ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿಗೆ ರಾಮಾನುಜ ನೆನಪು

Home

ಡಾ.ನಾ.ಗೀತಾಚಾರ್ಯ

ದಲಿತರನ್ನು ಬಲಿತರು ಹೆಗಲಲಿ ಹೊತ್ತು ದೇವಾಲಯದರ್ಶನ ಮಾಡಿಸುವ ಹೊತ್ತು
ಎಂದು ಬರುವುದೊ ಎಂದು ಕಾಯುತಿಹೆ ನಾನಂತು. ಜಾತ್ಯತೀತ ಭಾರತದ ಸಮಾನತೆಯ ಈ ಹೊತ್ತು.

ಇದು ಕನಸಲ್ಲ, ಹುಚ್ಚಲ್ಲ ,ನಡೆದಿದೆ ಸತ್ಯಕಥೆ. ತಿರುಪ್ಪಾಣರೆಂಬ ದಲಿತ ಆಳ್ವಾರರ ಜೀವನಗಾಥೆ. ಮುನಿಯೆ ವಾಹನನಾಗಿ ಗರ್ಭಗುಡಿಗೇ ಹೊತ್ತೊಯ್ದ ಕಥೆ.ಸಾವಿರವರ್ಷದ ಇತಿಹಾಸ ಮರುಕಳಿಸಬಾರದೇಕೆ.

ಅಂಬೇಡ್ಕರ್ ಗಾಂಧಿ ಬಸವರಿಗೂ ಮೊದಲೆ. ರಾಮಾನುಜರಿತ್ತಿದ್ದರು ದಲಿತರಿಗೆ ಹೆಗಲೆ.
ದಲಿತರ ಕಾಲ್ತೊಳೆದ ಕೆರೆನೀರ ಕುಡಿದಿದ್ದರಾಗಲೆ. ‘ತಿರುಕುಲ’ರೆಂದು ಕೂರಿಸಿದ್ದರು ದೇವರ ಬಗಲೆ.

ಅಂಬೇಡ್ಕರರೆ ನೀವೇನೋ ಆದಿರಿ ದಲಿತ ಸೂರ್ಯ.
ಸಂವಿಧಾನದಲಿ ಕೊಟ್ಟಿರಿ ಸಮಾನತೆ, ರಕ್ಷಣೆ, ತೂರ್ಯ.
ಎತ್ತಿಹಿಡಿದಿರಿ ವಸುದೈವ ಕುಟುಂಬದ ಧ್ಯೇಯ. ಆದರಿನ್ನೂ ಆಗಿಲ್ಲ ನಮಗೇ ಸೂರ್ಯೋದಯ.

ರಾಮಾನುಜ ಸಹಸ್ರಮಾನದ ಈ ಹೊತ್ತಿನಲ್ಲೂ ದಲಿತರ ಮೇಲಿನ ದೌರ್ಜನ್ಯ ಅವ್ಯಾಹತವಯ್ಯೊ. ಮುಟ್ಟಿದರೆ, ನೀರೆತ್ತಿದರೆ, ಎದುರಾಡಿದರೆ ಮೈಲಿಗೆಯ ಘಾತದಲೆ ಬಿದ್ದಿಹರಲ್ಲ ಬಲಿತರೆಲ್ಲ, ಅಯ್ಯ

ಎದ್ದೇಳಿ ಬಲ್ಲಿದರೆ ಬಲ್ಮೆತೋರಿ ಸಂವಿಧಾನಕೆ. ಮುನಿವಾಹನರೆನಿಸಿ ದಲಿತರಿಗೆ, ಹಾರಿಸಿ ಪತಾಕೆ. ಭಕ್ತಿಸಾಮ್ರಾಜ್ಯದಲಿಹುದು ದಲಿತ ಭಕ್ತರ ಸಾಲುಭಂಜಿಕೆ. ಲೋಕಸಾರಂಗರಾಗಿ ಲೋಕಕೆ ಸಾರಲೇಕೆ ಅಂಜಿಕೆ

*****

ಟಿಪ್ಪಣಿಗಳು:

1)ತಿರುಪ್ಪಾಣಾಳ್ವಾರ್: 12ಜನ ಆಳ್ವಾರ್ ಸಂತರಲ್ಲಿ ಒಬ್ಬರಾದ ದಲಿತ ಭಕ್ತರು. (8-9ನೇ ಶತಮಾನ)
2) ಮುನಿಯ ವಾಹನರಾಗಿ: ಈ ಆಳ್ವಾರರು ಶ್ರೀರಂಗದ ದೇವಾಲಯದ ಮುಂದೆ ಕುಳಿತು ನಿತ್ಯ ವೀಣೆ ನುಡಿಸುತ್ತ ಧ್ಯಾನದಲ್ಲಿರುತ್ತಿದ್ದರು. ಒಂದು ದಿನ ದೇವಾಲಯದ ಪ್ರಧಾನ ಅರ್ಚಕರಾದ ಲೋಕಸಾರಂಗರು ಕಾವೇರಿಯಿಂದ ದೇವರಿಗೆ ಮಡಿನೀರು ಒಯ್ಯುವಾಗ ಅಡ್ಡವಿದ್ದ ಇವರನ್ನು ಕೂಗಲು,ಭಕ್ತಿಯಲಿ ಮೈಮರೆತು ಕೇಳಿಸದಿರಲು, ಸಣ್ಣ ಕಲ್ಲು ಎಸೆದಾಗ ಎಚ್ಚರವಾಗಿ ದೂರ ಸರಿಯುವರು. ಸಾರಂಗರು ದೇವರಿಗೆ ಅಭ್ಯಂಜನ ಮಾಡುವಾಗ ಹಣೆಯಲ್ಲಿ ರಕ್ತ ಕಂಡು ಗಾಬರಿಯಾಗಲು ‘ನನ್ನ ಭಕ್ತನಿಗೆ ಹೊಡೆದು ಅಪಚಾರವಾಗಿದೆ, ಕೂಡಲೆ ಅವನನ್ನು ಹೆಗಲಲಿ ಹೊತ್ತು ಇಲ್ಲಿಗೆ ಕರೆದುತಾ’ರೆಂದು ದೇವ ವಾಣಿಯಾಗಲು,ಸಾರಂಗರು ಎಲ್ಲರನ್ನೂ ಕೂಡಿಕೊಂಡು ಆಳ್ವಾರರ ಬಳಿ ಹೋಗಿ ತಪ್ಪೋಪ್ಪಿ ನಮಸ್ಕರಿಸಿ ಒಲ್ಲೆನೆಂದರೂ ಬಿಡದೆ ಹೆಗಲಲಿ ಕೂರಿಸಿಕೊಂಡು ದೇವರಮುಂದಿಳಿಸುವರು. ಇದರಿಂದ ಇವರಿಗೆ ‘ಮುನಿವಾಹನ’ ಹೆಸರೂ ಇದೆ.
3) ದಲಿತರಿಗೆ ಹೆಗಲು: 11ನೇ ಶ.ದಲ್ಲೇ ರಾಮಾನುಜಾಚಾರ್ಯರು ದಲಿತ ಶಿಷ್ಯ-ದನುರ್ದಾಸ-ನ ಹೆಗಲ ಆಸರೆಯಲ್ಲಿರುತ್ತಿದ್ದರು.
4)ದಲಿತರ ಕಾಲ್ತೊಳೆದ: ಕೆರೆಯಲ್ಲಿ ದನುರ್ದಾಸನ ಪಾದ ತೊಳೆದ ನೀರನ್ನು ತೀರ್ಥವಾಗಿ ಸ್ವೀಕರಿಸಿ ಭಕ್ತರ ಶ್ರೀಪಾದ ತೀರ್ಥದ ಮಹತ್ವ ಸಾರಿದ್ದರು.
5)ತಿರುಕುಲದವರು: ದೆಹಲಿಯಿಂದ ಚೆಲುವನಾರಾಯಣನ ವಿಗ್ರಹ ತರಲು ತಮಗೆ ಜೊತೆಯಾಗಿದ್ದ ದಲಿತರನ್ನು ತಿರುಕುಲತ್ತಾರ್ ( ಶ್ರೇಷ್ಠ ಕುಲದವರು)ಎಂದು ಕರೆದು ದೇವಾಲಯದೊಳಗೆ ಕರೆದೊಯ್ದು ಅವರಿಂದಲೇ ಉತ್ಸವವನ್ನು ಹೊರಡಿಸುವ ಸಂಪ್ರದಾಯ ಹಾಕಿದರು. ಇದು ಈಗಲೂ ಮೇಲುಕೋಟೆಯಲ್ಲಿ ನಡೆಯುತ್ತಿದೆ.

About The Author

Leave a Reply

You cannot copy content of this page

Scroll to Top