ಕವಿತೆ ಅಬ್ಳಿ,ಹೆಗಡೆ ನಾನು ಮತ್ತು ದೇವರು ಇಬ್ಬರೇ ಕುಳಿತಿದ್ದೇವೆ ನಡುಮನೆಯ ಕತ್ತಲಲ್ಲಿ. ನನಗಿಷ್ಟ ಇಲ್ಲಿಯ ಕತ್ತಲು. ಕಾರಣವಿಷ್ಟೇ….. ಇಲ್ಲಿ ಬೆತ್ತಲಾದರೂ ಗೊತ್ತಾಗುವದಿಲ್ಲ ಹೊರಗೆ. ದಟ್ಟ ಕತ್ತಲು- ಯಾವಾಗಲೂ ರಾತ್ರಿಯೆ. ಇಲ್ಲಿ ಹಗಲಿನೆಚ್ಚರದಲ್ಲೂ ಕನಸು ಕಾಣಬಹುದು. ವಿಹರಿಸಬಹುದು- ನೀಲಾಕಾಶದಲ್ಲಿ ಚುಕ್ಕಿ,ಚಂದ್ರಮರೊಟ್ಟಿಗೆ. ಇಲ್ಲಿ ಯಾವಾಗಲೋ ಅಪರೂಪಕ್ಕೊಮ್ಮೆ ತೆರೆದುಕೊಳ್ಳುವದೂ- ಉಂಟು,ವರ್ಣಮಯ ಹೊರ ಜಗತ್ತು. ಇಲ್ಲಿ ಕಿಟಕಿ,ಬಾಗಿಲುಗಳ ಇರುವಿಕೆಯೂ ಕೂಡ ಗೊತ್ತಾಗುತ್ತಿಲ್ಲ. ಮುಚ್ಚಿರಬಹುದು… ಹೆಗ್ಗಣ,ಕ್ರಿಮಿ ಕೀಟಗಳ ಹೆದರಿಕೆಗೆ ಯಾರೋ….! ಯಾವಾಗಲೋ ಒಮ್ಮೆ ಮುಚ್ಚಿದ ಕದ ತೆರೆದಾಗಷ್ಟೇ ಒಳಬರುವ ಮಬ್ಬು ಬೆಳಕಲ್ಲಿ, ಒಳಗಿನ ಸೋಜಿಗಗಳೆಲ್ಲ ಅಸ್ಪಷ್ಟ ಕಣ್ಣೆದುರು.- ನೇತಾಡುವ ‘ಗಳು’ವಿಗೆ ನೇತಾಡುವ ಬಣ್ಣ,ಬಣ್ಣದ ಹಳೆ,ಹೊಸ ಬಟ್ಟೆಗಳು, ‘ಗಿಳಿಗುಟ್ಟ’ಕ್ಕೆ ನೇತಾಡಿಸಿದ ಖಾಲಿ ಚೀಲಗಳು, ಮುರಿದ,ಮುರಿಯದ ಹಳೆ,ಹೊಸಕೊಡೆಗಳು, ನೆಲಕ್ಕೆ ಗೋಡೆಗೆತಾಗಿ, ಬೆಂಚಿನ ಮೇಲೆ,ತುಂಬಿದ ಖಾಲಿ ಡಬ್ಬಗಳು… ಇನ್ನೂ ಏನೇನೋ……! ಇನ್ನು ಇಲ್ಲಿ.. ಕಠೋರ ವಾಸ್ತವದ ಬಿಸಿಲ ಝಳವಿಲ್ಲ, ಜಂಜಡವಿಲ್ಲ,ಹೊರಗಿನ- ಗೌಜಿ,ಗಲಾಟೆಗಳಿಲ್ಲ. ಎಲ್ಲ,,ಸ್ತಬ್ಧ,ಧ್ಯಾನಸ್ಥ- ಮೌನ,ತಾನೇ ತಾನಾಗಿದೆ. ಇನ್ನು…ನಾ ಹುಟ್ಟಿದ್ದು, ಮೊದಲು ಅತ್ತಿದ್ದು ಕೂಡ ಇಲ್ಲೇ ಆಗಿರಬಹುದು. ನನ್ನಂತೆ ಎಷ್ಟೊ ಹುಟ್ಟುಗಳು ನನಗಿಂತ ಮೊದಲು ಹುಟ್ಟಿ,ಅತ್ತು,ಗುಟ್ಟಾಗಿ- ಸತ್ತಿರಲೂ ಬಹುದು. ಎಷ್ಟೋ ಸಂತಸ,ಉನ್ಮಾದದ ಮೊದಲ ರಾತ್ರಿಗಳು, ಕೊನೆಯಾಗಿರಲೂ ಬಹುದು ನೋವಿನಲ್ಲಿ…..! ಈ ನಡುಮನೆಯಲ್ಲಿ.. ದೇವರೆದುರು ಹಚ್ಚಿಟ್ಟ ನಂದಾದೀಪವೂ.. ಎಂದೋ…ಎಣ್ಣೆಮುಗಿದು, ಬತ್ತಿಸುಟ್ಟು,ಕರಕಲಾಗಿ, ಆರಿಹೋಗಿದೆ- ಯಾವಾಗಲೋ….!? ದೇವರು ಕೂಡ ಕತ್ತಲಲ್ಲಿ,ನನ್ನೊಟ್ಟಿಗೆ. ಆತನಿಗೂ ಬೆಳಕಿನ ಅನಿವಾರ್ಯತೆ ಇದ್ದಂತೆ ಕಾಣುತ್ತಿಲ್ಲ ನನ್ನಂತೆ…! ಸುತ್ತಲೂ ನಮ್ಮಿಷ್ಟದ ಕತ್ತಲ ನಡುಮನೆ– ನಮಗೆಂದಿಗೂ……..!!! ************************************