ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ

ಗಾಳೇರ ಬಾತ್-01

The Indian Railways wants you to party at Vadodara's stations ...

ಮೊದಲ ಬಾರಿ ರಾಜಧಾನಿಗೆ…..

ಇವತ್ತಿನ ನನ್ನ present situation ನೋಡಿದರೆ ರಾಜಧಾನಿಯ ನನ್ನ ಮೊದಲ ಭೇಟಿ, ಹೀಗೆ ಇತ್ತು ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದು ಅಷ್ಟೊಂದು ಭಯಾನಕರೂ ಅಲ್ಲ. ಅದು ಅಷ್ಟೊಂದು ಆನಂದಮಯನೂ ಅಲ್ಲ. ಅದೊಂತರ ವಿಶಿಷ್ಟವಾದ ಬೇಟಿ ಎನ್ನಬಹುದು. ಆದರೆ ಈ ತರದ ಬೇಟಿ ಯಾವ ಮಕ್ಕಳಿಗೂ ಆಗಬಾರದು ಎನ್ನುವುದು ನನ್ನ ಈ ಲೇಖನದ ಆಕಾಂಕ್ಷೆ ಆಗಿದೆ.

ನನ್ನ ನೆನಪಿನ ಬುತ್ತಿ ಬಿಚ್ಚಿ ಒಮ್ಮೆ ಹೊರಳಿ ನೋಡಿದಾಗ, ಬೆಂಗಳೂರಿನ ಬೇಟಿ ಏಕೋ ನಿಮ್ಮೆದುರಿಗೆ ಹಂಚಿಕೊಳ್ಳಬೇಕೆನಿಸಿತು. ನಾನು ಆಗ ಸರಿಯಾಗಿ ಪಿಯುಸಿಯನ್ನು ಓದುತ್ತಿದ್ದೆ. ಅದು ಹರಪನಹಳ್ಳಿಯ ಉಜ್ಜೈನಿ ಶ್ರೀ ಜಗದ್ಗುರು ಮಹಾವಿದ್ಯಾಲಯದಲ್ಲಿ. ಕಾಲೇಜಿನಲ್ಲಿ ಬೆರಳು ಮಾಡಿ ತೋರಿಸುವ ವಿದ್ಯಾವಂತರ ಪಟ್ಟಿಯಲ್ಲಿ ನಾನು ಕೂಡ ಒಬ್ಬನು ಎಂದು ಅಂದುಕೊಂಡಿರಲಿಲ್ಲ. ಎಲ್ಲಾ ಗೆಳೆಯರು, ಲೆಕ್ಚರ್ ರು ನಿರ್ಧರಿಸಿ ಆ ಪಟ್ಟ ಕಟ್ಟಿ ಬಿಡುತ್ತಿದ್ದರು. ಇಂದಿಗೂ ಕೂಡ ನನಗೆ ಆ ಪಟ್ಟ ಕಟ್ಟುತ್ತಿದ್ದಾರೆ; ನಾನು ಆ ಪಟ್ಟಕ್ಕೆ ಯೋಗ್ಯನಲ್ಲ ಎಂದು ನನ್ನ ಮನಸ್ಸು ಮಾತ್ರ ಹೇಳುತ್ತದೆ. ಇದನ್ನು ಕೇಳುವವರ್ಯಾರು? ಇರ್ಲಿ ಬಿಡಿ; ವಿಚಾರಕ್ಕೆ ಬರುತೀನಿ. ನಾನು ಆಗ ಪಿಯುಸಿ ಓದುತ್ತಿರುವಾಗ ನಮ್ಮ ಕಾಲೇಜಿನಲ್ಲಿ ಶೈಕ್ಷಣಿಕ ಪ್ರವಾಸ ಏರ್ಪಡಿಸಿದ್ದರು. ನಾನು ಪ್ರವಾಸಕ್ಕೆ ಹೋಗಲು ನನ್ನ ತಂದೆ ತಾಯಿಯನ್ನು ಕೇಳಲು ಊರಿಗೆ ಹೋದೆ. ಊರಿಗೆ ಹೋಗಿ ನನ್ನ ತಂದೆಗೆ ಕೇಳಿದೆ! “ಅಪ್ಪ ಕಾಲೇಜಿನಲ್ಲಿ ಟೂರ್ ಕರ್ಕೊಂಡು ಹೋಗ್ತಿದ್ದಾರೆ, ನಾನು ಹೋಗ್ತೀನಿ ಅಂತ”. ಆಗ ನಮ್ಮ ತಂದೆ ನಮ್ಮ ಮಾವನಿಗೆ ಕೇಳಿದ. ನನ್ನ ಮಾವ ಎಂದರೆ ನಮ್ಮ ಸೋದರತ್ತೆಯ ಗಂಡ. ಅವರು ಪ್ರೈಮರಿ ಸ್ಕೂಲ್ ಟೀಚರ್. ಅವರಾಡಿದ ಆ ಮಾತು ನನ್ನ ಅಪ್ಪನಿಗೆ ಮತ್ತು ಅವರಿಗೆ ಇಂದಿಗೆ ಅದು ನೆನಪಿದೆಯೋ ಇಲ್ಲವೋ ಗೊತ್ತಿಲ್ಲ! ಆದರೆ ಆ ಮಾತು ನನ್ನ life ನಲ್ಲಿ ಇಂದಿಗೂ ಪ್ರತಿಧ್ವನಿಸುತ್ತಲೇ ಇರುತ್ತದೆ. ಅದೇನಪ್ಪಾ ಅಂತ ಕೇಳ್ತೀರಾ! ಕೇಳಿ ಪರವಾಗಿಲ್ಲ ,ಏಕೆಂದರೆ ಈ ಮಾತು ನೀವು ಮುಂದೆ ನಿಮ್ಮ ಮಕ್ಕಳಿಗೆ ಯಾವತ್ತು ಹೇಳಬಾರದೆಂದು ನಾನು ಈ ಲೇಖನ ಬರೆಯುತ್ತಿದ್ದೇನೆ. ನನ್ನ ಅಪ್ಪ “ಏನ್ ಮಾವ, ಮೂಗ ಕಾಲೇಜಲ್ಲಿ ಟೂರ್ ಗೆ ಹೋಗುತ್ತಾನಂತೆ ಕಳಿಸಬೇಕಾ!” ಆಗ ನನ್ನ ಮಾವ “ಹಾಗೇನಿಲ್ಲ ಮಾರಾಯ, ನಾವೆಲ್ಲಾ ಕಾಲೇಜಲ್ಲಿ ಟೂರ್ ಹೋಗಿ ಮೇಷ್ಟ್ರಾಗಿ ವೇನು? ಮುಂದಿನ ವರ್ಷ ಹೋದ್ರೆ ನಡೆಯುತ್ತೆದೆ ತಗೋ”. ನಮ್ಮ ಹಗರಿಬೊಮ್ಮನಹಳ್ಳಿ ಪಟ್ಟಣ ಬಿಟ್ಟರೆ ಬೇರೆ ಯಾವ ಚಿಕ್ಕ ಹಳ್ಳಿಗೂ ಪ್ರಯಾಣ ಬೆಳೆಸದ ನನ್ನಪ್ಪನಿಗೆ ಈ ಮಾತು ಸಾಕಿತ್ತೇನು. “ಬೇಡಪ ಮುಂದಿನ ವರ್ಷ ಹೋಗಬಹುದಂತೆಲ್ಲಾ, ಈ ವರ್ಷ ಹೋದ್ರೆ ಮುಂದಿನ ವರ್ಷನೂ ಹೋಗಬೇಕಂತಿಲ್ಲ ! ಅದಲ್ಲದೆ ಟೂರ್ ಏನು compulsory ಅಲ್ವಂತೆಲ್ಲಾ!” ಎಂದಾಗ ನನ್ನ ಕನಸಿಗೆ ಒಂದು ಗಳಿಗೆ ಬೆಂಕಿ ಇಟ್ಟಂಗಾಯಿತು. ಸುಧಾರಿಸಿಕೊಂಡು ಹರಪನಹಳ್ಳಿಗೆ ಬಂದು ರೂಮ್ ಲಿ ಯೋಚಿಸುತ್ತಾ ಕೂತಿದ್ದೆ.ಆಗ ನನಗೆ ನೆನಪಿಗೆ ಬಂದಿದ್ದು ನನ್ನ ಗೆಳೆಯನೊಬ್ಬ ಬೆಂಗಳೂರಿನಲ್ಲಿ ಇದ್ದಿದ್ದು, ಅವನು ಯಾವುದೋ ಹೋಟೆಲಿನಲ್ಲಿ ಕೆಲಸ ಮಾಡುತ್ತಾನೆ ಎಂದು ಕೇಳಲು ಪಟ್ಟಿದ್ದೆ. ಹಾಗೋ ಹೀಗೂ ಮಾಡಿ ಅವನ ನಂಬರನ್ನು collect ಮಾಡಿ ಅವನಿಗೆ ಫೋನಾಯಿಸಿದೆ. “ಮಗಾ, ಕಾಲೇಜಲ್ಲಿ ಟೂರ್ ಕರ್ಕೊಂಡು ಹೋಗ್ತಾರೆ ಕಣೋ, ಮನೆಯಲ್ಲಿ ಟೂರ್ ಗೆ ಕಳಿಸ್ತಾ ಇಲ್ಲ. 15days ಕೆಲಸ ಇದ್ರೆ ನೋಡು. ನನಗೆ ಟೂರ್ಗೆ ದುಡ್ಡು ಬೇಕಿದೆ” ಈ ಮಾತಿಗೆ ಸ್ಪಂದಿಸಿದ ನನ್ನ ಗೆಳೆಯ ಆಯ್ತು ಬಾ ಎಂದು ಹೇಳಿದ. ಆಗ ನಾನು ಬೆಂಗಳೂರಿಗೆ ಹೋಗಲು ನನ್ನ ಹತ್ತಿರ ಹಣವಿರಲಿಲ್ಲ. ಹೇಗೆ ಆರೆಂಜ್ ಮಾಡುವುದು ಎಂದು ಚಿಂತಿತನಾದ ನನಗೆ ಆಗ ತೋಚಿದ್ದು. ನನ್ನಪ್ಪ ಕೊಡಿಸಿದ ಟ್ರಂಕ್ ಮತ್ತು ಪುಸ್ತಕ! ಇವುಗಳನ್ನು ಗುಜುರಿಗೆ ಹಾಕಿದರೆ ಬೆಂಗಳೂರಿಗೆ ಹೋಗಲು ಟ್ರೈನ್ ಚಾರ್ಜ್ ಆಗುತ್ತದೆ ಎಂದು ಎನಿಸಿದೆ. ಟ್ರಂಕನ್ನು ಕಲ್ಲಿನಿಂದ ಕುಟ್ಟಿ ನುಜ್ಜುಗುಜ್ಜು ಮಾಡಿ ಗುಜರಿಗೆ ಹಾಕಿದೆ. ಅದರಿಂದ ಸಿಕ್ಕಿದ್ದು ಕೇವಲ 58 ರೂಪಾಯಿ. ಅದನ್ನು ಕಿಸೆಯಲ್ಲಿಟ್ಟುಕೊಂಡು, ಬಸ್ಸಿಗೆ ಹೋದರೆ ಬಸ್ ಚಾರ್ಜ್ ಜಾಸ್ತಿಯಾಗುತ್ತದೆ ಎಂದು ಲಾರಿಗೆ ಹತ್ತಿದೆ. ಹರಪನಹಳ್ಳಿಯಿಂದ ಹರಿಹರಕ್ಕೆ ಆಗ ನಾನು ಲಾರಿಗೆ ಕೊಟ್ಟಿದ್ದು ಹತ್ತು ರೂಪಾಯಿ, ಘಟನೆ ಇಂದಿಗೂ ನನ್ನ ಬದುಕಿನಲ್ಲಿ ಅಚ್ಚಳಿಯದೆ ಉಳಿದಿದೆ. ಇನ್ನು ಉಳಿದಿದ್ದು 48 ರೂಪಾಯಿ. ಆಗಲೇ ಅಷ್ಟು ಹೊತ್ತಿಗೆ ಸೂರ್ಯ ನೆತ್ತಿಯ ಮೇಲಿಂದ ಕೆಳಗಿಳಿಯುತ್ತಿದ್ದ. ನನ್ನ ಹೊಟ್ಟೆ ಹಸಿವಿನಿಂದ ವಿಲವಿಲ ಅನ್ನುತ್ತಿತ್ತು. ಕೈಯಲ್ಲಿದ್ದ ಬಿಡಿಗಾಸು ಟ್ರೈನ್ ಚಾರ್ಜ್ ಗಿತ್ತು. ಹಸಿವು ಯಾವುದನ್ನು ಕೇಳುವುದಿಲ್ಲ. ಆದ್ದರಿಂದ ಅಲ್ಲೇ ಪುಟ್ಬಾತ್ ಅಲ್ಲಿದ್ದ, ಒಂದು ಎಗ್ ರೈಸ್ ಅಂಗಡಿಯಲ್ಲಿ ಆಪರೇಟ್ ತಿಂದೆ. ಇನ್ನು ಉಳಿದಿದ್ದು 38 ರೂಪಾಯಿ. ಇನ್ನು ನನಗೆ ಸರಿಯಾಗಿ ನೆನಪಿದೆ ಆಗ ಹರಿಹರ ದಿಂದ ಬೆಂಗಳೂರಿಗೆ 47 ರೂಪಾಯಿ ಟ್ರೈನ್ ಟಿಕೆಟ್ ಇತ್ತು. ನನ್ನಲ್ಲಿದ್ದ 38ರೂಪಾಯಿ. ಏನ್ ಮಾಡುವುದು ಎಂದು ನನ್ನ ಸ್ನೇಹಿತನಿಗೆ ಫೋನ್ ಹಚ್ಚಿದೆ. ಅವನು ಒಂದು ಬಿಟ್ಟಿ ಸಲಹೆ ನೀಡಿದ. “ಮಗ ಜನರಲ್ ಬೋಗಿಯೊಳಗೆ ಹತ್ತಿಗೋ, ಅಲ್ಲಿ ಯಾರೂ ಬರೋದಿಲ್ಲ ಚೆಕ್ ಮಾಡಲಿಕ್ಕೆ” ಈ ಮಾತೊಂದೇ ಸಾಕಾಗಿತ್ತು ನನಗೆ. ನಾನು ಅಲ್ಲಿಯವರೆಗೂ ಟ್ರೈನನ್ನು ಯಾವತ್ತೂ ನೋಡಿರಲಿಲ್ಲ. ಬೆಂಗಳೂರು ಯಾವ ಇದೆ ದಿಕ್ಕಿಗೆ ಬರುತ್ತದೆ ಎಂಬ ಊಹೆಯೂ ಕೂಡ ನನಗಿರಲಿಲ್ಲ. ಕಿಕ್ಕಿರಿದ ಜನ, ಇಷ್ಟೊಂದು ಜನ ನಾನು ನೋಡಿದ್ದು ನಮ್ಮ ಊರಿನ ಜಾತ್ರೆಯಲ್ಲಿ. ನನಗೆ ಆಶ್ಚರ್ಯ ಕುತೂಹಲ ಎರಡು ಆಗುತ್ತಿತ್ತು. ಏಕೆಂದರೆ ನಾನು ಅಲ್ಲಿವರೆಗೆ ನೋಡಿದ್ದು ರೈಲನ್ನು ಪೇಪರ್ನಲ್ಲಿ ಟಿವಿಯಲ್ಲಿ. ಈಗ ಸ್ವತಃ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇನೆ ಎಂಬ ರೋಮಾಂಚನ ನನ್ನದಾಗಿರಲಿಲ್ಲ. ಯಾಕೆಂದರೆ ನನ್ನ ಪ್ರಯಾಣದ ಸ್ಥಿತಿ ಕಂಡರೆ ನಿಮಗೆ ತಿಳಿಯದೆ ಇರದು.

ರಾತ್ರಿ ಸರಿಯಾಗಿ 9:30 ಗಡಿಯನ್ನು ದಾಟಿ ಗಡಿಯಾರ ಮುನ್ನುಗ್ಗುತ್ತಿತ್ತು. ಯಾರೋ ಒಬ್ಬರು ಬೆಂಗಳೂರಿಗೆ ಹೊರಡಲು ಟಿಕೆಟ್ ತಗೊಂಡರು. ನಾನು ಆಗ ಇವರ ಹಿಂದೆ ಹೋದರೆ ನಾನು ಬೆಂಗಳೂರು ತಲುಪಬಹುದು ಎಂದು ಅವರು ಹೋದ ಕಡೆಯಲ್ಲೆಲ್ಲ ಹೋಗುತ್ತಿದ್ದೆ. ಅವರಿಗೆ ಯಾವುದೇ ರೀತಿಯ ಅನುಮಾನ ಬರದಹಾಗೆ ಅವರ ಹಿಂದೆ ಹಿಂದೆಯೇ ಸುತ್ತುತ್ತಿದ್ದೆ. ಕೊನೆಗೆ ರೈಲುಗಾಡಿ ಬಂದಾಗ ಅವರು ಹತ್ತಿದ ಬೋಗಿಯಲ್ಲಿ ಹತ್ತಿ ಗೆಳೆಯ ಹೇಳಿದಾಗೆ ಸೀಟಿನ ಅಡಿಯಲ್ಲಿ ಮಲಗಿದೆ. ರೈಲು ಯಾವಾಗ ಮತ್ತೆ ಚೆಲುವಾಯಿತೋ, ಯಾವ ಯಾವ ಪಟ್ಟಣಗಳನ್ನು ಹಾದುಹೋಯಿತೋ ಒಂದು ತಿಳಿಯಲಿಲ್ಲ. ಅಷ್ಟೊಂದು ಜನಗಳ ಮಧ್ಯೆ ಅದು ಯಾವಾಗ ನಿದ್ರೆ ದೇವತೆ ಆಕ್ರಮಿಸಿದ್ದಳೋ ಗೊತ್ತೆ ಆಗಲಿಲ್ಲ. ಪುನಃ ಕಣ್ಣು ತೆರೆಯುವಷ್ಟರಲ್ಲಿ ಜನಗಳು ತಾನು ಮುಂದು ನಾನು ಮುಂದು ಎಂದು ನುಗ್ಗುತ್ತ ಕೆಳಗಿಳಿಯುತಿದ್ದರು. ಯಾರನ್ನೋ ಕೇಳಿದೆ ಇದು ಬೆಂಗಳೂರಾ ಸರ್ ಅಂತ. ಹೌದಪ್ಪ ನೀನು ಎಲ್ಲಿ ಹೋಗಬೇಕು ಅಂತ ಕೇಳಿದರು. ಆಗ ನನಗೆ ನೆನಪಾಗಿದ್ದು ನನ್ನ ಗೆಳೆಯ . ಅವನಿಗೆ ಫೋನ್ ಮಾಡಲು ಬರೆದಿಟ್ಟು ಕೊಂಡ ಅವನ‌ ನಂಬರನ್ನು ಕಿಸೆಯಲ್ಲಿ ಹುಡುಕಿದೆ. ಅದು ನಾನು ಮಲಗಿದ ಬೋಗಿಯಲ್ಲಿಯೇ ಉದುರಿ ಹೋಗಿದ್ದು ನನಗೆ ಗೊತ್ತೇ ಆಗಲಿಲ್ಲ. ಆಗ ನನಗೆ ದಿಕ್ಕೇ ತೋಚದಾಯ್ತು. ಎಲ್ಲರೂ ಇಳಿದ ಅದೇ ಜಾಗದಲ್ಲಿ ನಾನು ಇಳಿದೆ. ಚಿಕ್ಕ ಪಟ್ಟಣವನ್ನು ನೋಡದ ನಾನು ಬೃಹತ್ ಬೆಂಗಳೂರು ನಗರವನ್ನು ನೋಡಿ ನಿಬ್ಬೆರಗಾಗಿದ್ದೆ. ಎಲ್ಲಿ ನೋಡಿದರೂ ಕಿಕ್ಕಿರಿದ ಜನ. ಆದರೆ ಒಬ್ಬರಿಗೊಬ್ಬರು ಸಂಬಂಧವಿಲ್ಲದಂತೆ ಓಡಾಡುತ್ತಿದ್ದಾರೆ. ಈಗಲೂ ಹಾಗೇನೇ ಓಡಾಡುತ್ತಿದ್ದಾರೆ, ಯಾಕೆ ಹೀಗೆ ಓಡಾಡುತ್ತಿದ್ದಾರೆ ಎನ್ನುವುದು ಈಗಲೂ ಕೂಡ ನನಗೆ ಬೆಂಗಳೂರಿನ ಜನರ ಬದುಕು ಒಗಟಾಗಿ ಉಳಿದಿದೆ. ಕಿಸೆಯಲ್ಲಿ ಕೈ ಹಾಕಿದೆ. 38 ರೂಪಾಯಿ ಇತ್ತು. ನನಗೆ ಆ ವಯಸ್ಸಿನಲ್ಲಿ newspaper ಓದುವುದು ಒಂದು ಚಟವಾಗಿ ಬಿಟ್ಟಿತ್ತು. ಎರಡು ರೂಪಾಯಿ ಕೊಟ್ಟು ಪ್ರಜಾವಾಣಿ ಪತ್ರಿಕೆ ತೆಗೆದುಕೊಂಡು. ಸಿಕ್ಕಸಿಕ್ಕ ಬೆಂಗಳೂರಿನ ದಾರಿಯುದ್ದಕ್ಕೂ ನಡೆದುಕೊಂಡು ಹೋದೆ. ಅಲ್ಲಲ್ಲಿ ಸಿಗುವ ಪಾರ್ಕುಗಳಲ್ಲಿ ಸ್ವಲ್ಪ ಸ್ವಲ್ಪ ವಿಶ್ರಾಂತಿ ಮಾಡಿ ಪೇಪರ್ ಅಲ್ಲಿರುವ ವಿಚಾರಗಳನ್ನು ಓದುತ್ತಾ ಟೈಮ್ ಪಾಸು ಮಾಡಿದೆ. ಉಳಿದ ದುಡ್ಡಲ್ಲಿ ಆ ದಿನದ ನನ್ನ ಊಟ-ಉಪಚಾರ ವಾಯಿತು. ಇನ್ನು ಕೈಯಲ್ಲಿ ಕಾಸಿಲ್ಲ. ಮಲಗಲು ಮನೆಯಿಲ್ಲ. ನನಗೆ ಆಗಿನ್ನೂ 16 ವರ್ಷ. ಬೆಂಗಳೂರಿನಲ್ಲಿ ನೆಂಟರಿಲ್ಲ, ಗೆಳೆಯರಿಲ್ಲ. ಸೂರ್ಯ ನೋಡಿದರೆ ಆಗಲೇ ಮನೆ ಸೇರಿದ್ದ. ಏನು ಮಾಡುವುದೆಂದು ತೋಚದೆ ಪುನಃ ರೈಲ್ವೆ ಸ್ಟೇಷನ್ ಹತ್ತಿರ ಬಂದೆ. ಮತ್ತೆ ಊರಿಗೆ ಹೋಗೋಣ ಎಂದರೆ ಟ್ರೈನ್ ಆಗಲೇ ಹೊರಟಾಗಿತ್ತು. ಆ ರಾತ್ರಿ ಹೇಗೆ ಕಳೆಯುವುದೆಂದು ನಾನು ಚಿಂತಿಸುತ್ತಾ ಕಂಡಕಂಡ ಒಂಟಿ ಬೆಂಚಿನ ಮೇಲೆ ಕೂತು ಕಾಲಹರಣ ಮಾಡಿದೆ. ರಾತ್ರಿ ಹನ್ನೆರಡರ ಸಮಯ ಪೊಲೀಸ್ ಪೇದೆಯೊಬ್ಬ ಇಲ್ಲಿ ಏನು ಮಾಡುತ್ತಿದ್ದೀಯಾ ಹೊರಡು ಎಂದು ತನ್ನ ಲಾಟಿಯಾ ರುಚಿಯನ್ನು ತೋರಿಸಿದ. ಆ ಕತ್ತಲೆಯಲ್ಲಿ ಪುನಃ ಬೇರೊಂದು ದಾರಿ ಹಿಡಿದು ಸಾಗಿದೆ. ಅದೊಂದು ಯಾವುದೋ ಸರ್ಕಾರಿ ಬಂಗಲೆ, ಅಲ್ಲಿ ಒಂದು ದೊಡ್ಡದಾದ ಕಾಂಪೌಂಡ್. ಆ ಕಾಂಪೌಂಡ್ ಒಳಗೆ ಹಾರಿ, ಕಾಂಪೌಂಡ್ ಬದಿಯಲ್ಲೇ ಸೊಳ್ಳೆಗಳ ಜೊತೆಗೆ ನನ್ನ ಆ ದಿನದ ಬೆಂಗಳೂರಿನ ರಾತ್ರಿ ಕಳೆದೆ. ಆಗಲಿಲ್ಲ ನಡೆದು ನಡೆದು ಸುಸ್ತಾಗಿದ್ದರಿಂದ, ಅದು ಯಾವಾಗ ನಿದ್ರೆ ದೇವತೆ ಬಂದು ಆಕ್ರಮಿಸಿಕೊಂಡಳೋ ಗೊತ್ತೇ ಹಗಲಿಲ್ಲ. ಕಣ್ಣು ತೆರೆದು ನೋಡಿದಾಗ ಬೆಳಕರಿದಿತ್ತು. ಎದ್ದು ಕಣ್ಣುಜ್ಜಿಕೊಂಡು ಕಾಂಪೌಂಡ್ ಮೇಲೆ ಹತ್ತಿ ಕೂತೆ. ಏನು ಮಾಡುವುದೆಂದು ತೋಚದೆ ಇದ್ದಾಗ, ಒಬ್ಬ ಬ್ರೋಕರ್ ಬಂದು ಹೋಟೆಲಲ್ಲಿ ಕೆಲ್ಸ ಇದೆ ಕೆಲಸಕ್ಕೆ ಬರ್ತೀಯಾ ಎಂದು ಕೇಳಿದಾಗ ನನಗೆ ಆಗ ಆದ ಆನಂದ ಅಷ್ಟಿಷ್ಟಲ್ಲ. ಹಸಿವನ್ನು ತಾಳದೆ ನಾನು ಅವನ ಹಿಂದೆ ಹೆಜ್ಜೆ ಇಟ್ಟೆ……….

ಇಷ್ಟಾದ ಮೇಲೆ ನಾನು ದುಡಿದುಕೊಂಡು ಕಾಲೇಜಿಗೆ ಹೋಗಿ ಟೂರ್ ಹೋಗಿದ್ದೇನೆಂದು ಭಾವಿಸಿದ್ದರೇ ಅದು ನಿಮ್ಮ ತಪ್ಪು ಕಲ್ಪನೆ. ಮುಂದೇನಾಯಿತು ಎಂದು ನನ್ನ ಇನ್ನೊಂದು ಲೇಖನದಲ್ಲಿ ಹೇಳುತ್ತೇನೆ. ಈ ಲೇಖನ ನಿಮಗೆ ಅರ್ಥವಾದಲ್ಲಿ ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ನಂಬಿರುವೆ.

*********

ಮೂಗಪ್ಪ ಗಾಳೇರ

   

About The Author

5 thoughts on “ಗಾಳೇರ್ ಬಾತ್”

  1. Chethan Yadav

    ರೋಮಾಂಚನ ಕಾರಿ ಸಂಗತಿಗಳು ಬಹಳ ಇದೆ….. ಮೂಗಪ್ಪ ರವರೆ ತಮ್ಮಲ್ಲಿ ನನ್ನದೊಂದು ಮನವಿ ಈ ಎಲ್ಲಾ ವಿಷಯವನ್ನು ಸೇರಿಸಿ ಆದಷ್ಟು ಬೇಗ ಒಂದು ಪುಸ್ತಕ ರಚಿಸಿ…. ಅದರ ಒಂದು ಕಾಪಿ ದಯವಿಟ್ಟು ನನಗೆ ಕೊಡಿ ಅದು ಹಲವರಿಗೆ ಜೀವನದ ಅರ್ಥ ಕಲ್ಪಿಸಿ ಮಾರ್ಗದರ್ಶನ ಕೂಡ ಆಗಬಹುದು ಎಂಬುದು ನನ್ನ ಸಲಹೆ

    1. Mugappa galera

      ಖಂಡಿತ ಗೆಳೆಯ…. ನನ್ನ ಅಂಕಣ ಓದಿದ್ದಕ್ಕೆ ಧನ್ಯವಾದಗಳು ಚೇತನ್. ಪ್ರತಿದಿನ ಈ ಅಂಕಣಕ್ಕೆ ಬೇಟೆ ನೀಡಿ ಅಭಿಪ್ರಾಯ ತಿಳಿಸಿ.

  2. ನಮಸ್ಕಾರ ಸರ್…..ತುಂಬಾ ಆಪ್ತವಾದ ಬರಹ..ಹೀಗೆಯೇ ಬರೆಯುತ್ತಾ ಇರಿ ಸರ್

Leave a Reply

You cannot copy content of this page

Scroll to Top