ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ಶೀಲಾ ಭಂಡಾರ್ಕರ್ ನಾನು ಮೊದಲ ಕವಿತೆ ಬರೆದಾಗ ಅದು ಪದ್ಯವೋ ಗದ್ಯವೋ ನನಗೇ ತಿಳಿಯಲಿಲ್ಲ. ನಾನದನ್ನು ಕವಿತೆ ಅಂದುಕೊಂಡೆ ಅಷ್ಟೇ. ಬರೆಯಬೇಕೆಂದು ಬರೆದುದಲ್ಲ ಅದು ಕಾಳಿದಾಸನ ಬಾಯಿಯಿಂದ ಆಕಸ್ಮಿಕವಾಗಿ ನಿರರ್ಗಳವಾಗಿ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾ ಶ್ಲೋಕ ಹೊರಹೊಮ್ಮಿದಂತೆ ನನ್ನ ಮನಸ್ಸಿನೊಳಗೆ ಕೆಲವು ಸಾಲುಗಳು ಹಾಗೆ ಹಾಗೆಯೇ ಬರಲು ಶುರುವಾದವು. ಅಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೊಂದು ರಾತ್ರಿ. ಎಂದಿನಂತೆ ಅದೂ ಒಂದು ರಾತ್ರಿ. ಮಲಗಿದರೆ ನಿದ್ದೆ ಹತ್ತುತ್ತಿಲ್ಲ. ಏನೇನು ಮಾಡಿದರೂ ಪ್ರಯತ್ನ ಫಲಕಾರಿ ಆಗುತ್ತಿಲ್ಲ. ಅಂದರೆ ಕಣ್ಣು ಮುಚ್ಚಲೂ ಆಗದು, ಕಿವಿ ಬಿಚ್ಚಲೂ ಆಗದು ಅಂತಹ ಸನ್ನಿವೇಶ. ಎಷ್ಟು ಹೊರಳಾಡಿದರೂ ನಿದ್ದೆ ಬರದೆ ಹುಚ್ಚು ಹಿಡಿಯುವುದೊಂದು ಬಾಕಿ. ಈಗಿನಷ್ಟು ಧೈರ್ಯವಿದ್ದಿದ್ದರೆ ಏನೋ ಭಯಂಕರವಾದ್ದು ಘಟಿಸುತಿತ್ತು. ನಾನೇನಾದರೂ ವಿದೇಶದಲ್ಲಿ ಜನಿಸಿದ್ದಿದ್ದರೆ ಅದೇ ವಿಷಯಕ್ಕೆ ವಿಚ್ಛೇದನವೂ ಆಗುತಿತ್ತು. ಆದರೆ ಭಾರತ ದೇಶದಲ್ಲಿ ಜನಿಸಿದ್ದರಿಂದ, ಭಾರತೀಯ ನಾರಿಯಾಗಿ ಇನ್ನೇನೂ ಮಾಡಲು ತೋಚದೆ ಪುಂಖಾನುಪುಂಖವಾಗಿ ತಲೆಯೊಳಗೆ ಬಂದ ಸಾಲುಗಳನ್ನು ಸೇರಿಸಿ ಏನೋ ಬರೆದೆ. ಅದೇ ನಾನು ಬರೆದ ಮೊದಲ ಕವಿತೆ. ಕವಿತೆಯ ಶೀರ್ಷಿಕೆ “ನನ್ನವರ ಗೊರಕೆ”. ಮದುವೆಯಾದಾಗಿನಿಂದಲೂ ಇವರ ಗೊರಕೆ ಅಭ್ಯಾಸವಾಗಿದ್ದರೂ.. ಒಮ್ಮೊಮ್ಮೆ ಚಿತ್ರ ವಿಚಿತ್ರ ಸ್ವರಗಳು ಹೊರಹೊಮ್ಮುವಾಗ ಬದುಕೇ ಅಸಹನೀಯವೆನಿಸುವುದುಂಟು. ಆ ದಿನ ಅಂತಹದ್ದೇ ಸಂದರ್ಭ. ಮಂದ್ರದಿಂದ ಶುರುವಾಗಿ ತಾರಕಕ್ಕೇರಿ ಪಂಚಮ ಸ್ವರದಲ್ಲಿ ಕರ್ಣಕಠೋರ.. ಹಳೆಯ ಪಿಟೀಲಿನ ತುಕ್ಕು ಹಿಡಿದ ತಂತಿಯನ್ನು ಉಜ್ಜುವ ಸಂಗೀತ. ನೀವೇ ಯೋಚಿಸಿ ನನ್ನ ಸ್ಥಿತಿ ಹೇಗಿರಬಹುದು? ನನಗೆ ಇನ್ನೊಂದು ಆಶ್ಚರ್ಯವೆಂದರೆ ಪಕ್ಕದಲ್ಲಿ ಮಲಗಿದ ನನಗೆ ಸಹಿಸಲು ಅಸಾಧ್ಯವಾದರೆ ತಾನೇ ಹೊಡೆಯುತ್ತಿರುವ ಗೊರಕೆಯಿಂದ ಅವರಿಗೆ ಎಚ್ಚರವಾಗದು ಹೇಗೆ? ಒಮ್ಮೊಮ್ಮೆ ಲಾರಿ ಘಟ್ಟ ಹತ್ತುವುದೂ ಇದೆ, ಒಮ್ಮೊಮ್ಮೆ ಎಣ್ಣೆ ಹಾಕದ, ತುಕ್ಕು ಹಿಡಿದ ರಾಟೆಯಿಂದ ನೀರು ಸೇದುವಂತೆ ಕೇಳಿಸುವುದೂ ಇದೆ. ರಾತ್ರಿಯ ನೀರವತೆಯಲ್ಲಿ ಮೂಡಿ ಬಂದ ನನ್ನ ಮೊದಲ ಕವನ ಬರೆದ ಮೇಲೆ ನನ್ನೊಳಗೆ ಏನೋ ಪುಳಕ. ಜೊತೆಗೆ ಸಣ್ಣದೊಂದು ನಡುಕ. ನನ್ನವರಿಗೇನಾದರೂ ನನ್ನ ಕವನದ ಬಗ್ಗೆ ತಿಳಿದರೆ ಆಮೇಲಿನ ಪರಿಣಾಮಗಳನ್ನು ಊಹಿಸಿ ಹೊಟ್ಟೆಯೊಳಗೇನೋ ವಿಚಿತ್ರ ಭಯ ಶುರುವಾದರೂ ಮೊದಲ ಕವನವನ್ನು ಅಳಿಸಲು ಮನಸ್ಸು ಬರಲಿಲ್ಲ. ನೋಡಿದರೆ ನೋಡಲಿ.. ಅವರಿಗೂ ತಿಳಿಯಲಿ ಪರೋಕ್ಷವಾಗಿ ತಾನು ಒಂದು ಪಾಪದ ಪ್ರಾಣಿಗೆ ಎಂಥಾ ದೊಡ್ಡ ಹಿಂಸೆ ಕೊಡುತ್ತಿರುವೆನೆಂಬ ಅರಿವು ಮೂಡಲಿ. ಇನ್ನೂ ಏನೇನೋ ದೊಡ್ಡ ದೊಡ್ಡ ಶಬ್ದಗಳೊಂದಿಗೆ ಮನಸ್ಸಿನಲ್ಲೇ ಧೈರ್ಯ ತಂದುಕೊಳ್ಳಲು ನೋಡಿದೆ. ಯಾಕೆಂದರೆ, ಯಾವಾಗಲಾದರೂ ಗೊರಕೆಯ ಬಗ್ಗೆ ಮಾತು ಬಂದಾಗ ನಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ವಾದಿಸುತಿದ್ದರು. ಯಾರು ಹೇಳಿದರೂ ಒಪ್ಪಿಕೊಳ್ಳುತ್ತಿರಲಿಲ್ಲ. ಈ ನನ್ನ ಮೊದಲ ಕವನ ಅವರ ಕಣ್ಣಿಗೆ ಯಾವತ್ತೂ ಬೀಳದಿರಲಿ, ಬಿದ್ದರೂ ನಕ್ಕು ಸುಮ್ಮನಾಗಲಿ ಎಂದು ಹರಕೆಯನ್ನೂ ಹೊತ್ತುಕೊಂಡೆ. ಹರಕೆ ಫಲಿಸಿದೆ. ಇಂದಿನವರೆಗೆ ಅವರ ಕಣ್ಣಿಗೆ ಗೊರಕೆ ಕವನ ಬಿದ್ದಿಲ್ಲ. ಆದರೆ ಇನ್ನೂ ಗೊರಕೆ ಹೊಡೆಯುವುದು ನಿಂತಿಲ್ಲ. ಕವಿತೆಯನ್ನು ಸ್ನೇಹಿತರ ಜೊತೆ ಹಂಚಿಕೊಂಡಾಗ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಬಂತು. ಹೆಚ್ಚಿನವರು ತಮ್ಮ ತಮ್ಮ ಗಂಡಂದಿರ ಗೊರಕೆಯ ಬಗ್ಗೆಯೂ ಹೇಳಿಕೊಂಡರು. ನನ್ನ ಸೋದರಮಾವ ನನ್ನ ಕವಿತೆಯಿಂದ ಪ್ರಭಾವಿತನಾಗಿ ಅವರ ಹೆಂಡತಿಯ ಗೊರಕೆಯ “ನನ್ನವಳ ಗೊರಕೆ” ಎಂಬ ಕವಿತೆಯನ್ನು ಬರೆದರು. ಮೊದಲ ಕವಿತೆಯ ಪುಳಕವನ್ನು ಕದ್ದು ಮುಚ್ಚಿಯೇ ಅನುಭವಿಸುವಂತಾಯ್ತು. ಮನೆಗೆ ಬಂದವರ್ಯಾರಾದರೂ ನಿನ್ನ ಕವಿತೆ ಚೆನ್ನಾಗಿತ್ತು ಅನ್ನುವುದರೊಳಗೆ ಅವರಿಗೆ ಕೈ ಬಾಯಿ ಸನ್ನೆ ಮಾಡಿ ಮುಂದೆ ಮಾತನಾಡದಂತೆ ತಡೆಯುತಿದ್ದೆ. ಮುಂದೆ ಒಮ್ಮೆ ಕೊಂಕಣಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಅದೇ ಕವಿತೆಯನ್ನು ಕೊಂಕಣಿಗೆ ಭಾಷಾಂತರಿಸಿ ಓದುವಾಗ ಎರಡೆರಡು ಸಲ ನನ್ನವರು ಅಲ್ಲಿ ಇಲ್ಲದುದನ್ನು ಖಾತ್ರಿ ಮಾಡಿಕೊಂಡ ಮೇಲೆಯೇ ಓದಿದ್ದೆ. ಏನೇ ಹೇಳಿ .. ಹೇಗೇ ಇದ್ದರೂ ಮೊದಲ ಕವಿತೆಯ ಸಂಭ್ರಮವೇ ಬೇರೆ. *****************

ಮೊದಲ ಕವಿತೆ Read Post »

ಕಾವ್ಯಯಾನ

ಕನಸು

ಕವಿತೆ ಅರುಣಾ ರಾವ್ ಸ್ವಪ್ನದಲ್ಲಿ ಕಂಡೆ ಸುಂದರ ಲೋಕ ಮನೆಗಳು ಮಹಲು ಮಾಲು ಮಂದಿರ ರಸ್ತೆ ಸೇತುವೆ ಮಾರುಕಟ್ಟೆ ಜನ ನೋಡುತ ನಡೆದೆ ಬೀದಿಯ ಗುಂಟ ಸಿನಿಮಾ ನೋಡಲು ನೆರೆದ ತರುಣರು ವಸ್ತ್ರಭಂಡಾರದಿ ಸೀರೆ ಬಳೆಗಳು ಪುಸ್ತಕ ಭಾರವ ಬೆನ್ನಲ್ಲಿ ಹೊತ್ತು ನಗುತ ಸಾಗುವ ಪುಟ್ಟ ಮಕ್ಕಳು ಕಚೇರಿಗಳಿಗೆ ಸಾಗುವ ಜನರು ದೇಗುಲಗಳಲಿ ನೆರೆದ ಭಕ್ತರು ಮದುವೆ, ಮುಂಜಿ ಸಮಾರಂಭಗಳು ಚರ್ಚು ಮಸೀದಿ ಪ್ರಾರ್ಥನೆ ಮೊಳಗು ರಸ್ತೆಯಂಚಿನಲ್ಲಿ ವ್ಯಾಪಾರ ಜೋರು ಹೋಟೆಲುಗಳಲ್ಲಿ ತಿಂಡಿಗೆ ಸಾಲು ಎಲ್ಲರ ಮುಖದಲ್ಲಿ ಸಂತಸ ಹೊನಲು ಕಾಣುತ ಸಾಗುತ ಹೋಯಿತು ಹೊತ್ತು ದೂರದಲ್ಲೆಲ್ಲೋ ಕೋಲಾಹಲವು ಓಡುತ ನಡೆದು ನೋಡುತ ನಿಂತೆ ನಡೆದು ಬರುವಂತೆ ಆಕಾರವೊಂದು ಕಣ್ಣಿಗೆ ಕಾಣದು ಇದೆ ಆದರದು ಮಂದಿ ಆತಂಕದಲ್ಲಿ ಸೇರಿ ಮನೆಯನು  ಬಾಗಿಲು ಮುಚ್ಚಿ ಅಂಗಡಿ ಮುಂಗಟ್ಟು ಶಾಲೆಯ ಬಾಗಿಲು ತೆರೆವುದು ಯಾವತ್ತು ಮೊದಲಿನ ದಿನಗಳ ಕಾಣುವೆವೆಂತು ಕಾಣದ ಆಕಾರವದು ಮೆರೆಯಿತು ಜೋರು ಅವನಿಗೆ  ಎಂದಿಗೆ ಬಂದೀತು ಸಾವು ಹೆಂಗಸು ಗಂಡಸು ಮಕ್ಕಳು ಮರಿಗಳು ಭೇದವೆ ಇಲ್ಲದೆ ಬಲಿಯ ಪಡೆದನು ನೋಡುತ ನಿಂತ ಕಾಲದು ನಡುಗಿತು ಓಡುತ ಓಡುತ ಸೇರಿ ಮನೆಯನು ಕದವನು ಇಕ್ಕಿ ಹಾಕಿ ಚಿಲಕವನು ಹೊರಹಾಕಿದೆನು ನಿಟ್ಟುಸಿರೊಂದನು ರಾವಣ ಕೀಚಕ ಭಸ್ಮಾಸುರರು ಕಾಲನ ಬಲೆಗೆ ಜಾರಿ ಬಿದ್ದರು ಪ್ಣೇಗು ಕಾಲರಾ ಮಸಣ ಸೇರಿದರು ಕೊರೊನಾಗೆಂದು ನಿಜದಲ್ಲಿ ಸಾವು  ********************************

ಕನಸು Read Post »

ಕಾವ್ಯಯಾನ

ನಡುಮನೆಯ ಕತ್ತಲಲ್ಲಿ

ಕವಿತೆ ಅಬ್ಳಿ,ಹೆಗಡೆ         ನಾನು ಮತ್ತು ದೇವರು         ಇಬ್ಬರೇ ಕುಳಿತಿದ್ದೇವೆ         ನಡುಮನೆಯ ಕತ್ತಲಲ್ಲಿ.         ನನಗಿಷ್ಟ ಇಲ್ಲಿಯ ಕತ್ತಲು.         ಕಾರಣವಿಷ್ಟೇ…..         ಇಲ್ಲಿ ಬೆತ್ತಲಾದರೂ         ಗೊತ್ತಾಗುವದಿಲ್ಲ ಹೊರಗೆ.         ದಟ್ಟ ಕತ್ತಲು-         ಯಾವಾಗಲೂ ರಾತ್ರಿಯೆ.         ಇಲ್ಲಿ ಹಗಲಿನೆಚ್ಚರದಲ್ಲೂ         ಕನಸು ಕಾಣಬಹುದು.         ವಿಹರಿಸಬಹುದು-         ನೀಲಾಕಾಶದಲ್ಲಿ         ಚುಕ್ಕಿ,ಚಂದ್ರಮರೊಟ್ಟಿಗೆ.         ಇಲ್ಲಿ ಯಾವಾಗಲೋ         ಅಪರೂಪಕ್ಕೊಮ್ಮೆ         ತೆರೆದುಕೊಳ್ಳುವದೂ-         ಉಂಟು,ವರ್ಣಮಯ         ಹೊರ ಜಗತ್ತು.         ಇಲ್ಲಿ ಕಿಟಕಿ,ಬಾಗಿಲುಗಳ         ಇರುವಿಕೆಯೂ ಕೂಡ         ಗೊತ್ತಾಗುತ್ತಿಲ್ಲ.         ಮುಚ್ಚಿರಬಹುದು…         ಹೆಗ್ಗಣ,ಕ್ರಿಮಿ ಕೀಟಗಳ         ಹೆದರಿಕೆಗೆ ಯಾರೋ….!         ಯಾವಾಗಲೋ ಒಮ್ಮೆ         ಮುಚ್ಚಿದ ಕದ         ತೆರೆದಾಗಷ್ಟೇ ಒಳಬರುವ         ಮಬ್ಬು ಬೆಳಕಲ್ಲಿ,         ಒಳಗಿನ ಸೋಜಿಗಗಳೆಲ್ಲ         ಅಸ್ಪಷ್ಟ ಕಣ್ಣೆದುರು.-         ನೇತಾಡುವ ‘ಗಳು’ವಿಗೆ         ನೇತಾಡುವ ಬಣ್ಣ,ಬಣ್ಣದ         ಹಳೆ,ಹೊಸ ಬಟ್ಟೆಗಳು,         ‘ಗಿಳಿಗುಟ್ಟ’ಕ್ಕೆ ನೇತಾಡಿಸಿದ         ಖಾಲಿ ಚೀಲಗಳು,         ಮುರಿದ,ಮುರಿಯದ         ಹಳೆ,ಹೊಸಕೊಡೆಗಳು,         ನೆಲಕ್ಕೆ ಗೋಡೆಗೆತಾಗಿ,         ಬೆಂಚಿನ ಮೇಲೆ,ತುಂಬಿದ         ಖಾಲಿ ಡಬ್ಬಗಳು…         ಇನ್ನೂ ಏನೇನೋ……!         ಇನ್ನು ಇಲ್ಲಿ..         ಕಠೋರ ವಾಸ್ತವದ         ಬಿಸಿಲ ಝಳವಿಲ್ಲ,         ಜಂಜಡವಿಲ್ಲ,ಹೊರಗಿನ-         ಗೌಜಿ,ಗಲಾಟೆಗಳಿಲ್ಲ.         ಎಲ್ಲ,,ಸ್ತಬ್ಧ,ಧ್ಯಾನಸ್ಥ-         ಮೌನ,ತಾನೇ ತಾನಾಗಿದೆ.         ಇನ್ನು…ನಾ ಹುಟ್ಟಿದ್ದು,         ಮೊದಲು ಅತ್ತಿದ್ದು ಕೂಡ         ಇಲ್ಲೇ ಆಗಿರಬಹುದು.         ನನ್ನಂತೆ ಎಷ್ಟೊ ಹುಟ್ಟುಗಳು         ನನಗಿಂತ ಮೊದಲು         ಹುಟ್ಟಿ,ಅತ್ತು,ಗುಟ್ಟಾಗಿ-         ಸತ್ತಿರಲೂ ಬಹುದು.         ಎಷ್ಟೋ ಸಂತಸ,ಉನ್ಮಾದದ         ಮೊದಲ ರಾತ್ರಿಗಳು,         ಕೊನೆಯಾಗಿರಲೂ ಬಹುದು         ನೋವಿನಲ್ಲಿ…..!         ಈ ನಡುಮನೆಯಲ್ಲಿ..         ದೇವರೆದುರು ಹಚ್ಚಿಟ್ಟ         ನಂದಾದೀಪವೂ..         ಎಂದೋ…ಎಣ್ಣೆಮುಗಿದು,         ಬತ್ತಿಸುಟ್ಟು,ಕರಕಲಾಗಿ,         ಆರಿಹೋಗಿದೆ-         ಯಾವಾಗಲೋ….!?         ದೇವರು ಕೂಡ         ಕತ್ತಲಲ್ಲಿ,ನನ್ನೊಟ್ಟಿಗೆ.         ಆತನಿಗೂ ಬೆಳಕಿನ         ಅನಿವಾರ್ಯತೆ ಇದ್ದಂತೆ         ಕಾಣುತ್ತಿಲ್ಲ ನನ್ನಂತೆ…!         ಸುತ್ತಲೂ ನಮ್ಮಿಷ್ಟದ         ಕತ್ತಲ ನಡುಮನೆ–         ನಮಗೆಂದಿಗೂ……..!!!         ************************************

ನಡುಮನೆಯ ಕತ್ತಲಲ್ಲಿ Read Post »

ಕಥಾಗುಚ್ಛ

ಧಾರವಾಡದ ಹೇಮಾಮಾಲಿನಿ

ಸಣ್ಣ ಕಥೆ ಬಸವರಾಜ ಹೂಗಾರ ಆಕೆ ಒಡೆದ ಪ್ರತಿಮೆಯಂತಿದ್ದಳು. ಬಿದ್ದ ಪ್ರತಿಮೆಯ ಯಾವುದೇ ಚೂರಾದ ಸಂಗತಿಯನ್ನು ಎತ್ತಿಕೊಂಡರೂ ಅಲ್ಲಿಂದ ಬಿಂಬಗಳು ಕಾಣಿಸುತ್ತಿದ್ದವು . ಆಕೆ ಹೆಚ್ಚು ಪ್ರೇಮದ ಕುರಿತು ಮಾತನಾಡುತ್ತಿದ್ದಳು ಆಕೆಯ ಡ್ರೆಸ್ಸಿನದೇ ಒಂದು ವಿಚಿತ್ರ ಡಿಸೈನ್ .ಕಟ್ಟಿಕೊಂಡ ಬಣ್ಣದ ಬಟ್ಟೆಯ ತುಣುಕುಗಳು ,ಬೊಚ್ಚು ಬಾಯಿ ,ಅರ್ಧ ಗೌನೊ ,ಬಣ್ಣದ ಗಗ್ಗರಿಯನ್ನೊ ಉಟ್ಟುಕೊಂಡು ಬಗಲಿಗೆ ಜೋಳಿಗೆ ಏರಿಸಿ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುತ್ತಾ ಕೆಲವು ಸಾರಿ ದಿವ್ಯ ಮೌನ ವಹಿಸುತ್ತಾ ಚಿಂದಿ ಆಯುತ್ತಿದ್ದರೆ, ಅದು ಧಾರವಾಡ ಗೊತ್ತಿದ್ದವರಾಗಿದ್ದರೆ‌  ಖಂಡಿತ  ಆಕೆ ಹೇಮಾಮಾಲಿನಿ.                ಬಾಸೆಲ್ ಮಿಷನ್ ಸ್ಕೂಲ್ ರಸ್ತೆಯಲ್ಲಿಯೋ, ಅಥವಾ ಎಲ್ಐಸಿ ಮುಂದೆಯೊ ಆಕೆ ನಡೆದು ಹೋಗುತ್ತಿದ್ದರೆ ನೋಡುವ ಹುಡುಗರಿಗೆ ತಮಾಷೆ, ಹುಡುಗರ ಹಾಸ್ಟೆಲ್ ಸುತ್ತಮುತ್ತ ಆಕೆ ಬಂದರೆ ಆಕೆಯ ಬಾಯಲ್ಲಿ ಬೈಗುಳ ಕೇಳಬೇಕಿತ್ತು . ಸ್ವರ್ಗಕ್ಕೆ ಮೂರೇ ಗೇಣು. ಅಷ್ಟು ಚಂದದ ಬೈಗುಳಗಳು.ಹುಡುಗ-ಹುಡುಗಿಯರ ಕುರಿತಾಗಿ ಆಕೆ ಬೈಯುತ್ತಿದ್ದಳು.  ಯಾರಿಗೆ  ಬೈಯುತ್ತಾಳೊ? ಯಾಕಾಗಿ ಬೈಯುತ್ತಾಳೊ? ಒಬ್ಬರಿಗೂ ಅರ್ಥವಾಗುತ್ತಿರಲಿಲ್ಲ .ಹಲಕಟ್ಟ ಭಾಷೆಯಲ್ಲಿ ಆಕೆ ಬೈಯುತ್ತಿದ್ದರೆ ನೀವು  ತಕ್ಷಣವೇ ಚೆನ್ನಾಗಿ ಮಾತನಾಡಿಸಿದರೆ ಸಾಕು ಪ್ರೀತಿಯ ಹಾದಿಗೆ ಬರುತ್ತಿದ್ದಳು .ನಾವು ಎಷ್ಟೋ ಸಾರಿ ಆಕೆಯನ್ನು ‘ಏನ್ ಮೇಡಂ ,ತುಂಬ ಸಿಟ್ಟಾಗೆದ್ದೀರಿ? ಎಂದರೆ ಆಕೆ ಗೆಳತಿ ಗೆಳೆಯನಿಗೆ ಹೇಳುವ ಅಕ್ಕರೆಯ ಮಾತುಗಳಂತೆ ತನ್ನ ಕಾಡಿಸಿದವರ, ತಾನು ಅವರನ್ನು ಸೋಲಿಸಿದ ಕಥೆ ಹೇಳುತ್ತಿದ್ದಳು .ಅದಕ್ಕೆ ಆರಂಭ ಅಂತ್ಯ ಇರುತ್ತಿರಲಿಲ್ಲ.ಚಿಂದಿ‌ ಆಯುವಾಗ ನೋಟುಗಳು ಸಿಕ್ಕ ಕತೆ, ತಾನು ಬೆಳಗ್ಗೆ ನಾಷ್ಟಾ ಮಾಡಿದ ಕತೆ ,ಒಬ್ಬರ ಹತ್ತಿರ ಇಟ್ಟ ಗಂಟಿನ ಕತೆ,ಯಾವುದೋ ಹುಡುಗಿ ಇನ್ನಾವುದೋ ಹುಡುಗನಿಗೆ ಮೋಸ ಮಾಡಿದ ಕತೆ ,ಕೈಕೊಟ್ಟು ಹೋದರೂ ಪ್ರಾಮಾಣಿಕವಾಗಿ ನಡಕೊಂಡ ವ್ಯಥೆ, ಆಕೆ  ಲೊಚಗುಟ್ಟುತ್ತ ಮುಂದೆ ಹೋಗುತ್ತಿದ್ದರೆ ಆಕೆಯನ್ನು ನೋಡಿದ ಯಾರಾದರೂ ಇದು ಪ್ರೇಮದ ಕೇಸೆ ಎನ್ನುತ್ತಿದ್ದರು. ಆಕೆಯನ್ನು ಸಿಟ್ಟಿಗೆಬ್ಬಿಸಿ ಜೀವನದಲ್ಲಿ ಯಾರಿಂದಲೂ ಬೈಸಿಕೊಳ್ಳದವರು ಹಲಕಟ್ಟ ಬೈಗುಳ ಬೈಸಿಕೊಂಡ ದೊಡ್ಡಪಡೆಯೇ ಕರ್ನಾಟಕದಲ್ಲಿ ಇದೆ. ಹಾದಿಯಲ್ಲಿ ಹೊರಟರೆ ‘ನೋಡಲೇ ಅಲ್ಲಿ ,ಹೇಮಾ ಬರಕತ್ತ್ಯಾಳ ಎನ್ನುವವರೆ.  ಆಕೆ ಇಂಗ್ಲಿಷ್ ಮಾತನಾಡುತ್ತಿದ್ದಳು. ಧಾರವಾಡ ಆಧುನಿಕತೆಗೆ ಕಣ್ಣು ತೆರೆಯುತ್ತಿರುವಾಗಲೇ ಧಾರವಾಡದ ಆಧುನಿಕ ಹೆಂಗಸರಂತಿದ್ದಳು.ಕೇಳುಗರಿಗೆ ಕರುಣೆಯ ಲೆಕ್ಕದಲ್ಲಿ ಹುಷಾರಿನ ಪಾಠ ಹೇಳುತ್ತಿದ್ದಳು .ವಯಸ್ಸಿನ ಹೆಂಗಸಾಗಿದ್ದರೂ ಕಾಲೇಜಿನ ಹುಡುಗ-ಹುಡುಗಿಯರಿಗೆ ಯಾಕೆ   ಆಕರ್ಷಣೀಯ ಕೇಂದ್ರವಾಗಿದ್ದಳು?ಕಳೆದುಕೊಂಡಿದ್ದನ್ನ ಹುಡುಕುತ್ತಿದ್ದಳೊ? ಸಿಗುವದಿಲ್ಲ‌ ಎಂದು ಗೊತ್ತಿದ್ದರೂ ಕನವರಿಸುತ್ತಿದ್ದಳೊ? ಪುರುಷರ  ದೌರ್ಜನ್ಯಕ್ಕೆ ಒಳಗಾಗಿದ್ದಳೊ?  ಆಕೆಯನ್ನು ಯಾರು ಈ ಪರಿಸ್ಥಿತಿಗೆ ತಂದಿಟ್ಟರೋ ಗೊತ್ತಿಲ್ಲ. ಆಕೆ ಯಾಕೆ ಹುಚ್ಚಿಯಾಗಿ ತಿರುಗುತ್ತಿದ್ದಾರೆ ಎನ್ನುವುದು ಬಹುತೇಕ ಧಾರವಾಡದ ಜನಕ್ಕೆ ಗೊತ್ತಿಲ್ಲ .ಧಾರವಾಡದ ಒಡೆದ ಪ್ರತಿಬಿಂಬದಂತೆ ಆಕೆ ಬದುಕಿದಳು .ಮೋಸ ಮಾಡಿದವರ  ಕ್ರೌರ್ಯದ ಗಾಯಗಳು ಆಕೆಯ ದೇಹದ ಮೇಲೆ ತುಂಬಾ ಗಾಯ ಮಾಡಿದ್ದವು .ಆ ಗಾಯದ ಗೀರುಗಳನ್ನ ಆಕೆ ಮುಟ್ಟಿಮುಟ್ಟಿ ನೋಡಿಕೊಳ್ಳುತ್ತಿದ್ದಳು .ಅದು ಕೆಲವರಿಗೆ ತಮಾಷೆಯಾಗಿತ್ತು .ಇನ್ನು ಕೆಲವರಿಗೆ ನೋವಿನ ಪರಿಭಾಷೆಯಾಗಿತ್ತು. ಆಕೆ ಭಿಕ್ಷೆ ಬೇಡಲಿಲ್ಲ .ಯಾರಿಗೂ ಜೀ ಎನ್ನಲಿಲ್ಲ.  ಆಕೆ ಎಲ್ಲಿ ಮಲಗುತ್ತಿದ್ದಳೊ?ಗೊತ್ತಿಲ್ಲ .ಪೂರ್ಣ ಹುಚ್ಚಿಯೋ ಅದೂ ಗೊತ್ತಿಲ್ಲ .ಉದ್ದೇಶಪೂರ್ವಕವಾಗಿಯೇ ಅಂತ ವ್ಯಕ್ತಿತ್ವವನ್ನು ಆವಗಾಹಿಸಿಕೊಂಡಳೋ  ಗೊತ್ತಿಲ್ಲ .ಧಾರವಾಡದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾಗ ಒಂದು ಸಲ ಆಕೆ ಎಲ್ಲಿರಬಹುದೆಂದು ಹುಡುಕುತ್ತಿದ್ದೆ. ಒಂದು ಸರ್ಕಾರಿ ಆಶ್ರಮದಲ್ಲಿ ಆಕೆ ಸಿಕ್ಕಳು .ಇಳಿವಯಸ್ಸಿನವರ ಜೊತೆಗೆ ಆಕೆ ಬದುಕುತ್ತಿದ್ದಳು. ಮೊದಲಿನ ಹಾಗೆ ಆಕೆಯ ಹತ್ತಿರ ಆವೇಶವಿರಲಿಲ್ಲ. ಸಮಾಧಾನವಿತ್ತು. ಸಹಜತೆ ಇತ್ತು .ಜೊತೆಗೆ ಫೋಟೋ ತೆಗೆಸಿಕೊಂಡೆ.’ಬಾಳ ಸಂತೋಷಪಾ,ಹುಡುಕಿಕೊಂಡು ಬಂದಿಯಲ್ಲ ಅಷ್ಟೇ ಸಾಕು ,ಬಾಳ ಜನ ಅದಾರ  ನೆನಪು ಮಾಡ್ಕೋತಾರ ‘ಅಂದಳು .ನಿನ್ನ ಫ್ರೆಂಡ್ಸ್ ಗೆ ಕೇಳಿದೆ‌ ಅಂತ ಹೇಳು ಅಂದಳು. ಧಾರವಾಡವೆಂಬ ಇಡೀ ಧಾರವಾಡದ ಹುಡುಗ-ಹುಡುಗಿಯರಿಗೆ ಹೇಮಮಾಲಿನಿ ಪರಿಚಿತರೆ .ಅದು ಆಕೆಯ ನಿಜವಾದ ಹೆಸರಲ್ಲ. ವಯಸ್ಸಾದಾರೂ ಆಕೆಯನ್ನು ನೋಡಿದರೆ ಒಂದು ಕಾಲಕ್ಕೆ ಸುಂದರಿಯಾಗಿದ್ದಿರಬೇಕು ಎಂದೆನಿಸುತ್ತಿತ್ತು.ಹಳೇ ಜಮಾನಾ ಆಕೆಯನ್ನು ಆ ಹೆಸರನಿಂದ ಕರೆದಿರಬೇಕು.ದಾಟಿ ಹೋಗುವ ಕಾಲದಲ್ಲಿ ಇಂಥವರು ನಮ್ಮ ನಡುವೆ ಬಂದು ಹೋಗುತ್ತಾರೆ .ನಮ್ಮದಲ್ಲದ ದುರಂತಕ್ಕೆ ಪ್ರತಿಮೆ ಯಾಗುತ್ತಾರೆ .ಆಕೆ ಕಳೆದುಕೊಂಡ ಸಂಗತಿಗಳನ್ನು ಧಾರವಾಡದ ಬೀದಿ ಬೀದಿಯಲ್ಲಿ ಹುಡುಕುತ್ತಿದ್ದಳು. ಹುಡುಗ ಹುಡುಗಿಯರು ,ಹೆಚ್ಚಾಗಿ ನಿವೃತ್ತರು ಕಾಣುವ ಧಾರವಾಡದಲ್ಲಿ ಜಿಟಿ ಮಳೆ , ಮಿರ್ಚಿ ಬಜಿ ಚಾ , ಅಲ್ಲಲ್ಲಿ ಒಡೆದ ಹೇಮಾಮಾಲಿನಿಯ  ನೆನಪಿನ ಬಿಂಬಗಳು.ಯಾರ ಕನಸುಗಳಿಗೆ ಯಾರು ಬಣ್ಣ ಬಳಿಯುತ್ತಾರೋ? ,ಎಲ್ಲೋ ಕಳೆದುಕೊಂಡಿದ್ದನ್ನ ಇನ್ನೆಲ್ಲಿ ಹುಡುಕುತ್ತಾರೆಯೋ?ಹೇಮಾಮಾಲಿನಿ ಸತ್ತಳಂತೆ ಅಂತಾ ಸುದ್ದಿ ಗೊತ್ತಾದಾಗ ಇದೆಲ್ಲ ನೆನಪಾಯಿತು .ಹೋಗಿ ಬಾ ಹೇಮಾ ನಿನ್ನಂಥ ಲವ್ವರ್ ಗಳು ಎಷ್ಟೋ  ಜನ ಇನ್ನೂ ಧಾರವಾಡದಲ್ಲಿ ಇದ್ದಾರೆ.          ***********************

ಧಾರವಾಡದ ಹೇಮಾಮಾಲಿನಿ Read Post »

ಇತರೆ

ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ

ಮೊದಲ ಕವಿತೆಯ ರೋಮಾಂಚನ ನಾಗರಾಜ ಹರಪನಹಳ್ಳಿ ನಾನು ಸಾಹಿತ್ಯದ ವಿದ್ಯಾರ್ಥಿ. ಉಪನ್ಯಾಸಕ ಆಗಬೇಕೆಂದು ಕೊಂಡಿದ್ದೆ. ಆಗಿದ್ದು ಪತ್ರಕರ್ತ. ಬಿಡುವಿನ ಮಧ್ಯೆ ಸಾಹಿತ್ಯದ ಓದು, ಬರಹ ಇದ್ದೇ ಇದೆ. ನನ್ನ ಮೊದಲ ಕವಿತೆ ಪ್ರಕಟವಾದದ್ದು ದಾವಣಗೆರೆಯ ಹೊಯ್ಸಳ ಪತ್ರಿಕೆಯಲ್ಲಿ. ೧೯೯೨ ರ ಸಮಯ. ಕವಿತೆಯ ಶೀರ್ಷಿಕೆ “ಕಲೆಗಳು” ಅಂತ ನೆನಪು.‌ ಸಾಹಿತ್ಯ ಸಂಗಾತಿ ಆ ಕವಿತೆಯ ನೆನಪಿಸಿತು.‌ಹೊಯ್ಸಳದ ಪ್ರತಿ ಸಿಕ್ಕೀತೆಂದು ಹುಡುಕಾಡಿದೆ.‌ ಸಿಗಲಿಲ್ಲ.‌ ಕವಿತೆ ಬಂಧ ಗಟ್ಟಿಯಾಗಿರಲಿಲ್ಲ.‌ ಬಂಡಾಯ  ಶೈಲಿಯ ಕವಿತೆಯಾಗಿತ್ತು. ೧೯೯೧-೯೨ ಸಮಯದಲ್ಲಿ ಫ್ರೆಂಚ್ ಲೇಖಕರಾದ ಅಲ್ಬರ್ಟ  ಕಾಮ್ಯು  ಹಾಗೂ ಕಾಫ್ಕ ನನ್ನ ಕಾಡಿದ್ದರು.ಪ್ರಭಾವಿಸಿದ್ದರು. ಅವರ ಕೃತಿಗಳನ್ನು ಕನ್ನಡದಲ್ಲಿ ಡಿ.ಎ.ಶಂಕರ್ ಅವರ ಅನುವಾದದ ಮೂಲಕ ಓದಿಕೊಂಡಿದ್ದೆ. ಎಂ.ಎ.ಮುಗಿಸಿ ನೌಕರಿ ಸಿಗದ ದಿನಗಳವು. ಹಾಗಾಗಿ ಬದುಕು ಸಂಕೀರ್ಣ ಸ್ಥಿತಿಯಲ್ಲಿತ್ತು, ನನ್ನದು ಸದಾ ಪ್ರೇಮಿಯ ಮನಸು, ಜೊತೆಗೆ ಆದರ್ಶಗಳು, ವ್ಯವಸ್ಥೆಯ ಬಗ್ಗೆ ಬೆಂಕಿಯಂತಹ ಕೋಪ. ಅದು ಈಗಲೂ ಇದೆ . ಹೀಗೆ ಇರುತ್ತಾ ಕಲೆಗಳು ಅಂತ ಕವಿತೆ ಬರೆದು ಕಲಾವಿದರೂ,  ಹೊಯ್ಸಳ ಪತ್ರಿಕೆಯ ಸಂಪಾದಕರು ಆದ ಶಂಕರ್ ಪಾಟೀಲರಿಗೆ ತೋರಿಸಿದೆ.  (ಅವರು ಕಾಣಲು ನಟ  ಅಮೂಲ್ ಪಾಲೇಕರ್ ತರಹ ಇದ್ದರು).‌  ಕವಿತೆ ಗಮನಿಸಿದ ಶಂಕರ ಪಾಟೀಲ ಸರ್, ” ಇನ್ನು ಪಕ್ವತೆ ಬೇಕು ಅಂದರು” .  ಅದಕ್ಕ ನಾನು “ಸರ್ ಇದೇ ಕವಿತೆಯನ್ನು ನಿಮಗೆ ಚಂಪಾ ಕಳಿಸಿದ್ದರೆ ನೀವು ಹಿಂದ ಮುಂದ ನೋಡ್ದ ಹಾಕೋತ್ತಿದ್ದಿರಿ”  ಅಂದು ಬಿಟ್ಟೆ. ತಕ್ಷಣ ಕವಿತೆ ತಗೊಂಡು , ಮತ್ತೊಮ್ಮೆ ಕಣ್ಣಾಡಿಸಿ , ಮುದ್ರಣಕ್ಕ ಒ.ಕೆ.ಮಾಡಿದ್ರು.‌ಮರುದಿನ ಹೊಯ್ಸಳ ಪತ್ರಿಕೆಯೊಳಗ ಕಲೆಗಳು ಕವಿತೆ ಪ್ರಕಟವಾಯಿತು. ಸಂತೋಷಕ್ಕ ಪಾರವೇ ಇರಲಿಲ್ಲ. ಆ ಕವಿತೆಯ ಪ್ರಾರಂಭ ಹೀಗಿತ್ತು…. ನನ್ನ ಅಂಗೈ,ಕಾಲು ಮುಂತಾದ ಕಡೆಗಳಲ್ಲಿ ತಟ್ಟನೆ ಕಣ್ಣಿಗೆ ತಬ್ಬುವ ಕಲೆಗಳು ಎಷ್ಟೊಂದು ಕತೆಗಳಿವೆ ರೂಪ ನೀಡುತ್ತವೆ ಕಲೆಗಳು ಕಲೆಗಳ ಹಿಂದಿನ ನೋವುಗಳು ನೋವುಗಳ ಹಿಂದಿನ ಕ್ಷಣಗಳು ನೋವುಗಳು ಮಾಸಿವೆ ಕಾಲ ಪ್ರವಾಹದ ತೊರೆ ಬತ್ತಿಹೋಗಿದೆ; ಈಗ ಬರೀ ನೆನಪು ಮಾತ್ರ ಈಗ ಒಮ್ಮೊಮ್ಮೆ ಆಕ್ರೋಶ ಹುಟ್ಟಿಸುತ್ತವೆ ಹುಟ್ಟಿದಷ್ಟೆ ವೇಗವಾಗಿ ಸತ್ತು ಹೋಗುತ್ತವೆ ಎಲ್ಲಾ ಕ್ರೂರ ಭ್ರಷ್ಟತೆಗಳ ವಿರುದ್ಧ ,ನೀಚತನದ ವಿರುದ್ಧ ಸಮರ ಸಾರುತ್ತವೆ… ಕಲೆಗಳು(9.10.1992) ….ಹೀಗೆ ಬರೆಯುತ್ತಿದ್ದ ನಾನು  ಅರೆಬೆಂದ ಕವಿತೆಗಳನ್ನು ಮುಂದೆ  ಪ್ರಕಟಿಸಲಿಲ್ಲ. ಓದಲು ಪ್ರಾರಂಭಿಸಿದೆ.  ಅಲ್ಲಿಂದ ಉದ್ಯೋಗಕ್ಕಾಗಿ ಕಾರವಾರ ಬಳಿಯ ಸದಾಶಿವಗಡಕ್ಕೆ ಬಂದೆ.  ಕವಿತೆ ಬರೆಯುವ ಹಂಬಲವಿತ್ತೇ ವಿನಃ ಬರೆದಿರಲಿಲ್ಲ.‌ ಆದಾಗಲೇ ಸಂಕ್ರಮಣ, ಲಂಕೇಶ್ ಪತ್ರಿಕೆ ನನ್ನ ವಿಚಾರಧಾರೆಯ ರೂಪಿಸಿದ್ದವು. ೧೯೯೭ರ ಹೊತ್ತಿಗೆ ಉಪನ್ಯಾಸಕ ಹುದ್ದೆಯಿಂದ ಪತ್ರಕರ್ತ ವೃತ್ತಿಗೆ ಬಂದಿದ್ದೆ.   “ಜಾಲ್ವೆಗಳ ನಡುವೆ” ಎಂಬ ಕವಿತೆಯನ್ನು ಸಂಕ್ರಮಣ ಪತ್ರಿಕೆಗೆ  ಕಳುಹಿಸಿದ್ದೆ. ಅದು ಜನೇವರಿ 1997ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆಗ ನನಗೆ ಕವಿತೆ ಬರೆಯುವ ಹುಮ್ಮನಸು ಇಮ್ಮಡಿಸಿತು. ಅದೇ ವರ್ಷ ಆಗಸ್ಟಿನಲ್ಲಿ ಸ್ವಾತಂತ್ರೋತ್ಸವ ಕವಿತೆ ಪ್ರಕಟವಾಯಿತು.   1997   ಅಥವಾ 1998ರಲ್ಲಿ ಕಾರವಾರದ ದೇವಭಾಗದಲ್ಲಿ ಸಾಹಿತ್ಯ ಕಮ್ಮಟ ನಡೆದಿತ್ತು. ಆಗ ಶಾಂತರಸರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು. ಕಮ್ಮಟದ ಬಿಡುವಿನ ಮಧ್ಯೆ ನನ್ನ ಜೊತೆ  ಮಾತಾಡುತ್ತಾ   ಏನ್ ಬರಿದಿರಿ ಅಂತ ವಿಚಾರಿಸಿದ್ರು. ನಾನು ಸಂಕ್ರಮಣದ ಕವಿತೆ ಬಗ್ಗೆ ಪ್ರಸ್ತಾಪಿಸಿದೆ. ”  ಹೌದಾ,  ಸಂಕ್ರಮಣದಲ್ಲಿ ಕವಿತೆ ಪ್ರಕಟ ಅಗ್ಯಾವ. ಹಾಗಾದರೆ ನೀವು ಕವಿ ಅಂದರು” . ಅವರ  ಆ ಮಾತು ” ನನ್ನ ಸಾಹಿತ್ಯ ಬದುಕಿಗೆ ಉಸಿರು ತುಂಬಿದ ಮಾತು” .  ಅಲ್ಲೇ ಇದ್ದ  ಕವಿ, ನಾಟಕಕಾರ, ಸಂಕ್ರಮಣದ ಸಂಪಾದಕರೂ  ಆದ  ಚಂದ್ರಶೇಖರ  ಪಾಟೀಲರು ಬೆನ್ನು ತಟ್ಟಿದರು. ಕತೆಗಾರ ರಾಮಚಂದ್ರ ಶರ್ಮ ಕಣ್ಣು ಮಿಟುಕಿಸಿದರು. ಈ ಸಂದರ್ಭ ನನ್ನಲ್ಲಿ ಸಾಹಿತ್ಯದ ಜೀವಸೆಲೆ ಹೆಚ್ಚಿಸಿತು. ವಚನ ಸಾಹಿತ್ಯದ ಓದು ನನ್ನ ಮೇಲೆ ಗಾಢ ಪ್ರಭಾವ ಬೀರಿತು.  ಹೈಸ್ಕೂಲ್ ಕಲಿಯುವ ವೇಳೆಗೆ ಸಮುದಾಯ ತಂಡ ನಮ್ಮ ಚಿಗಟೇರಿ ಹೈಸ್ಕೂಲ್ ಗೆ ಬಂದು ಪಿ.ಲಂಕೇಶರ  ಸಂಕ್ರಾಂತಿ ನಾಟಕ ಪ್ರದರ್ಶನ ಮಾಡಿತ್ತು. ಬಸವಣ್ಣ, ಬಿಜ್ಜಳ, ಹರಳಯ್ಯ, ಮಾದರಸ, ಅವರ ಮಕ್ಕಳು ನನ್ನ ಎದೆಯೊಳಗ ಉಳಿದು ಬಿಟ್ಟಿದ್ದರು. ಅಲ್ಲಮ ,ಅಕ್ಕಮಹಾದೇವಿ ದಿನವೂ ದಂಡೆಯೊಳಗ ನೆನಪಾಗುತ್ತಿದ್ದರು, ಬಯಲು, ಆಕಾಶ, ಮುಗಿಲು ,ಕಡಲು ನನ್ನ ಮನದೊಳಗ ತುಂಬಿ ತುಳುಕತೊಡಗಿದವು. ಹೀಂಗ ನನ್ನ ಕವಿತಾ ಪಯಣ ಆರಂಭವಾಯಿತು. ಆಕಾಶಕ್ಕ ನಕ್ಷತ್ರ ತೋರಿದೆ. ಅಕ್ಷರ ಎದಿಗ ಹಾಕಿಕೊಂಡು ದಾರಿಯಲ್ಲಿ ನಡೆದೆ…ಕವಿತೆ ನನ್ನ ಕೈಹಿಡಿದವು… ಇಷ್ಟೆಲ್ಲಾ ನೆನಪಿನ ಸವಾರಿ ಮಾಡ್ಲಿಕ್ಕ ಸಾಹಿತ್ಯ ಸಂಗಾತಿಯ ಗೆಳೆಯರು, ಸಂಪಾದಕರು ಆದ ಕು.ಸ. ಮಧುಸೂಧನ್  ಕಾರಣರಾದರು… ಕೊನೆಯ ಮಾತು: ಸಂಕ್ರಮಣದಾಗ ಪ್ರಕಟವಾದ ಕವಿತೆ ಹೀಗಿತ್ತು… ಜ್ವಾಲೆಗಳ ನಡುವೆ ….. ನಿಜದ ನೆಲದಲ್ಲಿ ಕಾಯದ ಕತ್ತಲ ಸೀಳಿ ಪಥಕನಾಗ ಹೊರಟಾಗ ನೂರು ಜ್ವಾಲೆಗಳೆರಗಿದವು ಸಾವಿರ ನುಡಿ ನಂಜಾಗಲು ಸಹಿಸಿದೆ ನಿನ್ನೆದೆಯ ಪುನ್ನಾಗ ಪ್ರಥಿತವಾಗಿಸಿ ನಿಜವೆರುವಾಗ; ನುಡಿಗಲಿಸುವಾಗ ಹಂಗಿಲ್ಲದ ಬದುಕ ರೂಢಿಸುವಾಗ ಕಣ್ಣು ತೆರೆಸುವ ಸಮಯ ಪೊಂಬಿಲ್ ಮೂಡುವಾಗ ಕಾಲಕಲ್ಲಾಗಿ ಹೊನ್ನಶೂಲವಾಗಿ ಕಾಯದ ಬಲಿಯಾಗಿತ್ತು ಶೂಲದ ಹಸಿವು ಹಿಂಗಿತ್ತು… ******************************

ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ Read Post »

ಕಾವ್ಯಯಾನ

ಇರುವುದನ್ನು ಕಾಣಲಾಗದೆ

ಕವಿತೆ ರಜಿಯಾ ಕೆ ಭಾವಿಕಟ್ಟಿ ನಿಮ್ಮಂತೆ ಇರಲಾಗದೆ ನನ್ನಂತೆ ನಾನುಇರಲಾಗದೆ.ಪರರ ಚಿಂತೆಗೆ ಚಡಪಡಿಸುತಿರೆಮನದ ದುಗುಢ ಇಮ್ಮಡಿಯಾಗುತಲಿ.ದಿನದೂಡುವಂತಾಗಿದೆ. ಇರುವುದನ್ನು ಇಲ್ಲದಂತೆ ಕಂಡು ಇಲ್ಲದನ್ನುಇರುವುದೆಂಬ ಭಾವದಲಿ ಬದುಕು ಬರುಡಾಗಲುಸಿದ್ಧಸ್ಥವಾಗುತಲಿ ದೂರವೇ ನಿಂತು ದಡ ಸೇರಲುಆತುರದ ದೋಣಿ ತವಕಿಸುತಿದೆ. ಜಗದೊಡಲಲಿ ತೆನೆ ಚಿಗುರಿದ ಕ್ಷಣದಲಿಉತ್ತವರು ಯಾರೋ ಬಿತ್ತವರೂ ಯಾರೋಉತ್ತಮರನು ಹುಡುಕುವ ಬರದಲಿ ಮಧ್ಯಸ್ಥಉಳಿದವನೇ ಉಳ್ಳವನಾಗುವ ಇದ್ದವ ಇಲ್ಲದವನಾದ . ಪರಮ ವೈರಿಯನು ಗುರುವೆಂದು ತಿಳಿದವಮುಂದಾದ ಅವಸಾನಕೆ ವಶವಾಗಿ ಮತಿ ಇನವನಾದಒಳಿತಿಗಾಗಿ ಹೊರಟು ಕೆಡಕುಗಳು ಬಲೆಗೆಅವನೇ ವರವಾದ ದುರಂತಗಳ ಸೆಲೆಗೆ ಬದುಕಾದ. ಸಿರಿಗಾಗಿ ಸಮರಗೈದು ಸಂಧಾನದಲಿ ಪಶುವಾದಧನಕನವನು ದೂರಮಾಡಿ ದಯೇಯಿಂದ ಅವಬುದ್ಧನಾದ ಬದುಕಿನ ಉದ್ದಕೂ ಹೆಸರಾದಮತಿಗೆಟ್ಟ ಅಂಗುಲಿಯ ಪಾಲಿಗೆ ದೈವವಾದ ಅಂದವನು ತೆರೆದಿಟ್ಟು ಆಸೆಗಳನು ತೆರೆದಿಟ್ಟುಕೂಡಿಟ್ಟ ಹೊಸತನದ ಕನಸುಗಳನು ಹೊರಬಿಟ್ಟುಬಂಡರಿಗೆ ಲಜ್ಜೆಗೆಟ್ಟು ಸೂಗಿನ ಕವಚಕ್ಕೆ ನಗಾರಿಯಬಿಗಿದಿಟ್ಟು ಸರಿತೂಕದವನೆನಲು ಸಮ್ಮತಕೆ ಸಲ್ಲದವ.ಅವ ಇರುವುದನ್ನು ಕಾಣಲಾಗದವ . ************************************

ಇರುವುದನ್ನು ಕಾಣಲಾಗದೆ Read Post »

ಇತರೆ

ಲೋಕಶಾಹಿರ ಅಣ್ಣಾಭಾವು ಸಾಠೆ

“ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ“ “ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 ಇವರ ಜಯಂತಿ. ಈ ವರ್ಷ ಜನ್ಮ ಶತಮಾನೋತ್ಸವ. ಈ ಸಂದರ್ಭದಲ್ಲಿ ಒಂದೆರಡು ಮಾತುಗಳು. ಕರ್ನಾಟಕ ಸೀಮೆಗೆ ಅಂಟಿಕೊಂಡ ಸಾಂಗಲಿ ಜಿಲ್ಲೆಯ ವಾಳವಾ ತಾಲೂಕಿನ ವಾಟೆಗಾಂವ ಎಂಬ ಗ್ರಾಮದಲ್ಲಿ 1 ಅಗಸ್ಟ 1920 ರಂದು ಮಾಂಗ ಎಂಬ ಶೋಷಿತ ಜಾತಿಯಲ್ಲಿ ಜನಿಸಿದರು. ಬಾಲ್ಯದ ಹೆಸರು ತುಕಾರಾಮ. ತಂದೆ ಬಾವುರಾವ ಸಾಠೆ, ಕುಟುಂಬದ ಪರಿಸ್ಥಿತಿ ಅತ್ಯಂತ ನಾಜೂಕು. ಶಾಲೆ ಕಲಿತು ದೊಡ್ಡವನಾಗುವ ಆಸೆಯಲ್ಲಿ ಶಾಲೆಗೆ ಹೋದರೆ ಜಾತಿ ಎಂಬ ಕ್ರೂರ ರಾಕ್ಷಸ. ಒಂದು ದಿನ ಪೂರ್ಣ ಹೋದ ಬಳಿಕ ಮರುದಿನ ಮಧ್ಯಾಹ್ನ ಶಾಲೆಯಿಂದ ದೂರಾದರು. ಮುಂದೆ 1932 ರಲ್ಲಿ ಉದರ ನಿರ್ವಹಣೆಗಾಗಿ ತಂದೆ ಜೊತೆ ಮುಂಬಯಿ ಸೇರಿದರು. ಇದ್ದಲಿ ಆರಿಸುವುದು, ಕಸಗೂಡಿಸುವದು ಹಿಡಿದು ಸಿಕ್ಕ ಸಣ್ಣ-ಪುಟ್ಟ ಎಲ್ಲ ಕೆಲಸವನ್ನು ಮಾಡುತಿದ್ದರು. ಬಿಡುವಿನ ಸಮಯದಲ್ಲಿ ಸ್ವಪ್ರಯತ್ನದಿಂದ ಅಕ್ಷರ ಜ್ಞಾನವನ್ನು ಕಲಿತರು. ಆಗಲೇ ಅವರಿಗೆ ಕಾರ್ಮಿಕರ ಕಷ್ಟದ, ದುಃಖದ ಬದುಕು ಅರಿವಾಯಿತು. ಮನದಲ್ಲಿ ಹೊತ್ತ ಕಿಡಿಯು ಕಾರ್ಮಿಕರ ಆಂದೋಲನದಲ್ಲಿ ಧುಮುಕುವಂತೆ ಮಾಡಿತು. 1936 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಕಾ. ಶ್ರೀಪಾದ ಡಾಂಗೆಯವರ ಪ್ರಭಾವದಿಂದಾಗಿ ಕಮ್ಯುನಿಸ್ಟ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿ ಕೆಲಸ ಮಾಡಿದರು. ತಂದೆಯ ಅವಸಾನದ ನಂತರ ಮನೆಯ ಜವಾಬ್ದಾರಿ ಇವರ ಹೆಗಲಿಗೆ ಬಂತು. ಆಗ ಮತ್ತೆ ತಮ್ಮೂರಿಗೆ ಬರಬೇಕಾಯಿತು. ಅಲ್ಲಿ ಬಂದು ಸಹೋದರನ ತಮಾಷಾ ಕಂಪನಿಯಲ್ಲಿ ಸೇರಿಕೊಂಡರು. ಇಲ್ಲಿ ಅವಗತವಾದ ತಮಾಷಾ ಕಲೆಯು ಮುಂದೆ ಅದನ್ನು ಪ್ರಸಿದ್ಧ ಲೋಕ ನಾಟ್ಯವನ್ನಾಗಿ ಮಾಡುವಲ್ಲಿ ಬಹಳಷ್ಟು ಸಹಾಯಕಾರಿ ಆಯಿತೆಂದು ಹೇಳಬಹುದು. ನಂತರ ಮತ್ತೆ ಮುಂಬಯಿಯನ್ನು ಸೇರಿದರು. ಈ ಸಲದ ಮುಂಬಯಿ ವಲಸೆ ಅವರಲ್ಲಿ ಬಹಳಷ್ಟು ಬದಲಾವಣೆ ತಂದಿತು. ಕಾರಣ ಮ್ಯಾಕ್ಸಿಮ್ ಗಾರ್ಕಿಯ ಸಾಹಿತ್ಯ ಓದಲು ದೊರೆಯಿತು. ಅವರ ವಿಶ್ವಮಾನ್ಯ ಬರಹಕ್ಕೆ ಸ್ಪೂರ್ತಿ ಸಿಕ್ಕಿದ್ದು ಇಲ್ಲಿಂದಲೆ. ಮುಂದೆ ಅವರ ಭೇಟಿ ಖ್ಯಾತ ಲೋಕಶಾಹೀರ ‘ಅಮರ ಶೇಖ’ರ ಜೊತೆ ಆಯಿತು. ಇವರಲ್ಲಿದ್ದ ಅಗಾಧ ಪ್ರತಿಭೆ ಕಂಡು ಇವರಿಗೂ ಸಹ ಲೋಕಶಾಹಿರ ಎಂದು ಕರೆಯತೊಡಗಿದರು. ಸಾಹಿತಿಗಿಂತ ಶಾಹಿರ ಎಂದು ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಸ್ಫೂರ್ತಿದಾಯಕ ಮಾತು, ನಟನೆ, ಗಾಯನ ಒಟ್ಟಿನಲ್ಲಿ ಇವರ ಬಹುಮುಖಿ ಪ್ರತಿಭೆಗೆ ಜನರ ಬಹಳಷ್ಟು ಮೆಚ್ಚುಗೆ ಇತ್ತು. ಮರಾಠಿಯ ಪೋವಾಡಾ ಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ ಮೊದಲಿಗರು. ಇದರಿಂದ ಕಮ್ಯುನಿಸ್ಟ್ ವಿಚಾರಗಳನ್ನು ಸಹ ಪ್ರಚಾರ ಮಾಡಿದವರಿವರು. ಈ ಕಾರಣದಿಂದಲೆ ಇವರನ್ನು ಕಮ್ಯುನಿಸ್ಟ್ ಶಾಹಿರ ಎಂದು ಕರೆಯುತ್ತಾರೆ. ಇವರು ರಚಿಸಿದ ಸ್ಟಾಲಿನ್‌ಗ್ರಾಡ್ ಪೋವಾಡಾ ಬಹಳ ಪ್ರಸಿದ್ಧವಾದದ್ದು. ರಶಿಯಾದಲ್ಲಿ ಸಹ ಪೋವಾಡಾ ಸಾದರ ಪಡಿಸಿ ರಶಿಯಾದ ಅಧ್ಯಕ್ಷರಿಂದ ಮೆಚ್ಚುಗೆ ಪಡೆದಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಾರ್ಕ್ಸ್‌ವಾದಿ ವಿಚಾರಗಳ ಅವಿಸ್ಕಾರವನ್ನು ಈ ಪೋವಾಡಾ ಮತ್ತು ಲೋಕನಾಟ್ಯಗಳಿಂದ ಮಾಡಿದರು. ಜನಪದ ಶೈಲಿಯಲ್ಲಿ ತತ್ವಜ್ಞಾನ ಮತ್ತು ಸೌಮ್ಯವಾದ ವಿಚಾರಗಳನ್ನು ಜನರ ಮುಂದೆ ಇಟ್ಟರು. 1942 ರ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯ ಸಹಭಾಗದ ಕಾರಣ ಬ್ರಿಟಿಶ್ ಸರಕಾರವು ಇವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತು. ಹೇಗೋ ಮುಂಬಯಿ ಬಂದು ತಪ್ಪಿಸಿಕೊಂಡರು. ಆದರೂ ಚಳುವಳಿಯಲ್ಲಿ ಸಕ್ರಿಯತೆ ಇತ್ತು. ಮಹಾತ್ಮಾ ಫುಲೆ, ಶಾಹು ಮಹಾರಾಜ ಹಾಗು ಡಾ. ಬಾಬಾಸಾಹೇಬ ಅಂಬೇಡ್ಕರರ ದಮನಿತ ಮತ್ತು ಶೋಷಿತ ವರ್ಗದ ಏಳಿಗೆಯ ಚಳುವಳಿಯನ್ನು ಅತ್ಯಂತ ಸಮರ್ಥರಾಗಿ ಮುನ್ನಡೆಸಿಕೊಂಡು ಬಂದರು. ಇವರು ಪ್ರಖರ ಅಂಬೇಡ್ಕರವಾದಿ; ಅಷ್ಟೆ ಮಾರ್ಕ್ಸವಾದಿ ಕೂಡ. ಅಂಬೇಡ್ಕರವಾದ ಮತ್ತು ಮಾರ್ಕ್ಸವಾದವನ್ನು ಸಮನ್ವಯ ಸಾಧಿಸಿದ ಏಕೈಕರು. ದೇಶಕ್ಕೆ ಸ್ವತಂತ್ರ ದೊರೆತ ತಕ್ಷಣ 1947 ಅಗಸ್ಟ 16 ರಂದು “ಈ ಸ್ವಾತಂತ್ರ ಸುಳ್ಳು, ಜನರು ಹಸಿವೆಯಿಂದ ಕಂಗಾಲಾಗಿದ್ದಾರೆ..” “ಮೊದಲು ಜನರ ಹೊಟ್ಟೆ ತುಂಬಿಸಿ” ಎಂಬ ಘೋಷಣೆ ಕೊಡುತ್ತಾ ಶಿವಾಜಿ ಪಾರ್ಕ್ ನಲ್ಲಿ ಧರಣಿ ಕುಳಿತರು. ಮಹಾಭಯಂಕರ ಮಳೆ ಸುರಿಯುತ್ತಿದ್ದರೂ ಹಿಂದೆ ಸರಿಯಲಿಲ್ಲ. ಅದಲ್ಲದೆ ಗೋವಾ ಮುಕ್ತಿ ಸಂಗ್ರಾಮ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳುವಳಿಗಳಲ್ಲಿ ಮುಂಚೂಣಿಯರಾಗಿ ಕಾರ್ಯ ನಿರ್ವಹಿಸಿದರು. ಅಲ್ಪ ಶಿಕ್ಷಿತರಾದ ಇವರು ಸತತ ಚಿಂತನೆ ಮತ್ತು ವೈಶ್ವಿಕ ಕಾರ್ಯಗಳಿಂದ ಸಾಹಿತ್ಯಕ್ಕೆ ಬಹು ದೊಡ್ಡ ಕಾಣಿಕೆ ನೀಡಿದರು. ಇವರು ಬರೆದ ಸಾಹಿತ್ಯ ಲೋಕನಾಟ್ಯ-13, ನಾಟಕ –3, ಕಥಾ ಸಂಗ್ರಹ –13, ಕಾದಂಬರಿ- 35, ಪೋವಾಡ-15, ಪ್ರವಾಸ ವರ್ಣನೆ-1, ಚಿತ್ರಪಟ ಕಥೆ-7 ಇದಲ್ಲದೆ 100 ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಲಾವಣಿಗಳೆಂದು ಪ್ರಸಿದ್ಧವಾಗಿವೆ. ಇವರ ಸಾಹಿತ್ಯ ಜಾತಿ, ಧರ್ಮ ಬಿಟ್ಟು ಜಾಗತಿಕ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತದ್ದು. ಹಾಗಂತಲೆ ಅದು ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಅನುವಾದಗೊಂಡಿದೆ. ಮೌಢ್ಯದ ಸಾಮಾಜಿಕ ಚಿಂತನೆಯಲ್ಲಿ ಸಾಠೆಯವರ ಸಾಹಿತ್ಯ ಹರಿತವಾದ ಖಡ್ಗದಂತೆ ಪ್ರಹಾರ ಮಾಡುತ್ತದೆ. 1959 ರಲ್ಲಿ ಪ್ರಕಟಣೆಯಾದ ಫಕೀರಾ ಕಾದಂಬರಿಯು ಬಹಳ ಪ್ರಸಿದ್ಧವಾಯಿತು. ಅವರ ಫಕೀರಾ ಕಾದಂಬರಿ ಜೊತೆ ಇನ್ನು ಹಲವು ಸಾಹಿತ್ಯ ಕನ್ನಡಕ್ಕೂ ಸಹ ಅನುವಾದಗೊಂಡಿದೆ. ಸಾಠೆಯವರು ತಮ್ಮ ಸಾಹಿತ್ಯದಲ್ಲಿ ಸಮತೆ, ವ್ಯಾಸ್ತವ್ಯತೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ತಮ್ಮ ಸಾಹಿತ್ಯದ ಬಗ್ಗೆ ಹೇಳುತ್ತಾರೆ, “ನಾನು ಹೇಗೆ ಬದುಕುತ್ತೇನೆ, ಏನು ನೋಡುತ್ತೇನೆ, ಯಾವುದನ್ನು ಅನುಭವಿಸುತ್ತೇನೆ, ಅದನ್ನೆ ಬರೆಯುತ್ತೇನೆ. ನಾನು ಆಳ ನೀರಿನ ಕಪ್ಪೆ. ನನಗೆ ಕಲ್ಪನೆಯ ರೆಕ್ಕೆ ಹಚ್ಚಿ ಹಾರಲು ಬರುವದಿಲ್ಲ.” ಇದು ಅವರ ಲೇಖನದ ಹಿಂದಿನ ಸ್ಪಷ್ಟವಾದ ನಿಲುವು. “ನನಗೆ ಬದುಕಿನ ಮೇಲೆ ಬಹಳ ನಿಷ್ಠೆ. ನನಗೆ ಶ್ರಮಜೀವಿಗಳೆಂದರೆ ಬಹಳ ಇಷ್ಟ. ಅವರ ಶ್ರಮಶಕ್ತಿ ಅತ್ಯಂತ ಶ್ರೇಷ್ಠವಾದದ್ದು, ಅವರಿಂದಲೆ ಈ ಜಗತ್ತು ಮುನ್ನಡೆಯುತ್ತದೆ. ಅವರ ಪ್ರಯಾಸ ಮತ್ತು ಯಶಸ್ಸಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.” ಇದು ಅವರ ಶ್ರಮಿಕರ ಬಗೆಗಿನ ಗೌರವ ಕಂಡುಬರುತ್ತದೆ. ಅದಲ್ಲದೆ ಇವರ ಸಂಪೂರ್ಣ ಸಾಹಿತ್ಯದ ಕೇಂದ್ರ ಸ್ಥಾನ ಶ್ರಮಿಕರನ್ನೆ ಒಳಗೊಂಡಿದೆ. ಸಾಠೆಯವರ ಸಮರ ಅಜ್ಞಾನದ ಅಂಧಕಾರದಲ್ಲಿ ಮಲಗಿದ ಸಮಾಜದ ವಿರುದ್ಧದಲ್ಲಿತ್ತು. ಮೇಲ್ವರ್ಗದ ದಬ್ಬಾಳಿಕೆಯ ರೂಢಿ-ಪರಂಪರೆಗಳ ವಿರುದ್ಧದಲ್ಲಿತ್ತು. ಧರ್ಮದಲ್ಲಿದ್ದ ಅನಿಷ್ಠತೆಯೇ ದಮನಿತ ಮತ್ತು ಶೋಷಿತರನ್ನು ಗುಲಾಮರನ್ನಾಗಿಸಿತು ಎಂಬುದು ಅವರ ಭಾವನೆಯಾಗಿತ್ತು. ಅದಕ್ಕಾಗಿ ಅವರು ಹೇಳುತಿದ್ದರು, “ಅನಿಷ್ಠ ಧರ್ಮದ ಆಚರಣೆಯಿಂದ ಜನರನ್ನು ಹೀನರನ್ನಾಗಿ ಕಾಣುವದು ಧರ್ಮವಲ್ಲ, ಅದೊಂದು ರೋಗವಾಗಿದೆ.” ಅದಕ್ಕೆ ಅವರು, “ಓ.. ಮನುಜನೆ ನೀನು ಗುಲಾಮನಲ್ಲ; ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಎಂದು ಹೇಳುತಿದ್ದರು. ದೇಶದಲ್ಲಿಯ ಜಾತಿ ಉಚ್ಛಾಟನೆ ಮಾಡದ ಹೊರತು ದೇಶದ ಪ್ರಗತಿ ಅಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ “ಜಾತಿ ವಾಸ್ತವ್ಯವಿದ್ದರೆ ಬಡತನ ಕೃತ್ರಿಮ. ಬಡತನ ನಿರ್ಮೂಲನೆ ಮಾಡುವದು ಸಹಜ. ಆದರೆ ಜಾತಿ ನಷ್ಟ ಮಾಡುವದು ನಮ್ಮೆಲ್ಲರ ಕೆಲಸವಾಗಿದೆ…” ಎಂದು ಹೇಳಿ ಜಾತಿ ನಿರ್ಮೂಲನೆ ಮಾಡಲು ಕರೆ ಕೊಟ್ಟರು. ಆದರೆ ದುಃಖವೆಂದರೆ ಜಾತಿಭೇದವು ಇವರನ್ನು ಕೊನೆಯವರೆಗೆ ಕಾಡಿತು. ಅವರು ಸ್ವತಃ ಸಾಲ ಮಾಡಿ “ಫಕೀರಾ” ಚಲನಚಿತ್ರವನ್ನು ಅದ್ಭುತವಾಗಿ ನಿರ್ಮಿಸಿದರು. ಯಶವಂತರಾವ ಚವ್ಹಾಣರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಜಾತಿ ಅಡ್ಡಬಂದು ಚಲನಚಿತ್ರ ನಡೆಯಲಿಲ್ಲ. ಸಾಲ ತೀರಲಿಲ್ಲ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾದವು. ಇದರ ನೈರಾಶ್ಯದಲ್ಲಿ ಆರೋಗ್ಯವು ಹದಗೆಟ್ಟಿತು. ಹೀಗಾಗಿ ಕೇವಲ 49ನೇ ವಯಸ್ಸಿನಲ್ಲಿ ಅಂದರೆ 1969 ರಲ್ಲಿ ತೀರಿಕೊಂಡರು. ವಿಪರ್ಯಾಸ ನೋಡಿ, ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದ ಇವರನ್ನು ಮತ್ತೆ ನಾವು ಒಂದು ಜಾತಿಗೆ ಮಾತ್ರ ಮೀಸಲಿಟ್ಟಿದ್ದೇವೆ. ಇವರು ಅಲ್ಪ ಶಿಕ್ಷಿತರಾಗಿ ಮಾಡಿದ ಕ್ರಾಂತಿ ನಮ್ಮೆಲ್ಲರಿಗೆ ಪ್ರೇರಣೆ ಎಂದು ತಿಳಿದು ನಮ್ಮೆಲ್ಲರಿಗೆ ದೇಶದಲ್ಲಿ ಸೌಹಾರ್ದತೆ ತರಬೇಕಿದೆ. ಇಂದು ನಾವೆಲ್ಲಾ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ಉನ್ನತದ ಮಟ್ಟದ ಹಾಯಟೆಕ್ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ ನಮ್ಮ ವಿಚಾರಗಳು ಮಾತ್ರ ಹಾಯಟೆಕ್ ಆಗುತ್ತಿಲ್ಲ. ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾದ ಇಂದು ನಾವು ಇಂತಹ ಮಹಾನ್ ವಿಚಾರವಂತರ ಆದರ್ಶಗಳನ್ನು ಅರಿತು ನಡೆಯೋಣ. ಶ್ರಮ ಜೀವಿಗಳ ಬೆನ್ನಿಗೆ ದೃಢವಾಗಿ ನಿಲ್ಲೋಣ. ವಿಶ್ವ ಮನುಕುಲದ ಏಳಿಗೆಗಾಗಿ ಐಕ್ಯರಾಗೋಣ. ಎಲ್ಲಕ್ಕಿಂತ ಮಹತ್ವದ್ದು ಭೇದಭಾವವನ್ನು ಮರೆಮಾಚದ ಹೊರತು ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಾಳೋಣ. ಸಾಠೆಯವರ ವಿಚಾರ ಮತ್ತು ಕಾರ್ಯಕ್ಕೆ ಸಾಟಿಯಿಲ್ಲ. ನಮನಗಳು… ********** ಮಲಿಕಜಾನ ಶೇಖ

ಲೋಕಶಾಹಿರ ಅಣ್ಣಾಭಾವು ಸಾಠೆ Read Post »

ವಾರದ ಕವಿತೆ

ವಾರದ ಕವಿತೆ

ಕಿಟಕಿ -ಗೋಡೆ ವಾರದ ಕವಿತೆ(ಪ್ರತಿ ಶುಕ್ರವಾರ) ವಸುಂಧರಾ ಕದಲೂರು ನಾನೊಂದು ಕಿಟಕಿ; ಮುಚ್ಚಿಯೇಇದ್ದೇನೆ ಶತಮಾನಗಳಿಂದಗತಕಾಲದ ಗಾಳಿ ಒಳಗೆಸುಳಿದಾಡುತ್ತಾ ಕತ್ತಲ ಘಮಲಿನಅಮಲಲಿ ಉರುಳಾಡುತ್ತಾಎದ್ದೆದ್ದು ಕುಣಿಯುವಆತ್ಮಗಳೂ ಅಸ್ಥಿಪಂಜರಗಳೂನನ್ನೊಳಗಿವೆ. ವಿಶಾಲ ಬಿಳಲುಗಳ ಆಲದಮರವೊಂದು ಟಿಸಿಲೊಡೆದುತೊಗಟೆ ಕಳಚಿಕೊಳ್ಳದೆ ಬೇರೂರಿಮುಚ್ಚಿದ ಕಿಟಕಿಯಾಚೆಸ್ವಚ್ಛ ಗಾಳಿಗೆ ಚಿಗುರು ಚಿಗಿಸಿಹಕ್ಕಿ ಗೂಡಿಗೆ ಟೊಂಗೆ ಚಾಚಿದೆ.ಒಂದೊಂದು ಟೊಂಗೆಗೂಗೂಡು. ಗೂಡೊಳಗೆ ಕಾವುಕೂತ ಹಸಿ ಬಾಣಂತಿ ಹಕ್ಕಿಕಿಟಕಿ ಕುಟುಕಿದ ಸದ್ದು;ಚಾಚಿದ ಟೊಂಗೆಯೋಚೈತನ್ಯದ ಹಕ್ಕಿಯೋ ತಿಳಿಯದು.ಪ್ರತೀ ಶಬ್ದ ಮಾಡುವ ಹಕ್ಕಿಗೂಅದೇನು ರಾಗವೋಸುಮ್ಮಗೆ ಬೀಸುವ ಗಾಳಿಗೆತಲೆದೂಗುವ ಟೊಂಗೆಗಳಿಗೂಅದೇನು ಹೊಸ ರಂಗೋ ನಾನು ಮಾತ್ರ ತೆರೆಯುವುದಿಲ್ಲ. ಶತಮಾನಗಳಿಂದ ಮುಚ್ಚಿದಕಿಟಕಿ. ನನ್ನಾಚೆ ನನಗೆ ಅರಿವಾಗದೇಒಳಗಿನ ಗವ್ವುಗತ್ತಲೆಕಮಟು ವಾಸನೆ ಕತ್ತು ಹಿಸುಕಿ ಕುತ್ತುತರುತ್ತಿವೆ. ಕಾಲದ ಅಲೆ ಉರುಳಿತನ್ನೊಡನೆ ತಂದಿಟ್ಟ ಮರಳುತನಕ್ಕೆಈಗ ಕಿವೂಡೂ ಕುರುಡೂಸಾತ್ ಕೊಡುತ್ತಾ ಕೂಡುತ್ತಿವೆಜತನ ಮಾಡುತ್ತಾ ಗತವನ್ನು. ನನ್ನ ಚೌಕಟ್ಟಿನಾಚೆ ನಿಂತಗಟ್ಟಿ ಗೋಡೆ ಆಗಾಗ್ಗೆ ಅಪಾರವೇದನೆಯಲಿ ಮುಖಕಿವುಚಿ ನರಳಿ ನುಡಿಯುತ್ತದೆಯಾರೋ ಈಗಷ್ಟೆ ಕೆತ್ತಿಹೋದರೆಂದು ಮೊಳೆ ಜಡಿದುಭಾರಗಳನು ತೂಗುಹಾಕಿಭಾವನೆಗಳನು ಹೇರಿದರೆಂದುಆಕ್ರಮಿಸಿಕೊಂಡ ಆಕ್ರಂದನದದನಿಯಲಿ.. ನೆಟ್ಟಗೆ ನಿಂತ ಪಾಪದ ಗಟ್ಟಿಗೋಡೆ ; ಹೊಸ ಬಣ್ಣ ಬಳಿದರೂಬದಲಾಗದ ಹಳೆಯ ಹಣೆಬರಹ.ನವೀನತೆಗೆ ಒಡೆಯಬೇಕು, ಕುಟ್ಚಿಕೆಡವಿ ಪುಡಿಗಟ್ಟಬೇಕು. ಅಸ್ತಿತ್ವದನಿರಾಕರಣೆ ಆಗಲೇಬೇಕು. ನನಗಾದರೂ ಬಾಗಿಲುಗಳಿವೆ ತೆರೆಯಬಹುದುಒಮ್ಮೆ ಜಗ್ಗನೆ ಹೊಳೆವ ಮಿಂಚುಪಕ್ಕನೆ ಹಾರುವ ಹಕ್ಕಿ ಸಾಲನುನಾನಾದರೂ ಕಾಣಬಹುದು.ನಿಧಾನದ ಆಲಾಪಕ್ಕೆ ತೆರೆದುತಲೆತೂಗಬಹುದು.ಯಾರಾದರು ಒಮ್ಮೆನನ್ನೊಳಗೆ ಹಣಕಿ ಈ ಓಲಾಡುವಆತ್ಮಗಳನೂ ಕಿಲುಬುಗಟ್ಟಿದಅಸ್ಥಿಪಂಜರಗಳನೂ ಒಮ್ಮೆ ಜಾಡಿಸಿಓಡಿಸಿ ಬಿಡಬಹುದು. ಗೋಡೆ ಕೆಡವಲುವಿಳಾಸ ಹುಡುಕಿ ಬರುವವರುಬಣ್ಣ ಮಾಸಿ ಸಡಿಲಾದ ನನ್ನಬಾಗಿಲುಗಳನುದೂಡಲಿ ಪರದೆ ಹರಿದು ಹೊಸಜೇಡ ಮತ್ತೆ ಬಲೆ ಹೆಣೆಯದಂತೆಮಾಡಲಿ ಎಳೆ ಬಿಸಿಲುಹೊಸ ಗಾಳಿ ತುಂಬಿ ಬರಲಿ ನಾನು ತೆರೆದುಕೊಳ್ಳುವ ಕಿಟಕಿ ವಸುಂಧರಾ ಕದಲೂರು

ವಾರದ ಕವಿತೆ Read Post »

ಇತರೆ

ಚಂದ್ರ ಮತ್ತು ನಾನು…

ಮೊದಲ ಕವಿತೆಯ ರೋಮಾಂಚನ ಫಾಲ್ಗುಣ ಗೌಡ ಅಚವೆ. ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವ‌ನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು ಚಂದಿರನ ಇರುವಿಕೆ ನನ್ನ ಸುತ್ತಲೇ ಇದೆಯೇನೋ ಎನ್ನುವಂತೆ ಅವನ ಪ್ರಭಾವಲಯ ನನ್ನೊಳಗೂ ಹೊರಗೂ ಹರಡಿಕೊಂಡಿತು.ಜೇನವರ್ಣದ ಬೆಳದಿಂಗಳು ಸುಧೆಯಂತೆ ಇಳಿಯುವಾಗ ನನ್ನ ಹೃದಯದ ಬಾಗಿಲಿನಿಂದ ಒಳಸೇರಿ ಸ್ವಾತಿ ಹನಿ ಚಿಪ್ಪು ಸೇರಿದಂತೆ ಭಾಸವಾಯಿತು.ಆ ಬಿಳ್ಳಿ ಮಿಂಚು ಬಂದದ್ದೇ ತಡ ಅಂಗಳದ ಹಾಲು ಬೆಳಕು, ಅರಳಿಯೇ ಇರುವ ಅಬ್ಬಲಿ ಹೂಗಳು, ನಾಳೆ ಅರಳುವ ಖುಷಿಯಿಂದ ನಿದ್ದೆಗೆ ಜಾರದ ದಾಸಾಳದ ಹೂಗಳು,ಚಂದಿರನ ಮರೆಮಾಡಿದ ತೆಂಗು ಗರಿಗಳು, ಅಸಂಖ್ಯ ನಕ್ಷತ್ರಗಳು ಮಾಯ.. ನನಗೆ ಚಂದ್ರ ಮಾತ್ರ ಕಾಣುತ್ತಿದ್ದುದು ಅಚ್ಚರಿಯೆನಿಸಿತು.ನನ್ನ ಎದೆ ಬಯಲಿಗೆ ಬಂದ ಚಂದ್ರ ನನ್ನೊಳಗನ್ನು ಸೇರಿಯಾಗಿತ್ತು.ದೂರದ ಬಯಲಲ್ಲಿ ಇಡೀ ಬೆಟ್ಟ ಕಾಡು ಪ್ರದೇಶಗಳ ಒಂದು ಮಾಡುವಂತೆ ಟಿಟ್ಟಿಭ ಟಿsssಟೀsssಟಿರ್ಯಾsssss ಕೂಗಿದರೂ ನನ್ನ ಕಿವಿಗೆ ಪೂರ್ತಿಯಾಗಿ ತಲುಪಲಿಲ್ಲ..                   ಇದು ಆಗಷ್ಟೇ ಪಿಯುಸಿ ಮುಗಿಸಿ ಡಿಗ್ರಿಗೆ ಕಾಲಿಟ್ಟ ಹೊತ್ತು.ಹರೆಯ ಗರಿಗೆದರಿ ಮುಗಿಲಿಗೆ ಹಾರುವ ಕಾಲ.. ಏನನ್ನು, ಯಾರನ್ನು ನೋಡಿದರೂ ಚಂದವಾಗಿ ಕಾಣುವ ವಯಸ್ಸು. ನನ್ನೂರಿನಿಂದ ನಮ್ಮದೇ ಕ್ಲಾಸಿಗೆ ಬರುವ ಹುಡುಗಿಯಲ್ಲಿ ಕ್ರಷ್ ಆಗಿತ್ತು. ಚಂದಿರನಂತೆ ನಗುವ ಅವಳ ಕಣ್ಣುಗಳು ನನ್ನಲ್ಲಿ ಕಾವ್ಯ ಭಾವನೆಯನ್ನು ಸ್ಪುರಿಸುತ್ತಿದ್ದವು.ಅವಳನ್ನು ಚಂದಿರನಿಗೆ ಹೋಲಿಸಿ ತಕ್ಷಣ ಪಟ್ಟಿ ತಗೆದುಕೊಂಡು ಬಂದು ‘ ಚಂದ್ರ ಮತ್ತು ನಾನು’ ಪದ್ಯ ಬರೆದೆ.    “ನನ್ನ ಭಾವನೆಯ ಚಂದ್ರನಿಗೆ ಮೋಡ ಮುಸುಕಿದರೆ ನನಗೆ ಖಗ್ರಾಸ! ಯಾಕೆಂದರೆ, ಆತ ಬೆಳಗುವವ ನಾನು ಬೆಳಗಲ್ಪಡುವವ ತಾರೆಗಳನ್ನು ನಾನು ಲಕ್ಷಿಸುವುದಿಲ್ಲ ಅವುಗಳಲ್ಲಿ ಹೊಳಪಿದ್ದರೂ ಬೆಳಗುವ ಶಕ್ತಿಯಿಲ್ಲ. ನನ್ನ ಚಂದಿರ ನಕ್ಕರೆ ನನಗೆ ಬೆಳದಿಂಗಳು ಇಲ್ಲದಿರೆ ಬರೀ ತಂಗಳು! ಅವನಿದ್ದರೆ ಅವ‌ನಿಂದಲೇ ಪ್ರೀತಿ ಕಡಲ ಮೊರೆತ ಕೆದಕುತ್ತದೆ ಕಾವ್ಯ ಭಾವನೆಯ ಅವನ ಹಾಲು ಬಣ್ಣವ ಬೆಳಗುಗೆನ್ನೆಯ ನೋಡಿ ಹಾರುತ್ತದೆ ಮನಸ್ಸು ಅವನೆತ್ತರಕ್ಕೆ! ಆತ ಅಮವಾಸ್ಯೆಯತ್ತ ಸಾಗಿದರೆ ಆ ಮಂದ ಬೆಳಕಲಿ ಮೆಲು ಗಾಳಿಗೆ ಅಲುಗುವ ಆಶಾಲತೆಗಳ ಹಸಿರು ಮಾಯ ಬೀಸುವ ತಂಗಾಳಿಯಲಿ ನಾ ತೂರುತ್ತೇನೆ ನೋವ. ಒಮ್ಮೊಮ್ಮೆ ಯೋಚಿಸುತ್ತೇನೆ, ಅವನಿದ್ದರೆ ನನ್ನ ಕಾವ್ಯ ಹಾಡೆಷ್ಟು ರಮ್ಯ ಅವನಿಲ್ಲದಿರೆ ಬರೀ ಶೂನ್ಯ! ಈ ಮೊದಲ ಕವಿತೆ ‘ಕರ್ಮವೀರ’ ಪತ್ರಿಕೆಯಲ್ಲಿ ‘ಖಗ್ರಾಸ’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ನಂತರ ತಾಲ್ಲೂಕಿನ, ಜಿಲ್ಲೆಯ ಬಹುತೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸುವಂತಾಯಿತು.ಆಗ ನಾನು ‘ಕರ್ಮವೀರ’ದ ಓದುಗನಾಗಿದ್ದೆ.ನಂತರದ ದಿನಗಳಲ್ಲಿ ಕೆ.ಎಸ್.ನ, ಜಿ.ಎಸ್.ಎಸ್,ಲಂಕೇಶ್, ಅಡಿಗ,ಜಯಂತ ಕಾಯ್ಕಿಣಿ, ಕೆ.ವಿ.ತಿರುಮಲೇಶ,ಎಸ್.ಮಂಜುನಾಥ ಅಂತವರ ಪದ್ಯಗಳು ನನ್ನನ್ನು ಪ್ರಭಾವಿಸಿದವು.ಸದ್ಯ ಜಯಂತ ಕಾಯ್ಕಿಣಿ ನನ್ನ ಕಾವ್ಯ ಗುರು.. ಕ್ರೈಸ್ಟ್ ಕಾಲೇಜು, ಸಂಚಯ ಬಹುಮಾನಗಳ ಜೊತೆ ಇತ್ತೀಚೆಗೆ ಒಂದು ಸಿನಿಮಾಕ್ಕೆ ಹಾಡು ಬರೆದಿರುವುದು ಮೊದಲು ಬರೆದ ‘ಚಂದ್ರ ಮತ್ತು ನಾನು’ ಪದ್ಯ ನಡೆಸಿಕೊಂಡು ಬಂದ ರೀತಿಯೇ ಅಗಿದೆ.ನನ್ನ ಕಾವ್ಯದ ಪಯಣವನ್ನು ನೆನಪಿಸಿದ ‘ಸಂಗಾತಿ’ಗೆ ಧನ್ಯವಾದಗಳು. ********************************************

ಚಂದ್ರ ಮತ್ತು ನಾನು… Read Post »

ಇತರೆ

ಪುಟ್ಟಿ ಅನ್ನೊ ಮೊದಲ ಪದ್ಯ

ಮೊದಲ ಕವಿತೆಯ ರೋಮಾಂಚನ ಚೈತ್ರಾ ಶಿವಯೋಗಿಮಠ ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ ಸಣ್ಣ ಪದ್ಯಗಳು ಹಾಗೂ ಪುಸ್ತಕಗಳಲ್ಲಿ ಓದುತ್ತಿದ್ದ ಮಕ್ಕಳ ಪದ್ಯಗಳನ್ನ ನೋಡಿ ನಾನೂ ಯಾಕೆ ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡಬಾರದು ಅನ್ನಿಸಿತು. ಒಂದಷ್ಟು ಸಣ್ಣ ಸಣ್ಣ ಪದ್ಯಗಳನ್ನ ಒಂದು ನೋಟ್ಬುಕ್ ನಲ್ಲಿ ಬರೆದೆ. ಅಜ್ಜಿ, ಪುಟ್ಟಿ, ನಾಯಿ ಬೆಕ್ಕು ಅಂತೆಲ್ಲ ಕಣ್ಣಿಗೆ ಕಂಡದ್ದು, ಮನಸ್ಸಿಗೆ ಅನ್ನಿಸಿದ್ದನ್ನ ಅಕ್ಷರ ರೂಪಕ್ಕಿಳಿಸಿದೆ. ಬರೆದದ್ದನ್ನ ನನ್ನ ಹಿರಿಯ ಅಣ್ಣನಿಗೆ ತೋರಿಸಿ ಹೇಗಿದೆ ಓದಿ ಹೇಳು ಅಂದೆ. ಸಣ್ಣವಳು ಬರೆದಿದ್ದಾಳೆ ಅಂತ ಹುರಿದುಂಬಿಸಲು, ಅಣ್ಣ ನನ್ನ ಒಂದೆರಡು ಪದ್ಯಗಳನ್ನ ಆಯ್ದು ಇವು ಚೆನ್ನಾಗಿವೆ ಹೀಗೆ ಬರಿತಿರು ಅಂತ ಪ್ರೋತ್ಸಾಹಿಸಿದ. ಜೊತೆಗೆ ಇವನ್ನ ತರಂಗಕ್ಕೆ ಯಾಕೆ ಕಳುಹಿಸಬಾರದು ಅನ್ನೋ ಯೋಚನೆಯನ್ನೂ ಹುಟ್ಟು ಹಾಕಿದ. ತಡ ಮಾಡದೆ ಪದ್ಯಗಳನ್ನ ಒಂದು ಬಿಳಿಹಾಳೆಯಲ್ಲಿ ದುಂಡಗಿನ ಅಕ್ಷರಗಳಲ್ಲಿ ಬರೆದು ಲಕೋಟೆ ಒಳಗೆ ಹಾಕಿ, ವಿಳಾಸ ಬರೆದು ಅಂಚೆ ಕಳುಹಿಸಿಯೇ ಬಿಟ್ಟೆ. ನಂತರ ಅದರ ಬಗ್ಗೆ ಮರೆತೂ ಹೋಯಿತು. ಒಂದಿನ ತರಂಗದಿಂದ ಒಂದು ಮನಿ ಆರ್ಡರ್ ಬಂತು ೧೨೫ ರೂಪಾಯಿಯದು, ನಿಮ್ಮ ಪದ್ಯ ಪ್ರಕಟವಾಗಿದೆ ಇಂತಹ ವಾರದ ತರಂಗವನ್ನ ಗಮನಿಸಿ ಅಂತ ಮೆಸೇಜ್ ಇತ್ತು. ನನಗೆ ಆದ ಸಂಭ್ರಮ ಅಷ್ಟಿಷ್ಟಲ್ಲ. “ಪುಟ್ಟಿ” ಅನ್ನೋ ಪದ್ಯ ಪ್ರಕಟವಾಗಿತ್ತು, ಜೊತೆಗೆ ಸಂಭಾವನೆ ಬೇರೆ. ಕೊನೆಯ ಸಾಲನ್ನ ಕೊಂಚ ಬದಲಾಯಿಸಿ ಪ್ರಕಟಿಸಿದ್ದರೂ ಬೇಸರವೆನಿಸಲಿಲ್ಲ. ಮುಂದೆ ಬರೆಯೋದನ್ನ ಬಹುತೇಕ ಕಡಿಮೆ ಮಾಡಿದೆ‌. ವಿದ್ಯಾಭ್ಯಾಸದ ಒತ್ತಡದಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಮುಂದೆ ಪಿ.ಯುಸಿ ಓದೋವಾಗ ಮತ್ತೊಮ್ಮೆ ಹೊಸದಾಗಿ ಪದ್ಯವನ್ನ ಬರೆದೆ. ಯಾರಿಗಾದರೂ ತೋರಿಸಿ ಹೇಗಿದೆ ಅಂತ ಕೇಳಲೇ ಬೇಕೆನಿಸಿತು‌. ನಾನು ಓದುತ್ತಿದ್ದದು ಶೇಷಾದ್ರಿಪುರಂ ಕಾಲೇಜಿನಲ್ಲಿ. ಆಗ ಸ್ನಾತಕೋತ್ತರ/ಪಿ.ಎಚ್.ಡಿ ವಿಭಾಗದಲ್ಲಿ ಡಾ. ದೊಡ್ಡರಂಗೇಗೌಡರು ವಿಭಾಗದ ಮುಖ್ಯಸ್ಥರಾಗಿದ್ದರು. ಒಂದಿನ ಗೆಳತಿಯನ್ನ ಕರೆದುಕೊಂಡು ಅವರ ಚೇಂಬರ್ ಗೆ ಹೋದೆ. ಅಲ್ಲಲ್ಲಿ ಬಿಳಿಯ ಕೂದಲು, ಕನ್ನಡಕ, ಜುಬ್ಬಾ ಪೈಜಾಮಾ ಮೇಲೊಂದು ಖಾದಿ ವೇಸ್ಟ್ ಕೋಟ್ ಧರಿಸಿ ಬಗಲಿಗೆ ಬಟ್ಟೆಯ ಕೈಚೀಲವನ್ನ ಹಾಕಿಕೊಂಡ ಅವರನ್ನ ನೋಡಿದ ಕೂಡಲೆ ಆಗೆಲ್ಲಾ ಕವಿಗಳ ಬಗ್ಗೆ ಕೇಳಿದ ವಿವರಣೆ ಸಾಕ್ಷಾತ್ಕರಿಸಿದಂತಾಯ್ತು. ಇನ್ನೇನು ಹೊರಡೋಕೆ ಅಣಿಯಾಗಿದ್ದರು. ನಮ್ಮನ್ನ ನೋಡಿ, ಅವರನ್ನೇ ಭೇಟಿಯಾಗೋಕೆ ಬಂದಿದ್ದು ಅಂತ ತಿಳಿದು ಬಹಳ ಸೌಜನ್ಯದಿಂದಲೇ ಬರಮಾಡಿಕೊಂಡು ಕುಳಿತುಕೊಳ್ಳೋಕೆ ಹೇಳಿದರು. ಅವರನ್ನ ನೋಡಿ ನನಗೆ ಪದ್ಯಗಳನ್ನ ಹೇಗೆ ತೋರಿಸಲಿ ಅನ್ನೋ ಕಸಿವಿಸಿಯ ಜೊತೆ ಭಯವೂ ಆಗಿ ನಾಲಿಗೆ ಒಣಗಿತು. ಏನೇನೋ ಮಾತಾಡಿ ಕೊನೆಗೆ ವಿಷಯಕ್ಕೆ ಬಂದೆ. “ಸರ್ ನಾನು ನಿಮ್ಮ ಬಳಿ ನನ್ನ ಪದ್ಯಗಳನ್ನ…..‌” ಅಂತ ರಾಗ ಎಳೆದೆ. ಅವರು ನಸುನಕ್ಕು “ಅದಕ್ಯಾಕೆ ಹೆದರ್ತೀರಿ. ತೋರಿಸಿ ನೋಡೋಣ” ಅಂದ್ರು. ನಾನು ಬಹಳಷ್ಟು ಅಳುಕಿನಿಂದಲೇ ಪುಸ್ತಕವನ್ನ ಅವರ ಕೈಗಿಟ್ಟೆ. ಸ್ವಲ್ಪ ಹೊತ್ತು ಅವರು ಓದಿ. “ಒಳ್ಳೆಯ ಪ್ರಯತ್ನ ರೀ. ಆದರೆ ನೀವು ಬಹಳಷ್ಟು ಇವನ್ನ ಟಚ್ ಅಪ್ ಮಾಡಬೇಕು. ಕೊಂಚ ಅರೆ ಬರೆ ಬೆಂದ ಹಾಗೆ ಅನ್ನಿಸ್ತವೆ.” ಅಂತ ಹೇಳಿ ಪದ್ಯವನ್ನ ಹೇಗೆ ಬರಿಬೇಕು, ಪ್ರಾಸಗಳನ್ನ ಹೇಗೆ ಸರಾಗವಾಗಿ ಬಳಸಬೇಕು ಅನ್ನೋದನ್ನ ಬಹಳಷ್ಟು ಹೊತ್ತು ಹೇಳಿದರು. ಮುಖ್ಯವಾಗಿ ಕವಿ ಒಳಗಣ್ಣ ತೆರೆದಿರಬೇಕು, ಸುತ್ತಲೂ ನಡೆಯುವುದನ್ನ ಸೂಕ್ಷ್ಮವಾಗಿ ಅವಲೋಕಿಸಬೇಕು, ಎಂದು ಹೇಳಿ ಒಂದು ಸಣ್ಣ ಪ್ರಾಸವನ್ನ ಬರೆದು ತೋರಿಸಿದರು: ಬಂದೆ ನೀನು ಕಂಡೆ ನಾನು ನಮ್ಮ ಬಾಳು ಹಾಲು ಜೇನು ಇಷ್ಟೇ! ಸರಾಗವಾಗಿ ಸುರಿಯಬೇಕು ಪದಗಳನ್ನ ಅಂತ ಹೇಳಿ ನನಗೆ ಏನೂ ತಿಳಿಯದ ವಿಷಯಗಳನ್ನ ಮಗುವಿಗೆ ಕಲಿಸುವ ಹಾಗೆ ತಿಳಿಸಿಕೊಟ್ಟರು. ಒಂದು ರೀತಿಯ ಹೊಸ ಪ್ರಪಂಚ ಕಂಡಂತಹ ಅನುಭವದ ಜೊತೆಗೆ ನನ್ನಷ್ಟಕ್ಕೆ ನಾನು, “ಚೇ ನಾನು ಬರೆದರೆ ಚೆನ್ನಾಗಿ ಬರಿಯಬೇಕು‌. ಭಾವನೆಗಳನ್ನ ಪದಗಳ ರೂಪದಲ್ಲಿ ಸರಿಯಾಗಿ ವ್ಯಕ್ತ ಪಡಿಸೋಕೆ ಪ್ರಯತ್ನ ಮಾಡಬೇಕು” ಎಂದು ಮನಸಲ್ಲೇ ಅಂದ್ಕೊಂಡೆ. ಈ ಘಟನೆ ನನ್ನ ಮನದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ***************************

ಪುಟ್ಟಿ ಅನ್ನೊ ಮೊದಲ ಪದ್ಯ Read Post »

You cannot copy content of this page

Scroll to Top