ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಗುಚ್ಛ

ಮುಡಿಯೇರಿದ ಹೂವು! ಸಂತೇಬೆನ್ನೂರು ಫೈಜ್ನಾಟ್ರಾಜ್ ಹುಡ್ಗಿ ಮನೆ ಪಕ್ಕಾನೇ ಇದ್ ಬಿಟ್ರೆ ಪ್ರೀತಿ ಹುಟ್ ಬಿಡುತ್ತಾ ? ಹುಡುಗೀರೂ ಥಕ್ ಅಂತ ತೆಕ್ಕೆಗೆ ಬಿದ್ ಬಿಡ್ತಾರಾ ? ಅದೆಲ್ಲಾ ನಮ್ಮಂಥಾ ಹುಚ್ ಹುಡುಗರ ಬೆಚ್ ಕಲ್ಪನೆಗಳು ! ಈಗ ಈ ರೇಷ್ಮಾ ನಮ್ಮ ಪಕ್ಕದ್ಮನೇಲೇ ಇರೋದು ; ಆಕೆ ಬಂದು ಸರಿ ಸುಮಾರು ವರ್ಷ ಆಗ್ತಾ ಬಂತು. ತಲೆ ಮೇಲಿನ ದಾವಣಿ ಸರೀಲಿಲ್ಲ. ತಲೆ ಎತ್ತಿ‍ ಯಾರನ್ನೂ ನೋಡ್ಲಿಲ್ಲ. ತಾನು, ತನ್ನ ಕೆಲ್ಸ ಅಂತ ಸದಾ ಮೌನದ ಮೂಟೆಯಾಗ ಇರತಿದ್ಲು !           ನಾನೇ ಅಲ್ವೆ ಹಳೇ ಸಿನೆಮಾದ ವಹಿದಾ ರೆಹಮಾನ್, ಜೀನತ್ ಅಮಾನ್, ಮಮ್ತಾಜ್ ಮುಂತಾದವರ ಹೋಲಿಕೆ ಕೊಟ್-ಕೊಟ್ ಮಾತಿಗಿಳ್ಸಿದ್ದು, ಅದೂ ಹ್ಞಾಂಜಿ, ಹ್ಞೂಂಜಿ, ಬೋಲೋಜಿ ಅಷ್ಟೆ! ಪಾಪ ಅವಳೇನ್ ಇಲ್ಲೇ ಪರ್ಮನೆಂಟಾಗಿ ಇರ್ತಾಳೆಯೇ? ಈಗ್ಲೋ ಆಗ್ಲೋ ತನ್ನೂರಿಗೆ ಹೋಗ್ತಾಳೆ; ಚಿಕ್ಕಮ್ಮ ಕಾಯಿಲೆ ಅಂತ ಸಹಾಯಕ್ಕೆ ಬಂದಿರೋದಲ್ವೆ ? ಬಂದಾಗ್ಲಿಂದಾಕೆಗೆ ಕಣ್ಣಲ್ಲಿ ಕಣ್ ಕೂಡ್ಸಕ್ ಪ್ರಯತ್ನ ಪಟ್ಟು ಪಟ್ಟು ಕಣ್ ಕರಗಿದ್ವೇ ಹೊರತು. ರೇಷ್ಮಾಳ ನೆರಳೂ ನನ್ ಮೇಲೆ ಬಿದ್ದಿರಲಿಲ್ಲ. ನನ್ನ ಈ ಪ್ರೀತಿ ಪ್ರಯತ್ನ ಪಾಪ ಅವಳಿಗೂ ಗೊತ್ತಿತ್ತು; ನಾನು ಹಳೇ ಹಾಡು ಹೇಳೋದು, ಹಿಂದಿ ರಾಜ್‌ಕುಮಾರ್‌ನ ಶಾಯರಿ ಬಿಸಾಕೋದು, ನಮ್ ತಂಗಿ ಮೇಲೆ ಹಾಕಿ ಮಾತಾಡೋದು ಎಲ್ಲಾ ತಿಳಿದೂ  ಮೂಕಿ ಹಾಗೆ ಇದ್ದ ಕಾರಣ ತಿಳೀತಾನೆ ಇರ್ಲಿಲ್ಲ. ಮೊನ್ನೆ ಅವಳಾಗಿ ಜುಮ್ಮಾ ನಮಾಜ್ ವೇಳೆ ಯಾರೂ ಇಲ್ಲದ ಸಮಯಕ್ಕೆ ಮಾತಾಡಲು ಹಿತ್ತಲ ಹುಣಸೇಮರದ ಎದುರಿನ ಗೋರಂಟಿ ಬಳ್ಳಿ ನೆರಳಿಗೆ ಕರೆಯುವರೆಗೂ !           ಎದೆಯಲ್ಲಿ ಹೂವರಳಿ ಘಂಗುಡ್ತಿದ್ವು; ಮನಸ್ಸು ಪಾರಿವಾಳವಾಗಿ ಹೋಗಿತ್ತು. ನಾ ಹೋದ ಅರ್ಧ ನಿಮಿಷಕ್ಕೆ ರೇಷ್ಮಾ ರಕ್ತ ಬಣ್ಣದ ನೈಟಿಯಲ್ಲಿ ಬಂದೇ ಬಿಟ್ಟಳು. ನನಗೋ ನೀರು ಎಲ್ಲೆಂದರಲ್ಲಿ ಒಸರುತ್ತಿತ್ತು. ‘ನೋಡಿ ಸಾಬ್ ನಾನು ನೀವಂದ್ ಕೊಂಡಂತೆ ಇಲ್ಲ. ನಿಮ್ಮ ಪ್ರೀತಿ, ಪ್ರೇಮ ಎಲ್ಲಾ ನಿಮ್ ತಂಗಿಯಿಂದ ಮಾಲೂಮ್ ಹೈ, ಮಗರ್ ನಾ ಅದಕ್ಕೆ ಅರ್ಹಳಲ್ಲ;  ನನ್ನಿಂದ ನೀವೇನೂ ಬಯಸದಿದ್ದರೆ ಒಳ್ಳೆಯದು -ಎಂದು ಮೌನವಾದಳು ಕಣ್ಣಲ್ಲಿ ನೀರು ಕವಿತೆ ಹಾಡುತ್ತಿದ್ದವು! ಅಲ್ಲಾ ರೇಷ್ಮಾ ಮೈ ತುಮ್‌ಸೆ ಪ್ಯಾರ್ ಕರ್ತಾ ಹುಂ -ಶಾದಿ ಕೆ ಲಿಯೇ ಭಿ ತಯಾರ್ .. .. ನಾ ನಿವೇದಿಸಿಕೊಂಡೆ.           ಆಕೆ ದುಃಖಿತಳಾಗಿ ನುಡಿದಳು; ನೋಡಿ ಸಾಬ್, ನಾನೂ ಜೀವನದ ಬಗ್ಗೆ ಬಹುತ್ ಬಹೂತ್ ಆಸೆ ಇಟ್ಕೊಂಡಿದ್ದವಳು. ಬಾಳನ್ನು ಬೆಲ್ಲದಂತೆ ಸವಿಯ ಬೇಕೆಂದುಕೊಂಡಿದ್ದವಳು, ಈ ನಸೀಬ್ ಹಾಳಾದ್ದು! ನನ್ನ ಒಳ್ಳೆತನಾನೇ ನನ್ನ ಹೀಗ್ ಮಾಡ್ತು ನಾ ಯಾರ್ಯಾರನ್ನ ಗೆಳೆಯರು ಅಂತ ನಮ್ಮೂರಲ್ಲಿ ನಂಬ್ಕೊಂಡಿದ್ನೊ ಅವ್ರೆ ಪಿಕ್ನಿಕ್ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಬಲತ್ಕ್ಕಾರದಿ ನರಬಾದ್ ಮಾಡಿದ್ರು. ಅದರ ನೋವು ಮರೆಯೋಕೆ ಇಲ್ಲಿಗೆ ಚಿಕ್ಕಮ್ಮನ ನೆಪಕ್ಕೆ ಬಂದೆ. ನಿಮ್ಮ ಪ್ರಾಮಾಣಿಕ ಪ್ರೀತಿ, ನಡೆ-ನುಡಿ ವರ್ಷದಿಂದ ನೋಡಿ, ಕೇಳಿ ಗೊತ್ತಿದೆ, ನಿಮ್ಮಂಥವರಿಗೆ ನಾ ತಕ್ಕವಳಲ್ಲ ಅಂತಲೇ ನಾ ಪ್ರೀತಿಯ ಹಾತ್ ನೀಡಲಿಲ್ಲ. ಈಗ ಹೇಳಿ ಈಗ್ಲೂ ಮೊದಲಿನಂತೆ ಪ್ರೀತಿ, ಪ್ರೇಮದ ಮಾತಾಡ್ತೀರಾ ? ಮದ್ವೆ ಯಾಗ್ತೀರಾ? ಎಂದಳು ರೇಷ್ಮಾ ಒಂದೇ ಉಸಿರಿಗೆ !           ನಾನು ದಿಜ್ಞೂಡನಾಗಿದ್ದೆ! ಎದೆಲಿ ಏನೋ ಇರಿದಂಗ್ ಅನುಭವ ! ರೇಷ್ಮಾ ಕಣ್ಣು ಹೊಳೆಯಾಗಿದ್ದವು ; ನೀರು ಧಾರಾಕಾರ ಸುರೀತಿದ್ವು ! ನಾ ಎರಡೂವರೆ ನಿಮಿಷದ ದೀರ್ಘ ಮೌನ ಚಿಂತನೆಯ ನಂತರ ದೊಡ್ ಉಸಿರ್ ಬಿಟ್ಟು ಹೇಳಿದೆ -’ರೇಷ್ಮಾ ಮೈ ತುಂಸೆ ಹಿ ಶಾದಿಕರೂಂಗ ..”           ಆಕೆ ಈಗ ತಲೆ ಎತ್ತಿ ಕಣ್ಕೂಡಿಸಿ, ಕಣ್ಣರಳಿಸಿ ನೋಡಿದಳು: ನೀರಲ್ ತೇಲೋ ನಕ್ಷತ್ರದಂತೆ ಕಣ್ ಕಂಡವು ! ಮಾತಾಡದೆ ಆಕೆ ಬರೀ ನನ್ನೇ, ನನ್ನ ಬೆಕ್ಕಿನ ಕಣ್‌ಗಳನ್ನೆ ನೋಡ್ತಾ ನಿಂತ್ ಬಿಟ್ಲು ! ನಾ ನಕ್ಕೆ…. ಅವಳು ನಗಲಿಲ್ಲ ಅಡಿಯ ಹೂ ಮುಡಿಗೇರಿತ್ತು ! ಸಂತೇಬೆನ್ನೂರು ಫೈಜ್ನಾಟ್ರಾಜ್ ಕಥೆಗಾರರ  ಪರಿಚಯ: ಕನ್ನಡ ಅಧ್ಯಾಪಕರು,.ನಾಡಿನೆಲ್ಲಾ ಪತ್ರಿಕೆ ಗಳಲ್ಲಿ ಕತೆ ಕವನ,ಪ್ರಬಂಧ, ಲೇಖನ, ಹನಿಗವನ ಪ್ರಕಟಗೊಂಡಿವೆ.ಈಗಾಗಲೇ ಎರಡು ಕವನ ಸಂಕಲನ,ಒಂದು ಮಕ್ಕಳ ಕಥಾ ಸಂಕಲನ,ಒಂದು ಮಕ್ಕಳ ಕವನ ಸಂಕಲನ,ಒಂದು ಕಥಾ ಸಂಕಲನ ಒಟ್ಟು ಐದು ಕೃತಿ ಬಿಡುಗಡೆ ಆಗಿವೆ,ಸ್ನೇಹ ಶ್ರೀ ಪ್ರಶಸ್ತಿ,ಸಂಚಯ ಕಾವ್ಯ ಪುರಸ್ಕಾರಹಾಮಾನಾ ಕಥಾ ಪ್ರಶಸ್ತಿಪಡೆದಿದ್ದಾರೆ…

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಟೊಮ್ಯಾಟೊ ಕೆಚಪ್ ಡಾ.ಅಜಿತ್ ಹರೀಶಿ ಹಲೋ ಸನಾ, ನಾನ್ಯಾರು ಗೊತ್ತಾಯ್ತಾ? ಒಂದು ವಾರದಿಂದ ವಾಟ್ಸ್ ಆಪ್ ಮಾಡದೆ, ನಿನ್ನ ಸಂದೇಶಕ್ಕೆ ಉತ್ತರ ಕೊಡದೆ ಸುಮ್ಮನಿದ್ದನಲ್ಲ… ಜಯ್.. ನಾನು ಜಯ್ ಅಲ್ಲ. ನನ್ನ ಹೆಸರು ಸುಹಾನ್. ನಾನೀಗ ಮೇಲ್ ಮಾಡಿದ್ದು ನಿನಗೆ ಸತ್ಯ ಹೇಳಲಿಕ್ಕೆ… ಸನಾ, ಅಡಿಗೇನೆ ಬರದ ನೀನು, ಮೆಟ್ರಿಮೋನಿಯಲ್ ನ ಪ್ರೊಫೈಲ್ ನಲ್ಲಿ ನನಗೆ ಒಪ್ಪಿಗೆ ಆದಾಗ್ಯೂ, ವಧು ಪರೀಕ್ಷೆ ಮಾಡೋದಿಕ್ಕೆ ಅಂತ ನಾನೊಂದು ವೇಷ ಹಾಕಿದೆ. ಜಯ್, ಕಂಪ್ಯೂಟರ್ ಇಂಜಿನಿಯರ್ ಅಂತ. ನಿಂಗೆ ಟೊಮ್ಯಾಟೊ ಕೆಚಪ್ ಇಷ್ಟ ಅಲ್ವ.. ಅದೂ ಟಿ.ಕೆ ರೆಸ್ಟೋ ದು. ಹೌದು ಕಣೇ.. ಆ ರೆಸ್ಟೋರೆಂಟ್‌ ಮಾಲಿಕ ನಾನು. ನಿಂಗೊತ್ತಾ, ಕೆಚಪ್ ಪಕ್ವ ಟೊಮ್ಯಾಟೊಗಳ ಹೂರಣ. ಪಕ್ವತೆಯ ಪರೀಕ್ಷೆಗೊಳಪಟ್ಟ ಆಯ್ದ ಹಣ್ಣುಗಳಿಂದ ತಯಾರಾಗೋ ಗೊಜ್ಜು. ತಾಜಾತನದ ಖುಷಿಗೆ, ಹೋಟೆಲಿನಲ್ಲೇ ಸಿದ್ಧ ಪಡಿಸುವ ಕಲ್ಪನೆಯೊಂದಿಗೆ, ಹೋಟೆಲ್  ಹೆಸರನ್ನೂ ಅದೇ ಇಟ್ಟು ನಾನು ಉದ್ಯಮ ಪ್ರಾರಂಭಿಸಿದ್ದು. ನಮ್ಮಪ್ಪ ಗೌತಮ್ ಗೋರ್ ನನ್ನ ಬೆನ್ನಿಗೆ ನಿಂತರು. ನಮಗೆ ಕೆಲವು ಪ್ರಾರಂಭಿಕ ಸವಾಲುಗಳಲ್ಲಿ ಉತ್ತಮ ಚೆಫ್ ಅಗತ್ಯವೂ ಒಂದಾಗಿತ್ತು. ಟಿ.ಕೆ ಹೋಟೆಲ್ ನ ಅಡುಗೆಮನೆಗೆ ವಿಶಿಷ್ಟ ರುಚಿಗಳ ಸಮಮಿಳಿತಗಳ ಹೆಗ್ಗಳಿಕೆ ಇರುವ ಚೆಫ್ ಸಮೀರ್ ವಿಜೇತನ ಪ್ರವೇಶವಾದ ನಂತರ, ಹೋಟೆಲ್ ನ ಮೆನುಕಾರ್ಡ್ ಗೆ ಒಂದು ಹೊಸ ಆಯಾಮ ದೊರೆತು, ಉದ್ಯಮ ಬೆಳೆಯತೊಡಗಿತು. ಕೆಚಪ್ ನ ರುಚಿಯ ಚಟ ಹತ್ತಿದವರ ತಿನ್ನುವ ಖಾಯಂ ಅಡ್ಡಾ ಅನ್ನುವಂತಾಯಿತು. ಟಿ.ಕೆ. ಹೋಟೆಲ್ ಹೋಗಿ ರೆಸ್ಟೋರೆಂಟ್ ಆಗಿ, ಕಟ್ಟಡವೂ ಸ್ಥಾನಪಲ್ಲಟ, ನವೀಕರಣಗಳೊಂದಿಗೆ ಬೆಳೆಯುವ ಹೊತ್ತಿಗೆ ಚೆಫ್ ಸಮೀರನ ರುಚಿ ಟಿ.ಕೆ. ರೆಸ್ಟೋಗೆ ಏಕತನದ ಗುರುತಾಯಿತು. ವ್ಯಾಪಾರದ ಕುರುಹಾಯಿತು. ದಿವಸವೂ ಕೆಚಪ್ ಗಾಗಿಯೇ ಅಡುಗೆಮನೆಯ ಒಂದು ಭಾಗ ಮತ್ತು ತಂಡ ಬೇಕು ಅನ್ನುವಷ್ಟು. ದುಡ್ಡುಳ್ಳ ದೊಡ್ಡಜನರ ಖಾಸಗೀ ಸಮಾರಂಭಗಳಿಗೂ, ಭೋಜನಾತಿಥ್ಯದ ಗುತ್ತಿಗೆ ಸಿಗುವಷ್ಟು ಬೆಳೆದು ಕೆಚಪ್ ಒಂದು ನಿತ್ಯ ತಯಾರಾಗಲೇ ಬೇಕಾಯಿತು. ಹೀಗೆ ನಮ್ಮ ಉದ್ಯೋಗ ಉತ್ತುಂಗದಲ್ಲಿದ್ದಾಗಲೇ ನಮ್ಮಪ್ಪ ಅಮ್ಮ ನನಗೆ ಮದುವೆ ಮಾಡ್ಕೋ ಅಂತ ಒತ್ತಾಯ ಹೇರಿದ್ರು. ಬರೀ ಉದ್ಯೋಗದಲ್ಲೇ ಮುಳುಗಿ ಹೋಗಿದ್ದ ನನಗೆ ನಿನ್ನ ಮೆಟ್ರಿಮೋನಿಯಲ್ ಪ್ರಪೋಸಲ್ ಬಂದ ನಂತರ ಸ್ವಲ್ಪ ಮನಸ್ಸು ಸಂಸಾರದ ಕಡೆ ವಾಲಿದೆ. ನಿನಗೆ ನೆನಪಿದೆಯಾ‌… ಕಳೆದ ಭಾನುವಾರ ಅತೀ ಸಂದಣಿಯಿರುವ ಸಂಜೆಯಲ್ಲಿ ಫಾಮಿಲಿ ರೂಮಿನ ಎರಡು ಜನರ ಖಾಲಿ ಟೇಬಲ್ ನ್ನು ಅರಸಿ ನಾನು ಮತ್ತು ನೀನು ಟಿ.ಕೆ.ರೆಸ್ಟೋದಲ್ಲಿ ಕುಳಿತಿದ್ದು. ಅದು ನಮ್ಮ ಮೂರನೆಯ ಭೇಟಿ ಆಗಿತ್ತಲ್ವ. ಮಾಟ್ರಿಮೊನಿಯಲ್ ನ ವಧು -ವರರ ಪಟ್ಟಿಗಳಲ್ಲಿ  ನಾವೇ ಆಯ್ದಕೊಂಡು, ಅಂತೂ ಮಾತನಾಡುವುದು ಅಂತ ಆಗಿ, ಮೊದಲನೇ ಭೇಟಿಯು ಎರಡನೆಯದಕ್ಕೂ, ಮುಂದೆ ಮೂರನೆಯದಕ್ಕೂ ಸಾಗಿ, ಸಾಕಷ್ಟು ಮೆಸೆಂಜರ್, ವಾಟ್ಸಪ್ ಸಂದೇಶಗಳು ಹರಟೆಗೆ ತಿರುಗಿ, ಅಪರಿಚತೆಯು ಪರಿಚಿತ ಅನ್ನುವಷ್ಟಾಗಿ ಇಂದು ಸಲುಗೆ ಎನ್ನುವ ಮಟ್ಟಿಗೆ ಒಡನಾಟ ಬೆಳೆದಿದ್ದು.  ಈ ಸಂದೇಶ, ಪುರಾಣಗಳಲ್ಲಿ ಒಂದೂ ಹೇಳಿಕೊಳ್ಳುವಂತಹ, ನಾನಿಲ್ಲಿ ನಮೂದಿಸಬೇಕಾದಂತಹದ್ದೇನೂ ಇಲ್ಲವಾಗಿ ನನಗೆ ಅದೊಂದು ಶೀತಲ ಮಾತುಕತೆ ಎಂದಷ್ಟೇ ಹೇಳಬಲ್ಲೆ. ಆದರೆ, ಸನಾ… ನನಗೆ ನಿನ್ನ ಆಂತರ್ಯ ಅರಿಯಬೇಕಾಗಿತ್ತು. ನೀನು ಚೆಂದದಿಂದ ನನ್ನ ಮನಸ್ಸು ಗೆದ್ದಿದ್ದರೂ…. ಆ ಮೂಲೆಯ ಟೇಬಲ್ ಆಯ್ಕೆ ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದದ್ದು. ನಿನಗೆ ಮೂಲೆ ಜಾಗ ಇಷ್ಟವಿಲ್ಲ ಅಂತ ಆವತ್ತೇ ಗೊತ್ತಾಗಿದ್ದು ನನಗೆ. ಅಷ್ಟು ಕಿಕ್ಕಿರಿದ ಹೋಟೆಲ್ ನಲ್ಲಿ ಮತ್ತೆಲ್ಲೂ ಅವಕಾಶವಿರದ ಕಾರಣ ಅನಿವಾರ್ಯವಾಗಿ ಕುಳಿತೆ ಅಲ್ವಾ.. ಇಲ್ಲಿಂದಲೇ ಆರಂಭ.. ನಿನ್ನ ಆಂತರಿಕ ಕಿರಿಕಿರಿ, ನನ್ಮುಂದೆ ಹೇಳಿಯೇ ಬಿಟ್ಟೆ ಅದನ್ನೂ… ನಾನೇನೋ ನಿನ್ಜೊತೆ ಕೂತಿದ್ದೆ. ಆದರೆ ಆವತ್ತು ಅಡುಗೆಮನೆಯ ಕೆಚಪ್ ವಿಭಾಗದಲ್ಲಿ ಒಂದು ಸಂಗತಿ ನಡೆದಿತ್ತು ಗೊತ್ತಾ… ಸಿದ್ಧ ಕೆಚಪ್ ನ ಸಂಗ್ರಹವು ಕೊನೆಯಾಗುವ ಹಂತದಲ್ಲಿ… ಆದರೆ ನೈಸರ್ಗಿಕವಾಗಿ ಕಳಿತ ಹಣ್ಣುಗಳ ಸರಬರಾಜು, ಅಂದು ಆಕಸ್ಮಿಕವಾಗಿ ನಮ್ಮ ರೆಸ್ಟೋರೆಂಟ್ ಗೆ ಇಲ್ಲದಂತಾಗಿ, ಟೇಬಲ್ ನ ಆರ್ಡರ್ ಗಳಿಗೆ ಯಥೇಚ್ಛವಾಗಿ ಸೇವೆಯಾಗುತ್ತಿದ್ದ ಕೆಚಪ್ ಗೆ ಕತ್ತರಿ ಬಿತ್ತು. ಮತ್ತೊಮ್ಮೆ ಕೇಳಿದವರಿಗೆ ಮಾತ್ರ ಕೆಚಪ್ ಅನ್ನು ಬಡಿಸುವ ಆದೇಶ ನಾನೇ ಕೊಟ್ಟಿದ್ದೆ. ನಿನ್ನನ್ನ ಪಾರಲೆಲ್ ರೋಡಿನಿಂದ ಪಿಕ್ ಅಪ್ ಮಾಡಿದ್ನಲ್ಲ, ಅಲ್ಲಿಗೆ ಬರೋ ಮುಂಚೇನೆ ಎಲ್ಲ ವೇಟರ್ ಗಳಿಗೂ, ಚೆಫ್ ಗೂ ಹೀಗೆ ಹೇಳಿದ್ದೆ. ನೀನು ಬಂದು ಕುಳಿತಾಗ, ನಾನು ಎಲ್ಲರಂತೆ ಗಿರಾಕಿ ಅನ್ನೋ ಹಾಗೆ ನಡೆಸಿಕೊಳ್ಳಲು ಮೊದಲೇ ಎಲ್ಲರಿಗೂ ಹೇಳಿಯೇ ಇದ್ದೆ. ಅದಾಗಲೇ ನಾನು, ಮೆನು ಕಾರ್ಡ್ ಒಮ್ಮೆ ಕಣ್ಣಾಡಿಸಿ ಪನೀರ್ ಮಂಚೂರಿಯನ್ ತಿನ್ನುವುದು, ನಿನ್ನನ್ನು ಕೇಳಿ, ನಿನಗೂ ಇಷ್ಟವಾದರೆ ಆರ್ಡರ್ ‌ಕೊಡುವುದೆಂದು… ಅಂದು ಕೊಂಡಿದ್ದೆ. ಆದರೆ ನೀನು ಅಮೇರಿಕನ್ ಕ್ರಿಸ್ಪಿ ನೂಡಲ್ಸ್ ಗೆ ಆರ್ಡರ್ ಕೂಡ ಕೊಟ್ಟಾಗಿತ್ತು… ನೀನೇ ಮೊದಲು ಹೇಳಿದ್ದರಿಂದ, ಈಗ ವಿಧಿಗಳೇನೂ ಇಲ್ಲವಾಗಿ ನನಗಾಗಿ ಆರ್ಡರ್ ಇತ್ತೆ. ಟೇಬಲ್ ನ ಆಯ್ಕೆ, ಇಬ್ಬರ ಬೇರೆ ಬೇರೆ ರುಚಿಗಳು ನನ್ನ ಗಮನಕ್ಕೆ ಬಂದಿತ್ತು ಆವತ್ತೇ.  ಒಂದು ತಾಸು ಕುಳಿತು, ಎದ್ದು ಹೋಗಬಹುದಾದ ಜಾಗ,  ಚಾಟ್ ವಿಷಯದಲ್ಲೇ ವೈರುಧ್ಯ. ಇನ್ನೂ ಏನೇನು ಭೇದವಿದೆಯೋ ಎಂಬ ಕುತೂಹಲ ಥಟ್ಟನೆ ಕೆರಳಿತ್ತು  ನನಗೆ. ಸನಾ, ಅದಾಗಲೇ ನೀನು ಸೆಲ್ಫೀ ಮೋಡ್ ಅನ್ನೇ ಕನ್ನಡಿಯಾಗಿಸಿ ಮೋರೆಯನ್ನು ನೋಡಿ, ಓರೆ ಕೋರೆಗಳಲ್ಲಿ ಮುಳುಗಿದ್ದೆ. ಇನ್ನು ಖಾಲಿ ಟೇಬಲ್, ತಿನ್ನಲು ಏನೂ ಇಲ್ಲ. ಸುಮ್ಮನೆ ಕೂರುವ ಬದಲು ಮಾತಿಗೆಳೆಯಲಾ? ಹೀಗೇ ಇಂದಿನ ಭೇಟಿ, ಹಿಂದಿನ ಎರಡೂ ಭೇಟಿಗಳೂ ನೀನೇ ಮೊದಲು ಕೇಳಿಯೇ ಆಗಿದ್ದು. ನಾನು ಒಪ್ಪಿ ಬಂದಿದ್ದೆ ಅಷ್ಟೇ. ದುಡ್ಡು ಮಾತ್ರ ನಾನೇ ಕೊಟ್ಟಿದ್ದೆ. ಗಂಡಸಿನ ಸಾರ್ವಕಾಲಿಕ ಕರ್ತವ್ಯ. ಹೆಣ್ಣಿಗಾಗಿ ತೆರು, ಹೆಣ್ಣಿನ ಭಾರ ಹೊರು, ಹೆಣ್ಣಿನಿಂದಲೇ ಶುರು, ಅಂತೆಲ್ಲಾ ನಾನೇ ಮನಸ್ಸಲ್ಲೇ ಅಳೆದು ತೆಗೆದು, ಕೊನೆಗೆ ನಾನು ಪ್ರಶ್ನೆ ಕೇಳಿದ್ದೆ ‘ನೀನು ತಿಂಗಳಲ್ಲಿ ಎಷ್ಟು ಖರ್ಚು ‌ಮಾಡ್ತೀಯಾ?’ ಅಂತ. ನಿನ್ನ ನಿರ್ವಹಣೆ ನನ್ನಿಂದ ಸಾಧ್ಯವೇ ಎಂಬ ವ್ಯಾವಹಾರಿಕ ಮತ್ತು ಅತ್ಯಂತ ಪ್ರಾಯೋಗಿಕವಾಗಿ ನಿನ್ನ ಬಗ್ಗೆ ಅರಿಯಲು. ಈ ಪ್ರಶ್ನೆ, ಹಿಂದೆಂದೂ ನಾನು ನಿನಗೆ ಕೇಳಿದ್ದಿಲ್ಲ.  ಉತ್ತರ ಸಿದ್ಧವೂ‌ ಇರಲಿಲ್ಲ ನಿನ್ನಲ್ಲಿ ಅಲ್ವಾ? ಯಾವತ್ತಾದರೂ ಖರ್ಚುವೆಚ್ಚಗಳ ದಾಖಲಿಸಿಟ್ಟಿರ್ತೀಯಾ ಅಂತ‌? ನೀನೆಷ್ಟು ಗಲಿಬಿಲಿಯಾಗಿದ್ದೆ ಗೊತ್ತಾ? ನನಗೆ ಇನ್ನೊಂದು ಅಸಮತೆ ಗುರುತು ಹತ್ತಿತು.  ‘ಇರಲಿ‌ ಬಿಡು, ನೀನೆಷ್ಟು ದುಬಾರಿ ನನಗೆ ಅಂತ ತಿಳಿಯಲು ಕೇಳಿದೆ’ ಅಂದು ಮಾತು ಬದಲಿಸಿದ್ದೆ.  ಆದರೆ ಸನಾ, ನಿನ್ನ ಉತ್ತರ ನನಗೆ ಸ್ವಲ್ಪ ಜಾಸ್ತಿನೇ ಶಾಕ್ ಕೊಟ್ಟಿತು.  ‘ನಂದೇ ದುಡ್ಡು. ನಾನೇ ಖರ್ಚು‌ ಮಾಡೋದು. ನಿನಗ್ಯಾಕೆ ಲೆಕ್ಕ ಕೊಡ್ಬೇಕು?  ನಾನು ಇಂಡಿಪೆಂಡೆಂಟ್‌’ ಅಂದೆ. ಮತ್ತೆ ಮೊಬೈಲ್ ನ ಜೊತೆ ಚಕ್ಕಂದ ಆಡ್ತಾ ಕುಳಿತೆ. ನೀನು ಇಷ್ಟು ಹೇಳಿದ್ರಿಂದ ನನಗೆ ಇನ್ನೊಂದು ಅಂಶ ಕಂಡುಕೊಂಡಂತೆ ಆಯಿತು. ಇಂಡಿಪೆಂಡೆಂಟ್‌ ‌ಆಗಿ ಬದುಕೋದಾದ್ರೆ, ನಮ್ಮಿಚ್ಛೆಯಂತೆಯೇ ನಡ್ಕೊಳೋದಾದ್ರೆ ಮದುವೆ ಯಾಕಾಗ್ಬೇಕು? ಒಂಚೂರು ಒಟ್ಟೊಟ್ಟಿಗೆ ಹೊಂದಿಕೊಂಡು ಹೋಗ್ಲಿಕ್ಕೆ ಮದುವೆ‌ ಅಲ್ವ? ಒಂಟಿ ಬದುಕಬಹುದು.. ಹಕ್ಕಿ ಹಾಗೇ ಸ್ವತಂತ್ರವಾಗಿ. ಆದರೆ ಜೊತೆಗೆ ಇನ್ನೊಂದು ಜೀವ ಒಟ್ಟಿಗೇ ಹೆಜ್ಜೆ ಇಡೋದಿದ್ರೆ ಜೀವನದ ದಾರಿ ಬೇಸರವಾಗದಂತೆ ಸವೆದು ಹೋಗುತ್ತೆ ಅಲ್ವಾ?  ಅಷ್ಟು ಹೊತ್ತಿಗೆ ನಮ್ಮಿಬ್ಬರ ಮುಂದೂ ತಿಂಡಿಯು ಬಂದು, ವೇಟರ್ ಬಡಿಸಿ ಹೋದ. ನೂಡಲ್ಸ್ ಕ್ರಿಸ್ಪಿ ಇದ್ದರೂ ಅದನ್ನು ಅದ್ದಿ ತೆಗೆದು ಬಾಯಿಗಿಡುವ ಮುನ್ನ ನೀನು ಚಿಲ್ಲಿ ಸಾಸ್ ಮತ್ತು ಟೊಮ್ಯಾಟೋ ಕೆಚಪ ಅನ್ನು ನಿನ್ನದೇ ಆದ ಹದದಲ್ಲಿ ಬೆರೆಸಿ ತಿನ್ನುವವಳು ಅಂತ‌ ಆವತ್ತು ಗೊತ್ತಾಯ್ತು. ಕೆಚಪ್ ಪುಟ್ಟದೇ ಕಪ್ ನಲ್ಲಿ ಮಿತಿಯಲ್ಲಿ ತಂದಿಟ್ಟಿದ್ದು, ನಿನಗೆ ಇನ್ನೊಂದಿಷ್ಟು ಬೇಕು ಅನಿಸ್ತು. ಸಾಸ್ ಗಿಂತ ಕೆಚಪ್ ಅನ್ನು ಜಾಸ್ತಿ‌ ಬೆರೆಸಿಕೊಳ್ಳುವ ನೀನು, ನಿನ್ನ ಪ್ಲೇಟ್ ಅನ್ನು ನಿನ್ನ ರುಚಿಗೆ ತಕ್ಕಂತೆ ಪರಿವರ್ತಿಸುವ ಕ್ರಿಯೆಯಲ್ಲಿ ತಲ್ಲೀನಳಾಗಿದ್ದೆ. ಇದನ್ನೆಲ್ಲಾ ಗಮನಿಸ್ತಾ, ಅದಾಗಲೇ ಪನೀರ್ ಮಂಚೂರಿಯನ್ ರುಚಿಯ ಹಿಡಿದು ಆಸ್ವಾದದಲ್ಲಿ ತೊಡಗಿದ್ದೆ ನಾನು. ಸರಳ ಲೆಕ್ಕದ ನನಗೆ ಎಲ್ಲವೂ ಹದದಲ್ಲೇ‌ ಇದೆ ಎನಿಸಿತ್ತು. ನೀನು ಕೆಚಪ್ ನ ಆರ್ಡರ್ ಮಾಡಲು ವೇಟರ್ ನ್ನು ಕೂಗಿ, ಆದೇಶವಿತ್ತೆ. ಅವನು‌ ಹೋದವನು ಮತ್ತೆ ಬರಲಿಲ್ಲ.. ಯಾಕೆ ಬರಲಿಲ್ಲ ನಿಂಗೆನಾದರೂ ಗೊತ್ತಾಯ್ತಾ? ಇದೇ ಸಮಯ, ಸನಾ …. ಅಡಗೆಮನೆ ಒಳಗೆ ಏನು ಆಗ್ತಾ ಇತ್ತು ಗೊತ್ತಾ? ಗಳಿತ ಕೆಂಪು ಹಣ್ಣುಗಳ ಹಿಸುಕಿದರೆ‌ ಮಾತ್ರ ಕೆಚಪ್ ಸಿದ್ಧವಾಗೋದು ಕಣೇ. ಕೆಚಪ್ ಗೆ ಅಚ್ಚ ಕೆಂಪು ಹೊಳಪಿನ ಬಣ್ಣ ಬರಬೇಕಾದರೆ, ಕಳಿತ ಹಣ್ಣುಗಳನ್ನು ಆಯ್ದು,  ಹವೆಯಲ್ಲಿ ಬಣ್ಣ ಬದಲಾಗದಂತೆ, ಸಿಪ್ಪೆ ಮಾತ್ರ ಬೇರೆಯಾಗುವಂತೆ ಬೇಯಿಸಿಕೊಳ್ಳುವುದು ಕ್ರಮ. ಹವೆಯೊಳಗೇ ಬೇಯುವ ಕ್ರಿಯೆಯಲ್ಲಿ ಸಿಪ್ಪೆ ಬೇರೆ, ಗುಳ ಬೇರೆಯಾಗಿ, ಹಣ್ಣಿಗೆ ಹಣ್ಣೇ ಹೊರಗಿನ ತೆಳುವಾದ ಆದರೆ ಪ್ಲಾಸ್ಟಿಕ್ ನಂತಹ ಪದರದಿಂದ ಬೇರ್ಪಡುವುದು. ಇದು ಹಿಸುಕುವ ಕ್ರಿಯೆಗೆ ಪೂರ್ವ ತಯಾರಿ‌. ಆವತ್ತು ಕೆಚಪ್ ಗೆ ತಕ್ಕ ಹಣ್ಣುಗಳು ಹೋಲ್ ಸೇಲ್ ಸಪ್ಲೈ ಮಾಡುತ್ತಿದ್ದ ತರಕಾರಿ ಮಾರುಕಟ್ಟೆಯಿಂದ ಆಗದೆ, ಅರೆಬರೆ ಹಂಪು, ಹಣ್ಣಾಗುತ್ತಿರುವ ಟೊಮ್ಯಾಟೊ ಗಳ ರಾಶಿ ಬಂದು ಬಿದ್ದಿತ್ತು. ಇಂತಹ ಅಪಕ್ವ ಟೊಮ್ಯಾಟೊ ಬೇಯಿಸಿದರೂ ಸರಿಯಾಗಿ ಸಿಪ್ಪೆಯಿಂದ ಬೇರ್ಪಡದು, ಕೆಚಪ್ ಗೆ ಬಣ್ಣವೂ ಬರದು. ಸಿದ್ಧಗೊಳಿಸಬೇಕಾಗಿದ್ದ ಪ್ರಮಾಣದಲ್ಲಿ ಗಣನೀಯ ಕಡಿತ ಮಾಡುವಂತಾಯಿತು. ರಾಶಿಯಿಂದ ಆಯ್ದು, ಮುಂದಿನ ಕ್ರಿಯೆಗೆ ತೊಡಗಿದ ತಂಡಕ್ಕೆ ಕೆಚಪ್ ನ ಬಣ್ಣ, ತಿಳಿಯಾಗಿದ್ದು ಅವರ ಮನಸ್ಸಿನಲ್ಲಿ ಇರಿಸುಮುರಿಸು ತಂದಿತ್ತು. ಬಣ್ಣಕ್ಕೆಂದು ಬೇರೆ ಯಾವುದನ್ನು ಸೇರಿಸಿದರೂ‌ ರುಚಿ ಹೋಗುವುದು. ಚೆಫ್ ಸಮೀರನ ತಲೆಯಲ್ಲಿ ಇದೇ ಸಮಯದಲ್ಲಿ ಬರೀ ಯೋಚನೆಗಳು. ಒಂದನ್ನೂ ಪ್ರಯೋಗಕ್ಕಾಗಿ ಕಾರ್ಯಗತಗೊಳಿಸಲು ಆಗುತ್ತಿಲ್ಲ. ತಂಡಕ್ಕೆ ಮಾಡಬೇಕಾದ ಬದಲೀ ಕೆಲಸ ಹೇಳಲಾಗುತ್ತಿಲ್ಲ. ಆಗಲೇ ನಾನು ಎದ್ದು ಹೋಗಿದ್ದು. ನಿನಗೆ ನೆನಪಿದೆಯಾ? ಫ್ರೆಷ್ ಆಗಲು ಹೋಗಿಬರುವ ನೆಪದಲ್ಲಿ, ನಮ್ಮ ಕಿಚನ್ ಗೆ ಹೋಗಿ ಬಂದೆ.  ಗಳಿತ ಹುಣಸೇಹಣ್ಣಿನ ಕಲ್ಕವನ್ನು ರುಚಿಗೆ ಮತ್ತು ಬಣ್ಣ ಬದಲಾವಣೆಗೆ ಬೆರೆಸಿ ಉಪ್ಪು, ಸಕ್ಕರೆ, ವಿನೆಗರ್ ನ ಹದವನ್ನು ರುಚಿ ನೋಡುತ್ತಾ ಬೆರೆಸಲು ಖುದ್ದು ಜವಾಬ್ದಾರಿ ಹೊರಲು, ಸಮೀರ್ ಗೆ ಹೇಳಿ ಬಂದೆ. ಕೆಚಪ್ ನ ಸಂಗ್ರಹ ಮುಗಿದೇ ಹೋಯಿತು ಅನ್ನುವಾಗ ನೀನು ಇಟ್ಟಿದ್ದ‌ ಆರ್ಡರ್ ‌ಟೇಬಲ್ ಗೆ ತಲುಪದೇ, ನಿನಗೆ ಅಸಮಾಧಾ‌ನ ಹೆಚ್ಚಾಗಿ, ಟೇಬಲ್ ನ ಸಪ್ಲೈರ್ ಗೆ, ಹೋಟೆಲ್ ನ ಸಿಬ್ಬಂದಿಗೆ ಹರಿಹಾಯ್ದು, ರಂಪಾಟವಾಗಿ, ನೆನಪಿದೆ ಅಲ್ವಾ…. ನಿನ್ನನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ ಎನಿಸಿತ್ತು ಆ ಹೊತ್ತಿಗೆ.‌ ಮೊದಲು ಹೊರಗೆ ಹೋಗಬೇಕೆನ್ನುವಷ್ಟು‌ ವಿಚಿತ್ರ ಹಿಂಸೆ ನನಗೆ. ಕೋಪ, ಅಸಹನೆ, ಆಹಾರದ ಬಗ್ಗೆ, ಬೇರೆಯವರ ಬಗ್ಗೆ ಅಗೌರವ…. ನೀನು ನಡೆದುಕೊಂಡ ರೀತಿ ಯಾವುದನ್ನೂ ಅನುಭವಿಸಲಾಗದೆ ನನ್ನ ಮನಸ್ಸಿಗೇ ರೇಜಿಗೆ ಹುಟ್ಟಿತ್ತು ಆ ಸಂಜೆಯ ಬಗ್ಗೆ, ನಿನ್ನ ವರ್ತನೆಯ ಬಗ್ಗೆ. ಹೋಟೆಲ್ ನ ಆಂತರಿಕ ವಿಷಯವನ್ನು ಖುದ್ದು ಮ್ಯಾನೇಜರ್ ಬಂದು ನಿನ್ನಲ್ಲಿ ವಿನಯವಾಗಿ, ವಾಸ್ತವವಾಗಿ ನಡೆದದ್ದನ್ನು ವಿವರಿಸದ ಮೇಲೂ ನಿನ್ನ ಮನಸ್ಸಿಗೆ ಇಳಿಯಲೇ ಇಲ್ಲ.. ಗಯ್ಯಾಳಿ ಹಾಗಿತ್ತು… ನಿನ್ನ ವರ್ತನೆ ನನ್ನನ್ನು ಇನ್ನಷ್ಟು ದೂರ ನೂಕಿತ್ತು.. ಈ ಮಾಟ್ರಿಮೋನಿಯಲ್ ಮುಲಾಕಾತ್ ಬಗ್ಗೆ. ಒಂದೂ ಮಾತನಾಡದೆ, ಸಿಬ್ಬಂದಿಗಳಿಗೆ, ಕ್ಷಮಿಸಿ ಅಂದಷ್ಟೇ ಹೇಳಿ ಹೊರಡುವವನಿದ್ದೆ…. ಆದರೆ,..

ಕಥಾಗುಚ್ಛ Read Post »

ನಿಮ್ಮೊಂದಿಗೆ

ಅನುವಾದ

ಮೂರು ಅನುವಾದಿತ ಗಜಲುಗಳು. ಉತ್ತಮ ಯಲಿಗಾರ ಗಜಲ್-ಒಂದು ಹೆಜ್ಜೆ ಶಬ್ದವೊಂದು ಕೇಳಿಸಿದರೆ ಅನಿಸುವದು ನೀನೆಂದು ನೆರಳೊಂದು ಬಳಿ ಸುಳಿದರೆ ಅನಿಸುವದು ನೀನೆಂದು ಹೂದೋಟದಲಿ ರೆಂಬೆಯೊಂದನು ಮುಟ್ಟಲು ನಾಚಿ ನಲಿದಾಡಿದರೆ ಅನಿಸುವದು ನೀನೆಂದು ಚಂದನದಿ ಸುವಾಸಿತ ಮದಭರಿತ ಗಾಳಿಯು ಅನಂದದಿ ಮೈಸೋಕಲು ಅನಿಸುವದು ನೀನೆಂದು ತಾರೆಗಳ ಮಿನುಗುವ ಹೊದಿಕೆ ಹೊದ್ದುಕೊಂಡು ನದಿಯೊಂದು ಹರಿದಾಡಿದರೆ ಅನಿಸುವದು ನೀನೆಂದು ಸರಿರಾತ್ರಿಯಲಿ ಬಂದು ಒಂದು ಹೊನ್ನ ರಶ್ಮಿ ನನ್ನೊಂದಿಗೆ ಉರುಳಾಡಿದರೆ ಅನಿಸುವದು ನೀನೆಂದು. ಮೂಲ: ಜಾನ್ ನಿಸ್ಸಾರ್ ಅಖತರ್ (ಉರ್ದು) ============================== ಗಜಲ್ -2 ದ್ವೇಷವೇ ಇರಲಿ, ಮನ ನೋಯಿಸಲಾದರೂ ಬಾ ಬಾ ಮತ್ತೆ ನನ್ನ ತೊರೆದು ಹೋಗಲಾದರೂ ಬಾ  ಇರಲಿ ಚೂರು ಭರವಸೆ ನನ್ನ ಹೆಮ್ಮೆಯ ಒಲವ ಮೇಲೆ ನನ್ನ ಮನವೊಲಿಸಲು ನೀ ಒಮ್ಮೆಯಾದರೂ ಬಾ ಮೊದಲಿನಂತಿಲ್ಲ ನಿಜ ನನ್ನ ನಿನ್ನ ಬಾಂಧವ್ಯ ಜಗದ ನಿಯಮವನ್ನೇ ಪಾಲಿಸಲಾದರೂ ಬಾ ವರ್ಷಗಳಿಂದ ವಂಚಿತ ನಾನು ಅಳುವಿನ ಆಹ್ಲಾದದಿಂದ ನನ್ನನು ಈ ಹೊತ್ತು ಅಳಿಸಲಾದರೂ ಬಾ ಯಾರ್ಯಾರಿಗೆ ವಿವರಿಸಲಿ ನೀ ಹೋದ ಕಾರಣ ನನ್ನ ಮೇಲೆ ಕೋಪವಿರಲು ಜಗಕಾಗಿಯಾದರೂ ಬಾ ಈ ಹುಚ್ಚು ಮನಸಿಗಿದೆ ಇನ್ನೂ ನಿನ್ನಿಂದ ಆಕಾಂಕ್ಷೆ ಆ ಅಂತಿಮ ಆಶಾದೀಪವನ್ನು ನಂದಿಸಲಾದರೂ ಬಾ. ಮೂಲ: ಅಹ್ಮದ್ ಫರಾಜ್ (ಉರ್ದು) ========================================= ಗಜಲ್ -3 ನೋವುಗಳೆಲ್ಲ ಹೀಗೆ ಒಳಗೊಳಗೇ ಚುಚ್ಚುವದಿಲ್ಲ ಹೃದಯದ ನೋವು ಇದು,  ವ್ಯರ್ಥವಾಗುವದಿಲ್ಲ ಯಾವ ಸ್ನೇಹಿತನೂ ಇಲ್ಲ, ರಹಸ್ಯ ಹಂಚಿಕೊಂಡವನಿಲ್ಲ ಹೃದಯವೊಂದಿತ್ತು ನನ್ನದು, ಅದೂ ದಯೆ ತೋರುವದಿಲ್ಲ ನನ್ನ ಆತ್ಮದ ನಿಜಾಂಶ , ನನ್ನ ಅಶ್ರುಗಳನು ಕೇಳು ನನ್ನ ತೋರಿಕೆಯ ನಗು,  ನನ್ನ ನಿಜಾನುವಾದವಲ್ಲ ಆ ಕೂದಲನ್ನು ಕೂಗು , ಆ ನಯನವನ್ನು ಕೋರು ತುಂಬಾ ಬಿಸಿಲು ಇಲ್ಲಿ, ಯಾವ ಸೂರು ಇಲ್ಲ ಈ ಕಲ್ಲುಗಳ ಮೇಲೆ ನಡೆದು ಬರುವದಾದರೆ ಹೊರಡು ನನ್ನ ಮನೆಯ ದಾರಿಯಲ್ಲಿ ಅಕಾಶಗಂಗೆ ಇಲ್ಲ ಮೂಲ : ಮುಸ್ತಫಾ ಜೈದಿ ================================== ಕವಿ ಪರಿಚಯ: ಉತ್ತಮ ಯಲಿಗಾರ ಬೆಳಗಾವಿಯಲ್ಲಿ ಹುಟ್ಟಿ ಅಲ್ಲೇ ಎಂಜಿನಿಯರಿಂಗ್ ವರೆಗೆ ಶಿಕ್ಷಣ ಪಡೆದು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿ BSNL ನಲ್ಲಿ ಉಪಮಂಡಲ ಅಭಿಯಾತರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ಹವ್ಯಾಸಿಯಾಗಿ ಕೆಲಸ ಮಾಡುತ್ತಿದ್ದು ಮೂರೂ ಭಾಷೆಯಲ್ಲಿ ಕವನ ಸಂಕಲನ ಹೊರತರುವ ಕನಸು ಹೊತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕವನ ಹಂಚಿಕೊಳ್ಳುವ ಇವರಿಗೆ ಉರ್ದುವಿನ ಪ್ರಸಿದ್ಧ ಗಜಲ್ ಗಳನ್ನು ಕನ್ನಡಕ್ಕೆ ತರುವ ಹಂಬಲ. ವಿವಿಧ ವೇದಿಕೆಗಳಲ್ಲಿ (ಕಹಳೆ, ಯುವರಕೋಟ್, ರಾಸ್ಯಮ್ ಇತ್ಯಾದಿ) ವಿಭಿನ್ನ ಶೈಲಿಯಲ್ಲಿ ಕವನವಾಚನ ಮಾಡುವದು ಇವರ ಹವ್ಯಾಸ.

ಅನುವಾದ Read Post »

ನಿಮ್ಮೊಂದಿಗೆ

ಅನುವಾದ

ಹಿಂದಿ ಮೂಲ:    ಅದ್ನಾನ್ ಕಾಫೀಲ್ ದರ್ವೇಶ್ ಪರಿಚಯ: ಕವಿ ಅದ್ನಾನ್ ಕಾಫೀಲ್ ದರ್ವೇಶ್ ಉತ್ತರ ಪ್ರದೇಶದ ಬಾಲಿಯಾದವರು. ಪ್ರಸ್ತುತ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಬರೆಯುತ್ತಾರೆ. ಹಿಂದಿಯ ಪ್ರಖ್ಯಾತ ಪತ್ರಿಕೆಗಳಲ್ಲಿ ಅವರ ಕವನಗಳು ಬೆಳಕು ಕಂಡಿವೆ. ಅವರು ಅನುವಾದದಲ್ಲಿಯೂ ತೊಡಗಿಕೊಂಡಿದ್ದಾರೆ. ಅವರ ಕಾವ್ಯಕ್ಕೆ ಈಗಾಗಲೇ ಮೂರು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕನ್ನಡಕ್ಕೆ: ಕಮಲಾಕರ ಕಡವೆ ಪರಿಚಯ: ಕಮಲಾಕರ ಕಡವೆ, ಮೂಲತಃ ಉತ್ತರಕನ್ನಡದ ಶಿರಸಿಯ ಕಡವೆ ಗ್ರಾಮದವರು, ಈಗ ಮಹಾರಾಷ್ಟ್ರದ ಅಹಮದನಗರದಲ್ಲಿ ಕಾಲೇಜು ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ ಮತ್ತು ಇಂಗ್ಲಿಷ ಭಾಷೆಗಳಲ್ಲಿ ಬರವಣಿಗೆ, ಅನುವಾದ ನಡೆಸುವ ಅವರು ಇವರೆಗೆ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ: ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017). ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ (ಕುವೆಂಪು ಭಾಷಾ ಭಾರತಿ, 2018). ಕನ್ನಡದ ಸಮಕಾಲೀನ ಕಾವ್ಯದ ಇಂಗ್ಲೀಷ ಅನುವಾದಗಳ ಪುಸ್ತಕವೊಂದರ ತಯಾರಿಯಲ್ಲಿ ಇದ್ದಾರೆ. ಸಾವಿಗೀಡಾದ ಕವಿ ದುಃಖ ಯಾವಾಗ ನನ್ನ ಅಂತರಂಗದ ಸಂದುಗೊಂದುಗೊಳಗಿಂದೆಲ್ಲ ಜಿನುಗುತ್ತಿತ್ತೋ ನಾನು ಹುಚ್ಚನಂತೆ ತಲೆ ಚಚ್ಚಿಕೊಳ್ಳುತ್ತಿದ್ದೆ ಕನಸಿನಲ್ಲೂ ಎಲ್ಲೆಲ್ಲೋ ಓಡುತ್ತಿದ್ದೆ ಆಗಾಗ ಅಲ್ಲಿಲ್ಲಿ ಬೀಳುತ್ತಿದ್ದೆ ಕಗ್ಗತ್ತಲ ದ್ವೀಪದ ಕಿನಾರೆಯಲ್ಲಿ ನಿಂತು ನರಳುತ್ತಿದ್ದೆ ಗೊತ್ತಿತ್ತು ನನಗೆ ನನ್ನ ಈ ನರಕದ ಅಂತ ನಿನಗೆ ತಿಳಿಯ ಬೇಕಿರುವುದು ಇದು ಮಾತ್ರ: ನಾನೊಬ್ಬ ಕವಿ ಮತ್ತು ಕಾವ್ಯದ ಅನಂತ ಏಕಾಂತದಲ್ಲಿ ಸಾವಿಗೀಡಾಗಿದ್ದೆ ========================= ನಗುತಿರುವೆ ನಾನೀಗ ದೂರು ಇನಿತಿಲ್ಲ ನೋಡು ನಿನ್ನ ಮೇಲೆ ಕೋಪವೂ ಇನಿತಿಲ್ಲ ನಿಷ್ಠೆಯೂ ಇಲ್ಲ, ನೇಮವೂ ಉಳಿದಿಲ್ಲ ಈಗ ನಿನ್ನಿಂದಾಗಿ ಶಿಕ್ಷೆಯೂ ಇನಿತಿಲ್ಲ ಅವಳು ನನ್ನ ಜೊತೆಗೀಗ ಇಲ್ಲವೇನೋ ಹೌದು ನಿಜವೆಂದರೆ ನಮ್ಮ ನಡುವೆ ದೂರವೂ ಇನಿತಿಲ್ಲ ಸೊರಗಿ ಹೋದೆ ಉಸಿರೇ ನಿಂತಂತೆ ಅವಳ ಪವಾಡವೇ! ನನ್ನ ಚಲನೆಯೂ ಇನಿತಿಲ್ಲ ಎರಡೂ ಬದಿ ಶವವೊಂದು ಬಿದ್ದಿದೆ ಉಸಿರು ನಿಂತ ಗುರುತೂ ಇನಿತಿಲ್ಲ ತಲೆ ಚಚ್ಚಿ ಕೊಳುವ ದಿನಗಳು ಕಳೆದವು ದರವೇಶನಿಗೆ ದೇವದಯೆಯೂ ಇನಿತಿಲ್ಲ. ============================== ಕಮಲಾಕರ ಕಡವೆ

ಅನುವಾದ Read Post »

ಕಾವ್ಯಯಾನ

ಕಾವ್ಯಯಾನ

ಹೂ ಕವಿತೆಗಳು. ರಂಗಮ್ಮ ಹೊದೇಕಲ್ ಗಂಧವಾಗಲು ಬೇರು ಎಷ್ಟು ನೋಯಬೇಕೋ.. ಘಮ ವಾಗಲು ದಾರಿ ಎಷ್ಟು ಸವೆಯಬೇಕೋ.. ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಸೋತ ಮಾತು ಹುಗಿದು ಗಿಡ ನೆಡಬೇಕು ಅರಳಿದ ಹೂವಾದರೂ ಮಾತ ಕಲಿಸಿಯಾತು!! ಒಲವೂ ವಿಷವಾಗುವ ಕಾಲದಲ್ಲಿ ಹೂವೂ ಕೆರಳುವುದು ಅಚ್ಚರಿಯೇನಲ್ಲ!! ಬೇರಿನ ನೋವು..ಹೂವಿನ ನಗೆಯು! ನೊಂದೆನೆಂದು ಡಂಗೂರ ಸಾರದ ಬೇರು ಹೂ ನಗೆಯಲ್ಲಿ  ಲೋಕ ಸೆಳೆಯುತ್ತದೆ! ಬೇರಿನ ಕಣ್ಣೀರು ಗುರುತಾದವರು ಹೂವಿನ ಘಮಕ್ಕೆ ಕೃತಜ್ಞತೆ ಸಲ್ಲಿಸುತ್ತಾರೆ-ಮೌನದಲ್ಲಿ! ಹೂವಿನ ಸೌಂದರ್ಯ ಬೇರಿನ ಕಣ್ಣಲ್ಲಿದೆ ಬೇರಿನ ನಗು ಅರಳಿದ ಹೂವಿನಲ್ಲಿ!! ತುಳಿಯುತ್ತಾರೆಂದು ಗೊತ್ತಿದ್ದೂ ನೆಲಕೆ ಹೂ ಚಲ್ಲುವ ಮರ ನಮಗೆ ಮಾದರಿಯಾಗುವುದೇ ಇಲ್ಲ!! ಮತ್ತೇನಿಲ್ಲ… ನನ್ನ ಶಕ್ತಿಯ ಗುಟ್ಟು ನನ್ನನ್ನೆತ್ತಿ ನಿಲ್ಲಿಸಿದ ಅದೃಶ್ಯ ಬೇರಿನದು! ಈ ಹೂ ನಗು ಬೇರಿನ ಅಂತಃಕರಣಕ್ಕೆ ಕೃತಜ್ಞತೆಯು..! ನೆಲದಲ್ಲಿ ಭದ್ರ ಬೇರೂರಿ ಆಕಾಶಕ್ಕೆ ಕಣ್ಣು ನೆಟ್ಟು ಪರಿಮಳದ ಬೆಡಗ ಹಾಡುವ ಸೋಜಿಗವ ಹೂಗಳೇ ತೆರೆದಾವು ನೋಡಾ…….!! ಮತ್ತೇನು? ಹೂ ಅರಳುತ್ತದೆ ಉರುಳುತ್ತದೆ..!! ಅಷ್ಟರಲ್ಲೇ ಬದುಕೂ ಇದೆ!! ಹೂ ಬೆಡಗ ಹಾಡುತ್ತಾ ನಿಲ್ಲಬೇಡ! ಬೆನ್ನ ಹಿಂದೆ ಚೂರಿ ಇದ್ದಾತು! ಹೂ ಗಂಧದ ಹಾಗೆ ಮೌನ ತೇಲಿಬರುತ್ತದೆ ಎಲ್ಲರಿಗೂ ತಲುಪಲಾಗದು! ರಂಗಮ್ಮ ಹೊದೇಕಲ್ ಕವಿಪರಿಚಯ: ಶಾಲಾ ಶಿಕ್ಷಕಿಯಾದ ಇವರು ಶೈನಾ ಕೈಬರಹದ ಪತ್ರಿಕೆಯ ಕೈಬರಹಗಾರ್ತಿ.ಒಳದನಿ,ಜೀವಪ್ರೀತಿಯ ಹಾಡು ಇವರ ಕವನಸಂಕಲನಗಳು.

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ ಚಂದ್ರಪ್ರಭ.ಬಿ ಅದೊಂದು ದಿನ ಅಪ್ಪ ನನ್ನ ಅವಸರಿಸಿ ಬರ ಹೇಳಿದ ಶಾಲೆಯಿಂದ ಓಡೋಡಿ ಬಂದ ನನ್ನ ತೆಕ್ಕೆಯಲ್ಲಿ ಬಿಗಿದು ಒಂದೇ ಸಮ ರೋಧಿಸಿದ ಅವನೂ ಅನಾಥನಾಗಿದ್ದ ನನ್ನಂತೆ ತನ್ನವ್ವನ ಕಳಕೊಂಡು ಆಡು ಕುರಿ ದನ ಮೇಯಿಸುತ್ತ ಅಪ್ಪನ ಕೂಗಿಗೆ ಓಗೊಡುತ್ತ ಆಗಾಗ ಶಾಲೆಗೂ ಮುಖ ತೋರಿಸುತಿದ್ದೆ ವರ್ಷದ ಕೊನೆಗೆ ಗೆಳೆಯರೆಲ್ಲ ಮುಂದಿನ ತರಗತಿಗೆ ನಾನು ಮಾತ್ರ ಹಿಂದೆ ಮೇಷ್ಟ್ರು ಹೇಳಿದರು – ‘ಗಣಿತದಲ್ಲಿ ನೀ ಎಲ್ಲ ಕಳಕೊಂಡೆ’ ವಸಂತ ಲಗ್ಗೆಯಿಟ್ಟುದು ಅರಿವಾದುದೇ ಅವಳ ರಾಗ ನನ್ನ ಕವಿತೆ ಸಂಧಿಸಿದಾಗ ನಮ್ಮ ನಡುವೆ ಗೋಡೆ ಎಳೆದವು ಅಂತಸ್ತಿನ ಇಟ್ಟಿಗೆ ನಾ ಬರಿಗೈಯಾಗಿದ್ದೆ ಒಲವ ಕಳಕೊಂಡು ಜೀವನ ನಾಟಕದ ಅಗಾಧ ರಂಗಸ್ಥಲ ಅಗಣಿತ ಪಾತ್ರ ಒಂದೊಂದು ಅಂಕದಲೂ ತಿರುವುಗಳ ರೋಚಕತೆ ತಿರುವು ತಿರುವಿನಲೂ ಬಗೆ ಬಗೆಯ ಲೆಕ್ಕ ಎಟುಕುತ್ತಲೇ ಕೈ ಜಾರುವ ಕೈಚೆಲ್ಲಿ ಕೂತಾಗ ತೆಕ್ಕೆಗೆ ಬಂದು ಬೀಳುವ ಸಂಗತಿಗಳ ವಿಸ್ಮಯ ಬದುಕಿನಲ್ಲಿ ಈಗ ಎಲ್ಲವೂ ಇದೆ ಕಳೆದುಕೊಳ್ಳುವುದು ನಿತ್ಯದ ಪರಿಪಾಠವಾದಂದಿನಿಂದ ಲೆಕ್ಕ ಇಡುವುದನ್ನು  ನಿಲ್ಲಿಸಿದ್ದೇನೆ. ಚಂದ್ರಪ್ರಭಾ ಕವಿ ಪರಿಚಯ: ಕಾಲೇಜಿನಲ್ಲಿ ಉಪನ್ಯಾಸಕರು. ಸಾಹಿತ್ಯದ ಓದು, ಬರವಣಿಗೆಯಲ್ಲಿ ಆಸಕ್ತಿ. ಕವಿತೆ, ಲೇಖನ ಬರೆಯುವ ಹವ್ಯಾಸ. ಪ್ರಕಟಿತ ಕೃತಿಗಳಿಲ್ಲ

ಕಾವ್ಯಯಾನ Read Post »

You cannot copy content of this page

Scroll to Top