ದಾರಾವಾಹಿ ಆವರ್ತನ ಅದ್ಯಾಯ-39 ‘ಕೊಡೆಕ್ಕೆನಾ’ ಹೋಟೇಲಿನೆದುರು ವ್ಯಾಪಾರ ಆರಂಭಿಸಿ ಕೈಸುಟ್ಟುಗೊಂಡು ದಿವಾಳಿಯಾದ ಹೇಮಚಂದ್ರನು ಹೈರಾಣಾಗಿದ್ದ ಸಂದರ್ಭದಲ್ಲಿ ತನ್ನ ಹತ್ತಿರದ ಸಂಬಂಧಿಯೊಬ್ಬನ ಸಲಹೆಯ ಮೇರೆಗೆ ಗುರೂಜೀಯವರಲ್ಲಿಗೆ ಬಂದ. ಅವರ ಆಪ್ತ ಸಹಾಯಕ ರಾಘವನ ಕಥೆ ಕೇಳಿ ಬೆಕ್ಕಸ ಬೆರಗಾಗಿ ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಸರಿಪಡಿಸಿ ನೆಟ್ಟಗೆ ಕುಳಿತುಕೊಂಡ. ತನ್ನದೂ ಇವನದೇ ಕಥೆ. ಹಾಗಾಗಿ ತನಗೂ ಈ ಗುರೂಜಿಯವರಿಂದ ಪರಿಹಾರ ದೊರಕೀತು ಎಂದುಕೊಂಡು ಉಲ್ಲಸಿತನಾದ. ಅದರ ನಡುವೆಯೂ ಅವನನ್ನೊಂದು ಅನುಮಾನ ಕಾಡಿತು. ಅದನ್ನು ನಿವಾರಿಸಿಕೊಳ್ಳಲು, ‘ನನ್ನದೂ ನಿಮ್ಮದೇ ಸಮಸ್ಯೆ ಮಾರಾಯ್ರೇ. ಆದರೆ ಈ ಗುರೂಜಿಯವರು ಅದಕ್ಕೆ ಯಾವ್ಯಾವ ಬಗೆಯ ಪರಿಹಾರವನ್ನು ಹೇಳಬಹುದೆಂಬ ಐಡಿಯಾ ಇದೆಯಾ ನಿಮಗೆ…?’ ಎಂದು ರಾಘವನನ್ನು ಪ್ರಶ್ನಿಸಿದ. ‘ಅಯ್ಯೋ, ಅದು ಬಿಡಿ. ಅವರು ಯಾವತ್ತೂ ದುಡ್ಡು ಮಾಡುವವರ ಜಾತಿಗೆ ಸೇರಿದವರಲ್ಲ. ಹಾಗಾಗಿ ದೊಡ್ಡ ದೊಡ್ಡ ವಿಧಿಗಳನ್ನೇನೂ ಹೇಳುವುದಿಲ್ಲ. ನಿಮಗ್ಯಾರಾದರೂ ಮಾಟ ಗೀಟ ಮಾಡಿಸಿದ್ದರೆ ಅದರ ನಿವಾರಣೆಗೆ ಕೆಲವು ಪೂಜೆ, ಪುನಸ್ಕಾರಗಳನ್ನು ಹೇಳಬಹುದಷ್ಟೇ. ಎಷ್ಟೆಷ್ಟೋ ಬಡವರ ಸಮಸ್ಯೆಗಳನ್ನು ಅವರು ಕೆಲವೊಮ್ಮೆ ಪುಕ್ಕಟೆಯಾಗಿ ತಮ್ಮ ಮಂತ್ರಶಕ್ತಿಯಿಂದಲೇ ನಿವಾರಿಸಿ ಕಳುಹಿಸಿದ್ದುಂಟು!’ ಎಂದು ವಿಸ್ಮಯ ಸೂಚಿಸುತ್ತ ಹೇಳಿದ. ಅಷ್ಟು ಕೇಳಿದ ಹೇಮಚಂದ್ರ ಪೂರ್ಣ ನಿರಾಳನಾದ. ‘ಹೌದೂ, ನಿಮ್ಮದೆಂಥ ಸಮಸ್ಯೆ ಮಾರಾಯ್ರೇ…?’ ಎಂದು ರಾಘವ ಎತ್ತಲೋ ನೋಡುತ್ತ, ಸಿಗರೇಟಿನ ಹೊಗೆ ಉಗುಳುತ್ತ ಅವನನ್ನು ಪ್ರಶ್ನಿಸಿದ. ‘ನನ್ನದೂ ವ್ಯಾಪಾರದ ಅವಸ್ಥೆಯೇ ಮಾರಾಯ್ರೇ! ಹೊಟೇಲು ಮಾಲಿಕನೊಬ್ಬ ನನ್ನ ಮೇಲೆ ಮಾಟ ಮಾಡಿಸಿರಬೇಕು. ಬರೇ ಆರು ತಿಂಗಳಲ್ಲಿ ಇಪ್ಪತ್ತು ಲಕ್ಷ ಲಾಸ್ ಆಯಿತು. ಅದರ ಮೇಲೆ ಒಂದಷ್ಟು ಸಾಲವೂ ಆಗಿಬಿಟ್ಟಿದೆ. ಆ ಸಾಲಗಾರರ ತೊಂದರೆ ತಾಳಲಾಗದೆ ಜೀವ ತೆಗೆದುಕೊಳ್ಳುವುದೊಂದೇ ದಾರಿ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲಿ ನನ್ನ ಸಂಬಂಧಿಕನೊಬ್ಬ ಈ ಗುರೂಜಿಯವರಲ್ಲಿಗೆ ಕಳುಹಿಸಿಕೊಟ್ಟ!’ ಎಂದ ವಿಷಾದದಿಂದ. ‘ಓಹೋ, ಹೌದಾ… ಇಲ್ಲಿಗೆ ಬಂದಾಯ್ತಲ್ಲ ಇನ್ನು ಮಂಡೆಬಿಸಿ ಬಿಟ್ಟುಬಿಡಿ. ನೀವೆಷ್ಟು ಕಳೆದುಕೊಂಡಿದ್ದೀರೋ ಅದರ ಡಬ್ಬಲ್ ತಿರುಗಿ ನಿಮ್ಮ ಹತ್ತಿರ ಬಂದೇ ಬರುತ್ತದೆ. ಅದಕ್ಕೆ ನಾನು ಭರವಸೆ ಕೊಡಬಲ್ಲೆ!’ ಎಂದು ಎದೆಯುಬ್ಬಿಸಿ ಅಂದವನು, ‘ಹೌದೂ ನಿಮ್ಮನ್ನು ಇಲ್ಲಿಗೆ ಕಳುಹಿಸಿದವನು ನಿಮ್ಮ ಸಂಬಂಧಿಕನೆಂದಿರಲ್ಲ ಆ ಪುಣ್ಯಾತ್ಮನ ಹೇಸರೇನಂದಿರಿ…?’ ಎಂದು ಪ್ರಶ್ನಿಸಿದ. ‘ಪ್ರಕಾಶ ಅಂತ. ಅವನು ನನ್ನ ಹತ್ತಿರದ ಸಂಬಂಧಿಯೇನೂ ಅಲ್ಲ. ಆದರೂ ಕಷ್ಟಕಾಲದಲ್ಲಿ ಅಂಥವರೇ ಆಗುವುದು ಅಂತ ಈಗ ಗೊತ್ತಾಗುತ್ತಿದೆ ಮಾರಾಯ್ರೇ!’ ಎಂದು ಹೇಮಚಂದ್ರ ಅವನನ್ನು ಸ್ಮರಿಸಿದ. ‘ಓಹೋ, ಅವನಾ… ಹೌದೌದು. ಅಂತವರೇ ಆಗುವುದು ಮಾರಾಯ್ರೇ!’ ಎಂದ ರಾಘವ ಇನ್ನು ತನ್ನ ಕೆಲಸವಾಯಿತು ಎಂಬಂತೆ ಎದ್ದು ನಿಂತವನು ಯಾರಿಗೋ ಕರೆ ಮಾಡಲು ನೆನಪಾದಂತೆ ನಟಿಸುತ್ತ ಫೋನೆತ್ತಿಕೊಂಡು, ‘ಆಯ್ತು ನೀವು ಕುಳಿತಿರಿ. ನಾನೀಗ ಬಂದೆ…’ ಎಂದವನು ಮತ್ತೆ ಅವನತ್ತ ತಿರುಗಿಯೂ ನೋಡದೆ ಹೊರಟು ಹೋದ. ಅವನು ಅತ್ತ ಹೋಗುತ್ತಲೇ, ಎಲ್ಲಿಂದಲೋ ಹಾರಿ ಬಂದ ಕಾಗೆಯೊಂದು ಹೇಮಚಂದ್ರನ ನೆತ್ತಿಯ ಮೇಲಿನ ಮರದ ಕೊಂಬೆಯಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಕ್ರಾವ್ಸ್…ಕ್ರಾವ್ಸ್…ಕ್ರಾವ್ಸ್…! ಎಂದು ಅರಚಿದ್ದು, ಪಿಚಕ್ಕನೆ ಅವನ ಮೇಲೆ ಹಿಕ್ಕೆ ಸುರಿದು ಹಾರಿ ಹೋಯಿತು. ಹೇಮನಾಥ ಬೆಚ್ಚಿಬಿದ್ದ. ಅವನ ಮೈಯಿಡೀ ಕೆಟ್ಟ ವಾಸನೆ ಹೊಮ್ಮತೊಡಗಿತು. ಅಸಹ್ಯದಿಂದ ಎದ್ದು ಸಮೀಪದ ನಳ್ಳಿಯತ್ತ ಧಾವಿಸಿ ತೊಳೆದುಕೊಂಡ. ಆದರೂ ಕೊಳೆತ ಮೀನಿನಂಥ ವಾಸನೆ ಹಾಗೆಯೇ ಉಳಿಯಿತು. ತಲೆಯನ್ನು ಕರವಸ್ತ್ರ್ರದಿಂದ ತಿಕ್ಕಿತಿಕ್ಕಿ ಒರೆಸಿಕೊಂಡು ಮರಳಿ ಅಲ್ಲಿ ಕೂರಲಾಗದೆ ಅಸಹನೆಯಿಂದ ಅಡ್ಡಾಡತೊಡಗಿದ. *** ಹೇಮಚಂದ್ರನೊಡನೆ ಮಾತಾಡಿ ಅಲ್ಲಿಂದ ಮರೆಯಾದ ರಾಘವ ಕೂಡಲೇ ಗುರೂಜಿಯವರಿಗೆ ಕರೆ ಮಾಡಿದ. ಆದರೆ ಆಹೊತ್ತು ಗುರೂಜಿಯವರ ಎದುರಿನಲ್ಲಿ ಶ್ರೀಮಂತ ಜೋಡಿಯೊಂದು ತಮ್ಮ ಜೀವನವೇ ಕಳೆದು ಹೋದಂಥ ದುಃಖದಿಂದ ಕುಳಿತಿತ್ತು. ಗುರೂಜಿಯವರು ಅವರ ಸಮಸ್ಯೆಯನ್ನೂ ಅವರ ಮನೆಯ ವಿವರವನ್ನೂ ಮತ್ತು ವಠಾರದ ಚಿತ್ರಣವನ್ನೂ ಅವರಿಂದಲೇ ಕೆದಕಿ ಕೆದಕಿ ಪ್ರಶ್ನಿಸುತ್ತ ಸಾಕಷ್ಟು ತಿಳಿದುಕೊಂಡವರು ಕೊನೆಯಲ್ಲಿ ತಮ್ಮ ಕವಡೆಗಳನ್ನು ಹರಿಯಬಿಟ್ಟರು. ಅವುಗಳು ಕೆಲವುಕ್ಷಣ ಕುಣಿದು ಕುಪ್ಪಳಿಸಿ ಬಿದ್ದ ಸ್ಥಿತಿಯ ಮೇಲೆ ಲೆಕ್ಕಾಚಾರ ಹಾಕಿದವರು, ‘ನೋಡೀ, ನಿಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಈಚೀಚೆಗೆ ಕಂಡು ಬಂದಿರುವ ಮನಸ್ತಾಪಕ್ಕೂ ಮತ್ತು ನಿಮ್ಮ ಆರ್ಥಿಕ ಸಂಕಷ್ಟಕ್ಕೂ ಕಾರಣವೇನೆಂದು ಇಲ್ಲಿ ಸ್ಪಷ್ಟವಾಗುತ್ತಿದೆ. ನೀವು ಹೊಸತಾಗಿ ಕಟ್ಟಿಸಿರುವ ಬಂಗಲೆಯ ವಾಸ್ತುದೋಷವೇ ಈ ಎಲ್ಲ ಅನಾಹುತಕ್ಕೆ ಕಾರಣ! ಆದರೆ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಬಂಗಲೆಯ ಮುಖ್ಯ ದ್ವಾರವನ್ನು ಕಿತ್ತು ನಾವು ಸೂಚಿಸುವ ದಿಕ್ಕಿಗೆ ಇರಿಸಿದರಾಯ್ತು. ಆನಂತರ ನಿಮ್ಮ ಬೆಡ್ರೂಮಿಗೆ ನೇರವಾಗಿ ಕಾಣಿಸುವ, ನಿಮ್ಮ ನೆರೆಮನೆಯ ತೋಟದಲ್ಲಿ ಹಳೆಯ ಕಾಟು ಮಾವಿನಮರವೊಂದಿದೆ ಅಂತ ಹೇಳಿದಿರಲ್ಲ ಆ ಮರವು ಪ್ರೇತಾತ್ಮಗಳ ವಾಸ್ಥಸ್ಥಾನವಾಗಿರುವುದೂ ಇಲ್ಲಿ ತೋರಿ ಬರುತ್ತಿದೆ. ಅವು ಮಸ್ಸರಗೊಂಡು ನಿಮ್ಮ ದಾಂಪತ್ಯ ಸುಖಕ್ಕೆ ಕಲ್ಲು ಹಾಕುತ್ತಿವೆ. ಆದಷ್ಟು ಬೇಗ ಆ ಮರವನ್ನು ಕಡಿಸುವ ಏರ್ಪಾಟ್ಟು ಮಾಡಿಸಿ. ಬಳಿಕ ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ಭಕ್ತಿಯಿಂದ ನೆರವೇರಿಸಿಬಿಡಿ. ಆಮೇಲೆ ನಿಮ್ಮ ಸರ್ವ ಸಮಸ್ಯೆಗಳೂ ನಿವಾರಣೆಯಾಗುತ್ತವೆ, ಚಿಂತಿಸಬೇಡಿ!’ ಎಂದು ಸಲಹೆಯಿತ್ತರು. ಅಷ್ಟು ಕೇಳಿದ ಹೆಂಗಸು ಸ್ವಲ್ಪ ನಿರಾಳಲಾಗಿ ಗಂಡನ ಮುಖ ದಿಟ್ಟಿಸಿದಳು. ಆದರೆ ಗಂಡಸಿಗೆ ಮರುಕ್ಷಣ ಬೇರೊಂದು ಚಿಂತೆ ಕಾಡಿತು. ‘ಸರಿ ಗುರೂಜಿ. ನೀವು ಹೇಳಿದಂತೆ ಮನೆಯ ದ್ವಾರವನ್ನು ತೆಗೆದು ಬೇರೆಡೆಗಿರಿಸಬಹುದು. ಆದರೆ ಮಾವಿನ ಮರ ಕಡಿಯಲು ನೆರೆಮನೆಯವರು ಒಪ್ಪುತ್ತಾರಾ…?’ ಎಂದು ಪ್ರಶ್ನಿಸಿದ. ‘ಅದೂ ಹೌದು. ಆದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ ಬಿಡಿ!’ ಎಂದ ಗುರೂಜಿಯವರು ಕುಂಕುಮದ ಕಟ್ಟೊಂದನ್ನು ತೆಗೆದು ಕಣ್ಣುಮುಚ್ಚಿ ಮಂತ್ರಿಸಿ ಅವರ ಕೈಗಿತ್ತು, ‘ಈ ಪ್ರಸಾದವನ್ನು ಆ ಮನೆಯವರಿಗೆ ಕೊಡಿ ಮತ್ತು ಆ ಮರದ ಕುರಿತು ನಾವು ಹೇಳಿದ ವಿಷಯವನ್ನೂ ಅವರಿಗೆ ವಿವರಿಸಿ. ಒಪ್ಪುತ್ತಾರೆ. ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ನಾವೇ ಹೇಳುತ್ತೇವೆ. ಯಾವುದಕ್ಕೂ ಆ ಕೆಲಸವಾದ ಮೇಲೆ ಇನ್ನೊಮ್ಮೆ ಬಂದು ಹೋಗಿ!’ ಎಂದು ನಗುತ್ತ ಹೇಳಿದರು. ಆಗ ಆ ದಂಪತಿಗೆ ಧೈರ್ಯ ಬಂತು. ‘ಸರಿ ಗುರೂಜಿ!’ ಎಂದು ಅವರು ನಮ್ರವಾಗಿ ಎದ್ದವರು ಐನೂರರ ಎರಡು ನೋಟುಗಳನ್ನು ಅವರ ಹರಿವಾಣದಲ್ಲಿಟ್ಟು ಕೈಮುಗಿದು ಹೊರಟು ಹೋದರು. ಶ್ರೀಮಂತ ದಂಪತಿ ಹೊರಗೆ ಹೋದ ಬೆನ್ನಿಗೆ ಮಧ್ಯಮವರ್ಗದ ಜೋಡಿಯೊಂದು ಅಳುಕುತ್ತ ನಾಚುತ್ತ ಗುರೂಜಿಯ ಕೋಣೆಯನ್ನು ಪ್ರವೇಶಿಸಿತು. ಗುರೂಜಿಯವರು ಆ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಹೌದೂ, ಇವರು ಮೂರು ತಿಂಗಳ ಹಿಂದೊಮ್ಮೆ ಬಂದು ಹೋದವರಲ್ಲವಾ…? ಎಂದುಕೊಂಡವರ ಮುಖದಲ್ಲಿ ತಟ್ಟನೆ ಅಸಹನೆಯ ಹೊಗೆಯಾಡಿತು. ಥತ್! ದರಿದ್ರದವುಗಳೆಲ್ಲಿಯಾದರೂ! ಮತ್ತೆ ಯಾಕೆ ವಕ್ಕರಿಸಿದವು? ಎಂದು ಚಿಂತಿಸಿದವರಿಗೆ ಆ ಜೋಡಿಯ ಸಮಸ್ಯೆಯೂ ಮುನ್ನೆಲೆಗೆ ಬಂತು. ಥೂ! ಇವುಗಳು ಕೊಡುವ ಇನ್ನೂರು ರೂಪಾಯಿಗೆ ನಾವು ಇವರಿಗೆ ಸಂತಾನಭಾಗ್ಯ ಕರುಣಿಸಬೇಕಂತೆ. ತಲೆಕೆಟ್ಟವುಗಳು! ಎಂದು ಒಳಗೊಳಗೇ ಬೈದುಕೊಳ್ಳುತ್ತ, ‘ಹ್ಞೂಂ ಹೇಳಿ ಏನು ವಿಶೇಷ? ಏನಾದರೂ ಸಿಹಿ ಸುದ್ದಿ ತಂದಿದ್ದೀರೋ ಇಲ್ಲವೋ…?’ ಎಂದು ನಗುತ್ತ ಕೇಳಿದರು. ಆದರೆ ಆ ದಂಪತಿಯ ಮುಖಗಳು ಬಾಡಿದವು. ‘ಅದು ಗುರೂಜೀ… ನಾವು ಹೋದ ಸಲ ಬಂದಾಗ ನೀವು ನಮ್ಮ ತೊಂದರೆಯ ನಿವಾರಣೆಗೆ ನಮ್ಮ ಕುಲದೇವರಿಗೆ ಒಂದೂವರೆ ಕಿಲೋ ಉದ್ದಿನ ಬೇಳೆಯನ್ನು ಭಕ್ತಿಯಿಂದ ಸಮರ್ಪಿಸಿಲು ಹೇಳಿದ್ದಿರಿ. ನಾವು ಕೂಡಾ ಹಾಗೆಯೇ ಮಾಡಿದೆವು. ಆದರೆ ಆ ಮೇಲೆ ಮೂರು ತಿಂಗಳು ಕಳೆಯಿತು. ಇನ್ನೂ ಯಾವ ಸೂಚನೆಯೂ ಇಲ್ಲ!’ ಎಂದ ಹೆಂಗಸು ಮತ್ತೆ ತಲೆ ತಗ್ಗಿಸಿ ಕುಳಿತಳು. ಗುರೂಜಿಯವರಿಗೆ ಜಿಗುಪ್ಸೆ ಮೂಡಿತು. ‘ಹೌದಾ ಅಮ್ಮಾ… ಮೂರು ತಿಂಗಳಲ್ಲಿ ಎಷ್ಟು ಬಾರಿ ಕೊಟ್ಟಿದ್ದೀರಿ? ಒಂದೇ ಸಲ ಅಲ್ಲವಾ… ಅದೂ ಒಂದೂವರೆ ಕೇಜಿ ಅಷ್ಟೇ ತಾನೇ. ಅಯ್ಯೋ, ಅಷ್ಟಕ್ಕೆಲ್ಲ ನಮ್ಮ ಈಗಿನ ಯಾವ ದೇವರು ಪ್ರಸನ್ನನಾಗುತ್ತಾನಮ್ಮಾ! ಇನ್ನೊಂದಷ್ಟು ಕಾಲ ಕೊಡುತ್ತಲೇ ಇರು. ದೇವರಿಗೂ ನಾವು ಆಗಾಗ ಸ್ವಲ್ಪ ಕಾಟ ಕೊಡುತ್ತಲೇ ಇರಬೇಕಮ್ಮಾ. ಆಗಲೇ ಅವನೂ ನಮ್ಮಾಚೆ ತಿರುಗಿ ನೋಡುವುದು!’ ಎಂದು ವ್ಯಂಗ್ಯವಾಗಿ ನಗುತ್ತ ಹೇಳಿದರು. ಆಗ ಅವಳ ಗಂಡ, ಗುರೂಜಿಯವರಿಗೆ ಕಾಣದಂತೆ ಹುಬ್ಬುಗಂಟಿಕ್ಕಿ ತಲೆಯನ್ನು ಕೆರೆದುಕೊಂಡ. ‘ಹ್ಞಾಂ! ಅಂದಹಾಗೆ ಇನ್ನು ಮುಂದೆ ಹೀಗೆ ಮಾಡಿ, ಒಂದು ತಿಂಗಳು ಉದ್ದಿನ ಬೇಳೆ ಕೊಟ್ಟರೆ ಮತ್ತೊಂದು ತಿಂಗಳು ತೊಗರಿಬೇಳೆ ಕೊಡಿ. ಅದರಿಂದ ದೇವರು ಸಂಪ್ರೀತನಾಗಿ ನಿಮಗೆ ಖಂಡಿತಾ ಸಂತಾನವಾಗುತ್ತದೆ. ಹೋಗಿ ಬನ್ನಿ!’ ಎಂದು ಗುರೂಜಿಯವರು ನಯವಾಗಿ ಅಂದರು. ಅಷ್ಟು ಕೇಳಿದ ಆ ಬಡಪಾಯಿ ದಂಪತಿ, ‘ಆಯ್ತು ಗುರೂಜಿ. ಎಲ್ಲಾ ನಿಮ್ಮ ಆಶೀರ್ವಾದ!’ ಎಂದು ಕೈಮುಗಿದು ಇನ್ನೂರು ರೂಪಾಯಿಯನ್ನು ಅವರ ಮುಂದಿಟ್ಟು ಹೊರಟು ಹೋದರು. ಅಷ್ಟರಲ್ಲಿ ಗುರೂಜಿಯವರಿಗೆ ರಾಘವನ ಕರೆ ಬಂತು. ಫೋನೆತ್ತಿಕೊಂಡರು. ಅದು ತಮ್ಮ ಸಹಾಯಕನ ಕರೆ ಎಂದು ತಿಳಿದರೂ ಅಭ್ಯಾಸ ಬಲದಂತೆ, ‘ಓಂ ನಾಗಾಯ ನಮಃ ಯಾರು ಮಾತಾಡ್ತಾ ಇರೋದು…?’ ಎಂದರು. ‘ನಾನು ಗುರೂಜೀ ರಾಘವ…ಹೊರಗಡೆ ಒಂದು ಹೊಸ ಕೇಸು ಬಂದು ಕೂತಿದೆ. ಕೆಂಪು ಶರ್ಟು ಮತ್ತು ಹಳೆಯ ಮಾಡೆಲಿನ ರಾಡೋ ವಾಚು ಧರಿಸಿರುವ ಹೇಮಚಂದ್ರ ಎಂಬವನಿದ್ದಾನೆ. ಸುಮಾರಾದ ಕುಳವೇ. ಹೊಟೇಲ್ ಬ್ಯುಸಿನೆಸ್ಸು. ಯಾರೋ ಮಾಟ ಮಾಡಿಸಿದ್ದಾರಂತೆ. ಈಗ ವ್ಯಾಪಾರ ಮುಳುಗಿ ಇಪ್ಪತ್ತು ಲಕ್ಷ ಲಾಸ್ ಆಗಿದೆಯಂತೆ. ಗಮನಿಸಿ!’ ಎಂದು ಸಂಕ್ಷಿಪ್ತ ಮಾಹಿತಿ ನೀಡಿ ಫೋನಿಟ್ಟ. ‘ಓಹೋ, ಹೌದಾ…, ಸರಿ, ಸರಿ!’ ಎಂದು ಗುರೂಜಿಯೂ ಫೋನಿಟ್ಟವರು ತಕ್ಷಣ ಅಣ್ಣಪ್ಪನನ್ನು ಕರೆದು, ‘ನೋಡನಾ… ಹೇಮಚಂದ್ರ ಎಂಬವನನ್ನು ಒಳಗೆ ಕಳುಹಿಸು…!’ ಎಂದು ಆಜ್ಞಾಪಿಸಿದರು. ಅದಕ್ಕವನು, ‘ಗುರೂಜೀ, ಸುಮಿತ್ರಮ್ಮ ಎಂಬವರು ಅವರಿಗಿಂದ ಮೊದಲು ಬಂದು ಕೂತಿದ್ದಾರೆ…!’ ಎಂದು ಹಲ್ಲುಗಿಂಜಿದ. ‘ಪರ್ವಾಗಿಲ್ಲ ಮಾರಾಯಾ. ಅವರನ್ನು ಇನ್ನೂ ಸ್ವಲ್ಪಹೊತ್ತು ಕುಳಿತಿರಲು ಹೇಳಿ ಇವನನ್ನು ಮೊದಲು ಕಳುಹಿಸು ಹೋಗು!’ ಎಂದು ಒರಟಾಗಿ ಅಂದರು. ಅವನು, ‘ಆಯ್ತು, ಗುರೂಜಿ’ ಎಂದುತ್ತರಿಸಿ ಹೊರಗೆ ಹೋದ. ಹೇಮಚಂದ್ರ ಉತ್ಸಾಹದಿಂದ ಒಳಗೆ ಬಂದವನು ಗುರೂಜಿಯವರಿಗೆ ಅತಿಯಾದ ಧೈನ್ಯ ಮತ್ತು ಗೌರವದಿಂದ ನಮಸ್ಕರಿಸಿ ಕುಳಿತುಕೊಂಡ. ಗುರೂಜಿಯವರು ಅವನನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದವರು ದೇಶಾವರಿ ನಗು ಬೀರುತ್ತ ಧ್ಯಾನಸ್ಥರಾದರು. ಕೆಲಕ್ಷಣದ ಬಳಿಕ ಕಣ್ಣು ತೆರದು ಕವಡೆಗಳನ್ನೆತ್ತಿ ಹಣೆಗೊತ್ತಿಕೊಂಡು ಮೇಜಿನ ಮೇಲೆ ಹರಡಿದರು. ತುಸುಹೊತ್ತು ಅವುಗಳನ್ನೇ ತದೇಕಚಿತ್ತದಿಂದ ದಿಟ್ಟಿಸುತ್ತ ಲೆಕ್ಕಾಚಾರವನ್ನೂ ಹಾಕಿದವರು ಅವನತ್ತ ತಲೆಯೆತ್ತಿ, ‘ಜೀವನದಲ್ಲಿ ನೀವು ಬಹಳವೇ ಕಷ್ಟನಷ್ಟವನ್ನನುಭವಿಸಿರುವ ಹಾಗಿದೆಯಲ್ಲ…!’ ಎಂದು ಕನಿಕರದಿಂದ ನೋಡುತ್ತ ಅಂದರು. ಹೇಮಚಂದ್ರ ತಟ್ಟನೆ ನೆಟ್ಟಗೆ ಕುಳಿತವನು, ‘ಹೌದು ಹೌದು, ಗುರೂಜೀ…!’ ಎಂದು ವಿಷಾದದಿಂದ ಗೋಣಲ್ಲಾಡಿಸಿದ. ‘ಜೀವಮಾನದ ಗಳಿಕೆ ಲಕ್ಷಲಕ್ಷ ಕರಗಿ ಹೋದಂತೆ ತೋರುತ್ತಿದೆ ಇಲ್ಲಿ, ಹೌದೇ…?’ ಎಂದು ಗುರೂಜಿ ಅದೇ ಧಾಟಿಯಿಂದ ಪ್ರಶ್ನಿಸಿದರು. ಹೇಮಚಂದ್ರನ ಮುಖದಲ್ಲಿ ವಿಲಕ್ಷಣ ಕಾಂತಿ ಮಿನುಗಿತು. ಅದನ್ನು ಗಮನಿಸಿದ ಗುರೂಜಿಯವರು ಮತ್ತೆ ಕವಡೆಗಳತ್ತ ನೋಡುತ್ತ, ‘ನಿಮ್ಮದು ಆಹಾರ ಪೂರೈಕೆಯ ವ್ಯವಹಾರವಿರಬೇಕಲ್ಲ…?’ ಎಂದರು ತಲೆ ಎತ್ತದೆಯೇ. ಆಗ ಹೇಮಚಂದ್ರ ನಿಜಕ್ಕೂ ವಿಸ್ಮಯಗೊಂಡ. ಅವನಿಗೆ ಗುರೂಜಿಯ ಮೇಲಿದ್ದ ಸಣ್ಣ ಅನುಮಾನವೂ ಕರಗಿ ಹೋಯಿತು. ಇವರು ಅಂತಿಂಥ ವ್ಯಕ್ತಿಯಲ್ಲ. ದಿವ್ಯದೃಷ್ಟಿ ಉಳ್ಳವರು ಅನ್ನುವುದರಲ್ಲಿ ಸಂಶಯವೇ ಇಲ್ಲ! ಎಂದುಕೊಂಡವನಿಗೆ ಅವರ ಮೇಲೆ ಅಪಾರ ನಂಬಿಕೆ ಹುಟ್ಟಿಬಿಟ್ಟಿತು. ‘ಹೌದು ಗುರೂಜಿ, ತಾವು ಸರಿಯಾಗೇ ಹೇಳಿದಿರಿ. ನನ್ನ ಇಪ್ಪತ್ತು ವರ್ಷದ ಸಂಪಾದನೆಯನ್ನು ಆರೇ ತಿಂಗಳಲ್ಲಿ ಒಬ್ಬಾತ ಮುಳುಗಿಸಿಬಿಟ್ಟ. ಅದರ ಮೇಲೆ ಈಗ ಒಂದಷ್ಟು ಸಾಲಕ್ಕೂ ಬಿದ್ದು ಸಾಯುವುದೊಂದೇ ಬಾಕಿ ಎಂಬಂತಾಗಿದೆ ನನ್ನ ಪರಿಸ್ಥಿತಿ!’ಎಂದು ಉಮ್ಮಳಿಸಿ ಬಂದ ದುಃಖವನ್ನು ಹತ್ತಿಕ್ಕಿಕೊಳ್ಳುತ್ತ ಹೇಳಿದವನು ತನ್ನ ಹಲವು ವರ್ಷಗಳ ಕಥೆಯನ್ನೆಲ್ಲ ಅವರ ಮನಕರಗುವಂತೆ ವಿವರಿಸಿ, ‘ನನ್ನಂಥ ಶನಿ ಹಿಡಿದವನನ್ನು ನೀವೇ ಕಾಪಾಡಬೇಕು ಗುರೂಜೀ!’ ಎಂದು ಕೈಮುಗಿದು ಬೇಡಿಕೊಂಡ. ಗುರೂಜಿ ಮತ್ತೊಮ್ಮೆ ಅವನತ್ತ ಮಂದಹಾಸ ಬೀರಿದವರು ಮರಳಿ ಕೆಲವು ಕ್ಷಣ ಕಣ್ಣುಮುಚ್ಚಿ ತೆರೆದರು. ‘ನೀವು ವ್ಯಾಪಾರಕ್ಕೆ ಆಯ್ಕೆ ಮಾಡಿಕೊಂಡ ಜಾಗದಲ್ಲಿ ದೋಷವಿತ್ತು ಹೇಮಚಂದ್ರರೇ. ಅದಕ್ಕೆ ಸರಿಯಾಗಿ ಬಲವಾದ ಕ್ಷುಧ್ರ ಮಾಟವೊಂದೂ ನಿಮ್ಮ ಮೇಲೆ ಪ್ರಯೋಗಿಸಲ್ಪಟ್ಟಿದೆ! ವ್ಯಾಪಾರ ಆರಂಭಿಸುವ ಮೊದಲು ನೀವು ಯಾರನ್ನಾದರೂ ಜ್ಯೋತಿಷಿಗಳನ್ನು ಸಂಪರ್ಕಿಸಿ ಸರಿಯಾದ ಸಲಹೆ ಸೂಚನೆ ಪಡೆದುಕೊಂಡು ಮುಂದುವರೆಯುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಆದರೂ ಕಾಲ ಮಿಂಚಿಲ್ಲ ಬಿಡಿ. ನಿಮ್ಮ ತಾಪತ್ರಯಕ್ಕೆ ಪರಿಹಾರವಿದೆ. ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿ. ಆನಂತರ ನಾವು ತಿಳಿಸುವ ಶುಭಗಳಿಗೆಯಲ್ಲಿ ಅದೇ ವ್ಯಾಪಾರವನ್ನು ಬೇರೆ ಜಾಗದಲ್ಲಿ ಪುನರಾರಂಭಿಸಿ. ಎಲ್ಲವನ್ನೂ ವೃದ್ಧಿಸಿ ಕೊಡುವ ಜವಾಬ್ದಾರಿ ನಮ್ಮದು. ಚಿಂತಿಸಬೇಡಿ ಹೋಗಿಬನ್ನಿ!’ ಎಂದು ಅಭಯ ನೀಡಿದರು. ಅಷ್ಟು ಕೇಳಿದ ಹೇಮಚಂದ್ರನ ಕೊರಗು ದಿಢೀರ್ರನೆ ಮರೆಯಾಯಿತು. ‘ಖಂಡಿತಾ ನೆರವೇರಿಸುತ್ತೇನೆ ಗುರೂಜಿ. ಮುಕ್ಕಾಲು ಮುಳುಗಿದವನಿಗೆ ಚಳಿಯೇನು ಮಳೆಯೇನು? ಒಟ್ಟಾರೆ ನನ್ನನ್ನು ಕಾಪಾಡುವ ಜವಾಬ್ದಾರಿ ನಿಮ್ಮದು!’ ಎಂದು ನಮ್ರವಾಗಿ ಕೈಮುಗಿದವನು ಐನೂರರ ನೋಟೊಂದನ್ನು ತೆಗೆದು ಅವರ ಹರಿವಾಣದಲ್ಲಿಟ್ಟು ಹಿಂದಿರುಗಿದ. (ಮುಂದುವರೆಯುವುದು) ಗುರುರಾಜ್ ಸನಿಲ್
ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ
ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಅಂತರಜಾಲ ಪತ್ರಿಕೆಗಳು ಮಾಡುತ್ತಿವೆ. ಅಲ್ಲದೇ ಅನೇಕ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರಿಗೆ ಗುರುತಿಸುವ ಕಾರ್ಯ ಈ ಅಂತರ್ಜಾಲ ಪತ್ರಿಕೆ ಮಾಡುತ್ತಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.
ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ Read Post »
ವಾರ್ಷಿಕ ವಿಶೇಷ-2021
ವಾರ್ಷಿಕ ವಿಶೇಷ-2021 ಕನ್ನಡ ಸಾಹಿತ್ಯ ಮತ್ತು ಧರ್ಮ ಶಾಂತಲಾ ಮಧು ಕನ್ನಡದ ಮೊದಲ ಗ್ರಂಥವೆಂದು ಒಪ್ಪಿಕೊಳ್ಳಲಾದ `ಕವಿರಾಜಮಾರ್ಗ’ದಲ್ಲಿ `ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಚಿನ್ನದಂತಹ ಮಾತೊಂದಿದೆ. ಈ ಮಾತಿನ ಅರ್ಥ `ನಿಜವಾದ ಐಶ್ವರ್ಯ (ಕಸವರ) ಪರವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ಆಗಿದೆ’ ಎನ್ನುವುದು. `ಅನ್ಯರ ವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು’ ಎನ್ನುವ ಈ ಸೂಕ್ತಿ ಕನ್ನಡನಾಡು ಧರ್ಮಗಳ ವಿಚಾರಗಳಲ್ಲಿ ಉದ್ದಕ್ಕೂ ತಾಳಿದ ನಿಲುವಿಗೆ ಬರೆದ ಒಂದು ವ್ಯಾಖ್ಯಾನದಂತಿದೆ, ಕರ್ನಾಟಕದ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದರ ಧರ್ಮ ಸಹಿಷ್ಣುತೆ. ಕನ್ನಡ ನಾಡು ಅನೇಕ ಧರ್ಮಗಳಿಗೆ ನೆಲೆಯಾದದ್ದಲ್ಲದೆ ಎಲ್ಲ ಧರ್ಮಗಳು ಜೊತೆಗೂಡಿ ವರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತಾ ಬಂದಿರುವುದೇ. ಕರ್ನಾಟಕದಲ್ಲಿ ಪ್ರವರ್ಧಮಾನವಾದ ಮುಖ್ಯ ಧರ್ಮಗಳು ಜೈನ, ವೀರಶೈವ ಮತ್ತು ವೈಷ್ಣವ. ಕವಿ ಮತ್ತು ಕಾಲ ಪರಸ್ಪರ ಪೋಷಿತ ಮತ್ತು ಪೂರಕ, ಕಾಲದಿಂದ ತಾನೇನು ಪಡೆಯುತ್ತಾನೋ ಅದನ್ನು ಪರಿಷ್ಕರಿಸಿ, ವಿಸ್ತರಿಸಿ ಮಾರ್ಪಡಿಸಿ ಅಲಂಕರಿಸಿ ಕಾಲಕ್ಕೆ ಹಿಂದಿರುಗಿಸುತ್ತಾನೆ ಕವಿ, ಮಹಾಕವಿ ಕಾಲಕ್ಕೆ ಕೊಡುವುದೇ ಹೆಚ್ಚಾಗಿರುತ್ತದೆ. ಅಂತಹ ಕವಿಯ ಮೂಲಕ ಋತು ಶಕ್ತಿ ಕವಿ ಕೃತು ಶಕ್ತಿಯಾಗಿ ಸಮಾಜಕ್ಕೆ ಸಂಜೀವಿನಿಯಾಗುತ್ತದೆ. ಕವಿಗಳ ಕಾವ್ಯ ರಚನೆಯಲ್ಲಿ ಹಲವು ಮೂಲ ಪ್ರೇರಣೆಯನ್ನು ಗಮನಿಸಬಹುದು. ೧. ಕವಿ ಹುಟ್ಟಿ ಬೆಳೆದ ಪರಿಸರ. ಕವಿ ಶ್ರದ್ಧೆಯಿಂದ ಒಪ್ಪಿಕೊಂಡ ಪ್ರಮುಖವಾದ ಮತ-ಧರ್ಮ ನಂಬಿಕೆಗಳು. ೨. ಕವಿಗಳಿಗೆ ಜೀವನದುದ್ದಕ್ಕೂ ಆಶ್ರಿತ ಹಾಗೂ ಪ್ರೋತ್ಸಾಹ ಒದಗಿಸಿದ ರಾಜನ ಆಸ್ಥಾನಗಳು ಮತ್ತು ಕೃತಿಯ ವಸ್ತು ಹಾಗೂ ಭಾಷೆ ಮೇಲೆ ಪ್ರಬಲ ಪ್ರಭಾವವನ್ನು ಬೀರುತ್ತಾ ಬಂದ ಸಂಸ್ಕೃತ ಸಾಹಿತ್ಯ ಪರಂಪರೆ. ಇವು ಒಂದು ರೀತಿಯಲ್ಲಿ ಪ್ರೇರಣೆ ಮತ್ತೊಂದು ರೀತಿಯಲ್ಲಿ ಕವಿಗೆ ಆತಂಕ, ಸವಾಲು ಆಗಿರುವುದು ಮರೆಯುವಂತಿಲ್ಲ. ಧರ್ಮವೇ ಜೀವದ ಉಸಿರೆಂದು ಹೇಳಿಸಿಕೊಂಡು ಬಂದ ಭಾರತದಲ್ಲಿ ಎಲ್ಲಾ ಕಾವ್ಯ-ಕಲೆಗಳ ಮೂಲ ಸ್ಫೂರ್ತಿಯೇ ಧರ್ಮವಾಗಿದೆ. ಇದು ಕನ್ನಡ ಸಾಹಿತ್ಯಕ್ಕೂ ಯಥಾವತ್ತಾಗಿ ಅನ್ವಯಿಸುತ್ತದೆ. ಇಲ್ಲಿ ಧರ್ಮ ಎಂಬ ಮಾತು `ಮತ ಧರ್ಮ’ ಎನ್ನುವ ಅರ್ಥದಲ್ಲಿ ಇದೆ. ಹಾಗೆ ಮುಂಬರುವ ಕಾಲದಲ್ಲಿ ಮಾನವೀಯ ಧರ್ಮದ ಹೆಚ್ಚುಗಾರಿಕೆಯೂ ಕಾಣುತ್ತದೆ. ಮುಂಬರುವ ಸಾಹಿತ್ಯದ ಪ್ರಕಾರಗಳಲ್ಲಿ ಈ ಮಾನವೀಯ ಧರ್ಮದ ಹುಡುಕಾಟ ಬರಹದಲ್ಲಿ ಹೆಚ್ಚು ಸ್ವಾತಂತ್ರ ಮನೋಭಾವ ಅಂದರೆ ಮನಬಿಚ್ಚಿ ಹೇಳುವಿಕೆ ಕಾಣುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೦ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಇಲ್ಲಿ ಮಹಾಕವಿಗಳಾದ ಪಂಪ, ಪೊನ್ನ, ರನ್ನರನ್ನು ನೆನಪಿಸಿಕೊಳ್ಳಬಹುದು. ಇವರುಗಳು ಕ್ರಮವಾಗಿ (ಪಂಪ) ಆದಿಪುರಾಣ, (ಪೊನ್ನ) – ಶಾಂತಿಪುರಾಣ, ರನ್ನ – ಅಜಿತನಾಥ ಪುರಾಣ ಎಂಬ ಧಾರ್ಮಿಕ ಕಾವ್ಯ ಹಾಗೆ (ಪಂಪ) ವಿಕ್ರಮಾರ್ಜುನ ವಿಜಯ, (ಪೊನ್ನ) ಭುವನೈಕ ರಾಮಾಭ್ಯುದಯ (ದೊರೆತಿಲ್ಲ) ಸಾಹಸಭೀಮವಿಜಯ (ರನ್ನ) ಎಂಬ ಲೌಕಿಕ ಕಾವ್ಯಗಳನ್ನು ಬರೆದರು. ಈ ಎಲ್ಲಾ ಕವಿಗಳು ಧಾರ್ಮಿಕ ಮತ್ತು ಲೌಕಿಕ ಕಾವ್ಯ ಬರೆದರೂ ಅಂದಿನ ಓದುಗರು ತೋರಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಧರ್ಮದ ಪ್ರಭಾವವೇ ಎತ್ತಿ ಹಿಡಿಯುತ್ತದೆ. ಲೌಕಿಕ ಕಾವ್ಯ ಪ್ರತಿಯನ್ನು ಉಳಿಸಿಕೊಳ್ಳುವಲ್ಲಿ ಉದಾಸೀನರಾಗಿದ್ದರು ಅನ್ನಿಸುತ್ತದೆ. ಈಗ ದೊರಕಿರುವ ಪ್ರತಿಗಳನ್ನು ನೋಡಿದರೆ ಉದಾ: ಪಂಪರ ವಿಕ್ರಮಾರ್ಜುನ ವಿಜಯ ಪ್ರತಿ ಸಿಕ್ಕಿರುವುದು ಮೂರು ರನ್ನನ ಗದಾಯುದ್ಧದ ಪ್ರತಿ ಕೇವಲ ಒಂದು ಒಂದೂವರೆ ಅದರೆ ಆದಿಪುರಾಣ, ಅಜಿತಪುರಾಣಗಳು ಸಾಕಷ್ಟು ದೊರಕಿದೆ. ಕವಿಯಾದವನು ಮೊಟ್ಟ ಮೊದಲಿಗೆ ತನ್ನ ಧರ್ಮಕ್ಕೆ ಕಾವ್ಯಮುಖೇನ ಅಭಿವ್ಯಕ್ತಿ ಕೊಡದೆ ಇದ್ದಾಗ ಆತನ ಕಾವ್ಯ ತಿರಸ್ಕೃತವಾದುದು ಇದೆ. ಇದಕ್ಕೆ ಉತ್ತಮ ಕಥೆಯ ಉದಾ: ಹರಿಹರ, ತನ್ನ ಸೋದರಳಿಯನಾದ ರಾಘವಾಂಕನನ್ನು ಶಿಕ್ಷಿಸಿದ ಪರಿ. ಹನ್ನೆರಡನೆಯ ಶತಮಾನ ವೀರಶೈವ ಧರ್ಮದ ಉತ್ಕೃಷ್ಟ ಕಾಲ ವಾಚನಕಾರರ ಧಾರ್ಮಿಕ ಕ್ರಾಂತಿಯ ನಂತರ ಬಂದ ಕವಿ ಹರಿಹರ-ರಾಘವಾಂಕ, ಶಿವ ಕವಿಯಾದ ಹರಿಹರ ಶಿವನನ್ನು ಶಿವಶರಣರನ್ನು ಕುರಿತು ಕಾವ್ಯ ಬರೆಯಬೇಕೇ ಹೊರತು ಮನುಜರ ಮೇಲೆ, ಕನಿಷ್ಟರ ಮೇಲೆ ಕಾವ್ಯ ಬರೆಯಬಾರದು ಎಂಬ ಧೋರಣೆಯನ್ನು ಎತ್ತಿ ಹಿಡಿದವನು. ರಾಘವಾಂಕ ಮೊದಲ ಕಾವ್ಯ ಬರೆದದ್ದು ‘ಹರಿಶ್ಚಂದ್ರ ಕಾವ್ಯ’ ಹೊನ್ನ ಹರಿವಾಣದಲ್ಲಿ ಇಟ್ಟು ಗುರುವೂ-ಸೋದರಮಾವನೂ ಆದ ಹರಿಹರನಲ್ಲಿ ಹೋದಾಗ, ಶಿವಶರಣರ ಕಥೆ ಅಲ್ಲ ಎಂಬ ಕಾರಣದಿಂದ ಅದನ್ನು ತಿರಸ್ಕರಿಸಿ ಎಡಗಾಲಿಂದ ಒದ್ದು ಕಳಿಸಿದನೆಂದು ರಾಘವಾಂಕ ನೊಂದು ಮುಂದೆ `ಶೈವ ಕೃತಿ ಪಂಚಕ’, ಸಿದ್ದರಾಮಚರಿತೆ, ಸೋಮನಾಥ ಚರಿತೆ, ಶರಭ ಚರಿತ್ರೆ, ವೀರೇಶ ಚರಿತ್ರೆ, ಹರಿಹರ ಮಹತ್ವ’ ಎಂಬ ಐದು ಕಾವ್ಯ ರಚಿಸಿದ ಎಂಬುದು ಒಂದು ಉಲ್ಲೇಖ. ಇಷ್ಟರಮಟ್ಟಿಗೆ ಧರ್ಮದ ಮುಷ್ಟಿಯಲ್ಲಿ ಸಾಹಿತ್ಯ, ಸಿಕ್ಕಿಕೊಂಡಿತು. ಹಾಗೇ ಮುಂದುವರಿದು `ಭಾಗವತ ಸಂಪ್ರದಾಯದಲ್ಲೂ ಇದೆ ಕತೆಯಾಯಿತು ಧಾರ್ಮಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ಅನುಭಾವ ಸಾಹಿತ್ಯ’ ಎಂದು ಈ ಸಾಹಿತ್ಯವನ್ನು ಸ್ಥೂಲವಾಗಿ ಗುರುತಿಸಲಾಯಿತು. ಭಕ್ತಿ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯ ಬರೆದವರಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲ ಒಂದು ಬಗೆಯ ಆಧ್ಯಾತ್ಮಿಕ ಶ್ರದ್ಧೆ- ವೈಯಕ್ತಿಕ ಸಾಧನೆಯು ಮುಖ್ಯವಾಗಿತ್ತು. ಇಲ್ಲಿ ಕವಿ ಒಬ್ಬ ಸಾಧಕ ಕೂಡ, ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಹಾಗೇ ದಾಸಪರಂಪರೆಯ ಪುರಂದರ ದಾಸರು ಹಾಗು ಕನಕದಾಸರುಗಳನ್ನು ನೆನಪಿಸಿಕೊಳ್ಳಬಹುದು. ಶತಮಾನದ ಉದ್ದಕ್ಕೂ ಧರ್ಮದ ನಿಯಂತ್ರಣಕ್ಕೆ ಒಳಪಟ್ಟ ಕನ್ನಡ ಸಾಹಿತ್ಯ. ಅದರಿಂದ ಲಾಭ ಪಡೆಯಿತೊ ಅಥವ ನಷ್ಟ ಪಡೆಯಿತೊ ಎನ್ನುವುದು ಒಂದು ದೊಡ್ಡ ಪ್ರಬಂಧದ ವಸ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಓದುವುದು ಕೇವಲ ಪುಣ್ಯ ಸಂಪಾದನೆಗೆ ಎಂಬ ನಂಬಿಕೆಯಿಂದ ವೈಚಾರಿಕತೆಯ ಬೆಳವಣಿಗೆಗೆ ಅವಕಾಶ ಕಡಿಮೆಯೇ ಆಯಿತು. ಅಭಿವ್ಯಕ್ತಿಗೆ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸುದೈವದಿಂದ ಆಧುನಿಕ ಸಾಹಿತ್ಯ ರಚನೆಯಲ್ಲಿ ಇಂದಿನ ಕವಿಗಳಿಗೆ ಹಿಂದಿನ ಕವಿಗಳಂತೆ ಮತ ಧರ್ಮ ನಿರ್ಬಂಧನೆ ಇಲ್ಲ. ಅಷ್ಟರಮಟ್ಟಿಗೆ ಇಂದಿನ ಸಾಹಿತ್ಯ ಸಾರ್ವತ್ರಿಕವಾಯಿತು ಎನ್ನಬಹುದು. ಮತ ಧರ್ಮದ ಸ್ಥಾನವನ್ನು ಇಂದು ವಿಜ್ಞಾನ ವೈಚಾರಿಕತೆ ಆಕ್ರಮಿಸಿತು. ಅಲ್ಲದೆ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಗಾಂಧಿ, ಅರವಿಂದರಂಥ ಮಹಾವ್ಯಕ್ತಿಗಳ ವಿಚಾರಧಾರೆಯಿಂದ ಹೊಸ ಮಾನವೀಯ ಧರ್ಮವೊಂದು ರೂಪುಗೊಂಡು ಸೌಂದರ್ಯಪ್ರಿಯತೆ ಜೀವನಪ್ರೀತಿ, ವಿಶ್ವಪ್ರಜ್ಞೆ ಇವುಗಳು. ಕವಿಯ ಧರ್ಮಶ್ರದ್ಧೆಯಾಗುತ್ತಿರುವುದು ಸಾಹಿತ್ಯ ವೈವಿಧ್ಯತೆಗೂ ಮತ್ತು ವಿನೂತನತೆಗೂ ಕಾರಣವಾಗಿರುವುದು ಸಂತೋಷದಾಯಕ ಸಂಗತಿ.
ವಾರ್ಷಿಕ ವಿಶೇಷ-2021 Read Post »
ವಾರ್ಷಿಕ ವಿಶೇಷ-2021
ಭಾಷೆಯೊಂದು ತನ್ನ ಗರ್ಭದಲ್ಲಿ ಅಡಗಿಸಿಕೊಂಡ ಸಾಹಿತ್ಯ ವಿಚಾರಧಾರೆಗಳು ಸಾರ್ವಕಾಲಿಕವಾದವು. ಧರ್ಮಜಾತಿಗಳನ್ನು ಮೀರಿ ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯ ಭಾಗವಾಗಿಯೇ ಜೈನ,ಶೈವ, ವೈದಿಕ ಸಾಹಿತ್ಯವೂ ವೈವಿಧ್ಯಮಯವಾಗಿ ಛಂದಸ್ಸು ಅಲಂಕಾರಗಳೊಂದಿಗೆ ಅನೂಚಾನವಾಗಿ ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ.
ವಾರ್ಷಿಕ ವಿಶೇಷ-2021 Read Post »
ವಾರ್ಷಿಕ ವಿಶೇಷ-2021
ಈ ಅನೇಕ ಬಗೆಯ ಕವಿಗಳಿಗೆ, ಲೇಖಕರಿಗೆ, ಸಾಹಿತ್ಯ ಓದುಗರಿಗೆ ವೇದಿಕೆ ನೀಡಿದ್ದು ಈ ಅಂತರ್ಜಾಲದ ಪತ್ರಿಕೆಗಳು,ಸಮಾನ ಆಸಕ್ತ ಸಮುದಾಯಗಳ ಬ್ಲಾಗ್ಗಳು, ಇ- ವೃತ್ತ ಪತ್ರಿಕೆಗಳು ಇವುಗಳ ಸೇವೆ ಅಷ್ಟಿಟ್ಟಲ್ಲ. ಜನರಿಗೆ ಧೈರ್ಯ, ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಅವರಲ್ಲಿ ವಿಭಿನ್ನ ಆಸಕ್ತಿ ಮೂಡಿಸುತ್ತ ಬಂದಿತು
ವಾರ್ಷಿಕ ವಿಶೇಷ-2021 Read Post »
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು
ಕೃತಿ: -‘ಮುಟ್ಟಿಸಿಕೊಂಡವರು:
ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ’ (1998)
ಸಂಪಾದಕರು: -ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು Read Post »
ಧಾರಾವಾಹಿ ಆವರ್ತನ ಅದ್ಯಾಯ-38 ಮಸಣದಗುಡ್ಡೆಯ ಎರಡನೆಯ ಬನ ಜೀರ್ಣೋದ್ಧಾರದ ನಂತರ ಗುರೂಜಿಯವರ ನಕ್ಷತ್ರವೇ ಬದಲಾಗಿಬಿಟ್ಟಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಸಂಪಾದನೆ ದುಪ್ಪಟ್ಟಾಗಿ ಕಷ್ಟಕಾರ್ಪಣ್ಯಗಳೆಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ತೂರಿ ಹೋಗಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು. ಅವರೀಗ ತಮ್ಮ ಜ್ಯೋತಿಷ್ಯ ವಿಭಾಗವನ್ನೂ, ಧಾರ್ಮಿಕ ಕೈಂಕರ್ಯಗಳ ವ್ಯವಹಾರವನ್ನೂ ಅಪ್ಪನ ಹಳೆಯ ಕೋಣೆಯಿಂದ ಹೊಸದಾಗಿ ನಿರ್ಮಿಸಿದ ವಿಶಾಲ ಪಡಸಾಲೆಯ ಹವಾನಿಯಂತ್ರಿತ ಕೊಠಡಿಗೆ ವರ್ಗಾಯಿಸಿದ್ದರು. ಆ ಕಛೇರಿಗೂ ಮತ್ತು ವಠಾರದ ಕೆಲವು ಕಡೆಗಳಿಗೂ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಆ ಉಪಕರಣಗಳು ಅವರ ವ್ಯವಹಾರಕ್ಕೆ ಸರ್ಪಗಾವಲಾಗಿದ್ದವು. ಇಷ್ಟಾಗುತ್ತಲೇ ಅವರು ತಮ್ಮ ಮಕ್ಕಳ ಭವಿಷ್ಯವನ್ನೂ ರೂಪಿಸಲು ನಿರ್ಧರಿಸಿದರು. ಅಪ್ಪ ಅಮ್ಮನನ್ನೂ ಮತ್ತು ತಮ್ಮ ಕನ್ನಡ ಮಾಧ್ಯಮದ ಸಹಪಾಠಿಗಳನ್ನೂ ಹಾಗೂ ವಠಾರದ ಆತ್ಮೀಯರನ್ನೂ ಅಗಲಿ ದೂರದ ಪರಕೀಯ ಶಾಲೆಗೆ ಹೋಗಲು ಸುತಾರಾಂ ಇಷ್ಟವಿಲ್ಲದೆ ಸದಾ ಅಳುತ್ತ ಕೂರುತ್ತಿದ್ದ ಮಗಳು ದೀಕ್ಷಾ ಮತ್ತು ಮಗ ದ್ವಿತೇಶ್ನನ್ನು ಗದರಿಸಿ, ಓಲೈಸಿ ಮಡಿಕೇರಿಯ ಪ್ರತಿಷ್ಠಿತ ರೆಸಿಡೆನ್ಶಿಯಲ್ ಆಂಗ್ಲ ಮಾಧ್ಯಮ ಸ್ಕೂಲಿಗೆ ದೊಡ್ಡ ಮೊತ್ತದ ಡೊನೇಷನ್ ಕೊಟ್ಟು ಸೇರಿಸಿ ನೆಮ್ಮದಿಪಟ್ಟರು. ಗುರೂಜಿಯವರಲ್ಲಿದ್ದ ಅಪಾರ ಧಾರ್ಮಿಕ ಸ್ವಜ್ಞಾನದಿಂದಲೂ ವಿಶೇಷ ಬುದ್ಧಿಶಕ್ತಿಯಿಂದಲೂ ಅವರತ್ತ ಆಕರ್ಷಿತರಾಗಿ ಬರುತ್ತಿದ್ದ ಬಡವರ, ದುರ್ಬಲರ ಮತ್ತು ಶ್ರೀಮಂತವರ್ಗದವರ ನಾನಾ ವಿಧದ ಸಮಸ್ಯೆ, ತೊಂದರೆಗಳನ್ನು ಅವರು ಬಹಳ ಕರುಣೆ ಮತ್ತು ಕೌಶಲ್ಯದಿಂದ ಹೋಗಲಾಡಿಸುವ ಕ್ರಮವು ಬಹಳ ಬೇಗನೇ ಅವರನ್ನು, ‘ಜನಾನುರಾಗಿ ಜ್ಯೋತಿಷ್ಯರು!’ ಎಂಬ ಹೆಗ್ಗಳಿಕೆಗೂ ಪಾತ್ರರನ್ನಾಗಿಸಿತ್ತು. ಹಾಗಾಗಿ ಅವರ ಬೇಡಿಕೆಯನ್ನೂ ಹೆಚ್ಚಿತ್ತು. ಗುರೂಜಿಯವರ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದ ರಾಜ್ಯದ ಪ್ರಸಿದ್ಧ, ‘ಅವಿಭಾಜ್ಯ’ ಎಂಬ ಖಾಸಗಿ ದೂರದರ್ಶನ ಮಾಧ್ಯಮವು ಪ್ರತೀ ಶುಕ್ರವಾರ ಅವರನ್ನು ತಮ್ಮ ವಾಹಿನಿಗೆ ಕರೆಯಿಸಿಕೊಂಡು, ‘ಮಹರ್ಷಿ ವಚನ!’ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರಪಡಿಸುತ್ತ ಅವರಿಗೆ ಮತ್ತಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಗುರೂಜಿಯವರ ಈ ಎಲ್ಲಾ ಸೃಜನಶೀಲ ಕಾರ್ಯಚಟುವಟಿಕೆಗಳಿಂದಾಗಿ ಅಪಾರ ಸಿರಿವಂತಿಕೆಯೂ ಅವರನ್ನು ಅರಸಿ ಬಂದಿದೆ. ಆದ್ದರಿಂದ ಅವರೀಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಬ್ಯುಸಿಯಾಗಿರುವುದು ಅನಿವಾರ್ಯವಾಗಿದೆ. ತಮ್ಮ ಕೆಲಸದ ಒತ್ತಡವನ್ನು ತುಸು ಕಡಿಮೆ ಮಾಡಿಕೊಳ್ಳಲು ಅವರು ರಾಘವ ಮತ್ತು ಅಣ್ಣಪ್ಪ ಎಂಬಿಬ್ಬರು ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಹಿರಿಯರ ನೆನಪಿಗಾಗಿ ಮೊನ್ನೆ ಮೊನ್ನೆಯವರೆಗೆ ಕ್ಷೀಣವಾಗಿ ಉಸಿರಾಡಿಕೊಂಡಿದ್ದ ಹಳೆಯ ಮನೆಯನ್ನು ಒಡೆದುರುಳಿಸಿ, ದೇವಕಿಯ ಆಸೆಗೂ ಮತ್ತು ತಮ್ಮ ಘನತೆಗೂ ಸರಿಹೊಂದುವಂಥದ್ದೊಂದು ಮೂರು ಸಾವಿರ ಚದರಡಿಯ ಭವ್ಯ ಬಂಗಲೆಯನ್ನು ತೋಟದ ನಟ್ಟನಡುವೆ ಕಟ್ಟಿಸಿಕೊಂಡು ಪುಟ್ಟ ಸಂಸಾರದೊಂದಿಗೆ ಹೆಮ್ಮೆಯಿಂದ ಬದುಕುತ್ತ, ಬಿಡುವಿಲ್ಲದೆ ದುಡಿಯುತ್ತ ಇನ್ನಷ್ಟು ಯಶಸ್ಸು ಗಳಿಸುವತ್ತಲೇ ಮುಖ ಮಾಡಿದ್ದಾರೆ. ಅಂದು ಮುಂಜಾನೆ ಒಂಬತ್ತು ಗಂಟೆಯ ಹೊತ್ತು. ಸುಮಿತ್ರಮ್ಮ ರಾಧಾಳನ್ನು ಕರೆದುಕೊಂಡು ಗುರೂಜಿಯ ಮನೆಗೆ ಬಂದರು. ಆಗ ಗುರೂಜಿಯವರ ಕಛೇರಿಯಲ್ಲಿ ಹದಿನೈದಿಪ್ಪತ್ತು ಜನರ ಸಣ್ಣ ದಿಬ್ಬಣವೇ ನೆರೆದಂತಿತ್ತು. ಸ್ವಲ್ಪ ಮಂದಬುದ್ಧಿಯ ಅವರ ಸಹಾಯಕ ಅಣ್ಣಪ್ಪ ಬಂದವರನ್ನೆಲ್ಲ ಅಭಿಮಾನದಿಂದ ಕುಳ್ಳಿರಿಸಿ ವಿಚಾರಿಸುತ್ತ ಬಾಯಾರಿಕೆ, ಟೀ, ಕಾಫಿ ಕೊಡುವ ಸೇವೆಯಲ್ಲಿ ತೊಡಗಿ ನಗುನಗುತ್ತ ಓಡಾಡುತ್ತಿದ್ದ. ಚತುರ ಬುದ್ಧಿಯ ರಾಘವ ಯಾರ ಕಣ್ಣಿಗೂ ಬೀಳದೆ ಗುರೂಜಿಯವರು ವಹಿಸಿದ್ದ ಗುಪ್ತಕಾರ್ಯವನ್ನು ನಿಭಾಯಿಸುತ್ತಿದ್ದ. ಸುಮಿತ್ರಮ್ಮನೂ, ರಾಧಾಳೂ ಜನರ ಕೊನೆಯ ಸಾಲಿನಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಹೇಮಚಂದ್ರ ಎಂಬ್ಬ ದುಬೈ ರಿಟರ್ರ್ನ್ ವ್ಯಕ್ತಿಯೊಬ್ಬ ಆಗಮಿಸಿದ. ಹೇಮಚಂದ್ರ ಇಪ್ಪತ್ತು ವರ್ಷಗಳ ಕಾಲ ದುಬೈಯ ಹೊಟೇಲೊಂದರಲ್ಲಿ ಹಗಲು ರಾತ್ರಿ ದುಡಿದು ಸಂಪಾದಿಸಿ ಎರಡು ವರ್ಷದ ಹಿಂದಷ್ಟೇ ಆ ದೇಶವನ್ನು ಬಿಟ್ಟು ಊರಿಗೆ ಬಂದಿದ್ದವನು, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ್ದ ಹಲವು ಲಕ್ಷ ರೂಪಾಯಿಗಳನ್ನು ಬಳಸಿ ಊರಿನಲ್ಲಿ ಹೊಟೇಲು ಉದ್ಯಮ ಆರಂಭಿಸಿ ಗೌರವದಿಂದ ಬಾಳಬೇಕೆಂದು ಮನಸ್ಸು ಮಾಡಿದ್ದ. ಹಾಗಾಗಿ ಅದಕ್ಕವನು ಸೂಕ್ತ ಜಾಗವೊಂದನ್ನೂ ಹುಡುಕುತ್ತಿದ್ದ. ಊರಿನಲ್ಲಿ ಅದಾಗಲೇ ಪ್ರಸಿದ್ಧವಾಗಿದ್ದ, ‘ಹೋಟೆಲ್ ಕೊಡೆಕ್ಕೆನಾ’ (ಉಪ್ಪು, ಹುಳಿ, ಖಾರದಂಥ ಮಸಾಲೆ ಪದಾರ್ಥಗಳು ಸಮಾ ಪ್ರಮಾಣದಲ್ಲಿ ಬೆರೆತ ಸ್ವಾದಿಷ್ಟ ಖಾದ್ಯಕ್ಕೆ ತುಳುವಿನಲ್ಲಿ: ‘ಕೊಡಕ್ಕೆನಾ!’ ಎಂದು ಉದ್ಗರಿಸುವ ವಾಡಿಕೆ ಇದೆ) ಎಂಬ ಮಾಂಸಹಾರಿ ಹೊಟೇಲಿನ ಪಕ್ಕದ ಕಟ್ಟಡವೊಂದು ದಲ್ಲಾಳಿ ಲಕ್ಷ್ಮಣನ ಮೂಲಕ ಖಾಲಿ ಇರುವುದು ಅವನಿಗೆ ತಿಳಿಯಿತು. ಹೊಟೇಲು ಕೊಡೆಕ್ಕೆನಾದಲ್ಲಿ ವಿವಿಧ ಬಗೆಯ ಕರಿದ ಮೀನು ಮತ್ತು ರುಚಿಕಟ್ಟಾದ ಮಾಂಸದ ಅಡುಗೆ ನಾಡಿನಾದ್ಯಂತ ಪ್ರಸಿದ್ಧವಾಗಿತ್ತು. ವರ್ಷದ ಮುನ್ನೂರರ್ವತ್ತೈದು ದಿನವೂ ತೆರೆದಿರುತ್ತಿದ್ದ ಆ ಹೊಟೇಲಿನಲ್ಲಿ ಜನಜಂಗುಳಿ ಹೇಗೆ ತುಂಬಿರುತ್ತದೆಯೆಂದರೆ, ಊಟ ಮಾಡುತ್ತಿದ್ದವರ ಹಿಂದೆ ಮುಂದೆ ತೂರಿ ನಿಂತುಕೊಂಡು ಕಾಯುತ್ತ ಸೀಟು ಖಾಲಿಯಾಗುತ್ತಲೇ ಮುಲಾಜಿಲ್ಲದೆ ನುಗ್ಗಿ ಕುಳಿತು ಉಂಡು ಹೋಗುವಂಥ ಜನರಿದ್ದರು. ಒಮ್ಮೆ ಆ ಹೊಟೇಲಿನ ಗಿರಾಕಿಗಳ ಧಾವಂತವನ್ನೂ ಅಲ್ಲಿನ ಊಟದ ರುಚಿಯನ್ನೂ ಸ್ವತಃ ಅನುಭವಿಸಿದ ಹೇಮಚಂದ್ರ ಅದರ ಪಕ್ಕದಲ್ಲಿಯೇ ತನ್ನ ವ್ಯಾಪಾರವನ್ನೂ ಆರಂಭಿಸಲು ಮನಸ್ಸು ಮಾಡಿದ. ದುಬೈ ನಮೂನೆಯ ಅಡುಗೆಯಿಂದ ಗಿರಾಕಿಗಳನ್ನು ಆಕರ್ಷಿಸಿ ಹಣ, ಹೆಸರು ಎರಡನ್ನೂ ಒಟ್ಟಿಗೆ ಗಳಿಸಲು ಇಚ್ಛಿಸಿದ. ಹಾಗಾಗಿ ದಲ್ಲಾಳಿ ಲಕ್ಷ್ಮಣ ತೋರಿಸಿದ ಕಟ್ಟಡದ ಅರ್ಧ ಭಾಗವನ್ನು ಬಾಡಿಗೆಗೆ ಪಡೆದುಕೊಂಡ. ಅಂತರ್ರಾಷ್ಟ್ರೀಯ ವಿನ್ಯಾಸದಿಂದ ಅದನ್ನು ಸುಸಜ್ಜಿತಗೊಳಿಸಲು ದುಬೈ ಸಂಪಾದನೆಯ ಬಹುಪಾಲು ವಿನಿಯೋಗಿಸಿದ. ಅದಕ್ಕೆ ‘ಹೊಟೇಲ್ ಸತ್ಕಾರ್’ ಎಂದು ನಾಮಕರಣ ಮಾಡಿ ಒಂದು ಶುಭದಿನದಂದು ವ್ಯಾಪಾರವನ್ನು ಆರಂಭಿಸಿದ. ಊಟ, ತಿಂಡಿ ತಿನಿಸುಗಳ ಬೆಲೆಯೇನೂ ದುಬಾರಿಯಿರಲಿಲ್ಲ. ಆದ್ದರಿಂದ ಕೊಡೆಕ್ಕೆನಾದ ಒಂದಷ್ಟು ಗಿರಾಕಿಗಳು ಮತ್ತು ಹೊಸಬರೂ ಹೇಮಚಂದ್ರನ ಹೊಟೇಲಿಗೆ ಬರುತ್ತ ವಿವಿಧ ಖಾದ್ಯಗಳ ರುಚಿಯನ್ನು ಸವಿಯತೊಡಗಿದರು. ಹಾಗಾಗಿ ಒಂದಷ್ಟು ಕಾಲ ವ್ಯಾಪಾರ ಭರದಿಂದ ಸಾಗಿತು. ಹೇಮಚಂದ್ರನ ಹೊಟೇಲ್ನ ಆಧುನಿಕ ವಿನ್ಯಾಸವನ್ನೂ ಅದರ ಆರಂಭದ ವೈಭವವನ್ನೂ ಕಂಡ ಕೊಡೆಕ್ಕೆನಾದ ಹೊಟೇಲ್ ಮಾಲಕ ರವಿರಾಜ ಮತ್ತು ಅವನ ಚಿಕ್ಕಪ್ಪ ದುಗ್ಗಪ್ಪಣ್ಣ ಇಬ್ಬರೂ ಕೊಡೆಕ್ಕೆನವಾಗಿ ನಕ್ಕರು. ಆದರೆ ಹೇಮಚಂದ್ರ ತನ್ನ ಅಡುಗೆಗೆ ಬಳಸುತ್ತಿದ್ದ ಕೃತಕ ರಾಸಾಯನಿಕವೂ ಮತ್ತು ಹೊಟೇಲ್ ಕೊಡೆಕ್ಕೆನಾದ ಅಡುಗೆಯ ತಾಜಾ ರುಚಿಗಳು ಇವನ ಆಹಾರದಲ್ಲಿ ಸಿಗದಿದ್ದುದನ್ನೂ ಬಹಳ ಬೇಗನೇ ಮನಗಂಡ ಗಿರಾಕಿಗಳ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸುತ್ತ ಹೋಯಿತು. ಆದ್ದರಿಂದ ಹೇಮಚಂದ್ರ ಹೊಟೇಲು ಆರಂಭಿಸಿದ ಐದಾರು ತಿಂಗಳೊಳಗೆ ಅವನು ಅಷ್ಟು ದೊಡ್ಡ ಹೊಟೇಲಿನ ಗಲ್ಲಾದಲ್ಲಿ ಕುಳಿತು ನೊಣ ಹೊಡೆಯುವ ಪರಿಸ್ಥಿತಿಗೆ ಬಂದು ತಲುಪಿದ. ಕೊನೆಗೆ ಅವನ ಅವಸ್ಥೆ ಕೆಲಸಗಾರರಿಗೆ ಸಂಬಳ ನೀಡಲೂ ಸಾಧ್ಯವಿಲ್ಲದಂತಾಗಿ ಒಬ್ಬೊಬ್ಬರೇ ಕೆಲಸಬಿಟ್ಟು ಹೋಗತೊಡಗಿದರು. ನಂತರ ಕಟ್ಟಡದ ಮಾಲಿಕನಿಂದಲೂ ಬಾಡಿಗೆಯ ವಿಷಯದಲ್ಲಿ ತಕರಾರೆದ್ದು ಹೇಮಚಂದ್ರ ಹೈರಾಣಾಗಿಬಿಟ್ಟ. ಆದರೆ ಅಷ್ಟರಲ್ಲಿ ಕಾಲವೂ ಮಿಂಚಿತ್ತು. ಹೊರದೇಶದಲ್ಲಿ ದುಡಿದ ಹಣವೆಲ್ಲ ನೀರಲ್ಲಿಟ್ಟ ಹೋಮವಾಗಿತ್ತು. ಅದರೊಂದಿಗೆ ಅವನು ಮತ್ತಷ್ಟು ಸಾಲದ ಸುಳಿಗೂ ಸಿಲುಕಿದ್ದ. ಕೊನೆಗೊಂದು ದಿನ ಜೀವನದಲ್ಲಿ ಜಿಗುಪ್ಸೆ ಬಂದು, ರಾತ್ರೋರಾತ್ರಿ ಹೋಟೇಲಿಗೆ ಬೀಗ ಜಡಿದು ಹೊರಟವನು ಕೆಲವು ಕಾಲ ಬುದ್ಧಿಭ್ರಮಣೆಗೊಂಡವನಂತೆ ಎಲ್ಲೆಲ್ಲೋ ತಿರುಗಾಡತೊಡಗಿದ. ಆದರೆ ಇದೇ ಸಮಯದಲ್ಲಿ ಅವನ ದೂರದ ಸಂಬಂಧಿ ಪ್ರಕಾಶನೆಂಬವನೊಬ್ಬ ಅವನ ಸಹಾಯಕ್ಕೆ ಓಡೋಡಿ ಬಂದ. ‘ಅಲ್ಲ ಮಾರಾಯಾ, ನೀನು ಹೋಗಿ ಹೋಗಿ ಆ ಕೊಡೆಕ್ಕೆನಾದವನ ಪಕ್ಕದಲ್ಲಿ ವ್ಯಾಪಾರ ಶುರುಮಾಡಿದ್ದಿಯಲ್ಲ. ಸ್ವಲ್ಪವಾದರೂ ಮಂಡೆ ಬೇಡವಾ ನಿಂಗೆ…? ಅವನು ಅಲ್ಲಿ ಎಷ್ಟು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಗೊತ್ತುಂಟಾ? ಅವನ ಅಪ್ಪನ ಕಾಲದಿಂದಲೂ ಆ ಹೊಟೇಲು ಅಲ್ಲುಂಟು. ಹಾಗಾಗಿ ಅವನ ಹತ್ತಿರ ಯಾರು ಹೊಟೇಲಿಟ್ಟರೂ ಉದ್ಧಾರವಾಗುವುದಿಲ್ಲ. ಯಾಕೆಂದರೆ ತಮ್ಮ ಸುತ್ತಮುತ್ತ ಯಾರನ್ನೂ ಮೇಲೆ ಬರಲು ಅವರು ಬಿಡುವುದಿಲ್ಲ. ಬಂದವರೆಲ್ಲರೂ ನಿನ್ನಂತೆಯೇ ಕೈ ಸುಟ್ಟುಕೊಂಡು ಓಡಿ ಹೋದವರೇ! ಇದನ್ನೆಲ್ಲ ವಿಚಾರಿಸಿಕೊಂಡೇ ಮುಂದುವರೆಯಬೇಕಿತ್ತು ನೀನು. ನಿನ್ನ ವ್ಯಾಪಾರದ ವಿಜೃಂಭಣೆಯನ್ನು ನೋಡಿದ ಅವರು ಹೊಟ್ಟೆ ಉರಿದುಕೊಂಡು ನಿನಗೆ ಸರಿಯಾಗಿ ಮಾಟ ಮಾಡಿಸಿದ್ದಾರೆ ಬಡ್ಡೀಮಕ್ಕಳು! ಆ ರವಿರಾಜನ ಚಿಕ್ಕಪ್ಪ, ದುಗ್ಗಪ್ಪ ಇದ್ದಾನಲ್ವಾ ಅವನು ಯಾವಾಗಲೂ ಬಲ್ಮೆಯವರ ಮನೆಯಲ್ಲೇ ಬಿದ್ದುಕೊಂಡಿರುತ್ತಾನೆ. ನಿನ್ನಂತೆಯೇ ಅಲ್ಲಿ ವ್ಯಾಪಾರ ಆರಂಭಿಸಿದ ತುಂಬಾ ಜನ ಅವರ ಮಾಟಮಂತ್ರಗಳಿಗೇ ಲಗಾಡಿ ಹೋಗಿದ್ದಾರೆ. ಈಗ ನಿನ್ನ ಕಥೆಯೂ ಹಾಗೆಯೇ ಆಯಿತು ನೋಡು!’ ಎಂದು ತನ್ನ ಬಂಧುವಿನ ನಷ್ಟಕ್ಕೆ ಅನುಕಂಪ ತೋರಿಸುವ ನೆಪದಿಂದ ಅವನ ಸೋಲಿನ ಗಾಯವನ್ನು ಮತ್ತಷ್ಟು ಕೆದಕಿ ಉಪ್ಪು, ಖಾರ ಸವರಿ ಬಳಿಕ ಮುಲಾಮು ಹಚ್ಚುವ ಕೆಲಸಕ್ಕೂ ಮುಂದಾದ. ‘ಈಗ ಸೋತು ಸುಣ್ಣವಾದ ಮೇಲೆ ಮಂಡೆ ಹಾಳು ಮಾಡಿಕೊಂಡು ಬದುಕುವುದರಲ್ಲಿ ಅರ್ಥವೇನಿದೆ ಹೇಳು. ಎಲ್ಲದಕ್ಕೂ ಪರಿಹಾರವೊಂದು ಇದ್ದೇ ಇರುತ್ತದೆ. ನಾವದನ್ನು ತಾಳ್ಮೆಯಿಂದ ಹುಡುಕಬೇಕಷ್ಟೆ!’ ಎಂದು ಆಪ್ತವಾಗಿ ಅಂದವನು ತನ್ನ ಆತ್ಮೀಯರೂ ಮತ್ತು ಮೇಲಾಗಿ ತನ್ನ ಕೆಲಸಕ್ಕೆ ಕೈತುಂಬಾ ಕಮಿಶನ್ ಕೊಡುವವರೂ ಆದ ಏಕನಾಥ ಗುರೂಜಿಯವರ ಮನೆಯ ದಾರಿಯನ್ನು ಅವನಿಗೆ ತೋರಿಸಿಕೊಟ್ಟ. ತನ್ನ ದೂರದ ಬಂಧುವಿಂದ ಭರವಸೆಯ ಬೆಳಕನ್ನು ಕಂಡ ಹೇಮಚಂದ್ರನಿಗೆ ಮತ್ತೆ ಜೀವನದಲ್ಲಿ ಆಶಾಭಾವನೆ ಮೂಡಿತು. ಆ ದಿನವೇ ಗುರೂಜಿಯವರ ಮನೆಯತ್ತ ಧಾವಿಸಿದ. ಗುರೂಜಿಯ ಗುಪ್ತ ಸಹಾಯಕ ರಾಘವನು ಹೇಮಚಂದ್ರ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ. ಆದರೆ ಅವನು ಈ ಮೊದಲೆಂದೂ ಗುರೂಜಿಯ ಹತ್ತಿರ ಬಂದುದನ್ನು ರಾಘವ ನೋಡಿರಲಿಲ್ಲ. ಆದ್ದರಿಂದ ಅವನು ಕೂಡಲೇ ತನ್ನ ಪತ್ತೆದಾರಿ ಕೆಲಸಕ್ಕಿಳಿದ. ಹೇಮಚಂದ್ರ ಗುರೂಜಿಯ ಮನೆಯಂಗಳಕ್ಕಡಿಯಿಟ್ಟವನು ಅಲ್ಲಿನ ಜನಸಂದಣಿಯನ್ನು ಕಂಡು ಬೇಸರಗೊಂಡು ಅಲ್ಲೇ ಸಮೀಪವಿದ್ದ ಮಾವಿನ ಮರದ ಬುಡದ ಕಲ್ಲು ಬೆಂಚಿನ ಮೇಲೆ ಕುಳಿತ. ಅವನನ್ನು ಗಮನಿಸಿದ ಅಣ್ಣಪ್ಪ ಕಾಫಿ ತಂದು ಕೊಟ್ಟು ಮುಗ್ಧವಾಗಿ ಹಲ್ಲು ಗಿಂಜಿ ಹೊರಟು ಹೋದ. ಹೇಮಚಂದ್ರ ಕಾಫಿ ತೆಗೆದುಕೊಂಡು ಕುಡಿಯುತ್ತ, ಚಡಪಡಿಸುತ್ತ ಸಮಯ ಕಳೆಯತೊಡಗಿದ. ಮಾವಿನ ಮರದ ಸುತ್ತಮುತ್ತ ತಂಪಾದ ಗಾಳಿ ಬೀಸುತ್ತಿತ್ತು. ಕೆಲಹೊತ್ತಿನಲ್ಲಿ ಅವನ ಮನಸ್ಸೂ ತಿಳಿಯಾಗುತ್ತ ಬಂತು. ಹಾಗಾಗಿ ತಾನು ಗುರೂಜಿಯವರಿಗೆ ವಿವರಿಸಬೇಕಾದ ವಿಚಾರವನ್ನು ಯೋಚಿಸುತ್ತ ಕಾಫಿ ಹೀರತೊಡಗಿದ. ಅಷ್ಟರಲ್ಲಿ ರಾಘವನ ಆಗಮನವಾಯಿತು. ಅವನು ತಾನೂ ಗುರೂಜಿಯವರನ್ನು ಕಾಣಲು ಬಂದ ಗಿರಾಕಿಯಂತೆ ಹೇಮಚಂದ್ರನತ್ತ ಬಂದವನು ಪರಿಚಯದ ನಗೆ ಬೀರುತ್ತ, ‘ಉಸ್ಸಪ್ಪಾ…!’ ಎಂದು ಉಸಿರು ದಬ್ಬಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಆದರೆ ಹೇಮಚಂದ್ರ ತನ್ನ ತಾಪತ್ರಯಗಳ ಮಡುವಿನಲ್ಲೇ ಮುಳಗೇಳುತ್ತಿದ್ದವನು ಅವನ ನಗುವಿಗೆ ಪ್ರತಿ ನಗದೆ ಅಲಕ್ಷ್ಯ ಮಾಡಿದ. ಅದರಿಂದ ರಾಘವ ತುಸು ಪೆಚ್ಚಾದ. ಆದರೆ ಅವನು ತನ್ನ ಕಾಯಕದಲ್ಲಿ ಪಳಗಿದವನು. ಆದ್ದರಿಂದ, ‘ಛೇ! ಛೇ! ಇದೆಂಥದು ಮಾರಾಯ್ರೇ ಇಲ್ಲಿನ ಅವಸ್ಥೆ…! ಈ ಗುರೂಜಿಯವರಲ್ಲಿಗೆ ನೀವು ಯಾವತ್ತೇ ಬನ್ನಿ, ಬೆಳಿಗ್ಗೆಯಿಂದ ನಡುರಾತ್ರಿಯವರೆಗೆ ಜನರ ಗುಂಪೊಂದು ತಪ್ಪುವುದೇ ಇಲ್ಲ ನೋಡಿ!’ ಎಂದು ಹೇಮಚಂದ್ರನನ್ನು ನೋಡುತ್ತ ಬೇಸರದಿಂದ ಅಂದ. ಆಗ ಹೇಮಚಂದ್ರ ವಾಸ್ತವಕ್ಕೆ ಬಂದು, ‘ಹೌದಾ…?’ ಎಂದು ಅಚ್ಚರಿಯಿಂದ ಅಂದವನು ಬಳಿಕ, ‘ನಾನು ಇದೇ ಮೊದಲ ಸಲ ಬರುತ್ತಿರುವುದು ಮಾರಾಯ್ರೇ. ಈ ಗುರೂಜಿ ಅಷ್ಟೊಂದು ಫೇಮಸ್ಸಾ…?’ ಎಂದ ಕುತೂಹಲದಿಂದ. ‘ಓಹೋ, ಹೌದಾ…? ಹಾಗಾದರೆ ನೀವು ಸರಿಯಾದ ಜಾಗಕ್ಕೇ ಬಂದಿದ್ದೀರಿ ಅಂತಾಯ್ತು. ಅಯ್ಯೋ, ಈ ಗುರೂಜಿಯವರ ಶಕ್ತಿಯನ್ನು ನಿಮಗೆ ನಾನೇನು ಹೇಳುವುದು ಮಾರಾಯ್ರೇ. ಊರಿಗೂರೇ ಇವರ ಚಮತ್ಕಾರವನ್ನು ಕೊಂಡಾಡುತ್ತಿದೆ!’ ಎಂದು ರಾಘವನು, ಗುರೂಜಿಯವರು ದೇವರೇ ಎಂಬಂತೆ ಹೊಗಳಿದ. ‘ಓಹೋ… ಹೌದಾ ಮಾರಾಯ್ರೇ…ಹಾಗಾದರೆ ನೀವೂ ಇವರ ಹಳೆ ಗಿರಾಕಿಯೇ ಎಂದಾಯ್ತು…!’ ‘ಛೇ, ಛೇ! ಗಿರಾಕಿ ಬಿರಾಕಿ ಎಂಥದ್ದೂ ಇಲ್ಲ. ಹಿಂದೊಂದು ಕಾಲದಲ್ಲಿ ಹಾಳಾಗಿ ಹೋಗಿದ್ದ ನನ್ನ ಬದುಕನ್ನು ಮತ್ತೆ ಬೆಳಗಿಸಿದಂಥ ಮಹಾನುಭಾವ ಇವರು!’ ‘ಹೌದಾ, ಅದು ಹೇಗೆ…?’ ‘ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡುವುದು ಹೇಳಿ? ಒಂದುವೇಳೆ ನನ್ನ ಆಗಿನ ಅವಸ್ಥೆಯನ್ನು ನೀವು ಕಣ್ಣಾರೆ ನೋಡಿರುತ್ತಿದ್ದರೆ ಈಗಲೇ ಎದ್ದು ಹೋಗಿ
ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು ಅಳುತ್ತಾಳೆ. ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ! ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು. *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು. ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು. ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು. ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ
ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ
ನಮ್ಮ ಆಚರಣೆಗಳಲ್ಲಿಯೇ ನಮ್ಮ ಚರಿತ್ರೆಗಳನ್ನು ಕಂಡುಕೊಳ್ಳಬೇಕಿದೆ. ಮಹಿಷಾ ಮಂಡಲದಲ್ಲಿ ಬೌದ್ಧರ ನಾಶದ ಹಿಂದೆ ಒಂದು ಚಾರಿತ್ರಿಕ ವಂಚನೆಯನ್ನು ಗ್ರಹಿಸಬೇಕಿದೆ.
ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ Read Post »







