ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಜುಗ್ಗ ರಾಮಣ್ಣ ಊರಲ್ಲಿ ಎಲ್ಲರೂ ರಾಮಣ್ಣನನ್ನು ಕರೆಯುತ್ತಿದ್ದುದು ಜುಗ್ಗ ರಾಮಣ್ಣ ಅಂತಲೆ. ಅವನ ಮನೆ ಇದ್ದ ಬೀದಿಯ ಉಳಿದ ಮನೆಗಳವರು ತಮ್ಮ ನೆಂಟರಿಗಾಗಲಿ, ಪರಿಚಯದವರಿಗಾಗಲಿ ಮನೆಯ ವಿಳಾಸ ಕೊಡಬೇಕಾದರೆ ಬಸ್ ಸ್ಟ್ಯಾಂಡಿನಿಂದ ದಾವಣಗೆರೆ ರಸ್ತೆಯ ಕಡೆ ನಾಲ್ಕು ಹೆಜ್ಜೆ ಬಂದು ಜುಗ್ಗ ರಾಮಣ್ಣನ ಬೀದಿ ಎಲ್ಲಿ ಬರುತ್ತೆ ಅಂತ ಯಾರನ್ನೇ ಕೇಳಿದರೂ ಸಾಕು ನಾವಿರುವ ಬೀದಿ ತೋರಿಸ್ತಾರೆ ಅಂತ. ಅಷ್ಟರಮಟ್ಟಿಗೆ ಆ ಊರಿನವರು ಆ ಹೆಸರಿಗೆ ಹೊಂದಿಕೊಂಡು ಬಿಟ್ಟಿದ್ದರು. ಇದು ರಾಮಣ್ಣನ ಮನೆಯವರಿಗಷ್ಟೆ ಅಲ್ಲದೆ ಸ್ವತ: ರಾಮಣ್ಣನಿಗು ಗೊತ್ತಿತ್ತು. ಅವನ ಮನೆಯವರಿಗೆ ಇದು ಸ್ವಲ್ಪ ಮುಜುಗರ ಎನಿಸಿದರೂ, ಸ್ವತ: ರಾಮಣ್ಣನಿಗೆ ಅದರಿಂದ ಯಾವ ಬೇಸರವಾಗಲಿ, ಮುಜುಗರವಾಗಲಿ ಇರಲಿಲ್ಲ. ತಾನು ಜುಗ್ಗ ಎನಿಸಿಕೊಳ್ಳುವ ನಿಟ್ಟಿನಲ್ಲಿನ ಆತನ ಪ್ರಯತ್ನ ಮುಂದುವರೆದಿತ್ತು. ಊರಲ್ಲಿ ತನ್ನ ಹೆಸರಿನ ಹಿಂದೆ ಸೇರಿಕೊಂಡ ಜುಗ್ಗ ಎನ್ನುವ ಶಬ್ದ ತನಗೆಸಿಕ್ಕ ಯಾವುದೊ ಪ್ರಶಸ್ತಿಯೇನೊ ಎಂಬಂತೆ ಒಳಗೊಳಗೆ ಖುಶಿ ಪಡುವಷ್ಟರ ಮಟ್ಟಿಗೆ ರಾಮಣ್ಣ ಅದಕ್ಕೆ ಒಗ್ಗಿ ಹೋಗಿದ್ದ. ಹಾಗೆ ನೋಡಿದರೆ ರಾಮಣ್ಣನೇನು ಹುಟ್ಟಾ ಶ್ರೀಮಂತನೇನಲ್ಲ. ಅವರ ಅಪ್ಪ ಆ ಕಾಲದಲ್ಲಿ ಒಂದು ಸೈಕಲ್ ಶಾಪ್ ಇಟ್ಟುಕೊಂಡು ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಚಿರಪರಿಚಿತರಾಗಿದ್ದರು. ಹೈಸ್ಕೂಲು ದಾಟದ ರಾಮಣ್ಣನೂ ಕ್ರಮೇಣ ಸೈಕಲ್ ಶಾಪಿನ ಕೆಲಸಕ್ಕೆ ನಿಂತು ಬಿಟ್ಟ. ಪಂಕ್ಚರ್ ಹಾಕುವುದರಿಂದ ಹಿಡಿದು ವೀಲ್ ಬೆಂಡ್ ತೆಗಿಯೋವರೆಗಿನ ಅಷ್ಟೂ ಕೆಲಸಗಳನ್ನು ಕಲಿತುಕೊಂಡು ಸೈಕಲ್ ರಿಪೇರಿಯ ವಿಚಾರದಲ್ಲಿ ಪಂಟರ್ ಅನಿಸಿಕೊಂಡಿದ್ದ. ರಾಮಣ್ಣನಿಗೆ ಇಪ್ಪತ್ಕಾಲು ವರ್ಷವಾಗಿದ್ದಾಗ ಅವರ ಅಪ್ಪ ತುಮಕೂರಿನ ವ್ಯಾಪಾರಸ್ಥರೊಬ್ಬರ ಮಗಳುಸಾವಿತ್ರಮ್ಮನ ಜೊತೆ ಮದುವೆ ಮಾಡಿಸಿದ್ದರು..ರಾಮಣ್ಣನನ್ನು ಮದುವೆಯಾಗಿ ಬರುವಾಗ ಸಾವಿತ್ರಮ್ಮನೇನು ಬರಿಗೈಲಿ ಬಂದಿರಲಿಲ್ಲ. ಆ ಕಾಲದಲ್ಲಿಯೇ ಇಪ್ಪತ್ತು ಸಾವಿರ ರೂಪಾಯಿ ನಗದು ಕಾಲು ಕೆಜಿ ಬಂಗಾರ ಅರ್ದ ಕೆಜಿ ಬೆಳ್ಳಿ ಒಡವೆಗಳ ಗಂಟಿನೊಂದಿಗೆಯೇ ಬಂದಿದ್ದಳು. ಒಂದರ ಹಿಂದೆ ಒಂದರಂತೆ ನಾಲ್ಕು ಮಕ್ಕಳ ತಾಯಿಯಾದ ಸಾವಿತ್ರಮ್ಮನಿಗೆ ಮಾವ ಇರುವತನಕ ಯಾವ ಕಷ್ಟವೂ ಎದುರಾಗಿರಲಿಲ್ಲ. ಮನೆ ಮತ್ತು ಅಂಗಡಿಗಳ ವ್ಯವಹಾರಗಳನ್ನು ತನ್ನ ಕೈಲೇ ಇಟ್ಟುಕೊಂಡಿದ್ದ ರಾಮಣ್ಣನ ಅಪ್ಪ ತೀರಾ ದಾರಾಳಿಯಲ್ಲದಿದ್ದರು ಮನೆಗೆ ತಂದು ಹಾಕುವಲ್ಲಿ ಉಣ್ಣುವುದು ತಿನ್ನುವುದರಲ್ಲಿ ಜುಗ್ಗತನ ತೋರಿಸಿದವನಲ್ಲ. ಹೀಗಾಗಿ ರಾಮಣ್ಣನ ಮಕ್ಕಳು ತಾತನ ಆರೈಕೆಯಲ್ಲಿಯೇ ಬೆಳೆಯತೊಡಗಿದ್ದರು. ರಾಮಣ್ಣನ ಮೊದಲ ಮೂರೂ ಮಕ್ಕಳು ಗಂಡು ಮಕ್ಕಳಾಗಿದ್ದು ನಾಲ್ಕನೆಯದು ಮಾತ್ರ ಹೆಣ್ಣಾಗಿತ್ತು. ನಾಲ್ಕನೆಯದಾಗಿ ಹೆಣ್ಣು ಹುಟ್ಟಿದ ಮೂರನೆ ತಿಂಗಳಿಗೆ ರಾಮಣ್ಣನ ಅಪ್ಪ ಪಾಶ್ರ್ವವಾಯುವಿಗೆ ತುತ್ತಾಗಿ ಶಿವನ ಪಾದ ಸೇರಿಬಿಟ್ಟಿದ್ದರು. ಅಲ್ಲಿಂದಾಚೆಗೆ ರಾಮಣ್ಣನ ಯಜಮಾನಿಕೆ ಶುರುವಾಯಿತು. ಕೈಗೆ ವ್ಯವಹಾರ ಸಿಕ್ಕೊಡನೆ ರಾಮಣ್ಣ ಕೈ ಬಿಗಿಮಾಡತೊಡಗಿದ. ಸೈಕಲ್ಲು ಶಾಪಿಗೆ ಬರುತ್ತಿದ್ದ ಗಿರಾಕಿಗಳ ಕಷ್ಟ ಸುಖ ತಿಳಿದುಕೊಂಡಿರುತ್ತಿದ್ದ ರಾಮಣ್ಣ ನಿದಾನವಾಗಿ ಮನೆಯಲ್ಲಿದ್ದ ದುಡ್ಡನ್ನು ಬಡ್ಡಿಗೆ ಬಿಡತೊಡಗಿದ. ಮೊದಲು ಸಣ್ಣದಾಗಿ ಶುರು ಮಾಡಿಕೊಂಡ ಈಬಡ್ಡಿ ವ್ಯವಹಾರ ರಾಮಣ್ಣನ ಕೈ ಹಿಡಿಯತೊಡಗಿತು. ಮೊದಮೊದಲು ನಂಬಿಕೆಗೆ ಸೀಮಿತವಾಗಿ ನಡೆಯುತ್ತಿದ್ದ ವ್ಯವಹಾರ ಕ್ರಮೇಣ ಪತ್ರಗಳನ್ನು ಬರೆಸಿಕೊಳ್ಳುವ ಹಂತಕ್ಕೆ ಬಂದಿತ್ತು. ದಿನಕಳೆದಂತೆ ರಾಮಣ್ಣ ನಿದಾನವಾಗಿ ದೊಡ್ಡ ವ್ಯವಹಾರಗಳಿಗೆ ಕೈ ಹಾಕತೊಡಗಿದ್ದ. ಮನೆಪತ್ರ, ಹೊಲಗದ್ದೆಗಳ ಪತ್ರವನ್ನು, ಬಂಗಾರದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಕೊಡತೊಡಗಿದ. ಈ ಲೇವಾದೇವಿವ್ಯವಹಾರ ದೊಡ್ಡದಾಗುತ್ತಿದ್ದಂತೆ ಸೈಕಲ್ಲುಗಳ ಜಾಗದಲ್ಲಿ ಆಗತಾನೆ ಮಾರ್ಕೆಟ್ಟಿಗೆ ಬಂದ ಮೋಟಾರ್ ಸೈಕಲ್ಲುಗಳ ಹಾವಳಿ ಕಂಡ ರಾಮಣ್ಣ ತನ್ನದೇ ಆದ ಮೋಟಾರ್ ಸೈಕಲ್ ಮಾರಾಟದ ಶೋರೂಮನ್ನು ಪ್ರಾರಂಬಿಸಿದ. ಅದರಲ್ಲಿ ಭರ್ಜರಿಯಾಗಿ ವ್ಯಾಪಾರ ನಡೆಯ ತೊಡಗಿತು. ಈ ನಡುವೆ ತನ್ನ ಲೇವಾದೇವಿ ವ್ಯವಹಾರಗಳಲ್ಲಿ ಪೋಲೀಸರ ಕಿರಿಕಿರಿ ತಡೆಯಲಾಗದೆ ನಾಮಕಾವಸ್ಥೆಗೆ ಒಂದು ಫೈನಾನ್ಸ್ ಕಂಪನಿ ರಿಜಿಸ್ಟರ್ ಮಾಡಿಸಿ ತನ್ನ ವ್ಯವಹಾರದ ಇಪ್ಪತ್ತೈದರಷ್ಟನ್ನು ಅದರ ಮೂಲಕ ಮಾಡ ತೊಡಗಿ, ಸರಕಾರದ ಕಣ್ಣಿಗೆ ಮಣ್ಣೆರಚಿ ವ್ಯವಹಾರ ನಡೆಸ ತೊಡಗಿದ. ಊರೊಳಗೆ ನಷ್ಟದಲ್ಲಿ ನಡೆಯುತ್ತಿದ್ದ ಒಂದು ರೈಸ್ ಮಿಲ್ಲನ್ನು ಖರೀಧಿಸಿ ಅದನ್ನು ಅಭಿವೃದ್ದಿ ಪಡಿಸಿ ಲಾಭ ಬರುವಂತೆ ಮಾಡಿಕೊಂಡ. ಕೊಟ್ಟ ಸಾಲ ಹಿಂದಿರುಗಿಸಲಾಗದವರ ಹತ್ತಾರು ಏಕರೆ ಗದ್ದೆ, ಅಡಿಕೆ ತೋಟಗಳನ್ನು ತನ್ನ ಹೆಸರಿಗೆ ಮಾಡಿಸಿಕೊಂಡು ಜಮೀನ್ದಾರನೆಂಬ ಹೆಸರು ಗಳಿಸಿಕೊಂಡ. ಇಷ್ಟೆಲ್ಲ ಆದರೂಹೀಗೆ ಯಥೇಚ್ಚವಾಗಿ ಸೇರುತ್ತಲೇ ಹೋದ ದುಡ್ಡು ಮನೆಯಲ್ಲಿ ಅವನ ಹೆಂಡತಿ ಮಕ್ಕಳಿಗೆ ಯಾವುದೆ ಸುಖಸಂತೋಷ ತರಲೇಇಲ್ಲ. ಮನೆಯಲ್ಲಿ ಒಂದು ಅಡುಗೆಮಾಡುವ ವಿಚಾರದಲ್ಲೂ ರಾಮಣ್ಣನ ಅನುಮತಿ ಬೇಕಾಗಿತ್ತು. ಆತ ತಂದು ಕೊಟ್ಟ ದಿನಸಿಯಲ್ಲಿಯೇ ಸಾವಿತ್ರಮ್ಮ ಸಂಸಾರ ನಿಬಾಯಿಸಬೇಕಿತ್ತು. ಮಕ್ಕಳು ಆಸೆಯಿಂದ ಏನಾದರು ತಿಂಡಿ ಕೇಳಿದರೂ ರಾಮಣ್ಣ ಸಂತೋಷವಾಗಿರುತ್ತಿದ್ದ ಸಮಯ ನೋಡಿ ಕೇಳಿ ಆತನ ಅಪ್ಪಣೆ ಪಡೆದೆ ಮಾಡಿಕೊಡಬೇಕಾಗಿತ್ತು. ಅವನ ಗಂಡುಮಕ್ಕಳಿಗು ಅಪ್ಪನ ಜುಗ್ಗತನ ಅರ್ಥವಾಗಿ ತಮ್ಮ ಆಸೆಗಳನ್ನು ಅದುಮಿಟ್ಟುಕೊಂಡೇ ಬೆಳೆಯ ತೊಡಗಿದ್ದರು. ವರ್ಷದಲ್ಲಿ ಗೌರಿ ಹಬ್ಬ ಮತ್ತು ದೀಪಾವಳಿಗೆ ಬಟ್ಟೆ ತೆಗೆಯುವಾಗಲೂ ಮೂವರು ಗಂಡು ಮಕ್ಕಳಿಗು ಒಂದೇ ತರದ ಅಗ್ಗದ ಬಟ್ಟೆ ತೆಗೆಯುತ್ತಿದ್ದ. ಅವನ್ನು ಹೊಲಿಸುವಾಗಲು ಅವರ ಅಳತೆಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ದೊಡ್ಡದಾಗಿಹೊಲಿಸುತ್ತಿದ್ದ.ಇನ್ನು ತನ್ನ ಮನೆಗೆ ಯಾರೇ ನೆಂಟರು ಬಂದರೂ ನೆಟ್ಟಗವರು ಒಂದು ರಾತ್ರಿಯೂ ಇರಬಾರದ ರೀತಿಯಲ್ಲಿ ಕಟುಕಿಯಾಡಿ ಕಳಿಸಿಬಿಡುತ್ತಿದ್ದ.ಅವನ ಇಂತಹ ಜಿಪುಣತೆಯನ್ನು ಕಂಡ ಸಾವಿತ್ರಮ್ಮನ ತವರಿನವರು ಸಹ ಈ ಕಡೆ ತಲೆಹಾಕಿ ಮಲಗುವುದನ್ನು ನಿಲ್ಲಿಸಿಬಿಟ್ಟಿದ್ದರು.ಗಂಡು ಮಕ್ಕಳಿಗೆ ಹದಿನಾರು ವರ್ಷ ದಾಟಿದರೂ ಯಾವತ್ತೂ ಅವರು ಒಂದೇ ಒಂದು ರೂಪಾಯಿ ತೆಗೆದುಕೊಂಡು ಅಂಗಡಿಗೆ ಹೋಗಿ ಸಾಮಾನು ತಂದವರಲ್ಲ.ಅವರುಗಳು ಹೈಸ್ಕೂಲು ಮುಗಿಸುವಷ್ಟರಲ್ಲಿ ಒಬ್ಬೊಬ್ಬರನ್ನೇ ತನ್ನ ವ್ಯವಹಾರಗಳನ್ನು ನಡೆಸಲು ಬಳಸಿಕೊಳ್ಳತೊಡಗಿದ.ದೊಡ್ಡ ಮಗ ಶೋರೂಮಿನಲ್ಲಿ ಕೂತರೂ ದಿನಸಂಜೆ ಅಪ್ಪನಿಗೆ ಪೈಸೆಪೈಸೆಗೆ ಲೆಕ್ಕ ಒಪ್ಪಿಸಬೇಕಿತ್ತು.ಬಂದ ಗಿರಾಕಿಗಳಿಗೆ ಒಂದು ಲೋಟ ಕಾಫಿ ತರಿಸಿ ಕುಡಿಸಲು ಸ್ವಾತಂತ್ರವಿಲ್ಲದೆಯೆ ಅವನು ಶೋರೂಮಲ್ಲಿ ಕೂರಬೇಕಿತ್ತು ಎರಡನೆಯವನು ಫೈನಾನ್ಸ್ ಆಪೀಸಲ್ಲಿ ಕೂತು ಲೆಕ್ಕಾಚಾರ ನೋಡಿಕೊಳ್ಳಬೇಕಿತ್ತು. ಜೊತೆಗೆ ಸಾಲ ವಸೂಲಿ ಮಾಡಿ ಅಪ್ಪನಿಗೆ ತಂದು ಕೊಡುವುದಷ್ಟನ್ನೆ ಮಾಡಬೇಕಾಗಿತ್ತು. ಇನ್ನು ವಸೂಲಿಗೆ ಹೋಗಲು ಹಳೆಯಕಾಲದ ಸೈಕಲ್ಲನ್ನೇ ತುಳಿಯಬೇಕಿತ್ತೇ ಹೊರತು ಮೋಟಾರ್ ಬೈಕು ಇರಲಿಲ್ಲ. ತಮ್ಮದೇಆದ ಮೋಟಾರ್ ಬೈಕಿನ ಶೋರೂಮಿದ್ದರೂ ಮಕ್ಕಳು ಮಾತ್ರ ಸೈಕಲ್ಲು ತುಳಿದೆ ಕೆಲಸ ಮಾಡಬೇಕಾಗಿತ್ತು. ಯಾರಾದರೂಅವನ ಸರೀಕರು ರಾಮಣ್ಣನನ್ನು ಕೇಳಿದರೆ ಸಯಕಲ್ಲು ಅನ್ನೋದು ನಮಗೆ ಮನೆದೇವರಿದ್ದ ಹಾಗೆ. ಅದರ ಪುಣ್ಯದಿಂದಲೇ ನಾವಿವತ್ತು ಈ ಮಟ್ಟಿಗೆ ಬಂದಿರುವುದೆಂದು ತಿಪ್ಪೆ ಸಾರಿಸುತ್ತಿದ್ದ. ಮೂರನೆಯವನು ರೈಸುಮಿಲ್ಲಿಗೆ ಹೋಗುತ್ತಾ ಗದ್ದೆತೋಟಗಳ ನಿಗಾ ವಹಿಸಿ ಕೆಲಸ ಮಾಡಬೇಕಾಗಿತ್ತೇ ಹೊರತು ಐದೇ ಐದು ಪೈಸೆಯ ಮುಖ ಕೂಡಾ ನೋಡಿರಲಿಲ್ಲ. ಇನ್ನು ರಾಮಣ್ಣ ಸ್ವತ: ತಾನಾದರು ಸುಖ ಅನುಭವಿಸಿದನೆ ಅಂದರೆ ಅದೂ ಇಲ್ಲ. ಒಂದು ದಿನವೂ ಒಳ್ಳೆಯ ಊಟಮಾಡದೆ ಒಂದೊಳ್ಳೆಯ ಬಟ್ಟೆ ಹಾಕದೆ ಜಿಪುಣತನದಲ್ಲಿಯೇ ಬದುಕುತ್ತಿದ್ದ. ಇನ್ನು ಊರಲ್ಲಿನ ಯಾವುದೇ ಸಮಾರಂಭಗಳಿಗೂ ನಯಾಪೈಸೆ ಕೊಡುತ್ತಿರಲಿಲ್ಲ. ಹಾಗಾಗಿ ಆತನ ಮನೆಯ ಬಾಗಿಲಿಗೆ ಸಾಲ ಕೇಳುವವರ ಹೊರತಾಗಿ ಬೇರೆಯವರೂ ಬರುತ್ತಿರಲಿಲ್ಲ. ಹಬ್ಬ ಹರಿದಿನಗಳನ್ನು ಆಚರಿಸಿದರೆ ಖರ್ಚಾಗುತ್ತದೆ ಅಂತ ಸಾವಿತ್ರಮ್ಮನ ತವರು ಮನೆಗೆ ಹೆಂಡತಿ ಮಕ್ಕಳನ್ನು ಕಳಿಸಿ ತಾನೊಬ್ಬನೆ ಮನೆಯಲ್ಲಿ ಇದ್ದು ಬಿಡುತ್ತಿದ್ದ. ಅವರು ಹೋಗಲು ಮಾತ್ರ ರೈಲಿನ ಟಿಕೇಟಿಗೆ ದುಡ್ಡು ಕೊಡುತ್ತಿದ್ದರಿಂದ ವಾಪಾಸು ಬರುವಾಗ ಅವಳ ತವರು ಮನೆಯವರೆ ಅವರನ್ನು ಕರೆದುಕೊಂಡು ಬಂದು ಬಿಟ್ಟುಹೋಗಬೇಕಾಗಿತ್ತು.. ರಾಮಣ್ಣ ಜುಗ್ಗರಾಮಣ್ಣನಾಗಿ ಹೀಗೆ ಹೆಸರುಮಾಡಿರುವಾಗಲೆ ನಡೆದ ಘಟನೆಯೊಂದು ರಾಮಣ್ಣನ ಜಂಘಾಬಲವನ್ನೇ ಉಡುಗಿಸಿಬಿಟ್ಟಿತ್ತು. ರಾಮಣ್ಣನ ಮೂವರು ಗಂಡುಮಕ್ಕಳ ನಂತರ ಹಿಟ್ಟಿದ ಮಗಳು ಸುಮ ಪಿಯುಸಿ ಓದುತ್ತಿದ್ದಳು. ಒಂದು ದಿನ ಕಾಲೇಜಿಗೆ ಹೋದವಳು ಮನೆಗೆವಾಪಾಸು ಬರದೆಕಣ್ಮರೆಯಾಗಿ ಬಿಟ್ಟಿದ್ದಳು. ಹಾಗೆ ನೋಡಿದರೆ ರಾಮಣ್ಣನಿಗೆ ಮಗಳನ್ನು ಕಂಡರೆ ಬಹಳ ಪ್ರೀತಿ ಇತ್ತು. ಎಷ್ಟೇ ಜುಗ್ಗನಾದರೂ ಮನೆಯಲ್ಲಿ ಬೇರ್ಯಾರಿಗು ಕಾಣದಂತೆ ಆಕೆಗೆ ಗುಟ್ಟಾಗಿ ತುಂಬಾ ದುಡ್ಡು ಕೊಡುತ್ತಿದ್ದ. ಅವಳಿಗೆ ಏನು ಬೇಕಾದರು ತೆಗೆದುಕೊಳ್ಳಲು ನಡೆದುಕೊಳ್ಳಲು ಸ್ವಾತಂತ್ರ ಕೊಟ್ಟಿದ್ದ. ಆದರೆ ಅವಳ ಮೇಲೆ ತನಗಿರುವ ಪ್ರೀತಿಯನ್ನು ಅವನ್ಯಾವತ್ತು ಬಹಿರಂಗವಾಗಿ ತೋರಿಸಿಕೊಂಡವನಲ್ಲ. ಅಂತಹ ಮಗಳು ವಾರವಾದರು ಮನೆಗೆ ಬಾರದೆ ನಾಪತ್ತೆಯಾದಾಗ ರಾಮಣ್ಣ ಕುಸಿದು ಕುಳಿತು ಬಿಟ್ಟಿದ್ದ. ವಾರ ಕಳೆದರು ಅವನು ಮನೆಯಿಂದಾಚೆ ಬರಲೆ ಇಲ್ಲ. ಕೊನೆಗೆ ಗಂಡು ಮಕ್ಕಳೆ ಸ್ಟೇಷನ್ನಿಗೆ ಹೋಗಿಕಂಪ್ಲೇಟ್ ಕೊಟ್ಟು ಬಂದಿದ್ದರು. ಹತ್ತನೆ ದಿನದ ಹೊತ್ತಿಗೆ ಅವಳು ಅದೇ ಊರಿನ ಹುಡುಗನನ್ನು ಮದುವೆಯಾಗಿ ಬೆಂಗಳೂರಲ್ಲಿ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿರುವುದು ಗೊತ್ತಾಯಿತು. ಈ ವಿಷಯ ಕೇಳಿದ ಸಾವಿತ್ರಮ್ಮ ಹೆಂಚು ಹಾರಿಹೋಗುವಂತೆ ಕಿರುಚಾಡಿ ಅಳುವಾಗ ‘ಮುಚ್ಚೇ ಬಾಯಿ! ಅವಳಿಗಿಷ್ಟ ಬಂದವನನ್ನು ಮದುವೆ ಮಾಡಿಕೊಂಡು ಹೋಗಿದ್ದಾಳೆ. ಎಲ್ಲೋ ಸುಖವಾಗಿರಲಿ’ ಅಂತೇಳಿ ಎಲ್ಲರಲ್ಲು ಅಚ್ಚರಿ ಹುಟ್ಟಿಸಿದ್ದ. ಬೆಂಗಳೂರಿಗೆ ಹೋಗಿ ಅವಳನ್ನು ನೋಡಿಕೊಂಡು ಬರೋಣ ಅಂತ ಹೆಂಡತಿ ಮಕ್ಕಳು ಹೇಳಿದರೂ ರಾಮಣ್ಣ ಸುತಾರಂ ಒಪ್ಪದೇ ಹೋದ.ಅಷ್ಟರಲ್ಲಿ ಊರಲ್ಲಿ ಇನ್ನೊಂದಿಷ್ಟು ವಿವರಗಳು ಬಯಲಾಗ ತೊಡಗಿದ್ದವು ಸುಮಾ ಪ್ರೀತಿಸಿ ಮದುವೆಯಾದ ಹುಡುಗ ಬೇರೆ ಯಾರೂ ಆಗಿರದೆ ನಾಲ್ಕು ವರ್ಷಗಳ ಹಿಂದೆ ರಾಮಣ್ಣನ ಸಾಲ ತೀರಿಸಲಾಗದೆ ಮನೆ ಹರಾಜಿಗೆ ಬಂದಾಗ ಅವಮಾನ ಸಹಿಸಲಾಗದೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದ ಚಂದ್ರಪ್ಪನ ಮಗ ಎನ್ನುವ ವಿಷಯವೇಊರಲ್ಲಿ ಕುತೂಹಲದ ಕತೆಯಾಗಿ ಹರಡಿತ್ತು. ರಾಮಣ್ಣನ ಮೇಲಿನ ಸೇಡಿನಿಂದಲೇ ಆ ಹುಡುಗ ಸುಮಾಳನ್ನು ತಲೆ ಕೆಡಿಸಿ ಕರೆದುಕೊಂಡು ಹೋಗಿ ಮದುವೆಯಾಗಿದ್ದಾನೆಂದು, ಸ್ವಲ್ಪ ದಿನವಾದ ಮೇಲೆ ಅವಳನ್ನು ಕೈಬಿಟ್ಟು ತವರು ಮನೆಗೆ ಓಡಿಸುತ್ತಾನೆಂದು ಜನ ಮಾತಾಡಿಕೊಳ್ಳತೊಡಗಿದ್ದರು. ಈ ವಿಷಯ ರಾಮಣ್ಣನ ಕಿವಿಗೂ ಬಿದ್ದಿತ್ತು. ಇದನ್ನು ಕೇಳಿದ ಸಾವಿತ್ರಮ್ಮನಂತು ಅಯ್ಯೋ ಈ ಗಂಡಸಿನ ಜುಗ್ಗತನದಿಂದ ನನ್ನ ಮಗಳ ಜೀವನ ಹಾಳಾಯಿತಲ್ಲ ಎಂದು ಎದೆ ಬಡಿದುಕೊಂಡು ಮನೆತುಂಬಾ ಉರುಳಾಡಿ ಅತ್ತಳು. ಗಂಡು ಮಕ್ಕಳು ಅಪ್ಪನನ್ನು ಮಾತಾಡಿಸುವ ಧೈರ್ಯ ಸಾಲದೆ ಕೂತುಬಿಟ್ಟಿದ್ದರು. ಅಂತೂ ಗಂಡ ಏನಾದರು ಅಂದುಕೊಂಡು ಸಾಯಲಿ ಎಂದುಕೊಂಡ ಸಾವಿತ್ರಮ್ಮ ಅವತ್ತು ಸಾಯಂಕಾಲ ಮೂವರು ಗಂಡುಮಕ್ಕಳನ್ನು ಕರೆದು ರೂಮಿನಲ್ಲಿ ಕೂತಿದ್ದ ಗಂಡನಿಗೆ ಕೇಳುವಂತೆ ನಾಳೆ ಬೆಳಗ್ಗಿನ ರೈಲಿಗೆ ಬೆಂಗಳೂರಿಗೆ ಹೋಗಿ ಮಗಳು ಅಳಿಯನನ್ನು ನೋಡಿಕೊಂಡು ಬರೋಣ ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ ಎಂದು ಹೇಳಿದಾಗ ನಡುಮನೆಯಲ್ಲಿ ಸಾಲಾಗಿ ಕೂತಿದ್ದ ಗಂಡು ಮಕ್ಕಳು ಮೌನವಾಗಿ ತಲೆಯಾಡಿಸಿದ್ದರು. ಈ ಮಾತುಗಳನ್ನು ಕೇಳಿಸಿಕೊಂಡರಾಮಣ್ಣ ಏನೂ ಮಾತಾಡಿರಲಿಲ್ಲ. ರಾತ್ರಿ ಮಾಮೂಲಿಯಂತೆಎಂಟುಗಂಟೆಗೆ ಊಟಕ್ಕೆ ಕರೆದಾಗ ಹೊರಗೆದ್ದು ಬಂದ ರಾಮಣ್ಣ ಹೆಂಡತಿ, ಮೂರೂಮಕ್ಕಳನ್ನು ಮುಂದೆ ಕೂರಿಸಿಕೊಂಡು ತನ್ನ ಕೈಲಿದ್ದ ಸಣ್ನ ಪೆಟ್ಟಿಗೆಯನ್ನು ಸಾವಿತ್ರಮ್ಮನ ಕೈಲಿ ಕೊಟ್ಟು ಇದರಲ್ಲಿ ಮನೆ, ಶೋರೂಂ, ಪೈನಾನ್ಸ್ , ಸೈಟು-ಮನೆಗಳ ಪತ್ರಗಳು,ಬ್ಯಾಂಕುಗಳ ಪಾಸ್ ಬುಕ್ಕುಗಳು ಸೇರಿದಂತೆ ಎಲ್ಲ ಪತ್ರಗಳೂ ಇವೆ. ನೀವು ಬೆಂಗಳೂರಿಗೆ ಹೋಗುವ ಮುಂಚೆ ಈ ಆಸ್ತಿಯನ್ನು ನಾಲ್ಕು ಭಾಗವನ್ನಾಗಿ ಮಾಡಿ ನಾಲ್ಕೂ ಮಕ್ಕಳ ಹೆಸರಿಗೆ ಮಾಡಿಸಿಬಿಡು. ನಮ್ಮ ಲಾಯರ್ ವೆಂಕಟೇಶಯ್ಯ ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಮನೆಗೆ ಬರ್ತಾರೆ. ನೀವೆಲ್ಲ ಕೂತು ಮಾತಾಡಿ ಯಾರ್ಯಾರಿಗೆ ಏನೇನು ಅಂತ ನಿದರ್ಾರ ಮಾಡಿಕೊಳ್ಳಿ ಎಂದು ಯಾರೀಗೂ ಪ್ರಶ್ನೆ ಕೇಳುವ ಅವಕಾಶ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ. ಬೆಳಿಗ್ಗೆ ಒಂಭತ್ತು ಗಂಟೆಯಾದರು ಯಾಕೆ ಎದ್ದಿಲ್ಲವೆಂದು ಸಾವಿತ್ರಮ್ಮ ಗಂಡನ ರೂಮಿಗೆ ಹೋದರೆ ಅವನಲ್ಲಿರಲಿಲ್ಲ. ಎಂದಿನಂತೆ ಬೆಳಿಗ್ಗೆ ಎದ್ದು ಯಾವುದಾದರು ವಸೂಲಿಗೆ ಹೋಗಿರಬೇಕೆಂದು ಕೊಳ್ಳುವಷ್ಟರಲ್ಲಿ ಲಾಯರ್ ವೆಂಕಟೇಶಯ್ಯ ಬಂದರು. ರಾಮಣ್ಣನ ಅನುಪಸ್ಥಿತಿಯಲ್ಲಿಯೇ ಅವರುಗಳು ಆಸ್ತಿಯ ಪತ್ರಗಳನ್ನಿಟ್ಟುಕೊಂಡು ಮಾತಾಡತೊಡಗಿದರು. ಅವರೆಲ್ಲ ಒಂದು ತೀಮರ್ಾನಕ್ಕೆ ಬರುವಷ್ಟರಲ್ಲಿ ಮದ್ಯಾಹ್ನ ಎರಡು ಗಂಟೆಯಾಗಿತ್ತು. ಅಷ್ಟು ಹೊತ್ತಾದರು ರಾಮಣ್ಣ ಬರದೆ ಹೋದಾಗ ಎಲ್ಲರಿಗು ಆತಂಕ ಅನುಮಾನ ಶುರುವಾಗಿತ್ತು. ಮತ್ತೊಂದು ಸಲ ಅವನ ರೂಮಿಗೆ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮಧುವಂತಿ ಅಂಜನಾ ಹೆಗಡೆ “ನೀನ್ಯಾಕೆ ಮದ್ವೆ ಆದೆ?” ರಜನಿ ಅವಿನಾಶನನ್ನು ಭೇಟಿಯಾದಾಗ ಕೇಳಿದ ಮೊದಲನೇ ಪ್ರಶ್ನೆ ಇದು. ಬೆಂಗಳೂರಿನ ಲಾ ಕಾಲೇಜೊಂದರ ಉಪನ್ಯಾಸಕ ಅವಿನಾಶ ಅವನ ಅಸಂಬದ್ಧ ಮಾತುಕತೆಗಳಿಂದ, ನಡೆವಳಿಕೆಯಿಂದ ರಜನಿಗೆ ಉಪನ್ಯಾಸಕ ಅಂತ ಅನ್ನಿಸುತ್ತಲೇ ಇರಲಿಲ್ಲ. ವಾರದ ಐದೂ ದಿನ ಬೆಳಗಿನ ಕ್ಲಾಸು ಮುಗಿಸಿ, ಊಟ ಮಾಡಿ ಮಲಗಿ ಎದ್ದವ ರಜನಿಗೊಂದು ಫೋನ್ ಮಾಡುವುದು ಅವಿನಾಶನ ದಿನಚರಿಗಳಲ್ಲೊಂದು. ಇವತ್ತು ಕ್ಲಾಸಲ್ಲಿ ಹಾಗಾಯ್ತು ಹೀಗಾಯ್ತು , ಹುಡುಗಿಯೊಬ್ಬಳು ಪಾಠ ಮಾಡುವಾಗ ನನ್ನನ್ನೇ ನೋಡ್ತಾ ಇದ್ಲು ಅಂತೆಲ್ಲ ಅವಿನಾಶ ಹೇಳುತ್ತಿದ್ದರೆ, “ಕ್ಲಾಸಿನಲ್ಲಿ ಪಾಠ ಮಾಡುವವನನ್ನ ನೋಡುವುದು ಕ್ಲಾಸ್ ರೂಮಿನ ನಿಯಮ ಮಾರಾಯ; ಅದಕ್ಕೆ ಲ್ಯಾಂಡ್ ಮಾರ್ಕ್ ಕೇಸುಗಳು ಬೇಕಿಲ್ಲ” ಎಂದು ಅವನ ಗರಿಗೆದರಿದ ಕನಸಿಗೆ ಪೂರ್ಣವಿರಾಮ ನೀಡುವುದು ರಜನಿಯ ದಿನಚರಿಯ ಭಾಗವಾಗಿತ್ತು ಕೂಡಾ. ಫ್ಯಾಮಿಲಿ ಲಾ ಅರೆದು ಕುಡಿದವನ ಹಾಗೆ ಮಾತನಾಡುತ್ತಿದ್ದ ಅವಿನಾಶನಿಗೆ ಕುಟುಂಬ ವ್ಯವಸ್ಥೆಯ ಕುರಿತಾಗಲೀ ಅಥವಾ ತಾನು ಪೂಜಿಸುವ ದೇವರ ಮೇಲೇ ಆಗಲಿ ಜಾಸ್ತಿ ಅಭಿಮಾನ-ಗೌರವಗಳು ಇರುವಂತೆ ರಜನಿಗೆ ಯಾವತ್ತೂ ಅನ್ನಿಸದೇ ಇರಲಿಕ್ಕೆ ಕಾರಣ ಅವನ ಮಾತನಾಡುವ ದಾಟಿಯೂ ಇರಬಹುದು. ಅವಳ ಮಾತಿನಲ್ಲಿ ಸ್ವಲ್ಪ ಕುತೂಹಲ ಕಾಣಿಸಿದರೂ “ನೀನೇನಕ್ಕೆ ಎಲ್ಲವನ್ನೂ ಕೆದಕ್ತೀಯಾ, ಹೇಳಿದಷ್ಟು ಅರ್ಥ ಮಾಡಿಕೊಂಡರೆ ಬೇಕಾದಷ್ಟಾಯ್ತು” ಎಂದು ಪ್ರತಿಕ್ರಿಯಿಸುತ್ತಿದ್ದ ಅವಿನಾಶನ ಆಕ್ರಮಣಕಾರಿ ಮನಸ್ಥಿತಿ ರಜನಿಗೆ ಅರ್ಥವೇ ಆಗದೇ ಒಂದು ವರ್ಷ ಕಳೆದಿತ್ತು ಅವರ ಸ್ನೇಹಕ್ಕೆ. ಅವಿನಾಶ ಫೇಸ್ ಬುಕ್ ನಲ್ಲಿ ಮದುವೆಯ ಕುರಿತು ಬರೆದ ಲೇಖನವೊಂದು ಯಾವುದೋ ಗ್ರೂಪ್ ನಲ್ಲಿ ಹರಿದಾಡಿದಾಗ “ನಾವ್ಯಾಕೆ ಕಡುಸಂಪ್ರದಾಯದ ಮನಸ್ಥಿತಿಯಿಂದ ಹೊರಗೆ ಬಂದು ಸಮಕಾಲೀನ ದೃಷ್ಟಿಕೋನದಲ್ಲಿ ಮದುವೆ-ಕುಟುಂಬಗಳ ಬಗ್ಗೆ ಚರ್ಚಿಸಬಾರದು?” ಎಂದು ರಜನಿ ಪ್ರತಿಕ್ರಿಯಿಸಿದ್ದು ಅವಿನಾಶನಿಗೆ ಆಕ್ಷೇಪಾರ್ಹ ಎನ್ನಿಸಿದ್ದು ಇನ್ಯಾರದೋ ಮುಖಾಂತರ ಗೊತ್ತಾಗಿತ್ತು ರಜನಿಗೆ. ಆಗಲೇ ರಜನಿ ಅವಿನಾಶನ ಫೇಸ್ ಬುಕ್ ಪ್ರೊಫೈಲ್ ತೆಗೆದು ನೋಡಿದ್ದು. ಅವನ ಓದಿಗೂ, ಮಾಡುವ ಕೆಲಸಕ್ಕೂ, ಆಸಕ್ತಿ-ಅಭಿರುಚಿಗಳಿಗೂ, ಜೀವನದ ಸ್ಥಿತಿಗತಿಗಳಿಗೂ ಹೊಂದಾಣಿಕೆಯೇ ಆಗದಂತೆ ಚಲ್ಲಾಪಿಲ್ಲಿಯಾಗಿ ಪ್ರೊಫೈಲ್ ತುಂಬಾ ಬಿದ್ದಿದ್ದ ಫೋಟೋಗಳು, ಅಪ್ ಡೇಟ್ ಗಳು ಅವನನ್ನೊಬ್ಬ ವಿಲಕ್ಷಣ ಜೀವಿಯಂತೆ ಚಿತ್ರಿಸುವಲ್ಲಿ ಸಫಲವಾಗಿದ್ದವು. ಅನಾಸಕ್ತಿಯಿಂದ ಕಣ್ಣಾಡಿಸುತ್ತಿದ್ದವಳಿಗೆ ಗಮನ ಸೆಳೆದದ್ದು ಇವೆಲ್ಲವುಗಳ ಮಧ್ಯೆ ಶೇರ್ ಆಗಿದ್ದ ಒಂದು ಭೈರವಿ ಭಜನೆ. ಹತ್ತು ನಿಮಿಷದ ವಿಡಿಯೋ ನೋಡಿದವಳು, ಮೆಸೆಂಜರ್ ನಲ್ಲಿ ಅವಿನಾಶ್ ರಾವ್ ಎಂದು ಹುಡುಕಿ “ನಿಮ್ಮ ಭೈರವಿಯ ವಿಡಿಯೋ ತುಂಬಾ ಇಷ್ಟವಾಯ್ತು; ನಾನು ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದು ನಿಮಗೆ ಇಷ್ಟವಾದಂತಿಲ್ಲ ಕ್ಷಮಿಸಿ” ಎಂದು ಮೆಸೇಜ್ ಕಳಿಸಿ, ಜೊತೆಗೆ ರಿಕ್ವೆಸ್ಟ್ ಕಳಿಸಿ ಹಾಸಿಗೆಯ ಮೇಲೆ ಅಡ್ಡಾದವಳಿಗೆ ಎಚ್ಚರವಾಗಿದ್ದು ಅಮ್ಮನ ಫೋನ್ ಬಂದಾಗ. “ಇವತ್ತು ಮಾರುತಿ ದೇವಸ್ಥಾನದಲ್ಲಿ ನಿನ್ನ ಹೆಸರಿನ ಪೂಜೆ ಇತ್ತು; ಮೂವತ್ತು ವರ್ಷವಾಯಿತು ಕಣಮ್ಮ ನೀನು ಹುಟ್ಟಿ, ಇನ್ನಾದರೂ ಮದುವೆ ಬಗ್ಗೆ ಯೋಚನೆ ಮಾಡಬಾರದಾ?” ಎಂದಳು ಅಮ್ಮ. ಅಮ್ಮ ಕಳೆದ ವರ್ಷ ವೈಶಾಖ ಪಾಡ್ಯಕ್ಕೂ ‘ನಿನಗೆ ಇಪ್ಪತ್ತೊಂಬತ್ತು ತುಂಬಿತು ಇನ್ನಾದರೂ ಮದುವೆ ಆಗು’ ಅಂದಿದ್ದು ನೆನಪಿದೆ ರಜನಿಗೆ. ಓದು ಮುಗಿದ ದಿನದಿಂದ “ಇನ್ನು ರಜನಿಗೆ ಒಂದು ಒಳ್ಳೇ ಗಂಡು ಹುಡುಕಿ ಮದುವೆ ಮಾಡಿದರೆ ಜವಾಬ್ದಾರಿ ಕಳೀತು” ಅಂತ ಹೇಳುತ್ತಲೇ ಬಂದಿರುವ ಅಮ್ಮನಿಗೆ, “ನಾನೆಂದರೆ ಯಾಕೆ ಜವಾಬ್ದಾರಿ ನಿನಗೆ, ಪ್ರೀತಿ ಎಲ್ಲಿಗೆ ಹೋಯಿತು?” ಎಂದು ಕೇಳಿಬಿಡುವ ಮನಸ್ಸು ರಜನಿಗೆ. ಚಿಕ್ಕವಳಿದ್ದಾಗಲೇ ಅಪ್ಪನ ಕಣ್ಣು ತಪ್ಪಿಸಿ ರೊಮ್ಯಾಂಟಿಕ್ ಕಾದಂಬರಿಗಳನ್ನು ಓದುತ್ತಿದ್ದ ಅವಳಿಗೆ ಮದುವೆ, ಮಕ್ಕಳು, ಸಂಸಾರ ಎಲ್ಲ ಸಲೀಸು ಎಂಬ ಭ್ರಮೆ ತೀರಿದ್ದು ಕೆಲಸಕ್ಕೆ ಸೇರಿದಾಗಲೇ. ಹೊಸ ದಿನಕ್ಕೊಂದು ಹೊಸ ಸುಂದರ ಅನುಭೂತಿ ದೊರಕಿಸುತ್ತಿದ್ದ ಬದುಕು ಅಕ್ಕಪಕ್ಕದ ಬದುಕುಗಳ ಅನುಭವಗಳಿಗೆ ದಕ್ಕುತ್ತ ಜಡವಾಗುತ್ತ ಹೋಗಿದ್ದಕ್ಕೆ ಅವಳಿಗೆ ಬೇಸರವಿದೆ. ಎಂಟು ವರ್ಷಗಳಿಂದ ಅಮ್ಮನ ಅದೇ ಜವಾಬ್ದಾರಿಯ ಮಾತು ಕೇಳುತ್ತಾ ಬಂದಿರುವ ರಜನಿಗೆ ಈಗೀಗ ಸಂಬಂಧಗಳೆಲ್ಲವೂ ಬಣ್ಣ ಬದಲಾಯಿಸಿ, ಜವಾಬ್ದಾರಿಯಾಗಿ ರೂಪವನ್ನೂ ಬದಲಾಯಿಸಿ ಬರಿದಾಗುತ್ತವೆ ಎನ್ನುವ ಯೋಚನೆ ಭಯ ಹುಟ್ಟಿಸುತ್ತದೆ. ನನಗೆ ಮದುವೆ ಆಗುವ ಯಾವುದೇ ಉದ್ದೇಶವಿಲ್ಲ ಎಂದು ಅಮ್ಮನಿಗೆ ಹೇಳಿಬಿಡಬೇಕು ಅಂತ ಯೋಚಿಸುತ್ತಾ ಕುಳಿತಿದ್ದ ಒಂದು ಸಂಜೆ ಅವಿನಾಶನ ಮೆಸೇಜು, “ಬಿಡುವಿದ್ದಾಗ ಫೋನ್ ಮಾಡಿ, ಮಾತನಾಡೋಣ” ಎಂದು ನಂಬರ್ ಕೊಟ್ಟಿದ್ದ. ಹಾಗೆ ಶುರುವಾದ ಅವರಿಬ್ಬರ ಸ್ನೇಹ ವಿಚಿತ್ರವಾಗಿಯೇ ಓಡುತ್ತಿತ್ತು. ಪ್ರೀತಿಯ ಮಾತುಗಳಿಗೆಲ್ಲ ವ್ಯಂಗ್ಯವಾಗಿಯೋ, ಕುಹಕದಿಂದಲೋ ಪ್ರತಿಕ್ರಿಯಿಸುತ್ತಿದ್ದ ಅವಿನಾಶ ಯಾವುದೋ ನಿರಾಶೆ-ತಲ್ಲಣಗಳ ಸ್ಥಿತ್ಯಂತರಕ್ಕಾಗಿ ಹೋರಾಡುತ್ತಿರುವಂತೆ ಭಾಸವಾಗುತ್ತಿದ್ದ. “ಸಾಕು ಎನ್ನಿಸುವಷ್ಟು ಸಿಗದೇ ಇರುವುದರ ಮೇಲೆ ಮನುಷ್ಯನಿಗೆ ಸಾಯುವವರೆಗೂ ಆಸೆ ಇರುತ್ತೆ ಕಣೇ” ಎನ್ನುತ್ತಾ ಎಳೆಪ್ರಾಯದ ಹುಡುಗಿಯರ ಎದೆಯ ಬಗ್ಗೆ ಮಾತಾಡುತ್ತಿದ್ದ. ವಿದ್ಯಾರ್ಥಿನಿಯೊಬ್ಬಳು ಯಾವುದೋ ಕೇಸ್ ಬಗ್ಗೆ ಮಾಹಿತಿ ಬೇಕೆಂದು ತನ್ನ ಡೆಸ್ಕಿಗೆ ಬಂದಾಗ ತಾನವಳ ಎದೆ ನೋಡಿದ್ದು, ಅವಳಿಗೆ ಅದು ಗೊತ್ತಾಗಿ “ಏನ್ಸಾರ್, ಯಾವ ಬಣ್ಣದ ಬ್ರಾ ಹಾಕಿದೀನಿ ಅಂತ ನೋಡ್ತಾ ಇದೀರಾ ಅಂತ ಕಣ್ಣು ಮಿಟಕಿಸಿದಳು; ಈಗಿನ ಕಾಲದ ಹುಡುಗೀರು ತುಂಬಾ ಫಾಸ್ಟ್” ಅಂತೆಲ್ಲ ಕಿರಿಕಿರಿಯಾಗುವಂತೆ ಮಾತನಾಡುವಾಗ ಇವನಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎನ್ನಿಸುತ್ತಿತ್ತು ರಜನಿಗೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಐವತ್ತು ವರುಷದ ಗಂಡಸೊಬ್ಬ ಹುಡುಗಿಯರ ಎದೆ, ಬ್ರಾ ಬಗ್ಗೆ ಮಾತನಾಡುವಾಗ ಮದುವೆಯ ಬಗ್ಗೆ ಇರುವ ಆಸಕ್ತಿ ಗೌರವಗಳೆಲ್ಲ ಇನ್ನಷ್ಟು ಕಡಿಮೆಯಾಗುತ್ತಿದ್ದವು. ಒಂದಿನ ಕ್ಲಾಸ್ ಮುಗಿಸಿದವನೇ ಫೋನ್ ಮಾಡಿ, “ಈ ವೀಕೆಂಡ್ ಚೌಡಯ್ಯದಲ್ಲೊಂದು ಒಳ್ಳೆ ಸಂಗೀತ ಕಾರ್ಯಕ್ರಮ ಇದೆ, ಎರಡು ಪಾಸ್ ಇದೆ; ಎಂಟಿಆರ್ ನಲ್ಲಿ ನಿಂಜೊತೆ ಊಟ ಮಾಡಬೇಕು ನಾನು; ಹೇಳೋದು ಮರೆತಿದ್ದೆ, ಆವತ್ತೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ಯಲ್ಲ ಹಳದಿಸೀರೇದು, ಆ ಸೀರೆ ಉಟ್ಕೊಂಡು ಬಾ ಚೆನ್ನಾಗಿ ಒಪ್ಪುತ್ತೆ ನಿಂಗೆ; ಆ ಬಳೆ ಕೂಡಾ ಚೆನ್ನಾಗಿದೆ ಕಣೇ, ನೀ ಬಳೆ ಹಾಕಿದ್ದನ್ನು ನೋಡಿಯೇ ಇರಲಿಲ್ಲ ನಾನು” ಎಂದ. ಪರಿಚಯವಾಗಿ ಒಂದು ವರ್ಷವಾಗಿದ್ದರೂ ಒಮ್ಮೆಯೂ ಭೇಟಿಯಾಗಲು ಆಸಕ್ತಿ ತೋರಿಸದಿದ್ದ ಅವಿನಾಶ ಇದ್ದಕ್ಕಿದ್ದಂತೆ ಸಂಗೀತ ಕಾರ್ಯಕ್ರಮಕ್ಕೆ ಹೋಗೋಣ ಎಂದಿದ್ದು, ನಿಂಜೊತೆ ಊಟ ಮಾಡಬೇಕು ಎಂದಿದ್ದು, ತನ್ನ ಬಗ್ಗೆ ಯಾವತ್ತೂ ಒಳ್ಳೆಯ ಮಾತುಗಳನ್ನೇ ಆಡದ ಮನುಷ್ಯ ಸೀರೆ, ಬಳೆಗಳ ಬಗ್ಗೆ ಮಾತಾಡಿದ್ದು! ತಾನು ಗಮನಿಸಿಯೇ ಇರದ ಅವಿನಾಶನ ಇನ್ನೊಂದು ಮುಖವೆನ್ನಿಸಿತು ರಜನಿಗೆ. ಅಷ್ಟಕ್ಕೂ ನಾವು ಬದುಕಿನಲ್ಲಿ ಕಳೆದುಕೊಳ್ಳುವುದು ಗಮನಕ್ಕೆ ಬಾರದವುಗಳನ್ನೇ ಅಲ್ಲವೇ! ಫೋಟೋಗಳಲ್ಲಿ, ಮಾತುಗಳಲ್ಲಿ ಕಾಣಿಸಿಕೊಂಡಿದ್ದಕ್ಕಿಂತ ಸುಂದರವಾಗಿದ್ದಾನೆ ಅನ್ನಿಸಿತು ಭೇಟಿಯಾದಾಗ. ಅಲ್ಲಲ್ಲಿ ಬೆಳ್ಳಗಾದ ಗಡ್ಡದ ಮೇಲೆ ಕೈಯಾಡಿಸುತ್ತ ವಿಶ್ ಮಾಡಿದವನ ಕಣ್ಣುಗಳು ಹೊಳೆದವು. “ಹೋಗ್ಲಿ, ಹೆಂಡತಿ ಮಕ್ಕಳ ಫೋಟೋವನ್ನಾದರೂ ತೋರಿಸು ಮಾರಾಯ” ಎಂದಿದ್ದಕ್ಕೆ, ಮುದ್ದಾಗಿ ನಗುತ್ತ “ಯಾಕೆ ನನ್ನ ಮದ್ವೆ ಹಿಂದೆ ಬಿದ್ದಿದೀಯಾ, ನೀ ಯಾಕೆ ಮದ್ವೆ ಆಗಲಿಲ್ಲ ಅದನ್ನ ಹೇಳು” ಎಂದ. ನಿನ್ನಂಥ ಗಂಡಸು ಸಿಗಲಿಲ್ಲ ಎಂದು ರೇಗಿಸಬೇಕೆಂದುಕೊಂಡ ರಜನಿ, “ಯಾಕೋ ಬಂಧನಗಳ ಬಗ್ಗೆ ಆಸಕ್ತಿ ಉಳಿದಿಲ್ಲ” ಎಂದು ಸುಮ್ಮನಾದಳು. ಫ್ರೆಂಚ್ ಸಿನೇಮಾಗಳಿಂದ ಹಿಡಿದು ಪುರಂದರದಾಸರ ಕೀರ್ತನೆಗಳವರೆಗೆ ನಿರರ್ಗಳವಾಗಿ ಮಾತನಾಡುತ್ತ ಊಟ ಮುಗಿಸಿದ ಅವಿನಾಶ ಸಿಗರೇಟು ಅಂಟಿಸುತ್ತ, “ನಾನು ಮದುವೆಯಾದಾಗ ನನಗೆ ನಲವತ್ತು. ದೇಹಕ್ಕೆ ಒಂದು ಹೆಣ್ಣು ಬೇಕಿತ್ತು ಅದಕ್ಕೇ ಮದುವೆ ಆದೆ” ಎಂದ. ಬಣ್ಣದ ಮಾತುಗಳಿಲ್ಲದ ಅವನ ಕಣ್ಣುಗಳೊಳಗಿನ ಪ್ರಾಮಾಣಿಕತೆ ರಜನಿಯನ್ನು ಕಲಕಿತು; ಯಾರದೋ ಹೃದಯದ ಸತ್ಯದ ತುಣುಕೊಂದು ಇನ್ಯಾರದೋ ಫೇಸ್ ಬುಕ್ ಗೋಡೆಗೆ ಅಂಟಿಕೊಂಡಂತೆ! ಅವಿನಾಶ ಹುಟ್ಟಿದ್ದು ಶಿವಮೊಗ್ಗದ ಹತ್ತಿರದ ಹಳ್ಳಿಯೊಂದರಲ್ಲಿ. ಬಡತನಕ್ಕೆ ದಣಿದು ಅಮ್ಮ ತೀರಿಕೊಂಡಾಗ ಇವನಿನ್ನೂ ಹತ್ತನೇ ಕ್ಲಾಸು ಮುಗಿಸಿದ್ದ. ನಾಲ್ವರು ಹೆಣ್ಣುಮಕ್ಕಳ ಮದುವೆ ಮಾಡಿ ಸೋತಿದ್ದ ಅಪ್ಪ ಅವಿನಾಶನಿಗೂ, ಅವನ ಅಣ್ಣನಿಗೂ ಮುಂದೆ ಓದಿಸಲಾರದಷ್ಟು ಸಾಲದಲ್ಲಿದ್ದ. ಆಗ ಅವಿನಾಶನಿಗೆ ದಾರಿ ತೋರಿಸಿದ್ದು ಹೈಸ್ಕೂಲ್ ಹೆಡ್ ಮಾಸ್ಟರ್ ಅವಧಾನಿಯವರು. ಅವಧಾನಿಯವರ ವಯಸ್ಸಾದ ಅಕ್ಕನನ್ನು ನೋಡಿಕೊಳ್ಳಲೆಂದು ಬೆಂಗಳೂರಿಗೆ ಬಂದವ ಇಲ್ಲೇ ಕಾನೂನು ಪದವಿ ಮುಗಿಸಿ, ಸ್ಕಾಲರ್ ಶಿಪ್ ನಲ್ಲೇ ಮಾಸ್ಟರ್ಸ್ ಮುಗಿಸಿ ಕೆಲಸ ಹಿಡಿಯುವವರೆಗೂ ನೋಡಿದ್ದು ಸಾವು ನೋವುಗಳನ್ನ. ಅವಧಾನಿಯವರ ಅಕ್ಕ ತೀರಿಕೊಂಡಮೇಲೆ ಅಮೆರಿಕಾಲ್ಲಿದ್ದ ಮಗ ಬಂದು ಇಲ್ಲಿಯ ಆಸ್ತಿಗಳನ್ನೆಲ್ಲ ಮಾರಿ ರಾಜಾಜಿನಗರದ ಹಳೆಯ ಮನೆಯೊಂದನ್ನು ಅವಿನಾಶನಿಗೆ ಬಿಟ್ಟು ಹೋಗಿದ್ದ. ವಠಾರದಂತೆ ಅಂಟಿಕೊಂಡ ಮನೆಗಳ ಮಧ್ಯದ ಮನೆಯೊಂದರಲ್ಲಿ ಅವಳ ಅಮ್ಮನೊಂದಿಗೆ ವಾಸಿಸುತ್ತಿದ್ದವಳು ಸುಷ್ಮಾ. ಮೂವರು ಹೆಣ್ಣುಮಕ್ಕಳಲ್ಲಿ ಕೊನೆಯವಳಾಗಿದ್ದ ಸುಷ್ಮಾ ಚಿಕ್ಕಬಳ್ಳಾಪುರದ ಪ್ರಾಥಮಿಕ ಶಾಲೆಯೊಂದರ ಟೀಚರಾಗಿದ್ದವಳು ಮನೆಗೆ ಬರುತ್ತಿದ್ದದ್ದು ಶನಿವಾರದ ಸಂಜೆ. ಎರಡು ಬಿಯರ್ ಕುಡಿದು ಒಬ್ಬನೇ ಕುಳಿತು ಪುಸ್ತಕ ಓದುತ್ತಲೋ, ಸಿನೆಮಾ ನೋಡುತ್ತಲೋ ಕಾಲ ಕಳೆಯುತ್ತಿದ್ದ ಅವಿನಾಶನಿಗೆ ಅವಳಮ್ಮ ಕಳುಹಿಸುತ್ತಿದ್ದ ಒಬ್ಬಟ್ಟನ್ನೋ, ಕಜ್ಜಾಯವನ್ನೋ ಕೊಡಲಿಕ್ಕೆಂದು ಬಂದವಳು ಇವನಲ್ಲಿ ಆಸೆ ಹುಟ್ಟಿಸಲಾರಂಭಿಸಿದಳು. ಸುಷ್ಮಾ ಮೂವತ್ತೈದಾದರೂ ಮದುವೆಯಾಗದೇ ಉಳಿದಿದ್ದು ಅವಳ ಸಾಧಾರಣ ರೂಪದಿಂದಾಗಿ. ಅಕ್ಕಂದಿರ ಮದುವೆಗೆಂದು ಮಾಡಿದ್ದ ಸಾಲ ತೀರಿಸುವಷ್ಟರಲ್ಲಿ ಅವಳ ಅಪ್ಪ ತೀರಿಕೊಂಡಿದ್ದ. “ಅವಳ ಅಮ್ಮನಿಗೆ ನಾನು ಮಗಳಿಗೆ ತಕ್ಕ ವರ ಎನ್ನಿಸಿರಬಹುದು. ಇವಳು ನಮ್ಮನೆಗೆ ಬರುವಾಗ ಬ್ರಾ ಹಾಕ್ತಾನೇ ಇರಲಿಲ್ಲ ಗೊತ್ತಾ. ಒಬ್ಬಟ್ಟಿನ ನೆಪದಲ್ಲಿ ನನ್ನ ಮೈ ಕೈ ಮುಟ್ಟುತ್ತಾ ಅವಳು ನನ್ನ ಕೆರಳಿಸಲಿಕ್ಕೆ ಪ್ರಯತ್ನಿಸಿದ್ದು ನನಗೆ ತಿಳಿದಿಲ್ಲವೆಂದೇ ಈಗಲೂ ಅಂದುಕೊಂಡಿದ್ದಾಳೆ. ನಾನೂ ಹೇಳುವುದಿಲ್ಲ ಬಿಡು. ಸುಳ್ಳುಗಳೇ ಸಂಬಂಧವನ್ನು ಸಲಹುತ್ತವೆ ಒಮ್ಮೊಮ್ಮೆ. ಅವುಗಳಿಂದ ಬಿಡಿಸಿಕೊಂಡ ಕ್ಷಣಕ್ಕೆ ಸಂಬಂಧಗಳೂ ಬಿಡಿಸಿಕೊಂಡು ದೂರಾಗಿಬಿಡಬಹುದು. ಒಮ್ಮೆ ಬಂಧನಕ್ಕೆ ಬಿದ್ದ ಮನುಷ್ಯ ಎದ್ದು ಓಡುವುದಾದರೂ ಎಲ್ಲಿಗೆ ಹೇಳು. ನೀನೂ ಅಷ್ಟೇ ನನ್ನಿಂದ ತಪ್ಪಿಸಿಕೊಳ್ಳಲಾರೆ. ನಿನಗೆ ಮಧುವಂತಿ ಅಂತ ಹೆಸರಿಡಬೇಕಿತ್ತು ಕಣೇ. ಇನ್ನೊಂದಿನ ಹೇಳ್ತೀನಿ ನಿಂಗೆ ಮಧುವಂತಿ ರಾಗದ ಬಗ್ಗೆ. ಬಾ ಹೊರಡೋಣ” ಎನ್ನುತ್ತಾ ಹೆಗಲು ಬಳಸಿದ. ಮುಸ್ಸಂಜೆಯ ರಾಗಗಳೆಲ್ಲ ಒಂದೊಂದಾಗಿ ಹೆಜ್ಜೆಹಿಡಿದವು. ********

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮನದ ಮುಗಿಲ ಹಾದಿ ರೇಶ್ಮಾ ಗುಳೇದಗುಡ್ಡಾಕರ್ ಕುಸುಮಾ- ಸರಳ ರೂಪ ,ಯಾವ ಹಮ್ಮು ಬಿಮ್ಮುಗಳಿಗೆ ಅವಳಲ್ಲಿ ಜಾಗವಿರಲಿಲ್ಲ  . ಬ್ಯಾಂಕ್ ಒಂದರ ಉದ್ಯೋಗ. ಪ್ರತಿಷ್ಠಿತ ಕಂಪನಿಯಲ್ಲಿ ಉನ್ನತ ಹುದ್ದೆ ಯ ಪತಿ ಅತ್ತೆ-ಮಾವನ ಒಬ್ಬನೇ ಮಗ. ಮುಂದಿನ ಬೀದಿಯಲ್ಲಿ ನಾದಿನ ಮನೆ ಸ್ಥಿತಿ ವಂತ ಕುಟುಂಬ . ಮದುವೆಯಾಗಿ ಹತ್ತು ವರ್ಷ ಕಳೆದರೂ ಅವಳಿಗೆ ಮಗುವಿನ ಭಾಗ್ಯ ಇರಲಿಲ್ಲ . ಇದಕ್ಕೆ ಅವಳಲ್ಲಿ ಯಾವ ದೋಷವು ಇರಲಿಲ್ಲ..!!! . ತನ್ನಲ್ಲಿ ಇಲ್ಲದ ತಪ್ಪಿಗೆ ಅವಳಲ್ಲಿ ಮಾಗಲಾರದ ಗಾಯವಾಗಿ  ಮನದಲ್ಲಿ ಜೀವಂತವಾಗಿತ್ತು ..‌‌   ಅವಳ ಈ ನೋವನ್ನು ಹಂಚಿಕೊಳ್ಳುವ , ಸಮಾಧಾನಿಸುವ ಯಾವ ಪ್ರಾಣಿಯು ಅವಳಿಗೆ ಮನೆಯಲ್ಲೂ ಆಫೀಸಿನಲ್ಲೂ ಇರಲಿಲ್ಲ …‌!!!??       ಸದಾ ಅವಳ ಸಂಬಳ ದ ಲೆಕ್ಕ ಚಾರ ಮಾಡುವ ಅತ್ತೆಮಾವ , ಹಂಗಿಸುವ ನಾದಿನಿ , ಇದನ್ನು  ಕಂಡುಕಾಣದಂತೆ ಇರುವ ಪತಿ.ಇನ್ನು ಆಫೀಸಿನಲ್ಲಿ ಇವಳ ಉದ್ಯೋಗ , ಗಂಡನ ಸಿರಿತನದ ಬಗ್ಗೆಯೇ ಮಾತು ಮತ್ತು ಉಚಿತ ಸಲಹೆ ಕೊಡುವವರ ಸಂಖ್ಯೆಇತ್ತೆ ಹೊರತು ಮನಕ್ಕೆ ಹತ್ತಿವಾಗುವ ಯಾವ ಜೀವಿಯೊ ಇರಲಿಲ್ಲ .> >    ಆದರೆ ಸರಳ ಮೃದು ಮನದ ಸ್ನೇಹಾಳ ಗೆಳತನಕ್ಕೆ ಯಾವುದೇ ಅಡ್ಡಿ ಇರಲಿಲ್ಲ .ಸಮಯ ಸಿಕ್ಕಾಗಲೇಲ್ಲ ಸ್ನೇಹಾಳ ಮನೆ ,ಪಾರ್ಕ್ , ವಾಕಿಂಗ್ ಎಂಬ ಹೆಸರಿನಿಂದ  ಸಮಯ ಕಳೆಯುತ್ತದ್ದಳು .ಇಲ್ಲವಾದರೆ ಅವಳು ಮೌನಿ …. ಒಂದು ಪ್ರೀತಿತುಂಬಿದ ಮಾತು ಸಾಕು ಬದುಕಿನಲ್ಲಿ ಭರವಸೆ ಬರಲು ಆದರೆ ಅಂತಹ ಮಾತು , ಮನಗಳು ಸಿಗುವದು ಈ ಜಗತ್ತಿನಲ್ಲಿ ಬಹಳ ದುಬಾರಿ … ಸದಾ ಹಣ ,ಅಧಿಕಾರ , ಕೆಲಸ, ಹೀಗೆ ಗೌರವಿಸುವ ಜಗತ್ತಿನಲ್ಲಿ ನಮಗಾಗಿ ಸ್ಪಂದಿಸುವ ನಿಷ್ಕಲ್ಮಷ ಸ್ನೇಹ ಸಂಬಂಧ ಬಹಳ ವಿರಳ .      ಕುಸುಮಾ ಲಘುಬಗೆಯಿಂದ ಮನೆಯ ಕೆಲಸ ಮುಗಿಸಿಬ್ಯಾಂಕ್ ಗೆ ಹೊರಡಲು ತಯಾರಾದಳು ಸಮಯ ಆಗಲೇ ಹತ್ತು ಆಗುತ್ತಾ ಬರುತ್ತಿತ್ತು . ಅತ್ತೆ  ಟಿ.ವಿ ನೋಡುವದರಲ್ಲಿ ಮಗ್ನರಾಗಿದ್ದರು .ಪತಿರಾಯ ಹೊರಡುವ ತಯಾರಿಯಲ್ಲಿದ್ದ ಇವಳು ಒಟ್ಟಿಗೆ ಹೊರಟರಾಯಿತು ಎಂದು ಹೊಬಂದಳು ಅಗಲೇ ಅವಳ ಅತ್ತೆ ಮಗನಿಗೆ ತನ್ನ ತಂಗಿಯ ಮನೆಗೆ ಹೊಗಿ ಆಫೀಸಿಗೆ ಹೋಗಲು ಆಜ್ಞೆ ಮಾಡಿದರು …!!  ಪತಿರಾಯ ಸಮ್ಮತಿಸಿ .ಕುಸುಮಾಳಿಗೆ ಕಣ್ಣಲ್ಲೆ ಬಾಯ್ ಹೇಳಿ ಹೊರಟು ಹೋದ .    ಕುಸುಮಾ ಇನ್ನು ಬಸ್ಸೇ ಗತಿ ಎಂದು  ಗೇಟಿನ ಬಳಿಬಂದಳು ಅಂಗಳದಲ್ಲಿ ತಾನು ಮುಂಜಾನೆ ಹಾಕಿದ ರಂಗೋಲಿ ಅರಳಿ ನಕ್ಕು ಮಾತಾಡಿಸಿದಂತೆ ಭಾಸವಾಯಿತು ಕುಸುಮಾ ಅದನ್ನು ನೋಡಿ ಸಂತೋಷದಿಂದ  ಬಸ್ ನಿಲ್ದಾಣ ಕ್ಕೆ ಬಂದಳು ..          ಬಸ್ಸು ತಂಗುದಾಣದ ಎದುರಿಗೆ ಸರ್ಕಾರಿ ಆಸ್ಪತ್ರೆ ಇತ್ತು. ಅಲ್ಲಿ ಜನಸಂಣಿ ತುಂಬಿ ರಸ್ತೆ ತುಂಬಾ ಜನರು ತುಂಬಿ ಅಳು ನರಳಾಟ ಕಂಡುಬಂತು .ಕುಸುಮಾ ಅದನ್ನು ನೋಡಿ ಕೊಂಚ ಗಲಿಬಿಲಿಗೊಂಡಳು ಇಷ್ಟು ಪ್ರಮಾಣದ ಜನ ಎಂದೋ ಅವಳು ಈ ದಾರಿಯಲ್ಲಿ ಕಂಡಿರಲಿಲ್ಲ .     ಜನರನ್ನು ಕೇಳಿದಳು …..ಸ್ಪಷ್ಟ ಮಾಹಿತಿ ಸಿಗಲಿಲ್ಲ ಅಷ್ಟರಲ್ಲಿ ಆಸ್ಪತ್ರೆಯ ನೌಕರರಾದ ಪರಿಚಿತ ಅಪ್ಪಣ್ಣ ಬರುತ್ತಿರುವದು ಕಂಡು ಕುಸುಮಾ ಅವರ ಬಳಿ  ತೆರಳಿ ಮಾತಾಡಿಸಿದಳು ಅವರು ರಾಜ್ಯದ ಹೆದ್ದಾರಿಯಲ್ಲಿ ನಸುಕಿಗೆ ಭೀಕರ ಅಪಘಾತವಾಗಿದ್ದು ಬೆಳಗಾವಿ ಸಮೀಪದ ತಾಂಡ ಜನರು ಕೂಲಿ ಕೆಲಸಕ್ಕಾಗಿ ಗುಳೆ ಹೋರಟಿದ್ದರುಅವರನ್ನು ತುಂಬಿಕೊಂಡು ಬಂದ ಟ್ಯಾಕ್ಟರ್ ಮತ್ತು ಎದುರಿಗೆ ಬರುತ್ತದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ತುಂಬಾ ಹೆಣಗಳು ಚೆಲ್ಲಾಪಿಲ್ಲಿಯಾಗಿದ್ದು ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದ್ದು ಅವರಿಗೆ ರಕ್ತ ದ ಮಾದರಿ ತರಲು ಸಾಯಿ ಮಲ್ಟಿಸ್ಪಷೇಲ್ ಆಸ್ಪತ್ರೆಗೆ ಹೊರಟಿರುವುದಾಗಿ ತಿಳಿಸಿದರು .  ಕುಸುಮಾ ತನ್ನದು “ಓ ನೇಗೆಟಿವ್ ಇದೆ ಬೇಕಾದರೆ ಹೇಳಿ ಕೊಡುತ್ತೆನೆ ಎಂದಳು” .ಅವರು ತುಂಬಾ ಸಂತೋಷಗೊಂಡು “ಹಲವು ರಕ್ತ ನಿಧಿಗೆ ಹೇಳಿದ್ದವು ಮುಂಜಾನೆಯಿಂದ ಬನ್ನಿ ನೋಡೋಣ ”  ಎಂದು ಹೇಳಿ ಅವಳನ್ನು ಕೊಡಲೆ ಆಸ್ಪತ್ರೆ ಯ ಒಳಗೆ ಕರೆದುಕೊಂಡು ಹೋದರು .          ಕುಸುಮಾ ಅಪಘಾತದ ತೀವ್ರ ತೆಯನ್ನು ಮೊದಲ ಬಾರಿಗೆ ಜೀವನದಲ್ಲಿ ಕಣ್ಣಲ್ಲಿ ಕಂಡಳು . ಮಕ್ಕಳು ವೃದ್ದರು ಎನ್ನದೆ ಎಲ್ಲರೋ ನರಳುತ್ತಿದ್ದರು . ಇಡೀ ಆಸ್ಪತ್ರೆ ರೋದನದಿದಂದ ತುಂಬಿತ್ತು ಕುಸುಮಾ ಭಾವಜೀವಿ ಅವಳ ಮನವು ದುಃಖಿಸಿತ್ತು ಮೂಕವಾಗಿ ……ಸಾವು ನೋವು ಸಕಲ ಚರಾಚರಗಳಿಗೊ ಒಂದೇ ಅಲ್ಲವೇ ತುತ್ತಿನ ಚೀಲತುಂಬಿಸಲು ಹೋಗಿದ್ದವರು ಜವರಾಯನ ಬಾಯಿಗೆ ತುತ್ತಾಗಿದ್ದರು!?       ಮೆಲ್ಲನೆ ಅವರಗಳನ್ನು ನೋಡುತ್ತಾ ಭಾರವಾದ ಹೆಜ್ಜೆ ಹಾಕುತ್ತಾ ವಾರ್ಡಿನತ್ತ ನಡೆದಳು  ಅಪ್ಪಣನವರು ಇದನ್ನು ಗಮನಿಸಿ “ಆಸ್ಪತ್ರೆ ಗಳಲ್ಲಿ ಇದು ನಿತ್ಯವು ಇರುವ ಸಾಮನ್ಯ ಸಂಗತಿ ಆದರೆ ಇಂದು  ಜನರ ನರಳಾಟ ಅಫಘಾತದ ಪರಿಣಾಮ ಹೆಚ್ಚಾಗಿದೆ . ನಿಮಗೆ ಇದು ಹೊಸದು ಬನ್ನಿ ತಾಯಿ ಈ ಜೀವ ನೀರಿನ ಮೇಲಿನ ಗುಳ್ಳೆಯಂತೆ .ಅದರೂ ಜನಗಳು ಈ ಸತ್ಯವ ಮರೆತು ನಾನು ,ನನ್ನದು ಎಂಬ ಸ್ವಾರ್ಥ ದ ಕೋಟೆಯಲ್ಲಿ ಬದುಕುತ್ತಾನೆ ” ಎಂದು ಹೇಳುತ್ತಾ ಅವಳನ್ನು ಸಾಮಾಧಾನಿಸುತ್ತಾ ಕರೆದುಕೊಂಡು ಹೋದರು ಅವರು ಸಾತ್ವಿಕ ನಿಷ್ಠಾವಂತ ನೌಕರರಾಗಿದ್ದರು ಇಡೀ ಆಸ್ಪತ್ರೆ ಯಲ್ಲೆ ಉತ್ತಮ ಕೆಲಸಗಾರ ಎಂಬ ನಂಬಿಕೆ ಗಳಿಸಿದರು .ಹಣ ಪಕ್ಷಪಾತದ ಯಾವ ಆಮಿಷ ಕ್ಕೆ ಒಳಗಾಗದೆ ಸೇವೆಯನ್ನು ಸಲ್ಲುಸುತ್ತಾ ಜೀವನ ನಡೆಸುತ್ತದ್ದರು. ಕುಸುಮಾಳ ಮುಂದಿನ ಬೀದಿಯ ಲ್ಲೆ ಇವರ ಮನೆಯೊ ಇತ್ತು .       ಕುಸುಮಾಳ ರಕ್ತ ದ ಮಾದರಿಯನ್ನು ಮತ್ತುಅವಳ ಆರೋಗ್ಯವನ್ನು ಪರೀಕ್ಷಿಸಿ. ಅವಳನ್ನು  ಒಂದು ಕೊಠಡಿ ಯಲ್ಲಿ ರಕ್ತ  ನೀಡಲು ಅವಕಾಶ ಮಾಡಕೊಟ್ಟರು  ಕುಸುಮಾ ಅಷ್ಟರಲ್ಲಿ ತನ್ನ ಸಹೋದ್ಯೋಗಿ ಗೆ ಕರೆಮಾಡಿಸಂಕ್ಷಪ್ತವಾಗಿ ವಿಷಯ ತಿಳಿಸಿ ರಜೆ ಪಡೆಯಲು ಹೇಳಿದಳುಪತಿಗೆ ಹೇಳುವ ಗೋಜಿಗೆ ಹೋಗಲಿಲ್ಲ .ಚಿಕ್ಕ ವಿಚಾರ ಇಗಲೇ ಹೇಳುವ ಅಗತ್ಯವಿಲ್ಲ ಅಗತ್ಯ ಬಂದರೆ ಹೇಳಿದರಾಯುತು ಎಂದು ಕೊಂಡು ಮೊಬೈಲ್ ಬ್ಯಾಗಿಗೆ ಹಾಕಿಕೊಂಡು ಕೊಠಡಿಗೆ ಬಂದಳು .            ಎಲ್ಲಾ ಮುಗಿದು  ಮಧ್ಯಾಹ್ನದ ಕಳೆಯುತ್ತಾ ಬಂದಿತು .ಅಪ್ಪಣ್ಣ ನವರು ಅವಳನ್ನು ಆಗಾಗ ಬಂದು ವಿಚಾರಿಸುತ್ತಾ  ಹೊಗುತ್ತಿದ್ದರು .      ಅವಳಿಗೆ ದಾಳಿಂಬೆ ಪಾನಕ ತಂದರು ” ಸ್ವಲ್ಪ ವಿರಮಿಸಿ ನಿಮ್ಮ ಪತಿಗೆ ಮಾಹಿತಿ ತಿಳಿಸಿರುವೆ ಅವರು ಇನ್ನೇನು ಬರುತ್ತಾರೆ ” ಎಂದು ತಿಳಿಸಿದರು. ” ತಮ್ಮಿಂದ ತುಂಬಾ ಉಪಕಾರವಾಯ್ತು ಎಂದು ಹೇಳಿ ಕೆಲಸ ತುಂಬಾ ಇದೆ ಹೊರಡುವಾಗ ಕೌಂಟರ್ ಅಲ್ಲಿ ಇರುತ್ತೇನೆ ಏನಾದರೊ ಬೇಕಾದರೆ ಸಂಕೋಚ ಪಡದೆ ಕೇಳಿ” ಎಂದು ಕುಸುಮಾಳಿಗೆ  ಹೇಳಿ  ಹೋದರು .ಅವಳು ಅಲ್ಲೆ ಮಂಚದ ಮೇಲೆ ವಿರಮಿಸುತ್ತಾ ಕುಳಿತಳು .ಅಷ್ಟರಲ್ಲಿ ಪತಿ ಅಭಯ್ ನ ಆಗಮನವಾಯಿತು .” ಅಪ್ಪಣ್ಣ ನನಗೆ ಕಾಲ್ ಮಾಡಿ ಹೇಳಿದರು ಇಗ ಹೇಗಿರುವೆ ? ಹೋಗೊಣವೇ ಮನೆಗೆ ? ” ಎಂದನು .      ಸರಿ ಎಂದು ಕುಸುಮ ಅಭಯ್ ಕೊಠಡಿ ಇಂದ ಹೊರನಡೆದರು ಆಸ್ಪತ್ರೆ ಯ ತುಂಬಾ ನರ್ಸ, ನೌರರು ,ಡಾಕ್ಟರ್ಗಳ ಗಡಿಬಿಡಿ ಓಡಾಟ , ಚಿತ್ಕಾರ, ನರಳಾಟ ಮುಗಿಲು ಮುಟ್ಟಿತ್ತು ಪೋಲಿಸರ ಉಪಸ್ಥಿತಿ, ಸಂಬಂಧಿಕರ ಹುಡುಕಾಟ , ಹೀಗೆ ಒಂದು ವಿಭಿನ್ನ ಲೋಕವೊಂದು ಅಲ್ಲಿ ಸೃಷ್ಟಿ ಯಾಗಿತ್ತು …..            ಕುಸುಮಾಳ ಮನದಲ್ಲಿ ಹಲವು ಪ್ರಶ್ನೆ ಉತ್ತರಗಳು ಈ ಹೊಸ ಅನುಭವಕ್ಕೆ ಸಾಕ್ಷಿ ಎಂಬಂತೆ ಉದ್ಬವಿಸುತ್ತಿದ್ದವು ಅಭಯ್  ಅವಳ ಮನದ ಇಂಗಿತ ಅರಿತು ಅವಳ ಕೈ ಹೀಡಿದು  ಕರೆದುಕೊಂಡು ಹೊರಬಂದನುಹೊರ ಬರುವಾಗ ಕೆಳಗಿನ ವಾರ್ಡ ಅಲ್ಲಿ ಸತ್ತ ತಾಯಿಯ ಶವದ ಮೇಲೆ ಹಾಲುಕುಡಿಯಲು ಹವಣಿಸುತ್ತಾ ಅಳುತ್ತಿದ್ದಒಂಭತ್ತುತಿಂಗಳ ಹೆಣ್ಣು ಮಗುವಿನ ದೃಶ್ಯ ಕುಸುಮಾಳ ಎದೆಯನ್ನು ಸೀಳಿಬಿಟ್ಟಿತ್ತು!     ಆ ಮನಕಲಕುವ ಸಂಗತಿಗೆ ಕುಸುಮಾಳ ಕಣ್ಣಾಲಿಗಳು ತುಂಬಿ ಬಂದವು .ಅಲ್ಲಿದ್ದ ಜನರಿಗೆ ಯಾರಿಗೊ ಇದರ ಪರಿವೆ ಇರಲಿಲ್ಲ .ಎಲ್ಲರಿಗೊ ಒಂದೊಂದು ನೋವು ಮನತುಂಬಿದ್ದವು .ತಮ್ಮಗಳ ನೋವಲ್ಲೆ ಜಗವ ಮರೆತಿದ್ದರು .    ಕುಸುಮಾ ಒಂದುಕ್ಷಣ ತನ್ನನ್ನೇ ತಾನು  ಆ ಮಗುವಿನಲ್ಲಿ ಕಂಡಳು ಹತ್ತು ವರ್ಷಗಳಿಂದ ಸತತ ನೋವು ,ಅವಮಾನಕ್ಕೆ ಶರಣಾಗಿ ಎಲ್ಲರೂ ಇದ್ದು ಇಲ್ಲದಂತೆ  ಬದುಕಿನಲ್ಲಿ ದಾರಿ ಕಾಣದೆ ನಿತ್ಯವು ದಹಿಸುತ್ತಿದ್ದಳು ಅಂತರಂಗದ ಬೆಂಕಿಯಲ್ಲಿ…!  ಇಂದು ಆ ಮಗು ವು ಇಷ್ಟು ಜನಗಳ ಮಧ್ಯ ತನ್ನವರ ಕಳೆದುಕೊಂಡು ಆನಾಥವಾಗಿತ್ತು …!!! .   ಕುಸುಮಾ   ಓಡಿ ಆ ಮಗುವನ್ನುಎತ್ತಿಕೊಂಡು ಸಂತೈಸುತ್ತಾ ಹೊರಬಂದಳು ಅವಳ ಈ ಅನೀರಿಕ್ಷತ  ನಡೆ ಪತಿ ಅಭಯ್ ಗೆ ಅಚ್ಚರಿಂದರು ಅವಳನ್ನು ಪ್ರಶ್ನಿಸುವ ದಿಟ್ಟತನ ಕ್ಕೆ ಅವನು ಕೈಹಾಕಲಿಲ್ಲ .ಸತ್ಯ ಅವನಿಗೋ ತಿಳಿದಿತ್ತು .    ಕುಸುಮಾ ಮಗುವನ್ನು ಎತ್ತಕೊಂಡು ಮನೆಗೆ ಬಂದಳು ಪತಿಯ ಜೊತೆಗೆ .ಮನೆಯಲ್ಲಿ ಇದ್ದ ಅತ್ತೆ – ಮಾವ  ನಾದಿನಿ ಮದ್ಯಾಹ್ನದ ಊಟ ಮುಗಿಸಿ ರಾತ್ರಿ ಗಾಗಿ ಸಂಬಾರ್ ತೆಗೆದುಕೊಂಡು ಹೋಗಲು ಸಿದ್ದತೆ ನಡೆಸುತ್ತಿದ್ದ ನಾದಿನಿ (ಇದು ಅವಳ ನಿತ್ಯದ ಕಾಯಕ …!!) ಎಲ್ಲರ ಮುಖದಲ್ಲೂ ಅಚ್ಚರಿ ಮತ್ತು ಪ್ರಶ್ನಾರ್ಥಕ ಚಿಹ್ನೆ ಉದ್ಬವಿಸಿದ್ದವು …!??   ತನ್ನ ಇಬ್ಬರು ಹೆಣ್ಣುಮಕ್ಕಳಲ್ಲಿ ಒಂದನ್ನು ಅಣ್ಣನಿಗೆ ದತ್ತು ಕೊಡುವ ಅದಮ್ಯ ಬಯಕೆ ಇತ್ತು  ನಾದಿನಿ ಗೆ .ಅಣ್ಣನ ಆಸ್ತಿ ತನಗೇ ಸೇರುತ್ತದೆ ಈ ಮೂಲಕ ಎಂಬ ಅದ್ಬುತ ಚಿಂತನೆಯಿಂದ !  ಅಭಯ್ ಗೆ ಒತ್ತಾಯ ಮಾಡುತ್ತಿದ್ದಳು ಇದಕ್ಕೆ ತನ್ನ ತಾಯಿಯ ಸಹಕಾರವು ಇತ್ತು . ಅದರೆ ಇದಕ್ಕೆ ಅಭಯ್ ಯಾವದೇ ಸೊಪ್ಪು ಹಾಕಿರಲಿಲ್ಲ  .ಆದರೆ ಈಗ ಎಲ್ಲ ಬುಡ ಮೇಲಾಗಿತ್ತು…..ಒಂದೇ ಹೊಡೆತಕ್ಕೆ .ಆ ಪುಟ್ಟ ಮಗುವನ್ನು ಕುಸುಮ ತಬ್ಬಿ ಹೀಡಿದು ಎತ್ತಿಕೊಂಡ ನೋಟವೇ ಅವರನ್ನು ಹೆಚ್ಚು ಕೆಣಕಿತ್ತು .ಕುಸುಮಳ ಮನದ ಇಂಗಿತ ಭಾವನಾತ್ಮಕವಾಗಿ ಅರಿವು ಮಾಡಿತ್ತು.     ಅತ್ತೆ ,ಮಾವ , ನಾದಿನಿ ಎಲ್ಲರೂ ಒಮ್ಮಲೇ ಅರ್ಭಟ ನಡೆಸಿದರು .  ಅಭಯ್ ಕುಸುಮಾ ಳ ಮೇಲೆ ಮಾತಿನ ಯುದ್ಧ.  ನಡೆಯಿತು ಆದರೆ ಕುಸುಮಾ ಳ ನಿರ್ಧಾರ ಬದಲಿಸುವ ಪ್ರಯತ್ನ ವಿಫಲವಾಯಿತು .ಕೊನೆಗೆ ಕುಸುಮಾ   ಮಗುನಿನೊಂದಿಗೆ ಒಬ್ಬಳೆ ಬದುಕುವ ನಿರ್ಧಾರ ವನ್ನು ಪ್ರಕಟಿಸಿದಳು .ಅಭಯ್ ಕ್ಷಣಮಾತ್ರದಲ್ಲಿ ಅದುರಿಹೋದ .ಕುಸುಮಾಳನ್ನು ತಡೆದು ನಿಧಾನವಾಗಿ ಹತ್ತು ವರ್ಷ ಮುಚ್ಚಿಟ್ಟ ಸತ್ಯ ಹೇಳಿದನು .ತನ್ನಿಂದ ಕುಸುಮಾಳಿಗೆ ಮಗು ನೀಡಲು ಸಾದ್ಯವಿಲ್ಲ .ಇದನ್ನು ಜಗತ್ತಿಗೆ ತಿಳಿಸಿ ಅವಮಾನ ಪಡುವದನ್ನು ತಪ್ಪಿಸಿಕೊಂಡು ನಿರಾತಂಕವಾಗಿ ಕುಸುಮಾಳ ಮೇಲೆ ಈ ಮಿಥ್ಯವನ್ನು ಹೊರಿಸಿದ್ದಾಗಿ , ಕುಸುಮಾಳನ್ನು ಬಿಟ್ಟು ಬದಕುಲು ಅಸಾದ್ಯವೆಂದು ಮೊದಲಬಾರಿಗೆ ಅಭಯ್ ಕುಸುಮಾಳ ನ್ನು ಹೀಡಿದು ಕ್ಷಮೆ ಯಾಚಿಸಿದನು ..!   ಅವನ ಮಾತುಗಳು ಮನದಾಳದಿಂದ ಹೊರಬಂದಿದ್ದವು ಕಂಗಳು ತುಂಬಿ ನಾಚಿಕೆಯಿಂದ ತಲೆತಗ್ಗಿಸಿದ್ದನು.ನಾದಿನಿ ರಭಸವಾಗಿ ಕ್ಯಾರಿಯರ್ ತೆಗೆದುಕೊಂಡು ಹೊರನಡೆದಳು …!!!?    ಅತ್ತೆಮಾವ ನಿಗೆ ಕುಸುಮಾಳ ಸಂಕಟಕ್ಕಿಂತ ಕುಸುಮಾಳ ಅವಮಾನ ನಿರಾಶೆಗಿಂತ . ಮಗಳಿಗಾದ ನಿರಾಶೆ ತೋಕವೇ ಹೆಚ್ಚಾಗಿ ಕಂಡಿತ್ತು …..!. ತಾವು ಇನ್ನು ಮುಂದೆ ಇಲ್ಲಿ ಇರುವದಿಲ್ಲ .  ಈ ಮಗು ನಮ್ಮ ರಕ್ತವಲ್ಲ ಇದು ನಮ್ಮದಲ್ಲ ನನ್ನ ಆಸ್ತಿಯಲ್ಲಿ ಒಂದು ಭಾಗವು ನಿನಗೆ ಇಲ್ಲ ಎಂದು ಘೋಷಿಸಿ ಹಳ್ಳಿಗೆ ಹೊರಡಲು ತಯಾರಾದರು.!!.  ಅಭಯ್ ಯಾರನ್ನು ಸಮಾಧಾನಿಸುವ ಗೋಜಿಗೆ ಹೊಗಲಿಲ್ಲ .ಮಗುವನ್ನು ಎತ್ತಿಕೊಂಡು ಕುಸುಮಾಳನ್ನು ಕರೆದುಕೊಂಡು ರೂಮಿಗೆ ಬಂದನು . ನಾಳೆ ವಕೀಲರನ್ನು ಕಂಡು ಮಗುವಿನ ಬಗ್ಗೆ ಮಾತುಕತೆ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸಂಬಂಧಗಳ ನವೀಕರಣ ಸುಧಾ ಹೆಚ್.ಎನ್ ನನ್ನಿಂದ ಆಗಲ್ಲ ಮೇಡಂ, ನನಗೆ ಅವನ ಜೊತೆ ಹೆಂಡತಿತರ ಸಂಸಾರ  ಮಾಡಕ್ಕೆ ಸಾಧ್ಯನೇ ಇಲ್ಲ,ನನಗೆ ಡೈವರ್ಸ್ ಬೇಕು” ಅಂದಳು ಹುಡುಗಿ. ಇಪ್ಪತ್ತೊಂದರ ಹರೆಯದ ಲಕ್ಷಣವಾದ ವಿದ್ಯಾವಂತೆ.       ತಾಯಿಯನ್ನು ಕಳೆದುಕೊಂಡು ತಂದೆಯ ಆನಾದಾರಕ್ಕೊಳಗಾಗಿ ಅನಾಥವಾಗಿದ್ದ ಎರಡು ವರ್ಷದ, ಈ ಹುಡುಗಿಯನ್ನು ಮೊಮ್ಮಗಳ ನಾಥೆಯಿಂದ ಮಡಿಲಿಗೆ ಹಾಕಿಕೊಂಡಿದ್ದಳು,ತಾಯಿಯ ತಾಯಿ ಅಂದರೆ ಅಜ್ಜಿ. ಅಜ್ಜಿ…ಮತ್ತವಳ ಹುಟ್ಟು ಕುರುಡ ಮಗನೇ ಇವಳ ಬಂದು-ಬಳಗ ಎಲ್ಲಾ,ಅಜ್ಜಿ ಹೊಲ, ಮನಿ ಚಾಕರಿ ಎಂದು ಬಿಡುವಿಲ್ಲದೆ ದುಡಿಯುತ್ತಿದ್ದರೆ,ಹುಡುಗಿಗಿಂತ ಏಳು ವರ್ಷ ದೊಡ್ಡವನಾದ ಸೋದರ ಮಾವಜತನದಿಂದ ಸೊಸೆಯ ನ್ನು ಸಂಬಾಳಿಸುತ್ತಿದ್ದ. ಅವಳನ್ನು ತೊಟ್ಟಿಲಲ್ಲಿಟ್ಟು ತೂಗುತ್ತಿದ್ದ. ಅವಳ ಪ್ರತಿ ಚಲನೆ ಅವಳರಿವನ್ನು ಆವರಿಸಿ ಒಳಗಣ್ಣು ತೆರೆದಿಟ್ಟು ಜೋಪಾನ ಮಾಡಿದ್ದ. ಈ ಹುಡುಗಿ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ,ಮಾವ-ಸೊಸೆ ಪರಸ್ಪರ ಅವಲಂಬಿತರಾಗಿ ಬದುಕತೊಡಗಿದ್ದರು. ಶಾಲೆ ಕಲಿಯ ತೊಡಗಿದ್ದು ಆ ಹುಡುಗಿಯಾದರೂ ಮಗ್ಗಿ,ಕತೆ,ಪದ್ಯ ಪಾಠ ವೆಲ್ಲಾ ಮಾವನಿಗೂ ಕಂಠಪಾಠವಾಗಿದ್ದವು. ಇವಳಿಗೆ ತಂದೆ ತಾಯಿಯ ಕೊರತೆ ಕಾಣಲೇ ಬಾರದು, ಅವನಿಗೆ ಕಣ್ಣು ಗಳಿಗೆ ಮುತ್ತಿದ್ದ ಕತ್ತಲ ಅರಿವು ಆಗಲೇ ಬಾರದು, ಎನ್ನುವುದನ್ನು ಪರಸ್ಪರರಿಗೆ ನಂಬಿಸುವ ಹಾಗೆ ಇವರಿಬ್ಬರ ಜೀವನ ನಡೆದಿತ್ತು. ಅದು ಮಾನವ ಸಹಜವಾದ ಪ್ರೀತಿಯೋ..ಅನಿವಾರ್ಯವೋ…ಅವಲಂಬನೆಯೋ ಅವರೆಂದೂ ಈ ಕುರಿತು ಯೋಚಿಸಲೇ ಇಲ್ಲ. ಹುಡುಗಿ ಆಗಲೇ ಕಾಲೇಜು ಮೆಟ್ಟಿಲು ಹತ್ತಿದ್ದಳು. ಇದ್ದಕ್ಕಿದ್ದಂತೆ ಅಜ್ಜಿ ಜಡ್ಡು ಬಂದು ಹಾಸಿಗೆ ಹಿಡಿದಿತ್ತು. ತನ್ನನ್ನೇ ನೆಚ್ಚಿಕೊಂಡ ಹರೆಯದ ಮೊಮ್ಮಗಳು ಕಣ್ಣು ಕಾಣದ ಮಗ ,ಊರಿನ ಹಳೆ ತಲೆಗಳು ಅಜಮಾಯಿಷಿ ಕೊಟ್ಟ ಸಲಹೆಯಂತೆ ನರಳುತ್ತಲೇ ಕುರುಡು ಮಗನೊಂದಿ ಗೆ ಮೊಮ್ಮಗಳ ಮದುವೆ ಮಾಡಿ ಮುಗಿಸಿತ್ತು ಅಜ್ಜಿ. ಮದುವೆ ನಂತರ ಮೂರರಿಂದ ನಾಲ್ಕು ತಿಂಗಳ ಕಾಲ ಅಜ್ಜಿಯ ಆರೈಕೆಯಲ್ಲಿ ಕಳೆದು ಹೋಗಿತ್ತು. ಅಜ್ಜಿಗೆ ಇದೆಲ್ಲ ರೇಜಿಗವನ್ನು ನೋಡಿ, ಅನುಭವಿಸುವ ಯೋಗ ಇದ್ದದ್ದ ಕ್ಕೋ ಏನೋ ಬದುಕಿ ಉಳಿದಿತ್ತು. ಈ ಮಧ್ಯೆಯೂ ಹುಡುಗಿ ವಿದ್ಯಾಭ್ಯಾಸ ಮುಂದುವರಿಸಿದ್ದಳು. ಮೂರು ತಿಂಗಳಿನಿಂದ ಕೆಲಸಕ್ಕೂ ಹೋಗತೊಡಗಿದ್ದಳು. ವರ್ಷ ದಿಂದ ತೊಡರುಗಾಲು ಹಾಕತೊಡಗಿದ್ದ ಇವರಿಬ್ಬರ ಸಂಬಂಧ ಇತ್ತೀಚೆಗೆ ಮುಗ್ಗರಿಸಿ ಬಿದ್ದಿತ್ತು. ಕುರುಡ ಗಂಡ ನಿಂದ ಡೈವರ್ಸ್ ಕೊಡಿಸಿ ಎಂದು ನನ್ನ ಬಳಿ ಬಂದಿದ್ದಳು ಹುಡುಗಿ. ” ಮೇಡಂ ಮಾವ ನಿನಗೆ ಏನು ಬೇಕೋ ಅದು ಬರ್ಕಂಡು ಬಾ ಸಹಿ ಮಾಡಿ ಕೊಡ್ತೀನಿ ಕೋರ್ಟೆಗೆಲ್ಲಾ ಹೋಗೋದೇ ನು ಬ್ಯಾಡ ಅಂದಿದಾನೆ.” ಅಂದಳು.” ನೋಡಮ್ಮ, ಹಾಗೆಲ್ಲಾ ಗಂಡ-ಹೆಂಡತಿ ನೀವು, ನೀವೇ ಕರಾರು , ಪತ್ರ ಅಂತ ಬರೆದುಕೊಂಡರೆ ಅದು ಕಾನೂನುಬದ್ಧ ವಿಚ್ಛೇದನ ಆಗಲ್ಲ. ಹಿಂದೂಗಳಲ್ಲಿ ವಿಚ್ಛೇದನ ನ್ಯಾಯಾಲಯದ ಮೂಲಕಾನೇ ಆಗಬೇಕು . ಸಾಮಾನ್ಯವಾಗಿ ಮದುವೆ ಯಾದ ಒಂದು ವರ್ಷ ಅದ್ಮೇಲೆ ಮಾತ್ರ ಡೈವೋರ್ಸ್ ಕೇಸ್ನ ಕೋರ್ಟಿಗೆ ಹಾಕಬಹುದು. ನಾವು ಕೇಸು ಹಾಕಬೇಕು ಅಂದ್ರೆ ಕಾರಣಗಳು ಬೇಕು. ನೀವು ಎರಡು ವರ್ಷಕ್ಕಿಂತ ಹೆಚ್ಚು ಸಂಸಾರ ಮಾಡದೆ ಬೇರೆ ಬೇರೆ ಇದ್ದಿರಬೇಕು. ಅವನು ನಿನಗೇನಾದರು ಹಿಂಸೆ ಕೊಟ್ಟಿರಬೇಕು , ಏನಾದರೂ ಕಾಯಿಲೆ ಇದ್ದಿರಬೇಕು. ಅವನು ನಿನ್ನ ಜೊತೆ ಅಲ್ಲದೆ ಬೇರೆ ಇನ್ನೊಂದು ಮದುವೆಯಾಗಿದ್ದರೆ,ಬೇರೆ ಧರ್ಮಕ್ಕೆ ಸೇರಿದ್ದರೆ ಹೀಗೆ ಯಾವುದಾದರು ಕಾರಣಗಳಿದ್ದ ರೆ ಅವನ ವಿರುದ್ಧ ಡೈವೋರ್ಸ್ ಕೇಳಿ ಕೇಸು ಹಾಕಬಹು ದು. ಡೈವೋರ್ಸ್  ಅಂದರೆ  ಹುಡುಗಾಟವಲ್ಲ . ತುಂಬಾ ಕಷ್ವ. ಕೋರ್ಟಿಗೆ ತುಂಬಾ ಸಮಯ ಓಡಾಡಬೇಕು.  ನಿನಗೆ ನಿನ್ನ ಗಂಡ  ಡೈವರ್ಸ್ ಕೊಡೋಕೆ ತಯಾರಿದಾನೆ ಅನ್ನೋದಾದ್ರೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ತಗೋಬಹುದು. ಒಂದು ಕೆಲಸ ಮಾಡು ನಿಮ್ಮಜ್ಜೀನ , ಸಾಧ್ಯವಾದರೆ ಗಂಡನ್ನೂ ಕರ್ಕೊಂಡು ಬಾ. ನಾನು ಮಾತಾಡ್ತೀನಿ “ಅಜ್ಜಿ,ಗಂಡ ಎಲ್ಲರನ್ನೂ ಕೂರಿಸಿ, ಮಾತಾಡಿ ಸಮಾಧಾನ ಹೇಳಿ ರಾಜಿ ಮಾಡಿ ಕಳಿಸುವ ಉದ್ದೇಶದಿಂದ ಹೇಳಿ ಕಳಿಸಿದ್ದಕ್ಕೆ ಅಜ್ಜಿ,ಗಂಡನೊಂದಿಗೆ ಬಂದು ‌ ನನ್ನೆದುರು   ಕೂತಿದ್ದಳು.   “ಏನಂತೀರಾ ಅಜ್ಜಿ”. ” ಏನ್ ಹೇಳದವ, ಸಣ್ಣಾಕಿದ್ದಾಗ ಅವನ ಜೊತೆ ಪಾಡಾಗೇ ಇದ್ಲು. ಅರಗಳಿಗೇನು ಅವನ್ನ ಬಿಟ್ಟುರ್ತಿಲಿಲ್ಲ. ಅವನ ಕೈ ಹಿಡ್ಕಂಡೇ ಇರಾಕಿ. ಅವನ ಎಲ್ಲಾ ಚಾಕ್ರಿ ತಾನೇ ಮಾಡಕಿ. ಅವನಿಗೊಂದು ಅಸರೆ ಆಗತೈತಿ ಅಂತ ಮದ್ವಿ ಮಾಡ್ದೆ”. ಅಜ್ಜಿ ತನ್ನ ಪರಿಮಿತಿಯಲ್ಲಿ ಪ್ರಾಮಾಣಿಕವಾಗಿಯೇ ನಡೆದುಕೊಂಡಿದ್ದಳು.” ಆ ವಯಸ್ಸಿನಲ್ಲಿ ನನಗೆ ಏನು ಗೊತ್ತಾಕತಿ ಅಜ್ಜಿ. ನೀನು, ಮಾವ ಬಿಟ್ಟರೆ ನನಗೆ ಬ್ಯಾರೆ ಯಾರೂ ದಿಕ್ಕಿದ್ರು?. ಅವನ ಜೊತೇನೆ ಇರ್ತಿದ್ದೆ. ನೀನು ಬ್ಯಾರೆ ಸಾಯಂಗಿದ್ದಿ. ಹಂಗಂತ ನನಗೆ ಸರಿ-ತಪ್ಪು ತಿಳೀದಿರೋ ವಯಸ್ಸಲ್ಲಿ ನೀನು ಕಣ್ಣು ಕಾಣ್ದವನ ಜೊತೆ ಮದುವೆ ಮಾಡಿಬಿಟ್ಟರೆ ನನಗೆ ಅನ್ಯಾಯ ಮಾಡಿದಂಗೆ ಆಗಾಕಿಲ್ವಾ ? ಸಾಯೋಗುಂಟ ಇವನ ಜೊತೆ ನಾ ಹೆಂಗೆ ಬಾಳ್ಲಿ. ನಂಗೂ ಆಸೆ ಅಂತ ಇರಾಕಿಲ್ವಾ”? ವಯಸ್ಸು , ಕಲಿತ ವಿದ್ಯೆಯ ಪರಿಣಾಮ ಬುದ್ಧಿ ಬಲಿತು ಹೊರಗಿನ ಬಣ್ಣದ ಪ್ರಪಂಚದ ಪರಿಚಯವಾಗಿ ಪ್ರಸ್ತುತ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದ, ಸಂಬಂಧ ಹರಿದುಕೊಳ್ಳಲಾಗದ ಗೊಂದಲದ ಮನಸ್ಥಿತಿಗೆ ಬಲಿಯಾಗಿದ್ದಳು ಆ ಹುಡುಗಿ. “ಕಷ್ಟಪಟ್ಟು ಸಾಕಿ, ಸಲುವಿ, ಮೈಯನೆರೆದ್ದಿದ್ದೂ ನಿನಗ್ಯಾಕೆ ಅನ್ಯಾಯ ಮಾಡ್ಲೇ ತಾಯಿ ನನಗ್ಯಾರಿದಾರೆ? ನೀವಿಬ್ರೂ ಆವಾಗ ಚನ್ನಾಗಿದ್ರಿ,ನನಗೇನೋ ಬ್ಯಾನಿ ಅವಾಗಬಂದಿತ್ತು. ನಿಮ್ಮಿಬ್ಬರನ್ನೇ ಬಿಟ್ಟು ಸತ್ತೋಗಿಬಿಟ್ರೇ? ನೀವಿಬ್ರೂ ಅನಾಥ ಅಗೋಗ್ತೀರ ಅನ್ನೊದಿಗಿಲಿಂದ ಮದುವೆ ಮಾಡ್ಬಿಟ್ಟೆ ! ನಿಮ್ಮವ್ವನ್ನ ಆಣೇಗೂ ಮುಂದೆ ನಿನ್ನ ಜೀವನ ಈ ಮದುವಿಂದ ಹಾಳಾಗತೈತಿ ಅನ್ನೋದು ಅರುವಾಗಲಿಲ್ಲ ನಂಗೆ. ಇರಕ್ಕೆ ಮನೆ ಇತ್ತು ,ನಾಕು ಎಕ್ರಿ ಜಮೀನಿತ್ತು, ಹೆಂಗೋ ಇಬ್ರೂ ಜೀವನ ಮಾಡ್ಕಂಡು ಹೋಕಿರಿ ಅಂತ ಯೋಚ್ನಿ ಮಾಡ್ದೆ.” ಅಜ್ಜಿ ಕಣ್ಣೀರಾಯಿತು. ” ಈಗ ಏನು ಮಾಡೋಣ ಅಜ್ಜಿ” ನಾನು ಕೇಳಿದೆ. ” ಮತ್ತೇನ್ಮಾಡದೈತವಾ, ನನ್ನ ಮಗನಿಗೂ ಇದು ಹೊಂದಲ್ಲಬೇ . ಸುಮ್ಕೆ ಅಕಿ ಹೆಂಗೆ ಹೇಳ್ತಾಳೋ ಹಂಗೆ ಮಾಡಾನ . ದಿನಾ ಇದೇ ರೇಜಿಗ ನೋಡಿ ಸಾಕಾಗೇತಿ ಅಂತ ಹ್ವಾದ ದೀಪಾವಳಿಂದ ವರಾತ ಹಚ್ಚಿದ್ದ. ನಾನೆ ತಡ್ದಿದ್ದೆ. ಇಲ್ಲಿತನ ಬಂದಾಳೆ ಅಂದ್ರೆ ತೀರ್ತಲ್ಲ , ಅಕಿ ಹೆಂಗೆ ಹೇಳ್ತಾಳೆ ಹಂಗೆ ಮಾಡ್ರೀ. ನನ್ನ ಮಗನ ಹಣೆ ಬರದಾಗ ಇದ್ದಾಂಗ ಆಕತಿ.” ಅಜ್ಜಿ ಗಟ್ಟಿಯಾಗಿಯೇ ಹೇಳಿದಳು. “ನೀನೇನಂತಿಯಪ್ಪ “. ನನ್ನ ಗೊಂದಲದ ಪ್ರಶ್ನೆ. ” ನಮ್ಮಿಂದ ತಪ್ಪು ಆಗೇತಿ ಮೇಡಂ. ತಂದೆ,ತಾಯಿ ಇಲ್ದಿರೋ , ಇನ್ನು ಸರಿಯಾಗಿ ತಿಳುವಳಿಕಿ ಬಾರದ ಹುಡುಗಿ ಮದುವೀನ ನನ್ನಂಥ ಬದುಕು ಕತ್ತಲಾದವನ ಜೋಡಿ ನಮ್ಮವ್ವ ಮಾಡ್ತೀನಿ ಅಂದಾಗ ನಾನಾದ್ರೂ ಯೋಚನೆ ಮಾಡಿ ಒಲ್ಲೆ ಅನ್ನಬೇಕಾಗಿತ್ತು. ನಮ್ಮವ್ವ ಲೋಕ ತಿಳೀದವಳು. ಅವಳ ಮನಸ್ಸಿನಲ್ಲಿ ವಿಷ ಇರ್ಲಿಲ್ಲ. ನಾನೇ ದುರಾಸೆಗೆ ಬಿದ್ದೆ. ನಮ್ಮನ್ನೇ ನಂಬಿದ್ದವಳಿಗೆ ಮೋಸ ಮಾಡ್ದಂಗಾಗೈತಿ. ಇವತ್ತಿನತನಕ ಆಕಿ ನನ್ನ ಹಡದವ್ವನಷ್ಟೇ ಸಮ ಕಾಳಜಿಯಿಂದ ನೊಡ್ಕಂಡವಳೆ. ನನ್ನ ಚಾಕರಿ ಮಾಡ್ಯಾಳೆ,ಗೆಳತಿತರ ಒಂದಿಷ್ಟು ಜ್ಞಾನ ,ಬುದ್ದಿ ಕಲಿಸಿದಾಳೆ. ತಬಲ , ಸಂಗೀತದ ಹೊಸ ಜಗತ್ತು ನನಗೆ ತೋರಿಸಿದ್ದು ಆಕೀನೇ ತೀರಿಸಲಾರದಷ್ಟು ,ಆಕಿ ಋಣ ನನ್ನಮೇಲೈತೆ. ಮುಂದೆ ಆಕಿ ಸುಖವಾಗಿ ಬಾಳಿ, ಬದುಕಬೇಕು. ಅದಕ್ಕೆ ನಾನು ಏನು ಮಾಡಬೇಕು ಹೇಳಿರಿ ? .” ಹುಡುಗನ ಸಮತೂಕದ ಮಾತು,ಸಮರ್ಪಣಾ ಭಾವ,ಅಂತರಂಗದ ಶುದ್ಧತೆ , ಸಮಚಿತ್ತದ ನಿರ್ಧಾರ, ತಪ್ಪೊಪ್ಪಿಗೆಯೊಂದಿಗೆ ಋಣಸಂದಾಯದ ಆಶಯ. ನಾನು ನಿರೀಕ್ಷಿಸದ ಪರಿಪೂರ್ಣ ವ್ಯಕ್ತಿತ್ವದ ಅನಾವರಣ ನನ್ನ ಬಾಯಿ ಕಟ್ಟಿಸಿತು . ಪರಸ್ಪರರ ಒಳಿತಿಗೆ ತುಡಿಯುವ ಆ ಮೂರೂ ಜೀವಗಳಿಗೆ ಮನದೊಳಗೆ ಶರಣೆಂದೆ. ಎರಡು ಎಕರೆ ಜಮೀನನ್ನು ಶಾಶ್ವತ ಜೀವನಾಂಶವನ್ನಾಗಿ ಆಕೆಯ ಹೆಸರಿಗೆ ಬರೆದುಕೊಟ್ಟು ಹರಸಿದರು ತಾಯಿ. ಮಗ. ಈ ವೈವಾಹಿಕ ಬಂಧನದಿಂದ ಬಿಡುಗಡೆಯಾದ. ಅಜ್ಜಿ , ಮಾವ, ಮೊಮ್ಮಗಳ ಬಂಧ ಜವಬ್ದಾರಿಯನ್ನು ಗಟ್ಟಿಗೊಳಿಸಬೇಕೆಂದು ಮೂವರಿಗೂ ತಾಕೀತು ಮಾಡಿ, ವಿಚ್ಛೇದನದ ಅರ್ಜಿ ಗುಜರಾಯಿಸುವ ತಯಾರಿಯಲ್ಲಿ ತೊಡಗಿದೆ. ……….. ………..

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಅಂಜಲಿ ಜ್ಯೋತಿ ಬಾಳಿಗ  ಇಂಜಿನಿಯರಿಂಗ್ ಕೆಲಸದ ನಿಮಿತ್ತ  ಅಮೇರಿಕಾಕ್ಕೆ ಹೋದ ಅಂಜಲಿ ‘ವೀಸಾ’ ರಿನಿವಲ್ ಗಾಗಿ ಮತ್ತೆ ಭಾರತಕ್ಕೆ ಬಂದಿದ್ದಳು. ಬೆಂಗಳೂರು ವಿಮಾನ ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ‘ಪಂಚತಾರಾ’ ಹೊಟೇಲ್ ಗೆ ಹೋಗಿ ಫ್ರೆಶ್ ಆಗಿ ತನ್ನ ಗೆಳತಿಯನ್ನು ಭೇಟಿ ಮಾಡಬೇಕೆಂದು ವೆರೆಂಡಾದ ಬಳಿ ಬಂದಾಗ ತನ್ನ ಗತ ಜೀವನದ ಭಾಗವಾಗಿರುವ ವ್ಯಕ್ತಿಯನ್ನು ಹೊಟೇಲ್ ‌ನ ಪಾರ್ಕಿಂಗ್ ನಲ್ಲಿ ನೋಡಿದೊಡನೆ ಭಯದಿಂದ ಕಂಪಿಸತೊಡಗಿದಳು. ತಾನು ಯಾರನ್ನು ಜೀವನದುದ್ದಕ್ಕೂ  ನೋಡಬಾರದು ಅಂದುಕೊಂಡಿದ್ದಳೋ ಆ ವ್ಯಕ್ತಿಯ ಆಗಮನವು,ಅವಳ ಬದುಕನ್ನು ಮತ್ತೊಮ್ಮೆ ಕತ್ತಲ ಕೂಪಕ್ಕೆ ತಳ್ಳಬಹುದೆಂಬ ಭಯ ಅಂಜಲಿಯ ಮೈ ಮನವನ್ನು ಆವರಿಸತೊಡಗಿತ್ತು‌. ಗೆಳತಿಯ ನೋಡಲೆಂದು ಹೊರಗೆ ಹೊರಟವಳು‌ ಮನಕ್ಷೋಭೆಯಿಂದ ಹಾಗೆಯೇ ಹಿಂತಿರುಗಿ ಹೂದೋಟದಲ್ಲಿ ಹಾಕಿದ್ದ ಆರಾಮ ಆಸನದ ಮೇಲೆ ಕೂತು ಕಣ್ಣು ಮುಚ್ಚಿ ಮಲಗಿದಳು. ತಣ್ಣನೆಯ ಗಾಳಿಯ ಜೊತೆಗೆ ಪಟ ಪಟ ಎಂದು ಮಳೆಯ ಹನಿಗಳು ಮುಖಕ್ಕೆ ಬಡಿದರೂ ಅವಳು ಏಳದೇ  ಕೂತಿರುವುದನ್ನು ನೋಡಿದ ಮ್ಯಾನೇಜರ್  ಒಳಗಿನಿಂದ ಕೊಡೆಯನ್ನು ತಂದು ಅಂಜಲಿ ಒದ್ದೆಯಾಗದಿರಲೆಂದು ತಲೆಯ ಮೇಲೆ ಹಿಡಿದ. ತನ್ನಿಂದ ಅವನಿಗೇಕೆ ತೊಂದರೆ ಎಂದು ಅಂಜಲಿ ಅವನ‌ ಜೊತೆಯಲ್ಲಿ ಹೆಜ್ಜೆಗೆ ಹೆಜ್ಜೆ ಹಾಕಿದಳು. ಪನ್ನೀರಿನಂತೆ ಬೀಳುತ್ತಿದ್ದ ಮಳೆಯ ಹನಿಯ ಬಿಂದುಗಳು ತನ್ನ ಆಕಾರವನ್ನು ಹೆಚ್ಚಿಸುತ್ತಿದ್ದಂತೆ ಅಂಜಲಿ ಸಂಪೂರ್ಣವಾಗಿ ಒದ್ದೆಯಾಗುವುದನ್ನು ನೋಡಿದ ಮ್ಯಾನೇಜರ್ ರಾಜೀವ್ ಪಾಂಡೆ ವೆರಾಂಡದ ಕಡೆ ಓಡಿದ. ಅವನು ವೆರಾಂಡಕ್ಕೆ ತಲುಪಿದರೂ ಅವಳ ನಡಿಗೆಯ ವೇಗ ಹೆಚ್ಚಾಗಲಿಲ್ಲ. ಅವಳಿನ್ನೂ ವೆರಾಂಡ ತಲುಪಲು ತುಂಬಾ  ದೂರದಲ್ಲೇ ಇದ್ದಳು.ಗಾಳಿ ಮಳೆಯ ಜೊತೆಗೆ ಸಿಡಿಲಿನ ಬೆಳಕಿಗೆ ಅಂಜಲಿಯ ಮನದಲ್ಲಿ ನಡೆಯುತ್ತಿದ್ದ ಸಂಘರ್ಷದಿಂದ ದುಃಖ ಉಮ್ಮಳಿಸಿ ಬಂದ‌ ಕಣ್ಣೀರು ಮಳೆ ಹನಿಯ ಜೊತೆಗೆ ಮಿಲನವಾದದ್ದು ರಾಜೀವನ ಕಣ್ಣಿಗೆ ‌ಕಾಣಿಸಿತು. ಅಂಜಲಿ ಕೋಣೆಯೊಳಗೆ ಬಂದವಳೇ ಒದ್ದೆಯಾಗಿದ್ದರೂ ಹಾಗೆಯೇ ಹಾಸಿಗೆಯ ಮೇಲೆ ಬಿದ್ದಳು. ಕಣ್ಣೀರು ಒಂದೊಂದೇ ಹನಿ ಹನಿಯಾಗಿ ಬೀಳುವಾಗ ಅವಳ ಜೀವನದಲ್ಲಿ ನಡೆದ ಘಟನೆಗಳು ಒಂದೊಂದರಂತೆ ಕಾಡಲು ಶುರುವಾಯಿತು. ****************************************************ವೇಣುಗೋಪಾಲರಾಯರು ಹಾಗೂ ಸುನಂದಿ ದಂಪತಿಯ ಏಕಮಾತ್ರ ಪುತ್ರಿಯೇ ಅಂಜಲಿ.ತಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ನಗು ಮುಖದಿಂದ ಸ್ವೀಕರಿಸುವ ಅಪ್ಪನೇ ಅವಳಿಗೆ ಸ್ಪೂರ್ತಿ. ಅಪ್ಪ ತಂದ ದುಡಿಮೆಯಲ್ಲಿ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸುವ ಅಮ್ಮನೆಂದರೆ ಅಂಜಲಿಗೆ ಅಪಾರ ಪ್ರೀತಿ. ತನ್ನ ಓದಿಗಾಗಿ ಹಗಲು ರಾತ್ರಿ ಕಷ್ಟಪಡುತಿರುವ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನ್ನ ಮನಸ್ಸನ್ನು ಸಂಪೂರ್ಣವಾಗಿ ಓದಿನೆಡೆಗೆ ಕೇಂದ್ರಿಕರಿಸಿದ್ದಳು.ತಂದೆಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸದ ಖರ್ಚನ್ನು ನಿಭಾಯಿಸುವ ಶಕ್ತಿ ಇಲ್ಲವೆಂದು ತಿಳಿದ ಅಂಜಲಿ ಮೆರಿಟ್ ಸೀಟ್ ಪಡೆದರೆ ಉಚಿತವಾಗಿ ಕಾಲೇಜಿನಲ್ಲಿ ಅಡ್ಮಿಷನ್ ಸಿಗುತ್ತದೆ ಜೊತೆ ಜೊತೆಗೆ ಸ್ಕಾಲರ್ಶಿಪ್ ನಿಂದ ಬರುವ ಹಣವನ್ನು ಹಾಸ್ಟೆಲ್ ವಾಸಕ್ಕೆ ಉಪಯೋಗಿಸುವ ಯೋಚನೆಯನ್ನು ಮಾಡಿ ಕಷ್ಟಪಟ್ಟು ಓದಿ ಸಿಯಿಟಿ ಯಲ್ಲಿ ರ‌್ಯಾಂಕ್ ಪಡೆದು ತನ್ನ ಕನಸು ನನಸು ಮಾಡುವತ್ತ ಹೆಜ್ಜೆ ಇಟ್ಟಳು. ಹಾಸಿಗೆ ಇದ್ದಷ್ಟೆ ಕಾಲು ಚಾಚಬೇಕೆಂದು  ತಿಳಿದ ಅಂಜಲಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮೇಲೂ ಅಳೆದು ತೂಗಿ ತನ್ನ ಹಣವನ್ನು ಖರ್ಚು ಮಾಡುತ್ತಿದ್ದಳು. ಅಂಜಲಿಯ ಕಷ್ಟ ಅರಿತ ಗೆಳತಿಯರು ಅವಳ ಮನಸ್ಸಿಗೆ ನೋವಾಗದಂತೆ  ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು.ಹಾಸ್ಟೆಲ್, ಲೈಬ್ರರಿ ಬಿಟ್ಟರೆ ಬೇರೆ ಯಾವುದೇ ವಿಷಯದ ಕಡೆ ಗಮನ ಕೊಡದ ಅಂಜಲಿ ಮೊದಲ ವರ್ಷ ಇಂಜಿನಿಯರಿಂಗ್ ನಲ್ಲಿ ತರಗತಿಗೆ ಪ್ರಥಮ ಸ್ಥಾನ ಪಡೆದಳು. ರಜೆಯಲ್ಲಿ ಮನೆಗೆ ಹೋಗಿ ಅಮ್ಮ ತಯಾರಿಸಿದ ರುಚಿಯಾದ ಊಟ ಮಾಡಿ ಅಪ್ಪನ ಹಿತವಾದ ಪ್ರೀತಿಯನ್ನು ಸವಿಯುತ್ತಿದ್ದ ಅಂಜಲಿಗೆ ದಿನಗಳು ಓಡುತ್ತಿದ್ದದ್ದೆ ತಿಳಿಯಲಿಲ್ಲ. ಇನ್ನೇನೂ ಒಂದು ವರ್ಷದ ಇಂಜಿನಿಯರಿಂಗ್ ಕೋರ್ಸ್ ಬಾಕಿ ಇರುವ ಹೊತ್ತಿಗೆ ಅಂಜಲಿಯ ಸಹಪಾಠಿಯಾದ ಪ್ರಮೋದ ಅವಳ ಬಳಿ ಬಂದು ಪ್ರೇಮಭಿಕ್ಷೆ ಕೇಳಿದ.“ನನಗೆ ಈ ಪ್ರೀತಿ ಪ್ರೇಮದಲ್ಲಿ ವಿಶ್ವಾಸವಿಲ್ಲ ಪ್ರಮೋದ್. ಓದು ಮುಗಿದ ಮೇಲೆ ನನಗೆ ನನ್ನದೇ ಕೆಲವು ಗುರಿಗಳು ಇವೆ. ಕೆಲಸಕ್ಕೆ ಸೇರಬೇಕು, ಇಷ್ಟು ವರ್ಷ ಬಾಡಿಗೆ ಮನೆಯ ಸಹವಾಸ ಸಾಕಾಗಿದೆ. ಅಪ್ಪ ಅಮ್ಮನಿಗಾಗಿ ಪುಟ್ಟ ಮನೆಯನ್ನು ಖರೀದಿಸಬೇಕು. ಸ್ವಲ್ಪ ಸಮಯ ಅವರ ಜೊತೆಯಲ್ಲಿ ಕಳೆಯಬೇಕು.ಅಪ್ಪ ಅಮ್ಮ  ಇಷ್ಟಪಟ್ಟ ಹುಡುಗನ ಗುಣ ಸ್ವಭಾವ  ಇಷ್ಟವಾದರೆ ‌ಅವನ ಜೊತೆಯಲ್ಲಿ ಮದುವೆಯಾಗುವುದು..” ಎಂದು ಹೇಳಿ ಅವನಿಗೆ ಸಮಾಧಾನ ಮಾಡಿ ಕಳುಹಿಸಿದಳು. ಅಂಜಲಿಯ ತಿರಸ್ಕಾರ ಪ್ರಮೋದ್ ಗೆ ಬೇಸರವಾದರೂ ಅವಳ ಬೆನ್ನು ಬಿಡದ ಬೇತಾಳದಂತೆ ಹಿಂದೆ ಸುತ್ತಲೂ ಶುರುಮಾಡಿದ. ಅವನ ವರ್ತನೆಯಿಂದ ತನ್ನ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದೆಂದು ಅರಿತ ಅಂಜಲಿ ಪ್ರಾಂಶುಪಾಲರಿಗೆ ದೂರು ಕೊಡುವೆ ಎಂದು ಪ್ರಮೋದನಿಗೆ ಹೆದರಿಸಿದಳು. ಓದು ಬಿಟ್ಟು ಬೇರೆ ಯಾವುದೇ ವಿಷಯಕ್ಕೂ ತಲೆ ಹಾಕದೇ ಇರುತ್ತಿದ್ದ ಅಂಜಲಿಯ ಹಠದ ಸ್ವಭಾವವನ್ನು ಇಷ್ಟು ವರ್ಷದಿಂದ ನೋಡಿದ್ದ ಪ್ರಮೋದ್ ಗೆ ಅವಳು ನಿಜವಾಗಿಯೂ ಪ್ರಾಂಶುಪಾಲರಿಗೆ ದೂರು ಕೊಟ್ಟರೆ ತನ್ನ ವಿದ್ಯಾರ್ಥಿ ಜೀವನಕ್ಕೆ  ಕಪ್ಪು ಚುಕ್ಕೆ ಬೀಳುವುದು ಖಚಿತವೆಂದು ತಿಳಿದು ಅಂಜಲಿಯ ವಿಷಯಕ್ಕೆ ಹೋಗುವುದನ್ನು ಕಡಿಮೆ ಮಾಡಿ ಸುಮ್ಮನಾಗುತ್ತಾನೆ. ಸಮಯ ಯಾರಿಗೂ ಕಾಯದೇ ಓಡುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಇನ್ನೇನೂ ತಾವು ‘ಇಂಜಿನಿಯರ್’ ಆದೆವು ಎಂಬ ಖುಷಿಯಿಂದ ಅಂತಿಮ ಪರೀಕ್ಷೆಗಾಗಿ ಹಗಲು ರಾತ್ರಿ ಓದಿ ಪರೀಕ್ಷೆಯನ್ನು ಬರೆದಿದ್ದರು.ವಿದ್ಯಾರ್ಥಿ ಜೀವನದ ಕೊನೆಯ ದಿನವನ್ನು ಮರೆಯದಂತೆ ಕಳೆಯಬೇಕೆಂದು ಯೋಚಿಸಿದ ಎಲ್ಲರೂ ಸೇರಿ ಪಾರ್ಟಿ ಮಾಡುತ್ತಾರೆ.ಔತಣ ಕೂಟ ಮುಗಿಸಿದ ವಿದ್ಯಾರ್ಥಿಗಳು ಸಂಜೆಯ ಹೊತ್ತಿಗೆ ಊರಿಗೆ ಹೋಗಲಿರುವುದೆಂದು ಹಾಸ್ಟೆಲ್ ನಿಂದ ಲಗೇಜು‌ ಹಿಡಿದು ತಮ್ಮ ತಮ್ಮ ಮನೆಗೆ ಹೋಗಲು ಬಸ್ಸು ನಿಲ್ದಾಣಕ್ಕೆ ಬರುತ್ತಾರೆ. ಒಬ್ಬೊಬ್ಬರೇ  ಅವರ ಊರಿನ‌ ಬಸ್ಸು ಬಂದಾಗ ಉಳಿದವರಿಗೆ ‘ಬಾಯ್’ ಎಂದು  ಹೇಳಿ ಬಸ್ಸು ಹತ್ತಿ ಹೋದರು. ಸುಮಾರು ಎಂಟು ಗಂಟೆ ಕಳೆದರೂ ತನ್ನ ಊರಿಗೆ ಹೋಗುವ ಬಸ್ಸು ಬಾರದೇ ಮುಂದೇನೂ ಮಾಡುವುದೆಂದು ತೋಚದೇ ನಿಂತಿದ್ದ ಅಂಜಲಿ ಪರಿಚಿತ ಧ್ವನಿಯೊಂದು‌‌ ಕೇಳಿ‌ ಗೆಲುವಾಗುತ್ತಾಳೆ. ತನ್ನ ಗೆಳೆಯರನ್ನು ಬಸ್ಸು ಹತ್ತಿಸಲು ಬಂದಿದ್ದ ಪ್ರಮೋದ್ , ಅಂಜಲಿಯನ್ನು ಕಂಡು ಒಬ್ಬಳೇ ನಿಂತಿರುವ ಬಗ್ಗೆ ಕೇಳುತ್ತಾನೆ. ಬಸ್ಸು ಬಾರದಿರುವ ಕಾರಣದಿಂದ ಇಲ್ಲಿ ನಿಂತಿರುವುದು ಎಂದು ಅಂಜಲಿ ಹೇಳಿದಾಗ “ಈ ಹೊತ್ತಿನಲ್ಲಿ ನೀನು‌ ಒಬ್ಬಳೇ ಇಲ್ಲಿ ನಿಲ್ಲುವುದು ಬೇಡಾ, ನಾನು ನಿನ್ನನ್ನು ಮನೆಗೆ ತಲುಪಿಸುತ್ತೇನೆ..” ಎಂದು ಪ್ರಮೋದ್ ಹೇಳುತ್ತಾನೆ. ಅಂಜಲಿ ಬೇಡವೆಂದು ಹೇಳಿದರೂ ಕೇಳದೆ ಅವಳ ಲಗೇಜುಗಳನ್ನು ಕಾರಿನ ಡಿಕ್ಕಿಯಲ್ಲಿರಿಸಿ ಕಾರಿನ ಡೋರ್ ತೆಗೆದು‌ ನಿಲ್ಲುತ್ತಾನೆ. ಪರಿಚಯವಿರದವರ ಜೊತೆಗೆ ನಿಲ್ಲುವ ಬದಲು ಪರಿಚಯದವನ ಜೊತೆಯಲ್ಲಿ ಮನೆಗೆ ತಲುಪುದು ಕ್ಷೇಮವೆಂದು ಅಂಜಲಿ ಕಾರಿನೊಳಗೆ ಕೂತುಕೊಳ್ಳುತ್ತಾಳೆ. ಅಂಜಲಿಯ ಊರು ತಲುಪಲು ಏಳು ಗಂಟೆಯ ಪ್ರಯಾಣವಿರುವುದರಿಂದ ಪ್ರಮೋದ್ ಅರ್ಧದಾರಿಯಲ್ಲಿ ಊಟ ಮಾಡಲು ಕಾರು ನಿಲ್ಲಿಸುತ್ತಾನೆ. ಹಳೆಯ ಕಹಿನೆನಪುಗಳನ್ನು ಮರೆತ ಇಬ್ಬರೂ ನಗು ನಗುತ್ತಾ ಊಟ ಮುಗಿಸಿ ಕಾರನ್ನು ಏರುತ್ತಾರೆ. ಪಾರ್ಟಿಯಲ್ಲಿ ಕುಣಿದು ಸುಸ್ತಾಗಿದ್ದ ಅಂಜಲಿ‌ ಚಳಿಗೆ ಮುದುಡಿ ಕಾರಿನಲ್ಲೇ ಮಲಗಿರುವಾಗ ಪ್ರಮೋದ್ ಗೆ ಕೆಟ್ಟ ವಿಚಾರ ಮನದಲ್ಲಿ ‌ಸುಳಿಯುತ್ತದೆ.‌ ಪ್ರಮೋದ್ ಗೆ ತಾನು ಮಾಡುವುದು ತಪ್ಪು ಎಂದು ತಿಳಿದಿದ್ದರೂ ವಯಸ್ಸಿನ ಕಾಮನೆಯನ್ನು ತಡೆದುಕೊಳ್ಳಲಾಗದೇ  ಜನಸಂಚಾರವಿಲ್ಲದ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುತ್ತಾನೆ.‌ ನಿದ್ದೆಯ ಮಂಪರಿನಲ್ಲಿದ್ದ ಅಂಜಲಿ ಊರು ಬಂತಾ?  ಎಂದು ಕೇಳುವಾಗ ಬರ್ಹಿದೆಸೆಗಾಗಿ ಎಂದು ಸುಳ್ಳು ಹೇಳುತ್ತಾನೆ.‌ ತನ್ನ ಪ್ರೀತಿಯನ್ನು ತಿರಸ್ಕರಿಸಿದ ಅಂಜಲಿಯ ಜೀವನ ಹಾಳು ಮಾಡಲು ಇದೇ ಸರಿಯಾದ ಸಮಯವೆಂದು ಯೋಚಿಸಿದ ಪ್ರಮೋದ್ ಹಸಿದ ವ್ಯಾಘ್ರದಂತೆ ಅವಳ ದೇಹವನ್ನು ‌ಆಕ್ರಮಿಸುತ್ತಾನೆ. ಎದೆಯ ಮೇಲೆಲ್ಲಾ ಕಚ್ಚಿ ರಕ್ತ ಸೋರುತ್ತಿದ್ದರೂ ತನ್ನ ಪೈಶಾಚಿಕ ಕೃತ್ಯವನ್ನು ಮುಂದುವರಿಸುತ್ತಾನೆ. ಎಷ್ಟು ಚೀರಾಡಿದರೂ ತನ್ನನ್ನು ರಕ್ಷಿಸಲು ಯಾರು ಬರಲಾರರು ಎಂದು ಅಂಜಲಿಗೆ ಅರಿವಾದಾಗ ಸೋತು ಕಣ್ಣೀರು ಹಾಕುತ್ತಾಳೆ. ತನ್ನ ಕೆಲಸ ಮುಗಿಸಿದ ಪ್ರಮೋದ್ ಅವಳ ಕುತ್ತಿಗೆಯನ್ನು ಹಿಸುಕಿ ಸತ್ತು ಹೋದಳೆಂದು ತಿಳಿದು ಅಲ್ಲೇ ಬಿಟ್ಟು ಹೋಗುತ್ತಾನೆ. ಅಂಜಲಿಯ ದೈವಬಲ ಚೆನ್ನಾಗಿತ್ತೋ, ಅಥವಾ ಪ್ರಮೋದ್ ‌ಗ್ರಹಚಾರ ಕೆಟ್ಟಿತ್ತೋ, ಅಂಜಲಿ ಸಾಯದೇ ಬದುಕಿರುತ್ತಾಳೆ. ಮುಂಜಾನೆಯ ಹೊತ್ತು ಪ್ರಜ್ಞೆ ಬಂದ ಅಂಜಲಿ ತನ್ನ ಇರುವಿಕೆಯನ್ನು ತಿಳಿಸಲು ಕಿರುಚಾಡುತ್ತಾಳೆ. ಆ ದಾರಿಯಲ್ಲಿ ಬರುತ್ತಿದ್ದ ಲಾರಿಯವರು ಕಿರುಚಾಟ ಕೇಳಿ ಗಾಡಿ ನಿಲ್ಲಿಸಿ ನೋವಿನಿಂದ  ಒದ್ದಾಡುತಿರುವ ಅಂಜಲಿಯನ್ನು ಲಾರಿಯಲ್ಲಿ ಹಾಕಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಿಂದ ಅವಳ ಮನೆಗೆ ವಿಷಯ ತಿಳಿಸಿದಾಗ ಅಳುತ್ತಾ ರಾಯರು ಹಾಗೂ ಅವರ ಪತ್ನಿ ಬರುತ್ತಾರೆ. ಹದಿನೈದು ದಿನ ಸಾವು ಬದುಕಿನೊಂದಿಗೆ  ಹೋರಾಡಿದ ಅಂಜಲಿ ಕೊನೆಗೂ ಬದುಕಿ ಉಳಿಯುತ್ತಾಳೆ. ವೇಣುಗೋಪಾಲರಾಯರು ಅಂಜಲಿಯನ್ನು ಮನೆಗೆ ಕರೆದುಕೊಂಡು ಬಂದಿರುತ್ತಾರೆ. ಅತ್ಯಾಚಾರದ ಕೇಸು ಆಗಿರುವುದರಿಂದ ಅಂಜಲಿ ನ್ಯಾಯಲಯದ ಮೆಟ್ಟಿಲು ಹತ್ತಬೇಕಾಗುತ್ತದೆ. ವಿಚಾರಣೆಗಾಗಿ ಅವಳು ಠಾಣೆಗೆ ಹೋಗಿ ಬರುವುದರಿಂದ ಅವಳಿಗೆ ಅತ್ಯಾಚಾರವಾದ  ವಿಷಯದ ಹೊರಬೀಳುತ್ತದೆ.ಈ ಸುದ್ದಿಯನ್ನು ಯಾರೋ ಹಬ್ಬಿಸಿದ್ದರಿಂದ ಮಾಧ್ಯಮದವರು ಇವಳ ಬಗ್ಗೆ ಮಾಹಿತಿಯನ್ನು ಕೇಳಲು ಒಬ್ಬೊಬ್ಬರಾಗಿ ಸೇರುತ್ತಾರೆ. ತಮ್ಮ ಮಗಳಂತೆ ಅಂಜಲಿ ಎಂಬ ಅಕ್ಕರೆಯು ತೊರದೇ, ಅವಳ ಸಾಧನೆಯ ಬಗ್ಗೆ ಅಸಮಾಧಾನವನ್ನು ಹೊಂದಿದವರು  ಕೆಟ್ಟಕೆಟ್ಟದಾಗಿ ಮಾಧ್ಯಮದವರ ಬಳಿ ಹೇಳಿದಾಗ ಇದನ್ನೇ ದಾಳವಾಗಿ ಉಪಯೋಗಿಸಿದ ಪ್ರಮೋದ್ ಕೇಸ್ ಗೆಲ್ಲುತ್ತಾನೆ. ನ್ಯಾಯ ದೊರಕದೇ ಅಂಜಲಿಯ ಜೊತೆಗೆ ಹೆತ್ತವರು ಕುಸಿಯುತ್ತಾರೆ. ಸಮಾಜದಲ್ಲಿ ತಮ್ಮ ಗೌರವ ಹಾಳಾಯಿತು, ಇನ್ನೂ ಬದುಕಲು ಸಾಧ್ಯವಿಲ್ಲವೆಂದು ‌ಮೂವರು ಸೇರಿ ಕೀಟನಾಶಕ‌ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ವಿಧಿನಿಯಮವೋ, ದೇವರ ಇಚ್ಛೆಯೋ ಹೆತ್ತವರ ಕಳೆದುಕೊಂಡ ಅಂಜಲಿ ಮತ್ತೊಮ್ಮೆ ಸಾವು ಬದುಕಿನೊಡನೆ ಹೋರಾಡಿ ‌ಬದುಕುತ್ತಾಳೆ. ಇಂಜಿನಿಯರಿಂಗ್ ನಲ್ಲಿ ಅಂಜಲಿ ರಾಜ್ಯಕ್ಕೆ ‌ಪ್ರಥಮ ಸ್ಥಾನ ಪಡೆದ ವಿಷಯ ತಿಳಿದು ಶುಭಕೋರಲು ‘ರೀನಾ’ ಪೋನ್ ಕರೆ ಮಾಡಿದಾಗ ತಾನು ಅನುಭವಿಸಿದ ನೋವು, ಹೆತ್ತವರ ಸಾವು ಎಲ್ಲವನ್ನೂ ಅಂಜಲಿ  ರೀನಾಳಿಗೆ ತಿಳಿಸುತ್ತಾಳೆ. ಅಂಜಲಿಯ ಪರಿಸ್ಥಿತಿಗೆ ನೊಂದ ರೀನಾ ಆಸ್ಪತ್ರೆಗೆ ಬಂದು ಅವಳನ್ನು ಕರೆದುಕೊಂಡು ತನ್ನ ಊರಿಗೆ ಹೋಗುತ್ತಾಳೆ.“ಇನ್ನೂ ಚಿಕ್ಕ ವಯಸ್ಸು ನಿನ್ನದು, ಕಹಿ ಘಟನೆಯನ್ನು ಮರೆತು ಬದುಕುವುದನ್ನು ಕಲಿ ” ಎಂದು ಅವಳಿಗೆ ಬುದ್ದಿ ಹೇಳಿ ಕೆಲಸಕ್ಕೆ ಸೇರಲು ಒತ್ತಾಯಿಸುತ್ತಾಳೆ. ಎಲ್ಲವನ್ನೂ ಮರೆತು ದೂರದ ದಿಲ್ಲಿಯಲ್ಲಿ ನೆಲೆನಿಂತ ಅಂಜಲಿ ತಾನು ಕಲಿತ ವಿದ್ಯೆಗೆ ಸರಿಹೊಂದುವಂತ‌ ಕೆಲಸವನ್ನು ಹುಡುಕಿ ಜೀವನ ನಡೆಸುತ್ತಾಳೆ. ****************************************************ಹಳೆಯ ನೆನಪಿನಿಂದ ಎಚ್ಚೆತ್ತು  ಬೆವರಿನಿಂದ ಮುದ್ದೆಯಾದ ಅಂಜಲಿ ಗಟಗಟನೆ ಬಾಟಲ್ ನಿಂದ ನೀರು ಕುಡಿದಳು. ದೇಹ ಹಾಗೂ ಮನಸ್ಸು ಸಹಜ ಸ್ಥಿತಿಗೆ ಮರಳಿದಾಗ ಪ್ರಮೋದ್ ಗೊಂದು ಗತಿ ಕಾಣಿಸಬೇಕೆಂದು ಅವನ ಚಲನವಲನ ಗಮನಿಸಿದಳು. ತನ್ನ ಮುಖ ಪರಿಚಯ ತಿಳಿಯಬಾರದೆಂದು‌ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿಕೊಂಡು  ಹೋಟೆಲ್ ನ ಒಬ್ಬ ಸರ್ವೆಂಟ್ ‘ಗೆ ಹಣದ ರುಚಿ ತೋರಿಸಿ ಪ್ರಮೋದ್ ನ ಬಗ್ಗೆ ಸಂಪೂರ್ಣ ವಿಷಯ ಕಲೆ ಹಾಕಿದಳು. ಅವನು, “ಪ್ರಮೋದ್ ಇಲ್ಲಿಯ ಖಾಯಂ ಕಸ್ಟಮರ್ .ತಾನು ಮದುವೆಯಾಗುವ  ಹುಡುಗಿಯ ಪರಿಚಯಮಾಡಿಕೊಳ್ಳಲು ಬಂದಿದ್ದಾನೆ” ಎಂದು ಹೇಳಿದಾಗ ಅಂಜಲಿಗೆ ಕೋಪದ ಜೊತೆಗೆ ಆ ಹುಡುಗಿಯ ಬಗ್ಗೆ ಮರುಕವಾಗುತ್ತದೆ. ನನ್ನಂತೆ ಮತ್ತೊಂದು ಹೆಣ್ಣಿನ ಬಾಳು ಹಾಳಾಗುವುದು ಬೇಡವೆಂದು ಯೋಚಿಸಿ ಪ್ರಮೋದ್ ನಂತಹ ಕ್ರಿಮಿಗಳನ್ನು ಹೊಸಕಿ ಹಾಕಲು ನಿರ್ಧಾರ ಮಾಡುತ್ತಾಳೆ. ಸರ್ವೆಂಟ್ ಸಹಾಯದಿಂದ  ಬಾಡಿಗೆ ಹಂತಕರ ಪರಿಚಯ ಮಾಡಿಕೊಂಡ ಅಂಜಲಿ, ಪ್ರಮೋದ್ ನ ಕೈಕಾಲು ಮುರಿಸುವುದಷ್ಟೇ ಅಲ್ಲದೇ ಅವನ ಪುರುಷತ್ವವನ್ನು ನಾಶ ಪಡಿಸಲು ಹಂತಕರಿಗೆ ಹೇಳುತ್ತಾಳೆ. ವಿಷಯ ಹೊರಬಾರದಂತೆ ಇಬ್ಬರಿಗೂ ಕೈ ತುಂಬಾ ಹಣಕೊಡುತ್ತಾಳೆ. ಪ್ರಮೋದ್ ಗೆ  ಗತಿ ಕಾಣಿಸಿದ ಮಾಹಿತಿಯನ್ನು ಪಡೆದ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

 ಒಂದು ಹನಿ ನೀರಿನ ಕಥೆ ಜ್ಯೋತಿ ಬಾಳಿಗಾ ಸದಾಶಿವ ರಾಯರಿಗೆ ಆರೋಗ್ಯದಲ್ಲಿ ತೊಂದರೆ ಆಗಿ ಆಸ್ಪತ್ರೆಗೆ ಸೇರಿಸಿದ್ದಾರಂತೆ. ಹಳ್ಳಿಯಿಂದ ನಿನ್ನ ಮಾವನ ಪೋನು ಬಂದಿತ್ತು ಸಚಿನ್. ರಾಯರು ಹೇಗಿದ್ದಾರೆ ಅಂತ ಒಮ್ಮೆ ನೋಡಿಕೊಂಡು ಬರೋಣ ಅಂದರೆ ಅಷ್ಟು ದೂರ ಪ್ರಯಾಣ ನನ್ನಿಂದ ಸಾಧ್ಯವಿಲ್ಲ ಮಗನೇ….ನಿನ್ನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯ ಮಾಡಿದ್ದಾರೆ ರಾಯರು. ನೀನಾದರೂ ಅವರ ಬಗ್ಗೆ ವಿಚಾರಿಸಿಕೊಂಡು ಬಾ ಎಂದು ಅಪ್ಪಾಜಿ ಹೇಳಿದಾಗ,ಆಸ್ಪತ್ರೆ ಎಂದರೆ ಮಾರು ದೂರ ಓಡುವ ನನಗೆ ಏನು ಮಾಡುವುದೆಂದು ತಿಳಿಯದೇ ಹುಂಗುಟ್ಟಿದೆ. ಊರಿಗೆ ಹೋಗದೇ ಕೆಲವಾರು ವರ್ಷಗಳೇ ಕಳೆದಿವೆ. ಸದಾಶಿವರಾಯರ ಜೊತೆಗೆ ಹಳೆಯ ಸ್ನೇಹಿತರನ್ನು ಭೇಟಿಮಾಡಿದ ಹಾಗೆ ಆಗುವುದು ಎಂದು ಬೆಂಗಳೂರಿನಿಂದ ಮಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದೆ. ರೋಗಿಯನ್ನು ಬರಿಗೈಯಲ್ಲಿ ನೋಡಲು ಹೋಗಲಾಗುವುದೇ ಎಂದು , ಸ್ವಲ್ಪ ಮುಸುಂಬಿ, ಕಿತ್ತಳೆ ಹಣ್ಣುಗಳನ್ನು ತೆಗೆದುಕೊಂಡು ಮಂಗಳೂರಿನ ಪ್ರಸಿದ್ಧ ಎ.ಜೆ ಆಸ್ಪತ್ರೆಯ ಮೆಟ್ಟಿಲು ಹತ್ತಿದೆ. ಸದಾಶಿವ ರಾಯರು ಯಾವ ವಾರ್ಡನಲ್ಲಿದ್ದಾರೆ ಎಂದು ರಿಷೆಪ್ಶ್ ನ್ ಕೌಂಟರ್ ಬಳಿ ವಿಚಾರಿಸಿ ಅವರ ಕೋಣೆಯ ಬಳಿ ಹೋದಾಗ ಒಳಗಿನಿಂದ ಅಳುವ ಸ್ವರ ಕೇಳಿಸುತ್ತಿತ್ತು. ಅಯ್ಯೋ,ನಾನು ಬಂದ ಹೊತ್ತು ಚೆನ್ನಾಗಿಲ್ಲ !, ಸದಾಶಿವ ರಾಯರು ನಮ್ಮನೆಲ್ಲ ಬಿಟ್ಟು ಹೋದರು ಕಾಣಬೇಕು ಅದಕ್ಕೆ ಈ ತರಹ ಅಳುತ್ತಿದ್ದಾರೆ , ಎಂದು ಸುಮ್ಮನೆ ಕೋಣೆಯ ಹೊರಗೆ ನಿಂತು ಅವರ ಮನೆಯವರ ಮಾತು ಕೇಳಿಸಿಕೊಳ್ಳುತ್ತಿದ್ದೆ. ನೋಡಿದರೆ; ರಾಯರ ಸ್ವರ ಕೇಳಿಸುತ್ತಿದೆ, ಒಂದು ಚಮಚದಷ್ಟು ಆದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ ರಾಯರು.ಅನಾಹುತ ಏನೂ ಸಂಭವಿಸಿಲ್ಲ ಎಂದು ಧೈರ್ಯದಿಂದ ಕೋಣೆಯ ಒಳಗೆ ಹೋದೆ. ನನ್ನನ್ನು ಕಂಡೊಡನೆ ರಾಯರು ಪರಿಚಯದ ನಗು ಬೀರಿದರು. ಸದಾಶಿವರಾಯರು ಶ್ರೀಮಂತ ಕುಟುಂಬದಲ್ಲಿ ಹುಟ್ಟಿದವರು. ಆಸ್ತಿ ವಿಚಾರಕ್ಕೆ ಗಲಾಟೆಮಾಡಿ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನೂ ದೂರ ಮಾಡಿ ಬದುಕನ್ನು ಕಟ್ಟಿಕೊಂಡು ,ಕೈಲಾದಷ್ಟು ಸಹಾಯ ಮಾಡಿ ಜನರ ಮನಸ್ಸನ್ನು ಗೆದ್ದವರು.ವ್ಯಾಪಾರದಲ್ಲಿ ಸೋಲು‌ ಗೆಲುವು ಕಂಡರೂ ಮನೆ ಬಾಗಿಲಿಗೆ ಬಂದವರಿಗೆ ಬರೀ ಹೊಟ್ಟೆಯಲ್ಲಿ ಕಳುಹಿಸದೇ ಪಾನಕ ಇಲ್ಲವೇ ಊಟ ಮಾಡಿಯೇ ಬಿಳ್ಗೊಡುತ್ತಿದ್ದಂತಹ ವ್ಯಕ್ತಿತ್ವ ಅವರದ್ದು. ಆರು ಅಡಿ ಎತ್ತರದ ದಷ್ಟಪುಷ್ಟ ಶರೀರದ ರಾಯರು ಇಂದು ಆರು ಅಡಿ ಉದ್ದದ ಕೋಲನ್ನು ನೆನಪಿಸುವಷ್ಟು ತೆಳ್ಳಗಾಗಿದ್ದಾರೆ. ಲಿವರ್ ಹಾಗೂ ಮೂತ್ರಪಿಂಡ ಸಂಪೂರ್ಣವಾಗಿ ಹಾಳಾಗಿರುವುದರಿಂದ ಜೀವರಕ್ಷಕ ಅಳವಡಿಸಿದ್ದಾರೆ. ಗಂಜಿಯಂತಹ ದ್ರವ ಪದಾರ್ಥಗಳನ್ನು ಪೈಪಿನ ಮೂಲಕ ತಿನ್ನಿಸುವಂತಹ ವ್ಯವಸ್ಥೆ…..ಅಬ್ಬಾ! ಅವರ ಶೋಚನೀಯ ಸ್ಥಿತಿಯನ್ನು ಕಂಡು ನನ್ನ ಕಣ್ಣಿಂದಲೂ ಕೆಲವೊಂದು ಬಿಂದುಗಳು ಜಾರಿದವು ನನ್ನನ್ನು ಕಂಡ ರಾಯರು ಅತೀ ಕ್ಷೀಣ ಸ್ವರದಲ್ಲಿ ನೀನಾದರೂ ಹೇಳೋ ಸಚಿನ್, ಒಂದು ಚಮಚದಷ್ಟು ನೀರು ಕೊಡಲು ಎಂದಾಗ ,ಈಗ ನೀರು ಕುಡಿಸಬಾರದೆಂದು ಡಾಕ್ಟರ್ ಹೇಳಿದ್ದಾರಲ್ಲ, ಎಂದು ಅವರ ಶ್ರೀಮತಿಯವರು ಸಮಾಧಾನ ಪಡಿಸುತ್ತಿದ್ದರು. ತಂದೆಯ ಕೊನೆಗಾಲದಲ್ಲಿ ಯಾಕೆ ಬಾಯಿಕಟ್ಟಬೇಕೆಂದು ರಾಯರ ಮಗ ತಂದೆಯ ಆಸೆಯಂತೆ ,ಒಂದು ಗ್ಲಾಸ್ ನಲ್ಲಿ ನೀರು ತುಂಬಿಸಿ ಚಮಚದಿಂದ ಕುಡಿಸುತ್ತಿದ್ದರು. ಕಾಕತಾಳೀಯವೊ ಎಂಬಂತೆ ರಾಯರು ಮಗನ ಕೈಯಲ್ಲಿಯೇ ಇಹಲೋಕ ತ್ಯಜಿಸಿದರು.ವಿಷಯ ತಿಳಿಯುತ್ತಿದಂತೆ ಸಂಬಂಧಿಕರೆಲ್ಲಾ ಸೇರಿದರು.ಅಲ್ಲಿದ್ದು ಏನೂ ಮಾಡಬೇಕೆಂದು ತೋಚದೆ ಮನೆಯವರಿಗೆ ಸಮಾಧಾನ ಹೇಳಿ ಹೊರಬಂದೆ. ಕೋಣೆಯಿಂದ ಹೊರ ಬಂದಾಗ ರಾಯರು ಒಂದು ಚಮಚದಷ್ಟು ನೀರಿಗಾಗಿ ಹಂಬಲಿಸುತ್ತಿದ್ದದು ಕಣ್ಣಮುಂದೆ ಕಾಣಿಸುತ್ತಿತ್ತು. ರಾಯರ ಸ್ಥಿತಿಯನ್ನು ನೋಡಿದ ನನಗೆ ಆಸ್ತಿ ಪಾಸ್ತಿ ಅಂತ ಎಷ್ಟೇ ಕೂಡಿಟ್ಟರೂ, ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ,ಕೊನೆಯ ಪ್ರಯಾಣದಲ್ಲಿ ಏನೂ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂಬ ಅರಿವಾಗಿ ನಿಧಾನವಾಗಿ ಆಸ್ಪತ್ರೆಯ ಮೆಟ್ಟಿಲುಗಳನ್ನು ಇಳಿಯುತ್ತಾ ಮನೆಯ ದಾರಿ ಹಿಡಿದೆ….. ***********

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಸುನಂದಾಬಾಯಿ ಕೊಡ ಮಲ್ಲಿಕಾರ್ಜುನ ಕಡಕೋಳ ಸುತ್ತ ನಾಕಿಪ್ಪತ್ತು ಹಳ್ಳಿಗಳಲ್ಲಿ ಅವರ  ಬಡತನ ಪ್ರಸಿದ್ದವಾಗಿತ್ತು.  ತಲೆಮಾರುಗಳಿಂದ ಶೀಲವಂತರ  ಸುನಂದಾಬಾಯಿ ಭಗವಂತ್ರಾಯ  ದಂಪತಿಗಳು ಪಡೆದುಕೊಂಡ  ಆಸ್ತಿಯೆಂದರೆ ಕಿತ್ತುತಿನ್ನುವ ಬಡತನ.  ಅದನ್ನೇ ಹಾಸುಂಡು ಬೀಸಿ  ಒಗೆಯುವಂತಿತ್ತು. ಅವರೂರು  ಮಾತ್ರವಲ್ಲ. ಸುತ್ತ ಹತ್ತಾರು ಹಳ್ಳಿಯ ಮಂದಿ ಘೋರ ಬಡತನದ ಬಗ್ಗೆ  ಮಾತಾಡುವಾಗ ಶೀಲವಂತರ ಭಗಂತ್ರಾಯರ ಬಡತನ ಉಲ್ಲೇಖಿಸದೇ ಇರಲಿಕ್ಕೆ  ಸಾಧ್ಯವಿರುತ್ತಿರಲಿಲ್ಲ.   ಅವರು ಉಪವಾಸದ ದಿನಗಳನ್ನು  ನೆನಪಿಡುತ್ತಿರಲಿಲ್ಲ., ಅಂಬಲಿ ಕುಡಿದ  ದಿನಗಳನ್ನು ನೆನಪಿಡುತ್ತಿದ್ದರು. ಈ  ದಿನಗಳೇ ಅಪರೂಪ. ಸಜ್ಜೆ ಹಿಟ್ಟಿನ  ಗಂಜಿಗೆ ರುಚಿ ಬರಲೆಂದು ಸೇರಿಸಲು  ” ಉಪ್ಪಿಗೂ ” ಅವರಲ್ಲಿ ಬಡತನವಿತ್ತು.  ಅಂತೆಯೇ ಉಪವಾಸದ ದಿನಗಳೇ  ಹೇರಳ. ಗಂಜಿ ಕುಡಿದ ದಿನಗಳೇ ವಿರಳ. ಸುನಂದಾಬಾಯಿಗೆ ಜಾಂಬಳ ಬಣ್ಣದ  ಒಂದೇ ಒಂದು ಸೀರೆ ಇತ್ತು. ಮೈ ಮೇಲಿನ  ಆ ಒಂದು ಸೀರೆಯನ್ನು ಜಳಕ  ಮಾಡುವಾಗ ಅರ್ಧರ್ಧ ತೋಯಿಸುತ್ತಾ ಒಣಗಿಸಿಕೊಳ್ಳುತ್ತಿದ್ದಳು. ಅಷ್ಟಕ್ಕೂ ಆಕೆ ಹೊಲಕ್ಕೆ ಹೋದಾಗ ನಿರ್ಜನ ಕರ್ಮನಹಳ್ಳದಲ್ಲಿ ಜಳಕ ಮಾಡುತ್ತಿದ್ದಳು. ಕೂಲಿನಾಲಿ ಮಾಡುವಾಗ ಸೀರೆ, ಗಿಡಗಂಟಿಗಳಿಗೆ ತಾಗದಂತೆ ಮತ್ತು ಕುಂತೇಳುವಾಗ  ಜಿಗಿಸತ್ತ ಸೀರೆ ಟಸಕ್ಕನೆ ಹರಿದು  ಹೋಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಳು. ತನ್ನ ಮಾನಮರ್ಯಾದೆ ಕಾಪಾಡುವ  ಏಕೈಕ ಸೀರೆ ಅದಾಗಿತ್ತು. ಹೋದ  ವರುಷ ಕುಂಡೀಪದರಲ್ಲಿ ಅದು ಹರಿದು  ಹೋದುದಕ್ಕೆ ಹರಿದುಹೋದ  ಭಾಗವನ್ನು ಕುಡುಗೋಲಿನಿಂದ  ಕೊಯ್ದು ತೆಗೆದು ಸೂಜಿ ದಾರಗಳಿಂದ  ಉದ್ದಕ್ಕೂ ದಿಂಡು ಹಾಕಿದ್ದಳು. ಹಾಗೆ  ಮಾಡುವಾಗ ಮೈ ತುಂಬಾ ಕೌದಿ ಹೊದ್ದುಕೊಂಡಿದ್ದಳು.ತನ್ನ ಮಾನರಕ್ಷಕ ಸೀರೆಯನ್ನು ಹೊಲಿದು ದುರಸ್ತಿಗೊಳಿಸಿದಮೇಲೆ ಕೌದಿ ತೆಗೆದಿಟ್ಟು ಸೀರೆ ಉಟ್ಟು ಕೊಂಡಿದ್ದಳೆಂಬುದು ನಾನು  ಸಣ್ಣವನಿದ್ದಾಗ ಕೇಳಿದ ನೆನಪು ಹಚ್ಚ ಹಸಿರಾಗಿದೆ. ಆಕೆಯ ಕುಪ್ಪಸದ್ದು  ಇಂತಹದ್ದೇ ಕರುಣಾಜನಕ ಕತೆ. ಭಗವಂತ್ರಾಯನ ಧೋತರ ಮತ್ತು  ಅಂಗಿಯ ಕತೆಗಳು ಇದಕ್ಕಿಂತ  ಭಿನ್ನವಾಗಿರದೇ ಕರುಳು  ಚುರುಗುಟ್ಟಿಸುವಂತಹದ್ದೇ ಆಗಿದ್ದವು.  ಆತ ಯಾವತ್ತೂ ತೊಡೆಯಿಂದ ಈಚೆ  ಮೊಳಕಾಲ ಕೆಳಗೆ ಧೋತರ ಇಳಿ ಬಿಟ್ಟಿದ್ದನ್ನೇ ನನ್ನ ಕಣ್ಣುಗಳು ಕಂಡಿಲ್ಲ.  ಕಾರಣ ಆತನ ಧೋತರದ ಮೈತುಂಬಾ  ಹರಿದ ಗಾಯಗಳೇ ತುಂಬಿದ್ದವು.  ಗಾಯಗಳನ್ನೆಲ್ಲ ಗಂಟು  ಹಾಕಿರುತ್ತಿದ್ದನಾದ್ದರಿಂದ ಆತನ ಮಾನದ  “ಹಿಂದು ಮುಂದು”ಗಳನ್ನು ಆ ಎಲ್ಲ  ಗಾಯಗಂಟುಗಳ ಧೋತರ ಮುಚ್ಚಿ ಕೊಂಡಿರುತ್ತಿತ್ತು. ಆತನಿಗೊಂದು ಪಟಗವಿತ್ತು. ಅವರಪ್ಪ  ತೀರಿಕೊಂಡಾಗ ರುದ್ರಭೂಮಿಯ  ಕುಣಿಯ ಮೇಲೆಯೇ ಆತನಿಗೆ  ವಾರಸುದಾರಿಕೆಯಾಗಿ ಬಂದ ಏಕೈಕ  ಆಸ್ತಿ ಅದಾಗಿತ್ತು. ಭಗವಂತ್ರಾಯನಿಗೆ  ಅಪ್ಪನಿಂದ ಬಂದ ಆ ಆಸ್ತಿಯನ್ನು ಜಾತ್ರೆ,  ದೀವಳಿಗೆ, ಉಗಾದಿ ಹಬ್ಬಗಳಲ್ಲಿ ತಲೆಗೆ  ಕಟ್ಟು ಹೊಡೆದು ಸುತ್ತಿಕೊಂಡು ಸಂಭ್ರಮಿಸುತ್ತಲೇ ಅದನ್ನು ಜೋಪಾನ  ಮಾಡಿಟ್ಟು ಕೊಂಡಿದ್ದ. ಮುಡ್ಡೀಚಾಟಿಯಂತಹ ಅಂಗಿ ಹರಿದು,  ಸವೆದು ಹೋಗಿತ್ತು. ಅವನ ಅಪ್ಪನ  ಅಪ್ಪನಿಂದ ಬಂದ ಮತ್ತೊಂದು  ಆಸ್ತಿಯೆಂದರೆ ಗುದ್ದಲಿ. ನಟ್ಟು ಕಡಿದು, ಮಣ್ಣಿನ ಕೆಲಸದಿಂದ ಕುಟುಂಬಜೀವಕ್ಕೆ ಗಂಜಿ ದೊರಕಿಸಿ ಕೊಡುತ್ತಿದ್ದುದೇ ಈ  ಗುದ್ದಲಿ. ಅಂತೆಯೇ ಗುದ್ದಲಿಯನ್ನು  ತಮ್ಮ ಜೀವದಷ್ಟೇ ಜೋಪಾನ  ಮಾಡುತ್ತಿದ್ದರು. ಅಮವಾಸ್ಯೆಗೊಮ್ಮೆ ಗುದ್ದಲಿ, ಕುರ್ಪಿ, ಕುಡುಗೋಲುಗಳಿಗೆ  ಪೂಜೆ ಸಲ್ಲಿಸುತ್ತಿದ್ದರು. ಸುನಂದಾಬಾಯಿ ಭಗವಂತ್ರಾಯರ ಲಗ್ನವಾದ ವರುಷ ಮೋಟಗಿ ಸಂತೆಯಲ್ಲಿ ದೀಡು ರುಪಾಯಿ ಕೊಟ್ಟುತಂದ ಮಣ್ಣಿನ ಕೊಡವನ್ನು ಅವರು ತಮ್ಮ ಜೀವದಷ್ಟೇ ಜೋಪಾನ ಮಾಡಿಕೊಂಡು ಬರುತ್ತಿದ್ದುದು ಅವರ ಬದುಕಿನ  ದಾಖಲೆಯಷ್ಟೇ ಅಲ್ಲ, ಅವರ  ಬಡತನದಷ್ಟೇ ಖ್ಯಾತಿಯನ್ನು ಆ ಮಣ್ಣಿನ  ಕೊಡ ಪಡಕೊಂಡಿತ್ತು. ಗಬಸಾವಳಗಿಯ  ಕುಂಬಾರರು ಗಟ್ಟಿಮುಟ್ಟಾಗಿ ಸುಟ್ಟುಮಾಡಿದ ಮಣ್ಣಿನ  ಕೊಡ ಅದಾಗಿತ್ತು.  ಆ ಮಣ್ಣಿನ ಕೊಡವನ್ನು ಅದೆಷ್ಟು  ಜಾಗರೂಕತೆಯಿಂದ ಬಳಕೆ ಮಾಡುತ್ತಿದ್ದರೆಂದರೆ ತಮ್ಮ ಪ್ರಾಣವನ್ನೂ ಅವರು  ಎಂದೂ ಅಷ್ಟೊಂದು ಎಚ್ಚರದಿಂದ  ಸಲಹಿಕೊಂಡ ನೆನಪು ಖಂಡಿತಾ ಅವರಿಗಿಲ್ಲ. ಗಂಡ ಹೆಂಡತಿ ಇಬ್ಬರಲ್ಲಿ ಯಾರೇ ಹಳ್ಳದ ನೀರು ತರಲು ಹೋದಾಗ ಸಮನಾದ  ಸಮಚಿತ್ತದ ಎಚ್ಚರ ವಹಿಸುತ್ತಿದ್ದರು. ವರತಿನೀರನ್ನು  ಕೊಡಕ್ಕೆ ತುಂಬುವಾಗ  ಅಪ್ಪೀತಪ್ಪಿಯೂ ತಂಬಿಗೆಯನ್ನು  ಕೊಡದ ಕಂಠಕ್ಕೆ ಮುಟ್ಟಿಸುತ್ತಿರಲಿಲ್ಲ. ಒಮ್ಮೊಮ್ಮೆ  ಚೆರಿಗೆಯನ್ನು ದೂರವಿಟ್ಟು ಬೊಗಸೆಯಿಂದಲೇ ಕೊಡ ತುಂಬಿಸುತ್ತಿದ್ದರು. ಅವರ ಮನೆಯಲ್ಲಿ ಮಣ್ಣಿನ ಹರವಿ ಇತ್ತು. ಅದಕ್ಕೊಂದು ಮಣ್ಣಿನ ಮುಚ್ಚಳ.  ಹರವಿಗೆ ಕೊಡದಿಂದ ನೀರು ಬರಕುವಾಗ  ಅಷ್ಟೇ ಎಚ್ಚರ. ಅಪ್ಪೀತಪ್ಪಿಯೂ ಹರವಿ  ಮತ್ತು ಕೊಡದ ಕಂಠಗಳು ಮುತ್ತಿಕ್ಕುತ್ತಿರಲಿಲ್ಲ. ಅಂತಹ ಕಟ್ಟೆಚ್ಚರ ಅವರಿಬ್ಬರದು. ಅವರಿಗೊಬ್ಬ ಮಗಳು ಹುಟ್ಟಿದಳು. ಚಂದ್ರಭಾಗಿ ಅವಳ ಹೆಸರು. ನಾಕೈದು  ವರುಷದ ಬೆಳೆದುನಿಂತ ಆ ಹುಡುಗಿಗೆ  ಹೋಳಿಗೆ ಅನ್ನಸಾರುಗಳೆಂಬ  ಹೆಸರುಗಳನ್ನು ಕೇಳಿ ಗೊತ್ತಿತ್ತೇ ಹೊರತು  ಅವನ್ನು ಕಂಡುಂಡ ಅನುಭವ  ಖಂಡಿತಾ ಇರಲಿಲ್ಲ. ಅದೇನಿದ್ದರೂ  ಅಂಬಲಿಯೇ ಅವರ ಪಾಲಿನ ಮೃಷ್ಟಾನ್ನ. ಆಗಾಗ ಆ ಹುಡುಗಿ ಕೆಮ್ಮು, ನೆಗಡಿ, ಜ್ವರ ಜಡ್ಡು ಜಾಪತ್ರಿಗಳಿಂದ ನರಳುತ್ತಿದ್ದರೆ ಲಕ್ಕಿ ತಪ್ಪಲು ತಲೆಗೆ ಕಟ್ಟಿ ಮಲಗಿಸುವುವುದು ಇಲ್ಲವೇ ದ್ಯಾಮವ್ವನ ಗುಡಿಯ ಬೂದಿ,  ಗಿರಿಮಲ್ಲಯ್ಯ ಸ್ವಾಮಿಗಳು  ಕಟ್ಚುವ  ಚೀಟಿ ಚಿಪಾಟಿಗಳೇ ಅವರಿಗಿರುವ  ಆಧಾರ. ಅವರೆಂದೂ ದವಾಖಾನೆಗೆ  ಹೋದವರಲ್ಲ. ಹೋಗಲು ರೊಕ್ಕ  ಬೇಕಲ್ಲ..! ಇಷ್ಟೆಲ್ಲ ಕ್ರೂರ ಬಡತನವಿದ್ದರೂ  ಅವರು ಯಾರೊಬ್ಬರ ಮನೆಗೆ ಹೋಗಿ  ದೈನೇಸಿ ಎಂದು ಕೈಯೊಡ್ಡಿದವರಲ್ಲ.  ಹಾಗೇ ಹಸಿವಿನಿಂದ, ನೋವಿನಿಂದ  ಸತ್ತಾರೇ ಹೊರತು ಅವರಿವರ ಮನೆಗೆ  ಹೋದವರಲ್ಲ. ಬೇರೆಯವರ ಮನೆಯಲ್ಲಿ ಊಟದ  ಮಾತು ದೂರವೇ. ಬಡತನ ಬಿಟ್ಟು  ಬದುಕಿದ್ದು ಅವರಿಗೆ ಗೊತ್ತಿಲ್ಲ. ನನಗಂತೂ ಅವರ ಮನೆಯ ಮಿರಿ ಮಿರಿ  ಮಿಂಚುವ ಮಣ್ಣಿನಕೊಡ ಅವರ  ಬಡತನಕ್ಕಿಂತ  ಹೆಚ್ಚು ಪ್ರಿಯವಾಗಿ  ಕಾಣುತ್ತಿತ್ತು. ಅವರು ಹಳ್ಳಕ್ಕೆ ನೀರಿಗೆ  ಬಂದಾಗೆಲ್ಲ ನಾನು ಆ ಕೊಡವನ್ನು  ಕಣ್ತುಂಬಿಸಿ ಕೊಳ್ಳುತ್ತಿದ್ದೆ. ಅದಕ್ಕೆ  ಮುತ್ತಿಕ್ಕ ಬೇಕೆನ್ನುವಷ್ಟು ಆ ಕೊಡದ  ಮೇಲೆ ನನ್ನ ಅದಮ್ಯ ಪ್ರೀತಿ. ಅರ್ಧಮೈಲಿ ದೂರದ ಲಂಡೇನಹಳ್ಳಕ್ಕೆ ನೀರು ತರಲು ಎಂದಿನಂತೆ ನಾನೂ ಹೋದೆ. ಕಡುಬೇಸಿಗೆಯಾದ್ದರಿಂದ ಹಳ್ಳದಲ್ಲಿ ನೀರು ಹರಿಯುತ್ತಿರಲಿಲ್ಲ. ಉಸುಕಿನಲ್ಲಿ ತೋಡಿದ ವರತೆಯಿಂದ ನೀರು ಕೊಡಕ್ಕೆ ತುಂಬಿಸಿಕೊಳ್ಳಬೇಕಿತ್ತು.   ಮೊಳಕಾಲುದ್ದದೊಳಗಿನ ವರತೆಯಿಂದ  ಸುನಂದಾಬಾಯಿ ತನ್ನ ಮಣ್ಣಿನ ಕೊಡಕ್ಕೆ  ಚೆರಿಗೆಯಿಂದ ನೀರು ತುಂಬಿಸಿಕೊಳ್ಳುತ್ತಿದ್ದಳು. ನನಗೋ ಆ  ಮಣ್ಣಿನ ಕೊಡವನ್ನು ಕೈಗೆಟಕುವ  ಸನಿಹದಿಂದ ನೋಡುವ ಭುವನದ ಭಾಗ್ಯ. ಹತ್ತತ್ತಿರ ಅದಕ್ಕೆ ಇಪ್ಪತ್ತರ  ಪ್ರಾಯವಿದ್ದೀತು. ಸವೆದು ಸವೆದು ಮಣ್ಣಿನಕೊಡ ಮಿರಿಮಿರಿ ಮಿಂಚುತ್ತಿತ್ತು.ಮನೆಯಲ್ಲಿ ನೀರು ತುಂಬಿಟ್ಟಾಗ ಚೇಳೊಂದು ಕೊಡಕ್ಕೆ  ಕುಟುಕಿ ಸಣ್ಣದೊಂದು ತೂತಾಗಿ ಆ ತೂತಿಗೆ ಸರಿಯಾಗಿ ಹರಕು ಬಟ್ಟೆಯ ಬತ್ತಿ ಸುತ್ತಿ ತುರುಕಿದ್ದರಿಂದ ಕೊಡಕ್ಕೊಂದು ಕಪ್ಪುಚಿಕ್ಕೆ ಬಿದ್ದಂಗಿತ್ತು. ಅದೆಷ್ಟೋ ವರುಷಗಳಿಂದ ಕೊಡವನ್ನು ದೂರದಿಂದಲೇ ನೋಡುತ್ತಾಬಂದ ನನಗವತ್ತು ಅಷ್ಟು ಸನಿಹದಿಂದ ನೋಡುವ ಜೀವಮಾನದ ಸದವಕಾಶ. ಆ ಕೊಡ ಕುರಿತು ಅದರ ಆಯಸ್ಸು ಕುರಿತು ಜನರಾಡುತ್ತಿದ್ದ ಮಾತುಕತೆಗಳು ನನಗೆದಂತಕತೆಗಳಾಗಿ ಕೇಳಿಸ ತೊಡಗಿದವು. ಅದೇಕೋ ಕೊಡವನ್ನು ನನ್ನ ಸುಕೋಮಲ ಎಳೆಯ ಕೈಗಳಿಂದ ಮುಟ್ಟಬೇಕೆನಿಸಿತು. ನೇರವಾಗಿ ಹೇಗೆ  ಮುಟ್ಟುವುದೆಂತು ಧೇನಿಸಿ, ಧೇನಿಸಿ ಧೈರ್ಯತಾಳದೇ… ಅಚಾತುರ್ಯದಲ್ಲೆಂಬಂತೆ ವರತಿಯ ಹತ್ತಿರ ಸರಿದಂತೆ ನಟಿಸಿ, ನನ್ನೆರಡೂ ಅಂಗೈಗಳಿಂದ ಸುನಂದಾಬಾಯಿಯ ಕೊಡ ಮುಟ್ಟಿದೆ. ನನ್ನ ಒಡಲಾಳದ ಬಯಕೆ ಈಡೇರಿಸಿಕೊಂಡೆ. ನನ್ನ ಸಂತಸಕ್ಕೆ ಎಣೆಯೇ ಇಲ್ಲವೆನಿಸಿತು. ಕೊಡಕ್ಕೆ ನನ್ನ ಕೈತಾಗಿಸಿದ ಮಿಂಚಿನ ಕ್ಷಣಗಳಲ್ಲೇ ಸುನಂದಾಬಾಯಿ ಕೊಡ ಬಿಟ್ಟು ದೂರಕ್ಕೆ ಹೋಗಿ ತಲೆಮೇಲೆ ಕೈ ಹೊತ್ತು ಕುಂತು ಒಂದೇಸಮನೆ “ಗೊಳೋ” ಅಂತ ಪ್ರಾಣ ಕಳಕೊಂಡವರಂತೆ ಅಳತೊಡಗಿದಳು.  ನಮ್ಮಕುಲದ ಶೀಲವೇ ಹಾಳಾಯಿತೆಂದು ಸತ್ತವರ ಮನೆಯಲ್ಲಿ ಅಳುವಂತೆ ಹಾಡಾಡಿಕೊಂಡು ಮುಖಕ್ಕೆ ಸೆರಗು ಮುಚಗೊಂಡು ಬೋರ್ಯಾಡಿ ಅಳತೊಡಗಿದಳು. ಅದನ್ನು ಕಣ್ಣಾರೆಕಂಡ ಬಡಿಗೇರ ಇಮ್ಮಣ್ಣ ನನಗೆ ಹುಚ್ಚುನಾಯಿಗೆ ಹೊಡೆಯುವಂತೆ, ಜನ್ಮ ಜನ್ಮಕು  ನೆನಪಿಡುವ ಹಾಗೆ ಥಳಿಸಿದ. ನಾವು ಶೂದ್ರರು ಶೀಲವಂತರ ಕೊಡ ಮುಟ್ಟಿಸಿ ಕೊಳ್ಳಬಾರದೆಂಬುದು ನನಗೆ  ಗೊತ್ತಿರಲಿಲ್ಲ. ಸುನಂದಾಬಾಯಿ ಆ  ಕೊಡವನ್ನು ಅಲ್ಲೇ ಒಡೆದು ಹಾಕಿದಳು. ಹಾಗೆ ಒಡೆಯುವಾಗ ನನ್ನ ಕಣ್ಣಲ್ಲಿ ದಳದಳನೆ ನೀರು ಹರಿಯುತ್ತಿದ್ದವು. ಒಡೆದ ಕೊಡದ ಒಂದೊಂದೇ ಬೋಕಿ ಚೂರುಗಳನ್ನು ನನ್ನ ಕೈಗಳಿಗೆ ತುಂಬಿ ಕೊಳ್ಳಬೇಕೆನಿಸಿತು. ಆದರೆ ಬೋಕಿಯ ಚೂರುಗಳನ್ನು ಮುಟ್ಟುವ ಧೈರ್ಯ ನನಗೆ ಬರಲಿಲ್ಲ. ಏಕೆಂದರೆ ಇಮ್ಮಣ್ಣ ಮಾವ ಅಲ್ಲೇ ಇದ್ದ.. ಆದರೆ ನನಗೆ ಮಾತ್ರ ಶೀಲವಂತರ ಸುನಂದಾಬಾಯಿಯ ಮಣ್ಣಿನ ಕೊಡವನ್ನು ನಾನೇ  ಕೊಂದು ಹಾಕಿದೆನೆಂಬ ” ಪಾಪಪ್ರಜ್ಞೆ ” ಅವಳ ಮಡಿವಂತಿಕೆಯ ಮನಸಿಗಿಂತ, ನನ್ನನ್ನು ಮತ್ತೆ ಮತ್ತೆ ಇವತ್ತಿಗೂ ಘೋರವಾಗಿ ಕಾಡುತ್ತಲೇ ಇದೆ. *******

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಹದಿನೆಂಟು ವರುಷದ ಬಳಿಕ ಸಿಕ್ಕವಳು… ಮಲ್ಲಿಕಾರ್ಜುನ ಕಡಕೋಳ ಹದಿನೆಂಟು ವರುಷದ ಬಳಿಕ ಸಿಕ್ಕವಳು…  ಆದರೆ ಮೊನ್ನೆ ಸಂಜೆ ಸಿಕ್ಕಾಗ  ತುಂಬಾನೇ ಚೆಂದ ಕಾಣಿಸುತ್ತಿದ್ದಳು.  ಹದಿನೆಂಟು ವರುಷಗಳ ಹಿಂದೆ ಅವಳಿಗೆ  ಹದಿನೆಂಟರ ಹದಿಹರೆಯ. ತೆಳ್ಳಗೆ., ಸಜ್ಜೆ ಬಣ್ಣದ ಸಾದಗಪ್ಪಿನ ಸುಂದರಿ.  ಹದಿನೆಂಟು ವರುಷಗಳ ಹಿಂದೆ ದಾವಲ್ ಮಲೀಕನ ಯಂಕಂಚಿ ಜಾತ್ರೆಯಲಿ  ಸಿಕ್ಕವಳು., ಮೊನ್ನೆ ಸಂಜೆ ತಂಗಾಳಿ ತೇಲಿ ಬರುವ ಹೊತ್ತಲಿ ಸಡನ್ನಾಗಿ ಸಿಕ್ಕಳು. ಇಪ್ಪತ್ತು ವರುಷಗಳ ಹಿಂದೆ ಮೊದಲ ಭೆಟ್ಟಿಯಲಿ ಹುಟ್ಟಿಕೊಂಡ ಹಿರಿ ಹಿರಿ  ಹಿಗ್ಗುವ ಸಂತಸವೇ ಮೊನ್ನೆ ಮತ್ತೆ  ನಮ್ಮಲ್ಲಿ ಚೇತನಗೊಂಡಿತು. ಏಕಕಾಲಕ್ಕೆ ನಮ್ಮಿಬ್ಬರಿಗೂ ಕ್ಷಿಪ್ರ ಕ್ರಾಂತಿಯ ಪರಮ ಅಚ್ಟರಿ!! ಸಿನೆಮಾ  ಕತೆಗಳಲ್ಲಂತೆ  ಕ್ಷಣಕಾಲ ಸ್ಟಿಲ್ಲಾದೆವು. ಲಗಾಮು ತುಳಿದು ನನ್ನ ಕಪ್ಪು ಕುದುರೆ  ತರುಬಿದೆ. ಕುದುರೆಯೆಂದರೆ  ಕುದುರೆಯಲ್ಲ. ಕಪ್ಪು ಕಲರಿನ  ಹೀರೋ  ಹೊಂಡಾ….  ಜಾಂಬಳ ವರ್ಣದ ಕಾಟನ್ ಸೀರೆ, ತಿಳಿ ಅರಿಶಿಣ ಬಣ್ಣದಂಚಿನ ಕೆಂಪು ಕುಪ್ಪಸ  ಅವಳ ತುಂಬಿದ ಮೈ ತುಂಬಿಕೊಂಡಿದ್ದವು. ತಲೆತುಂಬಾ ಅರೆನೆರೆತ ಕೂದಲು. ಥೇಟ್  ಹಳ್ಳಿಯ ಮುಗುದೆ – ಗೌಡತಿಯಂತೆ  ಜವಾರಿತನ ಬದುಕಿದ್ದಳು. ಅದಕ್ಕೆ ನಾನು ಆರಂಭಕ್ಕೇ ಹೇಳಿದ್ದು ಚೆಂದ ಕಾಣಿಸುತ್ತಿದ್ದಳೆಂದು. ಖರೇ ಖರೇನ ಹೇಳ್ತಿದೀನಿ….ಮೊದಲಿಗಿಂತ ಈಗಲೇ ಹೆಚ್ಚು ಚೆಂದ ಕಂಡಳು. ಅದನ್ನವಳಿಗೂ  ಹೇಳಿದೆ.  ಯಾವಾಗ ಬಂದೆ..? ಕೇಳಿದಳು. ನನಗೇನೋ….ಕೇಳಿದಂತಾಗಿ  ಏನುತ್ತರಿಸಿದೆನೋ..! ನೆನಪು ಹಾರಿ ಹೋಯಿತು. ಆಕೆ ಸಂಜೆಯ ವಾಕಿಂಗ್  ಮುಗಿಸಿ  ತೋಟದ ಮನೆ ಕಡೆಗೆ ಹೊರಟಂತಿತ್ತು. ಮನಸಿನ ತೊಗಲು ಹರಿದು ಸ್ಪರ್ಶಿಸಲಾಗದ  ಸುಖವೇ  ಅನರ್ಘ್ಯವೆಂದು ಹೆಸರಿಲ್ಲದ ಹಸಿವುಗಳನ್ನು ಅನೇಕ ಬಾರಿ ಪರಸ್ಪರ ಉಸುರಿ ಕೊಂಡವರು. ಹೀಗೇ ಇಬ್ಬರೂ ಒಂದೇ ನೋವಿನ ದೋಣಿಯಲಿ  ಪಯಣಿಸಿಬಂದ ಲೋಕಚರಿತರಂತೆ ಅದೆಷ್ಟೋ ಕಾಲ ಚರ್ಚಿಸಿದವರು. ದಂಗೆಕೋರ ಪ್ರೇಮಿಗಳಂತೆ ಸರಸ ಪ್ರೇಮಕೆ ಸನ್ಯಾಸ ದೀಕ್ಷೆ ಪಡೆದು, ನಕ್ಷತ್ರದೊಳಗಣ ವಿಮಲ ಸರೋವರದ ಕನಸುಗಳ ಕಂಡವರು ನಾವು.  ನೆನಪಿದೆಯಾ  ನಿನಗೆ  ? ನಾವಿಬ್ಬರೂ ಅಂದು ಹೊಳೆಯ ದಡದಲಿ ನಿಂದು ಮರುಳ ಮನೆಗಳ ಕಟ್ಟಿ ಆಟವಾಡಿದ ದಿವಸ ನೆನಪಿದೆಯಾ ನಿನಗೆ ?   ಯಾಕೋ ಗೊತ್ತಿಲ್ಲ…ಜಿಎಸೆಸ್ ಅವರ ಈ ಕವಿತೆ ಗಾಢವಾಗಿ ಕಾಡ ತೊಡಗಿತು. ಹೌದು, ನಾವಿಬ್ಬರು ಕೆಂಪುಹಳ್ಳದ  ಹುರುಮಂಜಿನಂತಹ ಉಸುಕಿನಲಿ  ‘ಗುಬ್ಬಿಮನೆ’ ಕಟ್ಟಿ ಗಂಡ – ಹೆಂಡತಿಯಾಗಿ ಆಡಿದ ಎಲ್ಲ ಆಟಗಳು ನೆನಪಾದವು.  ನನಗೆ ಈಜು ಬರ್ತಿರ್ಲಿಲ್ಲ. ಅದು ಮೂರು ಹಳ್ಳಗಳು ಕೂಡುವಲ್ಲಿರುವ  ಭಯಾನಕ  ಸೆಳೆತದ ಸುಳಿ ಮಡುವು. ಅಂತಹ ಕರಿನೀರಿನ ಮಡುವಲ್ಲಿ ಆಳಕ್ಕೆ ಉಸಿರು ಕಟ್ಟಿ ಮುಳು ಮುಳುಗೇಳಿ ಬರುತ್ತಿದ್ದಾಕೆ  ಒಮ್ಮೆ ನನ್ನನ್ನು ಎಳಕೊಂಡು  ಮುಳುಗೆದ್ದಿದ್ದಳು. ಅವಳಂತರಂಗದ ಜೀವಶಿಲ್ಪಕ್ಕೆ ಸಂಪೂರ್ಣ ಸಮರ್ಪಿಸಿಕೊಂಡೆ. ಹದಿನೆಂಟರ ಮೊದಲ ಹರೆಯಕ್ಕೆ ಧನ್ಯತೆಯ ಸಲಾಮು ಸಲ್ಲಿಸಿದೆ. ಗೊತ್ತಿಲ್ಲ ನನಗೆ ನನ್ನವ್ವ ಪುರಾಣ ಕತೆಗಳಂತೆ ಹೇಳುತ್ತಿದ್ದ “ಜಕಣಿ ಜಲ ದೇವತೆಯರು” ಆಗ ನೆನಪಾಗಿದ್ದರು.   ಏನಾಗಿದೆ ನಿನಗೆ..? ಆಗೆಲ್ಲಾ ಲಂಕೇಶ್,  ಮಾರ್ಕ್ಸ್, ಮಾರ್ಕ್ವೆಜ್..ಅಂತಿದ್ದಿ…  ” ನನ್ನವ್ವ  ಫಲವತ್ತಾದ ಕಪ್ಪು ನೆಲ… ಬನದ ಕರಡಿಯ ಹಾಗೆ ಚಿಕ್ಕಮಕ್ಕಳ  ಹೊತ್ತು ಸಾಕಿದಾಕೆ…” ಲಂಕೇಶರ ಸಾಲುಗಳೋದಿ ಏನೇನೋ ಹೇಳಾಂವ ಯಾಕೆ ಏನಾಗಿದೆ ನಿನಗೀಗ…? ನಾನಂದು ಕಂಡ ಕನಸಿನ ಗಂಧರ್ವ ಕಿಂಪುರುಷ ನೀನೇನಾ…? ಎಂದು  ಗೊಣಗಿ, ಗುದ್ದಾಡುವ ದನಿಯಲಿ  ಕೊಡವಿ ಬಿಟ್ಟಳು.  ಹಿಂದೊಮ್ಮೆ  ನಾವಿಬ್ಬರೂ…ಹುಯ್ದ ಚಿತ್ತೆ ಮಳೆಯಲಿ  ತೋಯ್ದುಡುಗೆಯಲೇ ಘತ್ತರಗಿ  ಅಮ್ಮನ ಸನ್ನಿಧಿಯಲಿ ನಿಂತಾಗ…  ” ಬದುಕು – ಬರಹಗಳನ್ನು ವ್ರತದಂತೆ  ಪಾಲಿಸುವ ನೀನೊಬ್ಬ ಹೇತ್ಲಾಂಡಿ ” ಅಂತ, ಅವಳೇ ಕಾರ್ಣಿಕ ನುಡಿದದ್ದು  ಬಡಬಡಿಸಿಕೊಂಡೆ. ಕುದುರೆಯಿಂದ  ಕೆಳಗಿಳಿದು ತುಡುಗು ಮಾಡಿದ ಪಾಪದ ಹುಡುಗನಂತೆ  ಹಂಗೇ ನಿಂತಿದ್ದೆ. ಒಂದುಬಗೆಯ ಜೀವ ಖಜೀಲಾದ ಸ್ಥಿತಿ ನನ್ನದಾಗಿತ್ತು. ಅವಳೆಲ್ಲ ಮಾತುಗಳಿಗೆ ಕಿವಿಯಾಗಿ ನಿಂತೇ ಇದ್ದೆ. “ನಾನೂನು ಇಲ್ಲ ನೀನೂನು ಇಲ್ಲ…ತನ್ನ  ತಾನರಿತವಗೆ ಬೇರೇನೂ ಇಲ್ಲ..” ಅಲ್ಲಮನ ವಚನ ಆಗಸದ ಅಶರೀರವಾಣಿಯಿಂದ ಶಾರೀರಗೊಂಡಿತು. “…ಆ ಕೆಂಪುಹಳ್ಳ ಮುತ್ತೈದೆಯಂತೆ  ಮೈತುಂಬಿ, ಮುಂಚಿನಂತೆ ಹರಿಯುತ್ತಿಲ್ಲ. ಹಳ್ಳದೆದೆಯ ನರ ನಾಡಿಗಳಲ್ಲಿ ಸರ್ಕಾರ ಜಾಲಿಯ ಮುಳ್ಳು ಕಂಟಿಗಳೇ ತುಂಬಿಕೊಂಡಿವೆ. ನಾವು ಆಟವಾಡಿದ  ಸ್ಮಾರಕದ ಆ ಜಾಗ ಎಲ್ಲಿ ಮಾಯವಾಗಿದೆಯೋ ತಿಳಿಯುತ್ತಿಲ್ಲ…” ಇದೆಲ್ಲ ನನ್ನೊಳಗೆ ನಾನೇ ಮಾತಾಡಿಕೊಂಡೆ. ಅವಳದು ಮುಂಚಿನಿಂದಲೂ ಲಿಪಿಗಿಂತ  ಲಿಪ್ಲಾಂಗ್ವೇಜ್ ಅಧಿಕ. ಹೀಗಾಗಿ ನನ್ನ ವಾಟ್ಸ್ಯಾಪ್, ಫೇಸ್ಬುಕ್ ಬರಹ  ನೋಡೋದಿಲ್ಲವೆಂದು  ಖಡಾಖಂಡಿತ ಧಾಟಿಯಲಿ ಉಲಿದಳು. ಪ್ಲಾಸ್ಟಿಕ್  ಬ್ಯಾಟೊಂದನ್ನು ಹಿಡಕೊಂಡು ಪುಟ್ಟ  ಬಾಲಕನೊಬ್ಬ ಅದೇ ರಸ್ತೆಯಲಿ  ಆಟವಾಡಿಕೊಂಡಂತೆ ಬರುತ್ತಿದ್ದ. ಹತ್ತಿರಕೆ ಬಂದು ಯಾರ್ಮಮ್ಮೀ ಇವ್ರು ? ಕೇಳಿತು ಮಗು. ನಾನು ಯಾರೀ ಮಗು ಎಂದು ಕೇಳುವ ಮುನ್ನವೇ…ತನ್ನ ಗಂಡನ  ಹೆಸರು ಹೇಳಿ,  ಹೌದು ಅವನ ಹಸಿತ್ಯಾಜ್ಯದ  ಫಲವೇ ಇವನು, ಎಂದು ಮಗನತ್ತ ತೋರಿಸಿದಳು. ಅವಳ  ಮಾತಲ್ಲಿ ವಿಷಾದಪೂರಿತ ವ್ಯಂಗ್ಯವಿತ್ತು. ಅಷ್ಟೊತ್ತಿಗೆ ಮಗು ಆಡುತ್ತಾಡುತ್ತಾ  ದೂರ ಚಲಿಸಿತ್ತು.   ಸೂರ್ಯ ತಾಯಿಹೊಟ್ಟೆ ಸೇರಿ ಕಣ್ನಸುಕು  ಮುಸುಕಿ, ಮೋಡ ಗುಡುಗುಗಳ ಕಗ್ಗತ್ತಲು ಘೋರಿಸಿತು. ಕಣ್ಣಳತೆಗೂ  ದೂರದ ತೋಟದ ಮನೆಯ ಕಡೆಯಿಂದ ಮಾಟದ ದೀವಟಿಗೆಯ ಕೋಲ್ಮಿಂಚಿನ ಸೆಳಕು ಬೀಸಿದಂತಾಯಿತು. ನನಗೇಕೋ ಸೂರ್ಯನಿಲ್ಲದ ಸುತ್ತಲಿನ ಕತ್ತಲೆಗಿಂತ  ಕೆಂಪಗೆ ಕಾದ ಛಡಿಗಳ ಭಯದ ಕತ್ತಲು ಎದೆಯ ತುಂಬ ತುಳುಕ ತೊಡಗಿತು. ನಾಳೆ “ಮತ್ತೆ ಭೆಟ್ಟಿಯಾಗೋಣವೆಂದು” ಕಪ್ಪು ಕುದುರೆಯ ಲಗಾಮಿಗೆ ಕಿಕ್ ಹೊಡೆದು  ಕತ್ತಲೆ ಸೀಳಿಕೊಳ್ಳುತ್ತ ಅರವತ್ತರ  ವೇಗದಲ್ಲಿ ಕುದುರೆ ಓಡಿಸತೊಡಗಿದೆ. ನನ್ನೊಳಗೆ ಅವಳು ಚೆಲುವ ಪರಿಮಳ ಅರಳಿಸುತ್ತ ದೇವಕನ್ನಿಕೆಯಾಗಿ…ಅನುಭವಿಸುತ್ತಲೇ ಹಿಂಬಾಲಿಸಿದಳು…ನಾನು ಕನ್ಯ ಸಿಸುಮಗನಂತೆ ಅರವತ್ತರ ವೇಗದಲ್ಲಿ ಸಾಗುತ್ತಲೇ ಇದ್ದೆ. *******  

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಥೆ ಪೊಟ್ಟಿ ಶೀಲಾ ಭಂಡಾರ್ಕರ್. ಪೊಟ್ಟಿ. ಪೊಟ್ಟಿ, ಬಂಟ್ವಾಳದ ಬಂಗ್ಲೆ ಗುಡ್ಡೆಯಲ್ಲೊಂದು ಗುಡಿಸಲು ಕಟ್ಟಿ ವಾಸವಾಗಿದ್ದಳು. ಬಂಗ್ಲೆ ಗುಡ್ಡೆಗೆ ಹೋಗುವ ರಸ್ತೆಗೆ ತಾಗಿಯೇ ನಮ್ಮಜ್ಜಿ ಮನೆ ಇದ್ದುದರಿಂದ ಅವಳು ಯಾವುದಕ್ಕಾದರೂ ಓಡಿ ಬರುವುದಿತ್ತು. ಅವಳಿಗೆ ಒಂದಿಷ್ಟು ಜನ ಮಕ್ಕಳು. ಎಷ್ಟು ಎಂದು ಅವಳಿಗೇ ಲೆಕ್ಕ ಇತ್ತೊ ಇಲ್ಲವೊ. ಕೃಶ ಶರೀರದ ಮಧ್ಯಮ ಎತ್ತರದ ಪೊಟ್ಟಿಗೆ ಒಬ್ಬ ಗಂಡ ಅಂತ ಇದ್ದನಂತೆ ಎಂದು ಬಾಪಮಾ ಹೇಳಿದ್ದ ನೆನಪು. ಅದೇನೋ ಆಗಿ ಅವನು ಸತ್ತ ಮೇಲೆ ಒಂದೆರಡು ಮಕ್ಕಳ ಜೊತೆ ಅವಳೊಬ್ಬಳೇ ಬಂಗ್ಲೆ ಗುಡ್ಡೆಯಲ್ಲಿ ವಾಸವಾಗಿದ್ದಳು. ವರ್ಷಕ್ಕೊಮ್ಮೆ ಬಸುರಿ, ವರ್ಷಕ್ಕೊಂದು ಬಾಣಂತನ ಅಂದ ಹಾಗೆ ಸದಾ ಅದೇ ಸ್ಥಿತಿಯಲ್ಲಿರುತಿದ್ದಳು. ಅದ್ಯಾರು ಬರುತಿದ್ದರೋ, ಹೋಗುತಿದ್ದರೋ, ಆ ಬತ್ತಿದ ದೇಹದಲ್ಲಿ ಅದೆಂತ ಅಕರ್ಷಣೆಯಿತ್ತೊ ಅವಳಲ್ಲಿಗೆ ಬರೋ ಗಂಡಸರಿಗೆ, ಹೋಗುವ ಮೊದಲು ಅವಳಿಗೆ, ಅವಳ ಮಕ್ಕಳಿಗೆಂದು ಏನಾದರೂ ಕೊಡಬೇಕೆಂದು ಅನಿಸುತಿತ್ತೋ ಇಲ್ಲವೋ ಒಂದೂ ಸರಿಯಾಗಿ ಯಾರಿಗೂ ತಿಳಿಯುತ್ತಿರಲಿಲ್ಲ. ಯಾಕೆಂದರೆ ಅವಳು ಪೊಟ್ಟಿ. ಪೊಟ್ಟಿ ಅಂದರೆ ಮಾತು ಬಾರದವಳು. ಮೂಕಿ. ಅವಳ ಮಕ್ಕಳಿಗೆ ಮಾತು ಬರುತಿತ್ತೇನೋ ಆದರೆ ಅವರಿಗೆ ಮಾತು ಕಲಿಸಲು ಯಾರಿದ್ದರು? ಅವರ ಬಳಿ ಮಾತನಾಡುವವರು ಬೇಕಲ್ಲ! ನಮ್ಮ ಮನೆಗೆ ಬರುವಾಗ,  ಹಿಂದಿನ ಬಾಗಿಲೆಂದಿಲ್ಲ, ಮುಂದಿನ ಬಾಗಿಲೆಂದಿಲ್ಲ ಎಲ್ಲಿಂದಾದರೂ ಯಾವಾಗಲಾದರೂ ಬರುತಿದ್ದಳು. ಅಂದರೆ ಒಳಗೆ ಬರುತ್ತಿರಲಿಲ್ಲ. ಹೊರಗೆ ನಿಂತು ಅದೇನೋ ವಿಚಿತ್ರ ಸದ್ದು ಮಾಡುತಿದ್ದಳು. ನಮ್ಮ ಬಾಪಮಾ ಅವಳಿಗೆ ಉಳಿದದ್ದು, ಬಳಿದದ್ದು ಅದು ಇದು ಅಂತ ಕೊಡುತಿದ್ದರು. ಆ ಮಕ್ಕಳನ್ನು ನೋಡುವಾಗ ಹೊಟ್ಟೆ ಚುರ್ ಅನ್ನುತ್ತೆ ಅನ್ನುತಿದ್ದರು. ಕಂಕುಳಲ್ಲೊಂದು, ಹೆಗಲ ಮೇಲೆ ನೇತಾಡುವ ಜೋಳಿಗೆಯಲ್ಲೊಂದು, ಹಿಂದೆ ಮುಂದೆ ಹೀಗೆ ಐದಾರು ಮಕ್ಕಳು ಜತೆಗೆ ನಡೆದುಕೊಂಡು ಬರುವಂಥವು. ಇಷ್ಟು ಮಕ್ಕಳನ್ನು ಕರೆದುಕೊಂಡು ಭಿಕ್ಷೆಗೆ ಹೋಗುತಿದ್ದಳು. ಕೆಲಸ ಮಾಡಿ ತಿನ್ನುವ ಸ್ವಾಭಿಮಾನ ಇತ್ತೋ ಇಲ್ಲವೋ, ಅವಳಿರುವ ಸ್ಥಿತಿ ಅವಳನ್ನು ಕೆಲಸ ಮಾಡಲು ಬಿಡಬೇಕಲ್ಲ. ನನ್ನ ಅಪ್ಪನಿಗೆ ಮದುವೆ ಆಗುವ ಮೊದಲಿನಿಂದಲೂ ಅವಳು ಅಲ್ಲಿ ವಾಸಿಸುತಿದ್ದಳು. ಅಪ್ಪನಿಗೆ ಮದುವೆ ಆದ ಹೊಸತರಲ್ಲಿ, ಅಮ್ಮ ಒಂದು ಸಂಜೆ ಒಬ್ಬರೇ ಅಡುಗೆ ಮನೆಯಲ್ಲಿ ಒಲೆ ಮೇಲೆ ಹಾಲಿಟ್ಟು ಅದು ಕಾಯುವುದನ್ನೇ ನೋಡುತ್ತಾ ಕೂತಿದ್ದಾಗ, ಎಂದಿನಂತೆ ಪೊಟ್ಟಿ ಬಂದು ತನ್ನ ವಿಚಿತ್ರ ಧ್ವನಿಯಲ್ಲಿ ಕೂಗಿದಳಂತೆ. ಅಮ್ಮ ಹೆದರಿ ಹೌಹಾರಿ ಒಲೆಯ ಕಟ್ಟಿಗೆ ಮೇಲೆ ಕಾಲಿಟ್ಟು, ಆ ಸೌದೆ ಎಗರಿ ಹಾಲಿನ ಪಾತ್ರೆ ಉರುಳಿ, ಹಾಲೆಲ್ಲ ಚೆಲ್ಲಿ ಹೋಯ್ತು. ಒಂದು ಕಡೆ ಇಷ್ಟೆಲ್ಲ ರಂಪವಾಗಿ ಹೋಯ್ತು. ಮತ್ತೊಂದೆಡೆ ಕಿಟಕಿಯಿಂದ ಹೆದರಿಸಿದ್ದು ಯಾರು ಎನ್ನುವ ಭಯ. ಒಳಗೆ ಇಷ್ಟೆಲ್ಲ ಆದ ಶಬ್ದಕ್ಕೆ ಎಲ್ಲರೂ ಓಡಿಬಂದು ನೋಡಿದರೆ ಪೊಟ್ಟಿ ಇನ್ನೂ ಅಲ್ಲೇ ತನ್ನ ಕೊಳಕಾದ ಹಲ್ಲು ತೋರಿಸಿ ನಗುತ್ತಾ ನಿಂತಿದ್ದಳು. ಅಮ್ಮ ಕಿಟಕಿ ಬಳಿ ಕೈ ತೋರಿಸಿ, ನಡುಗುತ್ತಾ ಅಳುವುದನ್ನು ನೋಡಿ ಬಾಪಮಾ ಪೊಟ್ಟಿಗೆ ಚೆನ್ನಾಗಿ ಬೈದರಂತೆ. ಹೀಗಾ ಹೆದರಿಸೋದು ಅಂತ. ಪೊಟ್ಟಿಗೆ ಹೆಸರೇನಾದರೂ ಇತ್ತೋ ಗೊತ್ತಿಲ್ಲ. ಇದ್ದರೂ ಅವಳ ಬಳಿ ಕೇಳಿದವರ್ಯಾರು? ಕೇಳಿದರೂ ಅವಳು ಹೇಳುವುದಾದರೂ ಹೇಗೆ? ಎಲ್ಲರೂ ಅವಳನ್ನು ಪೊಟ್ಟಿ ಎಂದೇ ಕರೆಯೋದಿತ್ತು. ಯಾರುಯಾರೋ ಕೊಟ್ಟ, ಎಲ್ಲಿ ಸಿಕ್ಕಿದರೂ ಹೆಕ್ಕಿದ ಬಳೆಗಳನ್ನು ಅವಳು ಕೈ ತುಂಬಾ ಸುರಿದುಕೊಳ್ಳುವುದಿತ್ತು. ಒಂದಕ್ಕೊಂದು ಬಣ್ಣ, ಸೈಜ್, ಡಿಸೈನ್ ಯಾವುದೂ ತಾಳೆ ಇರುತ್ತಿರಲಿಲ್ಲ. ಈಗಲೂ ಹಾಗೆ ಬಳೆ ಹಾಕಿಕೊಂಡ ಮಕ್ಕಳನ್ನು ” ಪೊಟ್ಟಿಯ ಹಾಗೆ” ಅನ್ನುವುದುಂಟು. ಅವಳ ಮಕ್ಕಳಲ್ಲಿ ಒಂದು ಮಗು ಎಲ್ಲೋ ಹೋಯ್ತೆಂದು ಬಂದು ಬಾಪಮಾ ಹತ್ತಿರ ಹೇಳುತಿದ್ದಳು ಒಮ್ಮೆ. ಆದರೆ ಅಂಥಾದ್ದೇನೂ ದುಃಖ ಆದ ಹಾಗಿಲ್ಲ. ಅವಳು ಯಥಾಪ್ರಕಾರ ಭಿಕ್ಷೆ ಬೇಡೋದು, ದಾರಿಯಲ್ಲಿ ಹೋಗುವವರನ್ನು ನೋಡಿ ತಲೆ ಕೆರೆದು, ಹಲ್ಲು ಕಿಸಿದು ನಗೋದು ಎಲ್ಲಾ ಮಾಡುತಿದ್ದಳು. ಅವಳಲ್ಲಿ ಏನೂ ಭಾವನೆಗಳಿಲ್ಲವೇನೋ ಎಂದು ನಮ್ಮ ಮನೆಯಲ್ಲಿ ಮಾತನಾಡಿಕೊಂಡದ್ದು ನನ್ನ ಕಿವಿಗೂ ಬಿದ್ದಿತ್ತು‌. ಅಮ್ಮನನ್ನು ಹೆದರಿಸಿದಾಗ ಬೈದದ್ದು ಬಿಟ್ಟರೆ ಬಾಪಮಾ ಮತ್ತು ಅವಳ ನಡುವೆ ಸಂಭಾಷಣೆ ಕೈ ಬಾಯಿ ಸನ್ನೆಯಲ್ಲೇ ನಡೆಯುತಿತ್ತು. ಅವಳಿಗೆಂದು ಏನಾದರೂ ತೆಗೆದಿಟ್ಟರೆ ಅಜ್ಜಿ ಮನೆಯ ಮುಂದಿನ ಸರಳುಗಳ ಜಗಲಿಯಲ್ಲಿ ಮರದ ಮಂಚದ ಮೇಲೆ ಕೂತು ಕಾಯುತಿದ್ದರು. ಅವಳನ್ನು ಕಂಡ ಕೂಡಲೇ ಏಯ್ ಅಂತ ಕರೆದರೆ ಅವಳೂ ಗೊಳ್ಳನೆ ನಕ್ಕು ನೀವು ಕರೆಯುವುದನ್ನೇ ಕಾದಿದ್ದೆ ಅನ್ನುವ ಹಾಗೆ ಕಾಂಪೌಂಡ್ ಒಳಗೆ ಬಂದು ತುಳಸಿ ಕಟ್ಟೆಯ ಬಳಿ ಕೂತು ಮಕ್ಕಳನ್ನೂ ಕೂರಿಸಿಕೊಂಡು ಬಾಪಮಾ ಕೊಟ್ಟ ತಿಂಡಿಯನ್ನು ತಾನೂ ತಿನ್ನುತ್ತಾ ಮಕ್ಕಳಿಗೆ ತಿನ್ನಿಸುತ್ತಾ ಸ್ವಲ್ಪ ಹೊತ್ತು ಇದ್ದು ನೀರು ಕುಡಿದು ಹೊರಡುತಿದ್ದಳು. ಮತ್ತೆ ಸಿಕ್ಕಿದ್ದು ಮದ್ಯಾಹ್ನಕ್ಕೆಂದು ಮನೆಗೆ ಕೊಂಡು ಹೋಗುತಿದ್ದಳು. ಮುಂದೆ ಒಂದು ದಿನ ಭಾರೀ ಸುಸ್ತಾಗಿ ಬಂದು ಅಂಗಳದಲ್ಲಿ ಕೂತಿದ್ದು ನೋಡಿ ಅಜ್ಜಿ ಹುಷಾರಿಲ್ವಾ ಎಂದು ಕೇಳಿದಾಗ ನಸು ನಾಚಿ ನಕ್ಕಳಂತೆ. ಅಜ್ಜಿಗೆ ಅರ್ಥ ಆಗಿ ಅವಳಿಗೆ ಸನ್ನೆಯಲ್ಲೇ ಸಹಸ್ರನಾಮಾರ್ಚನೆ ಮಾಡಿದರೂ ದಿನಾ ಕರೆದು ತಿನ್ನಲು ಕೊಡುತಿದ್ದರು. ಅವಳ ಬಾಣಂತನ ಅವಳೇ ಮಾಡಿಕೊಳ್ಳುತಿದ್ದಳಂತೆ. ಅದನ್ನೂ ಸನ್ನೆಯಲ್ಲೇ ವಿವರಿಸಿ ಹೇಳುತಿದ್ದಳು. ಯಾವ ಸಂಭ್ರಮವಿಲ್ಲದಿದ್ದರೂ, ಸರಿಯಾಗಿ ಹೊಟ್ಟೆಗಿಲ್ಲದಿದ್ದರೂ ಅವಳ ಮಕ್ಕಳು ಮಾತ್ರ ಮೈಕೈ ತುಂಬಿಕೊಂಡು ನೋಡಲು ಲಕ್ಷಣವಾಗಿದ್ದವು. ಹಾಲು, ಬೆಣ್ಣೆ, ತುಪ್ಪ ಸುರಿದು ತಿನ್ನಿಸಿದ್ರೂ ನಮ್ಮ ಮಕ್ಕಳು ಹೊಟ್ಟೆಗೆ ಇಲ್ಲದವರ ಹಾಗಿವೆ ಅಂತ ಬಾಪಮಾ ನಮ್ಮನ್ನು ತೋರಿಸಿ ಹೇಳುವಾಗ ಅಮ್ಮನಿಗೆ ಪಾಪ ಪಿಚ್ಚೆನಿಸುತಿತ್ತು. ಈ ಸಲವೂ ಹೆರಿಗೆಯಾಗಿ ಮೂರು ನಾಲ್ಕು ದಿನಕ್ಕೇ ರಸ್ತೆಗೆ ಇಳಿದಿದ್ದಳು ಪೊಟ್ಟಿ. ಅಷ್ಟೂ ಮಕ್ಕಳ, ತನ್ನ,  ಹೊಟ್ಟೆಗೆ ಏನಾದರೂ ಬೇಕಿತ್ತಲ್ಲ. ಈಗಲೂ ಎಂದಿನಂತೆ ಒಂದು ಜೋಳಿಗೆಯೊಳಗೆ, ಒಂದು ಕಂಕುಳಲ್ಲಿ. ಒಂದು ದಿನ ಮಾತ್ರ ಮದ್ಯಾಹ್ನ ಪೊಟ್ಟಿ ಓಡುತ್ತಾ ಬಂದು ಎದೆ ಬಡಿದುಕೊಳ್ಳುತ್ತಾ ಹೃದಯವಿದ್ರಾವಕವಾಗಿ ತನ್ನ ವಿಚಿತ್ರ ಧ್ವನಿಯಲ್ಲಿ ಅಳುತಿದ್ದಾಗ ಮನೆಯವರೆಲ್ಲ ಗಾಬರಿಯಾಗಿ ಓಡಿ ಬಂದರು. ಜೋಳಿಗೆಯಲ್ಲಿ ಮಗುವನ್ನು ನೇತಾಡಿಸಿದ್ದಾಳೆ. ಮಗು ಜೀವಂತವಾಗಿದೆ. ಇನ್ನೇತಕ್ಕೆ ಅಳುತಿದ್ದಾಳೆಂದು ಯಾರಿಗೂ ತಿಳಿಯದಾಯಿತು. ಆ ಹೊತ್ತು ಗಾಬರಿಯಾದ ನಮ್ಮ ಧೈರ್ಯಸ್ಥೆ ಬಾಪಮಾನ ಮುಖ ನನಗೆ ಇನ್ನೂ ಕಣ್ಣ ಮುಂದಿದೆ. ಬಾಪಮಾ ಅಂದರೆ ಅಜ್ಜಿ. ಅಜ್ಜಿ ಅಂದರೆ ಬಾಪಮಾ ಎರಡೂ ಒಬ್ಬರೇ. ಅಪ್ಪನ ಅಮ್ಮ ಬಾಪಮಾ. ಬಾಪಮಾ ಅಂಗಳಕ್ಕೆ ಇಳಿದು ಹತ್ತಿರ ಹೋಗಿ ಕೇಳಿದರು. ಹೂಂ ಹೂಂ ಅಂತ ಕೈಯಿಂದ ಸನ್ನೆಯಲ್ಲಿ “ಏನಾಯಿತು?” ಎಂದರು. ಅವಳು ಹೊಟ್ಟೆ ಕಿವುಚಿಕೊಳ್ಳುತ್ತಾ ಎದೆ ಬಡಿದು ಕೊಳ್ಳುತ್ತಾ, ಕೂದಲು ಕಿತ್ತು ಕೊಳ್ಳುತ್ತಾ ಅಳುವುದನ್ನು ನೋಡಿ ಅಲ್ಲಿದ್ದವರ ಕಣ್ಣುಗಳು ಒದ್ದೆಯಾದವು. ಅವಳ ಕೈ ಹಿಡಿದು ಅಳಬೇಡ ಎಂದು ಕುಡಿಯಲು ನೀರು ಕೊಟ್ಟು, ಸಮಾಧಾನ ಮಾಡಲು ನಮ್ಮಜ್ಜಿ ಮಡಿ ಮೈಲಿಗೆಯನ್ನೂ ಮರೆತು ಅವಳ ಬೆನ್ನು ಸವರಿದ್ದರು. ಸಮಾಧಾನ ತಂದುಕೊಂಡ ಅವಳು ಅಜ್ಜಿಯ ಕೈ ಹಿಡಿದು ಏನು ನಡೆಯಿತು ಎಂದು ಪಾಪ ಅವಳ ರೀತಿಯಲ್ಲಿ ವಿವರಿಸಿದಾಗ ಅರ್ಥವಾಗಿದ್ದನ್ನು ಬಾಪಮಾ ಉಳಿದವರಿಗೆ ಹೇಳಿದರು. ಬೆಳಿಗ್ಗೆ ಭಿಕ್ಷೆಗೆ ಹೋಗುವಾಗ, ಕಂಕುಳ ಮಗುವಿನ ಕಾಲಿಗೆ ಮತ್ತು ಮನೆಯ ಮಾಡಿನ ಆಧಾರದ ಕೋಲಿಗೆ ದಾರ ಕಟ್ಟಿ ಬಿಟ್ಟು ಹೋಗಿದ್ದಳು. ಮೊದಲೆಲ್ಲ ಇನ್ನೂ ನಡೆಯಲು ಬಾರದ ಮಕ್ಕಳನ್ನು ಹೀಗೆ ಕಾಲಿಗೆ ದಾರ ಕಟ್ಟಿ ಮಂಚಕ್ಕೋ, ಕಂಬಕ್ಕೋ ಕಟ್ಟಿ ಹಾಕಿ ಮನೆ ಕೆಲಸ ಮುಗಿಸುವುದಿತ್ತು. ಆ ದಾರದ ಪರಿಧಿಯಲ್ಲೇ ಓಡಾಡಿ, ಆಟವಾಡಿ, ಸಾಕಾಗಿ ಅಲ್ಲೇ ಕೂತು ಅಳುತಿದ್ದವು ಮಕ್ಕಳು. ಪೊಟ್ಟಿ ಹೀಗೆ ಬಿಟ್ಟು ಹೋಗಿದ್ದಾಗ, ಮನೆಗೆ ಹಿಂತಿರುಗಿ ಬಂದು ನೋಡಿದರೆ ಮಗು ಇಲ್ಲ. ಹುಡುಕಿ, ಹುಡುಕಿ, ಕರೆದು ಸಾಕಾಗಿ, ಕೊನೆಗೆ ನೋಡಿದರೆ ಅಲ್ಲೇ ಹತ್ತಿರದಲ್ಲೇ ಇದ್ದ ನೀರಿಲ್ಲದ ಪೊಟ್ಟು ಸರ್ಕಾರಿ ಬಾವಿಯೊಳಗೆ ಬಗ್ಗಿ ನೋಡಿದರೆ ಅದರೊಳಗೆ ಬಿದ್ದಿದೆ ಮಗು. ತುಂಬಾ ಹಳೆಯ ಬಾವಿ ಅದು ಅದರ ಕಟ್ಟೆಯೂ ಬಿದ್ದು ಹೋಗಿ ಬಾವಿ ಎಂಬ ಹೊಂಡವೊಂದು ಮುಚ್ಚದೇ ಹಾಗೇ ಇತ್ತು. ಬನ್ನಿ ಬನ್ನಿ ಎಂದು ಸನ್ನೆಯಲ್ಲೇ ಕರೆದಾಗ ಎಲ್ಲರೂ ಬಾವಿಯ ಬಳಿ ಹೋಗಿ ನೋಡಿದರೆ ಮಗು ರಕ್ತ ಸಿಕ್ತವಾಗಿ ವಿಕಾರವಾಗಿ ಬಿದ್ದಿತ್ತು. ಕೂಡಲೇ ಅಜ್ಜಿ ಅದರೊಳಗೆ ಯಾರನ್ನೋ ಇಳಿಸಿ ಮಗು ಬದುಕಿದೆಯೋ ಎಂದು ಪರೀಕ್ಷಿಸಲು ಹೇಳಿ ಅಲ್ಲಿಯೇ ಮಣ್ಣು ಹಾಕಿ ಮುಚ್ಚಿಸಿದರು. ಪೊಟ್ಟು ಬಾವಿ ಅರ್ಧ ಮುಚ್ಚಿತು. ಆದರೂ ಅಪಾಯವೆಂದು ಮುನಿಸಿಪಾಲಿಟಿಯವರಿಗೆ ಹೇಳಿ ಪೂರ್ತಿ ಮುಚ್ಚಿಸಲಾಯಿತು. ಮಾತು ಬಾರದಿದ್ದರೂ , ಭಾವನೆಗಳೇ ಇಲ್ಲ ಎಂದು ಕೊಂಡಿದ್ದರೂ ಪೊಟ್ಟಿಗೆ ತನ್ನ ಕೈಯಾರ ಮಗು ಸತ್ತಿತು ಅನ್ನುವ ಅಪರಾಧಿ ಪ್ರಜ್ಞೆ ಕಾಡುತಿತ್ತೇನೋ, ಹೊಟ್ಟೆಗಿಲ್ಲದಿದ್ದರೂ, ಬಟ್ಟೆಗಿಲ್ಲದಿದ್ದರೂ, ಆ ಮಕ್ಕಳನ್ನು ಹುಟ್ಟಿಸಿದವರು ಆಮೇಲೆ ತಿರುಗಿ ನೋಡದಿದ್ದರೂ ಕರುಳವೇದನೆ ಎಂಬುದು ಎಷ್ಟು ತೀವ್ರವಾದುದು.  ಮುಂದಿನ ದಿನಗಳಲ್ಲಿ ಅವಳು ಯಾವ ಗಂಡಸನ್ನೂ ತನ್ನ ಗುಡಿಸಲಿಗೆ ಬರಲು ಬಿಡುತ್ತಿರಲಿಲ್ಲವಂತೆ, ಕಿರುಚಾಡಿ, ಕೈಗೆ ಸಿಕ್ಕಿದುದರಿಂದ ಹೊಡೆದು ಓಡಿಸುತಿದ್ದಳಂತೆ. ಈಗಲಾದರೂ ಬುದ್ಧಿ ಬಂತಲ್ಲ ಎಂದು ಮನೆಯಲ್ಲಿ ಮಾತನಾಡಿಕೊಳ್ಳುತಿದ್ದರು.   *********

ಕಥಾಯಾನ Read Post »

ಕಥಾಗುಚ್ಛ

ಕಾರ್ಮಿಕ ದಿನದ ವಿಶೇಷ-ಕಥೆ

ಕಾರ್ಮಿಕ ದಿನದ ವಿಶೇಷ-ಕಥೆ ತಿಥಿ ಟಿ. ಎಸ್.‌ ಶ್ರವಣ ಕುಮಾರಿ. ತಿಥಿ “ನಾಗೂ… ಏ ನಾಗೂ… ಇದಿಯನೇ ಒಳಗೆ…” ಅಡುಗೆಮನೆಯನ್ನಿಸಿಕೊಂಡ ಆ ಮನೆಯ ಮೂಲೆಯಲ್ಲಿ ಹೊಗೆಯೊಂದಿಗೆ ಗುದ್ದಾಡುತ್ತಾ ಹುಳಿಗೆ ಹಾಕಲು ಹುಣಿಸೇಹಣ್ಣು ಕಿವುಚುತ್ತಾ ಕುಳಿತಿದ್ದ ನಾಗುವಿಗೆ ಸುಬ್ಬಣ್ಣನ ದನಿ ಕೇಳಿ ʻಯಾಕ್‌ ಬಂದ್ನೋ ಮಾರಾಯ ಈಗ, ಕೆಲಸಿಲ್ದೆ ಈ ದಿಕ್ಕಿಗ್‌ ಕೂಡಾ ತಲೆಯಿಟ್ಟು ಮಲಗೋನಲ್ಲʼ ಎಂದುಕೊಂಡೇ “ಇದೀನೋ ಇಲ್ಲೇ ಒಲೆಮುಂದೆ ಅಡುಗೆಮಾಡ್ತಾ” ಎಂದುತ್ತರಿಸಿದಳು. ಬಿಸಿಲಿನಿಂದ ಒಳಗೆ ಬಂದವನಿಗೆ ಅಡುಗೆಮನೆಯೆಂದು ಮಾಡಿದ್ದ ಅಡ್ಡಗೋಡೆಯ ಒಳಗಿನ ಕತ್ತಲೆ, ಹೊಗೆಯ ಮಧ್ಯೆ ʻನಾನೂ ಇದೀನಿʼ ಎನ್ನುವಂತೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅಸ್ಪಷ್ಟವಾಗಿ ಅವಳ ಆಕೃತಿ ಕಂಡಿತು. “ಈ ಹೊಗೇಲಿ ಅದೆಂಗಾರ ಇದಿಯೇ ಮಾರಾಯ್ತಿ, ನಿನ್‌ ಮಖ್ವೇ ಸಮಾ ಕಾಣಲ್ವಲ್ಲೇ” ಎಂದ ಕೆಮ್ಮುತ್ತಾ. “ಕಾಣ್ದಿದ್ರೆ ಬಿಡತ್ಲಾಗೆ, ಮಾತಾಡ್ತಿರದು ಕೇಳ್ತಿದ್ಯಲ್ಲ, ಏನು ಸವಾರಿ ಈ ಕಡೆ” ಎಂದಳು. ಇಷ್ಟು ಹೊತ್ತಿಗೆ ಆ ಕತ್ತಲಿಗೆ ಸ್ವಲ್ಪ ಕಣ್ಣನ್ನು ಹೊಂದಿಸಿಕೊಂಡಿದ್ದವನು ಅಲ್ಲೇ ಎದುರಿನ ಗೋಡೆಗೊರಗಿ ಕೂತು “ಇವತ್ತು ಸೋಮಾರ ಅಲ್ವನೇ, ನಾಳೆ ಬರಾ ಶುಕ್ರಾರ ಅಜ್ಜಿ ಬರ್ತಳೆ. ಈ ಸಲ ʻಮೇ ಡೇʼ ರಜಾದಿನ್ವೇ ಬಂದಿದೆ ನೋಡು. ಕರ್ದೋರೆಲ್ರೂ ಬರ್ತರೆ. ದೊಡ್ಡೋರೆ ಒಂದು ಮೂವತ್ತು ಜನ್ರ ಮೇಲೇ ಆಗ್ತರಪ್ಪ. ಅಮ್ಮಂಗೆ ಒಬ್ಳಿಗೇ ಅಷ್ಟು ಅಡುಗೆ ಮಾಡಕ್ಕೆ ಕೈಲಾಗುಲ್ವಲ್ಲೆ. ಅದ್ಕೇ ನಾಗೂನ ಸಹಾಯಕ್ಕೆ ಬರ್ಬಕಂತೆ ಅಂತ ಹೇಳ್ಬಾ ಅಂದ್ಳು” ಅಂದ.‌ ಅವನ ಕಡೆ ತಿರುಗಿ “ಈ ಶುಕ್ರಾರಾನಾ… ಅವತ್ತೇ ನಾರಣಪ್ಪನೋರ ಮನೇಲಿ ಮಗನ್‌ ಮದ್ವೆ ದೇವರ ಸಮಾರಾದ್ನೆ ಇಟ್ಕಂಡಿದರೆ. ಮದ್ವೆ ಮನೆ ಚಕ್ಲಿ, ಉಂಡೆ ಎಲ್ಲಾ ನಾನೇ ಮಾಡ್‌ಕೊಟ್ಟಿರದು. ನಿನ್ನೇಂದ ಶುರುಮಾಡ್ದೋಳು ಇವತ್ತು ಬೆಳಗ್ಗೆನೂ ಏಳುತ್ಲೇ ಹೋಗಿ ಕೆಲ್ಸ ಮುಗಿಸ್ಕೊಟ್ಟು ಬಂದು ಒಲೆ ಹಚ್ಚಿದೀನಿ. ತಪ್ದೇ ಅವತ್ತು ಸುತ್ತು ಕೆಲ್ಸಕ್ಕೆ ಜತಿಗೆ ಹೂವೀಳ್ಯಕ್ಕೂ ಬರ್ಬೇಕು ಅಂತ ಹೇಳಿಯಾರೆ. ನಾನೂ ಒಪ್ಕಂಡಿದಿನಿ. ತಿಥಿ ಅಡ್ಗೆಗೆ ನಂಗೆ ಬರಕ್ಕಾಗಲ್ಲ” ಅಂದು ಆರುತ್ತಿದ್ದ ಒಲೆಯನ್ನೊಮ್ಮೆ ಊದುಗೊಳವೆಯಿಂದ ಜೋರಾಗಿ ಊದಿದಳು. “ಹಂಗಂದ್ರೆ ಹ್ಯೆಂಗೇ? ವರ್ಷ್ವಷ್ವೂ ಮಾಘ ಶುದ್ಧ ಅಷ್ಟ್ಮಿ ದಿನ ಅಜ್ಜಿ ತಿಥಿ ಅನ್ನದು ನಿಂಗೊತ್ತಲ್ವನೆ. ಪ್ರತಿ ಸಲ್ವೂ ನಿಂಗೇ ಹೇಳುದು ನೀನೇ ಜತಿಗ್‌ ಬರದು. ಮರ್ತೇಂದ್ರೆ ಹ್ಯಂಗೆ?” ಮರೆತು, ಬೇರೆಯ ಕಡೆ ಒಪ್ಪಿಕೊಂಡದ್ದು ಅವಳದೇ ತಪ್ಪು ಅನ್ನೋ ಹಾಗೆ ಸುಬ್ಬಣ್ಣ ದಬಾಯಿಸಿದ. “ನಾನೊಬ್ಳೆನಾ ಇರದು ಅಜ್ಜಿಗೆ ಮೊಮ್ಮಗ್ಳೂಂತ, ಪ್ರತಿಸಲ್ವೂ ಬರ್ತಿರ್ಲಿಲ್ವ. ಈ ಸಲ ನಂಗಾಗಲ್ಲ. ಇನ್ಯಾರಾದ್ರೂ ಮಾಡ್ಲಿ” ಎಂದವಳೇ ಮತ್ತೆ ಆರುತ್ತಿದ್ದ ಒಲೆಯತ್ತ ತಿರುಗಿದಳು. “ನಂಗೊತ್ತಿಲ್ಲಪ್ಪ, ನೀ ಹೀಗಂದಿ ಅಂತ ಅಮ್ಮನ ಹತ್ರ ಹೇಳ್ತಿನಿ. ನೀನುಂಟು, ಅವ್ಳುಂಟು. ಹೇಳ್‌ಬಾ ಅಂದ್ಲು, ಹೇಳಿಯೀನಿ” ಎನ್ನುತ್ತಾ ಕೋಪಿಸಿಕೊಂಡು ಅಲ್ಲಿಂದ ಎದ್ದ. ʻಹೋದ್ರೆ ಹೋಗ್ತಾನೆ. ನಾನೊಬ್ಳು ಸಿಕ್ತೀನಿ ಇವ್ರಿಗೆ ಬಿಟ್ಟಿ ಚಾಕ್ರಿ ಮಾಡಿ ಸಾಯಕ್ಕೆ… ಹಾಳಾದ್ ಈ ಒಲೆ… ಹತ್ಕೊಂಡು ಅಡುಗೆಯಾದ್ರೆ ಸಾಕಾಗಿದೆ. ಮುಲ್ಲಾ ಕೂಗಿ ಎಷ್ಟೊತ್ತು ಆಗೋಯ್ತು. ಇನ್ನರ್ಧ ಗಂಟ್ಗೆ ಹಸ್ಕಂಡು ಬರಾ ಹೊತ್ಗೆ ಆಗಿಲ್ದಿದ್ರೆ ಒಂದು ರಾಮಾಣ್ಯವೇ ಆಗೋಗತ್ತೆ…ʼ ಅಂದುಕೊಂಡು ಮತ್ತೆ ಮತ್ತೆ ಊದಿ ಅಂತೂ ಒಲೆ ಉರಿಸುವುದರಲ್ಲಿ ಗೆದ್ದಳು. ಗಂಡನ ಊಟವಾದ ಮೇಲೆ ತಾನೂ ಒಂದಷ್ಟು ಉಂಡು ಮಿಕ್ಕದ್ದನ್ನ ಸ್ಕೂಲಿಂದ ಬರುವ ಮಕ್ಕಳಿಗೆ ಮುಚ್ಚಿಟ್ಟು ಅಡುಗೆ ಮಾಡಿದ ಜಾಗವೆಲ್ಲಾ ಒರಸಿ ಉಸ್ಸಪ್ಪಾ ಅಂತ ಬಾಗಿಲೆದುರಿಗೆ ಕುಳಿತುಕೊಂಡಳು. ಎದುರಿನ ಹೊಂಗೆಮರದಿಂದ ಬೀಸುತ್ತಿದ್ದ ಗಾಳಿಗೆ ಜೀವವೆಲ್ಲಾ ಹಾಯೆನಿಸಿ ಬಾಗಿಲು ತೆರೆದಿದ್ದಂತೆಯೇ ʻಓಣಿ ಕೊನೇಮನೆ, ಯಾರ್‌ ಹಾಯ್ತಾರಿಲ್ಲಿʼ ಎನಿಸಿ ಚಾಪೆ ಬಿಡಿಸಿ ಉರುಳಿಕೊಂಡಳು. ಬೆಳಗ್ಗೆ ಎದ್ದಾಗಿಂದ ಒಲೆ ಮುಂದೆ ದಣಿದಿದ್ದು ಬೆನ್ನು ನೆಲಕ್ಕೆ ಹಾಕಬೇಕೆನಿಸಿತ್ತು. ʻಪ್ರತಿಸಲವೂ ಜಯತ್ತೆ ನನ್ನೇ ಯಾಕ್ ಕರಿಬೆಕು? ಕೃಷ್ಣವೇಣಿ, ಶಾರದಾ, ವಿಮಲಾ ಯಾರೂ ಅವ್ಳ ಕಣ್ಣಿಗ್ಯಾಕ್ ಕಾಣಲ್ಲ. ಅವ್ರನ್ನ ಕರ್ಯದು, ಅವ್ರೂ ಎಲ್ಲಾ ನನ್ನಂಗೆ ಮಾವನ್‌ ಅಕ್ತಂಗೀರ್ ಮಕ್ಳೇ ಅಲ್ವಾ ಅವರತ್ರ ಕೆಲಸ ತೆಗೆಯೋದು ನನ್ನ ಹತ್ರ ತೆಗೆದಷ್ಟು ಸುಲಭ್ವಾ. ಯಾರೂ ಜಯತ್ತೆ ಜೋರಿಗೆ ಸೊಪ್ಪು ಹಾಕಲ್ಲ, ನೀನೂಂದ್ರೆ ನಿಮ್ಮಪ್ಪ ಅಂತರೆ. ಅವ್ರೆಲ್ಲಾ ಮನೆಕಡೆ ಹಚ್ಚಗೆ, ಬೆಚ್ಚಗೆ ತಕ್ಮಟ್ಟಿಗೆ ಚೆನ್ನಾಗಿದರೆ, ಹಾಗಂದ್ರೆ ತಡಕಳತ್ತೆ. ಅದೇ ನಾನು ಎದುರು ಮಾತಾಡಿದ್ರೆ ಊರಲ್ಲೆಲ್ಲಾ ʻಎರ್ಡೊತ್ತು ನೆಟ್ಗೆ ಊಟ್ಕಿಲ್ದಿದ್ದೂ ಎಷ್ಟು ಸೊಕ್ಕುʼ ಅಂತ ಕತೆಕತೆಯಾಗಿ ಹೇಳ್ಕಂಡು ಬರ್ತಳೆ. ತಥ್‌, ಬಡ್ತನಾ ಅನ್ನೋದು ಬಾಯ್ನೂ ಹೊಲ್ದ್ಬಿಡತ್ತಲ್ಲ…ʼ ಅನ್ನಿಸಿ ಇರುಸುಮುರುಸಾಯ್ತು. ಪಕ್ಕಕ್ಕೆ ತಿರುಗಿಕೊಂಡಳು. ʻಹಾಳಾಗ್ಲಿ ಆ ವಿಷ್ಯ, ಹೇಗೂ ಈ ಸಲ ಬರಲ್ಲʼ ಅಂತ ಹೇಳಾಯ್ತಲ್ಲಾ, ನಾಳೆ ತುಂಗಮ್ನೋರ ಮನೆ ಸಾರಿನ್‌ ಪುಡಿ, ಹುಳಿಪುಡಿ ಕೆಲ್ಸ ಇದೆ.‌ ದುಡ್ಡಿನ್‌ ಜತಿಗೆ ಒಂದು ವಾರ ಹತ್ದಿನಕ್ಕಾಗಷ್ಟು ಪುಡೀನು ಕೊಡ್ತರೆ. ಬುದ್ವಾರ ಲಲಿತಮ್ನೋರಿಗೆ ದೋಸೆಹಿಟ್ಟು ರುಬ್ಬುಕೊಡಕ್ಕೆ ಬರ್ತಿನಿ ಅಂತ ಹೇಳಾಗಿದೆ. ಎರಡ್ಸೇರು ಅಕ್ಕಿ ನೆನ್ಸಿರೂ ಒಂದು ಹೊತ್ಗಾಗೋಷ್ಟು ಹಿಟ್ಟು ತಗಂಡೋಗೆ ಅಂತೇಳಿ ಮೇಲಿಷ್ಟು ದುಡ್ಡೂ ಕೈಗಾಕ್ತಾರೆ. ಗುರ್‌ವಾರ ಬೆಳಗ್ಗೇನೇ ನಾರಣಪ್ಪನೋರ ಮನೆಗೆ ಹೋಗಿ ಮಡೀಲಿ ಚಿಗಳಿ, ತಂಬಿಟ್ಟು ಮಾಡಿಟ್ಟು ಬಂದ್ಬಿಡ್ಬೇಕು. ಶುಕ್ರಾರ ಬೆಳಗ್ಗೆದ್ದು ಕೋಸಂಬ್ರಿ, ಪಾನಕ ಎಲ್ಲಾ ಮಾಡೋ ಹೊತ್ಗೆ ಸರೀ ಹೋಗತ್ತೆ. ಹತ್ತೂವರೆಗೆ ರಾಹುಕಾಲ ಬಂದ್ಬಿಡತ್ತೆ, ಬೇಗ್ನೇ ಶುರು ಮಾಡ್ಕಂಬಿಡಣ ಅಂದ್ರಲ್ಲ ಕಮಲಮ್ಮʼ ಅಂತ ಯೋಚನೆ ಬಂತು. ಕೆಲ್ಸಕ್ಕೆ ನಾನೇನು ಇಂತಿಷ್ಟೂ ಅಂತ ಹೇಳ್ದಿದ್ರೂ ಸೈತಾ ಅವ್ರ ಕೈ ಧಾರಾಳಾನೆ. ʻಹೂವೀಳ್ಯಕ್ಕೆ ಕೊಡಕ್ಕೇಂತ ಐದು ಜನ ಮುತ್ತೈದೇರಿಗೆ ಕಾಟನ್ ಸೀರೆ ತಂದಿದೀನಿ ಕಣೆ. ನಿಂಗೂ ಒಂದು ಕೊಡ್ತಿನಿ. ನೋಡಿಲ್ಲಿʼ ಅಂತ ತೋರ್ಸಿದ್ರು ಬೇರೆ. ಗಳದ ಮೇಲೊಂದು, ಮೈಮೇಲೊಂದು ಅನ್ನೋ ಹಾಗಾಗಿದೆ ನಂಗೀಗ. ಆ ಸೀರೆ ಬಂತೂಂದ್ರೆ ಹೊರಗೆಲ್ಲಾದ್ರೂ ಹೋಗೋವಾಗ ಉಡಕ್ಕಾಗತ್ತೆ. ಆಗದನ್ನ ಪೆಟ್ಗೆಲಿಟ್ಟು ಅಲ್ಲಿರೊ ಇನ್ನೊಂದೇ ಒಂದು ಸ್ವಲ್ಪ ಗಟ್ಟಿಯಾಗಿರೊ ಸೀರೇನ ಹೊರಗೆ ತೆಕ್ಕೋಬೋದುʼ ಅಂದುಕೊಳ್ತಾ ಮತ್ತೆ ಈ ಪಕ್ಕಕ್ಕೆ ತಿರುಗಿದಳು. ʻಜೊತೆಗೆ ಜಾನಕೀನೂ ಕರ್ಕಂಬಾ, ಕನ್ಯಾಮುತ್ತೈದೆಗೆ. ಅವ್ಳಿಗೂ ಎಲಡಿಕೆ ಕೊಡೋದು ಅನ್ಕಂಡಿದೀನಿ ಅಂದ್ರು. ಅವ್ಳ ಕೈಗೂ ಏನಾರ ಕೊಡ್ತರೆನೋ. ಕೊಟ್ಟೇ ಕೊಡ್ತರೆ. ಒಳ್ಳೇ ಊಟ್ವಂತೂ ಸಿಗತ್ತೆ.ʼ ಕಣ್ಣು ತೂಗುವ ಹಾಗಾಯ್ತು ʻಎದ್ದು ಬಾಗಿಲು ಮುಂದೂಡಲೇʼ ಅನ್ನಿಸಿದರೂ ʻಅಯ್ಯೋ ಕೊಳ್ಳೆ ಹೊಡ್ಕಂಡು ಹೋಗಕ್ಕೆ ಏನಿದೆ. ಸ್ವಲ್ಪ ಗಾಳಿಯಾದ್ರೂ ಆಡಲಿʼ ಅಂದುಕೊಂಡು ಮತ್ತೆ ಯೋಚನೆಯಲ್ಲಿ ಮುಳುಗಿರುವಂತೆಯೇ ಒಂದು ಜೋಂಪು ಹತ್ತಿತು… “ಏನೇ ಬಾಗಿಲು ತೆಕ್ಕೊಂಡೇ ಮಲ್ಗಿದೀಯಲ್ಲೇ. ಯಾರಾದ್ರೂ ನುಗ್ಗಿದ್ರೇನು ಗತಿ” ಅಂತ ಕೇಳಿದ ತಕ್ಷಣ ಬೆಚ್ಚಿಬಿದ್ದು ಎದ್ದಳು. ಬಾಗಿಲಿಗಡ್ಡವಾಗಿ ಜಯತ್ತೆ ನಿಂತಿದ್ದಳು. ತಕ್ಷಣವೇ ಎದ್ದು, ಅದೇ ಚಾಪೆಯನ್ನು ಇನ್ನೊಂದು ಗೋಡೆಗೆ ಹಾಕಿ “ಕೂತ್ಕೋತ್ತೆ, ಮಕ ತೊಳ್ಕಂಡು ಬರ್ತಿನಿʼ ಎನ್ನುತ್ತಾ ಹಿತ್ತಿಲಿನ ಬಾಗಿಲಿನ ಪಕ್ಕದಲ್ಲಿದ್ದ ತಗಡಿನ ಮರೆಗೆ ಹೋಗಿ ಕೈಕಾಲು, ಮುಖ ತೊಳೆದುಕೊಂಡು ಬಂದು ಹೊಗೆಹಿಡಿದಿದ್ದ ಕನ್ನಡಿಯಲ್ಲಿ ಮಸಕುಮಸಕಾಗಿ ಕಂಡೂ ಕಾಣದಂತಿದ್ದ ಮುಖವನ್ನು ನೋಡಿಕೊಂಡು ಹಣೆಗಿಟ್ಟುಕೊಂಡು ಅವಳು ಬಂದಿದ್ದೇಕೆಂದು ತಿಳಿದಿದ್ದರೂ, “ಏನತ್ತೆ ಬಂದೆ, ಕೂತ್ಕಾ, ಒಂಚೂರು ಕಾಫಿ ಮಾಡ್ತಿನಿ” ಎನ್ನುತ್ತಾ ಅವಳೆಡೆಗೆ ತಿರುಗಿದಳು. “ಕಾಫೀನೂ ಬೇಡ, ಏನೂ ಬೇಡ, ನೀ ಬಾಯಿಲ್ಲಿ ಮದ್ಲು. ಇಲ್ಲಿ ಬಾ” ಅಂದಳು ಜಯಮ್ಮ ಜೋರಾದ ಅತ್ತೆ ಪಾಪದ ಸೊಸೆಗೆ ಹೇಳುವ ಜರ್ಬಿನಲ್ಲಿ. ಈ ಧಾಳಿಗೆ ಸಿದ್ದವಾಗಿಲ್ಲದ ನಾಗು ಬಂದು ಅಡುಗೆಮನೆಯ ಅಡ್ಡಗೋಡೆಗೆ ಒರಗಿ, ʻಈಗ ಅತ್ತೆ ಏನು ಗಿಲೀಟು ಮಾತು ಹೇಳಿದ್ರು ಸೈತ ಒಪ್ಕಬಾರ್ದುʼ ಅಂತ ನಿರ್ಧರಿಸಿಕೊಂಡವಳಂತೆ ಒರಗಿ ನಿಂತಳು. “ಅಲ್ವೇ, ಬೆಳಗ್ಗೆ ಸುಬ್ಬಣ್ಣನ್‌ ಕೈಲಿ ಹೇಳ್ಕಳಿಸಿದ್ರೆ ಬರಕ್ಕಾಗುಲ್ಲಾ ಅಂದ್ಯಂತೆ. ನಿಮ್ಮಜ್ಜಿ ತಿಥೀನೇ… ತಿಳ್ಕ, ನಿಮ್ಮಮ್ಮನ ಹೆತ್ತವ್ಳಲ್ವಾ… ಸ್ವಲ್ಪ ಸಹಾಯಕ್ಕೆ ಬಾಂದ್ರೆ ಎಷ್ಟು ಜಂಭ ನಿಂದು. ಅಜ್ಜಿ ತಿಥೀಗಿಂತ ಯಾರ್ದೋ ಮನೆ ದೇವ್ರಸಮಾರಾದ್ನೆ ಹೆಚ್ಚಾಯ್ತ ನಿಂಗೆ. ನಾನೇ ಬೇಕಾರೆ ಅವ್ರ ಮನೇಗೆ ಹೇಳಿ ಕಳಿಸ್ತೀನಿ, ʻಹೀಗಿದೆ ನಿಂಗ್ ಬರಕ್ಕಾಗಲ್ಲʼ ಅಂತ. ಬೇಕಾರೆ ನಿನ್‌ ಬದ್ಲು ಶಾರೀನ ಮಗ್ಳನ್‌ ಕರ್ಕಂಡೋಗಕ್ಕೆ ವಪ್ಸಿ, ಕಮಲಮ್ಮಂಗೆ ಹೇಳ್ತಿನಿ. ಹಿಂದಿನ್ದಿನ ಹೋಗಿ ಕೆಲ್ಸ ಮಾಡ್ಕೊಟ್ಟು ಬಾ. ಆವತ್ತು ನಮ್ಮನಿಗೆ ತಪ್ಪಸ್ಬೇಡ. ಎಲ್ಲಿ ಮಡಿಸೀರೇಗೆ ಒಣಗ್‌ಹಾಕಕ್ಕೆ ನಿಂದೊಂದು ಸೀರೆ ಕೊಡು” ಜಬರ್ದಸ್ತಿಯಿಂದ ತಾನೇ ಎಲ್ಲಾ ತೀರ್ಮಾನವನ್ನೂ ಮಾಡಿಬಿಟ್ಟಳು ಜಯಮ್ಮ. “ಹಾಗಲ್ಲತ್ತೇ…” ಏನೋ ಹೇಳಲು ಹೋದ ನಾಗುವನ್ನು ಅಲ್ಲೇ ತಡೆದು “ಹಂಗೂ ಇಲ್ಲ, ಹಿಂಗೂ ಇಲ್ಲ ಮದ್ಲು ಮಡಿಗೆ ಹಾಕಕ್ಕೆ ನಿನ್‌ ಸೀರೆ ಕೊಡು ಅಷ್ಟೇಯ. ನೋಡು, ಪುರೋಹಿತ್ರು ನಮ್ಮನೇ ಕೆಲ್ಸ ಮುಗಿಸ್ಕಂಡು ಮೂರು ಗಂಟೆ ಬಸ್ಸಿಗೆ ತೀರ್ಥಳ್ಳಿಗೆ ಹೋಗ್ಬಕಂತೆ. ಅಡ್ಗೆ ತಡಾಗೋ ಹಾಂಗಿಲ್ಲ. ಅವತ್ತು ಅದೇನೋ ರಜ ಇದ್ಯಂತಲ್ಲ, ಜನ ಬೇರೆ ಜಾಸ್ತಿ, ಬೆಳಗ್ಗೆ ಆರು ಗಂಟ್ಗೇ ಬಂದ್ಬಿಡು. ಈಗ ಮದ್ಲು ಸೀರೆ ಕೊಡು” ಎನ್ನುತ್ತಾ ಅವಳು ಮಾತನಾಡಕ್ಕೆ ಅವಕಾಶವನ್ನೇ ಕೊಡದೆ ʻಇಕಾ ನಾನೆ ತಗಂಡೆʼ ಎನ್ನುತ್ತಾ ಪಕ್ಕದ ಗಳುವಿನ ಮೇಲಿದ್ದ ಸೀರೆ, ರವಿಕೆಯನ್ನು ಎಳೆದು ಸುತ್ತಿಕೊಂಡು ಹೊರಟೇಬಿಟ್ಟಳು ಜಯಮ್ಮ. ಬೆಪ್ಪಾಗಿ ನಿಂತುಬಿಟ್ಟಳು ನಾಗು ʻಅದ್ಹೇಗೆ ನಂಗೆ ಮಾತಾಡಕ್ಕೂ ಬಿಡ್ದೆ ಅತ್ತೆ ಹೀಗ್ಮಾಡ್ಬಿಟ್ಳೂʼ ಅಂತ ತಲೆಮೇಲೆ ಕೈಹೊತ್ತು ಕೂತಿದ್ದ ನಾಗುವನ್ನು ಜಾನಕಿ ಕೂಗಿದ್ದು ಎಚ್ಚರಿಸಿತು. ಸ್ಕೂಲಿನ ಚೀಲವನ್ನು ಮೂಲೆಯಲ್ಲಿಡುತ್ತಾ “ಅದೇನು ಯೋಚ್ನೆ ಮಾಡ್ತ ಕೂತಿದೀಯೇ. ನಂಗೆ ಹಸಿವು. ಬೇಗ ಒಂದಿಷ್ಟು ಕಲ್ಸಿ ಕೊಡು” ಎನ್ನುತ್ತಾ ಕೈಕಾಲು ತೊಳೆಯಲು ಹೋದಳು. ಒಳಗೆ ಮುಚ್ಚಿಟ್ಟಿದ್ದ ಅನ್ನದಲ್ಲಿ ಹುಳಿಯನ್ನ, ಮಜ್ಜಿಗೆಯನ್ನ ಎರಡನ್ನೂ ಕಲಿಸಿ ಸ್ವಲ್ಪ ಸ್ವಲ್ಪವನ್ನು ಜಾನಕಿಯ ತಟ್ಟೆಗೆ ಹಾಕಿ ಕೊಟ್ಟಳು. ಮಿಕ್ಕದ್ದನ್ನು ಇನ್ನೇನು ಬರುವ ಶೇಷಾದ್ರಿಗೆ ಮುಚ್ಚಿಟ್ಟಳು. ಹುಳಿಯನ್ನ ಬಾಯಿಗಿಟ್ಟ ಜಾನಕಿ “ಇವತ್ತೂ ಪಪಾಯ ಕಾಯಿನ ಹುಳೀನೇ ಮಾಡಿದೀಯಾ… ಥೂ ನಂಗಿಷ್ಟ ಇಲ್ಲ” ಎನ್ನುತ್ತಾ ತಟ್ಟೆ ಕುಕ್ಕಿದಳು. ನಾಗುವಿಗೂ ಕೋಪ ಬಂತು. “ಏನ್‌ ನಿಮ್ಮಪ್ಪ ಇಪ್ಪತ್ತುಮೂವತ್ತು ಸಾವ್ರ ಸಂಬಳ ತರೋ ಸರ್ದಾರ. ದಿನದಿನಾನೂ ಅಂಗ್ಡೀಯಿಂದ ತರ್ಕಾರಿ ತಂದು ಮಾಡ್ತೀನಿ. ಮನೆ ಹಿತ್ಲಲ್ಲಿ ಏನು ಬೆಳ್ದಿರತ್ತೋ ಅಷ್ಟೇನೆ. ಹಸಿವಾಗಿದ್ರೆ ತಿನ್ನು ಇಲ್ದಿದ್ರೆ ಅಲ್ಲೇ ಮೂಲೇಲಿ ಮುಚ್ಚಿಟ್ಟು ಹೋಗು. ರಾತ್ರಿ ಹೊಟ್ಟೆ ಕಾದ್ರೆ ತಿನ್ನೋವಂತೆ” ಎನ್ನುತ್ತಾ ಮತ್ತೆ ರಾತ್ರಿಯ ಅಡಿಗೆಗೆ ಒಲೆ ಹಚ್ಚತೊಡಗಿದಳು. ಅಷ್ಟರಲ್ಲಿ ಶೇಷಾದ್ರಿಯೂ ಬಂದ. ಮಾತಿಲ್ಲದೆ ತನ್ನ ತಟ್ಟೆಗೆ ಹಾಕಿಕೊಟ್ಟಿದ್ದನ್ನು ಸ್ವಾಹಾ ಮಾಡತೊಡಗಿದ. ಗುಮ್ಮೆಂದು ಕೂತಿದ್ದ ಜಾನಕಿಯನ್ನು ನೋಡಿ “ತಿನ್ನಲ್ವೇನೆ, ತಿಂದಿದ್ರೆ ನಂಗ್ಹಾಕು” ಎಂದು ತಟ್ಟೆಯನ್ನು ಮುಂದೆ ಚಾಚಿದ. ಮರುಮಾತಿಲ್ಲದೆ ಜಾನಕಿ ತಿನ್ನತೊಡಗಿದಳು. ಒಲೆ ಹೊತ್ತಿದ ತಕ್ಷಣ ಸ್ವಲ್ಪ ನೀರುಕಾಸಿ ತೊಟ್ಟೇತೊಟ್ಟಿದ್ದ ಹಾಲು ಸೋಕಿಸಿ ನಾಗು ಬೆಲ್ಲದ ಕಾಫಿ ಮಾಡಿಕೊಂಡು ರಾತ್ರಿಯ ಊಟಕ್ಕೆ ಎಸರಿಟ್ಟಳು. ತಟ್ಟೆ ತೊಳೆದಿಟ್ಟ ಶೇಷಾದ್ರಿ ಎದ್ದು ಆಟಕ್ಕೆ ಹೊರಗೋಡಿದ. ಹೆದಹೆದರುತ್ತಲೇ ಜಾನಕಿ “ನಂಗೊಂತೊಟ್ಟು ಕಾಫಿನಾದ್ರು ಕೊಡ್ತಿಯೆನೇ?” ಕೇಳಿದಳು. ʻಅಯ್ಯೋʼ ಅನ್ನಿಸಿ “ತಗಾ” ಎನ್ನುತ್ತಾ ತಳಮುಳುಗುವಷ್ಟು ಕಾಫಿಯನ್ನು ಸಣ್ಣಲೋಟಕ್ಕೆ ಬಗ್ಗಿಸಿಕೊಟ್ಟಳು. ಇನ್ನಷ್ಟು ಬಿಸಿನೀರು ಬೆಲ್ಲವನ್ನು ಬೆರಸಿಕೊಂಡು ತನ್ನ ಲೋಟದ ತುಂಬ ಮಾಡಿಕೊಂಡು ನಿಧಾನವಾಗಿ ಕುಡಿಯುತ್ತಾ “ಈ ಕಾಫಿ ಕೊಟ್ಟಿದ್ರೆ ನಿಜ್ವಾಗೂ ಜಯತ್ತೆ ಕುಡಿತಿದ್ಲಾ” ಅಂದುಕೊಳ್ಳುತ್ತಲೇ ಎರಡೂ ಲೋಟ ತೊಳೆದಿಡು ಎಂದು ಜಾನಕಿಗೆ ಕೊಟ್ಟು ಸಿಟ್ಟು ತೀರಿಸಿಕೊಳ್ಳುವಂತೆ ಆರುತ್ತಿದ್ದ ಒಲೆ ಊದಿದಳು… ರಾತ್ರಿ ಎಷ್ಟೋ ಹೊತ್ತು ನಿದ್ರೆ ಬರಲಿಲ್ಲ… ನಂಗ್ಯಾಕೆ ʻನಾ ಬರಲ್ಲಾಂದ್ರೆ ಬರಲ್ಲʼ ಅಂತ ಹೇಳಕ್ಕಾಗ್ಲಿಲ್ಲ… ಹೇಳಕ್ಕೆ ಅವ್ಳು ಬಿಟ್ಟಿದ್ರಲ್ವಾ… ನಾರ್ಣಪ್ಪನೋರ ಮನೆಗ್ಹೋದ್ರೆ ಸೀರೆ, ದಕ್ಷಿಣೆ, ಒಂದಷ್ಟು ಹಣ್ಣು ಎಲ್ಲಾ ಸಿಗತ್ತೆ ಅಂತ ಅವ್ಳಿಗ್‌ ಗೊತ್ತಿಲ್ವಾ. ಹಂಗ್ಸಿ ಮಾತಾಡ್ತಳಲ್ಲ. ಬದ್ಲಿಗೆ ಶಾರೀನ ಕಳಿಸ್ತಿನಿ

ಕಾರ್ಮಿಕ ದಿನದ ವಿಶೇಷ-ಕಥೆ Read Post »

You cannot copy content of this page

Scroll to Top