ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಸೊಡರು ಚಂದ್ರಪ್ರಭ .ಬಿ. ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ ಅದ್ದಿ ಬಂದವಳೆ…ಸಖಿ ಅನುಪಮ..ಅಪಾರ ನಿನ್ನ ಮಮತೆ..ಹೃದಯವಂತಿಕೆ..! ಹಲವು ಮೈಲುಗಲ್ಲುಗಳಿಗೆ ಸಾಕ್ಷಿ ನಿನ್ನ ನಿರ್ಗಮನ ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ ಏನೆಲ್ಲಕೆ ತೆರೆದುಕೊಳುವಾಸೆಗೆ ಬಲಿತ ರೆಕ್ಕೆ ನೀ ಹೊತ್ತು ತರುತ್ತಿದ್ದ ವೇದನೆ ಈಗ ಕಾಡುತ್ತಿದೆ ಮಧುರ ನೆನಪಾಗಿ! ಅಜ್ಜಿ ಅವ್ವನ ಕಾಲದಲಿ ಅರವತ್ತರ ವರೆಗೂ ಜತೆಯಾದವಳು ನೀ ಅವರ ಹಿಂದೆ ಹಿಂದೆ ನಾ… ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ? ಮೂವ್ವತ್ತರ ಬಳಿಕ ಗೃಹಸ್ಥಾಶ್ರಮ ಸೇರಿ ಕಳ್ಳುಬಳ್ಳಿಯಲಿ ಹೂಗಳ ನಿರೀಕ್ಷೆಯಲಿ ಇರುವವರ ಗತಿಯೇನೆ? ಕರುಳ ಕುಡಿಗಳಲಿ ನಿನಗದೆಷ್ಟು ಕಳಕಳಿ! ಒಡಲಲ್ಲಿ ನಿನ್ನ ಹೊತ್ತುಕೊಂಡೇ ಹುಟ್ಟುವ ಜೀವ ತನಗೆ ತಾನೇ ಒಂದು ಘನತೆ ಜಗವ ಲಾಲಿಸಿ ಪಾಲಿಸುವ ಜಗನ್ಮಾತೆ ಪ್ರಕೃತಿ ನಿನ್ನ ಸ್ರಾವ ನಿಂತು ತಾಯ ಮಡಿಲಿಗೆ ಬಂದವರು ಅವಳೆದೆಯ ಅಮೃತದ ಸವಿಯುಂಡು‌ ಬೆಳೆದವರು ಹಳಿಯುವರಲ್ಲೇ ನಿನ್ನ..! ಪಾಪ, ಅವರ ನೋಟ ಅಷ್ಟು ಕಿರಿದು… ನಿನಗದರ ಗೊಡವೆಯಿಲ್ಲ ಅನಂತ ಸೃಷ್ಟಿಯ ಪೊರೆವ ಜೀವದಾಯಿನಿ ಅತ್ತ ಗಮನಿಸಲೂ ಬಿಡುವಿಲ್ಲ ನಿನಗೆ ನಿನ್ನ ಮಮತೆಯು ಹಾಡಿ ತೂಗುತಿರುವ ತೊಟ್ಟಿಲು ಈ ಲೋಕ ನಿನ್ನ ಅಂತಃಕರಣ ಹಚ್ಚಿಟ್ಟ ಸೊಡರು ಈ ಭೂಮಿ ಅನುಗಾಲವೂ ಆಭಾರಿ ಜೀವ ಸಂಕುಲ ನಿನಗೆ ========================= –

ಕಾವ್ಯಯಾನ Read Post »

ಇತರೆ

ಬಾಲ್ಯದ ದೀಪಾವಳಿ

ಅಪ್ಪ ಸಿಡಿಸಿದ ಪಟಾಕಿ ಸಿಂಧು ಭಾರ್ಗವ್. ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಪುಟಾಣಿಗಳಿಗೆ ಹೊಸ ಝಯಿತಾರಿ ಅಂಗಿ ಕೊಡಿಸುವರು. ಬೊಗಸೆ ತುಂಬಾ ಸಿಹಿಯನ್ನು ನೀಡುವರು. ಯಾರ ಮನೆಗೆ ಹೋದರೂ ಸಿಹಿತಿಂಡಿ ನೀಡಿ ಆ ಪುಟ್ಟ ಮಕ್ಕಳ ಖುಷಿಯನ್ನು ತಾವೂ ಅನುಭವಿಸುವರು. ಅದಲ್ಲದೇ ಇದಕ್ಕಿಂತ ಹೆಚ್ಚೆಂದರೆ ಅಪ್ಪ ಪಟಾಕಿ ತರುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಟ್ಟಡಗಳ ಹಾವಳಿಯೇ ವಿನಃ, ಮಕ್ಕಳಿಗೆ ಆಡಲು ಅನುಕೂಲವಾಗುವಂತಹ ವಾತಾವರಣ ಕಡಿಮೆ. ಆದರೂ ಈ ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ರಸ್ತೆಯಲ್ಲೇ ಇರುತ್ತಾರೆ. ಯಾವ ವಾಹನಗಳಿಗೂ ಹೋಗಲು ಬಿಡುವುದಿಲ್ಲ. ಓಣಿಯ ಮಕ್ಕಳೆಲ್ಲ ಒಂದಾಗಿ ರಾಕೇಟ್, ಬಿರ್ಸು, ನಕ್ಷತ್ರ ಕಡ್ಡಿ, ಬಾಳೆಮರ, ಲಕ್ಷ್ಮೀ ಪಟಾಕಿ, ನೆಲಚಕ್ರ, ಆಟಂಬಾಂಬ್ ಹೀಗೆ ಬಗೆಬಗೆಯ ಪಟಾಕಿಗಳ ಸಿಡಿಸುತ್ತಾ ಸಂಭ್ರಮ ಪಡುತ್ತಾರೆ. ಅಲ್ಲದೇ ಸಂಜೆ ಆದ ಮೇಲೆ ಎಲ್ಲರ ಮನೆಯ ಗಂಡಸರು ಅಂದರೆ ಅಪ್ಪಂದಿರು ರಸ್ತೆಗಿಳಿದು ತಮ್ಮ ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮ ಹೆಚ್ಚಿಸುತ್ತಾರೆ. ಹೀಗಿರುವಾಗ ಒಮ್ಮೆ ಪಕ್ಕದ ಮನೆಯ ಅಂಕಲ್ ಸಂಜೆ ವೇಳೆಗೆ ಒಂದು ದೊಡ್ಡ ಬಾಕ್ಸ್ ಪಟಾಕಿ ತಂದಿದ್ದರು. ಮಕ್ಕಳನ್ನೆಲ್ಲ ದೂರ ನಿಲ್ಲಲು ಹೇಳಿ ಒಂದೊಂದೇ ಜಾತಿಯ ಪಟಾಕಿ ಸಿಡಿಸುತ್ತಾ ಮಕ್ಕಳಲ್ಲಿ ಮೋಜು ಹೆಚ್ಚಿಸುತ್ತ ಇದ್ದರು. ಅದೊಂದು ಹೀರೋತನ ಪ್ರದರ್ಶನ ನಡೆಯುತ್ತಾ ಇತ್ತು. ಇದನ್ನೆಲ್ಲ ಹೆಚ್ಚಿನವರು ಅವರವರ ಮನೆಯ ಮಹಡಿ ಮೇಲಿಂದಲೂ ನೋಡುತ್ತ ಇದ್ದರು. ಹೀಗಿರುವಾಗ, ಅಂಕಲ್ ಮೊದಮೊದಲು ಸಣ್ಣಗಿನ ನೆಲಚಕ್ರ, ನಕ್ಷತ್ರ ಕಡ್ಡಿ , ಬಾಳೆಗಿಡ ಎಲ್ಲವನ್ನೂ ಹಚ್ಚುತ್ತ ಬಂದರು. ಈ ನಡುವೆ ಒಂದು ರಾಕೆಟ್ ತುದಿಗೆ ಬೆಂಕಿ ಹಚ್ಚಿಯೇ ಬಿಟ್ಟರು. ಮಕ್ಕಳು ವರ್ಣಮಯ ಬೆಳಕನ್ನು ನೋಡುವುದರಲ್ಲೇ ತಲ್ಲೀನ‌‌. ಕುಣಿಯುತ್ತ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಿರುವಾಗಲೇ ಆಗಸಕ್ಕೆ ಹಾರಬೇಕಿದ್ದ ಆ ರಾಕೇಟ್ ಸರಕ್ಕನೆ ಮಕ್ಕಳು ಇರುವ ಜಾಗಕ್ಕೆ ಬಂದು ಒಂದು ಪುಟಾಣಿ ಹುಡುಗಿಯ ಎದೆಯನ್ನು ಸೀಳಿ ರಸ್ತೆ ಮೇಲೇಯೇ ನೇರವಾಗಿ ಹೋಗಿ ಒಂದು ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿತು. “ಏನಾಯಿತು….?? ಓ ಮೈ ಗಾಡ್…” ಎಂದು ನೋಡುವಷ್ಟರಲ್ಲೇ ಆ ಮಗು ಪ್ರಜ್ಞೆ ತಪ್ಪಿ ಬಿದ್ದತು. ಮುಂಜಾಗ್ರತೆಗಾಗಿ ಏನನ್ನು ಹತ್ತಿರದಲ್ಲಿ ಇಟ್ಟುಕೊಂಡಿರಲಿಲ್ಲ. ಗಾಬರಿಯಾಗಿ ಆ ಮಗುವನ್ನು ಎತ್ತಿಕೊಂಡು ಮನೆ ಕಡೆ ಓಡತೊಡಗಿದರು‌. ಮಹಡಿ ಮೇಲೆ ನಿಂತು ನೋಡುತ್ತಿದ್ದವರೆಲ್ಲ ಭಯದಿಂದ “ಮಗು…ಮಗು…” ಎಂದು ಕಿರುಚುತ್ತ ಇದ್ದರು. ಕೊನೆಗೆ ಆ ಅಂಕಲ್ ಮನೆಯೊಳಗೆ ಹೋದಾಗ ಮಗುವ ನೋಡಿ ಅದರ ತಾಯಿಗೆ ಭಯವಾಗಿ ಅವರೂ ಕಿರುಚಿದರು. ಹೀಗೆ ಯಾರಿಗೂ ಏನು ಮಾಡಬೇಕು ಎಂದು ಅರಿವಾಗುತ್ತಲೇ ಇರಲಿಲ್ಲ. ಭಯದಿಂದ ಕೈಕಾಲುಗಳು ನಡುಗುತ್ತಿದ್ದವು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಮಗುವಿನ ಎದೆಯ ಭಾಗ ಸುಟ್ಟು ದೊಡ್ಡ ಗುಳ್ಳೆಯೊಂದು ಮೂಡುತ್ತದೆ. ಆ ಕಿರುಚಾಟ, ನೋವು ಒಂದೆರಡು ತಿಂಗಳುಗಳ ಕಾಲ ಎಲ್ಲರ ನಿದ್ರೆ ಕೆಡಿಸಿತ್ತು. ಹಾಗೆಯೇ ಅದೊಂದು ಕಲೆಯಾಗಿ ಆ ಮಗುವಿನ ಎದೆಯಲ್ಲಿ ಹಾಗೆಯೆ ಉಳಿದಿದೆ. ಸ್ನೇಹಿತರೇ, ಪಟಾಕಿ ಸಿಡಿಸುವುದು ತಪ್ಪಲ್ಲ. ಪುಟಾಣಿ ಮಕ್ಕಳ ಎದುರು ಹೀರೋ ಎಂದು ತೋರಿಸಲು ಹೋಗಿ ಅವಘಡಕ್ಕೆ ಸಿಲುಕಬೇಡಿ. ಮುಂಜಾಗ್ರತೆಗಾಗಿ ಒಂದು ಬಕೇಟು ಮರಳು, ನೀರು, ಐಸ್ ಕ್ಯೂಬ್, ಜೇನುಪುಪ್ಪ, ಬರ್ನಾಲ್ ಮುಲಾಮು ಸಗಣಿ, ಒಂದು ಪಾತ್ರೆ ಹುಣಸೆರಸ ಹೀಗೆ ಒಂದಿಲ್ಲೊಂದನ್ನು ಹತ್ತಿರದಲ್ಲೇ ಇರಿಸಿಕೊಂಡಿರಿ. ಈ ಎಂಟು ಹತ್ತು ವರುಷದ ಮಕ್ಕಳೋ ಇಲ್ಲ ಹದಿಹರೆಯದವರೂ ಕೂಡ ಪಟಾಕಿಗಳ ಜೊತೆ ಸರಸವಾಡುವುದನ್ನು ಕಡಿಮೆ ಮಾಡಿ. ನಿಮ್ಮ ಮೋಜು ಮಸ್ತಿ ಇನ್ನೊಬ್ಬರ ಭವಿಷ್ಯವನ್ನೇ ಹಾಳು ಮಾಡಬಹುದು. ಕಣ್ಣುಗಳು ಕುರುಡಾಗಲೂ ಬಹುದು. ದೇಹದ ವಿವಿಧ ಅಂಗಗಳ ಮೇಲಾಗುವ ಸುಟ್ಟಗಾಯ, ಕಲೆ ಎಂದೂ ಮರೆಯಲು ಸಾಧ್ಯವಿಲ್ಲ. ಆ ವಿಷಮದ್ದನ್ನು ಒಳಗೊಂಡ ಸುಟ್ಟಗಾಯ ತುಂಬಾ ಉರಿ ಕೊಡುತ್ತದೆ. ಕ್ಯಾಂಡಲ್ ಉರಿಸುವ ಬದಲು ಮಣ್ಣಿನ ಹಣತೆಯಿಂದ ದೀಪವ ಹಚ್ಚಿರಿ. ಸಿಹಿಯ ಹಂಚಿ ಸಂಭ್ರಮಿಸಿರಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.

ಬಾಲ್ಯದ ದೀಪಾವಳಿ Read Post »

ನಿಮ್ಮೊಂದಿಗೆ

ಸಂಪಾದಕರ ಮಾತು

ಕು.ಸ.ಮಧುಸೂದನರಂಗೇನಹಳ್ಳಿ           ಮೊದಲಿಗೆ ನಿಮಗೆಲ್ಲ ಬೆಳಕಿನಹಬ್ಬದ ಶುಭಾಶಯಗಳು.  ಅನಗತ್ಯ  ಖರ್ಚು ಮತ್ತು ಅಪಾಯವನ್ನು ಮೈಮೇಲೇಳೆದುಕೊಳ್ಳದೆ, ಸರಳವಾಗಿ,ಅನ್ಯರಿಗೆ ತೊಂದರೆ ಕೊಡದ ರೀತಿಯಲ್ಲಿ ಹಬ್ಬ ಆಚರಿಸಿ. ಹಬ್ಬದಂದು ಹಚ್ಚುವ ದೀಪದ ಬೆಳಕು ಮನದೊಳಗಿನ ಕತ್ತಲೆಯನ್ನೂ ಕಳೆಯುವಂತಿರ ಬೇಕು.ಆಗಲೇ ಹಬ್ಬಕ್ಕೆ ಸಾರ್ಥಕತೆ ಬರುವುದು    ಇನ್ನು ‘ಸಂಗಾತಿ’ಬಗ್ಗೆ ಏನು ಹೇಳಲಿ?ನಗರದ ಸಾಹಿತ್ಯಕ್ಷೇತ್ರದ ಕಣ್ಣು ಕುಕ್ಕುವ ಬೆಳಕಿನಿಂದ ಬಹುದೂರದಲ್ಲಿರುವ ಹಳ್ಳಿಯೊಂದರಿಂದ ಹೊರಬರುತ್ತಿರುವ  ಪತ್ರಿಕೆಗೆ ನೀವು ತೋರಿಸುತ್ತಿರುವ ಪ್ರೀತಿ ದೊಡ್ಡದೇ ಸರಿ. ಪತ್ರಿಕೆಯ ಬಗ್ಗೆ ಹಲವರ ಮೆಚ್ಚುಗೆಯಜೊತೆಗೆ ಕೆಲವು ದೂರುಗಳೂ ಇವೆ. ಅವನ್ನೂ ನಿಮ್ಮ ಬಳಿ ಹಂಚಿಕೊಳ್ಳಲು ಬಯಸುತ್ತೇನೆ:  ಮೊದಲನೆಯದಾಗಿ ಕವಿತೆಗಳು ಹೆಚ್ಚಾದವು ಎಂಬುದು. ನಿಜ, ನನಗು ಹಾಗನಿಸಿತು. ಅದರೆನು ಮಾಡಲಿ?  ಪತ್ರಿಕೆಗೆ ಹೆಚ್ಚುಜನ ಕವಿತೆಗಳನ್ನೇ ಕಳಿಸುತ್ತಿದ್ದಾರೆ.  ಎರಡನೆಯದು, ವೈಚಾರಿಕ ಲೇಖನಗಳು ಇಲ್ಲವೇಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಪ್ರಕಟಿಸಲು ನಮ್ಮದೇನು ತಕರಾರಿಲ್ಲ ಆದರೆ ಬರೆಯುವವರು ಯಾರು? ಪ್ರಖ್ಯಾತನಾಮರು ಈಗಾಗಲೇ ಹೆಸರು ಮಾಡಿರುವ ಪತ್ರಿಕೆಗಳಿಗೆ ಮಾತ್ರ ಬರೆಯಬೇಕೆಂದುಕೊಂಡಂತಿದೆ.. ಆದರೆ ನನ್ನ ಪ್ರಯತ್ನ ಕೈ ಬಿಟ್ಟಲ್ಲ,ಆದಷ್ಟೂ ಹಿರಿಯ ಬರಹಗಾರರನ್ನು ನಾನೇ ವೈಯುಕ್ತಿಕವಾಗಿ ಸಂಪರ್ಕಿಸಿ ಬರೆಯಲು ಕೋರುತ್ತಿದ್ದೇನೆ.  ಇರಲಿ ಪ್ರತಿ ಹೊಸ ಪ್ರಯತ್ನದ ಹಿಂದೆಯೂ ಇಂತಹ ಕೊರತೆಗಳಿರುತ್ತವೆ.ಈ ಕೊರತೆಗಳನ್ನು ಮೀರಿಯೂ’ಸಂಗಾತಿ’ ಸಾಹಿತ್ಯಪಯಣ ಸಾಗುತ್ತಲೆ ಇರುತ್ತದೆ.ಈಪಯಣದಲ್ಲಿ  ನೀವು ನಮ್ಮ ಜೊತೆಗಿರುತ್ತೀರೆಂದು ನಂಬಿಕೊಂಡಿದ್ದೇನೆ

ಸಂಪಾದಕರ ಮಾತು Read Post »

ನಿಮ್ಮೊಂದಿಗೆ

ಸಂಪಾದಕೀಯ

ಗೆಳೆಯರೆ, ಸಂಗಾತಿ ಪತ್ರಿಕೆಯನ್ನು ಕೇವಲ ರಂಜನೆಗಾಗಿ ರೂಪಿಸಿಲ್ಲ-ಜೊತೆಗೆ ಕೇವಲ ಕತೆ-ಕತೆಗಳಿಗೆ ಮಾತ್ರ ಮೀಸಲಿರಿಸಿಯೂ ಇಲ್ಲ.ಪತ್ರಿಕೆಯಲ್ಲಿ ಪ್ರಖರವಾದ ವೈಚಾರಿಕ ಲೇಖನಗಳನ್ನು,ಸಮಕಾಲೀನ ಸಮಸ್ಯೆಗಳ ಬಗ್ಗೆ ವಸ್ತುನಿಷ್ಠ ವಿಮರ್ಶಾತ್ಮಕ, ಬರಹಗಳನ್ನು ಪ್ರಕಟಿಸಬೇಕೆಂಬುದು ನಮ್ಮಬಯಕೆ. ಈ ವಿಷಯಗಳಬಗ್ಗೆ ಬರೆಯುವವರು ಸಾಕಷ್ಟು ಜನ ಲೇಖಕರಿದ್ದರೂ ಅವರಿನ್ನೂ ನಮ್ಮ ಪತ್ರಿಕೆಗೆ ಬರೆಯುವ ಮನಸ್ಸು ಮಾಡಿಲ್ಲ. ಬಹುಶ: ಪತ್ರಿಕೆಯ ನಡೆಯನ್ನು ಕಾದುನೋಡುವ ಉದ್ದೇಶವಿದ್ದರೂ ಇರಬಹುದೇನೊ. ಈ ದಿಸೆಯಲ್ಲಿ ಬಹಳಷ್ಟು ಲೇಖಕರನ್ನು ಈಗಾಗಲೇ ಸಂಪರ್ಕಿಸಿ ಬರೆಯಲು ಕೋರಿದ್ದೇನೆ.ಜನಪ್ರಿಯತೆಗಾಗಿ ಸಂಗಾತಿ ತನ್ನಗುಣಮಟ್ಟ ಮತ್ತು ಸ್ವಂತಿಕೆಯನ್ನುಯಾವತ್ತಿಗೂ ಬಿಟ್ಟು ಕೊಡುವುದಿಲ್ಲೆಂದು ಈ ಮೂಲಕ ತಮಗೆ ಮನವರಿಕೆ ಮಾಡಿಕೊಡುತ್ತಿದ್ದೇನೆ. ಅದಕ್ಕೆ ತಕ್ಕಂತೆ ಹಿರಿಯ ಬರಹಗಾರರುಸಹ ನಮಗೆ ಬರೆಯುತ್ತಾರೆಂದು ಆಶಿಸುತ್ತೇನೆ ಕು.ಸ.ಮಧುಸೂದನರಂಗೇನಹಳ್ಳಿ

ಸಂಪಾದಕೀಯ Read Post »

ನಿಮ್ಮೊಂದಿಗೆ

ಕಾವ್ಯಯಾನ

ದಾರಿಯುದ್ದಕ್ಕೂ…… ಮುಗಿಲಕಾವ್ಯ ನೀ ಬರುವ ದಾರಿ ಉದ್ದಕ್ಕೂ ಒಲವಿನ ಹೂ ಹಾಸಿ ಗರಿಗೆದರಿದ ನನ್ನೊಳಗಿನ ಹೃದಯದ ಭಾವಗಳನ್ನು,,, ಒಪ್ಪವಾಗಿ ಜೋಡಿಸಿಕೊಳ್ಳುತ್ತಾ ಕಣ್ಣು ಕೀಲಿಸುತ್ತೇನೆ,, ಹಾದಿಯೂ ಒಮ್ಮೊಮ್ಮೆ ಸಿಟ್ಟಿಗೇಳುತ್ತದೆ ಅಲ್ಲಲ್ಲ ಕರುಬುತ್ತದೆ ನಿನ್ನ ಮೇಲಿನ ನನ್ನೊಲವಿನ ಕಂಡು ಇದರ ಮತ್ಸರ ಎಷ್ಟಿದೆ ಗೊತ್ತಾ? ಬೇಕೆಂತಲೇ ಭಾರವಾಗಿ ದೂರವಾಗಿ ಕ್ಷಣಗಳನ್ನು ಯುಗಗಳಾಗಿ ಮಾಡುತ್ತಾ,,, ಮತ್ತಷ್ಟು ನನ್ನ ಕಾಯಿಸಲು ಶುರುವಿಟ್ಟುಕೊಳ್ಳುತ್ತದೆ ಮೊದಮೊದಲಿಗೆ ನಾನು ಜಿದ್ದಿಗಿಳಿಯುತ್ತೇನೆ ಸೋಲಲಾರೆ ಎಂದೂ ನಿನ್ನ ಕಾಣುವ ತವಕ ಮೂಡಿದಂತೆಲ್ಲಾ ನಾನೇ ನಾನಾಗಿ ಸೋತುಬಿಡುತ್ತೇನೆ; ನಿನ್ನ ಸಂಧಿಸುವ ಗಳಿಗೆಯ ಮುಂದೆ ,,ನನ್ನ ಜಿದ್ದು ಮಂಡಿಯೂರಿ ಬಿಡುತ್ತದೆ,, ನಿನಗೋಸ್ಕರ ತಾನೇ ಎಂಬ ಭಾವ ಮೂಡಿ ಮನ ಸಮಾಧಾನಿಸಿಕೊಂಡು; ದಾರಿ ಉದ್ದಕ್ಕೂಕಣ್ಣು ಕೀಲಿಸುತ್ತದೆ ನೀನು ಈ ಹಾದಿಯಿಂದ ಎಂದೋ ಕವಲೊಡೆದು ಬಹುದೂರ ಸಾಗಿದ್ದರೂ ಮತ್ತೆ ದಾರಿಯಲಿ ಒಲವಿನ ಹೂ ಹಾಸಿ ಪ್ರೀತಿಸುವುದಷ್ಟೆ ಗೊತ್ತಿರುವ ಈ ಮನಸ್ಸು,,,, ದಾರಿ ಉದ್ದಕೂ ಕಣ್ಣುಕೀಲಿಸುತ್ತದೆ. ===========

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಿನುಗುವ ನಕ್ಷತ್ರ ಚೈತ್ರ ಶಿವಯೋಗಿಮಠ ಅಗೋ…. ಅಲ್ಲಿ ಮಿನುಗುವ ನಕ್ಷತ್ರ ನೀನೇ ಇರಬಹುದು ಅಪ್ಪ! ಪ್ರತಿ ಇರುಳು ಕಾಯುವೆ  ನಿನ್ನ ಬಾಂದಳದಲಿ ಕಾಣಲು! ಮಿಣುಗುವ ಚುಕ್ಕಿ ಸ್ಮೃತಿ  ಪಟಲವ ಕೆಣಕುವುದು! ನೀ ನನ್ನ ಆಡಿಸಿದ್ದು, ಟುವ್ವಿ ಟುವ್ವಿ ಎಂದು ಹಾಡಿದ್ದು ಕಣ್ಮರೆಯಾಗಿ ಕಾಡಿದ್ದು  ಮುಂಜಾನೆಯ ವಿಹಾರಕ್ಕೆ ಹೋಗಿದ್ದು ಸದ್ದು ಮಾಡುತ್ತಾ ಕಾಫಿ ಹೀರಿದ್ದು ಎಲ್ಲವೂ ಕಾಡುವುದು ಅಪ್ಪ! ಈ ನಕ್ಷತ್ರದಂತೆಯೇ ನೀನು ಕತ್ತಲು ಕವಿದಾಗ ದಾರಿ ತೋರುವೆ ಈ ಚುಕ್ಕಿಯಂತೆಯೇ ಆದೆ ನೀನು ಹಗಲೆಂಬ ಸಂತಸದಲಿ ಮಾಯವಾದೆ ಆದರೆ ಇರುಳೆಂಬ ಸಂಕಟದಲಿ ಆಸರೆಯಾಗುವೆ! ಹಗಲಲಿ ಮಾಯವಾದಂತೆನಿಸಿದರೂ  ನೀ ಇಲ್ಲೇ ಇರುವೆ ಕಣ್ಣಿಗೆ ಮಾತ್ರ ಕಾಣಲಾರೆ! ನಿನ್ನಿರುವ ನಾ ಮಾತ್ರ ಗ್ರಹಿಸುವೆ! ಅಪ್ಪ, ಈ ನಕ್ಷತ್ರದಂತೆಯೇ  ಸದಾ ಸಂತಸ ಕೊಡುವವ ನೀ!! =================================== ಪರಿಚಯ: ಮೂಲತಃ ಬಿಜಾಪುರ, ಬೆಂಗಳೂರಿನ ನಿವಾಸಿ.Mtech ಪದವಿಯನ್ನು VTU ವಿಶ್ವವಿದ್ಯಾಲಯದಿಂದ ಪಡೆದು, ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆದರೂ ಪ್ರವೃತ್ತಿಯಲ್ಲಿ ಕವಯಿತ್ರಿ.. ಕಾರ್ಯಕ್ರಮ ನಿರೂಪಣೆ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವರು. ಸಾಹಿತ್ಯ ಪರಿಷತ್ತು ನಡೆಸುವ ಕನ್ನಡ ಕಾವ್ಯ ಪರೀಕ್ಷೆಯಲ್ಲಿ ಉತ್ತೀರ್ಣ. ಮುದ್ದೇಬಿಹಾಳ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಹಾಗೂ ಇನ್ನಿತರ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿರುವರು. ಅವಧಿ  – ಡಿಜಿಟಲ್ ಮ್ಯಾಗಝಿನ್, ಸುಗಮ – ಬ್ಲಾಗ್ಸ್ಪಾಟ್, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಪ್ರಜಾಪ್ರಗತಿ, ವಾರ್ತಾಭಾರತಿ, ಕರ್ಮವೀರ ಹಾಗೂ ಜನತಾವಾಣಿ ಪತ್ರಿಕೆಗಳಲ್ಲಿ ಕವನಗಳು ಪ್ರಕಟವಾಗಿವೆ.

ಕಾವ್ಯಯಾನ Read Post »

ಕಥಾಗುಚ್ಛ

ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ ಸುಮಂಗಳ ಮೂರ್ತಿ ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .          ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ ಸಲಹೆಗಳನ್ನು ಪಾಲಿಸಿದರೆ ಮತ್ತಷ್ಟು ಚಂದ ಎಂದು ಯೋಚಿಸುತ್ತಾ,ಸಂಜೆಯ ಕಾಫಿ ತಯಾರಿಸಿ, ಯಾವುದೋ ನ್ಯೂಸ್ ಚಾನಲ್ ನೋಡುತ್ತಿದ್ದ ಮಾವನವರಿಗೆ,ಮೊಬೈಲ್ ನೋಡುತ್ತಿದ್ದ ಗಂಡನಿಗೆ,ಪೂಜೆಗೆಂದು ಹೂ ಕಟ್ಟುತಿದ್ದ ಅತ್ತೆಯವರಿಗೆ ಕೊಟ್ಟು,ತಾನು ಕುಡಿಯುತ್ತಾ ಅತ್ತೆಯ ಬಳಿ ಕೂತಳು.           ಬಾನುಮತಿಯ ಕೆಲಸದ ವೈಖರಿ,ಅವಳ ಅತ್ತೆಗೆ ಬಹಳ ಇಷ್ಟವಾಗಿತ್ತು.ಬಾನುಮತಿ ಮನೆಗೆ ಬಂದ ಸ್ವಲ್ಪ ದಿನಗಳಲ್ಲಿಯೇ ಮನೆಯವರನ್ನೆಲ್ಲ ಬಹಳ ಚೆನ್ನಾಗಿ ಅರ್ಥಮಾಡಿಕೊಂಡು,ಹೊಂದಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವಳಿಗೆ, ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವಳು ಮೊದಲಿನಿಂದಲೂ ಯಾರಿಗಾದರೂ ಉಡುಗೊರೆ ಕೊಡಬೇಕಾದರೆ ಪುಸ್ತಕವನ್ನೇ ಕೊಡುವುದು ಅವಳ ರೂಢಿಯಾಗಿತ್ತು.ಈ ಬಾರಿ ಹಬ್ಬಕ್ಕೆ ತಾಂಬೂಲದೊಂದಿಗೆ ಪುಸ್ತಕಗಳನ್ನ ಕೊಡಬೇಕು,ಆದರೆ ಅತ್ತೆಯವರು ಏನೇಳುತ್ತಾರೋ ಎಂಬ ಯೋಚನೆಯಿಂದ,ಈ ಕುರಿತು ಅತ್ತೆಯ ಜೊತೆ ಮಾತನಾಡಬೇಕೆಂದು ಅವಳ ಮನಸ್ಸಿನಲ್ಲೇ ಆಲೋಚಿಸುತ್ತಿರುತ್ತಾಳೆ.ಅಷ್ಟರಲ್ಲಿಯೇ, ಬಾನು ನಿನ್ನ ತವರಲ್ಲಿ ವಿಜಯದಶಮಿ ಹಬ್ಬವನ್ನ ಹೇಗೆ ಆಚರಿಸುತ್ತಿದ್ದರು? ಎಂದ ಅತ್ತೆಯ ಪ್ರಶ್ನೆಗೆ ಬಾನುಮತಿ,ಹೀಗೆ ಇಲ್ಲಿಯ ರೀತಿಯೇ ಅತ್ತೆ ಶರನ್ನವರಾತ್ರಾರಂಭ ದಿಂದ ವಿಜಯದಶಮಿಯ ವರೆಗೆ ಒಂದೊಂದು ಶಕ್ತಿ ದೇವತೆಯ ಆರಾಧನೆ,ಮುತ್ತೈದೆಯರಿಗೆ ಕುಂಕುಮ ಪ್ರಸಾದ ಕೊಡುವುದು, ನಾನು ಪ್ರತೀ ಬಾರಿ ಕುಂಕುಮದೊಂದಿಗೆ ಕನ್ನಡ ಪುಸ್ತಕಗಳನ್ನು ಕೊಡುತ್ತಿದ್ದೆ.ಅತ್ತೆ ನೀವು ಒಪ್ಪುವುದಾದರೆ ಪುಸ್ತಕಕೊಡುವ ನನ್ನ ಅಭ್ಯಾಸವನ್ನ ಮುಂದುವರಿಸಲೇ ?ಎಂದ ಬಾನುಮತಿಯ ಮಾತಿಗೆ ಖಂಡಿತ ಬಾನು ಇದು ತುಂಬ ಒಳ್ಳೆಯ ಅಭ್ಯಾಸ ಮುಂದುವರೆಸು ಎನ್ನುತ್ತಾ ಮುಗುಳ್ನಗೆ ಬೀರಿದರು.           ಅತ್ತೆಯ ಸಮ್ಮತಿಗೆ ಖುಷಿಯಾದ ಬಾನುಮತಿ,ಮನದಲ್ಲೇ ಅತ್ತೆಯೂ ಅಮ್ಮನಂತೆಯೇ ನೋಡು ಇದಕ್ಕೆ ಹೇಳುವುದು, “ಪ್ರೀತಿ ಹಂಚಬೇಕು ಯಾವುದೇ ನಿರೀಕ್ಷೆ ಇಲ್ಲದೆ,ಆಗ ಹಂಚಿದಕ್ಕಿಂತ ಹೆಚ್ಚಿನ ಪ್ರೀತಿಯೇ ದಕ್ಕುತದೆ ” ನನ್ನ ಈ ಹೊಸ ಬದುಕಿನಲ್ಲೂ ಅಮ್ಮ ಜೊತೆಗಿದ್ದಾಳೆ,ಹೀಗೆ ಮನಸ್ಸಿನಲ್ಲೇ ಖುಷಿಪಡುತ್ತಿದ್ದ ಬಾನುಮತಿಯ ಅರಳಿದ ಮುಖ  ಹೊಳೆಯುವ ಚಂದ್ರನೂ ನಾಚುವಂತೆ ಕಂಗೊಳಿಸುತ್ತಿತ್ತು.              ಬಾಂಧವ್ಯ ಅಂದರೆ ಇದೇ ಅಲ್ಲವೇ,ಪರಸ್ಪರ ಹೊಂದಾಣಿಕೆ. ಬಾನುಮತಿಯ ಉತ್ತಮ ನಡುವಳಿಕೆ ಕನ್ನಡ ಸಾಹಿತ್ಯ ಓದುವುದರಿಂದ ಬಂದಿದೆ ಎಂದರೆ ತಪ್ಪಾಗಲಾರದು.           ಸಾಮಾನ್ಯವಾಗಿ ಒಂದಿಬ್ಬರು ಮೂರು ಹೆಂಗಸರು ಮಾತನಾಡಲು ಶುರುಮಾಡಿದ್ರೆ,ಇಡೀ ಒಂದು ಬಡಾವಣೆಯ ವಿಚಾರಗಳು ಬಿತ್ತರಿಕೆಯಾಗುವುದನ್ನ ಕಾಣಬಹುದು,ಅದರಲ್ಲಿ ಬೇರೊಬ್ಬರ ಕಾಲೆಳೆಯೊ ವಿಷಯಗಳೇ ಹೆಚ್ಚಾನ್ಹೆಚ್ಚು.ಇಂತಹ ಮಾತುಗಳಿಗೆ ಅವಕಾಶ ನೀಡದಂತ ಸ್ವಭಾವದವಳು ಬಾನುಮತಿ.ಹಬ್ಬ ಪ್ರೀತಿಯನ್ನ ಹಬ್ಬಿಸಬೇಕು,ಮನಗಳನ್ನ ತಣಿಸಬೇಕು,ಎನ್ನುವುದಷ್ಟೆ ಇವಳ ಹರಿಕೆ.        ಓ…ಹಬ್ಬದ ತಯಾರಿಯಲ್ಲಿ  ಮಗ್ನಳಾದ ಬಾನು,ಎಲ್ಲವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾಳೆ,ಆದರೆ ಚಾಪೆ ಇದ್ದಷ್ಟು ಕಾಲುಚಾಚು ಎಂಬ ಗಾದೆ ಮಾತಿಗೆ ವಿರುದ್ಧವೇನೂ ಅಲ್ಲ. ಮತ್ತು ಅತ್ತೆ ಸೊಸೆ ಇಬ್ಬರು ಹಬ್ಬಕ್ಕೆ ದೂರದ ಬಂಧು ಮಿತ್ರರನ್ನ,ಫೋನ್ ಮೂಲಕ ಕರೆಯುತ್ತಾರೆ,ಮನೆಯ ಅಕ್ಕಪಕ್ಕದವರನ್ನೆಲ್ಲ ಖುದ್ದಾಗಿ ಹೋಗಿ ಕರೆಯುತ್ತಾರೆ.ಇವರ ಪ್ರೀತಿಯ ಕರೆಗೆ ಯಾರು ಬಾರದೆ ಉಳಿಯಲಿಲ್ಲ.           ಬಾನುಮತಿಯ ಮನೆ ಸಂಮೀಪಿಸುತ್ತಿದ್ದಂತೆ, ಅವಳ ಮನೆಯಂಗಳದ ಪುಟ್ಟ ಹಣತೆಗಳ ಬೆಳಗು ನಕ್ಷತ್ರಗಳ ಮಿಂಚಿನಂತೆ ಜಗಮಗಿಸುತ್ತಿರುವುದು ಕಣ್ಣಿಗೆ ದೇವಾಲಯದಂತೆ ಕಾಣುತ್ತದೆ.ಹಾಗೇ ಮನೆಯಂಗಳದ ಹೂವುಗಳರಳಿದ ಹಸಿರು ಕಾಶಿಗೆ ಇಬ್ಬನಿ ಮುತ್ತಿಕ್ಕಿದೆ, ಹಣತೆಗಳ ಬೆಳಗಿಗೆ,ಹೊಂಬಣ್ಣದ ಹನಿಗಳು ಪನ್ನೀರಿನಂತೆ ಜಿನುಗಿ ಮೈಮನ ಪುಳಕಗೊಂಡಂತೆ ಭಾಸವಾಯ್ತು.           ಬಂದವರನ್ನ ಪ್ರೀತಿಯಿಂದ ಮಾತನಾಡಿಸಿ,  ‘ಬನ್ನಿ’ ಬೆಳಕಾಗಲಿ,ಪ್ರೀತಿ ಬದುಕಾಗಲಿ. ಎಂದು ನುಡಿಯುತ್ತಾ ,ಕುಂಕುಮ ಹಚ್ಚಿ, ಪ್ರಸಾದದ ಜೊತೆ ಕನ್ನಡ ಪುಸ್ತಕ ಕೊಟ್ಟು,ಬಿಡುವಿನ ಸಮಯದಲ್ಲಿ ಓದಿ ಎಂದು ಅಕ್ಕರೆ ಹರಿಸಿದ ಬಾನುಮತಿಯ ಮಾತು,ಮತ್ತಷ್ಟು ಹಿತವೆಸಿತ್ತು.     ==================================== ಪರಿಚಯ: Spoken English faculty ಆಗಿ 12 ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ.ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನ ಬರೆಯುವ ಮತ್ತು ಓದುವುದು ಹವ್ಯಾಸ. ಕಥೆ, ಕವಿತೆ,ಗಜಲ್,ವಚನ,ಲೇಖನ ಬರಹಗಳನ್ನು ಬರೆಯುತ್ತಿರುತ್ತಾರೆ.2013 ರಲ್ಲಿ Kannada to English dictionary ಬರೆದಿರುವ ಇವರ ಕವನ ಸಂಕಲನ “ಖಾಲಿಹಾಳೆ”ಬಿಡುಗಡೆಗೆ ಸಿದ್ಧವಾಗಿದೆ

ಕಥಾಗುಚ್ಛ Read Post »

ಕಾವ್ಯಯಾನ

ಕಾವ್ಯಯಾನ

ಗಾಯಗಳ ಎಣಿಸುತ್ತಲೇ! ದೀಪಾಜಿ ಮಾತಿಗೊಮ್ಮೆ ತುಟಿಕಚ್ಚಿ  ಹೀಗೆಂದರೆ ಎಲ್ಲಿ ಬಿಟ್ಟು ಹೋದಾನೊ ಹಾಗೆಂದರೆ ಎಲ್ಲಿ ಬಿಟ್ಟು ಹೋದಾನೊ ಎಂಬ ದುಗುಡದಲ್ಲೆ ಕಳೆದೆ ಅಷ್ಟು ದಿನಗಳನ್ನ.. ಹೆಜ್ಜೆ ಹೆಜ್ಜೆಗೊಮ್ಮೆ ಹೆಜ್ಜೇನು ಸುರಿದು ಬಾಯಿಗೆ ಸೆರಗ ಒತ್ತಿ ದುಃಖ ಉಮ್ಮಳಿಸಿದಾ -ಗೆಲ್ಲ ಹುಸಿ ನಗುವನ್ನೆ ಹೊರಚೆಲ್ಲಿ ನೋವೆಲ್ಲ ಪಕ್ಕಡಿಗೆ ಸರಿಸುತ್ತಲೆ ಕಳೆದೆ ಅಷ್ಟು ದಿನಗಳನ್ನ.. ಉಸಿರು ಬಿಟ್ಟುರು ಸಾಕು ಹೆಡೆಎತ್ತಿ ಬುಸುಗುಡುತ್ತೀ ಪ್ರೇಮ ಸರಸ ಸಮರಸ ಕಲ್ಪಸಿದವಳಿಗೆ ಸಿಕ್ಕಿದ್ದು ಬರಿಯ ಹಾಲಾಹಲ ನಿನ್ನ ಸಿಟ್ಟುರಿಯ ಹರಿವು ಅಸಮಾಧಾ -ನದ ಕೋಲಾಹಲ ಸಹಿಸುತ್ತಲೇ ಬಂದೆ ಅಷ್ಟು ದಿನಗಳನ್ನ ಅಕ್ಕರೆಯ ಸವಿಬೆಲ್ಲ ನೀ ಹರೆಸಲಿಲ್ಲ ಅನ್ನಕ್ಕೇನು ಕೊರತೆ ಮಾಡಲಿಲ್ಲ ಆದರೆ ನೀ ಹುಡುಕಿದ್ದು ಮೊಸರೊಳಗಿನ ಕಲ್ಲ, ಆ ಕಲ್ಲು ಇಲ್ಲವೆನ್ನುತ್ತಲೆ ಕಳೆದೆ ಅಷ್ಟು ದಿನಗಳನ್ನ ಕರುಣೆ ಕಕ್ಕಲಾತಿಗಳೇನು ಬೇಡ ಆದರೆ ಸಹಿಸುತ್ತ ಸವರುತ್ತ ಬಂದಿ -ರುವುದು ಬೆನ್ನ ಮೇಲಿನ ಬಾಸುಂಡೆಗಳನೆ ಗಾಯಗಳ ಎಣೆಸುತ್ತಲೆ ಕಳೆದೆ ಅಷ್ಟು ದಿನಗಳನ್ನ ಮಕ್ಕಳು ನಿನ್ನ ಹೋಲುವುದೆ ಇಲ್ಲವೆಂದು ಹೊಡೆದು ಬಡೆದು ಹಾಕುತ್ತೀ ,ನಶೆ ಎರುವ ಮುಂಚೆ ಮನೆಗೆ ಬಂದರೆ ತಿಳಿದೀತು ಹೋಲಿಕೆ,ಗರ್ತಿಯ ತಲೆಗೆ ಅಪಚಾರದ ಪಟ್ಟ  ಕಟ್ಟುತ್ತಲೆ ಬಂದಿ ಅದ ಕೇಳುತ್ತಲೆ ಉಳಿದೆ ಅಷ್ಟು ದಿನಗಳನ್ನ ಗಂಡಬಿಟ್ಟವಳೆಂದು ಅವರಿವರೆಂದಾರೆಂದು ನಿನ್ನ ಸಹಿಸುವುದು ದಂಡವೇ ಸರಿ ಗಂಡನಿಲ್ಲದಿದ್ದರು ಅದೆಂಥ ವೈನಾಗಿ ಬದುಕಿದಳೆನ್ನುವಂತೆ ಕಳೆಯುವೆ ಇನ್ನೂಳಿದ ಅಷ್ಟು ದಿನಗಳನ್ನ… ================= ಪರಿಚಯ: ಅಂಚೆಇಲಾಖೆಯಲ್ಲಿ ವೃತ್ತಿ, ಓದು, ಬರವಣಿಗೆ ಹವ್ಯಾಸ

ಕಾವ್ಯಯಾನ Read Post »

ಕಾವ್ಯಯಾನ

ತಂತಿಯೊಳಗಣ  ಶಬ್ದ !

ಕಾವ್ಯ ಸಂಗಾತಿ ತಂತಿಯೊಳಗಣ  ಶಬ್ದ ! ಬಿದಲೋಟಿ ರಂಗನಾಥ್ ನಾನು ಶರಾಬಿನ ದಾಸ ಘಟಶೋಧನೆಯಲ್ಲಿನ ಬಂಧವನ್ನು ಹುಡುಕುತ್ತಲೇ ಹೋದೆ ಅವನ ನೆರಳಿತ್ತು ಅವಳ ಒಲವಿತ್ತು ನಾನೇ ಇರಲಿಲ್ಲ. ಶೋಧಿಸಿಸಲು ಎದೆಗೂಡಲ್ಲಿದ್ದ ಹಂಸದ ನಡಿಗೆಯ ಹೆಜ್ಜೆಯ ಸುತ್ತಿ ಹೊಲೆದ ಪಾಪದ ಮೂಟೆಯ. ತಿರುಗಿದೆ ಕಾಡು –ಮೇಡು ಬೆಟ್ಟ ಕಣಿವೆ ಕಂದರ ನಾ ಬಯಸಿದ್ದು ಸಿಗಲಿಲ್ಲ ಧ್ಯಾನದ ಹೆಜ್ಜೆ ಮುಟ್ಟಿ ನೋಡಿದೆ ಸಕಲವೂ ನನ್ನೊಳಗೇ ಇತ್ತು ತಂತಿ ಮೀಟಿದ ಶಬ್ದ ನಿಜದ ನೆಲೆಯ ಬದುಕಿಗೆ ದಾರಿ ತೋರಿ ಬಯಲ ಪದಗಳು ಮುತ್ತಿದವು  ಎದೆಯ ತುಂಬಾ.. ಸಣ್ಣ ಬೆಳಕಿನ ದಾರಿ ಮೇಲೆ ಕಂಡು ಕಾಣದ ಹಂಸದ ನಡಿಗೆ ಬೆನ್ನ ಹಿಂದಿನ ಸತ್ಯ ನಿರಾಕಾರದಲಿ ಮಿಥ್ಯವ ಸುಟ್ಟು ನಡೆಯುತ್ತಲೇ ಹೋಯಿತು ಗೋಡೆಗಳಿಲ್ಲದ ಬಯಲ ಹರಸಿ ಯಾರೂ ಇರಲಿಲ್ಲ ನನ್ನೊಳಗೆ ನನ್ನವರು ಶರಾಬೇ ಸೌತಿ ಓಂಕಾರದೋಳಗಿನ ಗುಂಡಿಯ ಶೋಧಿಸುತ ಹಂಸ ಗೋರಿಯಾಯಿತು ತನ್ನೊಳಗೆ ಇಷ್ಟು ದಿನವಿದ್ದು ಒಂದು ಸುಳಿವೂ ಕೊಡದೆ. ತಂತಿಯೊಳಗಣ ಶಬ್ಧ ಮಾತ್ರ ಪಂಚಾಕ್ಷರಿಯ ನುಡಿಯುತ್ತಲೇ ಇತ್ತು ಗೂಡು ಬಯಲಾಗುತ್ತ… ===============

ತಂತಿಯೊಳಗಣ  ಶಬ್ದ ! Read Post »

ಇತರೆ

ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ! ಪಿಎಂ ಇಕ್ಬಾಲ್ ಕೈರಂಗಳ ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ ಹೀಗಾಗುತ್ತವೆ. ಅವನ್ನು ಅನುಭವಿಸಿದ ಆ ಜೀವಗಳ ಪರಿಸ್ಥಿತಿಯೆಷ್ಟು ಘೋರ ಇದ್ದೀತು! ಉಹುಂ, ಕಲ್ಪನೆ ಮಾಡೋಕೂ ಆಗುವುದಿಲ್ಲ. ಈ ಲೋಕವೇ ಬೇಡ, ಲೋಕವು ಒಮ್ಮೆ ಅವಸಾನ ಕಾಣಲಿ ಎಂದು ಅನಿಸುತ್ತದೆ. ಇತ್ತೀಚೆಗೆ ಹೊಸ ಬೆಳವಣಿಗೆಯೊಂದು ಕಾಣಸಿಗುತ್ತಿವೆ. ಗಾಯಕ್ಕೆ ಬರೆ ಹಾಕುವುದು ಅನ್ತಾರಲ್ಲಾ ಹಾಗೆ. ದೌರ್ಜನ್ಯಗಳ ವೀಡಿಯೋಗಳ ಜೊತೆಗೆ ಕೋಮುಪ್ರಚೋದಿತ ಕೆಲವು ವಾಕ್ಯಗಳು ಸೇರಿ ಷೇರ್ ಆಗುತ್ತಿವೆ. ‘ತಮ್ಮ ಧರ್ಮೀಯರ ವಿರುದ್ಧ ಇಂತಹ ಧರ್ಮೀಯರ ದೌರ್ಜನ್ಯ ಇದು’ ಎನ್ನುತ್ತಾ ಒಂದಷ್ಟು ವಾಕ್ಯಗಳು ಇರುತ್ತವೆ. ಕೆಲವು ವಾಕ್ಯಗಳಂತೂ ಅತಿ ಅಸಹ್ಯವಾಗಿರುತ್ತವೆ. ‘ಕೋಮು ಅಸಹನೆಯನ್ನು ಪ್ರಚೋದಿಸುವುದೇ ಧರ್ಮರಕ್ಷಣೆ’ಯೆಂಬ ವ್ಯಾಧಿಗೆ ತುತ್ತಾದವರು ಕಂಡುಕೊಂಡ ಹೊಸ ಫಾರ್ಮುಲಾ ಇವು. ಒಂದೇ ವೀಡಿಯೋ ಒಂದು ಕಡೆ ಮುಸ್ಲಿಮರ ಮೇಲಿನ ಹಿಂದೂಗಳ ದೌರ್ಜನ್ಯವಾಗಿಯೂ, ಮತ್ತೊಂದು ಕಡೆ ಹಿಂದುಗಳ ಮೇಲಿನ‌ ಮುಸ್ಲಿಮರ ದೌರ್ಜನ್ಯವಾಗಿಯೂ ಬರೆಯಲ್ಪಟ್ಟು ಷೇರ್ ಆಗುತ್ತಿರುವುದು ನನ್ನ ಗಮನಕ್ಕೆ ಎಷ್ಟೋ ಬಂದಿದೆ. ವೀಡಿಯೊ- ಫೋಟೋಗಳಲ್ಲಿರುವ ಬರ್ಬರತೆಯೇ ಸಾಕಾಗುತ್ತೆ ನಮ್ಮ ಮನಸ್ಸನ್ನು ಗಾಯಗೊಳಿಸಿಬಿಡಲು. ಇಂತಹ ಬರಹಗಳು ಗಾಯದ ಮೇಲಿನ ಬರೆಯಾಗಿ ಪರಿಣಮಿಸುತ್ತದೆ. ಅಂತಹ ವೀಡಿಯೋಗಳಲ್ಲಿ ಕಾಣುವ ಕ್ರೂರಿಗಳದ್ದು ಒಂದು ಮನಸ್ಥಿತಿಯಾದರೆ ಅವನ್ನು ಕೋಮು ಅಸಹನೆಗೆ ಉಪಯೋಗಿಸಲು ಉದ್ರೇಕಕಾರಿಯಾಗಿ ಬರಹದೊಂದಿಗೆ ಅಲಂಕರಿಸುವವರದ್ದು ಇನ್ನೊಂದು ಮನಸ್ಥಿತಿ. ವೀಡಿಯೋ ಜೊತೆಗೆ ಇರುವ ಬರಹ ಕನ್ಫರ್ಮಾ, ಬಹುಶ ಕನ್ಫರ್ಮು ಆದರೂ ಅದು ಆ ಪುಂಡರ ಹೆಸರು ಪ್ರತಿನಿಧಿಸುವ ಧರ್ಮದ ಎಲ್ಲರ ಕೃತ್ಯವಾ ಎಂದು ಯೋಚಿಸುವ ಗೋಜಿಗೇ ಹೋಗದೇ ಹಾಗೇ ಷೇರ್ ಮಾಡುವವರದ್ದು ಮತ್ತೊಂದು ಮನಸ್ಥಿತಿ. ಇಂತಹ ಕೋಮೋದ್ರೇಕ ಬರಹದೊಂದಿಗಿನ ವೀಡಿಯೋಗಳನ್ನು ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಅವುಗಳಲ್ಲಿರುವ ಸಂತ್ರಸ್ತರ ಪರವಾಗಿ ಮನಸ್ಸು ಮರುಗಿ, ಆ ರಾಕ್ಷಸರ ವಿರುದ್ಧವಾಗಿ ರೋಷ ಉಕ್ಕುತ್ತದೆಯೇ ಹೊರತು ಬರಹವನ್ನು ನಂಬಿ ಆ ಕೆಟ್ಟವರ ಹೆಸರುಗಳು ಪ್ರತಿನಿಧಿಸುವ ಧರ್ಮದ ಮೇಲೋ, ಧರ್ಮೀಯರ ಮೇಲೋ ಅಸಹನೆ ಒಮ್ಮೆಯೂ ಬಂದದ್ದಿಲ್ಲ. ವಾಟ್ಸಪ್, fbಯಲ್ಲಿ ವೀಡಿಯೋ ಜೊತೆ ಅಂತಹ ಬರಹ ಷೇರ್ ಮಾಡಿದವರೊಂದಿಗೆ ನನ್ನ ರಿಯಾಕ್ಟು, “ಈ ಘಟನೆಯ ರಾಕ್ಷಸರ ಮತ್ತು ಸಂತ್ರಸ್ತರ ಧರ್ಮ ಯಾವುದೆಂದು ನಿಮಗೆ ಕನ್ಫರ್ಮಾ, ಕನ್ಫರ್ಮಾದರೆ ಹೇಗೆ? ಇರೋದನ್ನು ಹಾಗೇ ನಂಬಿ ಷೇರ್ ಮಾಡಬೇಡಿ. ವೀಡಿಯೋವನ್ನು ಷೇರ್ ಮಾಡುವುದಾದರೆ ಅದರ ಜೊತೆಗಿರುವ ಬರಹವನ್ನು ದಯವಿಟ್ಟು ಅಳಿಸಿ’ ಎಂದಾಗಿರುತ್ತದೆ. ‘ಬಹುಶ ವೀಡಿಯೋ ಜೊತೆಗಿರುವ ಬರಹ ಪ್ರಕಾರ ಅದು …ಇಂತಹ ಧರ್ಮೀಯರು ಎಂಬುದು ನಿಮಗೆ ಪಕ್ಕಾ ಆದರೂ ಅದಕ್ಕೆ ಅವರ ಇಡೀ ಧರ್ಮೀಯನ್ನು ಹೊಣೆಗಾರರನ್ನಾಗಿ ಮಾಡಬೇಡಿ” ಎಂದೂ ಹೇಳುತ್ತೇನೆ. ಕೆಲವರು ನನ್ನ ಮಾತನ್ನು ಅನುಮೋದಿಸಿದರೆ ಕೆಲವರು ಜಗಳಕ್ಕೆ ನಿಂತದ್ದು ಇವೆ. ಜಗಳ ಮಾಡಿದವರಲ್ಲಿ ನಾನು “ ‘ನಿಮ್ಮ ಅರಿವು ನಿಜವೇ ಆದರೂ ಲೋಕದಲ್ಲಿ ಕಾಣುವ ಅಮಾನುಷ ಕಾರ್ಯಗಳನ್ನೆಲ್ಲ ಒಮ್ಮೆ ಪಟ್ಟಿ ನೋಡಿ. ಆ ಕೃತ್ಯಗಳ ಇಡೀ ಧರ್ಮೀಯರನ್ನೋ ಅಥವಾ ಸಿದ್ಧಾಂತವನ್ನೋ ಹೇಗೆ ಅಪರಾಧಿ ಮಾಡೋಕ್ಕಾಗುತ್ತೆ? ಹಾಗೆ ಮಾಡೋದಾದರೆ ಲೋಕದ ಅಷ್ಟೂ ಧರ್ಮ, ಸಿದ್ಧಾಂತಗಳನ್ನು ಅಪರಾಧಿ ಮಾಡಲೇಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಲಿ” ಎನ್ನುತ್ತೇನೆ. ಹೆಚ್ಚಿನವರು ಕನ್ವಿನ್ಸು ಆಗ್ತಾರೆ. ತೊಟ್ಟಿಲ ಮಗುವನ್ನೂ ಹೆಣವನ್ನೂ, ಪ್ರಾಣಿಯನ್ನೂ ರೇಪು ಮಾಡುವವರಿದ್ದಾರೆ. ಸ್ವಂತ ಕರುಳ ಕುಡಿಯನ್ನೇ ಕೊಲ್ಲುವ ತಾಯಿ, ಅಪ್ಪನನ್ನೇ ಕೊಲ್ಲುವ ತಂದೆ, ಸೋದರಿಯನ್ನೇ ಬಲಾತ್ಕರಿಸುವ ಸೋದರ, ನಿಧಿಗಾಗಿ ತಾಯಿಯನ್ನೇ ಬಲಿ ಕೊಡುವ ಮಗ, ಹತ್ಯಾ ಸರಮಾಲೆಯನ್ನೇ ಮಾಡುವ ಸರಣಿ ಹಂತಕ…‌ಹೀಗೆ ನಾವು ನ್ಯೂಸುಗಳನ್ನು ಕೇಳುತ್ತಿದ್ದೇವೆ. ಇಂತಹ ಕೃತ್ಯಗಳಲ್ಲಿ ಅಪರಾಧಿಗಳ ಹೆಸರು ನೊಡಿ.. ಎಲ್ಲಾ ಧರ್ಮಗಳಲ್ಲಿರುವ ಹೆಸರಿನವರಿಂದಲೂ ಅಪರಾಧ ನಡೆಯುತ್ತವೆ. ಆದರೆ ಆಕಸ್ಮಾತ್ ಕೆಲವು ಸಂದರ್ಭಗಳಲ್ಲಿ ಅಪರಾಧಿ ಮತ್ತು ಅಪರಾಧಗೊಳಪಟ್ಟವರ ಧರ್ಮ ಬೇರೆ ಆಗಿರುತ್ತವೆ! ಅಪರಾಧಗೊಳಪಟ್ಟವರು ಮತ್ತು ಅಪರಾಧಿಗಳು ಒಂದೇ ಧರ್ಮದವಾದರೆ ಅವು ಆ ಅಪರಾಧಿಗಳ ಮಾತ್ರ ಕೃತ್ಯಗಳಾಗಿಯೂ, ಅಪರಾಧಗೊಳಪಟ್ಟವರು ಅಪರಾಧಿಗಳ ಧರ್ಮದವರಲ್ಲವಾದರೆ ಆ ಕೃತ್ಯಗಳು ಅಪರಾಧಿಗಳ ಧರ್ಮೀಯರ ಎಲ್ಲರ ಕೃತ್ಯಗಳಾಗಿಯೂ ಆಗಿ ನಮಗೆ ಕಾಣೋದು ಯಾವ ನ್ಯಾಯ? ನಾವು ಯಾವ ಮನಸ್ಥಿತಿಯಲ್ಲಿ ಹೂತುಹೋಗಿದ್ದೇವೆ? 99 ಪರ್ಸೆಂಟ್ ಜನರು ಸತ್ಯ, ನ್ಯಾಯದ ದಾರಿಯಲ್ಲಿ‌ಸಾಗಿ ಭಗವಂತನ ಕೃಪೆ ಸಿಗಬೇಕೆಂದು ಬಯಸಿ ಆ ಉದ್ದೇಶಕ್ಕಾಗಿ ಅವರು ಹುಟ್ಟಿದ ಧಾರ್ಮಿಕ ನಂಬಿಕೆಯಲ್ಲಿ ಜೀವನದ ಏರಿಳಿತವನ್ನು ಎದುರಿಸೋದರಲ್ಲೇ ಸುಸ್ತಾಗಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರಂತೂ ನರಳುತ್ತಾ ‘ಯಾರಿಲ್ಲ ನಮಗೆಂದು’ ಫೀಲಾಗುತ್ತಾ ಜೀವನ ದೂಡುತ್ತಿದ್ದಾರೆ. ಅವರಲ್ಲಿ ಕೆಲವರಷ್ಟೇ ಆರ್ಥಿಕ ಸಬಲರಿದ್ದರೆ ಅವರೂ ಸೇವೆ, ದಾನ, ಪ್ರೆಸ್ಟೀಜು ಅಂತ ಬಿಝಿಯಾಗಿರ್ತಾರೆ. ಅದರೆ ಒ ಮಾನವಕುಲದ ಒಟ್ಟು ಜನರ ಒಂದು ಪರ್ಸೆಂಟು ಜನರು ವಿಕೃತರಾಗಿ ತಯಾರಾಗಿರುತ್ತಾರೆ. ಅವರು ವಿಕೃತ ಮೆರೆಯೋದು ಅವರದ್ದಲ್ಲದ ಧರ್ಮೀಯಲ್ಲಿ ಮಾತ್ರ ಅಲ್ಲ! ಪೋಲೀಸ್ ಠಾಣೆಗಳ ಕೇಸುಗಳ ಪಟ್ಟಿ ನೋಡಿ. ಕೋರ್ಟುಗಳಲ್ಲಿರುವ ಪಟ್ಟಿಗಳನ್ನು ಅವಲೋಕಿಸಿ. ಮಾಧ್ಯಮಗಳಲ್ಲಿ ಬರುತ್ತಿರುವ ವಾರ್ತೆಗಳನ್ನು ನೋಡಿ. ಏನನ್ಸುತ್ತದೆ? ಕೊಲೆ, ಅತ್ಯಾಚಾರ, ಹಿಂಶೆ ಮುಂತಾದ ಅಪರಾಧಗಳೆಲ್ಲದರಲ್ಲಿ ಅಪರಾಧಿಗಳ ಮತ್ತು ಅಪರಾಧಗೊಳಪಟ್ಟವರ ಧರ್ಮಗಳು ಬೇರೆ ಬೇರೆಯಾಗಿಯೇ ಇರುತ್ತಾ? ಒಂದು ಧರ್ಮದವರು ಒಂದಾಗಿ ಇನ್ನೊಂದು ಧರ್ಮದವರ ವಿರುದ್ಧ ಮಾಡಿದ ಯುದ್ಧವಾಗಿರುತ್ತವಾ ಅವುಗಳು? ನಮ್ಮ ಉತ್ತರ ‘ಅಲ್ಲ’ ಎಂದಾಗಿಯೇ ಇರುತ್ತದೆ! ಹಾಗಿರುವಾಗ ಕೆಲವು ಘಟನೆಗಳಲ್ಲಿ ಮಾತ್ರ ಅಪರಾಧಿ ಮತ್ತು ಅಪರಾಧಿಗಳ ಹೆಸರಿನವರ ಧರ್ಮಗಳು ಬೇರೆಯಾದರೆ ಅಪರಾಧ ಜಗತ್ತಿನ ಆಕಸ್ಮಿಕಗಳಷ್ಟೇ ಅವೆಂದು ತಿಳಿದುಕೊಳ್ಳದೆ ಅಪರಾಧಿಗಳ ಇಡೀ ಧರ್ಮೀಯರ ಮನಸ್ಥಿತಿಯ ಪ್ರತಿಬಿಂಬವೆಂದು ನಮಗೆ ಯಾಕೆ ಅನಿಸಬೇಕು? ನಮ್ಮಲ್ಲಿ ಹಿಂದುಗಳ ಬಗ್ಗೆ ಮುಸ್ಲಿಮರಿಗೆ ಮತ್ತು ಮುಸ್ಲಿಮರ ಬಗ್ಗೆ ಹಿಂದುಗಳಿಗೆ ಭಯವನ್ನು ಇಂಜೆಕ್ಟು ಮಾಡಲು ತಮ್ಮ ಆರಾಧನಾಲಯಗಳನ್ನು ತಾವೇ ಮಲಿನಗೊಳಿಸುತ್ತಾರೆ. ವಾಸ್ತವ ಏನು ಅಂತ ಗೊತ್ತಿಲ್ಲದ ಹಿಂಶಾತ್ಮಕ ವೀಡಿಯೋಗಳು ಸಿಕ್ಕಿದರೂ ಬಳಸುತ್ತಾರೆ. ಅಮಾನುಷ ಘಟನೆಗಳು‌ ನಡೆದಾಗ ಅಥವಾ ತಿಳಿದಾಗ ಆ ಅಪರಾಧಿಗಳ ಹೆಸರಿನ ಧರ್ಮದ 99.9 ಪರ್ಸೆಂಟ್ ಜನರ ಮನಸ್ಸೂ ಕರೆಳಿ ನಿಲ್ಲುತ್ತವೆ. ಅಪರಾಧಿಗಳ ವಿರುದ್ಧ ಹಿಡಿಶಾಪ ಹಾಕುತ್ತವೆ.‌ ಸಂತ್ರಸ್ತರಿಗಾಗಿ ಮರುಗುತ್ತವೆ. ಆ ನರರೂಪಿ ಚಿಶಾಚಿಗಳಿಗೆ ಶಿಕ್ಷೆ ಆಗಲು ಮನಸಾರೆ ಬಯಸುತ್ತವೆ. ಒಂದು ಧರ್ಮೀಯರು ಒಂದಾಗಿ, ಪ್ಲಾನ್ ಮಾಡಿದ ಕೃತ್ಯಗಳು ಅವುಗಳಲ್ಲ. ಅವು ಅಪರಾಧಿಗಳ ಹೆಸರುಗಳು ಪ್ರತಿನಿಧಿಸುವ ಧರ್ಮೀಯರಿಂದ ಶಹಬಾಸ್ ಪಡೆಯುವುದಿಲ್ಲ. ಅವೆಲ್ಲಾ ಧರ್ಮಯುದ್ದವಲ್ಲ, ವಿಕೃತರ ಅಟ್ಟಹಾಸವಷ್ಟೇ. ಹಿಂಶಾಪ್ರಿಯರ ಕೃತ್ಯಗಳನ್ನು ಕೋಮು ಬಣ್ಣದಿಂದ ಆಲಂಕರಿಸಬೇಡಿ. ಹಾಗೆ ಮಾಡಿದರೆ ಅದು ಆ ಹಿಂಶಾಪ್ರಿಯರಿಗೆ ಮತ್ತಷ್ಟು ಆನಂದ ತಂದುಕೊಡಬಲ್ಲದು. ಅಷ್ಟೂ ಸಮಸ್ಯೆಗಳಿಂದ ನರಳುತ್ತಿರುವ ಮನುಷ್ಯರ ನಡುವೆ ಕೋಮುರಾಕ್ಷಸನನ್ನು ಇನ್ನಷ್ಟು ಬೆಳೆಸಬೇಡಿ. ಅಪರಾಧಿಗಳನ್ನು ಅಪರಾಧವಾಗಿ ನೋಡದೇ ಅವರ ಹೆಸರು ಪ್ರತಿನಿಧಿಸುವ ಧರ್ಮದವರ ಮನಸ್ಥಿತಿ ಅಥವಾ ಕೃತ್ಯಗಳಾಗಿ ಕಂಡರೆ ಈ ಲೋಕದಲ್ಲಿ ಯಾವ ಧರ್ಮವನ್ನು ಸಾಚಾ ಅನ್ನೋಕೆ ಸಾಧ್ಯ ಎಂದು ಎದೆಯಲ್ಲಿ ಕೈಯಿಟ್ಟು ಚಿಂತಿಸಿನೋಡಿ. ================= ಪರಿಚಯ: ಮಂಗಳೂರು ಸಮೀಪದ ಕೈರಂಗಳದವರು.. ವಾರ್ತಾಭಾರತಿಯಲ್ಲಿ ಪ್ರೂಫ್ ರೀಡರ್ ಆಗಿದ್ದವನು

ಲೇಖನ Read Post »

You cannot copy content of this page

Scroll to Top