ನಡಿ ಕುಂಬಳವೇ ಟರಾ ಪುರಾ
ಕಥೆ ಪ್ರಜ್ಞಾ ಮತ್ತಿಹಳ್ಳಿ ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ. ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”. ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ? ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ. ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ. ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು. ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ. ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು. ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ. ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು. ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ. ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ. ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು. ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು. “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ. ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ. “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ. ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ. ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ. ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು. ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ. “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್
ನಡಿ ಕುಂಬಳವೇ ಟರಾ ಪುರಾ Read Post »






