ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

‘ಕಾಗೆ ಮುಟ್ಟಿದ ನೀರು’

ಪುಸ್ತಕ ಪರಿಚಯ ನಾನುಕಂಡಂತೆ– ‘ಕಾಗೆಮುಟ್ಟಿದನೀರು’         ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ.        ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, ನೆಂಟರು, ಬಡತನ, ಪುಟಾಣಿ ಹುಡುಗನೊಬ್ಬ ಆಸೆ ಕಂಗಳಿಂದ ಕಾಣುವ ಪುಟ್ಟ ಪುಟ್ಟ ವಿವರಗಳು…   ಅರವತ್ತರ ವಯಸ್ಸಲ್ಲಿ ಮಾಗಿ ಮಗುವಾಗಿ ನೆನಪಿನ ಹಾದಿಯಲ್ಲಿ ಹಿಂದಿರುಗಿ ಉತ್ಪ್ರೇಕ್ಷೆ ಇಲ್ಲದೆ ಸುಮ್ಮಗೆ ಅಡ್ಡಾಡಿ ಬರುವುದು ಇದೆಯಲ್ಲಾ… ಆ ಸುಖ ನಮ್ಮದೂ ಆಗುವ ಆಪ್ತ ಆರಂಭ ಪುಸ್ತಕದಲ್ಲಿದೆ. ಇದನ್ನು ಕೇವಲ ವಿವರಣೆ ಎನ್ನಲೇ? ವರ್ಣನೆ ಎನ್ನಲೇ? ಗೊಂದಲವಾಗುತ್ತೆ.     ಆರಂಭದ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ತೆರೆದಿಡುವ ಹೂ ಪಕಳೆಗಳಂತಹ ಮೃದುತ್ವದ ಬಾಲ್ಯದನುಭವಗಳು, ಕಂಡ ವ್ಯಕ್ತಿತ್ವ ಶ್ರೇಷ್ಠತೆಗಳು, ಕಟ್ಟಿಕೊಡುವ ಕತೆಗಳು ಭಾರೀ ಹಿಡಿಸುತ್ತವೆ. ಆದರೆ, ಮಂಡ್ಯ ಎಂಬ ಅಪ್ಪಟ ಬಯಲು ನೆಲದ ನನ್ನಂತಹವರಿಗೆ ಗುಡ್ಡ ಬೆಟ್ಟ ಹತ್ತಿಳಿಯುತ್ತಾ ಕಾಡು- ಮೇಡು ಅಲೆದಾಡುತ್ತಾ ಸಿಗುವ ಊರುಗಳು ಹೇಗಿರಬಹುದೆಂಬ ಕುತೂಹಲ ಮೂಡುತ್ತದೆ. ಅದರ  ಹೊರತು ನನ್ನೂರಿನಂತೆ ರಸ್ತೆ ಬದಿಗೇ ಸಿಕ್ಕಿಬಿಡುವ ಊರುಗಳಂತಿಲ್ಲದ ಪರಮಲೆ, ವಾಟೆಕಜೆ, ಕಳ್ಮಕಾರಿ,  ಹೊಪ್ಪಳೆ, ಕಮಿಲ, ಬಂಟಮಲೆ, ಬಿಳಿಮಲೆ, ಏನೇಕಲ್ಲು, ಪಂಜ, ಕರ್ಮಜೆ, ಕರಿಮಲೆ, ಎಲಿಮಲೆ, ಬಂಗಾಡಿ, ಕೂತ್ಕುಂಜ, ಸಂಪಾಜೆ… ಊಫ್!! ಇವೆಲ್ಲಾ ಅರ್ಥವಾಗದ ಚಿದಂಬರ ರಹಸ್ಯ ಹೊದ್ದುಕೊಂಡು ನಿಬಿಡ ಕಾನನದೊಳಗೆ ಲೀನವಾಗಿರುವ ಹಾರುವ ಓತಿಕ್ಯಾತದಂತೆ ಕಾಣುವ ಊರುಗಳಾಗುತ್ತವೆ. ಒಮ್ಮೆಯಾದರೂ ಅವನ್ನೆಲ್ಲಾ ತೀರಾ ಸಮೀಪ ಅನುಭವಿಸಿ ಬರಬೇಕೆನ್ನುವಂತೆ ಹುಚ್ಚು ಹಿಡಿಸುತ್ತವೆೆ.       ಬಾಲ್ಯದ ವಿವರಣೆಗಳು ಆಪ್ತವಾಗುತ್ತಾ ಆಗುತ್ತಾ ಮಂತ್ರಮುಗ್ಧತೆಯಲ್ಲಿ ಕಳೆದು ಹೋಗುತ್ತಿರುವಾಗಲೇ ಕಾಲ ಮಾಗುವುದೇ ತಿಳಿಯದು. ಆಮೇಲಿನದ್ದೆಲ್ಲಾ ಓದು- ಉದ್ಯೋಗ, ಏಳು-ಬೀಳಿನ ವ್ಯಾಪಾರ. ಕನ್ನಡ ಸಾಹಿತ್ಯ ಲೋಕದ ವ್ಯವಹಾರಗಳು, ವಿಶ್ವವಿದ್ಯಾಲಯವೊಂದರ ಕಟ್ಟುವಿಕೆಯ ಪರಿಶ್ರಮ, ಹಿರಿಯರ ಅನುಚಿತ ನಡೆ ಇವೆಲ್ಲಾ ಹಸಿಹಸಿಯಾಗಿಯೇ ದಾಖಲಾಗಿರುವುದು ಇಷ್ಟೊತ್ತಿಗಾಗಲೇ  ನಾಡಿನ ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ತಳಮಳ ಹುಟ್ಟಿಸಬೇಕಿತ್ತು. ಬಹು ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಲೋಕ ಇರುವುದೇ ಹೀಗೆ ನಮ್ಮ ಬೇಳೆ ಬೆಂದರೆ ಸಾಕೆನ್ನುವ ಲೋಕಜ್ಞಾನ ಪ್ರಾಪ್ತವಾಗಿರುವ ನಾಡವರಾಗಿರುವ ನಾವು ಅದೆಷ್ಟು ಜಡ್ಡುಗಟ್ಟಿದವರೆನ್ನುವುದು ತಿಳಿದುಕೊಂಡು ತೆಪ್ಪಗಿರಬೇಕಾಗಿದೆಯಲ್ಲ ಎಂದು ಸಂಕಟವಾಗುತ್ತದೆ.         ‘ಚದುರಿ ಬಿದ್ದ ಆತ್ಮದ ತುಣುಕುಗಳ’ನ್ನು ಆಯ್ದು ಕೊಂಡು ಎದೆಗಾನಿಸಿಕೊಳ್ಳುತ್ತಿರುವಾಗಲೇ ಥಟ್ಟನೆ ನಾನೊಂದು ಪ್ರವಾಸ ಕಥನವನ್ನೋ, ಸಾಹಸಗಾಥೆಯನ್ನೋ ಓದುತ್ತಿರುವಂತೆ ಭಾಸವಾಗುತ್ತದೆ. ಒಂದು ನಿರ್ದಿಷ್ಟ ತಾರ್ಕಿಕ ಆಲೋಚನೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಕೆಲವಾರು  ಆಪ್ತ ಸಮಾನಮನಸ್ಕರೊಡನೆ ಸೇರಿ ಮಾಡುವ ಸಾಂಸ್ಥಿಕ  ಸಂಘಟನೆಯ ಕೆಲಸವು ಸಂತಸ ತರುತ್ತದೆ. ಅದರಲ್ಲೂ ನಮ್ಮ ಕನ್ನಡದ ನೆಲದ ವಿಚಾರಗಳು ನಾಡಿನ ಎಲ್ಲೆ ಮೀರಿ ದೆಹಲಿ, ಅಮೇರಿಕ, ಬೆಲ್ಜಿಯಂ, ಜಪಾನು, ಹೊನಲುಲು ಮೊದಲಾದೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಬಿತ್ತರವಾದ ಬಗೆಗಳು ದಾಖಲಾದ ವಿವರಗಳನ್ನು ಓದುವಾಗ ಹೆಮ್ಮೆಯ ಭಾವ ಸ್ಫುರಿಸುತ್ತದೆ.              ಇಡೀ ಪುಸ್ತಕದ ಸ್ವರೂಪ ಹೀಗೆಯೇ ಎಂದು ನಿರ್ಣಾಯಕವಾಗಿ ಹೇಳಲು ಬಾರದಂತಹ ವಿಶಿಷ್ಟವಾದ ಕೃತಿ. ಸೊಗಸಾದ ನಿರೂಪಣೆ. ಹಲವು ಬಗೆಯಲ್ಲಿ ಕನ್ನಡ ನಾಡು- ನುಡಿ, ರಾಜಕೀಯ- ಸಾಂಸ್ಕೃತಿಕ- ಸಾಮಾಜಿಕ ಸ್ಥಿತ್ಯಂತರಗಳ ದಾಖಲೀಕರಣದಂತೆ ಭಾಸವಾಗುತ್ತದೆ. ಹಾಗೆಯೇ ಕೋಮುವಾದ, ಜಾತೀಯತೆ, ಬಡತನ, ಪಕ್ಷಪಾತ ಮೊದಲಾದನ್ನು ಕುರಿತು ಒತ್ತುಕೊಡದೆ, ಹೇಳಿಯೂ ಹೇಳದಂತೆ ಮಾಡಿರುವ ಲೇಖಕರ ಒಂದು ರೀತಿಯ ಜಾಗೃತ ಸ್ಥಿತಪ್ರಜ್ಞತೆಯು ಕಾಡದೇ ಬಿಡುವುದಿಲ್ಲ.       ನಮ್ಮ ನಡುವೆ ಲೋಕಜಾಗೃತಿಯಂತಿರುವ ಹಿರಿಯರಾದ ಶ್ರೀ ಪುರುಶೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಅನ್ನು ಮನೆಗೆ ಕೊಂಡುತಂದ ದಿನವೇ ಓದಿ ಮುಗಿಸಿದಾಗ ರಾತ್ರಿ ೧:೩೦ ದಾಟಿತ್ತು. ಇತ್ತೀಚೆಗೆ ನನ್ನಿಂದ ಇಷ್ಟು ಮಾತ್ರ ಒಂದೇ ಗುಕ್ಕಿಗೆ ಓದಿಸಿಕೊಂಡ ಕೃತಿ ಇದು.             ಎಲ್ಲಾ ಓದಿಯಾದ ಮೇಲೆ ಪುಸ್ತಕದ ಹಲವಾರು ವಿಷಯಗಳು ದಟ್ಟವಾಗಿ ಕಾಡುತ್ತಲಿವೆಯಾದರೂ ತೀವ್ರವಾಗಿ ಉಳಿದದ್ದು ಮಾತ್ರ ಮೂರು ವಿಚಾರಗಳು.   ೧. ನಿಗದಿಪಡಿಸಿದ ದಿನದಂದು ಗಂಡುಮಗುವಿನೊಡನೆ ಗಂಡನ ಮನೆಗೆ ಹಿಂದಿರುಗದೆ, ಮಳೆ ಕಡಿಮೆಯಾದ ಮೇಲೆ ಗಂಡನ ಮನೆಗೆ ಹಿಂದಿರುಗಿದ ಹಸಿಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳದೆ ಹಸುಗುಸನ್ನು ಮಾತ್ರ ಉಳಿಸಿಕೊಂಡದ್ದು,ಆದರೆ  ಆ ಬಾಣಂತಿ ಅನಂತರ ಏನಾದರೆಂದು ತಿಳಿಯದೇ ಹೋದದ್ದು… ೨. ಕಾಡ ನಡುವೆ ಶಾಲೆಗೆ ಹೋಗಿ ಬರುತ್ತಿದ್ದ ಮಗುವನ್ನು ಹೊಳೆ ದಾಟಿಸಿಕೊಳ್ಳಲು ಬರುಬೇಕಿದ್ದ ಅಮ್ಮ ಕಾಗೆ ಮುಟ್ಟಿದ್ದಕ್ಕೆ ಬರಲಾರದೇ ಹೋದದ್ದು. ಮತ್ತು ಆ ಮಗು ಇಡೀ ರಾತ್ರಿ ನಿಬಿಡ ಕಾಡಿನೊಳಗೆ ಅಮ್ಮನ ಬರುವಿಕೆಯನ್ನು ನಂಬಿ ಕಾದದ್ದು… ೩. ಹೃದಯವನ್ನು ಎಂದೋ ಕೊಟ್ಟಿದ್ದ ಪತ್ನಿ ಕಿಡ್ನಿ ಕೊಟ್ಟದ್ದು…  ವಸುಂಧರಾ ಕದಲೂರು

‘ಕಾಗೆ ಮುಟ್ಟಿದ ನೀರು’ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ ಎನ್ನದೇ ಈ ಕರೆಂಟ್ ನೊಂದಿಗೆ ಸರಸವಾಡುವ ಮತ್ತು ದುಡಿಯುವ ‘ಲೈನ್ ಮನ್’ ಗಳೆಂದರೆ ಈ ಸತೀಶ್ ಕುಲಕರ್ಣಿ ಅವರಿಗೆ ಅಪಾರ ಪ್ರೀತಿ ಮತ್ತು ಕಾಳಜಿ. ನಾನು ಮೊನ್ನೆ ಈ ಹೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿಯ ಬಗೆಗೆ ಒಂದು ಲೇಖನ ಬರೆದಾಗ, ಅವರು ಕೋಪ ಮಾಡಿಕೊಂಡು ಅಧಿಕಾರಿಗಳು ಇರಲಿ,  ಈ ಸಾವಿನೊಂದಿಗೆ ಸರಸವಾಡುವ ನಮ್ಮ ‘ಲೈನ್ ಮನ್’ ಗಳನ್ನು ಮೊದಲು ಗುರುತಿಸು ಶಿವು ಅಂತ ಹೇಳಿದರು ಇದೇ ಸತೀಶ್ ಕುಲಕರ್ಣಿಯವರು. ಅಧಿಕಾರಿಗಳನ್ನು ಬಿಡಿ, ಮೊದಲು ಈ ನಮ್ಮ ‘ಲೈನ್ ಮನ್’ಗಳ ಬಗೆಗೆ ಮೊದಲು ಬರೆ ಶಿವು ಅಂತ ಹಕ್ಕಿನಿಂದ ಮತ್ತು ಪ್ರೀತಿಯಿಂದ ಪದೇ ಪದೇ ಹೇಳಿದರು. ಅಂದಂತೆಯೇ ಈ ‘ಲೈನ್ ಮನ್’ಗಳು ಮನೆ-ಮಠವನ್ನೆದೇ, ಚಳಿ-ಮಳೆ ಎನ್ನದೇ ದುಡಿಯುವ ಪರಿಯನ್ನು ನನ್ನಿಂದ ಬರೆಸಿದರು. ಇದನ್ನೇಕೆ ಈ ‘ಸಮಯಾಂತರ’ ಕವನ ಸಂಕಲನದ ಬಗೆಗೆ ನನ್ನ ವಿಮರ್ಶೆ(ತೀರಾ ವಯಕ್ತಿಕ ಅಭಿಪ್ರಾಯ) ಬರೆಯುವ ಮೊದಲು ಹೇಳಿದೆನೆಂದರೆ ಇವರು ತಾವು ಕೆಲಸ ಮಾಡುತ್ತಿದ್ದ ಈ ಹೆಸ್ಕಾಂ ಒಟ್ಟಾರೆ ಕೆಇಬಿಯ ಕೆಳ‌ ದರ್ಜೆಯ ನೌಕರರ ಅದರಲ್ಲೂ ಈ ‘ಲೈನ್ ಮನ್’ಗಳ ಬಗೆಗೆ ಸತೀಶ್ ಕುಲಕರ್ಣಿಯವರಿಗೆ ಎಷ್ಟೊಂದು ಪ್ರೀತಿ, ಕಾಳಯ ಮತ್ತು ತಮ್ಮ ಕೆಲಸದಲ್ಲೂ ಶ್ರದ್ಧೆ ಇತ್ತು ಎಂದು ತಿಳುಸಲು ಈ ಪೀಠೀಕೆ ಹಾಕಿದೆ ಅಷ್ಟೇ. ಇನ್ನೂ ‘ಸಮಯಾಂತರ’ ‘ಕವನ ಸಂಕಲನ’ದ ಬಗೆಗೆ ನೋಡೋಣ… ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ್ ಕುಲಕರ್ಣಿಯವರೂ ಪ್ರಮುಖರು. ಐದು ದಶಕಗಳಿಗೂ ಹೆಚ್ಚು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿ ಅವರು ಸುಮಾರು ಇನ್ನೂರೈವತ್ತಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವರ “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಕವನ ಸಂಕಲನಗಳು. “ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ. ಸತೀಶರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ. ಸತೀಶರನ್ನು ಸಾಮಾನ್ಯವಾಗಿ ದಲಿತ–ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ. ಅವರನ್ನು “ಬಂಡಾಯ ಕವಿ”ಯೆಂದೂ ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ‘ಸಹಜ ಮಾನವತಾವಾದಿ ಕವಿಯೆಂದು ಕರೆಯಬಹುದು. ಪ್ರಸ್ತುತ “ಸಮಯಾಂತರ” ಸಂಕಲನದಲ್ಲಿ ಅವರ ಒಲವು ನಿಲುವುಗಳನ್ನು ಪ್ರತಿನಿಧಿಸಬಲ್ಲ ವೈವಿಧ್ಯಮಯ ಕವಿತೆಗಳಿವೆ. “ಅಜ್ಞಾತ ಪರ್ವದಲ್ಲಿ” ಕವಿತೆ ತುರ್ತು ಪರಿಸ್ಥಿತಿ ಉಂಟು ಮಾಡಿದ ಅವಾಂತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. “ಸ್ಮಶಾನ ಮೌನ ಬಾಗಿಲುಗಳು ಬಂದಾಗಿದ್ದವು. ನಾಲಿಗೆಗಳು ಕತ್ತರಿಸಿ ಹೋಗಿದ್ದವು. ಬೆಳಕಿಲ್ಲ, ಗಾಳಿಯಿಲ್ಲ. ಭದ್ರ ಕೀಲಿಗಳು. ಬಾಯಿ ಬಂದು ಮಾಡಿದ ಚಿಲಕಗಳು. ಜನ ಬರಿ ಸತ್ತ ಜನ……” # ಅಜ್ಞಾತ ಪರ್ವದಲ್ಲಿ… ನೂರಾರು ವರ್ಷಗಳಿಂದ ನೊಂದು ಬೆಂದು ಹೋದ ಶೋಷಿತರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು “ಒಡಲಾಳ ಕಿಚ್ಚು” ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. “ಹಟ್ಟಿಯಲ್ಲಿ ಬಟ್ಟೆ ಬಿಚ್ಚಿ ಸಾಹುಕಾರನಿಗೆ ಮೈ ಕೊಟ್ಟವರ, ಗದ್ದೆಯಲ್ಲಿ ಜರತಾರಿ ರುಮಾಲಿನ ರಾಕ್ಷಸರಿಗೆ ಹಮಾಲರಾಗುವವರ……” “ಕಿತ್ತು ತಿನ್ನುವವರ ಕೂತು ತಿನ್ನುವವರ ಕರಾಮತ್ತು ಉರಿ ಹಚ್ಚಿ ಎಲ್ಲ ಸುಟ್ಟು ಹಾಕಿ ಹೊಸ ಹಸಿರು ಚಿಗುರುವ ಮುನ್ನ ದನಿ ಎತ್ತಿ…… ” # ಒಡಲಾಳ ಕಿಚ್ಚು’ವಿನಲ್ಲಿ ಕಾಣಬಹುದು… ಸತೀಶ ಕುಲಕರ್ಣಿ ಅವರ “ಒಂದು ಅತ್ಯಾಚಾರದ ಹಂತಗಳು” ದೈಹಿಕವಾಗಿ ಜರ್ಜರಿತವಾದ ಅತ್ಯಾಚಾರ ಸಂತ್ರಸ್ತೆ ಕಾನೂನಿನ ಮೂಲಕ ಮಾನಸಿಕ ಅತ್ಯಾಚಾರಕ್ಕೊಳಗಾಗುವುದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹೀಗೆಯೇ ಮುಂದುವರಿದು… “ಅವರು ಬಂದು ತಡೆದವರಳನ್ನು ಮೇಲೆ ಗಿಡಗಳ ದಳದಳ – ಗಾಳಿಗುಲುಕುವ ಎಲೆಗಳು ಕೀವು ತುಂಬಿ ಸೋರುವ ಹುಣ್ಣು ನಕ್ಷತ್ರಗಳು ಇಷ್ಟು ಅವಳ ಕೊನೆಯ ನೆನಪುಗಳು……” “ಅತ್ಯಾಚಾರವಾಗಿಲ್ಲ – ತೀರ್ಪು ಬಂದಿತ್ತು ಒಂದು ದಿನ ಅವಳು ಹೆರಿಗೆ ನೋವಿಗೆ ನರಳುತ್ತಿದ್ದಳು……” # ಒಂದು ಅತ್ಯಾಚಾರದ ಹಂತಗಳು… “ಕಾಗದ ಕ್ರಾಂತಿಕಾರಿಗಳ ನಡುವೆ”, “ಸಿದ್ಧ ಸವಾರರು” ಹುಸಿ ಕ್ರಾಂತಿಕಾರರ ಕುರಿತ ಕವಿತೆಗಳಾದರೆ, “ಸತ್ತ ಮೇಲೆ” ನಿಜವಾದ ಹೋರಾಟಗಾರರ ಸ್ವಗತದಂತಿದೆ. “ನಾನು ಬೂದಿಯಾಗಿರುವೆ ಈ ನೆಲದ ಮಣ್ಣಾಗಿರುವೆ ನಾನು ಸ್ಮೃತಿಯಾಗಿರುವೆ ಜೀವನದ ಗತಿಯಾಗಿರುವೆ ನಿಲ್ಲದ ಸತ್ಯವಾಗಿರುವೆ ಆಗಿರುವೆ ನಾನು ಬೂದಿ ಎಲ್ಲರೂ ನಡೆದ ಹಾದಿ… ” # ನಾನು ಸತ್ತ ಮೇಲೆ… “ಬಂಡಾಯ” ಮತ್ತು “ಸ್ವಾಭಿಮಾನದ ಹಾಡು” ಬಂಡಾಯ ಚಳುವಳಿಯಿಂದ ಸ್ಫೂರ್ತಿ ಪಡೆದ ಕವಿತೆಗಳು. “ದಮನಕ್ಕೆ ಉತ್ತರ ಧಿಕ್ಕಾರ ಬಂಡಾಯ ದಬ್ಬಾಳಿಕೆಗೆ ಉತ್ತರ…” # ಬಂಡಾಯ… “ನೀ ಚೆಲ್ಲಿದ ಹಾದಿ ಮುಳ್ಳುಗಳ ನಿನ್ನೆಂಜಲ ನಿಗಿನಿಗಿ ಕೆಂಡದುಂಡೆಗಳ ತುಳಿದು ನಾ ದಾಟಬಲ್ಲೆ ನನ್ನ ಗುರಿ ನಾ ಮುಟ್ಟಬಲ್ಲೆ… ” # ಸ್ವಾಭಿಮಾನದ ಹಾಡು… ವಿಷಾದಯೋಗ ಹಿಂಸೆ ಮತ್ತು ಗಲಭೆಯ ದುಷ್ಪರಿಣಾಮದ ಕುರಿತ ಉತ್ತಮ ಕವಿತೆ. “ನಲವತ್ತೇಳರ ನರಕದ ನಾಡು ’ಹೇರಾಮ’ ಆರ್ತನದ ನಾಡು ಪುಡಿ ಪುಡಿಗೊಂಡ ಗೋಪುರದ ನಾಡು… ” # ವಿಷಾದಯೋಗ… “ಅಲಿಖಿತ ಕಾದಂಬರಿ ನಾಯಕನ ಕವಿತೆ” ಮತ್ತು “ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ” ಕವಿತೆಗಳು ಸಾಮಾನ್ಯರ ಅಸಮಾನ್ಯತೆಯನ್ನು ಗುರುತಿಸಿದೆ. ಈ ‘ಲೈನ್ ಮನ್ ಮಡಿವಾಳ ಬೀಮಪ್ಪ’ ಕವಿತೆ ನನಗಂತೂ ಇವರು ತಮ್ಮ ಸಹೋದ್ಯೋಗಿಗಳು ಮತ್ತು ಒಟ್ಟಾರೆ ಕೆಇಬಿಯ ಅಧಿಕಾರ ರಹಿತ ಕೆಲಸಗಾರರ ಬಗೆಗೆ ಸತೀಶ ಕುಲಕರ್ಣಿರಿಗೆ ಇದ್ದ ಮಾನವೀಯ ಮಮಕಾರ ಮತ್ತು ಕೆಇಬಿ ಕೆಲಸಗಾರರ ಮೇಲಿನ ಅಭಿಮಾನವನ್ನು ತೋರಿಸಿತು. “ಮೂಡಿಲ್ಲ ಅಕ್ಷರಕ್ಷರಗಳಲಿ, ಬದುಕಿಲ್ಲ, ಸತ್ತಿಲ್ಲ ಅನನ್ಯದವತಾರವೆ ಓ ಶ್ರೀ ಸಾಮಾನ್ಯ, ಸತ್ಯದ ಸೂತ್ರ ನಾಯಕ ನೀನು… ” # ಅಲಿಖಿತ ಕಾದಂಬರಿಯ ನಾಯಕ… “ಹಾದಿ ಹೆಣವಾದ ಬೀದಿ ದೀಪಗಳ ದೊರೆಯೆ ಬೆಳಕು ಕೊಟ್ಟು, ಕತ್ತಲೆಯ ನೀ ಸೇರಿದಿಯೆ?….. ” # ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ… ಇದು ತಮ್ಮ ಕಾಯಕವನ್ನು ಇಷ್ಟಪಡುವ ಮತ್ತು ಕೆಳಹಂತದ ನೌಕರರ‌ ಬಗೆಗಿನ ಮಾನವೀಯ ಪ್ರೀತಿ, ಕಾಳಜಿ ಮತ್ತು ಸಹಜ ‘ಲೈನ್ ಮನ್’ಗಳ ಕಷ್ಟದ ಕೆಲಸದ ಅನುಕಂಪವನ್ನು ಎತ್ತಿ ತೋರಿಸುತ್ತದೆ. “ನನ್ನಪ್ಪ”, “ಉಳಿದ ನೆನಪು” ಮತ್ತು “ಗುರುಗಳು ಸತ್ತ ಮುಂಜಾನೆ” ಮಾನವೀಯ ಸಂಬಂಧಗಳ ಕುರಿತ ಕವಿತೆಗಳಾಗಿದ್ದು, ಆ ನೆನಪುಗಳೇ ಕವಿತೆಗಳಾಗಿವೆ. “ನಾಲ್ಕು ಮಕ್ಕಳಿಗೆ ನೂರು ಕನಸು ಕೊಟ್ಟ ಸಾವು ಬರುವತನಕ ಬಿಳಿ ಅಂಗಿ ಪೈಜಾಮು ತೊಟ್ಟ ನನ್ನ ಆ ಬಡ ಅಪ್ಪ…” # ನನ್ನಪ್ಪ… “ಕೆಂಬೆಂಕಿ, ಸುಡುವ ಒಲೆಯ ಮುಂದೆ ಕೂತ ಅವ್ವನ, ಅದೆಷ್ಟು ಕನಸುಗಳು ಹಾಗೆಯೆ ಉರಿದು ಬೂದಿಯಾಗಿ ಹೋಗಿರಲಿಕ್ಕಿಲ್ಲ…… ” # ಉಳಿದ ನೆನಪು… “ಛಡಿ ಏಟಕೊಟ್ಟ ಮಾಸ್ತರು, ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು, ಸಾಲಿ ಗ್ರೌಂಡಿನ್ಯಾಗ ಮೂಲಿಗೆ ನಿಂತು ನಮ್ಮಾಟಾ ನೋಡಿದ ಮಾಸ್ತರು, ಅಕ್ಷರ ಏಣಿ ಹತ್ತಿಸಿ ಜೀವನದ ದೂರ ತೋರಿಸಿದ ಮಾಸ್ತರು, ಮನಿ ಮರ್ತು, ಮಕ್ಕಳ ಮರತು ನಮ್ಮನ್ನ ಮಕ್ಕಳಂತ ತಿಳಕೊಂಡ ಮಾಸ್ತರು ಎಲ್ಲಾ ನೆನಪಾದವು ದೂರದಿಂದ ನೋಡಿದೆ. ಮಾಸ್ತರ ಮನಿ ತುಂಬ ಮಂದಿ ಬಾಳಿತ್ತು, ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು…” # ಗುರುಗಳು ಸತ್ತ ಮುಂಜಾನೆ… “ನಗರ ಮೈ ಮುರಿಯುತ್ತಿದೆ” ನಗರೀಕರಣದ ಪೈಶಾಚಿಕತೆ ಯಾವ ಮಟ್ಟಕ್ಕೆ ಬದುಕನ್ನು ದುಸ್ತರ ಮಾಡಿದೆಯೆಂಬುದರ ಕುರಿತ ಕವಿತೆ. “ಅಮೇರಿಕಾ” ಬಂಡವಾಳಶಾಹಿ ರಾಷ್ಟ್ರಗಳ ದುರಾಸೆಯನ್ನು ಅಭಿವ್ಯಕ್ತಿಸಿದೆ. “ಕಂಪನಿ ಸವಾಲ್”, “ಎಲ್ಲಿಯೋ ದೂರದಲ್ಲಿ”, “ಮತ್ತೊಂದು ಬೆಳಕು”, “ಬೆಳ್ತನಕಾ” ಮತ್ತು “ಯುದ್ಧ ಶುರು ಆತೇನು? ಇವು ಸತೀಶ ಕುಲಕರ್ಣಿಯವರ ವಿಶಿಷ್ಟವಾದ ಮಾನವೀಯ ಸಹಜ ಕವಿತೆಗಳು. “ಮಹಾಭಾರತದ ಆ ಹಕ್ಕಿ ”ಬಹುಹಿಂದಿನಿಂದ ಬಂದ ಅರ್ಜುನ, ಏಕಲವ್ಯರ ರೂಪಕದೊಂದಿಗೆ ಗೆದ್ದವರ ಕಥೆಯನ್ನು ಸಂಭ್ರಮದಿಂದ ಹೇಳುವುದನ್ನು ಪ್ರಶ್ನಿಸುತ್ತದೆ. “ಕವಿಯಾಗಿ ನಾನೇಕೆ ಒಂದು ಪ್ರಶ್ನೆ ಕೇಳಬಾರದು ಯಾಕೆ, ಆ ಪುಟ್ಟ ಹಕ್ಕಿ ಆಕಾಶಕ್ಕೆ ಗಕ್ಕನೆ ಹಾರಿಹೋಗಬಾರದು ಯಾಕೆ, ಆ ಬಾಣದ ಗುರಿ ತಪ್ಪಬಾರದು ಹೇಳಿ ನೀವೇ ಹೇಳಿ…” # ಮಹಾಭಾರತದ ಆ ಹಕ್ಕಿ… “ಕಟ್ಟತೇವ ನಾವು” ಮತ್ತು “ಗಾಂಧೀಗಿಡ” ಕವಿತೆಗಳಲ್ಲಿ “ಕಟ್ಟತೇವ ನಾವು” ಬಂಡಾಯದ ಕ್ರಾಂತಿಗೀತೆಯಾಗಿದೆ. ಅದರಂತೆಯೇ ಆ ಕ್ರಾಂತಿಯಯನ್ನು ಬಯಸುವ ಕವನವಾಗಿದೆ. “ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ. ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ ನಾವು ಕನಸ ಕಟ್ಟತೇವ ನಾವು ಮನಸು ಕಟ್ಟತೇವ…” # ಕಟ್ಟತೇವ ನಾವು… “ಈಗ ನೆರಳಿಲ್ಲ ನೆಲಕ್ಕೆ ಅರಳಿಲ್ಲ ಹೂವುಗಳು ಸತ್ತ ನೆಲದ ಸತ್ವ ಕುಡಿದ ಗಿಡ ಹಣ್ಣು ಕೊಟ್ಟಿಲ್ಲ ಮೂಕ ಕಾವ್ಯದ ಪ್ರತೀಕದ ಗಿಡ ನಿತ್ಯ ಕೊಡಲಿಗೆ ಬಡವರಿಗೆ ಚಕ್ಕೆ ಕೊಡುವ ಗಾಂಧೀಗಿಡ ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗುಹುದೆ ಹೇಳು ಗಾಂಧೀಗಿಡ…” # ‘ಗಾಂಧೀಗಿಡ’… ಆಧುನಿಕ ಕನ್ನಡ ಕಾವ್ಯಕ್ಕೆ ಅನೇಕ ವಿಶಿಷ್ಟ ಕವಿತೆಗಳನ್ನು ನೀಡಿರುವ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಈ ವರೆಗೂ ಸೂಕ್ತ ವಿಮರ್ಶೆ ಸಂದಿಲ್ಲ. ಆದರೂ ಅವರ ಕಾವ್ಯ ಜನಮನದಲ್ಲಿ ಹಾಸುಹೊಕ್ಕಾಗಿಯೇ ಇದೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ತಮ್ಮ ಮುನ್ನುಡಿಯ ಮೂಲಕ ಒಟ್ಟಾರೆ ಈ ಕವನ ಸಂಕಲನವಾದ ‘ಸಮಯಾಂತರ’ ನ್ಯಾಯ ಒದಗಿಸಿದ್ದಾರೆ. ನಂಗಲಿಯವರು ಹೇಳಿದಂತೆ ಸತೀಶ ಕುಲಕರ್ಣಿಯವರು ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂವೇ ಸರಿಯೆಂಬುದು ನನ್ನದೂ ಅಭಿಪ್ರಾಯ..! ********************* ಕೆ.ಶಿವು.ಲಕ್ಕಣ್ಣವರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯಗಳು

ನಮ್ಮೂರ ಮಣ್ಣಿನಲಿ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಶಾಂತೇಶ ಪ್ರಕಾಶನ, ಧಾರವಾಡ ಪುಟ : ೧೦೨ ಬೆಲೆ : ₹ ೮೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB000400 “ಕೊರೊನಾ ಜೊತೆಗೆ ಶಾಲಾಬದುಕು” ಲೇಖಕರು: ಡಾ.ಪ್ರಸನ್ನ ಹೆಗಡೆ ಮೈಸೂರುಪುಟಗಳು 176ಬೆಲೆ 150/ಪ್ರಕಾಶಕರ ಹೆಸರು: ಲೇಖಕ ಪ್ರಕಾಶಕರುವಿಳಾಸ. ನಂಬರ್ ೨೦. ಐದನೇ ಕ್ರಾಸ್. ಬ್ಯಾಂಕರ್ಸ ಕಾಲೋನಿ.ಬೋಗಾಧಿ ಮೈಸೂರು 570026.ಪೋನ್ ನಂಬರ್ 9844355941ಬ್ಯಾಂಕ್ ಅಕೌಂಟ್ ನಂಬರ್‌.Bank account detailsPrasanna HegdeSyndicate bank.marimallappa college BranchAccount number 17152200003319Ifsc code SYNB0001715 ಮುಸ್ಸಂಜೆಯ ನೋಟ ಪ್ರಕಾರ : ಕವನ ಸಂಕಲನಲೇಖಕರು : ಅರುಣ ರಾವ್ಬೆಲೆ : ೬೦ ರೂಪಾಯಿಗಳುಪುಟಗಳು : ೬೦ ಕೃತಿಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ Aruna RaoNo. 22, ‘kanakadhara’,Sourobha orchard,Thigalarapalaya main road,Andrahalli main road,Land mark: Near kalikamba timbers & plywoods.Bangalore 560091 ph: 9901075235, 9449133457 ಹಣ ಜಮಾವಣೆ ಮಾಡಬೇಕಾದ ಖಾತೆಯ ವಿವರ:Aruna T.GA/c no. 1174131000134IFSC code: CNRB0001174 ಮೈರಾ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಚೇತನ ಪ್ರಕಾಶನ, ಹುಬ್ಬಳ್ಳಿ ಪುಟ : ೯೮ ಬೆಲೆ : ₹ ೧೦೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB0004006

ಪುಸ್ತಕ ಪರಿಚಯಗಳು Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನಲಿವಿನ ನಾಲಗೆ (ಪ್ರಬಂಧ ಸಂಕಲನ) ನಲಿವಿನ ನಾಲಗೆ ಪುಸ್ತಕದ ಹೆಸರು:ನಲಿವಿನ ನಾಲಗೆ(ಪ್ರಬಂಧ ಸಂಕಲನ)ಲೇಖಕರ ಹೆಸರು:ಸುಮಾವೀಣಾಪುಟಗಳ ಸಂಖ್ಯೆ:128–ಬೆಲೆ-120ರೂಪ್ರಕಾಶಕರ ಹೆಸರು:ಪರಶಿವಪ್ಪ,ಸ್ನೇಹ ಬುಕ್ ಹೌಸ್, ಬೆಂಗಳೂರುಪುಸ್ತಕ ದೊರೆಯುವ ಸ್ಥಳ:www.mybookadda.netಅಂಚೆಯಲ್ಲಿಪುಸ್ತಕ ತರಿಸಿಕೊಳ್ಳಲು ಹಣ ಹಾಕಬೇಕಾದ ಬ್ಯಾಂಕ್ ಖಾತೆ ವಿವರ;Ac No3211142353,IFSC code SBIN0011259

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಮೌನ ಮಂದಾರ ಮೌನ ಮಂದಾರ ಕರ್ತೃ_ ವಾಣಿಮಹೇಶ್ಪ್ರಕಾಶಕರು_ ಜ್ಞಾನಮುದ್ರ ಪ್ರಕಾಶನಲಿಂಗರಾಜು ಬಿ.ಎಲ್.ಹೊಳಲುಮಂಡ್ಯ_571402 ಪುಸ್ತಕದಬೆಲೆ-85ರೂಪಾಯಿ ಸ್ವ ವಿಳಾಸ_ವಾಣಿಮಹೇಶ್w/oಮಹೇಶ್ ಹೆಚ್. ಆರ್.ನಂ. ಎ.ಆರ್.613 ಮೊದಲನೇ ಮುಖ್ಯ ರಸ್ತೆ ನಾಲ್ಕನೇ ಅಡ್ಡ ರಸ್ತೆ ಸಾಲಗಾಮೆ ಗೇಟ್ ಸರಸ್ವತಿ ಪುರಂ ಹಾಸನ_573201 PH: 7975353693 ಬ್ಯಾಂಕ್ ಖಾತೆ ನಂ_37614898049IFSC_SBIN0040956 ಇದು ಸಾಧನೆಯ ಸಂಗಮದ ಅನವರತ. ಬೇಕಾದ್ದವು ಭಾವನೆಯಾಗಿ , ಸೋತು ನಿಂತ ನೆನಪುಗಳು ಮೌನ ಮಂದಾರವಾಗಿದೆ. ಕವಯತ್ರಿ ವಾಣಿಮಹೇಶ್ ಅವರ ಬರಹಗಳನ್ನು ಅಧ್ಯಯನ ಮಾಡಿದಾಗ ಸರಳ ಅಕ್ಷರಗಳಿಂದ ಜನನಾಡಿಗೆ ಸರಾಗವಾಗಿ ಹಂಚುವುದರ ಮೂಲಕ ಹೊಸ ಅನುಭವವೂ ಆಯ್ತು. ಹೇಗೆಂದರೆ ಸರಳ ಅನ್ನುವುದನ್ನು ಸರಿಸಿ ಆಳವಾಗಿ ಹೋದಂತೆ ಹಲವಾರು ಕವಲೊಡೆಯಲು ಶುರುವಾಯಿತು. ನಾ ಕಂಡೆ ಆ ಮನವ , ಮಿಡಿವ ಹೂವಂತೆ , ನಾ ಕಂಡೆ ಆ ಮನವ ಆಳದ ಕಡಲಂತೆ. ನಲಿವ ಸ್ಪರ್ಷದಿಂದ ಹೊಸ ಅನುಭವ ಯಾನದಲ್ಲಿ ಮುಳುಗಿ ಹೋದೆ. ಸಾಹಿತ್ಯ ಜಗತ್ತನ್ನು ಸರಳವಾಗಿ ಪರಿಚಯಿಸುವ ಮೂಲಕ ಹೊಸ ಸಂಶೋಧನೆ ಮಾಡಿದ್ದಾರೆ. ಆಳವಾಗಿ ಮುಳುಗಿ ನೋಡಿದಾಗ ಸರಳ ಭಾವನೆಯಲ್ಲೂ ಸಾವಿರ ಸಾರ ತುಂಬಿದ ಅನುಭವ ಸಂದೇಶ ಉಕ್ಕಿ ಬಂತು. ಅವರ ಕವನಗಳಿಂದ ಕಣ್ತುಂಬಿ ಬಂದದ್ದಂತೂ ನಿಜ. ಬದುಕಿನ ತ್ಯಾಗ ವೈರಾಗ್ಯ ಮರೆಯಲು ಮನಸ್ಸು ಮೂಕ ಪ್ರಶ್ನೆಯಾದಾಗ ಮಿಡಿದ ಹೂವೇ ಮೌನ ಮಂದಾರ. ಓದುಗರಿಗೆ ಉತ್ತಮ ಅಭಿರುಚಿಕರವಾಗಿದೆ ಎಂದು ಮನದಾಳದ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ. ——————————————————–

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕಸಂಗಾತಿ

ಹೋಗಿ ಬಾ ಮಗಳೆ. ಹೋಗಿ ಬಾ ಮಗಳೇ ಲೇಖಕರು: ಡಾ||ವಿರೂಪಾಕ್ಷ ದೇವರಮನೆಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್ಪುಸ್ತಕದ ಬೆಲೆ: ೧೫೦.೦೦ರೂ ಡಾ||ವಿರೂಪಾಕ್ಷ ದೇವರಮನೆಯವರಿಂದ ರಚಿತವಾದ “ಹೋಗಿ ಬಾ ಮಗಳೇ” ಜವಾಬ್ದಾರಿಯುತ ಅಪ್ಪನೊಬ್ಬ ತನ್ನ ಮಗಳಿಗೆ ವೈವಾಹಿಕ ಜೀವನದ ಅನೇಕ ಆಗು ಹೋಗುಗಳ ಬಗ್ಗೆ ಹಿತವಾಗಿ ಮುಖಾಮುಖಿ ಮಾತನಾಡಿದಂತೆ ತೋರುವ ಪುಸ್ತಕ ರೂಪದ ಕೈಗನ್ನಡಿ. ಮದುವೆ ಎನ್ನುವ ಮೂರಕ್ಷರಗಳೊಂದಿಗೆ ಆರಂಭವಾಗುವ ಎರಡು ವಿಭಿನ್ನ ಕುಟುಂಬಗಳ ನಡುವಿನ ಸೇತುವೆ. ಯಾವುದೇ ಮದುವೆಯ ಸಂದರ್ಭದಲ್ಲಿ ಎರಡೂ ಕಡೆ ಕೊಂಚವಾದರೂ ತಕರಾರಿಲ್ಲದೇ ಕಾರ್ಯಕ್ರಮ ನೆರವೇರದು. ಮದುವೆ ಗಂಡು ಹೆಣ್ಣಿನ ನಡುವೆ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಆತಂಕದ ವಿಷಯವೇ. ಸಂಭ್ರಮದ ಜೊತೆಗೆ ಭವಿಷ್ಯದ ಕಾತರವು ಬೆರೆತಿರುತ್ತದೆ. ಪ್ರಸ್ತುತ ಪುಸ್ತಕದ ಲೇಖಕರು ತಮ್ಮ ಬಳಿ ಬರುವ ಬಹಳಷ್ಟು ಪಾತ್ರಗಳ ಮೂಲಕ ಜೀವನದ ವಿವಿಧ ಮಜಲುಗಳಲ್ಲಿ ಎದುರಾಗಬಹುದಾದ ಘಟನೆಗಳ ಸವಿಸ್ತಾರ ವಿವರಣೆ ಹಾಗೂ ಸೂಕ್ತ ಪರಿಹಾರವನ್ನು ನೀಡಿದ್ದಾರೆ. ಹೆಣ್ಣಾಗಿ ನಾನೂ ಕೂಡಾ ಮತ್ತೊಂದು ಮನೆಗೆ ಬಂದವಳು ಹಾಗೂ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಸಾಕಷ್ಟು ಪರದಾಡಿದವಳು. ಅಪ್ಪ -ಅಮ್ಮನ ಮನೆಗೆ ವಿಭಿನ್ನವಾದ ವಾತಾವರಣ , ಒಂದು ರೀತಿಯ ಅಳುಕು . ಸಾಮಾನ್ಯವಾಗಿ ಎಲ್ಲಾ ಹೆಣ್ಣು ಮಕ್ಕಳಿಗೂ ಇದೇ ರೀತಿ. ಸೊಸೆ ಗಂಡನ ಮನೆಯಲ್ಲಿ  ಮದುವೆಯ ಮೊದಲಿನಿಂದಲೂ ಸೊಸೆಯೇ ಆಗಿರುತ್ತಾಳೆ. ಆದರೆ ಅಳಿಯನೆಂದರೆ ಹೆಂಡತಿಯ ಮನೆಯಲ್ಲಿ ವಿಶೇಷ ಗೌರವ, ಆದರಾತಿಥ್ಯ. ಬೇರೊಂದು ಮನೆಗೆ ಹೊಂದಿಕೊಳ್ಳುವಾಗ ಸಾಕಷ್ಟು ಸಮಸ್ಯೆಗಳಿರುತ್ತವೆ. ಆದರೆ ಯಾರೂ ಸಮಯದ ಅವಕಾಶವೇ ಕೊಡುವುದಿಲ್ಲ.  ಲೇಖಕರು ಈಗಿನ ಸಮಾಜದಲ್ಲಿ ಮುರಿದುಬೀಳುವ ಅನೇಕ ವಿವಾಹ ಹಾಗೂ ಅವುಗಳ ತೊಳಲಾಟಗಳ ಮೂಲಕ ಮದುವೆ ಎಂದರೆ ಸಮಸ್ಯೆಯಲ್ಲ,‌ ಅದನ್ನು ನಿಭಾಯಿಸಲು ಒಂದಷ್ಟು ತಯಾರಿ ಮಾಡಿಸುವುದು ಹೆತ್ತವರಿಗೂ, ಗಂಡಿನ ಕಡೆಯವರಿಗೂ ಸೇರಿರುತ್ತದೆ. ಲೇಖಕರು ತಮ್ಮ ಈ ಪುಸ್ತಕ ರೂಪದ ದಾರಿದೀಪವನ್ನು ನಮಗೆ ಕೊಡುಗೆಯಾಗಿ ನೀಡಿದ್ದಾರೆ. ೨೫ ಘಟಕಗಳು ಇದರಲ್ಲಿ ಸೇರಿದ್ದು , ನಮ್ಮನ್ನು ಓದಿಸಿಕೊಂಡು ಹೋಗುವ ಮಾರ್ಗದಲ್ಲಿ ಸ್ವ ಅನುಭವಗಳು , ಬೇಸರಿಕೆಗಳು, ಸಂಕಟಗಳು ಇಣುಕುತ್ತವೆ. ಮದುವೆಯ ವಯಸ್ಸಿನ ಕನಸಿನಿಂದ ಹಿಡಿದು ಮಕ್ಕಳ ಜವಾಬ್ದಾರಿ, ಮನೆಯವರೊಂದಿಗೆ ಹೊಂದಾಣಿಕೆ ಹೀಗೆ ಎಲ್ಲವನ್ನೂ ಸಾದೃಶ್ಯಗೊಳಿಸಿದ್ದಾರೆ. ಪತಿ ಹಾಗೂ ಪತ್ನಿ ಯಾರೂ ಹೆಚ್ಚು ಕಡಿಮೆ ಎಂಬ ತರ್ಕ ಕ್ಕೆ ಹೋಗಲೇಬಾರದೆಂಬ ಕಿವಿಮಾತು, ದಂಪತಿಗಳ ನಡುವೆ ಅನ್ಯರ ಪ್ರವೇಶ ಎಂದಿಗೂ ನಿಷಿದ್ಧ , ಅಪಾರ್ಥ ತರುವ ಮೌನಗಳಿಗಿಂತ ಅರ್ಥ ವಿರದ ಜಗಳಗಳೇ ವಾಸಿ, ಕ್ಷಮಿಸುವ ಮರೆಯುವ ಗುಣಗಳನ್ನು ಹೊಂದುವ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಬದುಕು ಕಟ್ಟಲು ಅಪ್ಪನಂಥ ಗೆಳೆಯನಿಂದ ಸಲಹೆ ಈ ಪುಸ್ತಕ ಎನಿಸಿತು. ಇಂಥ ಘಟನೆಗಳು ಸಾಮಾನ್ಯವಾಗಿ ಎನಿಸಿದರೂ ನಮಗೆ ಕಲಿಯುವ ಪಾಠ ಇದರಲ್ಲಿ ಅಡಗಿದೆ. ಅವಳಿಗೆ… ಅವನಿಗಿರದ ಪ್ರಾಕೃತಿಕ ಸವಾಲುಗಳು! ಅವನಿಗೆ .. ಅವಳಿಗಿರದ ಜವಾಬ್ದಾರಿಗಳು! ಎಂಥಾ ಅದ್ಭುತ ಅಲ್ಲವೇ  ಡಾಕ್ಟರ್ ಅವರ ಈ ನುಡಿಗಳು. ಹೆಣ್ಣು ಹಾಗೂ ಗಂಡು ವಿಭಿನ್ನ ದೈಹಿಕ, ಮಾನಸಿಕ ಕ್ಷಮತೆಯನ್ನು ಪಡೆದವರು. ಅವಳಿರಲಿ, ಅವನಿರಲಿ ಇಬ್ಬರೂ ಒಂದೇ ಆದರೂ ಭಿನ್ನ. ಆರೋಪಗಳ ಸರಮಾಲೆಯ ಮತ್ತೊಬ್ಬರಿಗೆ ಹಾಕುವ ಮುನ್ನ ಸ್ವ ವಿಮರ್ಶೆಗೆ ಅವಕಾಶ ನೀಡುತ್ತದೆ. ಈ ನಿಟ್ಟಿನಲ್ಲಿ ಮನವ ತಟ್ಟಿದ ಪುಸ್ತಕ. ಥ್ಯಾಂಕ್ಯೂ ಡಾಕ್ಟರ್. ****************************************** ಸರಿತಾ ಮಧು

ಪುಸ್ತಕಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಚರಿತ್ರೆಯ ಪುಟಗಳ ಕಟ್ಟ ಹೊತ್ತ ಪರಿಸರದ ಕಥಾ ಮಾಲೆ. ಮಧ್ಯಘಟ್ಟ – ಕಾದಂಬರಿಶಿವಾನಂದ ಕಳವೆಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪರಿಸರದ ಬಗೆಗಿನ ಕಾಳಜಿ ಮತ್ತು ಜ್ಞಾನ, ಅಪಾರ ತಿರುಗಾಟ, ಗ್ರಾಮೀಣರ ಒಡನಾಟ ಮತ್ತು ಅಧ್ಯಯನಪೂರ್ಣ ಬರಹಗಳ ಮೂಲಕ ಹೆಸರಾದವರು ಪತ್ರಕರ್ತ ಶಿವಾನಂದ ಕಳವೆ. ಶಿರಸಿಯ ಬಳಿಯ ಕಳವೆಯಲ್ಲಿ ಅವರ ನೇತೃತ್ವದ ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ, ಕಾನ್ಮನೆ – ಪರಿಸರಾಸಕ್ತರ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಆಸಕ್ತಿಯ ಕೇಂದ್ರವಾಗಿದೆ. ಅವರು ಈ ಹೊತ್ತಿಗೆಯಲ್ಲಿ ಮತ್ತಿಘಟ್ಟ ಎಂಬ ಕಾನನದ ನಡುವಿನ ಪ್ರದೇಶದ ಕಥನವನ್ನು ಹೇಳಿದ್ದಾರೆ. ಜನಪದ ಸಂಸ್ಕೃತಿ ಮತ್ತು ಪ್ರಕೃತಿಯ ಜೊತೆ ಸಂವಾದಿಯಾದ ವ್ಯಕ್ತಿಯು ಮಾತ್ರ ಇಂತಹದೊಂದು ವಿಶಿಷ್ಟವಾದ ಕೃತಿಯನ್ನು ರಚಿಸಬಲ್ಲರು. ಅವರ ಸ್ಮೃತಿಪಟಲದಲ್ಲಿ ಇದರಿಂದ ಮೂಡಿರುವ ಘಟನೆಗಳು, ಪಾತ್ರಗಳೊಂದಿಗೆ ಸಮ್ಮಿಳಿತಗೊಂಡು ಚೆಂದನೆಯ ಕೊಲಾಜ್ ಇಲ್ಲಿ ನಿರ್ಮಾಣಗೊಂಡಿದೆ. ಈ ಪುಸ್ತಕದ ತಮ್ಮ ಮನದ ಮಾತಿನಲ್ಲಿ, ಹೋಮ್ ಸಿಕ್ನೆಸ್ ಅನ್ನು ‘ಹುಟ್ಟೂರಿನ ಹಂಬಲ’ ಎಂದು ಅನುವಾದಿಸುವಲ್ಲೇ ಶಿವಾನಂದರ ಸಕಾರಾತ್ಮಕ ನೋಟದ ನಿಲುವು, ಒಲವು ಓದುಗನಿಗೆ ದಕ್ಕುತ್ತದೆ. ‌ಕಳವೆಯವರ ಜೇನಿನ ಕುರಿತು ಆಸಕ್ತಿ, ನಾಟಿ ವೈದ್ಯರ ಸಮೀಕ್ಷೆ, ಕಾಡಿನ ಪ್ರೀತಿ, ಪ್ರಾಣಿಗಳೆಡೆಗಿನ ಪ್ರೇಮ ( ಗೌರಿ ಜಿಂಕೆಯ ಆತ್ಮಕಥೆ ಕೃತಿ), ಜೀವಲೋಕದ ಸಸ್ಯಗಳ ಖಜಾನೆಯ ಕುತೂಹಲ ಮತ್ತು ಭಾಷೆಯೆಡೆಗಿನ ಮಮತೆಗಳ ಒಟ್ಟೂ ಮೊತ್ತವೇ ಕಾದಂಬರಿಯಾಗಿರಬಹುದು. ಸ್ಥಳೀಯ ಭಾಷೆ, ನಿರೂಪಣೆ ಮತ್ತು ಕಥೆಯ ಬಂಧ ಈ ಕಾದಂಬರಿಯ ಶಕ್ತಿಯಾಗಿದೆ. ಇಲ್ಲಿನ ನಾಣ್ಣುಡಿಗಳು, ತಮಾಷೆಗಳು, ಆರ್ದ್ರ ಘಟನೆಗಳು ಗಮನ ಸೆಳೆಯುತ್ತವೆ. ‘ಪರೂರ ಹೊಳೆ ಮತ್ತು ಊರ ಸ್ಮಶಾನ ಹೆದರಿಸುತ್ತದೆ’ ಎಂದು ಹೇಳುತ್ತಾ, ಕಥನ ಮಾರ್ಗದ ‘ದಾಟುಸಾಲು’ ಹುಡುಕುತ್ತಿದ್ದೇನೆ ಎಂಬ ವಿನಮ್ರತೆಯಿಂದ ಕಳವೆಯವರು, ಕೇರಳದ ಕೊಟ್ಟಾಯಂ ಕೋಶಾಂಬುಲಿಯಿಂದ ನೂರಾರು ಮೈಲಿ ದೂರವನ್ನು ಹತ್ತು ದಿನಗಳ ಪರ್ಯಂತ ಒಂಬತ್ತು ನದಿ ದಾಟಿ ಕಾಲ್ನಡಿಗೆಯಲ್ಲಿ ಶಿರಸಿ ಸಮೀಪದ ಮಧ್ಯಘಟ್ಟಕ್ಕೆ, ಮಗಳು ಶ್ರೀದೇವಿಯನ್ನು ಕಾಣಲು ಬರುವ ಭೂದೇವಿಯ ಪ್ರಯಾಣದಿಂದ ಕಾದಂಬರಿಯನ್ನು ಆರಂಭಿಸುತ್ತಾರೆ. ಶಿರಸಿ ಭಾಗದಲ್ಲಿ ಈಗ ಮತ್ತೆ ಶುರುವಾಗಿರುವಂತೆ, ಎಪ್ಪತ್ತು ಎಂಬತ್ತು ವರ್ಷಗಳ ಹಿಂದೆ ‘ತಿರಾ’ ( ವಧುದಕ್ಷಿಣೆ) ತೆತ್ತು ಲಗ್ನವಾಗುವ ಪ್ರಸಂಗ ಇದ್ದಾಗ ಗೋಪಯ್ಯ ಹೆಗಡೆ ಕುಂಬಳದ ಹೆಣ್ಣು ಶ್ರೀದೇವಿಯನ್ನು ವರಿಸುತ್ತಾರೆ. ಮದುವೆಯಾಗುವ ಹಂಬಲಕ್ಕೆ ಬಿದ್ದು ಸಾಲಮಾಡಿ ಜಮೀನು ಕಳೆದುಕೊಂಡವರ ಉಲ್ಲೇಖ ಕೂಡ ಇಲ್ಲಿ ಬರುತ್ತದೆ. ಒಂದು ಕೊಳಗ ಗೋಟಡಿಕೆಗೆ ಮಗುವನ್ನು ನೀಡುವ ತಾಯಿಯ ಚಿತ್ರಣ ಆ ಕಾಲದ ಪರಿಸ್ಥಿತಿಯ ಭೀಕರತೆಯನ್ನು ಸೂಚ್ಯವಾಗಿ ಹೇಳುತ್ತದೆ. ತಿರಸಿ (ಶಿರಸಿ) ಯಲ್ಲಿ ಮನುಷ್ಯರ ತಿಂಬುವ ಜನ ಇದ್ವಡ ಎಂಬ ಮಾತು ಕೇಳಿ ಹೊರಟ ಭೂದೇವಿಯ ಪ್ರಯಾಣದ ಜೊತೆಗೆ ಪುಡಿಯಮ್ಮ ಎಂಬ ನಸ್ಯ ಸೇದುವ ಕುಂಬಳೆ ಕಡೆಯ ಮತ್ತೊಂದು ಹೆಂಗಸಿನ ಕಥೆ ಸಾಥ್ ಪಡೆದು ಸಾಗುತ್ತದೆ. ಮಧ್ಯಘಟ್ಟದಲ್ಲಿ ಭತ್ತದ ಗದ್ದೆಗಳಿಲ್ಲದೇ ಅಕ್ಕಿ ದುಬಾರಿ. ಹಾಗಾಗಿ ಅವರು ಹಲಸು ಮತ್ತು ಬಾಳೆಯನ್ನು ಅವಲಂಬಿಸಿದ್ದ ಸನ್ನಿವೇಶದ ಚಿತ್ರಣ ಕಾಡುತ್ತದೆ. ಕೇಮು ಮರಾಠಿ ಭೂದೇವಿಗೆ ಮಗಳ ಮನೆಗೆ ದಾರಿ ತೋರಿಸುವವ ಮಾತ್ರವಾಗದೇ, ಮಗುವಾಗದ ಶ್ರೀದೇವಿ ಮತ್ತು ಗೋಪಯ್ಯ ಹೆಗಡೆ ದಂಪತಿಗೆ ನಾಟಿ ಮದ್ದು ನೀಡುವ ಆಪತ್ಬಾಂಧವನೂ ಆಗುತ್ತಾನೆ. ಹೀಗೆ ಈ ಕೃತಿ ಹವ್ಯಕರ ಬದುಕಿನ ಕಥನವಾಗದೇ ಗೌಳಿ, ಸಿದ್ಧಿ, ಕುಣಬಿ,ಕರೆವೊಕ್ಕಲಿಗ, ಕುಮರಿ ಮರಾಠಿಗರ ಜೀವನಗಾಥೆಯೂ ಆಗಿ ಗಮನ ಸೆಳೆಯುತ್ತದೆ. ದೇವಕಾನಿನ ನೀರ ನಡಿಗೆಯ ಜೊತೆಗೆ ಹೊಸಕಟ್ಟಿನ ಹೆರಿಗಮನೆಯ ದೃಶ್ಯವನ್ನು ನೋಡುವುದೇ ಇಲ್ಲಿಯ ಸೊಗಸಾಗಿದೆ. ಅಮಟೆ ಮರವನ್ನು ಮನುಷ್ಯನ ಬದುಕಿಗೆ ಹೋಲಿಸಿ ಮಾತನಾಡುವ ರೀತಿಯೇ ಕಾಡುನೆಲೆಯ ಮಧ್ಯಘಟ್ಟದ ಅದ್ಭುತವೆಂದು ಕೃತಿಕಾರ ಪಾತ್ರದ ಮೂಲಕ ಹೇಳುವುದು ಸತ್ಯವೂ ಹೌದು. ಅದಕ್ಕೆ ಕೆಂಪೆತ್ತಿನ ಕಾಯಿಯಂತಹ ಹೆಸರುಗಳು ಸಾಕ್ಷಿ. ಮನೆಗೆ ಸೋಗೆ ಹೊಚ್ಚುವ ಕಂಬಳ, ಅಡಿಕೆ ಮರದಲ್ಲಿ ಕೊನೆಗೆ ಕೊಟ್ಟೆ ಕಟ್ಟುವ ಕಂಬಳ, ಆಲೆಮನೆ ಹಬ್ಬ; ಇವೆಲ್ಲ ಇಂದಿನ ದಿನಗಳಲ್ಲಿ ಇಲ್ಲವೇ ಆಗಿಹೋಗಿದ್ದರೂ, ಈ ಅಧ್ಯಾಯಗಳನ್ನು ಓದುವಾಗ ಕೃತಿಯ ಕಾಲದ ಸ್ತಂಭನ ಮಾಡುವುದು ಕಾದಂಬರಿಯ ಪರಿಣಾಮಕ್ಕೆ ಸಾಕ್ಷಿ!ಇದರಲ್ಲಿ ಬರುವ ಗಂಜಿ ಕುಳಿ ಪ್ರಸಂಗದಂತವು ಸಂಕಟವನ್ನುಂಟು ಮಾಡುತ್ತವೆ. ಗಮಯನ ಗಿಣ್ಣು, ಚಾಂದ್ ಷಾ ಶಿಕಾರಿ, ಹುಲಿಯಜ್ಜನ ಅವತಾರ, ನಳಿನಮನೆ ಬೆಟ್ಟದ ಹುಲಿ ಬೇಟೆ ಅಧ್ಯಾಯಗಳು ಬೆರಗನ್ನು ಮೂಡಿಸುತ್ತವೆ. ಗಿಡ್ಡೂ ಮರಾಠಿಯ ಸಾವು ಅಧಿಕಾರಶಾಹಿ ವ್ಯವಸ್ಥೆಯ ಕರಾಳ ಮುಖವನ್ನು ಬಯಲಿಗೆ ಎಳೆಯುತ್ತದೆ. ಚಾಂದ್ ಷಾ ತಾವೇ ಗುಂಡು ಹಾರಿಸಿಕೊಂಡು ಸಾಯುವ ಸನ್ನಿವೇಶದಲ್ಲಿ ಎದೆ ಝಲ್ ಎನ್ನುತ್ತದೆ. ಉಗ್ರಾಣಿ ಧರ್ಮನ ರಹಸ್ಯ ಶೋಧ ಮತ್ತು ಡೊಳ್ಳು ಹೊಟ್ಟೆಯ ಭಟ್ಟರ ಹಾವು ಅಧ್ಯಾಯಗಳು, ಹಾಸ್ಯದ ಧಾಟಿಯಲ್ಲಿ ಮನುಷ್ಯನ ಕ್ರೂರತೆಯನ್ನು ಬಿಚ್ಚಿಡುತ್ತವೆ.ತಾಂಮ್ರ ಕಲ್ಲಂಟೆಯ ಕುಂಟಭೂತ, ಗುಂಡಟ್ಲಕಾನಿನ ಗಿರಿಜಮ್ಮನ ಕಥೆ ಮತ್ತು ಆಲೆ ಬಯಲಿನ ದೆವ್ವಗಳು ನಮ್ಮನ್ನು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯುತ್ತವೆ. ಒಕ್ಕಲಿಗರ – ಮತ್ತಿಮರದ ಸಂಬಂಧ, ಕುಮರಿ ಮರಾಠಿಗರ – ತಾಳೆ ಮರ ಸಂಬಂಧ, ಕನ್ನೆಕುಡಿ, ಹಲಸು, ಅಪ್ಪೆ ಮಾವಿನ ಜೊತೆ ಹವ್ಯಕರ ಸಂಬಂಧ ಈ ಹೊತ್ತಿಗೆಯಲ್ಲಿ ಅಪರೂಪದ ಹೊಳಹನ್ನು ನೀಡುತ್ತದೆ. ‘ಕಾಡಲ್ಲಿ ಕಂಡಿದ್ದೆಲ್ಲ ಮುಟ್ಟಲಾಗ, ನೋಡಿದ್ದೆಲ್ಲ ಕೆದಕಲಾಗ’ ಎಂಬ ವರದಪ್ಪಣ್ಣನ ಮಾತು ಕೃತಿಯ ಆಶಯವೂ ಆಗಿದೆ. ಪಟಾನ್ಸ್ ರಾಮ, ವಾಚು ತಂದ ವೈದ್ಯರು, ಎತ್ತಿನ ಗಾಡಿಯ ಕಾಲಚಕ್ರ, ಕಲ್ಲಂಟೆಯ ಕಳ್ಳರ ಮಾಳ ಅಧ್ಯಾಯಗಳು ಮಧ್ಯಘಟ್ಟ ಪ್ರಗತಿಯ ದಾರಿಗೆ ತೆರೆದುಕೊಳ್ಳುತ್ತಾ ಹೋಗುವುದನ್ನು ಸೂಕ್ಷ್ಮವಾಗಿ ಹೇಳುತ್ತವೆ. ಕಾದಂಬರಿಯ ಕೊನೆಯಲ್ಲಿರುವ ಆಯ್ದ ಪದಗಳ ಅರ್ಥ, ಜೀವಲೋಕದ ಖಜಾನೆ, ಕೃಷಿ ಮೂಲದ ಸಸ್ಯಗಳು, ಕಾದಂಬರಿಯಲ್ಲಿ ಪ್ರಸ್ತಾಪಿಸಿದ ಪ್ರಾಣಿಗಳ ಪಟ್ಟಿ ಓದುಗನಿಗೆ ಅನುಕೂಲವಾಗುವಂತಿದೆ.ನೆನಪಿನ ಜೇನಿನ ರೊಟ್ಟಿನಿಂದ ಮಧುರವಾದ ತುಪ್ಪವನ್ನು ಆಸ್ವಾದಿಸಲು, ಪರಿಸರದ ಅಧ್ಯಯನ, ಜಾನಪದದ ಮಾಹಿತಿ ಕುರಿತು, ಅದೆಲ್ಲಕ್ಕಿಂತ ಮುಖ್ಯವಾಗಿ ರಸ ಸ್ಪುರಣೆಯ ದೃಷ್ಟಿಯಿಂದ ಓದಲೇಬೇಕಾದ ಮಹತ್ವದ ಕೃತಿ ‘ ಮಧ್ಯಘಟ್ಟ’ ಎಂದು ನಿಶ್ಚಿತವಾಗಿ ಹೇಳಬಹುದು.********************** ಡಾ. ಅಜಿತ್ ಹರೀಶಿ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಕವಿ ಶಿವಪ್ರಕಾಶ ಅವರ ಚೈತನ್ಯದ ಚಿಲುಮೆಯಾದ ಅಕ್ಕರೆಯ ಮಗಳು “ನೇರಿಶಾ”ಳ ಬಗೆಗೆ ಹೊಂದಿದ ಅಪಾರ ನಿರೀಕ್ಷೆ, ಭರವಸೆ, ವಾತ್ಸಲ್ಯ ಇಲ್ಲಿ ಕಾಣಬಹುದು.

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಹಸಿರಿನೆಡೆಗೆ ನಮ್ಮನ್ನು ನಡೆಸುವ ‘ಹೂ ಹಸಿರಿನ ಮಾತು’ ಹೂ ಹಸಿರಿನ ಮಾತುಲೇಖಕಿ : ಡಾ.ಎಲ್.ಸಿ.ಸುಮಿತ್ರಾಪ್ರಕಾಶಕರು : ಅಂಕಿತ ಪುಸ್ತಕ, ಬೆಂಗಳೂರುಪ್ರಕಟಣಾ ವರ್ಷ :೨೦೧೨ಪುಟಗಳು : ೯೬ ಬೆಲೆ : ರೂ.೧೨೦ ಹಿರಿಯ ಲೇಖಕಿ ಡಾ.ಎಲ್.ಸಿ.ಸುಮಿತ್ರಾ ಅವರ ‘ಹೂ ಹಸಿರಿನ ಮಾತು’ ಸಾರ್ವಕಾಲಿಕ ಪ್ರಸ್ತುತಿಯುಳ್ಳ ಒಂದು ಕೃತಿ.  ಎಲ್ಲೆಲ್ಲೂ ಕಾಡು ಕಡಿದು, ಗುಡ್ಡಗಳನ್ನು  ಅಗೆದು, ಗದ್ದೆಗಳನ್ನು ಮುಚ್ಚಿ ಕಾಂಕ್ರೀಟು ಕಾಡುಗಳನ್ನಾಗಿ ಪರಿವರ್ತಿಸಿ ನಾವು ಪ್ರಕೃತಿಯ ಮುನಿಸಿಗೆ  ತುತ್ತಾಗುತ್ತಿರುವ ಇಂದು ಎಚ್ಚೆತ್ತುಕೊಳ್ಳಬೇಕಾದ ಕಾಲ. ಬಂದಿರುವ ಇಂದಿನ ಸಂಧರ್ಭದಲ್ಲಿ ಪರಿಸರದ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರೂ ಓದಬೇಕಾದ ಕೃತಿಯಿದು. ಸಾಹಿತ್ಯದೊಂದಿಗೆ ಉದ್ಯಾನ ಕಲೆ ಮತ್ತು ಹಸಿರುಪ್ರಿಯತೆಗಳನ್ನೂ ಮೈಗೂಡಿಸಿಕೊಂಡಿರುವ ಮಲೆನಾಡಿನ ತೀರ್ಥಹಳ್ಳಿಯ ಸುಮಿತ್ರಾ ಅವರು ಸ್ವತಃ ಕಾಡುಮೇಡುಗಳನ್ನು ಸುತ್ತಿ ಅಳಿವಿನಂಚಿನಲ್ಲಿರುವ ಅಪರೂಪದ ಗಿಡಗಳ ಸುಂದರ ಚಿತ್ರಗಳನ್ನು ಕ್ಲಿಕ್ಕಿಸಿ ಸಸ್ಯಶಾಸ್ತ್ರಜ್ಞರೊಂದಿಗೆ ಚರ್ಚಿಸಿ ಪುಸ್ತಕಗಳನ್ನು ಪರಾಮರ್ಶಿಸಿ ಚಿಂತನೆ ನಡೆಸಿ  ಈ ಪುಸ್ತಕವನ್ನು ಬರೆದಿದ್ದಾರೆ. ಅವರ ನಿರೂಪಣೆಯಲ್ಲಿ ವೈಜ್ಞಾನಿಕ ವಿವರಗಳೊಂದಿಗೆ ಸಾಹಿತ್ಯದ ಸೊಗಡೂ ಇರುವುದರಿಂದ  ಬಹಳ ಖುಷಿಯಿಂದ ಓದಿಸಿಕೊಂಡು ಹೋಗುತ್ತದೆ. ‘ಹೂ ಹಸಿರಿನ ಮಾತಿ’ನಲ್ಲಿ ೨೩ ಜಾತಿಯ ಅಪರೂಪದ, ಪರಂಪರಾಗತ ಹಿನ್ನೆಲೆಯ ಸಸ್ಯಗಳ ಕುರಿತಾದ ವಿವರಗಳಿವೆ. ಹಲವು ಸಸ್ಯಗಳ ಉಪಪ್ರಭೇದಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ. ಪ್ರತಿಯೊಂದು ಗಿಡ-ಮರ-ಬಳ್ಳಿಗಳ ಮೂಲ, ಅವುಗಳ ಬೇರು-ಕಾಂಡ-ಕೊಂಬೆ-ರೆಂಬೆಗಳು, ಎಲೆ, ಹೂವು, ಹಣ್ಣು, ಕಾಯಿ, ಬೀಜಗಳ ಬಾಹ್ಯ ಸ್ವರೂಪದ ವಿವರಣೆಗಳಿಂದ ಆರಂಭಿಸಿ ಅವುಗಳ ಸಸ್ಯಶಾಸ್ತ್ರೀಯ ಹೆಸರುಗಳು,  ಕನ್ನಡದಲ್ಲಿ ವಾಡಿಕೆಯಲ್ಲಿರುವ ಹೆಸರುಗಳನ್ನು ನಮೂದಿಸುತ್ತ ಮುಂದೆ ಅವುಗಳ ಸಾಮಾನ್ಯ ಉಪಯೋಗಗಳು, ಅವುಗಳ ಔಷಧೀಯ ಗುಣಗಳು, ಬೀಜಗಳ ಲಭ್ಯತೆ, ಪರಾಗಸ್ಪರ್ಷ, ಯಾವುದರ ಹೂಗಳ ಮೇಲೆ ಜೇನು ಹುಳಗಳು ಕುಳಿತು ಜೇನು ಉತ್ಪಾದನೆ ಮಾಡಲು ಸಹಾಯಕವಾಗುವ ಅಪಾರ ಪ್ರಮಾಣದ ಸಿಹಿಯಿದೆ, ಯಾವುವು ನಿತ್ಯಹರಿದ್ವರ್ಣದ ಸಸ್ಯಗಳು ಎಂದು ಮುಂತಾದ  ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ  ಬೇರೆ ಬೇರೆ ಗಿಡಗಳನ್ನು ಪುನರುತ್ಪಾದನೆ ಮಾಡುವುದು ಹೇಗೆ, ಬೀಜಗಳ ಮೂಲಕವೋ, ಬೇರುಗಳ ಮೂಲಕವೋ, ಗೆಲ್ಲುಗಳನ್ನು ನೆಡುವುದರ ಮೂಲಕವೋ ಎಂಬುದನ್ನೂ ತಿಳಿಸುತ್ತಾರೆ.   ಮತ್ತು ಹೆಚ್ಚು ಉಪಯುಕ್ತ ಗಿಡಗಳು ಹೇಗೆ ಅತಿಯಾದ ಬಳಕೆಯಿಂದಾಗಿ ಅಳಿವಿನಂಚಿಗೆ ಬಂದದ್ದರಿಂದ ಅವುಗಳನ್ನು ತಂದು ಪುನಃ ನೆಟ್ಟು ಬೆಳೆಸುವ ಅನಿವಾರ‍್ಯತೆಯಿದೆ ಎಂಬುದನ್ನೂ ಹೇಳುತ್ತಾರೆ. ಲೇಖಕಿ ತಮ್ಮಮುನ್ನುಡಿಯಲ್ಲಿ ಹೇಳುವಂತೆ ಈ ಕೃತಿಯಲ್ಲಿ ಅವರು ನೀಡುತ್ತಿರುವ ವಿವರಗಳು ಇಂದು ತೀರಾ ಅಪರೂಪವಾಗಿರುವ, ಇವತ್ತಿನ ತಲೆಮಾರಿನ ಯುವಕ-ಯುವತಿಯರಿಗೆ ಕೇಳಿಯೂ ಗೊತ್ತಿಲ್ಲದ ಸಸ್ಯಗಳ ಕುರಿತು ಮಾತ್ರ.  ಸುರಗಿ, ಅಶೋಕ, ರಂಜ, ಹೊಳೆ ದಾಸವಾಳ, ಹಾಲಿವಾಣ, ಕೇದಿಗೆ, ಮಾಧವಿಲತೆ, ಪಾರಿಜಾತ ಮೊದಲಾದ, ಹಿಂದೆ ನಾಡಿನ ಎಲ್ಲರ ಮನೆಗಳ ತೋಟ, ಹಿತ್ತಲು-ಬಯಲು-ಹೊಳೆಬದಿಗಳಲ್ಲಿ ಕಾಣಸಿಗುತ್ತಿದ್ದು ಪರಿಮಳ ಬೀರುತ್ತಿದ್ದ ಹೂಗಿಡಗಳು, ಸೀತಾಳೆ, ನಾಗಸಂಪಿಗೆ, ಕುರಿಂಜಿ ಹೂ, ನರ‍್ವಾಲ, ಕಾಡಿನ ದೀಪ, ಕಂಚುವಾಳ ಕಕ್ಕೆ, ಮೊದಲಾದ ಕಾಡು ಹೂಗಳು, ಶಾಲ್ಮಲಿ, ಇಪ್ಪೆಮರ,ಬೂರುಗ, ಮುತ್ತುಗ ಮೊದಲಾದ ಬೃಹತ್ ವೃಕ್ಷಗಳನ್ನು  ಲೇಖಕಿ ಓದುಗರಿಗೆ ಸಮೃದ್ಧ ವಿವರಗಳೊಂದಿಗೆ ಪರಿಚಯಿಸುತ್ತಾರೆ. ವಿದೇಶಿ ಮೂಲದವಾಗಿದ್ದು ಇಲ್ಲಿ ನೆಲೆಯೂರಿರುವ ಹೂಬಾಳೆ, ಆಲ್ಪೀನಿಯಾ,ಬ್ಲೀಡಿಂಗ್ ಹರ‍್ಭ್  ಮೊದಲಾದ ಕೆಲವು ಸಸ್ಯಗಳೂ ಇಲ್ಲಿ ಜಾಗ ಪಡೆದಿವೆ. ಹಲವಾರು ಗಿಡಮರಗಳ ಬಗ್ಗೆ ಮಾತನಾಡುವಾಗ ಲೇಖಕಿ ತಮ್ಮ ಬಾಲ್ಯದಲ್ಲಿ ಅವುಗಳ ಅಂದ ಚೆಂದ ಪರಿಮಳಗಳನ್ನು ಆಸ್ವಾದಿಸಿದ ಬಗ್ಗೆ , ಹೂಗಳನ್ನು ಮುಡಿಗೇರಿಸಿಕೊಂಡು ಖುಷಿಪಟ್ಟಿದ್ದರ ಬಗ್ಗೆ , ಹಬ್ಬ ಹರಿದಿನಗಳಂದು ಆಚರಣೆಯ ವಿಧಿಗಳಲ್ಲಿ ಅವುಗಳ ಹೂವು-ಹಣ್ಣು-ಎಲೆಗಳನ್ನು ಬಳಸಿಕೊಂಡದ್ದರ ಬಗ್ಗೆ,  ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ತೋರಣ ಕಟ್ಟುತ್ತಿದ್ದುದರ ಬಗ್ಗೆ ಸಂಭ್ರಮದಿಂದ ನೆನಪಿಸಿಕೊಳ್ಳುತ್ತ ನಿರೂಪಣೆಯ ನಡುನಡುವೆ ವೈಯಕ್ತಿಕ ಸ್ಪರ್ಶ ಕೊಡುತ್ತಾರೆ.  ಸಾಹಿತ್ಯದ ಪ್ರಾಧ್ಯಾಪಕಿಯಾದ್ದರಿಂದ ಸಹಜವಾಗಿ  ಅವರಿಗೆ ಪಂಪ, ರನ್ನ, ಜನ್ನ, ಬೇಂದ್ರೆ, ಕುವೆಂಪು, ಶಿವರುದ್ರಪ್ಪ ಮೊದಲಾದ ಕವಿಗಳ ಕವಿತೆಗಳಲ್ಲಿ ಆ ಗಿಡ-ಮರ-ಹೂವುಗಳ ಹೆಸರು ಬರುವುದು ಸಾಂಧರ್ಭಿಕವಾಗಿ  ನೆನಪಾಗುತ್ತದೆ. ರಾಮಾಯಣ, ಮಹಾಭಾರತ, ತಮಿಳಿನ ಸಂಘಂ ಕಾವ್ಯಗಳನ್ನೂ ಅವರು ಉದ್ಧರಿಸುತ್ತಾರೆ. ಒಟ್ಟಿನಲ್ಲಿ ಲೇಖಕಿಯ ಓದಿನ ವಿಸ್ತಾರಕ್ಕೆ ಈ ಎಲ್ಲ ಉದಾಹರಣೆಗಳು ಸಾಕ್ಷಿಯಾಗುತ್ತವೆ. ‘ಹೂ ಹಸಿರಿನ ಮಾತು’ ಅನೇಕ ವೈಶಿಷ್ಟ್ಯಗಳುಳ್ಳ ಕೃತಿ.  ಮೊತ್ತ ಮೊದಲಾಗಿ ಇದು ಸಾಹಿತ್ಯ-ವಿಜ್ಞಾನಗಳ ಸಂಗಮ. ಪರಂಪರಾಗತವಾಗಿ ನಮ್ಮಲ್ಲಿ ಬೆಳೆದುಕೊಂಡು ಬಂದ ಗಿಡಮರಗಳು ಅಳಿದು ಹೋಗಲು ಬಿಡಬಾರದೆಂಬ  ಕಾಳಜಿ ಇದರ ಹಿಂದೆ ಇದೆ. ನಮ್ಮ ಪರಿಸರವು ಗಿಡಮರಗಳನ್ನು ಕಳೆದುಕೊಂಡು ಬೋಳಾಗಿ  ಮನುಷ್ಯನ ಆಧುನಿಕತೆಯ ಹುಚ್ಚಿಗೆ ಬಲಿಯಾಗಬಾರದು ಎಂಬ ಕಾಳಜಿ ಇಲ್ಲಿದೆ.  ನಿಸರ್ಗದ ಮಕ್ಕಳಾದ ನಾವು ನಿಸರ್ಗವನ್ನು ಉಳಿಸಿಕೊಂಡು ಹೂ ಹಸಿರುಗಳ ಜತೆಗೆ ಸದಾ ಮಾತುಕತೆ ನಡೆಸುವುದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ  ಒಳ್ಳೆಯದೆನ್ನುವ ಪರೋಕ್ಷವಾದ ಸಂದೇಶವೂ ಇದರೊಳಗಿದೆ. ಈ ಕೃತಿ ಗಾತ್ರದಲ್ಲಿ ಚಿಕ್ಕದಾದರೂ ಇದರ ಹಿಂದೆ ಲೇಖಕಿಯ ಅಪಾರ ಪರಿಶ್ರಮವಿದೆ. ಯಾಕೆಂದರೆ ಇದು ಒಂದೆಡೆ ಅಲುಗಾಡದೆ ಕುಳಿತು ಬರೆದದ್ದಲ್ಲ. ಆಗಲೇ ಹೇಳಿದಂತೆ ಇದರ ಹಿಂದೆ ಬಹಳಷ್ಟು ಕ್ಷೇತ್ರಕಾರ‍್ಯ ಮತ್ತು ಸಂಶೋಧನೆಗಳಿವೆ. ಸಸ್ಯಶಾಸ್ತ್ರವನ್ನು ಒಂದು ಪಠ್ಯ ವಿಷಯವನ್ನಾಗಿ ತೆಗೆದುಕೊಂಡವರಿಗೆ ಮಾತ್ರವಲ್ಲದೆ ಸಾಮಾನ್ಯ ಓದುಗರಿಗೂ ಖುಷಿ ಕೊಡಬಲ್ಲ ,ಉಪಯುಕ್ತವಾಗ ಬಲ್ಲ ಮತ್ತು ಅರಿವು ಮೂಡಿಸಬಲ್ಲ ಒಂದು ಕೃತಿಯಿದು. ಅಂಕಿತ ಪುಸ್ತಕವು ೨೦೧೨ರಲ್ಲಿ ಮುದ್ರಿಸಿ ಪ್ರಕಟಿಸಿದ  ಕೃತಿಗೆ ಕಥೆಗಾರ್ತಿ ಉಷಾ ಪಿ.ರೈಯವರು ಬರೆದು ಅಪಾರ ಅವರು ವಿನ್ಯಾಸ ಮಾಡಿದ ಸುಂದರವಾದ ಮುಖಪುಟ ಚಿತ್ರವು ಪುಸ್ತಕದ ಅಂದವನ್ನು ಹೆಚ್ಚಿಸಿದೆ.         ********************************* ಡಾ.ಪಾರ್ವತಿ ಜಿ.ಐತಾಳ್        

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ ಅಲೆಮಾರಿಯ ದಿನದ ಮಾತುಗಳು  ಪುಸ್ತಕ : ಅಲೆಮಾರಿಯ ದಿನದ ಮಾತುಗಳು  ( ಪದ್ಯ – ಗದ್ಯಗಂಧಿ ಚಿಂತನ ಬರಹಗಳು ) ಲೇಖಕ: ಗಂಗಾಧರ ಅವಟೇರ ಪ್ರಕಾಶನ: ಪ್ರತೀ(ಕ)ಕ್ಷಾ ಪ್ರಕಾಶನ, ಕುಕನೂರ ಜಿ|| ಕೊಪ್ಪಳ ಪುಟಗಳು: 96 ಬೆಲೆ: 100/- ಪ್ರಕಟಿತ ವರ್ಷ: 2019 ಲೇಖಕರ ದೂರವಾಣಿ: 9449416270          ಮಾನವ ಸಮಾಜಜೀವಿ. ಅವನು ಸಮಾಜವನ್ನು ಬಿಟ್ಟು ಬಾಳಲಾರ-ಬದುಕಲಾರ. ಅರಿಸ್ಟಾಟಲ್ ಹೇಳುವಂತೆ ‘ಸಮಾಜವನ್ನು ಬಿಟ್ಟು ಬದುಕುವ ಮಾನವ ದೇವರು ಇಲ್ಲವೇ ಪಶು ಆಗಿರುತ್ತಾನೆ’. ಮಾನವ ಭಾಗಶಃ ಸಹಕಾರಿಯಾದಂತೆ ಭಾಗಶಃ ಸಂಘರ್ಷಮಯಿ. ಸಂಘರ್ಷದ ಫಲವಾಗಿ ದಂಗೆ, ಬಂಡಾಯ, ಯುದ್ಧ ಸಂಭವಿಸಿದರೆ ಸಹಕಾರದ ಫಲವಾಗಿ ಕುಟುಂಬ, ಸಮಾಜ, ಸಂಘ-ಸಂಸ್ಥೆಗಳು ಹುಟ್ಟಿಕೊಂಡವು. ಕುಟುಂಬವೊಂದರಲ್ಲಿ ಜನಿಸಿ ಸಮಾಜದಲ್ಲಿ ತನ್ನ ವಿಕಾಸ ಕಂಡುಕೊಳ್ಳುವ ವ್ಯಕ್ತಿಯು ಸಾಮಾಜಿಕ ರೂಢಿ-ಸಂಪ್ರದಾಯ, ಕಟ್ಟುಪಾಡು, ನೀತಿ-ನಿಯಮಗಳಿಗೆ ಬದ್ಧನಾಗಿ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಜೀವನವನ್ನು ಸುಂದರವಾಗಿಸಲು ಹಲವು ಅನುಭಾವಿಗಳು, ಶರಣರು-ಸಂತರು, ದಾರ್ಶನಿಕರು ತಮ್ಮ ಜೀವನಾನುಭವದ ಸತ್ಯಗಳನ್ನು ನುಡಿಮುತ್ತುಗಳಲ್ಲಿ, ಅನುಭವಾಮೃತಗಳಲ್ಲಿ ಕಟ್ಟಿಕೊಟ್ಟಿದ್ದಾರೆ‌. ಈ ನುಡಿಮುತ್ತುಗಳು ನಮ್ಮ ಅಜ್ಞಾನ, ಅಂಧಕಾರದ ಬದುಕಿಗೆ ಬೆಳಕು ತೋರಲು ಹಚ್ಚಿಟ್ಟ ಸಾಲು ಹಣತೆಗಳಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಿನ ಶುಭೋದಯದಲ್ಲಿ ‘ದಿನಕ್ಕೊಂದು ಮಾತು’ ಎನ್ನುವ ಚಿಂತನಶೀಲ ಬರಹಗಳನ್ನು ಬರೆಯುವ ಮೂಲಕ ತಮ್ಮ ಜೀವನಾನುಭವದ ಸಂಗತಿಗಳನ್ನು, ಜೀವನ ಮೌಲ್ಯಗಳನ್ನು ಕೆಲವೇ ಸಾಲುಗಳಲ್ಲಿ ಹೆಣೆದು ಅರ್ಥಪೂರ್ಣವಾದ ಪದ್ಯ-ಗದ್ಯಗಂಧಿಯಾದ ಚಿಂತನ ಬರಹಗಳನ್ನು ಬರೆಯುವುದರಲ್ಲಿ ಕವಿ, ಲೇಖಕ ಗಂಗಾಧರ ಅವಟೇರ ಅವರು ಪರೀಣತರು. ವೃತ್ತಿಯಿಂದ ಕನ್ನಡ ಉಪನ್ಯಾಸಕರಾಗಿ ಪ್ರವೃತ್ತಿಯಿಂದ ಸಾಹಿತಿಯಾಗಿರುವ ಗಂಗಾಧರ ಅವರು ಮೂಲತಃ ನಂದವಾಡಗಿಯವರು. ಈಗಾಗಲೇ “ನನ್ನೊಳಗಿನ ಪ್ರೀತಿ” ಹಾಗೂ “ನಿಬ್ಬಣ” ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತರಾಗಿದ್ದಾರೆ. “ಅಲೆಮಾರಿಯ ದಿನದ ಮಾತುಗಳು” ಕೃತಿಗೆ ಪತ್ರಿಕೊದ್ಯಮಿ ಮಹೇಶ್ ಮನ್ನಯ್ಯನವರಮಠ ಅವರ ಮಾರ್ಮಿಕ ಮುನ್ನುಡಿ ಹಾಗೂ ಹಿರಿಯ ಕವಿ ಡಾ‌|| ಗುಂಡಣ್ಣ ಕಲಬುರಗಿಯವರ ಸ್ನೇಹಪರ ಬೆನ್ನುಡಿ ಇದೆ. “ಅಲೆಮಾರಿಯ ದಿನದ ಮಾತುಗಳು” ಕೃತಿಯಲ್ಲಿ ಒಟ್ಟು 125ಕ್ಕೂ ಹೆಚ್ಚು ಚಿಂತನಶೀಲ ಬರಹಗಳಿವೆ. ಇವು ಗಾತ್ರದಲ್ಲಿ ಚಿಕ್ಕದಾದರೂ ಅವುಗಳ ಹರವು ವ್ಯಾಪಕವಾಗಿದೆ. ಜೀವನದಲ್ಲಿ ಎದುರಾಗುವ ಸೋಲು-ಗೆಲುವು, ನೋವು-ನಲಿವು‌, ಅಡ್ಡಿ-ಆತಂಕಗಳನ್ನು ಸಮಚಿತ್ತದಿಂದ ಎದುರಿಸಿ ಜೀವನದ ಆಟವನ್ನು ಗೆಲ್ಲಲು ಲೇಖಕರ ವಿಚಾರಗಳು ಇಲ್ಲಿ ಮಾರ್ಗದರ್ಶಿಯಾಗಿವೆ.  “ಗೆಲುವು ಹೂವಿನ ಹಾಸಿಗೆಯಲ್ಲ, ಅದು ಕೆಸರುಗದ್ದೆಯ ಓಟ. ಯಾರು ಕೊಸರಿಕೊಂಡು ಹೋಗಿ ದಡ ಮುಟ್ಟುತ್ತಾರೊ ಅವರು ಗೆಲ್ಲುತ್ತಾರೆ” ಎನ್ನುವ ಮಾತು ನಮ್ಮ ಸತತ ಪರಿಶ್ರಮ ಹಾಗೂ ಪ್ರಯತ್ನಶೀಲತೆಯ ಸಂಕೇತವಾಗಿದೆ. ‘ನಮಗೆ ದ್ವೇಷ ಮಾಡಲು ಆಯುಷ್ಯ ಬಹಳಷ್ಟು ಇಲ್ಲ. ಇರುವಷ್ಟು ಕಾಲ ಎಲ್ಲರನ್ನು ಪ್ರೀತಿಸೋಣ’ ಎನ್ನುವ ಮಾತು ಓದುಗರಿಗೆ ಜೀವನದ ಸತ್ಯ ದರ್ಶನ ಮಾಡಿಸುತ್ತದೆ. ‘ಮಾತು ಮೌನವಾದಾಗ ಅಂತರಂಗದಲ್ಲಿ ಅರಿವಿನ ಗುರು ಕಾಣಿಸಿಕೊಳ್ಳುತ್ತಾನೆ’ ಎನ್ನುವ ಮಾತು ಅರಿವೇ ಗುರುವಾಗಿ, ನುಡಿ ಜ್ಯೋತಿರ್ಲಿಂಗವಾಗಿ ಗೋಚರಿಸುತ್ತದೆ. ‘ಪುಸ್ತಕದ ಓದು ಮಸ್ತಕದಲ್ಲಿರಬೇಕು. ಜೀವನದ ಅನುಭವ ಅನುಭಾವವಾಗಬೇಕು. ‍ಓದು ಅನುಭವ ಒಂದಾದಾಗ ವ್ಯಕ್ತಿತ್ವಕ್ಕೊಂದು ಘನತೆ ಬರುತ್ತದೆ’ ಎನ್ನುವ ವಿಚಾರ ಮನೋಜ್ಞವಾಗಿದೆ. ‘ದಾರಿ ಇಲ್ಲವೆಂದು ನಡೆಯುವುದನ್ನು ನಿಲ್ಲಿಸಬಾರದು. ನಾವು ನಡೆದದ್ದೇ ದಾರಿ ಆಗಬೇಕು ಆ ದಾರಿ ನಾಲ್ಕು ಜನರಿಗೆ ಸ್ಪೂರ್ತಿಯಾಗಬೇಕು’ ಎಂಬ ಲೇಖಕರ ಆಶಯ ಶ್ಲಾಘನೀಯ. ‘ಯಾರು ನಿಮ್ಮ ಬಗ್ಗೆ ಹಗುರವಾಗಿ ಮಾತನಾಡುವರು ಅಂತವರನ್ನು ನಿರ್ಲಕ್ಷಿಸಬೇಕು ಆದರೆ ದ್ವೇಷ ಮಾಡಬಾರದು’ ಎಂಬ ವಿಚಾರ ಶಕ್ತಿಶಾಲಿ ವ್ಯಕ್ತಿತ್ವದ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ. ಹೀಗೆ “ಅಲೆಮಾರಿಯ ದಿನದ ಮಾತುಗಳು” ಕೃತಿಯು ಮುಳುಗಿದಷ್ಟು ಮುತ್ತನ್ನು ಕೊಡುವ ಶಬ್ಧಶರಧಿಯಾಗಿದೆ. ಓದುಗರ ಅಜ್ಞಾನದ ಹಾದಿಗೆ ಬೆಳಕು ತೋರುವ ದೀವಟಿಗೆಯಾಗಿದೆ. ವಿದ್ಯಾರ್ಥಿ ಸಮುದಾಯದೊಂದಿಗೆ ನಿರಂತರ ಒಡನಾಟದಲ್ಲಿರುವ ಲೇಖಕ ಗಂಗಾಧರ ಅವಟೇರ ಅವರು ಮಕ್ಕಳಲ್ಲಿ ನೈತಿಕ, ಸಾಮಾಜಿಕ ಪ್ರಜ್ಞೆ ಬೆಳೆಸುವ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ. ಪ್ರತಿಯೊಬ್ಬರು ಈ ಕೃತಿಯನ್ನು ತಮ್ಮ ಮನೆಯ ಪುಸ್ತಕ ಭಂಡಾರದಲ್ಲಿ ಸಂಗ್ರಹಿಸಿ ಇಟ್ಟುಕೊಂಡು ಓದಲು, ತಮ್ಮ ಮನೋವಿಕಾಸ ವಿಸ್ತರಿಸಿಕೊಳ್ಳಲು ಇದೊಂದು ಯೋಗ್ಯ ಕೃತಿಯಾಗಿದೆ. ****************************************** ಬಾಪು ಖಾಡೆ

ಪುಸ್ತಕ ಸಂಗಾತಿ Read Post »

You cannot copy content of this page

Scroll to Top