ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ನೀರಿಗೇತಕೆ ಬಣ್ಣವಿಲ್ಲ? ಮಹಾಂತೇಶ ಮಾಗನೂರ ಅರೆ ಯಾರು ಹೇಳಿದರು ನೀರಿಗೆ ಬಣ್ಣವಿಲ್ಲವೆಂದು… ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ ನೀರಿಗೂ ತರತರದ ಬಣ್ಣಗಳುಂಟು ಎಂದು ನೀರಿಗೇತಕೆ ಬಣ್ಣವಿಲ್ಲ? ಧುಮ್ಮಿಕ್ಕುವ ಜಲಪಾತದಿ ಹಾಲಿನಂತಹ ಬಿಳುಪು ಸೂರ್ಯಾಸ್ತದ ಸಮಯದಲ್ಲಿ ಸಾಗರದಿ ನಸುಗೆಂಪು ನೀರಿಗೇತಕೆ ಬಣ್ಣವಿಲ್ಲ? ಆಗಸದಿಂದ ನೋಡಿದೊಡೆ ನೀರೆಲ್ಲ ತಿಳಿನೀಲಿ ಕಾನನದಿ ಹರಿಯುವ ಜುಳು ಜುಳು ನೀರು ಪ್ರಕೃತಿಯ ಬಣ್ಣದಲಿ ನೀರಿಗೇತಕೆ ಬಣ್ಣವಿಲ್ಲ? ಬೆಟ್ಟಗಳಲಿ ಸುಳಿ ಸುಳಿದಾಡಿ ಹರಿಯುವುದು ಝರಿಯಾಗಿ,ಗಿಡ ಮರಗಳಿಗೆ ನೀಡುತ ಉಸಿರು ಕಾಣುವದು ಹಸಿರು ಹಸಿರು! ನೀರಿಗೇತಕೆ ಬಣ್ಣವಿಲ್ಲ? ಆಕಾಶದಿಂದ ಧರೆಗಿಳಿಯುತ ಸೂರ್ಯರಶ್ಮಿಯ ಚುಂಬಿಸಿ ಕಾಣುವುದಿಲ್ಲವೇ ಬಣ್ಣ ಬಣ್ಣದ ಮೋಹಕ ಕಾಮನಬಿಲ್ಲು ನೀರಿಗೇತಕೆ ಬಣ್ಣವಿಲ್ಲ? ರೈತನೊಂದಿಗೆ ಬೆರೆತು ಗದ್ದೆಯಲ್ಲಿ ಹರಿದಾಡಿ, ಪೈರಿನೊಂದಿಗೆ ಸೇರಿ ಹಚ್ಚ ಹಸಿರಾಗಿ ಹೊಮ್ಮುವುದು ನೀರಿಗೇತಕೆ ಬಣ್ಣವಿಲ್ಲ? ಆಧುನಿಕತೆಯ ಭರದಲ್ಲಿ ಕಾರ್ಖಾನೆಗಳು ಉಗುಳುವ ವಿಷ ಗಾಳಿಗೆ ಬಿಗಿದಪ್ಪಿ ಸುಟ್ಟು ಕಪ್ಪಾದ ನೀರು ನೀರಿಗೇತಕೆ ಬಣ್ಣವಿಲ್ಲ? ನಗರೀಕರಣದ ಕೊಳಕಿನೊಂದಿಗೆ ಮೋರೆಯ ಸೇರಿ, ಹಳಸಿ ಪಡೆಯುವದಿಲ್ಲವೆ ಬೇಡದ ಬಣ್ಣ ನಿಜ, ನೀರು ವರ್ಣರಹಿತ ಕಾಪಾಡಿದರೆ ಪರಿಸರ, ಸಾಧ್ಯ ಸುಂದರ ಬಣ್ಣವೂ ಸಹಿತ; ತಪ್ಪಿದರೆ, ಬಯಲಾಗುವದು ಶುದ್ಧ ನೀರಿನ ಅಭಾವದ ಬಣ್ಣ! ******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-9 ಸೇವಾನಿರತರ ಕೈ ಬಲಪಡಿಸಿ ‘ಧಿಡೀರ್ ಲಾಕ್ ಡೌನ್ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿತು’ ಎಂದು ಕೆಲವರು ಹಳಿಯುತ್ತಾ, ಮರುಗುತ್ತಾ ಕುಳಿತಿದ್ದಾರೆ. ಸರಕಾರ ಅವರಿಗೆ ಇದ್ದಲ್ಲಿಯೇ ಅನ್ನಾಹಾರ ನೀಡಲು ಹಲವು ಕ್ರಮ ಕೈಗೊಂಡಿದೆ. ಇಸ್ಕಾನ್, ಅದಮ್ಯಚೇತನ, ಇಂಪೋಸಿಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ( ನನ್ನ ಅರಿವಿಗೆ ಬಂದಷ್ಟನ್ನೇ ಉಲ್ಲೇಖಿಸಿದ್ದೇನೆ)… ಅನೇಕ ಸಹೃದಯಿಗಳು ಸರಕಾರದ ಕೆಲಸಕ್ಕೆ ಪೂರಕವಾಗಿ ಕಾರ್ಮಿಕರ, ನಿರ್ಗತಿಕರ ನೆರವಿಗೆ ಶ್ರಮಿಸುತ್ತಿವೆ. ಇಂತಹ ಸೇವಾಕಾರ್ಯದಲ್ಲಿ ತೊಡಗಿರುವ ಮೈಸೂರಿನ ಯೋಗ ಶಿಕ್ಷಕರಾದ ಶ್ರೀಹರಿಯವರನ್ನು ಮಾತನಾಡಿಸಿದೆ..ಲಾಕ್ ಡೌನ್ ಶುರುವಾದಾಗ ಮನೆ ಇದ್ದವರು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳಬಹದು. ಮನೆ ಇಲ್ಲದವರು ಏನು ಮಾಡಬೇಕು ಎಂದು ನಾನು ನನ್ನಂತಹ ಎರಡು ಸಾವಿರ ಸಮಾನ ಮನಸ್ಕರು ಚಿಂತಿಸಿದೆವು. ಸರಕಾರದಿಂದ ಪರ್ಮಿಶನ್ ತೆಗೆದುಕೊಂಡು, ಮಾಸ್ಕ ಧರಿಸಿ ಇಡೀ ಮೈಸೂರು ನಗರ ಸರ್ವೆ ಮಾಡಿದೆವು. ಎಲ್ಲೆಲ್ಲಿ ಕಟ್ಟಡ ಕಾರ್ಮಿಕರು, ನಿರ್ಗ ತಿಕರು, ವೃದ್ಧರು ಇದ್ದಾರೆಯೋ,ಅಂಥವರನ್ನು ಹುಡುಕಿದೆವು. ನಮ್ಮ ತಂಡದಲ್ಲಿ ಎಲ್ಲ ವೃತ್ತಿಯವರಿದ್ದಾರೆ. ಕೇಟರರ್ಸ ಅಡುಗೆ ಮಾಡುತ್ತಾರೆ. ಅವುಗಳನ್ನು ದಿನದಲ್ಲಿ ಮೂರು ಸಲ ಅಗತ್ಯವಿದ್ದವರಿಗೆ ಉಳಿದವರು ವಿತರಿಸುತ್ತಿದ್ದೇವೆ. ನಮ್ಮ ತಂಡದಲ್ಲಿರುವ ಹದಿನೈದು ಆಯುರ್ವೇದ ವೈದ್ಯರು ಪೋನ್ ಮೂಲಕ ಕೌನ್ಸಲಿಂಗ್ ಮಾಡುತ್ತಿದ್ದಾರೆ. ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಹದಿನೈದು ಯುವ ಜನರು ಸರಕಾರದಿಂದ ಬರುವ ನಿಖರವಾದ ಮಾಹಿತಿಗಳನ್ನು ಫೇಸ್ ಬುಕ್ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ…ಎಲ್ಲ ಚಟುವಟಿಕೆಗಳು ದಾನಿಗಳ ನೆರವಿನಿಂದ ನಡೆಯುತ್ತವೆ. ಇಡೀ ದೇಶ ನಮ್ಮ ಮನೆಯಿದ್ದಂತೆ. ಎಲ್ಲರನ್ನೂ ಜೋಡಿಸಿಕೊಂಡು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಾ ಕೊರೋನಾ ಬಿಕ್ಕಟ್ಟನ್ನು ಗೆಲ್ಲಲೆತ್ನಿಸುತ್ತಿದ್ದೇವೆ. ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವ ಮನೋಭಾವ ಬೇಡ. ಸಾರ್ವಜನಿಕರ ಸಹಕಾರವೂ ಇರಲಿ… ಎನ್ನುವ ಇಂತಹ ಸದ್ದಿಲ್ಲದೇ ಸೇವಾಕಾರ್ಯ ಮಾಡುತ್ತಿರುವ ಎಲ್ಲರೂ ಸ್ಯುತ್ಯಾರ್ಹರು. ಕೊರೋನಾ ಸೋಂಕು ತಗಲುವ ಭೀತಿ ನಿಮಗಿಲ್ಲವೇ? ಎಂದು ಶ್ರೀಹರಿಯವರನ್ನು ಕೇಳಿದ್ದೆ. . ‘ಸೋಂಕಿತರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತಿರುವ ವೈದ್ಯರೇ ನಮಗೆ ಮಾದರಿ. ಅವರು ಈಗ ತೆಗೆದುಕೊಳ್ಳುತ್ತಿರುವ ರಿಸ್ಕಿನ ಪ್ರಮಾಣಕ್ಕೆ ಹೋಲಿಸಿದರೆ ನಾವು ತೆಗೆದುಕೊಳ್ಳುವ ರಿಸ್ಕ ತುಂಬಾ ಕಡಿಮೆ ಪ್ರಮಾಣದ್ದು. ಮಾಸ್ಕ, ಗ್ಲೌಸ್ ಹಾಕಿಕೊಂಡು ಶುಚಿತ್ವ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೇವೆ.. ಇಂತಹ ಸೇವಾಕಾರ್ಯದಲ್ಲಿ ದೊರಕುವ ಆತ್ಮತೃಪ್ತಿಗೆ ಬೆಲೆಕಟ್ಟಲಾಗದು’. ಎಂದರು ಶ್ರೀಹರಿಯವರು. ಮಾನವೀಯತೆಯ ಹೆಬ್ಬಾಗಿಲು ತೆರೆಯುವುದು ಇಂತಹ ಕಷ್ಟಕಾಲದಲ್ಲಿಯೇ … ತೆರೆದಿದೆ ಮನೆ ಓ ಬಾ ಅತಿಥಿ ಎಂದು ಯಾರೂ ಈಗ ಹಾಡುವಂತಿಲ್ಲ .ಕೊರೊನಾ ಎಂಬ ಬೇಡದ ಅತಿಥಿ ಬಂದರೇನು ಮಾಡುವುದು ಎಂಬ ಭಯ ಎಲ್ಲರ ಮನದೊಳಗೆ. ಈ ಬೇಸಿಗೆಯಲ್ಲಿ ಯಾರ ಮನೆಗೂ ಯಾವ ಅತಿಥಿಗಳು ಬರಲಾರರು. ಆದ್ದರಿಂದ ಅತಿಥ್ಯಕ್ಕೆ ಮೀಸಲಿಟ್ಟ ಒಂದಿಷ್ಟು ಹಣ ದವಸ ಧಾನ್ಯಗಳನ್ನು ಅನುಕೂಲ ಇದ್ದವರು ಪ್ರತಿ ಊರು, ನಗರಗಳಲ್ಲಿ ನಡೆಯುವ ಇಂತಹ ಸೇವಾಕಾರ್ಯಗಳಿಗೆ ನೀಡಿದರೆ ಕಷ್ಟದಲ್ಲಿರುವವರು ನೆಮ್ಮದಿಯ ನಿಟ್ಟುಸಿರಿಟ್ಟಾರು ಅಲ್ವೇ? ********* ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ ಬಂದೇನಿ ಬಂಧುರದ/ ಬಳಗದಾಗೆಲ್ಲರ ಬಾಯಾಗ ಬೆಣ್ಣಿಯಾಗೇನಿ/ ಬಂದೇನಿ ಮುತ್ತಾಗಿ ಮಾಲೆಯ ಕಟ್ಟಲು// ಹ್ಯಾಂಗರ ತೀರಿಸಲಿ ತವರಿನ ಋಣವ ಅವ್ವ ಅಪ್ಪನ ಮಮತೆಯ ಬೆಳಕನ ಅಣ್ಣ ತಮ್ಮರ ಒಲವಿನ ಹೊಳೆಯನು ಸಾವಿರ ಜನುಮಕು ಋಣವ ತೀರಿಸಲಾರೆ// *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********

ಕಾವ್ಯಯಾನ Read Post »

You cannot copy content of this page

Scroll to Top