ಅವ್ಯಕ್ತ ಉಡುಗೊರೆ ಉಡುಗೊರೆ ಅವನ್ಯಾರೋ ನಂಗೆ ಗೊತ್ತಿಲ್ಲ, ಮುಗ್ಧ ನಗುವ ಹೊನಲು ಮುಖದಲ್ಲಿ ಹಾರಾಡ್ತಿರ್ತಿತ್ತು , 100 ಮಕ್ಳ ಕ್ಲಾಸಲ್ಲಿ ವಿಭಿನ್ನ ಇವ್ನು. ಹೊಳೆವ ಕಣ್ಣುಗಳು, ಮುಖದಲ್ಲಿ ಕಾಂತಿ, ಬಾಡಿ ಲ್ಯಾಂಗ್ವೇಜಲ್ಲಿ ಗೌರವ…ನಾನು ನಿತ್ಯ ನನ್ನ ಕೆಲಸ ಮಾಡೋದು- ಪ್ರಶ್ನೆ ಕೇಳೋದು, ಉತ್ತರ ಹೇಳೋದು, ಕೊನೇ ಘಳಿಗೇಲಿ ಸ್ವಲ್ಪ ಹೊತ್ತು ಜೀವನದ ಬೆಲೆ ಬಗ್ಗೆ ವಿಶ್ಲೇಷಣೆ…. ಹೀಗೆ ದಿನ ಕಳೆದ್ವು, ಎದ್ರು ಬಂದಾಗ್ಲು ಎದುರು ನಿಲ್ಲಲು ಹಿಂಜರಿತಿದ್ದ. ಫಸ್ಟ್ ಪಿಯುಸಿ ಅಲ್ವಾ ಭಯ ಇರ್ಬಹ್ದು ಅಂತ ಸುಮ್ನಾದೆ. ನಂಗೆ ಒಂದು ಹುಚ್ಚು ಕುತೂಹಲ, ಮಕ್ಳನ್ನ ಅವರ ಗುಣಗಳ್ನ ಅನ್ವೇಷಿಸೋದು ಸೈಲೆಂಟಾಗಿ ವೀಕ್ಷಿಸುತ್ತಾ ಹೋದ್ರೆ ಅವರ ಮನಸನ್ನ ಕೂಡ ಶೋಧಿಸ್ಬಹ್ದು ಅಂತ ಗೊತ್ತಿತ್ತು, ಕಲ್ತಿದ್ದೆ. ಸಮಯ ಸಿಕ್ಕಾಗ್ಲೆಲ್ಲಾ ಹುಡುಗನ ಚಟುವಟಿಕೆಗಳನ್ನು ದೂರದಿಂದಲೇ ವೀಕ್ಷಿಸುತ್ತಿದ್ದೆ ಸೋಜಿಗ ಎಂದರೆ ಎಲ್ಲಿದ್ದರೂ ಅಲ್ಲಿ ನಗೆಯ ಹೊನಲಿತ್ತು, ಅನ್ಯೋನ್ಯತೆ ಕಾಣುತ್ತಿತ್ತು. ಆದರೆ ನಾನು ಎದುರಿಗೆ ಹೋಗುವಾಗ ಮೌನ ಮುಗುಳ್ನಗು, ಗೌರವದ ಒಂದು ಸೂಚನೆ, ವಾಹ್! ಅಪರೂಪದ ರತ್ನ, 21ನೇ ಶತಮಾನದಲ್ಲೂ ಇಂಥ ಮಕ್ಕಳು..ಎಂದು ಮನಸ್ಸಲ್ಲೆ ಯೋಚಿಸಿ ಒಳ್ಳೇದಾಗಲಿ ಎಂದು ಆಶೀರ್ವಾದ ಮಾಡಿ ಬಿಡುತ್ತಿದ್ದೆ. ಕಾಲೇಜಿನ ವಾರ್ಷಿಕೋತ್ಸವ ಹೊಸತನದ ಹುಚ್ಚು.. ನನ್ನಲ್ಲಿ, ಮಕ್ಳಲ್ಲಿರುವ ಎಲ್ಲಾ ಗುಣಗಳ್ನ ಹೊರತೆಗಿಬೇಕಂತ ಆಸೆ. ಆ ಕಲೆಗಳ್ಗೆ ಗುರುತು ಕೊಡೋದೇ ನನ್ನ ಹುಚ್ಚು ಹಠ.. ಈ ನಿಟ್ನಲ್ಲಿ ಈ ಬಾರಿ ಕಾವ್ಯ ಕುಂಚ ಗಾನ ಎಂಬ 3 ಕಲೆಗಳ ಸಂಯೋಜನೆ ಮಾಡ್ದೆ-ಒಂದೇ ಸ್ಟೇಜಲ್ಲಿ. ಹಾಡುವವರು, ಹಾಡಿಗೆ ಚಿತ್ರ ಬರೆಯುವವರು, ಅದೇ ಹಾಡಿಗೆ ಮ್ಯೂಸಿಕಲ್ ಇನ್ಸ್ಟ್ರುಮೆಂಟ್ಸ್ ನುಡ್ಸೋರು…. ಗೊತ್ತಿರ್ಲಿಲ್ಲ ಇವನು ಮ್ಯಾಂಡೊಲಿನ್ ನುಡಿಸ್ತಾನೆ ಅಂತ….. ಅಭ್ಯಾಸ ಶುರುವಾಯ್ತು, ಅಭ್ಯಾಸದೊಂದಿಗೆ ಸರಿ-ತಪ್ಗಳ ವಿಶ್ಲೇಷಣೆ, ರಾಗತಾಳಗಳ ಬಗ್ಗೆ ಸಂಯೋಜನೆ, ಹೆಚ್ ತಿಳ್ದೋರು-ಸ್ವಲ್ಪ ತಿಳ್ದೋರ ಮಧ್ಯದಲ್ಲಿ ಒಂದು ಬ್ಯಾಲೆನ್ಸ್ ತರೋ ಪ್ರಯತ್ನ…. ಸ್ವಲ್ಪ ಹೆಣ್ಣುಮಕ್ಕಳು, ಸ್ವಲ್ಪ ಗಂಡುಮಕ್ಕಳು, ತಬಲ, ಹಾರ್ಮೋನಿಯಂ, ಕೀಬೋರ್ಡ್, ಚಿತ್ರಗಾರರು, ರಾಗತಾಳಗಳು,ಹಿಮ್ಮೇಳಗಳು,ಅವಶ್ಯಕತೆಗಳು, ಕಲ್ಪನೆಗಳು, ಆಲೋಚನೆಗಳು, ಧೋರಣೆಗಳು, ಒಂದರಮೇಲೊಂದು ಸಮಾಗಮಗಳು… ಆ ದಿನ ಕೆಲಸದ ಒತ್ತಡ ಹೆಚ್ಚಾಗಿ, ಬೇರೆ ಸಮಸ್ಯೆಗಳೂ ಸೇರಿ, ಒಂತರಾ ಅಸಹನೆ ಕೂಡಿತ್ತು ನನ್ನಲ್ಲಿ. ರೋಸಿಹೋದ ದೇಹವನ್ನು ಹೊತ್ತು,ಮನಸಲ್ಲಿ ಸಾವಿರ ಪ್ರಶ್ನೆಗಳ ಉತ್ರಾ ಹುಡುಕ್ತಾ ಲ್ಯಾಬ್ನ ಕಡೆ ನಡ್ದೆ.. ಯಾವುದೋ ಸಿಟ್ನಲ್ಲಿ, ವ್ಯವಧಾನ ಕಳ್ಕೊಂಡು ಹೇಳಿದೆ “ಪ್ರಾಕ್ಟೀಸ್ ಮಾಡಕ್ಕೆ ಏನ್ರೋಗ ನಿಮ್ಗೆ? ದಿನಾ ನಾನೇ ಬಂದು ಹೇಳ್ಬೇಕು! ಇಷ್ಟು ದೊಡ್ಡೋರಾಗಿದೀರ! ಜವಾಬ್ದಾರಿ ಬೇಡ್ವಾ. ಎಲ್ಲಾದುಕ್ಕೂ ನಾನೇ ತಲೆ ಚಚ್ಕೋಬೇಕಾ?” ಆ ಕಡೆಯಿಂದ ಮ್ಯಾಂಡೋಲಿನ್ ನಲ್ಲಿ “ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು” ನುಡಿಯಲಾರಂಭವಾಯಿತು. ನನ್ನ ಅತಿಪ್ರಿಯ ಹಾಡುಗಳಲ್ಲಿ ಒಂದು ಅದು. ನನ್ನ ಮುಖದಲ್ಲಿ ಮುಗುಳ್ನಗೆ ಅರಳಿದ್ದು ನಂಗೇ ಗೊತ್ತಾಗಲಿಲ್ಲ.. ನಕ್ಬಿಟ್ಟೆ..ಆಶ್ಚರ್ಯದಿಂದ ಅವನನ್ನ ಹತ್ರ ಕರ್ದು ಕೇಳ್ದೆ “ಹೇಗೆ ಗೊತ್ತು ಈ ಹಾಡು ನಿಂಗೆ, ಇದನ್ನೇ ಯಾಕ್ ನುಡುಸ್ದೆ ನೀನು?” ಅದಕ್ಕೆ ಅವನು ಆಡಿದ ಮಾತು ಕೇಳಿ ದಂಗಾದೆ,” ಮಿಸ್,ಅವತ್ತು ಲ್ಯಾಬ್ ರೆಕಾರ್ಡ್ ಇಡಲಿಕ್ಕೆ ಬಂದಾಗ ನೀವು ಕಿಟಕಿಯ ಕಡೆ ನೋಡ್ಕೊಂಡು ಇದೇ ಹಾಡನ್ನು ಗುನುಗ್ತಾ ಇದ್ರಿ, ಬಹಳ ಹಾಡುಗಳನ್ನು ನೀವುಗುಣ ಗಿದ್ದೀರಿ ಆದರೆ ಈ ಹಾಡಲ್ಲಿ ನಿಮ್ಮ ಮುಗುಳ್ನಗೆ ನಿಜವಾಗಿರುತ್ತೆ ಮಿಸ್” “ನಿಮಗೆ ಸಂತೋಷವಾಗಲಿ ಎಂದೇ ಇದನ್ನು ನುಡಿಸಿದೆ”……ಇದಾದ್ನಂತ್ರ ದಿನಾ ಲ್ಯಾಬ್ಗೆ ನಾನು ಬಂದು ಕೂರ್ತಿದ್ಹಂಗೆ, ಒಂದು ನಿಮಿಷ ಈ ಹಾಡು.. ನನ್ನ ಮುಗುಳ್ನಗೆ.. ನಂತರ ರೆಗ್ಯುಲರ್ ಪ್ರಾಕ್ಟೀಸ್. ವಾರ್ಷಿಕೋತ್ಸವ ಆಯ್ತು, ಇಷ್ಟ್ರಲ್ಲೇ ನಾನು ಇವ್ನಲ್ಲಿ ಬಹಳ ವಿಶೇಷ ಗುಣಗಳ್ನ ಗುರುತಿಸಿದ್ದೆ.. ಆಟ ಆಡ್ತಾ ನಗ್ ನಗ್ತಾ ಇನ್ನೊಬ್ರ ಬೇಸ್ರಾನ ಗುರ್ತಿಸ್ತಿದ್ದ, ಅದ್ನ ಕಡ್ಮೆ ಮಾಡಕ್ಕೆ ತನಗಾದ ಪ್ರಯತ್ನ ಮಾಡ್ತಿದ್ದ.. ಎಲ್ಲಾ ಸಂಬಂಧಗಳಿಗೂ ಒಂದು ಬೆಲೆ ಇದೆ ಎಂಬ ಔಚಿತ್ಯ ಅರಿತುಕೊಂಡಿದ್ದ. ಬೇರೆಯವರು ಅವರವರ ಸಂಬಂಧಗಳನ್ನು ಹೇಗೆ ಬೆಳೆಸಬೇಕು ಎಂಬ ಸೂಕ್ಷ್ಮವನ್ನು ಹೇಳಿಕೊಡುತ್ತಿದ್ದ…ಸಂಬಂಧಗಳಿಗೆ ಗೌರವ ಪ್ರೀತಿ ವಿಶ್ವಾಸ ತುಂಬಿ ಸಂತೋಷದ ಹೊನಲು ಹಂಚುವ ಗುಣ ಬಹಳ ವಿರಳ… ಇಷ್ಟು ಸಣ್ಣ ವಯಸ್ಸಿಗೆ ಇಷ್ಟೊಂದು ನಿಸ್ವಾರ್ಥ ನಿಷ್ಕಾಮ ಪ್ರಬುದ್ಧ ತೆ ಇದೇ ಮೊದಲ ಬಾರಿ ನೋಡಿದ್ದು..ವಿಪರ್ಯಾಸ ಅಂದ್ರೆ, ಈ ವಿದ್ಯೆ ಯಾವ ಪುಸ್ತಕದಲ್ಲೂ ಹೇಳ್ಕೊಡೊದಿಲ್ಲ, ಅಂಕಪಟ್ಟಿಯ ಸಾಲಿನಲ್ಲಿ ಸೇರೊದಿಲ್ಲ, ಮೆಡಲ್ ಗಳು ಖಂಡಿತಾ ಇಲ್ಲ, ಇದಕ್ಕೆ ಯಾವ Rank ಕೂಡ ಕೊಡೋದಿಲ್ಲ… ಈ ಸ್ವಾರ್ಥ ಲೋಕದಲ್ಲಿ ನಿಸ್ವಾರ್ಥ ಹಕ್ಕಿಯಾಗಿದ್ದು ಇವನು ಹಾರುವ ಮುನ್ನವೆ ಮುದುಡಿ ಹೋಗಿದ್ದು ತುಂಬಲಾರದ ನಷ್ಟವೇ ಸರಿ…ಸ್ವಾರ್ಥಿಗಳ ಸ್ವಾರ್ಥವೋ? ನಿಸ್ವಾರ್ಥದ ವರ ಶಾಪವೋ? ನಾನರಿಯೆ! ನನ್ನ ಮನಸ್ಸಲ್ಲಿ ಎಂದೂ ಆರದ ದೀಪವಾಗಿ ಆ ಗುಣಗಳನ್ನು ಅಳವಡಿಸಿಕೊಂಡು ಅವನನ್ನು ನನ್ನಲ್ಲಿ ಉಳಿಸಿಕೊಂಡೆ…..ಇರೋದ್ ಮೂರು ದಿನದಲ್ಲಿ ಹಂಚು ಪ್ರೀತಿಯ, ಈ ಉಡುಗೊರೆಗೆ ಸರಿಸಮ ಇನ್ನೇನಿಲ್ಲ