ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಿಪ್ಪೆಗುಂಡಿಯಲ್ಲಿ ಮಗು

HEARTBREAKING!! Mother Kills Newborn Baby, Throws Body Inside ...

ಫಾಲ್ಗುಣ ಗೌಡ ಅಚವೆ

ಅಲ್ಲಿ ಮುರ್ಕಿಯಲ್ಲಿರುವ
ತಿಪ್ಪೆಗುಂಡಿಯಲ್ಲಿ ಎಸೆದು ಹೋಗಿದ್ದಾಳೆ
ಇದೀಗ ಎಂಬಂತೆ ಒಂದು ಮಗು.

ನವೆಂಬರ್ ಬೆಳಗಿನ ಚುಮು ಚುಮು
ಚಳಿಯಲ್ಲಿ ಅಮ್ಮನ ಮಡಿಲಲ್ಲಿರಬೇಕಾದಂತೆ
ಅಲ್ಲೇ ಗುಲ್ ಮೋಹರ್ ಮರಗಳಲ್ಲಿ
ಹೊಡೆದು ಕೂಡ್ರಿಸಿದಂತೆ
ಬೆಳ್ಳಕ್ಕಿಗಳು ಸಣ್ಣಗೆ ಮುಸುಗುತ್ತಿವೆ.

ಗಸ್ತು ತಿರುಗುವ ಇರುವೆಗಳು
ಯಾರನ್ನೋ ಕರೆತರಲು ಹೊರಟಂತೆ
ಎಲ್ಲಿಗೋ ಪಯಣ ಹೊರಟಿವೆ.

ತುಸು ತಡವಾಗಿ ವಾಕಿಂಗ್ ಹೊರಟವರು
ಮಂಕಿ ಕ್ಯಾಪ್ ಬಿಟ್ಟು ಬಂದವರಂತೆ
ತಡವರಿಸುತ್ತ ಎದೆಗೆ ಕೈ ಕಟ್ಟಿಕೊಂಡು
ಹೊರಡುವ ಸನ್ನಾಹದಲ್ಲಿ
ಅವರದೇ ರಾತ್ರಿಯ
ಹಳಸಿದ ಕನಸುಗಳ ಜೊತೆಗೆ.

ಹಾಸಿಗೆ ಮಡಚಿಟ್ಟು ಆಗಸ
ಮುಖ ತೊಳೆದು ಕೊಳ್ಳುತ್ತಿದೆ
ಮೋಡಗಳ ಮರೆಯಲ್ಲಿ
ಬೆಳಗಿನ ಕೆಲಸಕ್ಕೆ ತಡವಾಯಿತೆಂಬ
ರಾತ್ರಿ ನರಳಿಕೆಯ ಮುಖ ಭಾವದಲ್ಲಿ.

ಪುರಸೊತ್ತು ಮಾಡಿಕೊಂಡು
ಬಸುರಾದವಳಿಗೆ ತೀಟೆಗೆಂಬಂತೆ
ಹೊಟ್ಟೆಯ ತಿಂಗಳುಗಳ
ಜವಾಬ್ದಾರಿಯಿಂದ ಯಾವ
ಮುಸುಕಿನಲ್ಲಿ ಹುಗಿಸಿದ್ದಳೊ?

ತಮ್ಮದೇ ಧಾವಂತದಲ್ಲಿ ಹಾಲು ತರಲು
ಹೊರಟವರಿಗೇನು ಗೊತ್ತು
ಅಲ್ಲೆ ಮಗು ಅಳುವ ಸದ್ದು?
ಆಚೆ ಮನೆಯಲ್ಲಿ ದಿನ ಬೆಳಗಾದರೆ
ಅಳುವ ಸದ್ದುಗಳು
ಅನವರತ ಧಾವಿಸುತ್ತಿರುತ್ತವೆ.

ತಮ್ಮ ಏಕಾಂತಕ್ಕೆ ಭಂಗ ಬರುವದೆಂದು
ಬಿಟ್ಟು ಹೊರಟವರ ಮನಸು
ಇಡೀ ಜಗವನೊಂದು ಮಾಡುವ
ಅಳುವ ಆಲಿಸುತ್ತಿದ್ದರೂ
ಅಲೆಯದ ಸಮುದ್ರದಂತೆ
ಸ್ತಬ್ಧಗೊಂಡಂತಿದೆ
ಕೀಳರಿಮೆಯ ಬೇಲೆಯಲ್ಲಿ.

ಹೊಸ ವಾತಾವರಣಕ್ಕೆ ಹೊಂದಿಕೊಳ್ಳದೇ
ಕರಳು ಕತ್ತರಿಸಿದ ರಕ್ತ ಒಸರುತ್ತಿರುವ
ಮಗು ಮುಂದುವರೆಸಿದೆ ತನ್ನ ಪ್ರತಿಭಟನೆ
ಇದನಾಲಿಸದೇ ಎಸೆದವರು
ನಸುಕಿನ ರೈಲು ಹತ್ತಿ ಹೊರಟಿದ್ದರು
ಅದು ಹೋದ ನಿಲ್ದಾಣದೆಡೆಗೆ.

ರಸ್ತೆಯಲ್ಲಿ ಹೊರಟ ಹೆಂಗಸರ ಬಾಯಲ್ಲಿ
ಪ್ರಕಟವಾದ ತಾಜಾ ಸುದ್ದಿಯೆಂದರೆ
ಎಲ್ಲಿಂದಲೋ ಬಂದ ನಾಯಿ
ಹೊತ್ತು ಹೋಯ್ತಂತೆ!

*******

About The Author

2 thoughts on “ಕಾವ್ಯಯಾನ”

  1. ನಾಗರಾಜ್ ಹರಪನಹಳ್ಳಿ

    ವಾಸ್ತದ ವರ್ತಮಾನವನ್ನು ಅದೆಷ್ಟು ಚೆಂದ ಕಟ್ಟಿರುವೆ ,ಗೆಳೆಯಾ, ಅವರದೇ ರಾತ್ರಿ ಹಳಸಿದ ಕನಸುಗಳನೊತ್ತು ವಾಕಿಂಗ್ ಹೊರಟವರು ಎಂಬ ಸಾಲು ಇಷ್ಟವಾಯಿತು.
    ಪುರುಸೊತ್ತು ಮಾಡಿಕೊಂಡು ಬಸುರಾದವಳು ತೀಟೆಗೆಂಬಂತೆ ಎಂಬ ಸಾಲುಗಳಲ್ಲಿ , ಆಕೆಯ ದೋಷವನ್ನು ಮಾತ್ರ ಹುಡುಕಿದಕ್ಕೆ ನನ್ನ ತಕರಾರು ಇದೆ. ಇದಕ್ಕೆ ಬೇಜವಾಬ್ದಾರಿ ವಿಟನೂ ಕಾರಣ ಇರಬಹುದು. ಈ ಅಂಶ ನನ್ನ ಕಾಡಿತು…ಇನ್ನು ನಿಸರ್ಗದ ಜೊತೆ ಬೆಳೆಯುವ ಕವಿತೆ ಅದ್ಭುತ ಸೂಕ್ಷ್ಮ ಗಳನ್ನು ಹೇಳಿದೆ….

Leave a Reply

You cannot copy content of this page

Scroll to Top