ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

ಶಿಕ್ಷಣ ಆನ್ ಲೈನ್!

ವಿನುತಾ ಹಂಚಿನಮನಿ ವಿಕಾಸ ವಾದ (Evolution theory) ದ ಪ್ರಕಾರ ಜೀವಿಗಳ ಅಳಿವು ಉಳಿವು ಯಾವುದರ ಮೇಲೆ ಅವಲಂಬಿಸಿದೆ? ಯಾರು ಬದಲಾಗುತ್ತಿರುವ ಪರಿಸರಕ್ಕೆ ಹೊಂದಾಣಿಕೆ ಮಾಡಿಕೊಂಡರೋ ಅವರು ಗೆದ್ದವರು. ಬಲವಾನರು, ಬುದ್ಧಿವಂತರು ಇದರಲ್ಲಿ ಸೋತರು. ಪ್ರಾಣಿ ಇರಲಿ ಮನುಷ್ಯನಿರಲಿ ಪರಿಸರಕ್ಕೆ, ಪರಿಸ್ಥಿತಿಗೆ ಹೊಂದಿಕೊಂಡು ಜೀವಿಸುವದನ್ನು ಕಲಿತರಷ್ಟೇ ಬದುಕಬಹುದು. ಅದೇ ಸೂಕ್ತರು ಬದುಕುವರು ಸಶಕ್ತರಲ್ಲ ಅನ್ನುವುದು (survival of the fittest). ಈ ಬದಲಾಗುವ ಕ್ರಮ ಪ್ರಕೃತಿಯಲ್ಲಿ ಅನಿವಾರ್ಯ. ಪರಿವರ್ತನೆ ಜಗದ ನಿಯಮ. ಇದು ಎಲ್ಲ ಕ್ರಾಂತಿಗಳಿಗೂ ಅನ್ವಯಿಸುವುದು. ಹಿಂದೆ ಎಷ್ಟೋ ಆಗಿವೆ, ಮುಂದೆ ಆಗಲಿವೆ. ಕೋವಿಡ್ ೧೯ ರ ದಾಳಿಯಿಂದ, ವಿಶ್ವ ಒಂದು ಅನಿವಾರ್ಯ ಬದಲಾವಣೆ ಮಾಡಲೇ ಕೊಳ್ಳಬೇಕಾದ ಪರಿಸ್ಥಿತಿಯ ಅಂಚಿಗೆ ಬಂದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿ ಈಗ ಬದಲಾವಣೆ ಅನಿವಾರ್ಯ. ಅದರಲ್ಲಿ ಒಂದು ಮಹತ್ವದ ಕ್ಷೇತ್ರ ಶಿಕ್ಷಣ. ಕೊರೊನಾ ರೋಗ ಹಬ್ಬುವ ವೇಗ ಮತ್ತು ವ್ಯಾಪ್ತಿಯನ್ನು ನೋಡಿದರೆ ಆನ್ ಲೈನ್ ಶಿಕ್ಷಣವೇ ಸೂಕ್ತ ಸಧ್ಯದ ಪರಿಸ್ಥಿತಿಯಲ್ಲಿ. ಸಾಂಕ್ರಾಮಿಕ ರೋಗದ ಉಡಿಯಲ್ಲಿ ಭವಿಷ್ಯದ ಆಸ್ತಿಯಾಗಿರುವ ಮಕ್ಕಳನ್ನು ಹಾಕುವ ರಿಸ್ಕ್ ತೆಗೆದುಕೊಳ್ಳಲಾಗದು. ಶಾಲೆಗಳನ್ನು ಪ್ರಾರಂಭಿಸುವದನ್ನು ಅನಿಶ್ಚಿತ ಅವಧಿಗೆ ತಳ್ಳಲಾಗಿದೆ. ಹೀಗಿರುವಾಗ ಎಲ್ಲರನ್ನೂ ಕಾಡುವ ಪ್ರಶ್ನೆ – ಮುಂದೇನು? ಆನ್ ಲೈನ್ ಶಿಕ್ಷಣಕ್ಕೆ ಅದರದೇ ಆದ ಸಾಧಕ ಭಾದಕಗಳಿವೆ (Bright side and dark side). ಏನೇ ಆದರೂ ಸಧ್ಯಕ್ಕಂತೂ ಕಂಪ್ಯೂಟರ್ ಮುಖಾಂತರ ವಿದ್ಯೆಗೆ ಮಣೆ ಹಾಕಬೇಕು. ಆದರೆ ಯಾವ ವಯಸ್ಸಿನವರಿಗೆ? ದೊಡ್ಡವರು ಈಗಾಗಲೇ ಕಂಪ್ಯೂಟರ್ ಗೆ ಸ್ವಲ್ಪ ಮಟ್ಟಿಗೆ ಪರಿಚಿತರು. ಆದರೆ ಪ್ರಾಥಮಿಕ ಶಿಕ್ಷಣ ಪಡೆಯಬೇಕಾದ ಎಳೆಯರು! ಅವರಿಗೂ ಕೂಡ ಪರಿಚಯಿಸಬೇಕಾದ ಸಂದರ್ಭ. ಇದರ ಪರಿಣಾಮ ಎಲ್ಲ ಪಾಲಕರಿಗೆ, ಶಿಕ್ಷಣ ಸಂಸ್ಥೆಗಳಿಗೆ, ಸರಕಾರಕ್ಕೆ ಅಲ್ಲದೆ ಭವಿಷ್ಯಕ್ಕೆ ಆಗಲಿದೆ. ಮೊದಲು ಅನುಕೂಲ ಅನಾನುಕೂಲಗಳನ್ನು ನೋಡೋಣ. *ಬಾಧಕಗಳು *:೧. ಮನೆಯಲ್ಲಿ ಕುಳಿತು ಶಿಕ್ಷಣ ಪಡೆಯಲು ಇಂಟರ್ನೆಟ್ ಸೌಲಭ್ಯ ಬೇಕು. ಬಡವರಿಗೆ ಅಷ್ಟೇ ಯಾಕೆ ಮಧ್ಯಮ ವರ್ಗದವರಿಗೆ ಇದು ಕಷ್ಟ ಸಾಧ್ಯ.೨. ಸಹಾಯ ಮಾಡಲು ತಂದೆ, ತಾಯಿ ಮತ್ತಾರೋ ಮಗುವಿನ ಒಟ್ಟಿಗೆ ಕೊಡಬೇಕು. ಅವರಿಗೂ ಶಿಕ್ಷಕರಿಗೆ ಇರಬೇಕಾದ ತಿಳುವಳಿಕೆ ಇರಬೇಕು. ಇದು ಎಷ್ಟರಮಟ್ಟಿಗೆ ಸಾಧ್ಯ. ಅಲ್ಲದೆ ದುಡಿಯಲು ಹೊರಗೆ ಹೋಗುವವರು ಇದಕ್ಕೆ ಒಪ್ಪಿಯಾರೇ?೩. ಪೋಷಕರು ಮನೆಯಿಂದ ಹೊರಗೆ ಹೋದರೆ ಚಿಕ್ಕ ಮಕ್ಕಳು ಮನೆಯಲ್ಲಿ ಒಂಟಿಯಾಗಿರಬೇಕಾದ ಸಮಸ್ಯೆ.೪. ಇದೆಲ್ಲಾ ಕೂಡಿ ಬಂದರೂ ಮಗುವಿನ ಮನಸ್ಸು ಮತ್ತು ಬುದ್ಧಿ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ಶಾಲೆಯಲ್ಲಿ ಸ್ನೇಹಿತರೊಂದಿಗೆ ಗುರುವಿನೊಂದಿಗೆ ಇರುವ ತೆರೆದ ವಾತಾವರಣ ಇಲ್ಲಿರುವದಿಲ್ಲ. ಏಕತಾನತೆ ಬೇಸರಕ್ಕೆ ಎಡೆಮಾಡಿಕೊಡುತ್ತದೆ.೫. ತಿಳಿಯದ ವಿಷಯ ಮತ್ತೆ ಕೇಳಿ ಸಮಸ್ಯೆ ಬಗೆಹರಿಸಿಕೊಳ್ಳುವಂತಿಲ್ಲ.೬. ಸಣ್ಣ ಊರುಗಳಲ್ಲಿ ಬಡ ಮಕ್ಕಳು ಮಧ್ಯಾಹ್ನ ಸಿಗುವ ಬಿಸಿಊಟ ತಪ್ಪಿಸಿಕೊಂಡರೆ ಆಸಕ್ತಿ ಕಡಿಮೆಯಾಗಬಹುದು. ಸರಕಾರ ಮನೆಗೆ ಧಾನ್ಯ ಒದಗಿಸುವ ಯೋಜನೆ ಇಟ್ಟುಕೊಂಡಿದೆ. ಆದರೆ ಅದರ ಸದುಪಯೋಗದ ಭರವಸೆ ಕೊಡುವವರು ಯಾರು? ೭. ಜನಸಂಖ್ಯೆ ನಿಯಂತ್ರಿಸುತ್ತಿರುವ ಹೊಸ ಪೀಳಿಗೆಯ ಈ ಕಾಲಮಾನದಲ್ಲಿ ಮಕ್ಕಳಿಗೆ ಸಹಜೀವನ ಇಲ್ಲದೆ ಹಂಚಿಕೊಳ್ಳುವ ಗುಣಕ್ಕೆ ಎರವಾಗಬಹುದು.೮. ಹಳ್ಳಿಗಳಲ್ಲಿ ಮಕ್ಕಳನ್ನು ಓದಿಸುವದರ ಬದಲು ಕೆಲಸಕ್ಕೆ ಕಳಿಸಬಹುದು.೯. ಬರೆಯುವಿಕೆ ಕಡಿಮೆಯಾಗಿ ಲಿಪಿಗಳು ಕಣ್ಮರೆಯಾಗಿ ಹೋಗಬಹುದು.೧೦. ಹೆಚ್ಚು ಸಮಯ ಕಂಪ್ಯೂಟರ್ ಪರದೆ ವೀಕ್ಷಿಸಿ ಮಕ್ಕಳ ಆರೋಗ್ಯದಲ್ಲಿ ದುಷ್ಪರಿಣಾಮ ತಲೆದೋರಬಹುದು.೧೧. ಹೆಣ್ಣು ಹುಡುಗಿಯರಿಗೆ ಶಿಕ್ಷಣ ದುರ್ಲಭವಾಗಬಹುದು. ಅವರನ್ನು ಕೆಲಸಕ್ಕೆ ಹಚ್ಚಬಹುದು ನಂತರ ಆದಷ್ಟು ಬೇಗ ಮದುವೆ ಮಾಡಬಹುದು. ಇದರಿಂದ ಬಾಲ್ಯವಿವಾಹ ಮತ್ತೆ ತಲೆದೋರಬಹುದು.೧೨. ಅಶಿಕ್ಷಿತ ಎಳೆಯ ಹುಡುಗಿಯರನ್ನು ದೈಹಿಕ ಮಾನಸಿಕ ಸಮಸ್ಯೆಗಳ ಒಟ್ಟಿಗೆ ಲೈಂಗಿಕ ಶೋಷಣೆ ಕಾಡಬಹುದು.೧೩. ಸಮಾಜದಲ್ಲಿ ಸಾಕ್ಷರತೆ ಕಡಿಮೆಯಾಗುವ ಭಯ.೧೪. ಮಕ್ಕಳಲ್ಲಿ ಶಿಸ್ತು ಕಡಿಮೆಯಾಗುವ ಸಾಧ್ಯತೆ ಇದೆ. ಶಿಕ್ಷಕರ ಮಾತನ್ನು ಕೇಳಿದಂತೆ ಪಾಲಕರ ಹಿತನುಡಿಯನ್ನು ಕೇಳುವುದಿಲ್ಲ.೧೫. ಪೂರ್ವಭಾವಿ ತಯಾರಿಗೆ ಹಣ ಒದಗಿಸುವುದು ಎಲ್ಲರಿಗೂ ಆಗಲಿಕ್ಕಿಲ್ಲ. ಇನ್ನು ಅನುಕೂಲಗಳನ್ನು ನೋಡಿದರೆ,೧. ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಉತ್ಕರ್ಷಣದಲ್ಲಿರುವ ಆನ್ ಲೈನ್ ಕಲಿಯುವಿಕೆ ಮತ್ತು ಕಲಿಸುವಿಕೆಯ ಓಟದಲ್ಲಿ ನಮ್ಮ ದೇಶ ಕೂಡ ಸೇರಿಕೊಂಡು, ಆಧುನಿಕತೆಯ ಸ್ಪರ್ಧೆಯಲ್ಲಿ ಪಾಲುಗೊಳ್ಳಬಹುದು.೨. ಉನ್ನತ ಶಿಕ್ಷಣ ಇ ಫೀಲ್ಡ್ ನಲ್ಲಿ ದೊರೆಯುವ ಸಾಧ್ಯತೆ ಹೆಚ್ಚಿರುವದರಿಂದ ಮುಂದಿನ ಶಿಕ್ಷಣಕ್ಕೆ ಇದು ನಾಂದಿಯಾಗಬಹುದು, ದೊರಕಿಸಿಕೊಳ್ಳುವುದು ಸುಲಭ ಸಾಧ್ಯ.೩. ಮನೆಯಲ್ಲಿಯೇ ಪಾಠ ಇರುವದರಿಂದ ತಮಗೆ ಬೇಕಾದ ವೇಳೆ ಆರಿಸಿಕೊಂಡು ಓದುವುದು ಸಾಧ್ಯ. ೪. ಪುನರ್ಮನನ ಸುಲಭ.೫. ಶಾಲೆ, ಕಾಲೇಜ್ ಗೆ ಹೋಗುವುದು ಇಲ್ಲದ್ದರಿಂದ ವಾಹನಗಳಲ್ಲಿ ಅಡ್ಡಾಡುವುದು ಕಡಿಮೆಯಾಗಿ, ಪ್ರಯಾಣದ ರಿಸ್ಕ್ ಇಲ್ಲ, ಖರ್ಚು ಇಲ್ಲ. ಸುರಕ್ಷತೆ ಹೆಚ್ಚಿದ್ದು ಮನಸ್ಸಿನ ಕಿರಿಕಿರಿ ಕಡಿಮೆಯಾಗಬಹುದು.೬. ಕೆಲವೊಂದು ಖರ್ಚು ಕಡಿಮೆಯಾಗುವ ಸಂಭವ. ಉದಾಹರಣೆಗೆ ಸ್ಕೂಲ್ ಯುನಿಫಾರ್ಮ ಇತ್ಯಾದಿ. ಪುರಾತನ ಸಂಸ್ಕೃತಿಯ ಗುರುಕುಲ ಪದ್ಧತಿ ನಮಗೆ ಶ್ರೇಷ್ಟವೆನಿಸಿದರೂ ಮತ್ತೆ ಅದರಿಂದ ಬದಲಾವಣೆಗೆ ಹೊಂದಿಕೊಂಡಂತೆ ಮುಂದೆ ಕೂಡ ಹೊಸ ಶಿಕ್ಷಣ ಪದ್ಧತಿಗೆ ಜನ ಹೊಂದಿಕೊಳ್ಳಬೇಕಾದೀತು. ಯಾವುದೇ ಹೊಸತನಕ್ಕೆ ವಿರೋಧ ಬರುವುದು ಸಾಮಾನ್ಯ. ಆದರೆ ಅದು ಅನಿವಾರ್ಯವಾಗಿದ್ದಲ್ಲಿ ಬೇರೆ ಆಯ್ಕೆ ಎಲ್ಲಿದೆ? ಸಧ್ಯಕ್ಕಂತೂ ಕೊರೊನಾದಿಂದ ತಪ್ಪಿಸಿಕೊಳ್ಳಲು ಇದೊಂದೇ ಮಾರ್ಗ. ಹಾಗಿದ್ದರೆ ಸಂತೋಷದಿಂದ ಒಪ್ಪಿ ಅನುಸರಿಸಿದರೆ ಜೀವವಿದೆ, ಜೀವನವಿದೆ ಅಲ್ಲವೇ? **************

ಶಿಕ್ಷಣ ಆನ್ ಲೈನ್! Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಪ್ರಯೋಗ?

ಅರ್ಪಣಾ ಮೂರ್ತಿ ಪ್ರಸ್ತುತ ಪರಿಸ್ಥಿತಿಯಲ್ಲಿ ಶೈಕ್ಷಣಿಕ ವರ್ಷದ ಆರಂಭವೇ ಗೊಂದಲಗಳಿಂದ ಕೂಡಿರುವ ಈ ಸಂದರ್ಭದಲ್ಲಿ, ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಇದಾಗಲೇ ಕಂಡುಕೊಂಡಿರುವ ಶಿಕ್ಷಣದ ಪರ್ಯಾಯ ಮಾರ್ಗದ ಹೆಸರೇ ಈ ಆನ್ಲೈನ್ ಶಿಕ್ಷಣ, ಈ ಪರ್ಯಾಯ ಮಾರ್ಗದ ಶಿಕ್ಷಣಕ್ಕೆ ಸರ್ಕಾರವು ಸಹ ಸಮ್ಮತಿಯ ಮುದ್ರೆ ಒತ್ತಿದೆ. ಈಗಿರುವ ಪ್ರಶ್ನೆಯೆಂದರೆ ಈ ಆನ್ಲೈನ್ ಶಿಕ್ಷಣ ಎಷ್ಟು ಪರಿಣಾಮಾತ್ಮಕವಾಗಿದೆ, ಮಕ್ಕಳ ಕಲಿಕೆಯ ಮಟ್ಟಕ್ಕೆ ಅದೆಷ್ಟು ಪೂರಕವಾಗಿದೆ ಅನ್ನುವುದು. ಮೊದಲಿಗೆ ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನೀಡುವುದರ ಕುರಿತು ಹೇಳೋದಾದ್ರೆ ಒಂದರಿಂದ ಐದನೆಯ ತರಗತಿಯವರೆಗೂ ಮಕ್ಕಳು ಸಂಪೂರ್ಣವಾಗಿ ಶಿಕ್ಷಕರ ಮೇಲೆ ಅವಲಂಬಿತವಾಗಿರುವಂತವರು, ಎದುರು ನಿಂತು ತರಗತಿಯಲ್ಲಿ ಬೋಧನೆ ಮಾಡುವುದಕ್ಕೂ ಮೊಬೈಲ್ ಅಥವಾ ಲ್ಯಾಪ್ಟಾಪ್ ಮೂಲಕ ಪಾಠ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ, ಹಾಗೆಯೇ ಸುಮಾರು ಎರಡರಿಂದ ಮೂರುಗಂಟೆಗಳ ಕಾಲ ಮೊಬೈಲ್ ಪರದೆಯನ್ನ ನೋಡುವ ಪುಟ್ಟ ಮಕ್ಕಳ ಕಣ್ಣುಗಳು ಮುಂದೊಂದು ದಿನ ಹಾನಿಗೊಳಗಾಗುವುದರಲ್ಲಿ ಸಂಶಯವೇ ಇಲ್ಲ, ಇದರ ಜೊತೆಗೆ ಮಕ್ಕಳ ಮೆದುಳಿನ ವಿಕಸನದ ಮೇಲೆ ಪರಿಣಾಮ ಉಂಟಾಗಬಹುದು, ನರಗಳ ಸಮಸ್ಯೆ ಉಂಟಾಗಬಹುದು, ಪುಟ್ಟ ಮಕ್ಕಳಿಗೆ ಯಾವುದೇ ಕಾರಣಕ್ಕೂ ಆನ್ಲೈನ್ ಶಿಕ್ಷಣ ಸೂಕ್ತವಲ್ಲ, ಇನ್ನು ಈ ಚಿಕ್ಕ ಮಕ್ಕಳನ್ನು ಹೊರತು ಪಡಿಸಿ ಪ್ರೌಡ ಮಕ್ಕಳ ಕುರಿತು ಹೇಳುವುದಾದರೆ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ, ಹಾಗಾದರೆ ಕಾಲೇಜು ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪೂರಕತೆ ಒದಗಿಸಬಹುದಾ ಅಂತ ನೋಡೋದಾದ್ರೆ ಸುಮಾರು ಅರ್ಧದಷ್ಟು ವಿದ್ಯಾರ್ಥಿಗಳು ಹಳ್ಳಿಗಾಡಿಗೆ ಸೇರಿದವರು, ಮೊದಲ ಸಮಸ್ಯೆಯೇ ಎಲ್ಲರೂ ಮೊಬೈಲ್ ಫೋನ್ಗಳನ್ನ ಹೊಂದುವಂತದ್ದು, ಈ ಕರೋನಾ ಕಾಲದಲ್ಲಿ ಈಗಾಗಲೇ ಹಳ್ಳಿಗಾಡಿನ ಜನ ಅತಿ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ ಮಕ್ಕಳಿಗೆ ಮೊಬೈಲ್ ಒದಗಿಸೋದು ಕಷ್ಟದ ವಿಷಯ, ಮನೆಯಲ್ಲಿ ಓದುತ್ತಿರುವ ಎರಡು ಮೂರು ಮಕ್ಕಳಿರುವ ಸಂದರ್ಭದಲ್ಲಿ ಎಲ್ಲರಿಗೂ ಮೊಬೈಲ್ ಕೊಡಿಸುವುದು ಆಗದ ವಿಷಯ, ಒಂದೊಮ್ಮೆ ಕೊಡಿಸಿದರೂ ಸಹ ಹಳ್ಳಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಅದೆಷ್ಟು ಸುಲಭವಾಗಿ ಸಿಗುತ್ತದೆ ಎನ್ನುವುದು ಹಳ್ಳಿಯ ವಾಸಿಗಳಿಗಷ್ಟೇ ಗೊತ್ತು, ನೆಟ್ವರ್ಕ್ ಕಾರಣದಿಂದಾಗಿ ಶೇಕಡಾ ಅರ್ಧದಷ್ಟು ಮಕ್ಕಳಿಗೆ ಹೆಚ್ಚಿನ ಮಾಹಿತಿ ತಲುಪಲಾರದು ಹಾಗೂ ಹಾಜರಾತಿ ಕೂಡ ನಿರೀಕ್ಷಿಸಲಾಗದು, ಒಂದೊಮ್ಮೆ ನೆಟ್ವರ್ಕ್ ದೊರೆಯುವ ಸ್ಥಳವಾದರೂ ಕೂಡ ದಿನಕ್ಕೆ ಮೂರರಿಂದ ನಾಲ್ಕು ತರಗತಿಗಳಿಗೆ ಸರಿಯಾಗುವಷ್ಟು ಮೊಬೈಲ್ ಡೇಟಾ ಹಾಕಿಸುವಷ್ಟು ಪೋಷಕರು ಶಕ್ತರಿದ್ದಾರಾ ಎನ್ನುವುದು ಯೋಚಿಸಬೇಕಾದ ವಿಷಯ, ಆನ್ಲೈನ್ ಶಿಕ್ಷಣ ಎನ್ನುವುದು ನಗರವಾಸಿಗಳ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಒಂದಿಷ್ಟು ಉತ್ತಮ ಅನಿಸಬಹುದಾದರೂ ಹಳ್ಳಿಗಾಡಿನ ಮಕ್ಕಳು ಈ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು, ವೈಜ್ಞಾನಿಕ ತಳಹದಿಯ ಮೇಲೆ ಹೇಳುವುದಾದರೆ ಸಣ್ಣ ಮಕ್ಕಳಿಗೆ ಆರೋಗ್ಯದ ದೃಷ್ಟಿಯಿಂದ ಆನ್ಲೈನ್ ಶಿಕ್ಷಣ ಮಾರಕವೇ ಹೊರತು ಪೂರಕವಲ್ಲ, ಕಾಲೇಜು ಹಂತದ ಮಕ್ಕಳ ಆನ್ಲೈನ್ ಶಿಕ್ಷಣದ ಕುರಿತು ಹೇಳುವುದಾದರೆ ಇದು ನಗರವಾಸಿ ಜನ ಹಾಗೂ ಉಳ್ಳವರಿಗಷ್ಟೆ ಒಂದಿಷ್ಟು ಪೂರಕವಾಗಬಹುದು ಹೊರತು ಹಳ್ಳಿಗಾಡಿನ ಜನರಿಗೆ ಆರ್ಥಿಕ ಹೊರೆಯಷ್ಟೆ.. ಒಟ್ಟಾರೆಯಾಗಿ ಸರ್ಕಾರಿ ಶಾಲಾಕಾಲೇಜಿನ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಎನ್ನುವುದು ಹೊರೆಯಾಗದಿರಲಿ. *********

ಆನ್ಲೈನ್ ಶಿಕ್ಷಣ – ಪ್ರಯೋಗ? Read Post »

ಇತರೆ, ಶಿಕ್ಷಣ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ. ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ. ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ. ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ. ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ. ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ. ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ. ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು. ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು? ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು. ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ. *********

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು. Read Post »

You cannot copy content of this page

Scroll to Top