ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಲಂಕೇಶ್ ಮೋಹಕ ರೂಪಕಗಳ ನಡುವೆ

ಪುಸ್ತಕ ಪರಿಚಯ ಲಂಕೇಶ್ ಮೋಹಕ ರೂಪಕಗಳ ನಡುವೆ ಲೇಖಕರು:-ಶೂದ್ರ ಶ್ರೀನಿವಾಸ,ಪ್ರಕಟನೆ-ಪಲ್ಲವ ಪ್ರಕಾಶನ,೯೪೮೦೩೫೩೫೭,ಪುಟ-೨೮೨,ಬೆಲೆ-೨೫೦/- ..     ನಾನು ಪಿಯುನಲ್ಲಿ ಓದುವಾಗಲೇ ಲಂಕೇಶ್ ಪತ್ರಿಕೆ ಗುಂ ಬಂ ಎಂಬ ಹೊಸ ನುಡಿಗಟ್ಟಿನೊಂದಿಗೆ ಕನ್ನಡದ ಜಾಣ ಜಾಣೆಯರಿಗಾಗಿ ಎಂಬ ಟ್ಯಾಗ್ ಲೈನ್ ದೊಂದಿಗೆ ಅದೇ ಆರಂಭವಾಗಿತ್ತು.ಪ್ರಥಮ ಸಂಚಿಕೆಯಿಂದ ಆರಂಭಿಸಿ ಕೊನೆಯ ಸಂಚಿಕೆಯವರೆಗೂ ಬಿಟ್ಟು ಬಿಡದೇ ಓದಿದ ನನಗೆ ಅತ್ಯಂತ ಬೆಳೆಯುವ ವಯಸ್ಸಿನಲ್ಲಿ ಪ್ರಭಾವ ಬೀರಿದವರು ಲಂಕೇಶ್ ಹಾಗೂ ಅವರ ಪತ್ರಿಕೆಯ ಬಳಗದ ಆಗಿನ ಎಲ್ಲ ಲೇಖಕರು,ವರದಿಗಾರರು.ಇಡೀ ಪತ್ರಿಕೆಯ ಒಂದಕ್ಷರವು ಬಿಡದೇ ಓದುತ್ತಿದ್ದೆ.ಲಂಕೇಶ, ತೇಜಸ್ವಿ,ಚಂಪಾ, ಶೂದ್ರ, ರಾಮದಾಸ,ಎಂ ಡಿ ಎನ್, ಎಚ್,ಎಲ್, ಕೇಶವಮೂರ್ತಿ,ಪುಂಡಲೀಕ್ ಶೇಠ,ಬಿ.ಚಂದ್ರೆಗೌಡ, ರವಿಂದ್ರ ರೇಷ್ಮೆ,ಲಿಂಸ್, ರಾಮಚಂದ್ರ ಶರ್ಮಾ, ಚಂದ್ರಶೇಖರ ಆಲೂರು, ಸತ್ಯಮೂರ್ತಿ ಆನಂದೂರು, ಟಿ.ಕೆ.ತ್ಯಾಗರಾಜ್, ಡಿ.ಆರ್,ನಾಗರಾಜ್, ಡಾ.ಸಿದ್ದಲಿಂಗಯ್ಯ,ಹೀಗೆ ಕೊನೆಗೆ ಬಸವರಾಜುರವರೆಗೆ ಪತ್ರಿಕೆಯ ಎಲ್ಲ ಬರಹಗಾರರ ದಟ್ಟ ಪ್ರಭಾವ ಪರಿಚಯ ಅವರ್ಯಾರನ್ನು ಕಾಣದೇ ಸಹ ನನ್ನ ಮೇಲೆ ಆಗಿತ್ತು.   ಪತ್ರಿಕೆ ಇಡೀ ಕರ್ನಾಟಕಕ್ಕೆ ಹೊಸ ದೃಷ್ಟಿಕೋನ ಕೊಟ್ಟಿದ್ದು ಸುಳ್ಳಲ್ಲ.ಅಂತಹ ಲಂಕೇಶರ ಕುರಿತು ಈ ಕೃತಿ ರಚಿಸಿದ, ನಾನು ತುಂಬಾ ಗಾಢವಾಗಿ ಗಮನಿಸಿದಂತಹ ಸೂಕ್ಷ್ಮ ಸಂವೇದನೆಯ ಲೇಖಕರು ಈ ಶೂದ್ರ ಶ್ರೀನಿವಾಸ್ ಸರ್.ಅವರು ತಮ್ಮ ಒಡನಾಟದ ಮೂಲಕ ಪತ್ರಿಕೆಯ ಮುಖದ ಮೂಲಕ ಮಾತ್ರ ದಟ್ಟ ಪರಿಚಯವಿದ್ದ ಲಂಕೇಶರನ್ನು ಅವರ ಎಲ್ಲ ಕೋನಗಳಿಂದಲೂ ನಿರಂತರ ಒಡನಾಟದ ಕಾರಣವಾಗಿ, ಸೂಕ್ಷ್ಮವಾಗಿ ಅವಲೋಕನ ಮಾಡಿ ಈ ಕೃತಿಯಲ್ಲಿ ಅತ್ಯಂತ ವಸ್ತುನಿಷ್ಠವಾಗಿ, ಇದ್ದುದಿದ್ದಂತೆ ಎಲ್ಲ ಪ್ರೀತಿ ಅಭಿಮಾನ,ರಾಗ ದ್ವೇಷಗಳನು ಮೀರಿ ಒಬ್ಬ ಸಂತನ ಮನಸ್ಥಿತಿಯಿಂದ ಸುಂದರ ರೂಪಕವಾಗಿಸಿದ್ದಾರೆ. ಈ ಕೃತಿಯಲ್ಲಿ ಅತ್ಯಂತ ಕಲಾತ್ಮಕವಾಗಿ, ಓದಿದವರಿಗೆ ಬಹುಕಾಲ ಕಾಡುವಂತೆ ಕಟ್ಟಿಕೊಟ್ಟಿದ್ದಾರೆ. ಅವರ ಅನೇಕ ಮಾತುಗಳನ್ನು ಉಲ್ಲೇಖಿಸಿ ಓದುಗರು ಅವನ್ನೆಲ್ಲ ಅರ್ಥಮಾಡಿಕೊಳ್ಳುವಂತೆ ಲಂಕೇಶರನ್ನು ಬಹುದೊಡ್ಡ ಕ್ಯಾನ್ವಾಸ್ ನಲ್ಲಿ ಕಲಾಕೃತಿಯಾಗಿಸಿ ನಮ್ಮ ಮುಂದೆ ನಿಲ್ಲಿಸಿ ಈ ಕೃತಿ ಸಾರ್ಥಕತೆ ಪಡೆದಿದೆ.ಲಂಕೇಶರ ಒಳಗಿನ ಮೂರು ವ್ಯಕ್ತಿತ್ವಗಳನ್ನು ಬಹಳ ಚೆಂದ ನಿರೂಪಿಸಿದ್ದಾರೆ. ಮತ್ತೆ ಮತ್ತೆ ಓದಬಹುದೆನಿಸುವ ಕೃತಿ ಇದು. ೧೯೯೧ ರಲ್ಲಿ ಪ್ರಕಟವಾದ ಮೊಟ್ಟಮೊದಲ ನಮ್ಮ ಅಕ್ಕಾಳಿಗೊಂದು ಪ್ರಶ್ನೆ ಹಾಗೂ ಇತರ ಕವನಗಳು ಸಂಕಲನಕ್ಕೆ ಆ ಕಾಲದಲ್ಲಿ ಬೆನ್ನುಡಿ ಬರೆದು ಕೊಟ್ಟಿದ್ದರು ಈ ಶೂದ್ರ ಸರ್,ಹಲವು ವರ್ಷ ಶೂದ್ರ ಸಹ ನನಗೆ ಬರುತ್ತಿತ್ತು. ಲಂಕೇಶರ ದಟ್ಟ ಪ್ರೀತಿ, ವ್ಯಂಗ್ಯ,ವಿಡಂಬನೆ ಎಲ್ಲವೂ ಶೂದ್ರರ,ಹಾಗೂ ಇತರರ ಮೇಲಾಗುತ್ತಿದ್ದದ್ದು ಗಮನಿಸುತ್ತಾ ಬೆಳೆದಿದ್ದೇವೆ.ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಇವರ ದಟ್ಟ ಪರಿಚಯ, ಪ್ರಭಾವಕ್ಕೆ ಒಳಗಾದದ್ದು ಉಂಟು.ಲಂಕೇಶ ಬಳಗ ಅಂದ್ರೆ ಓದಲು ಖುಷಿ ಆಗುತ್ತಿದ್ದ ಕಾಲವದು.    ಈ ಕೃತಿ ಎಪ್ಪತ್ತರ ದಶಕದಿಂದ ಆರಂಭಿಸಿ ಒಟ್ಟು ನಾಲ್ಕು ದಶಕಗಳವರೆಗಿನ ಇಡೀ ಸಾಹಿತ್ಯಕ ವಾತಾವರಣ,ರೈತ ಚಳುವಳಿ, ಗೋಕಾಕ ಚಳುವಳಿ,ಬೂಸಾ ಚಳುವಳಿ, ರಾಜಕೀಯ ಸ್ಥಿತ್ಯಂತರಗಳು,ಒಕ್ಕೂಟ,ಹೀಗೆ ಎಲ್ಲವನ್ನು ಒಬ್ಬ ಸಾಕ್ಷಿಪ್ರಜ್ಞೆ ಯಾಗಿ ಅವಲೋಕಿಸಿ ಅತ್ಯಂತ ಮಾನವೀಯ ನೆಲೆಯಲ್ಲಿ ಒಳಗೊಂಡು, ಖುಷಿ ಪಟ್ಟು, ನೊಂದು ಬೆಂದು ಈ ಕೃತಿ ರಚಿಸುವ ಮೂಲಕ ಹಗುರವಾಗಿದ್ದಾರೆನಿಸುತ್ತದೆ.ಅಷ್ಟೇ ಮುಖ್ಯವಾಗಿ ಈ ಎಲ್ಲ ಸಂದರ್ಭಗಳಲ್ಲೂ ಅವರ ಪಾಲ್ಗೊಳ್ಳುವಿಕೆ ತುಂಬಾ ಮಹತ್ವದ್ದೆನ್ನುವದು ಸಹ ಅಷ್ಟೇ ಮುಖ್ಯವಾಗಿದೆ.ಶೂದ್ರ ಸರ್ ನಿಮಗೆ ನೂರು ನಮನ.ಪ್ರಕಟಿಸಿ ಓದಲು ಹಚ್ಚಿದ ನಾಡಿನ ಹೆಮ್ಮೆಯ ಪ್ರಕಾಶನದ ಶ್ರೀ ವೆಂಕಟೇಶ್ ಅವರಿಗೂ ಅಭಿನಂದನೆಗಳು.ಲಂಕೇಶರು ನಮ್ಮ ಪ್ರಜ್ಞೆಯ ಒಂದು ಭಾಗವಾಗಿ ಸದಾ ನಮ್ಮೊಳಗೆ ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳುವಂತಹ,ಲಂಕೇಶರ ಬಗ್ಗೆ ಪ್ರೀತಿಯುಳ್ಳ ಎಲ್ಲರೂ ಒಮ್ಮೆಯಾದರು ಓದಲೇಬೇಕಾದ ಕೃತಿ ಇದು. *******************************

ಲಂಕೇಶ್ ಮೋಹಕ ರೂಪಕಗಳ ನಡುವೆ Read Post »

ಕಾವ್ಯಯಾನ

ಏನು ಬರೆಯಲಿ ……!

ಕವಿತೆ ಏನು ಬರೆಯಲಿ ……! ಅಕ್ಷತಾ ಜಗದೀಶ. ಬರೆಯೆಂದೊಡನೆ‌ ಏನುಬರೆಯಲಿ ನಾನುಕವನದ ಸಾಲುಗಳಿವುತಾವಾಗಿ‌ ಸಾಗುತಿಹವು… ಎಂದೂ ಕಾಣದ ಮೊಗವಜೊತೆಯಲಿ ಕಳೆಯದ ದಿನವಆ ಕ್ಷಣಗಳ ಕುರಿತು….ಏನೆಂದು‌ ಬರೆಯಲಿ ನಾನು… ದೂರದ ಕಾನನದೊಳಿರುವತೊರೆಯ‌ ಮೇಲಿನ ಬುಗ್ಗೆನಾ ಕಾಣ ಹೊರಟಾಗ…ಮಾಯವಾಗಿ‌ ಹೋದಾಗ….ಆ ಬುಗ್ಗೆಯ ಕುರಿತು‌ ನುಡಿಯೆಂದರೆಏನು‌ ನುಡಿಯಲಿ ನಾನು…. ಬಾನಲಿ ಮೂಡಿದ‌ ಮಿಂಚೊಂದುಕ್ಷಣದಲಿ ಮೂಡಿ ಮಾಯವಾಗಿಇರುಳ ದಾಟಿ ನಾ ಬಂದಾಗಹಗಲಲಿ ಏನು‌ ಹೆಳಲಿ ನಾನು.. ಬರೆಯೆಂದೊಡನೆ ಏನು‌ಬರೆಯಲಿ ನಾ‌ನು…….***

ಏನು ಬರೆಯಲಿ ……! Read Post »

ಕಾವ್ಯಯಾನ, ಗಝಲ್

ಲಂಕೇಶ-೭೮

ಲಂಕೇಶ-೭೮ ಸಿದ್ಧರಾಮ ಹೊನ್ಕಲ್ ಯಾರಿಗೂ ಏನನ್ನೂ ಬೇಡಲಿಲ್ಲ,ಬಯಸಲಿಲ್ಲ ಈ ಲಂಕೇಶಎಲ್ಲರಿಗೂ ಪಾಪಪ್ರಜ್ಞೆಯಾಗಿ ಕಾಡದೇ ಬಿಡಲಿಲ್ಲ ಈ ಲಂಕೇಶ ತಾನು ನಡೆದದ್ದು ಬರೀ ದಾರಿಯಲ್ಲ ಈ ಲಂಕೇಶನಿಗೆಅದು ರಾಜಮಾರ್ಗವೆಂದು ತೋರಿದನಲ್ಲ ಈ ಲಂಕೇಶ ಕನ್ನಡದ ಮೇರು ಲೇಖಕ ಮೇಲಾಗಿ ನಿರ್ಭೀತ ಪತ್ರಕರ್ತಶತಮಾನದ ದೃಷ್ಟಿಕೋನ ಬದಲಿಸಿದನಲ್ಲ ಈ ಲಂಕೇಶ ಕಥೆ,ಕವಿತೆ,ಪತ್ರಿಕೆ,ಸಿನೆಮಾ ನಿರ್ದೇಶನ ಹೀಗೆ ನಡೆದಂತೆಲ್ಲಾ ದಾರಿಗಳುನಡೆದ ದಾರಿಯಗುಂಟ ಬರೀ ಮುಳ್ಳುಗಳೇ ಹಸನಾದವಲ್ಲ ಈ ಲಂಕೇಶ ಯಾರಿಗೂ ಅಂಜಲಿಲ್ಲ ಅಳುಕಲಿಲ್ಲ ಯಾರ ಬಿಢೆಗೂ ಬೀಳಲಿಲ್ಲ“ಹೊನ್ನಸಿರಿ”ಕರ್ನಾಟಕಕ್ಕೆ ಹೊಸ ಮನ್ವಂತರ ಸೃಷ್ಟಿಸಿದರಲ್ಲ ಈ ಲಂಕೇಶ ******************************

ಲಂಕೇಶ-೭೮ Read Post »

ಇತರೆ

ಕಾದಂಬರಿ ಕುರಿತು ಬಂಡಾಯ ವ್ಯಾಸರಾಯ ಬಲ್ಲಾಳ ಒಳ್ಳೆಯ ಓದುಗ ವಿಮರ್ಶಕನಾಗುತ್ತಾನೆ ನಿನ್ನೆ ಮೊನ್ನೆ  ಎಲ್ಲಿಯೋ ಓದಿದ ನೆನಪು. ಬಹುಶಹ ಗಂಗಾಧರ್ ಸರ್ ‘ನನ್ನ ಪುಟ’ದಲ್ಲಿ?  ನಾನೋ ವಿಮರ್ಶೆ ನನಗೆ ಒಗ್ಗಲ್ಲ ಎನ್ನುತ್ತಲೇ ಹಾಗೆ ಓದಿ ಹೀಗೆ ತಲೆ ಕೊಡವಿಕೊಳ್ಳುವ ಜಾತಿ. ಆದರೆ ಓದಿ ಬದಿಗಿಟ್ಟಮೇಲೂ ಬಿಡದಲೇ  ಬೆನ್ನಿಗೆ ಬಿದ್ದು ದನಿಯಾಗಿ ಕಾಡಿದ ಕ್ರತಿಗಳ ಕಾರಣದಿಂದಲೇ ಒಮ್ಮೊಮ್ಮೆ ನೋಡೋಣವೆಂತಲೇ ಕಚ್ಚಿ ಕೂತಿದ್ದಿದೆ. ಅಂಥ ಕ್ರತಿಗಳಲ್ಲೊಂದು ಇತ್ತೀಚೆಗೆ ಕೈಗೆ ಬಂದ ಪುಸ್ತಕ ಬಲ್ಲಾಳರ ‘ಬಂಡಾಯ’.  ತಮ್ಮ ಕೊನೆಯ ದಿನಗಳಲ್ಲಿ ಬೆಂಗಳೂರಿನಲ್ಲಿದ್ದು ೩೦೦೮ರಲ್ಲಿ ನಿಧನರಾದ  ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳರು ಕರ್ನಾಟಕದ ಇತ್ತೀಚಿನ ಓದುಗರಿಗೆ ಬರಹಗಾರರಿಗೆ ತೀರಾ ಪರಿಚಿತರೇನಲ್ಲ. ಕಾರಣ ತಮ್ಮ ಬದುಕಿನ ಅರ್ಧ ಶತಮಾನಗಳಷ್ಟು ಕಾಲವನ್ನು ಅವರು ವಾಣಿಜ್ಯ ನಗರ ಮುಂಬೈನಲ್ಲಿಯೇ ಕಳೆದವರು. ಕನ್ನಡದ ಪ್ರಗತಿಪರ ನವ್ಯಬಂಡಾಯ ಸಾಹಿತ್ಯಗಳ ಪ್ರಭಾವದ ಸುತ್ತಿಗೆ ಸಿಕ್ಕಿಕೊಂಡೇ ಬೆಳೆದ ಬಲ್ಲಾಳರನ್ನು ಕನ್ನಡದ ಕೆಲವೇ ವೈಚಾರಿಕಪರ ಕಾದಂಬರಿಕಾರರ  ಸಾಲಿನಲ್ಲಿ ಅವರನ್ನ ತಂದು ನಿಲ್ಲಿಸಿದ್ದು ಅವರ ಬಂಡಾಯ ಕಾದಂಬರಿ. ನಿತ್ಯ ಬದುಕಿನ ನಿರಂತರ ವ್ಯವಸ್ಥೆಯಾದ ಶ್ರಮಿಕ ವರ್ಗ ಹಾಗೂ ಸಾಮ್ರಾಜ್ಯಶಾಹಿಗಳ ನಡುವಿನ ಸಂಘರ್ಷ, ಇದರಿಂದಾಗಿಯೇ ಹುಟ್ಟಿಕೊಂಡ ಕಾರ್ಮಿಕ ಸಂಘಟನೆಗಳು, ಶ್ರಮಿಕರ ಹಕ್ಕುಗಳರಕ್ಷಣೆಗಾಗಿಯೇ ಹುಟ್ಟಿಕೊಂಡ ಟ್ರೇಡ್ ಯೂನಿಯನ್ಗಳು ನಿಜವಾದ ಉದ್ಧೇಶಗಳನ್ನು ಮರೆತು ತಮ್ಮಬಲ ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ನಡೆಸುವ ತೆರೆಯ ಮರೆಯ ತಂತ್ರ ಕುತಂತ್ರಗಳು,  ಇಂತ ಸಂಘಟನೆಗಳನ್ನು ಹಿಡಿತದಲ್ಲಿಡಲು ಸಾಮ್ರಾಜ್ಯಶಾಹಿಗಳ ಕಸರತ್ತು , ಇಂತಹ ಧನದೊರೆಗಳನ್ನು ಕಾಯುವದೇ ತಮ್ಮ ಕರ್ತವ್ಯವೆಂದು ಸದಾ ಉಧ್ಯಮಿಗಳ ಪರವಾಗಿ ನಿಂತು ಅವರು ಕೊಡುವ ಜಿನ್ ವ್ವಿಸ್ಕಿಗಳ ಹೊಳೆಯಲ್ಲಿ ಹರಿದುಹೋಗುವ ಪೋಲೀಸ್ ಇಲಾಖೆ ಹಾಗೂ ರಾಜಕೀಯದ ಕರಾಳ ಮುಖಗಳನ್ನು ಬಯಲು ಮಾಡುತ್ತ ನಡೆದ ವಸ್ತುನಿಷ್ಠ ಕ್ರತಿ ಬಂಡಾಯ       ಮುಂಬೈ ಎಂದೊಡನೆ ಅಮಿತಾಬಚ್ಛನ್ ಖಾನ್ ಕುಮಾರ ಖನ್ನಾಗಳು, ಶಾಪಿಂಗ್ ಕಾಂಪ್ಲೆಕ್ಸಗಳು, ಲೋಕಲ್ ಟ್ರೇನುಗಳು, ಜುಹುಬೀಚ್, ಗಗನಚುಂಬಿ ಕಟ್ಟಗಳು, ನೆಲ ಕಾಣದಷ್ಟು ವಾಹನಗಳು, ಕಾಮಾಟಿಪುರದ ಕೆಂಪುದೀಪದ ಕೆಳಗಿನ ಬದುಕಿಗಾಗಿ ಮಾನವೀಯತೆ ಉಳಿದುಕೊಂಡ ಎದೆಯ ಸುಯ್ಯು ಎಂದಷ್ಟೇ ಹರವಿಕೊಳ್ಳುವ ನಮ್ಮ ತಲೆಯೊಳಗೆ ಮುಂಬೈ ಎಂದರೆ ಶ್ರಮಜೀವಿಗಳು, ಅವರ ಕಷ್ಟ ಕೋಟಲೆಗಳು, ಅವರ ನಿತ್ಯದ ಬದುಕುಗಳು, ಅವರು ದುಡಿವ ಯಂತ್ರಗಳೊಳಗೆ ಸಿಕ್ಕು ಕಳೆದು ಹೋಗುವ ಕೈಕಾಲುಗಳು, ಕಂಪನಿಯ ಲಾಕೌಟ್ ಗಳು, ಉರಿಯದೇ ತಣ್ಣಗೆ ಕೂರುವ ಶ್ರಮಿಕರ ಒಲೆಗಳು,  ಸೋರುವ ಸಿಂಬಳದ ಮಗು, ಗೂರಲು ಕೆಮ್ಮಿನ ಮುದುಕರು, ಸದ್ದಿಲ್ಲದೇ ಕೊಲೆಯಾಗಿ ಹೆಣವಾಗಿ ಮಲಗುವ ಕಾರ್ಮಿಕ ಮುಖಂಡರುಗಳು, ಇದೇ ಮುಂಬೈನ ನಿಜವಾದ ಮುಖ ಅನ್ನುವಷ್ಟರ ಮಟ್ಟಿಗೆ ನಮ್ಮನ್ನು ತನ್ನೊಳಗೆ ಸಿಕ್ಕಿಸಿಕೊಳ್ಳುತ್ತದೆ ಬಲ್ಲಾಳರ  ಬಂಡಾಯ. ಕೌಟುಂಬಿಕ ಕಾದಂಬರಿಯಲ್ಲದ ನಾಯಕ ಕಳನಾಯಕರ ನಡುವಿನ ಕದನವಾಗದ ಒಂದು ವ್ಯವಸ್ಥೆಯ ವಿರುದ್ಧದ ವಾಸ್ತವಿಕತೆಯ ಸುತ್ತ ಎಳೆಎಳೆಯಾಗಿಸುತ್ತ ಹರವಿಕೊಂಡ ಕಥಾವಸ್ತು. ತಾನೇ ಸ್ವತಹ ಮದ್ದಿನಂಗಡಿಯ ಕಾರ್ಮಿಕನಾಗಿ ಎಪ್ಪತ್ತು ರೂಪಾಯಿ ಸಂಬಳದಲ್ಲಿ ಎರಡೇ ಕೋಣೆಯ ವಾಸ ಬೆಳಗಿನ ಎಂಟರಿಂದ ರಾತ್ರಿಯ ಎಂಟರವರೆಗಿನ ಕತ್ತೆ  ದುಡಿತದಿಂದಲೇ ಮೇಲೇರಿಬಂದು ಹತ್ತಾರು ಇಂಡಸ್ಟ್ರಿಗಳಗೆ ಮಾಲಕರಾದ ನಾಗೇಶ ಶರ್ಮಾ ಅವರ ಮಗ ಸತೀಶ ಶರ್ಮಾ ತಮ್ಮಲ್ಲಿ ದುಡಿಯುವ ಕಾರ್ಮಿಕರನ್ನು ಹಿಡಿತದಲ್ಲಿಡಲು ಮಾಡುವ ಕಸರತ್ತುಗಳೆಲ್ಲ ಅವರನ್ನು ಕಳನಾಯಕರಲ್ಲದೆಯು ಕಳನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ.        ಡ್ರಾಯಿಂಗ್ ರೂಮಿನ ಮೂಲೆಯಲ್ಲಿರುವ ಸ್ವಂತದ ಬಾರ್, ಒಂದು ಕಪ್ ಚಹಾ ಹೊತ್ತು ಓಡಾಡುತ್ತ ಬರುವ ರಥ, ಹಾಸಿದ ಕಾರ್ಪೆಟ್ಟುಗಳ ಮೇಲೆ ಸದ್ದೇ ಕೇಳಿಸದ ಹೆಜ್ಜೆ, ಕಿಟಕಿಯ ಬೆಳಕನ್ನು ನಿಯಂತ್ರಿಸುವ ಬ್ಲೈಂಡ್ಸ,  ಪ್ರತಿಷ್ಠಿತರ ಸೊತ್ತಾದ ನರಿಮನ್ ಪಾಯಿಂಟ್ , ಬದುಕಲೆಂದೇ ಧಾವಿಸಿ ಬಂದು ಕಾಲುದಾರಿಗಳಲ್ಲಿ ಹೂಡುವ ನೂರಾರು ಅಗ್ಗಿಷ್ಠಿಕೆಗಳು, ಬಡಕಲು ಕೈಗಳಲ್ಲಿ ಕಾಯಿಸುತ್ತಿದ್ದ ರೊಟ್ಟಿಗಳು, ಝೋಪಡಿಯಲ್ಲಿ ಸಾಗುವ ಬದುಕು, ಜೋಪಡಿ ಪಕ್ಕದ ಕಾಲುದಾರಿಯಲ್ಲೇ ಮಲ ಮೂತ್ರವಿಸರ್ಜನೆಗೆ ಕೂಡ್ರುವ ಹೊಟ್ಟೆಯುಬ್ಬರಿಸಿದ ಮಕ್ಕಳು, ಜೋಪಡಿಯಲ್ಲಿ ಚಿಂದಿಯುಟ್ಟು ಅರೆನಗ್ನಳಾಗಿ ಮಲಗಿದ ತಾಯಿಯ ಎದೆಯ ಮೇಲೆ ಮಲಗಿ ಮೊಲೆ ಚೀಪುವ ಮಗು, ಮಗುವಿನ ತಲೆಗೂದಲಮೇಲೆ ಓಡಾಡಿ ಹೇನು ಹುಡುಕುವ ತಾಯ ಕೈ –ಹೀಗೆ ಬೊಟ್ಟು ಮಾಡದೆಯೇ ವ್ಯವಸ್ಥೆಯ ತಾರತಮ್ಯದ ವೈಪರೀತ್ಯಗಳನ್ನು ಓದುಗನಿಗೆ ಮನದಟ್ಟುಮಾಡುವ ಪ್ರೌಢಿಮೆ ಬಲ್ಲಾಳರದು.        ಸ್ನಾನ ಕಾಣದ ಮೈ, ಸಾಬೂನು ಕಾಣದ ಶರ್ಟ, ಹಳೆಸೀರೆ ನಿತ್ಯದ ಬೆವರು ಎಲ್ಲ ಕ್ಯೂ ಹಿಡಿದು ನಿಲ್ಲುವದು ಬದುಕಿಗಾಗಿ ಎನ್ನುತ್ತಲೇ ಓದುಗನೆದೆಗೆ ಹತ್ತಿರವಾಗುವ ಹೆಣ್ಣು   ಯಾಮೀ, ಯಾಮಿನಿ . ಶಾಕುಂತಲ ಮೃಚ್ಛಕಟಿಕ ನಾಟಕಗಳಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದವಳನ್ನು ಅವಳು ಅಭಿನಯ ಸಾಮ್ರಾಜ್ಞಿಯೆಂದು ಹೊಗಳಿ ಮೆಚ್ಚಿ ಮದುವೆಯಾದ ಪತಿ.  ಪೋಲಿಯೋ ಪೀಡಿತನಾಗಿ  ಹಾಸಿಗೆಹಿಡಿದ ಮೇಲೆ ದಾಂಪತ್ಯದಾರಂಭದ ಕೆಲದಿನದ ನಗು ಮಾತು ಸುತ್ತಾಟ ಸಿನೇಮಾ ಎಲ್ಲವೂ ಸುಳ್ಳು ಪತಿಯ ಹಾಸಿಗೆಯ ಪಕ್ಕದ ಕ್ರಚ್ ಒಂದೇ ಸತ್ಯ ಅನ್ನಿಸಿತೊಡಗಿದಾಗ ಹೆಂಡ್ ಲೂಮ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿದ ಹೆಣ್ಣು. ಭೋಸುಡಿ ಎಲ್ಲಿ ಹೋಗಿದ್ದೆ ಇಷ್ಟೊತ್ತು? ಯಾವ ಮಿಂಡನ ಜೊತೆಗೆ ಮಲಗಿದ್ದೆ ಮುಂಡೆ, ಹಲ್ಕಟ್ ರಂಡೆ, ಸೂಳೆಯೆಂದು ಅಪಾಂಗ ಅಸಹಾಯಕ ಪತಿಯಿಂದ ಅನ್ನಿಸಿಕೊಳ್ಳುತ್ತಲೇ  ಇಪ್ಪತ್ತೈದು ಪೈಸೆಯಗಲದ ಕುಂಕುಮ ಹಣೆಗಿಟ್ಟುಕೊಂಡು ನಗುನಗುತ್ತಲೇ ಪತಿಯ ಬೇಕು ಬೇಡಗಳನರಿತು ಪೂರೈಸುವ ಹೆಣ್ಣು ಅನಿರೀಕ್ಷಿತವಾಗಿಯೇ ಕಾರ್ಮಿಕ ಸಂಘಟನೆಯ ಸಂಪರ್ಕಕ್ಕೆ ಬರುತ್ತಾಳೆ.  ಲಾಲ್ ಬಾವುಟಾ ಜಿಂದಾಬಾದ್ ಎಂದಷ್ಡು ಸುಲಭವಲ್ಲ ಸಂಘರ್ಷದ ಹಾದಿ ಎನ್ನುವ ವಿಸ್ಮಯವನ್ನು ಒಳಗಿಟ್ಟುಕೊಂಡೆ ನಾಯಕ ರಾಜೀವನ ಸಾಂಗತ್ಯದಲ್ಲಿ  ಕೋಣ ತೀ ಬಾಯಿ? ರಾಜೀವಭಾಯಿ ಚಿ ಬಾಯಿ. ಕಸಲಿ ಬಾಯೀ? ಠೇವಲೇಲಿ (ಇಟ್ಟುಕೊಂಡವಳು)ಅನ್ನಿಸಿ ಕೊಳ್ಳುತ್ತಲೇ ಎಲ್ಲವನ್ನು ಕೊಡವಿಕೊಂಡು ಅವನ ವ್ಯಕ್ತಿತ್ವದ ಕರ್ತೃತ್ವ ಶಕ್ತಿ, ಪ್ರತಿಭೆ, ಸಾಂಘಿಕ ಸಮಾನತೆಯ ತಿಳುವಳಿಕೆ, ನಾಯಕತ್ವದ ಎಳೆಗಳನ್ನು ಒಂದೊಂದಾಗಿ ತನ್ನೊಳಗೆ ತುಂಬಿಕೊಂಡು ಮಜ್ದೂರ್ ಯೂನಿಯನ್ ನ ಪ್ರತಿಯೊಂದು ಸೂಕ್ಷ್ಮ ಕೊಂಡಿಗಳನ್ನು ಅರಿತು ಅದನ್ನು ಸಮರ್ಥವಾಗಿ ಮುನ್ನಡೆಸುವ ಮಟ್ಟಿಗೆ ಬೆಳೆದು ನಿಂತ ಸಾಮಾನ್ಯ ಹೆಣ್ಣು ಯಾಮಿನಿ ಮಹಿಳಾ ಸಾಬಲ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಾಳೆ. ಕಟ್ಟುವ ಕೆಲಸ ಮಾಡುವವರು ಬುಲ್ಡೋಜರ್ ಕಡೆ ನೋಡುವದಿಲ್ಲ ಎನ್ನುತ್ತಲೇ ಕಾರ್ಯ ಕಾರಣಗಳ ಒಳ ಹೊರಗಿನ ಸೂಕ್ಷ್ಮಗಳನ್ನರಿತು ಪೂರ್ತಿಯಾಗಿ ತನ್ನನ್ನು ಅದರಲ್ಲಿ ತೊಡಗಿಸಿಕೊಂಡು ಅವಳು ಕಟ್ಟಿದ್ದು ವ್ಯವಸ್ಥಿತ ವ್ಯವಸ್ಥೆಗಳನ್ನೇ ಕೆಡಹುವ ವ್ಯವಸ್ಥೆ.        ನಾಯಕ ರಾಜೀವನದು ಇಬ್ಬಗೆಯ ವಿಚಾರಗಳನ್ನು ಹೊಂದಿದ ದ್ವಂದ್ವ ವ್ಯಕ್ತಿತ್ವ. ವ್ಯವಸ್ಥೆಯ ವಿರುದ್ಧ ಸಿಡಿದು ನಿಂತು ತಮ್ಮ ಹಕ್ಕಿಗಾಗಿ ಹೋರಾಡದವರನ್ನೆಲ್ಲ ಬಾಂಬು ಹಾಕಿ ಕೊಲ್ಲಬೇಕು, ಬೆಂಕಿ ಹಾಕಬೇಕು, ಜೋಪಡಿಗಳಮೇಲೆ ಬುಲ್ಡೋಜರ್ ಹಾಯಿಸಿ ನೆಲಸಮ ಮಾಡಬೇಕೆಂದುಕೊಳ್ಳುತ್ತ ವ್ಯವಸ್ಥೆಯ ತಾರತಮ್ಯಕ್ಕೆ ಆಕ್ರೋಶದ ಬೆಂಕಿಯನ್ನ ಎದೆಯಲ್ಲಿಟ್ಟುಕೊಂಡು, ನಿತ್ಯ ಒಳಗೊಳಗೇ ಸುಡುತ್ತ, ಉಳ್ಳವರಿಂದ ಕಸಿದುಕೊಳ್ಳುವ ತಾಕತ್ತಿನವರನ್ನು ಕಂಡು ವಿಚಿತ್ರ ಸುಖವನ್ನ ಅನುಭವಿಸುತ್ತ ತಾರತಮ್ಯದ ವ್ಯವಸ್ಥೆಯನ್ನು ಒಪ್ಪಿಕೊಂಡವರನ್ನು ದ್ವೇಷಿಸುತ್ತ, ಬಲಕರಗಿ ಸೋಲುವವರನ್ನು ಕಂಡು ಹೇಸುತ್ತಲೇ ಅವರಿಗಾಗಿ ಮಿಡಿವ ವಿಚಿತ್ರ ವ್ಯಕ್ತತ್ವದ ರಾಜೀವ. ಪೂರ್ವಾಶ್ರಮದ ಯೋಚನೆಗಳನ್ನ  ಅಂಕೆಯಲ್ಲಿ ಬಿಗಿದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಕಾರ್ಮಿಕ ಸಂಘಟನೆಯ ಆಧಾರವಾಗಿ ಯಾವುದೇ ಸ್ವಾರ್ಥವಿಲ್ಲದೇ  ನಿರಂತರ ದುಡಿಯುವವನು. ಹತ್ತುವರ್ಷಗಳಿಂದ ಎಂಟು ಲಕ್ಷ ಕಾರ್ಮಿಕರಿಗೆ ನಾಯಕನಾಗಿ ಆಮಚಿ ರಾಜೀವ್ ಭಾಯಿ, ರಾಜೋಬಾ, ಅಣ್ಣಾಸಾಹೇಬ್, ಸಾಥಿ ರಾಜೀವ್ ಎನ್ನಿಸಿಕೊಂಡ ರಾಜೀವ ಕೈಯ್ಯಿಟ್ಟಲೆಲ್ಲೂ ಅಪಜಯ ಕಂಡರಿಯದ  ಧೀರ. ತನಗಾಗಿ ಏನನ್ನೂ ಬಯಸದೇ ಲೋಕಲ್ ಟ್ರೇನ್ ಗಳಲ್ಲಿ ಪ್ರಯಾಣಿಸುತ್ತ ,ಕಾರ್ಮಿಕ ಬಸ್ತಿಯ ಬಳಸು ದಾರಿಗಳಲ್ಲಿ ಕಾಲ್ನಡಿಗೆಯಲ್ಲೇ  ಸಂಚರಿಸುತ್ತ, ಮೈಲುಗಟ್ಟಲೆ ನಡೆದು ಬೋಯಿವಾಡಾದ ರಂಗೇರಿಚಾಳ್ನ ಒಂದೇ ಕೋಣೆಯ ಮನೆ ಸೇರುವದ ಪ್ರೀತಿಸುವ ರಾಜೀವ  ಓದುಗನೆದೆಗೆ ತೀರ ಹತ್ತಿರ ಬರುವ ವ್ಯಕ್ತಿತ್ವ. ನಕ್ಸಲ್ ಆಗಿದ್ದು ಬೋರಿವಂಕದಲ್ಲಿ ಪೋಲೀಸರೊಂದಿಗಿನ ಚಕಮಕಿಯಲ್ಲಿ ಗುಂಡು ತಗಲಿ ಸತ್ತನೆಂದು ದಾಖಲಾದ ರಾಜಶೇಖರ ಸೋಮಯಾಜಲು ವಿಕಾರವಾಗಿದ್ದ ಮುಖಕ್ಕೆ ಪ್ಲಾಷ್ಟಿಕ್ ಸರ್ಜರಿ ಮಾಡಿಸಿಕೊಂಡು ರಾಜೀವನೆಂಬ ಹೊಸ ಹೆಸರಿನೊಂದಿಗೆ ತನ್ನ ಪೂರ್ವಾಶ್ರಮಕ್ಕೆ ವಿಮುಖನಾಗಿ ಮುಂಬೈಗೆ ಬಂದು  ಅಸಾದ್ಯವಾದದನ್ನು ಸಾಧಿಸಿದ್ದ. ಕಾರ್ಮಿಕರ ಸಾವಿಗೆ ಹಣ ಹೆಂಡ ಹಾದರವೇ ಕಾರಣವೆಂಬುದು ಸುಳ್ಳಾಗಿ, ಟ್ರೇಡ್ ಯೂನಿಯನ್ ಲೀಡರುಗಳು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವದಕ್ಕಾಗಿ ಯಾರಿಗಾಗಿ ಸಂಘಟನೆಯೋ ಅವರನ್ನೇ ಕೊಲ್ಲಸುವ ಮಟ್ಟಕ್ಕೆ ಬೆಳೆದು ನಿಂತಿದ್ದನ್ನ ಕಂಡು,  ಶ್ರೀಕಾಕುಲಂ ವಾರಂಗಲ್  ಖಮ್ಮಾಮ್ ಗಳ ಚಟುವಟಿಕೆಗಳಿಗೆ ಹೇಸಿ ಅಲ್ಲಿ ಮನುಷ್ಯರಾಗಿ ಬದುಕುವದನ್ನು ಕಲಿಯಲು ಯಾರಿಗೂ ಸಾಧ್ಯವಾಗಿಲ್ಲ ಎಂದುಕೊಂಡು, ದಾರಿ ಬದಲಿಸಿ ಇಲ್ಲಿ ಬಂದವ ತಾನು ಕಟ್ಟಿದ ಸಂಘಟನೆಯ ಸರ್ವ ಜವಾಬ್ದಾರಿಗಳನ್ನು ಯಾಮಿನಿಗೆ ಒಪ್ಪಿಸಿ  ಶಕ್ತಿ ಪ್ರವಹಿಸುವದೇ ಬಂದೂಕಿನ ನಳಿಕೆಯ ಮೂಲಕ ಎನ್ನುತ್ತ ಮುಂಬೈಗೆ ಬೆನ್ನುಮಾಡಿ ಕಪ್ಪು ಕತ್ತಲೆಯಲ್ಲಿ ಕರಗಿ ಮತ್ತಲ್ಲಿಗೇ ಮುಖ ಮಾಡಿದನೆಂಬುದಕ್ಕೆ  ಸತೀಶ್ ಶರ್ಮಾನ ಕಲ್ಯಾಣಿ ಕೆಮಿಕಲ್ಸ ಗೆ ಹೊತ್ತಿಕೊಂಡ ಬೆಂಕಿ  ಪುಷ್ಟಿಯನ್ನು ನೀಡುತ್ತದೆ. ಓದುಗನೆದೆಯಲ್ಲಿ ರಾಜೀವ್ ಭಾಯಿ ದುರಂತ ನಾಯಕನಾಗಿ ನಿಂತು ಹೋಗುತ್ತಾನೆ.  ಎಲ್ಲ ವ್ಯವಸ್ಥೆಯಲ್ಲೂ ಹಿಂಸೆಯ ಬೀಜ ಅಡಗಿದೆ  ಎನ್ನುವದು ಓದುಗನ ಮೈಮುಳ್ಳಾಗಿಸುವ ಸತ್ಯ.      ಕಾದಂಬರಿಯಲ್ಲಿ ಅಂಕದಂಗಳಕ್ಕೆ ಬರದೇ ನೇಪಥ್ಯದಾಚೆಯೇ ನಿಂತು ನಿಜವಾದ ಖಳನಾಗಿ   ಓದುಗರ ಕೆಂಗಣ್ಣಿಗೆ ಸಿಕ್ಕುವದು ತನ್ನ ಸ್ವಾರ್ಥಕ್ಕೆ ಕಾರ್ಮಿಕರಲ್ಲಿ ಭಯವನ್ನು ಹುಟ್ಟಿಸುವದಕ್ಕಾಗಿ ಕಾರ್ಮಿಕರನ್ನೇ ಕೊಲ್ಲುವ ಕುಟಿಲ ಕ್ರೂರ ಬಾಪು ದೇಶಪಾಂಡೆಯೆಂಬ ಯೂನಿಯನ್ ಲೀಡರ್. ಮುಷ್ಕರ ದಂಗೆ ಕೆಂಪು  ಕೊಲೆ ರಕ್ತವೆಂದು ಎದೆ ಬಿಗಿವಾಗೆಲ್ಲ ಹಿತವಾದ ತಂಗಾಳಿಯಾಗಿ ಸುಳಿಯುವ ವ್ಯಕ್ತಿತ್ವ ಅಪಾಂಗ ಕಲ್ಯಾಣದ ಮಕ್ಕಳನ್ನೂ ನಿಜವಾಗಿ ಪ್ರೀತಿಸುವ ಸತೀಶ ಶರ್ಮಾನ ಹೆಂಡತಿ ಲಕ್ಷ್ಮಿಯದು.  ನಯನಾ, ಗೋದುಮಾಂಶಿ, ಪಾಂಡು ಸುತಾರ್, ಮಾನೆ ರಘು ಪಾಟಣ್ಕರ್ ಹೀಗೆ ಬಂದು ಹಾಗೆ ಹೋಗುವ ಪಾತ್ರಗಳಾದರೂ ಬಹುಕಾಲ ನೆನಪಲ್ಲಿ ನಿಲ್ಲುವ ಮುಖಗಳು. ಕನ್ನಡದ ನಡುವೆ ಕಂಪಾಗಿ ಕುಸುರಿಗೊಂಡ (ಆಣಿ, ಆಮ್ಚೇ,ತಸ್ಸ ಕಾಯ್,ಫುಡೆ ಕಾಯ್, ಬೆವಡಾ, ಮಲಾ,ಆಲಾ ) ಮರಾಠಿ ಕಮ್ಮಗನಿಸುತ್ತದೆ. ಕಾದಂಬರಿಯಲ್ಲಿ ಮತ್ತೆ ಮತ್ತೆ ಕಣ್ಣೆದುರು ಬರುವ ಹಾರ್ನಿಮನ್ ವೃತ್ತ ಬಾಂದ್ರಾ ಗಿರಗಾಂ ಭೋಯಿವಾಡಾ ಚರ್ಚಗೇಟ್ ಥಾಣೆ ಬೇಲಾಪುರ ಪನ್ವೇಲ್ ಪೋಕ್ರಾನ್ ವಾಡಿಬಂದರ್ ಕಾಳಾಚೌಕಿ ಭಿವಾಂಡಿವಾಲಾಚಾಳ್ ಕಾರ್ಮೈಕಲ್ ದಹಾನುಕರ್ ರಂಗೇರಿಚಾಳ್ ನಾವು ಕಂಡರಿಯದ ಮುಂಬೈನ  ಅದೆಷೋಸ್ಥಳ ಹಾಗೂ ರಸ್ತೆಗಳು ನಮ್ಮ ಆಜುಬಾಜು ಬಂದು ಕೂತಂತೆ ಹತ್ತರವಾಗುತ್ತವೆ.    ಕೇಂದ್ರ ಸಾಹಿತ್ಯ ಅಕೆಡಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ,ಹಾಗೂ ಮಹಾರಾಷ್ಟ್ರ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳನ್ಬು ಪಡೆದ ಕೃತಿ, ವಾಸ್ತವಿಕ  ನೆಲೆಯಲ್ಲಿ ಮುಂಬೈನ ಕಾರ್ಮಿಕ ಸಮಸ್ಯೆಯ ರೌದ್ರ ಮುಖಗಳನ್ನು ಸಮರ್ಥವಾಗಿ ತೆರೆದಿಟ್ಟು, ತನಗೆ ಆಸರೆಯಾದ ಮುಂಬೈನ ನೀರು ಗಾಳಿ ಮಣ್ಣಿಗೆ ಋಣ ಸಂದಾಯದ ಸಾರ್ಥಕ ಹೆಜ್ಜೆ ‘ಬಂಡಾಯ’. ಹಾಗೆಯೇ ಕನ್ನಡ ಸಾಹಿತ್ಯ ಭಂಡಾರಕ್ಕೊಂದು ಶ್ರೇಷ್ಠ ಕೊಡುಗೆಯಾಗಿದೆ. ******************************** ಪ್ರೇಮಾ ಟಿ.ಎಂ.ಆರ್

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ಋಗ್ವೇದ ಸ್ಫುರಣ ಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿ ಋಗ್ವೇದ ಸ್ಫುರಣಅನುವಾದ : ಹೆಚ್.ಎಸ್.ವೆಂಕಟೇಶಮೂರ್ತಿಪ್ರ : ಅಭಿನವ ಪ್ರಕಟಣೆಯವರ್ಷ : ೨೦೧೭ಬೆಲೆ : ರೂ.೨೦೦ಪುಟಗಳು : ೧೬೦ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ಭಾಷಿಕ ದಾಖಲೆಯಾದ ಋಗ್ವೇದ ಸೂಕ್ತಗಳಲ್ಲಿರುವ ಋಕ್ಕುಗಳೊಳಗಿನ ಬಿಡಿ ಪದ್ಯಗಳ  ಸರಳ ಅನುವಾದ ಈ ಕೃತಿಯಲ್ಲಿದೆ.  ಮೂಲ ಸಂಸ್ಕೃತದಲ್ಲಿರುವ ಈ ಪದ್ಯಗಳನ್ನು  ಆರಂಭದಲ್ಲಿ ಸೂಕ್ತ ವ್ಯಾಖ್ಯಾನಗಳ ಮೂಲಕವೂ ನಂತರ ತಿಳಿಗನ್ನಡದಲ್ಲಿ ವ್ಯಾಖ್ಯಾನಗಳಾಗಿಯೂ ನೀಡಲಾಗಿದೆ.  ಋಗ್ವೇದದ ಋಕ್ಕುಗಳು ಪ್ರಕೃತಿಯ ಮಹಾಶಕ್ತಿಗಳು.  ವಾಸ್ತವದ ನೆಲೆಯಲ್ಲಿ ಗ್ರಹಿಸುವಂಥವು.  ವಿಶ್ವಭ್ರಾತೃತ್ವವನ್ನು ಪ್ರೇರಿಸುವ  ಭಾರತೀಯ ಸಂಸ್ಕೃತಿಗೆ ಋಗ್ವೇದವು ಉಗಮ ಸ್ಥಾನ.  ಉಪನಿಷತ್ತುಗಳಲ್ಲಿ ವಿಸ್ತೃತವಾಗಿ ಚರ್ಚಿತವಾಗಿರುವ ಅದ್ವೈತ ತತ್ವವು  ಮೊದಲು ಕಾಣಿಸಿದ್ದು ಋಗ್ವೇದದಲ್ಲಿ.  ಪರಸ್ಪರ ಪ್ರೀತಿ-ಪೋಷಣೆಗಳು ಜಗತ್ತಿನ ಕಲ್ಯಾಣಕ್ಕೆ ಅಗತ್ಯ ಮತ್ತು ವಿಶ್ವ ಸಾಮರಸ್ಯವೇ ತಮ್ಮ ಏಕೈಕ ಗುರಿ ಎಂದು ತಿಳಿದವರು ವೇದಕಾಲದ ಋಷಿಗಳು.  ಕೇವಲ ಮಾನವನ ಸುಖವಲ್ಲ ವಿಶ್ವ ನಿಯಮದ ಗುರಿ.  ಬದಲಾಗಿ ಅದು ಸಕಲ ಚರಾಚರ ಜೀವಿಗಳು ಅಪ್ರತಿಹತವಾದ ಋತದ ಮೂಲಕ ಪಡೆಯುವ  ಆನಂದವಾಗಿದೆ. ಈ ವಿಶ್ವದಲ್ಲಿ ಗೆಲ್ಲುವುದು ಋತವೊಂದೇ.  ಅನೃತವಲ್ಲವೆಂದು ಋಗ್ವೇದ ಹೇಳುತ್ತದೆ.  ಈ ಋತಕ್ಕೆ ಯಾವುದು ಅಡ್ಡ ನಿಲ್ಲುತ್ತದೆಯೋ ಅದು ಆಸುರೀ ಶಕ್ತಿ. ಅಂಥ ಶಕ್ತಿಗಳ ವಿರುದ್ಧ ವೇದಕಾಲದ ಋಷಿಗಳು ಅನವರತ ಹೋರಾಡಿದರು.     ಋಗ್ವೇದ ಸ್ಫುರಣದಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ಆಯ್ದ ಸೂಕ್ತಗಳ ಕನ್ನಡ ರೂಪದ ಜತೆಗೆ ಸರಳ ವ್ಯಾಖ್ಯಾನಗಳ ಮೂಲಕ ಚಿಕ್ಕ ಮಕ್ಕಳಿಗೂ ಅರ್ಥವಾಗುವಂಥ ವಿವರಣೆಗಳಿವೆ. ಎರಡನೆಯ ಭಾಗದಲ್ಲಿ ಬೇರೆ ಬೇರೆ ಸಂದರ್ಭಗಳನ್ನು ಸೂಚಿಸುವಂಥ ಬಿಡಿ ಕವಿತೆಗಳಿವೆ.  ವೇದಕಾಲದಲ್ಲಿ ಜನಜೀವನ ಹೇಗಿತ್ತು,  ಸಾಮಾಜಿಕ ರೀತಿ-ನೀತಿಗಳು ಮತ್ತು ಪದ್ಧತಿ-ಪರಂಪರೆಗಳು ಹೇಗಿದ್ದವು ಎಂಬುದರ ಚಿತ್ರಣವನ್ನು ಈ ಕವಿತೆಗಳು ನೀಡುತ್ತವೆ. ಯುದ್ಧಭೂಮಿಯಲ್ಲಿ ಯೋಧನ ಚಿತ್ರ, ಮುಪ್ಪು ಮತ್ತು ಮರಣ, ದಾಂಪತ್ಯ ತತ್ವ, ಮಳೆಗಾಲದಲ್ಲಿ ಕಪ್ಪೆಗಳು, ಕಳೇಬರವನ್ನು ಕುರಿತು, ಪತಿಯನ್ನು ಕಳೆದುಕೊಂಡ ಪತ್ನಿ, ಕಸಬುಗಾರಿಕೆ,  ಕಾಳ್ಗಿಚ್ಚು, ಸವತಿ ಸಂಬಂಧ, ಶ್ರದ್ಧೆ ಮೊದಲಾದ ಕವಿತೆಗಳ ವಸ್ತುವನ್ನು ನೋಡಿದರೆ ಅವು ಆಧುನಿಕ ಕವಿತೆಗಳಿಗಿಂತ ಭಿನ್ನವಾಗಿ ಕಾಣುವುದಿಲ್ಲ.  ವೇದಕಾಲದ ಸಾಮಾಜಿಕ ಚಿಂತನೆಗಳು, ಎಷ್ಟರ ಮಟ್ಟಿಗೆ ಜೀವಪರವಾಗಿದ್ದವು ಎಂಬುದನ್ನು ಈ ಕವಿತೆಗಳು ನಿರೂಪಿಸುತ್ತವೆ.     ಕಾವ್ಯದ ಅನುವಾದಕ್ಕೆ ವಿಶೇಷ ಮಹತ್ವವಿದೆ. ಮೂಲದ ಛಂದಸ್ಸನ್ನೂ ಅಲಂಕಾರಗಳನ್ನೂ ಅರ್ಥಪೂರ್ಣವಾಗಿ ಉಳಿಸಿಕೊಳ್ಳುವುದು ಅನುವಾದಕರ ಸೃಜನಶಕ್ತಿಗೆ ಒಂದು ಬಹಳ ದೊಡ್ಡ ಸವಾಲು. ಇಲ್ಲಿ ಅನುವಾದಕರೂ ಸ್ವತಃ ಅನುಭವಿ ಕವಿಗಳೂ ಆದ ಹೆಚ್.ಎಸ್.ಆರ್. ಅವರು ಈ ಸವಾಲನ್ನು ಗೆಲ್ಲುವಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ್ದಾರೆ.  ಅನುವಾದಿತ ಕವಿತೆಗಳನ್ನೂ ಭಾವಗೀತೆಗಳಾಗಿ ಹಾಡುವಷ್ಟು ಛಂದೋಬದ್ಧವಾಗಿ ಕಟ್ಟಿಕೊಟ್ಟಿದ್ದಾರೆ. ********************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top