ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಭ್ರಮ

ಲೋಕಾರ್ಪಣೆ ಹೆಚ್.ಎಸ್.ಸುರೇಶ್ ಸೂರ್ಯನ ಕಥೆಗಳು(ಕಥಾಸಂಕಲನ) ಹೊಗರೆ ಖಾನ್ ಗಿರಿ(ಕಾದಂಬರಿ) ನಮ್ಮೂರಿನ ಕಾಡು ಮಲ್ಲಿಗ(ಕಥಾ ಸಂಕಲನ) ತೀರ್ಪು(ಕಥಾ ಸಂಕಲನ) ಹೀಗೂಇದ್ದನೇ ರಾವಣ(ನಾಟಕ) ಪ್ರಶ್ನಿಸುವ ಸಾಹಿತ್ಯಕ್ಕೆ ದೇಶದ್ರೋಹದ ಪಟ್ಟ “ಇಂದುಜನಪರ ಸಾಹಿತ್ಯವು ಆತಂಕದ ಸ್ಥಿತಿಯಲ್ಲಿದೆ.ವ್ಯವಸ್ಥೆಯ ಲೋಪದೋಷಗಳನ್ನುಪ್ರಶ್ನಿಸುವ ಸಾಹಿತಿಗಳಿಗೆ ದೇಶದ್ರೋಹಿಗಳ ಪಟ್ಟ ಕಟ್ಟುವಹೊಸಸಂಪ್ರದಾಯ ಪ್ರಾರಂಭವಾಗಿದೆ: ಎಂದು ಹಿರಿಯ ಸಾಹಿತಿ ಶ್ರೀ ಕು.ಸ.ಮಧುಸೂದನರಂಗೇನಹಳ್ಳಿ ವಿಷಾದಿಸಿದರು. ಶ್ರೀಯುತರು ಲೋಕಾರ್ಒಣೆ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು  ತರೀಕೆರೆಯಲ್ಲಿ ಬಾನುವಾರ (17-11-2019ರಂದು)ಶ್ರೀ ಹೆಚ್.ಎಸ್.ಸುರೇಶ್ ಅವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದ್ಲಲ್ಲಿ ಅವರು ಮಾತನಾಡುತ್ತ “ಸಾಹಿತಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡು,ಸತ್ಯಹುಡುಕಬೆಕು”ಎಂದು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನಮಾಜಿ ಅದ್ಯಕ್ಷರಾದ ಶ್ರೀ ಹೆಚ್. ಚಂದ್ರಪ್ಪನವರು ಅದ್ಯಕ್ಷತೆ ವಹಸಿದ್ದು,ಕಿರುತೆರೆಕಲಾವಿದೆ ಶ್ರೀಮತಿ ನಂದಿನಿ ಪಟವರ್ಷನ್ ಉದ್ಘಾಟನೆ ಮಾಡಿದರು.ಸಾಹಿತಿಗಳಾದಶ್ರೀನಾಗೇನಹಳ್ಳಿತಿಮ್ಮಯ್ಯ,ಶ್ರೀಭಗವಾನ್,ಎಂ.ಕೆ.ವಿಜಯಕುಮಾರ್,ಶ್ರೀಓಂಕಾರಪ್ಪನವರು ಉಪಸ್ಥಿತರಿದ್ದು ಕೃತಿಗಳ ಬಗ್ಗೆ  ಮಾತನಾಡಿದರು.

ಪುಸ್ತಕ ಸಂಭ್ರಮ Read Post »

ಇತರೆ

ವಿಶ್ಲೇಷಣೆ

ರಾಮ-ರಾಮಾಯಣ ಅಯೋಧ್ಯಾರಾಮ. ಗಣೇಶ ಭಟ್ ಶಿರಸಿ ..       ಅಯೋಧ್ಯೆಯಲ್ಲಿ  ರಾಮಮಂದಿರ  ನಿರ್ಮಾಣಕ್ಕೆ  ಹಸಿರು  ನಿಶಾನೆ ಸಿಕ್ಕಿರುವುದರಿಂದ    ಜನಸಾಮಾನ್ಯರು ನಿರಾಳವಾಗಿದ್ದರೆ, ರಾಜಕೀಯ  ಪಕ್ಷಗಳಿಗೆ   ಚಿಂತೆ  ಶುರುವಾಗಿದೆ.   ಬಹಳಷ್ಟು ವರ್ಷಗಳಿಂದ ಸಮಸ್ಯೆಯನ್ನು ಜೀವಂತವಾಗಿಟ್ಟು,  ಜನರನ್ನು  ಮರುಳು ಮಾಡಿ ಮತ ಗಳಿಸುತ್ತಿದ್ದವರಿಗೆ  ಇನ್ನೊಂದು ಹೊಸ ಸಮಸ್ಯೆ  ಹುಟ್ಟು ಹಾಕುವ  ಕುರಿತು   ಯೋಚಿಸುವ  ಪರಿಸ್ಥಿತಿ  ಎದುರಾಗಿದೆ.  ಇನ್ನು ರಾಮನನ್ನು  ಬಹುಬೇಗ  ನೇಪಥ್ಯಕ್ಕೆ ಸರಿಸಲಾಗುತ್ತದೆ.  ರಾಮಾಯಣದ  ಅಯೋಧ್ಯೆಯ  ರಾಮಚಂದ್ರನಿಗೂ, ಭಾರತೀಯ  ದರ್ಶನಶಾಸ್ತ್ರದ  ರಾಮನಿಗೂ ಏನಾದರೂ ಸಂಬಂಧವಿದೆಯೇ ಎಂಬ ಕುರಿತು ಪುನಃ ಚಿಂತನೆ  ನಡೆಸಬೇಕಾದ  ಸಮಯವಿದು.      ಭಾರತೀಯ ಚಿಂತನೆಯನ್ವಯ ರಾಮ ಎಂದರೆ ಪರಮ ಪುರುಷ,   ಪುರುಷೋತ್ತಮ, ಪರಮಪ್ರಜ್ಞೆ; ಜನಸಾಮಾನ್ಯರ ಭಾಷೆಯ  ದೇವರು.  ಸಂಸ್ಕೃತದ  ಮೂಲಧಾತು  ‘ರಮ್’  ಗೆ  ಗಂಯ್  ಪ್ರತ್ಯಯ ಸೇರಿಸಿದಾಗ  ರಾಮ ಎಂದಾಗುತ್ತದೆ.   ಯಾವ  ಅಸ್ತಿತ್ವವು  ಸಂತೋಷವನ್ನು ನೀಡುತ್ತದೋ, ಮನಕ್ಕೆ  ಆನಂದವನ್ನು  ಒದಗಿಸುತ್ತದೋ ಅದುವೇ ರಾಮ.  ಅಮಿತ ಆನಂದದ ಮೂರ್ತ ರೂಪವೇ ರಾಮ.    ರಾಮ ಶಬ್ದಕ್ಕೆ   ಮೂರು ರೀತಿಯ  ಪ್ರಮುಖ ವ್ಯಾಖ್ಯೆಗಳಿವೆ. ‘ರಮಂತೇ ಯೋಗಿನ ಯಸ್ಮಿನ್’ ಅಂದರೆ  ಯಾವುದರಿಂದ  ಯೋಗಿಗಳು  ಆನಂದ ಪಡೆಯುತ್ತಾರೋ  ಅದು ರಾಮ.  ಯೋಗ ಎಂದರೆ ಜೀವಾತ್ಮ ಪರಮಾತ್ಮನಲ್ಲಿ  ಒಂದಾಗುವುದು;  ಈ ಉದ್ದೇಶವನ್ನು  ಗುರಿಯಾಗಿಟ್ಟುಕೊಂಡು ಬದುಕುವವರು ಯೋಗಿಗಳು. ಯೋಗಿಯಾದವರು  ಅಲ್ಪಸುಖದಿಂದ ಅಥವಾ ತಾತ್ಕಾಲಿಕ ಸಂತೋಷದಿಂದ  ತೃಪ್ತರಾಗುವುದಿಲ್ಲ.  ಅವರಿಗೆ ಬೇಕಾದುದು ಮಿತಿಯಿಲ್ಲದಷ್ಟು  ಸುಖ; ಸುಖ ಅನಂತವಾದಾಗ ಅದು ಆನಂದ  ಎನಿಸಿಕೊಳ್ಳುತ್ತದೆ.  ಅನಂತವಾದ  ಸುಖವನ್ನು  ನೀಡುವ  ಸಾಮಥ್ರ್ಯ ಅನಂತವಾದ  ಅಸ್ತಿತ್ವಕ್ಕೆ  ಮಾತ್ರ ಇರಲು ಸಾಧ್ಯ. ಈ ಅನಂತತೆಯನ್ನೇ ದಾರ್ಶನಿಕರು ಪರಮಾತ್ಮ, ಪರಮಪ್ರಜ್ಞೆ ಮುಂತಾಗಿ ಕರೆದಿದ್ದಾರೆ.  ಆದ್ದರಿಂದ ಯೋಗಿಗಳಿಗೆ  ಪರಮಾನಂದವನ್ನು ನೀಡುವ ಅಸ್ತಿತ್ವವೇ ರಾಮ.     ರಾಮನ ಇನ್ನೊಂದು ವ್ಯಾಖ್ಯೆಯೆಂದರೆ ‘ರಾತಿ ಮಹೀಧರಮ್  ರಾಮ’. ರಾತಿ ಎಂದರೆ  ಅತ್ಯಂತ  ಉಜ್ವಲವಾದದ್ದು.  ತಾನು ಸ್ವತಃ  ಪ್ರಕಾಶಿಸುವದರ  ಜೊತೆಗೆ  ಇತರರಿಗೂ ಪ್ರಭೆ ಬೀರುವ  ಸಾಮಥ್ರ್ಯವನ್ನು   ಒದಗಿಸುವ  ಅಸ್ತಿತ್ವವೇ ರಾಮ. ಚಂದ್ರನ  ಪ್ರಭೆಗೆ  ಪೃಥ್ವಿ ಕಾರಣ, ಪೃಥ್ವಿಯ ಪ್ರಭೆಗೆ  ಸೂರ್ಯ, ಸೂರ್ಯನ ಪ್ರಕಾಶಕ್ಕೆ ಕಾರಣ ಸೃಷ್ಟಿಕರ್ತ  ಅಥವಾ ಪರಮಾತ್ಮ. ಈ ವ್ಯಾಖ್ಯೆಯನ್ವಯವೂ  ರಾಮ ಎಂದರೆ  ಪರಮ ಪುರುಷ. ರಾತಿಯ  ರಾ+ ಮಹೀಧರದ ‘ಮ’ ಸೇರಿದಾಗ ರಾಮ.    ‘ರಾವಣಸ್ಯ ಮರಣಮ್  ರಾಮ’  ಎಂಬುದು ರಾಮ ಶಬ್ದದ ಇನ್ನೊಂದು  ವ್ಯಾಖ್ಯೆ.   ರಾವಣನ  ಮರಣಕ್ಕೆ ಕಾರಣವಾಗುವುದೇ ರಾಮ.  ರಾವಣ ಎಂದರೆ ಭ್ರಷ್ಟಮನ. ರೌ+ಅಣ =ರಾವಣ. ಯಾವುದರಿಂದ ಮನಸ್ಸು ಅಧಃಪತನದತ್ತ ಚಲಿಸುತ್ತದೋ ಅದು ರಾವಣ.  ರಾವಣ ದಶಕಂಠ.  ಯಾಕೆಂದರೆ ಮನಸ್ಸು ನಾಲ್ಕು ದಿಕ್ಕುಗಳು, ನಾಲ್ಕು ಉಪದಿಶೆಗಳು,  ಮೇಲೆ  ಮತ್ತು ಕೆಳಗೆ ಹೀಗೆ ಒಟ್ಟೂ ಹತ್ತು ದಿಕ್ಕುಗಳಲ್ಲಿ ಚಲಿಸುತ್ತದೆ. ಇಂತಹ ಮನಸ್ಸಿನ ಮರಣ ಎಂದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದು. ಮಾನವನ  ಮನಸ್ಸು ಪರಮಾತ್ಮನಲ್ಲಿ ಒಂದಾದಾಗ ಮಾತ್ರ  ಅದರ ಅಸ್ತಿತ್ವ ಇಲ್ಲವಾಗುತ್ತದೆ. ಮನಸ್ಸನ್ನು  ಏಕಾಗ್ರಗೊಳಿಸಿ, ಅನಂತತೆಯ ಭಾವಧಾರಣೆಯಿಂದ ಸಾಧನೆ ಮಾಡಿದಾಗ ಇದು ಸಾಧ್ಯ.  ದಶದಿಕ್ಕುಗಳಲ್ಲಿ  ಚಲಿಸುವ  ಚಂಚಲ ಮನವನ್ನು  ಸ್ಥಿರಗೊಳಿಸಿ ಅದನ್ನು  ಉನ್ನತಿಯತ್ತ  ನಡೆಸುವ  ಅಸ್ತಿತ್ವವೇ ರಾಮ.  ಇಲ್ಲಿ ಕೂಡಾ ರಾವಣದ ರಾ+ ಮರಣದ   ಮ ಸೇರಿ ರಾಮ.   ರಾಮಾಯಣ ಎಂದರೆ ರಾಮನ ಆಶ್ರಯ ತಾಣ.  ಉದಾಹರಣೆಗಾಗಿ ನಾರಾಯಣ. ನಾರ+ ಅಯನ. ಎಲ್ಲಿ ನಾರ ಆಶ್ರಯ ಪಡೆಯುತ್ತದೋ ಅದುವೇ ನಾರಾಯಣ. ನಾರ ಶಬ್ದಕ್ಕೆ  ಸಂಸ್ಕೃತದಲ್ಲಿ  ನೀರು , ಪ್ರಕೃತಿ , ಭಕ್ತಿ  ಎಂಬ ಮೂರು  ಅರ್ಥಗಳಿವೆ.  ಪ್ರಕೃತಿಯ  ಆಶ್ರಯ ಪರಮಾತ್ಮ, ಪರಮ ಪುರುಷನ ಕುರಿತಾದ  ಅನನ್ಯ ಪ್ರೀತಿಯೇ ಭಕ್ತಿ.  ಆದ್ದರಿಂದಲೇ  ನಾರಾಯಣ ಎಂದರೆ ನಾರಕ್ಕೆ  ಆಶ್ರಯದಾತ. ಸಂಸ್ಕೃತ ಶಬ್ದದ ಈ ವಿಶ್ಲೇಷಣೆಯಂತೆ  ರಾಮನಿಗೆ  ಆಶ್ರಯ ನೀಡಿರುವುದು  ರಾಮಾಯಣ.  ರಾಮ ಶಬ್ದದ ಅರ್ಥವೇ ಪರಮಾತ್ಮ ಎಂದಿರುವಾಗ , ಸಕಲ ಚರಾಚರಗಳ ಆಶ್ರಯದಾತನೂ, ಆಧಾರವೂ ಆಗಿರುವ  ಪರಮ   ಪುರುಷನಿಗೂ ಆಶ್ರಯವನ್ನು ನೀಡುವ  ವಿಚಾರವೇ ಅಸಂಬದ್ಧ.     ಹಾಗಾದರೆ ರಾಮಾಯಣದ  ಹುಟ್ಟು ಹೇಗಾಯಿತು? ಮಹರ್ಷಿ ವಾಲ್ಮೀಕಿಯು ತನ್ನ ಕಲ್ಪನೆಯಲ್ಲಿ  ಮಾಡಿದ ಆದರ್ಶ ರಾಜ, ಆದರ್ಶ  ವ್ಯಕ್ತಿ ರಾಮ. ಅವನಿಗೆ  ಆಶ್ರಯ ನೀಡಿದ ಕಥಾನಕ ಗ್ರಂಥವೇ ರಾಮಾಯಣ.  ರಾಮಾಯಣದಲ್ಲಿ ಬರುವ  ರಾಮ   ಒಬ್ಬ ಕಾಲ್ಪನಿಕ  ವ್ಯಕ್ತಿ.      ರಾಮಾಯಣದ  ಕುರಿತಾದ   ಇನ್ನೊಂದು ಪ್ರಸಿದ್ಧ ಗ್ರಂಥವೆಂದರೆ  ತುಳಸಿದಾಸರ  ರಾಮಚರಿತ  ಮಾನಸ.  ಹೆಸರೇ ಸೂಚಿಸುವಂತೆ  ತುಳಸಿದಾಸರ  ಕಲ್ಪನೆಯಲ್ಲಿ  ಮೂಡಿದ  ರಾಮನ ಚರಿತ್ರೆ.     ರಾಮಾಯಣದಲ್ಲಿ  ವಿವರಿಸಿದ  ಘಟನೆಗಳು,  ಇತಿಹಾಸ ಎನ್ನುವುದಕ್ಕಿಂತ  ನೀತಿ ಕಥೆ ಎಂಬ ವಾದವನ್ನೇ  ಪುರಸ್ಕರಿಸುತ್ತವೆ.  ಇಡೀ ರಾಮಾಯಣದಲ್ಲಿ ಎದ್ದು ಕಾಣುವುದು ಪುರುಷ ಪ್ರಧಾನ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ವಿವರಣೆ. ರಾಜನ  ಹಿರಿಯ  ಮಗನಿಗೆ ಪಟ್ಟದ  ಹಕ್ಕು , ಸೀತೆಯ  ಪಾತಿವೃತ್ಯದ  ಪರೀಕ್ಷೆ, ಶುರ್ಪನಖಿ ಪ್ರಕರಣ ಮುಂತಾಗಿ ಪ್ರತಿಯೊಂದೆಡೆಯೂ ಪುರುಷ  ಪ್ರಧಾನತೆಯೇ ಎದ್ದು ತೋರುತ್ತದೆ.    ಮಹರ್ಷಿ ವಾಲ್ಮೀಕಿಯ ಕಲ್ಪನೆಯಂತೆ ಒಬ್ಬ  ಆದರ್ಶ ರಾಜನನ್ನಾಗಿ ಅಯೋಧ್ಯೆಯ  ರಾಮಚಂದ್ರನನ್ನು  ರೂಪಿಸಲಾಗಿದೆ.  ಇದರರ್ಥ ಆ ಸಮಯದಲ್ಲಾಗಲೇ  ರಾಜನ ಆಳ್ವಿಕೆಯ  ಪದ್ಧತಿ ಜಾರಿಯಲ್ಲಿತ್ತು.   ಗುಂಪಾಗಿ ಬದುಕುತ್ತಿದ್ದ ಮಾನವರು, ಶೂರನೊಬ್ಬನ ಆಡಳಿತಕ್ಕೆ  ಒಳಪಟ್ಟಿದ್ದು,  ರಾಜ್ಯದ  ಗಡಿಗಳನ್ನು ಗುರ್ತಿಸಿಕೊಂಡದ್ದು, ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿ ಬಂದಿದ್ದು,  ಮುಂತಾದವುಗಳು ಮಾನವನ ವಿಕಾಸ ಪಥದ  ಇತ್ತೀಚಿನ  ಕೆಲವು ಸಾವಿರ  ವರ್ಷಗಳ  ಬೆಳವಣಿಗೆ.   ಮಾನವ ಸಮಾಜದಲ್ಲಿ  ಮೊದಮೊದಲಿಗೆ  ಮಾತೃ ಪ್ರಧಾನ ವ್ಯವಸ್ಥೆಯೇ ಜಾರಿಯಲ್ಲಿತ್ತು.  ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನ ಮಹಾಭಾರತದ ಕಾಲಘಟ್ಟದಲ್ಲಿ, ಎರಡು ಸಾವಿರ  ವರ್ಷಗಳ ಹಿಂದಿನ ಬುದ್ಧನ ಸಮಯದಲ್ಲಿ  ಕೂಡ  ತಾಯಿಯ ಹೆಸರಿನಿಂದಲೇ ಮಕ್ಕಳನ್ನು  ಗುರ್ತಿಸುವ  ಪದ್ಧತಿ  ಅಸ್ತಿತ್ವದಲ್ಲಿತ್ತು.  ಅಂದಿನ ದಿನಗಳಲ್ಲಿ  ಪುರುಷ ಪ್ರಧಾನ ವ್ಯವಸ್ಥೆ ಕೂಡಾ ಪ್ರಚಲಿತವಿದ್ದು,  ನಿಧಾನಕ್ಕೆ  ಬೇರೂರತೊಡಗಿತ್ತು.  ಗುಂಪಿನ  ನೇತಾರನಾಗಿ ಗೋಷ್ಠಿ ಮಾತೆಯ  ಬದಲಿಗೆ  ಗೋಷ್ಠಿ ಪಿತನನ್ನು  ಒಪ್ಪಿಕೊಂಡ ನಂತರವೇ ಪಿತೃ ಪ್ರಧಾನ ವ್ಯವಸ್ಥೆ  ಗಟ್ಟಿಗೊಳ್ಳತೊಡಗಿತ್ತು.  ರಾಮಾಯಣದಲ್ಲಿ  ವಿವರಿಸಿರುವ  ಘಟನೆಗಳು ಮಾತೃ ಪ್ರಧಾನ ವ್ಯವಸ್ಥೆಯ  ಯಾವ ಕುರುಹನ್ನು ಒಳಗೊಂಡಿರದ ಕಾರಣ ಆ ಕಥಾನಕದ ಕಾಲಘಟ್ಟವನ್ನು ತುಂಬಾ ಪ್ರಾಚೀನ ಎನ್ನಲಾಗದು.    ರಾಮಾಯಣವನ್ನು  ಇತಿಹಾಸವೆಂದು  ಸಾಧಿಸುವ,  ಅದರ ಕಾಲಘಟ್ಟವನ್ನು  ತೀರಾ  ಹಿಂದಕ್ಕೆ  ಒಯ್ಯುವ ಪ್ರಯತ್ನಗಳು ಇಂದಿಗೂ ಮುಂದುವರಿದಿದೆ.  ಸುಂದರಾಂಗ ರಾಮಚಂದ್ರನು ದಕ್ಷಿಣ ಭಾರತಕ್ಕೆ  ಬಂದಾಗ, ಅವನ ಅನುಯಾಯಿಗಳೆಲ್ಲರೂ ವಾನರ ಸಂತಾನರು.  ಕಿಷ್ಕಿಂದೆಯ ದಕ್ಷಿಣಕ್ಕೆ  ವಾಸಿಸುವವರನ್ನು   ವಾನರರೆಂದು  ಬಿಂಬಿಸಿರುವುದಕ್ಕೆ  ಎರಡು ಕಾರಣಗಳು ಎದ್ದು ಕಾಣುತ್ತವೆ.  ಮೊದಲನೆಯದು ಆರ್ಯರ ಶ್ರೇಷ್ಠತೆಯನ್ನು ದಾಖಲಿಸುವ    ಪ್ರಯತ್ನ. ಇನ್ನೊಂದು ಈ ಕಥಾನಕಕ್ಕೆ  ಪ್ರಾಚೀನತೆಯನ್ನು  ಆರೋಹಿಸುವುದು.    ಸುಮಾರು  ಎಂಟು ಸಾವಿರ  ವರ್ಷಗಳ ಹಿಂದೆ ಆರ್ಯರು ಭಾರತಕ್ಕೆ  ಬಂದವರೆಂದು  ಹೇಳಲಾಗುತ್ತದೆ.  ಪಶು ಸಂಗೋಪನೆ ಮಾಡುತ್ತಾ ಅಲೆಮಾರಿಗಳಾಗಿದ್ದ ಶೀತ ಪ್ರದೇಶದ  ನಿವಾಸಿಗಳಾದ  ಆರ್ಯರು  ಸಮೃದ್ಧಿಯ  ಈ  ಪ್ರದೇಶಕ್ಕೆ  ಕಾಲಿಟ್ಟ  ನಂತರವೇ ಭಾರತ ವರ್ಷವೆಂಬ  ಹೆಸರು  ಬಂತು.  ಭಾರತ ಶಬ್ದಕ್ಕೆ  ಭರ್+ತನ್+ಅಲ್  ಎಂದರೆ ಮಾನವನ ಅಸ್ತಿತ್ವವನ್ನು  ಕಾಪಾಡುವವ, ಮಾನವನ ಉನ್ನತಿಗೆ  ಅಗತ್ಯವಾದವುಗಳನ್ನು  ನೀಡುವವನು ಎಂಬ ಅರ್ಥವಿದೆ.  ಅಂತಹ ಪ್ರದೇಶಕ್ಕೆ  ಭಾರತ  ವರ್ಷ ಎನ್ನುತ್ತಾರೆ.  ಅರ್ಜುನನಿಗೆ  ಭಾರತ ಎಂದು ಹಲವು ಬಾರಿ  ಸಂಬೊಧಿಸಿರುವುದನ್ನು   ಭಗವದ್ಗೀತೆಯಲ್ಲಿ ಕಾಣುತ್ತೇವೆ.  ಆದರ್ಶ  ರಾಜ ಎಂಬುದು  ಇದರ ಅರ್ಥ. ಭಾರತ ವರ್ಷೇ, ಭಾರತ ಖಂಡೇ… ಎಂಬುದು ತನ್ನನ್ನು  ಗುರ್ತಿಸಿಕೊಳ್ಳಲು  ಮಂತ್ರಗಳಲ್ಲಿ ಇಂದಿಗೂ ಬಳಕೆಯಲ್ಲಿರುವ  ಶಬ್ದ.    ಆರ್ಯರು ಭಾರತಕ್ಕೆ  ಬರುವ ಮೊದಲೇ ಇಲ್ಲಿ  ನಾಗರಿಕತೆ  ವಿಕಾಸ ಹೊಂದಿತ್ತು.  ಇಲ್ಲಿನ ಮೂಲ  ನಿವಾಸಿಗಳು  ತಮ್ಮೊಳಗಿನ  ಅನಂತತೆಯನ್ನು  ಅರಿಯುವ ದಾರಿಯಲ್ಲಿ ಸಾಗುವ ವಿಧಾನಗಳನ್ನು ಅನುಸರಿಸುತ್ತಿದ್ದರು.  ಮನಸ್ಸನ್ನು  ಅಂತರ್ಮುಖಿಯಾಗಿಸಿ, ಏಕಾಗ್ರತೆಯಿಂದ  ಧ್ಯಾನ ಮಾಡುವ  ಕಲೆ ಇವರಿಗೆ ಸಿದ್ದಿಸಿತ್ತು.  ಆದರೆ, ಆರ್ಯರು ಇನ್ನೂ ಬಾಹ್ಯ ಪೂಜೆಯಲ್ಲೇ ನಿರತರಾಗಿದ್ದರು.  ಯಜ್ಞ, ಯಾಗಾದಿಗಳು ಅವರೊಂದಿಗೇ ಭಾರತಕ್ಕೆ ಬಂದವು.    ಭಾರತದ ಮೂಲ ನಿವಾಸಿಗಳು ದ್ರಾವಿಡ, ಮಂಗೋಲಿಯನ್ ಜನಾಂಗ ಸೇರಿದವರಾಗಿದ್ದು,  ಆರ್ಯರಿಗೆ   ಹೋಲಿಸಿದರೆ ಇವರ ದೇಹ ಸಣ್ಣದಾಗಿತ್ತು.  ಎತ್ತರದ  ನಿಲುವಿನ , ಬಲಿಷ್ಠ ದೇಹದ  ಆರ್ಯರು, ಕುದುರೆಯನ್ನೂ ಪಳಗಿಸಿ, ಬಳಸುತ್ತಿದ್ದುದರಿಂದಾಗಿ,  ಭಾರತದ  ಮೂಲ ನಿವಾಸಿಗಳನ್ನು  ಸೋಲಿಸಲು ಸಾಧ್ಯವಾಯಿತು.  ಗಂಗಾನದಿಯ  ಬಯಲು ತಟ ಮತ್ತು  ಉತ್ತರ ಭಾರತದ  ಗುಡ್ಡಗಾಡು  ಪ್ರದೇಶವನ್ನು  ಆರ್ಯರು ಆಕ್ರಮಿಸಿಕೊಂಡು, ಅಲೆಮಾರಿ  ಬದುಕಿಗೆ  ವಿದಾಯ ಹೇಳಿ  ಒಂದೇ ಸ್ಥಳದಲ್ಲಿ  ವಾಸಿಸತೊಡಗಿದ್ದು ಇತಿಹಾಸ.       ಆರ್ಯರು  ನಡೆಸುತ್ತಿದ್ದ ಯಜ್ಞ,  ಯಾಗಗಳಲ್ಲಿ  ಅಮೂಲ್ಯವಾದ  ಆಹಾರ ವಸ್ತುಗಳನ್ನು  ಸುಡುತ್ತಿದ್ದುದು ಇಲ್ಲಿನ ಮೂಲ ನಿವಾಸಿಗಳಿಗೆ  ಒಪ್ಪಿಗೆಯಾಗುತ್ತಿರಲಿಲ್ಲ.  ಆದ್ದರಿಂದಲೇ ಅವರ ಯಜ್ಞಗಳನ್ನು   ಕೆಡಿಸುವ ಕೂಟ ನೀತಿಯಿಂದ  ಆರ್ಯರನ್ನು  ಮಣಿಸುವ , ಆಹಾರ ಪದಾರ್ಥಗಳನ್ನು  ಪುನಃ ಒಯ್ಯುವ  ಕೆಲಸಕ್ಕೆ  ಮುಂದಾಗುತ್ತಿದ್ದರು. ಆರ್ಯರು  ಮತ್ತು ಮೂಲ ನಿವಾಸಿಗಳ  ನಡುವೆ  ಸಾಕಷ್ಟು  ಸಂಘರ್ಷಗಳಾಗುತ್ತಿದ್ದವು. ಮೂಲ ನಿವಾಸಿಗಳನ್ನು ರಾಕ್ಷಸರು, ದುಷ್ಟರು, ಮಾಯಾವಿಗಳು ಎಂದೇ ಆರ್ಯರು ಕರೆಯುತ್ತಿದ್ದರು.    ವಿಶ್ವಾಮಿತ್ರರು ನಡೆಸುವ  ಯಜ್ಞದ ರಕ್ಷಣೆ ಹೊರುವ  ರಾಮಚಂದ್ರ , ಯಜ್ಞವನ್ನು   ಕೆಡಿಸುವ  ಮಾರೀಚ ಮುಂತಾದ ವರ್ಣನೆಗಳು  ಆರ್ಯರ   ಶ್ರೇಷ್ಠತೆಯನ್ನು ಬಿಂಬಿಸುವ  ಕಥಾನಕ ಎನ್ನುವುದಕ್ಕೆ  ಸಾಕ್ಷಿ. ಇದಕ್ಕೆ  ಪೂರಕವಾಗಿ  ವಾನರ  ರಾಜರಾದ  ವಾಲಿ, ಸುಗ್ರೀವ ಅವರ  ಆಕಾರ, ರೀತಿ, ರಿವಾಜುಗಳನ್ನು ಆರ್ಯರಿಗಿಂತ  ಕನಿಷ್ಠವೆಂದು   ತೋರಿಸುವುದನ್ನು ಕಾಣಬಹುದು.     ರಾವಣನನ್ನು  ಶಿವಭಕ್ತನೆಂದು  ಬಿಂಬಿಸಲಾಗಿದೆ.  ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಇದೇ ಭರತಭೂಮಿಯ ಮೇಲೆ ಆವಿರ್ಭವಿಸಿದ  ಸದಾಶಿವನ ಅನುಯಾಯಿಗಳಾದ  ದ್ರಾವಿಡರು,  ಅಂತರ್ಮುಖಿಯಾಗಿ ಪರಮಾತ್ಮನನ್ನು  ಕಾಣುವ   ವಿದ್ಯಾತಂತ್ರವನ್ನು  ತಮ್ಮದಾಗಿಸಿಕೊಂಡರು. ಎಲ್ಲರೊಂದಿಗೆ  ಬೆರೆಯುವ , ಸರಳ ಆಧ್ಯಾತ್ಮಿಕ ಬದುಕನ್ನು  ಬೋಧಿಸುತ್ತಿದ್ದ ಶಿವನನ್ನು ಆರ್ಯರು  ವಿರೋಧಿಸುತ್ತಿದ್ದರು.   ರಾವಣನ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಕೂಡಾ ಆರ್ಯರ ಮತ್ತು  ಅವರ ನಂಬಿಕೆ , ಆಚರಣೆಗಳೇ  ಶ್ರೇಷ್ಠವೆಂಬ  ವಿಚಾರ ಸ್ಪಷ್ಟ ಗೋಚರ.    ಭಾರತದ  ರಾಜಕಾರಣಿಗಳಿಗೆ  ಆಧ್ಯಾತ್ಮಿಕ ದಾರಿ ಬೇಕಿಲ್ಲ. ಮಂದಿರ,  ಮಸೀದಿಗಳ ಜಗಳದಲ್ಲಿ  ಜನರನ್ನು ತೊಡಗಿಸಿ,  ತಾವು ರಾಜಕೀಯ ಅಧಿಕಾರ ಪಡೆಯುವದೇ ಅವರ ಗುರಿ.  ಆಧ್ಯಾತ್ಮದ ರಾಮ ಅವರಿಗೆ  ಬೇಕಿಲ್ಲ.  ಅಯೋಧ್ಯೆಯ   ಕಾಲ್ಪನಿಕ ರಾಮಚಂದ್ರನೇ ಅವರಿಗೆ  ಪ್ರಿಯ.  ಪುರುಷ ಪ್ರಧಾನ ಸಮಾಜವನ್ನು ಇನ್ನಷ್ಟು  ಗಟ್ಟಿಗೊಳಿಸುವ  ಚಿಂತನೆಯೂ ಈ   ರಾಜಕಾರಣಿಗಳ ಇತರ  ಸ್ವಾರ್ಥದೊಂದಿಗೆ  ಸೇರಿಕೊಂಡಿದೆ.      ದೈನಂದಿನ  ಬದುಕನ್ನು  ಸಾಗಿಸುವುದೇ ಕಷ್ಟದಾಯಕವಾಗಿರುವ  ಜನಸಾಮಾನ್ಯರು ಅಯೋಧ್ಯೆಯ ರಾಮಚಂದ್ರನಲ್ಲೇ  ದಾರ್ಶನಿಕ ರಾಮನನ್ನು ನೋಡುವ  ಪ್ರಯತ್ನ ಮಾಡುತ್ತಿದ್ದಾರೆ.  ಆಧ್ಯಾತ್ಮದ ದಾರಿ ಅವರಿಗೆ ರುಚಿಸುವುದಿಲ್ಲ. ಅತಾರ್ಕಿಕತೆ, ಅವೈಚಾರಿಕ ನಂಬಿಕೆಗಳು, ಪಾಪ, ಪುಣ್ಯಗಳ ತಪ್ಪು ತಿಳುವಳಿಕೆ ನೀಡಿ,  ಕಾಣದ ಜಗತ್ತಿನ ಭಯ ಹುಟ್ಟಿಸಿ,  ಪುರೋಹಿತಶಾಹಿ  ಶೋಷಣಾ ವಿಧಾನದಿಂದ  ಜನರನ್ನು  ದಿಕ್ಕು ತಪ್ಪಿಸಿ,  ಅಸಹಾಯಕ ಭಾವವನ್ನು  ಮೂಡಿಸಿ,  ಗಟ್ಟಿಗೊಳಿಸಲಾಗುತ್ತಿದೆ.  ಆಧುನಿಕ  ಬಂಡವಾಳಶಾಹಿಗಳು ಈ ಸಂದರ್ಭವನ್ನು ತಮ್ಮ ಲಾಭ ಹೆಚ್ಚಳಕ್ಕಾಗಿ ಬಳಸಿಕೊಳ್ಳಲು  ಮೂಢನಂಬಿಕೆಗಳನ್ನು  ನೀರೆರೆದು  ಪೋಷಿಸುತ್ತಿದ್ದಾರೆ.  ಮಾಧ್ಯಮಗಳಲ್ಲಿ  ಪ್ರಸಾರವಾಗುತ್ತಿರುವ  ಮೂಢನಂಬಿಕೆಗಳನ್ನೇ ಬಿತ್ತುವ,  ಬೆಳೆಸುವ  ಧಾರವಾಹಿ, ಜ್ಯೋತಿಷಿ ಮುಂತಾದವುಗಳ   ಪ್ರಾಯೋಜಕತ್ವ  ವಹಿಸಿ,  ತಮ್ಮ   ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.  ಬುದ್ದಿಜೀವಿಗಳನ್ನು,  ಕಲಾಕಾರರನ್ನು, ರಾಜಕಾರಣಿಗಳನ್ನು ತಮ್ಮ ಧನಬಲದಿಂದ  ಗುಲಾಮರನ್ನಾಗಿಸಿಕೊಂಡು  ಬಂಡವಾಳಶಾಹಿಗಳು ಶೋಷಣೆ  ನಡೆಸುತ್ತಿದ್ದಾರೆ.  ಇದಕ್ಕೂ

ವಿಶ್ಲೇಷಣೆ Read Post »

ಅಂಕಣ ಸಂಗಾತಿ

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ (ಹಿಂದಿನ ವಾರದಿಂದ) ಕಳೆದ ಸಂಚಿಕೆಯಿAದ…  ಶಿವಮೊಗ್ಗ ಜಿಲ್ಲೆಯ ಚಳವಳಿಗಳು  ದೈವದ ಪ್ರೇರಣೆ ಎನ್ನುವಂತೆ ಅನಿಮಿಷ ಗುರುಗಳ ದರ್ಶನವನ್ನು ಪಡೆಯುತ್ತಾರೆ. ಅಲ್ಲಮ ಪ್ರಭುವಿನ ಬದುಕಿನಲ್ಲಿ ಕಾಮಲತೆಯ ಪ್ರವೇಶ ಮತ್ತು ಮರಣ, ಅನಿಮಿಷ ಗುರುವಿನ ಸಂದರ್ಶನ ಸಂದರ್ಭಗಳು ಹೊಸ ಸಾಧನೆಯ ದಿಕ್ಕನ್ನು ತೋರಿದವು. ಅವನ ಸಾಧನೆಯಿಂದ ಅದನು ಬಹುದೊಡ್ಡ ಅನುಭಾವಿಯಾಗಿ ಮಾರ್ಪಟ್ಟನು. ಬಸವಣ್ಣನವರ ಕ್ರಾಂತಿಗೆ ಕೈ ಜೋಡಿಸಿದ ಮಹಾ ಸಾಧಕನಾಗಿ ಗುರುತಿಸಿಕೊಂಡು ಕರ್ನಾಟಕದ ಶರಣ ಚಳುವಳಿಯ ಇತಿಹಾಸದಲ್ಲಿ ಮುಖ್ಯ ಸ್ಥಾನವನ್ನು ಪಡೆದುಕೊಂಡನು.  ಅಲ್ಲಮ ಪ್ರಭುವಿನ ಬದುಕು ಕೇವಲ ಚಿಂತನೆ, ವಚನ ರಚನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಲೋಕದ ಜನರ ಬದುಕನ್ನು ತಿದ್ದಿ ಅವರ ಜೀವನ ಸರಿ ದಾರಿ ತೋರಲು ಶ್ರಮಿಸಿದ. ಅಲ್ಲದೆ ಸಾಧಕರು ಇದ್ದಲ್ಲಿಗೆ ಹೋಗಿ ಅವರಲ್ಲಿದ್ದ ಕುಂದು ಕೊರತೆಗಳನ್ನು ತಿದ್ದಿ ಶರಣ ಚಳುವಳಿಗೆ ಪೂರಕ ಶಕ್ತಿಯಾಗುವಂತೆ ಮಾರ್ಪಡಿಸಿದರು. ದೀನ ದಲಿತರನ್ನು ಸಂತೈಸಿ ಸಮಾಜ ಸೇವೆಗೆ ತೊಡಗಿಸಿಕೊಂಡನು. ಬಸವಣ್ಣನವರ ಸಾಮಾಜಿಕ ಕ್ರಾಂತಿಗೆ ಪೂರ್ಣ ಬೆಂಬಲವಾಗಿ ನಿಂತನು. ಅನುಭವ ಮಂಟಪದ ಅಧ್ಯಕ್ಷನಾಗಿ ವೀರಶೈವ ತತ್ವ-ಚಿಂತನಾ ಮಂಥನ ಸಭೆಗಳನ್ನು ನಿಯಂತ್ರಿಸಿ ಮಹಾಶರಣ ನೆನೆಸಿಕೊಂಡನು.  ಅಲ್ಲಮಪ್ರಭು ಚಿಂತಕನೆಂತೋ ಹಾಗೆಯೇ ವಚನ ರಚನಾ ಕೌಶಲ್ಯವನ್ನು ಪಡೆದಿದ್ದನು.ಅಂತೆಯೇ ಬೆಡಗಿನ ವಚನಕಾರನೆಂದೇ ಪ್ರಸಿದ್ದಿಯನ್ನು ಪಡೆದವರು. ಅವರ ವಚನಗಳಲ್ಲಿ ನೀತಿ ಇದೆ. ಕಟು ವಿಡಂಬನೆಯಿದೆ, ತತ್ವವಿದೆ, ಬದುಕಿನ ಪೂರ್ಣತೆಯ ಹುಡುಕಾಟವಿದೆ. ಅನುಭವವಿದೆ, ಅವರ ನಿರಾಕಾರ ತತ್ವವಂತು ಚಿಂತಕರನ್ನು ಚಕಿತಗೊಳಿಸುತ್ತದೆ.  ಸ್ಪಟಿಕದ ದೀಪದಂತೆ ಒಳ ಹೊರಗು ಇಲ್ಲ ನೋಡಾ  ವಿಗಡ ಚರಿತ್ರಕ್ಕೆ ನಾ ಬೆರಗಾದೆನು  ನೋಡಿದರೆ ಕಾಣ ಬರುತ್ತದೆ, ಮುಟ್ಟಿದರೆ ಕೈಗೆ ಸಿಲುಕದು  ಹೊದ್ದಿದರೆ ಸಮೀಪ ಹತ್ತ ಸಾರಿದಡೆ ಅತ್ತತ್ತ ತೋರುತಿದೆ  ಆಕಾರ ನಿರಾಕಾರವೆ ನುಂಗಿ ಬಯಲು ಸಮಾಧಿಯಲ್ಲಿ ಸಿಲುಕಿತ್ತು  ನೋಡಾ ಗುಹೇಶ್ವರಾ  ಈ ವಚನದಲ್ಲಿ ಪ್ರಭುದೇವ ಸೃಷ್ಠಿಯ ಅನಂತತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸೃಷ್ಟಿ ನಿತ್ಯ ನೂತನವಾದದು, ನಿರಂತರ ಚಲನಾಶೀಲೆ, ಅದರ ಗಹನತೆಯನ್ನು ಅರ್ಥೈಸಿಕೊಳ್ಳಲು ಸಾಧನವಲ್ಲದೆ ಸಾಮಾನ್ಯನಿಗೆ ಸಾಧ್ಯವಿಲ್ಲ. ಸೃಷ್ಟಿಯ ಆಂತರ್ಯ ಸಂಭವಿಸುವ ವಿದ್ಯಮಾನವನ್ನು ಅಲ್ಲಮನಷ್ಟು ಸಶಕ್ತವಾಗಿ ಕಟ್ಟಿಕೊಟ್ಟವರು ವಿರಳ. ಆಕಾಶ-ನಿರಾಕಾರ ಬಯಲು ಸಮಾಧಿ ಈ ಪದಗಳ ಸಂದರ್ಭೋಚಿತ ಬಳಕೆ ವಿದ್ವಾಂಸರನ್ನು ಬೆರಗುಗೊಳಿಸುತ್ತದೆ.  ಶರಣರು ಇರದ ಲೋಕಕ್ಕೆ ಮಹತ್ವವವನ್ನು ಕೊಟ್ಟವರು, ಪರಲೋಕದ ತಾಪತ್ರಯದಿಂದ ದೂರವಿದ್ದವರು. ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಮೂಢನಂಬಿಕೆ, ಕಂದಾಚಾರವನ್ನು ನೇರ ಮಾತುಗಳಿಂದ ಖಂಡಿಸಿದವರು, ನೇರ ನುಡಿಯ ಅಲ್ಲಮಪ್ರಭು ಅಂತರAಗ ಶುದ್ದಿಗೆ ಅಪಾರ ಮಹತ್ವವನ್ನು ಕೊಟ್ಟವರು.  ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ,  ತುಟ್ಟ ತುದಿಯ ಮೇಲು ಗಿರಿಯ ಮೆಟ್ಟಿ ಕೂಗಿದಡಿಲ್ಲ  ನಿತ್ಯ ನೇಮದಿಂದ ತನುವ ಮುಟ್ಟಿಕೊಂಡಡಿಲ್ಲ  ನಿಚ್ಚಕ್ಕೆ ನಿಚ್ಚ ನೆನೆವ ಮಾನವ ಅಂದAದಿಗೆ ಅತ್ತಲಿತ್ತ ಹರಿವ ಮನದ  ಚಿತ್ತದಲಿ ನಿಲಿಸಬಲ್ಲದೆ  ಬಚ್ಚ ಬರಿಯ ಬೆಳಗು ಗುಹೇಶ್ವರ ಲಿಂಗವು.  ಭಾರತೀಯ ತತ್ವಜ್ಞಾನ ಇಹಕ್ಕಿಂತ ಪರಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತದೆ. ಪರಲೋಕ ಸಾಧಿಸಲು ಅನೇಕ ಬಗೆಯ ದೈಹಿಕ ಕಸರತ್ತನ್ನು ಆಚರಿಸಲು ಹೇಳುತ್ತದೆ. ಪರಲೋಕ ಇದೆಯೋ ಇಲ್ಲವೋ ಎಂಬುದನ್ನು ಪ್ರಮಾಣಿಸಿ ಹೇಳಿದವರು ಯಾರು ಇಲ್ಲ. ಶರಣರು ಇಹಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟವರು. ಅಲ್ಲಮಪ್ರಭು ಇದನ್ನೇ ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಮನಸ್ಸನ್ನು ನಿಯಂತ್ರಿಸದೆ ಎಷ್ಟು ಲೋಕವನ್ನು ಸುತ್ತಿದರೂ ಪೂರ್ಣತ್ವ ಪ್ರಾಪ್ತವಾಗುವುದಿಲ್ಲ ಎಂದು ಅಲ್ಲಮ ತೀಕ್ಷ÷್ಣವಾಗಿ ಪ್ರತಿಪಾದಿಸಿದ್ದಾರೆ. ಅಲ್ಲಮ ಪ್ರಭು ಒಬ್ಬ ದಾರ್ಶನಿಕ ಶರಣ. ತತ್ವಜ್ಞಾನಿಯಾಗಿ, ಸಂಘಟಕನಾಗಿ, ಸಮಾಜ ಸುಧಾರಕನಾಗಿ, ಬೆಡಗಿನ ವಚನ ರಚನಾಕಾರನಾಗಿ ಅವರ ಕೊಡುಗೆ ಅಪಾರ.  ಶಿವಶರಣರ ಚಳವಳಿಯಲ್ಲಿ ಪುರುಷರಷ್ಟೇ ಮಹಿಳೆಯರಿಗೂ ಸರಿಸಮಾನ ಸ್ಥಾನಮಾನಗಳಿದ್ದವು. ಎಂದಿಲ್ಲದ ಮಹಿಳೆಯರು ಶರಣ ಚಳವಳಿಯಲ್ಲಿ ಪಾಲ್ಗೊಂಡು ಅಪರೂಪದ ವಚನಗಳನ್ನು ರಚಿಸಿದ್ದೇ ಇದಕ್ಕೆ ಸಾಕ್ಷಿ. ವಚನಗಾರ್ತಿಯರಲ್ಲಿ ಮಂಚೂಣಿಯಲ್ಲಿ ಕಂಡು ಬರುವವಳು ಅಕ್ಕಮಹಾದೇವಿ. ಅದು ಕವಯಿತ್ರಿಯಾಗಿ, ಮಹಿಳಾವಾದಿಯಾಗಿ ಅಕ್ಕಳ ಬದುಕ ಮಾದರಿಯಾದುದು ಹತ್ತನೆ ಶತಮಾನದಲ್ಲಿ ಕಂತಿ ಎಂಬ ಹೆಸರಿನ ಮಹಿಳೆಯೋರ್ವಳು ಕೆಲವು ಸಾಲುಗಳ ಸಾಹಿತ್ಯವನ್ನು ರಚಿಸಿರಬಹುದೆಂಬುದರ ಊಹೆಯ ಹೊರತಾಗಿ ಅಕ್ಕ ಆದ್ಯ ಕವಯಿತ್ರಿಯಾಗಿ ಸಾಹಿತ್ಯ ಲೋಕಕ್ಕೆ ಸ್ಮರಣೀಯ ಕೊಡುಗೆಯನ್ನು ನೀಡಿದ್ದಾಳೆ. ಕೇವಲ ಕರ್ನಾಟಕ ಮಾತ್ರವಲ್ಲ ಭಾರತೀಯ ಚರಿತ್ರೆಯಲ್ಲಿ ಮಹಿಳಾ ವಾದದ ಪ್ರಾಚೀನತೆಯನ್ನು ಹುಡುಕುತ್ತಾ ಹೋಗುವವರಿಗೆ ಮೊಟ್ಟ ಮೊದಲಿಗೆ ಕಂಡು ಬರುವ ಹೆಸರೇ ಅಕ್ಕಮಹಾದೇವಿ. ಆಧುನಿಕ ಮಹಿಳಾ ವಾದದ ಎಲ್ಲಾ ಗುಣ ಸ್ವಭಾವಗಳು, ಹೋರಾಟಗಳು ಅಕ್ಕನಲ್ಲಿ ಕಂಡು ಬರುತ್ತವೆ. ಅಕ್ಕ ಪುರುಷ ಕೇಂದ್ರಿತ ಎಲ್ಲಾ ಕಟ್ಟು ಕಟ್ಟಲೆಗಳನ್ನು ಒಡೆದು ಛೀದ್ರಗೊಳಿಸಿ 12 ನೇ ಶತಮಾನದ ವೇಳೆಗಾಗಲೇ ಮಹಿಳಾ ಸ್ವಾಭಿಮಾನವನ್ನು ಪ್ರತಿಪಾದಿಸಿದವಳು. ಅವಳ ಬದುಕೇ ಅಷ್ಟು ರೋಚಕ ಸಂಕಥನ.  ಆಧುನಿಕ ಮಹಿಳಾವಾದವು ಸ್ತ್ರೀಯ ಮೈ-ಮನಸ್ಸುಗಳ ಮೇಲೆ ಪುರುಷನ ಹಕ್ಕನ್ನು ಧಿಕ್ಕರಿಸುತ್ತದೆ. ಹೆಣ್ಣಿನ ಮೇಲಿನ ದೌರ್ಜನ್ಯವನ್ನು ಸಮಾನತೆ ಮುಕ್ತ ಆಯ್ಕೆಯ ಹಕ್ಕುಗಳನ್ನು ಪ್ರತಿಪಾದಿಸುತ್ತದೆ. ಒಂದೊಮ್ಮೆ ಈ ಹಕ್ಕುಗಳು ಲಭ್ಯವಾಗಿದಿದ್ದರೆ ಅದನ್ನು ಪ್ರತಿಭಟನೆಯ ಮೂಲಕ ಪಡೆದುಕೊಳ್ಳುವ ಹಿಂದೇಟು ಹಾಕಕೂಡದೆಂದು ಪ್ರತಿಪಾದಿಸುತ್ತದೆ. ಈ ಎಲ್ಲಾ ಬಗೆಯ ಪ್ರತಿಭಟನೆಯನ್ನು ಅಂದೇ ಅಕ್ಕಮಹಾದೇವಿ ಮಾಡಿ ತೋರಿದ್ದಳು. ಆದ್ದರಿಂದ ಅಕ್ಕ ಮಹಾದೇವಿ ಆಧುನಿಕರಿಗೆ ಆಧುನಿಕ ಮಹಿಳಾ ಹೋರಾಟಗಾರ್ತಿ ಎಂದರೆ ತಪ್ಪಾಗಲಾರದು.  ಮೊದಲ ಮಹಿಳಾವಾದಿ ಅಕ್ಕಮಹಾದೇವಿ ಜನಿಸಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ. ಈಗ ಅದು ಉಡುಗಣಿಯಾಗಿದೆ. ತಂದೆ ನಿರ್ಮಲಶೆಟ್ಟಿ ತಾಯಿ ಸುಮತಿ, ಗುರು ಲಿಂಗದೇವರು ಲಿಂಗಧಾರಣೆ ಮಾಡಿದವರು. ಚಿಕ್ಕಂದಿನಿಂದಲೇ ಶಿವಭಕ್ತಳಾದ ಅಕ್ಕಮಹಾದೇವಿ ಲೌಕಿಕ ಜೀವನದಲ್ಲಿ ನಿರಾಶಕ್ತಿಯನ್ನು ಹೊಂದಿದ್ದಳು. ಯೌವನದ ಹೊಸ್ತಿಲಲ್ಲಿ ಅಕ್ಕ ಅಸಾಧಾರಣ ಸೌಂದರ್ಯವತಿಯಾಗಿದ್ದಳು. ಅನಿರಿಕ್ಷಿತ ಸಂದರ್ಭದಲ್ಲಿ ಅಕ್ಕನನ್ನು ಕಂಡ ಕೌಶಿಕ ಮಹಾರಾಜ ಮದುವೆಯಾಗಲು ಬಯಸುತ್ತಾನೆ. ತಂದೆ-ತಾಯಿಯರಿಗೆ ಕೌಶಿಕನನ್ನು ಮದುವೆ ಮಾಡಲು ಇಷ್ಟವಿಲ್ಲದಿದ್ದರೂ ಅವನಿಂದ ತನ್ನ ತಂದೆ ತಾಯಿಗೆ ಆಗಬಹುದಾದ ಹಿಂಸೆಯನ್ನು ಮನಗಂಡು ಷರತ್ತುಬದ್ದ ಮದುವೆಯಾಗಲು ಒಪ್ಪುತ್ತಾಳೆ. ಕೌಶಿಕ ಅಕ್ಕಳ ಷರತ್ತನ್ನು ಒಪ್ಪಿ ಮದುವೆಯಾಗುತ್ತಾನೆ. ಅಕ್ಕಳ ಷರತ್ತನ್ನು ಪಾಲಿಸದ ಕೌಶಿಕ ಅಕ್ಕ ಶಿವಪೂಜೆಯಲ್ಲಿ ನಿರತಳಾಗಿದ್ದಾಗ ಮುಟ್ಟಲು ಮುಂದಾಗುತ್ತಾನೆ. ಆ ಸಂದರ್ಭದಲ್ಲಿ ಅಕ್ಕಳ ಮುಂದೆ ಎರಡು ಆಯ್ಕೆಗಳಿರುತ್ತವೆ. ಕೌಶಿಕನೊಂದಿಗೆ ಹೊಂದಿಕೊಂಡು ಸಂಸಾರವನ್ನು ಒಪ್ಪಿಕೊಳ್ಳುವುದು, ಇನ್ನೊಂದು ಇಹದ ವೈಭೋಗವನ್ನು ದಿಕ್ಕರಿಸಿ ಸ್ವತಂತ್ರವಾಗಿ ಬದುಕುವುದು. ಅಕ್ಕ ಎರಡನೆಯದ್ದನ್ನೆ ಆಯ್ಕೆ ಮಾಡಿಕೊಳ್ಳುತ್ತಾಳೆ. ಭಕ್ತಿ ಭಂಡಾರಿಯಾಗಿದ್ದ ಅಕ್ಕಮಹಾದೇವಿ ಪರಾಧೀನತೆಯ ಬದುಕನ್ನು ದಿಕ್ಕರಿಸಿ ನಿಲ್ಲುತ್ತಾಳೆ. ಈ ನಿರ್ಧಾರ ಅಕ್ಕಳ ಬದುಕಿನ ಬಹುದೊಡ್ಡ ತಿರುವಾಗಿ ಮಹಿಳೆಯರ ಸ್ವಾಭಿಮಾನದ ಬದುಕಿಗೆ ಮಾದರಿಯಾಗಿ ನಿಂತಿದ್ದಾಳೆ. ಇತಿಹಾಸದ ಪುಟದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ.  ಹಿಡಿಯದಿರು ತಡೆಯದಿರು ಬಿಡು ಬಿಡು ಕೈಯ ಸೆರಗ  ಭಾಷೆಯ ಬರೆದುಕೊಟ್ಟು ಸತ್ಯಕ್ಕೆ ತಪ್ಪಿದರೆ  ಅಘೋರ ನರಕ ವೆಂದರಿಯ- ಎಂದು ಅಕ್ಕಮಹಾದೇವಿ ಪರಿಪರಿಯಾಗಿ ಬೇಡುತ್ತಾಳೆ. ಒಪ್ಪದಿದ್ದಾಗ ತಿರಸ್ಕರಿಸಿ ಉಟ್ಟ ಬಟ್ಟೆಯನ್ನು ಬಿಚ್ಚೊಗೆದು ಕೇಶಾಂಬರಿಯಾಗಿ ಕೂಡಲ ಸಂಗಮಕ್ಕೆ ಹೊರಟು ಬಿಡುತ್ತಾಳೆ. – ಮುಂದುವರೆಯುತ್ತದೆ…

ಶಿವಮೊಗ್ಗ ಜಿಲ್ಲೆಯ ಚಳುವಳಿಗಳು Read Post »

ಇತರೆ

ಪ್ರಬಂಧ

ಅಪ್ಪ ಅಂದರೆ ಆಕಾಶ = ಅಮ್ಮ ಅಂದರೆ ಭೂಮಿ. ಬಸನಗೌಡ ಪಾಟೀಲ ಹೆಗಲಿಗೆ ಕೊಡಲಿ ಹಾಕಿಕೊಂಡು ಸೂರ್ಯೋದಯವಾಗುತ್ತಿದ್ದಂತೆ ಹೊಲದ ಕಡೆ ಹೋದಾತ ಮರಳಿ ಮನೆಗೆ ಬರುವುದು ಸೂರ್ಯ ತಾಯಿಯ ಮಡಿಲು ಸೇರಿದ ಮೇಲೆಯೆ. ಮುಳ್ಳು ಕಂಟಿ ಕಡಿಯೋದು ನೀರು ಹಾಯೊಸೋದು, ಗೊಬ್ಬರ ಹರವುವುದು ಮಣ್ಣು ಹದ ಮಾಡುವುದು ಒಂದಾ ಎರಡಾ ಅವನ ಕೆಲಸ. ಸುರಿಯುವ ಮಳೆಯಲ್ಲಿ ಇಕ್ಕೆಲದ ರಸ್ತೆಯಲ್ಲಿ ನೀರು ತುಂಬಿದ ಗುಂಡಿಗಳಲ್ಲಿ ನಡೆದುಕೊಂಡು ಮನೆ ಸೇರೋ ಕಷ್ಟ ಅವನಿಗೆ ಮಾತ್ರ ಗೊತ್ತು. ಅದಕ್ಕೆ ಅನ್ನೋದು ಅಪ್ಪ ಅಂದ್ರೆ ಆಕಾಶ ಅಂತ. ಸಾದಾ ಸೀದಾ ಚಪ್ಪಲಿ, ವರ್ಷಕ್ಕೆರಡು ಬನೀನು, ಕಡ್ಡಿ ಕಿತ್ತು ಅನೇಕ ಬಾರಿ ರಿಪೇರಿಗೊಳಗಾಗದ ಕೊಡೆ, ಟಾರ್ಚ, ಹೊಲ, ಎತ್ತು, ಕೆರೆ, ಕುಟುಂಬ ಅವನ ದಿನ ನಿತ್ಯದ ಸರ್ವಸ್ವಗಳು. ನನ್ನ ಮಕ್ಕಳು ಹೆಂಡತಿಯನ್ನ ಪ್ರೀತಿಯಿಂದ ಸಾಕಿ ಸಲಹಬೇಕು ಎಂಬ ಉದ್ದೇಶದಿಂದ ಹಗಲಿರುಳೆನ್ನದೆ ಗಾಳಿ,ಮಳೆ ಲೆಕ್ಕಿಸದೇ ಉರಿಯುವ ಬಿಸಿಲಿನಲ್ಲಿಯೂ ಬೆವರು ಹರಿಸುತ್ತ ದುಡಿದು ಮನೆಗೆ ಬೆಳಕಾಗುವ ಮೇಣವೇ ಅಪ್ಪ. ಪ್ರತಿ ಮನೆಯಲ್ಲಿ ಶಾಲೆಯ ವಾತಾವರಣ ಇರೋಕೆ ಕಾರಣ ತಾಯಿಯಾದರೇ ಶಿಸ್ತಿನ ಕಾರ್ಖಾನೆಯೆ ಅಪ್ಪ. ಹೆಂಡತಿಯೊಡನೆ ತನ್ನ ಕಷ್ಟ ಹೇಳಿಕೋಳ್ಳದ ಆತ ಅವಳನ್ನು ರಾಣಿಯಂತೆ ಮಕ್ಕಳನ್ನು ಯುವರಾಜ ಯುವರಾಣಿಯರಂತೆ ಸಾಕಲು ಪ್ರಯತ್ನಿಸುವ. ತಾನು ಒದ್ದೆಯಾದರೆ ತನ್ನ ಎದೆಯಡಿ ಮಕ್ಕಳ ಅಪ್ಪಿ ರಕ್ಷಿಸುವ. ತಾನು ಬಿಸಿಲಲ್ಲಿ ಬೆಂದರು ಪರವಾಗಿಲ್ಲ ಮಕ್ಕಳು ಬಿಸಿಲಿಗೆ ಬರಬಾರದು ಎಂದು ಅಂದುಕೊಳ್ಳುವ. ಅದರಂತೆಯೆ ಅವರನ್ನು ಶಿಕ್ಷಣದ ಹಾದು ತುಳಿಸುವ. ಇಂತಹ ಮಹಾನ್ ತ್ಯಾಗಿಯನ್ನು ಬಿಟ್ಟು ಅದೇಷ್ಟೋ ಮಕ್ಕಳು ವಿದೇಶಕ್ಕೇ ಹೋಗುವರು..! ಇನ್ನು ಅನೇಕ ಮಾಹಾನು ಭಾವರು ವೃದ್ಧಾಶ್ರಮಕ್ಕೆ, ಅನಾಥಾಶ್ರಮಕ್ಕೆ ನೂಕುವರು..! ನಿಜವಾಗಿಯೂ ಇವರು ಇಂದಿನ ಸಮಾಜದ ಅಪರಾಧಿಗಳಲ್ಲದೆ ಮತ್ತಿನ್ನೇನು..? ಜಾತ್ರೆಯಲ್ಲಿ ತೇರು ಕಾಣದೇ ಹೋದಾಗ ತನ್ನ ಹೆಗಲ ಮೇಲೆ ಹೊತ್ತು ಕೊಂಡು ದೇವರ ದರ್ಶನ ಮಾಡಿಸುವ. ಅದ್ಯಾಗು ನಮಗೂ ಅನೇಕ ಬಾರಿ ದೇವರೇ ಕಂಡಿರುವುದಿಲ್ಲ ಯಾಕೇ ಹೇಳಿ..? ನಾವು ಕುಳಿತಿರುವ ಹೆಗಲೆ ದೇವರದು ಅಂತಾ ನಮಗೆ ಆಗ ಗೊತ್ತಿರುವುದಿಲ್ಲ. ಇನ್ನೂ ಅಪ್ಪನ ಕೋಪಕ್ಕೆ ಕೆಲಬಾರಿ ತುತ್ತಾಗಿ ಬೆತ್ತದ ಪೆಟ್ಟು ತಿನ್ನುವಾಗ ಕಾಪಾಡುವವಳೆ ಅವ್ವ. ಅಲ್ಲಿ ಇಲ್ಲಿ ಸ್ವಲ್ಪ ಉಳಿಸಿ, ವ್ಯಾಪಾರದಲ್ಲಿ ಚೌಕಾಸಿ ಮಾಡಿ ಉಳಿಸಿದ ಹಣವನ್ನು ಹಂಡನಿಗೆ ಕಾಣದ ಹಾಗೆ ಮಕ್ಕಳಿಗೆ ನೀಡುವಳು. ಅವಳೆ ನಮ್ಮ ಭಾಲ್ಯದ ಮೊದಲ ಸ್ವಿಸ್ ಬ್ಯಾಂಕ್. ತಾನು ಮಾತ್ರ ಹರಿದ ಸೀರೆಗೆ ಹೊಲಿಗೆ ಹಾಕುತ್ತ ಅದರಲ್ಲೆ ದಿನಗಳ ಕಳೆಯುವಳು. ಅಪ್ಪ ಒಂದು ದಿನವೂ ಶೋಕಿ ಮಾಡಿದವನಲ್ಲ. ಮಧ್ಯ ಸೇವಿಸಿದವನಲ್ಲ. ಎಷ್ಟೇ ಕಷ್ಟ ಬಂದರು ಕುಸಿದಿಲ್ಲ ಇನ್ನು ಅವ್ವ ತಾನು ಒಂದು ತುತ್ತು ಕಡಿಮೆ ಉಂಡು ಮಕ್ಕಳ ಗಂಡನ ಹಸಿವಿ ನೀಗಿಸುವಳು. ಇವರ ಇಷ್ಟೇಲ್ಲ ಉಳಿತಾಯ ನಿಸ್ವಾರ್ಥ ಬದುಕು ನಮಗಾಗಿ ಅಲ್ಲದೇ ಮತ್ತಿನ್ಯಾರಿಗೇ ಸ್ವಲ್ಪ ಚಿಂತಿಸಿ..? ಮಕ್ಕಳು ಬೆಳೆದು ಯುವಕ ಯುವತಿಯರಾದಾಗ ನೋಡಬೇಕು ಅವರ ಜಂಬ. ಮುಖದ ಮೇಲೆ ಮೇಸೆ ಮೂಡಿರುವುದಿಲ್ಲ ಅವನಿಗೆ ಆಗಲೆ ತಾಯಿಗೆ ಏಕವಚನದಲ್ಲಿ ನಿಂದಿಸಲೂ ಶುರು ಮಾಡುವ. ಇನ್ನು ಮಗಳೋ ರಾತ್ರಿಯೆನ್ನದೆ ಸಮಯದ ಮೀತಿ ಮೀರಿ ಮನೆಗೆ ಬರುವಳು ಪ್ರಶ್ನಿಸಿದ ಪಾಲಕರಿಗೆ ನನಗೆ ಸ್ವಾತಂತ್ರö್ಯವೇ ಇಲ್ಲ ಎಂದ ಅವರನ್ನು ದೂರುವಳು. ತಂದೆ ತಾಯಿ ಬಾವನೆಗಳಿಗೆ ಬೆಲೆ ಕೊಡದೆ ಕಲಿಯುವ ವಯಸ್ಸಲ್ಲಿ ಪ್ರೀತಿ ಪ್ರೇಮ ಎಂದು ಮೋಹದ ಬಲೆಯೊಳಗೆ ಬೀಳುವರು. ತಮ್ಮನ್ನು ಇಲ್ಲಿಯ ತನಕ ಬೆಳೆಸಲು ತಂದೆ ತಾಯತಿ ಪಟ್ಟ ಕಷ್ಟ ಮರೆತು ಬೀಡುವರು. ಇನ್ನು ಹೆಂಡತಿಯ ಮಾತು ಕೇಳಿ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದು ಮಗನ ಮಹಾನ್ ಕಾರ್ಯವಾದರೇ ಬೇರೆ ಮನೆಗೆ ಸೊಸೆಯಾಗಿ ಹೋದಾಕೆ ಮಾವ ಅತ್ತೆಯರ ಸೇವೆ ಮಾಡದಾಕೇ ಎಂದಿಗೂ ಉತ್ತಮ ಮಗಳಾಗಲಾರಳು. ಎಲ್ಲ ತಂದೆ ತಾಯಿಗಳು ತಮ್ಮ ಕೊನೆಗಾಲದಲ್ಲಿ ತಮ್ಮ ಹತ್ತಿರ ಮಕ್ಕಳು ಇರಬೇಕು ಎಂದು ಬಯಸುವರು. ಏಕೇ ಹೇಲಿ ತಮ್ಮ ಶಕ್ತಿಯನ್ನು ಬಸಿದು ಅವರು ನಮ್ಮ ಸಾಕಿ ಸಲಹಿಹರು. ಅವರಿಗೂ ಆಸೆ ತಮ್ಮ ವದೃದ್ಧಾಪ್ಯದಲ್ಲಿ ಮಕ್ಕಳು ನಮ್ಮನ್ನು ಸಾಕುವರು ಎಂದು. ಒಂದು ಕ್ಷಣ ಯೋಚಿಸಿ ಆಡವಾಡಲು ಅಂಗಳಕ್ಕೆ ಹೋದಾಗ ಬಿದ್ದು ಮೋಣಕಾಲು ಕೆತ್ತಿಸಿಕೊಂಡಾಗ ಅವ್ವ ಓಡಿ ಬಂದು ತನ್ನ ಸೆರಗು ಹರಿದು ಕಟ್ಟಿಲ್ಲವೇ..? ಇನ್ನು ಅಪ್ಪ ನಮ್ಮ ಹೊತ್ತು ಕೂಸುಮರಿ ಮಾಡಿಲ್ಲವೇ..? ಯೌವ್ವನ ಬಂದು ನೌಕರಿ ತಗೊಂಡು ಹಣ ಜೇಬಲ್ಲಿ ಬಂದಾಕ್ಷಣ ತಂದೆ ತಾಯಿಗಳನ್ನು ಕಡೆಗಣಿಸುವುದು ಸರಿಯಲ್ಲ. ತಂದೆ ತಾಯಿಯನ್ನು ಆಶ್ರಮದಲ್ಲಿ ಬಿಟ್ಟು, ಹಳ್ಳಿಯಲ್ಲಿಯೇ ಇರಿಸಿ, ಇಲ್ಲಬೇರೆ ಮನೆ ಮಾಡಿ ಇರಿಸಿ ದಿನ ಕಳೆಯುವವರಿಗೆ ಒಂದು ಕಿವಿಮಾತು. ನೀವು ಗಳಿಸಿದ ಆಸ್ತಿ, ಕಾರು, ಮನೆ, ಅಂದು ಅವ್ವ ಅಪ್ಪನ ಒಂದು ದಿನದ ಕೂಲಿಗೆ ಸಮ. ನೆನಪಿರಲಿ ನಮಗೂ ವಯಸ್ಸಾಗುವುದು.

ಪ್ರಬಂಧ Read Post »

ಕಾವ್ಯಯಾನ

ಕಾವ್ಯಯಾನ

ಸಾವಿನ ಸಾಂಗತ್ಯದಲ್ಲಿ ಮಧುಸೂದನ ಮದ್ದೂರು ಸಾವೆಂಬ ಸೂತಕದ ಹಕ್ಕಿ ರಕ್ಕೆ ಬಿಚ್ಚಿ ಹಾರುತ್ತಿದೆ ಯಾವ ಜೀವಗಳೆಂಬೋ ಹಣ್ಣ ಕಚ್ಚಿ ತಿಂದು ರಕ್ಕೆ ಪಟಪಟಿಸಿ ಗಗನದ ಚಿಕ್ಕೆಯಾಗಲಿದೆಯೋ ಬಲ್ಲವರು ಯಾರು ? ಸಾವೆಂಬ ಮಾಂತ್ರಿಕನ ಮಂತ್ರಬೂದಿಯ ಸೆಳತೆಗೆ ಸಿಲುಕಿ ಮಾಯವಾಗುವ ಮಾಯಕಾರರೆಷ್ಟೋ ಬಲ್ಲವರು ಯಾರು? ಸಾವೆಂಬ ಬುಟ್ಟಿಯಲಿ ಕಣ್ಕಟ್ಟಿನ ಯಕ್ಷಿಣಿಕಾರನ ಯಕ್ಷಿಣಿ ಕೋಲಿನ ಮಂತ್ರಕೆ ಅತಳ ಸುತಳ ಪಾತಾಳ ಸೇರುವವರೆಷ್ಟೋ ಬಲ್ಲವರು ಯಾರು? ಬಡವ-ಬಲ್ಲಿದ ಅಧಿಕಾರಸ್ಥ-ವ್ಯವಹಾರಸ್ಥ ಕಲೆಕಾರ-ಓಲೆಗಾರ ಯಾಂತ್ರಿಕ-ಮಾಂತ್ರಿಕ ವಿಜ್ಞಾನಿ-ಅಜ್ಞಾನಿ ಎಂಬೋ ಬೇಧ ಭಾವ ಎಣಿಸದ ಸಾವೆಂಬೋ ಸಾಹುಕಾರನೆದರು ಚೆಲ್ಲಾಟಗಾರನೆದುರು ಗೋಣು ಚೆಲ್ಲಲೇಬೇಕಲ್ಲವೇ…?

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕೃತಿ-ಗುಣ (ಕಾದಂಬರಿ) ಲೇಖಕರು-ಡಾ.ಗುರುಪ್ರಸಾದ್ ಕಾಗಿನೆಲೆ ಛಂದ ಪುಸ್ತಕ ಡಾ.ಅಜಿತ್ ಹರೀಶಿ ಶಿವಮೊಗ್ಗದಲ್ಲಿ ಹುಟ್ಟಿ ಬಳ್ಳಾರಿಯಲ್ಲಿ ಎಂಬಿಬಿಎಸ್.ಎಂಡಿ ಮಾಡಿ ಪ್ರಸ್ತುತ ಅಮೆರಿಕದಲ್ಲಿ ಎಮರ್ಜೆನ್ಸಿ ವೈದ್ಯರಾಗಿ ಕೆಲಸಮಾಡುತ್ತಿರುವ ಗುರುಪ್ರಸಾದರು ಬರೆದಿರುವ ಕಾದಂಬರಿಯಿದು. ಬಿಳಿಯ ಚಾದರ,ಗುಣ ಮತ್ತು ಹಿಜಾಬ್ ಅವರ ಪ್ರಕಟಿತ ಕಾದಂಬರಿಗಳು. ನಿರ್ಗುಣ, ಶಕುಂತಳಾ ಕಥಾಸಂಕಲನಗಳು, ಲೇಖನ ಸಂಗ್ರಹ-ವೈದ್ಯ ಮತ್ತೊಬ್ಬ, ಆಚೀಚೆ ಕಥೆಗಳು- ಸಂಪಾದಿತ ಕಥಾಸಂಕಲನಗಳನ್ನು ಇವರು ಪ್ರಕಟಿಸಿದ್ದಾರೆ. ಹಿಂದಿನ ದಶಕದಲ್ಲಿ ಅಮೆರಿಕೆಯಲ್ಲಿ ಘಟಿಸಿರಬಹುದಾದ, ಈ ದಶಕದಲ್ಲಿ ಭಾರತದ ಮಹಾನಗರಗಳಲ್ಲಿ ನಡೆಯುತ್ತಿರಬಹುದಾದ ಮತ್ತು ಮುಂದಿನ ದಿನಮಾನಗಳಲ್ಲಿ ನಾವೇ ಕಾಣಬಹುದಾದ ವಿಶಿಷ್ಟ ಕಥಾನಕವೇ ‘ ಗುಣ ‘ ಎನ್ನಬಹುದು. ಇದು ವಿದೇಶಿ ನೆಲದಲ್ಲಿ ಚಲಿಸುವ ಘಟನಾವಳಿಗಳ ನೋಟವಾದರೂ ಇದರ ಕೇಂದ್ರ ಭಾರತೀಯ ಮನಸ್ಥಿತಿಯೇ ಆಗಿದೆ. ಗೌತಮ ಮತ್ತು ಭಾರತಿ ಎಂಬ ವೈದ್ಯರ ಬದುಕಿನ ಕಥೆಯನ್ನು ಹೇಳುತ್ತಾ ವಾಸ್ತವದ ಮೇಲೆ ಬೆಳಕನ್ನು ಚೆಲ್ಲುತ್ತದೆ. ಅಮಿಗ್ಡಲ್, ಥ್ಯಾಲಮಸ್, ಹೈಪೊಥ್ಯಾಲಮಸ್ ಸೇರಿ – ‘ಅಮಿಗ್ಡಲ ಸರ್ಕ್ಯೂಟ್’ ಆಗುತ್ತದೆ. ಈ ಸರ್ಕ್ಯೂಟ್ ಬೇಗ ಫೈರ್ ಆಗುತ್ತದೆ. ಇದರಿಂದ ಸಿಟ್ಟು ಬಲು ಬೇಗ ಬರುತ್ತದೆ. ಅದೇ ಹೈಪೊಥ್ಯಾಲಮಸ್, ಥ್ಯಾಲಮಸ್ ಜೊತೆ ಪ್ರಿಫ್ರಂಟಲ್ ಕಾರ್ಟೆಕ್ಸ್ ಸೇರಿದರೆ ‘ ಪ್ರಿಫ್ರಂಟಲ್ ಸರ್ಕ್ಯೂಟ್’ ಆಗುತ್ತದೆ. ಇದು ಶಾಂತಿ, ಪ್ರೀತಿ ಮತ್ತು ತಾಳ್ಮೆಯ ಸರ್ಕ್ಯೂಟ್ ‌. ಸೋ…. ಪ್ರಿಫ್ರಂಟಲ್ ಸರ್ಕ್ಯೂಟ್ ಸ್ಟಿಮ್ಯುಲೇಟ್ ಮಾಡಿಕೊಳ್ಳೋಣ. ಇದೇ ‘ ಮೈಂಡ್ ಫುಲ್ ಅವೇರ್ ನೆಸ್’ ಎಂಬಂತಹ ಶಕ್ತಿಯುತ ವೈದ್ಯಕೀಯ ಸಾಲುಗಳನ್ನು ಇಲ್ಲಿ ಕಾಣಬಹುದಾಗಿದೆ. ಜೊತೆಗೆ ಗೌತಮ ಮತ್ತು ಮಲಿಸ್ಸಾ ಎಂಬ ನರ್ಸ್ ಇರುವಾಗ ನಡೆಯುವ ಪೋಲಿ ಸಾಲುಗಳೂ ಇವೆ. ಗೌತಮ ಮತ್ತು ಭಾರತಿ ಅವರ ಮಗಳು ಕ್ಷಮಾಳ ಪಾತ್ರ ಸಶಕ್ತವಾಗಿದ್ದು ಗಮನ ಸೆಳೆಯುತ್ತದೆ. ಸ್ಟೀವ್ ವಾರೆನ್, ಕೀರ್ತಿ ಎಂಬ ಗೇ ಗಳ ಸಮಸ್ಯೆ ಮತ್ತು ಬದುಕು ಕಾಡುತ್ತದೆ. ಗುಂಡಪ್ಪ ಮತ್ತು ನರಸಿಂಹರಾಯರು ಈಗ ಬೆಂಗಳೂರಿನಲ್ಲಿ ಅಥವಾ ನಮ್ಮೂರಿನಲ್ಲಿ ಸಿಗಬಹುದು. ಅಂತೆಯೇ ಶಕುಂತಳಾ ಬಾಯಿ ಎಂಬ ಟಿಪಿಕಲ್ ವುಮನ್ ಕೂಡ. ಜನರೇಷನ್ ಗ್ಯಾಪ್, ಇಂದಿನ ತಲೆಮಾರು ಬಳಸುವ ಪದಪುಂಜ ಗೌತಮ ಮತ್ತು ಭಾರತಿ ಎಂಬ ಪಾಲಕರನ್ನು ಮಾತ್ರವಲ್ಲ, ನಮ್ಮನ್ನೂ ಯೋಚನೆಗೀಡುಮಾಡುತ್ತದೆ. ಫ್ರೆಂಡ್, ಬಾಯ್ ಫ್ರೆಂಡ್, ಗರ್ಲ್ ಫ್ರೆಂಡ್ ಗಳ ವ್ಯತ್ಯಾಸ ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹೀಗೆ ವಿವಿಧ ಆಯಾಮಗಳನ್ನು ಹೇಳುತ್ತಾ ಕಥೆ ತೆರೆದುಕೊಳ್ಳುವ ಪರಿ ಅನನ್ಯವಾದುದು. ಒಂದು ಉತ್ತಮ ಕಾದಂಬರಿ ‘ಗುಣ’. ಗುಣಮಟ್ಟದ ಓದಿಗಾಗಿ ಖಂಡಿತಾ ಈ ಕೃತಿಯನ್ನು ಓದಿ.

ಪುಸ್ತಕ ಪರಿಚಯ Read Post »

ಕಾವ್ಯಯಾನ

ಕಾವ್ಯಯಾನ

ರೆಕ್ಕೆ ಮುರಿದ ಹಕ್ಕಿ ಕನಸು ಬಿದಲೋಟಿ ರಂಗನಾಥ್ ದುಃಖ ಬಚ್ಚಿಟ್ಟುಕೊಂಡು ನಗುವ ಸೂಸುವ ನಿನ್ನ ಅಂತರಂಗದ ನುಡಿಯೇ ನೋವುಗಳು ಜಾರುತ್ತಿವೆ ನಿನ್ನ ತುಟಿ ಸೀಳುಗಳ ಮೇಲೆ… ಕಣ್ಣಪದರುಗಳಲ್ಲಿ ತೇಲುವ ಕಣ್ಣೀರು ನಿಜಕ್ಕೂ ಎದೆಯಲ್ಲಡಗಿದ ಕಥೆ ಬಿಚ್ಚುತಿದೆ ಕುಂತ ನೆಲದ ಜೊಳ್ಳು ಮಾತುಗಳೋ ಸೀರೆ ಸುಟ್ಟ ನೋವೋ ಅಂತು ಸುಡುತ್ತಿದೆ ಎದೆಯ ಮೇಲೆ ಬಿದ್ದು ಉಕ್ಕಲಾರದೆ ರತಿ ಉಕ್ಕಿ ಗರಿಬಿಚ್ಚದೆ ಒಳಗೇ ಸುತ್ತಿ ಸುತ್ತಿ ಭಾವನೆಗಳ ಕೊಲ್ಲುತ.. ರತಿ ತಿಲೋತಮೆಯಂತಿದ್ದರೂ ಒಡೆದ ಒಳಮನಸಿನ ಕನ್ನಡಿಯ ಚೂರು ತಿವಿಯುತ್ತಿದೆ ಮೆತ್ತಗೆ ಮೆತ್ತಗೆ.. ಹಬೆಯಾಡದ ನಂಜು ಸುತ್ತಿ ಸುತ್ತಿ ಉಸಿರಾಡದಂತೆ ಮಾಡಿದೆ ಹೊತ್ತಿಗೊತ್ತಿಗೆ ಬಿಚ್ಚಿಕೊಳ್ಳದ ಮಾಯದ ನೋವು ಹೆಪ್ಪುಗಟ್ಟಿ ಬಿರಿಯುತ್ತಿದೆ ಕಣ್ಣೊಡಲ ಸುಖದಿಂದ ಅರಳಿ ಬೆವರಲು ಅದ್ಯಾವುದೋ ರೆಕ್ಕೆ ಮುರಿದ ಹಕ್ಕಿ ಕನಸೇ ಬೀಳುತ್ತಿದೆ..! ಹಾರಿದರೂ ಸಿಗದ ಹಕ್ಕಿಯ ಹೆಜ್ಜೆ ಗುರುತೊಂದು ಹಾಸಿಗೆಯ ಮೇಲೆ ಬಿದ್ದು ದುಃಖಿಸುವುದು ಕೇಳಿಸುತ್ತಲೇ ಇದೆ. ಈ ದೇಹದ ಮೇಲೆ ಸನ್ನದ್ದು ಪಡೆದವನ ತೋಳುಗಳು ಬಳಲಿ ಬಳಲಿ ಕಾಮಕ್ಕಾಗಿ ಕಾತರಿಸುವ ಪರಿಗೆ ಬಿತ್ತಿ ಬೆಳೆವ ಆಸೆಯು ಎದೆಯ ತುಂಬಿದರು ಒಪ್ಪಿತವಲ್ಲದ ಮನಸು ಬಂಜರು ನೆಲವಾಗಿದೆ ಸುಡುವ ನೆಲವನ್ನ ಅಪ್ಪಲು ಒಪ್ಪದ ಮನಸು ಬಿಡುಗಡೆಗೊಳ್ಳದ ಉಸಿರ ಶಪಿಸುತ್ತಿದ್ದರೂ ನಾಟಕೀಯ ನಗು ಎಂದೂ ಬಣ್ಣ ಮುಚ್ಚುವುದಿಲ್ಲ ಒಳಗೆ ನೆನಗುದಿಗೆ ಬಿದ್ದ ಭಾವದ ಕಾಲುಗಳಿಗೆ ಚಲಿಸುವ ಹವಣಿಕೆ ಇದ್ದರೂ ಪರದೆ ಎಳೆದು ನಗುತ್ತಿದ್ದೀಯಲ್ಲ. ಇದನ್ನೆಲ್ಲಾ ಕೇಳಿಸಿಕೊಂಡ ನನ್ನ ಮನಸು ಒಳಗಿನ ನೋವು ಪರಚಿ ಸೋತು ಶಬ್ಧಗಳಿಗೆ ಬಲೆ ಬೀಸಿ ಕವಿತೆ ಕಟ್ಟಿದ್ದೇನೆ ಇದರೊಂದಿಗೆ ಉಸಿರು ಬಿಡುವ ಶಕ್ತಿಯಿದ್ದರೆ , ಒಮ್ಮೆ ನಿಡಿದಾಗಿ ಉಸಿರೆಳೆದು ಹೊರಗೆ ಬಿಟ್ಟು ಬಿಡಿ.! ————————

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಜೀವನವೆಂದರೆ ಹೀಗೇನೆ ಟಿ.ಎಸ್.ಶ್ರವಣಕುಮಾರಿ ಪುಟ್ಟ ದೀಪೂಗೆ ಇವತ್ತು ಶಾಲೆಯಿಂದ ಬರುವಾಗಲೇ ಎರಡು ರೆಕ್ಕೆ ಹುಟ್ಟಿಕೊಂಡು ಬಿಟ್ಟಿತ್ತು. ಯಾವಾಗಲೂ ತನ್ನನ್ನು ಎರಡನೆಯ ಸ್ಥಾನಕ್ಕೆ ತಳ್ಳುತ್ತಿದ್ದ ಪುನೀತನನ್ನು ಅವನು ಎರಡನೆಯ ಸ್ಥಾನಕ್ಕೆ ಕಳಿಸಿ ತಾನು ಅವನ ಜಾಗದಲ್ಲಿ ಹೆಮ್ಮೆಯಿಂದ ನಿಂತಿದ್ದ. ಟೀಚರ್ ಮಾರ್ಕ್ಸ್ ಕಾರ್ಡ್ ಕೊಡೋವಾಗ ಪುನೀತನ ಮುಖ ನೋಡ್ಬೇಕಿತ್ತು. `ತಾನೇ ಫಸ್ಟ್ ಬರೋದು ಅನ್ನೋ ಜಂಭ… ಬೀಗ್ತಾ ಎಲ್ಲರ ಕಡೆ ನೋಡ್ತಾ ಇದ್ದ. ಆದರೆ ತನ್ನ ಹೆಸರು ಹೇಳಿದ ತಕ್ಷಣ ಅವನ ಮುಖ ಹೇಗಾಗಿ ಹೋಯಿತು…. ಹಾ! ಹಾ! ಹಾಗೇ ಆಗಬೇಕು ಅವನಿಗೆ. ಇನ್ನು ಯಾವತ್ತೂ ನಾನು ಈ ಜಾಗ ಬಿಟ್ಟು ಕೊಡಬಾರದು. ಅಪ್ಪ ಹೇಳಿದ್ದು ನಿಜ.. ಫಸ್ಟ್ ಬರೋದ್ರ ಖುಷೀನೇ ಬೇರೆ…. ಹೀಗೇ ಉತ್ಸಾಹದ ಕುದುರೆಯ ಬೆನ್ನೇರಿ ಗಾಳಿಯಲ್ಲಿ ತೇಲುತ್ತಾ ಬಂದಂತೆ ಮನೆಗೆ ಬಂದ. ಬಾಗಿಲ ಹತ್ತಿರ ಬರುತ್ತಿರುವಾಗಲೇ ಕೂಗಿಕೊಂಡ ಅಮ್ಮಾ ಇವತ್ತು ಏನು ಸ್ಪೆಷಲ್ ಹೇಳು ನೋಡೋಣ’’.ಏನು ಸ್ಪೆಷಲ್ಲೂ? ಯಾರ್ದಾ ದ್ರೂ ಹುಟ್ಟಿದ ಹಬ್ಬ ಇತ್ತಾ? ಕ್ಯಾಡ್ಬರೀಸ್ ಚಾಕಲೇಟ್ ಕೊಟ್ರಾ?’’ ಕೇಳಿದಳು ಸುಮಿತ್ರ. ಹೋಗಮ್ಮ ಅದಲ್ಲ. ಕೇಳಿದ್ರೆ ನೀನೇ ಕೊಡಿಸಲ್ವಾ ಚಾಕಲೇಟ್‌ನ. ಇನ್ನೂ ಬೇರೆ ಏನೋ ಬೇಗ ಹೇಳು’’. ಈಗ ಅವನ ಮುಖವನ್ನು ಸರಿಯಾಗಿ ಗಮನಿಸಿದಳು – ಕಣ್ಣು ಹೊಳೆಯುತ್ತಿದೆ, ಮುಖದಲ್ಲಿ ಸಂತೋಷವನ್ನು ಬಚ್ಚಿಡಲು ಅವನಿಂದ ಸಾಧ್ಯವೇ ಆಗುತ್ತಿಲ್ಲ… ಸರಿ ಹಾಗಾದ್ರೆ. ನೀನು ಯಾವುದೋ ಸ್ಪರ್ಧೇಲಿ ಬಹುಮಾನ ತೊಗೊಂಡಿದೀಯ.. ಎಷ್ಟನೇ ಬಹುಮಾನ’’ ಅವನ ಕೆನ್ನೆ ಹಿಂಡುತ್ತಾ ಕೇಳಿದಳು. ಉತ್ತರ ಅರ್ದ ಸರಿ ಅರ್ದ ಸರಿ ಅಲ್ಲ’’ ಅವನು ಜಾಣತನವಾಗಿ ನುಡಿದ.ಹಾಗಂದರೇನೋ’’ ಅರ್ಥವಾಗದವಳಂತೆ ಅವನ ಮುಖವನ್ನೇ ನೋಡಿದಳು. ಈಗ ಬಾಯ್ಬಿಟ್ಟ ಜಾಣ ಈ ಸಲ ನಾನೇ ಕ್ಲಾಸಿಗೆ ಫಸ್ಟ್ ಗೊತ್ತಾ. ಪುನೀತಂಗೆ ನನಗಿಂತ ಐದು ಮಾರ್ಕು ಕಮ್ಮಿ. ಅಪ್ಪ ಯಾವಾಗ್ಲೂ ಹೇಳ್ತಿದ್ರಲ್ಲಾ `ನೀನು ಫಸ್ಟ್ ಬಂದ್ರೇನೇ ನಾನು ಮಾರ್ಕ್ಸ್ ಕಾರ್ಡ್ಗೆ ಸೈನ್ ಮಾಡೋದು. ಇಲ್ದೇ ಇದ್ರೆ ಅಮ್ಮನ ಕೈಲೇ ಮಾಡಿಸ್ಕೊಂಡು ಹೋಗೂಂತ. ಈ ಸಲ ನೋಡು ನಾನು ಅವರ ಕೈಲೇ ಹಾಕಿಸ್ಕೊಂಡು ಹೋಗ್ತೀನಿ. ಇಲ್ನೋಡು’’ ಏನೋ ರಾಜ್ಯ ಗೆದ್ದು ಬಂದವರ ಹೆಮ್ಮೆಯಿಂದ ಬ್ಯಾಗಿನಿಂದ ಹುಷಾರಾಗಿ ಮಾರ್ಕ್ಸ್ ಕಾರ್ಡನ್ನು ತೆಗೆದು ಅಮ್ಮನಿಗೆ ತೋರಿಸುತ್ತಾ ಫಸ್ಟ್ ಎಂದು ಬರೆದಿದ್ದರ ಮೇಲೆ ಮುದ್ದಾಗಿ ಬೆರಳಿಡುತ್ತಾ ಹೇಳಿದ.ಆಯ್ತಾಯ್ತು. ಈಗ ಷೂ ಬಿಚ್ಚಿ, ಯೂನಿಫಾರಂ ಬದಲಾಯಿಸಿಕೊಂಡು ಕೈಕಾಲು ತೊಳೆದುಕೊಂಡು ಬಾ. ತಿಂಡಿ ತಿಂದು ಹಾಲು ಕುಡೀವಂತೆ. ಅಪ್ಪನಿಗೂ ಇವತ್ತು ತುಂಬಾ ಖುಷಿಯಾಗತ್ತೆ’’ ಎನ್ನುತ್ತಾ ಅವನ ಬ್ಯಾಗನ್ನು ತೆಗೆದುಕೊಂಡು ಒಳಗೆ ಹೋದಳು. ತಿಂಡಿ ತಿನ್ನುವಾಗಲೂ ಅವನಿನ್ನೂ ತನ್ನ ಸಾಧನೆಯ ಗುಂಗಿನಿಂದ ಹೊರಗೆ ಬಂದಿರಲಿಲ್ಲ. ಅಮ್ಮ…, ಅಪ್ಪನಿಗೆ ಇವತ್ತು ತುಂಬಾ ಖುಷಿಯಾಗತ್ತೆ ಅಲ್ವಾ? ನನ್ನ ಅವರ ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡ್ತಾರೆ. ನಾನು ಅವರ ಹತ್ರ ಒಂದು ಟೆಂಪ್ಟೇಷನ್ ಚಾಕೊಲೇಟ್ ತೆಗೆಸಿಕೊಳ್ಳುತ್ತೀನಿ. ಖಂಡಿತಾ ಕೊಡಿಸ್ತಾರೆ ಅಲ್ವಾ’’ ಅವನ ಮಾತಿನ ಪ್ರವಾಹ ನಿಲ್ಲುತ್ತಲೇ ಇಲ್ಲ.ಹ್ಞೂಂ. ಸರಿ. ಅವರು ಬಂದ ಮೇಲೆ ಖಂಡಿತಾ ಕೊಡಿಸ್ತಾರೆ. ಈಗ ನಿನ್ನ ಫ್ರೆಂಡ್ಸ್ ಕಾಯ್ತಿರ್ತಾ ರೆ. ಆಟ ಆಡಕ್ಕೆ ಹೋಗು’’ ಎಂದಳು. ಅಪ್ಪನ ಹತ್ತಿರಾ ಏನೋ ಚಾಕೊಲೇಟ್ ಕೊಡಿಸ್ಕೋತೀನಿ. ನೀನು ನಂಗೆ ಏನು ಮಾಡ್ಕೊಡ್ತೀಯ’’ಹೇಳು ಏನು ಮಾಡ್ಕೊಡ್ಲಿ?’’ ಜಾಮೂನು ಮಾಡ್ತೀಯಾ? ರಾತ್ರಿ ಊಟದ ಜೊತೆ ತಿನ್ನೋಣ’’ಆಯ್ತು ಹಾಗೇ ಮಾಡೋಣ’’ ಇನ್ನೂ ಅವನ ಉತ್ಸಾಹ ಕಮ್ಮಿಯಾಗಿಲ್ಲ ನೋಡು ನಾನೇನ್ಮಾಡ್ತೀನಿ ಗೊತ್ತಾ. ಪ್ರತಿಸಲದ ಹಾಗೆ ಸುಮ್ಮನೆ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ನಿಂತರ್ತೀ್ನಿ. ಅಪ್ಪ `ಮತ್ತೆ ಅದೇ ತಾನೇ ನಾನು ಸೈನ್ ಮಾಡಲ್ಲ ಹೋಗು; ಅಮ್ಮನ ಹತ್ರ ಮಾಡಿಸ್ಕೋ’ ಅಂತಾರೆ. ಆಗ ನೀನು ಹೇಳ್ಬೇಕು. ಇಲ್ಲಾ ಈಸಲ ಫಸ್ಟ್ ಬಂದಿದಾನೇಂತ. ಆಗ ಅವರಿಗೆ ಎಷ್ಟು ಖುಷಿಯಾಗತ್ತೆ…’’ ಅವನು ರಂಗ ಸಜ್ಜಿಕೆಯನ್ನು ಮಾಡತೊಡಗಿದ.ಹಾಗೇ ಆಗ್ಲಿ. ಈಗ ಆಡಕ್ಕೆ ಹೋಗು. ನಾನೂ ಜಾಮೂನು ಮಾಡಿ ಇಡ್ತೀನಿ. ಫ್ರೆಂಡ್ಸ್ ಕಾಯ್ತಿದಾರೆ’’ ಎನ್ನುತ್ತಾ ಅವನನ್ನು ಕಳಿಸಿ ಜಾಮೂನು ಮಾಡಲು ಒಳಗೆ ಹೋದಳು. ದೀಪು ಇವತ್ತು ಎಷ್ಟು ಖುಷಿಯಾಗಿದಾನೆ. ಸಧ್ಯ ಅವರಪ್ಪನಿಗೆ ಇವತ್ತಾದರೂ ಸಮಾಧಾನವಾಗತ್ತೆ. ಪ್ರತಿಸಲ ಇವನು ಮಾರ್ಕ್ಸ್ ಕಾರ್ಡ್ ತಂದಾಗಲೂ ಇವರದ್ದು ಒಂದೇ ತಕರಾರು. “ಇನ್ನೂ ಒಂದು ನಾಲ್ಕೈದು ಮಾರ್ಕ್ ಹೆಚ್ಚಿಗೆ ತೊಗೊಳ್ಳೋಕೆ ಏನು ಧಾಡಿ. ಏನು ಕಮ್ಮಿ ಮಾಡಿದೀವಿ ನಿಂಗೆ. ಶ್ರದ್ಧೆಯಿಂದ ನೀನು ಓದಿದ್ರೆ ಬರಲೇಬೇಕು. ನೀನು ಶುದ್ಧ ಸೋಂಭೇರಿ. ಹೀಗೇ ಓದ್ತಾ ಇದ್ರೆ ನೀನು ಖಂಡಿತಾ ಉದ್ಧಾರ ಆಗಲ್ಲ…. ನಾನು ಮಾತ್ರ ಇದಕ್ಕೆ ಸೈನ್ ಮಾಡಲ್ಲ. ನೀನು ಯಾವತ್ತು ಕ್ಲಾಸಿಗೆ ಫಸ್ಟ್ ಬರ್ತೀ ಯೋ ಆ ಮಾರ್ಕ್ಸ್ ಕಾರ್ಡ್ಗೇ ನಾನು ಸೈನ್ ಹಾಕೋದು. ಅಲ್ಲಿಯವರೆಗೆ ನಿಮ್ಮಮ್ಮನ ಹತ್ರಾನೇ ಹಾಕಿಸ್ಕೊಂಡು ಹೋಗು’’ ರಾಮ ರಾಮಾ ಅವರ ಕೋಪ ಬೇಗ ತಣ್ಣಗಾಗುತ್ತಲೇ ಇರಲಿಲ್ಲ. ಅವರ ಸಿಟ್ಟಿಗೆ ಇನ್ನೊಂದು ಕಾರಣ ಕ್ಲಾಸಿಗೆ ಫಸ್ಟ್ ಬರುತ್ತಿದ್ದ ಪುನೀತನ ಅಪ್ಪ ದುರಾದೃಷ್ಟವಶಾತ್ ಆಫೀಸಿನಲ್ಲಿ ಇವರ ಕೈಕೆಳಗಿನ ನೌಕರ. ಅವನ ಮುಂದೆ ತನ್ನ ಪ್ರತಿಷ್ಠೆಗೆ ಕುಂದೆಂಬ ಭಾವ ಬೇರೆ. ಅವನಾದರೂ ಸುಮ್ಮನಿರಬಾರದೆ. ಪ್ರತಿಸಲವೂ `ಮಾರ್ಕ್ಸ್ ಕಾರ್ಡ್ ನೋಡಿದ್ರಾ ಸಾರ್’ ಅಂತ ಸಹಜವಾಗೋ, ವ್ಯಂಗ್ಯವಾಗೋ ಅಂತೂ ಕೇಳುತ್ತಾನೆ. ಇವರಿಗೆ ಮೈಯೆಲ್ಲಾ ಉರಿದುಹೋಗುತ್ತೆ. ಮನೆಗೆ ಬಂದ ಮೇಲೆ ಅದರ ಮೊದಲ ಪರಿಣಾಮ ಅವನ ಮೇಲೆ; ಆಮೇಲೆ ನನ್ನ ಮೇಲೆ. “ನಿನ್ನ ಮುದ್ದಿಂದಾನೇ ಅವ್ನು ಹಾಳಾಗಿ ಹೋಗ್ತಿರೋದು. ನೀನು ಅವನಿಗೆ ಶಿಸ್ತು, ಶ್ರದ್ಧೆ ಕಲಿಸಲ್ಲ. ನೀನೇ ಅವನ ಮೊದಲ ಹಿತಶತ್ರು…’’ ಹೀಗೆಲ್ಲಾ ಆಪಾದನೆ. ಎಷ್ಟೋ ಸಲ ಹೇಳಿದ್ದೇನೆ ಅವನ ವಯಸ್ಸೆಷ್ಟು? ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಓದುತ್ತಾನೆ. ಅವನ ಮೇಲೆ ಯಾವುದನ್ನೂ ಅಷ್ಟೊಂದು ಬಲವಂತವಾಗಿ ಹೇರಬೇಡಿ. ಅವನೇನೂ ಫೇಲಾಗುತ್ತಿಲ್ಲವಲ್ಲ. ಸೆಕೆಂಡ್ ಬರುವುದೂ ಅಷ್ಟೊಂದು ಸುಲುಭವೇನಲ್ಲ. ಅಲ್ಲದೆ ಇಷ್ಟು ಚಿಕ್ಕ ಮಕ್ಕಳಲ್ಲಿ ಅಷ್ಟೊಂದು ಸ್ಪರ್ಧಾ ಮನೋಭಾವ ಬೆಳೆಸುವುದು ಒಳ್ಳೆಯದಲ್ಲ’’ ಈ ಮಾತುಗಳನ್ನು ದೀಪು ಎದುರಿನಲ್ಲಿ ಇಲ್ಲದಾಗ ಪ್ರತಿಸಲವೆನ್ನುವಂತೆ ಹೇಳಿದ್ದೇನೆ. ಅವರಿಗೆ ಇಂತಹ ಮಾತುಗಳನ್ನು ಕೇಳಿದಾಗ ಇನ್ನೂ ಅಷ್ಟು ಕೋಪ ಜಾಸ್ತಿಯಾಗುತ್ತದೆ.ನೀನು ಈ ಮನೋಭಾವ ಇಟ್ಟುಕೊಂಡು ಬೆಳೆಸ್ತಾ ಇರೋದ್ರಿಂದಲೇ ಅವನು ಮೇಲೆ ಬರ್ತಾ ಇಲ್ಲ. ನೀನೇ ಅವನ ಓದಿಗೆ ಮೊದಲ ಶತ್ರು. ಪುನೀತನಿಗೆ ಸಾಧ್ಯವಾಗೋದು ಇವನಿಗ್ಯಾಕೆ ಆಗ್ತಿಲ್ಲ? ಅಲ್ಲಿಯವರೆಗೆ ಹೋದವನು ಒಂದು ನಾಲ್ಕೈದು ಮಾರ್ಕಿನಲ್ಲಿ ಎಡವುತ್ತಾನೆಂದರೆ ಅವನಲ್ಲಿ ಮುಂದೆ ಬರಬೇಕೆಂಬ ಹಟವಿಲ್ಲ. ಅಥವಾ ಅದನ್ನು ಪಡೆದುಕೊಳ್ಳುವ ನೈಪುಣ್ಯತೆ, ಚಾಕಚಕ್ಯತೆ, ಛಲ ಇಲ್ಲ. ಈಗಿನಿಂದ ಅದನ್ನು ಸರಿಪಡಿಸಿಕೊಳ್ಳದೇ ಹೋದರೆ, ಜೀವನದಲ್ಲಿ ಹೇಗೆ ಮುಂದೆ ಬರ್ತಾನೆ?’’ ಅವರು ಹೇಳುವುದೇನೋ ಸರಿ. ಆದರೆ ಇವನು ಇನ್ನೂ ಚಿಕ್ಕವನು ಎನ್ನುವ ಭಾವನೆ ನನ್ನಲ್ಲಿ. ತಂದೆಯಾಗಿ ನನ್ನ ಮಗ ಮುಂದಿರಬೇಕೆಂದು ನನಗೆ ಆಸೆ ಇರೋಲ್ವೆ ಎನ್ನುವ ಧೋರಣೆ ಇವರಲ್ಲಿ. ಸರಿ ಎಷ್ಟು ಮಾತಾಡಿದರೂ ಇದು ಮುಗಿಯದ ಚರ್ಚೆ ಎನ್ನುವುದು ನನಗರ್ಥವಾಗಿ ಹೋಗಿದೆ. ಆದರೂ ಪ್ರತಿಸಲ ಅವನ ಮಾರ್ಕ್ಸ್ ಕಾರ್ಡ್ ಬಂದಾಗ ಇದರ ಪುನರಾವರ್ತನೆಯೇ. ಸಧ್ಯ ಈಸಲ ಅದಕ್ಕೆ ಅವಕಾಶವಿಲ್ಲವಲ್ಲ ದೇವರೇ ಎಂದುಕೊಳ್ಳುತ್ತಾ ಸುಮಿತ್ರ ಮನದಲ್ಲಿಯೇ ದೇವರಿಗೆ ಕೈಮುಗಿದು ಜಾಮೂನನ್ನು ಮಾಡತೊಡಗಿದಳು. ಅಮ್ಮ ಅಪ್ಪ ಇನ್ನೂ ಬರಲಿಲ್ವಾ’’ ಆರೂವರೆಗೆ ಎರಡೆರಡು ಮೆಟ್ಟಿಲನ್ನು ಒಟ್ಟೊಟ್ಟಿಗೆ ಹಾರುತ್ತಾ ಬಂದ ದೀಪು ಕೇಳಿದ.ಇಷ್ಟು ಬೇಗ ಯಾವತ್ತು ಬಂದರ್ತಾನರೆ. ಅವರು ಬರೋದು ಏಳೂವರೆಯಾಗುತ್ತೆ. ಅಲ್ಲಿಯವರೆಗೆ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ನಮಸ್ಕಾರ ಮಾಡಿ ಓದ್ತಾ ಕೂತುಕೋ ಹೋಗು’’ ಎನ್ನುತ್ತಾ ಕೈಲಿದ್ದ ಕೆಲಸವನ್ನು ಮುಂದುವರಿಸಿದಳು. `ಇವತ್ತು ಒಂದರ್ಧ ಘಂಟೆ ಕಂಪ್ಯೂಟರ್ ಆಡ್ಕೋತೀನಿ. ಅಪ್ಪ ಹೇಳಿದ್ರಲ್ವಾ ಕ್ಲಾಸಿಗೆ ಫಸ್ಟ್ ಬಂದ್ರೆ ಆಮೇಲೆ ಕಂಪ್ಯೂಟರಿನಲ್ಲಿ ಆಡಕ್ಕೆ ಬಿಡ್ತೀನಿ ಅಂತ. ಇವತ್ತು ಬಂದಿದೀನಲ್ಲ’’ ಆಸೆಯ ಕಂಗಳಿಂದ ನೋಡಿದ. ಅವನ ಮಾತು ಕೇಳಿ ನಗು ಬಂತುಸರಿ ಆಡ್ಕೋ ಹೋಗು ತುಂಬಾ ಹೊತ್ತು ಬೇಡ. ಒಂದರ್ಧ ಘಂಟೆ ಆಡಿ ಆಮೇಲೆ ಓದ್ಕೋ ಬೇಕು’ ಎನ್ನುತ್ತಾ ಪಾಸ್ ವರ್ಡ್ ಹಾಕಿ ಬಂದಳು. `ಸರಿ ಸರಿ’ ಅನ್ನುತ್ತಾ ಅವನು ಆಡಲು ಶುರುಮಾಡಿ ಅದರಲ್ಲೇ ಮುಳುಗಿ ಹೋದ. ಸುಮಿತ್ರೆಯೂ ಅಡುಗೆಮನೆಯ ಕೆಲಸದಲ್ಲೇ ಮಗ್ನಳಾಗಿ ಹೋದಳು. ಕಾಲಿಂಗ್ ಬೆಲ್ ಸದ್ದಿನಿಂದಲೇ ಅದು ರಮೇಶನದೆಂದು ಅರ್ಥವಾಗಿ ಹೋಯಿತು ಸುಮಿತ್ರೆಗೆ. ಓ! ಆಗಲೇ ಕತ್ತಲಾಗಿ ಹೋಗಿದೆ ಅಂದುಕೊಂಡು ಪಡಸಾಲೆ, ವರಾಂಡದ ದೀಪವನ್ನು ಹಾಕಿ ಬಾಗಿಲು ತೆರೆದಳು. ಬರುವಾಗಲೇ `ಎಲ್ಲಿ ಅವನು? ಏನ್ಮಾಡ್ತಾ ಇದಾನೆ?’ ಬುಸುಗುಡುತ್ತಲೇ ಬಂದ ರಮೇಶ. ಅಪ್ಪನ ದನಿ ಕೇಳುತ್ತಲೇ ಬ್ಯಾಗಿನಿಂದ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ದೀಪು ಹೊರಗೆಬಂದ. ಅಷ್ಟರಲ್ಲಿ ಅವನು ಕಂಪ್ಯೂಟರ್‌ನಲ್ಲಿ ಆಡ್ತಾ ಇದಾನೆ’’ ಸುಮಿತ್ರೆ ಮೆತ್ತಗೆ ಹೇಳುತ್ತಿದ್ದಳು. ಅವನ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಯಿತು.ಯಾರವನಿಗೆ ಕಂಪ್ಯೂಟರ್ ಪಾಸ್ ವರ್ಡ್ ಹಾಕಿ ಕೊಟ್ಟೋರು. ಒಂದು ಶಿಸ್ತು ಇಲ್ಲ, ಶ್ರದ್ಧೆ ಇಲ್ಲ. ಯಾವಾಗ ನೋಡಿದರೂ ಆಟ, ಆಟ, ಆಟ. ನೀನೂ ಅವನಿಗೆ ತಕ್ಕ ಹಾಗೆ ಕುಣೀತೀಯಾ.’’ ಕಿರುಚಿದ ಸಿಟ್ಟಿನಿಂದ. ದೀಪುವಿಗೆ ಹಿಂದೆ ಮುಂದೆ ಅರ್ಥವಾಗದೇ ಬೆಪ್ಪಾಗಿ ನಿಂತಿದ್ದ. ಅವನನ್ನು ನೋಡುತ್ತಲೇ ಮತ್ತಷ್ಟು ಕೆರಳಿದ ರಮೇಶ ಬೆನ್ನಿಗೊಂದು ಗುದ್ದಿದ. ಎಷ್ಟು ಸಲ ಹೇಳಿದೀನಿ ನಿಂಗೆ. ಸಾಯಂಕಾಲ ಏಳು ಘಂಟೆ ಆಗತ್ಲೂವೆ ಮನೆ ಮುಂದಿನ ದೀಪ ಹಾಕಬೇಕು. ನಾನು ಬರುವ ಹೊತ್ತಿಗೆ ಓದ್ತಾ ಕೂತಿರಬೇಕು ಅಂತ. ನೀನೇನ್ಮಾಡಿದೀಯ. ಆಟ ಆಡಿಕೊಂಡು ಬಂದು ಬ್ಯಾಟು ಬಾಲನ್ನು ಎಸೆದಿದೀಯ. ವರಾಂಡ ತುಂಬ ಬೂಟಿನ ಮಣ್ಣು… ಹಾಕಿದೀಯ ದೀಪ ಇವತ್ತು? ಹೇಳಿದ ಮಾತಿಗೆ ಒಂದಿಷ್ಟಾದರೂ ಬೆಲೆಯಿದೆಯಾ? ಜೀವನದಲ್ಲಿ ಶ್ರದ್ಧೆ ಇರಬೇಕು, ಶಿಸ್ತು ಇರಬೇಕು. ಇಲ್ದಿದ್ರೆ ಹಾಳಾಗಿ ಹೋಗ್ತೀಯ. ನಮ್ಮ ನಮ್ಮ ಕೆಲಸಾನ ಅಚ್ಚುಕಟ್ಟಾಗಿ ಮಾಡಿಕೊಂಡ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಸಾಧ್ಯ. ಇಲ್ದಿದ್ರೆ ಎಲ್ಲಾದರೂ ತಾಪೇದಾರಿ ಮಾಡ್ಕೊಂಡು ಜೀವನ ಮಾಡ್ಬೇಕು…’’ ಅವನ ಮಾತನ್ನು ತಡೆಯುತ್ತಾ ಸುಮಿತ್ರ ಹೇಳಿದಳುಸ್ವಲ್ಪ ಇಲ್ಲಿ ಕೇಳಿ ಇವತ್ತು ಏನಾಯ್ತೂಂದ್ರೆ….’’ ನೀನು ಬಾಯ್ಮುಚ್ಚು. ನಿನ್ನಿಂದಾನೇ ಅವನು ಕೆಟ್ಟು ಕುಲಗೆಟ್ಟು ಕೆರ ಹಿಡಿದು ಹೋಗಿರೋದು. ನಿನ್ನ ಪ್ರತಿಯೊಂದು ತಪ್ಪಿಗೂ ನಿನ್ನ ಹತ್ರ ಒಂದೊಂದು ಕಾರಣ ಇರತ್ತೆ; ಹಾಗೇ ಅವನ ತಪ್ಪಿಗೂ. ತಪ್ಪಿಗೆ ಕಾರಣ ಕೊಡೋದನ್ನ ಅವನಿಗೆ ಕಲಿಸಬೇಡ. ಅದನ್ನ ತಿದ್ದುಕೊಂಡು ಮುಂದೆ ಬರೋದಕ್ಕೆ ಅವನಿಗೆ ಅವಕಾಶ ಕೊಡು. ಮೊದಲು ನೀನು ಶಿಸ್ತು ಕಲಿ. ಆಗ ನಿನ್ನ ಮಗ ತಾನೇ ಕಲೀತಾನೆ.’’ಹಾಗಲ್ಲ ನಾನು ಹೇಳೋ ಒಂದು ಮಾತನ್ನ ನೀವು ಕೇಳಿ. ಅಮೇಲೆ ಕೂಗಾಡ್ತೀರಂತೆ’’ ಅವನಿಗೆ ಇನ್ನಷ್ಟು ರೇಗಿ ಹೋಯಿತು. “ಏನು? ಏನದು ಅಂತ ಮಾತು. ನಾನು ಎಷ್ಟು ಸಲ ನಿಂಗೆ ಹೇಳಿಲ್ಲ. ಅವನು ಕ್ಲಾಸಿನಲ್ಲಿ ಫಸ್ಟ್ ಬರೋತಂಕ ಕಂಪ್ಯೂಟರ್ ಮುಟ್ಟಕೂಡದು ಅಂತ. ನೀನು ಯಾಕೆ ಅವನಿಗೆ ಆಡಕ್ಕೆ ಹಾಕಿಕೊಟ್ಟಿದ್ದು? ತಾಯಿ, ಮಗ ಇಬ್ಬರೂ ಒಂದೇ. ನಿಮ್ಮಿಬ್ಬರ ದೃಷ್ಠೀಲಿ ನಾನೊಬ್ಬ ವಿಲನ್. ಈಗ ನಿಮಗೆ ನಾನು ಹೇಳೋದು ಅರ್ಥ ಆಗಲ್ಲ. ಬೈಯೋವ್ರು ಒಳಿತಿಗೆ ಬೈತಾರೆ ಅಂತ’’. ಸಿಡಿಮಿಡಿಗುಟ್ಟುತ್ತಲೇ ಬಟ್ಟೆ ಬದಲಾಯಿಸಲು ರೂಮಿಗೆ ಹೋದ ಮಾತನ್ನು ಅಲ್ಲಿಗೆ ಮುಗಿಸುವಂತೆ. ದೀಪೂ ಆಡಬೇಕೆಂದಿದ್ದ ನಾಟಕ ನಿಜರೂಪದಲ್ಲೇ ನಡೆದು ಹೋಗಿತ್ತು. ಆದರೆ ಅಂತ್ಯ ಮಾತ್ರ ಬದಲಾಗಿತ್ತು. ಬೆನ್ನಿಗೆ ಗುದ್ದಿದಾಗ ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡ್ ಮೂಲೆಗೆ ಹೋಗಿ ಬಿದ್ದಿತ್ತು. ಕಟ್ಟಿಕೊಂಡಿದ್ದ ರೆಕ್ಕೆಗಳು ಅವನ ಕಣ್ಣ ಮುಂದೆಯೇ ಮುರಿದು ಬಿದ್ದಿದ್ದವು.

ಕಥಾಗುಚ್ಛ Read Post »

You cannot copy content of this page

Scroll to Top