ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇರುಳ ಹೊಕ್ಕುಳ ಸೀಳಿ

red fire

ಸುಡುಕೆಂಡದ ಪಾದಗಳ ಮೆಲ್ಲನೂರಿ
ಅಂಬೆಗಾಲಿಟ್ಟವನ ಸ್ವಾಗತಕೆ

ಊರಕೇರಿಯ ಕೋಳಿಗಳು ಕೂಗು ನಿಲ್ಲಿಸಿ
ಹಸಿದ ನಾಯಿಗಳು ಊಳಿಟ್ಟು
ಮಲಗಿದ್ದ ಕಂದಮ್ಮಗಳು ಕಿಟಾರನೆ ಕಿರುಚಿದಂತೆ ಅಳತೊಡಗಿ

ಊರೂರೇ ತೆರೆದ ಮಶಾಣದಂತೆ ಬಾಸವಾಗಲು
ಮಾರ್ಚುರಿಯೊಳಗೆ ಕೊಯಿಸಿಕೊಂಡ ಹೆಣಗಳು
ವಾರಸುದಾರರಿರದೆ ಪೋಲಿಸರ ಕಾವಲಲಿ ಬೇಯುತ್ತ

ಹೆರಿಗೆ ವಾರ್ಡಿನ ನರ್ಸಮ್ಮಗಳು ಅತ್ತಿಂದಿತ್ತ ಇತ್ತಿಂದತ್ತ
ಓಡಾಡುವ ತರಾತುರಿಯಲ್ಲಿ
ಎಂತ ಮಗು ಕಣ್ಣರಳಿಸುವ ಗಂಡಸಿನ ಕಣ್ಣೊಳಗೆ
ಬೆಳಕೊಂದು ಮೂಡಿದಂತಾಗಿ

ಗುಳೆಹೊರಟ ಪರದೇಸಿ ಗುಂಪಿನಲ್ಲಿನ ಹರಯದ ಹೆಣ್ಣುಗಳ
ಬೇಟೆಯಾಡಲು ಹವಣಿಸುವ ತಲೆಹಿಡುಕರ ಹಿಂದೆ
ಸಾಲುಗಟ್ಟಿನಿಂತ ದುಡ್ಡಿದ್ದ ವಿಟಪುರುಷರು

ಇವರುಗಳ ಕಾಯಲು
ನೇಮಿಸಿದ ಮೇಸ್ತ್ರಿಗಳ ಕಣ್ಣಲ್ಲೂ ಕಮೀಷನ್ನಿನ
ದುರಾಸೆಯ ಚಿತ್ರ

ಇದೀಗ ಉರುಳುತ್ತಿರುವುದು ದಿನಗಳಷ್ಟೆ
ಒಳ್ಳೆಯವೊ ಕೆಟ್ಟವೊ?

ಹೇಳಬೇಕಾದ ಬಲ್ಲವರೆಲ್ಲ ಸೆಮಿನಾರುಗಳ ಕೊಠಡಿಯೊಳಗೆ
ಮಾತುಕತೆಯೊಳಗೆ ಮುಳುಗಿ

ಆಳುವ ಪ್ರಭುಗಳ ಪರವಿರೋಧಿಗಳೆಲ್ಲ
ರಸ್ತೆಯ ನಟ್ಟನಡೂವೆ ಮದ್ಯೆ ಪ್ರತಿಕೃತಿಗಳ ಸುಡುತ್ತ
ಮದ್ಯಾಹದೂಟಕ್ಕೆ ಕಾಯುತ್ತ

ಇಳಿ ಮದ್ಯಾಹ್ನ ಸಣ್ಣ ನಿದ್ದೆ ಮಗಿಸೆದ್ದ ಗೃಹಿಣಿ
ಮಕ್ಕಳಿಗಾಗಿ ಕಾಯುತ್ತ ಗೇಟಿನಂಚಲ್ಲಿ ನಿಂತಾಗ
ದಿನದ ಚಕ್ರದ ಕೊನೆಯ ಸುತ್ತು

ಉರಿಯುತ್ತಿದ್ದ ಕೆಂಡದವನು ಕೊಂಡದೊಳಗೆ ಹಾದಂತೆ
ಕತ್ತಲೊಳಗೆ ಸರಿದು ನಡೆಯುತ್ತಾನೆ


ಕು.ಸ.ಮಧುಸೂದನ

About The Author

3 thoughts on “ಕವಿತೆ ಕಾರ್ನರ್”

  1. ವಿಶಾಲಾ ಆರಾಧ್ಯ

    ಇರುಳ ಹೊಕ್ಕುಳ ಸೀಳಿ .. ಅದ್ಬುತ ಕವನ .

  2. ನಾಗರಾಜ್ ಹರಪನಹಳ್ಳಿ

    ಧ್ಯಾನಿಸಿದಷ್ಟು ಬಿಚ್ಚಿಕೊಳ್ಳುವ ಕವಿತೆ ಇದು. ಸೂರ್ಯ, ಭೂಮಿ, ಕತ್ತಲು ಹಗಲಿನ ನಡುವೆ ಹಾಯುವ ಕವಿತೆ ದುಡಿವ ವರ್ಗ, ಅಪರಿಚಿತ ,ಗುಳೆ‌ಹೊರಟ ಗುಂಪಿನ ಹರೆಯದ ಮೇಲೆ ಕಣ್ಣಿಡುವ ವಿಟ ಪುರುಷರು, ಕಮಿಷನ್ನಿಗೆ ಕಾಯುವ ಮೇಸ್ತ್ರಿಗಳ ಮಧ್ಯೆ ಹಾಯುವ ಬದುಕು, ಸಂಜೆ ಮಗುವಿಗೆ ಕಾಯುವ ಗೃಹಿಣಿ, ಆಳುವ ಸರ್ಕಾರ, ಬುದ್ದಿಜೀವಿಗಳ ಸೆಮಿನಾರ್ ನಡುವೆ ನಡೆಯುವ ಕವಿತೆಯ ಹಾದಿ ವಿಶಾಲವಾಗಿದೆ. ಒಂದೊರೊಳಗೊಂದು ಉಪ ಕತೆಗಳು ಬರುವಂತೆ ಕವಿತೆಯ ಅರ್ಥವಿಸ್ತಾರ ವ್ಯಾಪಕ ಹಾಗೂ ಧ್ವನಿಪೂರ್ಣ….

Leave a Reply

You cannot copy content of this page

Scroll to Top