ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಸಾರಾ ಶಗುಫ್ತಾ (ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.) ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..! ಹಾಲ ಮೇಲೆ ಆಣೆ… ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ ಬಾತುಕೋಳಿಗಳಿಗೆ ಬಿಳಿಯ ರೆಕ್ಕೆಗಳಿದ್ದವು. ಆಗ ಅವು ಒಂದು ಪ್ರಚಂಡ ಬಿರುಗಾಳಿಗೆ ಸಿಲುಕಿಕೊಂಡವು. ಅವು ಹದ್ದುಗಳ ಗೂಡಿನಲ್ಲಿ ಆಶ್ರಯ ಪಡೆಯಬೇಕಾಯಿತು. ಹದ್ದುಗಳು ಸಾಯಂಕಾಲ ತಮ್ಮ ಗೂಡಿಗೆ ಮರಳಿದಾಗ ಅಲ್ಲಿ ಬಾತುಕೋಳಿಗಳಿದ್ದುದನ್ನು ಕಂಡವು. ಕೆರಳಿ ಕೆಂಡವಾದ ಹದ್ದುಗಳು ತಮ್ಮ ಚುಂಚದಿಂದ ಅವುಗಳ ರೆಕ್ಕೆಗಳನ್ನು ಎಳೆಯತೊಡಗಿದವು. ಬಾತುಕೋಳಿಗಳ ರೆಕ್ಕೆಗಳು ಇಲ್ಲವಾದವು. ಹದ್ದುಗಳು ಅವುಗಳನ್ನು ತಮ್ಮ ಉಗುರುಗಳಲ್ಲಿ ಹಿಡಿದುಕೊಂಡು ದೂರದ ಒಂದು ಕಾಡಿನಲ್ಲಿ ಎಸೆದವು.. ತಿನ್ನಲು ಮತ್ತು ಕುಡಿಯಲು ಏನೂ ಸಿಗದೆ ಬಾತುಕೋಳಿಗಳು ತಮ್ಮ ಸಾವನ್ನು ಎದುರು ನೋಡತೊಡಗಿದ್ದಾಗ ಕೆಲವು ಕಾಗೆಗಳು ಬಂದವು, ಅವುಗಳ ಬಗ್ಗೆ ಕನಿಕರಪಟ್ಟವು. ಬಾತುಕೋಳಿಗಳು ತಮ್ಮ ಗೋಳಿನ ಕತೆ ಹೇಳಿಕೊಂಡವು. ಕಾಗೆಗಳು “ಈ ಹದ್ದುಗಳು ನಮ್ಮ ವೈರಿಗಳು. ನೀವು ಸೇಡು ತೀರಿಸಿಕೊಳ್ಳಬೇಕು. ಅವು ಪಾಠ ಕಲಿಯುವಂತಾಗಬೇಕು. ಅವುಗಳಿಗೆ ಅದೇ ಗತಿಯಾಗಬೇಕು.” ಎಂದವು. ನೆರವಿನ ಸಂಕೇತವಾಗಿ ಕಾಗೆಗಳು ಅವುಗಳಿಗೆ ತಮ್ಮ ರೆಕ್ಕೆಗಳನ್ನು ನೀಡಿದವು. ಆ ಕಾರಣದಿಂದಾಗಿ ಆಸ್ಟ್ರೇಲಿಯನ್ ಬಾತುಕೋಳಿಗಳು ಇಂದಿಗೂ ಕಪ್ಪು ರೆಕ್ಕೆಗಳನ್ನು ಹೊಂದಿರುತ್ತವೆ… ಆ ಕತೆಯ ಕಾಗೆಗಳು ನನಗೆ ನೆನಪಾಗುತ್ತಲೇ ಸಾರಾಳ ಒಂದು ಕವನ ಓದತೊಡಗಿದೆ… ನೀ ಒಬ್ಬ ಕವಿ ನಾನು ಗೂಡಿನಲ್ಲಿ ಕೊಳೆಯುತ್ತಿರುವ ಕ್ಷುಲ್ಲಕ ಹೆಣ್ಣು ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು ಸೂಳೆಯಾದ ನಾನು ಒಲಿಸಿಕೊಳ್ಳಲಾಗಲಿಲ್ಲ ನಿನ್ನನ್ನು ನನ್ನೆದೆಯಿಂದ ಜಾರಿದವು ಬರಿ ಖೊಟ್ಟಿ ನಾಣ್ಯ ನೀನು ತಪ್ಪಿಸಿಕೊಂಡೆ ಮದುವೆಯನ್ನು ಇಡೀ ನಾಲ್ಕು ದಿನ ಹೆಣೆದೆ ಅರ್ಧ ಹೊರಸು ನೀನು ಮಲಗಿದೆ ನನ್ನ ಲಜ್ಜೆಯ ಹಾಸಿಗೆಯಲ್ಲಿ ನಾನೊಬ್ಬ ಕ್ಷುಲ್ಲಕ ಹೆಣ್ಣು ಹಾಗಾಗಿ ಬೇಕಿದೆ ಪರಿಹಾರ ನೀನು ಮರೆಯಲಾರೆ ಸಾವನ್ನು ನಾ ಮರೆಯಲಾರೆ ನೋವನ್ನು ಖರೇ ನಾಣ್ಯವೆನಿಸಿಕೊಂಡಿತು ನನ್ನ ಖೊಟ್ಟಿ ನಾಣ್ಯ ಬೇಕೆಂದಾಗ ನಾನು ನಿನ್ನನ್ನು ಖರೀದಿಸಬಲ್ಲೆ ಎಲ್ಲೇ ಆಗಲಿ ಇಳಿಸಿಕೋ ಮುಸುಕಿನಲ್ಲಿ ನಿನ್ನ ಭಾರವನ್ನು ನಿನ್ನಿಂದಲೇ ಶುರುವಾಗಲಿ ನನ್ನ ವ್ಯಾಪಾರ ನಾನು ನರ್ತನದಿಂದ ಸವೆಸಿದೆ ನನ್ನ ಪೈಜಣದ ಗೆಜ್ಜೆಗಳನ್ನು ನೀನು ಸರ್ವಸ್ವವನ್ನು ಕಳೆದುಕೊಂಡೆ ಮೌನದಲ್ಲಿ ಗೂಡಿನಲ್ಲಿ ಕೂಡಿ ಹಾಕಲು ಒಂದು ಹೆಣ್ಣನ್ನು ಮದುವೆಯಾಗಿ ಸೂಳೆಮಕ್ಕಳು ಮೀರಿದರು ಎಲ್ಲ ಮಿತಿಗಳನ್ನು ಅದನ್ನೆಲ್ಲ ಅರಿತುಕೊಂಡೆ ಜೀವ ಪಣಕ್ಕೊಡ್ಡಿ ನಿನ್ನೆಲ್ಲ ಪದಗಳು ನೆರವಾಗುತ್ತವೆ ಕುಂಟಲಗಿತ್ತಿಯರಾಗಿ ನಿನ್ನಿಂದ ನಾ ತಿರುಗಿ ಪಡೆಯಲಾರೆ ಮೆಹರ್ ಅಷ್ಟೊಂದು ಮುಗ್ಗಲಗೇಡಿ ನಾನು ಜನ ನನಗೆ ನೀಡುವರು ಕಾಣಿಕೆಯಾಗಿ ನನ್ನ ಮೆಹರ್ ಜನಜನಿತವಾಗಿದೆ ನಿನ್ನ ಬಳಲಿಕೆ ಹೆಪ್ಪುಗಟ್ಟಿವೆ ನಿನ್ನ ಕೈಗಳು ಏನಾಯಿತು ನಿನ್ನ ಸಮರಕಲೆಗಳಿಗೆ ಆ ನಾಲ್ವರು ಹಿಜಡಾಗಳ ಅಣತಿ ಮೇರೆಗೆ ಯಾವಾಗ ನಾನಾದೆ ನಿನ್ನ ಮಾನ-ಮರ್ಯಾದೆ ನಿನ್ನ ಮಕ್ಕಳನ್ನು ಮರೆ ಮಾಚುವುದು ನಿನ್ನ ಸ್ವಾಭಿಮಾನ ರಮಿಸೀತು ಹೇಗೆ ಅದು ನನ್ನ ಚೂರಾದ ಮನಸ್ಸನ್ನು? ನನ್ನ ಕೊನೆಯ ಮನುಷ್ಯ ಸತ್ತು ಹೋದ ಅವನ ಮಡದಿಯಾಗಿದ್ದೆ ಇಲ್ಲಿ ತನಕ ನನ್ನ ಬಳೆಗಳೆ ಬದಲಾಗಿವೆ ಈಗ ಬರ್ಚಿಗಳಾಗಿ ಬರ್ಚೆಗಳಿಂದಲೇ ಬರೆಯುವೆ ನನ್ನ ಕತೆಯನ್ನು… ಕಡೆಗೂ ಸಾರಾ ತನ್ನ ಇಡೀ ಕತೆ ನನಗೆ ನಿರೂಪಿಸಿದಳು– “ಅಮೃತಾ, ದಿನಾಲು ನಿನ್ನ ತಲೆ ತಿನ್ನಲು ಬರುತ್ತಿದ್ದೇನೆ. ಅಷ್ಟಕ್ಕೂ ನಾನು ಹೋಗುವುದಾದರೂ ಎಲ್ಲಿ? ಹೌದಲ್ಲ, ನಾನು ಇಲ್ಲಿಯವರೆಗೆ ಕಾವ್ಯ ರಚನೆಗೆ ಹೇಗೆ ತೊಡಗಿದೆಯೆನ್ನುವುದನ್ನೇ ನಿನಗೆ ಹೇಳಲಿಲ್ಲ. ಐದು ವರ್ಷಗಳ ಹಿಂದೆ, ನನ್ನೊಂದಿಗೆ ಕುಟುಂಬ ಯೋಜನಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ತನ್ನನ್ನು ಕವಿ ಎಂದುಕೊಂಡಿದ್ದ ಒಬ್ಬ ವ್ಯಕ್ತಿ ನನ್ನ ಜೀವನದಲ್ಲಿ ಬಂದ. ಆಗ ನಾನೊಬ್ಬ ವಿಚಿತ್ರ ಸಾಂಪ್ರದಾಯವಾದಿ ಯುವತಿಯಾಗಿದ್ದೆ. ಮನೆಯಿಂದ ಆಫೀಸಿಗೆ ನಡೆದುಕೊಂಡು ಬರುವುದನ್ನೇ ಬಹಳ ಕಷ್ಟಪಟ್ಟು ಕಲಿತುಕೊಂಡಿದ್ದೆ. ಯಾವುದೇ ಬಗೆಯ ಸೃಜನಶೀಲತೆಯಲ್ಲಿ ನನಗ ಆಸಕ್ತಿ ಇದ್ದಿರಲಿಲ್ಲ. ಆದಾಗ್ಯೂ ಕವಿಗಳು ಬಹಳ ದೊಡ್ಡ ವ್ಯಕ್ತಿಗಳೆಂದು ನನಗೆ ಅನಿಸಿತ್ತು. ಒಂದು ದಿನ ಕವಿ ಮಹಾಶಯ “ನಾನು ಒಂದು ಮಹತ್ವಪೂರ್ಣ ವಿಷಯ ಕುರಿತು ಮಾತಾಡಬೇಕಿದೆ.”ಎಂದ. ನಾವು ರೆಸ್ಟಾರೆಂಟೊಂದರಲ್ಲಿ ಭೇಟಿಯಾದೆವು. “ನೀನು ನನ್ನನ್ನು ಮದುವೆಯಾಗುವೆಯಾ?” ಎಂದು ಆತ ಕೇಳಿದ. ಮರುದಿನವೇ ನಮ್ಮ ಮದುವೆ ನಿಶ್ಚಿತಾರ್ಥವಾಯಿತು. ಕಾಜಿಗೆ ಕೊಡುವುದಕ್ಕೆ ನಮ್ಮ ಬಳಿ ಹಣವಿದ್ದಿರಲಿಲ್ಲ. “ಅರ್ಧ ಹಣ ನೀವು ವ್ಯವಸ್ಥೆ ಮಾಡಿರಿ, ಇನ್ನರ್ಧ ನಾನು ಕೊಡುವೆ.” ಎಂದೆ… “ನನ್ನ ತಂದೆತಾಯಿಯರಿಗೆ ನನ್ನ ನಿರ್ಧಾರ ಇಷ್ಟವಾಗಿಲ್ಲ. ಅವರು ಮದುವೆಗೆ ಹಾಜರಾಗುವುದಿಲ್ಲ. ನನ್ನ ಪರವಾಗಿ ನೀವೇ ಸಾಕ್ಷಿಗಳನ್ನು ಕರೆ ತರುವ ವ್ಯವಸ್ಥೆ ಕೂಡ ಮಾಡಬೇಕು.” ಎಂದೂ ಅವನಿಗೆ ಸೂಚಿಸಿದೆ… ನನ್ನೊಬ್ಬ ಗೆಳತಿಯ ಬಟ್ಟೆಗಳನ್ನು ಎರವಲು ತಂದು ವಿವಾಹ ಸ್ಥಳ ತಲುಪಿದೆ. ನಮ್ಮ ಮದುವೆ ನೆರವೇರಿತು. ಕಾಜಿ ತನ್ನ ಶುಲ್ಕ ಮತ್ತು ಮಿಠಾಯಿಯ ಬಾಕ್ಸ್ ಸ್ವೀಕರಿಸಿದ. ನಮ್ಮ ಬಳಿ ಕೇವಲ ಆರು ರೂಪಾಯಿ ಉಳಿದಿತ್ತು. ನಾವು ನಮ್ಮ ಗುಡಿಸಲು ತಲುಪಿದಾಗ ನಮ್ಮ ಬಳಿ ಉಳಿದದ್ದು ಎರಡು ರೂಪಾಯಿ… ಕಂದೀಲ ಬೆಳಕಿನಲ್ಲಿ ಬುರ್ಖಾ ತೊಟ್ಟು ನಾನು ಕುಳಿತುಕೊಂಡೆ. ಕವಿ ಮಹಾಶಯ “ನಿನ್ನ ಬಳಿ ಎರಡು ರೂಪಾಯಿ ಇದೆಯೆ?” ಎಂದು ಕೇಳಿದ. ತನ್ನ ಗೆಳೆಯರ ಮರುಪ್ರಯಾಣಕ್ಕೆ ಅದು ಬೇಕಿತ್ತು. ನಾನು ನನ್ನ ಕಡೆಯ ಎರಡು ರೂಪಾಯಿ ಸಹ ಕೊಟ್ಟುಬಿಟ್ಟೆ… ಕೆಲ ದಿನಗಳ ನಂತರ “ನನ್ನ ಮನೆತನದಲ್ಲಿ ಹೆಂಡತಿ ಕೆಲಸ ಮಾಡುವುದಿಲ್ಲ.” ಎಂದು ಅವನು ಹೇಳಿದ. ನಾನು ಕೆಲಸ ಬಿಟ್ಟೆ. ಪ್ರತಿ ದಿನ ತಮ್ಮನ್ನು ಸುಪ್ರಸಿದ್ಧ ಕವಿಗಳೆಂದು ಭಾವಿಸಿದ್ದ ಕೆಲವು ಸೋಮಾರಿಗಳು ನಮ್ಮ ಮನೆಗೆ ಬರತೊಡಗಿದರು… ಹಿಂಸೆ ನನ್ನ ರಕ್ತದಲ್ಲಿಲ್ಲ. ಆದರೆ ಹಸಿವೆಯನ್ನು ಮಾತ್ರ ತಾಳಿಕೊಳ್ಳಲಾರೆ. ಪ್ರತಿ ದಿನ ‘ಮಹಾನ್’ ವಿಚಾರಗಳ ಕುರಿತು ಚರ್ಚೆಯಾಗುತ್ತಿತ್ತು. ನಮ್ಮ ಮನೆಯಲ್ಲಿ ಚಿಂತನ-ಮಂಥನ ನಡೆಯುತ್ತಿತ್ತು. ಇಷ್ಟರ ಹೊರತಾಗಿ ನನ್ನ ಗಂಡ ಬೇರೆ ಏನೂ ಮಾಡುತ್ತಿರಲಿಲ್ಲ… ಒಂದು ದಿನ ನಮ್ಮ ಬಾಡಿಗೆ ಗುಡಿಸಿಲಿನಿಂದ ಹೊರ ದಬ್ಬಲಾಯಿತು. ಅನಂತರ ಇದರರ್ಧದಷ್ಟು ಮನೆಯನ್ನು ಬಾಡಿಗೆಗೆ ಪಡೆದೆವು. ಹಾಸಿಗೆ ಮೇಲೆ ಮಲಗಿಕೊಂಡು ನಾನು ಗೋಡೆಗಳನ್ನು ದಿಟ್ಟಿಸುತ್ತಿದ್ದೆ. ಎಷ್ಟೋ ಸಲ ನಾನು ನನ್ನವೇ ಮೂರ್ಖ ಯೋಚನೆಗಳಿಗೆ ಬಲಿಯಾಗುತ್ತಿದ್ದೆ… ನಾನು ಏಳು ತಿಂಗಳ ಗರ್ಭಿಣಿಯಾಗಿದ್ದೆ. ಒಂದು ದಿನ ಇದ್ದಕ್ಕಿದ್ದಂತೆ ನನಗೆ ಪ್ರಸವ ವೇದನೆ ಶುರುವಾಯಿತು. ಕಾವ್ಯ ಪ್ರತಿಭೆಯ ಹಮ್ಮಿನ ಅಮಲೇರಿಸಿಕೊಂಡು ಕವಿ ಮಹಾಶಯ ತನ್ನ ಗೆಳೆಯರೊಂದಿಗೆ ಹೊರಗೆ ಹೋಗಿಬಿಟ್ಟ ನನ್ನತ್ತ ಕಣ್ಣೆತ್ತಿಯೂ ನೋಡದೆ… ನನಗೆ ನೋವು ಅಸಹನೀಯವಾದಾಗ ನನ್ನ ಮನೆಯೊಡತಿ ನನ್ನನ್ನು ಆಸ್ಪತ್ರೆಗೆ ಕರೆದೊಯ್ದಳು. ನನ್ನ ಕೈಯಲ್ಲಿ ಬರೀ ಐದು ರೂಪಾಯಿ ಇತ್ತು. ಸ್ವಲ್ಪ ಹೊತ್ತಿನ ನಂತರ ನನಗೆ ಗಂಡು ಮಗುವಾಯಿತು. ಚಳಿ ಇತ್ತು. ಕೂಸಿಗೆ ಹೊದಿಸಲು ಒಂದು ಟಾವೆಲ್ ಸಹ ಇದ್ದಿರಲಿಲ್ಲ. ಮಗುವು ಐದು ನಿಮಿಷದ ಮಟ್ಟಿಗೆ ಕಣ್ಣು ತೆರೆಯಿತು. ನಂತರ ತನ್ನ ಕಫನ್ ಅರಸಿಕೊಂಡು ಹೋಯಿತು… ಆ ಕ್ಷಣದಿಂದ ಮೈ ತುಂಬ ಕಣ್ಣಾದೆ… ನರ್ಸ್ ನನ್ನನ್ನು ಬೇರೊಂದು ವಾರ್ಡ್‍ಗೆ ಕರೆದೊಯ್ದಳು. ಅಲ್ಲಿ ನನಗೆ ಒರಗಲು ನೆರವಾದಳು. ನಾನು ಮನೆಗೆ ಹೋಗಬೇಕೆಂದಿದ್ದೇನೆ ಎಂದು ಅವಳಿಗೆ ಹೇಳಿದೆ. ಏಕೆಂದರೆ ಮನೆಯಲ್ಲಿ ಯಾರೊಬ್ಬರಿಗೂ ಏನು ನಡೆದಿದೆ ಎನ್ನುವುದು ಗೊತ್ತಿರಲಿಲ್ಲ. ಅಪಾರ ಕಾಳಜಿಯಿಂದ ಅವಳು ನನ್ನತ್ತ ದೃಷ್ಟಿ ಬೀರಿದಳು. “ನಂಜೇರುವ ಎಲ್ಲ ಸಾಧ್ಯತೆ ಇದೆ. ಅದಕ್ಕಾಗಿ ಹಾಸಿಗೆಯಲ್ಲಿ ಮಲಗಿರು.” ಎಂದು ಹೇಳಿದಳು… ಆಗ ನನ್ನ ಬಳಿ ಸತ್ತ ಕೂಸು ಮತ್ತು ಐದು ರೂಪಾಯಿ ಇತ್ತು. “ಆಸ್ಪತ್ರೆ ಬಿಲ್ ಕೊಡಬೇಕೆಂದರೆ ನನ್ನ ಬಳಿ ಹಣವಿಲ್ಲ. ನಾನು ಒಂದಷ್ಟು ಹಣ ತರುವೆ. ಇನ್ನು ಹೆಚ್ಚು ಕಾಲ ಹಾಸಿಗೆಯಲ್ಲಿ ಮಲಗಿರುವುದು ನನಗೆ ಸಾಧ್ಯವಾಗಲಾರದು. ನೀವು ನನ್ನ ಮಗುವನ್ನು ಭದ್ರತೆ ಎಂದು ಇಟ್ಟುಕೊಳ್ಳಿರಿ. ನಾನು ಬರುವೆ. ಓಡಿ ಹೋಗುವುದಿಲ್ಲ.” ಎಂದು ನರ್ಸ್‍ಗೆ ಮೊರೆ ಇಟ್ಟೆ… ನಾನು ನೆಲ ಮಹಡಿಗೆ ಹೋದೆ. ನನಗೆ ವಿಪರೀತ ಜ್ವರವಿತ್ತು. ನಾನು ಬಸ್ ಹತ್ತಿದೆ. ಹೇಗೋ ಮನೆ ತಲುಪಿದೆ. ನನ್ನ ಸ್ತನಗಳು ಹಾಲಿನಿಂದ ಬಿಗಿದುಕೊಂಡಿದ್ದವು. ನಾನು ಪಾತ್ರೆಯಲ್ಲಿ ಹಾಲು ಹಿಂಡಿದೆ. ಈ ಮಧ್ಯ ಕವಿ ಮಹಾಶಯ ತನ್ನ ಎಂದಿನ ಗೆಳೆಯರ ತಂಡದೊಂದಿಗೆ ಪ್ರವೇಶಿಸಿದ… ನಾನಂದೆ “ಗಂಡು ಮಗುವು ಆಗಿತ್ತು. ಸತ್ತು ಹೋಯಿತು.” ತುಂಬ ಮಾಮೂಲು ಎನ್ನುವಂತೆ ಅವನು ಕೇಳಿಸಿಕೊಂಡ. ತನ್ನ ಗೆಳೆಯರಿಗೆ ಸುದ್ದಿ ತಲುಪಿಸಿದ. ಆ ಮೇಲೆ ಏನೂ ನಡೆದೇ ಇಲ್ಲವೆನ್ನುವಂತೆ ಚರ್ಚೆಯನ್ನು ಎಲ್ಲಿಗೆ ಬಿಟ್ಟಿದ್ದರೋ ಅಲ್ಲಿಂದ ಮುಂದುವರಿಸಿದರು… … ಫ್ರೈಡ್ ಬಗ್ಗೆ ಏನಂತೀರಾ? … ರಿಂಬಾ ಏನು ಹೇಳಿದ್ದಾನೆ? … ಶಾಹಿದ್ ಹೇಳಿದ್ದೇನು? … ವಾರಿಸ್ ಶಾಹ್ ಬಹಳ ದೊಡ್ಡ ವ್ಯಕ್ತಿ. ಈ ವಿಷಯ ನಾನು ನಿತ್ಯವೂ ಕೇಳುತ್ತಿದ್ದೆ. ಆದರೆ ಆ ದಿನ ಶಬ್ದಗಳ ಅಬ್ಬರ ಜೋರಾಗಿತ್ತೆಂದು ಅನಿಸಿತು. ಈ ಎಲ್ಲ ಮಹಾನ್ ವ್ಯಕ್ತಿಗಳು ಈಗಾಗಲೇ ನನ್ನ ರಕ್ತದಲ್ಲಿದ್ದಾರೆ, ನನ್ನ ಎದೆ ಹಾಲಿನಲ್ಲಿದ್ದಾರೆ ಎಂದು ಅನಿಸಿತು. ರಿಂಬಾ ಮತ್ತು ಫ್ರೈಡ್ ನನ್ನ ಮಗುವನ್ನು ಕಿತ್ತುಕೊಳ್ಳುತ್ತಿದ್ದಾರೇನೋ, ಜಜ್ಜಿ ಹಾಕುತ್ತಿದ್ದಾರೇನೋ ಎಂದು ಅನಿಸಿತು… ಅಮೃತಾ, ಜ್ಞಾನಾರ್ಜನೆ ನನ್ನನ್ನು ಅಣಕಿಸುತ್ತಿತ್ತು ಎಂದು ನಿನಗೆ ಅನಿಸಬಹುದಲ್ಲವೆ? ಆ ದಿನ ಜ್ಞಾನ ನನ್ನ ಸ್ಥಳಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟಿತೇನೋ. ಹೀಗಿತ್ತು ನನ್ನ ಮಗುವಿನ ಜನನ… ಅದೇನೇ ಇರಲಿ ಅವರ ಚರ್ಚೆ ಮತ್ತಷ್ಟು ಹೆಚ್ಚು ಕಾಲು ಮುಂದುವರಿಯಿತು. ಅಷ್ಟೂ ಕಾಲ ಮೌನ ತನ್ನ ದುರ್ಬಲ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸುತ್ತಿತ್ತು… ನಂತರ ಈ ಜನ ಹೊರಟು ಹೋದರು. ತಮ್ಮ ಚಿಂತನೆಗಳ ಅಮಲೇರಿಸಿಕೊಂಡು… ನಾನು ಒಂದು ಚೀತ್ಕಾರದಂತೆ ಮೆಟ್ಟಲಿಳಿದು ಹೋದೆ. ಆಗ ನನ್ನ ಕೈಯಲ್ಲಿ ಕೇವಲ ಮೂರು ರೂಪಾಯಿ ಇತ್ತು. ನಾನು ನನ್ನ ಗೆಳತಿಯ ಮನೆಗೆ ಹೋದೆ. ಮುನ್ನೂರು ರೂಪಾಯಿ ಸಾಲ ಕೇಳಿದೆ. ಅವಳು ಹಣ ನೀಡಿದಳು. ಆದರೆ ನನ್ನತ್ತ ನೋಡುತ್ತ “ಮೈಯಲ್ಲಿ ಹುಷಾರಿಲ್ಲವೆ?” ಎಂದು ಕೇಳಿದಳು. “ಸ್ವಲ್ಪ ಜ್ವರವಿದೆ. ನಾನು ನಿಲ್ಲುವಂತಿಲ್ಲ. ನನ್ನ ಮಾಲೀಕನಿಗೆ ಹಣ ಕೊಡಬೇಕಿದೆ. ಅವನು ನನಗಾಗಿ ದಾರಿ ನೋಡುತ್ತಿದ್ದಾನೆ”… ನಾನು ಆಸ್ಪತ್ರೆ ತಲುಪಿದೆ. ಬಿಲ್ ಎರಡು ನೂರ ತೊಂಬತ್ತೈದು ಆಗಿ ಬಿಟ್ಟಿತ್ತು. “ದಯವಿಟ್ಟು ನನ್ನ ಮಗುವಿಗೆ ಕಫನ್ ವ್ಯವಸ್ಥೆ ಮಾಡಿ ಎಲ್ಲಾದರೂ ಅದನ್ನು ದಫನ್ ಮಾಡಿರಿ.” ಎಂದು ಡಾಕ್ಟರ್‍ಗೆ ಮನವಿ ಮಾಡಿಕೊಂಡೆ… ನಿಜವಾದ ಗೋರಿ ನನ್ನ ಹೃದಯದಲ್ಲಿ ಆಗಲೇ ನಿರ್ಮಾಣಗೊಂಡಿತ್ತು.– ಆಗ ನಾನು ಜೋರಾಗಿ ಕಿರುಚಿಕೊಂಡೆ. ಮಗುವನ್ನು ಕಳೆದುಕೊಂಡಿದ್ದರಿಂದ ನಾನು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರಬೇಕೆಂದು ಡಾಕ್ಟರ್ ಭಾವಿಸಿದರು. ಬರಿಗಾಲಲ್ಲೇ ಓಡುತ್ತಾ ಬಸ್ ಹತ್ತಿದೆ. ಕಂಡಕ್ಟರ್ ನನಗೆ ಟಿಕೆಟ್ ಕೊಡುವ ಗೊಡವೆಗೆ ಹೋಗಲಿಲ್ಲ. ಕಾರಣ ನನ್ನ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು. ನನ್ನ ಸ್ಟಾಪ್ ಬರುತ್ತಲೇ ಬಸ್ ಇಳಿದೆ. ಐದು ರೂಪಾಯಿ ನೋಟನ್ನು ಕಂಡಕ್ಟರ್ ಕೈಗೆ ತುರಿಕಿ ಹೊರಟು ಹೋದೆ… ಹೋಮ್… ಹೋಮ್… ಸ್ವೀಟ್ ಹೋಮ್… ಈಗ ನಾನು ಮನೆ ತಲುಪಿದೆ. ಹಾಲು ಇನ್ನೂ ಪಾತ್ರೆಯಲ್ಲಿತ್ತು. ಆದರೆ ಅದು ಕಫನ್‍ಗಿಂತಲೂ ಶುಭ್ರವಾಗಿತ್ತು. ನಾನು ಹಾಲ ಮೇಲೆ ಆಣೆ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ತಗಿ ನಿನ್ನ ತಂಬೂರಿ ಲೇಖಕಿ-ಚಂದ್ರಪ್ರಭ ದಾವಲ್ ಸಾಬ್ ಭಾರತೀಯ ಸನಾತನವಾದಿ ಆಧ್ಯಾತ್ಮವನ್ನು ಲೇವಡಿಗೊಳಿಸುವಂತೆ ತತ್ವಪದಗಳನ್ನು ಕಟ್ಟಿರುವ ಈ ಕವಿಲೋಕ ಬದುಕಿನ ಮಹತಿಯನ್ನು ಎತ್ತಿ ಹಿಡಿಯುತ್ತಾನೆ. ಅದೇ ಕಾಲಕ್ಕೆ ಆಳುವ ವರ್ಗಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ಒದ್ದಾಡುತ್ತಿರುವ ಸಾಮಾನ್ಯ ಜನತೆಯ ಬದುಕಿನ ಸಂಕಷ್ಟಗಳನ್ನು ಕಾಣಿಸುತ್ತಾನೆ. ಇಂಥ ಸಂಕಟ ತಳಮಳಗಳಿಂದ ಕೂಡಿ ಜನಸಾಮಾನ್ಯರ ಬದುಕು ಹೀನಸ್ಥಿತಿಯಲ್ಲಿದ್ದಿರುವಾಗ ಈ ನಾಡನ್ನು ಪುಣ್ಯ ಭೂಮಿ ಪಾವನ ನಾಡು ಎಂದು ಹೇಳುತ್ತಿರುವುದರ ಔಚಿತ್ಯವೇನು? ಇಂಥ ಹೇಳಿಕೆಗಳು ಸಂಕಟವನ್ನೆಲ್ಲ ಮುಚ್ಚಿಕೊಂಡು ನಗುವಿನ ಮುಖವಾಡ ಧರಿಸುವ ಔದಾರ್ಯಕ್ಕೆ ಒಳಗಾಗಿವೆ. ಭಾರತೀಯರ ಪ್ರಾಚೀನ ಬದುಕು ಸುಖದ ಸುಪತ್ತಿಗೆಯಾಗಿತ್ತು. ಅಲ್ಲಿ ಎಲ್ಲ ಬಗೆಯ ಸಮಾನತೆ ಇತ್ತು.ವೈದಿಕಯುಗದಲ್ಲಿ ಶಾಂತಿ,ಸಮೃದ್ದಿಯಿತ್ತು ಎಂಬ ಹೇಳಿಕೆಗಳು ಡಾಂಭಿಕತೆಯನ್ನು ಮೆರೆಯುತ್ತಿವೆ. ಹಸಿ ಸುಳ್ಳನ್ನು ಪ್ರದರ್ಶಿಸುತ್ತಿವೆ. ವಾಸ್ತವವೆಂದರೆ ರಾಜಪ್ರಭುತ್ವದ ಕಾಲದಲ್ಲಿ ಜನಸಾಮಾನ್ಯರ ಬದುಕು ಅತಿ ಹೆಚ್ಚು ಸಂಕಟ ಮತ್ತು ಶೋಷಣೆಗೆ ಒಳಗಾಗಿತ್ತು ಎಂಬುದನ್ನು ಶರೀಫರ ತತ್ವಪದಗಳಲ್ಲಿ ಕಂಡುಬರುತ್ತದೆ ಎಂಬಂತಹ ವಿಚಾರ ಚಂದ್ರಪ್ರಭಾ ರವರ ಈ ಹೊತ್ತಿಗೆಯಲ್ಲಿ ಕಾಣುತ್ತೇವೆ. ಬೌದ್ಧಿಕ ಬದುಕಿನ ದುಃಖ ದುಮ್ಮಾನಗಳನ್ನು ಧಿಕ್ಕರಿಸಿ ಜನನ ಮರಣ ಭವ ಚಕ್ರದಿಂದ ಪಾರಾಗುವ ಮುಕ್ತಿ ಸಾಧನೆಯನ್ನು ಸಾಧಿಸಬಹುದು. ಲೋಕ ಜೀವನವು ಹಲವು ವ್ಯಾಧಿಗಳಿಂದ ಕೂಡಿದೆ.ಹಸಿವು ನಿದ್ದೆ ನೀರಡಿಕೆ ನೆರೆಹಾವಳಿ ಅತಿವೃಷ್ಟಿ ಅನಾವೃಷ್ಟಿ ಬಡತನ ಅಜ್ಞಾನ ಮೌಢ್ಯ ಮೊದಲಾದವುಗಳು ಇಡುಕಿರಿದು ಭವ ಸಾಗರವು ಘೋರವಾಗಿದೆ.ಈ ಭವ ಸಾಗರದಿಂದ ಶಾಶ್ವತವಾಗಿ ಮುಕ್ತಿ ಪಡೆಯಲು ಆಧ್ಯಾತ್ಮ ಮಾರ್ಗವೇ ಸಾಧನ. ಜೀವ ಜಗತ್ತು, ಈಶ್ವರ ಮಾಯೆ ಮೊದಲಾದ ತತ್ವಗಳ ಹುಡುಕಾಟ, ನಂತವಾದ ಈ ಬದುಕಿನಿಂದ ಅನಂತವಾದದತ್ತ ಚಲಿಸುವುದೇ ಜೀವನದ ಗುರಿಯಾಗಿದೆ. ಹೀಗೆ ಇನ್ನೂ ಹಲವಾರು ವಿಷಯಗಳನ್ನು ಶ್ರೀಮತಿ.ಚಂದ್ರಪ್ರಭಾ ರವರು “ತಗಿ ನಿನ್ನ ತಂಬೂರಿ” ಎಂಬ ಕಿರುಹೊತ್ತಿಗೆಯಲ್ಲಿ ಸವಿವರವಾಗಿ ಚರ್ಚಿಸಿದ್ದಾರೆ.

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಬಿಡುಗಡೆ

ಸಂಕೋಲೆಗಳ ಕಳಚುತ್ತ ಕೃತಿ-ಸಂಕೋಲೆಗಳಕಳಚುತ್ತ ಕವಿ-ಕು.ಸ.ಮಧುಸೂದನ ಪ್ರಕಾಸಕರು- ಕಾವ್ಯಸ್ಪಂದನ ಪ್ರಕಾಶನ,ಬೆಂಗಳೂರು. ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಂಡ ‘ಸಂಕೋಲೆಗಳ ಕಳಚುತ್ತಲ ಕವನಸಂಕಲನ        ಕವಿ ಕು.ಸ.ಮಧುಸೂದನ್ ಅವರ ಕವನಸಂಕಲನ ’ಸಂಕೋಲೆಗಳ ಕಳಚುತ್ತ’ ಕೃತಿಯು 15-03-2020ರ ಬಾನುವಾರ ಲೋಕಾರ್ಪಣೆಗೊಂಡಿತು.    ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಭೀತಿಯಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಸದೆ, ಫೇಸ್ ಬುಕ್, ಟ್ವೀಟರ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ಪುಸ್ತಕವನ್ನು ವಿಭಿನ್ನವಾಗಿ ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು.ಈ ಲೈವ್ ಕಾರ್ಯಕ್ರಮದಲ್ಲಿ ಮಾತಾಡಿದ ಕವಿಯಿತ್ರಿ ಅವ್ಯಕ್ತ ಅವರು ಮದುಸೂದನ್ ಅವರ ಕಾವ್ಯ ಜನಪರ ಕಾವ್ಯವಾಗಿದ್ದು, ಅವರಿಂದ ಮತ್ತಷ್ಟುಕೃತಿಗಳು ಮೂಡಿಬರಲೆಂದು ಹಾರೈಸಿದರು. ನಂತರ ಮಾತಾಡಿದ ಕವಿ ಮದುಸೂದನ್ ಅವರು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕೆಂದು ಕರೆ ನೀಡಿದರು. ಕೃತಿ ಬಿಡುಗಡೆಯ ಈ ಕಾರ್ಯಕ್ರಮವನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಿದರು. ಸಂಕೋಲೆಗಳ ಕಳಚುತ್ತಆನ್ ಲೈನ್ ಮೂಲ ಪುಸ್ತಕ ಕೊಳ್ಳುವ ಮಾಹಿತಿಪುಸ್ತಕದ ಬೆಲೆ-150=00 ರೂಪಾಯಿಗಳುIFSC code:CNRBOOO2698A/c:. 1145101036761Bhadravathi RamachariCanara bank,. Rajajinagar 2nd Block. ಮೇಲಿನ ಖಾತೆಗೆ ಹಣ ಹಾಕಿಕೆಳಗಿನ ವಾಟ್ಸಪ್ ನಂಬರಿಗೆ ವಿಳಾಸ ಕಳುಹಿಸಿನಂಬರ್-8861495610ಇಂದ: ಕಾವ್ಯ ಸ್ಪಂದನ ಪ್ರಕಾಶನ,ಬೆಂಗಳೂರು ***********************************

ಪುಸ್ತಕ ಬಿಡುಗಡೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಸಿರ್ವಂತೆ ಕ್ರಾಸ್ ದಿನೇಶ ಹುಲಿಮನೆ ಮಲೆನಾಡಿನ ಬದುಕಿನ ಆಗುಹೋಗುಗಳ ಹಂದರವೇ ಆಗಿದೆ ದಿನೇಶ ಹುಲಿಮನೆಯವರ ‘ಸಿರ್ವಂತೆ ಕ್ರಾಸ್’ ಕಥೆಗಳ ಸಂಕಲನ..! ದಿನೇಶ ಹುಲಿಮನೆಯವರು ಮಲೆನಾಡು ಆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಿಮನೆಯವರು. ಹಾಗಾಗಿ ಇಲ್ಲಿ ಬರುವ ಎಲ್ಲಾ ಕಥೆಗಳೂ ದಿನೇಶ ಹಲಿಮನೆಯವರ ಮಲೆನಾಡಿನ ಕಲರವವಿದ್ದಂತೆ ಭಾಸವಾಗುತ್ತವೆ. ಭಾಸವಾಗುವುದೇನು ಬಂತು ಇದು ನಿಜವೂ ಆಗಿದೆ. ಏಕೆಂದರೆ ಈ ದಿನೇಶ ಹುಲಿಮನೆಯವರ ಈ ‘ಸಿರ್ವಂತೆ ಕ್ರಾಸ್’ ಈ ಕಥೆಗಳ ಸಂಕಲನವು ‘ಸಿರ್ವಂತೆ ಕ್ರಾಸ್‌’ ಕಥೆಯೂ ಸೇರಿದಂತೆ ಒಟ್ಟು ೧೮ ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡಿದೆ ಮತ್ತು ಮಲೆನಾಡಿನಲ್ಲಿ ನಡೆಯುವ ವಿದ್ಯಮಾನಗಳಾಗಿವೆ ಇಲ್ಲಿಯ ಕಥೆಗಳು. ದಿನೇಶ ಹಲಿಮನೆಯವರು ಮಲೆನಾಡನ್ನು ಬಿಟ್ಟು ಇರಲಾರರು. ಹಾಗಾಗಿಯೇ ಇವರ ಕಥೆಗಳು ಮಲೆನಾಡಿನ ಬದುಕು-ಬವಣೆಗಳನ್ನು ತೆರೆದಿಡುತ್ತವೆ ಇಲ್ಲಿನ ಕಥೆಗಳು. ದಿನೇಶ ಹುಲಿಮನೆಯವರೇ ಹೇಳುವಂತೆ ‘ನನ್ನ ಬದುಕು-ಬರಹ ಮಲೆನಾಡನ್ನು ಬಿಟ್ಟು ಇರಲಾರವು. ಹಾಗಾಗಿಯೇ ಇಲ್ಲಿಯ ಕಥೆಗಳೆಲ್ಲಾ ಮಲೆನಾಡಿನ ಆಗು-ಹೋಗಗಳಾವೆ’ ಎಂದು. ಈ ಕಥೆಗಳ ಸಂಕಲನದಲ್ಲಿಯ ‘ಸಿರ್ವಂತೆ ಕ್ರಾಸ್’ ‘ಮಧ್ಯ ರಾತ್ರಿಯ ಮಾತು’ನಂತಹ ಕಥೆಗಳು ಮಲೆನಾಡಿನ ಬೆಟ್ಟಗುಡ್ಡಗಳನ್ನು ಹತ್ತಿಳಿದು, ಅಂಕು-ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ ‘ಸ್ಮಾರ್ಟ್ ಜಗತ್ತು’ ‘ಕನ್ನಡದ ಕಂದ’ದಂತಹ ಕೆಲ ಚುಟುಕು ಕಥೆಗಳು ಬೆಂಗಳೂರು ಕಾಂಕ್ರೀಟ್ ಹಾದಿಯಲ್ಲಿ ನುಸುಳುವಂತೆ ಭಾಷವಾಗುತ್ತವೆ. ‘ಅರ್ಧ ಸತ್ಯ!’, ‘ಎಡ-ಬಲಗಳ ನಡುವೆ’, ‘ತಳವಾರ ತಿಮ್ಮ’, ‘ಪ್ರಜಾ ಸಮಾಧಿ’, ‘ಕೃಷ್ಣನ ಪ್ರಣಯ ಪ್ರಸಂಗ’, ‘ಕಿಲಾರ’ದ ಹುಡುಗರು’ ಒಟ್ಟಾರೆ ಎಲ್ಲಾ ಕಥೆಗಳೂ ಓದಿಸಿಕ್ಕೊಂಡು ಹೋಗುವ ಕಥೆಗಳಷ್ಟೇ ಅಲ್ಲ,‌‌ ವಾಸ್ತವ ಬದುಕಿನ ಪಯಣವೇ ಆಗಿವೆ ಎಂದು ನನ್ನ ಅನಿಸಿಕೆ. ‘ಕಡಲ ಮುತ್ತು’ ‘ಕುಮಟಾದ ಹಳೇ ಬಸ್ ನಿಲ್ದಾಣ’ದಂತಹ ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುತ್ತವೆ. ಇನ್ನುಳಿದ ಕಥೆಗಳು ಮನುಷ್ಯ ಸಹಜವಾದ ಪ್ರಾಕೃತಿಕ ಆಶೆ-ಅತಿಯಾಶೆ, ಪ್ರೀತಿ-ಪ್ರಣಯ, ಜೀವನ-ಜಂಜಾಟ, ಹಲವಾರು ಬಗೆಯ ಎಡರು-ತೊಡರುಗಳ ಮೇಲೆ ಇಲ್ಲಿಯ ಕಥೆಗಳನ್ನು ಹೆಣದಿದ್ದಾರೆ ದಿನೇಶ ಹಲಿಮನೆಯವರು. ನಂಬಿಕೆಯೇ ಜೀವನಾಧಾರ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡುವುದೇ ಜೀವನ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ವಾಣಿಯಂತೆ ಜೀವನದಲ್ಲಿ ಬರುವ ಕೆಲವು ಸಣ್ಣಪುಟ್ಟ ವಿಚಾರಗಳೇ ಇಲ್ಲಿಯ ಕಥಾವಸ್ತು ಅಲ್ಲದೇ ಇಲ್ಲಿಯ ಕಥೆಗಳು ನನ್ನ ದೃಷ್ಟಿಯಲ್ಲಿ ಕೇವಲ ಕಾಲ್ಪನಿಕವಲ್ಲ. ವಾಸ್ತವವೂ ಆದ ಬದುಕಿನ ಹಲವಾರು ಮಜಲುಗಳು. ಕಥೆಗಳಲ್ಲಿ ಹೆಚ್ಚು, ಹೆಚ್ಚು ವಿಷಯಗಳನ್ನು ತರಲಾಗದಿದ್ದರೂ ದಿನನಿತ್ಯ ನಡೆಯುವ ಬದುಕಿನ ಘಟಕಗಳ ಹಂದರವೇ ಆಗಿದೆ ಇಲ್ಲಿಯ ಕಥೆಗಳ ವಸ್ತು. ಹೀಗೆಯೇ ಬರುವ ಇಲ್ಲಿನ ಕಥೆಗಳು ವಿಶಿಷ್ಟ ಶೈಲಿಯದ್ದಾಗಿವೆ. ಇಲ್ಲಿಯ ಎಲ್ಲಾ ಕಥೆಗಳು ಓದುಗರನ್ನು ಹಿಡಿದಿಡುತ್ತವೆ. ದಿನೇಶ ಹಲಿಮನೆಯವರು ಹವ್ಯಾಸಿ ಲೇಖಕರಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ ಬರೆದ ಕಥೆಗಳು ಇವು. ಒಂದೆರಡು ನೀಳ್ಗತೆಯೂ ಸೇರಿದಂತೆ ಸಣ್ಣ-ಪುಟ್ಟ ಕಥೆಗಳೂ ಸೇರಿದಂತೆ ಒಟ್ಟು ಹದಿನೆಂಟು ಕಥೆಗಳು ಇಲ್ಲಿವೆ. ಇದು ಈ ದಿನೇಶ ಹಲಿಮನೆಯವರ ಮೊದಲ ಕಥೆಗಳ ಸಂಕಲನವಾಗಿದೆ. ಮೊದಲ ಕಥಾ ಸಂಕಲನ ಮೂಲಕವೇ ಇವರು ಒಬ್ಬ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಇವರಿಂದ ಇನ್ನೂ ಇಂತಹ ಕಥಾ ಬರಹವನ್ನು ನಿರೀಕ್ಷಿಸಬಹುದು. ಅಂಕೋಲಾದ ಶಿಕ್ಷಕಿಯಾದ ಶುಭಾ ಪಟಗಾರರವರ ಬೆನ್ನುಡಿ ಇದೆ. ********* ‌ —ಕೆ.ಶಿವು.ಲಕ್ಕಣ್ಣವರ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನೂರು ಜನಪದ ಹಾಡುಗಳು ಕೆ.ಶಿವು ಲಕ್ಕಣ್ಣವರ ಬೈಲೂರ ಬಸವಲಿಂಗಯ್ಯನವರ ಸಮೃದ್ಧ ಜನಪದ ಹಾಡಿನ‌ ಕೃತಿಯೇ ‘ನೂರು ಜನಪದ ಹಾಡುಗಳು’‌ ಎಂಬ ಪುಸ್ತಕವು! ಪ್ರಸ್ತುತವಾಗಿ ಈ ‘ನೂರು ಜನಪದ ಹಾಡುಗಳು’ ಕೃತಿಯು ವಿಸ್ತೃತವಾಗಿ ಗರ್ಭಸೇರಲಿದ್ದ ಬೀಸೂಕಲ್ಲಿನ ಪದಗಳು, ಸೋಬಾನೆ ಪದಗಳು, ಜೋಗುಳ ಪದಗಳು, ಚೌಡಿಕೆ ಪದಗಳು, ಕಿನ್ನರಿ ಪದಗಳು, ಹಬ್ಬದ ಹಾಡುಗಳು, ಕೋಲಾಟದ ಪದಗಳು, ಗೀಗೀ ಪದಗಳು, ಹೀಗೆಯೇ ಹತ್ತಾರು ಪ್ರಕಾರಗಳನ್ನು ಒಳಗೊಂಡಿದೆ ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು… ಒಟ್ಟಾರೆ ಜನಪದ ಹಾಡು ಅಥವಾ ಜಾನಪದವೆಂದರೆ ಹಳ್ಳಿಯ ಜನರ ಸಂಗೀತ, ರೂಪಕ, ಮಣ್ಣಿನ ವಾಸನೆಯ ಬದುಕು. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು ಮತ್ತು ಹಾಡುತ್ತಾರೆ. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆಯೇ ಎಲ್ಲ ಜನಪದರ ಬಾಯಿಂದ ಬಾಯಿಗೆ ಹೊರಹೊಮ್ಮುವ ಪದದ ಅಥವಾ ಹಾಡುಗಳನ್ನು ಹಾಡುತ್ತಿದ್ದರು ಮತ್ತು ಇವು ರೋಮಾಂಚಕವೂ ಹೌದು… ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜಾನಪದ ಹಾಡಿನ ರೀತಿಯಲ್ಲಿ ಹೀಗಿದೆ. “ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ… ಕೂಸು ಕಂದಯ್ಯ ಒಳ ಹೊರಗ… ಕೂಸು ಕಂದಯ್ಯ ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ…“ ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗಿರುವ ಜಾನಪದ ಹಾಡಿಗೆ ವಿಶೇಷ ಸ್ಥಾನ-ಮಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ… ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಎಂಬ ಕೃತಿಯು ಇದನ್ನೇ ಹೇಳುತ್ತದೆ ಮತ್ತು ಕಟ್ಟಿಕೊಡುತ್ತದೆ… ಒಟ್ಟಾರೆ ಜನಪದವೆಂದರೆ ಮನುಷ್ಯ ಬದುಕಿನ ಕ್ರಿಯೆಗಳು, ವಸ್ತುಗಳು, ಮನರಂಜನೆಯ ಸಾಧನಗಳು, ಮನುಷ್ಯನ ಸಂಸ್ಕಾರ, ಆರಾಧನೆ, ನಂಬಿಕೆಗಳು: ಉಡುಪುಗಳು, ಹಬ್ಬ ಹರಿದಿನಗಳು, ಇದೇ ರೀತಿಯಾಗಿ ಒಟ್ಟಾರೆ ಬದುಕಿನ ಸರ್ವ ಲಯಗಳನ್ನು ಒಳಗೊಂಡಿರುವಂತದೇ ಆಗಿದೆ… ಮನುಷ್ಯ ಜೀವಿ ತನಗೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಜಾನಪದ ಸಾಹಿತ್ಯಕ್ಕೆ ಮೊರೆಹೋಗುತ್ತಾನೆ. ಹೀಗೆಂದು ಸಾರಿಹೇಳುತ್ತದೆ ಬೈಲೂರ ಬಸವಲಿಂಗಯ್ಯ ಹಿರೇಮಠರವರ ಈ ಕೃತಿಯು ‘ನೂರು ಜನಪದ ಹಾಡುಗಳು’ ಎಂಬ ಕೃತಿಯಾಗಿದೆ… ಈಗಂತೂ ಮನುಷ್ಯ ಬಹು ಎತ್ತರಕ್ಕೆ ಬೆಳೆದಿದ್ದಾನೆ. ‘ಸಂಸ್ಕೃತಿ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಶೋಧನೆಯ ತೆಕ್ಕೆಯಲ್ಲೇ ತಬ್ಬಿಕೊಳ್ಳಲು ಮನುಷ್ಯ ನಿರಂತರವಾಗಿ ಹೋರಾಡುತ್ತಿದ್ದಾನೆ. ಇದರ ಪರಿಣಾಮವಾಗಿ ಇಂದು ಅನೇಕಾನೇಕ ಜ್ಞಾನಶಿಸ್ತುಗಳು ಆವಿಷ್ಕಾರಗಳು ಒಡಮೂಡಿವೆ. ಇಂತಹ ಜ್ಞಾನಶಿಸ್ತುಗಳಲ್ಲಿ ಅಂತರಶಿಸ್ತೀಯ ಅಧ್ಯಯನವೂ ಒಂದು. ಈ ಶಿಸ್ತಿನ ಮೂಲಕ ವಿದ್ವಾಂಸರು ಇತರ ಜ್ಞಾನ ಶಾಖೆಗಳೊಂದಿಗೆ ಜಾನಪದ ಸಾಹಿತ್ಯದ ಅಂತರ್ ಸಂಬಂಧವನ್ನು ಗುರುತಿಸುವ ಸವಾಲುಗಳನ್ನು ಎದುರಿಸುವ ಕಾರ್ಯದಲ್ಲಿ ತೊಡಗಿರುವುದು ಈ ಸಾಹಿತ್ಯದ ಸತ್ವವಾಗಿದೆ. ಜಾನಪದ ಬಿಟ್ಟು ಬದುಕಿಲ್ಲ, ಬದುಕು ಬಿಟ್ಟು ಜಾನಪದವಿಲ್ಲ ಎಂಬುದು ಕಟು ವಾಸ್ತವ. ಈ ಸಾರವನ್ನೇ ಹೇಳುತ್ತದೆ ಬೈಲೂರ ಬಸವಲಿಂಗಯ್ಯನವರ ‘ನೂರು ಜನಪದ ಹಾಡುಗಳು’ ಕೃತಿಯು… ಇಡೀ ವಿಶ್ವವೇ ನಮ್ಮ ದೇಶದತ್ತ ಬೆರೆಗುಗಣ್ಣಿನಿಂದ ನೋಡುವಂತೆ ನಮ್ಮ ದೇಶದಲ್ಲಿ ಜಾನಪದ ಕಲೆಗಳು ಸಮೃದ್ಧವಾಗಿದೆ. ಈಗಾಗಲೇ ಗುರುತಿಸಲ್ಪಟ್ಟ ಜಾನಪದ ಕಲೆ ನೂರಾರು ಮತ್ತು ಸಮೃದ್ಧವಾಗಿವೆ. ಇನ್ನೂ ಗುರುತಿಸಲ್ಪಡಬೇಕಾದ ಕಲೆಗಳು ಸಾವಿರಾರು. ಹೀಗಿರುವುದರಿಂದಲೇ ನಮ್ಮ ಯುವ ಜನರು ಈ ಬಗೆಗೆ ಚಿಂತಿಸಬೇಕಾಗಿದೆ. ಎಲ್ಲ ಜಾನಪದ ಕಲೆಗಳನ್ನು ದಾಖಲಿಸಬೇಕಾಗಿದೆ. ಪ್ರದರ್ಶನ ಕಲೆಗಳನ್ನು ಬದಿಗಿಟ್ಟರೂ ಹಾಡುವ ಸಾಹಿತ್ಯವೇ ಅಪಾರ ಪ್ರಮಾಣದಲ್ಲಿದೆ… ಇಂತಹ ಹಾಡುವ ಸಾಹಿತ್ಯದ ಒಂದಿಷ್ಟನ್ನಾದರೂ ಸಹೃದಯರ ಮನೆ-ಮನಸ್ಸನ್ನು ಮುಟ್ಟಿಸಬೇಕೆಂಬ ಆಸೆಯಿಂದ ಬೈಲೂರ ಬಸವಲಿಂಗಯ್ಯನವರು ತಮ್ಮ ಸಾವಿರಾರು ಜಾನಪದ ಹಾಡುಗಳಲ್ಲಿ ಆಯ್ದ ಪುಸ್ತುಕೆಯೇ ‘ನೂರು ಜನಪದ ಹಾಡುಗಳು’..! ಈ ‘ನೂರು ಜನಪದ ಹಾಡುಗಳು’ ಎಂಬ ಕೃತಿಯನ್ನು ಜಾನಪದ ಸಂಶೋಧನ ಕೇಂದ್ರ ಭೂಷಣ ಪ್ರಕಾಶನ, ಸಪ್ತಾಪುರ, ಧಾರವಾಡ-೧ ಎಂಬ ಪ್ರಕಾಶನ ಹೊರತಂದಿದೆ… ಈ ಪ್ರಕಾಶನದ ನಿರ್ದೇಶಕಿಯಾದ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠರು ಈ ಪುಸ್ತಕೆಯನ್ನು ಹೊರತಂದಿದ್ದಾರೆ… ಸರ್ಕಾರದ ಉದಾಸೀನತೆ, ವಿದ್ವಾಂಸರ ಅದೂರದೃಷ್ಟಿ, ಕಲಾವಿದರ ಅಜ್ಞಾನ ಮತ್ತು ಜನತೆಯ ಅನಾದಾರದ ಕಾರಣವಾಗಿಯೇ ಉತ್ತರ ಕರ್ನಾಟಕದ ಸಮೃದ್ಧ ಜಾನಪದ ಅವಸಾನದಂಚಿನಲ್ಲಿದೆ. ಈ ಅನಾದಾರ ದೂರವಾಗಬೇಕಿದೆ ಎಂದು ಹೇಳಿ ಈ ಬೈಲೂರ ಬಸವಲಿಂಗಯ್ಯ ಹಿರೇಮಠರವರ ‘ನೂರು ಜನಪದ ಹಾಡುಗಳು’ ಬಗೆಗಿನ ನನ್ನ ಮಾತು ಮುಗಿಸುತ್ತೇನೆ..! **********

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಕೃತಿ: ತಗಿ ನಿನ್ನ ತಂಬೂರಿ(ಶರೀಫರ ತತ್ವ ಭಾಷ್ಯ) ಲೇಖಕಿ; ಚಂದ್ರಪ್ರಭ ಬಿ. ಪ್ರಕಾಶಕರು: ಅಜಬ್ ಪ್ರಕಾಶನ, ನಿಪ್ಪಾಣಿ ತಗಿ ನಿನ್ನ ತಂಬೂರಿ , ಶರೀಫರ ತತ್ವ ಭಾಷ್ಯ” ಅಜಬ್ ಪ್ರಕಾಶನ, ನಿಪ್ಪಾಣಿ ರವರ ಹೊಸ ಪ್ರಕಟಣೆ. ಬನಹಟ್ಟಿಯ ಚಂದ್ರಪ್ರಭಾ ಲೇಖನಿಯಿಂದ ಇದು ಚೊಚ್ಚಲ ಪುಸ್ತಕ. ಕನ್ನಡ ನಾಡಿನ ಬಹು ಜನಪ್ರಿಯ ಜಾನಪದ ಕವಿ, ತತ್ವ ಪದಕಾರ ಶರೀಫ ಸಾಹೇಬರ ಆಯ್ದ ೨೫ ತತ್ವ ಪದಗಳನ್ನು ಇಲ್ಲಿ ಲೇಖಕರು ಚರ್ಚೆಗೆ ಒಳಪಡಿಸಿದ್ದಾರೆ. ಪ್ರಸ್ತಾವನೆಯಲ್ಲಿ ಸ್ವತಃ ಲೇಖಕಿ ಹೇಳುವಂತೆ ಶಿವಯೋಗದ ಹಿನ್ನೆಲೆಯಲ್ಲಿ ಈ ಪದ್ಯಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಪೂರಕವಾಗಿ‌ ಬಸವಾದಿ ಶರಣರ ವಚನಗಳನ್ನು ಅಲ್ಲಲ್ಲಿ ಉಲ್ಲೇಖಿಸಿ ಶರಣರ ವಚನಗಳು ಹಾಗೂ ಶರೀಫರ ತತ್ವ ಪದಗಳಿಗಿರುವ ತಾತ್ವಿಕ ಹಿನ್ನೆಲೆಯತ್ತ ಬಲು ಸೊಗಸಾಗಿ ಗಮನ ಸೆಳೆಯಲಾಗಿದೆ. ಸಾಮಾನ್ಯ ಜನಜೀವನದ ಆಗು ಹೋಗುಗಳನ್ನೇ ರೂಪಕವನ್ನಾಗಿ ಮಾಡಿಕೊಳ್ಳುವಾಗಲೂ ಶರೀಫರ ತತ್ವ ಪದಗಳ ಗೂಢಾರ್ಥ ಪರಮಾರ್ಥ ಸಾಧನೆಯತ್ತ ಕೈ ಹಿಡಿದು ನಡೆಯಿಸುವುದನ್ನು ಲೇಖಕಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ. ಆಯಾ ಸಂದರ್ಭಗಳಲ್ಲಿ ಅಗತ್ಯವೆನಿಸುವ ದೃಷ್ಟಾಂತ ನೀಡುವ ಮೂಲಕ ಸಂಗತಿಗಳನ್ನು ಓದುಗ ಸ್ನೇಹಿ ಮಾಡುವ ನಿಟ್ಟಿನಲ್ಲಿ ಲೇಖಕರು ಪರಿಶ್ರಮ ಪಟ್ಟಿದ್ದು ಕಂಡು ಬರುತ್ತದೆ. ಸುದೀರ್ಘವಾದ ತಮ್ಮ ಪ್ರಸ್ಥಾವನೆಯಲ್ಲಿ ಯೋಗ, ಶಿವಯೋಗ ಇತ್ಯಾದಿ ಕುರಿತು ಹೇಳುವ ಲೇಖಕರು ಕಾವ್ಯ ಕುರಿತು ವ್ಯಕ್ತಪಡಿಸುವ ಅಧ್ಯಾಯ ಗಮನ ಸೆಳೆಯುತ್ತದೆ. ಅದೇ ರೀತಿ ಯೋಗದಲ್ಲಿ ಪ್ರಸ್ತಾಪವಾಗುವ ಹಲವಾರು ತಾಂತ್ರಿಕ ಪಾರಿಭಾಷಿಕ ಪದಗಳ ವಿವರಣೆ ಕೂಡಾ ಪೂರಕವಾಗಿದೆ. ಶರೀಫರ ಜೀವನದ ಆಗು ಹೋಗುಗಳನ್ನು ತಿಳಿಸುವ ಮೂಲಕ ಅವರೊಬ್ಬ ಸಮನ್ವಯದ ಹರಿಕಾರ ಎಂಬ ಅಂಶವನ್ನು ಕೊನೆಯಲ್ಲಿ ನಿರೂಪಿಸಲಾಗಿದೆ. ಶರೀಫರು ಬೇರೆಲ್ಲ ಆಗುವುದಕ್ಕಿಂತ ಮಿಗಿಲಾಗಿ ಓರ್ವ ಶಿವಯೋಗ ಸಾಧಕರಾಗಿದ್ದರು, ಅಪ್ಪಟ ಶರಣರಾಗಿದ್ದರು, ಮೌಢ್ಯ ವಿರೋಧಿಯಾಗಿದ್ದರು, ಜನಾನುರಾಗಿಯಾಗಿದ್ದರು ಎಂಬ ಸ್ಪಷ್ಟ ನಿಲುವನ್ನು ಲೇಖಕರು ಅತ್ಯಂತ ಶ್ರದ್ಧೆಯಿಂದ ನಿರೂಪಿಸುವುದನ್ನು ಇಲ್ಲಿ ಕಾಣಬಹುದು. ಪುಸ್ತಕ ದೊರೆಯುವ ಸ್ಥಳ: ರೂ. ೧೮೦/- ಬೆಲೆಯ ಪುಸ್ತಕ “ಅರು ಪ್ರಕಾಶನ” ಬನಹಟ್ಟಿ ಇವರಲ್ಲಿ ಲಭ್ಯವಿದೆ. ಸಂಪರ್ಕ ಸಂಖ್ಯೆ 9916542172 ಡಿ. ಎ. ಬಾಗಲಕೋಟ, ‘ಅರು ನಿಲಯ’, ಬೀಳಗಿ ಓಣಿ, ಬನಹಟ್ಟಿ 587311, ಜಿ.‌ ಬಾಗಲಕೋಟ – ಇವರನ್ನು ಸಂಪರ್ಕಿಸಬಹುದು.

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ

‘ಗಂಗವ್ವ ಗಂಗಾಮಾಯಿ‘ ಶಂಕರ ಮೊಕಾಶಿ ಪುಣೇಕರ ಕೆ.ಶಿವು ಲಕ್ಕಣ್ಣವರ ಗಂಗವ್ವ ಗಂಗಾಮಾಯಿಯಾಗುವ ಅಪೂರ್ವ ಕಥನವೇ ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’..! ಕನ್ನಡದ ಮುಖ್ಯ ಸ್ತ್ರೀಪಾತ್ರಗಳ ಜೊತೆ ನಡೆಸುವ ಈ ಸಂವಾದಕ್ಕೆ ಹಲವು ಆಸೆಗಳು, ಉದ್ದೇಶಗಳು ಇವೆ. ಕನ್ನಡ ಮನಸ್ಸನ್ನು ಆವರಿಸಿರುವ, ಕಾಡಿರುವ ಈ ಸ್ತ್ರೀಪಾತ್ರಗಳನ್ನೆಲ್ಲ ಒಂದು ವೇದಿಕೆಗೆ ತಂದಾಗ ಸೃಷ್ಟಿಯಾಗುವ ಹೆಣ್ಣಿನ ಚಿತ್ರ ಹೇಗಿರಬಹುದು ಎನ್ನುವ ಕುತೂಹಲ, ಹೆಣ್ಣನ್ನು ನೋಡುವ, ಪರಿಭಾವಿಸುವ ನಿರ್ದಿಷ್ಟ ವಿನ್ಯಾಸಗಳು ಇವೆಯೇ ಎನ್ನುವ ಹುಡುಕಾಟವೇ ಲೇಖಕನದ ಮತ್ತು ಲೇಖಕನ ದೃಷ್ಟಿಕೋನ… ಆಯ್ಕೆ, ಆದ್ಯತೆ, ಸಮಕಾಲೀನ ಒತ್ತಡಗಳನ್ನೆಲ್ಲ ಮೆಟ್ಟಿ ನಿಂತ ಸ್ತ್ರೀಪಾತ್ರಗಳು ಏನನ್ನು ಪ್ರತಿನಿಧಿಸುತ್ತವೆ? ಕಲೆಯ ಶಕ್ತಿಯನ್ನೋ, ಹೆಣ್ಣಿನ ವ್ಯಕ್ತಿತ್ವದ ನಿಜ ನೆಲೆಯನ್ನೋ? ಅಪವಾದವೆನ್ನುವಂತೆ, ಅಪರೂಪವೆನ್ನುವಂತೆ, ಮುಖ್ಯವೆನ್ನುವಂತೆ ಕಾಣುವ ಸ್ತ್ರೀ ಪಾತ್ರಗಳಾಚೆಗೆ ಅಜ್ಞಾತವಾಸದಲ್ಲಿರುವ ಪಾತ್ರಗಳೂ ಇವೆಯೆ? ಈ ಸ್ತ್ರೀ ಪಾತ್ರಗಳ ಮೂಲಕ ಭಿನ್ನ ಲೋಕದೃಷ್ಟಿಯೊಂದನ್ನು ಕಟ್ಟಲು ಸಾಧ್ಯವಿದೆಯೆ? ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸುವಲ್ಲಿ ಈ ಪಾತ್ರಗಳ ಪಾತ್ರವೇನು..? ಇಂಥ ಹಲವು ಪ್ರಶ್ನೆಗಳ ಮುಖಾಮುಖಿಯೇ ಗಂಗವ್ವ ಗಂಗಾಮಾಯಿ… ಶಂಕರ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ ನಿಸ್ಸಂದೇಹವಾಗಿ ಕನ್ನಡದ ಶ್ರೇಷ್ಠ ಪಠ್ಯಗಳಲ್ಲೊಂದಾಗಿರುವಂತೆಯೇ ಗಂಗವ್ವ ಕನ್ನಡ ಜಗತ್ತು ಸೃಷ್ಟಿಸಿರುವ ಸಾರ್ವಕಾಲಿಕ ಪಾತ್ರಗಳಲ್ಲೊಂದು. ತಾಯ್ತನವನ್ನು ಕುರಿತ ಎಲ್ಲ ಬಗೆಯ ರೊಮ್ಯಾಂಟಿಕ್ ನಿರೂಪಣೆಗಳನ್ನು ನಿರ್ದಾಕ್ಷಿಣ್ಯವಾಗಿ ಹೊಡೆದು ಹಾಕುತ್ತಲೇ ತಾಯ್ತನ ಮತ್ತು ಹೆಣ್ಣಿನ ಶಕ್ತಿಯನ್ನು ಈ ಕಾದಂಬರಿ ಅದ್ಭುತವಾಗಿ ಕಟ್ಟಿಕೊಡುತ್ತದೆ. ಇದನ್ನು ಈ ಕಾದಂಬರಿ ಎಷ್ಟು ಶಕ್ತವಾಗಿ ಮಾಡುತ್ತದೆ ಎಂದರೆ, ಹೆಣ್ಣಿನ ಶಕ್ತಿ ವಿಶೇಷಗಳ ಬಗ್ಗೆ ನಮ್ಮಲ್ಲಿ ಭಾವುಕವೂ, ರಮ್ಯವೂ ಆದ ಕೃತಜ್ಞತೆಯ ಭಾವವೊಂದು ಅನಾಯಾಸವಾಗಿ ಮೂಡುವಷ್ಟು..! ಗಂಡನನ್ನು, ಭಾವನಾತ್ಮಕ ಹಾಗೂ ಆರ್ಥಿಕ ಸುರಕ್ಷತೆಯನ್ನು ಒಟ್ಟಿನಲ್ಲಿ ಎಲ್ಲ ಬಗೆಯ ಆಧಾರಗಳನ್ನು ಕಳೆದುಕೊಂಡು ಮಗನನ್ನು ಬೆಳೆಸುವ, ಅವನಿಗೊಂದು ಬದುಕನ್ನು ಕಟ್ಟಿಕೊಡುವುದೇ ತನ್ನ ಬದುಕಿನ ಏಕೈಕ ಗುರಿಯೆಂದು ತಿಳಿಯುವ, ಮಾತ್ರವಲ್ಲ, ಅದನ್ನು ಅಕ್ಷರಶಃ ಬದುಕಿನ ಪ್ರತಿಘಳಿಗೆಯೂ ಪಾಲಿಸುತ್ತಾಳೆ ಗಂಗವ್ವ… ಜಗತ್ತಿನಾದ್ಯಂತ ಇಂಥ ಲಕ್ಷಾಂತರ ತಾಯಂದಿರಿದ್ದಾರೆ. ಅವರಿಗೆಲ್ಲ ತ್ಯಾಗಮಯಿಗಳೆಂಬ, ಬದುಕನ್ನು ಗಂಧದ ಹಾಗೆ ತೇಯುವ ಸಾರ್ಥಕ ಜೀವಿಗಳೆಂಬ ಪ್ರಶಸ್ತಿಯೂ ಯಾವುದೇ ವಶೀಲಿಬಾಜಿಯಿಲ್ಲದೇ ಅಪಾರ ಕೃತಜ್ಞತೆಯಲ್ಲಿ ಸಲ್ಲುತ್ತಾ ಬಂದಿದೆ. ಈ ದೃಷ್ಟಿಕೋನವು ಹೆಣ್ಣು ಇರಬೇಕಾದ್ದೇ ಹೀಗೆ ಎನ್ನುವ ಕರಾರಾಗಿಯೂ ಸ್ಥಾಪಿತವಾಗಿಬಿಟ್ಟಿದೆ. ಇದು ಹೆಣ್ಣಿನ ಶಕ್ತಿ ವಿಶೇಷ ಎನ್ನುವುದೇನೋ ಸರಿ, ಆದರೆ ತಾಯ್ತನವೆನ್ನುವುದು ಪ್ರತಿಘಳಿಗೆಯೂ ಅಪೇಕ್ಷಿಸುವ ಮನೋಚೈತನ್ಯವನ್ನು, ಅದನ್ನು ನಿರಂತರವಾಗಿ ಉಳಿಸಿಕೊಳ್ಳಲು ಏನೆಲ್ಲವನ್ನೂ ಹೆಣ್ಣು ಪಣಕ್ಕೆ ಒಡ್ಡಬೇಕಾಗುತ್ತದೆ ಎನ್ನುವುದನ್ನು ಗಂಗವ್ವನ ಪಾತ್ರ ಸಾಕ್ಷಾತ್ಕರಿಸಿ ಕೊಡುತ್ತದೆ. ಆದ್ದರಿಂದಲೇ ಇದು ‘Making of the Mother’ನ ವಾಸ್ತವವಾದಿ ಚಿತ್ರಣದ ಹಾಗೆ ಕಾಣಿಸುತ್ತದೆ… ಗಂಗವ್ವನ ಪಾತ್ರ ಗಂಗವ್ವನಿಂದ ಗಂಗಾಮಾಯಿಯಾಗುವ ಪ್ರಕ್ರಿಯೆಯ ಸಜೀವ ಚಿತ್ರಣ ಈ ಕಾದಂಬರಿಯಲ್ಲಿದೆ. ಗಂಗವ್ವನ ಪಾತ್ರದ ಪ್ರವೇಶವೇ ಕೃತಿಕಾರರ ದೃಷ್ಟಿಕೋನದ ಥಾಟನ್ನು ನಾಟಕೀಯವಾಗಿ ಓದುಗರಿಗೆ ಪರಿಚಯಿಸುತ್ತದೆ. ಭಾರತೀಯರ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಗಂಗಾಜಲವನ್ನು ತನ್ನ ಮಗನನ್ನು ಪೊರೆಯಬೇಕಾದ ಜವಾಬ್ದಾರಿಯ ಸಲುವಾಗಿ ರೈಲಿನಿಂದ ಹೊರಗೆ ಚೆಲ್ಲುವ ದೃಶ್ಯದಿಂದ ಕಾದಂಬರಿ ಆರಂಭವಾಗುತ್ತದೆ. ಈ ಜವಾಬ್ದಾರಿಯ ಅರಿವು ಅವಳಿಗೆ ಆ ಘಳಿಗೆಯಲ್ಲಿ ಆಗುತ್ತದೆ ಎಂದಲ್ಲ. ಆದರೆ ಆ ಜವಾಬ್ದಾರಿ ಎಷ್ಟು ಮುಖ್ಯವಾದುದು ಮತ್ತು ಅನಂತವಾದುದು ಎಂದರೆ ಗಂಗಾಜಲ ತನ್ನ ಮನೆಯಲ್ಲಿ ಕಣ್ಣೆದುರಿಗೆ ಇರುವುದು ಅದಕ್ಕೊಡ್ಡುವ ಸವಾಲಿನ ಹಾಗೆ, ಸಾವಿನ ಅಸ್ತಿತ್ವವನ್ನು, ಆಗಮನದ ಅನಿವಾರ್ಯತೆಯನ್ನು ಆ ಗಂಗಾಜಲ ಪ್ರತಿಕ್ಷಣ ನೆನಪಿಸುವ ಮೂಲಕ ತನಗೆ ಅಡ್ಡಿಯಾಗಬಹುದೆಂದು ಆ ಗಂಗಾಜಲವನ್ನು ಹೊರಗೆ ಚೆಲ್ಲುತ್ತಾಳೆ… ಇದು ಆ ಗಂಗಾಜಲವನ್ನು ಕುರಿತ ಅವಳ ಅಪನಂಬಿಕೆಯ ಸಂಕೇತವೇನಲ್ಲ, ಸ್ವಭಾವತಃ ದೈವಶ್ರದ್ಧೆಯವಳಾದ ಗಂಗವ್ವನಿಗೆ ಧಾರ್ಮಿಕ ನಂಬಿಕೆಗಿಂತಲೂ ಮಗನನ್ನು ನೆಲೆನಿಲ್ಲಿಸುವುದು ತನ್ನ ಬದುಕಿನ ಪರಮ ಗುರಿ ಎನ್ನುವುದರಲ್ಲಿರುವ ನಂಬಿಕೆ ಮೇಲುಗೈ ಪಡೆಯುತ್ತದೆ ಎನ್ನುವ ಅಂಶ ತಾಯ್ತನದ ಸಹಜ ಗುಣವನ್ನು ಮಾತ್ರವಲ್ಲ; ಅದನ್ನು ಕಾಪಾಡಿಕೊಂಡು ಬರುವುದು ಯಾವ ಹೆಣ್ಣಿಗೂ ಒಂದು ಸವಾಲೂ ಹೌದು, ಅದೊಂದು ಸಾವಯವ ಪ್ರಕ್ರಿಯೆಯೂ ಹೌದು ಎನ್ನುವ ಬಹು ಮುಖ್ಯವಾದ ಅಂಶವನ್ನು ಹೇಳುತ್ತದೆ. ಸಾಮಾನ್ಯವಾಗಿ ಈ ಅಂಶವನ್ನು ಅವಳ ಹುಟ್ಟುಗುಣವೆನ್ನುವಂತೆ ನಿಭಾಯಿಸಲಾಗುತ್ತದೆ. ಆದರೆ ಪುಣೇಕರರ ಈ ಕೃತಿ ಅದೊಂದು ಸಿದ್ಧ ಸ್ಥಿತಿಯಲ್ಲ ಎನ್ನುವುದಕ್ಕೆ ಒತ್ತು ಕೊಡುವುದರ ಮೂಲಕ ಅದೊಂದು ಕಷ್ಟದ ದಾರಿ ಎನ್ನುವುದನ್ನು ಹೇಳುತ್ತದೆ… ಸ್ವಲ್ಪ ಉತ್ಪ್ರೇಕ್ಷಿತವಾಗಿ ಹೇಳುವುದಾದರೆ, ತಾಯ್ತನವೆನ್ನುವುದು ಅಹಂಕಾರವನ್ನು ಕಳೆದುಕೊಳ್ಳುತ್ತಾ ಹೋಗುವ ಕ್ರಿಯೆಯೂ ಹೌದು ಎನಿಸಿಬಿಡುತ್ತದೆ ಗಂಗವ್ವನನ್ನು ಅರ್ಥಮಾಡಿಕೊಳ್ಳುವಾಗ. ಮಗ–ಸೊಸೆ ತನ್ನನ್ನು ಅನಾದರದಿಂದ ಕಂಡ ಸಂದರ್ಭವೊಂದರಲ್ಲಿ ಊಟವನ್ನೂ ಮಾಡದೆ ಅವಳ ಹಿತಚಿಂತಕರಾದ ದೇಸಾಯರ ಮನೆಗೆ ಗಂಗವ್ವ ಹೋಗುತ್ತಾಳೆ. ಅಸಹನೀಯ ಅವಮಾನವಾಗಿದ್ದಾಗಲೂ ಗಂಗವ್ವ ಮನೆಗೆ ವಾಪಸಾಗುವುದಾಗಿ ಹೇಳುತ್ತಾಳೆ. ತನ್ನ ಅವಮಾನಕ್ಕಿಂತ ಮಗನ ಅಭ್ಯುದಯವೇ ದೊಡ್ಡದಾಗಿ ಅವಳಿಗೆ ಕಾಣಿಸುತ್ತದೆ. ಆದರೆ ಇದಕ್ಕಾಗಿ ಅವಳು ರಾಜಿ ಮಾಡಿಕೊಳ್ಳಬೇಕಾಗುವುದು ತನ್ನ ಆತ್ಮಗೌರವದ ಜೊತೆಗೆ. ಬಹುಕಷ್ಟದ ಈ ಸಂದರ್ಭವನ್ನು ಅವಳು ಹಾಯುವ ಘಳಿಗೆಯ ತಲ್ಲಣಗಳನ್ನು ಪುಣೇಕರರು ಅಬ್ಬರವಿಲ್ಲದ ತೀವ್ರತೆಯಲ್ಲಿ ಹಿಡಿಯುತ್ತಾರೆ. ತಾನು ಎನ್ನುವ ಅಹಂಕಾರವನ್ನು ಗೆಲ್ಲಬೇಕಾದ ಅನಿವಾರ್ಯತೆಯನ್ನು ಅವಳು ಸಾಂಪ್ರದಾಯಿಕ ಹೆಣ್ಣಿನ ಮಾಮೂಲಿ ಧಾಟಿಯಲ್ಲಿಯೇ ನಿಭಾಯಿಸಲು ಯತ್ನಿಸುವ ಹಾಗೆ ಕಾಣಿಸುತ್ತದೆ. ‘ಹೆಂಗಸಿನ ಜನ್ಮ ಇರೋದೇ ಅನುಭೋಗಿಸೋಕೆ… ಅನುಭೋಗಿಸ್ತೀನಿ ಬಿಡು ಗೋಪಣ್ಣಾ…’ ಎನ್ನುತ್ತಾಳೆ… ಆದರೆ ಇಡೀ ಕಾದಂಬರಿಯ ಭಿತ್ತಿಯಲ್ಲಿ ಅವಳ ಪಾತ್ರದ ಚಲನೆಗಳು ಅಸಹಾಯಕ ಹೆಣ್ಣಿನ ಗೋಳಾಟವಾಗಿ ಕಾಣಿಸುವುದಿಲ್ಲ. ಬದುಕಿನ ಯಾವುದೇ ಸನ್ನಿವೇಶಗಳನ್ನೂ ನಿರ್ಭೀತಿಯಿಂದ, ಕುಂದಿಲ್ಲದ ಆತ್ಮವಿಶ್ವಾಸದಿಂದ ಎದುರಾಗುತ್ತಾಳೆ. ಈ ಸನ್ನಿವೇಶವೂ ಕೂಡ ಅವಳ ಜೀವನದೃಷ್ಟಿಯ ನಿದರ್ಶನವೇ ಆಗಿದೆ. ಮಗನ ಹಾಗೂ ಸೊಸೆಯ ಎದುರಿಗಿನ ಸೋಲಾಗಬಹುದು ಎನ್ನುವುದಕ್ಕಿಂತ, ತನ್ನ ಆತ್ಮಗೌರವಕ್ಕೆ ಭಂಗವಾಗುತ್ತದೆ ಎನ್ನುವ ಸಾಧ್ಯತೆಗಿಂತ, ಮಗನ ಬದುಕು ಹಳಿ ತಪ್ಪಬಾರದು ಎನ್ನುವ ಪ್ರಜ್ಞಾಪೂರ್ವಕವಾದ, ಕಷ್ಟದ ಆಯ್ಕೆ ಇದು. ಆದರೆ ಅದು ಕಾಣಿಸಿಕೊಳ್ಳುವುದು ಮಾತ್ರ ಹೆಣ್ಣಿನ ಜನ್ಮ ಎನ್ನುವ ಸಾಂಪ್ರದಾಯಿಕ ಭಾಷೆಯಲ್ಲಿ. ಆದ್ದರಿಂದಲೇ ಗಂಗವ್ವನ ಪಾತ್ರ ಹೆಣ್ಣಿನ ವ್ಯಕ್ತಿತ್ವದ ಹುಡುಕಾಟ ಮತ್ತು ರಚನೆಯ ಅನೇಕ ಆಯಾಮಗಳನ್ನು ಅನಾವರಣಗೊಳಿಸುತ್ತದೆ… ಮುಖ್ಯವಾಗಿ ಹೆಣ್ಣಿನ ಸಾಮಾಜಿಕ, ಕೌಟುಂಬಿಕ ನೆಲೆಗಳಿಗೆ ಕೊಡುವ ಒತ್ತು ಇಲ್ಲೂ ಮುಂದುವರಿದಿರುವ ಹಾಗೆ ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ ಗಂಗವ್ವನ ಪಾತ್ರದ ಶಕ್ತಿ ಮತ್ತು ಅನನ್ಯತೆ ಇರುವುದೇ ಹೆಣ್ಣಿನ ಬದುಕಿನ ಸಾಮಾಜಿಕ, ಕೌಟುಂಬಿಕ ನೆಲೆಗಳನ್ನು ಸ್ಪಷ್ಟ ರಾಜಕೀಯ ಹಾಗೂ ನೈತಿಕ ಪ್ರಜ್ಞೆಯಲ್ಲಿ ಪ್ರತಿಪಾದಿಸುವುದರಲ್ಲಿ. ಗಂಗವ್ವ ಮುನ್ನೆಲೆಗೆ ತರುವ ಈ ಅಂಶಗಳು ಅವಳ ವ್ಯಕ್ತಿತ್ವ ಮತ್ತು ಹೋರಾಟಕ್ಕೆ ಅಪಾರ ಬಲ ಕೊಡುತ್ತವೆ. ಇಡೀ ಲೋಕವನ್ನು ಎದುರು ಹಾಕಿಕೊಳ್ಳಬಲ್ಲ ಛಾತಿಯನ್ನು ಅವಳು ಪಡೆಯುವುದು ಈ ರಾಜಕೀಯ ಪ್ರಜ್ಞೆಯಲ್ಲಿ. ಈ ಕಾರಣಕ್ಕಾಗಿಯೇ ಅವಳಿಗೆ ತನ್ನ ನಡೆಯಲ್ಲಿ ಯಾವ ದ್ವಂದ್ವಗಳೂ ಇಲ್ಲ. ತನ್ನ ಖಾಸಾ ತಮ್ಮ ರಾಘಪ್ಪನ ಮಗಳನ್ನೇ ತನ್ನ ಸೊಸೆಯಾಗಿ ಮಾಡಿಕೊಳ್ಳುವ ಸಂದರ್ಭದಲ್ಲೂ ಒಪ್ಪಂದದಂತೆ ಒಂದು ಸಾವಿರ ರೂಪಾಯಿ ಕೊಡದಿದ್ದರೆ ‘ಅಕ್ಕಿಕಾಳು’ ಇಲ್ಲ ಎಂದು ತುಂಬಿದ ಮದುವೆ ಮನೆಯಲ್ಲಿ ಘಂಟಾಘೋಷವಾಗಿ ಹೇಳಬಲ್ಲಳು. ಇಷ್ಟಾಗಿ ಆ ಹಣ ಯಾಕಾಗಿ? ತಾನು ಉಡುವ ಹರಕು ಸೀರೆಯ ಬದಲು ರೇಷ್ಮೆ ಸೀರೆ ಉಡಲಂತೂ ಅಲ್ಲ. ಮಗನ ಭವಿಷ್ಯದ ಆಪದ್ಧನವಾಗಿ ಅದು ಅವಳಿಗೆ ಬೇಕು… ಯಾರನ್ನು ಬೇಕಾದರೂ ತನ್ನ ಖೆಡ್ಡಾದಲ್ಲಿ ಬೀಳಿಸಿಕೊಳ್ಳಬಲ್ಲ, ಗೆದ್ದು ಬೀಗಬಲ್ಲ ಪ್ರಚಂಡ ರಾಘಪ್ಪನನ್ನು ಗಂಗವ್ವ ಸೋಲಿಸುವುದು ಇದೇ ಪ್ರಖರ ರಾಜಕೀಯ ಪ್ರಜ್ಞೆಯಲ್ಲಿ. ತಾಯಿಯಾಗಲ್ಲದೆ ತನಗೆ ಇನ್ನೊಂದು ಅಸ್ತಿತ್ವವೇ ಇಲ್ಲವೇನೋ ಎನ್ನುವ ಮಟ್ಟದಲ್ಲಿ ಗಂಗವ್ವ ವ್ಯವಹರಿಸುತ್ತಾಳೆ. ಕೆಲವು ಸನ್ನಿವೇಶಗಳು ಗಂಗವ್ವನ ವ್ಯಕ್ತಿತ್ವದ ಅಪ್ರತಿಮ ಸಾಕ್ಷಿಗಳಾಗಿವೆ. ಗಂಗವ್ವನ ಗಂಡ ಸ್ವಾಮಿರಾಯನ ಆಸ್ತಿಯೆಲ್ಲ ಹರಾಜಿಗೆ ಬಂದ ಹೊತ್ತಿನಲ್ಲಿ ಇವಳು ಮಗ ಕಿಟ್ಟಿಯ ಕೈಗೆ ಕೆಲವು ಒಡವೆಗಳನ್ನು ಕೊಟ್ಟು ಹಿತ್ತಲಿನಲ್ಲಿ ಒಗೆಸುತ್ತಾಳೆ. ನಂತರ ಅವುಗಳನ್ನು ಮಾರಿ, ಬಂದ ಹಣವನ್ನು– ರಕ್ಷಕ ದೈವದಂತೆ ಅವಳನ್ನು, ಮಗ ಕಿಟ್ಟಿಯನ್ನು ಸದಾ ಪೊರೆದ ದೇಸಾಯರ ಬಳಿ ಇಡುತ್ತಾಳೆ. ಎಂಥ ದುರ್ಭರ ಸನ್ನಿವೇಶದಲ್ಲೂ ಕಂಗೆಡದ ಈ ಗುಣವೊಂದು ಅವಳ ವ್ಯಕ್ತಿತ್ವದ ಅಸಾಧಾರಣ ಲಕ್ಷಣ. ಇದೇ ಹಣದ ಮೇಲೆ ತಮ್ಮ ರಾಘಪ್ಪ ಕಣ್ಣಿಟ್ಟು ಏನೆಲ್ಲಾ ಹುನ್ನಾರಗಳನ್ನು ಮಾಡಿದರೂ ಆ ಹಣ ಅವನ ಕೈಗಾಗಲಿ, ಮಗ ಕಿಟ್ಟಿಯ ದಂದುರಾಳಿತನಕ್ಕಾಗಲಿ ದಕ್ಕದಂತೆ ನೋಡಿಕೊಳ್ಳುತ್ತಾಳೆ… ನಿದ್ದೆ ಎಚ್ಚರಗಳಲ್ಲಿ ತನ್ನ ಜವಾಬ್ದಾರಿಯನ್ನೇ ಉಸಿರಾಡುವ ಗಂಗವ್ವ ಈ ಕಾರಣಕ್ಕಾಗಿಯೇ ಸದಾ ಚಡಪಡಿಸುತ್ತಿರುತ್ತಾಳೆ. ಆದ್ದರಿಂದಲೇ ಇವಳ ವ್ಯಕ್ತಿತ್ವದಲ್ಲಿ ಪ್ರಸನ್ನತೆ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಹಾಸ್ಯವೂ ಇವಳ ಬಳಿ ಸುಳಿಯುವುದಿಲ್ಲ. ಗಂಗವ್ವನ ವ್ಯಕ್ತಿತ್ವದ ಅಪೂರ್ಣತೆ ನಮ್ಮ ಅರಿವಿಗೆ ಬರುವುದು ಇಂಥ ಸಂಗತಿಗಳಿಂದ. ಮಗ ಕಿಟ್ಟಿಯನ್ನು ಕುರಿತ ಗಂಗವ್ವನ ಕಾಳಜಿ, ಸದೋದಿತವಾಗಿ ಅವಳು ನಡೆಸುವ ಪ್ರಯತ್ನಗಳನ್ನು, ಅವಳ ಭಂಗವಿರದ ಏಕೋನಿಷ್ಠೆಯನ್ನು ವೈಭವೀಕರಿಸುವ, ನಾಟಕೀಯಗೊಳಿಸುವ, ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುವ ಎಲ್ಲ ಅವಕಾಶಗಳೂ ಈ ಕೃತಿಗಿದ್ದವು. ಆದರೆ ಈ ಕಾದಂಬರಿ ಅದ್ಯಾವುದನ್ನೂ ಮಾಡದೆ ಗಂಗವ್ವನನ್ನು ಅವಳ ನಿಜದಲ್ಲಿ ನೋಡುವ ಪ್ರಯತ್ನ ಮಾಡುತ್ತದೆ. ಅವಳ ದೌರ್ಬಲ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುವುದಿಲ್ಲವೆಂದೇ ಅವಳ ಶಕ್ತಿಯೂ ನಮ್ಮ ಅರಿವಿಗೆ ದಕ್ಕುವುದು ಸಾಧ್ಯವಾಗುತ್ತದೆ. ತಮ್ಮ ರಾಘಪ್ಪ ಹತ್ತು ವರ್ಷಗಳ ನಂತರ ಮೊದಲ ಬಾರಿಗೆ ಮನೆಗೆ ಬಂದಾಗ ಮಗ ಚಹಾ ಮಾಡು ಎಂದರೆ, ‘ರಾಘಪ್ಪ ಚಹಾದ ಮನುಷ್ಯ ಅಲ್ಲೇಳಪ್ಪ’ ಎನ್ನುವ ಕ್ರೌರ್ಯ, ಸಣ್ಣತನ, ದಿಗಿಲು ಹುಟ್ಟಿಸುತ್ತದೆ (ಚಹಾದ ಪುಡಿ ತೀರಿತ್ತು ಎಂದು ನಂತರ ಮಗನಿಗೆ ಅವಳು ಕೊಡುವ ಸಮರ್ಥನೆ ಅವಳ ನಡವಳಿಕೆಯ ಕ್ರೌರ್ಯವನ್ನೇನು ಕಡಿಮೆ ಮಾಡುವುದಿಲ್ಲ)… ಗಂಗವ್ವನ ಪಾತ್ರದ ಮಹತ್ವ ಇರುವುದು, ಸ್ಥಾಪಿತ ನಿಲುವೊಂದನ್ನು ಅಗೋಚರ ನೆಲೆಯಲ್ಲಿ ಮುರಿಯುವ ಪ್ರಯತ್ನದ ಕಾರಣಕ್ಕಾಗಿ. ಸಾಮಾನ್ಯವಾಗಿ ತಾಯ್ತನವು ಮಕ್ಕಳನ್ನು ತಮ್ಮ ಅಧಿಕಾರ ಮತ್ತು ಪ್ರೀತಿಯ ಅಧೀನತೆಯಲ್ಲಿ ನಿಯಂತ್ರಿಸಲು ಇರುವ ಒಂದು ಆವರಣವಾಗಿ ಬಳಕೆಯಾಗುತ್ತದೆ. ಅಲ್ಲಿ ಅಧಿಕಾರ ಕೇಂದ್ರದ ಪ್ರಶ್ನೆಯೂ ಸಹಜವಾಗಿಯೇ ಇರುತ್ತದೆ. ಎಂದರೆ ತಾಯಿ ಕೇಂದ್ರವಾಗಿ ಮಕ್ಕಳು ಅಧೀನವಾಗುವ ಕ್ರಮ. ಆದರೆ ಗಂಗವ್ವನ ಪಾತ್ರ ಇದಕ್ಕಿಂತ ಭಿನ್ನ. ಅದು ಮಗ ಕೇಂದ್ರ ಎನ್ನುವುದನ್ನು, ತನ್ನ ವೈಯಕ್ತಿಕ ಬದುಕಿನ ಸುಖದುಃಖಗಳು ಎರಡನೆಯವು ಎನ್ನುವುದನ್ನು ಗಂಗವ್ವ ಮತ್ತೆ ಮತ್ತೆ ಸಾಬೀತು ಮಾಡುತ್ತಾ ಹೋಗುತ್ತಾಳೆ… ಆದ್ದರಿಂದಲೇ ಆರಂಭದಲ್ಲಿ ಇದು ಅಹಂಕಾರವನ್ನು ಕಳೆದುಕೊಳ್ಳುವ ದಾರಿಯಾಗಿ ಕಾಣುತ್ತದೆ ಎಂದಿದ್ದು. ತಮ್ಮ ಈಡೇರದ ಆಸೆಗಳ ಪೂರೈಕೆಯ ವಾಹಕಗಳಾಗಿ ಮಕ್ಕಳನ್ನು ಪರಿಭಾವಿಸುವ ಮಾಮೂಲಿ ದಾರಿಯಲ್ಲ ಇದು. ಅಥವಾ ಮಗ ತನ್ನ ರಾಜ್ಯದ ನಿಷ್ಠಾವಂತ ಪ್ರಜೆಯಾಗಿರಬೇಕು ಎನ್ನುವ ನಿಲುವಿನಳಾಗಿಯೂ ಗಂಗವ್ವ ಕಾಣಿಸುವುದಿಲ್ಲ. ಜೀವ ಕೊಟ್ಟ ಮಗನಿಗೆ ಬದುಕು ಕಟ್ಟಿಕೊಡಬೇಕು ಎನ್ನುವ ಮೂಲಧಾತು ಇವಳನ್ನು ಬೇರೆ ಪಾತಳಿಯಲ್ಲಿಡುತ್ತದೆ. ಅಧಿಕಾರ, ವಾತ್ಸಲ್ಯ, ಕಾಳಜಿ ಮತ್ತು ಜವಾಬ್ದಾರಿ– ಇದು ಸಾಮಾನ್ಯವಾಗಿ ತಾಯ್ತನದಲ್ಲಿ ನಾವು ನೋಡುವ ಶ್ರೇಣೀಕೃತ ನೆಲೆಗಳು. ಗಂಗವ್ವನಲ್ಲಿ ಇದು ತಿರುವುಮುರುವಾಗಿದೆ. ಜವಾಬ್ದಾರಿ ಮೊದಲಾಗಿ ಅಧಿಕಾರ ಕೊನೆಯದಾಗಿದೆ. ಗಂಗವ್ವನನ್ನು ಗಂಗಾಮಾಯಿಯಾಗಿಸುವ ಅಂಶ ಇದೇ. ಇದನ್ನೇ ಮುಂದುವರೆಸಿ ಹೇಳುವುದಾದರೆ ತಾಯ್ತನವನ್ನು ಗ್ರಹಿಸಬೇಕಾದ ವಾಸ್ತವ ದೃಷ್ಟಿಕೋನವನ್ನು ಪುಣೇಕರರ ಈ ಕಾದಂಬರಿ ಶಕ್ತವಾಗಿ ಸ್ಥಾಪಿಸುತ್ತದೆ. ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ… ಎನಿಸಿದಾಗಲೂ ಅವಳ ಬಗ್ಗೆ ಪ್ರೀತಿ, ಕೃತಜ್ಞತೆ ಮಾತ್ರವಲ್ಲ ಗೌರವವೂ ಹುಟ್ಟುವುದು ಈ ಕಾರಣಕ್ಕಾಗಿ. ಕನ್ನಡದಲ್ಲಿ ಹಲವು ಅಮರ ತಾಯಂದಿರಿದ್ದಾರೆ. ಅವರಲ್ಲಿ ಗಂಗವ್ವನಿಗೆ ಹತ್ತಿರದ ಸಂಬಂಧಿಗಳೆಂದರೆ, ಲಂಕೇಶರ ‘ಅವ್ವ’ ಮತ್ತು ದೇವನೂರರ ‘ಸಾಕವ್ವ’..! ಇಂತಹ ಕೃತಿಕಾರರ ಪರಿಚಯ ಹೀಗಿದೆ– ಶಂಕರ ಮೊಕಾಶಿ ಪುಣೇಕರ ಅವರು ಹುಟ್ಟಿದ್ದು 1928, ಧಾರವಾಡದಲ್ಲಿ. ಅಲ್ಲಿಯೇ ತಮ್ಮ ಶಿಕ್ಷಣವನ್ನು ಮುಗಿಸಿದರು. ಬಿ.ಎ.ಪದವಿ ಮುಗಿದ ನಂತರ ನಾಲ್ಕು ವರ್ಷಗಳ

ಪುಸ್ತಕ Read Post »

ಪುಸ್ತಕ ಸಂಗಾತಿ

ಮುಟ್ಟಬಾರದವರ ಕಥೆ

‘ಉಚಲ್ಯಾ’ ಕೆ.ಶಿವುಲಕ್ಕಣ್ಣವರ ಲಕ್ಷ್ಮಣ ಗಾಯಕವಾಡರ ‘ಉಚಲ್ಯಾ’ ಎಂಬ ಹೀಗೊಂದು ಮುಟ್ಟಬಾರದವರ ಮರಾಠಿ ಕಥೆ..! ಅನುವಾದಕರು- ಚಂದ್ರಕಾಂತ ಪೋಕಳೆ Pages 120 ₹ 75.00 Year of Publication: 2017 Published by: ನವಕರ್ನಾಟಕ ಪ್ರಕಾಶನ Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001 Phone: 080-22203580/01/02 ಉಚಲ್ಯಾ’ ಮರಾಠಿಯ ಪ್ರಖ್ಯಾತ ಲೇಖಕ ಲಕ್ಷ್ಮಣ ಗಾಯಕವಾಡರ ಆತ್ಮಕತೆಯ ಕನ್ನಡಾನುವಾದ. ಚಂದ್ರಕಾಂತ ಪೋಕಳೆಯವರು ಉಚಲ್ಯಾವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಬುಡಕಟ್ಟು ಸಮುದಾಯದಿಂದ ಬಂದ ಲೇಖಕ ತನ್ನ ಜೀವನದ ಭೀಕರೆಯನ್ನು ಬಿಚ್ಚಿಟ್ಟ ಈ ಕೃತಿ ಅತ್ಯಂತ ಪ್ರಸಿದ್ಧ ಕೃತಿಯಾಗಿದೆ. ’ರಕ್ತ ಸುರಿಸಿ ದುಡಿಯುವ ಸಮುದಾಯದ ನಾನು ಸಮಾಜಮುಖಿ ಕಾರ್ಯಕರ್ತ. ನಾನು ಹುಟ್ಟಿದ ಸಮುದಾಯವನ್ನು ಸಮಾಜ ಮತ್ತು ವ್ಯವಸ್ಥೆ ತಿರಸ್ಕರಿಸಿತ್ತು. ಸಾವಿರಾರು ವರ್ಷಗಳಿಂದಲೂ ನಮ್ಮನ್ನು ಪ್ರಾಣಿಗಳಿಂತಲೂ ಕಡೆಯಾಗಿ ಕಾಣುವ ಸಮಾಜದಲ್ಲಿ ಪ್ರಾಣಿ ಸಮಾನಜೀವನ ನಡೆಸುಂತ ಸ್ಥಿತಿ ಇತ್ತು. ಬ್ರಿಟಿಷ್ ಸರ್ಕಾರವಂತೂ ನಮ್ಮ ಜಾತಿಗೆ ಕ್ರಿಮಿನಲ್ ಟ್ರೈಬ್ ಎಂಬ ಹಣೆಪಟ್ಟಿಯನ್ನೇ ಹಚ್ಚಿತ್ತು ಎನ್ನುತ್ತಾರೆ’ ಮೂಲ ಲೇಖಕ ಲಕ್ಷ್ಮಣ ಗಾಯಕವಾಡರು… ಬುಡಕಟ್ಟು ಸಮುದಾಯವೊಂದರ ಬದುಕಿನ ನರಕ ಸದೃಶ್ಯ ಜೀವನವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಉಚಲ್ಯಾ ಕೃತಿ ಹಲವು ಭಾಷೆಗಳಿಗೆ ಅನುವಾದಗೊಂಡಿದೆ. ಮೂಲ ಕೃತಿಗೆ 1988ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಂಥಹ ಮೌಲ್ಯಯುತ ಕೃತಿಯನ್ನು ಚಂದ್ರಕಾಂತ ಪೋಕಳೆಯವರು ಅಷ್ಟೇ ಸೂಕ್ಷ್ಮವಾಗಿ ಕನ್ನಡೀಕರಿಸಿದ್ದಾರೆ… ಹೀಗೆ ಕನ್ನಡಿಕರಿಸಿದ ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು… ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಚಂದ್ರಕಾಂತ ಅವರು ಕನ್ನಡ, ಮರಾಠಿ ಎರಡು ಭಾಷೆಗಳಲ್ಲೂ ಪ್ರಭುತ್ವ ಪಡೆದಿದ್ದು, ಮರಾಠಿ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಕನ್ನಡಿಗರಿಗೆ ಪರಚಯಿಸುತ್ತಿದ್ದಾರೆ. ಅಲ್ಲದೇ ಕನ್ನಡ-ಮರಾಠಿ ಭಾಷಾ ಸೇತುವೆಯಾಗಿ ಕೆಲಸಮಾಡುತ್ತಿದ್ದಾರೆ… ಅನುವಾದಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಅನುವಾದ ಯಜ್ಞದಲ್ಲಿ ತಮ್ಮ ಹವಿಸ್ಸನ್ನೂ ಧಾರೆಎರೆದು ಮರಾಠಿ ಸಾಹಿತ್ಯದಿಂದ ಬಹುಮೌಲಿಕ ಕೃತಿಗಳನ್ನು ಕನ್ನಡಕ್ಕೆ ನೀಡುತ್ತಾ ಬಂದಿರುವ ಲೇಖಕರಲ್ಲಿ ಅತ್ಯಂತ ಪ್ರಮುಖರು… ಬೆಳಗಾವಿಯ ಗಡಿಭಾಗದಲ್ಲಿ ನೆಲೆಸಿರುವ ಚಂದ್ರಕಾಂತ ಪೊಕಳೆ ಆಗಾಗ್ಗೆ ಮರುಕಳಿಸುವ ಭಾಷಾ ವಾದ-ವಿವಾದ, ಏಕೀಕರಣ ಹೋರಾಟ, ಕನ್ನಡದ ಅಸ್ತಿತ್ವದ ಪ್ರಶ್ನೆ, ರಾಜಕಾರಣಿಗಳ ಮಸಲತ್ತುಗಳು ಇವುಗಳ ಮಧ್ಯೆಯೂ ಭಾಷಾ ಸ್ನೇಹಕ್ಕಾಗಿ ನಿರಂತರವಾಗಿ ದುಡಿಯುತ್ತಿದ್ದಾರಿ. ಭಾಷಾ ಬೆಳವಣಿಗೆಗೆ ತಮ್ಮದೇ ಆದ ಹಾದಿ ಕಂಡುಕೊಂಡಿದ್ದಾರೆ. ಕನ್ನಡ-ಮರಾಠಿ ಭಾಷೆಯ ಮೇಲಿನ ಪ್ರಭುತ್ವ, ವಿದ್ವತ್‌, ಅಧ್ಯಯನಶೀಲತೆಯಿಂದ ಸಾಹಿತ್ಯದ ಯಾವುದೇ ಪ್ರಕಾರವನ್ನು ಆಯ್ಕೆಮಾಡಿ ಅನುವಾದಿಸಿದರೂ ಅದು ಸಹಜವಾಗಿ ಅನುವಾದಿತ ಭಾಷೆಗೆ ಹೊಂದಿಕೊಂಡು ಸ್ವಾಭಾವಿಕವೆನಿಸುವಂತಹ ಶೈಲಿ ಇವರ ಬರವಣಿಗೆಯದ್ದು… ಇವರ ಮನೆಮಾತು ಕೊಂಕಣಿ, ಕಲಿತದ್ದು ಕನ್ನಡ, ತಾಯಿ ಹಾಗೂ ಹೆಂಡತಿ ಮರಾಠಿ ಪರಿಸರದಿಂದ ಬಂದವರು. ಇದರಿಂದ ಕೊಂಕಣಿ-ಕನ್ನಡ-ಮರಾಠಿ ಭಾಷೆಗಳ ಸಹಜ-ಒಡನಾಟದಿಂದ ಅನುವಾದ ಕ್ರಿಯೆಗೆ ದೊರೆತ ಭಾಷಾ ಬಂಧುರ. ಭಾಷಾಂತರದ ಹಿಂದೆ ಯಾವುದೇ ಸೈದ್ಧಾಂತಿಕ ನೆಲೆಗಟ್ಟಿರದಿದ್ದರೂ ತಮ್ಮದೇ ಹಾದಿಯಲ್ಲಿ, ಮೂಲದಲ್ಲಿ ಓದಿದಷ್ಟೇ ತೃಪ್ತಿಕೊಡುವಂತಹ ಬರವಣಿಗೆಯಿಂದ ಸುಮಾರು 60 ಕ್ಕೂ ಹೆಚ್ಚು ಕೃತಿಗಳನ್ನು, ಇನ್ನೂರಕ್ಕೂ ಹೆಚ್ಚು ಕಥೆಗಳನ್ನು, 50 ಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ತಂದಿದ್ದಾರೆ… ಇವರು ಮೊದಲು ಅನುವಾದಿಸಿದ ಕೃತಿ ಜಯವಂತ ದಳವಿಯವರ ‘ಚಕ್ರ’ ಕಾದಂಬರಿ. ಈ ಕಾದಂಬರಿಯನ್ನು ಕಸ್ತೂರಿ ಮಾಸ ಪತ್ರಿಕೆಯ ಪುಸ್ತಕ ವಿಭಾಗಕ್ಕಾಗಿ ಸಂಕ್ಷಿಪ್ತವಾಗಿ ಸಂಗ್ರಹಿಸಿದರು. ಈ ಅನುವಾದವನ್ನೂ ಓದಿದ ಐಬಿಎಚ್‌. ಪ್ರಕಾಶನ ಸಂಸ್ಥೆಯು ಪೂರ್ಣ ಪ್ರಮಾಣದಲ್ಲಿ ಅನುವಾದಿಸಿಕೊಡುವಂತೆ ಕೋರಿದಾಗ, ಅನುವಾದದ ಪೂರ್ಣ ಕೃತಿಯು ಪುಸ್ತಕ ರೂಪದಲ್ಲಿ ಪ್ರಕಟಗೊಂಡಾಗ ಕಾದಂಬರಿ ವಲಯದಲ್ಲಿ ಉತ್ತಮ ಪ್ರಾರಂಭ ದೊರೆತು ಅನೇಕ ಕಾದಂಬರಿಗಳನ್ನು ಅನುವಾದಿಸಿದರು… ಮುಂಬಯಿಯ ಜೋಪಡಪಟ್ಟಿಯ ಜೀವನ ಕ್ರಮವನ್ನೂ ನಿರೂಪಿಸುವ ‘ಚಕ್ರ’ (ಮೂಲ ಮರಾಠಿ ಲೇಖಕರು-ಜಯವಂತ ದಳದಿ); ಗೋವೆಯ ದೇವದಾಸಿ ಸಮಸ್ಯೆಯ ಮೇಲೆ ಬೆಳಕುಚೆಲ್ಲುವ ‘ಮಾನು’ (ಜಯವಂತದಳವಿ); ಅನ್ನಕ್ಷುಧೆ-ಕಾಮಕ್ಷುಧೆಯ ತಾಕೂಟದ ವರ್ಣನೆಯ ‘ಶ್ವಪಥ’ (ರಂಗನಾಥ್‌ ಪಠಾರೆ); ದಲಿತರ ಸಾಂಸ್ಕೃತಿಕ ಹೋರಾಟದ ನೆಲೆಗಟ್ಟಿನ ಮೇಲೆ ರೂಪಗೊಂಡಿರುವ ‘ಉಚಲ್ಯಾ’ (ಲಕ್ಷ್ಮಣಗಾಯಕವಾಡ); ಹೆಣ್ಣಿನ ಒಳತುಡಿತಗಳನ್ನು ಎಳೆಎಳೆಯಾಗಿಬಿಡಿಸುವ ‘ಒಂದೊಂದೇ ಎಲೆಯುದುರಿದಾಗ’ (ಗೌರಿದೇಶಪಾಂಡೆ); ಲೇಖಕನ ಬದುಕು ಬರೆಹದಲ್ಲಿ ಇಬ್ಬಂದಿ ಬದುಕಿನ ‘ಕುಣಿಯೆಘುಮಾ’ (ಮಾಧವಿ ದೇಸಾಯಿ); ಮರಾಠ-ಮೊಗಲರ ನಡುವಣ ಚಾರಿತ್ರಿಕ ಸಂಘರ್ಷವನ್ನು ಗುರುತಿಸುವ ‘ಪಾಣಿಪತ’ (ವಿಶ್ವಾಸ ಪಾಟೀಲ)-ಹೀಗೆ ಒಂದೊಂದು ಅನುವಾದಿತ ಕೃತಿಗಳೂ ವಿಶಿಷ್ಟವಾಗಿದ್ದು, ಕನ್ನಡಿಗರಿಗೆ ಹೊಸ ಅನುಭವ ಸಂವೇದನೆಗಳನ್ನೂ ನೀಡುವಂತಹ ಕೃತಿಗಳಾಗಿವೆ. 2004 ರ ಕೇಂದ್ರ ಸಾಹಿತ್ಯ ಅಕಾಡಮಿಯ ಅನುವಾದ ಪ್ರಶಸ್ತಿ ಪಡೆದಿರುವ ‘ಮಹಾನಾಯಕ’ ಕಾದಂಬರಿಯು (ವಿಶ್ವಾಸ ಪಾಟೀಲ) ಮರಾಠಿ ಸಾಹಿತ್ಯ ವಲಯದಲ್ಲಿ ಬಹು ಚರ್ಚಿತ ಕೃತಿಯಾಗಿದ್ದು, ಜನಮನ್ನಣೆ ಗಳಿಸಿದೆ. ಸುಭಾಶ್‌ ಚಂದ್ರ ಬೋಸರ ಬದುಕಿನ ಸಂಘರ್ಷದ ಕಥೆಯ ನಿರೂಪಣೆಯೇ ಈ ಕಾದಂಬರಿಯ ಮುಖ್ಯ ಉದ್ದೇಶವಾಗಿದ್ದು, ಇಂಗ್ಲಿಷ್‌ ಹಾಗೂ ಜಪಾನಿ ಭಾಷೆಯೂ ಸೇರಿ ಭಾರತದ ಹಲವಾರು ಭಾಷೆಗಳಿಗೆ ಅನುವಾಗೊಂಡಿರುವ ವಿಶಿಷ್ಟ ಕೃತಿ. ಕನ್ನಡದಲ್ಲಿ ಎರಡನೆಯ ಮುದ್ರಣ ಕಂಡಿರುವುದಷ್ಟೇ ಅಲ್ಲದೆ ಮರಾಠಿಯಲ್ಲಿ ಹಲವಾರು ಮುದ್ರಣಗಳನ್ನು ಕಂಡಿದ್ದು 80,000 ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿ ದಾಖಲೆಯನ್ನೇ ನಿರ್ಮಿಸಿದೆ. ಮಾರಾಠಿ ಸಾಹಿತ್ಯದಿಂದ ಹೀಗೆ ಸುಮಾರು 30 ಕಾದಂಬರಿಗಳು, 8ಆತ್ಮಕಥೆಗಳು,7 ಕಥಾ ಸಂಕಲನಗಳು, 8 ಸಂಶೋಧನ ಕೃತಿಗಳು, ವೈಚಾರಿಕ, ವೈಜ್ಞಾನಿಕ, ಜೀವನ ಚರಿತ್ರೆಗಳು, ನಾಟಕಗಳು, ಕವಿತೆಗಳು, ಪ್ರಬಂಧಗಳು ಸೇರಿ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಕೆಲವೊಂದು ಕಾದಂಬರಿಗಳಲ್ಲಿ ಬರುವ ಪ್ರಾದೇಶಿಕ ಭಾಷೆಯ ವರ್ಣನೆಯನ್ನು ಕನ್ನಡದಲ್ಲಿ ಹಿಡಿದಿಡುವುದು ಬಹುಪ್ರಯಾಸದ ಕೆಲಸವೆಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡರೂ ಸವಾಲೆನಿಸುವ ಕೃತಿಗಳನ್ನೂ ಅನುವಾದಿಸಿದ್ದಾರೆ. ಜೊತೆಗೆ ಇವರ ಸ್ವತಂತ್ರ ಕೃತಿಗಳಾದ ‘ಮರಾಠಿ ದಲಿತ ರಂಗಭೂಮಿ’, ಮರಾಠಿ ಭಾಷಾ ಸಾಹಿತ್ಯ, ಗಡಿಸಮಸ್ಯೆ ಮುಂತಾದ ವಿಷಯಗಳ ವೈಚಾರಿಕ ಲೇಖನಗಳ ಸಂಕಲನಗಳಾದ ‘ಅನುಸಂಧಾನ’ ಹಾಗೂ ‘ಜಾಗರ’ ಮತ್ತು ವ್ಯಕ್ತಿ ಪರಿಚಯದ ‘ಬಾಬಾ ಅಮ್ಟೆ’ ಕೃತಿಗಳು ಪ್ರಕಟವಾಗಿವೆ. ಇವುಗಳಲ್ಲದೆ ಕನ್ನಡದಿಂದ ಮರಾಠಿ ಭಾಷೆಗೆ ಆಧುನಿಕ ಬರಹಗಳನ್ನು ಭಾಷಾಂತರಿಸಿ ಶಾಂತಿನಾಥ ದೇಸಾಯಿಯವರೊಡನೆ ಹೊರತಂದ ಕೃತಿ ‘ಸಂಬಂಧ’ ಎಂಬ ಮರಾಠಿ ಸಂಕಲನ… ಬಹುಭಾಷೆಯಲ್ಲಿ ಎಷ್ಟೇ ಪಾಂಡಿತ್ಯ ಪಡೆದಿದ್ದರೂ ಅನುವಾದವೆನ್ನುವುದು ಬಹುಕ್ಲಿಷ್ಟಕರವಾದ ಕೆಲಸ. ಒಂದು ಭಾಷೆಯ ಆಡುನುಡಿ, ಗ್ರಾಮ್ಯಭಾಷೆ, ಜನಾಂಗೀಯ ಭಿನ್ನಭಿನ್ನ ಸಂಸ್ಕೃತಿಯ ಮತ್ತೊಂದು ಭಾಷೆಯಲ್ಲಿ ದೊರೆಯುವುದು ವಿರಳವೇ. ಇದಕ್ಕೆ ಮೂಲವಾಗಿ ಬೇಕಾಗಿರುವುದು ಸಾಂಸ್ಕೃತಿಕ, ಜನಾಂಗೀಯ ಅಧ್ಯಯನ ಹಾಗೂ ಭಾಷಾ ಸಂಪತ್ತು. ಇಷ್ಟೆಲ್ಲಾ ಪೂರ್ವ ಸಿದ್ಧತೆಗಳೊಡನೆ ಅನುವಾದ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಂದ್ರಕಾಂತ ಪೋಕಳೆಯವರಿಗೆ 1999 ಮತ್ತು 2004 ರಲ್ಲಿ ಶ್ರೀದೇವಿ ಶಾನಭಾಗ ಪ್ರಶಸ್ತಿ, 2001ರಲ್ಲಿ ವರದರಾಜ ಆದ್ಯಪ್ರಶಸ್ತಿ, 2002 ರಲ್ಲಿ ಸಂಗಾತಿ ಅಕಾಡಮಿ ಪ್ರಶಸ್ತಿ , 2002 ಮತ್ತು 2005 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2004 ರಲ್ಲಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡಮಿ ಅನುವಾದ ಪ್ರಶಸ್ತಿ, 2008ರಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿಗಳು ದೊರೆತಿವೆ… ಲೇಖಕರು, ಪ್ರಖ್ಯಾತ ಅನುವಾದಕರೂ ಆದ ಚಂದ್ರಕಾಂತ ಪೊಕಳೆ ಅವರು 20-08-1949 ರಂದು ಜನಿಸಿದರು. ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ತಂದೆ- ಮಹಾಬಲೇಶ್ವರ, ತಾಯಿ- ಪಾರ್ವತಿ. ಹೈಸ್ಕೂಲುವರೆಗೆ ಮಂಚಿಕೇರಿಯಲ್ಲಿ ಓದಿದ ಅವರು, ಧಾರವಾಡದ ಕಾಲೇಜಿನಿಂದ ಬಿ.ಎ ಪದವಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಗಳಿಸಿದ್ದಾರೆ. ಧಾರವಾಡದಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಗೌರೀಶ ಕಾಯ್ಕಿಣಿ, ಶಂಬಾ, ಬೇಂದ್ರೆ, ಇವರುಗಳ ಸಾಹಿತ್ಯದಿಂದ ಪ್ರೇರಿತರಾದ ಪೊಕಳೆ, ಅಧ್ಯಾಪಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ ಲಠ್ಠೆ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದ ಅವರು ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತಿಯಾಗಿದ್ದಾರೆ… **********************************

ಮುಟ್ಟಬಾರದವರ ಕಥೆ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಕಾಮೋಲವೆಂಬ ಅಂತರಂಗದ ಶೋಧ. ಸ್ಮಿತಾ ಅಮೃತರಾಜ್ ಕೃತಿ: ಕಾಮೋಲ (ಕಥಾ ಸಂಕಲನ) ಲೇಖಕ: ಅಜಿತ್ ಹರೀಶಿ ವೃತ್ತಿಯಲ್ಲಿ ವೈದ್ಯರಾಗಿ ಪ್ರವೃತ್ತಿಯಲ್ಲಿ  ಬರಹಗಾರರಾಗಿರುವ ಡಾ. ಅಜೀತ್ ಹರೀಶಿ ಶಿವಮೊಗ್ಗದ ಸೊರಬದವರು. ಕೃಷಿ, ವೈದ್ಯವೃತ್ತಿಯ ಬಿಡುವಿಲ್ಲದ ಕಾರ್ಯ ಬಾಹುಳ್ಯದ ನಡುವೆಯೂ ಕತೆ, ಕವಿತೆ ಬರೆಯುತ್ತಾ ತನ್ನ ಸೃಜನಶೀಲತೆಯನ್ನು ಬತ್ತದಂತೆ ಕಾಪಿಟ್ಟುಕೊಂಡಿರುವ  ಅಜೀತ್ ಹೆಗಡೆಯವರು ಈಗಾಗಲೇ ತಮ್ಮ ಬರಹಕ್ಕೆ ಅನೇಕ ಬಹುಮಾನ ಮತ್ತು ಪ್ರಶಸ್ತಿಗಳನ್ನು ಪಡೆದುಕೊಂಡವರು.   ಅವರ  ವೈವಿಧ್ಯಮಯ ಬರಹದ ಓಘದ ಕುರಿತು ನನಗೆ ಯಾವೊತ್ತು ತೀರದ ಅಚ್ಚರಿ. ಈಗಷ್ಟೇ ಓದಿ ಮುಗಿಸಿದ ,ವಿಶಿಷ್ಟ ಕುತೂಹಲ ಶಿರೋನಾಮೆ ಹೊಂದಿದ ಅವರ ಕಥಾಸಂಕಲನ ಕಾಮೋಲ. ಪ್ರೀತಿ,ಪ್ರೇಮ, ಕಾಮ,ಕ್ರೌರ್ಯ, ಹೀಗೆ  ಮನುಷ್ಯನ ಒಳಗೆ ಅಡಗಿರುವ ಅನೇಕ ಸುಪ್ತ ಭಾವಗಳನ್ನೆಲ್ಲಾ ಅನಾವರಣಗೊಳಿಸುತ್ತಾ ಹೋಗುತ್ತದೆ. ನಾವು ಕಂಡ ಕೆಲವೊಂದು ನಮ್ಮ ಸುತ್ತ ಮುತ್ತಲಿನ ಚರ್ಯೆಗಳು ಕೂಡ ಇದೇ ಕತೆಯ ಪಾತ್ರದಂತೆ ಭಾಸವಾಗುತ್ತದೆ. ಇದು ಅಜಿತ್ ರವರ ಕಥನಗಾರಿಕೆಯ ಕುಶಲತೆಗೆ ಸಾಕ್ಷಿ. ಮನುಷ್ಯನ ಪ್ರತಿಯೊಂದು ಕ್ರಿಯೆಯ ಹಿಂದೆ ಅವನಿಗೆ ದಕ್ಕಿದ ,ಬದುಕಿನಲ್ಲಿ ಘಟಿಸಿ ಹೋದ ಕೆಲವೊಂದು ಅಘಾತಕಾರಿ ಸಂಗತಿಗಳು ಆಳವಾಗಿ ಬೇರು ಬಿಟ್ಟು ಅವನಿಗೂ ಗೊತ್ತಿಲ್ಲದೆ  ಹೇಗೆ ಪ್ರಕಟಗೊಳ್ಳುತ್ತವೆ ಅನ್ನುವಂತದ್ದು ನಮಗೆ  ಕತೆಗಳನ್ನು ಓದುತ್ತಾ ಹೋದ ಹಾಗೆ ಮನದಟ್ಟಾಗುತ್ತದೆ. ಬಹುಷ; ತಮ್ಮ ವೃತ್ತಿಯಲ್ಲಿ ಅವರು ಇಂತಹ ವ್ಯಕ್ತಿತ್ವದವರಿಗೆ ಮುಖಾಮುಖಿಯಾಗುವ ಕಾರಣ ಜೊತೆಗೆ ವೈಜ್ಞಾನಿಕ ತಿಳುವಳಿಕೆ ಕೂಡ ಇರುವ ಕಾರಣ ಇಲ್ಲಿಯ ಕತೆಗಳು ಶೋಧನೆಗೆ ತೊಡಗುತ್ತವೆ. ಕಂಡುಂಡ ಘಟನೆಗಳನ್ನು ಕಲಾತ್ಮಕವಾಗಿ ಹೊರ ಹಾಕುವುದರಲ್ಲಿ ಅಜಿತ್ ಹೆಗಡೆಯವರು ಕುಶಲಿಗರು.  ಬದುಕಿನ ಪ್ರತಿಯೊಂದು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ದಿಟ್ಟಿಸುತ್ತಾ ಅದರ ಒಳ ಹೊರಗನ್ನು ಬಗೆಯುವ ಇಲ್ಲಿನ ಕತೆಗಳಲ್ಲಿ ಜೀವಂತಿಕೆ ಇದೆ. ಒಟ್ಟು ೧೪ ಕತಾಗುಚ್ಚವಿರುವ ಈ ಕತಾಸಂಕಲನದಲ್ಲಿ ಮನುಷ್ಯ ಸಂಬಂಧದ ವಿವಿಧ ಮಗ್ಗುಲುಗಳ ಪರಿಚಯವಿದೆ. ಲೌಕಿಕ ಬದುಕಿನಲ್ಲಿ ಪರಿಶುದ್ಧ ಪ್ರೇಮಕ್ಕೆ ಅವಕಾಶವಿಲ್ಲದಾಗ  ಅಕ್ಕನಂತೆ ಅಲೌಕಿಕ ಪೇಮದಲ್ಲೇ ಮನಸನ್ನು ನೆಲೆಗೊಳಿಸಿ ಅದರಲ್ಲಿ ನೆಮ್ಮದಿಯನ್ನು ಹುಡುಕುವ  ಇಲ್ಲಿನ ಕತೆ ಒಂದು ವಿಭಿನ್ನ ಪ್ರಯತ್ನ.  ಮನುಷ್ಯನ ಒಳಗಿನ  ಭಾವದ ಸೆಲೆ ಹೇಗೆ ಬದುಕನ್ನು ಅರಳಿಸಬಲ್ಲದು ಅನುವಂತದ್ದನ್ನು ಹೇಳುತ್ತಾ ಕವಿತೆಯ ಸೆಲೆ ಅನ್ನುವಂತದ್ದು ನೋವು ನಿವಾರಣೆಯಂತೆ ಅನ್ನುವಂತದ್ದನ್ನ ಬರೆಯುತ್ತಾರೆ. ಸ್ವತ; ಕತೆಗಾರರು ಕವಿಯಾದ ಕಾರಣ ಕವಿತೆಯ ಸಾಂಗತ್ಯದಿಂದ ಬದುಕು ಹಸನಾಗುವುದೆಬುದನ್ನು ಕಟ್ಟಿಕೊಡುತ್ತಾರೆ. ಇಲ್ಲಿಯ ಕಾಡುವ  ಆಯಿಯ ಕತೆಯ ತುಂಬಾ ವಿವರಣೆಯಂತೆ ಅನ್ನಿಸಿದರೂ ಓದಿ ಮುಗಿಸಿದಾಗ  ಅಲ್ಲಿರುವ ಅಂತ;ಕರಣ ಕಣ್ಣಂಚನ್ನು ತೇವಗೊಳಿಸಿ ಬಿಡುತ್ತದೆ. ಮನುಷ್ಯನ ವರ್ತನೆಗಳನ್ನು ವಿಭಿನ್ನ ನೆಲೆಯಲ್ಲಿ ಶೋಧಿಸುತ್ತಾ ಅಂತರಂಗದ ತುಮುಲಗಳನ್ನು ಚಿತ್ರಿಸುವ ಕೆಲಸವನ್ನ ಇಲ್ಲಿನ ಕತೆಗಳು ಮಾಡಿವೆ. ಹೊಸ ದೃಷ್ಟಿಕೋನದಿಂದ ಬದುಕನ್ನು ನೋಡಲು ಪ್ರೇರೇಪಿಸುವ ಇಲ್ಲಿನ ಕತೆಗಳು ಸ್ನೇಹಕ್ಕೆ ಯಾವುದೇ ಸಿದ್ಧಾಂತಗಳ ಕಟ್ಟುಪಾಡುಗಳಿರಬಾರದು  ಅನ್ನುವಂತದ್ದನ್ನ ಕಟ್ಟಿಕೊಡುತ್ತಾ ಮಾನವೀಯ ಪ್ರೇಮದ ನೆಲೆಯಲ್ಲಿ ಕತೆಗಳು ಪ್ರಕಟಗೊಳ್ಳುತ್ತವೆ. ಪ್ರಾಧೇಶಿಕ ಭಾಷೆಯನ್ನು ಕತೆಗಳ ಮೂಲಕ ಸಮರ್ಥವಾಗಿ ದುಡಿಸಿಕೊಂಡ  ಅಜಿತ್ ರವರ ಪ್ರತಿಭೆ, ಶ್ರದ್ಧೆ, ಶ್ರಮ ಶ್ಲಾಘನೀಯ. ಕಾಮೋಲ ಓದುತ್ತಾ ಹೋದಂತೆ ಮನುಷ್ಯನ ದು;ಖ, ಸಂಕಟ, ಪ್ರೇಮ,ಕಾಮ, ಎಲ್ಲ ತಳಮಳಗಳಿಗೂ  ಹೊಸ ಅರ್ಥ ಕಂಡುಕೊಳ್ಳುವಲ್ಲಿ ಕತೆ ಯಶಸ್ವಿಯಾಗಿವೆ.ಅಜಿತ್ ಹೆಗಡೆಯವರ ಕಥನ ಕುತೂಹಲ ಮತ್ತಷ್ಟು ಕತೆಗಳಿಗೆ ಸಾಕ್ಷಿಯಾಗಲಿ.     ************

ಪುಸ್ತಕ ವಿಮರ್ಶೆ Read Post »

You cannot copy content of this page

Scroll to Top