ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ಲಿವಿಂಗ್ ಟುಗೆದರ್

ಲೇಖನ ಲಿವಿಂಗ್ ಟುಗೆದರ್ ಸುಜಾತಾ ರವೀಶ್ ಇಬ್ಬರೂ ಸಮಾನ ಮನಸ್ಕರು ಒಂದೇ ಸೂರಿನಡಿ ವಾಸಿಸುತ್ತಾ ಭಾವನಾತ್ಮಕ ಹಾಗೂ ದೈಹಿಕ ಸಂಬಂಧಗಳನ್ನು ವಿವಾಹ ವ್ಯವಸ್ಥೆ ಇಲ್ಲದೆ ಹೊಂದಿ ಜೀವಿಸುವುದಕ್ಕೆ livein relationship ಅಥವಾ ಸಹಬಾಳ್ವೆ ಪದ್ಧತಿ ಎನ್ನುತ್ತಾರೆ.  ಈಗ ಎರಡು ದಶಕಗಳಿಂದೀಚೆಗೆ ಪ್ರಪಂಚದಲ್ಲಿ ಶುರುವಾಗಿರುವ ಹಾಗೂ ಸಮಾಜಶಾಸ್ತ್ರಜ್ಞರು ಮತ್ತು ಮಾನವ ಶಾಸ್ತ್ರಜ್ಞರ ನಿರೀಕ್ಷೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ವ್ಯವಸ್ಥೆ ಇದು ಪ್ರಚಲಿತ ಅಸ್ತಿತ್ವದಲ್ಲಿರುವ ಕುಟುಂಬ ಎಂಬ ಸಾಮಾಜಿಕ ಪರಿಕಲ್ಪನೆಯಿಂದ ಹೊರತಾದ ಹೊಸ ಬದಲಾವಣೆಯ ಅಲೆ ಇದು .  ಮನುಷ್ಯ ಒಂದು ಸಾಮಾಜಿಕ ಪ್ರಾಣಿ ಜೀವನವೇ ಸವಾಲು ಹಾಗೂ ಸಮಸ್ಯೆಗಳ ಪಯಣ .  ಆಗ ಸಾಹಚರ್ಯದ ಅಗತ್ಯವಿರುತ್ತದೆ . ಅದೇ ಸಂಸಾರ ಮದುವೆಯ ವ್ಯವಸ್ಥೆಗೆ ಕಾರಣೀಭೂತವಾಗುತ್ತದೆ.  ಆದರೆ ಈಗಿನ ಸಾಮಾಜಿಕ ಪರಿವರ್ತನೆಗಳ ದಾಳಿ, ಸಾಂಸಾರಿಕ ಬಂಧಗಳ ಶಿಥಿಲತೆ, ಹಳಸಿದ ಸಡಿಲಾದ ಸಂಬಂಧಗಳಿಗೆ ಕಾರಣವಾಗಿ ವಿವಾಹ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ.  ಹಾಗೂ ಈ ರೀತಿ ವಿವಾಹ ವ್ಯವಸ್ಥೆಯ ವಿರುದ್ಧ ಎತ್ತಿದ ಪ್ರಶ್ನೆಯೇ ಈ ಸಹಬಾಳ್ವೆ ಜೀವನ ಪದ್ಧತಿ.  ಮೊದಲಿಗೆ ಈ ಪದ್ಧತಿಗೆ ಕಾರಣಗಳೇನು ಎಂಬುದರ ಬಗ್ಗೆ ದೃಷ್ಟಿ ಹರಿಸಿದಾಗ…  ಜಾಗತೀಕರಣ  ಯಾವುದೇ ಆರ್ಥಿಕ ಬದಲಾವಣೆ ಸಾಮಾಜಿಕ ಮತ್ತು ನೈತಿಕ ಬದಲಾವಣೆಯನ್ನು ತರುತ್ತದೆ. ಕೈಗಾರೀಕರಣದ ಪ್ರಭಾವದಿಂದ ದೀರ್ಘಕಾಲದ ಕೆಲಸ ಒತ್ತಡದ ಜೀವನ ಹಾಗೂ ನಿಷ್ಕ್ರಿಯ ಸಾಮಾಜಿಕ ಜೀವನಗಳು ಮದುವೆಯ ಕಡೆಯಿಂದ ಅನ್ಯ ಸಂಬಂಧಗಳತ್ತ ಆಕರ್ಷಿಸುತ್ತದೆ.  ಪಾಶ್ಚಿಮಾತ್ಯೀಕರಣ ಆಧುನೀಕರಣದತ್ತ ಮಾರು ಹೋಗುತ್ತಿರುವ ಯುವ ಜನಾಂಗ ಪಾಶ್ಚಾತ್ಯ ಉಡುಗೊರೆಯಾದ ಲಿವ್ ಇನ್ ರಿಲೇಶನ್ ಶಿಪ್ ಅನ್ನು ಆಹಾರ ವಸ್ತ್ರ ಆಚಾರ ವಿಚಾರದಂತೆ ಇದನ್ನು ಕೂಡ ಅಂಧಾನುಕರಣೆ ಮಾಡುತ್ತಿದೆ. ಇವುಗಳೊಂದಿಗೆ ಜನಸಂಖ್ಯೆಯ ಚಲನಶೀಲತೆ (ಹೆಚ್ಚಿನ ಉದ್ಯೋಗ ನಿಮಿತ್ತ) ಸಹ ತನ್ನದೇ ಕೊಡುಗೆ ನೀಡುತ್ತಿದೆ . ಮಹಿಳಾ ಶಿಕ್ಷಣ ಮಟ್ಟ ಏರಿಕೆ ಪುರುಷರಂತೆ ಸ್ತ್ರೀಯರು ಸಹ ಶಿಕ್ಷಣ ಉದ್ಯೋಗ ಎಲ್ಲ ರಂಗಗಳಲ್ಲೂ ಸಮಾನತೆ ಹೊಂದುತ್ತಿದ್ದಾರೆ.  ಹಾಗಾಗಿ ಮದುವೆಯ ವಯಸ್ಸಿನ ಸರಾಸರಿ ಏರಿಕೆ ಮತ್ತು ವೈವಾಹಿಕ ಆಯ್ಕೆಯ ಸ್ವಾತಂತ್ರ್ಯ ಹಾಗೂ ಜೊತೆಯಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂದಿನ ಯುಗದ ಮಹಿಳೆಯರನ್ನು ಹೆಚ್ಚು  ದಿಟ್ಥರಾಗಿಸುತ್ತದೆ. ಹೊಸದಾಗಿ ಸಂಬಂಧ ಬೆಳೆಸುವುದರೊಂದಿಗೆ ಗಂಡ ಹೆಂಡಿರ ನಡುವಣ ಪ್ರತ್ಯೇಕತೆ ಉದ್ವಿಗ್ನತೆ ಘರ್ಷಣೆ ಹೆಚ್ಚಿಸಿ ವಿಚ್ಛೇದನಗಳಿಗೆ ಕಾರಣವಾಗುತ್ತಿದೆ . “ಜೀವನಕ್ಕಾಗಿ ಸತ್ತ ಸಂಬಂಧದ ಹೊರೆ ಹೊರುವುದಕ್ಕಿಂತ ಸಂಬಂಧವನ್ನು ಕೊನೆಗಾಣಿಸಿ ಕೊಳ್ಳುವುದು ಉತ್ತಮ” ಎಂಬ ನಿಲುವಿಗೆ ಅಂಟಿಕೊಳ್ಳುವುದನ್ನು ಕಾಣಬಹುದು.  ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆ ಮಹಿಳೆಯರಾಗಲಿ ಪುರುಷರಾಗಲಿ ವೃತ್ತಿ ಜೀವನವೇ ಕೇಂದ್ರಬಿಂದು ಆಗುತ್ತಿದೆ.  ಹಾಗಾಗಿ ಮದುವೆಯ ವಯಸ್ಸಿನಲ್ಲಿ ವಿಳಂಬ, ವೈವಾಹಿಕ ಅಡ್ಡಿ ಪಡಿಸುವಿಕೆ ಮದುವೆಯ ಪೂರ್ವಭಾವಿಯಾಗಿಯೋ ಅಥವಾ ಮದುವೆಯವರೆಗಿನ ಸ್ಟಾಪ್ ಗ್ಯಾಪ್ ವ್ಯವಸ್ಥೆ ಆಗಿಯೋ ಈ ಲಿವ್ ಇನ್ ರಿಲೇಷನ್ ಶಿಪ್ ಗಳು ಜನಪ್ರಿಯ ಆಗುತ್ತಿವೆ . ಸಂಸಾರದಲ್ಲಿನ ನಿರ್ಬಂಧ ಅಸಮಾನತೆ ಹಾಗೂ ಮಾನಸಿಕ ದೈಹಿಕ ಹಿಂಸೆಗಳನ್ನು ಮೌನವಾಗಿ ಯಾರೂ ಸಹಿಸುತ್ತಿಲ್ಲ ಹೀಗಾಗಿ ಈ ಪದ್ಧತಿ  ಸಾಂಸ್ಥಿಕ ವೈವಾಹಿಕ ಸಂಕೋಲೆಯಿಂದ ಬಿಡಿಸಿಕೊಳ್ಳುವ ಮಾರ್ಗವಾಗಿಯೂ ಪರಿಣಮಿಸಿದೆ . ಆದರೆ ಭಾರತದಂತಹ ಪುರಾತನ ಸಂಸ್ಕೃತಿಯ ದೇಶದಲ್ಲಿ ಇದು ಸರಿಯೇ? ನಿಜಕ್ಕೂ ಇದು ಒಂದು ನೈತಿಕ ಅಧಃಪತನವೇ ಸರಿ.  ಮದುವೆ ಎಂಬುದು ಸಮಾಜ ಅಂಗೀಕರಿಸಿದ ರಕ್ಷಣೆ ಕೊಟ್ಟ ಒಂದು ವ್ಯವಸ್ಥಿತ ಒಡಂಬಡಿಕೆ. ನ್ಯಾಯಸಮ್ಮತವೂ ಸಹ . ಆದರೆ ಈ ಲಿವ್ ಇನ್ ಸಂಬಂಧಗಳು ಮನುಷ್ಯರಲ್ಲಿ ಬದ್ಧತೆಯ ಕೊರತೆಯನ್ನುಂಟು ಮಾಡುತ್ತದೆ.  ಬಟ್ಟೆ ಬದಲಿಸುವ ಹಾಗೆ ಸಂಗಾತಿಯನ್ನು ಬದಲಾಯಿಸಬಹುದು . ನೈತಿಕ ಸಾಮಾಜಿಕ ಮೌಲ್ಯಗಳು ಪ್ರಪಾತದ ದಾರಿ ಹಿಡಿಯುತ್ತಿರುವ ದ್ಯೋತಕ. ಕುಟುಂಬ ವ್ಯವಸ್ಥೆಯಲ್ಲಿ ಪ್ರಬಲವಾಗಿರುವ ಕರ್ತವ್ಯ’ ತ್ಯಾಗ, ಬದ್ಧತೆ ಮತ್ತು ವಿಧೇಯತೆ ಜಾಗದಲ್ಲಿ ಈ ಸಂಬಂಧ ಸ್ವಾರ್ಥ ,ಸಹವಾಸ ಕಾಮತೃಪ್ತಿ, ಸಮಾನತೆ ಮತ್ತು ಒಗ್ಗಿ ಕೊಳ್ಳುವಿಕೆ ಅಂತಹ ದುರ್ಬುದ್ಧಿ ಬಿತ್ತುತ್ತಿದೆ_  ಸಾಮಾಜಿಕ ಬಂಧಗಳ ಬಗ್ಗೆ ಅಗೌರವ ಸಂಬಂಧಗಳಲ್ಲಿ ಅಸಹನೆ ಅಸಹಿಷ್ಣುತೆಗಳು ಸ್ಯೆ ಕೊರತೆ ಹುಟ್ಟುಹಾಕುತ್ತಿದೆ . ಹಕ್ಕುಗಳು ಜವಾಬ್ದಾರಿಗಳೂ ಇರದ ಜೀವನ ದೀರ್ಘಕಾಲದಲ್ಲಿ ಮಾನಸಿಕ ಸಮಸ್ಯೆಗಳನ್ನು ತರುತ್ತದೆ ಇಲ್ಲಿ ದೈಹಿಕ ಹೊಂದಾಣಿಕೆ ಹಾಗೂ ಭಾವನಾತ್ಮಕ ಅಂಶಗಳೇ ಮುಖ್ಯವಾಗಲಿ ಬೇರೆ ಉತ್ತಮ ಅಂಶಗಳು ಗೌಣವಾಗುತ್ತದೆ . ಸಾಮಾಜಿಕ ಬೇಜವಾಬ್ದಾರಿತನ ಯಾವುದೇ ಭದ್ರತೆ ಇಲ್ಲದ ಸಂಬಂಧಗಳು ಅಕ್ರಮ ಸಂತಾನಗಳಿಗೆ ಅನೈತಿಕತೆಗೆ ಮತ್ತಷ್ಟು ಎಡೆಮಾಡಿಕೊಡುತ್ತದೆ . ಸಾಮುದಾಯಿಕವಾಗಿ ಗೌರವ ಸ್ಥಾನಮಾನಗಳಿರದೆ ನೋವುಗಳನ್ನು ಉಂಟು ಮಾಡುತ್ತದೆ.  ಕಾನೂನುಬದ್ಧವಲ್ಲದ ಜನ್ಮ ಕೊಟ್ಟ ಮಕ್ಕಳು ಮತ್ತು ಅವರ ಬೆಳವಣಿಗೆಯಲ್ಲಿ ಅವರ ಮಾನಸಿಕ ಪರಿಸ್ಥಿತಿ ಇವುಗಳ ಬಗ್ಗೆ ಯೋಚಿಸುವಾಗ ಬರೀ ಸ್ವಾರ್ಥಪರತೆ ಕಾಮ ವಾಂಛೆಗಳೇ ಪ್ರಧಾನವಾದ ಈ ಸಂಬಂಧಗಳು ಸಾಧುವೇ ಅಗತ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ . ಭವ್ಯ ಪ್ರಾಚೀನ ಸಂಸ್ಕೃತಿಯ ನಮ್ಮ ದೇಶ ತನ್ನ ಕುಟುಂಬ ವ್ಯವಸ್ಥೆ ಪರಸ್ಪರ ಮಮತೆ ವಾತ್ಸಲ್ಯದಿಂದಲೇ ಪ್ರಪಂಚದಲ್ಲಿ ಪ್ರಸಿದ್ಧ . ಮೌಢ್ಯ ಅಂಧಾನುಕರಣೆಯಿಂದ ಸಚ್ಚರಿತೆಯ ಎಳನೀರನ್ನು ಬಿಟ್ಟು ಕೊಚ್ಚೆ ಗುಂಡಿನ ಕಲುಷಿತ ನೀರಿಗೆ ಆಸೆ ಪಡುವುದು ತರವೇ?   *******************************************

ಲಿವಿಂಗ್ ಟುಗೆದರ್ Read Post »

ಇತರೆ, ಜೀವನ

ಯೋಗ್ಯತೆಯಲ್ಲ ಯೋಗ ಬೇಕು

ಲೇಖನ ಯೋಗ್ಯತೆಯಲ್ಲ ಯೋಗ ಬೇಕು ಜ್ಯೋತಿ ಬಾಳಿಗಾ “ಯಾಕೆ ಒಳ್ಳೆ ಇಡ್ಲಿ ಹಿಟ್ಟು ಊದಿಕೊಂಡಹಾಗೆ ಮುಖ ಮಾಡಿ ಕೂತಿದ್ದೀಯಾ… ಏನಾಯಿತು ?” ಎಂದು ನನ್ನವರು ಕೇಳಿದಾಗ “ಯಾಕೋ ಮನಸ್ಸು ಸರಿಯಿಲ್ಲ ಕಣ್ರಿ.. ಅಳು ಬರುವ ಹಾಗಿದೆ…” ಎಂದು ನನ್ನ ಮನದ ಬೇಗುದಿಯನ್ನು ತಿಳಿಸದೇ ಮಾತನ್ನು ತಳ್ಳಿ ಹಾಕಿದೆ. “ವಿಷಯ ಏನೂಂತ ಹೇಳಿದ್ರೆ ನನಗೂ ಗೊತ್ತಾಗುತ್ತದೆ, ಅದು ಬಿಟ್ಟು ಮನಸ್ಸು ಸರಿಯಿಲ್ಲಾಂತ ಹೇಳಿದ್ರೆ ಹೇಗೆ …? ಇಡೀ ದಿನ ಓದುವುದು, ಬರೆಯೋದೆ ಆಯಿತು. ಯೋಚನೆ ಮಾಡಿ ಮಾಡಿ ತಲೆ ಹಾಳು ಮಾಡಿಕೊಳ್ಳೋದು ಅಲ್ಲದೇ ನಮ್ಮ ತಲೆನೂ ಕೆಡಿಸ್ತಾ ಇದ್ದೀಯಾ…” ಎಂದು ಹರಿಹಾಯ್ದರು. ಯಾವಾಗ ನಾನು ಸಪ್ಪಗಾದರೂ, ಅದರ‌ ನೇರ ಹೊಣೆ ನನ್ನ ಬರವಣಿಗೆಯ ಮೇಲೆ ಹಾಕುತ್ತಾರೆ. ಕೊನೆಗೆ ಬರೆಯೋದು ನಿಲ್ಲಿಸು ಎಂದು ನನ್ನ ಬುಡಕ್ಕೆ ಬರುತ್ತೆ ಮಾತು. ಅದಕ್ಕೆ ನನ್ನವರಿಗೆ ವಿಷಯ ಏನೂಂತ ಹೇಳುವ ಮನಸ್ಸು ಮಾಡಿದೆ. “ಅಲ್ಲಾರೀ‌… ಹೆಣ್ಣು ಮಕ್ಕಳು ಆಗದೇ ಇರೋದು ನಮ್ಮ ತಪ್ಪಾ ? ಹೆಣ್ಣು ಮಕ್ಕಳು ಮನೆಯ ನಂದಾದೀಪ. ಮನೆಗೊಂದು ಕಳೆ ಹೀಗೆ ಏನಾದರೂ ಪೋಸ್ಟ್ ಹಾಕಲಿ ಬೇಡ ಅನ್ನಲ್ಲ ನಾನು. ಆದರೆ ಹೆಣ್ಣುಮಕ್ಕಳು ಹುಟ್ಟಬೇಕು ಅಂದ್ರೆ ಪುಣ್ಯ ಮಾಡಿರಬೇಕಂತೆ, ಯೋಗ್ಯತೆ ಇದ್ದವರಿಗೆ ಮಾತ್ರ ಹೆಣ್ಣುಮಕ್ಕಳು ಹುಟ್ಟುತ್ತವೆಯಂತೆ … ಹೀಗೆ ಪೋಸ್ಟ್ ಹಾಕಿ ಹೊಟ್ಟೆ ಉರಿಸುತ್ತಾ ಇದ್ದಾರೆ‌ ಕಣ್ರಿ…” ಎಂದು ಗೋಳಿಟ್ಟೆ. “ಮಕ್ಕಳು ಹುಟ್ಟುವುದೇ ಒಂದು ಅದೃಷ್ಟ ಕಣೆ. ಹೆಣ್ಣಾಗಲಿ, ಗಂಡಾಗಲಿ ದೇವರು ಕೊಟ್ಟ ವರದಂತೆ ಸ್ವೀಕರಿಸಿ ಯೋಗ್ಯ ರೀತಿಯಲ್ಲಿ ಬೆಳಸಬೇಕೆ ಹೊರತು ಪಾಪ, ಪುಣ್ಯ ಎಂದು ಜಿದ್ದಿಗೆ ಬಿದ್ದವರ ಹಾಗೆ ಪೋಸ್ಟ್ ಹಾಕುವುದಲ್ಲ. ಒಮ್ಮೆ ಸುತ್ತಮುತ್ತಲಿನ ಜನರನ್ನು ನೋಡು, ಹೆಣ್ಣೋ, ಗಂಡೋ ಒಂದು ಮಗು ಹುಟ್ಟಿದರೆ ಸಾಕೂಂತ ಕಾಯುವ ಜೀವಗಳು ಎಷ್ಟಿವೆ ಗೊತ್ತಿಲ್ವಾ ? ಗಂಡು ಮಕ್ಕಳು ಹುಟ್ಟಿ ಏನು ತೊಂದರೆಯಾಗಿದೆ ನಿನಗೆ ? ಒಂದು ವೇಳೆ ಹೆಣ್ಣು ಮಕ್ಕಳೇ ಹುಟ್ಟಿದ್ರೆ ಏನ್ ಸಾಧನೆ ಮಾಡಿಸುತ್ತಿದ್ದೆ ನೀನು..? ನಿನ್ನ ಗಂಡು ಮಕ್ಕಳು ಯಾರಿಗೆ ಯಾವುದಕ್ಕೆ ಕಡಿಮೆ ಇದ್ದಾರೆ ಹೇಳು..? ” ಎಂದು  ಪ್ರಶ್ನೆಗಳ ಸುರಿಮಳೆ ಸುರಿಸಿದರು. ನಾನು ಮೌನವಾಗಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. “ಮಕ್ಕಳು ತಂದೆ ತಾಯಿಯ ಕಷ್ಟ ಅರಿತುಕೊಂಡು ಅವರಿಗೆ ವಿಧೇಯರಾಗಿರಬೇಕೆ ಹೊರತು ಹೇಳಿದ ಮಾತು ಕೇಳದೆ, ಅಷ್ಟೇನೂ ಚೆನ್ನಾಗಿಲ್ಲದ ತಂದೆಯ ಆರ್ಥಿಕ ಸ್ಥಿತಿಯನ್ನು ನೋಡಿದರೂ ಕೂಡ ಹಠಮಾಡಿ ತಮಗೆ ಬೇಕಾದದ್ದನ್ನು ತರಿಸಿಕೊಳ್ಳುವವರು, ಅಮ್ಮನಿಗೆ ಆರೋಗ್ಯ ಸರಿಯಿಲ್ಲದಿದ್ದರೂ ಕಿಂಚಿತ್ತೂ ಸಹಾಯ ಮಾಡದೇ ಬರೀ ಅಲಂಕಾರ ಮಾಡಿಕೊಂಡು ಷೋಕೇಷಿನಲ್ಲಿ ಇಡುವ ಬೊಂಬೆ ತರಹ ಇದ್ದರೆ ಏನು ಪ್ರಯೋಜನ ಹೇಳು…? ಅವತ್ತು ಪರಿಚಯದವರ ಮನೆಗೆ ಹೋದಾಗ ನೀನೆ ನೋಡಲಿಲ್ವಾ? ಅವರ ಮನೆಯ ಪರಿಸ್ಥಿತಿ ನೋಡಿ ಅರ್ಥಮಾಡಿಕೊಳ್ಳದೆ ಹೊಸ ಮೊಬೈಲ್ ಬೇಕೂಂತ ಅಷ್ಟು ದೊಡ್ಡ ಹುಡುಗಿ ಹೇಗೆ ಹಠ ಮಾಡ್ತಿದ್ದಳು….”ಎಂದು ವಾಸ್ತವದ ಅರಿವು ಮಾಡಿಸಿ ಸಮಾಧಾನ ಮಾಡಿದರು. “ಹೌದು ರೀ… ನಾನು ಇಷ್ಟು ದಿನದಿಂದಸುಮ್ಮನೆ ತಲೆಕೆಡಿಸಿಕೊಂಡಿದ್ದೆ..” ಎಂದು ಹೇಳಿದೆ. “ಹೆಣ್ಣೋ, ಗಂಡೋ ಆರೋಗ್ಯವಂತ , ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವಂತ ಮಕ್ಕಳು ಮುಖ್ಯ ಕಣೆ..”  ಎಂದು ಬೆನ್ನು ತಟ್ಟಿ ಹೋದರು. ನನಗೆ ನನ್ನ ಮಕ್ಕಳ ಬಾಲ್ಯದ ನೆನಪುಗಳು ಕಾಡಲು ಶುರುವಾದವು. ಮೊದಲನೆಯ ಮಗು ಹೆಣ್ಣಾಗಬೇಕೂಂತ ತುಂಬಾ ಆಸೆಯಿಂದ ಇದ್ದೆ. ಗಂಡು ಮಗು ಆದಾಗ ಆಸೆ ನಿರಾಸೆಯಾಗಿತ್ತು. ಗಂಡೋ ಹೆಣ್ಣೋ ಮಗು ಹುಟ್ಟಿತಲ್ವಾ ? ಸಂತೋಷ ಪಡು ಎಂದು ಮನೆಯವರೆಲ್ಲಾ ಹೇಳಿದರೂ ಮನಸ್ಸಿನಲ್ಲಿ ಹೆಣ್ಣಾಗಲಿಲ್ಲ ಎಂಬ ಕೊರಗು ಇದ್ದೆ ಇತ್ತು. ಅವನ ಹುಡುಗಾಟಿಕೆಯ ಬುದ್ಧಿಗೋ, ನನಗೆ ಮಗುವನ್ನು ನೋಡಿಕೊಳ್ಳಲು ತಿಳಿಯದೆಯೋ ದೊಡ್ಡ ಮಗ ನನ್ನಿಂದ ಏಟು, ಬೈಗುಳ ಸರಿಯಾಗಿ ತಿನ್ನುತ್ತಿದ್ದ. ನನಗೆ ಅವನಿಗೆ ತರಕಾರಿ ತಿನ್ನಿಸುವ ಹುಚ್ಚು. ಅವನಿಗೆ ತರಕಾರಿ ಅಂದರೆ ಗಂಟಲಿನಲ್ಲಿ ಇಳಿಯುತಿರಲಿಲ್ಲ. ಹೇಗಾದರೂ ಮಾಡಿ ತಿನ್ನಿಸಬೇಕೆಂದು ಬೇಯಿಸಿ ಮಿಕ್ಸಿಯಲ್ಲಿ ಹಾಕಿಯೋ ಹೊಸ ಹೊಸ ಸಂಶೋಧನೆ ಮಾಡಿಯೋ ಅವನಿಗೆ ತರಕಾರಿಯನ್ನು ತಿನ್ನಿಸುತ್ತಿದ್ದೆ. ನನ್ನ ಒತ್ತಾಯಕ್ಕೋ, ಹೆದರಿಕೆಗೋ ಆ ಕ್ಷಣ ತಿಂದರೂ ಸ್ವಲ್ಪ ಹೊತ್ತಿನಲ್ಲಿ ಎಲ್ಲಾ ವಾಂತಿ ಮಾಡುತ್ತಿದ್ದ. ಹೀಗೆ ವಾಂತಿ ಬಳಿದು ಬಳಿದು ಸಾಕಾಗಿ ಕೊನೆಗೆ ನಾನು ಅಲ್ಲಲ್ಲಿ ಬಕೆಟ್ ಇಡೋಕೆ ಶುರು ಮಾಡಿದೆ. ವಾಂತಿ ಬಂದ ಕೂಡಲೇ ಬಕೆಟ್ನಲ್ಲೇ ವಾಂತಿ ಮಾಡಬೇಕೂಂತ ಕಲಿಸಿದ್ದೆ. ತರಕಾರಿ ತಿಂದ ಕೂಡಲೇ ಬಕೇಟ್ ನಲ್ಲಿ ವಾಂತಿ ಮಾಡೋದು ಮಾಡ್ತಿದ್ದ. ಆಮೇಲೆ ನಾನು ತೊಳೆದಿಡುವುದು ಹೀಗೆ ದಿನಾ ಹೋಗ್ತಾ ಇತ್ತು. ಯಾವಾಗ ನಾನು ಮತ್ತೊಮ್ಮೆ ತಾಯಿಯಾಗುವೆನೆಂದು ತಿಳಿಯಿತೋ ಎರಡನೆಯ ಮಗು ಹೆಣ್ಣಾಗಲಿ ಎಂದು ಆಶಿಸಿದ್ದೆ. ಮೊದಲನೆಯ ಸಲ ಇರುವಾಗ ಇದ್ದ ಗರ್ಭಿಣಿಯ ಲಕ್ಷಣ ಕಾಣಿಸದೇ ಇದ್ದಾಗ ನನ್ನ ಆಸೆ ಹೆಚ್ಚಾಯಿತು. ಮೊದಲನೆ ಗರ್ಭಾವಸ್ಥೆಯಲ್ಲಿ ನನಗೆ ಅಷ್ಟೊಂದು ವಾಂತಿ ಇರಲಿಲ್ಲ. ಎರಡನೆಯ ಗರ್ಭಾವಸ್ಥೆಯಲ್ಲಿ ನನಗೆ ವಾಂತಿ ಶುರುವಾಯಿತು. ಅನ್ನ ಬಿಡಿ, ನೀರು ಕುಡಿದರೂ ವಾಂತಿ ಬರುತಿತ್ತು. ನಾನು ಓಡಿ ಹೋಗಿ ಬಾತ್ ರೂಮಿನಲ್ಲಿ ವಾಂತಿ ಮಾಡಿ ಬರುತ್ತಿದ್ದೆ. ನನ್ನ ವಾಂತಿ ನೋಡಿ ನೋಡಿ ನನ್ನ ಮಗ ಒಂದು ದಿನ ಬಕೆಟ್ ಹಿಡಿದು ನಿಂತಿದ್ದಾನೆ. ಅಮ್ಮಾ… ಇದರಲ್ಲಿ ವಾಂತಿ ಮಾಡು ಎಂದು ಬಕೆಟ್ ಕೈಯಲ್ಲಿ ಕೊಟ್ಟ. ನನಗೂ ಓಡಿ ಓಡಿ ಸುಸ್ತಾಗಿದ್ದ ಕಾರಣ ಬಕೆಟ್ ನಲ್ಲಿ ವಾಂತಿ ಮಾಡಿ ಮಲಗಿದೆ. ಸ್ವಲ್ಪ ಹೊತ್ತಿನಲ್ಲಿ ಸದ್ದು ಕೇಳಿ ಎಚ್ಚೆತ್ತಾಗ ಮಗನ ಕೈಯಲ್ಲಿ ಕ್ಲೀನ್ ಮಾಡಿದ ಬಕೆಟ್ ಇದೆ. ಇವರು ಬಂದಿದ್ರಾ ಎಂದು ನೋಡಿದರೆ ಹಾಕಿದ ಲಾಕ್ ಹಾಗೇ ಇದೆ. ಆರೋಗ್ಯ ಸರಿಯಿಲ್ಲಾಂದ್ರೆ ಒಂದು ತೊಟ್ಟು ನೀರು ಕೊಡೋದಕ್ಕೂ‌ ಹೆಣ್ಣಿನ ಗತಿಯಿಲ್ಲ ಎಂದು ಎಷ್ಟೋ ಸಲ ಗಂಡು ಮಗು ಹುಟ್ಟಿದಾಗ ಬೇಸರ ಮಾಡಿಕೊಂಡಿದ್ದೆ. ಆದರೆ ನನ್ನೆಲ್ಲಾ ಮಾತುಗಳನ್ನು ಹಿಂಪಡೆಯುವಂತೆ ಮಾಡಿದ್ದ ನನ್ನ ಮಗ. ಕ್ಲೀನ್ ಆದ ಬಕೇಟ್ ನೋಡಿದಾಗನನಗಂತೂ ನಿಜವಾಗಿ ಅಳುನೇ ಬಂದು ಬಿಡ್ತು. ನನ್ನ ಕಂದನಿಗೆ ಅವಾಗ ಬರಿ ಎರಡುವರೆ ವರ್ಷ…!! ಅವನ ಗುಣವನ್ನು ‌ನೋಡಿದ ಮೇಲೆ ಮತ್ತೆಂದೂ ಹೆಣ್ಣು ಹುಟ್ಟಲಿಲ್ಲ ಎಂದು ದುಃಖವನ್ನು ಪಡಲಿಲ್ಲ ನಾನು. ಎರಡನೆಯ ಮಗುವೂ ಗಂಡು ಮಗುವಾದಾಗ ಸಂಭ್ರಮದಿಂದ ಸ್ವಾಗತಿಸಿದೆ. ನನಗಿನ್ನೂ ನೆನಪಿದೆ. ಎಂಟು ವರ್ಷದ ಹಿಂದೆ ನನಗೆ ಆರೋಗ್ಯ ಸಮಸ್ಯೆಯಿಂದವೈದ್ಯರು ಬೆಡ್ ರೆಸ್ಟ್ ಹೇಳಿದ್ದರು. ಇವರು ಅಡುಗೆಯನ್ನು ಮಾಡಿಕೊಟ್ಟು ತೋಟದ ಉಸ್ತುವಾರಿ‌ ನೋಡಿಕೊಳ್ಳಲು ಹೋದಾಗ ಇಬ್ಬರೂ ಗಂಡು ಮಕ್ಕಳೇ ನನ್ನ ಅಪ್ಪ ಅಮ್ಮನಂತೆ ನೋಡಿಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಅಡುಗೆಯಿಂದ ಹಿಡಿದು ಮನೆಯ ಸ್ವಚ್ಚತೆಯ ಕೆಲಸದಲ್ಲೂ ಜೊತೆಗೂಡುತ್ತಾರೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಗಂಡು ಮಕ್ಕಳನ್ನು ಹೆಡೆದವರಿಗೆ ನೋವು ಕೊಡುವ ಪೋಷಕರೇ ಈಗ ಹೇಳಿ ಹೆಣ್ಣು ಮಕ್ಕಳು ಹುಟ್ಟಿದರೆ ಭಾಗ್ಯವೋ..? ಗಂಡೋ, ಹೆಣ್ಣೋ ನಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟು ಯೋಗ್ಯ ರೀತಿಯಲ್ಲಿ ಬೆಳಸುವುದು ಉತ್ತಮವೋ…?! *************************************************

ಯೋಗ್ಯತೆಯಲ್ಲ ಯೋಗ ಬೇಕು Read Post »

ಇತರೆ

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ

ಲೇಖನ ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ    – ಡಾ. ಎಸ್.ಬಿ. ಬಸೆಟ್ಟಿ ಬಹುಶಃ ಭಾರತಕ್ಕಿಂತ ಹೆಚ್ಚು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವ ಹೊಸ ರಾಷ್ಟ್ರವೂ ಎದುರಿಸಿರಲಿಕ್ಕಿಲ್ಲ. ಬ್ರಿಟಿಷರು ಆಖ್ಯೇರಾಗಿ ಉಪಖಂಡದ ಮೇಲಿನ ಹತೋಟಿಯನ್ನು ತ್ಯಜಿಸಿದಾಗ ಅವರು ತಮ್ಮ ಬೆನ್ನಿಗೆ ಒಂದಲ್ಲ ಎರಡು ರಾಷ್ಟ್ರಗಳನ್ನು ಬಿಟ್ಟು ಹೋಗಿದ್ದರು. ಒಂದು ಹೊಸ ರಾಷ್ಟ್ರವಲ್ಲ   ಎರಡು, ಭಾರತ ಮತ್ತು ಪಾಕಿಸ್ತಾನ. ಅಲ್ಪಸಂಖ್ಯಾತರಾದ ಮುಸ್ಲಿಮರ ಸ್ವದೇಶವಾಗಿ ಪಾಕಿಸ್ತಾನವನ್ನು ಸೃಷ್ಠಿಸಲಾಯಿತು. ಈ ಕೋಮುಗಲಭೆಗಳು ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡವು. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ಗಡಿದಾಟಿ ಬಂದಿದ್ದು ಸುಮಾರು ಎಂಬತ್ತು ಲಕ್ಷ ನಿರಾಶ್ರಿತರನ್ನು ಸಲಹಬೇಕಾದ ಕೋಪ ಹತಾಶೆಗಳಲ್ಲಿ ಭಾರತ ಸರ್ಕಾರ ತೃಪ್ತಿ ಪಟ್ಟು ಕೊಳ್ಳಬೇಕಾಯಿತು. ಇದರ ಜೊತೆಗೆ ಹಿಂಸಾಚಾರದ ಹೊಸ ಅಲೆ. ಒಂದು ಕಡೆ ಹಿಂದೂಗಳು ಮತ್ತು ಸಿಖ್ಖರ ನಡುವೆ ಮತ್ತೊಂದು ಕಡೆ ಭಾರತದಲ್ಲೇ ಉಳಿಯಲು ನಿಶ್ಚಯಿಸಿದ ಮುಸಲ್ಮಾನರುಗಳು ಮತ್ತು ಹಿಂದೂಗಳ ನಡುವೆ ಹಿಂಸಾಚಾರ ಭುಗಿಲೆದ್ದಿತು.ಇಂಥದ್ದೇ ಇನ್ನೊಂದು ಅನಿಷ್ಟಕಾರಿ ಸಮಸ್ಯೆಯೆಂದರೆ ರಾಜಮಹಾರಾಜರ ಆಳ್ವಿಕೆಯ ಸಂಸ್ಥಾನಗಳು ಬ್ರಿಟಿಷರು ಉಪಖಂಡದ ಮೂರನೇ ಎರಡರಷ್ಟು ಭಾಗದ ಮೇಲೆ ನೇರ ಹತೋಟಿ ಹೊಂದಿದ್ದರು. ಸ್ವಾತಂತ್ರ್ಯ ಬಂದ ನಂತರ ಹೊಸ ರಾಷ್ಟ್ರಗಳೊಂದಿಗೆ ವಿಲೀನ ಹೊಂದುವಂತೆ ಸಂಸ್ಥಾನಗಳ ರಾಜರುಗಳ ಮನ ಒಲಿಸಬೇಕಾಯಿತು. ಆಗ್ರಹ ಪಡಿಸಬೇಕಾಗಿ ಬಂತು. ಈ ಪ್ರಕ್ರಿಯೆ ಎರಡು ವರ್ಷಗಳಿಗಳೂ ಹೆಚ್ಚು ಕಾಲ ನಡೆಯಿತು. ನಿರಾಶ್ರಿತರನ್ನು ಸಂತೈಸಬೇಕಾಗಿತ್ತು. ರಾಜರ ಸಂಸ್ಥಾನಗಳನ್ನು ವಿಲೀನ ಗೊಳಿಸಿಕೊಳ್ಳಬೇಕಿತ್ತು. ಇವೆರಡು ತತ್‌ಕ್ಷಣದ ಸಮಸ್ಯೆಗಳಾಗಿದ್ದವು. ಇದರ ಜೊತೆಗೆ ಹೊಸ ರಾಷ್ಟ್ರ ದ ಭವ್ಯ ಭವಿಷ್ಯವನ್ನು ರೂಪಿಸಬೇಕಾಗಿತ್ತು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವೆ ಐಕ್ಯತೆ ಸಾಧಿಸುವ ನಿಟ್ಟಿನಲ್ಲಿ ವಹಿಸಿದ ಪಾತ್ರ ಅತ್ಯಂತ ಪ್ರಶಂಸನೀಯವಾದುದಾಗಿದೆ. ಗಾಂಧೀಜಿಯವರು ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಈ ಬಗ್ಗೆ ಪ್ರಯೋಗ ಕೈಗೊಂಡಿದ್ದು, ಭಾರತದಲ್ಲಿ ಹಿಂದೂ ಮುಸ್ಲಿಂರ ಐಕ್ಯತೆ ಸಾಧಿಸಲು ಅವರಿಗೆ ಪ್ರೇರಣೆ ದೊರಕಿದಂತಾಯಿತು. ಅಂತೆಯೇ ಲಕ್ನೋ ಒಪ್ಪಂದವು ಸಹ ಇವರಿಗೆ ಒಂದು ರೀತಿ ಸಹಕಾರಿಯಾಯಿತು. ಭಾರತೀಯ ರಾಷ್ಟ್ರೀ ಯ ಕಾಂಗ್ರೆಸ್‌ನಲ್ಲಿದ್ದ ಅನೇಕ ಮುಸ್ಲಿಂರು ಇವರಿಗೆ ಹತ್ತಿರವಾಗತೊಡಗಿದರು.  ಇವರು ೧೯೦೯ರ ತರುವಾಯ ಈ ಎರಡೂ ಸಮುದಾಯಗಳ ನಡುವಿನ ಐಕ್ಯತೆಯ ಮೂಲಕ ದೇಶದ ಪ್ರಗತಿ ಬಗ್ಗೆ ಚಿಂತನೆ ನಡೆಸಲಾರಂಭಿಸಿದರು.  ಇವರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು. ಗಾಂಧೀಜಿಯವರು ಹಿಂದೂ-ಮುಸ್ಲಿಮರ ನಡುವಿನ ಐಕ್ಯತೆಯನ್ನು ಸಾಧಿಸುವ ಪರಿಸ್ಥಿತಿಯನ್ನು ಗಮನಿಸಿದಾಗ ಅವರು ಈ ರೀತಿ ಹೇಳಿರುವರು “ತೊಂದರೆಗಳಲ್ಲಿ ತೊಂದರೆ” ಹಾಗೂ ಇದರಿಂದ ತೀವ್ರ ಅಸಮಾಧಾನಗೊಂಡರು. ಗಾಂಧೀಜಿಯವರ ಪ್ರಯತ್ನದ ಫಲವಾಗಿ ೧೯೧೯ ರಿಂದ ೧೯೨೨ರ ವರೆಗೆ ಈ ಎರಡೂ ಕೋಮುಗಳ ನಡುವೆ ಐಕ್ಯತೆ ಸಾಧಿಸಲಾಗಿತ್ತು. ಈ ದೇಶದ ಸ್ವಾತಂತ್ರ್ಯ ಕ್ಕೆ ಹಿಂದೂ ಮುಸ್ಲಿಂರ ಐಕ್ಯತೆ ಅನಿವಾರ್ಯವೆಂದು ಅವರು ಸಾರಿದರು. ೧೫ನೇ ಆಗಸ್ಟ್ ೧೯೪೭ ರಂದು ಭಾರತ ಬ್ರಿಟಿಷ್ ಕಾಮನ್‌ವೆಲ್ತ್ಗೆ ಸೇರಿದ ಸ್ವತಂತ್ರ ರಾಷ್ಟ್ರ ದ ಸ್ಥಾನಮಾನವನ್ನು ಪಡೆಯಿತು. ೨೬ನೇ ಜನೇವರಿ ೧೯೫೦ ರಂದು ಸಂವಿಧಾನದತ್ತವಾಗಿ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ಅವಧಿಯಲ್ಲಿ ಹೊಸ ರಾಷ್ಟ್ರದ ಏಕತೆ ದಾರುಣವಾದ ಪರೀಕ್ಷೆಗಳಿಗೊಳಪಟ್ಟಿತು. ನಿರಾಶ್ರಿತರ ಸಮಸ್ಯೆ, ರಾಜರ ಸಂಸ್ಥಾನಗಳ ಸಮಸ್ಯೆ ಹೀಗೆ ಹಲವಾರು ಗಂಭೀರ ಸಮಸ್ಯೆಗಳ ಅಗ್ನಿ ದಿವ್ಯವನ್ನು ಹೊಸ ರಾಷ್ಟ್ರ ಎದುರಿಸಬೇಕಾಗಿ ಬಂತು. ೧೯೪೭ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಸಶಸ್ತ್ರ ಹೋರಾಟ ನಡೆಸಬೇಕಾಯಿತು. ೧೯೪೮ ರ ಮಾರ್ಚ್ನಲ್ಲಿ ಕಮ್ಯುನಿಷ್ಟ್ ಪಕ್ಷ ಚೀನಾದ ಮಾದರಿಯಲ್ಲಿ ಏಕಪಕ್ಷ ಸರ್ಕಾರದ ವ್ಯವಸ್ಥೆಯನ್ನು ಜಾರಿಗೆ ತರುವ ನಿರೀಕ್ಷೆಯಿಂದ ದಂಗೆ ಎದ್ದಿತು. ನಾಗಾಗಳಲ್ಲಿ ಬಹುಸಂಖ್ಯಾತ ಜನರು ಹಾಗೂ ಮಣಿಪುರಿ ಜನರು ಭಾರತ ಒಕ್ಕೂಟಕ್ಕೆ ಸೇರಲೊಪ್ಪದೆ ತಕರಾರು ತೆಗೆದಿದ್ದರು. ಇದರಿಂದ ಈಶಾನ್ಯ ಗಡಿ ಪ್ರದೇಶಗಳಲ್ಲಿ ಅಸಮಾಧಾನ ಭುಗಿಲೆದ್ದಿತು. ೧೨ನೇ ನವೆಂಬರ್ ೧೯೪೭ ರಂದು ಮಹಾತ್ಮ ಗಾಂಧಿಯವರು ನಡೆಸಿದ ಪ್ರಾರ್ಥನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು. ಇದು ಸ್ವತಂತ್ರ ಭಾರತದ ಮೊದಲ ದೀಪಾವಳಿ. ಸಹೋದರರು ಮತ್ತು ಸಹೋದರಿಯರು. ಇಂದು ದೀಪಾವಳಿ ಮತ್ತು ಈ ಸಂದರ್ಭದಲ್ಲಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಇದು ಹಿಂದೂ ಕ್ಯಾಲೆಂಡರ್ನಲ್ಲಿ ಉತ್ತಮ ದಿನವಾಗಿದೆ. ವಿಕ್ರಮ್ ಸಂವತ್ಸರ ಪ್ರಕಾರ, ನಾಳೆ ಗುರುವಾರದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಪ್ರತಿವರ್ಷ ದೀಪಾವಳಿಯನ್ನು ಏಕೆ ಪ್ರಕಾಶದೊಂದಿಗೆ ಆಚರಿಸಲಾಗುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ರಾಮ ಮತ್ತು ರಾವಣನ ನಡುವಿನ ಮಹಾ ಯುದ್ಧದಲ್ಲಿ, ರಾಮನು ಒಳ್ಳೆಯ ಶಕ್ತಿಗಳನ್ನು ಮತ್ತು ರಾವಣನು ದುಷ್ಟ ಶಕ್ತಿಗಳನ್ನು ಸಂಕೇತಿಸಿದನು. ರಾಮನು ರಾವಣನನ್ನು ಗೆದ್ದನು ಮತ್ತು ಈ ಗೆಲುವು ಭಾರತದಲ್ಲಿ ರಾಮರಾಜ್ಯವನ್ನು ಸ್ಥಾಪಿಸಿತು. ಆದರೆ ಅಯ್ಯೋ! ಇಂದು ಭಾರತದಲ್ಲಿ ರಾಮರಾಜ್ಯ ಇಲ್ಲ. ಹಾಗಾದರೆ ನಾವು ದೀಪಾವಳಿಯನ್ನು ಹೇಗೆ ಆಚರಿಸಬಹುದು? ಒಳಗೆ ರಾಮನಿರುವವರು ಮಾತ್ರ ಈ ವಿಜಯವನ್ನು ಆಚರಿಸಬಹುದು. ಏಕೆಂದರೆ, ದೇವರು ಮಾತ್ರ ನಮ್ಮ ಆತ್ಮಗಳನ್ನು ಬೆಳಗಿಸಬಲ್ಲನು ಮತ್ತು ಆ ಬೆಳಕು ಮಾತ್ರ ನಿಜವಾದ ಬೆಳಕು. ಇಂದು ಹಾಡಿದ ಭಜನೆಯು ದೇವರನ್ನು ನೋಡುವ ಕವಿಯ ಬಯಕೆಯನ್ನು ಒತ್ತಿಹೇಳುತ್ತದೆ. ಜನಸಂದಣಿಯು ಕೃತಕ ಬೆಳಕನ್ನು ನೋಡಲು ಹೋಗುತ್ತದೆ ಆದರೆ ಇಂದು ನಮಗೆ ಬೇಕಾಗಿರುವುದು ನಮ್ಮ ಹೃದಯದಲ್ಲಿ ಪ್ರೀತಿಯ ಬೆಳಕು. ನಾವು ಪ್ರೀತಿಯ ಬೆಳಕನ್ನು ಒಳಗೆ ಬೆಳಗಿಸಬೇಕು. ಆಗ ನಾವು ಅಭಿನಂದನೆಗಳಿಗೆ ಅರ್ಹರು. ಇಂದು ಸಾವಿರಾರು ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಿಂದೂ, ಸಿಖ್ ಅಥವಾ ಮುಸ್ಲಿಂ ಆಗಿರುವ ಪ್ರತಿಯೊಬ್ಬ ರೋಗಿಯೂ ನಿಮ್ಮ ಸ್ವಂತ ಸಹೋದರ ಅಥವಾ ಸಹೋದರಿ ಎಂದು ನೀವು, ನಿಮ್ಮ ಹೃದಯದ ಮೇಲೆ ಕೈ ಹಾಕಿ ಹೇಳಬಹುದೇ? ಇದು ನಿಮಗಾಗಿ ಪರೀಕ್ಷೆ. ರಾಮ ಮತ್ತು ರಾವಣ ಒಳ್ಳೆಯ ಮತ್ತು ಕೆಟ್ಟ ಶಕ್ತಿಗಳ ನಡುವಿನ ನಿರಂತರ ಹೋರಾಟದ ಸಂಕೇತಗಳಾಗಿವೆ. ನಿಜವಾದ ಬೆಳಕು ಒಳಗಿನಿಂದ ಬರುತ್ತದೆ. ಗಾಯಗೊಂಡ ಕಾಶ್ಮೀರವನ್ನು ನೋಡಿದ ಪಂಡಿತ್ ಜವಾಹರಲಾಲ್ ನೆಹರು ಎಷ್ಟು ದುಃಖದ ಹೃದಯದಿಂದ ಮರಳಿದ್ದಾರೆ! ನಿನ್ನೆ ಮತ್ತು ಇಂದು ಮಧ್ಯಾಹ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅವರು ನನಗೆ ಬಾರಾಮುಲಾದಿಂದ ಕೆಲವು ಹೂವುಗಳನ್ನು ತಂದಿದ್ದಾರೆ. ಪ್ರಕೃತಿಯ ಅಂತಹ ಉಡುಗೊರೆಗಳನ್ನು ನಾನು ಯಾವಾಗಲೂ ಪ್ರೀತಿಸುತ್ತೇನೆ. ಆದರೆ ಇಂದು ಲೂಟಿ, ಅಗ್ನಿಸ್ಪರ್ಶ ಮತ್ತು ರಕ್ತಪಾತವು ಆ ಸುಂದರ ಭೂಮಿಯ ಸೌಂದರ್ಯವನ್ನು ಹಾಳು ಮಾಡಿದೆ. ಜವಾಹರಲಾಲ್ ಜಮ್ಮುವಿಗೂ ಹೋಗಿದ್ದರು. ಅಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಅವರ ಸಲಹೆಯನ್ನು ಕೋರಿದ ಶ್ರೀ ಶಮಲ್ದಾಸ್ ಗಾಂಧಿ ಮತ್ತು ಧೇಬರ್ಭಾಯ್ ಅವರ ಕೋರಿಕೆಯ ಮೇರೆಗೆ ಸರ್ದಾರ್ ಪಟೇಲ್ ಜುನಗಡಗೆ ಹೋಗಬೇಕಾಗಿತ್ತು. ಜಿನ್ನಾ ಮತ್ತು ಭುಟ್ಟೋ ಇಬ್ಬರೂ ಕೋಪಗೊಂಡಿದ್ದಾರೆ ಏಕೆಂದರೆ ಭಾರತ ಸರ್ಕಾರ ತಮ್ಮನ್ನು ಮೋಸ ಮಾಡಿದೆ ಎಂದು ಭಾವಿಸಿ ಜುನಗಡವನ್ನು ಒಕ್ಕೂಟಕ್ಕೆ ಸೇರಿಸಲು ಒತ್ತಾಯಿಸುತ್ತಿದೆ. ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಸ್ಥಾಪಿಸುವ ಸಲುವಾಗಿ ಅವನ ಹೃದಯದಿಂದ ದ್ವೇಷ ಮತ್ತು ಅನುಮಾನವನ್ನು ಹೊರಹಾಕುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ನಿಮ್ಮೊಳಗಿನ ದೇವರ ಉಪಸ್ಥಿತಿಯನ್ನು ನೀವು ಅನುಭವಿಸದಿದ್ದರೆ ಮತ್ತು ನಿಮ್ಮ ಸಣ್ಣ ಆಂತರಿಕ ಜಗಳಗಳನ್ನು ಮರೆಯದಿದ್ದರೆ, ಕಾಶ್ಮೀರ ಅಥವಾ ಜುನಗಡದ ಯಶಸ್ಸು ನಿರರ್ಥಕವೆಂದು ಸಾಬೀತುಪಡಿಸುತ್ತದೆ. ಭಯದಿಂದ ಪಲಾಯನ ಮಾಡಿದ ಎಲ್ಲ ಮುಸ್ಲಿಮರನ್ನು ನೀವು ಮರಳಿ ಕರೆತರುವವರೆಗೂ ದೀಪಾವಳಿ ಆಚರಿಸಲಾಗುವುದಿಲ್ಲ. ಅಲ್ಲಿಂದ ಓಡಿಹೋದ ಹಿಂದೂಗಳು ಮತ್ತು ಸಿಖ್ಖರ ಜೊತೆ ಹಾಗೆ ಮಾಡದಿದ್ದರೆ ಪಾಕಿಸ್ತಾನವೂ ಬದುಕುಳಿಯುವುದಿಲ್ಲ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಬಗ್ಗೆ ನಾನು ಏನು ಮಾಡಬಹುದೆಂದು ನಾಳೆ ಹೇಳುತ್ತೇನೆ. ಗುರುವಾರದಿಂದ ಪ್ರಾರಂಭವಾಗುವ ಹೊಸ ವರ್ಷದಲ್ಲಿ ನೀವು ಮತ್ತು ಅಖಿಲ ಭಾರತ ಸಂತೋಷವಾಗಿರಲಿ. ದೇವರು ನಿಮ್ಮ ಹೃದಯವನ್ನು ಬೆಳಗಿಸಲಿ ಇದರಿಂದ ನೀವು ಪರಸ್ಪರ ಅಥವಾ ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಸೇವೆ ಸಲ್ಲಿಸಬಹುದು. ಜೈ ಹಿಂದ್ ಎಂದರೆ ಹಿಂದೂಗಳಿಗೆ ಜಯ ಮತ್ತು ಮುಸ್ಲಿಮರಿಗೆ ಸೋಲು ಎಂದಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮುಸ್ಲಿಮರು ಅದನ್ನು ಆ ಬೆಳಕಿನಲ್ಲಿ ತೆಗೆದುಕೊಳ್ಳುತ್ತಾರೆ ಏಕೆಂದರೆ ನಾವು ಅದನ್ನು ತಪ್ಪು ಬಳಕೆಗೆ ತಂದಿದ್ದೇವೆ ಮತ್ತು ಅವರಿಗೆ ಬೆದರಿಕೆ ಹಾಕಿದ್ದೇವೆ. ಇನ್ನೊಬ್ಬ ವ್ಯಕ್ತಿಯು ಕೂಗಿದ ಘೋಷಣೆಗಳನ್ನು ನಾವು ಕೇಳಿದಾಗ, ಇತರ ಸಹವರ್ತಿ ಜಗಳಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ, ಮತ್ತು ನಾವು ಸಹ ಅದಕ್ಕೆ ತಯಾರಾಗಲು ಪ್ರಾರಂಭಿಸುತ್ತೇವೆ. ನಾವು ಈ ರೀತಿ ಹೋರಾಡುತ್ತಿದ್ದರೆ ಮತ್ತು ಒಂದು ಸ್ಥಳಕ್ಕೆ ಮತ್ತೊಂದು ಸ್ಥಳಕ್ಕೆ ಪ್ರತೀಕಾರ ತೀರಿಸಿದರೆ, ರಕ್ತದ ನದಿಗಳು ಭಾರತದಾದ್ಯಂತ ಹರಿಯುತ್ತವೆ ಮತ್ತು ಇನ್ನೂ ಪ್ರತೀಕಾರದ ಮನೋಭಾವ ಕಡಿಮೆಯಾಗುವುದಿಲ್ಲ. ಹಿಂದೂಗಳು ಎಷ್ಟು ಪ್ರೀತಿಯಿಂದ ವರ್ತಿಸಬೇಕು ಎಂದರೆ ಒಬ್ಬ ಮುಸ್ಲಿಂ ಮಗು ಅವರ ಮಧ್ಯೆ ಬಂದರೂ ಸಹ, ಅವನನ್ನು ತೊಳೆದು ಸ್ವಚ್ಛಗೊಳಿಸಬೇಕು, ಅವನನ್ನು ಚೆನ್ನಾಗಿ ಧರಿಸಿ ಮತ್ತು ಅಂತಹ ಪ್ರೀತಿಯಿಂದ ಶವರ್ ಮಾಡಬೇಕು. ಇದು ಸಂಭವಿಸಿದಾಗ ಮಾತ್ರ ಮುಸ್ಲಿಮರು ಹಿಂದೂಗಳು ತಮ್ಮ ಸ್ನೇಹಿತರಾಗಿದ್ದಾರೆಂದು ಅರಿತುಕೊಳ್ಳುತ್ತಾರೆ. ಗಾಂಧೀಜಿಯವರು ಹಿಂದೂ ಮುಸ್ಲಿಂರಿಬ್ಬರೂ ಒಳಗೊಂಡ ಸಮಾನ ವೇದಿಕೆಯೊಂದನ್ನು ರೂಪಿಸಲು ಪ್ರಯತ್ನಿಸಿ ವಿಫಲರಾದರು. ಪಾಕಿಸ್ತಾನ ಸೃಷ್ಠಿಯಲ್ಲಿ ಮುಸ್ಲಿಂಲೀಗ್ ಸಫಲವಾಯಿತು. ಆದರೆ ಉತ್ತರ ಭಾರತ ಮತ್ತು ಪೂರ್ವ ಭಾರತದ ಬಹುತೇಕ ಪ್ರದೇಶಗಳಲ್ಲಿ ಸಂಭವಿಸಿದ ಹಿಂದೂ-ಮುಸ್ಲಿಮರ ರಕ್ತಸಿಕ್ತ ಗಲಭೆಗಳ ಫಲ ಈ ಪಾಕಿಸ್ತಾನ ವಿಭಜನೆ ನಂತರ ಲಕ್ಷಾಂತರ ಮಂದಿ ಮುಸ್ಲಿಂರು ಭಾರತದಲ್ಲೇ ಉಳಿಯಲು ನಿರ್ಧರಿಸಿದರು. ೧೫ನೇ ನವೆಂಬರ್ ೧೯೪೭ ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನುದ್ದೇಶಿಸಿ ಮಾಡಿದ ಈ ಭಾಷಣದಲ್ಲಿ ಭಾರತದಲ್ಲಿನ ಮುಸ್ಲಿಮರಿಗೆ ಸಮಾನ ಪೌರತ್ವ ಮತ್ತು ಹಕ್ಕುಗಳನ್ನು ನೀಡುವಂತೆ ತಮ್ಮ ಪಕ್ಷದ ಸಹೋದ್ಯೋಗಿಗಳಿಗೆ ಗಾಂಧೀಜಿ ಆಗ್ರಹಪಡಿಸಿದ್ದಾರೆ.              ರಾಜಕೀಯ ಅಧಿಕಾರ ಎಲ್ಲಾ ಅಸಮಾಧಾನ ಸಂಶಯಗಳಿಗೂ ಮೂಲ ಸ್ಥಾನ. ಭಾರತದಲ್ಲಿ ಅನೇಕ ಜಾತಿಗಳಿವೆ, ಧರ್ಮಗಳಿವೆ. ಒಂದು ಧರ್ಮ ಅಥವಾ ಜಾತಿ ಮತ್ತೊಂದು ಜಾತಿಯ ಮೇಲೆ ಆಳಲು ಪ್ರಯತ್ನಿಸಿದರೆ ಇಲ್ಲಿ ಶಾಂತಿ ಅಭಿವೃದ್ಧಿಗಳು ಕಣ್ಮರೆಯಾಗುವುವು. ಇದರಿಂದ ಕೋಮು ಸೌಹಾರ್ದವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯವು ಔದಾರ‍್ಯವೂ ಒಂದಕ್ಕೊಂದು ವಿರೋಧವಾಗಬೇಕಾದುದಿಲ್ಲ. ಸಂಶಯವನ್ನು ದ್ವೇಷವನ್ನು ಹೋಗಲಾಡಿಸಲು ಒಂದು ಔದಾರ‍್ಯ ಮುಖ್ಯ ಅಸ್ತ್ರವಾಗಬೇಕು. ಸಮಾಜದಲ್ಲಿ ಕೋಮು ಸೌಹಾರ್ದತೆ ಗಾಂಧೀಜಿಯವರ ಮನದಾಳದ ಆಸೆಯಾಗಿತ್ತು. ಅಂತೆಯೇ ತಮ್ಮ ಜೀವನಪೂರ್ತಿ ಅವರು ಮತೀಯ ಸಾಮರಸ್ಯಕ್ಕಾಗಿ ಹೋರಾಡಿದರು. ಗಾಂಧೀಜಿ ತಾವೊಬ್ಬ ಹಿಂದುವಾಗಿರುವೆನೆಂಬುದನ್ನು ಅಭಿಮಾನದಿಂದ ಹೇಳುತ್ತಿದ್ದರೂ ಅದೇ ಕಾರಣದಿಂದ ಎಲ್ಲಾ ಮತೀಯರನ್ನೂ ಸಮಾನವಾಗಿ ಕಾಣುತ್ತಾ ಸಹೋದರ-ಸಹೋದರಿಯರಂತೆ ಪ್ರೀತಿಸಬಲ್ಲೆನೆನ್ನುತ್ತಿದ್ದರು. ವಿವಿಧ ಮತ-ಧರ್ಮಗಳಿಗೆ ಸೇರಿದ ಜನರು ಭಾರತದಲ್ಲಿ ಒಟ್ಟಿಗೆ ಜೀವಿಸಬೇಕಾದ್ದರಿಂದ ಮತೀಯ ಸಾಮರಸ್ಯ ತೀರಾ ಅಗತ್ಯವೆಂದು ಅವರು ಒತ್ತಿ ಹೇಳುತ್ತಿದ್ದರು. ಭ್ರಾತೃತ್ವ ತತ್ವವನ್ನು ಮಾನ್ಯ ಮಾಡದೇ ಇರುವುದು ನಮ್ಮಲ್ಲಿರುವ ದೊಡ್ಡ ನ್ಯೂನತೆ, ಭ್ರಾತೃತ್ವ ಎಂದರೇನು? ಭ್ರಾತೃತ್ವ ಎಂದರೆ ಭಾರತೀಯರೆಲ್ಲ ಸಹೋದರರು ಎನ್ನುವ ಒಂದು ಸಮಾನತೆ, ಸಹೋದರತೆ ಸಮಾನ ಮನೋಭಾವ, ಭಾರತೀಯರೆಲ್ಲ ಒಂದು ಎನ್ನುವ ಮನೋಭಾವ. ಈ ತತ್ವ ಸಾಮಾಜಿಕ ಜೀವನದಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ಮೂಡಿಸುತ್ತದೆ. ಕೋಮು ಸೌಹಾರ್ದವು  ರಾಜಕೀಯ ಐಕ್ಯತೆಗಿಂತ ಹೆಚ್ಚಿನ ಮಹತ್ವದಾಗಿದೆ. ಇದು ಪರಸ್ಪರ ಪ್ರೀತಿ, ವಿಶ್ವಾಸಗಳಾಧಾರಿತವಾಗಿರಬೇಕು. ಸಮಾಜ ಕಾರ್ಯಕರ್ತರು ಹಿಂದೂ ಮುಸ್ಲಿಂರಲ್ಲಿ ಪ್ರೀತಿ ವಿಶ್ವಾಸದ ಸಂಬಂಧ ಬೆಳೆಯುವಂತೆ ಪ್ರೋತ್ಸಾಹಿಸಬೇಕು. ಹೀಗೆ ಪ್ರೀತಿ ವಿಶ್ವಾಸದ ಐಕ್ಯತೆ ಮುರಿಯಲಾರದ್ದು. **************************

ಸ್ವತಂತ್ರ ಭಾರತದ ಮೊದಲ ದೀಪಾವಳಿಯಂದು ರಾಷ್ಟ್ರಕ್ಕೆ ಮಹಾತ್ಮ ಗಾಂಧಿಯವರ ಸಂದೇಶ Read Post »

ಇತರೆ

ಭಾವಪೂರ್ಣ ಅಂತಿಮ ನಮನ.

ಭಾವಪೂರ್ಣ ಅಂತಿಮ ನಮನ. ಹುಬ್ಬಳ್ಳಿ ಯ ಕರ್ಮವೀರ ಕಾಲದಿಂದಲೂ ನಿನ್ನೆ ಮೊನ್ನೆಯವರಿಗೂ ಸುಮಾರು ಇಪ್ಪತ್ತು ವರ್ಷಗಳ ಆತ್ಮೀಯ ಒಡನಾಟ ಹೊಂದಿದ್ದ ನಾಡಿನ ದೈತ್ಯ ಬರಹಗಾರ ಆತ್ಮೀಯ ರವಿ ಬೆಳಗೆರೆ ಅವರ ಸಾವು ತುಂಬಾ ನೋವು ತಂದಿದೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುವೆ.ನನ್ನ ನೂರಾರು ಹನಿಗವನ ,ಕವನ, ಗಜಲ್, ಕಥೆ,ಬರಹ ಪ್ರಕಟಿಸಿ ನನಗೆ ಒಂದು ಶಕ್ತಿಯಾಗಿದ್ದ ಈ ಓದುಗರ ದೊರೆ ನನಗೆ ಸ್ನೇಹಿತನಾಗಿದ್ದ ಎಂಬ ಹೆಮ್ಮೆ.ಈ ಕೊಂಡಿ ಇಷ್ಟು ಬೇಗ ಕಳಚಬಾರದಿತ್ತು. ಹುಬ್ಬಳ್ಳಿ ಯ ಕಸ್ತೂರಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಕೆಲಸ ಮಾಡುವ ಕಾಲದಿಂದಲೂ ನನಗೆ ಅವರ ಒಡನಾಟ.ಆಗಿನಿಂದಲೇ ನನ್ನ ಕಥೆ ಕಾವ್ಯ ಪ್ರಕಟಿಸುತ್ತಾ ಬಂದ ಅವರೊಂದಿಗೆ ಆತ್ಮೀಯತೆ ಬೆಳೆಯುತ್ತಲೇ ಹೋಯಿತು.ಬದುಕಿನ ದಕಡಿ ಅವರನ್ನು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತಂದಿತು.ಕರ್ಮವೀರಕ್ಕೆ ಮರು ಜೀವ ನೀಡಿದ ಅವರು ಪಾಪಿಗಳ ಲೋಕದಲ್ಲಿ ಅಂಕಣ ಬರೆಯುವ ಮೂಲಕ ಭೂಗತ ಲೋಕವನ್ನು ಪರಿಚಯಿಸಿದರು.    ಲಂಕೇಶ್, ಕನ್ನಡಪ್ರಭ ಹೀಗೆ ಅನೇಕ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಾ ಎಲ್ಲಿಯೂ ದಕ್ಕದೆ ಕಪ್ಪು ಸುಂದರಿ ಹಾಯ್ ಬೆಂಗಳೂರ್ ಆರಂಭಿಸಿ ಬದುಕಿಗೆ ತಿರುವು ಪಡೆದುಕೊಂಡರು.ಅದು ಅವರ ಕೈ ಹಿಡಿಯಿತು.ಅವರು ಮೊದಲ ಮಾರುತಿ ೮೦೦ ಕಾರುಕೊಂಡ ದಿನ ಅವರು ಜೊತೆ ಇದ್ದು ನಾನೇ ಸ್ವೀಟ್ ಕೊಟ್ಟಿದ್ದೆ.ಅಲ್ಲಿಂದ ಆರಂಭವಾದ ನಮ್ಮ ಬಾಂಧವ್ಯ ಬೆಳೆಯುತ್ತಲೇ ಹೋಯಿತು.ನಾನು ಪತ್ರಿಕೆಯ ಒಂದು ಭಾಗ ಅನ್ನುವಷ್ಟು ನಿರಂತರವಾಗಿ ನನ್ನ ಬರಹಗಳು ಪ್ರಕಟ ಆಗುತ್ತಲೇ ಹೋದವು. ನನ್ನ ಹೆಗಲ ಮೇಲೆ ಕಂಬಳಿ ಇತ್ತು ಕೈಯಲ್ಲಿ ಇತ್ತು ಕೊಳಲು ನಾನು ಎಲ್ಲೂ ಹೋಗಿರಲಿಲ್ಲ ಮಲಗಿರಲೂ ಇಲ್ಲ ನನ್ನ ಹೆಗಲ ಮೇಲೆ ಹೆಣವನಿಟ್ಟವರಾರು ಕೈಯಲ್ಲಿ ಬಂದುಕು ಕೊಟ್ಟವರಾರು. 🙏ಕವಿ ಮಿಂದರ್ ಪಂಜಾಬ್    ನನ್ನ ಪಂಚನದಿಗಳ ನಾಡಿನಲ್ಲಿ ಪ್ರವಾಸ ಕಥನ ದ ಈ ಕವಿತೆ ಯುದ್ಧ ವರದಿಗೆ ಆಫ್ಘಾನಿಸ್ತಾನ ಹೋದಾಗ ಇದನ್ನು ಉಲ್ಲೇಖಿಸಿ ಅಲ್ಲಿಂದಲೇ ತಮ್ಮ ವರದಿ ತಮ್ಮ ಪತ್ರಿಕೆ ಬರೆದು ಅಫ್ಘಾನಿಸ್ತಾನದ ಪರಸ್ಥಿತಿ ಸಿದ್ಧರಾಮ ಹೊನ್ಕಲ್ ಅವರು ಅವರ ಕೃತಿಯಲ್ಲಿ ಉಲ್ಲೇಖಿಸಿದ  ಕವಿತೆಯಂತಿದೆ ಎಂದು ಬರೆದು ನನಗೆ ಅಪಾರ ಹೆಸರು ತಂದಿದ್ದರು. ಅವರಿಗೆ ಶಹಾಪುರ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷತೆ ವಹಿಸಿದಾಗ ಅಹ್ವಾನಿಸಿದ್ದೆ.ಆದರೆ‌ ಆಗಲೇ ಅವರ ಆರೋಗ್ಯ ಕೈ ಕೊಡುತ್ತಾ ಬಂದಿದ್ದರಿಂದ ಬರಲು ಒಪ್ಪಲಿಲ್ಲ.ಆದರೆ ಬೆಂಗಳೂರು ಹೋದಾಗ ಮೂರು ನಾಲ್ಕು ದಿನ ಇದ್ದರೆ ಅದರಲ್ಲಿ ಒಂದು ದಿನ ಅವರ ಜೊತೆ ಭೇಟಿ ಮಾಡುವುದಿತ್ತು.      ಬೆಂಗಳೂರು ಇದ್ದಾಗ ಒಮ್ಮೆ ಫೋನು ಮಾಡಿ ಅಳಿಯ ಮಗಳು ಎಲ್ಲರೂ ಬನ್ನಿ ಅಂತ ಕರೆದಿದ್ದರು.ಎಲ್ಲರೂ ಹೋಗಿ ಬಂದಿದ್ದೇವು.ನಿಮ್ಮ ಮನೆಗೆ ರೊಟ್ಟಿ ಉಣ್ಣಲು ಬರುವೆ ಅಂತ ನನ್ನ ಹೆಣ್ಣು ಮಕ್ಕಳಿಗೆ ಅಳಿಯಂದಿರುಗಳಿಗೆ ಹೇಳಿದ್ದರು.ನನ್ನ ಮಗ ಬಸವಪ್ರಭು ಗೆ ಎಂ.ಎ.ಜರ್ನಾಲಿಸಂ ಮುಗಿಸಿ ಬಂದು ಭೇಟಿಯಾಗು.ನಿನಗೆ ಮಿಡಿಯಾದಲ್ಲಿ ಉದ್ಯೋಗ ಕೊಡಿಸುವೆ ಅಂತ ಅವನ ಹೆಗಲ ಮೇಲೆ ಕೈ ಹಾಕಿ ಹೇಳಿ ಧೈರ್ಯ ತುಂಬಿದ್ದರು.     ಕಥೆ ಕವನ ಗಜಲ್ ಕಾದಂಬರಿ ಪತ್ರಿಕಾ ಬರಹ ಖಾಸಬಾಥ್,ಹಸಿರು ಲಂಗದ ಹುಡುಗಿ, ಚಲನಚಿತ್ರ, ಕ್ರೈಮ್ ಡೈರಿ, ಟಿವಿ. ಹೀಗೆ ಏನೆಲ್ಲದರ ಜೊತೆ ಜೊತೆಗೆ ಪ್ರಾರ್ಥನಾ ಶಾಲೆ ಆರಂಭಿಸಿ ಬಹುದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಿ ನಿಲ್ಲಿಸಿದ್ದಾರೆ.ಇಪ್ಪತ್ತು ಪೈಸೆಯ ಒಂದು ರಿಫೀಲ್ ಹಿಡಿದು ಬರೆದ ಬರಹಗಾರ ಐದುನೂರು ಕೋಟಿಯ ಅಸ್ಥಿ ಘೋಷಣೆ ಮಾಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದು ಕನ್ನಡ ಸಾಹಿತ್ಯ ಹಾಗೂ ಪತ್ರಿಕಾ ಲೋಕದಲ್ಲೆ ಒಂದು ಲೆಜೆಂಡ್ ಅಂದ್ರೆ ತಪ್ಪಿಲ್ಲ.     ಬಹುಮುಖ ಪ್ರತಿಭೆ.ಏನೂ ಬರೆದರೂ ಅದು ಓದಿಸಿಕೊಂಡು ಹೋಗುವಂತೆ,ಪ್ರೇಮದ ಹುಡಿ ಮೈಮನಗಳಿಗೆ ಅಂಟಿಕೊಳ್ಳುವಂತೆ ಬರೆಯುತ್ತಿದ್ದ ಅಕ್ಷರ ಮಾಂತ್ರಿಕ.ಆತ ನನಗೆ ಖಾಸಗಿ ಸ್ನೇಹಿತ ಅನ್ನೋ ಹೆಮ್ಮೆ ನನ್ನಂಥವರದು.ಓ..ಮನಸೇ ಆರಂಭವಾದಾಗ ಉದ್ಯೋಗ ಬಿಟ್ಟು ಬಂದುಬಿಡು ನಿನಗೆ ವಹಿಸುವೆ ಅಂದದುಂಟು.ಆದರೆ ನನಗೆ ನಾನಿರುವ ಪ್ರಪಂಚ ಬಿಟ್ಟು ಹೋಗುವ ಮನಸು ಇರಲಿಲ್ಲ.ಇಷ್ಟೆ ಸಾಕು ಎಂಬ ತೃಪ್ತಿ ನನ್ನದು.ಹಾಗಾಗಿ ನಾ ಎಂದು ಹೋಗಲಿಲ್ಲ.    ಅಂತಹ ರವಿ ಬೆಳಗೆರೆ ಗೆ ತುಂಬಾ ಜೀವನೋತ್ಸಾಹ ಇತ್ತು. ಸಾರ್ , ನೀವು ಖುಷ್ವಂತ್ ಸಿಂಗ್ ರಂತೆ ನೂರು ವರ್ಷಗಳ ಕಾಲ ಬರೀತಾ ಬದುಕುವೀರಿ, ಅಂದಾಗಲೆಲ್ಲ ತುಂಬಾ ಖುಷಿ ಪಡೋರು.ಹೌದೋ ಹೊನ್ಕಲ್, ನನಗೆ ಅದೇ ಆಸೆ ಇದೆ ಅನ್ನೋರು.ಆದರೆ ಸಾವು ಎಲ್ಲಿ ಹೊಂಚಿ ಕುಳಿತಿತ್ತೋ ಇಂದು ಧುತ್ತನೆ ಆವರಿಸಿಕೊಂಡು ಕರೆದೊಯ್ದಿದೆ. ಮನಸು ಈಗ ತುಂಬಾ ಭಾರ.ಒಂದು ಕೃತಿಗಾಗುವಷ್ಟು ನೆನಪುಗಳಿವೆ.ಆದರೆ ಬರೆಯಲು ನೋವು ಅಡ್ಡವಾಗುತ್ತಿವೆ.ಎಂದೂ ಮರೆಯದ ಹಾಡಿನಂತೆ ಈ ರವಿ ಬೆಳಗೆರೆಯವರು ನನಗೆ ಎಂದು ಮರೆಯದ ಹಾಡಿನಂತೆ ಕಾಡುವರು. ******************** ಸಿದ್ಧರಾಮ ಹೊನ್ಕಲ್

ಭಾವಪೂರ್ಣ ಅಂತಿಮ ನಮನ. Read Post »

ಇತರೆ

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ ತಾಲ್ಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ ೨೦೧೯ರಲ್ಲಿ ಪ್ರಕಟಣೆ ಕಂಡಿದೆ. ಗ್ರಾಮೀಣ ಪರಿಸರ, ತಾಯ್ತನ ಈ ಸಂಕಲನದ ಪ್ರಧಾನ ಧಾರೆ. ಹಾಗೆ ಯುದ್ಧವಿರೋಧಿ ಧೋರಣೆ, ಬುದ್ಧನ ಕರುಣೆ ಹಾಗೂ ಅಯ್ಯಪ್ಪನನ್ನು ತಾಯಿಯ ಮಗನಾಗಿ ನೋಡುವ ಪ್ರಮುಖ ಕವಿತೆಗಳು ಅವ್ವ ಮತ್ತ ಅಬ್ಬಲಿಗೆ ಸಂಕಲನದಲ್ಲಿವೆ. ಅಲ್ಲದೇ ಹೆಣ್ಣಿನ ಕನಸು, ಪ್ರೀತಿಯ ಹಂಬಲ, ಬಂಜೆತನ ಹಾಗೂ ಶ್ರಮಿಕವರ್ಗದ ಬಗ್ಗೆ ಇರುವ ಕಳಕಳಿಯ ಕವಿತೆಗಳಿದ್ದು, ಕನ್ನಡ ಕಾವ್ಯ ಪರಂಪರೆಯನ್ನು ಶೋಭಾ ನಾಯ್ಕ ಹಿರೇಕೈ ಕವನಗಳಲ್ಲಿ ಕಾಣಬಹುದಾಗಿದೆ. ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೇಕೆರೆ ಮತ್ತು ವಿಮರ್ಶಕರಾದ ಜಿ. ಎನ್. ರಂಗನಾಥ್ ರಾವ್ ಅವರು ತೀರ್ಪುಗಾರರಾಗಿದ್ದರು. ೨೦೨೧ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಂತೋಷವಾಗಿದೆ :  ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ’ ಪ್ರಶಸ್ತಿ ಘೋಷಣೆಯಾದ ಕ್ಷಣದ ಕುರಿತು ಕವಯಿತ್ರಿ ಶೋಭಾ ನಾಯ್ಕ ಅವರು ಪ್ರತಿಕ್ರಿಯಿಸಿದ್ದು, ನನಗೆ ಸಂತೋಷವಾಗಿದೆ. ನನ್ನ ಮೊದಲ ಸಂಕಲನಕ್ಕೆ ಪ್ರಶಸ್ತಿ ಬಂದದ್ದು ಇನ್ನೂ ಖುಷಿಯ ಸಂಗತಿ. ನನ್ನ ಹಳ್ಳಿಯ ಸಂಬಂಧ ಗಟ್ಟಿಯಾಗಿದೆ. ನಾನು ಬರೆಯುವುದು ಸಹ  ವಿರಳ. ಶಾಲಾ ಶಿಕ್ಷಕಿಯಾಗಿರುವ ನನಗೆ ಮಕ್ಕಳ ಜೊತೆಗಿನ ಒಡನಾಟ, ನನ್ನ ಪರಿಸರ ಹಾಗೂ ಕನ್ನಡ ಪಠ್ಯಗಳಲ್ಲಿನ ವಚನಗಳು ಸೇರಿದಂತೆ ಕನ್ನಡ ಕವಿಗಳ ಕವಿತೆಗಳನ್ನು ಓದುತ್ತಾ, ಕಲಿಸುತ್ತಾ ನನಗೂ ಬರೆಯುವ ಹಂಬಲ ಹುಟ್ಟಿತು. ಅದೇ ಅವ್ವ ಅಬ್ಬಲಿಗೆಯಾಗಿದೆ. ಮುಂದೆ ನನ್ನೂರಿನ ಚಿತ್ರಗಳನ್ನು ಗದ್ಯ ರೂಪದಲ್ಲಿ ಬರೆಯುವ ಕನಸಿದೆ. ನನ್ನ ಮೇಲೆ ದೇವನೂರು ಮಹಾದೇವ ಅವರ ಬರಹಗಳು, ಎದೆಗೆ ಬಿದ್ದ ಅಕ್ಷರ ತುಂಬಾ ಪ್ರಭಾವ ಬೀರಿವೆ. ಕನ್ನಡದ ಸೌಹಾರ್ದ, ಮಾನವೀಯ ಪರಂಪರೆ ನನ್ನ ಪ್ರಜ್ಞೆಯಲ್ಲಿದೆ ಎಂದರು. *******************************

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ Read Post »

ಇತರೆ

ಆಕಾಶದೀಪದ ಪ್ರಾಧಾನ್ಯತೆ

ಲೇಖನ ಆಕಾಶದೀಪದ ಪ್ರಾಧಾನ್ಯತೆ ವೀಣಾ. ಎನ್. ರಾವ್. ದೀಪಾವಳಿ ಬಂತೆಂದರೆ ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ವಿನೂತನವಾದ ಸಂತಸ. ಹಾಗೆಯೇ ದೀಪಾವಳಿಯ ಸಮಯದಲ್ಲಿ ಅದರಲ್ಲೂ ವಿಶೇಷವಾಗಿ ಹಳ್ಳಿಗಳಲ್ಲಿ “ಆಕಾಶದೀಪ”ವನ್ನು ಮನೆಯ ಮುಂದೆ ತೂಗು ಹಾಕುತ್ತಾರೆ.  ಈ ‘ಆಕಾಶದೀಪ’ವು, “ಗೂಡುದೀಪ”,”ನಕ್ಷತ್ರದೀಪ”,ಎಂದು ಪರಿಚಿತವಾದರೆ, ಹಳ್ಳಿಗಳಲ್ಲಿ “ಯಮದೀಪ”,”ವ್ಯೋಮದೀಪ”  ಎಂದು ಕೂಡಾ ಕರೆಯುತ್ತಾರೆ.            ಬಿದಿರಿನ ಕಡ್ಡಿಗಳಿಂದ ಎಂಟು ಮೂಲೆಗಳಿರುವಂತೆ ಯಾವ ಆಕಾರಕ್ಕೆ ಬೇಕೊ ಆ ರೀತಿಯಾಗಿ ಕಟ್ಟಿ ಅದರ ಸುತ್ತಲೂ ಬಣ್ಣದ ಪೇಪರನ್ನು ಅಂಟಿಸಿ ಬಾಲಂಗೋಚಿಯನ್ನು ಇಳಿಬಿಟ್ಟು ಮನೆಯಲ್ಲೆ ತಯಾರಿಸುವ ಈ ‘ಆಕಾಶದೀಪ’ವು ಮನೆಯಂಗಳದಲ್ಲಿ ಕಾಣಸಿಗುತ್ತದೆ. ಸಾಂಪ್ರದಾಯಿಕವಾಗಿ ಬೆಳೆದು ಬಂದ ಈ ಆಕಾಶದೀಪ ಅದರ ಮೂಲ ರೂಪ ಆಧುನೀಕರಣತೆಯಿಂದ ಬದಲಾಗಿದೆ.              ಕೃಷಿಕರು ಸಂಧ್ಯಾಕಾಲದಲ್ಲಿ ಗದ್ದೆಗಳಿಗೆ ಹೋಗಿ ಅಲ್ಲಿ ರಂಗೋಲಿ ಹಾಕಿ ಕಾಡುಪುಷ್ಪದಿಂದ ಭೂಮಿಯನ್ನು ಪೂಜಿಸಿ ‘ನೆನೆಕೋಲು’ ಮಾಡಿ, ” ತನ್ನ ರಾಜ್ಯಕ್ಕೆ ತಾನು ಓಡೋಡಿ ಬಾ ಓ ಬಲೀಂದ್ರ ಕುಹೂ” ಎಂದು ಎಲ್ಲರೂ ಬೊಬ್ಬೆ  ಹಾಕಿ ದೀಪ ಹಚ್ಚುತ್ತಾರೆ. ಹಾಗೆಯೇ ಮನೆಗೆ ಬಂದು ಅಂಗಳದಲ್ಲಿ ಬಲೀಂದ್ರನ ಸ್ವಾಗತಕ್ಕಾಗಿ ನವಗ್ರಹ ಮಂತ್ರವನ್ನೋ, ಅಥವಾ “ದಾಮೋದರಾಯ ನಭಸಿ ತುಲಾಯಾಂ ದೋಲಯಾ ಸಹ “(ಗೊತ್ತಿರುವವರು ಈ ಮಂತ್ರ ಹೇಳುತ್ತಾರೆ) ಎಂದು ಹೇಳಿ ವ್ಯೋಮದೀಪವನ್ನು ಏರಿಸುತ್ತಾರೆ. ಪಾತಾಳಕ್ಕಿಳಿದ ಬಲೀಂದ್ರನು ಸಮುದ್ರ ಮಂಥನ ಮಾಡುವಾಗ ದೇವತೆಗಳಿಗೆ ಸಹಾಯ ಮಾಡಿದಕ್ಕಾಗಿ, ಅಲ್ಲದೆ ಬಲಿ ಚಿರಂಜೀವಿಯಾಗಿರುವುದರಿಂದ ಈ ಭೂಮಿಯ ಮೇಲೆ ಒಂದು ದಿನ ಭೂಮಿಯನ್ನಾಳುವ ಅವಕಾಶವನ್ನು ದೇವತೆಗಳ ಬಳಿ ಬೇಡಿದ್ದರಿಂದ ದೀಪಾವಳಿಯ ಅಮವಾಸೆಯಲ್ಲಿ ಬಲಿ ಚಕ್ರವರ್ತಿ ಮೇಲಕ್ಕೆ ಬಂದು ರಾಜ್ಯಾಡಳಿತ ಮಾಡುತ್ತಾನೆಂದು.           ಮತ್ತೊಂದೆಡೆ ಈ ‘ಯಮದೀಪ’ವು ಆಕಾಶತತ್ವ ಮತ್ತು ವಾಯುತತ್ವ ಆಗಿರೋದರಿಂದ ಮನೆಯಲ್ಲಿರುವವರೆಲ್ಲರಿಗೂ ಆಯುಷ್ಯ ವೃದ್ಧಿಸಲಿ ಎಂಬ ಆಶಯವೂ ಇದೆ.            ಒಟ್ಟಿನಲ್ಲಿ ಅದೇನೆ ಆದರೂ ಈ ‘ಆಕಾಶದೀಪ’ವನ್ನು ಇಡುವ ಸಂಪ್ರದಾಯ ಇಂದಿಗೂ ಹಳ್ಳಿಗಳಲ್ಲಿ ಮರೆಯಾಗದೆ  ಇರುವುದು ಈ ನೆಲದ ಸಂಸ್ಕೃತಿಯನ್ನು ಎತ್ತಿ ತೋರಿಸುತಿದೆ.

ಆಕಾಶದೀಪದ ಪ್ರಾಧಾನ್ಯತೆ Read Post »

ಇತರೆ

ಕಾದಂಬರಿ ಕುರಿತು ಮರಳಿ ಮಣ್ಣಿಗೆ ಡಾ.ಶಿವರಾಮ ಕಾರಂತ ಮರಳಿ ಮಣ್ಣಿಗೆ  ಲೇಖಕರು :ಡಾ. ಕೆ‌. ಶಿವರಾಮ ಕಾರಂತ ನಾನು ಶಿವರಾಮ ಕಾರಂತರ ಎಲ್ಲಾ ಕಾದಂಬರಿಗಳನ್ನು ಓದಿಲ್ಲವಾದರೂ ಕೆಲವೊಂದನ್ನು ಓದಿದ್ದೇನೆ.  ಅದರಲ್ಲಿ ನನಗಿಷ್ಟವಾದ ಕಾದಂಬರಿ ” ಮರಳಿ ಮಣ್ಣಿಗೆ”    ಈ ಕೃತಿಯನ್ನು ಓದುವಾಗ ಓದಿ ಮುಗಿಸುವ ತನಕ ಪುಸ್ತಕ ಮುಚ್ಚಿಡಲು ಆಗದಷ್ಟು ಆಸಕ್ತಿ ನಮ್ಮನ್ನು ಓದಿಸಿ ಕೊಂಡು ಹೋಗುತ್ತದೆ. ಇಡೀ ಕಥೆಯೆ ನಮ್ಮ ಕಣ್ಮುಂದೆ ಹಾದು ಹೋಗುವ ಅನುಭವವಾಗುತ್ತದೆ. ಇದಕ್ಕೆ ಕಾರಣ ಅಲ್ಲಿನ ಘಟನೆಗಳು, ಮಾತುಕತೆಗಳು ಹಾಗು ಪಾತ್ರಗಳು ವಾಸ್ತವಿಕ ನೆಲೆಯಲ್ಲೇ ನಡೆಯುವಂತೆ ಭಾಸವಾಗುತ್ತವೆ. ಇಲ್ಲಿನ ಪಾತ್ರಗಳೆಲ್ಲಾ ಗಟ್ಟಿತನದಿಂದ ಕೂಡಿರುವ ಕಾರಣ ನಮ್ಮ ಮನಸ್ಸಿನಲ್ಲಿ ನೆಲೆಸುತ್ತವೆ. ಇಲ್ಲಿನ ಸ್ತ್ರೀ ಪಾತ್ರಗಳು ಅಂದರೆ ಮುಖ್ಯವಾಗಿ ಸರಸೋತಿ, ಪಾರೋತಿ ಹಾಗೂ ನಾಗವೇಣಿ ಪಾತ್ರಗಳು ತಮ್ಮ ಬದುಕಿನ ಇತಿಮಿತಿಯಲ್ಲೇ ಕಷ್ಟಗಳೊಂದಿಗೆ ಹೋರಾಟದ ಬದುಕನ್ನು ನಿಭಾಯಿಸಿದ ರೀತಿಯಿಂದಾಗಿ ಈಗಿನ ಆಧುನಿಕ ಹೆಣ್ಣಿಗಿಂತ ಯಾವುದೇ ರೀತಿಯಲ್ಲೂ ಕಡಿಮೆಯಿಲ್ಲ. ಸ್ತ್ರೀ ಪಾತ್ರಗಳ ಮಾನಸಿಕ ತುಮುಲಗಳು ಅಂದಿನ ಕಾಲಘಟ್ಟದ ಎಲ್ಲ ಹೆಣ್ಣುಮಕ್ಕಳ ಸ್ಥಾನಮಾನದ ಕೈಗನ್ನಡಿಯಾಗಿದೆ. ಪಾರೋತಿ ಶೋಷಿತ  ಬದುಕನ್ನು  ತಲೆತಗ್ಗಿಸಿ ಸ್ವೀಕರಿಸಿದರೆ, ಸರಸೋತಿಯು ತನ್ನ ದುರಂತ ಬದುಕನ್ನು ಅಣ್ಣನ ಸಂಸಾರಕ್ಕೆ ಅರ್ಪಿಸಿ ಕೊಂಡರೂ ನಿರ್ಲಕ್ಷಿಸಲ್ಪಟ್ಟಾಗ ದೌರ್ಜನ್ಯದ ವಿರುದ್ಧ ಸಿಡಿದೇಳುವ ಮೂಲಕ ತನ್ನ ಅಸ್ಥಿತ್ವದ ಛಾಪನ್ನು ಎಲ್ಲರ ಮೇಲೂ ಒತ್ತಿದರೆ, ನಾಗವೇಣಿ ಗಂಡನ ದೌರ್ಜನ್ಯವನ್ನು ತನ್ನ ಇತಿಮಿತಿಯಲ್ಲಿ ತಿರಸ್ಕರಿಸಿ ಮಗನಿಗಾಗಿ ತಾನೆಂದೂ ಕಂಡರಿಯದ ಕಡುಬಡತನದ ಬದುಕನ್ನ ಅನುಭವಿಸುವ ಮೂಲಕ ಸ್ವಾಭಿಮಾನಿ ಹೆಣ್ಣಾಗಿ ನೆನಪಲ್ಲುಳಿಯುತ್ತಾಳೆ ನಾಗವೇಣಿಯು ಅಜ್ಜಿ ಸರಸೋತಿ ವ್ಯಕ್ತಿತ್ವದ ಮುಂದಿನ ಮುಂದುವರಿಕೆಯಾಗಿದೆ ಎನ್ನಲಡ್ಡಿಯಿಲ್ಲ. ರಾಮ ಐತಾಳ ಲಚ್ಚ, ರಾಮ ಈ ಮೂರು ಪಾತ್ರಗಳಲ್ಲಿ ಮೊದಲೆರಡು ಪಾತ್ರಗಳು ಸ್ತ್ರೀ ಶೋಷಣೆಯ ವಿಭಿನ್ನ ಮುಖಗಳಾಗಿ ಕಂಡು ಬಂದರೆ,ರಾಮನ ಪಾತ್ರವು ಹೆಂಗರುಳಿನದ್ದಾಗಿದೆ. ಇಡೀ ಕಾದಂಬರಿಯೇ ವಾಸ್ತವದ ನೆಲೆಯಲ್ಲಿ ಸಾಗುತ್ತ ಮುನ್ನೆಡೆಯುವುದರಿಂದ ಓದುಗರ ಮನದಾಳಕ್ಕಿಳಿದು ಸ್ಥಾಪಿತವಾಗಿ ಬಿಡುವುದು. ಕಾರಂತರ ಬರವಣಿಗೆಯ ವೈಶಿಷ್ಟ್ಯತೆಯಿರುವುದೇ ಇಲ್ಲಿ. ಈ ಕೃತಿಯಲ್ಲಿ ಮೂರು ತಲೆಮಾರಿನ ಕಥೆಯ ಚಿತ್ರಣವಿದ್ದರೂ ಎಲ್ಲಾ ಪಾತ್ರಗಳು  ಜೀವಂತಿಕೆಯಿಂದ ಕಣ್ಮುಂದೆ ನಿಲ್ಲುತ್ತವೆ. ಕಲ್ಪನಾ ವಿಲಾಸ ಪ್ರಸಂಗಗಳಿಲ್ಲದೆ ನೈಜತೆಗೆ ಹತ್ತಿರವಾಗಿ ನಾವು ನೋಡಿದ ಒಂದು ಸತ್ಯಕಥೆಯಂತೆ ನಿಲ್ಲುತ್ತದೆ. ಇಲ್ಲಿ ಕಡಲೂ ಸಹ ಜೀವನದ ಒಂದು ಪಾತ್ರವಾಗಿ ಜನಪದರ ಬೇರಾಗಿದೆ.  ಒಟ್ಟಾರೆ “ಮರಳಿ ಮಣ್ಣಿಗೆ”ಕಾದಂಬರಿಯು ಈ ಮಣ್ಣಿನ ಸೊಗಡುಳ್ಳ ಅಸದೃಶವಾಗಿದ್ದು ಶಿವರಾಮ ಕಾರಂತರ ಅನನ್ಯ ಕೃತಿಯಾಗಿದೆ. *****************************

Read Post »

ಇತರೆ

ಅಕಾರಣ ಅಕಾಲ

ಕವಿತೆಯ ಕುರಿತು ಅಕಾರಣ ಅಕಾಲ ನಾಗರೇಖಾ ಗಾಂವಕರ್ ಸಾಹಿತ್ಯದ ನಿಲುವುಗಳು ಭಿನ್ನ ರೀತಿಯಲ್ಲಿ ಎಂದಿಗೂ ಅಭಿವ್ಯಕ್ತಿಗೊಳ್ಳುತ್ತಲೇ ಇರುವುವು. ಸಮಾಜದ ಓರೆಕೋರೆಗಳಿಗೆ ಕನ್ನಡಿ ಹಿಡಿಯುವ ಸಾಹಿತಿಗಳು, ಕವಿಗಳು ತಮ್ಮ ವ್ಯಕ್ತಿತ್ವವನ್ನು ಅಷ್ಟೇ ಶುದ್ಧ ಪಾರದರ್ಶಕತೆಗೆ ಒಗ್ಗಿಕೊಂಡು, ನಡೆದಂತೆ ನುಡಿಯುವ  ಛಾತಿಯುಳ್ಳವರಾಗಿರಬೇಕು. ಇಲ್ಲವಾದಲ್ಲಿ ಅದು ಅಪಹಾಸ್ಯಕ್ಕೆ ಗುರಿಯಾದ ಸಂದರ್ಭಗಳಿವೆ. ಹಾಗೇ ಕವಿತೆಯಲ್ಲಿ ಕವಿಯನ್ನು ಹುಡುಕುವ ಪ್ರಯತ್ನ ಸಲ್ಲ ಎಂಬ ವಾದವೂ ಇದೆ. ಆದರೆ ಇದು ಕೂಡಾ ಎಲ್ಲ ಸಂದರ್ಭಗಳಿಗೆ ಸರಿಯಾಗದು. ಕವಿತೆ ಭಾವನೆಗಳ ಪದಲಹರಿ. ಹಾಗಾಗಿ ಅನ್ಯರ ಅನುಭವಗಳ ಮೇಲೆ ಬರೆದ ಕವಿತೆಗಳು ಆಪ್ತವಾಗಲಾರವು. ಕವಿ ತನ್ನ ನಿಕಷಕ್ಕೆ ಒಡ್ಡಿಕೊಳ್ಳಬೇಕು. ಅನುಭವಗಳಿಗೆ ತೆರೆದುಕೊಳ್ಳಬೇಕು. ಕಂಡಿದ್ದನ್ನು ನೋಡಿದ್ದನ್ನು  ರಸಾನುಭವ ನೀಡುವಂತೆ ಕಟ್ಟಿಕೊಡಬೇಕು. ಹೀಗೆ ಹತ್ತಾರು ಬಗೆಯ ನಿಲುವುಗಳು  ಅಭಿಪ್ರಾಯಗಳು  ಆಗಾಗ ಅಭಿವ್ಯಕ್ತವಾಗಿದ್ದನ್ನು ನಾನು ಗ್ರಹಿಸಿದ್ದೆ. ಇತ್ತೀಚಿನ ಸಮಕಾಲೀನ ಕವಿಗಳು ಅವರ ಭಾವತೀವ್ರತೆ, ಮುಕ್ತಛಂದದ ರೀತಿ ಎಲ್ಲವೂ ಹೆಚ್ಚು ಹೆಚ್ಚು ಪ್ರಚಲಿತವಾಗುತ್ತ ಅದರಲ್ಲಿಯೇ ಹೊಸ ಚಿಂತನೆಗಳು, ನೋವು ನಲಿವುಗಳು, ಬದುಕಿನ ಖುಷಿ, ಆಕ್ರೋಶಗಳು ವ್ಯಕ್ತವಾದ ಬಗೆಯಿಂದ ಹೃದಯಕ್ಕೆ ಆಪ್ತ ಎನ್ನಿಸಿಬಿಡುತ್ತಿವೆ. ಆ ಪಾತ್ರಗಳೇ ನಾವಾದಂತೆ, ಆ ನೋವು ಇಲ್ಲ ನಲಿವು ನನ್ನದೂ ಕೂಡಾ ಆಗಿರುವ ಸಾಧ್ಯತೆ. ಸಮಾಜಮುಖಿ ಎನ್ನುವುದಕ್ಕಿಂತ ತನ್ನನ್ನು ತೆರೆದುಕೊಳ್ಳುವುದು, ಇಲ್ಲ ಅವ್ಯಕ್ತಕ್ಕಿಂತ ವ್ಯಕ್ತ ನಿಲುವಲ್ಲಿ ಪಾರದರ್ಶಕವಾಗುವುದು ಇತ್ತೀಚಿನ ಬರಹಗಳಲ್ಲಿ ಹೆಚ್ಚು ಹೆಚ್ಚಾಗಿ ಕಂಡುಬರುತ್ತಿದೆ. ಅಂತಹ ಒಂದು ಆಪ್ತ ಕವಿತೆ ಸಮಕಾಲೀನ ಕವಯತ್ರಿ ನಂದಿನಿಯ –“ಅಕಾರಣ ಅಕಾಲ”  ಕವಯತ್ರಿ ನಂದಿನಿಯ ಭಾವಜಗತ್ತನ್ನು ಒಮ್ಮೆ ನವಿರಾಗಿ ಸ್ಪರ್ಷಿಸುವ ಪ್ರಯತ್ನ ಮಾಡಿದ್ದೇನೆ. ಅಕಾರಣವಾಗಿ ಈ ಕವಿತೆಯನ್ನು ಇಷ್ಟಪಟ್ಟಿದ್ದೇನೆ. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ವಿರಾಮದ ಕಾಲವಿರಬೇಕು ಜಗದ ವಿದೂಷಕನಿಗೆ ಚಿಟ್ಟೆ ಹಾರಿಬಿಟ್ಟು ಹೂವ ಬಟ್ಟಲಲಿ ಬಯಕೆ ತುಂಬಿಟ್ಟ ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು ಭೇಟಿ ಆದವು ಸದ್ದಿನ ಸೂರಿನಡಿಯಲ್ಲಿ.. ತುಸು ಹೊತ್ತು ಸುಖವಾದ ಮೌನ ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡವು ಮಾತು … ಗೊತ್ತಿಲ್ಲ ನನಗೆ.. ಅದು ಹೇಗೆ ಬಂತೆಂದು: ಕಡುಧಗೆಯ ದಿನದ ದಣಿವಿಂದ ಬಂತೇ? ಮಾಗಿಯಿರುಳಿನ ಮುಗಿಲ ಬೆಳಕಿಂದ ಬಂತೇ? ನೆಲಮುಗಿಲು ಒಲಿದಾಗ ಅಳುಕಾಗಿ ಬಂತೇ? ಗೊತ್ತಿಲ್ಲ ನನಗೆ ಅದು ಯಾಕೆ ಬಂತೆಂದು: ಬರದ ದಿನಗಳ ಬದುಕ ನೆರೆಯಾಗಿ ಬಂತೇ? ಬಯಲೆದೆಯ ಮೇಲೊಂದು ನವಿಲಾಗಿ ಬಂತೇ? ಬದಲಾಗದ ನೆಲೆಯ ಸೊಬಗಾಗಿ ಬಂತೇ..? ಬಂದೇ ಬಂತು.. ಹಗಲುಗಳ ಕಸಿಯಿತು..ಹಸಿವನ್ನೆ ಕೊಂದಿತು ಹರಿವನ್ನು ತೊರೆಯಿಸಿತು.. ಹುಡುಕಾಟ ಕೊನೆಯಾಯ್ತು ಬಂದೇ ಬಂತು ಸೊನ್ನೆಯಾಗಿಸಿತು ನನ್ನತನ ಚಂದವೆನಿಸಿತು ಒಂದುತನ ಬಂಧವೆಂದರೆ ಇದೇ ಎನಿಸಿ ಬಂಧನವೂ ಇದೇ..? ಬದಲಾದೆನೇ ನಾನು.. ಬೆಳಕಾದೆನೇ? ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಕತ್ತಲಾಯಿತೆಂದು  ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು ನನ್ನ ಪಕ್ಕೆ ಪಕ್ಕದಲ್ಲಿ.. ಚೆಲ್ಲಿದವು ಚುಕ್ಕಿ ಹೆಕ್ಕಿಕೋ ಎನ್ನುತ್ತಾ… ಒಳಗೊಳಗೆ ಹದ ಬೇಗೆ.. ಬೆಂಕಿ ಕೆನ್ನಾಲಿಗೆ…. ಇಲ್ಲವೆನ್ನುವುದೇ ಸುಖವೆನುವ ಕಾಲದಲ್ಲಿ ಇದೆ.. ಇದು ಅದೇ.. ಎನ್ನುತ್ತಾ ಬಂದೇ ಬಂತು ಅಕಾಲದಲ್ಲಿ ಅಕಾರಣ ಕಿರುಬೆರಳ ನೆರವಿಟ್ಟು ಕರೆಯಿತು ಹೊರಗೆ ಎಷ್ಟು ಬಾಯಿಗೆ ಹಾಕಬೇಕಿತ್ತು ಹೊಲಿಗೆ ಎಷ್ಟು ನೋಟಗಳಿಗೆ ಕಟ್ಟಬೇಕಿತ್ತು ಬಟ್ಟೆ ಅಡಿಯಿಟ್ಟೆ ನಡುಗುತ್ತಾ.. ಇದು ಬೆಂಕಿ ಜಾಡು ಎದೆಯೊಳಗೆ ಬೆಳಕ ಹಾಡು ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಕೂಡುವಾಸೆಗೆ ಬೇಡಿದ್ದು ಯಾರು ಮೊದಲು? ಯಾವುದೀ ಬೆರಗು? ಹೇಗೆ ತೆರೆದೆವು ನಾವು ಹೃದಯದ  ಬಾಗಿಲು ಇದು.. ಇದುವೇ ತವಕ.. ನಾನು ಕಾಣದ ಲೋಕ.. ಎದೆಯೊಳಗೆ ಎದೆ ಬೆರೆತು,ಭವವೆಲ್ಲಾ ಬೆವೆತು ಮತ್ತೆಮತ್ತೆ ಎಚ್ಚೆತ್ತು,. ಏರುವಾಗಲೂ ಇರುವನ್ನೆ ಅರಿತು ಕಳೆದುಹೋದೆನು ನಾನು ಪರಿಚಿತದ ಹಾದಿಯಲಿ ಸಂತೆಯಲ್ಲೇ ಒಂಟಿ ತಿರುಗಿ.. ನಾಳೆಯ ಮೊಗ್ಗಿಗೆ ಈ ಸಂಜೆಯೇ ಬೆಂಕಿ ಬೇರು ಉರಿವಾಗ ಚಿಗುರಲ್ಲಿ ಹೂವು ಮೀಯದೆ ಮಡಿಯುಟ್ಟು ಮಂಡಿಯೂರಿ ಬಿಡಿಸಿ ಅರ್ಪಿಸದ ಹೊರತು ಬದುಕಿಲ್ಲ ಇಲ್ಲಿ ಅಕಾಲ, ಅಕಾರಣ ಜನನಕ್ಕೆ ಹಸಿವು ಹೆಚ್ಚು. ಎಲ್ಲಿತ್ತು ಈ ಅಳಲು? ದಿನದಿನವೂ ಹೊಸ ಅರಳು ಸುಖವೆನಿಸುತ್ತದೆ ಅಸೂಯೆ ಹುಸುಹುಸಿ ದ್ವೇಷ ಬಯಸಿ ಮಾಡುವ ಮೋಸ ಸಂಜೆಗೊಂದಿಷ್ಟು ಮುನಿಸು ನಾಳೆಗೇನಿದೆ ಹೊಸ ಜಗಳ? ಅಕಾರಣ ಅಕಾಲದಲ್ಲಿ ಬಂದ ನನ್ನ ಅಂತರಂಗ ಸಂಚಲನವೇ.. ನಾನು ನಿಟ್ಟುಸಿರಾದೆ ನೀನಲ್ಲಿ ನರಳಿ ನಾನು ನಕ್ಕರೆ ನಿನ್ನ ನೀಲಿಮರವೂ ಹೊರಳಿ ನೀನು ಕರೆದರೆ ಸಾಕು ಇಲ್ಲಿ ದೇವಕಣಗಿಲೆ ಅರಳಿ ನನ್ನ ಹಿತವಾದ ನೋವೇ. ಕಾಯದ ಕಾವೇ ಕಾಯುವ ಸಾವೇ ಇನ್ನೆಷ್ಟು ಸರಕುಗಳ ಪೇರಿಸಿವೆ ಇಲ್ಲಿ ಹೇಗೆ ಅಡಗಿಸಲಿ ಎದೆಯಡಿಯ ನದಿಯನ್ನು? ಯಾವ ಹಾದಿಯಿದು, ಎಲ್ಲಿ ತಲುಪಿಸುವುದು ನಮ್ಮನ್ನು? ನನ್ನ ಆತ್ಮದ ತುಂಬಾ ನಿನ್ನವೇ ಬೇರುಗಳು ಚಿಗುರು, ಮುಗುಳು, ಎಸಳು  ಪರಿಮಳವೂ ನೀನೇ ನನ್ನೊಲವಿನ ಅಕಾರಣವೇ ಸುಖವಾದ ದುಃಖಿ ನಾನು ಗಾಳಿಯಲಿ ಹಾಡು ಹೇಳಬೇಡ ದಯಮಾಡಿ ಹಂಬಲಿಸುವೆ ನಾನು ಇನ್ನೂ ಇದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಆರಂಭವಾಗಿಲ್ಲ.. ನನ್ನ ಪ್ರೀತಿಯಿನ್ನೂ.. ಇದೊಂದು ದೀರ್ಘ ಕವನ. ಇಡೀ ಒಂದು ಚಿತ್ರಣವನ್ನು ನಮ್ಮ ಕಣ್ಣಮುಂದೆ ಬೆಳ್ಳಿಪರದೆಯ ಮೇಲೆ ಚಿತ್ರ ಮೂಡಿಸಿದಂತೆ ಚಿತ್ರಿಸುತ್ತಾ ಹೋಗಬಲ್ಲದು. ಕಾವ್ಯ ಮೋಹಿ ಹೆಣ್ಣೊಬ್ಬಳ ಅಂತರಂಗದ ಅಂತಪುರದ ಗೀತೆ. ತೀವ್ರ ಭಾವವೇ ಇಲ್ಲಿ ಸ್ಥಾಯಿ. ಕವಿತೆಯ ಪ್ರಾರಂಭದಲ್ಲಿ  ಅಕಾರಣವಾಗಿ ಅಕಾಲದಲ್ಲಿ ಬಂದದ್ದು ಏನೆಂದು ಹೊಳೆಯದೇ ವಿರಹಿಣಿಯೊರ್ವಳ ಹುಡುಕಾಟದ ಹಾಗೆ ಕಾಣುವ ಕವಿತೆ ಮಧ್ಯಭಾಗಕ್ಕೆ ಬರುತ್ತಲೇ, ಪ್ರೇಮವನ್ನು ಭಿನ್ನವಾಗಿ ಗ್ರಹಿಸುವಂತೆ ಮಾಡುತ್ತದೆ. ಕಾವ್ಯವನ್ನೆ ಪ್ರಿಯಕರನ ರೂಪದಲ್ಲಿ ಕಾಣುವ ಉತ್ಕಟತೆ ಇಲ್ಲಿದೆ. ಪ್ರಿಯ ಬೇರೆಯಲ್ಲ, ಕವಿತೆ ಬೇರೆಯಲ್ಲ.. ಅಕಾರಣ ಅಕಾಲದಲ್ಲಿ ನನ್ನ ಹುಡುಕಿ ಬಂತು ಅದು ಧಗೆಯ ಧೂಳು ತುಂಬಿದ ಒಂದು ಕಡು ಮಧ್ಯಾಹ್ನ.. ಗಿಜುಗುಡುವ ಮೌನ, ಗವ್ವೆನ್ನುವ ಸದ್ದು. ಇದು ಬಯಸಿದ್ದೂ ಅಲ್ಲ, ಪಡೆದದ್ದು ಅಲ್ಲ. ಕಾರಣವಿಲ್ಲದೇ ಬಂದಿದ್ದು, ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು. ಕಾರ್ಯಕಾರಣ ಎನ್ನುವುದು ಎಲ್ಲರಿಗೂ ಸಮ್ಮತವಾಗಿಯೇ ಇರುವಂತಹದ್ದು. ಆದರೆ ಇದು ಎಲ್ಲ ಸಂಗತಿಗೆ ಹೊರತಾದದ್ದು. ನಡು ಮಧ್ಯಾಹ್ನ, ನಡು ವಯಸ್ಸಿನ ಹೊತ್ತು, ಮನಸ್ಸು ಬೇಗೆಯಲ್ಲಿ ಬೆಂದು ಧೂಳು ತುಂಬಿಕೊಂಡ ಹೊತ್ತು, ಮೌನದ ಅಭ್ಯಾಸವಾಗಿ ಅದೇ ಮಾತಿಗಿಂತ ಹೆಚ್ಚು ಸದ್ದು ಮಾಡುತ್ತಿದ್ದ ಹೊತ್ತು, ಜಗದ ನಿಯಾಮಕ ತನ್ನ ಖುಷಿಯ ಕ್ಷಣದಲ್ಲಿ ವಿರಾಮದ ಅವಧಿಯಲ್ಲಿ ಇದ್ದ ಹೊತ್ತು, ಚಿತ್ತಾಕರ್ಷಕ ಚಿಟ್ಟೆಯನ್ನ ಇತ್ತ ಹಾರಿ ಬಿಟ್ಟ, ಬಯಕೆಯನ್ನೆ ಮನದ ಬಟ್ಟಲಲ್ಲಿ ತುಂಬಿಟ್ಟ ಎಂದು ತೀವ್ರವಾಗಿ ಅನುಭವಿಸುತ್ತಾ ಹೇಳುವ ಕವಯತ್ರಿ ಆಹ್ಲಾದದ ಜಗತ್ತಿನಲ್ಲಿ ಸಹೃದಯನ ಮನಸ್ಸನ್ನು ಸೆರೆ ಹಿಡಿಯುತ್ತಾರೆ. ತುಂಬಿದ ಬಿಂದಿಗೆಯಂಥ ಕಂಗಳು ಸಂಪಿಗೆ ಎಸಳಂಥ ಬೆರಳು. ಇಲ್ಲಿ ವ್ಯಕ್ತವಾಗುವ ಭಾವವೇ ಇಡೀ ಕವಿತೆಯ ಘನತೆಯನ್ನು ತೋರಿಸುತ್ತದೆ. ಕಂಗಳು ಬೆಳಕಾಗಿ, ಜ್ಞಾನವಾಗಿ ಕಂಡರೆ, ಬೆರಳು ಅರಿವನ್ನು ಪದಕ್ಕಿಳಿಸುವ ಬೆರಗಾಗಿ ಬಂದಿದೆ. ಅವರಿಬ್ಬರ ನಡುವಿನ ಭೇಟಿ, ಬಿಟ್ಟಸ್ಥಳಕ್ಕೆ ಹುಟ್ಟಿಕೊಂಡ ಮಾತು, ಎಂತಹ ಚಂದದ ಆಲೋಚನೆ. ಬಂದೇ ಬಂತು ಎನ್ನುವ ಈ ಪ್ರೀತಿ ನವಿಲಾಗಿ, ಬದುಕಿನ ನೆರೆಯಾಗಿ,ನೆಲೆಯ ಸೊಬಗಾಗಿ ಬಂತೆನ್ನುವುದು  ಈ ಪ್ರೇಮದ ಮೇಲಿನ  ವ್ಯಾಮೋಹಕ್ಕೆ ಉತ್ಪ್ರೇಕ್ಷೆಯಾಗಿದೆ. ಬಂದ ದಿನದಿಂದ ನಿತ್ಯದ ಹರಿವನ್ನೆ ತೊರೆಯಿಸಿದೆ, ಹಗಲುಗಳೇ ಇಲ್ಲ ಈಗ, ಹಸಿವೆನ್ನುವುದು ದೂರ, ಇದು ಬಂಧವಾಗಷ್ಟೇ ಉಳಿಯದೇ ಬಂಧನವೂ ಆಗಿದೆ. ಆದರೆ ಕವಯತ್ರಿಗೆ .ಬೆಳಗಾಗುವ ದಾರಿಯಲ್ಲಿ ಈ ಬಂಧನವೂ ಹಿತವಾಗಿದೆ. ಮುಂದಿನದೆಲ್ಲಾ ಇತಿಹಾಸ ತಪ್ಪಿತು ದಿನಚರಿಯ ಪ್ರಾಸ. ಬೆಂಕಿಯ ಕೆನ್ನಾಲಿಗೆಗೆ ಬಳಲಿದ ಹೊತ್ತು,ಹೊಸ ಕನಸುಗಳು ಮೂಡಿದ್ದು, ಹಕ್ಕಿ ಬಿಚ್ಚಿಟ್ಟ ರೆಕ್ಕೆಗಳು. ಚುಕ್ಕಿಗಳು ಅವಳ ಜೊತೆಯಾದದ್ದು,  ಆ ಸುಂದರತೆಯನ್ನು ಜೊತೆ ಮಾಡಿದ್ದು ಈ ಪ್ರೇಮ.  ಈ ಪ್ರೇಮ ಅವಳನ್ನು ಎಷ್ಟು ಬೆಂಬಲಿಸುತ್ತಿದೆ ಎಂದರೆ ನಡೆವ ಹಾದಿಗೆ ತನ್ನ  ಕಿರುಬೆರಳನ್ನು ನೀಡಿ ಹೊರಗೆ ಬರುವುದು ಕಲಿಸಿದೆ. ಆದರೆ ಜಗದ ಬಾಯಿಗೆ  ಹೊಲಿಗೆ ಹೇಗೆ ಹಾಕಲಿ ಎಂಬ ಚಿಂತೆ,  ವಿಕಾರ ನೋಟಗಳ ಹೇಗೆ ಎದುರಿಸಲಿ ಎಂಬ ಭಯ, ಆದರೂ ಧೃತಿಗೆಡದ ಈ ಕವಿತೆ ಬೆಂಕಿಯ ಜಾಡೆನ್ನುವುದ ತಿಳಿದೂ ಬೆಳಕಾಗುವ ಹಂಬಲ ಹೊತ್ತಾಕೆ. ಈ ಪ್ರೇಮ, ಕಾವ್ಯ ಪ್ರೇಮ ಅವಳಲ್ಲಿ ಅಂತರಂಗದ ಸಂಚಲನೆಯೇ ಆಗಿದೆ. ದ್ವೇಷ, ಅಸೂಯೆ, ಮೋಸ, ಮುನಿಸು, ಜಗಳ ಕಾವ್ಯಲೋಕದ  ನಿತ್ಯ ಕಾಯಕಗಳೆ ಆಗಿ ಮೆರದಿವೆ. ಒಂದು ಪ್ರೇಮದಲ್ಲಿ ಮುಳುಗುವುದೆಂದರೆ ..! ಎಷ್ಟು ಅಸ್ಪಷ್ಟ ಸಾಲುಗಳ ಬರೆದೆ.. ಅರ್ಥವಿರಲಿಲ್ಲ.. ವ್ಯರ್ಥವಾಗಲೂ ಇಲ್ಲ.. ಆ ಪುರುಷನಲ್ಲಿ, ಕಾವ್ಯ ಪುರುಷನ ಪ್ರೇಮದಲ್ಲಿ ಮುಳುಗಿದ ಸಂದರ್ಭ ಎಷ್ಟು ಅಸ್ಪಷ್ಟ ಸಾಲುಗಳಿಗೆ ಕಾರಣವಾಯಿತು ಎನ್ನುತ್ತಾಳೆ. ಆದರೆ ಅವೆಲ್ಲ ವ್ಯರ್ಥವಾಗಲಿಲ್ಲ. ಕಳೆದುಕೊಳ್ಳುತ್ತಲೇ ದಕ್ಕಿಸಿಕೊಂಡಿದ್ದು ಬಹಳಷ್ಟಿದೆ.ತೂಗಿ ಆಡಲಿಲ್ಲ.. ಸೋಗು ನಟಿಸಲಿಲ್ಲ. ಎಷ್ಟು ದಕ್ಕಿದೆವು ನಾವು ಒಬ್ಬರಿಗೊಬ್ಬರು ಏನೆಲ್ಲಾ ಕಳೆದದ್ದು? ಪ್ರೀತಿಯಲ್ಲಿ ಸ್ವಾರ್ಥ ವ್ಯಕ್ತಿತ್ವರಳಿಸುವ ಬದಲು ಸಂಕುಚಿತಗೊಳಿಸುತ್ತದೆ. ಒಳಗಿನ ಸೆಲೆ ಉಕ್ಕುತ್ತಲೆ ಇರಬೇಕು. ಬರಿದಾಗದಂತೆ. ಲೌಕಿಕದ ಸುತ್ತ ನೆರೆದ ಬಯಕೆಗಳು, ಹೆಣ್ಣಿನ ಮನಸ್ಸು ಬಯಸುವ ಸುಕೋಮಲ ಪ್ರೀತಿ. ಕಾರಣವಿಲ್ಲದೇ ಬಂದ ಈ ಸಂಗತಿ ಕಾಲವಲ್ಲದ ಕಾಲದಲ್ಲಿ ಹತ್ತಿರವಾದದ್ದು,  ಅತಿರೇಕದ ಭಾವಗಳು ಎನ್ನಿಸಿದರೂ ಉತ್ಕಟತೆಯನ್ನೆ ಪ್ರೇಮದ ಮದಿರೆಯನ್ನೇ ಕವಿತೆ ಹೇಳಿದ್ದು ಮನಸ್ಸು ಅದರೊಳಗೆ ನಾನೆ ಆಗಿ, ನನ್ನೊಳಗೆ ಕವಿ ಕಂಡಂತಾಗಿ, ಬಹುಶಃ  ಒಬ್ಬ ಆರ್ದ್ರ ಮನಸ್ಸಿನ ಹೆಣ್ಣುಗಳ ಪ್ರತೀಕವಾಗಿ      ಕವಯತ್ರಿ ಕಾಣುತ್ತಾರೆ. ನಿತ್ಯದ ಬದಲಾಗದ ದಿನಚರಿಯಲ್ಲಿ ಏಕತಾನತೆಯನ್ನೆ ಉಂಡು ನರಳಿ ಮೌನದ ಸದ್ದಿಗೆ ಮಸುಕಾಗುತ್ತಿದ್ದ ಜೀವವೊಂದರ ಬದಲಾದ ನಿಲುವು, ಹೊಸತನ, ಅದಕ್ಕೆ ಕಾರಣವಾದ ಸಂಗತಿಯೊಂದರ ಸುತ್ತ ಸುತ್ತುವ ಕವಿತೆ, ಬದುಕನ್ನೆ ತೆರೆದಿಟ್ಟದೆ. ಕಾವ್ಯ ಅವಳೊಳಗಿನ ಚೇತನವನ್ನು ಬಡಿದೆಬ್ಬಿಸಿದೆ,  ಜನರ ನುಡಿಗಳಿಗೆ ಭಯಗೊಳ್ಳುತ್ತಿದ ಆಕೆ ಈಗದನ್ನು ಮೀರಿದ್ದಾಳೆ. ಅವರ ವಕ್ರ ದೃಷ್ಟಿ ಅವಳಿಗೆ ಅಭ್ಯಾಸವಾಗುತ್ತಾ, ಹೆಜ್ಜೆಗಳು ದೃಢವಾಗುತ್ತಿವೆ. ಆದರೂ ಯಾವುದೂ ಸ್ಥಿರವಲ್ಲ ಎಂಬ ಪ್ರಜ್ಞೆ ಆಕೆಗಿದೆ. “ಗಾಳಿಯಲ್ಲಿ ಹಾಡು ಹೇಳಬೇಡ” ಎನ್ನುವ ಕವಯತ್ರಿ  ಇನ್ನೂ ಅಸ್ಥಿರತೆಯನ್ನು ಎದುರಿಸುತ್ತಿರುವ ಸಾಂಕೇತಿಕ. ಎಲ್ಲಿ ಪ್ರಾರಂಭವೋ ಅಲ್ಲೆ ಕೊನೆ ಎಂಬ ದರ್ಶನ ನೀಡುವಂತೆ ಮತ್ತೆ ಕೊನೆಯ ಸಾಲುಗಳು ಓದುಗನ ವ್ಯಾಕುಲ ಗೊಳಿಸುತ್ತವೆ. ಪೇಮದ ಹಾದಿಯಲ್ಲಿ ಕಾಣುವ ಎಲ್ಲ ಏಳುಬೀಳುಗಳು, ನೋವು ನಲಿವುಗಳು ಇಲ್ಲಿ ಸಹಜವಾಗಿ ಬಂದಿವೆ. ಇದು ಬರೀ ಪ್ರಿಯನ ಕುರಿತಾದ ಕನವರಿಕೆಯಲ್ಲ. ಅದಕ್ಕೂ ಮೀರಿ ತನ್ನ ತಾನು ಕಂಡುಕೊಳ್ಳುವ ದಾರಿಯಲ್ಲಿನ ಗತಿ ಈ  ಕವಿತೆ ಅತಿಯಾದ ವಿವರಣೆಗಳ ಭಾರದಿಂದ ನಲುಗಿದೆ. ಸೂಕ್ಷ್ಮತೆಯೂ, ಕಿರಿದರಲ್ಲಿ ಹಿರಿದರ್ಥವನ್ನೂ ಹೇಳುವುದು ಕವಿತೆಯ  ಶ್ರೇಷ್ಟತೆ.ಇಲ್ಲಿ ಆ ಸಂಗತಿಗಳ ಕೊರತೆ ಕಾಣುತ್ತಿದೆ.ಆದರೂ ಕವಿತೆ ಹೃದಯವನ್ನು ಗೆದ್ದಿದೆ. *****************

ಅಕಾರಣ ಅಕಾಲ Read Post »

ಇತರೆ

ಕಾದಂಬರಿ ಕುರಿತು ಚೋಮನ ದುಡಿ ಡಾ.ಶಿವರಾಮ ಕಾರಂತ ತಿಲಕ ನಾಗರಾಜ್ ಹಿರಿಯಡಕ ಚೋಮನ ದುಡಿಯ ಮೋಡಿಗೆ ಮನಸೋತಿರುವೆ…  ಯಾವುದೇ ಕೃತಿ ಓದಿದರೂ ನನ್ನನ್ನು ಮತ್ತೆ ಮತ್ತೆ ಕಾಡುವುದು ನೆಚ್ಚಿನ ಸಾಹಿತಿ ಕಾರಂತಜ್ಜರ ‘ಚೋಮನ ದುಡಿ’ ಅಂದಿನ ಕಾಲದ ಕಾರ್ಗತ್ತಲ ಸ್ವರೂಪ, ಆ ಕತ್ತಲನ್ನು ಲೆಕ್ಕಿಸದೆ ಜನರು ಊರ ಜಾತ್ರೆಯನ್ನು ಸಂಭ್ರಮಿಸುತ್ತಿದ್ದ ಪರಿ, ಇಂದು ಹಗಲಿನಂತೆ ಬೆಳಗುವ ರಾತ್ರಿಯ ಕಾಣುವ ನಮನ್ನು ಬೇರಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ಚೋಮನ ದುಡಿಯಲ್ಲಿ ಬರುವ ಪ್ರತಿಯೊಂದು ಪಾತ್ರಗಳು ಮನಸ್ಸಿಗಿಳಿಯುತ್ತವೆ. ನಮಗಿವತ್ತು ಕೇವಲವೆನಿಸುವ  ಇಪ್ಪತ್ತು ರೂಪಾಯಿ ಈ ಕಾದಂಬರಿಯಲ್ಲಿ ಒಗ್ಗಟ್ಟಾಗಿದ್ದ ಚೋಮನ ಸಂಸಾರವನ್ನು ಛಿದ್ರಗೊಳಿಸಿಬಿಡುತ್ತದೆ. ಹೇಗೋ ಗಂಜಿ,ಉಪ್ಪು, ಕಾಳುಕಡಿ ತಿಂದುಂಡಿದ್ದ ಸಂಸಾರ ಚೋಮ ಮಾಡಿದ್ದ ಸಾಲದ ಸುಳಿಯೊಳಗೆ ಸಿಲುಕಿ ನಲುಗುತ್ತದೆ. ಅಪ್ಪನ ಸಾಲ ತೀರಿಸ ಹೊರಟ ಗುರುವ, ಚನಿಯರಲ್ಲಿ ಗುರುವ ತನ್ನ ವಯೋ ಸಹಜ ಬಯಕೆಯಿಂದ ಅವಳಾರನ್ನೋ ಕಟ್ಟಿಕೊಳ್ಳುತ್ತಾನೆ. ಚನಿಯ ಜ್ವರಕ್ಕೆ ಬಲಿಯಾಗುತ್ತಾನೆ. ಇಷ್ಟಾಗಿದ್ದರೆ ಸಾಕಿತ್ತೇನೋ ಇಪ್ಪತ್ತು ರೂಪಾಯಿ ಯಿಂದ ಇಪ್ಪತ್ತೈದಕ್ಕೇರಿದ ಅಪ್ಪನ ಸಾಲದ ಹೊರೆಯನ್ನು ಬೆಳ್ಳಿ ಹೊರುತ್ತಾಳೆ , ಕೊನೆಗೆ ತೀರಿಸುತ್ತಾಳೆ ಕೂಡ. ಆದರೆ ಅಲ್ಲೊಂದಷ್ಟು ನಡೆಯುವ ಘಟನಾವಳಿಗಳು ಮನ ಕಲಕುತ್ತವೆ‌. ಎಷ್ಟಂದರೂ ಹೆಣ್ಣುಮಗಳಲ್ಲವೇ? ನೀಲನ ಘೋರ ಅಂತ್ಯಕ್ಕೆ ಛೆ! ಎಂಬ ಉದ್ಗಾರ ನಮಗರಿವಿಲ್ಲದೆ ಹೊರಬರುತ್ತದೆ. ಇಲ್ಲಿ ಬೆಳ್ಳಿ ಮತ್ತು ಚೋಮನ ಪಾತ್ರಗಳು ಬಹುವಾಗಿ ಕಾಡುತ್ತವೆ. ತಂದೆಯನ್ನು, ಅಣ್ಣತಮ್ಮಂದಿರನ್ನು ಬಹುವಾಗಿ ಪ್ರೀತಿಸುವ, ತಾಯಿ, ತಂಗಿ,ಅಕ್ಕ , ಜವಾಬ್ದಾರಿಯುತ ಹೆಣ್ಣುಮಗಳು ಹೀಗೆ ವಿವಿಧ ಪಾತ್ರಗಳನ್ನು ನಿಭಾಯಿಸುವ ಬೆಳ್ಳಿ ಹಾದಿ ತಪ್ಪಿದಳೆ? ಎಂದುಕೊಳ್ಳುವಾಗ ಇಲ್ಲ ವಯೋ ಸಹಜ ಬಯಕೆಗೆ ಬಲಿಯಾದಳೆ? ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೂ ಬೆಳ್ಳಿಯ ಬಗ್ಗೆ ಮನಸ್ಸಿನ ಮೂಲೆಯಲ್ಲಿ ಮರುಕವೊಂದು ಹುಟ್ಟಿಕೊಳ್ಳುತ್ತದೆ. ಇನ್ನು ಚೋಮನೇನಾದರೂ ಸಿಕ್ಕಿದರೆ ” ಅಯ್ಯೋ ಚೋಮ ಹೆಂಡದಂಗಡಿಗೆ ಹಾಕೊ ದುಡ್ಡಿಂದ ಸಾಲಾನಾದ್ರು ತೀರಿಸ್ಬಾರ್ದಾ? ” ಅಂತ ಕೇಳಿಬಿಡಬೇಕು ಎನ್ನುವಷ್ಟು ನೈಜವಾಗಿ ಮೂಡಿಬಂದಿರುವ ಪಾತ್ರ ಚೋಮನದು. ಮೊದಲಿನಿಂದ ಕೊನೆಯವರೆಗೂ ಚೋಮನ ಜೊತೆಗಾರನಾಗಿ ಕಾದಂಬರಿಯುದ್ದಕ್ಕೂ ಸದ್ದು ಮಾಡೋ  ದುಡಿ ಕೊನೆಯಲ್ಲಿ  ತನ್ನ ಸದ್ದಿನೊಂದಿಗೆ ಚೋಮನ ಉಸಿರನ್ನೂ ಜೊತೆಗೆ ಚೋಮನ ಬೇಸಾಯದ ಕನಸನ್ನೂ ಕರೆದೊಯ್ದು ಕಣ್ಣಂಚನ್ನು ತೇವಗೊಳಿಸುತ್ತದೆ. ಬದುಕಿನುದ್ದಕ್ಕೂ ಚೋಮನ ದುಡಿಯ “ಡಮ ಡಮ್ಮ ಢಕ ಢಕ್ಕ” ಸದ್ದು ಸದಾ ಕರ್ಣಗಳಲ್ಲಿ  ಅನುರಣಿಸುತ್ತಲೇ ಇರುತ್ತದೆ. ******************************* ತಿಲಕ ನಾಗರಾಜ್ ಹಿರಿಯಡಕ

Read Post »

ಇತರೆ

ಕಾದಂಬರಿ ಕುರಿತು ಮಲೆಗಳಲ್ಲಿ ಮದುಮಗಳು ಕುವೆಂಪು ಚಂದ್ರಿಕಾ ನಾಗರಾಜ್ ಹಿರಿಯಡಕ ಮಲೆಯ ಝೇಂಕಾರಗಳಿಗೆ ಕಿವಿಯಾಗುತ್ತಾ… ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಅನೇಕ ಕಾದಂಬರಿಗಳು ಜೀವಂತಿಕೆ ಪಡಕೊಂಡಿವೆ. ಅನೇಕ ಸಾಹಿತಿಗಳು ತಮ್ಮ ಕೃತಿಗಳ ಮೂಲಕಾನೇ ಉಸಿರಾಡುತ್ತಿದ್ದಾರೆ. ಅಂತಹ ಮೇರು ಸಾಹಿತಿಗಳಲ್ಲಿ ಪ್ರಮುಖರು ಕುವೆಂಪು. ಪ್ರಕೃತಿಯೊಂದಿಗಿನ ನಂಟಿನಲ್ಲೇ ಸಂಬಂಧಗಳನ್ನು ಅರಳಿಸುತ್ತಾ ಸಾಗಿಸುವ ಶ್ರೇಷ್ಠ ಕವಿ ಕುವೆಂಪು. ಅವರ ಕೃತಿಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ್ದು “ಮಲೆಗಳಲ್ಲಿ ಮದುಮಗಳು”. ಕಣ್ಣಿಗೆ ದಣಿವೇ ನೀಡದೆ ಓದಿಸಿಕೊಂಡು ಹೋಗುವ ಕಾದಂಬರಿ. ಮಲೆಗಳಲ್ಲಿ ಕಾಡುವ ಮದುಮಗಳ ಬರಹ ಕಾವ್ಯವಿದು.ಕಾದಂಬರಿಯ ಪ್ರತೀ ಪಾತ್ರವೂ ಮುಖ್ಯವೇ…ಒಂದೊಂದೂ ಕವಿತೆಯಂತೆ ಇಳಿಯುತ್ತವೆ. ಗುತ್ತಿ – ತಿಮ್ಮಿಯ ಪ್ರೇಮ, ಐತ – ಪೀಂಚಲುವಿನ ಮೋಹ, ಮುಕುಂದಯ್ಯ – ಚಿನ್ನಮ್ಮರ ಒಲವ ಚೆಲುವು ಎಲ್ಲವೂ ಇಲ್ಲಿ ದೊಡ್ಡ ಸೊಬಗು…ಈ ಸೊಬಗ ಹಿಂದೆ ಹಿಂದೆ ಹೋದಷ್ಟು ಎಲ್ಲಿಯೂ ನಿಲ್ಲಲಾಗುವುದಿಲ್ಲ…ದಾರಿ ಸಾಗಿದಂತೆ ಸಾಗುತ್ತಿರಬೇಕಷ್ಟೇ…ಪ್ರೇಮಕ್ಕೆ ಕೊನೆ ಎಂಬುವುದಿಲ್ಲ…ಅದು ಯಾರನ್ನೂ ಸೆಳೆಯಬಲ್ಲ ಸೂಜಿಗಲ್ಲು…ಪ್ರಕೃತಿಯಂತೆ….ಇಲ್ಲಿ ಪ್ರೇಮ ಹಾಗೂ ಪ್ರಕೃತಿ ಒಂದಾಗಿ ಮೇಳೈಸಿದೆ..ಹಾಗಂದ ಮೇಲೆ ಬೇರೆ ದಿಗ್ಭ್ರಮೆಗಳು ಬೇಕೇ…! ಪ್ರೀತಿಯೊಂದಿಗೆ ಬೆಸೆದ ಬಂಧಗಳ ನಡುವೆ ಜಾತಿಯ ನರಳಾಟ ಕಿವಿಗೆ ಕರ್ಕಶವಾಗುತ್ತದೆ.ಜಾತಿ ಭೇದದ ವಾಸನೆ ಮೂಗಿಗೆ ಬಡಿಯುತ್ತದೆ. ದೈಹಿಕ ವಾಂಛೆಗಳಿಗೆ ಬಲಿಯಾದ ಮುಗ್ಧ ಪ್ರೇಮದ ಕಿರುಚಾಟ ಕಿವಿಗೆ ಅಡರುತ್ತದೆ. ಇಲ್ಲಿ ಕಾಡುವ ದುರಂತಗಳಿವೆ..ಒಂದು, ಎಳಸು ಪ್ರೇಮವೊಂದರ ದುರ್ಮರಣ, ಮತ್ತೊಂದು ಮೂಕ ಪ್ರೇಮದ ಸಾವು…ಸಿರಿವಂತನಾದ ದೇವಯ್ಯನಿಗೆ ಇಟ್ಟುಕೊಂಡವಳಾಗಿಯಾದರೂ ಜೊತೆಯಾಗ ಬೇಕೆಂಬೋ ಕಾವೇರಿಯ ಉತ್ಕಟ ಪ್ರೇಮವಿಲ್ಲಿ ಭಯಂಕರ ಅಂತ್ಯ ಕಾಣುತ್ತದೆ ನೋಡಿ…ಅದು ಹೆಣ್ಣು ಬಾಕತನವನ್ನು ತೋರಿಸಿದೆ. ಆಕೆಗೆ ಬೇಕಾಗಿದ್ದು ದೇವಯ್ಯ…ಪ್ರೇಮ…ಅದಕ್ಕಾಗಿ ಚೀಂಕ್ರನೆಂಬೋ ನಂಬಿಕೆಯ ಹಿಂದೆ ಹೊರಡುತ್ತಾಳೆ. ಹೆಣ್ಣೆಂಬ ಕಾರಣಕ್ಕೆ ಭಕ್ಷಣೆಗೊಳ ಪಡುತ್ತಾಳೆ…ತನ್ನನ್ನು ತಾನು ಕೊಂದು ಕೊಳ್ಳುತ್ತಾಳೆ…ಕಾದಂಬರಿಯ ಆರಂಭ ಭಾಗದಲ್ಲಿ ಬರೋ ‘ಹುಲಿಯಾ’ ನಾಯಿಗುತ್ತಿಯ ಬದುಕಿನ ಪ್ರತೀ ಹೆಜ್ಜೆಗಳನ್ನು ಮೂಸುತ್ತಾ ಹಿಂಬಾಲಿಸುವ ನಿಯತ್ತಿನ ಜೀವಿ…ಒಂದರ್ಥದಲ್ಲಿ ಈ ಕಾದಂಬರಿಯಲ್ಲಿ ಅದರ ಪಾತ್ರವೂ ಖುಷಿ ಕೊಡುತ್ತದೆ…ಕೊನೆಗೆ ನೋಯಿಸುತ್ತದೆ…ನಿಯತ್ತು…ಪ್ರೀತಿ ಎಲ್ಲದಕ್ಕೂ ಹುಲಿಯಾ ಸಾಕ್ಷಿ…ಮಲೆ ಪ್ರೇಮದ ಗಂಧ ಹುಲಿಯಾನ ಏದುಸಿರಿನೊಂದಿಗೆ ಬೆರೆತಂತೆ ಭಾಸವಾಗುತ್ತದೆ. ಅದೊಂದು ಪ್ರೇಮಭರಿತ ಒಡನಾಟವಲ್ಲದೇ ಮತ್ತೇನು…ಅಕ್ಕಣಿಯ ಮೇಲೆ ಅಕ್ಕರೆ ಹೊಂದಿದ್ದ ಚೀಂಕ್ರ ಪಿಜಿಣನ ಸಾವನ್ನು ಬಯಸಿ ಸ್ವಾರ್ಥಿಯಾದ…ಆದರೆ….ಮೂಕ ಪ್ರಾಣಿ ಹುಲಿಯಾದು ಯಾವ ಸ್ವಾರ್ಥವಿರದ, ನಿಷ್ಕಲ್ಮಶ ನಿಷ್ಠೆಯ ಪ್ರೇಮದ ಕುರುಹಾಗಿ ಉಳಿಯುತ್ತದೆ. ಕೊನೆಗೊಂದು ಪ್ರೇಮಮಯ ಅಂತ್ಯ…ಕ್ಷಮಿಸಿ, ಅಂತ್ಯವೆಲ್ಲಿಂದ ಬಂತು..! ಒಂದಷ್ಟು ವಿಚಾರಗಳನ್ನ, ಪಾತ್ರಗಳನ್ನು ಒಳಗೆ ಕಾಡಲು ಬಿಟ್ಟ ಮೇಲೆ ಅಲ್ಲಿ ಅಂತ್ಯವೆಂಬುದು ಇರುತ್ತದೆಯೇ…ಕೊನೆ ಎಲ್ಲಿಂದ ಅಲ್ಲವೇ…ಒಂದರ ಅಂತ್ಯವೆಂಬಂತೆಯೇ ಮತ್ತೊಂದರ ಆರಂಭ…ಇಲ್ಲೂ ಕಾದಂಬರಿ ಕೊನೆಯ ಪುಟ ತಲುಪಿದೆಯಷ್ಟೇ ಮಳೆಯಲ್ಲಿ ಮಿಂದು ಎದ್ದ ಮಲೆಯ ಹಸಿರೊಂದಿಗೆ ಬೆರೆತ ಝೀರುಂಡೆಗಳ ಸದ್ದಿನಂತೆ ಸದಾ ಅನುರಣಿಸುತ್ತದೆ…ನಮ್ಮನ್ನೂ ಮಲೆಯ ದೃಶ್ಯ ಕಾವ್ಯದೊಳಗೆ ಬಂಧಿಸುತ್ತದೆ. ********************************* ಚಂದ್ರಿಕಾ ನಾಗರಾಜ್ ಹಿರಿಯಡಕ

Read Post »

You cannot copy content of this page

Scroll to Top