ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ದಿಕ್ಸೂಚಿ

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

ಅಂಕಣ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ ಅವ್ವನ ಮಾತುಗಳು. ರಾಜುನಿಗೂ ಹೆತ್ತವರ ಮಾತುಗಳನ್ನು ಕೇಳಿ ಕೇಳಿ ರೋಸಿ ಹೋಗುತ್ತದೆ. ನಾನು ಆಟದಲ್ಲಿ ಮುಂದಿರೋದು ಇವರಿಗೆ ಕಾಣುವುದೇ ಇಲ್ಲ ಎಂದು ಗೊಣಗಿಕೊಳ್ಳುತ್ತಾನೆ. ಮನಃಸ್ಥಿತಿ ಸರಿ ಇರದಿದ್ದಾಗ ಹೌದಲ್ಲ ನನಗೆ ಚೆನ್ನಾಗಿ ಹಾಡೋಕೆ ಬರಲ್ಲ. ಭಾಷಣ ಮಾಡೋಕೆ ಬರಲ್ಲ. ಅಂಕ ಜಾಸ್ತಿ ಗಳಿಸಲು ಆಗಿಲ್ಲ. ನಾನು ಕೆಲಸಕ್ಕೆ ಬಾರದವನು ಎಂದೆನಿಸುತ್ತದೆ. ಇದು ಕೇವಲ ರಾಜುವಿನ ಆತಂಕದ ಸ್ಥಿತಿಯಲ್ಲ. ನಮ್ಮಲ್ಲಿ ಬಹುತೇಕ ಜನ ಪಾಲಕರ ಮತ್ತು ಮಕ್ಕಳ ಸಮಸ್ಯೆ. ಇತರರೊಂದಿಗಿನ ಹೋಲಿಕೆ ಬಹುತೇಕ ಸಲ ನೋವನ್ನೇ ತರುವುದು. ಹೋಲಿಕೆಯಿಂದ ಹೊರ ಬರುವುದು ಹೇಗೆ ಎಂಬುದು ಹಲವಾರು ಯುವಕ/ತಿಯರ ಸಮಸ್ಯೆ. ಹೋಲಿಕೆಯ ಕುಣಿಕೆಯಿಂದ ಬಚಾವಾಗಲು ಕೆಲವು ಸುಳಿವುಗಳು ಒಬ್ಬರಂತೆ ಒಬ್ಬರಿಲ್ಲ ನಮಗೆಲ್ಲ ಗೊತ್ತಿರುವ ಹಾಗೆ ಶಕ್ತಿಯಲ್ಲಿ ಅಶ್ವ ಶಕ್ತಿ ಪ್ರಸಿದ್ಧವಾದುದು.ಅದಕ್ಕೆ ಮರ ಹತ್ತುವ ಸ್ಪರ್ಧೆಯಲ್ಲಿ ಅದು ನಪಾಸಾಗುತ್ತದೆ. ಮೀನು  ಸಲೀಸಾಗಿ ಈಜುವುದು ಅದಕ್ಕೆ ಭೂಮಿಯ ಮೇಲೆ ಓಡುವ ಸ್ಪರ್ಧೆ  ಇಟ್ಟರೆ ಸತ್ತೇ ಹೋಗುತ್ತದೆ. ಪಶು ಪ್ರಾಣಿಗಳ ಹಾಗೆಯೇ ನಮ್ಮಲ್ಲಿಯೂ ಪ್ರತಿಯೊಬ್ಬರೂ ಒಂದೊಂದರಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುತ್ತೇವೆ. ಈಗಾಗಲೇ ಗೆಲುವು ಸಾಧಿಸಿದವರನ್ನು ಕಂಡು ಅವರಂತಾಗಲು ಹೋದರೆ ಅವರಿಗೆ ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುತ್ತೇವೆ. ನಿಮ್ಮಲ್ಲಿರುವ ಶಕ್ತಿಯನ್ನು ಕಡೆಗಣಿಸುವುದು ದೊಡ್ಡ ತಪ್ಪು.ಜೀವನದ ಕೊನೆಯಲ್ಲಿ ಶಕ್ತಿಯ ಅರಿವಾದರೆ ನಿಷ್ಪ್ರಯೋಜಕ. ಹಾಗೇ ಯಾರನ್ನೂ ಕಡೆಗಣಿಸಬೇಡ.  ಕಬೀರರು ಹೇಳಿದಂತೆ,’ ಕಾಲ ಕೆಳಗಿರುವ ಕಡ್ಡಿಯನ್ನು ಕಡೆಗಣಿಸಬೇಡ. ಅದೇ ಹಾರಿ ಬಂದು ನಿನ್ನ ಕಣ್ಣಲ್ಲಿ ನೆಟ್ಟು ನೋವನ್ನುಂಟು ಮಾಡಬಹದು.’ ಮತ್ತೊಬ್ಬರ ನಕಲು ಮಾಡುವುದು ತರವಲ್ಲ. ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳಿವೆ. ಆದರೆ ಅವು ನೋಡಲು ಬೇರೆ ಬೇರೆಯೇ ಆಗಿವೆ. ಅಂದರೆ ಒಬ್ಬರಂತೆ ಒಬ್ಬರಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಹುದುಗಿರುವ ಪ್ರತಿಭೆಗಳು ಭಿನ್ನ ಭಿನ್ನ. ಎಂಬ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೋಲಿಕೆಯಾಚೆ ಬರುವುದು ಸುಲಭ ಕೊರತೆಯ ಭಯ ಬೇಡ ಬೇರೆಯವರಲ್ಲಿರುವ ಪ್ರತಿಭೆ ನನ್ನಲ್ಲಿಲ್ಲ. ನನ್ನಲ್ಲಿ ಕೊರತೆಗಳ ಆಗರವೇ ಇದೆ. ಈ ಕೊರತೆಗಳ ಕಾರಣದಿಂದ ನನಗೇನೂ ಸಾಧಿಸಲಾಗುವುದಿಲ್ಲ ಎನ್ನುವ ಭ್ರಮೆಯಿಂದ ಹೊರ ಬನ್ನಿ. ಇತರರ ಜಾಣ್ಮೆ, ಸೌಂದರ್ಯ, ಸಿರಿವಂತಿಕೆಗೆ ಹೋಲಿಸಿಕೊಂಡು ಕೊರಗುವುದನ್ನು ನಿಲ್ಲಿಸಿ. ಇತರರಲ್ಲಿರುವುದು ಶ್ರೇಷ್ಟ. ನನ್ನಲ್ಲಿರುವುದು ಕನಿಷ್ಟ. ಎಂಬ ನಿರ‍್ಧಾರಕ್ಕೆ ಬರಬೇಡಿ. ನಮ್ಮ ನಮ್ಮ ಮನೋವೃತ್ತಿಯಂತೆ ನಮ್ಮ ಇಚ್ಛೆಗಳಿರುತ್ತವೆ.ಎನ್ನುತ್ತಾರೆ ಬಲ್ಲವರು.ಸುತ್ತ ಮುತ್ತ ಇರುವವರ ಅಭಿಪ್ರಾಯವನ್ನು ಮನ್ನಿಸಿ ಅದರಂತೆ ನಡೆಯದೇ ಹೋದರೆ ನನ್ನಲ್ಲಿರುವ ಕೊರತೆಯ ಕಂದಕ ಮುಚ್ಚಲಾಗುವುದಿಲ್ಲ. ಬೇರೆಯವರ ಮಾತಿನಂತೆ ನಡೆದುಕೊಂಡರೆ ಅದು ನಿಸ್ವಾರ‍್ಥ.ಕೊರತೆಯ ನೀಗಿಸಿಕೊಳ್ಳುವುದರಲ್ಲಿ ತೊಡಗಿಕೊಂಡರೆ ಅದು ಸ್ವಾರ್ಥ ಎಂಬ ತಪ್ಪು ಕಲ್ಪನೆಯಲ್ಲಿ ಕಾಲ ಕಳೆಯಬೇಡಿ. ‘ತನ್ನ ಹಿತವನ್ನು ನೋಡಿಕೊಳ್ಳುವುದು ಸ್ವಾರ‍್ಥವಲ್ಲ. ಇತರರ ಹಿತಕ್ಕೆ ದಕ್ಕೆ ತರುವುದೇ ಸ್ರ‍ಾರ್ಥ.’ ಎಂಬುದನ್ನು ಅರಿತು ಮುನ್ನಡೆಯಿರಿ. ಆಸಕ್ತಿ ಗುರುತಿಸಿಕೊಳ್ಳಿ ವಾತ್ಸಾಯನ ಮುನಿಯ ನುಡಿಯಂತೆ ‘ಒಂದೇ ಒಂದು ದೋಷವು ಎಲ್ಲ ಗುಣಗಳನ್ನು ಕೆಡಿಸಿಬಿಡುತ್ತದೆ.’ ಹೋಲಿಕೆಯಲ್ಲಿ ಬಿದ್ದು ಬಿಟ್ಟರೆ ನಮ್ಮೆಲ್ಲ ಸಾರ್ಥಕ್ಯ ಶಕ್ತಿ ವಿನಾಶವಾದಂತೆಯೇ ಸರಿ. ನಿಮಗೆ ಯಾವ ರಂಗದಲ್ಲಿ ಆಸಕ್ತಿ  ಇದೆ ಎಂಬುದನ್ನು ಗುರುತಿಸಿ. ಬಡತನದ ಕಾರಣದಿಂದ ಶಾಲಾ ಶಿಕ್ಷಣ ಪಡೆಯದ ಬಾಲಕನೊಬ್ಬ ಹೊಟ್ಟೆ ಪಾಡಿಗಾಗಿ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ. ಬೈಂಡಿಂಗಿಗೆ ಬಂದ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಂಡ. ಬರ ಬರುತ್ತ ವಿಜ್ಞಾನದಲ್ಲಿ ತನಗಿರುವ ಆಸಕ್ತಿಯನ್ನು ಗುರುತಿಸಿಕೊಂಡು ಸರ್ ಹಂಪ್ರೆ ಡೇವಿಯ ಸಹಾಯಕನಾಗಿ ಕಾರ‍್ಯ ನಿರ‍್ವಹಿಸಿ ಕೊನೆಗೆ  ಜಗತ್ತಿನ  ಸುಪ್ರಸಿದ್ಧ ವಿಜ್ಞಾನಿಯಾದ ಆತನೇ ಮೈಕೆಲ್ ಫ್ಯಾರಡೆ. ಆಸಕ್ತಿಯನ್ನು ಗುರುತಿಸಿಕೊಳ್ಳಬೇಕೆಂದರೆ ನಿಮ್ಮನ್ನು ನೀವು ಅರ್ಥೈಸಿಕೊಳ್ಳಿ. ಅಂದರೆ  ನಿಮ್ಮಲ್ಲಿರುವ ಬಲ ಮತ್ತು ಬಲಹೀನತೆಗಳನ್ನು ತಿಳಿದುಕೊಳ್ಳಿ. ಈ ಕೆಲಸ ನನಗೆ ತುಂಬಾ ಖುಷಿ ನೀಡುತ್ತದೆ. ಇದನ್ನು ನಾನು ಇತರರಿಗಿಂತ ಬಹಳಷ್ಟು ಚೆನ್ನಾಗಿ ಮಾಡಬಲ್ಲೆ. ವಿವಿಧ ವಿಷಯಗಳಲ್ಲಿ ಆಸಕ್ತಿ ಇದೆ ಎಂದೆನಿಸಿದಾಗ ಇದನ್ನು ಮಾಡದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಈ ಕೆಲಸ ನನಗೆ ಪಂಚ ಪ್ರಾಣ. ಇದನ್ನು ಮಾಡದೇ ನಾನಿರಲಾರೆ.ಅಂತ ಹೇಳುತ್ತಿರೋ ಅದೇ ನಿಜವಾಗಲೂ ನಿಮ್ಮ ಆಸಕ್ತಿ ಎಂದು ಪರಿಗಣಿಸಿ ನಿಮ್ಮ ಗುರಿಯನ್ನು ನಿರ‍್ಣಯಿಸಿ. ನೀವು ನೀವಾಗಿರಿ ಬೇರೆಯವರು ನಿಮ್ಮನ್ನು ಇಷ್ಟಪಡಬೇಕೆಂದು ನಿಮಗೆ ಇಷ್ಟವಿಲ್ಲದ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದದ ಬದಲಾವಣೆಗಳಿಗೆ ಮುಂದಾಗವೇಡಿ. ಭೌತಿಕವಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಕುಟುಂಬದ ಆಚರಣೆಗಳು, ಪದ್ದತಿಗಳು, ಸತ್ಸಂಪ್ರದಾಯಗಳು, ಹಬ್ಬ ಹರಿದಿನಗಳು, ವ್ರತಾಚರಣೆಗಳು ಮೌಢ್ಯತೆಯಿಂದ ಮುಕ್ತವಾಗಿರುವಾಗ ಅವುಗಳನ್ನು ಬದಲಾಯಿಸುವುದರಿಂದ ಅರ‍್ಥವಿಲ್ಲ. ಸಣಕಲು ದೇಹದವನು ದಪ್ಪದಾಗಿ ಕಾಣಲು ಸ್ವೆಟರ್ ಧರಿಸಿದರೆ ನೀವು ಅದನ್ನು ಫ್ಯಾಷನ್ ಎಂದು ತಿಳಿದು ತಡೆದುಕೊಳ್ಳಲಾರದ ಬೇಸಿಗೆಯ ಧಗೆಯಲ್ಲಿ ಒದ್ದಾಡಬೇಕಾಗುತ್ತದೆ.  ಅಂಧರಾಗಿ ಅನುಕರಿಸಲು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ. ನಿಮ್ಮ ದೇಹಕ್ಕೆ ಕಾಲಮಾನಕ್ಕೆ ಏನು ಸೂಕ್ತವೋ ಅದನ್ನೇ ಧರಿಸಿ. ನಟ ಪುನೀತ್ ರಾಜ್ ಕುಮಾರ ಎಂದರೆ ಅಚ್ಚು ಮೆಚ್ಚು ಆತನ ಬಿಗ್ ಫ್ಯಾನ್ ನಾನು ಎನ್ನುತ್ತ ಆತನ ನಡೆ ನುಡಿಯನ್ನು ಅನುಸರಿಸಿದರೆ ನಿಮ್ಮನ್ನು ಜ್ಯೂನಿಯರ್ ಪುನಿತ್ ಎಂದು ಕರೆಯುತ್ತಾರೆ ಹೊರತು ನಿಮ್ಮನ್ನು ನಿಮ್ಮ ಹೆಸರಿನಲ್ಲಿ ಗುರುತಿಸುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಸಂಪೂರ‍್ಣವಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಹಾಗೆ ಮಾಡಲು ಹೋದರೆ ನವಿಲು ಕುಣಿಯುತ್ತೆ ಅಂತ ಕೆಂಬೂತ ಕುಣಿಯಲು ಹೋದಂತೆ ಆಗುತ್ತದೆ. ‘ನಮಗೆ ಜೀವನವನ್ನು ಕೊಟ್ಟ ದೇವರು ಅದರ ಜೊತೆಯಲ್ಲಿಯೇ ಸ್ವಾತಂತ್ರ್ಯವನ್ನೂ ದಯಪಾಲಿಸಿದ್ದಾನೆ.’ ಎಂಬುದು ಜೆರ‍್ಸನ್ ಮಾತು. ಸ್ವತಂತ್ರವಾಗಿ ನೆಮ್ಮದಿಯಿಂದಿರಿ. ಸ್ವಸ್ವಾರ್ಥದಿಂದ ಪಡೆಯುವ ಗೌರವವೇ ನಿಜವಾದ ಗೌರವ. ಅವಮಾನಗಳಿಗೆ ಹೆದರದಿರಿ ಬಹು ಅಂಗವೈಕಲ್ಯವನ್ನು ಹೊರೆ ಎಂದುಕೊಳ್ಳದೇ ಸಾಧನೆಯ ಪರ‍್ವತವನ್ನೇರಿದ ಹೆಲೆನ್ ಕೆಲ್ಲರ್, ಕುರುಡನಾದರೂ ಡಾಕ್ಟರ್ ಆದ ಡೇವಿಡ್ ಹರ‍್ಟ್ಮನ್,ಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಲು ಪಟ್ಟ ಅವಮಾನಗಳು ಅಷ್ಟಿಷ್ಟಲ್ಲ. ಹೆಜ್ಜೆ ಹೆಜ್ಜೆಗೂ ಅವಮಾನದ ರುಚಿಯನ್ನು ಕಂಡವರೆ ಅವರೆಲ್ಲ. ಆದರೂ ತನ್ನಂತೆ ಇರುವವರ ಜೊತೆ ತಮ್ಮನ್ನು ಹೋಲಿಸಿಕೊಂಡು ಅಮೂಲ್ಯ ಜೀವನ ವ್ಯರ್ಥವಾಗಿಸಿಕೊಳ್ಳಲಿಲ್ಲ. ಬದಲಾಗಿ ಅವಮಾನಗಳಿಗೆ ಕೆಚ್ಚೆದೆಯಿಂದ ಸೆಡ್ಡು ಹೊಡೆದು ಗೆದ್ದರು. ಖ್ಯಾತ ಫೋರ‍್ಢ್   ಮೋಟಾರು ಕಂಪನಿಯ ಮುಖ್ಯಸ್ಥ ಹೆನ್ರಿ ಫೋರ‍್ಢ್ ಕಾರು ಕಂಡು ಹಿಡಿಯುವ ಕಠಿಣ ಪರಿಶ್ರಮದಲ್ಲಿದ್ದ ಕಾಲದಲ್ಲಿ ಒಬ್ಬ ಹಳ್ಳಿಗ ಆತನನ್ನು ಉದ್ದೇಶಿಸಿ,’ಕುದುರೆಗಳೇ ಇಲ್ಲದ ಚಕ್ರದ ರಥವನ್ನು ಎಳೆಯಬೇಕು ಅಂದುಕೊಂಡಿದ್ದಿಯಾ? ಶ್ರೀಮಂತ ಆಗೋ ಹುಚ್ಚು ಕನಸು ಕಾಣ್ತಿದಿಯಾ?’ ಎಂದು ವ್ಯಂಗ್ಯವಾಗಿ ಕೇಳಿದನಂತೆ. ಅದಕ್ಕೆ ಫೋರ‍್ಡ್ ‘ನಾನಷ್ಟೇ ಅಲ್ಲ ಸಾವಿರಾರು ಜನರನ್ನು ಶ್ರೀಮಂತರನ್ನಾಗಿ ಮಾಡಬೇಕು ಅಂತ ಕನಸು ಕಾಣ್ತಿದಿನಿ.’ ಅಂತ ಗಟ್ಟಿಯಾದ ಧ್ವನಿಯಲ್ಲಿ ಉತ್ತರಿಸಿದನಲ್ಲದೇ ತಾನು ಅಂದಂತೆ ಸಾಧಿಸಿದ. ಹೋಲಿಕೆಯ ಗೋರಿಯಲ್ಲಿ ಹೂತುಕೊಳ್ಳದೇ ನೈಜತೆಯನ್ನು ಅರ‍್ಥೈಸಿಕೊಂಡು ನಡೆದರೆ  ಚೆಂದದ ಜೀವನವೊಂದು ನಾವು ನಡೆಯುವ ದಾರಿಯಲ್ಲಿ ಮುಗಳ್ನಗುತ್ತದೆ. ************* ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು ಇಂದಿನ ದಾವಂತದ ಬದುಕಿನಲ್ಲಿ ಎಲ್ಲ ಸುಖಗಳೂ ನಮ್ಮೆಡೆ ತಾವೇ ಬರಲಿ ಎಂದು ಆಶಿಸುತ್ತೇವೆ. ಬೆರಳ ತುದಿಯಲ್ಲಿ ಬೇಕಾದ್ದೆಲ್ಲವೂ ದೊರೆಯುತ್ತಿರುವಾಗ ಗೆಲುವಿಗೆ ಮಾತ್ರ ಇನ್ನಿಲ್ಲದ ಪರಿಶ್ರಮ ಏಕೆ ಪಡಬೇಕು ಎಂದು ಪ್ರಶ್ನಿಸುತ್ತೇವೆ. ‘ಕೆಲಸಕ್ಕೆ ಕರೆಯಬೇಡ್ರಿ ಊಟಕ್ಕೆ ಮರೆಯಬೇಡ್ರಿ.’ ಅನ್ನೋ ಜಾಯಮಾನದವರನ್ನು ಕಂಡರೆ ಯಶಸ್ಸು ಹತ್ತಿರವೂ ಸುಳಿಯುವುದಿಲ್ಲ. ಶ್ರಮವಿಲ್ಲದೇ ಏನೆಲ್ಲವೂ ತಮ್ಮ ಪಾದದ ಕೆಳಗೆ ಬಿದ್ದಿರಬೇಕೆಂಬುದು ನಮ್ಮಲ್ಲಿ ಬಹುತೇಕ ಜನರ ಅಭಿಪ್ರಾಯ. ವ್ಯಕ್ತಿತ್ವ ವಿಕಾಸದಲ್ಲಂತೂ ಪರಿಶ್ರಮ ಮೂಲ ವಸ್ತುವಿನಂತೆ ಕಾರ‍್ಯ ನಿರ‍್ವಹಿಸುತ್ತದೆ. ಶ್ರಮದ ಬೀಜಕ್ಕೆ ಅಗಾಧ ಶಕ್ತಿ ಇದೆ ಎನ್ನುವುದು ಈಗಾಗಲೇ ಮಹಾನ್ ಸಾಧಕರು ತೋರಿಸಿಕೊಟ್ಟಿದ್ದಾರೆ.  ಎಷ್ಟು ಶ್ರಮವಹಿಸಿದರೂ ಅಷ್ಟೇ ಬದುಕು ಅದೃಷ್ಟದಾಟ. ಅದೃಷ್ಟದ ಮುಂದೆ ಪರಿಶ್ರಮವೂ ಒಂದು ಆಟಿಗೆಯಂತೆ.ಎಂದು ನಂಬಿ ಜೀವನವನ್ನು ಅದೃಷ್ಟದ ಕೈಗೆ ಕೊಟ್ಟು ಹಗಲು ರಾತ್ರಿ ಹಲಬುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ‘ಪರಿಸ್ಥಿತಿಗೆ ಅಂಜಲಾರೆ. ನಾನೇ ಆ ಪರಿಸ್ಥಿತಿಯ ನಿರ‍್ಮಾತೃ.’ ಎಂಬ ನೆಪೋಲಿಯನ್ ಬೊನಾಪರ‍್ಟೆ ಮಾತಿಗೆ ಅಮೂಲ್ಯವಾದ ಬೆಲೆ ನೀಡಿದ ಮಹಾ ಪುರುಷರು ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ ಯಾವ ಆಸೆ ಆಮಿಷಗಳಿಗೆ ಬಲಿಯಾಗದ,ಎಂಥ ಸಿರಿವಂತಿಕೆಗೂ ದಕ್ಕದ ಗೆಲುವನ್ನು ಪರಿಶ್ರಮದ ಬೆವರಿನಿಂದ ಗಿಟ್ಟಿಸಿಕೊಳ್ಳಬಹುದು. ಅದು ಹೇಗೆ ಎಂಬುದಕ್ಕೆ ಮುಂದಕ್ಕೆ ಓದಿ. ಪರಿಶ್ರಮ ಎಂದರೆ . . . . ? ಗೆಲುವಿಗೆ ಬೇಕಾದ ಮೂಲ ಪರಿಕರ. ಮೂಲ ಬೀಜ. ಮೂಲತಃ ಗೆಲುವಿಗೆ ತಿಳಿಯುವ ಚೆಂದದ ಮೂಲ ಭಾಷೆ. ಪರಿಶ್ರಮ ಹೇಳಿದ ಮಾತನ್ನು ಗೆಲುವು ಶಿರಸಾವಹಿಸಿ ಪಾಲಿಸುತ್ತದೆ. ಸ್ವಲ್ಪ ತಡವಾಗಬಹುದು ಅಷ್ಟೆ. ಮನುಷ್ಯನ ಮನಸ್ಸೊಂದು ವಿಚಿತ್ರ. ಅದು ಯಾವ ಯಾವುದೋ ರೂಪದಲ್ಲಿ ರಂಜನೆಯನ್ನು ಪಡೆಯಲು ಸದಾ ಕಾಲ ತುಡಿಯುತ್ತದೆ. ಇನ್ನೂ ವಿಚಿತ್ರವೆಂದರೆ ಪರಿಶ್ರಮವೊಂದನ್ನು ಬಿಟ್ಟು. ಜೇನು ತುಪ್ಪ ಬೇಕಾದವನು ಜೇನುನೊಣಗಳಿಗೆ ಹೆದರಬಾರದು ಎಂಬುದು ದಕ್ಷಿಣ ಆಫ್ರಿಕನ್ ಗಾದೆ. ಗೆಲುವಿನ ಫಲ ಬೇಕೆನ್ನುವವರು ಪರಿಶ್ರಮದ ಬೀಜ ಬಿತ್ತಿ ಸತತ ನೀರೆರೆಯುವುದನು ಮರೆಯಬಾರದು. ನಡೆಯದು ಅದೃಷ್ಟದಾಟ  ಅದೃಷ್ಟ ಗಾಜಿನಂತೆ: ಹೊಳಪು ಹೆಚ್ಚಿದಂತೆಲ್ಲ ಬೇಗ ಒಡೆಯಬಲ್ಲದು. ಹಗಲಿರುಳೆನ್ನದೇ ಶ್ರಮ ಪಡುತ್ತಿದ್ದರೂ, ಹಣೆಯ ಮೇಲೆ ಬೆವರಿನ ಸಾಲು ಸಾಲುಗಟ್ಟಿದರೂ ಫಲಿತಾಂಶ ಮಾತ್ರ ನನ್ನ ನಿರೀಕ್ಷೆಯನ್ನು ತಲುಪುತ್ತಿಲ್ಲ. ಎಂಬುದು ಕೆಲವರ ಗೊಣಗಾಟ. ವಿಷ್ಣು ಶರ‍್ಮ ಹೇಳಿದಂತೆ,’ಆಪತ್ತು ಬಂದಾಗ ಬುದ್ಧಿಗೆಡಬಾರದು.’ಶೇ ೯೯ ರಷ್ಟು ಪ್ರಯತ್ನಕ್ಕೆ ಶೇ ೧ ರಷ್ಟು ಅದೃಷ್ಟ ಸೇರಿದಾಗ ಗೆಲುವು. ಶ್ರಮ ಎಂಬುದೊಂದು ದೊಡ್ಡ ಭಾರ ಎಂದು ಹೆಸರಿಟ್ಟು ದೂರ ಸರಿಯುವವರೂ ಇಲ್ಲದಿಲ್ಲ.ಇದನ್ನು ಕಂಡು ರವೀಂದ್ರನಾಥ ಟ್ಯಾಗೋರ್ ಹೀಗೆ ಹೇಳಿದ್ದಾರೆ; ಹೊರೆಯೇ ಮುಖ್ಯವಾಗಿರುವಾಗ ಯಾವ ಭಾರವಾದರೇನು? ಇಟ್ಟಿಗೆಯಾದರೇನು? ಕಲ್ಲಾದರೇನು? ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಪರಿಶ್ರಮದ ನೋವಿನಲ್ಲೂ ನಲಿವಿದೆ ಗೆಲುವಿದೆ ಹಾಗಾದರೆ ಪರಿಶ್ರಮದ ಬೀಜ ಬಿತ್ತಿ ಗೆಲುವಿನ ಫಲ ಪಡೆಯಬಹುದು. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ ಪರಿಶ್ರಮಿಗಳ ಬೆನ್ನು ಹತ್ತಿ ಗೆಲುವು ಓಡುತ್ತದೆ. ಬೇಡ ಕಣ್ಣೀರಿನ ಉತ್ತರ ಷೇಕ್ಸಪಿಯರ್ ತನ್ನ ಸಾನೆಟ್ ಒಂದರಲ್ಲಿ ‘ಕಾಲದ ಆಘಾತಕ್ಕೆ ಶಿಲಾ ಪ್ರತಿಮೆಗಳು ಒಡೆಯಬಹುದು. ಹೊನ್ನಲೇಪದ ಸ್ಮಾರಕಗಳು ಉರಳಬಹುದು. ಆದರೆ ಕಾವ್ಯ ಮಾತ್ರ ಮೃತ್ಯು ಹಾಗೂ ವಿಸ್ಮೃತಿಗೆ ಅತೀತವಾದುದು.’ ಎಂದು ಕಾವ್ಯದ ಅಮರತೆಯ ಕುರಿತು ಹೇಳಿದ ಅದೇ ಮಾತನ್ನು ಪರಿಶ್ರಮಕ್ಕೂ ಅನ್ವಯಿಸಬಹುದು. ಹೆಜ್ಜೆ ಹೆಜ್ಜೆಗೂ ಎದುರಾಗುವ ಸೋಲಿಗೆ ಹೆದರಿ ಹತಾಶೆಯಿಂದ ಕಣ್ಣೀರು ಸುರಿಸುತ್ತೇವೆ. ಸೋಲಿಗೆ ಕಣ್ಣೀರಿನ ಉತ್ತರ ನೀಡುತ್ತೇವೆ. ಸೋಲನ್ನು ಕಣ್ಣೀರಿನ ಕೈಯಲ್ಲಿ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತೇವೆ. ಕತ್ತಲು ಕೋಣೆಯಲ್ಲಿ ಕಣ್ಣೀರು ಕೆಡವಿ ಮತ್ತೆ ಆಲಸ್ಯತನದ ಮರೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವೆಂಬುದು ನಮಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಆಲಸ್ಯವೆಂಬ ಮಾಯೆ ಶ್ರಮವೆಂಬ ಸತ್ಪಥವನ್ನು ನುಂಗಿ ಹಾಕಿ ಬಿಡುತ್ತದೆ. ಶ್ರಮವೆಂಬ ಜಂಜಾಟದಲ್ಲಿ ಬೀಳುವುದಕ್ಕಿಂತ ಕಣ್ಣೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು ಎಂದು ಕೊಂಡಿದ್ದೇವೆ. ಮಣ್ಣಿನ ಗಡಿಗೆಯಲಿ ಅಡುಗೆ ಮಾಡಿ ಉಣ್ಣುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನೆಲ್ಲ ಪಾಲಿಸೋಕೆ ಸಮಯವೆಲ್ಲಿದೆ? ಶ್ರಮದ ಯೋಚನೆಗಳಿಲ್ಲದೇ ಯೋಜನೆಗಳಿಲ್ಲದೇ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಪಡೆಯುವುದು ಕಷ್ಟ. ಇರಲಿ ಗಟ್ಟಿ ನಿರ್ದಾರ ಪರಿಶ್ರಮವೆಂಬುದು ಕಿರಿದಾದ ದಾರಿಯಲ್ಲಿ ಅದೂ ಪಾಚಿಗಟ್ಟಿದ ದಾರಿಯಲ್ಲಿ ನಡೆದಂತೆ. ಆದ್ದರಿಂದ ಅದರ ಸಹವಾಸವೇ ಬೇಡ. ಗೆಲುವನ್ನು ಬಾಚಿ ತಬ್ಬಿಕೊಳ್ಳಲು ಸಾಕಷ್ಟು ಅಡ್ಡ ಮಾರ‍್ಗಗಳಿವೆ. ಅವುಗಳನ್ನು ಅನುಸರಿಸುವುದೇ ಸೂಕ್ತ ಎಂದು ಅವುಗಳತ್ತ ಹೆಜ್ಜೆ ಹಾಕಿ ಕೈ ಸುಟ್ಟುಕೊಳ್ಳುತ್ತೇವೆ. ಶಾಶ್ವತ ಗೆಲುವಿನ ನಿಜವಾದ ಕೀಲಿ ಕೈ ಶ್ರಮವೆಂದು ಅರಿಯುವುದರಲ್ಲಿ ಸಾಕಷ್ಟು ಸಮಯ ಸರಿದಿರುತ್ತದೆ. ನೊಂದ ಮನಸ್ಸು ವಿಶ್ರಾಂತಿ ಬೇಕೆಂದು ಅಂಗಲಾಚುತ್ತದೆ. ಆದರೆ ಅದು ವಿಶ್ರಾಂತಿಗೆ ಸಕಾಲವಲ್ಲ. ಪ್ರಖರವಾದ ಪರಿಶ್ರಮಕ್ಕೆ ಒಡ್ಡಿಕೊಳ್ಳಬೇಕಾದ ಕಾಲ.ಮಾಡಿದ ತಪ್ಪಿಗೆ ಬೇರೆ ದಾರಿ ಇಲ್ಲ. ಶ್ರಮದೆಡೆ ಮುಖ ಮಾಡುವುದೊಂದೇ ದಾರಿ. ಪರಿಶ್ರಮವೆಂಬುದು ನಿರಂತರ ಪ್ರಕ್ರಿಯೆ. ಶ್ರಮ ಪಟ್ಟದ್ದು ಸಾಕೆಂದುಕೊಂಡರೆ ಗೆಲುವು ನಿಂತ ನೀರಿನಂತೆ ನಿಲ್ಲುತ್ತದೆ. ಜಗತ್ತಿನ ಸುಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ೬೭ ನೇ ವಯಸ್ಸಿನಲ್ಲಿ ತಾನು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಹೊತ್ತಿ ಉರಿಯುವುದನ್ನು ಕಂಡು.’ ನಿನ್ನ ತಾಯಿ ಮತ್ತು ಆಕೆಯ ಗೆಳತಿಯರನ್ನು ಕರೆ. ಅವರೆಂದೂ ಇಂಥ ದೊಡ್ಡ ಫ್ಯಾಕ್ಟರಿ ಉರಿಯುವ ದೃಶ್ಯವನ್ನು ಕಂಡಿರಲಾರರು.’ ಎಂದು ತನ್ನ ೨೪ ವರ‍್ಷದ ಮಗ ಚಾರ್ಲ್ಸ್ ಹೇಳುತ್ತಾನೆ. ತಂದೆಯ ಮಾತು ಕೇಳಿದ ಮಗ ಗಾಬರಿಯಾಗಿ ಇದೇನು ಹೇಳುತ್ತಿರುವಿರಿ ನೀವು? ಇಷ್ಟು ದಿನ ಶ್ರಮವಹಿಸಿ ಬೆಳೆಸಿದ ನಿಮ್ಮ ಕನಸು ಹೊತ್ತಿ ಉರಿಯುತ್ತಿದೆ ಎಂದ ಸಖೇದ ಆಶ್ಚರ್ಯದಿಂದ. ಅದಕ್ಕೆ ಥಾಮಸ್ ಕೊಟ್ಟ ಉತ್ತರ ಮಾರ‍್ಮಿಕವಾದುದು. ಪರಿಶ್ರಮ ಪಡುವ ಗಟ್ಟಿ ನಿರ‍್ಧಾರವಿದ್ದರೆ ಇಂಥ ಎಷ್ಟು ಫ್ಯಾಕ್ಟರಿಗಳನ್ನು ಕಟ್ಟ ಬಹುದೆಂದ. ಮರು ದಿನದಿಂದಲೇ ಶ್ರಮದ ಬೆವರು ಸುರಿಸಿದ. ಪರಿಶ್ರಮವೇ ಕೀಲಿಕೈ ಭವಿಷ್ಯವನ್ನು ವರ‍್ತಮಾನದಿಂದ ಕೊಳ್ಳಬಹುದು ಎಂದಿದ್ದಾರೆ ಡಾ: ಜಾನ್ಸನ್. ಹಾಗೆಯೇ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು. ವರ‍್ತಮಾನದಲ್ಲಿ ನಾವು ತೊಡಗಿಸಬೇಕಾದ ಬಂಡವಾಳವೆಂದರೆ ಪರಿಶ್ರಮ. ಎಲ್ಲರ ಮನ ಸೆಳೆಯುವ ಬಣ್ಣ ಬಣ್ಣದ ಚಿಟ್ಟೆ ಆಗಬೇಕಾದರೆ ಕಂಬಳಿಹುಳ ಪಡುವ ನೋವು ಅಷ್ಟಿಷ್ಟಲ್ಲ. ಸಾಧಕರ ಯಶೋಗಾಥೆಯನ್ನು ಓದುವಾಗ ಅಥವಾ ಕೇಳುವಾಗ ಸ್ಪಷ್ಟವಾಗುವ ಅಂಶವೆಂದರೆ,’ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವರು ವಿಗ್ರಹವಾಗಲು ಹಂಬಲಿಸಬಾರದು. ಕಲ್ಲಾಗಿಯೇ ಇದ್ದು ಬಿಡಬೇಕು.’ ರಭಸವಾದ ಅಲೆಗಳಂತೆ ಬಂದ ಸಮಸ್ಯೆಗಳಿಗೆ ತಮ್ಮ ಛಲ ಬಿಡದ ಪರಿಶ್ರಮದಿಂದಲೇ ಎದೆಯನ್ನೊಡ್ಡಿ ದಿಟ್ಟ ಉತ್ತರ ನೀಡಬೇಕು.. ಆಂಡ್ರೂ ಕರ‍್ನೇಗಿ, ಅಮೇರಿಕದ ಸ್ಟೀಲ್ ರಂಗದಲ್ಲಿ ಬಹು ದೊಡ್ಡ ಹೆಸರು. ಆತ ಹನ್ನೊಂದುವರ‍್ಷದ ಪುಟ್ಟ ಪೋರನಾಗಿದ್ದಾಗ ಕಾರ‍್ಮಿಕನಾಗಿದ್ದ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿ ತಾನು ಶ್ರೀಮಂತನಾಗುವುದಲ್ಲದೇ ನೂರಾರು ಜನ ಬಿಲಿಯನರ್‌ಗಳನ್ನು ಸೃಷ್ಟಿಸಿದ.ಇದನ್ನು ಅವಲೋಕಿಸಿದಾಗ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಬನ್ನಿ ಸೋಲೆಂಬ ಅವಮಾನಕ್ಕೆ ಉತ್ತರವನ್ನು ಪರಿಶ್ರಮದಿಂದ ಕೊಡೋಣ. ಗೆಲುವಿನ ದಾರಿಯಲ್ಲಿ ನಗು ನಗುತ ಹೆಜ್ಜೆ ಹಾಕೋಣ. ************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅಪಾಯ ಎದುರಿಸುವ ಬಗೆ ಹೀಗೆ . ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಕಥೆ ರಷ್ಯಾದ ಖ್ಯಾತ ಸಾಹಿತಿ ಲಿಯೋ ಟಾಲ್ ಸ್ಟಾಯ್ ಬರೆದದ್ದು. ಒಮ್ಮೆ ಇಬ್ಬರು ಗೆಳೆಯರು ಕಾಡಿನಲ್ಲಿ ಹೋಗುತ್ತಿದ್ದರು. ಕಾಡು ಪ್ರಾಣಿಗಳು ಪೊದೆಗಳ ಹಿಂದೆ ಅಡಗಿರಬಹುದೆಂಬ  ಭಯದಿಂದ ಇಬ್ಬರೂ ಕೈ ಕೈ ಹಿಡಿದು ಸಾಗುತ್ತಿದ್ದರು.  ಕಾಡಿನ ದಾರಿಯನು ಗೆಲುವಾಗಿ ಸಾಗಲು ಅತಿ ಪ್ರೀತಿಯಿಂದ ಅದು ಇದು ಹರಟುತ್ತ ಸಾಗುತ್ತಿದ್ದರು. ಒಮ್ಮೆಲೇ ಕರಡಿ ಕಾಣಿಸಿಕೊಂಡಿತು.ಕರಡಿ ಇನ್ನೂ ದೂರದಲ್ಲಿತ್ತು. ಹಾಗಾಗಿ ಹೇಗಾದರೂ ಅದರಿಂದ ಬಚಾವಾಗಬೇಕೆಂದು ಉಪಾಯ ಮಾಡಲು ಅವರಿಬ್ಬರಿಗೂ ಕೆಲ ಕ್ಷಣಗಳು ಉಳಿದಿದ್ದವು. ಅಷ್ಟರಲ್ಲಿ ಇಬ್ಬರಲ್ಲಿ ಒಬ್ಬ ಸರಸರನೆ ಮರ ಹತ್ತಿ ಮರದ ಕೊಂಬೆಯ ಮೇಲೆ ಕುಳಿತು ಬಿಟ್ಟ. ಆದರೆ ಇನ್ನೊಬ್ಬನಿಗೆ ಮರ ಹತ್ತಲು ಬರದು. ಮತ್ತೊಬ್ಬರು ಸಹಾಯ ಸಿಕ್ಕಿದ್ದರೆ ಹತ್ತಿರುತ್ತಿದ್ದನೇನೋ! ಆದರೆ ಅವನ ಗೆಳೆಯ ಅದಾಗಲೇ ಮರದ ತುದಿಯನ್ನೇರಿ ಬಿಟ್ಟಿದ್ದರಿಂದ ಇವನೀಗ ನೆಲದಲ್ಲಿ ಒಬ್ಬಂಟಿಯಾಗಿದ್ದ. ಕರಡಿ ಇನ್ನೇನು ಹತ್ತಿರವೇ ಬಂತು. ಏನು ಮಾಡಬೇಕೆಂದು ಯೋಚಿಸುತ್ತಿರುವಾಗಲೇ ಒಂದು ಉಪಾಯ ಹೊಳೆದಂತಾಯ್ತು.  ಕರಡಿ ಸಮೀಪಕ್ಕೆ ಬಂತು ಎನ್ನುವಷ್ಟರಲ್ಲಿ ನೆಲದ ಮೇಲೆ ಸತ್ತಂತೆ ಮಲಗಿ ಬಿಟ್ಟ. ಕರಡಿ ತೀರಾ ಹತ್ತಿರಕ್ಕೆ ಬಂತು. ಯುವಕನನ್ನು ಮೂಸಿತು. ಸಾವು ಎದೆಯ ಮೇಲೆ ನಿಂತಿರುವಾಗ ಯಾರಿಗಾದರೂ ಉಸಿರು ಬಂದೀತೆ? ಯುವಕನಿಗೆ ಭಯದಲ್ಲಿ ಉಸಿರೇ ನಿಂತು ಹೋದಂತಾಗಿತ್ತು! ಕರಡಿ ಆತನು ಸತ್ತಿರುವನೆಂದು ತಿಳಿದು ತನ್ನ ಪಾಡಿಗೆ ತಾನು ಮುಂದೆ ಸಾಗಿತು. ಕರಡಿ ಕಣ್ಮರೆಯಾಗುವವರೆಗೂ ಮರದ ಮೇಲೆ ಕುಳಿತಿದ್ದ ಯುವಕ ಇನ್ನೇನು ಅಪಾಯವಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕೆಳಗಿಳಿದ. ಸತ್ತಂತೆ ನಟಿಸಿ ಮಲಗಿದ್ದವನೂ ಅಬ್ಬಾ! ಅಂತೂ ಇಂತೂ ಬಚಾವಾದೆ ಎಂದು ಎದ್ದು ಕೂತ. ಮರದಿಂದ ಇಳಿದ ಯುವಕ ‘ಏನು ಹೇಳಿತು ಗೆಳೆಯ, ಕರಡಿ ನಿನ್ನ ಕಿವಿಯಲ್ಲಿ? ಎಂದು ನಗುತ್ತ ಕೇಳಿದ. ಸತ್ತಂತೆ ಮಲಗಿದ್ದ ಯುವಕ ಉತ್ತರಿಸಿದ ‘ಅಪಾಯದ ಸಮಯದಲ್ಲಿ ಕೈ ಬಿಟ್ಟು ಹೋಗುವವರನ್ನು ಎಂದೂ ನಂಬಬೇಡ ಎಂದು ಹೇಳಿತು. ಅಪಾಯವೆಂದರೆ. . . . .?      ದೈನಂದಿನ ಬದುಕಿಗೆ ಅಕಸ್ಮಾತ್ತಾಗಿ ಭೇಟಿ ಕೊಡುವಂಥ ಆಗಂತುಕನೇ ಅಪಾಯ. ಆಂತರಿಕ ಅಗ್ನಿಯನ್ನು ಉದ್ದೀಪನಗೊಳಿಸುತ್ತದೆ. ನಮ್ಮೊಳಗಿನ ಅತ್ಯುನ್ನತವಾದುದನ್ನು ಅತ್ಯುತ್ತಮವಾದುದನ್ನು ಹೊರಗೆಳೆಯಲು ಪ್ರೇರೇಪಿಸುತ್ತದೆ. ಬಹುತೇಕರು ಅಪಾಯವನ್ನು ಅಪಾಯಕಾರಿ ಎಂದು ದೂರ ಸರಿಯುತ್ತಾರೆ ಹೊರತು ಅದು ಹೊತ್ತು ತಂದ ಅವಕಾಶಗಳ ಮೂಟೆಗಳನ್ನು ತೆರೆದು ನೋಡುವುದೇ ಇಲ್ಲ. ಸಣ್ಣ ಪುಟ್ಟ ಅಪಾಯಗಳಿಗೂ ಹೆದರಿ ಜೀವನ ಪ್ರೀತಿ ಕಳೆದುಕೊಳ್ಳುವವರು ಅಪಾಯಗಳ ಮಡಿಲಲ್ಲಿ ಬಿದ್ದು ಗಗನಚುಂಬಿ ಹಿಮ ಪರ‍್ವತಗಳ ನೆತ್ತಿಯ ಮೇಲೆ ನಿಂತವರನ್ನು, ಉದ್ದುದ್ದ ಸಾಗರಗಳನ್ನು ಈಸಿ  ಗೆದ್ದವರನ್ನು ಹಗ್ಗದ ಮೇಲೆ ನಡೆಯುವವರನ್ನು ನೋಡಿ ಕಲಿಯಬೇಕು. ಅಪಾಯಗಳು ಮನುಷ್ಯನಿಗೆ ಹೇಳಿ ಕೇಳಿ ಬರುವುದಿಲ್ಲ. ಅಪಾಯದ ಸ್ಥಿತಿಯಲ್ಲಿ ಯಾರಾದರೂ ನಮ್ಮನ್ನು ಬಚಾವು ಮಾಡುತ್ತಾರೆಂದು ನಂಬಿಕೊಂಡು ಕುಳಿತುಕೊಳ್ಳುವುದು ತರವಲ್ಲ. ಸಮಯ ನಿರ‍್ವಹಣೆಯಂತೆ ಅಪಾಯ ನಿರ‍್ವಹಣೆಯೂ ಒಂದು ಕಲಿಯಬೇಕಾದ ಕಲೆ. ಅಪಾಯ ಎದುರಿಸುವ ಬಗೆ ಹೇಗೆ ಎನ್ನುವುದನ್ನು ನೋಡೋಣ ಬನ್ನಿ. ಮೇಲಿನ ಕಥೆಯ ಸಂದೇಶವನ್ನು ಮಾನವರೆಲ್ಲ ಬಯಸುವುದು ಸಹಜ. ಆಪತ್ತಿನಲ್ಲಿ ಉದ್ದೇಶಪೂರ‍್ವಕವಾಗಿ ನಮ್ಮನ್ನು ಕೈ ಬಿಟ್ಟು ಹೋಗುವವರನ್ನು ನಾವು ನಂಬಲೇ ಬಾರದು. ಆದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ಹೊಳೆಯದೇ ಹಾಗೆ ನಡೆದುಕೊಂಡಿದ್ದರೆ ಅಂಥವರನ್ನು ಕ್ಷಮಿಸುವುದು ಒಳಿತು. ‘ಕ್ಷಮಾ ಗುಣದ ಬಗ್ಗೆ ಖಂಡಿತ ಕಡಿಮೆ ಎಣಿಕೆ ಬೇಡ.’ ಯಾವುದೇ ಕೆಟ್ಟ ಕಾರ‍್ಯ ಶಿಕ್ಷೆಯಿಂದ ತಪ್ಪಿಸಿಕೊಳ್ಳದು. ಎಂಬುದನ್ನು ನೆನಪಿನಲ್ಲಿಡಬೇಕು. ಗೊಂದಲದ ಗೂಡಾದ ಮನಸ್ಸಿಗೆ ಎಲ್ಲವೂ ವಿಪರೀತಾರ‍್ಥಗಳೇ! ಸಮಯ ಸನ್ನಿವೇಶವನ್ನು ಅರ‍್ಥೈಸಿಕೊಂಡು ಆಪತ್ಕಾಲದಲ್ಲಿ ನಮ್ಮೊಂದಿಗಿದ್ದವರು ನಡೆದುಕೊಳ್ಳುವ ರೀತಿಯನ್ನು ಪರಿಶೀಲಿಸಿ ದೂರ ಸರಿಯುವುದೋ ಇಲ್ಲ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕೋ ಎನ್ನುವುದನ್ನು ನಿರ‍್ಧರಿಸುವುದು ಉಚಿತ ಮನಸ್ಥಿತಿ.  ಹಾಗೆ ನೋಡಿದರೆ ಅಪಾಯದ ಸ್ಥಿತಿಯಲ್ಲಿ ನಮ್ಮ ಮನಸ್ಥಿತಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ನಮಗೆ ಘಟಿಸುವ ಅನೇಕ ವಿಷಯಗಳು ಮತ್ತು ಅವು ನಮಗೆ ಎಂಥ ಫಲಗಳನ್ನು ನೀಡುತ್ತವೆ ಎಂಬುದು ನಮ್ಮ ಮನಸ್ಥಿತಿಯ ಮೇಲೆ ಆಧಾರ ಪಡುತ್ತದೆ. ಭಯಗೊಂಡರೆ ಏನು ಮಾಡಬೇಕೆಂದು ತಲೆಗೆ ತೋಚುವುದೇ ಇಲ್ಲ. ಹೀಗಾಗಿ ‘ಧೈರ‍್ಯದಿಂದ ಇದ್ದರೆ  ಅರ‍್ಧ ಅಪಾಯವನ್ನು ಗೆದ್ದಂತೆ.’ಆಶಾವಾದಿ ಭಾವ ಶಕ್ತಿಯನ್ನು ತುಂಬುತ್ತದೆ. ಪ್ರಯತ್ನವೆನ್ನುವುದು ಎಲ್ಲದಕ್ಕೂ ಮೂಲ ಕೇಂದ್ರ ಬಿಂದು. ಅಪಾಯದಲ್ಲಿ ಪ್ರಯತ್ನ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವೆನ್ನುವುದು ಕೇವಲ ಪಠ್ಯ ಬೋಧನೆಯಲ್ಲ. ಆಗಾಗ ಎದುರಾಗುವ ಅಪಾಯಗಳನ್ನು ಎದುರಿಸಲು ಸಿದ್ಧರಾಗುವುದನ್ನು ಕಲಿಸುವುದೂ ಆಗಿದೆ. ವಿದ್ಯಾರ‍್ಥಿ ದೆಸೆಯಲ್ಲಿ ಅಪಾಯದ ಅಡಿಪಾಯ ಅಲ್ಲಾಡಿಸುವ ಬಗೆ ತಿಳಿದುಕೊಳ್ಳಬೇಕು. ಅನುಭವದ ತಿಳುವಳಿಕೆ ನಾವು ಯಾವುದೇ ಕ್ಷೇತ್ರದಲ್ಲಿರಲಿ ಅಪಾಯ ನಿರ‍್ವಹಣೆಯನ್ನು ಕಲಿಯದ ಹೊರತು ಆ ಕ್ಷೇತ್ರದಲ್ಲಿಯ ವ್ಯಕ್ತಿ ಮತ್ತು ವಸ್ತುಗಳ ಮೌಲ್ಯವನ್ನು ನಿಖರವಾಗಿ ಅಳೆಯದ ಹೊರತು ಕ್ಷೇಮಕರ ಎಂದು ಹೇಳಲಾಗದು. ಅಪಾಯದ ಬಗೆಗಿನ ನಮ್ಮ ಹಿಂದಿನ ಅನುಭವಗಳು ಒಳ್ಳೆಯ ನಿರ‍್ಧಾರಗಳಿಗೆ ದಾರಿ ಮಾಡುವುದಾದರೆ ಸರಿಯಾದ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ‘ನಾವು ಒಂದು ಅನುಭವದ ತಿಳುವಳಿಕೆಯನ್ನು ಬಿಟ್ಟರೆ ಮಿಕ್ಕೆಲ್ಲದ್ದರಿಂದ ಹೊರ ಬರುವ ಜಾಗರೂಕತೆಯನ್ನು ವಹಿಸಬೇಕು. ಅಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ನಾವು ಬಿಸಿ ಒಲೆಯ ಬಾಣಲೆಯ ಮೇಲೆ ಕುಳಿತ ಬೆಕ್ಕಂತಾಗುತ್ತೇವೆ. ಅದು ಮತ್ತೆ ಬಿಸಿ ಒಲೆಯ ಬಾಣಲೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಇದು ಒಳ್ಳೆಯದೇ, ಆದರೆ ಅದು ತಂಪಾದ ಒಲೆಯ ಮೇಲೂ ಕುಳಿತುಕೊಳ್ಳುವುದಿಲ್ಲ ಎಂದಿದ್ದಾನೆ ಮಾರ‍್ಕ್ ಟ್ವೇನ್. ಧನಾತ್ಮಕ ಆಲೋಚನೆ ಅಪಾಯದ ಸ್ಥಿತಿಯಲ್ಲಿ ಕೈ ಬಿಟ್ಟು ಹೋಗುವವರನ್ನು ಕುರಿತು ನಕಾರಾತ್ಮಕವಾಗಿ ಯೋಚಿಸತೊಡಗಿದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವರ ಉಳಿದೆಲ್ಲ ಉತ್ತಮ ಗುಣಗಳು ಗೌಣವೆನಿಸುತ್ತವೆ. ಅವರಿಂದ ದೂರವಾಗಬೇಕೆಂಬ ಭಾವನೆಯೂ ಬಲವಾಗುತ್ತದೆ.ಕೈ ಬಿಟ್ಟವರು ಸ್ವಯಂ ರಕ್ಷಣೆ ಮಾಡಲು ಕಲಿಸಿದರು ಎಂದುಕೊಂಡರೆ ಜೀವನಕ್ಕೊಂದು ಹೊಸ ಪಾಠ ಸಿಕ್ಕಂತಾಗುತ್ತದಲ್ಲವೇ? ಇಂಥವರು ನಮಗೆ ಭಿನ್ನ ದಾರಿಯಲ್ಲಿ ನಡೆಯುವುದನ್ನು ಕಲಿಸುತ್ತಾರೆ ಎಂದುಕೊಳ್ಳಬಹುದಲ್ಲವೇ? ಈ ಆಲೋಚನೆ ರೀತಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿದೆ ಎನಿಸುತ್ತದೆ ಅಲ್ಲವೇ? ಈ ಅಂಶ ಅವರು ಜೀವ ಪರರಾಗಿಲ್ಲವೆನ್ನುವುದಕ್ಕಿಂತ ನಾವೆಷ್ಟು ಸಂಬಂಧ ಪರತೆಯನ್ನು ಹೊಂದಿದ್ದೇವೆ ಎಂಬುದನ್ನು ನಮಗೆ ಮನಗಾಣಿಸುತ್ತದೆ. ಅಷ್ಟಕ್ಕೂ ಇಂಥವರು ನಮಗಾಗಿ ಅಪಾಯವನ್ನು ತಂದೊಡ್ಡುವುದಿಲ್ಲ ಎಂಬುದು ದೊಡ್ಡ ನಿರುಮ್ಮಳ ವಿಷಯ. ಅಪಾಯವನ್ನು ಎದುರಿಸುವ ಸಂಧರ‍್ಭದಲ್ಲಿ ಹೇಗೆ ವರ‍್ತಿಸುವುದು ಗೊತ್ತಿಲ್ಲ ಅಷ್ಟೇ.ಆಪತ್ತು ನಿರ‍್ವಹಣೆಯಲ್ಲಿರುವ ಕೊರತೆಗಾಗಿ ಸಂಬಂಧವನ್ನು ಕಳೆದುಕೊಳ್ಳುವುದು ಮೂರ‍್ಖತನ. ಆದ್ದರಿಂದ ಧನಾತ್ಮಕವಾಗಿ ಆಲೋಚಿಸಬೇಕು. ವಿವೇಚನೆ ಅಪಾಯಗಳಿಂದ ಸಾಕಷ್ಟು ಕಲಿಯುತ್ತೇವೆ. ಅವು ಜೀವನದ ಪಾಠಗಳೇ ಸರಿ.ಅಪಾಯಗಳು ಆತ್ಮಶೋಧನೆಗೆ ವಿಶ್ಲೇಷಣೆಗೆ ಹಚ್ಚುತ್ತವೆ.ಅಪಾಯಗಳು ಯಾವಾಗಲೋ ಬರುತ್ತವೆ ಆಗ ಏನಾದರೊಂದು ಮಾಡಿದರಾಯಿತು ಎಂಬ ನಿರ‍್ಲಕ್ಷ್ಯವು ಸಲ್ಲದು. ಬದುಕು ಆತ್ಮಶೋಧನೆ, ವೈಯಕ್ತಿಕ ಬೆಳವಣಿಗೆ ಮತ್ತು ಜೀವನ ಪರ‍್ಯಂತದ ಕಲಿಕೆಯ ಒಂದು ಪಥವಾಗಿದೆ. ಅಪಾಯಗಳು ಜೀವನದ ಅವಿಭಾಜ್ಯ ಅಂಗಗಳು ಎಂಬ ವಿಷಯ ತಿಳಿಯುವುದು ಸಮಾಧಾನಕರ ಸಂಗತಿ. ಹಾಗಾದಾಗ ಅಪಾಯಗಳನ್ನು ವಿವೇಚನೆಯ ರೀತಿಯಿಂದ ನೋಡುವುದನ್ನು ಕಲಿಯಬಹುದು. ಅನೇಕರು ಅಪಾಯದಲ್ಲಿ ಗೆಲುವಿನ ಹಂತ ಮುಟ್ಟುವ ಸಂಧರ‍್ಭದಲ್ಲಿಯೇ ಕೈ ಚೆಲ್ಲಿ ಬಿಡುತ್ತಾರೆ. ಇದರಿಂದ ಆಂತರಿಕ ಬಲ ಅಪಾರ ದೃಢಶಕ್ತಿಗೆ ನಷ್ಟವುಂಟಾಗುತ್ತದೆ.  ಭಿನ್ನಧಾರೆ ಹಾಗೆ ನೋಡಿದರೆ ಆ ದೇವರು ಪ್ರತಿ ಜೀವಿಗೂ ಅಪಾಯ ನಿರ‍್ವಹಿಸುವ ಕಲೆಯನ್ನು ದಯಪಾಲಿಸಿದ್ದಾನೆ. ಅತಿ ಚಿಕ್ಕದೆನಿಸುವ ಇರುವೆಗೆ ನೋವಾಗಿಸಿದರೆ ನಮ್ಮನ್ನು ಕಚ್ಚುತ್ತದೆ. ಊಸರವಳ್ಳಿ ತನ್ನ ಬೇಟೆಯಾಡುವ ಪ್ರಾಣಿಗಳಿಂದ ಬಚಾವಾಗಲು ಬಣ್ಣ ಬದಲಿಸುತ್ತದೆ. ಹೀಗೆ ಎಲ್ಲ ಜೀವಿಗಳಿಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ುರ‍್ತು ಅನಿವಾರ‍್ಯತೆ ಇರುತ್ತದೆ. ಅಪಾಯದಲ್ಲಿರುವಾಗ ಇತರರು ನಮ್ಮನ್ನು ಉಳಿಸುವರೆಂದು ತಿಳಿದರೆ ನಾವು ಅವರ ತೆಕ್ಕೆಗೆ ಬೀಳುತ್ತೇವೆ.ಬೇರೆ ಪ್ರಯತ್ನಗಳತ್ತ ಗಮನ ಹರಿಸುವುದು ಕಡಿಮೆ. ಭಿನ್ನಧಾರೆಯತ್ತ ಹೊರಳುವುದು ಜೀವನ ಪ್ರೀತಿಗೆ ತೆರುವ ಬೆಲೆ ಎನ್ನಬಹುದು. ಇದೆಲ್ಲ ಕೇವಲ ಗೆಳೆತನಕ್ಕೆ ಮಾತ್ರ ಸೀಮಿತವಾದದ್ದು ಎನ್ನುವಂತಿಲ್ಲ. ಆಪತ್ತಿನಲ್ಲಿ ಸಹಕರಿಸಲಿಲ್ಲವೆಂದು ಆಪ್ತಬಾಂಧವರಲ್ಲಿ ಮುನಿಸಿಕೊಳ್ಳುತ್ತೇವೆ. ನಿಜವಾದ ಅವರ ಸ್ಥಿತಿಯನ್ನು ಅರಿಯದೇ ನಮ್ಮ ಮೂಗಿಗೆ ನಾವು ಯೊಚಿಸಿ ಆ ಸಂಬಂಧವನ್ನು ಕಾಟು ಒಗೆಯುತ್ತೇವೆ. ಆತ್ಮೀಯರಲ್ಲಿ ಹಿತೈಷಿಗಳಲ್ಲೂ ಇಂಥ ವಿಷಯಗಳು ಮುನ್ನೆಲೆಗೆ ಬರುವುದುಂಟು. ಅನಗತ್ಯ ಪ್ರಾಮುಖ್ಯತೆಯನ್ನು ಪಡೆಯುವುದುಂಟು. ಆದರೆ ಕಾಲ ಒಂದು ದಿನ ಎಲ್ಲವನ್ನೂ ಹಿಂದಕ್ಕೆ ತಳ್ಳುತ್ತದೆ. ಆಗ ಅಪಾಯ ನಿರ‍್ವಹಣೆ ಗೊತ್ತಿಲ್ಲದವರು ಪ್ರಪಾತಕ್ಕೆ ಬೀಳುತ್ತಾರೆ.  ಕೊನೆ ಹನಿ ಗೆಳೆಯರು ಹಿತೈಷಿಗಳು ಅಪಾಯದ ಸ್ಥಿತಿಯಲ್ಲಿ ಕೈ ಹಿಡಿಯಬೇಕೆಂದು ಬಯಸುವುದು ಸಹಜಗುಣ. ಆದರೆ ಒಂದೊಂದು ಸಂಧರ‍್ಭದಲ್ಲಿ ನಾವು ಬಯಸಿದಂತೆ ನಮಗೆ ಇರಲಾಗುತ್ತದೆಯೇ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಾಗುತ್ತದೆ. ಮಧುರ ಬಾಂಧವ್ಯಗಳ ತಾಳವನ್ನು ತಪ್ಪಿಸುವ ಘಟನೆಗಳನ್ನು ನಿಂದಿಸುವ ರೀತಿಯಲ್ಲಿ ತೆಗೆದುಕೊಳ್ಳದೇ, ನಮ್ಮ ಶಕ್ತಿಯನ್ನು ಗುರುತಿಸಿಕೊಳ್ಳಲು ಸಹಕರಿಸಿದವರೆಂದು ತಿಳಿದು ವಂದಿಸುವ ರೀತಿಯಲ್ಲಿ ನಡೆದುಕೊಳ್ಳುವುದು ಸೂಕ್ತ. ಇದೆಲ್ಲ ನಮ್ಮ ದೃಷ್ಟಿ ಸಂಬಂಧಿಯಾದುದು. ಮನುಷ್ಯನ ಅನೇಕಾನೇಕ ಅಪೇಕ್ಷಿತ ಗುಣಗಳಲ್ಲಿ ಅಪಾಯ ಕಾಲದಲ್ಲಿ ಆಗಬೇಕು ಎನ್ನುವುದೂ ಒಂದು.ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬೀಜವೊಂದು ಸಂಪೂರ‍್ಣವಾಗಿ ಯಾವಾಗ ತನ್ನನ್ನು ಮಣ್ಣಲ್ಲಿ ಕಳೆದುಕೊಳ್ಳುತ್ತದೆಯೋ ಆಗ ಮಾತ್ರ ಅದು ಚಿಗುರೊಡೆದು ಮರವಾಗಿ ಬೆಳೆಯುವುದು. ಅಂತೆಯೇ ನಾವು ಮಾನವೀಯ ತುಡಿತಗಳಿಗೆ ಬೆಲೆ ಕೊಡಬೇಕು.ಗೊತ್ತಿಲ್ಲದೇ ಮಾಡಿದ ತಪ್ಪುಗಳನ್ನು ಕ್ಷಮಿಸಬೇಕು. ವಿಸ್ತಾರ ಚಿಂತನೆಗೆ ಹೊಸ ರೂಪ ಹೊಸ ಭಾಷ್ಯ ಬರೆಯಬೇಕು. ಹೊಸ ಅರ‍್ಥ ಬಿಟ್ಟು ಕೊಡುವ ಜೀವನದ ಹಲವಾರು ಘಟನೆಗಳ ಮೂಲಕ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ನಡೆದರೆ ಅಪಾಯದ ಮಡಿಲನ್ನು ಬಿಟ್ಟು ಸುಂದರ ಜೀವನದ ತೆಕ್ಕೆಯಲ್ಲಿ ನಾವಿರಲು ಸಾಧ್ಯ. ********************** ಲೇಖಕರ ಬಗ್ಗೆ ಎರಡು ಮಾತು ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಭಯದ ಬಗ್ಗೆ ಭಯ ಬೇಡ

ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ  ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.         ಮಕ್ಕಳು ಯಾವ ಯಾವುದೋ ವಿಷಯಕ್ಕೆ ಭಯಗೊಳ್ಳುತ್ತವೆ. ಭಯ ಕೇವಲ ಮಕ್ಕಳಿಗೆ ಅಷ್ಟೇ ಅಲ್ಲ ದೊಡ್ಡವರಿಗೂ ಕಾಡುವ ಮಾನಸಿಕ ಸಮಸ್ಯೆ. ಭಯ ಅಂದರೇನು? ಅದು ಏಕೆ ಉಂಟಾಗುತ್ತದೆ ಅದನ್ನು ಹೇಗೆ ನಿವಾರಿಸುವುದು ಎಂಬ ಪ್ರಶ್ನೆಗಳು ನಮ್ಮಲ್ಲಿ  ಅದೆಷ್ಟೋ ಬಾರಿ ಸುಳಿಯುತ್ತವೆ. ಭಯ ಅಂದರೆ ಏನು ಅಂತ ಹೇಳೋಕೆ ಆಗಲ್ಲ ಆದರೆ ಅದನ್ನು ಒಂದಿಲ್ಲೊಂದು ಸಂದರ್ಭದಲ್ಲಿ ನಾವು ಅನುಭವಿಸುತ್ತೇವೆ. ಇದು ಮನಸ್ಸಿನ ನಕಾರಾತ್ಮಕ ಭಾವನೆ.  ಭಯ ಎಂದರೇನು?   ನಮ್ಮ ಶಕ್ತಿಗೆ ಮೀರಿದ ಅಸಂಭಾವ್ಯ ವಿಚಾರವು ನಮ್ಮ ಮನಸ್ಸಿಗೆ ಹೊಕ್ಕಿತೆಂದರೆ ಆಗ ನಮ್ಮಲ್ಲಿ ನಾವು ಏನೋ ಕಲ್ಪಿಸಿಕೊಳ್ಳುತ್ತೇವೆ. ಇಂತಹ ವಾಸ್ತವವಲ್ಲದ ಕಲ್ಪನೆಗಳಿಗೆ ಒಂದು ಸ್ಪಷ್ಟ ಚಿತ್ರಣವನ್ನು ಸೃಷ್ಟಿಸಿಕೊಂಡು ನೋಡಲು ಶುರು ಮಾಡುತ್ತೇವೆ. ಆಗ ಮನದಲ್ಲಿ ಸಾವಕಾಶವಾಗಿ ಭಯವು ಆವರಿಸಕೊಳ್ಳತೊಡಗುತ್ತದೆ. ನಾವು ಸೃಷ್ಟಿಸಿಕೊಂಡ ಕಾಲ್ಪನಿಕ ಚಿತ್ರಣವು ಕ್ರಮೇಣ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ನಮ್ಮನ್ನು ಅಧೋಗತಿಗೆ ತಳ್ಳುತ್ತದೆ.          ಬಹಳಷ್ಟು ಬಾರಿ ಭಯವು ನಮ್ಮ ಭ್ರಮೆಯೇ ಆಗಿರುತ್ತದೆ. ಇಲ್ಲದ್ದನ್ನು ಇದ್ದ ಹಾಗೆ ತಿಳಿದುಕೊಳ್ಳುತ್ತೇವೆ. ಇದು ಒಂದು ಭಾವನಾತ್ಮಕ ಅನುಭವ. ಮನದಲ್ಲಿ ಆತಂಕ ಭಾವ ಸೃಷ್ಟಿ ಮಾಡಿ, ಭಾವನಾತ್ಮಕ ಅಡಚಣೆಯನ್ನುಂಟು ಮಾಡುತ್ತದೆ. ಭಯದಿಂದಾಗಿ ನಮ್ಮ ಜಾಗೃತ ಮನಸ್ಸು ನೋವನ್ನು ಅನುಭವಿಸುತ್ತದೆ. ನೋವಿನಿಂದ ಹೊರಬರಲು ನಮ್ಮ ಮನಸ್ಸು ಒದ್ದಾಡುತ್ತದೆ. ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ. ಇಲ್ಲವಾದಲ್ಲಿ ಮಾನಸಿಕ ವ್ಯಾಧಿಯಾಗಿ ಕಾಡುತ್ತದೆ.          ಭಯ ಉಂಟಾಗೋದು ಯಾವಾಗ?     ನಾಳೆ ಏನಾಗುತ್ತದೆಯೋ ಏನೊ ಎಂಬ ಚಿಂತೆಯು ಭಯವಾಗಿ ಪರಿವರ್ತನೆಯಾಗುತ್ತದೆ. ಯಾವುದೇ ವಿಷಯದ ಬಗೆಗೆ ನಿರಾಶಾದಾಯಕವಾಗಿ ಆಲೋಚಿಸುವದು, ಸುಮ್ಮನೆ ಏನನ್ನೋ ಇಲ್ಲದ್ದನ್ನು ಊಹಿಸಿಕೊಳ್ಳುವದು,ಹಿಂದೆ ನಡೆದು ಹೋದ ಕಹಿ ಘಟನೆಗಳನ್ನು ಮೇಲಿಂದ ಮೇಲೆ ನೆನಪು ಮಾಡಿಕೊಳ್ಳುವದು, ನಾನೆಲ್ಲಿ ಸೋತು ಹೋಗುತ್ತೇನೋ ಎಂಬ ಸೋಲಿನ ಆತಂಕ, ನನಗಾರೂ ಇಲ್ಲ ನಾನು ಏಕಾಂಗಿ ಎಂಬ ಭಾವ, ಪರರು ನನಗಿಂತ ಮುಂದೆ ಹೋಗುತ್ತಿದ್ದಾರೆ ಎಂಬ ಮತ್ಸರ ಭಾವ ನಮ್ಮಲ್ಲಿ ಭಯವನ್ನು ಹುಟ್ಟು ಹಾಕುತ್ತವೆ. ನಾವು ಅಪಾಯದಲ್ಲಿ ದ್ದಾಗ ನಮ್ಮ ಜೀವನದ ಬಗ್ಗೆ ಹೆದರಿಕೆಯಾಗುತ್ತದೆ.    ಯಾವುದಕ್ಕೆ ಭಯಗೊಳ್ಳುತ್ತೇವೆ?     ಚಿಕ್ಕ ಪುಟ್ಟ ವಿಷಯಗಳಿಗೂ ಮನಸ್ಸು ಭಯಗೊಳ್ಳುತ್ತದೆ. ಇದು ಒಂದು ತೆರನಾದ ಮಾನಸಿಕ ಸಂಘರ್ಷ. ಇದಕ್ಕೆ ಫೋಬಿಯೋ ಅಂತಲೂ ಕರೆಯುತ್ತಾರೆ. ಕೆಲವರಿಗೆ ಕಾಡುಪ್ರಾಣಿಗಳೆಂದರೆ ಭಯ. ಇನ್ನೂ ಕೆಲವರಿಗೆ ಸಾಕು ಪ್ರಾಣಿಗಳಾದ ನಾಯಿ ಬೆಕ್ಕು ಕಂಡರೂ  ಭಯ. ಮಳೆ ಗುಡುಗು ಮಿಂಚಿಗೂ ಹೆದರುತ್ತಾರೆ. ವಿಚಿತ್ರವೆಂದರೆ ಕೆಲವರು ಜನರನ್ನು ಕಂಡರೆ ಕಾಡು ಪ್ರಾಣಿ ನೋಡಿದ ಥರ ಭಯಗೊಳುತ್ತಾರೆ. ಆಹಾರದ ಭಯ, ಎತ್ತರ ಜಾಗದ ಭಯ, ಬಸ್ಸಿನಲ್ಲಿ , ರೈಲಿನಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವುದೆಂದರೆ ಭಯ ಇನ್ನು ಕೆಲವರು ನೀರು ಕಂಡರೆ ಹೆದರುತ್ತಾರೆ. ಅಂದರೆ ಭಯ ಎಲ್ಲ ಹಂತಗಳಲ್ಲಿ ಇದ್ದೇ ಇರುತ್ತದೆ.ಒಬ್ಬೊಬ್ಬರಿಗೆ ಒಂದೊಂದನ್ನು ಕಂಡರೆ ಭಯ. ಆಫೀಸಿಗೆ ಹೋದ ಗಂಡ, ಸ್ಕೂಲಿಗೆ ಹೋದ ಮಕ್ಕಳು ಮನೆಗೆ ಸರಿಯಾದ ಸಮಯಕ್ಕೆ ಮರಳಿ ಬರದಿದ್ದರೂ ಭಯಗೊಳ್ಳುವ ಪ್ರಸಂಗಗಳಿವೆ.  ನಾವು ಧೈರ್ಯವಂತರು ಎಂದು ಎಷ್ಟೋ ಜಂಭ ಕೊಚ್ಚಿಕೊಂಡರೂ ಭಯಗೊಳ್ಳುತ್ತೇವೆ ಎಲ್ಲಕ್ಕಿಂತ ದೊಡ್ಡ ಭಯ ಎಂದರೆ ಸಾವಿನ ಭಯ. ಈ ಭಯ ನಮ್ಮ ಅಸ್ತಿತ್ವಕ್ಕೆ ಸಂಬಂಧಿಸಿದ್ದು. ಎಲ್ಲಿ ನಮ್ಮ ಪ್ರಾಣಕ್ಕೆ ಸಂಚಕಾರ ಬರುತ್ತೇನೋ ಎಂದು ಎಷ್ಟೋ ಬಾರಿ ಭಯಗೊಳ್ಳುತ್ತೇವೆ.             ಭಯದ ಲಕ್ಷಣಗಳೇನು?      ಭಯವುಂಟಾದಾಗ ಮೈಂಡ್ ಫುಲ್ ಬ್ಲಾಂಕ್ ಆಗಿರುತ್ತೆ ಯಾವುದೇ ವಿಚಾರಗಳು ಆಲೋಚನೆಗಳು ಹೊಳೆಯುವುದಿಲ್ಲ. ಮೈಯೆಲ್ಲ ಬೆವರುತ್ತೆ.ಕೈ ಕಾಲುಗಳಲ್ಲಿ ಶಕ್ತಿಯಿಲ್ಲದಂತೆ ಭಾಸವಾಗುತ್ತೆ. ಮಾತೇ ಹೊರಡೋದಿಲ್ಲ. ಹೊರಡಿದರೂ ತೊದಲುತ್ತೆ. ಭಯದ ವಿಚಾರವನ್ನು ಹೊರತುಪಡಿಸಿ ಬೇರೆ ಯಾವ ವಿಚಾರಗಳು ಮನಸ್ಸಿನಲ್ಲಿ ಸುಳಿಯಲಾರವು. ವಿಚಾರಗಳೆಲ್ಲ ಅಸ್ತವ್ಯಸ್ತವಾಗುವುವು. ಅಂದುಕೊಂಡ ಯಾವ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆ ಬೆಚ್ಚಿ ಬೀಳುವುದು ಅಥವಾ ಇದಕ್ಕೆ ತದ್ವಿರುದ್ಧವಾಗಿ ಗಂಭೀರ ವಿಷಯಗಳಿಗೂ ಪ್ರತಿಕ್ರಿಯಿಸದೆ ಮೌನವಾಗಿರುವದು ಇವೆಲ್ಲ ಭಯದ ಮುಖ್ಯ ಲಕ್ಷಣಗಳು.            ಭಯ ತಡೆಯೋಕೆ ಏನು ಉಪಾಯ ?       ಪ್ರತಿಯೊಂದು ಭಯದಿಂದಲೂ ನಾವು ಮುಕ್ತರಾಗಬಹುದು. ಭಯ ತಡೆಯುವ ಉಪಾಯಗಳು ಕಠಿಣವೆನಿಸಿದರೂ ಅಸಾಧ್ಯವೇನಲ್ಲ. ನಾವು ಭಯಗೊಳ್ಳುತ್ತೇವೆ ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುವುದು.ಯಾವ ವಿಷಯದ ಬಗ್ಗೆ ಭಯವಿದೆಯೋ ಎಂಬುನ್ನು ತಿಳಿದು ಅದನ್ನು ಮುಕ್ತವಾಗಿ  ಆತ್ಮೀಯರೊಂದಿಗೆ ಚರ್ಚಿಸುವದು.ಯಾವಾಗಲೂ ಕೆಲಸದಲ್ಲಿ  ತೊಡಗಿಸಿಕೊಳ್ಳುವದು. ಮೂಢನಂಬಿಕೆ ಮತ್ತು ಅಪಶಕುನಗಳನ್ನು ನಂಬದೆ ಇರುವದು. ಸಕಾರಾತ್ಮಕ ದೃಷ್ಟಿಕೋನ ಬೆಳೆಸಿಕೊಳ್ಳುವುದು. ಪರಿಸ್ತಿತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರ್ಣಯ ಕೈಗೊಳ್ಳುವದು ಅನುಮಾನಕ್ಕೆ ಆಸ್ಪದ ಕೊಡದಿರುವದು ಭಯ ತಕ್ಕಷ್ಟು ಪ್ರಮಾಣದಲ್ಲಿದ್ದರೆ ನಮಗೆ ಎಚ್ಚರಿಕೆಯಂತೆ ವರ್ತಿಸುತ್ತದೆ ಎಂದು ತಿಳಿದುಕೊಳ್ಳುವುದು.ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈಜ್ಞರನ್ನು ಭೇಟಿ ಮಾಡುವುದು. ನಿಜವಾದ ಧೈರ್ಯವನ್ನು ಮನಸ್ಸಿಗೆ ತುಂಬಿಕೊಳ್ಳುವದು ಆಶಾವಾದಿಯಾಗಿರುವದು. ನಾನು ಧೈರ್ಯವಂತ ಎಂದು ನನ್ನಷ್ಟಕ್ಕೆ ನಾವೇ ಹೇಳಿಕೊಳ್ಳುವದು ಎಂದರೆ ಸೆಲ್ಪ್ ಹಿಪ್ನಾಟಿಸಂ ಮಾಡಿಕೊಳ್ಳುವದು.  ವಿವೇಕಾನಂದರ ವಾಣಿಯಂತೆ ‘ನಿಮ್ಮಿಂದ ನೀವೇ ಉದ್ದಾರವಾಗಬೇಕು. ಸ್ನೇಹಿತನೆ ನಿನಗೆ ಯಾರೂ ಸಹಾಯ ಮಾಡಲಾರರು. ನಿನಗೆ ನೀನೇ ದೊಡ್ಡ ಶತ್ರು . ನಿನಗೆ ನೀನೇ  ದೊಡ್ಡ ಮಿತ್ರ ಹಾಗಾದರೆ ನೀನು ಆತ್ಮವನ್ನು ದೃಢವಾಗಿ ಹಿಡಿದುಕೊ ಎದ್ದು  ನಿಲ್ಲು ಅಂಜಬೇಕಾಗಿಲ್ಲ. ನೀನು ಜಗತ್ತನ್ನೇ ಅಲ್ಲಾಡಿಸಲು  ಸಮರ್ಥನಾಗುವೆ. ಶಕ್ತಿಯ ರಹಸ್ಯ ವ್ಯಕ್ತಿ ಮತ್ತು ಆತನ ಜೀವನವೇ ಹೊರತು ಮತ್ತಾವುದು ಅಲ್ಲವೆಂಬುವುದನ್ನು ನೆನಪಿನಲ್ಲಿಡಿ’.          ಸ್ವಾಮಿ ವಿವೇಕಾನಂದರ ವಿವೇಕಭರಿತವಾದ ಈ ವಾಣಿಯನ್ನು  ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತ ಕೇವಲ ದೈಹಿಕ ಆರೋಗ್ಯದ ಕಡೆಗೆ ಗಮನ ಕೊಡದೆ ಮಾನಸಿಕ ಆರೋಗ್ಯದ ಬಗೆಗೆ ಗಮನವಹಿಸಿ ಆಗಾಗ ತಜ್ಞ ವೈದ್ಯರನ್ನು ಭೇಟಿಯಾಗಿ ನಮ್ಮ ವರ್ತನೆಯಲ್ಲಾದ ಬದಲಾವಣೆಯ ಕುರಿತು ಚರ್ಚಿಸಿ, ಅವರ ಸಲಹೆಗಳನ್ನು ಪಾಲಿಸಿದರೆ, ಭಯ ಮಂಗಮಾಯವಾಗುವದು ಖಚಿತ. ***************

ಭಯದ ಬಗ್ಗೆ ಭಯ ಬೇಡ Read Post »

ಅಂಕಣ ಸಂಗಾತಿ, ದಿಕ್ಸೂಚಿ

ಅವಮಾನದ ತಿರುವುಗಳು ಗೆಲುವಿನ ಮೈಲಿಗಲ್ಲುಗಳು ನಾನೀಗ ತಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ಅವಮಾನದ ಒಂದು ಪ್ರಸಿದ್ಧ ಉದಾಹರಣೆ; ಪವಿತ್ರ ನರ್ಮದಾ ನದಿಯಲ್ಲಿ ಒಮ್ಮೆ ಸಂತ ಏಕನಾಥ ಸ್ನಾನ ಮಾಡಿ ಹೊರ ಬರುತ್ತಿದ್ದ.ಆಗ ಪಠಾಣನೊಬ್ಬ ಮನದಲ್ಲಿ ವಿಷ ತುಂಬಿಕೊಂಡು ಸಂತನ ಮೇಲೆ ಉಗುಳಿದ. ಏಕನಾಥ ‘ಜೈ ವಿಠ್ಠಲ’ ಎನ್ನುತ್ತ ಮತ್ತೆ ನರ್ಮದೆಗಿಳಿದ. ಈ ರೀತಿ ಮುಂಜಾನೆಯಿಂದ ಸಂಜೆಯವರೆಗೂ ಇಬ್ಬರ ನಡುವೆ ನಡೆಯಿತು ಯಾರು ಸೋಲುತ್ತಾರೆಂದು ನದಿ ತಟದಲ್ಲಿ ಜನ ನಿಂತು ನೋಡುತ್ತಿದ್ದರು. ಕೊನೆಗೆ ಪಠಾಣ, ಸಂತರನ್ನು ಉದ್ದೇಶಿಸಿ ನಾನು ಯಾವುದೇ ಕಾರಣವಿಲ್ಲದೇ ನಿಮ್ಮನ್ನು ಹೀಗೆ ಅವಮಾನಗೊಳಿಸುತ್ತಿದ್ದೇನೆ ಅಶುದ್ಧಿಗೊಳಿಸುತ್ತಿದ್ದೇನೆ.ಆದರೆ ನೀವು ನನ್ನ ಮೇಲೆ ಕೋಪಿಸಿಕೊಳ್ಳದೇ ನಗುತ್ತಲೇ ನನ್ನನ್ನು ಸ್ವೀಕರಿಸುತ್ತಿದ್ದೀರಿ ಇದು ಹೇಗೆ ಸಾಧ್ಯವೆಂದು ಕೇಳಿದ.’ನೀನು ನನ್ನ ಪೋಷಕ.’ನಿನ್ನಿಂದಾಗಿ ಇಂದು ಪವಿತ್ರ ನರ್ಮದೆಯಲ್ಲಿ ಇಷ್ಟು ಬಾರಿ ಮಿಂದೆದ್ದೆ. ನನ್ನನ್ನು ಶುದ್ಧೀಕರಿಸಿಕೊಳ್ಳಲು ಒಂದು ಅವಕಾಶ ನೀಡಿದೆ ಎಂದನಂತೆ. ಫೋರ್ಡ್ ಕಾರಿನ ಹೆನ್ರಿ ,ವಿಮಾನ ಸಂಶೋಧಿಸಿದ ರೈಟ್ ಬ್ರದರ್ಸ್, ಅಬ್ರಹಾಂ ಲಿಂಕನ್,ಇತಿಹಾಸ ಪ್ರಸಿದ್ಧ ಚಾಣಕ್ಯ, ಮಹಾತ್ಮ ಗಾಂಧಿ, ಹಿಂದಿ ಚಿತ್ರ ಲೋಕದ ದಿಗ್ಗಜ ಅಮಿತಾಬ್ ಬಚನ್, ಸಾವಿರ ಸಂಶೋಧನೆಗಳ ಸರದಾರ ಥಾಮಸ್ ಅಲ್ವಾ ಎಡಿಸನ್ನಂಥ ಸಾವಿರ ಗೆಲುವಿನ ಸರದಾರರು ಅವಮಾನದ ತಿರುವುಗಳನ್ನೇ ಗೆಲುವಿನ ಮೈಲಿಗಲ್ಲುಗಳನ್ನಾಗಿ ರೂಪಿಸಿಕೊಂಡಿದ್ದು ಈಗ ಇತಿಹಾಸ. ಅವಮಾನವನ್ನು ಹೇಗೆ ಸ್ವೀಕರಿಸುತ್ತೇವೆ ಎನ್ನುವುದರ ಮೇಲೆ ಅವು ಮೈಲಿಗಲ್ಲುಗಳಾಗುವುದು ಅವಲಂಬಿತವಾಗುತ್ತದೆ. ಅವಮಾನವನ್ನು ಅನುಭವಿಸಿದವರು ಕೋಟಿ ಕೋಟಿ ಜನ ಆದರೆ ಅದನ್ನು ಗಂಭೀರವಾಗಿ ಕೈಗೆತ್ತಿಕೊಂಡವರ ಸಂಖ್ಯೆ   ಸಾವಿರ ಇಲ್ಲವೇ ಲಕ್ಷ ದಾಟುವುದಿಲ್ಲ. ಉಳಿದವರಿಗೆ ಸವಾಲಾಗದೇ ಕಾಡದೇ ಇದ್ದುದು ಎದುರಿಸಿ ನಿಲ್ಲಬೇಕೆನ್ನುವವರಿಗೆ ಸವಾಲಾಗಿ ಕಂಡಿದ್ದು ನಿಜ. ಅಳ್ಳೆದೆಯವರಿಗೆ ಅವಮಾನವೆಂಬ ಪದವೇ ದೂರ ಸರಿಯುವಂತೆ ಮಾಡುವುದೂ ಅಷ್ಟೇ ಸತ್ಯ. ದೂರು ಸರಿಯುವ ಬದಲು ಗಟ್ಟಿ ಧೈರ್ಯ ಮಾಡಿದರೆ ಅವಮಾನದೊಂದಿಗೆ  ಮುಖಾಮುಖಿಯಾಗಬಹುದು. ಹಾಗಾದರೆ ಅವಮಾನವೆಂದರೇನು? ಅದರ ಲಕ್ಪ್ಷಣಗಳೇನು? ಪರಿಣಾಮಗಳು ಎಂಥವು? ಅದನ್ನು ನಿರ್ವಹಿಸುವ ಕಲೆ ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಅವಮಾನವೆಂದರೆ. . . . .? ಯಾರಿಗೂ ಹೇಳಿಕೊಳ್ಳಲಾಗದ ಅವಮಾನದ ನೋವುಗಳನ್ನು ಎದೆಯ ತೆಕ್ಕೆಯಲ್ಲಿ ಬಚ್ಚಿಟ್ಟುಕೊಂಡು ತಿರುಗುವ ನೋವು ನಮ್ಮ ಶತ್ರುಗಳಿಗೂ ಬೇಡ. ‘ನಮ್ಮ ಭೀಮ ಗಾತ್ರದ ಶಕ್ತಿಗಳನ್ನು ಲವಲೇಶಕ್ಕೂ ಬೆಲೆ ಇಲ್ಲದಂತೆ ಲಘುವಾಗಿಸುವ ಪ್ರಯತ್ನ ನಡೆಸುವುದೇ ಅವಮಾನ.’ಅವಮಾನಿಸಿಯೇ ನಮ್ಮ ಗಮನ ಸೆಳೆಯುವವರೂ ಕಾಣ ಸಿಗುತ್ತಾರೆ. ಅದಕ್ಕೆಲ್ಲ ಬೇಸರಿಸಿಕೊಳ್ಳುವ ಹಾಗಿಲ್ಲ. ಅವರ ಹೀಯಾಳಿಕೆಯನ್ನೇ ಹೆಗ್ಗಳಿಕೆಯಾಗಿಸಿಕೊಳ್ಳುವುದೇ ಜಾಣತನ. ಭಯ ಆತಂಕದಿಂದಲೇ ಪಡೆಯಬೇಕಾದುದನ್ನು ಮನಸಾರೆ ಸ್ವೀಕರಿಸಿದರೂ ಅಗಾಧ ಬದಲಾವಣೆಯನ್ನು ತರುವ ಅಪಾರ ಶಕ್ತಿ ಅವಮಾನಕ್ಕೆ ಉಂಟು. ಅವಮಾನಿಸಿದವರ ಮುಂದೆ ತಲೆ ಎತ್ತಿ ಬದುಕಬೇಕೆಂದರೆ ಅವಮಾನವನ್ನೇ ಉತ್ಸಾಹವಾಗಿಸಿಕೊಳ್ಳಬೇಕು. ಅದೇ ಉತ್ಸಾಹ ನಮ್ಮನ್ನು ಉತ್ತೇಜಿಸುತ್ತದೆ. ಹೀಗೆ ದೊರೆತ ಉತ್ಸಾಹ ಬದಲಾಗುತ್ತ ಬೆಳೆಯುತ್ತ ಹೋಗುತ್ತದೆ. ಸನ್ಮಾನದತ್ತ ತಂದು ನಿಲ್ಲಿಸುತ್ತದೆ. ಲಕ್ಷಣ ಕಪಾಳ ಮೋಕ್ಷ,ಗುದ್ದುವುದು, ಅಪಹಾಸ್ಯದ ನಗು, ಮುಖದಲ್ಲಿಯ ಅಭಿವ್ಯಕ್ತಿ  ಹೀಗೆ ದೈಹಿಕವಾಗಿರಬಹುದು. ಇಲ್ಲವೇ ಸಾಮಾನ್ಯವಾಗಿ ವ್ಯಂಗ್ಯವಾಡುವುದು, ಅಣಕಿಸುವುದು, ಅವಾಚ್ಯ ಶಬ್ದಗಳ ಬಳಕೆ ಅಸಂಬದ್ಧ ಟೀಕೆಗಳನ್ನು ಮಾಡುವುದಿರಬಹುದು. ಪರಿಣಾಮಗಳು ಅವಮಾನ ಮಾಡುವ ಅಡ್ಡ ಪರಿಣಾಮಗಳು ಒಂದೇ ಎರಡೇ? ಅದರ ಪಟ್ಟಿ ಮಾಡುತ್ತ ಸಾಗಿದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಮೊದಲನೆಯದಾಗಿ ನಮ್ಮ ಸಂತೋಷವನ್ನೇ ಹಾಳು ಮಾಡುತ್ತದೆ. ಆತ್ಮವಿಶ್ವಾಸವನ್ನು ಸ್ವ ಗೌರವವನ್ನು ಒಮ್ಮಿಂದೊಮ್ಮೆಲೇ ಕೆಳಕ್ಕೆ ತಳ್ಳುತ್ತದೆ. ಏಕಾಂಗಿಯಾಗಿಸುತ್ತದೆ. ಸಿಟ್ಟು ತರಿಸುತ್ತದೆ. ಆತಂಕಕ್ಕೆ ಒಳಪಡಿಸುತ್ತದೆ. ಅಷ್ಟೇ ಅಲ್ಲ ಇನ್ನೂ ಮುಂದಕ್ಕೆ ಹೋಗಿ ಖಿನ್ನತೆಯೂ ಆವರಿಸುವಂತೆ ಮಾಡುತ್ತದೆ. ನಿರ್ವಹಿಸುವ ಬಗೆ ಹಲವು ಅವು ಇಲ್ಲಿವೆ ನೋಡಿ ಸಿಟ್ಟು ಅವಮಾನಕ್ಕೆ ಸಿಟ್ಟಿನಿಂದ ಉತ್ತರಿಸುವುದು ನಿಜಕ್ಕೂ ತುಂಬ ಅಶಕ್ತವೆನಿಸುತ್ತದೆ. ಅವಮಾನಿಸಿದವರನ್ನು ಮತ್ತು ಅವಮಾನವನ್ನು ಅತಿ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎನ್ನುವುದನ್ನು ಎತ್ತಿ ತೋರಿಸುತ್ತದೆ. ಅವಮಾನದಲ್ಲಿ ಸತ್ಯವಿದೆ ಎನಿಸುತ್ತದೆ. ಮನದ ಸ್ಥಿರತೆಯನ್ನು ತಗ್ಗಿಸುತ್ತದೆ. ಮತ್ತಷ್ಟು ಅವಮಾನಕ್ಕೆ ಎಡೆಮಾಡುತ್ತದೆ. ಹೀಗಾಗಿ ಅವಮಾನವನ್ನು ಸಿಟ್ಟಿನಿಂದ ಎದುರಿಸುವುದ ಅಷ್ಟು ಸೂಕ್ತವಲ್ಲ ಎನಿಸುತ್ತದೆ. ಸ್ವೀಕರಿಸುವಿಕೆ ಮೇಲ್ನೋಟಕ್ಕೆ ಅವಮಾನವನ್ನು ಸ್ವೀಕರಿಸುವುದು ಅಶಕ್ತವೆನಿಸಿದರೂ ಸಶಕ್ತ ವಿಧಾನವಾಗಿದೆ. ಅವಮಾನಿತಗೊಂಡಾಗ ಮೂರು ವಿಷಯಗಳನ್ನು ಪರಿಗಣಿಸಬೇಕು. ಅವಮಾನ ಸತ್ಯದ ಆಧಾರದ ಮೇಲಿದೆಯೇ? ಅವಮಾನಿಸಿದವರು ಯೋಗ್ಯರೇ? ಅವಮಾನ ಏಕೆ ಮಾಡಲ್ಪಟ್ಟಿತು? ಸತ್ಯವೆನಿಸಿದರೆ, ಯೋಗ್ಯರೆನಿಸಿದರೆ, (ಪಾಲಕರು, ಗುರುಗಳು, ಗೆಳೆಯರು) ಉದ್ದೇಶ ಒಳ್ಳೆಯದಿತ್ತು ಎನಿಸಿದರೆ ಅವಮಾನವ ಮಾಡಿದವರು ನೀವು ಗೌರವಿಸುವ ವ್ಯಕ್ತಿಯಾಗಿದ್ದರೆ ಆ ಅವಮಾನವನ್ನು ಉಡಾಫೆ ಮಾಡುವಂತಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆಯನ್ನು ಅರಿತು ಬದಲಾಗಲು ಸ್ವೀಕರಿಸಬೇಕು. ಮರಳಿಸುವಿಕೆ ಅವಮಾನವನ್ನು ಮರಳಿಸುವಿಕೆಯಲ್ಲಿ ಕೆಲವೊಂದಿಷ್ಟು ವಿಷಯಗಳು ಹುದುಗಿವೆ. ಆದ ಅವಮಾನ ಮರಳಿಸಲು ಯೋಗ್ಯವಾಗಿರಬೇಕು. ಸರಿಯಾದ ಸಮಯಕ್ಕೆ ಜಾಣತನದಿಂದ ಉತ್ತರಿಸುವಂತಿರಬೇಕು. ‘ಪರಿಪೂರ್ಣತೆಯನ್ನು ಕಡಿಮೆ ಮಾಡುವುದು ವಿರಳವಾಗಿ ಉತ್ತಮ ಪ್ರತಿಕ್ರಿಯೆ’ ಎಂದಿದ್ದಾನೆ ಆಸ್ಕರ್ ವೈಲ್ಡ್. ಆದರೆ ಹೀಗೆ ಕಡಿಮೆ ಮಾಡುವ ಪ್ರತಿಕ್ರಿಯೆಯ ಒಂದು ಮುಖ್ಯ ಸಮಸ್ಯೆ ಎಂದರೆ ಎಷ್ಟೇ ಜಾಣರಾಗಿದ್ದರೂ ಅದು ನಮ್ಮನ್ನು ಅವಮಾನಿಸಿದವರ ಮಟ್ಟಕ್ಕೆ ಇಳಿಸುತ್ತದೆ. ಹೀಗಾಗಿ ಇದು ಅಂದವಾದ ದುರ್ಬಲವಾದ ವಿಧಾನ. ಇದರಲ್ಲಿನ ಅವಮಾನಿಸಿದವರನ್ನು ಕೆರಳಿಸಿ ಮತ್ತಷ್ಟು ಆಕ್ರಮಣಗಳನ್ನು ಹೆಚ್ಚಿಸುವ ಸಾಧ್ಯತೆ ಹೆಚ್ಚು. ಆದರೆ ಈ ವಿಧಾನವನ್ನು ಹಾಸ್ಯಮಯವಾಗಿ ಗೆಳೆಯರೊಂದಿಗೆ ಸಮವಯಸ್ಕರೊಂದಿಗೆ ಬಳಸಬಹುದು. ಅಲಕ್ಷಿಸುವಿಕೆ ಹಾಸ್ಯ, ಶೋಚನೀಯವಾಗಿ ಮರಳಿಸುವಿಕೆಯ ಫಲಿತಾಂಶವನ್ನು ಪಡೆದಿದೆ. ನಿಮ್ಮ ಉತ್ತರ ಮೋಜಿನದಾಗಿರಬೇಕು. ಸರಿಯಾದ ಸಮಯಕ್ಕೆ ಸರಿಯಾದ ಭಾವದೊಂದಿಗೆ ಹೇಳುವಂತಿರಬೇಕು. ನಿಜದಲ್ಲಿ ಅವಮಾನವನ್ನು ಅಲಕ್ಷಿಸುವಿಕೆ ಬಹು ಸರಳ ಮತ್ತು ಹೆಚ್ಚು ಪರಿಣಾಮಕಾರಿ ವಿಧಾನ ಎನ್ನಬಹುದು. ಈ ವಿಧಾನವು ಅಪರಿಚಿತರೊಂದಿಗೆ ಸರಿಯಾಗುತ್ತದೆ. ಆದರೆ ಇದು ನಮ್ಮ ವೈಯಕ್ತಿಕ ವೃತ್ತಿಪರ ಸಂಬಂಧಗಳೊಂದಿಗೆ ಸರಿ ಹೊಂದುವುದಿಲ್ಲ.ಇಂಥ ಸಂದರ್ಭದಲ್ಲಿ ಸರಿಯಾದ ಶಬ್ದವನ್ನು ಬಳಸುವುದು ಆಯ್ಕೆಗೆ ಅರ್ಹವಾದುದು.ಶಬ್ದ ಬಳಸುವಾಗ ನಮ್ಮ ಎಲ್ಲೆಗಳನ್ನು ಮೀರದಂತೆ ಪುನಃ ದೃಢಪಡಿಸಲು ಪ್ರಯತ್ನಿಸಬೇಕು. ವೈಯಕ್ತಿಕ ಮತ್ತು ವೃತ್ತಿಪರ ಆರೋಗ್ಯಕರ ಪರಿಸರ ನಿರ್ಮಿಸುವುದು ಒಂದು ಸವಾಲಿನ ಸಂಗತಿಯೇ ಸರಿ. ಇಲ್ಲಿ ಶಾರೀರಿಕ  ಎಲ್ಲೆಗಳನ್ನು ಎಷ್ಟರಮಟ್ಟಿಗೆ ನಿರ್ದಿಷ್ಟವಾಗಿ ಕಾಪಾಡಿಕೊಳ್ಳುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಇದೊಂದು ನಾಯಿ ಬಾಲವನ್ನು ನೆಟ್ಟಗಾಗಿಸಿದಂತೆ.ಪ್ರತಿ ಬಾರಿ ಅದನ್ನು ಪುನಃ ದೃಢಪಡಿಸುವಾಗಲು ಅದು ಬಿಡಿಸದಂತೆ ಡೊಂಕಾಗಿರುತ್ತದೆ. ಇದಕ್ಕೆ ಸಾಕಷ್ಟು ಪ್ರಯತ್ನ ಬೇಕು. ಕೆಲವು ಬಾರಿ ಧೈರ್ಯವೂ ಬೇಕಾಗುತ್ತದೆ. ಆದರೆ ಈ ವಿಧಾನವನ್ನು ಪ್ರಾರಂಭದಿಂದಲೇ ರೂಢಿಸಿಕೊಂಡರೆ ಇದು ಬಹು ಪರಿಣಾಮಕಾರಿ ವಿಧಾನ. ಅವಮಾನ ಅಪರಾಧವಲ್ಲ ಅವಮಾನವನ್ನು ಅಪರಾಧವೆಂದು ಎಂದೂ ತಿಳಿಯಬಾರದು. ಅಪರಾಧವು ನಾವು ಅವಮಾನಕ್ಕೆ ಪ್ರತಿಕ್ರಿಯಿಸುವುದರಲ್ಲಿದೆ. ನಮ್ಮ ಪ್ರತಿಕ್ರಿಯೆಗಳು ನಮ್ಮ ಹತೋಟಿಯಲ್ಲಿರುತ್ತವೆ. ಒಬ್ಬ ಗಮಾರನನ್ನು ಗಮಾರನೆಂದು ನಿರೀಕ್ಷಿಸುವುದು ಅಸಮಂಜಸವಾಗಿದೆ. ಅವನ ಕೆಟ್ಟ ನಡುವಳಿಕೆಯಿಂದ ನಮ್ಮನ್ನು ಅಪರಾಧಿಗಳೆಂದುಕೊಂಡರೆ ನಮ್ಮನ್ನು ನಾವು ದೂಷಿಸಿಕೊಳ್ಳಬೇಕಾಗುತ್ತದೆ. ಆಯ್ಕೆ ಆದ್ಯತೆಗಳೂ ಕಾರಣವಾಗುತ್ತವೆ. ಅದಕ್ಕಾಗಿಯೇ ಸುತ್ತಲಿನ ಲೋಕ ಚಾಲ್ತಿ ಪಡೆಯುತ್ತದೆ. ಮೇಲ್ನೋಟದಲ್ಲಿ ಅವಮಾನವೆನಿಸುವುದು ಅವಮಾನಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದು ನಮ್ಮೊಳಗಿನ ಚೇತನವನ್ನು ಬಡಿದೆಬ್ಬಿಸುವ ದೊಡ್ಡ ಕೆಲಸವನ್ನು ಮಾಡುವ ಮಾಯಾ ಶಕ್ತಿಯನ್ನು  ಹೊಂದಿರುತ್ತದೆ ಎಂಬುದನ್ನು ತಿಳಿದು ನಮ್ಮ ಶಕ್ತಿ ದೌರ್ಬಲ್ಯವನ್ನು ಅಳೆದು ತೂಗಿ ನೋಡಿ ಸಾಧಿಸಬೇಕಾದ ಗುರಿಗೆ ಗುರಿ ಇಡಬೇಕು. ಅನುಮತಿಯಿಲ್ಲದೇ ಅವಮಾನವಿಲ್ಲ ‘ನಿನ್ನ ಅನುಮತಿ ಇರಲಾರದೇ ನಿನ್ನನ್ನು ಯಾರೂ ಅವಮಾನಿಸಲಾರರು.’ ಎಂಬುದು ಅನುಭವಿಕರ ನುಡಿ. ಅವಮಾನದ ಭೀತಿ ಇರುವವರೆಗೂ ಅವಮಾನಗಳು ನಮ್ಮನ್ನು ಸುತ್ತುವರೆಯುತ್ತವೆ. ಅವಮಾನದ ಭೀತಿ ತೊರೆದ ಮೇಲೆ ನಮ್ಮನ್ನು ಬಿಟ್ಟು ತೊಲಗುತ್ತವೆ. ಅವಮಾನಕ್ಕೆ ಪ್ರತಿಕ್ರಿಯಿಸಿ ಮತ್ತೆ ಅವಮಾನಿಸಿಕೊಳ್ಳುವುದು ಮೂರ್ಖತನವೇ ಸರಿ.ಅವಮಾನಕ್ಕೆ ಪ್ರತಿಯಾಗಿ ಅಸಂಬದ್ಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಕುಳಿತರೆ ನಡೆಯುವ ದಾರಿ ತಪ್ಪಿ ಹೋಗುತ್ತದೆ. ಅವಮಾನ ಎದುರಿಸುವಾಗ ಎಚ್ಚರದಿಂದಿರು. ಅವಮಾನವೆಂಬ ಹೆಸರಿನಲ್ಲಿ ಜೀವನದ ಖಾತೆಗೆ  ನಷ್ಟ. ಜನರ ದೃಷ್ಟಿಯಲ್ಲಿ ಅವಮಾನ ಸಣ್ಣದಿರಲಿ ದೊಡ್ಡದಿರಲಿ ನಮ್ಮ ಪಾಲಿಗಂತೂ ಅದು ದೊಡ್ಡ ಕಹಿಯೇ ‘ಅವಮಾನ ಹೆಚ್ಚಿದಷ್ಟು ಹೆಚ್ಚು ಲಾಭ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದರೆ ಮಾತ್ರ..’ ಕೊನೆ ಹನಿ ಗೆಲುವಿನೆಡೆಗೆ ಪಯಣ ಬೆಳೆಸುವಾಗ ಅವಮಾನ ಕಟ್ಟಿಟ್ಟ ಬುತ್ತಿ. ಇಲ್ಲಿ ಅವಮಾನ ಯಾರಿಗಿಲ್ಲ ಹೇಳಿ.ಲೋಕದಲ್ಲಿ ಹುಟ್ಟಿದ ಎಲ್ಲರೂ ಅವಮಾನ ಅನುಭವಿಸಿದವರೆ. ಹೆಜ್ಜೆ ಹೆಜ್ಜೆಗೂ ಕಾಡುವ ಅವಮಾನ ಗೆಲುವಿನ ಏಣಿ ಏರಿ ಯಶಸ್ಸಿನ ಶಿಖರವನ್ನು ಮುಟ್ಟಲು ಕಾರಣವಾಗತ್ತದೆ.ಸಣ್ಣ ಪುಟ್ಟ ಘಟನೆಗಳ ಅವಮಾನವೂ ಗಮನ ಸೆಳೆಯುತ್ತದೆ. ಒಮ್ಮೊಮ್ಮೆಯಂತೂ ನಿರುತ್ಸಾಹ ಮೂಡಿಸಿ ಹಿಂಡಿ ಹಿಪ್ಪಿ ಮಾಡಿ ಬಿಡುತ್ತದೆ. ಅವಮಾನಗಳಿಗೆ ಹೆದರುವ ಅಗತ್ಯವಿಲ್ಲ. ಅನಗತ್ಯ ಅವಮಾನವಾಗಿದ್ದರೆ ಅದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯತೆಯಿಲ್ಲ. ಎಲ್ಲರೂ ನಮ್ಮನ್ನು ಮೆಚ್ಚಿಕೊಂಡರೆ ನಾವು ಶುದ್ಧರಾಗುವುದಿಲ್ಲ. ಶುದ್ಧೀಕರಣ ಇತರರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಟೀಕಿಸಿದಾಗ ಉಂಟಾಗುತ್ತದೆ. ಅವಮಾನವೆಂಬ ದೌರ್ಬಲ್ಯವನ್ನು ಮೆಟ್ಟಿ ನಿಲ್ಲಬೇಕು. ಅವಮಾನದ ಸಂದರ್ಭದಲ್ಲಿ ಗೆಳೆಯರು ಬಂಧುಗಳು ಕೈ ಬಿಟ್ಟರೂ ಸಂಗಾತಿಯಾಗಿ ನಿಲ್ಲುವುದೇ ಆತ್ಮವಿಶ್ವಾಸ.ಅವಮಾನದ ಪ್ರತಿ ತಿರುವನ್ನು ಸವಾಲಾಗಿ ಸ್ವೀಕರಿಸಿದರೆ ಒಂದೊಂದು ಅವಮಾನದ ಪ್ರತಿ ತಿರುವೂ ನಿಮ್ಮ ಗೆಲುವಿನ ಮೈಲಿಗಲ್ಲುಗಳಾಗಿ ಜನರು ನಮ್ಮನ್ನು ಅಭಿಮಾನದಿಂದ ತಿರುಗಿ ನೋಡುವಂತೆ ಮಾಡುತ್ತವೆ.ಅವಮಾನಿಸಿದವರೇ ಸನ್ಮಾನಿಸುವಂತೆ ಬೆಳೆದು ತೋರಿಸುವುದೇ ಅವಮಾನಕ್ಕೆ ತಕ್ಕ ಉತ್ತರವಲ್ಲವೇ? ******** ಜಯಶ್ರೀ ಜೆ.ಅಬ್ಬಿಗೇರಿ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ ಜಯಶ್ರೀ.ಜೆ.ಅಬ್ಬಿಗೇರಿ ಮೊದಲೇ ಓದಿನ ಒತ್ತಡ. ಇದು ಸಾಲುವುದಿಲ್ಲ ಎಂಬಂತೆ ಬಹು ದಿನಗಳಿಂದ ಬೆನ್ನು ಬಿಡದಿರುವ ಕೆಲ ವೈಯುಕ್ತಿಕ ಸಮಸ್ಯೆಗಳು. ತಲೆ ತಿನ್ನುತ್ತಿವೆ. ಒಂದಿಷ್ಟು ಹೊತ್ತು ಎಲ್ಲೋ ಒಂದು ಕಡೆ ಹೋಗಿ ಮೌನವಾಗಿದ್ದು ಬರೋಣವೆಂದರೆ ನಿಮ್ಮ ಗೆಳೆಯ/ ಗೆಳತಿ ನಿಮಗೆ ಸಂಬಂಧವಿಲ್ಲದ ಯಾವುದೋ ವಿಷಯ ಹೇಳಿ ತಲೆ ತಿನ್ನುತ್ತಿದ್ದರೆ ಕೋಪ ನೆತ್ತಿಗೇರಿ ಬಿಡುತ್ತದೆ. ಖಂಡ ತುಂಡವಾಗಿ ಹೇಳಿ ಹೊರಗೆ ಅಟ್ಟಬೇಕೆನಿಸಿದರೂ ಹಾಗೆ ಮಾಡಲು ಸಾಧ್ಯವಿಲ್ಲವೆಂದು ಹೇಗೋ ಸಹಿಸಿಕೊಳ್ಳುತ್ತೀರಿ. ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗ್ತಿದೀನಿ ಯಾವುದು ಕ್ಲಿಕ್ ಆಗುತ್ತೋ ಗೊತ್ತಿಲ್ಲ. ತರಾತುರಿಯಲ್ಲಿ ಓದಿ ಮುಗಿಸಬೇಕು ಎಂದುಕೊಳ್ಳುತ್ತಿರುವಾಗ ಪಕ್ಕದ ಮನೆಯ ಟಿವಿ ವ್ಯಾಲ್ಯೂಮ್ ಕಿವಿಗಡಚಿಕ್ಕುವಂತೆನಿಸಿ ಅಸಾಧ್ಯ ಸಿಟ್ಟು ಉಕ್ಕಿ ಬರುತ್ತದೆ. ನೆರೆಯ ಹುಡುಗರು ತಮ್ಮ ಪರೀಕ್ಷೆಗಳು ಮುಗಿದಿವೆ ಎಂಬ ಖುಷಿಯಲ್ಲಿ ಮನೆಯ ಮುಂದೆ ಜೋರಾಗಿ ಕಿರುಚುತ್ತ ಆಡುತ್ತಿವೆ. ಹೇಗೆ ಇವರಿಗೆಲ್ಲ ಬುದ್ಧಿ ಹೇಳಿ ನಾನು ಏಕಾಗ್ರತೆಯಿಂದ ಓದುವುದು? ಹೇಗೆ ?ಅದರಲ್ಲೂ ಇಷ್ಟು ದಿನ ಮನೆಯಲ್ಲಿ ಸ್ವಂತ ಕೋಣೆಯಲ್ಲಿ ಓದಿ ರೂಢಿಯಿದ್ದವರು ಹಾಸ್ಟೆಲ್‌ಗೆ ಪಿಜಿಗಳಿಗೆ ಸೇರ್ಪಡೆಯಾದರೆ ಮುಗಿದೇ ಹೋಯ್ತು. ನಮ್ಮ ಗೋಳು ಕೇಳುವವರಾರೂ ಇಲ್ಲ ಎಂದೆನಿಸಿಬಿಡುತ್ತದೆ. ಅತಿ ಹೆಚ್ಚು ಅಂಕ ಗಳಿಸಿದವರು ಇಂಥ ಹೊಂದಾಣಿಕೆಯ ತೊಂದರೆಗಳಿಂದ ಓದಿನಲ್ಲಿ ಹಿಂದೆ ಬೀಳುವ ಪ್ರಸಂಗಗಳು ಇಲ್ಲದಿಲ್ಲ. ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ತೂರಿ ಬರುವ ಗಾಳಿ ನಿಮಗೆ ಆಗಿ ಬರುವುದಿಲ್ಲ. ಮುಂದೆ ಕುಳಿತ ನಿಮ್ಮ ಗೆಳೆಯ ಮುದ್ದಾಂ ಕಿಟಕಿ ತೆರೆದಿಡುತ್ತಾನೆ. ಸಿನಿಮಾ ಥೇಟರ್‌ನಲ್ಲಿ ನಿಮ್ಮ ಮುಂದೆ ಕುಳಿತ ವ್ಯಕ್ತಿಯ ತಲೆ ಅಡ್ಡ ಬರುತ್ತಿದೆ. ನಿಮ್ಮ ಪಕ್ಕಕ್ಕೆ ನಿಂತು ಬೀಡಿ ಸಿಗರೇಟ್ ಸೇದುವವರನ್ನು, ರೈಲ್ವೇ ಪಯಣದಲ್ಲಿ ನಿಮಗೆ ತಲೆ ಸುತ್ತು ತರಿಸುವ ಗುಟಕಾ ವಾಸನೆ, ಪಾನ್ ಜಗಿದು ಉಗಿಯುವರನ್ನು, ಮಲಗುವ ಸಮಯವಾದರೂ ಏರು ದನಿಯಲ್ಲಿ ಮಾತನಾಡುವವರನ್ನು ಕಂಡಾಗ ಮೈ ಉರಿಯುತ್ತದೆ. ಇಂಥ ತೊಂದರೆಗಳ ಸಾಲು ಸಾಲು ಪಟ್ಟಿಯನ್ನು ಮಾಡಬಹುದು.ನೋಡೋಕೆ ಕೇಳೋಕೆ ಇವೆಲ್ಲ ತೀರ ಸಣ್ಣ ಪುಟ್ಟ ತೊಂದರೆಗಳೆನಿಸಿದರೂ ಇವು ಹೆಚ್ಚು ಸಮಯ ಮುಂದುವರೆದರೆ ಆಗುವ ತೊಂದರೆ ಮತ್ತು ಹಾನಿ ಅಷ್ಟಿಷ್ಟಲ್ಲ. ಬಹುತೇಕ ಳಷ್ಟು ಸಲ ಈ ತೊಂದರೆಗಳನ್ನು ಬಾಯಿ ಮುಚ್ಚಿ ಸಹಿಸಿಕೊಂಡು ಬಿಡುತ್ತೀರಿ.ನೀವು ಹೀಗೆ ಈ ತೊಂದರೆಗಳನ್ನು ಸಹಿಸುವ ಅಗತ್ಯವೇ ಇಲ್ಲ. ತೊಂದರೆ ಕೊಡುವವರು ತಮ್ಮ ಚಾಳಿಯನ್ನು ರಾಜಾರೋಷವಾಗಿ ಮುಂದುವರೆಸಿಕೊಂಡು ಹೋಗುತ್ತಾರೆ. ಇಂಥ ತೊಂದರೆಗಳಿಂದ ಬಚಾವಾಗುವುದು ಹೇಗೆ ಅಂತ ಅನಿಸ್ತಿದೆಯಲ್ಲವೇ? ಹಾಗಾದರೆ ಮುಂದಕ್ಕೆ ಓದಿ. ಭಯ ಬಿಡಿ ತೊಂದರೆ ಕೊಡುವವರಿಗೆ ಮುಕ್ತವಾಗಿ ನಿಮ್ಮಿಂದ ತೊಂದರೆ ಆಗ್ತಿದೆ ಎಂದು ಹೇಳೋದಕ್ಕೆ ತುಂಬಾ ಭಯ ಆಗುತ್ತಿದೆಯೇ? ನಿಮ್ಮ ಮೇಲೆ ನಡೆದು ಹೋಗಲು ಜನಗಳಿಗೆ ಬೇಕಾಗಿಲ್ಲ. ನೀವು ಮಲಗಲು ಇಚ್ಛಿಸುವವರೆಗೆ ತೊಂದರೆ ಕೊಡಲು ದಾರಿ ಮಾಡಿ ಕೊಡಬೇಡಿ. ರಾಮಕೃಷ್ಣ ಪರಮಹಂಸರು ಹೇಳಿದಂತೆ ಮನವೆಂಬ ಆನೆಗೆ ಬುದ್ಧಿಯೇ ಅಂಕುಶ. ಬುದ್ಧಿಯನ್ನು ಬಳಸಿ ನಯವಾಗಿ ಮತ್ತು ನೇರವಾಗಿ ಮೆಲುದನಿಯಲ್ಲಿ ಹೇಳಿ. ನಿಮ್ಮ ಸೌಜನ್ಯಪೂರಿತ ನಡೆಗೆ ಪ್ರತಿಯಾಗಿ ತೊಂದರೆಯ ಕಿರಕಿರಿ ನಿಲ್ಲುವುದು. ದಯವಿಟ್ಟು, ಸ್ವಲ್ಪ, ಅನ್ನುವ ಶಬ್ದಗಳನ್ನು ಬಳಸಿ. ಇವು ಖಂಡಿತ ಪರಿಣಾಮ ಬೀರುವವು. ಮುಂದಿನ ವ್ಯಕ್ತಿ ಅಪರಿಚಿತನಾಗಿದ್ದರೆ ಹೀಗೆ ಹೇಳುವಾಗ ತುಟಿಯ ಮೇಲೆ ಸ್ನೇಹಪೂರ್ವಕವಾದ ನಗೆಯಿದ್ದರೆ ಉತ್ತಮ. ಮಾತುಗಾರಿಕೆ ಎಂಥ ಸಮಸ್ಯೆಯನ್ನೂ ಬಗೆಹರಿಸಬಲ್ಲದು. ಆದ್ದರಿಂದ ಸಂವಹನ ಕೌಶಲ್ಯವನ್ನು ನಿಮ್ಮದಾಗಿಸಿಕೊಳ್ಳಲು ನಿರಂತರ ಪ್ರಯತ್ನಿಸಿ. ಇತರರಿಗೆ ಕಾಯಬೇಡಿ ನಿಮಗಾಗುತ್ತಿರುವ ತೊಂದರೆಯನ್ನು ಯಾರೋ ಬಂದು ಬಗೆಹರಿಸುತ್ತಾರೆ ಅಂತ ಕಾಯುತ್ತ ಕುಳಿತುಕೊಳ್ಳಬೇಡಿ. ಗಾಂಧೀಜಿಯವರು ಹೇಳಿದಂತೆ ಸ್ವ ಸಹಾಯವೇ ಅತ್ಯುತ್ತಮ ಸಹಾಯ. ಹಲವು ಬಾರಿ ನಿಮಗೆ ತೊಂದರೆ ಆಗುತ್ತಿದೆ ಅಂತ ಮುಂದಿನವರಿಗೆ ಗೊತ್ತಿಲ್ಲದೇನೂ ಇರಬಹುದು. ನೀವೇ ಸ್ವತಃ ಮುಂದುವರೆದು ತೊಂದರೆ ನಿಲ್ಲಿಸಲು ಹೇಳಿ. ಹೀಗೆ ಹೇಳಿಕೊಳ್ಳುವುದರಿಂದ ಅವರು ತಿದ್ದಿಕೊಳ್ಳುತ್ತಾರೆ. ನಮ್ಮ ಅತ್ಯಂತ ಕಷ್ಟ ಅನುಭವಗಳಿಂದ ನಾವು ಸಾಕಷ್ಟು ಕಲಿಯುತ್ತೇವೆ ಎನ್ನುವುದು ಸತ್ಯ ಹಾಗಂತ ಇಂಥ ಕಿರಿಕಿರಿಗಳನ್ನು ಸಹಿಸುವುದು ತರವಲ್ಲ. ನೀವು ಹೊಂದಿರುವ ಜ್ಞಾನ ಮತ್ತು ಅನುಭವಗಳನ್ನು ಉಪಯೋಗಿಸಿಕೊಳ್ಳಿ. ಕೆಲವೊಮ್ಮೆ ನೀವು ತಾಳ್ಮೆಯಿಂದ ಹೇಳಿದರೂ ಆ ಕಡೆಯಿಂದ ಒರಟಾದ ಮಾತಿನ ಪ್ರತಿಕ್ರಿಯೆ ಬರಬಹುದು.ತಾಳ್ಮೆಯು ಸಂತೋಷದ ಬೀಗದ ಕೈ.ಆತುರವು ಸಂಕಟದ ಬೀಗದ ಕೈ. ಎಂಬುದನ್ನು ಮನದಟ್ಟು ಮಾಡಿಕೊಳ್ಳಿ..ನೀವು ತಾಳ್ಮೆ ಕಳೆದುಕೊಂಡು ವರ್ತಿಸಿದರೆ ಜಗಳ ತಪ್ಪಿದ್ದಲ್ಲ.ಎಚ್ಚರಿಕೆ ವಹಿಸಿ. ಬೇಡ ಹೊಂದಾಣಿಕೆ. ಹೊಂದಾಣಿಕೆಯೇ ಜಾಣತನ ಅಂತಾರೆ ಅಂಥದ್ದರಲ್ಲಿ ಹೊಂದಾಣಿಕೆ ಬೇಡ ಅಂದರೆ ಹೇಗೆ? ಅಂತಿದ್ದೀರಾ! ನಿಮ್ಮ ಏಳ್ಗೆಗೆ ಅಡೆತಡೆಯಾಗುವ ಗೆಳೆಯ/ತಿಯರ ನಡುವಳಿಕೆಗಳ ಜೊತೆಗೆ ಹೊಂದಾಣಿಕೆ ಬೇಡವೇ ಬೇಡ. ನೀವು ಮುಖ್ಯವಾದ ಕೆಲಸದಲ್ಲಿರುವಾಗ ನಿಮ್ಮನ್ನು ತಮ್ಮ ಅಮುಖ್ಯ ಕೆಲಸಕ್ಕೆ ಹಾಜರಾಗುವಂತೆ ಒತ್ತಾಯಿಸುವವರ ಜೊತೆಗೆ ರಾಜಿಯಾಗಿ ನಿಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತೊಂದರೆಯನ್ನು ಸಹಿಸಿಕೊಳ್ಳಬೇಡಿ. ನಿಮ್ಮ ಬುದ್ಧಿಯೇ ನಿಮಗೆ ಗುರು ಎಂಬ ವಿಲಿಯಮ್ ಷೇಕ್ಸ್ ಪಿಯರ್ ನ ಸೊಗಸಾದ ನುಡಿಯಂತೆ ಚಾಣಾಕ್ಷತನದಿಂದ ಸ್ನೇಹಿತರಿಗೆ ತಿಳಿ ಹೇಳಿ.ಅವರಿಂದ ನಿಮಗೆ ತೊಂದರೆಯಾಗುತ್ತಿದೆ ಎಂದು ಅರ್ಥೈಸಿಕೊಳ್ಳುವಂತೆ ಹೇಳಿ. ನಿಮ್ಮ ಬುದ್ಧಿಮಾತು ಅವರು ತಪ್ಪು ತಿದ್ದಿಕೊಳ್ಳುವಂತಿರಬೇಕು. ಮುಖಕ್ಕೆ ಹೊಡೆದಂತೆ ಹೇಳಿ ಮುಖ ಕಟ್ಟಿಕೊಳ್ಳಬೇಡಿ. ನಿಂದಿಸಿ ನುಡಿಯದಿರಿ ನಿಮಗೆ ತೀರಾ ಆಪ್ತರಾದವರು ನೆಂಟರಿಷ್ಟರು ತಮಗೆ ಗೊತ್ತಿಲ್ಲದಂತೆ ತೊಂದರೆ ಕೊಡುವವರ ಪಟ್ಟಿಯಲ್ಲಿರಬಹುದು. ಅಂಥವರಿಗೆ ಎಲ್ಲರೆದುರು ನೀವು ಹೀಗೆ ನಡೆದುಕೊಳ್ಳುತ್ತಿರುವುದು ನನಗೆ ತುಂಬಾ ಕಿರಿಕಿರಿ ಆಗುತ್ತಿದೆ. ನನಗೆ ಸತಾಯಿಸಬೇಡಿ ಅಂತ ಜೋರಾಗಿ ಹೇಳಬೇಡಿ. ನಿಂದಿಸಿ ನುಡಿಯದಿರಿ ಯಾರನು. ನಿಂದನೆ ಮುಜುಗರಕ್ಕೆ ಎಡೆಮಾಡಿಕೊಡುವುದಲ್ಲದೇ ಮನಸ್ಸನ್ನು ಒಡೆಯುತ್ತದೆ. ಇದು ಶಾಶ್ವತವಾಗಿ ಸಂಬಂಧವನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಬಹುದು. ಆದ್ದರಿಂದ ನೀವಿಬ್ಬರೇ ಇದ್ದಾಗ ಅವರ ಯಾವ ನಡುವಳಿಕೆ ನಿಮಗೆ ತೊಂದರೆ ಆಗುತ್ತಿದೆಯೋ ಸ್ಪಷ್ಟವಾಗಿ ಹೇಳಿಬಿಡಿ. ಇರಲಿ ಕೊಂಚ ಹೊಂದಾಣಿಕೆ ಬಿಜಿ ದಿನಚರಿಯ ಜೀವನದಲ್ಲಿ ಇಂಥ ತೊಂದರೆಗಳ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ನೆಮ್ಮದಿ ಹಾಳಾಗುತ್ತದೆ. ಕೆಲಸದ ನಡುವೆ ಇವು ಅಡ್ಡ ಗೋಡೆಗಳಾಗಿ ದೊಡ್ಡ ಕಂದಕಗಳಾಗಿ ನಿಂತು ಬಿಡುವ ಸಾಧ್ಯತೆಗಳೂ ಇಲ್ಲದಿಲ್ಲ.ಕೆಲ ಸಲ ತೊಂದರೆಯಾಗುತ್ತಿದೆ ಅಂತ ಹೇಳಿದರೂ ಕಷ್ಟ ಹೇಳದಿದ್ದರೂ ಕಷ್ಟ ಅನ್ನುವ ಸಂದಿಗ್ಧ ಪರಿಸ್ಥಿತಿ ಬರುತ್ತದೆ. ಹೊಂದಾಣಿಕೆ ಮಾಡಿಕೊಳ್ಳುವ ವಿಷಯದಲ್ಲೂ ಕ್ಯಾತೆ ತೆಗೆಯಲು ನೋಡಬೇಡಿ. ಹೊಂದಾಣಿಕೆಯೇ ಜೀವನ ಎಂದಿದ್ದಾರೆ ಬಲ್ಲವರು. ಹೊಂದಾಣಿಕೆಯ ಕೊರತೆ ಸಹಜವಾದರೂ ಅದು ಕೆಲವು ಸಲ ದೊಡ್ಡ ಬಿರುಕು ಮೂಡಿಸುತ್ತದೆ. ‘ಇಡೀ ಜಗತ್ತು ಹೊಂದಾಣಿಕೆಯ ಸುತ್ತ ಗಿರಕಿ ಹೊಡಿಯುತ್ತದೆ’ ಎಂದು ಪ್ರಾಜ್ಞವಾಗಿ ಹೇಳಿದ್ದಾನೆ ಫ್ರೆಂಚ್ ಕವಿ ಚಾಲ್ಸ್ ð ಬೋದಿಲೇರ್ಮಾನವ ನೆಮ್ಮದಿ ಬಯಸುವ ಜೀವಿ. ಸ್ನೇಹ ಜೀವಿ ಕೂಡ.. ಸಂಬಂಧಗಳ ಬಲೆಯಲ್ಲಿ ತೀವ್ರ ವಿಶ್ವಾಸವಿಟ್ಟುಕೊಂಡವನು. ನನಗೆ ತೊಂದರೆ ಕೊಡುತ್ತಿದ್ದೀರಿ ಎಂದು ಭಾವುಕರಾಗಿ ಕಿರುಚದೇ ಸಹಜವಾಗಿ ತೊಂದರೆ ಕೊಡಬೇಡಿ ಅಂತ ಹೇಳಿಬಿಡಿ.ತೊಂದರೆಗಳ ಲೋಕದ ಚಿಂತೆಯನ್ನು ದೂರ ಸರಿಸಿ ಉತ್ತಮ ಭವಿಷ್ಯಕ್ಕಾಗಿ ಶಾಂತಿಯಿಂದ ವರ್ತಮಾನದಲ್ಲಿ ಜೀವಿಸೋಣ. ಬದುಕನ್ನು ಬದಲಿಸಿಕೊಳ್ಳೋಣ ಅಲ್ಲವೇ? **************

ದಿಕ್ಸೂಚಿ Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ ಜಯಶ್ರೀ ಅಬ್ಬಿಗೇರಿ ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ ತಾಳಿ ಜೀವ ತಿನ್ನುತ್ತವೆ. ಬದುಕು ಬದಲಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಅದೃಷ್ಟ ಹಳಿಯುವುದನ್ನು ಬಿಟ್ಟು ನಾನೇಕೆ ಸೋಲುತ್ತಿದ್ದೇನೆ? ಎಲ್ಲಿ ಎಡುವುತ್ತಿದ್ದೇನೆ ಎಂದು ಕೊಂಚ ಆತ್ಮಾವಲೋಕನ ಮಾಡಿಕೊಂಡರೂ ಸರಿ, ನಮ್ಮ ತಪ್ಪುಗಳು ನಮ್ಮ ಕಣ್ಣಿಗೆ ರಾಚದೇ ಇರವು. ಸೋಲೊಪ್ಪಿಕೊಳ್ಳುವ ಮುನ್ನ ಈ ಸಂಗತಿಗಳತ್ತ ಗಮನ ಹರಿಸಿ. ಕೊಂಚ ಪ್ರಶ್ನಿಸಿಕೊಳ್ಳಿ . ನಿಮ್ಮ ಇಷ್ಟವೇ ಗುರಿ ಆಗಿದೆಯೇ? ನೀವಿಟ್ಟುಕೊಂಡ ಗುರಿ ನಿಮಗೆ ಇಷ್ಟವಾಗಿದೆಯೇ? ನಮ್ಮ ಮನೆಯಲ್ಲಿ ಎಲ್ಲರೂ ಇಂಜಿನೀಯರ್ ಆಗಿದಾರೆ. ನಾನು ಬೇರೆ ಕ್ಷೇತ್ರದಲ್ಲಿ ಮಿಂಚುವ ಅವಕಾಶ ಕಮ್ಮಿ . ನನಗೆ ಸಾಮರ್ಥ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಟೀಚರ್ ಆಗೋಕೆ ಇಷ್ಟ. ಆದರೆ ಅಪ್ಪನ ಆಸೆ ಈಡೇರಿಸೋಕೆ ಇಂಜನೀಯರಿಂಗ್ ಸೇರಿಕೊಂಡಿದಿನಿ. ನನ್ನ ಗೆಳತಿಯರು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದಾರೆ. ನನಗೆ ಲೆಕ್ಕಶಾಸ್ತ್ರ ಅಂದ್ರೆ ಪಂಚ ಪ್ರಾಣ. ಆದರೆ ಇಷ್ಟು ದಿನ ಕೂಡಿ ಕಲಿತ ಗೆಳತಿಯರ ಬಿಟ್ಟು ಹೊಸ ಪರಿಸರ ಹೊಸ ಸ್ನೇಹಿತರ ಜೊತೆ ಹೊಂದಿಕೊಳ್ಳುವುದು ಕಷ್ಟ ಹೀಗಾಗಿ ನಾನೂ ಇದನ್ನೇ ಮಾಡುವೆ ಎಂದು ನಿಮಗಿಷ್ಟವಿಲ್ಲದ ಓದಿಗೆ ಸೇರಿಕೊಳ್ಳುವುದು ಎಷ್ಟು ಸರಿ. ಯಾರಿಗಾಗಿಯೋ ನಿಮ್ಮ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡುವುದು ಸರಿಯಲ್ಲ. ಅಲ್ಲದೇ ನೀವು ಆಯ್ಕೆ ಮಾಡಿಕೊಂಡಿರುವ ದಾರಿ ನಿಮ್ಮ ಇಷ್ಟದ ದಾರಿ ಅಲ್ಲವೇ ಅಲ್ಲ ಎಂದಾಗ ಮುನ್ನಡೆಯುವುದಾದರೂ ಹೇಗೆ? ನಿಮ್ಮ ಶಕ್ತಿ ಸಾಮರ‍್ಥ್ಯ ಯಾವುದಿದೆಯೋ ನಿಮ್ಮ ಮನಸ್ಸು ಯಾವುದಕ್ಕೆ ಬಲವಾಗಿ ಮಿಡಿಯುತ್ತಿದೆಯೋ ಅದನ್ನೇ ಗುರಿಯಾಗಿಸಿಕೊಳ್ಳಿ. ಇಚ್ಛಾ ಶಕ್ತಿ ಬಲಪಡಿಸಿಕೊಳ್ಳಿ. ‘ಇಚ್ಛಾ ಶಕ್ತಿ ಎಲ್ಲಕ್ಕಿಂತ ಬಲಶಾಲಿಯಾದದ್ದು. ಅದರ ಮುಂದೆ ಎಲ್ಲವೂ ನಡು ಬಗ್ಗಿಸಬೇಕು.’ ಎಂಬ ಪ್ರೇರಣಾತ್ಮಕ ನುಡಿ ಸ್ವಾಮಿ ವಿವೇಕಾನಂದರದು. ಅದು ಸಾರ‍್ವಕಾಲಿಕ ಸತ್ಯವೂ ಕೂಡ. ಯೋಜನೆಗಳನ್ನು ಹಾಕಿಕೊಂಡಿದ್ದೀರಾ? ನಿರ್ದಿಷ್ಟ ಗುರಿ ನಿರ್ಧರಿಸಿಯಾದ ಮೇಲೆ, ಗುರಿ ಸಾಧಿಸಲು ಯೋಜನೆಗಳನ್ನು ಹಾಕಿಕೊಳ್ಳಿ. ಯೋಜನೆ ಎನ್ನುವುದು ಮಾನಸಿಕ ದೃಶ್ಯ. ನಾನು ನನ್ನ ಗುರಿಯ ಬಗ್ಗೆ ಸದಾ ಯೋಚಿಸುತ್ತಲೇ ಇರುತ್ತೇನೆ ಆದರೆ ಅದನ್ನು ಇನ್ನೂ ತಲುಪಲಾಗುತ್ತಿಲ್ಲ ಎಂದು ಹಳ ಹಳಿಸಿದರೆ ಪ್ರಯೋಜನವಿಲ್ಲ. ನೀವು ಸದಾ ಯಾವುದರ ಬಗ್ಗೆ ಆಲೋಚಿಸುತ್ತಿದ್ದೀರೋ ಅದೇ ಆಗುವ ಸಂಭವನೀಯತೆ ಹೆಚ್ಚಿದೆ. ಅಂದುಕೊಂಡದ್ದನ್ನು ಸಾಧಿಸಲು ಒಂದು ದಾರಿ ಬೇಕಲ್ಲ ಅದುವೇ ಯೋಜನೆ. ಯೋಜನೆ ಇರದಿದ್ದರೆ ಗಾಳಿ ಬೀಸಿದ ಕಡೆ ಗಂಧ ತೇಲುವಂತೆ ನಿಮ್ಮ ಗುರಿಯ ಪಯಣವೂ ಎಲ್ಲೆಲ್ಲೋ ದಾರಿ ತಪ್ಪಿ ಬಿಡುತ್ತದೆ ಅಲನ್ ಲಕೀನ್ ಹೇಳಿದಂತೆ,’ಯೋಜಿಸಲು ವಿಫಲರಾದರೆ, ವಿಫಲರಾಗಲು ಯೋಜಿಸಿದಂತೆ.’ ಆದ್ದರಿಂದ ದಿನಕ್ಕಿಷ್ಟು ತಿಂಗಳಿಗಿಷ್ಟು ವರ‍್ಷಕ್ಕಿಷ್ಟು ಸಾಧಿಸ್ತೀನಿ ಎಂದು ಯೋಜನೆ ಹಾಕಿಕೊಂಡು ಅದರಂತೆ ಜಾರಿಗೊಳಿಸಬೇಕು. ಫಲ ಸಿಗುವವರೆಗೆ ತಾಳ್ಮೆ ಇದೆಯಾ? ಗೆಲುವಿಗಾಗಿ ಕೆಲಸ ಮಾಡುವುದೆನೋ ಸರಿ. ಆದರೆ ಅದಕ್ಕಾಗಿ ಅದೆಷ್ಟು ದಿನ ಇನ್ನೂ ಕಾಯಬೇಕು.? ಕಾಯುವುದಕ್ಕೆ ಒಂದು ಮಿತಿ ಇಲ್ಲವೇ? ಎಂದು ಬೇಸರಿಸಿಕೊಳ್ಳದಿರಿ. ಗೆಲುವು ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ವರ‍್ಷಗಳವರೆಗೆ ತಪಸ್ಸನ್ನಾಚರಿಸಿದಂತೆ. ಧಿಡೀರ್ ಗೆಲುವು ಕಾಣಿಸಿಕೊಳ್ಳಲು ಅದೇನು ನಮ್ಮ ಕೈಯಲ್ಲಿ ಗೆಲುವಿನ ಮಂತ್ರದಂಡ ಇದೆಯೇ? ಕೊನೆ ಕ್ಷಣದಲ್ಲಿ ಸಹನೆ ಕಳೆದುಕೊಳ್ಳುವುದು ಸೋಲಿಗೆ ಕಾರಣವಾಗುತ್ತದೆ. ಅದಕ್ಕೆ ತಾಳ್ಮೆಗೆ ಬೇಲಿ ಹಾಕದೇ ಪ್ರಯತ್ನಿಸಿ. ಕವಿ ರುಡ್ಯಾರ್ಡ್ ಕಿಪ್ಲಿಂಗ್ ರ ಅನುಭವೋಕ್ತಿಯಲ್ಲಿ,’ ಮರೆಯಲಾರದ ನಿಮಿಷವನ್ನು ಅರವತ್ತು ಸೆಕೆಂಡುಗಳ ಬೆಲೆಯ ಓಟದ ದೂರದೊಂದಿಗೆ ತುಂಬಿದರೆ ಭೂಮಿಯೂ ನಿಮ್ಮದಾಗುತ್ತದೆ. ಮತ್ತು ಅದರೊಳಗಿರುವ ಎಲ್ಲವೂ ಸಹ.’ ಕಾರ‍್ಯಕ್ಷಮತೆ ಕೊನೆಯವರೆಗೂ ಇರಲಿದೆಯೇ? ಗುರಿ ನಿರ‍್ಧರಿಸಿ, ಯೋಜನೆಗಳನ್ನು ಸಿದ್ದ ಪಡಿಸಿದ ನಂತರ ಅತ್ಯುತ್ಸಾಹದಿಂದ ಆತ್ಮವಿಶ್ವಾಸವನ್ನಿಟ್ಟುಕೊಂಡು ಬಹಳ ದಿನಗಳವರೆಗೆ ತೊಡಗಿಸಿಕೊಂಡು, ಆಮೇಲೆ ಇದ್ಯಾಕೋ ಸರಿ ಹೋಗುತ್ತಿಲ್ಲವೆಂದು ಇಟ್ಟ ದಿಟ್ಟ ಹೆಜ್ಜೆಯನ್ನು ಮುಂದುವರೆಸಲು ಅನುಮಾನ ವ್ಯಕ್ತ ಪಡಿಸದಿರಿ. ಏಕೆಂದರೆ ಇನ್ನೇನು ಗೆಲ್ಲುವುದಕ್ಕೆ ಕೆಲವೇ ಹೆಜ್ಜೆಗಳಿರುತ್ತವೆ. ಅಂಥ ಸಮಯದಲ್ಲಿ ಹಿಂದಡಿ ಇಟ್ಟರೆ ಗೆಲುವು ಮರೀಚಿಕೆಯಾಗುವುದು ಖಚಿತ. ಒತ್ತಡದ ಒಂದು ಕ್ಷಣದಲ್ಲಿ ಶಾಂತತೆಯನ್ನು ಕಾಯ್ದಿರಿಸಿಕೊಂಡರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಕಾರಾತ್ಮಕ ಪ್ರೇರಣಾತ್ಮಕ ಅಂಶಗಳತ್ತ ಮಾತ್ರ ಗಮನ ಹರಿಸಿದರೆ ದಣಿವಿನ ಸಮಯದಲ್ಲೂ ಪುಟಿದೇಳುವ ಉತ್ಸಾಹವನ್ನು ಪಡೆಯುತ್ತೀರಿ. ಮಾಂಟ್ವೇನ್ ಹೇಳಿದರು.’ ಮನುಷ್ಯರ ಶ್ರೇಷ್ಠ ಮತ್ತು ಭವ್ಯ ಕಲೆಯೆಂದರೆ ಅಂದುಕೊಂಡದ್ದಕ್ಕೆ ತಕ್ಕಂತೆ ಬದುಕುವುದು.’ ಅಂದುಕೊಂಡಂತೆ ಗುರಿ ಸಾಧನೆಗೆ ಕಾರ‍್ಯಕ್ಷಮತೆ ಪ್ರಮಾಣ ಕುಗ್ಗದಿರಲಿ. ಪರರ ಮಾತಿಗೆ ಕಿವಿಗೊಡುತ್ತಿದ್ದಿರಾ? ಯಶಸ್ಸಿಗಾಗಿ ನೀವು ಪಡುವ ಶ್ರಮವನ್ನು ಕಂಡ ನಿಮ್ಮ ಆಪ್ತರು ಸ್ನೇಹಿತರು ಕುಟುಂಬ ಸದಸ್ಯರು ನಾವೂ ನಿಮ್ಮ ಹಿತವನ್ನೇ ಬಯಸುತ್ತೇವೆ. ಗೆಲುವಿಗಾಗಿ ಪಡುತ್ತಿರುವ ಕಷ್ಟವನ್ನು ನಮ್ಮಿಂದ ನೋಡಲಾಗುತ್ತಿಲ್ಲ. ಇದರಲ್ಲಿ ನಿನಗೆ ಗೆಲವು ಗೋಚರಿಸುತ್ತಿಲ್ಲವೆಂದು ತಿಳಿ ಹೇಳಿ, ನೀವು ಹಿಡಿದ ದಾರಿ ಬದಲಿಸಲು ಸಲಹೆ ನೀಡುತ್ತಾರೆ. ಕೆಲವೊಮ್ಮೆ ಒತ್ತಾಯಿಸುತ್ತಾರೆ. ಇದೇ ಪ್ರಯತ್ನವನ್ನು ಬೇರೆಡೆಗೆ ಹಾಕಿದರೆ ಇಷ್ಟೊತ್ತಿಗಾಗಲೇ ಗೆಲುವಿನ ದಡ ತಲುಪಿರುತ್ತಿದ್ದಿ ಎಂಬ ಮಾತುಗಳನ್ನು ಕೇಳುತ್ತೀರಿ. ನಿಮ್ಮ ಹಿತೈಷಿಗಳು, ಹತ್ತಿರದವರೂ ಇದೇ ಮಾತನ್ನು ಆಡಬಹುದು. ಆಗ ನಿಮ್ಮ ಮನಸ್ಥಿತಿ ಬದಲಿಸದಿರಿ. ಗುರಿಯತ್ತ ಇಟ್ಟ ಹೆಜ್ಜೆ ಕದಲಿಸದಿರಿ. ಬದ್ಧತೆ ಸಡಿಲಿಸುತ್ತಿದ್ದೀರಾ? ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಅಪರೂಪದ ಸಾಧನೆಗೈದ, ಇತಿಹಾಸದ ಪುಟದಲ್ಲಿ ಮಿಂಚುತ್ತಿರುವ ಮಹಿಳೆಯೆಂದರೆ ಮೇಡಮ್ ಕ್ಯೂರಿ. ಪತಿಯನ್ನು ಕಳೆದುಕೊಂಡ ದುಃಖದ ನಂತರವೂ ಸಂಶೋಧನೆಯನ್ನು ಮುಂದುವರೆಸಿದರು.ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯಂ ಉಪಯೋಗಗಳನ್ನು ಪ್ರತಿಪಾದಿಸಿದ್ದಕ್ಕಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಇದು ಕ್ಯಾನ್ಸರ್ ರೋಗಿಗಳಿಗೆ ವರದಾನವಾಯಿತು. ಸ್ವಲ್ಪ ಯೋಚಿಸಿ, ಒಂದು ವೇಳೆ ಪತಿಯ ಮರಣದ ದುಃಖದಲ್ಲಿ ಸಂಶೋಧನೆಯ ಬಗೆಗೆ ಇರುವ ಬದ್ಧತೆಯನ್ನು ಬದಿಗೊತ್ತಿದ್ದರೆ ಆಕೆಯ ಸಂಶೋಧನೆಯ ಫಲ ಜನ ಸಮುದಾಯಕ್ಕೆ ಲಭಿಸುತ್ತಿತ್ತೇ? ಬದ್ಧತೆ ಇದ್ದರೆ ಯಾವ ನೋವು ಸಂಕಟಗಳೂ ನಮ್ಮನ್ನು ಬಾಧಿಸವು. ನಿಮ್ಮೊಂದಿಗಿದ್ದವರು ಈಗಾಗಲೇ ಗೆಲುವಿನ ದಡ ಸೇರಿದ್ದಾರೆ ಎಂಬ ಭಯದಲ್ಲಿ ನಿಮ್ಮ ಬದ್ಧತೆಯನ್ನು ಸಡಿಲಿಸಬೇಡಿ. ಅಡ್ಡ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದೀರಾ? ಗೆಲುವು ಸಾಧಿಸಲು ಯಾವುದೇ ಅಡ್ಡ ದಾರಿಗಳಿಲ್ಲ. ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳದೇ ಇದ್ದರೆ ಸೋಲಿಗೆ ಆಹಾರವಾಗಿಸುತ್ತದೆ. ಯಶಸ್ಸು ಧುತ್ತನೇ ದೊರೆಯಬೇಕೆಂದು ಅಡ್ಡದಾರಿಗಳ ಬೆನ್ನು ಹತ್ತದಿರಿ. ಎಲ್ಲರೆದರೂ ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ವಿಜಯ ಪಥ ಧೀರ್ಘವಾಗಿರುತ್ತದೆ. ಧೀರೂಬಾಯಿ ಅಂಬಾನಿಯವರು ಕಟ್ಟಿದ ೬೫ ಸಾವಿರ ಕೋಟಿ ರೂಪಾಯಿಯ ದೊಡ್ಡ ರಿಲಾಯನ್ಸ್ ಕಂಪನಿ ರಾತ್ರೋ ರಾತ್ರಿ ಎದ್ದು ನಿಂತಿಲ್ಲ. ಧೀರೂಬಾಯಿಯವರ ಹಲವಾರು ವರ್ಷಗಳ ಅವಿರತ ಶ್ರಮವೇ ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ನಿಲ್ಲಲು ಕಾರಣವಾಯಿತು. .ಹಾಲಿನಲ್ಲಿ ಕರಗಿಸಿದ ಸಕ್ಕರೆಯಂತೆ ಗೆಲುವಿಗೆ ಬೇಕಾದ ಅಂಶಗಳೆಲ್ಲವೂ ನಮ್ಮೊಳಗೇ ಇವೆ. ಅವುಗಳನ್ನು. ಸೋಲು ಒಪ್ಪಿಕೊಳ್ಳುವ ಮುನ್ನ ತಪ್ಪದೇ ಪಾಲಿಸಿದರೆ ಗೆಲುವಿನ ರುಚಿ ನೋಡಲು ಖಂಡಿತ ಸಾಧ್ಯ. *************** .

ದಿಕ್ಸೂಚಿ Read Post »

You cannot copy content of this page

Scroll to Top