ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಆರನೇ ಅದ್ಯಾಯ ಈ ಸಂಭಾಷಣೆ ಹತ್ತಾರು ಗಜಲ್ ಸಂಕಲನ ಹೊರ ತಂದಿರುವ ಒಬ್ಬರು ಖ್ಯಾತ ಗಜಲಕಾರರು ಮತ್ತು ಇನ್ನೊಬ್ಬರು ಅಷ್ಟಿಷ್ಟು ಹೆಸರು ಮಾಡುತ್ತಿರುವ ಗಜಲ್ ನಿಪುಣರ ನಡುವೆ ಒಮ್ಮೆ ನಡೆದ ಸಂಭಾಷಣೆ… “ಏನು ಸರ್ ಇದು ಗಜಲ್ ಅಂತೀರಾ, ಆದರೆ ಕಾಫಿಯಾ ರಧೀಪ್ ಏನು ಇಲ್ಲ… ಅದು ಹೇಗೆ ಇದು ಗಜಲ್ ಆಗುತ್ತೆ” “ಅದು ಹಾಗೆ ಗಜಲ್ ಆಗುತ್ತದೆ, ನನ್ನದು ಒಂಥರಾ ಮುಕ್ತ ಗಜಲ್” “ಅದು ಯಾವುದು ಸರ್ ಮುಕ್ತ ಗಜಲ್, ಹಾಗೂ ಒಂದು ವಿಧ ಇದೀಯಾ??? ಆದರೆ ನನ್ನ ಇಷ್ಟು ವರ್ಷಗಳ ಅಧ್ಯಯನದಲ್ಲಿ ಅಂತಹ ಒಂದು ವಿಧ ನಾನು ಕೇಳೇ ಇಲ್ವಲ್ಲ” “ಇರಬಹುದು, ಇಲ್ಲದೆಯೂ ಇರಬಹುದು… ಇದೊಂದು ತರಹ ನನ್ನ ವಿಶೇಷ ಗಜಲ್” “ಏನು ಸರ್ ಅಡ್ಡ ಗೋಡೆ ಮೇಲೆ ದೀಪ ಇಡೋದು ಅಂದರೆ ಇದೇನಾ…!!! ಗಜಲ್ ನಿಯಮ ಗುಣಲಕ್ಷಣಗಳು ಪಾಲನೆಯಾಗದ ಬರಹಕ್ಕೆ ವಿಶೇಷ ಮುಕ್ತ ಗಜಲ್ ಅಂತೀರಿ” “ಇದನ್ನು ಯಾರಿಗಾದರೂ ಹೊಸಬರಿಗೆ ಹೇಳಿ, ನನ್ನ ಅಂತಹ ದೊಡ್ಡ ಗಜಲಕಾರರಿಗೆ ಕೇಳುವ ಮಾತು ಇದಲ್ಲ” “ಅಂದರೆ ಜನಪ್ರಿಯರಾದ ಕೂಡಲೇ ನಿಯಮವೆಲ್ಲಾ ಗಾಳಿಗೆ ತೂರಿ ಹೇಗೆ ಬರೆದರೂ ನಡಿದೀತು ಎನ್ನುವುದು ನಿಮ್ಮ ನೀತಿನಾ?” “ನಿಮಗೆ ಹಾಗೆ ಅನಿಸಿದರೆ ಹಾಗೆ ಅಂದುಕೊಳ್ಳಿ ಪರವಾಗಿಲ್ಲ… ನಾನು ಅಷ್ಟು ಎಲ್ಲಾ ಇಲ್ಲದೇನೇ ಈ ಮಟ್ಟಕ್ಕೆ ಬೆಳೆದಿಲ್ಲ, ಎಷ್ಟೆಲ್ಲಾ ನನ್ನ ಅಭಿಮಾನಿಗಳು ಎದ್ದು ಬಿದ್ದು ಓದಿ ವಾವ್ ಸೂಪರ್ ಅಂತ ಇರಲಿಲ್ಲ” “ಖ್ಯಾತರಾದ ಮೇಲೆ ನೀವು ಮಾಡಿದೆಲ್ಲಾ ಸರಿ, ಬರೆದಿದ್ದು ಎಲ್ಲಾ ಸೂಪರ್ ಎನ್ನುವವರು ಇದ್ದದ್ದೇ ಬಿಡಿ” “ಓದುಗರಿಗೆ ಮುಖ್ಯ ಅದರ ವಿಷಯ ವಸ್ತು ಮತ್ತು ಅದನ್ನು ನಾವು ಭಾವಗಳಲ್ಲಿ ಅದ್ದಿ ತೆಗೆದು ಪ್ರಸ್ತುತಪಡಿಸುವ ರೀತಿ ಮಾತ್ರ… ಇವೆಲ್ಲಾ ನಿಮಗೆ ಗೊತ್ತಾಗಲ್ಲ, ಸುಮ್ಮನೆ ಎದ್ದು ಹೋಗಿ ತಲೆ ತಿನ್ನೋದು ಬಿಟ್ಟು” “ಓದುಗರಿಗೆ ಏನು ಮುಖ್ಯ ಅನ್ನುವ ನಿಮ್ಮ ಮಾತು ಸರಿ, ಆದರೆ ಓದುಗರಿಗೆ ನಿಯಮಗಳ ಬಗ್ಗೆ ಗೊತ್ತಿರಲ್ಲ… ಆದ್ದರಿಂದ ನೀವು ಗಜಲ್ ಅಂತ ಹಾದಿ ತಪ್ಪಿಸುವ ಬದಲು ಕವನ ಅಥವಾ ಪದ್ಯದ ಪ್ರಕಾರ ಅಂತ ಹೇಳಿ” “ನೋಡಪಾ ನಾನು ನಿಯಮಗಳನ್ನು ಒಪ್ಪಿಕೊಳ್ಳಲ್ಲ, ಆದರೆ ಲಕ್ಷಣಗಳನ್ನು ಮಾತ್ರ ಅನುಸರಿಸುವೆ… ಆದ್ದರಿಂದ ಗಜಲ್ ಚೌಕಟ್ಟು ಮತ್ತು ದ್ವಿಪದಿ ಅಲ್ಲೇ ಇದೆ ಅಲ್ವಾ” “ಹಾಗಾದರೆ ಅದು ದ್ವಿಪದಿಗಳು ಅಂತ ಹೇಳಿಕೊಳ್ಳಿ… ಉರ್ದುನಿಂದ ಬಂದ ಪರ್ಧಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಸಾಹಿತ್ಯದ ಎಲ್ಲಾ ಪ್ರಕಾರಗಳು ಒಂದಕ್ಕಿಂತ ಒಂದು ಉತ್ತಮವಾದುದೇ… ಇನ್ನೂ ನೀವು ಹೇಳುವ ಚೌಕಟ್ಟಿನಲ್ಲಿಯೇ ಪರ್ಧ ಕೂಡ ಬರುತ್ತೆ. ಅಷ್ಟು ಇದ್ದ ಮಾತ್ರಕ್ಕೆ ಅದು ಗಜಲ್ ಆದೀತೆ “ “ನೋಡಿ ನನಗೆ ಇಂತಹ ಪ್ರಶ್ನೆಗಳು ಇಷ್ಟ ಆಗಲ್ಲ, ಪಿತ್ತ ನೆತ್ತಿಗೇರಿಸಬೇಡಿ. ನಿಮಗೆ ಕವನ ಎನಿಸಿದರೆ ಕವನ, ಪರ್ಧ ಎನಿಸಿದರೆ ಪರ್ಧ ಅಂತಾನೇ ಅಂದುಕೊಳ್ಳಿ. ಅದರಿಂದ ನನಗೇನು ತೊಂದರೆ ಇಲ್ಲ” “ಏನು ಸರ್ ಹೀಗೆ ಹೇಳತೀರಾ, ನಿಮ್ಮನ್ನೇ ಅನುಸರಿಸುವ ನೂರಾರು ಹೊಸ ಗಜಲಕಾರರ ಕಥೆ ಹೇಗೆ” “ಅವೆಲ್ಲವೂ ನನಗೆ ಬೇಕಿಲ್ಲ, ಇನ್ನೂ ಬರತೀನಿ” ಈ ಸಂಭಾಷಣೆ ಕೇಳಿದ ನಂತರ ನಿಮಗೆ ಗೊತ್ತಾಗಿರುತ್ತೆ ಕೆಲವು ವಿಷಯಗಳು ಆದ್ದರಿಂದ ಇದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಯಾರನ್ನೇ ಒಬ್ಬರನ್ನು ಅನುಸರಿಸುವ ಬದಲು ಹತ್ತಾರು ಬೇರೆ ಬೇರೆ ಬರಹಗಾರರು ಬರೆದ ಕೃತಿಗಳ ಸತತ ಅಧ್ಯಯನ ಮಾತ್ರ ಯಾವುದೇ ಒಂದು ಸಾಹಿತ್ಯದ ಪ್ರಕಾರದ ಬಗ್ಗೆ ತಿಳಿದುಕೊಳ್ಳಲು ಅತಿ ಉಪಯುಕ್ತ. ಹೆಚ್ಚಿನ ಖ್ಯಾತನಾಮರು ಯಾರು ಆ ಬಗ್ಗೆ ಉಚಿತವಾಗಿ ತಿಳಿಸಿ ಕೊಡುವ ಕೆಲಸ ಮಾಡುವುದಿಲ್ಲ. ಪ್ರಸ್ತುತ ಹೆಚ್ಚಿನವರು ಯಾವುದಾದರೂ ಒಂದು ರೀತಿಯ ಪ್ರತಿಫಲ ಅಪೇಕ್ಷೆಯಲ್ಲಿ ಇರುವುದು ಬಹು ಬೇಸರಕರ ಸಂಗತಿ. ತನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡಿ ಸರ್ ಎಂದು ಹೋದ ಒಬ್ಬ ಉದಯನ್ಮೋಖ ಬರಹಗಾರನಿಗೆ ಒಬ್ಬ ದೊಡ್ಡ ಸಾಹಿತಿ ಕೇಳಿದ್ದು ಕೇವಲ ಹತ್ತು ಸಾವಿರ ಗೌರವಧನ ಮಾತ್ರ. ಒಂದು ಉತ್ತಮ ಗಜಲ್ ರೂಪಗೊಳ್ಳಲು ವಿಷಯ ವಸ್ತು ಮತ್ತು ಪ್ರಸ್ತುತಪಡಿಸುವ ರೀತಿಯೊಂದಿಗೆ ಅದರ ನಿಯಮಗಳು ಅಷ್ಟೇ ಮುಖ್ಯವಾಗಿರುತ್ತವೆ. ಯಾವುದೇ ಬರಹವಾದರೂ ಅದು ಖಂಡಿತವಾಗಿಯೂ ಆಯಾ ಸಾಹಿತ್ಯ ಪ್ರಕಾರದ ಗುಣಲಕ್ಷಣಗಳಿಗೆ ನಿಷ್ಠೆಯಿಂದ ಕೂಡಿದ್ದು ಅದಕ್ಕೆ ಬದ್ಧವಾಗಿ ಇರಬೇಕು. ಆ ಕ್ಷಣಕ್ಕೆ ಮತ್ತು ಕೆಲವರಿಗೆ ಚೆನ್ನಾಗಿ ಇದೆ ಎನಿಸಿದರೂ ದೀರ್ಘಕಾಲದಲ್ಲಿ ನಿಷ್ಠವಾಗಿರದ ಬರಹ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಯಾವುದೇ ವಿಧ ತೆಗೆದುಕೊಂಡರೂ ಸಹ ಪ್ರತಿಯೊಂದು ತನ್ನದೇ ಆದ ಲಕ್ಷಣಗಳನ್ನು ಹೊಂದಿದ್ದೂ ಅದರಿಂದಲೇ ಅದು ಇತರೆ ವಿಧಗಳಿಗಿಂತ ಪ್ರತ್ಯೇಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಅಸ್ತಿತ್ವ ಪಡೆದು ವಿಶೇಷ ಎನಿಸಿಕೊಳ್ಳುತ್ತದೆ, ಅಂತೆಯೇ ಗಜಲ್ ಸಹ… ******** ಬಸವರಾಜ ಕಾಸೆ

ಗಝಲ್ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ರಾಧೆ ಹೇಳಿದ್ದು ಡಾ.ಗೋವಿಂದ ಹೆಗಡೆ 1. ಅವ ನುಡಿಸಿದ್ದು ಕೊಳಲನ್ನು ಅಲ್ಲ ಕಣೇ. ಕವಿಬೆರಳುಗಳಲ್ಲಿ – ನನ್ನನ್ನು ! 2. ರಾಧೆ ಎಂದರೆ ಶ್ಯಾಮ ಶ್ಯಾಮನೆಂದರೆ ರಾಧೆ ಹಾಲು ಮತ್ತದರ ಬಿಳುಪು ಬೇರೆ ಬೇರೆ ಹೇಗೆ ? 3. ನಾನು ಹೆಣ್ಣೇ ಅವ ಗಂಡೇ? ನಾವು ಸಂಧಿಸಿದ್ದು ಬೇರೆಯದೇ ಬಿಂದುವಿನಲ್ಲಿ ಹೆಣ್ಣು ಗಂಡುಗಳಾಗಿ ನಮ್ಮ ನೋಡುವ ಹಾಡುವ ಲೋಕದ ಕುರುಡಿಗೆ ನನ್ನ ಕನಿಕರ ! **

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನಗೀಗ ಅಟ್ಟಗಳೆಂದರೆ ಪ್ರೀತಿ ಶೀಲಾ ಭಂಡಾರ್ಕರ್ ಇವತ್ತು ಬೆಳಿಗ್ಗೆಯೇ ಘೋಷಿಸಿ ಬಿಟ್ಟೆ.. ಮನೆಯಲ್ಲಿ ಸ್ವಚ್ಛತಾ ಅಭಿಯಾನ. ತಿಂಡಿಗೆಂದು ಮಾಡಿದ್ದ ಚಿತ್ರಾನ್ನವೇ ಮದ್ಯಾಹ್ನದ ಊಟ.. ಬೇಡವಾದರೆ ಅಲ್ಲೇ ನಾಲ್ಕು ಬಾಳೆಹಣ್ಣು, ಒಂದು ಎಳನೀರಲ್ಲಿ ಹೊಟ್ಟೆ ತುಂಬಿಸಿಕೊಂಡರೆ ಆರೋಗ್ಯಕ್ಕೆ ಒಳ್ಳೆಯದು. ಹೂಂಕರಿಸಿದರು.. ಓದುತ್ತಿದ್ದ ಪೇಪರ್ ನಿಂದ ತಲೆ ಎತ್ತದೆ. ಅವರು ಹೋದ ಮೇಲೆ… ನಿಂತು ಒಮ್ಮೆ ಯೋಚಿಸಿದೆ.. ಎಲ್ಲಿಂದ ಶುರು ಮಾಡಲಿ..! ನಮ್ಮ ಅನುಕೂಲಕ್ಕೆ ಎಂದು ಮನೆಯ ಮೇಲೆ ಮನೆ ಕಟ್ಟಿಸಿದಾಗ ಬೇಕು ಬೇಕು ಎಂದು ಕಟ್ಟಿಸಿದ್ದ ಮುಚ್ಚಿದ್ದ ಬಾಗಿಲಿನ ಹಿಂದಿನ ಎಲ್ಲ ಅಟ್ಟಗಳೂ ಗಹಗಹಿಸಿ ನಕ್ಕಂತಾಯಿತು.. ಏಳು ವರ್ಷದ ಹಿಂದೆ ಮನೆ ಸೇರಿದಾಗ ಮೇಲೆ ಏರಿಸಿದ ಯಾವ ವಸ್ತುವನ್ನೂ ತಿರುಗಿ ನೋಡಿರಲಿಲ್ಲ… ಒಂದೆರಡು ಸಲ ದಿಢೀರ್ ನೆಂಟರು ಬರುತ್ತಾರೆಂದಾದಾಗ ಕೈಗೆ ಸಿಕ್ಕಿದ್ದನ್ನು ಎತ್ತಿ ಅಲ್ಲಿಯೇ ತುರುಕಿದ್ದು ಬಿಟ್ಟರೆ.. ಮುಚ್ಚಿದ್ದು ತೆರೆದಿರಲೇ ಇಲ್ಲ. ನಿಮಗನ್ನಿಸಬಹುದು.. ಮತ್ಯಾಕೆ ಇವತ್ತು ಇಷ್ಟು ಆಸಕ್ತಿ..!? ಏನಿಲ್ಲ.. ನನ್ನದೊಂದು ಪುಸ್ತಕ ಕಾಣಿಸುತ್ತಿಲ್ಲ.. ಯಾರಿಗೆ ಕೊಟ್ಟು ಮರೆತು ಕುಳಿತಿದ್ದೇನೊ ನೆನಪಾಗುತ್ತಿಲ್ಲ… ಹುಡುಕಿ ಹುಡುಕಿ.. ಇನ್ನು ಉಳಿದಿರುವುದು ನಾಲ್ಕು ಕೋಣೆಗಳ ನಾಲ್ಕು ಅಟ್ಟಗಳು. ನನ್ನ ಪುಸ್ತಕವೆಂದರೆ.. ಅದು ನಮ್ಮ ರೂಮಿನ ಅಟ್ಟದ ಮೇಲೆಯೇ ಇರುವ ಸಂಭವ ಹೆಚ್ಚು.. ಹೋಗಿ ..ಮಡಚುವ ಏಣಿ ತಂದಿಟ್ಟೆ. ಒಂದು ಕಡೆಯ ಬಾಗಿಲು ತೆರೆದಾಕ್ಷಣ ದೊಪ್ಪೆಂದು ತಲೆಯ ಮೇಲೊಂದು ಮೂಟೆ ಬಿತ್ತು.. ಹಾಗೇ… ನೆಲದ ಮೇಲೆ ಬಿದ್ದಿರಲಿ. ಆಮೇಲೆ ನೋಡಿದರಾಯಿತು … ಉಳಿದ ಸಾಮಾನುಗಳ ಮೇಲೆ ದೃಷ್ಟಿ ಹಾಯಿಸಿದರೆ.. ಬರಿಯ ಹಾಸಿಗೆ ದಿಂಬುಗಳು.. ಅದರಲ್ಲೊಂದು ಮದುವೆಯಾದಾಗ ತವರಿನಿಂದ ಕೊಟ್ಟ ಹಾಸಿಗೆ.. ನೆನಪಿಗಿರಲಿ ಎಂದು ಇಟ್ಟು ಮರೆತು ಹೋಗಿ ವರುಷಗಳಾಗಿವೆ ಏಳು. ತವರು ಮನೆಯ ನೆನಪಿನ ಅಕ್ಕರೆಯಿಂದ ಕೈಯಾಡಿಸಿದೆ ಮೆತ್ತಗೆ. ಹಳೆಯ ಬಟ್ಟೆ ಮುಚ್ಚಿಟ್ಟು ಕುಂಬಾಗಿ ಬಂತೊಂದು ಚೂರು ಕೈಗೆ. ಮನಸ್ಸು ಹೋಯ್ತು ಇಪ್ಪತ್ನಾಲ್ಕು ವರ್ಷಗಳ ಹಿಂದೆ.. ಇನ್ನಿವತ್ತು ಇಲ್ಲ ಹುಡುಕುವ ಕೆಲಸ ಆಗುವ ಸೂಚನೆ ಎಂದು ಅಟ್ಟದ ಬಾಗಿಲು ಮುಚ್ಚಿ ಏಣಿಯಿಂದ ಇಳಿದೆ ಮೆಲ್ಲನೆ. ಕೆಳಗೆ ಬಿದ್ದ ಮೂಟೆಯನ್ನು ಬಿಚ್ಚಿ ನೋಡಿದರೆ.. ಯಪ್ಪಾ…….. ನಾಲ್ಕು ವರ್ಷದಿಂದ ಹುಡುಕಿ ಆಸೆ ಬಿಟ್ಟು ಬಿಟ್ಟಿದ್ದ ನನ್ನದೊಂದು ಇನ್ನೂ ಉಡದ ಸೀರೆ… ನಾಡಿದ್ದು ಸತ್ಯನಾರಾಯಣ ಪೂಜೆಗೆ ಹೋಗುವಾಗ ಉಡಲೊಂದು ಹೊಸ ಸೀರೆಯಾಯ್ತು.. ಒಂದು ಚಿಂತೆ ಕಳೆಯಿತು.. ಒಂದೊಂದಾಗಿ ಸಿಕ್ಕಿದವು.. ಒಂದರ ಹಿಂದೆ ಒಂದು ಕಳೆದು ಹೋಗಿತ್ತು ಎಂದುಕೊಂಡಿದ್ದ ಎಷ್ಟೊಂದು ಅಮೂಲ್ಯ ವಸ್ತುಗಳು ಜತೆಗೆ ಅದರ ಜತೆಗಿನ ನೆನಪುಗಳು… ಅಡಿಯಲ್ಲಿತ್ತು ನನ್ನ ಆ ಪುಸ್ತಕ.. ದಿನ ಭವಿಷ್ಯದ ಅನಿರೀಕ್ಷಿತ ಲಾಭ ಅಂದರೆ ಇದೇ ಏನೊ ಅಂದ ಹಾಗಾಯಿತು ನನಗೀಗ. ಮನೆಗಳಲ್ಲಿ ಸರಂಜಾಮುಗಳು ಜಾಸ್ತಿಯಾಗಲು ಕಾರಣ.. ಆಲಸ್ಯವಲ್ಲ… ಅದರ ಜತೆಗೆ ಜೋಡಿಸಲ್ಪಟ್ಟಿರುವ ಅನೇಕ ಸವಿ ನೆನಪುಗಳು, ನವಿರಾದ ಭಾವನೆಗಳು. ನಮ್ಮನ್ನು ಆ ವಸ್ತುವಿನ ಆ ಕಾಲಕ್ಕೆ ಕೊಂಡೊಯ್ಯುವ ಕಾಲ ಯಂತ್ರಗಳು. ಎಸೆಯಲು ಬಿಡದೆ ನಮ್ಮನ್ನು ಕಟ್ಟಿಹಾಕಿ ತುಂಬಿಕೊಳ್ಳುತ್ತವೆ ಮನೆ ತುಂಬ. ಇನ್ನೂ ಇವೆ ಬಾಕಿ.. ಮೂರು ಅಟ್ಟಗಳು .. ಮುಂದಿನ ಜೀವನಕ್ಕಾದೀತು.. ದಿನ ಕಳೆಯುವ ಸಾಧನ. ನೆನಪುಗಳ ದಾಸ್ತಾನು. ನನಗೀಗ ಅಟ್ಟಗಳೆಂದರೆ ಬಲು ಪ್ರೀತಿ. ********

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕೊನೆಯ ಕಂತು ಸಮಸ್ಯೆ ಉಳಿದಿದೆ ಬಾಗಿಲು ತೆರೆದಿದೆ… ಕೊರೊನಾ ಆತಂಕವನ್ನು ಕಟ್ಟಿಟ್ಟು ಅದೆಷ್ಟೋ ಮನೆಗಳ, ಅಂಗಡಿಗಳ ಬಾಗಿಲು ಮತ್ತೆ ಮೊದಲಿನಂತೆಯೇ ತೆರೆದಿವೆ! ಒಂದೆಡೆ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಾಯರಹಿತ ಜೀವನ ನಡೆಸಲಾಗುವುದಿಲ್ಲ, ಹಸಿವಿನಿಂದಲೇ ಹಲವರು ಸಾಯಬಹುದು ಎನ್ನುವ, ಎಲ್ಲವೂ ಪುನರಾರಂಭಗೊಳ್ಳಬೇಕು ಎನ್ನುವ ಒತ್ತಡ, ಒತ್ತಾಯದಿಂದ ತೆರೆದಿರುವ ಬಾಗಿಲುಗಳು ಬದುಕಿನ ಆತಂಕಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತಿದೆ. ಮತ್ತದೇ ಭೋಗ ಜೀವನವನ್ನು ಬಾಚಿ ತಬ್ಬಿಕೊಳ್ಳುವ ಹಲವರ ನಡೆ ‘ನಾಯಿಯ ಬಾಲ ನಳಿಗೆಯಲ್ಲಿ ಹಾಕಿದರೂ ಡೊಂಕು’ ಎನ್ನುವ ಮಾತನ್ನು ನೆನಪಿಸುತ್ತಿದೆ. ‘ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ’ ಎಂದು ಎಚ್ಚರಿಸುವ ಮಾಧ್ಯಮಗಳ ಮಾತು ಬರಹ ಗಮನಿಸುವ ವ್ಯವಧಾನ ಕೆಲವರಲ್ಲಷ್ಟೇ ಉಳಿದಿದೆ. ಇಷ್ಟು ದಿನವೂ ತಮ್ಮ ಬದುಕನ್ನು ಪಣವಾಗಿಟ್ಟು ದುಡಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನರ್ಸ ಗಳು ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರುಗಳ ತ್ಯಾಗ, ಸಂಯಮ, ಸೇವೆಯ ಫಲವಾಗಿ ಅನೇಕರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಆದರೆ ಜನರ ವಿವೇಚನಾರಹಿತ ವ್ಯವಹಾರದಿಂದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಡಾಕ್ಟರುಗಳ ತಾಳ್ಮೆಯನ್ನು ನಿಕಷಕ್ಕೊಡ್ಡುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಹೆಣ ಸುಡುವ ಬೆಂಕಿಯಲ್ಲಿ ಅಡುಗೆ ಬೇಯಿಸಲೆತ್ನಿಸುವ ರಾಜಕೀಯದವರ ನಡೆ ವಾಕರಿಕೆ ಹುಟ್ಟಿಸುತ್ತಿದೆ. ಸತ್ತವರು ಒಂದು ಸಮುದಾಯದವರಾದರೆ ಎಡಗಣ್ಣಿನಲ್ಲಿ ನೀರು, ಸತ್ತವರು ಇನ್ನೊಂದು ಸಮುದಾಯದವರಾದರೆ ಬಲಗಣ್ಣಿನಲ್ಲಿ ನೀರು..ತಥ್.. ಸಿದ್ಧಾಂತದಲ್ಲಿ ಸಿಲುಕಿದವರಿಗೆ ಅರ್ಥವಾಗುವುದು ಅರೆಬರೆ ಬೆಂದ, ಅರ್ಧಸತ್ಯಗಳು ಮಾತ್ರ. . ನಿಜವಾಗಿಯೂ ಮಾನವೀಯತೆ ಇದ್ದರೆ ಎಡ ಬಲಗಳ ಹಂಗು ಹರಿದು ಎಲ್ಲ ಅನ್ಯಾಯವನ್ನು ಪ್ರಶ್ನಿಸಿ, ಎಲ್ಲರ ಕಷ್ಟಕ್ಕೂ ಸ್ಪಂದಿಸುವಂತಾಗಲಿ. ತೆರೆದ ಬಾಗಿಲಿನಾಚೆ ವೈರಾಣುವಿನ ರೂಪದಲ್ಲಿ ಸಾವು ಹೊಂಚು ಹಾಕುತ್ತಲೇ ಇದೆ.. ಜಾತಿ ಮತ ಬೇಧಭಾವ ಮಾಡದೇ ಯಾರನ್ನು ಆವರಿಸಲಿ ಎಂದು ಕಾಯುತ್ತಿದೆ. ಸಾಮರಸ್ಯವೆನ್ನುವುದು ಕಟ್ಟಲಾರದ ಕವಿತೆಯಾಗದಿರಲಿ. ನಮ್ಮನ್ನು ನಾವು ಕಾಪಾಡಿಕೊಳ್ಳುವ, ದೇಶ ಉಳಿಸುವ ಸಂಯಮ ಬದುಕಿನ ಗೀತವಾಗಲಿ. ****** ಮುಗಿಯಿತು ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಥಾಗುಚ್ಛ

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ  ಅವಳ ತುಂಬಿದ ಮೈ ತುಂಬಿಕೊಂಡಿದ್ದವು. ತಲೆತುಂಬಾ ಅರೆನೆರೆತ ಕೂದಲು. ಥೇಟ್  ಹಳ್ಳಿಯ ಮುಗುದೆ – ಗೌಡತಿಯಂತೆ  ಜವಾರಿತನ ಬದುಕಿದ್ದಳು. ಅದಕ್ಕೆ ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಖರೇ ಖರೇನ ಹೇಳ್ತಿದೀನಿ….ಮೊದಲಿಗಿಂತ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ  ಹೇಳಿದೆ.  ಯಾವಾಗ ಬಂದೆ..? ಕೇಳಿದಳು. ನನಗೇನೋ….ಕೇಳಿದಂತಾಗಿ  ಏನುತ್ತರಿಸಿದೆನೋ..! ನೆನಪು ಹಾರಿ ಹೋಯಿತು. ಆಕೆ ಸಂಜೆಯ ವಾಕಿಂಗ್  ಮುಗಿಸಿ  ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ  ಸುಖವೇ  ಅನರ್ಘ್ಯವೆಂದು ಹೆಸರಿಲ್ಲದ ಹಸಿವುಗಳನ್ನು ಅನೇಕ ಬಾರಿ ಪರಸ್ಪರ ಉಸುರಿ ಕೊಂಡವರು. ಹೀಗೇ ಇಬ್ಬರೂ ಒಂದೇ ನೋವಿನ ದೋಣಿಯಲಿ  ಪಯಣಿಸಿಬಂದ ಲೋಕಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು. ದಂಗೆಕೋರ ಪ್ರೇಮಿಗಳಂತೆ ಸರಸ ಪ್ರೇಮಕೆ ಸನ್ಯಾಸ ದೀಕ್ಷೆ ಪಡೆದು, ನಕ್ಷತ್ರದೊಳಗಣ ವಿಮಲ ಸರೋವರದ ಕನಸುಗಳ ಕಂಡವರು ನಾವು.  ನೆನಪಿದೆಯಾ  ನಿನಗೆ  ? ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರುಳ ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯಾ ನಿನಗೆ ?   ಯಾಕೋ ಗೊತ್ತಿಲ್ಲ…ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು. ಹೌದು, ನಾವಿಬ್ಬರು ಕೆಂಪುಹಳ್ಳದ  ಹುರುಮಂಜಿನಂತಹ ಉಸುಕಿನಲಿ  ‘ಗುಬ್ಬಿಮನೆ’ ಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು.  ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ  ಭಯಾನಕ  ಸೆಳೆತದ ಸುಳಿ ಮಡುವು. ಅಂತಹ ಕರಿನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ  ಒಮ್ಮೆ ನನ್ನನ್ನು ಎಳಕೊಂಡು  ಮುಳುಗೆದ್ದಿದ್ದಳು. ಅವಳಂತರಂಗದ ಜೀವಶಿಲ್ಪಕ್ಕೆ ಸಂಪೂರ್ಣ ಸಮರ್ಪಿಸಿಕೊಂಡೆ. ಹದಿನೆಂಟರ ಮೊದಲ ಹರೆಯಕ್ಕೆ ಧನ್ಯತೆಯ ಸಲಾಮು ಸಲ್ಲಿಸಿದೆ. ಗೊತ್ತಿಲ್ಲ ನನಗೆ ನನ್ನವ್ವ ಪುರಾಣ ಕತೆಗಳಂತೆ ಹೇಳುತ್ತಿದ್ದ “ಜಕಣಿ ಜಲ ದೇವತೆಯರು” ಆಗ ನೆನಪಾಗಿದ್ದರು.   ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್,  ಮಾರ್ಕ್ಸ್, ಮಾರ್ಕ್ವೆಜ್..ಅಂತಿದ್ದಿ…  ” ನನ್ನವ್ವ  ಫಲವತ್ತಾದ ಕಪ್ಪು ನೆಲ… ಬನದ ಕರಡಿಯ ಹಾಗೆ ಚಿಕ್ಕಮಕ್ಕಳ  ಹೊತ್ತು ಸಾಕಿದಾಕೆ…” ಲಂಕೇಶರ ಸಾಲುಗಳೋದಿ ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ನಾನಂದು ಕಂಡ ಕನಸಿನ ಗಂಧರ್ವ ಕಿಂಪುರುಷ ನೀನೇನಾ…? ಎಂದು  ಗೊಣಗಿ, ಗುದ್ದಾಡುವ ದನಿಯಲಿ  ಕೊಡವಿ ಬಿಟ್ಟಳು.  ಹಿಂದೊಮ್ಮೆ  ನಾವಿಬ್ಬರೂ…ಹುಯ್ದ ಚಿತ್ತೆ ಮಳೆಯಲಿ  ತೋಯ್ದುಡುಗೆಯಲೇ ಘತ್ತರಗಿ  ಅಮ್ಮನ ಸನ್ನಿಧಿಯಲಿ ನಿಂತಾಗ…  ” ಬದುಕು – ಬರಹಗಳನ್ನು ವ್ರತದಂತೆ  ಪಾಲಿಸುವ ನೀನೊಬ್ಬ ಹೇತ್ಲಾಂಡಿ ” ಅಂತ, ಅವಳೇ ಕಾರ್ಣಿಕ ನುಡಿದದ್ದು  ಬಡಬಡಿಸಿಕೊಂಡೆ. ಕುದುರೆಯಿಂದ  ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ  ಹಂಗೇ ನಿಂತಿದ್ದೆ. ಒಂದುಬಗೆಯ ಜೀವ ಖಜೀಲಾದ ಸ್ಥಿತಿ ನನ್ನದಾಗಿತ್ತು. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ. “ನಾನೂನು ಇಲ್ಲ ನೀನೂನು ಇಲ್ಲ…ತನ್ನ  ತಾನರಿತವಗೆ ಬೇರೇನೂ ಇಲ್ಲ..” ಅಲ್ಲಮನ ವಚನ ಆಗಸದ ಅಶರೀರವಾಣಿಯಿಂದ ಶಾರೀರಗೊಂಡಿತು. “…ಆ ಕೆಂಪುಹಳ್ಳ ಮುತ್ತೈದೆಯಂತೆ  ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ  ಸ್ಮಾರಕದ ಆ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ. ಅವಳದು ಮುಂಚಿನಿಂದಲೂ ಲಿಪಿಗಿಂತ  ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ  ನೋಡೋದಿಲ್ಲವೆಂದು  ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್  ಬ್ಯಾಟೊಂದನ್ನು ಹಿಡಕೊಂಡು ಪುಟ್ಟ  ಬಾಲಕನೊಬ್ಬ ಅದೇ ರಸ್ತೆಯಲಿ  ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ…ತನ್ನ ಗಂಡನ  ಹೆಸರು ಹೇಳಿ,  ಹೌದು ಅವನ ಹಸಿತ್ಯಾಜ್ಯದ  ಫಲವೇ ಇವನು, ಎಂದು ಮಗನತ್ತ ತೋರಿಸಿದಳು. ಅವಳ  ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ  ದೂರ ಚಲಿಸಿತ್ತು.   ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು  ಮುಸುಕಿ, ಮೋಡ ಗುಡುಗುಗಳ ಕಗ್ಗತ್ತಲು ಘೋರಿಸಿತು. ಕಣ್ಣಳತೆಗೂ  ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಕೋಲ್ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ  ಕೆಂಪಗೆ ಕಾದ ಛಡಿಗಳ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು  ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ  ವೇಗದಲ್ಲಿ ಕುದುರೆ ಓಡಿಸತೊಡಗಿದೆ. ನನ್ನೊಳಗೆ ಅವಳು ಚೆಲುವ ಪರಿಮಳ ಅರಳಿಸುತ್ತ ದೇವಕನ್ನಿಕೆಯಾಗಿ…ಅನುಭವಿಸುತ್ತಲೇ ಹಿಂಬಾಲಿಸಿದಳು…ನಾನು ಕನ್ಯ ಸಿಸುಮಗನಂತೆ ಅರವತ್ತರ ವೇಗದಲ್ಲಿ ಸಾಗುತ್ತಲೇ ಇದ್ದೆ. *******  

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ಆ ಕವಿತೆ ಇದಲ್ಲ. ಪೂರ್ಣಿಮ ಸುರೇಶ್ ಆ ಕವಿತೆ ಇದಲ್ಲ ‌‌‌ ನೀನು ಹಕ್ಕಿಯ ಬಗ್ಗೆ, ನದಿಯ ಬಗ್ಗೆ , ಚಿಟ್ಟೆ ಮರ,ಎಲೆಯ ಬಗ್ಗೆ ಕವಿತೆ ಹೊಸೆಯುವಿಯಲ್ಲ.. ಪ್ರಣಯ ಕಾಡಲಾರದೇ? ನೇರ ಪ್ರಶ್ನೆ.,. ಬಿಡಿ ನನಗೂ ಪ್ರಶ್ನೆ ಆಗುವುದು ಇಷ್ಟ. ನಡು ವಯಸ್ಸಿಗೆ ಅದೆಂತಹ ಪ್ರಣಯ ಎಂದೆ ನಿನಗೆ ಗೊತ್ತಾ ನಿನ್ನ ನಡು ಚೆಂದ ಒಮ್ಮೆ ಪುಟ್ಟ ಉನ್ಮಾದ ಬೇಕಿದ್ದರೆ ನಾ ಕ್ಲಿಕ್ಕಿಸಲೇ ಆ ಚಿತ್ರ ನೋಡು, ನಾಚಿದೆಯಾ.. ಬಿಡು, ಕಾಡುವ ಭಾವ ನೀನು ಹೆಕ್ಕಲಾರೆ ಛೇಡಿಸಿದ: ಎಲ್ಲೋ ಗರ್ಭದೊಳಗಿನ ನಗೆ ಕಿವಿಯ ಸುತ್ತ ಕಚಕುಳಿ ಇಟ್ಟಿತು ಊರು ಉರುಳೀತು ನಿಲ್ಲಿಸೋ ನಗೆ ಗೋಗೆರೆದೆ ಮುತ್ತಿನ ಸರಪಳಿ ಎಲ್ಲಿಗೆ ತೊಡಿಸಲಿ? ಮತ್ತೆ ಮತ್ತೆ ನಗು.. ಕರುವಿನ ಕಿವಿಗೆ ಗಾಳಿ ಊದಿದರೆ.,. ಪೋಲಿ ನಗು ತಾವರೆಯ ಕೆಂಪಾಗಿಸಿ ಬೊಗಸೆಯಲ್ಲಿ ತುಂಬಿ ಕವಿತೆ ಎಂದರೇನೇ.. ಜುಂ ಎನಿಸುತ್ತಾನೆ ಕವಿತೆಯ ಎಸಳು ಎಸಳು ತೆರೆದು ಘಮ ನೇವರಿಸುತ್ತಾನೆ ತಾವರೆ ದಂಟು ಬೆನ್ನ ಹುರಿಗೆ ಕಸಿ ಮಾಡುತ್ತಾನೆ ಮುತ್ತು ಮತ್ತು,.. ತೆರೆದುಕೋ ಕವಿತೆ ಗುಂಗಿನ ಗುನುಗು ಬೇಡ, ನನ್ನ ಅವನ ಪ್ರಣಯವನ್ನು ಕವಿತೆಯಲ್ಲಿ ಜಾಲಾಡದಿರಿ ನಾನು ಆ ಕವಿತೆ ಹೆಣೆಯಲಾರೆ ****** .

ಕಾವ್ಯಯಾನ Read Post »

You cannot copy content of this page

Scroll to Top