ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾದಂಬರಿ ಕುರಿತು

ಸು

ನಾನು ಪ್ರತಿ ಪುಸ್ತಕ ಓದಿದಾಗಲೂ ಅದರಲ್ಲಿ ಬರುವ ಒಂದು ಪಾತ್ರ ನಾನೇ ಎನ್ನಿಸಿಬಿಡುವಷ್ಟು ಕೆಲವೊಂದು ಪಾತ್ರಗಳು ಕಾಡುತ್ತವೆ. ಇಲ್ಲಿ ಸು ಕಥಾನಾಯಕನಾದರೂ ನನಗ್ಯಾಕೊ ಪ್ರಕಾಶ್ ಪಾತ್ರ ಬಹಳ ಹಿಡಿಸಿತು. ಇಡೀ ಸು ಕಾದಂಬರಿ ಪ್ರಕಾಶ್ ಪಾತ್ರವೇ ನಿರೂಪಣೆ ಮಾಡಿದ್ದು ಅಂತ ನನಗೆ ಭಾಸವಾಯಿತು. ಇದನ್ನ ಕಾದಂಬರಿ ಅನ್ನೋದಕ್ಕಿಂತ ಒಂದು ಅನುಭವ ಕಥನ ಅಂತ ಕರೆಯೋದು ಹೆಚ್ಚು ಸೂಕ್ತ ಅನ್ನಿಸಿತು ನನಗೆ. ಕಡೆಯ ಎರಡು ಅಧ್ಯಾಯಗಳಲ್ಲಿ ಸು ಮತ್ತು ಪ್ರಕಾಶ್ ಮನಸ್ಸಿನ ತಳಮಳಗಳು ಬಹಳ ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಸು, ಪ್ರಕಾಶ್, ಮಾರಡೂರಿ,ಸು ನ ಸಂಗಾತಿ ಇವೆಲ್ಲ ಪಾತ್ರಗಳು ಆಪ್ತವೆನಿಸುತ್ತವೆ. ಹೇಲಾಳ ಜೀವಕೋಶಗಳು ಮತ್ತವಳ ಸಮಾಧಿಯ ಬಗೆಗಿನ ಸನ್ನಿವೇಶಗಳು, ಪ್ರಕಾಶ್ ಸು ನ ಸಮಾಧಿಯ ಬಳಿಯ ಸನ್ನಿವೇಶಗಳು ಭಾವುಕವಾಗಿವೆ‌. ಮೆಟಾಸ್ಟಾಸಿಸ್, ಆಫ್ಲಾಟಾಕ್ಸಿನ್, ಹಸಿ ಕಾಳುಗಳ ಮೇಲೆ ಬೆಳೆಯುವ ಯಾಸ್ಪರ್ಜಿಲ್ಲುಸ್ ಫ್ಲಾವುಸ್ ಎಂಬ ಶಿಲೀಂಧ್ರ (ಕ್ಯಾನ್ಸರ್ ಕಾರಕ ವಿಷವಾದ ಆಫ್ಲಾಟಾಕ್ಸಿನ್ ಉತ್ಪತ್ತಿಸುವುದು), ಸು ನ ಕ್ಯಾನ್ಸರ್ ಗೆ ಕಾರಣ ಇವೆಲ್ಲವೂ ಕ್ಯಾನ್ಸರ್ ನ ಬಗೆಗಿನ ಬಹಳಷ್ಟು ವೈಜ್ಞಾನಿಕ ವಿಷಯಗಳನ್ನ ತಿಳಿಸುತ್ತವೆ ಮತ್ತಷ್ಟು ಕುತೂಹಲವನ್ನೂ ಹೆಚ್ಚಿಸಿದೆ. ಸು ಬಹಳ ಇಷ್ಟ ಪಟ್ಟು ಹೆಚ್ಚಾಗಿ ತಿನ್ನುತ್ತಿದ್ದ ನೆಲಗಡಲೆಯೇ ಅವನ ಜೀವಕ್ಕೆ ಕುತ್ತು ತಂದಿದ್ದು ಖೇದಕರ. ಅದು ಹೇಗೆ ಎಂದು ತಿಳಿಯಲು ಪುಸ್ತಕ ಓದಲೇಬೇಕು. ಟಿಬೆಟ್ ನೆಲದ ಸಂಸ್ಕೃತಿಯ ಸಣ್ಣ ಪರಿಚಯದೊಂದಿಗೆ ಅಲ್ಲಿಯ ಶವಸಂಸ್ಕಾರದ ರೀತಿ ಭೀಭತ್ಸ ಹುಟ್ಟಿಸುವಂತಿತ್ತು.

 ಅಲೆಕ್ಸಾಂಡರ್ ರೀತಿ ಸು ನ ಎರಡೂ ಕಣ್ಣುಗಳು ಬೇರೆ ಬೇರೆ ಬಣ್ಣಗಳು ಮತ್ತು ಕಾಕತಾಳೀಯವೆಂಬಂತೆ ಅಂತಹದೇ ಬೆಕ್ಕು ಸು ಗೆ ಹತ್ತಿರವಾಗುವುದು ಮತ್ತದು ಅವನನ್ನ ಬಹಳವಾಗಿ ಹಚ್ಚಿಕೊಳ್ಳುವುದು ಯಾವುದೋ ಜನ್ಮದ ಸಂಬಂಧದಂತೆ ತೋರುತ್ತೆ. ಎಷ್ಟೇ ಸಂಶೋಧನೆಗಳನ್ನು ಮಾಡಿದರೂ ಸು ಗೆ ಯಾವುದೇ ರೀತಿಯ ಪ್ರಶಸ್ತಿಗಳು, ಹೆಸರಿನ ಆಸೆ ಇಲ್ಲದೆ ಕೇವಲ ಕ್ಯಾನ್ಸರ್ ನನ್ನು ಸೋಲಿಸಲು ಸಂಶೋಧನೆ ಮಾಡುವನು. ಕೊನೆಗೆ ಸು ಸೋತು ಕ್ಯಾನ್ಸರ್ ಗೆಲ್ಲುವುದು. ಇಲ್ಲಿ ಸು ಮತ್ತು ಅಲೆಕ್ಸಾಂಡರ್ ಗೂ ಹೋಲಿಕೆ ಮಾಡಿರುವುದು ಪರಿಣಾಮಕಾರಿಯಾಗಿದೆ.

ಸು ನ ಆತ್ಮವೃತ್ತಾಂತದಂತಹ ಕಥನ, ಸರಾಗವಾಗಿ ಓದಿಸಿಕೊಳ್ಳುವ ಒಂದು ಚಂದದ ಓದು.

**********************************************

ಚೈತ್ರಾ ಶಿವಯೋಗಿಮಠ

About The Author

1 thought on “”

Leave a Reply

You cannot copy content of this page

Scroll to Top