ಏನೂ ಸಾಧ್ಯವಿಲ್ಲವೆಂಬ ಕಾಲಘಟ್ಟದಲ್ಲಿ ಪ್ರತಿರೋಧಗಳು ಬಂದಿವೆ ಬಿ.ಶ್ರೀನಿವಾಸ ಬಂಡ್ರಿ ಗೆಳೆಯ ಬಿ.ಶ್ರೀನಿವಾಸ ಕಡುಬಡತನದ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದರು. ೦೧-೦೬-೧೯೭೦ ಅವರ ಜನ್ಮದಿನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ತಂದೆ ಬಂಡ್ರಿ ನರಸಪ್ಪ, ತಾಯಿ ಓಬವ್ವರಿಗೆ ಹನ್ನೊಂದು ಮಕ್ಕಳ ಪೈಕಿ, ಬದುಕುಳಿದ ಏಳು ಮಕ್ಕಳಲ್ಲಿ ಶ್ರೀನಿವಾಸ ಸಹ ಒಬ್ಬರು.ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜೋಗಿಕಲ್ಲು ಗುಡ್ಡದಿಂದ ಬದುಕನ್ನರಸಿ ಕೂಡ್ಲಿಗಿಯಲ್ಲಿ ನೆಲೆನಿಂತರು. ಪ್ರಾಥಮಿಕ,ಪ್ರೌಢಶಾಲಾ ವಿದ್ಯಾಭ್ಯಾಸವನ್ನೆಲ್ಲ ಕೂಡ್ಲಿಗಿಯಲ್ಲಿ ಪೂರೈಸಿದ ನಂತರ,ಕೊಟ್ಟೂರು,ಹೂವಿನಹಡಗಲಿ,ಹೊಸಪೇಟೆಯಲ್ಲಿ ಬಿ.ಎಸ್.ಸಿ ಪದವಿ ನಂತರ ಕಲಬುರಗಿಯಲ್ಲಿ ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಎಮ್.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದರು.ಪ್ರಜಾವಾಣಿ ದೀಪಾವಳಿ ಕಥಾ ಪುರಸ್ಕಾರ,ಕಥೆಗಾರ ಸದಾಶಿವ ದತ್ತಿನಿಧಿ ಪುರಸ್ಕಾರ,ಸಿಂಚನ ಕಾವ್ಯಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದಾರೆ.ಪ್ರಕಟಿತ ಕೃತಿಗಳು : ಕಾಣದಾಯಿತೋ ಊರುಕೇರಿ (ಕಥಾ ಸಂಕಲನ), ಉರಿವ ಒಲೆಯ ಮುಂದೆ (ಕವನ ಸಂಕಲನ),ಪುರೋಹಿತಶಾಹಿ ಮತ್ತು ಗುಲಾಮಗಿರಿ (ಅನುವಾದಿತ ಕೃತಿ), ಹಾವೇರಿ ನ್ಯಾಯ (ಸಂಪಾದಿತ ಕೃತಿ) ಅವರ ಬರೆದ ಪುಸ್ತಕಗಳು.…………………………………. ಕತೆ,ಕವಿತೆ ಹುಟ್ಟುವ ಕ್ಷಣ ಯಾವುದು ? ಇವುಗಳು ಹುಟ್ಟುವ ಕ್ಷಣಗಳು ನಿರ್ದಿಷ್ಟವಾಗಿ ಬರವಣಿಗೆಯ ಮಾತ್ರದಿಂದಲೇ ಹುಟ್ಟಿಬರುತ್ತವೆ ಎಂಬುದು ತಪ್ಪು. ಸವಣೂರಿನ ಭಂಗಿಗಳು ಮೈ ಮೇಲೆ ಮಲ ಸುರುವಿಕೊಂಡು ಪ್ರತಿಭಟಿಸಿದ ಸುದ್ದಿಯಾಯ್ತಲ್ಲ..ಅವರ ಪೈಕಿ ಮಂಜುನಾಥ ಭಂಗಿ ಎಂಬ ಹುಡುಗ ಹೇಳ್ತಾನೆ….”ನಾವು…ಅಂದರೆ ನಾನು,ನನ್ ಚಿಗವ್ವ,ಚಿಗಪ್ಪ,ತಂಗಿ,ತಮ್ಮಂದಿರೆಲ್ಲರೂ ಹುಟ್ಟಿ ಈಗ್ಗೆ ಮೂರುದಿನಗಳಾದ್ವು”ಎಂದ!. ಅವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮಲ ಸರುವಿಕೊಂಡು ಅಂದಿಗೆ ಮೂರುದಿನವಾಗಿತ್ತು.ಟೀವಿ,ಪೇಪರ್ನಾಗೆಲ್ಲ ಸುದ್ದಿ ಬಂದಿತ್ತು. ಅಲ್ಲೀವರೆಗೂ ನಮ್ಮ ವ್ಯವಸ್ಥೆಗೆ ಅವರ ಸಂಕಟಗಳು ಹೋಗಲಿ ಮನುಷ್ಯರು ಇದ್ದಾರೆನ್ನುವುದೇ ಇರಲಿಲ್ಲ. ಇಪ್ಪತೈದರ ಹರೆಯದ ಯುವಕ “ನಾನು ಈಗ್ಗೆ ಮೂರು ದಿನದ ಹಿಂದೆ ಹುಟ್ಟಿದೆ” ಎನ್ನುವುದನ್ನು ಹೇಗೆ ತೆಗೆದುಕೊಳ್ತೀರಿ..?ಅವನೇನು ದಾರ್ಶನಿಕನಾ..? ಕವಿಯೋ…ಕಥೆಗಾರನೋ..ಏನಂತಾ ಕರೀತೀರಿ? ಅದಕ್ಕೆ ಅಕ್ಷರಗಳ ಸಾಲಿಯಲಿ ಕಲಿತವರಿಗಿಂತಲೂ ಲೋಕದ ಸಾಲಿಯಲಿ ಕಲಿತವರ ಬಹುದೊಡ್ಡ ಪರಂಪರೆಯೇ ನಮ್ಮ ಮುಂದಿದೆ.ಹೀಗಾಗಿ ನಾವು ಒಂದೆರೆಡು ಪುಸ್ತಕಗಳಲ್ಲಿ ಕೆಲವನ್ನು ಹಿಡಿದಿಟ್ಟರೆ ಅದು ಕಡಲಲಿ ನಿಂತು ಹಿಡಿದ ಬೊಗಸೆ ನೀರು ಮಾತ್ರ . ನಾನು..ನನ್ನ ಮೊದಲ ಪದ್ಯ ಬರೆದದ್ದು ಕೂಡ ಹೀಗೆಯೇ. ಅದೊಂದು ದಿನ,ಶಾಲೆಗೆ ರಜೆಯಿತ್ತು.ಬಳ್ಳಾರಿ ಜಿಲ್ಲೆಯ ಬಿಸಿಲು ನಿಮಗೆ ಗೊತ್ತೇ ಇದೆ.ಅಂಥಾ ಬಿಸಿಲಿನಲ್ಲೂ ಅಪ್ಪ,ನನ್ನನ್ನು ಬತ್ತಿಮರದ ನೆರಳಲ್ಲಿ ಕುಳ್ಳಿರಿಸಿ ರಂಟೆ ಹೊಡೆಯುತ್ತಿದ್ದ.ಆತನ ಕಪ್ಪು ಎದೆಯಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಈ ಚಿತ್ರ ಬಹುಶಃ ನಾನು ಮೂರೋ ನಾಕನೇ ಕ್ಲಾಸಿದ್ದಾಗೋ ಆಗಿರಬಹುದು.ಆದರೆ ಇಂದಿಗೂ ಕಾಡುತ್ತಿದೆ.`ನಾನು ಸಾಲಿ ಕಲಿತಿಲ್ಲ/ ಆದರೂ ಎಣಿಸಬಲ್ಲೆ/ ಅಪ್ಪನ ಎದೆಯ ಮೂಳೆಗಳನ್ನು/ ಎನ್ನುವ ಸಾಲುಗಳನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಅಂದರೆ ಅಕ್ಷರ ಕಲಿತರೆ ಮಾತ್ರವೇ ಸಂವೇದನೆ ಗಳಿರುತ್ತವೆ ಎಂಬ ಮಾತನ್ನು ಹೊಡೆದು ಹಾಕಿದೆ. ಹೌದು,ನಿವೇಕೆ ಬರೆಯುತ್ತೀರಿ? ಸೃಜನಶೀಲ ಬರಹಗಾರನೊಬ್ಬ ‘ಡಿಸ್ಟರ್ಬ್’ ಆದಾಗ,ಲೇಖನಿ ಖಡ್ಗವಾಗುವುದುಂಟು.ಕೆಲವೊಮ್ಮೆ ಅವ್ವನ ಬತ್ತಿದೆದೆಯಲಿ ಹಾಲು ಬರುವುದಿಲ್ಲವೆಂದು ಗೊತ್ತಿದ್ದೂ ಚೀಪುವ ಬಡಪಾಯಿ ಮಗುವಿನ ಹಾಗೆ.ಬರಹಗಾರ ಬರೀತಾ ಹೋಗ್ತಾನೆ.ನಿರಾಳತೆಯ ಅನಂತ ಗುಹೆ ಹೊಕ್ಕು ಸಾಗುತ್ತಲೇ ಇರುತ್ತಾನೆ.ಈ ಪಯಣ ಕವಿಗೆ,ಕಥೆಗಾರನಿಗೆ,ಕಾದಂಬರಿಕಾರನಿಗೆ,ಹೆಚ್ಚು ಭಾವುಕವಾಗಿಬಿಡುತ್ತದೆ. ಅಕ್ಷರಗಳಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಗೊತ್ತಿರುವ ಕಾಲಘಟ್ಟಗಳಲ್ಲಿ ಪ್ರಪಂಚದ ಅತ್ಯುತ್ತಮ ಕೃತಿಗಳು,ಪ್ರತಿರೋಧಗಳು ಮೂಡಿಬಂದಿರುವುದನ್ನು ಗಮನಿಸಬಹುದು. ಲಿಯೋ ಟಾಲ್ಸ್ಟಾಯ್,ಪಾಬ್ಲೋನೆರೂಡ, ಸಿದ್ಧಲಿಂಗಯ್ಯ, ದೇವನೂರು, ಅನಂತಮೂರ್ತಿ, ಲಂಕೇಶ, ತೇಜಸ್ವಿಯವರ ಸಾಹಿತ್ಯ ಉದಾಹರಿಸಬಹುದು. ಕತೆ-ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯೆ? ಓ…ಖಂಡಿತ.ಇಣುಕುವುದಿರಲಿ ಪರಿಪೂರ್ಣ ಹಾಜರಿಯೇ ಇದೆ.ನನ್ನ ಕಥೆ,ಕವಿತೆ….ಬರೆಯುತ್ತಿರುವ ಸಂಡೂರಿನ ಚಿತ್ರಗಳಾಗಲೀ,ಕಾದಂಬರಿಯೇ ಆಗಿರಲಿ ಎಲ್ಲದರ ಮೂಲಧಾತು ನನ್ನ ಊರಿನ ಬಾಲ್ಯ,ಮತ್ತು ಹರೆಯದ ಮೌನ. ಅಪ್ಪ ಚೌರ ಮಾಡಿಸಿಕೊಂಡಿದ್ದ ಕಿಟ್ಟಪ್ಪನ ಅಂಗಡಿಯಿಂದ ಹಿಡಿದು ಹರಿದ ಬನಿಯನ್ನಿನ ನನ್ನ ಮೇಷ್ಟ್ರವರೆಗೆ…ನನ್ನ ಬರವಣಿಗೆಯಲ್ಲಿ ಬಂದಿದ್ದಾರೆ. ಈ ಮನೆಯ ಮುದ್ದೆಗೆ/ ಆ ಮನೆಯ ಸಾರು/ ಉಂಡ ರುಚಿ ಮೂಲೆ ಸೇರಿದೆ ಅಜ್ಜನ ಹಾಗೆ/ ಹೀಗೆ ಬರೆಯಲಿಕ್ಕೆ ನನಗೆ ಸಾಧ್ಯ ಮಾಡಿದ್ದೇ ನನ್ನ ಕಳೆದುಹೋದ ಬದುಕು. ಪ್ರತಿಯೊಬ್ಬ ಲೇಖಕನಿಗೂ ಅವನ ಬಾಲ್ಯ,ಹರೆಯ, ಬರವಣಿಗೆಯೊಳು ಹಾಸುಹೊಕ್ಕಾಗಿರುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತಿದೆ? ಇತ್ತೀಚೆಗೆ ಎಲ್ಲ ಸಮುದಾಯಗಳೂ ತಮ್ಮ ತಮ್ಮ ಸಾಂಸ್ಕೃತಿಕ ಐಕಾನ್ ಗಳನ್ನು ಹೊಂದಿದ್ದಾರೆ.ಬಸವಣ್ಣನನ್ನು,ಕನಕನನ್ನು,ವಾಲ್ಮೀಕಿಯನ್ನು….ಹೀಗೆ ಆಯಾ ಬಹುಸಂಖ್ಯಾತ ಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿಕೊಂಡಿವೆ.ಆದರೆ ವಿಪರ್ಯಾಸ ನೋಡಿ,ಅಂಚಿನ ಸಮುದಾಯಗಳಾದ ಕೊರಚ,ಕೊರಮ,ಕೊರವರ,,ಕಮ್ಮಾರ,ಕುಂಬಾರ…ತಮ್ಮ ಅಸ್ತಿತ್ವಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ.ಯಾವ ನಾಯಕರು ಇಡೀ ಮಾನವ ಕುಲವೊಂದೇ ಎಂದು ಹೋರಾಡಿದರೋ ,ಅವರನೆಲ್ಲ ಆಯಾ ನಿರ್ದಿಷ್ಟ ಸಮುದಾಯಗಳು ಮಾತ್ರವೇ ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿವೆ.ಸಾಹಿತ್ಯಿಕ ಲೋಕದ ದಿಗ್ಗಜರಿಗೂ ಈ ಸತ್ಯ ಅರಿವಾಗಿದ್ದರೂ ಮೌನವಾಗಿರುವುದು ಸಾಂಸ್ಕೃತಿಕ ಅಪರಾಧ. ಇನ್ನು ಇತರೆ ಧರ್ಮೀಯರದಂತೂ ಹೇಳುವ ಹಾಗೆಯೇ ಇಲ್ಲ.ಶರೀಫರಿಗೂ ಮಠ ಕಟ್ಟಿ ಬಂಧಿಸಿಡಲಾಗಿದೆ.ಮಠಾಧೀಶರಂತೂ ಧಾರ್ಮಿಕ ಮತ್ತು ರಾಜಕಾರಣದ ಗೆರೆ ಅಳಿಸಿರುವವರಂತೆ ತೋರುತ್ತಿದ್ದಾರೆ.ಸಂಪುಟದ ತೀರ್ಮಾನಗಳು ಇವರ “ಅಪ್ಪಣೆ”ಮೇರೆಗೂ ನಡೆದ ವಿದ್ಯಮಾನಗಳು ನಮ್ಮ ಕಣ್ಣೆದುರಿಗಿವೆ. ಸಾಂಸ್ಕೃತಿಕ ರಾಜಕಾರಣ ಎಲ್ಲದಕ್ಕಿಂತಲೂ ಅಪಾಯಕಾರಿಯಾದುದು.ಇದನ್ನು ಗ್ರಹಿಸುತ್ತಿದ್ದ ಲೋಹಿಯಾ,ಜೆ.ಪಿ.,ನಮ್ಮ ಪಟೇಲರಂತಹ ರಾಜಕಾರಣಿಗಳೂ ಈಗ ಇಲ್ಲ.ಒಂದು ರೀತಿ ಕಲ್ಚರಲ್ ವ್ಯಾಕ್ಯೂಮ್ ಸೃಷ್ಟಿಯಾಗಿಹೋಗಿದೆ. ಈ ಮಾತನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ,ರಾಜಕಾರಣಿಯೂ ಎಲ್ಲ ಮನುಷ್ಯರ ಹಾಗೆ ನಗಬೇಕು,ಅಳಬೇಕು,ಸಂಕಟಗಳ ಅರಿವೂ ಇರಬೇಕು.ಈ ಹಿಂದಿನ ರಾಜಕಾರಣಿಗಳಿಗೆ ಕನಿಷ್ಟ ಮಟ್ಟದಲ್ಲಾದರೂ ಇವುಗಳ ಅರಿವಿತ್ತು. ನಗು ಮರೆತು,ಅಳು ಮರೆತು ರಾಜಕಾರಣ ಮಾಡಿದರೆ ಅದು ಮನುಷ್ಯ ರಾಜಕಾರಣವಾಗುವುದಿಲ್ಲ.ಸಂವೇದನಾರಹಿತನೊಬ್ಬ ರಾಜಕಾರಣಿಯಾಗುವುದೂ..ಬಾಂಬುಗಳೇ ನಮ್ಮನ್ನಾಳುವುದಕ್ಕೂ ವ್ಯತ್ಯಾಸವಿಲ್ಲ. ಇಂದು ನಮ್ಮನ್ನಾಳುವ ಪ್ರಭುಗಳ ಪರಿಸ್ಥಿತಿ ನೋಡಿ,ಎಲೆಕ್ಷನ್ ಹತ್ತಿರ ಬಂದಾಗಲೆಲ್ಲ ಮಿಲಿಟರಿ ಡ್ರೆಸ್ ಹಾಕ್ಕೊಂಡು ನಿಲ್ತಾರೆ.ಜನರನ್ನು ಭಾವನಾತ್ಮಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿಯೂ ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಈಗೀಗ ಗಡಿರೇಖೆಯ ನ್ಯೂಸ್ ಗಳನ್ನೇ ಹೆಚ್ಚಾಗಿ ಕೇಳುತ್ತೇವೆ. ನಾವು ನೀವೆಲ್ಲ ಚಿಕ್ಕ ವಯಸ್ಸಿನಲ್ಲಿ ಯುದ್ಧ ಎಂದರೆ ಬಬ್ರುವಾಹನ ಚಿತ್ರದ ದೃಶ್ಯ ಕಣ್ಮುಂದೆ ಬರುತಿತ್ತು,ಬಿಟ್ಟರೆ ಇಸ್ರೇಲೋ..ಇರಾನ್ ನಲ್ಲೋ..ಅಲ್ಲೊಂದು ಇಲ್ಲೊಂದು ಸುದ್ದಿಯಿರುತ್ತಿತ್ತು.ಆದರೀಗ ಸುದ್ದಿಗಳೇ ಯುದ್ಧ ಸೃಷ್ಟಿಸುವಂತಹ ಸಂದರ್ಭಕ್ಕೆ ಬಂದು ನಿಂತಿದ್ದೇವೆ.ಇದು ನಾವು ತಲುಪಿರುವ ದುರಂತ. ನಿಮ್ಮ ಕತೆಗಳ ವಸ್ತು,ವ್ಯಕ್ತಿ ಹೆಚ್ಚಾಗಿ ಯಾವುದು?ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಬರವಣಿಗೆಯು ವರ್ತಮಾನದ ಕನ್ನಡಿ.ಸಾಮಾಜಿಕ ಅಸಮಾನತೆಯಲಿ ಬೆಂದವರು,ಬಂಡವಾಳಶಾಹಿಯ ಹಿಡಿತಕ್ಕೆ ಸಿಕ್ಕು ನಲುಗಿದವರು ನನ್ನ ಕಥೆಯ ಪಾತ್ರಧಾರಿಗಳು.ಬರಹಗಾರನಿಗೆ ವೈಯಕ್ತಿಕವು ಸಾಮಾಜಿಕವೂ ಆಗಿರಬೇಕು.ಆಗ ಮಾತ್ರ ವರ್ತಮಾನದ ಒತ್ತಡ ಅವನನ್ನು ಲೇಖಕನನ್ನಾಗಿ ಮಾಡುತ್ತೆ. ನನ್ನ ಕಥೆ,ಕವಿತೆಗಳೆಲ್ಲವೂ ಒಂದು ರೀತಿಯಲ್ಲಿ ರಿಯಾಕ್ಷನರಿ ಪ್ರೋಜ್, ಪೊಯೆಮ್ಸ್ …ಪ್ರತಿಕ್ರಿಯಾತ್ಮಕ ಗದ್ಯ,ಪದ್ಯಗಳೆ ಆಗಿವೆ. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿಯೊಬ್ಬ ಭಾರತೀಯನಲ್ಲೂ ರಾಮ,ರಹೀಮ,ಏಸು,ನಾನಕ….ಮುಂತಾದ ಧರ್ಮಗಳ ನಾಯಕರಿದ್ದಾರೆ.ವಿವೇಕಾನಂದರೂ ಹೇಳಿದ್ದನ್ನೆ ನಾನು ಅನುಮೋದಿಸುತ್ತಿರುವೆನಷ್ಟೆ.ಆದರೆ ಆ ದೇವರುಗಳ ಹೆಸರಿನಲ್ಲಿನ ಮೌಢ್ಯತೆಗಳನ್ನು ಸಹಿಸಲಾರೆ. ಧರ್ಮಗಳ ನಡುವಿನ ಅಂತರ ಹೆಚ್ಚಾಗ್ತಿರುವುದೂ ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.ನೇರವಾಗಿ ಹೇಳಿಬಿಡ್ತೇನೆ…ಒಂದು ನಿರ್ದಿಷ್ಟ ಧರ್ಮೀಯರನ್ನು ಹೊರಗಿಟ್ಟು ಸಿಎಎ ಕಾಯಿದೆ ಜಾರಿ ಮಾಡುವುದು ,ಅನುಮಾನದಿಂದ ನೋಡುವುದು ಆ ಧರ್ಮೀಯರಲ್ಲಿ ಅಭದ್ರತೆ,ಪರಕೀಯ ಭಾವನೆಯನ್ನು ಮೂಡಿಸುವುದಲ್ಲದೆ ಮತ್ತೇನು?ಈ ಹಿಂದೆ ಕಾರ್ಗಿಲ್ ವಿಜಯೋತ್ಸಾಹದ ಸಂದರ್ಭದಲ್ಲಿ ಹಿಂದೂ ಸೈನಿಕರಿಗೆ ರಕ್ಷಾಬಂಧನ ಕಟ್ಟಿದರೆ..ಜೊತೆಯಲಿದ್ದ ,ದೇಶಕ್ಕಾಗಿ ದುಡಿದ ಮುಸ್ಲಿಮ್ ಸೈನಿಕರುಗಳ ಭಾವನೆ ಹೇಗಾಗಿದ್ದೀತು? ಕಳೆದ ವರುಷ ಪುಲ್ವಾಮ ದಾಳಿಯಲ್ಲಿ ಹತರಾದವರು ನಲವತ್ತು ಜನ ಯೋಧರಿದ್ದರು.ನಮ್ಮೂರುಗಳಲ್ಲಿ ರಾತ್ರಿ ಸರ್ಕಲ್ಲುಗಳಲಿ ಮೊಂಬತ್ತಿ ಹಿಡಿದು ಭಾವನಮನ ಸಲ್ಲಿಸುವಾಗ, ಹಾಕಿದ್ದ ಕಾರ್ಯಕ್ರಮದ ಪ್ಲೆಕ್ಸನಲ್ಲಿ ಒಬ್ಬ ನತದೃಷ್ಟನ ಪಟ ಇರಲಿಲ್ಲ.ಕಾರಣವೇನೆಂದರೆಅವನು ಅನ್ಯಧರ್ಮೀಯನಾಗಿದ್ದುದು! ಇದು ನನ್ನ ಭಾರತ ಸಾಗುತ್ತಿರುವ ದುರಂತ ಪಥ. ವೈಯಕ್ತಿಕವಾಗಿ ಧರ್ಮ,ದೇವರುಗಳ ವಿಷಯದಲ್ಲಿ ಲೋಹಿಯಾ ನನಗೆ ಮಾದರಿ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ….ನೋಡಿ,ನಮ್ಮೂರಿನಲ್ಲಿ ಹಿಂದೆ ಕೂಡ ಗಣಿಗಾರಿಕೆಯಿತ್ತು.ಈಗಲೂ ಇದೆ.ಈಗ ಇರುವಷ್ಟು ಅಕ್ರಮ ಇರಲಿಲ್ಲ. ಊರ ಜನರಿಂದ ಆಯ್ಕೆಯಾಗಿ ಹೋದ ಎಮ್ಮೆಲ್ಲೆ ಹತ್ರ ಹೋಗಿ,ಊರಿಗೆ ಶಾಲೆ,ರಸ್ತೆ ರಿಪೇರಿಗೋ,ಕುಡಿಯುವ ನೀರಿಗೋ ಬೇಡಿಕೆಯಿಟ್ಟರೆ “ಮೀಕೇಮಿ ಕೆಲ್ಸಮಲೇದ..?ಮೀದೊಕ್ಕಟೆ ಊರೇಮಿ ನಾಕಿ..? ಪೋ ಪೋ..ಪೋರ್ರಾ”(ನಿಮಿಗೆ ಕೆಲ್ಸವಿಲ್ಲವೇನು ? ನಿಮ್ಮದೊಂದೆ ಊರಂದ್ಕಡಿದಿರೇನು ನನಗೆ…ಹೋಗ್ ಹೋಗ್ರಪಾ..)ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಗದರಿಸಿ ಕಳುಹಿಸುತ್ತಿದ್ದ.ಆತ ಒಂದು ಕಪ್ಪು ಟೀ ಕೂಡ ಕೊಡುತ್ತಿರಲಿಲ್ಲ.ಜನರೂ ಸುಮ್ಮನೆ ಬರೋರು. ಆದರೆ ಅದೇ ನಮ್ಮೂರಿಗೆ ಕಳೆದ ಹದಿನೈದು ವರುಷಗಳಿಂದ ಗಣಿಧಣಿಗಳೇ ಶಾಸಕರಾಗುತ್ತಿದ್ದಾರೆ.ಅವರನ್ನು ಎಲೆಕ್ಷನ್ ಟೈಮಲ್ಲಿ ನೋಡಿದ್ದು ಬಿಟ್ಟರೆ ಮತ್ತೆ ನೋಡಾದು ಮತ್ತೊಂದು ಎಲೆಕ್ಷನ್ನು ಬಂದಾಗಲೆ.ಎಲೆಕ್ಷನ್ನಲ್ಲಿ ಹಬ್ಬವೋ ಹಬ್ಬ.ಅದುವರೆಗೂ ಅಂತಹ ಸ್ಟೀಲ್ ಸಾಮಾನುಗಳನ್ನು ನೋಡಿರದ ಜನರಿಗೆ ತರಹೇವಾರಿ ಟಿಪನ್ನು ಕ್ಯಾರಿಯರ್ ಮನೆಮನೆಗೆ ತಲುಪಿಸಲಾಯಿತು.ಓಟಿಗೆ ಸಾವ್ರ,ಎರಡ್ಸಾವ್ರ ರೂಪಾಯಿಗಳಂತೆ ಹಂಚಲಾಯಿತು.ಹೀಗೆ ಗೆದ್ದು ಬಂದ ಎಮ್ಮೆಲ್ಲೆ ಹತ್ರನೂ ಅದೇ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೂ ಹೋಕ್ತಾರೆ. ಅಲ್ಲಿ ಬೆಳಗಾ ಮುಂಜಾನಿಗೆ ಬೆಂಗಳೂರಿಗೆ ಹೋದವರ ದೃಶ್ಯ ವಿವರಿಸುವೆ ಕೇಳಿ. ಭವ್ಯ ಬಂಗಲೆ!ಹೋದ ತಕ್ಷಣ,ಇವರ ವೋಟಿನ ಕಾರ್ಡು,ಆಧಾರಕಾರ್ಡು ಚೆಕ್ ಮಾಡಲಾಗುತ್ತದೆ.ಕ್ಷೇತ್ರದ ಮತದಾರರೆಂದು ಕನ್ಫರ್ಮ್ ಆದ ಮೇಲೇಯೇ ಇವರಿಗೆಲ್ಲ ಸ್ನಾನ,ನಿತ್ಯಕರ್ಮಾದಿಗಳಿಗೆ ರೂಮು ತೋರಿಸ್ತಾರೆ. ಭರ್ಜರಿ ತಿಂಡಿ,ತಿಂದ ನಂತರ ನಿಂತಿದ್ದ ವೋಲ್ವೋ ಬಸ್ ಹತ್ತಬೇಕು.ಯಂತ್ರಮಾನವರಂತೆ ಜನರು ಹತ್ತಿ ಕುಳಿತು ಬೆಂಗಳೂರೆಂಬ ಮಾಯಾನಗರಿಯನ್ನು ಬೆರಗಿನಿಂದ ನೋಡ್ತಾರೆ.ಇಂಥದೊಂದು ಲೋಕವ ನಾವೂ ನೋಡದೆ ಇರುತ್ತಿದ್ವಲ್ಲ ಎಂದು ಬಂದ ಭಾಗ್ಯಕೆ ಖುಷಿಪಡುತ್ತಾರೆ. ಮತ್ತೆ ರಾತ್ರಿ ಭೂರಿ ಭೋಜನದ ವ್ಯವಸ್ಥೆ.ಪ್ರತಿಯೊಬ್ಬರ ಕೈಗೂ ಐನೂರರ ಗಾಂಧಿ ನೋಟು! ಬಸ್ಸೇರಿ ಊರಿಗೆ ಮರಳುತ್ತಾರೆ. ತಾವು ಕೇಳಲೆಂದು ಹೋದ ಅದೇ ಮುರಿದು ಬೀಳುವ ಹಂತದ ಶಾಲೆ ,ತಗ್ಗುದಿಣ್ಣಿಯ ರಸ್ತೆ,ತುಂಬು ಗರ್ಭಿಣಿಯರು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ನಡೆವ ಚಿತ್ರಗಳು ಕಾಣಸಿಗುತ್ತವೆ. ನಾನು ಹೇಳ್ತಿರುವುದು ಕಥೆಯಲ್ಲ.ವಾಸ್ತವ.ಇದು ಭಾರತದ ರಾಜಕಾರಣ ತಲುಪಿರುವ ದುರಂತ . ಮಾತನಾಡದಂತೆ ತಡೆಯುವುದು,ಪ್ರಭುತ್ವದ ವಿರುದ್ಧ ಮೌನವಾಗಿರುವಂತೆ ಬೆದರಿಸುವುದು ಫ್ಯಾಸಿಸಂನ ಲಕ್ಷಣಗಳನ್ನೂ ದಾಟಿ,ಇದೀಗ ಪ್ರತಿಯೊಬ್ಬರ ಮನೆಯಂಗಳಕೂ ಕಣ್ಗಾವಲಿಟ್ಟ ಬಿಗ್ ಬಾಸ್ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿದೆ.ಈ ಹೊತ್ತು ಇಡೀ ಭಾರತವೇ ಡಿಟೆನ್ಷನ್ ಕ್ಯಾಂಪಿನಲ್ಲಿರುವ ಹಾಗೆ ತೋರುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನಾನು,ಮೂಲತಃ ನ್ಯೂಕ್ಲಿಯರ್ ಫಿಜಿಕ್ಸ್ನ ವಿದ್ಯಾರ್ಥಿ. ಆದರೆ ಭೌತಶಾಸ್ತ್ರಕ್ಕಿಂತಲೂ ಹೆಚ್ಚು ಓದಿದ್ದು ಕನ್ನಡ ಸಾಹಿತ್ಯ. ನಾನೇಕೆ ಇಷ್ಟೊಂದು ಸೆಳೆತಕ್ಕೆ ಒಳಗಾದೆ? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡಿದ್ದುಂಟು. ನನ್ನೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ.ಬಿಸಿಲು,ಬಡತನ ಮತ್ತು ದೇವದಾಸಿಯೆಂಬ ನತದೃಷ್ಟರೇ ಹೆಚ್ಚಾಗಿರುವ ಊರು.ಕೊಟ್ರೇಶ್ ಎಂಬ ಬಾಲ್ಯದ ಗೆಳೆಯನಿದ್ದ.ಅವನಿಗೋ ವಿಪರೀತ ಓದುವ ಹುಚ್ಚು.ನನಗೂ ಹಿಡಿಸಿದ.ಸರ್ಕಾರಿ ಲೈಬ್ರರಿಯ ಹೆಚ್ಚು ಕಮ್ಮಿ ಎಲ್ಲಾ ಪುಸ್ತಕಗಳನ್ನೂ ಓದಿಬಿಟ್ಟಿದ್ದೆವು.ಸಾಲದಕ್ಕೆ ಏಪ್ರಿಲ್ ಮೇ ತಿಂಗಳ ರಜೆಯಲ್ಲಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು.ನನಗೆ ಬಹುವಾಗಿ ಕಾಡಿದ ಕಥೆ ನಿರಂಜನರ ಕೊನೆಯ ಗಿರಾಕಿ.ಕಣ್ಣೆದುರೇ ನಮ್ಮೂರಿನಲ್ಲಿ ಅಂತಹ ಎಷ್ಟೋ ನತದೃಷ್ಟರನ್ನು ನೋಡ್ತಾ ಬೆಳೆದ್ವಿ.ಆಗ ನಮಗೆ ಈ ಸಾಹಿತ್ಯ ಬೇರೆಯಲ್ಲ, ಬದುಕೂ ಬೇರೆಯಲ್ಲ ಎಂಬುದು ಅರಿವಾಗತೊಡಗಿತ್ತು.ಆಗಲೇ ನಾವು ಕುವೆಂಪು, ಕಾರಂತರ ಜಗತ್ತನ್ನು, ಮಾಸ್ತಿಯವರನ್ನು,ಅನಂತಮೂರ್ತಿ,ದೇವನೂರು,ಕುಂವೀ,ಸಿದ್ಧಲಿಂಗಯ್ಯ ನವರನ್ನು ಓದಿಕೊಂಡಿದ್ದು.ಬಹುಶಃ ಈ ಸೆಳೆತದಿಂದಾಗಿಯೇ ನಾನು ಮನುಷ್ಯನಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಲಂಕೇಶ್-ತೇಜಸ್ವಿಯವರ ಓದು,ನಮ್ಮ ದಾರಿಗಳನ್ನು ಮತ್ತಷ್ಟು ಕ್ಲಿಯರ್ ಮಾಡ್ತಾ ಹೋಯಿತು.ನಿರಂಜನರ ಕೊನೆಯ ಗಿರಾಕಿಗಳೂ,ದೇವನೂರರ ಅಮಾಸ,ಕುಂವೀಯವರ ಡೋಮ,ಮೊಗಳ್ಳಿಯವರ ಬುಗುರಿ,ಎಲ್ಲವೂ ನಮ್ಮೂರಲ್ಲಿದ್ವಲ್ಲ!ಅದಕ್ಕೆ…ಬರಹ ನನಗೆ ಆಪ್ತತೆಯನ್ನು ನೀಡ್ತಾ ಬಂತು. ನಂಜುಂಡ ಸ್ವಾಮಿಯವರ ರೈತ ಹೋರಾಟ,ಕೃಷ್ಣಪ್ಪನವರ ದ.ಸಂ.ಸ.,ಗೋಪಾಲಗೌಡರ ಸಮಾಜವಾದ ಕುರಿತಂತೆ ,,ಜೊತೆಗೆ ನಾನು ಈಗ ಕಳೆದ ಇಪ್ಪತ್ತು ವರುಷಗಳಿಂದ ಕೆಲಸ ಮಾಡುತ್ತಿರುವ ಹಾವೇರಿ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಚರಿತ್ರಾರ್ಹ ಬರವಣಿಗೆ ದಾಖಲಿಸಬೇಕಿದೆ.ಆ ಹೊತ್ತಿನ ಸಾಹಿತ್ಯದ ತೇವ ಆರಿ ಹೋಗದ ಹಾಗೆ ಮರು ರೂಪಿಸುವ ಬಹುದೊಡ್ಡ ಕನಸೊಂದಿದೆ.ಜೊತೆಗೆ ಗಣಿಗಾರಿಕೆಯೆಂಬ ಅತ್ಯಾಚಾರಕ್ಕೆ ಒಳಗಾದ ಸಂಡೂರೆಂಬ ಊರಿನ ಸಾಂಸ್ಕೃತಿಕ ದಾಳಿಯ ಕುರಿತೂ ಬರವಣಿಗೆ ಮಾಡಬೇಕಿದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ,ಸಾಹಿತಿ ಯಾರು..? ಲಂಕೇಶ್…ತೇಜಸ್ವಿ,ಕುವೆಂಪು, ಇಂಗ್ಲೀಷಿನಲ್ಲಿ ಶಿವ ವಿಶ್ವನಾಥನ್ ಬರಹಗಳಿಷ್ಟ.ಮಾರ್ಕ್ವೈಜ್ನ ಒನ್ ಹಂಡ್ರೆಡ್ ಡೇಸ್ ಆಫ್ ಸಾಲಿಟ್ಯೂಡ್….ತುಂಬ ಡಿಸ್ಟರ್ಬ್ ಮಾಡಿದ ಕೃತಿ.ಇತ್ತೀಚೆಗೆ ಶಿವಸುಂದರ್,ಬರಗೂರರ ,ಹರ್ಷಮಂದರ್,ಮುಜಾಫರ್ ಅಸಾದಿಯವರ ಮಾತುಗಳನ್ನು