ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಕಿಟಕಿ — ಗೋಡೆ ಕನ್ನಡ ಮೂಲ:ವಸುಂಧರಾಕದಲೂರು ಇಂಗ್ಲೀಷಿಗೆ: ಸಮತಾ ಆರ್ ಕಿಟಕಿ — ಗೋಡೆ ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ ಮುಚ್ಚಿದಕಿಟಕಿ. ನನ್ನಾಚೆ ನನಗೆ ಅರಿವಾಗದೇಒಳಗಿನ ಗವ್ವುಗತ್ತಲೆಕಮಟು ವಾಸನೆ ಕತ್ತು ಹಿಸುಕಿ ಕುತ್ತುತರುತ್ತಿವೆ. ಕಾಲದ ಅಲೆ ಉರುಳಿತನ್ನೊಡನೆ ತಂದಿಟ್ಟ ಮರಳುತನಕ್ಕೆಈಗ ಕಿವೂಡೂ ಕುರುಡೂಸಾತ್ ಕೊಡುತ್ತಾ ಕೂಡುತ್ತಿವೆಜತನ ಮಾಡುತ್ತಾ ಗತವನ್ನು. ನನ್ನ ಚೌಕಟ್ಟಿನಾಚೆ ನಿಂತಗಟ್ಟಿ ಗೋಡೆ ಆಗಾಗ್ಗೆ ಅಪಾರವೇದನೆಯಲಿ ಮುಖಕಿವುಚಿ ನರಳಿ ನುಡಿಯುತ್ತದೆಯಾರೋ ಈಗಷ್ಟೆ ಕೆತ್ತಿಹೋದರೆಂದು ಮೊಳೆ ಜಡಿದುಭಾರಗಳನು ತೂಗುಹಾಕಿಭಾವನೆಗಳನು ಹೇರಿದರೆಂದುಆಕ್ರಮಿಸಿಕೊಂಡ ಆಕ್ರಂದನದದನಿಯಲಿ.. ನೆಟ್ಟಗೆ ನಿಂತ ಪಾಪದ ಗಟ್ಟಿಗೋಡೆ ; ಹೊಸ ಬಣ್ಣ ಬಳಿದರೂಬದಲಾಗದ ಹಳೆಯ ಹಣೆಬರಹ.ನವೀನತೆಗೆ ಒಡೆಯಬೇಕು, ಕುಟ್ಚಿಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದನಿರಾಕರಣೆ ಆಗಲೇಬೇಕು. ನನಗಾದರೂ ಬಾಗಿಲುಗಳಿವೆ ತೆರೆಯಬಹುದುಒಮ್ಮೆ ಜಗ್ಗನೆ ಹೊಳೆವ ಮಿಂಚುಪಕ್ಕನೆ ಹಾರುವ ಹಕ್ಕಿ ಸಾಲನುನಾನಾದರೂ ಕಾಣಬಹುದು.ನಿಧಾನದ ಆಲಾಪಕ್ಕೆ ತೆರೆದುತಲೆತೂಗಬಹುದು.ಯಾರಾದರು ಒಮ್ಮೆನನ್ನೊಳಗೆ ಹಣಕಿ ಈ ಓಲಾಡುವಆತ್ಮಗಳನೂ ಕಿಲುಬುಗಟ್ಟಿದಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿಓಡಿಸಿ ಬಿಡಬಹುದು. ಗೋಡೆ ಕೆಡವಲುವಿಳಾಸ ಹುಡುಕಿ ಬರುವವರುಬಣ್ಣ ಮಾಸಿ ಸಡಿಲಾದ ನನ್ನಬಾಗಿಲುಗಳನುದೂಡಲಿ ಪರದೆ ಹರಿದು ಹೊಸಜೇಡ ಮತ್ತೆ ಬಲೆ ಹೆಣೆಯದಂತೆಮಾಡಲಿ ಎಳೆ ಬಿಸಿಲುಹೊಸ ಗಾಳಿ ತುಂಬಿ ಬರಲಿ ನಾನು ತೆರೆದುಕೊಳ್ಳುವ ಕಿಟಕಿ ——-ವಸುಂಧರ ಕದಲೂರು. A WINDOW—-A WALL I, a window,Kept closed since ages,Have deep inside,Stale air of aeons whirling,Skeletons and spirits twirling.Drunk with the scent of darkness. Outside,there is a non unbarkedBanyan tree, With props deep rooted,Is branching wide in the fresh air,Each branch has a nest,Each nest has an incubatinghatching bird. Tappings at the door,Who that could be?A twig or a spirited bird?Each chirping birdSeems to have its own tune.What new colourThese swaying sprigs get,?By the air flowing on its own.But I was never opened. A window kept closed for centuriesWas I, unaware of my outside,But inside,Gloomy darkness and stale airAre strangling me to choke. The craziness brought by theRolling waves of time,Is conserving the past,Unheard,unseen. The wall attached to my frameOften moans and groans,About the weight hangingOn a nail stuck deep,And of laden emotions,In a jeremiad. This upright, innocent,Well built wallWas newly paintedBut ill fated.Have to be demolishedTo be newfangledNeeds to be pulverizedTo Crush it’s existenceTo dust. I atleast have doorsThat could be opened,So that,Once in a while,I might be able to seeA streak of lightning,A flock of birds flyingAnd listen to a melody,To keep me moving. Some daySome one may scare,And drive awayThese rusted skeletonsAnd swinging spirits. Those who come,With the address of the wallTo demolish,Shall fling openMy faded, loosened doors,Tear off the curtains.For not letting any spiderTo weave again,Let the morning sun andThe blowing windFill me up.Because,I am an unfolding window.. ——- Translated by Samatha.R ***********************************

ಅನುವಾದ ಸಂಗಾತಿ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಸಹದೇವ ಯರಗೊಪ್ಪ ಪ್ರೇಮದ ಹೂ ಬಾಣ ಹೃದಯದಲಿ ರುಜು ಹಾಕುವಾಗ ನಾನೇ ಇಲ್ಲದಾದೆಹದವರಿತ ಎದೆಹೊಲದಿ ಬಿತ್ತಿದ ಪ್ರೀತಿ ಫಲ ನೀಡುವಾಗ ನಾನೇ ಇಲ್ಲದಾದೆ ಅಂಗಗಳ ಸಂಗ ಬಯಸಿದ ಮನಸು ನಿದಿರೆ ಬತ್ತಿಸಿ ಕಂಗಳ ವಿಶ್ರಾಂತಿ ಕದ್ದಿದೆತುಂಬಿದ ರೂಪದ ಬಟ್ಟಲು ಕಂಡು ಗುಲಾಬಿ ರಂಗೇರಿದಾಗ ನಾನೇ ಇಲ್ಲದಾದೆ ಫಕೀರನಂತೆ ತಂಬೂರಿ ಮೀಟುತ ಅವಳ ಹಿಮ್ಮಡಿಯ ಹುಡಿಬೆಳಕಲಿ ಅಲೆದೆಬದುಕಿನ ತಿರುವಿನಲ್ಲಿ ಕಣ್ಣ ಪ್ರಣತಿ ಹೊತ್ತಿಸಿ ಕಾಯುವಾಗ ನಾನೇ ಇಲ್ಲದಾದೆ ಮೋಹ ತೃಷೆಯಲಿ ತೇಲಾಡುವ ಅಮಲಿಗೆ ಬಿಸಿಯುಸಿರ ಗುಟುಕಿಸಿದೆಒಲವ ಮಳೆಗೆ ಹರಕೆ ಹೊತ್ತು ಇಳೆ ಸ್ನಾನ ಮಾಡುವಾಗ ನಾನೇ ಇಲ್ಲದಾದೆ ಕಸಿ ಮಾಡಿದ ಹೂ ಬಳ್ಳಿ ತೆಕ್ಕೆಯಲಿ ಬಿಗಿದಪ್ಪಿ ಮುತ್ತಿಡಲು ಸಿದ್ದವಾಗಿದೆಶ್ರಮ ಹರಿಸಿ ನೆಟ್ಟ ಗಿಡ ಹಸಿರನುಟ್ಟು ನೆರಳು ಹಾಸುವಾಗ ನಾನೇ ಇಲ್ಲದಾದೆ ಒಡಲು ಕುಡಿಯೊಡೆಯಲು ಊರ ದೇವರಿಗೆ ನಡೆಮಡಿ ಹಾಸಿರುವೆಹೆತ್ತು ಹೊತ್ತು ಬೆಳೆಸಿದ ಮಗ ಎದೆ ಎತ್ತರ ಬೆಳೆದಾಗ ನಾನೇ ಇಲ್ಲದಾದೆ ಪಾಪಿ ‘ಸಾಚಿಗೆ’ ವಿಧಿ ಆಟದಲಿ ಕೈಗೆ ಬಂದ ತುತ್ತು ಬಾಯಿಗೆ ನಿಲುಕದಾಗಿದೆಬೆವರನ್ನ ಉಂಡು ಒಕ್ಕಿದ ಫಸಲಿಗೆ ತಕ್ಕ ಬೆಲೆ ದಕ್ಕಿದಾಗ ನಾನೇ ಇಲ್ಲದಾದೆ ********************************

ಗಝಲ್ Read Post »

ಇತರೆ, ಶಿಕ್ಷಣ

ಗುರುವಿನ ಗರಿಮೆ

ಲೇಖನ ಗುರುವಿನ ಗರಿಮೆ ನೂತನ ದೋಶೆಟ್ಟಿ ಬಾಲ್ಯದಲ್ಲಿ ಶಿಕ್ಷಣವೆಂದರೆ ಶಿಕ್ಷೆ  ಯೌವನದಲ್ಲಿ ಶಿಕ್ಷಣವೆಂದರೆ ಪರೀಕ್ಷೆಗಳು ಹಾಗೂ ಮೋಜು, ಆನಂತರದಲ್ಲಿ ಅದೇ ಶಿಕ್ಷಣ ವೃತ್ತಿಗೆ ರಹದಾರಿ.ಈ ರೀತಿಯಾಗಿ ಶಿಕ್ಷಣವನ್ನು ಸರಳೀಕರಿಸಬಹುದಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಸರಳ ಸೂತ್ರಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.  ಶಿಕ್ಷಣ= ಶಿಕ್ಷಣ ಸಂಸ್ಥೆ+ ವಿದ್ಯಾರ್ಥಿ ಉದ್ಯೋಗ= ಮಾರ್ಕ್ಸ+ ವಶೀಲಿ ಈ ಎರಡು ಸೂತ್ರಗಳನ್ನು ಇಟ್ಟುಕೊಂಡು ಇಂದಿನ ಶಿಕ್ಷಣದ ಬಗ್ಗೆ ನೋಡೋಣ. ಮೊದಲ ಸೂತ್ರದಲ್ಲಿ ಶಿಕ್ಷಣ ಸಂಸ್ಥೆಗಳು ಬಹು ಮುಖ್ಯವಾಗುತ್ತವೆ. ಉನ್ನತ ಶಿಕ್ಷಣದಲ್ಲಿ ಈ ಸಂಸ್ಥೆಗಳು ನೀಡುವ ಶಿಕ್ಷಣದ ಗುಣಮಟ್ಟ ಮುಖ್ಯವಾದರೂ ಆ ಸಂಸ್ಥೆಗಳ ಮೂಲಕ ದೊರೆಯಬಹುದಾದ ಉದ್ಯೋಗಾವಕಾಶ ಹಾಗೂ ಸಂಬಳದ ಪ್ಯಾಕೇಜ್ ಬಹಳ ಮುಖ್ಯವಾಗುತ್ತದೆ.ಈ ಕಾರಣದಿಂದಲೇ ತಾಂತ್ರಿಕ ಹಾಗೂ ವೈದ್ಯಕೀಯ ಉನ್ನತ ಶಿಕ್ಷಣ ವಿದ್ಯಾಲಯಗಳು ಪರಸ್ಪರ ಪೈಪೋಟಿಗೆ ಬಿದ್ದಂತೆ ವಿದ್ಯಾರ್ಥಿಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಹೊಸ ಹೊಸ ಆಮಿಷಗಳನ್ನು ಒಡ್ಡುತ್ತಿರುವುದು.ಪ್ರತಿವರ್ಷ ಸಮರೋಪಾದಿಯಲ್ಲಿ ವಿದ್ಯಾಸಂಸ್ಥೆಗಳು ಹಾಗೂ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧವಾಗುತ್ತಿರುವುದು.ಈ ಸೂತ್ರದಲ್ಲಿ ಗುರು ಇಲ್ಲದಿರುವುದುದನ್ನು ಗಮನಿಸಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ಮಹತ್ವವನ್ನು ಕಳೆದು ಕೊಳ್ಳುತ್ತಿರುವುದನ್ನು ಈ ಸಂಸ್ಥೆಗಳು ನಡೆಸುವ ಪರೀಕ್ಷೆಗಳು, ಗುರುಗಳ ಬದಲಾಗಿ ಕೋಚಿಂಗ್ ಸೆಂಟರುಗಳ ಗುರುವಲ್ಲದ ತರಬೇತುದಾರರ ಮೇಲೆ ಹೆಚ್ಚು ಅವಲಂಬಿತರಾಗುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಮತ್ತೆ ಮತ್ತೆ ಪುಷ್ಟೀಕರಿಸುತ್ತಿದ್ದಾರೆ. ಎರಡನೇ ಸೂತ್ರ ವಿದ್ಯಾಭ್ಯಾಸದ ಗುರಿಯನ್ನು ನಿರ್ಧರಿಸುತ್ತದೆ.ಅದೆಂದರೆ ಉದ್ಯೋಗ.ಕೋರ್ಸಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರಿಂದ ದೊರೆಯಬಹುದಾದ ಸಂಬಳದ ಪ್ಯಾಕೇಜಿನ ಮೇಲೆ ಅದು ನಿರ್ಧರಿಸಲ್ಪಡುತ್ತದೆ.ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ವಿದ್ಯಾರ್ಥಿ ಪಡೆಯುವ ಅಂಕಗಳು, ಅಗತ್ಯ ಸಂದರ್ಭದಲ್ಲಿ ಮಾಡಬಹುದಾದ ವಶೀಲಿ.ಇಲ್ಲಿಯೂ ಕೂಡ ಗುರುವಿನ ಮಾತೇ ಇಲ್ಲ. ಇಂತಹ ಅನೇಕ ಸೂತ್ರಗಳನ್ನು ಸಿದ್ಧಪಡಿಸುತ್ತ ಹೋಗಬಹುದು.ಪ್ರಯತ್ನಿಸಿ ನೋಡಿ.ಆದರೆ ಎಲ್ಲಿಯೂ ಗುರುವಿನ ಅಗತ್ಯತೆ ಕಂಡುಬರದಿರುವುದು ಇಂದಿನ ಶಿಕ್ಷಣ ವ್ಯವಸ್ಥೆಯ ವಾಸ್ತವ.ಆಚಾರ್ಯದೇವೋ ಭವ ಎಂದು ಗುರುವನ್ನು ದೈವತ್ವಕ್ಕೇರಿಸಿದ  ನಮ್ಮ ನಾಡಿನಲ್ಲಿ ಹೀಗೆ ಗುರುವಿನ ಸ್ಥಾನ ಗೌಣವಾಗಲು ಆರಂಭವಾದದ್ದು ತೀರ ಇತ್ತೀಚಿನ ವರ್ಷಗಳಲ್ಲಿ. ನಮ್ಮ ದೇಶದಲ್ಲಿ ಗುರುಕುಲ ಪದ್ಧತಿಯಲ್ಲಿ ಮಾತ್ರಇದ್ದ ಶಿಕ್ಷಣ ನಿಲುಕುತ್ತಿದ್ದುದು ಕೂಡ ಸಮಾಜದ ಉನ್ನತ ವರ್ಗಕ್ಕೆ ಸೇರಿದ ಕೆಲ ಗಣ್ಯಾತಿಗಣ್ಯರಿಗೆ ಮಾತ್ರ. ಕಾಲಾಂತರದಲ್ಲಿ ಆದ ಸಾಮಾಜಿಕ ಬದಲಾವಣೆಗಳಿಂದ, ಶೈಕ್ಷಣಿಕ ಕ್ರಾಂತಿಯಿಂದ.  ಶಿಕ್ಷಣ ಸಾರ್ವತ್ರಿಕವಾದದ್ದು ಆಧುನಿಕ ಭಾರತದ ಅತಿ ದೊಡ್ಡ ಸಾಧನೆ. ಆದರೆ ಸ್ವಾತಂತ್ರ್ಯಾನಂತರ ಆದ ಆರ್ಥಿಕ ಬದಲಾವಣೆಯ ಬಿರುಗಾಳಿಯಲ್ಲಿ ಶಿಕ್ಷಣ ಕ್ಷೇತ್ರವೂ ಸಿಲುಕಿ ಅದರ ವ್ಯಾಪಾರೀಕರಣವಾದದ್ದರಿಂದಲೇ ‘ಗುರು’ಸ್ಥಾನ ಈ ಹಿಂದಿನ ಮಹತ್ವವನ್ನು ಕಳೆದುಕೊಳ್ಳಲಾರಂಭಿಸಿತು.‘ ಹಿಂದೆ ಗುರುವಿದ್ದ; ಮುಂದೆ ಗುರಿ ಇತ್ತು. ಸಾಗುತಿತ್ತು ಧೀರರದಂಡು. ಇಂದು ಹಿಂದೆ  ಗುರುವಿಲ್ಲ; ಮುಂದೆ ಗುರಿ ಇಲ್ಲ. ಸಾಗುತಿಹುದು ರಣಹೇಡಿಗಳ ಹಿಂಡು’ ಎಂಬ ನುಡಿ ಶಿಕ್ಷಣ ಕ್ಷೇತ್ರಕ್ಕೆ ಬಿದ್ದ ಕೊಡಲಿಪೆಟ್ಟಿನಿಂದ ಘಾಸಿಗೊಂಡು ಆಡಿದ್ದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ರಣಹೇಡಿತನವನ್ನೂ ಮೀರಿಸಿದ ಶಿಕ್ಷಣ ವ್ಯವಸ್ಥೆಗೆ ನಮ್ಮ ದೇಶ ಸಾಕ್ಷಿಯಾಗುತ್ತಿದೆ. ಉನ್ನತ ಶಿಕ್ಷಣದ ದೇಗುಲಗಳಾಗಿದ್ದ ವಿಶ್ವವಿದ್ಯಾಲಯಗಳೂ ಅನೀತಿಯ ತಾಣಗಳಾಗುತ್ತಿವೆ. ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ಈ ಪಿಡುಗು ಶಾಲೆ ಕಾಲೇಜುಗಳನ್ನೂ ಬಿಟ್ಟಿಲ್ಲ. ಇಂತಹ ವಾತಾವರಣದಲ್ಲಿ ನಲುಗುತ್ತಿರುವುದು ವಿದ್ಯೆಯೇ ಹೊರತು ಶಿಕ್ಷಕರಾಗಲೀ, ವಿದ್ಯಾರ್ಥಿಗಳಾಗಲೀ ಅಲ್ಲ. ಶಿಕ್ಷಕರಿಗೆ ಸಂಬಳ, ಭತ್ಯೆಗಳು, ಪರೀಕ್ಷಾ ಡ್ಯೂಟಿಗಳು, ಜೊತೆಗೆ ಒಂದಷ್ಟು ತರಗತಿಗಳಲ್ಲಿ ಪಾಠ ಇವಿಷ್ಟು ಶಿಕ್ಷಣ ವ್ಯವಸ್ಥೆಯಾಗಿ ಕಂಡರೆ ವಿದ್ಯಾಥಿಗಳಿಗೆ ಹಾಜರಿ ಹಾಗೂ ಪರೀಕ್ಷೆಗಳೇ ಶಿಕ್ಷಣ ವ್ಯವಸ್ಥೆಯಾಗಿವೆ. ಇದರಿಂದ ಸರಿಯಾದ ಶಿಕ್ಷಣ ಯಾವ ಹಂತದಲ್ಲೂ ದೊರೆಯದೇ ಇಡಿಯ ಶಿಕ್ಷಣ ವ್ಯವಸ್ಥೆ ಬಡವಾಗುತ್ತಿದೆ. ಅವ್ಯವಹಾರ, ಅನೈತಿಕತೆ ಈ ಶಿಕ್ಷಣ ವ್ಯವಸ್ಥೆಯಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು. ಪರೀಕ್ಷಾ ಗೊಂದಲಗಳು, ಪ್ರತಿವರ್ಷ ಕಾಡುವ ಪ್ರಶ್ನೆ ಪತ್ರಿಕೆ ಗೊಂದಲಗಳು, ಪರೀಕ್ಷೆಗೆ ಮುನ್ನವೇ ಅವುಗಳು ಬಯಲಾಗುವುದು, ಪರೀಕ್ಷಾ ನಂತರವೂ ಫಲಿತಾಂಶಗಳಲ್ಲಿ ಗೊಂದಲ, ಅವ್ಯವಹಾರಗಳು ಈ ವ್ಯವಸ್ಥೆಯನ್ನುಗುರುವಿನ ಹೊರತಾಗಿ ಬೇರೆ ಶಕ್ತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಆಳುತ್ತಿರುವುದನ್ನು ಕಣ್ಣಿಗೆ ರಾಚುವಂತೆ ತೋರಿಸುತ್ತಿವೆ. ಈ ಹಿನ್ನೆಲೆಯಲ್ಲಿ ‘ಗುರು’ ಎಂಬ ಪದ ತನ್ನ ಗರಿಮೆಯನ್ನು ಕಳೆದುಕೊಂಡಿದೆ. ಕೇವಲ ಮೂರು ದಶಕಗಳ ಹಿಂದೆ ಗುರು-ಶಿಷ್ಯ ಸಂಬಂಧ ಭಯ-ಭಕ್ತಿಯ ಸಂಬಂಧವಾಗಿತ್ತು. ತಮ್ಮನ್ನು ಗೌರವಿಸುವ ಅಪಾರ ಶಿಷ್ಯವೃಂದ ಗುರುಗಳಿಗೆ ಇತ್ತು.ಇದು ಒಳ್ಳೆಯ ಶಿಕ್ಷಣ ವ್ಯವಸ್ಥೆಯ ಸೊಬಗು ಕೂಡ.ಗೌರವಕ್ಕೆ ಪಾತ್ರನಾಗುವ ಗುರು ಎಂದರೆ ಅವನು ತನ್ನ ಕರ್ತವ್ಯಗಳಿಗೆ ಚ್ಯುತಿ ಬಾರದಂತೆ ತನ್ನ ಶಿಷ್ಯವೃಂದಕ್ಕೆ ಸಲ್ಲಬೇಕಾದ ಸೇವೆಯನ್ನು ಸಲ್ಲಿಸಿದ್ದಾನೆ ಹಾಗೂ ಹೊಣೆಯನ್ನು ನಿಭಾಯಿಸಿದ್ದಾನೆ ಎಂದೇ ಅರ್ಥ. ಅದರಂತೆ ವಿದ್ಯಾರ್ಥಿಗಳೂ ಕೂಡ ಅಂತಹ ಗುರುವಿಗೆ ವಿಧೇಯರಾಗಿರುತ್ತಾರೆಂದರೆ ಅದು ಆ ಗುರುವೇ ಅವರಿಗೆ ನೀಡಿದ ಮಾರ್ಗದರ್ಶನದ ಮೂಲಕ ಎಂಬುದೂ ಕೂಡ ಸತ್ಯ. ಕಾಲ ಕಳೆದಂತೆ ಗುರು-ಶಿಷ್ಯ ಸಂಬಂಧದಲ್ಲಿ ಬದಲಾವಣೆ ಕಂಡು ಬರುತ್ತಪರಸ್ಪರ ಮಿತ್ರತ್ವದ ನೆಲೆಗೆ ಈ ಸಂಬಂಧವನ್ನು ತಂದು ನಿಲ್ಲಿಸಿತು.ಇದು ಕೂಡ ಬಹು ಸುಂದರವಾದ ಘಟ್ಟವೇ. ಏಕೆಂದರೆ ಆಜ್ಞಾಪಾಲಕ ವಿದ್ಯಾರ್ಥಿ ಸಂಸ್ಕೃತಿಯಿಂದ ಗೆಳೆತನಕ್ಕೆ ಒಗ್ಗಿಕೊಳ್ಳುವ ಸಖ್ಯ ಪರಂಪರೆ ಈ ಕಾಲದಲ್ಲೆ ಬೆಳೆಯಿತು.ಇತ್ತೀಚಿನ ದಿನಗಳಲ್ಲಿ ಇದೂ ಕೂಡ ಮಾಯವಾಗುತ್ತ ಎಲ್ಲವೂ ಕೇವಲ ವ್ಯಾವಹಾರಿಕ ನೆಲೆಗೆ ಬಂದು ನಿಂತಿರುವುದು ಶಿಕ್ಷಣ ವ್ಯವಸ್ಥೆಯ ಅರಾಜಕತೆಯನ್ನು ತೋರಿಸುತ್ತದೆ.ಇದಕ್ಕೆಲ್ಲ ಮುಖ್ಯ ಕಾರಣ ಈ ವ್ಯವಸ್ಥೆಯಲ್ಲಿ ಬದಲಾದ ಗುರುವಿನ ಸ್ಥಾನ ಮಾನ ಎಂದು ನನ್ನ ಅನಿಸಿಕೆ. ವಿದ್ಯಾರ್ಥಿಗಳಲ್ಲಿ ಆಶಿಸ್ತು ಹೆಚ್ಚುತ್ತಿದೆ. ವಿದ್ಯಾಲಯಗಳು ಅನೀತಿಯ ತಾಣಗಳಾಗುತ್ತಿವೆ ಎಂಬ ಹಳಹಳಿಕೆ ಕೇವಲ ಕ್ಲೀಷೆಯಾಗುತ್ತದೆ. ಈ ಸ್ಥಿತಿಗೆ ಶಿಕ್ಷಣ ಕ್ಷೇತ್ರವನ್ನು ವಿಧಿವತ್ತಾಗಿ ನೂಕಲು ಆರಂಭಿಸಿದ್ದು ಕೆಲ ದಶಕಗಳ ಹಿಂದಿನಿಂದಲೇ ಎಂಬುದು ನಮಗೆ ಅರಿವಿದ್ದರೂ ಅದನ್ನು ಪರಿಣಾಮಕಾರಿಯಾಗಿ ಬದಲಾಯಿಸುವ ಗೊಡವೆ ಆಡಳಿತವೂ ಸೇರಿದಂತೆಯಾರಿಗೂ ಬೇಡವಾದದ್ದು ಈ ದುರಂತಕ್ಕೆ ಕಾರಣ.ಈಗ ಹಿಂದಿರುಗಿ ಹೋಗಲಾರದಷ್ಟು ದೂರದ ದಾರಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಕ್ರಮಿಸಿಯಾಗಿದೆ.ಆದ್ದರಿಂದ ಆರಂಭದಲ್ಲಿ ಹೇಳಿದ ಸೂತ್ರಗಳಿಗೆ ಪರ್ಯಾಯವಾಗಿ ಸೂತ್ರಗಳನ್ನು ನಾವು ಸಿದ್ಧಪಡಿಸಬೇಕು.ಅವು ಜ್ಞಾನ ಹಾಗೂ ಗುರುವನ್ನು ಒಳಗೊಂಡಂತೆ ಇರಬೇಕು.ಶಿಕ್ಷಣದ ಮೂಲ ಉದ್ದೇಶ ಜ್ಞಾನವೇ ಹೊರತು ಉದ್ಯೋಗವಲ್ಲ. ಆ ಜ್ಞಾನ ಗುರುಮುಖೇನ ಬರುವಂತಾಗಬೇಕು. ಮಾತ್ರವಲ್ಲದೇ ಗುರುವೂ ಕೂಡ ತನ್ನ ಸ್ಥಾನ ಹಾಗೂ ಹೊಣೆಗೆ ಬದ್ಧತೆಯನ್ನು ಹೊಂದುವಂತಿರಬೇಕು.ಈ ಮಾತನ್ನು ಕ್ಲಾಸ್‌ರೂಂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೇಳಬಹುದು.ಆದರೆಇಂದು ಶಿಕ್ಷಣ ಈ ಕ್ಲಾಸರೂಂ ಗೊಡವೆಯನ್ನು ದಾಟಿ ಅಂತರ್ಜಾಲದ  ಮೂಲಕ ಯಥೇಚ್ಛವಾಗಿ ದೊರೆಯುತ್ತಿದೆ. ಇಲ್ಲಿ ಗುರು-ಶಿಷ್ಯ ಪರಂಪರೆಗಿಂತ ನೀಡಲ್ಪಡುವ ಸಮಯ ಹಾಗೂ ಜ್ಞಾನಾಧಾರಿತ ವ್ಯಾವಹಾರಿಕ ಹಾಗೂ ಕೇವಲ ಲಾಭಾಧಾರಿತ ಶಿಕ್ಷಣಕ್ಕೆ ಮಾತ್ರ ಒತ್ತು ನೀಡಲಾಗಿದೆ.ಒಟ್ಟಿನಲ್ಲಿ ಶಿಕ್ಷಣ ಎಂದರೆ ಒಳ್ಳೆಯ ಸಂಬಳ ತರುವ ಉದ್ಯೋಗಕ್ಕೆ ರಹದಾರಿ ಎಂಬ ಸಿದ್ಧಸೂತ್ರ ಇಂದು ಪ್ರಚಲಿತದಲ್ಲಿರುವುದು ದಿಟ. ಮೊಗೆದಷ್ಟೂದೊರೆಯುವ ಮಾಹಿತಿಯ ಮಹಾಪೂರದ ಇಂದಿನ ದಿನಗಳಲ್ಲಿ ಒನ್‌ಟುಒನ್‌ ಟೀಚಿಂಗ್ ಬಹುತೇಕವಾಗಿ ನಶಿಸುತ್ತಿದೆ.ಆದರೆ ಶಿಕ್ಷಣ ಕ್ಷೇತ್ರದಲ್ಲಿ ತೆರೆದುಕೊಳ್ಳುತ್ತಿರುವ ಹೊಸ ಹೊಸ ದಾರಿಗಳು, ಅವಕಾಶಗಳು, ಇಂದಿನ ವಿದ್ಯಾರ್ಥಿಗಳ ಅಪ್ರತಿಮ ಸಾಮರ್ಥ್ಯ ಮೊದಲಾದವುಗಳನ್ನು ಖಂಡಿತ ಕಡೆಗಣಿಸುವಂತಿಲ್ಲ. ಶಿಕ್ಷಣಕ್ಕೆ ಇಂದು ಅಂತಾರಾಷ್ಟೀಯ ಆಯಾಮ ದೊರೆತಿದೆ.ಎಲ್ಲ ಸಂದರ್ಭಗಳಲ್ಲೂ ಬಂಡವಾಳಶಾಹಿ, ವಸಾಹತುಶಾಹಿ ದಾಳಿಯನ್ನು ತೀವ್ರವಾಗಿ   ಖಂಡಿಸುವ ನಾವು ಈ ಹೊಸ ಶಿಕ್ಷಣ ಆಯಾಮಕ್ಕೆ ಮಾತ್ರ ಬಂಡವಾಳಶಾಹಿಯೇ ಕಾರಣ ಎಂಬುದನ್ನೂ ಮರೆಯಬಾರದು. ಉತ್ತಮ ದರ್ಜೆಯ ಹಾಗೂ ವಿದೇಶದಲ್ಲಿ ಶಿಕ್ಷಣ ಉಳ್ಳವರಿಗೆ ಮಾತ್ರ ನಿಲುಕುತ್ತಿದ್ದ ಕಾಲ ಈಗ ಇಲ್ಲವಾಗಿದೆ.ಪ್ರತಿಭೆಗೆ ಸಲ್ಲಬೇಕಾದ ಪುರಸ್ಕಾರ ಸಲ್ಲುವ ಅವಕಾಶಗಳನ್ನೂ ಈ ಬಂಡವಾಳಶಾಹಿಯೇ ತೆರೆದಿದೆ.ಇದು ಸಧ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕಾಣ ಸಿಗುವ ಧನಾತ್ಮಕಗುಣ.ಅಂದ ಮಾತ್ರಕ್ಕೆ ವಿದೇಶೀ ಶಿಕ್ಷಣವೇ ಉನ್ನತ ಗುಣಮಟ್ಟದ್ದು ಎಂದಂತೂ ಅಲ್ಲ. ಭಾರತದಲ್ಲೂ ಇಂದು ಉತ್ಕೃಷ್ಟ ಮಟ್ಟದ ಶಿಕ್ಷಣ ನೀಡುವ ಅನೇಕ ಸಂಸ್ಥೆಗಳಿವೆ. ಮಾತು ಬಂದು ನಿಲ್ಲುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೇ.ಗುರು ಮುಖ್ಯವಲ್ಲದ ಬದಲಾದ ಶಿಕ್ಷಣ ಸ್ವರೂಪದ ವಾಸ್ತವತೆಯನ್ನು ಒಪ್ಪಿಕೊಳ್ಳುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಅಗತ್ಯ ಹಾಗೂ ಅನಿವಾರ್ಯ ಕೂಡ. ***********************************

ಗುರುವಿನ ಗರಿಮೆ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ         ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ ನನಗೆ ಒಂದೇ ಸಮನೆ ಯೋಚನೆ ಪ್ರಾರಂಭವಾಯಿತು. ಈ ಪ್ರಕಾಶಣ್ಣ ಎಲ್ಲಿಂದ ಪುಸ್ತಕ ಕಳಿಸ್ತಾರೆ? ಕ್ಯಾಲಿಪೋರ್ನಿಯಾದಿಂದ ಕಳಿಸಿದರೆ ನನಗೆ ಎಷ್ಟು ದಿನಕ್ಕೆ ಬಂದು ತಲುಪಬಹುದು? ಒಂದು ಕ್ಷಣ ಯೋಚನೆಯಾಯಿತಾದರೂ ನಂತರ ನಾನು ಯಾವಾಗಲೂ ಹೇಳಿಕೊಳ್ಳುವಂತೆ ‘ಮುಂದಿನ ಜನ್ಮದಲ್ಲಿ ಸಿಗಬಹುದು ಬಿಡು,’ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡೆ. ಆದರೆ ಈ ಮಾತುಕತೆ ನಡೆದು ನಾಲ್ಕನೇ ದಿನಕ್ಕೆ ನಾನು ಮನೆ ತಲುಪುವ ಹೊತ್ತಿಗೆ ಮನೆಯ ಮುಂದಿನ ಟಿಪಾಯಿಯ ಮೇಲೆ  ನನ್ನ ಖುಷಿ ಹೆಚ್ಚಿಸುವಂತೆ ಈ ಪುಸ್ತಕ ಕುಳಿತಿತ್ತು. ನನಗೆ ಅಚ್ಚಿರಿಯಾಗುವಂತೆ ನಾನು ಹೇಳಿದಂತೆ ಮುಂದಿನ ಜನ್ಮಕ್ಕೂ ಈ ಕಥೆಗೂ ತೀರಾ ಸಾಮ್ಯವಿದೆ.     ಇಡೀ ಕಥೆಯು ಅನಿವಾಸಿ ಭಾರತೀಯರ ಸುತ್ತ ಸುತ್ತುತ್ತ ಹೋಗುತ್ತದೆ. ಇಲ್ಲಿ ಕಥೆ ಹೇಳುವ ಪ್ರಥಮ ಪುರುಷ ಕಥೆಯನ್ನು ಕಥೆಯಾಗಿಸಲು ಒಂದು ವೇದಿಕೆ ಅಷ್ಟೆ. ಆದರೆ ಇಡೀ ಕಥೆ ನಮ್ಮನ್ನು ನಮ್ಮದೇ ಕಾಲಚಕ್ರದ ನಡುವಲ್ಲಿ ಕುಳ್ಳಿರಿಸಿ ಸುತ್ತುವಂತೆ ಮಾಡುತ್ತದೆ. ಯಾಕೆಂದರೆ ಘಟನೆ ನಡೆಯುವುದು ಅಮೇರಿಕಾದಲ್ಲೇ ಆದರೂ  ಕಾದಂಬರಿಕಾರರೇ ಒಂದು ಕಡೆ ಬಳಸಿರುವಂತೆ  ನಮ್ಮನ್ನು ಅರ್ಧ ಭೂಗೋಳ ಸುತ್ತಿಸಿ ಅಮೇರಿಕಾಕ್ಕೆ ಕರೆದೊಯ್ಯುವುದು ನಮ್ಮದೇ ಸುತ್ತಮುತ್ತಲಿನ ಪಾತ್ರಗಳು. ಕೇವಲ ಏಳೆಂಟು ಕಿ.ಮಿ ದೂರವಿರುವ ನಮ್ಮ ಪಾಲಿಗೆ ಪರಿಚಿತವೆಂದರೆ ಪರಿಚಿತವಲ್ಲದ, ಏನೂ ತಿಳಿಯದು ಎಂದು ಕೈ ಚೆಲ್ಲಿದರೂ ಯಾರೂ ನಂಬದ ಗೋಕರ್ಣದ ಪಿರ್ಕಿಬಾಬಾ ಎನ್ನುವವ ಹೇಳಿದ್ದ ಎನ್ನುವ ವಾಕ್ಯದಿಂದಲೇ ಪ್ರಾರಂಭವಾಗುತ್ತದೆ. ‘ಬದುಕಿದವರು ಸಾಯಲಾರರು, ಸಾಯುವವರು ಬದುಕಲಾರರು.’ ಎನ್ನುವ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕಾದಂಬರಿಯನ್ನು ತನ್ನೊಳಗೆ ನಿಗೂಢವಾಗಿ ಬಚ್ಚಿಟ್ಟುಕೊಂಡಿದೆಯೇನೋ ಎಂಬಂತೆ ತೋರುತ್ತದೆ. ಅಂಕೋಲಾದ ಬಸ್ ಸ್ಟಾಂಡಿನಲ್ಲಿ ಯಾವಾಗಲೂ ಒಬ್ಬ ಹುಚ್ಚ ಇರುತ್ತಿದ್ದ. ನಾಕಾಣಿ ಕೊಡಾ… ಎನ್ನುತ್ತ ಬೇಡಲು ಬರುವ ಅವನಿಗೆ ನೀವು ನೂರು ರೂಪಾಯಿ ನೀಡಿದರೂ ತಿರಸ್ಕರಿಸಿ ಬಿಡುತ್ತಿದ್ದ. ಆತ ಕೇಳುವುದು ಕೇವಲ ನಾಲ್ಕಾಣೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಅದು ಅವನಿಗೆ ಅಪಥ್ಯ. ಅದನ್ನು ನೋಡಿದಾಗಲೆಲ್ಲ ನಮಗೆ ತಮಾಷೆ. ನಾನು ಮತ್ತು ಗೆಳತಿ ರಾಜಶ್ರೀ ಹತ್ತು ರೂಪಾಯಿಯ ನೋಟು ಹಿಡಿದು, ‘ಹಿಡಿ ತಕ್ಕಾ. ಮಜಾ ಮಾಡ್…’ ಎನ್ನುತ್ತಿದ್ದರೆ ಆತ ಅದೇನೋ ವಿಷಸರ್ಪ ಎಂಬಂತೆ ಹತ್ತು ರೂಪಾಯಿಯ ನೋಟನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ನಮಗೋ ಹತ್ತು ರೂಪಾಯಿಯನ್ನು ತಿರಸ್ಕರಿಸಿ ‘ನಾಕಾಣಿ ಕುಡಾ..’ ಎನ್ನುವ ಅವನು ಕೇವಲ ಹುಚ್ಚನಾಗಿ ಅಲ್ಲ, ಮಹಾ ಪಿರ್ಕಿಯಾಗಿ ಕಾಣುತ್ತಿದ್ದ. ನಂತರದ ದಿನಗಳಲ್ಲಿ ಅದೆಷ್ಟೋ ಸಲ ಯೋಚಿಸಿದ್ದೇನೆ. ಬದುಕಿಗೆ ಸಾಕಾಗುವ ನಾಲ್ಕಾಣೆಯನ್ನು ಬಿಟ್ಟು ನಾವು ನಮಗೆ ಬೇಕಿಲ್ಲದ ಹತ್ತು ರೂಪಾಯಿಯ ಹಿಂದೆ ಓಡುತ್ತಿದ್ದೇವೇನೋ ಎಂದು. ಇಲ್ಲಿನ ಕಥೆಯೂ ಇದಕ್ಕೆ ಅನುಗುಣವಾಗಿಯೇ ಇದೆ.     ಬದುಕಿನಲ್ಲಿ ಖುಷಿಯಾಗಿರುವುದಕ್ಕೆ ನಮಗೇನು ಬೇಕು? ಎಷ್ಟು ಹಣ ಬೇಕು? ಎಂತಹ ಅಧಿಕಾರ ಬೇಕು?  ಅಥವಾ ಎಂತಹ ಉದ್ಯೋಗ ಬೇಕು? ಇದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಈ ವರ್ಷದ ಎಸ್.ಎಸ್.ಎಲ್.ಸಿ ಮುಗಿಸಿ ಮುಂದಿನ ಓದಿಗೆ ಹತ್ತನೇ ತರಗತಿಯ ವರ್ಗಾವಣೆ ಪತ್ರ ಪಡೆಯಲು ಬಂದಿದ್ದ ಹುಡುಗನೊಬ್ಬನನ್ನು ‘ಮುಂದೆ ಏನು ಮಾಡ್ತೀಯಪ್ಪಾ’ ಎಂದು ಸಹಜವಾಗಿ ಎಲ್ಲರನ್ನೂ ಕೇಳುವಂತೆಯೇ ಪ್ರಶ್ನಿಸಿದೆವು. ಆತ ಕೂಡ ಅದೊಂದು ಸಹಜ ವಿಷಯ ಎಂಬಂತೆ ‘ಪಿಯುಸಿ ಮುಗಿದ ಕೂಡಲೇ ಗಲ್ಫ್‌ಗೆ ಹೋಗಿ ಬಿಡ್ತೇನೆ ಟೀಚರ್, ಅಲ್ಲಿ ಹೋದರೆ ಜಾಸ್ತಿ ದುಡಿದು, ಹಣ ಸಂಪಾದನೆ ಮಾಡಬಹುದು.’ ಎಂದ. ಯಾಕೆಂದರೆ ಅವನ ಮನೆಯಲ್ಲಿ ಈಗಾಗಲೆ ಬಹಳಷ್ಟು ಜನ ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ಹೋಗಿದ್ದಾರೆ. ಪಿಯುಸಿ ಮುಗಿಸಿದ ತಕ್ಷಣವೇ ಒಂದು ಪಾಸ್‌ಪೋರ್ಟ್ ಮಾಡಿಸಿ, ವೀಸಾ ಮಾಡಿಕೊಂಡು ಹೊರಟು ಬಿಡುವ ಅದೆಷ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಹಾಗಾದರೆ ಭಾರತಕ್ಕಿಂತ ಅಲ್ಲಿ ಅವರ ಜೀವನಮಟ್ಟ ಒಳ್ಳೆಯದಾಗಿರುತ್ತದೆಯೇ? ಅಥವಾ ಭಾರತಕ್ಕಿಂತ ಸುಖೀ ಜೀವನ ನಡೆಸಲು ಸಾಧ್ಯವೇ? ಹಾಗೆಂದು ನಿಖರವಾಗಿ ಹೇಳಲು ಬರುವುದೇ ಇಲ್ಲ. ಇಲ್ಲಿ ಯಾವ್ಯಾವುದೋ ಕನಸನ್ನು ಇಟ್ಟುಕೊಂಡು ಹೋದವರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ, ಕಸ ಬಳಿಯಲೋ ಅಥವಾ ಅದಕ್ಕಿಂತ ಕನಿಷ್ಟ ಕೆಲಸಗಳಿಗೆ ನೇಮಕವಾದ ವಿಷಯ ಊರಿನ ಬಾಯಿಂದ ನುಣುಚಿಕೊಳ್ಳುವುದಿಲ್ಲ. ಆದರೆ ಮೂರು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿದಾಗ ಮಾತ್ರ ಅವರಿಗೆ ರಾಜ ಮರ್ಯಾದೆ ದೊರಕುತ್ತದೆ. ಅಂತೂ ಓದಿದಾಗ ಈ ಎಲ್ಲಾ ವಿಷಯಗಳೂ ಕಣ್ಣಿಗೆ ಕಟ್ಟುತ್ತವೆ. ಅಮೇರಿಕಾದಂತಹ ದೇಶಗಳಲ್ಲಿ ನಮ್ಮ ವಿದ್ಯೆಯನ್ನು ಅಡವಿಟ್ಟುಕೊಳ್ಳುವ ಪ್ರಕ್ರಿಯೆಯ ಚಂದದ ಚಿತ್ರಣವಿದೆ.                    ಇಲ್ಲಿ ಪ್ರಥಮ ಪುರುಷದಲ್ಲಿ ಬರುವ ನಿರೂಪಣೆಗಾರ ಕಾದಂಬರಿಗೆ ಒಂದು ಕುತೂಹಲದ ಪ್ರವೇಶಿಕೆಯನ್ನು ಹಾಕಿಕೊಡುತ್ತಾನೆ. ಅಲ್ಲೇ ಸನಿಹದಲ್ಲಿರುವ ಭಾರತೀಯ ಮೂಲದ ಕೌಶಿಕ್ ಕೃಷ್ಣ ಎನ್ನುವ ಜೀವ-ಭೌತ ವಿಜ್ಞಾನಿಯ ಹೆಂಡತಿ ಆಡ್ರಿಯಾನಾಳ ಆತ್ಮಹತ್ಯೆಯ ಕುರಿತಾಗಿ ಪೇಪರ್‌ನಲ್ಲಿ ಬಂದ ವಿಷಯವನ್ನು ಆಧರಿಸಿ ಲೇಖನ ಬರೆದು, ಅದಕ್ಕೆ ಒಬ್ಬ ಭಾರತೀಯ ಮೂಲದವನೇ ಆದ ಇನ್ನೊಬ್ಬನ ತೀಕ್ಷ್ಣ ಪ್ರತಿಕ್ರಿಯೆ ಬಂದಾಗಲೇ ಅರಿವಾಗುವುದು ಇದು ಸುಲಭದಲ್ಲಿ ಅರಿವಾಗದ ಚಕ್ರವ್ಯೂಹ ಎಂಬುದು. ಇಲ್ಲಿ ಪ್ರಕಾಶ ನಾಯಕರು ಬಳಸಿರುವ ಮಾತು ಮತ್ತು ಭಾಷೆಯನ್ನು ಗಮನಿಸಬೇಕು. ಒಬ್ಬ ನುರಿತ ತತ್ವಶಾಸ್ತ್ರ ಪ್ರಾಧ್ಯಾಪಕನು ತರಗತಿ ತೆಗೆದುಕೊಂಡಂತಿದೆ. ತನ್ನ ಸಹೋದ್ಯೋಗಿ ವಿವಿಯನ್‌ನ ಬಾಯಿಂದ ಆಡಿಸುವ ಈ ಮಾತುಗಳನ್ನೇ ಕೇಳಿ. ಹಾಗೆ ನೋಡಿದರೆ ಎಲ್ಲಾ ಕೊಲೆಗಳೂ ಆತ್ಮಹತ್ಯೆಗಳೇ. ತನ್ನ ಅಸ್ತಿತ್ವದಿಂದ ಬೇರೆಯವರಿಗೆ ಸಹಿಸಲಾಗದ ನಷ್ಟವೋ ಅಥವಾ ತನ್ನ ಸಾವಿನಿಂದ ಕಡೆಗಣಿಸಲಾಗದ ಲಾಭವೋ ಆಗುವಂತೆ ಮಾಡುವಲ್ಲಿ ಕೊಲೆಗೀಡಾಗುವವನ ಜವಾಬ್ಧಾರಿಯೇನು ಕಡಿಮೆಯೇ? ತನ್ನ ಸಾವಿನ ನಂತರ ಜೀವಂತ ಮನುಷ್ಯನನ್ನು ಅಪಮಾನದ ಬೇಗೆ ಅಥವಾ ಪಶ್ಚಾತ್ತಾಪದ ಉರಿಯಲ್ಲಿ ಬೇಯುವಂತೆ ಮಾಡುವುದು ಕೊಲೆಗಿಂತ ಹೇಯ. ಒಂದು ಕೊಲೆಯನ್ನು ಅಥವಾ ಆತ್ಮಹತ್ಯೆಯನ್ನು ಹೀಗೂ ನೋಡಬಹುದು ಎನ್ನುತ್ತದೆ. ಕಾದಂಬರಿಯ ತುಂಬ ಇಂತಹ ತರ್ಕ ವಿತರ್ಕಗಳು ತನ್ನ ಇರುವನ್ನು ಸಾಧಿಸುತ್ತಲೇ ಹೋಗುತ್ತದೆ.    ಕೌಶಿಕ್ ಕೃಷ್ಣ ತಾನಾಗಿಯೇ ಸಾವನ್ನು ತಂದುಕೊಳ್ಳುವ ಆ ಮೂಲಕ ಆತ್ಮವನ್ನು ಹಿಡಿದಿಟ್ಟುಕೊಂಡು  ಅದನ್ನು ಇನ್ನೊಂದು ಶರೀರಕ್ಕೆ ರವಾನಿಸುವ ಹೊಸ ಪ್ರಯೋಗವನ್ನು ಮಾಡುವ ನಿಟ್ಟಿನಲ್ಲಿ ಪೆಗಾಸಿಸ್ ಎನ್ನುವ ಯಂತ್ರವನ್ನು ಕಂಡು ಹಿಡಿಯುವುದು, ಅದಕ್ಕೆ ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದಲೇ ನೋಡುತ್ತ, ಈ ತರಹದ ಆಧ್ಯಾತ್ಮಿಕ ವಿಷಯಗಳನ್ನು ಒಪ್ಪದ ಅಭಿಜಿತ್ ಕಿಮಾನಿ ಹಣ ಹೂಡುವುದು ಎಲ್ಲವೂ ವಿಚಿತ್ರವೇ. ಅವನ ಆಫೀಸಿನಲ್ಲಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡದ, ಅಲೆಮಾರಿಯಾಗಿಯೇ ಬದುಕಬೇಕೆನ್ನುತ್ತ ಕೇವಲ ವಾರ, ತಿಂಗಳುಗಳ ಲೆಕ್ಕದಲ್ಲಿ ಕೆಲಸ ಮಾಡುವ ದಿಗಂಬರ ಸೇರಿಕೊಳ್ಳುವುದೂ ಕೂಡ. ಇಲ್ಲಿಯೇ ಅಮೇರಿಕಾದಲ್ಲಿರುವ ಭಾರತೀಯರ ಜೀವನದ ಅನಾವರಣವಾಗುತ್ತದೆ. ‘ಅಮೇರಿಕಾದಲ್ಲಿದ್ದಾನೆ. ಇಂಜಿನಿಯರ್.’ ಎಂದುಕೊಳ್ಳುತ್ತ ಇಲ್ಲಿಯವರು ಮೆರೆಸುವಾಗ ಅಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವುದೂ ಇದೆ. ಮಕ್ಕಳನ್ನು ಓದಿಸಿ ಪರದೇಶಿಗಳನ್ನಾಗಿ ಮಾಡುವ ತಂದೆ ತಾಯಿಯರು ಇದನ್ನು ಒಮ್ಮೆಯಾದರೂ ಓದಬೇಕು ಎಂದೆನ್ನಿಸುತ್ತದೆ.    ಕೌಶಿಕ್ ಕೃಷ್ಣನ ಪ್ರಯೋಗಕ್ಕಾಗಿ ಹಣ ಹಾಗೂ ಪ್ರಾಜೆಕ್ಟ್ ಮಾಡಲು ಸಮಯ ಹಾಗೂ ಸ್ಥಳವನ್ನು ಮೀಸಲಿಟ್ಟ ಅಭಿಜಿತ್ ಕಿಮಾನಿ ನಂತರ ಇಡೀ ಪ್ರಾಜೆಕ್ಟ್‌ನ್ನೇ ಮಾರಿ ಬಿಡುತ್ತಾನೆ. ಆದರೆ ಕೌಶಿಕ್ ಕೃಷ್ಣನಿಗೆ ಅದೇನೂ ಒಪ್ಪಿಗೆಯಾದ ಕೆಲಸವಲ್ಲ. ಹೀಗಾಗಿ ಆತ ಪ್ರಯೋಗವನ್ನು ತನ್ನ ಮನೆಗೆ  ಸ್ಥಳಾಂತರಿಸಿಕೊಳ್ಳುತ್ತಾನೆ. ಅಲ್ಲಿ ಆತನೊಡನೆ ಕೆಲಸ ಮಾಡುವ ಉತ್ಸಾಹಿ ಯುವಕ ಅನ್ಸೆಲ್ಮೋ ಈ ಕೆಲಸಕ್ಕೆ ಸಹಕಾರ ನೀಡುತ್ತಾನೆ. ಆತನಿಗೆ ಕೌಶಿಕ್ ಕೃಷ್ಣನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇಲ್ಲದಿದ್ದರೂ ಆತ ಮತ್ತು ಆತನ ಜೊತೆಗೇ ವಾಸಿಸುತ್ತಿದ್ದ ಪ್ರೇಯಸಿ ಎಂಜಲಿತೋ ಇಡೀ ಪ್ರಯೋಗದ ಯಶಸ್ಸಿಗೆ ಕಂಕಣ ಬದ್ಧರಾಗುತ್ತಾರೆ. ಕೌಶಿಕ್ ಕೃಷ್ಣನ ಹೆಂಡತಿ ಎಡ್ರಿಯಾನ ಒಬ್ಬ ಅತ್ಯುತ್ತಮ ಚಿತ್ರಕಾರಳು. ಹಾಗೆ ನೋಡಿದರೆ ಕೌಶಿಕ್ ಕೃಷ್ಣ ಅಭಿಜಿತ್ ಕಿಮಾನಿಗೆ ಪರಿಚಯವಾದ್ದೇ ಇಂತಹ ಚಿತ್ರಕಲಾ ಪ್ರದರ್ಶನದಲ್ಲಿ. ಕೌಶಿಕ್ ಕೃಷ್ಣ ಹಾಗೂ ಆತನ ಹೆಂಡತಿ ಎಡ್ರಿಯಾನಾ ಇಬ್ಬರೂ ಸೇರಿ ಚಿತ್ರಿಸಿದ್ದ ಪೇಂಟಿಂಗ್‌ಗಳು ಹೊಸದೊಂದು ಸಂಚಲನವನ್ನೇ ಅಭಿಜಿತ ಕಿಮಾನಿಯಲ್ಲಿ ಮೂಡಿಸಿದ್ದವು. ಪ್ರತ್ಯೇಕ ಆಲೋಚನೆ, ಪ್ರತ್ಯೇಕ ನಂಬಿಕೆಗಳನ್ನು ಹೊಂದಿರುಹಿಬ್ಬರು ಜೊತೆಯಾಗಿ ಒಂದು ಕೆಲಸ ಮಾಡುವುದೆಂದರೆ ಅದು ಅದ್ಭುತವೇ ಸರಿ. ಅದರಲ್ಲೂ ಚಿತ್ರಕಲೆಯಂತಹ ಸೂಕ್ಷ್ಮ ಸಂವೇದನೆ ಬೇಡುವ ವಿಭಾಗದಲ್ಲಿ. ಆದರೆ ಕೌಶಿಕ್ ಕೃಷ್ಣ ಹಾಗೂ ಎಡ್ರಿಯಾನಾ ಚಿತ್ರಗಳು ಅದ್ವಿತೀಯವಾಗಿದ್ದವು ಮತ್ತು ಅಲ್ಲಿಯೂ ಕೌಶಿಕ್ ಕೃಷ್ಣ ಆತ್ಮ ಹಾಗೂ ದೇಹದ ಸಂಗಾತವನ್ನು, ಆತ್ಮವನ್ನು ಸಂರಕ್ಷಿಸಿ ಬೇರೆಡೆಗೆ ಅದನ್ನು ಜೀವಂತ ಗೊಳಸುವ ಕುರಿತಾಗಿಯೇ ತನ್ನ ಬಣ್ಣವನ್ನು ಬಳಸುತ್ತಿದ್ದುದು ವಿಚಿತ್ರ.   ಕೊನೆಗೆ ಅಭಿಜಿತ್ ಕಿಮಾನಿಯ ಇಂಡಸ್ ಕಂಪನಿಯಿಂದ ಫಿನಿಕ್ಸ್ ಎನ್ನುವ ಆತ್ಮವನ್ನು ಕಾಪಿಟ್ಟು ಬೇರೆ ದೇಹಕ್ಕೆ ಸ್ಥಳಾಂತರಿಸುವ ಯೋಜನೆಯಿಂದಾಗಿ ಅಭಿಜಿತ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ, ಆತನ ತಂದೆ ಇನ್ನೆಂದೂ ಅಮೇರಿಕಾಕ್ಕೆ ಬರದಿರುವ ತೀರ್ಮಾನ ಕೈಗೊಂಡು ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೊನೆಯಲ್ಲಿ ಅನ್ಸೆಲ್ಲೋ ಹೇಳುವ ಸತ್ಯ ಬೆಚ್ಚಿ ಬೀಳಿಸುತ್ತದೆ. ಅದನ್ನು ಬೆಂಬಲಿಸುವಂತೆ ಸ್ವತಃ ಕೌಶಿಕ್ ಕೃಷ್ಣನೇ ತನ್ನ ಪತ್ನಿ ಎಡ್ರಿಯಾನಾಳ ಆತ್ಮಹತ್ಯೆ ಯೋಜಿತವಾದ್ದು ಹಾಗೂ ಪೆಗಾಸಿಸ್ ಯಂತ್ರ ಅವಳ ಆತ್ಮವನ್ನು ಅನೆಲ್ಲೋನ ಪ್ರೇಯಸಿ ಎಂಜಲಿತೋಳ ದೇಹಕ್ಕೆ ಯಶಸ್ವಿಯಾಗಿ ಸೇರಿಸಿದೆಯೆಂದು ಹೇಳುತ್ತಾನೆ. ಇದಕ್ಕೂ ಮೊದಲೇ ಬರುವ ಇಂಡಸ್ ಕಂಪನಿಯ ಸ್ವಾಗತಕಾರಿಣಿಯಾಗಿರುವ ಸೋಫಿಯಾಳ ನಾಯಿ ಅಲೆಕ್ ಒಂದು ದಿನ ಹಠಾತ್ ಆಗಿ ಯಾವುದೇ ಸೂಚನೆ ನೀಡದೆ ಸಾವಿಗೀಡಾಗಿದ್ದು ಮತ್ತು ಪೆಗಾಸಿಸ್ ಯಂತ್ರದ ಕಾರ್‍ಯ ವೈಖರಿ ತಿಳಿಯಲು ಹೋಗಿದ್ದ ಗಿಲ್ಟನ್ ಸಡನ್ನಾಗಿ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಈ ಯಂತ್ರದ ನಿಜಾಯತಿಯನ್ನು ಸಾಬೀತುಪಡಿಸುತ್ತವೆಯೋ ಎನ್ನುವಂತಿದ್ದರೂ ಅದೇ ಫಿನಿಕ್ಸ್ ಪ್ರಾಜೆಕ್ಟಿಗೆ ಡಾಟಾ ಸಂಗ್ರಹಿಸಿ ತರ್ಕಕ್ಕೆ ಹಚ್ಚುವ ದಿಗಂಬರ ಕೊನೆಯವರೆಗೂ ನಂಬುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.      ಕಾದಂಬರಿಯ ಒಟ್ಟೂ ಓಟ ಓದುಗನನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗಿ ಕೊನೆಯವರೆಗೂ ಪುಸ್ತಕವನ್ನು ಕೆಳಗಿಡಲಾಗದಂಥಹ ಒತ್ತಡವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ. ಇಲ್ಲಿನ ಪ್ರತಿ ಮಾತು, ಪ್ರತಿ ನಡತೆಯೂ ನಮ್ಮೊಳಗೇ ಹಾಸು ಹೊಕ್ಕಾಗಿರುವ ಮಾತುಗಳೇನೋ ಎಂದುಕೊಳ್ಳುವಂತೆ ಅಥವಾ ನಮ್ಮೊಡನೆ ವ್ಯವಹರಿಸಿದ್ದ ಯಾರದ್ದಾದರೂ ಮಾತನ್ನು ನೆನಪಿಗೆ ತರುತ್ತದೆ. ಇಲ್ಲಿ ಪೊಕ್ಕೆ ಪಾಂಡು ಹೇಳುವಂತೆ ‘ಅರ್ಧ ಭೂಗೋಲ ದಾಟಿದರೂ ಕಾಸೀಮನ ದೋಸ್ತಿ ತಪ್ಪಲಿಲ್ಲ’ ಎನ್ನುವ ಮಾತು, ‘ಅಣ್ಣ ಹೇಳ್ತೆ ಕೇಳ್’ ಎಂದು ಪದೇ ಪದೇ ಹೇಳುವ ಇದೇ ಪೊಕ್ಕೆಪಾಂಡು ಇಲ್ಲೆಲ್ಲೋ ನಮ್ಮ ಪಕ್ಕದಲ್ಲೇ ಇದ್ದವರು ಎನ್ನುವ ಭಾವ ಹುಟ್ಟಿಸುತ್ತದೆ. ಯಾಕೆಂದರೆ ತನ್ನನ್ನೇ ತಾನು ಅಣ್ಣ ಎಂದು ಕರೆದುಕೊಳ್ಳುವವರನ್ನು ನಮ್ಮೂರ ಕಡೆ ಪೊಕ್ಕೆ ಎನ್ನುವುದು ಸಹಜವಾದ ಮಾತು. ಕಿಮಾನಿ ಎನ್ನುವ ಸನಿಹದ ಊರಿನ ಹೆಸರೂ ಕೂಡ ಒಂದು ರೀತಿಯ ತಾದ್ಯಾತ್ಮವನ್ನು ಕಾದಂಬರಿಗೆ ನೀಡಿಬಿಡುತ್ತದೆ.     ಇಷ್ಟೆಲ್ಲ ಆದನಂತರ ಮತ್ತೊಂದು ಹೇಳಲೇಬೇಕಾದ ಮಾತಿದೆ. ಇಲ್ಲಿ ಬರುವ ವಿವರಣೆಗಳು ನಮಗೆ ಇಂಚಿಂಚಾಗಿ ಆ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಅಂಜನಾ ಬರೆಯುತ್ತಾರೆ ಜಗಲಿಯೆನ್ನುವ ಮೊದಲಪ್ರೇಮ ಸೂರ್ಯ ಮೂಡುವ ಹೊತ್ತು ಬರಿಗಾಲಲ್ಲಿ ಒಮ್ಮೆ ಅಂಗಳಕ್ಕಿಳಿದು ನೋಡಿ. ಮಣ್ಣಿನೊಂದಿಗಿನ ಮೊದಲಪ್ರೇಮದ ಸ್ಪರ್ಶ ಅಂಗಾಲುಗಳನ್ನು ತಾಕಿ ಹೃದಯವನ್ನು ಸೋಕುತ್ತದೆ; ಬಾಗಿಲುಗಳಾಚೆ ಬಂದು ಸುರಿವ ಮಳೆಗೆ ಒಮ್ಮೆ ಮುಖವನ್ನೊಡ್ಡಿ ನೋಡಿ. ಮಳೆಯೊಂದಿಗಿನ ಮೊದಲಪ್ರೇಮದ ಸುಖ ಮುಂಗುರುಳನ್ನು ತೋಯಿಸಿ ಹನಿಹನಿಯಾಗಿ ನೆಲಕ್ಕಿಳಿಯುತ್ತದೆ; ಒಂದು ಏಕಾಂತದ ಸಂಜೆಯಲ್ಲಿ ಸದ್ದಿಲ್ಲದೆ ಅರಳುತ್ತಿರುವ ಜಾಜಿಯ ಮೊಗ್ಗುಗಳನ್ನು ಅಂಗೈಯಲ್ಲಿ ಹಿಡಿದು ನೋಡಿ. ಪರಿಮಳದೆಡೆಗಿನ ಮೊದಲಪ್ರೇಮದ ಭಾವ ಇಂದ್ರಿಯಗಳ ಹಂಗು ತೊರೆದು ಗಾಳಿಯೊಂದಿಗೆ ತೇಲಿ ಹಗುರಾಗುತ್ತದೆ. ಮೃದುವಾದ ಪುಟ್ಟಪುಟ್ಟ ಕಾಲುಗಳಿಗೆ ಅಮ್ಮ ತೊಡಿಸಿದ ಗೆಜ್ಜೆ, ದೀಪಾವಳಿಗೆಂದು ಅಪ್ಪ ಕೊಡಿಸಿದ ಉದ್ದತೋಳಿನ ಫ್ರಾಕು, ಶನಿವಾರದ ಕೊನೆಯ ಕ್ಲಾಸು ತಪ್ಪಿಸಿ ಹೊಟೆಲಿಗೆ ಹೋಗಿ ತಿಂದ ಮಸಾಲೆದೋಸೆ, ಸಿಟಿಬಸ್ಸಿನಲ್ಲಿ ಎದುರಾಗುತ್ತಿದ್ದ ಹುಡುಗನ ನೀಲಿಬಣ್ಣದ ಅಂಗಿ ಎಲ್ಲವೂ ಮೊದಲಪ್ರೇಮವೆನ್ನುವ ಸುಂದರ ಅನುಭೂತಿಯ ಭಾಗವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಅಕ್ಕನ ಮದುವೆಯಲ್ಲಿ ಮುಡಿದ ಮಲ್ಲಿಗೆಮಾಲೆಯಿಂದ ಹಿಡಿದು ಸಂಧ್ಯಾವಂದನೆಯ ಧೂಪದಾರತಿಯವರೆಗೂ ಮೊದಲಪ್ರೇಮದ ನರುಗಂಪು ನೆನಪಿನ ಜಗಲಿಯಲ್ಲಿ ತೇಲುತ್ತಲೇ ಇರುತ್ತದೆ.           ಈ ಜಗಲಿಯೆಡೆಗಿನ ನನ್ನ ಪ್ರೇಮವೂ ನಿನ್ನೆ-ಮೊನ್ನೆಯದಲ್ಲ. ಪಕ್ಕದಮನೆಯ ಪುಟ್ಟ ಮಗುವೊಂದು ಅಂಬೆಗಾಲಿಡುತ್ತ ಜಗಲಿಯ ಕಂಬಗಳನ್ನು ಸುತ್ತುವಾಗಲೆಲ್ಲ, ನನ್ನ ಬಾಲ್ಯವೂ ಹೀಗೆ ಸ್ವಚ್ಛಂದವಾಗಿ ಜಗಲಿಯ ಮೇಲೆ ಹರಡಿಕೊಂಡಿದ್ದ ಗಳಿಗೆಯನ್ನು ನೆನೆದು ಪುಳಕಗೊಳ್ಳುತ್ತೇನೆ; ನೆನಪುಗಳಿಗೆ ದಕ್ಕಿರದ ಅವೆಷ್ಟೋ ಸಂಗತಿಗಳು ವಾಸ್ತವದಲ್ಲಿ ಕಣ್ಣೆದುರೇ ಕುಣಿದಾಡುತ್ತ, ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ಅನುಭವಗಳಾಗಿ ಜಗಲಿಗಿಳಿಯುವ ವಿಸ್ಮಯಕ್ಕೆ ಚಕಿತಗೊಳ್ಳುತ್ತೇನೆ. ಹಾಗೆ ನಡೆದಾಡುವ ಅನುಭವಗಳ ಸ್ವರೂಪ ಕಾಲಕಾಲಕ್ಕೆ ಬದಲಾಗಿರಬಹುದಾದರೂ, ಅವುಗಳ ಸೌಂದರ್ಯ ಕಳೆಗುಂದಿದ್ದನ್ನು ಎಂದಿಗೂ ಕಂಡಿಲ್ಲ. ಜಗಲಿಯ ದಾಸ್ತಾನುಗಳ ಮಾಲೀಕನಂತಿರುವ ಮರದ ಟಿಪಾಯಿಯ ಮೇಲಿನ ದಿನಪತ್ರಿಕೆ-ವಾರಪತ್ರಿಕೆಗಳ ಜಾಗವನ್ನು ಮೊಬೈಲುಗಳು, ಟಿವಿ ರಿಮೋಟುಗಳು ಆಕ್ರಮಿಸಿಕೊಂಡಿರಬಹುದು; ಮಹಾರಾಜರ ಗತ್ತಿನಲ್ಲಿ ಕುಳಿತಿರುತ್ತಿದ್ದ ಆರಾಮಕುರ್ಚಿಗಳ ಜಾಗದಲ್ಲಿ ಅಂದದ ಮೈಕಟ್ಟಿನ ಸೋಫಾಸೆಟ್ಟುಗಳು ವಿರಾಜಿಸುತ್ತಿರಬಹುದು; ಲಾಟೀನುಗಳನ್ನು ಟ್ಯೂಬ್ ಲೈಟುಗಳು, ಮಣ್ಣಿನ ನೆಲವನ್ನು ಮಾರ್ಬಲ್ಲುಗಳು, ರೇಡಿಯೋಗಳನ್ನು ಲ್ಯಾಪ್ಟಾಪುಗಳು ರಿಪ್ಲೇಸ್ ಮಾಡಿರಬಹುದಾದರೂ, ಆ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಜಗಲಿಯೆಂದೂ ತನ್ನ ನೈಜತೆಯ ಖುಷಿಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲ ಬದಲಾವಣೆಗಳಿಗೂ ಭಯವಿಲ್ಲದೆ ತನ್ನನ್ನು ಒಡ್ಡಿಕೊಳ್ಳುವ ಜಗಲಿ ಮನೆಯೊಳಗಿಂದ ಹೊರಗೆ ಬಂದವರಿಗೊಂದು ಬಿಡುವಿನ ಸಡಗರ ಒದಗಿಸುತ್ತ, ಹೊರಗಿನಿಂದ ಒಳಬಂದವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತ ಒಳಗು-ಹೊರಗುಗಳ ಅನುಬಂಧವನ್ನು ಹಿಡಿದಿಡುವ ಬಂಧುವಿನಂತೆ ಭಾಸವಾಗುತ್ತದೆ.           ಎಲ್ಲ ಅನುಬಂಧಗಳ ಹುಟ್ಟು, ಬೆಳವಣಿಗೆಗಳು ಸಂಭವಿಸುವುದು ಜಗಲಿಯಲ್ಲಿಯೇ ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಆರಾಮಕುರ್ಚಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನ ಕಾಲನ್ನು ಹಿಡಿದುಕೊಂಡು ನಾನು ಮೊದಲಸಲ ನನ್ನ ಕಾಲುಗಳ ಮೇಲೆ ನಿಂತಿದ್ದಿರಬಹುದು; ದೊಡ್ಡಪ್ಪನ ಕಿರುಬೆರಳನ್ನು ಹಿಡಿದು ಜಗಲಿಯ ತುಂಬ ಓಡಾಡಿದ ಮೇಲೆಯೇ ಎತ್ತಿಡುವ ಹೆಜ್ಜೆಗಳಿಗೊಂದು ಧೈರ್ಯ ಬಂದಿರಬಹುದು; ಅದೇ ಜಗಲಿಯ ಕಂಬಗಳ ಸುತ್ತ ಕಟ್ಟಿಕೊಂಡ ಬಂಧನಗಳೇ ಜಗತ್ತನ್ನೆದುರಿಸುವ ಚೈತನ್ಯವನ್ನು ಒದಗಿಸಿರಬಹುದು. ಹೀಗೆ ಹೊರಗೆ ಎತ್ತಿಟ್ಟ ಪ್ರತಿ ಹೆಜ್ಜೆಯನ್ನೂ ಹಗುರಾಗಿಸಿಕೊಳ್ಳುವ ಪಾಠವೊಂದನ್ನು ಜಗಲಿ ಗುರುವಿನ ಜಾಗದಲ್ಲಿ ನಿಂತು ಕಲಿಸಿಕೊಡುತ್ತದೆ. ಆ ಕಲಿಕೆಯ ಭಾಗವಾಗಿ ನೆನಪುಗಳು, ಅನುಭವಗಳು, ಅನುಬಂಧಗಳೆಲ್ಲವೂ ಅವುಗಳ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ಜಗಲಿಯ ಬಾಗಿಲಿನಲ್ಲೊಂದು ರಂಗೋಲಿ ಒಮ್ಮೆ ಅಳಿದರೂ ಮತ್ತೆ ಕೈಗಂಟಿಕೊಳ್ಳುವ ಬದುಕಿನ ಚಿತ್ತಾರವಾಗಿ, ಅದರ ಮೇಲೊಂದು ಹೂವು ಬಾಡುವ ಸಂಗತಿಯನ್ನು ಸಹಜಕ್ರಿಯೆಯಾಗಿಸಿ ಮತ್ತೊಮ್ಮೆ ಅರಳುವ ಕನಸಾಗಿ, ಪಕ್ಕದಲ್ಲೊಂದು ನೀರಿನ ಗಿಂಡಿ ಆಗಾಗ ಬರಿದಾಗುತ್ತ ಮತ್ತೆ ತುಂಬಿಕೊಳ್ಳುವ ಪ್ರಕೃತಿಯಾಗಿ ಜಗಲಿಯ ಮೇಲೊಂದು ಸಹಜ-ಸುಂದರ ಬದುಕಿನ ಚಿತ್ರಣ ರೂಪುಗೊಳ್ಳುತ್ತದೆ. ಬಾಗಿಲ ಮೇಲೊಂದು ಅಜ್ಜನ ಭಾವಚಿತ್ರ ಕೊಲಾಜಿನಂತಹ ಜಗಲಿಯ ಬದುಕುಗಳನ್ನು ಸಹನೆಯಿಂದ ಕಾಯುತ್ತಿರುತ್ತದೆ. ಹೀಗೆ ಜಗಲಿಯ ಮೇಲೆ ದಿನ ಬೆಳಗಾದರೆ ತೆರೆದುಕೊಳ್ಳುವ ಚಿತ್ರಣವೇ ಬಯಲಿಗಿಳಿವ ಬದುಕುಗಳ ಬೆನ್ನಹಿಂದೆ ನಿಂತು, ಅಗತ್ಯ ಬಂದಾಗ ಆಚೀಚೆ ಚಲಿಸಿ ಬೆರಗಿನ ದರ್ಶನವನ್ನು ಮಾಡಿಸುತ್ತಿರುತ್ತದೆ.           ಈ ಜಗಲಿಯ ಬದುಕಿನೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಾಗಲೇ ಅದೊಂದು ಬೆರಗು ಎನ್ನುವ ಅರಿವು ಸಾಧ್ಯವಾದೀತು. ಶಾಲೆಗೆ ಹೋಗುವುದೊಂದು ಬೇಸರದ ಸಂಗತಿಯೆನ್ನಿಸಿದಾಗ ಜಗಲಿಯ ಮೂಲೆಯಲ್ಲಿ ಗೋಡೆಗೆ ಆತು ನಿಂತಿರುತ್ತಿದ್ದ ಕೇರಂ ಬೋರ್ಡು ಎಲ್ಲ ಬೇಸರಗಳನ್ನೂ ಹೋಗಲಾಡಿಸುತ್ತಿತ್ತು. ಸಂಜೆ ಶಾಲೆಯಿಂದ ಮನೆಗೆ ಹಾಜರಾಗುತ್ತಿದ್ದಂತೆಯೇ ಜಗಲಿಯ ಮೇಲೊಂದು ಕಂಬಳಿ ಹಾಸಿ, ಬೋರ್ಡಿನ ಮೇಲೆ ರಾಣಿಯನ್ನು ಪ್ರತಿಷ್ಠಾಪಿಸಿ ಆಟಕ್ಕೆ ಕುಳಿತರೆ ಪ್ರಪಂಚದ ಸಕಲ ಸಂತೋಷಗಳೂ ಜಗಲಿಗೆ ಹಾಜರಾಗುತ್ತಿದ್ದವು. ಗಣಿತದ ಮಾಸ್ತರು ಕಷ್ಟಪಟ್ಟು ಕಲಿಸಿದ ಲೆಕ್ಕಾಚಾರಗಳೆಲ್ಲ ಕಪ್ಪು-ಬಿಳಿ ಬಿಲ್ಲೆಗಳ ಮಧ್ಯದಲ್ಲಿ ಸಿಕ್ಕು ತಲೆಕೆಳಗಾಗಿ, ಮರುದಿನ ಮತ್ತೆ ಶಾಲೆಯ ಮೆಟ್ಟಿಲೇರಿದಾಗಲೇ ಲೆಕ್ಕಕ್ಕೆ ಸಿಗುತ್ತಿದ್ದವು. ಜಗಲಿಯ ಮೇಲಿನ ಮಕ್ಕಳ ಸಂಖ್ಯೆ ನಾಲ್ಕಕ್ಕಿಂತ ಜಾಸ್ತಿಯಾದಾಗ ರಾಣಿಯನ್ನು ಮರೆತು ಕತ್ತೆಯ ಸವಾರಿ ಶುರುವಾಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡಿರುತ್ತಿದ್ದ ಹಳೆಯ ಇಸ್ಪೀಟು ಕಟ್ಟುಗಳನ್ನು ಹೊಸದಾಗಿ ಜೋಡಿಸಿಕೊಂಡು ಕತ್ತೆಯಾಗುವ, ಕತ್ತೆಯಾಗಿಸಿ ಖುಷಿಪಡುವ ಆಟವನ್ನು ಕಲಿಸಿಕೊಟ್ಟವರ ನೆನಪಿಲ್ಲ. ಅದೊಂದು ಪರಂಪರಾನುಗತ ಸಂಪ್ರದಾಯವೆನ್ನುವಂತೆ ಕಲಿತು, ಕಿರಿಯರಿಗೂ ಕಲಿಸಿ, ಜಗಲಿಯನ್ನೇ ಶಾಲೆಯನ್ನಾಗಿಸಿಕೊಳ್ಳುತ್ತಿದ್ದ ಬಾಲ್ಯದ ನೆನಪುಗಳನ್ನೆಲ್ಲ ಜಗಲಿ ಜಾಗರೂಕತೆಯಿಂದ ಜೋಪಾನ ಮಾಡುತ್ತದೆ.           ನೆನಪುಗಳೆಲ್ಲ ಚದುರಿಹೋಗಿ ಬದುಕು ತಲ್ಲಣಿಸುವ ಸಮಯದಲ್ಲೂ ಜಗಲಿಯಲ್ಲಿ ದೊರೆಯುವ ನೆಮ್ಮದಿ ಶಬ್ದಗಳಾಚೆ ನಿಲ್ಲುವಂಥದ್ದು. ಹೊರಬಾಗಿಲಿನಲ್ಲಿ ಚಪ್ಪಲಿ ಕಳಚಿ ಜಗಲಿಯ ತಣ್ಣನೆಯ ಸ್ಪರ್ಶವನ್ನು ನಮ್ಮದಾಗಿಸಿಕೊಂಡ ಮರುಕ್ಷಣವೇ, ಎಲ್ಲ ತಲ್ಲಣಗಳನ್ನು ತಣಿಸುವ ಜೀವಶಕ್ತಿಯಾಗಿ ಜಗಲಿ ನಮ್ಮನ್ನಾವರಿಸಿಕೊಳ್ಳುತ್ತದೆ. ಅಕ್ಕನ ಮದುವೆಯಲ್ಲಿ ಜಗಲಿಯ ಮೇಲೆ ಹಾಸಿದ್ದ ಜಮಖಾನದ ಮೇಲೆ ಕಾಲುಚಾಚಿ ಕುಳಿತಿದ್ದ ಕನಸಿನಂತಹ ಹುಡುಗ ಎದೆಯಲ್ಲೊಂದು ನವಿರಾದ ಭಾವವನ್ನು ಮೂಡಿಸಿ, ಮುಡಿದಿದ್ದ ಮಲ್ಲಿಗೆಮಾಲೆಯ ಪರಿಮಳದೊಂದಿಗೆ ಬೆರೆತುಹೋಗಿದ್ದ ನೆನಪು ಮತ್ತದೇ ಮೊದಲಪ್ರೇಮದ ಹಗುರಾದ ಅನುಭವವನ್ನು ಒದಗಿಸುತ್ತದೆ; ಮದುವೆಯಾಗಿ ದೂರದ ಊರಿಗೆ ಹೋದ ಅಕ್ಕ ವರುಷಕ್ಕೊಮ್ಮೆ ಭಾವನೊಂದಿಗೆ ಬಂದಾಗ, ನೀರು ತುಂಬಿದ ತಂಬಿಗೆಯನ್ನು ಅವರೆದುರಿಗಿಟ್ಟು ಬಗ್ಗಿ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದ ಸೊಗಸಾದ ಸಂಪ್ರದಾಯವೊಂದು ಜಗಲಿಯ ತುಂಬ ಸರಿದಾಡಿದಂತಾಗಿ ಹೊಸ ಹುರುಪೊಂದು ಹೃದಯವನ್ನಾವರಿಸುತ್ತದೆ; ಅಕ್ಕನ ಮಕ್ಕಳನ್ನು ಕೈಹಿಡಿದು ನಡೆಯಲು ಕಲಿಸಿದ, ಮಡಿಲಲ್ಲಿ ಕೂರಿಸಿಕೊಂಡು ದೇವರ ಭಜನೆಯನ್ನು ಹಾಡಿದ, ಪುಟ್ಟಪುಟ್ಟ ಕೈಗಳಿಗೆ ಮದರಂಗಿಯನ್ನು ಹಚ್ಚಿ ಸಂಭ್ರಮಿಸಿದ ನೆನಪುಗಳೆಲ್ಲವೂ ಅದೆಲ್ಲಿಂದಲೋ ಹಾಜರಾಗಿ, ಜಮಖಾನವೊಂದು ರತ್ನಗಂಬಳಿಯಾಗಿ ಬದಲಾಗಿ ಅರಮನೆಯಂತಹ ವೈಭವ ಜಗಲಿಗೆ ಪ್ರಾಪ್ತಿಯಾಗುತ್ತದೆ. ದೊಡ್ಡಮ್ಮ ಮಾಡುತ್ತಿದ್ದ ಬಿಸಿಬಿಸಿಯಾದ ಗೋಧಿಪಾಯಸ, ದೊಡ್ಡಪ್ಪನೊಂದಿಗೆ ಕುಳಿತು ಬೆರಗಾಗಿ ನೋಡುತ್ತಿದ್ದ ರಾಮಾಯಣ-ಮಹಾಭಾರತ, ಪಲ್ಲಕ್ಕಿಯೊಳಗೆ ಕುಳಿತಿರುತ್ತಿದ್ದ ಹನುಮಂತನಿಗೆಂದು ದೂರದ ಗದ್ದೆಯಿಂದ ಕೊಯ್ದು ತರುತ್ತಿದ್ದ ಗೆಂಟಿಗೆ ಹೂವು, ದೀಪಾವಳಿಯ ರಾತ್ರಿ ಜಗಲಿಯುದ್ದಕ್ಕೂ ಉರಿಯುತ್ತಿದ್ದ ಹಣತೆಯ ಸಾಲು ಎಲ್ಲವೂ ಆ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಭಾಸವಾಗಿ ಹಸನಾದ ಹೊಸ ಬದುಕೊಂದು ನಮ್ಮದಾದ ಭಾವ ಬೆಚ್ಚಗಾಗಿಸುತ್ತದೆ.           ಹೀಗೆ ಅಗತ್ಯಬಿದ್ದಾಗ ತಲ್ಲಣಗಳನ್ನು ತಣಿಸುತ್ತ, ಇನ್ನೊಮ್ಮೆ ಬದುಕು ಬೆಚ್ಚಗಿರುವ ಭರವಸೆಯನ್ನು ತುಂಬುತ್ತ ಜಗಲಿಯೆನ್ನುವ ಮೊದಲಪ್ರೇಮ ಬದುಕಿನುದ್ದಕ್ಕೂ ಕೈಹಿಡಿದು ನಡೆಯುತ್ತದೆ. ಮಣ್ಣಿನ ಜಗಲಿಯಲ್ಲಿ ಮಡಿಲಮೇಲೆ ಕುಳಿತಿರುತ್ತಿದ್ದ ಅಕ್ಕನ ಮಗ ಗ್ರಾನೈಟ್ ನೆಲದ ಫ್ಲೋರ್ ಕುಷನ್ನಿನ ಮೇಲೆ ಕುಳಿತು ಹೊಸ ಸಿನೆಮಾದ ಬಗ್ಗೆ ಚರ್ಚಿಸುತ್ತಾನೆ; ದೊಡ್ಡಮ್ಮನ ಗೋಧಿಪಾಯಸದ ರೆಸಿಪಿ ಹಳೆಯ ಡೈರಿಯ ಪುಟಗಳಲ್ಲಿ ಆತ್ಮಬಂಧುವಿನಂತೆ ಕುಳಿತು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿರುತ್ತದೆ; ಮಹಾಭಾರತದ ಶ್ರೀಕೃಷ್ಣ  ರಾಧೆಯೊಂದಿಗೆ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ; ದೀಪಾವಳಿಯ ಹಣತೆಗಳೆಲ್ಲ ಕ್ಯಾಂಡಲ್ ಲೈಟ್ ಡಿನ್ನರುಗಳಾಗಿ, ನಾಗರಪಂಚಮಿಯ ಮದರಂಗಿ ಪಾರ್ಲರುಗಳ ನೇಲ್ ಪಾಲಿಶ್ ಆಗಿ, ದೇವರ ಕಲ್ಪನೆಯೊಂದು ಸ್ನೇಹದಂಥ ಸುಮಧುರ ಸಾಂಗತ್ಯವಾಗಿ ಬದುಕುಗಳನ್ನು ಹೊಸತನದೆಡೆಗೆ ಹದಗೊಳಿಸುತ್ತವೆ. ಜಗಲಿಯಲ್ಲಿ ಕಾಲುಚಾಚಿ ಕುಳಿತಿದ್ದ ಹುಡುಗನ ನೆನಪು ಮಲ್ಲಿಗೆಮಾಲೆಯಾಗಿ ಬಾಗಿಲುಗಳ ಮೇಲೆ ತೂಗುತ್ತಿರುತ್ತದೆ. *********************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page

Scroll to Top