ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ದೃಷ್ಟಾಂತದ ಮೂಲಕ ನೀತಿಯ ಬೋಧನೆ. ಸೋಮೇಶ್ವರ ಶತಕ ಕೃತಿ : ಸೋಮೇಶ್ವರ ಶತಕಪುಲಿಗೆರೆ ಸೋಮನಾಥ.ಕನ್ನಡ ಸಾಹಿತ್ಯ ಪರಿಷತ್ತು.ಚಾಮರಾಜಪೇಟೆ.ಬೆಂ.ಮರು ಮುದ್ರಣ:೨೦೨೦.ಬೆಲೆ :೬೦. ಪುಸ್ತಕ ಪರಿಚಯ: ಕೃತಿ: *ಸೋಮೇಶ್ವರ ಶತಕಪುಲಿಗೆರೆಯಸೋಮನಾಥ ನಾವೆಲ್ಲಾ ಶಾಲೆಯಲ್ಲಿ ಕಲಿಯುವಾಗ ಕನ್ನಡ ಪಠ್ಯಪುಸ್ತಕದಲ್ಲಿ ‘ ಹರಹರಾ ಶ್ರೀಚೆನ್ನ ಸೋಮೇಶ್ವರ ‘ ಎಂದು ಕೊನೆಗೆ,ಮತ್ತೆ ಮತ್ತೆ ರಾಗವಾಗಿ ಹಾಡುವ ಪದ್ಯಗಳನ್ನು ಓದಿಯೇ ಇದ್ದೇವೆ.ಈಗಲೂ ಒಂದರಿಂದ ಹನ್ನೆರಡನೆ ತರಗತಿಯ ವರೆಗಿನ ಕನ್ನಡ ಪಠ್ಯದಲ್ಲಿ, ಎರಡು ಮೂರು ಪಠ್ಯಗಳಲ್ಲಾದರೂ ಈ ಬಗೆಯ ಪದ್ಯಗಳಿವೆ.ಇವು ಪುಲಿಗೆರೆ ಸೋಮೇಶ್ವರನ ಶತಕದಿಂದ ಆರಸಿ ಇಡುತ್ತಿದ್ದ ಪದ್ಯಗಳು.ಬಿಡಿ ಬಿಡಿಯಾಗಿರುವ ಈ ಪದ್ಯಗಳು ನೀತಿಬೋಧಕವಾದವು. ದೃಷ್ಟಾಂತಗಳ ಮೂಲಕ ಸರಿ ತಪ್ಪುಗಳನ್ನು,ಸಾಮಾಜಿಕ ನಡವಳಿಕೆಯನ್ನು ತಿಳಿಸುವ ಅಲಿಖಿತವಾದ ಜನಮಾನಸದ ಶಾಸನಗಳಂತಿರುವ ಪದ್ಯಗಳು ಇವು. ಹಾಗೆ ನೋಡಿದರೆ ನಮ್ಮ ಹಲವು ಜನಪದ ತ್ರಿಪದಿಗಳು,ಗಾದೆಗಳೂ,ಶರಣರ ನುಡಿಗಳು,ಸರ್ವಜ್ಞನ ವಚನಗಳು,ಕೀರ್ತನೆಕಾರರ ನುಡಿಗಳು..ಇವೆಲ್ಲಾ ಬಹುಪಾಲು ಸಾಮಾಜಿಕ ಧಾರ್ಮಿಕ ನಡಾವಳಿಗಳನ್ನು ಕುರಿತು ಹೇಳುತ್ತಲೇ,ಮಾರ್ಗದರ್ಶಿಯೂ ಚಿಂತನೆಗೆ ಹಚ್ಚುವವೂ ಆಗಿವೆ. “ಸೋಮೇಶ್ವರ ಶತಕ ” ರಚನೆಕಾರ ಪುಲಿಗೆರೆ ಸೋಮೇಶ್ವರ ಅಥವಾ ಪಾಲ್ಕುರಿಕೆ ಸೋಮೇಶ್ವರನೇ ಎಂಬ ಗೊಂದಲವಿದೆ.ಹನ್ನೆರಡನೆ‌ ಶತಮಾನದ ಅಂತ್ಯದಲ್ಲಿದ್ದ ಪಾಲ್ಕುರಿಕೆ ಸೋಮನಾಥನು ಸಂಸ್ಕೃತ, ತೆಲುಗು,ಕನ್ನಡ ಮೂರು ಭಾಷೆಗಳಲ್ಲೂ ಪಾಂಡಿತ್ಯ ಪಡೆದವನಾಗಿದ್ದ.ಆದರೆ,ಇವನು ಗೋದಾವರಿ ಪ್ರಾಂತ್ಯದಲ್ಲಿದ್ದನೆಂದು,ಇವನಿಂದ‌ ಇದು ರಚಿತವಾಗಿಲ್ಲವೆಂದು ಕವಿಚರಿತೆಕಾರರು ಹೇಳಿದ್ದಾರೆ.ಮತ್ತೊಬ್ಬರು, ಪುಲಿಗೆರೆ ಸೋಮನಾಥ. ಸುಮಾರು ಹದಿನಾರನೇ ಶತಮಾನ.ಧಾರವಾಡದ ಜಿಲ್ಲೆ,ವೀರಶೈವ ಕವಿಯಾಗಿದ್ದವನು.ಕೃತಿಯಲ್ಲಿ‌ಸೋಮ‌ ಎಂದಷ್ಟೇ ಕವಿ ಹೆಸರಿದೆ.ಈ ಧಾರವಾಡದ ಕವಿ ಪುಲಿಗೆರೆ ಸೋಮನಾಥನೇ‌ ಶತಕದ ಕವಿಯೆಂದು ವಿದ್ವಾಂಸರು ಊಹಿಸಿದ್ದಾರೆ. ಶತಕವೆಂದರೆ ನೂರು.ಆರಂಭದ ಸ್ತುತಿ ಮತ್ತು ಅಂತ್ಯದ ಶತಕದ ಉಪಯೋಗ ತಿಳಿಸುವ ಪದ್ಯಗಳನ್ನು ಸೇರಿಸಿ,ಒಟ್ಟು ನೂರ ಮೂರು ಪದ್ಯಗಳು ಇದರಲ್ಲಿವೆ.ಮೊದಲ ಮತ್ತು ಕೊನೆಯ ಪದ್ಯಗಳು ಸ್ರಗ್ಧರಾ ವೃತ್ತದಿಂದ ಕೂಡಿದ್ದು,ಉಳಿದವು ಮತ್ತೇಭವಿಕ್ರೀಡಿತವೆಂಬ ವೃತ್ತ ಪದ್ಯಗಳಲ್ಲಿ ರಚನೆಯಾಗಿವೆ. ” ಸೋಮೇಶ್ವರ ಶತಕ” ಕೃತಿಯ ಸಂಪಾದನೆ ಬಹಳ ಅರ್ಥಪೂರ್ಣವಾಗಿದೆ.ಪದ್ಯಗಳು, ಅವುಗಳಿಗೆ ಭಾವಾರ್ಥ,ಟಿಪ್ಪಣಿ,ಜೊತೆಗೆ ಆ ಪದ್ಯಗಳಲ್ಲಿ ಉಲ್ಲೇಖಿಸಿರುವ ಕಥಾ ಎಳೆಗಳು ತಿಳಿಯದವರಿಗೆ ಪೂರ್ಣ ವಾಗಿ ತಿಳಿಯಲಿ ಎಂಬ ಆಶಯದೊಂದಿಗೆ ನೀಡಿರುವ ಮುವತ್ತು ಮೂಲಕಥೆಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.ಹಾಗಾಗಿ,ಶಿಕ್ಷಕರಿಗೆ,ವಿದ್ಯಾರ್ಥಿಗಳಿಗೆ, ಓದುಗರೆಲ್ಲರಿಗೂ ಯಾವುದೇ ಗೊಂದಲವಿಲ್ಲದೆ ಸರಳವಾಗಿ ಗ್ರಹಿಸಲು ಉಪಯುಕ್ತವಾಗಿ ರೂಪಿಸಿಕೊಡಲಾಗಿದೆ. ಸೋಮೇಶ್ವರ ಶತಕದ ಪದ್ಯಗಳು ಎಷ್ಟು ಜನಪ್ರಿಯವಾದವು ಎಂದರೆ; ಎಳೆಗರು ಎತ್ತಾಗದೆ,ಬಡವಂ ಬಲ್ಲಿದನಾಗನೆ,ಹಲವು ಹಳ್ಳ ಸೇರಿ ಸಮುದ್ರವಾಗದೆ,ಮಡಿಯೆ ನಿರ್ಮಲ‌ ಚಿತ್ತ…ಹೀಗೆ ಗಾದೆಗಳಂತೆ,ನಾಣ್ನುಡಿಗಳಂತೆ ರೂಢಿಗತವಾಗಿ ಬಳಸುವ ಮಾತುಗಳಾಗಿವೆ. ಈ ಶತಕದ ಪದ್ಯಗಳು ನಾಲ್ಕು ಸಾಲಿನಲ್ಲಿದ್ದು ಕೆಲವು ದೃಷ್ಟಾಂತಗಳ ಮೂಲಕ ನೀತಿ, ತಿಳುವಳಿಕೆ ‌ಹೇಳುತ್ತವೆ. ” ಉಣದಿರುವ ಧನಮಿರ್ದೊಡೇನು,ಸುತನಿರ್ದೇಂ‌ ಮುಪ್ಪಿನಲ್ಲಾಗದಾ,ಒಣಗಲ್ಪೈರಿಗೆ ಬಾರದಿರ್ದ ಮಳೆ ತಾಂ‌ ಬಂದೇನದಾಪತ್ತಿನೊಳ್ ಮಣಿದುಂ‌ ನೋಡದ ಬಂಧುವೇತಕೆಣಿಸಲ್ ಕಾಲೋಚಿತಕ್ಕೈದಿದ ತೃಣವೇ ಪರ್ವತವಲ್ಲವೇ‌ ಹರಹರಾ ಶ್ರೀಚೆನ್ನ ಸೋಮೇಶ್ವರ.!”(೧೬) ಉಪಯೋಗಿಸದಿರುವ ಹಣವೂ,ಮುಪ್ಪಿನಲ್ಲಿರುವ ತಂದೆ ತಾಯಿಯನ್ನು ನೋಡದ ಮಗನೂ,ಪೈರು ಒಣಗುವಾಗ ಬಾರದ‌ ಮಳೆಯೂ,ಕಷ್ಟಕಾಲದಲ್ಲಿಯೂ ಬಂದು ವಿಚಾರಿಸಿಕೊಳ್ಳದ ನಂಟರೂ ಇದ್ದು ಪ್ರಯೋಜನವಿಲ್ಲ‌.ಉಪಯೋಗವಿಲ್ಲ.ಆದುದರಿಂದ ಸಮಯಕೆ ಸರಿಯಾಗಿ ಒದಗಿದ ಹುಲ್ಲುಕಡ್ಡಿಯೂ,ಅಂದರೆ‌ ಸಣ್ಣ‌ಸಹಾಯವೂ ಪರ್ವತಕ್ಕೆ ಸಮಾನವಾದುದು.ಹೀಗೆ ಸಾಮಾಜಿಕ ಜೀವನದ ವಿವರಗಳನ್ನೇ ಉದಾಹರಿಸುತ್ತಾ ಸರಿ ತಪ್ಪುಗಳ, ಒಳಿತು ಕೆಡಕುಗಳ ವಿಚಾರ ಮಾಡಿದ್ದಾನೆ‌ ಕವಿ. ” ಮದನಂ ದೇಹವ ನೀಗಿದಂ,ನೃಪವರಂ ಚಂಡಾಲಗಳಾದ,ಪೋದುದು ಬೊಮ್ಮಂಗೆ ಶಿರಸ್ಸು,ಭಾರ್ಗವನು ಕಣ್ಗಾಣಂ,ನಳಂ‌ ವಾಜಿಪಂ,ಸುಧೆಯಂ‌ ಕೊಟ್ಟು ಸುರೇಂದ್ರ ಸೋಲ್ತ,ಸತಿಯಂ ಪೋಗಾಡಿದಂ ರಾಘವಂ,ವಿಧಿಯಂ ಮೀರುವನಾವನೈ ಹರ ಹರಾ ಶ್ರೀ ಚೆನ್ನ ಸೋಮೇಶ್ವರ. “(೨೭) ಮನ್ಮಥನು ದೇಹವನ್ನೇ ಕಳೆದುಕೊಂಡನು,ರಾಜಶ್ರೇಷ್ಠನಾದ ಹರಿಶ್ಚಂದ್ರನು ಚಂಡಾಲನಿಗೆ ದಾಸನಾದನು,ಬ್ರಹ್ಮನಿಗೆ ಒಂದು ತಲೆಯೇ ಹೋಯಿತು.ಶುಕ್ರಾಚಾರ್ಯರಿಗೆ ಒಂದು ಕಣ್ಣು ಹೋಯಿತು.ನಳ‌ ಮಹಾರಾಜನು ಕುದುರೆಯ ನೋಡಿಕೊಂಡಿರಬೇಕಾಯಿತು,ಇಂದ್ರನು ಅಮೃತವನ್ನು ಕಳೆದುಕೊಂಡು ಯುದ್ದದಲ್ಲಿ ಸೋತು ಹೋದನು,ಶ್ರೀರಾಮನು ತನ್ನ ಹೆಂಡತಿಯನ್ನು ಕಳೆದುಕೊಂಡನು…ಹೀಗಿರುವಾಗ ಲೋಕದಲ್ಲಿ ದುರಾದೃಷ್ಟವನ್ನು ಮೀರಲು ಯಾರಿಗೆ ಸಾಧ್ಯ.ಎಲ್ಲರೂ ಬಂದುದನ್ನು ಅನುಭವಿಸಲೇಬೇಕು ಎಂದು ಕವಿ ಹೇಳುತ್ತಾನೆ.ಈ ಒಂದು ಪದ್ಯಭಾಗದಲ್ಲೇ ಏಳುಕಥೆಗಳ ಉಲ್ಲೇಖವಿದೆ.ಕಾಮ‌ ದಹನದ‌ ಕಥೆ,ಹರಿಶ್ಚಂದ್ರನ ಕಥೆ,ರಾಮಾಯಣದ ಕಥೆ,..ಹೀಗೆ ನಾಲ್ಕು ಪದ್ಯ ಗಳಲ್ಲೇ ಹಲವು ಕತೆಗಳ ನಿದರ್ಶನಗಳ ಮೂಲಕ ಅದೃಷ್ಟ ದುರಾದೃಷ್ಟ ನಮ್ಮ ಕೈಯಲಿಲ್ಲವೆಂದು ಕವಿ ಚಿತ್ರಿಸಿದ್ದಾನೆ. ಪಾಠ ಮಾಡುವಾಗ ಶಿಕ್ಷಕರು ಎಡವಬಾರದೆಂದು,ಮಕ್ಕಳೇ‌ ಓದುವಾಗ ಅವರಿಗೂ ತಿಳಿಯಲಿ ಎಂದು ಈ ಕೃತಿಯ ಸಂಪಾದಕರು ಈ ಎಲ್ಲಾ ಉಲ್ಲೇಖಿತ ಕಥಾ ಎಳೆಗಳನ್ನು ಹಿಡಿದು,ಅವುಗಳ ಮೂಲಕಥೆಗಳನ್ನು ಒದಗಿಸಿದ್ದಾರೆ.ಆ ಮೂಲಕ ಈ ಪುಸ್ತಕದ ಉಪಯುಕ್ತತೆ ಹೆಚ್ಚಾಗಿದೆ. ಈ ಶತಕದ ಪದ್ಯಗಳಲ್ಲಿರುವ ವಿಷಯವು ನೀತಿಬೋಧಕವೆಂದು ಆಗಲೇ‌ ಹೇಳಿದ್ದೇನೆ.ಆ ನೀತಿ,ಒಣ ಬೋಧನೆಯಂತಾಗಬಾರದೆಂದು ಕವಿ ಹೋಲಿಕೆ,ಉಪಮೆ,ದೃಷ್ಟಾಂತ ಗಳನ್ನು ನೀಡುತ್ತಾ ಅಂತಿಮವಾಗಿ ನೀತಿ ಹೇಳಿದ್ದಾನೆ.ಹೀಗಾಗಿ ಈ ಪದ್ಯಗಳು ಸೊಗಸಿನಿಂದ ಕೂಡಿದ್ದು,ಓದಿಸಿಕೊಳ್ಳುವ,ಸಂವಾದಿಸುವ ಸಾಮರ್ಥ್ಯ ಹೊಂದಿವೆ. ಮತ್ತೊಂದು ವಿಚಾರವೆಂದರೆ, ಈ ಪದ್ಯಗಳಲ್ಲಿರುವ ವಿಷಯಗಳೆಲ್ಲವೂ ಸಾರ್ವಕಾಲಿಕವಾದವೆ,ಪ್ರಗತಿಪರವೇ ಎಂದೇನಾದರೂ ಪ್ರಶ್ನೆ ಹಾಕಿಕೊಂಡರೆ,ಇಲ್ಲಿ,ಅನೇಕ ವಿಚಾರಗಳು ಎಲ್ಲ ಕಾಲಕ್ಕೂ ಬೇಕಾದತಂಹವು ಇವೆ.ಆದರೆ,ಕೆಲವು ವಿಚಾರಗಳು ಕವಿ ಬಾಳಿ ಬದುಕಿದ ಸಮಾಜದಲ್ಲಿ ಆಗ ಮಾನ್ಯತೆ ಪಡೆದಿದ್ದು,ಪ್ರಸ್ತುತದಲ್ಲಿ ಅವುಗಳು ಅರ್ಥ ಕಳೆದುಕೊಂಡಿವೆ.ಇವತ್ತಿನ ಸಮಾಜದಲ್ಲಿ ಅಂತಹ ವಿಷಯಗಳಿಗೆ ‌ಮೌಲ್ಯವಿಲ್ಲ.ನಿದರ್ಶನಕೆ ; ಹೀಗಾಗಲೇ ಉಲ್ಲೇಖಿಸಿರುವ ‘ಉಣದಿರ್ದ ಧನವಿದ್ದರೇನು ಪ್ರಯೋಜನ’ ಅಂತಹ ಪದ್ಯಗಳು ಎಲ್ಲಾ ಕಾಲ‌ಕ್ಕೂ ಸೂಕ್ತವಾದವು.ಆದರೆ,ವಿಧವೆ,ಒಂಟಿ ಬ್ರಾಹ್ಮಣ, ಜೈನ ಸಂನ್ಯಾಸಿ,ಅಂಗಹೀನನು…ಇವೆಲ್ಲವೂ ಅಪಶಕುನವಾದದ್ದು,ಇವುಗಳನ್ನು ಕಂಡಾಗ ನಿಪುಣರು ಹೊರಹೋಗುವುದಿಲ್ಲಾ ಎಂಬ ಮಾತು ಅವತ್ತಿನ ಸಾಮಾಜಿಕ ನಂಬಿಕೆ,ನಡವಳಿಕೆಯನ್ನು ಯಥಾ ಪ್ರಕಾರ ಬಿಂಬಿಸಿದಂತಿದೆ. ” ಧರೆ ಬೀಜಂಗಳ ನುಂಗೆ,ಬೇಲಿ ಹೊಲನೆಲ್ಲಂ‌ ಮೇದೊಡೆಂ,ಗಂಡ ಹೆಂಡಿರನತ್ಯುಗ್ರದಿ ಶಿಕ್ಷಿಸಲ್,ಪ್ರಜೆಗಳಂ ಭೂಪಾಲಕಂ ಭಾದಿಸಲ್,ತರುವೇ ಪಣ್ಗಳ ಮೆಲ್ಲೆ,ಮಾತೆ ವಿಷಮಂ ಪೆತ್ತರ್ಭಂಕಂಗೂಡಿಸಲ್,ಹರಂ‌ಕೊಲ್ಲಲ್ ಪರ ಕಾಯ್ವನೇ ಹರ ಹರಾ ಶ್ರೀಚೆನ್ನ ಸೋಮೇಶ್ವರ! “(೨೯) ಎಂಬ ಪದ್ಯದಲ್ಲಿ ರಕ್ಷಿಸಬೇಕಾದವರೇ ಭಕ್ಷಕರಾದರೆ ಯಾರು ರಕ್ಷಿಸಲು ಸಾಧ್ಯ ಎಂದು ಕವಿ ಕೇಳುತ್ತಾರೆ.ಬಸವಣ್ಣನ‌ ” ಒಲೆ ಹತ್ತಿ ಉರಿದರೆ ನಿಲ್ಲಬಹುದಲ್ಲದೆ,ಧರೆ ಹತ್ತಿ ಉರಿದರೆ ನಿಲಲಾಗದು” ವಚನವೂ ಇದೇ ನುಡಿಗಳನ್ನು ಹೇಳುತ್ತಾ,ಕಾಯುವವರೆ ಕೊಲ್ಲಲು ನಿಂತರೆ ಇನ್ಯಾರಿಗೆ ದೂರುವುದು ಎಂದು ಪ್ರಶ್ನಿಸುತ್ತದೆ‌.ಇಂತಹ ಹಲವಾರು ‌ಪದ್ಯಗಳು,ಗುರು,ಜ್ಞಾನ, ವಿದ್ಯೆ,ಹಣ,ಅಧಿಕಾರ,ಬಂಧು ಮಿತ್ರರು,ರಾಜ,ಮಂತ್ರಿ,ಅಧಿಕಾರಿಗಳಿಗಿರಬೇಕಾದ ಸಾಮರ್ಥ್ಯ.. ಹೀಗೆ ಇವುಗಳೆಲ್ಲದರ ಗುಣ ಲಕ್ಷಣ ಕುರಿತು ಆಡಿರುವ ನುಡಿಗಳು ಇವತ್ತಿಗೂ ಅನ್ವಯಿಸುತ್ತವೆ.ಮತ್ತು ಉಪಯುಕ್ತತೆ ಪಡೆದಿವೆ.ನಿದರ್ಶನಗಳ ಮೂಲಕ ಹೇಳುವುದರಿಂದ ಓದುಗ,ಕೇಳುಗರ‌ ಮನದಲ್ಲಿ ಉಳಿದು,ತಿಳುವಳಿಕೆಗೆ,ಚಿಂತನೆಗೆ ದೂಡುವ ಪದ್ಯಗಳಾಗಿವೆ.ಹಾಗಾಗಿ ಸೋಮೇಶ್ವರ ಶತಕವು ಮರುಓದಿಗೆ,ಪರಾಮರ್ಶನಕೆ ಒಳಗಾಗುತ್ತಲೇ ಇರುತ್ತದೆ. ಕವಿ ಪರಿಚಯ,ಪದ್ಯಗಳು,ಭಾವಾರ್ಥ,ಟಿಪ್ಪಣಿ,ಮೂಲಕಥೆಗಳು ಅಂದರೆ ಕಾಮದಹನದ ಕಥೆ,ಹರಿಶ್ಚಂದ್ರನ‌ ಕಥೆ,ಬಲಿಚಕ್ರವರ್ತಿಯ ಕಥೆ,ಅಹಲ್ಯೆಯ ಕಥೆ..ಹೀಗೆ ವಿನ್ಯಾಸಗೊಳಿಸಿ,ಸಿದ್ದಪಡಿಸಿರುವ ಸಂಪಾದಕರ ಶ್ರಮ ಮತ್ತು ಪಾಂಡಿತ್ಯಕ್ಕೆ ನಮಿಸಲೇಬೇಕಾಗುತ್ತದೆ.ಇಂತಹ ಪುಸ್ತಕವನ್ನು ಪುನರ್ ಮುದ್ರಣ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸ ಶ್ಲಾಘನೀಯ. ಆದರೆ,ಪುನರ್ ಮುದ್ರಣದಲ್ಲಿ ಸಂಪಾದಕರು ಯಾರು ಎಂದೇ‌ ತಿಳಿಯುತ್ತಿಲ್ಲಾ.ಅದನ್ನು ಇರುವುದು ಸಮಂಜಸವಲ್ಲ. ” ನೀತಿಯ ಕಟುತ್ವದ ಕಹಿ ಗುಳಿಗೆಗಳನ್ನು ಕಥೆಯ ಜೇನಿನಲಿ ಅದ್ದಿ ಉಣಿಸುವಆರೋಗ್ಯಕರ ನುಡಿಮುತ್ತುಗಳು ” ಈ ಶತಕದ ಪದ್ಯಗಳು. ********* ಡಾ.ಸುಜಾತಾ ಲಕ್ಷೀಪುರ

ಪುಸ್ತಕ ಸಂಗಾತಿ Read Post »

ಅಂಕಣ ಸಂಗಾತಿ, ಮುಖಾಮುಖಿ

ಅಕ್ಷರದ ಬಂಡಾಯ ತಲ್ಲಣಗಳಿಗೆ ಪ್ರತಿಕ್ರಿಯೆ ಬೇಕಾದ ಅನಿವಾರ್ಯತೆಯಲ್ಲಿ ಬರೆಯಲು ಮನಸ್ಸು ಮಾಡಿದೆ’ ಡಾ.ರಾಮಕೃಷ್ಣ ಗುಂದಿ ಡಾ.ರಾಮಕೃಷ್ಣ ಗುಂದಿ ಕನ್ನಡದ ಅತ್ಯಂತ ಪ್ರಭಾವಶಾಲಿ ಕತೆಗಾರರಲ್ಲಿ ಒಬ್ಬರು. ಅವಾರಿ ಅವರ ಪ್ರಸಿದ್ಧ ಕತೆ. ಅವರ ಮೊದಲ ಕಥಾ ಸಂಕಲನ ಅವಾರಿ ಹೆಸರಲ್ಲೇ ಪ್ರಕಟವಾಯಿತು. ಕಡಲ ಬೆಳಕಿನ ದಾರಿಯಲ್ಲಿ, ಸೀತೆದಂಡೆ ಹೂವೆ ಅವರ ಕಥಾ ಸಂಕನಲಗಳು. ಪ್ರಾಂಜಲ ಅವರು ವಿವಿಧ ಲೇಖಕರಿಗೆ ಬರೆದ ಮುನ್ನುಡಿಗಳ ಸಂಗ್ರಹ. ಆಗೇರರ ಬದುಕು ಮತ್ತು ಸಂಸ್ಕೃತಿ ಕುರಿತು ಅವರು ಸಂಶೋಧನಾ ಪ್ರಬಂಧ ಮಂಡಿಸಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರ ಆತ್ಮಕತೆ ಸಹ ಪ್ರಕಟವಾಗಿದೆ. ಯಕ್ಷಗಾನ ಕಲಾವಿದರೂ ಆಗಿರುವ ಡಾ.ಗುಂದಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ ಕಾರ‍್ಯ ನಿರ್ವಹಿಸಿದ್ದಾರೆ. ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸುಧೀರ್ಘ ಅವಧಿ ಕಾರ‍್ಯ ನಿರ್ವಹಿಸಿದ ಅವರು, ಕಾರವಾರದ ದಿವೇಕರ ಕಾಲೇಜಿನಲ್ಲಿ ಕೆಲ ವರ್ಷ ಪ್ರಾಂಶುಪಾಲರಾಗಿ ಕಾರ‍್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ಅವರು ಅಂಕೋಲಾದ ನಾಡು ಮಾಸ್ಕೇರಿ ಬಳಿಯ ಗ್ರಾಮದವರು. ಈಗ ನೆಲಸಿರುವುದು ಅಂಕೋಲಾದಲ್ಲಿ. ಅವಾರಿ, ಕಡಲ ಬೆಳಕಿನ ದಾರಿಯಲ್ಲಿ, ಸೀತೆ ದಂಡೆ ಹೂವೆ, ಮಾನಿನಿ ಮಣಿಯೆ ಬಾರೆ ಅವರ ಬರೆದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುವಂತಹವು. ಬಂಡಾಯ ಮತ್ತು ದಲಿತ ಸಾಹಿತ್ಯದ ಓದು ಅವರ ಕತೆಗಳನ್ನು ಪ್ರಭಾವಿಸಿದೆಯಾದರೂ, ಕರಾವಳಿಯಲ್ಲಿ ಶೋಷಣೆ, ಜಾತಿಯ ಮುಸುಕು, ಕಾಣುವ ದೌರ್ಜನ್ಯ ಕತೆಗಳಲ್ಲಿ ಅನಾವರಣಗೊಳ್ಳುವ ಬಗೆ ವಿಶಿಷ್ಟ. ಅವರ ಕತೆಗಳಲ್ಲಿ ಮಾನವೀಯ ಅನುಕಂಪ ಮತ್ತು ಮನುಷ್ಯನ ಸೂಕ್ಷ್ಮ ಪ್ರತಿಸ್ಪಂದನಗಳು ಎದ್ದು ಕಾಣುವಂತಹವು. …………………………. ನಾಗರಾಜ ಹರಪನಹಳ್ಳಿ : ಕತೆಗಳನ್ನು ಯಾಕೆ ಬರೆಯುತ್ತೀರಿ? ರಾಮಕೃಷ್ಣ ಗುಂದಿ : ನನ್ನ ಊರು ಕುಮಟಾ ತಾಲೂಕಿನ ನಾಡು ಮಾಸ್ಕೇರಿ ಎಂಬ ಪುಟ್ಟ ಗ್ರಾಮ. ನನ್ನ ಬಾಲ್ಯ ಮತ್ತು ಹರೆಯದ ಬಹುಪಾಲು ಅಲ್ಲಿಯೇ ಕಳೆದವು. ಅಂದಿನ ಅಲ್ಲಿಯ ಸಾಮಾಜಿಕ ಪರಿಸರ, ಜಾತಿ ವ್ಯವಸ್ಥೆ, ಮುಖಾಮುಖಿಯಾದ ವಿಕ್ಷಿಪ್ತ ಮತ್ತು ಉದಾತ್ತ ವ್ಯಕ್ತಿತ್ವಗಳು, ನನ್ನೊಳಗೆ ಉಂಟು ಮಾಡಿದ ತಲ್ಲಣಗಳಿಗೆ ಪ್ರತಿಕ್ರಿಯೆ ನೀಡಲೇ ಬೇಕಾದ ಅನಿವಾರ‍್ಯತೆಯಲ್ಲಿ ನಾನು ಬರೆಯಲು ಮನಸ್ಸು ಮಾಡಿದೆ ಮತ್ತು ಅದಕ್ಕೆ ಕಥೆಯೇ ಸೂಕ್ತವಾದ ಮಾಧ್ಯಮ ಅನ್ನಿಸಿತು. ಅದೇ ಸಮಯ ಆರಂಭವಾದ ದಲಿತ-ಬಂಡಾಯ ಚಳುವಳಿಯಿಂದಲೂ ಪ್ರಭಾವಿತನಾಗಿ ಕತೆ ಬರೆಯಲು ತೊಡಗಿದೆ. ಪ್ರಶ್ನೆ : ಕಥೆ ಹುಟ್ಟುವ ಕ್ಷಣ ಯಾವುದು? ಉತ್ತರ : ಸಂವೇದನಾ ಶೀಲತೆ ಇದ್ದರೆ ಬರಹಗಾರನಿಗೆ ಇಂಥಹುದೇ ಕ್ಷಣ ಎಂಬುದೇನಿಲ್ಲ. ಅಥವಾ ಅದು ನಿಜವೂ ಇರಬಹುದೇನೋ. ತೀರ ಮನಸ್ಸನ್ನು ಕಾಡುವ ಕ್ಷಣವೊಂದು ಅಭಿವ್ಯಕ್ತಿಯ ಉದ್ದೀಪನಕ್ಕೆ- ಪ್ರೇರಣೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ನಮ್ಮೂರಿನ ಬಂಡಿಹಬ್ಬ ನೋಡಲು ನೂರಾರು ಜನರ ನಡುವೆ ನಿಂತಿದ್ದೆ, ಆಗ ದೇವರ ಮೋಕ್ತೇಸರ ಭಕ್ತ ಜಂಗುಳಿಯತ್ತ ತೆಂಗಿನ ಕಾಯಿ ಎಸೆಯುತ್ತಾನೆ. ಅದು ಯಾರ ಕೈಗೆ ಸಿಗುತ್ತದೋ ಅವರು ಬಂಡಿ ಕಟ್ಟೆಗೆ ಒಡೆಯುವ ಅವಕಾಶ ಪಡೆಯುತ್ತಾರೆ. ಅಲ್ಲಿ ಆಕಸ್ಮಿಕವಾಗಿ ದಲಿತ ಯುವಕನೋರ‍್ವನ ಕೈಗೆ ಕಾಯಿ ಸಿಕ್ಕಾಗ ಅದನ್ನು ಒಡೆಯಲು ಆತನಿಗೆ ಅವಕಾಶ ನೀಡದೆ ಸವರ್ಣೀಯನೊ  ಬ್ಬನ ಕೈಗೆ ನೀಡಿ ಕಾಯಿ ಒಡೆಯಲಾಯಿತು. ಈ ದೃಶ್ಯ ನನಗೆ ಆ ಕ್ಷಣದಲ್ಲಿ ತುಂಬ ಕಾಡಿತು. ಮತ್ತು ಅಂದೇ ನಾನು ‘ಚಾಚುದಾರರು’ ಎಂಬ ಕಥೆ ಬರೆಯಲೇ ಬೇಕಾಯಿತು. ದಲಿತನಾದ ನನಗೆ ಅಸ್ಪ್ರಶ್ಯತೆಯ ಕಾರಣದಿಂದ ನೋವು ನೀಡಿದ ಕ್ಷಣಗಳೇ ನನ್ನ ಹಲವು ಕಥೆಗಳ ಹುಟ್ಟಿಗೆ ಕಾರಣವೂ ಆಗಿದೆ. ಪ್ರಶ್ನೆ : ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ : ನಾನು ಆಗಲೇ ಹೇಳಿರುವಂತೆ ನನ್ನೂರಿನ ದಲಿತ ಕೇರಿಯ ಬಡತನ, ಹಸಿವು, ಅಸ್ಪ್ರಶ್ಯತೆಯ ಅವಮಾನಕರ ಪ್ರಸಂಗಗಳು ಇದೇ ಕಾರಣದಿಂದ ಅನಿವಾರ‍್ಯವಾಗಿ ಅನುಭವಿಸುವ ಶೋಷಣೆ ಮುಂತಾದವುಗಳೇ ನನ್ನ ಕಥೆಗಳಿಗೆ ವಸ್ತುವಾದವು. ಮುಖ್ಯವಾಗಿ ಒಂದು ಉಪೇಕ್ಷಿತ ದಲಿತ ಸಮುದಾಯವಾಗಿ ಇಂದಿಗೂ ನಿರೀಕ್ಷಿತ ಪ್ರಗತಿ ಕಾಣದ ನಮ್ಮ ‘ಆಗೇರ’ ಜನಾಂಗದ ಧ್ವನಿಯಾಗಬೇಕೆಂಬ ಉತ್ಕಟ ಹಂಬಲವೇ ನನ್ನ ಬಹುತೇಕ ಕಥೆಗಳ ಪ್ರೇರಣೆ ಅನ್ನಬಹುದು. ಹಾಗಾಗಿ ನನ್ನ ಕಥೆಗಳ ವಸ್ತು ವ್ಯಾಪ್ತಿ ಅದರಾಚೆಗೆ ವಿಸ್ತರಿಸಿದ್ದು ಬಹಳ ಕಡಿಮೆಯೇ ಎಂದು ಒಪ್ಪಿಕೊಳ್ಳುವೆ. ಈಗಲೂ ಜಾತಿ-ಮತ-ಧರ‍್ಮದ ಕಾರಣದಿಂದಲೇ ನಿರ್ಧಾರಿತವಾಗುತ್ತಿರುವ ‘ಮನುಷ್ಯ ವ್ಯಕ್ತಿತ್ವ’ ನನ್ನನ್ನು ಯಾವಾಗಲೂ ಕಾಡುತ್ತದೆ. ಪ್ರಶ್ನೆ : ಕಥೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ? ಉತ್ತರ : ಖಂಡಿತವಾಗಿ. ಬಹುಶಃ ಯಾವುದೇ ವ್ಯಕ್ತಿತ್ವ ಬೆಳೆದು ಬರುತ್ತಲೇ ಬಾಲ್ಯ-ಯೌವನಗಳ ಅನುಭವಗಳು ಗಾಢವಾಗಿ ಪ್ರಭಾವಿಸಿರುತ್ತವೆ. ನನ್ನ ಬಹುತೇಕ ಕಥೆಗಳು ನನ್ನ ಬಾಲ್ಯದ ಅನುಭವಗಳಿಂದಲೇ ಸಾಕಷ್ಟು ವಸ್ತುಗಳನ್ನು ದೊರಕಿಸಿಕೊಂಡಿವೆ. ಹರೆಯದ ಅನುಭವಗಳ ಹಿನ್ನಲೆಯಲ್ಲಿ ಕೆಲವು ಕಥೆಗಳನ್ನು ನಿರೂಪಿಸಿದ್ದೇನೆ. ನನ್ನ ‘ಅವಾರಿ’, ‘ಇರಿತ’, ‘ಉಲ್ಕಾಪಾತ’, ‘ಅತಿಕ್ರಾಂತ’ ಮುಂತಾದ ಕಥೆಗಳು ನನ್ನ ಬಾಲ್ಯದ ಹಸಿ ಹಸಿ ನೆನಪುಗಳ ಹಿನ್ನೆಲೆಯಿಂದಲೇ ರೂಪುಗೊಂಡವು. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು? ಉತ್ತರ : ರಾಜಕೀಯ ವಿದ್ಯಮಾನಗಳ ಕುರಿತು ಮಾತೇ ಆಡದಿರುವುದು ಒಳಿತು ಎಂಬಂಥ ಸ್ಥಿತಿಯಲ್ಲಿ ಈಗ ನಾವಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ ಎನ್ನುವುದು ಕೇವಲ ಬಾಯಿ ಮಾತಿಗೆ ಅಷ್ಟೇ. ಎಲ್ಲರಿಗೂ ಅಧಿಕಾರ-ಗದ್ದುಗೆ ಮತ್ತು ಸ್ವಾರ‍್ಥವೇ ಮುಖ್ಯವಾಗಿರುವಾಗ ಪ್ರಜಾಹಿತವೆಂಬುದು ಒಂದು ಚರ್ಚಿತ ವಿಷಯವಾಗಿ ಅಷ್ಟೇ ಉಳಿದುಕೊಂಡಿದೆ. ರೈತರ, ನಿರುದ್ಯೋಗಿಗಳ, ಸಂತ್ರಸ್ತರ ಕುರಿತು ಆಲೋಚಿಸಬೇಕಾದ ರಾಜಕಾರಣಿಗಳು ಕೇವಲ ಅಧಿಕಾರಕ್ಕಾಗಿ ಕಚ್ಚಾಡುವುದು, ಪರಸ್ಪರ ಕಾಲೆಳೆಯುವ, ಕೆಸರೆರಚುವ ಹುಡುಗಾಟದಲ್ಲಿ ಮಗ್ನರಾಗಿರುವುದು ರಾಜಕೀಯದ ಶೋಚನೀಯ ಸ್ಥಿತಿಗೆ ದೃಷ್ಟಾಂತಗಳಾಗಿ ತೋರುತ್ತಿವೆ. ಪ್ರಶ್ನೆ: ಧರ‍್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ನನಗೆ ‘ವಚನ ಸಾಹಿತ್ಯ’ ತುಂಬಾ ಪ್ರಭಾವಿಸಿದ ಪ್ರಕಾರ ಅಲ್ಲಿಯೂ ಬಸವಣ್ಣನಂಥವರ ಧರ‍್ಮ ಮತ್ತು ದೇವರ ಕುರಿತಾದ ನಿಲುವು ಪರಿಕಲ್ಪನೆಗಳೇ ಹೃದಯದಿಂದ ಒಪ್ಪಿತವಾದವುಗಳು. ನನ್ನ ಬಾಲ್ಯ, ತಾರುಣ್ಯದ ಬಹು ಮುಖ್ಯ ಜೀವಿತಾವಧಿಯಲ್ಲಿ ನನಗೆ ಜಾತಿಯ ಕಾರಣದಿಂದ ದೇವಾಲಯ ಪ್ರವೇಶ ನಿಷಿದ್ಧವಾಗಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಗೋಕರ‍್ಣದ ಶಿವರಾತ್ರಿಯಲ್ಲಿ ಮಹಾಬಲೇಶ್ವರ ದೇವಸ್ಥಾನ ಪ್ರವೇಶಕ್ಕೆ ಅರ‍್ಚಕರು ತಡೆದಾಗ ನಮ್ಮ ತಂದೆಯವರು ಅರ‍್ಚಕರೊಡನೆ ಜಗಳಕ್ಕೇ ನಿಂತಿದ್ದು ನನಗೆ ನೆನಪಿದೆ. ಇಂಥ ಸನ್ನಿವೇಶಗಳಿಂದಾಗಿ ‘ದೇವಾಲಯಗಳಿಗೆ ಹೋಗದಿದ್ದರೆ ಆಗುವ ನಷ್ಟವೇನು?’ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡು ಅವುಗಳಿಂದ ದೂರವೇ ಉಳಿದೆ. ಹಾಗೆಂದು ನಾಸ್ತಿಕನೇನಲ್ಲ. ನಾನು ದೇವರನ್ನು ಆರಾಧಿಸುವ ಕ್ರಮ-ಪರಿಕಲ್ಪನೆಗಳು ಬೇರೆ ಅಷ್ಟೇ. ಮನುಷ್ಯನನ್ನು ಮನುಷ್ಯನಾಗಿ ನೋಡದ, ಮನುಷ್ಯ ಮನುಷ್ಯರ ನಡುವೆ ಭೇದ ಕಲ್ಪಿಸುವ ಯಾವ ದೇವರು ಧರ‍್ಮದ ಕುರಿತಾಗಿಯೂ ನನ್ನ ದಿಕ್ಕಾರವೇ. ಸೌಹಾರ್ದತೆ-ಶಾಂತಿ – ಪ್ರೀತಿಯ ನೆಲೆಯ ಯಾವ ಧರ‍್ಮವೇ/ದೇವರೇ ಆದರೂ ನಾನು ಆತ್ಮಸಾಕ್ಷಿಯಾಗಿ ಆರಾಧಿಸುವೆ. ದೇವಾಲಯ ಪ್ರವೇಶ, ಕ್ಷೇತ್ರದರ್ಶನ ಇತ್ಯಾದಿ ನನಗೆ ನಂಬಿಕೆಯಿಲ್ಲ. ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತದೆ? ಉತ್ತರ : ಸಾಂಸ್ಕೃತಿಕ ವಾತಾವರಣ ತಕ್ಕಮಟ್ಟಿಗೆ ಆಶಾದಾಯಕವಾಗಿಯೇ ಇದೆ ಅನಿಸುತ್ತದೆ. ಅಲ್ಲಿಯೂ ಆಗಾಗ ಪ್ರವೇಶ ಪಡೆಯುವ ರಾಜಕಾರಣ, ಸ್ವಜನಪಕ್ಷಪಾತ ಇತ್ಯಾದಿಗಳು ಸ್ವಲ್ಪಮಟ್ಟಿನ ಆತಂಕಕ್ಕೆ ಕಾರಣವಾಗುತ್ತದೆ ಎಂಬುದು ನಿಜವಾದರೂ ಒಟ್ಟಾರೆಯಾಗಿ ಸಾಂಸ್ಕೃತಿಕ ವಾತಾವರಣ ಸಹನೀಯವಾಗಿದೆ ಎನ್ನಬಹುದು. ಪ್ರಶ್ನೆ: ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ರಾಜಕಾರಣ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇರುತ್ತದೆ. ಸಾಹಿತ್ಯ ವಲಯ ಕೂಡ ಇದರಿಂದ ಹೊರತಾಗಿಲ್ಲ. ಇಲ್ಲಿಯೂ ಮತ್ತೆ ಅದೇ ಪ್ರಶ್ನೆ. ಮತ ಧರ‍್ಮಗಳಿಗೆ ಸೇರಿದ, ಸೇರದ ಎಂಬ ಗುಂಪುಗಾರಿಕೆ, ಅಕಾಡೆಮಿ, ಸಾಹಿತ್ಯ ಪರಿಷತ್ತು, ಮತ್ತಿತರ ಸಾಹಿತ್ಯ ಸಂಘಟನೆಗಳಲ್ಲಿನ ಗದ್ದುಗೆಯ ಗುದ್ದಾಟ ಇತ್ಯಾದಿ ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವುದು ಅಸಹನೀಯವೆನಿಸುತ್ತದೆ. ಸಾಹಿತ್ಯದ ಓದು-ಬರಹಗಳು ಭಾವನಾತ್ಮಕವಾಗಿ ನಮ್ಮನ್ನು ಒಂದುಗೂಡಿಸಲು ವಿಫಲವಾದರೆ ಅದರಿಂದ ಶ್ರೀಸಾಮಾನ್ಯನಿಗಾಗುವ ಪ್ರಯೋಜನವಾದರೂ ಏನು? ಪ್ರಶ್ನೆ: ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ : ಅಂತರಾಷ್ಟ್ರೀಯ ಮಟ್ಟದ ಸ್ನೇಹ-ಬಾಂಧವ್ಯ, ಸ್ವಚ್ಛತೆಯ ಕುರಿತಾದ ರಾಷ್ಟ್ರಮಟ್ಟದ ಅರಿವು ಮುಂತಾದ ಸಂಗತಿಗಳು ಹೆಮ್ಮೆಯೆನಿಸುವಂತಿವೆ. ದಿನದಿಂದ ದಿನಕ್ಕೆ ಗಾಬರಿ ಹುಟ್ಟಿಸುವಂತೆ ಬೆಳೆಯುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗದ ತೀವ್ರ ಸಮಸ್ಯೆ, ರೈತರು ಮತ್ತು ಮದ್ಯಮ ವರ‍್ಗದ ಜನಸಾಮಾನ್ಯರ ಸಮಸ್ಯೆಗಳು ಆತಂಕ ಹುಟ್ಟಿಸುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದೊಂದಿಗೆ ಪ್ರಬಲ ವಿರೋಧಿ ಪಕ್ಷವೂ ಸಕ್ರಿಯವಾಗಿರಬೇಕಾಗುತ್ತದೆ. ರಾಜ್ಯದಲ್ಲಿಯೇ ಇರಲಿ ರಾಷ್ಟ್ರಮಟ್ಟದಲ್ಲಿಯೇ ಇರಲಿ ಧ್ವನಿ ಕಳೆದುಕೊಳ್ಳುತ್ತಿರುವ ವಿರೋಧ ಪಕ್ಷಗಳ ಸ್ಥಿತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ರಕ್ಷಣೆ ಭವಿಷತ್ತಿನಲ್ಲಿ ಸಾಧ್ಯವೆ? ಸಂವಿಧಾನ ನಿಷ್ಠೆಯ ಕುರಿತು ಗಂಭೀರ ಚಿಂತನೆ ತುರ್ತು ಅಗತ್ಯವೆನಿಸುತ್ತದೆ. ಪ್ರಶ್ನೆ: ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸಾಹಿತ್ಯ ರಚನೆ ಆಶಾದಾಯಕವಾಗಿ ಅಭಿವೃದ್ಧಿ ಹೊಂದುತ್ತಿರುವುದು ಸಂತೋಷ ತರುತ್ತಿದೆ. ಆದರೆ ಅದೇ ಪ್ರಮಾಣದಲ್ಲಿ ಓದುಗರ ಸಂಖ್ಯೆ ಬೆಳೆಯುವಂತೆ ತೋರುತ್ತಿಲ್ಲ. ಸಾಹಿತ್ಯ ವೇದಿಕೆಗಳು, ಸಂಘ-ಸಂಸ್ಥೆಗಳು ಯುವ ಓದುಗರನ್ನು ಹೆಚ್ಚಿಸುವ ಕುರಿತು ಯೋಜನೆಗಳನ್ನು ರೂಪಿಸಬೇಕು, ಪ್ರಯತ್ನಿಸಬೇಕು. ವೈಯುಕ್ತಿಕವಾಗಿ ಇನ್ನಷ್ಟು ಬರಹಗಳಲ್ಲಿ ತೊಡಗಿಕೊಳ್ಳುವ, ಪ್ರಕಟನೆಯ ಕನಸುಗಳಿವೆ ನೋಡಬೇಕು. ಪ್ರಶ್ನೆ: ಕನ್ನಡ ಮತ್ತು ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಕಾಡಿದ ಕತೆಗಾರ ಸಾಹಿತಿ ಯಾರು? ಕನ್ನಡದಲ್ಲಿ ಬಹುತೇಕ ಎಲ್ಲ ಹಿರಿಯ ಸಾಹಿತಿಗಳೂ ಕವಿಗಳೂ ನನ್ನ ನೆಚ್ಚಿನವರೇ. ದೇವನೂರು, ತೇಜಸ್ವಿ, ಕುಂ. ವೀರಭದ್ರಪ್ಪ ನನ್ನ ಬಹುಮೆಚ್ಚಿನ ಲೇಖಕರು. ಮುಖ್ಯವಾಗಿ ಕಥೆ ಬರೆಯುವ ನಿಟ್ಟಿನಲ್ಲಿ ಕುಂ.ವೀ. ನನ್ನ ಇಷ್ಟದ ಮತ್ತು ನನ್ನನ್ನು ತುಂಬ ಪ್ರಭಾವಿಸಿದ ಕತೆಗಾರ. ಇಂಗ್ಲೀಷ ಸಾಹಿತ್ಯ   ಶ್ರದ್ಧೆಯ ಓದು ನನ್ನದಲ್ಲ ಹೆಮಿಂಗ್ವೇ, ಗಾರ್ಕಿ ಟಾಲ್ಸ್ಟಾಯ್ರಂಥವರ ಪ್ರಾಸಂಗಿಕ ಬೀಸು ಓದು ಮಾತ್ರವೇ ನನಗೆ ಸಾಧ್ಯವಾಗಿದೆ. ಯಾವ ಬಗೆಯ ಪ್ರಭಾವಕ್ಕೆ ದಕ್ಕುವ ಲೇಖಕರನ್ನು ಹೆಸರಿಸಲಾರೆ ಕ್ಷಮಿಸಿ. …. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಕಾವ್ಯಯಾನ

ಕಾವ್ಯಯಾನ

ನೆನಪುಗಳಲ್ಲಿ ಅವಳು ಲಕ್ಷ್ಮೀ ಪಾಟೀಲ್ ಅವಳ ಏಕಾಂತ ತೆರೆಯುತ್ತದೆ ನಿತ್ಯ ಕೈ ಮುಟ್ಟಿಕೂದಲು ಹಿಡಿದರೆ ಎದುರು ಮರದ ಕೆಳಗೆಸಂಧ್ಯಾ ರಾಗದ ಸಂಜೆ ಅದೇ ಮರ ಕೈ ಮಾಡಿ ಕರೆಯುತ್ತದೆ ಕೂದಲ ಸಿಕ್ಕು ಬಿಡಿಸಿಕೊಳ್ಳಲುನೀಟಾಗಿ ನೆನಪುಗಳ ತಲೆ ಬಾಚಲುಏಕಾಂತಕ್ಕೆ ಜೊತೆ ಹುಡುಕಿ ಧ್ಯಾನಿಸಲು ಸಂಧ್ಯಾರಾಗದೆ ದುರು ತಾನು ಮತ್ತೊಂದು ಕವಿತೆಯಾಗಲು !ಬರೆಯದ ಭಾವ ಗಳೆಲ್ಲ ಸಿಕ್ಕುಗಳಂತೆ ಮುತ್ತುವವು ಧ್ಯಾನಸ್ಥಳಾಗುವಳಾಗ ಕವಿತೆಯ ಸುತ್ತ !ಎಷ್ಟೊಂದು ಕವಿತೆ ಬದುಕಿದೆನಲ್ಲ ಬರೆಯಲು ಬಂದಿದ್ದರೆಪೈಪೋಟಿಯಲ್ಲಿ ಕವಿತೆ ಗೆಲ್ಲಿಸಬಹುದಿತ್ತುಈ ಹೇನು ಹರಿದಾಡಿಸಿಕೊಳ್ಳುವ ಹಿಂಸೆಗೆಮುಕ್ತಿ ಸಿಗಬಹುದಿತ್ತು ಎಂದುಕೊಳ್ಳುವಳುಈ ಕವಿತೆಗಳಿಗೆಲ್ಲ ಆಕ್ರಮಿಸುವ ಚಟಏನೆಲ್ಲಾ ಕಿತ್ತು ಖಜಾನೆ ಖಾಲಿ ಮಾಡಿ ಹೋಗುತ್ತವೆಅಕಾಲ ವ್ರದ್ಧಾಪ್ಯಕ್ಕೆ ದೂಕಿ ಯವ್ವನ ಕೊಲೆ ಮಾಡಿದ ಕೈದಿಯಾಗುತ್ತವೆ ದಂಡ ತೆತ್ತು ಪಡೆಯುವ ತೀರ್ಪಿ ನಂತೆಭಯ ಕಟ್ಟುತ್ತವೆ ಈ ಒಳ ಮುಖದ ಮಂಕತ್ವಕ್ಕೆಆ ನೆರಳು ನೀಡುವ ಮರ ನಿತ್ಯಜ್ಞಾನೋದಯಮಾಡಿಸುವ ಬೋದಿ ವ್ರಕ್ಷದಂತೆ ಆಕಾಶಕ್ಕೆ ದಿಟ್ಟಿಸಿದರೆವ್ಯಥೆ ಗೊಂದುಷರಾ ಬರೆದ ನೀಲಮೇಘ ಶಾಮ ನಂತೆತಾನೀಗ ಕಾವ್ಯಕ್ಕೆ ಜೀವ ತುಂಬಲು ನಡೆಯುವಳುದಿಟ್ಟ ಬದುಕಿನ ಪಾಠ ಹೀಗೆ ನಿತ್ಯ ಪಡೆಯುವಳು ಕೃಷ್ನೆಅವಳು ಉರಿಯಕುಂಡದಿಂದ ಎದ್ದವಳುಉರಿಯನುಂಗಿ ಉಳಿಯುವುದು ತಿಳಿದವಳುಉರಿಯಬದುಕಿನ ಕಲೆ ಯಾದವಳುನೆನಪುಗಳಲ್ಲಿ ನೆಲೆಯಾದವಳು ನಮ್ಮಲ್ಲೂ ಹೀಗೆ ಕೃಷ್ನೆ *************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾನು ಕೆಟ್ಟವಳು ಶೀಲಾ ಭಂಡಾರ್ಕರ್ ನಿನ್ನ ಪ್ರೀತಿಯ ಪರಿಮಾಣದಲ್ಲಿಒಂದಿಷ್ಟು ಆಚೆ ಈಚೆಯಾದಾಗನಾನು ಕೆಟ್ಟವಳು. ನನ್ನನ್ನು ಬದಿಗೆ ತಳ್ಳಿಇನ್ಯಾರನ್ನೋ ತಲೆ ಮೇಲೆಕೂರಿಸಿಕೊಂಡಾಗ,ನಾನು ಕೆಟ್ಟವಳು. ಅತಿಯಾಗಿ ಸಿಟ್ಟು ಬಂದಾಗನಿನ್ನ ಚುಚ್ಚಿ ನೋಯಿಸಿಖುಷಿ ಪಡುವಾಗನಿಜವಾಗಲೂನಾನು ಕೆಟ್ಟವಳು. ಇಷ್ಟೇ.. ನಾನು ಕೆಟ್ಟವಳಾಗುವುದುಇವಿಷ್ಟೇ ಸಂದರ್ಭಗಳಲ್ಲಿ. ನಾನು ಕೆಟ್ಟವಳಾದಮರುಕ್ಷಣವೇಮನವರಿಕೆಯಾಗಿಮತ್ತೆ ನಿನ್ನೆಡೆಗೆ ಬಂದಾಗ, ನೀನು ಎಂದಿನಂತೆಮುದ್ದಿಸುವಿಯಲ್ಲ..!ಆಗ ಮಾತ್ರ..ನೀನೇ ಕೆಟ್ಟವನು. ************

ಕಾವ್ಯಯಾನ Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ ಜಯಶ್ರೀ.ಜೆ.ಅಬ್ಬಿಗೇರಿ ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದೀನಿ ಯಾವುದು ಕ್ಲಿಕ್ ಆಗುತ್ತೋ ಗೊತ್ತಿಲ್ಲ. ತರಾತುರಿಯಲ್ಲಿ ಓದಿ ಮುಗಿಸಬೇಕು ಎಂದುಕೊಳ್ಳುತ್ತಿರುವಾಗ ಪಕ್ಕದ ಮನೆಯ ಟಿವಿ ವ್ಯಾಲ್ಯೂಮ್ ಕಿವಿಗಡಚಿಕ್ಕುವಂತೆನಿಸಿ ಅಸಾಧ್ಯ ಸಿಟ್ಟು ಉಕ್ಕಿ ಬರುತ್ತದೆ. ನೆರೆಯ ಹುಡುಗರು ತಮ್ಮ ಪರೀಕ್ಷೆಗಳು ಮುಗಿದಿವೆ ಎಂಬ ಖುಷಿಯಲ್ಲಿ ಮನೆಯ ಮುಂದೆ ಜೋರಾಗಿ ಕಿರುಚುತ್ತ ಆಡುತ್ತಿವೆ. ಹೇಗೆ ಇವರಿಗೆಲ್ಲ ಬುದ್ಧಿ ಹೇಳಿ ನಾನು ಏಕಾಗ್ರತೆಯಿಂದ ಓದುವುದು? ಹೇಗೆ ?ಅದರಲ್ಲೂ ಇಷ್ಟು ದಿನ ಮನೆಯಲ್ಲಿ ಸ್ವಂತ ಕೋಣೆಯಲ್ಲಿ ಓದಿ ರೂಢಿಯಿದ್ದವರು ಹಾಸ್ಟೆಲ್‌ಗೆ ಪಿಜಿಗಳಿಗೆ ಸೇರ್ಪಡೆಯಾದರೆ ಮುಗಿದೇ ಹೋಯ್ತು. ನಮ್ಮ ಗೋಳು ಕೇಳುವವರಾರೂ ಇಲ್ಲ ಎಂದೆನಿಸಿಬಿಡುತ್ತದೆ. ಅತಿ ಹೆಚ್ಚು ಅಂಕ ಗಳಿಸಿದವರು ಇಂಥ ಹೊಂದಾಣಿಕೆಯ ತೊಂದರೆಗಳಿಂದ ಓದಿನಲ್ಲಿ ಹಿಂದೆ ಬೀಳುವ ಪ್ರಸಂಗಗಳು ಇಲ್ಲದಿಲ್ಲ. ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ತೂರಿ ಬರುವ ಗಾಳಿ ನಿಮಗೆ ಆಗಿ ಬರುವುದಿಲ್ಲ. ಮುಂದೆ ಕುಳಿತ ನಿಮ್ಮ ಗೆಳೆಯ ಮುದ್ದಾಂ ಕಿಟಕಿ ತೆರೆದಿಡುತ್ತಾನೆ. ಸಿನಿಮಾ ಥೇಟರ್‌ನಲ್ಲಿ ನಿಮ್ಮ ಮುಂದೆ ಕುಳಿತ ವ್ಯಕ್ತಿಯ ತಲೆ ಅಡ್ಡ ಬರುತ್ತಿದೆ. ನಿಮ್ಮ ಪಕ್ಕಕ್ಕೆ ನಿಂತು ಬೀಡಿ ಸಿಗರೇಟ್ ಸೇದುವವರನ್ನು, ರೈಲ್ವೇ ಪಯಣದಲ್ಲಿ ನಿಮಗೆ ತಲೆ ಸುತ್ತು ತರಿಸುವ ಗುಟಕಾ ವಾಸನೆ, ಪಾನ್ ಜಗಿದು ಉಗಿಯುವರನ್ನು, ಮಲಗುವ ಸಮಯವಾದರೂ ಏರು ದನಿಯಲ್ಲಿ ಮಾತನಾಡುವವರನ್ನು ಕಂಡಾಗ ಮೈ ಉರಿಯುತ್ತದೆ. ಇಂಥ ತೊಂದರೆಗಳ ಸಾಲು ಸಾಲು ಪಟ್ಟಿಯನ್ನು ಮಾಡಬಹುದು.ನೋಡೋಕೆ ಕೇಳೋಕೆ ಇವೆಲ್ಲ ತೀರ ಸಣ್ಣ ಪುಟ್ಟ ತೊಂದರೆಗಳೆನಿಸಿದರೂ ಇವು ಹೆಚ್ಚು ಸಮಯ ಮುಂದುವರೆದರೆ ಆಗುವ ತೊಂದರೆ ಮತ್ತು ಹಾನಿ ಅಷ್ಟಿಷ್ಟಲ್ಲ. ಬಹುತೇಕ ಳಷ್ಟು ಸಲ ಈ ತೊಂದರೆಗಳನ್ನು ಬಾಯಿ ಮುಚ್ಚಿ ಸಹಿಸಿಕೊಂಡು ಬಿಡುತ್ತೀರಿ.ನೀವು ಹೀಗೆ ಈ ತೊಂದರೆಗಳನ್ನು ಸಹಿಸುವ ಅಗತ್ಯವೇ ಇಲ್ಲ. ತೊಂದರೆ ಕೊಡುವವರು ತಮ್ಮ ಚಾಳಿಯನ್ನು ರಾಜಾರೋಷವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ಇಂಥ ತೊಂದರೆಗಳಿಂದ ಬಚಾವಾಗುವುದು ಹೇಗೆ ಅಂತ ಅನಿಸ್ತಿದೆಯಲ್ಲವೇ? ಹಾಗಾದರೆ ಮುಂದಕ್ಕೆ ಓದಿ. ಭಯ ಬಿಡಿ ತೊಂದರೆ ಕೊಡುವವರಿಗೆ ಮುಕ್ತವಾಗಿ ನಿಮ್ಮಿಂದ ತೊಂದರೆ ಆಗ್ತಿದೆ ಎಂದು ಹೇಳೋದಕ್ಕೆ ತುಂಬಾ ಭಯ ಆಗುತ್ತಿದೆಯೇ? ನಿಮ್ಮ ಮೇಲೆ ನಡೆದು ಹೋಗಲು ಜನಗಳಿಗೆ ಬೇಕಾಗಿಲ್ಲ. ನೀವು ಮಲಗಲು ಇಚ್ಛಿಸುವವರೆಗೆ ತೊಂದರೆ ಕೊಡಲು ದಾರಿ ಮಾಡಿ ಕೊಡಬೇಡಿ. ರಾಮಕೃಷ್ಣ ಪರಮಹಂಸರು ಹೇಳಿದಂತೆ ಮನವೆಂಬ ಆನೆಗೆ ಬುದ್ಧಿಯೇ ಅಂಕುಶ. ಬುದ್ಧಿಯನ್ನು ಬಳಸಿ ನಯವಾಗಿ ಮತ್ತು ನೇರವಾಗಿ ಮೆಲುದನಿಯಲ್ಲಿ ಹೇಳಿ. ನಿಮ್ಮ ಸೌಜನ್ಯಪೂರಿತ ನಡೆಗೆ ಪ್ರತಿಯಾಗಿ ತೊಂದರೆಯ ಕಿರಕಿರಿ ನಿಲ್ಲುವುದು. ದಯವಿಟ್ಟು, ಸ್ವಲ್ಪ, ಅನ್ನುವ ಶಬ್ದಗಳನ್ನು ಬಳಸಿ. ಇವು ಖಂಡಿತ ಪರಿಣಾಮ ಬೀರುವವು. ಮುಂದಿನ ವ್ಯಕ್ತಿ ಅಪರಿಚಿತನಾಗಿದ್ದರೆ ಹೀಗೆ ಹೇಳುವಾಗ ತುಟಿಯ ಮೇಲೆ ಸ್ನೇಹಪೂರ್ವಕವಾದ ನಗೆಯಿದ್ದರೆ ಉತ್ತಮ. ಮಾತುಗಾರಿಕೆ ಎಂಥ ಸಮಸ್ಯೆಯನ್ನೂ ಬಗೆಹರಿಸಬಲ್ಲದು. ಆದ್ದರಿಂದ ಸಂವಹನ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸಿ. ಇತರರಿಗೆ ಕಾಯಬೇಡಿ ನಿಮಗಾಗುತ್ತಿರುವ ತೊಂದರೆಯನ್ನು ಯಾರೋ ಬಂದು ಬಗೆಹರಿಸುತ್ತಾರೆ ಅಂತ ಕಾಯುತ್ತ ಕುಳಿತುಕೊಳ್ಳಬೇಡಿ. ಗಾಂಧೀಜಿಯವರು ಹೇಳಿದಂತೆ ಸ್ವ ಸಹಾಯವೇ ಅತ್ಯುತ್ತಮ ಸಹಾಯ. ಹಲವು ಬಾರಿ ನಿಮಗೆ ತೊಂದರೆ ಆಗುತ್ತಿದೆ ಅಂತ ಮುಂದಿನವರಿಗೆ ಗೊತ್ತಿಲ್ಲದೇನೂ ಇರಬಹುದು. ನೀವೇ ಸ್ವತಃ ಮುಂದುವರೆದು ತೊಂದರೆ ನಿಲ್ಲಿಸಲು ಹೇಳಿ. ಹೀಗೆ ಹೇಳಿಕೊಳ್ಳುವುದರಿಂದ ಅವರು ತಿದ್ದಿಕೊಳ್ಳುತ್ತಾರೆ. ನಮ್ಮ ಅತ್ಯಂತ ಕಷ್ಟ ಅನುಭವಗಳಿಂದ ನಾವು ಸಾಕಷ್ಟು ಕಲಿಯುತ್ತೇವೆ ಎನ್ನುವುದು ಸತ್ಯ ಹಾಗಂತ ಇಂಥ ಕಿರಿಕಿರಿಗಳನ್ನು ಸಹಿಸುವುದು ತರವಲ್ಲ. ನೀವು ಹೊಂದಿರುವ ಜ್ಞಾನ ಮತ್ತು ಅನುಭವಗಳನ್ನು ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ನೀವು ತಾಳ್ಮೆಯಿಂದ ಹೇಳಿದರೂ ಆ ಕಡೆಯಿಂದ ಒರಟಾದ ಮಾತಿನ ಪ್ರತಿಕ್ರಿಯೆ ಬರಬಹುದು.ತಾಳ್ಮೆಯು ಸಂತೋಷದ ಬೀಗದ ಕೈ.ಆತುರವು ಸಂಕಟದ ಬೀಗದ ಕೈ. ಎಂಬುದನ್ನು ಮನದಟ್ಟು ಮಾಡಿಕೊಳ್ಳಿ..ನೀವು ತಾಳ್ಮೆ ಕಳೆದುಕೊಂಡು ವರ್ತಿಸಿದರೆ ಜಗಳ ತಪ್ಪಿದ್ದಲ್ಲ.ಎಚ್ಚರಿಕೆ ವಹಿಸಿ. ಬೇಡ ಹೊಂದಾಣಿಕೆ. ಹೊಂದಾಣಿಕೆಯೇ ಜಾಣತನ ಅಂತಾರೆ ಅಂಥದ್ದರಲ್ಲಿ ಹೊಂದಾಣಿಕೆ ಬೇಡ ಅಂದರೆ ಹೇಗೆ? ಅಂತಿದ್ದೀರಾ! ನಿಮ್ಮ ಏಳ್ಗೆಗೆ ಅಡೆತಡೆಯಾಗುವ ಗೆಳೆಯ/ತಿಯರ ನಡುವಳಿಕೆಗಳ ಜೊತೆಗೆ ಹೊಂದಾಣಿಕೆ ಬೇಡವೇ ಬೇಡ. ನೀವು ಮುಖ್ಯವಾದ ಕೆಲಸದಲ್ಲಿರುವಾಗ ನಿಮ್ಮನ್ನು ತಮ್ಮ ಅಮುಖ್ಯ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸುವವರ ಜೊತೆಗೆ ರಾಜಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತೊಂದರೆಯನ್ನು ಸಹಿಸಿಕೊಳ್ಳಬೇಡಿ. ನಿಮ್ಮ ಬುದ್ಧಿಯೇ ನಿಮಗೆ ಗುರು ಎಂಬ ವಿಲಿಯಮ್ ಷೇಕ್ಸ್ ಪಿಯರ್ ನ ಸೊಗಸಾದ ನುಡಿಯಂತೆ ಚಾಣಾಕ್ಷತನದಿಂದ ಸ್ನೇಹಿತರಿಗೆ ತಿಳಿ ಹೇಳಿ.ಅವರಿಂದ ನಿಮಗೆ ತೊಂದರೆಯಾಗುತ್ತಿದೆ ಎಂದು ಅರ್ಥೈಸಿಕೊಳ್ಳುವಂತೆ ಹೇಳಿ. ನಿಮ್ಮ ಬುದ್ಧಿಮಾತು ಅವರು ತಪ್ಪು ತಿದ್ದಿಕೊಳ್ಳುವಂತಿರಬೇಕು. ಮುಖಕ್ಕೆ ಹೊಡೆದಂತೆ ಹೇಳಿ ಮುಖ ಕಟ್ಟಿಕೊಳ್ಳಬೇಡಿ. ನಿಂದಿಸಿ ನುಡಿಯದಿರಿ ನಿಮಗೆ ತೀರಾ ಆಪ್ತರಾದವರು ನೆಂಟರಿಷ್ಟರು ತಮಗೆ ಗೊತ್ತಿಲ್ಲದಂತೆ ತೊಂದರೆ ಕೊಡುವವರ ಪಟ್ಟಿಯಲ್ಲಿರಬಹುದು. ಅಂಥವರಿಗೆ ಎಲ್ಲರೆದುರು ನೀವು ಹೀಗೆ ನಡೆದುಕೊಳ್ಳುತ್ತಿರುವುದು ನನಗೆ ತುಂಬಾ ಕಿರಿಕಿರಿ ಆಗುತ್ತಿದೆ. ನನಗೆ ಸತಾಯಿಸಬೇಡಿ ಅಂತ ಜೋರಾಗಿ ಹೇಳಬೇಡಿ. ನಿಂದಿಸಿ ನುಡಿಯದಿರಿ ಯಾರನು. ನಿಂದನೆ ಮುಜುಗರಕ್ಕೆ ಎಡೆಮಾಡಿಕೊಡುವುದಲ್ಲದೇ ಮನಸ್ಸನ್ನು ಒಡೆಯುತ್ತದೆ. ಇದು ಶಾಶ್ವತವಾಗಿ ಸಂಬಂಧವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಬಹುದು. ಆದ್ದರಿಂದ ನೀವಿಬ್ಬರೇ ಇದ್ದಾಗ ಅವರ ಯಾವ ನಡುವಳಿಕೆ ನಿಮಗೆ ತೊಂದರೆ ಆಗುತ್ತಿದೆಯೋ ಸ್ಪಷ್ಟವಾಗಿ ಹೇಳಿಬಿಡಿ. ಇರಲಿ ಕೊಂಚ ಹೊಂದಾಣಿಕೆ ಬಿಜಿ ದಿನಚರಿಯ ಜೀವನದಲ್ಲಿ ಇಂಥ ತೊಂದರೆಗಳ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ನೆಮ್ಮದಿ ಹಾಳಾಗುತ್ತದೆ. ಕೆಲಸದ ನಡುವೆ ಇವು ಅಡ್ಡ ಗೋಡೆಗಳಾಗಿ ದೊಡ್ಡ ಕಂದಕಗಳಾಗಿ ನಿಂತು ಬಿಡುವ ಸಾಧ್ಯತೆಗಳೂ ಇಲ್ಲದಿಲ್ಲ.ಕೆಲ ಸಲ ತೊಂದರೆಯಾಗುತ್ತಿದೆ ಅಂತ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ ಅನ್ನುವ ಸಂದಿಗ್ಧ ಪರಿಸ್ಥಿತಿ ಬರುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲೂ ಕ್ಯಾತೆ ತೆಗೆಯಲು ನೋಡಬೇಡಿ. ಹೊಂದಾಣಿಕೆಯೇ ಜೀವನ ಎಂದಿದ್ದಾರೆ ಬಲ್ಲವರು. ಹೊಂದಾಣಿಕೆಯ ಕೊರತೆ ಸಹಜವಾದರೂ ಅದು ಕೆಲವು ಸಲ ದೊಡ್ಡ ಬಿರುಕು ಮೂಡಿಸುತ್ತದೆ. ‘ಇಡೀ ಜಗತ್ತು ಹೊಂದಾಣಿಕೆಯ ಸುತ್ತ ಗಿರಕಿ ಹೊಡಿಯುತ್ತದೆ’ ಎಂದು ಪ್ರಾಜ್ಞವಾಗಿ ಹೇಳಿದ್ದಾನೆ ಫ್ರೆಂಚ್ ಕವಿ ಚಾಲ್ಸ್ ð ಬೋದಿಲೇರ್ಮಾನವ ನೆಮ್ಮದಿ ಬಯಸುವ ಜೀವಿ. ಸ್ನೇಹ ಜೀವಿ ಕೂಡ.. ಸಂಬಂಧಗಳ ಬಲೆಯಲ್ಲಿ ತೀವ್ರ ವಿಶ್ವಾಸವಿಟ್ಟುಕೊಂಡವನು. ನನಗೆ ತೊಂದರೆ ಕೊಡುತ್ತಿದ್ದೀರಿ ಎಂದು ಭಾವುಕರಾಗಿ ಕಿರುಚದೇ ಸಹಜವಾಗಿ ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ.ತೊಂದರೆಗಳ ಲೋಕದ ಚಿಂತೆಯನ್ನು ದೂರ ಸರಿಸಿ ಉತ್ತಮ ಭವಿಷ್ಯಕ್ಕಾಗಿ ಶಾಂತಿಯಿಂದ ವರ್ತಮಾನದಲ್ಲಿ ಜೀವಿಸೋಣ. ಬದುಕನ್ನು ಬದಲಿಸಿಕೊಳ್ಳೋಣ ಅಲ್ಲವೇ? **************

ದಿಕ್ಸೂಚಿ Read Post »

You cannot copy content of this page

Scroll to Top