ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ ` ಸಂಚಯ ‘ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಂದಿವೆ. ಸಂಯುಕ್ತ ಕರ್ನಾಟಕ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ದೊರೆತಿದೆ. ಪತ್ರಿಕೆಗಳಲ್ಲಿ ಕವನಗಳು, ಅಂಕಣ ಬರಹಗಳು ಪ್ರಕಟಗೊಂಡಿವೆ . ಕೆಲವು ಕಥಾಸಂಕಲನ ಹಾಗೂ ಕವನ ಸಂಕಲನಗಳ ಕುರಿತು ಬರೆದ ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು ಎಂ . ಎ. ಮುಗಿಸಿ ಬಂದನಂತರ ಬೇರೆ ಬೇರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ್ದಾರೆ. ಹಾಲಿ ಶಿಕ್ಷಕನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಿಕೊಡ್ಲ ನಂ ೨ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ` ನೇಪಥ್ಯ ‘ ( ಕವನ ಸಂಕಲನ) ‘ ನನ್ನೊಳಗೆ ನಾನು ‘ ( ಕಥಾಸಂಕಲನ ) ‘ ಸಿಂಧುವಿನಿಂದ ಬಿಂದು ‘ ( ವಿಮರ್ಶಾ ಸಂಕಲ) ಪ್ರಕಟಣೆಯ ಹಾದಿಯಲ್ಲಿದೆ . ………………. ಕಥೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನಾನು ಕವಿ ಅಥವಾ ಕತೆಗಾರನಾಗಬೆಕೆಂಬ ತೆವಲಿಗೆ ಎಂದೂ ಒಳಗಾಗಿಲ್ಲ. ಬೇರೆ ಬೇರೆ ಹಿರಯ ಕವಿ ಕಥೆಗಾರರನ್ನು ಓದಿದ ಹಿನ್ನೆಲೆಯಲ್ಲಿ ಸುತ್ತಲಿನ ಸಮುದಾಯದ ನೋವು – ನನ್ನ ನೋವು ,ನಲಿವುಗಳೊಂದಿಗೆ ತಾದಾತ್ಮ್ಯ ಹೊಂದಿದಾಗ ನನ್ನೊಳಗಿನ ಸಹಜವಾದ ಕವಿತ್ವದ ಪ್ರಜ್ಞೆ ಜಾಗ್ರತ ಗೊಂಡು ಅದು ಭಾಷೆಯ ನೆಲೆಯಲ್ಲಿ ಅಕ್ಷರ ರೂಪ ಪಡೆದಾಗ ಅದು ಕವನವಾಗಬಹುದು , ಅಥವಾ ಅದು ಸಂಭಾಷಣೆ, ವಿವರಣೆ ,ವಿಶ್ಲೇಷಣೆ , ನೀರೂಪಣೆಗಳನ್ನೊಳಗೊಂಡ ಪಾತ್ರಗಳ ರೂಪವನ್ನು ಪಡೆದಾಗ ಅದು ಕಥೆ ಕೂಡಾ ಆಗಬಹುದು. ಆದರೆ ಕಥೆ ಅಥವಾ ಕವಿತೆಗಳಿಗೆ ಸಂಬಂಧಿಸಿದ ಸಂಗತಿಗಳು ಒಮ್ಮೆ ಹುಟ್ಟಿ , ಹಲವಾರು ದಿನಗಳವರೆಗೆ ಮತ್ತೆ ಮತ್ತೆ ಕಾಡಿದಾಗ ಅದು ಆಯಾ ರೂಪದಲ್ಲಿ, ಅನಾವರಣಗೊಂಡು ಸಫಲ ಪ್ರಸವದ ಆನಂದಾನುಭೂತಿಯನ್ನು ಆ ಕ್ಷಣಕ್ಕೆ ನೀಡುತ್ತದೆಯಷ್ಟೆ . ಕಥೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ನನ್ನ ದೃಷ್ಟಿಯಲ್ಲಿ ಅದಕ್ಕೆ ಇಂತಹುದೇ ಕ್ಷಣ ಅಂತೇನೂ ಇಲ್ಲ. ನಾನು ಕ.ವಿ.ವಿ ಧಾರವಾಡದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಎಂ. ಎ. ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳಾದ ದಿ. ಡಾ. ಎಂ. ಎಂ.ಕಲ್ಬುರ್ಗಿ ಸರ್ ರವರು ಒಮ್ಮೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಮಾತನಾಡುತ್ತಾ ‘ ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯ ‘ ಎಂದಿದ್ದು ಈಗಲೂ ನೆನಪಿದೆ. ಅಂತಹ ಅನುಭವಗಳು ಕಥೆ ಅಥವಾ ಕವನವಾಗಬಲ್ಲ ಸಾಹಿತ್ಯಕ ಅನುಭೂತಿಯನ್ನು ಹೊಂದಿ ಗಾಢವಾಗಿ ಕಾಡಿದಾಗ ಅದು ಕತೆ ಅಥವಾ ಕವಿತೆಯಾಗಿ ರೂಪು ತಳೆಯುತ್ತದೆ ಅಷ್ಟೇ. ನಿಮ್ಮ ಕಥೆಗಳ ವಸ್ತು , ವ್ಯಾಪ್ತಿ ಹೆಚ್ಚಾಗಿ ? ಪದೇ ಪದೇ ಕಾಡುವ ವಿಷಯ ಯಾವುದು ?. ಬದುಕು ..! ಎಲ್ಲಾ ಲೇಖಕರ ಹಾಗೆಯೇ ನನ್ನ ಕಥೆಗಳ ವಸ್ತು ಮತ್ತು ವ್ಯಾಪ್ತಿ ಬದುಕಿಗೆ ಸಂಬಂಧಿಸಿದ ಸಂಗತಿಗಳೇ ಆಗಿವ. ಈ ಬದುಕಿನಲ್ಲಿ ಪ್ರೀತಿ ಯಿದೆ,ಪ್ರೇಮವಿದೆ,ನಂಬಿಕೆ – ವಿಶ್ವಾಸಗಳಿವೆ, ಅಲ್ಲಿ ವಂಚನೆ , ಮೋಸ , ದ್ರೋಹ , ಹಿಂಸೆ , ದೌರ್ಜನ್ಯಗಳಿವೆ .ಹಾಗೆನೆ ಪ್ರಾಮಾಣಿಕತೆ ಕೂಡ ಇವೆ . ಇವೆಲ್ಲವೂ ಸಂದರ್ಭಾನುಸಾರ ಕಥೆಯ ವಸ್ತುಗಳಾಗುತ್ತವೆ . ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಸುರುವಾಗಿದೆ. ಅದೆಂದರೆ ಹೇಗಾದರೂ ಸರಿಯೆ ಹಣಮಾಡಬೇಕು . ಅದರಿಂದ ನಮ್ಮ ಸಮಾಜ ಅದರಲ್ಲೂ ನಮ್ಮ ಯುವ ಜನಾಂಗ ಹಣದ ಹಿಂದೆ ಬಿದ್ದಿದೆ . ಮನುಷ್ಯತ್ವ, ಮಾನವೀಯತೆ , ಪ್ರೀತಿ ,ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆಯೆಂದರೆ ತಪ್ಪಾಗದು . ಮಾನವೀಯ ಮೌಲ್ಯಗಳ ಕುರಿತು ಮಾತನಾಡುವವರು ಎಂದರೆ ಒಂಥರಾ ಹುಚ್ಚರಹಾಗೆ ಅನ್ನುವ ಹಂತಕ್ಕೆ ನಮ್ಮ ಸಾಮಾಜಿಕ ಬದುಕು ತಲುಪಿದೆ . ಇದು ನಮ್ಮ ಒಟ್ಟಾರೆ ವ್ಯವಸ್ಥೆಯ ದುರಂತವೇ ಸರಿ . ತಮ್ಮ ಮಕ್ಕಳ ಬದುಕನ್ನು ಗಟ್ಟಿಗೊಳಿಸಲು ಬದುಕಿನುದ್ದಕ್ಕೂ ಹೆಣಗಾಡುವ ತಂದೆತಾಯಿಗಳು , ಅದರೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ತಂದೆತಾಯಿಗಳನ್ನು ತಿರಸ್ಕರಿಸುವುದು ಒಂದುಕಡೆಯಾದರೆ , ವಯಸ್ಸಿಗೆ ಬಂದ ಮಗ ತನ್ನ ತಂದೆತಾಯಿ , ಸಹೋದರ, ಸಹೋದರಿಯರ ಬದುಕಿಗಾಗಿ ತನ್ನ ವಯಕ್ತಿಕ ಬದುಕನ್ನು ಮರೆತು ರಕ್ತವನ್ನು ಬೆವರಿನರೂಪದಲ್ಲಿ ಚೆಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಸಂದರ್ಭದಲ್ಲೂ ಅಂತವರಿಗೆ ಕುಟುಂಬದ ಎಲ್ಲರಿಂದಲೂ ಆಗುವ ವಂಚನೆ ನೀಡುವ ನೋವುಗಳು ಗಾಢವಾಗಿ ಕಾಡಿದಾಗ ಅವುಗಳು ಕಥೆಗಳಿಗೆ ಗಟ್ಟಿ ವಸ್ತುಗಳಾಗುತ್ತವೆ . ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಾಮಾಣಿಕತೆ, ಪ್ರೀತಿ , ಪ್ರೇಮ, ವಿಶ್ವಾಸ, ನಂಬಿಕೆಗಳಿಗೆ ವಿರುದ್ಧವಾಗಿ ಎಸಗುವ ದ್ರೋಹ, ವಂಚನೆ , ಮೋಸ ಇದೆಯಲ್ಲಾ ..ಇವುಗಳು ಯಾವುದೇ ರೀತಿಯ ಹಿಂಸೆ, ದೌರ್ಜನ್ಯಗಳಿಗಿಂತಲೂ ಭೀಕರ ಎನಿಸುತ್ತವೆ . ಈ ಮುಂತಾದ ಸಂಗತಿಗಳೆಲ್ಲವೂ ನನ್ನ ಕಥೆಗಳಿಗೆ ವಸ್ತುವಾಗುತ್ತವೆ . ಹಾಗೇನೇ ಅತಿಯಾದ ಮದ್ಯಪಾನ ಮುಂತಾದ ದುಶ್ಚಟಗಳು , ಅವುಗಳಿಂದ ಬದುಕಿಗಾಗುವ ಹಾನಿ ಇವೆಲ್ಲವೂ ಕೆಲವು ಸಂದರ್ಭಗಳಲ್ಲಿ ವಸ್ತುವಾಗಿವೆ . ಕಥೆ , ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯೇ ? ಯಾಕಿಲ್ಲ ..? ಪ್ರತಿಯೊಬ್ಬ ಬರಹಗಾರನ ಬರವಣಿಗೆಯಲ್ಲೂ ಕೂಡ ಅವನ ಬಾಲ್ಯ ಮತ್ತು ಹರಯದ ಅನುಭವಗಳು ಇಣುಕಿನೋಡುತ್ತವೆ . ನನ್ನ ಬರವಣಿಗೆಯೂ ಕೂಡ ಅದಕ್ಕೆ ಹೊರತಾಗಿಲ್ಲ . ನಾನು ಬರೆದ ಪ್ರೇಮ ಕವನವೊಂದನ್ನು ಓದಿದ ಬಿಜಾಪುರ ಜಿಲ್ಲೆಯ ನನ್ನ ಎಂ. ಎ. ಸಹಪಾಠಿಯೊಬ್ಬರು ಇದು ನನ್ನ ಬದುಕಿನ ಸಂದರ್ಭಕ್ಕೆ ಸಂಬಂಧಿಸಿದಂತೆ ಇದೆ , ಎಂದಾಗ ನಾನು ಆಶ್ಚರ್ಯಗೊಂಡಿದ್ದೆ. ನನ್ನ ಬಾಲ್ಲದ ದಿನಗಂಳಿದ ಹಿಡಿದು ನಾನು ಶಿಕ್ಷಣ ಪಡೆದು ವ್ರತ್ತಿ ಜೀವನಕ್ಕೆ ಬರುವಲ್ಲಿಯವರೆಗೆ ನನ್ನನ್ನು ,ನಮ್ಮ ಕುಟುಂಬವನ್ನು ಕಾಡಿದ ಅತ್ಯಂತ ನಿಕ್ರಷ್ಟ ಎನ್ನಬಹುದಾದ ಬಡತನ , ನಾನು ಶಿಕ್ಷಣ ಪಡೆಯುವುದಕ್ಕಾಗಿ ನಡೆಸಿದ ಹೋರಾಟ , ಆ ಸಂದರ್ಭಗಳಲ್ಲಿ ಮಹಾತ್ಮರೊಬ್ಬರು ನನ್ನನ್ನು ಕೈಹಿಡಿದು ನಡೆಸಿದ್ದು ಇನ್ನೂ ಮುಂತಾದ ಸಂಗತಿಗಳು, ಅಭವಗಳು , ನನ್ನ ಬರವಣಿಗೆಯಲ್ಲಿ ಇಣುಕಿಹಾಕಲೆಬೇಕಲ್ಲ. ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇದು ತೀರಾ ಕ್ಲಿಷ್ಟಕರ ಪ್ರಶ್ನೆ ಎನ್ನಬೇಕಾಗುತ್ತದೆ . ಯಾಕೆಂದರೆ ಧರ್ಮದ ಕುರಿತು ಮಾತನಾಡುವಷ್ಟು ಧರ್ಮ ಸೂಕ್ಷ್ಮವನ್ನರಿತ ಧರ್ಮಜ್ಞ ನಾನಲ್ಲ. ಹಾಗೆ ನೋಡಿದರೆ ಧರ್ಮಕ್ಕಿಂತಲೂ ಮೊದಲು ಹುಟ್ಟಿದವ ಮನುಷ್ಯ . ಅವನ ನಂತರ ಅವನಿಂದಲೇ ಅಂದರೆ ಮನುಷ್ಯನಿಂದ ಹುಟ್ಟಿದ್ದು ಧರ್ಮ. ಕಾಡಿನಿಂದ ನಾಡಿನೆಡೆಗೆ , ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಮಾನವ ಹೆಜ್ಜೆಯಿಟ್ಟು ಅಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಮೇಲೆ ಹುಟ್ಟಿಕೊಂಡದ್ದು ಧರ್ಮ. ಮನುಷ್ಯ ತನ್ನ ವಯಕ್ತಿಕ ಹಾಗೂ ಸಾಮುದಾಯಿಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವುದಕ್ಕಾಗಿ , ಹೆಚ್ಚು ಮೌಲ್ಯಯುತಗೊಳಿಸಿಕೊಳ್ಳುವುದಕ್ಕಾಗಿ ಒಂದರ್ಥದಲ್ಲಿ ಹೆಚ್ಚು ಅರ್ಥಪೂರ್ಣ ಗೊಳಿಸಿಕೊಳ್ಳುವುದಕ್ಕಾಗಿ ಆ ಕಾಲದಲ್ಲಿ ಅವನು ಕಂಡುಕೊಂಡ ಸುಲಭ ಸಾಧನ ಧರ್ಮ. ಆದರೆ ಇಂದು ಏನಾಗುತ್ತಿದೆ ? ಧರ್ಮ ಮನುಷ್ಯನ ಜೀವನದಮೇಲೆ ಸವಾರಿಮಾಡುವಷ್ಟು ಪ್ರಭಲವಾಗಿ ಬೆಳೆದುನಿಂತಿದೆ . ಇದು ಕೇವಲ ನಮ್ಮ ದೇಶದ ವಿದ್ಯಮಾನವಷ್ಟೆ ಅಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ . ಇಂದು ಧರ್ಮದ ಕಾರಣದಿಂದಾಗಿ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಬದುಕು ವಿಕ್ರತಗೊಳ್ಳುತ್ತಿವೆ …ಸಂದಿಗ್ಧತೆಗೆ ಒಳಗಾಗಿದೆ . ಇಂತಹ ಬೆಳವಣಿಗೆ ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನಕ್ಕೆ ತಕ್ಕುದಾದ ಬೆಳವಣಿಗೆಯಂತೂ ಅಲ್ಲ. ಸ್ವಾಮಿ ವಿವೇಕಾನಂದರು ಧರ್ಮ ಮತ್ತು ದೇವರ ಕುರಿತು ಹೇಳುವಾಗ ..’ ವಿಧವೆಯರ ಕಣ್ಣೀರು ಒರೆಸದ , ಹಸಿದವನಿಗೆ ತುತ್ತು ಅನ್ನವ ನೀಡದ ದೇವರು ಮತ್ತು ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ. ಯಾವುದು ನಮ್ಮಲ್ಲಿಯ ಮಾನವೀಯ ಪ್ರಜ್ಞೆ ಯನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆಯೋ ಅದು ಧರ್ಮ. ಪರಸ್ಪರ ಪ್ರೀತಿ , ವಿಶ್ವಾಸ , ನಂಬಿಕೆ , ಪ್ರಾಮಾಣಿಕತೆ ಇವೇ ಅದರ ತಳಹದಿ . ಇವುಗಳಿಗೆ ಧಕ್ಕೆತರುವಂತ ಸಂಗತಿಗಳೆ ಅಧರ್ಮ. ನಾನು ಬದುಕುತ್ತಾ ನನ್ನೊಂದಿಗೆ ಇನ್ನುಳಿದ ಎಲ್ಲರನ್ನೂ ಬದುಕಲು ಬಿಡುವುದೇ ಧರ್ಮ .ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ. ಇನ್ನು ‘ ದೇವರು ‘ ಕುರಿತು ಹೇಳುವುದಾದರೆ ‘ ದೇವರು ‘ ಇದ್ದಾನೆ ಎಂಬ ನಂಬಿಕೆ ಹೊಂದಿದವರೆಲ್ಲಾ ಆಸ್ತಿಕ ಗುಂಪಿಗೆ ಸೇರಿದರೆ ‘ ದೇವರ ‘ ಅಸ್ತಿತ್ವದ ಕುರಿತು ಸಂಶಯಪಡುವವರೆಲ್ಲಾ ನಾಸ್ತಿಕ ಗುಂಪಿಗೆ ಸೇರಿಬಿಡುತ್ತಾರೆ . ಇದು ಪ್ರಪಂಚ ಇರುವತನಕ ಮತ್ತು ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಇರುವಲ್ಲಿಯ ತನಕ ಮುಂದುವರೆಯುವ ಚರ್ಚೆಯಾಗಿದೆ . ‘ ದೇವರು ‘ ಇದ್ದಾನೆಯೇ ಎನ್ನುವುದು ಅವರವರ ಸ್ವಯಂ ಅನುಭವವೇದ್ಯವಾದ ಸಂಗತಿಯಾಗಿದೆ . ಇನ್ನು ನನ್ನ ದ್ರಷ್ಟಿಯಲ್ಲಿ ನಾನು ಕಷ್ಟದಲ್ಲಿದ್ದಾಗ ಯಾರು ನನ್ನನ್ನು ಕೈಹಿಡಿದು ನಡೆಸಲು ಪ್ರಯತ್ನಿಸುತ್ತಾರೋ , ನಾನು ಸಾವು ಬದುಕುಗಳನಡುವೆ ಹೋರಾಡುತ್ತಿರುವಾಗ ಕಾಳಜಿಯಿಂದ ನನ್ನನ್ನು ಉಳಿಸಲು ಪ್ರಾಮಾಣಿಕವಾಗಿ ಹೆಣಗಾಡುತ್ತಾರೆಯೋ ಅವರೇ ನನ್ನ ಪಾಲಿಗೆ ದೇವರು . ಯಾಕೆಂದರೆ ಅವರು ಮಾತ್ರ ನಾನು ಕಾಣಲು ಸಾಧ್ಯವಾಗುವ ಸತ್ಯದ ದೇವರಾಗಿರುತ್ತಾರೆ . ಇದಕ್ಕೆ ಹೊರತಾದ ಅನ್ಯ ವಿಚಾರ ‘ ದೇವರ ‘ ಕುರಿತಂತೆ ನನ್ನಲ್ಲಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಮ್ಮ ಈ ಪ್ರಶ್ನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಆದರೂ ಈ ದೇಶದ ಪ್ರಜೆಯಾಗಿ , ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ಒಳಪಟ್ಟ ಒಬ್ಬ ಜವಾಬ್ದಾರಿಯುತ ಮತದಾರನಾಗಿ ನಿಮ್ಮ ಪ್ರಶ್ನೆಗೆ ಕೆಲವು ಮಿತಿಗೆ ಒಳಪಟ್ಟು ಪ್ರತಿಕ್ರಿಯಿಸಬಹುದು ಎಂದುಕೊಳ್ಳುತ್ತೇನೆ . ಇತ್ತೀಚಿನ ದಿನಗಳಲ್ಲಿ ಬದುಕಿನ ಎಲ್ಲಾ ಸ್ತರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಲಾಗುತ್ತಿವೆ . ಅದು ರಾಜಕೀಯ ಕ್ಷೇತ್ರಕ್ಕೂ ಹೊರತಾಗಿಲ್ಲ. ಮಹಾನ್ ರಾಷ್ಟ್ರೀಯ ಚಿಂತಕರನ್ನು ,ಯಾವುದೇ ವಿಧದ ಧಾರ್ಮಿಕ, ಸಾಮಾಜಿಕ ತಾರತಮ್ಯವಿಲ್ಲದ ಸರ್ವಜನಾಂಗದ ಹಿತಚಿಂತಕರುಗಳನ್ನು ರಾಷ್ಟ್ರದ ರಾಜಕೀಯ ನೇತಾರರುಗಳನ್ನಾಗಿ ಪಡೆದ ದೇಶ ಇದು . ಆದರೆ ಇಂದು ಈ ದೇಶದ ರಾಜಕೀಯ, ಸಾಮಾಜಿಕ ಜೀವನ ಹಾಗಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಶಕ್ತರಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ . ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ರಾಜಕೀಯದ ಮೂಲಕ ರಾಷ್ಟ್ರ ಸೇವೆ , ಸಮಾಜ ಸೇವೆ ಎನ್ನುವ ಮಾತು ಕೇವಲ ಸವಕಲು ನಾಣ್ಯಗಳಾಗಿವೆ ಎನಿಸುವುದಿಲ್ಲವೆ ? ಅವರು ಅಷ್ಟು ಹಾಳುಗೆಡವಿದ್ದಾರೆ , ಅಕ್ಕಾಗಿ ಇವರು ಇಷ್ಟು ಕುಲಗೆಡಿಸುತ್ತಾರೆ …ಅದನ್ನೆಲ್ಲಾ ಪ್ರಶ್ನಿಸಲು ನೀವುಗಳು ಯಾರು ? ಎಂಬ ಪ್ರಶ್ನೆಗಳು ಹೊರಬೀಳುತ್ತಿರುವುದನ್ನು ನಾವು ಕೇಳುತ್ತಿದ್ದೇವೆ . ಹಾಗೆ ನೋಡಿದರೆ ನಮಗೆ ತೀರಾ ಪುಕ್ಕಟೆಯಾಗಿ ದೊರೆತ ಮತದಾನದ ಹಕ್ಕೂ ಕೂಡ ಇಂದಿನ ವಿದ್ಯಮಾನಗಳಿಗೆ ಕೆಲಮಟ್ಟಿಗೆ ಕಾರಣವಾಗಬಹುದೇನೊ ? ಯಾಕೆಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿಯ ಪ್ರಜೆಗಳು ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯ ( ಮತದಾನದ ) ಹಕ್ಕು ,