ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

“ಅಂತರ್ಬಹಿರಂಗ

ಉದಯ ಧರ್ಮಸ್ಥಳ

Mask, Carnival, Venice, Mysterious

ನಿದ್ದೆಯ ಮುಂಜಾವಿನಲ್ಲಿ
ಮುಂಜಾವಿನ ನಿದ್ದೆಯಲ್ಲಿ
ಮಂಪರು ಭಾವಗಳೊಂದಷ್ಟು
ಮತಿಯ ತೋಪಿನಲ್ಲಿ
ಗತಿ ಲಯದ ಸಾಲು ತುರುಕಿದ ಕಾಡತೂಸುಗಳಂತೆ
ಶಬ್ದಗಳಲ್ಲದೆ
ಮೌನ ಅಕ್ಷರದುಂಡೆಗಳು !

ಎತ್ತೆತ್ತಲೋ ಎಸೆದೆರಗುವಂತಾಗಿ
ಧಮಿಲ್ ಧಮಿಲ್ ಧಮಿಲ್
ಹೊರಗುಗುಳುವಾಗ
ಹಿಡಿದು
ದಾಖಲಾಗಿಸುವಾಗ
ಅರೆಬಿರಿದ ಕಣ್ಣೆಡೆಯಿಂದ
ದೃಷ್ಟಿ ಕಾಣುವ ಪಂಕ್ತಿ ಪದ
ಅದೇನೋ ಅಪರೂಪದ
ಆಗೀಗ ಬರುವ ಅತಿಥಿಯಂತೆ
ನಕ್ಕಣರಳಿಸಿ ಬೀಸಿದ ಓರೆನೋಟ !

ಧಿಂಗಣ‌ ಕುಣಿದ ರಂಗದಂಗಳದ
ವೇಶಗಳಾಗಿ ಬಣ್ಣಬಣ್ಣ ಕಟ್ಟಿ
ದೊಗಲೆ ದೊಗಲೆಯೊಳಗೆ
ಅಂಡು ಬಿಗಿದ ಹಳೆಬಟ್ಟೆಯ ಹಿಂಡು
ಮೇಲೆ ಮಿರಮಿರನೆ ಝಗಮಗಿಸುವ
ರಾಜನುಡುವ ರಂಗುರಂಗಿನ ಪೋಷಾಕಿನೊಳಗಿಂದ
ಜೀವ ಲಕಲಕ ಲಕಾ ಭಾಷೆಯುಚ್ಛಾರ !

ಅದೇನೋ ಮೊರದಗಲ
ತಡ್ಪೆ ಕಿರೀಟದ ಬಣ್ಣದ ವೇಶ
ಅರಚಿ ಅರಚಿ ಬೆದರಿಸಿ
ಅರ್ಥವಾಗದಿದ್ದರೂ
ಅರ್ಥ ಮಾತಾಡುವಂತೆ ಕಂಡರೆ
ಅದು ಪ್ರಸಂಗದ ಮುಖ್ಯ ಅಧಿಕ
ಪ್ರತಿನಾಯಕನ ಚಿಟ್ಟೆಯ ಮುಖದ
ಒಳಗಿರುವ ನಿಜಮುಸುಡಿ
ಬೆವರಿ ಬೆದರಿ ನಿಜವಲ್ಲದ
ಕಥೆಗಳಿಗೆ ನಿಜವೆನಿಸುವ ಪದ ಉದುರಿಸಿ
ಹಿಮ್ಮೇಳದ ಆರ್ಭಟಗಳಿಗೆ
ಮುಮ್ಮೇಳವಾಗಿ ನಲಿಯುತ್ತದೆ !

ಬಾಲ್ಯಮುಖ
ತನು ಸುಕ್ಕಾಗಿ
ಮುದಿಯಾಗಿ‌ ಹಲವಾರು
ಪರಲೋಕ ಪಾತಾಳಗಳ
ಮನಕನಸಲ್ಲಿ ಕಂಡಾಡಿದ ನಂತರವೂ
ತಕತಕ ಕುಣಿವ ಪ್ರತಿಮಾಧ್ವನಿ
ಸಂಕೇತಗಳೇ ಖುಷಿಕೊಟ್ಟು
ಶಿಸ್ತಿನ ಸಿಪಾಯಿಗಳಂತೆ
ಸಾಲಾಗಿ‌ ಪಥಸಂಚಲನ ಗೈವಾಗ
ಹಾಯಾಗಿ ಒಳತೋಟಿ
ತಂಪಾದ ತೇಜಾಪು !
ಅನುಭಾವವರಳಿ ತನುಭಾವ ಕೆರಳಿ ಕೆಂಡಸಂಪಿಗೆಯ ಘಮ್ಮನೆಯ ಕಂಪು !

ರಾಗ ತಾಳ ಆಲಾಪಗಳ
ಹಂಗು ಗುಂಗಿಲ್ಲದಾಗ
ಹೊರ ಚೆಲ್ವ ಅಗ್ನಿಪರ್ವತದ
ತಲೆಯೊಡೆದು ಕಿಲೋಮೀಟರ್
ಮೇಲ್ಚಿಮ್ಮಿದ ಲಾವಾರಸ
ಸುಡುಸುಡುಸುಡುತಾ ಸಾಗಿ
ಸಿಕ್ಕಿದಕ್ಕೆಲ್ಲಾ ತಾಗಿ
ಕರಟಾಗಿಸಿ ಒಳಸೇರಿಸಿ
ಒರಟೊರಟಗಿ ಹೊರಟು
ಸಾಗಿಸಾಗಿ ಸಾಗುವ
ಜಗದಗಲ ಪ್ರಭಾವಿಸುವ ಪ್ರವಾಹ !

ಮುಗಿಲೆಂದರದೇ
ಮುಗಿಯದ ಮಿಗಿಲು
ಅಳೆಯಲಾಗದ ಅಂತರಾತ್ಮ
ಬಿಗಿದ ಸುಯಿಲು
ಅದ್ಯಾವುದೋ ಸನ್ನಿಧಿಗೆ
ಸಲ್ಲಿಸಿದ ದೂರಿನುಯಿಲು !
ಕಳೆದುಕೊಂಡ ಹಪಾಹಪಿಯ
ನಡುವೆ ಮತ್ತೆ ದಕ್ಕಿಸಿ
ಕೊಳ್ಳುವಾಸೆಯ ಅಮಲು ಕೊಯಿಲು !
ಕೊರೆದು ಬರೆದವುಗಳ
ಸೇರಿ ಸಿಟ್ಟು ಸೇರಿಸಿಟ್ಟು
ಸೇರಿಸಿಡುವ ಸೇರಿ ಸುಡುವ
ಅನರ್ಥ ಅಪಾರ್ಥಗಳ ಯತಾರ್ಥ !
ಹಾಂ ! ಯತಾರ್ಥಗಳ ಅಪಾರ್ಥ ಅಪಾತ್ರ !

ಹೇಳಬಾರದ್ದನ್ನು
ಹೇಳುವಾಗದರರ್ಥವಾಗದ
ಹಾಗೆ ಭೋರೆಂದು ಸುರಿದು ಹರಿದ
ಜೀವರಸದೊಳಗಿನ
ದ್ರವದೊಳಗಣ
ಕಣವೊಂದಿನ್ನೊಂದರಲ್ಸೇರಿ
ಝಗ್ಗನೆ ಸೃಜಿಸಲ್ಪಟ್ಟ ಮಿಸುಕಾಟದ
ಪಿಂಡದುಂಡೆ ಕೆಂಡಕುಸುಮದ
ಮುಡಿಯಲಾಗದ ಹೂದಂಡೆ !

ಅನಿರತ ಅಮಿತರತ
ವಿರಕ್ತನೇ ತಪ್ತಶಕ್ತವಾಗಿ
ಅನುರಕ್ತ ಭಕ್ತ
ಭಾವಲಹರಿಯ ಹರಿಯ ಬಿಟ್ಟ
ಹರಿ ಬಿಟ್ಟ ನರ ಹರಿದ ಬದುಕ
ತೇಪೆಹಾಕಲು
ಹೃತ್ಕುಂಜದಲಿ ಜೀವಕಾರಂಜಿಯ
ಭವಿತ ಚಿಲುಮೆಯಾಗಿಸುವ
ಚಲಿಸುವುದನು
ಚಲಿಸದಂತಾಗಿಸಲು
ಮುನಿಯುವುದನು
ಮುಗುಳಾಗಿಸಿಯರಳಿಸಲು
ಆಗಾಗ ಹೀಗಾಗುವ
ಜೀವಾಕ್ಷರಗಳ ಸರಪಳಿಯ
ಖಳ ಖಳ ಸದ್ದಿನ ನೆಯ್ಗೆ
ಅಪಾರ ಮಂಕು ಕಡಲ ಹೊಯಿಗೆ !
ಬಂಡೆಯೊಡೆಯದೆ
ಸಡಿಲಸಡಿಲವಾಗಿ
ಘನಕಣ ಮರುಳು ಮರಳಾಗೆ
ದಡಕಟ್ಟಿ ದಡಗಟ್ಟಿಯಾಗಿಸಿಕೊಂಡು
ಗುಳುಗುಳಿಸಿ ಭೋರ್ಗರಿಸಿ
ಬೊಬ್ಬಿರಿದು ತನ್ನಲೇ ತಾ ಮೊರೆದು
ತಳಕೊರೆದು ಒಳಗಿಳಿದು
ಘಮಲಿಸುವ ತಮಲಿಸುವ
ತಳಮಳವ ಇಳಗಿಟ್ಟು
ಶಾಂತಿಕವಚವ ಹೊದೆವ ಈ ಗುಟ್ಟು !

********************************

About The Author

Leave a Reply

You cannot copy content of this page

Scroll to Top