ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಿರುವಂತೆ ಭಾಸವಾಯಿತು. ಈ ನಡುವೆ ನಾನು ಗಮನಿಸಿಯೇ ಇರಲಿಲ್ಲ. ಭಾವದೊಳಗೆ ನಡೆದ ನೋವಿನ ಸಂಗತಿಗಳು ಸಂಪೂರ್ಣ ದಿನಚರಿಯನ್ನು ಅದಲು-ಬದಲು ಮಾಡಿತ್ತು. ಕೆಟ್ಟ ಗಡಿಯಾರ ಮತ್ತು ತಿರುಗಿಸಿ ಇರದ ಕ್ಯಾಲೆಂಡರ್ ಮನೆಯ ಗೋಡೆಯ ಮೇಲೆ ಯಾವತ್ತೂ ಇರಬಾರದು. ಅದು ಇದೆ ಅಂತಾದರೆ ಆ ಮನೆಯ ದಿನಚರಿ ಸರಿ ಇಲ್ಲ ಅಂತಲೇ ಅರ್ಥ. ಎನ್ನುವ ಅಪ್ಪನ ಮಾತು ತಕ್ಷಣ ನೆನಪಾಯಿತು. ನನ್ನ ಭಾವ ಕೂಡಾ ಅದಕ್ಕೆ ಪುಷ್ಟಿ ಕೊಡುತ್ತಿತ್ತು. ಎದ್ದು ಹೋಗಿ ಕ್ಯಾಲೆಂಡರನ್ನು ತಿರುವಿಹಾಕಿದೆ. ಇನ್ನು ಮೂರೇ ದಿನ ಇರುವುದು ಈ ಕ್ಯಾಲೆಂಡರಿನ ಅಸ್ತಿತ್ವ ಮುಗಿಯಲು. ಅಯ್ಯೋ ಪಾಪ ಅನ್ನಿಸಿ ಕ್ಯಾಲೆಂಡರ್ ಅನ್ನು ಸವರುತ್ತಾ ಕುಳಿತೆ. ಎಷ್ಟೊಂದು ನೋವುಗಳನ್ನು ಹೊತ್ತು ತಂದಿದ್ದೆ ನೀನು.ಸಾವು-ನೋವು,ರೋಗ,ಪ್ರವಾಹ, ಒಂದಾ ಎರಡಾ, ಮನುಕುಲಕ್ಕೆ ಅತಿ ತ್ರಾಸದಾಯಕವಾದ ವರ್ಷ ಅನ್ನಬಹುದು. ನೀನು ಕೊಟ್ಟ ನೋವಿನಿಂದ ನಿನ್ನ ಕಾಲ ಇತಿಹಾಸದಲ್ಲಿ ಕಹಿ ಭಾವದಿಂದ ನೆನಪಿರುವಂತಹ ವರ್ಷವಾಗುತ್ತದೆ ಅಂದೆ. ಅದೇ ಕ್ಷಣದಲ್ಲಿ ನನ್ನ ತಪ್ಪು ಮಾತಿನ ಅರಿವಾಯಿತು ನಡೆದ ಘಟನೆಗಳಿಗೆ ಕ್ಯಾಲೆಂಡರನ್ನು ದೂಷಿಸುತ್ತಿದ್ದೇನಲ್ಲ ಎಂದು. ನಡೆದ ತಪ್ಪುಗಳಿಗೆ ಯಾರನ್ನಾದರೂ ಹೊಣೆ ಮಾಡುವುದು ಮನುಷ್ಯನ ಸಹಜ ಗುಣ ಅನ್ನಿಸಿ ನಗು ಬಂತು.ಮತ್ತಲ್ಲೇ ತೂಗುಹಾಕಿ ಇನ್ನೆರಡು ದಿನ ಆರಾಮವಾಗಿ ಇರು ಕಾಲ ಎಲ್ಲರದ್ದು ಮುಗಿಯುತ್ತದೆ. ಹಾಗೆ ನಿನ್ನದೂ.. ಆದರೆ ಎಷ್ಟು ವಿಚಿತ್ರ ನೋಡು ನೀನು ಕಾಲ ಮುಗಿದ ಮೇಲೆ ಮತ್ತೆ ಇದೇ ರೂಪದಲ್ಲಿ ಬರುತ್ತೀಯ. ಯಾವ ವ್ಯತ್ಯಾಸವೂ ಇಲ್ಲದೇ. ಅದೇ ದಿನಾಂಕ, ಅದೇ ವಾರ, ಅದೇ ತಿಂಗಳು, ಅದೇ ಹಬ್ಬ ಹರಿದಿನಗಳನ್ನು ಹೊತ್ತು. ಕೇವಲ ಒಂದು ಸಂಖ್ಯೆಯನ್ನು ಬದಲಿಸಿಕೊಂಡು.ನಿನಗದು ಕರಾರುವಾಕ್ಕಾಗಿ ಗೊತ್ತಿದೆ. ಯಾರ ಕೈ ಚಳಕದೊಳಗೆ ಸಿಕ್ಕು ಹಣಿಸಿಕೊಂಡರೂ, ನಿನ್ನ ನಿಯಮಕ್ಕೇ ಬಂದು ನಿನಗೆ ರೂಪ ಕೊಡುತ್ತಾರೆ. ಮನುಷ್ಯನಂತೆ ಬೇರೆ ಬೇರೆ ದೇಹಗಳಿಗೆ ಹೊಕ್ಕು ಸಂಭ್ರಮಿಸುವ ನೋಯುವ ನಿಯಮವೂ ಇಲ್ಲ. ಆತ್ಮವು ಮಾತ್ಮತ್ತೆ ಅದದೇ ದೇಹದೊಳಗೆ ಹೊಕ್ಕು ನಗುವದೆಷ್ಟು ಸೋಜಿಗ ಅನ್ನಿಸುತ್ತದೆ. ಪ್ರತಿ ಮನೆಯಲ್ಲಿ ಅತ್ಯಂತ ಗೌರವದ ಸ್ಥಾನವೂ, ಮೂಲೆಗುಂಪು ಮಾಡುವ ನೋವು ಅನುಭವಿಸುವೆ.ಹೆಚ್ಚು ಕಡಿಮೆ ಮನುಷ್ಯನದು ಹಾಗೆ ಅಲ್ವಾ?ನಿನ್ನ ಹೊಸ ಹುಟ್ಟನ್ನು ತಂದು ಸಂಭ್ರಮಿಸುತ್ತಾರೆ, ಮತ್ತೆ ನಿನ್ನ ಎಸೆಯುತ್ತಾರೆ.ಬಹುಶಹ ಕಾಲಚಕ್ರ ಎನ್ನುವುದು ಇದೇ ಇರಬೇಕು.ಎಲ್ಲಿಂದಲೋ ಬಂದು, ಹೊಸತೊಂದು ಏನೂ ಸೇರಿಕೊಳ್ಳುವುದಿಲ್ಲ.ಇದೇ ಪರಿಧಿಯೊಳಗೆ ರೂಪಾಂತರವಾಗುತ್ತ ನಾವು ನೋಡುವ ರೀತಿಯಲ್ಲಿ ನಮಗೆ ಗೋಚರಿಸುತ್ತದೆ.ಹಾಗೆ ನಮ್ಮ ಸಂತೋಷ ಕೂಡ ಹೊರಗೆಲ್ಲೂ ಇರುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ನಾವು ಗ್ರಹಿಸಬೇಕು ಮತ್ತದಕ್ಕೆ ಪುನಹಃ ಪುನಹಃ ಹೊಸ ರೂಪವನ್ನು ಕೊಡಬೇಕು ಅಷ್ಟೇ. ಕ್ಯಾಲೆಂಡರ್ ನಂತೆ.ಕಾಲದ ಜೊತೆಗೆ ಸಾಗುವಾಗ ನೀನೊಂದು ಅದ್ಭುತ ಸಂಗತಿ ಮತ್ತು ಸಂಗಾತಿಯಂತೂ ಹೌದು. ನಿನ್ನ ಬೀಳ್ಕೊಡುತ್ತಿಲ್ಲ ಮತ್ತೆ ಸ್ವಾಗತಿಸುತ್ತಿದ್ದೇನೆ ಎಂದೆ. ಸದ್ದು ಮಾಡುವುದು ನಿಲ್ಲಿಸಿ ನಕ್ಕಂತೆ ಭಾಸವಾಯಿತು ***********************************

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ Read Post »

ಇತರೆ, ಲಹರಿ

ಚಂದಿರನ ಬೆಳದಿಂಗಳಲ್ಲಿ

ಭಾವಲಹರಿ… ಭಾವಲಹರಿ… ರಶ್ಮಿ.ಎಸ್. ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ. ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ. ಮತ್ತದೆ ರಾತ್ರಿ, ಮತ್ತದೆ ಒಂಟಿತನ. ಹಾಸಿಗೆಗೆ ಬೆನ್ನು ಆನಿಸಿ, ಅಂಗಾತ ಮಲಗಿದಾಗ, ಫ್ಯಾನಿನ ರೆಕ್ಕಿಗಳು ಮಾತಿಗಿಳೀತಾವ. ಈ ಫ್ಯಾನಿನ ರೆಕ್ಕಿಗಳ ಜೊತಿಗೆ ನನ್ನವು ಹಲವಾರು ಗುಟ್ಟುಗಳದಾವ.  ರಾತ್ರಿಗಳಿಂದ ಯಾವ ಗುಟ್ಟುಗಳನ್ನೂ ಮುಚ್ಚಿಡಾಕ ಆಗೂದಿಲ್ಲ. ಗುಟ್ಟೇನು ಬಂತು.. ಏನೇನೂ ಮುಚ್ಚಿಡಾಕ ಆಗೂದಿಲ್ಲ. ಅಗ್ದಿ ನೀರವ ರಾತ್ರಿ ಇವು. ತೀರ ನಮ್ಮ ಹೃದಯದ ಲಯ, ನಮಗೇ ಕೇಳಿಸುವಷ್ಟು ನೀರವ ರಾತ್ರಿಗಳಿವು. ಇದ್ದಕ್ಕಿದ್ದಂತೆ ಫೋನಿನಲ್ಲಿ ಮಿನುಗು ದೀಪ. ಕತ್ತಲೆಗೆ ಹೊಂದಿಕೆಯಾಗಲಿ ಅಂತ ಬೆಳಕು ಕಡಿಮೆ ಮಾಡಿದಷ್ಟೂ ಮಾದಕ ಮಂದ ದೀಪ. ಯಾವುದೋ ಮೂಲೆಯಲ್ಲಿರುವವರಿಗೆ ಇದೀಗ ಎಚ್ಚರಿಕೆ. ಹೇಗಿದ್ದೀರಿ ಅಂತ ಕೇಳುವ ಕಾಳಜಿ. ಆದರೆ ಮನಸಿಗೆ ಅದ್ಯಾವುದೂ ಬೇಡ. ಯಾರೂ ಬೇಡ. ಮತ್ತದೇ ಏಕಾಂತದೊಳು, ನಾಭಿಯಾಳದಿಂದ ಒಮ್ಮೊಮ್ಮೆ ಅಳು, ನರನಾಡಿಯಲ್ಲಿ ವ್ಯಾಪಿಸುವಂತೆ ಆವರಿಸುತ್ತದೆ. ಕಂಗಳಿಗೂ ಹಟ. ಇನ್ನು ಕಂಬನಿ ಸುರಿಸಲಾರೆವು ಎಂಬಂತೆ. ಜೊತೆಗೆ ಕೆನ್ನೆಗಾನಲಾರೆವು ಎಂಬಂತೆ. ಮತ್ತೆ ಫೋನಿನ ಮಿಂಚು. ಅಲೆಮಾರಿಯೊಬ್ಬ, ಕಸ ಕೆದುಕುತ್ತ, ಹೂ ಗಿಡಗಳ ದಿಟ್ಟಿಸುತ್ತ, ಕಾಲಿನಿಂದ ಕಲ್ಲನ್ನೊಂದು ಒದೆಯುತ್ತ ಹೋದಂತೆ… ಎಫ್‌.ಬಿಯಲ್ಲಿ ಕಣ್ಣಾಡಿಸುತ್ತ, ಕೈ ಆಡಿಸುತ್ತ ಅಲೆಮಾರಿಯಾಗುವುದು. ಯಾವುದೇ ಉದ್ದೇಶವಿಲ್ಲದೆ, ಯಾವುದೇ ಅಜೆಂಡಾಗಳಿಲ್ಲದೆ, ಯಾರಿಗೂ ಕಿರಿಕಿರಿ ಮಾಡದೇ, ಯಾರನ್ನೂ ಮೆಚ್ಚಿಸಲೆಂದೋ, ದೂರಲೆಂದೋ… ಏನೇನೂ ಬರೆಯದೆ, ಖುಷಿಯೆನಿಸಿದ ಹಾಡು, ಸಂಕಟವನ್ನೇ ಪದಗಳಲ್ಲಿ ಹಿಡಿದಿಡುವ ಶಾಯರಿಗಳನ್ನು ಹಂಚುತ್ತ ಹೋಗುವುದು. ಅದು ಯಾರಾದರೂ ಓದಲಿ ಅಂತಲ್ಲ. ನಮ್ಮ ಪುಟದಲ್ಲಿ ಉಳಿಯಲಿ ಅಂತ. ಅಂಥವನ್ನು ಓದಿ, ಒಂದಷ್ಟು ಮೆಸೆಂಜರ್‌ನಲ್ಲಿ ವಿಚಾರಿಸಿಕೊಳ್ಳುವುದು. ಆಪ್ತರೆನಿಸಿದರೆ ಉತ್ತರಿಸುವದು, ಇಲ್ಲದಿರೆ ನೋಡಿ, ಮುಗುಳೊಂದನ್ನು ಚೆಲ್ಲಿ, ಮುಂದಕ್ಕೆ ಹೋಗುವುದು. ಇದಿಷ್ಟೂ ಆಗುವಾಗ, ಬದುಕಿಡೀ ಕಪ್ಪುಬಿಳುಪಿನ ಚಿತ್ರದಂತೆ ಕಾಣತೊಡಗುತ್ತದೆ. ಕಾಡತೊಡಗುತ್ತದೆ. ಕತ್ತಲೆಯೊಳಗೆ ಬಣ್ಣಗಳಿಲ್ಲ. ಬಣ್ಣಗಳಿರುವುದಿಲ್ಲ. ಒಂದೋ ಕಡುಕಪ್ಪು. ಇಲ್ಲವೇ ಶ್ವೇತಶುಭ್ರ ಬಿಳುಪು. ಈ ಎರಡರ ನಡುವಿನ ಬೂದು ಬಣ್ಣಕ್ಕೆ ಯಾವ ಅರ್ಥವೂ ಇಲ್ಲ. ಕಡುಕಪ್ಪು ರಾತ್ರಿ, ಹೀಗೆ ಬೆಳಗಿನ ಸೆರಗಿನಂಚಿಗೆ ಸರಿಯುವಾಗ ನಿದ್ದೆ ಸುಳಿಯುತ್ತದೆ. ಕಣ್ರೆಪ್ಪೆ ಕೆನ್ನೆಗಾನುತ್ತವೆ… ಈ ರಾತ್ರಿಗಳಲ್ಲಿ ಅದೆಷ್ಟು ಗುಟ್ಟುಗಳಡಗಿವೆಯೋ… ಅದೆಷ್ಟು ಚುಕ್ಕೆಯಂಥ ಮಿಣಮಿಣ ನಗು ಮಿಂಚಿದೆಯೋ… ಮತ್ತ ಮರುದಿನ ಎಚ್ಚರ ಆದಾಗ, ಸಣ್ಣದೊಂದು ನಗು.. ಇನ್ನೊಂದು ರಾತ್ರಿ ಸಿಕ್ತು.. ಮೋಹಿಸಲು… ಏಕಾಂತವನ್ನು ಅನುಭವಿಸಲು, ಯಾವ ಮುಖವಾಡಗಳಿಲ್ಲದೆ ನನ್ನತನವನ್ನು ಇಡಿಯಾಗಿ ಅನುಭವಿಸಲು. ಈ ಚಳಿಗಾಲದ ನೀರವ ರಾತ್ರಿಯ ಮೌನದೊಳಗಿನ ಮಾತುಗಳಿಗೆ, ಮಾತುಗಳ ನಡುವಿನ ಮೌನಕ್ಕೆ ಮರುಳಾಗುತ್ತಲೇ ಇರ್ತೀನಿ. ರಾತ್ರಿಗಳನ್ನು ಮೋಹಿಸುವುದು ಈ ಕಾರಣಕ್ಕೆ. ಮೋಹಕ ರಾತ್ರಿಗಳನ್ನು ಪ್ರೀತಿಸುವುದೂ ಇದೇ ಕಾರಣಕ್ಕೆ. **********************************

ಚಂದಿರನ ಬೆಳದಿಂಗಳಲ್ಲಿ Read Post »

ಇತರೆ, ಲಹರಿ

ಒಲವಿನೋಲೆ..

ಒಲವಿನೋಲೆ.. ಜಯಶ್ರೀ.ಭ. ಭಂಡಾರಿ ಓ ಒಲವೇ ನೀ ಎಲ್ಲಿರುವೆ…. ನೀ ನನ್ನ ಹುಡುಕಿಕೊಂಡು ಬಂದು ಆಗಲೇ ೨ ವರ್ಷ ಕಳೆಯಿತು. ನೀ ಬಂದಾಗ ನನಗೆ ನಿನ್ನ ಮೇಲೆ ಅದ್ಯಾವ ಭಾವನೆ ಗಳೇ ಇರಲಿಲ್ಲ. ಈಗ ನಾನು ಈ ಭೂಮಂಡಲಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ.  ಪ್ರತಿಕ್ಷಣ ನಿನ್ನ ಬಿಟ್ಟರೆ ಹರಿದಾಡುವ ಗಾಳಿಗೂ ಜಾಗವಿಲ್ಲ. ನನ್ನ ಬಾಳಿನ ಕಗ್ಗತ್ತಲು ಬೆಳಗಲು ನೀನೇ ಬೇಕು. ಅತಿಯಾದ ಪ್ರೀತಿಯಲ್ಲಿ ನನ್ನ ನಾ ಮರೆತಿಹೆ.ನೀನಿಲ್ಲದ ಹೊತ್ತು ನೆನೆಯಲು ಸಾಧ್ಯವಿಲ್ಲ. ನಿನ್ನಲ್ಲಿ ಒಂದು ಕೆಟ್ಟ ಹಾಬಿ ಇದೆ.ಡ್ಯೂಟಿಯಲಿ ನಿರತನಾದರೆ ನನ್ನ ಮರೆತು ತನ್ಮಯನಾಗಿ ಬಿಡತಿ. ಅನೇಕ ಸಲ ಫೋನಾಯಿಸಿದರೂ ರಿಸಿವ್ ಮಾಡಲ್ಲ.  ನಾನು ಸಿಟ್ಟಿನಿಂದ ಮುಖ ಉಬ್ಬಿಸಿ ಕೂತರೆ ಸಂಜೆ ನೇರ ಬಂದವನೇ ಕೊರಳಿಗೆ ಬೆರಳಹಾರ ಹಾಕಿ ಕೆನ್ನೆ ಚುಂಬಿಸಿ  ನಿನ್ನ ಬೆವರು ಘಮಲಿನಲ್ಲಿ ಮೀಯಿಸಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತವಾಗಿದೆ. ಹೀಗಾಗಿ ನನ್ನ‌ ಸಿಟ್ಟು ಗಾಳಿಗಿಟ್ಪ ದೀಪದಂತೆ ಆಗುತ್ತದೆ. ಅಪ್ಪಾಜಿ ಪ್ಲೀಜ್ ಕ್ಷಮಿಸು ಅಂತ ನನ್ನ ಮುದ್ದು ಮಾಡುವಾಗ ನನಗೆ ಸಿಟ್ಟಿನಲ್ಲಿಯೇ ಒಲವು ಹೆಚ್ಚು ಲವಲವಿಕೆ ನೀಡುತ್ತದೆ. ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕದ ಚೆಲುವೆ ಎಂದು ರಾಗವಾಗಿ ಹಾಡುವ ನಿನ್ನ ದನಿಗೆ ಸೋತು ಶರಣಾಗಿ ಬಿಡುವೆ.      ನನಗೆ ಕೊಂಚ ಆರಾಮ ತಪ್ಪಿದರೂ ನಿನ್ನ ಜೀವ ಬಾಡಿ ಬಸವಳಿಯುತ್ತೆ.   ಅತಿಯಾದ ಕಾಳಜಿ ಮಾಡಿ ನನ್ನ ಆರಾಮ ಮಾಡುವೆ.  ಕಣ್ಣ ರೆಪ್ಪೆಯಂತೆ ಕಾಯುವ ನಿನ್ನ ಹೃದಯ ಅನುರಾಗಕೆ ಬಣ್ಣಿಸಲು ಪದಗಳೇ ಇಲ್ಲ ಗೆಳೆಯ. ಟೆಲಿಫೋನ್ ಗೆಳತಿ ನೀನಿಲ್ಲದೆ ಇರಲಾರೆ ಎಂದು ಛೇಡಿಸಿ ಕಾಡುವ ನೀ ಹಿಂಗ ಅಚಾನಕ್  ದೂರಾಗಿ ಹೋಗತಿ ಅಂದುಕೊಂಡಿರಲಿಲ್ಲ ಗೆಳೆಯಾ.. . ಯಾಕೆ ‌ದೂರಾದೆ ಏನಾಯ್ತು ನಿನ್ನ  ಒಲವು. ಬೊಗಸೆ ಕಂಗಳ ನಿನ್ನ ಗೆಳತಿಯನ್ನು ಮರೆಯಲು ನಾ ಮಾಡಿದ ತಪ್ಪಾದರೂ ಏನು? ನೀನಿಲ್ಲದೆ ಅರೆ ಜೀವವಾಗಿರುವೆ. ಚಂದ್ರನ ತಂಪು ಬಿಸಿಲಾಗಿದೆ.ಸುಳಿಯುವ  ಗಾಳಿಯಲೂ ನಿನ್ನನೇ ಹುಡುಕುವಂತಾಗಿದೆ. ನೀನಿಲ್ಲದೆ ಈ ಜನ್ಮದಲ್ಲಿ ನನಗೆ ಬದುಕುವ ಆಸೆಯಿಲ್ಲ. ನಿನ್ನ ಸಾನ್ನಿಧ್ಯ, ಆಲಿಂಗನ, ಬಿಸಿಯುಸಿರು ಆ ಮಿಂಚು ಕಂಗಳಲ್ಲಿ ವ್ಯಕ್ತವಾಗುವ ಮಾತು ಗಳಿಗೆ ಮೀರಿದ ಭಾವನೆಗಳನ್ನು ಹೆಂಗೆ ಮರೆಯಲಿ ದೇವರಂಥ ಗೆಳೆಯಾ… ವರ್ಷ ದ ಮೂರೂ ಕಾಲಗಳಲ್ಲಿಯೂ ಧೋ ….. ಎಂದು ಒಲವಿನ ಮಳೆ ಸುರಿಸುತ್ತಿದ್ದರೆ  ಈ ನಿನ್ನ ಗೆಳತಿ ಪುನೀತಳಾಗಿ ಅರಳುತ್ತಿದ್ದಳು. ಪ್ರೀತಿಯ ಅಮೃತಧಾರೆ ಉಣಿ‌ಸಿ ದೂರ ಹೋದೆ. ನೀ ಬರುವ ದಾರಿಯಲಿ ಕಂಗಳ ಹಾಸಿ ಕಾಯುತಿರುವ…..  ನಿನ್ನ ಕಪ್ಪು ಕಂಗಳ ಚೆಲುವೆ… ****************************************

ಒಲವಿನೋಲೆ.. Read Post »

ಇತರೆ, ಲಹರಿ

ನಾದಬೇಕು …ನಾದ ಬೇಕು !!

ರಶ್ಮಿ ಬರೆಯುತ್ತಾರೆ
ಈಗ ಅಡಗಿ ಮಾಡೂದೆ ಒಂದು ಸಮಯ ನಿರ್ವಹಣೆಯ ತಂತ್ರ ಆಗಿ ಬದಲಾಗೇದ. ಅಡಗಿ ಮಾಡೋರಿಗೂ ವ್ಯವಧಾನ ಇಲ್ಲ. ಊಟ ಅಸ್ವಾದಿಸೋರಿಗೂ ಇಲ್ಲ. ಅಡಗಿ ಮಾಡೂದು ಬರೂದಿಲ್ಲ ಅಂತ ಹೇಳೂದೆ ನಾಜೂಕಿನ ಮಾತಾಗೇದ

ನಾದಬೇಕು …ನಾದ ಬೇಕು !! Read Post »

ಇತರೆ, ಲಹರಿ

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು”

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” ರಶ್ಮಿ ಎಸ್. ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ ಡಿ. 6,7,8 ಬಾಬರಿ ಮಸೀದಿ ಪ್ರಕರಣ ಆದಾಗ ಇಡೀ ದೇಶ ಕೋಮು ದಳ್ಳುರಿಯೊಳಗ ಧಗಧಗಿಸುತ್ತಿತ್ತು… ನಮ್ಮನ್ಯಾಗ ಮಾತ್ರ ಪ್ರೀತಿಯ ದೀಪ ಜಗಮಗಸಾತಿತ್ತು… ಕಾರಣ … ಮುಗಲ ಮಾರಿಯೊಳಗ ದೇವರ ನಗಿ ನೋಡ್ಕೊಂತ… ನನ್ನ ತಾಯಾ, (ದೊಡ್ಡಪ್ಪ) ಅಂಗಳದೊಳಗ ಅರಾಮ ಕುರ್ಚಿ ಹಾಕ್ಕೊಂಡು ಆಕಾಶ ನೋಡ್ಕೊಂತ ಕುಂತಾರ ಅಂದ್ರ ಏನೋ ಚಿಂತಿ ಕಾಡ್ತದ ಅಂತನೇ ಅರ್ಥ. ಅವಾಗ ನಾವು ಯಾರೂ ಅವರೊಟ್ಟಿಗೆ ಮಾತಾಡ್ತಿರಲಿಲ್ಲ. ಬೇವಿನ ಮರದ ನೆರಳಾಗ ಕುಂತು ನೀಲಿ ಆಕಾಶದೊಳಗ ಹಾದು ಹೋಗುವ ಬಿಳೀ ಮುಗಿಲು ನೋಡ್ಕೊಂತ ಅವರ ಕೈ ಲೆಕ್ಕಾ ಹಾಕ್ತಿದ್ವು. ಅವರ ಹೆಂಡತಿ ಜಿಯಾ, ಮೊಮ್ಮಾ ಅಂತ ಕರೀತಿದ್ವಿ. ಕುರ್ಚಿಯಿಂದ ‘ಜಿಯಾ… ಚಾಯ್‌.. ಪಿಲಾತೆ’ ಅಂತ ಕೇಳಿದ್ರ ಸಾಕು, (ಉತ್ತರ ಸಿಕ್ತು ಅಂತನೇ ಅರ್ಥ.) ಛಾ ತರೂತನಾನೂ ಅವರ ಗುಡಾಣದಂಥ ಹೊಟ್ಟಿ ಮ್ಯಾಲೆ ನನ್ನ ಕೂಸಿನ್ಹಂಗ ಮಲಗಿಸಿಕೊಂಡು ಗುಳುಗುಳು ಮಾಡೋರು. ನನ್ನ ನಗಿ ಅಲಿಅಲಿಯಾಗಿ ಹರಡ್ತಿತ್ತು. ಏಳುವರಿ ಅಡಿ ಎತ್ತರದ ಅಜಾನುಬಾಹು ನನ್ನ ತಾಯಾ. ಅವರ ಕರಡಿ ಅಪ್ಪುಗೆಯೊಳಗ ನಾನು ಮಾತ್ರ ಯಾವತ್ತಿಗೂ ಕೂಸೇ. ಯಾರಿಗೂ ಇರಲಾರದ ಸಲಗಿ ನನಗ ಇತ್ತು. ‘ಆಸ್‌ಮಾನ್‌ಸೆ ಕ್ಯಾ ಆಪ್‌ಕೊ ಅಲ್ಲಾತಾಲಾ ನೆ ಜವಾಬ್‌ ದಿಯಾ?’ (ಆಕಾಶದಿಂದ ಆ ದೇವರು ನಿಮಗ ಉತ್ತರ ಕೊಟ್ರೇನು?) ಅಂತ ಕೇಳಿದ್ರ ಅದಕ್ಕೂ ಗುಳುಗುಳು ಮಾಡೂದೆ ಉತ್ತರ ಆಗಿರ್ತಿತ್ತು. ನಾವೆಷ್ಟೇ ದೊಡ್ಡವರು ಆಗಿದ್ರೂ ಈ ಕರಡಿ ಅಪ್ಪುಗೆ, ಈ ಗುಳುಗುಳು ಮತ್ತು ಅವರ ಮಡಿಲೊಳಗ ಮಗುವಾಗಿ ಮಲಗುವ ವಾತ್ಸಲ್ಯದಿಂದ ಮಾತ್ರ ಯಾವತ್ತೂ ವಂಚಿತರಾಗಿರಲಿಲ್ಲ. ಆದ್ರ ನಾವು ಬೆಳದ್ಹಂಗ ನಮ್ಮ ಪ್ರಶ್ನೆಗಳು ಭಿನ್ನ ಆಗಿರ್ತಿದ್ದವು. ಬ್ಯಾಸಗಿ ರಾತ್ರಿ ಅದು. ಸ್ವಚ್ಛ ಆಕಾಶ. ಚುಕ್ಕಿ ಅಲ್ಲಲ್ಲೇ ಮಿಣಮಿಣ ಅಂತಿದ್ವು. ದೊಡ್ಡ ಅಂಗಳ. ಬೇವಿನ ಮರ, ತೆಂಗಿನ ಮರ, ಬದಾಮಿ ಮರದ ನೆರಳನಾಗ ನಾವೆಲ್ಲ ಕುಂತು ಆಕಾಶ ನೋಡ್ತಿದ್ವಿ. ಹೋಳಿ ಹುಣ್ಣಿವಿ ಸಮೀಪ ಇತ್ತು. ಒಂದೆರಡೇ ಮೋಡದ ತುಂಡುಗಳು ದುಡುದುಡು ಓಡಿ ಹೊಂಟಿದ್ವು. ಅದೇ ಆಗ ಕಾಲು ಬಂದ ಉಡಾಳ ಕೂಸಿನ್ಹಂಗ. ಅವಾಗ ತಾಯಾನ ಮಡಿಲೊಳಗ ಕುಂತು ದ್ರಾಕ್ಷಿ ತಿನ್ಕೊಂತ.. ‘ಖರೇನೆ ನಿಮಗ ದೇವ್ರು ಉತ್ರಾ ಕೊಡ್ತಾನ? ಖರೇನೆ ದೇವರ ಮನಿ ಆಕಾಶದೊಳಗ ಐತೇನು? ನನಗೂ ಒಮ್ಮೆ ತೋರಸ್ರಿ…’ ಎಲ್ಲಾ ಪ್ರಶ್ನೆಗೂ ಉತ್ತರ ಕೊಡೂಕಿಂತ ಮೊದಲು ಉದ್ದಾನುದ್ದ ದ್ರಾಕ್ಷಿ ಆರಸಿ ಬಾಯಿಗೆ ಹಾಕ್ತಿದ್ರು. ಆಮೇಲೆ ತಾಯಾ ಮಾತಾಡಾಕ ಸುರು ಮಾಡಿದ್ರು. ‘ದೇವರು ಆಕಾಶದೊಳಗ ಇರೂದಿಲ್ಲ. ದೇವರು ನಮ್ಮೊಳಗ ಇರ್ತಾನ. ನಮ್ಮ ಮನಸಿನಾಗ ಇರ್ತಾನ. ಮನಸನ್ನು ಆಕಾಶದಷ್ಟು ವಿಷಾಲ ಮಾಡಿಕೊಂಡು ಅವನಿಗೆ ನಮ್ಮೊಳಗೇ ಹುಡುಕಬೇಕು. ಅವಾಗ ಮನಸ ಮ್ಯಾಲೆ ಕವಿದಿರುವ ಮೋಡಗಳೆಲ್ಲ ಚದುರಿ ಹೋಗ್ತಾವ. ನಮ್ಮ ಚಿಂತಿನೂ ಹಂಗೆ. ನಮ್ಮನ್ನೇ ನಾವು ನೋಡ್ಕೋಬೇಕು. ನಮ್ಮನ್ನ ಆವರಿಸಿರುವ ಮೋಡಗಳು ಚದರುವ ಹಂಗ ಮಾಡಬೇಕು. ಆಗ ಪರಿಹಾರದ ಚುಕ್ಕಿಯ ಹೊಳಹು ನಮಗೇ ಹೊಳೀತಾವ’ ನಮ್ಮೊಳಗಿನ ದೇವರನ್ನು ಹುಡುಕುವ ಪರಿ ಮಾತ್ರ ನಾವೇ ಕಂಡುಕೋಬೇಕು. ನಮ್ಮ ದೇವರನ್ನು ನಾವೇ ಕಾಣಬೇಕು ಅಂದ್ರು. ‘ಅಂದ್ರ, ನಿಮ್ಮ ದೇವರು ಬ್ಯಾರೆ, ನನ್ನ ದೇವರು ಬ್ಯಾರೆ ಏನು’ ಅಂದೆ. ‘ದೇವರು ಅಂದ್ರ ಅದೊಂದು ಸತ್ಯ. ನಿನ್ನ ಸತ್ಯವೇ ಬೇರೆ, ನನ್ನ ಸತ್ಯವೇ ಬೇರೆ. ಒಂದು ಪರಿಪೂರ್ಣ ಸತ್ಯವಾಗಿರೂದು ಸಾಧ್ಯವೇ ಇಲ್ಲ. ಒಂದು ಸತ್ಯಕ್ಕೆ ನಾಲ್ಕಲ್ಲ ಹದಿನಾರು ಆಯಾಮ ಇರ್ತಾವ. ಒಂದು ಇನ್ನೊಂದಕ್ಕ ಸತ್ಯ ಅಲ್ಲ ಅಂತ ಅನ್ನಸಬಹುದು’. ‘ಹಂಗಾದ್ರ ಎಲ್ಲಾನೂ ಸತ್ಯ ಅಲ್ಲ, ಎಲ್ಲಾನೂ ಸುಳ್ಳಲ್ಲ ಅಂತ ಅಂತೀರೇನು? ಯಾರಿಗೂ ಕೆಡುಕಾಗದೇ ಇರೂದು ಸತ್ಯ. ನಮ್ಮೊಳಗಿನ ಸತ್ಯವನ್ನು ನಾವೇ ಹುಡುಕಬೇಕು.’ ಹಿಂಗೇ ಸೂಫಿ ಸಂತನಹಂಗ ಮಾತಾಡತಿದ್ದ ತಾಯಾಗ ಸಿಟ್ಟು ಬಂದ್ರ ಮಾತ್ರ ಅವರೇ ಹೇಳೂಹಂಗ ಹೈವಾನ್‌ ಆಗ್ತಿದ್ರು. ಸಿಕ್ಕಿದ್ದು ತೊಗೊಂಡು ಆಳಮಕ್ಕಳಿಗೆ ಹೊಡೀತಿದ್ರು. ಅವರ ಆ ಅವತಾರ ಮಾತ್ರ ದಿಗಿಲು ಹುಟ್ಟಸ್ತಿತ್ತು. ಯಾಕ ಅವಾಗ ಅವರೊಳಗಿನ ದೇವರು ಮಲಗಿರ್ತಿದ್ದ? ಅಥವಾ ಅವರೇ ಹೇಳುಹಂಗ ಆ ದೇವರೇ ಇಲ್ಲವಾಗ್ತಿದ್ದನಾ? ಗೊತ್ತಿಲ್ಲ. ಈಗ ಹೇಳಾಕ ಅವರಿಲ್ಲ. ಆದ್ರ ಅವರು ತೋರಿದ ಆ ದಾರಿ ಈಗಲೂ ಭಾಳಷ್ಟು ಸಲೆ ಖರೆ ಅನ್ನಸ್ತದ. ನಮ್ಮ ಜೀವನದಾಗ ಒಂದು ಹಂತ ಎಂಥಾದ್ದು ಬರ್ತದ ಅಂದ್ರ, ‘ಎಲ್ಲಾರಿಗೆ ನಾವು ಬ್ಯಾಡಾಗೇವಿ. ನಾವಿರಲಿಲ್ಲಂದ್ರೂ ಎಲ್ಲಾನೂ ನಡದು ಹೋಗ್ತದ. ನಾವು ಎಲ್ಲಿಯೂ ಅನಿವಾರ್ಯ ಅಲ್ಲ. ನಾವಿರಲಿಲ್ಲ ಅಂದ್ರ ನಮಗಿರುವ ಕಷ್ಟಗಳು ನಮಗಷ್ಟೇ ಇರೂದಿಲ್ಲ. ಆದ್ರ ಉಳದೋರು ಆರಾಮ ಇರ್ತಾರ’ ಅನ್ನೂದೊಂದು ಭಾವ ಗಟ್ಟಿಯಾಗಾಕ ಸುರುಮಾಡ್ತದ. ಇದೊಂಥರ ನಮ್ಮ ಜೀವನಾಸಕ್ತಿ, ಆಸ್ಥೆಯನ್ನೇ ಕೊಂದು ಬಿಡ್ತದ. ಏನು ಮಾಡಿದ್ರೂ ಅಷ್ಟೆ, ಎಷ್ಟು ಮಾಡಿದ್ರೂ ಅಷ್ಟೆ… ಯಾರಿಗರೆ ಯಾಕ ಮಾಡಬೇಕು?’ ಇಂಥವೇ ಅಸಮಾಧಾನಗಳು ಗೂಡು ಕಟ್ತಾವ. ಈ ಗೂಡಿನೊಳಗ ಸಾವನ್ನು ಪ್ರೀತಿಸುವ ಸೈತಾನ ವಾಸಸ್ತಾನ. ಜೀವದ ಹಕ್ಕಿಯನ್ನ ತನ್ನ ಗೂಡಿನೊಳಗ ಮೆತ್ತನೆಯ ಹಾಸು ಮಾಡಿಕೊಂಡು ಮಲಗಿ ಬಿಡ್ತಾನ. ಅದು ಕೊಸರಾಡ್ತದ. ಒದ್ದಾಡ್ತದ. ಉಸಿರುಗಟ್ಕೊಂಡು, ಬದುಕಾಕ ಒಂದು ಸಣ್ಣ ಎಳಿ ಸಿಕ್ರೂ ಸಾಕು ಅಂತ ಪಿಳಿಪಿಳಿ ಕಣ್ಣು ಬಿಟ್ಕೊಂಡು ಕುಂತಿರ್ತದ. ನಿದ್ದಿ ಅನ್ನೂದು ಅದಕ್ಕ ಬಂಗಾರದ್ಹಂಗ ಭಾಳ ತುಟ್ಟಿ. ಹಿಂಗಾದಾಗಲೆಲ್ಲ ಎಲ್ಲಾರು ಮಲಕ್ಕೊಂಡ ಮ್ಯಾಲೆ ಬಾಲ್ಕನಿಗೆ ಬಂದು ನಿಂದರ್ತೀನಿ. ಸ್ವಚ್ಛ ಮುಗಲನಾಗ ಮೋಡಗಳೂ ಓಡತಿರ್ತಾವ. ಕೆಲವೊಮ್ಮೆ ಮಂದ. ಕೆಲವೊಮ್ಮೆ ಅಗ್ದಿ ಚುರುಕಾಗಿ. ನಮ್ಮ ಪರಿಸ್ಥಿತಿಗೆ ಕಾರಣ ಹುಡುಕೂದೇ ಆಕಾಶ ನೋಡ್ಕೋಂತ ಮನಸಿನೊಳಗ ಹಣಕಿ ಹಾಕ್ತೀವಿ. ಯಾರಿಗೂ ನಾವು ಅನಿವಾರ್ಯವಿಲ್ಲ ಅಂತ ಅಂದ್ಕೊಂಡ ಕ್ಷಣದ್ಹಂಗೇ ಒಂದರೆ ನಿಮಿಷ ಮರುದಿನದ ಬೆಳಗು ನಾನಿಲ್ಲದೆ, ನನ್ನ ಗಂಡ, ಮಕ್ಕಳಿಗೆ ಹೆಂಗಿರಬಹುದು, ನಾನಿಲ್ಲದ ಸತ್ಯವನ್ನು ನನ್ನ ಹೆತ್ತವರು ಹೆಂಗ ಒಪ್ಕೊಬಹುದು ಅನ್ನೂ ಪ್ರಶ್ನೆಗಳು ಈ ಮೋಡದೊಂದಿಗೆ ಹಾದು ಹೋಗ್ತಾವ. ಮತ್ತ ಹಂಗೇ ಆಕಾಶ ಸ್ವಚ್ಛ ಆಗ್ತದ. ಮನಸೂ. ಕೆಲವೊಮ್ಮೆ ಆಕಾಶದೊಳಗ ಎಲ್ಲೊ ಚುಕ್ಕಿಯಾಗಿ ನನ್ನನ್ನ ನೋಡ್ತಿರುವ ತಾಯಾ, ಮೊಮ್ಮಾ ನೆನಪಾಗ್ತಾರ. ಎಂಥ ಸಂದಿಗ್ಧ ಪರಿಸ್ಥಿತಿಯೊಳಗೂ ನಮ್ಮ ಇರುವಿಕೆಗೊಂದು ಅರ್ಥ ಅದ. ಆ ಪರಿಸ್ಥಿತಿಯೂ ನಮ್ಮ ಜೀವಕ್ಕ, ಜೀವನಕ್ಕ ಒಂದು ಅರ್ಥ ನೀಡ್ತದ. ಈ ಅರ್ಥದ ಹೊಳಹು ಹೊಳದಾಗ ಆಕಾಶದಾಗ ಬೂದು ಬಣ್ಣ ಹೋಗಿ, ತಿಳಿ ಗುಲಾಬಿ ಬಣ್ಣ ಮೂಡ್ತಿರ್ತದ. ಜೊತಿಗೆ ಸೂರ್ಯನೂ ಹುಟ್ಟತಿರ್ತಾನ. ಅದರೊಟ್ಟಿಗೆ ನಾವೂ ಮತ್ತ ಹುಟ್ಟಿ ಬರಬೇಕು. ಆ ಹೊಸ ಹೊಳಹಿನೊಂದಿಗೆ. ನಮ್ಮ ಸತ್ಯದ ದೇವರು ನಮಗ ಕಾಣುವ ಹೊತ್ತದು. ಮುಗಿಲಮಾರಿಯೊಳಗ ದೇವರು ನಕ್ಕು ಮುಂದ ಸಾಗೂ ಹೊತ್ತದು. ನೋಡುವ ಕಣ್ಣುಬೇಕು. ಹುಡುಕುವ ಮನಸು ಬೇಕು. ತಾಯಾನ್ಹಂಗ..! …*******************************************************

” ನಮ್ಮೊಳಗಿನ ಸತ್ಯ ನಾವ ಹುಡುಕಬೇಕು” Read Post »

ಇತರೆ, ಲಹರಿ

ಭಾವಲಹರಿ

ಲಹರಿ ಭಾವಲಹರಿ ರಶ್ಮಿ.ಎಸ್. ಸೌಹಾರ್ದ, ಸಹಬಾಳ್ವೆ ಮುಂತಾದ ಪದಗಳನ್ನು ನಾವೆಲ್ಲಿಯೂ ಓದಲಿಲ್ಲ. ವಿಶ್ಲೇಷಿಸಲಿಲ್ಲ. ಆದರೆ ಬಾಳಿದೆವು. ಆ ಬದುಕಿನ ಜೀವದ್ರವ್ಯ ಮೊಮ್ಮಾ.. ಜಿಯಾ ಸುಲ್ತಾನಾ. ಅವರ ನೆನಪಿನಲ್ಲಿ ಬರೆದ ಬರಹವಿದು.. ನಿಮ್ಮ ಉಡಿಗೆ.. ನೀವಷ್ಟು ಅವರ ಪ್ರೀತಿ ಉಣ್ಣಲಿ ಎಂದು… …………………………….. ಗಾಬರಿಯಾಗ್ತದ. ನಾವೆಲ್ಲ ಮೊಮ್ಮ ಇಲ್ಲದೇ ಬದುಕುತ್ತ್ದಿದೇವೆ. ಇನಿದನಿಯ, ವಾತ್ಸಲ್ಯ ತುಂಬಿ ಕರೆಯುವ ಮೊಮ್ಮ . ಸಾಯಿರಾಬಾನುವಿನ ಅಕ್ಕನಂತೆ ಕಾಣಿಸುತ್ತ್ದಿದ್ದ… ನಡೆದರೆ ದೇಹವೇ ಭಾರವೆಂದೆನಿಸುತ್ತ್ದಿದ ದೀರ್ಘದೇಹಿ. ಮುಟ್ಟಿದರೆಲ್ಲಿ ಕೊಳೆಯಗುವರೋ ಎಂಬ ದಂತವರ್ಣದವರು. ಮೊಮ್ಮ  ಇಲ್ಲ..!  ನಮ್ಮ ಮನೆಗೆ ಬಂದಾಗಲೆಲ್ಲ ಹಣೆಗೆ ಕುಂಕುಮವಿಟ್ಟುಕೊಂಡು, ಕೆನ್ನೆಗೆ ಅರಿಶಿನ ಲೇಪಿಸಿಕೊಂಡು ಉಡಿ ತುಂಬಿಸಿ, ಹೊಸಿಲಿಗೆ ಕೈ ಮುಗಿದು ಹೋಗುತ್ತ್ದಿದ ಮೊಮ್ಮ . ಆ ಕ್ಷಣ ನೋಡಿದರೆ ಇವರು ಅನ್ಯಧರ್ಮೀಯರೇ… ಮುಸ್ಲಿಂ ಮನೆತನದವರೇ ಎಂಬ ಸಂಶಯ ಮೂಡುತ್ತಿತ್ತು. ಆದರೆ ಪ್ರತಿ ವರ್ಷದ ಗೌರಿ ಹಬ್ಬಕ್ಕೆ ನಮ್ಮ ಮನೆಯ ಬಾಗಿನ ಪಡೆಯಲು ಬಂದಾಗಲೆಲ್ಲ ಕುಂಕುಮ ಅವರ ಹಣೆಯ ಮೇಲೆ ರಾರಾಜಿಸುತ್ತಿತ್ತು. ಆಗ ಅಲ್ಲಿ ಯಾವ ಮತಾಂಧ ನಂಬಿಕೆಗಳೂ ಇರಲಿಲ್ಲ. ಕೇವಲ ಪ್ರೀತಿ ಇತ್ತು.  ಮತಗಳಿಗೂ ಮೀರಿದ ಬಾಂಧವ್ಯವಿತ್ತು. ಮೊಮ್ಮ  ಬೀದರ್‌ನ ಮುಲ್ತಾನಿ ಮನೆತನ ಸೊಸೆ. ಬೆಳಗಾವಿ ಖಾನ್ ಮನೆತನದ ಮಗಳು. ಬೀದರ್‌ಗೆ ಸೊಸೆಯಾಗಿ ಬಂದಾಗ ಅದಿನ್ನೂ ರಜಾಕರ ಹಾವಳಿಯ ಕೆಟ್ಟ ನೆನಪುಗಳಿಂದ ಹೊರಬರುವ ಕಾಲ. ಅಲಿ ಇಕ್ಬಾಲ್ ಮುಲ್ತಾನಿ ಅವರ ವಧುವಾಗಿ ಬೀದರ್‌ಗೆ ಬಂದಾಗ ಹಬ್ಬದ ಚಂದ್ರನಂತೆ ಕಂಗೊಳಿಸುವ ಸೊಸೆ ಬಂದಳು ಎಂದು ಸಂಭ್ರಮಿಸ್ದಿದರಂತೆ ಓಣಿಯ ಜನ. ಎಳೆನಿಂಬೆ ವರ್ಣದ ಮೊಮ್ಮ ಕೆಂಪು ಚರ್ಮದ ಜ್ಯಾಕೆಟ್, ಗಂಬೂಟ್ಸ್ ಧರಿಸಿ, ಏರ್‌ಗನ್ ಹಿಡಿದು ಎನ್‌ಫೀಲ್ಡ್ ಬುಲೆಟ್ ಮೇಲೆ ಪತಿಯೊಡನೆ ಬೇಟೆಗೆ ಹೊರಟರೆ, ಓಣಿಯ ಹೆಂಗಳೆಯರೆಲ್ಲ ಕಿಟಕಿಯಿಂದಲೇ ಇಣುಕುತ್ತ್ದಿದರಂತೆ. ಬೀದರ್‌ನಲ್ಲಿ ಹೆಂಗಳೆಯರೆಲ್ಲ ಪರದೆಯಲ್ಲಿಯೇ ಬಾಳಬೇಕಾದ ದಿನಗಳು ಅವು. ದೊಡ್ಡ ಮನೆತನದವರು ಏನು ಮಾಡಿದರೂ ಚಂದವೇ ಎಂದು ಅದೆಷ್ಟೋ ಜನ ಮೂಗು ಮುರಿದ್ದಿದರಂತೆ. ಆದರೆ ಹಿತ್ತಲು ಮನೆಯ ಬಾಗಿಲು ಈ ಹೆಂಗಳೆಯರಿಗೆ ಸದಾ ತೆರೆದಿರುತ್ತಿತ್ತು. ಪ್ರತಿ ಮನೆಯ ವಿಚಾರವನ್ನೂ ಕಾಳಜಿಯಿಂದ ಕೇಳುತ್ತ್ದಿದರು.ಎಲ್ಲ ಮನೆಯ ಸುಖದುಃಖಗಳಲ್ಲೂ ಭಾಗಿಯಗುತ್ತ್ದಿದರು. ಸುಮ್ಮನೆ ಮಾತನಾಡುವ ಕುತೂಹಲದ ಬದಲು ಕಾಳಜಿಯ ಕಣಜವಾಗಿದ್ದರು ಅವರು. ದಲಿತ ಮಹಿಳೆಯ ಶೋಷಣೆಯನ್ನು ಸಹಿಸದೆ ಅವರ ಮನೆಯಂಗಳಕ್ಕೇ ಹೋಗಿ ಜಗಳ ಬಿಡಿಸಿ ಬಂದವರು. ಮತಾಂತರವಾದ ದಲಿತ ಮಹಿಳೆಯನ್ನು ಗಂಡ ಬಿಟ್ಟು ಹೋದಾಗ ಅವಳನ್ನೂ ಮನೆಗೆ ಕರೆತಂದವರೇ ಅವರು. ಕಾಶಮ್ಮ ಎಂಬ ಆ ಮಹಿಳೆಯ ಮಗಳಿಗೆ ಮದುವೆ ಮಡಿಕೊಟ್ಟ್ದಿದು ಎಲ್ಲವೂ ಕೇವಲ ಅಂತಃಕರಣದಿಂದ. ಈ ಅಂತಃಕರಣಕ್ಕೆ ಗೊತ್ತ್ದಿದ್ದಿದು ಕೇವಲ ಒಂದೇ ಭಾಷೆ. ಅದು ಪ್ರೇಮದ್ದು. ಪರಿಪೂರ್ಣ ಪ್ರೇಮದ್ದು. ಯಾವುದೇ ಕೊಡುಕೊಳ್ಳುವ ವ್ಯವಹಾರವಿಲ್ಲದ ಪ್ರೇಮವದು. ತನ್ನ ಸುತ್ತಲಿನವರು ಸಂತಸದಿಂದ ಇದ್ದರೆ ತನ್ನ ಪರಿಸರ ಸಮೃದ್ಧ ಎಂದು ನಂಬಿದ ಜೀವವದು. ಅಲ್ಲಿ ಯಾವ ಧರ್ಮಗಳೂ ಅಡ್ಡ ಬಂದಿರಲಿಲ್ಲ. ಅಮ್ಮ ಮದುವೆಯ ನಂತರ ೧೦ ವರ್ಷಗಳ ದೀರ್ಘ ವಿರಾಮದ ನಂತರ ಮತ್ತೆ ವಿದ್ಯಾಭ್ಯಾಸ ಮುಂದುವರೆಸ್ದಿದರು. ನಾನಾಗ ಕೈ ಕೂಸು. ಅಮ್ಮನ ಮಡಿಲಿನಿಂದ ಮೊಮ್ಮ ನ ಮಡಿಲಿಗೆ ಜಾರ‍್ದಿದೇ ಆಗ. ನನಗೆ ಯಶೋದಾ ಸಿಕ್ಕ್ದಿದಳು. ಅವರ ಮಗ ಫಿರೋಜ್‌ನೊಂದಿಗೆ ನಾನೂ ಬೆಳೆಯುತ್ತ್ದಿದೆ. ಫಿರೋಜ್‌ನ ಆಟಕ್ಕ್ದಿದ ಕೋಳಿ ಮರಿಗಳು ನನ್ನ ಗೆಜ್ಜೆ ಕುಕ್ಕಲು ಬಂದರೆ ಓಡಿ ಹೋಗಿ ಮೊಮ್ಮ ಳ ಮಡಿಲಿಗೆ ಹಾರುತ್ತ್ದಿದೆ. ಅವರೂ ಬಾಚಿ ತಬ್ಬುತ್ತ್ದಿದರು. ಆ ಬೆಚ್ಚನೆಯ ಅಪ್ಪುಗೆಯಲ್ಲಿ ಈಗಿರುವ ಮತಾಂಧ ದಳ್ಳುರಿ ಇರಲಿಲ್ಲ. ಮಮತೆಯ ಬಿಸುಪು ಇತ್ತು. ಫಿರೋಜ್‌ಗೊಂದು ತುತ್ತು, ನನಗೊಂದು ತುತ್ತು. ತುತ್ತಿಗೊಮ್ಮೆ ‘ಶೇರ್ ಬೇಟಾ ಹಿಮ್ಮತ್ ರಖೇಗಾ, ಕಭಿ ನ ಹಾರೇಗಾ’ ಎಂಬ ಮಾತುಗಳು. ಅದೆಷ್ಟೋ ಆತ್ಮಸ್ಥೈರ್ಯ ನೀಡುವ ಕತೆಗಳು. ಎಲ್ಲಿಯೂ ಗುಮ್ಮ ಬರುವ, ನಮ್ಮನ್ನು ಕಾಡುವ ಕತೆಗಳಿರಲಿಲ್ಲ. ನಾವೇ ಗುಮ್ಮನನ್ನು, ಸೈತಾನನನ್ನು ಹೊಡೆದು ಮುಗಿಸುವ ಕತೆಗಳು. ನಮ್ಮ ಬಾಲ್ಯದಲ್ಲಿ ಭಯವಿಲ್ಲದ, ಎಲ್ಲವನ್ನು ಎದುರಿಸಬಹುದಾದ ಮನೋಸ್ಥೈರ್ಯ ತುಂಬಿದವರು ಮೊಮ್ಮ.  ಪ್ರತಿ ಹಬ್ಬಕ್ಕೆ ರಂಜಾನ್‌ಗೆ ಅಮ್ಮನಿಗೆ ಮುತ್ತೈದೆಯ ಬಾಗಿನವಾಗಿ ‘ಸೋಲಾ ಸಿಂಗಾರ್’ನ ಎಲ್ಲ ಪ್ರಸಾಧನಗಳನ್ನೂ ಕಳುಹಿಸುತ್ತ್ದಿದರು. ಸೀರೆ, ಮೆಹೆಂದಿ, ಬಳೆ, ಕುಂಕುಮ, ನೂತನ ವಿನ್ಯಾಸದ ಮುತ್ತು, ಹರಳು ಅಲಂಕಾರದ ಟಿಕಳಿಗಳು, ವೀಳ್ಯ, ಹೂ ಮುಂತಾದವುಗಳ ಉಡುಗೊರೆಯ ಮೆರವಣಿಗೆಯೇ ಮನೆಗೆ ಬರುತ್ತಿತ್ತು. ನಾಗರ ಪಂಚಮಿಗೆ ಅಮ್ಮ ಅವರಿಗೆ ಉಡುಗೊರೆ ಕಳುಹಿಸುತ್ತ್ದಿದರು. ಅಣ್ಣನ ಮನೆಯ ಕೊಡುಗೆ ಎಂದು. ಗಣೇಶ ಚೌತಿ, ದುರ್ಗಾಷ್ಟಮಿ, ಸರಸ್ವತಿ ಪೂಜೆ, ಆಯುಧ ಪೂಜೆ, ಶ್ರಾವಣ ಮಸದ ಪಾರಾಯಣ ಇವೆಲ್ಲಕ್ಕೂ ಮೊಮ್ಮ  ಮನೆಯಲ್ಲೂ ಮಾಂಸದಡುಗೆ ವರ್ಜ್ಯವಾಗಿತ್ತು. ಸಂಜೆ ಸೆರಗು ಹ್ದೊದು, ಅರಿಶಿನ ಕುಂಕುಮ ಪಡೆದು, ಪೂಜೆಯ ವೀಳ್ಯ ಕಟ್ಟಿಸಿಕೊಂಡು ಪ್ರಸಾದ ಕೋಸಂಬರಿಯನ್ನು ಹಣೆಗೊತ್ತಿ ಸ್ವೀಕರಿಸುತ್ತಿದ್ದರು. ರಂಜಾನ್, ಈದ್ ಮಿಲಾದ್ ಹಬ್ಬಗಳಿಗೆ ಪ್ರಾರ್ಥನೆಯ ನಂತರ ದುವಾ ಓದುತ್ತ್ದಿದ ಮೊಮ್ಮ  ತಮ್ಮ ಮಕ್ಕಳೊಂದಿಗೆ ನಮ್ಮನ್ನೂ ಕರೆದು ಹಣೆಯ ಮೇಲೆ ಊದುತ್ತ್ದಿದರು. ಅಲ್ಲಿ ಪ್ರಾರ್ಥನೆಯೊಂದಿಗೆ ನಮ್ಮ ಮೇಲೆ ಅವರ ಚೇತನದ ಒಂದು ಭಾಗ ಪಸರಿಸುವ ಅನುಭವ ಅದು. ಹಣೆಗೂದಿ, ಹಣೆಗೊಂದು ಮುತ್ತಿಟ್ಟರೆ ಅಲ್ಲಿ ಪ್ರೀತಿಯ ಮುದ್ರೆ ಇರುತ್ತಿತ್ತು. ಅಯೋಧ್ಯೆ- ಬಾಬ್ರಿ ಮಸೀದಿ ಗಲಭೆಯಲ್ಲಿ ಇಡೀ ಬೀದರ್ ಹೊತ್ತಿ ಉರಿಯುತ್ತ್ದಿದರೆ ನಾವು ನಮ್ಮ ಮನೆಯ ಅಂಗಳದಲ್ಲಿ ಮೊಮ್ಮ ನ ಕುಟುಂಬದೊಡನೆ ಬೆಚ್ಚಗ್ದಿದೆವು. ಕಂಡಲ್ಲಿ ಗುಂಡು ಆದೇಶವಿತ್ತು. ಆಗಾಗ ಸೇನಾದಳದವರು ಗಾಳಿಯಲ್ಲಿ ಗುಂಡು ಹಾರಿಸುತ್ತ್ದಿದರು. ಆದರೆ ನಮ್ಮ ಮನೆಯಲ್ಲಿ ನಗೆ ಬುಗ್ಗೆಗಳು ಸ್ಫೋಟಿಸುತ್ತ್ದಿದವು. ಗಲಭೆ ಕಾಲಕ್ಕೆ ದೊಡ್ಡ ಮನೆಯ ಗೇಟೊಳಗೆ ಪ್ರವೇಶ ಪಡೆದ ಹಾಲು ತರುವ ಮುಸ್ತಫಾ, ಕ್ರೆಸ್ತ ಧರ್ಮಕ್ಕೆ ಸೇರಿದ ಬಟ್ಟೆ ಹೊಲಿಯುವ ಬಾಬು, ದಲಿತ ಮಹಿಳೆ ಕಾಶೆಮ್ಮ, ಅಮ್ಮನ ವಿದ್ಯಾರ್ಥಿ ರಾಜಶೇಖರ್ ಎಲ್ಲರೂ ಒಟ್ಟಾಗಿದ್ದೆವು. ಯಾವ ಕೋಮುಗಲಭೆಗಳ ಬಿಸಿ ತಾಕದೇ, ಸುರಕ್ಷಿತ ಬೆಚ್ಚನೆಯ ಭಾವ ನೀಡ್ದಿದೇ ಆ ಮುಲ್ತಾನಿ ಮನೆತನ. ಸಂಜೆ ವಚನ ಮತ್ತು ಸೂಫಿ ಗಾಯನ, ಮಕ್ಕಳೊಟ್ಟಿಗೆ ಆಟ… ಇಡೀ ಜಗತ್ತಿಗೆ ಸೇರದ ಲೋಕವೊಂದಿದ್ದರೆ ಅದು ಆ 18 ಕಮಾನುಗಳ ಮನೆಯಲ್ಲಿತ್ತು. ಮೂರು ಕುಟುಂಬಗಳು… ಸಂತಸವೇ ಆ ಮನೆಗಳ ಬಾಂಧವ್ಯದ ಕೊಂಡಿಯಾಗಿತ್ತು. ನನಗೆ ಮೊಮ್ಮಾ ಮಾಡುವ ಖಿಚಡಿಯಷ್ಟೇ ಪ್ರೀತಿ, ಅವರಿಗೆ ನಮ್ಮನೆಯ ಸಾಂಬರ್‌ ಮೇಲಿತ್ತು.  ನಮ್ಮ ಮನೆ ಎರಡು, ಧರ್ಮ ಬೇರೆ, ಜಾತಿ ಬೇರೆ, ನಂಬಿಕೆ ಬೇರೆ… ಆದರೆ ನಮ್ಮಲ್ಲಿ ಹುಟ್ಟ್ದಿದು ಬೆಳೆಸ್ದಿದು ಎರಡೇ ಭಾವ. ಅದು ಪರಸ್ಪರ ಗೌರವ ಮತ್ತು ಪ್ರೀತಿಯದು. ಈಗ ಧರ್ಮದ ಹೆಸರಿನಲ್ಲಿ ಅಮಾಯಕರನ್ನು ಕೊಲ್ಲುವ ಚಿಗುರು ಮೀಸೆಯೂ ಮೂಡದ ಹುಡುಗರನ್ನು ಕಂಡಾಗ ಇವರ‍್ಯಾರಿಗೂ ‘ಮೊಮ್ಮ ’ನಂಥವರು ಸಿಗಲಿಲ್ಲವೇ ಎನಿಸುತ್ತದೆ. ಕಳೆದುಕೊಂಡ ಮೊಮ್ಮ ರ ಕುಂಕುಮ ಅಳಿಸದ ಹಣೆ ನೆನಪಾಗುತ್ತದೆ. ನಮ್ಮ ಹಣೆಗೂದಿದ ದುವಾ ನೆನಪಾಗುತ್ತದೆ. ಅದರೊಂದಿಗೆ ದೇವರಿಗೆ ಇನ್ನೊಂದು ದುವಾ ಕೇಳುತ್ತೇನೆ… ಓಹ್ ದೇವರೇ ಎಲ್ಲ ಮನೆಯ ನೆರೆಯಲ್ಲಿಯೂ ಮೊಮ್ಮ ನಂಥ ಜೀವವೊಂದಿರಲಿ… ಆಮೇನ್…! ***********************************************

ಭಾವಲಹರಿ Read Post »

ಇತರೆ, ಲಹರಿ

ಲಹರಿ ಅಕ್ಕ , ನೀನು ಯಾರಿಗೆ ಮಗಳಾಗಿದ್ದೆ ? ವೀಣಾ ದೇವರಾಜ್   ಮಗಳೇ ನೀನು ಯಾರಿಗೆ ಮಗಳಾಗಿದ್ದೆ. ಮಗಳ ಪ್ರೀತಿ ನಿನಗೆ ಗೊತ್ತೇ. ಅದನ್ನು ಎಂದಾದರೂ ಅನುಭವಿಸಿದ್ದೀಯಾ. ಹೇಗಿರಬಹುದೆಂದು ಯೋಚಿಸಿದ್ದೀಯ ಅಥವಾ ಬಯಸಿದ್ದೆಯ? ಒಮ್ಮೆ ಯೋಚಿಸಿ ನೋಡೋಣ… ಹಾಂ,ಸಿನೆಮಾದಲ್ಲಿ,, ಪುಟಾಣಿ ಪಾಪು , ಅದೇನು ಚೆಂದ,ಅಪ್ಪ ಅಮ್ಮನ ಮುದ್ದು ಮಗು ತಮ್ಮಿಷ್ಟದಂತೆ  ಅದನ್ನು ಸಿಂಗರಿಸಿದ್ದಾರೆ ನೋಡಿದವರೆಲ್ಲಿ ಕಣ್ಣುಬಿಟ್ಟು ದೃಷ್ಟಿ ತಾಗುವುದೋ ಎಂದು ದೃಷ್ಟಿಬೊಟ್ಟನ್ನೂ  ಇಟ್ಟಿದ್ದಾರೆ. ಒಂದು ನಿಮಿಷವೂ ಒಂಟಿಯಾಗಿ ಬಿಟ್ಟಿಲ್ಲ. ಇನ್ನೇನು ಶಾಲೆಗೆ ಸೇರಿಸುವ ವಯಸ್ಸು ಬಂತು, ಪೋಷಕರು ಗಟ್ಟಿ ಧೈರ್ಯಮಾಡಿ ಶಾಲೆಗೆ ಕಳಿಸುತ್ತಾರೆ. ಅವಳ ಒಂದೊಂದೇ ಹೊಸಹೊಸ ಕಲಿಕೆಗಳನ್ನು ನೋಡಿ ಬೀಗುತ್ತಾರೆ. ಅಪ್ಪ, ಇವಳು ಎಲ್ಲಾ ನನ್ನಂತೆ ಅಂತಾನೆ , ಅಮ್ಮ ಇಲ್ಲ ಅವ್ಳು ನನ್ನಂತೆ ಅನ್ನುತ್ತಾಳೆ. ಮನೆಗೆ ಬಂಡ ಕೂಡಲೇ ಅಪ್ಪ, ಅಮ್ಮ ತುತ್ತು ಮಾಡಿ ಉಣಿಸುತ್ತಾರೆ ಆಟವಾಡಿಸುತ್ತಾರೆ , ಅವಳಾಡುವ ಆಟದಲ್ಲಿ ತಾವೂ ಭಾಗಿಯಾಗಿ ಖುಷಿಪಡುತ್ತಾರೆ. ಅವಳು ಆಟವಾಡುತಿದ್ದರೆ, ಮನೆ ಪಾಠ ಮಾಡುತಿದ್ದರೆ, ಬರೆಯುತ್ತಿದ್ದರೆ  ಅವಳಿಗೆ ತೊಂದರೆಯಾಗಬಾರದೆಂದು ತಾವೇ ಉಣಿಸುತ್ತಾರೆ. ನಸುಕಿನಲ್ಲೇ ಎದ್ದು ಮಗಳಿಗಿಷ್ಟವಾದ ತಿಂಡಿ ತಿನಿಸುಗಳನ್ನು ಅಮ್ಮ ಮಾಡಿದರೆ , ಅಪ್ಪ ಬೇಗಬೇಗನೆ ತನ್ನೆಲ್ಲ ಕೆಲಸಗಳನ್ನು ಮುಗಿಸಿ ಶಾಲೆಗೆ ತಾನೇ ಹೋಗಿ ಬಿಟ್ಟುಬರುತ್ತಾನೆ. ಮಗಳಿಗಾಗಿ ತಮ್ಮೆಲ್ಲವನ್ನೂ    ವ್ಯಯಿಸುತ್ತಾರೆ. ಅವ್ಳು ಕೇಳಿದ್ದನ್ನೆಲ್ಲ ತಂದು  ಕೊಡುತ್ತಾರೆ , ಪ್ರೀತಿಯ ಸುರಿಮಳೆಗರೆಯುತ್ತಾರೆ. ನೋಡಲು ಎಷ್ಟು ಚೆಂದ. ಮಗಳು ಮದುವೆಗೆ ಬಂದಾಗ ವಿಜೃಂಭಣೆಯಿಂದ ಮದುವೆ ಮಾಡುತ್ತಾರೆ ಕರುಳಕುಡಿಯನ್ನು ಬೇರೆಯವರ ಮನೆಗೆ ಕಳಿಸುವಾಗ ಅವಳ ಅತ್ತೆ ಮಾವ ಗಂಡನನ್ನು ತನ್ನ ಕೂಸನ್ನು ಚೆನ್ನಾಗಿ ನೋಡಿಕೊಳ್ಳಿರೆಂದು ಬೇಡಿಕೊಳ್ಳುತ್ತಾರೆ , ಬಿಕ್ಕಿಬಿಕ್ಕಿ ಅಳುತ್ತಾರೆ. ಅಂದಿಗೆ ಆ ಮನೆಯ ಋಣ ಮುಗಿಯಿತೇ ಗೊತ್ತಿಲ್ಲ.     ಎಂದೋ ಒಮ್ಮೆ ತವರಿಗೆ ಬರುವ ಮಗಳು ಅತಿಥಿಯಾಗಿಬಿಟ್ಟಿರುತ್ತಾಳೆ. ಮೊದಲಿನಂತೆ ಸಲೀಸಾಗಿ ಏನೊಂದನ್ನೂ ಮಾಡಲು ಹಿಂಜರಿಯುತ್ತಾಳೆ, ಅದು ತಾ ಹುಟ್ಟಿ ಬೆಳೆದ ಮನೆ, ಅಪ್ಪಅಮ್ಮನ ಕೈ ತುತ್ತು ತಿಂದು ಬೆಳೆದ ಮನೆ ಎನ್ನುವುದನ್ನು  ಮೆಲುಕುಹಾಕಿಕೊಂಡು ಸಂಕಟಪಡುತ್ತಾಳೆ. ತನ್ನ ಗೆಳತಿಯರ ಮನೆಗೆ ಹೋದರೆ ಅಲ್ಲಿ ಅವರೂ ಇಲ್ಲ ಎಲ್ಲ ತಮ್ಮ ಗಂಡನ ಮನೆಯಲ್ಲಿದ್ದಾರೆ. ಎಲ್ಲಾ ಹೆಣ್ಣು ಮಕ್ಕಳದೂ ಹೀಗೆಯೇ ಮನಸ್ಥಿತಿಯೇ ಎಂದು ಕೊರಗುತ್ತಾಳೆ. ಅಪ್ಪಅಮ್ಮನ ಹೇಳಿಕೊಳ್ಳಲಾರದೆ ಮನಸ್ಸಿನಲ್ಲೇ ಕೊರಗುತ್ತಾಳೆ. ಅಮ್ಮ ಮಾತುಮಾತಿಗೂ ಅತ್ತಿಗೆಯ ಹೆಸರನ್ನೇ ಕರೆಯುತ್ತಾರೆ ,ಅಪ್ಪ ನಾನು ಬಂದ್ದಿದ್ದೇನೆಂದು ಮನೆಗೆ ಬೇಗನೆ ಬರುವುದು ಹೋಗಲಿ, ಬಂದವರೇ ತನ್ನ ಗೆಳೆಯರನ್ನು ನೋಡಲು ಹೋಗುತ್ತಾರೆ. ಅಣ್ಣನೂ  ಮೊದಲಿನಂತೆ ಚೇಷ್ಟೆಯ ಮಾತುಗಳಿಲ್ಲ ,ಕೆಣಕುವುದೂ ಇಲ್ಲ.ಅಮ್ಮನ ಬಳಿ ಏನಾದರು ಏಕಾಂತದಲ್ಲಿ ಹೇಳಿಕೊಳ್ಳಬೇಕೆಂದರೆ ಯಾವಾಗಲೂ ಅತ್ತಿಗೆಯೋ ಅಣ್ಣನೋ ಇರುತ್ತಾರೆ.  ಯಾಕೆ ಹೀಗಾಯಿತು, ತವರಿನ ಪ್ರೀತಿ ಕಡಿಮೆಯಾಯಿತೇ, ತನ್ನ ಮೇಲಿನ ಹೆತ್ತವರ ಜವಾಬ್ದಾರಿ ಮುಗಿಯಿತೇ? ಈಗ ಅಪ್ಪಅಮ್ಮನಿಗೆ ನಾನು ಮಗಳಲ್ಲವೇ ಏಕೆ ಹೀಗೆ? ತನ್ನಿಂದಾದ ತಪ್ಪೇನು, ಇದನ್ನು ಹೇಗೆ ಸರಿ ಮಾಡುವುದು, ತಾನೇನು ಮಾಡಿದರೆ ತನ್ನ ತವರು ಮೊದಲಿನಂತಾಗುತ್ತದೆ , ದೇವರೇ ಏನು ಮಾಡಲಿ. ಇನ್ನು ಅಲ್ಲಿರುವುದು ಬೇಡವೆನಿಸಿ ತನ್ನಿನಿಯನ ಆಸರೆ ಬಯಸಿ  ಹೊರಡುತ್ತಾಳೆ. ತನ್ನಿನಿಯನ ತೋಳ್ತೆಕ್ಕೆಯಲ್ಲೇ ಅಪ್ಪಅಮ್ಮನ,ಅಣ್ಣನ ಪ್ರೀತಿ,ವಾತ್ಸಲ್ಯವನ್ನೂ , ತನ್ನ ಸಖಿಯರ ಸಂಗವನ್ನೂ ಕಾಣುತ್ತಾಳೆ. ಜಗವನ್ನೇ ಮರೆಯುತ್ತಾಳೆ. ಅವನೇ ತನ್ನ ಜಗತ್ತು, ಅವನಿಲ್ಲದೆ ತಾನಿಲ್ಲ. ಅವನುಸಿರೇ ತನ್ನುಸಿರು ಎಂದುಕೊಳ್ಳುತ್ತಾಳೆ. ಆದರೆ ಆ ಒಂದು ಕರಾಳ  ದಿನ ವಿಧಿಯ ದೃಷ್ಟಿತಾಗಿ ,ಅವಳ ಉಸಿರೇ ಅವಳ ಜೊತೆಗಿಲ್ಲ , ಅವಳ ಜಗತ್ತೇ ಇಲ್ಲವಾದಾಗ ,,,,,,,,  ಎಲೆ, ಹಾರುವ ಹಕ್ಕಿಗಳೇ ನೀವು “ನನ್ನುಸಿರ”ನ್ನು ಕಂಡಿರಾ? ಎಲೆ ಸಂಪಿಗೆಮರವೇ, ಎಲೆ ಹೊಂಗೆ ಮರವೇ ನೀವು ಬೀಸುವ ತಂಗಾಳಿಯಲ್ಲಿ  ದೇವನ ಬಿಸಿಯುಸಿರಿನ ಅನುಭವವಾಯಿತೇ? ಎಲೈ ಭೂಮಿ ತಾಯಿಯೇ ನೀನೆ ಬ್ರಹ್ಮಾಂಡವೆನ್ನುತ್ತಾರೆ. ನಿನ್ನ  ಮಡಿಲಲ್ಲೇನಾದರೂ ಬಚ್ಚಿಟ್ಟುಕೊಂಡು ನನ್ನೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿರುವನೋ ಒಮ್ಮೆ ನೋಡುವಿಯ ತಾಯೆ? ತಾನಿಲ್ಲದ ಜಗತ್ತು ಅವಳಿಗೆ ದುಸ್ತರವೆಂದು ತಿಳಿದೂ ದೇವನೇಕೆ ನನ್ನ ಕಣ್ಣಿಗೆ ಕಾಣುತಿಲ್ಲ. ಅವಳೆಲ್ಲಿಗೆ ಹೋಗುವುದು,ಯಾರ ಬಳಿಗೆ ತನ್ನ  ನೋವನಿವೇದಿಸಿಕೊಳ್ಳುವುದು,,,,,?,,,,,? ನೀವೂ ಹೇಳಲಾರಿರೆ,,,,,,,,,?,,,,,     ಅವಳು ಯಾರ ಮಗಳು? ,,,,,,,,,,? “ಇಂದು ನಾನು ಒಂಟಿ ! ನೀನು ಅದ್ಹೇಗೆ ಬಿಟ್ಟು ಹೋದೆ ಎಂದಿಗೂ ಒಬ್ಬಳನ್ನು ಬಿಡಲಾರದ ನಿನಗೆ ಹೇಗೆ ಮನಸ್ಸು ಬಂತೋ ನಾ ಕಾಣೆ ,ನಾನೀಗ ಇನ್ನೊಬ್ಬರಿಗೆ ಭಾರವಾದೆ. ನಾನೊಂದು ಚೆಂಡಿನಂತಾದೆ. ನಾನು ನಿನ್ನದೇ ವಸ್ತುವೆಂದು ನನ್ನ ಪೋಷಕರು ನಿನ್ನ ಸುಪರ್ದಿಗೆ ವಹಿಸಿದ್ದರು. ನಿನಗೂ ನಾನು ಬೇಡವಾಗಿಬಿಟ್ಟೆ. ಈಗ ಚೆಂಡು ಯಾರ ಬಳಿ ಇದೆಯೋ ಗೊತ್ತಿಲ್ಲ. ನನಗೊಂದು ಸ್ಥಿರವಾದ ಜಾಗವಿಲ್ಲವೇ ದೇವರೇ? ಎಲ್ಲೆಲ್ಲಿಗೆ ಅಂತ ಓಡಾಡಬೇಕು ತಿಳಿಯುತ್ತಿಲ್ಲ ಈ ಯಕ್ಷ ಪ್ರಶ್ನೆಗೆ ಉತ್ತರವಿಲ್ಲವೇ? *************************

Read Post »

ಇತರೆ, ಲಹರಿ

ಪ್ರತಿಮೆಯೂ ಕನ್ನಡಿಯೂ..

ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ ಸಿನಿಮಾ(೧೯೬೫) ದಲ್ಲಿ ಆಶಾ ಭೋಸ್ಲೆ ಹಾಡಿದ ಕೃಷ್ಣ ಭಜನೆ ಸಾಗುವುದು ಹೀಗೆ, ಸಾಹಿತ್ಯ ಸಾಹಿರ್ ಲುಧಿಯಾನ್ವಿ.ಮೀನಾಕುಮಾರಿ ಎಂಬ ಅಮರ ತಾರೆಯ ನಟನೆಯಲ್ಲಿ ಮೂಡಿ ಬಂದ ಅದ್ಭುತ..ಅಮರ ಗೀತೆ.‘ಮನುಜ ತನ್ನ ಮನಸ್ಸಿನಿಂದ ತಾನು ಓಡಿ ಹೋಗಲಾರ.. ಹೋಗಲಾಗದು’ ಎಂಬುದು ಕಟುವಾಸ್ತವ, ಮತ್ತದು ತುಂಬ ದೊಡ್ಡ ಸಂಗತಿ. ಚಲನಚಿತ್ರ ಗೀತೆಯೊಂದರಲ್ಲಿ ಇಂಥ ಲೋಕೋತ್ತರ ಸತ್ಯವನ್ನು ಹಿಡಿದಿಟ್ಟ ರೀತಿ ಕೂಡಾ ಅನನ್ಯ. ಕನ್ನಡದ ಸಂತ ಕವಿ ಸರ್ಪಭೂಷಣ ಶಿವಯೋಗಿ ಯ ಒಂದು ಜನಪ್ರಿಯ ತತ್ವ ಪದವೊಂದು ಇದನ್ನೇ ಇನ್ನೂ ವಿವರವಾಗಿ ಬಣ್ಣಿಸುತ್ತ ಸಾಗುತ್ತದೆ. “ಬಿಡು ಬಾಹ್ಯದೊಳು ಡಂಭವಮಾನಸದೊಳು ಎಡೆ ಬಿಡದಿರು ಶಂಭುವ/ಮನದೊಳು ವಂಚಿಸಿ ಹೊರಗೆ ನೀ ಕೀರ್ತಿಯಪಡೆದರೆ ಶಿವ ನಿನಗೊಲಿಯನು ಮರುಳೇ// ಜನಕಂಜಿ ನಡಕೊಂಡರೇನುಂಟು ಲೋಕದಿಮನಕಂಜಿ ನಡಕೊಂಬುದೇ ಚಂದ/ಜನರೇನು ಬಲ್ಲರು ಒಳಗಾಗೊ ಕೃತ್ಯವಮನವರಿಯದ ಕಳ್ಳತನವಿಲ್ಲವಲ್ಲ// ಮನದಲಿ ಶಿವ ತಾ ಮನೆ ಮಾಡಿಕೊಂಡಿಹಮನ ಮೆಚ್ಚಿ ನಡೆದರೆ ಶಿವ ತಾ ಮೆಚ್ಚುವ/ಮನಕಂಜಿ ನಡೆಯದೆ ಜನಕಂಜಿ ನಡೆದರೆಮನದಾಣ್ಮ ಗುರುಸಿದ್ಧ ಮರೆಯಾಗೊನಲ್ಲ// ‘ಮುಖ ಮನಸ್ಸಿನ ಕನ್ನಡಿ’ ಇದು ಕನ್ನಡದ ಬಲು ಜನಪ್ರಿಯ ನುಡಿಗಟ್ಟು. ದೇಶ, ಭಾಷೆಗಳ ಹಂಗು ಮೀರಿ ಮುಖ, ಮನಸ್ಸು, ಕನ್ನಡಿ – ಈ ಮೂರೂ ಪದಗಳಿಗಿರುವ ನಂಟನ್ನು ಶೋಧಿಸತೊಡಗಿದರೆ ಬಹು ಆಯಾಮಗಳ, ಮಾನವೀಯ ನೆಲೆಗಟ್ಟಿನ ಅನುಪಮ ಸಂಗತಿಯೊಂದು ಪದರುಪದರಾಗಿ ಬಿಚ್ಚಿಕೊಳ್ಳತೊಡಗುತ್ತದೆ. ಮನದ ಕನ್ನಡಿಯಲ್ಲಿ ತನ್ನ ತಾ ನೋಡಿಕೊಳ್ಳಲು ಅರಿತ ಜೀವಿಯಲ್ಲಿ ಒಂದು ಎಚ್ಚರ, ಒಂದು ಪ್ರಜ್ಞೆ ಸದಾವಕಾಲವೂ ಮೌನವಾಗಿ ಅಷ್ಟೇ ಸಹಜವಾಗಿ ಮೊರೆಯುತ್ತಿರುತ್ತದೆ. ಕನ್ನಡಿಯೆದುರು ಪರದೆ ಎಳೆದಿರುವಲ್ಲಿ ಅವಲೋಕನಕ್ಕೆ ಅವಕಾಶವೆಲ್ಲಿ!? ವೈಯಕ್ತಿಕ ನೆಲೆಯಲ್ಲೇ ಆಗಿರಲಿ ಸಮುದಾಯದ ನೆಲೆಯಲ್ಲೇ ಆಗಿರಲಿ ಪಾರದರ್ಶಕತೆ ಬೀರುವ ಪ್ರಭಾವ ಗಮನಾರ್ಹ. ತತ್ಪರಿಣಾಮವಾಗಿ ಅದರಿಂದ ದೊರಕುವ ಅಂತಿಮ ಫಲಿತಾಂಶವೂ ಅಷ್ಟೇ ಪರಿಣಾಮಕಾರಿ. ಹೀಗಿದ್ದೂ ಪ್ರತಿ ದಿನದ ಪ್ರತಿ ಹೆಜ್ಜೆಯಲ್ಲಿ ಮುಖವಾಡಗಳನ್ನು ಬದಲಾಯಿಸುತ್ತಲೇ ಸಾಗುವುದು ತೀರ ಸಹಜ ಎನ್ನುವ ರೀತಿಯಲ್ಲಿ ಬದುಕು ಸಾಗುವುದು. ನಿಜಕ್ಕೂ ಇದು ವಿಸ್ಮಯದ ಸಂಗತಿ. ನೈಜೀರಿಯನ್ ಕವಿ ಗೇಬ್ರಿಯಲ್ ಒಕಾರ ತನ್ನ “ಒಂದಾನೊಂದು ಕಾಲದಲ್ಲಿ” ಕವಿತೆಯಲ್ಲಿ ಹೇಳುವಂತೆ ಮನೆ, ಆಫೀಸು, ಬೀದಿ, ಸಭೆ ಸಮಾರಂಭ – ಹೀಗೆ ಯಾವುದಕ್ಕೆ ಎಂಥದು ಸೂಕ್ತವೊ ಅಂಥದೊಂದು ಮುಖವಾಡ ಧರಿಸಿ ಮುಗುಳ್ನಗುವೊಂದರಲ್ಲಿ ಅದನ್ನು ಅದ್ದಿ ತೆಗೆದು ಕಾರ್ಯ ಸಾಧಿಸಿಬಿಡುವುದು ನಮಗೆಲ್ಲ ರೂಢಿಯಾಗಿಬಿಟ್ಟಿದೆ. ಹೀಗಾಗಿ ನೈಜವಾದ ನಮ್ಮ ಮೂಲ ಮುಖದ ಅಸ್ತಿತ್ವವೇ ಕಳೆದುಹೋಗುತ್ತಿದೆ. ಇದು ತುಂಬ ಅಪಾಯಕಾರಿ. ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಬಗೆಯ ಅರಾಜಕತೆಗೂ ದಾರಿ ಮಾಡಿಕೊಡುವಂಥದು. ಯಾರನ್ನೊ ಮೆಚ್ಚಿಸುವುದಕ್ಕಾಗಿ ಅಲ್ಲ, ಯಾರಿಗೊ ವರದಿ ಒಪ್ಪಿಸುವುದಕಾಗಿ ಅಲ್ಲ. ತನ್ನ ಆತ್ಮಸಾಕ್ಷಿ ಎದುರು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಆತ್ಮಸಾಕ್ಷಿ ಎದುರು ಸ್ವತಃ ಕುಬ್ಜನಾಗದಿರಲು ಮನದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸಾಗುವ ಅಗತ್ಯ ಮನಸ್ಸನ್ನು ಎಡೆಬಿಡದೆ ಸತಾಯಿಸಿದಲ್ಲಿ ಸ್ವಾಸ್ಥ್ಯ ತಂತಾನೇ ಪಸರಿಸತೊಡಗುತ್ತದೆ. ಇದು ಆಮೆ ಗತಿಯಲ್ಲಿ ಸಂಭವಿಸುವ ಬಲು ನಿಧಾನವಾದ ಪ್ರಕ್ರಿಯೆ. ವ್ಯಕ್ತಿಯಿಂದ ಸಮಷ್ಟಿ ವರೆಗೆ ಸಾಗುವ ಸುದೀರ್ಘ ಪಯಣ. ಮನಸ್ಸಿದ್ದಲ್ಲಿ ಮಾರ್ಗ ಇದ್ದೇ ಇದೆಯಲ್ಲವೇ! ************************************

ಪ್ರತಿಮೆಯೂ ಕನ್ನಡಿಯೂ.. Read Post »

ಇತರೆ, ಲಹರಿ

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ

ಲಹರಿ ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ ಸ್ಮಿತಾ ಭಟ್ ತವರು ಎನ್ನುವದು ಮುಗಿಯಲಾರದ ಸೆಳೆತ ಮತ್ತದು ಹೆಣ್ಮಕ್ಕಳಿಗೆ ಮಾತ್ರ ಸೀಮಿತ. ತಲೆ ತಲಾಂತರಗಳಿಂದಲೂ ತವರು ಮತ್ತು ಹೆಣ್ಣು ಸಯಾಮಿಯಂತೆ ಬದುಕುತ್ತ ಬಂದಿದ್ದಾರೆ. ಹೆಣ್ಣಿನೊಳಗೆ ತವರಿನ ಸೆಳೆತ,ಪುಳಕ,ಅಪ್ಯಾಯ ಭಾವಗಳು ಶುರುವಾಗುವದೇ ಮದುವೆಯೆಂಬ ಬಂಧನದಲಿ,ಭಾವದಲಿ,ಸಿಲುಕಿ ತವರ ತೊರೆದು ಹೊರನಡೆದಾಗಲೇ. ಅಲ್ಲಿಯವರೆಗೆ ಸುಪ್ತವಾಗಿದ್ದ ನಯ ನಾಜೂಕಿನ ಭಾವನೆಗಳೆಲ್ಲ ಕಟ್ಟೆಯೊಡೆದು ಹೃದಯವನ್ನು ತಲ್ಲಣಗೊಳಿಸಿಬಿಡುತ್ತವೆ. ಎಂತಹ ಐಶಾರಾಮಿ ಗಂಡನಮನೆಯೇ ಸಿಗಲಿ ತವರಿನಿಂದ ಬರುವ ಪುಟ್ಟ ಉಡುಗೊರೆಗಾಗಿ  ಹೆಣ್ಣು ಕಾತರದಿಂದ ಕಾಯುತ್ತಾಳೆ. ತವರೂರಿನ ಹೆಸರು ಹೇಳಿ ಯಾರೇ ಬಂದರೂ ಮುಖದಭಾವಕ್ಕೆ ಬೇರೆಯದೇ ಕಳೆಗಟ್ಟುತ್ತದೆ. “ನಿನ್ನ ತವರು ಮನೆಗೆ ಹೋಗಿದ್ದೆ ತಂಗೀ” ನಿನ್ನ ಅಮ್ಮನಿಗೂ ಈತರದ್ದು ಎರಡು ಡಜನ್ ಬಳೆ ಕೊಟ್ಟು ಬಂದಿದ್ದೀನಿ, ಅನ್ನುವಾಗ ನನಗೂ ಅದೇ ಇರಲಿ ಎನ್ನುವ ಮಾತು ಅರಿವಿಲ್ಲದೆ ಬರುತ್ತದೆ. ಅಲ್ಲಿಂದ ಬರುವ ಕೆಲಸದ ಆಳುಗಳೇ ಇರಲಿ, ನೆಂಟರೇ ಇರಲಿ, ಹಿಂದೊಂದು ತವರೂರಿನ ಹೆಸರು ಸೇರಿಕೊಂಡರೆ ವಿಶೇಷ ಅಕ್ಕರೆ, ಹಾಗಂತ ಅದು ಬೇದ ಭಾವದ್ದಲ್ಲ. ರಕ್ತಗತವಾಗಿ ಬಂದದ್ದು.  ದಾರಿಯಲ್ಲಿ ತವರೂರಿಗೆ ಹೊರಟ ಬಸ್ಸಿನ ಬೋರ್ಡ ಕಂಡರೂ ಸಾಕು ಆ ಬಸ್ಸಿನ ಮೇಲೆ ಡ್ರೈವರ್ ನ ಮೇಲೆ ಎಲ್ಲ ಪ್ರೀತಿ ಉಕ್ಕತ್ತದೆ. ತುಪ್ಪ ಬಡಿಸುವಾಗ ತವರ ಸುದ್ದಿ ಕೇಳಿದರೆ ಎರಡ್ಹುಟ್ಟು ತುಪ್ಪ ಹೆಚ್ಚಿಗೆ ಬೀಳುವದು. ಎಂದು ಛೇಡಿಸುವಿಕೆಯಾದರೂ ಸತ್ಯವೇ, ಸ್ವಲ್ಪ ನಕ್ಕರೂ ,ಅಡುಗೆಯಲ್ಲಿ ವೀಶೇಷವಾದದನ್ನು ಸಜ್ಜು ಗೊಳಿಸುತ್ತಿದ್ದರೂ ಏನಿದು !!ಇಂದು ತವರಿಂದ ಏನಾದರೂ ವಿಶೇಷ ಸುದ್ದಿ ಇದೆಯಾ? ಯಾರಾದರೂ ಬರುತ್ತಿದ್ದಾರಾ? ಎಂದು ಕಾಲೆಳೆಯುವ ಪತಿರಾಯರಿಗೇನೂ ಕಡಿಮೆಯಿಲ್ಲ. ಆದರೆ ತಕರಾರು ಅದರದ್ದಲ್ಲ. ಇಷ್ಟೆಲ್ಲ ಬದುಕಿನ ಜೊತೆಗೇ ಅಂಟಿಕೊಂಡು ಬಂದಿರುವ ಭಾವವನ್ನು ಸಂಬಂಧವನ್ನು ಮದುವೆಯಾಗುತ್ತಿದ್ದಂತೆ ಬಿಡಲಾಗಲಿ ಆ ಭಾವದೊಳಗೆ ಬದಲಾವಣೆ ತಂದುಕೊಳ್ಳಲಾಗಲಿ ಸಾಧ್ಯವೇ!? ತವರು ಹೆಣ್ಣಿನ ಹಕ್ಕು ಮತ್ತು ಆಸ್ತೆಯ ವಿಷಯ. ತವರಿನ ಬಗ್ಗೆ ಸ್ವಲ್ಪವೇ ಸ್ವಲ್ಪ ಮೂಗು ಮುರಿದರೂ ಆಗುವ ಯಾತನೆ ಹೇಳತೀರದ್ದು.  ತವರು ನಗುತಿದ್ದರೆ,ಮನೆಯಾಕೆಯೂ  ನಗುತ್ತಿರುತ್ತಾಳೆ ಎನ್ನುವ ಅರಿವಿದ್ದೂ ಅಹಂಕಾರದಿಂದ ಅದೆಷ್ಟೋ ಗಂಡಸರು ಹೂಂಕರಿಸುವದನ್ನು ನೋಡಿದ್ದೇನೆ. ಸುಕಾ ಸುಮ್ಮನೇ ತವರ ದೂರುವುದು. ಅಪ್ಪ, ಅಮ್ಮ, ಅಣ್ಣ,ತಮ್ಮ ,ಯಾರೇ ಇದ್ದರೂ ಅವರಡೆಗೊಂದು ಅಸಡ್ಡೆಯ ಮಾತೊಗೆಯುವದು. ಗೊತ್ತಿದೆ ಬಿಡೆ ನಿನ್ನ ತವರು ಎನ್ನುವ ಅನಾಧರ. ಈಗೇನು ನಿನ್ನ ತವರಿನ ದೊಡ್ಡಸ್ತಿಕೆ,ಒಂದು  ನಯಾ ಪೈಸಾ ತಗೊಳ್ದೆ ನಿನ್ನ ಮದುವೆ ಮಾಡ್ಕೊಂಡು ಬಂದಿದ್ದೀನಿ. ಆಗ ಬಡತನವಿತ್ತು ಬಿಡು,ಈಗ ಹಬ್ಬಕ್ಕೆ ಏನು ಕೊಟ್ರೋ!? ಕರೆಯುವಲ್ಲಿ, ಕೇಳುವಲ್ಲಿ,ಹೇಳುವಲ್ಲಿ, ಕೊಂಚ ವ್ಯತ್ಯಾಸ ವಾದರೂ, ಕೃಷ್ಣ ಕದ್ದನೆಂದ ಶ್ಯಮಂತಕಮಣಿಯಂತೆ ಅಪವಾದ ಹೆಗಲೇರುತ್ತದೆ. ಹೇಗೆ ತೊರೆಯುವದು ಹೇಳಿ ತವರಿನ ಸೆಳೆತವ. ನೋವುಂಡು ನಗುವ ಮೂರ್ತಿಯನ್ನು ಮಾಡಿದ ಒಲವ. ಅಲ್ಲಿ ಮುಗಿಯದ ನಗುವಿದೆ, ಆಗಾದ ನೆನಪಿದೆ,ಅಪ್ಯಾಯ ಭಾವವಿದೆ, ತೀರದ ಬಂಧವಿದೆ. ನಿನಗೆ ನನಗಿಂತ ತವರೇ ಹೆಚ್ಚು ಎಂದು ಮೂದಲುಸುವಿಕೆಗಾದರೂ  ಒಂದು ಅರ್ಥ ಬೇಡವೇ? ಇಲ್ಲಿ ಹೆಚ್ಚು ಕಡಿಮೆ ಏನಿದೆ!?  ಜತನವಾಗಿ ಸಾಕಿದ ಪ್ರೀತಿಯನ್ನು ,ಜೀವವನ್ನೇ ಎರಡು ಭಾಗ ಮಾಡಿಕೊಟ್ಟ ವೇದನೆಯಲ್ಲಿ ಕೈ ಹಿಡುದು ಇನ್ನೊಂದು ಕೈಗೆ ಕೊಡುವಾಗ ಅಸಹಾಯಕ ತಂದೆ  ಕಣ್ಣೊಳಗೆ ಉಕ್ಕಿದ ಭಾವಕ್ಕೆ ವಿವರಣೆ ಕೊಡಲು ಸಾಧ್ಯವೇ? ತುಟಿ ಕಚ್ಚಿ ತಡೆದ ಅಮ್ಮನ ಕಣ್ಣ ಹನಿಗೆ ಋಣದ ಮಾತಾಡಲು ಸಾಧ್ಯವೇ? ಕೊಟ್ಟ ಹೆಣ್ಣು ಕುಲದ ಹೊರಗೆ ಎನ್ನುವುದಕ್ಕೆ ವಿವರಣೆ ಏನು ಕೊಟ್ಟು ಸಮರ್ಥಿಸುತ್ತಾರೋ ಅರಿಯೆ. ಆದರೆ ಎಂದಿಗೂ ಸಮ್ಮತವಲ್ಲದ ವಿಷಯ ಇದು ಹೆಣ್ಮನಸಿಗೆ. ಹಾಗೆ ನೋಡಿದರೆ ಗಂಡು ಕೂಡಾ ಹೆಣ್ಣು ಕೊಟ್ಟ ಮನೆಗೆ ಸದಾ ಋಣಿಯಾಗಿರಬೇಕು. ತವರಬಗ್ಗೆ ಸದಾ ತಕರಾರೆತ್ತುವ ಗಂಡನಮನೆಯಲ್ಲಿ ಹೆಣ್ಣು ತುಟಿ ಕಚ್ಚಿ ನಗುತ್ತಿರುತ್ತಾಳಷ್ಟೇ. ಗಂಡ ತನ್ನ ತವರನ್ನು ಗೌರವಿಸಲಿ. ಪ್ರೀತಿಸಲಿ,ಎನ್ನುವದು ಹೆಣ್ಣಿನ ಸಹಜ ಬಯಕೆ, ಗಂಡನಾದವ ಹೆಂಡತಿ ತನ್ನ ಮನೆಯವರನ್ನೆಲ್ಲ ಪ್ರೀತಿ ಆದರಗಳಿಂದ ಕಾಣಲಿ ಎಂದು  ಬಯಸುತ್ತಾನೋ  ಹಾಗೇ,  ತನ್ನ ಅಕ್ಕ ತಂಗಿಯರು ತವರನ್ನು ಪ್ರೀತಿಸುವದರ ಬಗ್ಗೆ ಖುಷಿ ಪಡುವವ, ತನ್ನ ಹೆಂಡತಿ ತವರನ್ನು ಪ್ರೀತಿಸತೊಡಗಿದರೆ ಸಿಡಿದೇಳುವ ವರ್ತನೆಗೆ ಅರ್ಥವುಂಟೇ!? ಅದೇನೆ ಹೊಂದಾಣಿಕೆಯ ಕೊರತೆ ಇದ್ದರೂ ತವರಿನೆಡೆಗಿನ ಹೆಣ್ಮನಸಿನ ಭಾವ ಅರಿತ ಗಂಡಸಿನೊಳಗೆ ಹೆಚ್ಚು ಯಶಸ್ಸಿದೆ. ಅದೆಷ್ಟೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡಾ ಗಂಡ ತನ್ನ ತವರನ್ನು ಪ್ರೀತಿಸುತ್ತಾನೆಂದರೆ, ಹೆಂಡತಿ ಗಂಡನ ಮನೆ ಕುರಿತು ತಕರಾರು ಎತ್ತುವದೇ ಇಲ್ಲ. ಎಲ್ಲಿ ತವರಿಗೆ ಬೆಲೆ ಇದೆಯೋ ಅಲ್ಲೇ ತನ್ನ ಅಸ್ತಿತ್ವ ಎನ್ನುವದನ್ನು ಅವಳು ಎಂದೋ ನಿರ್ಧರಿಸಿದ್ದಾಳೆ. ಅದು ಪ್ರಕೃತಿ ಮಾತೆ ಪಾರ್ವತಿದೇವಿಯಿಂದಲೇ ಒಲಿದು ಬಂದ ಬಳುವಳಿ ಹೆಣ್ಣಿಗೆ.  ಪರಮ ಅಹಂಕಾರಿ,ಕಠೋರ ಸ್ವರೂಪಿ ದಕ್ಷ , ಶಿವನನ್ನು ಅವಮಾನಿಸಿದ ನಿದರ್ಶನಗಳಿಗೆ ಲೆಕ್ಕವೇ ಇಲ್ಲ, ಆದರೆ ಶಿವ, ಅರ್ಧಾಂಗಿನಿಯಾದ ಸತಿಯ ತವರಿನ ಗೌರವದ ಬಗ್ಗೇಯೇ ಸದಾ ಯೋಚಿಸುತ್ತಿದ್ದ.ಮತ್ತಿ ಕಾಪಾಡುತ್ತಿದ್ದ. ಸಕಲ ಅವಮಾನಗಳನ್ನು ಸತಿಗಾಗಿ ಸಹಿಸಿದ. ಮನಸು ಮಾಡಿದರೆ ಪರಶಿವನಿಗೆ ದಕ್ಷನ ಅಹಂಕಾರ ಮುರಿಯುವುದು ಕ್ಷಣದ ಕೆಲಸವಾಗಿತ್ತು, ಅಪಾರವಾಗಿ ತಂದೆಯನ್ನು ಪ್ರೀತಿಸುವ ಸತಿಗೆ ಎಲ್ಲಿಯೂ ನೋವಾಗಬಾರದೆಂದು,ಅವಳ ಭಾವಕ್ಕೆ ಧಕ್ಕೆಯಾಗಬಾರದೆಂದು ನೊಂದ, ಬೆಂದ,ಪರಿತಪಿಸಿದ. ತಂದೆಯ ತಪ್ಪುಗಳು ಸತಿಗೆ ಅರಿವಾಗಲೆಂದು ವರುಷಗಳೇ ಕಾದ. ಕೊನೆಗೆ ತವರನ್ನೇ ತೊರೆಯಲು ನಿರ್ಧಸಿದ ಸತಿಯ ಕುರಿತು ಹೇಳುತ್ತಾನೆ. ಹೆಣ್ಮಕ್ಕಳಿಗೆ ತವರು ಎಂದರೆ ದೇಹದ ಉಸಿರು. ಅದನ್ನು ನೀನು ತೊರೆದು ಬದುಕಲಾಗದು. ನಿನ್ನ ಅಂತರಂಗದ ನೋವು ವೇದನೆ ನಾನು  ಸಹಿಸಲಾರೆ. ಅಲ್ಲದೇ ಉಸಿರು ತೊರೆದು ಬಂದ ನಿನ್ನ ದೇಹಕ್ಕೆ ಲಕ್ಷಣವಿರಲಾರದು. ತಂದೆಯನ್ನು ತಿದ್ದುವ ಪ್ರಯತ್ನಮಾಡುವದಾಗಿ ವಚನವನ್ನೂ ಕೊಡುತ್ತಾನೆ. ಇದೇ ಕಾರಣಕ್ಕಾಗಿ ಸತಿ ದೇಹತ್ಯಾಗವನ್ನೂ ಮಾಡುತ್ತಾಳೆ. ಶಿವ ತನ್ನ ಬದುಕಿನುದ್ದಕ್ಕೂ ಅರ್ಧಾಂಗಿನಿಯ ಮುಖಾಂತರ ತವರು ಮತ್ತು ಹೆಣ್ಣಿನ ಅವಿನಾಭಾವ ಸಂಬಂಧದ ಬಗ್ಗೆ ಹೇಳುತ್ತಲೇ ಬಂದಿದ್ದಾನೆ. ಪರ್ವತ ರಾಜನ ಮಗಳು ಪಾರ್ವತಿಯಾಗಿ ಶಿವನ ವರಿಸಿದಮೇಲೂ ತನ್ನ ಹಿಂದಿನ ಜನ್ಮದ ತಂದೆ ತಾಯಿಯಿದ್ದಲ್ಲಿ ಹೋಗಿ ಶಿವನ ಕೋಪಕ್ಕೆ ಬಲಿಯಾದ ದಕ್ಷನ ತಲೆಗೆ ಮೊದಲಿನ ರೂಪ ನೀಡಲು ಶಿವನನ್ನು ಕೇಳಿಕೊಳ್ಳುತ್ತಾಳೆ. ಆಗ ಶಿವ ಹೇಳುತ್ತಾನೆ. ನೋಡಿದೆಯಾ ದೇವೀ..  ಹೆಣ್ಮಕ್ಕಳ ಈ ಮನಸ್ಥಿತಿಯೇ ಸದಾ ತವರು ನಗುತ್ತಿರಲು ಸುಖವಾಗಿರಲು ಕಾರಣ. ಜಗತ್ತಿನ ಎಲ್ಲ ಹೆಣ್ಮಕ್ಕಳೂ ನಿನ್ನ ಗುಣವನ್ನೇ ಹೊಂದಲಿ ಎಂದು ವರ ನೀಡುತ್ತಾನೆ. ಶಿವನ ಹಾರೈಕೆಯ ಪರಿಣಾಮವೋ ಏನೋ ಪ್ರಕೃತಿಯ ಈ ಸ್ವರೂಪವೇ ಮುಂದುವರಿದು ಪ್ರತೀ ಹೆಣ್ಣು ಪಾರ್ವತಿಯೇ ಆಗಿದ್ದಾಳೆ. ಆದರೆ ಸಹನಾಮೂರ್ತಿ ಶಿವ ಯಾವ ಗಂಡಸಿನೊಳಗೂ ಇಲ್ಲವೇನೋ!? ಅಕಸ್ಮಾತ್ ಇದ್ದರೆ ಆ ಹೆಣ್ಣು ಪಾರ್ವತಿದೇವಿ ಯಷ್ಟೇ ಖುಷಿಯಾಗಿ ಬದುಕುತ್ತಿದ್ದಾಳೆ ಎಂದೇ ಅರ್ಥ.

ಪಾರ್ವತಿಯ ಖುಷಿ ಪ್ರತೀ ಹೆಣ್ಣಿಗೂ ಸಿಗಲಿ Read Post »

ಇತರೆ, ಲಹರಿ

ಹರಟೆ ಕಟ್ಟೆ

ಲಹರಿ ಹರಟೆ ಕಟ್ಟೆ ಮಾಲಾ  ಕಮಲಾಪುರ್   ನಾನು  ಹೇಳುವ ಮಾತು ಇದು  ಮೂವತ್ತು ವರ್ಷ ಗಳ ಹಿಂದು ಮುಂದಿನ ಮಾತು ಆಗಿನ ಜನರು ಗಂಡಾಗಲಿ ಹೆಣ್ಣಾಗಲಿ  ಭೇದ  ಭಾವ ಇಲ್ಲದೆ ತನ್ನವರು ನನ್ನವರು ಎನ್ನುವ ಭಾವನೆ ಯೊಂದಿಗೆ ಬೆರೆತು ಹರಟೆ ಹೊಡಿಯುತ್ತಿದ್ದರು. ತಮಗೆ ಬಿಡುವಾದಾಗ ಒಬ್ಬರಿಗೊಬ್ಬರು ಸಂಜೆಗೆ ಹರಟೆ ಕಟ್ಟೆಗೆ ಬಂದು ಹರಟೆ ಹೊಡೆದು ಹೋಗುತ್ತಿದ್ದರು. ಅಷ್ಟೇ ಅಲ್ಲ  ಸುಖ ದುಃಖ ದಲ್ಲಿ ಪಾಲ್ಗೊಂಡು  ತಮ್ಮ ಮನೆಯವರಂತೆ  ಹಚ್ಚಿಕೊಂಡು ಕೆಲಸ ಮಾಡುತ್ತಿದ್ದರು. ಮನೆಯ ಯಜಮಾನಿಯಂತೂ ತನ್ನ ಊಟ ಕೆಲಸ ವಾದಮೇಲೆ ಹೊಟ್ಟಿಯೊಳಗಿನ ಮಾತು ತನಗೆ ಬೇಕಾದವರೊಡನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆದು ಮನಸು ಹಗುರ ಮಾಡಿಕೊಳ್ಳುತ್ತಿದ್ದರು.ಬಾಜು ಮನೆಯವರಿಗೆ  ಯಾವತ್ತೂ ಹೆಸರು ಹಿಡಿದು ಕರೆಯದೆ ಮಾಮಾ, ಮಾಮಿ, ಕಾಕಾ, ಕಾಕು , ವೈನಿ ಅಂತ ಸಂಬೋಧಿಸುವ ವಾಡಿಕೆಯೂ ಇತ್ತು ಇದರಿಂದ ಅನ್ನ್ಯೋನ್ಯತೆ ಬೆಳೆಯುತ್ತಿತ್ತು. ಒಬ್ಬರಿಗೊಬ್ಬರು ಸಹಾಯ ಮಾಡೋದು ಮತ್ತು ಕಡಾ ಕೇಳೋದು ಜೋಳದ ಹಿಟ್ಟು ಮುಗಿದರೆ ಕೇಳಿ ತಂದು ಬೀಸಿ ಕೊಡೋದು ಮತ್ತ ತಿರುಗಿ ಹೀಗೆಲ್ಲ ನಡೆಯೋದರಲ್ಲಿ ಭಾಂದವ್ಯ ಇತ್ತು. ಒಬ್ಬರಿಗೊಬ್ಬರು ಬೆಳದಿಂಗಳಲ್ಲಿ ಪಂಕ್ತಿ ಊಟ ಮಾಡೋದು ಹಂಚಿ ತಿನ್ನೋದು ಒಂದು ತರಹ ಮಜಾನೇ ಇತ್ತು. ದೀಪಾವಳಿಯಲ್ಲಿ ಪಗಡೆ ಆಟ ಅಂತೂ ಬಹಳ ವಿಶೇಷ ಅದರಲ್ಲೂ ಬಳಗದವರಿಗಿಂತ ಓಣಿ ಮಂದಿ ಗಂಡಸರು ಮತ್ತು ಹೆಣ್ಣು ಮಕ್ಕಳು ಕೂಡಿ ಪಗಡಿ ಆಟ ಆಡಿ ಅದರಲ್ಲಿ ನಡುವ ಬ್ರೇಕ್ ಚಹಾ  ಆಹ ಅದೆಂಥ ದಿನ ಅಂತೀರಾ ಈಗ ನೆನಿಸಿದರೆ ಗತ ಕಾಲದ ನೆನಪು ಮಾತ್ರ  ಸಂಡಗಿ, ಹಪ್ಪಳ, ಶಾವಗಿ, ಉಪ್ಪಿನಕಾಯಿ ಮಾಡೋದು ಓಣಿ ಜನ ಸೇರಿ. ಅದೆಂಥ ಸಹಾಯ, ಪ್ರೀತಿ ನೆನೆಸುವುದಾಗಿದೆ ಆಗಿನ ಜನರ ಅನ್ನ್ಯೋನ್ಯ ವಿಚಾರಗಳು ನಗೆ ಮಾತುಗಳು. ಹರಟೆ ಕೇವಲ ಹರಟೆಯಾಗದೆ ಅದ್ದ್ಭುತ ವಿಚಾರಗಳನ್ನು ಹಂಚಿಕೊಳ್ಳುವುದು. ಯಾರದೇಮನೆಯಲ್ಲಿ ಕಾರ್ಯಕ್ರಮ ಆದರೂ ಮನೆಯಲ್ಲಿ ಓಡಾಡಿ ಸಹಾಯ ಮಾಡುವುದು ಇದು ಒಂದು ತರಹ ನಾವೆಲ್ಲರೂ ಒಂದು ಅನ್ನುವ ವಿಚಾರ ತೋರಿಸುತ್ತಿತ್ತು ಕಷ್ಟದಲ್ಲಿ ಸುಖದಲ್ಲಿ ಭಾಗಿಯಾಗಿ ತಮ್ಮ ಹಿರಿಮೆಯನ್ನು ತೋರಿಸುತ್ತಿದ್ದರು. ಇದೆಲ್ಲ ಈಗಿನ ಕಾಲದಲ್ಲಿ ಶೇಕಡಾ 99ರಷ್ಟು ಇಲ್ಲ. ತಾವಾಯಿತು ತಮ್ಮ ಮನೆ ಆಯಿತು ಎಲ್ಲ ಹಾಯ್ ಬಾಯ್ ಅಷ್ಟೇ ಯಾರಿಗೂ ಇದರ ಅವಶ್ಯಕತೆ ಇಲ್ಲ ಎಲ್ಲರದ್ದೂ ಬ್ಯುಸಿ ಲೈಫ್. ಬಾಜು ಮನೆಯಲ್ಲಿ ಏನು ಆದ್ರೂ ಗೊತ್ತಾಗದೆ ಇರುವ ಪರಿಸ್ಥಿತಿ ಈಗ. ಯಾಕೆಂದರೆ ಆ ನಂಬಿಕೆ ವಿಶ್ವಾಸವು ಯಾರಲ್ಲೂ ಉಳಿದಿಲ್ಲ ಉಳಿದವರು ಬೆರಳೆಣಿಕೆ ಯಲ್ಲಿ. ಮನೆಯಲ್ಲಿ ಹಿರಿಯರು ಮಕ್ಕಳು ಹೇಳಿದಂತೆ ಮೌನ ತಾಳಿ ಹೊಂದಿಕೊಂಡು ಮನೆಯಲ್ಲಿಯೇ ಉಳಿಯುತ್ತಾರೆ ಈಗಿರುವ ಪರಿಸ್ಥಿತಿ ಹೀಗೆ. ಈಗ ಪ್ರತಿಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಅತ್ತಿ ಮಾವ ಇಷ್ಟು ಮಾತ್ರ. ಹೀಗೆ ಕಾಲಮಾನ ವಿಚಾರ ಆಚಾರ ಕೆಲಸದ ಒತ್ತಡ ಅಂತಾನೆ ಇಟ್ಟುಕೊಳ್ಳರಿ ಆದರ ಆಗಿನ ಜನರ ರೀತಿನೀತಿ ಹಂಚಿಕೊಳ್ಳುವ ಮಾತು ತೀರಾ ಕಡಿಮೆ. ಎಲ್ಲವೂ ತೋರಿಕೆಯ ಜೀವನ ಈಗಿನದು ಯಾವುದರಲ್ಲಿಯೂ ಸಮಾಧಾನವು ಇಲ್ಲ ಎಲ್ಲವೂ ಇದೆ ಆದ್ರೆ ಮನ್ಸಿಗೆ ನೆಮ್ಮದಿ ಇಲ್ಲ ಯಾಕೆಂದರೆ ಎಲ್ರಿಗೂ ಒಂದಿಲ್ಲ ಒಂದು ಒತ್ತಡ ಟೆನ್ಷನ್.  ಜೀವನವೇ ಟೆನ್ಷನ್. ಆಗ ಈ ಟೆನ್ಷನ್ ಪದಬಳಿಕೆ ಇರಲಿಲ್ಲ ಹಾಗಂತ ಅವರು ತುಂಬಾ ಕಾಲ ಬದುಕಿ ಬಾಳಿದರು. ನಾವು ಸಹ ಸ್ವಲ್ಪ ನಮ್ಮ ಹತ್ತಿರದವರೊಡನೆ ಒಂದು ಘಳಿಗೆ ಪ್ರೀತಿಯ ಮಾತುಗಳನ್ನು ಹಂಚಿಕೊಂಡು ನಮ್ಮ ಒತ್ತಡ ಕಡಿಮೆಮಾಡಿಕೊಳ್ಳೋಣ ಇದು ವಾಟ್ಸಪ್ ಯುಗ ಯಾರಿಗೂ ಮಾತು ಬೇಡ ಕಣ್ಣಿಗೆ ಕೆಲಸ, ಮತ್ತು ಕೈ ಕೆಲಸ ಅಷ್ಟೇ.  ಮನಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು  ಬಿಡುವಿನ ವೇಳೆಯಲ್ಲಿ ನಮ್ಮ ಹಿತೈಷಿ ಗಳೊಂದಿಗೆ  ಹಾಸ್ಸ್ಯ ಹರಟೆ, ಸಂಗೀತ, ಆಧ್ಯಾತ್ಮ ವಿಚಾರ,  ಸಾಹಿತಿಕ ವಿಚಾರ  ಚಿಂತನೆ ಮಾಡಿದಾಗ ನಮ್ಮ ಮನಸು ಪ್ರಫುಲ್ಲ ವಾಗುವುದಲ್ಲವ *******************************************

ಹರಟೆ ಕಟ್ಟೆ Read Post »

You cannot copy content of this page

Scroll to Top