ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ ಪ್ರಜ್ಞಾ ಮತ್ತಿಹಳ್ಳಿ            ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ   ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ ಕಾಣುತ್ತಿದ್ದವು. ಹಕ್ಕಿಯೊಂದು ಮೊಟ್ಟೆಯಿಡಲು ಮರದ ಕಾಂಡದಲ್ಲಿ ಹುಡುಕಿಕೊಂಡ ಡೊಗರಿನ ಹಾಗೆ ಎಲುಬುಗಳ ನಡುವೆ ಖಾಲಿ ಜಾಗ ಎದ್ದು ಕಾಣುತ್ತಿತ್ತು.  ಬದುಕಿನ ನಲವತ್ತು ವರ್ಷ ಜೊತೆಗಿದ್ದ ಅಸ್ತಮಾ ಅವಳ ಉಸಿರಾಟದ ರೀತಿಯನ್ನೇ ಬೇರೆ ಮಾಡಿಬಿಟ್ಟಿತ್ತು.  ಸಾದಾ ಉಸಿರು ಎಂದರೂ ಅದಕ್ಕೊಂದು ಸುಂಯ್ ಸುಂಯ್ ಸಪ್ಪಳ ಇರುತ್ತಿತ್ತು. ಹಳೆಯ ಹಾರ್ಮೊನಿಯಂ ಜೋರುಜೋರಾಗಿ ತಿದಿಯೊತ್ತಿದರೆ ಬುಸುಗುಟ್ಟುವ ಹಾಗೆ  ಆ ನಲವತ್ತು ವರ್ಷವೂ ಪ್ರತಿ ಸೆಕೆಂಡೂ ಅವಳು ತನ್ನ ಉಸಿರನ್ನು ಪ್ರಯತ್ನಪೂರ್ವಕವಾಗೇ ತೆಗೆದುಕೊಳ್ಳಬೇಕಿತ್ತು. ಮತ್ತು ಆ ಪ್ರತಿ ಸಲದ ಉಸಿರು ಎಳೆಯುವ ಸದ್ದನ್ನೂ ಅವಳ ಕಿವಿಗಳು ಕೇಳಿಸಿಕೊಂಡಿದ್ದವು. ಅವಳನ್ನು ಮೊದಲ ಬಾರಿಗೆ ನೋಡಿದವರು ಥಟ್ಟನೆ ಈ ವಿಲಕ್ಷಣ ಉಸಿರಾಟದ ಸಪ್ಪಳ ಗಮನಿಸಿ ಅನಾರೋಗ್ಯದ ಕುರಿತು ಕೇಳದೇ ಇರಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಆ ಸದ್ದು ತನ್ನ ಇರುವಿಕೆಯನ್ನು ತೋರುತ್ತಿತ್ತು. ಅವಳು ನಾಕು ಮೆಟ್ಟಿಲು ಹತ್ತಿದಾಗಲಂತೂ ಅವಳ ನಾಕಡಿಯ ಪುಟ್ಟ ದೇಹದ ಪ್ರತಿ ಕಣ ಕಣವೂ ಉಸಿರಿಗಾಗಿ ಹಪಹಪಿಸುತ್ತಿರುವಂತೆ ಅನ್ನಿಸಿದರೆ ಆಳಕ್ಕಿಳಿದ ಕಣ್ಣುಗಳು ನೀರಿಂದ ಹೊರತೆಗೆದ ಮೀನುಗಳಂತೆ ಚಡಪಡಿಸುತ್ತಿದ್ದವು.  ಅವಳ ಪುಪ್ಪುಸದಲ್ಲಿ ಸದಾ ತುಂಬಿರುತ್ತಿದ್ದ ಕಫ ಖಾಲಿಯಾಗದ ಅಕ್ಷಯ ಭಂಡಾರದಂತೆ ಕೂತಿದ್ದು ಧಾವಂತದ ಘಳಿಗೆಗಳಲ್ಲಿ ಕೆಮ್ಮಿನ ಕೊನೆಯಲ್ಲಿ ಹೊರಬರುತ್ತಿತ್ತು. ನಿರಂತರ ಸ್ಟೆರಾಯ್ಡಿನ ಸೇವನೆಯ ಅಡ್ಡ ಪರಿಣಾಮವಾಗಿ ಸೊಟ್ಟ ಸೊಟ್ಟಗೆ ಬಗ್ಗಿ ಹೋದ ಬೆರಳುಗಳು ಅವಳು ಬದುಕಿಡೀ ಉಳಿಸಿಕೊಳ್ಳಲು ಹೆಣಗುತ್ತಿದ್ದ ಬಾಂಧವ್ಯಗಳ ಬೇರಂತೆ ನೇತಾಡುತ್ತಿದ್ದವು. ಅದೇ ಬೆರಳಿಂದಲೇ ದೊಡ್ಡ ದೊಡ್ಡ ತಪ್ಪಲೆಗಳ ಹೊತ್ತು ಓಡಿದಂತೆ ದಾಪುಗಾಲಿಕ್ಕುತ್ತ ಬುಸುಬುಸು ಉಸಿರೆಳೆದುಕೊಳ್ಳುತ್ತಲೇ ಕೂಡೊಲೆಗೆ ಬೆಂಕಿ ಹಾಕುತ್ತ ಸೊಟ್ಟ ಬೆರಳಿಂದಲೇ ಕಡುಬಿನ ಕೊಟ್ಟೆ ಕಟ್ಟಿ ಮೊಮ್ಮಕ್ಕಳು ಮರಿಮಕ್ಕಳಾದಿಯಾಗಿ ಹಿಂಡುಗಟ್ಟಲೆ ಜನರನ್ನು ಅನಾಮತ್ತಾಗಿ ಎಪ್ಪತ್ತು ವರ್ಷ ಸಾಕಿಬಿಟ್ಟಳು ಸೀರೆಯುಟ್ಟುಕೊಂಡು ಬಂದ ಇಣಚಿಯಂತಿದ್ದ ನಮ್ಮಜ್ಜಿ.                 ಅಸ್ತಮಾ ಕಾಟಕ್ಕೆ ಅವಳಿಗೆ ರಾತ್ರಿ ಗಡದ್ದು ನಿದ್ದೆ ಅಂತ ಬರುತ್ತಲೇ ಇರಲಿಲ್ಲ. ಒಂದು ರೀತಿಯ ಮಂಪರಿನಲ್ಲೇ ಇರುತ್ತಿದ್ದಳು. ಯಾವುದಾದರೂ ಸಣ್ಣ ಸಪ್ಪಳವಾದರೂ ಎದ್ದು ಬಿಡುತ್ತಿದ್ದಳು. ಅವಳ ಮಂಚದ ಪಕ್ಕದಲ್ಲಿ ಕಿಡಕಿಯ ಮೇಲೆ ಯಾವಾಗಲು ಒಂದು ಬ್ಯಾಟರಿ, ಅಮ್ರತಾಂಜನದ ಡಬ್ಬಿ, ಬಾಯೊಳಗೆ ಸ್ಪ್ರೇ ಮಾಡಿಕೊಳ್ಳುವ ಅಸ್ತಮಾದ ಔಷಧಿ ಇರುತ್ತಿದ್ದವು. ಹಾಗೆ ನಿದ್ದೆಯಲ್ಲದ ಎಚ್ಚರವಲ್ಲದ ಮಂಪರಿನಲ್ಲಿ ತೆರೆದಿಟ್ಟ ಕಿಡಕಿಯಾಚೆಗಿನ ನಿಶಾ ಜಗತ್ತಿನ ಶಬ್ದಗಳನ್ನು ಆಲಿಸುತ್ತ ತನ್ನ ಉಸಿರಿಗೆ ತಾನೇ ಕಾವಲೆಂಬಂತೆ ಅಷ್ಟೆಲ್ಲ ವರ್ಷ ಬದುಕಿದರೂ ಒಂದೇ ದಿನಕ್ಕೂ ರೋಗ ಕೊಟ್ಟ ವಿಧಿಯನ್ನಾಗಲೀ, ಗುಣ ಮಾಡದ ಔಷಧಿಯನ್ನಾಗಲೀ, ತನ್ನ ಸ್ಥಿತಿಯ ಸಂಕಟವನ್ನಾಗಲೀ ಬೈದಿದ್ದು ಇಲ್ಲವೇ ಇಲ್ಲ. ಇದು ಹೀಗೇ ಇರಬೇಕು ಮತ್ತು ಇದು ಹೀಗಿದ್ದರೇ ಸರಿ ಎನ್ನುವಷ್ಟು ಒಗ್ಗಿಕೊಂಡು ಅದರಲ್ಲೇ ಮನಸ್ವೀ ಕೆಲಸ, ತಿರುಗಾಟ, ಕಾರ್ಯ-ಕಟ್ಟಲೆ ಓಡಾಡಿದ್ದೆಂದರೆ ಅದಕ್ಕೆ ಅವಳ ನಾಕಡಿ ದೇಹದ ಪ್ರತಿ ಅಣುಅಣುವಿನಲ್ಲಿ ತುಂಬಿದ್ದ ಜೀವಶೃದ್ಧೆ ಮತ್ತು ಏಳು ಜನ್ಮಕ್ಕಾಗುವಷ್ಟಿದ್ದ ಆತ್ಮವಿಶ್ವಾಸ ಕಾರಣ.              ಆ ಕಾಲಕ್ಕೆ ಮನೆಪಾಠ ಮಾಡಿಸಿಕೊಂಡು ಎಲ್ ಎಸ್ ಓದಿದ್ದಳು. ಆದ್ದರಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಹಿಂದಿಗಳೂ ಬರುತ್ತಿದ್ದವು. ತೀರಾ ಸಣ್ಣ ವಯಸ್ಸಿಗೆ ಮದುವೆಯಾಗಿ ಬಂದು ಏಳು ಜನ ಮೈದುನ, ನಾಲ್ವರು ನಾದಿನಿಯರ ಸಂಸಾರ ಸೇರಿಕೊಂಡು ಅತ್ತೆ ಮಾವನ ಮನೋಭಿಲಾಷೆ ತಿಳಿದು ವ್ಯವಹರಿಸುತ್ತ ನಾಲ್ಕು ಮಕ್ಕಳ ತಾಯಾಗಿ ಆಮೇಲೆ ಗಂಡ ಪ್ರತ್ಯೇಕ ಜಮೀನು ಮಾಡಲು ಹೊರಟಾಗ ಅಲ್ಲಿಯ ಅಟ್ರಾಕಣಿ ಬಿಡಾರಕ್ಕೆ ಸ್ಥಳಾಂತರಗೊಂಡು ಒಂದಿದ್ದರೆ ಒಂದಿಲ್ಲದ ಸಂಸಾರ ನಡೆಸುತ್ತ ಬದುಕು ಕಳೆದಳು. ತೋಚಿದ್ದನ್ನು ಆ ಕ್ಷಣಕ್ಕೆ ಮಾಡಿಬಿಡುವ ಅಜ್ಜ ಪರಿಣಾಮಗಳನ್ನು ಆದಮೇಲೆ ಅನುಭವಿಸುವ ಜಾಯಮಾನದವ. ಯೋಜನೆ, ಸಮಾಲೋಚನೆ, ಯಾರನ್ನಾದರೂ ಹೇಳಿ ಕೇಳುವ ಪ್ರವೃತ್ತಿ ಇಲ್ಲವೇ ಇಲ್ಲ. ಅವನ ಎಲ್ಲಾ ಯಡವಟ್ಟುತನಗಳ ಪರಿಣಾಮ ಉಣ್ಣುವಾಗ ಮಾತ್ರ ಅಜ್ಜಿಗೆ ಪಾಲು. ಮಾಡುವಾಗ ಅವಳೇನಾದರೂ ಸಲಹೆ ಸೂಚನೆ ಕೊಟ್ಟರೆ ಹೀನಾಯದ ಮೂದಲಿಕೆ ಕಟ್ಟಿಟ್ಟ ಬುತ್ತಿ. ಆರಡಿ ಎತ್ತರದ ದೊಡ್ಡ ಗಂಟಲಿನ ಪ್ರಚಂಡ ಧೈರ್ಯದ ಆಸಾಮಿ. ಹಾಗೊಮ್ಮೆ ಎಂದಾದರೂ ಜೋಗದ ತಡಸಲಿಗೆ ಬಂಡೆಯಿಂದ ಧುಮುಕಲು ಭಯವಾದರೆ ತನ್ನ ಧೈರ್ಯ ಕಡ ಕೊಡುವಂತಿದ್ದ.  ಇವಳು ಅವನೆದುರಿಗೆ ಬಿರುಮಳೆಯಲ್ಲಿ ತೊಯ್ದ ಗುಬ್ಬಚ್ಚಿ. ಹಾಗಂತ ಅವಳು ಅನ್ನಿಸಿದ್ದನ್ನು ಆಡದೇ ಬಿಟ್ಟವಳೇ ಅಲ್ಲ. ಅವನೆಷ್ಟೇ ಬೈದು ಕೂಗಿದರೂ ತನ್ನ ಅನಿಸಿಕೆಯನ್ನು ಹೇಳಿಯೇ ಸಿದ್ದ. ಅವನ ಕಿವಿಯೋ ಯಾವುದೋ ಅವಘಡದಲ್ಲಿ ಕೆಪ್ಪಾಗಿತ್ತು. ಇವಳು ಅವನ ಮತ್ತೊಂದು ಕಿವಿಯ ಹತ್ತಿರ ಕೂಗಿಕೂಗಿ ಹೇಳಬೇಕು. ಅವನು ಮೊದಲು ಆಂ ಆಂ ಎಂದು ಆಮೇಲೆ ಕೇಳಿದ ನಂತರ ಅವಳಿಗೆ ಯದ್ವಾ ತದ್ವಾ ಬಯ್ಯಬೇಕು. ನಾವೆಲ್ಲ ಮೊಮ್ಮಕ್ಕಳು ದೊಡ್ಡವರಾದಮೇಲೂ ಹೀಗೇ. ಪಾಪ ನಮ್ಮೆದುರಿಗೆ ಅವಳಿಗೆ ಪ್ರಚಂಡ ಅವಮಾನ ಆಗುತ್ತಿತ್ತು. ಹೆಂಡತಿಯ ಮಾತನ್ನು  ಎಂದೆಂದೂ ಕೇಳತಕ್ಕದ್ದಲ್ಲ ಅಂತ ಅದ್ಯಾವ ಪುರುಷೋತ್ತಮ ದೇವರು ಅವನಿಗೆ ಪ್ರಮಾಣ ಮಾಡಿಸಿ ಕಳಿಸಿದ್ದನೋ ಕಡೆತನಕ ಹಾಗೇ ಇದ್ದ. ತನ್ನ ನಿರ್ಧಾರವನ್ನು ಖಡಕ್ಕಾಗಿ ಹೇಳಿ ಮಾತ್ರ ರೂಢಿಯಿರುವ, ಯಾರ ಮಾತನ್ನು ಕೇಳಿ ಗೊತ್ತಿಲ್ಲದವರಿಗೆ ತಾವು ಕೆಪ್ಪರಾಗಿದ್ದೂ ಗೊತ್ತಾಗುವ ಸಂಭವ ಕಡಿಮೆ. ಯಾಕೆಂದರೆ ಅವರು ಕಿವಿಯನ್ನು ಬಹಳ ಕಡಿಮೆ ಮತ್ತು ಗಂಟಲನ್ನು ಬಹಳ ಜಾಸ್ತಿ ಉಪಯೋಗಿಸುತ್ತಿರುತ್ತಾರೆ.            ಆರಂಭದ ದಿನಗಳಲ್ಲಿ ಬ್ರಿಸ್ಟಾಲ್ ಸಿಗರೇಟು ಸೇದುತ್ತಿದ್ದ ಅಜ್ಜ ಸಾಕಷ್ಟು ಖಾರ ಕೂಡ ತಿನ್ನುತ್ತಿದ್ದ. ಆಮೇಲೆ ಅಸಿಡಿಟಿ ಹೆಚ್ಚಾಗಿ ಕರುಳು ಹುಣ್ಣು ಆದಮೇಲೆ ಎಲ್ಲಾ ಬಿಟ್ಟ. ಮಲ್ಲಾಡಿಹಳ್ಳಿಗೆ ಹೋಗಿ ಯೋಗಾಸನ ಕಲಿತು ಬಂದ. ಒಂದು ದಿನವೂ ತಪ್ಪಿಸಲೇ ಇಲ್ಲ. ಅಜ್ಜಿ ತನ್ನ ಅಸ್ತಮಾಕ್ಕಾಗಿಯೂ ಔಷಧ ಪಡೆದು ಪ್ರಾಣಾಯಾಮ, ಯೋಗಾಸನ ಕಲಿತಳು. ಹೋದಹೋದಲ್ಲಿ ಹೆಂಗಸರಿಗೆಲ್ಲ ಕರೆಕರೆದು ಕಲಿಸುತ್ತಿದ್ದಳು. ಮಗಳ ಮನೆ, ಮೊಮ್ಮಗಳ ಮನೆ ಅಕ್ಕಪಕ್ಕದ ಹೆಂಗಸರೆಲ್ಲ ಅವಳ ಶಿಷ್ಯರೇ. ಅಜ್ಜ ಪ್ರತಿ ರಾತ್ರಿ ಏಳುವರೆಯೊಳಗೆ ಊಟ(ಒಣ ರೊಟ್ಟಿ, ಕಾಯಿಸುಳಿ, ಬಿಸಿ ಅನ್ನ-ಹಾಲು)ಮುಗಿಸಿ ಮಲಗಿ ಬಿಡುತ್ತಿದ್ದ. ಒಂಬತ್ತೆಂದರೆ ಅವನಿಗೆ ಮಧ್ಯರಾತ್ರಿ. ಬೆಳಿಗ್ಗೆ ನಾಕೂವರೆಗೆ ಎದ್ದು ದಡ ದಡ ಬಾಗಿಲು ಹಾಕಿ ತೆಗೆದು ಯೋಗಾಸನ ಮಾಡುತ್ತಿದ್ದ. ಓಂ ಎಂದು ಧ್ಯಾನ ಶುರು ಮಾಡಿದನೆಂದರೆ ಜೋಗದ ಕಾಡಿನ ಪ್ರಾಣಿಗಳಿಗೆಲ್ಲ ಅಲಾರಾಂ ಕೂಗಿದಂತಾಗುತ್ತಿತ್ತು. ಅಜ್ಜಿ ಎದ್ದು ಕೆಂಪಕ್ಕಿ ಗಂಜಿ ತಿಂಡಿ ಚಾ ಅಂತೆಲ್ಲ ತಯಾರಿ ಮಾಡಬೇಕು. ಬೆಳಿಗ್ಗೆ ಏಳೆಂದರೆ ಎಲ್ಲಾ ರೆಡಿ. ನಸುಕಿನ ಆರು ಗಂಟೆಗೆ ಅಜ್ಜನ ರೆಡಿಯೊ ಶುರುವಾಗುತ್ತಿತ್ತು. ದಟ್ಟ ಕಾಡಿನ ಕಣಿವೆಯೊಳಗೆ ಅದು ಹೇಗೆ ರೆಡಿಯೊ ತರಂಗಗಳು ಬರಲು ಸಾಧ್ಯ? ಗೊರಗೊರ ಸಪ್ಪಳದ ನಡುನಡುವೆ ಚಿಂತನ. ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಇಷ್ಟನ್ನು ಕೇಳಿ ಅಜ್ಜ ತಿಂಡಿಗೆ ಬರುತ್ತಿದ್ದ. ಸಂಜೆ ಏಳಕ್ಕೆ ಮತ್ತೆ ರೇಡಿಯೊ ಗೊರಗೊರ. ಕೃಷಿರಂಗದಲ್ಲಿ ಬಂದಲಿ ಎತ್ತ ಕಾಳಿಂಗ ಎತ್ತ ಮಾಲಿಂಗ ಅಂತೆನೋ ಅದರ ಟೈಟಲ್ ಹಾಡು ಬರುತ್ತಿತ್ತು. ಯುವವಾಣಿಯ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿರುತ್ತಿತ್ತು. ಆದರೆ ಅದು ಅಜ್ಜನ ಊಟದ ಹೊತ್ತು ಪಟ್ಟನೆ ರೆಡಿಯೊ ಆರುತ್ತಿತ್ತು. ಬೀಟೆಯ ಹಳೆ ಕುರ್ಚಿ ಹಿಂದಕ್ಕೆ ಸರಿದ ಸಪ್ಪಳ. ಆ ಕೋಣೆಯ ಲೈಟು ಆರಿಸಿ ಡಬಾರನೆ ಅಜ್ಜ ಬಾಗಿಲು ಹಾಕುತ್ತಿದ್ದ. ತಕ್ಷಣ  ಒಳಗಿನ ಹೆಣ್ಣು ಮಕ್ಕಳಿಗೆ ಸಿಗ್ನಲ್. ಒರೆದಿಟ್ಟ ರೊಟ್ಟಿ ಕಾವಲಿಗೆ ಹಾಕಿ ತಾಟು ರೆಡಿ ಮಾಡಿ ಅಂತ. ಇಬ್ಬಿಬ್ಬರು ಸೊಸೆಯರಿದ್ದರೂ ಅಜ್ಜ ಬದುಕಿದ್ದ ಅಷ್ಟೂ ದಿನ ಅವನ ಕಿರಿಕಿರಿಯ ಸೇವೆಗೆ ಅಜ್ಜಿ ತಾನೇ ಹೋಗುತ್ತಿದ್ದಳು. ಅವಳು ಮಗಳ ಮನೆಗೆ ಹೋದಾಗ ಅಜ್ಜ ಸಾಕಿದ ಬೆಕ್ಕಿನ ಹಾಗಿರುತ್ತಿದ್ದ. ಸೊಸೆಯರಿಗೆ ಚೂರೂ ಕಿರಿಕಿರಿ ಮಾಡುತ್ತಿರಲಿಲ್ಲ. ಅದಕ್ಕೆ ದೊಡ್ಡ ಸೊಸೆ ಅವನ ಕಾಟ ಹೆಚ್ಚಾದಾಗ ಅತ್ತೆಗೆ ನೀವು ಮಗಳ ಮನೆಗೆ ಹೋಗಿದ್ದು ಬನ್ನಿ ಎಂದು ಸಲಹೆ ಕೊಡುತ್ತಿದ್ದಳು. ಅಜ್ಜಿ ಅಜ್ಜನಿಗೂ ಉಳಿದ ಜಗತ್ತಿಗೂ ಮಧ್ಯದ ಸ್ಟೆಬಿಲೈಸರ ಇದ್ದ ಹಾಗಿದ್ದಳು. ಅವನ ಕೋಪ ತಾಪ ತಿಕ್ಕಲುಗಳನ್ನೆಲ್ಲ ತಾನೇ ಪಡೆದು ತಡೆದು ಬಿಡುತ್ತಿದ್ದಳು. ಉಳಿದವರು ಸುರಕ್ಷಿತರಾಗುತ್ತಿದ್ದರು. ಹಾಗಂತ ಗಂಡ ಹೇಗಿದ್ದರೂ ಏನು ಮಾಡಿದರೂ ಸರಿ ಎನ್ನುವ ಸತಿ ಶಿರೋಮಣಿ ಖಂಡಿತ ಆಗಿರಲಿಲ್ಲ. ಅವನ ಲೋಪದೋಷಗಳ ಸಂಪೂರ್ಣ ಅರಿವಿತ್ತು. ಯಾರ ಜೊತೆಗಾದರೂ ಅಜ್ಜ ಜಗಳಾಡಿದರೆ ಅಥವಾ ಅಕ್ಸಿಡೆಂಟ ಮಾಡಿಕೊಂಡು ಬಂದರೆ ಇವನದೇ ತಪ್ಪಿರುತ್ತದೆಯೆಂದು ಅಂದಾಜು ಮಾಡಿ ಹೇಳುತ್ತಿದ್ದಳು. ಎಂಭತ್ತರ ಇಳಿ ವಯಸ್ಸಿನಲ್ಲೂ ತಲೆಗೆ ರುಮಾಲು ಸುತ್ತಿಕೊಂಡು ಯಮವೇಗದಲ್ಲಿ ಬೈಕು ಹತ್ತಿ ಹೊಂಟು ಬಿಡುತ್ತಿದ್ದ. ಡುಗುಡುಗು ಶಬ್ದ ಕೇಳಿ ಕಿಡಕಿಯಲ್ಲಿಣುಕಿ ಬೈಕು ಹೋದ ದಿಕ್ಕು ನೊಡಿ ಅವನೆಲ್ಲಿಗೆ ಹೋಗಿರಬಹುದು ಅಂತ ಅಂದಾಜು ಮಾಡಬೇಕಿತ್ತೇ ಹೊರತು ಹೇಳಿಕೇಳಿ ಹೋಗುವ ಕ್ರಮ ಇರಲೇ ಇಲ್ಲ. ಆಸುಪಾಸಿನ ಜನ ಅವನ ಬೈಕಿಗೆ ದಾರಿ ಕೊಟ್ಟು ತಾವಾಗೇ ಸರಿಯುತ್ತಿದ್ದರು. ಗೌರವದಿಂದಲ್ಲ ಪ್ರಾಣದಾಸೆಗೆ. ಸಣ್ಣಪುಟ್ಟ ಕೋಳಿ ದನ ತಾಗುವುದು ಎಲ್ಲಾದರೂ ಡಿಕ್ಕಿಯಾಗುವುದು ಮಾಮೂಲೇ ಆಗಿತ್ತು. ಯಾರೂ ಅವನ ಹಿಂದೆ ಕೂರಬಾರದೆಂದು ಹೆಂಗಸರು ಮಕ್ಕಳಿಗೆ ತಾಕೀತು ಮಾಡಲಾಗಿತ್ತು. (ಈ ರೀತಿಯ ಆತ್ಮರಕ್ಷಣೆಯ ಕ್ರಮಗಳ ವಕ್ತಾರ ಅವನ ಅಳಿಯನಾಗಿದ್ದ)               ಕಾಡಿನ ನಡುವೆ ಪೇಟೆಯ ಸವಲತ್ತುಗಳಿಂದ ದೂರವಾಗಿ ಬದುಕುತ್ತಿದ್ದ ಕಾರಣಕ್ಕೋ ಅಥವಾ ಯಾವುದಕ್ಕೂ ಕಾಯದ ಜೀ ಎನ್ನದ ಸ್ವಭಾವಕ್ಕೋ ಅಜ್ಜ ಸ್ವಾವಲಂಬಿಯಾಗಿದ್ದ. ಹಳೆ ಟಯರಿನಿಂದ ಚಪ್ಪಲಿ ಮಾಡಿಕೊಳ್ಳುತ್ತಿದ್ದ. ಹರಿದ ಕಂಬಳಿ ಕತ್ತರಿಸಿ, ಹೊಲಿದು ಕೋಟು ಟೊಪ್ಪಿ ಮಾಡಿಕೊಳ್ಳುತ್ತಿದ್ದ. ಬೈಕು, ಪಂಪುಸೆಟ್ಟು, ಟ್ರಾನ್ಸಫರ‍್ಮರು ಎಲ್ಲದರ ರಿಪೇರಿ ಅತಿ ಚೆನ್ನಾಗಿ ಮಾಡುತ್ತಿದ್ದ. ಅವನ ಗಂಡು ಮಕ್ಕಳು ಈ ಎಲ್ಲಾ ವಿದ್ಯೆಗಳಲ್ಲಿ ಪಾರಂಗತರೇ. ಆದರೆ ಎಲ್ಲರಿಂದಲೂ ಸಾಮೂಹಿಕ ನಿಂದನೆಗೆ ಗುರಿಯಾದ ಅಜ್ಜನ ವಿದ್ಯೆಯೆಂದರೆ ಮೊಮ್ಮಕ್ಕಳ ಕೂದಲು ಕತ್ತರಿಸುವ ಹಜಾಮತಿ. ಅವನಿಗೆ ಗಂಡು ಹುಡುಗರು ಉದ್ದ ಕೂದಲು ಬಿಟ್ಟುಕೊಂಡು ತಿರುಗಿದರೆ ಕಂಡಾಪಟ್ಟೆ ಸಿಟ್ಟು ಬರುತ್ತಿತ್ತು. ಬಾರಾ ಎಂದು ಕರೆದು ಕೂರಿಸಿಕೊಂಡು ಕೈಗೆ ಸಿಕ್ಕಿದ ಕತ್ತರಿಯಿಂದ ನಿರ್ದಯವಾಗಿ ಕತ್ತರಿಸುತ್ತಿದ್ದ. ಕತ್ತರಿಯ ಮೊಂಡುತನ, ಅಜ್ಜನ ನೇತ್ರಗಳ ಮಂದತನ ಎರಡೂ ಕೂಡಿ ಭಯಂಕರವಾದ ಆಕಾರದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಅಲ್ಲಲ್ಲಿ ವಿರಳ ಭೂಮಿಯಾಗಿ ಮೊಮ್ಮಕ್ಕಳ ತಲೆ ತಯಾರಾಗುತ್ತಿತ್ತು. ಅಜ್ಜನ ಗಂಟಲಿಗೆ ಹೆದರುವ ಆ ಹುಡುಗರು ಉಕ್ಕಿ ಬರುವ ಅಳುವನ್ನು ಭಯಕ್ಕೆ ವರ್ಗಾಯಿಸಿ ನಡುಗುತ್ತ ಕೂರುತ್ತಿದ್ದರು. ಮತ್ತೆ ಅವರನ್ನು ಪಾರು ಮಾಡಲು ಅಜ್ಜಿಯೇ ಓಡಿ ಬರಬೇಕಿತ್ತು. ಕಡೆಗೆ ಅವಳೇ ಮೊಮ್ಮಕ್ಕಳಿಗೆ ಎಂದೆಂದೂ ಅಜ್ಜ ಹಜಾಮತಿಗೆ ಕರೆದರೆ ಹೋಗಬಾರದೆಂದು ತಾಕೀತು ಮಾಡಬೇಕಾಯಿತು. ಕಡೆಗಾಲದಲ್ಲಿ ಅಜ್ಜನಿಗೆ ಕ್ಯಾನ್ಸರ್ ಆದಾಗ ಅವನ ತಿಕ್ಕಲು ನಿರ್ಧಾರಗಳನ್ನು ಸಹಿಸಿಕೊಂಡು ಕ್ಯಾನ್ಸರ್ ಆಸ್ಪತ್ರೆ ರೇಡಿಯೇಷನ್ ಅಂತೆಲ್ಲಾ ಅಲೆಯುವಾಗ ಅವಳಿಗೆ ತನ್ನ ರೋಗದ ಬಗ್ಗೆ ಮರೆತೇ ಹೋಗಿತ್ತು. ಮುರುಟಿದ ಬೆರಳುಗಳ ಕಾಲನ್ನು ಅಡ್ಡಡ್ಡ ಹಾಕುತ್ತ ಏದುಸಿರು ಬಿಡುತ್ತ ಆಸ್ಪತ್ರೆಯ ಮೆಟ್ಟಿಲನ್ನು ಗೊಣಗದೇ ಹತ್ತಿಳಿದಳು.                ಅನಾಮತ್ತಾಗಿ ಅರವತ್ತು ವರ್ಷ ಸಂಸಾರ ಮಾಡಿದ ಅಜ್ಜನ ಜೊತೆಗೆ ಅವನೆಲ್ಲ ಗುಣಸ್ವಭಾವಗಳೊಂದಿಗೆ ಏಗುವುದೇ ಬದುಕಾಗಿಬಿಟ್ಟವಳಿಗೆ ಅವನ ಇಲ್ಲದಿರುವಿಕೆಯಿಂದ ಉಂಟಾದ ಶೂನ್ಯ ತುಂಬಿಕೊಳ್ಳುವುದು ಕಷ್ಟವಾಗಿರಬೇಕು. ಅಜ್ಜನ ಸೇವೆ ಅವಳ ದಿನಚರಿಯ ಎಷ್ಟು ದೊಡ್ಡ ಭಾಗವಾಗಿತ್ತೆಂದು ಗೊತ್ತಾಗುವಾಗ ಅದರ ಖಾಲಿತನ ಭರಿಸುವುದು ಸಮಸ್ಯೆಯಾಗಿಬಿಟ್ಟಿತು. ನಿಧಾನಕ್ಕೆ ಅಸ್ತಮಾ ನೆನಪಾಯಿತು. ದುಡಿಯಲಿಕ್ಕೇನು ಉಳಿದಿಲ್ಲವೆಂಬಂತೆ ಅಶಕ್ತತೆ ಆವರಿಸಿತು. ಸ್ಟೆರಾಯ್ಡಿನ ಧಾಳಿಗೆ ಶರಣಾದ ಎಲುಬುಗಳು ನೋಯಲು

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ Read Post »

ಕಾವ್ಯಯಾನ

ಜುಮುರು ಮಳೆ

ಫಾಲ್ಗುಣ ಗೌಡ ಅಚವೆ. ನಿನ್ನ ಕೆನ್ನೆ ಹೊಳಪಿಗೆಮೋಡನಕ್ಕಿತು ಬೆಳ್ಳಕ್ಕಿಗಳುದಂಡೆಗೆ ಬಂದುಪಟ್ಟಾಂಗಹೊಡೆದಿವೆ.! ಮಗು ಎದ್ದುನಕ್ಕಾಗಬೆಳಕಾಯಿ ದಿನವಿಡೀ ನಕ್ಕಹೂ ಬಾಡಿಮೊಗ್ಗಾಯಿತು ಮಣ್ಣ ಗಂಧಕುಡಿದುಮಿಂಚಿದೆನೆಲ ಸಂಪಿಗೆ ಬಾಡುವಹಂಗಿಲ್ಲದಗುಲ್ ಮೋಹರ್ಮನಮೋಹಕ! ನಿನ್ನ ತುಟಿಯಲ್ಲಿನಕ್ಕ ಮಳೆನನ್ನ ಕಣ್ಣಲ್ಲಿಹೊಳೆ! ಇಡೀ ರಾತ್ರಿಮೋಡನಿನ್ನ ಮನೆಸುತ್ತುತ್ತಿದ ನಿನ್ನ ಹಾಡುಕೇಳಲುಬೆಳದಿಂಗಳುಕಾದಿದ ನಿನ್ನ ಹುಬ್ಬಿಗೆನಾಚಿದೆಮಳೆಬಿಲ್ಲು ಮುಳ್ಳುಮರೆಮಾಚಿಗುಲಾಬಿನಿನಗೆ ಕಳಿಸಿದೆ ಲಂಗರುತಗೆದ ಹಡಗುದಂಡೆಯಲ್ಲಿಹೊರಟಿದೆ!

ಜುಮುರು ಮಳೆ Read Post »

ಅನುವಾದ

ಜೈಲು ಶಿಕ್ಷೆ

ಅನುವಾದಿತ ಕವಿತೆ ವಿಯೆಟ್ನಾ೦ ಮೂಲ: ಹೋ ಚಿ ಮಿನ್ ಇ೦ಗ್ಲಿಶ್ ನಿ೦ದ ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (೧೯೪೫ ರಿ೦ದ ೧೯೬೯ ರ ವರೆಗೆ ವಿಯೆಟ್ನಾ೦ ನ ಜನಪ್ರಿಯ ಅಧ್ಯಕ್ಷರಾಗಿದ್ದ ಹೊ ಚಿ ಮಿನ್ ವಿಯೆಟ್ನಾ೦ ನ ಸ್ವಾಯತ್ತತೆಗಾಗಿ ಹೋರಾಡಿದ ಧುರೀಣ. ಚೀನಾ ದೊ೦ದಿಗೆ ವಿಯೆಟ್ನಾ೦ ಬಗ್ಗೆ ಮಾತು ಕತೆ ಗಾಗಿ ಬ೦ದ ಹೊ ಚಿ ಮಿನ್ ರನ್ನು ಚೀನಾ ಸರ್ಕಾರ ೨೯ – ೦೮ – ೧೯೪೨ ರ೦ದು ಗೂಢ ಚರ್ಯೆಯ ಆರೋಪದ ಮೆಲೆ ಬ೦ಧಿಸಿ ೧೦-೦೯- ೧೯೪೩ ರ೦ದು ಆರೋಪ ರಹಿತವಾಗಿ ಬಿಡುಗಡೆ ಮಾಡಿತು. ಜೈಲಿನಲ್ಲಿ ಹೊ ಚಿ ಮಿನ್ ಬರೆದ ಕವಿತೆಗಳ ಸ೦ಗ್ರಹ “ಜೈಲ್ ಡೈರೀಸ್”. ಈ ಸ೦ಗ್ರಹವನ್ನು ಯೂನಿವರ್ಸಿಟಿ ಆಫ಼್ ಲಿವರ್ಪೂಲ್ ನಲ್ಲಿ ಆ೦ಗ್ಲ ಪ್ರಾಧ್ಯಪಕಾಗಿರುವ ಟಿನೋತಿ ಆಲೆನ್ ಅವರು ಇ೦ಗ್ಲಿಶ್ ಭಾಶೆಗೆ ಅನುವಾದಿಸಿದ್ದಾರೆ. ಈ ಸ೦ಗ್ರಹದ “ಇ೦ಪ್ರಿಸನ್ಮೆ೦ಟ್” ಎ೦ಬ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಕವಿತೆ ಸ್ವಲ್ಪ ವಾಚ್ಯವೆನಿಸಿದರೂ, ಅದರ ದನಿಯಲ್ಲಿರುವ ನೋವು ಎಲ್ಲರ ಒಳಗನ್ನು ತಟ್ಟುತ್ತದೆ.) ನನ್ನ ದೇಹ ಜೈಲಿನಲ್ಲಿದೆ, ಆದರೆ ನನ್ನಾತ್ಮ ಸ್ವತ೦ತ್ರವಾಗಿದೆಮತ್ತೀಗ ಅದು ನೆಗೆಯ ಬಹುದು ಆಗಸಕ್ಕೆ.ಕವಿತೆಯ ಬಗ್ಗೆ ನಾನೆ೦ದೂ ಹೆಚ್ಚು ತಲೆ ಕೆಡಿಸಿಕೊ೦ಡವನಲ್ಲ.ಆದರೀಗ ಜೈಲಿನಲ್ಲಿ ಮಾಡಲು ಕೆಲಸವೇನಿದೆ?ಲ೦ಬಿಸಲ್ಪಟ್ಟಿದೆ ಕಾಲ ಜೈಲಿನಲ್ಲಿಹಾಡೊ೦ದು ಬೆಳಗಿ ಸಹ್ಯವಾಗಿಸ ಬಹುದದನು! ಜಿ೦ಗ್ ಕ್ಸಿ ಜೈಲಿಗೆ ನಾನು ಬ೦ದಾಗಹಳೆಯ ಕೈಗಳು ಮು೦ಚಾಚಿದವು ನನ್ನನ್ನು ಅಭಿನ೦ದಿಸಿ ಎದುರುಗೊಳ್ಳಲುಬಿಳಿಯ ಮೋಡಗಳು ಬೆನ್ನಟ್ಟಿದ್ದವು ಕಪ್ಪು ಮೋಡಗಳನ್ನುವಿಶಾಲ ನೀಲ ಗಗನದಲ್ಲಿ.ಮೋಡಗಳು ಎಷ್ಟು ಸ್ವತ೦ತ್ರವಾಗಿ ತೇಲಾಡುತ್ತಿವೆ ಆಗಸದಲ್ಲಿ!ಮನುಷ್ಯರು ಮಾತ್ರ ಬ೦ದಿಯಾಗಿದ್ದಾರೆ ಜೈಲಿನಲ್ಲಿ. ದುರ್ಗಮ ಪರ್ವತಗಳನ್ನು ದಾಟಿದೆಗಿರಿಶೃ೦ಗಗಳನ್ನು ಪ್ರಯಾಸದಿ೦ದ ಇಳಿದೆಆದರೆ ತೆರೆದ ರಸ್ತೆಯಲ್ಲಿ ನಾನು ಹಿಡಿಯಲ್ಪಟ್ಟೆ. ಬೆಟ್ಟದೇರಿನಲಿ ಹುಲಿಯೊ೦ದನ್ನು ಕ೦ಡೆ, ಅದು ನನ್ನನ್ನು ನೋಡಿತುನಾನೂ ಅದನ್ನು ನೋಡಿದೆ. ಹುಲಿ ಮತ್ತು ನಾನುಬೇರೆ ಬೇರೆ ಹಾದಿ ಹಿಡಿದು ಸಾಗಿದೆವು.ಸುರಕ್ಷಿತವೆ೦ದು ನಾನ೦ದುಕೊ೦ಡಿದ್ದ ತೆರೆದ ರಸ್ತೆಯಲ್ಲಿನನ್ನನ್ನು ಹಿಡಿದರು ಆ ಖೂಳ ಜನರು. ವಿಯೆಟ್ನಾ೦ ಬಗ್ಗೆ ಮಾತನಾಡಲು ಚೈನಾಕ್ಕೆ ಬ೦ದೆನಡು ಹಾದಿಯಲ್ಲಿ ಎಲ್ಲರೆದುರು ನನ್ನನ್ನು ಬ೦ಧಿಸಿದರುನನ್ನನ್ನು ಜೈಲಿಗೆ ತಳ್ಳಿ ನನಗೆ ಸ್ವಾಗತ ಕೋರಿದರು ಪರಿತಪಿಸಲು ಕಾರಣ ಗಳೇನೂ ಇರದ ನಾನೊಬ್ಬ ನಿಶ್ಪಾಪಿಆದರೆ ಆ ಚೀನೀಯರು ನನ್ನನ್ನು ದೇಶ ದ್ರೋಹಿ ಎ೦ದು ಜರೆಯುವರುಜಗದ ನಿಯಮವೇ ಹಾಗೆ : ಎಲ್ಲವೂ ಬದಲಾಗುವುದು.************ ಮೇಗರವಳ್ಳಿರಮೇಶ್

ಜೈಲು ಶಿಕ್ಷೆ Read Post »

ಕಾವ್ಯಯಾನ

ಭಾವ ಚಿತ್ರ

ಶಾಂತಾ ಕುಂಟಿನಿ ಮೇಲಿನಿಂದ ನೋಡಿದರೇತಿಳಿದೀತೇ ಅವಗುಣವೂಕೆಳಗಿಳಿದು ನೋಡಿದಾಗಒಳಗೆಲ್ಲ ಅಪಸ್ವರವೂ//೧// ಹೊರಗೆಲ್ಲಾ ನಗುಮೊಗವುಒಳಗೆಲ್ಲಾ ಬೈಗುಳವೂಅರಿತಾಗಲೆ ಮನಸುಗಳಆಂತರ್ಯ ಕಾಣುವವೂ// ಕಣ್ಣಿದ್ದರು ಕುರುಡರಂತೆನಮ್ಮದೆಲ್ಲ ವರ್ತನೆಯೂಇದು ಎಲ್ಲವು ನಮಗೇಕೆಅನ್ನುಂತಹ ಶೈಲಿಯೂ ನಿರ್ಮಲದ ಮನಸುಗಳಹುಡುಕಾಟವು ದುರ್ಲಭವುಏನಿದ್ದರು ಇಲ್ಲಿ ಎಲ್ಲವುಹೊಳಹುಗಳೇ ತೇಲಿದವು// ************* ಅದೆ ಸತ್ಯ ಎಂದಂದೂನಂಬಿರುವಾ ಜನರಿರಹರೂಪರದೆಯನು ನೀ ಸರಿಸಲುಕಂಡಿಹುದೇ ಕೆಸರೂ// ನಾಟಕವನೆ ಮಾಡುತಲೀವೇಷವನ್ನೇ ತೊಡುವರೂನಂಬಿ ನೀನು ಹೋದರಲ್ಲಿಹಳ್ಳವನೇ ತೋಡುವರೂ//

ಭಾವ ಚಿತ್ರ Read Post »

ಪುಸ್ತಕ ಸಂಗಾತಿ

ಒಂದು ಮರ ನೂರು ಸ್ವರ

ಪುಸ್ತಕಸಂಗಾತಿ ಒಂದು ಮರ ನೂರು ಸ್ವರಭಾರತೀಯ ಸಣ್ಣಕಥೆಗಳುಎನ್ ಎಸ್ ಶಾರದಾಪ್ರಸಾದ್ಸಂಚಯ ಪ್ರಕಾಶನ ಈ ಪುಸ್ತಕ ಮುದ್ರಣದ ಹಂತದಲ್ಲಿದ್ದಾಗ ಶಾರದಾಪ್ರಸಾದರು ತೀರಿಕೊಂಡಿದ್ದು ದುಃಖದ ವಿಷಯ. ಅವರು ತಮ್ಮ ಬರವಣಿಗೆಯ ಬದುಕಿನುದ್ದಕ್ಕೂ ಆಯ್ದು ಪೋಣಿಸಿದ ಕಥೆಗಳಿವು. 1981 ರಿಂದ 2014 ರ ತನಕದ ಅವರ ಎಲ್ಲಾ ಅನುವಾದಿತ ಚೆಂದದ ಕತೆಗಳು ಇಲ್ಲಿವೆ. ರಾಜಾಜಿ (ಚಕ್ರವರ್ತಿ ರಾಜಗೋಪಾಲಾಚಾರಿ) ಅವರ, ಲೋಕನಾಯಕ ಜಯಪ್ರಕಾಶ ನಾರಾಯಣ್ ಅವರ ಅಪರೂಪದ ಕತೆಗಳೂ ಇಲ್ಲಿವೆ. ಒಟ್ಟೂ 51 ಕತೆಗಳು ಇಲ್ಲಿ ಕನ್ನಡಿಸಿವೆ‌.ಅಷ್ಟೇನೂ ಪರಿಚಿತರಲ್ಲದವರ ಕತೆಗಳೂ ಇಲ್ಲಿವೆ. ಕಳೆದ ಶತಮಾನದ ಭಾರತೀಯ ಬದುಕಿನ ವಿವರಗಳನ್ನು, ಸಾಂಸ್ಕೃತಿಕ ಪಲ್ಲಟಗಳನ್ನು, ನೋವು- ನಲಿವು, ಹತಾಶೆ, ಸಾವು, ಯಶಸ್ಸು… ಹೀಗೆ ಆಯಾ ಪ್ರದೇಶದ, ಭಾಷೆಯ ಆವರಣದಲ್ಲಿ ಮೈಪಡೆದ ಮನುಷ್ಯ ಜಗತ್ತಿನ ಚಿತ್ರಣ ಈ ಕೃತಿಯಲ್ಲಿದೆ. ಇಲ್ಲಿನ ಕತೆಗಳ ಆಯ್ಕೆಯ ಹಿಂದೆ ಶಾರದಾಪ್ರಸಾದರ ಸೂಕ್ಷ್ಮತೆ ಮತ್ತು ಭಾವುಕತೆ ಎದ್ದು ಕಾಣುತ್ತದೆ.ಯಾವ ಸಾಹಿತ್ಯ ಫ್ಯಾಷನ್ನುಗಳಿಂದ ಪ್ರಭಾವಿತರಾಗದ ಅವರ ಆಯ್ಕೆ, ತಮ್ಮ ಮನಸ್ಸಿಗೆ ತಟ್ಟಿದ ಕಥೆಗಳನ್ನು ಅವರು ಕನ್ನಡಿಗರ ಓದಿಗೆ ಬಡಿಸಿದ್ದಾರೆ. ಇವು ಅಂತಃಕರಣದ ಕತೆಗಳು. ವೈವಿಧ್ಯಮಯ ಕಥೆಗಳಿಗಾಗಿ ಒಮ್ಮೆ ಓದಲೇಬೇಕಾದ ಕೃತಿಯಿದು. ******** ಡಾ.ಅಜಿತ ಹರೀಶಿ

ಒಂದು ಮರ ನೂರು ಸ್ವರ Read Post »

ಕಾವ್ಯಯಾನ, ಗಝಲ್

ಗಝಲ್

ಮಾಲತಿ ಹೆಗಡೆ ಇಳೆಯ ಕೊಳೆಯನು ತೊಳೆದು ಹರಸಿದೆ ಮುಂಗಾರು ಮಳೆಕಂಗೆಟ್ಟ ರೈತರ ಕಣ್ಣಲ್ಲಿ ಕನಸು ಬಿತ್ತುತ್ತದೆ ಮುಂಗಾರು ಮಳೆ‌‌ ಬಿರು ಬಿಸಿಲ ಕಡು ತಾಪದಲಿ ಬೆಂದಿವೆ ಜೀವಕೋಟಿಎಲ್ಲರ ಬಾಳಿಗೆ ಭರವಸೆಯಾಗಿ ಬೀಳುತ್ತದೆ ಮುಂಗಾರು ಮಳೆ ಕಾದು ಕಾದು ಬಿರಿದ ಭುವಿಯ ತಣಿಸಲು ಬೇಕು ವರ್ಷಧಾರೆಮಣ್ಣಿನಲಿ ಅವಿತ ಬೀಜವ ಮೊಳೆಯಿಸುತ್ತದೆ ಮುಂಗಾರು ಮಳೆ ಕರಿಮುಗಿಲು ಕರಕರಗಿ ಹನಿ ಮುತ್ತಾಗಿ ಬೀಳುವುದೇ ಸೊಗಎಷ್ಟೇ ಅಬ್ಬರಿಸಿ ಬೊಬ್ಬಿದರೂ ಹಿತನಿಸುತ್ತದೆ ಮುಂಗಾರು ಮಳೆ ಮಾಲತಿಯ ಮನದಲ್ಲಿ ತುಂಬಿತ್ತು ಸಾವು ನೋವಿನ ಭೀತಿಹೊಸ ಹಸುರ ಹುಟ್ಟಿನ ಹರುಷ ಹಂಚುತ್ತದೆ ಮುಂಗಾರು ಮಳೆ ************

ಗಝಲ್ Read Post »

ಇತರೆ

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

ಅನುಭವ ಕಥನ ಕಾಡಿನಲ್ಲಿ ಓದು ವಿಜಯಶ್ರೀ ಹಾಲಾಡಿ  ವಿಜಿ ಮತ್ತು ಅವಳಂತಹ ಆಗಿನ ಕಾಲದ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದುಬಿದ್ದು ಓದುವುದೆಲ್ಲ ಏನೂ  ಇರಲಿಲ್ಲ. ಮನೆಕೆಲಸ, ಆಟ, ಹಾಡಿ-ಗುಡ್ಡಗಳ ಸುತ್ತಾಟ,   ಎಲ್ಲದರ ನಡುವೆ ಶಾಲೆಗೂ ಹೋಗಿಬರುತ್ತಿದ್ದರು!  ಪರೀಕ್ಷೆ ಬಂದಾಗ ಅಲ್ಪಸ್ವಲ್ಪ ಓದಿಕೊಳ್ಳುತ್ತಿದ್ದರು. ಹಾಗಂತ ಶಾಲೆಗೆ ಹೋಗುವುದು ಅವರಿಗೆ ಸುಲಭವೇನೂ ಆಗಿರಲಿಲ್ಲ.  ಗದ್ದೆ, ತೋಡು, ಕಾಡುಗಳಲ್ಲಿ ಮೈಲಿಗಟ್ಟಲೆ ನಡೆದು ಹೋಗಿಬರಬೇಕಿತ್ತು . ಆದರೆ ‘ಓದಿ ಓದಿ’ ಎಂದು ಶಾಲೆಯಲ್ಲೂ ಮನೆಯಲ್ಲೂ ಯಾರೂ ಅವರ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಮನಸ್ಸಾದರೆ ಓದಿಕೊಳ್ಳುತ್ತಿದ್ದರು. ಆದರೆ ತರಗತಿಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದರು. ಒಂಬತ್ತನೇ ತರಗತಿಯವರೆಗೂ ಇದೇ ತರ ತಲೆಬಿಸಿ ಇಲ್ಲದೆ ಇದ್ದರು. ವಿಜಿ ಶಾಲೆ ಪುಸ್ತಕಗಳ ಜೊತೆಗೆ ಕಥೆ ಪುಸ್ತಕಗಳನ್ನೂ ಓದುತ್ತಿದ್ದಳು. ಹತ್ತನೇ ತರಗತಿಯಲ್ಲಿ ಮಾತ್ರ ತುಸು ಗಂಭೀರವಾಗಿ ಓದಬೇಕಿತ್ತು. ಪರೀಕ್ಷೆಯ ತಯಾರಿ ಎಂದರೇನೆಂದು ತಿಳಿದದ್ದು ಆಗಲೇ. ಈ ಮಕ್ಕಳ ಓದುವಿಕೆಯೂ ವಿಚಿತ್ರವಾಗಿತ್ತು. ಕೋಣೆಯೊಳಗೆ ಕುರ್ಚಿ, ಮೇಜುಗಳನ್ನಿಟ್ಟುಕೊಂಡು ಶಿಸ್ತಾಗಿ ಕೂತು ಓದುತ್ತಿದ್ದುದು ಭಾರೀ ಕಮ್ಮಿ. ಅಲ್ಲದೆ ಹಾಗೆಲ್ಲ ಓದಲು ಹೆಚ್ಚಿನ ಮಕ್ಕಳ ಮನೆಯಲ್ಲಿ ಟೇಬಲ್ಲು ಕುರ್ಚಿಗಳು ಇರಲಿಲ್ಲ. ನೆಲದಲ್ಲಿ ಚಿಮಣಿದೀಪದ ಎದುರಿಗೆ ಕೂತು ಪುಸ್ತಕಗಳನ್ನು ಹರಡಿಕೊಂಡು ಬರೆದುಕೊಳ್ಳುತ್ತಿದ್ದರು. ವಿಜಿ ದಿನವೂ ರಾತ್ರಿ ಒಂದರ್ಧ ಗಂಟೆಯಾದರೂ ಹೀಗೆ ಅಜ್ಜಿ, ಅಮ್ಮನಎದುರಿಗೆ ಬರೆಯಲೇಬೇಕಿತ್ತು .ಇದು ಊಟದ ಮುಂಚೆ ನಡೆಯುತ್ತಿತ್ತು. ಆಮೇಲೆ ಊಟ ಮಾಡಿ ಒಂಭತ್ತು ಗಂಟೆಗೆಲ್ಲ ಮಲಗಿಬಿಡುತ್ತಿದ್ದರು.  ಪರೀಕ್ಷೆಯ ಸಮಯದಲ್ಲಿ ವಿಜಿ ಮತ್ತು ಅವಳ ಗೆಳತಿಯರು ಓದುತ್ತಿದ್ದುದು ಹೆಚ್ಚಾಗಿ ತೋಟ ಹಾಡಿಗಳಲ್ಲಿ. ತೋಟದಲ್ಲಿ ಹುಲ್ಕುತ್ರೆ ಇರುತ್ತಿತ್ತು. ಸೂಡಿಹಲ್ಲುಕುತ್ರೆಯಾದರೆ  ಹುಲ್ಲನ್ನು ಜಪ್ಪಿ ಭತ್ತವನ್ನು ಪೂರ್ತಿಯಾಗಿ ಬೇರ್ಪಡಿಸಿ ಹುಲ್ಲನ್ನು ಸೂಡಿ ಮಾಡಿ ಜೋಡಿಸಿಡುತ್ತಿದ್ದ ಕುತ್ರೆ. ಇಂತಹ ಒಣಹುಲ್ಲನ್ನು ಸಂಗ್ರಹಿಸಿ ಇಟ್ಟು ವರ್ಷಪೂರ್ತಿ ದನಕರುಗಳಿಗೆ ತಿನ್ನಲು ಬಳಸುತ್ತಿದ್ದರು . ಹಟ್ಟಿಯ ಅಟ್ಟದಲ್ಲಿ ಕೂಡಿಟ್ಟು ಉಳಿದ  ಹುಲ್ಲನ್ನು ಹುಲ್ಕುತ್ರೆ ಮಾಡಿ ಇಡುತ್ತಿದ್ದರು. ಬೇಕಾದಾಗ ಇದರಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದರು. ಇಂತಹ ಕುತ್ರೆಗಳು ಮೂರ್ನಾಲ್ಕು ಇರುತ್ತಿದ್ದವು. ಇದಲ್ಲದೆ ತಳು ಹುಲ್ಲಿನ ಕುತ್ರೆಯೂ ಇರುತ್ತಿತ್ತು. ಇದು ಸೂಡಿ ಮಾಡದ ಬಿಡಿ ಹುಲ್ಲು. ಸ್ವಲ್ಪ ಸ್ವಲ್ಪ ಹುಲ್ಲು ತೆಗೆದು ಅರ್ಧ ಆದ ಇಂತಹ ಕುತ್ರೆಗಳ ಮೇಲೆ ಆರಾಮವಾಗಿ ಕುಳಿತು ಅಥವಾ ಕಾಲು ಚಾಚಿ ಮಲಗಿ ಓದುತ್ತಿದ್ದರು. ನಾಲ್ಕೈದು ಜನ ಅಂದರೆ ನೀಲಿಮಾ,ಮಾಣಿಕ್ಯ ಮತ್ತು ಅವಳ ತಂಗಿಯರು ಸೇರಿದರೆ ಮಾತ್ರ ಓದು ನುಗುಳಿ (ಜಾರಿ ) ಹೋಗಿ ಮಾತು ಜೋರಾಗುತ್ತಿತ್ತು…. ಅಂತಹ ಸಂದರ್ಭದಲ್ಲಿ ಹುಲ್ಕುತ್ರೆ ಮೇಲೆ  ಕುಣಿಯುತ್ತ ಆಟವಾಡುತ್ತಿದ್ದುದೂ ಉಂಟು.   ಆಟ ಎಂದಮೇಲೆ ಜಗಳವೂ ಇರುತ್ತಿತ್ತು; ರಾಜಿಯೂ ಆಗುತ್ತಿತ್ತು! ಅಜ್ಜಿಯೇನಾದರೂ  ತೋಟದ ಕಡೆಗೆ ಬಂದರೆ “ಎಂತಾ ಮಕ್ಳೆ ಅದ್ ನಳಿನಳಿ ಓಡೂದ್, ನೀವ್ ಓದೂಕ್ ಬಂದದ್ದಾ, ಕೊಣೂಕ್ ಬಂದದ್ದಾ?” ಎಂದು ಜೋರು ಮಾಡುತ್ತಿದ್ದರು. ಅವರು ಆಚೆ ದಾಟುವವರೆಗೆ ಸುಮ್ಮನೆ ಹೆಡ್ಡರ ತರ ನಿಂತುಕೊಂಡು ಮತ್ತೆ ಮೊದಲಿನಂತೆ ಓಡುವುದು, ಹಾರುವುದು ಬೀಳುವುದು ಮಾಡಿ ಕುತ್ರೆ ಹರಡುತ್ತಿದ್ದರು . ಆದರೆ ಹೆಚ್ಚು ಶಬ್ದ ಆಗದಂತೆ ಬಾಯಿ ಒತ್ತಿ ಹಿಡಿಯುತ್ತಿದ್ದರು. ಮನೆಗೆ ಹೊರಡುವಾಗಂತೂ ಹುಲ್ಲನ್ನೆಲ್ಲ ಮೊದಲಿನಂತೆ ಇಟ್ಟು ಜಾಗ್ರತೆ ಮಾಡುತ್ತಿದ್ದರು ವಿಜಿ, ನೀಲಿಮಾ.  ಇಲ್ಲದಿದ್ದರೆ ಅಜ್ಜಿ ಬೆನ್ನಿಗೆ ಬಾರಿಸುತ್ತಾರೆ ಎಂದು ಅವರಿಗೆ ಗೊತ್ತಿತ್ತು.ಕೆಲವೊಮ್ಮೆ ಹಾಡಿಗೆ ಪುಸ್ತಕ ಹಿಡಿದು ಹೋಗಿ ಕೂತುಕೊಳ್ಳುತ್ತಿದ್ದರು. ಹತ್ತಲಿಕ್ಕಾಗುವ ಸಣ್ಣ ಮರ ಇದ್ದರೆ ಮಂಗಗಳಂತೆ ಅದರ ಮೇಲೆ ಹತ್ತಿ ಕೂತು ಪುಸ್ತಕ ಬಿಡಿಸುತ್ತಿದ್ದರು.  ಒಂದೈದು ನಿಮಿಷ ಓದಲಿಕ್ಕಿಲ್ಲ, ಅಷ್ಟೊತ್ತಿಗೆ ಎಂತದೋ ನೆನಪಾಗಿ ಒಬ್ಬರನ್ನೊಬ್ಬರು ಕರೆದುಕೊಂಡು ಮಾತು ಶುರು ಮಾಡುತ್ತಿದ್ದರು. ಅದೂ ಸಹ ಒಂದ್ಹತ್ತು ನಿಮಿಷ ಅಷ್ಟೇ….. ಮರ ಇಳಿದು ಹಾಡಿ ತಿರುಗಲು ಆರಂಭಿಸುತ್ತಿದ್ದರು. ಯಾವುದಾದರೂ ಹಣ್ಣೋ, ಕಾಯೋ , ಚಿಗುರೋ, ಎಲೆಯೋ  ಹೀಗೆ ತಿನ್ನಲಿಕ್ಕಾಗುವುದು ಏನಾದರೂ ಇದೆಯಾ ಎಂದು ಹುಡುಕುತಿದ್ದರು. ಈ ವಿಷಯದಲ್ಲಿ ಇವರು ಮಂಗಗಳಿಗೇನೂ ಕಮ್ಮಿ ಇರಲಿಲ್ಲ. ವರ್ಷದ ಯಾವುದೇ ಕಾಲವಾಗಲಿ, ಈ ಮಕ್ಕಳಿಗೆ ಹಾಡಿಯಲ್ಲಿ ಎಂತಾದರೂ ತಿನ್ನಲು ಸಿಗುತ್ತಿತ್ತು!  ಮಳೆಗಾಲದ ಆರಂಭದಲ್ಲಾದರೆ ರಾಶಿರಾಶಿ ನೇರಳೆ, ಸಳ್ಳೆ ಹಣ್ಣು ಇರುತ್ತಿತ್ತು . ನೇರಳೆ ಹಣ್ಣು ತಿಂದು ಮುಖ ಮೈ ಅಂಗಿಗೆಲ್ಲ ಬಣ್ಣ ಮೆತ್ತಿಕೊಂಡು ಥೇಟ್ ಮಂಗನಾಗುತ್ತಿದ್ದರು ! ವೈಶಾಖದಲ್ಲಂತೂ ಕೇಳುವುದೇ ಬೇಡ; ಗರ್ಚ (ಕರಂಡೆ),  ಜಡ್ಡ್ ಮುಳ್ಳ್ ಹಣ್ಣು,ಸೂರಿಹಣ್ಣು, ಚಾಂಪಿಹಣ್ಣು ಇನ್ನೂ ಎಂತೆಂತದೆಲ್ಲ ಸಿಗುತ್ತಿತ್ತು. ಹಾಡಿಯಲ್ಲಿ ಹಣ್ಣೇ ಇಲ್ಲ ಎಂದಾದರೆ, ಗರ್ಚನ ಗಿಡ ಮತ್ತು ದುರ್ಕಲ ಗಿಡದ ಎಳೆಕಾಂಡವನ್ನು ತಿನ್ನುತ್ತಿದ್ದರು. ಗರ್ವಾಳ ಕಾಯಿ ಹುಡುಕುತ್ತಿದ್ದರು. ಯಾವ್ಯಾವುದೋ ಹುಳಿ ಸೊಪ್ಪನ್ನು ಬಾಯಿಗೆ ತುಂಬಿಕೊಳ್ಳುತ್ತಿದ್ದರು. ಇಷ್ಟೆಲ್ಲ ಆಗುವಾಗ ಓದುವುದು ಮರೆತುಹೋಗಿ ಕಾಡಿನ ಹಣ್ಣೋ, ಎಲೆಯೋ,  ಹಕ್ಕಿಯೋ, ಮೊಲವೋ ಯಾವ್ಯಾವುದರ ಕುರಿತೋ ಪಂಚಾಯಿತಿಗೆ ಮಾಡುತ್ತಾ ಮನೆ ತಲುಪುತ್ತಿದ್ದರು.  ಇನ್ನು ಕೆಲವೊಮ್ಮೆ ಓದುವ ರಜೆ ಕೊಟ್ಟಾಗ ಗಂಟಿ(ದನಕರು) ಎಬ್ಬಿಕೊಂಡು ಸುಮಾರು ದೂರ ಹೋಗುತ್ತಿದ್ದರು. ದನಗಳು ತಮ್ಮಷ್ಟಕ್ಕೆ ಹಸಿ ಮೇಯ್ದುಕೊಳ್ಳುವಾಗ ಅಲ್ಲೇ ಮರಗಳ ಬುಡದಲ್ಲಿ ದರಲೆಗಳ ಮೇಲೆ ಕುಳಿತು ಓದುತ್ತಿದ್ದರು . ಪರೀಕ್ಷೆಯ ರಜೆಯಲ್ಲಿ ಸ್ವಲ್ಪ ಗಂಭೀರವಾಗಿ ಓದಲು ತೊಡಗುತ್ತಿದ್ದರು. ಆಗಲೂ ಮಧ್ಯೆ ಎದ್ದು ಹೋಗಿ ಹಣ್ಣುಗಳನ್ನು ಹೊಟ್ಟೆಗೆ ಸೇರಿಸದೆ ಬಿಡುತ್ತಿರಲಿಲ್ಲ. ಹತ್ತನೇ ಕ್ಲಾಸಿನ ಪರೀಕ್ಷೆಗೆ ರಜೆ ಕೊಟ್ಟಾಗ ಚೋರಾಡಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿ ಇರುವ ಗರ್ಚನ ಗಿಡಗಳ ಗುಡ್ಡೆಯಲ್ಲಿ ಗಂಟಿ ಬಿಟ್ಟುಕೊಂಡು ಒಬ್ಬಳೇ ಓದುತ್ತಾ ಕುಳಿತಿರುತ್ತಿದ್ದುದು ವಿಜಿಗೆ ಕಣ್ಣಿಗೆ ಕಟ್ಟಿದಂತೆ ನೆನಪಿಗೆ ಬರುತ್ತದೆ. ಪಿಯುಸಿಗೆ ಹೋಗುವಾಗ ನಾಗ್ ದೇವ್ರ್ ಬನದ ಸುರುಳಿ ಸುರುಳಿ ಸುತ್ತಿದ ದಪ್ಪ ಬೀಳಿನ ಮೇಲೆ ಕುಳಿತು ಓದಿದ್ದು ಅವಳಿಗೆ ನೆನಪಿದೆ. ಕೆಲವು ವಿಷಯಗಳನ್ನು ಅಲ್ಲಿ ಕೂತು ಬಾಯಿಪಾಠ ಮಾಡುತ್ತಿದ್ದಳು. ಅವಳಿಗೆ ಇಂಗ್ಲಿಷ್ ಸ್ವಲ್ಪ ಕಷ್ಟವಾದ್ದರಿಂದ ಹಾಗೆ ಕೆಲವು ಉತ್ತರಗಳನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದಳು.  ವಿಜಿಯ ಮನೆಯಲ್ಲಿ’ ಆಚೆ ಒಳ’ ಅಂತ ಒಂದು ಪುಟಾಣಿ ಕೋಣೆಯಿತ್ತು. ಅದಕ್ಕೊಂದು ಸಣ್ಣ ಕಿಟಕಿ. ಮೇಲೆ ಮುಚ್ಚಿಗೆಯ ಮಾಡು. ಆ ಕೋಣೆಯಲ್ಲಿ ಅಕ್ಕಿಮುಡಿ ಗಳನ್ನು ಸಂಗ್ರಹಿಸಿಡುತ್ತಿದ್ದರು. ಉಳಿದ ಜಾಗದಲ್ಲಿ ಒಂದು ಮರದ ಪೆಟ್ಟಿಗೆ, ಟ್ರಂಕ್ ಮತ್ತು ಕೆಲವು ದಿನನಿತ್ಯ ಉಪಯೋಗಿಸದ ಪಾತ್ರೆಗಳು , ಹಪ್ಪಳದ ಕಟ್ಟಿನ ಡಬ್ಬಗಳು, ಹಿಟ್ಟಿನ ಡಬ್ಬ, ಶಾವಿಗೆ ಒರಳು ಮುಂತಾದುವೆಲ್ಲ ಇದ್ದವು. ತುಂಬಾ ಚಳಿ ಇದ್ದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದು ಹೊರಗೆ ಕುಳಿತು ಓದಲಾಗದ ಸಮಯದಲ್ಲಿ ಆ ಸಣ್ಣ ಕೋಣೆಯ ಸಣ್ಣಜಾಗದಲ್ಲಿ ವಿಜಿ ಓದಿ ಕೊಳ್ಳುತ್ತಿದ್ದಳು. ಹಾಗೊಂದು ಸಲ ಚಿಮಣಿದೀಪ ಇಟ್ಟುಕೊಂಡು ಕುಳಿತಿದ್ದಳು. ಮನೆಗೆ ಯಾರೋ ನೆಂಟರೆಲ್ಲ ಬಂದ ಸಮಯವಾದ್ದರಿಂದ ಗಲಾಟೆ ಕೇಳುತ್ತದೆ ಎಂದು ಕೋಣೆಯ ದಪ್ಪಬಾಗಿಲನ್ನು ಎಳೆದು ಹಾಕಿದ್ದಳು .ಕಿಟಕಿಯು ಮಾಮೂಲಿಯಂತೆ ಹಾಕಿಕೊಂಡಿತ್ತು .ಅದಲ್ಲದೆ ಅಕ್ಕಿ ಮುಡಿಗಳು ಬೆಚ್ಚಗಿರಬೇಕು ಎಂದು ಆ ಕಿಟಕಿಗೆ ಯಾವಾಗಲೂ ಒಂದು ಪ್ಲಾಸ್ಟಿಕ್ಕಿನ ಹಾಳೆಯನ್ನು ಹೊಡೆದಿರುತ್ತಿದ್ದರು. ಈ ಸಂದರ್ಭದಲ್ಲಿ ಬಾಗಿಲು ತೆಗೆದು  ಬಂದ ಅಣ್ಣ” ಅಯ್ಯೋ ಇಂಥ ಹೊಗೆಯಲ್ಲಿ ಕುಳಿತು ಓದುವುದಾ!? ಆರೋಗ್ಯಕ್ಕೆ ಒಳ್ಳೆಯದಲ್ಲ, ಕಿಟಕಿ ತೆಗೆದಿಡಬೇಕು ” ಎಂದು ಉದ್ಗರಿಸಿದ್ದ, ಏಕೆಂದರೆ ಹೊಗೆ ಕೋಣೆಯನ್ನೆಲ್ಲಾ ತುಂಬಿ ಉಸಿರುಕಟ್ಟುವಂತೆ ಆಗಿತ್ತು . ಆದರೂ ಅದು ವಿಜಿಗೆ ಗೊತ್ತಾಗಿರಲಿಲ್ಲ. ಆದರೆ ಸಾಮಾನ್ಯವಾಗಿ ಅವಳು ಓದುತ್ತಿದ್ದುದು ಹೊರಗೆ ಚಾವಡಿ – ಜಗಲಿಯಲ್ಲಿ ಅಥವಾ ಉಪ್ಪರಿಗೆಯಲ್ಲಿ. ಅಲ್ಲಾದರೆ ಚೆನ್ನಾಗಿ ಗಾಳಿಯಾಡುವಂತಿತ್ತು . ಈ ಮೊದಲೇ ಹೇಳಿದಂತೆ ವಿಜಿಯ ಊರಿಗೆ ಕರೆಂಟ್ ಬರುವಾಗ ಅವಳಂತಹ ಮಕ್ಕಳೆಲ್ಲ ಪಿಯುಸಿ ಮುಗಿಸಿಯಾಗಿತ್ತು. ಚಿಮಣಿ ದೀಪದ ಬೆಳಕಲ್ಲಿ ಓದುವಾಗ ದೀಪಕ್ಕೆ ಆಕರ್ಷಿತವಾಗಿ ಕುಟ್ಟೆ, ಹಾತೆ, ಮಿಡತೆ, ಮಳೆಹಾತೆ ಒರ್ಲೆಹಾತೆ ಹೀಗೆ ವಿಧವಿಧ ಕೀಟಗಳು ಬಂದು ದಾಳಿ ಮಾಡುತ್ತಿದ್ದವು. ಕೆಲವು ದೀಪಕ್ಕೆ ಬಿದ್ದು ಸುಟ್ಟು ಸತ್ತೂ ಹೋಗುತ್ತಿದ್ದವು. ಮತ್ತೆ ಕೆಲವು ಮೈಮುಖದ ಮೇಲೆ ಕೂತು ಕಿರಿಕಿರಿ ಕೊಡುತ್ತಿದ್ದವು. ಕೆಲವೊಮ್ಮೆ ದೀಪದ ಬುಡದಲ್ಲಿ ರಾಶಿರಾಶಿ ಬಂದು ಬೀಳುತ್ತಿದ್ದವು. ಚಿಮಣಿದೀಪದಲ್ಲಿ ಮಕ್ಕಳು ಓದುವುದು ಕಷ್ಟ ಎಂದು ಮನಗಂಡ ಅಪ್ಪಯ್ಯ ಲ್ಯಾಂಪು ತರುತ್ತಿದ್ದರು. ಸಣ್ಣ ಲ್ಯಾಂಪು ಕೋಣೆಯಲ್ಲಿ ಮೊಳೆಗೆ ಸಿಕ್ಕಿಸಿ ಇಡಲಾದರೆ , ದೊಡ್ಡ ಲ್ಯಾಂಪು ಓದಲಿಕ್ಕೆ. ಒಂದು ಸಲ ಸುಮಾರು ದೊಡ್ಡ ಲ್ಯಾಂಪ್ ತಂದಿದ್ದರು. ಅದರ ಬುರುಡೆ ಸೋರೆಕಾಯಿಯ ಗಾತ್ರಕ್ಕಿತ್ತು! ಮತ್ತೊಂದು ಸಲ ಸಪೂರ ಬುರುಡೆಯ ನೋಡಲು ವಿಚಿತ್ರವಾಗಿರುವ ಲ್ಯಾಂಪನ್ನು ತಂದುಕೊಟ್ಟಿದ್ದರು . ಅದು ಚೀನಿ ಲ್ಯಾಂಪಂತೆ! ಯಾಕೆ ಆ ಹೆಸರು ಬಂದದ್ದೋ ಗೊತ್ತಿರಲಿಲ್ಲ. ಚೀನಾದವರು ಅಂತಾ ಲ್ಯಾಂಪು ಉಪಯೋಗಿಸುತ್ತಾರೋ  ಏನೋ ಎಂದು ಅವಳು ಅಂದುಕೊಂಡಿದ್ದಳು. ಇಂತಹ ಲ್ಯಾಂಪುಗಳಲ್ಲಾದರೆ ಓದಲು ಸ್ವಲ್ಪ ಆರಾಮವೆನಿಸುತ್ತಿತ್ತು. ಹೊಗೆ ಮುಖಕ್ಕೆ ಬಡಿಯುವುದಿಲ್ಲ ಮತ್ತು ಜಾಸ್ತಿ ಪ್ರಕಾಶ ಬೀರುತ್ತಿತ್ತು. ಅವರ ಮನೆಯ ಎಡಬದಿಯಲ್ಲಿ ಒಂದು ಸಪೂರ ಚಿಟ್ಟೆ (ದಂಡೆ ) . ಅದರ ಕೆಳಗೆ ಗದ್ದೆ. ಅಲ್ಲಿ ಉದ್ದಾನುದ್ದಕ್ಕೆ ಊರಿನ ಎಲ್ಲರ ಮನೆಯ ಗದ್ದೆಗಳು ಹಬ್ಬಿಕೊಂಡಿದ್ದವು. ಗದ್ದೆಯ ಇನ್ನೊಂದು ಬದಿಗೆ ಕಾಡು . ಮನೆಯ ಬಲಭಾಗದಲ್ಲಿ ತೋಟ; ಅದನ್ನು ದಾಟಿದರೆ ಕಾಡು. ಇಂತಹ ಗದ್ದೆ, ಕಾಡುಗಳ ನಡುವೆ ರಾತ್ರಿಯ ದಟ್ಟಕತ್ತಲು, ನೀರವತೆ…. ನಡುನಡುವೆ ಇರುಳ ಸದ್ದುಗಳು, ಕೆಲವೊಮ್ಮೆ ತೋಟದ ಕಡೆಯಿಂದ ಗುಮ್ಮಗಳ ಕೂಗು. ಒಂದು ಗುಮ್ಮ ‘ಹೂಂ’ ಎಂದರೆ ಇನ್ನೊಂದು ಗುಮ್ಮ ‘ಹೂಂಊಂಹೂಂ’ ಎಂದು ಉತ್ತರ ಕೊಡುತ್ತಿತ್ತು! ಹಾಡಿಯಲ್ಲಿ ನೀರಿಗೆ ಕಲ್ಲು ಹಾಕಿದಂತೆ ಕೂಗುವ ಯಾವುದೋ ರಾತ್ರಿಹಕ್ಕಿಯ ಕೂಗು . ಆಗಾಗ ನಾಯಿಗಳ ನೀಳ ಬೊಗಳು. ಮಳೆಗಾಲವಾದರೆ ಮನೆಯೆದುರಿನ ಗದ್ದೆಯಲ್ಲಿ ಅಸಂಖ್ಯಾತ ಕಪ್ಪೆಗಳ, ಕೀಟಗಳ  ಸದ್ದು ಅಥವಾ’ಜೈಲ್’ ಎಂದು ಸುರಿಯುವ ಮಳೆಯ ಶಬ್ದ. ಮನೆಯೊಳಗೆ ಕುಳಿತು ಓದಿನಲ್ಲಿ ಮುಳುಗುವ ವಿಜಿಗೆ ಸುತ್ತಲಿನ ಪರಿಸರ ನಿಜಕ್ಕೂ ಸಹಕಾರಿಯಾಗಿತ್ತು. ಓದು ಎಂದರೆ ಬರೀ ಶಾಲೆ ಪುಸ್ತಕದ ಓದಷ್ಟೇ ಅಲ್ಲ, ಆರನೇ ತರಗತಿಯಲ್ಲೇ ಅವಳು ಕತೆ ಕಾದಂಬರಿಗಳನ್ನು ಓದಲು ಶುರು ಮಾಡಿದ್ದಳು. ಅವರ ಮನೆಯಲ್ಲಿದ್ದ ಕುವೆಂಪು, ಕಾರಂತರ ಪುಸ್ತಕಗಳು ಮತ್ತು ಇತರ ಪುಸ್ತಕಗಳು, ವಾರಪತ್ರಿಕೆ, ಮಾಸ ಪತ್ರಿಕೆಗಳನ್ನು ಓದುತ್ತಿದ್ದಳು.  ಹಗಲೆಲ್ಲ ಶಾಲೆ, ಮನೆಕೆಲಸ ಹೀಗೆ ಸಮಯ ಕಳೆದುಹೋಗುತ್ತಿತ್ತು. ರಾತ್ರಿ ಶಾಲೆಯ ಓದಿನ ನಂತರ ಕಥೆ ಪುಸ್ತಕಗಳನ್ನು ಓದುವುದು ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಪ್ರಾರಂಭವಾಗಿ ಮುಂದುವರೆಯಿತು. ಶಾಲೆಯ ಓದು ಅನಿವಾರ್ಯವಾಗಿತ್ತು ; ಅದಲ್ಲದೆ ಓದಲೇಬೇಕೆಂಬ ಛಲ, ಹಠವೂ ಇತ್ತು. ಇತರ ಪುಸ್ತಕಗಳ ಓದು ಮಾತ್ರ ಹೊಸ ಲೋಕವೊಂದನ್ನು ಪರಿಚಯಿಸಲು ಸಹಕಾರಿಯಾಯಿತು. ***

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ Read Post »

You cannot copy content of this page

Scroll to Top