ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಮೀನು ಶಿಕಾರಿಯ ಸಂಭ್ರಮ

ಮಳೆಗಾಲದ ಆರಂಭ ಮತ್ತು ಮೀನು ಶಿಕಾರಿ… ರಮೇಶ್ ನೆಲ್ಲಿಸರ ‘ಮಳ್ಗಾಲ ಅನ್ನೋದ್ ಯಾವಾಗ್ ಬಂದ್ ಈ ಸುಡ್ಗಾಡ್ ಶೆಕೀನ ಹೊತ್ಕಂಡ್ ಹೋಯ್ತದೋ ಆ ದ್ಯಾವ್ರೆ ಬಲ್ಲ’, ಅಂತ ಬೇಸ್ಗೀಲಿ ಹಾಗೇಯ “ಈ ಹಾಳಾದ್ ಮಳಿ ದಸೇಂದ್ ಮನೆ ಹೊರ್ಗ್ ಕಾಲಿಡಕ್ ಆಗ್ದು” ಅಂತ ಮಳ್ಗಾಲದಾಗೆ , ಈ ಬಗೀ ಮಾತು ನಮ್ ಮಲ್ನಾಡ್ ಕಡೆ ಎಲ್ರೂ ನಾಲ್ಗಿ ಮೇಲೂ ನಲೀತರ‌್ದದೆ. ಏನ್ ಶೆಕಿ ಅಂತೀರಾ, ಹೋದ್ ಮಳ್ಗಾಲ‌್ದಲ್ ಆ ನಮೂನಿ ಮಳೆ ಹೊಯ್ದ್ರು ನೀರ್ ಅನ್ನದ್ ಪಾತಾಳ್‌ಮಟ ಇಳ್ದು ತುಂಗಾ ನದಿ ಅನ್ನೋದು ಬೇಗೊಳ್ಳಿ ಹಳ್ದಂಗ್ ಆಗಿ ಆಚಿದಡ ಈಚಿದಡಕ್ಕೆ ‌ನಡ್ಕೊತಾನೆ ದಾಟಾಡೊಂಗ್ ಆಗಿತ್ತು. ಮುುುಂಗಾರಲ್ ಮಳಿ ಹೆಂಗಪ್ಪ ಅಂದ್ರೆ ಅತ್ಲಾಗೂ ಬಂದಂಗೂ ಅಲ್ಲ, ಇತ್ಲಾಗ್ ಬರ್ದೀತೆ ಇರಂಗು ಅಲ್ಲ, ಒಂದ್ ಸರಿ ಹೊಯ್ತದೆ,ಮಾರ‌್ನೆ ಗಳ್ಗೆಗ್ ಬಿಸ್ಲ್ ಮೂಡತ್ತೆ, ಮಳಿ ಹಿಡ್ಕಳಾ ಒಳ್ಗೇನೆ ದರ‌್ಗು, ಒಣ ಹುಲ್ಲು,ಕಟ್ಗಿ ಎಲ್ಲಾ ಕೊಟ್ಗೆಗ್ ಸೇರ್ಸಿದ್ವೊ ಆತು ಇಲ್ಲಾಂದ್ರೆ ಆ ಯಮ ಮಳೀಲಿ ಹೊರ್ಗ್ ಹೊಂಡಾಕ್ ಆಗ್ತ?, ಊಹುಂ ಅದ್ ಕೇಣ್ಬೇಡಿ. ಬೇಸ್ಗಿ ಮುಗ್ಯೋವರ್ಗು ಕೇಸಿನ್ ಸೊಪ್ಪು, ಬಸ್ಲೆ ದಂಟು, ಸೂರೇನ್‌ಗೆಡ್ಡೆ, ಅಂತ ಚಪ್ಪೆ ತಿನ್ಕುಂಡು ನಾಲ್ಗಿ ಕೆಟ್ಟೋಗಿರೋ ಟೇಮಿಗ್ ಈ ಮಳಿ ಅನ್ನೊದ್ ನಮ್ಗೆ ಅಮೃತ ಇದ್ದಂಗೆ,ಇಷ್ಯ ಏನಪ್ಪ ಅಂದ್ರೆ ಚೂರ್ ಮಳಿ ಬಂದು ಕೊನೇಗ್ ಗದ್ದೆ ಬದಿ ಹಳ್ಳನಾರು ಬಂದಿದ್ರೆ ನಾಕ್ ಸೊಸ್ಲು ಹಿಡ್ಕಂಡ್ ಬಂದ್ರೆ ಪಲ್ಯಾಕಾದ್ರೂ ಆದೀತು ಅಂತ. ಈ ಸಮುದ್ರದ್ ಮೀನ್ನ ನಮ್ಗ್ ಕೊಣ್ಣಾಕ್ ಆದೀತಾ ಊಹುಂ, ಆ ಪಾಟಿ ರೇಟು!, ಏನಾರ್ ಅರ್ಧಕೇಜಿ ತಕ್ಕಂಬದು ಆದ್ರೆ ಅದೂ ಕೊನ್ಕೊನೆಗೆ ಚಪ್ಪೇಯ, ಭೂತಾಯಿ ಬಂಗ್ಡೆ ಎಲ್ಲಾರ್ ತೀರ್ಥಳ್ಳಿ ಪೇಟೆ ಕಡೆ ಹ್ವಾದ್ರೆ ಹ್ವಾಟ್ಲಲ್ ತಿನ್ಕಬರ್ಬೋದು, ಅದೂ ದೊಡ್ಡೋರ್ ಮಾತ್ರ. ಆಗಿಂದನೂ ಅಷ್ಟೇ ಅಪ್ಪಯ್ಯ, ದೊಡ್ಡಪಯ್ಯೋರು ಮಳಿ ಬಂತು ಅಂದ್ರೆ ಗದ್ದೆ ಬದ ಕೆತ್ತೋದು, ಗೊಬ್ರ ಹರ‌್ಡೋದು, ಬೀಜದ್ ಭತ್ತ ಬಿತ್ತಕ್ ಅಣಿ ಮಾಡೋದು ಅವ್ರ್‌ ಅವ್ರು ಅವರ್ ಕೆಲ್ಸ್ದಾಗ್ ಇದ್ರೆ ನಮ್ ಮಂಜ್ ಚಿಕ್ಕಪ್ಪಯ್ಯ ನಾವ್ ಹುಡುಗ್ರು ಮಕ್ಕಳನ್ನ ಸೇರ್ಸೊಂಡು ಬಿದ್ರಳ್ಳ ತುದೀಗ್ ಹೋಗಿ ಸೋಸ್ಲು ಮೀನ್ ಹಿಡೀತಾ ಕೂಕಂತಿದ್ರು. ಚಿಕ್ಕಪ್ಪಯ್ಯ ಸಿಕ್ದಷ್ಟ್ ಮೀನ್ ಹಿಡ್ಕಣಕ್ ಒದ್ದಾಡ್ತಿದ್ರೆ ನಾನು ಮತ್ತೆ ತಮ್ಮಣ್ಣಿ, ಆಚೆಮನಿ ರಾಜು, ದೊಡ್ಡಪ್ಪಯ್ಯನ್ ಮಗ ವಿನಯ ಮತ್ತೆ ನಾಗತ್ತೆ ಮಗ್ಳು ಜಲಜ ಎಲ್ಲಾ ಕೆಸ್ರು ನೀರಾಗ್ ಬಿದ್ದ್ ಒದ್ದಾಡೊದೇ!, ಒಳ್ಳೆ ಹಾಲಂಗ್ ಇರೋ ಮಳೆ ನೀರ‌್ನ ಕೆಸ್ರು ರಾಡಿ ಎಬ್ಸ್ತಿದ್ದೋ. ಪಾಪದ್ ಚಿಕ್ಕಪಯ್ಯಂಗ್ ಎಲ್ಲಾ ಬಯ್ಯೋರೆ,ಆದ್ರೆ ಮೀನಿನ್ ಸಾರಿನ್ ಘಾಟಿಗ್ ಒಲಿ ಹತ್ರನೇ ಬಂದ್ ಕೂರವ್ರು ಎಲ್ಲರೂವೆ. ಮಂಜ್ ಚಿಕ್ಕಪಯ್ಯಂಗೆ ತಲಿ ಕೆಟ್ಟದೆ ಅಂತ ಅವ್ರಿಗ್ ಜಾಸ್ತಿ ಕೆಲ್ಸ ಏನೂ ಕೊಡ್ತ ಇರ್ಲಿಲ್ಲ, ಅದ್ಕೆ ಬರೀ ಇಂತವ್ವೆ ಕೆಲ್ಸ ಹಲ್ಸಿನ್ ಬೀಜ ಒಟ್ಟಾಕದು, ಮುರ್ಗನ್ ಹುಳಿ ಒಣಗ್ಸಿ ಇಡೋದು (ಮೀನ್ ಪಲ್ಯಕ್ ಭಾರಿ ಮಸ್ತಾತದೆ), ಏಡಿ ಹಿಡ್ಯಾಕ್ ಹೋಗದು, ಅಳ್ಬಿ ಹುಡ್ಕಂಡು ಕಾನಿನ್ ಬದಿ ತಿರ್ಗಾದು, ನಾಕ್ ರುಪಾಯ್‌ಗೆ ಹಲ್ಸಿನ್ ಕಾಯ್ ಕೊಯ್ದ್ ಮಾರದು ಇವೇಯ. ಚಿಕ್ಕಪಯ್ಯ ನಮ್ಗೆ ಕೆಲವ್ ಅಸಾಮಾನ್ಯ ಕೆಲ್ಸಗಳ್ ಕಲ್ಸ್‌ಕೊಟೈತೆ, ಅವ್ ಏನಂದಿರಾ? ನಮ್ಮವ್ ಅಸಾಮಾನ್ಯ ಕೆಲ್ಸಗಳ್ ಅಂದ್ರೆ ಇವೇಯ, ಸೊಳ್ಳೆ ಪರ್ದೆ ಒಟ್ಟಾಕದು, ಯಾದಾದ್ರೂ ಬಲೆ ಇದ್ರೆ ಅದ್ನ ಸರಿ ಮಾಡ್ಕಣದು, ಅವ್ವನ್ ಹತ್ರ ಉಗ್ಸ್ಕೊಂಡು ಹಳೆ ಸೀರೆಲಿ ಮೀನ್ ಹಿಡ್ಯಾದು. ಅದ್ರಲ್ ಈ ರಾತ್ರಿ ಮೀನ್ ಹಿಡ್ಯಾಕ್ ಹೋಗೋದ್ ತಾಪತ್ರಯ ಯಾರಿಗೂ ಬ್ಯಾಡ, ಅಪ್ಪಯ್ಯ ಬೆಳ್ಗಾತಿಂದ ಸಂಜೆಮಟ ಗದ್ದೆ,ತ್ವಾಟ ರಾತ್ರಿ ಶಿಕಾರಿಗ್ ಹತ್ಯಾರ ಜೋಡ್ಸುದ್ ನೋಡುದೆ ಚಂದ, ಉದ್ದದ್ ಕತ್ತಿ ಮಸ್ಕಂಡು, ಬ್ಯಾಟ್ರಿಗ್ ಶೆಲ್ ಹಾಕಿಟ್ಕೊಣದು, ಕಂಬ್ಳಿ ಕೊಪ್ಪೆಗ್ ತೇಪೆ ಹಾಕಿ ರೆಡಿ ಮಾಡ್ಕೊತಿದ್ರು. ಅಪ್ಪಯ್ಯೋ ನಾನು ಬತ್ತೀನೋ ಅಂದ್ರು ಇದ್ ಅಪ್ಪಯ್ಯ ಕೇಣ್ಬೇಕಲ್ಲ, ‘ಮೈ ಎಲ್ಲಾ ತೊಪ್ಪೆ ಆತದ್ ಮುದ್ರ್ಕೊಂಡು ಉಂಡ್ಕಂಡ್ ಬಿದ್ಕೋ ಅಂತ ಹೇಳ್ ಹೊಂಡೋರು. ಅಪ್ಪಯ್ಯ ಮತ್ತೆ ಅವ್ರು ಪ್ರೆಂಡ್‌ಗಳ್ದು ಮೀನ್ ಹಿಡ್ಯೋ ನಮೂನಿನೆ ಬೇರೆ, ಹಳ್ಳದ್ ಬದಿ ಹೋಗಿ ಆಯ್ಕಟ್ಟಲಿ ಕುಣಿ ಹಾಕಿ ಈ ಕಡೆ ಕತ್ತಿಂದ ಬ್ಯಾಟ್ರಿ ಬೆಳ್ಕ್ ನೀರಲ್ ಬಿಟ್ಟು ಮೀನ್ ಕಾಣ್ಸಿದ್ ಕೂಡ್ಲೆ ಎತ್ತಿದ್ ಏಟಿಗ್ ಕತ್ತಿ ಬೀಸಿದ್ರೆ ಆ ಮೀನು ಇಲ್ಲೋ ಎರಡ್ ಪೀಸ್ ಆಗೋವು ಇಲ್ದಿದ್ರೆ ತಪ್ಸ್‌ಕೊಂಡ್ ಪಾರಾಗೋವು. ರಾತ್ರಿ ಕಳೆಯೋ‌ದೆ ಕಾಯ್ತ ಕೂಕಣದ್ ಯಮ ಯಾತ್ನೆ ಯಾವಂಗು ಬ್ಯಾಡ, ಸೊಳ್ಳೆ ಕಚ್ಚುಸ್ಕುತ ಹುಯ್ಯೋ ಮಳೇಲಿ ನೆನೀತ ಇರ್ಬೇಕು, ಹಾಕಂಡಿರೋ ಕಂಬ್ಳಿ ಆ ಗಾಳಿಮಳೆಗ್ ಯಾವ್ ಲೆಕ್ಕಾನು ಅಲ್ಲ, ಹಳ್ಳದ್ ನೀರು ಏರ್ತಿದ್ದಂಗೆ ಮುರ್ಗೋಡು, ಚೇಳಿ, ಗೊಜ್ಲೆ ,ಗೌರಿ ಮತ್ತೆ ಏಡಿ ದಡಕ್ಕೆ ಬತ್ತಿದಂಗೆ ನಮ್ಮ್ ಕೆಲ್ಸ ಸುರು, ಚೂರು ಸೌಂಡ್ ಮಾಡ್ದೆ ಬ್ಯಾಟ್ರಿ ಬೆಳ್ಕ್ ಬಿಟ್ರೆ ಮೀನ್ ಅಲ್ಲೆ ಬೆಳ್ಕ್ ನೋಡ್ಕುತಾ ನಿಲ್ತವೆ ಆಗ್ಲೆ ಕತ್ತಿಲ್ ರಪ್ ಅಂತ್ ತಾಗೂ ಹಾಗೋ ಮಂಡೆ ಬುಡ್ದಲ್ ಹೊಡ್ಯಾದು ಇನ್ನುಬ್ರು ಹೊಡ್ದಿದ್ ಏಟಿಗ್ ಮೇಲ್‌ಬರೋ ಮೀನ್ ಹಿಡ್ಕಂಡು ಚೀಲಕ್ ತುರ‌್ಕದು. ಈ ಹತ್ಮೀನ್ ಮಾತ್ರ ಸೊಳ್ಳೆಪರ್ದೇಲ್ ಸೋಸಿದ್ರೆ ಕೆಲೋ ಬಾರಿ ಮೂಟೆಗಟ್ಲೆನೂ ಸಿಕ್ತಾವೆ. ನಾನೂ ಐದ್ನೇ ಕ್ಲಾಸ್ ಅಗೋವರ್ಗೂ ಅಪ್ಪಯ್ಯ ರಾತ್ರಿ ಶಿಕಾರಿಗ್ ನಂಗ್ ಕರ್ಕೊಂಡ್ ಹೋಗ್ನಿರ್ನಿಲ್ಲ, ಆಮೇಲಾಮೇಲೆ ನಾನೆ ಬಯ್ದ್ರು ಓಡ್ ಹೋಗ್ತಿದ್ರೆ , ಏನ್ ನಾಕೇಟ್ ಹೊಡೆಯವ್ರು ಆದ್ರೆ ಮೀನ್ ಹಿಡ್ಯೋ ಖುಷಿ ಮುಂದೆ ಅವೆಲ್ಲಾ ಹೊಡ್ತ ಎಂತದೂ ಅಲ್ಲ ಬಿಡಿ. ಕಾಲೇಜಿಗ್ ಹೋಗ್ವಾಗ ಮಂಜ್ ಚಿಕ್ಕಪಯ್ಯ ಹೋದ್ರು, ಆಮೇಲ್ ಅಪ್ಪಯ್ಯ ಮೀನ್ ಶಿಕಾರಿ ಕಡ್ಮೆ ಮಾಡ್ತು, ಹೆಂಗು ಹಿಡ್ದೋರ್ ಯಾರಾರು ಸ್ವಲ್ಪ ಕೊಡೋರು, ನಾನುವೆ ಆಗಾಗ ದೊಡ್ಡಪ್ಪಯ್ಯನ್ ಜೊತೆ ಹೋಗ್ತಿದ್ದೆ‌. ಒಂದೊಂದ್ ಸರಿ ಹ್ವಾದ್ರು ಒಂದೊಂದ್ ಅನುಭವ ಆಗದು, ಕೆಲ ಸಲ ಏನೂ ಸಿಗ್ದೆ ನಾಕ್ ಏಡಿ ಹಿಡ್ಕ ಬಂದಿದ್ದೂ ಅದೆ.ಸರಿ ರಾತ್ರಿ ಆದ್ರೂ ಅಮ್ಮ ಕಾಯ್ಕೊತಾ ಇದ್ದು ಎರ್ಡ್ ಗಂಟೆ ಆದ್ರೂ ವಾಟೆಹುಳಿ ಹಾಕ್ ಘಮ್ ಅನ್ನೋ ಬಿಸಿಬಿಸಿ ಮೀನ್ ಸಾರ್ ಮಾಡ್ ಹಾಕ್ತಿತ್ತು ,ಆಗ್ಲೆ ನಮ್ ಶಿಕಾರಿನು ಸಾರ್ಥಕ ಆಗೋದು. ಈಗ್ ಎಲ್ಲೆಲ್ಲೋ ಪೇಟೆಲ್ ಕೆಲ್ಸ ಮಾಡ್ಕುತ ಇರೋ ನಮ್ಗೆ ಯಾರಾದ್ರು ಹತ್ಮೀನ್ ಕಡಿಯೋ ಪೋಟೋ ಹಾಕಿದ್ರೆ ಹಳೆ ನೆಂಪೆಲ್ಲಾ ಅಂಗೆ ಕಣ್ ಮುಂದೇನೆ ಬಂದಂಗ್ ಆತದೆ. ಈಗ್ಲೂವೆ ಮಲ್ನಾಡ್ ಬದಿ ಮೀನ್‌ಶಿಕಾರಿ ಅಂದ್ರೆ ಅದೊಂಥರ ಹಬ್ಬಾನೆ… ರಮೇಶ್ ನೆಲ್ಲಿಸರ ಪರಿಚಯ: ಮೂಲತಃ ತೀರ್ಥಹಳ್ಳಿ,ಪ್ರಸ್ತುತ ಸರ್ಕಾರಿ ಪ್ರೌಢ ಶಾಲೆ ಯಡೂರು, ಹೊಸನಗರ ತಾಲ್ಲೂಕು, ಇಲ್ಲಿ ಇಂಗ್ಲಿಷ್ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓದಿದ್ದು ಆಂಗ್ಲ ಸಾಹಿತ್ಯ, ಕತೆ ,ಕವನ ಮತ್ತು ಲಲಿತ ಪ್ರಬಂಧಗಳನ್ನು ಬರೆಯುವ ಹವ್ಯಾಸವಿದ್ದು. ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮೀನು ಶಿಕಾರಿಯ ಸಂಭ್ರಮ Read Post »

ಇತರೆ

ಲಹರಿ

ಒಮ್ಮೆ ತಿರುಗಿ ನೋಡು ನನ್ನ ಕೊನೆಯ ತಿರುವು ಬರುವ ಮುನ್ನ. ವಿಷ್ಣು ಭಟ್ ಹೊಸ್ಮನೆ ನನ್ನ ಮನಸ್ಸು ಅವಳು ತಿರುಗಿ ನೋಡಲೇಬಾರದು. ಮುಂದೆ ಎಂದಿಗೂ ಸಂಧಿಸದ ಹಾದಿಯಲ್ಲಿ ನಾನು ಮತ್ತು ಅವಳು ಸಾಗುತ್ತ ಇರಬೇಕು ಅಂದುಕೊಂಡಿತ್ತು. ಅವತ್ತು ತಿರುಗಿ ನೋಡದೇ ಹೋದರೂ ಎರಡು ದಿನ ಬಿಟ್ಟು ಮತ್ತೆ ಅವಳು ಬಂದಿದ್ದಳು. ಅವಳನ್ನು ಮತ್ತೆ ನೋಡಿದೆ ಎಂಬೊಂದು ಖುಷಿ ಬಿಟ್ಟರೆ ಮತ್ತೇನೂ ನನ್ನಲ್ಲಿ ಹುಟ್ಟಲಿಲ್ಲ. ಆದರೆ ಅವಳು ಎದೆ ತುಂಬ ಪ್ರೀತಿಯನ್ನು ಹೊತ್ತು ತಂದಿದ್ದಳು. ಅವಳು ಕಾದುಕಾದು ಕೇಳಿದ್ದು ಒಂದೇ ಮಾತು “ನನ್ನನ್ನು ಪ್ರೀತಿಸುತ್ತೀಯಾ? ಪ್ಲೀಸ್..” ಇದು ನನಗೆ ಅನಿರೀಕ್ಷಿತ. “ಇಲ್ಲ” ಎಂದು ಬಿಟ್ಟೆ. ಎರಡು ದಿನ ತಲೆ ಕೆಟ್ಟುಹೋಗಿತ್ತು. ಈ ನಿರಾಕರಣೆಗೆ ಕಾರಣವಿರಲಿಲ್ಲ. ಎಷ್ಟು ನೊಂದುಕೊಂಡಳೋ? ಇಲ್ಲ ಎನ್ನುವುದಕ್ಕಾದರೂ ಕೊನೆಯ ಪಕ್ಷ ಎರಡು ದಿನ ಸಮಯ ಕೊಡು ಎಂದು ಬಿಡಬಹುದಿತ್ತು. ಮತ್ತೆ ಎರಡು ದಿನ ಬಿಟ್ಟು ನನ್ನ ಬಳಿ ಬಂದು ನಿಂತಿದ್ದಳು. ಈ ಬಾರಿ ಅವಳು ಕೇಳಲಿಲ್ಲ; ಹೇಳಿದಳು. “ನೀನು ನನ್ನನ್ನು ಪ್ರೀತಿಸಲೇ ಬೇಕು, ಇಲ್ಲ ಅನ್ನಬೇಡ” ಎನ್ನುತ್ತ ನನ್ನ ಕೈಯನ್ನು ಎಳೆದು ಹಿಡಿದುಕೊಂಡು ನಿಂತೇ ಇದ್ದಳು; ಕಣ್ಣಲ್ಲಿ ನೀರು ತುಂಬಿತ್ತು. ಅವಳೆದೆಯಲ್ಲಿ ಮೊಗೆದಷ್ಟೂ ಪ್ರೀತಿ. ನಾನು ಒಪ್ಪಿಕೊಂಡೆ. ನನ್ನ ಹಣೆಗೊಂದು ಮುತ್ತಿಕ್ಕಿ ಹೊರಟು ಹೋದಳು. ನನ್ನಲ್ಲಿ ನಿಜವಾಗಿ ಪ್ರೀತಿ ಹುಟ್ಟಿತ್ತಾ? ಅವಳನ್ನು ನಿರಾಕರಿಸಲಾಗದೇ ಒಪ್ಪಿಕೊಂಡೇನಾ? ಅಥವಾ ಒಳ ಮನಸ್ಸಿನಲ್ಲಿ ಅವಳನ್ನು ಇಷ್ಟ ಪಡದೆ ಒಪ್ಪಿಕೊಳ್ಳಲು ಸಾಧ್ಯವಾ? ಎಂದು ಕೇಳಿಕೊಳ್ಳುತ್ತಾ ಹೋದೆ. ಎಲ್ಲವೂ ಗೊಂದಲ. ಮುಂದೇನು? ಎಂಬ ಪ್ರಶ್ನೆ. ಪ್ರೀತಿಗೆ ಕಾರಣಗಳನ್ನು ಹುಡುಕಬಾರದು; ಪ್ರೀತಿ ಬೇಗನೆ ಸತ್ತು ಬಿಡುತ್ತದೆ. ನಾನೂ ಪ್ರೀತಿಸಿದೆ; ಮುಂದಿನದನ್ನು ಯೋಚಿಸದೆ. * “ಇನ್ನು ಹದಿನೈದು ದಿನಕ್ಕೆ ನನ್ನ ಮದುವೆ. ನನ್ನನ್ನು ಹುಡುಕಿಕೊಂಡು ಮನೆಯ ತನಕ ಬರಬೇಡ. ನಮ್ಮದು ಮರ್ಯಾದಸ್ಥ ಕುಟುಂಬ. ನೀನು ಬಂದರೂ ನೀನು ಯಾರೆಂದು ಗೊತ್ತಿಲ್ಲ ಎಂದೇ ಹೇಳುವ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಹೇಳಿದರೂ ನಿನಗೆ ನನ್ನನ್ನು ಕೊಟ್ಟು ನನ್ನಪ್ಪ ಮದುವೆ ಮಾಡುವುದಿಲ್ಲ. ನೀನು ನನ್ನನ್ನು ಪ್ರೀತಿಸಿದ್ದು ನಿಜವೇ ಆಗಿದ್ದರೆ ನನ್ನನ್ನು ಮರೆತು ಬಿಡು. ಸಾಧ್ಯವಾದರೆ ಕ್ಷಮಿಸಿಬಿಡು.” ಇದು ಅವಳ ಕೊನೆಯ ಮಾತು. ಅದೂ ಫೋನಿನಲ್ಲಿ. ಅವತ್ತೇ ಅವಳ ಮೊಬೈಲ್ ನಂಬರ್ ಬದಲಾಗಿತ್ತು. ನನಗೆ ಸಿಟ್ಟು ಬರಬೇಕಿತ್ತು. ಆದರೆ ಅಳು ಬರುತ್ತಿತ್ತು. ಗಂಡಸು ಅಳಬಾರದಂತೆ. ನೋವು ಮತ್ತು ಸಾವಿಗೆ ಗಂಡು ಹೆಣ್ಣೆಂಬ ಭೇದವಿಲ್ಲ. ಪ್ರೀತಿ ಸತ್ತು ಶವವಾಗಿ ಬಿದ್ದ ಮೇಲೆ, ಅಳುವೊಂದೇ ಉಳಿದ ಭಾವ. ಕಣ್ಣಿಗೆ ಕಣ್ಣಿಟ್ಟು ಬಂದವಳೇ ಕೊಟ್ಟ ಕಣ್ಣೀರು. ನನ್ನ ನೆನಪುಗಳೊಂದಿಗೆ ನಾನು ಏಕಾಂಗಿ. * ಅವಳಲ್ಲಿ ಕೇಳಬೇಕಿತ್ತು. ಈ ಪ್ರೀತಿಯನ್ನು ಹೇಗೆ ಕೊಂದುಕೊಳ್ಳಲಿ? ನೀನಾದರೂ ಹೇಗೆ ಅಷ್ಟು ಸುಲಭವಾಗಿ ಸಾಯಿಸಿಬಿಟ್ಟ? ಕಾರಣವೇ ಅಲ್ಲದ ಕಾರಣಗಳನ್ನು ಕೊಟ್ಟು ಹೊರಟು ಬಿಟ್ಟೆ? ಆದರೆ ನಿಜವಾದ ಕಾರಣಗಳನ್ನು ಕೇಳಿಯಾದರೂ ಏನು ಮಾಡಲಿ? ಬನದ ತುಂಬ ಘಮವ ಪಸರಿಸಿ ತೊಟ್ಟು ಕಳಚಿಕೊಂಡು ಬಿದ್ದ ಹೂವಿನಂಥಾದ ಪ್ರೀತಿಗೆ ಇನ್ನು ಏನೆಂದು ಕರೆಯಲಿ? ಕರೆಯದೇ ಕಾಯದೇ ಬಂದವಳು ತೊರೆದ ರೀತಿಗೆ ನಾನೀಗ ನನ್ನ ಪ್ರೀತಿಯನ್ನು ಕೊಲ್ಲಬೇಕು. ಆದರೆ ಅವಳ ನೆನಪುಗಳು ಸಾಯುವುದಿಲ್ಲ. ಕನಸುಗಳನ್ನು ಕಸಿದುಕೊಂಡು ನೆನಪುಗಳನ್ನು ಬಿಟ್ಟುಹೋಗಿದ್ದು ಸರಿಯೇನು? ಎಷ್ಟೊಂದು ಕನಸುಗಳು ಹುಟ್ಟಿದ್ದವು. ನಾನು ಅವಳು ಒಟ್ಟೊಟ್ಟಿಗೆ ಪೇರಿಸಿ ಇಟ್ಟ ಕನಸುಗಳಿಗೆ ಲೆಕ್ಕವಿಲ್ಲ. ಇವತ್ತು ಎಲ್ಲವೂ ಹಾಗೇ ಸುರುಳಿ ಸುತ್ತಿಕೊಂಡು ನೆನಪಿನ ಮೂಟೆಯಾಗಿ ಮನದೊಳಗೆ ಕಾಡುತ್ತಿವೆ. ನೆನಪಿನ ಮೊಟ್ಟೆಯೊಡೆದ ಕವನ ಕಣ್ಣಿರು. ಅವಳ ನೆನಪುಗಳಿಂದ ಬಿಡಿಸಿಕೊಳ್ಳಲು ಮಾಡಿದ ಸಾಹಸಗಳು ಸಾವಿರಾರು. ಒಂದಿಷ್ಟು ದಿನ ಯಾರ ಜೊತೆಗೂ ಮಾತನಾಡಲಿಲ್ಲ. ಅದಕ್ಕಿಂತ ಹೆಚ್ಚಾಗಿ ನನ್ನ ದನಿಯಲ್ಲಿ ನೋವಿತ್ತು. ಇವತ್ತಿನಿಂದ ಅವಳು ನನ್ನ ಜೊತೆಗಿಲ್ಲ ಎಂದುಕೊಳ್ಳುವಾಗಲೆಲ್ಲ ಎದೆನೋವು. ಹೃದಯಯವೂ ಅಷ್ಟೊಂದು ಭಾರ ಎಂಬುದು ಅರಿವಾದದ್ದೇ ಅವಳು ಹೋದ ಬಳಿಕ. ಈ ನೋವು ಸಾವಿಗಿಂತಲೂ ತೀವ್ರ ಮತ್ತು ಭಯಾನಕ. ಎದೆಗೆ ಚುಚ್ಚಿಕೊಂಡೇ ನಲಿವ ಮುಳ್ಳುಗಳು. ನನಗೆ ಒಂದು ಸಂಶಯ ಕಾಡುತ್ತಿದೆ; ಈ ಪ್ರೀತಿ ಎಂದರೇ ನೆನಪುಗಳಾ? ಅಥವಾ ಸತ್ತ ಕನಸುಗಳು ಭೂತವಾಗಿ ಕಾಡುವ ಬಗೆಯಾ? ಇವತ್ತಿನಿಂದ ಅವಳನ್ನು ಮರೆತು ಈ ನೋವುಗಳನ್ನೇ ಪ್ರೀತಿಸಬೇಕು. ಅಂದು ನೀನಿತ್ತ ಮುತ್ತಿನ ಅಮೃತ ಬಿಂದು ಎದೆ ಚುಚ್ಚಿ ಕೊಲ್ಲುತಿದೆ ನೀ ಮರಳ ಬಾರದೇ ಸಾವುಯುವುದರ ಒಳಗೆ. ಅವಳನ್ನು ಕರೆಯುತ್ತಲೇ ಇದ್ದೆ. ಖಾಲಿ ಬಿದ್ದಿದ್ದ ಹೃದಯದಲ್ಲಿ ಉಳಿದುಕೊಂಡು ಈಗ ಅನಾಥವಾಗಿಸಿ ಹೋದದ್ದು ಅವಳಿಗೆ ಕಾಡದೇ ಹೋಯಿತೇಕೋ? ಒಮ್ಮೆ ತಿರುಗಿ ನೋಡು ನನ್ನ ಕೊನೆಯ ತಿರುವು ಬರುವ ಮುನ್ನ ‘ಒಮ್ಮೆ ತಿರುಗಿ ನೋಡು, ಈಗ ಹುಟ್ಟಿಕೊಂಡ ಪ್ರೀತಿ ಏಳೂ ಜನ್ಮಗಳಿಗೆ ಸಾಕು. ನಾನು ನಾನಾಗಿ, ನೀನು ನೀನಾಗಿ, ನಿನ್ನೊಳಗೆ ನಾನೂ ನನ್ನೊಳಗೆ ನೀನೂ, ಇಬ್ಬರೂ ಒಂದೇ ಆಗಿ ಬದುಕಿ ಬಿಡೋಣ. ಈ ಪ್ರೀತಿ ಸಹಿ ಇಲ್ಲದ ಒಪ್ಪಿಗೆ, ಬಾ ಹಿಂದಿರುಗು’ ಎಂದು ಹೇಳಲು ಕಾಯುತ್ತಲೇ ಇದ್ದೆ. ಅವಳು ಹೋಗಿಯಾಗಿತ್ತು. ತಿರುಗಬಾರದ ತಿರುವ ದಾಟಿ; ಎದೆಯೊಳಗಿನ ತಂತಿಯ ಮೀಟಿ. * ಅವಳು ಬರೆದ ಪತ್ರಗಳ ರಾಶಿಯಲ್ಲಿ ನಾನು ಕಳೆದು ಹೋಗಿದ್ದೆ. ಮರೆಯಲೇ ಬೇಕೆಂದು ನಿರ್ಧರಿಸಿದೆ. ಅವಳು ಕೊಟ್ಟ ಗಿಫ್ಟುಗಳು ನನ್ನ ಕಣ್ಣ ದಂಡೆಯನ್ನು ಚುಚ್ಚುತ್ತಿದ್ದವು. ಎದೆನೋವು ಸ್ವಲ್ಪ ಕಡಮೆಯಾದಂತೆ ಕಂಡುಬಂದ ಬೆಳದಿಂಳಿಲ್ಲದ ಒಂದು ರಾತ್ರಿ ಅವಳು ಕೊಟ್ಟಿದ್ದೆಲ್ಲವನ್ನು ಮನೆಯ ಅಂಗಳದಲ್ಲಿ ಚೆಲ್ಲಿ ಬೆಂಕಿಕೊಟ್ಟೆ. ಎದೆಯೊಳಗೆ ಉರಿ ಹೆಚ್ಚಿತು. ಎದೆ ಬರಿದಾಗಲೇ ಇಲ್ಲ. ಆ ರಾತ್ರಿ ನಿದ್ರೆ ಬರಲಿಲ್ಲ. ಮರೆಯಲಾಗದ ಹೊತ್ತಲ್ಲಿ ದ್ವೇಷಿಸಬೇಕೆಂಬ ಹಠಕ್ಕೆ ಬಿದ್ದೆ. ಈ ಪ್ರೀತಿ ದ್ವೇಷಿಸಲೂ ಬಿಡಲೊಲ್ಲದು. ಮತ್ತೆ ಎದೆನೋವು. ಎದೆಯನ್ನು ಹಗುರ ಮಾಡಿಕೊಳ್ಳಲೇ ಬೇಕಿತ್ತು. ಒಂದು ಡೈರಿಯನ್ನು ಎತ್ತಿಕೊಂಡು ಗೀಚಿದೆ. ಪದಪದಗಳ ನಡುವೆ ಕಾಡಿದ ಅವಳು ವಿರಹದ ವಿರಾಟ್ ರೂಪ. ಕನವರಿಕೆಯ ಹೋಯ್ದಾಟದಲ್ಲಿ ಒದ್ದೆಯಾಗುತ್ತಲೇ ಇದ್ದೆ. ಕತ್ತಲಲ್ಲಿ ಬಿಟ್ಟು ಹೋಗ ಬೇಡ ನನಗೆ ಭಯ ಇರುವುದು ಹಗಲಿನಲ್ಲೇ.. ತೊರೆದವರ ಬಗೆಗೆ ಬರೆದರೆ ಬರುವರೇನು? ಬರೆಯುತ್ತ ಹೋದಂತೆ ನಾನು ಖಾಲಿಯಾಗಬೇಕಿತ್ತು. ಆದರೆ ನೆನಪುಗಳು ಮತ್ತೆಮತ್ತೆ ಸುತ್ತಿಕೊಂಡವು. ಮೊದಲು ಈ ನೆನಪುಗಳಿಂದ ಬಿಡುಗಡೆ ಹೊಂದಬೇಕೆಂಬ ನಿರ್ಧಾರಕ್ಕೆ ಬಂದೆ. ಸಾಯದ ನೆನಪುಗಳಿಗೆ ಅಹಂಕಾರ ಜಾಸ್ತಿ. ಅವಳು ಬಂದಲ್ಲಿಂದ ಹೋದಲ್ಲಿಯ ತನಕ ಬರೆದೆ. ಆ ಡೈರಿ ಕಣ್ಣಿಗೆ ಬಿದ್ದಾಕ್ಷಣ ಮತ್ತೆ ಮತ್ತೆ ಸಾಯುತ್ತಿದ್ದೆ. ಮತ್ತೊಂದು ಕಪ್ಪಗಿನ ರಾತ್ರಿಗಾಗಿ ಕಾದೆ. ಒಂದೊಂದೇ ಪುಟವನ್ನು ಹರಿದು ಬೆಂಕಿಗೆ ಹಾಕುತ್ತ ಪೂರ್ತಿಯಾಗಿ ಸುಟ್ಟುಬಿಟ್ಟೆ. ನೆನಪುಗಳು ಸುಟ್ಟು ಹೋಗಲಿಲ್ಲ. ಮಂದಾಗ್ನಿ ಎದೆಯೊಳಗೆ ಉರಿಯುತ್ತಲೇ ಇದೆ! ========================================== ವಿಷ್ಣು ಭಟ್ ಹೊಸ್ಮನೆ. ಪರಿಚಯ: ಲಘು ಹಾಸ್ಯದ ಲೇಖನ ಮತ್ತು ಇತರ ಲೇಖನಗಳನ್ನು ಬರೆಯುವುದು, ಓದುವುದು ಹಾಗೂ ಚಿತ್ರ ಬಿಡಿಸುವುದು, ಜೇಡಿಮಣ್ಣಿನಲ್ಲಿ ಗಣಪತಿ ಮಾಡುವುದು ನನ್ನ ಹವ್ಯಾಸ. ಹುಟ್ಟಿದ ಊರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಂಡೀಬೈಲ್ ಎಂಬ ಹಳ್ಳಿ. ಪ್ರಸ್ತುತ ಮಣಿಪಾಲ್ ಟೆಕ್ನೋಲೋಜೀಸ್ ಲಿಮಿಟೆಡ್ ನಲ್ಲಿ ಉದ್ಯೋಗಿ.

ಲಹರಿ Read Post »

ಇತರೆ

ಸಂಪ್ರದಾಯದ ಸೊಬಗು

ಅರುಣ್ ಕೊಪ್ಪ ಊರ ಬಾಗಿಲು ಮುಂದೆ ಭಯಭಕ್ತ ಕಲ್ಲುಗಳು, ತೀರಾ ಹಳೆಯವು ಅಲ್ಲಲ್ಲಿ ಹಾಲು ಸೋಕುವ ಮರಗಳು, ಮುಗಿದರೆ ಕೈ ದೇವರು, ಹಾಗೋ ಹೀಗೋ ಗಾಳಿ ಬಂದಾಗ ಬುಡಸಡಿಲವಾಗುವ ಭಯ ಮಹಾಮಯ ! ಮುಂಗಾರಮುಂದೆ ಮಾತು ಕಥೆ, ಅಂತೂ ಕುದುರಿಸಿಯೇ ಬಿಟ್ಟರು ಮಾರಿ ಹಬ್ಬವಂತೆ, ಕುರಿ ಕೋಳಿಯ ಜಾತ್ರೆ ಊರೊಳಗೆ, ಮುಟ್ಟು ಮೈಲಿಗೆ ಹೆಂಗಸರ ಸ್ಥಳಾಂತರ ಒಪ್ಪ, ವಾಗತಿಯಲಿ ಹಬ್ಬ ಸಜ್ಜು ಊರ ಹಬ್ಬದ ಸಲುವಾಗೆ ಶಣ್ಣಿ ಮದುವಿ ಮುಂದಾತು ಕಿವಿಗಿಲ್ಲ ಮೂಗಿಗಿಲ್ಲ ಎಲ್ಲ ದುಬಾರಿಮಯ.. ಇದ್ದದ್ದು ನಾಕು ಬತ್ತದ ಕಾಳು, ಕೂಲಿ ಹುಟ್ಟದು ಅರ್ದಮ್ಮುರ್ದಬಣ್ಣ ಅಡಿಕೆ ಅದೆಷ್ಟು? ಕವಳಕ್ಕೆ ಹೆಚ್ಚು ಮಾರಕೆ ಕಡಿಮೆ ಮನೆ ಮುಗಿದಿಲ್ಲ ಬಿಲ್ಲೂ ಆಗಿಲ್ಲ, ಪಿಡಿಓ, ಪಂಚಾಯತಿ ಅಲೆದಾಟ, ಆಗೇ ಹೋತು ಹನಿ ಹಿಡಿತು ಜಡಿ ಕಟ್ಟಿಲ್ಲ ಜಾತ್ರೆ ಮುಗಿಸಿ ಬತ್ತ ನೆನಸಿ, ಊರ ದೇವರ ಹಬ್ಬ ಮುಗ್ಸಿ ಹ್ವಾಕೆ ಹೊಡಿಯೋ ಎತ್ತುಗಳು ಈ ವರುಸ ಕೆಟ್ಟಿಲ್ಲ ಮೈ ತುಂಬಿದಾವ ದಡ್ಡಿ ಗೊಬ್ಬರ ಚೆಲ್ಲಿ, ಒಣ ಕಟ್ಟಿಗೆ ಸರಿದು, ಗ್ಯಾಸ್ ಇದ್ದರೂ ಬೇಕು ಬೆಂಕಿ ಕಾಸಲು ತಾಸೊತ್ತು ಹೊದ್ದ ಕಂಬಳಿ ಕೊಪ್ಪೆಗೆ, ಹೊಡುಚುಲು ಹಾಕಿ ಸುತ್ತ ಕೂತು ಚುಟ್ಟಿ ಸೇದು ಕಫ ವ್ಯಾಕರಿಸಿ ಗರಟಿ ತುಂಬಿಸಿದ ಅಜ್ಜ ಶೇಂಗಾ ಹುರಿದು ವಡಚುವಾಗ ಗುಡುಗಿನ ಶಬ್ಧ ಮಂಗಮಾಯ (ಹ್ವಾಕೆ =ಮೊದಲ ನೇಗಿಲ ಸಾಲು ಹೊಡುಚುಲು =ಬೆಂಕಿ ಗುಡ್ಡೆ, ಕಂಬಳಿ ವಣಸಲು ಹಳ್ಳಿಯಲ್ಲಿ ಮಾಡುವದು ಕೊಪ್ಪೆ =ಮಳೆಗೆ ತಲೆಗೆ ಹಾಕುವ ಸಾಧನ ) ======================== ಅರುಣ್ ಕೊಪ್ಪ ಕವಿ ಪರಿಚಯ: ಯುವ ಬರಹಗಾರರು ಕೃಷಿಕರು, ಔಷಧಿ ವ್ಯಾಪಾರಿಗಳು, ಸಂಘಟಕರು ಬಿ ಎ. ಪದವಿ ಪ್ರಥಮ ಕವನ ಸಂಕಲನ ಭಾವಗಳು ಬಸುರಾದಾಗ (2018)ಪ್ರಕಟಣೆ ಹಂತದಲ್ಲಿ ಹನಿಗಳ ಹಂದರ ಎಂಬ ದ್ವಿತೀಯ ಹನಿ ಗವನಗಳ ಸಂಕಲನ ಅನೇಕ ಪತ್ರಿಕೆಗಳಲ್ಲಿ ಕವಿತೆ ಪ್ರಕಟ ಆಕಾಶವಾಣಿಯಲ್ಲಿ ಕವಿತೆ ವಾಚನ, ಸಂದರ್ಶನ ತಾಲ್ಲೂಕು ಕಬಡ್ಡಿ ಅಮೇಚೂರ್ ಶಿರಸಿ ಪ್ರಧಾನ ಕಾರ್ಯದರ್ಶಿಯಾಗಿ ಕ್ರೀಡಾ ಸಂಘಟನೆ 

ಸಂಪ್ರದಾಯದ ಸೊಬಗು Read Post »

ಇತರೆ

ಪ್ರಬಂದ

ಶ್ರಮಜೀವಿ ಜೇನ್ನೊಣಗಳು ನಾಗರಾಜ ಮಸೂತಿ ಶ್ರಮಜೀವಿಗಳಲ್ಲಿ ಒಂದಾದ ಜೇನುಹುಳು ಶ್ರಮದಿಂದಲೇ ತನ್ನ ಆಯಸ್ಸನ್ನು ಕಡಿಮೆ ಮಾಡಿಕೊಳ್ಳುವಂತೆ ಶ್ರಮವಹಿಸಿ ದುಡಿಮೆ ಮಾಡುತ್ತದೆ. ಇದರ ಆಯಸ್ಸು ಸುಮಾರು ಒಂದು ತಿಂಗಳು ಅಥವಾ ಮೂವತ್ತು ದಿನಗಳು ಮಾತ್ರ. ಚಗಳಿ ಇರುವೆಯ ಜೀವನ ಶೈಲಿಯನ್ನು ಹೋಲುವ ಜೇನುಹುಳು ಎಲ್ಲರ ಕೋಪಕ್ಕೆ ತುತ್ತಾದರೆ ಅದರ ಶ್ರಮದ ಫಲ ಜೇನು ಹನಿ ಮಾತ್ರ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಬಹುಶಃ ಜೇನುತುಪ್ಪ ಇಷ್ಟ ಪಡದ ವ್ಯಕ್ತಿ ಭೂಮಿಯ ಮೇಲೆ ಇರಲಿಕ್ಕಿಲ್ಲ. ಈ ಜೇನುಹನಿಯನ್ನ ಪೇರಿಸಲು ಅದು ಪಡುವ ಕಷ್ಟ ಅಷ್ಟಿಷ್ಟಲ್ಲ. ತರಹೆವಾರಿ ಗಿಡಗಳು ಮೊಗ್ಗು ಬಿಟ್ಟು ಹೂವಾಗಿ ಮೈದಳಿದು ಅರಳಿ ನಾಕವೇ ಧರೆಗಿಳಿದಂತೆ ಶೃಂಗಾರಗೊಳ್ಳುವ ಸಮಯಕ್ಕಾಗಿ ಹುಳುಗಳು ಹಾತೊರೆದು ಕಾಯ್ದು ಕೂಳಿತಿರುತ್ತವೆ. ಮಕರಂದವನ್ನು ಹೀರಲು ಹೂಗಳಿಗೆ ಮುತ್ತಿಗೆ ಹಾಕಿ ಕಾರ್ಯಾರಂಭ ಮಾಡುತ್ತವೆ.      ಆದರೆ ಎಲ್ಲವೂ ಇದೇ ಕೆಲಸಕ್ಕೆ ಇಳಿಯದೆ ಚಗಳಿ ಇರುವೆಯಂತೆ ಕೆಲಸದ ಹಂಚಿಕೆ ಮಾಡಿಕೊಳ್ಳುವ ಬುದ್ಧಿವಂತಿಕೆಗೆ ಮುಂದಾಗುತ್ತವೆ. ಒಂದೇ ಕುಟುಂಬದ ಒಂದೇ ಗೂಡಿನ ಲಕ್ಷಾಂತರ ಹುಳುಗಳಲ್ಲಿ ಒಂದು ಮಾತ್ರ ರಾಣಿಜೇನು ಗೂಡು ಕಟ್ಟುವ ಸ್ಥಳವನ್ನು ಗುರುತಿಸುತ್ತದೆ. ಸಾವಿರಾರು ಕಿರಿಯ ಜೇನುಗಳು ಮನೆಯ ಶುಚಿತ್ವ ಕಾಯ್ದುಕೊಳ್ಳುವ ಹಾಗೂ ಸರಾಗವಾದ ಗಾಳಿಯ ಚಲನವಲನ ನೋಡಿಕೊಳ್ಳುವ ಕೆಲಸ ನಿರ್ವಹಿಸುತ್ತವೆ. ಇನ್ನೂ ಬಾಕಿ ಇರುವ ಹಿರಿಯ ಹಾಗು ಅನುಭವಿ ಹುಳುಗಳು ಪುಷ್ಪಗಳನ್ನು ಅರಸಿಕೊಂಡು ಕಿಲೋಮೀಟರ್ ಗಟ್ಟಲೆ ಸಂಚರಿಸಿ ಹುಡುಕಿ ಹೂಗಳ ಮಕರಂದ ಹೀರುವ ಕೆಲಸವನ್ನು ಮಾಡುತ್ತವೆ.      ಜೇನು ನೊಣಗಳು ತಮ್ಮ ಟ್ಯೂಬ್ ಆಕಾರದ ಅಥವಾ ಸೀರಂಜ್ ರೀತಿಯಲ್ಲಿರುವ ತಮ್ಮ ಕೊಂಡಿಯಿಂದ, ಆಡು ಭಾಷೆಯಲ್ಲಿ ಹೇಳುವುದಾದರೆ ಅದು ತನ್ನ ಮುಳ್ಳಿನಿಂದ ಮಕರಂದವನ್ನು ಹೀರಿಕೊಂಡು ಜಠರದಲ್ಲಿ ಶೇಖರಿಸಿಕೊಳ್ಳುತ್ತದೆ. ಶೇಖರಿಸಿಕೊಂಡ ಮಕರಂದದಲ್ಲಿ ಶೇಕಡಾ ೮೦ % ರಷ್ಟು ನೀರಿನಂಶ ಇರುತ್ತದೆ. ಹಾರುವಾಗ ಫ್ಯಾನ್ ನಂತೆ ರಭಸವಾಗಿ ರೆಕ್ಕೆ ಬೀಸುವುದು ಉದ್ದೇಶ ಭರಿತವಾಗಿದೆ. ಹೀಗೆ ವೇಗವಾಗಿ ರೆಕ್ಕೆ ಬಡಿದು ತಾನು ಹೀರಿದ ಮಕರಂದದಲ್ಲಿನ ನೀರಿನಂಶವನ್ನು ಶೇಕಡ ೬೨% ರಿಂದ ೬೬% ರಷ್ಟು ಆವಿಯಾಗುವಂತೆ ಮಾಡುತ್ತದೆ. ಹೀಗೆ ನೀರಿನಂಶ ಕಡಿಮೆ ಆದ ಮಕರಂದ ಗಟ್ಟಿಯಾದ ದ್ರವ ಪದಾರ್ಥ(liquid) ಆಗಿ ಪರಿವರ್ತನೆ ಮಾಡುವುದರ ಜೊತೆ ಜೊತೆಯಲ್ಲಿ ತನ್ನ ದೇಹದಿಂದ ಸಕ್ಕರೆ(sugar),  ಕಬ್ಬಿಣಾಂಶ(Iron content) ಹಾಗೂ ಪ್ರೋಟಿನ್ (protein) ಅಂಶಗಳನ್ನು ಸೇರ್ಪಡೆ ಮಾಡುತ್ತದೆ. ಈ ಕಾರ್ಯಕ್ಕೆ  ಅದಕ್ಕೆ ಕನಿಷ್ಠ ಅರ್ಧ ಗಂಟೆ ಸಮಯ ಬೇಕಾಗುತ್ತದೆ. ಹೀಗೆ ಹೂವಿಂದ ಹೂವಿಗೆ ಹಾರಿ ಮಕರಂದವನ್ನು ಹೀರಿಕೊಂಡು ಜೇನುಗೂಡಿಗೆ ಮರಳುತ್ತವೆ. ತನ್ನ ಜಠರದಲ್ಲಿ ಪೇರಿಸಿದ ಮಕರಂದವನ್ನು ಜೇನುತುಪ್ಪವಾಗಿ ಪರಿವರ್ತಿಸಿ ಜೇನುಗೂಡಿನ ಸಾವಿರಾರು ಮಣಿಗಳನ್ನು ಹನಿ ಹನಿಯಾಗಿ ತುಪ್ಪದಿಂದ ಭರ್ತಿಯಾಗಿಸುವ ಕೆಲಸ ಭರದಿಂದ ಬಿಡುವಿಲ್ಲದಂತೆ ಶ್ರಮವಹಿಸಿ ದುಡಿಮೆ ಮಾಡಿ ಪ್ರಾಣ ತ್ಯಾಗ ಮಾಡುತ್ತವೆ. ಇವುಗಳ ಮಧ್ಯೆ ಇರುವ ರಾಣಿಜೇನು ಮಾತ್ರ ಮೊಟ್ಟೆಯನ್ನು ಇಡುತ್ತ ಸಂತಾನೋತ್ಪತ್ತಿ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತದೆ. ಈ ಜೀವನ ಶೈಲಿಯನ್ನು ಚಗಳಿ ಇರುವೆಗಳಲ್ಲಿ ಕಾಣಸಿಗುತ್ತದೆ. ರಾಣಿ ಇರುವೆ ಕೂಡ ಸಂತಾನೋತ್ಪತ್ತಿ ಕೆಲಸ ಮಾಡುತ್ತದೆ. ಆದರೆ ಚಗಳಿ ಇರುವೆಗಳ ಗೂಡುಗಳಲ್ಲಿ ಇರುವೆಗಳ ಸಂಖ್ಯೆ ಜೇನಿಗಿಂತ ಕಡಿಮೆ ಇರುತ್ತದೆ. ಹಾಗೂ ಇವಗಳ ಆಹಾರ ಪದ್ಧತಿಯಲ್ಲಿ ವ್ಯತ್ಯಾಸ ಕಾಣುತ್ತೇವೆ. ಜೇನು ಸಸ್ಯ ಆಹಾರಿ ಆದರೆ ಇರುವೆ ಸಸ್ಯ ಮತ್ತು ಮಾಂಸಹಾರಿ, ಇದನ್ನು ಹೊರತು ಪಡಿಸಿದರೆ ಉಳಿದಂತೆ ರಕ್ಷಣೆ ಕಾರ್ಯ, ಕಾರ್ಯ ಹಂಚಿಕೆ, ಮತ್ತು ನಿರ್ವಹಣೆ ನೂರಕ್ಕೆ ತೊಂಭತ್ತೊಂಭತ್ತರಷ್ಟು ಹೋಲಿಕೆ ಆಗುತ್ತದೆ.          ಜೇನುಗೂಡು ಕಟ್ಟುವ ಲಕ್ಷಾಂತರ ಹುಳುಗಳು ಮಧ್ಯೆ ನಡೆಯುವ ದಿನನಿತ್ಯದ ಕೆಲಸದಲ್ಲಿ ದಿನಕ್ಕೆ ಸುಮಾರು ಎರಡು ಸಾವಿರದಷ್ಟು ಜೇನ್ನೊಣಗಳು ಅಸುನೀಗುತ್ತವೆ. ಹಿಂದೆ ರಾಜರ ಕಾಲದಲ್ಲಿ ತಾಜಮಹಲ್, ಗೋಲ ಗುಂಬಜ್ ನಂತಹ ಐತಿಹಾಸಿಕ ಸ್ಥಳಗಳನ್ನು ನಿರ್ಮಿಸುವಾಗ ದಶಾನುದಶ ವರ್ಷಗಳ ಕಾಲ ನಡೆಯುವ ಕೆಲಸದಲ್ಲಿ ಕೆಲಸಗಾರರು ಅಸುನೀಗಿದಂತೆ. ಹೀಗೆ ಒಂದು ಜೇನುಗೂಡು ಕಟ್ಟಿ ಜೇನುತುಪ್ಪವನ್ನು ಪೇರಿಸುವ ಈ ಕೆಲಸದಲ್ಲಿ ಲಕ್ಷಾಂತರ ಹುಳುಗಳು ಯೋಧರಂತೆ ವೀರಮರಣವಪ್ಪಿ ಸಾವಿರಾರು ಜನರಿಗೆ ಅಚ್ಚು ಮೆಚ್ಚಿನ ಜೇನುತುಪ್ಪವನ್ನು ನೀಡುತ್ತವೆ. ಇಂತಹ ನಿಸ್ವಾರ್ಥ ಸೇವೆಯನ್ನು ಮನುಷ್ಯನನ್ನು ಹೊರತುಪಡಿಸಿ ಅನೇಕ ಜೀವಿಗಳಲ್ಲಿ ಕಾಣಬಹುದು… ನಾಗರಾಜ ಮಸೂತಿ ಲೇಖಕರ ಪರಿಚಯ: ಶಿಕ್ಷಕರಾಗಿರುವ  ಶ್ರೀಯುತರು ಕಥೆ,ಕವಿತೆ,ಲೇಖನ, ಪ್ರಬಂದಗಳನ್ನು  ಬರೆಯುತ್ತಾ ಬರುತ್ತಿದ್ದಾರೆ. ಇವರ ಹಲವು ಬರಹಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಪ್ರಬಂದ Read Post »

ಇತರೆ

ಅಂಕಣ

ಮುಟ್ಟು! ಚಂದ್ರಪ್ರಭ ಮುಟ್ಟು .. ಮುಟ್ಟು.. ಮುಟ್ಟು.. ಪ್ರಜಾವಾಣಿ ಭಾನುವಾರದ ಪುರವಣಿ (೨೩/೧೦/೧೯) ಯಲ್ಲಿ ಬಾನು ಮುಷ್ತಾಕ್ ರವರ ಲೇಖನ  “ಮುಟ್ಟು ಮುಟ್ಟೆಂದೇಕೆ..?”  ಓದುವಾಗ ‘ಮುಟ್ಟು’ ಕುರಿತು ಹತ್ತಾರು ಸಂಗತಿಗಳು ತಲೆಯಲ್ಲಿ ಸುಳಿದಾಡತೊಡಗಿವೆ. ನಮ್ಮ ಬಾಲ್ಯ ಕಾಲಕ್ಕಿಂತ ಈಗ ಸ್ವಲ್ಪ ಮಟ್ಟಿಗೆ ಧೋರಣೆಗಳು ಬದಲಾಯಿಸಿದಂತೆ ತೋರುವುದಿದೆ. ಆಗ ಅದನ್ನು ಕುರಿತು ಹೆಣ್ಮಕ್ಕಳು ತಮ್ಮ ತಮ್ಮಲ್ಲಿಯೂ ಮುಕ್ತವಾಗಿ ಮಾತನಾಡಲು ಹಿಂಜರಿಕೆಯಿತ್ತು. ಆಗ ಆ ಸಂಗತಿ ಮಕ್ಕಳು, ಇತರರ ತಿಳಿವಳಿಕೆಗೆ ಬರುವ ಸಂಭವನೀಯತೆ ಇದ್ದುದು ತೀರ ಕಡಿಮೆ. ತರಗತಿಯಲ್ಲಿ ಅಂಡಾಣು, ವೀರ್ಯಾಣು, ಗರ್ಭಧಾರಣೆ, ಋತುಚಕ್ರಗಳ ಕುರಿತು ಇದ್ದ ಅಧ್ಯಾಯವನ್ನು ಮಕ್ಕಳೆದುರು ಪಾಠ ಮಾಡಲು ಶಿಕ್ಷಕಿಯರೇ ಹಿಂದೇಟು ಹಾಕುತ್ತಿದ್ದುದನ್ನು ನಾನು ಹತ್ತಿರದಿಂದ ನೋಡಿರುವೆ. ಅದೊಂದು ನಿಸರ್ಗ ಸಹಜ ಕ್ರಿಯೆ, ಮನುಕುಲದ ಉಳಿವು, ಬೆಳವಣಿಗೆಯ ಮೂಲ ಸ್ರೋತ ಎಂಬ ಅದ್ಬುತ ಸತ್ಯವನ್ನು ಮಕ್ಕಳೆದುರು ಅನಾವರಣ ಮಾಡಲು ಇರುವ ಒಂದು ಸದವಕಾಶ ಅದು. ಅಂಥದೊಂದು ಅಧ್ಯಾಯ ಗೌಣವಾಗಿ ಬಿಡುವುದು ನಿಜಕ್ಕೂ ವಿಷಾದನೀಯ. ನನ್ನೂರು ಬನಹಟ್ಟಿ ನೇಕಾರರ ಬೀಡು. ಲಿಂಗ, ಜಾತಿ, ಮತ, ಪಂಥ ಮರೆತು ಎಲ್ಲ ಜೀವಗಳೂ ನೇಕಾರಿಕೆಯನ್ನು ವೃತ್ತಿ ಮಾಡಿಕೊಂಡ ಜನರು ನನ್ನವರು. ದಿನ ಬೆಳಗಾಗುವುದು, ಸಂಜೆಗತ್ತಲು ಕವಿಯುವುದು ನೂಲೆಳೆಯೊಂದಿಗೇ. ಅಲ್ಲಲ್ಲಿ ಕೆಲವರು ನೌಕರದಾರರು ಸಹ ಕಾಣಸಿಗುತ್ತಾರೆ. ತೀರ ಚಿಕ್ಕವಳಿದ್ದಾಗ ನನ್ನವ್ವ ಮುಟ್ಟಿನ ದಿನಗಳಲ್ಲಿ ತಲೆ ಮೇಲೆ ನೀರು ಹಾಕಿಸಿಕೊಂಡು ಕೆಲಸದಲ್ಲಿ ತೊಡಗುತ್ತಿದ್ದುದನ್ನು ನೋಡುತ್ತಿದ್ದರೂ ಅದೇಕೆ ಹಾಗೆ ಅಂತ ತಿಳಿದೇ ಇರಲಿಲ್ಲ. ಅವ್ವ ನನಗೆ ನೀರು ಹಾಕುವಂತೆ ಆಗುವವರೆಗೂ ಹೊತ್ತಲ್ಲದ ಹೊತ್ತಿನಲ್ಲಿ ಅಜ್ಜಿ ಅವ್ವನಿಗೆ ನೀರು ಹಾಕುವುದೇಕೆ ಎಂಬುದು ವಿಸ್ಮಯದ ಸಂಗತಿಯಾಗೇ ಉಳಿದಿತ್ತು! ಈ ದಿನದ ವರೆಗೂ ಆ ದಿನಗಳಲ್ಲಿ ಮೂಲೆ ಹಿಡಿದು ಕೂತವರನ್ನು ನಾ ಕಂಡಿಲ್ಲ. ಕೆಲವು ಸಮುದಾಯದವರು ಅದನ್ನು ಪಾಲಿಸುತ್ತಾರೆ ಎಂದು ಕೇಳಿ ಮಾತ್ರ ಗೊತ್ತು. ನೇಕಾರಿಕೆ ಪ್ರತಿ ದಿನದ ಪ್ರತಿ ಕ್ಷಣದ ದುಡಿಮೆ ಬಯಸುವ ಕಾಯಕ. ಮುಟ್ಟು ಕಾಣಿಸಿಕೊಂಡ ಕೂಡಲೇ ತಲೆ ಮೇಲೆ ನೀರು ಹಾಕಿಕೊಂಡು ಕೆಲಸಕ್ಕೆ ತೊಡಗುವುದು ಇವರಿಗೆ ಅನಿವಾರ್ಯ. ಮೂರು-ನಾಲ್ಕನೇ ದಿನ ಮತ್ತೊಮ್ಮೆ ನೀರು ಹಾಕಿಕೊಂಡರೆ “ಶುದ್ಧ” ಆದ ಹಾಗೆ. ಆ ದಿನಗಳಲ್ಲಿ ದೇವರ ಪೂಜೆ, ನೈವೇದ್ಯ ಇತ್ಯಾದಿಗಳಿಂದ ದೂರ ಉಳಿಯುವುದೇ  ಅವರು ಪಾಲಿಸುವ ‘ಮಡಿ’. ಅವರೇ ಹೇಳುವ ಕೆಲವು ಖಡಕ್ ದೇವರುಗಳ ವಿಶೇಷ ಆಚರಣೆ, ಜಾತ್ರೆಗಳ ಸಂದರ್ಭದಲ್ಲೂ ಅವರು ಅದರಿಂದ ದೂರ. ಇದು ಅವರು ಪಾಲಿಸುವ ಮಡಿಯ ಒಂದು ಭಾಗ. ಆರನೇ ತರಗತಿ ಕಳೆದ ನಂತರದ ರಜೆಯಲ್ಲಿ ನಾನು ಋತುಮತಿಯಾದ ನೆನಪು. ಆಗೆಲ್ಲ ಮೊದಲ ಋತುವನ್ನು ಸಂಭ್ರಮಿಸುವುದು ಜನಗಳಿಗೆ ಪ್ರಿಯವಾದ ಸಂಗತಿ. ೫ ದಿನ, ೯ದಿನ, ೧೧ ದಿನ ಹೀಗೆ ಹುಡುಗಿಯನ್ನು ಮಂಟಪದಲ್ಲಿ ಕೂರಿಸಿ ಸೋಬಾನೆ ಪದ ಹಾಡುವುದು. ದಿನಕ್ಕೊಂದು ರೀತಿಯ ಅಲಂಕಾರ ಮಾಡುವುದು.. ಆಕೆಗೆ ಬಗೆ ಬಗೆ ಊಟ, ಪೌಷ್ಟಿಕ ಆಹಾರ ತಿನ್ನಿಸುವುದು. ‘ಸಾಲಿಗಿ ಹೋಗೂ ಹುಡುಗಿ.. ಕುಂಡ್ಸೂದು ಏನೂ ಬ್ಯಾಡ’ ಅಂತ ನನ್ನಜ್ಜಿ ಫರ್ಮಾನು ಹೊರಡಿಸುದಳು. ಜನಗಳಿಗೆ ಗೊತ್ತಾದರೆ ಅಡುಗೆ ತಂದು ಕೊಟ್ಟು ಕಾರ್ಯ ಮಾಡುವುದು ಅನಿವಾರ್ಯ ಆದೀತೆಂದು ಗುಟ್ಟಾಗಿ ನನ್ನ ಒಳ ಮನೆಯಲ್ಲೇ ಇರಿಸಿದ ನೆನಪು. ಅವ್ವ ನನಗೆ ಸ್ರಾವದ ದಿನಗಳಲ್ಲಿ ಬಟ್ಟೆ ಉಪಯೋಗಿಸುವುದು ಹೇಗೆ ಅಂತ ಹೇಳಿ ಕೊಟ್ಟಳು. ಆದರೆ ಅದನ್ನೆಲ್ಲ ತೊಳೆದು ಸ್ವಚ್ಛ ಮಾಡುವುದು.. ಗುಟ್ಟಾಗಿ ಮುಟ್ಟಿನ ಬಟ್ಟೆ ಒಣಗಿಸಿಕೊಳ್ಳುವುದು ಎಲ್ಲ ಬೇಡದ ಸಂಗತಿಗಳಾಗಿದ್ದವು. ಒಬ್ಬೊಬ್ಬರಾಗಿ ಗೆಳತಿಯರು “ದೊಡ್ಡವ”ರಾಗ ತೊಡಗಿದರು. ಆದರೂ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದುದು ಕಡಿಮೆ. ನಮ್ಮೂರಲ್ಲಿ ಆಗ ಇದ್ದುದು ಕೆಲವೇ ಕೆಲವು ಔಷಧಿ ಅಂಗಡಿ. ಶೋಕೇಸಿನಲ್ಲಿಟ್ಟ ವಸ್ತುಗಳನ್ನು ನೋಡುವುದೆಂದರೆ ನಮಗೆ ಖುಷಿ. ಅದೊಂದು ದಿನ ಸ್ನಾನದ ಸೋಪಿನ ಮಾದರಿಯಲ್ಲಿ ಸುತ್ತಿಟ್ಟ ಪ್ಯಾಕೆಟ್ ಒಂದನ್ನು ನಾನೂ ತಮ್ಮನೂ ಕುತೂಹಲದಿಂದ ನೋಡ ತೊಡಗಿದೆವು. ಅಷ್ಟು ದೊಡ್ಡ ಸಾಬೂನು ಇರುವುದೇ? ಅಂತ ಅಚ್ಚರಿ. ಕೊನೆಗೆ ಅದೇನೆಂದು ಅಂಗಡಿಯವರನ್ನೇ ಕೇಳಿದೆವು. ‘ನಿಮಗ ಗೊತ್ತಾಗೂದಿಲ್ಲ ಹೋಗರಿ’ ಅಂತ ಗದರಿ ಕಳಿಸಿ ಬಿಟ್ಟರು ಅವರು. ‘ಸುಧಾ’ ಆ ಕಾಲದ ಜನಪ್ರಿಯ ವಾರ ಪತ್ರಿಕೆ. ಅದರಲ್ಲಿ ವಸುಮತಿ ಉಡುಪ, ಅನುಪಮಾ ನಿರಂಜನ ಮೊದಲಾದವರ ಸ್ತ್ರೀ ಆರೋಗ್ಯ ಕುರಿತು ಲೇಖನಗಳು. ಮುಟ್ಟಿನ ದಿನಗಳಲ್ಲಿ ಅನುಸರಿಸಬೇಕಾದ ಸಂಗತಿಗಳ ಬಗ್ಗೆ ಕೊಟ್ಟ ಮಾಹಿತಿಯಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆ ಕುರಿತು ವಿವರ ಓದಿದ ನಂತರವಷ್ಟೇ ಅದೆಲ್ಲ ಅರ್ಥ ಆಗಿದ್ದು. ಹಾಗಿದ್ದೂ ದುಡ್ಡು ಕೊಟ್ಟು ಅದನ್ನು ಖರೀದಿಸುವ ಅವಕಾಶ ಇರಲಿಲ್ಲ. ಹೈಸ್ಕೂಲು ಮುಗಿಸಿ ಕಾಲೇಜಿಗೆ ಸೇರುವಾಗ ಅವರಿವರು ಕೊಟ್ಟ ಹತ್ತಿಪ್ಪತ್ತು ರೂಪಾಯಿಗಳನ್ನು ಉಳಿತಾಯ ಮಾಡಿ ಅದರಿಂದ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಆರಂಭಿಸಿದೆ. ಬಳಸಿದ ಮೇಲೆ ಒಪ್ಪವಾಗಿ ಸುತ್ತಿ ಅದನ್ನು ಕಸದ ಡಬ್ಬಿಗೆ ಎಸೆಯುವುದು ಅಭ್ಯಾಸ ಆಯ್ತು. ಅಂಗಡಿಗೆ ಹೋಗಿ ಪ್ಯಾಡ್ ಕೇಳಿದರೆ ಸಾಕು, ಅಂಗಡಿಯಾತ ಗುಟ್ಟಾಗಿ ಅದನ್ನು ಕಾಗದದ ಹಾಳೆಯಲ್ಲಿ ಸುತ್ತಿಯೊ ಕಪ್ಪು ಬಣ್ಣದ ಪ್ಲಾಸ್ಟಿಕ್ ಹಾಳೆಯಲ್ಲಿ ಇರಿಸಿಯೊ ಕೊಡುವುದು ಈಗಲೂ ಕಾಣುವ ವಿದ್ಯಮಾನ. ತೀವ್ರ ಹೊಟ್ಟೆ ನೋವು ಕಾಡಿದಾಗ ವೈದ್ಯರ ಬಳಿ ಹೋಗಿ ಮಾತ್ರೆ ತರುವುದಿತ್ತು. ಬಟ್ಟೆ, ಪ್ಯಾಡ್ ಯಾವುದೇ ಆಗಿರಲಿ ಸ್ರಾವವುಂಡು ಒಣಗಿ ತೊಡೆಯ ಸಂದುಗಳಲ್ಲಿ ಉಂಟು ಮಾಡುತ್ತಿದ್ದ ಗಾಯಗಳದೇ ಒಂದು ಸಮಸ್ಯೆ. ಅದನ್ನು ನಿವಾರಿಸಲು ವೈದ್ಯರಲ್ಲಿಗೆ ತೆರಳಿ ಮುಲಾಮು ತರುವುದು. ಈ ತಿಂಗಳ ಗಾಯ, ನೋವು ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಮುಂದಿನ ತಿಂಗಳ ಋತು ಹಾಜರ್!! ಇದರೊಂದಿಗೆ ಅವ್ವ, ಅಜ್ಜಿ ಹಾಕುತ್ತಿದ್ದ ಅಲ್ಲಿ ಬರಬೇಡ, ಇಲ್ಲಿ ಬರಬೇಡ.. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಇವೆಲ್ಲ ಕಿರಿಕಿರಿ ತಾಳಬೇಕಿತ್ತು. ಮದುವೆ, ವೃತ್ತಿ, ತಾಯ್ತನಗಳ ಮೂಲಕ ಹಾದು ಬರುವಾಗ ಅವ್ವ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳತೊಡಗಿದಳು. ಮುಟ್ಟು ಕಾಣಿಸಿಕೊಂಡ ತಕ್ಷಣ ತಲೆ ಸ್ನಾನ ಮಾಡಬೇಕಿರಲಿಲ್ಲ. ದೇವರು, ನೇಮಗಳ ವಿಷಯದಲ್ಲಿಯೂ ಅವಳು ಆಕ್ಷೇಪಿಸುವುದನ್ನು ನಿಲ್ಲಿಸಿದಳು. ಆದರೂ ನಮ್ಮಲ್ಲಿ ಮೊದಲಿನ ಭಯ ಹಾಗೇ ಉಳಿದಿತ್ತು. ಮುಟ್ಟು ನಿಲುಗಡೆಯ ಹೊಸ್ತಿಲಲ್ಲಿರುವ ಈ ಹೊತ್ತು ಮುಟ್ಟಿನ ಬಟ್ಟಲುಗಳ ಬಳಕೆ ವ್ಯಾಪಕವಾಗಿ ಕೇಳಿ ಬರುತ್ತಿದೆ. ಅರವತ್ತರ ದಶಕದಲ್ಲಿಯೇ ಶೋಧಿಸಲ್ಪಟ್ಟ ಮುಟ್ಟಿನ ಬಟ್ಟಲು ಮಾರುಕಟ್ಟೆಗೆ ಬರದಿರುವಂತೆ ತಡೆಯುವ ಹಿಂದೆ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡುವ ಕಂಪನಿಗಳ ಕೈವಾಡ ಇತ್ತೆಂಬುದನ್ನು ಪತ್ರಿಕೆಗಳು ವರದಿ ಮಾಡುವುದನ್ನು ಓದುವಾಗ ಆಘಾತವಾಗುತ್ತದೆ. ಮಣ್ಣಿನಲ್ಲಿ ಕರಗದ, ನಾಶವಾಗದ, ನೂರಾರು ವರ್ಷಗಳ ವರೆಗೆ ಇದ್ದ ಸ್ಥಿತಿಯಲ್ಲಿಯೇ ಉಳಿಯುವ, ಕ್ರಿಮಿಗಳ ಉತ್ಪಾದನೆಗೆ ಆಕರವಾದ ಅದೆಷ್ಟು ಪ್ಯಾಡ್ ಗಳನ್ನು ವರ್ಷಗಟ್ಟಲೇ ನಾವು ಎಸೆಯುತ್ತಲೇ ಬಂದಿದ್ದೇವೆ ಎಂದು ಊಹಿಸಲೂ ಭಯವಾಗುವದು. ಹೆಂಗಳೆಯರ ಸೌಕರ್ಯ, ಪರಿಸರ ಕಾಳಜಿ ಯಾವುದೂ ಇಲ್ಲದ ಕಂಪನಿಗಳಿಗೆ ತಮ್ಮ ಹಿತಾಸಕ್ತಿಗಳೇ ಮುಖ್ಯ ಆಗುವುದು ಆಗಲೂ ಇತ್ತು.. ಈಗಲೂ ಇದೆ.. ಮುಂದೆಯೂ ಇದ್ದರೆ ಅಚ್ಚರಿಯಿಲ್ಲ. ಮುಟ್ಟಿನ ಕುರಿತು ಮುಕ್ತವಾಗಿ ಮಾತನಾಡಲು ಹಿಂಜರಿಯದ ವಾತಾವರಣ ಇನ್ನೂ ನಿರ್ಮಾಣ ಆಗಿಲ್ಲ. ಅದು ಸಾಧ್ಯ ಆಗಬೇಕು. ಹಾಗಾಗುವುದು ಆರೋಗ್ಯವಂತ ಸಮಾಜದ ಲಕ್ಷಣ. ನಮ್ಮ ಮಕ್ಕಳಿಗೆ ಗಂಡು ಹೆಣ್ಣು ಭೇದವಿಲ್ಲದೆ ಇಬ್ಬರಿಗೂ ಈ ಕುರಿತ ವಾಸ್ತವಾಂಶಗಳ ಅರಿವಾಗಬೇಕು. ಅದು ಪರಸ್ಪರರ ಕುರಿತ ಮಾನವೀಯ ನಿಲುವು ವೃದ್ಧಿಸಲು ಸಹಕಾರಿ. ಮುಟ್ಟಿನ ಬಟ್ಟಲು ಬಳಕೆ ವ್ಯಾಪಕ ಆಗಬೇಕು. ಒಣ ಅನುಕಂಪ, ಸಹಾನುಭೂತಿಗೆ ಬದಲಾಗಿ ಅವಳ ‘ಆ ದಿನಗಳ’ಲ್ಲಿ ಆಕೆಗೆ ಇತರರ ಸಹಕಾರ, ಸಾಂತ್ವನ ಸಿಗುವಂತಾಗಬೇಕು. ಎಲ್ಲ ಹೆಣ್ಣು ಜೀವಗಳಲ್ಲಿ ನನ್ನದೊಂದು ವಿನೀತ ಪ್ರಾರ್ಥನೆ.. ಮುಟ್ಟು ಕುರಿತು ನಿಮ್ಮ ಅನುಭವವನ್ನು ಮುಕ್ತವಾಗಿ ಹಂಚಿಕೊಳ್ಳಲು ಆರಂಭಿಸಿ. ಒಂದು ಅಭಿಯಾನದ ರೀತಿಯಲ್ಲಿ ಅದು ಸಾಗಲಿ. ಅದರಿಂದ ಪುರುಷ ಜಗತ್ತಿನೆದುರು ಹೊಸತೊಂದು ಲೋಕದ ಅನಾವರಣವಾಗಲಿ. ಮಿಡಿಯುವ ಮನಗಳು ಮಿಡಿದಾವು -ಚಂದ್ರಪ್ರಭಾ.

ಅಂಕಣ Read Post »

ಇತರೆ

ಅಂತರಂಗದ ಅಲೆಗಳು

                         ಸುಜಾತ ರವೀಶ್ ಹೌದು. ಮನವೆಂಬುದು ಅದೆಷ್ಪೋ ಲಕ್ಷ GBಗಳಾಗಿಂತ ಶಕ್ತಿಯುತ ಚಿಪ್. ಅಂತರಾಳದ ಪದರ ಪದರಗಳಲ್ಲಿ ಅಸಂಖ್ಯಾತ ನೆನಪಿನಲೆಗಳೇಳುತ್ತಲೇ ಇರುತ್ತವೆˌ ಈ ಭರತಕ್ಕೆ ಹುಣ್ಣಿಮೆ ಅಮಾವಾಸ್ಯೆಗಳ ಹಂಗಿಲ್ಲ. ಅವಿರತ ನಿರಂತರ ಅನಂತ.ಎಂದೋ ಎಲ್ಲೋ ಆದ ಅನುಭವದ ನೆನಹು ಇನ್ನೆಂದೋ ಇನ್ನೆಲ್ಲೋ ಧುತ್ತನೆ ಮನದಂಗಳದಲಿ ಪ್ರತ್ಯಕ್ಷ.ಕವಿವಾಣಿ ನುಡಿದಂತೆ “ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮಜಲದಾ ತಂಪು” ಇಂದಿಗೂ ತಾಜಾ ತಾಜಾ ಹಸಿ ಹಸಿ. ಇವತ್ತು ಬರೆಯಹೊರಟಿರುವ ವಿಷಯ ತುಂಬಾ ದಿನದಿಂದ ಮನದಲ್ಲಿತ್ತು. ಮುಂದೂಡೂತ್ತಲೇ  ಇದ್ದೆ. ಹಾಗಾಗಿ ಈಗ ನಿಮ್ಮ ಮುಂದೆ ನನ್ನ ಅಂತರಂಗದಲೆಯ ನರ್ತನ. ಮನೆಯ ಬಳಿಯೇ  ಉದ್ಯಾನವಿದ್ದರೂ ರಿಂಗ್ ರಸ್ತೆಯಲ್ಲಿ ಗೆಳತಿಯೊಡನೆ ನಡೆದಿತ್ತು ನನ್ನ ಮುಂಜಾವಿನ ವಾಯುವಿಹಾರ. ಗೆಳತಿ ಬೆಂಗಳೂರಿಗೆ ಶಿಫ್ಟ್  ಆದ್ದರಿಂದ ಒಬ್ಬಳೇ ತಾನೇ ಇನ್ನು ಮುಂದೆ ಉದ್ಯಾನವನಕ್ಕೇ ಹೋಗೋಣ ಎಂದು ನಿರ್ಧರಿಸಿದೆ. ಸರಿ ಆ ಬೆಳಿಗ್ಗೆ ಹೊರಟಿತು ನನ್ನ ಸವಾರಿ.ಹಿಂದಿನ ರಾತ್ರಿ ಜೋರಾಗಿ ಮಳೆ ಗಾಳಿ ಬಂದ ಕಾರಣ ವಾತಾವರಣವೆಲ್ಲಾ ತಂಪು ತಂಪು ಹಾಯಿ ಹಾಯಿ. ಗೇಟಿನ ಬಳಿ ಹೋಗುತ್ತಿದ್ದಂತೆ ತಡೆದು ನಿಲ್ಲಿಸಿತು  ಆ ಕಂಪು. ಏನೋ ಪರಿಚಿತ ಅನ್ನಿಸ್ತಿದೆ ಆದರೆ ನಿಖರವಾಗಿ ಗೊತ್ತಾಗ್ತಾಯಿಲ್ಲ.ಒಂದು ಕ್ಷಣ ನೆನಪಿಸಿಕೊಂಡ ನಂತರ ಯಾವುದೋ ಹೂವಿನದು ಅನ್ನಿಸಿತು.ಮೆದುಳಿಗೆ ಮತ್ತಷ್ಟು ಕೆಲಸ ಕೊಡುವಷ್ಟರಲ್ಲಿ ಕಣ್ಣಿಗೆ ಬಿತ್ತು ಆಕಾಶಮಲ್ಲಿಗೆಯ ಮರ. ತಕ್ಷಣ ಹೊಳೆಯಿತು ಅದು ಆಕಾಶಮಲ್ಲಿಗೆ ಹೂವಿನ ನರುಗಂಪು ಎಂದು.ಈ ಸುಗಂಧದ ಬಂಧ ಬಾಲ್ಯದ ನಂಟು.ಚಿಂತಾಮಣಿಯಲ್ಲಿ ಅಜ್ಜಿಮನೆಯ ದಾರಿಯುದ್ದಕ್ಕೂ ಮತ್ತು ಅಲ್ಲಿದ್ದ ಪಾರ್ಕಿನಲ್ಲೂ ಇವೇ ಮರಗಳು. ಸಾಮಾನ್ಯವಾಗಿ ನಾವು ಹೋಗುತ್ತಿದ್ದುದು ಏಪ್ರಿಲ್ ಮೇ ತಿಂಗಳಾದ್ದರಿಂದ ಮರತುಂಬಾ ನಕ್ಷತ್ರದಂತಹ ಹೂಗಳುˌ! ಬೆಳಿಗ್ಗೆ ರಸ್ತೆಯಿಡೀ ಬಿದ್ದಿರುತ್ತಿದ್ದವು. ನೋಡಲು ಥೇಟ್ ಸುಗಂಧರಾಜದಂತೆಯೇ!ಅದರೆ ಅಷ್ಟು ತೀಕ್ಷ್ಣ ಪರಿಮಳವಿಲ್ಲ.ದೇವರ ಪೂಜೆಗೆ ಅರ್ಹವಿಲ್ಲ ಅಂತಿದ್ರು ದೊಡ್ಡವರು.ನಾವು ಮಕ್ಕಳು ಅವನ್ನು ಆರಿಸಿ ತೊಟ್ಟ ಲಂಗಗಳಲ್ಲಿ ಉಡಿ ತುಂಬಿಸಿಕೊಂಡು ತರುತ್ತಿದ್ದೆವು.ಆ ನಂತರ ರಂಗವಲ್ಲಿ ಚಿತ್ತಾರ ಮಾಡಿಯೋ ಮಾಲೆಯೋ ಕಟ್ಟುತ್ತಿದ್ದೆವು. ದೇಟು (ತೊಟ್ಟು) ಉದ್ದವಾದ್ದುದರಿಂದ ಹೊಸದಾಗಿ ಹೂ ಕಟ್ಟಲು ಕಲಿಯುವವರಿಗೆ ಸುಲಭ ಆಗುತ್ತಿತ್ತು. ನಂತರದ ದಿನಗಳಲ್ಲಿ ಅದರ ಒಡನಾಟವೇ ಇಲ್ಲ.ˌ ಹಾಂ! “ಮುಗಿಲ ಮಲ್ಲಿಗೆಯೋ ಗಗನದ ತಾರೆಯೋ” ಹಾಡು ಕೇಳಿದಾಗಲೆಲ್ಲಾ ಈ ನೆನಪು ಸುಳಿದು ಹೋಗುತ್ತಿದ್ದುದು ಉಂಟು. 35_40 ವರ್ಷಗಳ ಹಿಂದೆ ಆಘ್ರಾಣಿಸಿದ ಆ ಕಂಪು ಇನ್ನೂ ಮನದಲ್ಲಿ ಉಳಿದಿದೆಯೆಂದರೆ ಮಾನವನ ಮಿದುಳು ಚಮತ್ಕಾರವಲ್ಲದೇ ಇನ್ನೇನು?ಆಗತಾನೇ ಬಿದ್ದಿದ್ದ ಕಾಲ್ತುಳಿತಕ್ಕೆ ಸಿಕ್ಕದ ಹೂಗಳನ್ನು ಆರಿಸಿ ತಂದು ಫೋಟೋ ತೆಗೆದು ಹೂದಾನಿಯಲ್ಲಿಟ್ಟೆ.3_4  ದಿನಗಳವರೆಗೂ ಬಾಡದೆ ಮನೆಯೆಲ್ಲಾ ಆ ಮಂದ್ರ ಪರಿಮಳ ಆವರಿಸಿತ್ತು ಅಂತೇ  ಮನದ ತುಂಬಾ ಕಳೆದ ಆ ಬಾಲ್ಯದ ದಿನಗಳ ಮೆಲುಕೂ! ಜೀವನವೇ ಹೀಗೇ….. ಬಾಳ ಕಡಲಿನಲಿ ನೆನಪಿನ ಹಾಯಿದೋಣಿಯ ಯಾನ. ಸುಜಾತ ರವೀಶ್ ಲೇಖಕರ ಪರಿಚಯ: ಜೀವ ವಿಮಾ ನಿಗಮದಲ್ಲಿ ಉನ್ನತ ದರ್ಜೆ ಸಹಾಯಕಿ.ಅಂತರಂಗದ ಆಲಾಪ ಕವನ ಸಂಕಲನ ಪ್ರಕಟಣೆಯಾಗಿದೆ. ಮುಖವಾಡಗಳು ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಪದವಿ ಪಠ್ಯ ಪುಸ್ತಕಕ್ಕೆ ಆಯ್ಕೆಯಾಗಿದೆ.ಕೆಲವು ಕವನಗಳು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

ಅಂತರಂಗದ ಅಲೆಗಳು Read Post »

ಇತರೆ

ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.  ಡಿ.ಎಸ್.ರಾಮಸ್ವಾಮಿ         ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.      ಅಂದರೆ ಕನ್ನಡ ನೆಲದ ಅಸ್ಮಿತೆ ಲೋಕ ಖ್ಯಾತವಾಗಲು ಬಳಸಬಹುದಾದ ಹಲವು ಏರುಮಣೆಗಳನ್ನು ಬಳಸುವ ಚಾಕಚಕ್ಯತೆ ಇದ್ದವರು ಮುನ್ನೆಲೆಗೆ ಬಂದಿದ್ದಾರೆ ಹಾಗೇ ಆಯಾ ಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳದ ಜಾಣ್ಮೆ ಇಲ್ಲದಿದ್ದವರು ಅವಕಾಶ ವಂಚಿತರಾಗಿದ್ದಾರೆ. ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಟ್ಟಿಗೆ ಸಂಪರ್ಕವಿರಿಸಿಕೊಂಡಿರುವ ಎಲ್ಲರ ಅನುಭವವೂ ಹೌದು. ಸಣ್ಣ ಹಳ್ಳಿಯೊಂದರಲ್ಲಿ ತನ್ನ ಪಾಡಿಗೆ ತಾನು ಸ್ವಾದಿಷ್ಠವೂ ರಸಭರಿತವೂ ಆದ ಆಹಾರವನ್ನು ತಯಾರು ಮಾಡುವ ಬಾಣಸಿಗ ಸ್ಟಾರ್ ಹೋಟೆಲಿನ ಛೆಫ್ ತರಹ ಪ್ರಸಿದ್ಧನಾಗುವುದೇ ಇಲ್ಲ! ಏಕೆಂದರೆ ಛೆಫ್ ಗೆ ಇರುವ ಅವಕಾಶ ಮತ್ತು ಅವಕಾಶವಾದಿತನ ಹಳ್ಳಿಯ ಬಾಣಸಿಗನಿಗೆ ದಕ್ಕುವುದಿಲ್ಲ. ವರ್ತಮಾನದ ಸಾಹಿತ್ಯ ಸಂದರ್ಭವೂ ಇದಕ್ಕಿಂತ ಹೆಚ್ಚೇನೂ ವ್ಯತ್ಯಾಸದಲ್ಲಿ ಇಲ್ಲ. ತನ್ನ ಪಾಡಿಗೆ ತಾನು ಒಳ್ಳೆಯ ಓದು ಮತ್ತು ಬರಹದಲ್ಲಿ ಸುಖ ಕಂಡಂತೆ ಇರುವ ಅದೆಷ್ಟೋ ಬರಹಗಾರರು ಎಲೆ ಮರೆಯ ಕಾಯಂತೆ ಇದ್ದರೆ ಒಂದಷ್ಟು ಚಾಕಚಕ್ಯತೆ ಮತ್ತು ಲೋಕನುಭವದಿಂದ ಸತ್ಯವನ್ನು ಅರಿತವರು ಯಾರನ್ನು ಯಾವಾಗ ಮತ್ತು ಹೇಗೆ ಹಿಡಿದರೆ ತಾವು ಸಲ್ಲಬಹುದು ಖ್ಯಾತರಾಗಬಹುದು ಎಂಬ ಅಂದಾಜಿದ್ದವರೇ ಇವತ್ತು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರೇ ತಮ್ಮದೇ ಗುಂಪುಗಳನ್ನು ಕ್ಷಮಿಸಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ಸಾಂಸ್ಕೃತಿಕ ಲೋಕದ ನಿಯಂತ್ರಣಕ್ಕೆ ಕಟಿಬದ್ಧರಾಗಿರುತ್ತಾರೆ. ಆದರೂ ಖುಷಿಯೆಂದರೆ ಈ ಎಲ್ಲ ಗುಂಪು ಗದ್ದಲ ಮತ್ತು ಗೋಜುಗಳಾಚೆಯೂ ಅತ್ಯುತ್ತಮ ಎನ್ನಬಹುದಾದ ಹಲವು ಸಂಕಲನಗಳು ಬರುತ್ತಿವೆ ಮತ್ತು ಘೋಷಿತ ವಲಯಕ್ಕೂ ಅಚ್ಚರಿ ಮತ್ತು ಗಾಬರಿಗಳನ್ನು ಹುಟ್ಟಿಸುತ್ತಲೂ ಇವೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಣುಕು ಹಾಕದ ಬರಹಗಾರರು ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅಂಡ್ರಾಯ್ಡ್ ಫೋನು ಮತ್ತು ಅಂತರ್ಜಾಲ ಸುಲಭಕ್ಕೆ ಸಿಗುತ್ತಿರುವ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ಭಾಗವಹಿಸುವಿಕೆ ಪ್ರತಿಷ್ಠೆಯಾಗಿಯೂ ಬದಲಾಗುತ್ತಿದೆ. ಫೋನಿನ ಡಾಟ ಬಟನ್ ಒತ್ತಿದ ತಕ್ಷಣವೇ ಓತ ಪ್ರೋತ ಬಂದೆರಗುವ ಹೆಚ್ಚಿನ ಸಂದೇಶಗಳು ಓದದೇ ಫಾರ್ವರ್ಡ್ ಆದವೇ ಆಗಿರುತ್ತವೆ. ಓದುವ ಮುನ್ನವೇ ಲೈಕ್ ಕೊಡುವ ಇಮೋಜಿಯನ್ನೋ ಚಿತ್ರವನ್ನೋ ಪ್ರತಿಕ್ರಿಯೆಯಾಗಿ ಹರಿಯಬಿಡುವುದು ತೀರ ಸುಲಭದ ಕೆಲಸವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವೋ ಮಾರಕವೋ ಎಂದು ಚಿಂತಿಸುವುದು ಪ್ರೌಢಶಾಲೆಯ ಚರ್ಚಾ ಸ್ಪರ್ದೆಯ ವಿಷಯವಾಗಬಹುದೇ ವಿನಾ ಅದರಾಚೆಗೆ ಅದರ ವ್ಯಾಪ್ತಿ ಇಲ್ಲ. ಏಕೆಂದರೆ ಈ ಜಾಲತಾಣಗಳ ಭೇಟಿ ಇವತ್ತು ಚಟವಾಗಿ ಬದಲಾಗಿದೆಯೇ ವಿನಾ ಅದು ರಸಾನುಭವದ ಕೊಡು ಕೊಳ್ಳುವಿಕೆಯ ವೇದಿಕೆಯಾಗಿ ಉಳಿದಿಲ್ಲ. ಜೊತೆಗೆ ಈ ಜಾಲತಾಣಗಳು ಸಾಮಾಜಿಕ ಆರ್ಥಿಕ ರಾಜಕೀಯ ವಲಯಗಳ ಸುಳ್ಳು ವದಂತಿಗಳ ಹಂಚುವಿಕೆಗೆ ಮತ್ತು ವ್ಯಕ್ತಿ ಹಾಗು ಪಂಥದ ವಿರುದ್ಧದ ವ್ಯವಸ್ಥಿತ ಸಂಚಾಗಿ ಬಳಕೆಯಾಗುತ್ತಿರುವುದನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.    ಆದರೂ ಅಪರೂಪಕ್ಕೆಂಬಂತೆ ಒಂದೆರಡು ವಾಟ್ಸ್ ಅಪ್ ಗುಂಪುಗಳು ಒಳ್ಳೆಯ ಊಟ ಉಪಾಹಾರಗಳ ತಯಾರಿಕೆ ಮತ್ತು ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದಂತೆಯೇ ಕತೆ, ಕವಿತೆಗಳ ಪ್ರಕಟಣೆಗೆ ವಿಮರ್ಶೆಗೆ ಪರಸ್ಪರರ ಭೇಟಿ ಮಾತುಕತೆಗೆ ನೆರವಾಗುತ್ತಿವೆ. ಆದರೆ ಇವುಗಳ ಸಂಖ್ಯೆ ತೀರ ಕಡಿಮೆ. ಜಾತಿ,ಕೆಲಸ,ನಂಬಿಕೆಯ ತಳಹದಿಯ ಮೇಲೇ ರಚಿತವಾಗುವ ಜಾಲತಾಣಗಳು ಹೆಚ್ಚೇನನ್ನೂ ಸೃಜಿಸಲಾರವು.   ನಿಜಕ್ಕೂ ಹೇಳಬಹುದೆಂದರೆ ಸಾಮಾಜಿಕ ಜಾಲತಾಣ ಒಂದು ಬಗೆಯ ಸಂತೆ ಇದ್ದಂತೆ. ಇಲ್ಲಿ ಎಲ್ಲರಿಗೂ ಬೇಕಾದ ವಿವಿಧ ಬಗೆಯ ಸಾಮಾನು ಸರಂಜಾಮು ಮಾರಾಟಕ್ಕೆ ಇದೆ. ತನಗೆ ಬೇಕಾದ್ದನ್ನು ಬೇಕಾದವರು ಅರಸಿ ಹೋಗಿ ಖರೀದಿಸುವಂತೆ ತನ್ನಿಷ್ಟದ ಸಾಹಿತ್ಯದ ಪ್ರಕಾರಕ್ಕೆ ಚಂದಾದಾರನಾಗುವುದು ಚಂದಾ ನೀಡುವುದು ಅಥವ ಚಂದವಾಗಿ ಎದ್ದು ಹೊರ ನಡೆಯುವುದು ಆಯಾಯ ವ್ಯಕ್ತಿಯ ಬೌದ್ಧಿಕ ಮಾನಸಿಕ ಮತ್ತು ಸಾಮಾಜಿಕ ನಿಲುವು ಮತ್ತು ಒಲವುಗಳ ವಿಷಯವಾಗಿದೆಯೇ ವಿನಾ ಅದೇ ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವುದು ನನ್ನ ನಿಲುವು. ಡಿ.ಎಸ್.ರಾಮಸ್ವಾಮಿ. ಲೇಖಕರ ಪರಿಚಯ: ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿರುವ ಇವರು ಮೂಲತ: ಕವಿಯಾಗಿದ್ದು,ಇವರ ಉಳಿದ ಪ್ರತಿಮೆಗಳು ಕವನಸಂಕಲನಕ್ಕೆ 2006ರ ಮುದ್ದಣ ಕಾವ್ಯ ಪ್ರಶಸ್ತಿ ಬಂದಿರುತ್ತದೆ.

ವಿಶೇಷ Read Post »

You cannot copy content of this page

Scroll to Top