ಪುಸ್ತಕ ವಿಮರ್ಶೆ
ಪುಟ್ಟ ಗೌರಿ ಪುಟ್ಟ ಗೌರಿ : ಕುರಿತು ಕೆಲವು ಮಾತುಗಳು ಹೊಟ್ಟೆಯೊಳಗಡೆ ಗೋರಿ ಕಟ್ಟಿಕೊಂಡಿರುವವರೆ, ಹೊಡೆಯಲೆತ್ತಿರುವ ಕೈ ಹೊತ್ತಿ ಹೊಗೆಯುವೆದೆ, ವಿಷವುಗುಳಿ ನಗುವ ನಾಲಿಗೆ, ಎಲೆಲೇ, ತಡೆಯಿರಿ, ತಡೆಹಿಡಿಯಿರಿ: ಮಗು ನಗುತ್ತಿದೆ, ಮಗು ಆಡುತ್ತಿದೆ. ( ಒಳ್ಳೆತನ ಸಹಜವೇನಲ್ಲ – ಎಂ ಗೋಪಾಲಕೃಷ್ಣ ಅಡಿಗ ) ಮೇಲಿನ ಸಾಲುಗಳು ಪ್ರತೀಕ್ಷಣವೂ ಎಚ್ಚರಿಸುವ, ಒಂದಷ್ಟು ಅಸಹಜ ಕಾರ್ಯಗಳನ್ನು ಒಳಗಿಂದ ತಡೆವಂತೆ ಮಾಡುವ ಕಾರ್ಯವನ್ನು ಮಾಡುತ್ತಾ ಜಾಗೃತವಾಗಿಟ್ಟಿದೆ. ದುಷ್ಟ ಮನಸ್ಥಿತಿ ಅಡಿಗರು ಬರೆದು ಹಾದಿ ಕಾಣಿಸಿಕೊಟ್ಟ ನಂತರೂ ಬದಲಾಗದಿರುವುದು ನಮ್ಮ ದುರಂತ, ಮಗುತ್ವದ ಆಸೆಯ ಮುಂಗಾಣ್ಕೆ ಅವರ ದೊಡ್ಡತನ. ‘ಮಗು ಆಡುತ್ತಿದೆ’ ‘ಮಗು ನಗುತ್ತಿದೆ’ ಎನ್ನುವುದು ಇಂದಿಗೆ ಇದೆಯೇ? ಬಹುದೊಡ್ಡ ಪ್ರಶ್ನೆಯಾಗಿ ಕಾಡುತ್ತದೆ. ಇಂದು ಮಗು ನಗಲು, ಆಡಲು ಒಂದಷ್ಟು ಅವಕಾಶ ಕೊಡಬೇಕಾಗಿದೆ. ಸಮಾಜವೊಂದು ನಿರಂತರವಾಗಿ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಂವಹನಗಳಿಂದ ಬೆಳೆಯುತ್ತಿರುವಾಗ, ಅದನ್ನನುಸರಿಸುವ ಮನುಷ್ಯನ ಅಭಿವ್ಯಕ್ತಿಯಲ್ಲಿ ಬದಲಾಗುತ್ತಾ ಬಹುದೊಡ್ಡ ಅವಕಾಶಗಳನ್ನು ಆಯಾ ಕಾಲದಲ್ಲಿ ಬದುಕುತ್ತಿರುವವರಿಗೆ ಮೇಲಿನ ಅಂಶಗಳು ಹಾದಿ ತೆರೆದು ಕೊಡುತ್ತದೆ. ಅವುಗಳ ಬಳಕೆ ನಮ್ಮ ಯೋಗ್ಯತೆಯ ಪ್ರತೀಕದಂತೆಯೆ; ನಮ್ಮ ಸಮಾಜದ ನಡೆ, ಇತಿ-ಮಿತಿಯನ್ನು ತಿಳಿಸುತ್ತದೆ. ನಮ್ಮೊಳಗಿನ “ಮಗು” ತನವನ್ನು ಆದಷ್ಟು ಕಾಪಿಟ್ಟುಕೊಂಡು ಬದುಕಬೇಕಾದ ಅಗತ್ಯ ತುರ್ತು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ. ವಿಜ್ಞಾನ, ತಂತ್ರಜ್ಞಾನಗಳಲ್ಲಿನ ಆವಿಷ್ಕಾರಗಳು ಆರಂಬ ಮಾಡಿ, ಮಾಡಲು ಹೊರಟಿರುವ ದೊಡ್ಡ ಕೆಲಸವನ್ನು, ಅದು ಉಂಟುಮಾಡುವ ಪರಿಣಾಮವನ್ನು ಬಿತ್ತನೆಮಾಡಿ ಪ್ರಯೋಗಿಸಿಯೇ ನೋಡಬೇಕಾದ ಅಗತ್ಯವಿಲ್ಲ. ಊಹಿಸುವ ಒಂದಷ್ಟು ಪ್ರಜ್ಞೆಯಿದ್ದರೆ, ಮುಂಗಾಣ್ಕೆ ಕೈ ಹಿಡಿದಿದ್ದರೆ, ಅಪಾಯಕಾರಿ ಪ್ರಯೋಗಗಳಿಂದ ದೂರ ಉಳಿವಂತೆ ಮಾಡುವಲ್ಲಿ ಬುದ್ದಿ ಭಾವಗಳು ಯಶಸ್ವಿಯಾಗಿ ಕೆಲಸ ಮಾಡುತ್ತವೆ. ಈ ಮುಂಗಾಣ್ಕೆಯ ಆಗಮನಕ್ಕೆ ಬದುಕನ್ನು ಸಹಜವಾಗಿ ಗಮನಿಸುತ್ತಲೇ, ಅದರ ಉಪೋತ್ಪನ್ನವಾದ ಬರಹಗಳ ರಾಶಿಯೂ ಕೈ ಹಿಡಿಯುತ್ತವೆ. ಜೊತೆಗೆ ಎಲ್ಲಾ ಲಲಿತಕಲಾ ಪ್ರಕಾರಗಳೂ ಬದುಕ ಹಸನಾಗಿಸುವ, ಸಹ್ಯಗೊಳಿಸುವ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಗ್ರಹಿಕೆ ಮತ್ತು ಅಯ್ಕೆಗಳಲ್ಲಿ ಬಿದ್ದಿರುವ ಕಂದಕವೇ ಇಂದಿನ ತಲೆಮಾರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಮನುಷ್ಯ ಕೇವಲ ಹೊರ ಆಕಾರಗಳಿಂದ ಮನುಷ್ಯನಾಗಿದ್ದಾನೆ, ಒಳಗೆ ‘ಆ’ ಮನುಷ್ಯತ್ವ ಇದೆಯೇ? ಈ ಪ್ರಶ್ನೆ ಕಾಡುತ್ತಿರುವಾಗ ಕಣ್ಣ ಮುಂದಿನ ಎಳೆಯ ಮಕ್ಕಳಿಗೆ ನಾವು ಕೊಟ್ಟು-ಬಿಟ್ಟುಹೋಗುವುದಾದರೆ ಏನನ್ನು? ಮತ್ತು ಏಕೆ? ಈ ಪ್ರಶ್ನೆಗಳು ಬಹಳವಾಗಿ ಕಾಡುತ್ತದೆ. ಪುಟ್ಟಗೌರಿ ಸಂಕಲನ ‘ಆ’ ಬಿಟ್ಟು ಕೊಟ್ಟುಹೋಗಬೇಕಾದ ಅಂಶಗಳ ಕಡೆಗೆ ಗಮನ ಸೆಳೆಯುವುದರಿಂದಲೇ ಸದ್ಯದ ಒತ್ತಡದಲ್ಲಿ ಮುಖ್ಯ ಎನಿಸುತ್ತದೆ. ಬಾಲ್ಯದಲ್ಲಿ ಮಕ್ಕಳ ಶಿಕ್ಷಣ ಕುಟುಂಬದಿಂದ ಪ್ರಾರಂಭವಾಗಿ, ಶಾಲೆಯೆಂಬ ವ್ಯವಸ್ಥೆಯಲ್ಲಿ ಒಂದು ವ್ಯವಸ್ಥಿತ ಆಕಾರ ಪಡೆಯುತ್ತಿತ್ತು. ಇಂದಿನ ಶಿಕ್ಷಣ ರಜೆಯ ಮಜೆಯಾಗಿಯಷ್ಟೇ ಉಳಿದಿದೆ ಎನ್ನುವುದು ಮೊದಲ ಸಮಸ್ಯೆ. ಹಿಂದಿನ ತಲೆಮಾರು ತನ್ನ ಬಾಲ್ಯದ ಹೆಚ್ಚು ಸಮಯ ಕಳೆಯುತ್ತಿದ್ದುದು ಶಾಲೆಯ ವಾತಾವರಣದಲ್ಲಿ. ಇಂದು ಮನೆಯ ವಾತಾವರಣ ಬೇಸರವೆನಿಸಿದರೆ ಶಾಲೆಯ ಕಡೆ ಮುಖಮಾಡುವ, ಅದೂ ರಜೆಯಿಲ್ಲದಿದ್ದರೆ ಎನ್ನುವಷ್ಟು ಸಮಾಜ ಮತ್ತು ಶಿಕ್ಷಣ ವ್ಯವಸ್ಥೆ ಬದಲಾಗಿವೆ. ಒಂದೆಡೆ ಕೂರಲಾರದ, ನಿಂತಲ್ಲಿ ನಿಲ್ಲಲಾರದ, ಒಬ್ಬರನ್ನೊಬ್ಬರು ಸಹಿಸಲಾರದ, ಸದಾ ಅನುಮಾನಿಸುವ ಮಟ್ಟದ ಮನಸ್ಥಿತಿಗಳಲ್ಲಿರುವವರಲ್ಲಿ “ಸ್ವತಂತ್ರ”ವನ್ನು ಕುರಿತು ಅಪಾರ ಕಾಳಜಿಯಿದೆ, ಆದರೆ ತಮ್ಮದು “ಸ್ವೇಚ್ಛಾಚಾರ”ವೆಂಬ ಸಣ್ಣ ಗಮನವೂ ಇಲ್ಲ. ಇವುಗಳನ್ನು ಆಲೋಚಿಸವಷ್ಟೂ ನಮಲ್ಲಿ ವ್ಯವಧಾನವಿಲ್ಲ. ಅಂತರಾಷ್ಟ್ರೀಯ ಸಂಬಂಧಗಳ ಕುರಿತು ಮಾತಾಡುವ ಕಣ್ಣಿಗೆ, ಕಣ್ಣೆದುರಿನ ಎಳೆಯ ಮಕ್ಕಳ ಬುದ್ದಿ ಭಾವಗಳ ಸಂಬಂಧದಲ್ಲಿ ಆಗಿರುವ ‘ವಿಘಟನೆ’ ಕಾಣುತ್ತಿದ್ದರೂ ಅದಕ್ಕೆ ಕಾರಣ, ಪರಿಹಾರ ಮಾರ್ಗೋಪಾಯಗಳ ಆಲೋಚನೆ ನಮ್ಮೊಳಗೆ ಬಂದೇ ಇಲ್ಲ. ಅಥವಾ ಎಲ್ಲವನ್ನು ಕಂಡೂಕಾಣದ ಜಾಣಕುರುಡರಂತೆ ವರ್ತಿಸುತ್ತಿದ್ದೇವೆ. ಈ ಜಾಣಕುರುಡುತನ ಕಳೆಯದೆ ಉಳಿದ ಹಾದಿ ಕ್ರಮಿಸಲಾರೆವು ಎಂಬುದು ಇನ್ನಾದರೂ ನಮಗೆ ಅರ್ಥವಾಗಬೇಕಿದೆ. “ಉತ್ತರೋತ್ತರ ವಾದ”ಗಳಲ್ಲಿ ಮಿಂದು ಬಂದಿರುವವರಿಗೆ, “ವಿಶ್ವಗುರು” ಪಟ್ಟದ ಕುರ್ಚಿಗೆ “ಟವಲ್” ಹಾಕುವ ಕಾರ್ಯದಲ್ಲಿ ಸದಾನಿರತರಾಗಿರುವ ನಮಗೆ ಮೇಲಿನ ಅಲೋಚನೆ ಮತ್ತು ಕಾಳಜಿಗಳು ಬಾಲಿಷವಾಗಿ ಕಂಡರೆ ಅಶ್ಚರ್ಯವಿಲ್ಲ. ಅದರೆ ಒಂದಂತೂ ಸತ್ಯ – ಆಂತರಿಕವಾಗಿ ಸದೃಢರಾಗದ ಹೊರತು, ಹೊರಗಿನ ಬಲಿಷ್ಟತೆ ಮಾತ್ರ ಜೀವಂತವಾಗಿ ಉಳಿಯುವ ಹಾದಿ ಎಂದು ನಂಬುವುದು, ‘ಕಲ್ಪನೆ’ಯಲ್ಲಿ ನಿಂತು ‘ಸದ್ಯ’ದ ಒತ್ತಡಕ್ಕೆ ಮಾಡುವ ಅಪಾರ ಪ್ರಮಾಣದ ಹಾನಿಗೆ ಹಾದಿ ಮಾಡಿಕೊಡುತ್ತಿದೆ. ಢಾಳಾಗಿ ಕಾಣಿಸುವಷ್ಟು ಸಮಸ್ಯೆ ಇರುವಾಗ, ಒಂದು ಭೂಭಾಗದ ಪರಿಸರ, ನಂಬಿಕೆ, ಆಚರಣೆ, ಅವುಗಳು ಕಟ್ಟಿಕೊಳ್ಳುವ ಕಲ್ಪನೆ ಮತ್ತು ಸೃಷ್ಟಿಸಿಕೊಂಡ ಭಾಷೆ, ಅವುಗಳ ಒಟ್ಟೂ ಮೊತ್ತವಾದ “ಸಂಸ್ಕೃತಿ”ಯ ಆಕಾರ ಇಂದು ಹೇಗಿದೆ? ಇದ್ದರೆ ಅದರ ಕೊಡುಗೆ ಎನು? ಪಲ್ಲಟವಾಗಿದ್ದರೆ ಏಕೆ? ಈ ಪ್ರಶ್ನೆಗಳು ಹೊಕ್ಕದ ಹೊರತು ಮುಂದಿನ ಎಳೆಯ ತಲೆಮಾರಿನ ಕುರಿತು ಸ್ವಲ್ಪವೂ ಯೋಚಿಸಲಾರೆವು. ಈ ಪ್ರಶ್ನೆಗಳು ಕಾಡಲ್ಪಟ್ಟಿರುವ ಕೆಲವರಾದರೂ ಒಂದಷ್ಟು ಆ ಕಡೆಗೆ ಗಮನ ಹರಿಸಿದ್ದಾರೆ. ಅಂತಹವರಲ್ಲಿ ಜಯಲಕ್ಷ್ಮೀ ಎನ್. ಎಸ್. ಕೋಳಗುಂದರೂ ಒಬ್ಬರು, ಅಂತಹಾ ಸಂಕಲನಗಳಲ್ಲಿ “ಪುಟ್ಟಗೌರಿ” ಯೂ ಒಂದು. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಕವಿತೆಗಳು ಹೇರಳವಾಗಿ ಬಂದಿದೆ. ರಾಜರತ್ನಂ ರಿಂದ ಹಿಡಿದು ಇತ್ತೀಚೆಗೆ ಮಕ್ಕಳ ಕವಿತೆಗಳ ಸಮಗ್ರದವರೆಗಿನ ಕವಿತೆಗಳು ವ್ಯಾಪ್ತಿ, ವಿಸ್ತಾರ ಮತ್ತೊಂದಷ್ಟು ಸಮಸ್ಯೆಗಳ ಕುರಿತು ಮಾತಾಡುತ್ತದೆ. ಮಕ್ಕಳಿಗಾಗಿ ಬರೆಯುವಾಗ ವಯಸ್ಸಿನ ಮಿತಿ ಇರುತ್ತದೆಯೇ? ಇದ್ದರೆ ಏಕೆ? ಈ ಪ್ರಶ್ನೆಗಳು ಬಹುಮುಖ್ಯವಾದದ್ದು. ಮಕ್ಕಳ ಕವಿತೆಗಳು ಕೇವಲ ಮಕ್ಕಳಿಗಲ್ಲ, “ಮಗು ಮನಸ್ಥಿತಿ” ಯನ್ನು ಕಾಪಿಟ್ಟುಕೊಳ್ಳುವ ಅಗತ್ಯವಿರುವ ಎಲ್ಲರಿಗೂ ಎನ್ನುವುದು ಸ್ಪಷ್ಟ ಉತ್ತರವಾದರೂ, ಆ ಕಾರ್ಯ ಎಷ್ಟು ಪ್ರಮಾಣದಲ್ಲಿ ಯಶಸ್ವಿಯಾಗಿದೆ ಎನ್ನುವುದು ಬಹಳ ಮುಖ್ಯ. ಭಾಷೆ, ವಸ್ತು, ರೂಪಗಳು ಮೊದಲ ತಲೆಮಾರಿನಂತೆಯೇ ಇರುವ ‘ಪುಟ್ಟಗೌರಿ’ಯಲ್ಲಿ ಗಮನ ಸೆಳೆಯುವುದು ಕವಿತೆಗಳಲ್ಲಿನ “ಲಯ”. “ಲಯ” ಕಳೆದುಕೊಂಡು ಬದುಕುತ್ತಿರುವವರಿಗೆ “ಲಯ”ವಾಗದಂತೆ “ಲಯ”ದಲ್ಲಿಯೇ “ಬದುಕ ಲಯ”ದ ಕಡೆಗೆ ಗಮನಸೆಳೆಯುವಂತೆ ಈ ಸಂಕಲನವಿದೆ. ಮೇಲಿನ ವಾಕ್ಯದಲ್ಲಿ ಬಳಸಿರುವ “ಲಯ” ಪದವು ಕೇವಲ ವಾಕ್ಯರಚನೆಯ ಆಟಕ್ಕಾಗಿ ಆಲ್ಲ. ಒಮ್ಮೆ ಸಂಕಲನದ ಕವಿತೆಗಳನ್ನು ಗಟ್ಟಿಯಾಗಿ ಓದಿನೋಡಿ “ಲಯ” ಅನುಭವಕ್ಕೆ ಬರುತ್ತದೆ. ಮೇಲಿನ ಅಷ್ಟೆಲ್ಲಾ ‘ಲಯ ಕಾರಣ’ಗಳನ್ನು ಒಳಗಿಟ್ಟುಕೊಂಡು ಬದುಕುತ್ತಿರುವ ನಮಗೆ ಕಾವ್ಯದ ಲಯ ಕಾಣಿಸುವ ಸತ್ಯ ಏನನ್ನು? ಕವಿ ಏಕೆ ಲಯವಿಲ್ಲದ ಬದುಕಿನ ನಡುವೆ, ಮತ್ತೆ ಲಯದ ಕಡೆ ಮುಖಾಮುಖಿಯಾಗಿ ಕಲಾತ್ಮಕ ಅಭಿವ್ಯಕ್ತಿ ಮಾಡುತ್ತಾನೆ/ಳೆ? ಕವಿಯ ಈ ಮನಸ್ಥಿತಿ ಎಂತದ್ದು? ಮತ್ತು ಇದರ ಹಿಂದಿರುವ ಉದ್ದೇಶ ಏನು? ಮೇಲಿನ ಪ್ರಶ್ನೆಗಳನ್ನು ಕೇಳಿಕೊಳ್ಳುವುದರ ಮೂಲಕ ಈ ಸಂಕಲನ ತನ್ನ ಕಡೆಗೆ ಸೆಳೆದು ಬೆರಗಾಗಿಸಿ ಮುಖಮಾಡುವಂತೆ ಮಾಡುತ್ತದೆ. ‘ಪುಟ್ಟಗೌರಿ’ ಸಂಕಲನವು ನಲವತ್ತಮೂರು ಕವನಗಳ ಗುಚ್ಛ. ಹೆಸರಿನಲ್ಲಿ ಪುಟ್ಟ ಇದೆಯಷ್ಟೇ, ಸತ್ವದಲ್ಲಿ ಹಿರಿದಾಗಿಯೇ ಇದೆ. ಶಿಕ್ಷಕಿಯಾಗಿರುವ ಕಾರಣದಿಂದ ಕವಯತ್ರಿಗೆ ಮಕ್ಕಳೊಂದಿಗಿನ ಒಡನಾಟ ಮತ್ತು ಅವರ ಭಾಷೆಯ ಜಾಡನ್ನು ಹಿಡಿದು ಭಾವವನ್ನು ಅರ್ಥೈಸುವ ಮತ್ತು ಅಭಿವ್ಯಕ್ತಿಸುವ ಕಲೆ ಸಹಜವಾಗಿಯೇ ಸಿದ್ದಿಸಿದೆ. ಶಿಕ್ಷಕ ವೃತ್ತಿಯಲ್ಲಿ ಇರುವವರಿಗೆ ಇರಲೇಬೇಕಾದ ಜಾಗೃತಾವಸ್ಥೆ. ಸಂಕಲನದ ಪ್ರತಿಯೊಂದು ಕವನವು ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ವಿಶಿಷ್ಟತೆಯನ್ನು ಸಹಜವಾಗಿ ಪಡೆದಿರುವ ರಚನೆಯು, ಕವನಗಳ ಒಳ ಹೊರಗುಗಳ ಬಲ್ಲವರಾದ ಕವಯತ್ರಿಗೆ ಈ ರಚನೆಗಳು ಸವಾಲಿನ ಕೆಲಸ ಆಗಿರಲಾರದು. ಇಲ್ಲಿನ ಕವನಗಳು ಕಲಾತ್ಮಕ ಹೊದಿಕೆ ಹೊದ್ದಿರುವುದು ವಸ್ತು ಮತ್ತು ಭಾಷೆಯ ಮೇಲ್ನೋಟಕ್ಕೆ ತಿಳಿಯುತ್ತದೆ. ಕವನವೊಂದು ಹೀಗೆ ಅಖಂಡರೂಪ ಪಡೆಯಲು ಕವಿ ತನ್ನೆಲ್ಲಗಬಹುದಾದ ಕವನಗಳ ಆವಿರ್ಭಾವಕ್ಕೆ ನನ್ನ ಜೀವಮಾನದ ಕೊನೆಯ ಕವನವೇ ಇದೆಂದು ಭಾವಿಸಿದಾಗ ಮಾತ್ರ ಕುಸುರಿ ಕೆಲಸಗಳು ಸಾಧ್ಯವಾಗುತ್ತದೆ. ಅಂತಹಾ ರಚನೆಗಳು ಇಲ್ಲಿ ಕಣ್ಣಿಗೆ ಕಂಡಿವೆ. ಸಹಜವಾಗಿಯೇ ಮಕ್ಕಳ ಕವನಗಳು ಹಾಡುವ ಮಟ್ಟನ್ನು ಹೊಂದಿದ್ದಾಗ ಕಂಠಸ್ಥವಾಗುತ್ತವೆ. ನೆನಪಿನಲ್ಲಿ ಉಳಿವುದಕ್ಕೆ ಮುಖ್ಯ ಕಾರಣವೇ ಕವಿ ಬಳಸುವ ಭಾಷೆ. ಭಾಷೆಯೊಂದರಲ್ಲಿನ ವಾಕ್ಯ ರಚನೆಯ ನಿಯಮಗಳನ್ನು ಮುರಿಯುವಿಕೆ ಮತ್ತು ಬೇರೆಯದೇ ಆದ ಕ್ರಮದಲ್ಲಿ ಪದಗಳನ್ನು ಕೂಡಿಸುವಿಕೆ/ಜೋಡಿಸುವಿಕೆಯ ಮೂಲಕ ಕವನವೊಂದು ವ್ಯಾಪ್ತಿಯನ್ನು ವಿಸ್ತಾರಗೊಳಿಸಿಕೊಳ್ಳುತ್ತಾ ಸಾಗುತ್ತದೆ. ಈ ಮುರಿಯುವಿಕೆಯು ಆಂತರಿಕವಾಗಿ ಕವನವೊಂದರಲ್ಲಿ ಲಯದ ಆವಿರ್ಭಾವಕ್ಕೆ ಕಾರಣವಾಗುತ್ತದೆ. ‘ಲಯ’ ಒಮ್ಮೆ ಸಿದ್ದಿಸಿತೆಂದರೆ ಮಕ್ಕಳ ಮನಸ್ಸನ್ನು ಹೊಕ್ಕು ಕವನವೊಂದು ಸಾರ್ಥಕ್ಯ ಪಡೆದಂತೆ. ಸದ್ಯದಲ್ಲಿ ರಚನೆಯಾಗುತ್ತಿರುವ ಮಕ್ಕಳ ಕವನಗಳನ್ನು ಗಮನಿಸಿದ್ದೇನೆ ಅವು ವಿಸ್ತಾರವಾದ ಬೌದ್ಧಿಕಕ್ರಿಯೆಯ ಅಭಿವ್ಯಕ್ತಿ ಎಂದು ಕೆಲವು ರಚನೆಗಳು ಆಕಾಗ ಪತ್ರಿಕೆಗಳಲ್ಲಿ ಓದಿದಾಗ ಎನಿಸಿದ್ದಿದೆ. ಇದಕ್ಕೆ ಬಹುಮುಖ್ಯ ಕಾರಣವೇ ಮಕ್ಕಳ ಭಾಷಾ ರಚನೆಯನ್ನು ಗಮನಿಸದ ಮತ್ತು ಅವರ ಭಾವಕೋಶವನ್ನು ಪ್ರವೇಶಿದೆ ಇರುವುದೇ ಕಾರಣಗಳಾಗಿದೆ. ಇಲ್ಲಿನ ರಚನೆಗಳು ಆ ಸಮಸ್ಯೆಯಿಂದ ಹೊರಗೆ ಉಳಿದಿರುವುದೇ ವೃತ್ತಿ ಮತ್ತು ತಾಯೊಡಲ ತಲ್ಲಣಗಳು ಇರುವುದರಿಂದ. ಪುಕ್ಕವ ತಿರುವುತ ರೆಕ್ಕೆಯ ಬೀಸುತ ಎಲ್ಲಿಗೆ ಹೊರಟೆ ಎಲೆ ನವಿಲೆ ಗರಿಗಳ ಬಿಚ್ಚಿ ಕುಣಿಯಲು ನೀನು ಸ್ವರ್ಗವ ಕಾಣುವೆ ನಾನಿಲ್ಲೆ ( ನವಿಲೇ ನವಿಲೆ ) ನಮ್ಮ ಮನೆಯ ನಾಯಿಮರಿ ಕದ್ದು ತಿಂತು ಕಾಯಿತುರಿ ( ಕಳ್ಳ ನಾಯಿ ) ಕವನಗಳಿಂದ ಅಯ್ದ ಸಾಲುಗಳನ್ನೊಮ್ಮೆ ಗಮನಿಸಿ. ಮೊದಲ ಸಾಲಿನಲ್ಲಿ ಬರುವ ಪುಕ್ಕ, ರೆಕ್ಕೆ, ಎಲ್ಲಿಗೆ, ಎಲೆ ಪದಗಳು ಸೃಷ್ಟಿಸುವ ಪ್ರಾಸ ಬಹುಮುಖ್ಯವಾಗುತ್ತದೆ. ಎರಡನೆಯ ಸಾಲನ್ನು ಗಟ್ಟಿಯಾಗಿ ಓದಿದಾಗ ಪಡೆವ ನಿಲುಗಡೆಯು (ಯತಿ) ಸಹಾ ಇಲ್ಲಿ ಮುಖ್ಯವಾಗುತ್ತದೆ. ‘ಎಲ್ಲಿಗೆ ಹೊರಟೆ, ಎಲೆ ನವಿಲೆ’ ಎಂದು ಓದುವಾಗಲೆ ಪ್ರಶ್ನೆಯೊಂದು ಆರಂಭವಾಗಿ ಕಾವ್ಯ ತನ್ನ ಮುಂದಿನ ದಿಕ್ಕನು ಪಡೆಯುತ್ತದೆ. ಮೊದಲಿಗೆ ಈ ಪ್ರಶ್ನೆಯ ಮೂಲಕ ಉಂಟಾದ ಕುತೂಹಲ ಕವನವನ್ನು ಪೂರ್ಣವಾಗಿ ಓದುವಂತೆ ಪ್ರೇರೇಪಿಸಿಬಿಡುತ್ತದೆ. ಎರಡನೆಯ ಉದಾಹರಣೆಯಲ್ಲಿನ ನಾಯಿಮರಿ, ಕಾಯಿತುರಿ ಪದಗಳು ಪಡೆವ ವೇಗವಾದ ಓಟವನ್ನು ಗಮನಿಸಿ. ನಿಲುಗಡೆಯನ್ನು ಬಯಸದ ಸರಾಗ ಓಟ. ನಿಲ್ಲಿಸುವ ಮತ್ತು ವೇಗಪಡೆದುಕೊಳ್ಳುವ ಗುಣಗಳು ಮಕ್ಕಳನ್ನು ಬೇಗ ಗಮನಸೆಳೆದುಬಿಡುತ್ತದೆ. ‘ಕಳ್ಳ ನಾಯಿ’ ಕವನವನ್ನು ಕವಿ ಇನ್ನೊಂದಷ್ಟು ಬೆಳೆಸಬಹುದಾದ ಸಾಧ್ಯತೆಯಿದ್ದರು ಏಕೆ ಬೆಳೆಸಲಿಲ್ಲವೆನ್ನುವುದೇ ಕುತೂಹಲದ ವಿಷಯ. ಇಲ್ಲಿ ಬೆಳವಣಿಗೆ ಪಡೆದಿದ್ದರೆ ಯಶಸ್ವಿ ಕವನಗಳ ಪಟ್ಟಿಯಲ್ಲಿ ಇದೂ ಒಂದು ಸೇರುತ್ತಿತ್ತು. ಅಮ್ಮ ಅಮ್ಮ ಅಲ್ಲಿ ನೋಡು ಹಾರುತಿರುವ ಚಿಟ್ಟೆ ಅದರ ಹಾಗೆ ನನಗು ಕೂಡ ರೆಕ್ಕೆ ಎರಡು ಕಟ್ಟೆ ( ಅಲ್ಲಿ ನೋಡು ಚಿಟ್ಟೆ ) ಕವನದಲ್ಲಿನ ರಾಚನಿಕ ವಿನ್ಯಾಸವನ್ನು ಗಮನಿಸಿ. ನಾಲ್ಕು ಪಾದಗಳನ್ನು ಹೊಂದಿದ್ದು ಮೊದಲು, ಮೂರನೆಯ ಪಾದಗಳು ಸಮಾನ ಹನ್ನೆರಡು ಮಾತ್ರೆಗಳಿಂದ ಕೂಡಿದ್ದು, ಎರಡು, ನಾಲ್ಕನೆಯ ಸಾಲು ಒಂಭತ್ತು ಮಾತ್ರೆಗಳಿಂದ ಕೂಡಿದೆ. ಈ ರಚನೆಯಲ್ಲಿನ ಭಾಷೆ ಮತ್ತು ತೀವ್ರತಮ ಓಟಗಳು ಚಿಟ್ಟೆಯ ರೆಕ್ಕೆ ಬಡೆವಂತೆಯೇ ಭಾಸವಾಗುತ್ತದೆ. ಅನಂತರ ಈ ಲಯ ನಿಧಾನಗತಿ ಪಡೆದು ಕಥನಕ್ರಮದ ಕಡೆಗೆ ನಡೆದುಬಿಡುತ್ತದೆ. ಮಕ್ಕಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಇಂತ ರಚನೆಗಳನ್ನು ಮಾಡಬಲ್ಲರು ಎನಿಸಿದೆ. ಮೊದಲು ಕುತೂಹಲ ಅಅನಂತರ ಬೋಧನೆ. ಈ ನಿಯಮದಲ್ಲಿ ಕವನ ಸಾಗುತ್ತದೆ. ಕಥನಕ್ರಮ ಮಕ್ಕಳ ಕವಿತೆಗಳ ಸಾಮಾನ್ಯ ರಚನಾಕ್ರಮ. ಮಕ್ಕಳ ಕವನಗಳ ಪರಂಪರೆಯಲ್ಲಿ ರಚನೆಯಾಗಿರುವ ಹಲವಾರು ಉದಾಹರಣೆಗಳನ್ನು ಇದಕ್ಕೆ ಸಾಕ್ಷಿಯಾಗಿ ಹೆಕ್ಕಿ ಕೊಡಬಹುದು. ‘ಆ’ ಕವನಗಳಲ್ಲಿ ಒಂದು ಸಾಯುಜ್ಯಸಂಬAಧ ಇರುವುದಕ್ಕೆ ‘ಆ’ ಸಮಾಜದಲ್ಲಿನ ಕುಟುಂಬಗಳಲ್ಲಿದ್ದ ಅವಿಭಜತ ವ್ಯವಸ್ಥೆ ಬಹುಮುಖ್ಯ ಕಾರಣ. ಬದಲಾದ ಕಾಲಮಾನದಲ್ಲಿ ಬದುಕುತ್ತಿರುವ, ಕಾವ್ಯರಚನೆ ಮಾಡುತ್ತಿರುವವರಲ್ಲಿ ಕಥನಕ್ರಮ ಸಹಜವಾಗಿ ಉಂಟಾಗದಿರಲು ವಿಭಜನೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ವಿವರಣೆಗಳನ್ನು ಕೊಡುವ ಅಗತ್ಯವಿಲ್ಲ. ಪ್ರತಿಯೊಂದು ವಿಭಜಿತ ಕುಟುಂಬಕ್ಕೆ ಅದರದೇ ಆದ ಕಾರಣಗಳಿವೆ. ಆದರೆ ಕವಿಯೊಬ್ಬನ ಗಮನ ಮತ್ತು ಎಳೆಯ ತಲೆಮಾರಿಗೆ ತಾನು ದಾಟಿಸಬೇಕಾದ ಮೌಲ್ಯ ಎಂತದ್ದೆನ್ನುವ ಪರಿವೆ ಇರಬೇಕಾದುದು ಬಹುಮುಖ್ಯವಾದದ್ದು. ಸಂಕಲನದಲ್ಲಿರುವ ಎರಡು ಕವನಗಳಾದ ‘ನನ್ನ ದಿನಚರಿ’ ಮತ್ತು ‘ಚಂದಾ ಮಾಮ ಬಾರೋ’ ಗಳಲ್ಲಿರುವ









