ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
White and Yellow Flower With Green Stems

ಡಾ.ಗೋವಿಂದ ಹೆಗಡೆಯವರ ಎರಡು ಪದ್ಯಗಳು

White Flowers In Bloom

ನಕ್ಕು ಬಿಡು.

ಉಂಡ ಕಹಿಗುಳಿಗೆಗಳ
ತಪಸೀಲು ಬೇಕಿಲ್ಲ

ಸವೆಸಿದ ಕೊರಕಲು ದಿಣ್ಣೆ
ದಾರಿಗಳಿಗೆ
ಎಡವಿದ ಗಾಯ ನಟ್ಟ ಮುಳ್ಳುಗಳಿಗೆ
ಪುರಾವೆಯಿಲ್ಲ
ಹನಿಗೂಡಿದ ಕಣ್ಣುಗಳಲ್ಲಿ
ತಿರುಗಿ ನೋಡಿ ಒಮ್ಮೆ
ನಕ್ಕು ಬಿಡು, ಗೆಳತಿ!

ಕೂಡಿ ನಡೆದ ದಾರಿಗಳು
ಬೇರಾದ ಹೆಜ್ಜೆಗಳು
ಏರು ದಾರಿಯ ಕುಂಟುನಡೆ-ಗೆ
ಒದಗದ ಊರುಗೋಲುಗಳು
ಬೆನ್ನಿಗೆರಗಿದ ಬಾರುಕೋಲುಗಳು
ಎಲ್ಲ ಅನುಭವ ಸಂತೆಯಲ್ಲೊಮ್ಮೆ
ನಿಂತು ಗೆಳತೀ, ನಕ್ಕುಬಿಡು

ದಾರಿ ಹೂವಿನದಲ್ಲ ನೆರಳು-
ನೀರು ಸಿಗುವ ಖಾತರಿಯಿಲ್ಲ
ಮುಗಿವ ಮುನ್ನ ಹಗಲು
ಸೇರುವುದು ಯಾವ ಮಜಲು
ಕಾಲ ಕೆಳಗಿನ ಕಳ್ಳ ಹುದಿಲಲ್ಲೂ
ನೇರ ನಡೆವ ಬಿಗಿ ನಿಲುವಿನ
ಅವಡುಗಚ್ಚಿದ ಮುಖದಲ್ಲೂ

ಒಮ್ಮೆ ಸಡಲಿಸಿ ಗಂಟು
ಕುಸಿದಾಗ ಮಡಿಲೀವ
ನೆಲದ ನಲುಮೆಗೆ ನಮಿಸಿ
ಒಮ್ಮೆ-
ನಕ್ಕುಬಿಡು!

Fire Wallpaper

ಕುಲುಮೆ

ಚಿನ್ನ ಸುಟ್ಟಾಗ
ಶುದ್ಧವಾಗುತ್ತದೆ
ಮಣ್ಣು ಇಟ್ಟಿಗೆಯಾಗುತ್ತದೆ
ಕಟ್ಟಿಗೆ ಇಂಧನವಾಗುತ್ತದೆ
ಯಾರದೋ ಹಸಿವೆಗೆ

ಎದೆಯ ಕುಲುಮೆ
ಉರಿಯುತ್ತಲೇ ಇದೆ
ಏನನ್ನು ಉರಿಸುತ್ತದೆ
ಪುಟಕ್ಕಿಡುತ್ತದೆ
ಅಥವಾ
ಸುಟ್ಟು ಬೂದಿಯಾಗಿಸುತ್ತದೆ

ನೀನು
ಅಲಕ್ಕಾಗಿ ಕೂತುಬಿಟ್ಟಿದ್ದೀ-

ನೆನಪುಗಳೇ ಇಲ್ಲದ ಹಾಗೆ..


About The Author

5 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top