ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಅಂಜಲಿ ಜ್ಯೋತಿ ಬಾಳಿಗ  ಇಂಜಿನಿಯರಿಂಗ್ ಕೆಲಸದ ನಿಮಿತ್ತ  ಅಮೇರಿಕಾಕ್ಕೆ ಹೋದ ಅಂಜಲಿ ‘ವೀಸಾ’ ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ‘ಪಂಚತಾರಾ’ ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ‌ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ  ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಅಂಜಲಿಯ ಮೈ ಮನವನ್ನು ಆವರಿಸತೊಡಗಿತ್ತು‌. ಗೆಳತಿಯ ನೋಡಲೆಂದು ಹೊರಗೆ ಹೊರಟವಳು‌ ಮನಕ್ಷೋಭೆಯಿಂದ ಹಾಗೆಯೇ ಹಿಂತಿರುಗಿ ಹೂದೋಟದಲ್ಲಿ ಹಾಕಿದ್ದ ಆರಾಮ ಆಸನದ ಮೇಲೆ ಕೂತು ಕಣ್ಣು ಮುಚ್ಚಿ ಮಲಗಿದಳು. ತಣ್ಣನೆಯ ಗಾಳಿಯ ಜೊತೆಗೆ ಪಟ ಪಟ ಎಂದು ಮಳೆಯ ಹನಿಗಳು ಮುಖಕ್ಕೆ ಬಡಿದರೂ ಅವಳು ಏಳದೇ  ಕೂತಿರುವುದನ್ನು ನೋಡಿದ ಮ್ಯಾನೇಜರ್  ಒಳಗಿನಿಂದ ಕೊಡೆಯನ್ನು ತಂದು ಅಂಜಲಿ ಒದ್ದೆಯಾಗದಿರಲೆಂದು ತಲೆಯ ಮೇಲೆ ಹಿಡಿದ. ತನ್ನಿಂದ ಅವನಿಗೇಕೆ ತೊಂದರೆ ಎಂದು ಅಂಜಲಿ ಅವನ‌ ಜೊತೆಯಲ್ಲಿ ಹೆಜ್ಜೆಗೆ ಹೆಜ್ಜೆ ಹಾಕಿದಳು. ಪನ್ನೀರಿನಂತೆ ಬೀಳುತ್ತಿದ್ದ ಮಳೆಯ ಹನಿಯ ಬಿಂದುಗಳು ತನ್ನ ಆಕಾರವನ್ನು ಹೆಚ್ಚಿಸುತ್ತಿದ್ದಂತೆ ಅಂಜಲಿ ಸಂಪೂರ್ಣವಾಗಿ ಒದ್ದೆಯಾಗುವುದನ್ನು ನೋಡಿದ ಮ್ಯಾನೇಜರ್ ರಾಜೀವ್ ಪಾಂಡೆ ವೆರಾಂಡದ ಕಡೆ ಓಡಿದ. ಅವನು ವೆರಾಂಡಕ್ಕೆ ತಲುಪಿದರೂ ಅವಳ ನಡಿಗೆಯ ವೇಗ ಹೆಚ್ಚಾಗಲಿಲ್ಲ. ಅವಳಿನ್ನೂ ವೆರಾಂಡ ತಲುಪಲು ತುಂಬಾ  ದೂರದಲ್ಲೇ ಇದ್ದಳು.ಗಾಳಿ ಮಳೆಯ ಜೊತೆಗೆ ಸಿಡಿಲಿನ ಬೆಳಕಿಗೆ ಅಂಜಲಿಯ ಮನದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ದುಃಖ ಉಮ್ಮಳಿಸಿ ಬಂದ‌ ಕಣ್ಣೀರು ಮಳೆ ಹನಿಯ ಜೊತೆಗೆ ಮಿಲನವಾದದ್ದು ರಾಜೀವನ ಕಣ್ಣಿಗೆ ‌ಕಾಣಿಸಿತು. ಅಂಜಲಿ ಕೋಣೆಯೊಳಗೆ ಬಂದವಳೇ ಒದ್ದೆಯಾಗಿದ್ದರೂ ಹಾಗೆಯೇ ಹಾಸಿಗೆಯ ಮೇಲೆ ಬಿದ್ದಳು. ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುವಾಗ ಅವಳ ಜೀವನದಲ್ಲಿ ನಡೆದ ಘಟನೆಗಳು ಒಂದೊಂದರಂತೆ ಕಾಡಲು ಶುರುವಾಯಿತು. ****************************************************ವೇಣುಗೋಪಾಲರಾಯರು ಹಾಗೂ ಸುನಂದಿ ದಂಪತಿಯ ಏಕಮಾತ್ರ ಪುತ್ರಿಯೇ ಅಂಜಲಿ.ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗು ಮುಖದಿಂದ ಸ್ವೀಕರಿಸುವ ಅಪ್ಪನೇ ಅವಳಿಗೆ ಸ್ಪೂರ್ತಿ. ಅಪ್ಪ ತಂದ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸುವ ಅಮ್ಮನೆಂದರೆ ಅಂಜಲಿಗೆ ಅಪಾರ ಪ್ರೀತಿ. ತನ್ನ ಓದಿಗಾಗಿ ಹಗಲು ರಾತ್ರಿ ಕಷ್ಟಪಡುತಿರುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನ್ನ ಮನಸ್ಸನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿದ್ದಳು.ತಂದೆಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುವ ಶಕ್ತಿ ಇಲ್ಲವೆಂದು ತಿಳಿದ ಅಂಜಲಿ ಮೆರಿಟ್ ಸೀಟ್ ಪಡೆದರೆ ಉಚಿತವಾಗಿ ಕಾಲೇಜಿನಲ್ಲಿ ಅಡ್ಮಿಷನ್ ಸಿಗುತ್ತದೆ ಜೊತೆ ಜೊತೆಗೆ ಸ್ಕಾಲರ್ಶಿಪ್ ನಿಂದ ಬರುವ ಹಣವನ್ನು ಹಾಸ್ಟೆಲ್ ವಾಸಕ್ಕೆ ಉಪಯೋಗಿಸುವ ಯೋಚನೆಯನ್ನು ಮಾಡಿ ಕಷ್ಟಪಟ್ಟು ಓದಿ ಸಿಯಿಟಿ ಯಲ್ಲಿ ರ‌್ಯಾಂಕ್ ಪಡೆದು ತನ್ನ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಳು. ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆಂದು  ತಿಳಿದ ಅಂಜಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೂ ಅಳೆದು ತೂಗಿ ತನ್ನ ಹಣವನ್ನು ಖರ್ಚು ಮಾಡುತ್ತಿದ್ದಳು. ಅಂಜಲಿಯ ಕಷ್ಟ ಅರಿತ ಗೆಳತಿಯರು ಅವಳ ಮನಸ್ಸಿಗೆ ನೋವಾಗದಂತೆ  ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.ಹಾಸ್ಟೆಲ್, ಲೈಬ್ರರಿ ಬಿಟ್ಟರೆ ಬೇರೆ ಯಾವುದೇ ವಿಷಯದ ಕಡೆ ಗಮನ ಕೊಡದ ಅಂಜಲಿ ಮೊದಲ ವರ್ಷ ಇಂಜಿನಿಯರಿಂಗ್ ನಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದಳು. ರಜೆಯಲ್ಲಿ ಮನೆಗೆ ಹೋಗಿ ಅಮ್ಮ ತಯಾರಿಸಿದ ರುಚಿಯಾದ ಊಟ ಮಾಡಿ ಅಪ್ಪನ ಹಿತವಾದ ಪ್ರೀತಿಯನ್ನು ಸವಿಯುತ್ತಿದ್ದ ಅಂಜಲಿಗೆ ದಿನಗಳು ಓಡುತ್ತಿದ್ದದ್ದೆ ತಿಳಿಯಲಿಲ್ಲ. ಇನ್ನೇನೂ ಒಂದು ವರ್ಷದ ಇಂಜಿನಿಯರಿಂಗ್ ಕೋರ್ಸ್ ಬಾಕಿ ಇರುವ ಹೊತ್ತಿಗೆ ಅಂಜಲಿಯ ಸಹಪಾಠಿಯಾದ ಪ್ರಮೋದ ಅವಳ ಬಳಿ ಬಂದು ಪ್ರೇಮಭಿಕ್ಷೆ ಕೇಳಿದ.“ನನಗೆ ಈ ಪ್ರೀತಿ ಪ್ರೇಮದಲ್ಲಿ ವಿಶ್ವಾಸವಿಲ್ಲ ಪ್ರಮೋದ್. ಓದು ಮುಗಿದ ಮೇಲೆ ನನಗೆ ನನ್ನದೇ ಕೆಲವು ಗುರಿಗಳು ಇವೆ. ಕೆಲಸಕ್ಕೆ ಸೇರಬೇಕು, ಇಷ್ಟು ವರ್ಷ ಬಾಡಿಗೆ ಮನೆಯ ಸಹವಾಸ ಸಾಕಾಗಿದೆ. ಅಪ್ಪ ಅಮ್ಮನಿಗಾಗಿ ಪುಟ್ಟ ಮನೆಯನ್ನು ಖರೀದಿಸಬೇಕು. ಸ್ವಲ್ಪ ಸಮಯ ಅವರ ಜೊತೆಯಲ್ಲಿ ಕಳೆಯಬೇಕು.ಅಪ್ಪ ಅಮ್ಮ  ಇಷ್ಟಪಟ್ಟ ಹುಡುಗನ ಗುಣ ಸ್ವಭಾವ  ಇಷ್ಟವಾದರೆ ‌ಅವನ ಜೊತೆಯಲ್ಲಿ ಮದುವೆಯಾಗುವುದು..” ಎಂದು ಹೇಳಿ ಅವನಿಗೆ ಸಮಾಧಾನ ಮಾಡಿ ಕಳುಹಿಸಿದಳು. ಅಂಜಲಿಯ ತಿರಸ್ಕಾರ ಪ್ರಮೋದ್ ಗೆ ಬೇಸರವಾದರೂ ಅವಳ ಬೆನ್ನು ಬಿಡದ ಬೇತಾಳದಂತೆ ಹಿಂದೆ ಸುತ್ತಲೂ ಶುರುಮಾಡಿದ. ಅವನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದೆಂದು ಅರಿತ ಅಂಜಲಿ ಪ್ರಾಂಶುಪಾಲರಿಗೆ ದೂರು ಕೊಡುವೆ ಎಂದು ಪ್ರಮೋದನಿಗೆ ಹೆದರಿಸಿದಳು. ಓದು ಬಿಟ್ಟು ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕದೇ ಇರುತ್ತಿದ್ದ ಅಂಜಲಿಯ ಹಠದ ಸ್ವಭಾವವನ್ನು ಇಷ್ಟು ವರ್ಷದಿಂದ ನೋಡಿದ್ದ ಪ್ರಮೋದ್ ಗೆ ಅವಳು ನಿಜವಾಗಿಯೂ ಪ್ರಾಂಶುಪಾಲರಿಗೆ ದೂರು ಕೊಟ್ಟರೆ ತನ್ನ ವಿದ್ಯಾರ್ಥಿ ಜೀವನಕ್ಕೆ  ಕಪ್ಪು ಚುಕ್ಕೆ ಬೀಳುವುದು ಖಚಿತವೆಂದು ತಿಳಿದು ಅಂಜಲಿಯ ವಿಷಯಕ್ಕೆ ಹೋಗುವುದನ್ನು ಕಡಿಮೆ ಮಾಡಿ ಸುಮ್ಮನಾಗುತ್ತಾನೆ. ಸಮಯ ಯಾರಿಗೂ ಕಾಯದೇ ಓಡುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಇನ್ನೇನೂ ತಾವು ‘ಇಂಜಿನಿಯರ್’ ಆದೆವು ಎಂಬ ಖುಷಿಯಿಂದ ಅಂತಿಮ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಯನ್ನು ಬರೆದಿದ್ದರು.ವಿದ್ಯಾರ್ಥಿ ಜೀವನದ ಕೊನೆಯ ದಿನವನ್ನು ಮರೆಯದಂತೆ ಕಳೆಯಬೇಕೆಂದು ಯೋಚಿಸಿದ ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ.ಔತಣ ಕೂಟ ಮುಗಿಸಿದ ವಿದ್ಯಾರ್ಥಿಗಳು ಸಂಜೆಯ ಹೊತ್ತಿಗೆ ಊರಿಗೆ ಹೋಗಲಿರುವುದೆಂದು ಹಾಸ್ಟೆಲ್ ನಿಂದ ಲಗೇಜು‌ ಹಿಡಿದು ತಮ್ಮ ತಮ್ಮ ಮನೆಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬರುತ್ತಾರೆ. ಒಬ್ಬೊಬ್ಬರೇ  ಅವರ ಊರಿನ‌ ಬಸ್ಸು ಬಂದಾಗ ಉಳಿದವರಿಗೆ ‘ಬಾಯ್’ ಎಂದು  ಹೇಳಿ ಬಸ್ಸು ಹತ್ತಿ ಹೋದರು. ಸುಮಾರು ಎಂಟು ಗಂಟೆ ಕಳೆದರೂ ತನ್ನ ಊರಿಗೆ ಹೋಗುವ ಬಸ್ಸು ಬಾರದೇ ಮುಂದೇನೂ ಮಾಡುವುದೆಂದು ತೋಚದೇ ನಿಂತಿದ್ದ ಅಂಜಲಿ ಪರಿಚಿತ ಧ್ವನಿಯೊಂದು‌‌ ಕೇಳಿ‌ ಗೆಲುವಾಗುತ್ತಾಳೆ. ತನ್ನ ಗೆಳೆಯರನ್ನು ಬಸ್ಸು ಹತ್ತಿಸಲು ಬಂದಿದ್ದ ಪ್ರಮೋದ್ , ಅಂಜಲಿಯನ್ನು ಕಂಡು ಒಬ್ಬಳೇ ನಿಂತಿರುವ ಬಗ್ಗೆ ಕೇಳುತ್ತಾನೆ. ಬಸ್ಸು ಬಾರದಿರುವ ಕಾರಣದಿಂದ ಇಲ್ಲಿ ನಿಂತಿರುವುದು ಎಂದು ಅಂಜಲಿ ಹೇಳಿದಾಗ “ಈ ಹೊತ್ತಿನಲ್ಲಿ ನೀನು‌ ಒಬ್ಬಳೇ ಇಲ್ಲಿ ನಿಲ್ಲುವುದು ಬೇಡಾ, ನಾನು ನಿನ್ನನ್ನು ಮನೆಗೆ ತಲುಪಿಸುತ್ತೇನೆ..” ಎಂದು ಪ್ರಮೋದ್ ಹೇಳುತ್ತಾನೆ. ಅಂಜಲಿ ಬೇಡವೆಂದು ಹೇಳಿದರೂ ಕೇಳದೆ ಅವಳ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿ ಕಾರಿನ ಡೋರ್ ತೆಗೆದು‌ ನಿಲ್ಲುತ್ತಾನೆ. ಪರಿಚಯವಿರದವರ ಜೊತೆಗೆ ನಿಲ್ಲುವ ಬದಲು ಪರಿಚಯದವನ ಜೊತೆಯಲ್ಲಿ ಮನೆಗೆ ತಲುಪುದು ಕ್ಷೇಮವೆಂದು ಅಂಜಲಿ ಕಾರಿನೊಳಗೆ ಕೂತುಕೊಳ್ಳುತ್ತಾಳೆ. ಅಂಜಲಿಯ ಊರು ತಲುಪಲು ಏಳು ಗಂಟೆಯ ಪ್ರಯಾಣವಿರುವುದರಿಂದ ಪ್ರಮೋದ್ ಅರ್ಧದಾರಿಯಲ್ಲಿ ಊಟ ಮಾಡಲು ಕಾರು ನಿಲ್ಲಿಸುತ್ತಾನೆ. ಹಳೆಯ ಕಹಿನೆನಪುಗಳನ್ನು ಮರೆತ ಇಬ್ಬರೂ ನಗು ನಗುತ್ತಾ ಊಟ ಮುಗಿಸಿ ಕಾರನ್ನು ಏರುತ್ತಾರೆ. ಪಾರ್ಟಿಯಲ್ಲಿ ಕುಣಿದು ಸುಸ್ತಾಗಿದ್ದ ಅಂಜಲಿ‌ ಚಳಿಗೆ ಮುದುಡಿ ಕಾರಿನಲ್ಲೇ ಮಲಗಿರುವಾಗ ಪ್ರಮೋದ್ ಗೆ ಕೆಟ್ಟ ವಿಚಾರ ಮನದಲ್ಲಿ ‌ಸುಳಿಯುತ್ತದೆ.‌ ಪ್ರಮೋದ್ ಗೆ ತಾನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ವಯಸ್ಸಿನ ಕಾಮನೆಯನ್ನು ತಡೆದುಕೊಳ್ಳಲಾಗದೇ  ಜನಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಾನೆ.‌ ನಿದ್ದೆಯ ಮಂಪರಿನಲ್ಲಿದ್ದ ಅಂಜಲಿ ಊರು ಬಂತಾ?  ಎಂದು ಕೇಳುವಾಗ ಬರ್ಹಿದೆಸೆಗಾಗಿ ಎಂದು ಸುಳ್ಳು ಹೇಳುತ್ತಾನೆ.‌ ತನ್ನ ಪ್ರೀತಿಯನ್ನು ತಿರಸ್ಕರಿಸಿದ ಅಂಜಲಿಯ ಜೀವನ ಹಾಳು ಮಾಡಲು ಇದೇ ಸರಿಯಾದ ಸಮಯವೆಂದು ಯೋಚಿಸಿದ ಪ್ರಮೋದ್ ಹಸಿದ ವ್ಯಾಘ್ರದಂತೆ ಅವಳ ದೇಹವನ್ನು ‌ಆಕ್ರಮಿಸುತ್ತಾನೆ. ಎದೆಯ ಮೇಲೆಲ್ಲಾ ಕಚ್ಚಿ ರಕ್ತ ಸೋರುತ್ತಿದ್ದರೂ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸುತ್ತಾನೆ. ಎಷ್ಟು ಚೀರಾಡಿದರೂ ತನ್ನನ್ನು ರಕ್ಷಿಸಲು ಯಾರು ಬರಲಾರರು ಎಂದು ಅಂಜಲಿಗೆ ಅರಿವಾದಾಗ ಸೋತು ಕಣ್ಣೀರು ಹಾಕುತ್ತಾಳೆ. ತನ್ನ ಕೆಲಸ ಮುಗಿಸಿದ ಪ್ರಮೋದ್ ಅವಳ ಕುತ್ತಿಗೆಯನ್ನು ಹಿಸುಕಿ ಸತ್ತು ಹೋದಳೆಂದು ತಿಳಿದು ಅಲ್ಲೇ ಬಿಟ್ಟು ಹೋಗುತ್ತಾನೆ. ಅಂಜಲಿಯ ದೈವಬಲ ಚೆನ್ನಾಗಿತ್ತೋ, ಅಥವಾ ಪ್ರಮೋದ್ ‌ಗ್ರಹಚಾರ ಕೆಟ್ಟಿತ್ತೋ, ಅಂಜಲಿ ಸಾಯದೇ ಬದುಕಿರುತ್ತಾಳೆ. ಮುಂಜಾನೆಯ ಹೊತ್ತು ಪ್ರಜ್ಞೆ ಬಂದ ಅಂಜಲಿ ತನ್ನ ಇರುವಿಕೆಯನ್ನು ತಿಳಿಸಲು ಕಿರುಚಾಡುತ್ತಾಳೆ. ಆ ದಾರಿಯಲ್ಲಿ ಬರುತ್ತಿದ್ದ ಲಾರಿಯವರು ಕಿರುಚಾಟ ಕೇಳಿ ಗಾಡಿ ನಿಲ್ಲಿಸಿ ನೋವಿನಿಂದ  ಒದ್ದಾಡುತಿರುವ ಅಂಜಲಿಯನ್ನು ಲಾರಿಯಲ್ಲಿ ಹಾಕಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಅವಳ ಮನೆಗೆ ವಿಷಯ ತಿಳಿಸಿದಾಗ ಅಳುತ್ತಾ ರಾಯರು ಹಾಗೂ ಅವರ ಪತ್ನಿ ಬರುತ್ತಾರೆ. ಹದಿನೈದು ದಿನ ಸಾವು ಬದುಕಿನೊಂದಿಗೆ  ಹೋರಾಡಿದ ಅಂಜಲಿ ಕೊನೆಗೂ ಬದುಕಿ ಉಳಿಯುತ್ತಾಳೆ. ವೇಣುಗೋಪಾಲರಾಯರು ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅತ್ಯಾಚಾರದ ಕೇಸು ಆಗಿರುವುದರಿಂದ ಅಂಜಲಿ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಗುತ್ತದೆ. ವಿಚಾರಣೆಗಾಗಿ ಅವಳು ಠಾಣೆಗೆ ಹೋಗಿ ಬರುವುದರಿಂದ ಅವಳಿಗೆ ಅತ್ಯಾಚಾರವಾದ  ವಿಷಯದ ಹೊರಬೀಳುತ್ತದೆ.ಈ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಮಾಧ್ಯಮದವರು ಇವಳ ಬಗ್ಗೆ ಮಾಹಿತಿಯನ್ನು ಕೇಳಲು ಒಬ್ಬೊಬ್ಬರಾಗಿ ಸೇರುತ್ತಾರೆ. ತಮ್ಮ ಮಗಳಂತೆ ಅಂಜಲಿ ಎಂಬ ಅಕ್ಕರೆಯು ತೊರದೇ, ಅವಳ ಸಾಧನೆಯ ಬಗ್ಗೆ ಅಸಮಾಧಾನವನ್ನು ಹೊಂದಿದವರು  ಕೆಟ್ಟಕೆಟ್ಟದಾಗಿ ಮಾಧ್ಯಮದವರ ಬಳಿ ಹೇಳಿದಾಗ ಇದನ್ನೇ ದಾಳವಾಗಿ ಉಪಯೋಗಿಸಿದ ಪ್ರಮೋದ್ ಕೇಸ್ ಗೆಲ್ಲುತ್ತಾನೆ. ನ್ಯಾಯ ದೊರಕದೇ ಅಂಜಲಿಯ ಜೊತೆಗೆ ಹೆತ್ತವರು ಕುಸಿಯುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಹಾಳಾಯಿತು, ಇನ್ನೂ ಬದುಕಲು ಸಾಧ್ಯವಿಲ್ಲವೆಂದು ‌ಮೂವರು ಸೇರಿ ಕೀಟನಾಶಕ‌ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಧಿನಿಯಮವೋ, ದೇವರ ಇಚ್ಛೆಯೋ ಹೆತ್ತವರ ಕಳೆದುಕೊಂಡ ಅಂಜಲಿ ಮತ್ತೊಮ್ಮೆ ಸಾವು ಬದುಕಿನೊಡನೆ ಹೋರಾಡಿ ‌ಬದುಕುತ್ತಾಳೆ. ಇಂಜಿನಿಯರಿಂಗ್ ನಲ್ಲಿ ಅಂಜಲಿ ರಾಜ್ಯಕ್ಕೆ ‌ಪ್ರಥಮ ಸ್ಥಾನ ಪಡೆದ ವಿಷಯ ತಿಳಿದು ಶುಭಕೋರಲು ‘ರೀನಾ’ ಪೋನ್ ಕರೆ ಮಾಡಿದಾಗ ತಾನು ಅನುಭವಿಸಿದ ನೋವು, ಹೆತ್ತವರ ಸಾವು ಎಲ್ಲವನ್ನೂ ಅಂಜಲಿ  ರೀನಾಳಿಗೆ ತಿಳಿಸುತ್ತಾಳೆ. ಅಂಜಲಿಯ ಪರಿಸ್ಥಿತಿಗೆ ನೊಂದ ರೀನಾ ಆಸ್ಪತ್ರೆಗೆ ಬಂದು ಅವಳನ್ನು ಕರೆದುಕೊಂಡು ತನ್ನ ಊರಿಗೆ ಹೋಗುತ್ತಾಳೆ.“ಇನ್ನೂ ಚಿಕ್ಕ ವಯಸ್ಸು ನಿನ್ನದು, ಕಹಿ ಘಟನೆಯನ್ನು ಮರೆತು ಬದುಕುವುದನ್ನು ಕಲಿ ” ಎಂದು ಅವಳಿಗೆ ಬುದ್ದಿ ಹೇಳಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಾಳೆ. ಎಲ್ಲವನ್ನೂ ಮರೆತು ದೂರದ ದಿಲ್ಲಿಯಲ್ಲಿ ನೆಲೆನಿಂತ ಅಂಜಲಿ ತಾನು ಕಲಿತ ವಿದ್ಯೆಗೆ ಸರಿಹೊಂದುವಂತ‌ ಕೆಲಸವನ್ನು ಹುಡುಕಿ ಜೀವನ ನಡೆಸುತ್ತಾಳೆ. ****************************************************ಹಳೆಯ ನೆನಪಿನಿಂದ ಎಚ್ಚೆತ್ತು  ಬೆವರಿನಿಂದ ಮುದ್ದೆಯಾದ ಅಂಜಲಿ ಗಟಗಟನೆ ಬಾಟಲ್ ನಿಂದ ನೀರು ಕುಡಿದಳು. ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಪ್ರಮೋದ್ ಗೊಂದು ಗತಿ ಕಾಣಿಸಬೇಕೆಂದು ಅವನ ಚಲನವಲನ ಗಮನಿಸಿದಳು. ತನ್ನ ಮುಖ ಪರಿಚಯ ತಿಳಿಯಬಾರದೆಂದು‌ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಂಡು  ಹೋಟೆಲ್ ನ ಒಬ್ಬ ಸರ್ವೆಂಟ್ ‘ಗೆ ಹಣದ ರುಚಿ ತೋರಿಸಿ ಪ್ರಮೋದ್ ನ ಬಗ್ಗೆ ಸಂಪೂರ್ಣ ವಿಷಯ ಕಲೆ ಹಾಕಿದಳು. ಅವನು, “ಪ್ರಮೋದ್ ಇಲ್ಲಿಯ ಖಾಯಂ ಕಸ್ಟಮರ್ .ತಾನು ಮದುವೆಯಾಗುವ  ಹುಡುಗಿಯ ಪರಿಚಯಮಾಡಿಕೊಳ್ಳಲು ಬಂದಿದ್ದಾನೆ” ಎಂದು ಹೇಳಿದಾಗ ಅಂಜಲಿಗೆ ಕೋಪದ ಜೊತೆಗೆ ಆ ಹುಡುಗಿಯ ಬಗ್ಗೆ ಮರುಕವಾಗುತ್ತದೆ. ನನ್ನಂತೆ ಮತ್ತೊಂದು ಹೆಣ್ಣಿನ ಬಾಳು ಹಾಳಾಗುವುದು ಬೇಡವೆಂದು ಯೋಚಿಸಿ ಪ್ರಮೋದ್ ನಂತಹ ಕ್ರಿಮಿಗಳನ್ನು ಹೊಸಕಿ ಹಾಕಲು ನಿರ್ಧಾರ ಮಾಡುತ್ತಾಳೆ. ಸರ್ವೆಂಟ್ ಸಹಾಯದಿಂದ  ಬಾಡಿಗೆ ಹಂತಕರ ಪರಿಚಯ ಮಾಡಿಕೊಂಡ ಅಂಜಲಿ, ಪ್ರಮೋದ್ ನ ಕೈಕಾಲು ಮುರಿಸುವುದಷ್ಟೇ ಅಲ್ಲದೇ ಅವನ ಪುರುಷತ್ವವನ್ನು ನಾಶ ಪಡಿಸಲು ಹಂತಕರಿಗೆ ಹೇಳುತ್ತಾಳೆ. ವಿಷಯ ಹೊರಬಾರದಂತೆ ಇಬ್ಬರಿಗೂ ಕೈ ತುಂಬಾ ಹಣಕೊಡುತ್ತಾಳೆ. ಪ್ರಮೋದ್ ಗೆ  ಗತಿ ಕಾಣಿಸಿದ ಮಾಹಿತಿಯನ್ನು ಪಡೆದ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

 ಒಂದು ಹನಿ ನೀರಿನ ಕಥೆ ಜ್ಯೋತಿ ಬಾಳಿಗಾ ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ ಹೋಗದೇ ಕೆಲವಾರು ವರ್ಷಗಳೇ ಕಳೆದಿವೆ. ಸದಾಶಿವರಾಯರ ಜೊತೆಗೆ ಹಳೆಯ ಸ್ನೇಹಿತರನ್ನು ಭೇಟಿಮಾಡಿದ ಹಾಗೆ ಆಗುವುದು ಎಂದು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ. ರೋಗಿಯನ್ನು ಬರಿಗೈಯಲ್ಲಿ ನೋಡಲು ಹೋಗಲಾಗುವುದೇ ಎಂದು , ಸ್ವಲ್ಪ ಮುಸುಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ಮಂಗಳೂರಿನ ಪ್ರಸಿದ್ಧ ಎ.ಜೆ ಆಸ್ಪತ್ರೆಯ ಮೆಟ್ಟಿಲು ಹತ್ತಿದೆ. ಸದಾಶಿವ ರಾಯರು ಯಾವ ವಾರ್ಡನಲ್ಲಿದ್ದಾರೆ ಎಂದು ರಿಷೆಪ್ಶ್ ನ್ ಕೌಂಟರ್ ಬಳಿ ವಿಚಾರಿಸಿ ಅವರ ಕೋಣೆಯ ಬಳಿ ಹೋದಾಗ ಒಳಗಿನಿಂದ ಅಳುವ ಸ್ವರ ಕೇಳಿಸುತ್ತಿತ್ತು. ಅಯ್ಯೋ,ನಾನು ಬಂದ ಹೊತ್ತು ಚೆನ್ನಾಗಿಲ್ಲ !, ಸದಾಶಿವ ರಾಯರು ನಮ್ಮನೆಲ್ಲ ಬಿಟ್ಟು ಹೋದರು ಕಾಣಬೇಕು ಅದಕ್ಕೆ ಈ ತರಹ ಅಳುತ್ತಿದ್ದಾರೆ , ಎಂದು ಸುಮ್ಮನೆ ಕೋಣೆಯ ಹೊರಗೆ ನಿಂತು ಅವರ ಮನೆಯವರ ಮಾತು ಕೇಳಿಸಿಕೊಳ್ಳುತ್ತಿದ್ದೆ. ನೋಡಿದರೆ; ರಾಯರ ಸ್ವರ ಕೇಳಿಸುತ್ತಿದೆ, ಒಂದು ಚಮಚದಷ್ಟು ಆದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ ರಾಯರು.ಅನಾಹುತ ಏನೂ ಸಂಭವಿಸಿಲ್ಲ ಎಂದು ಧೈರ್ಯದಿಂದ ಕೋಣೆಯ ಒಳಗೆ ಹೋದೆ. ನನ್ನನ್ನು ಕಂಡೊಡನೆ ರಾಯರು ಪರಿಚಯದ ನಗು ಬೀರಿದರು. ಸದಾಶಿವರಾಯರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ಆಸ್ತಿ ವಿಚಾರಕ್ಕೆ ಗಲಾಟೆಮಾಡಿ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನೂ ದೂರ ಮಾಡಿ ಬದುಕನ್ನು ಕಟ್ಟಿಕೊಂಡು ,ಕೈಲಾದಷ್ಟು ಸಹಾಯ ಮಾಡಿ ಜನರ ಮನಸ್ಸನ್ನು ಗೆದ್ದವರು.ವ್ಯಾಪಾರದಲ್ಲಿ ಸೋಲು‌ ಗೆಲುವು ಕಂಡರೂ ಮನೆ ಬಾಗಿಲಿಗೆ ಬಂದವರಿಗೆ ಬರೀ ಹೊಟ್ಟೆಯಲ್ಲಿ ಕಳುಹಿಸದೇ ಪಾನಕ ಇಲ್ಲವೇ ಊಟ ಮಾಡಿಯೇ ಬಿಳ್ಗೊಡುತ್ತಿದ್ದಂತಹ ವ್ಯಕ್ತಿತ್ವ ಅವರದ್ದು. ಆರು ಅಡಿ ಎತ್ತರದ ದಷ್ಟಪುಷ್ಟ ಶರೀರದ ರಾಯರು ಇಂದು ಆರು ಅಡಿ ಉದ್ದದ ಕೋಲನ್ನು ನೆನಪಿಸುವಷ್ಟು ತೆಳ್ಳಗಾಗಿದ್ದಾರೆ. ಲಿವರ್ ಹಾಗೂ ಮೂತ್ರಪಿಂಡ ಸಂಪೂರ್ಣವಾಗಿ ಹಾಳಾಗಿರುವುದರಿಂದ ಜೀವರಕ್ಷಕ ಅಳವಡಿಸಿದ್ದಾರೆ. ಗಂಜಿಯಂತಹ ದ್ರವ ಪದಾರ್ಥಗಳನ್ನು ಪೈಪಿನ ಮೂಲಕ ತಿನ್ನಿಸುವಂತಹ ವ್ಯವಸ್ಥೆ…..ಅಬ್ಬಾ! ಅವರ ಶೋಚನೀಯ ಸ್ಥಿತಿಯನ್ನು ಕಂಡು ನನ್ನ ಕಣ್ಣಿಂದಲೂ ಕೆಲವೊಂದು ಬಿಂದುಗಳು ಜಾರಿದವು ನನ್ನನ್ನು ಕಂಡ ರಾಯರು ಅತೀ ಕ್ಷೀಣ ಸ್ವರದಲ್ಲಿ ನೀನಾದರೂ ಹೇಳೋ ಸಚಿನ್, ಒಂದು ಚಮಚದಷ್ಟು ನೀರು ಕೊಡಲು ಎಂದಾಗ ,ಈಗ ನೀರು ಕುಡಿಸಬಾರದೆಂದು ಡಾಕ್ಟರ್ ಹೇಳಿದ್ದಾರಲ್ಲ, ಎಂದು ಅವರ ಶ್ರೀಮತಿಯವರು ಸಮಾಧಾನ ಪಡಿಸುತ್ತಿದ್ದರು. ತಂದೆಯ ಕೊನೆಗಾಲದಲ್ಲಿ ಯಾಕೆ ಬಾಯಿಕಟ್ಟಬೇಕೆಂದು ರಾಯರ ಮಗ ತಂದೆಯ ಆಸೆಯಂತೆ ,ಒಂದು ಗ್ಲಾಸ್ ನಲ್ಲಿ ನೀರು ತುಂಬಿಸಿ ಚಮಚದಿಂದ ಕುಡಿಸುತ್ತಿದ್ದರು. ಕಾಕತಾಳೀಯವೊ ಎಂಬಂತೆ ರಾಯರು ಮಗನ ಕೈಯಲ್ಲಿಯೇ ಇಹಲೋಕ ತ್ಯಜಿಸಿದರು.ವಿಷಯ ತಿಳಿಯುತ್ತಿದಂತೆ ಸಂಬಂಧಿಕರೆಲ್ಲಾ ಸೇರಿದರು.ಅಲ್ಲಿದ್ದು ಏನೂ ಮಾಡಬೇಕೆಂದು ತೋಚದೆ ಮನೆಯವರಿಗೆ ಸಮಾಧಾನ ಹೇಳಿ ಹೊರಬಂದೆ. ಕೋಣೆಯಿಂದ ಹೊರ ಬಂದಾಗ ರಾಯರು ಒಂದು ಚಮಚದಷ್ಟು ನೀರಿಗಾಗಿ ಹಂಬಲಿಸುತ್ತಿದ್ದದು ಕಣ್ಣಮುಂದೆ ಕಾಣಿಸುತ್ತಿತ್ತು. ರಾಯರ ಸ್ಥಿತಿಯನ್ನು ನೋಡಿದ ನನಗೆ ಆಸ್ತಿ ಪಾಸ್ತಿ ಅಂತ ಎಷ್ಟೇ ಕೂಡಿಟ್ಟರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ,ಕೊನೆಯ ಪ್ರಯಾಣದಲ್ಲಿ ಏನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಅರಿವಾಗಿ ನಿಧಾನವಾಗಿ ಆಸ್ಪತ್ರೆಯ ಮೆಟ್ಟಿಲುಗಳನ್ನು ಇಳಿಯುತ್ತಾ ಮನೆಯ ದಾರಿ ಹಿಡಿದೆ….. ***********

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸುನಂದಾಬಾಯಿ ಕೊಡ ಮಲ್ಲಿಕಾರ್ಜುನ ಕಡಕೋಳ ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ  ಬಡತನ ಪ್ರಸಿದ್ದವಾಗಿತ್ತು.  ತಲೆಮಾರುಗಳಿಂದ ಶೀಲವಂತರ  ಸುನಂದಾಬಾಯಿ ಭಗವಂತ್ರಾಯ  ದಂಪತಿಗಳು ಪಡೆದುಕೊಂಡ  ಆಸ್ತಿಯೆಂದರೆ ಕಿತ್ತುತಿನ್ನುವ ಬಡತನ.  ಅದನ್ನೇ ಹಾಸುಂಡು ಬೀಸಿ  ಒಗೆಯುವಂತಿತ್ತು. ಅವರೂರು  ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ  ಮಾತಾಡುವಾಗ ಶೀಲವಂತರ ಭಗಂತ್ರಾಯರ ಬಡತನ ಉಲ್ಲೇಖಿಸದೇ ಇರಲಿಕ್ಕೆ  ಸಾಧ್ಯವಿರುತ್ತಿರಲಿಲ್ಲ.   ಅವರು ಉಪವಾಸದ ದಿನಗಳನ್ನು  ನೆನಪಿಡುತ್ತಿರಲಿಲ್ಲ., ಅಂಬಲಿ ಕುಡಿದ  ದಿನಗಳನ್ನು ನೆನಪಿಡುತ್ತಿದ್ದರು. ಈ  ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ  ಗಂಜಿಗೆ ರುಚಿ ಬರಲೆಂದು ಸೇರಿಸಲು  ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು.  ಅಂತೆಯೇ ಉಪವಾಸದ ದಿನಗಳೇ  ಹೇರಳ. ಗಂಜಿ ಕುಡಿದ ದಿನಗಳೇ ವಿರಳ. ಸುನಂದಾಬಾಯಿಗೆ ಜಾಂಬಳ ಬಣ್ಣದ  ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ  ಆ ಒಂದು ಸೀರೆಯನ್ನು ಜಳಕ  ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಆಕೆ ಹೊಲಕ್ಕೆ ಹೋದಾಗ ನಿರ್ಜನ ಕರ್ಮನಹಳ್ಳದಲ್ಲಿ ಜಳಕ ಮಾಡುತ್ತಿದ್ದಳು. ಕೂಲಿನಾಲಿ ಮಾಡುವಾಗ ಸೀರೆ, ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ  ಜಿಗಿಸತ್ತ ಸೀರೆ ಟಸಕ್ಕನೆ ಹರಿದು  ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು. ತನ್ನ ಮಾನಮರ್ಯಾದೆ ಕಾಪಾಡುವ  ಏಕೈಕ ಸೀರೆ ಅದಾಗಿತ್ತು. ಹೋದ  ವರುಷ ಕುಂಡೀಪದರಲ್ಲಿ ಅದು ಹರಿದು  ಹೋದುದಕ್ಕೆ ಹರಿದುಹೋದ  ಭಾಗವನ್ನು ಕುಡುಗೋಲಿನಿಂದ  ಕೊಯ್ದು ತೆಗೆದು ಸೂಜಿ ದಾರಗಳಿಂದ  ಉದ್ದಕ್ಕೂ ದಿಂಡು ಹಾಕಿದ್ದಳು. ಹಾಗೆ  ಮಾಡುವಾಗ ಮೈ ತುಂಬಾ ಕೌದಿ ಹೊದ್ದುಕೊಂಡಿದ್ದಳು.ತನ್ನ ಮಾನರಕ್ಷಕ ಸೀರೆಯನ್ನು ಹೊಲಿದು ದುರಸ್ತಿಗೊಳಿಸಿದಮೇಲೆ ಕೌದಿ ತೆಗೆದಿಟ್ಟು ಸೀರೆ ಉಟ್ಟು ಕೊಂಡಿದ್ದಳೆಂಬುದು ನಾನು  ಸಣ್ಣವನಿದ್ದಾಗ ಕೇಳಿದ ನೆನಪು ಹಚ್ಚ ಹಸಿರಾಗಿದೆ. ಆಕೆಯ ಕುಪ್ಪಸದ್ದು  ಇಂತಹದ್ದೇ ಕರುಣಾಜನಕ ಕತೆ. ಭಗವಂತ್ರಾಯನ ಧೋತರ ಮತ್ತು  ಅಂಗಿಯ ಕತೆಗಳು ಇದಕ್ಕಿಂತ  ಭಿನ್ನವಾಗಿರದೇ ಕರುಳು  ಚುರುಗುಟ್ಟಿಸುವಂತಹದ್ದೇ ಆಗಿದ್ದವು.  ಆತ ಯಾವತ್ತೂ ತೊಡೆಯಿಂದ ಈಚೆ  ಮೊಳಕಾಲ ಕೆಳಗೆ ಧೋತರ ಇಳಿ ಬಿಟ್ಟಿದ್ದನ್ನೇ ನನ್ನ ಕಣ್ಣುಗಳು ಕಂಡಿಲ್ಲ.  ಕಾರಣ ಆತನ ಧೋತರದ ಮೈತುಂಬಾ  ಹರಿದ ಗಾಯಗಳೇ ತುಂಬಿದ್ದವು.  ಗಾಯಗಳನ್ನೆಲ್ಲ ಗಂಟು  ಹಾಕಿರುತ್ತಿದ್ದನಾದ್ದರಿಂದ ಆತನ ಮಾನದ  “ಹಿಂದು ಮುಂದು”ಗಳನ್ನು ಆ ಎಲ್ಲ  ಗಾಯಗಂಟುಗಳ ಧೋತರ ಮುಚ್ಚಿ ಕೊಂಡಿರುತ್ತಿತ್ತು. ಆತನಿಗೊಂದು ಪಟಗವಿತ್ತು. ಅವರಪ್ಪ  ತೀರಿಕೊಂಡಾಗ ರುದ್ರಭೂಮಿಯ  ಕುಣಿಯ ಮೇಲೆಯೇ ಆತನಿಗೆ  ವಾರಸುದಾರಿಕೆಯಾಗಿ ಬಂದ ಏಕೈಕ  ಆಸ್ತಿ ಅದಾಗಿತ್ತು. ಭಗವಂತ್ರಾಯನಿಗೆ  ಅಪ್ಪನಿಂದ ಬಂದ ಆ ಆಸ್ತಿಯನ್ನು ಜಾತ್ರೆ,  ದೀವಳಿಗೆ, ಉಗಾದಿ ಹಬ್ಬಗಳಲ್ಲಿ ತಲೆಗೆ  ಕಟ್ಟು ಹೊಡೆದು ಸುತ್ತಿಕೊಂಡು ಸಂಭ್ರಮಿಸುತ್ತಲೇ ಅದನ್ನು ಜೋಪಾನ  ಮಾಡಿಟ್ಟು ಕೊಂಡಿದ್ದ. ಮುಡ್ಡೀಚಾಟಿಯಂತಹ ಅಂಗಿ ಹರಿದು,  ಸವೆದು ಹೋಗಿತ್ತು. ಅವನ ಅಪ್ಪನ  ಅಪ್ಪನಿಂದ ಬಂದ ಮತ್ತೊಂದು  ಆಸ್ತಿಯೆಂದರೆ ಗುದ್ದಲಿ. ನಟ್ಟು ಕಡಿದು, ಮಣ್ಣಿನ ಕೆಲಸದಿಂದ ಕುಟುಂಬಜೀವಕ್ಕೆ ಗಂಜಿ ದೊರಕಿಸಿ ಕೊಡುತ್ತಿದ್ದುದೇ ಈ  ಗುದ್ದಲಿ. ಅಂತೆಯೇ ಗುದ್ದಲಿಯನ್ನು  ತಮ್ಮ ಜೀವದಷ್ಟೇ ಜೋಪಾನ  ಮಾಡುತ್ತಿದ್ದರು. ಅಮವಾಸ್ಯೆಗೊಮ್ಮೆ ಗುದ್ದಲಿ, ಕುರ್ಪಿ, ಕುಡುಗೋಲುಗಳಿಗೆ  ಪೂಜೆ ಸಲ್ಲಿಸುತ್ತಿದ್ದರು. ಸುನಂದಾಬಾಯಿ ಭಗವಂತ್ರಾಯರ ಲಗ್ನವಾದ ವರುಷ ಮೋಟಗಿ ಸಂತೆಯಲ್ಲಿ ದೀಡು ರುಪಾಯಿ ಕೊಟ್ಟುತಂದ ಮಣ್ಣಿನ ಕೊಡವನ್ನು ಅವರು ತಮ್ಮ ಜೀವದಷ್ಟೇ ಜೋಪಾನ ಮಾಡಿಕೊಂಡು ಬರುತ್ತಿದ್ದುದು ಅವರ ಬದುಕಿನ  ದಾಖಲೆಯಷ್ಟೇ ಅಲ್ಲ, ಅವರ  ಬಡತನದಷ್ಟೇ ಖ್ಯಾತಿಯನ್ನು ಆ ಮಣ್ಣಿನ  ಕೊಡ ಪಡಕೊಂಡಿತ್ತು. ಗಬಸಾವಳಗಿಯ  ಕುಂಬಾರರು ಗಟ್ಟಿಮುಟ್ಟಾಗಿ ಸುಟ್ಟುಮಾಡಿದ ಮಣ್ಣಿನ  ಕೊಡ ಅದಾಗಿತ್ತು.  ಆ ಮಣ್ಣಿನ ಕೊಡವನ್ನು ಅದೆಷ್ಟು  ಜಾಗರೂಕತೆಯಿಂದ ಬಳಕೆ ಮಾಡುತ್ತಿದ್ದರೆಂದರೆ ತಮ್ಮ ಪ್ರಾಣವನ್ನೂ ಅವರು  ಎಂದೂ ಅಷ್ಟೊಂದು ಎಚ್ಚರದಿಂದ  ಸಲಹಿಕೊಂಡ ನೆನಪು ಖಂಡಿತಾ ಅವರಿಗಿಲ್ಲ. ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ಹಳ್ಳದ ನೀರು ತರಲು ಹೋದಾಗ ಸಮನಾದ  ಸಮಚಿತ್ತದ ಎಚ್ಚರ ವಹಿಸುತ್ತಿದ್ದರು. ವರತಿನೀರನ್ನು  ಕೊಡಕ್ಕೆ ತುಂಬುವಾಗ  ಅಪ್ಪೀತಪ್ಪಿಯೂ ತಂಬಿಗೆಯನ್ನು  ಕೊಡದ ಕಂಠಕ್ಕೆ ಮುಟ್ಟಿಸುತ್ತಿರಲಿಲ್ಲ. ಒಮ್ಮೊಮ್ಮೆ  ಚೆರಿಗೆಯನ್ನು ದೂರವಿಟ್ಟು ಬೊಗಸೆಯಿಂದಲೇ ಕೊಡ ತುಂಬಿಸುತ್ತಿದ್ದರು. ಅವರ ಮನೆಯಲ್ಲಿ ಮಣ್ಣಿನ ಹರವಿ ಇತ್ತು. ಅದಕ್ಕೊಂದು ಮಣ್ಣಿನ ಮುಚ್ಚಳ.  ಹರವಿಗೆ ಕೊಡದಿಂದ ನೀರು ಬರಕುವಾಗ  ಅಷ್ಟೇ ಎಚ್ಚರ. ಅಪ್ಪೀತಪ್ಪಿಯೂ ಹರವಿ  ಮತ್ತು ಕೊಡದ ಕಂಠಗಳು ಮುತ್ತಿಕ್ಕುತ್ತಿರಲಿಲ್ಲ. ಅಂತಹ ಕಟ್ಟೆಚ್ಚರ ಅವರಿಬ್ಬರದು. ಅವರಿಗೊಬ್ಬ ಮಗಳು ಹುಟ್ಟಿದಳು. ಚಂದ್ರಭಾಗಿ ಅವಳ ಹೆಸರು. ನಾಕೈದು  ವರುಷದ ಬೆಳೆದುನಿಂತ ಆ ಹುಡುಗಿಗೆ  ಹೋಳಿಗೆ ಅನ್ನಸಾರುಗಳೆಂಬ  ಹೆಸರುಗಳನ್ನು ಕೇಳಿ ಗೊತ್ತಿತ್ತೇ ಹೊರತು  ಅವನ್ನು ಕಂಡುಂಡ ಅನುಭವ  ಖಂಡಿತಾ ಇರಲಿಲ್ಲ. ಅದೇನಿದ್ದರೂ  ಅಂಬಲಿಯೇ ಅವರ ಪಾಲಿನ ಮೃಷ್ಟಾನ್ನ. ಆಗಾಗ ಆ ಹುಡುಗಿ ಕೆಮ್ಮು, ನೆಗಡಿ, ಜ್ವರ ಜಡ್ಡು ಜಾಪತ್ರಿಗಳಿಂದ ನರಳುತ್ತಿದ್ದರೆ ಲಕ್ಕಿ ತಪ್ಪಲು ತಲೆಗೆ ಕಟ್ಟಿ ಮಲಗಿಸುವುವುದು ಇಲ್ಲವೇ ದ್ಯಾಮವ್ವನ ಗುಡಿಯ ಬೂದಿ,  ಗಿರಿಮಲ್ಲಯ್ಯ ಸ್ವಾಮಿಗಳು  ಕಟ್ಚುವ  ಚೀಟಿ ಚಿಪಾಟಿಗಳೇ ಅವರಿಗಿರುವ  ಆಧಾರ. ಅವರೆಂದೂ ದವಾಖಾನೆಗೆ  ಹೋದವರಲ್ಲ. ಹೋಗಲು ರೊಕ್ಕ  ಬೇಕಲ್ಲ..! ಇಷ್ಟೆಲ್ಲ ಕ್ರೂರ ಬಡತನವಿದ್ದರೂ  ಅವರು ಯಾರೊಬ್ಬರ ಮನೆಗೆ ಹೋಗಿ  ದೈನೇಸಿ ಎಂದು ಕೈಯೊಡ್ಡಿದವರಲ್ಲ.  ಹಾಗೇ ಹಸಿವಿನಿಂದ, ನೋವಿನಿಂದ  ಸತ್ತಾರೇ ಹೊರತು ಅವರಿವರ ಮನೆಗೆ  ಹೋದವರಲ್ಲ. ಬೇರೆಯವರ ಮನೆಯಲ್ಲಿ ಊಟದ  ಮಾತು ದೂರವೇ. ಬಡತನ ಬಿಟ್ಟು  ಬದುಕಿದ್ದು ಅವರಿಗೆ ಗೊತ್ತಿಲ್ಲ. ನನಗಂತೂ ಅವರ ಮನೆಯ ಮಿರಿ ಮಿರಿ  ಮಿಂಚುವ ಮಣ್ಣಿನಕೊಡ ಅವರ  ಬಡತನಕ್ಕಿಂತ  ಹೆಚ್ಚು ಪ್ರಿಯವಾಗಿ  ಕಾಣುತ್ತಿತ್ತು. ಅವರು ಹಳ್ಳಕ್ಕೆ ನೀರಿಗೆ  ಬಂದಾಗೆಲ್ಲ ನಾನು ಆ ಕೊಡವನ್ನು  ಕಣ್ತುಂಬಿಸಿ ಕೊಳ್ಳುತ್ತಿದ್ದೆ. ಅದಕ್ಕೆ  ಮುತ್ತಿಕ್ಕ ಬೇಕೆನ್ನುವಷ್ಟು ಆ ಕೊಡದ  ಮೇಲೆ ನನ್ನ ಅದಮ್ಯ ಪ್ರೀತಿ. ಅರ್ಧಮೈಲಿ ದೂರದ ಲಂಡೇನಹಳ್ಳಕ್ಕೆ ನೀರು ತರಲು ಎಂದಿನಂತೆ ನಾನೂ ಹೋದೆ. ಕಡುಬೇಸಿಗೆಯಾದ್ದರಿಂದ ಹಳ್ಳದಲ್ಲಿ ನೀರು ಹರಿಯುತ್ತಿರಲಿಲ್ಲ. ಉಸುಕಿನಲ್ಲಿ ತೋಡಿದ ವರತೆಯಿಂದ ನೀರು ಕೊಡಕ್ಕೆ ತುಂಬಿಸಿಕೊಳ್ಳಬೇಕಿತ್ತು.   ಮೊಳಕಾಲುದ್ದದೊಳಗಿನ ವರತೆಯಿಂದ  ಸುನಂದಾಬಾಯಿ ತನ್ನ ಮಣ್ಣಿನ ಕೊಡಕ್ಕೆ  ಚೆರಿಗೆಯಿಂದ ನೀರು ತುಂಬಿಸಿಕೊಳ್ಳುತ್ತಿದ್ದಳು. ನನಗೋ ಆ  ಮಣ್ಣಿನ ಕೊಡವನ್ನು ಕೈಗೆಟಕುವ  ಸನಿಹದಿಂದ ನೋಡುವ ಭುವನದ ಭಾಗ್ಯ. ಹತ್ತತ್ತಿರ ಅದಕ್ಕೆ ಇಪ್ಪತ್ತರ  ಪ್ರಾಯವಿದ್ದೀತು. ಸವೆದು ಸವೆದು ಮಣ್ಣಿನಕೊಡ ಮಿರಿಮಿರಿ ಮಿಂಚುತ್ತಿತ್ತು.ಮನೆಯಲ್ಲಿ ನೀರು ತುಂಬಿಟ್ಟಾಗ ಚೇಳೊಂದು ಕೊಡಕ್ಕೆ  ಕುಟುಕಿ ಸಣ್ಣದೊಂದು ತೂತಾಗಿ ಆ ತೂತಿಗೆ ಸರಿಯಾಗಿ ಹರಕು ಬಟ್ಟೆಯ ಬತ್ತಿ ಸುತ್ತಿ ತುರುಕಿದ್ದರಿಂದ ಕೊಡಕ್ಕೊಂದು ಕಪ್ಪುಚಿಕ್ಕೆ ಬಿದ್ದಂಗಿತ್ತು. ಅದೆಷ್ಟೋ ವರುಷಗಳಿಂದ ಕೊಡವನ್ನು ದೂರದಿಂದಲೇ ನೋಡುತ್ತಾಬಂದ ನನಗವತ್ತು ಅಷ್ಟು ಸನಿಹದಿಂದ ನೋಡುವ ಜೀವಮಾನದ ಸದವಕಾಶ. ಆ ಕೊಡ ಕುರಿತು ಅದರ ಆಯಸ್ಸು ಕುರಿತು ಜನರಾಡುತ್ತಿದ್ದ ಮಾತುಕತೆಗಳು ನನಗೆದಂತಕತೆಗಳಾಗಿ ಕೇಳಿಸ ತೊಡಗಿದವು. ಅದೇಕೋ ಕೊಡವನ್ನು ನನ್ನ ಸುಕೋಮಲ ಎಳೆಯ ಕೈಗಳಿಂದ ಮುಟ್ಟಬೇಕೆನಿಸಿತು. ನೇರವಾಗಿ ಹೇಗೆ  ಮುಟ್ಟುವುದೆಂತು ಧೇನಿಸಿ, ಧೇನಿಸಿ ಧೈರ್ಯತಾಳದೇ… ಅಚಾತುರ್ಯದಲ್ಲೆಂಬಂತೆ ವರತಿಯ ಹತ್ತಿರ ಸರಿದಂತೆ ನಟಿಸಿ, ನನ್ನೆರಡೂ ಅಂಗೈಗಳಿಂದ ಸುನಂದಾಬಾಯಿಯ ಕೊಡ ಮುಟ್ಟಿದೆ. ನನ್ನ ಒಡಲಾಳದ ಬಯಕೆ ಈಡೇರಿಸಿಕೊಂಡೆ. ನನ್ನ ಸಂತಸಕ್ಕೆ ಎಣೆಯೇ ಇಲ್ಲವೆನಿಸಿತು. ಕೊಡಕ್ಕೆ ನನ್ನ ಕೈತಾಗಿಸಿದ ಮಿಂಚಿನ ಕ್ಷಣಗಳಲ್ಲೇ ಸುನಂದಾಬಾಯಿ ಕೊಡ ಬಿಟ್ಟು ದೂರಕ್ಕೆ ಹೋಗಿ ತಲೆಮೇಲೆ ಕೈ ಹೊತ್ತು ಕುಂತು ಒಂದೇಸಮನೆ “ಗೊಳೋ” ಅಂತ ಪ್ರಾಣ ಕಳಕೊಂಡವರಂತೆ ಅಳತೊಡಗಿದಳು.  ನಮ್ಮಕುಲದ ಶೀಲವೇ ಹಾಳಾಯಿತೆಂದು ಸತ್ತವರ ಮನೆಯಲ್ಲಿ ಅಳುವಂತೆ ಹಾಡಾಡಿಕೊಂಡು ಮುಖಕ್ಕೆ ಸೆರಗು ಮುಚಗೊಂಡು ಬೋರ್ಯಾಡಿ ಅಳತೊಡಗಿದಳು. ಅದನ್ನು ಕಣ್ಣಾರೆಕಂಡ ಬಡಿಗೇರ ಇಮ್ಮಣ್ಣ ನನಗೆ ಹುಚ್ಚುನಾಯಿಗೆ ಹೊಡೆಯುವಂತೆ, ಜನ್ಮ ಜನ್ಮಕು  ನೆನಪಿಡುವ ಹಾಗೆ ಥಳಿಸಿದ. ನಾವು ಶೂದ್ರರು ಶೀಲವಂತರ ಕೊಡ ಮುಟ್ಟಿಸಿ ಕೊಳ್ಳಬಾರದೆಂಬುದು ನನಗೆ  ಗೊತ್ತಿರಲಿಲ್ಲ. ಸುನಂದಾಬಾಯಿ ಆ  ಕೊಡವನ್ನು ಅಲ್ಲೇ ಒಡೆದು ಹಾಕಿದಳು. ಹಾಗೆ ಒಡೆಯುವಾಗ ನನ್ನ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತಿದ್ದವು. ಒಡೆದ ಕೊಡದ ಒಂದೊಂದೇ ಬೋಕಿ ಚೂರುಗಳನ್ನು ನನ್ನ ಕೈಗಳಿಗೆ ತುಂಬಿ ಕೊಳ್ಳಬೇಕೆನಿಸಿತು. ಆದರೆ ಬೋಕಿಯ ಚೂರುಗಳನ್ನು ಮುಟ್ಟುವ ಧೈರ್ಯ ನನಗೆ ಬರಲಿಲ್ಲ. ಏಕೆಂದರೆ ಇಮ್ಮಣ್ಣ ಮಾವ ಅಲ್ಲೇ ಇದ್ದ.. ಆದರೆ ನನಗೆ ಮಾತ್ರ ಶೀಲವಂತರ ಸುನಂದಾಬಾಯಿಯ ಮಣ್ಣಿನ ಕೊಡವನ್ನು ನಾನೇ  ಕೊಂದು ಹಾಕಿದೆನೆಂಬ ” ಪಾಪಪ್ರಜ್ಞೆ ” ಅವಳ ಮಡಿವಂತಿಕೆಯ ಮನಸಿಗಿಂತ, ನನ್ನನ್ನು ಮತ್ತೆ ಮತ್ತೆ ಇವತ್ತಿಗೂ ಘೋರವಾಗಿ ಕಾಡುತ್ತಲೇ ಇದೆ. *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ  ಅವಳ ತುಂಬಿದ ಮೈ ತುಂಬಿಕೊಂಡಿದ್ದವು. ತಲೆತುಂಬಾ ಅರೆನೆರೆತ ಕೂದಲು. ಥೇಟ್  ಹಳ್ಳಿಯ ಮುಗುದೆ – ಗೌಡತಿಯಂತೆ  ಜವಾರಿತನ ಬದುಕಿದ್ದಳು. ಅದಕ್ಕೆ ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಖರೇ ಖರೇನ ಹೇಳ್ತಿದೀನಿ….ಮೊದಲಿಗಿಂತ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ  ಹೇಳಿದೆ.  ಯಾವಾಗ ಬಂದೆ..? ಕೇಳಿದಳು. ನನಗೇನೋ….ಕೇಳಿದಂತಾಗಿ  ಏನುತ್ತರಿಸಿದೆನೋ..! ನೆನಪು ಹಾರಿ ಹೋಯಿತು. ಆಕೆ ಸಂಜೆಯ ವಾಕಿಂಗ್  ಮುಗಿಸಿ  ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ  ಸುಖವೇ  ಅನರ್ಘ್ಯವೆಂದು ಹೆಸರಿಲ್ಲದ ಹಸಿವುಗಳನ್ನು ಅನೇಕ ಬಾರಿ ಪರಸ್ಪರ ಉಸುರಿ ಕೊಂಡವರು. ಹೀಗೇ ಇಬ್ಬರೂ ಒಂದೇ ನೋವಿನ ದೋಣಿಯಲಿ  ಪಯಣಿಸಿಬಂದ ಲೋಕಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು. ದಂಗೆಕೋರ ಪ್ರೇಮಿಗಳಂತೆ ಸರಸ ಪ್ರೇಮಕೆ ಸನ್ಯಾಸ ದೀಕ್ಷೆ ಪಡೆದು, ನಕ್ಷತ್ರದೊಳಗಣ ವಿಮಲ ಸರೋವರದ ಕನಸುಗಳ ಕಂಡವರು ನಾವು.  ನೆನಪಿದೆಯಾ  ನಿನಗೆ  ? ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರುಳ ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯಾ ನಿನಗೆ ?   ಯಾಕೋ ಗೊತ್ತಿಲ್ಲ…ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು. ಹೌದು, ನಾವಿಬ್ಬರು ಕೆಂಪುಹಳ್ಳದ  ಹುರುಮಂಜಿನಂತಹ ಉಸುಕಿನಲಿ  ‘ಗುಬ್ಬಿಮನೆ’ ಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು.  ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ  ಭಯಾನಕ  ಸೆಳೆತದ ಸುಳಿ ಮಡುವು. ಅಂತಹ ಕರಿನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ  ಒಮ್ಮೆ ನನ್ನನ್ನು ಎಳಕೊಂಡು  ಮುಳುಗೆದ್ದಿದ್ದಳು. ಅವಳಂತರಂಗದ ಜೀವಶಿಲ್ಪಕ್ಕೆ ಸಂಪೂರ್ಣ ಸಮರ್ಪಿಸಿಕೊಂಡೆ. ಹದಿನೆಂಟರ ಮೊದಲ ಹರೆಯಕ್ಕೆ ಧನ್ಯತೆಯ ಸಲಾಮು ಸಲ್ಲಿಸಿದೆ. ಗೊತ್ತಿಲ್ಲ ನನಗೆ ನನ್ನವ್ವ ಪುರಾಣ ಕತೆಗಳಂತೆ ಹೇಳುತ್ತಿದ್ದ “ಜಕಣಿ ಜಲ ದೇವತೆಯರು” ಆಗ ನೆನಪಾಗಿದ್ದರು.   ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್,  ಮಾರ್ಕ್ಸ್, ಮಾರ್ಕ್ವೆಜ್..ಅಂತಿದ್ದಿ…  ” ನನ್ನವ್ವ  ಫಲವತ್ತಾದ ಕಪ್ಪು ನೆಲ… ಬನದ ಕರಡಿಯ ಹಾಗೆ ಚಿಕ್ಕಮಕ್ಕಳ  ಹೊತ್ತು ಸಾಕಿದಾಕೆ…” ಲಂಕೇಶರ ಸಾಲುಗಳೋದಿ ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ನಾನಂದು ಕಂಡ ಕನಸಿನ ಗಂಧರ್ವ ಕಿಂಪುರುಷ ನೀನೇನಾ…? ಎಂದು  ಗೊಣಗಿ, ಗುದ್ದಾಡುವ ದನಿಯಲಿ  ಕೊಡವಿ ಬಿಟ್ಟಳು.  ಹಿಂದೊಮ್ಮೆ  ನಾವಿಬ್ಬರೂ…ಹುಯ್ದ ಚಿತ್ತೆ ಮಳೆಯಲಿ  ತೋಯ್ದುಡುಗೆಯಲೇ ಘತ್ತರಗಿ  ಅಮ್ಮನ ಸನ್ನಿಧಿಯಲಿ ನಿಂತಾಗ…  ” ಬದುಕು – ಬರಹಗಳನ್ನು ವ್ರತದಂತೆ  ಪಾಲಿಸುವ ನೀನೊಬ್ಬ ಹೇತ್ಲಾಂಡಿ ” ಅಂತ, ಅವಳೇ ಕಾರ್ಣಿಕ ನುಡಿದದ್ದು  ಬಡಬಡಿಸಿಕೊಂಡೆ. ಕುದುರೆಯಿಂದ  ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ  ಹಂಗೇ ನಿಂತಿದ್ದೆ. ಒಂದುಬಗೆಯ ಜೀವ ಖಜೀಲಾದ ಸ್ಥಿತಿ ನನ್ನದಾಗಿತ್ತು. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ. “ನಾನೂನು ಇಲ್ಲ ನೀನೂನು ಇಲ್ಲ…ತನ್ನ  ತಾನರಿತವಗೆ ಬೇರೇನೂ ಇಲ್ಲ..” ಅಲ್ಲಮನ ವಚನ ಆಗಸದ ಅಶರೀರವಾಣಿಯಿಂದ ಶಾರೀರಗೊಂಡಿತು. “…ಆ ಕೆಂಪುಹಳ್ಳ ಮುತ್ತೈದೆಯಂತೆ  ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ  ಸ್ಮಾರಕದ ಆ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ. ಅವಳದು ಮುಂಚಿನಿಂದಲೂ ಲಿಪಿಗಿಂತ  ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ  ನೋಡೋದಿಲ್ಲವೆಂದು  ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್  ಬ್ಯಾಟೊಂದನ್ನು ಹಿಡಕೊಂಡು ಪುಟ್ಟ  ಬಾಲಕನೊಬ್ಬ ಅದೇ ರಸ್ತೆಯಲಿ  ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ…ತನ್ನ ಗಂಡನ  ಹೆಸರು ಹೇಳಿ,  ಹೌದು ಅವನ ಹಸಿತ್ಯಾಜ್ಯದ  ಫಲವೇ ಇವನು, ಎಂದು ಮಗನತ್ತ ತೋರಿಸಿದಳು. ಅವಳ  ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ  ದೂರ ಚಲಿಸಿತ್ತು.   ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು  ಮುಸುಕಿ, ಮೋಡ ಗುಡುಗುಗಳ ಕಗ್ಗತ್ತಲು ಘೋರಿಸಿತು. ಕಣ್ಣಳತೆಗೂ  ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಕೋಲ್ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ  ಕೆಂಪಗೆ ಕಾದ ಛಡಿಗಳ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು  ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ  ವೇಗದಲ್ಲಿ ಕುದುರೆ ಓಡಿಸತೊಡಗಿದೆ. ನನ್ನೊಳಗೆ ಅವಳು ಚೆಲುವ ಪರಿಮಳ ಅರಳಿಸುತ್ತ ದೇವಕನ್ನಿಕೆಯಾಗಿ…ಅನುಭವಿಸುತ್ತಲೇ ಹಿಂಬಾಲಿಸಿದಳು…ನಾನು ಕನ್ಯ ಸಿಸುಮಗನಂತೆ ಅರವತ್ತರ ವೇಗದಲ್ಲಿ ಸಾಗುತ್ತಲೇ ಇದ್ದೆ. *******  

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ. ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ! ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ. ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು. ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ. ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು. ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ. ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ. ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ. ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು. ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌. ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು. ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು. ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು. ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು. ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ. ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು. ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ. ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ. ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು. ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು. ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು. ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು. ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು. ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು. ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು. ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ. ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.   *********

ಕಥಾಯಾನ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಾರ್ಮಿಕ ದಿನದ ವಿಶೇಷ-ಕಥೆ ತಿಥಿ ಟಿ. ಎಸ್.‌ ಶ್ರವಣ ಕುಮಾರಿ. ತಿಥಿ “ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್‌ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್‌ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ ʻನಾನೂ ಇದೀನಿʼ ಎನ್ನುವಂತೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅಸ್ಪಷ್ಟವಾಗಿ ಅವಳ ಆಕೃತಿ ಕಂಡಿತು. “ಈ ಹೊಗೇಲಿ ಅದೆಂಗಾರ ಇದಿಯೇ ಮಾರಾಯ್ತಿ, ನಿನ್‌ ಮಖ್ವೇ ಸಮಾ ಕಾಣಲ್ವಲ್ಲೇ” ಎಂದ ಕೆಮ್ಮುತ್ತಾ. “ಕಾಣ್ದಿದ್ರೆ ಬಿಡತ್ಲಾಗೆ, ಮಾತಾಡ್ತಿರದು ಕೇಳ್ತಿದ್ಯಲ್ಲ, ಏನು ಸವಾರಿ ಈ ಕಡೆ” ಎಂದಳು. ಇಷ್ಟು ಹೊತ್ತಿಗೆ ಆ ಕತ್ತಲಿಗೆ ಸ್ವಲ್ಪ ಕಣ್ಣನ್ನು ಹೊಂದಿಸಿಕೊಂಡಿದ್ದವನು ಅಲ್ಲೇ ಎದುರಿನ ಗೋಡೆಗೊರಗಿ ಕೂತು “ಇವತ್ತು ಸೋಮಾರ ಅಲ್ವನೇ, ನಾಳೆ ಬರಾ ಶುಕ್ರಾರ ಅಜ್ಜಿ ಬರ್ತಳೆ. ಈ ಸಲ ʻಮೇ ಡೇʼ ರಜಾದಿನ್ವೇ ಬಂದಿದೆ ನೋಡು. ಕರ್ದೋರೆಲ್ರೂ ಬರ್ತರೆ. ದೊಡ್ಡೋರೆ ಒಂದು ಮೂವತ್ತು ಜನ್ರ ಮೇಲೇ ಆಗ್ತರಪ್ಪ. ಅಮ್ಮಂಗೆ ಒಬ್ಳಿಗೇ ಅಷ್ಟು ಅಡುಗೆ ಮಾಡಕ್ಕೆ ಕೈಲಾಗುಲ್ವಲ್ಲೆ. ಅದ್ಕೇ ನಾಗೂನ ಸಹಾಯಕ್ಕೆ ಬರ್ಬಕಂತೆ ಅಂತ ಹೇಳ್ಬಾ ಅಂದ್ಳು” ಅಂದ.‌ ಅವನ ಕಡೆ ತಿರುಗಿ “ಈ ಶುಕ್ರಾರಾನಾ… ಅವತ್ತೇ ನಾರಣಪ್ಪನೋರ ಮನೇಲಿ ಮಗನ್‌ ಮದ್ವೆ ದೇವರ ಸಮಾರಾದ್ನೆ ಇಟ್ಕಂಡಿದರೆ. ಮದ್ವೆ ಮನೆ ಚಕ್ಲಿ, ಉಂಡೆ ಎಲ್ಲಾ ನಾನೇ ಮಾಡ್‌ಕೊಟ್ಟಿರದು. ನಿನ್ನೇಂದ ಶುರುಮಾಡ್ದೋಳು ಇವತ್ತು ಬೆಳಗ್ಗೆನೂ ಏಳುತ್ಲೇ ಹೋಗಿ ಕೆಲ್ಸ ಮುಗಿಸ್ಕೊಟ್ಟು ಬಂದು ಒಲೆ ಹಚ್ಚಿದೀನಿ. ತಪ್ದೇ ಅವತ್ತು ಸುತ್ತು ಕೆಲ್ಸಕ್ಕೆ ಜತಿಗೆ ಹೂವೀಳ್ಯಕ್ಕೂ ಬರ್ಬೇಕು ಅಂತ ಹೇಳಿಯಾರೆ. ನಾನೂ ಒಪ್ಕಂಡಿದಿನಿ. ತಿಥಿ ಅಡ್ಗೆಗೆ ನಂಗೆ ಬರಕ್ಕಾಗಲ್ಲ” ಅಂದು ಆರುತ್ತಿದ್ದ ಒಲೆಯನ್ನೊಮ್ಮೆ ಊದುಗೊಳವೆಯಿಂದ ಜೋರಾಗಿ ಊದಿದಳು. “ಹಂಗಂದ್ರೆ ಹ್ಯೆಂಗೇ? ವರ್ಷ್ವಷ್ವೂ ಮಾಘ ಶುದ್ಧ ಅಷ್ಟ್ಮಿ ದಿನ ಅಜ್ಜಿ ತಿಥಿ ಅನ್ನದು ನಿಂಗೊತ್ತಲ್ವನೆ. ಪ್ರತಿ ಸಲ್ವೂ ನಿಂಗೇ ಹೇಳುದು ನೀನೇ ಜತಿಗ್‌ ಬರದು. ಮರ್ತೇಂದ್ರೆ ಹ್ಯಂಗೆ?” ಮರೆತು, ಬೇರೆಯ ಕಡೆ ಒಪ್ಪಿಕೊಂಡದ್ದು ಅವಳದೇ ತಪ್ಪು ಅನ್ನೋ ಹಾಗೆ ಸುಬ್ಬಣ್ಣ ದಬಾಯಿಸಿದ. “ನಾನೊಬ್ಳೆನಾ ಇರದು ಅಜ್ಜಿಗೆ ಮೊಮ್ಮಗ್ಳೂಂತ, ಪ್ರತಿಸಲ್ವೂ ಬರ್ತಿರ್ಲಿಲ್ವ. ಈ ಸಲ ನಂಗಾಗಲ್ಲ. ಇನ್ಯಾರಾದ್ರೂ ಮಾಡ್ಲಿ” ಎಂದವಳೇ ಮತ್ತೆ ಆರುತ್ತಿದ್ದ ಒಲೆಯತ್ತ ತಿರುಗಿದಳು. “ನಂಗೊತ್ತಿಲ್ಲಪ್ಪ, ನೀ ಹೀಗಂದಿ ಅಂತ ಅಮ್ಮನ ಹತ್ರ ಹೇಳ್ತಿನಿ. ನೀನುಂಟು, ಅವ್ಳುಂಟು. ಹೇಳ್‌ಬಾ ಅಂದ್ಲು, ಹೇಳಿಯೀನಿ” ಎನ್ನುತ್ತಾ ಕೋಪಿಸಿಕೊಂಡು ಅಲ್ಲಿಂದ ಎದ್ದ. ʻಹೋದ್ರೆ ಹೋಗ್ತಾನೆ. ನಾನೊಬ್ಳು ಸಿಕ್ತೀನಿ ಇವ್ರಿಗೆ ಬಿಟ್ಟಿ ಚಾಕ್ರಿ ಮಾಡಿ ಸಾಯಕ್ಕೆ… ಹಾಳಾದ್ ಈ ಒಲೆ… ಹತ್ಕೊಂಡು ಅಡುಗೆಯಾದ್ರೆ ಸಾಕಾಗಿದೆ. ಮುಲ್ಲಾ ಕೂಗಿ ಎಷ್ಟೊತ್ತು ಆಗೋಯ್ತು. ಇನ್ನರ್ಧ ಗಂಟ್ಗೆ ಹಸ್ಕಂಡು ಬರಾ ಹೊತ್ಗೆ ಆಗಿಲ್ದಿದ್ರೆ ಒಂದು ರಾಮಾಣ್ಯವೇ ಆಗೋಗತ್ತೆ…ʼ ಅಂದುಕೊಂಡು ಮತ್ತೆ ಮತ್ತೆ ಊದಿ ಅಂತೂ ಒಲೆ ಉರಿಸುವುದರಲ್ಲಿ ಗೆದ್ದಳು. ಗಂಡನ ಊಟವಾದ ಮೇಲೆ ತಾನೂ ಒಂದಷ್ಟು ಉಂಡು ಮಿಕ್ಕದ್ದನ್ನ ಸ್ಕೂಲಿಂದ ಬರುವ ಮಕ್ಕಳಿಗೆ ಮುಚ್ಚಿಟ್ಟು ಅಡುಗೆ ಮಾಡಿದ ಜಾಗವೆಲ್ಲಾ ಒರಸಿ ಉಸ್ಸಪ್ಪಾ ಅಂತ ಬಾಗಿಲೆದುರಿಗೆ ಕುಳಿತುಕೊಂಡಳು. ಎದುರಿನ ಹೊಂಗೆಮರದಿಂದ ಬೀಸುತ್ತಿದ್ದ ಗಾಳಿಗೆ ಜೀವವೆಲ್ಲಾ ಹಾಯೆನಿಸಿ ಬಾಗಿಲು ತೆರೆದಿದ್ದಂತೆಯೇ ʻಓಣಿ ಕೊನೇಮನೆ, ಯಾರ್‌ ಹಾಯ್ತಾರಿಲ್ಲಿʼ ಎನಿಸಿ ಚಾಪೆ ಬಿಡಿಸಿ ಉರುಳಿಕೊಂಡಳು. ಬೆಳಗ್ಗೆ ಎದ್ದಾಗಿಂದ ಒಲೆ ಮುಂದೆ ದಣಿದಿದ್ದು ಬೆನ್ನು ನೆಲಕ್ಕೆ ಹಾಕಬೇಕೆನಿಸಿತ್ತು. ʻಪ್ರತಿಸಲವೂ ಜಯತ್ತೆ ನನ್ನೇ ಯಾಕ್ ಕರಿಬೆಕು? ಕೃಷ್ಣವೇಣಿ, ಶಾರದಾ, ವಿಮಲಾ ಯಾರೂ ಅವ್ಳ ಕಣ್ಣಿಗ್ಯಾಕ್ ಕಾಣಲ್ಲ. ಅವ್ರನ್ನ ಕರ್ಯದು, ಅವ್ರೂ ಎಲ್ಲಾ ನನ್ನಂಗೆ ಮಾವನ್‌ ಅಕ್ತಂಗೀರ್ ಮಕ್ಳೇ ಅಲ್ವಾ ಅವರತ್ರ ಕೆಲಸ ತೆಗೆಯೋದು ನನ್ನ ಹತ್ರ ತೆಗೆದಷ್ಟು ಸುಲಭ್ವಾ. ಯಾರೂ ಜಯತ್ತೆ ಜೋರಿಗೆ ಸೊಪ್ಪು ಹಾಕಲ್ಲ, ನೀನೂಂದ್ರೆ ನಿಮ್ಮಪ್ಪ ಅಂತರೆ. ಅವ್ರೆಲ್ಲಾ ಮನೆಕಡೆ ಹಚ್ಚಗೆ, ಬೆಚ್ಚಗೆ ತಕ್ಮಟ್ಟಿಗೆ ಚೆನ್ನಾಗಿದರೆ, ಹಾಗಂದ್ರೆ ತಡಕಳತ್ತೆ. ಅದೇ ನಾನು ಎದುರು ಮಾತಾಡಿದ್ರೆ ಊರಲ್ಲೆಲ್ಲಾ ʻಎರ್ಡೊತ್ತು ನೆಟ್ಗೆ ಊಟ್ಕಿಲ್ದಿದ್ದೂ ಎಷ್ಟು ಸೊಕ್ಕುʼ ಅಂತ ಕತೆಕತೆಯಾಗಿ ಹೇಳ್ಕಂಡು ಬರ್ತಳೆ. ತಥ್‌, ಬಡ್ತನಾ ಅನ್ನೋದು ಬಾಯ್ನೂ ಹೊಲ್ದ್ಬಿಡತ್ತಲ್ಲ…ʼ ಅನ್ನಿಸಿ ಇರುಸುಮುರುಸಾಯ್ತು. ಪಕ್ಕಕ್ಕೆ ತಿರುಗಿಕೊಂಡಳು. ʻಹಾಳಾಗ್ಲಿ ಆ ವಿಷ್ಯ, ಹೇಗೂ ಈ ಸಲ ಬರಲ್ಲʼ ಅಂತ ಹೇಳಾಯ್ತಲ್ಲಾ, ನಾಳೆ ತುಂಗಮ್ನೋರ ಮನೆ ಸಾರಿನ್‌ ಪುಡಿ, ಹುಳಿಪುಡಿ ಕೆಲ್ಸ ಇದೆ.‌ ದುಡ್ಡಿನ್‌ ಜತಿಗೆ ಒಂದು ವಾರ ಹತ್ದಿನಕ್ಕಾಗಷ್ಟು ಪುಡೀನು ಕೊಡ್ತರೆ. ಬುದ್ವಾರ ಲಲಿತಮ್ನೋರಿಗೆ ದೋಸೆಹಿಟ್ಟು ರುಬ್ಬುಕೊಡಕ್ಕೆ ಬರ್ತಿನಿ ಅಂತ ಹೇಳಾಗಿದೆ. ಎರಡ್ಸೇರು ಅಕ್ಕಿ ನೆನ್ಸಿರೂ ಒಂದು ಹೊತ್ಗಾಗೋಷ್ಟು ಹಿಟ್ಟು ತಗಂಡೋಗೆ ಅಂತೇಳಿ ಮೇಲಿಷ್ಟು ದುಡ್ಡೂ ಕೈಗಾಕ್ತಾರೆ. ಗುರ್‌ವಾರ ಬೆಳಗ್ಗೇನೇ ನಾರಣಪ್ಪನೋರ ಮನೆಗೆ ಹೋಗಿ ಮಡೀಲಿ ಚಿಗಳಿ, ತಂಬಿಟ್ಟು ಮಾಡಿಟ್ಟು ಬಂದ್ಬಿಡ್ಬೇಕು. ಶುಕ್ರಾರ ಬೆಳಗ್ಗೆದ್ದು ಕೋಸಂಬ್ರಿ, ಪಾನಕ ಎಲ್ಲಾ ಮಾಡೋ ಹೊತ್ಗೆ ಸರೀ ಹೋಗತ್ತೆ. ಹತ್ತೂವರೆಗೆ ರಾಹುಕಾಲ ಬಂದ್ಬಿಡತ್ತೆ, ಬೇಗ್ನೇ ಶುರು ಮಾಡ್ಕಂಬಿಡಣ ಅಂದ್ರಲ್ಲ ಕಮಲಮ್ಮʼ ಅಂತ ಯೋಚನೆ ಬಂತು. ಕೆಲ್ಸಕ್ಕೆ ನಾನೇನು ಇಂತಿಷ್ಟೂ ಅಂತ ಹೇಳ್ದಿದ್ರೂ ಸೈತಾ ಅವ್ರ ಕೈ ಧಾರಾಳಾನೆ. ʻಹೂವೀಳ್ಯಕ್ಕೆ ಕೊಡಕ್ಕೇಂತ ಐದು ಜನ ಮುತ್ತೈದೇರಿಗೆ ಕಾಟನ್ ಸೀರೆ ತಂದಿದೀನಿ ಕಣೆ. ನಿಂಗೂ ಒಂದು ಕೊಡ್ತಿನಿ. ನೋಡಿಲ್ಲಿʼ ಅಂತ ತೋರ್ಸಿದ್ರು ಬೇರೆ. ಗಳದ ಮೇಲೊಂದು, ಮೈಮೇಲೊಂದು ಅನ್ನೋ ಹಾಗಾಗಿದೆ ನಂಗೀಗ. ಆ ಸೀರೆ ಬಂತೂಂದ್ರೆ ಹೊರಗೆಲ್ಲಾದ್ರೂ ಹೋಗೋವಾಗ ಉಡಕ್ಕಾಗತ್ತೆ. ಆಗದನ್ನ ಪೆಟ್ಗೆಲಿಟ್ಟು ಅಲ್ಲಿರೊ ಇನ್ನೊಂದೇ ಒಂದು ಸ್ವಲ್ಪ ಗಟ್ಟಿಯಾಗಿರೊ ಸೀರೇನ ಹೊರಗೆ ತೆಕ್ಕೋಬೋದುʼ ಅಂದುಕೊಳ್ತಾ ಮತ್ತೆ ಈ ಪಕ್ಕಕ್ಕೆ ತಿರುಗಿದಳು. ʻಜೊತೆಗೆ ಜಾನಕೀನೂ ಕರ್ಕಂಬಾ, ಕನ್ಯಾಮುತ್ತೈದೆಗೆ. ಅವ್ಳಿಗೂ ಎಲಡಿಕೆ ಕೊಡೋದು ಅನ್ಕಂಡಿದೀನಿ ಅಂದ್ರು. ಅವ್ಳ ಕೈಗೂ ಏನಾರ ಕೊಡ್ತರೆನೋ. ಕೊಟ್ಟೇ ಕೊಡ್ತರೆ. ಒಳ್ಳೇ ಊಟ್ವಂತೂ ಸಿಗತ್ತೆ.ʼ ಕಣ್ಣು ತೂಗುವ ಹಾಗಾಯ್ತು ʻಎದ್ದು ಬಾಗಿಲು ಮುಂದೂಡಲೇʼ ಅನ್ನಿಸಿದರೂ ʻಅಯ್ಯೋ ಕೊಳ್ಳೆ ಹೊಡ್ಕಂಡು ಹೋಗಕ್ಕೆ ಏನಿದೆ. ಸ್ವಲ್ಪ ಗಾಳಿಯಾದ್ರೂ ಆಡಲಿʼ ಅಂದುಕೊಂಡು ಮತ್ತೆ ಯೋಚನೆಯಲ್ಲಿ ಮುಳುಗಿರುವಂತೆಯೇ ಒಂದು ಜೋಂಪು ಹತ್ತಿತು… “ಏನೇ ಬಾಗಿಲು ತೆಕ್ಕೊಂಡೇ ಮಲ್ಗಿದೀಯಲ್ಲೇ. ಯಾರಾದ್ರೂ ನುಗ್ಗಿದ್ರೇನು ಗತಿ” ಅಂತ ಕೇಳಿದ ತಕ್ಷಣ ಬೆಚ್ಚಿಬಿದ್ದು ಎದ್ದಳು. ಬಾಗಿಲಿಗಡ್ಡವಾಗಿ ಜಯತ್ತೆ ನಿಂತಿದ್ದಳು. ತಕ್ಷಣವೇ ಎದ್ದು, ಅದೇ ಚಾಪೆಯನ್ನು ಇನ್ನೊಂದು ಗೋಡೆಗೆ ಹಾಕಿ “ಕೂತ್ಕೋತ್ತೆ, ಮಕ ತೊಳ್ಕಂಡು ಬರ್ತಿನಿʼ ಎನ್ನುತ್ತಾ ಹಿತ್ತಿಲಿನ ಬಾಗಿಲಿನ ಪಕ್ಕದಲ್ಲಿದ್ದ ತಗಡಿನ ಮರೆಗೆ ಹೋಗಿ ಕೈಕಾಲು, ಮುಖ ತೊಳೆದುಕೊಂಡು ಬಂದು ಹೊಗೆಹಿಡಿದಿದ್ದ ಕನ್ನಡಿಯಲ್ಲಿ ಮಸಕುಮಸಕಾಗಿ ಕಂಡೂ ಕಾಣದಂತಿದ್ದ ಮುಖವನ್ನು ನೋಡಿಕೊಂಡು ಹಣೆಗಿಟ್ಟುಕೊಂಡು ಅವಳು ಬಂದಿದ್ದೇಕೆಂದು ತಿಳಿದಿದ್ದರೂ, “ಏನತ್ತೆ ಬಂದೆ, ಕೂತ್ಕಾ, ಒಂಚೂರು ಕಾಫಿ ಮಾಡ್ತಿನಿ” ಎನ್ನುತ್ತಾ ಅವಳೆಡೆಗೆ ತಿರುಗಿದಳು. “ಕಾಫೀನೂ ಬೇಡ, ಏನೂ ಬೇಡ, ನೀ ಬಾಯಿಲ್ಲಿ ಮದ್ಲು. ಇಲ್ಲಿ ಬಾ” ಅಂದಳು ಜಯಮ್ಮ ಜೋರಾದ ಅತ್ತೆ ಪಾಪದ ಸೊಸೆಗೆ ಹೇಳುವ ಜರ್ಬಿನಲ್ಲಿ. ಈ ಧಾಳಿಗೆ ಸಿದ್ದವಾಗಿಲ್ಲದ ನಾಗು ಬಂದು ಅಡುಗೆಮನೆಯ ಅಡ್ಡಗೋಡೆಗೆ ಒರಗಿ, ʻಈಗ ಅತ್ತೆ ಏನು ಗಿಲೀಟು ಮಾತು ಹೇಳಿದ್ರು ಸೈತ ಒಪ್ಕಬಾರ್ದುʼ ಅಂತ ನಿರ್ಧರಿಸಿಕೊಂಡವಳಂತೆ ಒರಗಿ ನಿಂತಳು. “ಅಲ್ವೇ, ಬೆಳಗ್ಗೆ ಸುಬ್ಬಣ್ಣನ್‌ ಕೈಲಿ ಹೇಳ್ಕಳಿಸಿದ್ರೆ ಬರಕ್ಕಾಗುಲ್ಲಾ ಅಂದ್ಯಂತೆ. ನಿಮ್ಮಜ್ಜಿ ತಿಥೀನೇ… ತಿಳ್ಕ, ನಿಮ್ಮಮ್ಮನ ಹೆತ್ತವ್ಳಲ್ವಾ… ಸ್ವಲ್ಪ ಸಹಾಯಕ್ಕೆ ಬಾಂದ್ರೆ ಎಷ್ಟು ಜಂಭ ನಿಂದು. ಅಜ್ಜಿ ತಿಥೀಗಿಂತ ಯಾರ್ದೋ ಮನೆ ದೇವ್ರಸಮಾರಾದ್ನೆ ಹೆಚ್ಚಾಯ್ತ ನಿಂಗೆ. ನಾನೇ ಬೇಕಾರೆ ಅವ್ರ ಮನೇಗೆ ಹೇಳಿ ಕಳಿಸ್ತೀನಿ, ʻಹೀಗಿದೆ ನಿಂಗ್ ಬರಕ್ಕಾಗಲ್ಲʼ ಅಂತ. ಬೇಕಾರೆ ನಿನ್‌ ಬದ್ಲು ಶಾರೀನ ಮಗ್ಳನ್‌ ಕರ್ಕಂಡೋಗಕ್ಕೆ ವಪ್ಸಿ, ಕಮಲಮ್ಮಂಗೆ ಹೇಳ್ತಿನಿ. ಹಿಂದಿನ್ದಿನ ಹೋಗಿ ಕೆಲ್ಸ ಮಾಡ್ಕೊಟ್ಟು ಬಾ. ಆವತ್ತು ನಮ್ಮನಿಗೆ ತಪ್ಪಸ್ಬೇಡ. ಎಲ್ಲಿ ಮಡಿಸೀರೇಗೆ ಒಣಗ್‌ಹಾಕಕ್ಕೆ ನಿಂದೊಂದು ಸೀರೆ ಕೊಡು” ಜಬರ್ದಸ್ತಿಯಿಂದ ತಾನೇ ಎಲ್ಲಾ ತೀರ್ಮಾನವನ್ನೂ ಮಾಡಿಬಿಟ್ಟಳು ಜಯಮ್ಮ. “ಹಾಗಲ್ಲತ್ತೇ…” ಏನೋ ಹೇಳಲು ಹೋದ ನಾಗುವನ್ನು ಅಲ್ಲೇ ತಡೆದು “ಹಂಗೂ ಇಲ್ಲ, ಹಿಂಗೂ ಇಲ್ಲ ಮದ್ಲು ಮಡಿಗೆ ಹಾಕಕ್ಕೆ ನಿನ್‌ ಸೀರೆ ಕೊಡು ಅಷ್ಟೇಯ. ನೋಡು, ಪುರೋಹಿತ್ರು ನಮ್ಮನೇ ಕೆಲ್ಸ ಮುಗಿಸ್ಕಂಡು ಮೂರು ಗಂಟೆ ಬಸ್ಸಿಗೆ ತೀರ್ಥಳ್ಳಿಗೆ ಹೋಗ್ಬಕಂತೆ. ಅಡ್ಗೆ ತಡಾಗೋ ಹಾಂಗಿಲ್ಲ. ಅವತ್ತು ಅದೇನೋ ರಜ ಇದ್ಯಂತಲ್ಲ, ಜನ ಬೇರೆ ಜಾಸ್ತಿ, ಬೆಳಗ್ಗೆ ಆರು ಗಂಟ್ಗೇ ಬಂದ್ಬಿಡು. ಈಗ ಮದ್ಲು ಸೀರೆ ಕೊಡು” ಎನ್ನುತ್ತಾ ಅವಳು ಮಾತನಾಡಕ್ಕೆ ಅವಕಾಶವನ್ನೇ ಕೊಡದೆ ʻಇಕಾ ನಾನೆ ತಗಂಡೆʼ ಎನ್ನುತ್ತಾ ಪಕ್ಕದ ಗಳುವಿನ ಮೇಲಿದ್ದ ಸೀರೆ, ರವಿಕೆಯನ್ನು ಎಳೆದು ಸುತ್ತಿಕೊಂಡು ಹೊರಟೇಬಿಟ್ಟಳು ಜಯಮ್ಮ. ಬೆಪ್ಪಾಗಿ ನಿಂತುಬಿಟ್ಟಳು ನಾಗು ʻಅದ್ಹೇಗೆ ನಂಗೆ ಮಾತಾಡಕ್ಕೂ ಬಿಡ್ದೆ ಅತ್ತೆ ಹೀಗ್ಮಾಡ್ಬಿಟ್ಳೂʼ ಅಂತ ತಲೆಮೇಲೆ ಕೈಹೊತ್ತು ಕೂತಿದ್ದ ನಾಗುವನ್ನು ಜಾನಕಿ ಕೂಗಿದ್ದು ಎಚ್ಚರಿಸಿತು. ಸ್ಕೂಲಿನ ಚೀಲವನ್ನು ಮೂಲೆಯಲ್ಲಿಡುತ್ತಾ “ಅದೇನು ಯೋಚ್ನೆ ಮಾಡ್ತ ಕೂತಿದೀಯೇ. ನಂಗೆ ಹಸಿವು. ಬೇಗ ಒಂದಿಷ್ಟು ಕಲ್ಸಿ ಕೊಡು” ಎನ್ನುತ್ತಾ ಕೈಕಾಲು ತೊಳೆಯಲು ಹೋದಳು. ಒಳಗೆ ಮುಚ್ಚಿಟ್ಟಿದ್ದ ಅನ್ನದಲ್ಲಿ ಹುಳಿಯನ್ನ, ಮಜ್ಜಿಗೆಯನ್ನ ಎರಡನ್ನೂ ಕಲಿಸಿ ಸ್ವಲ್ಪ ಸ್ವಲ್ಪವನ್ನು ಜಾನಕಿಯ ತಟ್ಟೆಗೆ ಹಾಕಿ ಕೊಟ್ಟಳು. ಮಿಕ್ಕದ್ದನ್ನು ಇನ್ನೇನು ಬರುವ ಶೇಷಾದ್ರಿಗೆ ಮುಚ್ಚಿಟ್ಟಳು. ಹುಳಿಯನ್ನ ಬಾಯಿಗಿಟ್ಟ ಜಾನಕಿ “ಇವತ್ತೂ ಪಪಾಯ ಕಾಯಿನ ಹುಳೀನೇ ಮಾಡಿದೀಯಾ… ಥೂ ನಂಗಿಷ್ಟ ಇಲ್ಲ” ಎನ್ನುತ್ತಾ ತಟ್ಟೆ ಕುಕ್ಕಿದಳು. ನಾಗುವಿಗೂ ಕೋಪ ಬಂತು. “ಏನ್‌ ನಿಮ್ಮಪ್ಪ ಇಪ್ಪತ್ತುಮೂವತ್ತು ಸಾವ್ರ ಸಂಬಳ ತರೋ ಸರ್ದಾರ. ದಿನದಿನಾನೂ ಅಂಗ್ಡೀಯಿಂದ ತರ್ಕಾರಿ ತಂದು ಮಾಡ್ತೀನಿ. ಮನೆ ಹಿತ್ಲಲ್ಲಿ ಏನು ಬೆಳ್ದಿರತ್ತೋ ಅಷ್ಟೇನೆ. ಹಸಿವಾಗಿದ್ರೆ ತಿನ್ನು ಇಲ್ದಿದ್ರೆ ಅಲ್ಲೇ ಮೂಲೇಲಿ ಮುಚ್ಚಿಟ್ಟು ಹೋಗು. ರಾತ್ರಿ ಹೊಟ್ಟೆ ಕಾದ್ರೆ ತಿನ್ನೋವಂತೆ” ಎನ್ನುತ್ತಾ ಮತ್ತೆ ರಾತ್ರಿಯ ಅಡಿಗೆಗೆ ಒಲೆ ಹಚ್ಚತೊಡಗಿದಳು. ಅಷ್ಟರಲ್ಲಿ ಶೇಷಾದ್ರಿಯೂ ಬಂದ. ಮಾತಿಲ್ಲದೆ ತನ್ನ ತಟ್ಟೆಗೆ ಹಾಕಿಕೊಟ್ಟಿದ್ದನ್ನು ಸ್ವಾಹಾ ಮಾಡತೊಡಗಿದ. ಗುಮ್ಮೆಂದು ಕೂತಿದ್ದ ಜಾನಕಿಯನ್ನು ನೋಡಿ “ತಿನ್ನಲ್ವೇನೆ, ತಿಂದಿದ್ರೆ ನಂಗ್ಹಾಕು” ಎಂದು ತಟ್ಟೆಯನ್ನು ಮುಂದೆ ಚಾಚಿದ. ಮರುಮಾತಿಲ್ಲದೆ ಜಾನಕಿ ತಿನ್ನತೊಡಗಿದಳು. ಒಲೆ ಹೊತ್ತಿದ ತಕ್ಷಣ ಸ್ವಲ್ಪ ನೀರುಕಾಸಿ ತೊಟ್ಟೇತೊಟ್ಟಿದ್ದ ಹಾಲು ಸೋಕಿಸಿ ನಾಗು ಬೆಲ್ಲದ ಕಾಫಿ ಮಾಡಿಕೊಂಡು ರಾತ್ರಿಯ ಊಟಕ್ಕೆ ಎಸರಿಟ್ಟಳು. ತಟ್ಟೆ ತೊಳೆದಿಟ್ಟ ಶೇಷಾದ್ರಿ ಎದ್ದು ಆಟಕ್ಕೆ ಹೊರಗೋಡಿದ. ಹೆದಹೆದರುತ್ತಲೇ ಜಾನಕಿ “ನಂಗೊಂತೊಟ್ಟು ಕಾಫಿನಾದ್ರು ಕೊಡ್ತಿಯೆನೇ?” ಕೇಳಿದಳು. ʻಅಯ್ಯೋʼ ಅನ್ನಿಸಿ “ತಗಾ” ಎನ್ನುತ್ತಾ ತಳಮುಳುಗುವಷ್ಟು ಕಾಫಿಯನ್ನು ಸಣ್ಣಲೋಟಕ್ಕೆ ಬಗ್ಗಿಸಿಕೊಟ್ಟಳು. ಇನ್ನಷ್ಟು ಬಿಸಿನೀರು ಬೆಲ್ಲವನ್ನು ಬೆರಸಿಕೊಂಡು ತನ್ನ ಲೋಟದ ತುಂಬ ಮಾಡಿಕೊಂಡು ನಿಧಾನವಾಗಿ ಕುಡಿಯುತ್ತಾ “ಈ ಕಾಫಿ ಕೊಟ್ಟಿದ್ರೆ ನಿಜ್ವಾಗೂ ಜಯತ್ತೆ ಕುಡಿತಿದ್ಲಾ” ಅಂದುಕೊಳ್ಳುತ್ತಲೇ ಎರಡೂ ಲೋಟ ತೊಳೆದಿಡು ಎಂದು ಜಾನಕಿಗೆ ಕೊಟ್ಟು ಸಿಟ್ಟು ತೀರಿಸಿಕೊಳ್ಳುವಂತೆ ಆರುತ್ತಿದ್ದ ಒಲೆ ಊದಿದಳು… ರಾತ್ರಿ ಎಷ್ಟೋ ಹೊತ್ತು ನಿದ್ರೆ ಬರಲಿಲ್ಲ… ನಂಗ್ಯಾಕೆ ʻನಾ ಬರಲ್ಲಾಂದ್ರೆ ಬರಲ್ಲʼ ಅಂತ ಹೇಳಕ್ಕಾಗ್ಲಿಲ್ಲ… ಹೇಳಕ್ಕೆ ಅವ್ಳು ಬಿಟ್ಟಿದ್ರಲ್ವಾ… ನಾರ್ಣಪ್ಪನೋರ ಮನೆಗ್ಹೋದ್ರೆ ಸೀರೆ, ದಕ್ಷಿಣೆ, ಒಂದಷ್ಟು ಹಣ್ಣು ಎಲ್ಲಾ ಸಿಗತ್ತೆ ಅಂತ ಅವ್ಳಿಗ್‌ ಗೊತ್ತಿಲ್ವಾ. ಹಂಗ್ಸಿ ಮಾತಾಡ್ತಳಲ್ಲ. ಬದ್ಲಿಗೆ ಶಾರೀನ ಕಳಿಸ್ತಿನಿ

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಥೆ ಕರ್ಮ ಮತ್ತು ಕಾರ್ಮಿಕ!  ಪೂರ್ಣಿಮಾ ಮಾಳಗಿಮನಿ ಕರ್ಮ ಮತ್ತು ಕಾರ್ಮಿಕ!  ಎಲ್ಲರ ಮನೆಯ ದೋಸೆಯೂ ತೂತೇ, ಹಾಗಂತ ತೂತಿಲ್ಲದ ದೋಸೆಗಾಗಿ ಹಾತೊರೆಯುವುದನ್ನು ರಾಗಿಣಿ ಬಿಟ್ಟಿರಲಿಲ್ಲ. ಮನೆಯೊಳಗಿನ ಸಣ್ಣ ಪುಟ್ಟ ಜಗಳಗಳಿಗೆ, ಮೂವತ್ತೈದು ವರ್ಷಕ್ಕೇ ಜೀವನವೇ ಸಾಕಾಗಿ ಹೋಗಿದೆ, ಎಂದು ಕೈ ಚೆಲ್ಲಿ ಕುಳಿತ ಹೆಂಡತಿ ರಾಗಿಣಿಯನ್ನು ಮ್ಯಾರೇಜ್ ಕೌನ್ಸಲರ ಬಳಿ ಕರೆದೊಯ್ಯುವ ವಿಚಾರ ಮಾಡಿದ್ದು ಪ್ರಶಾಂತನೇ. ಮಕ್ಕಳೂ ಆಗಿಲ್ಲವೆಂದ ಮೇಲೆ ನಿಮ್ಮ ಹೆಂಡತಿ ಟೈಮ್ ಪಾಸ್ ಮಾಡುವುದಾದರೂ ಹೇಗೆ ಎಂದು  ದಬಾಯಿಸಿ, ಕೌನ್ಸಲರ ಒಂದು ನಾಯಿ ಮರಿ ಸಾಕಿ ಕೊಳ್ಳಿ ಎಂದು ಉಪದೇಶ ಮಾಡಿದ್ದರು.ನಾಯಿ ಮರಿಯನ್ನಾದರೆ ಪದೇ ಪದೇ ಒಂದು, ಎರಡು ಮಾಡಿಸಲು ಮನೆ ಹೊರಗೆ ಕರೆದೊಯ್ಯ ಬೇಕು, ಅದರ ಬದಲು ಬೆಕ್ಕು ಸಾಕಿಕೊಳ್ಳಿ, ಟಾಯ್ಲೆಟ್ ಟ್ರೈನ್ಡ್ ಸಿಗುತ್ತವೆ ಎಂದು ಪಕ್ಕದ ಮನೆ ನಯನ ಹೇಳಿದಾಗ ಫೇಸ್ಬುಕ್ ಮೂಲಕ ಎರಡು ಮುದ್ದಾದ ಬೆಕ್ಕಿನ ಮರಿಗಳನ್ನು ತಂದು ಪ್ರಶಾಂತ ರಾಗಿಣಿ ಮಡಿಲಿಗೆ ಹಾಕಿ, ಇನ್ನಾದರೂ ಶಾಂತಿ ಸಿಗಬಹುದು ಎಂದು ಆಶಿಸಿ, ತನ್ನ ಕೆಲಸದಲ್ಲಿ ಮತ್ತೆ ಮುಳುಗಿ ಬಿಟ್ಟಿದ್ದ. ಹೊಸದಾಗಿ ಸಿಕ್ಕ ಸ್ನೇಹಿತರನ್ನು ಬಹಳ ಹಚ್ಚಿಕೊಂಡ ರಾಗಿಣಿ, ಅವುಗಳ ಆರೈಕೆ, ಊಟ, ವ್ಯಾಕ್ಸೀನ್, ಸ್ನಾನ ಮಾಡಿಸುವುದು, ಹೇನುಗಳಾಗದಂತೆ ಕೂದಲನ್ನು ಬಾಚುವುದು, ದಿನಕ್ಕೊಂದು ಹೊಸ ಸಾಮಾನಿನ ಶಾಪಿಂಗ್, ಎಲ್ಲದರ ಮಧ್ಯೆ ಪ್ರಶಾಂತನೊಂದಿಗೆ ಜಗಳ ಆಡುವುದು ಮರೆತು ಬಿಟ್ಟಳು.  ಹೆಸರುಘಟ್ಟದಲ್ಲಿದ್ದ ಕೃಷಿ ಇಲಾಖೆಯ ಸಾವಿರಾರು ಎಕರೆ ಜಮೀನಿನಲ್ಲಿ ತರಕಾರಿ ಹಣ್ಣು ಹಂಪಲುಗಳ ಕುರಿತು ಸಂಶೋಧನೆ ಮಾಡುವ ವಿಜ್ಞಾನಿಯಾಗಿದ್ದರೂ ಅಪ್ಪಟ ಮಣ್ಣಿನ ಮಗನಾಗಿಬಿಡುತಿದ್ದ  ಪ್ರಶಾಂತನಿಗೆ ತನ್ನ ಕೆಲಸದಲ್ಲಿ ಬಹಳ ಶ್ರದ್ಧೆ ಮತ್ತು ಆಸಕ್ತಿ. ತರಕಾರಿಗಳ ಹೊಸ ಹೊಸ ತಳಿಗಳನ್ನು ಬೆಳೆಸಿ, ಅದಕ್ಕಾಗಿ ಹಗಲಿರುಳೂ ಶ್ರಮಿಸುತ್ತಾ ತನ್ನದೇ ಲೋಕದಲ್ಲಿರುತಿದ್ದ. ಒಮ್ಮೊಮ್ಮೆ ಇಲಾಖೆಯಿಂದ ಅವನಿಗೆ ಒದಗಿಸುತಿದ್ದ ಕೂಲಿ ಆಳುಗಳು ಬರದಿದ್ದರೆ, ತನ್ನ ಆಫೀಸ್ ಕೋಣೆಯಲ್ಲಿ ಇಟ್ಟುಕೊಂಡಿದ್ದ ಒಂದು ಟಿ ಶರ್ಟ್ ಮತ್ತು ಶಾರ್ಟ್ಸ್ ಹಾಕಿಕೊಂಡು ತಾನೇ ಗಿಡಗಳಿಗೆ ಪಾತಿ ಮಾಡುವುದು, ನೀರು ಬಿಡುವುದು ಮಾಡುತ್ತಿದ್ದ. ಮರುದಿನ ಅವರು ಕೈಗೆ ಸಿಕ್ಕಾಗ ನೀರು ಬಿಡದೆ ಗಿಡ ಒಣಗಿಸಿದ್ದಕ್ಕೆ ಚೆನ್ನಾಗಿ ಬೈಯ್ಯ ಬೇಕೆಂದುಕೊಂಡಿದ್ದರೂ, ದಿನಗೂಲಿ ಕಂಟ್ರಾಕ್ಟರ್ ತಿಮ್ಮಾ ರೆಡ್ಡಿ, ತಮ್ಮನ್ನು skilled labour ಅಂತ ಸೇರಿಸಿಕೊಂಡರೂ, unskilled labour ಸಂಬಳವನ್ನೇ ಕೊಡುತ್ತಿದ್ದಾನೆಂದು ಕೂಲಿ ಆಳುಗಳು ದುಃಖ ತೋಡಿಕೊಂಡಾಗ, ಪ್ರಶಾಂತ ತನ್ನ ಥರ್ಮಾಸ್ ನಲ್ಲಿ ತಂದ ಚಹವನ್ನೂ ಅವರಿಗೆ ಬಸಿದುಕೊಟ್ಟು, ಜೇಬಿನಿಂದ ಐದು ನೂರು ಕೊಟ್ಟು ಹಂಚಿಕೊಳ್ಳಿ ಎಂದು ಹೇಳಿ ಹೋಗಿಬಿಡುತಿದ್ದ. ಪ್ರಶಾಂತನ ಸಹೋದ್ಯೋಗಿ, ಅನೂಪ್ ವರ್ಮಾ, ಇದೇ ಕೂಲಿಯಾಳುಗಳು ತಮ್ಮ ಊಟದ ಡಬ್ಬಿಯಲ್ಲಿ ಆರ್ಕಿಡ್, ಕ್ಯಾಕ್ಟಸ್, ಅಣಬೆ, ವಿಭಿನ್ನ ಬಣ್ಣದ ಗುಲಾಬಿ ಮುಂತಾದ ದುಬಾರಿ ಗಿಡಗಳನ್ನು ಬಚ್ಚಿಟ್ಟುಕೊಂಡು ಹೋಗಿ ತಿಮ್ಮಾ ರೆಡ್ಡಿಗೆ ಮಾರಿಕೊಳ್ಳಲು ಕೊಡುತ್ತಿದ್ದುದನ್ನು ತಾನು ಕಣ್ಣಾರೆ ನೋಡಿದ್ದೇನೆ ಎಂದಾಗ, “ಇವರು ಬರೀ ಕಾರ್ಮಿಕರು, ಕರ್ಮದ ಫಲ ಏನೇ ಆಗಿದ್ದರೂ ಅದನ್ನು ಮಾಡಿಸಿದ ರೆಡ್ಡಿ ಅಷ್ಟೇ ಅನುಭವಿಸುತ್ತಾನೆ ಬಿಡಿ.” ಎಂದು ಉಪೇಕ್ಷಿಸಿದ್ದ.   ಪ್ರಶಾಂತನಿಗೆ ಸ್ವಲ್ಪ ಹಣ ಖರ್ಚು ಮಾಡಿದರೆ ಮನಃಶಾಂತಿ ಸಿಗುತ್ತದೆ ಎಂದರೆ ಅದಕ್ಕಿಂತ ಉತ್ತಮ ಒಪ್ಪಂದ ಬೇರೆ ಇಲ್ಲವೆಂದೇ ನಂಬಿಕೆ.  ರೆಡ್ಡಿ ತನ್ನ ಮಾತು ಕೇಳದಿದ್ದರೆ, ಎಂತದ್ದೇ ತುರ್ತು ಪರಿಸ್ಥಿತಿಯಿದ್ದರೂ ಆಳುಗಳಿಗೆ ರಜೆ ಕೊಡುತ್ತಿರಲಿಲ್ಲ. ಎಷ್ಟೋ ಬಾರಿ ಕೆಂಡದಂತೆ ಮೈ ಸುಡುತ್ತಿದ್ದರೂ, ದಿನಗೂಲಿ ಕಳೆದುಕೊಂಡರೆ ಮನೆ ಮಂದಿಯೆಲ್ಲಾ  ಊಟಕ್ಕೆ ಪರೆದಾಡುವಂತಾದೀತು ಎಂದು ಕೂಲಿ ಆಳು ನರಸಯ್ಯ ಕೆಲಸಕ್ಕೆ ಬರುತಿದ್ದುದನ್ನು ಪ್ರಶಾಂತ ನೋಡಿದ್ದ. ಇದ್ದುದರಲ್ಲೇ ಮೈ ಕೈ ತುಂಬಿಕೊಂಡಿದ್ದ ಪುಟ್ಟಮ್ಮ ಮಾತ್ರ ತಿಂಗಳಲ್ಲಿ ನಾಲ್ಕಾರು ಬಾರಿ ರಜೆ ಹಾಕಿ, ಪೂರ್ತಿ ಇಪ್ಪತ್ತಾರು ದಿನಗಳ ಕೂಲಿ ತೆಗೆದುಕೊಳ್ಳುತ್ತಿದ್ದಳು. ಅವಳ ಬಗ್ಗೆ ಮತ್ಸರವಿದ್ದರೂ, ಹೆಂಗಸರಿಗೂ, ಗಂಡಸರಿಗೂ ದಿನಗೂಲಿ ಒಂದೇ ಎಂದು ಹೇಳಿ, ಅವಳಂತೆ ಉಳಿದ ಹೆಂಗಸರಿಗೆ ರೆಡ್ಡಿಯಿಂದ ಆಗುತ್ತಿದ್ದ ಅನ್ಯಾಯವನ್ನೂ ನರಸಯ್ಯನೇ ತಪ್ಪಿಸಿದ್ದ.  ಅದೊಂದು ದಿನ ರಾಗಿಣಿ, “ಈ ಮೂಕ ಪ್ರಾಣಿಗಳಿಗೆ ಆಶ್ರಯ ಕೊಟ್ಟಿದ್ದೇನೋ ಸರಿ. ಆದರೆ ನನಗೆ ಇನ್ನೂ ಏನಾದರೂ ಸಮಾಜ ಸೇವೆ ಮಾಡಬೇಕು ಅನಿಸುತ್ತಿದೆ ಕಣ್ರೀ.” ಎಂದು ರಾಗ ಎಳೆದಾಗ ಪ್ರಶಾಂತ ಆಶ್ಚರ್ಯದಿಂದ ಅವಳನ್ನೇ ಒಂದು ಗಳಿಗೆ ನೋಡಿದ.  “ನಿಜಕ್ಕೂ ಸಮಾಜ ಸೇವೆ ಮಾಡಬೇಕೆಂದಿದ್ದರೆ, ನಮ್ಮ ಕ್ಯಾಂಪಸ್ಸಿಗೆ ಬಂದುಬಿಡು. ನೂರಾರು ಕೂಲಿ ಆಳುಗಳಿರುತ್ತಾರೆ. ಅವರಲ್ಲಿ ಒಂದಿಬ್ಬರಿಗಾದರೂ ಆರೋಗ್ಯ ಸರಿ ಇರುವುದಿಲ್ಲ. ಅಂತವರಿಗೆ ಮರದಡಿ ಮಲಗಲು ಹೇಳಿ, ಅವರ ಕೆಲಸ ನೀನು ಮಾಡು. ಹೇಗೆ?” ಎಂದು ಕೇಳಿ ತನ್ನ ಅದ್ಭುತ ಯೋಚನೆಗೆ ತಾನೇ ತಲೆದೂಗಿ ಕೇಳಿದ.  “ನನಗೆ ಮೊದಲಿನಿಂದಲೂ ಅನುಮಾನ ಇತ್ತು, ನಿಮಗೆ ತಲೆ ಸರಿ ಇಲ್ಲಾಂತ.” ಎಂದು ಬುಸುಗುಡುತ್ತಾ ಹೋದ ರಾಗಿಣಿ ಅಷ್ಟಕ್ಕೇ ಸುಮ್ಮನಾಗಲಿಲ್ಲ.  ‘ಹೆಂಡತಿಗೇ ಕೂಲಿ ಮಾಡಲು ಹೇಳುತ್ತಿದ್ದಾನೆ, ಎಂತಹ ಕ್ರೂರಿ’ ಎಂದು ಅಪ್ಪ ಅಮ್ಮನಿಂದಲೂ ಮತ್ತು ಅತ್ತೆ ಮಾವಂದಿರಿಂದಲೂ ಸರಿಯಾಗಿ ಪೂಜೆ ಮಾಡಿಸಿದಳು. ಪ್ರಶಾಂತ ತೆಪ್ಪನಾದ!  ವಾರ್ಷಿಕ ಕೃಷಿ ಮೇಳಕ್ಕೆ ಇನ್ನು ಎರಡೇ ತಿಂಗಳು ಉಳಿದಿದ್ದುವು. ಸಂಸ್ಥೆಯಲ್ಲಿ ಎಲ್ಲರೂ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ಕಾರ್ಯಾಗಾರ, ಬೋಧನೆ, ಪ್ರದರ್ಶನ ಎಲ್ಲದಕ್ಕೂ ಕೂಲಿ ಆಳುಗಳ ಸಹಕಾರ ಬೇಕೇಬೇಕು. ಆದ್ದರಿಂದ ಪ್ರಶಾಂತ ತನ್ನ ತಂಡದಲ್ಲಿದ್ದ ಕೂಲಿಯವರನ್ನು ಖುಷಿಯಾಗಿಟ್ಟುಕೊಳ್ಳಲು ಪ್ರಯತ್ನಿಸುತಿದ್ದ. ಪ್ರತಿದಿನವೂ ಆರೈಕೆ ಬೇಡುವ ಸಸಿಗಳು ಭಾನುವಾರ ರಜೆ ಎಂದರೆ ಮಾತು ಕೇಳಬೇಕಲ್ಲ? ಒಂದು ದಿನವೂ ಮನೆಯಲ್ಲಿರುವುದಿಲ್ಲ ಎಂದು ರಾಗಿಣಿ ರಂಪ ಮಾಡಿದರೂ ಪ್ರಶಾಂತ ಭಾನುವಾರವೂ ತಪ್ಪದಂತೆ ಆಫೀಸಿಗೆ ಬಂದು ಕೆಲಸ ಮಾಡುತಿದ್ದ. ಇದರ ನಡುವೆಯೇ ದಾವಣಗೆರೆಯಲ್ಲಿದ್ದ ಪ್ರಶಾಂತನ ಅಪ್ಪನಿಗೆ ಇದ್ದಕ್ಕಿದ್ದಂತೆ ರಕ್ತದೊತ್ತಡ ಹೆಚ್ಚಾಗಿ ಬಿಟ್ಟಿತು. “ಬಿಡುವಿದ್ದಿದ್ದರೆ ನಾನೇ ಬರುತ್ತಿದ್ದೆ, ಆದರೆ ಕೆಲಸದೊತ್ತಡ ಬಹಳ ಇರುವುದರಿಂದ ಡ್ರೈವರ ಜೊತೆಯಲ್ಲಿ ಬಂದು ಬಿಡಿ.” ಎಂದು ಕಾರು ಕಳಿಸಿದ. ಬೆಂಗಳೂರಿಗೆ ಬಂದಿಳಿದ ಸಂಜೆಯೇ ಅಮ್ಮನಿಗೆ ಭೇದಿ ಕಿತ್ತುಕೊಂಡಿತು. ಅದಕ್ಕೆ ದಾರಿಯಲ್ಲಿ ಮಾಡಿದ ಹೋಟೆಲು ಊಟವೇ ಕಾರಣ ಎಂದು ಡ್ರೈವರಿಗೆ ಅಮ್ಮ ಹಿಡಿ ಶಾಪ ಹಾಕಿದಾಗ, ಪ್ರಶಾಂತ ಮನದೊಳಗೇ ನಡುಗಿದ. ಏಕೆಂದರೆ ಯಾವ ಹೋಟೆಲಿನಲ್ಲಿ ಊಟಕ್ಕೆ ನಿಲ್ಲಿಸಬೇಕು ಎಂದು ಕೂಡ ಪ್ರಶಾಂತನೇ ಡ್ರೈವರಿಗೆ ಹೇಳಿದ್ದ! ಅಮ್ಮನ ಶಾಪ ಯಾರಿಗೆ ತಗಲುವುದೋ ಎಂದು ಹೆದರುತ್ತಲೇ, ಅವಳ ಆರೈಕೆ ಮಾಡಿದ.  ರಾಗಿಣಿ ಅಪರೂಪಕ್ಕೆ ಬಂದ ಅತ್ತೆ ಮಾವಂದಿರ ಸೇವೆಯನ್ನು ಎರಡು ದಿನ ಪ್ರೀತಿಯಿಂದಲೇ ಮಾಡಿದಳು. ಆದರೆ ಅವರು, ಮನೆ ತುಂಬಾ ರಾಜಾರೋಷವಾಗಿ ಓಡಾಡಿಕೊಂಡಿದ್ದ, ಕೊಬ್ಬಿದ್ದ ಬೆಕ್ಕುಗಳನ್ನು ಸಹಿಸುವುದು ಆಗದು, ಅವುಗಳನ್ನು ಈ ಕೂಡಲೇ ಹೊರಗಟ್ಟಿರಿ, ಎಂದಾಗ ಕೆರಳಿದಳು. ಎಲ್ಲೆಂದರಲ್ಲಿ ಅವುಗಳ ಕೂದಲುಗಳೇ; ಅಡುಗೆ ಮನೆಯಲ್ಲಿ ಎಲ್ಲ ಪಾತ್ರೆಗಳಿಗೂ ಬಾಯಿ ಹಚ್ಚಿ ಬಿಡುತ್ತಿದ್ದುದು ನೋಡಿದಾಗಲಂತೂ ಅಮ್ಮ ತನಗೆ ಊಟವೇ ಬೇಡವೆಂದು ಹಠ ಮಾಡಿದರು. ಆಫೀಸಿನ ಕೆಲಸದ ನಡುವೆ ಅಪ್ಪನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿಂದ ಪ್ರಶಾಂತ ಆಗಲೇ ಚಡಪಡಿಸುತ್ತಿದ್ದ. ಇದರ ನಡುವೆ ಬೆಕ್ಕುಗಳದೇ ದೊಡ್ಡ ತಲೆನೋವಾಗಿ ಬಿಟ್ಟಿತು. ರಾಗಿಣಿ ಅಡುಗೆ ಮಾಡುವುದನ್ನಷ್ಟೇ ಅಲ್ಲದೆ ಮಾತು ಕೂಡ ಬಿಟ್ಟಿದ್ದಳು. ಮನೆಗೆ ಬರುವುದು ಎಂದರೆ ಬಹಳ ಧೈರ್ಯಸ್ಥರ ಕೆಲಸ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾದಾಗ, ಮನೆಮಂದಿಯನ್ನೆಲ್ಲಾ ಕೌನ್ಸಲರ ಬಳಿ ಕರೆದುಕೊಂಡು ಹೋಗಬಾರದೇಕೆ ಎನ್ನುವ ಯೋಚನೆ ಬಂದರೂ ಅದನ್ನು ತಳ್ಳಿ ಹಾಕಿ, ಪ್ರಶಾಂತ ಒಂದು ಉಪಾಯ ಮಾಡಿದ.  “ನೋಡು ರಾಗಿಣಿ, ಅಪ್ಪ ಅಮ್ಮ ಇರುವತನಕ ಬೆಕ್ಕುಗಳನ್ನು ನಮ್ಮ ಇಲಾಖೆಯ ಜಮೀನಿನಲ್ಲಿ ಬಿಟ್ಟಿರುತ್ತೇನೆ. ಅವುಗಳನ್ನು ನೋಡಿಕೊಳ್ಳಲು ಒಬ್ಬ ಕೂಲಿ ಹುಡುಗನಿಗೆ ಹೇಳಿ ಸ್ವಲ್ಪ ದುಡ್ಡು ಕೊಟ್ಟಿರುತ್ತೇನೆ. ಆಮೇಲೆ ಮತ್ತೆ ಕರೆ ತಂದರಾಯಿತು.” ಎಂದು ಹೇಳಿದ.  ಸ್ವಭಾವತಃ ದುರ್ಬುದ್ದಿಯವಳೇನಲ್ಲದ ರಾಗಿಣಿ ಬಹಳ ಹೊತ್ತು ಪುಸಲಾಯಿಸಿದ ಮೇಲೆ ಒಪ್ಪಿದಳು.  “I love you ಕಣೇ” ಎಂದು ಪ್ರಶಾಂತ ಅವಳ ಹಣೆಗೆ ಮುತ್ತಿಟ್ಟು, ಅವಳು ಮನಸ್ಸು ಬದಲಾಯಿಸುವ ಮೊದಲೇ ದೊಡ್ಡ ಬುಟ್ಟಿಯೊಂದರಲ್ಲಿ ಎರಡೂ ಮರಿಗಳನ್ನು ಹಾಕಿಕೊಂಡು ಕಾರಿನತ್ತ ನಡೆದ. ಏನನ್ನೋ ನೆನೆಸಿಕೊಂಡು ಹಿಂದೆಯೇ ಬಂದ ರಾಗಿಣಿ, “ಅಲ್ಲಾ ರೀ, ಇವತ್ತು ತಾರೀಖು ಮೇ, ಒಂದು, ತಾನೇ? ಲೇಬರ್ಸ್ ಡೇ, ರಜೆ ಅಲ್ವಾ?” ಎಂದು ಕೇಳಿ, ಇನ್ನೊಂದು ದಿನ ಬೆಕ್ಕುಗಳನ್ನು ಜೊತೆಯಲ್ಲಿಟ್ಟುಕೊಳ್ಳಬಹುದೇನೋ ಎಂದು ಆಸೆಯಿಂದ ನೋಡಿದಳು.  “ರಜೆ ತಕೊಳ್ಳೋಕೆ ನಾನೇನು ಲೇಬರ್ ಏನೇ? ಸೀನಿಯರ್ ಸೈಂಟಿಸ್ಟ್ ನಾನು. ತಲೆಗೆ ಕೆಲಸ ಕೊಡದೆ ಹೇಳಿದ ಕೆಲಸ ಮಾಡುವವರು ಲೇಬರ್ಸು. ದಡ್ಡಿ.” ಎಂದು ತನ್ನ ಜೋಕಿಗೆ ತಾನೇ ನಗುತ್ತ ಪ್ರಶಾಂತ ಹೊರಟೇ ಬಿಟ್ಟ.  ಅವನೆಣಿಕೆಯಂತೆ ಅಂದೂ ಕೂಡ ದಿನಗೂಲಿ ಆಸೆಗೆ ಸುಮಾರು ಜನ ಕೂಲಿ ಆಳುಗಳು ಬಂದಿದ್ದರು. ಆಗಲೇ ಎಷ್ಟೋ ಜನ ವಿವಿಧ ಖಾನೆಗಳಲ್ಲಿ ಬೆಳೆದ ಗಿಡಗಳಿಗೆ ಗೊಬ್ಬರ ಹಾಕುವುದು, ಔಷದಿ ಹೊಡೆಯುವುದು, ಕುಂಬಳ ಕಾಯಿಗಳಿಗೆ ಪ್ಲಾಸ್ಟಿಕ್ ಕವರು ಕಟ್ಟುವುದು, ಪಾತಿ ಮಾಡುವುದು, ಮಣ್ಣಿಗೆ ನೇರವಾಗಿ ಬಿಸಿಲು ಬಿದ್ದು ಒಣಗದಂತೆ ಕಾಪಾಡಲು ಗಿಡಗಳ ಮಧ್ಯೆ ತಾಡಪಾಲು ಹಾಸುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು. ನರಸಯ್ಯನೂ ಅಣತಿ ದೂರದಲ್ಲೇ ಕಂಡಾಗ, ಪ್ರಶಾಂತ ಅವನನ್ನು ಕಾರಿನ ಬಳಿ ಬರುವಂತೆ ಕರೆದ.  “ನರಸಯ್ಯ, ಒಂದು ಸ್ವಲ್ಪ ದಿನ ಈ ಬೆಕ್ಕಿನ ಮರಿಗಳನ್ನು ಇಲ್ಲೇ ಹೊಲದಲ್ಲಿ ಬಿಟ್ಟಿರ್ತೀನಿ, ನೋಡಿ ಕೊಳ್ತೀಯಾ?” ಎಂದು ಕಾರಿನ ಹಿಂದಿನ ಸೀಟಿನಲ್ಲಿ ಬುಟ್ಟಿಯೊಳಗಿಂದ ಒಂದೇ ಸಮನೆ ದೈನ್ಯತೆಯಿಂದ ಕೂಗಿ ಕೊಳ್ಳುತ್ತಿದ್ದ ಬೆಕ್ಕಿನ ಮರಿಗಳನ್ನು ತೋರಿಸಿ, ಒಂದು ಸಾವಿರ ರೂಪಾಯಿಗಳನ್ನು ಕೈಯ್ಯಲ್ಲಿ ಹಿಡಿದು ಚಾಚಿದ.   “ಸಾವಿರಾರು ಎಕರೆ ಜಾಗ ಇದು ಬುದ್ದಿ. ಹಾವು, ನಾಯಿ, ನರಿ ಏನಾದರೂ ಒಂದೇ ದಿನಕ್ಕೆ ಕೊಂದಾಕ್ ಬುಡ್ತಾವೆ.” ಮರುಕದಿಂದ ನರಸಯ್ಯ ಹೇಳಿದ.  ಪ್ರಶಾಂತ ತನ್ನೆದುರೇ ಹಾದು ಹೋದ ಕಾರು ತನ್ನ ಡೈರೆಕ್ಟರದು ಎಂದು ಗುರುತಿಸಿ ಅವಸರ ತೋರಿದ. ಮತ್ತೆ ಜೇಬಿಗೆ ಕೈ ಹಾಕಿ ಇನ್ನೊಂದು ಸಾವಿರ ರೂಪಾಯಿಗಳನ್ನು ಸೇರಿಸಿದ.  “ಕಾಸ್ ಕೊಟ್ ಬುಟ್ಟಿ ಪಾಪ ಎಂಗ್ ಕಳಕಂಡೀರಿ ಬುದ್ದಿ? ನಾನೆಷ್ಟೇ ಆದ್ರೂ ನೀವ್ ಯೋಳಿದ್ ಕೆಲ್ಸ ಮಾಡೋ ಕಾರ್ಮಿಕ ಅಷ್ಟೇಯಾ, ಅಲ್ಲವುರಾ? ಅದರ ಪಾಪ ಪುಣ್ಯ ಎಲ್ಲಾ… ”  ಪ್ರಶಾಂತ ಪೆಚ್ಚಾಗಿ ನರಸಯ್ಯನನ್ನು ನೋಡುತ್ತಲೇ ಇದ್ದ.  “ಇವತ್ತು ಕಾರ್ಮಿಕರ ದಿನ ಅಂತ ನಮ್ಮ ರೆಡ್ಡಿ ಸಾಬು ಸ್ವೀಟ್ ಕೊಡ್ತಾವ್ನೆ ಎಲ್ಲಾರಗುವೆ,” ಎಂದು ಹೇಳಿ ಮೂಕನಾಗಿದ್ದ ಪ್ರಶಾಂತನ ಕೈಯಿಂದ ಹಣ ಪಡೆದುಕೊಂಡು, “ಇವತ್ತೊಂದಿನ ಕಾರ್ಮಿಕನಂಗೆ ಯೋಳಿದ್ ಕೆಲ್ಸ ಮಾಡಾಕಿಲ್ಲ ಬುದ್ದಿ. ಈ ಮರಿಗೋಳ್ನ ಮನೆಗ್ ಎತ್ಗವೋಯ್ತಿನಿ, ಬುಡಿ.” ಎನ್ನುತ್ತಾ ಕಾರಿನ ಹಿಂದಿನ ಬಾಗಿಲು ತೆಗೆದು ಬುಟ್ಟಿಯನ್ನು ಕೈಗೆತ್ತಿಕೊಂಡ.       *******

ಕಾರ್ಮಿಕ ದಿನದ ವಿಶೇಷ-ಕಥೆ Read Post »

ಕಥಾಗುಚ್ಛ

ಕಥಾಯಾನ

ಈಗೊಂದು ಉತ್ತರ ಸಿಗದಾ ಪ್ರಶ್ನೆ ಸುಮಂತ್ ಎಸ್ ಅದೊಂದು ಸಂಜೆ, ನನ್ನ ಕೈಯಲ್ಲಿ ಆಕೆಯ ಕೈ ಇತ್ತು. ಕಣ್ ಮಿಟುಕಿಸದೆ, ಚಂದ್ರ ನಕ್ಷತ್ರಗಳನು ಎಣಿಸುವ ಹಾಗೆ ಆಕೆ ನನ್ನನ್ನೇ ನೋಡುತ್ತಿದ್ದಳು, ನಾನು ಆಕೆಯನ್ನು.ಸೂರ್ಯಾಸ್ತಮಾನದ  ಮೋಡಗಳಂತಾಗಿದ್ದ ಕಣ್ಣುಗಳು ನನಗೆ ಏನನ್ನೊ ಹೆಳಬೇಕೆಂದು ಚಟಪಡಿಸುತಿದ್ದನ್ನು ಕಂಡೆ. ಇದೇನು ಮೊದಲಬಾರಿಯಲ್ಲ, ಅದೆಷ್ಟೋ ಬಾರಿ ಹೀಗೆ ಏನನ್ನೊ ಹೇಳಬೇಕೆಂದು ಪ್ರಯತ್ನಿಸಿ ಸೂತಿದ್ದು ಗೂತ್ತಿದೆ ನನಗೆ,  ಅದೇ, ಅನಿಶ್ಚಿತತೆ, ನಾಚಿಕೆ,ಭಯ,ಗೂಂದಲ ಇಂದಿಗೂ ಅವಳ ಕಣ್ಣಾ ಪರದೆ ಹಿಂದಿನಿಂದ ಇಣುಕುತ್ತಲೇಯಿತ್ತು. ಎಲ್ಲಾ ನದಿಗಳು ಸೇರಿದರೂ ಒಂದೇತರನಾಗಿರುವ ಸಮುದ್ರ, ಅಲೆಗಳದೆಷ್ಟೇ ಅಬ್ಬರಿಸಿದರೂ ನಂತರ ಪ್ರಶಾಂತವಾಗಿ ಗೂಚರಿಸುವ ಹಾಗೆ ಅವಳ‌ ನಗು. ನನಗೂ ಅದನ್ನು ಕೇಳಬೇಕಂಬ ಹುಚ್ಚು ಕುತೂಹಲವಿದ್ದರೂ ಎಂದಿಗೂ ಒತ್ತಾಯ ಮಾಡಿರಲಿಲ್ಲ. ಬೆವರುತ್ತಿದ್ದ ಕೈಯಿ, ನಡುಗುತ್ತಿದ್ದರೂ ನನ್ನ ಕೈಯನ್ನು ಗಟ್ಟಿ ಹಿಡಿದು ಹೇಳಲೇಬೇಕೆಂದು  ಮೆಲ್ಲನೇ ಒಣಗಿದ ತುಟಿ ಬಿಡಿಸುತ್ತಿದ್ದರೇ ನನಗೆ ಎಲ್ಲಿಲ್ಲದ ಆತಂಕದ ಅನುಭವವಾಗುತ್ತಿತ್ತು..ನನ್ನ ಕಿವಿಗಳಿಗೆ, ನನ್ನ ಎದೆಬಡಿತ ಕೇಳುತ್ತಿತ್ತು.  ಅವಳಿಗೇನು ನನ್ನ ಪ್ರತಿಕ್ರಿಯೆ ಕಾಯಬೇಕೆಂದೆನೂ ಇರುಲಿಲ್ಲಾ, ಬರಿ ಹೇಳಿ  ನಿರುಂಬಳ ಆಗುವ ಹಂಬಲ ಅವಳನ್ನು ಕಾಡಿದಂತೆ ಇತ್ತು…  ಹಾಗಾಗಿ ಮೆಲ್ಲನೆ ಪಿಸುದ್ವನಿಯಲ್ಲಿ ಹೇಳಿಯೇಬಿಟ್ಟಳು. ಆಕಸ್ಮಿಕವೂ  ಏನೋ ಆಗಸದಲ್ಲಿ ಮೋಡ ಅಬ್ಬರಿಸ ತೊಡಗಿತು.. ಆಕೆಯ ಕಣ್ಣಿಂದ ಜಾರಿದ ಮಳೆ ಆಕೆಯ ಕೆನ್ನೆಯ ಮೇಲಿತ್ತು. ಒರೆಸುವ ಮುನ್ನ ಮಳೆ ಹೊತ್ತು ತಂದಿದ್ದ ಆ ಗಾಳಿ ಆಕೆಯ ಶ್ವಾಸಕೋಶವನ್ನು ಕೂನೆಯ ಬಾರಿ ಸ್ಪರ್ಶಿಸಿತು… ಅವಳ ವಾಲಿದ ಕತ್ತು  ನನ್ನ ಕೈಯಲ್ಲಿ ಇತ್ತು…. ತೇಲುತ್ತಿದ್ದಾ ಕಣ್ಣುಗಳು ಮುರಿದ ದೋಣಿಯಂತೆ ಸ್ಥಬ್ದ ಸ್ಥಿತಿ ಅವರಿಸಿತು, ಬಾಗಿಲಿನಲ್ಲಿ ನಿಂತಿದ್ದ, ನನ್ನ ಮಲತಂದೆ ಬಿಕ್ಕಳಿಸುತ್ತಾ ಆಳುತಿದ್ದಾ ನನ್ನಂತೆ…    ಆಕೆಯ ಮೇಲೆ ನನಗೆ ಅಗಾಧ ಪ್ರೀತಿಯಿತ್ತು ಎಂದೇನಲ್ಲ,ಸತ್ಯ ತರ್ಕಿಸಿದರೆ ನಾ ಆಕೆಯನ್ನು ದ್ವೇಷಿಸಿದ್ದೂ ಹೌದು.  ಆದರೂ ಅನುಮತಿ ಕೇಳದೆ ಕಣ್ಣೀರು ಹರಿದ್ದಿತ್ತು. ಚಿಕ್ಕಪ್ಪ ಒಳ್ಳೆಯ ಮನುಷ್ಯ,ನನಗೆ ವೀರ್ಯ ಕೂಟ್ಟ ತಂದೆಯಾಗಿಲ್ಲದೆ ಇದ್ದರು, ನನ್ನನ್ನು ಒಪ್ಪಿಕೂಂಡು , ಅರ್ಜಿಗಳಲ್ಲಿ ಖಾಲಿಯಿದ್ದ ಅಪ್ಪನ ಸ್ಥಾನವನ್ನು ತುಂಬಿ, ನನ್ನ ಹೆಸರಿಗೆ ಆತನ  ಸರ್ ನೇಮ್  ಸೇರಿಸಿದ್ದು ಒಂದಾದರೆ,ನನ್ನ ಅಮ್ಮನನ್ನು ಒಪ್ಪಿಕೊಂಡು ಪ್ಯಾರೀಸ್ ನಲ್ಲಿ ಮದುವೆಯಾಗಿದ್ದು ಇನ್ನೂಂದು, ಆಕೆ ಒಳ್ಳೆಯ ನೃತ್ಯಗಾರ್ತಿ ಎಂದು ಹೇಳುವ ಚಿಕ್ಕಪ್ಪನ ಕಂಗಳಲ್ಲಿ ಇನ್ನೂ ಅದೇ ಮೊದಲ ಬಾರಿಗೆ ಕಂಡ ಹೂಳಪು.  ಆಕೆಯನ್ನು  ಮೊದಲ ಬಾರಿಗೆ ಕಂಡಿದ್ದನ್ನು ವರ್ಣಿಸುವ ಆತ ಮಾವಿನ ಚಿಗುರು ಕಂಡ ಕೂಗಿಲೆಯಂತೆ ಕಾಣುತ್ತಾನೆ. ಓಡಿಬಂದು ಆಕೆಯನ್ನು ಮಡಿಲಿಗೆ ಎಳೆದುಕೊಂಡು ಒದ್ದೆಯಾದ ಕಣ್ಣುಗಳಿಂದ ಆಕೆಯನ್ನು ನೋಡುತ್ತಾ ಹಣೆಗೆ ಮುತ್ತಿಟ್ಟ.      ಹಾಹ್ ಅಷ್ಟೇ ಸಾಕು ಅವಳೆಡೆಗಿನ ಅವನ ಪ್ರೀತಿ ಎಂಥವುದು ಎಂದು ತಿಳಿಯಲು..      ನಿಜ ಸ್ಥಬ್ದವಾಗಿದ್ದು ಅವಳ ದೇಹವಷ್ಟೆ      ಕೊನೇಯಪಕ್ಷ ನನ್ನಿಂದ ಮುಚ್ಚಿಟ್ಟಿದ್ದ ನನ್ನ ತಂದೆಯ ಹೆಸರನ್ನು ಸಹ ಅವಳೂಂದಿಗೆ ಕೊಡ್ಯೊಲಲಿಲ್ಲಾ, ಕೊನೆಗೆ ಹೇಳಿದ್ದು ಆತನದೇ ಹೆಸರು… ನಮ್ಮ ಊರಿಗೆ ಜರ್ಮನ್ ಸೈನಿಕರು ಬರುತ್ತಿದ್ದದ್ದು ಸಾಧಾರಣ ವಿಷಯವೇ…ಹಾಗೆ ಬಂದಿದ್ದ ಆತ,ನನ್ನ ಅಮ್ಮ ಕೆಲಸ ಮಾಡುತ್ತಿದ್ದ ಜಮೀನಿನ ಬದಿಯಲ್ಲಿ ತನ್ನ ಪುಸ್ತಕದಲ್ಲಿ ಏನ್ನನ್ನೋ ಚಿತ್ರಿಸುತ್ತಾ ಅಪ್ಪಟ ಕಲಾವಿದನಂತೆ ನಿಂತಿದ್ದರೆ, ಪಾರಿಜಾತ ಪುಷ್ಪ ಗಮನ ಸೆಳೆದಂತೆ ಎಲ್ಲರ ಗಮನ ಸೆಳೆಯುತ್ತಿದ್ದಾ, ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ಹೆಂಗಸರೆಲ್ಲಾ ಮಳೆ ಮುಂಚಿನ ಮೋಡ ಕಂಡ ನವಿಲ ಹಾಗೆ ಅವನೆಡೆಗೆ ನೋಡುತ್ತಿದ್ದರೆ ನನ್ನ ಅಮ್ಮ ಮಾತ್ರ ಮೊದಲ  ಮಳೆ ಸ್ವೀಕರಿಸಲು ಕಾಯುತ್ತಿದ್ದ ಮಣ್ಣಿನ ಹಾಗೆ ಆಗಿದ್ದಳು.. ನನ್ನ ಚಿಕ್ಕಪ್ಪ ಯಾವಾಗಲೂ ಹೇಳುವ ಹಾಗೆ ನನ್ನ ಅಮ್ಮ ಬಹಳ ಅಂದದ ಹೆಂಗಸು.ನಿರ್ಲಕ್ಷಿಸಲು ಅಸಾಧ್ಯವಾದ ರೂಪ ಅವಳದು, ಆತನೂ,  ಅವಳನ್ನು ಮೋಹಿಸಿದರೂ ತನ್ನ ಕಾಮನೆಗಳನ್ನು ಮೋಟು ಮೀಸೆಯ ಅಡಿಯಲ್ಲಿ ಬಚ್ಚಿಟ್ಟುಕೊಂಡು ಅವಳನ್ನು ನೋಡಲು ದಿನಾ ಬರುತ್ತಿದ್ದ, ಅವಳು ಕೂಡ ಆತ ಬರುವುದನ್ನು ತಿಳಿದು ದಿನಾ ಚಂದಚಂದದ ಬಟ್ಟೆ ತೊಟ್ಟು  ಕೆಲಸಕ್ಕೆ ಹೋಗುತ್ತಿದ್ದಳು. ಒಬ್ಬರಲ್ಲಿ ಇದ್ದ ಮತ್ತೊಬ್ಬರ ಮೇಲಿನ ಪ್ರೀತಿ ತಿಳಿಸಲು ಎಷ್ಟೇ ಪ್ರಯತ್ನಿಸಿದರೂ ಭಯ ಮತ್ತು ಭಾಷೆ ಎರಡೂ ತಡೆಯುತ್ತಿತ್ತು.ನಂತರ ಕಣ್ಣು ಬೆರೆಯಿತು, ಮುಗುಳುನಗೆ ವಿನಿಮಯ ಆಯಿತು, ಕ್ರಮೇಣ ಸ್ನೇಹ ಮತ್ತು ಪ್ರೀತಿ,ಊರು ಬದಿಯ ಮೈಲಿಗಲ್ಲುಗಳಿಗೆ  ಕಾವು ಕೊಡುವುದರಿಂದ ಶುರುವಾಗಿ ಸಾಯಂಕಾಲ ಒಟ್ಟಿಗೆ ಮದ್ಯಪಾನ ಮಾಡುವವರೆಗೂ ಭೂಮಿ ನೀರನ್ನು ಒಪ್ಪಿಕೊಳ್ಳುವ ಹಾಗೆ ಮಾತಿನಲ್ಲಿ  ಹೇಳಿಕೊಳ್ಳದೆ ಬೆಳೆದಿತ್ತು….. ಎಷ್ಟೇ ಆದರೂ ಆತ ಸೈನಿಕ, ಊರನ್ನು ಬಿಟ್ಟು ಹೋಗಬೇಕಾಗಿ ಬಂತು, ಆತ ಅವರಿಬ್ಬರ ನಡುವೆ ಏನೂ ಆಗೇ ಇಲ್ಲವೇನೋ ಎಂಬಂತೆ ಹೊರಟೆ‌ ಬಿಟ್ಟ…ಅಷ್ಟರಲ್ಲಿ ಅಮ್ಮ ಗರ್ಭಿಣಿಯಾಗಿದ್ದು ನಾನು ಈ ಪ್ರಪಂಚಕ್ಕೆ ಬರಲು ಸಿದ್ಧನಾಗುತ್ತಿದ್ದೆ.ಆಕೆ ದಿನೇ ದಿನೇ ಕೊರಗತೊಡಗಿದಳು, ಒಬ್ಬಳೆ ಕೂತು ಗಂಟೆಗಟ್ಟಲೆ ಅತ್ತಳು‌, ಈಕೆಯನ್ನು ನಡುರಾತ್ರಿಯಲ್ಲಿ ಬಿಟ್ಟು ಹೋದವನಿಗೆ ಮೈಥುನವಷ್ಟೇ ಬೇಕಾಗಿದೆಯೇನೋ  ಎಂಬ ಆಲೋಚನೆ  ಆಕೆಯಲ್ಲಿದ್ದರೂ ಎಂದೂ ಅವನನ್ನು ಬೈದದ್ದಿಲ್ಲ, ಪ್ರೀತಿ ಏನೋ ಹಾಗೆ ಇತ್ತು. ಜರ್ಮನ್ ಸೈನಿಕರು ನಮ್ಮ ಊರಿಗೆ ಬರುತ್ತಿದ್ದದ್ದು ಎಷ್ಟು ಸತ್ಯವೋ ನಮ್ಮ ಊರಿನ ಎಷ್ಟೋ ಮಕ್ಕಳಿಗೆ ಅಘೋಷಿತ ತಂದೆಗಳಿರುವರು ಎಂಬುದು ಅಷ್ಟೇ ಸತ್ಯ.ಆದರೂ ಮರ್ಯಾದೆಗೆ ಅಂಜಿದ ಅಮ್ಮ ನಾನು ಹುಟ್ಟಿದ ಮೇಲೆ, ಅಜ್ಜಿಯ ಬಳಿ ನನ್ನ ಬಿಟ್ಟು ಪ್ಯಾರಿಸ್ ಗೆ ಹೋದವಳು ಅವರ ಸಾವಿನ ನಂತರವೇ ನಾನು ಕಂಡಿದ್ದು, ಅಷ್ಟರಲ್ಲಿ ಆಕೆಗೆ ಮತ್ತೊಂದು ಮದುವೆ ಆಗಿತ್ತು.ಆಕೆ ತನ್ನ ಕನಸಿನ ಜೀವನ ಬದುಕುತ್ತಿದ್ದಳು, ಆದರೆ ನಾನು ಗೋಮುಖ ವ್ಯಾಘ್ರದಂತಹ ತಾತ ಅಜ್ಜಿಯ ಬಳಿ ನರಳುತ್ತಿದ್ದೆ; ಎಷ್ಟರ ಮಟ್ಟಿಗೆ ಎಂದರೆ ನಾನು ಅವರ ಸಾವನ್ನು ಬೇಡದ ದಿನವಿರಲ್ಲಿಲ್ಲ.ಮತ್ತೆ ಕೆಲ ದಿನದ ಮಟ್ಟಿಗೆ  ನನ್ನನ್ನು ಅಮ್ಮನ ತಂಗಿ,ಅವಳ ಗಂಡ ಸಾಕಿದರು… ಕಷ್ಟ ಪಟ್ಟು ಓದಿದೆ, ನಾನು ಪ್ರೀತಿಸಿದವಳನ್ನೇ  ಜೀವನ ಸಂಗಾತಿಯಾಗಿ ಪಡೆದೆ, ಒಂದರ ನಂತರ ಮತ್ತೊಂದೆಂಬಂತೆ ಒಂಬತ್ತು ಮಕ್ಕಳಾಯ್ತು , ಒಳ್ಳೆಯ ವಿದ್ಯಾಭ್ಯಾಸ ಪಡೆದರೂ ಮನಸಿನಲ್ಲಿ ತಂದೆ ಹೆಸರಿನಲ್ಲಿ ಇದ್ದ ನಕಲಿ ಹೆಸರು, ಅಮ್ಮನೆಡೆಗಿನ ಕೋಪ,ಸಮಾಜದೆಡೆಗಿನ ಆಕ್ರೋಶ, ಅಂಜಿಕೆ ನನ್ನನ್ನು ಸದಾ ಕೆಳಗೆ ಎಳೆಯುತ್ತಿತ್ತು. ಅದೆಷ್ಟೋ ಕಡೆ ಕೆಲಸ ಮಾಡಿದೆ.ನನ್ನದೆಯಾದ ಬಿಸ್ನೆಸ್ ಆರಂಭಿಸಿದೆ, ಆದರೂ ನಷ್ಟ ಬೇತಾಳನಂತೆ ಹಿಂಬಾಲಿಸುತ್ತಿತ್ತು, ಏನೂ ತೋಚದೆ ಕೈಚೆಲ್ಲಿ ಕುಳಿತಾಗ ಸೇನೆಗೆ ಸೇರಿದೆ, ಅದು World war ನ ಸಮಯ… ಒಂದೆಡೆ ಇಡೀ ವಿಶ್ವವೇ ಜೀವ ಭಯದಲ್ಲಿ ತತ್ತರಿಸುತ್ತಿದ್ದರೆ ಇನ್ನೊಂದೆಡೆ ನಾನು, ನನ್ನದೇ ತಂದೆಯ ಹೆಸರನ್ನು ಕೇಳಿ ಹಿಡಿ ಮುಷ್ಟಿ  ಉಪ್ಪು ತಿಂದಂತೆ ಆಗಿತ್ತು. ವಿಶ್ವಯುದ್ಧದಲ್ಲಾದರೆ ಸಾವು ಬದುಕಿನ ಹಪಾಹಪಿ ಆದರೆ ಬದುಕಿದ್ದಾಗಲೇ ಸಾಯುವುದು ಇನ್ನೆಷ್ಟು ಭೀಕರ? ನಾನು ಮತ್ತು ನಮ್ಮ ಜನಾಂಗದವರು ಆರಾಧಿಸುತ್ತಿದ್ದ ಆ ಪರಮ ದೇಶಭಕ್ತ, ಎಂಜಲು ಹಾರಿಸುತ್ತಾ ಮಾತಲ್ಲೇ ಮೋಡಿ ಮಾಡುವ ಸಾಮರ್ಥ್ಯವಿದ್ದ ಆ ಮೋಟು ಮೀಸೆಯವ,ನಮ್ಮ ಜನಾಂಗ ಅತೀ ಶುಭ್ರ ಜನಾಂಗವೆಂದು ನಂಬಿ ನಮಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದ ಒಂಟಿ ಸಲಗ, ಆತನೇ ನನ್ನ ತಂದೆ…!!! ಆತನನ್ನು ದೇವರನ್ನಾಗಿ ಒಪ್ಪಿಕೊಳ್ಳಬಹುದಿತ್ತು, ಆದರೆ ತಂದೆಯಾಗಿ?! ತಾಯಿಗೆ ಮೋಸ ಮಾಡಿದವನನ್ನು , ಒಮ್ಮೆಯೂ ನನ್ನ ಕಾಣದಿರುವವನನ್ನು,ಬೆರಳ ಹಿಡಿದು ನಡೆಸದವನನ್ನು, ಹೆಂಡತಿ ಮಕ್ಕಳನ್ನು ದೂರ ಮಾಡಿದವನನ್ನು ಹೇಗೆ ಒಪ್ಪಿಕೊಳ್ಳಲಿ ತಂದೆಯೆಂದು? ಹೇಗೆ ಒಪ್ಪಿಕೊಳ್ಳಲಿ?? ಅವನನ್ನು ಬಿಡಿ ಬರೀ ಆತನ ಹೆಸರೇ ಸಾಕಿತ್ತು ನನ್ನಿಂದ ಎಲ್ಲವನ್ನೂ ಕಬಳಿಸಲು. ತಾಯಿಯಿದ್ದರೂ ಅನಾಥನಾದೆ, ಸಂಸಾರ,ಸ್ನೇಹಿತರಿದ್ದರೂ ಏಕಾಂಗಿಯಾದೆ. ಕೆಲಸವಿದ್ದರೂ ಬಡವನಾದೆ,ಸಮಾಜದ ಕ್ರೂರತ್ವಕ್ಕೆ ಬಲಿ ಪಶುವಾದೆ, ಒಟ್ಟಿನಲ್ಲಿ ಜೀವಂತ ಶವವಾದೆ!! ಹೌದು, ಒಪ್ಪುತ್ತೇನೆ ಆತನಿಗೂ ತಂದೆ ಪ್ರೀತಿಯ ಅರಿವೇ ಇರಲಿಲ್ಲಾ, ತಂದೆ ಏನೋ ಇದ್ದ ಆತನಿಗೆ, ಆದರೆ ತಂದೆ ವಾತ್ಸಲ್ಯ ಎಂದಿಗೂ ಸಿಗಲಿಲ್ಲ ಅವನಿಗೆ.. ಜೀವನದುದ್ದಕ್ಕೂ ಈತನ ಇಚ್ಛೆಯ ವಿರುದ್ಧವೇ ನಡೆಸಿದ ಆತ, ಬಣ್ಣಗಳಿಗೆ ಜೀವ ತುಂಬುವ ಕೈಗಳಿಗೆ ಜೀವ ತೆಗೆಯುವ ಪಿಸ್ತೂಲನಿತ್ತು, ಕಲಾವಿದನ ಕೊಂದು ಕೊಲೆಗಾರನನ್ನಾಗಿಸಿದ… ಸುಖದ ಸುಪ್ಪತ್ತಿಗೆಯಲ್ಲಿ ಇರಬೇಕಾದವನ್ನನ್ನು ಪದೇ ಪದೇ ಶೂನ್ಯಕ್ಕೆ ಉರುಳಿಸಿದ,  ಆತನೂ ನನ್ನ ಹಾಗೆ ಅವರ ಸಾವಿಗೆ ಕಾದ್ದಿದ್ದಿರಬಹುದು? ತಂದೆಯ ಮೇಲಿನ ಆಕ್ರೋಶ,ಇಡಿ ಒಂದು ಜನಾಂಗವನ್ನೇ ನಿರ್ನಾಮ ಮಾಡುವೆಡೆ ತಿರುಗಿತು, ಇಡೀ ವಿಶ್ವವನ್ನೇ ರಣರಂಗ ಮಾಡಿಸಿತು!!  ಆದೆಷ್ಟೋ ಜೀವಗಳನ್ನು  ಇರುವೆಗಳ ಹೊಸಕಿ ಹಾಕಿದಂತೆ  ಹಾಕಿದ ರಕ್ತಾ ಸಾಗರವೇ ಹರಿಯಿತು…. ಆದರೂ ಆತನನ್ನು ಸಮರ್ಥಿಸಿಕೊಳ್ಳುತ್ತೇನೆ!!! ಏಕೆಂದರೆ  ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಮ್ಮೆಲ್ಲರ  ಒಳಗೆ ಅಡಾಲ್ಫ್ ಹಿಟ್ಲರ್ ಇದ್ದಾನೆ. ಕೆಲವರಲ್ಲಿ ಸ್ವಲ್ಪ, ಇನ್ನೂ ಹಲವರಲ್ಲಿ ಕೊಂಚ ಜಾಸ್ತಿ, ಅಷ್ಟೇ ವ್ಯತ್ಯಾಸ… ಇಡೀ ಜಗತ್ತು ಅವನನ್ನು ಮಾನವ ರೂಪದ ರಾಕ್ಷಸವೆನ್ನಬಹುದು!! ನರಹಂತಕ ಎನ್ನಬಹುದು,ನೀಚ ಎನ್ನಬಹುದು,ರಕ್ತಭಕ್ಷಕ, ಭಕ್ಷಾಸುರ ಎಂದೆಲ್ಲಾ ಎನ್ನಬಹುದು; ಆದರೆ ಅದಕ್ಕೆಲ್ಲಾ ಕಾರಣ!??

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮಕ್ಕಳ ಕಥೆ ಗರುಡನ ಆದರ್ಶ ರಾಜ್ಯ ಮಲಿಕಜಾನ ಶೇಖ     ವಿಂದ್ಯ ಪರ್ವತಗಳ ಇಳಿಜಾರು ಭಾಗದಲ್ಲಿ ‘ಸುಂದರಬನ’ ಎಂಬ ಸುಂದರ ಕಾಡು. ಹಚ್ಚ ಹಸಿರಿನ ಸಿರಿ, ಸುತ್ತಲೂ ಪರ್ವತ ಶ್ರೇಣಿ. ಅಲ್ಲಲ್ಲಿ ನೀರಿನ ಹೊಂಡಗಳು, ಜುಳು ಜುಳು ಹರಿಯುವ ನದಿ ಇವೆಲ್ಲವುಗಳಲ್ಲಿ ಹಾರಾಡಿ, ನಲಿದು ನೆಮ್ಮದಿಯಿಂದ ಬದುಕುವ ಪಕ್ಷಿ ಸಂಕುಲ. ಪಕ್ಷಿಗಳೆಲ್ಲಾ ಹಾರಾಡಿಕೊಂಡು ಗೂಡು ಮಾಡಿಕೊಂಡು ಸಂತೋಷವಾಗಿದ್ದವು. ಕಾಲ ಕ್ರಮೇಣ ಅವುಗಳಲ್ಲಿ ಸ್ವಾರ್ಥ ಬೆಳೆದು, ತಂಡ ಕಟ್ಟಿಕೊಂಡು ಕಳ್ಳತನ, ಸುಲಿಗೆ, ಅನ್ಯಾಯ, ಅತ್ಯಾಚಾರದಲ್ಲಿ ನಿರತರಾದವು. ಅದರಲ್ಲಿ ನೆರೆಯ ಕಾಡಿನ ಬರಗಾಲದಿಂದ ಅಲ್ಲಿಯ ಪಕ್ಷಿಗೂ ವಲಸೆ ಬರುವುದು ದೊಡ್ಡ ಸಮಸ್ಯೆಯಾಯಿತು.             ಈ ಬಗ್ಗೆ ಅಲ್ಲಿಯ ಎಲ್ಲ ಪಕ್ಷಿಗಳು ಕೂಡಿಕೊಂಡು ಸಮಾಲೋಚನೆ ಮಾಡಿದವು. ನಮ್ಮ ಪಕ್ಷಿಗಳ ಬದುಕು ನೆಮ್ಮದಿ, ಸಂತೋಷಕ್ಕೆ ಮರಳಬೇಕಾದರೆ ನಮ್ಮ ಕಾಡಿಗೆ ಒಬ್ಬ ಆದರ್ಶ ರಾಜನ ಆಯ್ಕೆ ಮಾಡಬೇಕು. ಶೌರ್ಯ, ಶಕ್ತಿ ಮತ್ತು ಬುದ್ದಿಮತ್ತೆಗೆ  ಹೆಸರಾದ ಗರುಡನನ್ನು ರಾಜನನ್ನಾಗಿ ಮಾಡಿದರೆ ಒಳ್ಳೆಯದೆಂದು ಬಹಳಷ್ಟು ಪಕ್ಷಿಗಳು ಹೇಳಿದವು. ಆ ತೀರ್ಮಾನ ಮಾಡುವುದಿತ್ತು, ಅಷ್ಟರಲ್ಲಿ ಕಾಗೆ ಮತ್ತು ಗೂಬೆ ನಮಗೂ ರಾಜನಾಗುವ ಅವಕಾಶ ಕೊಡಿ ಎಂದು ಬೇಡಿಕೊಂಡವು. ಸಭೆಯ ಮುಂದೆ ಹೊಸ ಪೇಚು ನಿರ್ಮಾಣವಾಯಿತು. ಆಗ ಗರುಡ, ಕಾಗೆ ಮತ್ತು ಗೂಬೆಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿ, ಮೂರರಲ್ಲಿ ತಮಗೆ ಇಷ್ಟವಾದ ಪಕ್ಷಿಯ ಮನೆಯ ಮುಂದೆ ಕಾಳು ಹಾಕುವಂತೆ ಹೇಳಲಾಯಿತು. ಇದಕ್ಕಾಗಿ ಎಲ್ಲ ಪಕ್ಷಿಗಳಿಗೆ ಐದು ದಿನಗಳ ಅವಕಾಶ ಕೊಡಲಾಯಿತು.               ಮೂರು ಪಕ್ಷಿ ಕಾಡಿನ ಪಕ್ಷಿಗಳನ್ನು ಒಲಿಸಿಕೊಳ್ಳುವದಕ್ಕೆ ತಮ್ಮ ತಂಡ ಕಟ್ಟಿಕೊಂಡು ಹೊರಟವು. ಗರುಡ ಶಿಸ್ತಿನ ಸಿಪಾಯಿ, ದಿಟ್ಟ ಸ್ವಭಾವ, ಕೆಲಸದ ಬಗ್ಗೆ ಮಾತಾಡಿ ಕಾಡಿನಲ್ಲಿ ಸೇರುವ ವೈರಿಗಳನ್ನು ತಡೆಯಲು ಗಗನ ಯಾತ್ರೆಗೆ ಹಾರಿತು. ಗೂಬೆ ಕನಸು ದೊಡ್ಡದು ಆದರೆ ಹಗಲಿನಲ್ಲಿಯೆ ಡುಸ್ಸೆಂದು ಮಲಗುತಿತ್ತು. ರಾತ್ರಿ ಸ್ವಲ್ಪ ಎಲ್ಲರಿಗೆ ಬಣ್ಣದ ಲೋಕ ತೋರಿಸಿ ಮತ್ತೆ ಮಲಗುತಿತ್ತು. ಆದರೆ ಯಾವ ವಿಶೇಷ ಗುಣವಿಲ್ಲದ, ಹಳಸಿದ ಅನ್ನಕ್ಕೆ ಮತ್ತು ಕೊಳೆತ ಮಾಂಸಕ್ಕೆ ಜಾರುವ ಕಾಗೆಗೆ ಮಾತ್ರ ರಾಜನಾಗುವ ಬಯಕೆ ಬಹಳ. ಎಲ್ಲ ಪಕ್ಷಿಗಳ ಮುಂದೆ ಸತತ ಕಾ.. ಕಾ.. ಮಾಡುತ್ತಾ ಇಲ್ಲ ಸಲ್ಲದ ಮಾತುಗಳನ್ನು ಹೇಳುತಿತ್ತು. ‘ನಾನು ರಾಜನಾದರೆ ಗರುಡನಿಗಿಂತ ಎತ್ತರಕ್ಕೆ ಹಾರಿ, ವರುಣ ದೇವನನ್ನು ಸೋಲಿಸಿ ಕಾಡಲ್ಲಿ ಬರಗಾಲ ಬೀಳದಂತೆ ನೋಡಿಕೊಳ್ಳುತ್ತೇನೆ’ ಎಂದು ಹೇಳುತಿತ್ತು. ಇಂತಹ ಮಾತುಗಳಿಗೆ ಮಾರು ಹೋಗಿ ಪಕ್ಷಿಗಳು ಸಾವಕಾಶ ಕಾಗೆಯತ್ತ ಜಾರಲು ಪ್ರಾರಂಭ ಮಾಡಿದವು. ಕಾಗೆ ತನ್ನ ಗುಂಪನ್ನು ಕರೆದು, ಪ್ರತಿ ಹಕ್ಕಿ ಗೂಡಿಗೆ ಕೊಳೆತ ಮಾಂಸದ ತುಣುಕು ಮತ್ತು ಹಳಸಿದ ಅನ್ನ ಹಾಕಲು ಹೇಳಿತು. ಆಗ ಮಾತ್ರ ದೊಡ್ಡ ಚಮತ್ಕಾರವೇ ಆಯಿತು. ಎಲ್ಲ ಹಕ್ಕಿಗಳು ಕಾಗೆಯೇ ನಮ್ಮ ರಾಜನೆಂದು ಹೇಳತೊಡಗಿದವು.             ಐದು ದಿನಗಳ ನಂತರ ನೋಡಿದರೆ ಕಾಗೆಯ ಮನೆಯ ಮುಂದೆ ಕಾಳಿನ ದೊಡ್ಡ ರಾಶಿಯೇ ಬಿದ್ದಿತ್ತು. ಗೂಬೆಗೆ ಸ್ವಲ್ಪ ಕಾಳು ಬಂದಿದ್ದವು ಆದರೆ ಗರುಡನಿಗೆ ಮಾತ್ರ ಒಂದು ಕಾಳೂ ಹಾಕಿರಲಿಲ್ಲ. ಅದಕ್ಕೆ ಬಹಳ ನೋವಾಯಿತು. ಹಕ್ಕಿಗಳಿಗೆ ‘ಶಿಸ್ತು, ಶೌರ್ಯ, ಶಾಂತಿ, ರಕ್ಷಣೆ’ ಬೇಕಾಗಿಲ್ಲ ಎಂದು ನೊಂದುಕೊಂಡಿತು.              ಅತ್ತ ಕಾಗೆಯ ಮನೆಯ ಮುಂದೆ ಮಾತ್ರ ಸಂತೋಷಕ್ಕೆ ಪಾರವೇ ಇರಲಿಲ್ಲ. ಕಾಡಿನ ತುಂಬೆಲ್ಲಾ ‘ಕಾ,, ಕಾ,,’ ಕರ್ಕಶ ಧ್ವನಿಯು ಆವರಿಸಿತು. ಮರದಲ್ಲಿ ಹೊಲಸು ಮಾಡುವದರ ಜೊತೆಗೆ ಕಾಗೆ ಕಾರುಬಾರು ಪ್ರಾರಂಭಿಸಿತು. ತನ್ನ ದರಬಾರದಲ್ಲಿ ತಿಪ್ಪೆ ಕೆದರುವ ಕೋಳಿ, ಗೂಬೆ, ಬಾವುಲಿಗಳಂತ ಪಕ್ಷಿಗಳನ್ನು ಮಂತ್ರಿಗಳನ್ನಾಗಿ ಮಾಡಿ ಸಲಹೆ ಪಡೆಯುತಿತ್ತು.                   ಕಾಗೆ ರಾಜನಾದ ನಂತರ ಕಾಡಿನ ತುಂಬೆಲ್ಲಾ ಹೊಲಸುತನ ಪ್ರಾರಂಭವಾಯಿತು. ಹೊಲಸು ತಿಂದು ಹೊಲಸು ಮಾಡುವುದು ಹೆಚ್ಚಾಯಿತು. ಇಷ್ಟು ದಿನ ಗರುಡನಿಗೆ ಅಂಜಿ ಕುಳಿತ ಕಾಗೆಗಳ ಗ್ಯಾಂಗು ಸಕ್ರಿಯವಾದವು. ಎಲ್ಲ ಪಕ್ಷಿಗಳ ಮೇಲೆ ದಬ್ಬಾಳಿಕೆ ಪ್ರಾರಂಭವಾಯಿತು. ಕಾಡಿನಲ್ಲಿ ಒಂದು ರೀತಿಯ ಭಯದ ವಾತಾವರಣ. ಮೊದಲಿದ್ದ ಸ್ವಾತಂತ್ರವು ಇಲ್ಲದಂತಾಯಿತು. ಆದರ್ಶ, ಬುದ್ಧಿಮತ್ತೆ ಮಣ್ಣಾಯಿತು. ಪಕ್ಷಿಗಳಿಗೆ ಪಶ್ಚಾತಾಪ ಆಗುತ್ತಲಿತ್ತು. ಅಂತಹದರಲ್ಲಿ ನೆರೆಯ ಕಾಡಿನ ಪಕ್ಷಿಗಳು ಈ ಕಾಡಿನ ಮೇಲೆ ಯುದ್ಧ ಸಾರಿದವು. ಎಲ್ಲ ಪಕ್ಷಿಗಳಿಗೆ ಮತ್ತಷ್ಟು ಚಿಂತೆಯಾಯಿತು. ‘ಚುಗುಲಿ’ ಮಾಡುವ ಕಾಗೆಗಳೇನು ಯುದ್ಧ ಮಾಡಬೇಕು.                    ಆಗ “ನಮ್ಮ ಕಾಡನ್ನು ರಕ್ಷಣೆ ಮಾಡುವದು ನನ್ನ ಧರ್ಮ” ಎಂದು ಗರುಡ ತನ್ನ ಸ್ನೇಹಿತರ ಸಹಕಾರದಿಂದ ವೀರಾವೇಶದಿಂದ ಕಾದಾಡಿ ಅವುಗಳನ್ನು ಹಿಮ್ಮೆಟ್ಟಿಸಿತು. ಎಲ್ಲ ಪಕ್ಷಿಗಳಿಗೆ ಗರುಡನ ಮೇಲೆ ಗರ್ವ ಎನಿಸಿತು. ಅವೆಲ್ಲವು ಗರುಡನ ಜಯ ಜಯಕಾರ ಹಾಕುತ್ತಾ ಬಂದು ಕ್ಷಮೆ ಕೇಳಿ, “ನೀನೆ ರಾಜನಾಗಬೇಕು ಮತ್ತು ಕಾಗೆಗಳ ಹೊಲಸು ವೃತ್ತಿಗೆ ಕಡಿವಾಣ ಹಾಕಬೇಕು” ಎಂದು ವಿನಂತಿಸಿಕೊಂಡವು. ಅಂದಿನಿಂದ ತ್ಯಾಗ, ಪ್ರಾಮಾಣಿಕ, ನಿಸ್ವಾರ್ಥಗಳಂತಹ ಆದರ್ಶ ಗುಣವುಳ್ಳ; ಶೌರ್ಯ ಮತ್ತು ಚತುರತೆಗೆ ಹೆಸರಾದ, ಪಕ್ಷಿಗಳ ಸ್ವಾತಂತ್ರ್ವವನ್ನು ರಕ್ಷಣೆ ಮಾಡಿ, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ಗರುಡ ಪಕ್ಷಿಯು ರಾಜನಾಗುತ್ತದೆ. ಆಗ ಅಲ್ಲಿ ಮತ್ತೆ ಎಲ್ಲ ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತವೆ. *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸಂತೆಯಲಿ ಕಂಡ ರೇಣುಕೆಯ ಮುಖ ಮಲ್ಲಿಕಾರ್ಜುನ ಕಡಕೋಳ ಸಂತೆಯಲಿ ಕಂಡ ರೇಣುಕೆಯ ಮುಖ ಸಂತೆಯಲಿ ಕಂಡ ರೇಣುಕೆಯ ಮುಖ   ಒಂದಲ್ಲ, ಎರಡಲ್ಲ, ಬರೋಬ್ಬರಿ ಎಂಟು ವರುಷಗಳ ಕಾಲ ಅವಳ ಕಣ್ಣಲ್ಲಿ  ಕಣ್ಣಿಟ್ಟು ನಿರಂತರವಾಗಿ ನೋಡಿದ ನನ್ನ ನೆನಪಿಗೆ ಸಾವಿಲ್ಲ. ಮರೆತೆನೆಂದರೂ  ಮರೆಯಲಾಗದ ಮೃದುಲ ಮುಖವದು.  ಅದೊಂದು ಅನಿರ್ವಚನೀಯ ಮಧುರ ಸ್ಮೃತಿ. ಹೌದು, ಅವಳ ” ಆ ಮುಖ ” ನನ್ನ  ಸ್ಮೃತಿಪಟಲದಲ್ಲಿ ಕಳೆದ ಶತಮಾನದಿಂದ ಹಾಗೇ ಅನಂತವಾಗಿ ಸಾಗಿ ಬರುತ್ತಲೇ ಇದೆ. ನನ್ನ ಪಾಲಿಗೆ ಅದೊಂದು ಬಗೆಯ ಸಂವೇದನಾಶೀಲ ಪ್ರ(ತಿ)ಭೆಯ  ಸುಮಧುರ ಸಮಾರಾಧನೆ. ಅವಳನ್ನು  ಅದೆಷ್ಟು ಬಾರಿ ಭೆಟ್ಟಿ ಮಾಡಿ,  ಅವಳೊಂದಿಗೆ ಮಾತಾಡಿ, ಜೀವಹಗುರ  ಮಾಡಿಕೊಂಡಿದ್ದೇನೆಂಬುದು ಲೆಕ್ಕವಿಟ್ಟಿಲ್ಲ. ಯಡ್ರಾಮಿಯ ಶಾಲಾದಿನಗಳು  ಮುಗಿಯುವ ಮುಜೇತಿ… ಅವಳ ನನ್ನ  ಭೆಟ್ಟಿ. ಅವಳನ್ನು ಮಾತಾಡಿಸುವ ದಿವ್ಯ  ಕುತೂಹಲ ನನಗೆ. ಆದರೆ ಅವಳು  ಹುಂ..ಹೂಂ.. ನನ್ನನ್ನು ಕಣ್ಣೆತ್ತಿಯೂ  ನೋಡುತ್ತಿರಲಿಲ್ಲ. ಆಕೆಗೆ ನಾನ್ಯಾವ ಲೆಕ್ಕ, ಹೇಳಿಕೇಳಿ ನಾನು ‘ಹಸೀಮಡ್ಡ’ ಎಂದು ನನಗೆ ನಾನೇ ಅಂದುಕೊಳ್ಳುತ್ತಿದ್ದೆ. ಹೀಗೆ ವರುಷ ನಾಲ್ಕು ಕಳೆದಿರಬಹುದು.   ಅದೊಂದು ಮಟಮಟ ಮಧ್ಯಾಹ್ನ . ದುಡಿದು, ದಣಿದು ಬಂದಿದ್ದಳು. ಕಂದು ಬಣ್ಣದ ಸೀರೆಯುಟ್ಟಿದ್ದಳು. ಕಡಲೇಬೇಳೆ ಬಣ್ಣದ ಹಣೆಯ ಮೇಲಿದ್ದ ಗಂಧ ಕುಂಕುಮದ ಬೊಟ್ಟೆಲ್ಲ ಕರಗಿ ಕಟಿನೀರು ಬಸಿದು ಮೃದುಮಲ್ಲಿಗೆ ಮುತ್ತಿನಂತೆ, ಹವಳದ ತುಟಿದಾಟಿ ಅವಳೆದೆಯ ದಾಸವಾಳಗಳ ಮೇಲೆ ತಟಕು ತಟಕೆಂದು ಹನಿಸುತ್ತಿದ್ದವು. ಬಾವಾಗೋಳ ತೆಕ್ಕೆಯ ಪಕ್ಕದ ಹಣಮಂದೇವರ  ಗುಡಿಯ ಬಾಜೂಕೆ ರುದ್ರಯ್ಯ ಮುತ್ಯಾನ ಹೊಟೇಲ್. ಜೋಡು ಬಸರಿ ಗಿಡದ ದಟ್ಟನೆರಳು : ಪತರಾಸಿನ  ಹೊಟೇಲಿಗೂ ಹಣಮಪ್ಪನ ಗುಡಿಯ  ಪೌಳಿಗೂ.    ಗುಡಿಕಟ್ಟೆಯ ಮೇಲೆ ಕುಂತಿದ್ದಾಕೆ.., ಇನ್ನೇನು ನಾನು ಬಂದು  ” ತನ್ನ  ಮಾತಾಡಿಸಿ ಬಿಡುತ್ತೇನೆಂಬಂತೆ ”  ಕಮಟಾದ ಹರಕು ಸೀರೆಯ ಸೆರಗಿನಿಂದ  ಮುಖದ ಮೇಲಿಂದುದುರುವ ಕಟ್ನೀರು  ಒರೆಸಿಕೊಂಡಳು. ಸೆರಗ ಮರೆಯಲಿದ್ದ  ಅರಿಶಿಣ ಉಂಡೆದ್ದ ಕೆಂಪು ಕುಪ್ಪಸದ  ದಾಸವಾಳಗಳ ಮೇಲೆ ಬಿದ್ದ ಕಟಿನೀರಿನ  ಹಸಿ ಹಸಿ ಗುರುತುಗಳು..!  ಆ ಹಸಿ ಗುರುತುಗಳ  ಮೇಲೆ  ಬಿಸಿ ಬಿಸಿ ಹಾಡಿನ ಚಿದ್ವಿಲಾಸದ ಸಾಲುಗಳನ್ನು  ಬರೆಯಲು  ನನ್ನ ಬರಹಗಣ್ಣು ಕನಸಿದವು. ಅಭಿಜಾತ ಪ್ರೀತಿಯ ಪ್ರಥಮವಾಂಛೆ ಅರಳಿ ನಿಂತ ಕವಿಸಮಯ. ” ಅವು” ನನ್ನ ಕಳ್ಳಗಣ್ಣಿಗೆ ಬಿದ್ದುದು ಗೊತ್ತಾಗಿ ನನ್ನತ್ತ ಮಿಂಚಿನ ಕಣ್ಣುಹಾಯಿಸಿ, ಸೆರಗು ಸರಿಪಡಿಸಿಕೊಂಡಳು. ಆಹಾ..! ಅದೆಂಥ ಮಾಧುರ್ಯದ  ಕಣ್ಣುಗಳವು…! ಒಂದೊಂದು ಕಣ್ಣಲ್ಲೂ  ಪೂರ್ಣಚಂದಿರಿನ ಹಾಲ್ಬೆಳದಿಂಗಳು…   ನನಗೆ ಮಧ್ಯಾಹ್ನವೇ ಮರೆತು ಹೋಗಿತ್ತು.  ಏನಿಲ್ಲವೆಂದರೂ ವಯಸಿನಲ್ಲಿ ನನಗಿಂತ  ಒಂದೆರಡು ವರುಷವಾದರೂ ಹಿರೀಕಳು. ಅದ್ಯಾವುದು ಅಡ್ಡಿಯಾಗಿ  ಇಬ್ಬರನು ಕಾಡಲಿಲ್ಲ, ಕಾಣಲಿಲ್ಲ. ಕಣ್ಣಿಗೆ ಕಾಣದ  ವಯಸು. ಕೊರಳ ಮೋಹದ ಬಲೆಗೆ ಕರುಳಬಳ್ಳಿ ಸುತ್ತಿಕೊಂಡ, ಬ್ರಹ್ಮಾಂಡ ಬೀಜಗಳ ಖಂಡುಗ ಕನಸು. ಹೇಳು, ಕನಸುಗಳಿಗೆ ಒಡತಿಯಾಗುವೆಯಾ…ಎಂದು ಕೇಳುವುದನ್ನ ತಡೆ ಹಿಡಿದು  ಹೆಸರು ಕೇಳಿದೆ. ” ರೇಣುಕ ” ಎಂದಳು. ನಾನು ಈ ಊರಿನವಳಲ್ಲ…ನನ್ನ ಅಪ್ಪ  ಯಾರಂತ ನನಗೇ ಗೊತ್ತಿಲ್ಲ. ಅವ್ವ  ಜೋಗೇರ ಚೆಂಗಳಿ…ದೇವರಿಗೆ  ಬಿಟ್ಟವಳು… ನಾನವಳ ಮಗಳು.  ನಾನು ಪ್ರಶ್ನಿಸದಿದ್ದರೂ ತಾನೇ ಕತೆ  ಹೇಳಿದಂತೆ  ಹೇಳ ತೊಡಗಿದಳು. ” ನಂಗೊತ್ತಿಲ್ಲ… ಅದೇಕೋ ನಿಮ್ಮುಂದೆ  ಎಲ್ಲ ಹೇಳಿಕೊಳ್ಳಬೇಕನಸ್ತಿದೆ ” ಎನ್ನುತ್ತಾ ತನ್ನ ಜೀವದ ಗೆಳತಿ ಲಂಬಾಣಿ ತಾಂಡಾದ  ನಿಂಬೆವ್ವ  ತನಗೆ ಮಾಡಿದ ಸಹಾಯ, ಸಹಕಾರ ಕುರಿತು  ಹೇಳುತ್ತಾ., ಮಠದ ಬೀಜದಹೋರಿ ಯೊಂದು ತನ್ನನ್ನು  ಬೆನ್ನಟ್ಟಿ ದಾಳಿ ಮಾಡಿ, ಹೆಣ್ತನದ ಜೀವಶಿಲ್ಪಕ್ಕೆ ಕೈಹಾಕಲು ಬಂದಾಗ ತನ್ನನ್ನು ಕಾಪಾಡಿದಾಕೆ. ಹೀಗೆ ಲಮಾಣೇರ ನಿಂಬೆವ್ವ ತನ್ನ ಕುಟುಂಬದ “ಜೀವದ ಜೀವ” ಎಂದಳು.    ಅಂದು ಸೋಮವಾರ ಯಡ್ರಾಮಿ ಸಂತೆಯದಿನ,  ಅಮ್ಮನ ಕೊಡ ತುಂಬಿ ತುಳುಕುವಷ್ಟು ರೊಕ್ಕ. ಹಣಮಂದೇವರ ಮುಂದಿಟ್ಟ ತುಂಬಿದ ತಾಮ್ರದ ಕೊಡ, ಬಿಚ್ಚಿಟ್ಟ ತನ್ನ  ಕಾಲ್ಗೆಜ್ಜೆ,  ಭಂಡಾರದ ಚೀಲ  ತೋರಿಸಿದಳು. ಅದು ನನ್ನ  ತಾಯಿಗೇ ಕಡೆಯಾಗಲಿಲ್ಲ. ನನಗೂ  ಕೊಡ ಹೊರಿಸಿದಳು ಗುಡ್ಡದ ಅಮ್ಮ. ಮೂರು ವರುಷಗಳಿಂದ ಗುಡ್ಡಕ್ಕೆ ಹರಕೆ  ತೀರಿಸುತ್ತಿದ್ದೇನೆ. ಅಮ್ಮನ ಶಕ ಸಣ್ಣದಲ್ಲ  ಮತ್ತು ಸುಮ್ಮನಲ್ಲ..  ಡೇಕರಿಕೆ ಶುರುವಾಗಿ., ಕಾಲಿಗೆ ಗೆಜ್ಜೆ  ಕಟ್ಟಿಕೊಂಡಳು. ಕುಣಿಯುತ್ತಾ  ಲೋಕಾಕರ್ಷಣೆಯ ಝಲಕಿನಲಿ  ಹಾಡ ತೊಡಗಿದಳು. ನೋಡ ನೋಡುತ್ತಿದ್ದಂತೆ  ಸಂತೆಯ ಜನ  ಗಿಜಿಗುಡತೊಡಗಿದರು. ರೊಕ್ಕದ ಝಣ ಝಣ. ಕನಸು ಮತ್ತು ಕಣ್ಣೀರು ಬಿಕರಿಯ ಕ್ಷಣ. ಹಾಗನಿಸಿದ್ದು ನನಗೆ. ಎಡ ಬಗಲಿಗೆ ದಾರೂ ತುಂಬಿದ ಸಣ್ಣ ತತ್ರಾಣಿ ಕಟ್ಟಿಕೊಂಡ ಎಣ್ಣೆಗಮಟಿನ ಜಡೆಯ ಮುದುಕನೊಬ್ಬ ತುಂತಣಿ, ಚೌಡಿಕೆ  ನುಡಿಸುತ್ತ ಜನರ ಹಣೆಗೆ ಭಂಡಾರ  ಹಚ್ಚುತ್ತಾ, ಬೇವಿನ ಸೊಪ್ಪಿನ ಸಡಿಲ ಸಿವುಡು ಸವರುತಾ ಉಧೋ..ಉಧೋ..ಉಧೋ.. ಉದ್ಘೋಷಣೆಗಳೊಂದಿಗೆ… ಜನ ಜಂಗುಳಿಯ ನಡುವೆ ಸೇರಿಕೊಂಡ.  ಆರಂಭಕ್ಕೆ ಅದೆಷ್ಟೋ ವರಗಳು  ರೇಣುಕೆಯ ಮದುವೆ ಮಾಡಿಕೊಳ್ಳಲೆಂದು ಮುಂದೆ ಬಂದರೂ, ಗುಡ್ಡದ ಅಮ್ಮ ಹಾಗೂ ತನ್ನ ತಾಯಿಗೋಸ್ಕರ ರೇಣುಕ ಮದುವೆ ನಿರಾಕರಿಸಿದಳು. ಈಗೀಗಂತು ಐಹಿಕ ಸುಖದ ಮಾತುಗಳಿಂದ ವಿಮುಕ್ತಳು. ಅಬ್ಬಾ..! ಆಕೆ ಗೆಜ್ಜೆ ಕಟ್ಟಿಕೊಂಡು ಲಯಬದ್ದವಾಗಿ ಕುಣಿಯುತ್ತಾ  ಹಾಡುತ್ತಿದ್ದರೆ ಉತ್ತರಾದಿಯ ರಾಧೆ -ಕೃಷ್ಣರ ಹಾಡಿನ ಮೋಡಿ..!  ಆಹಾ!! ಮಣ್ಣ ನಾದದಲಿ ಕಲೆತು ಹೋದ ಅವಳೆದೆಗಣ್ಣುಗಳ ಕುಣಿತ. ಅಭಿಜ್ಞಾನ ಪ್ರೀತಿ ಹುಟ್ಟಿಸುವ ಅವಳ ಸಿರಿಕಂಠದ ಲೋಕ ಸಂಗೀತಕೆ ಮಾರು ಹೋಗದವರಿಲ್ಲ. ಅಂದಿನ ಆ ಪಾರಿಜಾತದ ಅಮಲು – ಘಮಲಿನ ಗಂಧರ್ವ ಗುಂಗಿನಿಂದ ನಾನಿನ್ನೂ  ಪಾರಾಗಿ ಬಂದಿಲ್ಲ. ಅದೆಲ್ಲ ಮಹಾ ಸ್ವಪ್ನದಂತೆ ನನ್ನೆದೆಯಲ್ಲಿ ಸ್ಥಾಯಿಗೊಂಡಿದೆ. ಅದೊಂದು ಮರೆಯಲಾಗದ ಸ್ಥಾಯೀಸ್ಮರಣೆ. ***********************

ಕಥಾಯಾನ Read Post »

You cannot copy content of this page

Scroll to Top