ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಪಾಕ ಕ್ರಾಂತಿ

ಕಾದಂಬರಿ ಕುರಿತು ಪಾಕ ಕ್ರಾಂತಿ ಪೂರ್ಣಚಂದ್ರ ತೇಜಸ್ವಿ ದಿವಂಗತ ಶ್ರೀ ಪೂರ್ಣಚಂದ್ರ ತೇಜಸ್ವಿಯವರ ನೀಳ್ಗತೆ *ಪಾಕ್ ಕ್ರಾಂತಿ* ಓದಲು ಸುರುವು ಮಾಡುವದಕ್ಕೂ ಮೊದಲು ನನಗೆ ಅನ್ನಿಸಿದ್ದು ಕ್ರಾಂತಿಯ ಬಗೆಗೆ ಬರೆದಿರುವ ಲೇಖನವಿರಬಹುದು, ಬಹುಶಃ ಪಾಕಿಸ್ತಾನದ ಯಾವುದೋ ಕ್ರಾಂತಿಯದು ಎಂದು. ಆದರೆ ಒಂದೆರಡು ವಾಕ್ಯ ಓದಿದಾಗ ಇದು ಪಾಕ್ ಕ್ರಾಂತಿಯಲ್ಲ ಪಾಕ ಕ್ರಾಂತಿ ಅಂದರೆ ಪಾಕಶಾಸ್ತ್ರದ, ಅಡುಗೆಯಲ್ಲಿ ಮಾಡಿದ ಕ್ರಾಂತಿಯ ಬರಹ ಅಂತ. ನಾಲ್ಕೇ ಜನ ಕಥೆಯಲ್ಲಿ ಬರುತ್ತಾರೆ, ಅದರಲ್ಲಿ ಹೆಂಡತಿ ತವರಿಗೆ ಹೋದಾಗ ಅಡುಗೆಯಲ್ಲಿ ಕ್ರಾಂತಿ ಮಾಡಲು ಹೊರಟ ಮಹಾಶಯರದು ಮುಖ್ಯ ಪಾತ್ರ. ಅರವತ್ನಾಲ್ಕು ಕಲೆಗಳಲ್ಲಿ ಪಾಕಶಾಸ್ತ್ರ ಕೂಡ ಒಂದು ಕಲೆ. ಹೆಣ್ಣುಮಕ್ಕಳು ಅಡುಗೆ ಮನೆಯಲ್ಲಿ ಏನೋ ಮಾಡಿಕೊಂಡಿರುತ್ತಾರೆ ಅಂತ ಉದಾಸೀನ ತಳೆಯುವ ವಿದ್ಯೆ ಇದಲ್ಲವೆಂದು ಈ ಲೇಖನ ಓದಿದ ಮೇಲೆ ಗೊತ್ತಾಗುತ್ತದೆ. ಪುರಾಣದಲ್ಲಿ ಬರುವ ನಳ ಮಹಾರಾಜ, ಭೀಮಸೇನ ಅಡುಗೆಯಲ್ಲಿ ಪ್ರವೀಣರಾಗಿದ್ದರು. ಈ ವಿದ್ಯೆ ಗಂಡಸರಿಗೆ ಒಲಿಯುವದಿಲ್ಲ ಅಂತೆನೂ ಇಲ್ಲ. ಪಾಕಶಾಸ್ತ್ರದಲ್ಲಿ ಏನೂ ಗೊತ್ತಿಲ್ಲದವನ ಹೆಂಡತಿ ಊರಿಗೆ ಹೋದಳು. ಹೋಗುವಾಗ ಎಲ್ಲ ತಿಳಿಸಿಕೊಟ್ಟು. ಹೆಂಡತಿ ಇಲ್ಲದಿದ್ದರೆ ಗಂಡಸು ಉಪವಾಸ ಸಾಯ್ತಾನೇನು ಅನ್ನುವ ಮನೋಭಾವದ ವ್ಯಕ್ತಿ ಅಡುಗೆ ಮಾಡುವಾಗ ಪಡಬಾರದ ಕಷ್ಟ ಎದುರಿಸುವದು ಒಳ್ಳೆಯ ಹಾಸ್ಯಮಯವಾಗಿದೆ. ‘ಹೀಗೆಯೇ ಮಾಡಬೇಕು ಅನ್ನುವ ಕಾಯ್ದೆ ಯಾತಕ್ಕೆ?’ ಈ ಸಂಪ್ರದಾಯ ನಿಷ್ಠಯೇ ನಮ್ಮ ದೇಶ ಮುಂದುವರೆಯದಿರುವುದಕ್ಕೆ ಮುಖ್ಯ ಕಾರಣ ಅನ್ನಿಸಿ ಹೊಸ ಕ್ರಾಂತಿಕಾರಕ ಆಲೋಚನೆಗಳನ್ನು ಅನುಷ್ಠಾನಕ್ಕೆ ತರಲು ಹೊರಟಿದ್ದಾರೆ ನಾಯಕ. ಮೊದಲ ಪ್ರಯತ್ನದಲ್ಲಿಯೇ ಮುಗ್ಗರಿಸುತ್ತಾರೆ. ಹಾಲು ಕಾಯಿಸುವುದು ಎಷ್ಷು ಸರಳ ಮತ್ತು ಸಣ್ಣ ಕೆಲಸ! ಅಂದುಕೊಂಡರೆ….. ಅದು ಉಕ್ಕಿ, ಎಲೆಕ್ಟ್ರಿಕಲ್ ಒಲೆ ಮೇಲೆ ಚೆಲ್ಲಿ, ಒಲೆ ಮತ್ತು ಪಾತ್ರೆ ಸುಟ್ಟು ಕರಕಲಾದಾಗ ಹಾಲು ಒಂದು ಅಪಾಯಕಾರಿ ವಸ್ತು ಅಂತ ನಿರ್ಧರಿಸಲಾಯಿತು. ‘ಹಾಲು ಹೆಂಗಸರನ್ನು ಒಲೆಯ ಬುಡಕ್ಕೆ ಬಂಧಿಸಿರುವ ಮೊದಲ ಸಂಕೋಲೆ’ ಇದರಲ್ಲಿ ಬದಲಾವಣೆ ತರುವ ಕ್ರಾಂತಿಯ ವಿಚಾರ ಇವರದು. ಇನ್ನು ಒಲೆ ರಿಪೇರಿಯಾಗದಿದ್ದರೆ ಶಾರ್ಟಸರ್ಕಿಟ್ ನಿಂದ ಹೆಂಡತಿಗೆ ಬೆಂಕಿ ತಗುಲಿದರೆ  ವಧುದಹನದ ಕೇಸಾಗುವುದು ಖಂಡಿತ ಅನ್ನಿಸಿ ಅದರ ಸ್ವಚ್ಚತೆ ಮತ್ತು ರಿಪೇರಿಯಾಗುತ್ತದೆ. ಒಂದು ಹಾಲು ಕಾಯಿಸಲು ಇಷ್ಟಾದರೆ ಅಡುಗೆ ಮಾಡುವುದು ಹೇಗಿರಬೇಡ? ಪ್ರೆಷರ್ ಕುಕರ್ ಗ್ಯಾಸ್ಕೆಟ್ ಮತ್ತು ಸೇಫ್ಟಿವಾಲ್ವ್ ಮಾರುವ ಹುಡುಗಿಗೆ ಕೂಡ ಗೊತ್ತಾಗಿ ಹೋಯಿತು, ಮನೆಯ ಯಜಮಾನಿ ಮನೆಯಲ್ಲಿ ಇಲ್ಲ ಅನ್ನುವುದು. ರಬ್ಬರ್ ಸುಟ್ಟ ವಾಸನೆ ಅನ್ನಕ್ಕೆ ಬಂದು, ಸಾಕಿದ ನಾಯಿ ಆ ಅನ್ನವನ್ನು ತಿನ್ನುವುದು ಬಿಡಿ ಮೂಸಿ ನೋಡಲಿಲ್ಲ. ನಾಯಿಗೆ ಊಟ ಮಾಡಿಸಲೋಸುಗ ಒಣ ಮೀನು ತಂದು ಹುರಿದು ಕೊಟ್ಟರು. ಮೀನಿನ ವಾಸನೆಗೆ ಮನೆಯಲ್ಲ ಇರುವೆಗಳು. ನಾಯಿ ಅನ್ನ ತಿಂತೋ ಇಲ್ಲವೋ ಆದರೆ ಕರೆಂಟ ಇಲ್ಲದಾಗ ಕತ್ತಲಲ್ಲಿ ಸಾರಿನಲ್ಲಿ ಬಿದ್ದ ಇರುವೆಯ ಭಕ್ಷಣೆಯೂ ಇವರಿಂದ ಆಯಿತು. ಇನ್ನು ಇರುವೆ ಕೊಲ್ಲಲು ಸೀಮೆ ಎಣ್ಣೆ ಬೇಕು. ಅದನ್ನು ಕೊಳ್ಳಲು ರೇಶನ್ ಕಾರ್ಡ ಇಲ್ಲ. ಒಟ್ಟಿನಲ್ಲಿ *ಸನ್ಯಾಸಿಯ ಸಂಸಾರ* ಬೆಳಿತಾ ಹೋಯಿತು. ಇದೇನು ಮಹಾವಿದ್ಯೆ ಅನ್ನಿಸಿದ್ದು ಈಗ ಕುತ್ತಿಗೆಗೆ ಬಂತು. ಕೊನೆಗೆ ಡಿಸೇಲ್ ತಂದು ಇರುವೆ ಕೊಲ್ಲುವ ನಿರ್ಧಾರ. ಸೀಮೆ ಎಣ್ಣೆಗಾಗಿ ಹೊರಗೆ ಹೋದಾಗ ಸ್ನೇಹಿನೊಬ್ಬ ಸಿಕ್ಕು ಮತ್ತೋರ್ವನನ್ನು ಪರಿಚಯಿಸುತ್ತಾನೆ. ಆಗುಂತಕ ತನ್ನ ಕೂಸಿಗೆ ಹೆಸರು ಸೂಚಿಸು ಅಂತ ಗಂಟುಬೀಳುತ್ತಾನೆ. ಈ ಭಾಗ ಮುಖ್ಯ ಕಥೆಗೆ ಎಳ್ಳಷ್ಟೂ ಹೊಂದಿಕೆಯಾಗದು. ಅದೇ ಗೆಳೆಯನ ಸಲಹೆಯ ಮೇರೆಗೆ ಒಂದೇ ಸಲಕ್ಕೆ ಎಲ್ಲ ಅಡಿಗೆ ಕುಕರ್ ನಲ್ಲಿ ಮಾಡಬಹುದೆಂದು ಪ್ರಯೋಗಕ್ಕೆ ಅಣಿಯಾಗುತ್ತಾನೆ. ಅಡುಗೆ ಮಾಡುವುದು ಒಂದು ಕಲೆ ಅನ್ನುವ ಹೀರೋಗೆ ಗಣಿತದ ಲೆಕ್ಕಾಚಾರ ತಪ್ಪಿಹೋಯಿತು. ಅದೇ ವೇಳೆಗೆ ಒಬ್ಬ ಉಗ್ರನನ್ನು ಹುಡುಕುತ್ತಾ ಮನೆಯ ಮುಂದೆ ಪೋಲೀಸ್ ಅಧಿಕಾರಿ ಹಾಜರ್. ಕುಕರ್ ಸಿಡಿದ ಶಬ್ದ, ಬಾಂಬ್ ಇಲ್ಲವೆ ಗುಂಡು ಅಂತ ಭಾವಿಸಿ ಪೋಲಿಸ್ ಮನೆಯೊಳಗೆ ಬಂದು ರೆಡ್ ಆಕ್ಸೈಡ್‌ ನೆಲದ ಮೇಲೆ ಜಾರಿ ಬಿದ್ದ. ಪ್ಯಾಂಟಿಗೆ ಹತ್ತಿದ ಕೆಂಪು ಬಣ್ಣ ಬ್ಲೀಡಿಂಗ್ ಆಗಿ ತೋರಿತು. ಪೋಲಿಸರನ್ನು ಹೊರಗೆ ಹಾಕಲು ಹರಸಾಹಸ ಮಾಡಬೇಕಾಯಿತು. ಇದನ್ನೆಲ್ಲಾ ಓದುತ್ತಿರುವಾಗ ನಗು ನಿಯಂತ್ರಿಸಲು ಆಗುವುದಿಲ್ಲ. ಅಡುಗೆ ಮಾಡುವುದು ಕಲೆ ಅಂತ ಒಬ್ಬ ಪುರುಷನ ಅಭಿಪ್ರಾಯವಿದ್ದರೆ ಅದು ಕರ್ತವ್ಯ, ಅಗತ್ಯತೆ ಅನ್ನುವಳು ಹೆಣ್ಣು. ಬೆಳೆಯುತ್ತಿರುವ ವಿಜ್ಞಾನ ಯುಗದಲ್ಲಿ ಅದು ವಿಜ್ಞಾನವಾಗಿ ಮಾರ್ಪಡುತ್ತಿದೆ. ಏನೇ ಆಗಲಿ ಅಡುಗೆ ಸಾಮಾನ್ಯ ವಿಜ್ಞಾನ, ಎಲ್ಲರಿಗೂ ತಿಳಿದಿರಬೇಕಾದುದು. ಪೇಟೆಯಲ್ಲಿ ತಿನಿಸುಗಳ ಮೇಲೆ ಪ್ರಯೋಗಿಸಿದ ಅದ್ಭುತ ಕಲೆಯನ್ನು ನೋಡಿಯೇ ಕೊಳ್ಳುವವರು ಜಾಸ್ತಿ. ಕಲೆ ಬಾಹ್ಯ ಸೌಂದರ್ಯ, ವಿಜ್ಞಾನ ಆಂತರ್ಯದ ರುಚಿ ಅಂತ ಹೊರಗಿನ ತಿನಿಸುಗಳನ್ನು ಸವಿದವರಿಗೆ ಗೊತ್ತು. ಅದಕ್ಕಾಗಿ ಪಾಕಕ್ರಾಂತಿಗೆ ಜಯವಾಗಲಿ. ಏನೇ ಆಗಲಿ ಪೂರ್ಣಚಂದ್ರ ತೇಜಸ್ವಿಯಂತ ಒಬ್ಬ ಗಂಭೀರ ವಿಜ್ಞಾನಿ ಇಂತಹ ಹಾಸ್ಯಮಯ ಕಥೆ ಬರೆಯುತ್ತಾರೆ ಅನ್ನುವದನ್ನು ನಂಬುವುದು ಕಷ್ಟ. ******************************** ವಿನುತಾ ಹಂಚಿನಮನಿ

ಪಾಕ ಕ್ರಾಂತಿ Read Post »

ವಾರದ ಕವಿತೆ

ಗಝಲ್

ಗಝಲ್ ಪ್ರೇಮಾ ಹೂಗಾರ ಬೀದರ ನೀ ಇಲ್ಲದೆಯು ನಾ ಬದುಕಬಲ್ಲೆ ಈ ಗಜಲ್ ನ ಧ್ಯಾನದಲಿಸಣ್ಣಗೆ ಮೌನದಿ ಕುದಿಯುವ ಎದೆಯ ದನಿಯ ರಾಗದಲಿ ಕುಸಿದು ಬೀಳಿಸುವ ಆ ಮಾತು,ನೋಟ್,ಸ್ಪರ್ಷ ಮರೆತಿಲ್ಲಗುಟುಕುವ ಚೇತನವೇ ಆ ಸೂರ್ಯನ ಸಾವು ಈ ಜೀವದಲಿ ಒಂಟಿತನದ ಹೆಜ್ಜೆಯೊಳಗೆ ಬಿಕ್ಕಳಿಕೆ ಮಲಗುತ್ತವೆ ಎನ್ನಬೇಡಎಂದೂ ಬತ್ತದ ನಿನ್ನ ಪ್ರೀತಿಯ ಜೋಳಿಗೆ ಇದೆ ನನ್ನ ಮೌನದಲಿ ಉರಿಯುತ್ತಿರುವ ದೀಪ ಆರುವ ಸತ್ಯ ಎಂದೋ ಅರಿತವಳು ನಾಕಲ್ಪನೆಗೂ ಮೀರಿ ಕತ್ತಲೆ ಜೊತೆ ನೀಡಿತು ನೀನಿಲ್ಲದ ಈ ಭವದಲಿ ನನ್ನೊಳಗಿನ ಹೆಜ್ಜೆಗಳಿಗೆ ಹೊಸ ನಾದದ ಅರಿವು ಮೂಡುತ್ತಿದೆಸಮಾಧಿಯಾದ ನೆನಪುಗಳೆಲ್ಲ ದನಿ ಮುರಿದಿವೆ ಹೊಸ ಮೋಹದಲಿ ಗಜಲ್ ಎಂದರೆ ನನ್ನ ಧ್ಯಾನ್,ಮೌನ ‘ಪ್ರೇಮ’ದ ಸಂಕೇತಬಿಟ್ಟೆನೆಂದರೂ ಬಿಡದು ಈ ಬಂಧ ಗಜಲ್ ನಾದದಲಿ ***************************************

ಗಝಲ್ Read Post »

ಕಾವ್ಯಯಾನ

ಪೂರ್ವಿಕರ ಸಾಧನೆ

ಕವಿತೆ ಪೂರ್ವಿಕರ ಸಾಧನೆ ಮಾಲಾ ಕಮಲಾಪುರ್ ಮಾನ ಮುಚ್ಚಲೆಂದು ಗೇಣು ಬಟ್ಟೆಜ್ಞಾನಕ್ಕೇನೂ ಕಮ್ಮಿ ಇಲ್ಲ ಎನ್ನುವ ಸಾಧನೆಮುಷ್ಠಿ ಅನ್ನದಲ್ಲಿಯೂ ನಾಲ್ಕು ಜನರಿಗೆಕೈ ತುತ್ತು ಹಾಕುವ ಪೂರ್ವಿಕರಿಗೊಂದು ನನ್ನ ಸಲಾಂ ಕೇಳುವ ಹತ್ತಾರು ಕಿವಿಗಳಿಗೆ ಪುರಾಣ ಪುಣ್ಣ್ಯ ಕಥೆಗಳನು ನಾಲ್ಕು ಚಪ್ಪರದಲಿ ಕಂದೀಲು ಬೆಳಕಿನಲಿ ಜ್ಞಾನಾಮೃತ ಉಣಿಬಡಿಸಿದ ಪೂರ್ವಿಕರಿಗೊಂದು ನನ್ನ ಸಲಾಂ ಚೌಕಾಬಾರ ಗೋಟ ಗೋಣಿ ಗೋಲಿ ಆಟದಲಿ ಮಕ್ಕಳಿಗೆ ಅಂಕೆ ಸಂಖ್ಯೆ ಗಳ ಪರಿಚಯಸಿ ಮೋಜು ಮಾಡುತ ಮನ ತುಂಬಿ ಹಾರೈಸುವ ಪೂರ್ವಿಕರಿಗೊಂದು ನನ್ನ ಸಲಾಂ ಭಯ ಭೀತಿ ಅಳಿಸಲೋಮ್ಮೆ ಮಕ್ಕಳಿಗೆ ದೃಷ್ಟಿ ತೆಗೆದು ಹಾರೈಸುವ ಅಜ್ಜಿಯರಿಗೊಂದು ನನ್ನ ಸಲಾಂ ರೋಗಗಳು ಭಾದೆ ತಾಗದಿರಲೆಂದು ವೈರಾಣುಗಳನು ಹೊರ ಹಾಕಲು ಮನೆ ಮನೆಯಲಿ ಊದು ಹಾಕಿ ಅಕ್ಷರಸ್ಥರಾಗದೆ ವೈದ್ದ್ಯಕೀಯ ಅರಿವು ಹೊಂದಿದ ಪೂರ್ವಿಕರಿಗೊಂದು ನನ್ನ ಸಲಾಂ ನಮ್ಮ ಜಲ ನಮ್ಮ ನೆಲ ನಾವೆಲ್ಲ ಒಂದು ಹೇಳುತಾ ನಿಸ್ವಾರ್ಥ ಬದುಕಿನಲಿ ಬಂಗಾರದ ಬದುಕು ಕಂಡ ಪೂರ್ವಿಕರಿಗೊಂದು ನನ್ನ ಸಲಾಂ. ************************************************

ಪೂರ್ವಿಕರ ಸಾಧನೆ Read Post »

ಇತರೆ

‘ಶಾಂತಿ ಮಾನವ’ ಶಾಸ್ತ್ರಿ

ಲೇಖನ ‘ಶಾಂತಿ ಮಾನವ’ ಶಾಸ್ತ್ರಿ ಚವೀಶ್ ಜೈನ್ ಚಪ್ಪರಿಕೆ ಭಾರತ ಎಂಬ ಈ ದೇಶ ಸಾವಿರಾರು ಮಹಾಪುರುಷರನ್ನು ಕಂಡಿದೆ. ಅಂತಹ ಮಹಾನ್ ನಾಯಕರನ್ನೂ ಒಪ್ಪಿಕೊಳ್ಳುವ ಮತ್ತು ತಿರಸ್ಕರಿಸುವ ಎರಡೂ ವರ್ಗಗಳು ಸಾಮಾನ್ಯವಾಗಿ ಸಮಾಜದಲ್ಲಿ ಇರುತ್ತವೆ. ಆದರೆ ಕೆಲವು ವ್ಯಕ್ತಿಗಳಿದ್ದಾರೆ, ಅವರನ್ನು ಎಲ್ಲಾ ವರ್ಗದವರು, ಎಲ್ಲಾ ಜಾತಿ – ಮತದವರು, ಬಲಪಂಥೀಯರು, ಎಡಪಂಥೀಯರು, ಎಲ್ಲಾ ಪಕ್ಷಗಳು ಒಟ್ಟಾರೆ ಸಮಸ್ತ ದೇಶ ಒಪ್ಪಿಕೊಳ್ಳುತ್ತದೆ ಮತ್ತು ಗೌರವಿಸುತ್ತೆ. ಅಂತಹ ಮಹಾತ್ಮರಲ್ಲಿ ಅಗ್ರಪಂಕ್ತಿಯಲ್ಲಿ ನಿಂತುಕೊಳ್ಳುವವರು, ಈ ದೇಶದ ಶಾಂತಿ ಮಾನವ ಲಾಲ್ ಬಹದ್ದೂರ್ ಶಾಸ್ತ್ರಿ. ಅಂತಹ ನಾಯಕರು ಇತಿಹಾಸದ ಎಲ್ಲಾ ಪುಟಗಳಲ್ಲಿ ಆವರಿಸಿಕೊಂಡಿರುವಾಗ, ವಿಪರ್ಯಾಸ ಎಂಬಂತೆ ಶಾಸ್ತ್ರೀಜೀ ಮಾತ್ರ ಇತಿಹಾಸ ಪುಟದಲ್ಲಿ ಮರೆಯಾಗಿದ್ದಾರೆ.  ಯಾವ ಇತಿಹಾಸದಲ್ಲೂ ಇಂತಹ ಮೇರು ನಾಯಕನನ್ನು ಅಷ್ಟಾಗಿ ಓದುವುದಿಲ್ಲ.      ಆದ್ದರಿಂದ ಈ ಸಂದರ್ಭದಲ್ಲಿ ಶಾಸ್ತ್ರೀಜೀಯವರ ಕುರಿತು ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ. ಇವರು ಹುಟ್ಟಿದ್ದು ಅಕ್ಟೋಬರ್ 2, 1904 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಿಯಲ್ಲಿ. ಅಂದರೆ ರಾಷ್ಟಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದೆ ಇವರ ಜನ್ಮದಿನ. ಆದರೆ ಸಹಜವಾಗಿ ಅಕ್ಟೋಬರ್ 2 ಅಂದಾಕ್ಷಣ ಗಾಂಧೀಜಿ ಮತ್ತು ಗಾಂಧಿ ಜಯಂತಿ ಮಾತ್ರ ನೆನಪಾಗುತ್ತದೆ ವಿನಃ ಶಾಸ್ತ್ರೀಜೀ ನೆನಪಾಗುವುದಿಲ್ಲ. ಹಾಗಂತ ಗಾಂಧಿ ಜಯಂತಿಯ ನೆಪದಲ್ಲಿ ಶಾಸ್ತ್ರೀಯನ್ನು ಮರೆಯುತ್ತೇವೆ ಅಥವಾ ಗಾಂಧಿ ಹೆಸರಲ್ಲಿ ಶಾಸ್ತ್ರಿ ಮರೆಯಾಗಿದ್ದಾರೆ ಎಂದು ಅರ್ಥವಲ್ಲ. ಬಹುಶಃ ಬೇರೆ ಯಾವುದಾದರೂ ದಿನ ಶಾಸ್ತ್ರೀ ಹುಟ್ಟಿದ್ದರೆ ಅವರ ಜನ್ಮಜಯಂತಿಯೇ ಇರುತ್ತಿರಲಿಲ್ಲವೆನೋ!  ಆದರೆ ಈ ದಿನ ಜನಿಸಿದ್ದಕ್ಕೆ ಗಾಂಧಿ ಜೊತೆಗೆ ಇವರ ಭಾವಚಿತ್ರ ಇಟ್ಟು ಗೌರವ ಸಲ್ಲಿಸುತ್ತೇವೆ. ಇವರು ಒಂದು ಸಾಮಾನ್ಯ ಬಡ ಕುಟುಂಬದಿಂದ ಬಂದಂತವರು. ಇವರ ತಂದೆ ಶಿಕ್ಷಕರಾಗಿದ್ದರು, ಆದರೆ ಶಾಸ್ತ್ರಿ ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ನಂತರ ಚಿಕ್ಕಪ್ಪನ ಮನೆಯಿಂದ ಶಾಲೆಗೆ ಹೋಗುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರಪ್ರೇಮ ಮೈಗೂಡಿಸಿಕೊಂಡಿದ್ದ ಇವರು 16ನೇ ವಯಸ್ಸಿಗೆ ಶಿಕ್ಷಣ ನಿಲ್ಲಿಸಿ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗಿಯಾದರು. ನಂತರ ರಾಷ್ಟ್ರೀಯ ಹೋರಾಟಗಳಲ್ಲಿ ತಮ್ಮನ್ನು ತಾವು  ಸಕ್ರೀಯವಾಗಿ ತೊಡಗಿಸಿಕೊಂಡು, ಹಲವಾರು ಬಾರಿ ಸೆರೆವಾಸ ಅನುಭವಿಸಿದರು.   ಸ್ವಾತಂತ್ರ್ಯ ನಂತರ ಉತ್ತರ ಪ್ರದೇಶ ಸರ್ಕಾರದಲ್ಲಿ ಪೋಲೀಸ್ ಖಾತೆಯನ್ನು ವಹಿಸಿಕೊಂಡರು. 1951ರಲ್ಲಿ  ಲೋಕಸಭೆಗೆ ಆಯ್ಕೆಯಾಗಿ ರೈಲ್ವೆ ಖಾತೆಯನ್ನು ವಹಿಸಿಕೊಂಡರು. ಆದರೆ ಅವರ ಅವಧಿಯಲ್ಲಿ ಆದ ಒಂದು ರೈಲು ಅಪಘಾತಕ್ಕೆ ವೈಯಕ್ತಿಕ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿದರು. ಹತ್ತಾರು ಹಗರಣ, ಭ್ರಷ್ಟಾಚಾರ ಪ್ರಕರಣಗಳಿದ್ದರು ಅಧಿಕಾರದಲ್ಲೇ ಮುಂದುವರೆಯುವ ಇವತ್ತಿನ ಅನೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಶಾಸ್ತ್ರೀಜೀಯವರ ವ್ಯಕ್ತಿತ್ವ ಅರಿಯಬೇಕು. ನಂತರ ಮತ್ತೆ ಕ್ಯಾಬಿನೆಟ್ ಪ್ರವೇಶಿಸಿದ ಇವರು ಸಾರಿಗೆ ಮಂತ್ರಿಯಾಗಿ, ನಂತರ 1961ರಲ್ಲಿ ಗೃಹ ಸಚಿವರಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.    ನೆಹರು ನಿಧನದ ನಂತರ 1964 ಜೂನ್ 9 ರಂದು ಭಾರತದ 2ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಪ್ರಧಾನಿಯಾಗಿ 17 ತಿಂಗಳ ಅವಧಿಯಲ್ಲಿ ಅವರು ದೇಶಕ್ಕೆ ಮಾಡಿದ ಸೇವೆ ಅಪೂರ್ವವಾದುದು. ಅವರು ಪ್ರಧಾನಿಯಾದಾಗಲು ಕೂಡ ಅವರ ಬಳಿ ಸ್ವಂತ ಕಾರಿರಲಿಲ್ಲ. ನಂತರ ಮನೆಯವರ ಒತ್ತಾಯದ ಮೇರೆಗೆ 12,000 ರೂಪಾಯಿಗಳ ಫಿಯಟ್ ಕಾರೊಂದನ್ನು ಖರೀದಿಸಿದರು. ಆಗ ಅವರ ಬಳಿ ಅಷ್ಟು ಹಣವಿಲ್ಲದ ಕಾರಣ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 5,000 ರೂಪಾಯಿಗಳ ಸಾಲವನ್ನು ಪಡೆದುಕೊಂಡರು. ಶಾಸ್ತ್ರೀ ಸಾವಿನ ನಂತರ ಬ್ಯಾಂಕ್ ಅವರ ಸಾಲವನ್ನು ಮನ್ನಾ ಮಾಡಿತು. ಆದರೆ ಅವರ ಪತ್ನಿ ಲಲಿತಾ ಶಾಸ್ತ್ರಿ ಸಾಲವನ್ನು ಮರುಪಾವತಿಸಿದರು. ಇದು ಈ ದೇಶ ಮತ್ತು ಶಾಸ್ತ್ರೀ ಕುಟುಂಬದ ಪ್ರಾಮಾಣಿಕತೆಗೆ ಹಿಡಿದ ಕೈಗನ್ನಡಿ.    ನಿಜವಾಗಿಯೂ ಸ್ವಾಭಿಮಾನ ಎಂಬ ಪದಕ್ಕೆ ಅರ್ಥವೇ ಶಾಸ್ತ್ರೀಜೀ. ಸವಾಲುಗಳಿಂದ ಕೂಡಿದ್ದ ಅಂತಹ ಕಠಿಣ ಸಂದರ್ಭದಲ್ಲೂ ದೇಶದ ಗೌರವ ಉಳಿಸಿದ್ದರು. ಸ್ವಾವಲಂಬಿ ರಾಷ್ಟವನ್ನು ಕಟ್ಟುವ ಉದ್ದೇಶ ಅವರದ್ದು. ಇವತ್ತು ನಾವು ‘ಆತ್ಮ ನಿರ್ಭರ ಭಾರತ’ ಎಂದು ಹೇಳುತ್ತಿದ್ದೇವಲ್ಲ, ಈ ಚಿಂತನೆಯನ್ನು ಶಾಸ್ತ್ರೀಜೀ ಆವತ್ತೇ ಮಾಡಿದ್ದರು. ಕೈಗಾರಿಕೆ, ಕೃಷಿ, ಸೈನ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು. ‘ಕ್ಷೀರ ಕ್ರಾಂತಿ’  ಹೆಸರಿನಲ್ಲಿ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾಲಿನ ಉತ್ಪಾದನೆಗೆ ಕಾರಣರಾದರು.        ಶಾಸ್ತ್ರೀ ಜೀವನದುದ್ದಕ್ಕೂ ಸರಳತೆ ಎಂಬ ಅಂಶವನ್ನು ಎಲ್ಲೂ ಮರೆಯಲಿಲ್ಲ. ಯಾವತ್ತೂ VVIP ಎಂಬ ಕಾರ್ಡನ್ನು  ತೋರಿಸಲಿಲ್ಲ. ಮಗನನ್ನು ಕಾಲೇಜಿಗೆ ಸೇರಿಸುವಾಗ  ಎಲ್ಲರಂತೆ ತಾವು ಸಹ  ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ದೇಶದ ಸಾಮಾನ್ಯ ಜನರೊಂದಿಗೆ ಅತಿಸಾಮಾನ್ಯರಾಗಿ ಶಾಸ್ತ್ರೀ ಬದುಕುತ್ತಿದ್ದರು.     ಶಾಸ್ತ್ರೀಜೀ ಪ್ರಧಾನಿಯಾದಾಗ ದೇಶದಲ್ಲಿ ನೂರಾರು ಸಮಸ್ಯೆಗಳಿದ್ದವು. ಅದನ್ನು ಅತ್ಯಂತ ಸಮರ್ಥವಾಗಿ ಎದುರಿಸಿದರು. ಒಂದೆಡೆ ಬಡತನ ಮತ್ತೊಂದೆಡೆ ಪಾಕಿಸ್ತಾನದ ಉಪಟಳ. ಪಾಕಿಸ್ತಾನ ಮತ್ತೆ 1965ರಲ್ಲಿ ಭಾರತದ ಮೇಲೆ ಯುದ್ಧ ಸಾರಿತು. ಕಠಿಣ ಪರಿಸ್ಥಿತಿಯಲ್ಲಿ ದೇಶದ ಸೈನಿಕರ ಜೊತೆ ನಿಂತ ಶಾಸ್ತ್ರೀ “ಜೈ ಜವಾನ್, ಜೈ ಕಿಸಾನ್” ಘೋಷಣೆ ಮೊಳಗಿಸಿದರು.  ಇದು ಭಾರತೀಯ ಸೈನಿಕರಲ್ಲಿ ಹೊಸ ಉತ್ಸಾಹ ತುಂಬಿತು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಮಾಡಲು ಭಾರತೀಯ ಸೈನ್ಯಕ್ಕೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಟ್ಟರು. ಆವಾಗಲೇ ಈ ದೇಶಕ್ಕೆ ಮತ್ತು ಹೊರ ಜಗತ್ತಿಗೆ ಶಾಂತಿ ಮಾನವನ ದಿಟ್ಟತನದ ಅರಿವಾಗಿದ್ದು. ಶಾಂತಿಗೆ ಭಂಗವಾದಾಗ ಶಾಸ್ತ್ರಿ ಸುಮ್ಮನೆ ಕೂರಲಿಲ್ಲ. ಬಹುಶಃ ಶಾಸ್ತ್ರಿ, ‘ಅಹಿಂಸೆ’ ಎಂಬ ಪದದ ಸ್ಪಷ್ಟವಾದ ಅರ್ಥವನ್ನು ಅರಿತಿದ್ದರು. ಅಹಿಂಸೆ ಎಂದರೆ ‘ಹಿಂಸಾ ನ ಕರೋ, ಹಿಂಸಾ ನ ಸಹೋ’ ಅಂದರೆ ಹಿಂಸೆಯನ್ನು ಮಾಡಬಾರದು ಮತ್ತು ಹಿಂಸೆಯನ್ನು ಸಹಿಸಿಕೊಳ್ಳಬಾರದು ಎಂದು. ಭಾರತದ ಈ ಅಹಿಂಸಾ ಸಿದ್ಧಾಂತವನ್ನು ಜಗತ್ತಿಗೆ ತೋರಿಸಿದರು. ಪರಿಣಾಮ ಭಾರತೀಯ ಸೈನ್ಯ ಲಾಹೋರ್ ವರೆಗೂ ನುಗ್ಗಿ ಪಾಕಿಸ್ತಾನಕ್ಕೆ ಉತ್ತರ ನೀಡಿತ್ತು. ಆದರೆ ನಾವು ಈ ಯುದ್ಧದ ಗೆಲುವನ್ನು ಮರೆತೇಬಿಟ್ಟಿದ್ದೇವೆ.     ಯುದ್ಧದ ಮಧ್ಯೆ ಅಮೇರಿಕಾ ಭಾರತಕ್ಕೆ ಯುದ್ಧವನ್ನು ನಿಲ್ಲಿಸುವಂತೆ ಒತ್ತಾಯ ಮಾಡಿತು. ಯುದ್ಧ ಮುಂದುವರೆಸಿದರೆ, ಭಾರತಕ್ಕೆ ಗೋಧಿಯ ರಫ್ತನ್ನು ನಿಲ್ಲಿಸುವುದಾಗಿ ಹೇಳಿತು. ಅದರೆ ಶಾಸ್ತ್ರೀ ಅಮೇರಿಕಾದ ಬೆದರಿಕೆಗೆ ಬಗ್ಗಲಿಲ್ಲ. ನಿಮ್ಮ ದೇಶ ಕಳಿಸುವ ಗೋಧಿಯನ್ನು ನಮ್ಮ ದೇಶದಲ್ಲಿ ಪ್ರಾಣಿಗಳು ಮೂಸಿ ನೋಡುವುದಿಲ್ಲ ಎಂದು ಉತ್ತರಿಸಿದರು. ಶಾಸ್ತ್ರಿ  ದೇಶಕ್ಕೋಸ್ಕರ ಪ್ರತಿನಿತ್ಯ ತಮ್ಮ ರಾತ್ರಿ ಊಟವನ್ನು ತ್ಯಜಿಸಿದರು. ನಂತರ ದೇಶದ ಜನರಲ್ಲಿ ಪ್ರತಿ ಸೋಮವಾರ ರಾತ್ರಿಯ ಊಟವನ್ನು ತ್ಯಜಿಸುವಂತೆ ಮನವಿ ಮಾಡಿಕೊಂಡರು. ಇದು ‘ಸೋಮವಾರದ ಉಪವಾಸ’ ಎಂದು ಪ್ರಸಿದ್ಧವಾಯಿತು. ದೇಶದ ಜನ ಶಾಸ್ತ್ರೀ ಮಾತಿಗೆ ಸಹಕರಿಸಿದರು.   ಭಾರತೀಯ ಸೈನ್ಯ ಲಾಹೋರ್ ಗೆ ನುಗ್ಗುತ್ತಿದ್ದಂತೆ ರಷ್ಯಾದ ನೇತ್ರತ್ವದಲ್ಲಿ, ತಾಷ್ಕೆಂಟ್ ನಲ್ಲಿ ಒಪ್ಪಂದ ಏರ್ಪಡಿಸಲಾಯಿತು. ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಪಾಕ್ ಪ್ರಧಾನಿ ಅಯ್ಯುಬ್ ಖಾನ್ ಒಪ್ಪಂದಕ್ಕೆ ಸಹಿ ಹಾಕಿದರು. ಮೊದಲೇ ತಯಾರಾಗಿದ್ದ ಒಡಂಬಡಿಕೆಗಳನ್ನು ನೋಡಿ ಶಾಸ್ತ್ರೀಜೀ ಸಹಿ ಹಾಕಲು ನಿರಾಕರಿಸಿದರೂ ಕೂಡ, ನಂತರ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಭಾರತೀಯ ಸೈನ್ಯ ಪ್ರಾಣ ಪಣಕ್ಕಿಟ್ಟು ಹೋರಾಡಿ ಗೆದ್ದ ಭಾಗವನ್ನೇ ಬಿಟ್ಟುಕೊಡಬೇಕಾಗಿ ಬಂತು. ಭಾರತೀಯ ಸೈನ್ಯ ಯುದ್ಧವನ್ನು ಗೆದ್ದರೂ ಕೂಡ, ಗೆಲುವನ್ನು ಉಳಿಸಿಕೊಳ್ಳಲಾಗಲಿಲ್ಲ. ಅದೇ ರಾತ್ರಿ, 11 ಜನವರಿ 1966 ರಂದು  ತಾಷ್ಕೆಂಟ್ ನಲ್ಲೇ ಲಾಲ್ ಬಹಾದ್ದೂರ್ ಶಾಸ್ತ್ರಿ ಅಸ್ತಂಗತರಾದರು. ಸರ್ಕಾರಿ ಮೂಲಗಳು ಶಾಸ್ತ್ರಿ ಹೃದಯಾಘಾತದಿಂದ ನಿಧನರಾದರು ಎಂದು ಹೇಳಿದವು. ಆದರೆ ದೇಶದ ಜನ ಮತ್ತು ಶಾಸ್ತ್ರಿ ಕುಟುಂಬ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ನೇತಾಜಿಯಂತೆ ಶಾಸ್ತ್ರೀಜೀಯವರ ಸಾವು ನಿಗೂಢವಾಯಿತು. ಸರ್ಕಾರ ಈ ಕುರಿತಂತೆ ಸರಿಯಾದ ತನಿಖೆ ನಡೆಸಲೇ ಇಲ್ಲ. ಖ್ಯಾತ ಲೇಖಕ ಅನೂಜ್ ಧರ್ ‘YOUR PRIME MINISTER IS DEAD’  ಎಂಬ ತಮ್ಮ ಪುಸ್ತಕದಲ್ಲಿ ಶಾಸ್ತ್ರೀ ಸಾವಿನ ಸಂಶಯಗಳ ಕುರಿತಂತೆ ಅದ್ಭುತವಾಗಿ ವಿಶ್ಲೇಷಣೆ ಮಾಡಿದ್ದಾರೆ. ಒಟ್ಟಾರೆ ದೇಶ ಸತ್ಯವನ್ನು ಅರಿಯಬೇಕಿದೆ. ಶಾಸ್ತ್ರೀಜೀ ಅಂತ್ಯಕ್ಕೆ ನ್ಯಾಯ ಸಿಗಬೇಕಿದೆ. ಆದರೆ ಲಾಲ್ ಬಹದ್ದೂರ್ ಶಾಸ್ತ್ರೀಜೀಯವರ 17 ತಿಂಗಳ ಅಧಿಕಾರ, ಅವರ ವ್ಯಕ್ತಿತ್ವ, ಈ ದೇಶ ಎಂದಿಗೂ ಸ್ಮರಿಸಿಕೊಳ್ಳುವಂತದ್ದು. ************************************

‘ಶಾಂತಿ ಮಾನವ’ ಶಾಸ್ತ್ರಿ Read Post »

ಕಥಾಗುಚ್ಛ

ದುರಾಸೆ ಹಿಂದೆ ದುಃಖ

ಕಥೆ ದುರಾಸೆ ಹಿಂದೆ ದುಃಖ ಲಕ್ಷ್ಮೀದೇವಿ ಪತ್ತಾರ   ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. ಬಗೆ ಬಗೆ ಸಾಮಾನು. ಮಸ್ತ ಊಟದ ವ್ಯವಸ್ಥೆ. ಕೈಯಾಗ ದುಡ್ಡಿದ್ದರ ಸಾಕು. ಏನು ಬೇಕು ಅದನ್ನು ತಗೋಬಹುದು. ಅಲ್ಲದೆ ಫ್ರೀ ಬಸ್ ಬಿಟ್ಟಾರ. ಫ್ರೀ ಊಟ, ಫ್ರೀ ಬಸ್ ನೀನು ಹೋಗಿ ಬಾರಲ್ಲ “ಎಂದಳು ಸುಮಾ. ನನ್ನ ಗಂಡಂದು ಬರೇ ದುಡ್ಡೇ ಹುಚ್ಚು. ಮುಂಜಾಲೆ ಹೋದರೆ ಒಮ್ಮೆಲೆ ಕತ್ತಲಾದ ಮೇಲೆ ಮನೆ ಕಾಣೋದು. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಮಂಗಲಾ ತನ್ನ ದುಃಖ ತೋಡಿಕೊಂಡಳು. ಅದಕ್ಕೆ ಸುಮಾ ಒಳ್ಳೆಯ ಉಪಾಯವನ್ನೇ ಸೂಚಿಸಿದಳು. ಹೇಗೂ ನಿನ್ನ ಗಂಡ ದುಡೀಲಿಕ್ಕೆ ಹೋದಾಗ ನೀನು, ನಿನ್ನ ಮಗನೊಂದಿಗೆ ಹೋಗಿ ಬಾ. ನಮ್ಮ ಊರು ಜನ ಬೇಕಾದಷ್ಟು ಮಂದಿ ಹೊಂಟಾರ. ನೀನು ಹೋಗಿ ಸಾಯಂಕಾಲದೊಳಗೆ ಬಂದು ಬಿಡು” ಎಂದಳು. ಇಷ್ಟು ಹೇಳೋದು ಒಂದೇ ತಡ ಮೊದಲೇ ಗಯ್ಯಾಳಿ, ಎಲ್ಲದರ ಹಪಾಹಪಿ ಇರುವ ಮಂಗಲಾ ತನ್ನ  ಮಗನನ್ನು          ಕರೆದುಕೊಂಡು ಫ್ರೀ ಬಸ್ ಹತ್ತಿ ಹೊರಟೇ ಬಿಟ್ಟಳು. ಹಾಗೆ 4-5 ವರ್ಷದ ಮಗನಿಗೆ, ಮಂಗಲಾಗೆ ಹಂಪಿಯ ಸೋಬುಗು ಮೆರಗು, ಜನದಟ್ಟಣೆ ಕಂಡು ಬೆರಗಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ಹೌಹಾರುವಂತಾಯಿತು. ಗಟ್ಟಿಗಿತ್ತಿ ಮಂಗಲಾ ಓಡ್ಯಾಡಿ ತನ್ನ ಮಗನಿಗೆ ಆಟಿಗೆ ಸಾಮಾನು ತನಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಊಟದ ವ್ಯವಸ್ಥೆ ಮಾಡಿದ್ದಲ್ಲಿಗೆ ಬಂದಳು. ಅಲ್ಲೆ ಇದ್ದ ಪರಿಚಿತೆ ಮಹಿಳೆ ಜೊತೆ ಮಾತಾಡಿದಳು. ನಂತರ ಬಹಳ ನುಕೂ-ನುಗ್ಗಲು ಇದ್ದ ಕಾರಣ ಮಗುವನ್ನು ಪರಿಚಿತಳಿಗೆ ಕೊಟ್ಟು “ನಿನಗೂ ಒಳಗ್ಹೋಗಿ ಊಟ ತರುವೆ. ಇಲ್ಲೆ ನನ್ನ ಮಗು ನೋಡಿಕೊಂಡಿರಿ” ಎಂದು ಹೇಳಿ ಒಳಗ್ಹೋದಳು. ಅಲ್ಲೆಗೆ ಆಕಸ್ಮಿಕವಾಗಿ VIP ಆಗಮನವಾಗಿ ಅವನ ಗುಂಪಿನ ಹಿಂದೆ ಮಂಗಳಾ ವಿಶೇಷ ಊಟವಿದ್ಹೆಡೆಗೆ ಹೋದಳು. ನೋಡಿದರೆ ಬಗೆ ಬಗೆ ಅಡುಗೆ ಮೊದಲೇ ಅತಿ ಆಶೆಯ ತಿನಿಸು ಬಡಕಿ ಮಂಗಳ ಒಂದೊಂದೆ ಅಡುಗೆ ತಿನ್ನುತ್ತಾ ಹೋದಳು. ಒಂದೊಂದು ವಿಶೇಷ ರುಚಿ ಹೊಂದಿರುವ ಅಪರೂಪದ ಅಡುಗೆ. ಈ ತರದ ಊಟ ಒಮ್ಮೆಯೂ ಮಾಡಿರದ ಮಂಗಳ ಉಣ್ಣುತ್ತಾ ಉಣ್ಣುತ್ತಾ ತನ್ನ ಮಗುವನ್ನು, ಮಗುವನ್ನು ಕರೆದುಕೊಂಡು ಕುಳಿತಿರುವ ಪರಿಚಯದವಳನ್ನು ಮರೆತಳು. ಆಕೆಗೆ ಊಟ ಒಯ್ಯಬೇಕೆಂಬುದ ಮರೆತು ಹಾಗೆ ಗದ್ದಲದ ನಡುವೆ ಹೊರಬಂದಳು. VIP ನೋಡಲು ನೂಕು ನುಗ್ಗಲು. ಈ ಗದ್ದಲದಲ್ಲೆ ಪ್ಲಾಸ್ಟಿಕ ಡಬ್ಬಿಗಳನ್ನು ಹೊತ್ತು ಮಾರುವನು ಗದ್ದಲದಲ್ಲೆ ಸಿಕ್ಕೂ ಅವನ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಅವನ್ನು ಕೆಲವರು ಎತ್ತಿಕೊಂಡು ಹೋದರು. ಈಕೆಗೂ ತೆಗೆದುಕೊಂಡು ಒಯ್ಯಬೇಕೆಂದು ಯೋಚಿಸುವಷ್ಟರಲ್ಲೆ ಮಗುವಿನ ನೆನಪಾಯಿತು. ಓಡಿ ಹೋಗಿ ನೋಡುತ್ತಾಳೆ. ಮಗುವು ಇಲ್ಲ. ಅಪರಿಚಿತ ಹೆಂಗಸು ಇಲ್ಲ. ಹುಚ್ಚಿಯಂತೆ ಹುಡುಕುತ್ತಾ ಹೋದಳು. ಗದ್ದಲಿನಲ್ಲೆ ಕಂಡಕಂಡವರಿಗೆ ತನ್ನ ಮಗು ಹೀಗೆ ಇತ್ತು. ನೋಡಿದಿರಾ ಎಂದು ಕೇಳಿದಳು. ಎಲ್ಲಿ ನೋಡಿದರೆ ಸುಳಿವಿಲ್ಲ. ಹೀಗೆ ಹುಡುಕುವಾಗ ಮಗುವನ್ನು ನೋಡಿಕೊಂಡಿರಲು ಹೇಳಿದ ಹೆಂಗಸು ಸಿಕ್ಕಳು.ಮಂಗಲಾ “ನನ್ನ ಮಗು ಎಲ್ಲಿ” ಎಂದರೆ, “ಎಷ್ಟು ಹೊತ್ತು ಅಂತ ಕಾಯೋದು. ನನ್ನ ಹೊಟ್ಟೆಯೂ ಚುರುಗುಟ್ಟಿತು. ನಾನು ಮೊದಲೇ ಒಂತರಾ ಮನುಷ್ಯಳು. ಯಾವಾಗ ಹೇಗೆ ಇರುತ್ತೇನೂ ನನಗೆ ಗೊತ್ತಿರುವುದಿಲ್ಲ. ನನಗೂ ನೀನು ಬೇಗ ಬರದೇ ಇರುವುದು ಬೇಸರವಾಗಿ ನಿನ್ನ ಮಗುವನ್ನು ಅಲ್ಲೆ ಬಿಟ್ಟು ಬಂದೆ “ಎಂದಳು. ಮಂಗಲಾಗೆ ಆಕಾಶವೇ ಕಳಚಿ ಬಿದ್ದಾಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತರ ತರ ನಡುಗಿ ಹೋದಳು. ತನ್ನ ಒಂದು ಕ್ಷಣದ ಬಾಯಿ ರುಚಿ ಆಶೆಗೆ (ದುರಾಶೆಗೆ) ಮುಂದಿನ ಪರಿಣಾಮ ಯೋಚಿಸಲಿಲ್ಲವಲ್ಲ. ನನ್ನ ಮಗು ಏಲ್ಲಿ ಹೋಯಿತು. ಯಾರು ಎತ್ತಿಕೊಂಡು ಹೋದರು. ನನ್ನ ಮಗುವನ್ನು ಏನೂ ಮಾಡುವರೊ. ಎಂತಹ ಮುದ್ದಾದ ಸುಂದರ ಮಗು ನನ್ನದು. ದೇವರು ನನಗೇಕೆ ಇಂತಹ ಬುದ್ಧಿ ಕೊಟ್ಟೆ ಎಂದು ಒಂದೇ ಸಮನೆ ಹಲುಬುತ್ತಾ, ಕಣ್ಣೀರಿಡುತ್ತಅ ಕಂಡ ಕಂಡವರನ್ನೂ ತನ್ನ ಮಗು ಕುರಿತು ಕೇಳುತ್ತಾ ಹುಚ್ಚಿಯಂತೆ ಹುಡುಕುತ್ತಾ ಹೊರಟಳು. ************************

ದುರಾಸೆ ಹಿಂದೆ ದುಃಖ Read Post »

ಕಾವ್ಯಯಾನ

ನಮ್ಮ ಮನೆ

ಕವಿತೆ ನಮ್ಮ ಮನೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಅರಮನೆಯಂತಿಲ್ಲ ಈ ನನ್ನ ಮನೆಮಧ್ಯಮವರ್ಗದಅತೀ ಸಾಮಾನ್ಯ ಅನುಕೂಲದಸಣ್ಣದೊಂದು ಸೂರು ಅಷ್ಟೆ!ಹಜಾರವಿದೆಅದೂ ಮಧ್ಯಮಒಂದೆರಡು ರೂಮುತಲೆಯಿಂದ ಕಾಲ ಉದ್ದುದ್ದಧಾರಾಳ ನೀಡುವಷ್ಟು!ಊಟಕ್ಕೆ ನೆಲಮತ್ತು ಅಡುಗೆಗೊಂದು ದೊಡ್ಡ ಬಿಲ! ಬನ್ನೀ ಸ್ವಾಮಿಯಾರು ಬೇಕಾದರೂ ಬನ್ನಿಎಷ್ಟು ಜನರಾದರೂ ಬನ್ನಿಒಳಗೆ ಹಿಡಿಸುವಷ್ಟು…ಅಥಿತಿಗಳಾಗಿಅಥವಾ ಹಿತೈಷಿಗಳಾಗಿಸ್ನೇಹದಿಂದ…ಬಂದು ಇದ್ದು ಹೋಗಿನಿಮಗಿಷ್ಟವಾದಷ್ಟು ದಿನನೆಮ್ಮದಿಯಿಂದ… ದಿನದಿನವೂ ಸುತ್ತಿ ಬನ್ನಿನಮ್ಮೂರ ಸುತ್ತಮುತ್ತಅನತಿ ದೂರದಲ್ಲೇ ಇವೆಅನೇಕ ಪ್ರವಾಸಿ ಸ್ಥಳಕಣ್ಣು ತುಂಬಿಸಿಕೊಂಡು ಬನ್ನಿ ಎಲ್ಲಊರೊಳಗೆ ಬೀಡು ಬಿಟ್ಟಿರುವ ಅನೇಕಾನೇಕ ಥರದ ಮೇಳ…ಕಾಯ್ದಿರುವೆವು ದಿನವೂ ನಿಮಗಾಗಿನಮ್ಮದೇ ಮನೆಯ ನಮ್ಮ ಸಮ ಊಟಕ್ಕೆಮತ್ತು ಹಂಚಿಕೊಳ್ಳರಿನಮ್ಮದೇ ಹಜಾರ ಕೊಠಡಿನಿಮ್ಮ ನಿಶ್ಚಿಂತೆಯ ಶಯನಕ್ಕೆ… ಹೊರಡುವ ದಿನಹೊರಡಿ ತೃಪ್ತಿ ನೆಮ್ಮದಿಯಲಿನಮಗೂ ನಿಮಗೂ ಇರಲಿವಿಶ್ವಾಸ ಮೊದಲಿನಂತೆ ಈಗಲೂಇನ್ನೂ ಖುಷಿ ಈಗದು ಮತ್ತೂ ಹೆಚ್ಚಿದ್ದರೂ…ಹಾಗೂ ಬಿಟ್ಟು ಹೋಗಿ ಎಲ್ಲಒಳಾಂಗಣ ಇದ್ದ ಹಾಗೇ ಮೊದಲುಅಲ್ಲಲ್ಲಿ ಗೋಡೆ ಕಟ್ಟುವ ಬದಲು…ಮತ್ತು…ಉಳಿಸಿ ಹೋಗದಿರಿನಮ್ಮೊಳಗೆ ಕರಾಮತ್ತಿನ ಕಿಷ್ಕಿಂಧ… ******************************

ನಮ್ಮ ಮನೆ Read Post »

honkal
ಅನುವಾದ

ಗಝಲ್

ಗಝಲ್ ಸಿದ್ಧರಾಮ ಹೊನ್ಕಲ್ ತರಹಿ ಗಜಲ್-೧೨೫ ಮಿಸ್ರಾ:-ಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಮೂಲ:-ಬಶೀರ್ ಬದ್ರ್ಕನ್ನಡಕ್ಕೆ:-ಡಾ.ಸಿದ್ಧರಾಮ ಹಿರೇಮಠ ಕೂಡ್ಲಿಗಿ ಮನ ಸಾಗರದಲ್ಲಿ ಮತ್ತೆ ಹುಡುಕಿದೆ ಇವಳಂತೆ ಯಾರೂ ದೊರೆಯಲೇ ಇಲ್ಲಅವಳಿಂದ ಬೇರಾದ ಮೇಲೆ ಅವಳಂತೆ ಯಾರೂ ದೊರೆಯಲೇ ಇಲ್ಲ ಆಡಿದ ಪಿಸು ಮಾತು ಮಧುರ ನೆನಪಾಗಿ ಕಾಡುವವು ಬೇರೆ ಬೇಕೆನಿಸುವದಿಲ್ಲನಾನಿಲ್ಲಿ ಅವಳಲ್ಲಿ ಏಕಾಂಗಿಭಾವ ಕಾಡುವುದಂತೆ ಯಾರು ದೊರೆಯಲೇ ಇಲ್ಲ ಈ ಪ್ರೀತಿಯಲಿ ಕಣ್ಣು ಮತ್ತು ಕರುಳುಗಳು ಅರಿತಷ್ಟು ಮತ್ತೆ ಯಾರು ಅರಿಯುವದಿಲ್ಲಕೆಲವರು ಬಂದು ಅವಳಿಗೂ ಇಷ್ಟವಾಗದೇ ಹೋದರಂತೆ ಯಾರೂ ದೊರೆಯಲೇ ಇಲ್ಲ ನಮ್ಮೀರ್ವರ ಆಯ್ಕೆಗಳು ಒಂದೇ ನೋವು ಒಂದೇ ಎಂದು ಸದಾ ಹಚ್ಚಿಕೊಂಡಿದ್ದಳುಬಿಟ್ಟಿರಲಾರೆ ಬದುಕುಪೂರ್ತಿ ಎಂದು ಮತ್ತೆ ಮರೆತಳಂತೆ ಯಾರೂ ದೊರೆಯಲೇ ಇಲ್ಲ ಪ್ರೀತಿ ಪ್ರೇಮದಿ ಬೆರೆತು ಸವಿಮಾತು ಖುಷಿ ಕ್ಷಣ ಹಂಚಿಕೊಂಡೆವು ಆ ಸುವರ್ಣಕಾಲಹೋಗುವ ಮುನ್ನ ಬಿಟ್ಟ ನೆನಪುಗಳು ಸದಾ ಜೊತೆಗಿಟ್ಟಂತೆ ಯಾರು ದೊರೆಯಲೇ ಇಲ್ಲ ಅವಳಿಗೆ ಬೇಕೆನಿಸಿದರೆ ಸಿಗಲಿ ನನಗೆ ಹಿಡಿಸುವಂತಹ ಯಾರು ಮತ್ತೆ ಸಿಗುವದೇ ಬೇಡಹೊನ್ನಸಿರಿ’ಕನಸಲಿ ಸಹ ಬಿಟ್ಟು ಕೊಳ್ಳಲಾರನಂತೆ ಯಾರು ದೊರೆಯಲೇ ಇಲ್ಲ ********************************

ಗಝಲ್ Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅಂಕಣ ಬರಹ ದಿ ಲಾಸ್ಟ್ ಲೆಕ್ಚರ್ ದಿ ಲಾಸ್ಟ್ ಲೆಕ್ಚರ್ ( ಆತ್ಮ ಕಥನ ರೂಪದ ಉಪನ್ಯಾಸಗಳು)ಮೂಲ : ರ‍್ಯಾಂಡಿ ಪಾಶ್ ಕನ್ನಡಕ್ಕೆ : ಎಸ್.ಉಮೇಶ್ಪ್ರ : ಧಾತ್ರಿ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ಪುಟಗಳು : ೧೯೩ ಮೂಲಕೃತಿಯ ಅದ್ಭುತ ಜನಪ್ರಿಯತೆಯಿಂದಾಗಿ ಕನ್ನಡಕ್ಕೂ ಬಂದು ಕನ್ನಡದಲ್ಲೂ ಮಾರಾಟ ಮತ್ತು ಜನಪ್ರಿಯತೆಗಳ ದೃಷ್ಟಿಯಿಂದ ಅಪಾರ ಯಶಸ್ಸು ಪಡೆದ ಕೃತಿಯಿದು. ಮೂಲ ಲೇಖಕ ರ‍್ಯಾಂಡಿ ಪಾಶ್ ಜಠರದ ಕ್ಯಾನ್ಸರಿನಿಂದ ಪೀಡಿತನಾಗಿ ಇನ್ನು ಕೆಲವೇ ತಿಂಗಳುಗಳಷ್ಟೇ ಬದುಕುವನೆಂದು ವೈದ್ಯಕೀಯ ವರದಿ ಬಂದಾಗ ಅಮೆರಿಕಾದ ಕಾರ್ನಿಗಿ ಮೆಲನ್ ವಿಶ್ವವಿದ್ಯಾನಿಲಯದವರು ಆತನ ಅಂತಿಮ ಉಪನ್ಯಾಸಕ್ಕೆ ಒಂದು ಅವಕಾಶ ಮಾಡಿಕೊಡುತ್ತಾರೆ. ಆ ಸಂದರ್ಭದಲ್ಲಿ ರ‍್ಯಾಂಡಿ ಪಾಶ್ ಒಂದು ಗಂಟೆ ಕಾಲ ತನ್ನ ಬಾಲ್ಯದ ಕನಸುಗಳು, ಅನುಭವಗಳು, ಘಟನೆಗಳು, ತನ್ನ ತಂದೆ ತಾಯಿಗಳ ಉದಾತ್ತ ಗುಣಗಳು, ಅವರೊಂದಿಗಿನ ಕೌಟುಂಬಿಕ ಬದುಕಿನಲ್ಲಿ ತಾನು ಅನುಭವಿಸಿದ ಸಂತಸ, ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್ ಆಗಿ ತಾನು ಮಾಡಿದ ಕೆಲಸಗಳು, ವಿದ್ಯಾರ್ಥಿಗಳಿಗೆ ನೀಡಿದ ಮಾರ್ಗದರ್ಶನ, ಜೈ ಎಂಬ ಹೆಣ್ಣನ್ನು ತನ್ನ ೩೭ನೆಯ ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆಕೆಯೊಂದಿಗಿನ ಸಂತಸಭರಿತ ದಾಂಪತ್ಯ ಜೀವನ, ಮೂವರು ಎಳೆಯ ಮಕ್ಕಳಾದ ಡೈಲಾ, ಲೋಗನ್ ಮತ್ತು ಛೋಲೆಯೊಂದಿಗಿನ ಸುಂದರ ಸಾಂಸಾರಿಕ ಬದುಕು, ತನ್ನ ಮಕ್ಕಳಿಗೆ ಆದರ್ಶ ತಂದೆಯಾಗಲು ಆತ ಪಟ್ಟ ಶ್ರಮ, ಕ್ಯಾನ್ಸರ್ ಇದೆ ಎಂಬುದು ತಿಳಿದಾಗ ಉಂಟಾದ ಆಘಾತ, ತಳಮಳ ಮತ್ತು ತಲ್ಲಣ, ಪ್ರೀತಿಸುವ ಹೆಂಡತಿಯನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಬೇಕಲ್ಲ ಎಂಬ ನೋವು, ಆದರೂ ತಾನಿಲ್ಲದ ಕೊರತೆ ಮಕ್ಕಳನ್ನು ಕಾಡಬಾರದು ಎಂಬ ಕಾಳಜಿಯಿಂದ ಅವರೊಂದಿಗೆ ಖುಷಿಯಿಂದ ಆಡಿದ ಎಲ್ಲ ಕ್ಷಣಗಳನ್ನೂ ವೀಡಿಯೋದಲ್ಲಿ ಸೆರೆ ಹಿಡಿದದ್ದು-ಹೀಗೆ ಹಲವಾರು ವೈಯಕ್ತಿಕ ಸಂಗತಿಗಳನ್ನು ಕುರಿತು ತಮ್ಮ ಉಪನ್ಯಾಸದಲ್ಲಿ ವಿಸ್ತರಿಸುತ್ತಾರೆ. ಲೇಖಕರ ಆತ್ಮಕಥನದ ರೀತಿಯಲ್ಲಿರುವ ಈ ಎಲ್ಲ ಮಾತುಗಳು ಈ ಕೃತಿಯಲ್ಲಿ ದಾಖಲಿಸಲ್ಪಟ್ಟಿವೆ. ಆತನ ಒಂದೊಂದು ಮಾತುಗಳೂ ಅವುಗಳಲ್ಲಿ ಕಾಣುವ ತಾತ್ವಿಕ ಮೌಲ್ಯಗಳಿಂದ ಬೆರಗು ಹುಟ್ಟಿಸುತ್ತವೆ. ಸಾವನ್ನು ಗಟ್ಟಿ ಮನಸ್ಸಿನಿಂದ ಎದುರಿಸಿ ತಾನು ತೊರೆದು ಹೋಗುತ್ತಿರುವ ಕುಟುಂಬಕ್ಕೆ ತನ್ನ ಅಗಲುವಿಕೆಯಿಂದ ಯಾವ ತೊಂದರೆಯೂ ಆಗಬಾರದೆಂದು ಅವರೆಲ್ಲರನ್ನೂ ಮಾನಸಿಕವಾಗಿ ಸಿದ್ಧಪಡಿಸುವ ರ‍್ಯಾಂಡಿಪಾಶರವರ ಧೈರ್ಯ ಮತ್ತು ಆತ್ಮವಿಶ್ವಾಸಗಳು ಅಪ್ರತಿಮವಾಗಿವೆ. ಹಾಗೆಯೇ ಆತನ ಪರಿಸ್ಥಿತಿಯ ಚಿತ್ರಣವು ಮನಕದಡುತ್ತದೆ. ಸ್ವತಃ ಲೇಖಕರೇ ಸಾವನ್ನೆದುರಿಸುವ ಸಂದರ್ಭದಲ್ಲಿ ನೀಡಿದ ಅಂತಿಮ ಉಪನ್ಯಾಸದಲ್ಲಿ ಮಂಡಿಸಿದ ವಿಚಾರಗಳು ಸಾರ್ವಕಾಲಿಕ ಸತ್ಯಗಳಾಗಿದ್ದು ಸಾವು ಸನ್ನಿಹಿತವಾದ ವ್ಯಕ್ತಿಯ ದಿಟ್ಟ ಮನೋಭಾವವನ್ನು ಬಹಳ ಸುಂದರವಾಗಿ ಚಿತ್ರಿಸುತ್ತದೆ. ಎಸ್.ಉಮೇಶ್ ಅವರ ಅನುವಾದ ಸರಳವಾಗಿದ್ದು ನಯವಾಗಿ ಓದಿಸಿಕೊಂಡು ಹೋಗುತ್ತದೆ. ************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top