ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಚರ್ಚೆ

ಟಿಪ್ಪು ಸುಲ್ತಾನನ ಇತಿಹಾಸ ಪಠ್ಯದಿಂದ ತೆಗೆಯುವುದು ಎಷ್ಟು ಸರಿ ? ಡಾ.ಮಹಾಲಿಂಗ ಪೋಳ ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಹಲವು ರಾಜ ಸಂಸ್ಥಾನಗಳ ಬೀಡಾಗಿತ್ತು.ಅವು ತಮ್ಮದೇಯಾದ ಗಡಿಯನ್ನು ಹೊಂದಿದ್ದವು.ತಮ್ಮ ಸಂಸ್ಥಾನದ ಗಡಿಯನ್ನು ವಿಸ್ತರಿಸಲಿಕ್ಕೆ ಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತಿದ್ದವು.ಅಲ್ಲದೇ ತಮ್ಮದೇಯಾದ ಸಂಸ್ಕೃತಿಯ ಪ್ರಸಾರಕ್ಕೆ ಕ್ರಮ ಕೈಗೊಳ್ಳುತ್ತಿದ್ದವು.ಇದು ರಾಜಪ್ರಭುತ್ವ ಚಾಲ್ತಿಯಾದಾಗಿನಿಂದ ಬಂದದ್ದು.ಟಿಪ್ಪು ಕೂಡ ಈ ನಾಡಿನಲ್ಲಿ ಒಂದು ಸಂಸ್ಥಾನದ ರಾಜನಾಗಿದ್ದವ.ಅವನ ಸಂಸ್ಥಾನದ ಪ್ರದೇಶ ವಿಸ್ತರಿಸಲು ಪಕ್ಕದ ರಾಜ ಸಂಸ್ಥಾನಗಳ ಮೇಲೆ ದಾಳಿ ಮಾಡಿದ ಸರಿ.ಹಲವು ವಿರೋಧಿಗಳನ್ನು ಕೊಂದ ಸರಿ.ಈ ಕೆಲಸ ಟಿಪ್ಪು ಒಬ್ಬನು ಮಾತ್ರ ಮಾಡಿದನೆ ? ಆಗಿನ ಕಾಲದಲ್ಲಿ ಒಂದು ಸಂಸ್ಥಾನ ಇನ್ನೊಂದು ಸಂಸ್ಥಾನದ ಮೇಲೆ ಹಗೆ ಸಾಧಿಸಿ ದಾಳಿ ಮಾಡುವುದು ಸಾಮಾನ್ಯವಾಗಿತ್ತು.ಟಿಪ್ಪು ಹಿಂದುಗಳನ್ನು ಕೊಂದ ಅವನು ದುಷ್ಟ ಎಂದು ಈ ಕಾಲಘಟ್ಟದಲ್ಲಿ ನಿಂತು ತೀರ್ಮಾಣಿಸುವುದು ಎಷ್ಟು ಸರಿ ? ಯಾವುದೇ ಐತಿಹಾಸಿಕ ಘಟನೆಗಳನ್ನು ಆಯಾ ಸಂದರ್ಭದ ರಾಜನೀತಿಗೆ ಅನುಗುಣವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಇಂದಿನ ರಾಜಕೀಯ ತೆವಲುಗಳಿಗಾಗಿ ವಿಶ್ಲೇಷಣೆ ಮಾಡುವುದಲ್ಲ. ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಕಾರಣಕೊಟ್ಟು ಪಠ್ಯದಿಂದ ಅವನ ಇತಿಹಾಸ ಕೈಬಿಡುವುದಾದರೆ,ಹಿಂದೂ ಸಾಮ್ರಾಜ್ಯ ವಿಜಯನಗರದ ಮೇಲೆ ದಾಳಿಮಾಡಿ ಅವನತಿಗೆ ಕಾರಣವಾದ ಶಾಹಿ ಸುಲ್ತಾನರ ಇತಿಹಾಸ ,ರಕ್ಕಸ ತಂಗಡಗಿ ಯುದ್ಧದ ಕುರಿತಾಗಿ ಪಠ್ಯದಿಂದ ತೆಗೆದು ಹಾಕಬಹುದೇ ? ಧರ್ಮದ ಆಧಾರದ ಮೇಲೆ ಇತಿಹಾಸ ನಿರ್ಧರಿಸುವುದು ಸರಿಯಲ್ಲ.ರಾಮಾನುಜಚಾರ್ಯರನ್ನು ದೇಶಬಿಟ್ಟು ಓಡಿಸಿದ ಶೈವ ಧರ್ಮಿಯ ಕುಲೋತ್ತುಂಗ ಚೋಳನ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದು ವೈಷ್ಣವರು ಒತ್ತಾಯ ಮಾಡಿದರೆ ಹೇಗೆ ? ಹಾಗೆಯೇ ಕಲಚೂರಿ ಅರಸನ ಸೈನಿಕರ ವಚನಕಾರರನ್ನು ಬೆನ್ನಟ್ಟಿಕೊಂಡು ಹೋಗಿ ಕೊಂದ ಇತಿಹಾಸ ಗೊತ್ತೆ ಇದೆ.ಲಿಂಗಾಯತ ಸಮುದಾಯದವರೆಲ್ಲ ಕಲಚೂರಿಗಳ ಇತಿಹಾಸ ಪಠ್ಯದಲ್ಲಿ ಬೇಡ ಎಂದರೆ ಹೇಗೆ ? ಅಂದಿನ ರಾಜನೀತಿಗಳನ್ನು ಇಂದಿನ ರಾಜನೀತಿಯ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಬಾರದು. ಶಿವಾಜಿಯು ತನ್ನ ತಂದೆಯ ಬಂದನಕ್ಕೆ ಕಾರಣರಾದರು ಎಂಬ ಉದ್ದೇಶದಿಂದ ಮುಧೋಳ,ಜಮಖಂಡಿ ಸಂಸ್ಥಾನಗಳ ಮೇಲೆ ದಾಳಿ ಮಾಡಿದ.ಮುಧೋಳ ಸಂಸ್ಥಾನದ ಭಾಗಗಳನ್ನು ನಾಶಮಾಡಿ ಸುಟ್ಟುಹೋದನಂತೆ.ಹಾಗಾದರೆ ಮುಧೋಳ,ಜಮಖಂಡಿ ಭಾಗದವರು ಶಿವಾಜಿಯ ಇತಿಹಾಸವನ್ನು ಪಠ್ಯದಿಂದ ತೆಗೆಯಿರಿ ಎಂದರೆ ಅದಕ್ಕೆ ಅರ್ಥ ಬರುತ್ತದೆಯೆ ? ಒಂದು ಕಾಲಘಟ್ಟದ ಇತಿಹಾಸದಲ್ಲಿ ಹಲವು ಬದಲಾವಣೆಗೆ ಕಾರಣವಾದ ಒಬ್ಬ ಐತಿಹಾಸಿಕ ವ್ಯಕ್ತಿಯನ್ನು ಬದಿಗಿಟ್ಟು ಇತಿಹಾಸ ಓದುವುದೆಂದರೆ ಅದು ನೈಜ ಇತಿಹಾಸಕ್ಕೆ ಮಾಡಿದ ಮೋಸ. ಹಿಂದೂ ರಾಜರಾರು ಬೇರೆ ಸಂಸ್ಥಾನದ ಮೇಲೆ ದಾಳಿ ಮಾಡಿಲ್ಲವೆ ? ಜನರನ್ನು ಕೊಂದಿಲ್ಲವೇ ? ಕೇವಲ ದಾಳಿ ಮಾಡುವುದು ವೈರಿಗಳನ್ನು ಕೊಲ್ಲುವ ವಿಷಯಗಳು ಮಾತ್ರ ಇತಿಹಾಸವೇ ? ಅದರಾಚೆಯಿರುವ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ವಿಷಯಗಳು ಇತಿಹಾಸದ ವಿಷಯವಾಗಿ ಓದಬೇಕಲ್ಲವೇ ? ಒಂದು ಕಾಲಘಟ್ಟದ ಇತಿಹಾಸವೆಂದರೆ ಒಂದುದಿನ ನಡೆದ ಘಟನೆಗಳು ಮಾತ್ರವಲ್ಲ ,ಅದು ಎಲ್ಲ ರೀತಿಯ ಅಂಶಗಳನ್ನು ಸೇರಿ ಒಂದು ಕಾಲಘಟ್ಟದ ಇತಿಹಾಸ ನಿರ್ಮಿಸುತ್ತವೆ. ಟಿಪ್ಪು ಒಬ್ಬ ಇಸ್ಲಾಂ ಧರ್ಮದ ರಾಜ ಎಂದ ಮಾತ್ರಕ್ಕೆ ಇತಿಹಾಸ ಬದಲಾಯಿಸಲು ಬರುವುದಿಲ್ಲ.ಅದು ಒಳ್ಳೆಯದಿರಲಿ,ಕೆಟ್ಟದ್ದಿರಲಿ ಅದು ಇತಿಹಾಸದ ಭಾಗ ಅದನ್ನು ನಾವು ವಸ್ತುನಿಷ್ಠವಾಗಿ ಓದಬೇಕು,ವಿಶ್ಲೇಷಿಸಬೇಕು.ಅದನ್ನು ಬಿಟ್ಟು ಅವನು ಮುಸ್ಲಿಂ,ಹಿಂದೂಗಳ ಮೇಲೆ ದಾಳಿ ಮಾಡಿದ ,ಹಿಂದೂಗಳನ್ನು ಕೊಂದ ಎಂದು ಇತಿಹಾಸ ಪಠ್ಯದಿಂದ ಕೈಬಿಡುವುದು ಎಷ್ಟು ಸರಿ ? ಇತಿಹಾಸದ ಘಟನೆಗಳನ್ನು ದಾಖಲೆಗಳ ಆಧಾರದಿಂದ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಬೇಕೆ ಹೊರತು ಯಾವುದೋ ಪಂಥಕ್ಕೆ ಜೋತುಬಿದ್ದು ಕುರುಡಾಗಿ,ನೈಜತೆಯನ್ನು ಮರೆಮಾಚಿ ಹುಸಿ ಸಂಕಥನಗಳನ್ನು ಸೃಷ್ಟಿಸುವುದಲ್ಲ. ಯಾಕೇ ಹೀಗಾಗುತ್ತಿದೆ ? ಇದಕ್ಕೇ ಕಾರಣ ಯಾರು ? ಈ ವಿಷಯ ರಾಜಕೀಯವಾಗುತ್ತಿರುವುದು ಯಾಕೆ? ಇದರ ಬಗ್ಗೆ ಮಾತನಾಡುವವರೆಲ್ಲ ನೈಜ ಇತಿಹಾಸ ಓದಿದ್ದಾರೆಯೆ ? ಪಠ್ಯದಿಂದ ಹೊರತೆಗೆಯುವ ತೀರ್ಮಾಣ ತೆಗೆದುಕೊಂಡವರು ಇತಿಹಾಸ ತಜ್ಞರೇ ? ಈ ಪ್ರಶ್ನೆಗಳು ನಮ್ಮನ್ನು ಕಾಡಿದರೆ ಉತ್ತರ ಸಿಕ್ಕಬಹುದೇನೋ .. ನಮ್ಮ ಅಜ್ಜನ ಇತಿಹಾಸವೇ ನಮಗೆ ಗೊತ್ತಿಲ್ಲ ..! ಹಿಂದಿನ ಘಟನೆಗಳನ್ನು ಹೆಕ್ಕಿ ತಿಪ್ಪೆ ಕೆದಕಿ ಜನರ ಮನಸ್ಸನ್ನು ಹಾಳು ಮಾಡುವುದು ಸರಿಯೇ ? ======================================================== ಪರಿಚಯ: ಜಮಖಂಡಿಯಲ್ಲಿಉಪಬ್ಯಾಸಕರು

ಚರ್ಚೆ Read Post »

ಕಥಾಗುಚ್ಛ

ಸಣ್ಣಕಥೆ

ಪ್ರೀತಿ ಆನಂದ್ ಕೊರಟಿ ಆಫೀಸಿಗೆÉ ತಡವಾಗುತ್ತಿದೆ, ಬೇಗ ಹೋಗಬೇಕು…’ ಅವನು ತನ್ನ ಕೋಟನ್ನು ಭುಜದ ಮೇಲೆ ಹಾಕಿಕೊಳ್ಳುತ್ತಾ ಜೋರಾಗಿ ಹೇಳಿದ. ಮೆಟ್ಟಿಲುಗಳನ್ನು ಇಳಿದು ಮನೆಯಿಂದ ಹೊರಗೆ ಓಡುತ್ತಾ ಹೊರಟ. ಅವನು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅವಳು ಓಡುತ್ತಾ ಮೆಟ್ಟಿಲಿಳಿದು ಬಂದಳು. ‘ತಡಿ, ತಡಿ….’ ಎಂದು ಕೂಗಿದಳು, ಆದರೆ ಅಷ್ಟರಲ್ಲಿ ಅವನು ಹೊರಟು ಹೋಗಿದ್ದ. ಅವಳ ಮುಖ ಮುದುರಿದ ಕಾಗದದಂತೆ ಆಯಿತು. ‘ಅವನು ಹೋಗುವಾಗ ನನಗೆ ಮುತ್ತಿಕ್ಕುವುದನ್ನು ಮರೆತ’ ತನಗೆ ಆದ ನೋವಿನಿಂದ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದಳು. ಅವಳು ಅವನಿಗೆ ಕರೆ ಮಾಡಿ, ‘ನೀನು ನನಗೆ ಮುತ್ತಿಡದೇ ಹೋದೆ’ ಆರೋಪ ಮಾಡುವವಳಂತೆ ಹೇಳಿದಳು. ‘ನನ್ನನ್ನು ಕ್ಷಮಿಸು, ನನ್ನ ಮುದ್ದಿನ ಮಗಳೆ’ ಅವನು ಪರಿತಪಿಸುವ ಧ್ವನಿಯಲ್ಲಿ ಹೇಳಿದ. ಅವಳು ದೊಡ್ಡ ಹೆಂಗಸಿನಂತೆ ‘ಸರಿ ಬಿಡು’ ಎಂದು ಕರೆಯನ್ನು ಕಡಿತಗೊಳಿಸುತ್ತಾ ಹೇಳಿದಳು. ನಂತರ ಸಿಡುಕಿನಿಂದ ತಿಂಡಿ ನುಂಗಿದಳು, ತನ್ನ ಶೂಗಳನ್ನು ಧರಿಸಿದಳು, ತನ್ನ ಶಾಲೆಯ ಬ್ಯಾಗ್ ತೆಗೆದುಕೊಂಡು ಬಾಗಿಲಿನಿಂದ ಹೊರಗೆ ನಡೆದಳು. ಮನಸ್ಸಿನ ಭಾರಕ್ಕೆ ಅವಳ ಭುಜಗಳು ಕುಸಿದವು. ಅವಳು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಾರು ಮನೆಯ ಹೊರಗಿನ ಪೆÇರ್ಟಿಕೋಗೆ ಬಂತು. ಅವನು ಕಾರ್‌ನಿಂದ ಹೊರಗೆ ಬಂದ. ಅವಳು ಅವನೆಡೆಗೆ ಓಡಿದಳು. ಅವಳ ಮುಖವು ಕ್ರಿಸಮಸ್ ಟ್ರೀಯಂತೆ ಬೆಳಗಿತು. ‘ನನ್ನನ್ನು ಕ್ಷಮಿಸು ಕಂದಾ, ನಾನು ಮರೆತೆ’ ಅವನು ಅವಳನ್ನು ಮೇಲಕ್ಕೆತ್ತುತ್ತಾ ಹೇಳಿದ. ಪ್ರೀತಿಯ ಮುತ್ತಿನ ಮಳೆಗೈದ. ಅವಳು ಏನೂ ಹೇಳಲಿಲ್ಲ. ಮಂದಹಾಸದ ಮುಗುಳ್ನಗೆ ಬೀರಿದಳು. ಹದಿನೈದು ವರ್ಷಗಳ ನಂತರ- ಆ ದಿನ ಆತ ಆಫೀಸಿಗೆ ತಡವಾಗಿ ಬಂದಿದ್ದ ಎಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಆದರೆ ಆ ಚಿಕ್ಕ ಬಾಲಕಿ ತನ್ನ ತಂದೆ ಕೇವಲ ತನಗೆ ಪ್ರೀತಿಯ ಮುತ್ತಿಡುವುದಕ್ಕಾಗಿಯೇ ಬಹಳ ದೂರದ ಆಫೀಸಿನಿಂದ ಮರಳಿ ಕಾರನ್ನು ಚಲಾಯಿಸಿಕೊಂಡು ಹಿಂತಿರುಗಿ ಬಂದಿದ್ದನೆಂದು ಇನ್ನೂ ಮರೆತಿಲ್ಲ. ==================================================== ಪರಿಚಯ: ವೃತ್ತಿಯಲ್ಲಿ ಪುಸ್ತಕ ಪ್ರಕಾಶಕ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ. ಆಗಾಗ್ಗೆ ತೋಚಿದ್ದು ಗೀಚುತ್ತೆÃನೆ. ಉಳಿದಂತೆ ಎಲ್ಲರೊಳಗೊಂದಾದ ಮಂಕುತಿಮ್ಮ.

ಸಣ್ಣಕಥೆ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ….

ಹನ್ನೆರಡು ರಾಶಿಯೊಳಗೊಂದು ರಾಶಿ ಚಂದ್ರಾವತಿ ಬಡ್ಡಡ್ಕ ಧನ ಲಾಭ, ಮಿತ್ರರಿಂದ ಸಂತಸ, ಮೇಲಧಿಕಾರಿಯಿಂದ ಪ್ರಶಂಸೆ – ಹೀಗೆ ಪತ್ರಿಕೆಗಳಲ್ಲಿ ಬರೆದಿರುವ ನನ್ನ ದಿನ ಭವಿಷ್ಯ ಓದಿ ನಾನೇದರೂ ನನ್ನ ದಿನವನ್ನು, ಆಹಾ! ಬಹಳ ಒಳ್ಳೆಯ ದಿನವೆಂದು ತುಂಬ ಸಂತೋಷ ಮತ್ತು ಸಮಾಧಾನದಿಂದ ಆರಂಭಿಸಿದೆನೆಂದಾದರೆ ಕೆಟ್ಟೆ. ಯಾಕೆಂದರೆ ಒಂದೇ ಒಂದು ದಿನವೂ ನನ್ನ ಭವಿಷ್ಯ ಸರಿ ಇರುವುದಿಲ್ಲ. ಧನಲಾಭ ಅಂತ ಬರೆದಿದ್ದ ದಿನ, ಇರೋ ದುಡ್ಡೆಲ್ಲ ಖರ್ಚಾಗುತ್ತದೆ. (ಬಹುಶಃ ನಿನ್ನಿಂದಾಗಿ ಇತರರಿಗೆ ಧನಲಾಭ ಎಂದಾಗಬೇಕೋ…) ಮಿತ್ರರಿಂದ ಸಂತರ ಎಂದಿದ್ದರೆ ಗೆಳೆಯ – ಗೆಳತಿಯರೊಂದಿಗೆ ಶರಂಪರ ಜಗಳ. ಇಲ್ಲವಾದರೆ ಕನಿಷ್ಠಪಕ್ಷ ಮಾತಿನಲ್ಲಿ ಭಿನ್ನಾಭಿಪ್ರಾಯ ಹತ್ತಿ ಮೂಡು ಕೆಡುವಷ್ಟಾದರೂ ಆಗೇ ಆಗುತ್ತೆ. ಮೇಲಧಿಕಾರಿಗಳಾಗಿದ್ದವರಂತೂ ಚಂದಗೆ ಭವಿಷ್ಯ ಬರೆದಿದ್ದ ದಿನವನ್ನೇ ಆಯ್ದುಕೊಂಡವರಂತೆ ನಾನು ತಪ್ಪು ಮಾಡಿದ್ದರೂ, ಮಾಡದಿದ್ದರೂ ನಾಲ್ಕು ಜನರ ಮುಂದೆಯೇ ಮಂಗಳಾರತಿ ಮಾಡಿ ನನ್ನ ಉತ್ಸಾಹ, ಸ್ವಾಭಿಮಾನವನ್ನು ಚರಂಡಿಗೆಸೆಯುತ್ತಿದ್ದರು. ಹಾಗಾಗಿ ನಾನು ನನ್ನ ಅನುಭವದಿಂದ ಕಲಿತಿದ್ದೇನೆಂದರೆ ಯಾವದಿನ ಭವಿಷ್ಯ ಚೆನ್ನಾಗಿ ಬರೆಯಲ್ಪಟ್ಟಿದೆಯೇ ಆ ದಿನವಿಡೀ ಜಾಗರೂಕಳಾಗಿರಬೇಕು! ನಾವು ಎಮ್ಮೆ ಓದುವಾಗ, ನಮ್ಮ ಔದಾಸೀನ್ಯವನ್ನು ಮಾತ್ರ ಗಮನಿಸಿದ ನಮ್ಮ ಅಧ್ಯಾಪಕರುಗಳೆಲ್ಲ ನಾವು ಗುಡ್‌ ಫಾರ್ ನಥಿಂಗ್‌ಗಳೆಂದೂ, ನಮಗೆ ಭವಿಷ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ನುಡಿದಿದ್ದರು. ಅಲ್ಲಿಂದ ನನಗೆ ಭವಿಷ್ಯ (ದಿನ, ವಾರ, ವರ್ಷ)  ನೋಡುವ ಅಭ್ಯಾಸ. ಬಳಿಕ ಕ್ರಮೇಣ ಇದೊಂದು ಚಟವಾಯಿತು. ಅಂದ ಹಾಗೆ ನಿನ್ನ ರಾಶಿ ಯಾವುದು ಅಂತ ಕೇಳ್ತೀರಾ? ಸತ್ಯವನ್ನೇ ಹೇಳಬೇಕೆಂದರೆ ನನಗೇ ಗೊತ್ತಿಲ್ಲ. ಮತ್ತೆ ಏನಿದು ನಿನ್ನ ಗೋಳು, ಇಷ್ಟೆಲ್ಲ ಹೇಳಿದ್ದು ಸುಳ್ಳೇ ಎಂದು ತೀರ್ಮಾನಿಸಿ ಇವಳು ಬರೀ ಸುಳ್ಳು ಬುರ್ಕಿಯೆಂಬ ತೀರ್ಮಾನಕ್ಕೆ ಬರಬೇಡಿ. ಒಟ್ಟಾರೆ ಹನ್ನೆರಡು ರಾಶಿಯಲ್ಲಿ (ಹದಿಮೂರನೆಯ ರಾಶಿಯೊಂದು ಗೋಚರವಾಗಿದೆ ಎಂಬುದಾಗಿ ಆರೇಳು ವರ್ಷದ ಹಿಂದೆ ಸುದ್ದಿಯಾಗಿತ್ತು. ಒಂದು ವೇಳೆ ಅದೂ ಇದ್ದರೆ ಅದೂ ಸೇರಿದಂತೆ) ಒಂದು ನನ್ನದು ಆಗಿರಲೇ ಬೇಕಲ್ಲಾ? ಹಾಗಾಗಿ ನಾನು ಎಲ್ಲಾ ರಾಶಿಯನ್ನೂ ಓದುತ್ತೇನೆ. ಚೆನ್ನಾಗಿ ಭವಿಷ್ಯ ಬರೆದ ರಾಶಿ ನನ್ನದೆಂದು ಅಂದುಕೊಳ್ಳುತ್ತೇನೆ. ನಿಜವೆಂದರೆ, ನನ್ನ ಹುಟ್ಟಿದ ದಿನಾಂಕವೇ ನನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಹೆತ್ತವರು ಬರೆದಿಡಲಿಲ್ಲ ಎಂದು ನಾನವರನ್ನು ದೂಷಿಸುವಂತಿಲ್ಲ. ನಿರಕ್ಷರಿಗಳಾಗಿದ್ದ ಮತ್ತು ಅವರಿದ್ದ ಪರಿಸ್ಥಿತಿಯಲ್ಲಿ ಅದನ್ನು ನಿರೀಕ್ಷಿಸುವುದೂ ತಪ್ಪೇ. ನನ್ನ ದೊಡ್ಡಅಕ್ಕ ಎಲ್ಲೋ ಬರೆದಿಟ್ಟ ದಿನಾಂಕವನ್ನೇ ಗಟ್ಟಿಮಾಡಿಕೊಳ್ಳೋಣವೆಂದರೆ, ನನ್ನ ಅಮ್ಮನ ಹೇಳಿಕೆ ಅದಕ್ಕೆ ಅಡ್ಡ ಬರುತ್ತದೆ. ನಾನು ಹುಟ್ಟಿದ ದಿನ ಭಯಂಕರ ಕತ್ತಲಿತ್ತು, ಧಾರಾಕಾರ ಮಳೆ ಸುರಿಯುತ್ತಿತ್ತು ಎನ್ನುತ್ತಾ ನೆನಪಿಸಿಕೊಳ್ಳುತ್ತಿದ್ದರು. ಅವರು ಹೇಳುವ ತುಳು ತಿಂಗಳ ಲೆಕ್ಕಾಚಾರಕ್ಕೂ ಅಕ್ಕ ಬರೆದಿಟ್ಟಿರುವ ಇಂಗ್ಲೀಷು ತಿಂಗಳ ಲೆಕ್ಕಾಚಾರಕ್ಕೂ ತಾಳೆ ಆಗುವುದಿಲ್ಲ. ಕೂಡಿ, ಗುಣಿಸಿ, ಕಳೆದು, ಭಾಗಿಸಿ ಎಲ್ಲಾ ಮಾಡಿ ನನ್ನಕ್ಕ ಬರೆದಿಟ್ಟ ದಿನಾಂಕ ಯಾವ ವಾರ ಬರುತ್ತದೆ ಎಂದು ನೋಡಿದರೆ ಅದಕ್ಕೂ ಅಮ್ಮ ಹೇಳಿದ ವಾರಕ್ಕೂ ವ್ಯತ್ಯಾಸ. ಈ ಮಧ್ಯೆ, ನಿನ್ನ ಜನ್ಮ ನಕ್ಷತ್ರಕ್ಕನುಗುಣವಾಗೇ ನೆರೆಮನೆಯ ಕಲ್ಲೂರಾಯರು ಹೆಸರು ಸೂಚಿಸಿದ್ದು ಎಂಬ ಇನ್ನೊಂದು ಅಂಶವನ್ನು ನನ್ನ ಮುಂದಿಟ್ಟು ಮತ್ತೂ ಗೊಂದಲವಾಗುವಂತೆ ಮಾಡಲಾಗಿದೆ. ಹೆಸರು ಜನ್ಮ ನಕ್ಷತ್ರದ್ದೇ ಆಗಿದ್ದರೆ, ಆ ನಕ್ಷತ್ರಕ್ಕೂ, ಅಕ್ಕ ಬರೆದಿಟ್ಟ ಇಂಗ್ಲೀಷ್ ತಿಂಗಳ ದಿನಕ್ಕೂ, ಅಮ್ಮನ ತುಳು ತಿಂಗಳ ದಿನಕ್ಕೂ ತಾಳೆ ಇಲ್ಲ. (ಹಾಗಾದ್ರೆ ಶಾಲಾ ದಾಖಲಾತಿಯಲ್ಲಿ ಏನಿದೆ ಎಂಬುದು ನಿಮ್ಮ ಪ್ರಶ್ನೆಯೇ? ಅದನ್ನು ನೋಡಿದರೆ ಇನ್ನೂ ಗಮ್ಮತ್ತಿದೆ. ನಮ್ಮ ಐದೂ (ನಾನು ಮತ್ತು ನನ್ನ ಒಡ ಹುಟ್ಟಿದವರು) ಮಂದಿಯ ಜನ್ಮ ದಿನಾಂಕವೂ ಜೂನ್ ತಿಂಗಳೆಂದೇ ದಾಖಲಾಗಿದೆ. ಯಾಕೆಂದರೆ ಶಾಲೆಗೆ ಸೇರಿಸಲು ಕನಿಷ್ಠ ಎಷ್ಟು ವರ್ಷವಾಗಬೇಕೋ, ಅದಕ್ಕೆ ತಕ್ಕಂದೆ ದಾಖಲೆಗಳಲ್ಲಿ ಬರೆಯಲಾಗಿದೆ.) ಹಾಗಾಗಿ ಈ ಮೇಲಿನ ಆಧಾರದನ್ವಯ  ಯಾವ್ಯಾವ ದಿನಕ್ಕೆ ಯಾವ್ಯಾವ ರಾಶಿ ಬರುತ್ತೋ ಅವು ನನ್ನವೇ ಅಂದು ಕೊಂಡಿದ್ದೇನೆ. ಇದರ ಮಧ್ಯೆ ವೆಸ್ಟರ್ನೂ, ಈಸ್ಟರ್ನೂ ಅಂತ ಇನ್ನೂ ಒಂದೆರಡು ರಾಶಿಗಳೂ ಸಹ ನಂದಾಗಿರಬಹುದೋ ಎಂಬ ಸಂಶಯ. ಈ ಐದಾರು ರಾಶಿಗಳಲ್ಲಿ ಯಾವುದಕ್ಕೆ ಚೆನ್ನಾಗಿ ಬರೆದಿದೆಯೋ ಅದೇ ನನ್ನ ರಾಶಿ ಎಂಬುದು ಅಂತಿಮ ನಿರ್ಧಾರ. ಟಪ್ಪಂತ ಮುಖಕ್ಕೆ ರಾಚಿದಂತೆ ಮಾತಾಡುವ ನನ್ನ ಗುಣ ಕಂಡವರು ನನ್ನದು ಧನು ರಾಶಿ ಇರಬಹುದೆಂದೂ, ಮಾತಿನಲ್ಲಿ ಕೆಲವೊಮ್ಮೆ ಕಟಕುವುದನ್ನು ಕಂಡ ಕೆಲವರು ಕಟಕ ರಾಶಿಯೆಂದು ಇನ್ನು ಕೆಲವರು ವೃಶ್ಚಿಕ ರಾಶಿಯೆಂದೂ, ಸಿಟ್ಟು ಬಂದಾಗ ಸುನಾಮಿ ಬಡಿದಂತೆ ಘರ್ಜಿಸುವ ಪರಿ ಮತ್ತು ಅಗತ್ಯ ಮೀರಿದ ಔದಾರ್ಯವನ್ನು ಕಂಡ ಕೆಲವರು ಸಿಂಹ ರಾಶಿ ಇರಬಹುದು ಎಂಬುದಾಗಿ ಆರೋಪಿಸಿದ್ದಾರೆ. ಮದುವೆಯಾಗುವ ಹೊತ್ತಿನಲ್ಲಿ ನನಗೆ ಜಾತಕ – ಗೀತಕ ಎಲ್ಲಾ ಇಲ್ಲ ಎಂದು ಮಾತುಕತೆಗೆ ಮೊದಲೇ ಸ್ಪಷ್ಟವಾಗಿ ಹೇಳಿದ್ದೆ. ನನ್ನ ಗಂಡ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಪೈಕಿಯಲ್ಲ. ಜಾತಿ, ವಿದ್ಯೆ, ಸಂಬಳ, ಮನೋಭಾವ ಎಲ್ಲವನ್ನೂ ಜಾತಕ ಮೀರಿಸಿದ್ದ ಕಾರಣ ಈ ಹಿಂದೆ ಹಲವು ಸಂಧಾನಗಳು ಅಂತಿಮ ಹಂತದ ತನಕ ಬಂದು ಬಳಿಕ ರದ್ದಾಗಿದ್ದವು. ನನ್ನ ಅತ್ತೆಮ್ಮನಿಗೆ ಜಾತಕದ ಗೀಳು. (ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡಿರುವ ಅವರಿಗೆ ಬಳಿಕ ಜಾತಕ ಅಧ್ಯಯನದ ಆಸಕ್ತಿ ಹುಟ್ಟಿತಂತೆ. (ಅರೆಬರೆ ತಿಳಿದುಕೊಂಡಿರುವ ಅವರು, ಸಪ್ತಮಾಧಿಪತಿ ಚಂದ್ರ…. ಅಂತ ಶುರುವಿಕ್ಕಿದರೆ, ನಾನಲ್ಲಿಂದ ಪರಾರಿ!) ಮದುವೆ ಆದ ಶುರವಿನಲ್ಲಿ ಅತ್ತೆಮ್ಮ “ಸರಿ ನಿನ್ನ ಅಂದಾಜಿನ ಹುಟ್ಟಿದ ದಿನವನ್ನೇ ಹೇಳು” ಅಂದಿದ್ದರು. ನಿನ್ನ ಅಕ್ಕನವರು ಸಾಯಂಕಾಲ ಶಾಲೆಯಿಂದ ಬರುವ ವೇಳೆಗೆ ನೀನು ಹುಟ್ಟಿದ್ದೆ ಅಂತ ಅಮ್ಮ ಹೇಳಿದ್ದನ್ನೇ ಅವರಿಗೆ ಹೇಳಿದ್ದೆ. ಅವರು ಹಳೆಯ ಪಂಚಾಂಗವನ್ನೆಲ್ಲ ತೆಗೆದು – ಬಗೆದು; ಯಾವುದಕ್ಕೋ ಯಾವುದನ್ನೋ ಥಳುಕು ಹಾಕಿ, ನಾನು ವರಮಹಾಲಕ್ಮ್ಮಿ ವೃತ ದಿವಸ ಹುಟ್ಟಿದೆಂದು ಶೋಧಿಸಿ ಪ್ರಚಾರ ಮಾಡುತ್ತಿದ್ದಾರೆ. ಅದಲ್ಲದೆ, ಅವರ ಮಗನ ಜಾತಕಕ್ಕೆ ಅತ್ಯಂತ ಪ್ರಶಸ್ತವಾಗಿ ಹೊಂದುವ ಜಾತಕ ನನ್ನದಂತೆ! ಸ್ನೇಹಿತೆಯೊಬ್ಬಳ ಮೂಲಕ ಫೋನಲ್ಲೇ ಪರಿಚಿತರಾಗಿ ಮಾತಾಡಿಕೊಂಡಿದ್ದ ನಾವು ಪರಸ್ಪರ ಮುಖತ ಭೇಟಿಯಾಗುವ ಮುನ್ನ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೆವು. “ನನ್ನಮ್ಮ ಆರು ವರ್ಷದವರಾಗಿದ್ದಾಗ ಅವರ ಅಮ್ಮ ತೀರಿಕೊಂಡರು, ಮೂವತ್ತಾರು ವರ್ಷಕ್ಕೆ ಗಂಡ ತೀರಿದರು. ಅವರು ಬದುಕಿನಲ್ಲಿ ತುಂಬ ನೊಂದ ಜೀವ, ಅವರಿಗೆ ನೋವಾಗದಂತೆ ಇರಬೇಕೆಂಬುದು ಮಾತ್ರ ನನ್ನ ನಿರೀಕ್ಷೆ, ಮಿಕ್ಕಂತೆ ನೀನು ಹೇಗಿದ್ದರೂ ಪರ್ವಾಗಿಲ್ಲ” – ಇದೊಂದೇ ಅವರು ಕೇಳಿಕೊಂಡಿದ್ದು. (ನನ್ನ ಹೆತ್ತಮ್ಮ ತೀರಿಕೊಂಡಿದ್ದರಿಂದ ನನಗೂ ಒಂದು ಅಮ್ಮನ ಅವಶ್ಯಕತೆ ಇತ್ತು.) ಮಿಕ್ಕಂತೆ ಜಾತಿ, ವಯಸ್ಸು, ವಿದ್ಯೆ, ಚಿನ್ನ, ಜಾತಕ, ಅಂತಸ್ತು, ಸಂಬಳ, ಉಳಿತಾಯ ಯಾವುದನ್ನೂ ಕೇಳಿರಲೇ ಇಲ್ಲ. ನಮ್ಮದು ಹುಟ್ಟಿನಿಂದ ವಿಭಿನ್ನ ಜಾತಿ. ಸಹಜವಾಗೇ ಕೆಲವು ಸಂಪ್ರದಾಯ, ನಂಬಿಕೆ, ಸಂಸ್ಕೃತಿಗಳಲ್ಲಿ ಭಿನ್ನತೆ ಇದೆ. ನನ್ನ ಅತ್ತೆಮ್ಮನ ತಾಳಕ್ಕೆ ತಕ್ಕಂತೆ ನನ್ನ ಮೇಳ ಇರುವ ಕಾರಣ ನಂಗೆ ಯಾವುದೇ ಸಮಸ್ಯೆ ಇಲ್ಲ. ಅಯ್ಯೋ ಅವಳ ಜಾತಕ – ಸ್ವಭಾವ ನನ್ನಂತೆಯೇ ಎಂಬುದಾಗಿ ಅತ್ತೆಮ್ಮ ಹೇಳುವಾಗ ಮಾತ್ರ ಮನದಲ್ಲಿ ಮುಸಿ ನಗು! ಜನ್ಮ ದಿನಾಂಕ ಸರಿಯಾಗಿ ತಿಳಿಯದಿರುವುದು ನನಗೆ ಎಷ್ಟೋ ಅನುಕೂಲವಾಗಿದೆ. ಜಾತಕ ನೋಡಿಸಿ ಜಾತಕದಲ್ಲಿ ಕೆಟ್ಟದಿದೆ ಎಂಬುದಾಗಿ ಅಳುವವರನ್ನು, ಶಾಂತಿ ಮಾಡಿಸುವವರನ್ನು, ಪೂಜೆ-ಪುನಸ್ಕಾರ ಮಾಡಿಸುವ ಪುರೋಹಿತರ ಉದ್ಧಾರಕರನ್ನೂ ಕಂಡಿದ್ದೇನೆ. ಇಷ್ಟನೇ ವರ್ಷಕ್ಕೆ ಇಂತಾದ್ದು ಆಗುತ್ತದೆ ಎಂಬ ಲೈಫ್ ಲೀಸ್ಟ್ ಇಲ್ಲದ ಕಾರಣ ನಾನು ಎಷ್ಟೋ ಆರಾಮ ಮತ್ತು ನಿರಾತಂಕಳಾಗಿ ಇದ್ದೇನೆ. ಆ ಮಟ್ಟಿಗೆ ನಾನು ತುಂಬಾ ಅದೃಷ್ಟವಂತಳೇ.

ಶಾನಿಯ ಡೆಸ್ಕಿನಿಂದ…. Read Post »

ಇತರೆ

ಕನ್ನಡದ ಅಸ್ಮಿತೆ

ನಾಡ ದ್ವಜ ಯಾಕೆ ಬೇಕು? ಚಂದ್ರಪ್ರಭ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ಕಯ್ಯಾರ ಕಿಞ್ಞಣ್ಣ ರೈ ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಎಲ್ಲವುಗಳ ಮೂಲ ನೆಲೆ ಅಸ್ಮಿತೆ. ಅಷ್ಟೇ ಅಲ್ಲ ಇವೆಲ್ಲ ಒಂದನ್ನೊಂದು ಪೂರಕವಾಗಿ ಪ್ರಭಾವಿಸುವ ಅಂಶಗಳು. ವ್ಯಕ್ತಿ, ವ್ಯಕ್ತಿಯ ಮನೆತನ, ಪ್ರದೇಶ ಎಲ್ಲಕ್ಕೂ ಒಂದು ಹೆಸರಿದೆ. ಹತ್ತಾರು ಸಂಗತಿಗಳನ್ನು ಹೇಳಿ ಬಿಡುವ ತಾಕತ್ತು ಆ ಒಂದು ಹೆಸರಿಗಿದೆ. ಗುರುತಿಸುವಿಕೆಯ ಇಂಥದ್ದೊಂದು ಅಂಶವಾಗಿ ಹುಟ್ಟಿದ್ದು ‘ಧ್ವಜ’ ಎಂಬ ಪರಿಕಲ್ಪನೆ. ಉರಗ ಪತಾಕ ಎಂದೊಡನೆ ತಟ್ಟನೆ ನೆನಪಾಗುವುದು ದುರ್ಯೋಧನ ಮತ್ತವನ ಛಲ. ಗರುಡಧ್ವಜನೆಂದಾಗ ಕೃಷ್ಣ, ಕಪಿಧ್ವಜನೆಂದಾಗ ಅರ್ಜುನ, ವರಾಹ ಧ್ವಜ ಅಂದಾಗ ವಿಜಯನಗರ ಸಾಮ್ರಾಜ್ಯ, ಭಗವಾ ಧ್ವಜ ಅಂದಾಗ ಮರಾಠಾ ಸಾಮ್ರಾಜ್ಯ ನೆನಪಿಗೆ ಬರುವುದು. ಧ್ವಜ, ಪತಾಕೆ, ಬಾವುಟ ಎಂದೆಲ್ಲ ಕರೆಸಿಕೊಳ್ಳುವ ಈ ಸಂಗತಿ ನಿರ್ದಿಷ್ಟ ಕಾರ್ಯೋದ್ದೇಶವನ್ನು ಸೂಚಿಸುತ್ತದೆ. ನಿರಂತರ ಎಲ್ಲರ ಲಕ್ಷ್ಯವನ್ನು ತನ್ನತ್ತ ಸೆಳೆದು ಗುರಿ ತಲುಪುವ ಸಂಕೇತವನ್ನು ಪ್ರತಿನಿಧಿಸುತ್ತದೆ. ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಬೇಕೆಂಬ ಕನಸು ನನಸಾದ ಕ್ಷಣದ ಹಿಂದೆ ಏನೆಲ್ಲ ಹೋರಾಟ, ತ್ಯಾಗ, ಬಲಿದಾನಗಳಿವೆ.. ಕೆಲವಷ್ಟು ಮೊಳದ ಬಟ್ಟೆಯಾಗಿರದೇ ಇಡಿಯಾಗಿ ‘ಇಂಡಿಯಾ’ ವನ್ನು ಎಲ್ಲಾ ಗೌರವ, ಸ್ಥಾನ, ಮಾನ ಸಮ್ಮಾನಗಳ ಎತ್ತರದಲ್ಲಿ ನಿರೂಪಿಸುವ ಅಂಶವಾಗಿ ತ್ರಿವರ್ಣ ಧ್ವಜ ಪ್ರತಿಯೊಬ್ಬ ದೇಶವಾಸಿಯ ಎದೆಯಲ್ಲಿ ಸ್ಥಾನ ಪಡೆದಿದೆ. ಸ್ವಾತಂತ್ರ್ಯ ಪೂರ್ವದ ಸಂಸ್ಥಾನಿಕ ಅರಸರ ನಿಯಂತ್ರಣದಲ್ಲಿದ್ದ ಬಿಡಿ ಬಿಡಿ ಪ್ರದೇಶಗಳು ಇಡಿಯಾಗಿ “ಒಂದು ದೇಶ” ದ ಪರಿಕಲ್ಪನೆಯಡಿ ಬರುವಾಗಲೂ ಸಂಸ್ಥಾನಗಳು ಭಾಷೆ, ಸಂಸ್ಕೃತಿ ಇತ್ಯಾದಿ ಹಲವಾರು ಸಂಗತಿಗಳ ವಿಷಯದಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ… ಅದರಲ್ಲಿ ಒಕ್ಕೂಟದ ಸಾಂಕೇತಿಕ ಪ್ರತಿನಿಧಿತ್ವದ ಹಸ್ತಕ್ಷೇಪ ಇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ ಬಳಿಕವಷ್ಟೇ ಸಂಸ್ಥಾನಗಳ ವಿಲೀನ ಕಾರ್ಯ ಸಾಧ್ಯವಾಗಿದ್ದು ಮತ್ತು ಅಂದಿನ ಹಿರಿಯರ ನಿರಂತರ ಮನವೊಲಿಸುವ ಪ್ರಯತ್ನದಿಂದ ಅದು ನೆರವೇರಿದ್ದು. ಚಿಕ್ಕದೊಂದು ಉದಾಹರಣೆ ಈ ಸಂಗತಿಯನ್ನು ಪ್ರಸ್ತುತ ಪಡಿಸುವುದು – ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳು ನಡೆದಿವೆ ಎಂದುಕೊಳ್ಳೋಣ. ಅಲ್ಲಿ ಒಂದು ಗುಂಪಿನವರು ತಮಿಳು ಧ್ವಜ ಎತ್ತಿ ಹಿಡಿದಿದ್ದಾರೆ, ಕೆಲವರು ಮಲಯಾಳ ಧ್ವಜ, ಮತ್ತೆ ಕೆಲವರು ಪಂಜಾಬಿ..ಇತ್ಯಾದಿ ಅನುಕ್ರಮವಾಗಿ ತಮ್ಮ ತಮ್ಮ ಧ್ವಜ ಹಿಡಿದು ನಿಂತಿರುವಾಗ ನೀವು ಎತ್ತಿ ಹಿಡಿಯುವ ಧ್ವಜ ಕನ್ನಡ ಧ್ವಜವೇ ಆಗಿರುತ್ತದೆ. ಅಖಂಡತೆಯ ಸೂಚಕ ಎಂಬ ಕಾರಣಕ್ಕೆ ಅಲ್ಲಿ ನೀವು ಭಾರತದ ಧ್ವಜ ಹಿಡಿಯಲಾಗದು. ಕನ್ನಡ ಧ್ವಜ ಎಂದಾಗ ಅದು ಬಸವಾದಿ ಶರಣರು, ಸೂಫಿ ಸಂತರು, ಚೆನ್ನಮ್ಮ-ಅಬ್ಬಕ್ಕ ರಂಥ ಧೀರ ರಾಣಿಯರು, ಟಿಪ್ಪು, ಒಡೆಯರ್ ಮೊದಲಾದ ರಾಜರು ; ಪಂಪ, ರನ್ನ ಪೊನ್ನರಿಂದ ಹಿಡಿದು ಕುವೆಂಪು, ಬೇಂದ್ರೆ ವರೆಗಿನ ಕವಿಗಳನ್ನು… ಅವರು ಬಿತ್ತಿ ಹೋದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ಇತಿಹಾಸ, ಪರಂಪರೆಯನ್ನು ಪ್ರತಿನಿಧಿಸುವ ಕನ್ನಡತನದ ಪ್ರತೀಕ ಕನ್ನಡ ಧ್ವಜ. ಶಾಂತಿ, ಸೌಹಾರ್ದತೆ ಕನ್ನಡಿಗರ ಮೂಲ ಗುಣ, ಸ್ವಭಾವ. ತನ್ನ ಇಂಥ ಮೌಲ್ಯಗಳ ಮೂಲಕವೇ ಕರ್ನಾಟಕ ಭಾರತೀಯತೆಯನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದೆ. ವಿವಿಧತೆಯಲ್ಲಿ ಏಕತೆ ಭಾರತದ ಹೆಗ್ಗಳಿಕೆ. ಭಾಷೆ, ಸಂಸ್ಕೃತಿ, ಆಚರಣೆಗಳಲ್ಲಿರುವ ವೈವಿಧ್ಯತೆ ಭಾರತದ ಅಂತಃಸತ್ವ.  ಈ ಜಾತ್ಯತೀತ ಸ್ವರೂಪ, ಬಹುತ್ವದ ನೆಲೆಯೇ ಭಾರತ ವಿಶ್ವಮಾನ್ಯವಾಗಲು ಕಾರಣವಾದ ಅಂಶವಾಗಿದೆ. ಈ ಅರ್ಥದಲ್ಲಿ ಭಾರತವೆಂದರೆ ನೂರಾರು ಸುಂದರ ಅಸ್ಮಿತೆಗಳ ಸಂಘಟಿತ ರೂಪ. ಎಲ್ಲ ರಾಜ್ಯಗಳೂ ತಮ್ಮತನವನ್ನು ಉಳಿಸಿಕೊಂಡೇ ಭಾರತೀಯತೆಯನ್ನು ಒಪ್ಪಿಕೊಂಡಿವೆ. ‘ಭಾರತ ಜನನಿಯ ತನುಜಾತೆ’ ಎಂದು ಬಣ್ಣಿಸುವಾಗ ಕುವೆಂಪು ನಿರೂಪಿಸುವುದು ಈ ಅಂಶವನ್ನೇ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವುದು ಒಕ್ಕೂಟ ವ್ಯವಸ್ಥೆಯ ಹೊಣೆ ಮತ್ತು ನಿಜವಾದ ಭಾರತೀಯತೆಯ ಲಕ್ಷಣ. ರಾಜ್ಯಗಳು ರಾಷ್ಟ್ರ ಧ್ವಜದ ಅಡಿಯಲ್ಲಿ ತಮ್ಮ ಅಸ್ಮಿತೆಯ ಕುರುಹಾಗಿ ಸ್ವಂತ ಧ್ವಜ ಹೊಂದುವುದರಲ್ಲಿ ಎಂಥ ಅತಿರೇಕವೂ ಇಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಆ ಧ್ವಜ ಹಾರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಧ್ವಜವನ್ನು ನಿರಾಕರಿಸಿ ಅಲ್ಲಿ ‘ಒಂದು ಧ್ವಜ’ ಪರಿಕಲ್ಪನೆಯನ್ನು ಹೇರುವ ಪ್ರಯತ್ನಗಳು ನಡೆದರೆ ಅದು ಪರೋಕ್ಷವಾಗಿ ಕರ್ನಾಟಕದ ಇತಿಹಾಸ, ಪರಂಪರೆಯನ್ನು ನಿರಾಕರಿಸುವುದೇ ಆಗಿದೆ. ಕನ್ನಡಿಗರು ಕನ್ನಡ ಧ್ವಜವನ್ನು ಪ್ರೀತಿಸಿದರೆ ಅದೊಂದು ಸಹಜ ಪ್ರಕ್ರಿಯೆ. ಅದನ್ನು ಪ್ರತಿಯೊಬ್ಬನೂ ಗೌರವಿಸಬೇಕು. =============================================

ಕನ್ನಡದ ಅಸ್ಮಿತೆ Read Post »

ಕಾವ್ಯಯಾನ

ಕಾವ್ಯಯಾನ

ಮಧುಕುಮಾರ್ ಸಿ.ಹೆಚ್. ನೂತನ ಪ್ರಜ್ಞಾ ದೀಪಿಕೆ ನಿರ್ಗಮಿಸು ಸಾಕ್ಷಿಪ್ರಜ್ಞೆಯೆ, ಅಂತರಂಗದ ದನಿಯೆದುರು ಮಂಡಿಯೂರಿ ನಿಲ್ಲಬೇಡ: ಯಾರದೋ ಬಹಿರಂಗ ತಲ್ಲಣಕೆ ಮನ ತೆರೆಯಬೇಡ ತಪ್ಪು-ಒಪ್ಪುಗಳ ಕಂತೆಯನು ಅಡ್ಡಗೋಡೆಯ ಮೇಲಿಟ್ಟು ಸುಮ್ಮನೆ- ತಣ್ಣಗೆ ಪಲಾಯನ ಮಾಡು ಪ್ರತಿಕ್ರಿಯೆ – ಸ್ಪಂದನದ ಗೊಡವೆ ನಿನಗೇತಕೆ? ಭೂತದ ಬೆನ್ನು ಹತ್ತಿ; ವರ್ತಮಾನವ ಕಟ್ಟಿಡು ಸತ್ಯದರ್ಶನಕೆ ಗಾಂಧಾರಿ- ಧೃತರಾಷ್ಡçರ ಸಾಲಲ್ಲಿ ನಿಲ್ಲು ನಮ್ಮವ ನಮ್ಮವರೆಂಬ ದಾರಿಯಲಿ ಸದ್ದುಮಾಡದೆ ನುಸುಳಿ ನುಸುಳಿ ಮುಂದೆ ಸಾಗು. ಅನುಭವ ಮಂಟಪದ ಮಹಾನುಡಿಗಳನು ಅನ್ಯರಿಗೆ ಅನ್ವಯಿಸಿ ಗುಣಿಸಿಬಿಡು ಅಹಮಹಮಿಕೆಯ ಆಪ್ಯಾಯನದೊಡನೆ ಲೋಕದೆದುರು ಸರ್ವಗುಣ ಸಂಪನ್ನತೆಯ ಪೋಷಾಕು ಧರಿಸಿ ಯಾರ ಜಪ್ತಿಗೂ ಸಿಗದ ನಗೆಯ ನವಿಲನ್ನೆÃರಿ ಆ ಭಾವ ಈ ಭಾವ ಎಲ್ಲ ಭಾವಗಳ ಹಿಮ್ಮೆಟ್ಟಿಸಿ ಸುಮ್ಮನೆ- ತಣ್ಣಗೆ ಪಲಾಯನ ಮಾಡು ಸುಮ್ಮನೆ- ತಣ್ಣಗೆ ಪಲಾಯನ ಮಾಡು ======================= ಪರಿಚಯ: ಕನ್ನಡಭಾಷಾ ಶಿಕ್ಷಕರು-ಬರಹಗಾರರು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿ ಕೆ.ಬಿ.ಸಿದ್ದಯ್ಯನವರ ನೆನಪಿನಲ್ಲಿ ಕೊನೆಯ ಅ.. ಆ.. ಮಂಟಪ ಡಾ.ಆನಂದ ಕುಮಾರ್ ಮೈಸೂರು ಹಿಂದೆ ಮುಂದೆ ಒಂದಾಕ್ಷರದ ಬದಲಿಕೆ ಒಂದಾಕ್ಷರ ಸೇರೊ ಆಳಿಸೋ ಹಾಗಿಲ್ಲವೆಂದು ಪ್ರಕಟಿಸೋಕೊ ತಾಕೀತು ಮಾಡೋ ಹಾಗೆ ಅ.. ಆ.. ಮಂಟಪದ ಮಾರ್ಗದ ಸ್ವೀಕಾರಕ್ಕೆ ಕಾಲನ ಒಪ್ಪಿಸಿದ ತಂಟೆಕೋರ ಮುದ್ದು ಮಾದಪ್ಪನ ಕುಡಿಯೇ ಕೆಲಹೊತ್ತು ಇನಿಯ ಮೋಹ ಪಾಶ ಕಳಚಿ ಸಿದ್ದಾರ್ಥ ರೂಪ ಧರಿಸಿಯೂ ಪತಿ ಧರ್ಮ ಪಾಲಕನಾಗಿಯೂ ಆಲ್ಲಮ.. ಅಲ್ಲ..ಹೌದು ಅಪ್ಪ ಭಾವ ಬಂಧನ ಕಳಚದಾ ಕಹಿ ಸಿಹಿ ಊಣ್ಣೋ ವ್ಯಾಮೋಹ ವ್ಯಾಕುಲತೆ ಇಲ್ಲದಾಗಿ ಸಂಸಾರ ಸಾಗರ ಈಜಿ ತಾವರೆ ಪುಷ್ಪಧಾರಿ ಆದಿಜಾಂಭವನಾದೆ ಅಡ್ಡಿ ಅತಂಕ ಆಗಾಧಗಳೊಳಗಿಂದ ಎದ್ದು ಮರೆವಿನಂದು ಪೂಜಿಸುವಿಕೆಗೆ ನಿನ್ನ ಕೈನ ಸುರೆ ಮದ್ದು ನೀಡೆಂದು ಬೇಡಿ ಪಡೆದಿಹ ಐಭೋಗ ಸಂತನಂತೆ ಸಂಗಡಿಗನಾಗಿ ಎಲ್ಲರೊಂದಿಗೆ ಹಂಚಿಕೊಂಡು ಸೇವಿಸಿದ್ದ ಮಾತಂಗಿ ಮಗನೇ ನಾಡ ಮಣ್ಣಲ್ಲಿ ಮಣ್ಣಾದವರ ಕತೆಯ ಕರಳು ಕಿವಚುವಂತೆ ಹಾಡು ಕಟ್ಟಿದ್ದ ಮೋಡಿಗಾರ ಅಲ ಆಕಾಶೆ ಮರದ ನಡು ಮಧ್ಯೆ ಮಲಗಿದ್ದ ಬಾಧ್ಯತೆಗೆ ಕಟ್ಟು ಬಿದ್ದಯೊ ಮಾನ್ಯತೆಗಾಗಿ ಚರಮರಾಗವನ್ನು ಗುನುಗಿ ಹೋಗಿ ಬಿಟ್ಟಯಾ ಗುರುವೇ. ============================. ಪರಿಚಯ: ಕಳೆದ ಇಪ್ಪತ್ತೇಳು ವರುಷದಿಂದ ದಲಿತ ಚಳುವಳಿ ಹಾಗೂ ಅಲೆಮಾರಿ & ಅರೆ ಅಲೆಮಾರಿ ಮತ್ತು ಕೊಳಚೆ ನಿವಾಸಿಗಳ ಹಕ್ಕುಗಳ ಪರ ಕೆ ಕೆ ಎನ್ ಎಸ್ ಸಹಿತ ಅನೇಕ ಸಂಘಟನೆಗಳೊಂದಿಗೆ ಕೆಲಸ ಮಾಡುತ್ತ ಹಾಗೂ ಜಾತಿ ಸಮನ್ವಯಕ್ಕಾಗಿ ಸಾಮರಸ್ಯ ವೇದಿಕೆಯಲ್ಲಿ ಪಾಲ್ಗೊಂಡಿದ್ದಾರೆ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಪ್ರಮಿಳಾ ಎಸ್.ಪಿ. ಹಬ್ಬ ದೀಪಾವಳಿಯ ಸಡಗರಕ್ಕೆ ಮಗಳು ಮನೆಗೆ ಬಂದಂತೆ ಮೇಕೆಯೂ ಸಂತೆಗೆ ಬಂದಿತು. ಯಾರದ್ದೋ ಮನೆ ಸೇರಿ ರಾತ್ರಿ ಇಡೀ ಮಾವಿನ ಎಲೆ ತಿಂದು ನಗುತ್ತಿತ್ತು. ತುಂಬಿದ ಮೊಲೆಗಳು ಜೋತು ಬಿದ್ದಿದ್ದ ಕಂಡು ಆಡಿನ ಹಾಲು ಶ್ರೇಷ್ಟ ವಂತೆ ಎಂದೇ ನನ್ನೆದೆಯೊಳಗೆ. ಮಾವಿನ ಎಲೆ ಮೆಲುಕಿ ಮಲಗಿದ್ದ ಮೇಕೆ ಬೆಳಗಿನ ಜಾವಕ್ಕೆ ಹಾಲು ಕಕ್ಕಿತ್ತು. ಒಂದಾಡು ಮೂರು ಪಾಲಾಗಿ ನೇತಾಡುತ್ತಿದ್ದ ನೋಡಿ ಮನ ಹೋಳಾಗಿತ್ತು. ಮಹಾವೀರ ನ ನಾಡಲ್ಲಿ ಅಣ್ಣ ನ ವಚನ ನೆನೆದು.. ಮಗಳ ಊಟ ಮುಗಿಯಿತು. ಆಕಳಿಕೆ ಬಂತೆಂದು ನೆಪದಲ್ಲಿ ಕಣ್ಣ ನೀರು ಹೊರ ಹರಿಯಿತು.. ========== ಪರಿಚಯ: ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ವೃತ್ತಿಯಲ್ಲಿ ಶಿಕ್ಷಕಿ,ನೋವುಗಳ ನಡುವೆಯೂ ಖುಶಿಯಾಗಿರುವ ಬಯಸುವ ವ್ಯಕ್ತಿತ್ವ

ಕಾವ್ಯಯಾನ Read Post »

You cannot copy content of this page

Scroll to Top