ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ತೇಜಾವತಿ ಹೆಚ್.ಡಿ.

ಗಝಲ್

Indian workers painting a house in Jodhpur in blue colour ...

ಕನಿಷ್ಠ ಕೂಲಿಗಾಗಿ ಮೈಯೊಳು ಬೆವರ ಹರಿಸುವೆವು ಕಾರ್ಮಿಕರು ನಾವು
ಒಂದ್ಹೊತ್ತಿನ ಗಂಜಿಗಾಗಿ ಶ್ರಮದ ಬದುಕ ಸಾಗಿಸುವೆವು ಕಾರ್ಮಿಕರು ನಾವು

ಕರ್ತವ್ಯ ನಿಷ್ಠೆಯಲಿ ಹಗಲಿರುಳೆನ್ನದೆ ಸ್ವಾರ್ಥವ ತೊರೆದು ಹೋರಾಡುವೆವು
ಬಿಸಿಲು ಮಳೆ ಗಾಳಿಗೆ ಜಗ್ಗದೆ ತನುವ ಒಡ್ದುವೆವು ಕಾರ್ಮಿಕರು ನಾವು

ಮಲಗಲು ಸೂರಿಲ್ಲದೆ ಮೈಗೆ ಹೊದಿಕೆಯಿಲ್ಲದೆ ಚಳಿಗೆ ನಲುಗಿದರೂ
ಒಡೆಯನಿಗೆ ಸುಸಜ್ಜಿತ ಅರಮನೆ ನಿರ್ಮಿಸುವೆವು ಕಾರ್ಮಿಕರು ನಾವು

ಕೃಷಿಯನ್ನೇ ನಂಬಿ ಮುಗಿಲನ್ನು ನೋಡುತ ಮಳೆಯ ಕಾಯುವೆವು
ದೇಶಕ್ಕಾಗಿ ಹೊಲವ ಉತ್ತು ಅನ್ನವ ಬೆಳೆಯುವೆವು ಕಾರ್ಮಿಕರು ನಾವು

ಪೌರರಾಗಿ ಸಮಯ ಪಾಲಿಸಿ ಕಾಯಕವೇ ಕೈಲಾಸ ತತ್ವದೊಳು
ಸ್ವಚ್ಛತೆಯ ಮಹತ್ವ ಸಾರುತ ಬದುಕುವೆವು ಕಾರ್ಮಿಕರು ನಾವು

ಅಪಾಯವೇ ಇರಲಿ ಪ್ರಾಣವೇ ಹೋಗಲಿ ಹಂಗು ತೊರೆದು ಬಾಳುವೆವು
ಅದರಲ್ಲೇ ಸಾರ್ಥಕ ದಿನಗಳ ದೂಡುವೆವು ಕಾರ್ಮಿಕರು ನಾವು

ಜನ ನಾಯಕ ಸರ್ಕಾರ ಸಮಸ್ಯೆಯ ಆಲಿಸಿ ಸ್ಪಂದಿಸದಿದ್ದರೂ ಸರಿಯೇ
ಮಾನವೀಯ ತೇಜಸ್ಸಿನೊಂದಿಗೆ ನಮ್ಮಯ ಗುಣವ ಮೆರೆಯುವೆವು ಕಾರ್ಮಿಕರು ನಾವು

*********

About The Author

1 thought on “ಕಾರ್ಮಿಕ ದಿನದ ವಿಶೇಷ-ಗಝಲ್”

Leave a Reply

You cannot copy content of this page

Scroll to Top