ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಧೃಡ ಚಿತ್ತ

ಕಥೆ ಧೃಡ ಚಿತ್ತ ವಾಣಿ ಸುರೇಶ್ ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ ತನಗೆ ಬೇಕಾದ್ದನ್ನು ನೋಡುತ್ತಾಳೆ.ಅವ್ರೆಲ್ಲಾ ಹಿಂದಿ ನಿಂದ ಆಡ್ಕೊಳ್ತಾರೆ ಆಮೇಲೆ! ಅದ್ರ ಬದ್ಲು ಟ್ಯೂಷನ್ ಆದ ಮೇಲೆ ಒಂದೇ ಗಂಟೆ ಸೀರೀಸ್ ನೋಡು ಅಂತ ಸ್ಟ್ರಿಕ್ಟ್ ಆಗಿ ಹೇಳೋಣ. ಅದೇನು ನೋಡ್ತಾಳೆ ಅಂತ ನಮ್ಗೂ ಕಣ್ಣಿಡಬಹುದು” ಅಂದಾಗ ಹರಿಣಿಗೂ ಸರಿಯೆನಿಸಿ ತಲೆಯಾಡಿಸಿದಳು. ” ನಿನ್ನ ಮಗರಾಯನಿಗೂ ಸ್ವಲ್ಪ ಬುದ್ದಿ ಹೇಳು! ಇನ್ನೂ ಎಳೇಮಗೂ ತರ ಆಡ್ತಾನೆ.ನಾನು ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಗಳೂರಿಗೆ ಹೊರಡುತ್ತೇನೆ.ರವಿ ಬರ್ತಾನೆ ನಂಜೊತೆ.ನಾಡಿದ್ದು ಮದ್ವೆ ಊಟ ಮುಗಿಸಿಕೊಂಡು ಹೊರಟ್ರೆ ರಾತ್ರಿ ಇಲ್ಲಿ ತಲುಪ್ತೇವೆ.” ” ನಿನ್ನ ಮಗರಾಯ” ಎಂದು ಗಂಡ ಹೇಳಿದ್ದಕ್ಕೆ ಸಿಟ್ಟು ಬಂದರೂ ತಡೆದುಕೊಂಡು , ” ಸರಿ ಹಾಗೇ ಮಾಡಿ” ಅಂದಳು.       ಮದುವೆಯಾಗಿ ಐದು ವರ್ಷಗಳ ನಂತರ, ಜನರ ಕೊಂಕು ಮಾತುಗಳನ್ನು ಕೇಳಿ ಹೈರಾಣಾಗಿ ಹೋದವಳಿಗೆ, ಮಗ ಹುಟ್ಟಿದಾಗ ಆದ ಸಂಭ್ರಮ ಹೇಳತೀರದು! ಮಗನಿಗೆ ಐದು ವರ್ಷ ತುಂಬುವವರೆಗೆ ಕೆಲಸಕ್ಕೆ ಹೋಗದೆ ಅವನ ಆಟಪಾಠಗಳಲ್ಲಿ ಮಗ್ನಳಾಗಿ ತಾಯ್ತನದ ಸುಖ ಅನುಭವಿಸಿದ್ದಳು ಅವಳು.ಅಜ್ಜಿ, ತಾತ ,ಅಮ್ಮನ ಅತಿಯಾದ ಮುದ್ದಿನಿಂದಾಗಿ ಅವನು ಸೋಮಾರಿಯಾಗಿ ಬೆಳೆದಿದ್ದ.ಆರು ವರ್ಷದ ನಂತರ ಹುಟ್ಟಿದ ಮಗಳನ್ನು ಕೂಡ ಮುದ್ದಾಗಿ ಬೆಳೆಸಿದರೂ ಮಗನಷ್ಟಲ್ಲ.ಅದಕ್ಕೇನೇ ಆವಾಗಾವಾಗ ” ನಿನ್ನ ಮಗ” ಎಂದು ಗಂಡ ಹೇಳುವಾಗ ಸಿಟ್ಟು ಬರುವುದು ಹರಿಣಿಗೆ. **”****** ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸ್ಟೇಜ್ ಪ್ರ್ಯಾಕ್ಟೀಸ್ ಮಾಡಿಸುತ್ತಿರುವಾಗ  ಓಡೋಡಿ ಬಂದ ಆಯಾ ಹರಿಣಿ ಗೆ ಫೋನ್ ಕೊಟ್ಟು,  “ನಾಲ್ಕೈದು ಸಲ ನಿಮ್ಮತ್ತೆ ಫೋನ್ ಮಾಡಿದ್ರಂತ ಗೀತಾ ಮೇಡಂ ನಿಮ್ಮತ್ತೆ ಜತೆ ಮಾತಾಡಿದ್ರಂತೆ. ಏನೋ ಅರ್ಜೆಂಟಂತೆ, ನೀವು ಈವಾಗ್ಲೇ ಫೋನ್ ಮಾಡ್ಬೇಕಂತೆ” ಅಂದಳು. ಹರಿಣಿಗೆ ಭಯದಿಂದ ಎದೆ ಧಸಕ್ಕೆಂದಿತು!! ಗಂಡ ಕೂಡ ಇಲ್ಲಿಲ್ಲವಲ್ಲ ಅಂದುಕೊಳ್ಳುತ್ತಾ ಫೋನ್ ಮಾಡಿದಾಗ , ಮಾತಾಡಿದ್ದು ಪಕ್ಕದ ಮನೆಯ ಸೋಮು ಅಂಕಲ್. ” ನಿನ್ನ ಮಾವನಿಗೆ ಆಗಾಗ ಆಗೋವಂತೆ  ಶುಗರ್ ಜಾಸ್ತಿಯಾಗಿ ತಲೆಸುತ್ತು ಬರ್ತಿದೆ, ಜೊತೆಗೆ ವಿಪರೀತ ಸುಸ್ತು. ಗಾಬ್ರಿ ಮಾಡ್ಕೊಳ್ದೆ ಆರಾಮವಾಗಿ ಸ್ಕೂಟರ್ ನಲ್ಲಿ ಬಾಮ್ಮ ನೀನು. ನಾವಿದ್ದೀವಲ್ಲಾ ಇಲ್ಲಿ” ಅಂದಾಗ ಅವರ ಕಾಳಜಿಯ ಮಾತಿಗೆ ಹರಿಣಿಯ ಕಣ್ಣು ತುಂಬಿ ಬಂತು! ಮಾವನದೇ ವಯಸ್ಸಿನವರಾದರೂ ಆರೋಗ್ಯದ ಬಗ್ಗೆ ಎಷ್ಟು ಗಮನಕೊಡುತ್ತಾರೆ ಅವರು!!  “ಅರ್ಧ ಗಂಟೆಯಲ್ಲಿ ಅಲ್ಲಿರ್ತೇನೆ ಅಂಕಲ್” ಎಂದು ಫೋನಿಟ್ಟಳು. ಶಾಲೆಯ ಸಮಯ ಮುಗಿದಿದ್ದರಿಂದ ಸೀದಾ ಮನೆಗೆ ಬಂದು , ಅತ್ತೆ ಮಾವನನ್ನು ಆಸ್ಪತ್ರೆಗೆ ಕರೆದೊಯ್ದಳು. ಇವರ ಕತೆ ಮೊದಲೇ ಗೊತ್ತಿದ್ದ ಡಾಕ್ಟರ್, ಹರಿಣಿಯ ಅತ್ತೆ ಮಾವನ ಮೇಲೆ ಹರಿಹಾಯ್ದರು.” ಪ್ರತಿ ತಿಂಗಳೂ ಈ ತರ ಸಮಸ್ಯೆ ತಗೊಂಡು ಬರ್ತೀರಲ್ವಾ ನೀವು?ಸ್ವಲ್ಪ ನಾದ್ರೂ ಆರೋಗ್ಯದ ಕಡೆಗೆ ಗಮನ ಕೊಡಬಾರ್ದಾ? ಇವತ್ತು ಅಡ್ಮಿಟ್ ಮಾಡ್ಬೇಕಾಗತ್ತೆ ಇವ್ರನ್ನು” ಅಂದಾಗ ಹರಿಣಿ ಚಿಂತಾಕ್ರಾಂತಳಾದಳು. ನಾಳೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ವಹಿಸಿರುವ ತನಗೆ ರಜೆ ಸಿಗುವುದು ಸಾಧ್ಯವೇ ಇಲ್ಲ. ಏನಾದರೂ ಉಪಾಯ ಮಾಡೋಣ ಅಂದುಕೊಳ್ಳುತ್ತಾ ಕೌಂಟರ್ ಕಡೆಗೆ ನಡೆದಳು.       ಮಾವನನ್ನು ರೂಮಿಗೆ ಕರೆದೊಯ್ದು ಟ್ರೀಟ್ಮೆಂಟ್ ಶುರು ಮಾಡಿದ ನಂತರ ಮಗನಿಗೆ ಫೋನ್ ಮಾಡಿ ” ತಾತನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಲ್ಲಿ ನೀನು ಇಲ್ಲಿಗೆ ಬಾ.ಇವತ್ತು ರಾತ್ರಿ ನೀನು ತಾತನ ಜೊತೆಗಿರು” ಅಂದಳು. ಮಗ ಅಚ್ಚರಿಯಿಂದ ” ನಾನಾ? ” ಎಂದಾಗ  , ” ಹೌದು ನೀನೇ. ನಂಗೆ ನಾಳೆ ಬೆಳಗ್ಗೆ ಆರು ಗಂಟೆಗೆ ಶಾಲೆಯಲ್ಲಿರ್ಬೇಕು.ರಾತ್ರಿ ಹೊತ್ತು ಅಜ್ಜಿ ಇಲ್ಲಿರೋದು ಸರಿಯಲ್ಲ. ಬೇಗ ಬಾ” ಅಂದಳು. ” ನೀನು ರಜೆ ಹಾಕಲ್ವಾ? ” ಎಂದು ಅಚ್ಚರಿಯಿಂದ ಕೇಳಿದ ಅತ್ತೆಗೆ ಶಾಂತವಾಗಿಯೇ ” ಈ ತರದ ಪರಿಸ್ಥಿತಿಯನ್ನು ನೀವಾಗೇ ತಂದುಕೊಂಡದ್ದಲ್ವಾ ಅತ್ತೆ? ನಾನು ಎಷ್ಟಂತ ರಜೆ ಹಾಕ್ಲಿ? ಮಕ್ಳು ಹೆಲ್ಪ್ ಮಾಡ್ತಾರೆ ” ಅಂದಳು. ತಪ್ಪು ತಮ್ಮದಿರುವಾಗ ಸೊಸೆಯ ಹತ್ತಿರ ಮಾತನಾಡಿದರೆ ಕಷ್ಟ ಎಂದು ಅವರೂ ಸುಮ್ಮನಾದರು. ಮಗನನ್ನು ಮಾವನ ಬಳಿ ಬಿಟ್ಟು ಅತ್ತೆಯ ಜೊತೆ ಹರಿಣಿ ಮನೆಗೆ ಹೋದಳು. ಟಿವಿ ನೋಡುತ್ತಾ ಕುಳಿತ ಮಗಳನ್ನು ಕರೆದು,  “ನಾನು ನಾಳೆ ಶಾಲೆಗೆ ಹೋಗುತ್ತೇನೆ. ನೀನು ಕ್ಯಾಬ್ ಬುಕ್ ಮಾಡಿ ಅಜ್ಜಿಯ ಜೊತೆ ಆಸ್ಪತ್ರೆಗೆ ಹೋಗು” ಅಂದಳು. ” ನಾನಾ?” ಎಂದು ಪ್ರಶ್ನಿಸಿದ ಮಗಳಿಗೆ , ” ಹೌದು ನೀನೇ. ನಾಳೆ ಬೆಳಗ್ಗೆ ಬೇಗ ಎದ್ದು ಅಜ್ಜಿಗೆ ಅಡುಗೆಮನೆಯಲ್ಲಿ ಹೆಲ್ಪ್ ಮಾಡು” ಎಂದು ಹೇಳುತ್ತಾ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗೆ ತೊಡಗಿದಳು. ********* ಮಾರನೇ ದಿನ ಬೆಳಗ್ಗೆ ಶಾಲೆಗೆ ಹೊರಟ ಹರಿಣಿಗೆ ಈ ಸೂರ್ಯೋದಯ ಹೊಸತೆಂಬಂತೆ ಕಂಡಿತು.ಮಗನಿಗೆ ಫೋನ್ ಮಾಡಿದಾಗ ಮಾವ ಚೇತರಿಸುತ್ತಿದ್ದಾರೆಂದು ಕೇಳಿ ಇನ್ನಷ್ಟು ಸಮಾಧಾನವಾಯಿತು. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಊಟಕ್ಕೆ ಕುಳಿತು, ಧಾತ್ರಿಗೆ ಮನೆಯ ಕತೆ ಹೇಳಿದಾಗ ಅವಳಿಗೆ ಅಚ್ಚರಿಯೋ ಅಚ್ಚರಿ!! ಅವಳು  “ನಿಜಾನಾ ? ನಂಬಕ್ಕಾಗ್ತಿಲ್ಲ ನಂಗೆ!!!” ಎಂದು ಕೇಳಿದಾಗ ಹರಿಣಿ ನಗುತ್ತಾ  “ಹೌದಮ್ಮಾ..ಜವಾಬ್ದಾರಿ ಯನ್ನು ನಾವಾಗೇ ವಹಿಸಿಕೊಡೋವರ್ಗೂ ಎಲ್ರೂ ಸುಮ್ನಿರ್ತಾರೆ. ಇದೊಂದು ಪಾಠ, ಕಲ್ತು ಕೋ ” ಅಂದಳು. *************************************

ಧೃಡ ಚಿತ್ತ Read Post »

ಇತರೆ, ಪುಸ್ತಕ ಸಂಗಾತಿ

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..!

ಲೇಖನ ವಿಮರ್ಶಾ ಲೋಕದ ದಿಗ್ಗಜ ಜಿ.ಎಸ್. ಆಮೂರ..! ಜಿ.ಎಸ್. ಅಮೂರರು ನಮನಗಲಿದ್ದಾರೆ ಈಗ. ಆದರೆ ಅವರ ಸಾಹಿತ್ಯ ಕೃತಿಗಳು ಮತ್ತು ಮಾಡಿದ ಪಿ.ಎಚ್.ಡಿಯ ಸಾಹಿತ್ಯ ಸೌರಭ ನಮ್ಮ ಜೊತೆಯಲ್ಲಿ ಇದೆ. ಆಗಲಿ, ಜಿ.ಎಸ್.ಅಮೂರರಿಗೆ ಅನಂತಾನಂತ ನಮನಗಳು… ೦೮.೦೫.೧೯೨೫ ಕನ್ನಡ ಸಾಹಿತ್ಯವನ್ನು ಇಂಗ್ಲಿಷ್‌ ಮೂಲಕ ಇತರ ಭಾಷಾ ಜಗತ್ತಿಗೆ ಪರಿಚಯಿಸುತ್ತಾ, ವಿಮರ್ಶಾಲೋಕದಲ್ಲಿ ೪-೫ ದಶಕಗಳಿಂದಲೂ ಕನ್ನಡ-ಇಂಗ್ಲಿಷ್‌ ಕೃತಿಗಳನ್ನು ವಿಮರ್ಶಿಸುತ್ತಾ, ಮಹತ್ತರ ಪಾತ್ರ ವಹಿಸುತ್ತಾ ಬಂದಿರುವ ಗುರುರಾಜ ಶಾಮಾಚಾರ್ಯ ಆಮೂರರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೧೯೨೫ ರ ಮೇ ೮ ರಂದು. ತಂದೆ ಶಾಮಾಚಾರ್ಯರು, ತಾಯಿ ಗಂಗಾದೇವಿ. ತಂದೆಗೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ. ಮನೆಗೆ ತರುತ್ತಿದ್ದ ಸದ್ಭೋಧ ಚಂದ್ರಿಕಾ, ಕರ್ಮವೀರ ಮುಂತಾದ ಪತ್ರಿಕೆಗಳ ಸಂಗ್ರಹವೇ ಇದ್ದು ಇದನ್ನೂ ಓದುತ್ತಾ ಬಂದಂತೆಲ್ಲಾ ಆಮೂರರಿಗೆ ಸಾಹಿತ್ಯದಲ್ಲಿ ಆಸ್ಥೆ ಬೆಳೆಯ ತೊಡಗಿತು. ಪ್ರಾರಂಭಿಕ ಶಿಕ್ಷಣ ಸೂರಣಗಿಯಲ್ಲಿ (ಈಗ ಶಿರಹಟ್ಟಿ ತಾಲ್ಲೂಕು, ಗದಗ ಜಿಲ್ಲಾ) ಹೈಸ್ಕೂಲು ವಿದ್ಯಾಭ್ಯಾಸ ಹಾವೇರಿಯಲ್ಲಿ ಆಯಿತು. ಶಿಕ್ಷಕರಾಗಿ ದೊರೆತ ಹುಚ್ಚೂರಾವ್‌ ಬೆಂಗೇರಿ ಮಾಸ್ತರು ಕನ್ನಡದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿದರೆ, ಎಸ್‌.ಜಿ. ಗುತ್ತಲ ಮಾಸ್ತರು ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಿದರು. ಧಾರವಾಡದ ಕರ್ನಾಟಕ ಕಾಲೇಜಿನಿಂದ ಪಡೆದ ಬಿ.ಎ.ಆನರ್ಸ್ ಪದವಿ (೧೯೪೭) ಮತ್ತು ಮುಂಬಯಿ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ ಎಂ.ಎ. ಪದವಿ (೧೯೪೯) ಪ್ರತಿ ವರ್ಷವೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿ ಜಿ.ಎಸ್‌ ಅಮೂರರು. ೧೯೬೧ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ `THE CONCEPT OF COMEDY’ ಮಹಾ ಪ್ರಬಂಧ ಮಂಡಿಸಿ ಪಡೆದ ಪಿ.ಹೆಚ್‌.ಡಿ. ಪದವಿ ಪಡೆದರು. ಗದುಗಿನ ತೋಂಟದಾರ್ಯ ಕಾಲೇಜಿನಲ್ಲಿ ಇಂಗ್ಲಿಷ್‌ ಅಧ್ಯಾಪಕರಾಗಿ (೧೮೬೪-೬೮) ಸೇರಿ ನಂತರ ೧೯೬೮ರಲ್ಲಿ ಔರಂಗಾಬಾದ್‌ನ ಮರಾಠವಾಡ ವಿದ್ಯಾಪೀಠದಲ್ಲಿ ಇಂಗ್ಲಿಷ್‌ ವಿಭಾಗದ ಪ್ರಾಧ್ಯಾಪಕರಾಗಿ ಹಾಗೂ ಮುಖ್ಯಸ್ಥರಾಗಿಯೂ ನಿವೃತ್ತರಾಗುವವರೆವಿಗೂ (೧೯೮೫) ಕಾರ್ಯ ನಿರ್ವಹಿಸಿದರು..! ಮುರಾಡವಾಡ ವಿದ್ಯಾಪೀಠದಲ್ಲಿದ್ದಾಗಲೇ ೧೯೭೨-೭೩ರಲ್ಲಿ ಫುಲ್‌ಬ್ರೈಟ್‌ ಫೆಲಿಶಿಪ್‌ ಪಡೆದು ಅಮೆರಿಕದ ಕೆಲಫೋರ್ನಿಯಾ (ಸಾಂಟಾಬಾರ್ಬರ) ಹಾಗೂ ಯೇಲ್ಸ್‌ ವಿಶ್ವವಿದ್ಯಾಲಯಗಳಲ್ಲಿ ಮತ್ತು ೧೯೭೩ರಲ್ಲಿ ಬ್ರಿಟಿಷ್‌ ಕೌನ್ಸಿಲ್‌ ಸಹಾಯದಿಂದ ಇಂಗ್ಲೆಂಡ್‌ನಲ್ಲಿ – ಹೀಗೆ ಎರಡುಬಾರಿ ಸಂಶೋಧನೆಯಲ್ಲಿ ನಿರತರಾಗಿದ್ದರು. ಇವರು ಪ್ರಾಧ್ಯಾಪಕರಾಗಿದ್ದಾಗ ೧೪ ವಿದ್ಯಾರ್ಥಿಗಳು ಪಿ.ಹೆಚ್‌.ಡಿ. ಹಾಗೂ ೩ ಎಂ.ಫಿಲ್‌. ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಿಂದ ಪದವಿ ಪಡೆದಿದ್ದಾರೆ. ಇವರ ಕನ್ನಡದ ಮೊದಲ ಕೃತಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾದುದು ಮಿಲ್ಟನ್‌ ಕವಿಯ ಮೇಲೆ ಬರೆದ ‘ಮಹಾಕವಿ ಮಿಲ್ಟನ್‌’ (೧೯೬೬). ನಂತರ ಮೊದಲ ವಿಮರ್ಶಾ ಪ್ರಬಂದಗಳ ಕೃತಿ ‘ಕೃತಿ ಪರೀಕ್ಷೆ’ಯಲ್ಲಿ ಕನ್ನಡದ ಪ್ರಮುಖ ಕಾದಂಬರಿಗಳಾದ ರಾವಬಹದ್ದೂರರ ‘ಗ್ರಾಮಾಯಣ’. ಅನಂತಮೂರ್ತಿಯವರ ಸಂಸ್ಕಾರ, ಶೌರಿ; ರಾಮಾನುಜನ್‌ರವರ ‘ಹಳದಿಮೀನು’, ಶಿವರಾಮ ಕಾರಂತರರ ಬೆಟ್ಟದ ಜೀವ ಮತ್ತು ಮರಳಿಮಣ್ಣಿಗೆ ಮುಂತಾದವುಗಳ ವಿಶ್ಲೇಶಣಾತ್ಮಾಕ ಲೇಖನಗಳಿಂದ ಕೂಡಿದೆ. ಇದಲ್ಲದೆ ಹಾಸನ ರಾಜಾರಾಯರು, ಶ್ರೀರಂಗರ ಕೃತಿಗಳ ಬಗ್ಗೆ, ಕೈಲಾಸಂರವರ ಇಂಗ್ಲಿಷ್‌ ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖನಗಳಿವೆ. ಸಮಕಾಲೀನ ಕಥೆ-ಕಾದಂಬರಿ, ಕನ್ನಡ ಕಾದಂಬರಿಯ ಬೆಳವಣಿಗೆ, ಅ.ನ. ಕೃಷ್ಣರಾಯ, ಅರ್ಥಲೋಕ ಮುಂತಾದ ಕೃತಿಗಳಲ್ಲದೇ ಬೇಂದ್ರೆಯವರ ಗಂಗಾವತರಣವನ್ನೂ ಮಧ್ಯಬಿಂದುವಾಗಿಟ್ಟುಕೊಂಡು ಕಾವ್ಯ ಹಾಗೂ ಕಾವ್ಯೇತರ ಬರಹಗಳನ್ನೂ ವಿವೇಜಿಸುವ ‘ಭುವನದ ಭಾಗ್ಯ’ ಕೃತಿ, ವ್ಯವಸಾಯ, ಕನ್ನಡ ಕಥನ ಸಾಹಿತ್ಯ: ಕಾದಂಬರಿ, ವಿರಾಟಪುರುಷ, ಸಾತ್ವಿಕ ಪಥ, ಕಾದಂಬರಿ ಸ್ವರೂಪ, ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಮುಂತಾದ ೩೯ ಕೃತಿಗಳಲ್ಲದೇ ಚಿತ್ತಾಲರ ಆಯ್ದ ಕಥೆಗಳು, ಕೆ ಸದಾಶಿವ ಅವರ ಕಥಾ ಸಾಹಿತ್ಯ, ಅವಳ ಕಥೆಗಳು, ಬೇಂದ್ರೆ ಕಾವ್ಯ, ಕನ್ನಡ ಕಥಾಲೋಕ, ಶ್ರೀರಂಗ ಸಾರಸ್ವತ, ಹುಯಿಲಗೋಳ ನಾರಾಯಣರಾಯರ ಸಮಗ್ರ ಸಾಹಿತ್ಯ ಮುಂತಾದವುಗಳನ್ನು ಸಂಪಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ರಚಿಸಿರುವ ಕೃತಿಗಳು– ದಿ ಕಾನ್ಸೆಪ್ಟ್‌ ಆಫ್‌ ಕಾಮಿಡಿ, ಮನೋಹರ ಮಳಗಾಂವ್‌ಕರ್, ಆದ್ಯರಂಗಾಚಾಯ್, ದಿ ಕ್ರಿಟಿಕಲ್‌ ಸ್ಪೆಕ್ಟ್ರಮ್‌, ಇಮೇಜಸ್‌ ಅಂಡ್‌ ಇಂಪ್ರೆಷನ್ಸ್‌, ಎ.ಎನ್‌. ಕೃಷ್ಣರಾವ್‌, ಕ್ರಿಯೇಷನ್ಸ್‌ ಅಂಡ್‌ ಟ್ರಾನ್ಸ್‌ ಕ್ರಿಯೇಷನ್ಸ್‌, ದತ್ತಾತ್ರೇಯ ರಾಮಚಂದ್ರಬೇಂದ್ರೆ, ಪರ್ಸೆಷನ್ಸ್‌ ಆಫ್‌ ಮಾಡರ್ನ್ ಲಿಟರೇಚರ್, ಮೊದಲಾದ ೧೪ ಕೃತಿಗಳ ಜೊತೆಗೇ ಕ್ರಿಟಿಕಲ್‌ ಎಸ್ಸೆಸ್‌ ಹ್ಯಾನ್‌ ಇಂಡಿಯನ್‌ ರೈಟಿಂಗ್‌ ಇನ್‌ ಇಂಗ್ಲಿಷ್‌, ಕಾಲೊನಿಯಲ್‌ ಕೌನ್ಷಿಯಸ್ ನೆಸ್‌ ಇನ್‌ ಕಾಮನ್‌ವೆಲ್ತ್ ಲಿಟರೇಚರ್ ಮುಂತಾದ ಆರು ಕೃತಿಗಳನ್ನೂ ಸಂಪಾದಿಸಿದ್ದಾರೆ. ಹೀಗೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿರುವುದಲ್ಲದೇ ಬೆಂಗಳೂರು, ಕರ್ನಾಟಕ ವಿಶ್ವವಿದ್ಯಾಲಯ, ಬೆನಾರಸ್‌ ಹಿಂದೂ ವಿಶ್ವವಿದ್ಯಾಲಯ, ಮೈಸೂರಿನ ಧ್ವನ್ಯಾಲೋಕ ಮುಂತಾದೆಡೆಗಳಲ್ಲಿ ಉಪನ್ಯಾಸಗಳನ್ನೂ ನೀಡಿದ್ದಾರೆ..! ಗದಗ ಜಿಲ್ಲಾ ಸಾಹಿತ್ಯ ಸಮ್ಮೇಳನ, ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಗೌರವಗಳಿಸಿದ್ದಾರೆ. ಇವರ ‘ಅರ್ಥಲೋಕ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಮತ್ತು ಸ.ಸ.ಮಾಳವಾಡ ಪ್ರಶಸ್ತಿ; ಭುವನದ ಭಾಗ್ಯ ಕೃತಿಗೆ ಭಾರತೀಯ ಭಾಷಾ ಪರಿಷತ್‌-ಕೊಲ್ಕತ್ತಾ, ಪ್ರೊ.ವಿ.ಎಂ. ಇನಾಂದಾರ್ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ; ಕನ್ನಡ ಕಥನ ಸಾಹಿತ್ಯ: ಕಾದಂಬರಿ ಕೃತಿಗೆ ಬಿ.ಎಚ್‌. ಶ್ರೀಧರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಇವರಿಗೆ ಸಂದಿವೆ. ಇವಲ್ಲದೆ ರಾಜ್ಯೋತ್ಸವ ಪ್ರಶಸ್ತಿ, ಅ.ನ.ಕೃ. ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ವಿಮರ್ಶಕ ರತ್ನ ಪ್ರಶಸ್ತಿ, ಅಖಿಲ ಭಾರತ ಮಾಧ್ವ ಮಹಾ ಮಂಡಲದಿಂದ ಕನ್ನಡ ಭಾಷಾ ಭೂಷಣ ಪ್ರಶಸ್ತಿ, ದ.ರಾ. ಬೇಂದ್ರೆ ಪ್ರಶಸ್ತಿ, ಸಂದೇಶ್‌ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ, ಪಂಪ್ರಶಸ್ತಿ, ಮಾಸ್ತಿ ಪ್ರಶಸ್ತಿಗಳು ದೊರೆತಿವೆ. ಒಂದು ಕೃತಿಯನ್ನೂ ವಿಮರ್ಶಿಸುವಾಗ ಕೃತಿಯಲ್ಲಿ ಏನಿದೆ? ಏಕಿದೆ? ಎಂದು ವಿಮರ್ಶಿಸಬೇಕೇ ವಿನಃ ಏನಿಲ್ಲ, ಏನಿರಬೇಕಿತ್ತು ಎಂದು ಹುಡುಕುವುದು ವಿಮರ್ಶಕನ  ಕೆಲಸವಾಗಬಾರದು ಮತ್ತು ವಿಮರ್ಶಕನಾದವನು ಅಂತಃ ಚಕ್ಷುಗಳನ್ನೂ ತೆರೆದು ಪೂರ್ವಾಗ್ರಹ ಪೀಡಿತನಾಗದೇ ಕೃತಿಯೊಡನೆ ಅನುಸಂಧಾನ ಮಾಡಬೇಕೆನ್ನುವುದೇ ಇವರ ಖಚಿತ ಅಭಿಪ್ರಾಯವಾಗಿದ್ದು, ವಿಮರ್ಶೆಯ ಕ್ಷೇತ್ರದಲ್ಲಿ ಹೊಸಹೊಸ ಅನ್ವೇಷಣೆಗಳನ್ನು ಮಾಡಿ ಹೊಸಹೊಸ ವಿಸ್ತೃತ ವಿಮರ್ಶಾ ವಿಧಾನಗಳನ್ನೂ ರೂಪಿಸತೊಡಗಿದ್ದರು..! ಇಂತಹ ಜಿ.ಎಸ್. ಅಮೂರ ಈಗ ನಮ್ಮನ್ನು ಅಗಲಿದ್ದಾರೆ. ಅವರಿಗಿದೋ ‘ನಮನ’ಗಳು… ************************************* ಕೆ.ಶಿವು.ಲಕ್ಕಣ್ಣವರ ***************************************************

ವಿಮರ್ಶಾ ಲೋಕದ ದಿಗ್ಗಜ, ಜಿ.ಎಸ್. ಆಮೂರ..! Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು. `ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು. ‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ. ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು. ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ? ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ. ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ. ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ. ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ! ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

You cannot copy content of this page

Scroll to Top