ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅನುಬಂಧ

ಕವಿತೆ ಅನುಬಂಧ ಅಕ್ಷತಾ ಜಗದೀಶ ಆ ನೀಲಿ ‌ಆಗಸದಿ ಚಿತ್ತಾರ ಮೂಡಿಸಲೇನು…..ಮೌನದಲಿ ಅಡಗಿದ ಭಾವನೆಗಳಮಾತಿನಲ್ಲಿ ಬಹಿರಂಗ‌ ಪಡಿಸಲೇನು…. ಎಲ್ಲಾ ಆಸೆಗಳ , ಎಲ್ಲಾ ಕನಸುಗಳಎಲ್ಲೆಲ್ಲೂ ಓಡುವ ಮನದೊಳಗೆಬಂಧಿಸಿರುವೇ ಈಗ…… ಬರೆವ ಕವಿತೆಯೋಳಗೆಮನದ ಮಾತು ಕುಣಿದಾಡಿ…ಪದಗಳೊಡನೆ‌ ಪುಟಿದೆದ್ದುರಾಗದಲಿ‌ ಬೆರೆತು ಅರಳಿದಾಗ..ಆಹಾ ಸಂತೋಷವೇ…!ಎಂಥಹ ಆಹ್ಲಾದವು.. ಚೂರು ಪ್ರೀತಿ ಭಾವದೊಳು ಬೆರೆತಾಗಸುಂದರ ಬಾಳಿನ ಪ್ರಾರಂಭ ಆಗ..ಇರಲೀ ಹೀಗೆ ಈ ಬಂಧ..ಮರೆಯಲಾರದ ಅನುಬಂಧ. *************************

ಅನುಬಂಧ Read Post »

ಇತರೆ

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ ತಾಲ್ಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ ೨೦೧೯ರಲ್ಲಿ ಪ್ರಕಟಣೆ ಕಂಡಿದೆ. ಗ್ರಾಮೀಣ ಪರಿಸರ, ತಾಯ್ತನ ಈ ಸಂಕಲನದ ಪ್ರಧಾನ ಧಾರೆ. ಹಾಗೆ ಯುದ್ಧವಿರೋಧಿ ಧೋರಣೆ, ಬುದ್ಧನ ಕರುಣೆ ಹಾಗೂ ಅಯ್ಯಪ್ಪನನ್ನು ತಾಯಿಯ ಮಗನಾಗಿ ನೋಡುವ ಪ್ರಮುಖ ಕವಿತೆಗಳು ಅವ್ವ ಮತ್ತ ಅಬ್ಬಲಿಗೆ ಸಂಕಲನದಲ್ಲಿವೆ. ಅಲ್ಲದೇ ಹೆಣ್ಣಿನ ಕನಸು, ಪ್ರೀತಿಯ ಹಂಬಲ, ಬಂಜೆತನ ಹಾಗೂ ಶ್ರಮಿಕವರ್ಗದ ಬಗ್ಗೆ ಇರುವ ಕಳಕಳಿಯ ಕವಿತೆಗಳಿದ್ದು, ಕನ್ನಡ ಕಾವ್ಯ ಪರಂಪರೆಯನ್ನು ಶೋಭಾ ನಾಯ್ಕ ಹಿರೇಕೈ ಕವನಗಳಲ್ಲಿ ಕಾಣಬಹುದಾಗಿದೆ. ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೇಕೆರೆ ಮತ್ತು ವಿಮರ್ಶಕರಾದ ಜಿ. ಎನ್. ರಂಗನಾಥ್ ರಾವ್ ಅವರು ತೀರ್ಪುಗಾರರಾಗಿದ್ದರು. ೨೦೨೧ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತೋಷವಾಗಿದೆ :  ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ’ ಪ್ರಶಸ್ತಿ ಘೋಷಣೆಯಾದ ಕ್ಷಣದ ಕುರಿತು ಕವಯಿತ್ರಿ ಶೋಭಾ ನಾಯ್ಕ ಅವರು ಪ್ರತಿಕ್ರಿಯಿಸಿದ್ದು, ನನಗೆ ಸಂತೋಷವಾಗಿದೆ. ನನ್ನ ಮೊದಲ ಸಂಕಲನಕ್ಕೆ ಪ್ರಶಸ್ತಿ ಬಂದದ್ದು ಇನ್ನೂ ಖುಷಿಯ ಸಂಗತಿ. ನನ್ನ ಹಳ್ಳಿಯ ಸಂಬಂಧ ಗಟ್ಟಿಯಾಗಿದೆ. ನಾನು ಬರೆಯುವುದು ಸಹ  ವಿರಳ. ಶಾಲಾ ಶಿಕ್ಷಕಿಯಾಗಿರುವ ನನಗೆ ಮಕ್ಕಳ ಜೊತೆಗಿನ ಒಡನಾಟ, ನನ್ನ ಪರಿಸರ ಹಾಗೂ ಕನ್ನಡ ಪಠ್ಯಗಳಲ್ಲಿನ ವಚನಗಳು ಸೇರಿದಂತೆ ಕನ್ನಡ ಕವಿಗಳ ಕವಿತೆಗಳನ್ನು ಓದುತ್ತಾ, ಕಲಿಸುತ್ತಾ ನನಗೂ ಬರೆಯುವ ಹಂಬಲ ಹುಟ್ಟಿತು. ಅದೇ ಅವ್ವ ಅಬ್ಬಲಿಗೆಯಾಗಿದೆ. ಮುಂದೆ ನನ್ನೂರಿನ ಚಿತ್ರಗಳನ್ನು ಗದ್ಯ ರೂಪದಲ್ಲಿ ಬರೆಯುವ ಕನಸಿದೆ. ನನ್ನ ಮೇಲೆ ದೇವನೂರು ಮಹಾದೇವ ಅವರ ಬರಹಗಳು, ಎದೆಗೆ ಬಿದ್ದ ಅಕ್ಷರ ತುಂಬಾ ಪ್ರಭಾವ ಬೀರಿವೆ. ಕನ್ನಡದ ಸೌಹಾರ್ದ, ಮಾನವೀಯ ಪರಂಪರೆ ನನ್ನ ಪ್ರಜ್ಞೆಯಲ್ಲಿದೆ ಎಂದರು. *******************************

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ Read Post »

ಪುಸ್ತಕ ಸಂಗಾತಿ

ಬೊಗಸೆ ತುಂಬ ಕನಸು”

ಪುಸ್ತಕ ಪರಿಚಯ ಬೊಗಸೆ ತುಂಬ ಕನಸು ಪ್ರಪಂಚದಲ್ಲಿ ಎರಡು ರೀತಿಯ ಸಾಧಕರಿರುತ್ತಾರೆ. ಒಬ್ಬರು ಇದ್ದ ಹಾದಿಯಲ್ಲಿ ಶ್ರದ್ಧೆಯಿಂದ ಸಾಗಿ ಗುರಿ ತಲುಪುವವರು. ಮತ್ತೊಬ್ಬರು ತಾವೇ ಹಾದಿ ನಿರ್ಮಿಸಿಕೊಂಡು ಗುರಿ ಕಂಡುಕೊಳ್ಳುವವರು. ಹೀಗೆ ಎರಡನೇ ಸಾಲಿನ ಮುಂದಾಳುವಿನ ಹಾಗೆ ನಿಂತು ಯಶ ಬದುಕಿನ ಗಾಥೆ ಬರೆದವರು ಡಾ.ಪ್ರಭಾಕರ ಶಿಶಿಲರು. ಅವರ ಆತ್ಮಕತೆ “ಬೊಗಸೆ ತುಂಬ ಕನಸು” ಓದಿದ ತಕ್ಷಣಕ್ಕೆ ನನಗೆ ಅನ್ನಿಸಿದ್ದು ಹೀಗೆ. ಬಹುಶ: ಈ ಕೃತಿಯನ್ನು ಓದುವ ಎಲ್ಲರಿಗೂ ಹೀಗೊಂದು ಭಾವ ಮೂಡಿಯೇ ಮೂಡುತ್ತದೆ. ಅರ್ಥಶಾಸ್ತ್ರದ ಅಧ್ಯಾಪಕರಾಗಿ. ವಿದ್ಯಾರ್ಥಿ ಜೀವನದ ಉದ್ದಕ್ಕೂ ಕಷ್ಟ ಕಾರ್ಪಣ್ಯಗಳನ್ನೆ ಹೊದ್ದುಕೊಂಡು ಆ ಹರಕು ಆಗಸದ ನಡುವೆಯೂ ಬೆಳ್ಳಿ ಚುಕ್ಕಿಗಳ ಹುಡುಕಿ ಹೆಕ್ಕಿ ತಮ್ಮ ಬದುಕಿಗೆ ಕೌದಿಯಾಗಿಸಿಕೊಂಡವರು. ಅವರ ಆತ್ಮಕತೆಯ ಪುಟದಲ್ಲಿ ಲೇಖಕನ ಮಾತು ಆರಂಭವಾಗುವುದೇ ಹೀಗೆ “ತುಂಬಾ ಅಂದ್ರೆ ತುಂಬಾ ಬಡತನದಿಂದ ಬಂದ ನನಗೆ ಕನಸು ಕಾಣಲು ಕಲಿಸಿದ್ದು ನನ್ನ ತಾಯಿಯ ತಾಯಿ ಬರ್ಗುಳ ಕಾವೇರಮ್ಮ” ಈ ಒಂದು ಸಾಲು ಪ್ರಭಾಕರ ಈ ಪುಸ್ತಕದ ಬಹುತೇಕ ಪುಟಗಳನ್ನು ತನ್ನದಾಗಿಸಿಕೊಂಡಿದೆ. ಸಣ್ಣ ವಯಸ್ಸಿನಲಿ ಬಿಟ್ಟು ಹೋದ ಅಪ್ಪ. ಮತ್ಯಾರೊ ಅಪರಿಚಿತನ ಜೊತೆಗೆ ಶುರುವಾಗುವ ಅಮ್ಮನ ಬದುಕು. ಯಾವ ದೂಷಣೆಯೂ ಇಲ್ಲದೆ ಚಿಕ್ಕಪ್ಪನನ್ನೆ ಒಪ್ಪಿಕೊಳ್ಳುವ ಮುಗ್ಧ ಪುಟ್ಟ ಬಾಲಕ ಬದುಕಿನ ಬಹುತೇಕ ದಿನಗಳವರೆಗೆ ಅನಾಥ ಪ್ರಜ್ಞೆಯಲ್ಲಿಯೇ ಬಳಲುತ್ತಾನೆ. ದಿನಕ್ಕೊಂದು ಊರು ಬದಲಾಯಿಸುವ ಅವರುಗಳ ಜೊತೆ ಹೋಗಲಾಗದೆ ಅಜ್ಜಿ,ಮಾವಂದಿರ ಮನೆಯಲ್ಲಿ ಉಳಿದು ಅಸಹಾಯಕ ಸ್ಥಿತಿ ಎದುರಾದಾಗಲೆಲ್ಲ ಯಾರೊಂದಿಗೂ ಹಂಚಿಕೊಳ್ಳಲಾಗದ ಸಂಕಟದಲ್ಲಿ ಮನೆಯಲಿದ್ದ “ಕೊಂಡಪ್ಪ” ಎತ್ತಿನ ಕುತ್ತಿಗೆಗೆ ಜೋತು ಬಿದ್ದು ಮೌನದಲ್ಲಿ ರೋಧಿಸುವ ಜೀವ ಓದುವ ಹುಚ್ಚಿನ ಸಲುವಾಗಿ ವಯೋಸಹಜ ಭಾವನೆಗಳನ್ನು, ಕಾಮನೆಗಳನ್ನು ಹತ್ತಿಕ್ಕುತ್ತಲೇ ಹೋಗುತ್ತದೆ. ಫೀಸು ಮತ್ತು ಹೊಟ್ಟೆ ಪಾಡಿನ ಸಲುವಾಗಿ, ಬಾಣಸಿಗನಾಗುವ, ಆಳದ ಬಾವಿ ಇಳಿದು ಬಕೆಟ್ಟು ತಂಬಿಗೆ ತೆಗೆದುಕೊಡುವ ಕೆಲಸಗಳಿಗೆ ತನ್ನನ್ನು ತಾನು ಅಣಿಯಾಗಿಸಿಕೊಳ್ಳುವ ಶಿಶಿಲರು ಎಲ್ಲಿಯೂ ಕೂಡ ತಮ್ಮ ಅಂದಿನ ಪರಿಸ್ಥಿತಿಗಾಗಿ ಮರುಗುವುದಿಲ್ಲ. ಮತ್ತೊಬ್ಬರ ಕನಿಕರ ನಿರೀಕ್ಷಿಸುವುದಿಲ್ಲ. ಬದುಕನ್ನು ಬಂದಂತೆ ಎದುರಿಸುತ್ತ ಹೋಗುತ್ತಾರೆ. ತಮ್ಮ ಬಗ್ಗೆ ಕಿಂಚಿತ್ತು ಕಾಳಜಿಯನ್ನು ಮಾಡದಿರುವ ಅಪ್ಪ ಅಮ್ಮನ ಬಗ್ಗೆಯು ಅವರಿಗೆ ತಕರಾರುಗಳಿಲ್ಲ. ಆದರೆ ತಮ್ಮ ಸಲುವಾಗಿ ಒದ್ದಾಡುವ ತಮ್ಮ ಮಾವಂದಿರ ಕುರಿತಾಗಿ ಅವರಿಗೆ ಅಪಾರ ಗೌರವವಿದೆ. ಅವರ ಕಷ್ಟದ ನಡುವೆಯು ತಮಗೆ ಬೆಂಬಲವಾಗಿ ನಿಲ್ಲುವ ಅವರ ಕುರಿತು ವಿಶೇಷ ಅಕ್ಕರೆ ಇದೆ. ಅಲ್ಲದೆ ಅವರಿಗೆ ಹೊರೆಯಾಗಬಾರದು ಎನ್ನುವ ಕಾರಣಕ್ಕೆ ಕೆಲಸಕ್ಕೆ ಸೇರಿ ಒಂದು ವರ್ಷ ಓದನ್ನು ಮೊಟಕುಗೊಳಿಸಿ ತದನಂತರ ಮತ್ತದೆ ದಾರಿಗೆ ಮರಳಿದ ಪ್ರಸ್ತಾಪವು ನಮ್ಮನ್ನು ಶಿಶಿಲರೆಡೆಗೆ ಅಚ್ಚರಿಯಿಂದ ನೋಡುವಂತೆ ಮಾಡುತ್ತದೆ. ಓದಿನ ಹಸಿವು, ಹೊಟ್ಟೆಯ ಹಸಿವು. ಚಿಂತನೆಯ ಹಸಿವು, ಸಾಮಾಜಿಕ ಕಳಕಳಿಗಳ ಹಸಿವು. ಅವರನ್ನು ಮತ್ತೆ ಮತ್ತೆ ಒರೆಗೆ ಹಚ್ಚುತ್ತ ಹೋಗುತ್ತದೆ. ಬಂಗಾರದ ಪದಕ ಸಿಕ್ಕ ಮೇಲೆಯೂ ಕೆಲಸ ಸಿಗದೆ ಕೇವಲ ಒಂದು ವರ್ಷಕ್ಕಷ್ಟೆ ತಾತ್ಕಾಲಿಕ ಬೋಧಕರಾಗಿ ಸೇರಿಕೊಳ್ಳುವ ಶಿಶಿಲರು ಸಿಕ್ಕ ಕೆಲಸಕ್ಕೆ ಕಿಂಚಿತ್ತು ಧಕ್ಕೆ ತರದೆ ಪ್ರತಿಯೊಂದನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುತ್ತಾರೆ. ಜೀವನದ ಪ್ರತಿಯೊಂದು ಘಟನೆಗಳನ್ನು ಹೆಕ್ಕಿ ಹೆಕ್ಕಿ ಸವಿವರವಾಗಿ ಓದುಗನ ಮುಂದಿರಿಸುತ್ತಾರೆ. ಕೆಲವೊಂದು ಸಂಗತಿಗಳನ್ನು ರಸವತ್ತಾಗಿ ಓದುಗರ ಮುಂದಿಡುತ್ತಾರೆ. ಅವುಗಳನ್ನು ಬಿಡಿ ಬಿಡಿಯಾಗಿ ಓದಿದರೆ ಲಲಿತ ಪ್ರಬಂಧದ ಹಾಗೆ  ಆವರಿಸಿಕೊಳ್ಳುತ್ತವೆ. “ಅತೀಂದ್ರಿಯದ ಅಮಲಿನಲ್ಲಿ” ಎನ್ನುವಲ್ಲಿ ನಿರುದ್ಯೋಗಿ ಲೇಖಕರು ಕೆಲಸ ಹುಡುಕಿ ಹೋಗಿ ಪಡುವ ಪರಿಪಾಡಲನ್ನು ಓದಿಯೇ ಅರಿಯಬೇಕು. ಅತ್ಯಂತ ವಿನೋದದ ಭಾಷೆಯ ಬಹಳಷ್ಟು ಸಂಗತಿಗಳು ಈ ಪುಸ್ತಕದಲ್ಲಿ ಮತ್ತೆ ಮತ್ತೆ ಬರುತ್ತವೆ. ಹೀಗಾಗಿ  ಪುಸ್ತಕದ ಮೊದಲನೆ ಪುಟದಲ್ಲಿ ವಿಷಾದ, ವಿನೋದ ವಿಚಾರಗಳ ತ್ರಿವೇಣಿ ಸಂಗಮ ಎಂದ ಮಾತು ಅಕ್ಷರಶ: ಸತ್ಯ ಎನ್ನಿಸುತ್ತದೆ.ಚಿಕ್ಕಂದಿನಲ್ಲಿ ಅಧ್ಯಾತ್ಮದ ಆಸಕ್ತಿ ಹೊಂದಿ ನಂತರದಲ್ಲಿ ಪ್ರಗತಿಪರ ಚಿಂತನೆಗಳ ಮೈಗೂಡಿಸಿಕೊಂಡು ನಂಬಿದ ಸಿದ್ದಾಂತದಂತೆ ಅಂತರಧರ್ಮಿಯ ವಿವಾಹವಾದವರು ಶಿಶಿಲರು. ಸುಮಾರು ೨೯ ಅನುಕ್ರಮಣಿಕೆಯಲ್ಲಿ ಲೇಖಕರ ಬದುಕಿನ ಒಂದೊಂದೆ ಮಜಲುಗಳನ್ನು ಎಳೆಎಳೆಯಾಗಿ ಹೆಕ್ಕಿ ಇಡುವ ಈ ಪುಸ್ತಕ ಸುದೀರ್ಘ ೬೮೮ ಪುಟಗಳನ್ನು ಹೊಂದಿದೆ. ಮೈಸೂರಿನ ರಾಜ್ ಪ್ರಕಾಶನ ಇದನ್ನು ಹೊರತಂದಿದೆ ಬೆಲೆ :೬೫೦ ರೂ ತಮ್ಮ ಪುಟ್ಟ ಊರಿನ ಹೆಸರನ್ನು ತಮ್ಮ ಹೆಸರಿನೊಂದಿಗೆ ಬೆಸೆದುಕೊಂಡು, ಆ ಮೂಲಕ ತನ್ನ ಪಾಡಿಗೆ ತಾನು ಇದ್ದ ಊರನ್ನು ನಾಡಿನ ಉದ್ದಗಲಕ್ಕು ಪರಿಚಯಿಸಿದವರು. ಯಕ್ಷಗಾನ, ತಾಳಮದ್ದಲೆ,ಸಾಹಿತ್ಯ ಹತ್ತಾರು ಪ್ರಕಾರಗಳು, ಸಾಮಾಜಿಕ ಚಟುವಟಿಕೆಗಳು ಶಿಶಿಲರ ಅಗಾಧ ಜ್ಞಾನವನ್ನು, ಅಪರಿಮಿತ ಶ್ರಮವನ್ನು, ಅವರಿಗೆ ಬದುಕಿನ ಕುರಿತಾಗಿ ಇರುವ ಜೀವನೋತ್ಸಾಹವನ್ನು ಪರಿಚಯ ಮಮಮಾಡಿಸುವ ಕೃತಿ *********************************** ದೀಪ್ತಿ ಭದ್ರಾವತಿ

ಬೊಗಸೆ ತುಂಬ ಕನಸು” Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಂಕಣ ಬರಹ ಹವ್ಯಾಸವೆಂಬ ಮಂದಹಾಸ… ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು, ನೋವನ್ನು ಮರೆಸಿ ಮಾಯಿಸಬಲ್ಲದು. ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಹವ್ಯಾಸಗಳ ಒರೆಗೆ ಹಚ್ಚುವುದರಿಂದ ಪುಟಕ್ಕಿಟ್ಟ ಚಿನ್ನವೆಂದು ಸಾಬೀತಾಗುತ್ತದೆ. ಸಾಯಲು ನಿಂತವನಲ್ಲೂ ಒಂದು ಸಣ್ಣ ಹಾಡು, ಒಂದು ಸಣ್ಣ ಕವಿತೆ, ಚೆಂದದ ಚಿತ್ರ ಬದುಕುವ ಆಸೆಯನ್ನು ಹುಟ್ಟಿಸುತ್ತದೆಯೆಂದರೆ ಅದರ ಶಕ್ತಿಯನ್ನು ಯಾರಾದರೂ ಊಹಿಸಬಹುದು. ಹವ್ಯಾಸಗಳೆಂದಾಕ್ಷಣ ನಾವದರಲ್ಲಿ ಅತೀತವಾದ್ದೇನನ್ನೋ ಸಾಧಿಸಲೇ ಬೇಕಂತಿಲ್ಲ. ಅದು ನಮ್ಮ ಆತ್ಮ ಸಂತೋಷಕ್ಕೆ ಒದಗಿ ಬಂದರೂ ಸಾಕು. ಹಳ್ಳಿಗಳಲ್ಲಿ ಅದೆಷ್ಟೋ ಅನಕ್ಷರಸ್ಥರು ತಮಗರಿವಿಲ್ಲದೇ ತಮ್ಮ ವಿರಾಮದ ವೇಳೆಯಲ್ಲಿ ಸೋಬಾನೆ ಪದ ಹಾಡಿಕೊಳ್ಳುವುದು, ಹಸೆ ಹೊಯ್ಯುವುದು, ಜಾನಪದ ಕತೆಗಳನ್ನು ಹೇಳುವುದು, ಕೌದಿ, ದಟ್ಟ ಹೊಲೆಯುವುದು, ಹೊಲಿಗೆ, ಕಸೂತಿ, ರಂಗೋಲಿ, ಹಗ್ಗ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮನೆ ಮುಂದೆ ಕೈತೋಟ ಮಾಡಿ ಅದರಲ್ಲಿ ನಾನಾ ಬಗೆಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದು…. ಇಂತಹ ಅದೆಷ್ಟೋ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. “ಖಾಲಿ ಮೆದುಳು, ದೆವ್ವದ ಮನೆ” ಎನ್ನುವ ಹಾಗೆ ಖಾಲಿ ಕುಳಿತಾಗ ಅನವಶ್ಯಕ ಚಿಂತೆಗಳು ಮುತ್ತಿ ಆರೋಗ್ಯ ಹಾಳುಮಾಡುತ್ತವೆ. ಇಲ್ಲಾ ದೈಹಿಕ ಮತ್ತು ಮಾನಸಿಕ ನಿಷ್ಕ್ರಿಯತೆಯಿಂದಾಗಿ ದೇಹ ರೋಗಗಳ ಗೂಡಾಗುತ್ತದೆ. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಯಸ್ಸಿನ ಮಿತಿ ಅಂತ ಏನೂ ಇಲ್ಲ. ನಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಯಾವುದಾದರೂ ಸರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಯಾವುದೇ ವಯಸ್ಸಿನವರಾಗಲೀ ತಮ್ಮ ವಿರಾಮದ ವೇಳೆಯಲ್ಲಿ ಅನವಶ್ಯಕವಾಗಿ ಸಮಯ ಹಾಳುಮಾಡುವ ಬದಲು ಹವ್ಯಾಸಕ್ಕೆಂದು ಬಳಸಿಕೊಂಡರಾಯಿತು. ಈ ಅಭ್ಯಾಸ, ರೂಢಿ, ಚಟ ಎನ್ನುವ ಪದಗಳು ಹವ್ಯಾಸಕ್ಕೆ ಸಮೀಪದಲ್ಲಿದ್ದರೂ ಹವ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ ನಾವು. ಮಕ್ಕಳು ಏನನ್ನಾದರೂ ಸುಲಭವಾಗಿ ಬಹಳ ಬೇಗ ಕಲಿತುಬಿಡುತ್ತರೆ. ಹಾಗಾಗಿ  ರಜೆಯಲ್ಲಿ ಅವರು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣ ಪುಟ್ಟ ತಿನಿಸು ಪಾನೀಯ ತಯಾರಿಸುವುದನ್ನೂ ಹೇಳಿಕೊಡಬಹುದು. ಮನೆಯನ್ನು ಸ್ವಚ್ಛವಾಗಿ ಒಪ್ಪವಾಗಿ ಇಟ್ಟುಕೊಳ್ಳುವುದು, ಹಿರಿಯರಿಗೆ ಸಹಾಯ ಮಾಡುವುದು, ಸಂಗೀತ,  ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ,  ಕತೆ-ಕವನ ಬರೆಯುವುದು, ಉತ್ತಮ ಪುಸ್ತಕಗಳನ್ನು ಓದುವುದು, ಆಟ ಆಡುವುದು, ಕೃಷಿ, ತೋಟಗಾರಿಕೆ, ಈಜು, ನಾಟಕ, ಯೋಗ, ಭಾಷಣ, ಗೀತಾ ಪಠಣ, ಕರಾಟೆ ಹೀಗೆ ನಾನಾ ಹವ್ಯಾಸಗಳಲ್ಲಿ ಮಕ್ಕಳು ತೊಡಗಿಕೊಳ್ಳಬಹುದು. ಮಕ್ಕಳಿಗೆ ಸ್ಫೂರ್ತಿ ಮತ್ತು ಮಾದರಿಯಾಗುವಂತೆ ಹಿರಿಯರೂ ಸಹ ಹವ್ಯಾಸಗಳಲ್ಲಿ ತೊಡಗಿಕೊಳ್ಳಬಹುದು. ಇಂದಿನ ಜಗತ್ತು ನಮ್ಮ ಹವ್ಯಾಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಅನುಕೂಲಕರವಾಗಿದೆ. ಅದೆಷ್ಟೋ ಜನ ಹಾಗೆ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಯಶಸ್ಸೂ ಕಂಡಿದ್ದಾರೆ. ಕರಕುಶಲ ವಸ್ತು ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸ, ಸಂಗೀತ, ನೃತ್ಯ, ನಟನೆ, ಬರಹ, ಅಡುಗೆಯಂತಹ ಹವ್ಯಾಸಗಳು ಜೀವನದ ನಿರ್ವಹಣೆಗೂ ಆಧಾರವಾಗಿವೆ. ಅದೆಷ್ಟೋ ಮಹಿಳೆಯರು ಇಂತಹ ಗೃಹಾಧಾರಿತ ಉದ್ದಿಮೆಗಳಿಂದಾಗಿ ಸಾಕಷ್ಟು ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಕೂಡ. ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆಗಳಲ್ಲಿ ನಡಿಗೆ, ಓಟ, ವ್ಯಾಯಾಮ, ಹಗ್ಗದಾಟ, ಶಟಲ್, ಟೆನ್ನಿಕಾಯ್ಟ್ ನಂತಹ ಅಲ್ಪ ದೈಹಿಕ ಶ್ರಮ ಬೇಡುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇದು ಬದಲಾದ ನಮ್ಮ ಜೀವನ ಶೈಲಿಗೆ ಮತ್ತು ಕೋವಿಡ್ 19 ನಂತಹ ಪ್ಯಾಂಡಾಮಿಕ್ ಕಾಯಿಲೆಗಳ ವಿರುದ್ಧ ಪರಿಹಾರವಾಗಿಯೂ ತೋರುತ್ತದೆ. ನಾವಿರುವ ಪ್ರದೇಶದಲ್ಲೇ ಸಣ್ಣ ಪುಟ್ಟ ಸಂಘ ಮಾಡಿಕೊಂಡು ಸ್ವಚ್ಛತೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಅಂಶಗಳನ್ನಿಟ್ಟುಕೊಂಡು ಜನರನ್ನು ಒಟ್ಟಾಗಿ ಸೇರಿಸಿ ರಚನಾತ್ಮಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಹವ್ಯಾಸಹಳಿಂದ ಚಿಂತೆ ದೂರವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಬುದ್ಧಿ ಮನಸ್ಸು ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತದೆ. ಧನಾತ್ಮಕ ಚಿಂತನೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರದಂತಹ ಮೌಲ್ಯಗಳು ಬೆಳೆದು ಮನುಷ್ಯ ಪ್ರಬುದ್ಧನಾಗುತ್ತಾನೆ. ಹಾಗಾಗಿ ಯಾರೇ ಆಗಲಿ ಮನುಷ್ಯರಾಗಿ ಹುಟ್ಟಿದ ಮೇಲೆ ಒಂದಾದರೂ ಹವ್ಯಾಸ ಇಟ್ಟುಕೊಳ್ಳಲೇ ಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಗಳು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಹವ್ಯಾಸಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಂಡ ಮೇಲೆ ಸಹಪಠ್ಯ ಚಟುವಟಿಕೆಗಳು ಮತ್ತು ಪಠ್ಯೇತರ ಚುಟುವಟಿಕೆಗಳೂ ಸಮಾನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಎಳೆವಿನಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವುದು ಸಾಧ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ವೇದಿಕೆಗಳೂ ಸಹ ಮಕ್ಕಳ ಹವ್ಯಾಸಗಳನ್ನು ಬೆಳೆಸುತ್ತಿವೆ. ಮಾಧ್ಯಮಗಳು ಮತ್ತು ವಿವಿಧ ಚ್ಯಾನಲ್ಲುಗಳೂ ಸಹ ಹಲವಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಮತ್ತು ಹಿರಿಯರಿಬ್ಬರ ಪ್ರತಿಭೆಗೂ ಪ್ರಚಾರ ಮತ್ತು ವೇದಿಕೆ  ಕಲ್ಪಿಸಿಕೊಡುತ್ತಿವೆ. ಅಕ್ಬರನ ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರಾದ ತಾನಸೇನರು ತಮ್ಮ ಗುರು ಹರಿದಾಸರು ತಮಗಿಂತಲೂ ಶ್ರೇಷ್ಠ ಗಾಯಕರು ಎಂದು ಹೇಳುತ್ತಿದ್ದರು. ಕಾರಣ ತಾನಸೇನರು ಅಕ್ಬರರನ್ನು ಮೆಚ್ಚಿಸಲು ಹಾಡುವವರಾಗಿದ್ದರು. ಆದರೆ ಹರಿದಾಸರು ಆತ್ಮ ಸಂತೋಷಕ್ಕಾಗಿ ಮಾತ್ರ, ಜಗತ್ತಿನಲ್ಲಿ ನಾದ ಹುಟ್ಟುವಷ್ಟೇ ಸಹಜವಾಗಿ ಹಾಡುತ್ತಿದ್ದರು. ಇಬ್ಬರೂ ಶ್ರೇಷ್ಠರೇ. ಆದರೆ ನಮ್ಮ ಲಕ್ಷ್ಯ ಯಾವುದು ಎಂಬುದು ನಮಗೆ ಸ್ಪಷ್ಟವಿರಬೇಕು. ಇನ್ನಾದರೂ ಸಮಯವಿಲ್ಲ, ಕೆಲಸ ಜಾಸ್ತಿ, ನಂಗ್ಯಾವುದರಲ್ಲೂ ಆಸಕ್ತಿ ಇಲ್ಲ ಅಂತೆಲ್ಲ ಸಬೂಬು ಹೇಳುವ ಬದಲು ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಂಡು ಜೀವನ್ಮುಖಿಯಾಗಿ ಹವ್ಯಾಸದ ಮಂದಹಾಸ ಬೀರಬೇಕಿರುವುದು ಈ ಕಾಲದ ತುರ್ತು. **************************************** ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊದಬನಿ-ಹೊಸದನಿ-14 ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ ಉಳಿಯುವ ಆಸ್ಪರಿಯವರ ಕವಿತೆಗಳು ಚನ್ನಬಸವ ಆಸ್ಪರಿ . ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು  ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಕಾಪಾಡಿದ ಅವ್ವನ ನೆನಪು ಅನನ್ಯ. ಅಸ್ಪರಿಯವರ ಈ ಕವಿತೆ ಅವಧಿಯಲ್ಲೂ ಪ್ರಕಟವಾಗಿತ್ತು. ಈ ಪದ್ಯದಲ್ಲೇ ಕವಿ ತಾಯಿಯನ್ನು ಹೀಗೂ ಕಾಣುತ್ತಾನೆ; ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ಎಂದು ಬರೆಯುವಾಗ “ಪಾಪದ ಹೂ” ಎಂದು ಯಾಕಾಗಿ ಬರೆದರೋ ಏನೋ, ಹೊಸ ಕಾಲದ ಹುಡುಗರು ತಾವು ಬಳಸಿದ ಶಬ್ದಗಳ ಬಗ್ಗೆ ತುಂಬಾ ಎಚ್ಚರದಲ್ಲಿರುವ ಅಗತ್ಯತೆ ಇದ್ದೇ ಇದೆ. ಪ್ರಾಯಶಃ ಲಂಕೇಶರು ಬೋದಿಲೇರನನ್ನು ಅನುವಾದಿಸಿದ್ದ ಪಾಪದ ಹೂ ಎನ್ನುವ ಶೀರ್ಷಿಕೆ ಈ ಕವಿಗೆ ತಕ್ಷಣಕ್ಕೆ ಹೊಳೆದಿರಬೇಕು. ಶ್ರೀ ಚನ್ನಬಸವ ಆಸ್ಪರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯವರು. ವೃತ್ತಿಯಿಂದ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.ಅನುವಾದದಲ್ಲಿ ವಿಶೇಷ ಆಸಕ್ತಿ.ವಿಶ್ವವಾಣಿ, ವಿಜಯ ಕರ್ನಾಟಕ, ಅವಧಿ ಪತ್ರಿಕೆಗಳಲ್ಲಿ ಬಿಡಿ ಕವಿತೆಗಳು ಪ್ರಕಟವಾಗಿವೆ.ಸಂಕ್ರಮಣ ಕಾವ್ಯ ಪುರಸ್ಕಾರ ಹಾಗೂ ಪ್ರತಿಲಿಪಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇಲಾಖೆಯಿಂದ ಪೂರ್ವಾನುಮತಿ ಪಡೆದು ಪಾರ್ಟ್ ಟೈಮ್ ಕ್ಯಾಂಡಿಡೇಟ್ ಆಗಿ ಪಿ.ಹೆಚ್.ಡಿ.ಮಾಡುತ್ತಿರುವ ಇವರು ಪಿ.ಯು.ಉಪನ್ಯಾಸಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ.ಪೂ.ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದ ಪ್ರತಿಭಾಶಾಲಿ,  ಸರ್ಕಾರಿ ನೌಕರಿ ಸೇರಿದ ಕೂಡಲೇ ಸಂಬಳ ಸಾರಿಗೆ ಇಂಕ್ರಿಮೆಂಟೆಂದು ಲೆಕ್ಕ ಹಾಕುತ್ತ ಕಳೆದೇ ಹೋಗುವ ಬದಲು ಇಲಾಖೆಯು ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡ ಮಾದರಿ ಯುವಕ. ಕವಿತೆ ಬರೆಯುವುದೆಂದರೆ ಶಬ್ದದ ಧಾರಾಳ ಬಳಕೆ ಮತ್ತು ವಾಚಾಳಿತನವೇ ಆಗುತ್ತಿರುವ ಹೊತ್ತಲ್ಲಿ ಈ ಕವಿ ಶಬ್ದಗಳ ಶಬ್ದದ ಸಂತೆಯೊಳಗೂ ಮೌನವನ್ನು ಹುಡುವುದು ವಿಶೇಷ ಲಕ್ಷಣವೇ ಆಗಿದೆ. ಮಾತಾಗದೇ ಹೊರಬರಲು ಕಾತರಿಸಿ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಎಂದೆನ್ನುವಾಗ ಮಾತ ಪಾತಳಿಯ ಅಸ್ತಿವಾರವನ್ನೇ ಅಲುಗಿಸಿ ಆಳದಾಳದ ಗೊಂದಲವನ್ನು ಹೊರಹಾಕುತ್ತಾರೆ ಮತ್ತು ಕವಿತೆಯ ಅಂತ್ಯದಲ್ಲಿ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ ಎನ್ನುತ್ತಾರಲ್ಲ ಅದು ಸುಲಭಕ್ಕೆ ಸಿಗದ ಸಾಮಾನ್ಯ ಸಂಗತಿಗೆ ನಿಲುಕದ ವಸ್ತುವೂ ಆಗಿದೆ. ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ ಎಂದು “ಮುಕ್ತಿ ಮಾಯೆ” ಎನ್ನುವ ಕವಿತೆಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದೂ ಅದನ್ನೇ ಹಸನು ಮಾಡಿದವನ ಪಾದದ ಧೂಳಿಗೂ ಮುಕ್ತಿ ಸಿಕ್ಕಿತು ಎನ್ನುವಾಗ ಪದ್ಯದ ಆಶಯವನ್ನೇ ಗೊಂದಲದ ಗೂಡಾಗಿಸಿಬಿಟ್ಟಿದ್ದಾರೆ. ಇದು ಸಹಜವಾಗಿ ಆಗುವ ತಪ್ಪು. ಕವಿಯೊಬ್ಬ ತಾನು ಬರೆದುದನ್ನು ಕೆಲವು ದಿನ ಹಾಗೇ ಬಿಟ್ಟು ಕೆಲ ದಿದ ನಂತರ ಅದು ತನ್ನ ರಚನೆಯೇ ಅಲ್ಲವೆಂದುಕೊಂಡು ಓದಿದರೆ ತಪ್ಪು ಕಾಣಿಸುತ್ತದೆ. ಬರೆದ ಕೂಡಲೇ ಪ್ರಕಟಿಸಿ ಬಿಡುವ ಅವಸರ ಈ ಬಗೆಯ ತಪ್ಪನ್ನು ಮಾಡಿಸಿ ಬಿಡುತ್ತದೆ. ನನ್ನ ಮುಖದ ಮೇಲೆ ಥೇಟ್ ಅಪ್ಪನದೇ ಮೂಗು ತುಟಿಗಳಿಗೆ ಅವ್ವನದೇ ನಗು ಅವೇ ಚಿಕ್ಕ ಕಣ್ಣುಗಳು ಚಿಕ್ಕಪ್ಪನಿಗಿರುವಂತೆಯೇ ಮಾತಿನಲಿ ಅಜ್ಜನದೇ ಓಘ ನಡೆದರೆ ಸೋದರಮಾವನ ಗತ್ತು ನನ್ನದೇನಿದೆ? ಎನ್ನುವ ಕವಿತೆಯ ಸಾಲುಗಳು ಈ ಕವಿಯ ಭಿನ್ನ ಧ್ವನಿಗೆ ಪುರಾವೆಯಾಗಿವೆ. ಈ ನಡುವೆ ಅದರಲ್ಲೂ ಈ ಎಫ್ಬಿಯಲ್ಲಿ ಪದ್ಯಗಳೆಂದು ಪ್ರಕಟವಾಗುವ ೯೦% ಪದ್ಯಗಳು ಸ್ವಕ್ಕೆ ಉರುಳು ಹಾಕಿಕೊಳ್ಳುತ್ತಿರುವಾಗ ಈ ಕವಿ ತನ್ನ ಅಸ್ತಿತ್ವ ಅನ್ಯರ ಪ್ರಭಾವದಿಂದ ಆದುದು ಎಂಬ ಪ್ರಜ್ಞೆಯಿಂದ ಆದರೆ ಅದನ್ನು ನೆಗೆಟೀವ್ ಅರ್ಥದಲ್ಲಿ ಹೇಳದೇ ಇರುವುದು ಭಿನ್ನತೆ ಅಲ್ಲದೇ ಮತ್ತಿನ್ನೇನು? ಹುಟ್ಟು ಪಡೆವ ಜೀವಕ್ಕೆ ನೀಗದ ಪರಿಪಾಟಲು ಜೀವ ಪಡೆವ ಕವಿತೆಗೆ ಸಾವಿರ ಸವಾಲು ಎಂದು ಸ್ಪಷ್ಟವಾಗಿ ಅರಿತಿರುವ ಈ ಕವಿಗೆ ಕವಿತೆಯ ರಚನೆ ಸುಲಭದ್ದೇನೂ ಅಲ್ಲ ಎನ್ನುವ ಸತ್ಯ ಗೊತ್ತಿದೆ. ಇದು ಕೂಡ ಅಪರೂಪವೇ. ಸದ್ಯದ ಬಹುತೇಕರು ಪದವೊಂದಕ್ಕೆ ಇರುವ ಅರ್ಥವನ್ನೇ ಅರಿಯದೇ ಚಡಪಡಿಸುತ್ತ ಇರುವಾಗ ಚನ್ನಬಸವ ಆಸ್ಪರಿಯವರು ತಮ್ಮನ್ನು ತಾವೇ ನಿಕಷಕ್ಕೆ ಒಡ್ಡಿ ಕೊಳ್ಳುತ್ತ ಪದ್ಯರಚನೆಯ ಸಂದರ್ಭ ಮತ್ತು ಸಮಯ ಅರಿತವರೂ ಹೌದೆಂದು ಇದು‌ ಪುರಾವೆ ನೀಡಿದೆ. ಬುದ್ಧ ಕತ್ತಲು ಮತ್ತು ದೀಪಗಳ ಜೊತೆಗೆ ತನ್ನ ಒಳಗನ್ನು ತೋಯಿಸಿದ ಕುರಿತೇ ಪದ್ಯವನ್ನಾಗಿ ಬೆಳಸುವ ಆಸ್ಪರಿ ಒಮ್ಮೊಮ್ಮೆ ತೀವ್ರ ವಿಷಾದದ ಸುಳಿಗೂ ಸಿಕ್ಕಿ ಬೀಳುತ್ತಾರೆ ಮತ್ತು ಆ ಅಂಥ ಸುಳಿಯಿಂದ ಹೊರಬರುವುದು ದುಸ್ತರ ಎನ್ನುತ್ತಲೇ ಕಡು ಕಷ್ಟದ ಬದುಕು ತೋರುಗಾಣಿಸಿದ ಬೆಳಕ ದಾರಿಯನ್ನೂ ಸ್ಮರಿಸುತ್ತಾರೆ. ತನ್ನೊಳಗನ್ನೇ ಶೋಧಿಸದೇ ಅನ್ಯರ ಹುಳುಕನ್ನು ಎತ್ತಿಯಾಡುವ ಕಾಲದಲ್ಲಿ ಇದು ಭಿನ್ನ‌. ಆದರೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸುವ ಇವರ ಕವಿತೆಗಳಿಗೆ  ಸಂಕಲನಕ್ಕೆ (ಕತ್ತರಿ ಪ್ರಯೋಗ) ಅಂದರೆ ಅಗತ್ಯಕ್ಕಿಂತ ಉದ್ದವಾದುದನ್ನು ಹ್ರಸ್ವಗೊಳಿಸುವ ಅಗತ್ಯತೆ ಇದ್ದೇ ಇದೆ. ನಿಜದ ಕವಿತೆಗಳು ಈ ಕವಿಯ ಒಳಗೇ ಉಳಿದಿವೆ. ಪ್ರಾಯಶಃ ಕಂಡ ಕಷ್ಟಗಳು ಉಂಡ ಸಂಕಟಗಳಾಚೆಯೂ ಇರುವ ಸಂತಸವನ್ನೂ ಇವರು  ಹೊರತಾರದೇ ಇದ್ದರೆ ಬರಿಯ ವಿಷಾದದಲ್ಲೇ ಈ ಕವಿತೆಗಳು ನರಳಬಹುದು. ಬದುಕೆಂದರೆ ವಿಷಾದ ಸಂತಸ ಭರವಸೆ ಆಸೆ ನಿರಾಸೆಗಳ ಒಟ್ಟು ಮೊತ್ತ. ಬರಿಯ ದುಃಖಾಗ್ನಿಯೇ ಅಲ್ಲದೆ ಸಂತಸದ ಸಂಭ್ರಮದ ಘಳಿಗೆಯ ದಾಖಲೆಯಾಗಿಯೂ ಇವರ ಕವಿತೆಗಳು ಹೊಮ್ಮಲೇ ಬೇಕಾದ ಅನಿವಾರ್ಯವನ್ನು ಈ ಕವಿ ಅರಿಯುವ ಅಗತ್ಯತೆ ಇದೆ. ಚನ್ನಬಸವ ಆಸ್ಪರಿಯವರ ಉದ್ದೇಶಿತ ಸಂಕಲನ ಸದ್ಯವೇ ಹೊರ ಬರಲಿದೆಯಂತೆ. ಅದಕ್ಕೂ ಮೊದಲು ಅವರು ಅದರ ಹಸ್ತಪ್ರತಿಯನ್ನು ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಕೊಡುವ ಸಹಾಯಧನದ ಯೋಜನೆಯಲ್ಲಿ ಪ್ರಕಟಿಸಿದರೆ ಅವರ ಹೆಸರು ಕರ್ನಾಟಕದ ಉದ್ದಗಲಕ್ಕೂ ಗೊತ್ತಾಗುತ್ತದೆ ಎನ್ನುವ ಆಶಯದೊಂದಿಗೆ ಅವರ ಪದ್ಯಗಳನ್ನು ಕುರಿತ ಈ ಟಿಪ್ಪಣಿಗೆ ಅವರದೇ ಐದು ಕವಿತೆಗಳನ್ನು ಸೇರಿಸಿ ಮುಗಿಸುತ್ತೇನೆ. ೧. ಶಬ್ದ ಸಂತೆಯಲಿ ಮೌನದ ಮೆರವಣಿಗೆ ಕೆಲವು ಶಬ್ದಗಳು ತುಂಬ ವಿಚಿತ್ರ ಹೊರಬಂದು ಮಾತಾಗುವುದೇ ಇಲ್ಲ ! ಕೇವಲ ತುಟಿ ಕಿನಾರೆಗಳ ಅರಳಿಸಿಯೋ ಮೂಗು ಮುರಿದೋ ಹಣೆಗೆರೆಗಳ ಬರೆದೋ ಕೆನ್ನೆಗುಳಿಗಳಲಿ ನರ್ತಿಸಿಯೋ ಕಣ್ ಹುಬ್ಬು ಕೊಂಕಿಸಿಯೋ ಇಲ್ಲಾ ಕಣ್ಣು ತಿರುವಿಯೋ ಹೊತ್ತು ತಂದ ಸಂದೇಶ ರವಾನಿಸಿಬಿಡುತ್ತವೆ ಅಖಂಡ ಮೌನದಲಿ… ನಿರುಮ್ಮಳ ನಿದ್ದೆಗೆ ಹಿತದಿಂಬು ಕೆಲವು ಸಲ ಮತ್ತೆ ಹಲವು ಸಲ ಬೂದಿ ಮುಚ್ಚಿದ ಕೆಂಡ ಕೆಲವೊಮ್ಮೆ ಶಬ್ದಗಳು ಅಬ್ಬರಿಸುತ್ತವೆ ಮಾತು ಸೋಲುತ್ತದೆ ಆದರೂ ಉದುರುತ್ತಲೇ ಹೋಗುತ್ತವೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಹಂಕಾರದ ಕಣ್ಣಾಮುಚ್ಚಾಲೆಯಲಿ ಮೈಮರೆವ ಮನಸಿಗೆ ಚಾಟಿ ಏಟು ಯಾವ ಲೆಕ್ಕ? ಒಮ್ಮೊಮ್ಮೆ ಶಬ್ದಗಳು ಜಾರುತ್ತವೆ ನಾಲಗೆಯಿಂದ ಚಿಮ್ಮುತ್ತವೆ ಬಾಯಿಂದ ತಿವಿಯುತ್ತವೆ ಒಲವ ಹನಿಗೆ ಬಾಯ್ದೆರೆದ ದೈನೇಸಿ ಎದೆಯನು ಇಂಥ ಶಬ್ದಗಳ ಅನಾಯಾಸವಾಗಿ ಹಡೆದು ಧ್ವನಿಬಟ್ಟೆ ತೊಡಿಸಿ ಸಿಂಗರಿಸಿ ಮಾತು ಎಂದು ಹೆಸರಿಟ್ಟು ತೇಲಿಬಿಟ್ಟ ಮನಸಿಗೆ ವೇಗ ರಭಸ ದಾರಿ ಗುರಿ ಯೇ ಗೊತ್ತಿಲ್ಲದಿರುವಾಗ ಅವು ಹಾದರಕ್ಕೆ ಹುಟ್ಟಿದ ಮಕ್ಕಳಲ್ಲದೆ ಮತ್ತೇನು? ಇನ್ನೂ ಕೆಲ ಶಬ್ದಗಳು ಮೈಮುರಿಯುತ್ತವೆ ಆಕಳಿಸುತ್ತವೆ ತೂಕಡಿಸುತ್ತವೆ ಜೋಲಿ ಹೊಡೆಯುತ್ತಲೇ ನಾಲಿಗೆ ಪಲ್ಲಂಗದಲ್ಲಿ ಪವಡಿಸುತ್ತವೆ ಮತ್ತೆ ಕೆಲವು ಗಂಟಲ ಕಣಿವೆಯಲ್ಲಿ ಜಾರಿ ಬೀಳುತ್ತವೆ ತುಟಿಸರಹದ್ದುಗಳಲಿ ಸಿಕ್ಕಿ ನರಳುತ್ತವೆ ಹಲ್ಲುಗಂಬಗಳಿಗೆ ನೇಣು ಬಿಗಿದುಕೊಳ್ಳುತ್ತವೆ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಹೀಗೂ ಉಂಟು- ಶಬ್ದಗಳನ್ನು ಒದ್ದು ಹೋದ ಬುದ್ಧ ಲೋಕದ ಮಾತಾದ ಬಹುಶಃ ಈ ಲೋಕದ ಪಾಪಗಳೆಲ್ಲ ತೀರಿದ ದಿನ ಅಥವಾ ಮಾಡಿದ ಮಾಡುವ ಪ್ರತಿ ಪಾಪಕ್ಕೂ ವಿಮೋಚನಾ ಪತ್ರ ದೊರೆತೀತೆಂಬ ಭರವಸೆ ದಕ್ಕಿದ ದಿನ ಅಥವಾ ಪಾಪ ಪುಣ್ಯಗಳಾಚೆಯ ನಿರ್ವಾತದಲ್ಲಿ ನೆಲೆಯಾದ ದಿನ ಉದುರಬಹುದು ಶಬ್ದಗಳು ನಿಶ್ಯಬ್ದದ ಕೂಸುಗಳಾಗಿ ಮಾರ್ದನಿಸಬಹುದು ಆತ್ಮಗರ್ಭದಿಂದ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ             -ಚನ್ನಬಸವ ಆಸ್ಪರಿ ೨.ಮುಕ್ತಿ ಮಾಯೆ ಕವಿತೆ ಒಡಲಿಂದ ಹಠಾತ್ತನೆ ಕಳಚಿದ ಅನಾಥ ಸಾಲು ಭಾವಕ್ಕೆ ಭಾರವೇ? ಮುಕ್ತಿ ಕವಿತೆಗೋ ದೈನೇಸಿ ಪದಗಳಿಗೋ ! ಟೊಂಗೆ ತೋಳಿಂದ ಹಗುರ ಕುಸಿದ ಹಣ್ಣೆಲೆ ಮರಬಸಿರಿಗೆ ಭಾರವೇ? ಮುಕ್ತಿ ಟೊಂಗೆಗೋ ಹಣ್ಣೆಲೆಯ ಜೀವಕೋ ! ಗಾಳಿ ಉಸಿರಿಂದ ಸರಕ್ಕನೆ ಸೂತ್ರ ಹರಿದ ಗಾಳಿಪಟ ದಾರಕ್ಕೆ ಭಾರವೇ? ಮುಕ್ತಿ ಆಕಾಶಕ್ಕೋ ತಲೆಮರೆಸಿಕೊಂಡ ಗಾಳಿಪಟಕ್ಕೋ ! ಬಾನಗೊಂಚಲಿಂದ ಧುತ್ತನೆ ಉದುರಿದ ನಕ್ಷತ್ರ ಬೆಳಕಿಗೆ ಭಾರವೇ? ಮುಕ್ತಿ ಬೆಂಕಿಗೋ ಕುದಿಕುದಿದು ಆರಿದ ನಕ್ಷತ್ರದೊಡಲಿಗೋ ! ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ                            -ಚನ್ನಬಸವ ಆಸ್ಪರಿ ೩. ಅವ್ವ ಎಂಬ ರೇಖಾಚಿತ್ರ ಅವ್ವ ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ ನನ್ನ  ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ ಅಪ್ಪ ಮನೆ ಕಟ್ಟಲಿಲ್ಲ ಅವ್ವ ಮನೆಯ ಗೌಡತಿ ಆಗಲಿಲ್ಲ ಗುಳೇ ಹೊರಟ ಅಪ್ಪನ ಹಿಂದೆ ಗಂಟು ಮೂಟೆ ಕಟ್ಟಿ ಊರೂರು ಅಲೆದಳು ಮರುಮಾತನಾಡದೆ ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ ತಾನೇ ಬಣ್ಣದ ಪತಂಗವಾಗುತ್ತಿದ್ದ ಅವ್ವನ ಮಾಸಿದ ಸೀರೆ ಸೆರಗಿನ ತುಂಬ ಹಳಸಿದೆದೆಯ ಕನಸುಗಳು ಉಳಿದರ್ಧ ಬದುಕು ನೀರ ಮೇಲೆ ತೇಲಿ ಬಿಟ್ಟ ಬಾಗಿನಕ್ಕೆ ಮಾಡಿದ ಸಿಂಗಾರ ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಪುಸ್ತಕದಲ್ಲಿಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ ಪಾಟೀಚೀಲದ ಹೊಲಿಗೆಗಂಟಿದ ಅವ್ವನ ಬೆರಳ ತುದಿಯ ಬಿಸಿ ಇನ್ನೂ ಆರಿಲ್ಲ ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ವಿಚಿತ್ರ ನರಳಿಕೆಗಳನುಂಡು ತೇಗುವ ವಾರ್ಡಿನ ಬಿಳಿ ಗೋಡೆಗಳ ಮಧ್ಯೆ

Read Post »

You cannot copy content of this page

Scroll to Top