ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ ಕಚ್ಚಲೆರಡು ಹಾರಿ ನಡೆದವು ತುಸು ದೂರ ಸಾಗಿದೊಡನೆಕಂಡಿತೊಂದು ಊರುಮಕ್ಕಳೆಲ್ಲ ಆಮೆ ಕಂಡುಕೂಗಿದರು ಜೋರು ಕಲ್ಲನೆಸೆದು ಗೇಲಿ ಮಾಡೆಆಮೆ ಕೋಪ ಸಿಡಿಯಿತುಬೈಯ್ಯಲೆಂದು ಬಾಯಿ ತೆರೆಯೆಕೆಳಗೆ ಬಿದ್ದು ಮಡಿಯಿತು ಹಮ್ಮು ಬಿಮ್ಮು ಬೇಡ ನಮಗೆಬೇಡ ಕೋಪ ತಾಪಮನಗಾಣಿರಿ ಮಕ್ಕಳೆಲ್ಲಅವುಗಳೆಮಗೆ ಶಾಪ ******************

ಮಕ್ಕಳ ಕವಿತೆ Read Post »

ಇತರೆ, ಪ್ರಬಂಧ

ನಾನು ಈಜು ಕಲಿತ ಪ್ರಸಂಗ:

ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು ಭಾಷೆಯಲ್ಲಿ ‘ಪದ್ರಾಡ್’ ಅಂದರೆ ‘ಸದ್ದಿಲ್ಲದೆ ತಪ್ಪಿಸಿಕೊಂಡು ಓಡಿಹೋಗುವುದು’ ಎಂದು ಅರ್ಥ; ಅಲ್ಲದೇ ಅದು ಅಂಕೆ 12 ರ ಸಂಖ್ಯಾವಾಚಕ ಶಬ್ದವೂ ಹೌದು). ಹಿರಿಯರಿಗೆ ತಿಳಿಸಲೂ ಭಯ. ಆ ವಯಸ್ಸೇ ಅಂತಹ ಹುಚ್ಚಾಟದ್ದು. ಹೀಗಾಗಿ ನನಗೆ ಈಜು ಕಲಿಯಲು ಹಸಿರು ನಿಶಾನೆ ಸಿಗುವ ಸಂಭವವೇ ಇರಲಿಲ್ಲ. ನಮ್ಮ ಊರಿನ ಕೋಟಿಕೆರೆ ಬಹು ದೊಡ್ಡದು. ಮನೆಯಿಂದ ಒಂದು ಕಿ.ಮಿ. ದೂರದಲ್ಲಿ ಹಸಿರು ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿತ್ತು. ಆ ಕೆರೆ ವಿಶ್ವವಿಖ್ಯಾತ — ಆ ಕಾಲಕ್ಕೆ ‘ನಮ್ಮ ಊರೇ ನಮ್ಮ ವಿಶ್ವ, ಸರ್ವಸ್ವ’ — ಆಗಿದ್ದರೂ ಮೊತ್ತಮೊದಲ ಬಾರಿಗೆ ನಮ್ಮ ಊರಿನವರೇ ಆದ ಪರಮೇಶ್ವರ ಹೊಳ್ಳರನ್ನು ನ್ಯಾಶನಲ್ ಚಾಂಪಿಯನ್ ಮಟ್ಟದವರೆಗೆ ತರಬೇತುಗೊಳಿಸಿದ ಮಹಾನ್ ಕೆರೆ ಎಂಬಭಿದಾನದಿಂದ ಕಂಗೊಳಿಸುತ್ತಿರ್ಪ ಒಂದು ಶುಭಮುಹೂರ್ತದಲ್ಲಿ ನನ್ನ ಪಾಲಿಗೂ ಅದು ಅನುಕೂಲವಾಗಿಯೇ ಒದಗಿ ಬಂತು. ಅದೇ ಪರಮೇಶ್ವರ ಹೊಳ್ಳರನ್ನು ತಯಾರು ಮಾಡಿದ ನಮ್ಮ ಹೈಸ್ಕೂಲಿನ ವ್ಯಾಯಾಮ ಶಿಕ್ಷಕರಾಗಿದ್ದ ಶ್ರೀ ಸುಬ್ರಾಯ ಶೆಟ್ಟಿಗಾರ್ ನನಗೂ ಈಜು-ಗುರುಗಳು. ಆದರೆ ಮನೆಯಲ್ಲಿ ಗೊತ್ತಾಗದಂತೆ ಈಜು ಕಲಿಯುವುದು ಹೇಗೆ? ಮನೆಯಿಂದ ಹೆಚ್ಚುವರಿ ಬಟ್ಟೆ ತರುವಂತೆಯೂ ಇಲ್ಲ. ಅದಕ್ಕಿದ್ದದ್ದೊಂದೇ ಪರಿಹಾರ. ಹಾಕಿದ್ದ ಅಂಗಿ ಚಡ್ದಿಯನ್ನೇ ಪುನರ್ಬಳಕೆ ಮಾಡುವುದು – ಮೈ, ತಲೆ ಒಣಗಿದ ಬಳಿಕ! ಆ ಕೋಟಿಕೆರೆ ಎಂದರೆ ಸಾಮಾನ್ಯವೇನಲ್ಲ. ಅದರ ಸುತ್ತಲೂ ಹಲವು ಮನೆಗಳೂ ಇದ್ದುವು. ಹಳ್ಳಿಮನೆ ಎಂದ ಮೇಲೆ ಜನರಿಗಿಂತ ಹೆಚ್ಚು ಜಾನುವಾರುಗಳೂ – ಹಸು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವೆಲ್ಲ ಸೇರಿ ಒಂದು ಪ್ರಪಂಚ – ಇದ್ದುವು. ಅವುಗಳಿಗೂ ಜಳಕವಾಗಬೇಕಲ್ಲ. ಕೋಟಿಕೆರೆಯ ಒಂದು ತುದಿಯಲ್ಲಿ ದನಗಳೂ, ಹೆಚ್ಚಾಗಿ ಎಮ್ಮೆಗಳೂ ಅಲ್ಲಿ ಜಲವಿಹಾರದಲ್ಲೋ ಜಲಕೇಳಿಯಲ್ಲೋ – ಹಾಲುಕರೆಯುವ ಸಮಯವೊಂದನ್ನು ಬಿಟ್ಟು – ಸದಾ ತೊಡಗಿರುತ್ತಿದ್ದವು. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳ ಬಟ್ಟೆಬರೆ ತೊಳೆಯುವ ಕೆಲಸ, ಮೈ…(!) ತೊಳೆಯುವ ಕೆಲಸ – ಮರೆಯಲ್ಲಿ ‘ಸ್ನಾನ’ ಎಂಬುದು ಎಲ್ಲೋ ಕೆಲವರಿಗಷ್ಟೇ ಲಭ್ಯವಿದ್ದ ಘನಕಾರ್ಯ; ಹಾಗೆಯೇ ಮುಸುರೆಪಾತ್ರೆಗೆ ಬೂದಿ ಬಳಿದು ಶುದ್ಧೀಕರಿಸುವ ಕೆಲಸ, ಸ್ವಲ್ಪ ಮಟ್ಟಿಗೆ ಕೃಷಿಗಾರಿಕೆಗೂ – ಹೀಗೆ ಹಲವು ಹನ್ನೊಂದು ಕೆಲಸಗಳಿಗೆ ಈ ಕೋಟಿಕೆರೆಯೇ ಆಧಾರ. ಇವೆಲ್ಲದರ ಜೊತೆಗೆ ಕೋಟಿಕೆರೆಯ ಇನ್ನೊಂದು ತುದಿ ಈಜುವುದಕ್ಕೆ ಮೀಸಲು. ಹೀಗೆ ಕ್ಷೇತ್ರ ವಿಂಗಡಣೆಯ ವಿಷಯ ಸರ್ವರಿಗೂ ತಿಳಿದಿದ್ದ ಕಾರಣದಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರವರ ಕೆಲಸ-ಕಾರ್ಯಗಳು ಅದರದರ ಪಾಡಿಗೆ ಸ್ವಯಂಚಾಲಿತ ಕ್ರಿಯೆಯಂತೆ ನಡೆದುಕೊಂಡು ಹೋಗುತ್ತಿತ್ತು. ಯಾರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಮೀರುವಂತಿಲ್ಲದ ಒಂದು ಅಲಿಖಿತ ನಿಯಮ ಜಾರಿಯಲ್ಲಿತ್ತು ಮತ್ತು ಇದು ಎಲ್ಲರಿಗೂ ತಿಳಿದಿದ್ದ ಗುಟ್ಟು. ಈಜು ಕಲಿಯುವ ಪ್ರಾಥಮಿಕ ಪಾಠ ಕೆರೆದಂಡೆಯ ಕಲ್ಲುಗಳನ್ನು ಆಧಾರಕ್ಕೆ ಹಿಡಿದುಕೊಂಡು ಕೈ ಕಾಲು ಬಡಿಯುವುದು. ಆಗ ಈಜಿನಲ್ಲಿ ಪರಿಣತಿ ಹೊಂದಿದ್ದ ಇತರ ಗೆಳೆಯರು ಸುಬ್ರಾಯ ಶೆಟ್ಟಿಗಾರ್ ಅವರ ಸುಪರ್ದಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ಶೆಟ್ಟಿಗಾರ್ ಮಾಸ್ತರ್ ತಮ್ಮ ಸ್ಟಾಪ್-ವಾಚ್ ಹಿಡಿದು ಟೈಮ್ ನೋಡುತ್ತಿದ್ದರು. ನನಗೋ ಇದನ್ನು ನೋಡಿ ಒಂಥರಾ ಹೊಟ್ಟೆಯುರಿ. ನಾನು ಅವರಂತೆ ಈಜುವುದು ಯಾವಾಗ? ಶೆಟ್ಟಿಗಾರ್ ಮಾಸ್ಟರ್ ಅವರ ಹೆಚ್ಚಿನ ಗಮನ ಆ ವಿದ್ಯಾರ್ಥಿಗಳ ಮೇಲೆ. ನನಗೆ ನನ್ನ ಮೇಲೂ, ನನ್ನಂತೆ ಕೈ ಕಾಲು ಬಡಿಯುತ್ತಿದ್ದ ಇನ್ನಿತರ ಬಾಲಪಾಠದ ವಿದ್ಯಾರ್ಥಿಗಳ ಮೇಲೂ ಒಂದು ಥರಾ ಅಸಹನೆ ಮೂಡುತ್ತಿತ್ತು. ಆದರೆ ವಿಧಿಯಿಲ್ಲ. ಬಹುಶಃ ಮಾಸ್ತರಿಗೆ ಇದು ಗೊತ್ತಾಯಿತೇನೋ ‘ಇರಿ ಮಾಡುತ್ತೇನೆ’ ಎಂದು ಎರಡನೆ ಬಾಲಪಾಠ –- ಲೆಸನ್ ನಂಬರ್ ೨ – ಶುರು ಮಾಡಿದರು: ಹಾಗೆಯೇ ಕೈಕಾಲು ಬಡಿಯುತ್ತಾ ಅರ್ಧತಲೆಯನ್ನು ನೀರಿಗೆ ಮುಳುಗಿಸಿ ಉಸಿರು ತೆಗೆದುಕೊಳ್ಳಲು ಮಾತ್ರ ಮುಖ ಒಂದು ಬದಿಗೆ ವಾಲಿಸಿ ಉಸಿರೆಳೆದುಕೊಂಡು ತಕ್ಷಣ ಮತ್ತೆ ಅರ್ಧತಲೆ ಮುಳುಗಿಸಿ ಇನ್ನೊಂದು ದಿಕ್ಕಿಗೆ ತಲೆ ವಾಲಿಸಿ ಉಸಿರೆಳೆದುಕೊಳ್ಳುವುದು. ಆಗ ಕೈಕಾಲು ಬಡಿಯುವುದನ್ನು ನಿಲ್ಲಿಸುವಂತಿಲ್ಲ! ಇದನ್ನು ಒಂದೆರಡು ಬಾರಿ ಮಾಡುವಷ್ಟರಲ್ಲಿ ನಾನು ಸಾಕಷ್ಟು ನೀರು ಕುಡಿದದ್ದಾಯಿತು, ಅಲ್ಲದೆ ತಲೆ ಮುಳುಗಿಸುವಾಗ ಕೈಕಾಲು ಬಡಿಯುವುದು ನಿಲ್ಲುತ್ತಿತ್ತು; ಕೈಕಾಲು ಬಡಿಯುತ್ತಿದ್ದರೆ ತಲೆ ಮುಳುಗುತ್ತಿರಲಿಲ್ಲ.ಒಳ್ಳೇ ಪೇಚಾಟಕ್ಕೆ ಬಂತು. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ. ಇದನ್ನು ಆದಷ್ಟು ಬೇಗನೆ ಕಲಿಯದಿದ್ದರೆ ಈಜಲು ಸಾಧ್ಯವಿಲ್ಲ ಎಂಬ ಜ್ಞಾನೋದಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಮಾಡಿದ ಮೇಲೆ ಮಾಸ್ತರಿಗೆ ದುಂಬಾಲು ಬಿದ್ದು ಮುಂದಿನ ಪಾಠ ಹೇಳಿ ಕೊಡಿ ಅಂತ ಅವರನ್ನು ಪೀಡಿಸಿದೆ. ಮೊದಲಿನಿಂದಲೂ ನನಗೆ ತಾಳ್ಮೆ ಸ್ವಲ್ಪ ಕಡಿಮೆಯೇ. ಎಲ್ಲವೂ ಬೇಗ ಬೇಗ ಆಗಬೇಕು. ಆಗೆಲ್ಲಾ ‘ಏನು ಆರು ತಿಂಗಳಿಗೆ ಹುಟ್ಟಿದ ಹಾಗೆ ಮಾಡುತ್ತಿ?’ ಎನ್ನುವ ವಾಡಿಕೆಯ ಚುಚ್ಚುಮಾತು ನನ್ನೆದೆಗೆ ಚುಚ್ಚಿದರೂ ನಾನದನ್ನು ‘ಡೋಂಟ್ ಕೇರ್’ ಮಾಡುತ್ತಿದ್ದೆ! ಸರಿ ಮುಂದಿನ ಪಾಠ: ಎರಡು ಪೊಟ್ಟು ತೆಂಗಿನಕಾಯಿಗಳನ್ನು ಒಟ್ಟಿಗೆ ಚಿಕ್ಕ ಹಗ್ಗದ ಸಹಾಯದಿಂದ ಜೋಡಿಸಿ ಹೊಟ್ಟೆಗೆ ಆಧಾರವಾಗಿಟ್ಟುಕೊಂಡು (ಇವು ನಮ್ಮನ್ನು ನೀರಲ್ಲಿ ಮುಳುಗದಂತೆ ತಡೆಯುತ್ತವೆ ಮತ್ತು ಇದು ಈಜು ಕಲಿಯಲು ಎಲ್ಲರೂ ಬಳಸುತ್ತಿದ್ದ ಅತೀ ಸಾಮಾನ್ಯ ಸಾಧನ, ಅದಿಲ್ಲದಿದ್ದರೆ ಉದ್ದದ ಬಾಳೆದಿಂಡೂ ಇದೆ ರೀತಿ ಆಸರೆಯಾಗುತ್ತಿತ್ತು.) ಕಡಿಮೆ ಆಳದ ನೀರಿನಲ್ಲಿ ಈಜುವ ಅಭ್ಯಾಸ ಮಾಡುವುದು. ಆಗ ಚೆನ್ನಾಗಿ ಈಜು ಗೊತ್ತಿದ್ದ ಇತರ ಮಕ್ಕಳು ನಮ್ಮ ಸುತ್ತ ಈಜುತ್ತಾ ಹುರಿದುಂಬಿಸುತ್ತಿದ್ದರು. ಕೆಲವೊಮ್ಮೆ ನಮಗೆ ಅರಿವೇ ಆಗದಂತೆ ಈ ಪೊಟ್ಟು ತೆಂಗಿನಕಾಯಿಗಳನ್ನು ತಪ್ಪಿಸಿ ನಾವು ಈಜುವಂತೆ ಮಾಡುತ್ತಿದ್ದರು. ಆದರೆ ಈ ಆಸರೆ ತಪ್ಪಿದೆ ಎಂದು ತಿಳಿದ ತಕ್ಷಣ ಕೈಕಾಲು ಬಡಿಯುವುದು ನಿಂತು ಮುಳುಗುವ ಭಯದಲ್ಲಿ ಇನ್ನಷ್ಟು ನೀರು ಕುಡಿದು ದಡದ ಕಡೆಗೆ ಈಜುವುದಲ್ಲ, ಹಾರುವುದು ಎಂದರೂ ಸರಿಯೇ – ಆಗುತ್ತಿತ್ತು. ಹೀಗೆ ನಿಧಾನವಾಗಿ ಈಜುವುದು ಅಭ್ಯಾಸವಾಯಿತು. ಆಮೇಲೆ ಕೇಳಲುಂಟೇ! ‘ಭಳಿರೇ ಪರಾಕ್ರಮ ಕಂಥೀರವ’ ಎಂದು ‘ಡೈವ್’ ಮಾಡುವುದರಿಂದ ಹಿಡಿದು ಫ್ರೀ-ಸ್ಟೈಲ್, ಬ್ಯಾಕ್ ಸ್ಟ್ರೋಕ್ ಇತ್ಯಾದಿಗಳಲ್ಲಿ ಪಳಗಿದ್ದುಂಟು. ಆದರೆ ಇದನ್ನು ಸ್ಪರ್ಧೆಯ ಮಟ್ಟಕ್ಕೆ ಮುಂದುವರಿಸುವುದಕ್ಕಾಗಲಿಲ್ಲ. ಇದರಿಂದ ಊರೇನೂ ಮುಳುಗಿಹೋಗಿಲ್ಲ ಅಥವಾ ದೊಡ್ಡ ನಷ್ಟ ಯಾರಿಗೂ ಏನೂ ಇಲ್ಲ. ಇರಲಿ ಬಿಡಿ. ನನ್ನ ಜೊತೆ ಈಜಿಗೆ ಸಾಥ್ ಕೊಡುತ್ತಿದ್ದ ಒಬ್ಬ ಸಹಪಾಠಿ ಶೇಕ್ ಹಸನ್ ಸಾಹೇಬ್. ಹೀಗೆ ಹೇಳಿದರೆ ಹೆಚ್ಚಿನವರಿಗೆ ತಿಳಿಯಲಾರದು. ‘ವಿಟ್ಲ ಹಸನ್’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ನಾನು ಅವನ ಮನೆಗೆ, ಅವನು ನಮ್ಮ ಮನೆಗೆ ಬಂದು ಹೋಗುವುದು ಮಾಮೂಲಾಗಿತ್ತು. ಅವನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆ ಕಾಲದಲ್ಲಿ ನಮ್ಮಿಬ್ಬರಿಗೂ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ಪರಸ್ಪರ ಪ್ರೀತಿ, ವಿಶ್ವಾಸಗಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತದ್ದು ಒಂದು ಸುಖಾನುಭವ. ಜೊತೆಗೆ ಹಸನ್ ಕೂಡಾ ನನ್ನೊಂದಿಗೆ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ. ನಾವು ರಿಹರ್ಸಲ್-ಗೂ ಜೊತೆಯಲ್ಲೇ ಹೋಗುತ್ತಿದ್ದೆವು. ನಾವು ಹತ್ತನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ (ಆಗೆಲ್ಲಾ ರಾತ್ರಿಪೂರ್ತಿ ಬೆಳಗಾಗುವ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾತ್ರಿ ಎರಡರ ಬಳಿಕ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹೀಗೆ ನಡೆಯುತ್ತಿತ್ತು. ಹಳ್ಳಿಯ ಜನರು ಇದಕ್ಕೆ ತಯಾರಾಗಿಯೇ ಬರುತ್ತಿದ್ದರು.) ನಮ್ಮ ಮಾಸ್ತರ್ ಮಹಾಬಲ ರೈ ಅವರು ಬರೆದು ನಿರ್ದೇಶಿಸಿದ ತುಳು ನಾಟಕ ‘ಲಾಟ್ರಿ ಲಕ್ಕಪ್ಪೆ ದಿವಾಳಿ ದೂಮಪ್ಪೆ’ ದಲ್ಲಿ ನನ್ನದು ಲಕ್ಕಪ್ಪನ ಪಾತ್ರ. ದೂಮಪ್ಪನ ಪಾತ್ರ ಬಹುಶಃ ಹಸನ್ ಮಾಡಿದ್ದ ಅಂತ ನೆನಪು. ಇರಲಿ, ತಿರುಗಿ ಮತ್ತೆ ನನ್ನ ಈಜು ಪುರಾಣಕ್ಕೆ ಬರೋಣ. ನಾನು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಸನ್ ಮನೆಗೆ ಬಂದು (ನಮ್ಮ ಮನೆಯಲ್ಲಿ ಏನೋ ಒಂದು ಸುಳ್ಳು ಹೇಳಿ; ಏನದು ಸುಳ್ಳು ಸಬೂಬು ಈಗ ನೆನಪಾಗುತ್ತಿಲ್ಲ) ಇನ್ನೂ ಮಲಗಿಯೇ ಇರುತ್ತಿದ್ದವನನ್ನು ಎಬ್ಬಿಸಿ, ಬಳಿಕ ಕಾರಿನ ಹಳೆ ಟ್ಯೂಬ್ (ಅದು ಅವನ ಮಾವನ ಕಾರಿನದ್ದು) ಹಿಡ್ಕೊಂಡು ನಿದ್ದೆಗಣ್ಣಿನಲ್ಲಿ ಒಂದು ಕಿಲೋ ಮೀಟರ್ ನಡ್ಕೊಂಡು ಹೋಗಿ ಈಜು ಕ್ಲಾಸಿಗೆ ಮೊದಲು ಹಾಜರು ಹಾಕುತ್ತಿದ್ದೆವು. ಪೊಟ್ಟು ತೆಂಗಿನ ಕಾಯಿ, ಬಾಳೆದಿಂಡುಗಳಿಂದ ಮೇಲ್-ಬಡ್ತಿ ಕಾರಿನ ಹಳೆ ಟ್ಯೂಬ್. ಇದರ ಮಧ್ಯದಲ್ಲಿ ಕೂತರೆ ಯಾವ ಭಯ, ಸುಸ್ತು ಇಲ್ಲದೆ ಬೇಕಾದಷ್ಟು ಹೊತ್ತು ನೀರಿನಲ್ಲಿ ಖುಷಿ ಬಂದಂತೆ ವಿಹರಿಸಬಹುದಾಗಿತ್ತು. ಆದರೆ ನಮ್ಮ ಶೆಟ್ಟಿಗಾರ್ ಮಾಸ್ತರಿಗೆ ಇದನ್ನು ಕಂಡರೆ ಅಷ್ಟಕ್ಕಷ್ಟೇ. ಮಕ್ಕಳು ಈಜು ಕಲಿಯುವುದು ಬಿಟ್ಟು ಜಲವಿಹಾರ ಮಾಡುತ್ತಾ ಕಾಲಕಳೆಯುತ್ತಾರೆ ಎಂದು ಅವರಿಗೆ ಅನಿಸುತ್ತಿತ್ತು. ಮತ್ತು ಅದು ಸತ್ಯವೂ ಆಗಿತ್ತು.ಅಜಿತ್ ಕುಮಾರ್ ರೈ ಕೂಡಾ ಈ ಈಜು ಕ್ಲಾಸಿನ ಸದಸ್ಯನೇ. ಇವರಿಬ್ಬರು ಮತ್ತು ಗಣಪತಿ ಭಟ್ (ಉಳಿದವರ ಹೆಸರು ನೆನಪಾಗುತ್ತಿಲ್ಲ) ಮೈಸೂರು ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಟ್ರೋಫಿ ಹಿಡಿದು ಮೆರೆದ ಘಟನೆ ಒಂದು ರೋಚಕ ಕಥೆ. ಈ ಕೋಟಿಕೆರೆಗೆ ಬರಬೇಕಾದರೆ ನನಗೆ ಎರಡು ದಾರಿಗಳಿದ್ದವು. ಒಂದು ಜಟಾಧಾರಿ ಕೆರೆದಂಡೆ ಮೇಲೆ ಸಾಗಿ ಸದಾ ನೀರು ಹರಿಯುವ ಒಂದು ಸಣ್ಣ ತೋಡಿನಲ್ಲಿ ಸ್ವಲ್ಪ ದೂರ ನಡೆದು ದಾಟಿ ಬರುವುದು – ಇದು ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು – ಮಳೆ ಬರುತ್ತಿದ್ದ ದಿನಗಳಲ್ಲೂ ಎಷ್ಟೋ ಬಾರಿ ನಾನು ಈಜು ಹೊಡೆಯುತ್ತಿದ್ದೆ. ಆಗೆಲ್ಲಾ ಸಾಮಾನ್ಯವಾಗಿ ನಾನು ಒಂಟಿಯೇ. ಇನ್ನೊಂದು ದಾರಿ ನಮ್ಮ ಹೈಸ್ಕೂಲ್ ಬದಿಯಿಂದ ಗದ್ದೆಗಳನ್ನು ಹಾದು ನನ್ನ ಸಹಪಾಠಿ ಸುಬ್ರಹ್ಮಣ್ಯ ಹೊಳ್ಳನ (ಪರಮೇಶ್ವರ ಹೊಳ್ಳರ ಖಾಸಾ ತಮ್ಮ – ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ದುರದೃಷ್ಟವಶಾತ್ ಬೈಕ್ ಆಕ್ಸಿಡೆಂಟ್-ನಲ್ಲಿ ತೀರಿಹೋದ) ಮನೆಗೆ ಬಂದು ಅವನೊಂದಿಗೆ ಕೋಟಿಕೆರೆಗೆ ಬರುವ ಬಳಸು ದಾರಿ. ಅವನು ನನ್ನೊಂದಿಗೆ ಬರುತ್ತಾನೆ ಎನ್ನುವ ಕಾರಣಕ್ಕೆ ನಾನು ಈ ಬಳಸು ದಾರಿಯನ್ನೇ ಹೆಚ್ಚು ನೆಚ್ಚಿದ್ದೆ. ಈಜುವಿಕೆಯಲ್ಲಿ ಸಾಧನೆ ಮಾಡಿದ ನನ್ನ ಇನ್ನೊಬ್ಬ ಸಹಪಾಠಿ ಕಾಶೀಮಟದ ಗಣಪತಿ ಭಟ್. ಇವನೊಂದಿಗೆ ತಳುಕುಹಾಕಿಕೊಂಡ ನೆನಪು ನಾನು ಏಳನೆಯ ತರಗತಿಯಲ್ಲಿ ಇದ್ದಾಗ ಜೀವಂಧರ ಮಾಷ್ಟ್ರ ನಿರ್ದೇಶನದ ‘ಕುರುಕ್ಷೇತ್ರ’ ನಾಟಕ. ಅದರಲ್ಲಿ ಗಣಪತಿಯದ್ದು ಕೌರವನ ಪಾತ್ರ, ನನ್ನದು ಬಲರಾಮನ ಪಾತ್ರ. ನಾಟಕದ ತರಬೇತಿ ಸಮಯದಲ್ಲಿ ಮಾತು ಮರೆತರೆ ಜೀವಂಧರ ಮಾಸ್ತರಿಗೆ (ನಮ್ಮ ಊರಿನ ಎರಡೋ ಮೂರೋ ಜೈನ ಮನೆಗಳಲ್ಲಿ ಇವರದೂ ಒಂದು; ಇನ್ನೊಂದು ಜೈನ ಬಸದಿಯ ಇಂದ್ರ ಅವರದು.) ಅಸಾಧ್ಯ ಸಿಟ್ಟು. ಕೌರವನ ಗದೆ, ಬಲರಾಮನ ಹಲಾಯುಧಗಳನ್ನು ನಾವು ನಮ್ಮ ನಮ್ಮ ಕೈಯಲ್ಲಿ ಇದೆ ಎಂದೇ ಭಾವಿಸಿಕೊಂಡು ರಿಹರ್ಸಲ್ ನಡೆಸುತ್ತಿದ್ದೆವು. ನಾಟಕದ ದಿನ ನನಗೆ ಸಣ್ಣಗೆ ಜ್ವರ. ಇದು ಮಾಸ್ತರಿಗೆ ಗೊತ್ತಾದರೆ ಫಜೀತಿ ಎಂದು ಸಾಧ್ಯವಾದಷ್ಟು ಉಮೇದು ತೋರಿಸುತ್ತಿದ್ದೆ. ಮೇಕಪ್ ಎಲ್ಲಾ ಮುಗಿದು ನಾಟಕ ನಡೆಯುತ್ತಿದೆ. ಆದರೆ ನನ್ನ ಹಲಾಯುಧ ಮಾತ್ರ ಕಾಣೆಯಾಗಿದೆ; ಅದನ್ನು ತಂದೇ ಇಲ್ಲವೋ ಅಥವಾ ಉಳಿದ ಪರಿಕರಗಳೆಡೆಯಲ್ಲಿ ಎಲ್ಲಿ ಮರೆಯಾಗಿತ್ತೋ

ನಾನು ಈಜು ಕಲಿತ ಪ್ರಸಂಗ: Read Post »

ಕಾವ್ಯಯಾನ

ಕಾವ್ಯಯಾನ

ಅವರು-ಇವರು ಕೆ.ಎ. ಎಂ. ಅನ್ಸಾರಿ ಮುಸ್ಸಂಜೆಯ ಹೊತ್ತುಮನೆಯತ್ತಹೆಜ್ಜೆಯಿಡಲುಮಡದಿಯಬಾಡಿದ ಮುಖ ದರ್ಶನ… ಗೊತ್ತಾ ಇವರು ಇನ್ನಿಲ್ಲವಾದರಂತೆ…ನಾನುಇನ್ನಾ ಲಿಲ್ಲಾಹ್.. ಎನ್ನುವಾಗಮೊಗದಲ್ಲಿ ನಗುವ ಕಂಡ ಅವಳು…ನಗಬಾರದೆಂದಳು… ಒಂದೆರಡು ವರುಷಗಳ ಹಿಂದೆಇವರು ಅವರನ್ನುಕೊಂದಿ ದ್ದರು..ಸಾವಿಗೆ ಸಂಭ್ರಮಿಸಬಾರದು.. ದಫನ ವಾಗಿರಬಹುದೇ..ನಾ ಕೇಳಿದ ಪ್ರಶ್ನೆ..ಹೌದು. ಈಗ ಮುಗಿದಿರಬಹುದೆನುವಉತ್ತರ.. ಇವರು-ಅವರುಇಬ್ಬರೂ ಊರಿನವರು ..ಅದೇನೋ ಜಗಳ ತಾರಕಕ್ಕೇರಿದಾಗಇರಿತದಿಂದ ಅವರುಪರಲೋಕ ತಲುಪಿದ್ದರು..ಇಂದು ಇವರ ಸರದಿ.. ಮೆಲ್ಲನೆ ಮಸೀದಿಯತ್ತ ಹೆಜ್ಜೆ ಹಾಕಿದೆ..ಪಕ್ಕದಲೇ ಖಬರಸ್ಥಾನ.ಗುಂಪು ಕಟ್ಟಿ ನಡೆದ ಇವರುಒಬ್ಬಂಟಿ ಮಲಗಿದ್ದರು..ಹೊತ್ತೊಯ್ದವರು ಮಣ್ಣು ಮಾಡಿಮರಳಿದ್ದರು.. ಬಡ-ಸಿರಿವಂತ ರೆಲ್ಲರೂಮಲಗುವ ತಾಣವಿದು..ಇವರೀಗ ಒಬ್ಬಂಟಿ..ಸುಮ್ಮನೇ ಪಕ್ಕದಲಿ ಯಾರು ಮಲಗಿರುವುದೆಂದುಕುತೂಹಲದಿ ನೋಡಿದೆ… ಹೌದು..ಪಕ್ಕದಲಿ ಅವರ ಹೆಸರು ಕೆತ್ತಿದ ಕಲ್ಲುನಗುವಂತೆ ಕಾಣಿಸಿತು..ಅಂದಿನ ಶತ್ರುಗಳು ಇಂದುಅಕ್ಕ-ಪಕ್ಕದಲಿ ಮಲಗಿದ್ದರು ..!!! *****************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬರೆಯದಿರಲಾರೆ…. ನಾಗರಾಜ ಹರಪನಹಳ್ಳಿ ಅಕ್ಷರಗಳು ಆತ್ಮಹತ್ಯೆ ಮಾಡಿಕೊಂಡಿವೆಕೆಲವರಿಗೆ ಮಾರಾಟವಾಗಿವೆ ಹಸಿ ಮಾಂಸಲ ದಂಧೆಗೆಗೊತ್ತಾ ನಿನಗೆ?ಕೆಲವೆಡೆ ಫತ್ವಾ ಇದೆ ಬೆಳಕಿಗೆ ಇನ್ನೇನಾಗಬಹುದು??ಪನ್ಸಾರೆ, ಕಲಬುರ್ಗಿ, ಗೌರಿ ಕೊಂದ ನಾಡಿನಲ್ಲಿ??ಬರೆವ ಕೈಗಳ,ನಿಜದ ಮಾತಿಗೆ ಬೀಗ ಜಡಿದ ಮೇಲೆ ??ಕೊಲೆಯಾಗಿದೆ ಅಭಿವ್ಯಕ್ತಿ! ಗೊತ್ತಾ ನಿನಗೆ ??ಅಮಾಸ, ಠೊಣ್ಣಿಯರ ಹಸಿವು ಹಿಂಗಿಲ್ಲಸಾಕವ್ವ ಬದುಕಿನ ಜಂಜಾಟ ನಿಂತಿಲ್ಲ; ಹರಕು ಸೀರೆ ,ಮುರಿದ ಮನೆ ಕಟ್ಟಲಾಗಿಲ್ಲಐತ ಪೀಂಚಲು ಬದುಕ ಕಟ್ಟಲು ಅಲೆದಾಡುತ್ತಿದ್ದಾರೆಚೋಮುನ ಭೂಮಿ ಹೊಂದುವ ಕನಸು ಕನಸಾಗಿಯೇ ಇದೆ…ನಾಡದೊರೆಯ ಕಣ್ಣು ಬದಲಾಗಿಲ್ಲ ಹೀಗಿರುವಾಗ…ನನಗೆ ನಾಚಿಕೆಯಾಗುತ್ತದೆಮಳೆ ನದಿ ಕಾಡು ಬೆಟ್ಟ ಕಡಲು ದಂಡೆ ಕಾಮನಬಿಲ್ಲನ ಬಗ್ಗೆ ಕವಿತೆ ಬರೆದದ್ದಕ್ಕೆ… ಇನ್ನು ಬರೆಯದಿರಲಾರೆ ಮನುಷ್ಯರ ಸಂಚುಗಳ ಬಗ್ಗೆಆತ್ಮವಂಚನೆಗಳ ಬಗ್ಗೆಹಸಿದವರ ಬಗ್ಗೆಬರೆಯದೇ ಇರಲಾರೆ ಹಾಗೆ ಬರೆಯದೇ ನಾಮೌನಿಯಾದರೆ ; ಅಕ್ಷರಗಳ ಯಜಮಾನಿಕೆಗೆ ಒತ್ತೆ ಇಡದೆಅಕ್ಷರಗಳ ಜೊತೆ ಬದುಕುತ್ತೇನೆ‌ಇಲ್ಲವೇ …… *****************************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

‘ಬಾಳ ಬಣ್ಣ’  ವಸುಂಧರಾ ಕದಲೂರು       ಕುಸುಮಳಿಗೆ ವಿವಾಹದ ಏಳು ವರ್ಷದ ಅನಂತರ ಹುಟ್ಟಿದವನೇ ‘ಅಮರಕಿಶೋರ’. ಕುಸುಮಾಳದ್ದು ಮೂವತ್ತರ ಹರಯದಲ್ಲಾದ ವಿವಾಹ.    ತಡವಾದ ವಿವಾಹ ಜೊತೆಗೆ ತಡವಾಗಿಯೇ ಮಗು ಹುಟ್ಟಿದ್ದು. ಈ ಕಾರಣಕ್ಕೋ ಏನೋ ಮಗುವನ್ನು ಐದು ವರ್ಷ ಆಗೋವರೆಗೂ ನೆಲಕ್ಕೆ ಬಿಟ್ಟರೆಎಲ್ಲಿ ನವೆದು ಹೋಗುವುದೋ ಎಂದುಕೊಂಡು ಕೆಳಕ್ಕೆ ಬಿಡದೇ ಕಂಕುಳಲ್ಲಿಟ್ಟುಕೊಂಡು ಸಾಕಿದಳು. ಕಣ್ಣನ್ನು ರೆಪ್ಪೆಗಳು ಹೇಗೆ ಮುಚ್ಚಟೆಯಿಂದ ರಕ್ಷಿಸುತ್ತವೆಯೋ ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಳು.         ಮಗುವಿಗೆ ಹಸಿವಾಗಿ ಅದು ‘ಆ…’ ಎಂದು ಬಾಯ್ಬಿಡುವ ಮೊದಲೇ ತುಪ್ಪದಲ್ಲೇ ಅನ್ನ ಕಲಸಿ ಬಾಯಿಗಿಟ್ಟು ತಿನಿಸುತ್ತಿದ್ದಳು. ಯಾವುದಾದರೂ ಆಟದ ಸಾಮಾನು ಬೇಕೆನ್ನುತ್ತಾ ಕೈಚಾಚುವ ಮೊದಲೇ ಕೊಂಡು ಅದನ್ನವನ ಕೈಗಿತ್ತು ಸಂಭ್ರಮಿಸುತ್ತಿದ್ದಳು. ಆಕೆಯ ಪ್ರೀತಿಯಲ್ಲಿ  ಶ್ರೀಮಂತಿಕೆಯ ಅದ್ದೂರಿತನ ಇಲ್ಲದಿದ್ದರೂ, ಭಾವ ತೀವ್ರತೆಯ ಆಡಂಬರಕ್ಕೇನೂ ಕೊರತೆಯಿರಲಿಲ್ಲ. ಅವಳ ವಾರಿಗೆಯಲ್ಲೇ ಹೆತ್ತವರು ತಮ್ಮ ಮಕ್ಕಳನ್ನು ಎರಡು- ಎರಡೂವರೆ ವರ್ಷಕ್ಕೇ ಮಾಂಟೆಸ್ಸರಿಗೆ ಸೇರಿಸಿದರೆ, ಈಕೆ ಮಾತ್ರ ‘ಮನೆಯೇ ಮೊದಲ ಪಾಠಶಾಲೆ’ ಎಂದು ನಂಬಿ, ‘ಅಆಇಈ’, ‘ಎಬಿಸಿಡಿ’, ‘1234’ ಗಳ ಜೊತೆಗೆ ನರ್ಸರಿ ರೈಮ್ಸ್, ದೇವರ ನಾಮ, ಶ್ಲೋಕಗಳನ್ನು ಅಮರನಿಗೆ ಕಲಿಸುತ್ತಾ, ಅವನ ತೊದಲು ಬಾಯಿಂದ ಮತ್ತೆಮತ್ತೆ ಅದನ್ನು ಹೇಳಿಸಿ, ಮುದ್ದು ಮುದ್ದು ಉಚ್ಚಾರಣೆಗಳನು ಕೇಳಿ, ಮಗನೊಡನೆ ತಾನೂ ಮತ್ತೊಂದು ಮಗುವಾಗಿ ಆಡುತ್ತಾ ಖುಷಿಪಡುತ್ತಾ ದಿನದೂಡುತ್ತಿದ್ದಳು.    ಅಮ್ಮ ಹೇಳಿಕೊಡುವ ಪಾಠಗಳನ್ನು ಕಲಿಯುವುದರಲ್ಲಿ      ಚುರುಕಾಗಿದ್ದ ಅಮರನು, ಬಣ್ಣಗಳನ್ನು ಗುರುತಿಸಲು ಮಾತ್ರ ಪರದಾಡುತ್ತಿದ್ದ. ಅವನ ಈ ಸಮಸ್ಯೆ ಅರಿವಿಗೆ ಬಂದದ್ದೂ ಸಹ, ಕುಸುಮಾಳು ಅವನಿಗೆ ಕಲರ್ಸ್ಗಳ ಕುರಿತು ಪಾಠ ಮಾಡುವಾಗ. ಕಾಮನ ಬಿಲ್ಲಿನ ಬಣ್ಣಗಳ ಚಾರ್ಟನ್ನು ಗುರುತಿಸುವಾಗ ಅಮರ ಪದೇಪದೇ ವಿಫಲನಾಗುತ್ತಿದ್ದ. ಹಸಿರು, ಕೆಂಪು, ಹಸಿರು, ಹಳದಿ ಹೀಗೆ ಕೆಲವು ಛಾಯೆಯ ಬಣ್ಣಗಳನ್ನು ಗುರುತಿಸಲು ಕಷ್ಟಪಡುತ್ತಿದ್ದ. ಪದೇ ಪದೇ ತಿದ್ದಿ ಹೇಳಿಕೊಟ್ಟರೂ ಈ ಕೆಲವು ಬಣ್ಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅಸಮರ್ಥನಾಗುತ್ತಿದ್ದ.    ಅಮರನು ಪದೇ ಪದೇ ತನ್ನನ್ನು ರೇಗಿಸಲು ಬೇಕೆಂದೇ ಹೀಗೆ ತುಂಟಾಟ ಮಾಡುತ್ತಿರಬಹುದಾ..? ಎಂದು ಆರಂಭದಲ್ಲಿ ನಿರ್ಲಕ್ಷಿಸಿದ್ದ ಕುಸುಮಾ, ಅದು ಆಟವಲ್ಲ, ಆತನ ಸಮಸ್ಯೆ ಎಂದು ತಿಳಿದು ಚಿಂತೆಗೆ ಒಳಗಾದಳು.  ಸಮಸ್ಯೆ ಸ್ವರೂಪ ತಿಳಿಯುತ್ತಿದ್ದಂತೇ ನೇತ್ರತಜ್ಞರ ಬಳಿ ಮಗುವನ್ನು ಕರೆದುಕೊಂಡು ಹೋದಳು.    ಮಗುವಿನ ಕಣ್ಣುಗಳನ್ನು ಅತ್ಯಾಧುನಿಕ ಉಪಕರಣಗಳ ಮೂಲಕ ಪರೀಕ್ಷಿಸಿದ ನೇತ್ರತಜ್ಞರು ‘ನೋಡಿ ಕುಸುಮ, ನಿಮ್ಮ ಮಗು ಅಮರನಿಗೆ ‘ಬಣ್ಣಗುರುಡು’ತನ ಅಂದರೆ colour blindness ಇದೆ’ ಎಂದು ಸ್ಪಷ್ಟಪಡಿಸಿದರು. ವಿಷಯ ತಿಳಿದು ಆಘಾತಕ್ಕೊಳಗಾದ ಕುಸುಮಾ ತನ್ನ ಮುದ್ದು ಮಗುವಿನ ಬದುಕು ಹೀಗೆ ಬಣ್ಣಗೆಟ್ಟಿತೇ ಎಂದು ಶೋಕಿಸಿದಳು.       ಮನೋವ್ಯಥೆಯಿಂದ ದುಃಖಿಸುತ್ತಿದ್ದ ಕುಸುಮಾಳನ್ನು ಸಂತೈಸಿದ ವೈದ್ಯರು, ಆಕೆಗೆ ‘ಬಣ್ಣಗುರುಡುತನ’ದ ಬಗ್ಗೆ ಕೂಲಂಕಷವಾಗಿ ವಿವರಿಸಿ, ‘’ಕೆಲವರಿಗೆ ಇಂತಹ ಕೆಲವು ಅಪರೂಪದ ಅನುವಂಶೀಯ ಕಾಯಿಲೆಗಳು ಬರುತ್ತವೆ. ಹಾಗೆ ಬರುವುದು ಯಾರದ್ದೋ ಅಪರಾಧದಿಂದಲ್ಲ. ನೀವು ಯಾವ ರೀತಿಯಲ್ಲೂ ಅಧೀರರಾಗಬೇಡಿ’’ ಎಂದು ಧೈರ್ಯ ತುಂಬಿದರು. ಜೊತೆಗೆ ಒಂದಷ್ಟು ಸಲಹೆ ನೀಡಿ ಮನೆಗೆ ಕಳುಹಿಸಿಕೊಟ್ಟರು.     ಆಸ್ಪತ್ರೆಯಿಂದ ಮನೆಗೆ ಮರಳಿದ ಕುಸುಮಾಳಿಗೆ, ಸಮಾಧಾನವೇ ಆಗಲಿಲ್ಲ. ಮಕ್ಕಳಿಲ್ಲದೇ ಹಲವು ವರ್ಷ ಬಣ್ಣಗೆಟ್ಟಿದ್ದ ತನ್ನ ಬದುಕಿಗೆ ಉಲ್ಲಾಸದ ಹೊಸಬೆಳಕನ್ನು ತಂದುಕೊಟ್ಟ ತನ್ನ ಮುದ್ದುಕಂದನ ಬದುಕು ಹೀಗೆ ವರ್ಣಹೀನವಾಯಿತಲ್ಲಾ… ಎಂದು ರೋಧಿಸಿದಳು.      ವೈದ್ಯರ ಸಲಹೆಯಂತೆ, ನಾಕಾರು ದಿನಗಳಾದ ಮೇಲೆ ಅಮರನಿಗೆಂದು ವಿಶೇಷವಾಗಿ ಆರ್ಡರ್ಮಾಡಿಸಿದ್ದ ಹೊಸ ಕನ್ನಡಕ ತರಲು ಹೋದಾಗ, “ಡಾಕ್ಟರ್ ‘ಡೇ ವಿಸಿಟಿಂಗ್’ ಮೇಲೆ ಆಸ್ಪತ್ರೆ ರೌಂಡ್ಸ್ ಗೆ ಹೋಗಿದ್ದಾರೆ. ಪ್ಲೀಸ್ ವೇಯ್ಟ್ ಮಾಡಿ” ಎಂದು ರಿಸೆಪ್ಷನಿಸ್ಟ್ ಹುಡುಗಿ ತಿಳಿಸಿದಳು. ಡಾಕ್ಟರ್ ಬರುವುದು ತಡವೆಂದು ತಿಳಿದ ಮೇಲೆ ಕುಸುಮಾ ವೇಯಿಟಿಂಗ್ ರೂಮಿನಲ್ಲಿ ಹೋಗಿ ಕುಳಿತಳು.              ಪದೇ ಪದೇ ಮಗನ ಪರಿಸ್ಥಿತಿಯ ಬಗ್ಗೆಯೇ ಯೋಚಿಸುತ್ತಾ ಒತ್ತಿ ಬರುತ್ತಿದ್ದ ದುಃಖಕ್ಕೆ ಬಿಕ್ಕಳಿಸುತ್ತಾ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದುಕೊಂಡು ತಲೆತಗ್ಗಿಸಿ ಕುಳಿತಿದ್ದಳು. ವೇಯ್ಟಿಂಗ್ ರೂಮಿನಲ್ಲಿ ಇವಳಂತೆೇ ಡಾಕ್ಟರರನ್ನು ಕಾಣಲು ಬಂದಿದ್ದ ಹಲವರಿದ್ದರು.   ಸಣ್ಣವಯಸ್ಸಿನವರಾಗಿದ್ದ ಒಂದು ದಂಪತಿ ಜೋಡಿಯು,  ಕುಸುಮಾ ದುಃಖಿಸುವುದನ್ನು ನೋಡಿ ಹತ್ತಿರಬಂದು “ಅಳುತ್ತಿರುವುದು ಏಕೆ ?”ಎಂದು ಸಾಧಾನವಾಗಿ ಕಾರಣ ವಿಚಾರಿಸಿದರು. ಅವರ ಸಂತೈಸುವಿಕೆಯ ದನಿಯ ಮಾಂತ್ರಿಕ ಶಕ್ತಿಗೆ ಸಮಾಧಾನಗೊಂಡ ಕುಸುಮಾ ಬಿಕ್ಕಳಿಸುತ್ತಲೇ ತನ್ನ ದುಃಖದ ಕಾರಣ ತಿಳಿಸಿದಳು. ಆ ದಂಪತಿಗಳು ಆಕೆಯನ್ನು ಸಮಾಧಾನಿಸುತ್ತಾ, ‘’ನೋಡಿ, ಹೀಗೆ ಹೇಳುತ್ತಿದ್ದೇವೆಂದು ತಪ್ಪು ತಿಳಿಯಬೇಡಿ. ನಾವು ನಿಮಗಿಂತ ಸಣ್ಣವರೇ ಇರಬಹುದು. ಆದರೆ, ಬರೀ ಶೋಕಿಸುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಮಾತ್ರ ಹೇಳಬಲ್ಲೆವು. ಸುಮ್ಮನೆ ಯೋಚಿಸುತ್ತಾ ಬೇಸರಪಡುತ್ತಾ ಕುಳಿತುಕೊಳ್ಳಬೇಡಿ. ವಿಜ್ಞಾನ ಮುಂದುವರೆದಿದೆ. ಹಲವು ಸಾಧನ- ಸಾಧ್ಯತೆಗಳಿವೆ. ನೀವು ಹೊಸ ಹುರುಪಿನಿಂದ ನಿಮ್ಮ ಮಗುವಿನ ಕನಸುಗಳಿಗೆ ಬಣ್ಣ ತುಂಬಿರಿ. ಮಗುವಿನ ಭವಿಷ್ಯವನ್ನು ವರ್ಣಹೀನ ಮಾಡಬೇಡಿ. ನಿಮ್ಮದೇನು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ” ಎಂದು ನಿಧಾನವಾಗಿ ಸಂತೈಸಿ ತಮ್ಮ ಕುರ್ಚಿ ಬಳಿ ಮರಳಿ ಹೋದರು.    ‘’ನನ್ನದೇನು ದೊಡ್ಡ ಸಮಸ್ಯೆಯಲ್ಲವಾ..?! ನನ್ನ ದುಃಖ, ಹೊಟ್ಟೆ ಸಂಕಟ ಇವರಿಗೆ ಹೇಗೆ ತಿಳಿಯಬೇಕು? ಇವರ ಬಳಿ ನಾನು ಏಕಾದರು ನನ್ನ ಮಗನ ಸಮಸ್ಯೆ ಹೇಳಿಕೊಂಡೆನೋ..?!’’ ಎಂದುಕೊಂಡು ಕುಸುಮ ತನ್ನ ನೋವಿನ ಜೊತೆಗೆ ಈಗ ಕೋಪ ಅಸಮಾಧಾನಗಳನ್ನೂ ಹೊಂದಿದವಳಾಗಿ ಕುದಿಯತೊಡಗಿದಳು.    ಅವರು ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಅವರ ಪಕ್ಕದ ಕುರ್ಚಿಯ ಬಳಿಯಲ್ಲಿ ಇರಿಸಲಾಗಿದ್ದ ಪ್ರಾಮ್ನಲ್ಲಿ ನಿದ್ರಿಸುತ್ತಿದ್ದ ಮಗುವೊಂದು ಎದ್ದು ಕಿಟಾರನೆ ಕಿರುಚಿ ರೋಧಿಸತೊಡಗಿತು. ಕುಸುಮಾಳ ಗಮನ ಆ ಮಗುವಿನತ್ತ ಹರಿಯಿತು. ಕ್ಷಣದ ಹಿಂದೆ ಯಾರನ್ನು ‘ತನ್ನ ಸಂಕಟ ಅರಿಯಲಾಗದವರು’ ಎಂದು ಮನಸ್ಸಿನಲ್ಲೇ ಜರಿದುಕೊಂಡಳೋ ಅದು ಅವರ ಮಗುವಾಗಿತ್ತು .       ದಂಪತಿಗಳು ಆ ಮಗುವನ್ನು ನಿಧಾನವಾಗಿ ಪ್ರಾಮ್ನಿಂದ ಮೇಲೆತ್ತಿಕೊಂಡು, ಬಹಳ ನಾಜೂಕಾಗಿ ಅದರ ಬಟ್ಟೆ ಸರಿಪಡಿಸುತ್ತಾ ಮೆಲ್ಲನೆ ದನಿಯಲ್ಲಿ ಸಂತೈಸಲು ತೊಡಗಿದರು. ಮಗುವಿನ ಮುಖ ತನ್ನತ್ತ ತಿರುಗುತ್ತಲೇ ಅದನ್ನು ಕಂಡ ಕುಸುಮ ಗರಬಡಿದಂತೆ ಸ್ಥಬ್ಧಳಾದಳು!        ‘ಅಮರನಿಗೆ ಕೆಲವೊಂದು ಬಣ್ಣ ಗುರುತಿಸಲು ತಿಳಿಯದಿದ್ದರೇನಂತೆ, ಕಡೇಪಕ್ಷ ಈ ಜಗತ್ತನ್ನಾದರೂ ಕಾಣುತ್ತಾನಲ್ಲಾ. ಈ ಅಮ್ಮನ ಮುಖವನ್ನಾದರೂ ನೋಡಿ ನಲಿಯುತ್ತಾನವನು. ಅವನಿಗೆ ಬಣ್ಣಗಳ ಬಗ್ಗೆ ತಿಳಿಯದಿದ್ದರೇನಂತೆ, ನನಗೆ ಅವನೇ ಕಾಮನಬಿಲ್ಲು. ನನ್ನ ಬಾಳಿಗೆ ಅವನೇ ಬಣ್ಣದೋಕುಳಿ, ಬಾಣಬಣ್ಣ’ ಎಂದು ತನ್ನ ಮನವನ್ನು ಸಂತೈಸಿಕೊಂಡಳು ಕುಸುಮ.    ಇನ್ನೂ ಅಳುತ್ತಲೇ ಇದ್ದ ಮಗುವನ್ನು ಸಂತೈಸಲು ಮನಸ್ಸಾಗಿ, ಕುಸುಮ ಅಮರನಿಗೆಂದು ಕೊಂಡಿದ್ದ ದೊಡ್ಡ ಕ್ಯಾಡ್ಬರೀಸ್ ಚಾಕ್ಲೇಟ್ ಅನ್ನು ಪರ್ಸಿನಿಂದ ತೆಗೆದು, ಅಳುತ್ತಿದ್ದ ಮಗುವಿನ ಬಳಿಗೆ ನಡೆದಳು. ಸ್ನೇಹದ ನಗೆ ಸೂಸುತ್ತಿದ್ದ ಆ ಮಗುವಿನ ಅಪ್ಪಅಮ್ಮನ ಕಣ್ಣುಗಳು ಕುಸುಮಾಳತ್ತ ತಿರುಗಿದಾಗ ಅಪಾರ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಆದರೆ, ಕಣ್ಣುಗಳಿರಬೇಕಾದ ಜಾಗದಲ್ಲಿ ಕೇವಲ ಎರಡು ಕುಳಿಗಳನ್ನು ಹೊಂದಿದ್ದ ಮಗುವನ್ನು ಅವರು ಎದೆಗವಚಿಕೊಂಡ ರೀತಿಯನ್ನು ಕಂಡಾಗ ಕುಸುಮಳಿಗೆ ‘ಎಲ್ಲಾ ತಾಯ್ತಂದೆಯರಿಗೂ ಅವರ ಮಗುವೇ ಅವರವರ ಬಾಳ ಬಣ್ಣ-  ಬಾಳ ಬೆಳಕು’ ಎಂಬ ಸತ್ಯ ಅರ್ಥವಾಗಿತ್ತು. ****************************

ಕಥಾಯಾನ Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ. ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ. ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ. ಕ್ಷಮೆ ಇರಲಿ ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ ಹೀಗೆ ಬನ್ನಿಇಲ್ಲಿ ಒಂದು ಸಮಯದಲ್ಲಿನಿಸರ್ಗದ ಮಡಿಲಾದದಟ್ಟ ಕಾಡೊಂದಿತ್ತುಗಿಡಮರ ಹೂವು ಹಣ್ಣುಗಳಿಂದನಮ್ಮೆಲ್ಲರ ತಂಗುದಾಣವಾಗಿತ್ತುಈಗ ಇದು ಬರೀ ಅವಶೇಷ ಭೂಮಿಇಲ್ಲಿಗೆ ವಸಂತನ ಆಗಮನದಸುಳಿವು ಸಿಗುವುದಿಲ್ಲಕುರುಹೂ ಕಾಣುವುದಿಲ್ಲಆದಕಾರಣ ಏನೂ ಕಾಣದಿದ್ದರೆಕ್ಷಮೆ ಇರಲಿ ಹೀಗೆ ಬನ್ನಿಕೆಲವಾರು ದಶಕಗಳ ಹಿಂದೆ ಇಲ್ಲಿವನಜೀವಿಗಳ ಸಂಭ್ರಮವಿತ್ತುಪಶು ಪಕ್ಷಿಗಳ ಜಾತ್ರೆಯಿತ್ತುಹಸಿರುವನ ಸಿರಿಯ ನಡುವೆಅವುಗಳ ಜೀವನವೂ ಹಸಿರಾಗಿತ್ತುಈಗ ಇದು ಬರೇ ಬೀಡುಗುಡ್ಡ ದಿನ್ನೆಗಳ ನಾಡು ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ ವಸಂತನ ಆಗಮನದಕಾತರ ತೋರುವ ನಿಮಗೆನಿರಾಶೆ ಮಾಡುತ್ತಿದ್ದಕ್ಕೆಕ್ಷಮೆ ಇರಲಿನೀವು ಮುಂದುವರೆಸಿಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ *** *** *** ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು. ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ! ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ. ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ. “ನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು” ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ. “ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ” ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ. ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ. “ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ” ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ. “ಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ” ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ.‌ ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?. ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ. ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ. ತಳಿರು ಮೆದ್ದ ಕೋಗಿಲೆ ಪ್ರತಿವರ್ಷದಂತೆಯುಗಾದಿಯಂದುವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗಹರಡಿದ ರಂಗಸ್ಥಳದಿನವಿಡೀ ಮನತುಂಬಿಸಾಗಿತು ಗಾನಕೊರೋನಾದ ಖಬರಿಲ್ಲಆಡಳಿತದ ಅರಿವಿಲ್ಲಕಾಲುಷ್ಯ ಕಾಣದ್ದೇ ಮಾನದಂಡಅಂದಿನಿಂದ ಇಂದಿಗೂಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ ! ** *** **** ಈ ಸಾಲುಗಳನ್ನು ನೋಡಿ! “ವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗ “ ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ. “ಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ !” ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ. ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ. ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ. ಭಾರತೀಯ ಜೀವನಶೈಲಿ ಹೀಗಿತ್ತೇ?. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || (ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ) ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ. ******************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

You cannot copy content of this page

Scroll to Top