ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮಕ್ಕಳ ಸಾಹಿತ್ಯ

ಆಯ್ಕೆ ಅವ್ಯಕ್ತ ನನ್ನಹೆಚ್ಚಿನ ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು) ಆಯ್ಕೆ ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ”, “ಇನ್ಯಾವತ್ತೂ ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ “ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ ! ನಾನುಸ್ವರ ಸ್ವಲ್ಪ ಏರಿಸಿ, ಮೃದುವಾಗಿ ಹೇಳಿದೆ “ಸ್ಟಾಪ್!”. ಅವಳ ಕಣ್ಣಂಚಲ್ಲಿ ನೋವು ಸಿಟ್ಟು ಎರಡೂ ಸೇರಿ ಕಣ್ಣೀರು ಬರದಷ್ಟು ನಿರಾಸೆ ನನಗೆ ಭಾಸವಾಗಿತ್ತು! ಮೆಲ್ಲನೆ ನಾನೇ ಹತ್ತಿರ ಹೋಗಿ ಮುದ್ದಾಗಿ ತಲೆಸವರಿ ಕೇಳಿದೆ. “ಸರೀ…ಅವರು ಎಷ್ಟು ಸಾರಿ ನಿನ್ನ ನೋಡಿ ನಕ್ಕರು? ಎಷ್ಟು ಸಾರಿಛೇಡ್ಸಿದ್ರು?”ಸಿಟ್ಟಿನಲ್ಲಿ “ಒಂದು ಸಾರಿ ಅಲ್ಲ ಎರಡು ಅಲ್ಲ ಮೂರು ಅಲ್ಲ…” ಲೆಕ್ಕ ಮಾಡಲು ಶುರುಮಾಡಿದಳು.“10 ಬಾರಿ”ಎನ್ನುವಷ್ಟರಲ್ಲಿ ಸ್ವಲ್ಪ ಶಾಂತಿ ತುಂಬಿತ್ತು ಅವಳ್ಮನ್ಸಲ್ಲಿ. ನಾನು ಸುಮ್ಮ್ನೆ“ಈಗ ನಿನ್ನ ಮನಸ್ಸಲ್ಲಿ ಅದೇ ವಿಷಯ ಎಷ್ಟು ಬಾರಿ ನೆನೆಸಿಕೊಂಡು ಸಿಟ್ ಮಾಡ್ಕೊಂಡೆ?” ಅಂತ ಕೇಳ್ದೆ. ಯೋಚಿಸಿ ಅಳೆದು ಸುರಿದು ಲೆಕ್ಕ ಮಾಡಿ ಅವರು ಇವರು ಕಥೆ ಹೇಳ್ತಾ ಕೊನೆಗೆ 25 ಎಂದ್ಲು. ನಾನು ೨೫+೧೦+೨ಬಾರಿನನ್ಹತ್ರ,ಒಟ್ಟು ೩೭ ಬಾರಿ…ಈಗ ಹೇಳು “ನಿನ್ನನ್ನು ಹೆಚ್ಚು ನೋವಿಸಿದ್ದು ಯಾರು ಬಂಗಾರಿ?” ಸ್ವಲ್ಪ ಹೊತ್ತು ಸುಮ್ಮನೇ ನಿಂತು ಮತ್ತೆ ನಾಚಿಕೆಯಿಂದ“ನಾಆಆಆನೇಏಏಏಏಎಂದು ಹೇಳಿ ನಕ್ಕುಬಿಟ್ಟಳು. ನಾನು ಎಲ್ಲರ ಕಡೆ ತಿರುಗಿ ಹೇಳಿದೆ.. “ಸಂತೋಷವಾಗಿರುವುದು ನಮ್ಮ ಆಯ್ಕೆ ಯಾಗಿರಲಿ…, ಕ್ಷಮಿಸಿಬಿಡಿ… ಆದರೆ,ನೋವುತಂದಅನುಭವ ಮರೆಯದಿರಿ!” ==================================== ಪರಿಚಯ: ವಿದ್ಯಾಭ್ಯಾಸ: ಎಂ.ಎಸ್ಸಿ.(ರಸಾಯನಶಾಸ್ತ್ರ) ಬಿ.ಎಡ್, ವೃತ್ತಿ: MAGMA COACHING ZONE ನನಡೆಸುತ್ತಿದ್ದೇನೆ. (ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾಡಿರುವಂತಹ ತಾಣ)ಹವ್ಯಾಸಗಳು: ಬರೆಯೋದು, ಪ್ರಕೃತಿಗೆ ಹತ್ತಿರವಾಗುವಂಥ ತಾಣಗಳಿಗೆ ಹೋಗುವುದು, ಹಾಡು ಕೇಳುವುದು, ಕರಕುಶಲ ಕೆಲಸಗಳನ್ನು ಮಾಡುವುದು,ಇತ್ಯಾದಿ.

ಮಕ್ಕಳ ಸಾಹಿತ್ಯ Read Post »

ಅಂಕಣ ಸಂಗಾತಿ

ಕಾಡುವ ಹಾಡು!

ಒಲವೇ ಜೀವನ ಸಾಕ್ಷಾತ್ಕಾರ ಸುಜಾತ ರವೀಶ್ ಒಲವೇ ಜೀವನ ಸಾಕ್ಷಾತ್ಕಾರ ಒಲವೇ ಮರೆಯದ ಮಮಕಾರ ಚಿತ್ರ ಸಾಕ್ಷಾತ್ಕಾರ (೧೯೭೧) ಅಭಿನಯ ರಾಜಕುಮಾರ್ ಜಮುನಾ ಪೃಥ್ವಿರಾಜ್ ಕಪೂರ್ ಸಾಹಿತ್ಯ ಕೆ ಪ್ರಭಾಕರ ಶಾಸ್ತ್ರಿ ಸಂಗೀತ ಎಂ ರಂಗರಾವ್ . ಚಿತ್ರದ ನಾಯಕ ನಾಯಕಿ ಇನ್ನೇನು ಮದುವೆಯಾಗಲಿರುವವರು. ಅವರ ಮನದ ತುಂಬಾ ಪ್ರೀತಿಯ ಕನಸು ತುಂಬಿರುತ್ತದೆ. ಕಂಡದ್ದೆಲ್ಲ ಪ್ರೇಮದ ಪ್ರತಿರೂಪ ಆಗಿರುತ್ತದೆ .ಅಂತಹ ಸಂದರ್ಭದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು ಕನ್ನಡದ ಚಿತ್ರ ರಸಿಕರ ಮನಸೂರೆಗೊಂಡಿದ್ದು ಆಶ್ಚರ್ಯವಲ್ಲ. ಪ್ರೇಮಿಗಳ ಪಾಲಿನ ಅಮರ ಗೀತೆಯಾಗಿಯೂ ಬಿಟ್ಟಿದೆ . ಪ್ರಕೃತಿಯ ವಿವಿಧ ಬಗೆಗಳಲ್ಲಿ ಒಲವಿನ ಸಾಕ್ಷಾತ್ಕಾರವನ್ನು ಕಾಣುತ್ತಾರೆ ಧುಮ್ಮಿಕ್ಕಿ ಹರಿಯುವ ಜಲಪಾತ ದುಂಬಿಯ ಹಾಡಿನ ಝೇಂಕಾರ ಘಮ್ಮನೆ ಹೊಮ್ಮುವ ಹೊಸ ಹೂವಿನ ಪರಿಮಳ ಎಲ್ಲದರಲ್ಲೂ ಒಲವೇ ಒಲವು .ಆದಿ ಹಾಗೂ ಅಂತ್ಯ ಪ್ರಾಸಗಳನ್ನು ಹೊಂದಿರುವ ಮೊದಲ ಮೂರು ಸಾಲುಗಳ ಮಾಧುರ್ಯವನ್ನು ಸವಿಯಲೇಬೇಕು. ಮುಂದೆ ವಸಂತನ ಕೋಗಿಲೆಯ ಇಂಚರ ಗಾಂಧಾರ ಭಾಷೆಯಲ್ಲಿ ಹಾಡುತ್ತಿರುವ ಹಕ್ಕಿಗಳ ಕಲರವ ಮತ್ತು ಮಲೆನಾಡಿನ ನಿಸರ್ಗ ಸೌಂದರ್ಯದಲ್ಲಿ ಪ್ರೇಮವನ್ನು ಕಾಣುತ್ತಾರೆ .ಎಲ್ಲಕ್ಕಿಂತ ಪ್ರಿಯವಾದದ್ದು ಕಡೆಯ ಪ್ಯಾರ. ಆಗ ಆಕಾಶವಾಣಿಯಲ್ಲಿ ಈ ಪ್ಯಾರಾವನ್ನು ಕತ್ತರಿಸಿ ಹಾಕುತ್ತಿದ್ದರು .ಹಾಗಾಗಿ ಈ ಸಾಲುಗಳು ಅಪರೂಪವೇ . ಒಲವಿನ ಪೂಜೆಗೆ ಒಲವೇ ಮಂದಾರ ಒಲವೇ ಬದುಕಿನ ಬಂಗಾರ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ . ಈ ಸಾಲುಗಳು ಗೀತೆಗೆ ದೈವೀಕತೆಯನ್ನು ಒದಗಿಸಿ ಕೊಟ್ಟಿದೆ ಎಂದರೆ ತಪ್ಪಾಗಲಾರದು .ಉತ್ತಮ ಸಾಹಿತ್ಯ ಸಂಗೀತ ಇರುವ ಯಾವುದೇ ಗೀತೆ ಕನ್ನಡ ಜನರನ್ನು ಸೆಳೆಯುತ್ತಿದೆ ಎನ್ನುವುದಕ್ಕೆ ಇದು ಒಂದು ಉದಾಹರಣೆ. ಪಿಬಿ ಶ್ರೀನಿವಾಸ್ ಹಾಗೂ ಪಿ ಸುಶೀಲಾ ಅವರ ಮಧುರ ಕಂಠದಲ್ಲಿ ಹೊಮ್ಮಿರುವ ಈ ಸುಂದರ ಗೀತೆ ಎಷ್ಟು ಕೇಳಿದರೂ ತೃಪ್ತಿಯಾಗುವುದಿಲ್ಲ .ಮುಂಚೆ ಬರೀ ರೇಡಿಯೋ ಆಕಾಶವಾಣಿಯಲ್ಲಿ ಕೇಳಿ ನಂತರ ಧ್ವನಿ ಸುರುಳಿಗಳಲ್ಲಿ ತದನಂತರ ಸಿಡಿಗಳಲ್ಲಿ ಹಾಗೂ ಈಗ ಮೊಬೈಲ್ನಲ್ಲಿ ಸೇವ್ ಆಗಿರುವ ನನ್ನ ಅಚ್ಚುಮೆಚ್ಚಿನ ಗೀತೆ ಇದು .ನಮ್ಮ ಹಳೆಯ ಚಿತ್ರಗೀತೆಗಳ ಸೊಗಡೇ ಹಾಗೆ ಚಿನ್ನದ ಮಲ್ಲಿಗೆಗೆ ಪರಿಮಳ ಬೆರೆಸಿದ ಹಾಗೆ .

ಕಾಡುವ ಹಾಡು! Read Post »

ಕಾವ್ಯಯಾನ

ಕಾವ್ಯಯಾನ

ಬದುಕೆಂಬ ವಂಚಕ! ಸೌಜನ್ಯ ದತ್ತರಾಜ ಪರಿಚಿತರಾಗುತ್ತಾ ಆಗುತ್ತಾ ಪರಕೀಯತೆಯ ಭಾವವೇ ಹೆಚ್ಚಾಗಿ ಆಗೀಗ ಪೆಚ್ಚಾಗಿ ಕಾಡುತಿದೆ ಹತ್ತಿರವಾದಷ್ಟೂ ಒಬ್ಬರನೊಬ್ಬರು ದೂರುತ್ತಲೇ ದೂರವಾಗುತ್ತಿರುವ ವಿಪರ್ಯಾಸ ವಿಚಲಿತರನ್ನಾಗಿಸುತಿದೆ ಏಕೆ…. ಏನಾಯ್ತು……ಹೇಗಾಯ್ತು ಪ್ರಶ್ನಿಸಿಕೊಳ್ಳಲೇ ಭಯವಾಗುತ್ತಿದೆ ಅನುಮಾನದ ಹೆಡೆಯೊಂದು ಸದ್ದಿಲ್ಲದೆ ಆಗಾಗ ತಲೆಯೆತ್ತುತಿದೆ ಆಡಬಾರದ ಹೇಳಬಾರದ ಮಾತುಗಳನೆಲ್ಲಾ ಆಡುವ ಬಾಯಿ ಇತ್ತೀಚೆಗೆ ಇಬ್ಬದಿಯಲೂ ಬಿಗಿಯುವ ಇಕ್ಕಳದಂತಾಗಿದೆ ಇರಿಯುತ್ತಲಿದೆ ಮನದಲೊಂದು ಮುಗಿಯದ ಭಾವ ಹೊಂದಾಣಿಕೆ ಆಗದ ಸ್ವಭಾವ ಒಗ್ಗಿಕೊಳ್ಳಲಾರದೆ ಒದ್ದಾಡುತಿರುವ ಜೀವ ಪ್ರೀತಿ ಸ್ನೇಹಗಳ ಹೆಸರಲ್ಲಿ ಪ್ರತಿದಿನವೂ ನಡೆಯುತಿವೆ ಹೊಸ ಹೊಸ ನಾಟಕ ಗೆಲ್ಲುವುದು ಕಡೆಗೆ ಅದೇ………….ಬದುಕೆಂಬ ವಂಚಕ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಮ್ಮಳಗೊಬ್ಬ ಸಂತೆಬೆನ್ನೂರು ಫೈಜ್ನಟ್ರಾಜ್ ಮನಸಲ್ಲಿ ಕೋಟಿ ಕೋಟಿ ಯುದ್ಧ  ಸಾಮಗ್ರಿಗಳನ್ನು ಹೊತ್ತು ಕಡಲ ದಡದಿ ನೆಮ್ಮದಿ ಹುಡುಕ್ತಿದ್ದ! * ಎದುರಿಗೇ ಎಲ್ಲಾ ಐತೆ ಏನೋ ಮಿಸ್ಸಾಗಿದೆ ಅಂತ ಎದ್ದು ನಡೆದ ಇದ್ದುದನ್ನ ಬಿಟ್ಟು! * ಕಣ್ಣೆದುರು ಇದ್ರೆ ಕಣ್ ಕೆಂಪು..ಉರಿ ಉರಿ ಮರೆಯಾದ್ರೆ ಕಳ್ಕಂಡೋರ ತರ ಅಂಡ್ ಸುಟ್ ಬೆಕ್ಕು! * ಹಾಡ್ತಾನೆ,ಕುಣಿತಾನೆ,ನಗ್ತಾನೆ,ಅಳ್ತನೆ ಎಲ್ಲಾ ಸರಿ ಮತ್ ಎದುರಿರೋ ಬಳಿ ಏನೈತ್ರಿ ಈ ಬಾಳ್ನಾಗೆ….ರಾಗ * ನಾಯಿ ಬಾಲ ನೇರ ಮಾಡಬಹುದಂತೆ ಹೆಂಗೋ ನಮ್ಮೊಳಗಿದ್ದಾನಲ್ಲಾ ಅವನ್ನ ಊಹ್ಞುಂ….ಗುಂಡ್ಕಲ್ಲದು!!

ಕಾವ್ಯಯಾನ Read Post »

ಅಂಕಣ ಸಂಗಾತಿ

ಶಾನಿಯ ಡೆಸ್ಕಿನಿಂದ…….

ನನ್ನ ಬಾಲ್ಯದ ದೀಪಾವಳಿ ಚಂದ್ರಾವತಿ ಬಡ್ಡಡ್ಕ ನನ್ನ ಪ್ರೀತಿಯ ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಆಶಯಗಳು. ತಮ್ಮೆಲ್ಲರ ಬದುಕಲ್ಲಿ ನೆಮ್ಮದಿ, ಸುಖ-ಸಂತೋಷ ಸಮೃದ್ಧಿಗಳು ದೀಪಗಳ ಆವಳಿಯಂತೆ ಬೆಳಗಲಿ.) ಒಂದು ತಿಂಗಳ ಮುಂಚಿತವಾಗಿ ಬಾಳೆ ರೆಂಬೆಗಳನ್ನು ಒಣಹಾಕುವಲ್ಲಿಂದ ಆರಂಭವಾಗುತ್ತಿತ್ತು ದೀಪಾವಳಿ ತಯ್ಯಾರಿ. ಅದಾದ ಬಳಿಕ ಕಾಡುಮೇಡು ಅಲೆದು ಎಲ್ಲಿ ಯಾವ ಹೂವು ಅರಳಿದೆ, ಹೂವಿನಂದದ ಬಳ್ಳಿ ಹೊರಳಿದೆ ಎಂಬ ಹುಡುಕಾಟ. ಇವೆಲ್ಲವನ್ನು ಮನಸ್ಸಿನಲ್ಲೇ ಗಟ್ಟಿ ಮಾಡಿಕೊಂಡು ಬಲಿಯೇಂದ್ರನನ್ನು ಹೇಗೆ ಸಿಂಗಾರಮಾಡಬೇಕು ಎಂಬ ವಾದ-ವಿವಾದ, ವಾಗ್ವಾದೊಂದಿಗೆ ಆಗಿನ ನಮ್ಮ ಬಹುದೊಡ್ಡ ಆಚರಣೆಯ ದೀಪಾವಳಿ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಕೃಷಿಕ ಕುಟುಂಬದ ನಮಗಾಗ ಹಬ್ಬ ಅಂದರೆ ಅದು ದೀಪಾವಳಿ. ಕಾಡಿನಿಂದ ಹಾಲೆಮರವನ್ನು (ಇದನ್ನು ನಾವು ಬಲಿಯೇಂದ್ರ ಮರವೆಂದೇ ಹೇಳುವುದು) ದೀಪಾವಳಿ ಅಮವಾಸ್ಯೆಯಂದು ಬೆಳಗ್ಗೆ ಅಪ್ಪ ಕಡಿದು ತರುತ್ತಿದ್ದರು. ಅಂದು ರಾತ್ರಿ ಮರವನ್ನು ಮನೆಯೆದುರು ಅಂಗಳದಲ್ಲಿ ತುಳಸಿ ಕಟ್ಟೆಯ ಪಕ್ಕ ನೆಟ್ಟು ಪ್ರತಿಷ್ಠಾಪಿಸುವಲ್ಲಿಂದ ನಮ್ಮ ಹಬ್ಬ ಶುರು. ಈ ಮರವೇ ನಮ್ಮನಮ್ಮಗಳ ಶಕ್ತ್ಯಾನುಸಾರ, ಚಾಕಚಕ್ಯತೆಗನುಗುಣವಾಗಿ ಶೃಂಗಾರಗೊಂಡು ಬಲಿಯೇಂದ್ರನಾಗಿ ನಮ್ಮ ಮನೆ-ಮನದಂಗಳದಲ್ಲಿ ಹಬ್ಬದ ಮೂರ್ನಾಲ್ಕು ದಿನ ರಾರಾಜಿಸುತ್ತಿದ್ದುದು. ಕೆಲವು ಮನೆಗಳಲ್ಲಿ ಒಂಟಿ ಮರದ ಬಲಿಯೇಂದ್ರ. ಆದರೆ ನಮ್ಮದು ಜೋಡಿಮರಗಳ ಬಲಿಯೇಂದ್ರ. ಪುಟ್ಟದಾದ ಮರ (ಕೊಂಬೆ) ಒಂದು ದನದಹಟ್ಟಿಯ ಎದುರು. ಅದೇ ಗಾತ್ರದ ಇನ್ನೊಂದು ಮರ ಗದ್ದೆಯಲ್ಲಿ. ನೆಡುವ ಮರಗಳ ಮೇಲ್ತುದಿಯಲ್ಲಿ ರೆಂಬೆ ಒಡೆದ ಕವಲುಗಳನ್ನು ಅಲ್ಲಿ ಹಣತೆ ಕುಳಿತುಕೊಳ್ಳುವಂತೆ ಚೆನ್ನಾಗಿ ಕತ್ತರಿಸಿಯೇ ತರಲಾಗುತ್ತಿತ್ತು. ಮರದಲ್ಲಿ ಹಬ್ಬದ ಎಲ್ಲ ದಿನಗಳೂ ದೀಪ ಇರಿಸುತ್ತಿದ್ದದು ರೂಢಿ. ಮನೆಗಳೆದುರು ಪ್ರತಿಷ್ಠಾಪನೆಗೊಳ್ಳುವ ಬಲಿಯೇಂದ್ರಗಳ ಸಿಂಗಾರದ ವಿಚಾರದಲ್ಲಿ ನಾವು ನೆರೆಹೊರೆಯ ಮಕ್ಕಳಲ್ಲಿ ಅಘೋಷಿತ ಸ್ಫರ್ಧೆ. ಎಲ್ಲ ಮನೆಗಳಲ್ಲೂ ಬಲಿಯೇಂದ್ರನ ಸಿಂಗಾರಕ್ಕಾಗೇ ಹೂ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದೆವು. ಮೇಲೆ ಹೇಳಿದ್ದೇನಲ್ಲಾ ಬಾಳೆಯ ರೆಂಬೆಗಳನ್ನು ಒಣಹಾಕುವ ವಿಚಾರ; ಇದ್ಯಾಕೆಂದರೆ, ಕಾಡಿನ, ಊರಿನ ಹೂವುಗಳನ್ನು ಅಂದವಾಗಿ ಪೋಣಿಸಲು ಹಗ್ಗ(ನಾರು) ತಯಾರಿಸಲು. ಹೀಗೆ ಒಣಗಿದ್ದ ರೆಂಬೆಯನ್ನು ಸಪೂರಕ್ಕೆ ಸೀಳಿ, ನೀರಿನಲ್ಲಿ ಅದ್ದಿ ದಟ್ಟವಾಗಿ ಬಣ್ಣಬಣ್ಣದ ವಿವಿಧ ಗಾತ್ರಗಳ ಹೂ ಮಾಲೆಕಟ್ಟಿ ಬಲಿಯೇಂದ್ರನಿಗೆ ಅರ್ಪಿಸುತ್ತಿದ್ದೆವು. ಅಪ್ಪನದ್ದು ಬೇರೆಯೇ ಟ್ರಿಕ್. ಬಾಳೆಯನ್ನು ಕಡಿದು ದಿಂಡಿನೊಳಗಿನ ಬಿಳಿಬಿಳಿ ಪದರಗಳನ್ನು (ನಾವಿದಕ್ಕೆ ಬಾಳೆರಂಬೆ ಅಂತೇವೆ) ತೆಗೆದು ಒಂದು ಭಾಗವನ್ನು ಹಲ್ಲುಹಲ್ಲಾಗಿ ಕತ್ತರಿಸಿ ಬಿದಿರನ್ನು ಸೀಳಿ ಮಾಡಿದ ಸಲಾಕೆಗಳ ಆಧಾರದೊಂದಿಗೆ ಎರಡೂ ಬಲಿಯೇಂದ್ರ ಮರಕ್ಕೆ ಜೋಡಿಸಿ ಕಟ್ಟಿದಾಗ ಶ್ವೇತವರ್ಣದ ಅದರ ಗೆಟಪ್ಪೇ ಗೆಟಪ್ಪು. ಇದರ ಮೇಲೆ ಬಣ್ಣಬಣ್ಣದ ವಿವಿಧ ಪುಷ್ಪಗಳ ಮಾಲೆಗಳು ಕಂಗೊಳಿಸುತ್ತಿದ್ದವು ನೋಡಿ, ಪಕ್ಕದ ಮನೆಯ ಬಲಿಯೇಂದ್ರಗಳೆಲ್ಲ ನಮ್ಮ ಬಲಿಯೇಂದ್ರನೆದುರು ಸಪ್ಪೆಸಪ್ಪೆ. ಹಂದಿಬಳ್ಳಿ ಕಾಯಿ, ಕೇನೆ ಹೂವು,  ಕೋಳಿ ಜುಟ್ಟು, ಪಿಂಗಾರ(ಹೊಂಬಾಳೆ) ಹಬ್ಬಲ್ಲಿಗೆ, ಗೋರಟೆ, ದಾಸವಾಳ, ತೇರು ಹೂವು, ಚೆಂಡು ಹೂವು (ಇವುಗಳೆಲ್ಲ ಕಾಡಿನಲ್ಲಿ ಬೆಳೆಯುವ, ಊರಲ್ಲಿ ಬೆಳೆಸುವ ಸುಂದರ ಪುಷ್ಪಗಳು. ಇವುಗಳ ವೈಜ್ಞಾನಿಕ ಹೆಸರು ಗೊತ್ತಿಲ್ಲ, ಕ್ಷಮಿಸಿ)ಎಲ್ಲದರ ಮಾಲೆಯೊಂದಿಗೆ ಬಲಿಯೇಂದ್ರ ಜಿಗಿಜಿಗಿಯೊಂದಿಗೆ ಘಮಘಮ! ಬಲಿಯೇಂದ್ರನಿಗೆ ಪ್ರಭಾವಳಿಯನ್ನೂ ಇರಿಸುತ್ತಿದ್ದೆವು. ಅದು ನಮ್ಮ ಭಾಷೆಯಲ್ಲಿ ಪರ್ಬಾಳೆ ಆಗಿತ್ತು. ಬೆತ್ತದಲ್ಲಿ ನೇಯ್ದಿರುವ ಯು ಶೇಪಿನ ಪರ್ಮನೆಂಟ್ ಪ್ರಭಾವಳಿಯದು. ಹಬ್ಬವೆಲ್ಲ ಮುಗಿದು ಬಲಿಯೇಂದ್ರನ ವಿಸರ್ಜನೆಯ ವೇಳೆಗೆ ತಲೆಯಾಗಿದ್ದ ಪ್ರಭಾವಳಿಯನ್ನು ಮಾತ್ರ ಎತ್ತಿಟ್ಟು ಜೋಪಾನ ಮಾಡುತ್ತಿದ್ದೆವು. ತಲೆಯ ಭಾಗಕ್ಕೆ ಮಾತ್ರ ಹಳದಿ ಕೇಸರಿ ಮುಂತಾದ ವಿವಿಧ ಬಣ್ಣಗಳ ಚೆಂಡು(ಗೊಂಡೆ) ಹೂವು. ಇಷ್ಟು ಜತನದಿಂದ ಸಿಂಗರಿಸಿದ ಬಲಿಯೇಂದ್ರ ಬಿಸಿಲು-ಮಳೆಗೆ ನರಳಿದರೆ ನಮ್ಮ ಕರುಳು ಚುಳ್ ಎನ್ನುವುದಿಲ್ಲವೇ? ಈ ಕಾರಣಕ್ಕೂ ಮತ್ತು ಬಲಿಯೇಂದ್ರನ ಅಂದವನ್ನು ಹೆಚ್ಚಿಸಲೂ ಅರಳಿಸಿದ ಕೊಡೆಯ ಕಡ್ಡಿಗಳ ತುತ್ತತುದಿಯಲ್ಲಿ ತಾಜಾತಾಜಾ ಕೆಂಪಡಿಕೆಯನ್ನು ನೂಲಿನಲ್ಲಿ ಸುರಿದು ಕಟ್ಟಿ ಹ್ಯಾಂಗಿಂಗ್ ಥರ ಇಳಿಬಿಡುತ್ತಿದ್ದೆವು. ಆಹಾ….. ಇಂತಿಪ್ಪ ಬಲಿಯೇಂದ್ರನ ಸೌಂದರ್ಯವನ್ನು ತುಂಬಿಕೊಳ್ಳಲು ಆಗಿನ ಪುಟ್ಟ ಕಂಗಳು ಸಾಕಾಗುತ್ತಿರಲಿಲ್ಲ. (ಈಗವಾದರೆ ಕನ್ನಡಕವೂ ಸೇರ್ಪಡೆಗೊಂಡು ಕಣ್ಣು ನಾಲ್ಕಾಗಿದೆ, ಆದರೆ ಬಲಿಯೇಂದ್ರನಿಲ್ಲ!) ಅದೊಂದು ವರ್ಷ ಹೂವಿನ ಅಭಾವ ತೋರಿತ್ತು. ಆಗ ನಮ್ಮ ದೊಡ್ಡಕ್ಕನ ಐಡಿಯಾದಂತೆ ಬಣ್ಣದ ಕಾಗದವನ್ನು ಹೂವಿನ ಮಾಲೆಯಂತೆ ನೆರಿಗೆನೆರಿಗೆಯಾಗಿ ಹೊಲಿದು ಮಾಡಿದ್ದ ಸಿಂಗಾರ ನಮ್ಮೂರಲ್ಲಿ ಸೂಪರ್ ಹಿಟ್ ಆಗಿತ್ತು. ನಮ್ಮ ಬಲಿಯೇಂದ್ರನ ಸಿಂಗಾರ ಮುಗಿಸಿ ಪಕ್ಕದ ಸಿಂಗಮಾಮನ ಮನೆ ಬಲಿಯೇಂದ್ರನ ವೀಕ್ಷಣೆಗೆ ತೆರಳುತ್ತಿದ್ದೆವು. ಅವರ ಪುತ್ರ ಬೆಂಗಳೂರಿನಲ್ಲಿ ಇಂಜಿನೀಯರ್. ಆಗ ನಮಗೆ ಬೆಂಗಳೂರೆಂದರೆ ಅದು ಭಾರೀ ದೂರದ ದೇಶ. ಅವರು ಹಬ್ಬಕ್ಕೆಂದೇ ಸ್ಪೆಷಲ್ ಆಗಿ ಬರುವಾಗ ಪಟಾಕಿ, ತಿಂಡಿ ತಿನಿಸುಗಳನ್ನು ಖಡ್ಡಾಯ ತರುತ್ತಿದ್ದರು. ಗೆಳತಿ ಕುಮ್ಮಿ (ಅವರ ತಂಗಿ, ನನ್ನ ಜೀವನದ ಪ್ರಪ್ರಥಮ ದೋಸ್ತಿ) ಬೇರೆ ಅಣ್ಣ ನೂ……..ರು ರೂಪಾಯಿ ಪಟಾಕಿ ತಂದಿದ್ದಾರೆ ಎಂದಾಗ ಆಸೆ ಚಿಗುರದಿರುತ್ತದಾ? ನಮ್ಮಮನೆಯಲ್ಲೋ, ಅಪ್ಪ ಒಂದು ಬಾರಿ ಕಣ್ಣು ಕೆಕ್ಕರಿಸಿದರೆಂದರೆ ನಮ್ಮ ಪಟಾಕಿ(ಬೇಡಿಕೆಯ) ಸದ್ದು ಅಲ್ಲೇ ಅಡಗುತ್ತಿತ್ತು. ಅದು ಹೇಗೋ ಸಿಂಗತ್ತೆಗೆ ನನ್ನ ಪಟಾಕಿ ಆಸೆ ಗೊತ್ತಾಗಿ ಅವರ ಶಿಫಾರಸ್ಸಿನ ಮೇಲೆ ನಂಗೊಂದಿಷ್ಟು ಪಟಾಕಿ, ಒಂದು ಪ್ಯಾಕ್ ನಕ್ಷತ್ರ ಕಡ್ಡಿ ಸಿಗುತ್ತಿತ್ತು. ಆದರೆ ನನ್ನ ಗಾಯತ್ರಕ್ಕಳಿಗೆ ಮಾತ್ರ ನಮ್ಮ ಅಂಗಳದಿಂದಲೂ ಪಟಾಕಿ ಸದ್ದು ಸಿಡಿಯಬೇಕೆಂಬ ಆಸೆ. (ಈಗ ಯಾರಾದರೂ ಅವಳ ಬಳಿ ಹಬ್ಬಕ್ಕೆ ಪಟಾಕಿ ತಗೊಂಡ್ರಾ ಅಂದ್ರೆ; ಇಲ್ಲ, ನಮ್ಮ ಮನೆಯಲ್ಲಿ ತಂಗಿ ಇದ್ದಾಳೆ ಅಂತಾಳೆ) ಅದಕ್ಕಾಗಿ ನಾವು ನಾಡ ಪಟಾಕಿ ತಯ್ಯಾರಿಸುತ್ತಿದ್ದೆವು. ನಾವು ಮಾತ್ರವಲ್ಲ, ನಮ್ಮ ಮನೆಯ ಉತ್ತರಕ್ಕಿದ್ದ ವೆಂಕಪ್ಪಣ್ಣನ ಮನೆ, ಎದುರಿಗಿದ್ದ ಚಿಕ್ಕಪ್ಪನ ಮನೆ, ಆಚೆಗಿದ್ದ ಮಾಲಿಂಗಣ್ಣ- ಎಲ್ಲರ ಮನೆಯಲ್ಲೂ ಇದೇ ಪಟಾಕಿ. ಚೆನ್ನಾಗಿ ಬೆಳೆದ ಹಸಿ ಬಿದಿರಿನ ಒಳಗಿನ ಗಂಟುಗಳನ್ನು ಹಾರಿಸಿ, ಎರಡೂ ಬದಿ ಬಂದ್ ಇರಿಸಿ ಮೇಲೆ ಒಂದು ಕಡೆಯಲ್ಲಿ ತೂತು ಮಾಡಿ ಅದರ ಒಳಭಾಗಕ್ಕೆ ಸೀಮೆ ಎಣ್ಣೆ ಚಿಮುಕಿಸಿ ಬೆಂಕಿ ತೋರಿಸುವ ಮೂಲಕ ಚೆನ್ನಾಗಿ ಬಿಸಿ ಮಾಡಬೇಕು. ಬಿದಿರು ಕಾದ ಬಳಿಕ ಸಣ್ಣದಾಗಿ ಮೇಲ್ಮುಖವಾಗಿ ಮಾಡಿದ ತೂತಿನಲ್ಲಿ ಚೆನ್ನಾಗಿ ಊದಿ, ಒತ್ತಡ ತುಂಬಿ ಬೆಂಕಿಯ ಜ್ವಾಲೆಯನ್ನು ಹಾಯಿಸಿದರೆ ಭಯಂಕರ ಸದ್ದು ಹೊರಡುತ್ತಿತ್ತು. (ನಿಮ್ಮ ಈಗಿನ ಮಾಲೆ ಪಟಾಕಿಗಿಂತ ಒಳ್ಳೆಯ ಶಬ್ದವೇ ಹೊರಡುತ್ತಿತ್ತು) ಪಟಾಕಿ ಸದ್ದಿನೊಂದಿಗೆ ವಿವಿಧ ಮನೆಗಳಲ್ಲಿ ಬಿದಿರನ್ನು ಊದುವ ಶಬ್ದವೂ ಅನುರಣಿಸುತ್ತಿತ್ತು. ಇದರಲ್ಲೂ ಕಾಂಪಿಟೇಶನ್. ಬಿದಿರು ಊದಿದವರ ಪುಪ್ಪುಸದ ಕಥೆ ಬಲಿಯೇಂದ್ರನಿಗೇ ಪ್ರೀತಿ. ಮರುದಿನದ ಕಿವಿನೋವು ಹಬ್ಬದ ಸಡಗರದಲ್ಲಿ ಲೆಕ್ಕಕ್ಕೇ ಇರುತ್ತಿರಲಿಲ್ಲ. ಮುಸ್ಸಂಜೆ ಕಳೆದು ಕತ್ತಲಾಗುತ್ತಿರುವಂತೆ ಬಲಿಯೇಂದ್ರ ಕೂಗುವುದು ಇನ್ನೊಂದು ಸಂಭ್ರಮ. ಅದೇನು ಕಟ್ಟುಕಟ್ಟಳೆಯ ಶಬ್ದಗಳೋ ಅಂತು ಕೊನೆಯಲ್ಲಿ ‘ಹರಿಯೇ ಸಿರಿಯೇ ಕೂ….’ ಎಂಬುದು ಮಾತ್ರ ಸರಿಯಾಗಿ ಅರ್ಥವಾಗುತ್ತಿತ್ತು. ಒಟ್ಟಿನಲ್ಲಿ ಅದರ ತಾತ್ಪರ್ಯವೆಂದರೆ, ಕೆಟ್ಟದನ್ನು ಕೊಂಡೊಯ್ದು ಸಿರಿಯನ್ನು ತಾ ಎಂಬುದು ಬಲಿಯೇಂದ್ರನೊಡನೆ ಅರಿಕೆ. ಅರಿಕೆ ಮಾಡಿಕೊಳ್ಳುವುದು ಯಜಮಾನನ ಕರ್ತವ್ಯವಾದರೆ, ಕೊನೆಯಲ್ಲಿ ಕೂ…. ಎಂಬುದು ಮಾತ್ರ ಮನೆಯವರೆಲ್ಲರ ಕೋರಸ್. ಇದರಲ್ಲೂ ಯಾವ ಮನೆಯ ಕೂ….. ಎಂಬ ಕೂಗು(ಕಿರುಚು) ಹೆಚ್ಚು ಶಕ್ತಿಶಾಲಿ ಎಂಬ ಬಹುಮಾನರಹಿತ ಸ್ಫರ್ಧೆ. ಬಲಿಯೇಂದ್ರನ ಬಳಿ ಅರಿಕೆ ಮಾಡಿದ ಬಳಿಕ ಮನೆಯವರೆಲ್ಲರೂ ಸಾಲಾಗಿ ನಿಂತು ಪ್ರತಿಷ್ಠಾಪಿತ ಬಲಿಯೇಂದ್ರನಿಗೆ ಅವಲಕ್ಕಿ ಎರಚಿ ಅಥವಾ ಚಿಮ್ಮಿ ಪ್ರಾರ್ಥಿಸುವುದು ಕ್ರಮ. ನಾನಾಗ ನಾಲ್ಕೋ ಇಲ್ಲ ಐದರ ಹರೆಯದವಳು. ಅಪ್ಪ ಎಲ್ಲರ ಕೈಗೆ ಅವಲಕ್ಕಿ ಕೊಟ್ಟಿದ್ದರು. ಆಗೀಗ ನಮ್ಮಲ್ಲಿ ಅಗತ್ಯ ತೋಟದ ಕೆಲಸವೇನಾದರೂ ಇದ್ದರೆ ಬಂದು ಸಹಕರಿಸುತ್ತಿದ್ದ, ನೆರೆಮನೆಯ ಮೇಸ್ತ್ರಿ ಚೋಮಣ್ಣ ವಿಶೇಷ ಆಹ್ವಾನಿತರಾಗಿದ್ದರು. ಅಪ್ಪ ಅವರೊಂದಿಗೆ ಕಟ್ಟುಪಾಡಿನ ಮಾತುಗಳನ್ನು ಹೇಳುತ್ತಾ ಬಲಿಯೇಂದ್ರನಿಗೆ ಅರಿಕೆ ಮಾಡುತ್ತಿದ್ದರು. ಚೋಮಣ್ಣ ‘ಆಂ, ಹೌದೌದು, ಸರಿ’ ಎಂದೆಲ್ಲ ಹೇಳುತ್ತಾ ಅಪ್ಪನಿಗೆ ಸಾಥ್ ನೀಡುತ್ತಿದ್ದರು. ನಾನು ಆ ಸಮಯವನ್ನು ವ್ಯರ್ಥ ಮಾಡುವುದೇಕೆ ಎಂಬ ಉದ್ದೇಶದಿಂದಲೋ, ಅಥವಾ ಅದನ್ನು ತಿನ್ನಲು ಕೊಟ್ಟಿದ್ದಾರೆಂದೋ, ಸದ್ದಿಲ್ಲದೆ ಕೈಯಲ್ಲಿದ್ದ ಅವಲಕ್ಕಿಯನ್ನು ಮೆದ್ದಿದ್ದೆ. (ಅದು ಮನೆಯಲ್ಲೇ ಅಮ್ಮ ಕುಟ್ಟಿ ಮಾಡುತ್ತಿದ್ದ ರುಚಿಯಾದ ಅವಲಕ್ಕಿ) ಕೊನೆಯಲ್ಲಿ ಕೂ…. ಹೇಳುವ ವೇಳೆಗೆ ಎರಚಲು ನನ್ನ ಕೈಯಲ್ಲಿ ಅವಲಕ್ಕಿ ಇಲ್ಲದೆ, ಇಂಗು(ಅವಲಕ್ಕಿ)ತಿಂದ ಮಂಗಿಯಾಗಿದ್ದೆ. ಇನ್ನೊಂದು ಘಟನೆಯನ್ನೂ ಹೇಳಲೇ ಬೇಕು. ಮೂರು ದಿವಸ ಶೃಂಗಾರ ಪೂಜೆ ಎಲ್ಲ ಆದ ಮೇಲೆ ಕೊನೆಯ ದಿವಸ ಮುಂಜಾನೆಯೇ ಬಲಿಯೇಂದ್ರನ ವಿಸರ್ಜನೆ. ಅಂದರೆ ಮನೆಯ ಮುಂದೆ ರಾರಾಜಿಸುತ್ತಿದ್ದ ಜೋಡಿಮರವನ್ನು ಶೃಂಗಾರ ಸಮೇತ ಕಿತ್ತು ಹರಿಯುವ ನೀರಿನ ಬಳಿಯಲ್ಲಿ ಇರಿಸಲಾಗುತ್ತದೆ. ನಮ್ಮ ಬಲಿಯೇಂದ್ರನನ್ನು ಕೆಳಗಿನ ತೋಟದಲ್ಲಿ ಹರಿಯುವ ತೊರೆಯ ಬದಿಯಲ್ಲಿ ಇರಿಸುವುದು ವಾಡಿಕೆ. ಮೂರು ದಿವಸಗಳ ಕಾಲ ಬಲಿಯೇಂದ್ರನೇ ಸರ್ವಸ್ವವಾಗಿದ್ದು, ಅವಿನಾಭಾವ ನಂಟು ಉಂಟಾಗಿರುತ್ತಿದ್ದ ನನಗೆ ಬಲಿಯೇಂದ್ರನನ್ನು ಅಗಲುವುದು ಬಹಳ ಕಷ್ಟಕರ ವಿಚಾರವಾಗಿತ್ತು. ಬಲಿಯೇಂದ್ರ ವಿಸರ್ಜನೆಯ ಮಾತುಕತೆ ನಡೆಯುತ್ತಿದ್ದ ವೇಳೆ, ನಾನು ಅಪ್ಪನನ್ನು ಬಲಿಯೇಂದ್ರ ವಿಸರ್ಜನೆ ಬೇಡವೇ ಬೇಡವೆಂಬ ಹಠದೊಂದಿಗೆ ವಿನಂತಿಸಿಕೊಂಡಿದ್ದೆ. ಆ ಕ್ಷಣಕ್ಕೆ ‘ಆಯ್ತು ಮಗಾ, ಈಗ ನಿದ್ದೆ ಮಾಡು’ ಎಂದು ಸಮಾಧಾನಿಸಿದ್ದರು. ಆದರೆ, ಅದೇನೋ ಸಿಕ್‌ಸ್ತ್ ಸೆನ್ಸ್ ಇರಬೇಕು. ಮರುದಿನ ನಸುಕಿನಲ್ಲಿ ಎಚ್ಚರವಾಗಿತ್ತು. (ಇಲ್ಲವಾದರೆ ನಾನು ಕುಂಭಕರ್ಣಿ) ಎದ್ದ ತಕ್ಷಣ ಆಗ ನೇರ ಬಲಿಯೇಂದ್ರನ ಬಳಿಸಾರಿಯೇ ಕಣ್ಣು ಬಿಡುತ್ತಿದ್ದದ್ದು. ಅಂದು ಎದ್ದು ನೋಡುತ್ತಿರಬೇಕಿದ್ದರೆ, ಅಪ್ಪ ಮರವನ್ನು ಕೀಳುತ್ತಿದ್ದಾರೆ. ಪುಟ್ಟ ಹೃದಯಕ್ಕೆ ಎಷ್ಟು ನೋವಾಯಿತೆಂದರೆ, ಅದನ್ನಿಲ್ಲಿ ಹೇಳಲಾಗುತ್ತಿಲ್ಲ. ಪ್ರತಿಭಟಿಸಿದೆ. ಊಹೂಂ… ಪರಿಣಾಮ ಸಾಲದಾಯಿತು. ಅಪ್ಪ ಅವರ ಪಾಡಿಗೆ ಬಲಿಯೇಂದ್ರನನ್ನು ಬೆನ್ನ ಮೇಲಿರಿಸಿ ಶೋಭಾಯಾತ್ರೆ(ಒಬ್ಬರೇ) ಹೊರಟರು. ನಾನೂ ಸದ್ದಿಲ್ಲದೆ ಕಣ್ಣಲ್ಲಿ ನೀರು ಸುರಿಸುತ್ತಾ ಅವರ ಹಿಂದೆಯೇ ನಡೆದಿದ್ದೆ. ತೊರೆಬದಿಯಲ್ಲಿ ಮರವಿಳಿಸಿ ಹಿಂತಿರುಗಿ ನೋಡುವ ವೇಳೆ ನಿಯಂತ್ರಿಸಲಾಗದ ದುಃಖ ಉಮ್ಮಳಿಸುತ್ತಾ, ಬಿಕ್ಕುತ್ತಾ ನಿಂತಿದ್ದ ನನ್ನನ್ನು ಅಪ್ಪ ಹೆಗಲ ಮೇಲೆ ಕೂರಿಸಿ ಕರೆತಂದಿದ್ದರು (ಅವರಿಗೂ ದುಃಖವಾದದ್ದು ತಿಳಿಯುತ್ತಿತ್ತು). ಈ ಕತೆ ನಮ್ಮ ಮನೆಯಲ್ಲಿ ಎವ್ವರ್ ಗ್ರೀನ್. ಪ್ರತೀ ದೀಪಾವಳಿ ವೇಳೆ ಒಬ್ಬರಿಲ್ಲವಾದರೆ ಒಬ್ಬರು ನೆಪಿಸಿಯೇ ಸಿದ್ಧ. ನನ್ನ ಮೋಡರ್ನ್ ಮಕ್ಕಳಿಗೆ(ಅಕ್ಕನ) ಅದೊಂದು ನಗೆ ಸರಕು. ಕಾಡಿಗೆ ತೆರಳಿ ಮರತರಲು ಅಪ್ಪನಿಲ್ಲ. ಅಣ್ಣನಿಗೆ ಇಂಟರೆಸ್ಟ್ ಇಲ್ಲ. ಭತ್ತದಗದ್ದೆ ಇದ್ದಲ್ಲಿ ಅಡಿಕೆ ತೋಟವಿದೆ. ಹಟ್ಟಿ ತುಂಬ ಇರುತ್ತಿದ್ದ ದನಗಳ ಸಂಖ್ಯೆ ಕಮ್ಮಿಯಾಗಿದೆ. ಇಚ್ಚೆಯಂತೆ ನಮಗೆ ಹಬ್ಬಕ್ಕೆ ತೆರಳಲಾಗುತ್ತಿಲ್ಲ. ಹಬ್ಬಬಂದಾಗೆಲ್ಲ ಆ ಸಂಭ್ರಮ, ಹರ್ಷೋತ್ಕರ್ಷದ ನೆನಪಿನ ಹೂವುಗಳು ಮನದೊಳಗೆ ಬಿರಿಯುತ್ತವೆ, ಮುದಗೊಳ್ಳುತ್ತೇನೆ. ==============================================

ಶಾನಿಯ ಡೆಸ್ಕಿನಿಂದ……. Read Post »

ಇತರೆ

ಭಾಷೆ

ಕನ್ನಡದ ಕಲಿಸುವಿಕೆಯ ಒಂದು ಅನುಭವ ದಾಕ್ಷಾಯಣಿ ನಾಗರಾಜ್            ಭಾಷೆಯೂ ಮಾನವನಿಗೆ ಒದಗಿಬಂದ ಅತ್ಯಾದ್ಭುತವಾದ ಶಕ್ತಿಯಾಗಿದೆ.ಅದನ್ನು ಬಳಸಿ ರೂಢಿಸಿಕೊಂಡು ಸಿದ್ದಿಸಿದರೆ ಅದು ಮಾಂತ್ರಿಕ ಶಕ್ತಿಯಾಗಿ ಪರಿವರ್ತಿನೆಯಾಗಿ ಅವನಿಗೆ ಜೀವಂತಿಕೆಯನ್ನು ತಂದುಕೊಡುತ್ತದೆ. ಭಾಷಾ ಕಲಿಕೆಯನ್ನು ಕಲಿಸುವ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ.          ಮಗುವಿನ ಸರ್ವತೋಮುಖ ಬೆಳೆವಣಿಗೆಯಲ್ಲಿ ಮಾತೃಭಾಷೆಯ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಬೇಕು.            ಮಗು,ಮನೆ ,ಪರಿಸರ ,ಕೌಟುಂಬಿಕ ಸದಸ್ಯರು, ಸಹಪಾಠಿಗಳು ಸಮಾಜದ ಇತರರೊಂದಿಗೆ ಎಳವೆಯಿಂದಲೇ ಹಲವಾರು ಭಾಷಿಕ ಸಾಮರ್ಥಗಳನ್ನು ಸ್ವಾಭಾವಿಕವಾಗಿ ರೂಢಿಸಿಕೊಂಡೇ ಶಾಲೆಗೆ ಬಂದಿರುತ್ತದೆ.                   ವಸ್ತುಗಳನ್ನು ಗುರುತಿಸುವ,ಗ್ರಹಿಸುವ,ಸಂಬಂಧಕಲ್ಪಿಸುವ,ನೆನಪಿಟ್ಟುಕೊಂಡು ಅರ್ಥೈಸುವ,ವಿಶ್ಲೇಷಿಸುವ,ಬಳಸುವ,ಹೊಂದಾಣಿಕೆ ಮಾಡುವ,ಕಲ್ಪಿಸುವ ಕಲ್ಪನೆಯಾಚೆಗೆ ಯೋಚಿಸುವ,ತನ್ನ ಅಗತ್ಯತೆಗೆ ತಕ್ಕಂತೆ ಬಳಸುವ ,ಹೋಲಿಕೆ ಮಾಡುವ, ವ್ಯತ್ಯಾಸೀಕರಿಸುವ,ಸಮಗ್ರವಾಗಿ ನೋಡಿ ಗ್ರಹಿಸುವ ,ದಿಕ್ಕು ಬಣ್ಣ ಗಾತ್ರ ಗುರುತಿಸುವ ಇನ್ನೂ ಮುಂತಾದ ಭಾಷಾ ಸಾಮರ್ಥಗಳನ್ನು ಮಾತೃಭಾಷೆಯಲ್ಲಿ ಸ್ವಾಭಾವಿಕವಾಗಿ ಕಲಿತಿರುತ್ತದೆ.ಆದ್ದರಿಂದ ಕನ್ನಡಭಾಷೆಯ ಕಲಿಕೆಯಿಂದಲೇ ಈ ಎಲ್ಲಾ ಸಾಮರ್ಥಗಳು ಹೊರತರಲು ಸಾಧ್ಯ.           ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಾನು ನನ್ನ ವೃತ್ತಿಯಲ್ಲಿ ಗಮನಿಸಿದ ಒಂದು ಅಂಶವೆಂದರೆ ಯಾವ ಮಗು ಕನ್ನಡ(ಮಾತೃಭಾಷೆ)ವನ್ನು ಸ್ಪಷ್ಟವಾಗಿ ಓದುತ್ತಾ,ತಪ್ಪಿಲ್ಲದಂತೆ ಬರೆಯುತ್ತದೆಯೋ ಆ ಮಗು ಇತರ ವಿಷಯಗಳ ಮತ್ತು ಭಾಷೆಗಳ ಕಲಿಕೆಯಲ್ಲಿ ಸಕಾರಾತ್ಮಕವಾಗಿರುತ್ತದೆ.ಒಬ್ಬ ಒಳ್ಳೆಯ ಕನ್ನಡ ಶಿಕ್ಷಕ ಮಗುವಿನಲ್ಲಿ ಓದುವ ರುಚಿಯನ್ನು,ಪ್ರಶ್ನೆ ಮಾಡುವ ಬಾಯಿಯನ್ನು,ಮತ್ತು ಸೃಜನಾತ್ಮಕತೆಯನ್ನು ಬೆಳೆಸಬಲ್ಲ.ನಮ್ಮ ಯೋಚನೆಯ ಲಹರಿ ಮೂಡುವುದು ಮಾತೃಭಾಷೆಯಲ್ಲಿ.ಆದ್ದರಿಂದ ಕನ್ನಡದ ಕಲಿಕೆಯೂ ಗುಣಮಟ್ಟದ್ದಾಗಿರಬೇಕು.           ನಮ್ಮ ಕರುನಾಡು ವಿಭಿನ್ನ ಕನ್ನಡಗಳ ಆಮೂಲ್ಯ ಸಂಗಮ.ಆ ನೆಲದ ಸೊಗಡಿನಂತೆ ಕನ್ನಡ ಅಲ್ಲಿನವರ ಜೀವನಾಡಿಯಾಗುತ್ತಾ ಹೋಗುತ್ತದೆ.         ನಾನು ವೃತ್ತಿಯ ಪ್ರಾರಂಭದ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಗಡಿನಾಡ ಒಂದು ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಅಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲೂ ಹರಸಾಹಸ ಪಡಬೇಕಾಯಿತು. ಕಾರಣವೆಂದರೆ ಅಲ್ಲಿ ಇಡೀ ಊರಿನ ತುಂಬಾ ಅವರ ಮಾತೃ ಭಾಷೆ ಮಠಾಠಿ ಆಗಿತ್ತು.ಕೆಲವೇ ಕುಟುಂಬಗಳ ಮಾತೃಭಾಷೆ ಮಾತ್ರ ಕನ್ನಡ‌.ಅಂಥಾ ಮಕ್ಕಳು ಮಾತ್ರ ನಮ್ಮ ಕನ್ನಡ ಶಾಲೆಗೆ ದಾಖಲಾಗುತ್ತಿದ್ದರು. ಅಲ್ಲಿ ಕೆಲಸ ನಿರ್ವಹಿಸಲು ಹೋದ ಶಿಕ್ಷಕರು ತಾವೇ ಮಠಾಠಿ ಕಲಿತು ಮಕ್ಕಳಿಗೆ ಕನ್ನಡ ಅರ್ಥ ಮಾಡಿಸಬೇಕಾದ ಪರಿಸ್ಥಿತಿ.      ಆದರೆ ನನಗೆ ಬರುತ್ತಿದ್ದು ಕನ್ನಡ ಮಾತ್ರ!        -ನಮ್ಮ ಮಕ್ಕಳಿಗೆ ಕನ್ನಡವನ್ನು ಕೇಳಿಸಿಕೊಳ್ಳುವ ಕೌಶಲ‌ ಗೊತ್ತಿದ್ದರೂ ಅದನ್ನು ಸಮರ್ಥವಾಗಿ ಬಳಸಲು ಗೊತ್ತಿರಲಿಲ್ಲ. ಅಂತಹ ವಾತಾವರಣದ ಕೊರತೆ ಕಂಡುಬರುತ್ತಿತ್ತು.        -ನಮ್ಮ ಮಕ್ಕಳಿಗೆ ಒಂದೆರಡು ವಾಕ್ಯಗಳ ಅರ್ಥ ಗೊತ್ತಿದರೂ,ಒಂದು ಇಡೀ ಪ್ಯಾರದ ಭಾವಾರ್ಥ ಅವರಿಗೆ ಆಗುತ್ತಿರಲಿಲ್ಲ.        -ಮಾತನಾಡಲು ಹಿಂಜರಿತ ಇರುವುದರ ಜೊತೆಗೆ ಕೆಲವರು ಮಾತನಾಡಿದರೂ ಬರೀ ತುಂಡು ವಾಕ್ಯಗಳನ್ನು ಮಾತನಾಡುತ್ತಿದ್ದರು.ಪೂರ್ತಿ ವಾಕ್ಯ ಬಳಸಲು ಗೊತ್ತಿರಲಿಲ್ಲ.       ಹಾಗಾಗಿ ಮಕ್ಕಳಿಗೆ ನಾನು ಹೊಸಶಿಕ್ಷಕಿಯಾಗಿದ್ದರಿಂದ ಮಾತನಾಡಿಸುವ ತವಕ ಬಹಳಷ್ಟು ಇದ್ದರು ಭಾಷೆ ಬರದೆ ಒದ್ದಾಡುತ್ತಿದ್ದವು. ನನ್ನ ಪರಿಸ್ಥಿತಿ ಅವರಿಗಿಂತ ಭಿನ್ನವಾಗಿರಲಿಲ್ಲ. ಪ್ರಾರಂಭದ ದಿನಗಳಲ್ಲಿ ನಾನು ಹೇಳಿದ ಮಾತುಗಳನ್ನು ನಮ್ಮ ಮುಖ್ಯ ಶಿಕ್ಷಕರು ಮಕ್ಕಳಿಗೆ ಮರಾಠಿಯಲ್ಲಿ ತರ್ಜುಮೆ ಮಾಡಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು ನನಗೆ. ಕನ್ನಡ ಮಾತುಗಳು ಕೇಳದೆ ನಮಗೆ ಏನೋ ಕಳೆದುಕೊಂಡ ಭಾವ. ಆದ್ದರಿಂದ ಕನ್ನಡವನ್ನು ಕನ್ನಡದಲ್ಲಿ ಹೇಳಲೇಬೇಕು ಅನ್ನುವ ಮನಸ್ಸು ಮಾಡಿದೆ.     ಕೊನೆಗೆ ಅವರಿಗೆ ಎಷ್ಟು ಅರ್ಥ ಆಗುತ್ತೋ ಅಷ್ಟೇ ಆಗಲಿ ಅಂತ ಆ ಮಕ್ಕಳ ಜೊತೆ ಬರೀ ಕನ್ನಡ ಮಾತ್ರ ಮಾತನಾಡಲು ಶುರು ಮಾಡಿದೆ.       ಕೆಲವೊಮ್ಮೆ ಸನ್ನೆಗಳ ಮೂಲಕ ಪದಗಳನ್ನು ಉಚ್ಚರಿಸುತ್ತಾ ಕಲಿಸಲು ಶುರುವಿಟ್ಟುಕೊಂಡೆ.         ಅವರ ಪೋಷಕರನ್ನು ಕರೆಸಿ ಮನೆಯಲ್ಲಿ ಹೆಚ್ಚಾನುಹೆಚ್ಚು ಕನ್ನಡ ಮಾತನಾಡಲು ತಿಳಿಸಿದೆ.        ಮಕ್ಕಳಿಗೆ ಕನ್ನಡದಲ್ಲೇ ಸಣ್ಣ ಸಣ್ಣ ಸಂಭಾಷಣೆಗಳ ಇರುವ ನಾಟಕ ಮಾಡಿಸಿದೆವು.           ಶಿಶುಗೀತೆ,ಪದಗಳ ಆಟ,ಕನ್ನಡದಲ್ಲೇ ಮಾತುಕತೆ, ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದೆವು.        ಅವರು ನಿತ್ಯ ಜೀವನದ ಘಟನೆಗಳನ್ನು ಕನ್ನಡದಲ್ಲಿ ಹೇಳಲು ಪ್ರೇರೆಪಿಸಿದೆವು. ಉದಾಹರಣೆಗೆ ಸಂತೆಗೆ ಹೋದಾಗ ಅವರ ಅನುಭವ,ಅವರ ಮನೆಯಲ್ಲಿ ಆಚರಿಸುವ ಹಬ್ಬ, ದಿನಸಿ ಅಂಗಡಿಯಲ್ಲಿನ ಅನುಭವ,, ಹೀಗೆ ಹಲವಾರು. ಮೊದಮೊದಲು ಅವರ ಮಾತುಗಳ ಇಪ್ಪತ್ತು ಶಬ್ದಗಳಲ್ಲಿ ಹತ್ತಕ್ಕಿಂತ ಹೆಚ್ಚು ಮರಾಠಿ ಪದಗಳು ನುಸುಳಿದ್ದವು. ಹಲವಾರು ಚಟುವಟಿಕೆಗಳ ಮೂಲಕ ಅವರನ್ನು ಪ್ರೇರೆಪಿಸಿದ ಬರುಬರುತ್ತಾ ಅವುಗಳ ಸಂಖ್ಯೆ ಇಳಿಕೆಯಾಗಿತ್ತು. ಅಂತೂ ನಮ್ಮ ಮಕ್ಕಳು ನನ್ನ ಜೊತೆ ಮಾತ್ರ ಕನ್ನಡ ಮಾತನಾಡಲು ಶುರು ಮಾಡಿದರು,,ಮುದ್ದಾಗಿ ,,ಕನ್ನಡ್ ಟೀಚರ್ ಅನ್ನುತ್ತಾ. ಕನ್ನಡ ಅಂದರೆ ಸಾಕು “ಮಲ ಕಾಯ್ ಸಮಜಲೆ ನಹೀ”(ನನಗೆ ಅರ್ಥ ಆಗುತ್ತಿಲ್ಲ) ಅನ್ನುತ್ತಿಲ್ಲ ನಮ್ಮ ಮಕ್ಕಳು “ಕನ್ನಡ್ ಮಲ ಯೇತೆ” (ಕನ್ನಡ ನನಗೆ ಬರುತ್ತೆ) ಅನ್ನುವಂತದರು.        ಶಾಲೆಗಳಲ್ಲಿ ಕೆಲವು ಮಕ್ಕಳ ಮಾತೃಭಾಷೆ ಬೇರೆಯದೇ ಆಗಿರುತ್ತದೆ.ಆದ್ದರಿಂದ ಅಂಥಾ ಮಕ್ಕಳ ಕನ್ನಡ ಕಲಿಕೆಯಲ್ಲಿ ನಾವು ಹೆಚ್ಚಿನ ಗಮನ ನೀಡಬೇಕಾಗುತ್ತದೆ.       ಕನ್ನಡದ ಉಚ್ಚಾರಣೆಯನ್ನು ಮೊದಲು ನಾವು ಸರಿಯಾಗಿ ಮಾಡಬೇಕು.ಅಂತೆಯೇ  ಮಕ್ಕಳಿಗೆ ಸರಿಯಾದ ಉಚ್ಚಾರಣೆ ಕಲಿಸಬೇಕು.       ಇನ್ನು ಕೆಲವು ಮಕ್ಕಳು ವ್ಯಾಕರಣವನ್ನು ಬಳಸುವಲ್ಲಿ ಎಡವುತ್ತಾರೆ.ಉದಾಹರಣೆಗೆ ವಾಕ್ಯಗಳಲ್ಲಿ ಏಕವಚನ ಬಹುವಚನಗಳನ್ನು,ಲಿಂಗಗಳನ್ನು  ಬಳಸುವಲ್ಲಿ‌ ಗೊಂದಲಕ್ಕೀಡಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಈ ಕ್ರಿಯಾತ್ಮಕ ವ್ಯಾಕರಣದ ಚಟುವಟಿಕೆಗಳ ಮೂಲಕ ನಾವು ಅರಿವು ಮೂಡಿಸಬಹುದು.      ಆಲಿಸುವಿಕೆ,ಮಾತನಾಡುವುದು,ಓದುವುದು, ಬರೆಯುವುದು ಮತ್ತು ಕ್ರಿಯಾತ್ಮಕ ವ್ಯಾಕರಣದ  ಕೌಶಲಗಳು ಸಮರ್ಪಕವಾಗಿ ಮಕ್ಕಳಿಂದ ಬಳಕೆ ಆಗಬೇಕು.         ಇಂಗ್ಲಿಷ್ ನಲ್ಲಿ ಕಲಿತ ಮಕ್ಕಳು ಬರೆಯಲು ಓದಲು ಶಕ್ತರಾಗಿರುತ್ತಾರೆ.ಆದರೆ ಆಲಿಸಿದ್ದನ್ನು ಅರ್ಥ   ಅರ್ಥಮಾಡಿಕೊಳ್ಳುವಲ್ಲಿ ಮತ್ತು   ಸನ್ನಿವೇಷಕ್ಕೆ ತಕ್ಕಂತೆ ಕನ್ನಡವನ್ನು ಬಳಸಿ ಮಾತನಾಡುವಲ್ಲಿ ಸೋಲುತ್ತಾರೆ.     ಇಂಥ ಸನ್ನಿವೇಶಗಳಲ್ಲಿ ಮಕ್ಕಳಿಗೆ ಅಗತ್ಯ ಪೂರಕ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಅವರು ಸಹಜವಾಗಿ ಆಲಿಸಿ ಅರ್ಥೈಸಿಕೊಳ್ಳಲು,ಮಾತನಾಡಲೂ ಸಹಾಯ ಮಾಡಬೇಕಾಗುತ್ತದೆ.     ಹೀಗೆ ಬೊಧನೆಯಲ್ಲಿ ಹಲವಾರು ಎಡರತೊಡರುಗಳು ಬಂದೇ ಬರುತ್ತವೆ.ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರೊಂದಿಗೆ ಮಾತೃಭಾಷೆಯನ್ನು ಕಲಿಸಬೇಕಾಗಿದೆ.      ಒಟ್ಟಾರೆ ಕನ್ನಡ ಶಿಕ್ಷಕರ ಜವಾಬ್ದಾರಿ ಕನ್ನಡ ಕಲಿಸುವಲ್ಲಿ ಬಹಳಷ್ಟು ಇದೆ ಎಂದರೆ ತಪ್ಪಾಗಲಾರದು.ಇಂದಿನ ಅಗತ್ಯ ಕೂಡ ಇದು. ===================

ಭಾಷೆ Read Post »

ಪುಸ್ತಕ ಸಂಗಾತಿ

ಪಸ್ತಕ ಲೋಕ

ಕೃತಿ: ಹಾಣಾದಿ(ಕಾದಂಬರಿ ಲೇಖಕರು: ಕಪಿಲ ಪಿ.ಹುಮನಾಬಾದ್ ದೀಪಾಜಿ “ಹಾಣಾದಿ‌‌‌‌” ಕಾದಂಬರಿ ಒಬ್ಬ ಅದ್ಭುತ ಕಲಾಕಾರನ ಕೈಚಳಕದ ಪ್ರತೀಕದಂತಿದೆ. ಹಾಣಾದಿಯ ಹಾದಿಯಲ್ಲಿ ನಡೆಯುವ ಪ್ರತಿ ಸಂಗತಿಯು ಇಲ್ಲೆ ಓದುಗನೆದುರಲ್ಲೆ ಜರುಗುತ್ತಿರುವಂತೆ ಗೋಚರಿಸುತ್ತವೆ. ಅದಕ್ಕೆ ಕಾರಣ ಕಥೆಗಾರನ ತೂಕದ ಶಬ್ಧಗಳು ಹಾಗೂ ಆ ಶಬ್ದಗಳನ್ನು ಹಂದರದಂತೆ ಅಚ್ಚುಕಟ್ಟಾಗಿ ಹೊಂದಿಸಿದ ಕಲ್ಪಾನಾ ಶಕ್ತಿ. ಜೊತೆಗೆ ಉತ್ತರ ಕರ್ನಾಟಕದ ಕಿರೀಟ‌ ಬೀದರದ ಮೆದು ಹೃದಯದ ಗಂಡು ಭಾಷೆ.     ಕಥೆ ಓದುತ್ತ ಹೋದಂತೆ ಉಪಮೇಯಗಳು ಎದುರಾಗುತ್ತವೆ . “ಚಂದ್ರನಿಗೆ ಒದ್ದು ಸೂರ್ಯ ಹುಟ್ಟಲೇಬಾರದು ಜನ ಎಷ್ಟು ಆರಾಮವಾಗಿರುತ್ತಿದ್ದರು? ಕೇವಲ ಮಲಗಿರುತ್ತಿದ್ದರಷ್ಟೆ “,  “ಶಿಲುಬೆಗೇರಿದ ಕ್ರಿಸ್ತನಿಗೆ ವಯಸ್ಸಾದಂತೆ ಕಂಡಿತು”, “ಈಗಿನವರಿಗೆ ಕಷ್ಟಗಳ ಸುಖ ಗೊತ್ತಿಲ್ಲ. ಸುಖದ ಸುಖ ಮಾತ್ರ ಗೊತ್ತು ಮಗ”.    ಈ ವಾಕ್ಯರಚನೆಗಳು ಅದೆಷ್ಟು ಮಜಬೂತಾಗಿವೆ ಎಂದರೆ ಓದುಗನನ್ನು ಒಂದು ಕ್ಷಣ ನಿಲ್ಲಿಸಿ ಶಬ್ಧಾರ್ಥಕ್ಕೂ ಸನ್ನಿವೇಶದ ಭಾವಾರ್ಥಕ್ಕೂ ಇರುವ ಮಧ್ಯದ ತೆಳು ಗೆರೆಯೊಂದನ್ನು ಹುಡುಕ ಹಚ್ಚುತ್ತವೆ.     ಪಾಳುಬಿದ್ದ ಊರಿಗೆ ಬಂದ ಅದೆ ಊರಿನ ಮಗನಿಗೆ ಕಾಲದ ಕಾಲಿಗೆ ಸಿಕ್ಕು ನಲುಗಿದ ತನ್ನೂರಿನ ಬದಲಾವಣೆಗಳು ದಿಗಿಲು ಹುಟ್ಟಿಸುವ ಬಗೆ ಮತ್ತದನ್ನು ಚಿತ್ರಿಸಿದ ಬಗೆ ಮಾರ್ಮಿಕವಾಗಿದೆ. ಕಥೆಗಾರನ ಕೈಯಲ್ಲಿ ಅರಳಿದ ಅಪ್ಪ‌ ಒಮ್ಮೆ ಓದುಗರ ಅಪ್ಪನೊಂದಿಗೆ ಹೋಲಿಸಿಕೊಳ್ಳದೆ ಇರಲಾರನು. ತಾನು ಆಡಿದ ಅಂಗಳ, ಶಾಲೆಯ ಬಯಲು ಊರಾಚೆಗಿನ ಗೌವ್ವನೆ ಗುಹೆ, ಹೊಲದ ದಾರಿ, ಹಳ್ಳದ ಹುತ್ತ ಕೆಡಿಸಿ ಬಡಿಸಿಕೊಂಡ ಮೈ ನೋವು ಮನೋಜ್ಞವಾಗಿದೆ.    ಅಕ್ಕನೆಂಬ ಬೆಂಬಲ, ಅವ್ವನೆಂಬ ಸೋತ ಜೀವ ಮತ್ತು ತನ್ನಪ್ಪನ ಜೀವಕ್ಕೆ-ಸಾವಿಗೆ ಜತೆಯಾದ ಬಾದಾಮ ಗಿಡ. ಮರದೊಡೆಯ ಅಪ್ಪ ಮರಕ್ಕಾಗಿ ಜೀವಿಸಿದ ಕಥೆ, ಜೀವ ತೆತ್ತ ಕಥೆ ಇಂದು ನಡೆಯುತ್ತಿರುವ ಪರಿಸರ ಪ್ರಜ್ಞೆಯ ಪ್ರತೀಕವೆನ್ನಿಸುವುದು ಸುಳ್ಳಲ್ಲ.     ಹಳ್ಳಿಯ ಬದುಕಿನಲ್ಲಿ ಸಾಕು ಪ್ರಾಣಿಗಳು, ಬೆಳಸಿದ ಮರಗಳು ನಮ್ಮದೆ ಮನೆಮಕ್ಕಳಾಗಿ ಬದುಕುತ್ತವೆ ಮತ್ತು ಬದುಕಿಸುತ್ತವೆ ಎಂಬುದಕ್ಕೆ ಇಲ್ಲಿ ಹೆಜ್ಜೆ ಹೆಜ್ಜೆಗೂ ಸಕಾರಣಗಳು ಸಿಗುತ್ತವೆ.     ಹೋರಾಟದ ಬದುಕಿಗೆ ಮುಳ್ಳಗಳು ಹೆಚ್ಚು, ಇಲ್ಲಿ ಕಥಾನಾಯಕನ ಅಪ್ಪನಿಗೆ ಸಿಕ್ಕ ನೆರೆ-ಹೊರೆಯ ಪಾತ್ರಗಳ ಕಾರ್ಯ ವೈಖರಿ ಕಂಡಾಗ ನಮ್ಮ ನಡುವಿರುವ ಖಳನಾಯಕರನ್ನು ಧೊಪ್ಪನೆ ಎಳೆದು ತಂದು ಎದುರಿಗೆ ನಿಲ್ಲಿಸುತ್ತವೆ. ಬೆಳೆದು ನಿಂತ ನೆರಳು ನೀಡುವ ಮರದೊಡನೆ ಜಿದ್ದಿಗೆ ಬಿದ್ದ ಊರ ಮಂದಿ, ಊರು ಬಿಟ್ಟು ಊಸಿರು ಬಿಟ್ಟು ಹೋದ ಕಥೆಯನ್ನು ಹೇಳುವ ಪರಿ-ವೈಖರಿ ಚಂದವಾಗಿದೆ.     ಕಥೆಯ ಆರಂಭದಲ್ಲಿ ಸಿಗುವ, ಊರಿಗೆ ಹೋಗುವಂತೆ ದುಂಬಾಲು ಬೀಳುವ ಯುವ ಪೀಳಿಗೆಯ ಪ್ರತೀಕದಂತಿರುವ ಗೆಳತಿಯ ಮಾತುಗಳು ಎಂತವರಿಗಾದರೂ ಎರಡು ನಿಮಿಷಗಳ ಕಾಲ ತಟಸ್ಥವಾಗುವಂತೆ ಮಾಡುತ್ತವೆ. “ನಿವೇಲ್ಲ ಗಂಡಸರೆ ಹೀಗೆ ಕಣೊ ಕುಡಿಯೋಕೆ,ಸೇದೋಕೆ, ರಾತ್ರಿ ಮೈ ಬಿಸಿ ಆರಿಸೊಕೆ ಒಂದು ಹುಡುಗಿ ಸಿಕ್ರೆ ಸಾಕು ಜೀವನ ಸಾರ್ಥಕ ಅಂತೀರಾ”-ಎಂತ ಪಕ್ವ ಮಾತು.ಇಷ್ಟು ಮಾತ್ರ ಕಂಡ ಹುಡುಗನೊಬ್ಬ ವರಷಾನುಗಟ್ಟಲೆ ಹುಟ್ಟುರಿನ ಗೋಜಿಗೆ ಹೋಗದೆ ಉಳಿದರೆ ಹೆತ್ತ ತಂದೆಗೆ  ಮರವೇ ಮಗನಂತೆ ಆಶ್ರಯಿಸುವ ಕಥೆ ಮನಕಲಕುತ್ತದೆ.    ಕಂಟಿ ಎಂಬ ಆಳು ಧರ್ಮಾಂತರದ ಕಥೆ ಹೇಳುತ್ತಾನೆ. “ಚರ್ಚ್ ನ ಪೂಜಾರಪ್ಪ”ನೆನ್ನುವ ಮುಗ್ಧತೆ, ಅಪ್ಪನಿಗೆ ಜೀವದ ಗೆಳೆಯನಂತುಳಿಯುವ ಭಾವೈಕ್ಯತೆ ಸನ್ನವೇಶಗಳು ಧರ್ಮಾಂಧರ ಮುಖಕ್ಕೆ ರಾಚುವಂತಿವೆ.    ಕಂಟಿಯ ಮಗ ತೋತ್ಯಾ ಕಥಾನಾಯಕನನ್ನು ಕೊನೆಯ ಪುಟಗಳಲ್ಲಿ ಕಾಯುವ ಬಗೆ,  “ಮಾಲಕ್” ಎಂಬ ಶಬ್ಧ ಎಲ್ಲವು ಭಾವನೆಗಳ ತಿಕ್ಕಾಟದಲ್ಲಿ ಅರೆಗಳಿಗೆ ವಿರಮಿಸುತ್ತವೆ.    ಇದು ಕಥೆಯಲ್ಲಿ ಬರುವ ಸಣ್ಣಪುಟ್ಟ ಪಾತ್ರಗಳ ವಿವರಣೆಯಾಯಿತು ಅಸಲಿ ಪಾತ್ರದ ಬಗೆಗೆ ನಾನೀನ್ನು ಎನನ್ನು ಹೇಳಲೆ ಇಲ್ಲ. ಪುಸ್ತಕದ ಮುಖಪುಟದಲ್ಲಿ ಕಾಣ ಸಿಗುವ ಹಣ್ಣು ಹಣ್ಣು  ಮುದುಕಿ, ಬದುಕಿನ ಜಂಜಾಟಕ್ಕೊ ಕಾಲದ ಹೊಡೆತಕ್ಕೊ, ವಯಸ್ಸಿನ ಪಕ್ವತೆಗೋ ಸಿಕ್ಕು-ಸುಕ್ಕಾದ ಹಿರಿ ಜೀವ ಕಥೆಗೆ ಬೇಕಾದ ಮೂಲ ವಸ್ತುಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಅಸಲಿಗೆ ಕಥೆ ಹೇಳುವವಳು ಅವಳೆ ಇಲ್ಲಿ ಈ ಊರಿಗೆ ಬಂದ ಯುವಕ ತನ್ನ ನೆನಪನ್ನು ಅವಳ ಕಥೆಗೆ ಹೊಂದಿಸಿಕೊಳ್ಳುತ್ತಾ ಹೋಗುತ್ತಾನೆ. ಕಥೆಯಲ್ಲಿ ಅವಳ ಹೆಸರು ಗುಬ್ಬಿ ಆಯಿ. ಅವಳೆ ಹೇಳುವಂತೆ ಕಥೆ ಹೇಳಲಿಕ್ಕಾಗಿಯೆ ನಾನೊಬ್ಬಳು ಉಳಿದಿದ್ದೇನೆ ಎನ್ನುವ ಮಾತು ಕಥೆ ಓದುವವ ಗಮನಕ್ಕೆ ಬರದೆ ಇರಲಾರದು.    ಗುಬ್ಬಿ ಆಯಿ, ಗುಬ್ಬಿ ಆಯಿ ಹಿಂದೆ ಮುಂದೆ ಚಿಲಿಪಿಲಿಗುಟ್ಟುವ ಗುಬ್ಬಿಗಳು ಆಕೆಯ ಹೃದಯವಂತಿಕೆಗೆ ಹಿಡಿದ ಕೈಗನ್ನಡಿ. ಆಕೆಯನ್ನು ವಿಮರ್ಶಿಸುವ ಗೋಜಿಗೆ ನಾನಿಲ್ಲಿ ಹೋಗಲಾರೆ ಕಾರಣ ವಿಮರ್ಶೆಗೆ ದಕ್ಕದ ಗತಕಾಲದ ಪ್ರತೀಕವದು.    ಈ ಕಥೆಯ ರೂವಾರಿಯಾದ ತಮ್ಮನ ವಯಸ್ಸಿನ ಕಪಿಲ ಪಿ ಹುಮನಾಬಾದಿಯವರಿಗೆ ಸಾಕಷ್ಟು ಶುಭಕಾಮನೆಗಳು. ವಯಸ್ಸಿಗೆ ಮೀರಿದ ಬರವಣಿಗೆ ಒಂದನ್ನ ಓದುಗರಿಗೆ ನೀಡಿದ್ದೀರಿ ವಾಸ್ತವಕ್ಕೂ ಭೂತಕಾಲದ ಘಟನೆಗಳಿಗೂ ಕೊಂಡಿ ಹಾಕಿ ಹಾಣಾದಿಯಲ್ಲಿ ಹಳ್ಳ-ಕೊಳ್ಳ, ಜಾಲಿಯ ನೆರಳಲ್ಲಿ ನಡೆಸುವಾಗ ನಮ್ಮಲ್ಲೂ ಒಂದು ಜಾಲಿ ಮುಳ್ಳು ನಟ್ಟು ಕಿತ್ತಷ್ಟು ನೋವನ್ನು ಉಳಿಸುವ ತಾಕತ್ತು ನಿಮ್ಮ ಅಭಿವ್ಯಕ್ತಿ ಶೈಲಿಗೆದೆ. ಶುಭವಾಗಲಿ.     ಹಾಣಾದಿ ಪುಸ್ತಕವನ್ನು ನಮ್ಮ ಹಸಿವಿಗೆ ಪೂರೈಸಿದ ತಮ್ಮ ಚಾಂದ್ ಕವಿಚಂದ್ರ ಹಾಗೂ ಬಯಲ ಬಾಗಿಲು ಖ್ಯಾತಿಯ ಶಿವಮಾಧುವಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು.

ಪಸ್ತಕ ಲೋಕ Read Post »

ಕಾವ್ಯಯಾನ

ಕಾವ್ಯಯಾನ

ನೆನಪುಗಳ ಪಾಲೀಶ್ ಪಾಲಿಸಿ ಬಸವರಾಜ ಕಾಸೆ ಮರೆಯದ ನೆನಪುಗಳತೊಳೆಯುವೆ ಕೊಳೆಯಲು ಕಣ್ಣೀರಲ್ಲಿಅಚ್ಚಳಿಯದೆ ಸ್ವಚ್ಛ ಪಾಲಿಶ್ ಆಗಿಫಳಪಳವೆಂದು ಬೆನ್ನೆತ್ತವುದು ಕ್ಷಣದಲ್ಲಿ ಕಳಿಸಿ ಕೊಡಲು ಕಲಿಸಿದೆಕೇಳಿ ನಗುವಿನ ಆಮಂತ್ರಣಸಪ್ಪೆಯಾದರೂ ನಟಿಸಿದೆನಿರಾಳವಾಗಲು ನಿನ್ನ ಮೈಮನ ಹೇಳಿ ಹೋಗದ್ದಿದರೆಚೆಂದವಿತ್ತು ಏನೋ ಕಾರಣತಿಳಿ ಹೇಳಿ ರಮಿಸಿದ ಪರಿಬಿಗಿಗೊಳಿಸಿತು ಭಾವ ಬಂಧನ ಬಿಟ್ಟು ಕೊಡದ ಪ್ರೀತಿಪಡೆಯಲಾಗದ ಬದುಕುಧಿಕ್ಕಾರ ಕಿರುಚಲು ನನ್ನೊಳಗೆನನಗೆ ನಿರಂತರ ಕುಟುಕು ಇಡಿ ಸಾಗರದ ಉಪ್ಪುತೆವಳಿಯೇ ಹಿಂದಿಕ್ಕುತ್ತೆ ನೋವಿನಾಳದಲ್ಲಿತಡೆತಡೆದು ಬಿಕ್ಕಿ ಜಾರುವಹನಿ ಹನಿ ನೀರಲ್ಲಿ ಬಿಟ್ಟು ಹೋಗುವ ಮುನ್ನಪ್ರೇಮದ ನಿನಾದಗರಿಗೆದರಿ ತಬ್ಬಿ ಅಲವತ್ತಿತುನೆನೆದು ತವಕಿಸಿ ತಲ್ಲಣದ ಕದ ಮುದ್ದಿಸಿ ಸಮಾಧಾನಿಸುವಪರಿಪಕ್ವತೆಯಲ್ಲಿ ನೀನುಹಾಗೆ ಇರುವಂತೆ ತೋರಿಸುವಅನಿವಾರ್ಯತೆಯಲ್ಲಿ ನಾನು ತಟ್ಟಿ ಹೋದೆ ಯಾಕೆಆ ಕೊನೆಯ ಕ್ಷಣದಲ್ಲೂಇನ್ನಿಲ್ಲದಂತೆ ಹೃದಯ ಮೀಟಿಆವರಿಸಿದೆ ಭೀತಿ ಹಿಂದೆಂದಿಗಿಂತಲೂ =====================

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸೊಡರು ಚಂದ್ರಪ್ರಭ .ಬಿ. ಚೆಂಗುಲಾಬಿ ಮೊಗದವಳೆ ದಾಸವಾಳದ ವರ್ಣದಲಿ ಅದ್ದಿ ಬಂದವಳೆ…ಸಖಿ ಅನುಪಮ..ಅಪಾರ ನಿನ್ನ ಮಮತೆ..ಹೃದಯವಂತಿಕೆ..! ಹಲವು ಮೈಲುಗಲ್ಲುಗಳಿಗೆ ಸಾಕ್ಷಿ ನಿನ್ನ ನಿರ್ಗಮನ ಅಂಚಿನತ್ತ ದೌಡಾಯಿಸುತ್ತಿರುವ ವೃತ್ತಿ ಮೈಕೊಡವಿ ಮೇಲೇಳುತ್ತಿರುವ ಪ್ರವೃತ್ತಿ ಏನೆಲ್ಲಕೆ ತೆರೆದುಕೊಳುವಾಸೆಗೆ ಬಲಿತ ರೆಕ್ಕೆ ನೀ ಹೊತ್ತು ತರುತ್ತಿದ್ದ ವೇದನೆ ಈಗ ಕಾಡುತ್ತಿದೆ ಮಧುರ ನೆನಪಾಗಿ! ಅಜ್ಜಿ ಅವ್ವನ ಕಾಲದಲಿ ಅರವತ್ತರ ವರೆಗೂ ಜತೆಯಾದವಳು ನೀ ಅವರ ಹಿಂದೆ ಹಿಂದೆ ನಾ… ನನ್ನ ಹಿಂದಿನವರಿಗೆ ನಲವತ್ತಕ್ಕೇ ಕೈ ಬೀಸಿ ವಿದಾಯ ಹೇಳುತಿರುವೆಯಲ್ಲೇ? ಮೂವ್ವತ್ತರ ಬಳಿಕ ಗೃಹಸ್ಥಾಶ್ರಮ ಸೇರಿ ಕಳ್ಳುಬಳ್ಳಿಯಲಿ ಹೂಗಳ ನಿರೀಕ್ಷೆಯಲಿ ಇರುವವರ ಗತಿಯೇನೆ? ಕರುಳ ಕುಡಿಗಳಲಿ ನಿನಗದೆಷ್ಟು ಕಳಕಳಿ! ಒಡಲಲ್ಲಿ ನಿನ್ನ ಹೊತ್ತುಕೊಂಡೇ ಹುಟ್ಟುವ ಜೀವ ತನಗೆ ತಾನೇ ಒಂದು ಘನತೆ ಜಗವ ಲಾಲಿಸಿ ಪಾಲಿಸುವ ಜಗನ್ಮಾತೆ ಪ್ರಕೃತಿ ನಿನ್ನ ಸ್ರಾವ ನಿಂತು ತಾಯ ಮಡಿಲಿಗೆ ಬಂದವರು ಅವಳೆದೆಯ ಅಮೃತದ ಸವಿಯುಂಡು‌ ಬೆಳೆದವರು ಹಳಿಯುವರಲ್ಲೇ ನಿನ್ನ..! ಪಾಪ, ಅವರ ನೋಟ ಅಷ್ಟು ಕಿರಿದು… ನಿನಗದರ ಗೊಡವೆಯಿಲ್ಲ ಅನಂತ ಸೃಷ್ಟಿಯ ಪೊರೆವ ಜೀವದಾಯಿನಿ ಅತ್ತ ಗಮನಿಸಲೂ ಬಿಡುವಿಲ್ಲ ನಿನಗೆ ನಿನ್ನ ಮಮತೆಯು ಹಾಡಿ ತೂಗುತಿರುವ ತೊಟ್ಟಿಲು ಈ ಲೋಕ ನಿನ್ನ ಅಂತಃಕರಣ ಹಚ್ಚಿಟ್ಟ ಸೊಡರು ಈ ಭೂಮಿ ಅನುಗಾಲವೂ ಆಭಾರಿ ಜೀವ ಸಂಕುಲ ನಿನಗೆ ========================= –

ಕಾವ್ಯಯಾನ Read Post »

ಇತರೆ

ಬಾಲ್ಯದ ದೀಪಾವಳಿ

ಅಪ್ಪ ಸಿಡಿಸಿದ ಪಟಾಕಿ ಸಿಂಧು ಭಾರ್ಗವ್. ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಪುಟಾಣಿಗಳಿಗೆ ಹೊಸ ಝಯಿತಾರಿ ಅಂಗಿ ಕೊಡಿಸುವರು. ಬೊಗಸೆ ತುಂಬಾ ಸಿಹಿಯನ್ನು ನೀಡುವರು. ಯಾರ ಮನೆಗೆ ಹೋದರೂ ಸಿಹಿತಿಂಡಿ ನೀಡಿ ಆ ಪುಟ್ಟ ಮಕ್ಕಳ ಖುಷಿಯನ್ನು ತಾವೂ ಅನುಭವಿಸುವರು. ಅದಲ್ಲದೇ ಇದಕ್ಕಿಂತ ಹೆಚ್ಚೆಂದರೆ ಅಪ್ಪ ಪಟಾಕಿ ತರುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಟ್ಟಡಗಳ ಹಾವಳಿಯೇ ವಿನಃ, ಮಕ್ಕಳಿಗೆ ಆಡಲು ಅನುಕೂಲವಾಗುವಂತಹ ವಾತಾವರಣ ಕಡಿಮೆ. ಆದರೂ ಈ ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ರಸ್ತೆಯಲ್ಲೇ ಇರುತ್ತಾರೆ. ಯಾವ ವಾಹನಗಳಿಗೂ ಹೋಗಲು ಬಿಡುವುದಿಲ್ಲ. ಓಣಿಯ ಮಕ್ಕಳೆಲ್ಲ ಒಂದಾಗಿ ರಾಕೇಟ್, ಬಿರ್ಸು, ನಕ್ಷತ್ರ ಕಡ್ಡಿ, ಬಾಳೆಮರ, ಲಕ್ಷ್ಮೀ ಪಟಾಕಿ, ನೆಲಚಕ್ರ, ಆಟಂಬಾಂಬ್ ಹೀಗೆ ಬಗೆಬಗೆಯ ಪಟಾಕಿಗಳ ಸಿಡಿಸುತ್ತಾ ಸಂಭ್ರಮ ಪಡುತ್ತಾರೆ. ಅಲ್ಲದೇ ಸಂಜೆ ಆದ ಮೇಲೆ ಎಲ್ಲರ ಮನೆಯ ಗಂಡಸರು ಅಂದರೆ ಅಪ್ಪಂದಿರು ರಸ್ತೆಗಿಳಿದು ತಮ್ಮ ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮ ಹೆಚ್ಚಿಸುತ್ತಾರೆ. ಹೀಗಿರುವಾಗ ಒಮ್ಮೆ ಪಕ್ಕದ ಮನೆಯ ಅಂಕಲ್ ಸಂಜೆ ವೇಳೆಗೆ ಒಂದು ದೊಡ್ಡ ಬಾಕ್ಸ್ ಪಟಾಕಿ ತಂದಿದ್ದರು. ಮಕ್ಕಳನ್ನೆಲ್ಲ ದೂರ ನಿಲ್ಲಲು ಹೇಳಿ ಒಂದೊಂದೇ ಜಾತಿಯ ಪಟಾಕಿ ಸಿಡಿಸುತ್ತಾ ಮಕ್ಕಳಲ್ಲಿ ಮೋಜು ಹೆಚ್ಚಿಸುತ್ತ ಇದ್ದರು. ಅದೊಂದು ಹೀರೋತನ ಪ್ರದರ್ಶನ ನಡೆಯುತ್ತಾ ಇತ್ತು. ಇದನ್ನೆಲ್ಲ ಹೆಚ್ಚಿನವರು ಅವರವರ ಮನೆಯ ಮಹಡಿ ಮೇಲಿಂದಲೂ ನೋಡುತ್ತ ಇದ್ದರು. ಹೀಗಿರುವಾಗ, ಅಂಕಲ್ ಮೊದಮೊದಲು ಸಣ್ಣಗಿನ ನೆಲಚಕ್ರ, ನಕ್ಷತ್ರ ಕಡ್ಡಿ , ಬಾಳೆಗಿಡ ಎಲ್ಲವನ್ನೂ ಹಚ್ಚುತ್ತ ಬಂದರು. ಈ ನಡುವೆ ಒಂದು ರಾಕೆಟ್ ತುದಿಗೆ ಬೆಂಕಿ ಹಚ್ಚಿಯೇ ಬಿಟ್ಟರು. ಮಕ್ಕಳು ವರ್ಣಮಯ ಬೆಳಕನ್ನು ನೋಡುವುದರಲ್ಲೇ ತಲ್ಲೀನ‌‌. ಕುಣಿಯುತ್ತ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಿರುವಾಗಲೇ ಆಗಸಕ್ಕೆ ಹಾರಬೇಕಿದ್ದ ಆ ರಾಕೇಟ್ ಸರಕ್ಕನೆ ಮಕ್ಕಳು ಇರುವ ಜಾಗಕ್ಕೆ ಬಂದು ಒಂದು ಪುಟಾಣಿ ಹುಡುಗಿಯ ಎದೆಯನ್ನು ಸೀಳಿ ರಸ್ತೆ ಮೇಲೇಯೇ ನೇರವಾಗಿ ಹೋಗಿ ಒಂದು ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿತು. “ಏನಾಯಿತು….?? ಓ ಮೈ ಗಾಡ್…” ಎಂದು ನೋಡುವಷ್ಟರಲ್ಲೇ ಆ ಮಗು ಪ್ರಜ್ಞೆ ತಪ್ಪಿ ಬಿದ್ದತು. ಮುಂಜಾಗ್ರತೆಗಾಗಿ ಏನನ್ನು ಹತ್ತಿರದಲ್ಲಿ ಇಟ್ಟುಕೊಂಡಿರಲಿಲ್ಲ. ಗಾಬರಿಯಾಗಿ ಆ ಮಗುವನ್ನು ಎತ್ತಿಕೊಂಡು ಮನೆ ಕಡೆ ಓಡತೊಡಗಿದರು‌. ಮಹಡಿ ಮೇಲೆ ನಿಂತು ನೋಡುತ್ತಿದ್ದವರೆಲ್ಲ ಭಯದಿಂದ “ಮಗು…ಮಗು…” ಎಂದು ಕಿರುಚುತ್ತ ಇದ್ದರು. ಕೊನೆಗೆ ಆ ಅಂಕಲ್ ಮನೆಯೊಳಗೆ ಹೋದಾಗ ಮಗುವ ನೋಡಿ ಅದರ ತಾಯಿಗೆ ಭಯವಾಗಿ ಅವರೂ ಕಿರುಚಿದರು. ಹೀಗೆ ಯಾರಿಗೂ ಏನು ಮಾಡಬೇಕು ಎಂದು ಅರಿವಾಗುತ್ತಲೇ ಇರಲಿಲ್ಲ. ಭಯದಿಂದ ಕೈಕಾಲುಗಳು ನಡುಗುತ್ತಿದ್ದವು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಮಗುವಿನ ಎದೆಯ ಭಾಗ ಸುಟ್ಟು ದೊಡ್ಡ ಗುಳ್ಳೆಯೊಂದು ಮೂಡುತ್ತದೆ. ಆ ಕಿರುಚಾಟ, ನೋವು ಒಂದೆರಡು ತಿಂಗಳುಗಳ ಕಾಲ ಎಲ್ಲರ ನಿದ್ರೆ ಕೆಡಿಸಿತ್ತು. ಹಾಗೆಯೇ ಅದೊಂದು ಕಲೆಯಾಗಿ ಆ ಮಗುವಿನ ಎದೆಯಲ್ಲಿ ಹಾಗೆಯೆ ಉಳಿದಿದೆ. ಸ್ನೇಹಿತರೇ, ಪಟಾಕಿ ಸಿಡಿಸುವುದು ತಪ್ಪಲ್ಲ. ಪುಟಾಣಿ ಮಕ್ಕಳ ಎದುರು ಹೀರೋ ಎಂದು ತೋರಿಸಲು ಹೋಗಿ ಅವಘಡಕ್ಕೆ ಸಿಲುಕಬೇಡಿ. ಮುಂಜಾಗ್ರತೆಗಾಗಿ ಒಂದು ಬಕೇಟು ಮರಳು, ನೀರು, ಐಸ್ ಕ್ಯೂಬ್, ಜೇನುಪುಪ್ಪ, ಬರ್ನಾಲ್ ಮುಲಾಮು ಸಗಣಿ, ಒಂದು ಪಾತ್ರೆ ಹುಣಸೆರಸ ಹೀಗೆ ಒಂದಿಲ್ಲೊಂದನ್ನು ಹತ್ತಿರದಲ್ಲೇ ಇರಿಸಿಕೊಂಡಿರಿ. ಈ ಎಂಟು ಹತ್ತು ವರುಷದ ಮಕ್ಕಳೋ ಇಲ್ಲ ಹದಿಹರೆಯದವರೂ ಕೂಡ ಪಟಾಕಿಗಳ ಜೊತೆ ಸರಸವಾಡುವುದನ್ನು ಕಡಿಮೆ ಮಾಡಿ. ನಿಮ್ಮ ಮೋಜು ಮಸ್ತಿ ಇನ್ನೊಬ್ಬರ ಭವಿಷ್ಯವನ್ನೇ ಹಾಳು ಮಾಡಬಹುದು. ಕಣ್ಣುಗಳು ಕುರುಡಾಗಲೂ ಬಹುದು. ದೇಹದ ವಿವಿಧ ಅಂಗಗಳ ಮೇಲಾಗುವ ಸುಟ್ಟಗಾಯ, ಕಲೆ ಎಂದೂ ಮರೆಯಲು ಸಾಧ್ಯವಿಲ್ಲ. ಆ ವಿಷಮದ್ದನ್ನು ಒಳಗೊಂಡ ಸುಟ್ಟಗಾಯ ತುಂಬಾ ಉರಿ ಕೊಡುತ್ತದೆ. ಕ್ಯಾಂಡಲ್ ಉರಿಸುವ ಬದಲು ಮಣ್ಣಿನ ಹಣತೆಯಿಂದ ದೀಪವ ಹಚ್ಚಿರಿ. ಸಿಹಿಯ ಹಂಚಿ ಸಂಭ್ರಮಿಸಿರಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.

ಬಾಲ್ಯದ ದೀಪಾವಳಿ Read Post »

You cannot copy content of this page

Scroll to Top