ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಮಾರ್ಕೆಟ್ಟು, ಮಾತು ಮತ್ತು ಶಬರಿ ಅಂಜನಾ ಹೆಗಡೆ ಬ್ರ್ಯಾಂಡೆಡ್ ಶರ್ಟು ತೊಟ್ಟು ಸರ್ವಾಲಂಕೃತನಾದ ರಾಮ ಮಾರ್ಕೆಟ್ಟಿನಲ್ಲಿ… ಇದೇ ಮೊದಲಭೇಟಿ!! ಕಣ್ಣಗಲಿಸಿ “ಹೌ ಆರ್ ಯೂ” ಎಂದು ಕೈ ಕುಲುಕಿದೆ ಥಟ್ಟನೆ ಪ್ರತ್ಯಕ್ಷನಾಗಿದ್ದಕ್ಕೆ ಒಂದು ಪ್ರೀತಿಯ ಆಲಿಂಗನ… ಬಿಲ್ಲು ಬಾಣಗಳೆಲ್ಲಿ ಎಂದೆ… ಉತ್ತರವಿಲ್ಲ ಕಣ್ಣು ಮಿಟಕಿಸಿದ ಥೇಟು ಕಮರ್ಷಿಯಲ್ ಸಿನೆಮಾವೊಂದರ ನಾಯಕನಂತೆ… ಕಣ್ತಪ್ಪಿಸಿಕೊಂಡಿದ್ದ ಟೀನೇಜಿನ ಕನಸೊಂದು ವನವಾಸದಿಂದ ಮಾರ್ಕೆಟ್ಟಿಗೆ… ಮಿಟಕಿಸಿದ್ದು ಎಡಗಣ್ಣೋ ಬಲಗಡೆಯದೋ ಗೊಂದಲ… ಕೌಸಲ್ಯೆ ಸುಮಿತ್ರೆ ಅಹಲ್ಯೆ ಸೀತೆ…. ಎಲ್ಲರ ಪ್ರೀತಿಯ ರಾಮ ಅದ್ಯಾರ ಹಂಬಲಗಳ ಉತ್ಸವಮೂರ್ತಿ ಯಾರ ಕಳವಳಗಳ ಉತ್ತರ ಯಾವ ಯುಗಕ್ಕೆ ಯಾರು ಕೊಟ್ಟ ಜನ್ಮ… ದಪ್ಪಮೀಸೆಯ ದೇವಮಾನವ!! ನಾನಿವತ್ತು ಉದ್ದನೆಯ ಮೀಸೆಯ ಜಿರಲೆಯೊಂದನ್ನು ಬಾತ್ರೂಮಿನಲ್ಲಿ ಸಾಯಿಸಿಬಿಟ್ಟೆ “ನಡಿ ಕಾಫಿ ಕುಡಿಯೋಣ” ಎಂದವನ ಮಾತನ್ನೇ ಹಿಂಬಾಲಿಸಿದೆ ಮಾರ್ಕೆಟ್ಟಿನ ತುಂಬೆಲ್ಲ ಮಾತುಗಳು… ಕೊನೆಯಿಲ್ಲದ ಗುರಿಯೂ ಇಲ್ಲದ ಬರಿದೇ ಮಾತುಗಳ ವಿಧವಿಧ ಅವತಾರದ ಒಂದೊಂದು ಮುಖಕ್ಕೂ ಒಂದೊಂದು ರೂಪ… ಸುತ್ತ ಕಣ್ಣಾಡಿಸಿದೆ… ಮೌನಕ್ಕೆ ಶರಣಾಗಿ ನಿಂತಲ್ಲೇ ಶಬರಿಯಾದೆ!! **********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ವಿನಿ ಬೆಂಗಳೂರು ಒಲವ ಬಂಧದಲಿ ಮನವು ಉಲ್ಲಾಸದಿ ತೇಲುತಿದೆಯಲ್ಲ ಗೆಳತಿ ಬಾಳ ಪಯಣದಲಿ ಸಂತಸವೆ ತುಂಬುತಿದೆಲ್ಲ ಗೆಳತಿ ಪ್ರಕೃತಿಗೆ ಮತ್ತೆ ಚೈತ್ರ ಮೂಡಿಸಿ ವಸಂತ ನಗುತಿದೆಯಲ್ಲ ನೋಡು ಕವಿ ಮನದಲಿ ಶೃಂಗಾರ ಕಾವ್ಯಕೆ ಮುನ್ನುಡಿ ಬರೆದಿದೆಯಲ್ಲ ಗೆಳತಿ ಮೊದಲ ಮಳೆಗೆ ಹೂಗಳರಲಿ ಸುಗಂಧವನು ಬಿರುತಿದೆಯಲ್ಲ ಇಲ್ಲಿ ಭೃಂಗವದು ಮಕರಂದ ಬಯಸಿ ಹೂಗಳಲಿ ಮಧುವ ಹೀರುತಿದೆಯಲ್ಲ ಗೆಳತಿ ಬೀಸುವ ಗಾಳಿಯಲಿ ಮಾಧುರ್ಯ ತುಂಬಿ ಸೆಳೆಯುತಿದೆಯಲ್ಲ ತಂಪಾದ ಮನದಲಿ ಹೊಸ ಕನಸುಗಳು ಮೂಡುತಿದೆಯಲ್ಲ ಗೆಳತಿ ಕಣ್ಗಳು ತುಂಬಿ ಬಯಕೆಗಳನು ಹೇಳಲಾರದೆ ತವಕದಲಿ ಕಾಯುತಿದೆಯಲ್ಲ ಇನಿಯನಾಗಮನವು ವಿಜಯಳ ಬಾಳಿಗೆ ಬೆಳಕಾಗಿ ಚಿಮ್ಮಿದೆಯಲ್ಲ ಗೆಳತಿ *********

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ಬರಿಗಾಲಿನ ಭಾರತ ಶಿವಶಂಕರ ಸೀಗೆಹಟ್ಟಿ. ಹಸಿವು ಇವರ ಹೊಟ್ಟೆಗಿದೆ ಬಟ್ಟೆ ಜೋಳಿಗೆಗಳು ಇವರ ಹೆಗಲಿಗಿವೆ ಅರಸಿ ಹೊರಟಿದ್ದಾರೆ ಊರ ಹಾದಿ ದಾರಿ ಸಾಗುತ್ತಿಲ್ಲ ದಿನವೂ ಮೂರು ಮೈಲಿ ಕಾಲಿಗೂ ಕಾಲಕ್ಕು ಹೊಂದಾಣಿಕೆ ತಪ್ಪಿ ಹೋಗಿದೆ ನಡೆಯುವವರ ಕಾಲುಗಳು ಬಿಗಿಯುತ ರಕ್ತ ಸುರಿಸುತ್ತಿವೆ ಅಲ್ಲಲ್ಲಿ ಕಂಡು ಕೇಳುವ ಬೂಟುಗಾಲಿನ ಸದ್ದುಗಳು ಗಾಬರಿ ಹುಟ್ಟಿಸುತ್ತಿವೆ ಹಸಿವು ಕಾಣದವರು ಆಹಾರದ ಉಸ್ತುವಾರಿಗಳಾಗಿದ್ದಾರೆ ದೂರದೂರಿಗೆ ಹೊಟ್ಟೆ ಹೊರೆಯಲು ಬಂದವರು ಒಟ್ಟಿಗೆ ನಡೆಯುತ್ತಿದ್ದಾರೆ ಹೊತ್ತು ಹೊತ್ತಿಗೂ ಇಲ್ಲಿ ಹೊಟ್ಟೆ ಸಾಕದವರು ಈಗ ನಿಟ್ಟುಸಿರು ಬಿಟ್ಟಿದ್ದಾರೆ ನಡೆಯುವರಿಗೆ ಕಾಲು ಸೋತು ದೇವರ ಕರೆಯುತ್ತಿದ್ದಾರೆ ಹಿಟ್ಟು ಇರದೆ ಹೊರಟ ಜನ ಹಟ್ಟಿ ಕಡೆಗೆ ಹೊರಟಿದ್ದಾರೆ ಕಟ್ಟಿದ ಕಟ್ಟಡಗಳೆಲ್ಲ ಇವರನ್ನೆ ನೋಡುತಿವೆ ಹಾಕಿದ ಟಾರು ಮಾಡಿದ ರೋಡುಗಳಲ್ಲ ಇವರಿಗಾಗಿ ಕಾಯುತ್ತಿವೆ ಬೀದಿ ಬದಿಯ ಜನರು ಕರಗಿ ಬಡಕಲಾಗಿದ್ದಾರೆ ಬದುಕಿನ ಏರು ಪೇರುಗಳು ಇವರ ಲೆಕ್ಕಕ್ಕೆ ಸಿಗುತಿಲ್ಲ ಹೊಟ್ಟೆ ತುಂಬಿದವರು ಕೂಸಿಗೆ ಕುಲಾಯಿ ಹೊಲಿಸುವ ತಯಾರಿಯಲ್ಲಿದ್ದಾರೆ ಸಾವು ನೋವುಗಳ ನಗಾರಿ ತನ್ನನ್ನೆ ಬಡಿದುಕೊಳ್ಳುತ್ತಿದೆ ಬದುಕಿರುವ ಮನುಷ್ಯರೀಗ ಭೂಮಿಗಿಳಿದ್ದಿದ್ದಾರೆ ಎಲ್ಲಾ ಸಾಂತ್ವನದ ಕೂಗುಗಳು ಮೂಕವಾಗಿವೆ ಇದು ಬರಿಗಾಲಿನ ಭಾರತ ಇಲ್ಲಿ ಬವಣೆಗಳು ಸದಾ ಶಾಶ್ವತ. *********

ಕಾವ್ಯಯಾನ Read Post »

ಇತರೆ

ಇತರೆ

ಸಂಸ್ಕೃತಿ ಉಳಿಸಿ  ಶೈಲಜಾ ಹಾಸನ ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ        ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ  ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು  ಇಂದು ಅಗತ್ಯ ವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿ ಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ.ಆದರೆ ಅದು ಹೇಗೆ  ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು  ಸಹಜ.       ಮಕ್ಕಳು ತೋಟದಲ್ಲಿ ಅರಳಿ ನಗುತ್ತಿರುವ ಸುಂದರ ಹೂವುಗಳು .ಈ ಹೂಗಳು  ಸದಾ ನಳನಳಿಸುತ್ತಾ ಇರಬೇಕು .ಒಂದು ಪೀಳಿಗೆಯಿಂದ  ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಯನ್ನು ಹೊತ್ತೊಯ್ಯ ಬೇಕು ಅನ್ನುವುದಾದರೆ   ಆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅತ್ಯಂತ ಹೆಚ್ಚಿನ ಜವಾಬ್ದಾರಿ ತಗೊಬೇಕಾಗುತ್ತದೆ .ಪೋಷಕರು ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ಹೇರಿ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ . ಆದರೆ ಮಗು ಶಿಕ್ಷಕ ಹಾಗೂ ಪೋಷಕರನ್ನು ಅನುಕರಣೆ ಮಾಡುತ್ತವೆ . ಇಲ್ಲಿ ಇಬ್ಬರ ಪಾತ್ರವೂ ಅಪಾರ .            ಒಮ್ಮೆ ಒಬ್ಬಾತ ಸೈಕಲ್ ಅಂಗಡಿಯಲ್ಲಿ ಇರುವ ಸುಂದರ ಸೈಕಲ್‌ಗಳನ್ನು ಕಂಡು ಅಂಗಡಿಯಾತನನ್ನು ಕೇಳುತ್ತಾನೆ . “ಈ ಸೈಕಲ್ ಹೊಡೆಯಲು ಬರುತ್ತವೆ ಯೇ, ನನ್ನ ಮಗ ಈ ಸೈಕಲ್ ಮೇಲೆ ಕುಳಿತು ಸುಲಭವಾಗಿ ಚಲಿಸಬಲ್ಲವೇ” ಎಂದು ಕೇಳುತ್ತಾನೆ . “ಇದು ಉತ್ತಮ ಗುಣಮಟ್ಟದ ಸೈಕಲ್ ಯಾರೂ ಬೇಕಾದರೂ ಇದನ್ನು ಸುಲಭವಾಗಿ ಹೊಡೆಯಬಹುದು, ಯಾವುದೇ ಸಂಶಯವಿಲ್ಲದೆ ಕೊಂಡುಕೊಳ್ಳಿ “ಎಂದು ಹೇಳುತ್ತಾನೆ  ಅಂಗಡಿಯಾತ.        ಅತ್ಯಂತ ಆಸಕ್ತಿಯಿಂದ ಸೋಕಲ್ಕೊಂಡು ಕೊಂಡು ಹೋದ ವ್ಯಕ್ತಿ ಎರಡೇ ದಿನದಲ್ಲಿ ವಾಪಸ್ಸು ಬಂದು “ಏನಯ್ಯ  ಸೈಕಲ ಚೆನ್ನಾಗಿ ಹೊಡಿಬಹುದು ಅಂತ ಹೇಳಿ ಮೋಸ ಮಾಡಿಬಿಟ್ಟೆ . ನನ್ನ ಮಗ ಈ ಸೈಕಲಿನಿಂದ ಕೈಕಾಲು ಮುರಿದುಕೊಂಡಿದ್ದಾನೆ. ಎಂತಹ ಸೈಕಲನ್ನು ಕೊಟ್ಟು ಬಿಟ್ಟೆ. ನಿನ್ನ ಮಾತು ಕೇಳಿ ನಾನು ಕೆಟ್ಟೆ “ಎಂದು ಆ ವ್ಯಕ್ತಿ ಜೋರು ಮಾಡುತ್ತಾನೆ.   ಆಗ ಅಂಗಡಿಯ ಮಾಲಿಕ ” ಅಲ್ಲಾ  ಸ್ವಾಮಿ ನಾನು ಉತ್ತಮವಾದ  ಸೈಕಲನ್ನು ಕೊಟ್ಟಿದ್ದಿನಿ, ಒಳ್ಳೆಯ ಸೈಕಲ್ ಮಾರೋಕೆ ಸಾಧ್ಯವೇ ವಿನಃ ಸೈಕಲ್ ಹೊಡೆಯೋಕೆ ಬೇಕಾದ ಬ್ಯಾಲನ್ಸನ್ನು ಮಾರೋಕೆ ಸಾಧ್ಯ ಎನ್ರಿ. ಮೊದಲು ಸೈಕಲ್ ಬ್ಯಾಲನ್ಸನ್ನು ಕಲಿಸಿ ಕೊಡಿ ಅಂತ ದಬಾಯಿಸಿ ಕಳುಹಿಸಿ ಕೊಡುತ್ತಾನೆ .ಹೀಗೆ ಉತ್ತಮವಾದ ವಾಹನಗಳನ್ನು ಮಾರಬಹುದೇ ವಿನಾಃ ಕಲಿಯುವಿಕೆಗೆ ಬೇಕಾದ ಆಸಕ್ತಿ ಪ್ರಾವಿಣ್ಯತೆಯನ್ನು ಮಾರೋಕೆ ಸಾಧ್ಯವಿಲ್ಲ . ಅದೇ ರೀತಿ ಒಬ್ಬ ಶಿಕ್ಷಕ ಮಗುವಿಗೆ ಉತ್ತಮವಾಗಿ ಬೋಧಿಸ ಬಲ್ಲ . ಕಲಿಕೆಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಬಲ್ಲ. ಆದರೆ ಕಲಿಕೆ ಮಾತ್ರ ಮಗುವಿನಿಂದಲೇ ಆಗಬೇಕು , ಆ ಮಗು ಸ್ವತಃ ಕಲಿತಾಗ ಮಾತ್ರ ಅಕ್ಷರ , ಜ್ಞಾನ ವೃದ್ಧಿಯಾಗೋಕೆ ಸಾಧ್ಯ . ಇದನ್ನು ಪೋಷಕರು ಅರ್ಥ ಮಾಡಿಕೊಂಡು ತಮ್ಮ ಜವಾಾರಿಯನ್ನುಕೂಡ ಅರಿಯಬೇಕು .ಸುಂದರವಾಗಿ ಅರಳಿ ನಗುತ್ತಾ ಇರೊ ಹೂವುಗಳು , ಬಾಡೊಕ ಕಾರಣ ಇರುತ್ತೆ , ಗಿಡಕ್ಕೆ ಬೇಕಾದ ನೀರು , ಗೊಬ್ಬರ ಕಡಿಮೆ ಆದರೂ ಗಿಡ ಬಾಗುತ್ತದೆ, ಹೆಚ್ಚು ಆದರೂ ಗಿಡ ಬಾಗುತ್ತದೆ . ಇದಕ್ಕೆ ಕೂಡಬೇಕಾದಷ್ಟು ಪ್ರಮಾಣದ ನೀರು, ಗೊಬ್ಬರ ಕೊಡಬೇಕು . ಈಗಂತು ಎಲ್ಲಾ ಮನೆಗಳಲ್ಲೂ ಒಂದೊ , ಎರಡೋ ಮಕ್ಕಳಿರುತ್ತದೆ . ಮಗು ಕೇಂದ್ರೀಕೃತ ಸಂಸಾರಗಳೇ ಹೆಚ್ಚು . ಮಗುವಿನ ಬಗ್ಗೆ ವಿಪರೀತ ಕಾಳಜಿ, ಪ್ರೀತಿ , ವಾತ್ಸಲ್ಯ . ಅದು ಏನು ಹೇಳುತ್ತೊ ಅದನ್ನು ಕೊಡಿಸಿಬಿಡಬೇಕು.ಅದೆಷ್ಟೆ ದುಡ್ಡಾದ್ರು ಚಿಂತೆ ಇಲ್ಲ . ಅದರಿಂದ ಏನೇ ಹಾನಿಯಾದ್ರೂ ಪರವಾಗಿ ನಮ್ಮ ಮಗು ಬೇಸರ ಮಾಡ್ಕೊಬಾರದು ಅನ್ನೋ ಮನೋಭಾವ , ಇಂದಿನ ಹೆತ್ತವರಲ್ಲಿ ಹೆಚ್ಚು ಕಾಣ್ತಾ ಇದ್ದೇವೆ . ನಮಗಂತೂ ನಾವು ಬಯಸಿದ ಎಲ್ಲವನ್ನು ಈಡೇರಿಸಿ ಕೊಡೋ ಹೆತ್ತವರಿರಲಿಲ್ಲ . ಆಗೆಲ್ಲ ತಮಗೆಷ್ಟು ನಿರಾಶೆ ಆಗ್ತಾ ಇತ್ತು . ಬೇಸರ ಆಗ್ತ ಇತ್ತು . ಅಂತಹ ಬೇಸರ ತಮ್ಮ ಮುದ್ದು ಕಂದಮ್ಮಗಳಿಗಾಗಬಾರದು ಅನ್ನೋ ಆಲೋಚನೆ ಒಂದೆಡೆ ಆದರೆ , ತಾವು ಏನಾಗಬೇಕು ಅಂತ ಅಂದುಕೊಂಡಿದ್ದರೋ , ಅದು ತಮ್ಮ ಮಕ್ಕಳಾದ್ರೂ ಆಗಲಿ ಅನ್ನೋ ಒತ್ತಡ ತರೋದು , ಆ ಮಕ್ಕಳಿಗೆ ಆಸಕ್ತಿ ಇರಲಿ , ಬಿಡಲಿ , ತನ್ನಾಸೆಯನ್ನು ಮಗು ಈಡೇರಿಸಲೇಬೇಕು . ಉದಾಹರಣೆಗೆ ತಾನು ಡಾಕ್ಟರಾಗಲಿಲ್ಲ ಅಂತ ತನ್ನ ಮಗನಾದರೂ ಡಾಕ್ಟರಾಗಲಿ , ಮಗಳು ಇಂಜಿನಿಯರ್ ಆಗಲಿ , ನೃತ್ಯಗಾತಿ ಆಗಲಿ ಅನ್ನೋ ಒತ್ತಡ ಹೇರಿ , ಆ ಮಕ್ಕಳಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಅವು ಓದಿನಲ್ಲಿ ಬದುಕಿನಲ್ಲಿ ಆಸಕ್ತಿ ಕಳೊಂಡು ಏನೇನೋ ಅನಾಹುತ ಗಳಿಗೆ ಕಾರಣಕರ್ತರಾಗುತ್ತಾರೆ . ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು . ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಆಸೆ ಇದೆ ಅದನ್ನೆ ಓದಲು ಬಿಡಬೇಕು.ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರುಗಳೇ ಆಗಬೇಕೆ. ಜಾಗತಿಕರಣದಿಂದಾಗಿ ಇಂದು ನಮ್ಮ ದೇಶ ತೆರೆದ ಕೈ ಗಳಿಂದ ವಿದೇಶಿ ಸಂಸ್ಕೃತಿಯನ್ನು ಸ್ವಾಗತಿಸುತಿದೆ. ಇದರ ಪರಿಣಾಮ ಕೂಡ ನತಮ್ಮ ಪುಟಾಣಿಗಳ ಮೇಲೆ ಆಗ್ತಾ ಇದೆ . ಯಾವುದೊ ಪಾನಿಯಾ ಕುಡಿದ ಮಾತ್ರಕ್ಕೆ ತಾನು ಸಚಿನ್ ಅಂತೆ ದೊಡ್ಡ ಕ್ರಿಕೆಟಿಗವಾಗಬಹುದು ಅನ್ನೋ ಕನಸುಗಳನ್ನು ಇಂದಿನ ಟಿವಿ ಸಂಸ್ಕೃತಿ ಜಾಹೀರಾತು ನಮ್ಮ ಕಂದಮ್ಮಗಳಿಗೆ ಮಾಡ್ತಾ ಇದೆ. ರ ಯಾವುದೋ ಕ್ರೀಮ್ ಹಚ್ಚಿದರೆ ತಾನು ಐಶ್ವರ್ಯ ರೈ ಯಂತೆ ಸುಂದರ ಹುಡುಗಿಯಾಗ ಬಹುದು ಅನ್ನೋ ಕಲ್ಪನೆ ಹುಡುಗಿಯರಿಗೆ ಇರುತ್ತೆ.ಇಂತಹ ಪೊಳ್ಳು ಕನಸುಗಳಿಗೆ ನಾವು ಮಕ್ಕಳನ್ನು ಬಿಟ್ಟು ಕೊಡುತ್ತಾ ಇದ್ದೆವೆ. ಮಕ್ಕಳು ಆಸೆ ಪಟ್ಟು ಕುಡಿಯುವ ತಂಪು ಪಾನೀಯಗಳು, ಟಾಯ್ಲೆಟ್ ತೊಳೆಯುವ ಕ್ರಿಮಿ ನಾಶಕಗಳಿಗೆ ಸಮನಾಗಿರುತ್ತವೆ ಅನ್ನೋ ಸತ್ಯವನ್ನು ನಾವೇಕೆ ಮಕ್ಕಳಿಗೆ ತಿಳಿಸೊಲ್ಲ. ಸದಾ ಕುಡಿಯುವ ಆ ಪಾನೀಯಗಳಿಂದ ದಂತಗಳು ಕರಗಿ ಹೋಗುತ್ತವೆ ಅನ್ನೋ ನೈಜ ಚಿತ್ರಣಗಳನ್ನೆಕೆ ನಾವು ಮಕ್ಕಳಿಗೆ ಕೊಡುತ್ತಿಲ್ಲ . ಮಕ್ಕಳು ಕೇಳಿದ ಕೂಡಲೇ ಪಾನೀಗಳನ್ನು ಕೊಡಿಸಿಬಿಡುತ್ತೇವೆ . ಇವತ್ತು ಎಷ್ಟೋ ಮಕ್ಕಳಿಗೆ ಎಳನೀರು ಬೇಡದ ವಸ್ತು. ಮಜ್ಜಿಗೆ ಬೇಕಾಗಿಯೇ ಇಲ್ಲಾ ಮಕ್ಕಳಿಗೆಲ್ಲಾ ಟಿ ವಿಯಲ್ಲಿ ಬರುವ ಸಚಿನ್ ಕುಡಿಯುವ, ಐಶ್ವರ್ಯ ಋತ್ವಿಕ್ ರೋಷನ್ ಕುಡಿಯುವ ಪಾನೀಯಗಳೇ ಬೇಕು .ಇಂಥ ಹವ್ಯಾಸಗಳನ್ನು ಬೆಳಿಸುತ್ತಾ ನಾವು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಾ ಸ್ವದೇಶಿ ಮೂಲಕ್ಕೆ ಕಂಠಕಪ್ರಾಯರಾಗಿ , ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಾ ಇದ್ದೇವೆ . ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ಕಾರನ್ ಪ್ಲೇಕ್ಸ್ ಬೇಕು. ರೊಟ್ಟಿ ಬೇಡ , ದೊಸೆ ಬೇಡ , ಫಿಜ್ಜಾ ಬೇಕು . ನಾವು ಕೂಡ ಯಾವುದೋ ಆಮಿಷಕ್ಕೆ ಬಲಿ ಬಿದ್ದು ಮಕ್ಕಳಿಗೆ ತಮ್ಮತನವನ್ನು ಬೆಳೆಸುವಲ್ಲಿ ,ಸ್ವದೇಶದ ಪ್ರೇಮ ಸಂಸ್ಕೃತಿಯಲ್ಲಿನ ಆಸಕ್ತಿಯನ್ನು ತುಂಬುವಲ್ಲಿ ಹಿಂಜರಿಯುತ್ತಿದ್ದೇವೆ .ಈಗಲಾದರೂ ನಾವು ಬದಲಾಗಬೇಕು . ವಿದೇಶಿಯರಿಗೆ ನಮ್ಮ ಸಂಸ್ಕೃತಿಯ ಆಸಕ್ತಿ ಬೆಳೆಯುತ್ತದೆ . ಅವರು ಆಸೆಯಿಂದ ಯೋಗವನ್ನು ಕಲಿಯುತ್ತಿದ್ದಾರೆ . ನಮ್ಮ ಆಯುರ್ವೇದಿಕವನ್ನು ಆಸಕ್ತಿಯಿಂದ ನೋಡ್ತಾ ಇದಾರೆ . ನಮ್ಮ ಭರತನಾಟ ಯಕ್ಷಗಾನ , ಆವರಿಗೂ ಪ್ರಿಯ ಅನಿಸುತ್ತದೆ . ಆದರೆ ಇದ್ಯಾವುದೂ ನಮಗೆ ಬೇಡವಾಗ್ತಾ ಇದೆ .ಇಂದಿನ ಮಕ್ಕಳಿಗೆ ಶಿವರಾಮ ಕಾರಂತ ಯಾರು ಅಂತ ಗೊತ್ತಿಲ್ಲ .ಬೇಂದ್ರೆಯವರಿಗೆ ಯಾವ ಪ್ರಶಸ್ತಿ ಬಂತು ಆನೋದು ತಿಳಿದಿಲ್ಲ. ಸಾಹಿತ್ಯದ ಯಾವ ಕೃತಿ ಇದೆ ಅಂತಲೇ ಗೊತ್ತಿಲ್ಲ . ಎಷ್ಟೋ ಮಕ್ಕಳಿಗೆ ಕಥೆ ಅಂದ್ರನೇ ಗೊತ್ತಿಲ್ಲ ಕವನ ಅಂದ್ರೆ ತಿಳಿದಿಲ್ಲ .ಆದ್ರೆ ಕಾರ್ಟೂನ್ ಅಂದರೆ ಬಹಳ ಇಷ್ಟ. ಈ ಪುಟಾಣಿಗಳಿಗೆ ಯಾಕೆ ಹೀಗಾಗುತ್ತಿದೆ. ನಾವ್ಯಾಕೆ ಸಾಹಿತ್ಯಕ ವಾತಾವರಣವನ್ನು ಮಕ್ಕಳಿಗೆ ಕೊಡ್ತಾ ಇಲ್ಲ.ದೂರದರ್ಶನದ ವ್ಯಾಮೋಹದಲ್ಲಿ ಮುಳುಗಿದ ಮಕ್ಕಳನ್ನು ಸೃಜನಾತ್ಮಕತೆಗೆ ಯಾಕೆ ನಾವು ಎಳೆಯುತ್ತಾ ಇಲ್ಲಾ .ಈ ಪುಟಾಣಿಗಳ ಸಾಹಿತ್ಯದ ವಾತಾವರಣ ಸೃಷ್ಟಿ ಮಾಡಿ , ಅವರಿಗೆ ಸಾಹಿತ್ಯದ ಕೃತಿಗಳನ್ನು ಓದುವಲ್ಲಿ ಆಸಕ್ತಿ ಬೆಳೆಸಿ , ಕವಿತೆ ಎಂದರೇನು , ಅದನ್ನು ಹೇಗೆ ಬರೆಯಬಹುದು ಅನ್ನೋ ತಿಳಿವಳಿಕೆ ಕೊಟ್ಟರೆ ,ಈ ಮಕ್ಕಳಿಂದ ಒಬ್ಬ ಕಾರಂತ, ಒಬ್ಬ ಭೈರಪ್ಪ , ಒಬ್ಬ ಅನುಪಮಾ ನಿರಂಜನ , ಒಬ್ಬ ಬೇಂದ್ರೆಯವರನ್ನು ಸೃಷ್ಟಿಸೋಕೆ ಸಾಧ್ಯ.ನಮ್ಮ ನಾಡಿನ ಬಗ್ಗೆ , ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿ,ಗೌರವ ಬೆಳೆಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲಿದೆ.ಬದುಕಿನ ಮೌಲ್ಯಗಳು, ರೀತಿ ನೀತಿಗಳು, ಪರಂಪರೆ , ಆಚಾರ ವಿಚಾರಗಳು , ನಾಡ ಹಬ್ಬ . ರಾಷ್ಟ್ರೀಯ ಹಬ್ಬಗಳು , ಶಿಲ್ಪಕಲೆ ಮುಂತಾದ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತ ಬಂದಲ್ಲಿ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ಸಾಧ್ಯ . ********************************

ಇತರೆ Read Post »

ಕಾವ್ಯಯಾನ

ಕಾವ್ಯಯಾನ

ನನ್ನ ದನಿ ವೀಣಾ ನಿರಂಜನ ‘ನಿನ್ನನ್ನು ಬಂಧಿಸಲು ಆಜ್ಞೆಯಾಗಿದೆ. ನೀನು ಯಾರು?’ ಕೇಳಿದರವರು ‘ನಾನು ಕವಿತೆ’ ಎಂದೆ. ಅವರೆಂದರು – ‘ಹಾಗಾದರೆ ನಿನ್ನ ನಾಲಿಗೆ ಸೀಳಬೇಕು.’ ನಾನು ತಣ್ಣಗೆ ‘ಉಸಿರು’ ಎಂದೆ. ಅವರು ಮತ್ತೆ ನಿನ್ನ ಕತ್ತು ಹಿಸುಕಬೇಕು’ ಎಂದರು ನನ್ನುಸಿರು ಗಾಳಿಯಲ್ಲಿ ಬೆರೆತು ಹೋಗಿದೆ’ ಎಂದೆ! ಅವರೀಗ ಗಾಳಿಯ ಜೊತೆ ಗುದ್ದಾಡುತ್ತಿದ್ದಾರೆ !! ಎಲ್ಲೋ ದೂರದಲ್ಲಿ ಯಾರೋ ಅಳುವ ದನಿ ನಾನು ತಟ್ಟಿ ಮಲಗಿಸುತ್ತಿದ್ದೇನೆ ನನ್ನ ಮಗುವನ್ನು ಎದೆಯ ಬೇಗುದಿಗೆ ಸಾಂತ್ವನ ಹೇಳಬೇಕಿತ್ತಲ್ಲ! ** ನಾನು ಮೌನಿಯಾಗಿದ್ದೆ. ಅವರು ನನ್ನನ್ನು ಹೇಡಿ ಎಂದರು ! ನಾನು ಮಾತಾಡ ತೊಡಗಿದೆ ಈಗ ಅವರು ನನ್ನನ್ನು ದ್ರೋಹಿ ಎನ್ನುತ್ತಿದ್ದಾರೆ !! ವೀಣಾ ನಿರಂಜನ

ಕಾವ್ಯಯಾನ Read Post »

ಅಂಕಣ ಸಂಗಾತಿ

ಗಝಲ್ ಲೋಕ

‘ಗಝಲ್ ಲೋಕ’ ಬಸವರಾಜ್ ಕಾಸೆಯವರ ಹೊಸ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಮೊದಲ ಅದ್ಯಾಯ ಒಲವಿನ ಅಧಿವೇಶನವೇ ಈ ಗಜಲ್ ಗಜಲ್ ಎನ್ನುವ ಪದ ಕೇಳಿದರೆ ಸಾಕು ಇದರಲ್ಲಿ ಏನೋ ಇದೆ ಎಂದು ತನ್ನಷ್ಟಕ್ಕೇ ತಾ ಹಿಡಿದಿಟ್ಟು ಕಾಡುವ ಒಂದು ಭಾವ ಕಣ್ಣು ಮುಂದೆ ಬರುತ್ತದೆ. ಹೌದು ಗಜಲ್ ಎಂದರೆ ಹಾಗೆ ಮನಸ್ಸಿಗೆ ಮುಟ್ಟಿ ಬಿಟ್ಟ ನಂತರವೂ ಸಹ ಆವರಿಸುವ ಒಂದು ಬೆಚ್ಚನೆ ಅನುಭೂತಿ. ಅದಕ್ಕೆ ಅಡೆತಡೆಗಳಿಲ್ಲದೆ ಸದಾ ಹರಿಯುವುದು ಮಾತ್ರವಲ್ಲದೆ ಪುಟಿಯುವುದು ಗೊತ್ತು. ಬಿಡದೇ ಸುರಿಯುವ ಜಡಿ ಮಳೆಯಂತೆ ಗಜಲ್, ಚಳಿಗಾಲದ ಒಲವಿನ ಅಧಿವೇಶನಕ್ಕಾಗಿ ಕಾಯುತ್ತಿರುವ ಪ್ರೇಮಿಗಳ ನಾಡಿ ಮಿಡಿತ ಈ ಗಜಲ್. ಹೊತ್ತಲ್ಲದ ಹೊತ್ತಲ್ಲಿ ನೆನಪುಗಳ ಹೊತ್ತು ತರುವ ಪರಿಮಳವೇ ಗಜಲ್. ಹೌದು ಗಜಲ್ ಎಂದರೆ ಹಾಗೆ ಹೀಗೆ ಮತ್ತು ಅದಕ್ಕೆ ಇರುವ ಶಕ್ತಿಯೇ ಅಷ್ಟು ಅನನ್ಯ ಮತ್ತು ಅಪೂರ್ವ. ಅಂತಹ ಅಮೋಘ ಕಾವ್ಯ ಪ್ರಕಾರವಾದ ಗಜಲ್ ಕುರಿತ ಅಂಕಣಕ್ಕೆ ತಮಗೆ ಇದೋ ಸ್ವಾಗತ. ಗಜಲ್ ಬಹುತೇಕವಾಗಿ ಎಲ್ಲರೂ ಒಮ್ಮೆ ಆದರೂ ಓದಿಯೇ ಇರುತ್ತೀರಿ ಇಲ್ಲ ಅಂದ್ರೆ ಆ ಬಗ್ಗೆ ಕೇಳಿಯೇ ಇರುತ್ತೀರಿ. ಈ ಮೊದಲು ತುಂಬಾ ಅಪರೂಪವಾಗಿದ್ದ ಗಜಲ್ ಇತ್ತಿಚೆಗೆ ಕನ್ನಡದಲ್ಲೂ ಸಾಕಷ್ಟು ಸದ್ದು ಮಾಡುತ್ತಿದೆ. ಆ ಮೂಲಕ ನಮ್ಮ ವಿಶಾಲ ಕನ್ನಡ ಸಾಹಿತ್ಯ ಗಜಲಗಳಿಗೂ ತೆರೆದುಕೊಂಡಿದ್ದೂ ಹೊಸ ಹೊಸ ಬರಹಗಾರರು ಇದರಲ್ಲಿ ತೊಡಗಿಸಿಕೊಂಡಿರುವುದು ಆಸಕ್ತಿಕರ ವಿಷಯ. ಈಗಾಗಲೇ ಕೆಲವು ಬೆರಳಣಿಕೆ ಸಂಖ್ಯೆಯ ಪರಿಣತಿ ಹೊಂದಿದ ಉತ್ತಮ ಗುಣಮಟ್ಟದ ಖ್ಯಾತ ಗಜಲಕಾರರು ಕನ್ನಡದಲ್ಲಿ ಇದಾರೆ. ಅಂತೆಯೇ ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಗಜಲಕಾರರು ಹೊರ ಹೊಮ್ಮುತ್ತಿರುವುದು ಸಹ ಖುಷಿಯ ವಿಚಾರ ಗಜಲ್ ಏನನ್ನು ನಿರೀಕ್ಷಿಸುವುದು ಯಾವುದೇ ಸಾಹಿತ್ಯ ಪ್ರಕಾರವಾದರೂ ಸರಿ ನಾವು ಬರೆಯಬೇಕು ಎಂದರೆ ಅದಕ್ಕೆ ಆ ಬಗ್ಗೆ ತಿಳುವಳಿಕೆ, ಆಳವಾದ ಜ್ಞಾನ, ಸತತ ಅಧ್ಯಯನ, ಉತ್ತಮ ಓದು ಮೊದಲಾದವು ಬಹು ಅಗತ್ಯ. ಅದು ಇಲ್ಲವಾದರೆ ಪೊಳ್ಳು ಜೊಳ್ಳುಗಳಾಗಿ ಬೆಲೆ ಕಳೆದುಕೊಳ್ಳುತ್ತವೆ. ಈ ದೃಷ್ಟಿಯಿಂದ ನೋಡಿದಾಗ ಈ ಡಿಜಿಟಲ್ ಯುಗದಲ್ಲಿ ಫೇಸ್ಬುಕ್, ಟ್ವಿಟ್ಟರ್, ಇನಸ್ಟಾಗ್ರಾಮ್ ಮೊದಲಾದ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ದಿನಕ್ಕೆ ಒಬ್ಬರು ಬರಹಗಾರರು ಹುಟ್ಟುತ್ತಿದ್ದಾರೆ. ಹಾಗೆ ಅದೊಂದು ಒಳ್ಳೆಯ ಬರಹವೇ ಎಂದು ನೋಡಿದರೆ ಖಂಡಿತ ಅದರಲ್ಲಿ ಏನು ಇರುವುದಿಲ್ಲ. ಆ ಬಗ್ಗೆ ವಿಚಾರಿಸಿದರೆ ಅವರಿಗೆ ಆ ವಿಷಯದ ಕುರಿತು ಕನಿಷ್ಠ ಜ್ಞಾನದ ಅರಿವು ಇರುವುದಿಲ್ಲ. ಬರಿದಿದ್ದೂ ಎಲ್ಲಾ ಬರಹಗಳು ಆಗಲ್ಲ ಅಂತೆಯೇ ಕವಿಗಳು ಸಹ ಆಗುವುದಿಲ್ಲ. ಹಾಗೆಯೇ ಗಜಲ್ ಕೂಡ ಸಾಕಷ್ಟು ಅರ್ಹತೆಗಳನ್ನು, ಕೌಶಲಗಳನ್ನು ನಿರೀಕ್ಷಿಸುತ್ತದೆ. ಇತರ ಸಾಹಿತ್ಯ ಪ್ರಕಾರಗಳಿಗಿಂತ ಗಜಲ್ ಬರಹಗಳಿಗೆ ಹೆಚ್ಚಿನ ಪೂರ್ವ ಸಿದ್ದತೆಗಳೇ ಬೇಕು ಯಾಕೆಂದರೆ ಗಜಲ್ ಅಷ್ಟು ಸುಲಭವಾಗಿ ಒಗ್ಗುವಂತದಲ್ಲ, ಇಲ್ಲಿ ಪ್ರತಿ ಬರಹಗಳು ಧ್ಯಾನದಂತೆ ಜೀವಿಸಬೇಕು. ಗಜಲ್ ಛಾಯೆ ಕನ್ನಡದ ಪ್ರಸಿದ್ಧ ಹಿರಿಯ ಕಿರಿಯ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು, ಅಂತರ್ಜಾಲ ಪತ್ರಿಕೆಗಳು ಮೊದಲಾದವುಗಳಲ್ಲಿ ಗಜಲ್ ಎಂದು ಪ್ರಕಟವಾಗುವ ಎಷ್ಟೋ ಬರಹಗಳು ಗಜಲಗಳೇ ಆಗಿರುವುದಿಲ್ಲ. ಗಜಲ್ ಅಲ್ಲದ ಇಂತಹ ಗಜಲಗಳನ್ನು ಗಜಲ್ ಎಂದು ಪ್ರಕಟಿಸುವುದಕ್ಕೆ ಇರುವ ಮಾನದಂಡಗಳು ಏನು ಎಂದು ಇತ್ತೀಚೆಗೆ ಸಾಕಷ್ಟು ಗಜಲಕಾರರು ಆಕ್ಷೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೆಲವರು ಪತ್ರಿಕೆಗಳಿಗೆ ಪತ್ರ ಬರೆದು ಕರೆ ಮಾಡಿ ವಿವರಣೆ ಕೇಳಿಯೂ ಇದ್ದಾರೆ. ಹಾಗೆ ನೋಡಿದಾಗ ಗಜಲ್ ಬರಹಗಳನ್ನು ಪ್ರಕಟಿಸಲು ಅಲ್ಲಿ ಪ್ರತ್ಯೇಕ ಗಜಲ್ ತಜ್ಞರು ಇರುವುದಿಲ್ಲ ಮತ್ತು ಓದಿದಾಗ ಸ್ವಲ್ಪ ಚೆನ್ನಾಗಿ ಇದೆ ಎನಿಸಿದರೆ ಪ್ರಕಟಿಸಿ ಬಿಡುವುದು ಅವರ ರೀತಿ ನೀತಿಗಳು. ಹೀಗೆಂದು ಪತ್ರಿಕೆಯೊಂದರ ಸಂಪಾದಕರೇ ತಿಳಿಸಿದಾಗ ಒಂದಿಷ್ಟು ಬೇಸರ ಆಗಿದ್ದೂ “ಓದುಗರು ಏನೋ ಚೆನ್ನಾಗಿ ಇದ್ದರೆ ಓದಿ ಖುಷಿ ಪಡಬಹುದು. ಆದರೆ ಅದನ್ನು ಓದುವ ಇತರ ಬರಹಗಾರರು ಆಕರ್ಷಣೆಗೆ ಒಳಗಾಗಿ ಅಲ್ಲಿನ ಬರಹವನ್ನೇ ಗಜಲ್ ಎಂದು ಅನುಸರಿಸಿದರೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಮತ್ತು ಒಂದು ಒಳ್ಳೆಯ ಪ್ರಕಾರವನ್ನು ಬೇಕಾಬಿಟ್ಟಿ ಹರಿಯ ಬಿಟ್ಟು ಹಾಳು ಮಾಡಿದಂತೆ” ಎಂದಾಗ ಈ ಬಗ್ಗೆ ಗಮನಿಸಿ ಇನ್ನೂ ಮುಂದೆ ಹಾಗಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೌದು ಈಗಾಗಲೇ ಹಲವಾರು ಬರಹಗಾರರು ಗಜಲ್ ಅಲ್ಲದ ಆದರೆ ಗಜಲ ಛಾಯೆ ಹೊಂದಿದ ಬರಹಗಳನ್ನು ಅನುಸರಿಸಿ ಗಜಲ್ ಹೆಸರಿನಲ್ಲಿ ಏನೇನೋ ಬರೆಯುತ್ತಿದ್ದಾರೆ. ಆದರೆ ಮೌಲ್ಯ ಕಳೆದುಕೊಳ್ಳುವ ಅಂತಹ ಬರಹಗಳು ಇತರ ಉದಯೋನ್ಮುಖ ಬರಹಗಾರರನ್ನು ಗೊಂದಲಕ್ಕೆ ಒಳಗಾಗಿಸುತ್ತವೆ. ಆದರೆ ಗಜಲ್ ಅಂತಹ ಬರಹಗಳನ್ನು ಕಾಲಕ್ರಮೇಣ ಮೂಲೆ ಗುಂಪಾಗಿಸುತ್ತದೆ ಗಜಲ್ ಬರೆಯಲು ಏನು ಬೇಕು ಕವನ ಆಗಬಹುದು, ಚುಟುಕು ಆಗಬಹುದು, ಭಾವಗೀತೆ ಆಗಿರಬಹುದು ಅಥವಾ ನೀಳ್ಗವಿತೆಯೇ ಆಗಿರಬಹುದು ಯಾವುದೇ ಕಾವ್ಯ ಪ್ರಕಾರವನ್ನು ನೋಡಿ ಪ್ರತಿಯೊಂದು ಸಹ ತನ್ನದೇ ಆದ ಚೌಕಟ್ಟು, ಗುಣ ಲಕ್ಷಣಗಳು ಮೊದಲಾದವುಗಳನ್ನು ಹೊಂದಿವೆ. ಇದನ್ನು ಗಜಲಗಳಿಗೆ ಹೋಲಿಸಿದರೆ ಇದರ ಚೌಕಟ್ಟು ಅತ್ಯಂತ ಕಟ್ಟುನಿಟ್ಟಾಗಿದ್ದೂ ಗುಣ ಲಕ್ಷಣಗಳೊಂದಿಗೆ ನಿಯಮಗಳನ್ನು ಸಹ ಹೊಂದಿದೆ. ಪ್ರತಿ ಸಾಲು ಹೀಗೆ ಇರಬೇಕು ಹಾಗೆ ಇರಬೇಕು ಎಂದು ಬಯಸುವ ಗಜಲ್, ಬರೆಯಲು ಅದರ ಬಗೆಗಿನ ಅರಿವು ಮೊದಲ ಮತ್ತು ಕನಿಷ್ಠ ಅವಶ್ಯಕತೆ. ಜೊತೆಗೆ ಗಜಲ್ ಇತಿಹಾಸ, ಬೆಳೆದು ಬಂದ ರೀತಿ, ತನ್ನೊಳಗೆ ಹಲವು ಪ್ರಕಾರಗಳನ್ನು ಅಡಗಿಸಿಗೊಂಡಿರುವ ನೀತಿ ಹೀಗೆ ಗಜಲ್ ಬಗ್ಗೆ ಉತ್ತಮ ಬರವಣಿಗೆಗೆ ಏನು ಬೇಕು, ಏನು ಬೇಕು, ಹೇಗೆ ಇರಬೇಕು ಎನ್ನುವ ಮೊದಲಾದ ಅಂಶಗಳನ್ನು ನಿಮ್ಮ ಮುಂದೆ ತೆರೆದಿಡುವುದು ಗಜಲ್ ಲೋಕ ಎನ್ನುವ ಈ ಅಂಕಣದ ಹೊಣೆಯಾಗಿರಲಿದೆ. ಇನ್ನೂ ಮುಂದೆ ಇದರ ಬಗ್ಗೆ ಪ್ರತಿ ಸಂಚಿಕೆಯಲ್ಲಿ ಮಾಹಿತಿ ನೀಡುತ್ತಾ ಸಾಗಲಾಗುವುದು. *********** ಬಸವರಾಜ ಕಾಸೆ

ಗಝಲ್ ಲೋಕ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ನಾಳೆ ಬಪ್ಪುದು ಕೆ.ಶಿವುಲಕ್ಕಣ್ಣವರ ಹಲವಾರು ಪಲ್ಲಟಗಳನ್ನು ಹೊಂದಿರುವ ‘ನಾಳೆ ಬಪ್ಪುದು’ ಎಂಬ ಹನುಮಂತ ಹಾಲಿಗೇರಿಯವರ ನಾಟಕವೂ..! ಸಾಹಿತಿ ಹನುಮಂತ ಹಾಲಿಗೇರಿಯವರು ತಮ್ಮ ‘ಏಪ್ರಿಲ್ ಫೂಲ್’ ಕಥೆಗಳ‌ ಸಂಕಲನದ ‘ಏಪ್ರಿಲ್ ಪೂಲ್’ ಕಥೆಯನ್ನು ಆಧರಿಸಿ ‘ನಾಳೆ ಬಪ್ಪುದು’ ಎಂಬ ನಾಟಕವನ್ನು ಬರೆದಿದ್ದಾರೆ… ಈ ನಾಟಕವನ್ನು ಓದುತ್ತಿದ್ದಂತೆ, ಇದು ಮುಖ್ಯವಾಗಿ ನಾಟಕಕಾರ ಹನುಮಂತ ಹಾಲಿಗೇರಿಯವರ ಫ್ಯಾಂಟಸಿ ನಾಟಕದಂತೆ ನನಗೆ‌ ಭಾಸಾವಾಯಿತು… ಯಾರಿಗೆ ಗೊತ್ತು ಇದು ಮುಂದೆ ವಾಸ್ತವವಾಗಲೂಬಹುದು. ಇರಲಿ. ಮುಂದೆ ಈ ನಾಟಕದ ಹಂದರ ನೋಡೋಣ… ಇಲ್ಲಿ ಮುಖ್ಯವಾಗಿ ನನಗೆ ಮೈತ್ರಿರಾವ್, ಈಕೆಯ ಗಂಡ ರಾಮು, ಮೈತ್ರಿರಾವ್ ಮಗಳು ಭೂಮಿರಾವ್, ‌ಮೈತ್ರಿರಾವ್ ಮಗ ದೀಪು ಮತ್ತು ಮೈತ್ರಿರಾವ್ ಸೊಸೆಯಾಗುವವಳು ಶರ್ಮಿಳಾರಾವ್ ಗಳ ಪಾತ್ರ ಮುಖ್ಯವಾಗಿ ಕಂಡವು. ಈ ಪಾತ್ರಗಳೇ ಈ ನಾಟಕದಲ್ಲಿ ಮುಖ್ಯವಾದವು ಮತ್ತು ಇವುಗಳ ಜೊತೆಗೆ ಅನೇಕಾನೇಕ ಪಾತ್ರಗಳೂ ಇಲ್ಲಿ ಬರುತ್ತವೆ… ಇಲ್ಲಿ ಬರುತ್ತಿರುವ ಪಾತ್ರಗಳು ಒಂದು ಕಾಲದಲ್ಲಿ ಅಂದರೆ ಪ್ರಸ್ತುತ ಕಾಲದಲ್ಲೂ ಪುರುಷ ಪ್ರಧಾನ ಸಮಾಜದಲ್ಲಿ ಮುಖ್ಯವಾಗಿ ಕನಸ್ಸು ಕಾಣುತ್ತಿರುವುದು ಹನುಮಂತ ಹಾಲಿಗೇರಿಯವರ ಸ್ತ್ರೀ ಸಮಾನಾಂತರ ಸಮಾಜವನ್ನು. ಪುರುಷರಿಗೆ ಸ್ತ್ರೀಯರು ಸಮಾನವಾಗಿ ಎಲ್ಲಾ ವಿಧದಲ್ಲೂ ಕಾಣಬೇಕೆನ್ನುವ ನಿಟ್ಟಿನಲ್ಲಿ ಹನುಮಂತ ಹಾಲಿಗೇರಿಯವರು ಈ ‘ನಾಳೆ ಬಪ್ಪುದು’ ಎಂಬ ನಾಟಕ ಹೆಣೆದಿದ್ದಾರೆ… ಇಲ್ಲಿ ಬರುವ ಪಾತ್ರಗಳು ಮುಖ್ಯವಾಗಿ ಪ್ರಸ್ತುತ ಕಾಲಘಟ್ಟದಲ್ಲಿ ಪುರುಷರು ಅದು ಹೇಗೆ ಸ್ತ್ರೀಯನ್ನು ಅಸಮವಾಗಿ ಕಾಣುತ್ತಾರೋ ಹಾಗೆಯೇ ನಾಳೆಯ ದಿನಗಳಲ್ಲಿ ಸ್ತ್ರೀಯರು ಪುರುಷರನ್ನು ಅಸಮವಾಗಿ ಕಾಣುವ ದೃಶ್ಯಗಳನ್ನು ನಾವು ಅಂದರೆ ನಾಟಕಕಾರ ಕಾಣುವ ಸಮಾಜವನ್ನೂ ಅಲ್ಲಗಳೆಯಲಾಗದು. ಅಂದರೆ ಇಲ್ಲಿ ಪುರುಷ ಮುಂದೊಂದು ದಿನ ಸ್ತ್ರೀಯೂ ಕಾಲಚಕ್ರದಲ್ಲಿ ಬದಲಾಗಿ ಈ ಪುರುಷರನ್ನು ಹಿಮ್ಮೆಟ್ಟಿಸಿ ಮುನ್ನಡೆಯಬಹದು‌ ಎಂಬ ಸಂದೇಶವನ್ನು ಪರೋಕ್ಷವಾಗಿ ಕೊಡುತ್ತಾರೆ… ಇಲ್ಲಿ ಮುಂದೊಂದು ಕಾಲದಲ್ಲಿ ಬರುವ ಮತ್ತೊಂದು ಮುಖ್ಯ ಪಾತ್ರವಾದ ಬಾಪಣ್ಣ ಎಂಬ ಪುರುಷ ರಕ್ಷಣಾ ವೇದಿಕೆ ಅಧ್ಯಕ್ಷನದು. ಹೆಂಡತಿ ಮತ್ತು ಅತ್ತೆಯಿಂದ ಸಾಕಷ್ಟು ಶೋಷಣೆಗೆ ಒಳಗಾಗಿ ಮನೆಯಿಂದ ಹೊರಗೆ ದಬ್ಬಲ್ಪಟ್ಟ ನಂತರ ಅವರು ಸದರಿ ಸಂಘಟನೆ ಕಟ್ಟಿಕೊಂಡು ಪುರುಷನೇ ಈ ಪ್ರಕೃತಿಗೆ ಪ್ರಧಾನ ಎಂದು ವೇದ ಕಾಲದಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಕಾಲ ಬದಲಾದಂತೆ ಮಹಿಳೆಯರೇ ಅಧಿಕಾರ ಚುಕ್ಕಾಣಿ ಹಿಡಿದುಕೊಂಡು ಅಮಾಯಕ ಪುರುಷರಿಗೆ ಅನ್ಯಾಯ ಮಾಡುತ್ತಿದ್ದಾರೆ. ಸಂವಿಧಾನವನ್ನು ತಮಗೆ ಬೇಕಾದಂತೆ ಬದಲಾಯಿಸಿಕೊಂಡು ಎಲ್ಲ ಚರ ಮತ್ತು ಸ್ಥಿರಾಸ್ತಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಿದ್ದಾರೆ. ನಮ್ಮ ಪೂರ್ವಜ ಪುರುಷರು ಮಾಡಿದ ತಪ್ಪಗೆ ಸ್ತ್ರೀಯರು ಸಮಾಜದ ಎಲ್ಲ ಪುರುಷರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆಂಬಲ್ಲಿಯಿಂದ ಹಿಡಿದು ಒಟ್ಟಾರೆ ಸಮಾಜದಲ್ಲಿ ಸ್ತ್ರೀಯರು ಪುಷರನ್ನು ಹಿಂಸಿಸಿಸುತ್ತಿದ್ದಾರೆಂಬಲ್ಲಿಯ ವರೆಗೆ ಬಾಪಣ್ಣ ಹೇಳುತ್ತಾನೆ ಮತ್ತು ವೇದ ಕಾಲದ ಗುಣಗಾನ ಮಾಡುತ್ತಾನೆ. ಅಲ್ಲದೇ ಸ್ತ್ರೀ ಕಾಲವನ್ನು ದೂಷಿಸುತ್ತಾನೆ… ಬಾಪಣ್ಣನದು ಒಂದು ಮನವಿ ಇದೆ. ಅದೆಂದರೆ ಹೆಂಗಸರಿಗೆ ಸಮಾನವಾಗಿ ಪುರುಷರಿಗೆ ಶಿಕ್ಷಣ ಹಕ್ಕು, ಆಸ್ತಿ ಹಕ್ಕು ಇತ್ಯಾದಿ ಹಕ್ಕುಗಳನ್ನು ನೀಡುವವರೆಗೆ ತಮ್ಮ ಹೋರಾಟ ನಡೆದಿರುತ್ತದೆ ಎಂಬುದು ಬಾಪಣ್ಣನ ಹಕ್ಕೊತ್ತಾಯವಾಗಿರುತ್ತದೆ… ಹೀಗೆಯೇ ಪುರುಷರ ಕಾಲದ ಕನಸಿನ ಮನವರಿಕೆಯ ಹಕ್ಕೊತ್ತಾಯವೂ ಆಗಿರುತ್ತದೆ ಮತ್ತದೇ ಮುಂದೊಂದು ಕಾಲದಲ್ಲಿ ಈ ಸ್ತ್ರೀಯರ ಕಾಲವನ್ನು ಮೈತ್ರಿರಾವ್ ಕನಸ್ಸಿನಲ್ಲಿ ಕಂಡವರಂತೆ ಶಿರಸಾವಸಿ ಪಾಲಿಸಿಕೊಂಡು ಬಂದವಳು. ಮತ್ತು ಅಂತೆಯೇ ತನ್ನ ಜೀವನದಲ್ಲೂ ಅಳವಡಿಸಿಕೊಂಡವಳು. ತನ್ನ ಗಂಡ ರಾಮುನನ್ನು ತನ್ನ ಅಂಕೆಯಲ್ಲೇ ಇಟ್ಟುಕೊಂಡು, ಸ್ತ್ರೀ ದಬ್ಬಾಳಿಕೆಯನ್ನು ನಡೆಸುತ್ತಲೇ ಬಂದವಳು. ಅಂತೆಯೇ ಮೈತ್ರಿರಾವ್ ತನ್ನ ಮಗಳು ಭೂಮಿರಾವ್ ಳನ್ನೂ ಬೆಳೆಸಿದವಳು. ಮಗ ದೀಪು ತನ್ನಪ್ಪ ರಾಮುನಂತೆಯೇ ಇಲ್ಲಿ ಸ್ತ್ರೀ ಪ್ರಧಾನ ಸಮಯದಲ್ಲಿ ದೀಪು ಕೂಡ ಸ್ತ್ರೀ ದಬ್ಬಾಳಿಕೆ ಅನುಭವಿಸಿದನು. ಮೈತ್ರಿರಾವ್ ಮಗಳು ಭೂಮಿರಾವ್ ಮಾತ್ರ ತನ್ನ ತಾಯಿ ಮೈತ್ರಿರಾವ್ ಳಂತೆ ಬೆಳೆದವಳು ಮತ್ತು ಸ್ತ್ರೀ ಪ್ರಧಾನವಾಗಿ ಈ ಸಮಾಜವನ್ನು ನೋಡುವವಳು. ಮೈತ್ರಿರಾವ್ ಸೊಸೆಯಾಗುವವಳು ಶರ್ಮಿಳಾರಾವ್ ಕೂಡ ಮೈತ್ರಿರಾವ್ ಳಂತೆಯೇ ಇರಬೇಕೆಂಬುದು ಮೈತ್ರಿರಾವ್ ಕನಸ್ಸು… ಹೀಗೆ ಸಾಗುವ ಈ ನಾಟಕ ಹಂದರ ಒಂದು ಕನಸ್ಸನ್ನು ಹುಟ್ಟು ಹಾಕುತ್ತದೆ. ಈ ಸುಂದರ ಭೂಮಿಯಲ್ಲಿ ಗಂಡು-ಹೆಣ್ಣು ಸಮವಾಗಿ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯು ಒಡಮೂಡಿಸುತ್ತದೆ. ಗಂಡು-ಹೆಣ್ಣು ಸಮವಾಗಿ ಬದಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಏಳುಸುತ್ತದೆ. ಅದು ಸಾಧ್ಯವಿದೆ ಆದರೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ‘ಮನುವಾದ’ವಾದದ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪುರುಷ ಪ್ರಾಧಾನ್ಯತೆಯ ಮನವರಿಕೆ ಆಗಿ ಹೆಣ್ಣು-ಗಂಡು ಸಮವಾಗಿ ಬಾಳಿದರೆ ಮಾತ್ರ ಎಂಬ ಅರಿವನ್ನು ಈ ನಾಟಕ ಮೂಡಿಸುತ್ತದೆ… ಅನಾದಿ ಕಾಲದಿಂದ ಹೆಣ್ಣು ಹುಟ್ಟಿದಾಗ ತಂದೆಯ ಆಶ್ರಯದಲ್ಲಿ, ದೊಡ್ಡವಳಾಗಿ ಮದುವೆ ಆಗುತ್ತಿದಂತೆ ಗಂಡನ ನೆರಳಲ್ಲಿ, ಮುದುಕೆಯಾಗುತ್ತಿದ್ದಂತೆ ಮಕ್ಕಳ ಆಶ್ರಯದಲ್ಲಿ ಬದುಕು ಸಾಗಿಸಬೇಕೆಂಬ ಅನ್ನುವ ದುರಾಲೋಚನೆಯ ಗಂಡಸರು ಮನುಶ್ಯಾಸ್ತ್ರ, ವೇದ, ಉಪನಿಷತ್ತು, ಪುರಾಣಗಳಲ್ಲಿ ಹೇಳುತ್ತಲೇ ಬಂದವು‌ ಸ್ಬಾರ್ಥ ಈ ಗಂಡು ಪ್ರಧಾನ ಗ್ರಂಥಗಳು. ಹೆಣ್ಣನ್ನು ಕಪಟಿ, ಮೋಸಗಾತಿ, ಮಾಯೆ, ಅಬಲೆ ಎಂಬ ಋಣಾತ್ಮಕತೆಯನ್ನು ಅಂಟಿಸಿಬಿಟ್ಟವು ಆ ಮನುವಿನ ಮಕ್ಕಳು. ಹೆಣ್ಣು ಒಂದು ವೇಳೆ ಬೀದಿಪಾಲಾದರೆ ಆ ಹೆಣ್ಣಿನ ಪರಿಸ್ಥಿತಿಯಂತೂ ಊಹಿಸಲೂ ಆಗದು… ಹಾಗಾಗಿಯೇ ಹೆಣ್ಣು ಬಾಯಿ ಮುಚ್ಚಿಕೊಂಡು ಪುರುಷ ಪ್ರಧಾನ ಸಮಾಜದಲ್ಲಿ ಬದುಕಬೇಕಾಗಿತ್ತು. ಆದರೆ ಕಾಲ ಚಕ್ರ ಬದಲಾ ಒಂದೇ ತರಹವಿರುದಿಲ್ಲ. ಈ ಕಾಲ ಚಕ್ರ ಉರುಳುತ್ತಿದ್ದಂತೆ ಬದಲಾಯಿತು ಸಮಾಜ. ಹೆಣ್ಣು ಗಟ್ಟಿಯಾದ ಧ್ವನಿಯಲ್ಲಿ ಪ್ರಶ್ನಿಸತೊಡಗಿದಳು ಈ ಮೊದಲಿನ ಸಮಾಜವನ್ನು. ಅಕ್ಷರಾಭ್ಯಾಸ ಮಾಡತೊಡಗಿದಳು. ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಡತೊಡಗಿದಳು. ಹಾಗೆಯೇ ರಾಜಕೀಯ ಇಚ್ಛಾಶಕ್ತಿ ಬೆಳೆಸಿಕೊಂಡಳು. ಪರಿಣಾಮವಾಗಿ ಬಿಬಿಪಿ ಪಕ್ಷ ಕಟ್ಟಿಕೊಂಡು ಆ ಮುಖೇನ ರಾಜಕಾರಣಕ್ಕೂ ಇಳಿದಳು.ಕಾಲಕ್ರಮೇಣ ಬದಲಾಯಿತು ಸಮಾಜ. ಮಹಿಳೆಯರು ಅಧಿಕಾರ ಚುಕ್ಕಾಣಿ ಹಿಡಿಯುತ್ತಿದಂತೇ ಈ ಮಹಿಳೆಯರಿಗೂ ಮದವೇರಿತು ಪುರುಷರನ್ನು ಕಾಲಕಸ ಮಾಡಿಕ್ಕೊಂಡನಾಟಕ ಈ ಮಹಿಳಾ ಮಣಿಗಳ ಪಿತ್ತವೂ ನೆತ್ತಿಗೇರಿದಂತೆ ಮೈತ್ರಿರಾವ್ ಪಾತ್ರ ಕುಣಿಯಲಾರಂಭಿಸಿತು… ಹೀಗೆ ಈ ನಾಟಕ ‘ನಾಳೆ ಬಪ್ಪುದು’ ಎಂಬುದನ್ನು ಸಾಹಿತಿ ಹನುಮಂತ ಹಾಲಿಗೇರಿಯವರು ಸಾಧರಪಡಿಸುತ್ತಾರೆ…. ಹೀಗೆ ಶಿಲಾಯುಗ, ವೇದಕಾಲ, ವರ್ತಮಾನ ಕಾಲ ಮತ್ತು ಭವಿಷ್ಯದ ಹೊಳವನ್ನು ಹೊಂದಿರುವ ಮಹಿಳೆಯರ ಕಾಲದ ಪಲ್ಲಟಗಳಿಂದ ಈ ನಾಟಕ ಕೂಡಿದೆ… *******

ಸ್ವಾತ್ಮಗತ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಹಾಣಾದಿ ಕಪಿಲ ಪಿ.ಹುಮನಾಬಾದ ಕೆಚ್ಚೆದೆಯ ಹೋರಾಟ “ಹಣಾದಿ”. ಹೌದು ಕೆಲವು ದಿನಗಳ ಹಿಂದೆ ಅಬ್ದುಲ್ ಹೈ (ಹೈ.ತೋ) ರವರ ಕಾವ್ಯಮನೆ  ಪ್ರಕಾಶನದಲ್ಲಿ ಮುದ್ರಿತವಾಗಿ ಲೇಖಕರು ಮಿತ್ರರಾದ “ಕಪಿಲ್ ಹುಮನಾಬಾದಿ” ರವರ “ಹಣಾದಿ” ಕಿರು ಕಾದಂಬರಿ ಲೋಕಾರ್ಪಣೆ ಗೊಂಡು ಓದುಗರನ್ನು ತನ್ನತ್ತ ಸೆಳೆದಿದೆ ಅದರಲ್ಲಿ ನಾನು ಒಬ್ಬ. ಅತಿ ಚಿಕ್ಕ ವಯಸ್ಸಿನಲ್ಲಿ ಅನುಭವಿ ಲೇಖಕನಂತೆ ಅದ್ಭುತವಾಗಿ ಹೆಣೆದಿದ್ದಾರೆ. ಬಾದಾಮು ಗಿಡದ  ಸುತ್ತ ಕತೆ ಹೆಣೆದ ರೀತಿ ವಿಶೇಷ ಎನ್ನವಂತಿದೆ. ಅಪ್ಪನನ್ನು ನೋಡಲು ಹಳ್ಳಿಗೆ ಮರಳಿದ ಮಗನಿಗೆ ಕಂಡಿದ್ದು ವಿಚಿತ್ರವಾದ ಊರ ಚಿತ್ರಣ. ಒಂಟಿಯಾದ ಅವನ ಮನೆಯಲ್ಲಿ ಭೂತಕಾಲದ ಚಿತ್ರಣ ಬರೆಯಲು ಉಳಿದಿದ್ದು ಗುಬ್ಬಿ ಆಯಿ ಸಂದರ್ಭಕ್ಕನುಸಾರವಾಗಿ ಅವನ ಪ್ರಶ್ನೆಗಳಿಗೆ ಉತ್ತರಿಸುವ ರೀತಿ ಸುತ್ತಲು ಮೋಡವಾದಾಗ ಮಳೆಸುರಿಸುವಂತಿದೆ. ತಲ್ಲಣಗೊಂಡ ಅವನ ಮನಸ್ಸು ಭಯದಲ್ಲೂ ಅಪ್ಪನನ್ನು ಕಾಣುವ ಹಂಬಲ ಎಳ್ಳಷ್ಟು ಕ್ಷೀಣಿಸದೆ ಗುಬ್ಬಿ ಆಯಿಯನ್ನು ಬೆಂಬಿಡದೆ ನೆಡೆದಿದ್ದು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಉತ್ತರ ಸಿಗದ ಅವನ ಪ್ರಶ್ನೆಗಳು ಹತಾಶನಾಗದೆ ಕುತುಹಲ ಕೆರಳಿಸುವಂತಿವೆ. ಬಾದಾಮು ಗಿಡವನ್ನು ಉಳಿಸಿಕೊಳ್ಳಲು ಅಂದರೆ ಪರೋಕ್ಷವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ರೀತಿ ಹಾಗೂ ಸ್ವತಂತ್ರವಾಗಿ ಬದುಕುವ ಹಕ್ಕಿಗಾಗಿ ಇಡೀ ಊರನ್ನೆ ಎದುರು ಹಾಕಿಕೊಂಡು ನೆಡೆಸಿದ ಹೋರಾಟ ಓದುಗನ ಮನಸ್ಸಿನಲ್ಲಿ ಅಚ್ಚುವತ್ತಿದೆ. ಊರಲ್ಲಿ ಯಾವುದಾದರು ಹೆಣ ಹೂಳಿದರೆ ಮಾತ್ರ ಹೊಟ್ಟೆ ತುಂಬಾ ಊಟ ಇಲ್ಲವಾದರೆ ಅರೆಹೊಟ್ಟೆ ಊಟ ಮಾಡುವ ಕಂಠಿಯ ಜಾತಿಯನ್ನು ತಿರಸ್ಕರಿಸಿ ಬದುಕು ಮತ್ತು ವೃತ್ತಿಯನ್ನು ಗೌರವಿಸುವ ರೀತಿ, ಅದಕ್ಕೆ ಅವನ ಅಪ್ಪನ ಕಾಳಜಿ, ಹಾಗೂ ಬದುಕಿನ ಹೋರಾಟಕ್ಕೆ ಕಂಠಿ ನೀಡಿದ ಸಾಥ್ ಚೆನ್ನಾಗಿ ಹೆಣೆಯಲಾಗಿದೆ.               ಅಪ್ಪನ ಈ ಹೋರಾಟದಲ್ಲಿ ಜಾತಿ, ಧರ್ಮ, ದೇವರು ಮತ್ತು ಸಿರಿತನ ವಿರುದ್ಧ ಗಟ್ಟಿಯಾಗಿ ನಿಂತಿರುವುದು ಬದುಕು. ಸೊಗಸಾಗಿ ಹೆಣೆದ ಕಥೆಯಲ್ಲಿ ವಿಶೇಷವಾದ ಆಕರ್ಷಣೆಯಾಗಿದೆ ಸ್ಥಳೀಯ ಭಾಷೆ. ಒಟ್ಟರೆಯಾಗಿ ಕಿರು ಕಾದಂಬರಿಯಲ್ಲಿ ಲೇಖಕರು ಸಮಾಜದಲ್ಲಿ ಬದುಕನ್ನು ಗಟ್ಟಿಗೊಳಿಸುವ ರೀತಿ ಹಾಗೂ ಅಸ್ತಿತ್ವ ಉಳಿಸಿಕೊಳ್ಳಲು ಹೆಣೆದಿರುವ ಹೋರಾಟದ ದಾರಿ ಓದುಗನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹಾಗೂ ವಿಶಾಲವಾದ  ಸಮಾಜದಲ್ಲಿ ಹಣಾದಿಯಲ್ಲೂ (ಬಂಡಿ ಜಾಡಿನಂತ ಚಿಕ್ಕ ಹಾದಿಯಲ್ಲಿ) ಪ್ರಾಮಾಣಿಕವಾದ ಉತ್ತಮ ಬದುಕು ಕಟ್ಟಿ ಕೊಳ್ಳಬಹುದು ಮತ್ತು ಬದುಕು ನಿರಂತರ ಎನ್ನುವ ಒಳ್ಳೆಯ  ಸಂದೇಶವನ್ನು ನೀಡಿದ್ದಾರೆ.       ಜೀವನದ ಮಹತ್ವ ತಿಳಿಸುವ ಹಾಗೂ ಸಮಾಜಕ್ಕೆ ಸಂದೇಶ ಸಾರುವ ಹೊಸ ಲೇಖಕರ ಹೊಸ ಹೊಸ ವಿಚಾರಗಳು ಹೊರ ಹೊಮ್ಮಲಿ ಎನ್ನುವುದು ಮತ್ತು ಬರಹದ ಮೂಲಕ ಸಮಾಜವನ್ನು ತಿದ್ದುವ ಕೆಲಸಗಳು ಸದಾ ಜಾರಿಯಲ್ಲಿರ ಬೇಕು ಎನ್ನುವುದು ಆಶಯ… ************************ ನಾಗರಾಜ ಮಸೂತಿ…      

ನಾನು ಓದಿದ ಪುಸ್ತಕ Read Post »

ಇತರೆ

ಲಹರಿ

ನಿನಗಾಗಿ ಶಾಲಿನಿ ಆರ್. ಹೌದು, ಬೆಳಗ್ಗೆ ಬೆಳಗ್ಗೆ ಆ ಪ್ರಾಥಃ ಸ್ಪರ್ಶ ಇರತ್ತಲ್ಲ ಅದನ್ನ ಆಸ್ವಾದಿಸೋದೆ ಒಂದು ಹಬ್ಬ ನನಗೆ.ಇದನ್ನ ಬರಿವಾಗ ಕೋಗಿಲೆ ಹಾಡ್ತಿದೆ. ಜಸ್ಟ ವಾಕಿಂಗ್ ಮುಗ್ಸಿ ಬಂದೆ. ಬಂದ್ ಕೂಡ್ಲೆ ಮನದಲ್ಲಿ ಒಂದು ಆಲಾಪನೆ ಶುರುವಾಯಿತು. ಅದಕ್ಕೆ ಈ ನೂರಾರು ಪದಗಳ ಹರವನ್ನ ,ಬದುಕಿನ‌ ಹದಗಳನ್ನ ಹರಡಿಕೊಂಡು ಕುಳಿತೆ.    ಐದುವರಿಯಿಂದ ಆರು ಇಪ್ಪತ್ತು ರವರೆಗೆ  ವಾಕಿಂಗ್  ಹೋಗಿದ್ದೆ.ದಾರಿಲಿ, ಪಾರಿಜಾತದ ಪರಿಮಳ ,ಮಲ್ಲಿಗೆ ಸುವಾಸನೆ, ದೂರದಲ್ಲಿ ಕೂಗೋ ನವಿಲು, ಕೋಗಿಲೆಯ ಆ ಪಂಚಮಸ್ವರ ಜೊತೆಗೆ ನನ್ನ ಪುಟ್ಟ ಜಗತ್ತಿನ ಒಲವು ನೀ ನಿನ್ನ ಜೋಡಿ ಅದನ್ನೆಲ್ಲ ಮನಸ್ಸಿನಲ್ಲಿ ಅನುಭವಿಸುತ್ತ ಮನೆಗೆ ಬಂದೆ .ನೆನ್ನೆ ರಾತ್ರಿ ಮಾಡಿದ ಈ ಹಲ್ವನ ಡೈಮಂಡ್ ಶೇಪಲ್ಲಿ ಕಟ್ ಮಾಡಿ ಪಿಕ್ ತೆಗೆದು ಇವತ್ತಿನ ಶುಭೋದಯ ಕಳ್ಸಿದೀನಿ ನೋಡು. ಇವತ್ತಿನ ಈ ಬರಹ ಕೂಡ ಹಲ್ವಾ ನೆಪಾನೆ. ಅಷ್ಟು ಚೆಂದದ ಹದಾ ಬಂದಿದೆ. ಪ್ರತಿಭಾರಿನು ಬರತ್ತೆ. ಹಲ್ವಾ , ನೆನಸಿದ ರಾಗಿನ ರುಬ್ಬಿ ಅದರ ಹಾಲು ತೆಗೆದು ಸೋಸಿ ಎಕ್ದಂ ಪೈನ್ ಹಾಲ ಬರಬೇಕು ಹಾಗೆ. ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲ ಬೆರೆಸಿ. ಅದನ್ನ ಕೈ ಬಿಡದ ಹಾಗೆ ಬೆರೆಸ್ತಾನೆ ಇರಬೇಕು ಸಣ್ಣ ಉರಿಯಲಿ. ಅದನ್ನ ಗುರಾಡ್ತಾನೆ ಇರಬೇಕು, ಕೈ ನೋವಾಗತ್ತೆ ಗೊತ್ತಾ. ಗುರಾಡ್ತಾ ಗುರಾಡ್ತ ಅದು ಗಟ್ಟಿಯಾಗ್ತಾ ಬೆಂದು ಬೆಂದು ಬರತ್ತೆ. ಆಗ ಒಂದು ಹದ ಬರತ್ತೆ. ಎಂಥ ಅನುಭವ ಗೊತ್ತಾ ಅದು. ಅದು ಜೀವನದ ಅನುಭಾವಾವೆ ಸರಿ. ಬದುಕು ಹೀಗೆ ಅಲ್ವ , ಶರಣಾಗತಿಯ ಸಮರ್ಪಣೆ. ಜೀವನದಲ್ಲಿ ಏನು ಅರಿದೇ ಇದ್ದಾಗ ಬೆಸೆವ ಸಂಬಂಧಗಳು ಒಂದು ಹದಕ್ಕೆ ನಿಲುಕಿ ಬೆಂದು ನೊಂದು ಗಟ್ಟಿಯಾಗಿ ನಮ್ಮನ್ನೆಲ್ಲ ಒಂದುಗೂಡಿಸೋದು.      ‌         ಒದ್ದಾಡ್ತ ಇರತ್ತೆ ಬೆಲ್ಲ ರಾಗಿ ಎರಡು ಬೆರೆಯೋಕೆ, ಆದರೆ ಬೆರೆತ ಮೇಲೆ ಅದಕ್ಕೆ ಒಂದು ಹಿಡಿತ ಸಿಕ್ಕತ್ತೆ. ಆಗ ನೋಡಬೇಕು ಅದರ ಬಣ್ಣ ಬದಲಾಗೋ ರೀತಿ,  ಅಲ್ಲಿ ಪ್ರೀತಿ ಮೇಳೈಸಿ ಒಂದು ಹೊಂಬಣ್ಣಬರತ್ತೆ. ನೋಡೋಕೆ ಚೆಂದ ಗೊತ್ತಾ. ರಾಗಿ, ಬೆಲ್ಲ ಎರಡೂ ಬೇರೆ ಬೇರೆ ಅಸ್ಮಿತೆ  ಹೊಂದಿದ್ದರು, ಎರಡು ಬೆರೆತು ಒಂದಾಗೋ ಪರಿನೆ ಅದ್ಭುತ. ಎರಡಕ್ಕೋ ಆದ ಬದಲಾವಣೆ ಈ ಹದ, ಚೆಲುವಿದ್ದರೇನು, ಸಿರಿಯಿದ್ದರೇನು ನಲವಿಲ್ಲದ ಬದುಕಿಗೆ . ಪ್ರೀತಿ ಅಂದರೇನೆ  ಬದಲಾವಣೆ , ಅದರಿಂದ ಸಿಗೋ ಈ ನಿರಾಳತೆ, ಸ್ವಭಾವಗಳ ರೂಪಾಂತರ, ಇದೇ ಅಲ್ವೆನೋ  ಮೂಲ ಖುಷಿಗೆ ಕಾರಣ. ನಿನ್ನ ಖುಷಿಗೆ ನಾ ಕಾರಣ , ನನ್ನ ಖುಷಿಗೆ ನೀ ಅನ್ನೋ ಮನೋಭಾವ ಸದ್ದಿಲ್ಲದೆ ಜಾಗ ಮಾಡಿ ಮನದ ಗುಡಿಸಲಲ್ಲಿ ಕೂರತ್ತಲ್ಲ. ಅದರ ಜೋಡಿ ತುಟಿಯಂಚಿನಲಿ ಕಂಡು ಕಾಣದ ಹಾಗೆ ಮೂಡಿ ಬರುವ ಈ ನಗು ಕೂಡ ಖುಷಿನೆ . ಇದೇ ಮುಂದೆ ಬರುವ ದಿನಗಳ ಭರವಸೆಗಳ ಬೆಳೆ.‌      ಈ ಹೊತ್ತಲ್ಲಿ  ಹಲ್ವಾ ಗಟ್ಟಿಯಾಗಿ ಮತ್ತಷ್ಟು ಗಟ್ಟಿಯಾಗತ್ತ ಹೋಗತ್ತೆ . ಈಗ ನಿಜವಾದ ಟೆನಷ್ಷನ್ , ಒಂದು ಕ್ಷಣ ಮೈಮರೆತರು.ಹಲ್ವ ಹಳ್ಳ ಹಿಡಿಯೋ ಹೊತ್ತು. ಗಂಟಾಗಿಲ್ಲ ಅನ್ನೋ ಮನದಟ್ಟು ಆಯ್ತಾ, ಆದರೂ, ಬಿಡದೆ ಕೈಯಾಡ್ಸತ್ತ , ಒಂದು ನೆಮ್ಮದಿಯ ನಿಟ್ಟುಸಿರು ಬಿಡ್ತಿನಿ. ಈಗ ಪರಿಪೂರ್ಣ ಬೆಂದಿದೆ ಅನ್ನೊ ಹೊತ್ತಿಗೆ ಅದನ್ನ ಮುಚ್ಚಿ ಮತ್ತಷ್ಟು ಹೊತ್ತು ಇಡೋದು. ನಂತರ ತಟ್ಟೆಗೆ ತುಪ್ಪ ಸವರಿ, ಬೆಂದ ಹಲ್ವಾ ಹಾಕಿ ಚೆನ್ನಾಗಿ ಸಮಮಾಡಿ ಇಡೋದು .ಆಗ್ಲೆ ಹಲ್ವಾ ಮಾಡಿದ ಅನುಭವ ಅನುಭಾವ ಆಗಿರುತ್ತೆ. ಹಲ್ವಾ ಮಸ್ತ ಬಂದಿದೆ.  ಆ ಖುಷಿ ನಿನ್ನೊಟ್ಟೊಗೆ  ಹಂಚ್ಕೋಬೇಕಿತ್ತು, ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ ಅನ್ನೋ ಹಾಡು ಕಿವಿಲಿ ಗುನುಗುಟ್ಟುತಿದೆ. ಅದೇ ಪ್ರೇಮ ಹಬ್ಬಿದ ಪರಿಲಿ ಈ ಬರಹ ನಿ‌ನಗಾಗಿ ಬರಿತಿದೀನಿ. ಮತ್ತೆ ಹಲ್ವಾ ನೋಡಿ ಮನಸ್ಸು  ಮತ್ತೆ ಜಪ ಮಾಡ್ತಿದೆ. ನಮ್ಮ ಪ್ರೀತಿ ಮತ್ತಷ್ಟು ಅದರ ಮೃದುತ್ವ ಪಡೆದು ಕೂಡಿ ಕೊಳ್ಳಲಿ ಅಂತ ಮನಸ್ಸು ಹೇಳ್ತಿದೆ. ಅನುಭವನೇ ಹಾಗೆ , ಅದು ಅಡಿಗೆ ಮನೆದಿರಲಿ ಅದರಾಚೆಗಿನ ಪ್ರಕೃತಿಯ ಎಲ್ಲ ಪ್ರಕಾರಗಳಲ್ಲೇ ಇರಲಿ, ಪ್ರತಿಯೊಂದರಲ್ಲೂ ನಾವು ಕಾಣೋ ಪ್ರೀತಿ , ಪ್ರೇಮದ ನಂಟು  ಹಬ್ಸೋ ರೀತಿಲಿ ನನ್ನ ನಾನು ನನ್ನತನ ಮಾತ್ರ ಉಳಿಸಿ ಮೆರೆಸೋ ತಂತ್ರ ಅದನ್ನ ಬಳಸೋ ಬಾಳು ಎಲ್ಲ ಸೋಜಿಗಾದ ಸೂಜುಮಲ್ಲಿಗೇನೆ ಅಲ್ವಾ…? *************

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಶಬರಿ ಡಾ.ಗೋವಿಂದ ಹೆಗಡೆ ಯಾವುದೋ ಬೇಡರ ಹುಡುಗಿ ಹೆಸರಿಲ್ಲದೇ ಮರೆಗೆ ಸಲ್ಲುವ ಬದಲು ‘ಶಬರಿ’ ಎನಿಸಿ ತಪಕೆ ಹೆಸರಾಗಿ ನಿಂತಿದ್ದು ರಾಮನ ಮಹಿಮೆಯೇ ಶಬರಿಯದೇ ಕನಸ ಕಂಡಿರಬಹುದೇ ಹುಡುಗಿ ಕುದುರೆಯೇರಿ ಬರುವ ಯಾವುದೋ ಉತ್ತರದ ರಾಜಕುವರನದು ಹುಡುಗಿ ಹೆಣ್ಣಾಗಿ ಹಣ್ಣಾಗಿ ಹಪ್ಪು ಮುದುಕಿಯಾಗುವವರೆಗೂ ಕಾದು ಕಾದು ಪಾತ್ರ ಬದಲಿಸಿ ಹರಿದಿರಬೇಕು ನದಿ ಕಾದ ಕಾಯುವ ಕಾವಿನಲ್ಲಿ ಕಾಮನೆಗಳು ಕರಗಿ ನೋಡುವ ಊಡುವ ಬಯಲ ಬಯಕೆ ಉಳಿದು ಕಣ್ಣು ಮುಚ್ಚುವ ಮೊದಲು ಕಂಡೇನೇ ಎಂದು ಕಣ್ಣ ಕೊನೆಯಲ್ಲೆ ಜೀವವನಿರಿಸಿ ಕಾದಿದ್ದಕ್ಕೆ ಬಂದ ಉತ್ತರವಾಗಿ ಅರಸುಮಗನಾಗಲ್ಲ ತಾಪಸಿಯ ವೇಷದಲ್ಲಿ ಕೊನೆಗೂ ಬಂದ ಘನಿತ ಮೋಡ ಎಂಥ ಮಳೆ ಬಂದಿರಬೇಕು ಆಗ! ಯಾವ ಹಣ್ಣನ್ನು ಯಾರು ತಿಂದಿರಬೇಕು ಕಳಿತ ನೇರಳೆಯಂಥವನಿಗೆ ನೇರಳೆಯ ಕೊಟ್ಟಳೇ ಮುದುಕಿ ಕಚ್ಚಿದ್ದಳಂತೆ, ಎಂಜಲು ಹಣ್ಣು ಹಿಡಿದು ಕಾದಿದ್ದಳಂತೆ -ಆಹಾ! (ರಾಮಫಲವನ್ನು ಸವಿದಳೇ ಕಣ್ಣಲ್ಲೇ) ನಡುಗು ಕೈ ಮೈಗಳಲ್ಲಿ ಏನು ಕೊಟ್ಟಳೋ ಪಡೆದಳೋ ಯಾರಿಗೆ ಗೊತ್ತು ವಿರಹ ತಪ್ತ ರಾಮ ; ರಾಮ ತಪಿತೆ ಶಬರಿ ಇದ್ದೀತು ಅವನಿಗದು ಎಂದಿನಂಥದೇ ಇನ್ನೊಂದು ಹಗಲು ಶಬರಿಗೋ ಸಂಜೆಯರಳಿ ಹಗಲು ಸಂಜೆಯಿರದ ಹಗಲು *******

ಕಾವ್ಯಯಾನ Read Post »

You cannot copy content of this page

Scroll to Top