ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

closeup photo of grey fish

ಡಾ.ಗೋವಿಂದ ಹೆಗಡೆ

ಮದಿರೆಬಟ್ಟಲು ಖಾಲಿಯಾಗಿದ್ದಕ್ಕೆ ಅವಳು ಅಳುತ್ತಿದ್ದಾಳೆ
ಎಲ್ಲಿ ಹೇಗೆ ಯಾವಾಗ ಸೋರಿಹೋಯಿತೆಂದು ಹುಡುಕುತ್ತಿದ್ದಾಳೆ

ಜನ್ಮ ಜನ್ಮಾಂತರಕ್ಕೂ ತುಂಬಿರುವುದೆಂದು ಎಣಿಕೆಯಿತ್ತು
ಇಷ್ಟು ಬೇಗ ಎಲ್ಲ ಖಾಲಿ ಆಗಿದ್ದನ್ನು ನಂಬದಂತಿದ್ದಾಳೆ

ಕನಸುಗಣ್ಣುಗಳಲ್ಲಿ ಎಷ್ಟೊಂದು ಸುರೆಯ ಸಂಗ್ರಹವಿತ್ತು
ಪತ್ತೆಯೇ ಇರದೆ ಸೂರೆಯಾಗಿದ್ದಕ್ಕೆ ತಳಮಳಿಸುತ್ತಿದ್ದಾಳೆ

ಮಧುಬಟ್ಟಲಲ್ಲೇ ಐಬಿತ್ತೋ ಅಥವಾ ಮಧುವಿನಲೋ
ಬಟ್ಟಲನೆತ್ತಿ ಹಿಂದೆ-ಮುಂದೆ ತಿರುತಿರುಗಿಸಿ ನೋಡುತ್ತಿದ್ದಾಳೆ

ಮರಳೇ ಹಾಗೆ ಕಣಕಣವಾಗಿ ಸುರಿದು ಖಾಲಿಯಾಗುತ್ತದೆ
ಗಡಿಯಾರ ತಿರುಗಿಸಬಹುದು, ಕಾಲವನಲ್ಲ ಮರುಳಿಯಾಗಿದ್ದಾಳೆ

ಎದೆಯೊಡೆದ ಹುಚ್ಚಿ ಅವಳನ್ನು ಹೇಗೆ ಸಂತೈಸಲಿ ಸಾಕಿ
ಹೇಗೋ ಒಂದು ಮುಕ್ಕೆರೆದು ಬಿಡು,ಚೇತರಿಸುತ್ತಾಳೆ..


About The Author

Leave a Reply

You cannot copy content of this page

Scroll to Top