ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಜ್ಞಾನೋದಯದ ನಿದ್ದೆ

ಕವಿತೆ ವಸುಂಧರಾ ಕದಲೂರು ನಡುರಾತ್ರಿಗಳಲಿ ಒಮ್ಮೊಮ್ಮೆ ನಿದ್ದೆಸುಳಿಯದೇ ನರಳಿ,ನರಳಾಡಿಹೊರಳಾಡುವಾಗ ಮನಕೆ ಜಗದಚಿಂತೆಯೂ ಹಿಡಿದು ಚಿಂತನೆಗೆಶುರುವಾಗುತ್ತದೆ. ಇಂತಿಪ್ಪ ಅಶಾಂತಿಗೆ ಶಾಂತಿಯಹುಡುಕುವ ಮನಸ್ಸಾಗುತ್ತದೆ. ಜ್ಞಾನೋದಯಕ್ಕೆ ಮನೆಬಿಟ್ಟುಹೋದವ ನೆನಪಾಗಿ, ನಾನೂ ಎದ್ದುಹೊರಡಿಬಿಡಬೇಕೆಂಬ ತುಡಿತ ಹೆಚ್ಚಾಗಿಪರಿತ್ಯಾಗದ ವೇದಿಕೆ ಹತ್ತಲು ಮನಇನ್ನಿಲ್ಲದಂತೆ ಸಿದ್ಧವಾಗುತ್ತದೆ. ಏಳಬೇಕೆಂದವಳ ನಡು ಬಳಸಿ,ಕೊರಳ ಸುತ್ತಿ ಅಪ್ಪಿರುವ ‘ನಾಲ್ಕುಕೈಗಳ ಬಂಧನ ಬಿಡಿಸಿಕೊಳ್ಳುವುದುಹೇಗೆ?’ ಪ್ರಶ್ನೆ ಧುತ್ತೆಂದು ಕಾಡುತ್ತದೆ. ಲೋಕೋದ್ಧಾರಕ್ಕೆ ಹೊರಡಲಾಗದೆಭವಬಂಧನಕೆ ಸಿಲುಕಿರುವ ನಾನು,ಬದ್ಧತೆಯೇ ಇಲ್ಲದ ಬುದ್ಧಿಗೇಡಿಯೇ?!ಭಯವೂ ಸುಳಿದಾಡುತ್ತದೆ. ‘ಛೇ, ಬಿಡು ಇದನ್ನೆಲ್ಲಾ ಎದ್ದು ನಡೆ’……ಕಳ್ಳ ಮನಸ್ಸಿನ ಚಿತಾವಣೆ. ನಾನೇನೋ ಹೋಗಿಬಿಡುವೆ. ನಾಳೆಇವರೆಲ್ಲಾ ಹುಡುಕಾಡಿದರೆ, ಸ್ನಾನದಲಿಬಿಸಿನೀರಿಗೆ, ಹಸಿವಿನಲಿ ಅನ್ನಕೆ… ನನ್ನ ಸಮಸ್ತ ಗೆಳೆಯರ ಪಟ್ಟಿಹಿಡಿದು ‘ಯಾರೊಡನೆ ಹೋದಳುಇವಳೆಂದು?!’ ಉಳಿದ ಮಿತ್ರಜನಪರಿವಾರ ಕುಹಕವಾಡಿ ನಕ್ಕರೆ… ಲೋಕೋದ್ಧಾರಕ್ಕೆ ತೊಡಗಲೂ ನನಗೆ ಭಯವಾಗುತ್ತದೆ; ಇದನ್ನೆಲ್ಲಾ ನೆನೆದರೆ.. ಚಿಂತೆಗಳ ಸುಳಿವಲ್ಲಿ ನಡುರಾತ್ರಿಯಲಿಎದ್ದವಳು ಮತ್ತೆ ಹಾಗೆಯೇ ಬಿದ್ದುಕೊಳ್ಳುವೆ.ಅಪ್ಪಿಕೊಂಡವರೊಡನೆ ಮಲಗಿದರೆ ನನಗೆಜಗದೋದ್ಧಾರದ ಚಿಂತೆ ಮರೆತ ಗಾಢ ನಿದ್ದೆ *********************

ಜ್ಞಾನೋದಯದ ನಿದ್ದೆ Read Post »

ಕಾವ್ಯಯಾನ

ತುಟಿಗಳ ಮೇಲೆ ನಿನ್ನಿಯದೇ ಹೆಸರು

ಕವಿತೆ ನಾಗರಾಜ ಹರಪನಹಳ್ಳಿ ತಲೆಗೂದಲ ಮುದ್ದಿಸಬೇಕುಅವುಗಳ ಒಂದೊಂದೇ ಎಣೆಸುತಪ್ರೀತಿಸಬೇಕು ನಿನಗೆ ಊಹಿಸಲು ಅಸಾಧ್ಯಉಸಿರಲ್ಲಿ ಹೆಸರು ಬೆರೆಸುವಕಲೆ ನನಗೆ ಮಾತ್ರ ಗೊತ್ತು ಪ್ರೀತಿ ಅಂದರೆ ಹುಡುಗಾಟವಲ್ಲಅದು ಕಣ್ಬೆಳಕುಹಾಗಾಗಿಪ್ರತಿನೋಟದಲ್ಲಿ ನನ್ನ ಬಿಂಬ ದೂರ ತಳ್ಳಲಾಗದು ಒಲವುಅದು ಹಠಮಾರಿನಿನ್ನ ತುಟಿಗಳ ಮೇಲೆನಿನ್ನಿನಿಯದೇ ಹೆಸರು ಯಾರು ಏನೇ ಹೇಳಲಿಎಷ್ಟೇ ಹತ್ತಿರದವರಿರಲಿಪ್ರೇಮದ ಮುಂದೆಅವು ನಿಲ್ಲಲಾರವು ಹೃದಯದ ಬಡಿತವೇ ನಿಲ್ಲುವಕ್ಷಣ ಬಂದರೂಕೊನೆಯಲ್ಲಿ ನೆನಪಾಗುವುದುಇನಿಯ ದನಿಯೇ ಒಲವು ಮಳೆಅದನ್ನೆಂದೂ ಭೂಮಿ ನಿರಾಕರಿಸದುನದಿಯ ಎಷ್ಟೇ ಹಿಡಿದಿಟ್ಟರು ಅದರ ಚಲನೆ ಕಡಲಕಡೆಗೆ ನೀ ನಿನ್ನ ಮನಸ ಜೊತೆ ಮಾತಾಡುವುದೇ ಇನಿಯಎದುರಿಟ್ಟುಅದೇ ಬದುಕಿನ ಗುಟ್ಟು ಮನಸು ಬಂಡೇಳುತಿದೆನದಿಗೆ ಕಟ್ಟಿದ ಕಟ್ಟುಪಾಡುಗಳಮುರಿಯಲುತಲೆಯ ಮುಡಿ ಸಿಕ್ಕುಗಳಹೆಣಿಗೆಯಿಂದ ಬಿಡಿಸಿದಂತೆಬಂಧನಗಳ ಕಳಚಿಇನಿದಾರಿಯ ಕಡೆ ನಡೆಯಲುಅಕ್ಕ ಕದಳಿಯ ಕಡೆಗೆ ನಡೆದಂತೆ ಮಾತಾಡು ; ಎದೆಬಿಚ್ಚಿ ಮಾತಾಡುಮನಕೆ ಸಮಧಾನವಾಗುವತನಕಭವ ಬಂಧನದ ಚಾಡಿ ರಾಕ್ಷಸರ ಮಾತಿನಲಗಿನಿಂದ ಇರಿದು ಹಾಕುಆ ರಕ್ತದಲ್ಲಿ ಪ್ರೇಮದ ಓಘಜಗಕೆ ತಿಳಿಯಲಿಪ್ರೇಮ ವ್ಯಭಿಚಾರವಲ್ಲಅದು ಬೆಳಕೆಂದು ಒಲವೇ ಬಂದು ಬಿಡುನದಿಯಾಗಿ, ಸುಳಿವಗಾಳಿಯಾಗಿ,ಪ್ರೇಮದ ಕಡಲಾಗಿ**********************************************

ತುಟಿಗಳ ಮೇಲೆ ನಿನ್ನಿಯದೇ ಹೆಸರು Read Post »

ಇತರೆ, ಮಕ್ಕಳ ವಿಭಾಗ

ಬೆಕ್ಕು -ನಾಯಿಗಳ ಹುಲ್ಲಿನೌಷಧ!

ಅನುಭವ ಕಥನ(ಮಕ್ಕಳಿಗಾಗಿ) ವಿಜಯಶ್ರೀ ಹಾಲಾಡಿ   ‘ಮುದೂರಿ’ ಒಂದು ಸಣ್ಣ ಹಳ್ಳಿ.   ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು ಹತ್ತಿ ‘ಶಂಕರನಾರಾಯಣ’ ಎಂಬ ಪಕ್ಕದೂರಿಗೆ ಹೋಗಬೇಕಿತ್ತು. ಅಥವಾ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರವಾದ ಕುಂದಾಪುರಕ್ಕೆ ಧಾವಿಸಬೇಕಿತ್ತು. ಮುದೂರಿಯಲ್ಲಿ ಒಂದು ಬೆಂಕಿಪೊಟ್ಟಣ ಕೂಡಾ ಸಿಗಲು ಸಾಧ್ಯವಿರಲಿಲ್ಲ. ಅಗತ್ಯ ಬೇಕಾದ ವಸ್ತುಗಳನ್ನು ಹಾಲಾಡಿಯಿಂದ ತಂದು ಇಟ್ಟುಕೊಳ್ಳಬೇಕಿತ್ತು. ಹಾಗಾಗಿ ಅವರ ಊರಿನ ಜನ ತಮ್ಮಲ್ಲಿ ಇದ್ದುದರಲ್ಲೇ ಅಲ್ಪಸ್ವಲ್ಪ ಹೊಂದಿಸಿಕೊಂಡು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದ್ದರು. ತೀರಾ ಅನಿವಾರ್ಯವಾದಾಗ ಮಾತ್ರ ದೂರದ ಪೇಟೆಪಟ್ಟಣಗಳಿಗೆ ಭೇಟಿಕೊಡುತ್ತಿದ್ದರು . ಆಹಾರಕ್ಕೆ ಬೇಕಾಗುವ ಅಕ್ಕಿ ,ಕಾಳು ,ತರಕಾರಿ ,ಸೊಪ್ಪು ಹಣ್ಣು ಮುಂತಾದುವನ್ನು ಬೆಳೆದುಕೊಳ್ಳುತ್ತಿದ್ದರು. ಜೊತೆಗೆ ಅಕ್ಕಪಕ್ಕದ ಕಾಡು ,ಬಯಲುಗಳಲ್ಲಿ ಬೆಳೆದ ತಿನ್ನಲಿಕ್ಕಾಗುವ ಹಣ್ಣು, ಕಾಯಿ ಗಡ್ಡೆ, ಎಲೆಗಳನ್ನು ಕೊಯ್ದು ಬಳಸುತ್ತಿದ್ದರು. ಆರೋಗ್ಯ ಸರಿಯಿಲ್ಲದಾಗ ಮನೆಯಲ್ಲೇ ಸಣ್ಣಪುಟ್ಟ ಮದ್ದು ಮಾಡಿಕೊಂಡು ಮತ್ತೂ ಗುಣವಾಗದಿದ್ದರೆ ವೈದ್ಯರನ್ನು ಕಾಣುತ್ತಿದ್ದರು. ದನಕರುಗಳಿಗೆ ಹಳ್ಳಿಯ ಪಂಡಿತರಲ್ಲಿ ಔಷದ ತಂದು ಕುಡಿಸುತ್ತಿದ್ದರು. ಇಂತಹ ವಿಷಯಗಳಿಗೆ ಸಂಬಂಧಿಸಿದ ಕೆಲ ನೆನಪುಗಳು ವಿಜಿಯ ಮನಸ್ಸಿನಲ್ಲಿ ಆಗಾಗ ಹಣಕಿಹಾಕುತ್ತಿರುತ್ತವೆ.  ಕಾಲಿಗೆ ಗರ್ಚ (ಕರಂಡೆ ,ಕವಳಿ )ನ ಗಿಡದ ಮುಳ್ಳು ಹೆಟ್ಟಿ ಅದೇ ಒಂದು ದೊಡ್ಡ ನೋವಾಗಿ ನಡೆದಾಡಲು ಆಗದೆ ಪುಟ್ಟ ವಿಜಿ ಹಾಸಿಗೆ ಹಿಡಿದ ಪ್ರಸಂಗ ಮೊದಲ ಪುಸ್ತಕದಲ್ಲಿ ಬಂದಿದೆ. ಆಗ ನೋವಿನ ತೀವ್ರತೆಗೆ ಜೋರು ಜ್ವರ ಕೂಡಾ  ಬಂದಿತ್ತು. ಅಮ್ಮ ಪ್ರತಿರಾತ್ರಿ ಮುಳ್ಳಿನ ಗಾಯಕ್ಕೆ ಸುಣ್ಣ ಹಚ್ಚಿ ಬಿಸಿಯಾದ ಒಲೆದಂಡೆಯ ಮೇಲೆ ಇಡಲು ಹೇಳುತ್ತಿದ್ದರು. ವಿಜಿ ಹಾಗೇ ಮಾಡುತ್ತಿದ್ದಳು. ಇದರಿಂದ ಗಾಯ ಬೇಗನೇ ಮಾಗಿ ಮೆದುಗೊಂಡು ಒಳಗಿರುವ ಮುಳ್ಳು ಹೊರಬರಲು ಸಹಾಯವಾಗುತ್ತದೆ ಎನ್ನುತ್ತಿದ್ದರು. ಇದಲ್ಲದೆ ತೋಟದಲ್ಲಿ ತಾನೇತಾನಾಗಿ ಬೆಳೆದು ಹಳದಿ ಹೂ ಬಿಡುವ ಕಡ್ಲಂಗಡ್ಲೆ  ಗಿಡದ ಎಲೆ ತಂದು ರಸ ಮಾಡಿ ಹಚ್ಚುತ್ತಿದ್ದರು . ಕೊನೆಗೊಂದು ದಿನ ಸೂಜಿಯಲ್ಲಿ ಕುತ್ತಿ ದೊಡ್ಡದಾದ ಮುಳ್ಳನ್ನು ಹೊರತೆಗೆದಾಗ ಒಂದು ಲೋಟದಷ್ಟು ರಶಿಗೆ (ಕೀವು) ಹೊರಬಂದು ಅಂಗಾಲಿನಲ್ಲಿ ದೊಡ್ಡ ಗಾಯವಾಗಿತ್ತು. ನೋವೆಂದು ಕಿರುಚಿ ಕುಣಿಯುತ್ತಿದ್ದ ವಿಜಿಗೆ ಸಮಾಧಾನವಾಗುವಂತೆ ಬಸಳೆಸೊಪ್ಪನ್ನು ಬಾಡಿಸಿ ಅದರ ರಸವನ್ನು ಹಚ್ಚಿದ್ದರು. ಆಗ ಸ್ವಲ್ಪ ತಣ್ಣ ತಣ್ಣಗೆ ಆಗಿ ಅವಳು ಅಳುವುದನ್ನು ನಿಲ್ಲಿಸಿದಳು. “ಬಸಳೆ ರಸ ಭಾರೀ ತಂಪು “ಎಂದು ಮುಳ್ಳು ತೆಗೆಯಲು ಬಂದಿದ್ದ ಶೇಷಿಬಾಯಿ, ರುಕ್ಮಿಣಿಬಾಯಿ ಹೇಳಿದ್ದರು.  ಜಿರಾಪತಿ ಸುರಿಯುವ ಮಳೆಗಾಲದ ನಾಲ್ಕು ತಿಂಗಳಲ್ಲಂತೂ ಅವರೂರಿನಲ್ಲಿ ಶೀತ, ಜ್ವರ ಮಾಮೂಲಿ ವಿಚಾರವಾಗಿತ್ತು. ಸೀನಿ ಸಾಕಾಗಿ ಮೂಗಿನಲ್ಲಿ ನೀರಿಳಿದು ಮೈಕೈ ನೋವು, ತಲೆಭಾರ ಆಗಿ ಮೈಯೆಲ್ಲಾ ಕೆಂಡದಂತೆ ಸುಡುತ್ತಾ ಸ್ವಸ್ಥ ನಿದ್ದೆ ಮಾಡಲೂ ಬಿಡದೆ ಜ್ವರ ಕಾಡುವಾಗ ಆರಂಭದಲ್ಲಿ ಜನರು ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಕಾಳು ಮೆಣಸಿನ ಕಷಾಯ ಮಾಡುತ್ತಿದ್ದರು. ಕಾಳುಮೆಣಸು ಬೆಳೆಯುವುದು ತೋಟದ ಅಡಕೆ, ತೆಂಗಿನ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ. ಆರಂಭದಲ್ಲಿ ಹಸಿರಾಗಿದ್ದು ಹಣ್ಣಾದ ಮೇಲೆ ಕೆಂಪಾಗಿ, ಕೊಯ್ದು ಒಣಗಿಸಿದ ನಂತರ ಕಪ್ಪಾಗುತ್ತದೆ.  ಇದು ಚಿಕ್ಕ ಚಿಕ್ಕ ಕಾಳಿನಂತಹಾ ಮೆಣಸು. ಇದನ್ನು ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಕಷಾಯ ಮಾಡುವಾಗ ಒಂದರ್ಧ ಮುಷ್ಟಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ನೀರು -ಬೆಲ್ಲ ಬೆರೆಸಿ ಕುದಿಸುತ್ತಿದ್ದರು. ಒಂದ್ಹತ್ತು ನಿಮಿಷ ಕುದಿದ ಮೇಲೆ ಕಷಾಯ ತಯಾರಾಗುತ್ತದೆ. ಇದನ್ನು ಸೋಸಿ ಕುಡಿದರೆ ಜೋರು ಖಾರ!  ವಿಜಿಗೆ ಖಾರ ಇಷ್ಟವಿಲ್ಲದಿದ್ದರೂ ಕುಡಿಯಲೇಬೇಕು. ಅವಳಿಗೆ ಆಗಾಗ ಜ್ವರ ಬರುತ್ತಿತ್ತು. ಸಪೂರಕ್ಕಿದ್ದ ವಿಜಿಗೆ ಏನೂ ತಿನ್ನದೇ ನಿಶ್ಶಕ್ತಿಯಿಂದಲೇ ಜ್ವರ ಬರುವುದೆಂದು ಅಮ್ಮ ದೂರುತ್ತಿದ್ದರು. ಅವರ ಮನೆಯಲ್ಲಿ ಶೋಲಾಪುರ (ಸೊಲ್ಲಾಪುರ) ಹೊದಿಕೆಗಳಿದ್ದವು. ಅಪ್ಪಯ್ಯ ಯಾವಾಗಲೂ ಅವುಗಳನ್ನೇ ತರುತ್ತಿದ್ದುದು. ವಿಜಿ ನೋಡಿದ ಹೊದಿಕೆಗಳಲ್ಲೆಲ್ಲ ಇವೇ ಅತ್ಯುತ್ತಮವಾದವು. ಉದ್ದ- ಅಗಲ ಹೆಚ್ಚು ಇರುವುದರ ಜೊತೆಗೆ ದಪ್ಪ ಇರುತ್ತವೆ. ಆದರೆ ದಿನಗಳಲ್ಲೂ ಹೊದ್ದುಕೊಳ್ಳಬಹುದು. ಸೆಕೆಗೆ ತಣ್ಣಗೆ ಇರುತ್ತವೆ. ಚಳಿ ಬಂದಾಗ ಎರಡೆರಡು ಹೊದಿಕೆ ಹೊದ್ದು ಮೇಲೊಂದು ರಗ್ಗು ಹಾಕಿಕೊಳ್ಳಬೇಕು. ಶೋಲಾಪುರ ಹೊದಿಕೆಯ ಡಿಸೈನ್ಗಳೂ ಚಂದ . ಈ ಎಲ್ಲ ಕಾರಣಕ್ಕಾಗಿ ಅವಳಿಗೆ ಶೋಲಾಪುರ ಹೊದಿಕೆಗಳೆಂದರೆ ಬಹಳ ಇಷ್ಟ. ಆದರೆ ಜ್ವರ ಬಂದ ರಾತ್ರಿಗಳಲ್ಲಿ ಆಗುತ್ತಿದ್ದುದೇ ಬೇರೆ. ಆಗ ಜ್ವರ ತಲೆಗೇರಿ ಹೊದಿಕೆಯ ಬಣ್ಣದ ಚಿತ್ತಾರಗಳು ರಾಕ್ಷಸಾಕಾರ ತಾಳಿ ಬಂದು ಹೆದರಿಸುತ್ತಿದ್ದವು. ಅರೆನಿದ್ದೆಯಲ್ಲಿರುತ್ತಿದ್ದ ವಿಜಿ ಹಲ್ಲುಮಟ್ಟೆ ಕಚ್ಚಿ ಕೈ ಮುಷ್ಟಿ ಬಿಗಿದುಕೊಂಡು ರಾಕ್ಷಸಾಕಾರಗಳನ್ನು ನೋಡುತ್ತಿದ್ದುದು ಮರೆತೇ ಹೋಗುವುದಿಲ್ಲ .ಹೀಗಾಗಿ ಜ್ವರವೆಂದರೆ ಕೆಟ್ಟ ಕನಸಿನಂತೆ ಅವಳಿಗೆ. ಇಂತಹ ಸಂದರ್ಭದಲ್ಲಿ ಕಾಳು ಮೆಣಸಿನ ಕಷಾಯ ಕುಡಿಯದಿದ್ದರೆ ಅಜ್ಜಿ ಹೊಡೆಯುತ್ತಾರೆಂಬ ಕಾರಣಕ್ಕಾದರೂ ಕುಡಿದೇ ಕುಡಿಯುತ್ತಿದ್ದಳು. ಸುಮಾರು ಏಳೆಂಟು ದಿನವಾದರೂ ಜ್ವರ ಬಿಡದಿದ್ದರೆ ಆಸ್ಪತ್ರೆಗೆ ಹೋಗಬೇಕಿತ್ತು. ಆಚೆಮನೆ ದೊಡ್ಡಮ್ಮ ಜ್ವರ, ಗಂಟಲುನೋವು ಬಂದರೆ ಈರುಳ್ಳಿ, ಶುಂಠಿ, ಕಾಳುಮೆಣಸು ಎಲ್ಲಾ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರು.” ನಂಗೆ ಗಂಟ್ಲ್ ನೋವ್. ನೀರುಳ್ಳಿ ಸುಟ್ಕಂಡ್, ಬೆಲ್ಲ ಹಾಯ್ಕಂಡ್ ತಿಂದೆ” ಅಂತ ಆಗಾಗ ಹೇಳುತ್ತಿದ್ದರು. ಅಜ್ಜಿಗೆ ಜ್ವರ ಬರುತ್ತಿದ್ದುದು ಕಮ್ಮಿ. ಬಂದರೆ ಮಾತ್ರ ಜೋರಾಗಿಬಿಡುತ್ತಿತ್ತು. ಅವರಿಗೆ ಜ್ವರ ಬಂದಾಗ ನಾಲಗೆ ರುಚಿ ಇರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಡುಗೆ ಚೆನ್ನಾಗಿಲ್ಲವೆಂದು ಅಮ್ಮನಿಗೆ ಬಯ್ಯುತ್ತಿದ್ದುದೂ ಇದೆ! ಕಟ್ಟಗಿನ ಮಿಡಿ ಉಪ್ಪಿನಕಾಯಿ ರಸವನ್ನು ನಾಲಗೆಗೆ ತಾಗಿಸಿಕೊಂಡು ಒಂದೆರಡು ತುತ್ತು ತಿಂದು ಬೇಡವೆಂದು ಎದ್ದುಹೋಗುತ್ತಿದ್ದರು. ಆಮೇಲೆ ಕಷಾಯ ಕುಡಿದು ಕಂಬಳಿ ಹೊದ್ದು ಮಲಗುತ್ತಿದ್ದರು. ಆದರೆ ಅಮ್ಮ ಹಾಗಲ್ಲ, ಜ್ವರ ಬಂದಾಗಲೂ ಸ್ವಲ್ಪ ಊಟ ಮಾಡಿ ಆಗಾಗ ಕಷಾಯ ಕುಡಿದು ಬೇಗನೆ ಗುಣ ಮಾಡಿಕೊಳ್ಳುತ್ತಿದ್ದರು.  ಮುದೂರಿ ಮತ್ತು ಆಸುಪಾಸಿನಲ್ಲಿ ನರ್ಸಿಹಾಂಡ್ತಿ, ಅಕ್ಕಣಿಬಾಯಿ ಮುಂತಾದ ಸೂಲಗಿತ್ತಿಯರಿದ್ದರು. ಪೈಕನಾಯ್,ಕ ಸುಬ್ಬನಾಯ್ಕ ಎಂಬ ನಾಟಿ ವೈದ್ಯರಿದ್ದರು.  ಜನರಿಗೆ ಮತ್ತು ದನಕರುಗಳಿಗೂ ಇವರುಮದ್ದು ಕೊಡುತ್ತಿದ್ದರು. ಗಂಟಿ (ದನಕರು)ಗಳಿಗೆ ಹುಷಾರಿಲ್ಲದಾಗ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಪೈಕ ನಾಯ್ಕ ಕೊಡುವ ಕಪ್ಪು ದ್ರವವನ್ನು ತಂದು ನೆಳಾಲಿಗೆ ಹಾಕಿ ಕುಡಿಸುತ್ತಿದ್ದರು. ಅವು ಹೆದರಿಕೆಯಲ್ಲಿ ಕುಣಿದಾಡುತ್ತಾ, ಅರ್ಧ ಉಗಿದು ಸೀನುತ್ತಾ ಹೇಗೋ ಸ್ವಲ್ಪ-ಸ್ವಲ್ಪ ನುಂಗಿ ಆರೋಗ್ಯರಕ್ಷಣೆ ಮಾಡಿಕೊಳ್ಳುತ್ತಿದ್ದವು!  ಬೆಕ್ಕುಗಳಾದರೆ ಹೀಗಲ್ಲ ; ತಮ್ಮಆರೋಗ್ಯದ ಬಗ್ಗೆ ತಾವೇ ಆದಷ್ಟು ಜಾಗ್ರತೆ ವಹಿಸುತ್ತಿದ್ದವು!!  ತಿಂಗಳಿಗೆರಡು ಸಲವಾದರೂ ಎಳೆಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತಿದ್ದವು. ಹಾಗೆ ಮಾಡಿದಾಗ ಅವುಗಳ ಹೊಟ್ಟೆಯಲ್ಲಿ ಅಜೀರ್ಣದ ಅಂಶ ಇದ್ದರೆ ಹೋಗಿಬಿಡುತ್ತದಂತೆ. ಬೆಕ್ಕುಗಳನ್ನು ನೋಡಿ ನಾಯಿಗಳೂ ಇದನ್ನು ಕಲಿತು ಅಳವಡಿಸಿಕೊಂಡಿದ್ದವು!  ಹುಲ್ಲು ತಿನ್ನುವುದು; ವಾಂತಿ ಮಾಡುವುದು!  ಇನ್ನು ಬೆಕ್ಕುಗಳು ಇಡೀ ದಿನ ಒಲೆಯ ಹತ್ತಿರ ಅಥವಾ ಅಕ್ಕಿಮುಡಿ, ಅಟ್ಟ ಹೀಗೆ ಮನೆಯ ಬೆಚ್ಚಗಿನ ಜಾಗದಲ್ಲೇ ಮಲಗುತ್ತಿದ್ದುದರಿಂದ ಜ್ವರ ಗಿರ ಬಾಧಿಸುವ ಚಾನ್ಸೇ ಇರಲಿಲ್ಲ !ಅದೇನೇ ಇರಲಿ, ಅಮ್ಮ ಬೆಕ್ಕುಗಳಿಗೆ ಆಗಾಗ ಅನ್ನಕ್ಕೆ ತೆಂಗಿನೆಣ್ಣೆ ಹಾಕುತ್ತಿದ್ದರು. “ಅದಕ್ಕೆ ಅದೇ ಔಷಧ ಯಾವುದೇ ಕಾಯಿಲೆ ಬರುವುದಿಲ್ಲ” ಎನ್ನುತ್ತಿದ್ದರು. ದಿನಾಲೂ ಕಾಯಿ ಹೆರೆಯುವಾಗ ತುರಿಯನ್ನು ಹಾಕುತ್ತಿದ್ದರು. ನಾಯಿಗಳಿಗೆ ಟೀ ಕಣ್ಣ್ (ಟೀ ಡಿಕಾಕ್ಷನ್) ಮಾಡಿ ಹಾಕುತ್ತಿದ್ದರು . ಅದನ್ನು ಕುಡಿದರೆ ಅವುಗಳಿಗೆ ಹುಳದ ಉಪದ್ರ ಇರುವುದಿಲ್ಲ ಎಂಬುದಾಗಿ ಜನರ ಅಭಿಪ್ರಾಯ. ಇನ್ನು ಬೆಕ್ಕು ,ನಾಯಿಗಳು ವಿಷದ ವಸ್ತು ತಿಂದದ್ದು ಗೊತ್ತಾದರೆ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಪ್ರಥಮ ಚಿಕಿತ್ಸೆ ಮಾಡುತ್ತಿದ್ದರು. ಬಿಸಿಲು- ಚಳಿ -ಮಳೆಯೆನ್ನದೆ ಗದ್ದೆಗಳಲ್ಲಿ ಕಷ್ಟದ ಕೆಲಸ ಮಾಡುವ ಹೋರಿಗಳಿಗೆ ವರ್ಷದ ಕೊನೆಯಲ್ಲಿ ಹದ್ನದ ದಿನ ಹಂಗಾರ್ ಕೆತ್ತೆಯ ಗಂಜಿ ಮಾಡಿ ಬಡಿಸುತ್ತಿದ್ದರು. ಅದು ಕಹಿಯಿರುತ್ತದೆಂದು  ಅದಕ್ಕೆ ಬೆಲ್ಲ ಕೂಡ ಹಾಕುತ್ತಿದ್ದರು. ಆ ದಿನ ಅವುಗಳಿಗೆ ಸ್ನಾನ ಮಾಡಿಸಿ ಮೈಗೆಲ್ಲಾ ಎಣ್ಣೆ ಹಚ್ಚುತ್ತಿದ್ದರು. ವರ್ಷವಿಡೀ ದುಡಿದ ಎಲ್ಲರಿಗೂ ಹದ್ನದ ದಿನ ಪಾಯಸದ ಊಟ ಇರುತ್ತಿತ್ತು. ಇದಾದ ನಂತರ ಹೋರಿಗಳಿಗೆ, ಶ್ರಮಿಕರಿಗೆ ಗದ್ದೆಯಲ್ಲಿ ಮಾಡುವ ಕಷ್ಟದ ಕೆಲಸದಿಂದ ಸ್ವಲ್ಪ ಸಮಯ ಬಿಡುವು.  ಹಲ್ಲು ನೋವು, ತಲೆನೋವು ,ಬೆನ್ನುನೋವು, ಕಾಲು ನೋವು, ಹಾವು ಕಚ್ಚಿದ್ದು , ಚೇಳು ಕಚ್ಚಿದ್ದು ಹೀಗೆ ಪ್ರತಿಯೊಂದಕ್ಕೂ ಹಳ್ಳಿಗರಲ್ಲಿ ಏನಾದರೊಂದು ಔಷಧದ ಮಾಹಿತಿ ಇರುತ್ತಿತ್ತು. ಕೆಲವರಂತೂ ಬಾಯಿ ತೆಗೆದರೆ ಆ ಸೊಪ್ಪು, ಈ ಬಳ್ಳಿ ,ಇನ್ಯಾವುದೋ ಬೇರು ಎಂದು ಮದ್ದುಗಳನ್ನು ಸೂಚಿಸುತ್ತಿದ್ದರು. ಇವುಗಳಲ್ಲಿ ಕೆಲವಂತೂ ಒಳ್ಳೇ ಪ್ರಭಾವ ಬೀರುತ್ತಿದ್ದವು. ‘ದಶಮೂಲಾರಿಷ್ಟ’ ಎಂಬ ಗಿಡಮೂಲಿಕೆಗಳ ಔಷಧವೊಂದು ಆಗ ಅಲ್ಲಿನ ಜನರ ಸರ್ವರೋಗ ನಿವಾರಕ ಎಂಬಂತಿತ್ತು!  ಅಜೀರ್ಣ ಅಥವಾ ಥಂಡಿ ಆದಾಗ ಮೊದಲು ಅದನ್ನೇ ಕುಡಿಯಲು ಕೊಡುತ್ತಿದ್ದರು. ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ, ಬೆಕ್ಕು -ನಾಯಿಗೂ ಸುಮಾರು ಕಾಯಿಲೆಗೆ ಇದೇ ಮದ್ದಾಗಿತ್ತು! ಇನ್ನು; ಹುಟ್ಟಿದ ಮಕ್ಕಳ ಎಳೆನಾಲಿಗೆಗೆ ‘ಬಜೆ’ ಹಾಕುತ್ತಿದ್ದರು . ಅಂದರೆ ಬಜೆ, ಹಿಪ್ಪಲಿ, ಜಾಯಿಕಾಯಿ ಎಂಬ ಮೂಲಿಕೆಗಳನ್ನು ತೇಯ್ದು ಚೂರು ಜೇನುತುಪ್ಪದೊಂದಿಗೆ ಸೇರಿಸಿ ನೆಕ್ಕಿಸುತ್ತಿದ್ದರು. ಇದನ್ನು ದಿನವೂ ಸಂಜೆ ಹೊತ್ತಿಗೆ ತಪ್ಪದೇ ಮಾಡುತ್ತಿದ್ದರು. ಮಗುವಿಗೆ ಹೊಟ್ಟೆ ನೋವು ಬಾರದೆ  ಚೆನ್ನಾಗಿ ನಿದ್ದೆ ಮಾಡುತ್ತದೆ ಮತ್ತು ಸ್ಪಷ್ಟವಾಗಿ ಮಾತು ಕಲಿಯುತ್ತದೆ ಎನ್ನುತ್ತಿದ್ದರು. ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಸಂಬಾರ್ ಬಳ್ಳಿ ಸೊಪ್ಪನ್ನು (ದೊಡ್ಡಪತ್ರೆ ) ಬಾಡಿಸಿ ರಸ ತೆಗೆದು ಕುಡಿಸುತ್ತಿದ್ದರು . ಇನ್ನೂ ಕೆಲವು ಸಂಬಾರ ಪದಾರ್ಥಗಳನ್ನು ದಿನನಿತ್ಯದ ಊಟದಲ್ಲಿ ಬಳಕೆ ಮಾಡುತ್ತಾ ಅವುಗಳಿಂದ  ಔಷಧೀಯ ಅಂಶಗಳನ್ನು ಪಡೆಯುತ್ತಿದ್ದರು. ಕೊತ್ತಂಬರಿ, ಜೀರಿಗೆ, ಮೆಂತ್ಯೆ, ಸಾಸಿವೆ, ಅರಿಶಿನ ಹಾಕದೆ ಸಾಂಬಾರು ಆಗುವುದಿಲ್ಲ. ಬೆಳ್ಳುಳ್ಳಿ, ಶುಂಠಿ ಕಾಳುಮೆಣಸು, ಜೀರಿಗೆ, ಓಮ, ಏಲಕ್ಕಿ, ಲವಂಗ ,ಚಕ್ಕೆ ,ಜಾಯಿಕಾಯಿ ಆಗಾಗ ಬಳಸುತ್ತಲೇ ಇರುತ್ತಿದ್ದರು. ತ್ರಾಣಿ ಮೊದಲಾದ ಸೊಪ್ಪಿನ ಕಷಾಯಗಳನ್ನು ಮಾಡಿ ಕುಡಿಯುತ್ತಿದ್ದರು.  ಆಸ್ಪತ್ರೆಗಳಾಗಲಿ, ವೈದ್ಯರ ಸಹಾಯವಾಗಲಿ ಸುಲಭಕ್ಕೆ ದೊರಕದ ಆ ಕಾಲದಲ್ಲಿ ಜನರಿಗೆ ಆದಷ್ಟು ಕಾಯಿಲೆಗಳೇ ಬರದಂತೆ ಆರೋಗ್ಯ ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅನಾರೋಗ್ಯವಾದಾಗ ಆಗುವ ಅನಾಹುತಗಳ ಬಗ್ಗೆ ಭಯವಿತ್ತು. ನಿಸರ್ಗಸಹಜ ಆಹಾರ  ಬಳಸುತ್ತಾ ಹುಷಾರಿಲ್ಲದಾಗ ಹಳ್ಳಿಯ ಮದ್ದು ಮಾಡುತ್ತಾ ಸುಧಾರಿಸಿಕೊಳ್ಳುತ್ತಿದ್ದರು. ಶುದ್ಧ ನೀರು ,ಗಾಳಿ ,ಆಹಾರ ಸೇವಿಸುತ್ತಿದ್ದುದರಿಂದ ಕಾಯಿಲೆ ಕಸಾಲೆಗಳೂ ಕಮ್ಮಿಯಿದ್ದವು . **************************

ಬೆಕ್ಕು -ನಾಯಿಗಳ ಹುಲ್ಲಿನೌಷಧ! Read Post »

ಕಥಾಗುಚ್ಛ

ಸಹನೆಯ ತೇರು

ಕಥೆ ಸುಧಾ ಹಡಿನಬಾಳ.            ರೀ, ನಿನ್ನೆ  ಅವರೆಲ್ಲಾ ನಗ್ ನಗ್ತಾ ಮಾತಾಡ್ತಿರ್ವಾಗ ನೀವ್ಯಾಕ್ರಿ ಮಂಕಾಗಿ ಕುತಿದ್ರಿ? ನೀವೂ ನಗ್ತಾ ಮಾತಾಡ್ತಾ ಇದ್ರೆ ನಂಗೆ ಎಷ್ಟು ಖುಷಿ ಆಗ್ತಿತ್ತು ಗೊತ್ತಾ’ ಎನ್ನುತ್ತ ನಿನ್ನೆಯ ಅಮ್ಮನ ಮನೆ ಸಡಗರದ ಗುಂಗಲ್ಲೇ ಗಂಡನ ಕೊರಳಿಗೆ ಜೋತು ಬಿದ್ದು ಲಲ್ಲೆಗರೆದಳು ಸ್ವಾತಿ. ಅಷ್ಟೇ ನಿರ್ದಾಕ್ಷಿಣ್ಯವಾಗಿ ಅವಳ ಕೈಗಳನ್ನು ತಳ್ಳಿ ‘ ಒಹೋ, ನಿನ್ ತರನೆ ಕಂಡವರ ಜೊತೆ ಎಲ್ಲಾ ಹಲ್ ಕಿರ್ದು ನಗ್ಬೇಕಿತ್ತಾ? ನಿಂಗೆ ನೀನು ಮದುವೆ ಆಗಿರೋಳು ಅನ್ನೋದೆ ಮರ್ತು ಹೋದಂತಿದೆ. ನಂಗಿದೆಲ್ಲ ಒಂಚೂರು ಇಷ್ಟ ಆಗೋದಿಲ್ಲ. ಈಗ್ಲೆ ಹಿಂಗಿರೋಳು ಮದುವೆಗೆ ಮುಂಚೆ ಹೇಗಿದ್ಯೊ ಏನ್ ಕತೆನೊ. ಇನ್ಮುಂದೆ ಅಲ್ಲಿ ಹೋಗಿ  ಮೊದಲಿಂತರ ಇರೋ ಕನಸು ಕಾಣ್ಬೇಡ ಹಾಂ’ ಎನ್ನುತ್ತಾ ಬೋರಲಾಗಿ ಮುಸುಕು ಎಳೆದುಕೊಂಡ. ಗಂಡನ ಮಾತಿನ ತೀಕ್ಷ್ಣತೆಗೆ, ಒಳಾರ್ಥಕ್ಕೆ ಸ್ವಾತಿ ನಲುಗಿ ಹೋದಳು.          ‌‌ ‌‌‌ ‌‌‌                   ಸ್ವಾತಿ ಕಿಲಕಿಲ ನಗುವ ಉತ್ಸಾಹದ ಚಿಲುಮೆಯಾಗಿದ್ದವಳು. ಇಡೀ ಊರಿಗೆ ಯುವರಾಣಿ ಹಾಗೆ ರಾಜಾರಸ್ಸಾಗಿ ಸಮುದ್ರ, ಹೊಲ- ಗದ್ದೆ ಹೀಗೆ ಎಲ್ಲೆಡೆ ತನ್ನ ಓರಗೆಯವರು, ಊರ ಹೈಕಳ ದಂಡು ಕಟ್ಟಿಕೊಂಡು ನಾಟಕ, ಡಾನ್ಸ ಅಂತ ನಲಿದಾಡ್ತಾ ಇರೊ ನವಿಲು ಅವಳು. ಅಪ್ಪನ ಜೊತೆ ಕತ್ತಿ ಹಿಡಿದು ತೋಟಕ್ಕೆ ಬಿಟ್ರು ಸೈ, ಅಡುಗೆ ಮನೆಯಲ್ಲಿ ಎಂಟಾಳಿಗೆ ಅಡಿಗೆ ಮಾಡಿ ಬಡಿಸೋಕು ಜೈ ಅಂತಿರೋಳು. ಹೆಸರಿಗೆ ತಕ್ಕ ಹಾಗೆ ಅಪರೂಪದ ಸ್ವಾತಿ ಮುತ್ತು. ಇಂತ ಮಗಳನ್ನ ಒಲ್ಲದ ಮನಸ್ಸಿನಿಂದ ಒಳ್ಳೆಯ ಸಂಬಂಧ , ಒಬ್ಬನೇ ಮಗ, ಅಲ್ಲೂ ರಾಜಕುಮಾರಿ ತರ ಇರ್ಬಹುದು ಅಂತ ಹೆತ್ತವರು ಮಹೇಶನಿಗೆ ಧಾರೆ ಎರೆದು ಕೊಟ್ಟರು. ಊರು – ಕೇರಿಯ  ಪ್ರೀತಿ,ಆಶೀರ್ವಾದದೊಂದಿಗೆ  ಬೆಳಕಿನ ಕಿರಣವಾಗಿ, ಮಹೇಶನ ಭಾಗ್ಯವಾಗಿ ಮನೆ ತುಂಬಿ ಬಂದವಳು ಸ್ವಾತಿ.ಆದರೆ ಅವನಿಗದು ಬೇಕಿರಲಿಲ್ಲ. ಹೇಳಿಕೊಳ್ಳಲೇನೂ ಕೊರತೆ ಇಲ್ಲ. ಮಿತಭಾಷಿ ಅತ್ತೆ, ಆಳು- ಕಾಳು , ತೋಟ, ಸ್ವಂತ ಟ್ಯಾಕ್ಸಿ ಓಡಿಸುವ ಗಂಡ. ಆದರೆ ಮದುವೆ ಸ್ವಾತಿಯ ಪಾಲಿಗೆ ಮಧುರ ಅನುಭವ ನೀಡಲಿಲ್ಲ.; ಸರಸ- ಸಲ್ಲಾಪದ ರಸ ನಿಮಿಷಗಳಾಗಿರಲಿಲ್ಲ. ಮಹೇಶನಿಗೆ ಹೆಂಡತಿಯಲ್ಲಿ ಯಾವ ಆಸಕ್ತಿ ಇಲ್ಲ. ಬೇಕಾದಾಗ ಮಡಿಲಿಗೆ ಬಂದರೆ ಮುಗಿಯಿತು. ಪಿಸು ಮಾತು, ಬಿಸಿಯಪ್ಪುಗೆ ಬೇಕಿರಲಿಲ್ಲ. ಅವಳ ಕಿಲಕಿಲ ನಗು ಅವನಿಗೆ ವರ್ಜ್ಯ. ಅದಕ್ಕೆ ಮದುವೆಯಾದ ಹೊಸದರಲ್ಲೇ ಬ್ರೇಕ್ ಹಾಕಿದ್ದ. ಅವಳ ಸೌಮ್ಯ ವದನ, ಸಹನೆಯನ್ನು ಕೆಣಕಿ ಕೊಂಕು ತೆಗೆಯುತ್ತಿದ್ದ.ಯಾವುದಕ್ಕೂ ಸೊಲ್ಲೆತ್ತದ ಸ್ವಾತಿ ಹೆಚ್ಚು – ಕಮ್ಮಿ ನಗುವುದನ್ನೇ ಮರೆತಿದ್ದಳು.ಗಂಡನ ವಿಚಿತ್ರ ವರ್ತನೆಗೆ ಕಾರಣ ಗೊತ್ತಿಲ್ಲದೆ ತಡಕಾಡುತ್ತಿದ್ದಳು. ಕಾಲ ಹೀಗೆ ಉರುಳುತ್ತಿರಲು ಸ್ವಾತಿಯ ಮಡಿಲಲ್ಲಿ ಮುದ್ದು ಕೂಸೊಂದು ಅರಳಿತ್ತು. ಮೂರು ತಿಂಗಳ ಕೂಸಿನೊಂದಿಗೆ ಮರಳಿ ಬಂದ ಸ್ವಾತಿ ಗಂಡನ ನಡೆಯಲ್ಲಿನ ಏರುಪೇರನ್ನು ಗುರುತಿಸಿದಳು. ಮೊದಲಿನಂತೆ ಮನೆಗೆ ಸರಿಯಾಗಿ ಬರುತ್ತಿಲ್ಲ. ಬಂದರೂ ತಡವಾಗಿ ಕುಡಿದು ಬರುತ್ತಿದ್ದ.ಪ್ರಶ್ನಿಸಿದರೆ ಏರು ದನಿಯಲ್ಲಿ ಗದರಿ ರಂಪಾಟ ಮಾಡಿ ಬಾಯಿ ಮುಚ್ಚಿಸುತ್ತಿದ್ದ. ಒಂದಿನ ಅಕ್ಕಿ ಗೇರುವಾಗ ಸ್ವಾತಿಯ ಅಸಹಾಯಕ ಮೌನವನ್ನು ಗ್ರಹಿಸಿ ಮನೆಯಾಳು ಮಂಜಮ್ಮ ಸತ್ಯ ಬಾಯ್ಬಿಟ್ಟಳು. ಗಂಡನ ಈ ಅನೈತಿಕ ಸಂಬಂಧವನ್ನು ಸಹಿಸಲಾರದೆ ಮುದ್ದು ಮಗಳ ಮುಂದೆ ಕಣ್ಣೀರಾಗುವುದೊಂದೆ ಸಮಾಧಾನದ ಕ್ಷಣ.ಇನ್ನೇನು ಮಾಡಿಯಾಳು? ಅವಳ ಸಹನೆ ಎಲ್ಲವನ್ನೂ ಮೌನವಾಗಿ ಒಪ್ಪಿಕೊಂಡಿತ್ತು. ಎಲ್ಲಕ್ಕೂ ಕಾಲವೆ ಪಾಠ ಕಲಿಸುತ್ತದಲ್ಲವೆ?            ‌‌‌                                ಅದೊಂದು  ರಾತ್ರಿ ಕುಡಿದ ಅಮಲಿನಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಬರುವಾಗ ನಿಂತ ಲಾರಿಗೆ ಗುದ್ದಿಕೊಂಡು ಮಣಿಪಾಲ ಸೇರಿದ. ತಲೆಗೆ ಬಲವಾಗಿ ಏಟು ಬಿದ್ದ ಕಾರಣ ಮೆದುಳು ದೇಹದ ಮೇಲಿನ ಹಿಡಿತ ಕಳೆದುಕೊಂಡಿತ್ತು. ವೈದ್ಯರೆ ಅಸಹಾಯಕರಾಗಿ ಇರುವಷ್ಟು ದಿನ ಹೀಗೆ ಮನೆಯಲ್ಲಿ ಇರಲಿ ; ಬೇರಾವ ಚಿಕಿತ್ಸೆಯೂ ಇಲ್ಲ ಎಂದಾಗ ಜೀವಂತ ಶವದಂತೆ ಮನೆ ಸೇರಿದ್ದ.. ಸ್ವಾತಿ ಟೊಂಕ ಕಟ್ಡಿ ಈ ಅಗ್ನಿ ಪರೀಕ್ಷೆಯನ್ನೂ ಎದುರಿಸಿದಳು. ಬಿದ್ದಲ್ಲೆ ಬಿದ್ದು ನಾರುವ ಎಲ್ಲವೂ ಸರಿ ಇದ್ದಾಗ ಗುರ್ ಎಂದು ಗೂಳಿಯಂತೆ ಗುಟುರುವ ಗಂಡನ ಕೊಳಕು ಬಳಿದು ,ಕುಂಡೆ ತೊಳೆದು ಕಲ್ಲಾಗಿದ್ದಳು. ಹೀಗೆ ನಾಲ್ಕು ವರ್ಷ ಕಳೆಯಿತು. ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ ಅವನ ಆರೋಗ್ಯ. ಅದೊಂದು ಮಳೆಗಾಲದ ರಾತ್ರಿ ಉಣಿಸಿ ಕಂಬಳಿ ಹೊದೆಸಿ ತುಸು ದೂರದಲ್ಲಿ ಮಲಗಿದ್ದಳು ಸ್ವಾತಿ. ಇದ್ದಕ್ಕಿದ್ದಂತೆ ಕೆಮ್ಮಲಾರಂಭಿಸಿದ ಗಂಡನ ತಲೆ ,ಬೆನ್ನು ನೀವುತ್ತಾ ನೀರು ಕುಡಿಸಲು ಮುಂದಾದ ಮಡದಿಯ ಕೈಯಲ್ಲೆ ಕತ್ತು ವಾಲಿಸಿ ಉಸಿರು ನಿಲ್ಲಿಸಿಬಿಟ್ಡ. ಬತ್ತಿ ಹೋದ ಅವಳ ಕಂಗಳಲ್ಲಿ ಮತ್ತೆ ನೀರು ಜಿನುಗಲಿಲ್ಲ. ಬೆಳಗಾಯಿತು. ಅಕ್ಕ- ಪಕ್ಕದವರು ,ಬಂಧು- ಬಳಗದ ಹಿರೀಕರು  ಸೇರಿದರು. ಎಲ್ಲಾ ಕ್ರಿಯಾಕರ್ಮ ಮುಗಿಸಿ ಸ್ವಾತಯನ್ನು ಹೊರಗೆ ಕರೆದರು. ಮುಂದಿನ ತಯಾರಿಗಾಗಿ  ಹೆಂಗಳೆಯರು ಶುರುವಿಟ್ಟುಕೊಂಡರು. ನೀರವ ಮೌನದ ನಡುವೆ ಆ ಮನೆಯ   ಹಿರಿಯಾಳು ಬೋಳು ಬೋಳಾಗಿದ್ದ ಬಾಲ ವಿಧವೆ ಮಂಜಮ್ಮ ಏರು ದನಿಯಲ್ಲಿ  ಮೊದಲ ಬಾರಿಗೆ ದನಿ ಎತ್ತಿದಳು.” ನಿಲ್ಸಿ, ಏನು ಮೊಕ ನೋಡ್ತಿವ್ರಿ; ಸ್ವಾತವ್ವ ಈ ಮನೆಗೆ ಬೆಳದಿಂಗಳ ಚಂದ್ರನಂತೆ ನಗ್ತಾ ಬಂದೋರು. ಆದ್ರೆ ಒಂದಿನ ನೆಮ್ಮದಿ ಕಾಣ್ಲಿಲ್ಲ ಅವರು. ನಮ್ ನಡುವಿನ ಸಹನೆಯ ತೇರು ಸ್ವಾತವ್ವ. ಮತ್ತೆ ಕೆಣಕ್ಬೇಡಿ ಅವರ ಸಹನೆಯ ಹಾಂ, ಅವ್ರನ್ನು ನೆಮ್ಮದಿಯಾಗಿ ಅವ್ರಿಷ್ಡದಂತೆ ಇರೋದಕ್ಕೆ ಬಿಟ್ಬಿಡಿ. ನೀವು ಒಳಗೆ ಹೋಗ್ರಿ ಸ್ವಾತವ್ವ’ ಎನ್ನುತ್ತಿದ್ದಂತೆ ಸ್ವಾತಿ ಸೆರಗು ಬಾಯಿಗೆ ಅಡ್ಡಲಾಗಿ ಹಿಡಿದು ಒಳಗೆ ನಡೆದಳು.  **********************          ‌      ‌   ‌   ‌                                                                            ‌                   

ಸಹನೆಯ ತೇರು Read Post »

ಕಾವ್ಯಯಾನ

ಪಾಕ

ಕವಿತೆ ಡಾ . ಅಜಿತ್ ಹರೀಶಿ. ಎದೆಯೊಳಗೆ ಸಿಕ್ಕಿಬಿದ್ದಪದಗಳು ಸೀಳಿಹೊರಬಂದು ಘೀಳಿಡುತ್ತವೆನಮ್ಮನು ಕಟ್ಟಿಹಾಕಲುನಿನಗಾವ ಹಕ್ಕಿದೆಯೆಂದು…? ಈ ಮುರಿಯದ ಮೌನಆ ಅಕಾಲ ಪ್ರಸವಈ ಮುದವಿಲ್ಲದ ಮನಆ ಕಳೆಗೆಟ್ಟ ಮಳೆಹದ ಬಿದ್ದು ಮೊಳೆಯಲಿ ಅರ್ಧ ಗೀಚಿದ ಕವಿತೆಅಂತ್ಯ ಕಾಣದ ಕತೆಮಧ್ಯೆ ನಿಂತ ಬದುಕಿನಂತೆಮುಂದೇನೆಂಬ ಚಿಂತೆ ಅವಸರಕ್ಕೆ ಬಿದ್ದುಮುಗಿಸುವ ದಾರಿಅದಿಲ್ಲವೋ ಸದ್ದಿಲ್ಲದೆಮಾಡಬೇಕು ತಯಾರಿ…!********************

ಪಾಕ Read Post »

ಇತರೆ, ಜೀವನ

ವೃದ್ಧಾಶ್ರಮಗಳ ಸುತ್ತ

ಚಿಂತನೆ ಅರುಣ ರಾವ್ ನನ್ನ  ಶಾಲಾ ದಿನಗಳಲ್ಲಿ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಈ ನಾಲ್ಕು ಆಶ್ರಮಗಳನ್ನು ಕೇಳಿದ್ದ ನನಗೆ, ವೃದ್ಧಾಶ್ರಮ ಎಂಬ  ಹೊಸ ಆಶ್ರಮ ನವ  ಪ್ರಪಂಚವೊಂದನ್ನು ಪರಿಚಯಿಸಿತು. ನನ್ನ ಚಿಕ್ಕಂದಿನಲ್ಲಿ ವೃದ್ಧಾಶ್ರಮ ಎನ್ನುವ ಪದವನ್ನು ನಾನೆಂದೂ  ಕೇಳಿಯೇ  ಇರಲಿಲ್ಲ. ಆಗೆಲ್ಲಾ  ಒಂದು ಕುಟುಂಬದಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ, ಮಕ್ಕಳು ಬಹಳ ಆನಂದದಿಂದ ಸಮರಸದಿಂದ ಕೂಡಿ ಬಾಳುವೆ ನಡೆಸುತ್ತಿದ್ದರು. ಇವರೆಲ್ಲರೂ ಇದ್ದಾಗ ಮಾತ್ರ ನಮ್ಮದೊಂದು ಸಂಸಾರವಾಗುತ್ತದೆ ಎಂದು ಎಲ್ಲರೂ ಬಲವಾಗಿ ನಂಬಿದ್ದರು. ವಯಸ್ಸಾದ  ತಂದೆ ತಾಯಿಗಳು ನಮಗೊಂದು ಹೊರೆ ಎಂದು ಮಕ್ಕಳು ಎಂದೂ ಭಾವಿಸುತ್ತಿರಲ್ಲಿಲ್ಲ‌.   ತಮ್ಮ ತಂದೆ ತಾಯಂದಿರು ಅಜ್ಜ -ಅಜ್ಜಿಯರನ್ನು ನೋಡಿಕೊಳ್ಳುವುದನ್ನು ನೋಡುತ್ತಲೇ ಬೆಳೆದ ಮಕ್ಕಳು, ತಮ್ಮ ತಂದೆ ತಾಯಿಗೆ ವಯಸ್ಸಾದಾಗ ತಾವು ನೋಡಿಕೊಳ್ಳಬೇಕೆಂಬ ಸಹಜ ಭಾವನೆಯಿಂದಲೇ ಬೆಳೆದು ದೊಡ್ಡವರಾಗುತ್ತಿದ್ದರು.  ಅವರನ್ನು ನೋಡಿಕೊಳ್ಳುವುದು  ಮಕ್ಕಳ ಆದ್ಯ ಕರ್ತವ್ಯವಾಗಿ, ಬಲವಂತ ಮತ್ತು ದಾಕ್ಷಿಣ್ಯ ರಹಿತವಾಗಿ ಸರಾಗವಾಗಿ ಸಾಗಿ ಹೋಗುತ್ತಿತ್ತು. ಭಾರತೀಯ   ಸಮಾಜದ ಒಟ್ಟಾರೆ ಚಿತ್ರಣ ಇದೇ ಆಗಿರುವಾಗ ಎಲ್ಲರೂ ಈ ವ್ಯವಸ್ಥೆಯನ್ನು ಯಥಾವಿಧಿ ಒಪ್ಪಿಕೊಂಡು, ಅದರಂತೆ ತಮ್ಮ ಮನಸ್ಥಿತಿಯನ್ನು ರೂಢಿಸಿಕೊಳ್ಳುತ್ತಿದ್ದರು.  ನಮ್ಮ ಪುರಾಣಗಳಲ್ಲಿ ಕಂಡು ಬರುವ ‘ಶ್ರವಣನ ಪಿತೃಭಕ್ತಿ’ ಕತೆಯೂ ಸಹ   ಇದನ್ನೇ ಒತ್ತಿಹೇಳುತ್ತದೆ.  ಶ್ರವಣಕುಮಾರನು ಕುರುಡರಾದ ತನ್ನ ತಂದೆ ತಾಯಿಯರ ಮನೋಭಿಲಾಷೆಯನ್ನು  ನೆರವೇರಿಸುವ ಸಲುವಾಗಿ,  ವಯಸ್ಸಾದ ಅವರನ್ನು  ಡೋಲಿಯಲ್ಲಿ ಕುಳ್ಳರಿಸಿಕೊಂಡು ಪುಣ್ಯಕ್ಷೇತ್ರಗಳಿಗೆ ಹೊತ್ತೊಯ್ದು ತೀರ್ಥಯಾತ್ರೆ ಮಾಡಿಸಿದ್ದು.  ನಂತರ ದಶರಥನ ಶಬ್ದವೇಧಿ ಬಾಣಕ್ಕೆ ಗುರಿಯಾಗಿ, ಸಾವಿನ ಅಂಚಿನಲ್ಲದ್ದಾಗಲೂ ಸಹ‌ ಅವನಿಗೆ ತನ್ನ ತಂದೆ-,ತಾಯಿಯರದೇ ಚಿಂತೆ. ಹಾಗಾಗಿ  ನಮ್ಮ ಇಂದಿನ ಯುವ ಜನಾಂಗ ಈ ಕತೆಯನ್ನು  ಮತ್ತೊಮ್ಮೆ ಕೇಳಬೇಕಿದೆ, ಮನವರಿಕೆ ಮಾಡಿಕೊಳ್ಳಬೇಕಿದೆ. ಏಕೆಂದರೆ  ಶ್ರವಣ ಕುಮಾರನು  ಸರ್ವಕಾಲಕ್ಕೂ, ಸರ್ವರಿಗೂ ಆದರ್ಶಪ್ರಾಯನಾಗಿದ್ದಾನೆ. ಉದಾಹರಣೆಗೆ ಸ್ವತ: ರಾಷ್ಟ್ರಪಿತ  ಮಹಾತ್ಮ ಗಾಂಧೀಜಿಯವರೇ ಈ ಕಥೆಯನ್ನು ಓದಿ, ಶ್ರವಣನಿಂದ ಪ್ರಭಾವಿತರಾಗಿ, ಕಾಯಿಲೆ ಪೀಡಿತರಾದ  ತಮ್ಮ ತಂದೆಯ ಸೇವೆಯನ್ನು  ಅವರ ಕೊನೆ ಉಸಿರಿರುವವರೆಗೂ ಮಾಡಿದರು.. ಆದರೆ  ಇಂದು ಎಲ್ಲವೂ ತಿರುಗು ಮರುಗಾಗಿದೆ. ಮಕ್ಕಳಿಗೆ ತಮ್ಮ ತಂದೆ ತಾಯಿ ತಮ್ಮ ಜೊತೆಯಲ್ಲಿದ್ದರೆ ಸರಿ‌ಬೀಳದು.  ಇದಕ್ಕೆ ಹಲವಾರು ಕಾರಣಗಳಿರಬಹುದು. ಅಜ್ಜ, ಅಜ್ಜಿಯರ  ಮುದ್ದಿನಿಂದಾಗಿ ತಮ್ಮ ಮಕ್ಕಳು ಹಾಳಾಗುತ್ತಿದ್ದಾರೆಂದೋ, ಸಂಜೆಯಾದರೆ ಧಾರಾವಾಹಿಗಳನ್ನು ನೋಡುವುದರಿಂದ ತಮ್ಮ ಮಕ್ಕಳು ಓದುತ್ತಿಲ್ಲವೆಂದೋ, ಅವರಿಂದಾಗಿ‌ ಮನೆಯಲ್ಲಿ ಪದೇಪದೇ ಜಗಳಗಳಾಗುತ್ತಿವೆಯೆಂದೋ  ಹೀಗೆ ಹತ್ತು ಹಲವು ಕಾರಣಗಳನ್ನು ನೀಡಿ,  ಮೊಮ್ಮಕ್ಕಳು ಅಜ್ಜಿ ಅಥವಾ ತಾತ ತಮ್ಮ  ಜೊತೆಯಲ್ಲಿ, ತಮ್ಮ ಮನೆಯಲ್ಲಿಯೇ  ಇರಬೇಕೆಂದು ಹಠ ಮಾಡಿ, ಅತ್ತು ಕರೆದು ಗೋಳಾಡಿದರೂ, ಮಕ್ಕಳ  ಮಾತನ್ನು‌ ಕೇಳದೆ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿರುವುದು, ತಮ್ಮ ಜೊತೆಯಲ್ಲಿಟ್ಟುಕೊಳ್ಳದೆ ಬೇರೆ ಮನೆ ಮಾಡಿ ಇಡುವುದು  ವಿಪರ್ಯಾಸವೇ ಸರಿ. ತಮ್ಮ ಇಳಿ ವಯಸ್ಸಿನಲ್ಲಿ ಮಕ್ಕಳೊಂದಿಗೆ, ಮೊಮ್ಮಕ್ಕಳನ್ನು ಆಡಿಸುತ್ತಾ, ಕಾಲ ಕಳೆಯುವ ಕನಸನ್ನು ಹೊತ್ತ ವೃದ್ಧ ಜೀವಗಳು ವೃದ್ಧಾಶ್ರಮಕ್ಕೆ ಹೋಗಲು,   ತಾವೇ ಪ್ರತ್ಯೇಕವಾಗಿರಲು ಅದೆಷ್ಟು ನೊಂದುಕೊಂಡೀತೋ?   ಇಂದು ಇದು ಕೇವಲ  ಬಡವ ಹಾಗೂ ಮಧ್ಯಮ ತರಗತಿಯವರ ಸಮಸ್ಯೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಮಕ್ಕಳ ಭವ್ಯ ಭವಿಷ್ಯದ ಬಗೆಗೆ ಕನಸು ಹೊತ್ತ ಪೋಷಕರು ಅವರಿಗಾಗಿ ಹಗಲಿರುಳು ಶ್ರಮಿಸಿ ಕಷ್ಟ ಪಡುತ್ತಾರೆ.  ಓದಿದ ಮಕ್ಕಳು  ಉದ್ಯೊಗಗಳನ್ನು ಅರಸುತ್ತಾ, ವಿದೇಶಕ್ಕೆ ಹೋಗುತ್ತಾರೆ. ನಂತರ ಅಲ್ಲಿಯೇ ಶಾಶ್ವತವಾಗಿ  ನೆಲೆನಿಂತು,  ತಿಂಗಳಿಗೆ ಲಕ್ಷಾಂತರ ರೂಪಾಯಿಗಳನ್ನು ಪೋಷಕರಿಗೆ ಕಳುಹಿಸಿ ಕೊಡುವುದರಲ್ಲಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ. ಆದರೆ  ಈ ಹಣ ಯಾವತ್ತಿಗೂ ಇವರನ್ನು ಪ್ರೀತಿಯಿಂದ ಮಾತನಾಡಿಸಲು ಸಾಧ್ಯವೇ?   ಇವರು ಅನಾರೋಗ್ಯ ಪೀಡಿತರಾದಾಗ  ಸೇವೆ ಮಾಡಲು ಸಾಧ್ಯವೇ? ಅವರು ಕಾಯಿಲೆ ಬಿದ್ದಾಗ ಅಕ್ಕರೆಯಿಂದ ಆರೈಕೆ ಮಾಡಲು ಸಾಧ್ಯವೇ?  ವಯಸ್ಸಾದಂತೆ ಮುದಿ ಜೀವಗಳು ಇತರರೊಂದಿಗೆ  ಮಾತುಕತೆಗಾಗಿ ಹಂಬಲಿಸುತ್ತಿರುತ್ತದೆ.ಆದರೆ ಮಕ್ಕಳಿಗಾಗಲೀ, ಮೊಮ್ನಕ್ಕಳಿಗಾಗಲೀ ಇವರೊಡನೆ ಮಾತನಾಡಲು‌ ಪುರುಸೊತ್ತೆಲ್ಲಿಯದು?  ಈಗ‌ಂತೂ ಮಗುವನ್ನು‌ ಯಾವ ಶಾಲೆಗೆ ಸೇರಿಸಿದಿರಿ ಎನ್ನುವಷ್ಟು ಸಹಜವಾಗಿ, ‘ ನಿಮ್ಮ ತಂದೇನ ಯಾವ ವೃದ್ಧಾಶ್ರಮಕ್ಕೆ ಸೇರಿಸಿದ್ರಿ? ಎಂದು ಕೇಳಲಾಗುತ್ತಿದೆ.ಪಟ್ಟಣ ಪ್ರದೇಶಗಳಿಗೆ ಹೋಲಿಸಿಕೊಂಡರೆ ಗ್ರಾಮೀಣ ಪ್ರದೇಶಗಳಲ್ಲಿ ಈ ಸ್ಥಿತಿ ವಿಭಿನ್ನವಾಗಿದೆ.  ವಯಸ್ಸಾದ ತಂದೆ ತಾಯಂದಿರು ಹಳ್ಳಿ ಗಳಲ್ಲಿ ವಾಸಿಸುತ್ತಿದ್ದರೆ, ಅವರ ಮಕ್ಕಳು ಕೆಲಸದ ಕಾರಣದಿಂದಲೋ ಮತ್ತೊಂದೋ ಆಗಿ ನಗರಗಳಲ್ಲಿ ನೆಲೆಸಿರುತ್ತಾರೆ.  ವರ್ಷದಲ್ಲಿ ಯಾವಾಗಲೋ ಒಮ್ಮೊಮ್ಮೆ ರಜಾ ದೊರೆತಾಗ ಊರಿಗೆ ಹೋದರೆ ಹೋದರು; ಇಲ್ಲದಿದ್ದರೆ ಇಲ್ಲ.  ತಮ್ಮ ಇಡೀ ಜೀವಮಾನ ಅದರಲ್ಲೂ ಯೌವ್ವನದ ಬಹು ಪಾಲು ಕುಟುಂಬದ, ಮಕ್ಕಳ ಏಳಿಗೆಗಾಗಿ ದುಡಿದು ಹಣ್ಣಾದ ಜೀವಗಳು ವೃದ್ಧಾಶ್ರಮದ ಬಾಗಿಲ ಬಳಿ ಕುಳಿತು ತಮ್ಮ ಮಕ್ಕಳು ಎಂದಿಗೆ ಬರುತ್ತಾರೋ?  ಎಂದು ಎದಿರು ನೋಡುವ ದೃಶ್ಯವಂತೂ ಕರುಳಿರಿಯುವಂತಹುದು.   ಹಾಗಿದ್ದರೂ  ವೃದ್ಧಾಶ್ರಮಗಳಲ್ಲಿನ ವಾಸ್ತವ್ಯ ಅಷ್ಟೇನೂ ಕಷ್ಟಕರವಾದುದಲ್ಲ. ಏಕೆಂದರೆ ಅಲ್ಲಿ ಅವರಿಗೆ ಅವರದೇ ವಯೋಮಾನದವರ ಜೊತೆ ಬೆರೆಯುವ, ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವ ಅವಕಾಶ ಇಲ್ಲದಿಲ್ಲ. ಕಾಲಕಾಲಕ್ಕೆ ಊಟ, ನಿದ್ದೆ, ವಿಶ್ರಾಂತಿ, ಔಷಧ ಎಲ್ಲವೂ ದೊರಕುತ್ತದೆ. ಅದರೂ ಈ ಸೌಕರ್ಯಗಳು ಸ್ವಂತ ಮಕ್ಕಳ ಜೊತೆ ಇರುವ ನೆಮ್ಮದಿಯನ್ನು  ಸುಖ-ಸಂತೋಷವನ್ನು  ಎಂದಿಗೂ ಕೊಡಲಾಗದು. ” ದೋಸೆ ಮಗುಚಿ  ಹಾಕಿದಂತೆ”ಎನ್ನುವ ಗಾದೆ ಮಾತಿನಂತೆ   ಅಜ್ಜ,ಅಜ್ಜಿಯರನ್ನು ವೃದ್ಧಾಶ್ರಮದಲ್ಲಿಯೇ ನೋಡಿ ಅಭ್ಯಾಸವಿರುವ ಇವರ ಮಕ್ಕಳು  ತಮ್ಮ ತಂದೆ-ತಾಯಿಯರಿಗೆ ವಯಸ್ಸಾದ ಕಾಲಕ್ಕೆ ಅವರನ್ನೂ ಸಹ ವೃದ್ಧಾಶ್ರಮಕ್ಮೆ ಕಳುಹಿಸುವುದು ನೂರಕ್ಕೆ ನೂರರಷ್ಟು ನಿಜ.  ಏಕೆಂದರೆ ಮಕ್ಕಳು ನಾವು ಹೇಳಿಕೊಟ್ಟು ಕಲಿಯುವುದಕ್ಕಿಂತ ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ ಅಲ್ಲವೇ? ********************

ವೃದ್ಧಾಶ್ರಮಗಳ ಸುತ್ತ Read Post »

ಕಾವ್ಯಯಾನ

ಎದೆಯ ಬೆಂಕಿ

ಕವಿತೆ ವೀಣಾ ನಿರಂಜನ ನನ್ನ ಎದೆಯೊಳಗೆ ಬೆಂಕಿಯಿದೆಈ ಬೆಂಕಿಯೇನನ್ನ ಸುಡದಂತೆ ಎಚ್ಚರದಿಂದದಾಟಬೇಕಿದೆ ಹೊರಗೆನಿರೂಪಾಯಳಾದ ನನಗೆನಿರುಪದ್ರವಿ ಕವಿತೆಯೇಉತ್ತರ ಹೇಳಬೇಕುಅಕ್ಷರಗಳು ಬೇಯದಂತೆಶಬ್ದಗಳು ಬೂದಿಯಾಗದಂತೆಈ ಬೆಂಕಿಯಿಂದಲೇಬೆಳಕ ಹೊತ್ತಿಸ ಬೇಕಿದೆ ಕತ್ತಲು ಮಗ್ಗುಲು ಬದಲಾಯಿಸಿನಾಳೆ –ಬೆಳಗಾಗುವುದು ಮತ್ತೆಸುಡುವ ಸೂರ್ಯ ಹೊತ್ತು ತರುತ್ತಾನೆಬೆಳಕಿನ ಪುಂಜ ಎಂದಿನಂತೆ ಎದೆಯ ಬೆಂಕಿಗೆ ನೆರಳಿಲ್ಲ ಎಂದಾದರೆಕವಿತೆ –ನೀನೇಕೆ ಮರವಾಗಿ ನಿಲ್ಲ ಬಾರದುಸುಡುವಾಗ್ನಿ ತಣ್ಣಗಾದೀತುನಿನ್ನ ತಂಗಾಳಿಯ ಸ್ಪರ್ಶದಿಂದಗಾಳಿ, ಬೆಳಕು ಮತ್ತು ಕವಿತೆಈ ಬೆಂಕಿಯೆದುರುಎದೆ ಸೆಟೆಸಿ ನಿಲ್ಲುವುದಾದರೆಪುಟಗೊಂಡ ಆತ್ಮ ಪರಿಶುದ್ಧವಾಗುತ್ತದೆಮತ್ತುಸತ್ಯವಾಗಿಯೂ ಅಲ್ಲಿ ಹೊಸತೊಂದುಕವಿತೆ ಬದುಕನ್ನು ಚುಂಬಿಸುತ್ತದೆಬದುಕಿಗಾಗಿ ಹಂಬಲಿಸುತ್ತದೆ.                    **********************

ಎದೆಯ ಬೆಂಕಿ Read Post »

You cannot copy content of this page

Scroll to Top