ಅಂಕಣ ಬರಹ–02 ಶಾಂತಿ ವಾಸು ಹೋದ ಅಂಕಣದಲ್ಲಿ ರೇಡಿಯೋ ನಮ್ಮ ಜೀವನವನ್ನು ಆಕ್ರಮಿಸಿದ ಕಾಲ ಹಾಗೂ ರೀತಿಯನ್ನು ನೋಡಿದೆವು. ನಮ್ಮನ್ನು ಆಧುನಿಕ ಕಾಲದ ಪ್ರತಿನಿಧಿಗಳನ್ನಾಗಿಸಿದ ರೇಡಿಯೋ ಬಗ್ಗೆ ಈಗ ಇನ್ನಷ್ಟು ವಿಷಯಗಳನ್ನು ತಿಳಿಯೋಣ ಬನ್ನಿ. ಸಂಶೋಧನೆಗಾಗಿ ನೋಬಲ್ ಪ್ರಶಸ್ತಿ ಪಡೆದ ಇಟಲಿಯ ಗೂಗ್ಮಿಯೆಲ್ಮೋ ಮಾರ್ಕೋನಿಯಿಂದ 1885 ರಲ್ಲಿ ತಂತಿರಹಿತ ಸಂದೇಶ ರವಾನಿಸುವ ಮೂಲಕ ಕಂಡುಹಿಡಿಯಲ್ಪಟ್ಟ ರೇಡಿಯೋ ಎಂಬ ಒಂದು ಅದ್ಭುತವನ್ನು ಭಾರತಕ್ಕೆ ಕೊಡುಗೆಯಾಗಿ ನೀಡಿದ ಭೌತವಿಜ್ಞಾನಿ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ, ದೂರಸಂಪರ್ಕ ಹಾಗೂ ರೇಡಿಯೋ ವಿಜ್ಞಾನಿ ಸರ್. ಜಗದೀಶ್ ಚಂದ್ರ ಬೋಸ್ ಅವರ ಕೊಡುಗೆ ರೇಡಿಯೋ ಹಾಗೂ ದೂರ ಸಂಪರ್ಕದ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರವಾದದ್ದು. ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾದ ಹಾಗೂ ತಮ್ಮ ಸಂಶೋಧನೆಗಳಿಗೆ ಅಗತ್ಯವಾದ ಉಪಕರಣಗಳನ್ನು ತಾವೇ ಸ್ವತಃ ಕಂಡು ಹಿಡಿದುಕೊಂಡಿದ್ದ ಮಹಾಜ್ಞಾನಿ, ಅಧ್ಯಾತ್ಮ ಚಿಂತಕ, ನಮ್ಮ ಭಾರತದ ಹೆಮ್ಮೆಯ ಪುತ್ರ “ಜ್ಞಾನ ಯಾರ ಸ್ವತ್ತೂ ಅಲ್ಲ. ಅವರವರ ಶ್ರಮದ ಪ್ರತಿಫಲ ಅವರವರಿಗೆ” ಎಂದು ಜಗತ್ತಿಗೆ ಸಾರಿದ, ಪ್ರತಿಷ್ಠಿತ ನೈಟ್ ಹುಡ್ ಪ್ರಶಸ್ತಿಯೊಂದಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿ, ಕಲ್ಕತ್ತಾದಲ್ಲಿ “ಬೋಸ್ ಇನ್ಸ್ಟಿಟ್ಯೂಟ್” ಆರಂಭಿಸಿದ ನಮ್ಮ ಭಾರತದ ಹೆಮ್ಮೆಯ ಸಸ್ಯ ವಿಜ್ಞಾನಿ ಇವರು ಎಂಬುದು ಹೆಮ್ಮೆ ಪಡತಕ್ಕ ವಿಷಯ. ರೇಡಿಯೋದ ಕಾರ್ಯವಿಧಾನ, ಉಪಯೋಗಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸಲುವಾಗಿ 1932ರಲ್ಲಿ ಮಂಗಳೂರಿನ ವಿದ್ವಾನ್. ಹೊಸಬೆಟ್ಟು ರಾಮರಾವ್ ಅವರು “ಆಕಾಶವಾಣಿ” ಎಂಬ ಹೆಸರಿನ ಸುಮಾರು 20 ಪುಟಗಳ ಒಂದು ಪುಸ್ತಕವನ್ನು ಬರೆದಿದ್ದರು . ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾಕ್ಟರ್ ಎಂ.ವಿ.ಗೋಪಾಲಸ್ವಾಮಿಯವರು ದೇಶಕ್ಕೆ ಹೊಸತನ್ನು ಪರಿಚಯಿಸುವ ಸಲುವಾಗಿ ಲಂಡನ್ನಿನಿಂದ ಕಡಿಮೆ ವಿದ್ಯುತ್ ಬಳಕೆಯ “ಟಾಲ್” ಎಂಬ ಟ್ರಾನ್ಸಮೀಟರನ್ನು ತಂದು 1935 ಸೆಪ್ಟೆಂಬರ್ 10ರಂದು, ರಾಷ್ಟಕವಿ ಕುವೆಂಪುರವರಿಂದ ಕವನವಾಚನ ಮಾಡಿಸುವ ಮೂಲಕ ಭಾರತ ದೇಶದ ಮೊದಲ ಬಾನುಲಿ ಕೇಂದ್ರವನ್ನು ಮೈಸೂರಿನ ತಮ್ಮ ವಿಠ್ಠಲವಿಹಾರ ಮನೆಯಲ್ಲಿ ಸ್ಥಾಪಿಸಿದರು. ಆಗಿನ ಮೈಸೂರಿನ ಮಹಾರಾಜರು ಸ್ವತಃ ಕಾಲೇಜಿನ ಅಸೆಂಬ್ಲಿಯಲ್ಲಿ ಹಾಜರಿದ್ದು ಅದನ್ನು ಆಲಿಸಿದ್ದರು ಎಂಬುದು ವಿಶೇಷ. ಬಾನಿನಿಂದ ತರಂಗಗಳು ಹೊತ್ತು ತಂದ ಉಲಿಯನ್ನು ರೇಡಿಯೋದಲ್ಲಿ ಕೇಳಬಹುದಾದ ಅದ್ಭುತವನ್ನು ಅಂದಿನ ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ, ಸಾಹಿತಿ ನಾ. ಕಸ್ತೂರಿಯವರು “ಆಕಾಶವಾಣಿ” ಎಂದು ಕರೆದರು. ಭಾನುವಾರ ಹೊರತು ಪಡಿಸಿ, ಮಿಕ್ಕ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣವನ್ನು ಪ್ರಸಾರ ಮಾಡುತ್ತಿದ್ದ ಬಾನುಲಿ ಕೇಂದ್ರವನ್ನು ಸ್ವಾತಂತ್ರ್ಯಾ ನಂತರ ಅಂದರೆ 1950 ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಿಸಲಾಯಿತು. ಹಾಗೂ 1956 ರಲ್ಲಿ ಕೇಂದ್ರಸರ್ಕಾರವು “ಆಕಾಶವಾಣಿ” ಎಂಬ ಹೆಸರನ್ನೇ ಅಧಿಕೃತವಾಗಿ ಘೋಷಣೆ ಮಾಡಿತು. ದಾಖಲೆಗಳ ಪ್ರಕಾರ 1954 ರಲ್ಲಿ ಭಾರತದ ಮೊದಲ ವ್ಯಾಪಾರಿ ರೇಡಿಯೋ ಅಂದರೆ ಆಂಟೆನೋ ಇದ್ದ ಕಮರ್ಷಿಯಲ್ ಟ್ರಾನ್ಸಿಸ್ಟರ್ ಮಾರಾಟವಾಯಿತು. ಇದನ್ನು ಹೋದ ಕಡೆಯಲ್ಲೆಲ್ಲ ಹೊತ್ತು ಹೋಗಬಹುದಾದರಿಂದ, ಹಾಗೂ ದರದ ದೃಷ್ಟಿಯಿಂದ ಅಗ್ಗವಾಗಿದ್ದ ಟ್ರಾನ್ಸಿಸ್ಟರ್ ಎಂಬುದು ಆ ದಿನಗಳಲ್ಲಿ ಒಂದು ಮನರಂಜನಾ ವಸ್ತುವಾಗಿ ಬಹುದೊಡ್ಡ ಮಾರುಕಟ್ಟೆಯೊಂದಿಗೆ ಬಹು ಜನಪ್ರಿಯತೆಯ ಕೇಂದ್ರ ಬಿಂದುವಾಯಿತು. ಪೂರ್ಣ ಪ್ರಮಾಣದಲ್ಲಿ ವಾಣಿಜ್ಯ ದೃಷ್ಟಿಯಿಂದ ಆರಂಭವಾದ ರೇಡಿಯೋ ಎಂಬ ಆ ಕಾಲದ ಆಧುನಿಕ ತಂತ್ರಜ್ಞಾನವು, ಜಾಹೀರಾತು ಪ್ರಪಂಚಕ್ಕೆ ಭದ್ರವಾದ ಅಡಿಗಲ್ಲನ್ನು ನೆಟ್ಟಿತು. ಜಾಹೀರಾತುಗಳನ್ನು ಕೇವಲ ಕೇಳಬಹುದಾಗಿದ್ದ ಆ ಕಾಲಘಟ್ಟದಲ್ಲಿ ಆಲ್ ಇಂಡಿಯಾ ರೇಡಿಯೋ (A.I.R)ದ ಭಾಗವಾಗಿ 1959ರಲ್ಲಿ ದೂರದರ್ಶನವನ್ನು ಆರಂಭಿಸಲಾಯಿತು. ಇದು ಕೂಡ ವಾಣಿಜ್ಯ ದೃಷ್ಟಿಯಿಂದಲೇ ಸ್ಥಾಪಿತವಾದದ್ದೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹಾಗಾಗಿ ಮೊದಲೇ ಹೇಳಿದ ಜಾಹೀರಾತಿನೊಂದಿಗೆ ದೂರದರ್ಶನದಲ್ಲಿ ಡಾಬರ್ ಚವನ್ ಪ್ರಾಶ್, ನಿರ್ಮಾ ವಾಷಿಂಗ್ ಪೌಡರ್ ವಿಕೋ ಟರ್ಮರಿಕ್ ಕ್ರೀಮ್, ಲಿರಿಲ್ ಸೋಪು ಹಾಗೂ ಸಿಯಾರಾಂ ಸೂಟಿಂಗಿನ ಜಾಹೀರಾತು ಕೂಡ ಸೇರಿಕೊಂಡದ್ದು ಹೌದಲ್ಲವೇ? ಆಗಿನ ಜನರಿಗೆ ಆದ ಹೊಸ ಹೊಸ ಅವಿಷ್ಕೃತ ವಸ್ತುಗಳ ಪರಿಚಯ, ನೋಡುವ ಮುಟ್ಟುವ ಉತ್ಸಾಹ, ಉಪಯೋಗಿಸುವಾಗಿನ ಪುಳಕ ಈಗೊಂದೂ ಇಲ್ಲ. ಏಕೆಂದರೆ ಕೆಲವೇ ಕೆಲವನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಆಗಿನದ್ದರ ಸುಧಾರಿತ ವ್ಯವಸ್ಥೆ ಹಾಗೂ ರೂಪಾಂತರ ಅಷ್ಟೇ ಆಗಲೀ ಯಾವುದೂ ಹೊಸತಲ್ಲ. ಶ್ರೀಸಾಮಾನ್ಯರಿಗಾಗಿಯೇ, ರೇಡಿಯೋಗಳ ನಿಗದಿತ ಕಾರ್ಯಕ್ರಮಗಳ ಏಕತಾನತೆಯನ್ನು ಹೋಗಲಾಡಿಸವ ಸಲುವಾಗಿ, ಸುಧಾರಿತ ಹಾಗೂ ಉತ್ತಮಗುಣಮಟ್ಟದ ಕಾರ್ಯಕ್ರಮ ರೂಪಿಸುವ ಹಾಗೂ ಸರ್ಕಾರದ ವರಮಾನವನ್ನು ಹೆಚ್ಚುಮಾಡುವ ಹೆಚ್ಚು ಸ್ಪಷ್ಟತೆಯ ಎಫ್. ಎಂ (frequency modulation ಆವರ್ತನ ಮಾಡ್ಯುಲೇಶನ್) ಕೇಂದ್ರಗಳು ಸ್ಥಾಪಿತವಾದವು. MHz(ಮೆಗಾಹರ್ಡ್ಜ್) ತರಂಗಾಂತರದ ಮೇಲೆಯೇ ಇಂದಿಗೂ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿರುವ ಎಫ್.ಎಂ. ರೇಡಿಯೋಗಳು ಹಾಗೂ ದೂರದರ್ಶನದ ಹಲವಾರು ಚಾನೆಲ್ಲುಗಳಿಗೆ ಜಾಹೀರಾತುಗಳಿಂದ ಬರುವ ಹಣವೇ ಜೀವಾಳ ಹಾಗೂ ಹಿರಿಮೆ. ********************************************************
ಅಂಕಣ ಬರಹ ಮೆಹಬೂಬ್ ಮುಲ್ತಾನಿ ಪರಿಚಯ: ಮೆಹಬೂಬ್ ಮುಲ್ತಾನಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕನದಿಕೊಪ್ಪ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಕಾಲಿನ ಓದು ಬರಹ ವೇದಿಕೆ ಕಟ್ಟಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಹಿಂದಿ,ಉರ್ದು, ಮರಾಠಿ, ಆಂಗ್ಲ ಭಾಷೆಯ ಸಾಹಿತ್ಯ ಅನುವಾದ, ವಿಶೇಷವಾಗಿ ಕವಿತೆಗಳ ಅನುವಾದ ಇವರ ಇಷ್ಟದ ಕೆಲಸ. ಕವಿತೆ ಬರೆಯಲು ಪ್ರಾರಂಭಿಸಿದ್ದಾರೆ. ತುಂಬಾ ಜೀವನ ಪ್ರೀತಿಯ ಮನುಷ್ಯ ನಮ್ಮ ಮೆಹಬೂಬ್ ಮುಲ್ತಾನಿ ಈ ವಾರದ ಮುಖಾಮುಖಿಯಲ್ಲಿ ಕವಿ ಮೆಹಬೂಬ್ ಮುಲ್ತಾನಿಯನ್ನು ಮಾತಾಡಿಸಿದ್ದಾರೆನಾಗರಾಜ ಹರಪನಹಳ್ಳಿ ” ನನ್ನ ಕವಿತೆಯ ವಸ್ತು ಪ್ರೀತಿ ಮತ್ತು ಧರ್ಮ “ “ ದೇವರು -ಧರ್ಮದಲ್ಲಿ ನನಗೆ ಅಷ್ಟಾಗಿ ನಂಬಿಕೆಯಿಲ್ಲ “ ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಕವಿತೆ ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ನಿರ್ದಿಷ್ಟ ಉತ್ತರ ಹೇಳಲಾಗದು. ಮನಸ್ಸಿನ ಬೇಗುದಿ ಹೊರಹಾಕಲು ನಾನು ಕವಿತೆಯ ಮೊರೆ ಹೋಗುತ್ತೇನೆ. ಕವಿತೆ ಹುಟ್ಟುವ ಕ್ಷಣ ಯಾವುದು ? ನಿರ್ದಿಷ್ಟ ಸಮಯ ಅಂತೆನೂ ಇಲ್ಲ .ಯಾವುದೋ ಒಂದು ಕ್ಷಣದಲ್ಲಿ ಹೊಳೆದ ಸಾಲುಗಳು ಆಗಾಗ ಕವಿತೆಯ ರೂಪ ತಾಳುತ್ತವೆ ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಪ್ರೀತಿ ಮತ್ತು ಧರ್ಮ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಹಾ..ಬಾಲ್ಯಕ್ಕೆ ಅಷ್ಟು ಅವಕಾಶವಿಲ್ಲ , ಹರೆಯ ಕವಿತೆಗಳಲ್ಲಿ ಆವರಿಸಿದೆ. ಪ್ರಸ್ತುತ ರಾಜಕೀಯಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ತಲ್ಲಣದ ದಿನಗಳಿವು. ಕಾಯಬೇಕಾದವರೆ ಕೊಲ್ಲುವವರಾಗಿರುವ ಸನ್ನಿವೇಶ ಇದೆ. ಸಮಚಿತ್ತದಿಂದ ಇರುವುದು ಈ ಕ್ಷಣದ ಅವಶ್ಯಕತೆ. ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇವೆರಡರಲ್ಲೂ ನನಗೆ ಅಷ್ಟಾಗಿ ನಂಬಿಕೆಯಿಲ್ಲ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಸಾಂಸ್ಕೃತಿಕ ವಾತಾವರಣ ಹದೆಗೆಟ್ಟಿದೆ. ಇಸಂಗಳು ಸಾಂಸ್ಕೃತಿಕ ಲೋಕವನ್ನು ಆಳುತ್ತಿವೆ. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಇದು ಸಾಹಿತ್ಯದ ಎಲ್ಲರಿಗೂ ತಿಳಿದಿರು ವಿಷಯ. ಬಾಲ ಬಡಿಯುವವರು ಮುಂದಿದ್ದಾರೆ. ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಅತೃಪ್ತಿ ಇದೆ ಅಷ್ಟೇ.. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಬೇರೆ ಬೇರೆ ದೇಶದ,ಭಾಷೆಯ ಭಿನ್ನ ಸಂವೇದನೆಯ ಸಾಹಿತ್ಯಿಕ ಕೃತಿಗಳನ್ನು ಅನುವಾದಿಸುವುದು.. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಕನ್ನಡದಲ್ಲಿ ಎಚ್ ಎಸ್ ಶಿವಪ್ರಕಾಶ ನನ್ನಿಷ್ಟದ ಕವಿ.ಆಂಗ್ಲಭಾಷೆಯಲ್ಲಿ ರೈನರ್ ಮಾರಿಯಾ ರಿಲ್ಕ ನನ್ನ ಪ್ರೀತಿಯ ಕವಿ . ಈಚೆಗೆ ಓದಿದ ಕೃತಿಗಳಾವವು? ಕೆಂಪು ಮುಡಿಯ ಹೆಣ್ಣು, ಪದ ಕುಸಿಯೆ ನೆಲವಿಲ್ಲ, ಬದುಕು ಮಾಯೆಯ ಆಟ, ಚಿಲಿ ಕೆ ಜಂಗಲೊಸೆ( ಹಿಂದಿ), ಖುಷಿಯೊಂಕೆ ಗುಪ್ತಚರ ( ಹಿಂದಿ), ನಿಮಗೆ ಇಷ್ಟವಾದ ಕೆಲಸ ಯಾವುದು? ಶಿಕ್ಷಕ ವೃತ್ತಿ ನಿಮಗೆ ಇಷ್ಟವಾದ ಸ್ಥಳ ಯಾವುದು ? ನಮ್ಮ ಮನೆ ಮತ್ತು ಶಾಲೆ ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಮಿಲನ( ಕನ್ನಡ), ರಬ್ ನೇ ಬನಾ ದಿ ಜೋಡಿ( ಹಿಂದಿ) ನೀವು ಮರೆಯಲಾರದ ಘಟನೆ ಯಾವುದು? ಒಮ್ಮೆ ನಮ್ಮ ಮೇಲೆ ಹೆಜ್ಜೆನು ದಾಳಿ ಮಾಡಿದವು. ಇನ್ನೆನೂ ಸಾಯುತ್ತೇವೆ ಎನ್ನುವಾಗ ಭಾಷೆ,ಜಾತಿ, ಧರ್ಮಗಳನ್ನು ಮೀರಿದ ಮಾನವೀಯ ವ್ಯಕ್ತಿ ಯೊಬ್ಬ ನಮಗೆ ಸಹಾಯ ಮಾಡಿದ. ಅವತ್ತು ನನಗೆ ಪ್ರೀತಿ ಮತ್ತು ಮಾನವೀಯತೆಯ ಅವಶ್ಯಕತೆ ಎಷ್ಟಿದೆ ಎನ್ನುವ ಅರಿವು ಮೂಡಿತು. ಇದು ನನ್ನ ಜೀವನದ ಮರೆಯಲಾರದ ಘಟನೆ. ************************************************** ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ

