ಗಜಲ್ ಪ್ರೇಮಾ ಹೂಗಾರ ಅಳು ಬಂದರೂ ಅಳಲಾರೆ ಆ ಹನಿಯಲ್ಲಿ ಜಾರಿಹೋಗುವೆ ಎಂಬ ಸಂಕಟನಗು ಬಂದರೂ ನಗಲಾರೆ ಆ ನಗುವಿನೊಂದಿಗೆ ಕಳೆದುಹೋಗುವೆ ಎಂಬ ಸಂಕಟ ನಿನ್ನ ಗಜಲ್ ಸಾಲಿನಲ್ಲಾದರೂ ಜೀವಂತ ಇರುವೆನಲ್ಲ ಎಂಬುದೇ ಸಮಾಧಾನಹಾಡು ಬಂದರೂ ಹಾಡಲಾರೆ ಆ ಹಾಡಿನೊಂದಿಗೆ ಹಾರಿಹೋಗುವೆ ಎಂಬ ಸಂಕಟ ಅಕ್ಷರಗಳ ಜೊತೆಗೇ ಒಂದಾಗಿ ಬೆರೆತೆವು ನಲಿದೆವು ಮುನಿಸ ತೋರಿದೆವು ರೋದಿಸಿದೆವುಬರೆಯಬೇಕೆಂದರೂ ಬರೆಯಲಾರೆ ಆ ಬರಹದೊಂದಿಗೆ ಖಾಲಿಯಾಗುವೆ ಎಂಬ ಸಂಕಟ ಬದುಕಿನ ಪ್ರತಿ ಕ್ಷಣದಲೂ ಜೊತೆಯಾದೆವು ಪ್ರತಿ ಕ್ಷಣವನು ಹಂಚಿಕೊಂಡೆವುನಡೆಯಬೇಕೆಂದರೂ ನಡೆಯಲಾರೆ ಆ ನಡೆಯೊಂದಿಗೆ ಕಾಣೆಯಾಗುವೆ ಎಂಬ ಸಂಕಟ ಬದುಕಿನ ಸುದೀರ್ಘ ಪಯಣದಲಿ ಪ್ರೇಮಳ ಜೊತೆಯಾದೆ ಒಲವಿನಲಿ ಬಂದಿಯಾದೆಮರೆಯಬೇಕೆಂದರೂ ಮರೆಯಲಾರೆ ಆ ಮರೆವಿನೊಂದಿಗೇ ಕಂಬನಿಯಾಗುವೆ ಎಂಬ ಸಂಕಟ ನಾಟಿ ಹೋದ ನೆನಪುಗಳೆಲ್ಲ ಮತ್ತೆ ಮೊಳಕೆ ಒಡೆಯುತ್ತಿವೆತೇಲಿ ಬಿಟ್ಟ ದೋಣಿಗಳೆಲ್ಲ ಮತ್ತೆ ಜಗಕೆ ಕರೆಯುತ್ತಿವೆ ನೀನುಡಿಸಿದ ಕೆಂಪು ಸೀರೆಯ ನೆರಿಗೆಗಳು ಇನ್ನೂ ನಾಚುತಿವೆ ಸಾಕಿನೋಟ ಕಸಿದ ಕಾಡಿಗೆಯೊಳಗೆ ಹೊಸ ಬಯಕೆ ಚಿಮ್ಮುತಿವೆ ನಗುವ ಗೋರಿಯ ಮೇಲೆ ನೇಪಥ್ಯದ ಪ್ರೇಮದ ನೆಪಬೇಡಹೊಣೆಯಿಲ್ಲದ ಕನಸುಗಳಿಗೆ ಚಂದ್ರನ ಕಟ್ಟಿ ನೊಗಕೆ ಜರೆಯುತ್ತಿವೆ ಗೋಧೂಳಿಯು ಹೊತ್ತು ತರುವ ನಂಜಿನ ಆ ಮಹಾಮೌನ………..ಸಾಕು ಸಾಕಿನ್ನು ಮುನಿದ ತೋಳುಗಳು ನೀ ಬರುವ ಹರಕೆ ಬಯಸುತ್ತಿವೆ ನೀ ತುಳಿದು ಹೋದ ಅಂಗಳದ ರಂಗವಲ್ಲಿಯೂ ನನ್ನ ಅಣಕಿಸುತಿದೆಈ ಹೊಸ್ತಿಲು ತಲೆಬಾಗಿಲು ನಮ್ಮ ಪ್ರೀತಿ ಸಾರಲು ಯುಗಕೆ ಕನವರಿಸುತ್ತಿವೆ ಪ್ರೇಮಾ ಕಾದ ಎಲ್ಲ ಘಳಿಗೆಗಳಿಗೂ ಪಂಚಭೂತಗಳೇ ಸಾಕ್ಷಿಹೇಳು ಯಾವ ಕಟ್ಟೆ ಕಟ್ಟಲಿ ನೀನಿರದ ಕಣ್ಣೀರು ಈ ಲೋಕಕೆ ಹರಿಯುತ್ತಿವೆ **********************************
ಗಜಲ್ ಮುರಳಿ ಹತ್ವಾರ್ ಹೊಳೆವ ನೀರ ಮೇಲೆ ಅರಳಿದ ತಾವರೆಯಲ್ಲಿ ನಿನ್ನದೇ ನೆನಪುಸುಳಿವ ತಂಗಾಳಿಗೆ ನಾಚಿ ಸರಿವ ಅಲೆಯಲ್ಲಿ ನಿನ್ನದೇ ನೆನಪು ಶಿಶಿರದಾ ಎಳೆಬಿಸಿಲು ಉಸಿರಿತ್ತು ತೆರೆವ ಚಿಗುರಿನೆಲೆಯಲ್ಲಿಆ ನೆಲೆಯ ಹಕ್ಕಿಗಳ ಚಿಲಿಪಿಲಿಯ ಹಾಡಿನಲ್ಲಿ ನಿನ್ನದೇ ನೆನಪು! ಬಸಿರೊಡೆದ ಮುಗಿಲು ಸುರಿಸುವ ತಿಳಿನೀರ ಹನಿಹನಿಗಳ ಸ್ಪರ್ಶದಲಿಹಸಿರೊಡೆದ ಮನದಿ ಮೂಡುವ ಕಾಮನಬಿಲ್ಲಿನಲ್ಲಿ ನಿನ್ನದೇ ನೆನಪು! ನೆಗೆನೆಗೆದು ಧುಮುಕುತ್ತ ಸರಿಸರಿವ ನದಿಗಳ ಬಳುಕಿನಲ್ಲಿಅಬ್ಬರದ ಅಲೆಗಳಲಿ ದಡವನಪ್ಪುವ ಶರಧಿಯಲ್ಲಿ ನಿನ್ನದೇ ನೆನಪು! ಚಳಿಯೊಡೆವ ಇರುಳುಗಳು ಮಬ್ಬಿಟ್ಟ ನಸುಕಿನ ಮಂಜಿನಲಿರಾಧೆಯ ನೆನೆನೆನೆದು ಮೆರೆವ ಮುರಳಿಯ ಗಾನದಲ್ಲಿ ನಿನ್ನದೇ ನೆನಪು! ಮತ್ತೆ ಬೇಕೆನಿಸಿದೆ…! ತಂಪು ಕನ್ನಡಕಗಳ ಹೊಳಪಿಸಿದ ಆ ಕಿರಣಗಳು ಮತ್ತೆ ಬೇಕೆನಿಸಿದೆಕನಸಿನ ಹೊದಿಕೆಗಳಲಿ ಅರಳಿದ ಆ ಕನಸುಗಳು ಮತ್ತೆ ಬೇಕೆನಿಸಿದೆ ಅಮ್ಮನ ಕೈತುತ್ತು ಅಪ್ಪನ ಕೈ ಬೆರಳು ಬರೆಸಿ ಬೆಳೆಸಿದ ಆ ಹೆಜ್ಜೆಯ ಗುರುತುನಡೆದ ದಾರಿಯ ಅಡಿಅಡಿಗೆ ನೆರಳಿತ್ತ ತಂಪಿನ ಮರಗಳು ಮತ್ತೆ ಬೇಕೆನಿಸಿದೆ ಚಿಗುರೊಡೆದ ಮೀಸೆಯ ಹರೆಯ ಚುಂಬಿಸಲು ನಾಚಿದ ಸವಿ ಹೃದಯಯೌವನದ ದಿನಗಳ ಶೃಂಗರಿಸಿದ ಆ ಗೆಳೆತನಗಳು ಮತ್ತೆ ಬೇಕೆನಿಸಿದೆ ಉರಿ ಬಿಸಿಲ ಕ್ಷಣಗಳ ಪ್ರಯಾಣ ಕೆಲವೊಮ್ಮೆ ನಮ್ಮೀ ಜೀವನ ಯಾನಮೈಮರೆಸಿ ತಣಿಸುವ ಅಮೃತ ಗಾನದ ಆ ಮುರಳಿಯ ಕೊರಳು ಮತ್ತೆ ಬೇಕೆನಿಸಿದೆ! ******************
ಗಜಲ್ ಸುಜಾತಾ ರವೀಶ್ ನೆಲವ ನೋಡುತ ನಡೆಯಲು ಒಲವು ಪದವಾಗಿ ಇಳಿಯಿತಲ್ಲ ಗೆಳೆಯಾಛಲವ ಬಿಡುತ ಸಾಗಿರಲು ನಲಿವು ಹದನಾಗಿ ಉಳಿಯಿತಲ್ಲ ಗೆಳೆಯಾ ಬಲವ ತೋರಲು ಬದುಕಿದು ಗೆಲುವು ಕಾಣುವುದು ತೋರಿಕೆಯಲಿ ಮಾತ್ರನಿಲುವ ಬದಲು ಮಾಡಿರಲು ಜಗವು ಸೊಗವೆಂದು ತಿಳಿಯಿತಲ್ಲ ಗೆಳೆಯಾ ಹಮ್ಮಿನ ಪರದೆ ಸುತ್ತೆತ್ತಲೂ ಧಿಮ್ಮನೆ ಕವಿಯುತ ಮಂಜಾಯಿತೇಕೆ ದೃಷ್ಟಿ ಬಿಮ್ಮನು ತೊರೆದು ವರ್ತಿಸಲು ಘಮ್ಮನೆ ಪರಿಮಳ ಸುಳಿಯಿತಲ್ಲ ಗೆಳೆಯಾ ಎಳವೆ ಕಲಿಸಿದ ರಾಗಗಳ ಆಲಾಪ ಮರೆತರೆ ಪ್ರಬುದ್ದರಾದಂತೆಯೇಸುಳಿವೆ ಕಾಣಿಸದೆ ನೋವುಗಳ ಪ್ರಲಾಪ ಜೀವನದಿ ಅಳಿಯಿತಲ್ಲ ಗೆಳೆಯಾ ಅಧ್ಯಾತ್ಮ ಅರಸಿದ ಸುಜಿಮನ ಸಂತೋಷ ಹೊಂದುತ ಶಾಂತವಾಗಿಹುದುತಾಧ್ಯಾತ್ಮ ತಿಳಿಯಲಿ ತೇಲುತಲಿ ಸಂತೃಪ್ತಿ ಬಾಂಧವ್ಯ ಬೆಳೆಯಿತಲ್ಲ ಗೆಳೆಯಾ ***************************** ಜಗದ ಕನ್ನಡಿಯಲ್ಲಿ ಎದೆಯ ಪ್ರತಿಬಿಂಬವ ಕಾಣದಾದೆಯಾ ಮನದ ಮಂಟಪದಲ್ಲಿ ಪ್ರೀತಿಯ ಪ್ರತಿರೂಪ ನೋಡದಾದೆಯಾ ಮಗುವ ಹೃದಯದಲಿ ಇರದು ದ್ವೇಷಾಸೂಯೆ ಕಲ್ಮಶಗಳು ನಗುವ ಪರಿಮಳದೆ ಇಳೆಯ ಸುಗಂಧಮಯ ಮಾಡದಾದೆಯಾ ಮನಸು ಮನಸುಗಳ ನಡುವೆ ಅಹಂನ ಬೇಲಿ ಕಟ್ಟಿದವರ್ಯಾರು? ಕನಸು ನನಸುಗಳ ಚೆಲ್ಲಾಟಕ್ಕೆ ಪೂರ್ಣವಿರಾಮ ಕೊಡದಾದೆಯಾ ಕಲ್ಪನೆ ವಾಸ್ತವಗಳ ಪರಿಧಿಯಂಚಿಗೆ ಲಕ್ಷ್ಮಣರೇಖೆ ಎಳೆದವರಾರು? ಭಾವನೆ ಸ್ಪಂದನೆಗಳ ಸವಿಪ್ರಸಾದದ ರಸದೌತಣ ನೀಡದಾದೆಯಾ ರಾಜಿಯ ಪ್ರಸಕ್ತಿ ಬರದ ಹಾಗಿಂತು ನಿಷ್ಠುರನಾಗಿ ನಡೆಯಬೇಡ ಸುಜಿಯ ಜೀವನ ನಿನಗಾಗಿಯೇ ಎಂದರಿತಿದ್ದರೂ ಬೇಡದಾದೆಯಾ ******************************
ಅಂಕಣ ಗಜಲ್ ಜಯಶ್ರೀ.ಭ. ಭಂಡಾರಿ. ಸರಿದು ಹೋಯ್ತು ಮತ್ತೊಂದು ಪ್ರೇಮಿಗಳ ದಿನಮರೆಯಲಾರೆ ನಾವಿಬ್ಬರೂ ಸಂಧಿಸಿದ ಆ ಸುದಿನ ಸಖನೇ ಜೋರಾದ ಮಳೆ ಅಬ್ಬರಕ್ಕೆ ನಡುಗಿ ನಿಂತಿದ್ದೆ ಮರದ ಕೆಳಗೆಸರಿ ಸಮಯಕೆ ಹಿತವಾಗಿ ಬಂದು ತುಂಬಿ ನಿಂತೆ ಮೈಮನ ಸಖನೇ ಪ್ರೀತಿ ದೇವನಿಟ್ಟ ವರ ಅದಕೆ ನೀ ನನಗೆ ದಕ್ಕಿದೆ ನೀ ನಿಟ್ಟೆ ಹಣೆಗೆ ಚುಕ್ಕಿ ಅದಕೆ ಸಲ್ಲಿಸುವೆ ದೇವಗೆ ನಮನ ಸಖನೇ ಪ್ರತಿ ಬಾರಿ ಈ ದಿನ ನಮ್ಮದೆ ಗುಲಾಬಿಯಲಿ ರಂಗಾಗಲುಹೊಸ ಚೈತನ್ಯ ತುಂಬಿ ಬರುತಿರಲು ಒಲವ ಗಾನ ಸಖನೇ. ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ನಾವುಬದುಕು ಬಂಡಿಯಲಿ ಅಪರಂಜಿಗಳಾಗಿ ಮಾದರಿಯಾಗೋಣ ಸಖನೇ ಪ್ರೇಮಿಗಳು ನಾವು ಪ್ರತಿದಿನ ಪ್ರತಿಕ್ಷಣ ಸಾಂಗತ್ಯದಲ್ಲಿಒಂದೆ ದಿನದ ಆಚರಣೆ ಬೇಕಿಲ್ಲ ಈ ಜಯಳಿಗೆ ಸದಾ ನಿನ್ನದೇ ಧ್ಯಾನ ನಿಶಾಪಾನ ಸಖನೇ ನೀನಗೇಕೆ ಅರಿವಾಗುತ್ತಿಲ್ಲ ನನ್ನ ಒಲವು ಮೌನವೇನೀ ಹೀಗೆ ಮರೆತು ಕುಳಿತರೆ ಹೇಗೆ ಮೌನವೇ. ಮನಸಿನಾಳಕಿಳಿದ ಈ ಪ್ರೀತಿ ಕೇವಲ ನೆಪವೇನೋಡಿದಾಗಲೆಲ್ಲ ಹತ್ತಿರ ಬರ್ತಿದ್ದೆ ಮೌನವೇ. ನೀ ಮೀಟಿದೆ ಹೃದಯದಿ ಹಿತವಾದ ನೆನಪೇಅಳುಕಿಸಲಾರದು ಯಾವ ಶಾಯಿ ಮೌನವೇ ಪ್ರೇಮಿಗಳು ನಾವು ಮರೆಯದಿರು ಜೀವವೇ.ಅನುರಾಗವಿದು ದುಡುಕಿ ದೂರಾಗದಿರು ಮೌನವೇ. ನೀನಿರದ ಸಂಭ್ರಮ ಯಾತಕೆ ಮನವೇಎಂದಿಗಾದರೂ ಬಾ ಒಪ್ಪಿಕೊಳ್ಳುವೆ ಮೌನವೇ.. ಮೌನ ಮಾತಾಗಿ ಬಾ ಪ್ರೇಮ ಬೊಕ್ಕಸವೇನೋವು ಮರೆತು ಮುತ್ತಾಗೋಣ ಮೌನವೇ. ಜೀವನವೆಂಬ ಜೋಕಾಲಿ ಜೀಕೋಣ ಸಖನೇಸುಖವೆನೆಂದು ಅರಿತು ಬೆರೆತು ಬಾಳೋಣ ಮೌನವೇ ನೆಪವೆಂದು ಹೇಳಿ ತಲ್ಲಣಿಸದಿರು ದೊರೆಯೇದೊರೆಸಾನಿ ಜಯಳಿಗೆ ನಿನ್ನೊಲುಮೆ ನೀಡು ಮೌನವೇ. ******************************
ಗಜಲ್ ರೇಖಾ ಭಟ್ ಗುಡಿಸಲುಗಳ ಹೊಸ್ತಿಲಲಿ ಹಣತೆಗಳು ಬೆಳಗಿದರೆ ಅಂದು ದೀಪಾವಳಿಹಬ್ಬಿದ ಗೆದ್ದಲುಬಳ್ಳಿ ಉದುರಿ ಹಸೆಚಿತ್ರ ಮೂಡಿದರೆ ಅಂದು ದೀಪಾವಳಿ ಹಬ್ಬವೆಂದರೆ ಹೊಸ ಬಟ್ಟೆ ಹೊಸ ವೇಷ ಹೊಸ ನೋಟ ಇಷ್ಟೇ ಅಲ್ಲಹರಿದ ಅಂಗಿಯ ತುದಿಯಲಿ ಪಾಯಸವು ಅಂಟಿದ್ದರೆ ಅಂದು ದೀಪಾವಳಿ ರಂಗು ಬೆಳಕಿನಲಿ ನಡೆವ ನಶೆಯ ಕೂಟಗಳಿಗೆ ದೀಪಾವಳಿಯೇ ಆಗಬೇಕೆ‘ಮದ್ಯ’ದಲಿ ಕರಗುವ ಪುಡಿಗಾಸು ಕೂಸಿನ ಕಾಲ್ಗೆಜ್ಜೆಗಾದರೆ ಅಂದು ದೀಪಾವಳಿ ನೊಂದ ಜೀವಗಳಲಿ ಆಶಾಭಾವದ ಮಿಣುಕು ಮೊದಲು ಉದಿಸಬೇಕಿದೆ ಇಲ್ಲಿಕಸಮುಸುರೆಯಲಿ ಕನಸರಳಿಸುವ ಕೈಗಳಿಗೆ ಬಿಡುವಾದರೆ ಅಂದು ದೀಪಾವಳಿ ಬದುಕೇ ಹಬ್ಬವಾದವರಿಗೆ ಈ ಹಬ್ಬಗಳ ಸಾಲು ನಾಮಾಂಕಿತ ‘ರೇಖೆ’ಗಳುಸೋತ ಕಂಗಳ ಆಳವನು ಬೆಳಕೊಂದು ತಡವಿ ತಬ್ಬಿದರೆ ಅಂದು ದೀಪಾವಳಿ ನಿನ್ನೊಲವ ಅರಿತ ಮೇಲೆ ಪ್ರೀತಿಯ ವ್ಯಾಖ್ಯಾನವನು ಹುಡುಕಲಿಲ್ಲಜೀವಭಾವ ಬೆರೆತ ಮೇಲೆ ಅನುಸಂಧಾನದ ಅರ್ಥವನು ಹುಡುಕಲಿಲ್ಲ ನಿನ್ನ ಮೇಲೆ ಮುನಿಸು ಹೆಚ್ಚಿದಂತೆಲ್ಲಾ ಕುದಿಯುವುದು ನನ್ನದೇ ಹೃದಯನೀ ನನ್ನೊಳಗಿರುವೆ ಎಂದರಿತ ಮೇಲೆ ಸಲ್ಲದ ನೆಪಗಳನು ಹುಡುಕಲಿಲ್ಲ ಎಂಟು ದಿಕ್ಕಿಂದ ತೂರಿಬರುತಿವೆ ರಾಗಗಳು ಯಾವುದಕ್ಕೆ ಕಿವಿ ತೆರೆಯಲಿಅನುರಾಗದ ಅಲೆಗಳು ಎದೆಯ ತುಂಬಿದ ಮೇಲೆ ವಿರಹದ ಹಾಡುಗಳನು ಹುಡುಕಲಿಲ್ಲ ಈ ಪ್ರೀತಿಯು ಮಧುರ ಮಾಯೆಯಂತೆ ಆದರೂ ಮೊದಲ ಆದ್ಯತೆ ನಿನಗೆನಿನ್ನ ಸನಿಹ ನನ್ನ ಸ್ವರ್ಗ ಎಂದು ತಿಳಿದ ಮೇಲೆ ಯಾವ ಆಕರ್ಷಣೆಗಳನು ಹುಡುಕಲಿಲ್ಲ ಬರಿದೇ ಇನ್ನೇನು ಹುಡುಕಲಿ ತೃಪ್ತಿಯಾಳದಲಿ ‘ರೇಖೆ’ಯ ಮನವು ನೆಲೆನಿಂತಾಗಆತ್ಮಕ್ಕೆ ಪ್ರೇಮ ದರ್ಶನವಾದ ಮೇಲೆ ಕಾಣದ ದೇವರನು ಹುಡುಕಲಿಲ್ಲ *****************************************
ಗಜಲ್ ಮುತ್ತು ಬಳ್ಳಾ ಕಮತಪುರ ನಿಮಗೆ ಮುಳ್ಳಂತೆ ಚುಚ್ಚುವುದು ಗೊತ್ತು |ಪ್ರೀತಿಸಿದರೆ ಹೂ ಹಣ್ಣಾಗುವುದು ಗೊತ್ತು || ಕಂಗಳಿಗೆ ಸೋಲದವರು ಯಾರು ಹೇಳಿ |ಅಂದಕೆ ಮೋಸ ಮಾಡುವುದು ಗೊತ್ತು || ನೋವುಗಳು ನುಂಗಿದ ಮೌನ ಸಾಗರದಷ್ಟು |ಒಂದು ತಪ್ಪು ಬದುಕೇ ಬದಲಿಸುವುದು ಗೊತ್ತು || ಅಲೆವ ಜೀವ ನದಿ ಕೊನೆಗೆ ಅಂತ್ಯವಾಗುದೆ |ಬೆಣ್ಣೆಯಂತ ಸ್ನೇಹ ಬೆಸೆಯುವುದು ಗೊತ್ತು || ಒಂಟಿ ಚಂದ್ರನು ಬಣ್ಣ ಬದಲಿಸಿದ ಮುತ್ತು|ಬೆವರ ಹನಿ ನೆಲವ ತಣಿಸಿರುವುದು ಗೊತ್ತು | ಕದಡಿದ ಮನದಲಿ ಆಸೆಯ ನಶೆಯನು ತುಂಬಿ ಉಸಿರಿಗೆ ಉಸಿರಾದವಳೇ ಆಲಿಸು |ಹರಿಯುವ ಕೊಳದ ನೀರಲಿ ಬಿಂಬವ ತೋರಿ ಕ್ಷಣದಲಿ ಮಾಯವಾದವಳೇ ಆಲಿಸು || ಬನದಲಿ ಹಾರುವ ಪತಂಗ ಮುಟ್ಟಿದರೆ ಮುನಿಯುವ ನಾಜೂಕಿನ ಬಣ್ಣದವಳು |ಊರ ಹೊರಗಿನ ಹನುಮದೇವರಿಗೆ ಹರಕೆಯ ಕಟ್ಟಿ ಕಾಯುತ್ತಿರುವಳೇ ಆಲಿಸು | ಬೆರಳ ತುದಿಯಲಿ ನೆಲವ ತೀಡುತ್ತಾ ನಾಚಿ ತುಟಿಯನು ಕಚ್ಚಿ ಮರೆಯಾದವಳು|ಊರ ಮುಂದಿನ ಬಾವಿಯಲಿ ನೀರನ್ನು ಸೇದುವಾಗ ಜೊತೆಯಾದವಳೇ ಆಲಿಸು || ಕಣ್ಣ ಸನ್ನೆ ಮಾಡಿ ಮೌನವಾಗಿ ಪಿಸುನಕ್ಕರು ಅರಿಯದ ಮಡ್ಡಿ ಮಣ್ಣಿನವಳು |ಆಟದ ನೆಪದಲಿ ನಿನ್ನ ಕೈಗೆ ಸಿಕ್ಕರು ಮುಟ್ಟದೆ ಗಾಬರಿಯಾದವಳೇ ಆಲಿಸು || ಆಚೆ ಬೀದಿಯ ಸಂದಿಯಲಿ ಕದ್ದು ಮುಚ್ಚಿ ಭೇಟಿಯಾದ ಸಂಗತಿಯೆ ಮುತ್ತುದುಂಬಿಯ ಗೆಳತನ ಬಯಸಿದ ಸುಮಸ್ಪರ್ಶಕೆ ನಾಚಿ ನೀರಾಗಿ ಸಾರ್ಥಕವಾದವಳೇ ಆಲಿಸು ||
ಗಜಲ್ ವೀಣಾ .ಎನ್. ರಾವ್. ಎದೆಯ ನದಿಯಲಿ ಹರಿಯಲಿ ಒಲವ ಭಾವಗಂಗೆ ಅನುದಿನ ಗೆಳೆಯಾಸುಧೆಯ ಸುಳಿಯಲಿ ಜಿನುಗಲಿ ನಾದದ ಜೀವಬಂಧ ಹೊಸದಿನ ಗೆಳೆಯಾ. ನಿಯಂತ್ರಣ ತಪ್ಪದ ಬದುಕಲಿ ಹುಡುಕಬೇಕಿದೆ ನಿನ್ನಯ ಸಾಂಗತ್ಯ ಸವಿಯಲುಆಮಂತ್ರಣ ನೀಡದೆ ಬರೆದೆ ನನ್ನೆದೆಯಲಿ ಕಾವ್ಯಕುಸುರಿ ಸುರಿದದಿನ ಗೆಳೆಯಾ. ನಿಲ್ಲದ ಅಭಿಲಾಷೆ ನೋಟದಲಿ ಬಂಧಿಸಿ ಮಧುರ ನುಡಿ ಮರೆಸಿದೆಸಲ್ಲದ ನೆಪದಲಿ ಹಗಲು ಕನಸಿಗೆ ಸ್ಪೂರ್ತಿಯು ಮರೆಯದದಿನ ಗೆಳೆಯಾ. ಕಿರುನಗೆಯನು ಕೆಣಕುತ ಸೆಳೆದ ಮನಕೆ ಪುಳಕದ ಸವಿರಸ ಉಣಿಸಿಹೊಸಬಗೆಯನು ತೋರುತ ಬಳಿಬಂದು ನೋವ ಮರೆತು ಸರಿದದಿನ ಗೆಳೆಯಾ. ಬೆಳಗಿದನು ರವಿಯು ಜಗದೊಡಲಿಗೆ ಹರುಷದ ಕಿರಣಗಳ ಚಿಲುಮೆ ಧಾರೆಯಲಿಸುರಿಸಿದನು ಮಧುರ ಪ್ರೇಮವ ವೀಣಾಳ ಬಾಳಿನಲ್ಲಿ ಸುದಿನ ಹಳೆಯ ದಿನಗಳ ಸವಿಯ ಸವಿಯುತ ಮನವು ನಲಿಯುತಿದೆ ಗೆಳತಿಮಳೆಯ ಸೂಚನೆಗೆ ಮೋಡವು ಕವಿಯುತ ಗಗನ ನಲುಗುತಿದೆ ಗೆಳತಿ. ಮಸುಕು ಕನ್ನಡಿಯಲಿ ಕಂಡ ಅಸ್ಪಷ್ಟ ನನ್ನದೇ ಪ್ರತಿಬಿಂಬವಿದೆ ಅಲ್ಲಿನಸುಕು ಇಬ್ಬನಿಯಲಿ ಕಾಣದ ಪರದೆ ಸಿಗದೆ ಮರೆಯಾಗುತಿದೆ ಗೆಳತಿ. ಉರಿವ ಸೂರ್ಯನಿಗೂ ಬರುವುದು ಒಮ್ಮೊಮ್ಮೆ ಗ್ರಹಣವೆಂಬ ಕರಿಯ ಛಾಯೆಜರಿವ ಜನರಲ್ಲಿ ಕುಟಿಲ ಅಂತರಂಗ ಅರಿತು ನೋವಾಗುತಿದೆ ಗೆಳತಿ. ದುಡಿವ ಕೈಗಳ ಹಿಂದಿರುವ ಬೆವರ ಶ್ರಮವು ಯಾರಿಗೂ ತೋರದುಮಿಡಿವ ಹೃದಯವು ಕಾಯುತ ನಿಂತರೂ ಉಸಿರು ಬೆದರುತಿದೆ ಗೆಳತಿ. ಮನಕೆ ಸಾಂತ್ವನ ಹೇಳಲು ವೀಣಾಳು ಜೊತೆಯಿರಲು ಭಯವೇಕೆ ನಿನಗೆಒನಕೆ ಕುಟ್ಟುತ ಹಾಡಿದ ಹೊಸರಾಗ ಎಲ್ಲರ ಒಂದಾಗಿಸುತಿದೆ ಗೆಳತಿ. ***********************
ಗಜಲ್ ಶಂಕರಾನಂದ ಹೆಬ್ಬಾಳ ಮಳೆಯ ಹನಿಗಳು ಇಳಿಯುತ ಇಳೆಗೆ ಎದೆಗಳ ತಂಪಾಗಿಸಲಿ ಸಖಿ|ಮನದಲಿ ಪ್ರೀತಿಯು ಚಿಮ್ಮುತ ತಾನಿಂದು ಭಾವಗಳ ಇಂಪಾಗಿಸಲಿ ಸಖಿ|| ಜೀವಗಳ ಬಾಂಧವ್ಯ ಬೆಸೆಯುವ ನಲ್ಮೆಯ ಸುಮಧುರ ಸ್ನೇಹವದು|ಭಾನುಭೂಮಿಗಳು ಜೊತೆಯಲಿ ಬೆರೆಯುತ ತನುಗಳ ಒಂದಾಗಿಸಲಿ ಸಖಿ|| ಒಲವಿನಲಿ ಕೂಡುವ ಸವಿ ಸ್ವಪ್ನಗಳು ಕಂಗಳಲಿ ನಲಿಯುತಿವೆ|ಚೆಲುವಿನ ಸಿರಿಯು ಧರಣಿಯ ಮೆಲ್ಗಡೆ ಹಸಿರಿನು ಸೊಂಪಾಗಿಸಲಿ ಸಖಿ|| ಇಬ್ಬನಿಯಲಿ ಕಿರಣಗಳು ರವಿಯ ಕಾಂತಿ ತೋಷದಲ್ಲಿ ಚಲ್ಲುತಿವೆ|ಕಾರ್ಮೋಡ ಆಗಸದಲಿ ಶರಧಿಯ ಸೇರುತ ವರುಣನ ಸ್ವಾಗತಿಸಲಿ ಸಖಿ|| ನೀಲಾಕಾಶವು ಚಣದಲ್ಲಿ ರವಿಯನ್ನು ಹೊಳೆಸಿ ಅಭಿನವನ ಮೆರೆಸುತಿದೆ|ಧರೆಯಲ್ಲಿ ಕಲ್ಮಷಗಳ ದೂರವಿರಿಸಿ ಬರುತಿರುವ ಭಾಸ್ಕರನ ಬೆಳಗಿಸಲಿ ಸಖಿ|| ನೂರು ರಾಗದಲಿ ಸಾವಿರ ಹಾಡುಗಳ ಹಾಡುವೆನು ನನ್ನೊಡತಿ||ಸಾಗುವ ಹಾದಿಯಲಿ ಕಲ್ಲುಮುಳ್ಳುಗಳ ದಾಟುವೆನು ನನ್ನೊಡತಿ|| ಒಲಿದ ಜೀವಗಳಲಿ ಒಲುಮೆಯ ಸಂಗೀತ ಕೇಳುತಿದೆ|ಮೇಘಗಳ ಮಾಲೆಯಲಿ ಪ್ರೇಮತೇರನು ಎಳೆವೆನು ನನ್ನೊಡತಿ|| ಕೌಮುದಿಯ ಬೆಳಕಿನಲಿ ತಮವನ್ನು ಓಡಿಸುತ ಬಂದಿರುವೆ|ತೂರ್ಯವನು ಊದುತಲಿ ಮನವನ್ನು ಗೆಲ್ಲುವೆನು ನನ್ನೊಡತಿ|| ರೇಷ್ಮೆಯ ತನುವಿಂದು ತೋಳನ್ನು ಬಳಸುತ್ತ ಬರುತಲಿದೆ|ಶುದ್ದಾಂತದ ಮನೆಯಲಿ ಹಿಡಿದು ತಬ್ಬುವೆನು ನನ್ನೊಡತಿ|| ಅಭಿನವನ ನಲ್ನುಡಿಯ ಶುಕ್ತಿಯಲಿ ಮುತ್ತಾಗಿ ಹೊಳೆದಿರುವೆ |ಶೈಲೂಷಿಯ ನೃತ್ಯಕ್ಕೆ ಕಂಗಳಲಿ ಸೋಲುವೆನು ನನ್ನೊಡತಿ|| *************************************
ಗಜಲ್ ಸಿದ್ದರಾಮ ಹೊನ್ಕಲ್ ತೆರೆಯಬಾರದೇನೇ ನಿನ್ನ ಹೃದಯಕ್ಕೆ ಹಾಕಿದ ಬೀಗವನುತೋರಬಾರದೇ ದೇಹ ಮನದೊಳಗಿನ ಚೆಲುವ ಸಿರಿಯನು ಒಲವು ತುಂಬಿಟ್ಟಿರುವಿ ಯಾರೂ ಕದಿಯದಂತೆ ಕಾಪಿಟ್ಟುಮುದದಿ ಸಿಹಿ ಮುತ್ತಿಕ್ಕಿ ನೀ ತಬ್ಬದೇ ಹಬ್ಬಲು ಅರಿಯನು ಜಗದಿ ಕಳ್ಳ ಸುಳ್ಳ ಖದೀಮರೇ ಜಾಸ್ತಿ ದೋಚ ಬಲ್ಲವರುಎಚ್ಚರದಿ ದೂರವಿಡು ನಾಯಿ ನರಿ ಕಾಡು ಕೋಣಗಳನು ಹುಷಾರ್ ಕಣೇ ಬಹುದೂರ ಬಂದಿರುವಿ ಬೇಲಿ ಮರೆಯಲಿಎಲ್ಲೆಂದರಲ್ಲಿ ಕುಂತು ಹಾಕಲು ಮರೆಯದಿರು ಚಿಲುಕವನು ಹೊನ್ನಸಿರಿ’ಮೆಚ್ಚಿಹನು ನಿಸ್ವಾರ್ಥ ಸ್ವಾಭಿಮಾನ ಸಂಪತ್ತನುಜೋಪಾನದಿ ಕಾಪಾಡಿಕೋ ಮುಳ್ಳ ಮೇಲಿನ ಸೀರೆಯನು ಕಲ್ಲು ಬಂಡೆಯಂತವ ಕರಗಿ ಹಿಮದಂತಾದೆ ನಾನೇಕೆ ಹೀಗೆರಾಗಾನುರಾಗದಿ ಮುಳುಗುತ್ತಾ ಹೂವಂತಾದೆ ನಾನೇಕೆ ಹೀಗೆ ಕನಸಲಿ ಎದ್ದು ಬೆಂಬತ್ತಿ ಹೋಗುವಂತದು ಏನಿರಬಹುದುಕನಸು ನನಸು ವ್ಯತ್ಯಾಸ ಅರಿಯದಂತಾದೆ ನಾನೇಕೆ ಹೀಗೆ ಬಾಂದಳದಿ ಚಕೋರಂಗೆ ಸದಾ ಚಂದ್ರಮನ ಚಿಂತೆಯಂತೆಮಾತು ಮೌನದಿ ತಣಿದು ಮೂಕನಂತಾದೆ ನಾನೇಕೆ ಹೀಗೆ ನಟ್ಟ ನಡು ರಾತ್ರಿಯಲಿ ಧಿಗ್ಗನೆದ್ದು ಬಾಯಾರಿದ ಬವಣೆಯುಸಿದ್ದಾರ್ಥನು ಧೇನಿಸಿ ಎದ್ದುಹೋದಂತಾದೆ ನಾನೇಕೆ ಹೀಗೆ ಬಾರದ ದುಂಬಿಗಾಗಿ ಮಧು ಎತ್ತಿಟ್ಟು ಕಾದ ಗುಲಾಬಿಯಂತೆಆ ಕಾರ್ಮೋಡ ಮುಸುಕಿದ ಶಶಿಯಂತಾದೆ ನಾನೇಕೆ ಹೀಗೆ ಬರುವಾಗ ಅಳುತಾ ಬಂದೆ ಹೋಗುವಾಗಲು ನಗು ಬೇಡವೇಹೊನ್ನಸಿರಿ’ಸ್ವಾರ್ಥ ಮನಸಿಗೆ ಕಮರಿದಂತಾದೆ ನಾನೇಕೆ ಹೀಗೆ **********************************
ಗಜಲ್ ಪ್ರಭುಲಿಂಗ ನೀಲೂರೆ ಬಿಗಿ ಸಾಮೀಪ್ಯ ಇಲ್ಲದೆಯೂ ನೀ ನನ್ನ ಪ್ರಾರ್ಥನೆಯೊಳಗೆ ಅಡಗಿರುವೆ ಮುದ್ದುದೇಹ ಬೇರೆಯಾದರೂ ನೀ ನನ್ನ ಉಸಿರೊಳಗೆ ಬೆರೆತಿರುವೆ ಮುದ್ದು ಎಲ್ಲಿ ನೋಡಿದರಲ್ಲಿ ನಿನ್ನದೆ ಬಿಂಬ ನಾ ಕಾಣುತಿರುವೆ ನನಗೇನಾಗಿದೆ ಹೇಳುನಿನ್ನ ಕಂಡಂದಿನಿಂದ ಶಾಶ್ವತವಾಗಿ ನೀ ನನ್ನ ಕಣ್ಣೊಳಗೆ ನೆಲೆಸಿರುವೆ ಮುದ್ದು ನಮ್ಮ ದೇಹಗಳು ಹತ್ತಿರವಿಲ್ಲದಿದ್ದರೂ ಹೃದಯಗಳು ಎಂದೋ ಒಂದಾಗಿವೆದೂರವಿದ್ದರೂ ಪ್ರತಿಕ್ಷಣ ಮನಸ್ಸಿನೊಳಗೆ ಓಡಾಡುತಿರುವೆ ಮುದ್ದು ತಲೆ ಬಾಚಿದಾಗಲೆಲ್ಲ ನಿನ್ನ ಬೆರಳುಗಳ ಓಡಾಟ ಕಂಡು ನಾಚಿ ನೀರಾಗುತ್ತೇನೆಬೆಳದಿಂಗಳಲಿ ನೀ ನೀಡಿದ ಮುತ್ತಿಗೆ ಸಾಕ್ಷಿಗೆ ಚಂದಿರನಿಗೆ ಹೇಳಿರುವೆ ಮುದ್ದು ನಿನ್ನ ಬೆರಳ ತುದಿಯಲಿರುವ ಜಾದುವಿಗೆ ನಾನೇ ಮೈಮರೆತು ಹೋದೆನಲ್ಲಬದುಕುಪೂರ್ತಿ ಹೀಗೆ ಇದ್ದು ಬಿಡು ನಿನ್ನ ಪ್ರೀತಿಗೆ ಸೋತಿರುವೆ ಮುದ್ದು ಸಮುದ್ರದ ಅಲೆಗಳಂತೆ ಎಡೆಬಿಡದೆ ಎದೆ ಮಿಡಿತ ನಿನ್ನದೇ ಹೆಸರಲ್ಲಿದೆಅದ ಕೇಳಲು ನನ್ನೆದೆಗೆ ತಲೆಯಿಟ್ಟು ಮಲಗಲು ನೀನೆಂದಿಗೆ ಬರುವೆ ಮುದ್ದು ಎಂದೂ ಪ್ರಭುವಿನ ಕನಸಲ್ಲಿ ಬರಬೇಡ ಎದ್ದ ಕೂಡಲೇ ನೀ ದೂರಾಗುವ ಭಯಸಾವಿರ ಜನುಮಕೂ ನೆನಪುಗಳ ಹೊತ್ತೇ ನಿನಗೆ ಕಾಯುತಿರುವೆ ಮುದ್ದು ನಾ ಮರೆತರೂ ಆ ನಿನ್ನ ಸಾಲು ಮರೆಯಲು ಬಿಡುತ್ತಿಲ್ಲ ಸಾಕಿಬರೆಯುವ ಪ್ರತಿ ಅಕ್ಷರದಲ್ಲೂ ನೀನೇ ಇಣುಕುವೆಯಲ್ಲ ಸಾಕಿ ನಡೆದ ದಾರಿಯಲಿ ಜೋಡಿ ಹೆಜ್ಜೆ ಗುರುತು ಕಥೆ ಹೇಳುತಿದೆ ಕೇಳುಆಡಿದ ಪ್ರತಿ ಮಾತು ಪ್ರತಿಧ್ವನಿಯಾಗಿ ರಿಂಗಣಿಸುತಿದೆಯಲ್ಲ ಸಾಕಿ ಅದರಕೆ ಜೇನಿನ ರುಚಿ ತೋರಿ ಮತ್ತೇರಿಸಿದ ಕ್ಷಣ ಕಾಡುತಿದೆ ನೋಡುನಿನ್ನ ಕೈ ಕುಂಚವಾಗಿ ಶೃಂಗಾರದ ಚಿತ್ರ ಬಿಡಿಸುವಾಗ ಮೈಮರೆತೆನಲ್ಲ ಸಾಕಿ ಕನಸಲೂ ನಿನ್ನದೆ ದರ್ಶನ ಹಗಲಿಗಿಂತ ಇರುಳು ಹಿತವೆನಿಸುತಿದೆಮತ್ತೆ ಒಂದಾಗುವ ಕ್ಷಣಕೆ ಕಾಯುತಿರುವೆ ಕೊಟ್ಟ ಭಾಷೆ ಮರೆತಿಲ್ಲ ಸಾಕಿ ಬದುಕಿನ ಕಾದಂಬರಿಯಲಿ ಪ್ರೀತಿಯ ಅಧ್ಯಾಯ ನೀನಾಗಬೇಕಿದೆ ಒಲವೇಪ್ರಭುವಿನ ಜೊತೆ ಜೀವನಪೂರ್ತಿ ಹೀಗೆಯೇ ಇದ್ದು ಬಿಡು ಪ್ರೀತಿಗೆ ಸಾವಿಲ್ಲ ಸಾಕಿ ***************************









