ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. …..

ಕಥೆ ನಂದಿನಿ ವಿಶ್ವನಾಥ ಹೆದ್ದುರ್ಗ. “ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ” ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ. ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ  ಪದೇಪದೇ ಹೇಳ್ತಾನೆ ಇರ್ತಾನೆ. ಅದೂ ಇತ್ತೀಚಿಗೆ. ಅವನ ಜೊತೆಗೆ  ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ. ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ . ‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್  ಫಾ ಇಟ್”ಅಂದ ತೀರ ಗಂಭೀರವಾಗಿ. ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ. ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು. ನನ್ನ ಹುಡುಗ…! ನನಗಾಗಿಯೇ ಇದ್ದವನು. ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ, ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು. ಅವನ ಆ ಒಲವು,ಕಾವು ,ನನಗಾಗಿ ‌ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.? ಅಂತಹ ಅವನು..?? ಹೀಗೆ…ಹೇಗೆ ಸಾಧ್ಯ.? ಇದೇನಾಯಿತು‌ ನಮ್ಮಿಬ್ಬರ ನಡುವೆ.? ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ. ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರು‌ಮಾಡಿದ. ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ. ಬರುಬರುತ್ತಾ  ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು. ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ  ‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ” ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ. ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.  ಕಳಿಸಿದ ಫೋಟೊದಲ್ಲಿ  ದೂರದವರು ಅಂದುಕೊಂಡವರೆಲ್ಲ ಇದಾರೆ. ನಾನಿಲ್ಲ. ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ. ಹಾಗಾದ್ರೆ ಇಲ್ಲೇನೋ ನಡೀತಿದೆ. ಪರಿಹರಿಸಿಕೊಳ್ಳಣಾಂದ್ರೆ ಅವ‌ ಮಾತಿಗೆ ಸಿಗೋದೇ ಇಲ್ಲ.. ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ. “ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?” ಅಂದೆ. ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು. ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ‌ಕಾರು. ತಲೆಸುತ್ತಿ ಬಂದ ಹಾಗಾಯ್ತು. ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು. ಅದು ಅವನೇ ಇರಬೇಕು. ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿ‌ಮೇಡಮ್ ‘ಅಂದ. ಇದೇನಾಗ್ತಿದೆ ನನ್ನ ಜೀವನದಲ್ಲಿ.! ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.! ಕಾರಣ..?? ಇವತ್ತೇ.ಇದೇ ಕೊನೆ.ಮತ್ತೆಂದೂ‌ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ. ಆದರೆ.? ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.? ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ ಮತ್ತದೆ ಉಡಾಫೆ ಉತ್ತರ. ಅದೂ ಗಂಟೆ ಕಳೆದ ಮೇಲೆ. ” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”  ಅಂತ ಬೇರೆ ಸ್ಟೇಟಸ್ ಹಾಕಿದಾನೆ.. ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..? ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು . ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.? ಅದೂ ಈ‌ ಮಟ್ಟಿಗೆ.? ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು. ಛೀ ಅನಿಸುತ್ತೆ ಈಗ ಯೋಚಿಸಿದ್ರೆ. ಅತ್ತು‌ಮುಗಿದ ಮೇಲೆ  ಯೋಚಿಸುತ್ತೇನೆ.? ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.? ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ. ಹೀಗಂತ ಪದೇಪದೇ ಹೇಳಿಕೊಂಡಿದ್ದೂ ಆಯ್ತು. ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ. ಇಲ್ಲಿ.. ಈ ಎದೆಯೊಳಗೆ. ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ. ‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ‌ನಂಗೆ ಮೊದಲಿಂದಲೂ ಅನುಮಾನ ಇದೆ’. ಅಂತಿದ್ದೆ ನಾನು ಆಗಾಗ. ಹಾಗಂದಾಗೆಲ್ಲಾ  ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ  ರಾಣಿ ‘ ಅಂದ‌ಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ. ಮತ್ತೆ ಹಳೆ ನೆನಪುಗಳೆ. ಇವತ್ತು..ಇವತ್ತೇ ಕೊನೆ ಬಾರಿ. ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ  ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ. “ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ. ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ. ಲಗೇಜಿದೆ.ಬಸ್ಸು ಪ್ರಯಾಣ “ ಅಂತ ಟೈಪಿಸಿ ಸೆಂಡ್ಒತ್ತಿದೆ. ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು. ಇಷ್ಟೇನಾ..? ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ. ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.? ಇಲ್ಲ.. ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು.. ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು. ಅನುಮಾನ, ಬೇರೆಯವರ ಬಳಿಯಲ್ಲಿ ಫೋನಿದ್ದರೆ..? ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು. ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ. ‘ಹಾ ಹೇಳು.’ ‘ಮಂಡ್ಯಕ್ಕೆ ಹೊರಟಿದ್ದೀನಿ’ ಮುಗಿದೇ ಇಲ್ಲ ಮಾತು. ‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ. ಪ್ಲೀಸ್ ಬಿಟ್ ಬ್ಯುಸಿ’ ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ  ತಿಳಿಲಿಲ್ಲ. ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು.. ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು.. ಛೆ..ಫೋನ್  ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ… 9.15ಆಯ್ತು.ಓ ಮೈ ಗಾಡ್. ಇವನು…!! ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.! ಆನ್ ಲೈನ್‌ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ. ‘ಹೈ ‘ಕಳಿಸಿದೆ. ಸಿಂಗಲ್  ರೈಟುಮಾರ್ಕು. ಅಂದರೆ. ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ. ಹೀಗೇಕಾಯ್ತು. ಸಂಬಂಧದಲ್ಲಿ ಏನೊಂದು  ಇಲ್ಲದೆ ಹೀಗೆ ದೂರಾಗಲು ಸಾಧ್ಯವೇ? ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು? ಛೆ.ಅಲ್ಲದ್ದನ್ನೇ ಯೋಚಿಸ್ತೀನಿ. ಅಂತವನಲ್ಲ ಅವ. ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು. ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ ಅವನಿಂದ ಮೆಸೇಜು ಬಂತು. ಜೊತೆಗೆ ಅನ್ಲೈನಿಗೂ ಬಂದ  ‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ. ಫಾರ್ ಮಂಡ್ಯ, ಯೂ ಪ್ಲೀಸ್ ಕ್ಯಾರಿ ಆನ್. ಹ್ಯಾವ್ ಎ ನೈಸ್ ಟೈಮ್.ಬೈ.’ ಗಳಗಳನೆ ಅಳಬಹುದಾದ ಮಾತುಗಳು. ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.! ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ . ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ. ಮತ್ತೆಂದೂ. ಎಂದೆಂದೂ ಅವನಿಗಾಗಿ ಕಾಯಲಾರೆ. ತಿರುಗಿ ಬಂದರೆ ಸ್ವೀಕರಿಸಲಾರೆ. ಮುಂದೆ ಯಾರಿಗಾಗಿಯೂ ಕಾಯಲಾರೆ.! ಕನ್ನಡಿ ನೋಡಿಕೊಂಡೆ. ಹಣೆಯ  ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು. ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ. ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ. —– ಸುದೀರ್ಘವಾದ ನಿಟ್ಟುಸಿರಿನೊಂದಿಗೆ  ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು. ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು. ಸಮಾನ ದುಃಖಿಗಳು. ಇದೇ ಕಥೆ ನನ್ನ ಜೀವನದಲ್ಲಿ. ಎರಡು ವರ್ಷ ಮೊದಲು. ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ.. ಈಗ …!!! ಹೆಸರು ಗೊತ್ತಿಲ್ಲ.. ಯಾವುದೋ ಹೆಣ್ಣು ಎದೆ… ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.! ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು. ನಡುರಾತ್ರಿವರೆಗೆ..!! ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.! ಎಲ್ಲ ಹೇಳಿ ಹಗುರಾಗಿ ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ. ಅವಳೂ ಅಡ್ಡಿಯಿಲ್ಲದೆ  ಎದ್ದಳು. **********************

ಹಿ ಈಸ್ ಅನ್ಲೈನ್..ಬಟ್ ನಾಟ್ ಫಾರ್ ಯೂ. ….. Read Post »

ಕಥಾಗುಚ್ಛ

ನಡಿ ಕುಂಬಳವೇ ಟರಾ ಪುರಾ

ಕಥೆ ಪ್ರಜ್ಞಾ ಮತ್ತಿಹಳ್ಳಿ             ಇನ್ನೇನು ಈ ಬಸ್ಸು ಇಳಿದಿಳಿದು ಕೆರೆಯೊಳಗೇ ನುಗ್ಗಿ ಬಿಡುತ್ತದೆ ಎಂಬ ಭಾವ ಬಂದು ಮೈ ಜುಂ ಎನ್ನುವಷ್ಟರಲ್ಲಿ ರೊಯ್ಯನೆ ಎಡಕ್ಕೆ ತಿರುಗಿ ದಟ್ಟ ಕಾಡಿನ ಏರಿ ಶುರುವಾಗುತ್ತದೆ. ಅಂದರೆ ಇದರರ್ಥ ಇಳಿಯೂರು ಎಂಬ ಊರು ದಾಟಿತು ಹಾಗೂ ತಲೆಯೂರಿಗೆ ೧೫ ಕಿ.ಮೀ ಉಳಿದಿದೆ ಅಂತ. ಮೂರು ಜನರ ಸೀಟಿನ ಎಡತುದಿಗೆ ಕೂತಿದ್ದ ಬಸವರಾಜ ಎಡಬದಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬೀಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾನೆ. ಇಕ್ಕೆಲದ ಎತ್ತೆತ್ತರದ ಮರಗಳು, ಅವುಗಳ ದಟ್ಟ ನೆರಳಿನಲ್ಲಿ ಬಿಸಿಲೇ ಕಾಣದ ಆಕಾಶ, ಬೈತಲೆಯಂಥ ಸಣ್ಣ ದಾರಿಯಷ್ಟೇ ಕಾಣುವ ಸ್ಟಾಪುಗಳು, ಅಲ್ಲಲ್ಲಿಳಿದುಕೊಂಡು ನಿರ್ಭಯವಾಗಿ ಸರಸರ ನಡೆಯುತ್ತ ಮಾಯವಾಗಿಬಿಡುವ ಜನರು. ಒಂದಿಷ್ಟು ಭತ್ತದ ಗದ್ದೆ, ಅಡಿಕೆ-ತೆಂಗಿನ ಮರಗಳಿರುವ ಒಂಟಿ ಮನೆಗೆ ಜನ ಒಂದು ಊರು ಎಂದು ಕರೆಯುವುದು ನಾಲ್ಕೈದು ದನ-ಕರು ಸಾಕಿಕೊಂಡು ೫-೬ ಜನರ ಕುಟುಂಬವೊಂದು ಆರಾಮವಾಗಿ ಸದ್ದಿಲ್ಲದೇ ಬದುಕುವ ರೀತಿ ಇವನ್ನೆಲ್ಲ ಈಗೊಂದು ೫-೬ ತಿಂಗಳಿಂದ ನೋಡುತ್ತಿದ್ದಾನೆ.  ಬೆಳಗಿನಿಂದ ರಾತ್ರಿಯವರೆಗೆ ಬಾಯ್ತುಂಬ ಎಲೆ-ಅಡಿಕೆ ತುಂಬಿಕೊಂಡು ಓಡಾಡುವ ಗಂಡಸರು, ತುರುಬು ಕಟ್ಟಿಕೊಂಡು ಅಬ್ಬಲ್ಲಿಗೆ ದಂಡೆ ಮುಡಿವ ಹೆಂಗಸರು. ಮೊದಮೊದಲು ಅವನಲ್ಲಿ ಭಯ ಹುಟ್ಟಿಸುತ್ತಿತ್ತದ್ದರು. ಪುಳು-ಪುಳು ಕುಣಿಯುವ ಮೀನು ಹಿಡಿದು ಅಡಿಗೆ ಮಾಡುವ ಸಂಗತಿಯೆ  ಅವನಿಗೆ ಎದೆ ಝಲ್ಲೇನ್ನಿಸುವಂತೆ ಮಾಡಿತ್ತು. ಬಿಜಾಪೂರ ಜಿಲ್ಲೆಯ ಬಸವನಬಾಗೇವಾಡಿಯ ಬಸವಣ್ಣನವರು ಹುಟ್ಟಿದೂರಿನಲ್ಲಿ ಹುಟ್ಟಿದ, ಬಿಜಾಪುರವೆಂಬ ಗುಮ್ಮಟಗಳ ಊರಿನಲ್ಲಿ ಓದಿದ, ಈ ಬಸವರಾಜ ಉಳ್ಳಾಗಡ್ಡಿಯೆಂಬ ಸಂಭಾವಿತ ಹುಡುಗ ಅರ್ಥಶಾಸ್ತ್ರದಲ್ಲಿ ಎಂ.ಎ. ಮಾಡುವಾಗ ಡಿಪಾರ್ಟಮೆಂಟಿನ ಹುಡುಗರ ಜೊತೆ ಟೂರು ಹೋಗುವಾಗ ತಲೆಯೂರಿನ ಮಾರಿಕಾಂಬಾ ದೇವಸ್ಥಾನವನ್ನು ನೋಡಿದ್ದ. ತನ್ನ ಕುಟುಂಬದ ಸದಸ್ಯರು ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನಕ್ಕೆ  ಕರೆದೊಯ್ಯುವಾಗ, ಇಲ್ಲಿಯ ಬಸ್ ಸ್ಟಾö್ಯಂಡಿನಲ್ಲಿಳಿದು, ಕೆ.ಎಸ್.ಆರ್.ಟಿ.ಸಿ., ಕ್ಯಾಂಟೀನಲ್ಲಿ ಚಾ ಕುಡಿದಿದ್ದ. ಅಷ್ಟು ಬಿಟ್ಟರೆ, ಅವನಿಗೆ ಈ ಊರು ಅಪರಿಚಿತವೆ. ನೆಟ್ ಪರೀಕ್ಷೆ ರಿಝಲ್ಟ ಬರುತ್ತಿದ್ದಂತೆ, ಕೆ.ಪಿ.ಎಸ್.ಸಿ.ಯ ಇಂಟರವ್ಯೂ ನಡೆಸಿ, ಸೆಲೆಕ್ಟ್ ಆದವರಿಗೆ ಪೋಸ್ಟಿಂಗ್ ಕೊಡುವಾಗ ಕೌನ್ಸೆಲಿಂಗ್ ಮಾಡಿದ್ದರು. ಲಿಸ್ಟಿನಲ್ಲಿ ಮೊದಲು ಹೆಸರಿದ್ದವರೆಲ್ಲ ಬೆಂಗಳೂರು, ಮೈಸೂರು, ಇತ್ಯಾದಿ ಊರುಗಳನ್ನು ಆಯ್ದುಕೊಂಡಿದ್ದರು. ಬಸವರಾಜನ ಪಾಳಿ ಬರುವಷ್ಟರಲ್ಲಿ ಇದ್ದವೆಲ್ಲ ಸಣ್ಣ-ಸಣ್ಣ ಊರುಗಳು, ಶಿವಮೊಗ್ಗ, ಉಡುಪಿ ಜಿಲ್ಲೆಯ ಊರುಗಳನ್ನು ಆಯ್ಕೆ ಮಾಡಿಕೊಳ್ಳಲು ಮನಸ್ಸು ಬರದೇ, ಇದ್ದುದರಲ್ಲೇ ವಿಜಾಪೂರ, ಬಾಗಲಕೋಟೆಗಳಿಂದ ಡೈರೆಕ್ಟ್ ಬಸ್ಸು ಇರುವ ಇದೇ ಅನುಕೂಲ ಎನ್ನಿಸಿತು. ಆದರೆ, ಕೆ.ಪಿ.ಎಸ್.ಸಿ., ಬಿಲ್ಡಿಂಗ್‌ನ ಹೊರಗಿನ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ನಿಂತಾಗ, ಯಾರೋ ಕುಮಟಾ ಕಡೆ ಹುಡುಗಿಯಂತೆ ಕಣ್ಣಲ್ಲಿ ನೀರು ತುಂಬಿಕೊAಡು ಮತ್ತೊಬ್ಬರಿಗೆ ಹೇಳುತ್ತಿದ್ದಳು. “ಇದೇ, ಇವ್ರೆಯಾ ತಲೆಯೂರು ತಗೊಂಬಿಟ್ರು. ಇವ್ರ ನೆಕ್ಸಟ್ ನಂದೇ ಇತ್ತು. ಸಾಯ್ಲಿ ತಪ್ಪೋಯ್ತು ಒಂದ್ ನಿಮಿಷ್ದಲ್ಲಿ ಕೈ ಬಿಟ್ ಹೋಯ್ತು”.  ಕುಡಿಯುತ್ತಿರುವ ಚಾ ನೆತ್ತಿಗೇರಿದಂತಾಗಿ, ಕೆಮ್ಮು ಬಂದಿತ್ತು. ಜೊತೆಗಿದ್ದ ವೀರೇಶ ಬಳಿಗಾರ ಅವಳನ್ನೇ ನೇರವಾಗಿ ಕೇಳಿಬಿಟ್ಟ. “ಯಾಕ್ರಿ ಮೇಡಮ್ಮರೆ ಏನಾಯ್ತ್ರೀ?  ಯಾರಿಗ್ಯಾವ್ದು ಬೇಕೋ ತಗೋತರ‍್ರಿ, ನಿಮ್ಗೇನ್ ಮಾಡ್ಯಾನಿಂವ?” “ಅಯ್ಯೋ ನಾ ಎಂತ ಹೇಳ್ದೆ? ನಮಗೆ ಲೇಡಿಸಿಗೆ ದೂರ ಹೋಗೋದು ತ್ರಾಸಲ.  ನೀವು ಜಂಟ್ಸ್ ಬೇಕಾರ ಹೋಗ್ಬಹ್ದು .ಕುಮ್ಟಾ, ಇಲ್ಲದಿದ್ರೆ ತಲೆಯೂರು ಸಿಗ್ತದೆ ಹೇಳಿ ಆಸೆ ಇತ್ತು” ಎಂದೇನೋ ಗಳಗಳ ಹೇಳಿದಳು. “ಯಾವ್ಯಾವ ಊರಿನ ನೀರಿನ ಋಣ ಯಾರ‍್ಯಾರಿಗೆ ಇರ್ತೈತಿ ಹೇಳಾಕ ಬರೂದಿಲ್ರಿ. ಇಷ್ಟಕ್ಕೂ ಪ್ರತಿವರ್ಷ ಟ್ರಾನ್ಸಫರ್ ಮಾಡಿ ಒಗಿತಿರ‍್ತಾರ. ನೀವು ಮುಂದಿನ್ವರ್ಷ ಟ್ರಾನ್ಸಫರ್ ಕೌನ್ಸೆಲಿಂಗ್‌ಗೆ ರ‍್ರಿ. ಎಕ್ಸಚೇಂಜ್ ಮಾಡಿಕೊಳ್ಳೋಣ”, ವೀರೇಶ ಅಕ್ಕಿಆಲೂರು ತೆಗೆದುಕೊಂಡಿದ್ದ. ಅದೊಂದು ಸಣ್ಣ ಹಳ್ಳಿ. ತಾನು ಪ್ರತಿ ಶನಿವಾರ ತಲೆಯೂರಿಗೆ ಬಂದುಬಿಡುತ್ತೇನೆ ಎಂದು ಹೇಳಿದ್ದ.             ಬಸವರಾಜ ಜಾಯ್ನ ಆಗಲು ಬಂದಾಗ ಅಕ್ಟೋಬರ್ ತಿಂಗಳು. ಸೆಮಿಸ್ಟರ್ ಮುಗಿಯಲು ಇನ್ನೊಂದೇ ತಿಂಗಳು ಬಾಕಿ ಇತ್ತು.  ಎಂ.ಎ. ಮಾಡುವಾಗ ಹಾಸ್ಟೇಲಲ್ಲಿ ಪರಿಚಯವಿದ್ದ ರಾಮಚಂದ್ರ ನಾಯ್ಕ ಸಮಾಜಶಾಸ್ತ್ರಕ್ಕೆ ಜಾಯ್ನ ಆಗಲು ಬಂದಿದ್ದ. ಅವನು ಭಟ್ಕಳದವನಾದ ಕಾರಣ, ಊರಿನ ಪರಿಚಯ ಚೆನ್ನಾಗೇ ಇತ್ತು. ಅವನು ತಾನು ಮನೆ ಬಾಡಿಗೆಗೆ ಹಿಡಿಯುತ್ತೇನೆ, ನೀನು ಶೇರ್ ಮಾಡು ಎಂದಾಗ ಬಸವರಾಜನಿಗೆ ಅನುಕೂಲವೇ ಆಯ್ತು. ದೊಡ್ಡ ಕಂಪೌಂಡಿನ ಮಹಡಿ ಮನೆಯ ಕೆಳಗಿನ ಭಾಗದಲ್ಲಿ ಮಾಲಕರು ಇದ್ದರು. ಮೇಲ್ಬಾಗದ ಮೂರು ರೂಮುಗಳ ಮನೆ ಇವ್ರದ್ದು. ಮಾಲಕ ವಿಶ್ವನಾಥ ಕಿಣಿಯದು ಪೇಟೆಯಲ್ಲಿ ಅಂಗಡಿ ಇತ್ತು. ಹೆಂಡತಿ ದೊಡ್ಡ ಧ್ವನಿಯ ಜೋರುಮಾತಿನ ಸಂಧ್ಯಾಬಾಯಿ. ಮಕ್ಕಳು ಹುಬ್ಬಳ್ಳಿಯಲ್ಲಿ ಇಂಜನಿಯರಿಂಗ್ ಓದುತ್ತಿದ್ದರು. ಜನಿವಾರ ಹಾಕಿಕೊಂಡು ಸಂಧ್ಯಾವಂದನೆ ಮಾಡುವ ಕಿಣಿ ಮೀನು ತಿನ್ನುವುದು ನೋಡಿ ಬಸವರಾಜ ಕಕ್ಕಾಬಿಕ್ಕಿಯಾಗಿದ್ದ.  ಅವರು ಸಾರಸ್ವತ ಬ್ರಾಹ್ಮಣರೆಂದೂ, ಕೊಂಕಣಿ ಮಾತಾಡುತ್ತಾರೆ ಹಾಗೂ ಮತ್ಸ್ಯಾಹಾರ ಸೇವಿಸುತ್ತಾರೆಂದೂ ರಾಮಚಂದ್ರನಾಯ್ಕ ವಿವರಣೆಯಿತ್ತಾಗ, ಬಸವರಾಜ ತಲೆಯಾಡಿಸಿದ. ಕೊಂಕಣಿ ಮಾತೃಭಾಷೆಯ ಕಿಣಿ ದಂಪತಿಗಳು ರಾಗವಾಗಿ ಮಾತನಾಡುವ ಕನ್ನಡ ಇವನಿಗೆ ಅರ್ಥವೇ ಆಗುತ್ತಿರಲಿಲ್ಲ. ಒಂದು ಸಲ ಸಂಧ್ಯಾ ಮನೆ ಬಾಗಿಲ ಮೆಟ್ಟಿಲ ಮೇಲೆ ಕುಳಿತು ಚಾ ಕುಡಿಯುತ್ತಿರುವಾಗ ಕಾಲೇಜು ಮುಗಿಸಿ ಬಂದ ರಾಮಚಂದ್ರ ಬಸವರಾಜರಿಗೆ “ಚಾ ಕುಡಿವಾ ರ‍್ರಿ” ಎಂದು ಕರೆದಳು. ಮುಖ ತೊಳೆದು ಕುಡಿದರಾಯ್ತು ಎಂದು ಬಸವರಾಜ “ಹಿಂದಾಗಡೆ ಕುಡಿತೀನ್ರಿ ಅಕ್ಕಾರೆ” ಎಂದ. “ಇಶ್ಯಿಶ್ಯಿ ನಾವು ಜಾತಿಬೇಧ ಮಾಡೋದಿಲ್ಲ. ಹಿತ್ಲಲ್ಲೆಲ್ಲ ಕೂತ್ಕೊಂಡು ಕುಡ್ಯುದೆಂತಕೆ, ಇಲ್ಲೇ ಕುಡೀರಿ” ಎಂದಳು.  ಬಸವರಾಜನ ಭಾಷೆಯನ್ನು ಕೆಲಮಟ್ಟಿಗೆ ಬಲ್ಲ ರಾಮಚಂದ್ರ ಹಿಂದಾಗಡೆ ಅಂದ್ರೆ ಆಮೇಲೆ ಅಂತ ಎಂದು ಕನ್ನಡವನ್ನು ಕನ್ನಡಕ್ಕೆ ಭಾಷಾಂತರ ಮಾಡಬೇಕಾಯ್ತು. ರಾಮಚಂದ್ರನ ಅನ್ನ, ಕರಾವಳಿಯ ತೆಂಗಿನ ಕಾಯಿ, ಮಸಾಲೆ ಸಾರಿನ ಅಡುಗೆ, ಬಸವರಾಜನಿಗೆ ರೂಢಿಸಲಿಲ್ಲ. ಊರಿಂದ ದೊಡ್ಡ ಗೋಣೀಚೀಲದಲ್ಲಿ ಕಟಕರೊಟ್ಟಿ, ಚಟ್ನಿಪುಡಿ, ತಂದಿಟ್ಟುಕೊಳ್ಳುತ್ತಿದ್ದ.  ಯಾವುದಾದರೂ ತರಕಾರಿಯ ಪಲ್ಯ ಅಥವಾ ಸಾಂಬಾರ್ ಮಾಡಿಕೊಂಡು ಅನ್ನ-ರೊಟ್ಟಿಗಳ ಜೊತೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ಬೆಳಗಿನ ತಿಂಡಿಗೆ ರಾಮಚಂದ್ರ ದೋಸೆ-ಇಡ್ಲಿ ಮಾಡುವುದು ಮಾತ್ರ ಬಸವರಾಜನಿಗೆ ಬಹಳ ಇಷ್ಟವಾಗುತ್ತಿತ್ತು. “ಮುಂಜಾನೆ ನಸಿಕ್ಲೆ ನಾಷ್ಟಾ ಮಾಡ್ತೀರಿ. ನೋಡಪ್ ನೀವೆಲ್ಲ. ನಮ್ಮೂರಾಗೆ ಬರೇ ಚಾ ಕುಡ್ದು ಮಂದಿ ಅಡ್ಡಾಡತೇವಿ. ಒಂದು ತುತ್ತು ಉಪ್ಪಿಟ್ಟು ಇಲ್ಲಾ, ಚುಮ್ಮರಿ ಒಗ್ಗರಣಿ ಕಾಣ್ಬೇಕಂದ್ರೆ ಹತ್ತು ಹೊಡೀತೇತಲೆ. ಅದು ಹ್ಯಾಂಗ ಏಳಕ್ಕೆ ತಿಂತಿರೋ ಮಾರಾಯ” ಎಂದು ಆಶ್ಚರ್ಯ ಪಡುತ್ತಿದ್ದ. ಎಂಟು ಗಂಟೆಯೆಂದರೆ, ಅಕ್ಕ-ಪಕ್ಕದ ಹೆಂಗಸರು ಒಬ್ಬರಿಗೊಬ್ಬರು “ಆಸ್ರಿ ಕುಡಿದ್ರಿ?” ಎಂದು ಕೇಳುತ್ತ ಚೊಂಯ್ ಚೊಂಯ್ ಎಂದು ದೋಸೆ ಎರೆವ ಸದ್ದಿನ ಹಿನ್ನೆಲೆ ಸಂಗೀತದೊಂದಿಗೆ ಓಡಾಡುತ್ತಿದ್ದರು.             ಬಸ್ಸಾಗಲೇ ತಲೆಯೂರಿನ ಬಸ್ ಸ್ಟಾö್ಯಂಡಲ್ಲಿ ನಿಂತು ಕಂಡಕ್ಟರ್ ಮುಖ ಹೊರಹಾಕಿ “ಡೈರೆಕ್ಟ ಕುಮ್ಟಾ, ಹೊನ್ನಾವರ್, ಭಟ್ಕಳ್ ಯರ‍್ರಿ” ಎಂದು ಕೂಗುತ್ತಿದ್ದ. ಪಕ್ಕದಲ್ಲಿ ಗೊರಕೆ ಹೊಡಿಯುತ್ತ ಮಲಗಿದ್ದ ಮಾವನನ್ನು ಅಲುಗಾಡಿಸಿ ಎಬ್ಬಿಸಿದ ಬಸವರಾಜ “ಏಳೋ ಮಾವಾ  ಊರ‍್ಬಂತು” ಸೀಟಿನ ಕೆಳಗಿನ ರೊಟ್ಟಿ ಚೀಲ, ಮೇಲಿಟ್ಟ ಬ್ಯಾಗುಗಳನ್ನು ತೆಗೆದುಕೊಂಡು ಇಬ್ಬರೂ ಇಳಿದರು. ಅವ್ನೌವ್ನ ಎಂಥಾ ನಿದ್ದೇಲೆ ಬಸು, ಹುಬ್ಬಳ್ಳಿ ದಾಟಿದ್ದೊಂದೇ ಗೊತ್ನೋಡೊ” ಎನ್ನುತ್ತ ಮಾಮಾ ಇಳಿದ. ಈ ಬಾರಿ ಊರಿಗೆ ಹೋದಾಗ ಅಕ್ಕನ ಗಂಡ ಮಲ್ಲಿಕಾರ್ಜುನ ತಾನೂ ಬರುವುದಾಗಿ ಬೆನ್ನು ಹತ್ತಿ ಬಂದಿದ್ದ.  ಬಸವರಾಜನ ಒಬ್ಬಳೇ ಅಕ್ಕ ನೀಲಾಂಬಿಕಾಳನ್ನು ಖಾಸಾ ಸೋದರ ಮಾವ ಮಲ್ಲಿಕಾರ್ಜುನನಿಗೆ ಕೊಟ್ಟಿದ್ದರು. ಬಸವನಬಾಗೇವಾಡಿಯ ಮಗ್ಗುಲಲ್ಲೇ ಇರುವ ನಿಡಗುಂದಿಯಲ್ಲಿ ಹೊಲ-ಮನೆ ಮಾಡಿಕೊಂಡು ಅನುಕೂಲವಾಗಿರುವ ಮಲ್ಕಾಜಿ ಮಾಮಾಗೆ ಹಿರಿಮಗಳು ಅಕ್ಕಮಹಾದೇವಿ.  ಅವಳನ್ನು ವಾಡಿಕೆಯಂತೆ, ತಮ್ಮನಿಗೇ ಕೊಡಬೇಕೆನ್ನುವ ಆಸೆ ನೀಲಕ್ಕನದು. ನೌಕರಿ ಸಿಕ್ಕಿದ್ದೇ ಮದುವೆ ಪ್ರಸ್ತಾಪ ಶುರುವಿಟ್ಟುಕೊಂಡರು. ಆದರೆ, ಅರ್ಥಶಾಸ್ತ್ರದ ಜೊತೆಗೆ ಒಂದಿಷ್ಟು ಸಾಹಿತ್ಯ, ವೈಚಾರಿಕತೆ ಅಂತೆಲ್ಲಾ ಓದುತ್ತ ಬೆಳೆದು ಇದೀಗ ನೌಕರಿಗೆ ಸೇರಿಕೊಂಡ ಬಸವರಾಜ ಉಳ್ಳಾಗಡ್ಡಿಗೆ ಅಕ್ಕನ ಮಗಳನ್ನು ಮದುವೆಯಾಗಲು ಎಳ್ಳಷ್ಟೂ ಮನಸ್ಸಿಲ್ಲದೇ ಒಲ್ಲೆನೆಂದು ಜಗಳ ತೆಗೆದಿದ್ದ. ಮೊದಲೇ ಈ ದೂರದ ಮಲೆನಾಡಿನ ಊರುಗಳನ್ನು ಸರಿಯಾಗಿ ನೋಡಿರದ ಬಾಗೇವಾಡಿಯ ಜನರಿಗೆ ಆತಂಕ ಶುರುವಾಗಿತ್ತು. ತಮ್ಮ ಬಸೂನನ್ನು ಅಲ್ಲಿ ಯಾರಾದರೂ ಬುಟ್ಟಿಗೆ ಹಾಕಿಕೊಂಡಿರುವರೇ, ಹೇಗೆಂದು  ತನಿಖೆ ಮಾಡುವ ಸಲುವಾಗಿ ಬಸೂನ ತಾಯಿ ಗೌರವ್ವ ತಮ್ಮನನ್ನು ಕಳಿಸಿದ್ದಳು. ಆಗಾಗ ಅಲ್ಲಿ-ಇಲ್ಲಿ ಊರು ನೋಡಿ ಬರುವ ಚಟವಿದ್ದ ಮಲ್ಕಾಜಿ ಮಾವ ತನ್ನ ಜೊತೆ ಬರುತ್ತೇನೆಂದಾಗ ಕಾರಣ ಗೊತ್ತಿರದ ಬಸೂ ಸಹಜವೇ ಇರಬೇಕೆಂದುಕೊಂಡು ಒಪ್ಪಿ ಕರೆತಂದಿದ್ದ. ಎರಡು ದಿನದ ರಜೆಗೆ ಊರಿಗೆ ಹೋಗಿದ್ದ ರಾಮಚಂದ್ರನಾಯ್ಕ ಮರುದಿನ ಬರುವವನಿದ್ದ ಕಾರಣ ರೂಮಿಗೆ ಬೀಗ ಹಾಕಿತ್ತು.  ಮೆಟ್ಟಿಲಮೇಲೆ ಕುಳಿತು ಪಕ್ಕದ ಮನೆ ಹೆಂಗಸಿನ ಜೊತೆ ಹರಟುತ್ತಿದ್ದ ಸಂಧ್ಯಾ,“ಏನು ಉಳ್ಳಾಗಡ್ಡಿ ರ‍್ರು, ಯಾರೋ ನೆಂಟ್ರಿಗೆ ಕಕ್ಕೊಂಬಂದಾರಲ್ಲ”ಎಂದಳು. “ಹೌದ್ರಿ ಅಕ್ಕಾರೆ, ಇವ್ರು ನಮ್ಮ ಮಾಮರ‍್ರಿ” ಎಂದ. “ಇನ್ ನಾಳೆ ಬೆಳಿಗ್ಗೇನೆ ನೀರು ಮ್ಯಾಲೇರ‍್ಸೋದು. ಹನಿ ಸಣ್ಣಕೆ ಬಿಟ್ಕಳ್ರಿ ಹಂ” ಎಂದಳು.  “ಯಕ್ಲೆ ಬಸ್ಯಾ ಈ ಊರಾಗೂ ನೀರಿನ ತ್ರಾಸೈತಿ” ಎಂದು ಭಯಂಕರ ಆಶ್ಚರ್ಯದಿಂದ ಕೇಳಿದ ಮಾವನಿಗೆ “ಇಲ್ಲೋ ಮಾರಾಯ ಈ ಮಾಲಕರು ಕೆಟ್ಟ ಜುಗ್ಗ ಅದಾರ. ದಿನಕ್ಕೊಮ್ಮೆ ಮುಂಜಾನೆ ನಳ ಬಿಟ್ಟಾಗ ನೀರು ಏರ‍್ಸತಾರ. ಕರೆಂಟು ಉಳ್ಸಾಕಂತ ಲೈಟು ರ‍್ಸಿ, ಅಂಗಳದಾಗ ಕೂಡೊ ಮಂದಿ ಐತಿ ಬಾ ಇಲ್ಲೆ” ಎಂದು ನಕ್ಕ.             ಅವ್ವ ಮಾಡಿಕೊಟ್ಟ ಮಾಡ್ಲಿ ಉಂಡಿ, ಚಕ್ಕುಲಿಗಳನ್ನು ಸಂಧ್ಯಾಗೆ ಕೊಡಲೆಂದು ಕೆಳಗೆ ಹೋದ.  “ಇದೇನು ರೇತಿ ಕಂಡಾಂಗೆ ಕಾಣ್ತದಲ್ಲ” ಎಂದು ಆಶ್ಚರ್ಯಪಟ್ಟಳು. ಹ್ಹೆ ಹ್ಹೆ ಹ್ಹೆ ಎಂದು ನಕ್ಕು ಮೇಲೆ ಬಂದ.  ರಾಮಚಂದ್ರನ ಫೋನು ಬಂದಾಗ ರೇತಿ ಎಂದರೇನೆಂದು ಕೇಳಿದ. ಅವನು ‘ಮರಳು’ ಅಂದಾಗಲೇ ಅರ್ಥವಾಗಿ ನಗು ಬಂದಿತು. ಮಾವನಿಗೆ ಊರು ತೋರಿಸಲು ಕರಕೊಂಡು ಹೊಂಟ.  ಅವರ ಮನೆಯಿದ್ದ ಅಯ್ಯಪ್ಪ ನಗರದಿಂದ ನಡೆಯುತ್ತ ಕೋಟೆಕರೆಗೆ ಬಂದರು. ಕೆರೆ ಏರಿ ಮೇಲೆ ನಡೆಯುತ್ತ ಹೊರಟಾಗ ಒಂದಿಬ್ಬರು ಹುಡುಗರು ಬಸವರಾಜನಿಗೆ “ನಮಸ್ಕಾರ ಸರ್, ವಾಂಕಿಗು?” ಎಂದು ಮಾತಾಡಿಸಿದರು. “ನಮ್ಮ ಮಾಮಾಗೆ ಊರು ತೋರಿಸ್ಬೇಕು’’ ಎಂದ. ಹಾಗಿದ್ರೆ ಮಾರಿಗುಡಿಗೆ ಹೊಗೋದು ಚೊಲೊ. ಈ ಬದಿಗೆ ಗಣಪತಿ ದೇವಸ್ಥಾನ ಮತ್ತೆಂತ ಉಂಟು ಈ ಊರಲ್ಲಿ.  ಆ ಹುಡುಗರಿಗೆ ತಮ್ಮ ಊರು ಎಂದರೆ, ಮಹಾಬೋರು. ಎರಡು ದೇವಸ್ಥಾನ-ಕೆರೆ ಇರುವ ಈ ಊರಲ್ಲಿ ಎಂತಾ ನೋಡ್ತಾರೆ ಅಂತ ಆಶ್ಚರ್ಯಪಟ್ಟರು. ಬನವಾಸಿಗೆ, ಜೋಗಕ್ಕೆ ಆಥ್ವಾ ಸಹಸ್ರಲಿಂಗಕ್ಕೆ ಹೋಗ್ಬಹುದು ಸರ್ ಎಂದ ಒಬ್ಬ. ಆಯ್ತು ಎಂದು ತಲೆಯಾಡಿಸುತ್ತ ಹೊರಟರು. “ಇವ್ರು ಹ್ಯಾಂಗ್ ಮಾತಾಡ್ತರ‍್ಲೆ, ಮಾಸ್ತರು ಅಂತ ಕಿಮ್ಮತ್ತಿಲ್ಲೇನಲ್ಲೆ? ರಿ ಹಚ್ಚಂಗಿಲ್ಲಲ್ಲ?” ಸಿಟ್ಟಿನಿಂದ ಕೇಳಿದ ಮಾವನಿಗೆ, “ನಂಗೂ ಹೀಗ ಅಗಿತ್ತಪ್ಪ ಶುರುವಿಗೆ. ಆಮೇಲೆ ಗೊತ್ತಾಯ್ತು.  ಇಲ್ಲಿ ಮಂದಿ ಕನ್ನಡ ಬ್ಯಾರೇನೇ ಐತಿ. ಯಾರಿಗೂ ರಿ ಹಚ್ಚಂಗಿಲ್ಲ. “ವಿಚಿತ್ರ ಊರು ಬಿಡಪ” ಎಂದು ಮಲ್ಕಾಜಿ ಪಾನಂಗಡಿ ಕಡೆ ನಡೆದು ಸಿಗರೇಟು ಹಚ್ಚಿಕೊಂಡ. ಬಾಳೆಹಣ್ಣು ಕೊಂಡ ಬಸೂ ಸಿಪ್ಪೆ ಸುಲಿದು ತಿನ್ನತೊಡಗಿದ.  “ಅರೆ ಸರ್, ನೀವು ಊರಿಂದ ಯಾವಾಗ ಬಂದ್ರಿ?” ಧ್ವನಿ ಕೇಳಿ ತಿರುಗಿದರೆ, ಫ್ಯೆನಲ್ ಬಿ.ಎ. ಹುಡುಗಿ ವರದಾ. ಇಡೀ ಕಾಲೇಜಿನಲ್ಲೇ ಹೆಚ್ಚು ಮಾತಾಡುವ ಐದೂ ಕಾಲಡಿ ಎತ್ತರದ ಕಟ್ಟುಮಸ್ತಾದ ಹುಡುಗಿ. ಆಟ-ಭಾಷಣ-ರಂಗೋಲಿ-ಡ್ಯಾನ್ಸು ಎಲ್ಲಾ ಸ್ಫರ್ಧೆಗಳಲ್ಲೂ ಬಹುಮಾನ ಗಳಿಸುತ್ತ ಉಪನ್ಯಾಸಕರ ಮುಖ ಕಂಡಾಗಲೊಮ್ಮೆ “ಇಂಟರ‍್ನಲ್ಸಗೆ ಇಪ್ಪತ್ತಕ್ಕೆ ಇಪ್ಪತ್ತು ಕೊಡ್ಬೇಕು ಹಂ ಈ ಸಲ ನಾವು ಫ್ಯೆನಲ್ ಇಯರ್. ಜೀವನದ ಪ್ರಶ್ನೆ ಮತ್ತೆ” ಎಂದು ತಾಕೀತು ಮಾಡುತ್ತ ತಿರುಗುತ್ತಿದ್ದಳು. ಹಾಂಗಂತ ಅಭ್ಯಾಸದಲ್ಲಿ ಅವಳು ತೀರಾ ಸಾಧಾರಣವಾದ ಅಂಕ ಪಡೆಯುವ ಹುಡುಗಿ. ಅವಳ ಭಯಕ್ಕೆ ಉಪನ್ಯಾಸಕರು ಅಂಕ ಕೊಡಬೇಕಾಗಿತ್ತು. ತೀರಾ ಕಟ್ಟುನಿಟ್ಟಿನ ಕಾಮತ್

ನಡಿ ಕುಂಬಳವೇ ಟರಾ ಪುರಾ Read Post »

ಕಥಾಗುಚ್ಛ

ಉದಾಹರಣೆ

ಕಥೆ ಮಧುರಾ ಕರ್ಣಮ್ ಎಲ್ಲ ಸರಿ ಇದ್ದವರು ಸುಮ್ಮನಿರಲಾಗದೇ ಮೈಮೇಲೆ ಇರುವೆ ಬಿಟ್ಕೊಂಡು ತುರಸ್ಕೋತಾರಂತೆ. ಹಾಗಾಗಿದೆ ನನ್ನ ಕತೆ. ನೀವು ಹೇಳಿದ್ರೆ ನಂಬ್ತೀರೋ ಇಲ್ಲವೋ, ಜನಕ್ಕೆ ನೂರೆಂಟು ತಾಪತ್ರಯಗಳು. ವೃದ್ಧರಿಗಂತೂ ಸಾವಿರದೆಂಟಂದ್ರೂ ಪರವಾಗಿಲ್ಲ. ಅಪರೂಪಕ್ಕೆ ನನಗೆ ತೊಂದರೆಗಳೇ ಇಲ್ಲದಂತಿದ್ದೆ. ‘ತೊಂದರೆಗಳು ನಾವು ನೋಡುವ ದೃಷ್ಟಿಯಲ್ಲಿರುತ್ತವೆ ಬಿಡಿ. ಆದ್ರೂನೂ ನನಗೆ ಒಂದೇ ಒಂದು ಕೊರತೆ ಅನಿಸಿದ್ದು ನನ್ನ ಪತ್ನಿ ಜಾನ್ಹವಿ, ಜಾನೂ ಇಲ್ಲದ್ದು. ಕೈಹಿಡಿದವಳು ಕೈಬಿಟ್ಟು ನಡೆದು ಆಗಲೇ ಹತ್ತು ವರ್ಷಗಳಾಗಿದ್ದವು. ಅದನ್ನು ಬಿಟ್ಟರೆ ಮೂರು ಜನ ಮಕ್ಕಳು ತಮ್ಮ ಪತ್ನಿಯರು, ಮಕ್ಕಳೊಂದಿಗೆ ಆರಾಮವಾಗಿದ್ದಾರೆ. ಮುವರೂ ಸಾಫ್ಟವೇರೇ. ಹಿರಿಯವ ಮುಕುಲ್ ಕಂಪನಿಯೊಂದರಲ್ಲಿ ಎ.ವಿ.ಪಿ. ಆಗಿದ್ದಾನೆ. ಎರಡನೆಯವ ನಕುಲ್ ಸಾಫ್ಟವೇರ್ ಜೊತೇನೆ ಅಮೆರಿಕಾ ಸೇರಿದ್ದಾನೆ. ಕೊನೆಯವ ಬಕುಲ್ ಮುಂಬಯಿ ಸೇರಿಕೊಂಡಿದ್ದಾನೆ. ಸೊಸೆಯಂದಿರು ಮೂವರು ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟರೆ ಒಳ್ಳೆಯವರೇ. ನನ್ನ ತಂಟೆಗೇನೂ ಬರುವದಿಲ್ಲ. ನಾನು ಎಂದಿಗೂ ಅವರು ಧರಿಸುವ ಬಟ್ಟೆ, ಮಾಡುವ ಖರ್ಚು ಶಾಪಿಂಗ್ಗಳ ಉಸಾಬರಿ ಮಾಡುವದಿಲ್ಲ.             ಎಲ್ಲೋ ಹುಟ್ಟಿ ಎಲ್ಲೋ ಹರಿದು ಎಲ್ಲೋ ಸೇರುವಂತೆ, ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ಕಾಲೇಜಿಗೆ ಮಣ್ಣು ಹೊತ್ತು ಪೋಸ್ಟಲ್ ಡಿಪಾರ್ಟಮೆಂಟಿಗೆ ಸೇರಿದ್ದೆ. ಮಕ್ಕಳ ಓದಿಗೆಂದು ಪುಣೆಗೆ ಬಂದವರು ಅಲ್ಲೇ ನೆಲೆ ನಿಂತೆವು. ಜೀವನವೂ ನಿಧಾನವಾಗಿ ಪುಣೇರಿ ಧಾಟಿಯಲ್ಲೇ ಬದಲಾಗತೊಡಗಿತ್ತು. ಅವಶ್ಯಕ ವಿಷಯಗಳ ಬಗ್ಗೆ ಮಾತ್ರ ಮಾತು, ಚರ್ಚೆ ಇತ್ಯಾದಿ. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರ ಆರಿಸಿಕೊಂಡರು. ಹಾಗೇ ಪತ್ನಿಯರನ್ನೂ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೆಂದಳು ಜಾನ್ಹವಿ. ಯಾವಾಗಲೋ ಒಮ್ಮೆ ಹೋಗಿ ಬರುತ್ತಿದ್ದ ಧಾರವಾಡದ ನಂಟು ಪೂರ್ತಾ ಕಡಿಮೆಯಾಯಿತು.             ಲಕ್ಷ್ಮಿ ರೋಡಿನ ಈ ಚಾಳದಲ್ಲಿ ನಲವತ್ತು ವರ್ಷಗಳ ಹಿಂದೆ ನಾವು ಹೊಸದಾಗಿ ಬಂದಾಗ ವಾಸಿಸಲಾರಂಭಿಸಿದ ಮನೆಯಲ್ಲೇ ಇಂದಿಗೂ ನಮ್ಮ ವಾಸ. ಹಳೆಯ ಮನೆಗಳು. ಅರವತ್ತು ರೂಪಾಯಿಗಳ ಬಾಡಿಗೆ. ಆಗಲೋ ಈಗಲೋ ಎನ್ನುವಂತಿದ್ದರೂ ಇನ್ನೂ ಏನೂ ಆಗಿಲ್ಲ. ನನ್ನ ಹಣೆಬರಹದಂತೆ ಗಟ್ಟಿಮುಟ್ಟಾಗಿವೆ. ಹಿಂದೆಯೇ ತುಳಸಿ ಬಾಗ. ಪುಣೆಯ ಖ್ಯಾತ ಮಾರುಕಟ್ಟೆ. ಅಲ್ಲಿ ಸದಾ ಸಂತೆಯೇ. ರಾತ್ರಿ ಹನ್ನೊಂದು ಗಂಟೆಯಲ್ಲೂ ಬೇಕಾದ್ದು ಸಿಗುತ್ತಿತ್ತು. ಆದರೆ ವ್ಯಾಪಾರಿಗಳ ಗಲಾಟೆ, ಚಿಕ್ಕ ಚಿಕ್ಕ ಖೋಲಿಗಳ ಮನೆ ಮಕ್ಕಳು ದೊಡ್ಡವರಾದಂತೆ ಅವರಿಗೆ ಹಿಡಿಸಲಿಲ್ಲ. ಮುಕುಲ್ ‘ಸಾರ್ಗೇಟ್’ನಲ್ಲಿ ದೊಡ್ಡ ಮನೆ ಮಾಡಿದ. ನಮ್ಮನ್ನೂ ಅಲ್ಲಿಗೇ ಕರೆದ. ಯಾಕೋ ಚಾಳ ಬಿಟ್ಟು ಹೋಗಲು ಮನಸ್ಸೊಪ್ಪಲಿಲ್ಲ. ಆದರೆ ಮೂರೂ ಮಕ್ಕಳ ಮದುವೆ, ಹೆಂಡಿರ ಸೀಮಂತ, ಮೊಮ್ಮಕ್ಕಳ ಜಾವಳ ಇತ್ಯಾದಿಗಳು ಈ ಗುಬ್ಬಿಗೂಡಿನಲ್ಲೇ ನಡೆದವು. ನಕುಲ್ ಹೆಂಡತಿಯೊಂದಿಗೆ ಅಮೆರಿಕಾ ಸೇರಿದವ ಆಗಾಗ್ಗೆ ಬಂದು ಹೋಗುತ್ತಾನೆ. ಬಕುಲ್ ಮುಂಬೈನಲ್ಲೇ ಓನರ್ಶಿಪ್ ಮೇಲೆ ಫ್ಲಾಟ್ ಕೊಂಡು ಆರಾಮವಾಗಿದ್ದಾನೆ.             ಮೊಮ್ಮಕ್ಕಳನ್ನು ಕಂಡ ಕೆಲವೇ ದಿನಗಳಲ್ಲಿ ಜಾನು ಹೋಗಿಬಿಟ್ಟಳು. ಕುಳಿತವಳು ಎದ್ದು ಹೋದಂತೆ. ಒಂದು ದಿನವೂ ಮಲಗಲಿಲ್ಲ. ‘ಎದೆನೋವು’ ಎಂದವಳು ನನ್ನ ಕೊಂಡಿಯಿಂದ ಕಳಚಿಕೊಂಡುಬಿಟ್ಟಳು. ಆಗಿನಿಂದಲೇ ನಾನು ಒಬ್ಬಂಟಿ. ಹತ್ತು ವರ್ಷಗಳು ಯಾಂತ್ರಿಕವಾಗಿ ಸಾಗಿದ್ದವು. ಶುಗರ್, ಬಿ.ಪಿ. ಇದ್ದರೂ ತೊಂದರೆ ಕೊಡಲಿಲ್ಲ. ನಿತ್ಯ ಒಂದು ಡಯಾನಿಲ್, ಒಂದು ಲೋಸಾರ್ ನುಂಗಿದರಾಯಿತು. ಹೀಗಾಗಿ ಚಾಳಿನ ಮನೆಯನ್ನೇನೂ ಬಿಟ್ಟಿರಲಿಲ್ಲ. ನಿತ್ಯ ಸಾರ್ಗೇಟ್ನಲ್ಲಿರುವ ಮಗನ ಮನೆಗೆ ವಾಕಿಂಗ್ ಮಾಡುತ್ತಾ ಹೋಗಿ ತಿಂಡಿ, ಊಟ ಮುಗಿಸಿ ಒಂದಿಷ್ಟು ಓಡಾಡಿ, ನಿವೃತ್ತರೊಂದಿಗೆ ಕಾಲ ಕಳೆದು, ದೇವಸ್ಥಾನ, ಲೈಬ್ರರಿಗಳಿಗೆ ಭೇಟಿ ನೀಡಿ ರಾತ್ರಿ ಊಟ ಮುಗಿಸಿಯೇ ಮನೆ ಸೇರುವದಿತ್ತು. ಮನೆ ಕೀಲಿ ಹಾಕಿಕೊಂಡು ಮುಂಬೈಗೆ ಹೋದರೆ ಮೂರು ತಿಂಗಳು ಪುಣೆಯತ್ತ ಹೊರಳುತ್ತಿರಲಿಲ್ಲ. ನಕುಲ್ ಎರಡು ಬಾರಿ ಅಮೆರಿಕೆಗೆ ಕರೆಸಿಕೊಂಡಿದ್ದ. ನಯಾಗರ ನೋಡಿಕೊಂಡು ಬಂದಿದ್ದೆ. ಪಾಪ, ಜಾನು ಏನೂ ನೋಡಲಿಲ್ಲ. ಅವಳ ಜೀವನವೆಲ್ಲ ಕತ್ತೆಯಂತೆ ದುಡಿದು ಗಂಡ, ಮಕ್ಕಳಿಗೆ ಚಪಾತಿ, ಪಲ್ಯದ ಡಬ್ಬಿ ಕಟ್ಟಿದ್ದೇ ಬಂತು. ಮಕ್ಕಳ ಶ್ರೀಮಂತಿಕೆ, ಕಾರುಗಳು, ಚಿನ್ನ ಏನೂ ಕಾಣಲಿಲ್ಲ. ಅವಳಿಗೊಂದೆರೆಡು ಒಡವೆ  ಕೂಡ ಕೊಡಿಸಲಾಗಲಿಲ್ಲ. ಹೇಗೆ ಕೊಡಿಸುತ್ತಿದ್ದೆ? ಮೂರು ಮಕ್ಕಳ ಶಿಕ್ಷಣ, ಪುಣೆಯಲ್ಲಿ ಜೀವನ ಎಂದರೆ ಹುಡುಗಾಟವೇ? ಹಾಸಿದರೆ ಹೊದೆಯಲಿಲ್ಲ, ಹೊದ್ದರೆ ಹಾಸಲಿಲ್ಲ ಎಂಬಂಥ ಪರಿಸ್ಥಿತಿ. ಹೊಂದಾಣಿಕೆ ಮಾಡಿಕೊಳ್ಳುತ್ತಲೇ ನಮಗಾಗಿ ಬದುಕು ಕಳೆದುಬಿಟ್ಟಳು. ಏನೇ ಆದರೂ ನಾವಿಬ್ಬರೂ ಸಂಕಷ್ಟಿಯಂದು ‘ಪರ್ವತಿ’ಯಲ್ಲಿದ್ದ ಗಣಪತಿಯ ದರ್ಶನ ತಪ್ಪಿಸುತ್ತಿರಲಿಲ್ಲ. ಇಬ್ಬರೂ ಸೇರಿ ದರ್ಶನ ಮಾಡಿಕೊಂಡು ಎದುರಿನ ಹೊಟೆಲ್ನಲ್ಲಿ ಸಂಕಷ್ಟಿಯ ಸ್ಪೆಶಲ್ ಸಾಬೂದಾಣೆಯ ವಡೆ, ಬಟಾಟೆಯ ಹಪ್ಪಳ ತಿಂದು ಬರುತ್ತಿದ್ದೆವು. ಈಗ ಯಾಂತ್ರಿಕವಾಗಿ ಒಬ್ಬನೇ ಹೋಗುತ್ತೆನೆ.             ಆ ಬಾರಿ ಅಂಗಾರಕ ಸಂಕಷ್ಟಿ ಬೇರೆ. ಪರ್ವತಿಯಲ್ಲಿ ಗಣಪತಿಯ ದರ್ಶನಕ್ಕೆ ಉದ್ದಾನುದ್ದ ಸಾಲು. ಸರತಿಯ ಸಾಲಿನಲ್ಲಿ ಯಾವುದೋ ಪರಿಚಿತ ಮುಖ ಕಂಡಂತಾಯಿತು. ನನ್ನಿಂದ ಅನತಿ ದೂರದಲ್ಲೇ. ತಲೆ ಕೆರೆದುಕೊಂಡು ಯೋಚಿಸಿದಾಗ ಚಿತ್ತಭಿತ್ತಿಯಲ್ಲಿ ಮೀನಾ ಕಂಡುಬಂದಳು. ಹೌದು, ಅವಳೇ ನನ್ನ ತಂಗಿ ಸುರೇಖಾಳ ಗೆಳತಿ ಮೀನಾ. ಸುರೇಖಾ ಮತ್ತು ಮೀನಾ ಆಟ್ರ್ಸ ತೆಗೆದುಕೊಂಡು ಧಾರವಾಡದ ಜೆ.ಎಸ್.ಎಸ್. ಕಾಲೇಜಿಗೆ ಹೋಗುತ್ತಿದ್ದರು. ಆಗ ನನ್ನದೂ ಹದಿ..ಹದಿ..ಹರಯ. ಅವಳ ಜಿಂಕೆಗಂಗಳ ಮೋಡಿಗೆ ಸಿಲುಕಿದ್ದೆ. ತೊಡುತ್ತಿದ್ದ ಲಂಗ, ದಾವಣಿ, ಸೀರೆ ಅವಳ ಮೈಮಾಟಕ್ಕೊಪ್ಪುತ್ತಿದ್ದವು. ಮಾತನಾಡಿಸಬೇಕೆಂಬ ಬಯಕೆ ತೀವ್ರವಾಗಿತ್ತು. ಆದರೆ ಅಪ್ಪನ ಹೆದರಿಕೆ. ಅಲ್ಲದೇ ಸುರೇಖಾ ಸದಾ ಅವಳ ಜೊತೆಯಲ್ಲೇ ಇರುತ್ತಿದ್ದಳು. ಕೊನೆಗೆ ಧಾರವಾಡ ರೆಸ್ಟೋರೆಂಟ್ ಪಕ್ಕ ಅವಳು ಟೈಪಿಂಗ್ ಕ್ಲಾಸಿಗೆ ಹೋಗುವದನ್ನು ತಿಳಿದುಕೊಂಡು ಅಲ್ಲೇ ಹೋಗಿ ಮಾತನಾಡಿಸಿದೆ. ಬಹುಶ: ಅವಳಿಗೂ ನನ್ನ ಮೇಲೆ ಆಕರ್ಷಣೆ ಇತ್ತು. ಹೀಗಾಗಿ ಹೆದರದೇ ಮುಗುಳ್ನಗುತ್ತ ಮಾತನಾಡಿದಳು. ಇಬ್ಬರೂ ಮೊದಲೇ ನಿಶ್ಚಯಿಸಿಕೊಂಡು ಒಮ್ಮೆ ನುಗ್ಗೀಕೇರಿಗೆ ಹೋಗಿದ್ದೆವು. ಹನುಮಪ್ಪನ ದರ್ಶನ ಪಡೆದು ಮುಂದೆ ಮರದ ನೆರಳಿನಲ್ಲಿ ಕುಳಿತು ಪ್ರೇಮ ನಿವೇದನೆ ಮಾಡುತ್ತಾ ಅವಳ ಮುಂಗೈಯನ್ನು ತುಟಿಗೊತ್ತಿಕೊಂಡಿದ್ದೆ. ರೋಮಾಂಚನವಾಗಿತ್ತು. ತಕ್ಷಣ ಅವಳು ನಾಚಿಕೊಂಡು ಕೈ ಕೊಸರಿಕೊಂಡು ಓಡಿಹೋಗಿದ್ದಳು. ಮಾತಿಗೆ ನಿಲುಕದ ಸುಖ. ಜನ್ಮಪೂರ್ತಾ ಮರೆಯಲಾಗಿರಲಿಲ್ಲ.             ಮುಂದೆ ನಾನು ಅಂಚೆ ಇಲಾಖೆ ಸೇರುತ್ತಿದ್ದಂತೆ ಸುರೇಖಾಳ ಮದುವೆಯಾಗಿತ್ತು. ಅವಳ ಮದುವೆಯಲ್ಲಿ ನಮ್ಮಿಬ್ಬರ ಓಡಾಟ ಕಂಡು ಕೆಲವರ ಕಣ್ಣು ಕೆಂಪಾಗಿದ್ದವು. ಮದುವೆ ಗಲಾಟೆ ಮುಗಿಯುತ್ತಿದ್ದಂತೆ ಅಪ್ಪ ಗುಡುಗಿದ್ದರು. ಅವರದು ಬ್ಯಾರೇ ಜಾತಿ. ನಿನಗ ಹುಡುಗಿನ್ನ ನಾವು ನೋಡೇವಿ ಎಂದಿದ್ದರು. ಅತ್ತ ಮೀನಳ ಮನೆಯಲ್ಲೂ ವಾಸನೆ ಬಡಿದಿತ್ತು. ವಾರದೊಳಗೇ ಅವಳ ಮದುವೆ ಗೊತ್ತಾಗಿತ್ತು. ನನಗೊಂದು ಭೇಟಿಗೂ ಅವಕಾಶವಾಗದಂತೆ ಮದುವೆ ಮುಗಿದು ಹೋಯಿತು. ರಾತ್ರಿ ಹೊದಿಕೆಯ ಒಳಗೇ ದು:ಖಿಸಿದ್ದೆ. ಮುಂದೆ ಜಾನು ನನ್ನ ಕೈಹಿಡಿದಳು. ಎಲ್ಲ ತೆರೆಯ ಮೇಲೆ ಸರಿಯುವ ರೀಲಿನಂತೆ. ಹಾಗೇ ಇದ್ದಾಳೆ. ಹೆಚ್ಚೇನೂ ಬದಲಾಗಿಲ್ಲ. ಮುಖದ ಮೇಲಿನೊಂದೆರಡು ಸುಕ್ಕುಗಳು, ಕಣ್ಣಸುತ್ತ ಕಪ್ಪು ವರ್ತುಲ , ನೋವಿನ ಗೆರೆಗಳನ್ನು ಬಿಟ್ಟು.. ..             ಗಣೇಶನ ದರ್ಶನ ಮಾಡಿಕೊಂಡು ಹುಡುಕುತ್ತ ಬಂದಾಗ ದೇವಾಲಯದ ಆವರಣದಲ್ಲೇ ಅವಳು ಪ್ರಸಾದದೊಂದಿಗೆ ಕುಳಿತಿರುವದು ಕಂಡಿತು. ತಟಕ್ಕನೇ ಮುಂದೆ ನಿಂತು  ಹೆಂಗಿದ್ದೀ ಮೀನಾ? ಎಂದೆ. ಅವಳು ಕಣ್ಕಣ್ಣು ಬಿಟ್ಟು ನೋಡಿದಳು. ನನ್ನ ಅರ್ಧ ಸಪಾಟಾದ ತಲೆ ಗುರುತು ಸಿಗಲು ತೊಡಕಾಗಿತ್ತು. ನಂತರ ಪ್ರ..ಕಾ..ಶ ? ಎಂದಳು ಪ್ರಶ್ನಾರ್ಥಕವಾಗಿ. ಹೌದು ಎನ್ನುತ್ತ ಕತ್ತಾಡಿಸಿದೆ. ನೀ ಹೆಂಗೋ ಇಲ್ಲೇ? ಎಂದಳು. ಅಲ್ಲೆ ಹೋಗೋಣ ಎಂದು ಕೊಂಚ ದೂರದ ಪಾರ್ಕ್ ಗೆ ಹೋಗಿ ಕುಳಿತೆವು. ನಾನು ನನ್ನ ಪ್ರವರವನ್ನೆಲ್ಲಾ ಹೇಳಿದೆ. ಕೇಳಿಸಿಕೊಂಡು ತನ್ನದನ್ನೂ ಹೇಳಿದಳು. ಹೇಳ್ಲಿಕ್ಕೆ ಭಾಳೇನಿಲ್ಲೋ ಪ್ರಕಾಶ. ಅವರದು ಸರ್ಕಾರಿ ಆಫೀಸಿನ್ಯಾಗ ಸ್ಟೆನೋ ಕೆಲಸಿತ್ತು. ಎರಡು ಮಕ್ಕಳು. ಮಗಳು ಮದಿವ್ಯಾಗಿ ‘ನಾಸಿಕ’ನ್ಯಾಗಿದ್ದಾಳ. ಮಗ ಭಾಸ್ಕರ ಪುಣೇದಾಗ ಬ್ಯಾರೇ ಮನಿ ಮಾಡಿಕೊಂಡು ಹೆಂಡ್ತಿ ಜೋಡಿ ಇದ್ದಾನ. ಅವರು ಹೋಗಿ ಹತ್ತು ವರ್ಷಾತು. ನಾ ಒಬ್ಬಾಕಿನ ಸಾರ್ಗೇಟ್ ಕಡೆ ಖೋಲಿ ಬಾಡಿಗಿಗೆ ತೊಗೊಂಡಿದ್ದೇನಿ. ಎಂದು ಮೌನವಾದಳು .             ಅಂದು ಮನೆಗೆ ಹಿಂತಿರುಗಿ ಬಂದರೂ ಮೀನಳ ಗುಂಗು ಆವರಿಸಿತ್ತು. ನಾವಿಬ್ಬರೂ ಸಮದು:ಖಿಗಳಿದ್ದಂತೆ. ಹೆಚ್ಚು ಕಡಿಮೆ ಜಾನು ಹೋದಾಗಲೇ ಅವಳ ಗಂಡನೂ ಹೋಗಿದ್ದು. ಅವಳದೂ ಒಂಟಿ ಜೀವ. ರಾತ್ರಿಯೆಲ್ಲ ಏಕೋ ಧಾರವಾಡದ ನುಗ್ಗಿಕೇರಿಯ ನಮ್ಮ ಭೇಟಿಯ ನೆನಪು ಮೂಡಿ ಬಂದಿತ್ತು. ಮುಂದಿನ ದಿನಗಳಲ್ಲಿ ನಾನು ಅನೇಕ ಬಾರಿ ಸಾರ್ಗೇಟ್ನ ಅವಳ ಮನೆಗೆ ಭೇಟಿ ಇತ್ತಿದ್ದೆ. ಅವಳೂ ನನ್ನ ಮನೆಗೆ ಬಂದು ಹೋಗಿದ್ದಳು. ಹಾಗೇ ನಮ್ಮ ಒಡನಾಟ ಬೆಳೆದು ವಾರಕ್ಕೆ ಎರಡು ಮೂರು ಬಾರಿಯಾದರೂ ನಾವು ಭೇಟಿಯಾಗುವಂತಾಯಿತು. ಹೆದರಿಸಲು ಇಲ್ಲೇನು ಅಪ್ಪನ ಕಣ್ಣುಗಳಿರಲಿಲ್ಲ. ಅಮ್ಮನ ನೊಂದ ಮುಖವಿರಲಿಲ್ಲ.             ಈ ಮನಸ್ಸಿನ ಕಥೆಯನ್ನೇ ನಾನು ಹೇಳಿದ್ದು. ಎಷ್ಟು ವಿಚಿತ್ರ ನೋಡಿ. ಹೆಂಡತಿ ಎಂಬ ಚೌಕಟ್ಟಿದ್ದರೆ ಒಳಗೇ ಹರಿದಾಡಿಕೊಂಡಿರುತ್ತದೆ. ಇಲ್ಲವಾದರೆ ಎಲ್ಲೆಲ್ಲೋ ನುಗ್ಗಿ ಒಡ್ಡು ಮೀರಿ ಹರಿಯುತ್ತ.. ..ಮೊರೆಯುತ್ತದೆ. ನನಗೀಗ ಅರವತ್ತೆರಡು ವರ್ಷಗಳು. ಇತ್ತೀಚೆಗೆ ನನಗೆ ‘ಮೀನಳನ್ನೇಕೆ ಮದುವೆಯಾಗಬಾರದು?’ ಎನಿಸಿತ್ತು. ಅಂದು ಅಪ್ಪನ ಹೆದರಿಕೆಯಿಂದ ನಿಂತು ಹೋದ ಪ್ರೀತಿ ಮತ್ತೆ ಮುಂದುವರೆಯಬಹುದಲ್ಲ. ನನ್ನ ಮಕ್ಕಳಂತೂ ಬೇಡವೆನ್ನಲಿಕ್ಕಿಲ್ಲ. ‘ಫಾರ್ವರ್ಡ’ಹುಡುಗರು. ಬೇರೆ ಏನೂ ಜಂಜಡವಿಲ್ಲ. ಇಬ್ಬರೂ ಸಮದು:ಖಿಗಳು. ಜೋಡಿಯಾಗಿ ವೃದ್ಧಾಪ್ಯ ಕಳೆಯಬಹುದು. ಈ ವಯಸ್ಸಿಗೆ ಅವಶ್ಯಕವಾಗಿ ಬೇಕಾಗುವದು ‘ಸಾಂಗತ್ಯ.’ ಇಬ್ಬರೂ ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕಿದರೆ.. ಅನೇಕ ‘ರೇ..ಳು ಮನದಲ್ಲಿ ಸುಳಿದವು. ನುಗ್ಗೀಕೇರಿಯ ಆಲದ ಮರದಡಿಯ ಚಿತ್ರ ಮುಂದೋಡಿ ಉತ್ತುಂಗ ಸುಖ ತಂದಿಡುವಂತೆ ಭಾಸವಾಯಿತು. ವಿಷಯ ಪ್ರಸ್ತಾಪಿಸಿದಾಗ ಮೀನಳಿಗೆ ಅಚ್ಚರಿಯೇನೂ ಆಗಿರಲಿಲ್ಲ. ಬದಲಿಗೆ ನಿರೀಕ್ಷಿಸುತ್ತಿದ್ದವಳಂತೆ ಸಮ್ಮತಿಸಿದ್ದಳು. ನನಗ ಇಬ್ಬರು ಮಕ್ಕಳಿದ್ದಾರಂತ ಹೇಳಿದೆನಲ್ಲ ಪ್ರಕಾಶ. ನೀ ಬೇಕಾದರೆ ಅವರಿಬ್ಬರನ್ನೂ ಒಮ್ಮೆ ಭೆಟ್ಟಿ ಮಾಡು ಎಂದಿದ್ದಳು. ನಾನು ಹೀರೋನ ಪೋಸು ಕೊಟ್ಟು ಬೇಕಾಗಿಲ್ಲ ಮೀನಾ. ನಿನ್ನ ಮಕ್ಕಳಂದ್ರ ನನ್ನ ಮಕ್ಕಳಿದ್ದಂಗ. ನನಗಂತೂ ಹೆಣ್ಣು ಮಕ್ಕಳಿಲ್ಲ. ಹಿಂಗರೆ ಒಬ್ಬಾಕಿ ಮಗಳು ಸಿಕ್ಕಂಗಾತು. ಎಂದಿದೆ.್ದ             ನನ್ನ ಮಕ್ಕಳಿಗೆ ವಿಷಯ ತಿಳಿಸಿದಾಗ ಅಚ್ಚರಿಯಿಂದ ಹುಬ್ಬೇರಿಸಿದರು. ಸೊಸೆಯಂದಿರೂ ಆಶ್ಚರ್ಯಚಕಿತರಾದರೂ ಬದಲು ಹೇಳಲಿಲ್ಲ. ಎಲ್ಲರ ಪರವಾಗಿ ಮುಕುಲ್ ಮಾತನಾಡಿದ್ದ. ದಾದಾ, ನಿಮ್ಮ ಇಚ್ಛಾಕ್ಕ ನಾವು ಅಡ್ಡ ಬರಂಗಿಲ್ಲ. ಆದ್ರ ನಮ್ಮವ್ವನ್ನ ನಾವು ಮರೀಲಿಕ್ಕಾಗೂದಿಲ್ಲ… .. ಎಂದಿದ್ದ. ಹೌದಲ್ಲ, ಇಷ್ಟೂ ದಿನಗಳೂ ಮೀನಳ ಭೇಟಿಯಾದಾಗಿನಿಂದ ನನ್ನ ಜಾನ್ಹವಿಯ ನೆನಪೇ ಬರದಷ್ಟು ಮರೆತು ಹೋಗಿದ್ದೆ. ‘ಈ ವಯಸ್ಸಿನಲ್ಲಿ..  ಮದುವೆಯಾಗಿ.. ಜಾನ್ಹವಿಗೇನಾದರೂ ಮೋಸ ಮಾಡುತ್ತಿದ್ದೇನಾ?’ ಎಂಬ ವಿಚಾರ ಒಳಹೊಕ್ಕು ತಲೆಯೆಲ್ಲ ಚಿಟ್ಟೆಂದಿತು. ‘ಉಹ್ಞೂಂ, ನಾನು ಜಾನ್ಹವಿಗೇನೂ ಅನ್ಯಾಯ ಮಾಡುತ್ತಿಲ್ಲ. ಒಮ್ಮೆ ನಿರ್ಧರಿಸಿ ಆಗಿದೆ. ಇನ್ನು ಮುಂದುವರೆದೇ ಸೈ’ ಎಂದು ತೀರ್ಮಾನಿಸಿದೆ. ಅಕ್ಕ ಪಕ್ಕದ ಒಂದೆರೆಡು ಮನೆಯವರಿಗೆ ವಿಷಯ ತಿಳಿಸಿದೆ. ಕೆಲವರು ಕಣ್ಣರಳಿಸಿದರು. ಹಲವರು ಸಂತೋಷದಿಂದ ಕಂಗ್ರಾಚುಲೇಷನ್ಸ ಎಂದರು. ಹಿಂದೆ ಆಡಿಕೊಂಡು ನಕ್ಕವರೂ ಇದ್ದರೆನ್ನಿ. ಏನೋ ಸಂತೋಷ, ಹುರುಪು.. ಮಹಾಬಲೇಶ್ವರದಲ್ಲಿ ಒಂದು ವಾರ ಮಜವಾಗಿ ಕಳೆದು ಬಂದು ಸಂಸಾರ ಆರಂಭಿಸಬೇಕು. ಏನೇನೋ ಕನಸುಗಳು, ಕನವರಿಕೆಗಳು…             ನಿರೀಕ್ಷಿಸಿದಂತೆ ದೇವಸ್ಥಾನದಲ್ಲಿ ಹಾರ ಬದಲಾವಣೆ ಮಾಡಿಕೊಂಡು ಸರಳವಾಗೇ ಮದುವೆಯಾದೆವು. ಬಕುಲ್ ಗ್ರೀಟಿಂಗ್ಸ ಕಳಿಸಿದ್ದ. ನಕುಲ್ನಿಂದ ಶುಭಾಷಯದ ಸಂದೇಶ ಬಂದಿತ್ತು. ಮುಕುಲ್ ಒಬ್ಬನೇ ಬಂದು ಶುಭ ಹಾರೈಸಿದ. ಹೆಂಡತಿ, ಮಕ್ಕಳು ಬೇಸಿಗೆ ರಜಕ್ಕೆ ತವರಿಗೆ ಹೋಗಿದ್ದರಂತೆ. ಶಿಷ್ಟಾಚಾರದಂತೆ ನನಗೆ ಮೀನಳಿಗೆ ನಮಸ್ಕರಿಸಿ ಆಫೀಸಿಗೆ ಹೊರಟು ಹೋದ. ನಾವೇ ನವದಂಪತಿಗಳು ಪಾಂಚಾಲಿ ಹೋಟೆಲ್ನಲ್ಲಿ ಊಟ ಮಾಡಿಕೊಂಡು ಮನೆಗೆ ಬಂದೆವು. ಚಾಳದ ಕಣ್ಣುಗಳೆಲ್ಲ ಆನಂದಾಶ್ಚರ್ಯಗಳಿಂದ ನೋಡಿ ಶುಭ ಹಾರೈಸಿದರು. ಮೊದಲು ಬಂದು ಜಾನ್ಹವಿಯ ಫೋಟೋಕ್ಕೆ ಕೈ ಮುಗಿದೆ.

ಉದಾಹರಣೆ Read Post »

ಕಥಾಗುಚ್ಛ

ಬಣ್ಣದ ವೇಷ

ಕಥೆ ಪ್ರಜ್ಞಾ ಮತ್ತಿಹಳ್ಳಿ ನೀಲಕಮಲವೆಂದು ಚೆಂದನೆಯ ಸ್ಟಿಕ್ಕರ್ ಅಂಟಿಸಿಕೊಂಡು ಫಳಫಳ ಹೊಳೆಯುತ್ತಿದ್ದ ಸ್ಟೀಲು ತಾಟು ಢಮಾರ್ ಎಂಬ ದೊಡ್ಡ ಸಪ್ಪಳದೊಂದಿಗೆ ಗೋಡೆಗೆ ಮುಖ ಗುದ್ದಿಕೊಂಡು ನೆಲಕಪ್ಪಳಿಸುವುದು, ಅದೇ ಗೋಡೆಯ ಮೇಲೆ ನೇತಾಡುವ ಬಂಗಾರ ಬಣ್ಣದ ಗುಂಡು ಮೋರೆಯ ಗಡಿಯಾರ ಢಣ್ ಢಣ್ ಎಂದು ಒಂಭತ್ತು ಸಲ ಹೊಡೆದುಕೊಳ್ಳುವುದೂ ಏಕಕಾಲದಲ್ಲಿಯೇ ಘಟಿಸುವ ಮೂಲಕ ತಗ್ಗಿನಕೇರಿಯೆನ್ನುವ ಊರಿನಲ್ಲೇ ಹೆಚ್ಚು ತಗ್ಗಾಗಿರುವ ಆ ಕೇರಿಯಲ್ಲೊಂದು ಯುದ್ಧ ಘೋಷಣೆಯಾಗಿತ್ತು. ದುರವೀಳ್ಯವನ್ನು ತನ್ನ ಕುದಿಯುವ ಮನಸ್ಸಿನಲ್ಲಿಯೇ ತಯಾರಿಸಿಕೊಂಡ ನಾಗಲಕ್ಷ್ಮಿ ಹೆಡೆಯಾಡಿಸುವ ಘಟಸರ್ಪದಂತೆ ಧುಸ್ ಧುಸ್ ಉಸಿರು ಬಿಟ್ಟಳು. ಆದರೆ ರಣವೀಳ್ಯವನ್ನು ಇಸಿದುಕೊಳ್ಳಬೇಕಾಗಿದ್ದ ಆಕೆಯ ಎದುರು ಪಕ್ಷದ ಸೇನಾನಿ ಪದುಮಣ್ಣ ಅಂದರೆ ಆಕೆಯ ಗಂಡ ಆಸುಪಾಸಿನಲ್ಲೆಲ್ಲೂ ಇಲ್ಲದಿದ್ದ ಕಾರಣ ಬೋರಲು ಬಿದ್ದ ತಾಟಿನಿಂದ ಹೊರಬಿದ್ದು ಚೆಲ್ಲಾಪಿಲ್ಲಿಯಾದ ಅನ್ನದಗುಳಿನಷ್ಟೇ ಅನಾಥಳು ತಾನೆಂಬ ಭಾವ ಮೂಡಿದ್ದೇ ತಡ, ಅಳುಮಿಶ್ರಿತ ಕ್ರೋಧದ ಅಲೆಯೊಂದು ಅವಳ ನಾಭಿಯಾಳದಿಂದ ಹೊರಟು ಗಂಟಲಿನವರೆಗೆ ಬಂದಿತು. ಆಗ ಅವಳ ಧುಸ್ ಧುಸ್ ಸದ್ದು ಕೆಲವು ಬಿಕ್ಕುಗಳನ್ನು ಸೇರಿಸಿಕೊಂಡು ಹುಂ ಕ್ಕು ಕ್ಕು ಹುಂ ಕ್ಕು ಕ್ಕು ಎಂಬಂತಹ ವಿಚಿತ್ರ ಸಪ್ಪಳವಾಗಿ ಪರಿವರ್ತನೆ ಹೊಂದಿತು. ಅವಳ ಕೈಯಿಂದ ಬೀಸಿ ಒಗೆಯಲ್ಪಡುವ ಮೊದಲು ಪುಟ್ಟ ಪುಟ್ಟ ತುತ್ತುಗಳು ತುಂಬಿದ್ದ ತಾಟನ್ನು ಆವರೆಗೆ ಹೊತ್ತುಕೊಂಡಿದ್ದ ಟೀಪಾಯಿಯ ಮೇಲೆ ಕೂತಿದ್ದ ಮೊಬೈಲು ಈಗಷ್ಟೇ ಮುಗಿದ ಕರೆಯ ಸಲುವಾಗಿ ತನ್ನೊಳಗೆ ಹಚ್ಚಿಕೊಂಡಿದ್ದ ಬೆಳಕನ್ನು ಆರಿಸಿ ಕಪ್ಪಾಯಿತು.        ಎಂದೂ ಯಾವ ಕಾರಣಕ್ಕೂ ಅಳು ಎಂಬ ಕ್ರಿಯೆಯನ್ನೇ ಇಷ್ಟ ಪಡದ, ಅಳುವವರ ಸಮೀಪಕ್ಕೆ ಹೋಗಲಿಕ್ಕೂ ಇಚ್ಛೆಪಡದ, ತಾನೆಂಬೋ ತಾನು ತನ್ನ ಮನೆ, ಸಂಸಾರಗಳನ್ನು ತನ್ನಿಚ್ಛೆಯಂತೆಯೇ ನಡೆಸಬಲ್ಲ ಭಯಂಕರ ತಾಕತ್ತಿನವಳೆಂದು ಬಲವಾಗಿ ನಂಬಿಕೊಂಡಿದ್ದ ನಾಗಲಕ್ಷ್ಮಿಗೆ  ತನ್ನೊಳಗೆ ಉಕ್ಕುತ್ತಿರುವ ಭಾವನೆಯನ್ನು ಹೇಗೆ ನಿರ್ವಹಿಸಬೇಕೆಂದೇ ತಿಳಿಯದಂತಾಗಿ ಆವೇಶದ ನಡುಕ ಬರತೊಡಗಿತು. ತಾನೀಗ ಸೋತಿದ್ದೇನೆಂಬ ನಿರಾಶೆ, ಗೆಲ್ಲಲಾಗಲಿಲ್ಲವೆಂಬ ಹತಾಶೆ, ತನ್ನ ಸೋಲನ್ನು ತಾನೆಂದೂ ಸ್ವೀಕರಿಸಬಾರದೆಂಬ ಹಠ ಇವೆಲ್ಲ ಕೂಡಿದ ಪ್ರಳಯಾಗ್ನಿಯಂತಹ ಬೆಂಕಿಯೊಂದು ಒಡಲಲ್ಲಿ ಹುಟ್ಟಿದ್ದೇ ತಡ, ಹಲ್ಲು ಕಡಿಯುತ್ತ, ಚಪ್ಪಲಿ ಮೆಟ್ಟಿಕೊಂಡು ಬಾಗಿಲನ್ನು ಹಾಗೇ ಮುಂದಕ್ಕೆಳೆದುಕೊಂಡು ಹೊರಟುಬಿಟ್ಟಳು. ಕೆಂಡ ಕಾರುತ್ತಿದ್ದ ಅವಳ ಕಣ್ಣೊಳಗೆ ಗಂಡ ಪದುಮಣ್ಣನ ಚಿತ್ರ ಗಿರಿಗಿರಿ ತಿರುಗುತ್ತಿತ್ತು. ಅಲ್ಲೇ ಪಕ್ಕದ ಬೀದಿಯಲ್ಲಿ ಅಟ್ಟದ ಮೇಲಿರುವ ಅವನ ಆಫೀಸಿಗೆ ನುಗ್ಗಿ, ಕೇಸಿನ ಫೈಲುಗಳನ್ನು ಸುತ್ತಲೂ ರಾಶಿ ಹಾಕಿಕೊಂಡು ಕೂತಿರುವ ಅವನನ್ನು ಹಿಡಿದು ತನ್ನ ಸಿಟ್ಟಿಳಿಯುವ ತನಕ ಬಡಿಯಲೇಬೇಕೆಂದು ರೋಷದಿಂದ ಹೆಜ್ಜೆಗಳನ್ನು ಎತ್ತೆತ್ತಿ ಇಡತೊಡಗಿದಳು. ತನ್ನನ್ನು ಕಂಡ ಕೂಡಲೇ “ಅಕ್ಕಾ ಆರಾಮಾ” ಎಂದು ಹಲ್ಲು ಕಿರಿಯುತ್ತ, “ಯಾಕಕ್ಕ ಇಷ್ಟು ಮೈ ಬಂದದಲ್ಲ, ವಾಕಿಂಗೂ ಮಾಡೂದಿಲ್ವಾ ಹೆಂಗೆ, ಡಾಕ್ಟ್ದ್ರಿಗಾದರೂ ತೋರಸ್ಕಳಿ” ಎಂದೆಲ್ಲ ಬೊಗಳೆ ಬಿಡುತ್ತ ತನ್ನ ಬಳ್ಳಿ ಮೈಯನ್ನು ವಾಲಾಡಿಸುವ ವಲ್ಲರಿಯನ್ನು ಇವತ್ತು ಬಿಡಬಾರದು. ಕತೆ ಹೇಳಲು ಭೂಮಿಗಿಳಿದ ನೀಲಿ ಮೋಡದಂತೆ ಗಾಳಿಗೆ ಹಾರಾಡುವ ಅವಳ ಅಲೆಗೂದಲನ್ನು ಮುಷ್ಟಿಯಲ್ಲಿ ಹಿಡಿದು ದರದರ ಎಳೆಯಬೇಕು. ಎಷ್ಟು ಸೊಕ್ಕು ಆ ಚೋದಿಗೆ, ತಾನು ತೆಳ್ಳಗೆ ಬೆಳ್ಳಗೆ ಸುಂದರಿಯಾಗಿದ್ದೇನೆ ಅಂತಲೇ ಇಷ್ಟು ಉರಿಯುವುದಲ್ವ ಅವಳು. ಪಟಪಟ ಇಂಗ್ಲೀಷು ಮಾತಾಡ್ತೇನೆ ಅಂತ, ರೊಯ್ಯನೆ ಗಾಡಿ ಬಿಟ್ಟುಕೊಂಡು ಬೇಕೆಂದಲ್ಲಿ ಹೋಗಬಲ್ಲೆ ಅಂತ ಪೊಗರು ತುಂಬಿಕೊಂಡಿದೆ. ಆದ್ದರಿಂದಲೇ ನನ್ನ ಗಂಡ ರಾತ್ರಿ ಒಂಭತ್ತು ಹೊಡೆದರೂ ಕೇಸು, ಕೇಸು ಅಂತ ಅವಳ ಮಗ್ಗುಲಲ್ಲಿ ಕೂತೇ ಇರಲಿಕ್ಕೆ ಸಾಯ್ತಾನೆ. ತಾನು ಫೋನು ಮಾಡಿದರೆ ಆಂ, ಊಂ ಕೇಳ್ತಾ ಇಲ್ಲ, ನೆಟ್ ವರ್ಕ ಇಲ್ಲ ಅಂತ ಫೋನು ಇಡ್ತಾನೆ, ಬೋಳಿಮಗ, ಇವತ್ತು ಅವನ ಗ್ರಾಚಾರ ಬಿಡಿಸದಿದ್ರೆ ನಾನು ಆಟಕ್ಕೊಂದೇ ವೀರಭದ್ರ ಎಂದೆನಿಸಿಕೊಳ್ಳುವ ಗಪ್ಪತಿಯ ಮಗಳೇ ಅಲ್ಲ. ಹೀಗೆಂದು ಉರಿಯುತ್ತ, ಮತ್ತೆ ಮತ್ತೆ ಕೆದರಿ ಉರಿ ಹೆಚ್ಚಿಸಿಕೊಳ್ಳುತ್ತ ಸೀರೆ ಉಟ್ಟ ಅಗ್ನಿಕುಂಡದ ಹಾಗೆ ಹೊರಟ ನಾಗಲಕ್ಷ್ಮಿ ಉರುಫ್ ನಾಗಕ್ಕ ಮೊದಲಿನಿಂದಲೂ ಸಿಟ್ಟಿನ ಸ್ವಭಾವದವಳೇ.           ಗುಡ್ಡೇಮಠದ ಮಹಾಲಿಂಗೇಶ್ವರ ಯಕ್ಷಗಾನ ಮೇಳದಲ್ಲಿ ವೀರಭದ್ರನ ಪಾತ್ರ ಹಾಕುತ್ತಿದ್ದ ಗಪ್ಪತಿಯ ಏಕೈಕ ಮಗಳೇ ನಾಗಲಕ್ಷ್ಮಿ. ವರ್ಷದ ಎಂಟು ತಿಂಗಳು ಮೇಳದೊಂದಿಗೆ ತಿರುಗುತ್ತ ಉಳಿದ ನಾಕು ತಿಂಗಳಲ್ಲಿ ಕೊಟ್ಟೆ ಕೊನೆ, ಸೊಪ್ಪು-ಮಣ್ಣು ಎಂದು ಗೇಯುತ್ತ ಸಂಸಾರ ಮಾಡುತ್ತಿದ್ದ ಗಪ್ಪತಿಯ ಹೆಂಡತಿ ಗಂಗೆ ಮೂರು ಮಕ್ಕಳನ್ನು ಹೆತ್ತಿದ್ದಳಾದರೂ ಒಂದೂ ಉಳಿದಿರಲಿಲ್ಲ. ಕಡೆಗೆ ಯಾರೋ ಹಿರಿಯರು ನಾಗದೋಷವಿರಬಹುದೆಂದು ಸಲಹೆ ಕೊಟ್ಟ ಮೇಲೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಹರಕೆ ಹೇಳಿಕೊಂಡ ಮೇಲೆ ನಾಗಲಕ್ಷ್ಮಿ ಹುಟ್ಟಿದ್ದು. ಅಪರೂಪದ ಮಗಳು ಅಂತ ಅಪ್ಪ-ಅಮ್ಮ ಮುದ್ದು ಮಾಡಿದ್ದೇ ಮಾಡಿದ್ದು. ಅವಳು ಹೇಳಿದ ಮಾತನ್ನು ತೆಗೆದು ಹಾಕುತ್ತಲೇ ಇರಲಿಲ್ಲ. ಅಪ್ಪನ ಜೊತೆ ಆಟಕ್ಕೂ ಹೋಗಿ ಅವನ ವೀರಭದ್ರನ ಪಾತ್ರ ನೋಡಿ ಬರುತ್ತಿದ್ದ ನಾಗಲಕ್ಷ್ಮಿ ಮನೆಯಲ್ಲಿ ಅದೇ ಸಿಟ್ಟು-ಕೋಪ-ತಾಪಗಳನ್ನು ಅನುಕರಣೆ ಮಾಡುತ್ತಿದ್ದಳು. ತಮ್ಮ ಮಗಳು ದೈವಾಂಶ ಸಂಭೂತೆ ಅಂತಲೇ ಭಾವಿಸಿಕೊಂಡಿದ್ದ ಗಂಗೆ-ಗಣಪರು ಮಗಳಿಗೆ ಏನೆಂದರೆ ಏನೂ ಹೇಳುತ್ತಿರಲಿಲ್ಲ. ಅವರ ಕೊಂಡಾಟಗಳನ್ನೂ, ನಾಗಿಯ ಮೊಂಡಾಟ-ಭಂಡಾಟಗಳನ್ನು ಹತ್ತಿರದಿಂದ ಬಲ್ಲವರೆಲ್ಲ ಈ ನಮೂನಿ ಮಗಳನ್ನು ಬೆಳೆಸಿದ್ರೆ ನಾಳೆ ಆ ಕೂಸು ಸಂಸಾರ ಮಾಡದಾರೂ ಹೌದಾ? ಎಂದು ಮಾತಾಡಿಕೊಂಡರು. ಆಸುಪಾಸಿನಲ್ಲೆಲ್ಲೂ ಗಂಡು ಸಿಗದೇ ಗಪ್ಪತಿ ತನ್ನ ಮಗಳಿಗಾಗಿ ದೂರದ ಊರಿನ ಗಂಡುಗಳ ತಲಾಶೆಗೆ ಇಳಿದ. ಆಗ ಅವನ ಮೇಳದ ಭಾಗವತರೊಬ್ಬರು ಪದುಮಣ್ಣನ ಬಗ್ಗೆ ಹೇಳಿ ಗೋವಿನಂಥಾ ಸಾಧು ಮನುಷ್ಯ, ನಿನ್ನ ಮಗಳು ಹೇಳ್ದಾಂಗೆ ಕೇಳ್ಕಂಡು ಇರ್ತ ನೋಡು ಅಂತ ಶಿಫಾರಸು ಮಾಡಿದರು.             ನಮ್ಮ ಪದುಮಣ್ಣ ಇದ್ದಾನಲ್ಲ ಈತ ಶಾಲೆಗೆ ಕಾಲಿಟ್ಟ ಕ್ಷಣದಿಂದ ಅಂದರೆ ತನ್ನ ನಾಲ್ಕನೆಯ ವಯಸ್ಸಿನಿಂದಲೇ ದುಡಿಯಲಾರಂಭಿಸಿದ್ದಾನೆಂದರೆ ನೀವು ನಂಬಲೇಬೇಕು. ಅವನು ಶಾಲೆಗೆ ಹೋಗುವ ಕಾಲದಲ್ಲಿ ಅಂದರೆ ಈಗೊಂದು ಮೂವತ್ತು ವರ್ಷದ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಸರ್ಕಾರದ ವತಿಯಿಂದ ಪ್ರತಿ ಮದ್ಯಾಹ್ನ ಉಪ್ಪಿಟ್ಟು ಕೊಡುತ್ತಿದ್ದರು. ದೊಡ್ಡಗಾತ್ರದ ಕಾಳಿನ ಜವೆಗೋಧಿಯಿಂದ ತಯಾರಿಸಿದ ಉಪ್ಪಿಟ್ಟು ಬಿಸಿಬಿಸಿಯಾಗಿ ರುಚಿಯಾಗಿರುತ್ತಿತ್ತು. ಹಾಜರಿ ಪುಸ್ತಕದಲ್ಲಿ ನಮೂದಿಸಿದ ಹುಡುಗರ ಸಂಖ್ಯೆಗನುಗುಣವಾಗಿ ಉಪ್ಪಿಟ್ಟು ಬರುತ್ತಿತ್ತು. ಆದರೆ ನಿಜವಾಗಿಯೂ ಹಾಜರಿರುತ್ತಿದ್ದವರು ಅದರ ಅರ್ಧದಷ್ಟು ಹುಡುಗರು ಮಾತ್ರ. ಆದ್ದರಿಂದ ಹುಡುಗರು ತಮಗೆ ಸಾಕೆನ್ನಿಸುವಷ್ಟು ಉಪ್ಪಿಟ್ಟು ಹಾಕಿಸಿಕೊಳ್ಳಬಹುದಿತ್ತು. ಪದುಮಣ್ಣ ಶಾಲೆಗೆ ಕಾಲಿಟ್ಟ ದಿನವೇ ದೊಡ್ಡದೊಂದು ಪ್ಲಾಸ್ಟಿಕ್  ಕವರಿನಲ್ಲಿ ಉಪ್ಪಿಟ್ಟು ಹಾಕಿಸಿಕೊಂಡ. ಸೀದಾ ಶಾಲೆಯ ಹೊರಗೆ ಬಂದ. ಅಲ್ಲಿ ರಸ್ತೆಯ ಪಕ್ಕದ ಕಾಲುವೆಗಳನ್ನು ಅಗೆಯುವ ಕೆಲಸದಲ್ಲಿ ತೊಡಗಿರುವ ಜನರು ಕೂತಿದ್ದರು. ಅವರೆದುರು ಘಮಘಮಿಸುವ ಉಪ್ಪಿಟ್ಟು ತೋರಿಸಿದ. ತಮ್ಮ ಡಬ್ಬಿಗಳಲ್ಲಿರುವ ತಂಗಳಿಗಿಂತ ಈ ಉಪ್ಪಿಟ್ಟು ತಿನ್ನುವುದು ಬಹಳ ಉತ್ತಮವೆಂದು ಭಾವಿಸಿದ ಅವರು ಎರಡು ರೂಪಾಯಿ, ಮೂರು ರೂಪಾಯಿ ಮುಂತಾಗಿ ಹಣ ಕೊಟ್ಟು ಉಪ್ಪಿಟ್ಟು ಕೊಂಡರು. ಹೀಗೆ ಶಾಲೆಗೆ ಹೋಗತೊಡಗಿದಂದಿನಿಂದಲೇ ಗಳಿಕೆ ಮಾಡಲಾರಂಭಿಸಿದ ಅದ್ಭುತ ಪ್ರತಿಭಾರತ್ನ ಆತ. ತನಗೆ ಅಯಾಚಿತವಾಗಿ ದೊರಕಿದ ಆಹಾರದ ಗಿರಾಕಿಗಳನ್ನು ಹಲವಾರು ವ್ಯಾಪಾರಗಳಿಗೆ ಆತ ಬಳಸಿಕೊಂಡ. ಅಂದರೆ ಅವನ ಮನೆಯಲ್ಲಿ ಮಾಡಿದ ದೋಸೆ, ರೊಟ್ಟಿ, ಕಡುಬು, ಪಲ್ಯಗಳೇನಾದರೂ ಆತನಿಗೆ ಇಷ್ಟವಾಗದಿದ್ದರೆ ಬೇರೆ ಹುಡುಗರಂತೆ ಆತ ರಗಳೆ ಮಾಡುತ್ತಿರಲಿಲ್ಲ. ಸುಮ್ಮನೆ ಒಂದು ಕವರಿನಲ್ಲಿ ಹಾಕಿಕೊಂಡು ಪಾಟಿಚೀಲದಲ್ಲಿರಿಸಿಕೊಂಡು ಶಾಲೆಗೆ ಬಂದು ಮಾರಿಬಿಡುತ್ತಿದ್ದ. ಕೆಲವು ಸಲ ತನ್ನ ಪಾಲಿನ ತಿಂಡಿಗಳು ಸಾಲದೆಂದು ಅನ್ನಿಸಿದಾಗ ಅಂದರೆ ಮಾರುಕಟ್ಟೆಯ ಬೇಡಿಕೆ ಹೆಚ್ಚಿದ್ದಾಗ ಅಡಿಗೆ ಮನೆಯಲ್ಲಿ ಹರಿದ ದೋಸೆ, ಉಳಿದ ರೊಟ್ಟಿ ಇತ್ಯಾದಿಗಳನ್ನು ಎಮ್ಮೆಗೆ ಹಾಕುವುದಕ್ಕಾಗಿ ತೆಗೆದಿರಿಸುವ ಅಕ್ಕಚ್ಚು ಪಾತ್ರೆಯಿಂದ ಎಗರಿಸಿಕೊಂಡು ತನ್ನ ಸ್ಟಾಕ್ ಶಾರ್ಟೇಜು ಸರಿಪಡಿಸಿಕೊಳ್ಳುತ್ತಿದ್ದ. ಇಂತಹ ಮಾರಾಟದಿಂದ ಗಳಿಸಿದ ಹಣವನ್ನು ಅವನೆಂದೂ ಪೋಲು ಮಾಡುತ್ತಿರಲಿಲ್ಲ. ಮನೆಯ ಪುರುಷ ಸದಸ್ಯರಿಗೆ ತಿಳಿಯದಂತೆ ಮಹಿಳೆಯರು ಕೈಗೊಳ್ಳುವ ಸಾಹಸಗಳಿಗೆ ಬಂಡವಾಳದಂತೆ ಕೈಕಡ ಕೊಡುತ್ತಿದ್ದ. ಅದಕ್ಕೆ ಬದಲಾಗಿ ಆ ಹೆಂಗಸರು ತಮಗೆ ಅನುಕೂಲವಾದಾಗ ಹೆಚ್ಚಿನ ಹಣವನ್ನು ಕೊಡುವುದಲ್ಲದೇ ಹಲವು ಬಗೆಯ ತಿಂಡಿ-ತೀರ್ಥಗಳನ್ನು ಬಡ್ಡಿಯಂತೆ ಕೊಡುತ್ತಿದ್ದರು. ಹೀಗೆ ಪದುಮಣ್ಣನ ವ್ಯಾಪಾರ-ವಹಿವಾಟುಗಳು ಬಾಲ್ಯದಲ್ಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದವು. ವಿಷಯ ಇಷ್ಟೇ ಆಗಿದ್ದರೆ ಪದುಮಣ್ಣನ ಬಗ್ಗೆ ಬರೆಯಬೇಕಾಗಿರಲಿಲ್ಲ. ಅವನು ತನ್ನ ಮಾರಾಟಪ್ರತಿಭೆಯನ್ನು ಮುಂದುವರೆಸಿಕೊAಡು ಅಪ್ರತಿಮ ವ್ಯವಹಾರಸ್ಥನಾಗಿ ಟಾಟಾ, ಅಂಬಾನಿಗಳಿಗೇ ಸೆಡ್ಡು ಹೊಡೆದು ಪದ್ಮವಿಭೂಷಣ ಇತ್ಯಾದಿ ಪಡೆದುಕೊಂಡು ಸುಖವಾಗಿ ಇರಬಹುದಿತ್ತು. ಆದರೆ ಪ್ರಾಥಮಿಕಶಾಲೆ ಬಿಟ್ಟು ಹೈಸ್ಕೂಲಿಗೆ ಬರುವಷ್ಟರಲ್ಲಿ ಪದುಮಣ್ಣ ದುಡಿಮೆಯ ದಾರಿಯನ್ನೇ ಬದಲಾಯಿಸಿಕೊಂಡಿದ್ದ. ಸರಕಿನಿಂದ ಸೇವಾ ಕ್ಷೇತ್ರಕ್ಕೆ ಶಿಫ್ಟ್ ಆಗಿದ್ದ. ಅಂದರೆ ಗೂಡ್ಸ್ ಟು ಸರ್ವಿಸ್ ಸೆಕ್ಟರ್.             ಪದುಮಣ್ಣನಿಂದ ಹಣಕಾಸಿನ ನೆರವು ತೆಗೆದುಕೊಳ್ಳುತ್ತಿದ್ದ ಹೆಂಗಸರು ಅವನನ್ನು ತಮ್ಮ ಒಳಗುಟ್ಟಿನ ಸಂಗತಿಗಳಿಗೆ ಆಪ್ತ ಸಲಹೆಗಾರನನ್ನಾಗಿ ಬಳಸಿಕೊಳ್ಳುತ್ತಿದ್ದರು. ಗಂಡಸರ ಗಮನಕ್ಕೆ ಬರದಂತೆ ಗುಟ್ಟಾಗಿ ಶೇಖರಿಸಿಕೊಂಡ ಗೋಡಂಬಿ, ದಾಲ್ಚಿನ್ನಿ, ಮುರುಗಲ ತುಪ್ಪ, ಆರಾರೋಟು, ಅರಿಶಿಣ ಪುಡಿ ಇತ್ಯಾದಿಗಳಿಗೆ ಸೂಕ್ತ ಗಿರಾಕಿಯ ಹೆಸರು ಸೂಚಿಸುವುದು, ಹೆಂಗಸರು ಮದುವೆಯಂತಹ ಕಾರ್ಯಗಳಿಗೆ ಹೋಗುವಾಗ ಎರವಲು ಚಿನ್ನ ಧರಿಸುವ ಆಸೆಪಟ್ಟರೆ ಯಾವ ಆಭರಣ ಯಾರ ಬಳಿಯಿದೆಯೆಂಬ ಮಾಹಿತಿ ನೀಡುವುದು, ಅವರ ಗುಪ್ತಧನಕ್ಕೆ ನಂಬಿಗಸ್ತ ಗಿರಾಕಿ ಹುಡುಕುವುದು ಹೀಗೆ ತನ್ನ ಹಳ್ಳಿಯ ಮಹಿಳಾ ಆರ್ಥಿಕತೆಯ ಕ್ಷೇತ್ರಕ್ಕೆ ಪದುಮಣ್ಣನದು ದೊಡ್ಡ ಕೊಡುಗೆಯಿದೆ. ಆದರೆ ಅವನ ಅಮೂಲ್ಯ ಸೇವೆಯ ಮಹತ್ವ ಅರ್ಥವಾಗದ ಅವನ ಶಿಕ್ಷಕರು ಅವನನ್ನು ಅಡ್ಡಕಸುಬಿಯೆಂದು ಅಪಮಾನಿಸಿ ಶಿಕ್ಷೆ ನೀಡುತ್ತಿದ್ದರು.           ಕಾಲೇಜು ಮೆಟ್ಟಿಲು ಹತ್ತುವಷ್ಟರಲ್ಲಿ ಪದುಮಣ್ಣನ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಂಡಿತು. ಇನ್ನೂ ಮೊಬೈಲುಗಳು ಬಂದಿರದ ಆ ಕಾಲದಲ್ಲಿ ಮಲೆನಾಡಿನ ಕೊಂಪೆಗಳಿAದ ಸುತ್ತುವರೆದ ಪಟ್ಟಣದಲ್ಲಿ ವಾಸಿಸುತ್ತಿದ್ದ ಆತ ಯಾವುದೇ ವ್ಯಕ್ತಿಯ ಯಾವುದೇ ರೀತಿಯ ಕೆಲಸಕ್ಕೆ ಒದಗಬಲ್ಲ ಸರ್ವೀಸ್ ಪ್ರೊವೈಡರ್ ಆಗಿದ್ದ. ತಾನು ಕಾಲೇಜಿಗೆ ಹೋಗುವ ದಾರಿಯಲ್ಲಿಯೇ ಕರೆಂಟು ಬಿಲ್ಲು ಕಟ್ಟುವುದು, ಔಷಧಿ ಗುಳಿಗೆ ತರುವುದು, ಬ್ಯಾಂಕಿನಿಂದ ದುಡ್ಡು ತಂದು ಕೊಡುವುದು, ಯಾರಿಗಾದರೂ ಮನಿಯಾರ್ಡರು ಮಾಡುವುದು, ದಿನಸಿ ಸಾಮಾನು ತಂದು ಕೊಡುವುದು ಇಂತಹ ನೂರಾರು ಕೆಲಸಗಳನ್ನು ತಕರಾರೆತ್ತದೆ ಮಾಡುತ್ತಿದ್ದ. ಪ್ರತಿ ಕೆಲಸಕ್ಕೂ ಪ್ರತಿಫಲವಾಗಿ ಏನಾದರೂ ಸಿಕ್ಕೇ ಸಿಗುತ್ತಿತ್ತು. ಇಂತಿಪ್ಪ ಪದುಮಣ್ಣ ವಕೀಲಿ ಪದವಿ ಪಡೆದುಕೊಂಡು ವೃತ್ತಿ ಆರಂಭಿಸಿದ. ದಿನದ ಇಪ್ಪತ್ನಾಲ್ಕು ತಾಸು ಕೂಡ ಕಕ್ಷಿದಾರರ ಮನೆಯ ಕಡೆಗೆ ಕಾಲಾಡಿಸುತ್ತ ಇರುವ ಪ್ರವೃತ್ತಿಯಿಂದಾಗಿ ಕೇಸುಗಳು ಜೋರಾಗೇ ಸಿಗುತ್ತಿದ್ದವು. ಅವನಿಂದ ಉಪಕೃತರಾದವರೊಬ್ಬರು ತಮ್ಮ ನೆಂಟರ ಪೈಕಿಯ ಭಾಗವತರಿಗೆ ಶಿಫಾರಸು ಮಾಡಿ ಮದುವೆ ಮಾಡಿಸಿದರು. ಹಾಗೆ ಅವನ ಜೀವನದಲ್ಲಿ ಪ್ರವೇಶ ಪಡೆದುಕೊಂಡವಳು ನಾಗಲಕ್ಷ್ಮಿ. ಅರ್ಥಾತ್ ನಾಗಕ್ಕ. ಆದರೇನು ಮಾಡೋಣ. ಆ ಮದುವೆ ಮಾಡಿಸಿದವರು ಅವರಿಬ್ಬರ ಸ್ವಭಾವಗಳನ್ನು ಹೋಲಿಕೆ ಮಾಡಿ ವಿಚಾರ ಮಾಡಿರಲೇ ಇಲ್ಲ. ಹೀಗಾಗಿ ಪದುಮಣ್ಣನ ವಿರುದ್ಧ ಸ್ವಭಾವದ ನಾಗಕ್ಕ ಅವನ ಕೈ ಹಿಡಿದು ಬಂದಳು. ಅವಳೋ ಪಕ್ಕಾ ಒಂಟಿಗೂಬೆ. ಜನರ ತಲೆ ಕಂಡರೇ ಅವಳಿಗಾಗದು. ಹೊರತಿರುಗಾಟವೆಂದರೆ ಮುಖ ಸಿಂಡರಿಸುತ್ತಾಳೆ. ಸದಾಕಾಲ ಬಾಗಿಲು ಹಾಕಿಕೊಂಡು ಒಳಗೇ ಇರುವ ಮನೆಗುಬ್ಬಿ. ತಾನು-ತನ್ನ ಗಂಡ ಇಬ್ಬರೇ ರಾಜ-ರಾಣಿಯರ ಹಾಗೆ ಬದುಕಬೇಕೆಂದು ಕನಸು ಕಂಡವಳು. ಅವಳಿಗೆ ಪದುಮಣ್ಣನ ವಿಶ್ವಕುಟುಂಬಿತನ ಕಂಡು ದಿಗಿಲಾಗಿಬಿಟ್ಟಿತು. ಅವನ ಹಿಂದೆ ಹಿಂಡುಗಟ್ಟಿಕೊಂಡು ಬರುವ ಕಕ್ಷಿದಾರರನ್ನು ಗೌ ಗೌ ಎಂದು ಕೂಗಿ ಓಡಿಸಿಬಿಟ್ಟಳು. ಯಕ್ಷಗಾನ, ತಾಳಮದ್ದಲೆ, ದೇವಕಾರ್ಯ, ಊರ ಸಮಾರಾಧನೆ ಅಂತೆಲ್ಲ ಊರೊಟ್ಟಿನ ಕೆಲಸಕ್ಕಾಗಿ ದಿನಾಲೂ ಹುಡುಕಿಕೊಂಡು ಬರುವ ಪುರಬಾಂಧವರಿಗೂ ಅವಳಿಂದ ಮಂಗಳಾರತಿ ಸಿಕ್ಕಿತು. ಆದರೆ ಪದುಮಣ್ಣನ ಪಾಡು ನೋಡಿ. ಈಗ ಬಂದ ಹೆಂಡತಿಗಾಗಿ ಲಾಗಾಯ್ತಿನಿಂದ ಮಾಡಿಕೊಂಡು ಬಂದ ಜೀವನವನ್ನು ಬದಲಾಯಿಸಿಕೊಳ್ಳಲಿಕ್ಕೆ ಸಾಧ್ಯವೆ? ಅದಕ್ಕಾಗಿ ಪದುಮಣ್ಣ ಮನೆಯಿಂದಾಚೆಗೆ ಇರುವುದೇ ಜಾಸ್ತಿಯಾಯಿತು. ಹೆಂಡತಿ ಬೈಯುತ್ತಾಳೆ

ಬಣ್ಣದ ವೇಷ Read Post »

ಕಥಾಗುಚ್ಛ

ಕಡಲಲೆಗಳ ಲೆಕ್ಕ

ಕಥೆ ಸುಧಾ ಹೆಚ್.ಎನ್ ರುಕ್ಮಿಣಮ್ಮ  ಕಡಲಿನ ಮಗಳು.  ಹುಟ್ಟಿದ್ದು, ಬೆಳೆದದ್ದು, ಪ್ರತಿ ಬೆಳಗು, ಪ್ರತಿರಾತ್ರಿ  ಕಳೆದದ್ದು  ಸಮುದ್ರದ ಜೊತೆಗೇ. ಮೀನುಗಳ ವ್ಯಾಪಾರ ಮಾಡುತ್ತಿದ್ದ ತಂದೆಯ, ಜೀವನದ ಜೊತೆಗಾರನಾದ  ಪಾಂಡುರಂಗನ ಮನೆಯಿದ್ದದ್ದು ಕಡಲತೀರದಲ್ಲೇ.  ತಮ್ಮ ಸುಮಾರು ಎಂಬತ್ತು ವರ್ಷದ ಜೀವಮಾನವನ್ನು     ಕಣ್ಣಳತೆಯಲ್ಲಿದ್ದ  ಅಗಾಧ ಸಮುದ್ರ,  ಅವಿರತವಾಗಿ  ಕೇಳಿಬರುತ್ತಿದ್ದ ಅಲೆಗಳ ಮೊರೆತ,  ಮೀನು….ಇತರೆ    ವಾಸನೆಯ ಜೊತೆಗೆ ಜೀವನ  ಸವೆಸಿದ್ದರು  ರುಕ್ಮಿಣಮ್ಮ.   ರುಕ್ಮಿಣಮ್ಮ ಮತ್ತು ಪಾಂಡುರಂಗಪ್ಪ   ಐವರು ಮಕ್ಕಳಿಗೆ ತಮ್ಮ ಕೈಲಾದ ಮಟ್ಟಿಗೆ ವಿದ್ಯಾಭ್ಯಾಸ ಕೊಡಿಸಿ, ಮದುವೆ ಮಾಡಿದ್ದರು. ಎಲ್ಲಾ ಮಕ್ಕಳು ದೂರ ದೂರದ ಊರುಗಳಲ್ಲಿ   ತಮ್ಮ,  ತಮ್ಮ ನೆಲೆ  ಕಂಡುಕೊಂಡಿದ್ದರು.      ಎಂಟು ವರ್ಷಗಳ ಹಿಂದೆ ಪಾರ್ಶ್ವವಾಯು ಪೀಡಿತರಾಗಿ,  ದೇಹದ ಒಂದು ಭಾಗದ  ಸ್ವಾಧೀನ ಕಳೆದುಕೊಂಡಿದ್ದರು  ಪಾಂಡುರಂಗಪ್ಪ.   ಗಂಡನ ಅನಾರೋಗ್ಯದ  ಸಮಯದಲ್ಲಿ  ಅನಾವರಣಗೊಂಡ ಮಕ್ಕಳ   ನಡವಳಿಕೆ,  ಅಸಹಕಾರ, ಅಸಹನೆ,  ಲೆಕ್ಕಾಚಾರಗಳಿಂದ  ಬಹಳವಾಗಿ  ನೊಂದಿದ್ದರು ರುಕ್ಮಿಣಮ್ಮ.  ತಂದೆ-ತಾಯಿಯರ  ಕಷ್ಟಕಾಲದಲ್ಲಿ  ಹಡೆದ ಮಕ್ಕಳು ತಮ್ಮ  ಕರ್ತವ್ಯ ನಿರ್ವಹಿಸುವಾಗ ತಮ್ಮತಮ್ಮಲ್ಲೆ   ಸ್ಪರ್ಧೆ, ಜಿದ್ದಿಗೆ ಬಿದ್ದು ತೋರಿಸಿದ ಅನಾದರ, ಮಾಡಿದ ಅವಮಾನ   ರುಕ್ಮಿಣಮ್ಮನವರಿಗೆ ಜೀವನ ಕಲಿಸಿದ ಹೊಸ ಪಾಠವಾಗಿತ್ತು.       ಹಾಗೂ,  ಹೀಗೂ  ಪರಿಪಾಟಲು ಪಟ್ಟು ಆಸ್ಪತ್ರೆಯಿಂದ ಗಂಡನನ್ನು  ಮನೆಗೆ ಕರೆತಂದಿದ್ದರು  ರುಕ್ಮಿಣಮ್ಮ. ನಂತರ ವೈದ್ಯರ ಸಲಹೆಯಂತೆ ಪ್ರತಿ ದಿನ  ಮುಂಜಾನೆ , ಸಂಜೆ ಗಂಡನ  ಕೈ ಹಿಡಿದು  , ಸಮುದ್ರದ  ದಂಡೆಗೆ  ಕರೆದೊಯ್ದು ಬೆಚ್ಚಗಿನ ಮರಳಿನಲ್ಲಿ  ಮಲಗಿಸಿ, ಹಿತವಾಗಿ ಕೈ ಕಾಲು  ತಿಕ್ಕಿ , ಕಡಲ ಅಲೆಗಳಿಂದ ಸ್ನಾನ ಮಾಡಿಸುತ್ತಿದ್ದರು.   ಗಂಡನ ಬಗಲಲ್ಲಿ ಕುಳಿತು  ಸಮುದ್ರದಲೆಗಳ  ಲೆಕ್ಕ ಹಾಕುತ್ತಿದ್ದಾಗ,  ಪಾಂಡುರಂಗಪ್ಪ  ನಗುತ್ತಾ ” ಹುಚ್ಚು ರುಕ್ಮಿ”   ಎಂದು   ಪ್ರೀತಿಯಿಂದ ತಲೆಗೆ  ಮೊಟಕುತ್ತಿದ್ದರು.     ಮಕ್ಕಳೆಲ್ಲಾ   ಕಳುಹಿಸುತ್ತಿದ್ದ  ಅಷ್ಟಿಷ್ಟು ಹಣದಿಂದ  ಎಂಟು ವರ್ಷಗಳು ಜೀವನ ದೂಡಿದ್ದ  ಪಾಂಡುರಂಗಪ್ಪನವರು ತೀರಿಕೊಂಡಿದ್ದರು.       ಪಾಂಡುರಂಗಪ್ಪ ಸತ್ತು ಹನ್ನೊಂದು  ದಿನಗಳು  ಕಳೆದಿದ್ದವು.  ಐವರು ಮಕ್ಕಳು, ಹನ್ನೆರಡು  ಮೊಮ್ಮಕ್ಕಳು ಒಟ್ಟಿಗೆ ಕುಳಿತು ಎಂಟು  ವರ್ಷಗಳಿಂದ , ತಂದೆಯ  ಆಸ್ಪತ್ರೆ ಖರ್ಚು ,  ಇದುವರೆಗೆ  ತಾಯಿಗೆ ನೀಡಿದ ಹಣ,    ತಂದೆಯ ಮಣ್ಣು ,  ಶ್ರಾದ್ಧ,  ಮಾಡುವವರೆಗೆ ಆದ ಖರ್ಚುವೆಚ್ಚಗಳನ್ನು ಲೆಕ್ಕ ಹಾಕುತ್ತಾ ಕುಳಿತಿದ್ದರು.   ಪ್ರತಿಯೊಬ್ಬರು ತಾವು  ಮಾಡಿದ ವೆಚ್ಚಕ್ಕೆ ಸಾಕ್ಷಿಗಳನ್ನು  ನೀಡುತ್ತಿದ್ದರು.  ತಾಯಿಯಾದ ರುಕ್ಮಿಣಮ್ಮ   ಮಕ್ಕಳಿಗೆ   ತಾನೇನು ನೀಡಿದ್ದೇನೆ  ಎಂಬುದಕ್ಕೆ ಯಾವ ಲೆಕ್ಕ , ಸಾಕ್ಷಿ ನೀಡಲಾಗದೆ ಕುಳಿತಿದ್ದರು.      ಗಂಡನನ್ನು ಕಳೆದುಕೊಂಡು ಒಂಟಿಯಾಗಿದ್ದ ರುಕ್ಮಿಣಮ್ಮನನ್ನು ಯಾರ್ಯಾರು ಎಷ್ಟೆಷ್ಟು ದಿವಸ ಯಾರ್ಯಾರ ಮನೆಗಳಲ್ಲಿ ಇಟ್ಟುಕೊಳ್ಳಬೇಕು ಎಂಬುದರ  ಕುರಿತು   ಚರ್ಚೆಯಾಗತೊಡಗಿತ್ತು.  ಅವರುಗಳೆಲ್ಲಾ ವೇಳಾಪಟ್ಟಿಯನ್ನು ತಯಾರಿಸುತ್ತಾ ಪರಸ್ಪರರ ಅನುಕೂಲ, ಅನಾನುಕೂಲಗಳನ್ನು    ಹೇಳಿ ಕೊಳ್ಳತೊಡಗಿದ್ದರು.  ರುಕ್ಮಿಣಮ್ಮ ಬದುಕಿರುವ  ಜೀವಿ ಎಂದು ಅವರ್ಯಾರೂ ಭಾವಿಸಿದಂತೆ ಕಾಣಲಿಲ್ಲ.       ರುಕ್ಮಿಣಮ್ಮನವರಿಗೆ ಆ ಕ್ಷಣದಲ್ಲಿ ಅಗಾಧವಾದ , ಆಳವಾದ ,  ಲೆಕ್ಕ ಮಾಡಲಾಗದ   ಅಲೆಗಳ  ಕಡಲು ನೆನಪಾಯಿತು.   ಕುಳಿತಲ್ಲಿಂದ ಮೆಲ್ಲನೆ ಎದ್ದು  ಮನೆಯಿಂದ  ಹೊರಬಂದು ಕಡಲ ಕಡೆ ಹೆಜ್ಜೆ ಹಾಕಿದರು. ಕಡಲ ಮರಳು ತನ್ನ  ಆತ್ಮೀಯತೆಯ  ಸ್ಪರ್ಶದಿಂದ   ನೊಂದ ಮನಸ್ಸನ್ನು  ಸಂತೈಸಿತು. ರುಕ್ಮಿಣಮ್ಮ  ಕಡಲ ಅಲೆಗಳ ಲೆಕ್ಕ ಹಾಕುತ್ತಾ…… ಹಾಕುತ್ತಾ ………ಕಡಲೆಡೆಗೆ ಹೆಜ್ಜೆ ಹಾಕತೊಡಗಿದ್ದರು. *********   

ಕಡಲಲೆಗಳ ಲೆಕ್ಕ Read Post »

ಕಥಾಗುಚ್ಛ

ಅಬ್ಬರವಿಳಿದಾಗ

ಶೈಲಜಾ ಹಾಸನ್        ತಣ್ಣಗೆ ಗಾಳಿ ಬೀಸಿದಂತಾಗಿ ಮಾಧವಿ ನಡುಗಿದಳು. ಕೆರೆ ಏರಿ ಮೇಲೆ ಕುಳಿತಿದ್ದರಿಂದ ಕೆರೆಯ ಮೇಲಿಂದ ಹಾದು ಬರುತ್ತಿದ್ದ ಗಾಳಿ ಎದೆ ನಡುಗಿಸುವಂತಿತ್ತು. ಚಳಿ ಆಗುತ್ತಿದ್ದರೂ ಮಾಧವಿಗೆ ಮನೆಗೆ ಹೋಗುವ ಮನಸ್ಸು ಇರಲಿಲ್ಲ. ಏರಿ ಮೇಲೆ ಕುಳಿತು ಸಾಕಾದ ಮಾಧವಿ ನಿಧಾನವಾಗಿ ಕೆಳಗಿಳಿದು ನೀರಿಗೆ ಕಾಲು ಇಳಿಬಿಟ್ಟು ಚಪ್ಪಡಿ ಮೇಲೆ ಕುಳಿತಳು. ಕಾಲುಗಳೆರಡನ್ನು ನೀರಿನಲ್ಲಿ ಆಡಿಸುತ್ತಾ ಕಾಲಬೆರಳನ್ನು ಕಚ್ಚಲು ಬರುತ್ತಿದ್ದ ಮೀನುಗಳೊಡನೆ ಆಟವಾಡತೊಡಗಿದಳು. ಕೆಲವು ನಿಮಿಷಗಳಷ್ಟೆ ಆ ಆಟವೂ ಮುದ ನೀಡದೆ ಕಾಲುಗಳನ್ನು ಎತ್ತಿಕೊಂಡು ಮೇಲೆ ಇರಿಸಿಕೊಂಡಳು.      ಬಾನಿನಲ್ಲಿ ಬೆಳ್ಳಕ್ಕಿಗಳು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹೋಗುತ್ತಿರುವುದನ್ನು ಕಂಡು ಎದ್ದು ನಿಂತವಳೇ “ಬೆಳ್ಳಿಕ್ಕಿ, ಬೆಳ್ಳಕ್ಕಿ ನನ್ನ ಉಂಗುರ ಕೊಡ್ತಿನಿ ನಿನ್ನ ಉಂಗುರ ಕೊಡು” ಎಂದು ಕೂಗಿದಳು.  ಯಾರಾದರೂ ಕೇಳಿಸಿಕೊಂಡರೇನೊ ಎಂದು ತಟ್ಟನೆ ನಾಚಿ ಸುತ್ತಲೂ ನೋಡಿದಳು. ಸ್ವಲ್ಪವೇ ದೂರದಲ್ಲಿ  ಬಟ್ಟೆಗೆ ಸೋಪು ಹಚ್ಚುತ್ತಿದ್ದ ಶಾಮಣ್ಣನ ಸೊಸೆ ” ಏನೇ ಮಾಧವಿ, ಉಂಗುರ ಕೇಳಿದಿಯಾ ಬೆಳ್ಳಕ್ಕಿಯಾ, ಸ್ವಲ್ಪ ದಿನ ಇರು, ಬೆಳ್ಳಕ್ಕಿಯಂತೆ ಮದ್ವೆ ಗಂಡು ಹಾರಿ ಬಂದು ಚಿನ್ನದುಂಗುರ ತೊಡಿಸುತ್ತಾನೆ.” ಎನ್ನುತ್ತಾ ನಕ್ಕಳು.   “ಥೂ ಹೋಗಕ್ಕ, ನಾನು ಚಿನ್ನದ ಉಂಗುರನೇ ಹಾಕಳಲ್ಲ, ಅದರಲ್ಲೂ  ಮದ್ವೆ ಗಂಡು ತೊಡಿಸುತ್ತಾನೆ ಅಂದ್ರೆ ನಂಗೆ ಬೇಡವೇ ಬೇಡಾ” ಮೂತಿ ಉಬ್ಬಿಸಿದಳು.   “ನೀನು ಬೇಡ ಅಂದ್ರೆ ನಿಮ್ಮಪ್ಪ ಕೇಳುತ್ತಾರಾ, ಆಗ್ಲೆ ಗಂಡು ಹುಡುಕುತ್ತಾ ಇದ್ದಾರೆ. ಈ ವರ್ಷವೇ ನಿಂಗೆ ಮದ್ವೆ ಕಣೇ” ಮಾಧವಿಯನ್ನು ರೇಗಿಸಿದಳು. ” ಥೂ ಎಲ್ಲಿಹೋದರೂ ಮದ್ವೆ ವಿಷಯನೇ, ಮೊದ್ಲು ನೀನು ಬಟ್ಟೆ ಒಗೆಯಕ್ಕ” ಸಿಡಾರನೇ ಸಿಡುಕಿ ಅಲ್ಲಿಂದ ಎದ್ದು ಮನೆಯತ್ತ ಹೊರಟಳು.    ಮನೆಗೆ ಹೊಗಲು ಮನಸ್ಸಾಗದೆ ಸೀದಾ ತೋಪಿನೊಳಗೆ ಹೆಜ್ಜೆ ಹಾಕಿ ಅಲ್ಲಿದ್ದ ಅವಳ ಮೆಚ್ಚಿನ ಮಾವಿನ ಮರವೇರಿ ಕುಳಿತುಕೊಂಡಳು. ಮರದಲ್ಲಿನ ಮಾವಿನ ಕಾಯಿಗಳು ಬಲಿತು ಮಾವಿನ ಸುವಾಸನೆ ಸುತ್ತಲೂ ವ್ಯಾಪಿಸಿತ್ತು. ಆ ವಾಸನೆಗೆ ಅರೆ ಕ್ಷಣ ಮೂಗರಳಿಸಿ ಕಂಪನ್ನು ಒಳಗೆಳೆದುಕೊಂಡಳು. ಮನೆಯೊಳಗೆ ರಾಶಿ ರಾಶಿ ಹಣ್ಣು ಬಿದ್ದಿದ್ದರೂ ತಿನ್ನುವ ಮನಸ್ಸಾಗಿರಲಿಲ್ಲ. ಮನದೊಳಗೆ ಕೊರೆಯುತ್ತಿದ್ದ ಸ್ಕೂಟಿ ವಿಷಯವೇ ಬೃಹದಾಕಾರವಾಗಿ ಎದ್ದು ಕುಣಿಯ ತೊಡಗಿತು. ಹೊಸ ಸ್ಕೂಟಿ ಓಡಿಸುತ್ತಾ ಕಾಲೇಜಿನ ದಾರಿ ಹಿಡಿದು ತಾನು ಹೋಗುತ್ತಿದ್ದರೆ ಎಲ್ಲರ ದೃಷ್ಟಿಯೂ ನನ್ನ ಮೇಲೆಯೇ, ಸ್ಕೂಟಿಯಿಂದ ಹೆಮ್ಮೆಯಿಂದ ಇಳಿದು ಸ್ಟಾಂಡಿನಲ್ಲಿ ನಿಲ್ಲಿಸಿ, ಬ್ಯಾಗ್ ತೆಗೆದುಕೊಂಡು ಹೆಗಲಿಗೇರಿಸಿಕೊಂಡು ಕ್ಲಾಸಿನೊಳಗೆ ಹೋಗುತ್ತಿದ್ದರೆ….ರೇ… ರಾಜ್ಯದಲ್ಲಿ ಮುಳುಗಿಹೋಗಿರುವಾಗಲೇ ಅಪ್ಪನ ಕೂಗು ” ಮಾಧವಿ, ಎಲ್ಲಿದ್ದಿಯಾ, ಕತ್ತಲೆ ಆಗ್ತಾ ಇದೆ, ಈ ತೋಪಿನಲ್ಲಿ ಕುಳಿತು ಕೊಂಡು ಏನು ಮಾಡ್ತಾ ಇದ್ದಿಯಾ,ಎದ್ದು ಬಾ ಮನೆಗೆ” ಅಪ್ಪನ ಜೋರು ಧ್ವನಿ ಕೇಳಿಸಿದಾಗ ಅತ್ತ ತಿರುಗಿ ” ಈ ಅಪ್ಪಾ ಇನ್ನೂ ಸ್ವಲ್ಪ ಹೊತ್ತು ಸುಮ್ಮನಿರಬಾರದಿತ್ತಾ, ನನ್ನ ಕನಸು ಅರ್ಧಕ್ಕೆ ನಿಂತು ಹೋಯಿತು ಎಂದು ಬೈಯ್ದುಕೊಳ್ಳುತ್ತಾ ಮರದಿಂದ  ಒಂದೇ ಸಲಕ್ಕೆ ಧುಮುಕಿದಳು.       ತೋಪಿನಿಂದ ಮನೆ ಒಂದು ಕೂಗಳತೆ ಅಂತರ. ಮಗಳು ಕೆರೆ ಏರಿ ಅಥವಾ ತೋಪು ಇವೆರಡು ಜಾಗದಲ್ಲಿಯೇ ಇರುತ್ತಾಳೆ ಅಂತ ಗೊತ್ತಿದ್ದ ಕೇಶವ ಕೆರೆ ಬಳಿ ಮಾಧವಿ ಇಲ್ಲ ಅಂತ ತಿಳಿದು ಕೊಂಡು ತೋಪಿನಲ್ಲಿಯೇ ಇರ ಬೇಕೆಂದು ಕೂಗು ಹಾಕಿದ್ದ.   ಮುಖ ದುಮ್ಮಿಸಿಕೊಂಡೇ ಮನೆಯೊಳಗೆ ಬಂದ ಮಾಧವಿ ಯಾರೊಂದಿಗೂ ಮಾತನಾಡದೆ ಕುರ್ಚಿ ಮೇಲೆ ಕುಳಿತು ಕೊಂಡಳು. ಮಗಳ ಮುದ್ದು ಮುಖ ನೋಡಿದ ವೇದಾ “ಮಾಧವಿ, ಊಟಾ ಮಾಡು ಬಾರೆ” ಕಕ್ಕುಲಾತಿಯಿಂದ ಕರೆದಳು. ಮಧ್ಯಾಹ್ನವೂ ಊಟಾ ಮಾಡದೆ ಹಸಿದಿರುವ ಮಗಳ ಬಗ್ಗೆ ಅಂತಃಕರಣದಿಂದ ಕರೆದಳು. ಮಾಧವಿ ಅಮ್ಮನ ಮುಖವನ್ನು ದುರು ದುರು ನೋಡುತ್ತಾ ತಟ್ಟನೆ ಎದ್ದವಳೇ ರೂಮಿನತ್ತ ನಡೆದು ಧಡಾರನೇ ಬಾಗಿಲು ತೆರೆದು ಒಳನಡೆದು ಬಿಟ್ಟಳು.      “ನೋಡ್ರಿ, ನೋಡ್ರಿ ಅವಳು ಹೇಗಾಡ್ತಾ ಇದ್ದಾಳೆ. ಬೆಳಗ್ಗೆಯಿಂದಲೂ ಏನೂ ತಿಂದಿಲ್ಲ. ಮಧ್ಯಾಹ್ನವೂ ಊಟಾ ಮಾಡಿಲ್ಲ.ಇವಳು ಹೀಗೆ ಹಸ್ಕೊಂಡಿದ್ರೆ ಹೇಗ್ರಿ ನನ್ನ ಗಂಟಲಲ್ಲಿ ಅನ್ನ ಇಳಿಯುತ್ತೆ” ವೇದಾ ನೊಂದುಕೊಂಡಳು.  “ನೋಡು ವೇದಾ, ಅವಳೇನೇ ಹಟ ಮಾಡಿದ್ರೂ ನಾನೂ ಅವಳನ್ನ ಕಾಲೇಜಿಗೆ ಕಳಿಸಲ್ಲ.ಸ್ಕೂಟಿಯನ್ನೂ ಕೊಡಿಸಲ್ಲ.ಅವಳು ಅಷ್ಟು ದೂರ ಗಾಡಿ ಓಡಿಸಿಕೊಂಡು ಕಾಲೇಜಿಗೆ ಹೋಗೋದನ್ನ ನನ್ನ ಕೈಲಿ ನೋಡೋಕೆ ಆಗಲ್ಲ ತಿಳಿತಾ.ನಾಳೆ ಗಂಡಿನ ಕಡೆಯವರು ಬರ್ತಾ ಇದ್ದಾರೆ. ಅವರ ಮುಂದೆ ರಾಮಾಯಣ ಮಾಡದೆ ಮರ್ಯಾದೆಯಿಂದ ಇರೋ ಹಾಗೆ ನಿನ್ನ ಮಗಳಿಗೆ ಬುದ್ದಿಹೇಳು.” ನಿರ್ಧಾರಿತವಾಗಿ ಕೇಶವ ನುಡಿದನು.      “ನಿಮ್ಮ ಅಪ್ಪ ಮಗಳ ಮಧ್ಯೆ ನನ್ನ ಸಂಕಟ ಕೇಳೊರು ಯಾರು? ಅವಳುಕಾಲೇಜಿಗೆ ಹೋಕ್ತಿನಿ ಅಂತ ಹಟ ಮಾಡ್ತಾಳೆ, ನೀವು ಮದ್ವೆ ಮಾಡ್ತಿನಿ ಅಂತ ಹಟ ಮಾಡ್ತಿರಾ, ನಾನು ಯಾರ ಕಡೆಗೆ ಹೇಳಲಿ. ಏನಾದ್ರೂ ಮಾಡಿ ಕೊಳ್ಳಿ, ನನ್ನ ಮಾತನ್ನ ಯಾರು ಕೇಳುತ್ತಿರಿ” ಜೋರಾಗಿಯೇ ಗೊಣಗಾಡುತ್ತಾ ಅಡುಗೆ ಮನೆ ಹೊಕ್ಕಳು. ಮಾಧವಿ ತನ್ನ ಹಟ ಬಿಡಲಿಲ್ಲ. ಅಂದು ಯಾರೂ ಮನೆಯಲ್ಲಿ ಊಟಾ ಮಾಡಲಿಲ್ಲ.    ಬೆಳಗ್ಗೆಯಿಂದಲೆ ಕೇಶವ ಸಡಗರದಿಂದ ಓಡಾಡುತ್ತಿದ್ದ. ಗಂಡಿನವರು ಬೆಳಗ್ಗೆ ಹನ್ನೊಂದು ಗಂಟೆಗೆ ಬರುತ್ತಾರೆ ಎಂದು ತಿಳಿಸಿದ್ದರಿಂದ ವೇದಳಿಗೆ ಬಂದವರಿಗೆ ತಿಂಡಿ ಮಾಡಿ ಸಿದ್ದವಾಗಿರಲು ತಿಳಿಸಿದ. ಮಗಳ ಕೋಪವನ್ನು ಲೆಕ್ಕಕ್ಕೆ ತೆಗೆದು ಕೊಳ್ಳದೆ ಪಾಪ ಅದು ಮಗು ಅದಕ್ಕೇನು ತಿಳಿಯುತ್ತದೆ. ಕಾಲೇಜು, ಸ್ಕೂಟಿ ಅಂತ ಕುಣಿಯುತ್ತೆ, ಬಂದ ವರ ಒಪ್ಪಿಕೊಂಡರೆ  ಮದುವೆಯಾಗಿ ಅವನ ಪ್ರೀತಿಯಲ್ಲಿ ಎಲ್ಲವನ್ನು ಮರೆಯುತ್ತಾಳೆ. ನಮಗೆ ತಾನೇ ಯಾರಿದ್ದಾರೆ, ಇರುವ ಒಬ್ಬಳೆ ಮಗಳು ಓದು, ಕಾಲೇಜು ಅಂತ ಯಾಕೆ ಕಷ್ಟ ಪಡ ಬೇಕು ಅನ್ನೋವ ಧೋರಣೆಯಲ್ಲಿ ಕೇಶವನಿದ್ದ.ವೇದಳಿಗೂ ಗಂಡನ ರೀತಿ ಸರಿ ಎನಿಸಿದರೂ ಮಾಧವಿಗೆ ಮದುವೆ ಇಷ್ಟವಿಲ್ಲವಿರುವುದು, ಅವಳಿಗೆ ಮುಂದೆ ಓದಲು ಆಸೆ ಇರುವುದು, ಬಸ್ಸಿನ ಸೌಕರ್ಯ ಇಲ್ಲದಿರುವ ಈ ಊರಿನಿಂದ ಪ್ರತಿ ದಿನ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗಲು ಮಗಳು ಬಯಸಿರುವುದು ಗೊತ್ತಿದ್ದ ವೇದ ಮಗಳ ಮನಸ್ಸನ್ನೂ ನೋಯಿಸಲಾರಳು. ಗಂಡನನ್ನು ಎದಿರು ಹಾಕಿಕೊಳ್ಳಲಾರಳು. ಇಬ್ಬರ ಮಧ್ಯೆ ಯಾರಿಗೂ ಹೇಳಲಾರದೆ ಒದ್ದಾಡಿ ಹೋಗುತ್ತಿದ್ದಾಳೆ.    ಅಮ್ಮನ ಬಲವಂತಕ್ಕೆ ಗಂಡಿನ ಮುಂದೆ ಕುಳಿತಿದ್ದ ಮಾಧವಿಯ ಮುದ್ದು ಮುಖಕ್ಕೆ ಮದುವೆಯ ಗಂಡು ಕ್ಲೀನ್ ಬೈಲ್ಡ್ ಆಗಿಬಿಟ್ಟಿದ್ದ. ನಾಳೆನೇ  ಮದ್ವೆ  ಅಂದರೂ ತಾಳಿ ಕಟ್ಟೊಕೆ ಸಿದ್ದವಾಗಿಬಿಟ್ಟ. ಆದರೆ ಮಾಧವಿ ಮಾತ್ರಾ ಕತ್ತೆತ್ತಿಯೂ ಹುಡುಗನತ್ತ ನೋಡಿರಲಿಲ್ಲ.     ಹುಡುಗ ತಂದೆ ” ಏನಮ್ಮ ನಮ್ಮ ಹುಡುಗ ಒಪ್ಪಿಗೆಯೇ ನಿನಗೆ, ಈಗ್ಲೇ ಸರಿಯಾಗಿ ನೋಡಿಕೊಂಡು ಬಿಡು, ಆಮೇಲೆ ನೋಡಿಲ್ಲ ಅಂತ  ಹೇಳಬೇಡ” ಕತ್ತು ಬಗ್ಗಿಸಿ ಕುಳಿತಿದ್ದ ಮಾಧವಿಯನ್ನು ಕೇಳಿದರು.    ಆಗಾ ಮಾಧವಿ ತಟ್ಟನೆ ” ಒಪ್ಗೆ ಇಲ್ಲ. ನನಗೆ ಮದ್ವೆ ಆಗೋಕೆ ಇಷ್ಟ ಇಲ್ಲ. ನಮ್ಮ ಅಪ್ಪನ ಬಲವಂತಕ್ಕೆ ಇಲ್ಲಿ ಕೂತಿದೀನಿ” ಮುಖಕ್ಕೆ ಹೊಡೆದ ಹಾಗೆ ಹೇಳಿ ಬಿಟ್ಟಳು. ಮನದೋಳಗಿನ ನಿರಾಶೆ, ಆಕ್ರೋಷ ತರಿಸಿ ಮಾಧವಿಗೆ ಹಾಗೆ ನುಡಿಯುವಂತೆ ಮಾಡಿ ಬಿಟ್ಟಿತ್ತು. ಈ ಅನಿರೀಕ್ಷಿತ ಘಟನೆಯಿಂದ ತಬ್ಬಿಬ್ಬಾದ ಗಂಡಿನವರು ದುರ್ದಾನ ತೆಗೆದುಕೊಂಡವರಂತೆ ಪೆಚ್ಚಾಗಿ ಬಿಟ್ಟರು.     ಹುಡುಗನ ತಂದೆ ಎದ್ದು ನಿಂತು ಕೇಶವನತ್ತ ತಿರುಗಿ ” ಅಲ್ಲ ಸ್ವಾಮಿ, ಹುಡುಗನನ್ನು ಕರೆಸುವ ಮುಂಚೆ ನಿಮ್ಮ ಮಗಳ ಒಪ್ಪಿಗೆ ತೆಗೆದು ಕೊಳ್ಳ ಬಾರದಿತ್ತೆ. ಹುಡುಗಿಗೆ ಮದ್ವೆ ಇಷ್ಟ ಇಲ್ಲ ಅಂದ ಮೇಲೆ ಹುಡುಗಿ ನೋಡಿ ಏನು ಪ್ರಯೋಜನ, ನಮ್ಮ ಸಮಯವೂ ಹಾಳೂ, ನಿಮ್ಮ ಸಮಯವೂ ಹಾಳೂ, ನಾವಿನ್ನೂ ಹೊರಡುತ್ತೆವೆ, ಮೊದ್ಲೂ ನಿಮ್ಮ ಹುಡುಗಿಗೆ ನಡವಳಿಕೆ ಕಲಿಸಿ, ಆಮೇಲೆ ಮದುವೆ ಮಾಡುವಿರಂತೆ” ಅಂತ ವ್ಯಂಗ್ಯವಾಗಿ ನುಡಿದು ನಡೀರಿ ಹೋಗೋಣ ಅಂತ ತನ್ನವರೊಂದಿಗೆ ಹೊರಟು ನಿಂತರು.    ” ದಯವಿಟ್ಟು ಕ್ಷಮಿಸಿ ಸ್ವಾಮಿ, ನನ್ನ ಮಗಳು ಇನ್ನೂ ಚಿಕ್ಕವಳು. ಏನೋ ಗೊತ್ತಾಗದೆ ಮಾತಾಡಿ ಬಿಟ್ಟಿದ್ದಾಳೆ. ನಾನು ಆಮೇಲೆ ಅವಳಿಗೆ ಬುದ್ದಿ ಹೇಳುತ್ತೆನೆ. ನೀವು ಬೇಸರ ಮಾಡಿ ಕೊಳ್ಳ ಬೇಡಿ. ಎಲ್ಲಾ ಹೆಣ್ಣು ಮಕ್ಕಳು ಮೊದ್ಲು ಮೊದ್ಲು  ಮದ್ವೆ ಬೇಡಾ ಅಂತಾ ತಾನೇ ಹೇಳೊದು, ಅವಕ್ಕೇನು ಗೊತ್ತಾಗುತ್ತೆ. ನಾವು ಕೊಂಚ ತಿಳಿಸಿ ಹೇಳಿದ್ರೆ ಒಪ್ಪಿಕೊಂಡು ಮದ್ವೆ ಆಗಿ ಸಂಸಾರ ಮಾಡ್ತರೆ. ದಯವಿಟ್ಟು ನೀವು ಕುಳಿತು ಕೊಳ್ಳಿ. ಅನುನಯದಿಂದ ಕೇಶವ ಅವರ ಕೋಪ ಇಳಿಸಲು ನೋಡಿದ.    ಅದ್ಯಾವುದಕ್ಕೂ ಜಗ್ಗದ ಅವರು “ಯಜಮಾನ್ರೆ , ಬಲವಂತಾಗಿ ನಿಮ್ಮ ಮಗಳನ್ನ ಸೊಸೆ ಮಾಡಿಕೊಳ್ಳುವ ದರ್ದು ನಮಗೇನು ಇಲ್ಲ. ನನ್ನ ಮಗನಿಗೆ ಹೆಣ್ಣುಕೊಡಲು ಕ್ಯೂ ನಿಂತಿದ್ದಾರೆ, ಹೆಚ್ಚು ಮಾತು ಬೇಡಾ, ನಾವಿನ್ನು ಬರ್ತಿವಿ” ಅಂದವರೆ  ಮತ್ಯಾವುದಕ್ಕೂ ಅವಕಾಶ ಕೊಡದೆ ತಮ್ಮವರನ್ನು ಏಳಿಸಿಕೊಂಡು ಹೋಗಿಯೇ ಬಿಟ್ಟಾಗ ಅವಮಾನ ತಾಳದೆ ಕೇಶವ ಕುಸಿದು ಕುಳಿತರೆ, ವೇದಾ ಬಾಯಿಗೆ ಸೆರಗುಹಚ್ಚಿ ಬಿಕ್ಕಳಿಸಿದಳು.   ಮಾಧವಿ ಮಾತ್ರ ಏನೂ ಆಗದವಳಂತೆ ಎದ್ದು ರೂಮಿನೊಳಗೆ ಹೋಗಿ ಬಟ್ಟೆ ಬದಲಿಸಿ ನೈಟ್ ಡ್ರಸ್ ಧರಿಸಿದಳು. ಗಂಡಿನವರು ಹೋಗಿದ್ದು ಒಳ್ಳೆಯದೇ ಆಯಿತು ಎಂದು ಕೊಂಡು ಹಾಯಾಗಿ ಹಾಸಿಗೆ ಮೇಲೆ ಉರುಳಿಕೊಂಡಳು. ಅಲ್ಲಿವರೆಗೂ ಕಾಡದಿದ್ದ ಹಸಿವು ಈಗಾ ಧುತ್ತನೆ ಕಾಡಿತು,  ಹೊಟ್ಟೆ ಹಸಿವು ಹೆಚ್ಚಾಗಿ ನೆನ್ನೆಯಿಂದ ತಿನ್ನದೆ ಇದ್ದದ್ದು ಈಗಾ ಕಾಡಲು ತೊಡಗಿದಾಗ ಎದ್ದು ಅಡುಗೆ ಮನೆಗೆ ಹೋಗಿ ಗಂಡಿನವರಿಗೆ ಮಾಡಿದ್ದ ಉಪ್ಪಿಟ್ಟು, ಕೇಸರಿಭಾತನ್ನು ತಟ್ಟೆಗೆ ತುಂಬಿಕೊಂಡು  ಹಾಲಿಗೆ ಬಂದು ಕುಳಿತು ಗಭ ಗಭನೆ ತಿನ್ನ ತೊಡಗಿದಳು.   ಗಂಡಿನವರಿಗೆ ಅವಮಾನ ಮಾಡಿ ಏನೂ ಆಗದವಳಂತೆ ಅವರಿಗಾಗಿ ಮಾಡಿದ್ದ ತಿಂಡಿಯನ್ನು ತಿನ್ನುತ್ತಿರುವ ಮಗಳನ್ನು ನೋಡಿ ಕೇಶವನಿಗೆ ಪಿತ್ತ ಕೆರಳಿತು.ಅಷ್ಟು ಒಳ್ಳೆಯ ಸಂಬಂಧವನ್ನು ತಾನೇ ಕೈಯಾರೆ ದೂರ ತಳ್ಳಿದ ಮಗಳ ಮೇಲೆ  ಮೊದಲೆ ಕ್ರೋಧ ಉಕ್ಕಿತ್ತು. ಈಗಾ ಆ ಕ್ರೋಧ ಮತ್ತಷ್ಟು ಹೆಚ್ಚಾಗಿ ಆವೇಶದಿಂದ ಮಗಳ ಬಳಿ ಬಂದವನೇ “ಹಾಳಾದವಳೆ ನಮ್ಮ ಹೊಟ್ಟೆ ಹುರಿಸೋಕೆ ಹುಟ್ಟಿದ್ದಿಯಾ. ಒಬ್ಳೆ ಮಗಳು ಅಂತ ಮುದ್ದು ಮಾಡಿ ಬೆಳೆಸಿದ್ದಕ್ಕೆ  ಒಳ್ಳೆ ಉಡುಗರೆ ಕೊಟ್ಟು ಬಿಟ್ಟೆ ನೀನು,ಯಾಕಾದ್ರೂ ನನ್ನ ಮಗಳಾಗಿ ಹುಟ್ಟಿದ್ಯೆ” ಎಂದು ಬೈಯುತ್ತಾ ಅವಳು ತಿನ್ನುತ್ತಿದ್ದ ತಟ್ಟೆಯನ್ನು ಕಿತ್ತೆಸೆದು ಮಗಳ ಬೆನ್ನಿಗೆ ದಪ ದಪನೇ ಗುದ್ದಿದ.   ಅಪ್ಪನ ಈ ಅನಿರೀಕ್ಷಿತ ಧಾಳಿಯಿಂದ ಕಂಗೆಟ್ಟು ಮಾಧವಿ ಜೋರಾಗಿ ಅಳತೊಡಗಿದಳು. ಅಪ್ಪನ ಹೊಡೆತ ಇದೇ ಮೊದಲು, ಈ ಆವೇಶ ರೋಷವೂ ಅವಳು ಕಂಡದ್ದು ಇದೇ ಮೊದಲು. ದಿಗ್ಭ್ರಾಂತಳಾಗಿ ಹೋದಳು ಮಾಧವಿ. ಅಪ್ಪ ಕೊಟ್ಟ ಏಟಿಗಿಂತ ಮನಸ್ಸಿಗೆ ನೋವಾಗಿದ್ದು ಅವನ ಮಾತುಗಳಿಂದ. ಮತ್ತಷ್ಟು ಹೊಡೆಯುವ ಉಮೇದಿನಲ್ಲಿದ್ದ ಕೇಶವನನ್ನು ತಡೆಯುತ್ತಾ ವೇದಾ “ಏನಾಯ್ತು ನಿಮಗೆ, ಯಾಕೀಗೆ ಆಡ್ತಾ ಇದ್ದಿರಾ, ಅವಳಂತೂ ಚಿಕ್ಕವಳು, ಗೊತ್ತಾಗದೆ ಏನೋ ಮಾತಾಡಿ ಬಿಟ್ಟಳು. ಅದನ್ನೆ  ಆ ಗಂಡಿನವರು ದೊಡ್ಡದು ಮಾಡಿ ಬಿಟ್ಟರು. ಅಂಥ ಮನೆಗೆ ಮಗಳನ್ನು ಕೊಟ್ಟರೆ ಮುಂದೆ ಬಾಳಿಸುತ್ತಾರಾ, ಅವರ ನಿಜವಾದ ಬಣ್ಣ ಈಗ್ಲೆ ಗೊತ್ತಾಗಿದ್ದು ಒಳ್ಳೆಯದಾಯ್ತು. ನೀವು ಅದಕ್ಕಾಗಿ ಮಗೂನಾ   ಹೊಡಿಬೇಡಿ, ನನ್ನಾಣೆ” ಅನ್ನುತ್ತಾ ಬಂದು ಮಗಳನ್ನು ರಕ್ಷಿಸಿಕೊಂಡಳು. ಪತ್ನಿಯ ವಿರೋಧ ಕಂಡು ಹಿಮ್ಮೆಟ್ಟಿದ ಕೇಸವ ತಪ್ತನಾಗಿ “ಹಾಳಾಗಿ ಹೋಗಿ ಇಬ್ಬರೂ” ಅಂತ ಪೂತ್ಕರಿಸಿ ಹೊರನಡೆದು ಬಿಟ್ಟ.  “ಮಾಧವಿ, ನೀನ್ಯಾಕೆ ಗಂಡಿನವರ ಮುಂದೆ ಅಂಗೆಲ್ಲ ಮಾತಾಡಿದೆ. ನಿಮ್ಮಪ್ಪ ನೋಡು

ಅಬ್ಬರವಿಳಿದಾಗ Read Post »

ಕಥಾಗುಚ್ಛ

ಕಥಾಯಾನ

ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು. ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು. ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು. ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು. ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು. ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ. ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ. ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು. ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ? ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು. ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು! ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ… ************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಾಲೋ ಜಗದ್ಭಕ್ಷಕಃ ಅನುಪಮಾ ರಾಘವೇಂದ್ರ ‘ಮಕ್ಕಳು ಮೊಮ್ಮಕ್ಕಳು ಜೊತೆಯಲ್ಲಿದ್ದರೆ ಇಳಿ ವಯಸ್ಸಿನಲ್ಲೂ ವಯಸ್ಸು ಇಳಿಯುತ್ತದೆ’ ಎಂದು ಎಲ್ಲೋ ಓದಿದ್ದು ನೆನಪಾಗಿ ನಸು ನಗು ಬಂತು. ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗ ಕಿಶನ್ “ಏನಜ್ಜೀ….. ನಗ್ತಾ ಇದ್ದೀರಿ. ನಂಗೂ ಹೇಳಿ” ಎಂದ. “ಪುಟ್ಟಾ … ನೀನು ಹುಟ್ಟಿದ ಮೇಲೆ ಮೊದಲ ಸಲ ಇಷ್ಟು ದಿನ ಈ ಅಜ್ಜಿಯ ಮನೆಯಲ್ಲಿ ಉಳಿದುಕೊಂಡದ್ದಲ್ವಾ …… ನೀನಿಲ್ಲಿರಲು ಕೊರೋನಾ ಒಂದು ನೆಪವಾಯ್ತಲ್ಲಾ ಅಂತ ನೆನೆಸಿ ನಗು ಬಂತು” ಎಂದೆ. “ಹೌದಜ್ಜೀ …… ಹಳ್ಳಿ ಮನೆ ಅಂದ್ರೆ ಇಷ್ಟು ಚೆನ್ನಾಗಿರ್ತದಾ……? ತೋಟ, ಗುಡ್ಡೆ , ತೋಡು, ಕಾಡು …. ವಾಹ್ ಮಜವೇ ಮಜ. ಇಷ್ಟು ಸಲ ಬಂದಾಗಲೂ ಇದೆಲ್ಲ ನೋಡೇ ಇರ್ಲಿಲ್ಲ” ಎಂದ. “ಹೌದು ಪುಟ್ಟಾ… ಹಳ್ಳಿ ಎಂದರೆ ಅಮ್ಮನ ಮಡಿಲಿನ ಹಾಗೆ. ಹಚ್ಚ ಹಸಿರು…. ನಿತ್ಯ ನೂತನ…..” ಎಂದು ನಾನು ನನ್ನಷ್ಟಕ್ಕೇ ಬಡಬಡಿಸುತ್ತಲೇ ಇದ್ದೆ. ಕಿಶನ್ ಅಂಗಳದಲ್ಲಿ ಓಡಾಡುತ್ತಿದ್ದ ನವಿಲುಗಳ ಹಿಂಡನ್ನು, ಕಳ್ಳ ಹೆಜ್ಜೆ ಇಟ್ಟು ಹಿಂಬಾಲಿಸುತ್ತಾ ನಡೆದಿದ್ದ. ಹದಿನೆಂಟನೇ ವಯಸ್ಸಿನಲ್ಲಿ ಈ ಮನೆಗೆ ಕಾಲಿಟ್ಟವಳು ನಾನು. ನಮ್ಮ ಹಾಲಿನಂತಹ ಸಂಸಾರಕ್ಕೆ ಜೇನಾಗಿ ಬಂದವರು ಮಿಥುನ್, ಮೈಥಿಲಿ. ಮಗ ವೈದ್ಯನಾದ. ಮಗಳು ತನ್ನಿಚ್ಛೆಯಂತೆಯೇ ಇಂಜಿನಿಯರ್ ಆದಳು. ಮಗನ ಕೈ ಹಿಡಿದ ಶಮಾ ದಂತ ವೈದ್ಯೆ. ಅನಘಾ , ಅಮೋಘ ಮುದ್ದಾದ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದು , ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಮೈಥಿಲಿಯ ಗಂಡ ಶ್ರೀರಾಮ ಬೆಂಗಳೂರಿನಲ್ಲಿ ಇಂಜಿನಿಯರ್. ಇತ್ತೀಚೆಗಷ್ಟೇ ಅಮೇರಿಕಾದ ಒಂದು ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿ ಅಲ್ಲಿಗೆ ಹೋಗಿ ಮನೆ ಮಾಡಿದ್ದಾನೆ . ಮೈಥಿಲಿಯೂ, ಮೊಮ್ಮಗ ಕಿಶನ್ ಇನ್ನೇನು ಸದ್ಯದಲ್ಲಿಯೇ ಅಲ್ಲಿಗೆ ಹೋಗುವವರಿದ್ದರು . ಹೋಗುವ ಮೊದಲು ಊರಿಗೆ ಬಂದವರು ಲಾಕ್ ಡೌನ್ ಕಾರಣದಿಂದ ಇಲ್ಲಿ ಉಳಿಯಬೇಕಾಯ್ತು.ಆರು ವರ್ಷ ವಯಸ್ಸಿನ ಕಿಶನ್ ಪ್ರಶ್ನೆಗಳ ಭಂಡಾರ. “ಅಜ್ಜೀ ಇಲ್ಲಿ ಹಾಲು ಯಾಕೆ ಇಷ್ಟು ರುಚಿಯಾಗಿದೆ…?” ಎಂದು ಕೇಳುತ್ತಾ ಚಪ್ಪರಿಸುತ್ತಾ ಹಾಲು ಕುಡಿಯುತ್ತಿರುವ ಮಗನನ್ನು ನೋಡಿ ಮೈಥಿಲಿಗೂ ಆಶ್ಚರ್ಯವಾಯ್ತು. ಬೆಂಗಳೂರಿನಲ್ಲಿ ಅವನಿಗೆ ಒಂದು ಲೋಟ ಹಾಲು ಕುಡಿಸುವುದೆಂದರೆ ಒಂದು ದೊಡ್ಡ ಸಾಧನೆ. “ಪುಟ್ಟಾ … ಇದು ನಮ್ಮ ದನದ ಹಾಲು. ಶುದ್ಧವಾಗಿರ್ತದೆ. ಅಲ್ಲಿ ಪ್ಯಾಕೆಟ್ ಹಾಲಿಗೆ , ಹಾಲು ಕೆಡದಂತೆ ಇಡಲು ಕೆಲವು ರಾಸಾಯನಿಕಗಳನ್ನು ಸೇರಿಸ್ತಾರೆ” ಎಂದೆ. ಕೊರೋನಾದಿಂದಾಗಿ ಹೊರಗಿನ ತರಕಾರಿ ಸಿಗದೆ ಹೋದರೂ ನಮಗೆ ತರಕಾರಿಗಳ ದಾರಿದ್ರ್ಯಬರಲೇ ಇಲ್ಲ. ಕಿಶನ್ ಗೆ ಇದೂ ಆಶ್ಚರ್ಯದ ಸಂಗತಿಯೇ…. “ಪೇಟೆಗೆ ಹೋಗದೇ ಇದ್ದರೂ ಇಷ್ಟೊಂದು ತರಕಾರಿ ಎಲ್ಲಿಂದ….?” ಹಲಸಿನ ಕಾಯಿ , ಹಲಸಿನ ಬೇಳೆ , ಬಾಳೆಕಾಯಿ , ಬಾಳೆದಂಡು , ಬಾಳೆ ಹೂ , ಬಸಳೆ , ನೆಲಬಸಳೆ, ತೊಂಡೆಕಾಯಿ, ಬೆಂಡೆಕಾಯಿ, ಬದನೆ , ಒಂದೆಲಗ , ವಿಟಮಿನ್ ಸೊಪ್ಪು……ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾನು ದಿನಕ್ಕೊಂದು ಸೊಪ್ಪಿನ ತಂಬುಳಿ ಮಾಡುವುದನ್ನು ನೋಡಿದ ಕಿಶನ್ , ಬಹಳ ಅಸ್ಥೆಯಿಂದ ಕಮ್ಯೂನಿಸ್ಟ್ ಸೊಪ್ಪು ಕೊಯ್ದು ತಂದು ನನ್ನ ಬಳಿ ಹಿಡಿದಿದ್ದ. ಅಜ್ಜನೂ , ಮೊಮ್ಮಗನೂ ತೋಟ , ಗುಡ್ಡೆ ಎಂದು ಸುತ್ತೀ ಸುತ್ತಿ ಮಾವಿನ ಹಣ್ಣು , ಗೇರು ಹಣ್ಣು , ಕುಂಟಾಂಗಿಲ , ನೇರಳೆಹಣ್ಣು , ಮುಳ್ಳು ಹಣ್ಣು ಕೊಯ್ದು ತಿಂದು ಈಗ ಕಾಡಿನ ಹಣ್ಣುಗಳೆಲ್ಲ ಮೊಮ್ಮಗನಿಗೂ ಚಿರಪರಿಚಿತ. ಕೆರೆಯ ನೀರಿನಲ್ಲಿ ಆಟವಾಡುವಾಗ ಅವನ ಪುಟ್ಟ ತಲೆಯೊಳಗೆ “ಈ ನೀರು ಯಾಕೆ ಇಷ್ಟು ಚೆನ್ನಾಗಿದೆ…… ಹೇಗೆ ಇಷ್ಟು ತಂಪಾಗಿದೆ …” ನೂರೆಂಟು ಪ್ರಶ್ನೆಗಳು. ಬೆಂಗಳೂರಿನಲ್ಲಿ ದಿನವಿಡೀ ಶಾಲೆ ,ಟ್ಯೂಷನ್ ಎಂದು ಕಳೆದು ಹೋದರೂ ವಾರಂತ್ಯದಲ್ಲಿ ಮೊಬೈಲ್ , ಕಂಪ್ಯೂಟರ್ , ಟಿ.ವಿ. ಕಿಶನ್ ನ ಪ್ರಪಂಚವಾಗಿತ್ತು. ಇಲ್ಲಿ ಬಂದ ಮೇಲೆ ಗೂಡಿನಿಂದ ಹೊರಗೆ ಬಿಟ್ಟ ಹಕ್ಕಿಯಂತಾಗಿದ್ದ. ಟಿ.ವಿ. , ಕಂಪ್ಯೂಟರ್ ಗಳ ನೆನಪೇ ಇಲ್ಲ. ಮೊಬೈಲ್ ನೆನಪಾಗುತ್ತಿದ್ದುದು ವಿಡಿಯೋ ಕರೆ ಮಾಡಿ ಅಪ್ಪನ ಬಳಿ ಮಾತನಾಡಲು ಮಾತ್ರ. ಅಲ್ಲಿ ಪಿಜ್ಜಾ , ಬರ್ಗರ್ ಇಲ್ಲದೇ ವಾರ ಮುಗಿಯುತ್ತಿರಲಿಲ್ಲ. ಇಲ್ಲಿ ಅದ್ಯಾವುದರ ನೆನಪೂ ಅವನಿಗಿಲ್ಲ. ಆಶ್ಚರ್ಯವೆಂದರೆ ಯಾವಾಗಲೂ ಗಂಟು ನೋವೆಂದು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದ ಯಜಮಾನರಿಗೆ ಈಗ ಹದಿನೈದು ದಿನಗಳಿಂದ ತನಗೆ ನೋವಿದೆ ಎಂಬುದೇ ಮರೆತು ಹೋಗಿತ್ತು. ನನ್ನ ಸೊಂಟ ನೋವೂ ಅಷ್ಟೇ……. ನಾವಿಬ್ಬರೂ ಮತ್ತೆ ಚಿಕ್ಕ ವಯಸ್ಸಿಗೆ ಕಾಲಿಡುತ್ತಿರುವ ಅನುಭವ. ಇದು ನಮ್ಮ ಜೀವನದಲ್ಲಿ ಕೊರೋನಾ ಪರಿಣಾಮದ ಒಂದು ಮುಖ .ಮಗ ಮಿಥುನ್ ನಗರದಲ್ಲಿ ಪ್ರಸಿದ್ಧ ವೈದ್ಯ. ಕೊರೋನಾ ಚಿಕಿತ್ಸೆಗಾಗಿ ಸಿದ್ಧರಾಗಿರುವ ವೈದ್ಯರ ತಂಡದಲ್ಲಿ ಅವನೂ ಒಬ್ಬ . ಸೊಸೆಯೂ , ಮೊಮ್ಮಕ್ಕಳೂ ನಗರದಲ್ಲೇ ಇದ್ದರೂ ಅವರಿಗೂ ಮಗನ ಭೇಟಿ ಇಲ್ಲ. ಪ್ರತಿ ದಿನ ಪ್ರತಿ ಕ್ಷಣ ಆತಂಕ. ನನ್ನ ಮನಸ್ಸು , ನಮ್ಮ ದೇಶ ಸೇವೆಗಾಗಿ ನಿಂತ ಸೈನಿಕರನ್ನು ಒಂದು ಕ್ಷಣ ನೆನೆಸಿಕೊಂಡಿತು. ಮಗ ಒಳ್ಳೆಯ ಕೆಲಸ ಮಾಡುತ್ತಿದ್ದಾನೆಂಬ ಸಮಾಧಾನವಿದ್ದರೂ, ಕೊರೋನಾದ ಕರಾಳ ಛಾಯೆಯನ್ನು ನೆನೆಸಿ ಕೈಕಾಲು ನಡುಗುತ್ತಿತ್ತು. ಈ ಸಮಯದಲ್ಲೇ ಹುಚ್ಚು ಮನಸ್ಸಿನ ಹತ್ತು ರೂಪಗಳ ಪರಿಚಯವಾಗಿದ್ದು. ಬೈಲಿನ ಮಾಲಿಂಗ ಬಂದು ಅಂಗಳದ ಬದಿಯಲ್ಲಿ ನಿಂತು “ಅಕ್ಕಾ” ಎಂದು ಕರೆದ. “ಹೋ…ಮಾಲಿಂಗಾ… ಏನು ವಿಶೇಷ….?” “ಎಂತ ಹೇಳುದು ಅಕ್ಕಾ… ಈ ಕೊರೋನಾ ಮಾರಿ ನಮ್ಮನ್ನು ಸರ್ವನಾಶ ಮಾಡಿತು” ಎಂದು ಗೋಳಾಡಿದ. “ಸಮಾಧಾನ ಮಾಡಿಕೋ ಮಾಲಿಂಗಾ…… ಏನಾಯ್ತು ಹೇಳು…..” ಎಂದೆ. “ನಾನು ದಿನಾ ಕೆಲಸಕ್ಕೆ ಹೋದರೆ ಮಾತ್ರ ನಮ್ಮ ಮನೆ ನಡೆಯುವುದು. ಈಗ ಒಂದು ತಿಂಗಳಾಯ್ತು ಕೆಲಸ ಇಲ್ಲದೆ. ರೇಶನ್ ಇಲ್ಲ. ವಯಸ್ಸಾದ ಅಮ್ಮನ ಔಷಧಿ ಮುಗಿದಿದೆ. ಮಗಳು ತುಂಬಿದ ಬಸುರಿ. ಹೆಂಡತಿಗೂ ಪ್ರೆಶರ್ ಹೆಚ್ಚು ಕಮ್ಮಿ ಆಗ್ತಾ ಇರ್ತದೆ. ಎಂತ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ.” ಎಂದು ಕಣ್ಣೀರಿಟ್ಟ. “ಹೌದು ಮಾಲಿಂಗ . ಹೆಚ್ಚಿನವರ ಸ್ಥಿತಿಯೂ ಹೀಗೇ ಇದೆ. ದೊಡ್ಡ ದೊಡ್ಡ ಬಿಸಿನೆಸ್ ನೆಲ ಕಚ್ಚಿದೆ. ವ್ಯಾಪಾರ , ವಹಿವಾಟುಗಳು ಏರುಪೇರಾಗಿವೆ. ಮಕ್ಕಳ ವಿದ್ಯಾಭ್ಯಾಸ ಎಲ್ಲ ಹಾಳಾಯ್ತು. ಕೊರೋನಾ ಯಾರನ್ನೂ ಬಿಟ್ಟಿಲ್ಲ…..” ಎಂದೆ. “ಅದೆಲ್ಲ ಹೋಗ್ಲಿ. ನನ್ನ ಮನೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಪಂಚಾಯ್ತಿಂದ ಮನೆ ಕಟ್ಟಿಸಿ ಕೊಡ್ತಾರೆ ಅಂತ ಸುದ್ಧಿ ಇತ್ತು . ಇನ್ನು ಅದ್ಯಾವುದೂ ನಡೀಲಿಕ್ಕಿಲ್ಲ” ಎಂದ. ಅವನ ಪರಿಸ್ಥಿತಿ ನೆನೆದು ಸಂಕಟ ಆಯ್ತು. ಒಂದು ಬಾಳೆ ಗೊನೆ , ಸ್ವಲ್ಪ ತರಕಾರಿ, ಸ್ವಲ್ಪ ಅಕ್ಕಿ, ಸ್ವಲ್ಪ ಹಣ ಕೊಟ್ಟು “ಹೆದರ್ಬೇಡ. ಎಲ್ಲ ಒಳ್ಳೆದಾಗ್ತದೆ. ಒಂದು ಮಾತು ನೆನಪಲ್ಲಿಟ್ಟುಕೋ ಈ ಸಮಯ ಕಳೆದು ಹೋಗುವುದು” ಎಂದೆ. ಮಾಲಿಂಗ ಹೊರಟು ಹೋದ. ಇಷ್ಟನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕಿಶನ್ ಗೆ ಒಂದು ಮಾತ್ರ ಅರ್ಥ ಆಗಿರಲಿಲ್ಲ. “ಅಜ್ಜೀ…. ಎಲ್ಲ ಗೊತ್ತಾಯ್ತು. ನೀವು ಕೊನೆಯಲ್ಲಿ ಹೇಳಿದ ಒಗಟು ಮಾತ್ರ ಅರ್ಥ ಆಗ್ಲಿಲ್ಲ” ಎಂದ. “ಒಗಟಾ… ನಾನು ಒಗಟು ಹೇಳಿಯೇ ಇಲ್ವಲ್ಲಾ” ಎಂದೆ. “ನೀವು ‘ಈ ಸಮಯ ಕಳೆದು ಹೋಗುವುದು’ ಅಂತ ಹೇಳಿದ್ರಲ್ಲಾ… ಅದೇನು…?” ಎಂದ. “ಹೋ ….. ಅದಾ…. ನೋಡು ಪುಟ್ಟಾ… ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ವಾ……”ಎಂದೆ. “ಅಂದ್ರೇ…..?” ಪುಟ್ಟನ ರಾಗ. “ಈಗ ನೋಡು ನೀನೀಗ ಇಲ್ಲಿ ಎಷ್ಟು ಸಂತೋಷದಲ್ಲಿದ್ದೀಯ ? ಈ ಸಮಯ ಕಳೆದು ಹೋದರೆ……. ಮತ್ತೊಮ್ಮೆ ನಿನ್ನ ಜೀವನ ಯಾಂತ್ರಿಕ ಬದುಕಾಗ್ತದೆ . ಅಲ್ವಾ…..ಈಗ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೋ….. ಜೀವನದಲ್ಲಿ ನಿನಗೆ ಬೇಸರವಾದಾಗಲೆಲ್ಲ ಈ ಮಾತನ್ನು ನೆನೆಸಿಕೋ. ಮನಸ್ಸಿಗೆ ಸಮಾಧಾನವಾಗುತ್ತದೆ. ಕಷ್ಟದಲ್ಲಿರುವವರು ಈ ಮಾತನ್ನು ನೆನೆಸಿಕೊಂಡರೆ ‘ಈಗ ಕಷ್ಟ ಕಾಲ. ಈ ಕಾಲ ಕಳೆದು ಹೋದರೆ ಮುಂದೆ ಬರುವ ಕಾಲ ನಮಗೆಲ್ಲರಿಗೂ ಒಳ್ಳೆಯದನ್ನೇ ಮಾಡ್ತದೆ’ ಎಂಬ ಧನಾತ್ಮಕ ಚಿಂತನೆ ಮೂಡ್ತದೆ. ಕಾಲೋ ಜಗದ್ಭಕ್ಷಕಃ .ಅಂದರೆ ‘ಕಾಲ ಜಗತ್ತಿನ ಎಲ್ಲವನ್ನೂ ತಿಂದು ತೇಗುವವ’ ಎಂದರ್ಥ ಕಾಲವು ಎಲ್ಲವನ್ನೂ ಕಬಳಿಸುತ್ತಲೇ ಇರುತ್ತದೆ. ಜೀವನದಲ್ಲಿ ಅದೆಷ್ಟೋ ಸಿಹಿ – ಕಹಿ ಘಟನೆಗಳು ಸಂಭವಿಸಿರುತ್ತವೆ. ನಮ್ಮದು ಸಿಹಿಯನ್ನು ಮರೆಸಲು ಸಿದ್ಧವಿಲ್ಲದ , ಕಹಿಯನ್ನು ಮರೆಯಲು ಸಾಧ್ಯವಾಗದ ಮನಸ್ಥಿತಿ. ಆದರೆ ಸಮಯವು ಯಾವ ಬೇಧವನ್ನೂ ತೋರದೆ ಎಲ್ಲವನ್ನೂ ಮರೆಸುತ್ತದೆ” ಎಂದು ಒದರುತ್ತಲೇ ಇದ್ದೆ. ನನ್ನ ಮಾತು ಆರರ ವಯಸ್ಸಿನ ಕಿಶನ್ ಗೆ ಅರ್ಥವಾಗದ ಹಂತಕ್ಕೆ ತಲುಪಿದ್ದು ನನ್ನರಿವಿಗೆ ಬರುವ ಮೊದಲೇ ಕಿಶನ್ ಹೂವಿನ ಗಿಡದಲ್ಲಿ ಕುಳಿತಿದ್ದ ಪಾತರಗಿತ್ತಿಯ ಬೆನ್ನು ಹತ್ತಿದ್ದ. ಮರುದಿನ ಬೆಳಗ್ಗೆ ಅಪ್ಪನಿಗೆ ಕರೆ ಮಾಡಿ ಮಾತನಾಡುತ್ತಿದ್ದ ಕಿಶನ್ ಇಲ್ಲಿನ ವಿದ್ಯಮಾನಗಳನ್ನು ಬಹಳ ಉತ್ಸಾಹದಲ್ಲಿ ವರ್ಣಿಸುತ್ತಿದ್ದ. ಆಗ ಅಲ್ಲಿಂದ ಶ್ರೀರಾಮ “ಕಿಶೂ …….. ನಿನಗಲ್ಲಿ ಮಜವೋ ಮಜ ಅಲ್ವಾ… ನನಗಿಲ್ಲಿ ಯಾರಿಲ್ಲ. ತುಂಬ ಬೋರಾಗ್ತಿದೆ. ಅಳ್ಬೇಕು ಅನಿಸ್ತಿದೆ” ಎಂದ. ಕಿಶನ್ “ಅಪ್ಪಾ ಬೇಸರ ಮಾಡ್ಕೊಳ್ಬೇಡಿ. ಈ ಸಮಯವು ಕಳೆದು ಹೋಗ್ತದೆ” ಎಂದು ಮುದ್ದು ಮುದ್ದಾಗಿ ಹೇಳಿದಾಗ ನಮಗೆಲ್ಲ ನಗಬೇಕೋ ಅಳಬೇಕೋ ಎಂದರಿವಾಗದ ಪರಿಸ್ಥಿತಿ. ಹೌದಲ್ಲಾ…… ‘ಈ ಸಮಯವು ಕಳೆದು ಹೋಗುತ್ತದೆ’ ಕೊರೋನಾ ಮುಗಿದು ಎಲ್ಲೆಡೆ ಶಾಂತಿ ನೆಲೆಸುತ್ತದೆ. ಮಗಳು , ಮೊಮ್ಮಗ ಅಮೇರಿಕಾ ಹೋಗುತ್ತಾರೆ. ಮತ್ತೆ ಅವರನ್ನು ಕಾಣಲು ಅದೆಷ್ಟು ಕಾಲ ಕಾಯಬೇಕೋ….. ಮತ್ತೆ ಏಕಾಂಗಿತನ……. ಮತ್ತೆ ವಾರಕ್ಕೊಮ್ಮೆ ಬರುವ ಮಗ , ಸೊಸೆ, ಮೊಮ್ಮಕ್ಕಳ ನಿರೀಕ್ಷೆ…….. ಇದುವೇ ಜೀವನ . ಕಾಲಾಯ ತಸ್ಮೈ ನಮಃ ~~~~

ಕಥಾಯಾನ Read Post »

ಕಥಾಗುಚ್ಛ

ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳುಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ಎಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಭಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು. ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ಎಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿಬೆರೆಯುತ್ತಹೋದಳು. ಹೀಗಿರುವಾಗ ಅವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಅವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ.ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಭಾವನೆಗಳನ್ನು ಅವನಿಂದ ಓದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಅವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಭಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಆಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಅವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ಈ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಭೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಭಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಆ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ.ಓ! ದೇವರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ.ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! ******** ಕು.ಸ.ಮಧುಸೂದನ

Read Post »

ಕಥಾಗುಚ್ಛ

ಕಥಾಯಾನ

ಕಕ್ಷೆ ಡಾ.ಅಜಿತ್ ಹರೀಶಿ [11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ. ‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ. ‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು. ** ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, ಅಪರಿಮಿತ ಆತ್ಮವಿಶ್ವಾಸ ಎನ್ನಬಹುದಾಗಿದ್ದ ದಿನಗಳು. ಮನೆ ಬಾಗಿಲಿಗೇ ಸೇವೆ ಕೊಡುವ ಹುಮ್ಮಸ್ಸು ಬೇರೇ..! ಎಲ್ಲಾ ನನ್ನ ಸುತ್ತಲೇ ಸುತ್ತುತ್ತಿದೆ, ಅನಿಸುವಂತೆ ನಡೆಯುತ್ತಿತ್ತು. ಅಂತಹದ್ದೊಂದು ದಿನ… ಬಂತಲ್ಲ ಇನ್ನೊಂದು ಫೋನ್ ಕಾಲ್… “ಹಲೋ..” “ಹಲೋ..ನಾನು ವಾಸುದೇವ ರಾವ್, ಪಂಚಾಯತ್ ಮೆಂಬರ್ರು” “ಗೊತ್ತಾಯ್ತು ಹೇಳಿ ಸರ್” “ಗುಡ್, ಗುಡ್. ಹೊಸದಾಗಿ ಬಂದ್ರೂ ಆಗ್ಲೆ ನನ್ನ ಬಗ್ಗೆನೂ ತಿಳ್ಕೊಂಡು ಬಿಟ್ರಾ..” “ನಿಮಗೆ ನನ್ನ ಬಗ್ಗೆ ಗೊತ್ತಿಲ್ಲದಿರಬಹುದು.. ನಿಮ್ ಬಗ್ಗೆ ನಂಗೊತ್ತು “ ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಆದರೆ ನಮ್ಮ ಒಡನಾಟ ಕಡಿಮೆ ಇತ್ತು. “ಡಾಕ್ಟರೇ.. ಅರ್ಜೆಂಟ್ ನಿಮ್ಮ ಕಿಟ್ ತಗೊಂಡು ಬನ್ನಿ ಸೀರಿಯಸ್..” ಹಳ್ಳಿಗಳ ಸ್ಥಿರ ದೂರವಾಣಿ ಕರೆ ಕಟ್ಟಾಗೋದು ಹೊಸ ವಿಷಯವೇನಲ್ಲ. ಹಿರಿಯ ವೈದ್ಯರೊಬ್ಬರು ಹಿಡಿಕೆಯಿರುವ, ಆಯತಾಕಾರದ ತಮ್ಮ ಕಿಟ್ ಒಂದನ್ನು ನೀಡಿ ಪ್ರೀತಿಯಿಂದ ಶುಭ ಹಾರೈಸಿದ್ದರು. ಹಾಗಾಗಿ ಹೊಸಕಾಲದ ಬ್ಯಾಗ್ ಖರೀದಿಸದೇ ಅದರಲ್ಲೇ ಔಷಧ ಒಯ್ಯುತ್ತಿದ್ದೆ. ಅದಂತೂ ತಾನು ರೆಡಿ ಅಂತ ತೊಡೆ ಏರಿತ್ತು. ಅವಶ್ಯವಾಗಿ ಇರಬಹುದಾದ ತುರ್ತು ಔಷಧಗಳೆಲ್ಲ ಇದೆಯಾ ಅಂತ ಮತ್ತೊಮ್ಮೆ ಪರೀಕ್ಷಿಸಿ, ನನ್ನ ಮೆಚ್ಚಿನ ಕೆಂಪು ಬಣ್ಣದ ಕ್ಯಾಲಿಬರ್ ಬೈಕ್ ಏರಿದೆ. ಜೊತೆಗೆ ಪೆಟ್ರೋಲ್ ಟ್ಯಾಂಕ್ ನ ಮೇಲೆ, ಆಚೀಚೆ ಅಲ್ಲಾಡುವ ಹಿರಿಯರು ನೀಡಿದ ಔಷಧಗಳ ಪೆಟಾರಿ..! *   * “ಓಹ್ ..! ಬಂದ್ರಾ ಬನ್ನಿ..ಬನ್ನಿ.. ಆಸರಿಗೆ ಸದ್ಯ? , ಕಮಲೀ ನೀರು ಕಾಸೆ..” ಮಹಾಬಲರಂತೂ ಅರಾಮಿದ್ದಾರೆ ಅಂತ ಲೆಕ್ಕ ತೆಗೆದೆ. ಕಮಲ ಬಹುಷಃ ಹೆಂಡತಿಯಿರಬೇಕು ಅಂತ ಯೋಚನೆ ಸಾಗುತ್ತಿತ್ತು. ತಂದೆ ಅಥವಾ ತಾಯಿಗೆ ಆರಾಮಿಲ್ಲವೇನೋ.. ಇಲ್ಲಾ, ಅರ್ಜೆಂಟ್ ಅಂದರು ಎಂದರೆ ಮಗಳಿಗೆ..ಛೇ.! ಓ ಮನಸೇ ವಸಿ ನಿಲ್ಲಪ್ಪ ಅಂದೆ. ಹೆಬ್ಬಾಗಿಲಿಗೆ ಅಖಂಡವಾಗಿ ನಿಂತ ರಾಯರನ್ನು ದಾಟುವ ದಾರಿಯ ಸಾಧ್ಯತೆಯ ಬಗ್ಗೆಯೂ ಮನಸ್ಸು ಹುಡುಕುತ್ತಿತ್ತು. ಹತ್ತಿರವಾಗುತ್ತಿದ್ದಂತೆ ಸ್ವಲ್ಪ ಮನೆಯ ಪಕ್ಕಕ್ಕೆ ಜರುಗಿದರು. ಅವರು ಹಿಂಬಾಲಿಸಿ ಎನ್ನುವ ನೋಟದೊಂದಿಗೆ ಹೆಜ್ಜೆ ಹಾಕಿದರು.  “ನಮ್ಮ ಕಮಲಿಗೂ ಸರಿ ಅರಾಮಿಲ್ಲ .. ಆದರೂ ಮಾಡ್ತಾಳೆ ಪಾಪ. ಹಳ್ಳಿಯಲ್ಲಿ ಎಲ್ಲಾ ಹೀಗೆನೇ. ಸದ್ಯ ನಾವಿಬ್ಬರೇ, ಮಕ್ಕಳು ಪ್ಯಾಟೇಲಿ ಒದ್ತಾ ಇವೆ..!” ಅಲ್ಲಿಗೆ ಕೋಟ್ಯಾಧಿಪತಿ ಕ್ವಿಜ಼್ ನಿಂದ ಹೊರಬೀಳುವ ಸನಿಹಕ್ಕೆ ನಾನು ಬಂದಿದ್ದೆ. ಒಂದೇ ಲೈಫ್ ಲೈನ್ ಉಳಿದದ್ದು. ಆಡಿಯನ್ಸ್ ಪೋಲ್..! ಪಕ್ಕದ ಓರಿಯಲ್ಲಿರುವ ಮನೆಯ ಕೆಲಸದ ಆಳಿಗೆ ಅರಾಮಿಲ್ಲವೇನೋ ಅಂದುಕೊಂಡೆ. ನಿಜಕ್ಕೂ ಜನಸೇವಕ, ಅದಕ್ಕೇ ಇರಬೇಕು ಪದೇ ಪದೇ ಪಂಚಾಯತ್ ಚುನಾವಣೆಯಲ್ಲಿ ಆರಿಸಿ ಬರ್ತಾರೆ. “ಇನ್ನು ನನಗೂ ವಯಸ್ಸಾಯ್ತು, ಈ ಕೂಲಿಯವರ ನಂಬಿ ಏನೂ ಮಾಡ್ವಾಂಗಿಲ್ಲ. ಎರಡು ದಿನ ಕೆಲಸಕ್ಕೆ ಬಂದ್ರೆ ನಾಕು ದಿನ ರಜೆ ಮಾಡ್ತಾರೆ. ಇವತ್ತೂ ನಾನೇ ಒದ್ದಾಡುದೇಯಾ. ಪಂಚಾಯತ್ ಮೆಂಬರ್  ಮೀಟಿಂಗ್ ಬೇರೆ. ಮೊದ್ಲೆಲ್ಲಾ ಈ ಕೆಲಸದವ್ರು ಹತ್ತು ತಾಸು ಕೆಲಸ ಮಾಡ್ತಿದ್ರು. ಈಗ ಎಂಟು ತಾಸು ಅಷ್ಟೇಯಾ. ಮುಂದೆಲ್ಲಾ ಆರೇ ತಾಸೆನಾ?” ‘ಅಪರೂಪಕ್ಕೆ ಆಡಿಯನ್ಸ್ ಕೂಡ ತಪ್ಪಾಗುವುದುಂಟು ಮಾರ್ರೆ’ ಅಂತ ಗೋಳಿಬಜೆಯನ್ನು ಸಕತ್ತಾಗಿ ಮಾಡುವ ಬೈಂದೂರು ಮೂಲದ ಗೋಪಾಲ ಹೇಳಿದ ಮಾತು ನೆನಪಾಯ್ತು. ತರ್ಕವೆಂಬ ತಾಟಗಿತ್ತಿಯ ಹೆಡೆಮುರಿ ಕಟ್ಟಿ ಹಿಡಿದು ಕುಳ್ಳಿರಿಸಿದೆ. ಮನಸ್ಸು ಮುಗ್ಗರಿಸಿದ್ದು ಅವರಿಗೇನು ಗೊತ್ತಾಗಲಿಲ್ವಲ್ಲ ಸದ್ಯ.. * * “ಇಲ್ಲಿ ಬನ್ನಿ … ಕಮಲೀ ಬಿಸಿ ನೀರು, ಸಾಬೂನು ತಂದಿಡೇ..” ಕೊಟ್ಟಿಗೆಯಂತಹ ಮನೆ, ಅಲ್ಲಲ್ಲ ಕೊಟ್ಟಿಗೆಯೇ. ಕಿರಿಕಿರಿ ಕೊಡುವ ರೋಗಿಗೆ ಮಂಪರು ಹತ್ತುವ ಇಂಜೆಕ್ಷನ್ ನೀಡಲು ಹೋಗಿ, ತಾನೇ ಅಕಸ್ಮಾತ್  ಆಗಿ ಚುಚ್ಚಿಕೊಂಡ ವೈದ್ಯನಂತಾಗಿತ್ತು ನನ್ನ ಪರಿಸ್ಥಿತಿ. ಬವಳಿಕೆ ಬಂದಂತಾದರೂ ಸ್ವಲ್ಪ ಸುಧಾರಿಸಿಕೊಂಡೆ. “ನಾನು ದನದ ಡಾಕ್ಟ್ರಲ್ಲ ..!” “ನೀವು  …!” “ನಾನು ಅದೇ ಅಂದ್ಕಂಡೆ, ನಿಮ್ಮ ಮುಖಲಕ್ಷಣ ನೊಡಿಯೇ ಡೌಟ್ ಬಂತು”. ಮುಖದ ಗೆರೆಗಳ ಮೇಲೆ ಅಂದಾಜಿಸಿದ್ದ ರಾಯರು ಬಹು ದೊಡ್ಡ ಮುಜುಗರದಿಂದ ನನ್ನನ್ನು ಪಾರು ಮಾಡಿದ್ದರು. ಬರೀ ಮೆಂಬರ್ ಅಲ್ಲಾ ಇನ್ನೂ ಮೇಲಿನ ಹುದ್ದೆಗೆ ಹೋಗುವ ಪ್ರತಿಭೆ ಇದೆ ಅನ್ನಿಸಿತು. “ಬನ್ನಿ ಒಳಗೆ, ಒಳ್ಳೆದಾಯ್ತು ನೀವು ಬಂದದ್ದು. ದೇವರು ಕರಿಸಿದಾಂಗೆ ಬಂದ್ರಿ. ನಮ್ಮ ಕಮಲೀ ಅದೃಷ್ಟ , ಪ್ಯಾಟೆಗೆ ಹೊಂಟವಳು ಮಜ್ಜಾನ ಮೇಲೆ. ಚೊಲೋ ಆಯ್ತು. ಕೇಳ್ತ್ಯನೇ ಕಮಲೀ, ನಮ್ಮೂರಿಗೆ ಬಂದ ಹೊಸ ಡಾಕ್ಟ್ರು ನಿನ್ನ ನೋಡುಲೆ ಬಂಜ್ರು”. ಒಳಗಿನಿಂದ ಧ್ವನಿ…”ಯನಗೆಂತ ಸುಟ್ಟ ಅರ್ಜೆಂಟ್ ಇತ್ತಿಲ್ಲೆ…ಕಲಗಚ್ಚು ಕುಡಿಯ ಬದಲಿಗೆ ಅಡಿಕೆ ತೊಗರು ಕುಡದ ಎಮ್ಮೆಕರ ಬದಕ್ತ ಇಲ್ಯಾ ಹೇಳದೇ ಚಿಂತೆ. ಸುಮ್ಮನೆ ವಯಸ್ಸಾಗಿದ್ದೆಯಾ, ಯಾವುದು ಮೊದ್ಲು , ಯಾವುದು ಕಡಿಗೆ ಹೇಳ ಬುದ್ಧಿ ಇಲ್ಲೆ “…. ಒಗಟೊಗಟಾದ ವಿಷಯ ಒಡಚಿತಲ್ಲಾ ಅಂತ… ಸದ್ಯ ಕೊಟ್ಟಿಗೆಯಿಂದ ನನ್ನ ಹೊರಗೆ ಬಿಟ್ಟರಲ್ಲ ಅಂತ ನಿಟ್ಟುಸಿರು ಬಿಟ್ಟೆ.. ಕಮಲಮ್ಮನವರಿಗೆ ಕಾಲುನೋವಿಗೆ ಔಷಧೋಪಚಾರ ಹೇಳಿ, ಹೊರಬಂದೆ. ಬಂದ ದಾರಿಗೆ ಒಂದಿಷ್ಟು ಸುಂಕ ಸಿಕ್ಕಿತ್ತಾದರೂ, ಒಂದು ರೀತಿಯ ಅವಮಾನ, ನಾನು ಬೇರೆಯ ಆಡಳಿತ ಪ್ರದೇಶದ ಗೆರೆಯೊಳಗೆ ಬಂದೆನೆಂಬ ಸಂಕೋಚ! ಅವರಿಗೆ ಬೇಕಾದ್ದು ಎಮ್ಮೆಗೆ ಉಪಚಾರ, ಕರೆದದ್ದು ನನ್ನನ್ನು! ನಾನು ಮನುಷ್ಯರ ಡಾಕ್ಟರು, ನನ್ನ ವ್ಯಾಪ್ತಿಯೇನು? ಅಂತೆಲ್ಲಾ… ಲೆಕ್ಕ. * * ಆಮೇಲೊಂದು ದಿನ ನನ್ನ ಅದೇ ಲ್ಯಾಂಡು ಲೈನಿಗೆ ಫೋನು ಬಂತು. “ಹಲೋ..ಡಾಕ್ಟರ್ರಾ..?” ನನ್ನ ಹೆಂಡತಿಯ ಅಣ್ಣನ ಧ್ವನಿ ಅಂತ ಗೊತ್ತಾಗಿ ಹೋಯ್ತು. ಅವನೇ ಬೇಕಂತ ತಮಾಷೆ ಮಾಡ್ತಿದಾನಂತ ನನ್ನ ಊಹೆ. ‘ಹೌದು ಹೇಳಿ’,  ಅಂದೆ. “ನಮ್ಮ ಆಕಳು ಹೀಟಿಗೆ ಬಂದಿದೆ, ದಯವಿಟ್ಟು ಬೇಗ ಬಂದರೆ ಅನುಕೂಲ ಆಗ್ತಿತ್ತು. ಇನ್ಸಮೈನೇಷನ್ ಇವತ್ತಾದ್ರೆ..” ಅಂದ. ಒಂದಿಷ್ಟು ಆಕಳನ್ನು ಕಟ್ಟಿಕೊಂಡು ಡೈರಿಗೆ ಹಾಲು ಕೊಡ್ತಾನೆ. “ಹೀಟಿಗೆ ಬಂದವರನ್ನೆಲ್ಲಾ ಸಂಭಾಳಿಸ ಹೋದರೆ ನಿಮ್ಮ ತಂಗಿ ಬಡಿಗೆ ತಗಳ್ತಾಳೆ” ಅಂದೆ. “ಅಯ್ಯೋ ಬಾವನನಾ..? ಒಂದು ತಾಸು ಹಿಂದೆ ವೆಟರ್ನರಿ ಡಾಕ್ಟರಿಗೆ ಫೋನ್ ಮಾಡಿದ್ದೆ. ಹಾಗಾಗಿ ಮತ್ಯಾರು ಫೋನ್ ಮಾಡಿಲ್ಲ ಅಂತ ಅಂದ್ಕೊಂಡು ರೀಡಯಲ್ ಬಟನ್ ಒತ್ತಿದೆ” ಅಂದ. ಅತ್ತೆಯ ಫೋನು ಬಂದಿತ್ತು.  ಮಗಳೊಂದಿಗೆ ಮಾತಾಡಿ ರಿಸೀವರ್ ಕೆಳಗಿಟ್ಟ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಇವನ ಕರೆ ಬಂದಿತ್ತು, ಹೆಂಡತಿಯ ತೌರುಮನೆಯಿಂದ. ಮನಸ್ಸಿಗೆ ಮತ್ತೆ ಮೊರೆತ. ದನದ ಡಾಕ್ಟರೆಲ್ಲಿ, ನಾನೆಲ್ಲಿ?! * ಈ ಹೊಸದಾಗಿ ಬಂದ ಪಶು ವೈದ್ಯರು ಮತ್ತು ನನ್ನ ನಡುವೆ ನಡೆಯುವ ಸಂದರ್ಭಗಳು ಸರ್ವೇಸಾಮಾನ್ಯವಾಯ್ತು. ದನಕ್ಕೆ, ಎಮ್ಮೆಗೆ, ಕರುಗಳಿಗೆ, ಅವುಗಳ ಹೆರಿಗೆಗೆಲ್ಲಾ ಕರೆಗಳು. ಇತ್ತೀಚೆಗೆ ಮೊದಲೇ ಕೇಳಿ ಬಿಡ್ತೀನಿ, “ಯಾರಿಗೆ?” ಅಂತ. ಈ ವ್ಯವಸ್ಥೆಗೆ, ನಾನು ಒಗ್ಗಿಹೋಗಿರುವಾಗಲೇ ಒಂದು ದಿನ ನಾನು ಪೇಷಂಟ್ ನೋಡುತ್ತಿರುವಾಗ ಬಂತು ಸ್ಥಿರ ದೂರವಾಣಿ ಕರೆ. ಪೇಷಂಟ್ ನೋಡುತ್ತಾ ಇದ್ದುದರಿಂದ ಕರೆ ಹಾಗೇ ಬಡಿದುಕೊಳ್ಳುತ್ತಿತ್ತು. ಸ್ವಲ್ಪ ಉದ್ದದ ಕರೆಯಾದ ಮೇಲೆ ಫೋನ್ ಎತ್ತಿ ನನ್ನ ಹಲೋ ಮುಗಿಯುವುದರೊಳಗೆ, ಒಬ್ಬಾಕೆ ಧ್ವನಿ.. ‘ರೀ, ಬಸ್ಟಾಂಡಿನಲ್ಲಿ ಕಾಯ್ತಾ ಇದ್ದಿ, ಕರಕೊಂಡು ಹೋಗಲೆ ಬನ್ನಿ’ ಫೋನ್ ಕಟ್.. ನನಗೆ ವಿಷಯ ಏನೆಂದು ಅರ್ಥವಾಗುವುದರೊಳಗೆ ಉತ್ತರಕ್ಕೂ ಕಾಯದೆ ಫೋನ್ ಕುಕ್ಕಿದ ಆ ಹೆಣ್ಣಿನ ಧ್ವನಿ ಹೊಸದು. ನಾನು ರಿಸೀವ್ ಮಾಡಿದಾಗಲೇ ನನ್ನ ಹೆಂಡತಿಯೂ ಮನೆಯಲ್ಲೇ ರಿಸೀವ್ ಮಾಡಿದ್ದಾಳೆ. ಮನೆಯೊಳಗೆ ಒಂದು, ಕ್ಲಿನಿಕ್ ನಲ್ಲೊಂದು ರಿಸೀವರ್ ಇಟ್ಟುಕೊಂಡಿದ್ದರಿಂದ ಇದು ಹೊಸತೇನಲ್ಲ. ಯಾವ ಸಮಯಕ್ಕಾದರೂ ಕರೆ ಬರುವ ಸಂಭವನೀಯತೆಗಳು. ಅಚಾನಕ್ ಆ ದೂರವಾಣಿ ಕರೆಯ ಧ್ವನಿ, ವಿವರಗಳನ್ನು ಮನಸ್ಸಿನಲ್ಲಿ ತಾಳೆ ಹಾಕುತ್ತಾ ಪೇಷಂಟ್ ನೋಡಿ ಮುಗಿಯುವುದರೊಳಗೆ ಮತ್ತೊಂದು ಕರೆ ಬಂತು, ಹತ್ತಿರದಲ್ಲೇ ಇದ್ದ ಒಬ್ಬ ರೋಗಿಯ ವಿಸಿಟ್ ಗೆ.  ಕ್ಲಿನಿಕ್ ನ ಪೇಷಂಟ್ ಸರತಿಯೂ  ಮುಗಿದಿದ್ದರಿಂದ ನನ್ನ ರಥವನ್ನೇರಿ ಹೊರಟು ಹೋಗಿದ್ದೆ. ಹತ್ತಿರದ ಕೆಲವು ಪೇಷಂಟ್ ಗಳನ್ನು ಅವರ ಮನೆಗೆ ಹೋಗಿ ವಿಸಿಟ್ ಮಾಡುವ ರೂಢಿಯಿತ್ತು. ಆದ್ದರಿಂದ ಮನೆಯಲ್ಲಿ ಹೇಳುವ ಅಗತ್ಯವೂ ಇರದ ಕಾರಣ, ನಾನು ಸಹಜದಂತೆ ವಿಸಿಟ್  ಮುಗಿಸಿ ಬಂದೆ. ಕ್ಲಿನಿಕ್ ನ ಸಮಯವೂ ಮುಗಿದಿತ್ತು, ಊಟದ ಸಮಯವಾದ್ದರಿಂದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ಬಾವ ಜಗುಲಿಯಲ್ಲಿ ಸ್ಥಿರಮುದ್ರೆಯಲ್ಲಿ ಕುಳಿತಿದ್ದ. ಅವನ ಆಗಮನ ಅನಿರೀಕ್ಷಿತ. ‘ಹೋ, ಬಾವ ಅರಾಮ… ಯಾವಾಗ ಬಂದೆ?’ ಅಂದವನಿಗೆ ಹೆಂಡತಿ ಪ್ರಧಾನಬಾಗಿಲಿಗೆ ಆತು ಗುಮ್ಮಳಂತೆ ನಿಂತಿದ್ದು ಕಂಡಿತು. ಕೆಂಪುಕಣ್ಣು, ಉರಿಮೂಗು ನೋಡಿದಾಗಲೇ ಗೊತ್ತಾಗಿದ್ದು, ಓಹ್ ಇಂದು ಗಂಗೆ ಧರೆಗಿಳಿದಿದ್ದಾಳೆಂದು. ಅದು ಯಾವ ಕಾರಣಕ್ಕೆಂದು ಮನಸ್ಸಿನ ಮೂಲೆಗಳಲ್ಲೆಲ್ಲಾ ಸರ್ರೆಂದು ಜಾಲಾಡಿದರೂ ಬಗೆಹರಿಯದ ಕಾರಣ ಅವರಿಬ್ಬರ ಮುಖ ನೋಡುವಂತಾಯಿತು. ನನ್ನ ಚಹರೆಯ ಪ್ರಶ್ನೆಯನ್ನು ಓದಿದವನಂತೆ,  ಬಾವ ‘ಸವಾರಿ ಎಲ್ಲಿಂದ ಬಂದಿದ್ದು?’ ಕೋರ್ಟ್‌ ನ ಕಟಕಟೆಯಲ್ಲಿ ನಿಂತ ಅಪರಾಧಿಯ ಸ್ಥಾನ ನನಗಿತ್ತು. ‘ಇಲ್ಲೆಯಾ, ವಿಸಿಟ್ ಗೆ ಹೋಗಿದ್ದೆ,’ ನನ್ನ ಸಹಜ ಉತ್ತರಕ್ಕೆ ಸಮಾಧಾನ‌ವಾಗದ ಮಡದಿಗೆ ದುಃಖ ಉಮ್ಮಳಿಸಿ ಬಂದಿತ್ತು. ವೃತ್ತಿಯಂತೇ ಮದುವೆಯೂ ಹೊಸತು. ದಾಂಪತ್ಯಕ್ಕಿನ್ನೂ ದಮ್ ಇಲ್ಲದ ಎಳಸಿನ ಕಾಲ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ ಒಬ್ಬರನ್ನೊಬ್ಬರು ಇನ್ನೂ ಪರಿಚಿತರಾಗುತ್ತಿರುವಾಗಲೇ ನಡೆದಿತ್ತು ಈ ಅಪಸ್ವರದ ಘಟನೆ. ಅವಳಿಗೇನಾಯ್ತು, ಅರ್ಥವಾಗದ ನನಗೆ, ಬಾವನ ಪ್ರಶ್ನೆ. ‘ಬಸ್ಟಾಂಡಿನಲ್ಲಿ ಯಾರು ಕಾಯುತ್ತಿದ್ದರು? ಎಲ್ಲಿಗೆ ಬಿಟ್ಟು ಬಂದದ್ದು? ಯಾರ ಫೋನಾಗಿತ್ತು? ಅದು’ …. ಓಹ್, ಈಗ ಸರಿಯಾಯ್ತು ಲೆಕ್ಕ… ಆ ಅಪರಿಚಿತ ಕರೆ… ಆ ಕರೆಯ ಬಗ್ಗೆ ಹೆಂಡತಿಯ ಮೂಲಕ ಅವನಿಗೆ ತಲುಪಿದ ವಿಷಯ. ಈ ತರಹದ ಗೊಂದಲಗಳಿಗೆ ಕಾರಣವಾದ ಆ ದೂರವಾಣಿಕರೆ! ಮೂಲ ಹೇಗೆ ಹುಡುಕುವುದು? ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಏನು ಮಾಡಲಿ?ಮತ್ತೆ ಮನಸ್ಸಿನ ಕಕ್ಷೆಯೊಳಗೆ ಸುತ್ತುತ್ತಿರುವ ಪ್ರಶ್ನೆ, ನಾನ್ಯಾಕೆ ಪದೇ ಪದೇ ಈ ದೂರವಾಣಿ ಕರೆಯೊಳಗೆ ಸಿಕ್ಕಿ ಬೀಳುವುದು? ಅನ್ನುವಾಗಲೇ ಥಟ್ಟನೆ ಒಂದು ವಿಚಾರ ಹೊಳೆದಿತ್ತು. ‘ಬಾವ, ನಂಗೂ ಆ ಫೋನ್ ವಿಷಯ ಬೇಕಿತ್ತು. ಯಾರದ್ದು ಎಂದು… ಒಮ್ಮೆ ಪ್ರಯತ್ನ ಪಡೋಣ… ಅನ್ನುತ್ತಾ ನಮ್ಮ ಗ್ರಾಮದ ಸ್ಥಿರದೂರವಾಣಿ ಕರೆಗಳ ಸಂಖ್ಯೆ ನಮೂದಿಸಿದ ಕೈಪಿಡಿ ಹೊರತೆಗೆದೆ. ನಮ್ಮೂರಿನ ಪಶುವೈದ್ಯರ ಕರೆಗಳು ನನಗೆ ಬರುತ್ತಿದ್ದವಲ್ಲ, ಎಮ್ಮೆ, ಹಸು, ಕರುಗಳ ಚಿಕಿತ್ಸೆಗೆಂದು. ಅವರನ್ನೇ ವಿಚಾರಿಸಲು ಅವರಿಗೇ ಫೋನು ಮಾಡಲು ಅವರ ಸಂಖ್ಯೆ ಹುಡುಕಿದೆ. ಹೆಸರಿನ ಪಟ್ಟಿಯಲ್ಲಿ ಪಶುವೈದ್ಯರ ಹೆಸರು. ಅರೆ! ಸ್ಥಿರ ದೂರವಾಣಿ ಸಂಖ್ಯೆ ನಂದು! ಆಹ್, ನನ್ನ ಹೆಸರು ತೆಗೆದೆ…., ಆ ಸಂಖ್ಯೆ ನನ್ನ ಮನೆಯ ಸ್ಥಿರ ದೂರವಾಣಿ ಸಂಖ್ಯೆಯ ಮೊದಲಿನ ಅಂಕೆಗಳೆ…. ಆದರೆ ಕೊನೆಯ ಅಂಕೆ ಅಲ್ಲ! ಅಂದರೆ ಬೇರೆಯವರ ದೂರವಾಣಿ ಸಂಖ್ಯೆ… ಓಹ್! ಇದೊಂದು ಹೊಸ ಅನ್ವೇಷಣೆಯಾಗಿ, ನನಗೆ ಪತ್ತೆದಾರಿ ಮಾಡುವ ಮನಸ್ಸು ಚುರುಕಾಯಿತು. ‘ನೀವಿಬ್ಬರೂ ಇಲ್ಲೆ ಈ ರಿಸೀವರ್ ಇಂದ ಕೇಳಿ. ನಾನು ವಿಚಾರಿಸುತ್ತೇನೆ.’ ಅನ್ನುತ್ತಾ, ನನ್ನ ಹೆಸರಿನ ಮುಂದೆ ನಮೂದಿಸಿದ್ದ ಸಂಖ್ಯೆಗೆ ಕರೆಯಿತ್ತೆ. ಫೋನ್

ಕಥಾಯಾನ Read Post »

You cannot copy content of this page

Scroll to Top