ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಎದೆಯ ಕದ ತೆರೆದಾಗ. “ಎದೆಯ ಕದವ ತೆರೆಯುತಿರೆ| ಒಳಗೆ ಬೆಳಕು ಹರಿಯಿತು|ಹೂಗಳೆಸಳು ಬಿರಿಯುತಿರೆ |ತುಂಬಿ ಹಾಡು ಮೊರೆಯಿತು”——ಕವಿ ಕಯ್ಯಾರರ ‘ಯುಗಾದಿ’ ಕವನದ ಸಾಲುಗಳಿವು.ಯುಗಾದಿ ಸಮೃದ್ಧಿಯ ಸಂಕೇತ.ಪ್ರಕೃತಿ-ಮಾನವ ಅನುಸಂಧಾನದ ಪ್ರತೀಕ.ಕವಿಗಳು ಪರಿಸರ ಪ್ರೇಮಿಗಳು.ಮಣ್ಣಿನಲ್ಲಿ ಸ್ವರ್ಣವನ್ನು, ಶಿಲೆಯಲ್ಲಿ ಶಿಲ್ಪವನ್ನು ಕಾಣುವವರು.ಎದೆಯ ಕದ ತೆರೆದು ಆತ್ಮದ ಮಿಂಚನ್ನು ಹೊಳೆಯಿಸುವವರು.ಅಂತರಂಗದ ಬೆಳಕಲ್ಲಿ ಬಹಿರಂಗವನ್ನು ಬೆಳಗಿಸುವವರು.ಮೊಗ್ಗು ಹೂವಾಗಿ ದಳ ಬಿರಿದು ನಿಂತಾಗ ಒಂದು ರೀತಿಯ ನಿಸ್ವನ.ಹೂವಿನ ಮಕರಂದ ಹೀರುವ ದುಂಬಿಗಳು,ಝೇಂಕಾರದ ನಾದಮಯತೆ,ನವನವೋನ್ಮೇಷ, ಮಾಧುರ್ಯದ ಮೊರೆತಕ್ಕೆ ಮನವರಳುವುದು ಸಹಜ.ಹೀಗೆ ರವಿ ಕಾಣದ್ದನ್ನು ಕವಿ ಕಂಡೇ ಕಾಣುತ್ತಾನೆ ಎಂಬುದಂತೂ ಸತ್ಯ.“ಎದೆಎದೆಗೂ ವ್ಯತ್ಯಯ ಹಾಳಾಗಲಿ ಎದೆಎದೆ ಗೂಡಲಿ ಹಾಲಾಗಲಿ” ಎಂಬ ವಿ.ಗ ನಾಯಕರ ಸಾಲುಗಳು ಇಲ್ಲಿ ನೆನಪಾಗುತ್ತವೆ.ದ್ವೇಷಿಸುವ ಎದೆಗಳು ಬೇಡ, ಪ್ರೀತಿಸುವ ಎದೆಗಳು ಬೇಕು.ಎದೆಎದೆಗಳ ಮಿಳಿತ ಜೀವಜೀವದ ಸೆಳೆತ.ಎದೆಯ ಆಕಾರಕ್ಕೆ ಆಕರ್ಷಣೆಯಿದೆ.ಹೃದಯದ ತುಡಿತದಲ್ಲಿ ಪ್ರೀತಿಯ ಮಿಡಿತವಿದೆ.ಕವಯಿತ್ರಿ ಆಶಾ ದಿಲೀಪ್ ಸುಳ್ಯಮೆ ಅವರ ಚೊಚ್ಚಲ ಕವನ ಸಂಕಲನದ ಶೀರ್ಷಿಕೆ “ಎದೆಯ ಕದ”.ವಿಷಯ ವೈವಿಧ್ಯತೆಯ ನಲುವತ್ತೆರಡು ಕವನಗಳ ಈ ಸಂಕಲನ 2016 ರಲ್ಲಿ ಬೆಳಕಿಗೆ ಬಂದಿದೆ.ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ನ ಕಲ್ಲೂರು ನಾಗೇಶ್ ಇದರ ಪ್ರಕಾಶಕರು.ಬಿಡುಗಡೆಯಾದ ಸಂದರ್ಭದಲ್ಲಿ ಓದಿ ಖುಷಿ ಪಟ್ಟವರಲ್ಲಿ ನಾನೂ ಒಬ್ಬ.ಈಗ ಮತ್ತೊಮ್ಮೆ ಕಣ್ಣು ಹಾಯಿಸುವ ಅವಕಾಶ ಲಭಿಸಿದೆ.ಕವನಗಳ ಬಗ್ಗೆ ಕೆಲವು ಮಾತುಗಳನ್ನು ಹೇಳ ಬೇಕು ಎನಿಸಿದೆ.ಇಲ್ಲಿ ಕಲೆಹಾಕಿದ ಕವನಗಳೆಲ್ಲವು ಭಾವ ಕೇಂದ್ರಿತ ರಚನೆಗಳು.ಆಶಾ ಅವರು ಭಾವನೆಯ ಬಲೆ ಹೆಣೆದು ಕಾವ್ಯ ಕಟ್ಟಿದ್ದಾರೆ.ಅನುಭವಕ್ಕೆ ದಕ್ಕಿದ್ದನ್ನು ಸಶಕ್ತ ಪದಗಳಲ್ಲಿ ಅಭಿವ್ಯಕ್ತಿಸಿದ್ದಾರೆ.ಎದೆ ಮುಟ್ಟುವ ರಚನೆಗಳಿಗೆ ಭಾವವೇ ಮೂಲದ್ರವ್ಯ ವಾದರೂ ಇಲ್ಲಿ ಎದೆಯ ಕದ ತೆರೆದಾಗ ಅನುಭವದ ಅಂತರ್ಧ್ವನಿ ಅನುರಣಿಸುವುದನ್ನು ಕಾಣಬಹುದು.ಮುನ್ನುಡಿಯಲ್ಲಿ ಸಾಹಿತಿ, ಮಾಧ್ಯಮ ತಜ್ಞ ಡಾ ವಸಂತಕುಮಾರ್ ಪೆರ್ಲ ಅವರು ಹೇಳುವಂತೆ ‘ಈ ಸಂಕಲನದಲ್ಲಿ ಮನೆ, ಮಕ್ಕಳು, ಸಂಸಾರ ಜೊತೆಗೆ ಕೆಲವು ಪ್ರಕೃತಿ ಚಿತ್ರ ಗಳು ಇವೆ.ಎಲ್ಲವುಗಳ ಕಡೆಗೆ ಒಂದು ಸಹೃದಯ ವೀಕ್ಷಣೆ ಕವಯಿತ್ರಿಯಲ್ಲಿ ಕಂಡುಬರುತ್ತದೆ.ಚಿತ್ರಕ ಸನ್ನಿವೇಶವೊಂದನ್ನು ಕೊಡುತ್ತಲೇ ಅದರಾಚೆಗಿನ ಅರ್ಥ ಭಾವಗಳನ್ನು ಭಾಷಿಕ ಸಂವಿಧಾನದ ಮೂಲಕ ಕಟ್ಟಿಕೊಡುವ ಪರಿ ಸಂತೋಷ ಕೊಡುತ್ತದೆ.ಈ ಮಾತಗಳು ಎದೆಯ ಕದ ತೆರೆದು ನೋಡುವ ಕುತೂಹಲ ವನ್ನು ಹೆಚ್ಚಿಸುತ್ತದೆ’.ಕಾವ್ಯ ಸಹಜವಾಗಿ ಹುಟ್ಟು ವ ಕ್ರಿಯೆ.ಅತಿಯಾದ ನೋವು ಮತ್ತು ಸಂತೋಷವಾದಾಗ ಜೀವ ಪಡೆಯುತ್ತದೆ.ಇದು ಆಶಾ ಅವರು ಕಂಡುಕೊಂಡ ಸತ್ಯ.ಮೌನರೋದನದಲ್ಲಿ ರೋಮಾಂಚನದ ಉತ್ತುಂಗದಲ್ಲಿ ಸುಖದುಃಖದ ಕಟ್ಟೆಯೊಡೆದು ಕಾವ್ಯಕನ್ನಿಕೆ ಹುಟ್ಟುತ್ತಾಳೆ ಎಂಬುದು ಅನುಭವ ಜನ್ಯ.ಆದರೆ ‘ಬರೆಯಲು ಹೊರಟರೆ ಸುಂದರ ಕವಿತೆ| ಪದಗಳ ಮರ್ಮವ ಅರಿಯದೆ ಹೋದೆ’ ಎಂಬ ಮರುಕ ‘ಒಂಟಿ ನಾನು’ ಕವನದಲ್ಲಿದೆ.ಕ ವಯಿತ್ರಿ ‘ಭಾವ ಜೀವ ರಸಿಕನೆದೆಗೆ ದಾಳಿಯಿಡುವ ಕವಿಯು ನಾನಾಗ ಬೇಕು| ನನ್ನ ಕವಿತೆಯ ಪ್ರಾಸ ನೀನಾಗ ಬೇಕು|ನಾ ಭಾವವಾದರೆ ಜೀವ ನೀನಾಗ ಬೇಕು’ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.ನಲ್ಲೆಯ ನಲ್ನುಡಿ ಯ ಕೇಳದೆ ವಿಚಲಿತನಾದ ನಲ್ಲ ಆಸೆ ಮುತ್ತುಗಳ ಪೋಣಿಸುತ ಎದೆ ಬಾಗಿಲಿಗೆ ತೋರಣ ಕಟ್ಟಿ ಕಾಯುತ್ತಾನೆ.ಏಕಾಂಗಿಯಾಗಿರುವ ಆತನ ಭಾವನೆಗಳು ಬಂಧನಕ್ಕೊಳಗಾಗಿದೆ. ‘ನನ್ನೆದೆಯ ಕದವನ್ನು’ ಸರಳತೆ ಮತ್ತು ಆರ್ದ್ರತೆಗಳಿಂದ ಗಮನ ಸೆಳೆಯುತ್ತದೆ.ಸಂಕಲನದ ಮೊದಲ ಕವಿತೆ ‘ಯಾವ ಮಾಯೆಯಮ್ಮಾ’ ಜೀವದನಿ ತುಂಬಿ ಕೊಂಡ ಭಾವ ಗೀತೆ.ಹೆಣ್ಣು ಮಾಯೆ ಆಕೆಯ ಮಹಿಮೆ ಅಪಾರ.ಸಕಲ ಜೀವದ ಭಾಗ್ಯ ದಾಯಿನಿ ಆಕೆ.’ಅಷ್ಟವೈರಿಗಳನ್ನು ದಮನಮಾಡಿಸಿ| ಸ್ವರ್ಗ ದಾರಿಯಲ್ಲಿ ನಮ್ಮನ್ನು ನಡೆಸು’ ಎಂಬ ಪ್ರಾರ್ಥನೆ (ಗೀತೆ)ಯಾಗಿಯೂ ಈ ರಚನೆ ಸಲ್ಲುತ್ತದೆ.ತಾಯಿಗೆ ಮಕ್ಕಳು ಅಂದರೆ ಮಮತೆ.ಹೊತ್ತು ಸಲಹಿದಾಗ ಕಂದನ ಮುಖವರಳುವುದು ಸಹಜ.ಆದು ಹೆತ್ತ ನೋವನ್ನು ಮರೆಸುತ್ತದೆ.’ಅಮ್ಮ ಎನ್ನುವ ಕಂದನ ಕೂಗಲಿ|ಬ್ರಹ್ಮಾಂಡದ ಭವ್ಯತೆ ಅಡಗಿತ್ತು’ (ಅಮ್ಮ) ಎಂಬೀ ಸಾಲುಗಳಲ್ಲಿ ದರ್ಶನದ ಕಲ್ಪನೆಯಿದೆ.ಮಹಿಳೆ ಎಂದರೆ ಮಹಾ ಇಳೆ.ಸಕಲ ಚರಾಚರಗಳಿಗೂ ಜೀವ ಚೈತನ್ಯ ನೀಡುವವಳು.ಮಹಿಳೆ ತಾಯಿಯೂ ಹೌದು.ಭೂದೇವಿಯೂ ಹೌದು.’ಭರತ ಭೂಮಿ ವಿಶ್ವ ವಂದ್ಯೆ ಜನ್ಮದಾತೆಯು’ಎಂದು ಆರಂಭವಾಗುವ ‘ಭರತಭೂಮಿ ವಿಶ್ವ ವಂದ್ಯೆ’ ಎನ್ನುವ ಕವನದಲ್ಲಿ ದೇಶಪ್ರೇಮವುಕ್ಕಿಸುವ ಭಾವನೆಗಳಿವೆ.’ವೇಷ ಬೇರೆ ಭಾಷೆ ಬೇರೆ ಒಲವು ಮೆರೆಯಲಿ |ಪ್ರೀತಿ ಉಳಿದು ದ್ವೇಷ ಅಳಿದು ನಗೆಯು ಚಿಮ್ಮಲಿ’ ಎಂಬ ಆಶಯವಿದೆ.ಬದುಕಿನ ಉನ್ಮಾದ’ ವಿಷಾದ,ಪ್ರೀತಿ ,ತೀವ್ರತೆಯನ್ನು ಆಪ್ತವಾಗಿ ಕಟ್ಟಿಕೊಡುವ ‘ತೂಗದ ತೊಟ್ಟಿಲು’ ಅಂತರಂಗದ ನಿಸ್ವನ.’ಒಲುಮೆ ತುಂಬಿದ ಮನೆಯಲ್ಲಿ| ತೂಗಲಿಲ್ಲ ತೊಟ್ಟಿಲು| ಕೊನೆಗೂ ಕಂದನ ಕನಸು ಕಾಡಿದೆ|ಬರಿದಾಗಿದೆ ಮಡಿಲು’.ಬದಲಾವಣೆಯ ಕಾಲಘಟ್ಟದಲ್ಲಿ ಪ್ರೀತಿ ಮಮಕಾರ ಯಾಂತ್ರಿಕವಾದಾಗ,ಸಹಜತೆಯ ಒರತೆ ಬತ್ತಿ ಹೋಗುವುದನ್ನು ಇಲ್ಲಿ ಕಾಣಬಹುದು.ದಾರ್ಶನಿಕ ಹೊಳಹು ಗಳನ್ನು ನೀಡುವ ‘ಆತ್ಮದೇಗುಲ’ದಲ್ಲಿ ‘ಬಾಳ ಹಾದಿ ಚಿಮ್ಮಿ ನಗಲಿ ಹೂವ ಹಾಸಿಗೆ| ಒಲವ ಧಾರೆ ಹರಿದು ಬರಲಿ ಬಾಳ ಹಣತೆಗೆ’ ಎಂಬ ಆಶಯವಿದೆ.’ಸಿಹಿಯುಂಟು ಕಹಿಯುಂಟು ಜೀವನ ಯಾತ್ರೆಲಿ| ಮರೆಯಲು ಕಲಿತೋನೆ ಜಾಣ ಈ ಜಗದಲಿ’ ಈ ವಾಸ್ತವ ಸತ್ಯ ‘ಹೋಗೋಣ ಬಾರೆ’ ಕವನದಲ್ಲಿದೆ.‘ವಂದನೆ-ಅಭಿನಂದನೆ’ಯಲ್ಲಿ ಸಾಮರಸ್ಯದ ಸಂದೇಶವಿದೆ.’ಹಿಂದೂ ಸಿಖ್ಖ ಕ್ರೈಸ್ತ ಮುಸಲ್ಮಾನರು| ಒಟ್ಟಿಗೆ ಬದುಕುವ ರೀತಿಯೆ ಅಭಿಮಾನವು’ ನಿಜವಾಗಿಯು ಇದು ಹೆಮ್ಮೆಯ ವಿಷಯ. ಸ್ವಾತಂತ್ರ್ಯ ಸಿಕ್ಕಿ ವರ್ಷಗಳೇ ಸಂದರೂ ಅಳಿಯಲಿಲ್ಲ ಗುಲಾಮಗಿರಿ.’ಎಲ್ಲಿದೆ ಸಮಾನತೆ ಮೀಸಲಾತಿ| ಸ್ತ್ರೀ ಸ್ವಾತಂತ್ರ್ಯದ ಅನುಭೂತಿ’ ಎಂಬುದು ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.ಹಳತಿಗೆ ವಿದಾಯ, ಹೊಸತಿಗೆ ಸ್ವಾಗತ ಹೇಳುವ ಸಂದರ್ಭವನ್ನು ನೆನಪಿಸುವ ‘ವಿದಾಯ’ ವರ್ತಮಾನದ ವೈಚಿತ್ರ್ಯ ವನ್ನು ಧ್ವನಿಸುವ ‘ನಲುಗುತ್ತಿದೆ ವರ್ತಮಾನ’ಕನಸು ಭ್ರಮೆಯಾಗಿ ಕಾಡುವ ಘಟನೆಗಳನ್ನು ಪಲ್ಲವಿಸುವ ‘ಭ್ರಮೆ’ ಅರ್ಥ ಸಂಚಲನ ಮೂಡಿಸುತ್ತದೆ.ವಿಕೃತ ಮನಸುಗಳ ಅಮಾನುಷ ವರ್ತನೆಗಳಿಗೆ ಮುಖಾಮುಖಿ ಯಾಗುವ ‘ಭಯಾನಕ ರಾತ್ರಿ’ಯಲ್ಲಿ ಸೂಚ್ಯಾರ್ಥವಿದೆ.ಇಂಟರ್ನೆಟ್ ಯುಗದಲ್ಲಿ ಭಾವನೆಗಳ ಒರತೆ ಬರಿದಾಗುವ ಸಂದಿಗ್ಧ ಪರಿಸ್ಥಿತಿ ‘ಒಂಟಿ ಹಕ್ಕಿಯ ಮರ್ಮರ’ದಲ್ಲಿದೆ. ಪರಿಸರವನ್ನು ಉಳಿಸಬೇಕಾದ ಅನಿವಾರ್ಯತೆ ‘ಕೆಡಿಸದಿರು ಪರಿಸರವ’ಕವನ ಸಾರಿ ಹೇಳುತ್ತದೆ.’ಗೆಳತಿ’,’ಕಳೆದು ಹೋದ ಬಾಲ್ಯ’,’ಅರಳುವ ಹೂಗಳು’ ‘ನೆನಪಿದೆಯಾ ಗೆಳತಿ’ ಭಾವನೆಗಳಿಗೆ ಶಬ್ದ ರೂಪ ಕೊಡುವ ಕ್ರಿಯೆಯಲ್ಲಿ ಯಶಸ್ವಿಯಾಗಿದೆ.ಪ್ರೀತಿ ವಾತ್ಸಲ್ಯಕ್ಕಾಗಿ ಕವಯಿತ್ರಿಯ ‘ಹಂಬಲ’ ಸಾರ್ವಕಾಲಿಕ ಮೌಲ್ಯ ಪಡೆದ ಕವನವಾಗಿ ಸಲ್ಲುತ್ತದೆ.ಸರಳವಾಗಿ ಹೇಳುತ್ತಲೇ ಸಂಕೀರ್ಣವಾಗುವ ರಚನೆಗಳೂ ಸಂಕಲನದಲ್ಲಿ ಇಲ್ಲದ್ದಿಲ್ಲ.ನವೋದಯದ ನಾದಮಯತೆ,ನವ್ಯದ ಧ್ವನಿ ಶಕ್ತಿ ಆಶಾ ದಿಲೀಪ್ ಅವರ ಕವನಗಳಲ್ಲಿ ಕಾಣಬಹುದು.ಹೆಚ್ಚಿನವುಗಳೂ ಗೇಯತೆಯ ರಚನೆಗಳು.ಸಂದರ್ಭೋಚಿತವಾಗಿ ಬರೆದವುಗಳು.ಅವರ ಭಾಷೆ,ಭಾವ, ಲಯ ಆಪ್ತವಾಗುತ್ತದೆ.ಪ್ರತಿಮೆ ಸಂಕೇತಗಳಿಂದ ತಾಜಾ ಅನಿಸುತ್ತದೆ.ಗೌರವಾನ್ವಿತ ಗುರು ಸಾವಿತ್ರಿ ಎಸ್ ರಾವ್ ‘ಎದೆಯ ಕದ’ಕ್ಕೆ ಬೆನ್ನುಡಿ ಬರೆದಿದ್ದಾರೆ.ಆಶಾ ಅವರ ಕ್ರಿಯಾಶಕ್ತಿ, ಧೀಶಕ್ತಿಗೆ ಕನ್ನಡಿ ಹಿಡಿದಿದ್ದಾರೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ನಾನು ಮತ್ತು ಆಕಾಶ ಡಾ.ಧನಂಜಯ ಕುಂಬ್ಳೆ ಕವಿಮಿತ್ರ ಡಾ.ಧನಂಜಯ ಕುಂಬ್ಳೆಯವರ ‘ನಾನು ಮತ್ತು ಆಕಾಶ’ ವಿಮರ್ಶಾ ಸಂಕಲನದ ಬರಹಗಳನ್ನು ಮರುಓದುವ ಅವಕಾಶ ಲಭಿಸಿದೆ. ಹದಿನಾರು ವರ್ಷಗಳ ಹಿಂದೆ ಪುಟ ತಿರುವಿ ದೃಷ್ಟಿ ಹಾಯಿಸಿದ್ದೆ ಅಷ್ಟೆ. ಈಗ ಅನುಭವಿಸಿದ ಸಾರ್ಥಕ ಭಾವ. ೨೦೦೩ರಲ್ಲಿ ಮೂಡಬಿದಿರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪುಸ್ತಕ ಪ್ರಕಾಶನ ಧನಸಹಾಯ ಯೋಜನೆಯಲ್ಲಿ ಆಯ್ಕೆಯಾದ ಈ ಕೃತಿಯನ್ನು ಪುತ್ತೂರಿನ ಅನನ್ಯ ಪ್ರಕಾಶನ ಹೊರ ತಂದಿದೆ. ಧನಂಜಯ ಅವರ ಭಾವಗಳು, ಸಂವೇದನೆಗಳು, ಚಿಂತನೆಗಳು ತ್ರಿಮುಖಿ ಲಹರಿಗಳಾಗಿ ಇದರಲ್ಲಿ ಹರಿದಿದೆ. ಅವರ ಅನುವಭವಕ್ಕೆ ದಕ್ಕಿದ ಆಕಾಶದ ಆಕಾರ, ವಿಕಾರ ಬೆಡಗಿನೊಳಗೆ ಬೆರಗು ಮೂಡಿಸುತ್ತದೆ. ನೆಲದ ಧ್ಯಾನದಲ್ಲಿ ಎಲ್ಲವನ್ನೂ ಧೇನಿಸಿದ್ದಾರೆ. ವ್ಯಕ್ತಿ- ಕೃತಿ- ಪ್ರೀತಿ ಅಕ್ಷರಗಳಲ್ಲಿ ದಾಖಲಾಗಿದೆ. ಒಟ್ಟು ೨೫ ಬರಹಗಳಿರುವ ಈ ಪುಟ್ಟ ಸಂಕಲನಕ್ಕೆ ಪ್ರೊ.ತಾಳ್ತಜೆ ವಸಂತಕುಮಾರ್  ಮುನ್ನುಡಿ ಬರೆದಿದ್ದಾರೆ. “ತಮ್ಮ ಬರಹಗಳಲ್ಲಿ ಏಕತಾನತೆಯ ಬದಲಾಗಿ ವೈವಿಧ್ಯವನ್ನು ಆರಿಸಿಕೊಳ್ಳುವ ಧನಂಜಯರ ಹುರುಪು ಮೆಚ್ಚುಗೆಯನ್ನುಂಟು ಮಾಡುತ್ತದೆ. ಹೀಗಾಗಿ ಈ ಕೃತಿಯಲ್ಲಿ ವ್ಯಕ್ತಿಚಿತ್ರಗಳೂ, ಸಾಹಿತ್ಯ ವಿಮರ್ಶೆಯೂ, ಸಮಕಾಲೀನ ವಿದ್ಯಮಾನಗಳೂ ಎಡೆಪಡೆಯುತ್ತವೆ.  ಇದರಿಂದಾಗಿ ಓದುಗರ ಆಸಕ್ತಿಯೂ ಕದಡದಂತೆ ಕಾಯ್ದುಕೊಳ್ಳುವುದರ ಜೊತೆಗೆ ಬರಹಗಳ ಬಂಧ ಗಟ್ಟಿಯಾಗಿರುವಂತೆ ಜಾಗ್ರತೆ ವಹಿಸುವ ವಸ್ತುವಿನ ಆಯ್ಕೆಯ ಸ್ವಾತಂತ್ರ್ಯದ ಸಂಭ್ರಮವನ್ನು ಅನುಭವಿಸುವ ಸೌಲಭ್ಯಗಳನ್ನು ಅವರು ಕಲ್ಪಿಸಿಕೊಳ್ಳುತ್ತಾರೆ. ಆ ಮೂಲಕ ಆಪ್ತರಾಗುತ್ತಾರೆ” – ಇದು ತಾಳ್ತಜೆಯವರ ಮಾತು. ಆಕಾಶ ಸಾವಿರಾರು ನಕ್ಷತ್ರಗಳನ್ನು ಅರಳಿಸುತ್ತಿರುವಾಗ ಧನಂಜಯರು ಅವರೊಳಗಿನ ನಕ್ಷತ್ರ ಸದೃಶ ಸೃಜನಶೀಲತೆಯನ್ನು ಅರಳಿಸಿದ್ದಾರೆ. ಅವುಗಳು ಬರಹ ರೂಪದಲ್ಲಿ ಅಭಿವ್ಯಕ್ತವಾಗಿವೆ. ಸಾಹಿತ್ಯದ ದಾರಿಗನಿಗೆ ದೀಪಗಳಾಗಿ ಕಾಣಿಸಿಕೊಳ್ಳುತ್ತವೆ.    ‘ನಾನು ಮತ್ತು ಆಕಾಶ’ದಲ್ಲಿ ಕಲೆ ಹಾಕಿರುವ ಬರಹಗಳಲ್ಲಿ ಹೆಚ್ಚಿನವುಗಳು ಅಂಕಣಸ್ವರೂಪದವುಗಳು. ವಿಷಯವನ್ನು ಹಿಗ್ಗಿಸುವ ಜಾಣ್ಮೆ ಲೇಖಕರಿಗಿದ್ದರೂ ಅಂಕಣಬರಹಗಳ ಇತಿ ಮಿತಿಗಳಿಗನುಗುಣವಾಗಿ ಸಂಕ್ಷಿಪ್ತಗೊಳಿಸಿದ್ದಾರೆ. ಬರವಣಿಗೆ ಸರಳವಾಗಿದ್ದರೂ ಪ್ರಬುದ್ಧತೆ ಬಂದುಬಿಟ್ಟಿದೆ. ಸರಸ ನಿರೂಪಣೆ, ಬಿಚ್ಚು ಮನಸ್ಸಿನ ಅಭಿವ್ಯಕ್ತಿ. ಆಳವಾದ ಅಧ್ಯಯನ ಎದ್ದು ಕಾಣುತ್ತದೆ. ಅಪಾರವಾದ ಓದಿನಿಂದ ಪಡೆದ ಜ್ಞಾನ ಪ್ರಜ್ವಲಿಸುತ್ತದೆ. ಮುನ್ನುಡಿಯಲ್ಲಿ ಬರಹಗಳ ಅಂತರ್ದರ್ಶನವಿದ್ದರೆ ನಲ್ನುಡಿಗಳ ಮೂಲಕ ಡಾ. ಶ್ರೀಧರ ಎಚ್. ಜಿ.ಯವರು ಕುಂಬ್ಳೆಯವರ ವ್ಯಕ್ತಿತ್ವವನ್ನು ಸ್ಪರ್ಶಿಸಿದ್ದಾರೆ.  ಒಟ್ಟು ಬರಹಗಳನ್ನು ಮೂರಾಗಿ ವಿಭಾಗಿಸಲಾಗಿದೆ. ಮೊದಲ ಭಾಗ ‘ಭಾವ ಲಹರಿ’ಯಲ್ಲಿ ಏಳು, ಎರಡನೇಯ ಭಾಗ ‘ವಿಮರ್ಶಾ ಲಹರಿ’ಯಲ್ಲಿ ಹತ್ತು, ಕೊನೆಯ’ವ್ಯಕ್ತಿ ಲಹರಿ’ಯಲ್ಲಿ ಎಂಟು ಲೇಖನಗಳಿವೆ. ‘ಜೀವನ ವನದಲ್ಲಿ ಕವನ ಮಯೂರ’ ಶೀರ್ಷಿಕೆಯ ಲೇಖನದಲ್ಲಿ ಕಾವ್ಯ ಮಿಮಾಂಸೆಯಿದೆ. ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಹಾಗೂ ಬರೆದದ್ದೆಲ್ಲ ಕಾವ್ಯ ಎಂದುಕೊಂಡವರು ಇದನ್ನು ಓದಲೇಬೇಕು. ವಿದ್ಯಾರ್ಥಿಗಳಿಗಂತೂ ಉಪಯುಕ್ತವಾದ ಲೇಖನವಿದು. ‘ಕಾಲದ ಅನಿರ್ವಚನೀಯತೆ’ಯಲ್ಲಿ ಕಾಲದ ಕುರಿತಾದ ವ್ಯಾಖ್ಯಾನವಿದೆ. ಸೇಡಿಯಾಪು ಅವರ ಬರಹಗಳನ್ನು ಇದು ನೆನಪಿಸುತ್ತದೆ. ‘ಬುದ್ಧ ಮತ್ತು ಅಕ್ಕ’ ಒಂದು ಸಂಶೋಧನಾ ಪ್ರಬಂಧಕ್ಕೆ ಅಗತ್ಯವಾದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ನೀಡುತ್ತದೆ. ಶ್ರೀಮಂತಿಕೆಯನ್ನು ತ್ಯಜಿಸಿ ಸಾಂಸಾರಿಕತೆಯನ್ನು ಹರಿದು ಆಧ್ಯಾತ್ಮವನ್ನು ಬಾಳಿದ ಗೌತಮ ಬುದ್ಧ ಮತ್ತು ಅಕ್ಕ ಮಹಾದೇವಿ ಭಾರತದ ಬೆಳಕಾದವರು.  ‘ಮನಸು ಹರಿದಾಗ’ ಸಾಹಿತ್ಯದ ಸ್ವಾನುಭವವನ್ನು ನಿವೇದಿಸುತ್ತದೆ. ಎರಡು ಮೂರು ಉಪಕಥೆಗಳ ಮೂಲಕ ಬದುಕಿನ ‘ಭಾವ- ಅಭಾವ’ವನ್ನು ಚಿತ್ರಿಸಿದ ಕುಂಬ್ಳೆಯವರು ರಮಣ ಮಹರ್ಷಿಯ ಸಂದೇಶವನ್ನು ಉಲ್ಲೇಖಿಸುತ್ತಾರೆ. ಸಾಕ್ರಟೀಸ್, ಪ್ಲೇಟೊ, ಕ್ರೀಟೊ ಆಸ್ಕ್ಲಿಪಿಯಸ್ ಮೊದಲಾದವರ ಬಗ್ಗೆ ಕುತೂಹಲ ಮೂಡಿಸುತ್ತಾರೆ. ನಾಟ್ಯ ಚಪಲವಿರುವವರಲ್ಲಿ ಕಾಪಟ್ಯವೂ ಇದೆ ಎನ್ನುವ ಸತ್ಯದ ಕುರಿತಾದ ಚರ್ಚೆ ‘ನಾಟ್ಯ ಲಹರಿ’ಯಲ್ಲಿದೆ. ನಾಟ್ಯ ಎನ್ನುವುದು ಬೇರೆ ಬೇರೆ ಸಂದರ್ಭಗಳಲ್ಲಿ ಅದನ್ನು ರೂಢಿಸಿಕೊಂಡ ಬೇರೆ ಬೇರೆ ವ್ಯಕ್ತಿಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವುದನ್ನು ಗಮನಿಸಬಹುದು. ‘ಬೆಳಕಿನ ಹಾದಿ’ ಒಂದು ಸುಂದರ ರೂಪಕ. ಧನಂಜಯ ಅವರು ಪ್ರಾಚೀನ ತುಳು ಸಾಹಿತ್ಯದ ಬಗ್ಗೆ ಅಧ್ಯಯನ ನಡೆಸಿದವರು. ಈ ಸಂಕಲನದಲ್ಲಿ ಅದಕ್ಕೆ ಸಂಬಂಧಿಸಿದ ಎರಡು ಲೇಖನಗಳಿವೆ. ಅವುಗಳಲ್ಲಿ ಒಂದು ‘ತುಳು ಸಾಹಿತ್ಯ- ಕೆಲವು ಟಿಪ್ಪಣಿಗಳು’. ಇನ್ನೊಂದು ‘ತುಳು ಕಾವ್ಯಕ್ಕೆ ಕಾಸರಗೋಡಿನ ಕೊಡುಗೆ’. ತುಳುವಿಗೆ ಪ್ರಾಚೀನ ಲಿಖಿತ ಸಾಹಿತ್ಯ ಪರಂಪರೆಯಿತ್ತು ಎಂಬುದನ್ನು ಸಾಬೀತು ಪಡಿಸುವ ಬರಹಗಳಿವು. ಕುಂಬ್ಳೆಯವರ ವಿಮರ್ಶಾ ಪ್ರಜ್ಞೆಗೆ ಸಾಕ್ಷಿಯಾಗ ಬಲ್ಲ ಲೇಖನಗಳು ವ್ಯಕ್ತಿಚಿತ್ರಗಳಾಗಿಯೂ, ಕೃತಿ -ಸ್ಮೃತಿಗಳಾಗಿಯೂ ಇಲ್ಲಿ ದಾಖಲಾಗಿವೆ. ಬೇಂದ್ರೆ, ಕಾರಂತ, ಸೇಡಿಯಾಪು,  ಕಯ್ಯಾರ, ಏರ್ಯ, ಅಮೃತ, ಚಿತ್ತಾಲ, ವೇಣುಗೋಪಾಲ ಕಾಸರಗೋಡು, ಜನಾರ್ದನ ಎರ್ಪಕಟ್ಟೆ ಮೊದಲಾದವರ ಕೃತಿಗಳ ಅನನ್ಯತೆಯನ್ನು ಅಧ್ಯಯನಾತ್ಮಕವಾಗಿ  ವಿಶ್ಲೇಷಿಸಿದ್ದಾರೆ.  ‘ಹೊಸ ಕಾವ್ಯದ ಹೆಜ್ಜೆ’ ಲೇಖನದಲ್ಲಿ ನವೋದಯ, ನವ್ಯ,  ನವ್ಯೋತ್ತರ ಕಾಲಘಟ್ಟದ ಆಶಯ ಮತ್ತು ಆಕೃತಿಗಳ ಬಗ್ಗೆ ಚರ್ಚಿಸಲಾಗಿದೆ. ಅಡಿಗ, ಎಕ್ಕುಂಡಿ, ರಾಮಾನುಜನ್, ತಿರುಮಲೇಶ್ ಮೊದಲಾದವರ ಸತ್ವವನ್ನು ಮೈಗೂಡಿಸಿಕೊಂಡು ತನ್ನದೇ ಆದ ಹೊಸ ಕಾವ್ಯ ಮಾರ್ಗವನ್ನು ರೂಪಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರ ‘ಅಗ್ನಿ ಜಿಹ್ವಾ’ ವನ್ನು ಪರಾಮರ್ಶಿಸಲಾಗಿದೆ. ಶಿವರಾಮ ಕಾರಂತರು ತಾವು ಪರಂಪರೆಯನ್ನು ಮುರಿಯುವುದರ ಮೂಲಕ ಪರಂಪರೆಯ ಬಗೆಗೆ ಹೊಸ ಎಚ್ಚರವನ್ನು ಮೂಡಿಸಿದವರು. ಈ ಮಾತಿಗೆ ಪೂರಕವಾಗುವಂತೆ ಕಾರಂತರು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಹೊಸ ಪ್ರಯೋಗಗಳ ಬಗ್ಗೆ ‘ಯಕ್ಷಗಾನ ಮತ್ತು ಕಾರಂತ’ ಲೇಖನದಲ್ಲಿ ತಿಳಿಸಲಾಗಿದೆ.   ‘ಸೇಡಿಯಾಪು: ಒಂದು ನೆನಪು’ ಲೇಖನದಲ್ಲಿ ಸೇಡಿಯಾಪು ಅವರ ಬರವಣಿಗೆಯನ್ನು ಸೃಜನಶೀಲ, ಶಾಸ್ತ್ರೀಯ ಮತ್ತು ವೈಯುಕ್ತಿಕ ನೆಲೆಯಲ್ಲಿ ಸ್ಥೂಲವಾಗಿ ಗುರುತಿಲಾಗಿದೆ.  ಆ ಪ್ರಖಾಂಡ ಪಂಡಿತನ ನೆನಪಿನಲ್ಲಿ ಕುಂಬ್ಳೆ ಬರೆದ ಭಾವನಾತ್ಮಕ ಕವನವನ್ನು ಅಳವಡಿಸಲಾಗಿದೆ. ಮೂಡಬಿದಿರೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂವಾದ ಗೋಷ್ಠಿಯಲ್ಲಿ ಬಿತ್ತರಗೊಂಡ ವಿಚಾರ ಲಹರಿಯ ಟಿಪ್ಪಣಿ ‘ವೃತ್ತ್ತಿ-ಪ್ರವೃತ್ತಿ’. ಡಾ. ನಾ ಮೊಗಸಾಲೆ, ಈಶ್ವರಯ್ಯ, ಚೊಕ್ಕಾಡಿ, ವೈದೇಹಿ,  ಮಾವಿನಕುಳಿ ಹೀಗೆ ಸಾಹಿತ್ಯ ಕಲಾ ಪ್ರಕಾರದ  ಪಂಚರನ್ನು ಪರಿಚಯಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಚುಟುಕು ಪ್ರಕಾರದ ಸ್ಥಾನ-ಮಾನ ಬಗೆಗಿನ ‘ಚುಟುಕು ಕನ್ನಡದ ಸ್ಫಟಿಕ’  ಅಧ್ಯಯನ ಯೋಗ್ಯ. ಕನ್ನಡ ಕಾವ್ಯ ಪ್ರಪಂಚವನ್ನು ಸಹೃದಯ ಭಾವ ಪ್ರಪಂಚಕ್ಕೆ ಧಾರೆಯೆರೆದ ಗಮಕಿ ಶಕುಂತಲಾಬಾಯಿ ಕುರಿತಾದ ಬರಹವೂ ರಸಾರ್ದ್ರವಾಗಿದೆ.  ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಮತ್ತು ಫ್ರೊ.ವೇಣುಗೋಪಾಲ ಕಾಸರಗೋಡು ಗಡಿನಾಡಿನ ಎರಡು ಕಣ್ಣುಗಳು. ಸಾಹಿತ್ಯ ರಚನೆ ಮತ್ತು ಸಂಘಟನೆ, ಕನ್ನಡ ಹೋರಾಟಗಳಲ್ಲೂ ಬದುಕನ್ನು ಕಳೆದವರು. ಮಹತ್ವದ ಸಾಹಿತ್ಯ ಕೃತಿಗಳನ್ನು ರಚಿಸಿ ಅಖಿಲ ಕರ್ನಾಟಕದ ಗಮನ ಸೆಳೆದವರು. ಕಯ್ಯಾರರ ಶಿಶುಗೀತೆಗಳ ಬಗ್ಗೆ ಕುಂಬ್ಳೆಯವರು ಪರಾಮರ್ಶಿಸಿದ್ದಾರೆ. ಅದೇ ರೀತಿ ವೇಣುಗೋಪಾಲರ ‘ದೃಷ್ಟಿ ಮತ್ತು ಸೃಷ್ಟಿ’ಗಳ ಕುರಿತಾಗಿ ಹೊಸ ಬೆಳಕು ನೀಡಿದ್ದಾರೆ. ಔಚಿತ್ಯ ಪೂರ್ಣ ಮೌಲಿಕ ಬರಹಗಳಿವು.      ‘ನಾನು ಮತ್ತು ಆಕಾಶ’ ಪ್ರಕಟವಾದಾಗ ಡಾ.ಧನಂಜಯ ಕುಂಬ್ಳೆಯವರು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿದ್ದರು. ಆ ಬಳಿಕ ಮೂಡಬಿದಿರೆ ಆಳ್ವಾಸ್ ಕಾಲೇಜಿಗೆ ಸೇರಿ ಅದೇ ವೃತ್ತಿಯಲ್ಲಿ ಮುಂದುವರಿದರು. ಈಗ ಕೆಲವು ವರ್ಷಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದು, ಪ್ರಕೃತ ಕನಕದಾಸ ಅಧ್ಯಯನ ಪೀಠದ ನಿರ್ದೇಶಕರು. ಬೋಧನೆ, ಶೋಧನೆ, ಸಂಘಟನೆ,  ಕಾರ್ಯಕ್ರಮಗಳ ಆಯೋಜನೆ, ನಿರೂಪಣೆ, ನಿರಂತರ ಸಾಹಿತ್ಯ ರಚನೆಯ ಮೂಲಕ ನಾಡಿನಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಲ್ಕು ಕವನ ಸಂಕಲನ, ವಿಮರ್ಶೆ, ವ್ಯಕ್ತಿಚಿತ್ರ, ಸಂಶೋಧನಾ ಕೃತಿಗಳನ್ನು ರಚಿಸಿದ್ದಾರೆ. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ಕ್ಕಾಗಿ ಪಿ.ಎಚ್.ಡಿ ಪಡೆದಿದ್ದಾರೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಅನುಭವದಿಂದ ಅವರ ಮನಸ್ಸು ಪಕ್ವವಾಗಿದೆ. ದೇಹ ಪುಷ್ಟವಾಗಿದೆ. ಸ್ನೇಹ (ವಲಯ) ವಿಸ್ತಾರವಾಗಿದೆ. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಇನ್ನೂ ಹಲವಾರು ಕೃತಿಗಳನ್ನು ನೀಡುವ ಶಕ್ತಿ ಅವರಿಗಿದೆ. ******* ರಾಧಾಕೃಷ್ಣ ಕೆ ಉಳಿಯತ್ತಡ್ಕ –

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಾಲಕ್ಕಿ ಕೋಗಿಲೆ ಮಾರ್ಚ್ ತಿಂಗಳಿನಲ್ಲಿ ಬರಹ ಓಡಾಟ ಎಂದುಕೊಂಡು ಸದಾ ಕೆಲಸದ ಒತ್ತಡದಲ್ಲಿದ್ದ ನನಗೆ ಒಮ್ಮೆಲೆ ಅನಿರೀಕ್ಷಿತವಾಗಿ ಕೋವಿಡ- 19 ನಿಂದಾಗಿ ಲಾಕ್ಡೌನ ಆದಾಗಿನಿಂದ ಮಾನಸಿಕ ಗೊಂದಲ.ಭಯದಿಂದ ಮನೆಯ ನಾಲ್ಕು ಗೋಡೆಗಳ ನಡುವೆ ಸುಧಾರಿಸಿಕೊಳ್ಳಲು ಕೆಲವು ದಿನಗಳು ಬೇಕಾದವು.ಬಳಿಕ ನಾವೆಲ್ಲ ನಮ್ಮ ಆಸಕ್ತಿಗೆ ತಕ್ಕಂತೆ ಮನಸ್ಸು ಪ್ರಪುಲ್ಲಗೊಳಿಸಿಕೊಳ್ಳಲು ಮಾರ್ಗ ಹುಡುಕುತ್ತಿದ್ದಾಗ ಕಣ್ಣಿಗೆ ಬಿದ್ದದ್ದು ಅಕ್ಷತಾಕೃಷ್ಣಮೂರ್ತಿ ಅವರ ಹಾಲಕ್ಕಿ ಕೋಗಿಲೆ. ಮುಖಪುಟದಲ್ಲಿದ್ದ ಮುಗ್ಧ ನಗುವಿನ ಸುಕ್ರಜ್ಜಿಯನ್ನು ಕಂಡ ಮೇಲಂತೂ ಒಂಥರಾ ಖುಷಿ. ಇದಕ್ಕೆ ಒಂದು ತಿಂಗಳ ಮೊದಲಷ್ಟೆ ಬಡಗೇರಿಯ ಸುಕ್ರಜ್ಜಿಯವರ ಮನೆಯಂಗಳದಲ್ಲಿ ವೈಶಿಷ್ಟಪೂರ್ಣವಾಗಿ ಕವಿ ಕಥೆಗಾರ ಜಯಂತಕಾಯ್ಕಿಣಿಯವರು ಬಿಡುಗಡೆಗೊಳಿಸಿದ ಕೃತಿ ಇದು.ಆ ಬಿಡುಗಡೆಯ ಕ್ಷಣ ಮರೆಯಲಾಗದು.ನಿರಾಡಂಬರವಾದ ಸರಳ ಸಮಾರಂಭದಲ್ಲಿ ಅತ್ಯಂತ ಆತ್ಮೀಯ, ಪ್ರೀತಿಯ, ಒಂದು ರೀತಿಯಲ್ಲಿ ದಿವ್ಯ ಎನಿಸಬಹುದಾದ ವಾತಾವರಣದಲ್ಲಿಜಾನಪದ ಹಾಡುಗಾರ್ತಿಯರಾದ ಪದ್ಮಾವತಿ, ಕುಸಲಿ, ಲಲಿತಾ ಅವರ ಹಾಡಿನ ಹಿನ್ನೆಲೆಯಲ್ಲಿ ಜಯಂತಕಾಯ್ಕಿಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಸುಕ್ರಜ್ಜಿಯವರ ಕೈಗಿಟ್ಟ ಅಪರೂಪದ ಘಳಿಗೆಯಲ್ಲಿ ನಾನೂ ಪಾಲುದಾರಳಾಗಿದ್ದೆ. ಈ ಹಾಲಕ್ಕಿ ಹಾಡುಗಾರ್ತಿಯರ ಹೃದಯ ತುಂಬುವ ಮನಸ್ಸು, ಮುಖದಲ್ಲಿನ ಸಂತೃಪ್ತ ಭಾವ, ಜೀವನ ಪ್ರೀತಿ, ಪ್ರಾಮಾಣಿಕ ಪಾರದರ್ಶಕ ವ್ಯಕ್ತಿತ್ವ ಇತರರಿಗೆ ಮಾರ್ಗದರ್ಶನ ಎನಿಸುವಂತಹುದ್ದು.ಕನ್ನಡ ಜಾನಪದ ಸಾಹಿತ್ಯದ ವೈಶಿಷ್ಟಪೂರ್ಣ ಬೆಳವಣಿಗೆಯಲ್ಲಿ ಇವರ ಕೊಡುಗೆ ಅಪೂರ್ವವಾದದ್ದು.                       ನಾಡೋಜ ಪದ್ಮಶ್ರೀ ಪ್ರಶಸ್ತಿ ವಿಜೇತ ಹಾಲಕ್ಕಿ ಒಕ್ಕಲು ಬುಡಕಟ್ಟಿನ  ಸುಕ್ರಿ ಬೊಮ್ಮಗೌಡ ಅವರ ಜೀವನ ಪರಿಚಯಿಸುವ ಇಪ್ಪತ್ತೊಂದು ಲೇಖಕರ ಬರಹಗಳ ಗುಚ್ಛವೇ ಹಾಲಕ್ಕಿ ಕೋಗಿಲೆ. ಸುಕ್ರಜ್ಜಿ ಬದುಕಿನ ಶೈಲಿ, ಸರಳತೆ, ಜಾನಪದ ಜಗತ್ತಿಗೆ ಅವರ ಕೊಡುಗೆ, ಅವರ ಸಮಾಜಮುಖಿ ವ್ಯಕ್ತಿತ್ವ ಮುಂತಾದ ವಿಷಯಗಳ ಕುರಿತು ಹತ್ತಿರದಿಂದ ಸುಕ್ರಜ್ಜಿಯವರನ್ನು ಕಂಡ ಲೇಖಕರು ಸರಳ ಸುಂದರವಾಗಿ, ಆತ್ಮೀಯವಾಗಿ ತೆರೆದಿಟ್ಟಿದ್ದಾರೆ. ಇದು ಜಾನಪದದಲ್ಲಿ ಅರಳಿದ ಹೂವಿಗೆ ಸರಳವಾಗಿ ಸುಂದರವಾಗಿ ಸಂದ ಗೌರವವೆನಿಸುತ್ತದೆ. ಸುಕ್ರಜ್ಜಿಯ ಸಾಮಾಜಿಕ ಕಳಕಳಿ, ಔಷಧೀಯ ಸಸ್ಯಗಳ ಕುರಿತು ಜ್ಞಾನವು ತುಂಬ ಮಹತ್ವಪೂರ್ಣವಾದದ್ದು. ಸಾವಿರಗಟ್ಟಲೇ ಹಾಡುಗಳ ಧ್ವನಿಭಂಡಾರವಾದ ಸುಕ್ರಜ್ಜಿಗೆ ಅಕ್ಷತಾ ಅವರು ಬಳಸಿದ `ಧ್ವನಿದೂತೆ’ ಪದ ಮಾರ್ಮಿಕ ವೆನಿಸಿತು.             ಹಲವಾರು ಲೇಖಕರು ಸುಕ್ರಜ್ಜಿಯವರ ಕಷ್ಟದ ಜೀವನದ ಕ್ಷಣಗಳನ್ನು ಎಳೆಎಳೆಯಾಗಿ ಬಿಡಿಸುತ್ತ ಸುಕ್ರಜ್ಜಿಯವರ ಜಾನಪದ ಹಾಡುಗಳ ಧಾರೆಯಿಂದಲೇ ಅಭಿನಂದನೆ ಸಲ್ಲಿಸಿದ್ದಾರೆ. ಸಾಂಸ್ಕೃತಿಕ ರಾಯಭಾರಿಯಾಗಿ ಸುಕ್ರಜ್ಜಿಯ ಪ್ರತಿಭೆ, ನಮ್ಮ ನಾಡಿನ ಹೆಮ್ಮೆಯಾಗಿ ಸುಕ್ರಜ್ಜಿ, ಜಾನಪದದ ಅಗಣಿತ ನಿಧಿಯಾಗಿ, ಲೋಕಸಿರಿಯಾಗಿ, ಕಲಾಸಿರಿಯಾಗಿ ಸುಕ್ರಜ್ಜಿಯ ಜೀವನ ಸುಂದರವಾಗಿ ಈ ಕೃತಿಯಲ್ಲಿ ಅನಾವರಣಗೊಂಡಿದೆ. `ನೀನೊಂದುಕೋಗಿಲೆಯೋ’ ಜನಪದ ಜಗದ ಬಾಗಿನವೋ’ ಎಂಬುದಾಗಿ ಹಿರೇಗುತ್ತಿಯವರು ರೂಪಕ ನೀಡಿರುವುದು ಉತ್ಫ್ರೇಕ್ಷೆ ಅನಿಸುವುದಿಲ್ಲ. ಸುಕ್ರಜ್ಜಿಯ ಸರಳ ಬದುಕು, ಪ್ರತಿಭೆ, ಸಮಾಜಮುಖಿ ವ್ಯಕ್ತಿತ್ವ ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ನಿಲ್ಲುವಲ್ಲಿ ಪ್ರಸ್ತುತ ಕೃತಿ ಪ್ರೇರಣೆಯಾಗಿ ನಿಲ್ಲುತ್ತದೆ. ಇಂತಹ ಅಮೂಲ್ಯಕೃತಿ ಲೋಕಾರ್ಪಣೆ ಮಾಡಿದ ಅಕ್ಷತಾಕೃಷ್ಣಮೂರ್ತಿ ಹಾಗೂ ಅವರ ವಿವರ ಕಟ್ಟಿಕೊಟ್ಟ ಲೇಖಕರಿಗೆ ವಂದನೆಗಳು.ಜೊತೆಗೆ ಈ ಕೃತಿಗೆ ಕರ್ನಾಟಕ ಜಾನಪದ ಪರಿಷತ್ತಿನ ಲೋಕ ಸರಸ್ವತಿ ಪ್ರಶಸ್ತಿ ಬಂದಿರುವುದಕ್ಕೆ ಅಭಿನಂದನೆಗಳು. ************ ಡಾ. ಪ್ರೀತಿ ಭಂಡಾರಕರ್

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

“ಪಮ್ಮಿ” ಹನಿಗವಿತೆಗಳು ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮ‌ಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ‌ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ ಹೇಳಿಬಿಡುವುದು.ಕೊನೆಯಲ್ಲಿ ಪಂಚ್ ಇರಬೇಕು ಅಂತಾರ,ಅದು ಪದಗಳ ಮೂಲಕ ಇಲ್ಲಾ ಅರ್ಥದಲ್ಲಿ ಮೂಡಿಸುವ ಪಂಚ್ ಆದರೂ ಆಗಬಹುದು.ಒಟ್ಟಿನಲ್ಲಿ ಹನಿಯಲ್ಲಿ ಕಡಲು,ಕನ್ನಡಿಯಲ್ಲಿ ಕರಿ ಎಂಬಂತೆ ಮೂರು ನಾಲ್ಕೋ ಸಾಲಿನಲ್ಲೇ ಬ್ರಹ್ಮಾಂಡ ತೋರಿಬಿಡುವ ಶಕ್ತಿಯುಳ್ಳವು ಚುಟುಕುಗಳು.ಕೆಲವು ಗಂಭೀರ,ಕೆಲವು ಹಾಸ್ಯಭರಿತ, ಮತ್ತೆ‌ ಕೆಲವು ಜಟಿಲ,ಮತ್ತಷ್ಟು ಸರಳ,ಸರಾಗ ..ಹೀಗೆ ಧೊಪ್ಪೆಂದು ಆಗಸದಿಂದ ಗಟ್ಟಿ ಮಳೆಹನಿಯೊಂದು ಕಾರ್ಮೋಡ ಸೀಳಿಕೊಂಡು ಧರೆಗೆ ಬಿದ್ದಂತೆ. ” ಮೌನವೆಂದರೆ…ಮಾತಿಲ್ಲದ ಮನೆಯೇಮಾತುಬಾರದ ಮಗಳೆಇದ್ಯಾವುದೂ ಇಲ್ಲವಾದರೆ! ‌‌‌‌‌‌‌‌‌ ಮೌನವೆಂದರೆ…ಮುನಿಸಿಕೊಂಡಮಾತಿರಬೇಕು.”.. ದೇಸು ಆಲೂರು ಮಾತು ಮೌನದ ನಡುವಿನ ಸಂಬಂಧ ಮತ್ತು ವ್ಯತ್ಯಾಸವನ್ನು ಹೇಳುವ ಈ ಚುಟುಕು ದೇಸು ಆಲೂರು ಅವರದು.ಬಾಯಿ ತೆರೆದರೆ ಸಾಕು ಹಾಸ್ಯ ಚಟಾಕಿಗಳ ಹಾರಿಸುತ್ತಾ,ಎಲ್ಲರನ್ನೂ ನಗಿಸಿ,ತನ್ನ ಸುತ್ತಮುತ್ತ ಸದಾ ಉತ್ಸಾಹದ ಅಲೆಯನ್ನು ಮೂಡಿಸಿಕೊಂಡುಬಿಡುವ ಚುಟುಕು ಕವಿ ದೇಸು ಅವರು.ಶಾಲೆ ಕಾಲೇಜುಗಳಿಗಿಂತ ಭಿನ್ನವಾದ ಕಲಿಕೆಯನ್ನು ಜೀವನದುದ್ದಕ್ಕೂ ಕಲಿಯುತ್ತಾ ಬಂದಿರುವ ದೇಸು ಅವರು ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು.ದುಡಿಮೆಯನ್ನೇ ದೈವವಾಗಿಸಿ ಬದುಕುತ್ತಿರುವವರು. “ಪಮ್ಮಿ”.. ಹರಿಣಿ ಹೆಸರಿನ ಹೆಂಡತಿಯನ್ನು ಪಮ್ಮಿಯಾಗಿಸಿ,ಆಗಾಗ ತಮಾಷೆಗೆ ಡುಮ್ಮಿ ಎನ್ನುತ್ತಾ,ಸಮಯಕ್ಕೆ ತಕ್ಕಂತೆ ನೀನೀಗ ಎರಡು ಮಕ್ಕಳ ಮಮ್ಮಿ ಎನ್ನುತ್ತಲೂ ತಮ್ಮ ದಾಂಪತ್ಯ ಜಗತ್ತನ್ನು ತೆರೆದಿಡುವ ದೇಸು ಅವರ ಚುಟುಕುಗಳು ಕಚಗುಳಿಯಿಡುವ ಮಾತ್ರೆಗಳು.ಪಮ್ಮಿ ಸಂಕಲನದ ಬಹುಪಾಲು ಹನಿಗವನಗಳು ಹಾಸ್ಯದ ಪಟಾಕಿಗಳೇ. ” ತವರಿನಲ್ಲಿದ್ದನನ್ನಾಕೆಗೆ ಕಾಗದ ಬರೆದೆ..ಪ್ರಿಯೆ,ಈ ಓಲೆ ತಲುಪಿದತಕ್ಷಣನಿನ್ನ ಕ್ಷೇಮದ ವಿಚಾರತಿಳಿಸತಕ್ಕದ್ದುಅತ್ತ ಕಡೆಯಿಂದ ಕಾಗದಬಂತು..ರೀ….ನಿಮ್ಮ ಕಾಗದ ಸಿಕ್ಕಿದೆ,ಆದರೆ…ವಾಲೆ‌ ಮಾತ್ರ ಸಿಕ್ಕಿಲ್ಲ..” ಹೆಂಡತಿಯನ್ನು ಪೆದ್ದತನದಲಿ ಕಾಣಿಸುವ ಇವರ ಬಹಳಷ್ಟು ಚುಟುಕುಗಳು ಅವಳು ಮೊದ್ದು,ಪೆದ್ದು,ಮುದ್ದು,ಸಿಡುಕು,ಕ್ಯಾತೆ ತೆಗೆವಾಕೆ ಎನ್ನುತ್ತಲೇ ಅವಳಿಲ್ಲದೆ ಬಾಳಿಲ್ಲಾ.ಅವಳ ಮಾತು,ಮುನಿಸು,ಸಿಟ್ಟಿಲ್ಲದೆ ಇರಲಾಗುವುದಿಲ್ಲವೆಂಬ ಪ್ರೀತಿಯನ್ನೂ ತೋರುತ್ತದೆ. ” ಪಮ್ಮಿಗೂ..ನನಗೂ ನಿತ್ಯ ಕದನಕದನದಲ್ಲೂ ಹೊಳೆಯುವುದುನನ್ನವಳ ವದನ “ ಪಮ್ಮಿ ತುಂಬಾ ಒಳ್ಳೆಯವಳಂತೆ ಪಕ್ಕದ ಮನೆಯಾಕೆ ಹೇಳ್ತಿದ್ರು ಎನ್ನುವ ದೇಸು,ಮಡದಿಯನ್ನು ರೇಗಿಸುತ್ತಾ,ಕಿಚಾಯಿಸುತ್ತಾ,ನಗಿಸುತ್ತಾ ಇಬ್ಬರು ಮಕ್ಕಳೊಡನೆ ಬಾಳ ಕಡಲನ್ನು ನಗುತ್ತಲೇ ಈಜುತ್ತಿದ್ದಾರೆ‌. ‘ ಮಹಿಳೆ..ಮಧ್ಯದ ಅಕ್ಷರ ತೆಗೆದರೆ ಹೊಳೆ..ತೆಗೆಯದಿದ್ದರೆ ಮಹಿಳೆಮಳೆ ಪ್ರತೀ ಜೀವನಾಡಿಯ ಉಸಿರು..ಮಹಿಳೆ,ಗಂಡಿನ ಯಶಸ್ಸಿನ ಉಸಿರು.. “ ಎಂದೆನ್ನುತ್ತಾ ಪಮ್ಮಿಯೆ ಎಲ್ಲಾ ಎನ್ನುತ್ತಾರೆ. ” ಗತ್ತು..ಅದೇನು ಗತ್ತೇ ಹುಡುಗಿಆ ಮುಂಗುರುಳಿಗೆ..!ಬಾಚಿ ತಬ್ಬಿ ನಗುತಿದೆನಿನ್ನ ಕೊರಳಿಗೆ..” ” ಸಾಂಗತ್ಯ.. ಶೃಂಗಾರ ಸಂಗತ್ಯ,ನವರಸದ ನೇಪಥ್ಯಸಮರಸದ ದಾಂಪತ್ಯ, ಕಾಲನಿಗೂ ಅಭೇದ್ಯ..” ಎಂದು ದಾಂಪತ್ಯದ ಅರ್ಥ ತಿಳಿದವರು ದೇಸು.ಮಡದಿ,ಮಗಳ ಕಣ್ಣುಗಳೇ ಮನೆಯ ನಾಲ್ಕು ಕಣ್ಣುಗಳೆಂದು ಸಂಭ್ರಮಿಸಿ,ಸಂಬಂಧಗಳೇ ಸತ್ತ ಮೇಲೆ ಭಾವನೆಗಳಿಗೆ ಕೆಲಸವಿಲ್ಲವೆಂದು ಸಂಬಂಧಗಳ ಜೋಪಾನ ಮಾಡುವವರು. ” ಅಮ್ಮನ ಮಾತಿಗೆ ಮನಸು ನಗುತದೆಮುಂದೆ ಹೋಗುತಿಲ್ಲ ಅಪ್ಪನ ವಯಸ್ಸುಹತ್ತು ವರ್ಷದಿಂದ ಒಂದೇ ಮಾತುನಿಮ್ಮಪ್ಪನಿಗಿನ್ನೂ ಐವತ್ತು..” ಎನ್ನುತ್ತಲೇ ಅಗಲಿದ ಅಮ್ಮನನ್ನು ಆಕಾಶದ ಚುಕ್ಕಿಗಳಲ್ಲಿ ಕಾಣುತ್ತಾ,ಅಲ್ಲಿ ಚನ್ನಾಗಿರಮ್ಮಾ..ಇಲ್ಲಿ ನಾವು ಚನ್ನಾಗಿರುತ್ತೇವೆ ಎಂದು ಭಾವುಕರಾಗಿಬಿಡುತ್ತಾರೆ. ” ದೇಸು ಕನ್ನಡದ ಕೂಸು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಕನ್ನಡಮ್ಮನ ಮಗ,ಕನ್ನಡ ಸಾಹಿತ್ಯ ಸೇವೆಗೆ ಸದಾ ನಿಂತಿರುವ ಕನ್ನಡದ ಬಂಟ. ಏನಕ್ಕಾ ಸಮಾಚಾರ ಎಂದೆನ್ನುತ್ತಾ ಕಣ್ಣರಳಿಸಿ ನಗುಮೊಗದಲಿ ಎದುರಾಗುವ ಈ ತಮ್ಮನ ಮನೆ, ಮನ ಸದಾ ಹೀಗೇ ಸಂತಸದಿಂದಿರಲಿ..ಇವರಿಂದ ಇನ್ನಷ್ಟು ಮತ್ತಷ್ಟು ಹನಿಗವನಗಳೊಂದಿಗೆ ಗಂಭೀರ ಸೃಜನಶೀಲ ಸಾಹಿತ್ಯದ ಹಲವು ಪ್ರಕಾರಗಳ ಬೆಳೆ ಉಲುಸಾಗಿ ಬೆಳೆಯಲಿ. ” ಕಬ್ಬಿಗರೆದೆಯಲಿ ನಲಿದಿದೆಕನ್ನಡಹಿಗ್ಗಿದೆ ಕನ್ನಡ ಹಿರಿದಿದೆ ಕನ್ನಡಕನ್ನಡಿಗರ ಮನೆ ಮನದಲಿನೆಲೆಸಿದೆ ಕನ್ನಡ” ಕನ್ನಡಕ್ಕಾಗಿ ಮಿಡಿವ,ತುಡಿವ ದೇಸುರವರ ಕನ್ನಡ ಸೇವೆ ‌ನಿರಂತರವಾಗಲಿ. |******* ಸುಜಾತಾ ಲಕ್ಷ್ಮೀಪುರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕಾನನದ ಸುಮ ಶ್ರೀ ಉಮೇಶ ಮುನವಳ್ಳಿಯವರ‘ಕಾನನದ ಸುಮ’ ಕವನ ಸಂಕಲನ. ಸಾಹಿತ್ಯ ನಿರ್ಮಾಣದ ಪರಮ ಉದ್ದೇಶ ಒಳ್ಳೆಯದನ್ನು ಹೇಳುವುದು, ಒಳ್ಳೆಯದನ್ನು ಮಾಡಲು ಪ್ರೇರೇಪಿಸುವುದು ಮತ್ತು ಮುಂದಿನವರಿಗೆ ಸಾಗಿಸಿ ಸಾಗುವುದು. ಸಾಹಿತ್ಯ ವಸ್ತು ಯಾವುದೇ ಇರಲಿ, ಅದರ ಹಿಂದೆ ನಿಸರ್ಗವಿರುತ್ತದೆ ಮತ್ತು ಜಗತ್ತು ಇರುತ್ತದೆಯೆಂಬುದನ್ನು ಮರೆತು ಬರೆದರೆ ಅಂಥ ಸಾಹಿತ್ಯಕ್ಕೆ ಭವಿಷ್ಯವಿರುವುದಿಲ್ಲ. ಕವಿತೆಯಲ್ಲಿ ಉತ್ತಮ ಕವಿತೆ, ಕೆಟ್ಟ ಕವಿತೆ ಎಂಬುದಿರುವುದಿಲ್ಲ, ಅದು ಕವಿತೆ ಹೌದೋ ಅಲ್ಲವೋ? ಎಂಬುದಷ್ಟೇ ಗಣನೆಗೆ ಬರುತ್ತದೆ. ಅದು ಹೌದಾದರೆ ಉತ್ತಮವಾಗಿಯೇ ಇರುತ್ತದೆ. ಯಾವುದಕ್ಕೂ ಕಮಿಟೆಡ್ ಆಗಿರದೆ ಸ್ವತಂತ್ರವಾಗಿರುವುದು ಉತ್ತಮ ಕವಿತೆಯ ಲಕ್ಷಣ. ಕವಿಯಾದವನು ಲೌಕಿಕ ಆಕರ್ಷಣೆಯಿಂದ ತನ್ನನ್ನು ಬಿಡಿಸಿಕೊಂಡು, ಸಹೃದಯ(ಓದುಗ)ನನ್ನೂ ಬಿಡಿಸಿ, ತನ್ನ ರಚನೆಯ ಕಡೆಗೆ ಸೆಳೆಯುತ್ತಾನಲ್ಲ ಅದೇ ಅವನ ಹೆಗ್ಗಳಿಕೆ. ಈ ಹಿನ್ನೆಲೆಯಲ್ಲಿ ಶ್ರೀ ಉಮೇಶ ಮುನವಳ್ಳಿ ಅವರ ‘ಕಾನನದ ಸುಮ’ ಕವನ ಸಂಕಲನವನ್ನು ಅವಲೋಕಿಸಿದಾಗ ಬಹಳ ಸಂತೋಷವಾಯ್ತು. ಪ್ರಾಥಃಸ್ಮರಣೀಯರಾದ ಹೊಸಗನ್ನಡ ಸಾಹಿತ್ಯ ಸಂಭೂತರೆನಿಸಿದ ಶ್ರೀ ಬಿ. ಎಂ. ಶ್ರೀ ಅವರು ಇಂಗ್ಲೀಷ ಪ್ರಾಧ್ಯಾಪಕರಾಗಿದ್ದು, ಕನ್ನಡ ಸಾಹಿತಿಗಳಾಗಿದ್ದರು. ಎರಡೂ ಭಾಷೆಗಳೂ ಅವರಿಗೆ ಇಷ್ಟ. “ಇವಳ ಸೊಬಗನವಳು ತೊಟ್ಟು ನೋಡಬಯಸಿದೆ; ಅವಳ ತೊಡಿಗೆ ಇವಳಿಗಿಟ್ಟು ಹಾಡಬಯಸಿದೆ” ಎಂದು ಎದೆದುಂಬಿ ಹಾಡಿದವರು. ಅವರು ಒಂದೆಡೆ “ನಾನು ಇಂಗ್ಲೀಷನ್ನೇನು ಕಡಿಮೆ ಪ್ರೀತಿಸುವುದಿಲ್ಲ; ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೇನೆ” ಎಂದು ಉದ್ಗಾರ ತೆಗೆದವರು. ಇದನ್ನು ಯಾಕೆ ಹೇಳಿದೆನೆಂದರೆ ಶ್ರೀ ಮುನವಳ್ಳಿಯವರ ಮಾತೃಭಾಷೆ ಕನ್ನಡ ಮತ್ತು ಅಧ್ಯಯನದ ಭಾಷೆ ಇಂಗ್ಲಿಷ. ಇವರಿಗೂ ಆ ತಾಕಲಾಟ ಅನುಭವಕ್ಕೆ ಬಂದಿರಲು ಸಾಕು. ಶ್ರೀ ಮುನವಳ್ಳಿಯವರು ‘ಬಿ. ಎಂ. ಶ್ರೀ’ ಯವರು ಬಳಸಿದ ‘ಸೊಬಗು’ ಮತ್ತು ‘ತೊಡಿಗೆ’ ಪದಗಳನ್ನು ಪ್ರತಿಮೆಯಾಗಿ ಅರಿತು ಬರೆಯಲೆಂದು ಮನವಿ.[2:20 pm, 19/06/2020] UMESH MUNAVALLY: ‘ಕಾನನದ ಸುಮ’ ಕವನ ಸಂಕಲನಕ್ಕೆ ಕವಿಯ ಮಡದಿಯೇ ಮುನ್ನುಡಿ ಬರೆದುದು ಸಾಹಿತ್ಯ ಕ್ಷೇತ್ರಕ್ಕೆ ಹೊಸತು. ಅವರು ಮುನ್ನುಡಿಗೆ ಕೊಟ್ಟ ಶೀರ್ಷಿಕೆ ; “ನಿನ್ನ ಕವಿತೆಗೆ ನಾನೇ ಮುನ್ನುಡಿ” ಎಂಬುದು ಒಂದು ಅಧ್ಭುತ ಪ್ರತಿಮೆಯಾಗಿದೆ! ಶ್ರೀ ಮುನವಳ್ಳಿಯವರು ರಚಿಸಿರುವ, ರಚಿಸಲಿರುವ ಎಲ್ಲ ಸಾಹಿತ್ಯಕ್ಕೂ ಅವರೇ ಪ್ರತಿಮೆ ಮತ್ತು ಮತ್ತು ಪ್ರತೀಕವೆಂದರೆ ತಪ್ಪಾಗಲಾರದು. ಈ ಸಂಕಲನದ ‘ಋತು’ ಕವನ ಪ್ರತಿಮೆಗಳ ಸರಮಾಲೆ! ‘ನಿನ್ನ ಹಾರೈಕೆ’ ಯಲ್ಲಿ ಬಳಸಿದ ‘ಇತಿಹಾಸದ ಮಸಣ’ ಸುಂದರ ಪ್ರತೀಕ. ಮನುಷ್ಯನ ಬಾಳಿಗೆ ನಂಬಿಕೆ ಬಹಳ ಮುಖ್ಯ, ಇತರರನ್ನು ನಂಬುವ ಮೊದಲು ತನ್ನನ್ನು ನಂಬಬೇಕು, ನಂಬಿಕೆಯು ಬಾಳಿಗೊಂದು ಭರವಸೆ. ಈ ಮಾತಿಗೆ ಪ್ರತೀಕದಂತಿವೆ “ನನಗೂ ಒಬ್ಬ ಗೆಳೆಯ ಬೇಕು”, “ಬಾಳ ಕವಿತೆ”, ಮತ್ತು “ಸ್ಪಟಿಕದಂತೆ ಸ್ಪಷ್ಟ” ಕವಿತೆಗಳು. ಶ್ರಂಗಾರಭರಿತ ರಸಭರಿತ ಕಾವ್ಯದಂತಿದೆ “ಹೆಣ್ಣು” ಕವಿತೆ. ಕವಿತೆ, ಪ್ರಾಮಾಣಿಕ ಸಂವೇದನೆಯನ್ನು ಹೊರಹಾಕುವ ಒಂದು ಸೃಜನಶೀಲ ಕ್ರಿಯೆ. ಮೊಗ್ಗೊಂದು ಅರಳಿ ಹೂವಾಗಿ ಚಲುವನ್ನೂ ಸುಗಂಧವನ್ನೂ ಹೊರಸೂಸುವಂತೆ. ಸಿಂಪಿಗ ಬಟ್ಟೆಯನ್ನು ಕತ್ತರಿಸುವ ಪೂರ್ವದಲ್ಲಿ ತನಗೆ ಸಮಾಧಾನ ಆಗುವವರೆಗೆ ಅಳತೆ ತೆಗೆದುಕೊಳ್ಳುತ್ತಾನೆ. ಹಾಗೆಯೇ ಕವನ ರಚನೆಯ ಪೂರ್ವದಲ್ಲಿ ಕವಿ ಹಲವು ದಿಸೆಯಲ್ಲಿ ಯೋಚಿಸಬೇಕು. ಈ ಸಂಕಲನದ ಕೆಲವು ವಾಚ್ಯಾರ್ಥದ ಮತ್ತು ಉಪದೇಶಾತ್ಮಕ ಕವನಗಳನ್ನು ಬಿಟ್ಟರೆ ಉಳಿದೆಲ್ಲ ಕವನಗಳು ಉತ್ತಮವಾಗಿವೆ. ಓದುಗನನ್ನು ಚಿಂತನೆಗೆ ತೊಡಿಸುತ್ತವೆ. ಪ್ರಕೃತಿಯ ಒಮ್ಮೆ ಬನಶಂಕರಿಯಾದರೆ ಪ್ರಸಂಗ ಬಂದರೆ ರಣಭಯಂಕರೀಯೂ ಆಗುತ್ತಾಳೆ. ಹೊಲದಲ್ಲಿ ಬೆಳೆಯ ಜೊತೆ ಕಳೆಯೂ ಬೆಳೆಯುತ್ತದೆ. ರೈತ ಕಳೆ ತೆಗೆದು ಬೆಳೆ ನಳನಳಿಸುವಂತೆ ಮಾಡುತ್ತಾನೆ. ಹಾಗೆಯೇ ಸಮಾಜದಲ್ಲಿ ಒಳ್ಳೆಯದರ ನಡುವೆ ಕೆಟ್ಟದ್ದೂ ಇರುತ್ತದೆ, ಕವಿಯಾದವನು ಅದನ್ನು ಎದುರಿಸಬೇಕು. ಮನ ಮಿಡಿದಾಗ ಧ್ವನಿಯ ಅಲೆಗಳೇ ಕವನಗಳಾಗಿ ಮೂಡಿಬರುತ್ತವೆ.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಬಾಗಿಲು ತೆರೆಯೇ ಸೇಸಮ್ಮ ಬಾಗಿಲು ತೆರೆಯೇ ಸೇಸಮ್ಮವೈಚಾರಿಕ ಲಲಿತ ಪ್ರಬಂಧಗಳುಲೇಖಕರು- ಶರತ್ ಭಟ್ ಸೇರಾಜೆಅಂಕಿತ ಪುಸ್ತಕ ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ. ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ. ಗುರುತ್ವದ ಅಲೆ ಕುರಿತು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ವಿವರಿಸಬಹುದು ಎಂದು ಸೇರಾಜೆ ತೋರಿಸಿಕೊಟ್ಟಿದ್ದಾರೆ. ಜೊತೆಗೆ ಪಂಚಿಂಗ್ ಡೈಲಾಗ್ಸ್ ಇವೆ. ಇವು ನಮ್ಮಲ್ಲಿ ನಗುವನ್ನು ಉಕ್ಕಿಸುತ್ತವೆ. ಅವರು ಗೋಪಾಲಕೃಷ್ಣ ಅಡಿಗರ ಯಾವ ಮೋಹನ ಮುರಲಿ ಕರೆಯಿತು ಕವಿತೆಯ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಂತೆ ಚೆಂದವಾಗಿ ವರ್ಣಿಸಿದ್ದಾರೆ.ಬಿಎಂಶ್ರೀಯಿಂದ ಬರ್ನ್ಸ್ ಎಂಬ ಕವಿಯವರೆಗೆ ಉಲ್ಲೇಖ ಮಾಡಿದ್ದಾರೆ. ಥಟ್ ಅಂತ ರಾಷ್ಟ್ರಗಳ ಸಂಖ್ಯೆ ಬಗ್ಗೆ ಶರತ್ ಹೇಳಿಬಿಡುತ್ತಾರೆ.ದೇಶಗಳನ್ನೂ, ಅವುಗಳ ಗುಟ್ಟುಗಳನ್ನು, ಜೋಕುಗಳನ್ನು ಕ್ರ್ಯಾಕ್ ಮಾಡುತ್ತಾ ಬೆಡ್ ರೂಂವರೆಗೂ ಬರುತ್ತಾರೆ. ಅರ್ಥವೆಂಬ ಊಸರವಳ್ಳಿಯಲ್ಲಿ ಶಬ್ದದ ಅನುಕರಣೆ ಮಾಡಿ ಬದಲಾದ ಅರ್ಥಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ರೀಸಸ್ ( ಬಿಡುವು ) ಶಬ್ದ ಮೂತ್ರ ವಿಸರ್ಜನೆಗೆ ಬಳಕೆಯಾಗಿದ್ದು. ಆಯಿಲ್, ಸಕತ್, ಪ್ರವೀಣ ಮುಂತಾದ ಶಬ್ದಗಳ ಬಗ್ಗೆ ಇಲ್ಲಿ ಭಟ್ಟರು ಹೇಳಿದ್ದಾರೆ. ಬಾಗಿಲು ತೆರೆಯೇ ಸೇಸಮ್ಮ – ನಾವು ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಬಳಸುವ ಪಾಸ್ವರ್ಡ್ ಕುರಿತು ಮಾಹಿತಿ ನೀಡುವ ಮತ್ತು ಹ್ಯಾಕರ್ ಗಳ ವಿವರ ನೀಡುವ ಪ್ರಬಂಧ.ಇದು ನಿಮಗೆ ಗೂಗಲ್ ಮಾಡಿದರೂ ಸಿಗಬಹುದು ಆದರೆ ಇಲ್ಲಿ ಅವರು ವಿವರಿಸಿದರ ಶೈಲಿ ಇದೆಯಲ್ಲ ಇದು ವಿಭಿನ್ನ ಮತ್ತು ಸರಳವಾಗಿದೆ. ಮರ್ಯಾದೆ ತೆಗೆಯುವ ಕಲೆಯನ್ನು ಓದುತ್ತಾ ನೋಡಬಹುದು ಮತ್ತು ಬೆಚ್ಚಿಬೀಳಬಹುದು.ಇಂಗ್ಲಿಷ್ ಮಾಧ್ಯಮದ ಕುರಿತು ಅವರ ನಿಲುವನ್ನು ಒಪ್ಪದಿರುವುದು ಕಷ್ಟ. ಇಂಗ್ಲೀಷ್ ಭಾಷೆ ದೋಸೆಯಾದರೆ ಮಾತೃಭಾಷೆ ಕನ್ನಡ ಊಟ ಎಂಬ ಸೋದಾಹರಣೆ ಚೆನ್ನಾಗಿದೆ. ಲೆಕ್ಕ ಹಾಕಿ ಸುಳ್ಳು ಹೇಳಿ – ಈ ಕ್ಷಣದ ಕಟು ವಾಸ್ತವವನ್ನು ಅನಾವರಣ ಮಾಡುವ ಲೇಖನ.ಸಿನೆಮಾ ಮತ್ತು ಕಳ್ಳತನ ಕುರಿತು ಅವರ ವಿಚಾರ, ನಮ್ಮ ತಲೆಗೆ ಕೈ ಹಾಕಿ ಹೂಂಗುಟ್ಟುವಂತೆ ಮಾಡುತ್ತದೆ.ವಿಮರ್ಶಕರಿಗೆ ಶಾಲಿನಲ್ಲಿ ಕಲ್ಲು ಹಾಕಿ ತಟ್ಟಿದ್ದಾರೆ. ಕಾರಂತಜ್ಜನ ಕಥೆಗಳು – ಇದರಲ್ಲಿ ಕಾರಂತರ ಕುರಿತು ಅಪರೂಪದ ವಿಷಯಗಳಿವೆ.ಬಲಿ ಚಕ್ರವರ್ತಿಯ ತ್ರಿವಿಕ್ರಮ ದಲ್ಲಿ ಮಿಖಾಯಿಲ್ ತಾಲ್ ಎಂಬ ಚೆಸ್ ಆಟಗಾರ ಬರುತ್ತಾನೆ.ಅದನ್ನು ಓದುವುದೇ ಒಂದು ಪುಳಕ. ನಮ್ಮ ತಲೆಯೂ ನಮ್ಮ ಹರೆಟೆಯೂ; ವೈಚಾರಿಕ ಲಲಿತ ಪ್ರಬಂಧ ಬರೆಯಲು ಆಸಕ್ತಿ ಇರುವವರು ಅಧ್ಯಯನ ಮಾಡುವಂತಹ ಒಂದು ಲೇಖನ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಒಮ್ಮೆ ಓದಲೇಬೇಕಾದ ಲೇಖನಗಳ ಗುಚ್ಛ ಶರತರ ಈ ಕೃತಿ ಎಂದು ಬೇಷರತ್ತಾಗಿ ಹೇಳುವೆ.******* ಡಾ.ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ: ಫೂ ಮತ್ತು ಇತರ ಕಥೆಗಳು ಲೇಖಕರು: ಮಂಜುನಾಯಕ ಚಳ್ಳೂರು ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರಾದ ಮಂಜುನಾಯಕ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಕಲಿತು ಕೆಲಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಕಲರ್ಸ್ ಸೂಪರ್ ಕನ್ನಡ ವಾಹಿನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸೃಜನಶೀಲ ಲೇಖಕರಾದ ಮಂಜುನಾಯಕ ಅವರ ಮೊದಲ ಕಥಾ ಸಂಕಲನ ಇದು. ಇಲ್ಲಿನ ಫೂ, ಖತಲ್ ರಾತ್ರಿ ಹಾಗೂ ತೇರು ಸಾಗಿತಮ್ಮ ನೋಡಿರೆ ಎಂಬ ಮೂರು ಕಥೆಗಳಿಗೆ ೨೦೧೮ರ ಟೊಟೊ ಯುವ ಪುರಸ್ಕಾರ ಲಭಿಸಿದೆ. ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿರುವ ಈ ಕಥಾ ಸಂಕಲನದಲ್ಲಿ ಒಟ್ಟು ೭ ಕಥೆಗಳಿವೆ. ವೈವಿಧ್ಯಮಯ ಕಥಾವಸ್ತುಗಳು, ಪಾತ್ರಗಳ ಮೂಲಕ ಇಲ್ಲಿನ ಕಥೆಗಳು ಓದುಗರನ್ನು ಸೆಳೆದುಬಿಡುತ್ತವೆ. ಈ ಪುಸ್ತವನ್ನ ಓದಿ ಮುಗಿಸುವಾಗ ಖುಷಿಯೊಂದು ಮನಸ್ಸನ್ನು ಆವರಿಸಿಕೊಂಡಿತ್ತು. ಈ ಕಥೆಗಳು ನಮ್ಮನ್ನು ಕೂಡ ಬಿಸಿಲ ಸೀಮೆಗೆ ಕರೆದೊಯ್ಯುತ್ತವೆ. ಅಲ್ಲಿನ ಜನರ ಬದುಕನ್ನು ಪರಿಚಯಿಸುತ್ತದೆ. ಇಲ್ಲಿನ ಪಾತ್ರಗಳ ಸಂಭಾಷಣೆಯಲ್ಲಿ ಉತ್ತರ ಕನ್ನಡ ಭಾಷೆಯನ್ನು ಬಳಸಲಾಗಿದೆ. ಮೊದಲ ಕಥೆ ‘ಫೂ’ ಅಲ್ಲಿ ಕುಟುಂಬದೊಳಗೆ ಹೆಣ್ಣಿನ ಮೇಲೆ ನಡೆಯುವ ಹಿಂಸೆಯನ್ನು ಪದರ ಪದರವಾಗಿ ತಿಳಿಸಲಾಗಿದೆ. ಚಿಕ್ಕ ಹುಡುಗನ ನಿರೂಪಣೆಯಂತು ಮನಸನ್ನು ತಟ್ಟುತ್ತದೆ ಅವಿವಾಹಿತಳಾದ ಜಯತ್ತೆಯ ಪಾತ್ರವಂತು ಮನದಲ್ಲಿ ಉಳಿದುಬಿಡುತ್ತದೆ. ಎಲ್ಲ ಕಷ್ಟಗಳನ್ನೂ ಅಣ್ಣ ಅತ್ತಿಗೆಯರ ಚುಚ್ಚುಮಾತುಗಳನ್ನು ಸಹಿಸಿಕೊಂಡೇ ಬರುವ ಜಯತ್ತೆ, ಪುಟ್ಟ ಬಾಲಕನೊಡನೆ ಆಕೆಯ ಒಡನಾಟ ತಾಯಿ ಮಗುವಿನಂತಿರುತ್ತದೆ. ‘ನನ ಹೊಟ್ಯಾಗ್ ಹುಟ್ಟೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ” ಎಂಬ ಮಾತಿನಲ್ಲಿ ಅಳಿಯನ ಮೇಲಿನ ಮಮತೆ ವಾತ್ಸಲ್ಯಗಳನ್ನು ಗಮನಿಸಬಹುದು. ಜಯತ್ತೆ ಎಂದರೆ ತನಗೆ ಜೀವ ಎಂದೂ ಆಕೆಯ ಬಾಯಲ್ಲಿ ಕಾಮನಬಿಲ್ಲಿತ್ತು ಎಂದು ಹೇಳುವ ಹುಡುಗ, ಅತ್ತೆ ಬಾಯಲ್ಲಿ ನೀರು ತುಂಬಿಕೊಂಡು ಬಿಸಿಲಿಗೆ ಮುಖ ಮಾಡಿ ಫೂ ಮಾಡುವಾಗಲೆಲ್ಲ ಮೂಡಿ ಬರುವ ಕಾಮನಬಿಲ್ಲನ್ನು ಕಂಡು ವಿಸ್ಮಯಗೊಳ್ಳುವ ಮುಗ್ಧ ಹುಡುಗ ತುಂಬ ಇಷ್ಟವಾಗಿಬಿಡುತ್ತಾನೆ. ಇಲ್ಲಿನ ಜಯತ್ತೆಯ ಪಾತ್ರವು ವೈದೇಹಿ ಅವರ ‘ಜಾತ್ರೆ’ ಸ್ಮೃತಿ ಕಥನದಲ್ಲಿ ಬರುವ ‘ಮಂಜತ್ತೆ’ಯ ಪಾತ್ರವನ್ನು ನೆನಪಿಸುತ್ತದೆ. ‘ಖತಲ್ ರಾತ್ರಿ’ ಕಥೆಯಲ್ಲಿ ಮೊಹರಂ ದೇವರುಗಳ ಕೊನೆಯ ರಾತ್ರಿಯೇ ಖತಲ್ ರಾತ್ರಿ. ಜಾತಿ ಧರ್ಮಗಳನ್ನು ಮರೆತಯ ಎಲ್ಲರೂ ಜೊತೆಗೂಡಿ ಆಚರಿಸುವ ಹಬ್ಬದ ಸಂಭ್ರಮವಿದೆ. ಜೊತೆಗೇ ಮಕ್ಕಳಲ್ಲಿ ಅಗಲಿದ ಅಪ್ಪನ ನೆನಪುಗಳಿವೆ. ಸಂತೋಷದ ಮಧ್ಯೆಯೇ ನೋವಿನ ಎಳೆಯೊಂದು ಗೋಚರಿಸುತ್ತದೆ. ‘ತೇರು ಸಾಗಿತಮ್ಮ ನೋಡಿರೆ’ ಕಥೆಯಲ್ಲಿ ಶ್ರೀಶೈಲ ಎಂಬ ಹುಡುಗನ ಹೃದಯವಿದ್ರಾವಕ ಕಥೆಯಿದೆ. ಓದಲು ಬುದ್ಧಿವಂತನಾದ ಆತನಿಗೆ ಭಜನೆಯ ಮೇಲೆ ಅಪಾರ ಆಸಕ್ತಿ. ಶಾಲೆ ಬಿಟ್ಟ ಮೇಲೆ ಶರಣಪ್ಪನಿಂದ ಸಾಧ್ಯವಾದಷ್ಟೂ ಭಜನೆಗಳನ್ನು ಕಲಿತು ಹಾಡುತ್ತಿದ್ದ. ಶರಣಪ್ಪ ಹುಡುಗನಿಗೆ ಪ್ರೀತಿಯ ಕಕ್ಕಪ್ಪನಾಗಿದ್ದ. ಕಕ್ಕಪ್ಪನ ಸಾವು ಶ್ರೀಶೈಲನ ಬದುಕಿನ ಮೇಲೆ ಮಾಡಿದ ದಟ್ಟ ಪರಿಣಾಮಗಳನ್ನು ವಿವರಿಸಲಾಗಿದೆ. ಸಮಾಜದ ಕಣ್ಣಿಗೆ ಹುಚ್ಚನಂತೆ ಕಾಣುವ ಮಗನ ಬಗ್ಗೆ ತಾಯಿಯ ದುಃಖ ಸಂಕಟಗಳಿವೆ. ‘ವಜ್ರಮುನಿ’ ಕಥೆಯಲ್ಲಿ ಕೆಟ್ಟ ಚಟಕ್ಕೆ ಬಲಿಯಾಗಿ ಇದ್ದದ್ದನ್ನೆಲ್ಲ ಕಳಕೊಂಡು ಕೆಲಸಕ್ಕೂ ಹೋಗದೆ ತನ್ನ ಜವಾಬ್ದಾರಿಗಳ ಕಡೆ ಗಮನ ಹರಿಸದೆ ಮಕ್ಕಳೊಂದಿಗೆ ಆಡುತ್ತಾ, ಕಾಲ ಬದಲಾದರೂ ತನ್ನ ನೆನಪುಗಳಲ್ಲೇ ಮೈಮರೆತಿರುವ ಭಗವಂತ ಊರವರ ದೃಷ್ಟಿಯಲ್ಲಿ ವಜ್ರಮುನಿಯಾದ ಕಥೆ ಹೇಳುತ್ತಾರೆ. ‘ಕನಸಿನ ವಾಸನೆ’ ಕಥೆಯಲ್ಲಿ ಮಿರ್ಚಿ ರಂಗಮ್ಮನ ಪಾತ್ರ ಗಮನಾರ್ಹವಾಗಿದೆ. ಲಚುಮನಿಗೆ ತನ್ನ ತಪ್ಪಿನ ಅರಿವಾಗಿ ಮನ ಪರಿವರ್ತನೆಗೊಂಡು “ತಪ್ಪಾತಾ ನಮವ್ವಾ” ಎಂದು ರಂಗಮ್ಮನಲ್ಲಿ ಕ್ಷಮೆಯಾಚಿಸಿ ಅವಳ ಮಡಿಲಲ್ಲಿ ಮಗುವಾಗಿ ಮಲಗುವ ಚಿತ್ರಣ ಅಪ್ಯಾಯಮಾನವಾಗಿದೆ. ‘ಪಾತಿ’ ಕಥೆಯಲ್ಲಿ ಬಾಲ್ಯದಿಂದ ಹದಿಹರೆಯದವರೆಗೆ ಜೊತೆಗೆ ಆಡಿಬೆಳೆವ ಮಕ್ಕಳ ಸಂಭ್ರಮ ಓದುಗರನ್ನೂ ತಮ್ಮ ಬಾಲ್ಯವನ್ನು ನೆನಪಿಸುವಂತೆ ಮಾಡುತ್ತದೆ. ಮತ, ವರ್ಣ ಬೇಧಗಳಿಲ್ಲದೆ ಹುಟ್ಟಿ ಬೆಳೆವ ಸ್ನೇಹ. ಮುಗಿಯದ ಮಾತು, ನಿಸ್ವಾರ್ಥ ಪ್ರೀತಿ, ಪರಸ್ಪರ ರೇಗಿಸುವಿಕೆ ಜಗಳ, ಮುನಿಸು, ರಾಜಿ ಕೋಪಗಳು ಅವರ ಸ್ನೇಹದ ಸಂಬಂಧವನ್ನು ಗಟ್ಟಿಗೊಳಿಸುತ್ತಿತ್ತು. ಈ ಕಥೆ ಓದಿ ಮುಗಿಸಿದಾಗ ಫಾತಿಮಳಂಥ, ಆಕೆಯ ಗೆಳೆನಂಥ ಸ್ನೇಹಿತರು ಇರಬೇಕೆಂದು ಅನಿಸಿಬಿಡುತ್ತದೆ.‘ಮಿಂಚುಹುಳ’ದ ಬಗ್ಗೆ ಕಲ್ಪನೆಯಲ್ಲಿ ಮೂಡಿದ ಕಥೆಯನ್ನೂ ಹೇಳುತ್ತಾರೆ. ಇದರಲ್ಲಿ ಲೇಖಕರ ಕಲ್ಪನೆಯಿಂದಲೇ ಕಥೆ ಕಟ್ಟುವ ರೀತಿಯನ್ನು ಗಮನಿಸಬಹುದು. ಇವರ ಕಥೆಯಲ್ಲಿ ಬಡತನದ ಬದುಕು, ಮುಗ್ಧ ಜನರ ಆಲೋಚನೆಗಳು, ಧಾರ್ಮಿಕ ನಂಬಿಕೆಗಳು, ಮಕ್ಕಳ ಮನದಲ್ಲಿ ಮೂಡುವ ಅದ್ಭುತ ಕಲ್ಪನೆಗಳು, ಹದಿಹರೆಯದವರ ಸಂಭ್ರಮ, ಆತ್ಮೀಯರ ಅಗಲುವಿಕೆಯಿಂದಾಗುವ ಪರಿಣಾಮಗಳು , ಎದುರಾಗುವ ಕಷ್ಟಗಳು, ಕುಟುಂಬದೊಳಗೆ ಹೆಣ್ಣಿಗಾಗುವ ಹಿಂಸೆ ಮನುಷ್ಯ ಸಂಬಂಧಗಳು, ಭಾವನಾತ್ಮಕ ವಿಚಾರಗಳನ್ನು ಎಲ್ಲವನ್ನು ಸಮರ್ಥವಾಗಿ ಕಥೆಗಳಲ್ಲಿ ಕಟ್ಟಿಕೊಡುತ್ತಾರೆ. ಇವರ ಬರಹ ತುಂಬ ಆಪ್ತವಾಗಿದ್ದು ನಿರೂಪಣೆಯ ಶೈಲಿಯೂ ಭಿನ್ನವಾಗಿದೆ. ಓದುಗರನ್ನೂ ತಮ್ಮ ಲೋಕಕ್ಕೆ ಕೊಂಡೊಯ್ಯುವ, ಓದಿ ಮುಗಿಯುವವರೆಗೆ ಅಲ್ಲೇ ಹಿಡಿದಿಡುವ ಶಕ್ತಿ ಈ ಕಥೆಗಳಿಗಿವೆ. ಇವರ ಬರವಣಿಗೆ ನಿರಂತರವಾಗಿ ಸಾಗುತಿರಲಿ, ಇನ್ನಷ್ಟು ಕಥೆಗಳು ಓದುಗರನ್ನು ತಲುಪಲಿ. ಸಾಹಿತ್ಯ ಲೋಕಕ್ಕೆ ಇಂಥ ಉತ್ತಮ ಕೃತಿಗಳನ್ನು ನೀಡುವಂತಾಗಲಿ. ****** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ವಿಮುಕ್ತೆ ಪುಸ್ತಕ: ವಿಮುಕ್ತೆ ಲೇಖಕರು: ಓಲ್ಗಾ ಅನುವಾದಕರು: ಅಜಯ್ ವರ್ಮ ಅಲ್ಲೂರಿ      ‘ವಿಮುಕ್ತ’ ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ ಓಲ್ಗಾ ಅವರ ಬಹುಚರ್ಚಿತ ಕೃತಿಗಳಲ್ಲಿ ಒಂದು. ಓಲ್ಗಾ ಎಂಬ ಹೆಸರಿನಿಂದಲೇ ದೇಶದಾದ್ಯಂತ ಗುರುತಿಸಿಕೊಂಡಿರುವ ಪೋಪೂರಿ ಲಲಿತ ಕುಮಾರಿಯವರು ಮೂಲತಃ ಆಂಧ್ರಪ್ರದೇಶದ ಗುಂಟೂರಿನವರು. ತೆಲುಗಿನ ಖ್ಯಾತ ಸ್ತ್ರೀವಾದಿ ಲೇಖಕಿ, ಚಿಂತಕಿ, ಅನುವಾದಕಿ, ಹಾಗೂ ಮಹಿಳಾ ಹಕ್ಕುಗಳ ಹೋರಾಟಗರ್ತಿಯಾಗಿರುವ ಇವರು ಪ್ರಸ್ತುತ ತೆಲುಂಗಾಣದ ಸಿಕಂದ್ರಾಬಾದಿನಲ್ಲಿ ನೆಲೆಸಿದ್ದಾರೆ. ಸ್ವೇಚ್ಛ, ನೀಲಿ ಮೇಘಾಲು, ರಾಜಕೀಯ ಕಥಲು, ಮಾಕು ಗೋಡಲು ಲೇವು, ಪ್ರಯೋಗಂ, ವಿಮುಕ್ತ ಇವು ಇವರ ಬಹುಚರ್ಚಿತ ಕೃತಿಗಳು. ಈ ವಿಮುಕ್ತ ಕೃತಿ ಹಲವು ಭಾಷೆಗಳಲ್ಲಿ ಅನುವಾದಗೊಂಡಿವೆ.  ಡಾ. ಸುಪ್ರಿಯ ಎಂ. ಅವರು ಇದನ್ನು ಮಲಯಾಳಕ್ಕೆ ಅನುವಾದ ಮಾಡಿದ್ದಾರೆ.         ಅಜಯ್ ವರ್ಮಾ ಅಲ್ಲೂರಿ ಅವರು ಈ ಕಥಾ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಿಜ್ಞಾನದ ವಿದ್ಯಾರ್ಥಿಯಾದ ಅಜಯ್ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು. ಕ್ರೈಸ್ಟ್ ಕಾಲೇಜಿನ ಬೇಂದ್ರೆ ಕಾವ್ಯ ಸ್ಪರ್ಧೆ, ಅ ನ ಕೃ ಕಥಾ ಸ್ಪರ್ಧೆಗಳಲ್ಲಿ ಬಹುಮಾನಿತರು. ಗಗನ ಸಿಂಧು (ಕವಿತೆಗಳು), ಡಯಾನ ಮರ (ಅಲೆಹಾಂದ್ರಾ ಪಿಜಾರ್ನಿಕ್ ಸ್ಪಾನಿಶ್ ಕವಿತೆಗಳ ಕನ್ನಡಾನುವಾದ), ಕಲಲ ಇನ್ನೀಟ ಪಾಟ ( ವಿಭಾ ಅವರ ಕವಿತೆಗಳ ತೆಲುಗು ಅನುವಾದ) ಅವರ ಪ್ರಕಟಿತ ಕೃತಿಗಳು. ಕಳೆದ ಎರಡು ಮೂರು ವರ್ಷಗಳಿಂದೀಚೆ ಅನುವಾದ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ  ಎಂ.ಎಸ್ಸಿ (ಭೌತಶಾಸ್ತ್ರ) ಓದುತ್ತಿದ್ದಾರೆ.            ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಈ ಕೃತಿಯಲ್ಲಿ ಒಟ್ಟು ೬ ಕಥೆಗಳಿವೆ. ವಾಲ್ಮೀಕಿ ರಾಮಾಯಣದಲ್ಲಿ ಬರುವ ಶೂರ್ಪನಖಿ, ಅಹಲ್ಯೆ, ರೇಣುಕ, ಮಂಡೋದರಿ ಊರ್ಮಿಳೆಯ ಪಾತ್ರಗಳು ಒಮ್ಮೆ ಮಿಂಚಿ ಮರೆಯಾಗುವುದಾದರೂ ಹಲವು ಕಾರಣಗಳಿಂದ ಓದುಗರ ಮನದಾಳದಲ್ಲಿ ಬೇರೂರಿ ನಿಂತಿವೆ. ರಾಮಾಯಣದಲ್ಲಿ ಅಮುಖ್ಯವಾಗಿ ಪರಿಗಣಿಸಲಾದ ಈ ಪಾತ್ರಗಳನ್ನು  ಓಲ್ಗಾ ಅವರು ತಮ್ಮ ಕಥೆಗಳಲ್ಲಿ ಕೇಂದ್ರ ಪಾತ್ರಗಳಾಗಿ ಆಯ್ದುಕೊಂಡು ಅವುಗಳಿಗೊಂದು ಅಸ್ಥಿತ್ವವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಈ ಪಾತ್ರಗಳೆಲ್ಲವೂ ಕಥಾ ನಾಯಕಿ ಸೀತೆಯೊಡನೆ ಬೇರೆ ಬೇರೆ ಕಾಲಘಟ್ಟಗಳಲ್ಲಿ ಸಂವಾದಿಸುತ್ತವೆ.  ಹಾಗೆ ಸೀತೆಯೊಂದಿಗಿನ ಭೇಟಿಯಲ್ಲಿ ಆ ಪಾತ್ರಗಳು ತಮ್ಮ ಅಂತರಂಗವನ್ನು ತೆರೆದು ತೋರಿಸುತ್ತವೆ.  ಅವುಗಳಿಂದ ಸೀತೆ ಹಲವು ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಾಳೆ. ಆ ಹೊಸ ಅರಿವಿನ ಬೆಳಕು ಕೊನೆಗಾಲದಲ್ಲಿ ಆಕೆಯನ್ನು ಮುನ್ನಡೆಸುತ್ತದೆ. ರಾಮನಿಂದ ಪರಿತ್ಯಕ್ತಳಾದ ಸೀತೆ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳ ಬೆಳವಣಿಗೆಯನ್ನು ಕಾಣುತ್ತಾ ಅವರ ಸಂಭ್ರಮದಲ್ಲಿ ತನ್ನ ಖುಷಿಯನ್ನು ಅರಸುತ್ತಿರುತ್ತಾಳೆ. ಅದೇ ಸಂದರ್ಭದಲ್ಲಿ ಈ ಪಾತ್ರಗಳನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಈ ಕಥೆಗಳ ಶೀರ್ಷಿಕೆಗಳೂ ಅರ್ಥಪೂರ್ಣವಾಗಿದ್ದು ಆಕರ್ಷಣೀಯವಾಗಿದೆ.          ಮೊದಲ ‘ಸಮಾಗಮ’ ಕಥೆಯಲ್ಲಿ, ಲವಕುಶರ ನಿಮಿತ್ತ ಸೀತೆ ಮತ್ತು ಶೂರ್ಪನಖಿಯರ ಅನಿರೀಕ್ಷಿತ ಭೇಟಿ ನಡೆಯುತ್ತದೆ. ತನ್ನ ಸೌಂದರ್ಯವನ್ನು ಕಳಕೊಂಡು ಇತರರ ಅವಮಾನ, ಪರಿಹಾಸ್ಯ, ನಿಂದನೆಗೆ ಗುರಿಯಾದ ಶೂರ್ಪನಖಿ ನೋವುಗಳನ್ನು ಮರೆಯಲು ಪ್ರಕೃತಿಯನ್ನು ಪ್ರೀತಿಸತೊಡಗುತ್ತಾ ತನ್ನೊಳಗಲ್ಲೂ ಸೌಂದರ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತಾಳೆ. ನಿಸರ್ಗದ ಸೌಂದರ್ದಲ್ಲಿ ಖುಷಿಯನ್ನು ಅರಸುತ್ತಾ, ಹೂದೋಟವನ್ನು ಬೆಳೆಸುವ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳುತ್ತಾಳೆ. ಇಲ್ಲಿ ಬಾಹ್ಯ ಸೌಂದರ್ಯಕ್ಕಿಂತಲೂ ಅಂತರಂಗದ ಸೌಂದರ್ಯವೇ ಮಿಗಿಲೆಂದು ಲೇಖಕಿ ಪ್ರತಿಪಾದಿಸುತ್ತಾರೆ.   ‘ಮೃಣ್ಮಯನಾದ’ ಕಥೆಯಲ್ಲಿ ತನ್ನದಲ್ಲದ ತಪ್ಪಿಗೆ ಗಂಡನಿಂದಲೇ ಶಾಪಕ್ಕೊಳಗಾಗಿ ಕಲ್ಲಾಗಿ ಯುಗಗಳ ಕಾಲ ರಾಮನ ಪಾದ ಸ್ಪರ್ಶಕ್ಕಾಗಿ ಕಾದು ಶಾಪ ವಿಮೋಚನೆ ಪಡೆದ ಅಹಲ್ಯೆಯನ್ನು ಕಾಣಬಹುದು. ವನವಾಸದ ಕಾಲದಲ್ಲಿ ಸೀತೆಯು ಅಹಲ್ಯೆಯನ್ನು ಭೇಟಿಯಾಗುತ್ತಾಳೆ.  ತನ್ನ ಜೀವನಾನುಭವದಿಂದ ತಿಳಿದುಕೊಂಡ ವಿಚರಾಗಳನ್ನು ಅಹಲ್ಯೆ ಹಂಚಿಕೊಳ್ಳುವಾಗ “ವಿಚಾರಣೆ ಮಾಡುವುದೆಂದರೇನು ಸೀತಾ?  ಅಪನಂಬಿಕೆ ತಾನೆ! ಅದಕಿಂತಲೂ ಯಾವುದೋ ಒಂದು ನಂಬಿಕೆಯೇ ಲೇಸಲ್ಲವೇ? ಎಂಬ ಮಾತು ಆ ಕ್ಷಣಕ್ಕೆ ಅರ್ಥವಾಗದಿದ್ದರೂ ಮುಂದೊಂದು ದಿನ ಸೀತೆಗೆ ಅಗ್ನಿಪರೀಕ್ಷೆ ಸಂದರ್ಭದಲ್ಲಿ ಮನವರಿಕೆಯಾಗುತ್ತದೆ. ಮುಂದೆ ಬಸುರಿಯಾಗಿದ್ದಾಗ ಮತ್ತೊಮ್ಮೆ ಅಹಲ್ಯೆಯೊಡನೆ ಮಾತನಾಡುತ್ತಾಳೆ. ಆಗ ಸೀತೆ ಆಕೆಯ ಮಾತುಗಳಿಂದ ತನ್ನನ್ನು ತಾನು ಅರಿತುಕೊಳ್ಳುತ್ತಾಳೆ. ಅದನ್ನೇ ಮುಂದೊಂದು ದಿನ ರಾಮನಿಗೂ ಹೇಳುತ್ತಾಳೆ. “ನಾನು ಭೂಪುತ್ರಿ ರಾಮಾ, ನಾನು ಯಾರೆಂದು ಈಗ ಅರಿತುಕೊಂಡಿದ್ದೇನೆ. ಈ ಇಡೀ ಲೋಕವೆಲ್ಲ ನನ್ನದೇ. ಯಾವ ಕೊರತೆಯೂ ಇಲ್ಲ ನನಗೆ, ನಾನು ಭೂಪುತ್ರಿ” ಎಂದು ಹೇಳುತ್ತಾ ಮಕ್ಕಳನ್ನು ರಾಮನಿಗೊಪ್ಪಿಸಿ ಎಲ್ಲಾ ಬಂಧನಗಳಿಂದಲೂ ಮುಕ್ತಳಾಗಲು ಬಯಸುತ್ತಾಳೆ. ‘ಮರಳ ಮಡಕೆ’  ಕಥೆಯಲ್ಲಿ, ಒಬ್ಬ ಗಂಡಸನ್ನು ನೋಡಿ ಚಂಚಲಗೊಂಡದ್ದಕ್ಕೆ ಗಂಡನಾದೇಶದಂತೆ ಮಗನಿಂದ ಶಿಕ್ಷೆಗೊಳಗಾದ ರೇಣುಕೆಯದ್ದೇ ಪ್ರಧಾನ ಪಾತ್ರ. ಗಂಡ ಮಕ್ಕಳಿಂದ ದೂರವಾಗಿ ಏಕಾಗ್ರತೆಯಿಂದ ಶಿಲ್ಪಗಳನ್ನು ತಯಾರಿಸುತ್ತಾ ಆ ಕಲೆಯನ್ನು ಮತ್ತೊಬ್ಬರಿಗೆ ಕಲಿಸುತ್ತ ಹೊಸ ಬದುಕು ಕಟ್ಟಿಕೊಂಡ ರೇಣುಕೆ “ಗಂಡಂದಿರ ಕುರಿತು, ಮಕ್ಕಳ ಕುರಿತು ನನಗೆ ಗೊತ್ತಿದ್ದಷ್ಟು ಮತ್ತಾರಿಗೂ ಗೊತ್ತಿಲ್ಲ” ಎಂಬ ಅನುಭವಜನ್ಯವಾದ ಮಾತು ಸೀತೆಗೆ ಮೊದಲು ಅರ್ಥವಾಗದಿದ್ದರೂ ಮುಂದೆ ಪರಿಸ್ಥಿತಿಯೆ ಆಕೆಗದನ್ನು ಅರ್ಥಮಾಡಿಸುವುದು ವಿಪರ್ಯಾಸ. ‘ವಿಮುಕ್ತೆ’ ಕಥೆಯಲ್ಲಿ, “ಎಲ್ಲ ದುಃಖಗಳಿಗೂ ಮೂಲ ಕಾರಣ ಅಧಿಕಾರವೇ ಅಕ್ಕಾ” ಎಂದು ಹೇಳುವ ಊರ್ಮಿಳೆ ಯಾರ ಅಧಿಕಾರಕ್ಕೂ ಅಧೀನಳಾಗದೆ, ಅಧಿಕಾರದಿಂದ ಯಾರನ್ನೂ ಬಂಧಿಸಲು ಪ್ರಯತ್ನಿಸದೆ ಮುಕ್ತಳಾಗಲು ಬಯಸುತ್ತಾಳೆ. ಏಕಾಂತ ಮತ್ತು ಧ್ಯಾನದಲ್ಲೇ ತನ್ನ ನೆಮ್ಮದಿ, ಪ್ರೀತಿಯನ್ನು ಅರಸುತ್ತಾಳೆ. ಈ ಸಂದರ್ಭದಲ್ಲಿ ಊರ್ಮಿಳೆಯ ಬಗ್ಗೆ ಶೀಲಾ ಭಂಡಾರ್ಕರ್ ಅವರು ಬರೆದ  ‘ತಪ್ತ ಮೈಥಿಲಿ’ ಎಂಬ ಬರಹ ನೆನಪಾಗುತ್ತದೆ. ಅದರಲ್ಲೂ ಊರ್ಮಿಳೆಯ ಅಂತರಂಗದ ಶೋಧನೆಯಿದೆ. ‘ಅಶೋಕ’  ಕಥೆಯಲ್ಲಿ ಪತಿವ್ರತೆಯರ ಸಾಲಿನಲ್ಲಿ ಗುರುತಿಸಲ್ಪಟ್ಟ ಮಂಡೋದರಿಯ ವ್ಯಕ್ತಿತ್ವದ ಪರಿಚಯವಿದೆ. ಅಶೋಕವನವು ರಾವಣ ಮಂಡೋದರಿಗೆ ನೀಡಿದ ಒಲವಿನ ಉಡುಗೊರೆ. ಅಲ್ಲಿ ಮಂಡೋದರಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಾಳೆ. ಅದು ಆಕೆಯ ಧ್ಯಾನ ಮಂದಿರವೂ ಆಗಿರುತ್ತದೆ. ಅಲಂಕಾರಗಳನ್ನು ಮಾಡುವುದರಲ್ಲೇ ಜೀವನೋತ್ಸಾಹವನ್ನು ಕಾಣುವ ಮಂಡೋದರಿ ತನ್ನ ಆಚಾರ ವಿಚಾರ ಸಂಸ್ಕೃತಿಗಳನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುವುದನ್ನು ಕಾಣಬಹುದು. ಹಾಗೇ ರಾವಣ ತಪ್ಪು ಹಜ್ಜೆಗಳನ್ನಿಡುವಾಗಲೆಲ್ಲ ಆತನನ್ನು ಸದಾ ಎಚ್ಚರಿಸುವ  ಮಂಡೋದರಿ, ರಾವಣ ಸತ್ತಾಗ,  ಆರ್ಯ ಧರ್ಮದ ವಿಧವೆಯರಂತೆ ಬದುಕಲು ಒಪ್ಪದೆ ಸದಾ ಸರ್ವಾಲಂಕಾರಭೂಷಿತಳಾಗಿರಲು ಬಯಸುತ್ತಾಳೆ. “ಈ ಮಂಡೋದರಿ ಆರ್ಯ ಧರ್ಮಗಳನ್ನು ಅನುಸರಿಸಿ ನಿರಲಂಕಾರಿಯಾಗುವವಳಲ್ಲ. ವೈಧವ್ಯವನ್ನು ಹೊಂದುವವಳಲ್ಲ” ಎಂದು ಪ್ರತಿಭಟಿಸುತ್ತಾಳೆ. ಕುಮಾರಸ್ವಾಮಿ ತೆಕ್ಕುಂಜ ಅವರು ‘ಮಂಡೋದರಿಯ ಪಾತ್ರವನ್ನಿಟ್ಟುಕೊಂಡು ಕಾದಂಬರಿ ಬರೆದಿದ್ದಾರೆ. ಹಾಗೆಯೇ ಭಾಗ್ಯರೇಖಾ ದೇಶಪಾಂಡೆ ಅವರೂ ಮಂಡೋದರಿ ಪಾತ್ರವನ್ನು ಆಳವಾಗಿ ಅಭ್ಯಸಿಸಿ ಒಂದು ಕಾದಂಬರಿಯನ್ನು ನೀಡಿರುವುದು ಗಮನಾರ್ಹ. ‘ಬಂಧಿತ’ ಕಥೆಯಲ್ಲಿ, ರಾಜನಾಗಿ,  ಪ್ರಜಾಪಾಲಕನಾಗಿ ಅಧಿಕಾರ ಕರ್ತವ್ಯಗಳ ಮಧ್ಯೆ ಸಿಲುಕಿ ನಲುಗಿ ಹಲುವು ವಿಚಾರಗಳಲ್ಲಿ ಬಂಧಿತನಾಗಿ, ಕುಟುಂಬ, ಸಂಬಂಧ ಪ್ರೀತಿ ಎಲ್ಲದರಿಂದಲೂ ದೂರ ನಿಂತು ತನ್ನನ್ನು ತಾನೇ ಬಂಧನಕ್ಕೊಳಪಡಿಸಿಕೊಂಡು ಪ್ರಜೆಗಳಿಗಾಗಿ, ಆರ್ಯ ಧರ್ಮದ ಉಳಿವಿಗಾಗಿ ಬದುಕಿದ ರಾಮನಿದ್ದಾನೆ.           ಓಲ್ಗಾ ಅವರು ‘ಸೋದರಿತ್ವವೇ ಮಹಿಳೆಯರ ವಿಮೋಚನೆಯ ಪರಿಣಾಮಕಾರಿ ವಿಧಾನ ಎಂದು ದೃಢವಾಗಿ ನಂಬಿದವರು” ಆದ್ದರಿಂದಲೇ ಈ ಸೋದರಿತ್ವದ ಭಾವನೆ ಇಲ್ಲಿನ ಕಥಾ ಪಾತ್ರಗಳಲ್ಲಿ ಗಮನಿಸಬಹುದು. ಸೀತೆ ಭೇಟಿಯಾಗುವ ಎಲ್ಲಾ ಸ್ತ್ರೀ ಪಾತ್ರಗಳು ಈ ಭಾವನೆಯನ್ನು ಬೆಳೆಸಿಕೊಂಡಿದೆ. ಇವರ ಜೀವನ ಅನುಭವಗಳ ಮಾತಿನಿಂದ ಸೀತೆಯೂ ಸತ್ಯಾಸತ್ಯಗಳ ನಡುವಿನ ವಿಚಾರಗಳನ್ನು ತಿಳಿದುಕೊಂಡು ಎಲ್ಲ ಬಂಧನಗಳಿಂದಲೂ ಹೊರಗೆ ಬಂದು ಸ್ವತಂತ್ರಳಾಗಿಬಿಡುತ್ತಾಳೆ. ಸಮಾಜದಲ್ಲಿ ಪುರುಷನಿಂದ ಗುರುತಿಸಿಕೊಳ್ಳುವ ಆಕೆ ನಿಜದ ಅರಿವಾದಾಗ ತಾನು ಕೇವಲ ಭೂಪುತ್ರಿಯಾಗಿ ಉಳಿಯುವ ದಿಟ್ಟ ತೀರ್ಮಾನ ಕೈಗೊಳ್ಳುವುದು ಶ್ಲಾಘನೀಯ.  ಹೀಗೆ ಓಲ್ಗಾ ಅವರು ಈ ಪಾತ್ರಗಳ ಮೂಲಕ ಹೊಸತೊಂದು ಲೋಕವನ್ನು ನಮ್ಮ ಮುಂದೆ ತೆರೆದಿಡುತ್ತಾರೆ. ಆ ಲೋಕವನ್ನು ಪ್ರವೇಶಿಸಿದ ಓದುಗಾರಿಗೆ ಅಲ್ಲಿ ಹಲವು ಅಚ್ಚರಿಗಳೂ ಕಾದಿರುತ್ತದೆ.  ಅಜಯ್ ಅವರ ಅಲಂಕಾರಗಳಿಲ್ಲದ ನೇರ ಮತ್ತು ಸರಳವಾದ ಭಾಷೆ, ಕಥಾ ನಿರೂಪಣೆ, ಎಲ್ಲವೂ ಓದುತ್ತಾ ಹೋದಂತೆ ಆಪ್ತವಾಗಿಬಿಡುತ್ತದೆ. ಈ ಕಥೆಗಳೆಲ್ಲವೂ ಬಹಳ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.           ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡ ಈ ಸಂಕಲನಕ್ಕೆ ಬಿ. ಎನ್ ಸುಮಿತ್ರಾಬಾಯಿ ಅವರು ಮುನ್ನುಡಿ ಬರೆದಿದ್ದಾರೆ. ಇದರಲ್ಲಿ ಓ ಎಲ್ ನಾಗಭೂಷಣಸ್ವಾಮಿ ಅವರ ಅಭಿಪ್ರಾಯವೂ ಇದೆ.  “ಇದು ಪೌರಾಣಿಕ ನಾಯಕಿಯರ ಅಂತರಂಗದ ಅಷ್ಟೇ ಅಲ್ಲ ರಾಮನಂಥವರ ಒಳತೋಟಿಗಳನ್ನೂ ಆಳಕ್ಕಿಳಿದು ಗ್ರಹಿಸಿದೆ” ಎನ್ನುವ ವೈದೇಹಿಯವರು ಇದಕ್ಕೆ ಬೆನ್ನುಡಿ ಬರೆದಿದ್ದಾರೆ.  ಅಜಯ್ ಅವರು ಓಲ್ಗಾ ಅವರೊಂದಿಗೆ ನಡೆಸಿದ ಸಂದರ್ಶನವನ್ನು ಕೊನೆಯ ಭಾಗದಲ್ಲಿ ಹಂಚಿಕೊಂಡಿರುವುದರಿಂದ ಅವರ ಬಗ್ಗೆ ತಿಳಿದುಕೊಳ್ಳಲು ಓದುಗರಿಗೆ ಸಹಕಾರಿಯಾಗಿದೆ.  ಇದು ಒಂದು ಅನುವಾದಿತ ಕೃತಿಯಾಗಿದ್ದರೂ ಆ ಭಾವನೆ ಬರಂದಂತೆ ತುಂಬ ಮುತುವರ್ಜಿಯಿಂದ ಸ್ವಂತಿಕೆಯನ್ನುಳಿಸಿಕೊಂಡು ಅಜಯ್ ಅನುವಾದಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಉತ್ತಮ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಓಲ್ಗಾ ಅವರನ್ನು ಕನ್ನಡಿಗರಿಗೂ ಪರಿಚಯಿಸಿದ್ದಕ್ಕೆ ಕೃತಜ್ಞತೆಗಳು. ಇಂತಹ ಉತ್ತಮ ಕೃತಿಗಳನ್ನು ಅನುವಾದ ಮಾಡುತ್ತಿರಿ ಕನ್ನಡಿಪರಿಚಯಿಸುತ್ತಿರಿ. ನಿಮ್ಮ ಬರವಣಿಗೆಯೂ ನಿರಂತರವಾಗಿರಲಿ. ******** ಚೇತನಾ ಕುಂಬ್ಳೆ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ‌ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ ‌.ಇದರಲ್ಲಿ‌ ನಾ ಓದೊದ ಮೊದಲ ಕತೆ‌ ಕವಲು ಸಂಕಲನದ‌ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ‌‌ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ.‌ ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ ತೆರೆದಿಡುವ ರೀತಿ ಅದ್ಭುತವಾದುದು. ೧೯೭೬ ರಲ್ಲಿ ಈ ಸಂಕಲನ ಬಂದಿದೆ.‌೧೯೬೮ ರಲ್ಲಿ ಅವರ ಮುಳ್ಳುಗಳು ಕತೆ ಪ್ರಕಟವಾದುದು.ಆಗಲೇ ವೀಣಾ ಶಾಂತೇಶ್ವರ ಅವರ ಕತೆಯ ಶೈಲಿ, ದಿಟ್ಟತನ, ಕತೆ ಕಟ್ಟುವ ರೀತಿಯ ‌, ಹೆಣ್ಣಿನ‌ ಅಂತರಂಗವನ್ನು ಪ್ರಾಮಾಣಿಕವಾಗಿ, ಕಲಾತ್ಮಕವಾಗಿ ಕಟ್ಟುವ ವೀಣಾ ಅವರನ್ನು ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬರಗೂರು ರಾಮಚಂದ್ರ ಅವರು ಮೆಚ್ಚಿ ಬರೆದಿದ್ದಾರೆ.ಅವರ ಕವಲು ಸಂಕಲನದ ಕತೆಗಳನ್ನು ‌ಓದಲು ಎತ್ತಿಕೊಂಡಾಗ, ಇವತ್ತಿನ ಬರಹಗಾರ್ತಿಯರು ಮುದ್ದಾಂ ‌ಓದಬೇಕು. ಅಬ್ಬಾ ವೀಣಾ ಶಾಂತೇಶ್ವರ ಅವರ ಧೈರ್ಯ ನನಗೆ ಇಷ್ಟವಾಯಿತು.‌ ಇವತ್ತಿನ ಕರ್ನಾಟಕಕ್ಕೆ ಅಂತಹ ಶಕ್ತಿಯುತ, ಸತ್ವಯುತು ಬರಹ ಪ್ರಕಟಿಸುವ ಧೈರ್ಯ ಇದೆಯಾ ಅಂತ ಅನ್ನಿಸಿತು ನನಗೆ. ಪ್ರಶ್ನಿಸುವ ಮನೋಭಾವವೇ ಹೊರಟು ಹೋಗುತ್ತಿದೆ. ಇಲ್ಲಿ ಕಾಯಿಲೆ ನೆಪದಲ್ಲಿ ಒಪ್ಪಿತ ಗುಲಾಮಗಿರಿ ಹೇರುವ ಮತ್ತು ಅದನ್ನು ಒಪ್ಪಿಸುವ ಮನಸ್ಥಿತಿಯ ಕರ್ನಾಟಕದಲ್ಲಿ ನಾವಿದ್ದೇವೆ.ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ.ಇನ್ನೂ ” ಹೋಟೆಲ್ ಬ್ಲೂ ” ೧೯೭೬ ರಲ್ಲಿ ಬಂದ ಸಂಕಲನ.‌ಎಮರ್ಜನ್ಸಿ ಪ್ರಾರಂಭದ ಕಾಲ.‌(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು…ಪ್ರತಿಭಟನೆ, ಸ್ತ್ರೀ‌ಶೋಷಣೆ ….ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು…ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾಳೆ.ಕತೆ ಓದುತ್ತಲೇ ಒಂದು ನಾಟಕಕೀಯ ದೃಶ್ಯ ನಮ್ಮ‌‌ ಕಣ್ಮುಂದೆ ಚಲಿಸುತ್ತದೆ. ಅವರ ಮುಳ್ಳುಗಳು ಕತೆಯನ್ನು ಕನ್ನಡ ಯುವ ಬರಹಗಾರ್ತಿ ಯರು ಹಾಗೂ ಬರಹಗಾರರು ಓದಬೇಕು.ಅದ್ಭುತ ಕತೆ. ಮನದ ಚಲನೆ ಅಲ್ಲಿದೆ. ೨೪ ತಾಸುಗಳಲ್ಲಿ ಚಲಿಸುವ ಕತೆ ಅದು. ಅವಳ ಸ್ವಾತಂತ್ರ್ಯ ಧ್ವನಿಪೂರ್ಣ ಕತೆ.‌೧೯೯೪ ರಲ್ಲಿ ಬಂದ ಬಿಡುಗಡೆ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿ ಅಲ್ಲಿದೆ. ಕತೆ ಸಾಗುವ ದಾರಿ ನಿಮ್ಮನ್ನ ಅಚ್ಚರಿ‌ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..ಈ ದೃಷ್ಟಿಯಿಂದ ಕತೆ ,ಕತೆಗಾರ್ತಿ ಬಹುತ್ವದ ಸಂಕೇತ. ‌ ಕವಿ ಬಹುತ್ವ‌ ಭಾವನೆಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಸರ್ವಾಧಿಕಾರಿಯಂತೆ, ಶಬ್ದಗಾರುಡಿಗನಂತೆ ಏಕತ್ರನಾಗಿ ಬರೆಯುತ್ತಾ ಸಾಗುತ್ತಾನೆ. ಬಹುತ್ವ ತನ್ನದಾಗಿಸಿಕೊಂಡ ಬೇಂದ್ರೆಯಂತೆ. ಬಹುತ್ವವನ್ನೇ ಮಾತಾಡಲು ಬಿಟ್ಟು ,ತಾನು ಕೃತಿಕಾರನಾಗಿ ಕಾನೂರು‌‌ ಸುಬ್ಬಮ್ಮ ಹೆಗ್ಗಡಿತಿಯಂತೆ ಬಹುತ್ವವೇ ಆಗುತ್ತಾರೆ ಕುವೆಂಪು.‌ ಹಾಗಾಗಿ ಕುವೆಂಪು ನನಗೆ ಬಹುತ್ವದ ಪ್ರತಿನಿಧಿ. ಬೇಂದ್ರೆ ಏಕತ್ವದ ಪ್ರತಿನಿಧಿ. ನನಗೆ ನನ್ನ ಅಪ್ತರರೊಬ್ಬರು ಹೇಳುತ್ತಿದ್ದರು ; ” ಪ್ರಯತ್ನಿಸಿದರೆ ಎಲ್ಲರೂ ಬರಿಯಬಹುದು.‌ಕತೆ ಕಷ್ಟ. ನಿನಗೆ ಕತೆ ಬರೆಯುವ ಶಕ್ತಿಯಿದೆ.‌ನೀ ಕತೆ ಬರೆಯೆಂದುಆ ಮಾತು ನನಗೆ ಈಚೆಗೆ ನಮ್ಮ ಕಥಾ ಪರಂಪರೆಯ ಹಿರಿಯರನ್ನು ಓದುವಾಗ ನಿಜ ಅನ್ನಿಸಿದೆ. ಲಂಕೇಶ್, ದೇವನೂರು, ವೀಣಾ ಶಾಂತೇಶ್ವರ, ಶಾಂತಿನಾಥ ದೇಸಾಯಿ ಅದ್ಭುತ ಕತೆಗಾರರು. ನೀವು ಸಹ ಕತೆ ಓದಿ. ಬಿಡುವಾದಾಗ.‌ ಪ್ರಶ್ನಿಸುವುದ‌ ಈ ಸಮಾಜ ಕಲಿಯುವಂತೆ ಕತೆ ಬರೆಯಿರಿ. ************** ನಾಗರಾಜ ಹರಪನಹಳ್ಳಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ ಕವಿ ಅಸಮಾನ್ಯನೇ ಸರಿ. ಆದರೂ ಎಲ್ಲರಿಗೂ ಪ್ರಕೃತಿಯೊಡನೆ ಒಂದಾಗುವುದು, ವರ್ಷಾನುಗಟ್ಟಲೆ ಮಾತಿಗಿಳಿಯುವುದು ಕಷ್ಟಕರವೇ. ಅಂತಹ ಕಷ್ಟಪರರ ಆಚೆ ನಿಂತು ತನ್ನ ಐಚ್ಛಿಕದ ಪ್ರಪಂಚದಲ್ಲಿ ಆಪ್ತ ಭಾವಗಳ ಬಲೆಯೊಳಗೆ ತನ್ನನ್ನೂ, ತನ್ನದನ್ನೂ ಹಾಗೂ ತನ್ನವರನ್ನು ಬರಸೆಳೆದ ಕವಿ ನಾಗರಾಜ ಹರಪನಹಳ್ಳಿಯವರು. ಅವರ ಎರಡನೇ ಕವನ ಸಂಕಲನ ವಾದ “ವಿರಹಿ ದಂಡೆ” ಯೊಂದಿಗೆ ವಿಹಾರದ ವಿವರಗಳ ಹೊತ್ತು ನಲಿದ ಸಂತ್ರಪ್ತ ಕ್ಷಣವಿದು ಚಂದ. ಕವನ ಸಂಕಲನದ ” ವಿರಹಿ ದಂಡೆ” ಶೀರ್ಷಿಕೆಯೇ ಆಕರ್ಷಣೀಯ. ‘ವಿರಹ ನೂರು ತರಹ’ ಎಂಬ ಸಿನಿಮಾದ ಹಾಡಿನ ಸಾಲಿನಂತೆ ಜಗದ ಎಲ್ಲರನ್ನೂ ಬೆಂಬಿಡದೆ ಒಮ್ಮೆಯಾದರೂ ಕಾಡುವ ವಿರಹಿತನದ ಸುಂದರವಾದ ಗುಟುಕನ್ನು ಮೆದುವಾಗಿ ಗಂಟಲಿಗಿಳಿಸಿಕೊಂಡಿದ್ದಾನೆ ಕವಿ. ಪ್ರಕೃತಿಯನ್ನೇ ಹೆಣ್ಣಾಗಿಸಿ, ಹೆಣ್ಣನ್ನೇ ಪ್ರಪಂಚದ ಸುಂದರ ಜೀವರೂಪಿಯಾಗಿ ಆರಾಧಿಸುವ ಕವಿತ್ವಕ್ಕೊಂದು ಸಲಾಂ ಸಲ್ಲಿಸಲೇಬೇಕು. ಆ ಮಗ್ಗಲು ಬದಲಿಸಿ ಪ್ರಕೃತಿಯನ್ನು ಬೊಗಸೆಯಲ್ಲಿ ಹಿಡಿದು ಗಾಳಿ, ಮಳೆ, ಬೆಳಕು, ಸಮುದ್ರದ ದಂಡೆಗಳೆಲ್ಲವನ್ನೂ ಆಟಿಕೆಯಂತೆ ಅನುಭವಿಸುವ ಕವಿಯ ತುಂಟತನ, ಪ್ರೀತಿಯನ್ನು ಬರೀ ಕಣ್ಣುಗಳಿಗೆ ಮಾತ್ರ ಸೀಮಿತವಾಗಿಸದೆ, ಕನಸುಗಳಲ್ಲಿ ಮಾತಾಡುವ ಪ್ರೀತಿ, ಪ್ರಣಯವನ್ನು ಪಕ್ಕಕ್ಕಿಟ್ಟು, ನಿಸರ್ಗ ಸಿದ್ಧವಾದ ಮಿಲನ ಮೈಥುನವನ್ನು ಬರೀ ಹೆಣ್ಣು-ಗಂಡಿಗೆ ಮಾತ್ರ ಸೀಮಿತವಾಗಿಸದೇ ಗಿಡ- ಮರಗಳಿಗೂ, ದಂಡೆ -ಕಡಲಿಗೂ ಕಂಡಲ್ಲಿ ಕಂಡಷ್ಟು ಪ್ರಕೃತಿಗೆ ಮಿಲನದ ಕಾತುರವಾಗುವ ಪುಣ್ಯಕಾಲವನ್ನು ಕವಿ ಎದೆಯೊಳಗೆ ತುಂಬಿಕೊಂಡಿದ್ದಾನೆ. ತನ್ನ ಪ್ರೀತಿಯ ಪರಾಕಾಷ್ಠೆಯನ್ನು ತುಂಬಾ ವಿಸ್ತಾರವಾಗಿ, ಬಾಹ್ಯವಾಗಿ ಅವಲತ್ತು ಕೊಂಡಿದ್ದು ಪ್ರೀತಿಯನ್ನು ಸದಾ ರಸಿಕತೆಯಲ್ಲಿ ಕಂಡ ಕವಿಗೆ ವಿರಹವನ್ನ ಸರಳ ಸುಲಭವಾಗಿ ಅನುಭವಿಸಲಾಗದು. ಸಾನಿಧ್ಯಕ್ಕೆ ಮುದ್ದಾಡಿದ, ಹೊರಳಾಡಿದ ಸುಖದ ತುತ್ತ ತುದಿಯ ಕೂಗಾಟ, ಬಿಸಿಯುಸಿರ ಉನ್ಮಾದದ ಯಾವುದೋ ಸುಖದಲ್ಲಿ ಕಳೆದುಹೋಗುವ ಕವಿಗೆ ವಿರಹ ಎಂಬುದೊಂದು ಮರೀಚಿಕೆಯೇ ಆಗಿರುವಾಗ ಒಮ್ಮೊಮ್ಮೆ ಕ್ಷಣಿಕ ವಿರಹವನ್ನು ಎದುರಿಸುವುದು ಕೂಡಾ ಅಸಾಧ್ಯವಾದ ಮಾತೇ ಆಗಿದೆ. “ಭೂಮಿಯ ಬಿರುಕಿಗೆ ಬೆರಳಿಡುವೆ” ಕವಿತೆ ಸಾಕೆನಿಸುವಷ್ಟು ಶೃಂಗಾರವನ್ನು ತುಂಬಿಕೊಂಡಿದ್ದು, ರಸಿಕತೆಯ ಅನುಭವಿಸಿದ ಅವಕಾಶವಾದಿಗಳಿಗೆ ಏನೇನನ್ನೋ ಒಳಗೊಳಗೆ ಅನಿಸುವಷ್ಟು , ನಿರೀಕ್ಷಿಸುತ್ತಿರುವವರಿಗೆ ಆಸೆ ಹುಟ್ಟಿಸುವಂತಹ ಗಟ್ಟಿತನದ ಕವಿತೆ. ಸೃಷ್ಟಿಯ ಒಂದು ಮಿಲನದ ನೋಟವನ್ನು ಆಪ್ತ ಪದಗಳಿಂದ ಔಚಿತ್ಯ ಪೂರ್ಣವಾಗಿ ಓದುವವರಿಗೆ ಉಣಬಡಿಸುವ ಕಲೆಯೊಂದು ಕವಿಗೆ ಕರಗತವಾದಂತಿದೆ. ಕವಿತೆಯ ಕೊನೆಯಲ್ಲಿ “ಭೂಮಿಯ ಬಿರುಕಿಗೆ ಬೆರಳಿಡುವುದೆಂದರೆಗೆಲ್ಲುವುದು ಸೋಲುವುದು ಶರಣಾಗುವುದು ಒಂದಾಗುವುದುಉಳಿದದ್ದು?ಉಳಿದದ್ದು ಏನು ಇಲ್ಲ…!!ಭೂಮಿಯ ಎದುರು ಮತ್ತೆ ಮತ್ತೆ ಧ್ಯಾನಿಸುವುದು….” ಕವಿಯ ಈ ಕಲ್ಪನೆಯು ತೀರಾ ಆಪ್ತವಾಗಿ ಮನತಟ್ಟುತ್ತದೆ. ದೈನಿಕದಲ್ಲಿ ಬಹುತೇಕರು ರಾತ್ರಿ ಕನಸಿನಲ್ಲಿ ಕಾಣುವ ವಾಸ್ತವವಲ್ಲದಾದರೂ ಕ್ಷಣಿಕ ವಾಸ್ತವ ಎನಿಸುವ, ಆಪ್ತವೂ ದೂರವೂ ಆದಂತಹ ಕನಸು ಮತ್ತು ಮನಸ್ಸಿನ ತೊಯ್ದಾಟಗಳು, ಮಲಗಿದ್ದಾಗ ಕನಸು ಅನಾವರಣವಾಗುವ ಬಗೆ, ಅದರಲ್ಲಿ ದನಿಯೊಂದು, ಮುಖವೊಂದು, ಸ್ಥಳ ಇನ್ನೊಂದು ಆದರೆ ಆ ಕನಸಿನಲ್ಲಿ ನಾವು ಮಾತ್ರ ಪಕ್ಕಾ. ಕನಸೇ ಹೀಗೆ ಎಂಬುದು ನನ್ನ ವಾಸ್ತವಕ್ಕೂ ಬರುವಹಾಗೆ ಕಟ್ಟಿಕೊಟ್ಟ ಕವಿತೆಯು ಸಹ ಆಪ್ತವಾಗಿ ಕೈ ಹಿಡಿದುಬಿಡುತ್ತದೆ. “ಕಣಿವೆ ತೋಳುಗಳಲಿರಭಸದಿ ಹರಿವ ನದಿಗೆಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತಕಾಮೋನ್ಮಾದದಿ ಮಿಂದ ನಗ್ನ ಭೂಮಿನಗುನಗುತ್ತಾ ನಿದ್ದೆ ಹೋಗಿರಲು” ರಾತ್ರಿ ಸುರಿದ ಮಳೆ ಕವಿಯ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾಗಿದೆ. ಮಳೆ ಮತ್ತು ಪ್ರಥ್ವಿಯ ಬರಪೂರಿ ಮಿಲನವನ್ನು ಕವಿ ಕಂಡು ಉಂಡು ತೇಗಿದ್ದಾನೆ ತೇಗುತ್ತಿದ್ದಾನೆ. ಭೂಮಿ ಮತ್ತು ಮಳೆಯ ನಡುವಿನ ನಂಟು ಭೂಮಂಡಲದ ಚರಾಚರ ಜೀವರಾಶಿಗಳಿಗೆ ಅವಶ್ಯಕ. ಅದಕ್ಕೆ ಗಂಡು ಹೆಣ್ಣಿನ ಮಿಲನದಂತೆ ಹೋಲಿಕೆ ನೀಡಿ ಕವಿತೆಯ ಕೊನೆಯಲ್ಲಿ “ಬೆವರುಂಡ ಗದ್ದೆಗಳು ಹಸಿರಾದವು” ಎಂದು ಸತ್ಯವನ್ನೇ ಅರುಹಿದರೂ ಆ ತುಂಟತನದ ಸಾಲುಗೊಂದು ಸೋಜಿಗದ ಚಪ್ಪಾಳೆ ಸೇರಲೇ ಬೇಕು. “ಸುಳಿವ ಗಾಳಿ ಯಲಿಎರಡು ನಿಟ್ಟಿಸಿರುಗಳಿವೆಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ “ ಈ ಸಾಲುಗಳು “ಮೌನ” ಕವಿತೆಯಲ್ಲಿ ಮಿಂದೆಳುವಾಗ ವಿರಹದ ಆಳ ಅನುಭವಕ್ಕೆ ಬರುತ್ತದೆ.” ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆಯ ಸಮಯ” ಹೀಗೆ ವಿರಹದ ವಾರ್ತೆ ಎದೆಯೊಳಗೆ ಆರಿದ ಕೆಂಡದಲಿ ಹಸಿ ಜೋಳದ ತೆನೆಗಳನಿಟ್ಟು ಬಿಸಿ ಜೋಳದ ತೆನೆಯ ತಿನ್ನಲಾಗದ ನಿರಾಶೆಯಂತೆ ವಿರಹ ಹಾದುಹೋಗುತ್ತದೆ. ಕವನ ಸಂಕಲನದ ಪುಟಗಳಿಗೆ ಮೈಗಂಟಿಕೊಂಡ ರಾಶಿರಾಶಿ ಹನಿಗಳು ಓದುಗನ ಎದೆಯಮೇಲೆ ಇಬ್ಬನಿಯಂತೆ ಭಾಸವಾಗುತ್ತವೆ. ಅವು ಪದಕ್ಕೆ ಪದ ಸೇರಿ ಎದೆ ತಾಕಿಸಿ ಮೆಲ್ಲಗೆ ಮಾಯವಾದರೂ ಮತ್ತೆ ಬೇಕೆನಿಸುವಷ್ಟು ಸಂಜೆಯ ಕಾಂದಾ ಬಜಿಗಳಂತೆ ಅನಿಸುವವು. “ಬಯಲ ಗಾಳಿಮನೆ-ಮನಗಳ ಸುಖ-ದುಃಖ ಮಾತಾಡಿಸಿ ಹೋಯಿತು” ಯಾರದೋ ಮನೆವಾರ್ತೆಗೆ ಸಾಕ್ಷಿಯಾಗುವ ಗಾಳಿ ಕವಿಯೊಳಗೆ ಸಜೀವ ಸಹೃದಯ ವ್ಯಕ್ತಿಯಂತೆ ಭಾಸವಾಗುವ ಪರಿ ಅದ್ಭುತವಾದದ್ದು. ಒಂದು ತುಂಟತನ, ಅವ್ಯಕ್ತ ಭಾವ, ಸೂಕ್ಷ್ಮತೆಯ ಅನಾವರಣಗಳ ಅಭಿವ್ಯಕ್ತತೆಯನ್ನು ಕ್ಷಣದಲ್ಲೇ ಮೈಮನಕ್ಕೆ ಹಾಯಿಸಿ ನಿರಾಳವಾಗುವ ನಾಗರಾಜರವರ ಹನಿಗಳು ಮೋಡಿ ಮಾಡುವಂಥವುಗಳಾಗಿವೆ. “ಚಂದ್ರ ಮೈತುಂಬಿ ಬಳುಕಿದ ನಿನ್ನ ನೆನಪಾಯಿತು” ” ಬಣ್ಣದ ಸೀರೆ ತೊಟ್ಟು ಮಧುಮಗಳಂತೆ ಕಾದದ್ದೇ ಆತು ವಿರಹ ವಿರಹಕ್ಕೆ ಪ್ರೇಮ ಬರೆಯುವುದುಂಟೇ? “ ಪ್ರೇಮದ ಫಲಿತಾಂಶಗಳಲ್ಲಿ ವಿರಹವು ಒಂದು ಭಾಗ. ಕೆಲವೊಮ್ಮೆ ಅದು ಸಂಪೂರ್ಣವಾಗುವುದೂ ಕೂಡ ಇದೆ. ಆದರೆ ಇಂತಹದೇ ವಿರಹಗಳ ಒಳಗೆ ಮತ್ತೆ ಪ್ರೇಮ ವಾಗಬೇಕೆಂದು ಕಾಯುವುದು ಹೊಸತನ. ಹೀಗೆ ‘ವಿರಹಿ ದಂಡೆ’ ಕವನ ಸಂಕಲನದುದ್ದಕ್ಕೂ ಪ್ರಕೃತಿ, ಪ್ರೇಮ, ವಿರಹ, ಕನಸು, ನಿರೀಕ್ಷೆ , ಆಸೆ-ಆಕಾಂಕ್ಷೆ , ಅಮಲು, ತುಮುಲ, ಬಲ,ಸಕಲಗಳನ್ನು ತನ್ನದಾಗಿಸಿಕೊಂಡು ವಿಶೇಷ ಪದಪುಂಜದಲಿ ಅವುಗಳನ್ನು ಅಚ್ಚಾಗಿಸಿ ತನ್ನೆದೆಯ ಒಳಗೆ ವಿಶೇಷ ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡು ಜಾಗೃತವಾದ ಸಾಹಿತ್ಯ ಆಸಕ್ತಿಯನ್ನು ಬೆಳೆಕಾಗಿಸಬೇಕೆಂಬ ಕವಿಯ ಪ್ರಯತ್ನ ಸಫಲವಾಗಿದೆ. ತೀರಾ ಗಂಭೀರ ಶೈಲಿಯಲ್ಲಿ ಓದಿದಾಗ ಕವಿತೆಗಳು ಮುಖ ಊದಿಸಿಕೊಂಡು ಸಿಟ್ಟುಗೊಳ್ಳುತ್ತವೆ. ತೀರಾ ಒಳಗಣ್ಣಿನಿಂದ ಬಾಲ್ಯ, ಹರೆಯಗಳ ತುಂಟಾಟಗಳಿಗೆ ಅವಕಾಶವಿತ್ತು ಕವಿತೆಗಳನ್ನು ಆಸ್ವಾದಿಸುವಾಗ ಹೊಸ ತರದ ಪ್ರೇಮ, ವಿರಹ, ಪ್ರಣಯ ಇತ್ಯಾದಿಗಳ ಹಿತವಾದ ಪರಿಧಿಯೊಂದು ಮನಸ್ಸಿನ ಪರದೆ ಸರಿಸಿ ನಸುನಗುತ್ತದೆ. ಒಟ್ಟಾರೆಯಾಗಿ ಕಾವ್ಯ ಪ್ರಪಂಚಕ್ಕೆ ವಿರಹವನ್ನೂ ಸಲಿಗೆಯಾಗಿ ಒಲವಾಗಿ ಉಣಬಡಿಸುವ ಕವಿಯ ಪ್ರಯತ್ನ ಅದ್ಬುತವಾದಂತದ್ದು. ******* ಮೋಹನ್ ಗೌಡ ಹೆಗ್ರೆ

ಪುಸ್ತಕ ವಿಮರ್ಶೆ Read Post »

You cannot copy content of this page

Scroll to Top