ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಬನ್ನಿ ಮನೆಗೆ ಹೋಗೋಣ. . .

ವಿಶೇಷ ಲೇಖನ ಬನ್ನಿ ಮನೆಗೆ ಹೋಗೋಣ. . . ಅಂಜಲಿ ರಾಮಣ್ಣ ಬಡತನ ಮತ್ತು ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತದೆ ಎನ್ನುವ ಕಾರಣಗಳನ್ನು ನೀಡಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ತಾಯ್ತಂದೆಯರು ತಮ್ಮ ಮಕ್ಕಳನ್ನು ಬೆಂಗಳೂರಿನ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ, NGOಗಳಲ್ಲಿ ದಾಖಲಿಸಿರುತ್ತಾರೆ. ಈ ಕಾರಣಗಳು ಒಂದು ಹಂತದವರೆಗೂ ನಿಜವೇ ಆದರೂ ಹೀಗೆ ಮಕ್ಕಳನ್ನು ದೂರ ಮಾಡಿರುವ ತಂದೆ ತಾಯಿಯರಲ್ಲಿ ತಮ್ಮ ಜವಾಬ್ದಾರಿಯನ್ನು ವರ್ಗಾವಣೆ ಮಾಡುವ ಮನೋಭಾವವೇ ಎದ್ದು ಕಾಣುತ್ತದೆ. ಅವರುಗಳ ಉಡಾಫೆತನವನ್ನು ವ್ಯಾಪಾರೀಕರಣಗೊಳಿಸಿ,  ಸಮಾಜ ಸೇವೆ ಎನ್ನುವ ಹೆಸರಿನಲ್ಲಿ ನಾಯಿಕೊಡೆಗಳಂತೆ ಬೆಂಗಳೂರಿನ ಪ್ರತೀ ಗಲ್ಲಿಯಲ್ಲೂ ’ಸೇವಾಶ್ರಮ’ ಎನ್ನುವ ಬೋರ್ಡ್ ಕಾಣುತ್ತದೆ. ಬಹಳಷ್ಟು ಸಂಸ್ಥೆಗಳಿಗೆ ಸರಿಯಾದ ನೋಂದಾವಣೆ ಇರುವುದಿಲ್ಲ. ಯಾವ ಬಡತನ ಎನ್ನುವ ಕಾರಣಕ್ಕೆ ಮಕ್ಕಳು ಸುಖವಾಗಿರಲು ಇಲ್ಲಿನ ಸಂಸ್ಥೆಗೆ ಬಂದಿರುತ್ತಾರೋ , ವಾಸ್ತವದಲ್ಲಿ ಇಲ್ಲಿ ಇನ್ನೂ ಹಾಳಾದ ಪರಿಸರದಲ್ಲಿ ಇರುತ್ತಾರೆ. ಮಾನಸಿಕ ಆರೋಗ್ಯವೂ ಕುಂದಿರುತ್ತದೆ. Inferiority complexನ ಬಲಿ ಪಶುಗಳಾಗಿರುತ್ತಾರೆ. ಭವಿಷ್ಯದೆಡೆಗೆ ನಿರ್ವಿಣ್ಣರಾಗಿರುತ್ತಾರೆ. ಸಂಸ್ಥೆಗಳು ಅವರಲ್ಲಿನ ಹೆಣ್ಣು ಮಕ್ಕಳನ್ನು ಬ್ಯೂಟಿ ಪಾರ್ಲರ್‍ನ ಕೆಲಸಕ್ಕೆ ಹೊರತಾದ ಯಾವುದೇ ಕೌಶಲ್ಯ ಕಲಿಸಲು ಸೋಲುತ್ತಿವೆ. ಅಬ್ಬಬ್ಬಾ ಎಂದರೆ ಮಕ್ಕಳು ನಾಲ್ಕು ಚೂಡಿದಾರ್ ಹೊಲಿಯುವಷ್ಟು ಟೈಲರ್ ಆಗುತ್ತಿದ್ದಾರೆ ಅಷ್ಟೇ. ಇಲ್ಲಿರುವ ಬಾಲಕಿಯರದ್ದೂ , ಅದೆಷ್ಟೋ ಕುಟುಂಬದ ಜೊತೆಯಲ್ಲಿ ಇರುವ ಹೆಣ್ಣು ಮಕ್ಕಳಂತೆ ಮದುವೆಯೇ ಪರಮ ಗುರಿಯಾಗಿದೆ. ಯಾವುದೋ ಸಮಯದಲ್ಲಿ ತಮ್ಮ ಮಕ್ಕಳನ್ನು ಸಂಸ್ಥೆಗಳಿಗೆ ದಾಖಲು ಮಾಡಿರುವ ಪೋಷಕರು ನಂತರ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬೇಕು ಎನ್ನುವು ಆಶಯದಿಂದ ಸಂಸ್ಥೆಯನ್ನು ವಿನಂತಿಸಿಕೊಂಡರೂ ಹತ್ತಾರು ಕಾರಣಗಳನ್ನು ಮುಂದೆ ಒಡ್ಡಿ ಮಕ್ಕಳನ್ನು ಕುಟುಂಬದ ಜೊತೆಗೆ ಹೋಗದಂತೆ ಸಂಸ್ಥೆಯವರು ತಡೆಗಟ್ಟುತ್ತಿರುವುದು ವಾಸ್ತವ. ಇಂತಹ ಸನ್ನಿವೇಶಕ್ಕೆ ಕರೋನ ಧಾಳಿ ತಿಳಿಗಾಳಿ  ತೀಡಿದಂತಾಗಿದೆ. ಕರೋನ ಕೃಪೆಯಿಂದ  ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಹಪಹಪಿಸುತ್ತಿದ್ದಾರೆ. ಸಂಸ್ಥೆಗಳೂ ತಮ್ಮ ಜವಾಬ್ದಾರಿಯಿಂದ ಹೊರಬರಲು ಮಕ್ಕಳನ್ನು ಮನೆಗೆ ಕಳುಹಿಸಲು ಉತ್ಸುಕರಾಗಿದ್ದಾರೆ. ಬಡ ಕುಟುಂಬಗಳು ತಮ್ಮತಮ್ಮ ತವರಿಗೆ ಹಿಂದಿರುಗುತ್ತಿದ್ದಾರೆ ಮಕ್ಕಳೊಂದಿಗೆ,  ಪರಿಸ್ಥಿತಿ ಸರಿ ಹೋಗುತ್ತದೆ ಆಗ ಮತ್ತೆ ಸಂಸ್ಥೆಗೆ ಸೇರಿಸುವ ಎನ್ನುವ ಭಾವದೊಂದಿಗೆ. ಸಂಸ್ಥೆಗಳೂ ಇವರಲ್ಲದಿದ್ದರೆ ಇನ್ನೊಬ್ಬರು, ಈ ದೇಶದಲ್ಲಿ ಮರುಳಾಗುವ ಜನಕ್ಕೇನು ಕೊರತೆಯೇ ಎನ್ನುವ ಆಶಾಭಾವದೊಂದಿಗೆ ಮಕ್ಕಳನ್ನು ಮನೆ ಸೇರಿಸುತ್ತಿದ್ದಾರೆ. ಅಂತೂ ಕಾನೂನು, ಕಾರ್ಯಾಂಗ ಮಾಡಲು ಸೋತಿದ್ದನ್ನು ಕರೋನ ಒಂದಷ್ಠ್ರ ಮಟ್ಟಿಗೆ ಜಾರಿಗೆ ತಂದಿದೆ. ಮಕ್ಕಳು ಎಷ್ಟೋ ದಿನಗಳ ನಂತರ ಅವ್ವ, ಅಮ್ಮ, ಅಪ್ಪ ಎನ್ನುವ ನಗುವನ್ನು ಸ್ಪರ್ಶಿಸುತ್ತಿದ್ದಾರೆ. ವಿಕೇಂದ್ರೀಕರಣಗೊಳ್ಳುತ್ತಿರುವ ಆರ್ಥಿಕತೆ ಮತ್ತೆ ಕೆಲವೇ ಪ್ರದೇಶಗಳಲ್ಲಿ ತನ್ನ ಪ್ರಾಬಲ್ಯ ಬೆಳೆಸಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೂ ಮಕ್ಕಳು  ಮನೆಯ ಮಣ್ಣಲ್ಲಿ ಕಿಲಗುಟ್ಟುತ್ತಿರುತ್ತಾರೆ. ಮನೆ ಎಂದರೆ ಅವರಿಗೆ ಬರಿಯ ಮಣ್ಣಲ್ಲ ಅವರ ಅಕ್ಕ ಅಣ್ಣ  ತಂಗಿ ತಮ್ಮಂದಿರ ಪರಿಮಳ. ಅಜ್ಜಿಯ ತೂತು ಬಿದ್ದ ಸೆರಗು, ತಾತನ ಮೋಟು ಬೀಡಿ, ದೊಡ್ಡಪ್ಪನ ಜಗಳ, ಅತ್ತೆ ಬೀದಿ ಬದಿಯಲ್ಲಿ ಕರಿದು ಕೊಡುವ ಕಜ್ಜಾಯ, ಸಡಿಲಾದ ಚೊಣ್ಣವನ್ನು ಮೇಲೆಕ್ಕೆಳುದುಕೊಳ್ಳುತ್ತಾ ಮೂಲೆ ಅಂಗಡಿಗೆ ಹೋಗಿ ಬೆರಳಿಗೆ ಅಂಗಿಯಾಗುವ ಬೋಟಿ! ಓಹ್, ಎಲ್ಲಾ ಮಕ್ಕಳನ್ನೂ ನಗರೀಕರಣಗೊಳಿಸಬೇಕು ಎನ್ನುವ ಅಮಾವಸ್ಯೆ ನಾಗರೀಕತೆಯನ್ನು ಅದ್ಯಾವಾಗ ಆವರಿಸಿಕೊಂಡಿತೋ!  ಮಕ್ಕಳನ್ನು ಕುಟುಂಬದಿಂದ ಬೇರ್ಪಡಿಸಿ ಬೆಳೆಸುವುದು ಹೇಗಿದೆ ಎಂದರೆ, ಪ್ರಾಕೃತಿಕವಾಗಿ ಸ್ವಜಾತಿಯ ಗುಂಪಿನೊಂದಿಗೆ ಗುರುತಿಸಿಕೊಂಡು, ಇದ್ದು ಬೆಳೆದು ಬದುಕು ರೂಪಿಸಿಕೊಳ್ಳಬೇಕಿರುವ ಜೀವಿಯನ್ನು ಸರ್ಕಸ್‍ ಕಂಪನಿಯಲ್ಲಿ ಕೂಡಿಟ್ಟು, ತರಬೇತಿಕೊಟ್ಟು, ಅಸಹಜಕ್ಕೆ ಒಗ್ಗುವಂತೆ ಪಳಗಿಸಿ ಮತ್ತೆ ತನ್ನ ಪ್ರಾಕೃತಿಕ ಗುಂಪಿನೊಂದಿಗೆ ಒಂದು ಮಾಡುವಂತೆ. ಮಕ್ಕಳ ಹಕ್ಕುಗಳ ಒಡಂಬಡಿಕೆ ಇಂದ, ಮಕ್ಕಳ ಹಕ್ಕುಗಳ ಬಗ್ಗೆ ನಮ್ಮಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕಾಯಿದೆ, ಯೋಜನೆಗಳ ಮೂಲ ಉದ್ದೇಶ ಮಕ್ಕಳು ಅವರ ಕುಟುಂಬದ ಜೊತೆಯಲ್ಲಿಯೇ ಬೆಳೆಯಬೇಕು ಎನ್ನುವುದೇ ಆಗಿದೆ. ಇದು ಕೇವಲ ಉಳ್ಳವರಿಗೆ  ಮಾತ್ರ ಅನ್ವಯ ಆಗುವುದಿಲ್ಲ,  ಅಲೆಮಾರಿ ವರ್ಗದ ಕುಟುಂಬವೂ ತಮ್ಮ ಮರಿಗಳನ್ನು ತಮ್ಮದೇ ಗೂಡೆಯಲ್ಲಿಟ್ಟು ಕಾಪಾಡಬೇಕು. ಎಲ್ಲೆಡೆಯಲ್ಲಿಯೂ ಮಕ್ಕಳ ದೈಹಿಕ,  ಮಾನಸಿಕ, ಭಾವನಾತ್ಮಕ ಮತ್ತು ಬುದ್ಧಿಮತ್ತೆಯ ಆರೋಗ್ಯ ಕಾಪಾಡಲು ಪರ್ಯಾಯ ಬೆಂಬಲ ಕೊಡುವುದು ಮಾತ್ರ ಸರ್ಕಾರದ ಜವಾಬ್ದಾರಿ ಬಾಕಿಯಂತೆ ಮಕ್ಕಳು ಅವರವರ ಕುಟುಂಬದ ಹೊಣೆ ಮತ್ತು ಸಾಮಾಜಿಕ ಕರ್ತವ್ಯ. ನಮ್ಮ ಸಂವಿಧಾನದದ ಪರಿಚ್ಚೇಧ 14,15 ಮತ್ತು 21 ಇವುಗಳ ಪ್ರಕಾರ ಮತ್ತು Universal Declaration of Human Rights, Convention For Elimination of all All Forms of Violence Against Women and Child Rights Convention ಇವುಗಳ ಆಶಯ “Institutionalization shall be a last resort” ಕರೋನ ಸನ್ನಿವೇಶವು ಪಂಚಾಯ್ತಿ ಅಧಿಕಾರ ವ್ಯವಸ್ಥೆಯನ್ನು ಎಚ್ಚರಗೊಳಿಸಿದೆ. ಅಂಗನವಾಡಿಗಳ ಕಡೆಗೆ ಸರ್ಕಾರದ ಹೆಚ್ಚು ಗಮನ ಹರಿಯುವಂತೆ ಮಾಡಿದೆ. ಅಂತರ್ಜಾಲ ಮುಖೇನ ಶಿಕ್ಷಣ ಏರು ಮುಖ ಕಾಣುತ್ತಿದೆ. ನ್ಯಾಯಾಲಯಗಳು ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಉದ್ಯೋಗ ಯೋಜನೆಗಳು ಸರಿಯಾಗಿ ಜಾರಿಗೆ ಮಾಡುವಂತೆ ಕಾರ್ಯಾಂಗಕ್ಕೆ ಆದೇಶ ನೀಡಿವೆ. ಈ ಎಲ್ಲಾ ಶ್ರಮಗಳಿಂದ ಮಕ್ಕಳು ಕುಟುಂಬದ ಜೊತೆ ಇರುವಂತೆ ಆಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸರ್ಕಾರದ ಮತ್ತು ಸಾಂಸ್ಥಿಕ ವ್ಯವಸ್ಥೆಯ ಬಲದಿಂದ ವ್ಯವಸಾಯ ಊರ್ಜಿತಗೊಂಡರೆ ಕಳೆದು ಹೋಗಿರುವ ಒಂದು ತಲೆಮಾರಿನ ಮನಸ್ಸು ರೈತನಾಗುತ್ತೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮನೆಗಳಲ್ಲಿಯೇ ಹೆಚ್ಚು, ಬಡತನ ಬಾಲ ಕಾರ್ಮಿಕತೆಗೆ ಮೂಲ ಎನ್ನುವ ಕರಾಳ ಸತ್ಯವನ್ನು ಭೂತಗನ್ನಡಿಯಲ್ಲಿ ದಪ್ಪಗಾಗಿಸುವ ಪ್ರತಿವಾದಿಗಳು ಮಕ್ಕಳನ್ನು ಸಂಸ್ಥೆಯಲ್ಲಿ ಇರಿಸುವುದು ಸುರಕ್ಷಿತ ಎನ್ನುತ್ತಾರೆ. ಆದರೆ ಲ್ಹಾಕ್ಗೆಡೌನ್ ಕಾರಣದಿಂದ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಹಂಚಿಹೋಗಿ ಮನೆ ಸೇರಿಸಿಕೊಂಡಿರುವ ಮಕ್ಕಳಿಗೆ, ಅವರ ಸಂಬಂಧಿಗಳಿಗೆ ಮಕ್ಕಳ ಹಕ್ಕುಗಳ ಬಗ್ಗೆ awareness ಕೊಡುವುದು ಮೊದಲಿಗಿಂತಲೂ ಸುಲಭ ಸಾಧ್ಯ. ಅದಕ್ಕಾಗಿ ಸಮಾಜ ಕಾರ್ಯಕರ್ತರನ್ನು, ಗ್ರಾಮ ಪಂಚಾಯತಿ ಸಿಬ್ಬಂದಿಗಳನ್ನು ತರಬೇತುಗೊಳಿಸಬೇಕಷ್ಟೇ. ನಗರ ಪ್ರದೇಶಗಳಿಗೆ ಮಾತ್ರ ಸೀಮಿತ ಗೊಂಡಿರುವ ಮಕ್ಕಳೆಡೆಗಿನ ನಮ್ಮ ಕಾಳಜಿಯನ್ನು ಅವರಿರುವ ಜಾಗಗಳಿಗೆ ಕೊಂಡೊಯ್ಯ ಬೇಕಿದೆ. ಮಕ್ಕಳ ಪಾಲನೆ, ಪೋಷಣೆ, ಸುರಕ್ಷತೆ, ವಿದ್ಯಾಭ್ಯಾಸವನ್ನೂ ಅವರ ಜೊತೆಗೇ “ಬನ್ನಿ ಮನೆಗೆ ಹೋಗೋಣ” ಎಂದು ಜತನದಿಂದ ಕರೆದುಕೊಂಡು ಹೋಗಬೇಕಿದೆ. ಅವರೆಡೆಗೆ ಮಿಡಿಯುವ ನಮ್ಮ ಮನಸ್ಸುಗಳಿಗೆ ಅವರುಗಳನ್ನು ಅವರವರ ಕುಟುಂಬಕ್ಕೆ ಸೇರಿಸುವುದೇ ಧ್ಯಾನವಾಗಬೇಕಿದೆ. ಎಲ್ಲರ ಗಮ್ಯವೂ “Lets Go Home” ಎನ್ನುವುದೇ ಆಗಬೇಕಿದೆ. ************************* ಲೇಖನ ಕೃಪೆ: ಅಸ್ಥಿತ್ವ ಲೀಗಲ್ ಬ್ಲಾಗ್(ಅಂಜಲಿ)

ಬನ್ನಿ ಮನೆಗೆ ಹೋಗೋಣ. . . Read Post »

ಇತರೆ

ಧರೆ ಹತ್ತಿ ಉರಿದೊಡೆ

ಲೇಖನ ಧರೆ ಹತ್ತಿ ಉರಿದೊಡೆ ಜಯಶ್ರೀ.ಜೆ.ಅಬ್ಬಿಗೇರಿ ರಾತ್ರಿ ಹನ್ನೆರಡು ಹೊಡೆದರೂ ಹಾಡು ಹಗಲಿನಂತೆ ಕಿಕ್ಕಿರಿದು ಜನ ತುಂಬಿರುತ್ತಿದ್ದ ಬೀದಿಗಳೆಲ್ಲ ಬಿಕೋ ಎನ್ನುತ್ತಿವೆ. ಸಂಖ್ಯೆಗೆ ಸಿಗದಷ್ಟು ದೇಹಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಉರಿದು ಹೋಗುತ್ತಿವೆ.ಇದೊಂಥರ  ಮರದಲ್ಲಿನ ಹಣ್ಣು ಉದುರಿ ಬೀಳುವಂತೆ ಬೀಳುತ್ತಿವೆ. ಅಳಿದುಳಿದ ಕಾಯಿಗಳ ಹಣ್ಣುಗಳ ದುಃಖ ಅರಣ್ಯರೋಧನವಾಗಿದೆ. ಎಲ್ಲೆಲ್ಲೂ ಅಲ್ಲೋಲ ಕಲ್ಲೋಲ.ಇಂಥದ್ದೊಂದು ದಿನ ಬರುತ್ತದೆ ಅಂತ ಯಾರೂ ಊಹಿಸಿರಲಿಲ್ಲ. ಜೀವನ ಹಿಡಿತಕ್ಕೆ ಸಿಗದಂತಾಗಿದೆ. ಬಿರುಗಾಳಿಗೆ ಸಿಕ್ಕ ಹಡಗಿನಂತಾಗಿದೆ.ಬದುಕನ್ನು ಯಾವ ಕಡೆಯಿಂದ ನಿಯಂತ್ರಿಸಿದರೆ ಹಿಡಿತಕ್ಕೆ ಸಿಗಬಹುದು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ನಾ ನೀ ಎನ್ನುವ ಅತಿರಥ ಮಹಾರಥರು, ಪಂಡಿತರು, ವಿದ್ವಾಂಸರು ಪ್ರಯತ್ನಿಸಿ ಸೋತು ಸುಣ್ಣವಾಗಿದ್ದಾರೆ. ಹೆಣಗಳ ಉರುಳುವಿಕೆ ಹೀಗೆ ಮಾಡಿದರೆ ನಿಲ್ಲಬಹುದು ಹಾಗೆ ಮಾಡಿದರೆ ನಿಲ್ಲಬಹುದು ಎಂದು ಲೆಕ್ಕ ಹಾಕುವುದೇ ಆಯಿತು. ಆದರೆ ಅದು ಯಾವವೂ ಪ್ರಯೋಜನಕ್ಕೆ ಬರುತ್ತಿಲ್ಲ. ಇದುವರೆಗೂ ವಿಶ್ವವು ಕೇಳರಿಯದ ಕಂಡರಿಯದ ದುಸ್ಥಿತಿಯಿದು. ಹೀಗಾಗಿ ಇದರ ನಿಗ್ರಹಕ್ಕೆ  ಓದಿದ ಯಾವ ಗ್ರಂಥದ ಜ್ಞಾನವೂ ಉಪಯೋಗಕ್ಕೆ ಬರುತ್ತಿಲ್ಲವೆಂದು ಕೆಲವು ಜ್ಞಾನಿಗಳು ಗೊಣಗುತ್ತಿದ್ದಾರೆ. ವಿಷಮ ಸ್ಥಿತಿಯನ್ನು ತಹಬದಿಗೆ ತರಲು ವೈದ್ಯರು, ನರ್ಸ್ಗಳು, ಸಂಪೂರ್ಣ ವೈದ್ಯಕೀಯ ಇಲಾಖೆ ವೀರ ಸೇನಾನಿಗಳಂತೆ ಜನರ ಜೀವ ಕಾಪಾಡಲು ತಮ್ಮ ಜೀವ ಒತ್ತೆ ಇಟ್ಟಿದ್ದಾರೆ. ಇವರೊಂದಿಗೆ ಹೃದಯವಂತರು ಮನೆ ಮಠ ಬಿಟ್ಟು ಟೊಂಕ ಕಟ್ಟಿ ನಿಂತಿದ್ದಾರೆ. ಸ್ವೇಚ್ಛಚಾರದಿಂದ ಬೀಗುತ್ತಿದ್ದವರನ್ನು ಕೈ ಕಾಲು ಕಟ್ಟಿ ಮೂಲೆಯಲ್ಲಿ ಒಗೆದಂತಾಗಿದೆ. ನಾವೆಲ್ಲ ಪಂಜರದಲ್ಲಿನ ಗಿಳಿಗಳಂತಾಗಿದ್ದೇವೆ. ಅದೇ ಸೂರ್ಯ ಅದೇ ಚಂದ್ರ ಆದರೂ ಬದುಕಿನ ಚಂಡಮಾರುತದಿಂದ ಮನಸ್ಸು ಬಿಕ್ಕುತ್ತಿದೆ. ಮಂಗನಂತೆ ಹಾರಾಡುತ್ತಿದ್ದ ಮನಸ್ಸು ತಲೆ ಮೇಲೆ ಕೈ ಹೊತ್ತು ಕೂತಿದೆ. ಜಗವೇ ಮಸಣಭೂಮಿ ಎಂದೆನಿಸುತ್ತಿದೆ.ಇದೆಲ್ಲ ಮಾನಸಿಕ ಸ್ಥಿತಿ ಒಂದೆಡೆಯಾದರೆ,ಇನ್ನೊಂದೆಡೆ ಮಿಡಿಯುವ ಹೃದಯ ತನ್ನ ಕರುಣಾ ಮಿಡಿತವನ್ನು ಕಳೆದುಕೊಳ್ಳುತ್ತಿದೆ.ಮಿಡಿದರೂ ಅಸಹಾಯಕ ಸ್ಥಿತಿಯಲ್ಲಿದೆ. ಬಿಕ್ಕಳಿಸುವ ದೇಹಗಳ ಕಣ್ಣೊರೆಸುವವರಿಲ್ಲ. ಕಣ್ಣೊರೆಸುವ ಹೃದಯವಂತಿಕೆ ಇದ್ದರೂ ಧೈರ್ಯ ಬರುತ್ತಿಲ್ಲ. ಎಲ್ಲಿ ನನಗೂ ಸಾವು ಅಂಟಿಬಿಡುವುದೇನೋ ಎಂಬ ಭಯ ಹಿಂಜರಿಯುವಂತೆ ಮಾಡುತ್ತಿದೆ. ಅಪ್ಪನನ್ನು ಕಳೆದುಕೊಂಡ ಮಕ್ಕಳ ರೋಧನ ಒಂದೆಡೆಯಾದರೆ, ಹೆತ್ತವ್ವನನ್ನು ಬೆಂಕಿ ಆಹುತಿ ತೆಗೆದುಕೊಂಡವರ ಗೋಳು ಮುಗಿಲು ಮುಟ್ಟುತ್ತಿದೆ. ಇನ್ನು ಕಾಣುವ ದೇವರೀರ್ವವರು ಮುನಿಸಿಕೊಂಡಂತೆ ಹೇಳದೇ ಹೋದವರ ಗೋಳಿಗೆ ಸಾಂತ್ವನ ಹೇಳಲು ಬಾಯಿ ಬರುತ್ತಿಲ್ಲ. ಪುಟ್ಟ ಪುಟ್ಟ ಮಕ್ಕಳು ಅನಾಥರಾಗಿ ದಿಕ್ಕು ಕಾಣದೇ ಹಲಬುತ್ತಿದ್ದಾರೆ.ಹಸಿವಿನಿಂದ ರೋಧಿಸುವ ಮಕ್ಕಳ ದನಿ ಕೇಳುವ ಕಿವಿಗಳು ಕಮ್ಮಿಯಾಗಿವೆ. ವಿಧವಿಧವಾದ ರುಚಿಯಾದ ಹಣ್ಣುಗಳು, ನಗುವ ಹೂಗಳು, ಮನೋಸ್ಥೈರ್ಯ ಹೆಚ್ಚಿಸುತ್ತಿದ್ದ  ಪುಸ್ತಕಗಳು ಲಾಟಿಯ ರುಚಿ  ನೆನೆದು ಕೊಳೆಯುತ್ತಿವೆ ಬಾಡುತ್ತಿವೆ ಪುಟಗಳನ್ನು ಭದ್ರವಾಗಿ ಮುಚ್ಚಿಕೊಂಡು ಕೂತಿವೆ.ವ್ಯಾಪಾರವೆಲ್ಲ ಕುಸಿದಿದೆ. ಹೀಗಾಗಿ ಜೀವನ ಜರ್ಝರಿತವಾಗುತ್ತಿದೆ. ಯಾರ ಪಾಳೆ ಯಾವಾಗ ಅಂತ ಗೊತ್ತಿಲ್ಲ. ಜೀವ ಪಕ್ಷಿ ಹಾರುವುದಕ್ಕೆ ಕ್ಷಣಗಣನೆ ನಡೆದಿದೆ. ನಿನ್ನೆ ನಮ್ಮೊಂದಿಗಿದ್ದವರು ಇಂದಿಲ್ಲ. ಇಂದು ಇರುವವರು ನಾಳೆ ಇರುವರೋ ಇಲ್ಲವೋ ಗೊತ್ತಿಲ್ಲ. ಮೃತ್ಯುಲೋಕವೇ ಧರೆಗಿಳಿದಂತಾಗಿದೆ. ದಿನವೂ ಸಾವುಗಳ ಲೆಕ್ಕ ಇಡಲು ಯಮ ಮತ್ತು ಚಿತ್ರಗುಪ್ತರು ಹರಸಾಹಸ ಪಡುವಂತಾಗಿದೆ. ಭೂ ಲೋಕದ ಜನರನ್ನೆಲ್ಲ ಮೃತ್ಯುಲೋಕಕ್ಕೆ ಹಂತ ಹಂತವಾಗಿ ಸಾಗಿಸುವ ಬೃಹತ್ ಆಂದೋಲನವೇನಾದರೂ ನಡೆದಿದೆಯೇನೋ ಎನ್ನುವ ಸಂದೇಹ ಹೆಚ್ಚುತ್ತಿದೆ. ಇನ್ನೂ ಕೆಲ ವರ್ಷ ನಮ್ಮ ಜೊತೆ ಇದ್ದಾರು. ಸಿಹಿ ಕಹಿಗಳಲ್ಲಿ ನಮ್ಮೊಡನಿದ್ದು ಮುನ್ನಡೆದಾರು ಎನ್ನುವಂತವರು ಹೇಳದೇ ಕೇಳದೇ ಹೋಗಿಯೇ ಬಿಟ್ಟರು.ನೂರು ವರ್ಷ ಬದುಕಲಿಲ್ಲವಾದರೂ ಇಷ್ಟು ವರ್ಷಗಳ ದೀರ್ಘಾಯುóಷಿಯಾದರಲ್ಲ ಅದೇ ನಮ್ಮ ಭಾಗ್ಯ.ವೆಂದು ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಅಗಲಿ ಹೋದ ಜೀವಗಳ ಜೊತೆ ಕಳೆದ ಸವಿನೆನಪುಗಳ ನೆನೆದು ಕಣ್ಣೀರಿಡುವುದೊಂದೇ ನಮ್ಮ ಕೈಯಲ್ಲಿರೋದು ಅಂತ ಸಂಕಟ ಪಡುತ್ತಿದ್ದೇವೆ. ಬಾಳಿನ ದೋಣಿ ಯಾವಾಗ ಮುಗುಚಿ ಬೀಳುವುದೋ ಎಂಬ ಭಯ ಎಲ್ಲೆಲ್ಲೂ ಆವರಿಸಿದೆ. ದೋಣಿ ಸಾಗಿದರೂ ಸುರಕ್ಷಿತವಾಗಿ ಮುನ್ನಡೆಯುವುದೋ ಇಲ್ಲವೋ ಎನ್ನುವ ಆತಂತ ಮನದಲ್ಲಿ ಮನೆ ಮಾಡುತ್ತಿದೆ.ಮೂಗಿನಲ್ಲಿ ನುಸುಳುವ ಗಾಳಿ ಸಿಗದೆ ಪ್ರಾಣವನ್ನು ಗಾಳಿಪಟದ ಹಾಗೆ ಹರಿದು ಹಾಕುತ್ತಿದೆ. ಮುಗಿಲೆತ್ತರಕ್ಕೆ ಹೆಣದ ರಾಶಿ ಸುಡುವವರೂ ದಿಕ್ಕಿಲ್ಲ. ಈ ದೃಶ್ಯ ಸುಳಿವ ಕೀಟಗಳನ್ನು ಬಾಚಿಕೊಳ್ಳುವ ಓತಿಕ್ಯಾತನ ರೀತಿ ನೆನಪಿಸುತ್ತಿದೆ. ಅಳಿಸಲಾಗದ ಕ್ರೂರ ಹಣೆ ಬರಹದಂತಾಗಿದೆ. ಅಂಗೈ ರೇಖೆಗಳ ನುಡಿ ಎಲ್ಲಿ ಸವೆದು ಹೋಯಿತೋ? ಸಾವು ಇಡಿಯಾಗಿ ಎಲ್ಲರನ್ನೂ ಒಮ್ಮೆಲೇ ಹೊಸೆದು ಹಾಕುತ್ತದೆ ಎಂದು ಬರೆಯಲಾಗಿತ್ತೋ ಏನೋ ಗೊತ್ತಿಲ್ಲ. ನಿಜ ಹೇಳಬೇಕೆಂದರೆ ನಮ್ಮ ಮುಖಗಳಿಂದ ಸೆರಗು ಸರಿಸಿದ ಸಮಯವಿದು. ಬದುಕಿಗೆ ಮುಚ್ಚಿದ್ದ ರೇಷಿಮೆಯ ಪರದೆ ತೆರೆದ ಹೊತ್ತಿದು. ಬದುಕಿನ ಮೊನಚನ್ನು ಆವಾಹಿಸಿಕೊಳ್ಳಲು ಸಾವು ಹವಣಿಸುವ ಹೊತ್ತಿನಲ್ಲಿ ಉಚ್ಛಸ್ವರದ ಬೀಗುವಿಕೆ ಉಚಿತವಾಗದು. ಇದೆಲ್ಲ ಗೊತ್ತಿದ್ದರೂ ಇನ್ನೂ ಬೀಗುವುದನ್ನು ಬಿಟ್ಟಿಲ್ಲ. ರಕ್ಷಣೆಗಾಗಿ ನೆಟ್ಟ ಕಂಬಗಳೆಲ್ಲ ಕೆಸರಿನಲ್ಲಿ ಸಿಕ್ಕಿಕೊಂಡಿವೆ. ಇತ್ತಿಂದತ್ತ ಅತ್ತಿಂದಿತ್ತ ನಿಧಾನವಾಗಿ ಸಾವಿನ ಕತ್ತಿ ತೂಗುತ್ತಿದ್ದ ಯಮ ಈಗ ಕೋಮಲ ಕತ್ತುಗಳು ಮಾಗಿದ ಜೀವಗಳೆಂದು ನೋಡದೇ  ಹಿಸುಕುತ್ತಿದ್ದಾನೆ. ಇಷ್ಟೆಲ್ಲ ನರಕ ಸದೃಶ ವಾತಾವರಣ ಹೆಚ್ಚುತ್ತಿರುವಾಗ ಕಾಯುವ ದೇವರು ಎಲ್ಲಿರಬಹುದು? ನಾನೇ ಬುದ್ಧಿವಂತ  ಎನ್ನುವ ಮಾನವನ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲವಲ್ಲ ಏಕೆ? ಎನ್ನುವ ಪ್ರಶ್ನೆಗಳು ಭೂತಾಕಾರವಾಗಿ ಪೀಡಿಸುತ್ತಿವೆ. ಹಾರುವ ಜೀವಗಳೆಲ್ಲ ನೋವಿನಿಂದ ಬೇಡಿಕೊಳ್ಳುತ್ತಿವೆ. ಇದೀಗ ಕಾರಂತರ ‘ಬಾಳ್ವೆಯೇ ಬೆಳಕು’ ವೈಚಾರಿಕ ಕೃತಿಯು ನೆನಪಿಗೆ ಬರುತ್ತಿದೆ. ಅದು ಜೀವನ ಸ್ವೀಕಾರವನ್ನು ದೃಢವಾಗಿ ಪ್ರತಿಪಾದಿಸುತ್ತದೆ. ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದೊಡೆ ನಿಲಲುಬಾರದು ಏರಿ ನೀರೊಂಬೊಡೆ ಬೇಲಿ ಕೆಯ್ಯ ಮೇವಡೆ ನಾರಿ ತನ್ನ ಮನೆಯಲ್ಲಿ ಕಳುವಡೆ ತಾಯಿ ಮೊಲೆಹಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ಕೂಡಲಸಂಗಮದೇವ ಪ್ರಸ್ತುತ ಸನ್ನಿವೇಶಕ್ಕೆ ಈ ವಚನ ಕನ್ನಡಿ ಹಿಡಿದಂತಿದೆ. ಒಲೆಯಲ್ಲಿ ಹತ್ತಿ ಉರಿಯುವ ಉರಿಯು ಇದ್ದಕ್ಕಿದ್ದಂತೆಯೇ ಧಗ್ ಎಂದು ಹತ್ತಿಕೊಂಡು ತನ್ನ ಕೆನ್ನಾಲಿಗೆಯನ್ನು ಸುತ್ತಮುತ್ತ ಚಾಚುತ್ತ ಹಬ್ಬತೊಡಗಿದಾಗ ಒಲೆಯ ಉರಿಯ ಜಳದಿಂದ ದೂರ ಸರಿದು ತಪ್ಪಿಸಿಕೊಳ್ಳಬಹುದು. ಆದರೆ ಇಡೀ ಜಗತ್ತೇ ಹತ್ತಿಕೊಂಡು ಉರಿಯತೊಡಗಿದರೆ ಬೆಂಕಿಯ ತಾಪದಿಂದ ಪಾರಾಗಲು ಹೋಗುವುದಾದರೂ ಎಲ್ಲಿಗೆ? ವಿಧಿಯಿಲ್ಲದೇ ಉರಿಗೆ ಬಿದ್ದು ಸುಟ್ಟು ಕರಕಲಾಗಬೇಕಾಗುತ್ತದೆ. ವ್ಯವಸಾಯಕ್ಕೆ ಬಳಸಲೆಂದು ಹರಿಯುತ್ತಿರುವ ನೀರನ್ನು ಒಂದೆಡೆ ನಿಲ್ಲಿಸಲೆಂದು ಕಟ್ಟಿರುವ ಏರಿಯೇ ನೀರೆಲ್ಲವನ್ನು ಹೀರಿಕೊಂಡರೆ ಏನು ಗತಿ? ಬೆಳೆದ ಬೆಳೆಯನ್ನು ಕಾಪಾಡುವುದಕ್ಕೆ ಹೊಲದ ಸುತ್ತ ಹಾಕಿದ ಬೇಲಿಯೇ ಬೆಳೆಯನ್ನು ಮೇಯ್ದರೆ ಮಾಡುವುದಾದರೂ ಏನು? ಮನೆಯನ್ನು ಕಾಯಬೇಕಾಗಿರುವ ಮನೆಯೊಡತಿಯೇ ಮನೆಯ ವಸ್ತುಗಳನ್ನು ಕದ್ದರೆ? ಮಗುವನ್ನು ರಕ್ಷಿಸುವ ಎದೆಹಾಲೇ ಮಗುವಿನ ಸಾವಿಗೆ ಕಾರಣವಾದರೆ ಏನು ಗತಿ? ಇಂತಹ ವಿವಿಧ ರೂಪಕಗಳ ಮೂಲಕ ಸಮಾನತೆಯ ಹರಿಕಾರ ಬಸವಣ್ಣ ಸಾಮಾಜಿಕ ಷಡ್ಯಂತ್ರಗಳಿಗೆ ಬಲಿಯಾಗಿ ತೊಳಲಾಡುವ ವ್ಯಕ್ತಿಯ ಮೂಕವೇದನೆಯನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾನೆ.  ವ್ಯಕ್ತಿ ತನ್ನನ್ನು ರಕ್ಷಿಸಿಕೊಳ್ಳುವುದನ್ನು ಬಿಟ್ಟು, ತನ್ನನ್ನು ತಾನೇ ನಾಶ ಮಾಡಿಕೊಳ್ಳಲು ಹೊರಟಾಗ ಅದನ್ನು  ತಡೆಗಟ್ಟಲು ಯಾರಿಂದಲೂ ಆಗುವುದಿಲ್ಲವೆಂಬ ವಾಸ್ತವ ಸತ್ಯವನ್ನು ರೂಪಕಗಳ ಮೂಲಕ ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ. ಕಳಚಿ ಬಿದ್ದಿರುವುದನ್ನೆಲ್ಲ ಬದುಕಿನ ಕುಲುಮೆಯಲ್ಲಿ ಮತ್ತೆ ಬೆಸೆಯಬೇಕಿದೆ. ದೇಶ ದೇಶಗಳ ನಡುವೆ ಸೊದರತ್ವದ ಪ್ರೀತಿ ಪ್ರಜ್ವಲಿಸಬೇಕಿದೆ. ಹೃದಯ ಹೃದಯಗಳ ಬೆಸೆಯಬೇಕಿದೆ. ಚಂದ್ರ ಚೂರಾಗುವ ಮುನ್ನ, ನಕ್ಷತ್ರಗಳು ಕರಗುವ ಮುನ್ನ ಪ್ರಾಣಿಗಳಲ್ಲೇ ಬುದ್ಧಿವಂತ ಪ್ರಾಣಿ ಎಂದು ಜಂಭ ಪಡುವ ನಾವೆಲ್ಲ ಪಾಠ ಕಲಿಯಲೇಬೇಕಿದೆ. ಆಗ ಬದುಕೆಂಬ ಗುಲಾಬಿ ಹೂ ಪಕಳೆಗಳ ಹರವುತ್ತ ಖುಷಿಯ ಸುಗಂಧ ಸೂಸುತ್ತದೆ. =============================================================

ಧರೆ ಹತ್ತಿ ಉರಿದೊಡೆ Read Post »

ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ ಅವರ ಹೊಲಗದ್ದೆಗಳಿಗೆ ನುಗ್ಗಿ ಬೆಳೆಗಳನ್ನೆಲ್ಲ ಹಾಳು ಮಾಡುತ್ತಿದ್ದುದನ್ನು ನೋಡುತ್ತ ಬಂದವರಿಗೆ ತಲೆಕೆಟ್ಟು ಹೋಯ್ತಂತೆ. ಅದೇ ಸಂದರ್ಭದಲ್ಲಿ ಯಾರೋ ಸ್ನೇಹಿತರು ಅವರಿಗೆ ಈ ಜನರ ಪರಿಚಯ ಮಾಡಿಸಿದರಂತೆ. ಹಾಗಾಗಿ ಇವರು ಆಗಾಗ ಆ ಜನರನ್ನು ಕರೆಯಿಸಿಕೊಂಡು ಹಂದಿಗಳನ್ನು ಹಿಡಿಸುತ್ತಿದ್ದವರು ಒಂದೆರಡು ಹಂದಿಗಳನ್ನೂ ಮತ್ತು ಐದಾರು ಸಾವಿರ ರೂಪಾಯಿಗಳನ್ನೂ ಅವರಿಗೆ ಕೊಟ್ಟು ಖುಷಿಪಡಿಸುತ್ತಿದ್ದರು. ಉಳಿದ ಹಂದಿಗಳನ್ನು ಅವರಿಂದಲೇ ಕೊಲ್ಲಿಸಿ ಮಾಂಸ ಮಾಡಿಸುತ್ತಿದ್ದರು. ಈಶ್ವರಪುರದ ಪೇಟೆಯಲ್ಲಿ, ‘ಹೊಟೇಲ್ ಮೇನಕಾ’ ಅಂತ ದೊಡ್ಡ ತ್ರೀಸ್ಟಾರ್ ಹೋಟೆಲೊಂದಿದೆ ಗೊಂತ್ತುಂಟಾ ನಿಮಗೆ?’ ‘ಹೌದು ಮಾರಾಯಾ…ಬಹಳ ಫೇಮಸ್ ಹೊಟೇಲ್ ಅಲ್ಲವಾ ಅದು!’ ‘ಹೌದು ಗುರೂಜಿ ಅದು ಪುರಂದರಣ್ಣನದ್ದಲ್ಲವಾ…!’ ‘ಓಹೋ, ಹೌದಾ ಮಾರಾಯಾ…ಅವರೀಗ ಅಷ್ಟು ದೊಡ್ಡ ಕುಳವಾ…?’ ‘ಮತ್ತೆಂಥದು ಗುರೂಜಿ…ನೀವು ನನ್ನನ್ನು ಏನೆಂದುಕೊಂಡಿದ್ದೀರಿ! ಅಂತಿಂಥವರೊಡನೆಯೆಲ್ಲ ಬೆರೆಯುವವನಲ್ಲ ನಾನು. ಅವರೂ ನಾನೂ ತುಂಬಾ ಹಳೆಯ ದೋಸ್ತಿಗಳು. ಹಾಗಾಗಿ ಯಾವಾಗಲೂ ಒಟ್ಟಿಗಿರುತ್ತೇವೆ. ಅದಿರಲಿ. ಮುಂದೆ ಕೇಳಿ. ಕಾಡುಹಂದಿಯ ಮಾಂಸದಿಂದ ತಮ್ಮ ಹೊಟೇಲಿನಲ್ಲಿ ಅವರು ಎಷ್ಟೊಂದು ಬಗೆಯ ಚೈನೀಶ್ ಫುಡ್ ತಯಾರಿಸುತ್ತಾರೆ ಗೊತ್ತುಂಟಾ? ಹಾಗಾಗಿಯೇ ಅವರ ಹೊಟೇಲಿಗೆ ಕಂಡಾಬಟ್ಟೆ ಗಿರಾಕಿ!’ ಎಂದ ಶಂಕರ ನಗುತ್ತ. ‘ಅಯ್ಯೋ ದೇವರೇ, ಹೀಗೂ ಉಂಟಾ? ಇದೆಲ್ಲ ಅರಣ್ಯ ಇಲಾಖೆಗೆ ಗೊತ್ತಾದರೆ ಕೇಸು ಗೀಸು ಆಗಿ ಅವರ ಕಥೆ ಕೋಚಾ ಆಗಲಿಕ್ಕಿಲ್ಲವಾ ಮಾರಾಯಾ?’ ಎಂದು ಏಕನಾಥರು ಅಚ್ಚರಿಯಿಂದ ಪ್ರಶ್ನಿಸಿದರು. ‘ಎಂಥದು ಕೋಚಾ ಆಗುವುದು ಗುರೂಜೀ? ಅದಕ್ಕೆಲ್ಲ ಅವರು ತಕ್ಕ ವ್ಯವಸ್ಥೆ ಮಾಡಿಕೊಂಡೇ ವ್ಯಾಪಾರಕ್ಕಿಳಿದಿರುವುದು. ಕೇಸು ಮತ್ತು ಕೋರ್ಟು ಕಛೇರಿಗಳೆಲ್ಲ ನಮ್ಮಂಥವರಿಗೆ ಅಲ್ಲ ಗುರೂಜಿ. ಅದಕ್ಕೆಂದು ಬೇರೆಯೇ ವರ್ಗದ ಜನರಿದ್ದಾರೆ!’ ಎಂದು ಶಂಕರ ಗರ್ವದಿಂದ. ‘ಅಂದರೇ, ಈಗ ನಮ್ಮೂರಿನಲ್ಲಿ ಇಷ್ಟೆಲ್ಲ ಸಂಗತಿಗಳು ನಡೆಯುತ್ತಿದ್ದಾವಾ ಮಾರಾಯಾ…? ಇದೆಲ್ಲ ನಮಗೇ ಗೊತ್ತೇ ಇರಲಿಲ್ಲ ನೋಡು!’ ಎಂದು ಗುರೂಜಿ ವಿಸ್ಮಯ ತೋರಿಸಿದರು. ‘ಅದು ಬಿಡಿ ಗುರೂಜಿ, ಇನ್ನೊಂದು ಕೊನೆಯ ವಿಷಯವನ್ನು ಹೇಳಿ ಕಥೆ ಮುಗಿಸುತ್ತೇನೆ’ ಎಂದು ನಗುತ್ತ ಅಂದ ಶಂಕರ, ‘ನನ್ನ ಆ ಜಾಗದೊಳಗೆ ಒಂದು ಕೆರೆಯಿತ್ತು. ಅದು ಎಷ್ಟು ದೊಡ್ಡದಿತ್ತೆಂದರೆ ಸುಮಾರು ಎರಡು ಎಕರೆಯಷ್ಟು ವಿಶಾಲವಿತ್ತು. ಅದರ ಸುತ್ತಮುತ್ತ ಮರಮಟ್ಟುಗಳೆಲ್ಲ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದವು. ಅವುಗಳ ಮೇಲೆ ದೊಡ್ಡ ದೊಡ್ಡ ಗಾತ್ರದ ಕೊರುಂಗ್ ಪಕ್ಷಿ(ವಲಸೆ ಕೊಕ್ಕರೆಗಳು)ಗಳಿದ್ದವು. ಅವು ನಮ್ಮೂರಿನ ಸಾಮಾನ್ಯ ಕೊರುಂಗುಗಳಂತೆ ಇರಲಿಲ್ಲ ಗುರೂಜಿ. ನಮ್ಮೂರಿನ ನಾಯಿಗಳಷ್ಟು ಎತ್ತರವಿದ್ದವು! ಅಲ್ಲಿನ ಮರಗಳನ್ನೆಲ್ಲ ಕಡಿದುರುಳಿಸುವಾಗ ಆ ಹಕ್ಕಿಗಳ ಐನೂರಕ್ಕೂ ಹೆಚ್ಚು ಮರಿಗಳು ಮತ್ತು ಅವುಗಳ ರಾಶಿರಾಶಿ ಮೊಟ್ಟೆಗಳೂ ಆ ಕಾಡು ಜನರಿಗೆ ಸಿಕ್ಕಿದವು. ಒಂದೊಂದು ಹಕ್ಕಿಮರಿಗಳು ಒಂದೊಂದು ಕಿಲೋದಷ್ಟು ತೂಕವಿದ್ದವು. ಅವೆಲ್ಲ ಪ್ರತೀವರ್ಷ ಸಾವಿರಾರು ಕಿಲೋಮೀಟರ್ ದೂರದ ಯಾವ್ಯಾವುದೋ ಹೊರ ದೇಶಗಳಿಂದೆಲ್ಲ ನಮ್ಮಲ್ಲಿಗೆ ವಲಸೆ ಬರುವ ಹಕ್ಕಿಗಳೆಂದು ಪುರಂದರಣ್ಣ ಹೇಳುತ್ತಿದ್ದರು. ಆದರೆ ಅವುಗಳ ಈ ವರ್ಷದ ಫಾರಿನ್ ಟೂರನ್ನು ನಾವು ಇಲ್ಲಿಯೇ ಮುಕ್ತಾಯಗೊಳಿಸಿ ಅವುಗಳ ಆತ್ಮಕ್ಕೆ ಸಾಮೂಹಿಕವಾಗಿ ಶಾಂತಿ ಕೋರಿದೆವು ಗುರೂಜಿ!’ ಎಂದು ಶಂಕರ ಒಮ್ಮೆ ಜೋರಾಗಿ ನಕ್ಕ. ಆಗ ಗುರೂಜಿಯ ಮುಖದಲ್ಲಿ ವಿಷಾದ ಮೂಡಿತು. ಆದರೆ ಅದನ್ನು ಗಮನಿಸದ ಶಂಕರ ಮತ್ತೆ ಕಥೆ ಮುಂದುವರೆಸಿದ. ‘ನಮ್ಮ ಕಾಡು ಜನರು ಆ ಪಕ್ಷಿಗಳನ್ನೆಲ್ಲ ಹಿಡಿದ್ಹಿಡಿದು ಅವುಗಳ ಕೊರಳು ಹಿಸುಕಿ ಕೊಂದು ಗೋಣಿ ಚೀಲಕ್ಕೆ ತುಂಬಿಸಿಕೊಂಡು ಕುಣಿದಾಡುತ್ತಿದ್ದರು. ಸುಮಾರಾಗಿ ರೆಕ್ಕೆ ಬಲಿತ ಮೂವತ್ತು, ನಲ್ವತ್ತು ದೊಡ್ಡ ಮರಿಗಳು ಪುರಂದರಣ್ಣನ ಹೊಟೇಲಿಗೂ ರವಾನೆಯಾದವು. ಹೀಗೆ ಆ ಜಾಗವನ್ನು ಸಮತಟ್ಟು ಮಾಡುವ ಸುಮಾರು ಎರಡು ತಿಂಗಳ ಕಾಲ ಆ ಮನುಷ್ಯರ ದೆಸೆಯಿಂದಾಗಿ ನಮ್ಮವರ ತಂಡವೂ ಬೇಕಾಬಿಟ್ಟಿ ಮಾಂಸದೂಟ ಮಾಡುತ್ತ ತೇಗುತ್ತಿತ್ತು. ಹಾಗಾಗಿ ಸತ್ಯ ಹೇಳುತ್ತೇನೆ ಗುರೂಜಿ, ಈಗ ‘ಮಾಂಸ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ವಾಕರಿಕೆ ಬಂದಂತಾಗುತ್ತದೆ!’ ಎಂದು ಶಂಕರ ಮುಖವನ್ನು ವಿಲಕ್ಷಣವಾಗಿ ಕಂಪಿಸುತ್ತ ತನ್ನ ವಿಕೃತ ಕಾಯಕವನ್ನು ವರ್ಣಿಸಿದ. ಅಷ್ಟು ಕೇಳಿದ ಏಕನಾಥರಿಗೆ ಮತ್ತೊಮ್ಮೆ ಹೇಸಿಗೆ ಒತ್ತರಿಸಿ ಬಂತು. ‘ಅಲ್ಲಾ ಮಾರಾಯಾ, ನೀವೆಲ್ಲ ಮನುಷ್ಯರೋ, ಮೃಗಗಳೋ ಆ ದೇವರಿಗೆ ಗೊತ್ತು. ಥು, ಥೂ…!’ ಎಂದು ಈ ಸಲ ಬಾಯಿಬಿಟ್ಟೇ ಉಗಿದುಬಿಟ್ಟರು. ಆದರೆ ಶಂಕರ ಅವರ ಮಾತಿಗೆ ಪಕಪಕಾ ನಗುತ್ತ ಮರಳಿ ಮಾತು ಮುಂದುವರೆಸಲಿದ್ದ. ಅಷ್ಟರಲ್ಲಿ ಏಕನಾಥರ ಮನೆಯೆದುರು ಒಂದಷ್ಟು ದೈತ್ಯ ಮರಗಳಿದ್ದ ತೋಟದೊಳಗಿಂದ ತಂಪಾದ ಗಾಳಿಯೆದ್ದು ವಠಾರದೊಳಗೆಲ್ಲ ಸುಳಿಯುತ್ತ ಬಂದುದು ಇವರನ್ನು ಹದವಾಗಿ ಸೋಕುತ್ತ ಒಳಗೆ ಹೋಗಿ ಮನೆಯೊಳಗೊಂದು ಸುತ್ತು ಹೊಡೆದು ಕಿಟಕಿ, ಬಾಗಿಲುಗಳ ಮೂಲಕ ಹಿತ್ತಲಿಗೆ ಹೊರಟು ಹೋಯಿತು. ಅದು ನಡು ಬೇಸಿಗೆಯ ಕಾಲ. ಹಾಗಾಗಿ ಏಕನಾಥರೂ, ಶಂಕರನೂ ವಿಪರೀತ ಸೆಕೆಯಿಂದ ಬೆವರುತ್ತಿದ್ದರಾದರೂ ಸಹಿಸಿಕೊಂಡು ಮಾತುಕತೆಯಲ್ಲಿ ಮುಳುಗಿದ್ದರು. ಈಗ ತಂಗಾಳಿ ಬೀಸಿದ್ದು ಶಂಕರನಲ್ಲಿ ಉಲ್ಲಾಸವನ್ನು ತರಿಸಿತು. ಆದ್ದರಿಂದ ಅವನು, ‘ಆಹ್ಹಾಯ್ ಗುರೂಜೀ…! ನಿಮ್ಮ ವಠಾರದಲ್ಲಿ ಭಾರೀ ಒಳ್ಳೆಯ ಗಾಳಿ ಉಂಟಲ್ಲವಾ ಅಬ್ಬಾ…! ಒಮ್ಮೆ ಜೀವ ಬಂದ ಹಾಗಾಯ್ತು ನೋಡಿ!’ ಎಂದು ಉದ್ಗರಿಸಿ, ತನ್ನ ಅಂಗಿಯ ನಾಲ್ಕು ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ಪೂರ್ತಿ ಗಾಳಿಗೊಡ್ಡುತ್ತ, ‘ಅದಕ್ಕೇ ಹೇಳುವುದು  ನೋಡಿ, ಒಂದು ಮನೆ ಎಂದ ಮೇಲೆ ಅದರ ಸುತ್ತಮುತ್ತ ಹತ್ತಾರು ಗಿಡಮರಗಳು ಇರಲೇಬೇಕು ಅಂತ!’ ಎಂದು ದೊಡ್ಡ ಪರಿಸರ ಜ್ಞಾನಿಯಂತೆ ಅಂದ. ‘ಹೌದು ಹೌದು ಮಾರಾಯಾ. ನಮ್ಮ ತೋಟದಲ್ಲೂ ಬಹಳಷ್ಟು ಮರಮಟ್ಟುಗಳುಂಟು. ನನ್ನ ಅಜ್ಜ ಮತ್ತು ಅಪ್ಪ ಅವನ್ನೆಲ್ಲ ನೆಟ್ಟು ಬೆಳೆಸಿದ್ದಂತೆ. ‘ಮನೆಯೆಂದ ಮೇಲೆ ನಾಲ್ಕಾರು ಮರಗಳಿರಬೇಕು. ಇಲ್ಲದಿದ್ದರೆ ಅದು ಮನುಷ್ಯರ ವಾಸಸ್ಥಾನವೇ ಅಲ್ಲ ಅಂತ ಅವರು ಹೇಳುತ್ತಿದ್ದರು. ಆ ಮಾತು ಸತ್ಯ ನೋಡು. ಅವರಿಂದಾಗಿ ಇಂದು ನಮ್ಮ ವಠಾರದ ವಾತಾವರಣವು ಬಹಳ ಉತ್ತಮವಾಗಿದೆ. ನಮ್ಮ ಹಿರಿಯರು ನಮಗೆ ಆಸ್ತಿಪಾಸ್ತಿಯನ್ನೇನೂ ಮಾಡಿಟ್ಟು ಹೋಗದಿದ್ದರೂ ಇಂಥದ್ದೊಂದು ಜಾಗವನ್ನು ನಮಗೆ ಬಿಟ್ಟು ಹೋದದ್ದು ನಮ್ಮ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು ಮಾರಾಯಾ!’ ಎಂದರು ಏಕನಾಥರೂ ಹೆಮ್ಮೆಯಿಂದ. ‘ಹೌದು ಗುರೂಜಿ, ಆ ವಿಷಯದಲ್ಲಿ ನೀವು ಅದೃಷ್ಟವಂತರು!’ ಎಂದ ಶಂಕರ ಮರಳಿ ಮಾತು ಮುಂದುವರೆಸಿದ. ‘ಪುರಂದರಣ್ಣನ ಕಾಡು ಜನರು ಆ ಪಕ್ಷಿಗಳ ಕಥೆಯನ್ನೆಲ್ಲ ಮುಗಿಸಿದ ಮೇಲೆ ನಮಗೆ ಅವರ ಇನ್ನೊಂದು ಕಾರನಾಮೆಯೂ ತಿಳಿಯಿತು ಗುರೂಜೀ. ಆ ಮನುಷ್ಯರು ಬರೇ ಪ್ರಾಣಿಗಳನ್ನು ಮಾತ್ರ ತಿನ್ನುವುದಲ್ಲ ಅರಣೆ, ಓತಿಕೇತ, ಕ್ರಿಮಿಕೀಟ ಮತ್ತು ಸಿಕ್ಕಿಸಿಕ್ಕಿದ ಹಾವುಗಳನ್ನೆಲ್ಲ ಹಿಡಿದು ತಿನ್ನುತ್ತಾರೆ ಬಿಕನಾಸಿಗಳು!’ ಎಂದು ಅಸಹ್ಯದಿಂದ ಮೈಯನ್ನು ಹಿಂಡಿ ನಕ್ಕ. ಅಷ್ಟು ಕೇಳಿದ ಏಕನಾಥರಿಗೆ ಹೊಟ್ಟೆ ತೊಳಸಿದಂತಾಯಿತು. ‘ಥೂ! ಸಾಕು, ಸಾಕು ಮಾರಾಯ ನಿಲ್ಲಿಸು. ಆ ರಕ್ಕಸ ವಂಶದವರು ಸಾಯಲಿ ಅತ್ಲಾಗೆ! ನೀನು ಬಂದ ವಿಷಯವನ್ನು ಇನ್ನೂ ಹೇಳಲಿಲ್ಲ. ಅದನ್ನು ಹೇಳು!’ ಎಂದು ಮುಖ ಕಹಿ ಮಾಡಿಕೊಂಡು ಅಂದರು. ಏಕನಾಥರ ಮುಖ ಚಿರುಟಿದ್ದನ್ನು ಕಂಡ ಶಂಕರನಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕ. ಆಗ ಏಕನಾಥರಿಗೂ ನಗು ಬಂತು. ‘ಆಯ್ತು ಗುರೂಜೀ ಇಲ್ಲಿ ಕೇಳಿ, ಇನ್ನೊಂದು ಸ್ವಲ್ಪ ಉಂಟು ಅದನ್ನೂ ಹೇಳಿ ಬಿಡುತ್ತೇನೆ. ಒಮ್ಮೆ ನಮ್ಮ ಜೆಸಿಬಿ ಚಾಲಕನೊಬ್ಬ ಒಂದು ದಟ್ಟವಾದ ಬಲ್ಲೆಯನ್ನು ತೆಗೆಯುತ್ತಿದ್ದವನು ‘ಹಾವು ಹಾವೂ…! ಎಂದು ಬೊಬ್ಬೆ ಹೊಡೆದು ತಟ್ಟನೆ ಕೆಲಸ ನಿಲ್ಲಿಸಿಬಿಟ್ಟ. ಅಷ್ಟೊತ್ತಿಗೆ ಸುತ್ತಮುತ್ತಲಿದ್ದ ಕೆಲಸಗಾರರೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿ ಹೋದರು. ಯಾವ ಹಾವೆಂದು ತಿಳಿಯದ ನಮಗೂ ಭಯವಾಗಿ ದೂರ ಓಡಿದೆವು. ಆದರೆ ಆ ಕಾಡು ಜನರು ಒಮ್ಮೆಲೇ ಆ ಪೊದರಿನತ್ತ ನುಗ್ಗಿದರು. ಆಗ ನಮಗೆಲ್ಲ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸಮೀಪ ಹೋದೆವು. ಅಷ್ಟರಲ್ಲಿ ಅವರ ಐವರು ಯುವಕರು ಆ ಪೊದೆಯಿಂದ ದೊಡ್ಡ ದೊಡ್ಡ ಐದು ಹೆಬ್ಬಾವುಗಳ ಬಾಲಗಳನ್ನು ಹಿಡಿದು ದರದರನೇ ಹೊರಗೆಳೆದು ತಂದು ಮೈದಾನದಲ್ಲಿ ಹಾಕಿದರು. ಮತ್ತೊಬ್ಬ ಯುವಕ ಸುತ್ತಿಗೆಯೊಂದನ್ನು ತಂದ. ನಮ್ಮ ಕಂಕಣಬೆಟ್ಟಿನ ಉಮೇಶಾಚಾರಿ ಇದ್ದಾನಲ್ಲ ಅವನು ಕಾದ ಪಿಕ್ಕಾಸಿನ ತುದಿಯನ್ನು ಹೇಗೆ ಬಡಿಬಡಿದು ಹದ ಮಾಡುತ್ತಾನೆ ಎಂದು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ, ಈ ಹುಡುಗನೂ ಒಂದೊಂದು ಪೆರ್ಮಾರಿಯ ತಲೆಗೂ ಲೆಕ್ಕದ ಎರಡೆರಡು ಪೆಟ್ಟು ಬೀಸಿ ಬೀಸಿ ಬಡಿದ ನೋಡಿ ಅವುಗಳ ತಲೆ ಒಡೆದು ಅಪ್ಪಚ್ಚಿಯಾಯಿತು. ಮರುಕ್ಷಣ ಅವು ಅಲ್ಲಲ್ಲೇ ನರಳಾಡಿ ಪ್ರಾಣಬಿಟ್ಟವು. ಬಳಿಕ ಅವರು ಅವುಗಳನ್ನು ಚೀಲಕ್ಕೆ ತುಂಬಿಸಿಕೊಂಡು ಗುಡಿಸಲಿನತ್ತ ಹೋದರು. ಅದನ್ನೂ ಪದಾರ್ಥ ಮಾಡಿ ತಿನ್ನುತ್ತಾರಂತೆ ಅವರು!’ ‘ಅಯ್ಯೋ ದೇವರೇ, ನೀವೆಲ್ಲ ಮಹಾಪಾಪಿಗಳು ಮಾರಾಯಾ!’ ಎಂದು ವಿಷಾದದಿಂದ ನಕ್ಕ ಗುರೂಜಿ, ‘ಅದೆಲ್ಲ ಹಾಗಿರಲಿ ಶಂಕರ. ನೀನು ಹೇಳಬೇಕೆಂದಿದ್ದ ವಿಷಯವನ್ನು ಕೊನೆಗೂ ಹೇಳಲೇ ಇಲ್ಲವಲ್ಲ? ನಮಗೂ ಪೂಜೆಗೆ ಹೊತ್ತಾಯಿತು ಮಾರಾಯಾ…!’ ಎಂದು ಅವನ ಮೂಕ ಜೀವರಾಶಿಯ ಮಾರಣಹೋಮದ ಕಥೆಗೆ ಮುಕ್ತಾಯ ಹಾಡಿದರು. ಆಗ ಶಂಕರ ಪೆಚ್ಚಾದ. ಆದರೂ ಸಂಭಾಳಿಸಿಕೊಂಡು, ‘ಓಹೋ, ಹೌದಲ್ಲವಾ ಗುರೂಜಿ. ನಮ್ಮ ಕಥೆ ಎಲ್ಲೆಲ್ಲಿಗೋ ಹೋಯಿತು. ಸರಿ, ಈಗ ಹೇಳುತ್ತೇನೆ ಕೇಳಿ’ ಎಂದವನು ಮುಖ್ಯ ವಿಷಯಕ್ಕೆ ಬಂದ. ‘ನನ್ನ ಜಾಗದ ಕಥೆ ಹೇಳಿದೆನಲ್ಲ ಅದರ ಮೂಲ ವಾರಸುದಾರರು ಅಮೆರಿಕದಲ್ಲೆಲ್ಲೋ ಇದ್ದಾರಂತೆ ಗುರೂಜಿ. ಅವರ ಪರವಾಗಿ ನನ್ನ ಜೊತೆ ಅದರ ವ್ಯವಹಾರ ಮಾಡಿದವನು ಅಬ್ದುಲ್ ರಜಾಕ್ ಅಂತ. ಅವನೂ ನನಗೆ ಒಳ್ಳೆಯ ಪರಿಚಯಸ್ಥ. ಅವನ ಕುಟುಂಬಕ್ಕೂ ಜಾಗದವರ ಕುಟುಂಬಕ್ಕೂ ಹಿಂದಿನಿಂದಲೂ ಬಹಳ ಹತ್ತಿರವಂತೆ. ಹಾಗಾಗಿ ನಾನು ಆ ಜಾಗದ ರೆಕಾರ್ಡ್ ಪರೀಕ್ಷಿಸಿ ಎಲ್ಲವೂ ಸರಿಯಾಗಿದೆ ಅಂತ ತಿಳಿದ ಮೇಲೆ ಅಡ್ವಾನ್ಸ್ ಕೊಟ್ಟು ಕಾಡು ಕಡಿಯಲಾರಂಭಿಸಿದೆ. ಆದರೆ ಅದು ಮುಗಿಯುವಷ್ಟರಲ್ಲಿ ಒಂದು ದೊಡ್ಡ ತಾಪತ್ರಯ ಬಂದು ವಕ್ಕರಿಸಿತು ನೋಡಿ! ಆ ಜಾಗವು ಶೆಟ್ಟರೊಬ್ಬರ ಮನೆತನಕ್ಕೆ ಸೇರಿದ್ದಂತೆ. ಅದರೊಳಗಿನ ಕಾಡು ಅವರ ಮೂಲದ ದೈವಭೂತಗಳ ಸ್ಥಾನವಂತೆ. ಆ ಕಾಡಿನೊಳಗೆ ನಾಗ, ಪಂಜುರ್ಲಿ, ನಂದಿಗೋಣ, ಲೆಕ್ಕೆಸಿರಿ, ಕ್ಷೇತ್ರಪಾಲ ಮತ್ತು ಗುಳಿಗ ದೈವಗಳ ಗುಂಡಗಳಿದ್ದವಂತೆ! ನಮ್ಮ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕೆಲಸ ಮಾಡುವಾಗ ಒಂದು ಕಡೆ ವಿಶಾಲ ಜಾಗದಲ್ಲಿ ತರಗೆಲೆಯ ರಾಶಿಯ ಮಧ್ಯೆ ಬಹಳ ಹಿಂದಿನ ಕಾಲದ ಸವೆದು ಹೋದ ಹತ್ತಾರು ಮುರಕಲ್ಲುಗಳು ಸಿಕ್ಕಿದ್ದವು ಗುರೂಜಿ. ಆದರೆ ನನಗೇನು ಗೊತ್ತಿತ್ತು ಅವು ಭೂತದ ಕಲ್ಲುಗಳು ಅಂತ? ಹಾಗಾಗಿ ಅಲ್ಲಿನ ಮಣ್ಣು ಲೋಡು ಮಾಡುವಾಗ ಆ ಕಲ್ಲುಗಳು ಮಣ್ಣಿನೊಳಗೆಲ್ಲೋ ಸೇರಿಕೊಂಡು ಈಗ ಯಾರ ಮನೆಯ ಅಡಿಪಾಯದೊಳಗೋ ಅಥವಾ ಪೊಟ್ಟು ಬಾವಿಯೊಳಗೋ ಬಿದ್ದು ಮುಚ್ಚಿ ಹೋಗಿವೆಯೋ ಯಾರಿಗೆ ಗೊತ್ತು?’ ಎಂದು ಶಂಕರ ಮಾತು ನಿಲ್ಲಿಸಿ ಯಾವುದೋ ಚಿಂತೆಗೆ ಬಿದ್ದ. ಆಗ ಏಕನಾಥರಿಗೆ ಸಂಗತಿ ಮೆಲ್ಲನೆ ಮನವರಿಕೆಯಾಗತೊಡಗಿತು. ಆದ್ದರಿಂದ ಅವರು, ‘ಬೇರೇನು ತೊಂದರೆಯಾಗಿದೆ ಮಾರಾಯಾ, ಅದನ್ನೂ ಹೇಳು…?’ ಎಂದರು ಮೃದುವಾಗಿ.    ಆಗ ಶಂಕರ ತನ್ನ ಹಿಂತಲೆಯನ್ನೊಮ್ಮೆ ಅಸಹನೆಯಿಂದ ಕೆರೆದುಕೊಂಡವನು, ‘ಈಗ ಒಂದು ದೊಡ್ಡ ಫಜೀತಿಯಾಗಿದೆ ಗುರೂಜಿ.

Read Post »

ಇತರೆ

ಹೋದಿರೆಲ್ಲಿ..?

ಮಕ್ಕಳ ಕವಿತೆ ಹೋದಿರೆಲ್ಲಿ..? ಮಲಿಕಜಾನ ಶೇಖ ಗುಬ್ಬಿ ಗುಬ್ಬಿ ಪುಟ್ಟನೆ ಗುಬ್ಬಿಚಿಂವ್ ಚಿಂವ್ ಹಾಡುತ್ತಾಮನೆಯಲಿ ಬಂದುಕನ್ನಡಿ ನೋಡುತಾಮುಖವನು ತೋರುತಾಆಡುತಾ ಹಾರುತಾಹೋಗುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಜಿಂಕೆ ಜಿಂಕೆ ಮುದ್ದಿನ ಜಿಂಕೆಜಿಗಿಯುತ ನಲಿಯುತತೋಟಕೆ ಬಂದುಚಿಗುರಿದ ಹುಲ್ಲುತಂಪನೆ ನೀರುಕುಡಿಯುತ ಆಡುತಾಓಡತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗಿಳಿಯೆ ಗಿಳಿಯೆ ಮುದ್ದಿನ ಗಿಳಿಯೆಮಿಟು ಮಿಟು ಗುನಗುತಾಹಿತ್ತಲ ಬಂದುಸವಿ ಸವಿ ಪೇರಲತರ ತರ ಕಾಯಿತಿನ್ನುತಾ ಕುಣಿಯುತಾಹಾರುತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಗರುಡನೆ ಗರುಡನೆ ಶೌರ್ಯದ ಗರುಡನೆಭರ್ರನೆ ಬಂದುಕೆಡಕರ ಕೊಂದುಸರ್ರನೆ ಗಗನಕ್ಕೆ ಹಾರುತ್ತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಹುಳವೆ ಹುಳವೆ ಎರೆ ಹುಳವೆತೋಟಕ್ಕೆ ಬಂದುಮಣ್ಣು ಹದಿಸಿರೈತನ ಬದುಕಿನಆಸರೆಯಾಗಿಬಾಳನು ಬೆಳಗಿಸಿಹೋಗುತ್ತಲಿದ್ದೆ ನೀ ಅಂದುಕಾಣುತ್ತಿಲ್ಲ ನೀನು,,ಹೋದೆ ಎಲ್ಲಿ ಇಂದು..? ಬನ್ನಿರೆ ಬನ್ನಿರೆ ಎಲ್ಲರೂ ಬನ್ನಿರೆಕೂಡಿ ಬಾಳೋಣ ಇಂದುನೀವು ನಮಗೆ ನಾವು ನಿಮಗೆಇದ್ದರೆ ಬಾಳು ಬಹಳ ಚಂದ.ಪ್ರೀತಿ, ಪ್ರೇಮ ಸಾರಿಬದಕನು ಹರ್ಷದಿ ಕಳೆಯೋಣ.. *******************************

ಹೋದಿರೆಲ್ಲಿ..? Read Post »

ಇತರೆ, ದಾರಾವಾಹಿ

ದಾರಾವಾಹಿ ಅಧ್ಯಾಯ: 14 ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ ಮರಳಿ ಕಥೆ ಮುಂದುವರೆಸಿದ. ‘ಇಲ್ಲ ಗುರೂಜಿ, ಅದು ಇನ್ನೇನು ತಿವಿದೇ ಬಿಟ್ಟಿತು ಎಂಬಷ್ಟರಲ್ಲಿ ಆ ಕಾಡು ಜನರ ತಂಡದ ಸಪೂರ ಓಟೆಯಂತಿದ್ದ ಯುವಕನೊಬ್ಬ ಎಲ್ಲಿದ್ದನೋ ರಪ್ಪನೆ ಧಾವಿಸಿ ಬಂದು ಹಂದಿಯೆದುರು ನೆಗೆದು ನಿಂತುಬಿಟ್ಟ! ಅವನ ಕೈಯಲ್ಲೊಂದು ದೊಣ್ಣೆಯಿತ್ತು. ಆ ಹುಡುಗನನ್ನು ಕಂಡ ಹಂದಿಯು ಯಮದರ್ಶನವಾದಂತೆ ಬೆಚ್ಚಿ ಬಿದ್ದದ್ದು, ಅವನನ್ನೇ ಹಿಡಿದು ತಿವಿಯುವುದನ್ನು ಬಿಟ್ಟು ಸರಕ್ಕನೆ ಹಿಂದಿರುಗಿ ಕರ್ಕಶವಾಗಿ ಘೀಳಿಡುತ್ತ ಉಳಿದ ಹಂದಿಗಳತ್ತ ಧಾವಿಸಿ ಹೋಗಿ ತಾನೂ ಬಲೆಗೆ ಬಿದ್ದುಬಿಟ್ಟಿತು! ಆಗ ನಮಗೆಲ್ಲ ಹೋದ ಜೀವ ಬಂದಂತಾಯಿತು ನೋಡಿ. ನಂತರ ನಾನು ಹೇಗೋ ಕಷ್ಟಪಟ್ಟು ಆ ದಪ್ಪ ಮರದಿಂದ ಇಳಿದೆ. ಅಷ್ಟರಲ್ಲಿ ತುಂಬಾ ದೂರ ಓಡಿ ಹೋಗಿದ್ದ ಪುರಂದರಣ್ಣನೂ ಕುಂಟುತ್ತ ತೇಕುತ್ತ ಹಿಂದಿರುಗಿದರು. ಆದರೆ ಪಾಪ ಅವರು ಮರ ಹತ್ತಲು ಪ್ರಯತ್ನಿಸಿದ್ದ ರಭಸಕ್ಕೆ ಅವರ ಹೊಟ್ಟೆಯ ಒಂದೆರಡು ಕಡೆ ಚರ್ಮವೇ ಕಿತ್ತು ಹೋಗಿ ರಕ್ತ ಸುರಿಯುತ್ತಿತ್ತು.   ರಫೀಕ್ ಮಾತ್ರ ಎಲ್ಲಿದ್ದನೋ? ಸುಮಾರು ಹೊತ್ತಿನ ಮೇಲೆ ಅಷ್ಟು ದೂರದಿಂದ ಅವನ ತಲೆ ಕಾಣಿಸಿತು. ಹೆದರಿ ಕಂಗಾಲಾಗಿದ್ದ ಅವನು ತನ್ನ ಸುತ್ತಮುತ್ತ ಬಹಳ ಜಾಗ್ರತೆಯಿಂದ ದಿಟ್ಟಿಸುತ್ತ, ಹಂದಿಗಳೆಲ್ಲ ಬಲೆಗೆ ಬಿದ್ದಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಬೆಲ್ಚಪ್ಪನಂತೆ ಬಂದು ನಮ್ಮ ಹತ್ತಿರ ನಿಂತುಕೊಂಡ. ಆದರೆ ಇಷ್ಟೆಲ್ಲ ನಡೆಯುವಾಗ ಅಲ್ಲಿ ಇನ್ನೊಂದು ಗಮ್ಮತ್ತೂ ನಡೆಯುತ್ತಿತ್ತು ಗುರೂಜೀ! ಏನು ಗೊತ್ತುಂಟಾ, ಆ ಮುದುಕ ಕಾಡು ಮನುಷ್ಯನಿದ್ದನಲ್ಲ ಅವನು ಮತ್ತು ಅವನ ಸಂಗಡಿಗರೆಲ್ಲ ಸೇರಿ ಸುಮಾರು ದೂರದಲ್ಲಿ ನಿಂತುಕೊಂಡು ನಮ್ಮ ಬೊಬ್ಬೆ ಮತ್ತು ಪ್ರಾಣಸಂಕಟದ ಒದ್ದಾಟವನ್ನೆಲ್ಲ ನೋಡುತ್ತ ಬಿದ್ದು ಬಿದ್ದು ನಗುತ್ತಿದ್ದರು ಕಳ್ಳ ಬಡ್ಡಿಮಕ್ಕಳು! ಆ ಹೊತ್ತು ನನಗವರ ಮೇಲೆ ಬಂದ ಸಿಟ್ಟು ಅಷ್ಟಿಷ್ಟಲ್ಲ ನೋಡಿ! ರಪ್ಪನೆ ಮುದುಕನನ್ನು ಕರೆದು, ‘ನೀನೆಂಥದು ಮಾರಾಯಾ… ಆ ಮೃಗಗಳನ್ನು ಓಡಿಸಿಕೊಂಡು ಬರುವ ಮೊದಲು ನಮಗೆ ಸೂಚನೆ ಕೊಡುವುದಲ್ಲವಾ…? ಅವುಗಳಿಂದ ನಮ್ಮನ್ನು ಕೊಲ್ಲಿಸಬೇಕೆಂದಿದ್ದಿಯಾ ಹೇಗೇ…?’ ಎಂದು ಜೋರಾಗಿ ಗದರಿಸಿ ಬಿಟ್ಟೆ. ಅದಕ್ಕಾತ ‘ಹ್ಹೆಹ್ಹೆಹ್ಹೆ, ಇಲ್ಲಿಲ್ಲ ಧಣೇರಾ, ನಮ್ ಬೇಟೆಯಾಗ ಅಂಥದ್ದೆಲ್ಲಾ ನಡೆಯಾಕಿಲ್ರೀ. ನೀವೆಲ್ಲ ಸುಖಾಸುಮ್ಮನೆ ಹೆದರಿ ಎಗರಾಡಿಬಿಟ್ಟಿರಷ್ಟೇ!’ ಎಂದು ಇನ್ನಷ್ಟು ನಗುತ್ತ ಹೇಳಿದ. ಇಂಥ ಕೆಲಸದಲ್ಲಿ ಪಳಗಿದ್ದ ಅವರೆಲ್ಲ ಬೇಕೆಂದೇ ನಮ್ಮನ್ನು ಹೆದರಿಸಿ ಮಜಾ ತೆಗೆದುಕೊಳ್ಳುತ್ತಿದ್ದರು ಅಂತ ನಮಗೆ ಆಮೇಲೆ ಅರ್ಥವಾಗಿ ಮುದುಕನನ್ನು ಹಿಡಿದು ಎರಡು ಬಾರಿಸುವ ಅಂತ ತೋರಿತು. ಆದರೂ ಸುಮ್ಮನಾದೆ’ ಎಂದ ಶಂಕರ ಆ ಘಟನೆಯನ್ನು ನೆನೆದು ಜೋರಾಗಿ ನಗತೊಡಗಿದ. ಏಕನಾಥರಿಗೂ ನಗು ಉಕ್ಕಿ ಬಂತು. ಅತ್ತ ದಾರಂದದೆಡೆಯಲ್ಲಿ ದೇವಕಿಯೂ ನಗುತ್ತಿದ್ದಳು. ಆದರೆ ಅವಳನ್ನು ಗಮನಿಸದ ಏಕನಾಥರು, ‘ಲೇ, ಇವಳೇ…ಎರಡು ಕಪ್ಪು ಕಾಫಿ ಮಾಡಿಕೊಂಡು ಬಾರೇ… ಹಾಗೇ ತಿನ್ನಲೇನಾದರೂ ತಾ…!’ ಎಂದು ಗಟ್ಟಿ ಸ್ವರದಲ್ಲಿ ಕೂಗಿದಾಗ ಅವಳು ಬೆಚ್ಚಿಬಿದ್ದು, ‘ಆಯ್ತೂರೀ…!’ ಎಂದು ಒಳಗೆ ಓಡಿದಳು. ಗುರೂಜಿಯ ಪತ್ನಿ ಹೊರಟು ಹೋದುದನ್ನು ಕಂಡ ಶಂಕರನಿಗೆ ಮುಂದಿನ ಕಥೆ ಹೇಳುವ ಹುರುಪು ಸ್ವಲ್ಪ ತಗ್ಗಿತು. ಆದರೂ ಮುಂದುವರೆಸಿದ. ‘ಅಲ್ಲಾ ಗುರೂಜಿ, ಆ ಕಾಡು ಜನರು ಎಂಥ ಭಯಂಕರ ಮನುಷ್ಯರು ಅಂತೀರೀ! ಸುಮಾರು ಹದಿನೆಂಟು ಇಪ್ಪತ್ತರ ವಯಸ್ಸಿನ ಮೂವರು ಹುಡುಗರು, ಬಲೆಗೆ ಬಿದ್ದು ಆಕಾಶ ಸಿಡಿಯುವಂತೆ ಹೂಳಿಡುತ್ತಿದ್ದ ಆ ಮೃಗಗಳತ್ತ ಹೆಬ್ಬುಲಿಗಳಂತೆ ನೆಗೆದರು. ಯಾವ ಮಾಯಕದಿಂದಲೋ ಅವುಗಳ ಹಿಂಗಾಲುಗಳನ್ನು ಸಟಕ್ಕನೆ ಹಿಡಿದು ಮೇಲೆತ್ತಿ ಅದೇ ವೇಗದಲ್ಲಿ ನೆಲಕ್ಕೆ ಕೆಡಹಿ ಬಿಗಿಯಾಗಿ ತುಳಿದು ಹಿಡಿದುಕೊಂಡು ಕ್ಷಣದಲ್ಲಿ ಅವುಗಳ ಹೆಡೆಮುರಿ ಕಟ್ಟಿದರು. ಅವು ಕಚ್ಚದಂತೆ ಮೂತಿಗೂ ಹಗ್ಗ ಬಿಗಿದರು! ಅದನ್ನೆಲ್ಲ ನೋಡುತ್ತಿದ್ದ ಆ ಮುದುಕ ಅವರಿಗೇನೋ ಸಂಜ್ಞೆ ಮಾಡಿದ. ಆದರೆ ಅಷ್ಟರಲ್ಲಿ ನಮಗೆ ಮತ್ತೊಂದು ಮಂಡೆಬಿಸಿ ಎದುರಾಯಿತು ನೋಡಿ!’ ಎಂದು ಶಂಕರ ಕೆಲವುಕ್ಷಣ ಮಾತು ನಿಲ್ಲಿಸಿದ. ‘ಹೌದಾ…ಮತ್ತೇನಾಯಿತು ಮಾರಾಯಾ, ಮತ್ತೆ ಅಲ್ಲಿಗೆ ಕಾಡುಕೋಣಗಳೇನಾದರೂ ನುಗ್ಗಿದವಾ ಹೇಗೆ?’ ಎಂದು ಗುರೂಜಿ ಮರಳಿ ಹಾಸ್ಯ ಮಾಡಿದರು. ‘ಅಯ್ಯೋ, ಅದಲ್ಲ ಗುರೂಜಿ. ಸುಮಾರು ದೂರದಲ್ಲಿ ಯಾವನೋ ಒಬ್ಬ ಯುವಕ ನಿಂತುಕೊಂಡು ನಮ್ಮ ಕೆಲಸದ ಫೋಟೋಗಳನ್ನು ತೆಗೆಯುತ್ತಿದ್ದ! ನಮ್ಮ ತಂಡದ ಹುಡುಗ ಅದನ್ನು ನೋಡಿದವನು ಪುರಂದರಣ್ಣನಿಗೆ ತಿಳಿಸಿದ. ಅವರಿಗೆ ಆತಂಕವಾಯ್ತು. ಯಾಕೆಂದರೆ ಈಗ ಕಾಡುಪ್ರಾಣಿಗಳನ್ನು ಹಿಡಿಯುವುದು ದೊಡ್ಡ ಅಪರಾಧವಂತಲ್ಲ? ಅವನನ್ನು ಹೇಗೆ ತಡೆಯುವುದೆಂದು ತೋಚದೆ, ಎಲ್ಲರೂ ಕೈಗೆ ಸಿಕ್ಕಿದ ಬಡಿಗೆಗಳನ್ನೆತ್ತಿಕೊಂಡು ಅವನತ್ತ ಓಡಿದೆವು. ಆದರೆ ಅವನು ಭಯಂಕರ ಆಸಾಮಿ ಗುರೂಜಿ. ನಾವು ಅಷ್ಟು ಜನ ಅವನ ಮೇಲೆ ನುಗ್ಗಿ ಹೋದರೂ ಅವನು ಸ್ವಲ್ಪವೂ ಹೆದರದೆ, ನಾವೆಲ್ಲ ಓಡಿ ಬರುವುದನ್ನೂ ಚಕಚಕಾಂತ ಫೋಟೋ ತೆಗೆಯುತ್ತಲೇ ಇದ್ದ. ಹಾಗಾಗಿ ಅವನನ್ನು ಹೆದರಿಸಬೇಕೆಂದಿದ್ದ ಪುರಂದರಣ್ಣನೇ ಅಳುಕಿದರು. ಆದರೆ ನಾವೆಲ್ಲ ಅವರ ಸುತ್ತ ಇದ್ದುದನ್ನು ಕಂಡು ಧೈರ್ಯ ತಂದುಕೊಂಡವರು, ‘ಹೇ, ಹೇ… ಯಾರು ಮಾರಾಯಾ ನೀನು? ಫೋಟೋ ಗೀಟೋ ತೆಗೀಬಾರ್ದು. ಹೋಗ್ ಹೋಗ್!’ ಎಂದು ಗದರಿಸಿದರು. ಅವನು ಆಗಲೂ ನಮ್ಮನ್ನು ಕ್ಯಾರೇ ಅನ್ನದೆ ದಿಟ್ಟಿಸಿದವನು, ‘ನೋಡೀ, ನಾನೊಬ್ಬ ಪ್ರೆಸ್ ರಿಪೋರ್ಟರ್. ಆ ಪ್ರಾಣಿಗಳನ್ನು ಯಾಕೆ ಹಿಡಿಯುತ್ತಿದ್ದೀರಿ? ವನ್ಯಜೀವಿಗಳನ್ನು ಬೇಟೆಯಾಡೋದು ಆಫೆನ್ಸ್ ಅಂತ ಗೊತ್ತಿಲ್ವಾ ನಿಮ್ಗೇ? ಈಗಲೇ ಅವುಗಳನ್ನು ರಿಲೀಸ್ ಮಾಡಿ. ಇಲ್ಲದಿದ್ದರೆ ಎಲ್ಲರ ಮೇಲೆ ಕೇಸು ಹಾಕಬೇಕಾಗುತ್ತದೆ ಹುಷಾರ್!’ ಎಂದು ನಮಗೇ ಧಮಕಿ ಹಾಕುವುದಾ…? ಅವ ಪೇಪರಿನವನೆಂದ ಕೂಡಲೇ ಪುರಂದರಣ್ಣ ಸಮಾ ತಣ್ಣಗಾದರು. ಆದರೂ ತಪ್ಪಿಸಿಕೊಳ್ಳುವ ಉಪಾಯ ಅವರ ನಾಲಿಗೆಯ ತುದಿಯಲ್ಲೇ ಇತ್ತು ನೋಡಿ, ‘ನೀವು ಯಾರಾದರೂ ನಮಗೇನ್ರೀ? ಆ ಹಂದಿಗಳು ನಮ್ಮ ಬೇಸಾಯವನ್ನೆಲ್ಲ ತಿಂದು ಲಗಾಡಿ ತೆಗಿತಾ ಇರ್ತಾವೆ. ಅದಕ್ಕೆ ಕೆಲವನ್ನು ಹಿಡಿದು ಬೇರೆ ಕಾಡಿಗೆ ಬಿಡುತ್ತೇವೆ ಅಂತ ಅರಣ್ಯ ಇಲಾಖೆಯ ಪರ್ಮೀಷನ್ ತೆಗೆದುಕೊಂಡೇ ಹಿಡಿಸುತ್ತಿರುವುದು!’ ಎಂದು ತಾವೂ ರೂಬಾಬಿನಿಂದ ಉತ್ತರಿಸಿದರು. ‘ಹೌದಾ! ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆಯಾ? ಹಾಗಾದರೆ ಅವರೆಲ್ಲಿ? ಒಬ್ಬರಾದರೂ ಇರಬೇಕಿತ್ತಲ್ಲಾ? ಅಥವಾ ಅವರ ಅನುಮತಿ ಪತ್ರವಾದರೂ ನಿಮ್ಮಲ್ಲಿರಬೇಕು, ಎಲ್ಲಿದೆ ತೋರಿಸಿ…?’ ಎಂದು ಅವನೂ ಜೋರಿನಿಂದ ಪ್ರಶ್ನಿಸಿದ.     ಆಗ ಪುರಂದರಣ್ಣನ ದಮ್ಮು ಖಾಲಿಯಾಯ್ತು. ‘ಅದೂ, ಏನಾಯ್ತೆಂದರೇ…?’ ಎಂದು ಬ್ಬೆ…ಬ್ಬೆ…ಬ್ಬೇ…! ಅಂದವರು ತಕ್ಷಣ ಸಂಭಾಳಿಸಿಕೊಂಡು, ‘ಅದು ಹಾಗಲ್ಲ ಇವ್ರೇ, ಇಲ್ಲಿನ ಕೆಲಸ ಮುಗಿದ ನಂತರ ಆ ಹಂದಿಗಳನ್ನು ಕೊಂಡೊಯ್ದು ಇಲಾಖೆಗೆ ಒಪ್ಪಿಸುತ್ತೇವೆ. ನಿಮಗೆ ನಂಬಿಕೆಯಿಲ್ಲದಿದ್ದರೆ ಒಂದು ನಂಬರ್ ಕೊಡುತ್ತೇನೆ. ಫೋನ್ ಮಾಡಿ ತಿಳಿದುಕೊಳ್ಳಿ. ನಮ್ಮ ಹಿರಿಯರ ಕಾಲದಿಂದಲೂ ನಾವು ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿರುವವರು ಮಾರಾಯ್ರೇ! ಆದರೇನು ಮಾಡುವುದು? ಈಗೀಗ ಈ ದರಿದ್ರ ಪ್ರಾಣಿಗಳು ಒಂದು ಮುಡಿ ಭತ್ತ ಬೆಳೆಯಲೂ ಬಿಡುತ್ತಿಲ್ಲ. ಹೀಗಾದರೆ ನಮ್ಮಂಥ ಬಡ ರೈತರು ಬದುಕುವುದಾದರೂ ಹೇಗೆ ಹೇಳಿ? ಜನರ ಕಷ್ಟಸುಖಗಳನ್ನು ತಿಳಿದು ವ್ಯವಹರಿಸುವ, ಸಹಾಯ ಮಾಡುವ ನಿಮ್ಮಂಥವರೇ ನಮಗೆ ತೊಂದರೆ ಕೊಟ್ಟರೆ ಹೇಗೆ…?’ ಎಂದು ಅವನೊಡನೆ ದೈನ್ಯದಿಂದ ಮಾತಾಡಿದರು. ಆದರೆ ಅವನು ಅದಕ್ಕೆ ಉತ್ತರಿಸಲಿಲ್ಲ. ಹಾಗಾಗಿ ಅವರೂ ಮತ್ತೇನೂ ಮಾತಾಡದೆ ಹಿಂದಿರುಗಿದಾಗ ನಾವೂ ಅವರನ್ನು ಹಿಂಬಾಲಿಸಬೇಕಾಯ್ತು.    ಒಂದು ವೇಳೆ ಪುರಂದರಣ್ಣ ಆವಾಗ, ‘ಏಯ್, ಏನ್ ನೋಡ್ತಿದ್ದೀರಾ? ಆ ಮಗನನ್ನು ಹಿಡ್ಕೊಂಡು ನಾಲ್ಕು ಬಡಿಯಿರನಾ…!’ ಅಂತ ಒಂದೇ ಒಂದು ಮಾತು ಅನ್ನುತ್ತಿದ್ದರು ಅಂತಿಟ್ಟುಕೊಳ್ಳಿ ಗುರೂಜೀ, ಆ ಬಡ್ಡೀಮಗನ ಕ್ಯಾಮರಾವನ್ನಲ್ಲೇ ಕಲ್ಲಿಗೆ ಬಡಿದು ಪುಡಿ ಮಾಡಿ ಅವನಿಗೆ ನಾಲ್ಕು ಒದ್ದು ಓಡಿಸಲು ನಮ್ಮ ಕಾಡು ಹುಡುಗರೆಲ್ಲ ತುದಿಗಾಲಿನಲ್ಲಿ ನಿಂತಿದ್ದರು ಗೊತ್ತುಂಟಾ! ಆದರೆ ನಮ್ಮವರೇ ಠುಸ್ಸಾದ ಮೇಲೆ ಏನು ಮಾಡುವುದು ಹೇಳಿ? ಅವನೂ ಮತ್ತೇನೂ ಹೇಳದೆ ಹೊರಟು ಹೋದ. ಅಷ್ಟಾದ ನಂತರ ಇನ್ನೊಂದು ಸಮಸ್ಯೆಯಾಯ್ತು. ಸ್ವಲ್ಪಹೊತ್ತಿನಲ್ಲಿ ಪುರಂದರಣ್ಣನ ಪರಿಚಯದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಒಬ್ಬ ಕರೆ ಮಾಡಿದವನು, ‘ನಿಮ್ಮ ಮೇಲೆ ಪೇಪರ್ ರಿಪೋರ್ಟರ್ ಒಬ್ಬ ನಮ್ಮ ಹೈಯರ್ ಆಫೀಸರ್‍ಗೆ ಕಂಪ್ಲೇಂಟ್ ಮಾಡಿದ್ದಾನೆ. ಹಾಗಾಗಿ ನಾವು ಯಾವ ಕ್ಷಣದಲ್ಲಾದರೂ ಸ್ಪಾಟಿಗೆ ಬರಬಹುದು. ಆದಷ್ಟು ಬೇಗ ಹಂದಿಗಳನ್ನು ಅಲ್ಲಿಂದ ಸಾಗಿಸಿಬಿಟ್ಟು ಬೇಟೆಯಾಡಿದ ಯಾವ ಗುರುತೂ ಸಿಗದಂತೆ ನೋಡಿಕೊಳ್ಳಿ!’ ಅಂತ ಸೂಚನೆ ಕೊಟ್ಟ. ಅಷ್ಟು ತಿಳಿದ ನಾವೆಲ್ಲ ಕಂಗಾಲಾಗಿ ಕೆಲಸವನ್ನು ನಿಲ್ಲಿಸಿದೆವು. ಆ ಬುಡಕಟ್ಟಿನ ಜನರು ಕೂಡಲೇ ಹಂದಿಗಳನ್ನೂ, ಬೇಟೆಯ ಸಾಮಾನುಗಳನ್ನೂ ಹೊತ್ತುಕೊಂಡು ಹೊರಟರು. ನಾವೂ ಅವರನ್ನು ಹಿಂಬಾಲಿಸಿದೆವು. ಆದರೆ ಪುರಂದರಣ್ಣನಿಗೆ ಆ ಪೇಪರಿನವನ ಮೇಲೆ ವಿಪರೀತ ಸಿಟ್ಟು ಬಂತು. ‘ಆ ಬಡ್ಡೀಮಗನ ಸೊಕ್ಕು ಮುರಿಯಲೇಬೇಕು!’ ಎಂದು ಕುದಿದರು. ಆದರೆ ಅದಕ್ಕಿಂತ ಮೊದಲು ಅವನ ಪೂರ್ವಾಪರ ವಿಚಾರಿಸಲು ತಮ್ಮ ಅಳಿಯ ರವಿಪ್ರಕಾಶನಿಗೆ ಫೋನ್ ಮಾಡಿದರು. ರವಿಪ್ರಕಾಶನಿಂದ ಅವನು ಈಶ್ವರಪುರದ ಸ್ಥಳೀಯ ಪತ್ರಿಕೆಯೊಂದರ ಮುಖ್ಯ ವರದಿಗಾರನಲ್ಲದೇ ಬೆಂಗಳೂರಿನ ಪ್ರಸಿದ್ಧ ಪ್ರಾಣಿ ದಯಾ ಸಂಸ್ಥೆಯೊಂದರ ಸದಸ್ಯನೂ ಆಗಿದ್ದಾನೆ ಎಂಬ ಸಂಗತಿ ತಿಳಿಯಿತು.    ಪ್ರಾಣಿ ದಯಾ ಸಂಘ ಎಂದ ಕೂಡಲೇ ನನಗೂ ಹೆದರಿಕೆಯಾಯ್ತು ಗುರೂಜಿ! ಅವರು ಹಾಕುವ ಕೇಸು ಯಾರಿಗೆ ಬೇಕು ಮಾರಾಯ್ರೇ. ಜೀವನಪರ್ಯಂತ ಬಂಜರವಾಗುತ್ತದೆ! ಹಾಗೇನಾದರೂ ಆದರೆ ನನ್ನ ಅಷ್ಟು ದೊಡ್ಡ ಜಮೀನಿನ ಕೆಲಸ ನಿಂತು, ನಾನು ಅಲಕ್ಕ ಲಗಾಡಿ ಹೋಗುವುದಂತು ಗ್ಯಾರಂಟಿ!’ ಎಂದು ಶಂಕರ ಸೋಲೆಪ್ಪಿಕೊಂಡ. ಅದಕ್ಕೆ ಏಕನಾಥರೂ, ‘ಹೌದು ಹೌದು ಮಾರಾಯಾ. ಯಾರ ತಂಟೆಯಾದರೂ ಬೇಕು. ಈ ಪ್ರಾಣಿ ದಯಾ ಸಂಘ ಮತ್ತು ಅರಣ್ಯ ಇಲಾಖೆಯವರ ಸಹವಾಸವಲ್ಲ. ವಿಶ್ವ ಪರಿಸರ ಸಂಸ್ಥೆಯೂ ಈಚೆಗೆ ಪರಿಸರ ಸಂರಕ್ಷಣಾ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ಆರಂಭಿಸಿರುವುದು ಪೇಪರಿನಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯೂ ಬಹಳ ಬಿಗುಗೊಂಡಿದೆ!’ ಎಂದು ಶಂಕರನ ಭಯವನ್ನು ತಾವೂ ಸಮರ್ಥಿಸಿಕೊಂಡರು. ಶಂಕರ ಮತ್ತೆ ಮಾತು ಮುಂದುವರೆಸಿದ. ‘ಹೌದಂತೆ ಗುರೂಜಿ, ಪುರಂದರಣ್ಣನೂ ಅದಕ್ಕೇ ಸುಮ್ಮನಾದರು. ಆದರೆ ಅವರು ಆ ಸಮಸ್ಯೆಯನ್ನು ಎಂಥ ಉಪಾಯದಿಂದ ನಿವಾರಿಸಿಕೊಂಡರು ಗೊತ್ತುಂಟಾ?’ ಎಂದು ಶಂಕರ ತಾವೊಂದು ಅದ್ಭುತ ಸಾಧಿಸಿದಂತೆ ನಗುತ್ತ ಅಂದ. ‘ಅಂಥದ್ದೇನು ಮಾಡಿದರು ಮಾರಾಯಾ..!’ ‘ಪುರಂದರಣ್ಣ ಕೂಡಲೇ ರಫೀಕನೊಡನೆ ಒಂದಿಷ್ಟು ‘ಸಮ್‍ಥಿಂಗ್’ ಅನ್ನು ಅರಣ್ಯ ಇಲಾಖೆಗೆ ಕಳುಹಿಸಿಕೊಟ್ಟು ಅವರ ಬಾಯಿ ಮುಚ್ಚಿಸಿದರು. ಅದರ ಬೆನ್ನಿಗೆ ಆ ಪತ್ರಕರ್ತನ ಹತ್ತಿರದ ಗೆಳೆಯನೊಬ್ಬನನ್ನೂ ಹಿಡಿದರು. ಅವನು ಇವರ ಅಳಿಯನ ದೋಸ್ತಿಯಂತೆ. ಅವನ ಹತ್ತಿರ, ‘ತಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ, ಅರಣ್ಯ ಇಲಾಖೆಗೆ ನೀಡಿರುವ ದೂರನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ನಮ್ಮ ಪರವಾಗಿ ನೀನೇ ಅವನೊಡನೆ ವಿನಂತಿಸಿಕೊಂಡು ಅವನನ್ನು ಒಪ್ಪಿಸಬೇಕು ಮಾರಾಯಾ!’ ಎಂದು ಅವನ ಮಂಡೆ ಗಿರ್ಮಿಟ್ ಆಗುವಂತೆ ಮಾತಾಡಿ ಬೇಡಿಕೊಂಡರು. ಅವನು ಪುರಂದರಣ್ಣನಿಗೆ ಭಾರಿ ಮರ್ಯಾದೆ ಕೊಡುವವನು. ಆದ್ದರಿಂದ ಅವರ ಮಾತಿಗೆ ಕಟ್ಟುಬಿದ್ದು ಹೇಗೋ ಪತ್ರಕರ್ತನ ಮನವೊಲಿಸಿ ಕೇಸು ವಾಪಾಸ್ ಪಡೆಯುವಂತೆ ಮಾಡಿದ. ಇಲ್ಲದಿದ್ದರೆ ನನ್ನ ಜಾಗಕ್ಕೆ ಇಷ್ಟೊತ್ತಿಗೆ ದೊಡ್ಡ ‘ಸ್ಟೇ’ ಬಿದ್ದು ನಾನು ಊರುಬಿಟ್ಟೇ ಓಡಿ ಹೋಗಬೇಕಿತ್ತೋ

Read Post »

ಇತರೆ

2017 ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ.73 ರಷ್ಟು ಪಾಲು ಶೇ.1 ರಷ್ಟು ಸಿರಿವಂತರು ಹಂಚಿಕೊಂಡಿದ್ದರೆ, ಭಾರತದ ಅತಿಬಡತನದಲ್ಲಿರುವ ಶೇ.50 ರಷ್ಟು ಜನಸಂಖ್ಯೆ (67 ಕೋಟಿ ಭಾರತೀಯರು) ಕೇವಲ ಶೇ.1ರಷ್ಟು ಸಂಪತ್ತು ಹೆಚ್ಚಳವನ್ನು ಕಂಡಿದ್ದಾರೆಂದು ವರದಿಯಾಗಿದೆ.

Read Post »

ಇತರೆ

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ

ವಿಶೇಷ ಲೇಖನ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ ಆಶಾ ಸಿದ್ದಲಿಂಗಯ್ಯ ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿಯಾಗಿದ್ದಾರೆ. ಅಕ್ಕಮಹಾದೇವಿಯವರನ್ನು ಶರಣ ಚಳುವಳಿಯ ಪ್ರಮುಖರಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರಿವಾದಿ ಚಳವಳಿಯ ನಿಜವಾದ ಪ್ರತಿಪಾದಕಿಯಾಗಿ, ಅಕ್ಕರೆಯ ಅಕ್ಕನಾಗಿ, ಗುರುತಿಸ ಬಹುದಾಗಿದೆ. ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕ, ಎದುರಿಸಿದ ಪರೀಕ್ಷೆಗಳು ಬಹಳಷ್ಟು.  ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕಮಹಾದೇವಿಯವರು ಜನಿಸಿದ್ದು ಶಿವಮೊಗ್ಗ ಜಿಲ್ಲೆ, ಶಿಕಾರಿಪುರ-ಶಿರಾಳ ಕೊಪ್ಪದ ನಡುವೆ ಇರುವ ಉಡುತಡಿ ಅಥವಾ ಉಡಗಣಿ ಇಲ್ಲವೆ ಉಡುಗಣಿ ಎಂದೇ ಪ್ರಸಿದ್ದವಾಗಿರುವ ಪುಟ್ಟ ಗ್ರಾಮದಲ್ಲಿ. ಸುಮಾರು 15 ಕಿ.ಮಿ. ಹಾಗೂ ಶಿರಾಳ ಕೊಪ್ಪದಿಂದ 4 ಕಿ.ಮಿ.ದೂರದಲ್ಲಿದೆ. ಇದೀಗ ಇದು ಪ್ರವಾಸಿ ತಾಣವಾಗಿಯೂ ಪ್ರಸಿದ್ದವಾಗಿದೆ. ಪರರ ಪಾಲಾಗಿದ್ದ ಇಲ್ಲಿರುವ ಕೌಶಿಕ ಮಹಾರಾಜರ ಕೋಟೆ ಹಾಗೂ ಅಕ್ಕನ ದೇವಸ್ಥಾನ ಇರುವ ಜಮೀನನ್ನು ಉಳಿಸಲು ಪ್ರಯತ್ನಿಸಿ, ಹೋರಾಟ ನಡೆಸಿ, ಯಶಸ್ವಿಯಾಗಿದ್ದು ಸಿರಿಗೆರೆಯ ಶ್ರೀಗಳಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು. ಇದನ್ನು ಇವರು ಉಳಿಸಿ ಕೊಟ್ಟ ನಂತರ ಸರಕಾರ ಇತ್ತ ಗಮನ ಹರಿಸಿ,ಅದರ ಅಭಿವೃದ್ದಿಗೆ ಮುಂದಾಗಿದೆ. ಇಂತಹ ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ ಬಸವ ಕಲ್ಯಾಣದ ಅನುಭವ ಮಂಟಪದಲ್ಲಿ ಅಲ್ಲಮಪ್ರಭು, ಬಸವಣ್ಣ, ಚೆನ್ನಬಸವಣ್ಣ ಸಿದ್ಧರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, “ಚನ್ನಮಲ್ಲಿಕಾರ್ಜುನ” ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.  ಒಮ್ಮೆ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿರುವಾಗ ಮಹಾದೇವಿಯ ಆಗಮನವಾಗುತ್ತದೆ. ಆಗ ಮಡಿವಾಳ ಮಾಚಿದೇವರು ಎದ್ದು ನಿಂತು ಬುದ್ಡಿ ಉಡುತಡಿಯ ಮಹಾದೇವಿ ಅಕ್ಕನವರು ಆಗಮಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆಗ ಬಸವಣ್ಣನವರು ಮಾಚಿದೇವರೇ ಮಹಾದೇವಿ ಯವರನ್ನು ಮರ್ಯಾದೆಯಿಂದ ಕರೆ ತನ್ನಿ ಎಂದು ಹೇಳಲು ಮಾಚಿದೇವರು ಆಕೆಗೆ ನಡೆ ಮುಡಿಯನ್ನು ಹಾಸುತ್ತಾರೆ. ಆಗ ಮಹಾದೇವಿಯು ಮಡಿಯನ್ನು ಸರಿಸಿ ಒಳಗೆ ಬರುತ್ತಾಳೆ. ಅಲ್ಲಿಂದ ಮುಂದೆ ಅಲ್ಲಮಪ್ರಭುದೇವರು ಮತ್ತು ಅಕ್ಕಮಹಾದೇವಿಯ ನಡುವೆ ಈ ರೀತಿ ಸಂಭಾಷಣೆ ನಡೆಯುತ್ತದೆ. ಅಕ್ಕ : ಪ್ರಭುದೇವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ, ಅಲ್ಲಮ : ನಿಲ್ಲು ತುಂಬು ಯೌವನದ ಸತಿ ನೀನು ಇತ್ತಲೇಕೆ ಬಂದೆಯವ್ವ. ಸತಿ ಎಂದರೆ ಮುನಿಯುವರು ನಮ್ಮ ಶರಣರು. ನಿನ್ನ ಪತಿಯ ಹೆಸರ ಹೇಳಿದರೆ ಬಂದು ಕುಳ್ಳಿರು ಅಲ್ಲವಾದರೆ ತೆರಳು ತಾಯೆ. ನಮ್ಮ ಶರಣರ ಸಂಘ ಸುಖದಲಿ ಸನ್ನಿಹಿತವ ಬಯಸುವೆಯಾದರೆ ನಿನ್ನ ಪತಿಯ ಹೆಸರ ಹೇಳಾ, ಎಲೆ ಅವ್ವಾ ಅಲ್ಲವಾದರೆ ನಿನಗೆ ಇಲ್ಲಿ ಸ್ಥಳವಿಲ್ಲ. ಅಕ್ಕ : ಹರನೇ ಗಂಡನಾಗಬೇಕೆಂದು ಅನಂತ ಕಾಲ ತಪಿಸಿದೆ ನೋಡಾ ! ಎನ್ನ ಜನ್ಮ ಜನ್ಮಾಂತರದ ಬಯಕೆ ಆ ಶಿವನೇ ಗಂಡನಾಗಬೇಕೆಂಬುದು ಅದು ಈ ಜನ್ಮದಲ್ಲಿ ಸಿದ್ದಿಸಿದೆ. ಗುರು ನನ್ನನ್ನು ಚನ್ನಮಲ್ಲಿಕಾರ್ಜುನನಿಗೆ ವಿವಾಹ ಮಾಡಿ ಕೊಟ್ಟಿದ್ದಾನೆ. ಗುರುವೇ ತೆತ್ತಿಗನಾದ, ಲಿಂಗವೇ ಮದುವಣಿಗನಾದ, ಆನು ಮದುವಣಗಿತ್ತಿಯಾದೆನು. ಈ ಭುವನವೆಲ್ಲವರಿಯಲು ಅಸಂಖ್ಯಾತರೆನ್ನ ತಾಯಿ ತಂದೆಗಳು, ಕೊಟ್ಟರು ಪ್ರಭುವಿನ ಮನೆಗೆ ಸಾದೃಶ್ಯವಪ್ಪ ವರನನ್ನು ನೋಡಿ, ಇದು ಕಾರಣ ಚೆನ್ನಮಲ್ಲಿಕಾರ್ಜುನನೇ ಗಂಡನೆನಗೆ ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧ ವಿಲ್ಲವಯ್ಯಾ ಪ್ರಭುವೇ. ಅಲ್ಲಮ : ಈ ಮಾತಿನ ಚಮತ್ಕಾರವನ್ನು ನಮ್ಮ ಶರಣರು ಮೆಚ್ಚಲಾರರು ಮಹಾದೇವಿ. ನಿನ್ನ ಚರಿತ್ರೆಯನ್ನು ಲೋಕ ತಿಳಿಯದೆಂದು ಭಾವಿಸಬೇಡ. ಲಗ್ನವಾದ ಕೌಶಿಕನ ಮೇಲೆ ತಪ್ಪನ್ನು ಹೊರೆಸಿ ಅರಮನೆಯನ್ನು ಬಿಟ್ಟು ನಿರ್ವಾಣ ಶರೀರಿಯಾಗಿ ಹೊರಟು ಬಂದಿರುವೆ ಎಂಬ ಮಾತು ನಿಜವೇ ? ಪತಿಯ ಮೇಲೆ ತಪ್ಪನ್ನು ಹೊರಿಸಿ ಬರುವ ಸತೀಧರ್ಮವನ್ನು ಈ ನಮ್ಮ ಶರಣರು ಮೆಚ್ಚಲಾರರು. ಅಕ್ಕ : ನನ್ನ ಮದುವೆಯ ಕತೆಯನ್ನು ಪ್ರಪಂಚ ಹೇಗಾದರೂ ತಿಳಿದು ಕೊಂಡಿರಲಿ. ನಾನು ಮೊದಲಿನಿಂದಲೂ ಚನ್ನಮಲ್ಲಿಕಾರ್ಜುನನಿಗೆ ಮೀಸಲು ಹೆಣ್ಣು. ಸಾವ ಕೆಡುವ ಗಂಡಂದಿರನೆಂದೂ ಬಯಸಿದವಳಲ್ಲ. ಸೀಮೆ ಇಲ್ಲದ ನಿಸ್ಸೀಮ ಚಲುವನಿಗೆ ಮಾತ್ರ ಒಲಿದವಳು. ನನ್ನ ಜೀವನದಲ್ಲಿ ಕೌಶಿಕನ ಪ್ರಸಂಗ ಒಂದು ದೈವ ಕೃಪೆಯಂತೆ ಬಂದಿತಷ್ಟೇ. ಸ್ತ್ರೀಯ ಸೌಂದರ್ಯದ ವ್ಯರ್ಥ ವ್ಯಾಮೋಹವನ್ನು ಬಿಡಿಸಲು ದಿಗಂಬರಳಾಗಿ ಅರಮನೆಯನ್ನು ತ್ಯಜಿಸಿ ಬಂದೆ. ಸೌಂದರ್ಯದ ಹಂಗನ್ನು ಹರಿದೊಗೆದು ಬಂದಂತಹವಳು. ಅಲ್ಲಮ : ನಿನ್ನ ದೇಹದ ಮೋಹ ನಿನಗಿನ್ನು ಹೋಗಿಲ್ಲ, ನಿನ್ನ ಸೌಂದರ್ಯದ ಮೋಹ ನಿನಗಿನ್ನೂ ಉಳಿದಿದೆಯಲ್ಲವೇ? ಅಕ್ಕ : ಇಲ್ಲ, ಆ ಭಾವ ನನಗೆ ಎಳ್ಳಷ್ಟೂ ಉಳಿದಿಲ್ಲ, ಕಾಯ ಕರ್ರನೆ ಕಂದಿದರೇನಯ್ಯ ? ಕಾಯ ಮಿರ್ರನೆ ಮಿಂಚಿದರೇನಯ್ಯ ? ಅಂತರಂಗ ಶುದ್ಧವಾದ ಬಳಿಕ ಚನ್ನಮಲ್ಲಿಕಾರ್ಜುನನಿಗೆ ಒಲಿದ ಅಂಗವು ಹೇಗಿದ್ದರೇನಯ್ಯ ಪ್ರಭುವೇ ? ಅಲ್ಲಮ : ಇದು ಬರಿಯ ಆಡಂಬರದ ಮಾತು, ಮಾತಿನಂತೆ ನಡೆ ಇಲ್ಲದವರನ್ನು ಗುಹೇಶ್ವರ ಲಿಂಗ ಮೆಚ್ಚುವವನಲ್ಲ. ಅಂತರಂಗದ ನಾಚಿಕೆ ಬಹಿರಂಗದಲ್ಲಿ ತಲೆದೋರುತ್ತಿದೆ. ಸೀರೆಯನ್ನಳಿದು ಕೂದಲನ್ನೇಕೆ ಮರೆಮಾಡಿ ಕೊಳ್ಳಬೇಕಾಗಿತ್ತು, ಈ ವರ್ತನೆ ಒಪ್ಪವಲ್ಲ ಗುಹೇಶ್ವರ ಲಿಂಗಕ್ಕೆ. ಅಕ್ಕ : ನಿಜ. ಒಂದರ ಹಂಗನ್ನು ಬಿಟ್ಟು , ಇನ್ನೊಂದರ ಹಂಗನ್ನು ನಾನು ಹೊಂದಿದ್ದೇನೆಂದು ನೀವು ಹೇಳುವ ಮಾತು ನಿಜ. ಆದರೆ ಅದು ನನಗಾಗಿ ಅಲ್ಲ, ನಿಮಗಾಗಿ ಅಂದರೆ ಜನರ ಹಂಗಿಗಾಗಿ ಇದನ್ನು ಅವಲಂಬಿಸಿದ್ದೇನೆ. ಫಲ ಒಳಗೆ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು. ಕಾಮನ ಮುದ್ರೆಯ ಕಂಡು ನಿಮಗೆ ನೋವಾದಿತೆಂದು ಆ ಭಾವದಿಂದ ಮುಚ್ಚಿದೆ. ಇದಕ್ಕೆ ನೋವೇಕೆ ಕಾಡದಿರಣ್ಣ ಚನ್ನಮಲ್ಲಿಕಾರ್ಜುನನ ದೇವರ ದೇವನ ಒಳಗಾದವಳ. ಅಲ್ಲಮ : ಏನೂ ! ಫಲ ಪಕ್ವವಾದಲ್ಲದೆ ಹೊರಗಣ ಸಿಪ್ಪೆ ಒಪ್ಪಗೆಡದು ಎಂದೆಯಲ್ಲವೆ ನಾನು ಹೇಳುತ್ತೇನೆ ಕೇಳು, ಸಿಪ್ಪೆ ಒಪ್ಪಗೆಟ್ಟಾಗ ಹಣ್ಣಿನ ರಸ ಕೊಳಕಾಗುತ್ತದೆ ಅದನ್ನಾದರೂ ಮೆಚ್ಚುವುದು ಹೇಗೆ ? ಅಕ್ಕ : ಆ ಹಣ್ಣನ್ನು ನಾನು ಹಾಗೇ ಇಟ್ಟಿಲ್ಲ ಪ್ರಭುವೇ, ಎಂದೋ ಚನ್ನಮಲ್ಲಿಕಾರ್ಜುನನಿಗೆ ಸಮರ್ಪಿಸಿ ಬಿಟ್ಟಿದ್ದೇನೆ. ಅರಿಷಡ್ವರ್ಗಗಳನ್ನಳಿದು ನನ್ನ ದೇಹವನ್ನು ವ್ಯಾಪಿಸಿರುವ ಸಚ್ಛಿದಾನಂದಾತ್ಮಕವಾದ ರಸ ಅದು. ಸಿಪ್ಪೆ ಒಪ್ಪಗೆಟ್ಟರು ಕೊಳೆಯಲಾರದು, ನನ್ನ ಒಳ ಹೊರೆಗೆಲ್ಲವ ನಳಿದು ನನ್ನತನ ಒಂದೂ ಇಲ್ಲವೆಂದು ಎಂದೆಂದೂ ಅಳಿಯದ ಅಮರ ಪವಿತ್ರತೆಯನ್ನು ತಂದು ಕೊಟ್ಟಿದೆ ಪ್ರಭುವೆ. ಅಲ್ಲಮ : ಈ ಬಾಹ್ಯ ಬ್ರಹ್ಮದ ಬೆಡಗನ್ನು ನಾವು ಮೆಚ್ಚುವವರಲ್ಲ. ನಾ ಸತ್ತೆನೆಂದು ಹೆಣ ಕೂಗಿದುದುಂಟೆ ? ಬೈಚಿಟ್ಟ ಬಯಕೆ ಕರೆದುದುಂಟೆ ? ಹೆಪ್ಪಿಟ್ಟ ಹಾಲು ಸಿಹಿಯಪ್ಪುದೇ ? ಈ ಮಾತು ಒಪ್ಪವಲ್ಲ ಗುಹೇಶ್ವರ ಲಿಂಗದಲ್ಲಿ. ಅಕ್ಕ : ಸತ್ತ ಹೆಣ ಕೂಗಿದುದುಂಟು. ಮರೆತು ಒರಗಿ ಕನಸು ಕಂಡು ಅದನ್ನು ಹೇಳುವಲ್ಲಿ ಸತ್ತ ಹೆಣ ಎದ್ದಂತೆ ಆಯಿತು. ಹೆಪ್ಪಿಟ್ಟ ಹಾಲು ಗಟ್ಟಿ ತುಪ್ಪವಾಗಿ ಸಿಹಿಯಾಗಿತ್ತು. ಇದಕ್ಕೆ ತಪ್ಪು ಸಾಧಿಸಲೇಕೆ ಪ್ರಭುವೇ. ಅಲ್ಲಮ : ಅದೂ ಹೋಗಲಿ, ಅರಿಷಡ್ವರ್ಗಗಳಿಂದಲೇ ತುಂಬಿರುವ ಈ ಶರೀರದಲ್ಲಿದ್ದು ಅದನ್ನು ದಾಟಿದ್ದೇನೆ ಎಂದರೆ ಅದನ್ನಾದರೂ ನಂಬುವುದು ಹೇಗೆ ? ಅಕ್ಕ : ಕಾಮನ ಗೆದ್ದ ಠಾವನ್ನು ಹೇಳಬೇಕೆ ಪ್ರಭುವೇ ? ಕಾಮವನ್ನು ಗೆಲ್ಲುವುದಕ್ಕೆ ಆ ಕಾಮ ನನ್ನ ಮನಸ್ಸಿನಲ್ಲಿ ಎಂದೂ ಹುಟ್ಟಿಯೇ ಇಲ್ಲ. ಕೇಳಿ ಅಂಗದ ಭಂಗವ ಲಿಂಗ ಸುಖದಿಂದ ಗೆಲ್ಲಿದೆ. ಜೀವದ ಭಂಗವ ಶಿವಾನುಭವದಿಂದ ಗೆಲ್ಲಿದೆ. ಕರಗದ ಕತ್ತಲೆಯ ಬೆಳಗನ್ನುಟ್ಟು ಗೆಲ್ಲಿದೆ. ಜವ್ವನದ ಹೊರ ಮಿಂಚಿನಲ್ಲಿ ನಿಮ್ಮ ಕಣ್ಣಿಗೆ ಕಾಣುವ ಕಾಮನ ಸುಟ್ಟುರಿಯುವ ಭಸ್ಮವ ನೋಡಯ್ಯ. ಕಾಮನ ಕೊಂದು ಮನಸ್ಸಿಜನಾಗುಳಿದರೆ, ಮನಸಿಜನ ತಲೆ ಬರಹವ ತೊಡೆದೆನು. ಎನ್ನ ಮನಸ್ಸಿಜನ ಜನನಕ್ಕೆ ಅವಕಾಶವನ್ನೇ ಕಲ್ಪಿಸಿಕೊಟ್ಟಿಲ್ಲ. ಇದನ್ನು ತಮ್ಮಂತಹ ಕೆಲವರು ಮಾತ್ರವೇ ಅರ್ಥ ಮಾಡಿ ಕೊಳ್ಳಬಲ್ಲವರು ಪ್ರಭುವೇ. ಅಲ್ಲಮ : ನೋಡಿದೆಯಾ ಬಸವಣ್ಣ, ಮಹಾದೇವಿಯ ಈ ನಿಲುವನ್ನು ಲೋಕಕ್ಕೆ ಪ್ರಕಟ ಮಾಡಬೇಕೆಂದೇ ನಾನು ಇಷ್ಟು ನಿಷ್ಠುರನಾದೆ. ತಾಯೇ ನಿನ್ನ ಜ್ಞಾನ ಘನ, ನಿನ್ನ ವಿರತಿ ಘನ, ನೀನು ವೈರಾಗ್ಯ ನಿಧಿ. ನಿನ್ನನ್ನು ಪಡೆದ ಜಗತ್ತು ಪಾವನ. ಮಾಯೆ ನಿನ್ನ ಮುಟ್ಟಲಿಲ್ಲ, ಮರಹು ನಿನ್ನ ಸೋಂಕಲಿಲ್ಲ, ಕಾಮ ನಿನ್ನ ಕೆಡಿಸಲಿಲ್ಲ, ಮಹಾದೇವಿ ಅಕ್ಕ ನೀನು ವಿಶ್ವ ಸ್ತ್ರೀ ಕುಲದ ಜ್ಯೋತಿ. ದಿಟ್ಟ ಹೆಜ್ಜೆ, ಧೀರ ನುಡಿಯ ತಾಯಿ ನೀನು, ವಿನಯ ವಿಶ್ವಾಸಗಳ ರತ್ನಗಣಿ ನೀನು, ತಾಯೇ ಮಹಾದೇವಿ ನಿನ್ನ ಸ್ತ್ರೀ ಪಾದಗಳಿಗೆ ನಮೋ ನಮೋ ಎಂದೆನು. (ಅಲ್ಲಮಪ್ರಭು ಕೈ ಮುಗಿಯುವರು) ಬಸವಣ್ಣ : ಹೌದು ಪ್ರಭುವೇ, ಈಕೆ ನಮ್ಮೆಲ್ಲರ ಅಕ್ಕ. ನಮಗೆಲ್ಲರಿಗೂ ಗುರುವಾಗಬಲ್ಲ ಯೋಗ್ಯತೆಯುಳ್ಳವಳು. ಅಕ್ಕಮಹಾದೇವಿ ನಿನಗೆ ಶರಣು ಶರಣಾರ್ಥಿ. (ಬಸವಣ್ಣ ನವರು ಕೈಮುಗಿಯುವರು) ಅಕ್ಕ : ತಾವು ಹಾಗೆಲ್ಲಾ ಹೇಳಬಾರದು, ನಿಮ್ಮೆಲ್ಲರ ಕರುಣೆಯ ಶಿಶು ನಾನು, ನಿಮ್ಮೆದುರಿನಲ್ಲಿ ಅತಿ ಚಿಕ್ಕವಳು. ಚನ್ನಬಸವಣ್ಣ : ಇರಬಹುದು, ವಯಸ್ಸು ಅತಿ ಚಿಕ್ಕದೇ ಇರಬಹುದು. ಆದರೂ ನೀನು ಎಲ್ಲರಿಗೂ ಅಕ್ಕನಾಗಬಲ್ಲವಳು ತಾಯಿ. ಮಹಾದೇವಿ ಅಕ್ಕ ಹಿರಿತನ ಕೇವಲ ವಯಸ್ಸಿನಿಂದ ಮಾತ್ರವೇ ಬರುವುದಿಲ್ಲ. ಅಜ ಕಲ್ಪಕೋಟಿ ವರುಷದವರೆಲ್ಲರೂ ಹಿರಿಯರೇ ? ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ ? ನಡು ಮುರಿದು, ತಲೆ ನಡುಗಿ, ಮತಿಗೆಟ್ಟು ಒಂದನಾಡ ಹೋಗಿ ಒಂಭತ್ತನಾಳುವ ಅಜ್ಞಾನಿಗಳೆಲ್ಲರೂ ಹಿರಿಯರೇ ? ;ಅನುವನರಿದು, ಘನವ ಬೆರೆಸಿ, ಹಿರಿದು ಕಿರಿದೆಂಬ ಭೇದವ ಮರೆತು ಕೂಡಲ ಚನ್ನಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ ನಮ್ಮ ಮಹಾದೇವಿಯಕ್ಕಂಗಾಯಿತ್ತು. ಸಿದ್ದರಾಮ : ಅಹುದಹುದು ಮತ್ತೇನು, ಮರಹಿಂಗೆ ಹಿರಿದು ಕಿರಿದುಂಟಲ್ಲದೆ, ಅರಿವಿಂಗೆ ಹಿರಿದು ಕಿರಿದುಂಟೆ ಹೇಳಯ್ಯ ? ಜಾತಂಗೆ ಮರಣದ ಭಯ ಉಂಟಲ್ಲದೆ, ಅಜಾತಂಗೆ ಮರಣದ ಭಯವುಂಟೇ ಹೇಳಯ್ಯ? ಕಪಿಲಸಿದ್ಧ ಮಲ್ಲಿನಾಥನಲ್ಲಿ ಮಹಾದೇವಿಯಕ್ಕನ ನಿಲವಿಂಗೆ ಶರಣೆಂದು ಶುದ್ಧನಾದೆನು ಕಾಣಾ ಚನ್ನಬಸವಣ್ಣ. ಅಕ್ಕ : ಭಕ್ತಿ ಬಂಡಾರಿ ಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಬಸವಣ್ಣ : ಶರಣು ತಾಯೇ ಶರಣು ಶರಣು. ಅಕ್ಕ : ಜ್ಞಾನ ನಿಧಿ ಚನ್ನಬಸವಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಚನ್ನಬಸವಣ್ಣ : ಶರಣು ತಾಯೇ ಶರಣು. ಅಕ್ಕ : ಧರ್ಮಯೋಗಿ ಸಿದ್ಧರಾಮಣ್ಣನವರ ಶ್ರೀ ಚರಣಗಳಿಗೆ ಶರಣು ಶರಣಾರ್ಥಿ. ಸಿದ್ಧರಾಮ : ಶರಣು ತಾಯೇ ಶರಣು. ಅಕ್ಕ : ಎಲ್ಲಾ ಶರಣ ಶರಣೆಯರಿಗೂ ಶರಣು ಶರಣಾರ್ಥಿ. ಎಲ್ಲರೂ : ಶರಣು ತಾಯೇ ಶರಣು ಶರಣು ಎಂದು ಎಲ್ಲಾ ಶರಣರು ನಮಸ್ಕರಿಸುವರು ಆಗ ಬಸವಣ್ಣನವರು ಅಕ್ಕನನ್ನು ಅಂದಿನ ಅನುಭವಮಂಟಪದ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ಹೇಳುವರು. ಆಗ ಅಕ್ಕನು ಶರಣರೊಂದಿಗೆ ಕುಳಿತು ಅಂದಿನ ಗೋಷ್ಠಿಯಲ್ಲಿ ಭಾಗವಹಿಸುವಳು. *********************

ಅಕ್ಕಮಹಾದೇವಿ ಕನ್ನಡದ ಪ್ರಥಮ ಮಹಿಳಾ ಕವಿಯತ್ರಿ Read Post »

ಇತರೆ

ಮಕ್ಕಳ ಹಕ್ಕು,ಮೊದಲ ಹುಡುಗ

ಲೇಖನ ಮಕ್ಕಳ ಹಕ್ಕು,ಮೊದಲ ಹುಡುಗ ಅಂಜಲಿ ರಾಮಣ್ಣ ಈ ಸಂಪರ್ಕ ಸಂಖ್ಯೆಯೊಡನೆ ಮಾತು ನಿಂತು ಮೂರು ತಿಂಗಳಾಗಿತ್ತೇ?! ಗಮನಕ್ಕೇ ಬರಲಿಲ್ಲವಲ್ಲ. ಎಂದುಕೊಳ್ಳುತ್ತಲೇ ಬಂದಿದ್ದ ಆಡಿಯೋ ಸಂದೇಶವನ್ನು ತೆರೆದೆ “ ಲೇ ಲೇ ರಾಮಣ್ಣನ ಮಗಳೇ. . .” ಎಂದು ರಾಗವಾಗಿ ಹಾಡಿದ್ದ ಅವನು. ಆ ರಾಗಕ್ಕೆ ತಾಳವಾಗುವ ಮನಸ್ಸು ಇರಲಿಲ್ಲ. ಆದರೆ ಉತ್ತರಿಸುವುದು ಬೇಕಾಗಿತ್ತು. ಪ್ರಾಮಾಣಿಕವಾಗಿ ಹೇಳಿದೆ “ ಪಾಪ ಆ ಹುಡುಗಿ ಹತ್ತಿರ ಸೆಕ್ಶನ್ 94ರಲ್ಲಿ ಹೇಳಿರುವ ಯಾವ ದಾಖಲೆಯೂ ಇಲ್ಲ. ಏನು ಮಾಡೋದು ಅಂತ ಯೋಚಿಸ್ತಿದ್ದೀನಿ” ಎಂದೆ.  ಪ್ರತಿ ಬಾರಿಯಂತೆ ಈಗ ಅವನು ಸಿಡುಕಲಿಲ್ಲ. “ನೀನೊಂದು ಗೂಬೆ’ ಎಂದು ದೂರಲಿಲ್ಲ. “ನಿನ್ನಿಂದ ರೊಮ್ಯಾಂಟಿಕ್ ಮಾತು impossible” ಎಂದು ಬೈಯಲಿಲ್ಲ. ಸಮಾಧಾನದಿಂದ “ಓಹ್ ಹೌದಾ. . .” ಎನ್ನುತ್ತಲೇ ಒಂದೆರಡು ಸಲಹೆಗಳನ್ನು ಕೊಟ್ಟ. ಸಲೀಂ ನನ್ನ ಜೀವದ ಅವಿಭಾಜ್ಯ ಅಂಗ. ಜೀವನವನ್ನು ಹಂಚಿಕೊಂಡವ. ಅಮೇರಿಕೆಯಲ್ಲಿ ಇದ್ದಾನೆ. ನಮ್ಮಿಬ್ಬರದು ಹುಟ್ಟಿದಾರಭ್ಯ ಏತಿ ಎಂದರೆ ಪ್ರೇತಿ ಎನ್ನುವ ಬಂಧ. ನನ್ನ ಯಾವ ಗುರಿಗಳೂ ಅವನದಲ್ಲ. ಅವನ ಯಾವ ಕನಸುಗಳೂ ನನ್ನನ್ನು ರೋಮಾಂಚನ ಗೊಳಿಸಿದ್ದೇ ಇಲ್ಲ. ಕಲ್ಪನೆಗಳನ್ನೂ ನಮ್ಮಿಬ್ಬರ ಸಾಮ್ಯತೆಯೇ ಇಲ್ಲ. ಅವನದ್ದು ಬೆಳಗ್ಗೆ ಒಂಭತ್ತರಿಂದ ಸಂಜೆ ಐದಕ್ಕೆ ನಿಗಧಿಗೊಂಡ ಶೈಲಿ. ನನ್ನದು ಹಿಡಿದ ಕೆಲಸ ಮುಗಿಸಿ, ತಕ್ಷಣವೇ ಮತ್ತೊಂದನ್ನು ತೆರೆದಿಟ್ಟುಕೊಂಡು ಕೂರುವ ಹೊತ್ತುಗತ್ತು ಇಲ್ಲದ ಅಭಿರುಚಿ. ಅಗಾಧ ವ್ಯತ್ಯಯಗಳಲ್ಲೂ ನನ್ನನ್ನು ಹುಚ್ಚನಂತೆ ಪ್ರೀತಿಸುತ್ತಾನೆ ಅವ. ಒಂದಷ್ಟು ವರ್ಷಗಳಿಂದ ಅವನ ಎಲ್ಲಾ ಮಾತುಗಳಿಗೂ ನನ್ನ ಉತ್ತರ ಮಕ್ಕಳ ನ್ಯಾಯ ಕಾಯಿದೆಯ ಸೆಕ್ಶನ್‍ಗಳೇ ಆಗಿರುತ್ತಿತ್ತು. ಇತ್ತ ಕಡೆಯಿಂದ ಹಂಚಿಕೆ ಎಂದರೆ POCSO ಕಾಯಿದೆಯ ಅರ್ಥೈಸುವುಕೆಯೇ ಆಗಿರುತ್ತತ್ತು. ಸಾಹಿತ್ಯ ಎಂದರೆ ಬಾಲ ಕಾರ್ಮಿಕ ನಿಷೇಧ ವಿಷಯ. ಕಣ್ಣೀರು ಎಂದರೆ ಬಾಲ್ಯ ವಿವಾಹದ ಪ್ರಕರಣಗಳು ನಗು ಎಂದರೆ ಮಕ್ಕಳು ನನಗೆ ಕೊಟ್ಟ ’ಪ್ರೇಮಪತ್ರಗಳು’. ಇವೆಲ್ಲವನ್ನೂ ಮೀರದ ಮಾತುಗಳು ಎಂದರೆ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಡಂಬಡಿಕೆ.  ಹೇಳಿದ ಹೇಳಿದ ಹೇಳುತ್ತಲೇ ಇದ್ದ ಬುದ್ಧಿ ಮಾತನ್ನು. ಇವೆಲ್ಲವನ್ನೂ ಮೀರಿದ ಬದುಕು ಇದೆ ಎಂದು ನನಗೆ ಉಪದೇಶಿಸುತ್ತಿದ್ದ. ನನಗೋ ಇವುಗಳೇ ಬ್ರಹ್ಮಾಂಡ. ಪಾಪ ಅವನ ತಾಳ್ಮೆ ಕೈಕೊಟ್ಟಿತ್ತು. ಎಂಟು ತಿಂಗಳಿಂದ ಮಾತು ಕಡಿಮೆ ಮಾಡಿದ್ದ. ಮೂರು ತಿಂಗಳಿಂದ ಫೋನ್ ಸಂದೇಶಗಳನ್ನೂ ಬಂದು ಮಾಡಿದ್ದ. ನನ್ನ ಗಮನಕ್ಕೇ ಬಂದಿರಲಿಲ್ಲ ಎನ್ನುವುದು ಅಹಂಕಾರ ಎನಿಸಿದರೂ ಸತ್ಯ. ಅರೆ, ಈ ಬಾರಿ ಇವನು ಯಾಕೆ ಸಿಟ್ಟಾಗುತ್ತಿಲ್ಲ ಎನ್ನುವ ಗುಮಾನಿಯಿಂದಲೇ ಮಾತು ಮುಂದುವರೆಸಿದೆ. ಈ ವರ್ಷದ ಮಕ್ಕಳ ಸ್ನೇಹಿ ಸಪ್ತಾಹಕ್ಕೆ ಸಂಯೋಜಿಸಿದ್ದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದಾಗಲೂ ಉತ್ಸಾಹ ತೋರುತ್ತಿದ್ದ. ಹದಿಮೂರು ವರ್ಷದ ಆ ಹುಡುಗಿ ತುಂಬು ಗರ್ಭಿಣಿ ಸಾವು ಬದುಕಿನ ನಡುವೆ ಹೋರಾಡಿ ಮಗು ಕಳೆದುಕೊಂಡ ಘಟನೆಯನ್ನು ಹೇಳಿದಾಗಲೂ “ಸಾಕು ಮಾಡು ಗೋಳು” ಎನ್ನಲಿಲ್ಲ ಅವ. ಹತ್ತೊಂಬತ್ತೇ ವರ್ಷದ ಹುಡುಗ ತಾನು ಪ್ರೀತಿಸಿದವಳನ್ನು ಓಡಿಸಿಕೊಂಡು ಬಂದು ಮಕ್ಕಳ ನ್ಯಾಯ ಮಂಡಳಿಯ ಎದುರು ಆಪಾದಿತನಾಗಿ ನಿಂತಿದ್ದ ವಿಷಯ ಹೇಳಿದಾಗ “ಅಯ್ಯೋ ಪಾಪ” ಎಂದ. “ತನ್ನ ತಂದೆ ಕುಡಿದು ಬಂದು ಕಾಟ ಕೊಡುತ್ತಾನೆ. ತನಗೆ ರಕ್ಷಣೆ ಕೊಡಿ” ಎಂದು ರಾತ್ರಿ ಹನ್ನೆರಡು ಗಂಟೆಗೆ ಮನೆ ಬಿಟ್ಟು ಬಂದು ಕದ ತಟ್ಟಿದ ಹದಿನಾರರ ಬಾಲೆಯ ಕಥೆ, ಶಾಲೆಯಲ್ಲಿ ಟೀಚರ್ ತುಂಬಾ ಹೊಡೆಯುತ್ತಾರೆ ಎಂದು ಅಳುತ್ತಿದ್ದ ಎಂಟರ ಪೋರನ ಮಾತು ಯಾವುದಕ್ಕೂ ಅವನ ಆಸಕ್ತಿ ಕಡಿಮೆ ಆಗಲೇ ಇಲ್ಲ. ನನ್ನ ಅನುಮಾನ ಈಗ ಮಿತಿ ಇರದ ಆಶ್ಚರ್ಯವಾಗಿ ತಿರುಗಿತ್ತು. ಕೊನೆಗೂ ಬಾಯಿಬಿಡಿಸಿದೆ ಅವನ ಬದಲಾದ ಚರ್ಯೆಯ ಕಾರಣವನ್ನು! ಈಗ ಅವನು ಮಕ್ಕಳ ಹಕ್ಕುಗಳ ಬಗ್ಗೆ ಒಂದು ವರ್ಷದ ಡಿಪ್ಲೊಮಾ ತರಬೇತಿಗೆ ಸೇರಿದ್ದಾನೆ. ಅಮೇರಿಕೆಯಲ್ಲಿನ ಬೀದಿ ಮಕ್ಕಳ ಜೊತೆ ಸಂಪರ್ಕಕ್ಕೆ ಬಂದು ಅವರಿಗೆ ಮಾರ್ಗದರ್ಶಿ ಆಗಿದ್ದಾನೆ. ವಿಚ್ಚೇಧನ ಪಡೆದ ಕುಟುಂಬದ ಮಕ್ಕಳ ಮಾನಸಿಕ ಸ್ಥಿತಿಗೆ ಸ್ನೇಹಿತನಾಗಿ ಕೆಲಸ ಮಾಡುತ್ತಿದ್ದಾನೆ. ಅಪ್ರಾಯಸ್ಥ ಗರ್ಭಧಾರಣೆಯ ಕೆಡುಕುಗಳನ್ನು ಹರೆಯಕ್ಕೆ ತಿಳಿ ಹೇಳುವ ಗುರು ಆಗಿದ್ದಾನೆ. ಅವನು ಸೆಕೆಂಡ್ ಇನ್ನಿಂಗ್ನ್ಸ್‍ನಲ್ಲಿ ಜೀವನದ ಟೆಸ್ಟ್ ಮ್ಯಾಚ್ ಆಡಲು ಕಣಕ್ಕಿಳಿದಿದ್ದಾನೆ. ಅದಕ್ಕೇ ಅವನೀಗ ಹಗುರವಾಗಿದ್ದಾನೆ , ನನ್ನೊಡನೆ ನಿಜಾರ್ಥದಲ್ಲಿ ರೊಮ್ಯಾಂಟಿಕ್ ಆಗಿದ್ದಾನೆ! ಮಕ್ಕಳಿಗೆ ದೊರಕಲೇ ಬೇಕಾದ ಬದುಕನ್ನು ದಕ್ಕಿಸಿಕೊಡಲು ನಾನು ಇನ್ನೂ ದೂರ ಸಾಗಬೇಕಿದೆ ಜನ್ಮಜನ್ಮಗಳಲ್ಲಿ. ಆದರೆ ಸಲೀಂಗೆ ನಿಜದ ಬದುಕನ್ನು ಅರ್ಥ ಮಾಡಿಸಿಕೊಟ್ಟ ಸಾಧಕಳಾಗಿದ್ದೇನೆ. ಮಕ್ಕಳ ಪರವಾಗಿ ದನಿ ಎತ್ತಿ ನನ್ನ ಮೊದಲ ಹುಡುಗ ನನ್ನನ್ನು ಅಮ್ಮ ಮಾಡಿದ್ದಾನೆ.  ಜಗತ್ತು ಆತಂಕದ ಪರಿಸ್ಥಿತಿಯಿಂದ ಹೊರಬರಬಹುದು ಎನ್ನುವ ಬೆಳಕಿನ ಕಿರಣ ಮೂಡಿದೆ. ಒಂದು ಸಣ್ಣ ಕನಕನ ಕಿಂಡಿ ಮಕ್ಕಳ ಬದುಕಿನಲ್ಲಿ ವಿಶ್ವರೂಪಿ ಬದಕನ್ನು ತೆರೆದಿಡಿಲಿ ಎನ್ನುವ ಆಶಯ ಈ ದಿನದ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಚರಣಾ ದಿನಕ್ಕೆ. ****************** ಚಿತ್ರ ಮತ್ತು ಲೇಖನ ಕೃಪೆ:ಅಸ್ಥಿತ್ವ ಲೀಗಲ್ ಬ್ಲಾಗ್ ಸ್ಪಾಟ್.ಕಾಂ

ಮಕ್ಕಳ ಹಕ್ಕು,ಮೊದಲ ಹುಡುಗ Read Post »

You cannot copy content of this page

Scroll to Top