ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮೂರನೇ ಆಯಾಮ

ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ         ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ ನನಗೆ ಒಂದೇ ಸಮನೆ ಯೋಚನೆ ಪ್ರಾರಂಭವಾಯಿತು. ಈ ಪ್ರಕಾಶಣ್ಣ ಎಲ್ಲಿಂದ ಪುಸ್ತಕ ಕಳಿಸ್ತಾರೆ? ಕ್ಯಾಲಿಪೋರ್ನಿಯಾದಿಂದ ಕಳಿಸಿದರೆ ನನಗೆ ಎಷ್ಟು ದಿನಕ್ಕೆ ಬಂದು ತಲುಪಬಹುದು? ಒಂದು ಕ್ಷಣ ಯೋಚನೆಯಾಯಿತಾದರೂ ನಂತರ ನಾನು ಯಾವಾಗಲೂ ಹೇಳಿಕೊಳ್ಳುವಂತೆ ‘ಮುಂದಿನ ಜನ್ಮದಲ್ಲಿ ಸಿಗಬಹುದು ಬಿಡು,’ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡೆ. ಆದರೆ ಈ ಮಾತುಕತೆ ನಡೆದು ನಾಲ್ಕನೇ ದಿನಕ್ಕೆ ನಾನು ಮನೆ ತಲುಪುವ ಹೊತ್ತಿಗೆ ಮನೆಯ ಮುಂದಿನ ಟಿಪಾಯಿಯ ಮೇಲೆ  ನನ್ನ ಖುಷಿ ಹೆಚ್ಚಿಸುವಂತೆ ಈ ಪುಸ್ತಕ ಕುಳಿತಿತ್ತು. ನನಗೆ ಅಚ್ಚಿರಿಯಾಗುವಂತೆ ನಾನು ಹೇಳಿದಂತೆ ಮುಂದಿನ ಜನ್ಮಕ್ಕೂ ಈ ಕಥೆಗೂ ತೀರಾ ಸಾಮ್ಯವಿದೆ.     ಇಡೀ ಕಥೆಯು ಅನಿವಾಸಿ ಭಾರತೀಯರ ಸುತ್ತ ಸುತ್ತುತ್ತ ಹೋಗುತ್ತದೆ. ಇಲ್ಲಿ ಕಥೆ ಹೇಳುವ ಪ್ರಥಮ ಪುರುಷ ಕಥೆಯನ್ನು ಕಥೆಯಾಗಿಸಲು ಒಂದು ವೇದಿಕೆ ಅಷ್ಟೆ. ಆದರೆ ಇಡೀ ಕಥೆ ನಮ್ಮನ್ನು ನಮ್ಮದೇ ಕಾಲಚಕ್ರದ ನಡುವಲ್ಲಿ ಕುಳ್ಳಿರಿಸಿ ಸುತ್ತುವಂತೆ ಮಾಡುತ್ತದೆ. ಯಾಕೆಂದರೆ ಘಟನೆ ನಡೆಯುವುದು ಅಮೇರಿಕಾದಲ್ಲೇ ಆದರೂ  ಕಾದಂಬರಿಕಾರರೇ ಒಂದು ಕಡೆ ಬಳಸಿರುವಂತೆ  ನಮ್ಮನ್ನು ಅರ್ಧ ಭೂಗೋಳ ಸುತ್ತಿಸಿ ಅಮೇರಿಕಾಕ್ಕೆ ಕರೆದೊಯ್ಯುವುದು ನಮ್ಮದೇ ಸುತ್ತಮುತ್ತಲಿನ ಪಾತ್ರಗಳು. ಕೇವಲ ಏಳೆಂಟು ಕಿ.ಮಿ ದೂರವಿರುವ ನಮ್ಮ ಪಾಲಿಗೆ ಪರಿಚಿತವೆಂದರೆ ಪರಿಚಿತವಲ್ಲದ, ಏನೂ ತಿಳಿಯದು ಎಂದು ಕೈ ಚೆಲ್ಲಿದರೂ ಯಾರೂ ನಂಬದ ಗೋಕರ್ಣದ ಪಿರ್ಕಿಬಾಬಾ ಎನ್ನುವವ ಹೇಳಿದ್ದ ಎನ್ನುವ ವಾಕ್ಯದಿಂದಲೇ ಪ್ರಾರಂಭವಾಗುತ್ತದೆ. ‘ಬದುಕಿದವರು ಸಾಯಲಾರರು, ಸಾಯುವವರು ಬದುಕಲಾರರು.’ ಎನ್ನುವ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕಾದಂಬರಿಯನ್ನು ತನ್ನೊಳಗೆ ನಿಗೂಢವಾಗಿ ಬಚ್ಚಿಟ್ಟುಕೊಂಡಿದೆಯೇನೋ ಎಂಬಂತೆ ತೋರುತ್ತದೆ. ಅಂಕೋಲಾದ ಬಸ್ ಸ್ಟಾಂಡಿನಲ್ಲಿ ಯಾವಾಗಲೂ ಒಬ್ಬ ಹುಚ್ಚ ಇರುತ್ತಿದ್ದ. ನಾಕಾಣಿ ಕೊಡಾ… ಎನ್ನುತ್ತ ಬೇಡಲು ಬರುವ ಅವನಿಗೆ ನೀವು ನೂರು ರೂಪಾಯಿ ನೀಡಿದರೂ ತಿರಸ್ಕರಿಸಿ ಬಿಡುತ್ತಿದ್ದ. ಆತ ಕೇಳುವುದು ಕೇವಲ ನಾಲ್ಕಾಣೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಅದು ಅವನಿಗೆ ಅಪಥ್ಯ. ಅದನ್ನು ನೋಡಿದಾಗಲೆಲ್ಲ ನಮಗೆ ತಮಾಷೆ. ನಾನು ಮತ್ತು ಗೆಳತಿ ರಾಜಶ್ರೀ ಹತ್ತು ರೂಪಾಯಿಯ ನೋಟು ಹಿಡಿದು, ‘ಹಿಡಿ ತಕ್ಕಾ. ಮಜಾ ಮಾಡ್…’ ಎನ್ನುತ್ತಿದ್ದರೆ ಆತ ಅದೇನೋ ವಿಷಸರ್ಪ ಎಂಬಂತೆ ಹತ್ತು ರೂಪಾಯಿಯ ನೋಟನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ನಮಗೋ ಹತ್ತು ರೂಪಾಯಿಯನ್ನು ತಿರಸ್ಕರಿಸಿ ‘ನಾಕಾಣಿ ಕುಡಾ..’ ಎನ್ನುವ ಅವನು ಕೇವಲ ಹುಚ್ಚನಾಗಿ ಅಲ್ಲ, ಮಹಾ ಪಿರ್ಕಿಯಾಗಿ ಕಾಣುತ್ತಿದ್ದ. ನಂತರದ ದಿನಗಳಲ್ಲಿ ಅದೆಷ್ಟೋ ಸಲ ಯೋಚಿಸಿದ್ದೇನೆ. ಬದುಕಿಗೆ ಸಾಕಾಗುವ ನಾಲ್ಕಾಣೆಯನ್ನು ಬಿಟ್ಟು ನಾವು ನಮಗೆ ಬೇಕಿಲ್ಲದ ಹತ್ತು ರೂಪಾಯಿಯ ಹಿಂದೆ ಓಡುತ್ತಿದ್ದೇವೇನೋ ಎಂದು. ಇಲ್ಲಿನ ಕಥೆಯೂ ಇದಕ್ಕೆ ಅನುಗುಣವಾಗಿಯೇ ಇದೆ.     ಬದುಕಿನಲ್ಲಿ ಖುಷಿಯಾಗಿರುವುದಕ್ಕೆ ನಮಗೇನು ಬೇಕು? ಎಷ್ಟು ಹಣ ಬೇಕು? ಎಂತಹ ಅಧಿಕಾರ ಬೇಕು?  ಅಥವಾ ಎಂತಹ ಉದ್ಯೋಗ ಬೇಕು? ಇದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಈ ವರ್ಷದ ಎಸ್.ಎಸ್.ಎಲ್.ಸಿ ಮುಗಿಸಿ ಮುಂದಿನ ಓದಿಗೆ ಹತ್ತನೇ ತರಗತಿಯ ವರ್ಗಾವಣೆ ಪತ್ರ ಪಡೆಯಲು ಬಂದಿದ್ದ ಹುಡುಗನೊಬ್ಬನನ್ನು ‘ಮುಂದೆ ಏನು ಮಾಡ್ತೀಯಪ್ಪಾ’ ಎಂದು ಸಹಜವಾಗಿ ಎಲ್ಲರನ್ನೂ ಕೇಳುವಂತೆಯೇ ಪ್ರಶ್ನಿಸಿದೆವು. ಆತ ಕೂಡ ಅದೊಂದು ಸಹಜ ವಿಷಯ ಎಂಬಂತೆ ‘ಪಿಯುಸಿ ಮುಗಿದ ಕೂಡಲೇ ಗಲ್ಫ್‌ಗೆ ಹೋಗಿ ಬಿಡ್ತೇನೆ ಟೀಚರ್, ಅಲ್ಲಿ ಹೋದರೆ ಜಾಸ್ತಿ ದುಡಿದು, ಹಣ ಸಂಪಾದನೆ ಮಾಡಬಹುದು.’ ಎಂದ. ಯಾಕೆಂದರೆ ಅವನ ಮನೆಯಲ್ಲಿ ಈಗಾಗಲೆ ಬಹಳಷ್ಟು ಜನ ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ಹೋಗಿದ್ದಾರೆ. ಪಿಯುಸಿ ಮುಗಿಸಿದ ತಕ್ಷಣವೇ ಒಂದು ಪಾಸ್‌ಪೋರ್ಟ್ ಮಾಡಿಸಿ, ವೀಸಾ ಮಾಡಿಕೊಂಡು ಹೊರಟು ಬಿಡುವ ಅದೆಷ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಹಾಗಾದರೆ ಭಾರತಕ್ಕಿಂತ ಅಲ್ಲಿ ಅವರ ಜೀವನಮಟ್ಟ ಒಳ್ಳೆಯದಾಗಿರುತ್ತದೆಯೇ? ಅಥವಾ ಭಾರತಕ್ಕಿಂತ ಸುಖೀ ಜೀವನ ನಡೆಸಲು ಸಾಧ್ಯವೇ? ಹಾಗೆಂದು ನಿಖರವಾಗಿ ಹೇಳಲು ಬರುವುದೇ ಇಲ್ಲ. ಇಲ್ಲಿ ಯಾವ್ಯಾವುದೋ ಕನಸನ್ನು ಇಟ್ಟುಕೊಂಡು ಹೋದವರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ, ಕಸ ಬಳಿಯಲೋ ಅಥವಾ ಅದಕ್ಕಿಂತ ಕನಿಷ್ಟ ಕೆಲಸಗಳಿಗೆ ನೇಮಕವಾದ ವಿಷಯ ಊರಿನ ಬಾಯಿಂದ ನುಣುಚಿಕೊಳ್ಳುವುದಿಲ್ಲ. ಆದರೆ ಮೂರು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿದಾಗ ಮಾತ್ರ ಅವರಿಗೆ ರಾಜ ಮರ್ಯಾದೆ ದೊರಕುತ್ತದೆ. ಅಂತೂ ಓದಿದಾಗ ಈ ಎಲ್ಲಾ ವಿಷಯಗಳೂ ಕಣ್ಣಿಗೆ ಕಟ್ಟುತ್ತವೆ. ಅಮೇರಿಕಾದಂತಹ ದೇಶಗಳಲ್ಲಿ ನಮ್ಮ ವಿದ್ಯೆಯನ್ನು ಅಡವಿಟ್ಟುಕೊಳ್ಳುವ ಪ್ರಕ್ರಿಯೆಯ ಚಂದದ ಚಿತ್ರಣವಿದೆ.                    ಇಲ್ಲಿ ಪ್ರಥಮ ಪುರುಷದಲ್ಲಿ ಬರುವ ನಿರೂಪಣೆಗಾರ ಕಾದಂಬರಿಗೆ ಒಂದು ಕುತೂಹಲದ ಪ್ರವೇಶಿಕೆಯನ್ನು ಹಾಕಿಕೊಡುತ್ತಾನೆ. ಅಲ್ಲೇ ಸನಿಹದಲ್ಲಿರುವ ಭಾರತೀಯ ಮೂಲದ ಕೌಶಿಕ್ ಕೃಷ್ಣ ಎನ್ನುವ ಜೀವ-ಭೌತ ವಿಜ್ಞಾನಿಯ ಹೆಂಡತಿ ಆಡ್ರಿಯಾನಾಳ ಆತ್ಮಹತ್ಯೆಯ ಕುರಿತಾಗಿ ಪೇಪರ್‌ನಲ್ಲಿ ಬಂದ ವಿಷಯವನ್ನು ಆಧರಿಸಿ ಲೇಖನ ಬರೆದು, ಅದಕ್ಕೆ ಒಬ್ಬ ಭಾರತೀಯ ಮೂಲದವನೇ ಆದ ಇನ್ನೊಬ್ಬನ ತೀಕ್ಷ್ಣ ಪ್ರತಿಕ್ರಿಯೆ ಬಂದಾಗಲೇ ಅರಿವಾಗುವುದು ಇದು ಸುಲಭದಲ್ಲಿ ಅರಿವಾಗದ ಚಕ್ರವ್ಯೂಹ ಎಂಬುದು. ಇಲ್ಲಿ ಪ್ರಕಾಶ ನಾಯಕರು ಬಳಸಿರುವ ಮಾತು ಮತ್ತು ಭಾಷೆಯನ್ನು ಗಮನಿಸಬೇಕು. ಒಬ್ಬ ನುರಿತ ತತ್ವಶಾಸ್ತ್ರ ಪ್ರಾಧ್ಯಾಪಕನು ತರಗತಿ ತೆಗೆದುಕೊಂಡಂತಿದೆ. ತನ್ನ ಸಹೋದ್ಯೋಗಿ ವಿವಿಯನ್‌ನ ಬಾಯಿಂದ ಆಡಿಸುವ ಈ ಮಾತುಗಳನ್ನೇ ಕೇಳಿ. ಹಾಗೆ ನೋಡಿದರೆ ಎಲ್ಲಾ ಕೊಲೆಗಳೂ ಆತ್ಮಹತ್ಯೆಗಳೇ. ತನ್ನ ಅಸ್ತಿತ್ವದಿಂದ ಬೇರೆಯವರಿಗೆ ಸಹಿಸಲಾಗದ ನಷ್ಟವೋ ಅಥವಾ ತನ್ನ ಸಾವಿನಿಂದ ಕಡೆಗಣಿಸಲಾಗದ ಲಾಭವೋ ಆಗುವಂತೆ ಮಾಡುವಲ್ಲಿ ಕೊಲೆಗೀಡಾಗುವವನ ಜವಾಬ್ಧಾರಿಯೇನು ಕಡಿಮೆಯೇ? ತನ್ನ ಸಾವಿನ ನಂತರ ಜೀವಂತ ಮನುಷ್ಯನನ್ನು ಅಪಮಾನದ ಬೇಗೆ ಅಥವಾ ಪಶ್ಚಾತ್ತಾಪದ ಉರಿಯಲ್ಲಿ ಬೇಯುವಂತೆ ಮಾಡುವುದು ಕೊಲೆಗಿಂತ ಹೇಯ. ಒಂದು ಕೊಲೆಯನ್ನು ಅಥವಾ ಆತ್ಮಹತ್ಯೆಯನ್ನು ಹೀಗೂ ನೋಡಬಹುದು ಎನ್ನುತ್ತದೆ. ಕಾದಂಬರಿಯ ತುಂಬ ಇಂತಹ ತರ್ಕ ವಿತರ್ಕಗಳು ತನ್ನ ಇರುವನ್ನು ಸಾಧಿಸುತ್ತಲೇ ಹೋಗುತ್ತದೆ.    ಕೌಶಿಕ್ ಕೃಷ್ಣ ತಾನಾಗಿಯೇ ಸಾವನ್ನು ತಂದುಕೊಳ್ಳುವ ಆ ಮೂಲಕ ಆತ್ಮವನ್ನು ಹಿಡಿದಿಟ್ಟುಕೊಂಡು  ಅದನ್ನು ಇನ್ನೊಂದು ಶರೀರಕ್ಕೆ ರವಾನಿಸುವ ಹೊಸ ಪ್ರಯೋಗವನ್ನು ಮಾಡುವ ನಿಟ್ಟಿನಲ್ಲಿ ಪೆಗಾಸಿಸ್ ಎನ್ನುವ ಯಂತ್ರವನ್ನು ಕಂಡು ಹಿಡಿಯುವುದು, ಅದಕ್ಕೆ ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದಲೇ ನೋಡುತ್ತ, ಈ ತರಹದ ಆಧ್ಯಾತ್ಮಿಕ ವಿಷಯಗಳನ್ನು ಒಪ್ಪದ ಅಭಿಜಿತ್ ಕಿಮಾನಿ ಹಣ ಹೂಡುವುದು ಎಲ್ಲವೂ ವಿಚಿತ್ರವೇ. ಅವನ ಆಫೀಸಿನಲ್ಲಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡದ, ಅಲೆಮಾರಿಯಾಗಿಯೇ ಬದುಕಬೇಕೆನ್ನುತ್ತ ಕೇವಲ ವಾರ, ತಿಂಗಳುಗಳ ಲೆಕ್ಕದಲ್ಲಿ ಕೆಲಸ ಮಾಡುವ ದಿಗಂಬರ ಸೇರಿಕೊಳ್ಳುವುದೂ ಕೂಡ. ಇಲ್ಲಿಯೇ ಅಮೇರಿಕಾದಲ್ಲಿರುವ ಭಾರತೀಯರ ಜೀವನದ ಅನಾವರಣವಾಗುತ್ತದೆ. ‘ಅಮೇರಿಕಾದಲ್ಲಿದ್ದಾನೆ. ಇಂಜಿನಿಯರ್.’ ಎಂದುಕೊಳ್ಳುತ್ತ ಇಲ್ಲಿಯವರು ಮೆರೆಸುವಾಗ ಅಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವುದೂ ಇದೆ. ಮಕ್ಕಳನ್ನು ಓದಿಸಿ ಪರದೇಶಿಗಳನ್ನಾಗಿ ಮಾಡುವ ತಂದೆ ತಾಯಿಯರು ಇದನ್ನು ಒಮ್ಮೆಯಾದರೂ ಓದಬೇಕು ಎಂದೆನ್ನಿಸುತ್ತದೆ.    ಕೌಶಿಕ್ ಕೃಷ್ಣನ ಪ್ರಯೋಗಕ್ಕಾಗಿ ಹಣ ಹಾಗೂ ಪ್ರಾಜೆಕ್ಟ್ ಮಾಡಲು ಸಮಯ ಹಾಗೂ ಸ್ಥಳವನ್ನು ಮೀಸಲಿಟ್ಟ ಅಭಿಜಿತ್ ಕಿಮಾನಿ ನಂತರ ಇಡೀ ಪ್ರಾಜೆಕ್ಟ್‌ನ್ನೇ ಮಾರಿ ಬಿಡುತ್ತಾನೆ. ಆದರೆ ಕೌಶಿಕ್ ಕೃಷ್ಣನಿಗೆ ಅದೇನೂ ಒಪ್ಪಿಗೆಯಾದ ಕೆಲಸವಲ್ಲ. ಹೀಗಾಗಿ ಆತ ಪ್ರಯೋಗವನ್ನು ತನ್ನ ಮನೆಗೆ  ಸ್ಥಳಾಂತರಿಸಿಕೊಳ್ಳುತ್ತಾನೆ. ಅಲ್ಲಿ ಆತನೊಡನೆ ಕೆಲಸ ಮಾಡುವ ಉತ್ಸಾಹಿ ಯುವಕ ಅನ್ಸೆಲ್ಮೋ ಈ ಕೆಲಸಕ್ಕೆ ಸಹಕಾರ ನೀಡುತ್ತಾನೆ. ಆತನಿಗೆ ಕೌಶಿಕ್ ಕೃಷ್ಣನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇಲ್ಲದಿದ್ದರೂ ಆತ ಮತ್ತು ಆತನ ಜೊತೆಗೇ ವಾಸಿಸುತ್ತಿದ್ದ ಪ್ರೇಯಸಿ ಎಂಜಲಿತೋ ಇಡೀ ಪ್ರಯೋಗದ ಯಶಸ್ಸಿಗೆ ಕಂಕಣ ಬದ್ಧರಾಗುತ್ತಾರೆ. ಕೌಶಿಕ್ ಕೃಷ್ಣನ ಹೆಂಡತಿ ಎಡ್ರಿಯಾನ ಒಬ್ಬ ಅತ್ಯುತ್ತಮ ಚಿತ್ರಕಾರಳು. ಹಾಗೆ ನೋಡಿದರೆ ಕೌಶಿಕ್ ಕೃಷ್ಣ ಅಭಿಜಿತ್ ಕಿಮಾನಿಗೆ ಪರಿಚಯವಾದ್ದೇ ಇಂತಹ ಚಿತ್ರಕಲಾ ಪ್ರದರ್ಶನದಲ್ಲಿ. ಕೌಶಿಕ್ ಕೃಷ್ಣ ಹಾಗೂ ಆತನ ಹೆಂಡತಿ ಎಡ್ರಿಯಾನಾ ಇಬ್ಬರೂ ಸೇರಿ ಚಿತ್ರಿಸಿದ್ದ ಪೇಂಟಿಂಗ್‌ಗಳು ಹೊಸದೊಂದು ಸಂಚಲನವನ್ನೇ ಅಭಿಜಿತ ಕಿಮಾನಿಯಲ್ಲಿ ಮೂಡಿಸಿದ್ದವು. ಪ್ರತ್ಯೇಕ ಆಲೋಚನೆ, ಪ್ರತ್ಯೇಕ ನಂಬಿಕೆಗಳನ್ನು ಹೊಂದಿರುಹಿಬ್ಬರು ಜೊತೆಯಾಗಿ ಒಂದು ಕೆಲಸ ಮಾಡುವುದೆಂದರೆ ಅದು ಅದ್ಭುತವೇ ಸರಿ. ಅದರಲ್ಲೂ ಚಿತ್ರಕಲೆಯಂತಹ ಸೂಕ್ಷ್ಮ ಸಂವೇದನೆ ಬೇಡುವ ವಿಭಾಗದಲ್ಲಿ. ಆದರೆ ಕೌಶಿಕ್ ಕೃಷ್ಣ ಹಾಗೂ ಎಡ್ರಿಯಾನಾ ಚಿತ್ರಗಳು ಅದ್ವಿತೀಯವಾಗಿದ್ದವು ಮತ್ತು ಅಲ್ಲಿಯೂ ಕೌಶಿಕ್ ಕೃಷ್ಣ ಆತ್ಮ ಹಾಗೂ ದೇಹದ ಸಂಗಾತವನ್ನು, ಆತ್ಮವನ್ನು ಸಂರಕ್ಷಿಸಿ ಬೇರೆಡೆಗೆ ಅದನ್ನು ಜೀವಂತ ಗೊಳಸುವ ಕುರಿತಾಗಿಯೇ ತನ್ನ ಬಣ್ಣವನ್ನು ಬಳಸುತ್ತಿದ್ದುದು ವಿಚಿತ್ರ.   ಕೊನೆಗೆ ಅಭಿಜಿತ್ ಕಿಮಾನಿಯ ಇಂಡಸ್ ಕಂಪನಿಯಿಂದ ಫಿನಿಕ್ಸ್ ಎನ್ನುವ ಆತ್ಮವನ್ನು ಕಾಪಿಟ್ಟು ಬೇರೆ ದೇಹಕ್ಕೆ ಸ್ಥಳಾಂತರಿಸುವ ಯೋಜನೆಯಿಂದಾಗಿ ಅಭಿಜಿತ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ, ಆತನ ತಂದೆ ಇನ್ನೆಂದೂ ಅಮೇರಿಕಾಕ್ಕೆ ಬರದಿರುವ ತೀರ್ಮಾನ ಕೈಗೊಂಡು ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೊನೆಯಲ್ಲಿ ಅನ್ಸೆಲ್ಲೋ ಹೇಳುವ ಸತ್ಯ ಬೆಚ್ಚಿ ಬೀಳಿಸುತ್ತದೆ. ಅದನ್ನು ಬೆಂಬಲಿಸುವಂತೆ ಸ್ವತಃ ಕೌಶಿಕ್ ಕೃಷ್ಣನೇ ತನ್ನ ಪತ್ನಿ ಎಡ್ರಿಯಾನಾಳ ಆತ್ಮಹತ್ಯೆ ಯೋಜಿತವಾದ್ದು ಹಾಗೂ ಪೆಗಾಸಿಸ್ ಯಂತ್ರ ಅವಳ ಆತ್ಮವನ್ನು ಅನೆಲ್ಲೋನ ಪ್ರೇಯಸಿ ಎಂಜಲಿತೋಳ ದೇಹಕ್ಕೆ ಯಶಸ್ವಿಯಾಗಿ ಸೇರಿಸಿದೆಯೆಂದು ಹೇಳುತ್ತಾನೆ. ಇದಕ್ಕೂ ಮೊದಲೇ ಬರುವ ಇಂಡಸ್ ಕಂಪನಿಯ ಸ್ವಾಗತಕಾರಿಣಿಯಾಗಿರುವ ಸೋಫಿಯಾಳ ನಾಯಿ ಅಲೆಕ್ ಒಂದು ದಿನ ಹಠಾತ್ ಆಗಿ ಯಾವುದೇ ಸೂಚನೆ ನೀಡದೆ ಸಾವಿಗೀಡಾಗಿದ್ದು ಮತ್ತು ಪೆಗಾಸಿಸ್ ಯಂತ್ರದ ಕಾರ್‍ಯ ವೈಖರಿ ತಿಳಿಯಲು ಹೋಗಿದ್ದ ಗಿಲ್ಟನ್ ಸಡನ್ನಾಗಿ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಈ ಯಂತ್ರದ ನಿಜಾಯತಿಯನ್ನು ಸಾಬೀತುಪಡಿಸುತ್ತವೆಯೋ ಎನ್ನುವಂತಿದ್ದರೂ ಅದೇ ಫಿನಿಕ್ಸ್ ಪ್ರಾಜೆಕ್ಟಿಗೆ ಡಾಟಾ ಸಂಗ್ರಹಿಸಿ ತರ್ಕಕ್ಕೆ ಹಚ್ಚುವ ದಿಗಂಬರ ಕೊನೆಯವರೆಗೂ ನಂಬುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.      ಕಾದಂಬರಿಯ ಒಟ್ಟೂ ಓಟ ಓದುಗನನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗಿ ಕೊನೆಯವರೆಗೂ ಪುಸ್ತಕವನ್ನು ಕೆಳಗಿಡಲಾಗದಂಥಹ ಒತ್ತಡವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ. ಇಲ್ಲಿನ ಪ್ರತಿ ಮಾತು, ಪ್ರತಿ ನಡತೆಯೂ ನಮ್ಮೊಳಗೇ ಹಾಸು ಹೊಕ್ಕಾಗಿರುವ ಮಾತುಗಳೇನೋ ಎಂದುಕೊಳ್ಳುವಂತೆ ಅಥವಾ ನಮ್ಮೊಡನೆ ವ್ಯವಹರಿಸಿದ್ದ ಯಾರದ್ದಾದರೂ ಮಾತನ್ನು ನೆನಪಿಗೆ ತರುತ್ತದೆ. ಇಲ್ಲಿ ಪೊಕ್ಕೆ ಪಾಂಡು ಹೇಳುವಂತೆ ‘ಅರ್ಧ ಭೂಗೋಲ ದಾಟಿದರೂ ಕಾಸೀಮನ ದೋಸ್ತಿ ತಪ್ಪಲಿಲ್ಲ’ ಎನ್ನುವ ಮಾತು, ‘ಅಣ್ಣ ಹೇಳ್ತೆ ಕೇಳ್’ ಎಂದು ಪದೇ ಪದೇ ಹೇಳುವ ಇದೇ ಪೊಕ್ಕೆಪಾಂಡು ಇಲ್ಲೆಲ್ಲೋ ನಮ್ಮ ಪಕ್ಕದಲ್ಲೇ ಇದ್ದವರು ಎನ್ನುವ ಭಾವ ಹುಟ್ಟಿಸುತ್ತದೆ. ಯಾಕೆಂದರೆ ತನ್ನನ್ನೇ ತಾನು ಅಣ್ಣ ಎಂದು ಕರೆದುಕೊಳ್ಳುವವರನ್ನು ನಮ್ಮೂರ ಕಡೆ ಪೊಕ್ಕೆ ಎನ್ನುವುದು ಸಹಜವಾದ ಮಾತು. ಕಿಮಾನಿ ಎನ್ನುವ ಸನಿಹದ ಊರಿನ ಹೆಸರೂ ಕೂಡ ಒಂದು ರೀತಿಯ ತಾದ್ಯಾತ್ಮವನ್ನು ಕಾದಂಬರಿಗೆ ನೀಡಿಬಿಡುತ್ತದೆ.     ಇಷ್ಟೆಲ್ಲ ಆದನಂತರ ಮತ್ತೊಂದು ಹೇಳಲೇಬೇಕಾದ ಮಾತಿದೆ. ಇಲ್ಲಿ ಬರುವ ವಿವರಣೆಗಳು ನಮಗೆ ಇಂಚಿಂಚಾಗಿ ಆ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಅಂಜನಾ ಬರೆಯುತ್ತಾರೆ ಜಗಲಿಯೆನ್ನುವ ಮೊದಲಪ್ರೇಮ ಸೂರ್ಯ ಮೂಡುವ ಹೊತ್ತು ಬರಿಗಾಲಲ್ಲಿ ಒಮ್ಮೆ ಅಂಗಳಕ್ಕಿಳಿದು ನೋಡಿ. ಮಣ್ಣಿನೊಂದಿಗಿನ ಮೊದಲಪ್ರೇಮದ ಸ್ಪರ್ಶ ಅಂಗಾಲುಗಳನ್ನು ತಾಕಿ ಹೃದಯವನ್ನು ಸೋಕುತ್ತದೆ; ಬಾಗಿಲುಗಳಾಚೆ ಬಂದು ಸುರಿವ ಮಳೆಗೆ ಒಮ್ಮೆ ಮುಖವನ್ನೊಡ್ಡಿ ನೋಡಿ. ಮಳೆಯೊಂದಿಗಿನ ಮೊದಲಪ್ರೇಮದ ಸುಖ ಮುಂಗುರುಳನ್ನು ತೋಯಿಸಿ ಹನಿಹನಿಯಾಗಿ ನೆಲಕ್ಕಿಳಿಯುತ್ತದೆ; ಒಂದು ಏಕಾಂತದ ಸಂಜೆಯಲ್ಲಿ ಸದ್ದಿಲ್ಲದೆ ಅರಳುತ್ತಿರುವ ಜಾಜಿಯ ಮೊಗ್ಗುಗಳನ್ನು ಅಂಗೈಯಲ್ಲಿ ಹಿಡಿದು ನೋಡಿ. ಪರಿಮಳದೆಡೆಗಿನ ಮೊದಲಪ್ರೇಮದ ಭಾವ ಇಂದ್ರಿಯಗಳ ಹಂಗು ತೊರೆದು ಗಾಳಿಯೊಂದಿಗೆ ತೇಲಿ ಹಗುರಾಗುತ್ತದೆ. ಮೃದುವಾದ ಪುಟ್ಟಪುಟ್ಟ ಕಾಲುಗಳಿಗೆ ಅಮ್ಮ ತೊಡಿಸಿದ ಗೆಜ್ಜೆ, ದೀಪಾವಳಿಗೆಂದು ಅಪ್ಪ ಕೊಡಿಸಿದ ಉದ್ದತೋಳಿನ ಫ್ರಾಕು, ಶನಿವಾರದ ಕೊನೆಯ ಕ್ಲಾಸು ತಪ್ಪಿಸಿ ಹೊಟೆಲಿಗೆ ಹೋಗಿ ತಿಂದ ಮಸಾಲೆದೋಸೆ, ಸಿಟಿಬಸ್ಸಿನಲ್ಲಿ ಎದುರಾಗುತ್ತಿದ್ದ ಹುಡುಗನ ನೀಲಿಬಣ್ಣದ ಅಂಗಿ ಎಲ್ಲವೂ ಮೊದಲಪ್ರೇಮವೆನ್ನುವ ಸುಂದರ ಅನುಭೂತಿಯ ಭಾಗವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಅಕ್ಕನ ಮದುವೆಯಲ್ಲಿ ಮುಡಿದ ಮಲ್ಲಿಗೆಮಾಲೆಯಿಂದ ಹಿಡಿದು ಸಂಧ್ಯಾವಂದನೆಯ ಧೂಪದಾರತಿಯವರೆಗೂ ಮೊದಲಪ್ರೇಮದ ನರುಗಂಪು ನೆನಪಿನ ಜಗಲಿಯಲ್ಲಿ ತೇಲುತ್ತಲೇ ಇರುತ್ತದೆ.           ಈ ಜಗಲಿಯೆಡೆಗಿನ ನನ್ನ ಪ್ರೇಮವೂ ನಿನ್ನೆ-ಮೊನ್ನೆಯದಲ್ಲ. ಪಕ್ಕದಮನೆಯ ಪುಟ್ಟ ಮಗುವೊಂದು ಅಂಬೆಗಾಲಿಡುತ್ತ ಜಗಲಿಯ ಕಂಬಗಳನ್ನು ಸುತ್ತುವಾಗಲೆಲ್ಲ, ನನ್ನ ಬಾಲ್ಯವೂ ಹೀಗೆ ಸ್ವಚ್ಛಂದವಾಗಿ ಜಗಲಿಯ ಮೇಲೆ ಹರಡಿಕೊಂಡಿದ್ದ ಗಳಿಗೆಯನ್ನು ನೆನೆದು ಪುಳಕಗೊಳ್ಳುತ್ತೇನೆ; ನೆನಪುಗಳಿಗೆ ದಕ್ಕಿರದ ಅವೆಷ್ಟೋ ಸಂಗತಿಗಳು ವಾಸ್ತವದಲ್ಲಿ ಕಣ್ಣೆದುರೇ ಕುಣಿದಾಡುತ್ತ, ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ಅನುಭವಗಳಾಗಿ ಜಗಲಿಗಿಳಿಯುವ ವಿಸ್ಮಯಕ್ಕೆ ಚಕಿತಗೊಳ್ಳುತ್ತೇನೆ. ಹಾಗೆ ನಡೆದಾಡುವ ಅನುಭವಗಳ ಸ್ವರೂಪ ಕಾಲಕಾಲಕ್ಕೆ ಬದಲಾಗಿರಬಹುದಾದರೂ, ಅವುಗಳ ಸೌಂದರ್ಯ ಕಳೆಗುಂದಿದ್ದನ್ನು ಎಂದಿಗೂ ಕಂಡಿಲ್ಲ. ಜಗಲಿಯ ದಾಸ್ತಾನುಗಳ ಮಾಲೀಕನಂತಿರುವ ಮರದ ಟಿಪಾಯಿಯ ಮೇಲಿನ ದಿನಪತ್ರಿಕೆ-ವಾರಪತ್ರಿಕೆಗಳ ಜಾಗವನ್ನು ಮೊಬೈಲುಗಳು, ಟಿವಿ ರಿಮೋಟುಗಳು ಆಕ್ರಮಿಸಿಕೊಂಡಿರಬಹುದು; ಮಹಾರಾಜರ ಗತ್ತಿನಲ್ಲಿ ಕುಳಿತಿರುತ್ತಿದ್ದ ಆರಾಮಕುರ್ಚಿಗಳ ಜಾಗದಲ್ಲಿ ಅಂದದ ಮೈಕಟ್ಟಿನ ಸೋಫಾಸೆಟ್ಟುಗಳು ವಿರಾಜಿಸುತ್ತಿರಬಹುದು; ಲಾಟೀನುಗಳನ್ನು ಟ್ಯೂಬ್ ಲೈಟುಗಳು, ಮಣ್ಣಿನ ನೆಲವನ್ನು ಮಾರ್ಬಲ್ಲುಗಳು, ರೇಡಿಯೋಗಳನ್ನು ಲ್ಯಾಪ್ಟಾಪುಗಳು ರಿಪ್ಲೇಸ್ ಮಾಡಿರಬಹುದಾದರೂ, ಆ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಜಗಲಿಯೆಂದೂ ತನ್ನ ನೈಜತೆಯ ಖುಷಿಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲ ಬದಲಾವಣೆಗಳಿಗೂ ಭಯವಿಲ್ಲದೆ ತನ್ನನ್ನು ಒಡ್ಡಿಕೊಳ್ಳುವ ಜಗಲಿ ಮನೆಯೊಳಗಿಂದ ಹೊರಗೆ ಬಂದವರಿಗೊಂದು ಬಿಡುವಿನ ಸಡಗರ ಒದಗಿಸುತ್ತ, ಹೊರಗಿನಿಂದ ಒಳಬಂದವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತ ಒಳಗು-ಹೊರಗುಗಳ ಅನುಬಂಧವನ್ನು ಹಿಡಿದಿಡುವ ಬಂಧುವಿನಂತೆ ಭಾಸವಾಗುತ್ತದೆ.           ಎಲ್ಲ ಅನುಬಂಧಗಳ ಹುಟ್ಟು, ಬೆಳವಣಿಗೆಗಳು ಸಂಭವಿಸುವುದು ಜಗಲಿಯಲ್ಲಿಯೇ ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಆರಾಮಕುರ್ಚಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನ ಕಾಲನ್ನು ಹಿಡಿದುಕೊಂಡು ನಾನು ಮೊದಲಸಲ ನನ್ನ ಕಾಲುಗಳ ಮೇಲೆ ನಿಂತಿದ್ದಿರಬಹುದು; ದೊಡ್ಡಪ್ಪನ ಕಿರುಬೆರಳನ್ನು ಹಿಡಿದು ಜಗಲಿಯ ತುಂಬ ಓಡಾಡಿದ ಮೇಲೆಯೇ ಎತ್ತಿಡುವ ಹೆಜ್ಜೆಗಳಿಗೊಂದು ಧೈರ್ಯ ಬಂದಿರಬಹುದು; ಅದೇ ಜಗಲಿಯ ಕಂಬಗಳ ಸುತ್ತ ಕಟ್ಟಿಕೊಂಡ ಬಂಧನಗಳೇ ಜಗತ್ತನ್ನೆದುರಿಸುವ ಚೈತನ್ಯವನ್ನು ಒದಗಿಸಿರಬಹುದು. ಹೀಗೆ ಹೊರಗೆ ಎತ್ತಿಟ್ಟ ಪ್ರತಿ ಹೆಜ್ಜೆಯನ್ನೂ ಹಗುರಾಗಿಸಿಕೊಳ್ಳುವ ಪಾಠವೊಂದನ್ನು ಜಗಲಿ ಗುರುವಿನ ಜಾಗದಲ್ಲಿ ನಿಂತು ಕಲಿಸಿಕೊಡುತ್ತದೆ. ಆ ಕಲಿಕೆಯ ಭಾಗವಾಗಿ ನೆನಪುಗಳು, ಅನುಭವಗಳು, ಅನುಬಂಧಗಳೆಲ್ಲವೂ ಅವುಗಳ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ಜಗಲಿಯ ಬಾಗಿಲಿನಲ್ಲೊಂದು ರಂಗೋಲಿ ಒಮ್ಮೆ ಅಳಿದರೂ ಮತ್ತೆ ಕೈಗಂಟಿಕೊಳ್ಳುವ ಬದುಕಿನ ಚಿತ್ತಾರವಾಗಿ, ಅದರ ಮೇಲೊಂದು ಹೂವು ಬಾಡುವ ಸಂಗತಿಯನ್ನು ಸಹಜಕ್ರಿಯೆಯಾಗಿಸಿ ಮತ್ತೊಮ್ಮೆ ಅರಳುವ ಕನಸಾಗಿ, ಪಕ್ಕದಲ್ಲೊಂದು ನೀರಿನ ಗಿಂಡಿ ಆಗಾಗ ಬರಿದಾಗುತ್ತ ಮತ್ತೆ ತುಂಬಿಕೊಳ್ಳುವ ಪ್ರಕೃತಿಯಾಗಿ ಜಗಲಿಯ ಮೇಲೊಂದು ಸಹಜ-ಸುಂದರ ಬದುಕಿನ ಚಿತ್ರಣ ರೂಪುಗೊಳ್ಳುತ್ತದೆ. ಬಾಗಿಲ ಮೇಲೊಂದು ಅಜ್ಜನ ಭಾವಚಿತ್ರ ಕೊಲಾಜಿನಂತಹ ಜಗಲಿಯ ಬದುಕುಗಳನ್ನು ಸಹನೆಯಿಂದ ಕಾಯುತ್ತಿರುತ್ತದೆ. ಹೀಗೆ ಜಗಲಿಯ ಮೇಲೆ ದಿನ ಬೆಳಗಾದರೆ ತೆರೆದುಕೊಳ್ಳುವ ಚಿತ್ರಣವೇ ಬಯಲಿಗಿಳಿವ ಬದುಕುಗಳ ಬೆನ್ನಹಿಂದೆ ನಿಂತು, ಅಗತ್ಯ ಬಂದಾಗ ಆಚೀಚೆ ಚಲಿಸಿ ಬೆರಗಿನ ದರ್ಶನವನ್ನು ಮಾಡಿಸುತ್ತಿರುತ್ತದೆ.           ಈ ಜಗಲಿಯ ಬದುಕಿನೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಾಗಲೇ ಅದೊಂದು ಬೆರಗು ಎನ್ನುವ ಅರಿವು ಸಾಧ್ಯವಾದೀತು. ಶಾಲೆಗೆ ಹೋಗುವುದೊಂದು ಬೇಸರದ ಸಂಗತಿಯೆನ್ನಿಸಿದಾಗ ಜಗಲಿಯ ಮೂಲೆಯಲ್ಲಿ ಗೋಡೆಗೆ ಆತು ನಿಂತಿರುತ್ತಿದ್ದ ಕೇರಂ ಬೋರ್ಡು ಎಲ್ಲ ಬೇಸರಗಳನ್ನೂ ಹೋಗಲಾಡಿಸುತ್ತಿತ್ತು. ಸಂಜೆ ಶಾಲೆಯಿಂದ ಮನೆಗೆ ಹಾಜರಾಗುತ್ತಿದ್ದಂತೆಯೇ ಜಗಲಿಯ ಮೇಲೊಂದು ಕಂಬಳಿ ಹಾಸಿ, ಬೋರ್ಡಿನ ಮೇಲೆ ರಾಣಿಯನ್ನು ಪ್ರತಿಷ್ಠಾಪಿಸಿ ಆಟಕ್ಕೆ ಕುಳಿತರೆ ಪ್ರಪಂಚದ ಸಕಲ ಸಂತೋಷಗಳೂ ಜಗಲಿಗೆ ಹಾಜರಾಗುತ್ತಿದ್ದವು. ಗಣಿತದ ಮಾಸ್ತರು ಕಷ್ಟಪಟ್ಟು ಕಲಿಸಿದ ಲೆಕ್ಕಾಚಾರಗಳೆಲ್ಲ ಕಪ್ಪು-ಬಿಳಿ ಬಿಲ್ಲೆಗಳ ಮಧ್ಯದಲ್ಲಿ ಸಿಕ್ಕು ತಲೆಕೆಳಗಾಗಿ, ಮರುದಿನ ಮತ್ತೆ ಶಾಲೆಯ ಮೆಟ್ಟಿಲೇರಿದಾಗಲೇ ಲೆಕ್ಕಕ್ಕೆ ಸಿಗುತ್ತಿದ್ದವು. ಜಗಲಿಯ ಮೇಲಿನ ಮಕ್ಕಳ ಸಂಖ್ಯೆ ನಾಲ್ಕಕ್ಕಿಂತ ಜಾಸ್ತಿಯಾದಾಗ ರಾಣಿಯನ್ನು ಮರೆತು ಕತ್ತೆಯ ಸವಾರಿ ಶುರುವಾಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡಿರುತ್ತಿದ್ದ ಹಳೆಯ ಇಸ್ಪೀಟು ಕಟ್ಟುಗಳನ್ನು ಹೊಸದಾಗಿ ಜೋಡಿಸಿಕೊಂಡು ಕತ್ತೆಯಾಗುವ, ಕತ್ತೆಯಾಗಿಸಿ ಖುಷಿಪಡುವ ಆಟವನ್ನು ಕಲಿಸಿಕೊಟ್ಟವರ ನೆನಪಿಲ್ಲ. ಅದೊಂದು ಪರಂಪರಾನುಗತ ಸಂಪ್ರದಾಯವೆನ್ನುವಂತೆ ಕಲಿತು, ಕಿರಿಯರಿಗೂ ಕಲಿಸಿ, ಜಗಲಿಯನ್ನೇ ಶಾಲೆಯನ್ನಾಗಿಸಿಕೊಳ್ಳುತ್ತಿದ್ದ ಬಾಲ್ಯದ ನೆನಪುಗಳನ್ನೆಲ್ಲ ಜಗಲಿ ಜಾಗರೂಕತೆಯಿಂದ ಜೋಪಾನ ಮಾಡುತ್ತದೆ.           ನೆನಪುಗಳೆಲ್ಲ ಚದುರಿಹೋಗಿ ಬದುಕು ತಲ್ಲಣಿಸುವ ಸಮಯದಲ್ಲೂ ಜಗಲಿಯಲ್ಲಿ ದೊರೆಯುವ ನೆಮ್ಮದಿ ಶಬ್ದಗಳಾಚೆ ನಿಲ್ಲುವಂಥದ್ದು. ಹೊರಬಾಗಿಲಿನಲ್ಲಿ ಚಪ್ಪಲಿ ಕಳಚಿ ಜಗಲಿಯ ತಣ್ಣನೆಯ ಸ್ಪರ್ಶವನ್ನು ನಮ್ಮದಾಗಿಸಿಕೊಂಡ ಮರುಕ್ಷಣವೇ, ಎಲ್ಲ ತಲ್ಲಣಗಳನ್ನು ತಣಿಸುವ ಜೀವಶಕ್ತಿಯಾಗಿ ಜಗಲಿ ನಮ್ಮನ್ನಾವರಿಸಿಕೊಳ್ಳುತ್ತದೆ. ಅಕ್ಕನ ಮದುವೆಯಲ್ಲಿ ಜಗಲಿಯ ಮೇಲೆ ಹಾಸಿದ್ದ ಜಮಖಾನದ ಮೇಲೆ ಕಾಲುಚಾಚಿ ಕುಳಿತಿದ್ದ ಕನಸಿನಂತಹ ಹುಡುಗ ಎದೆಯಲ್ಲೊಂದು ನವಿರಾದ ಭಾವವನ್ನು ಮೂಡಿಸಿ, ಮುಡಿದಿದ್ದ ಮಲ್ಲಿಗೆಮಾಲೆಯ ಪರಿಮಳದೊಂದಿಗೆ ಬೆರೆತುಹೋಗಿದ್ದ ನೆನಪು ಮತ್ತದೇ ಮೊದಲಪ್ರೇಮದ ಹಗುರಾದ ಅನುಭವವನ್ನು ಒದಗಿಸುತ್ತದೆ; ಮದುವೆಯಾಗಿ ದೂರದ ಊರಿಗೆ ಹೋದ ಅಕ್ಕ ವರುಷಕ್ಕೊಮ್ಮೆ ಭಾವನೊಂದಿಗೆ ಬಂದಾಗ, ನೀರು ತುಂಬಿದ ತಂಬಿಗೆಯನ್ನು ಅವರೆದುರಿಗಿಟ್ಟು ಬಗ್ಗಿ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದ ಸೊಗಸಾದ ಸಂಪ್ರದಾಯವೊಂದು ಜಗಲಿಯ ತುಂಬ ಸರಿದಾಡಿದಂತಾಗಿ ಹೊಸ ಹುರುಪೊಂದು ಹೃದಯವನ್ನಾವರಿಸುತ್ತದೆ; ಅಕ್ಕನ ಮಕ್ಕಳನ್ನು ಕೈಹಿಡಿದು ನಡೆಯಲು ಕಲಿಸಿದ, ಮಡಿಲಲ್ಲಿ ಕೂರಿಸಿಕೊಂಡು ದೇವರ ಭಜನೆಯನ್ನು ಹಾಡಿದ, ಪುಟ್ಟಪುಟ್ಟ ಕೈಗಳಿಗೆ ಮದರಂಗಿಯನ್ನು ಹಚ್ಚಿ ಸಂಭ್ರಮಿಸಿದ ನೆನಪುಗಳೆಲ್ಲವೂ ಅದೆಲ್ಲಿಂದಲೋ ಹಾಜರಾಗಿ, ಜಮಖಾನವೊಂದು ರತ್ನಗಂಬಳಿಯಾಗಿ ಬದಲಾಗಿ ಅರಮನೆಯಂತಹ ವೈಭವ ಜಗಲಿಗೆ ಪ್ರಾಪ್ತಿಯಾಗುತ್ತದೆ. ದೊಡ್ಡಮ್ಮ ಮಾಡುತ್ತಿದ್ದ ಬಿಸಿಬಿಸಿಯಾದ ಗೋಧಿಪಾಯಸ, ದೊಡ್ಡಪ್ಪನೊಂದಿಗೆ ಕುಳಿತು ಬೆರಗಾಗಿ ನೋಡುತ್ತಿದ್ದ ರಾಮಾಯಣ-ಮಹಾಭಾರತ, ಪಲ್ಲಕ್ಕಿಯೊಳಗೆ ಕುಳಿತಿರುತ್ತಿದ್ದ ಹನುಮಂತನಿಗೆಂದು ದೂರದ ಗದ್ದೆಯಿಂದ ಕೊಯ್ದು ತರುತ್ತಿದ್ದ ಗೆಂಟಿಗೆ ಹೂವು, ದೀಪಾವಳಿಯ ರಾತ್ರಿ ಜಗಲಿಯುದ್ದಕ್ಕೂ ಉರಿಯುತ್ತಿದ್ದ ಹಣತೆಯ ಸಾಲು ಎಲ್ಲವೂ ಆ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಭಾಸವಾಗಿ ಹಸನಾದ ಹೊಸ ಬದುಕೊಂದು ನಮ್ಮದಾದ ಭಾವ ಬೆಚ್ಚಗಾಗಿಸುತ್ತದೆ.           ಹೀಗೆ ಅಗತ್ಯಬಿದ್ದಾಗ ತಲ್ಲಣಗಳನ್ನು ತಣಿಸುತ್ತ, ಇನ್ನೊಮ್ಮೆ ಬದುಕು ಬೆಚ್ಚಗಿರುವ ಭರವಸೆಯನ್ನು ತುಂಬುತ್ತ ಜಗಲಿಯೆನ್ನುವ ಮೊದಲಪ್ರೇಮ ಬದುಕಿನುದ್ದಕ್ಕೂ ಕೈಹಿಡಿದು ನಡೆಯುತ್ತದೆ. ಮಣ್ಣಿನ ಜಗಲಿಯಲ್ಲಿ ಮಡಿಲಮೇಲೆ ಕುಳಿತಿರುತ್ತಿದ್ದ ಅಕ್ಕನ ಮಗ ಗ್ರಾನೈಟ್ ನೆಲದ ಫ್ಲೋರ್ ಕುಷನ್ನಿನ ಮೇಲೆ ಕುಳಿತು ಹೊಸ ಸಿನೆಮಾದ ಬಗ್ಗೆ ಚರ್ಚಿಸುತ್ತಾನೆ; ದೊಡ್ಡಮ್ಮನ ಗೋಧಿಪಾಯಸದ ರೆಸಿಪಿ ಹಳೆಯ ಡೈರಿಯ ಪುಟಗಳಲ್ಲಿ ಆತ್ಮಬಂಧುವಿನಂತೆ ಕುಳಿತು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿರುತ್ತದೆ; ಮಹಾಭಾರತದ ಶ್ರೀಕೃಷ್ಣ  ರಾಧೆಯೊಂದಿಗೆ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ; ದೀಪಾವಳಿಯ ಹಣತೆಗಳೆಲ್ಲ ಕ್ಯಾಂಡಲ್ ಲೈಟ್ ಡಿನ್ನರುಗಳಾಗಿ, ನಾಗರಪಂಚಮಿಯ ಮದರಂಗಿ ಪಾರ್ಲರುಗಳ ನೇಲ್ ಪಾಲಿಶ್ ಆಗಿ, ದೇವರ ಕಲ್ಪನೆಯೊಂದು ಸ್ನೇಹದಂಥ ಸುಮಧುರ ಸಾಂಗತ್ಯವಾಗಿ ಬದುಕುಗಳನ್ನು ಹೊಸತನದೆಡೆಗೆ ಹದಗೊಳಿಸುತ್ತವೆ. ಜಗಲಿಯಲ್ಲಿ ಕಾಲುಚಾಚಿ ಕುಳಿತಿದ್ದ ಹುಡುಗನ ನೆನಪು ಮಲ್ಲಿಗೆಮಾಲೆಯಾಗಿ ಬಾಗಿಲುಗಳ ಮೇಲೆ ತೂಗುತ್ತಿರುತ್ತದೆ. *********************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು ಎ.ಕೆ.ರಾಮಾನುಜನ್ ಅವರ ಆಯ್ದ ಪ್ರಬಂಧಗಳು                ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಅನುವಾದ : ಓ.ಎಲ್. ನಾಗಭೂಷಣÀ ಸ್ವಾಮಿ ಪ್ರ: ಮನೋಹರ ಗ್ರಂಥಮಾಲಾ ಪ್ರ.ವರ್ಷ :೨೦೧೨ ಬೆಲೆ : ರೂ.೨೦೦.೦೦ ಪುಟಗಳು: ೩೫೦ ಕನ್ನಡದವರೇ ಆಗಿದ್ದರೂ ಇಂಗ್ಲಿಷ್‌ನಲ್ಲೇ ತಮ್ಮ ಪ್ರಮುಖ ಸಾಹಿತ್ಯ ಕೃತಿಗಳನ್ನು ರಚಿಸಿದ ಎ.ಕೆ.ರಾಮಾನುಜನ್ ಅವರು ಸಾಹಿತ್ಯ, ಭಾಷೆ, ಸಂಸ್ಕೃತಿ ಚಿಂತನೆ, ತೌಲನಿಕ ಅಧ್ಯಯನ ಮೊದಲಾದ ಹಲವಾರು ಮಹತ್ವದ ವಿಚಾರಗಳ ಕುರಿತಾಗಿ ಬರೆದ ಪ್ರಬಂಧಗಳನ್ನು  ಓ.ಎಲ್. ನಾಗಭೂಷಣ ಸ್ವಾಮಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.  ಭಾರತೀಯ ಚಿಂತನಾಕ್ರಮ,  ಮುನ್ನೂರು ರಾಮಾಯಣ : ಐದು ನಿದರ್ಶನಗಳು,  ಭಾಷಾಂತರದ ಕುರಿತು ಮೂರು ಚಿಂತನೆಗಳು, ಮಹಾಭಾರತದಲ್ಲಿ ಪುನರುಕ್ತಿ ಎಂಬ ಪ್ರಬಂಧಗಳು ಭಾರತೀಯ ಸಾಹಿತ್ಯಗಳ ಬಹುಮುಖತೆಯನ್ನುಹಾಗೂ ಬಹುಪಠ್ಯಗಳ ಲಭ್ಯತೆಯನ್ನುತಿಳಿಸುತ್ತವೆ. ‘ಅಲ್ಲಮ ಕವಿತೆ ಯಾಕೆ ಒಗಟಲ್ಲ’ ಎಂಬ ಪ್ರಬಂಧವು  ಅಲ್ಲಮನ ಅನುಭಾವಿ ಕವಿತೆಗಳ ಕುರಿತು ಚರ್ಚಿಸುತ್ತದೆ.     ಮಹಾದೇವಿಯಕ್ಕ, ಬಂಗಾಳಿ ಭಕ್ತಿ ಕವಿ ಗೋವಿಂದ ದಾಸ, ಇಂಗ್ಲಿಷಿನ ಜಾನ್ ಡನ್ ಕವಿಯ ಹೋಲಿ ಸಾನೆಟ್ಸ್ ಸರಣಿಯ ೧೪ನೆಯ ಕವಿತೆ, ಮತ್ತು ಜಾರ್ಜ್ ಹರ್ಬರ್ಟ್ ಕವಿಯ ‘ಲವ್’ಎಂಬ ನಾಲ್ಕು ಕವಿತೆಗಳ ಮೂಲಕ ‘ಭಕ್ತಿ ವೈವಿಧ್ಯ’ಎಂಬ ಪ್ರಬಂಧದಲ್ಲಿ ಭಕ್ತಿಕಾವ್ಯದ ಕುರಿತಾದ ಚರ್ಚೆ ಮಾಡುತ್ತಾರೆ. ‘ಹೂಬಿಡುವ ಮರ’ ಎಂಬ  ಒಂದು ಕಥೆಯ ಮೂಲಕ ಹೆಣ್ಣು ಕೇಂದ್ರಿತ ಕಥೆಗಳ ಕೆಲವು ಲಕ್ಷಣಗಳನ್ನು ಚರ್ಚಿಸುತ್ತಾರೆ.  ಭಾರತೀಯ ಮಹಾಕಾವ್ಯಗಳ ಕಥೆಗಳಿಗಿಂತ ಭಿನ್ನವಾದ ಸಂಸ್ಕೃತಿಯು ಕಲ್ಪಿಸಿರುವ  ಪರ್ಯಾಯ ಸಾಧ್ಯತೆಗಳನ್ನು ಒಳಗೊಂಡಿರುವ  ಹೆಂಗಸರ ಕಥೆಗಳನ್ನು ತಮ್ಮ ಕ್ಷೇತ್ರಕಾರ್ಯದ ಟಿಪ್ಪಣಿಗಳಿಂದ ಆಯ್ದು ಹೇಳುತ್ತಾರೆ. ತಮ್ಮ ಬಾಲ್ಯದಲ್ಲಿ ಅಡುಗೆ ಮನೆಯಲ್ಲಿ   ಅಜ್ಜಿ, ಅತ್ತೆ, ಅಡುಗೆಯವರ ಬಾಯಿಂದ ಕೇಳಿದ ಕಥೆಗಳನ್ನೂ ಅವರ ದನಿಗಳನ್ನೂ ಕುರಿತು ‘ಕತೆ ಹೇಳುವುದು’ ಅನ್ನುವ ಪ್ರಬಂಧದಲ್ಲಿ ನಿರೂಪಿಸುತ್ತಾರೆ. ‘ಕನ್ನಡ ಜಾನಪದದ ಎರಡು ವಲಯಗಳು’ಎಂಬ ಪ್ರಬಂಧದಲ್ಲಿ ಕನ್ನಡ ಜಾನಪದದ ಪ್ರಕಾರ ಮತ್ತು ವ್ಯವಸ್ಥೆ, ಖಾಸಗಿ ಮತ್ತು ಸಾರ್ವಜನಿಕ ಕತೆಗಳು, ಕಥೆಗಾರರು, ಅಜ್ಜಿಕತೆ ಮತ್ತು ಪುರಾಣ, ಜಾನಪದ ಪುರಾಣ ಮತ್ತು ಪ್ರಾಚೀನ ಪುರಾಣಗಳು, ಗ್ರಾಮದೇವತೆ, ಎರಡು ಬಗೆಯ ಭಾರತೀಯ ದೇವತೆಗಳು, ಆಚರಣೆ ಮತ್ತು ರಂಗಭೂಮಿಗಳ ಕುರಿತಾದ ವಿಸ್ತಾರವಾದ ವಿವರಣೆಗಳಿವೆ. ‘ಸ್ಪೀಕಿಂಗ್ ಆಫ್ ಶಿವ’ ಅನ್ನುವ ಕೊನೆಯ ಪ್ರಬಂಧದಲ್ಲಿ ವೀರಶೈವ ಧಾರ್ಮಿಕ ಚಳುವಳಿಯ ರೂವಾರಿ ಬಸವಣ್ಣನ ‘ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನವನ್ನೆತ್ತಿಕೊಂಡು ಪ್ರತಿರೋಧ ಚಳುವಳಿಯ ಆಶಯ ಹಾಗೂ ವೈರುಧ್ಯಗಳ ಕುರಿತಾದ ಚರ್ಚೆಯಿದೆ. ರಾಮಾನುಜನ್ ಅವರ ಸುದೃಢ ಸಹಜ ಮತ್ತು ಸುಲಲಿತವಾದ  ಇಂಗ್ಲಿಷ್ ಬರವಣಿಗೆಯಿಂದ ಅಷ್ಟೇ ಸಶಕ್ತವಾಗಿ ಅನುವಾದವೂ ಬಂದಿದೆ.    ರಾಮಾನುಜನ್ ಅವರ ಚಿಂತನೆಗಳು  ಇಂದಿನ ಕನ್ನಡದ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತವಾದವುಗಳು. ಸಾಹಿತ್ಯ-ಸಂಸ್ಕೃತಿಯ ವಿದ್ಯಾರ್ಥಿಗಳು ಓದಲೇ ಬೇಕಾದವುಗಳು.  ಹೊಸ ತಲೆಮಾರಿನ ಕನ್ನಡದ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮಾಡಿದ ಈ ಕೃತಿ ಬಹಳ ಉಪಯುಕ್ತ. ,   *************************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ‌ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ ಬೇರೆ ಬೇರೆಯದೇ ರೂಪದಲ್ಲಿ ಭೇಟಿಯಾಗುತ್ತಲೇ ಇರುತ್ತವೆ. ಇವರ ಎಫ್ಬಿ ಖಾತೆಯಲ್ಲಿ  Kumara h c holenarsipur  ಎಂದಿದೆ. ಎಫ್ಬಿಯ ಅಸಂಖ್ಯಾತ ಪೋಸ್ಟುಗಳ ನಡುವೆ ದಿನಕ್ಕೊಮ್ಮೆಯಾದರೂ ಹಣಕುವ ಲೈಕೋ ಕಮೇಂಟೋ ಅಥವ ತಮ್ಮದೇ ಪಟಗಳನ್ನೇ ತೇಲಿ ಬಿಡುವವರ ನಡುವೆ ಸ್ವಲ್ಪ ಸೀರಿಯಸ್ ಆಗಿಯೇ ಪ್ರತಿಕ್ರಯಿಸುವ ಕುಮಾರ್ ತಮ್ಮ ಕವಿತೆಗಳಿಂದಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಳೆದ ಆರೇಳು ವರ್ಷಗಳಿಂದ ಕವನ ಕೃಷಿಗೆ ಕೈ ಹಾಕಿರುವ ಕುಮಾರ್ ಸದ್ಯ ಹುಣಸೂರಿನ ವಾಸಿ. “ಬೆಳಕಿನೆಡೆಗೆ” ಸಂಘಟನೆಯ ಮೂಲಕ ಹುಣಸೂರಿನಲ್ಲಿ ಸಾಹಿತ್ಯಾಸಕ್ತರ ಗುಂಪಿನ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಶ್ರೀ ಅರವಿಂದ ಚೊಕ್ಕಾಡಿಯವರ ಮಧ್ಯಮಪಂಥದ ಬೆಂಬಲಿಗ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಡಯಟ್ ಮೈಸೂರಿನ ಮೂಲಕ ಪ್ರಕಟಿಸಿರುವ ಇವರುಯಾವುದೇ ಲೇಖನ ಕವನಗಳನ್ನು ಉಳಿದಂತೆ  ಯಾವುದೇ ಪತ್ರಿಕೆಗೂ ಕಳುಹಿಸಿಲ್ಲ ಎಂದು ಹೇಳಿದಾಗ ಆಶ್ಚರ್ಯವಾಗದೇ ಇರದು. ಆದರೂ ಕವನ ಸಂಕಲನ “ಪ್ರಳಯವಾಗುತ್ತಿರಲಿ..” ಪ್ರಕಟಿಸಿದ್ದಾರೆ. ಯಾವ ಪತ್ರಿಕೆಗೂ ಬರೆಯದೆ ಬರಿಯ ಫೇಸ್ಬುಕ್ಕಿನ ಮೂಲಕವೇ ಕವಿತೆ ಪ್ರಕಟಿಸುವ ಶ್ರೀಯುತರ ಸಂಕಲನ ನಾನು ನೋಡದೇ ಇದ್ದರೂ ಅವರ ಫೇಸ್ಬುಕ್ ಕವಿತೆಗಳ ಮೂಲಕವೇ ಅವರೊಳಗಿನ ಕವಿಯ ಭಾವವನ್ನು ಆ ಕವಿಯು ಸಮಾಜದ ನಡವಳಿಕೆಗಳ ಮೇಲೆ ಇರಿಸಿ ಕೊಂಡಿರುವ ನೈತಿಕ ಸಿಟ್ಟನ್ನೂ ಅರಿಯಬಹುದು. ಶ್ರೀ ಕುಮಾರ್ ಅರವಿಂದ ಚೊಕ್ಕಾಡಿಯವರ ಮಧ್ಯಮ ಪಂಥದ ಸಹವರ್ತಿಯೂ ಆಗಿರುವ ಕಾರಣ ಅವರ ನಿಲುವು ಎಡವೂ ಅಲ್ಲದ ಬಲಕ್ಕೂ ವಾಲದ ಆದರೆ ಸಾಮಾಜಿಕ ಸನ್ನಿವೇಶಗಳಿಗೆ ಆಯಾ ಸಂದರ್ಭಗಳ ಅಗತ್ಯತೆಗೆ ತಕ್ಕಂತೆ ಬಾಗುವುದನ್ನೂ ಬಳುಕುವುದನ್ನೂ ಹಾಗೆಯೇ ಬಗ್ಗದೇ ಸೆಟೆಯುವದನ್ನೂ ಈ ಕವಿತೆಗಳ ಅಧ್ಯಯನದಿಂದಲೇ ಅರಿಯಬಹುದು. ನಿಜದ ಕವಿಯು ನಿಜಕ್ಕೂ ಇಟ್ಟುಕೊಳ್ಳಲೇ ಬೇಕಾದ ನೈತಿಕತೆ ಇದುವೇ ಆಗಿದೆ. ಏಕೆಂದರೆ ಕವಿಯೂ ಮೂಲತಃ ಒಬ್ಬ ಮ‌ನುಷ್ಯ. ಅವನಿಗೂ ಎಲ್ಲರ ಹಾಗೆ ಬದುಕಿನ ಸವಾಲುಗಳು, ಸಾಲ ಸೋಲಗಳು, ಸೋಲು ಗೆಲವುಗಳು, ನೈತಿಕತೆಯನ್ನು ಪ್ರಶ್ನಿಸುತ್ತಲೇ ಅನೈತಿಕತೆಗೆ ಎಳೆಸುವ ಪ್ರಲೋಭನೆಗಳು ಈ ಎಲ್ಲವನ್ನೂ ಕವಿಯೂ ಅನುಭವಿಸುತ್ತಲೇ ಇರುತ್ತಾನೆ ಮತ್ತು ಆ ಅಂಥ ಸಂದರ್ಭಗಳಲ್ಲಿ ಎಲ್ಲ ಸಾಮಾನ್ಯರೂ ವರ್ತಿಸುವಂತೆಯೇ ವರ್ತಿಸಿರುತ್ತಾನೆ. ಆದರೆ ಕವಿಯಾದವನು ಆ ಅಂಥ ಅನುಭವವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು ಕವಿತೆಗೆ ಮೊರೆ ಹೋಗುತ್ತಾನೆ. ಮತ್ತು ತನ್ನ ಮುಂದಣ ಸವಾಲುಗಳಿಗೆ ಕವಿತೆಯ ಮೂಲಕವೇ ಉತ್ತರ ಕಂಡು ಕೊಳ್ಳುತ್ತಾನೆ. ಇದನ್ನು ಅವರ “ಸರದಿ” ಅನ್ನುವ ಕವಿತೆಯಲ್ಲಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ…… (ಸರದಿ) ಈ ದ್ವಂದ್ವಗಳ ನಡುವೆಯೂ ಪಯಣವನು ಮುಂದಕ್ಕೆ ಸಾಗಿಸಬೇಕಲ್ಲ ಅನ್ನುವ ವ್ಯಥೆಯ ನಡುವೆಯೇ ಸರದಿಯಲ್ಲಿರುವ ನಾವು ನಮ್ಮಾಚೆ ಇನ್ನೂ ಯಾರೋ ಕಾಯುತ್ತಲೇ ಇದ್ದಾರೆ ಅನ್ನುವ ಅರಿವು ಇಲ್ಲಿ ಮುಖ್ಯ. ಮತ್ತು ಆ ಅದೇ ಭಾವವೇ ಈ ಕವಿತೆಯು ದ್ವಂದ್ವವನ್ನು ಗೆಲ್ಲುವ ಉಪಾಯ ಕಂಡುಕೊಂಡದ್ದು! ಈ ಕವಿ ವೃತ್ತಿಯಿಂದ ಶಿಕ್ಷಕ. ಹಾಗಾಗಿ ಪ್ರತಿ ವರ್ಷ ಫಲಿತಾಂಶದತ್ತಲೇ ದಿಟ್ಟಿ. ಅವರು ಹೇಳುತ್ತಾರೆ; ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? (ಉದುರಿದ ಎಲೆಗಳ ಗುಡಿಸಿ) ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನೂ ಅದು ಅಮೂಲಾಗ್ರವಾಗಿ ಬದಲಾಗಬೇಕಾದ ಅನಿವಾರ್ಯವನ್ನೂ ಹೇಳುತ್ತಿದ್ದಾರೆ ಅನ್ನಿಸಿತು. ಉದುರಿದ ಎಲೆಗಳನ್ನು ಗುಡಿಸಿ ಬಿಸಾಕುವ ಅಂದರೆ ಈಗಾಗಲೇ ಘಟಿಸಿದ ಐತಿಹಾಸಿಕ ಸಾಮಾಜಿಕ ಸನ್ನಿವೇಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳದೇ ಕಡ ತಂದ ರಸ ಗೊಬ್ಬರ ಚಲ್ಲಿದರೆ ಅಂದರೆ ಆಧುನಿಕ ವಿದ್ಯಾಭ್ಯಾಸ ಕ್ರಮ(?) ನೆಲವನ್ನು ಬಂಜರು ಮಾಡುತ್ತಿದೆ ಅನ್ನುವ ಅರಿವು ಸ್ವತಃ ಅನುಭವದಿಂದಲೇ ಕಂಡು ಕೊಂಡ ಕಾಣ್ಕೆ. ” ಕಳೆದ ಆ ನನ್ನ ಮೊಗ” ಕವಿತೆಯು ಧೇನಿಸುವುದು ಸಾಮಾನ್ಯ ಸಂಗತಿಯನ್ನೇ ಆದರೂ ಅದು ಪಡೆಯುವ ನಿಲುವು ಸಾರ್ವತ್ರಿಕವಾಗಿ ಸತ್ಯವಾದುದೂ ಸತ್ವವಾಗಿಯೂ ಇರುವಂಥದು. ಮುಖವಾಡಗಳೊಳಗೇ ಏಗಬೇಕಿರುವ ನಮ್ಮೆಲ್ಲರ ಬದುಕನ್ನೂ ಈ ಕವಿ ಅತ್ಯಂತ ಯಶಸ್ವಿಯಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ; ಅದೆಷ್ಟು ವರುಷಗಳಾದವು ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು ಅದು ನನ್ನದು ಅನ್ನುವ ಯಾವುದೋ ಏನೋ ಎಲ್ಲಾ ಅಯೋಮಯ ಮುಂದುವರೆದ ಪದ್ಯ ಕಡೆಯಲ್ಲಿ ಕಂಡುಕೊಳ್ಳುವ ಸತ್ಯ ಹೀಗೆ; ಅಲ್ಲಿಯವರೆಗೆ ಹೀಗೆ ಅನಿವಾರ್ಯ ಕನ್ನಡಿಯೊಳಗೆ ಕಾಣುವ ಸಾವಿರಾರು ಮುಖಗಳಲಿ ಸಿಕ್ಕ ಒಂದನು ಕಿತ್ತು ಭುಜಗಳ ಮೇಲೆ ಸಿಕ್ಕಿಸಿಕೊಂಡು … ಅಂದ ಮಾತ್ರಕ್ಕೆ ಇವರ ಎಲ್ಲ ಕವಿತೆಗಳೂ ಹೀಗೆ ಅನೂಹ್ಯಕ್ಕೆ ಸಲ್ಲುತ್ತವೆ ಎಂದೇನಲ್ಲ. ನಿಜಕ್ಕೂ ಅದ್ಭುತವಾಗಬಹುದಾಗಿದ್ದ “ನಾನು ಮತ್ತು ನನ್ನಂಥವರು” ಕವಿತೆ ಆರಂಭದಲ್ಲಿ ಹುಟ್ಟಿಸಿದ ಭರವಸೆಯನ್ನೂ (ಶೀರ್ಷಿಕೆ ಗಮನಿಸಿ) ಸಾಮಾನ್ಯ ಸಂಗತಿಯನ್ನೂ ಕವಿತೆಯ ವಸ್ತುವನಾಗಿಸುವ ಕ್ರಮವನ್ನೂ ಉದ್ದೀಪಿಸುತ್ತಲೇ ಅಂತ್ಯವಾಗುವ ವೇಳೆಗೆ ತೀರ ಸಾಮಾನ್ಯ ಹೇಳಿಕೆಯಾಗಿಬಿಡುವುದು ನಿರಾಶೆಯ ಸಂಗತಿ. ಇಂಥ ಹಲವು ಪಲಕುಗಳ ನಡುವೆಯೂ ಕವಿ ಅರಳಿ ಮತ್ತೆ ಹೊರಳುವುದು, ಅನೂಹ್ಯಕ್ಕೆ ತಡಕುವುದು ಕಾವ್ಯ ಕೃಷಿಯ ಪರಂಪರೆಯನ್ನು ಅರಿತವರಿಗೆ ತಿಳಿದ ಸಾಮಾನ್ಯ ಅಂಶ. ಏಕೆಂದರೆ ಇಂಥ ಪದ್ಯಗಳ ನಡುವೆ ಅಬ್ಬ ಎನ್ನುವ ಪ್ರತಿಮೆ ರೂಪಕಗಳನ್ನೂ ಈ ಕವಿ ನೀಡಬಲ್ಲರು. ಉದಾಹರಣೆಗೆ “ಪ್ರಶ್ನೆಗಳು” ಕವಿತೆಯ ಈ ಸಾಲು ನೋಡಿ; ಬಲಹೀನ ನಿಜ ಬಲಹೀನ ಸುಳ್ಳು ಎರಡನ್ನೂ ಹೇಳುವುದಿಲ್ಲ ನಿನ್ನೆದುರು ಹೇಳು ಗೆಳೆಯ ‘ನಿಜ’ವೆಂದರೆ ಏನು? ‘ಸುಳ್ಳು’ ಅದರ ವಿರುದ್ಧ ಪದವೆ? ಓಡುವ ಕಾಲದ ಜತೆಜತೆಗೆ ಓಡುವಾಗ ಯಾವುದು ನಿನ್ನ ಮುಂದಿನ ಕಾಲು ಹಿಂದಿನ ಕಾಲು? ಹೀಗೆ ಪ್ರಶ್ನೆಗಳಿಗೆ ಉತ್ತರವನ್ನು ತಡಕದೆಯೇ ಇದ್ದರೆ ಆ ಕವಿ ಬರಿಯ ಹೇಳಿಕೆ ಕೊಟ್ಟಾನು. ಹೇಳಿಕೆ ಮತ್ತು ಘೋಷಣೆಗಳನ್ನು ಬಿಟ್ಟುಕೊಟ್ಟ ಅನುಭವಗಳ ಸಹಜ ಅಭಿವ್ಯಕ್ತಿ ಮಾತ್ರ ಕವಿತೆಯಾಗಿ ಅರಳುತ್ತದೆ ಮತ್ತು ಬಹುಕಾಲ ಓದುಗನ ಮನಸ್ಸಿನಲ್ಲಿ ನಿಲ್ಲುತ್ತದೆ. ಈಗ ಈವರೆಗೂ ಈ ಕವಿ ಪ್ರಕಟಿಸಿರುವ ಕವಿತೆಗಳಲ್ಲೆಲ್ಲ ಬಹುವಾಗಿ ನನ್ನನ್ನು ಕಾಡಿದ ಮತ್ತು ಎಲ್ಲ ಸಹೃದಯರ ಮನಸ್ಸಿನಲ್ಲೂ ಉಳಿಯಬಹುದಾದ ರಚನೆಯೆಂದರೆ ಸದ್ಯದ ರಿಯಲ್ ವರ್ಲ್ದ್ ಮತ್ತು ವರ್ಚುಯಲ್ ವರ್ಲ್ದ್ ಗಳ ನಡುವಣ ಅಘೋಷಿತ ಯುದ್ಧದ ಪರಿಣಾಮ. ಆ ಪದ್ಯದ ಶೀರ್ಷಿಕೆ “ಹುಚ್ಚು ಹುಚ್ಚಾಗಿ”. ಸರಕು ಇರದ ಸಂತೆಯಲಿ ಬರೀ ಮಾತು ಮಾಹಿತಿ….. ಎಂಥ ವಿಪರ್ಯಾಸದ ಮಾತಿದು? ಸರಕೇ ಇಲ್ಲದ ಸಂತೆಯಲಿ ಮಾರಲೇನಿದೆ? ಕೊಳ್ಳಲೇನಿದೆ? ಇಂಥ ಅದ್ಭುತ ರೂಪಕಗಳನ್ನು ನಿಜ ಕವಿಯು ಮಾತ್ರ ಸೃಷ್ಟಿಸಬಲ್ಲ. ಈ ಮೊದಲೇ ಹೇಳಿದಂತೆ ಫೇಸ್ಬುಕ್ ಕವಿಗಳು ತಮ್ಮ ಪಟಗಳ ಲೈಕು ಕಮೆಂಟುಗಳಲ್ಲಿ ಕಳೆದು ಹೋಗುತ್ತಿರುವಾಗ ನಿಜಕ್ಕೂ ಹೌದೆನ್ನಿಸುವ ಈ ರೂಪಕ ಸೃಷ್ಟಿಸಿದ ಕುಮಾರ್ ಕವಿತೆಯನ್ನು ಮೆಚ್ಚದೇ ಇರುವುದು ಅಸಾಧ್ಯ. ಪದ್ಯದ ಕೊನೆ ಹೀಗಿದೆ; ಸುಮ್ಮನಿರಬೇಕು ಎಂದುಕೊಂಡರೂ ಹೆಂಡತಿ ಬಿಡುವುದಿಲ್ಲ ಮಗ ಕೇಳುತ್ತಾನೆ “ಅಪ್ಪಾ, ಕುಪ್ಪಳಿಸಿದರೆ ತಪ್ಪೇನು?” ಕುಪ್ಪಳಿಸುವುದ ನೋಡುತ್ತ ನಾನೂ ಕುಪ್ಪಳಿಸುತ್ತ ಅವಳ ಕರೆಗೆ ಓಗೊಟ್ಟು… ಹಿಮಾಲಯಕ್ಕೆ ಹೋಗುವುದು ಕನಸು ಬಿಡಿ. ವಾಹ್, ವಾಸ್ತವದ ಉರುಳಲ್ಲಿ ನರಳುತ್ತಿರುವ ಮತ್ತು ಮತ್ತೇನೋ ಕನಸುವ ಎಲ್ಲರಲ್ಲೂ ಈ ಭಾವನೆ ಇರದೇ ಉಂಟೇ? ಕುಮಾರ್ ಅವರ “ಪ್ರಳಯವಾಗಲಿ” ಸಂಕಲನ ನಾನು ಓದಿಲ್ಲ‌. ಪ್ರಾಯಶಃ ಅವರ ಇಂಥ ಪದ್ಯಗಳು ಆ ಸಂಕಲನದಲ್ಲಿ ಇರಲಾರವು. ಹತ್ತು ಹೆರುವುದಕ್ಕಿಂತ ಮುತ್ತ ಹೆರಬೇಕು ಎನ್ನುವುದು ಆಡುಮಾತು. ಅಂತೆಯೇ ಈ ಕವಿ ಹತ್ತು ಜಾಳು ಪದ್ಯ ಹಿಸೆಯುವ ಬದಲು ಒಂದು ರೂಪಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಲಿ ಎರಡನೆಯ ಸಂಕಲನ ತರುವ ಮನಸ್ಸು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಅವರ ಐದು ಕವಿತೆಗಳನ್ನು ನಿಮ್ಮೆಲ್ಲರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಕುಮಾರ್ ಹೊನ್ನೇನಹಳ್ಳಿಯವರ ಕವಿತೆಗಳು ೧. ಸರದಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ ಇವೆ ಕೆಲವು ನಿಮ್ಮಾತಿನ ವ್ಯಂಗ್ಯದಂತೆ ದಾಟುವ ಹೆಜ್ಜೆಗಳಿಗೆ ತಮ್ಮೆದೆಯನೇ ಹಾಸುವ ಕಡುಮೂರ್ಖ ಶಿಖಾಮಣಿಗಳು ಗೊತ್ತಿದೆ ಮಾತು ಮತ್ತು ಹೆಜ್ಜೆಗಳು ಸಿಗವು ಗಳಿಗೆ ದಾಟಿದ ಯಾವ ನಿಯಮಗಳಿಗೂ ಆದರೂ ನಿಮ್ಮಗಳ ವಜ್ಜೆ ಪಾದಗಳಿಗೆ ತಮ್ಮೆದೆಯನೇ ಹಾಸಿರುವ ಇವರುಗಳು ಹಾಗೆಯೆ, ತಡಮಾಡಬೇಡಿ ಯಾರಾದರೇನು ನೀವು, ದಾಟಿರಿ. ನಡೆದು ಬಂದ ಹಾದಿಯ ನೋಡಿದರೆ ಹಿಂದಿರುಗಿ ದಾಟಿರುವೆವು ನಾವೂ ನಮ್ಮ ಕನಸ ನನಸಿಗೆ ತಮ್ಮ ಕನಸುಗಳ ನಮ್ಮ ಕಾಲಡಿಗೆ ಹಾಸಿದ್ದವರ ಎದೆಗಳ ತುಳಿದು ಮುಗಿಯದ ಹಾದಿಯಲಿ ಮುಗಿಯಬಾರದು ಪಯಣವೂ ಬೇಕಾಗಿವೆ ಇನ್ನೂ ಸೇತುವೆಗಳು ಇದ್ದಾರೆ ಪಯಣಿಗರೂ ಈಗಲಾದರೂ ನುಡಿಯಬೇಕಲ್ಲವೆ ಮುಂಚೂಣಿಯಲಿ ನಿಂತಿರುವ ನಿಮ್ಮೆದೆ, ನಮ್ಮೆದೆ ‘ ಇನ್ನಾದರೋ ಸರದಿ ನಮ್ಮದೆ ‘. ೨. ಉದುರಿದ ಎಲೆಗಳ ಗುಡಿಸಿ ಮಾಗಿ ಕಾಲದಲ್ಲಿ ಮರ ಎಲೆ ಉದುರಿಸುವಂತೆ ಮಾತು, ಈ ಮಕ್ಕಳದ್ದು. ತಾಕೀತು ಮಾಡಿದ್ದೆ ” ಕೈ ಕಟ್ ಬಾಯ್ ಮುಚ್ “ ಮರದ ಬುಡದ ಸುತ್ತ ಉದುರಿದ್ದ ಎಲೆಗಳ ಗುಡಿಸಿ ಎಸೆದು ಪಾತಿ ಮತ್ತೊಮ್ಮೆ ಅಗೆದು ಸುರಿದೆ ರಸಗೊಬ್ಬರ, ಇನ್ನೇನಿದ್ದರೂ ಕೈತುಂಬಾ ಹಣ ಎಣಿಸುವ ಕನಸು. ಕೂಡಿ ಕೂರಿಸಿದ ಕೋಣೆಯೊಳಗೆ ಪಿಳಿಪಿಳಿ ನೋಡುವ ಮಕ್ಕಳು ಎಲ್ಲವ ನಾನೇ ಹೇಳುತ್ತಿರುವೆ ಸುಮ್ಮನೆ ಕೇಳುತ್ತಾ ಕಲಿಯಲು ಏನು ದಾಡಿ? ಯಾರು ಕೊಡುತ್ತಾರೆ ಇಷ್ಟು ಚನ್ನಾಗಿ ರಸಗೊಬ್ಬರ? ಕೇಳಿದಾಗ, ಹೇಳಿಕೊಟ್ಟಂತೆ ಉಲಿದಿದ್ದ ಈ ಗಿಳಿಗಳು ‘ ಹಾರಿ ತೋರಿ ‘ ಎಂದಾಗ ನಿಂತಿವೆ ಹಾಗೆ ಗೊಂದಲದಲಿ. ಸಾಕಲ್ಲವೆ ಕಾಲುಗಳು ಎಂದೇ ಕಟ್ಟಿ ಹಾಕಿದ್ದೆ ರೆಕ್ಕೆಗಳ. ರಸಗೊಬ್ಬರ ಉಂಡುಂಡ ಮಣ್ಣು ಈಗೀಗ ಬಂಜರು ಇಳುವರಿ ಇರಲಿ ಫಲ ಕಚ್ಚಿದರೆ ಸಾಕಾಗಿದೆ. ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? ೩. ಹೂವು ಮತ್ತು ಕಲ್ಲು ಹೂವಿಗೂ ಕಲ್ಲಿಗೂ ಮದುವೆ ಕರಗಿಸಿ ಮೃದು ಮಾಡಲು ಒದ್ದಾಡಿತು ಹೂವು ಕಲ್ಲು ಕಲ್ಲೇ ಮಿಸುಕಲಿಲ್ಲ ದಿನ ಕಳೆದ ಹಾಗೆ ಹೊಂದಿಕೊಂಡರೂ ನಲುಗಿ ನಲುಗಿ ಬಾಡಿ ಮಣ್ಣಾಯಿತು ಕಲ್ಲಿಗೇನು, ಗುಂಡಗೆ ನಿಂತಲ್ಲಿ ನಿಂತು ಕುಂತಲ್ಲಿ ಕುಂತು ಚಳಿ ಬಿಸಿಲಿಗೇ ಅಲುಗದವನು ಇನ್ನು ಈ ಹುಲು ಹೂವಿಗೆ ನಿಮಗೂ ಗೊತ್ತಿದೆ ನಮ್ಮಲ್ಲಿ ವಿಧುರನ ಲಗ್ನ ಸುಲಭ ಉಳಿಗೂ ಕಲ್ಲಿಗೂ ಮದುವೆ ಉಳಿಯ ಮುಂದೆ ಕಲ್ಲೇ ಮಿದು! ಉಳಿಯ ಒಂದೊಂದು ಪೆಟ್ಟಿಗೂ ನೋವಾದರೂ ಕಲ್ಲು ಕಲ್ಲೇ. ಈಗೇನೋ ಅದು ವಿಗ್ರಹವಂತೆ ನೀಡಿ ಉಳಿಗೆ ವಿಚ್ಛೇದನ ಪಡೆದು ದೀಕ್ಷೆ ನೆಲೆಸಿದೆಯಂತೆ ಗುಡಿಯೊಳಗೆ ಈ ಜನ ನೋಡಿ ಮತ್ತೆ ಮತ್ತೆ ಗುಡಿಗೆ ಹೂವುಗಳ ಹೊರುವುದು “ಕಲ್ಲಿಗೂ ಹೂವಿಗೂ”… ಕ್ಷಮಿಸಿ “ವಿಗ್ರಹಕೂ ಹೂವಿಗೂ”… ಅಲ್ಲಲ್ಲ  “ದೇವರಿಗೂ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಅಯ್ಯೋ! ನನ್ನ ಎಲ್ಲ ಕೆಲಸಗಳು ಅರ್ಧಂಬರ್ಧ. ಯಾವುದೂ ಪೂರ್ಣ ಮಾಡೋಕೆ ಆಗುತ್ತಿಲ್ಲ ಏಕಾಗ್ರತೆ ಇಲ್ಲದೇ ನನಗೆ ಅಡಚಣೆ ಆಗ್ತಿದೆ.ಇದನ್ನು ಸಾಧಿಸೋದು ಹೇಗೆ ತಿಳಿಯುತ್ತಿಲ್ಲ? ಎನ್ನುವುದು ಇತ್ತೀಚಿನ ಅನೇಕ ವಿದ್ಯಾರ್ಥಿಗಳ ಮತ್ತು ದಾವಂತದ ಬದುಕಿನಲ್ಲಿ ಕಾಲು ಹಾಕುತ್ತಿರುವ ಬಹುತೇಕ ಜನರ ದೊಡ್ಡ ದೂರು. ಏಕಾಗ್ರತೆಯಿಲ್ಲದೇ ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹೀಗಾಗಿ ಎಲ್ಲದರಲ್ಲೂ ವೈಫಲ್ಯತೆಯ ನೋವು ಕಾಡುತ್ತದೆ. ಒತ್ತಡದ ಕೂಪದಲ್ಲಿ ಬಿದ್ದವರೆಲ್ಲ ಸುಲಭವಾಗಿ ಏಕಾಗ್ರತೆಯನ್ನು ಕಳೆದುಕೊಂಡು ನರಳುತ್ತಾರೆ. ಯಾವುದೇ ಒಂದು ನಿರ್ದಿüಷ್ಟ ಕೆಲಸದಲ್ಲಿ ತೀಕ್ಷ÷್ಣ ದೃಷ್ಟಿ ಹರಿಸಿ ಮುಂದುವರೆಯಬೇಕೆAದರೆ ಬೇಡವಾದ ನೂರಾರು ಆಲೋಚನೆಗಳು ಹರಿದಾಡಿ ಮನಸ್ಸನ್ನು ಎಲ್ಲೆಲ್ಲೋ ಕರೆದುಕೊಂಡು ಹೋಗಿ ಬಿಡುತ್ತವೆ. ನೆಪೋಲಿಯನ್ ಹೇಳಿದಂತೆ ಏಕಾಗ್ರತೆಯಿಂದ ಯಾವನು ಪ್ರಯತ್ನಿಸುವುದಿಲ್ಲವೋ, ಅವನು ಎಂದೂ ಯಶಸ್ಸು ಗಳಿಸಲಾರನು. ಇದು ಸರ್ವಕಾಲಿಕ ಸತ್ಯ. ಏಕಾಗ್ರತೆ ಸಾಧಿಸುವುದೆಂದರೆ ತನ್ನ ಕೆಲಸದಲ್ಲಿ ತನಗೆ ತಾನೇ ಸಹಾಯ ಮಾಡಿಕೊಳ್ಳುವುದು. ತನಗೆ ತಾನು ಸಹಾಯ ಮಾಡಿಕೊಳ್ಳದೆ ಯವುದೇ ವ್ಯಕ್ತಿ ಪ್ರಾಮಾಣಿಕವಾಗಿ ಇತರರಿಗೆ ಸಹಾಯ ಮಾಡಲು ಪ್ರಯತ್ನಿಸಲು ಸಾಧ್ಯವಿಲ್ಲ. ಎಂಬುದು ಈ ಜೀವನದ ಅತ್ಯಂತ ಸುಂದರ ಪರಿಹಾರಗಳಲ್ಲಿ ಒಂದು.ಏಕಾಗ್ರತೆ ಎಂದರೆ.. . . ?ದೈನಂದಿನ ಗಜಿಬಿಜಿ ಕೆಲಸಗಳು ನಮ್ಮ ಗಮನವನ್ನು ಅತಿ ಸುಲಭವಾಗಿ ಸೆಳೆಯುತ್ತಿರುವಾಗ ನಮ್ಮ ಆದ್ಯತೆಗಳತ್ತ ಗಮನ ಹರಿಸುವಂತೆ ಮಾಡುವುದೇ ಏಕಾಗ್ರತೆ. ಯಾವುದಾದರೂ ಒಂದು ಗುರಿಗೆ ಸಂಪೂರ್ಣ ದೃಷ್ಟಿ ನೆಡುವುದೇ ಏಕಾಗ್ರತೆ. .ಏಕಾಗ್ರತೆ ಸಾಧಿಸಲು ಈ ಸೂತ್ರಗಳನ್ನು ಅನುಸರಿಸಿ.ಒಂದು ಸಮಯಕ್ಕೆ ಒಂದೇ ಕೆಲಸಗುರಿಯ ಸಾಧನೆಗೆ ಮಾಡಲೇಬೇಕಾದ ಕೆಲಸಗಳು ಸಾಕಷ್ಟಿವೆ ಅವುಗಳಲ್ಲಿ ಯಾವುದನ್ನು ಮೊದಲು ಮಾಡುವುದು ಎಂಬ ಗೊಂದಲ ಇದ್ದೇ ಇರುತ್ತದೆ. ಹೀಗಾಗಿ ಆದ್ಯತೆಯ ಪ್ರಕಾರ ಕೆಲಸದ ಪಟ್ಟಿ ಮಾಡಿ ಮಹತ್ವದ ಕೆಲಸ ಅನಿವಾರ್ಯ ಕೆಲಸ ಪಟ್ಟಿಗಳನ್ನು ಮಾಡಿ ಅದರಲ್ಲಿ ನಿರ್ಧಿಷ್ಟ ಕೆಲಸವನ್ನು ಕೈಗೆತ್ತಿಕೊಳ್ಳಿ. ಎತ್ತಿಕೊಂಡಿರುವ ಕೆಲಸದ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ. ಹೀಗೆ ತದೇಕ ಚಿತ್ತದಿಂದ ತಲ್ಲೀನರಾಗಿ ಮಾಡಿದ ಕೆಲಸದ ಫಲಿತಾಂಶ ಅತ್ಯದ್ಭುತವಾಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಅತ್ತುತ್ತಮ ಗುಣಮಟ್ಟದ ಕಾರ್ಯ ಬೇರೆಯವರು ನಿಮ್ಮೆಡೆ ಹುಬ್ಬೇರಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಧ್ಯಾನಬೆಂಕಿಯಿAದ ಕಬ್ಬಿಣ ಮೃದುವಾಗುವಂತೆ ಧ್ಯಾನದಿಂದ ಏಕಾಗ್ರತೆ ಹದಕ್ಕೆ ಬರುತ್ತದೆ. ಮನುಷ್ಯನಿಗೆ ಉಸಿರಾಡಲು ಹೇಗೆ ಆಮ್ಲಜನಕವೋ ಹಾಗೆ ಗುರಿಯ ಸಾಧನೆಗೆ ಏಕಾಗ್ರತೆ ಅವಶ್ಯಕ. ಪ್ರತಿದಿನ ಧ್ಯಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಎನ್ನುವುದು ಈಗಾಗಲೇ ಸಂಶೋಧನೆಗಳಿAದ ಸಾಬೀತಾದ ಸಂಗತಿ. ಕ್ಷಣ ಕ್ಷಣಕ್ಕೂ ಹೊಯ್ದಾಡುವ ಮನಸ್ಸನ್ನು ಒಂದೆಡೆ ಹಿಡಿದಿಡಲು ಧ್ಯಾನ ಸಹಕಾರಿ. ದ್ಯಾನ ನಮ್ಮ ಧಾರಣ ಶಕ್ತಿಯನ್ನು ಹೆಚ್ಚಿಸುತ್ತದೆ. ಎಂಥ ಚಂಚಲ ಸ್ವಭಾವದವರಾದರೂ ಸರಿ ಜಾಗರೂಕರಾಗಿ ಮೈ ಕೊಡವಿಕೊಂಡು ನಿಲ್ಲುವಂತೆ ಮಾಡಲು ಧ್ಯಾನ ಸಹಾಯಕ ಬದುಕು ಒಂದು ಸುಂದರ ಗೆಲುವುಗಳ ಮುತ್ತಿನ ಹಾರ. ವಿವಿಧ ಬಣ್ಣಗಳ ಮುತ್ತಿನ ಹಾರ ಪಡೆಯಬೇಕೆಂದು ಬಯಸುವುದಾದರೆ ಧ್ಯಾನ ಅವಶ್ಯಕ. ನೆಪ ಬೇಡನಾನೂ ಏಕಾಗ್ರತೆಯಿಂದ ಚೆನ್ನಾಗಿ ಕೆಲಸ ನಿರ್ವಹಿಸಬೇಕು, ಅಧ್ಯಯನ ನಡೆಸಬೇಕು ಅಂತಿದ್ದೇನೆ ಆದರೆ ನನ್ನ ಮನೆಯ ವಾತಾವರಣ ಸರಿ ಇಲ್ಲ. ಗದ್ದಲಮಯ ಪ್ರದೇಶದಲ್ಲಿ ಚಿತ್ತವನ್ನು ಒಂದೆಡೆ ಕೇಂದ್ರೀಕರಿಸುವುದು ಕಷ್ಟವಾಗುತ್ತಿದೆ. ಎಂಬ ನೂರಾರು ನೆಪಗಳನ್ನು ಹೇಳದಿರಿ. ಕಷ್ಟಪಟ್ಟವನಿಗೆ ಸುಖ ಏನೆನ್ನುವುದು ತಿಳಿಯುತ್ತದೆ.ಮೊದಲು ಐದಾರು ನಿಮಿಷ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವೆನಿಸುತ್ತದೆ. ಮುಂದಿನ ಐದು ನಿಮಿಷ ಮನಸ್ಸನ್ನು ಸ್ವಾಧೀನದಲ್ಲಿರಿಸಿ ಗುರಿಯತ್ತ ನೆಟ್ಟರೆ ಸಾಕು. ಏಕಾಗ್ರತೆ ತಾನೇ ತಾನಾಗಿ ಹೊಂದಿಕೊಳ್ಳುತ್ತದೆ. ಏಕಾಗ್ರತೆಯ ಬಲದಿಂದ ಮಹಾನ್ ಕಾರ್ಯಗಳು ಸಂಭವಿಸಿವೆ. ಜೀವನದಲ್ಲಿ ನೀವು ಈಗ ಹೆಮ್ಮೆಯಿಂದ ಹೇಳಿಕೊಳ್ಳುವ ಅನೇಕ ಮಹತ್ಕಾರ್ಯಗಳು ಏಕಾಗ್ರತೆಯಿಂದಲೇ ಸಾಧಿಸಲ್ಪಟ್ಟಿವೆ ಸಂಕೀರ್ಣಮಯ ಜೀವನವನ್ನು ಸರಳಗೊಳಿಸಿ, ಶ್ರೇಷ್ಠ ಕೆಲಸಗಳಿಗೆ ಏಕಾಗ್ರತೆ ಮುನ್ನುಡಿಯಾಗುತ್ತದೆ. ಬದ್ಧತೆ ಬೆಳೆಸಿಕೊಳ್ಳಿನಮ್ಮ ಮೆದುಳು ಅದ್ಭುತ ಕಾರ್ಖಾನೆಯಿದ್ದಂತಿದೆ. ಒಂದು ಕೆಲಸ ಮಾಡುವಾಗಲೇ ಬೇರೆಲ್ಲ ಕೆಲಸಗಳ ಬಗೆಗೂ ಯೋಚಿಸಬಲ್ಲುದು ತರಕಾರಿ ಹೆಚ್ಚುತ್ತಿರುವ ತಾಯಿ ಹಾಲು ಉಕ್ಕದಂತೆ ನೋಡುತ್ತಾಳೆ. ಹೊರಗೆ ಯಾರೋ ಯಾವುದೇ ವಸ್ತು ಎಲ್ಲಿದೆ ಎಂದು ಕೇಳಿದರೂ ಸರಿಯಾಗಿ ಉತ್ತರಿಸುತ್ತಾಳೆ.ಮೆದುಳಿನ ಕಾರ್ಯದ ಬಗೆಗೆ ಅಚ್ಚರಿಯೆನಿಸುತ್ತದಲ್ಲವೇ? ಇಷ್ಟೆಲ್ಲ ಶಕ್ತಿ ಹೊಂದಿದ ಮೆದುಳಿಗೆ ಒಂದೇ ಕೆಲಸ ಕೊಟ್ಟರೆ ಇನ್ನೂ ಅಚ್ಚುಕಟ್ಟುತನದಿಂದ ಮಾಡಬಲ್ಲದು. ಸೂರ್ಯನ ಕಿರಣಗಳು ಕಾಗದವೊಮದನ್ನು ಸುಡಬಲ್ಲವು. ಆಶ್ಚರ್ಯವೇ! ಸೂರ್ಯನ ಕಿರಣಗಳನ್ನು ಒಂದೆಡೆ ಭೂತಗನ್ನಡಿಯಲ್ಲಿ ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಚದುರಿದ ಕಿರಣಗಳಿಂದ ಅಸಾಧ್ಯ. ಮೆದುಳಿನ ಒಟ್ಟು ಶಕ್ತಿಯನ್ನುೆÆಂದು ಸಮಯದಲ್ಲಿ ಒಂದೇ ಕೆಲಸಕ್ಕೆ ಉಪಯೋಗಿಸುವ ಬದ್ಧತೆ ಬೆಳೆಸಿಕೊಳ್ಳಿ. ದಿನಚರಿ ಬರೆಯಿರಿನೀವು ಏನಾಗಬೇಕೆಂಬುದನ್ನು ಬೇರೆಯವರು ನಿರ್ಧರಿಸುವದಕ್ಕಿಂತ ನೀವೇ ನಿರ್ಧರಿಸಿಕೊಳ್ಳಿ.ದಿನಚರಿ ಬರೆಯುವುದನ್ನು ರೂಢಿಸಿಕೊಂಡರೆ ನಿಮ್ಮ ಆಸಕ್ತಿ ಒಲವು ಅಭಿರುಚಿಗಳು ನಿಮಗೇ ಗೊತ್ತಾಗುತ್ತವೆ. ಆಸಕ್ತಿಯಿದ್ದಲ್ಲಿ ಮನಸ್ಸನ್ನು ಹಿಡಿದಿಡುವುದು ಅವಶ್ಯವಿಲ್ಲ.ಮನಸ್ಸು ತಾನೇ ಆಸಕ್ತಿಯಿಂದ ತೊಡಗಿಕೊಂಡು ಬಿಡುತ್ತದೆ. ಇದರಿಂದ ಏಕಾಗ್ರತೆ ಸುಲಭ ಸಾಧ್ಯವಾಗುವುದು. ಮಾಡುವ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಮಾಡಬಹುದೇ? ಎಂಬ ಸೃಜನಶೀಲತೆನ್ನು ಅಳವಡಿಸಿಕೊಳ್ಳಲು ದಿನಚರಿ ಉಪಯುಕ್ತ.ಟನಲ್ ವಿಷನ್ ಬಳಸಿಎರಡೂ ಅಂಗೈಗಳಿAದ ಕಣ್ಣುಗಳನ್ನು ಮುಚ್ಚಿಕೊಳ್ಳಿ. ನಂತರ ಅಂಗೈಗಳನ್ನು ಕಣ್ಣುಗಳ ಮೇಲಿಂದ ತೆಗೆಯುತ್ತ ಮುಚ್ಚುತ್ತ ಬ್ಲಿಂರ‍್ಸ್ (ಮಿಣುಕು) ತರ ಉಪಯೋಗಿಸಿ.ನಂತರ ನಿಮ್ಮ ದೃಷ್ಟಿಯನ್ನು ನಿಮ್ಮ ಮುಂದಿರುವ ಗುರಿಯತ್ತ ಹೊರಳಿಸಿ. ಕ್ರಮೇಣವಾಗಿ ಮೆದುಳು ಪೂರ್ತಿ ಏಕಾಗ್ರತೆಯನ್ನು ಪಡೆಯುತ್ತದೆ. ನಿಮ್ಮ ಗುರಿಯತ್ತ ದೃಷ್ಟಿ ಕೇಂದ್ರೀಕರಿಸುವ ಈ ಟನಲ್ ವಿಷನ್ ಪ್ರಕ್ರಿಯೆಯನ್ನು ಬಳಸಿ. ತಾಜಾ ಹಣ್ಣು ಸಮತೋಲಿತ ಆಹಾರ ಸೇವಿಸಿಆದರ್ಶ ಕಣ್ಮುಂದಿರಲಿಬರೀ ಅಧ್ಯಯನ ಮತ್ತು ಕೆಲಸ ಎಂದು ಸಮಯ ಕಳೆದರೆ ನೆಚ್ಚಿನ ಆಟ ಆಡುವುದು ಯಾವಾಗ? ಎಂದು ಯೋಚಿಸದಿರಿ. ಆಡುವಾಗ ಮನಸ್ಸು ಆಟದಲ್ಲಿರಲಿ ಅಧ್ಯಯನದಲ್ಲಿರುವಾಗ ಪುಸ್ತಕದಲ್ಲಿರಲಿ.ಆಡುವಾಗ ಅಭ್ಯಾಸದ ಕುರಿತು ಚಿಂತಿಸಿ ಕಿರಕಿರಿಗೊಳಗಾಗದಿರಿ. ಒಂದೇ ಮಾತಿನಲ್ಲಿ ಸ್ಪಷ್ಟಗೊಳಿಸಬೇಕೆಂದರೆ ಟಿವಿ ನೊಡಿ ಕಪಿ ಛೇಷ್ಟೆ ಮಾಡಿ. ಕಂಪ್ಯೂಟರ್ ಗೇಮ್ ಆಡಿ ಇಷ್ಟವಾದ ಸಂಗೀತ ಆಲಿಸಿ ಕುಣಿಯಿರಿ. ಇವು ನಿಮ್ಮನ್ನು ಪುನಃಶ್ಚೇತನಗೊಳಿಸುತ್ತವೆ. ಆದರೆ ಏನೋ ಮಾಡುವಾಗ ಏನೋ ಯೋಚಿಸುತ್ತ ನಿತ್ರಾಣಗೊಳ್ಳದಿರಿ.. ನೀವು ಎಲ್ಲಿದ್ದಿರೋ ಅಲ್ಲಿಯೇ ನಿಮ್ಮ ಮನಸ್ಸು ಇರಲಿ.ಮಾಡುವ ಕೆಲಸ ಬಿಟ್ಟು ಮನಸ್ಸು ಬೇರೆಲ್ಲೂ ಕದಲದಿರಲಿ. ಏಕಾಗ್ರತೆಯಿಂದಲೇ ಇಡಿ ಜಗತ್ತು ಫಲವತ್ತತೆಯನ್ನು ಪಡೆದಿದೆ ಎನ್ನುವುದು ನೆನಪಿರಲಿ. ಏಕಾಗ್ರತೆಗೆ ಅತ್ಯುತ್ತಮ ಉದಾಹರಣೆಯೆಂದರೆ ಸ್ವಾಮಿ ವಿವೇಕಾನಂದರು. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಇಷ್ಟನೇ ಪುಟದಲ್ಲಿ ಹೀಗೇ ಹೇಳಲಾಗಿದೆ ಎಂದು ಹೇಳುವಷ್ಟು ಏಕಾಗ್ರಚಿತ್ತರಾಗಿ ಅಧ್ಯಯನ ನಡೆಸುತ್ತಿದ್ದರು. ಅಂಥ ಆದರ್ಶ ಸಾಧಕರು ಕಣ್ಮುಂದಿರಲಿ.ಪ್ರಯತ್ನಿಸಿ -ಸಾಧಿಸಿಕೆಲಸದ ಒತ್ತಡದಲ್ಲಿ ಕೆಲಸಗಳ ತರಾತುರಿಯಲ್ಲಿ ನಾನೇನು ಮಾಡುತ್ತಿದ್ದೇನೆ ಎಂಬುದರ ಪರಿವೆ ಇರಬೇಕಾದುದು ಅನಿವಾರ್ಯ. ಗುರಿಯೆಡೆಗೆ ಗುರಿಯಿಟ್ಟು ಅತ್ಯುನ್ನತ ಸಾಮರ್ಥ್ಯಕ್ಕೆ ಏರಲು ಏಕಾಗ್ರತೆ ಬೇಕೇ ಬೇಕು. ಅಸಾಧಾರಣವಾದುದನ್ನು ಸಾಧಿಸಲು ಸಾಧಾರಣ ಗುಣಮಟ್ಟದ ಏಕಾಗ್ರತೆ ಸಾಕಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಏಕಾಗ್ರತೆ ಸಾಧಿಸಿದಷ್ಟು ದೊರೆಯುತ್ತದೆ.ನಿಮ್ಮ ಬದುಕನ್ನು ವಿಶೇಷ ಮತ್ತು ಮರೆಯಲಾಗದ್ದನ್ನಾಗಿ ಮಾಡಲು ಏಕಾಗ್ರತೆಯ ಹೆಜ್ಜೆಯು ಕಾಲಾಂತರದಲ್ಲಿ ದೊಡ್ಡ ಪರಿಣಾಮ ಬೀರಬಲ್ಲದು. ಏಕಾಗ್ರತೆ ಇಲ್ಲ ಎಂಬ ಬಲಹೀನತೆಯನ್ನು ಅತಿಕ್ರಮಿಸಲು ಪ್ರಯತ್ನಿಸಿ. ಬರೀ ಗುರಿ ಇಟ್ಟರೆ ಸಾಲದು ಹೊಡೆಯಲೂ ಬೇಕು. ಏಕಾಗ್ರತೆಯ ಬೆನ್ನೇರಿ ಗೆಲುವಿನ ನಗೆ ಬೀರಿ ಏಕಾಗ್ರತೆಯನ್ನು ಸಾಧಿಸಿದರೆ ಗೆಲುವು ಕಟ್ಟಿಟ್ಟ ಬುತ್ತಿ. ಸಾಧನೆಯ ಮೈಲಿಗಲ್ಲು ಸ್ಥಾಪಿಸಲು ಸಾಧ್ಯವಾಗುವುದು. **************************** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ  ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ  ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ  ಸಾಂಸ್ಕೃತಿಕ ಪತ್ರಿಕೆ ` ಸಂಚಯ ‘ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಂದಿವೆ. ಸಂಯುಕ್ತ ಕರ್ನಾಟಕ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ದೊರೆತಿದೆ. ಪತ್ರಿಕೆಗಳಲ್ಲಿ ಕವನಗಳು, ಅಂಕಣ ಬರಹಗಳು ಪ್ರಕಟಗೊಂಡಿವೆ . ಕೆಲವು ಕಥಾಸಂಕಲನ ಹಾಗೂ ಕವನ ಸಂಕಲನಗಳ ಕುರಿತು ಬರೆದ ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು ಎಂ . ಎ. ಮುಗಿಸಿ ಬಂದನಂತರ ಬೇರೆ ಬೇರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ್ದಾರೆ. ಹಾಲಿ ಶಿಕ್ಷಕನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಿಕೊಡ್ಲ  ನಂ  ೨ ಯಲ್ಲಿ  ಸೇವೆ ಸಲ್ಲಿಸುತ್ತಿದ್ದಾರೆ.  ಸದ್ಯ  ` ನೇಪಥ್ಯ ‘ ( ಕವನ ಸಂಕಲನ) ‘ ನನ್ನೊಳಗೆ ನಾನು ‘ ( ಕಥಾಸಂಕಲನ ) ‘ ಸಿಂಧುವಿನಿಂದ ಬಿಂದು ‘ ( ವಿಮರ್ಶಾ ಸಂಕಲ) ಪ್ರಕಟಣೆಯ ಹಾದಿಯಲ್ಲಿದೆ . ………………. ಕಥೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನಾನು ಕವಿ ಅಥವಾ ಕತೆಗಾರನಾಗಬೆಕೆಂಬ ತೆವಲಿಗೆ ಎಂದೂ ಒಳಗಾಗಿಲ್ಲ. ಬೇರೆ ಬೇರೆ ಹಿರಯ ಕವಿ ಕಥೆಗಾರರನ್ನು ಓದಿದ ಹಿನ್ನೆಲೆಯಲ್ಲಿ ಸುತ್ತಲಿನ ಸಮುದಾಯದ ನೋವು – ನನ್ನ ನೋವು ,ನಲಿವುಗಳೊಂದಿಗೆ ತಾದಾತ್ಮ್ಯ ಹೊಂದಿದಾಗ ನನ್ನೊಳಗಿನ ಸಹಜವಾದ ಕವಿತ್ವದ ಪ್ರಜ್ಞೆ ಜಾಗ್ರತ ಗೊಂಡು ಅದು ಭಾಷೆಯ ನೆಲೆಯಲ್ಲಿ ಅಕ್ಷರ ರೂಪ ಪಡೆದಾಗ ಅದು ಕವನವಾಗಬಹುದು , ಅಥವಾ ಅದು ಸಂಭಾಷಣೆ, ವಿವರಣೆ ,ವಿಶ್ಲೇಷಣೆ , ನೀರೂಪಣೆಗಳನ್ನೊಳಗೊಂಡ ಪಾತ್ರಗಳ ರೂಪವನ್ನು ಪಡೆದಾಗ ಅದು ಕಥೆ ಕೂಡಾ ಆಗಬಹುದು. ಆದರೆ ಕಥೆ ಅಥವಾ ಕವಿತೆಗಳಿಗೆ ಸಂಬಂಧಿಸಿದ ಸಂಗತಿಗಳು ಒಮ್ಮೆ ಹುಟ್ಟಿ , ಹಲವಾರು ದಿನಗಳವರೆಗೆ ಮತ್ತೆ ಮತ್ತೆ ಕಾಡಿದಾಗ ಅದು ಆಯಾ ರೂಪದಲ್ಲಿ, ಅನಾವರಣಗೊಂಡು ಸಫಲ ಪ್ರಸವದ ಆನಂದಾನುಭೂತಿಯನ್ನು ಆ ಕ್ಷಣಕ್ಕೆ ನೀಡುತ್ತದೆಯಷ್ಟೆ . ಕಥೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ನನ್ನ ದೃಷ್ಟಿಯಲ್ಲಿ ಅದಕ್ಕೆ ಇಂತಹುದೇ ಕ್ಷಣ ಅಂತೇನೂ ಇಲ್ಲ. ನಾನು ಕ.ವಿ.ವಿ ಧಾರವಾಡದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಎಂ. ಎ. ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳಾದ  ದಿ. ಡಾ. ಎಂ. ಎಂ.ಕಲ್ಬುರ್ಗಿ ಸರ್ ರವರು ಒಮ್ಮೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಮಾತನಾಡುತ್ತಾ ‘ ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯ ‘ ಎಂದಿದ್ದು ಈಗಲೂ ನೆನಪಿದೆ. ಅಂತಹ ಅನುಭವಗಳು ಕಥೆ ಅಥವಾ ಕವನವಾಗಬಲ್ಲ ಸಾಹಿತ್ಯಕ ಅನುಭೂತಿಯನ್ನು ಹೊಂದಿ ಗಾಢವಾಗಿ ಕಾಡಿದಾಗ ಅದು ಕತೆ ಅಥವಾ ಕವಿತೆಯಾಗಿ ರೂಪು ತಳೆಯುತ್ತದೆ ಅಷ್ಟೇ.  ನಿಮ್ಮ ಕಥೆಗಳ ವಸ್ತು , ವ್ಯಾಪ್ತಿ ಹೆಚ್ಚಾಗಿ ? ಪದೇ ಪದೇ ಕಾಡುವ ವಿಷಯ ಯಾವುದು ?.  ಬದುಕು ..! ಎಲ್ಲಾ ಲೇಖಕರ ಹಾಗೆಯೇ ನನ್ನ ಕಥೆಗಳ ವಸ್ತು ಮತ್ತು ವ್ಯಾಪ್ತಿ ಬದುಕಿಗೆ ಸಂಬಂಧಿಸಿದ ಸಂಗತಿಗಳೇ ಆಗಿವ. ಈ ಬದುಕಿನಲ್ಲಿ ಪ್ರೀತಿ ಯಿದೆ,ಪ್ರೇಮವಿದೆ,ನಂಬಿಕೆ – ವಿಶ್ವಾಸಗಳಿವೆ, ಅಲ್ಲಿ ವಂಚನೆ , ಮೋಸ , ದ್ರೋಹ , ಹಿಂಸೆ , ದೌರ್ಜನ್ಯಗಳಿವೆ .ಹಾಗೆನೆ ಪ್ರಾಮಾಣಿಕತೆ ಕೂಡ ಇವೆ . ಇವೆಲ್ಲವೂ ಸಂದರ್ಭಾನುಸಾರ ಕಥೆಯ ವಸ್ತುಗಳಾಗುತ್ತವೆ .   ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಸುರುವಾಗಿದೆ. ಅದೆಂದರೆ ಹೇಗಾದರೂ ಸರಿಯೆ ಹಣಮಾಡಬೇಕು . ಅದರಿಂದ ನಮ್ಮ ಸಮಾಜ ಅದರಲ್ಲೂ ನಮ್ಮ ಯುವ ಜನಾಂಗ ಹಣದ ಹಿಂದೆ ಬಿದ್ದಿದೆ . ಮನುಷ್ಯತ್ವ, ಮಾನವೀಯತೆ , ಪ್ರೀತಿ ,ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆಯೆಂದರೆ ತಪ್ಪಾಗದು . ಮಾನವೀಯ ಮೌಲ್ಯಗಳ ಕುರಿತು ಮಾತನಾಡುವವರು ಎಂದರೆ ಒಂಥರಾ ಹುಚ್ಚರಹಾಗೆ ಅನ್ನುವ ಹಂತಕ್ಕೆ ನಮ್ಮ ಸಾಮಾಜಿಕ ಬದುಕು ತಲುಪಿದೆ . ಇದು ನಮ್ಮ  ಒಟ್ಟಾರೆ ವ್ಯವಸ್ಥೆಯ ದುರಂತವೇ ಸರಿ . ತಮ್ಮ ಮಕ್ಕಳ ಬದುಕನ್ನು ಗಟ್ಟಿಗೊಳಿಸಲು ಬದುಕಿನುದ್ದಕ್ಕೂ ಹೆಣಗಾಡುವ ತಂದೆತಾಯಿಗಳು , ಅದರೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ತಂದೆತಾಯಿಗಳನ್ನು ತಿರಸ್ಕರಿಸುವುದು ಒಂದುಕಡೆಯಾದರೆ , ವಯಸ್ಸಿಗೆ ಬಂದ ಮಗ ತನ್ನ ತಂದೆತಾಯಿ , ಸಹೋದರ, ಸಹೋದರಿಯರ ಬದುಕಿಗಾಗಿ ತನ್ನ ವಯಕ್ತಿಕ ಬದುಕನ್ನು ಮರೆತು ರಕ್ತವನ್ನು ಬೆವರಿನರೂಪದಲ್ಲಿ ಚೆಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಸಂದರ್ಭದಲ್ಲೂ ಅಂತವರಿಗೆ ಕುಟುಂಬದ ಎಲ್ಲರಿಂದಲೂ ಆಗುವ ವಂಚನೆ ನೀಡುವ ನೋವುಗಳು ಗಾಢವಾಗಿ ಕಾಡಿದಾಗ ಅವುಗಳು ಕಥೆಗಳಿಗೆ ಗಟ್ಟಿ ವಸ್ತುಗಳಾಗುತ್ತವೆ .   ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಾಮಾಣಿಕತೆ, ಪ್ರೀತಿ , ಪ್ರೇಮ, ವಿಶ್ವಾಸ, ನಂಬಿಕೆಗಳಿಗೆ ವಿರುದ್ಧವಾಗಿ ಎಸಗುವ ದ್ರೋಹ, ವಂಚನೆ , ಮೋಸ ಇದೆಯಲ್ಲಾ ..ಇವುಗಳು ಯಾವುದೇ ರೀತಿಯ ಹಿಂಸೆ, ದೌರ್ಜನ್ಯಗಳಿಗಿಂತಲೂ ಭೀಕರ ಎನಿಸುತ್ತವೆ . ಈ ಮುಂತಾದ ಸಂಗತಿಗಳೆಲ್ಲವೂ ನನ್ನ ಕಥೆಗಳಿಗೆ ವಸ್ತುವಾಗುತ್ತವೆ . ಹಾಗೇನೇ ಅತಿಯಾದ ಮದ್ಯಪಾನ ಮುಂತಾದ ದುಶ್ಚಟಗಳು , ಅವುಗಳಿಂದ ಬದುಕಿಗಾಗುವ ಹಾನಿ ಇವೆಲ್ಲವೂ ಕೆಲವು ಸಂದರ್ಭಗಳಲ್ಲಿ ವಸ್ತುವಾಗಿವೆ . ಕಥೆ , ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯೇ  ? ಯಾಕಿಲ್ಲ ..? ಪ್ರತಿಯೊಬ್ಬ ಬರಹಗಾರನ ಬರವಣಿಗೆಯಲ್ಲೂ ಕೂಡ ಅವನ ಬಾಲ್ಯ ಮತ್ತು ಹರಯದ ಅನುಭವಗಳು ಇಣುಕಿನೋಡುತ್ತವೆ . ನನ್ನ ಬರವಣಿಗೆಯೂ ಕೂಡ ಅದಕ್ಕೆ ಹೊರತಾಗಿಲ್ಲ . ನಾನು ಬರೆದ ಪ್ರೇಮ ಕವನವೊಂದನ್ನು ಓದಿದ ಬಿಜಾಪುರ ಜಿಲ್ಲೆಯ ನನ್ನ ಎಂ. ಎ. ಸಹಪಾಠಿಯೊಬ್ಬರು ಇದು ನನ್ನ ಬದುಕಿನ ಸಂದರ್ಭಕ್ಕೆ ಸಂಬಂಧಿಸಿದಂತೆ ಇದೆ , ಎಂದಾಗ ನಾನು ಆಶ್ಚರ್ಯಗೊಂಡಿದ್ದೆ. ನನ್ನ ಬಾಲ್ಲದ ದಿನಗಂಳಿದ ಹಿಡಿದು ನಾನು ಶಿಕ್ಷಣ ಪಡೆದು ವ್ರತ್ತಿ ಜೀವನಕ್ಕೆ ಬರುವಲ್ಲಿಯವರೆಗೆ ನನ್ನನ್ನು ,ನಮ್ಮ ಕುಟುಂಬವನ್ನು ಕಾಡಿದ ಅತ್ಯಂತ ನಿಕ್ರಷ್ಟ ಎನ್ನಬಹುದಾದ ಬಡತನ , ನಾನು ಶಿಕ್ಷಣ ಪಡೆಯುವುದಕ್ಕಾಗಿ ನಡೆಸಿದ ಹೋರಾಟ , ಆ ಸಂದರ್ಭಗಳಲ್ಲಿ ಮಹಾತ್ಮರೊಬ್ಬರು ನನ್ನನ್ನು ಕೈಹಿಡಿದು ನಡೆಸಿದ್ದು ಇನ್ನೂ ಮುಂತಾದ ಸಂಗತಿಗಳು, ಅಭವಗಳು , ನನ್ನ ಬರವಣಿಗೆಯಲ್ಲಿ ಇಣುಕಿಹಾಕಲೆಬೇಕಲ್ಲ.  ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು   ? ಇದು ತೀರಾ ಕ್ಲಿಷ್ಟಕರ ಪ್ರಶ್ನೆ ಎನ್ನಬೇಕಾಗುತ್ತದೆ . ಯಾಕೆಂದರೆ ಧರ್ಮದ ಕುರಿತು ಮಾತನಾಡುವಷ್ಟು ಧರ್ಮ ಸೂಕ್ಷ್ಮವನ್ನರಿತ ಧರ್ಮಜ್ಞ ನಾನಲ್ಲ. ಹಾಗೆ ನೋಡಿದರೆ ಧರ್ಮಕ್ಕಿಂತಲೂ ಮೊದಲು ಹುಟ್ಟಿದವ ಮನುಷ್ಯ . ಅವನ ನಂತರ ಅವನಿಂದಲೇ ಅಂದರೆ ಮನುಷ್ಯನಿಂದ ಹುಟ್ಟಿದ್ದು ಧರ್ಮ. ಕಾಡಿನಿಂದ ನಾಡಿನೆಡೆಗೆ , ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಮಾನವ ಹೆಜ್ಜೆಯಿಟ್ಟು ಅಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಮೇಲೆ ಹುಟ್ಟಿಕೊಂಡದ್ದು ಧರ್ಮ. ಮನುಷ್ಯ ತನ್ನ ವಯಕ್ತಿಕ ಹಾಗೂ ಸಾಮುದಾಯಿಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವುದಕ್ಕಾಗಿ , ಹೆಚ್ಚು ಮೌಲ್ಯಯುತಗೊಳಿಸಿಕೊಳ್ಳುವುದಕ್ಕಾಗಿ ಒಂದರ್ಥದಲ್ಲಿ ಹೆಚ್ಚು ಅರ್ಥಪೂರ್ಣ ಗೊಳಿಸಿಕೊಳ್ಳುವುದಕ್ಕಾಗಿ ಆ ಕಾಲದಲ್ಲಿ ಅವನು ಕಂಡುಕೊಂಡ ಸುಲಭ ಸಾಧನ ಧರ್ಮ.    ಆದರೆ ಇಂದು ಏನಾಗುತ್ತಿದೆ  ? ಧರ್ಮ ಮನುಷ್ಯನ ಜೀವನದಮೇಲೆ ಸವಾರಿಮಾಡುವಷ್ಟು ಪ್ರಭಲವಾಗಿ ಬೆಳೆದುನಿಂತಿದೆ . ಇದು ಕೇವಲ ನಮ್ಮ ದೇಶದ ವಿದ್ಯಮಾನವಷ್ಟೆ ಅಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ . ಇಂದು ಧರ್ಮದ ಕಾರಣದಿಂದಾಗಿ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಬದುಕು ವಿಕ್ರತಗೊಳ್ಳುತ್ತಿವೆ …ಸಂದಿಗ್ಧತೆಗೆ ಒಳಗಾಗಿದೆ . ಇಂತಹ ಬೆಳವಣಿಗೆ ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನಕ್ಕೆ ತಕ್ಕುದಾದ ಬೆಳವಣಿಗೆಯಂತೂ ಅಲ್ಲ. ಸ್ವಾಮಿ ವಿವೇಕಾನಂದರು ಧರ್ಮ ಮತ್ತು ದೇವರ ಕುರಿತು ಹೇಳುವಾಗ ..’ ವಿಧವೆಯರ ಕಣ್ಣೀರು ಒರೆಸದ , ಹಸಿದವನಿಗೆ ತುತ್ತು ಅನ್ನವ ನೀಡದ ದೇವರು ಮತ್ತು ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ. ಯಾವುದು ನಮ್ಮಲ್ಲಿಯ ಮಾನವೀಯ ಪ್ರಜ್ಞೆ ಯನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆಯೋ ಅದು ಧರ್ಮ. ಪರಸ್ಪರ ಪ್ರೀತಿ , ವಿಶ್ವಾಸ , ನಂಬಿಕೆ , ಪ್ರಾಮಾಣಿಕತೆ ಇವೇ ಅದರ ತಳಹದಿ . ಇವುಗಳಿಗೆ ಧಕ್ಕೆತರುವಂತ ಸಂಗತಿಗಳೆ ಅಧರ್ಮ. ನಾನು ಬದುಕುತ್ತಾ ನನ್ನೊಂದಿಗೆ ಇನ್ನುಳಿದ ಎಲ್ಲರನ್ನೂ ಬದುಕಲು ಬಿಡುವುದೇ ಧರ್ಮ .ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ.   ಇನ್ನು  ‘ ದೇವರು ‘ ಕುರಿತು ಹೇಳುವುದಾದರೆ ‘ ದೇವರು ‘ ಇದ್ದಾನೆ ಎಂಬ ನಂಬಿಕೆ ಹೊಂದಿದವರೆಲ್ಲಾ ಆಸ್ತಿಕ ಗುಂಪಿಗೆ ಸೇರಿದರೆ ‘ ದೇವರ ‘ ಅಸ್ತಿತ್ವದ ಕುರಿತು ಸಂಶಯಪಡುವವರೆಲ್ಲಾ ನಾಸ್ತಿಕ ಗುಂಪಿಗೆ ಸೇರಿಬಿಡುತ್ತಾರೆ . ಇದು ಪ್ರಪಂಚ ಇರುವತನಕ ಮತ್ತು ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಇರುವಲ್ಲಿಯ ತನಕ ಮುಂದುವರೆಯುವ ಚರ್ಚೆಯಾಗಿದೆ . ‘ ದೇವರು ‘ ಇದ್ದಾನೆಯೇ ಎನ್ನುವುದು ಅವರವರ ಸ್ವಯಂ ಅನುಭವವೇದ್ಯವಾದ ಸಂಗತಿಯಾಗಿದೆ . ಇನ್ನು ನನ್ನ ದ್ರಷ್ಟಿಯಲ್ಲಿ ನಾನು ಕಷ್ಟದಲ್ಲಿದ್ದಾಗ ಯಾರು ನನ್ನನ್ನು ಕೈಹಿಡಿದು ನಡೆಸಲು ಪ್ರಯತ್ನಿಸುತ್ತಾರೋ , ನಾನು ಸಾವು ಬದುಕುಗಳನಡುವೆ ಹೋರಾಡುತ್ತಿರುವಾಗ ಕಾಳಜಿಯಿಂದ ನನ್ನನ್ನು ಉಳಿಸಲು ಪ್ರಾಮಾಣಿಕವಾಗಿ ಹೆಣಗಾಡುತ್ತಾರೆಯೋ ಅವರೇ ನನ್ನ ಪಾಲಿಗೆ ದೇವರು . ಯಾಕೆಂದರೆ ಅವರು ಮಾತ್ರ ನಾನು ಕಾಣಲು ಸಾಧ್ಯವಾಗುವ ಸತ್ಯದ ದೇವರಾಗಿರುತ್ತಾರೆ . ಇದಕ್ಕೆ ಹೊರತಾದ ಅನ್ಯ ವಿಚಾರ ‘ ದೇವರ ‘ ಕುರಿತಂತೆ ನನ್ನಲ್ಲಿಲ್ಲ.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು  ? ನಿಮ್ಮ ಈ ಪ್ರಶ್ನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಆದರೂ ಈ ದೇಶದ ಪ್ರಜೆಯಾಗಿ , ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ಒಳಪಟ್ಟ ಒಬ್ಬ ಜವಾಬ್ದಾರಿಯುತ ಮತದಾರನಾಗಿ ನಿಮ್ಮ ಪ್ರಶ್ನೆಗೆ ಕೆಲವು ಮಿತಿಗೆ ಒಳಪಟ್ಟು ಪ್ರತಿಕ್ರಿಯಿಸಬಹುದು ಎಂದುಕೊಳ್ಳುತ್ತೇನೆ .   ಇತ್ತೀಚಿನ ದಿನಗಳಲ್ಲಿ ಬದುಕಿನ ಎಲ್ಲಾ ಸ್ತರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಲಾಗುತ್ತಿವೆ . ಅದು ರಾಜಕೀಯ ಕ್ಷೇತ್ರಕ್ಕೂ ಹೊರತಾಗಿಲ್ಲ. ಮಹಾನ್ ರಾಷ್ಟ್ರೀಯ ಚಿಂತಕರನ್ನು ,ಯಾವುದೇ ವಿಧದ ಧಾರ್ಮಿಕ, ಸಾಮಾಜಿಕ ತಾರತಮ್ಯವಿಲ್ಲದ ಸರ್ವಜನಾಂಗದ ಹಿತಚಿಂತಕರುಗಳನ್ನು ರಾಷ್ಟ್ರದ ರಾಜಕೀಯ ನೇತಾರರುಗಳನ್ನಾಗಿ ಪಡೆದ ದೇಶ ಇದು . ಆದರೆ ಇಂದು ಈ ದೇಶದ ರಾಜಕೀಯ, ಸಾಮಾಜಿಕ ಜೀವನ ಹಾಗಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಶಕ್ತರಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ .   ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ರಾಜಕೀಯದ ಮೂಲಕ ರಾಷ್ಟ್ರ ಸೇವೆ , ಸಮಾಜ ಸೇವೆ ಎನ್ನುವ ಮಾತು ಕೇವಲ ಸವಕಲು ನಾಣ್ಯಗಳಾಗಿವೆ ಎನಿಸುವುದಿಲ್ಲವೆ  ? ಅವರು ಅಷ್ಟು ಹಾಳುಗೆಡವಿದ್ದಾರೆ , ಅಕ್ಕಾಗಿ ಇವರು ಇಷ್ಟು ಕುಲಗೆಡಿಸುತ್ತಾರೆ …ಅದನ್ನೆಲ್ಲಾ ಪ್ರಶ್ನಿಸಲು ನೀವುಗಳು ಯಾರು  ? ಎಂಬ ಪ್ರಶ್ನೆಗಳು ಹೊರಬೀಳುತ್ತಿರುವುದನ್ನು ನಾವು ಕೇಳುತ್ತಿದ್ದೇವೆ .   ಹಾಗೆ ನೋಡಿದರೆ ನಮಗೆ ತೀರಾ ಪುಕ್ಕಟೆಯಾಗಿ ದೊರೆತ ಮತದಾನದ ಹಕ್ಕೂ ಕೂಡ ಇಂದಿನ ವಿದ್ಯಮಾನಗಳಿಗೆ ಕೆಲಮಟ್ಟಿಗೆ ಕಾರಣವಾಗಬಹುದೇನೊ ? ಯಾಕೆಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿಯ ಪ್ರಜೆಗಳು ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯ ( ಮತದಾನದ ) ಹಕ್ಕು ,

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಡಾ.ಪಾರ್ವತಿ ಜಿ.ಐತಾಳ್ ಅವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಈ ಅಂಕಣದಲ್ಲಿ ಅನ್ಯವಾಷೆಗಳಿಂದ ಕನ್ನಡಕ್ಕೆಅನುವಾದಗೊಂಡ ಕೃತಿಗಳ ಓದಿಗೆ ಪೂರಕವಾಗಿ ಅವುಗಳ ಪರಿಚಯ ಮಾಡಿಕೊಡಲಿದ್ದಾರೆ ಕೊಸಿಮೊ ಕೊಸಿಮೊ ( ಕಾದಂಬರಿ)ಮೂಲ : ಇಟಾಲೋ ಕಾಲ್ವಿನೊಕನ್ನಡಕ್ಕೆ : ಕೆ.ಪಿ.ಸುರೇಶಪ್ರ : ಅಭಿನವಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೧೦೦ ಪುಟಗಳು : ೨೧೬ ಜಗತ್ಪ್ರಸಿದ್ದ  ಲೇಖಕ ಇಟಾಲೋ ಕಾಲ್ವಿನೋ ಅವರ  ಕಾದಂಬರಿಯ ಇಂಗ್ಲಿಷ್ ಅನುವಾದ ‘ದಿ ಬ್ಯಾರನ್ ಇನ್ ದ ಟ್ರೀಸ್’ ಇದನ್ನು ಸುರೇಶ್ ಅವರು ‘ಕೊಸಿಮೋ’ಎಂಬ ಅದರ ನಾಯಕನ ಹೆಸರಿನ ಶೀರ್ಷಿಕೆಯಿಂದ ಅನುವಾದಿಸಿದ್ದಾರೆ. ಬಹಳ ವಿಶಿಷ್ಟವಾದ ಒಂದು ಕಥಾವಸ್ತುವನ್ನು ಹೊಂದಿದ ಕಾದಂಬರಿಯಿದು.  ಮಹಾ ಛಲವಾದಿ ಕೊಸಿಮೊ ತನ್ನ ಹನ್ನೆರಡನೆಯ ವಯಸ್ಸಿನಲ್ಲೇ ಯಾವುದೋ ಕಾರಣಕ್ಕೆ ತಂದೆಯ ಮೇಲೆ ಮುನಿಸಿಕೊಂಡು ಮರವೇರಿ ಕುಳಿತು, ಇನ್ನು ಮುಂದೆ ಎಂದಿಗೂ ನೆಲದ ಮೇಲೆ ಕಾಲಿಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದವನು ಕೊನೆಯ ತನಕವೂ ತನ್ನ ಮಾತನ್ನು ಉಳಿಸಿಕೊಳ್ಳುತ್ತಾನೆ.  ಮನುಷ್ಯನೊಬ್ಬ ನೆಲದ ವ್ಯವಹಾರಗಳನ್ನು ಪೂರ್ತಿಯಾಗಿ ಬಿಟ್ಟು  ಮರದ ಮೇಲೆಯೇ, ನಿಸರ್ಗದ ಒಂದು ಅವಿಭಾಜ್ಯ ಅಂಗವಾಗಿ ಹೇಗೆ ಯಶಸ್ವಿಯಾಗಿ ಬದುಕಲು ಸಾಧ್ಯವೆಂಬುದನ್ನು ಈ ಕಥೆ ತೋರಿಸಿ ಕೊಡುತ್ತದೆ. ಕೊಸಿಮೊ ಹುಟ್ಟಿದ್ದು ಪ್ರತಿಷ್ಠಿತ ಜಮೀನ್ದಾರಿ ಕುಟುಂಬದಲ್ಲಿ. ಅಧಿಕಾರ-ಪ್ರತಿಷ್ಠೆಗಳೇ ಮುಖ್ಯವೆಂದು ತಿಳಿದುಕೊಂಡ ತಂದೆಯ ಅಹಂಕಾರವನ್ನು ಮೆಟ್ಟಿ ಮೇಲೇರಿ ನಿಂತು, ಬಡವರ ಬಂಧುವಾಗಿ, ಅಸಹಾಯಕರಿಗೆ ಸಹಾಯ ಮಾಡುತ್ತ ಆಕಾಶದೆತ್ತರಕ್ಕೆ ಬೆಳೆಯುವ ಕೊಸಿಮೋನ ಬದುಕಿನ ಕಥೆ ಬಹಳ ರೋಮಾಂಚಕ. ಮರದ ಮೇಲಿನ ಮನುಷ್ಯನೆಂದು ಇಡಿಯ ಭೂಖಂಡದಲ್ಲಿ ಪ್ರಸಿದ್ಧಿ ಪಡೆಯುವ ಕೊಸಿಮೊ ಎಂದರೆ ಆತನ ತಮ್ಮ ( ಈ ಕಥೆಯ ನಿರೂಪಕ) ನಿಗೂ ಎಲ್ಲಿಲ್ಲದ ಹೆಮ್ಮೆ. ತಮ್ಮನ ಸಹಾಯದಿಂದ ಮರದ ಮೇಲಿನ ಬದುಕಿಗೆ ಎಲ್ಲ ಸೌಕರ್ಯಗಳನ್ನು ಮಾಡಿಕೊಳ್ಳುವ ಕೊಸಿಮೊ ಮರದಿಂದ ಮರಕ್ಕೆ ಕೋತಿಯಂತೆ ಹಾರುತ್ತ, ನೇತಾಡುತ್ತ ಸರಾಗವಾಗಿ  ಓಡಾಡುತ್ತ, ದೂರಗಳನ್ನು ಕ್ರಮಿಸಲು ಕಲಿಯುವುದೇ ಒಂದು ಸೋಜಿಗ. ನೆಲವನ್ನು ಮುಟ್ಟಲು ಬಂದೂಕು-ಕಠಾರಿಗಳನ್ನು ಹಿಡಿದು ಯುದ್ಧವನ್ನೂ ಮಾಡಬಲ್ಲ, ಎದುರಾಳಿಗಳನ್ನು ಕಾಳಗದಲ್ಲಿ ಸೋಲಿಸ ಬಲ್ಲ ಆತನ ಧೈರ್ಯ-ಸಾಹಸ-ಸಾಮರ್ಥ್ಯಗಳು ಬೆರಗು ಹುಟ್ಟಿಸುತ್ತವೆ.  ಆತನಿಂದ ಆಕರ್ಷಿತರಾಗುವ ಅನೇಕ ಹೆಣ್ಣುಮಕ್ಕಳೊಂದಿಗೆ ಪ್ರಣಯದ ಅನುಭವಗಳನ್ನೂ ಕೊಸಿಮೊ ಪಡೆಯುತ್ತಾನೆ. ಸಂಸಾರ ಸುಖವೊಂದನ್ನು ಬಿಟ್ಟರೆ  ನೆಲದ ಮೇಲಿನ ಮನುಷ್ಯರಷ್ಟೇ ಸುಖ ಪಡೆದು, ಮಾತ್ರವಲ್ಲ, ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಸಾಧನೆಗಳನ್ನು ಅವನು ಮಾಡುತ್ತಾನೆ. ಒಂದಾದ ನಂತರ ಇನ್ನೊಂದರಂತೆ ವಿವಿಧ ವಿಷಯಗಳಿಗೆ ಸಂಬಂಧ ಪಟ್ಟ ಪುಸ್ತಕಗಳನ್ನೂಓದುವ ಕೊಸಿಮೊ ಮಹಾಜ್ಞಾನಿಯೂ ಆಗುತ್ತಾನೆ. ತನ್ನ ಓದಿನ ಹುಚ್ಚನ್ನು ಕುಪ್ರಸಿದ್ಧನಾದ ಒಬ್ಬ ದರೋಡೆಕೋರನಿಗೂ ಅಂಟಿಸಿ ಅವನನ್ನೊಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ಪರಿವರ್ತಿಸುತ್ತಾನೆ.  ಆದರ್ಶ ರಾಜ್ಯವೆನಿಸಿದ ಯುಟೋಪಿಯಾವನ್ನು ಪುನರ್ನಿರ್ಮಿಸುವ ಪ್ರಯತ್ನವನ್ನು ಇಟಾಲೋ ಕಾಲ್ವಿನೋ ಇಲ್ಲಿ ಮಾಡುತ್ತಾರೆ. ಆದ್ಯಕಾಲದ ಇಂಗ್ಲಿಷ್ ಕಾದಂಬರಿಕಾರರಾದ ರಿಚರ್ಡ್ಸನ್ ಮತ್ತು ಫೀಲ್ಡಿಂಗರ ನೈತಿಕತೆ ಮೇಲೆ ಒತ್ತುನೀಡುವ ಕಾದಂಬರಿಗಳ ನಾಜೂಕಾದ ಅಣಕವೂ ಇಲ್ಲಿದೆ. ಒಟ್ಟಿನಲ್ಲಿ ಕೊಸಿಮೊನ ಕಥೆ  ಒಂದು ರೀತಿಯ ಫ್ಯಾಂಟಸಿ ಶೈಲಿಯಲ್ಲಿ  ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.  ಕೆ.ಪಿ.ಸುರೇಶ ಅವರು ಕಾದಂಬರಿಯನ್ನು ಬಹಳ ಸುಂದರವಾಗಿ ಅನುವಾದಿಸಿದ್ದಾರೆ.  ಅವರ ಭಾಷಾ ಶೈಲಿ, ವಾಕ್ಯ ಸರಣಿ, ಪದಬಳಕೆಗಳಲ್ಲಿ ಕನ್ನಡದ ಸಹಜತೆ ಬಹಳ ಆಪ್ಯಾಯಮಾನವಾಗಿ ಮೂಡಿ ಬಂದಿದೆ. ********************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸಂಗಾತಿಯ ಮೌನ ಪಂಡಿತ್ ರವಿಶಂಕರ್ ನಿಧನರಾದಾಗ ಅವರ ಸಂಗೀತ ಪ್ರತಿಭೆ, ಪ್ರಯೋಗಶೀಲತೆ, ಪ್ರಶಸ್ತಿಗಳನ್ನು ಮೆಚ್ಚುವ ಬರೆಹಗಳು ಪ್ರಕಟವಾದವು. ಕೆಲವು ಪತ್ರಿಕೆಗಳು ಮಾತ್ರ ಅವರ ಖಾಸಗಿ ಬದುಕಿನ ಬಗ್ಗೆ ಬರೆದವು. ಅಲ್ಲಿ ಅವರ ಪ್ರೇಯಸಿಯರ, ಮಡದಿಯರ ಹಾಗೂ ವಿಚ್ಛೇದನಗಳನ್ನು ಕುರಿತ ಮಾಹಿತಿಯಿತ್ತು. ಈ ಲೇಖನಗಳಿಗೆ ರವಿಶಂಕರ್ ಅವರನ್ನು ಬದನಾಮಿ ಮಾಡುವ ಇರಾದೆ ಏನಿರಲಿಲ್ಲ. ಹೆಸರಾಂತ ಕಲಾವಿದರು ವೈಯಕ್ತಿಕ ಜೀವನದಲ್ಲಿ ತಮ್ಮ ಸಂಗಾತಿಗಳನ್ನು ನಡೆಸಿಕೊಂಡ ವಿಶ್ಲೇಷಣೆಯಿತ್ತು. ಇವುಗಳಲ್ಲಿ ರವಿಶಂಕರರ ಮೊದಲ ಪತ್ನಿಯೂ ಗುರು ಉಸ್ತಾದ್ ಅಲ್ಲಾವುದ್ದೀನಖಾನರ ಪುತ್ರಿಯೂ ಆದ ಅನ್ನಪೂರ್ಣಾ ದೇವಿಯವರು, ರವಿಶಂಕರ್ ತ್ಯಜಿಸಿದ ಬಳಿಕ ತಮ್ಮ ಬದುಕನ್ನು ಮುಂಬೈನ ಫ್ಲಾಟಿನಲ್ಲಿ, ಏಕಾಂತವಾಗಿ ಮೌನವಾಗಿ ದುಗುಡದಲ್ಲಿ ಕಳೆಯುತ್ತಿರುವ ಚಿತ್ರ ಮಾತ್ರ ಕರುಳಿಗೆ ಕಿಚ್ಚಿಡುವಂತಿತ್ತು. ಪ್ರತಿಭಾವಂತ ಕಲಾವಿದೆಯಾಗಿದ್ದ ಅನ್ನಪೂರ್ಣಾ ವಿಚ್ಛೇದನದ ಬಳಿಕ ಸಾರ್ವಜನಿಕ ಕಾರ್ಯಕ್ರಮ ನಿಲ್ಲಿಸಿದರು. ಆಮೆಯಂತೆ ಚಿಪ್ಪಿನಲ್ಲಿ ತಮ್ಮನ್ನು ಒಳಗೆಳೆದುಕೊಂಡು ಬದುಕಲಾರಂಭಿಸಿದರು. ರವಿಶಂಕರ್ ಸಾವಿಗೆ ಅವರ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಯತ್ನಿಸಿದವು. ಅವರು ಯಾರ ಕೈಗೂ ಸಿಗಲಿಲ್ಲ್ಲ. ರವಿಶಂಕರ್ ಯಾಕೆ ಹೀಗೆ ಮಾಡಿದರು? ಸ್ವತಃ ಅನ್ನಪೂರ್ಣಾ ಬದುಕಿನ ಈ ತಿರುವನ್ನು ಯಾಕೆ ಸವಾಲನ್ನಾಗಿ ಸ್ವೀಕರಿಸಲಿಲ್ಲ? ಗಂಡ ಮಾಡಿದ್ದು ವಿಶ್ವಾಸದ್ರೋಹ ಎನಿಸಿತೇ? ಗಂಡನ ಮನೋಭಾವವನ್ನು ಅರಿಯದಂತೆ ನಡೆದುಕೊಂಡ ಪರಿತಾಪವೇ? ನಿಜವೇನೆಂದು ಅವರಿಗಷ್ಟೆ ಗೊತ್ತು. ಆದರೆ ಲೋಕದ ಮುಂದೆ ಹೇಳಲೊಲ್ಲರು. ಅನಕೃ ಅವರ `ಸಂಧ್ಯಾರಾಗ’ ಕಾದಂಬರಿಯಲ್ಲೂ ಹೀಗೇ ಆಗುತ್ತದೆ. ಕಲಾವಿದ ತನ್ನ ಕಲಾಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಹತ್ತುತ್ತ ಹೋಗುತ್ತಾನೆ. ತಾನು ಬಳಸಿ ಕೈಬಿಡುತ್ತ ಹೋಗುವ ಸ್ತ್ರೀಯರ ಬಗ್ಗೆ ಮರಳಿ ಚಿಂತಿಸುವುದೇ ಇಲ್ಲ. ಕಾದಂಬರಿ ಕೂಡ ಈ ಪರಿತ್ಯಕ್ತರ ಬಾಕಿ ಜೀವನದ ಬಗ್ಗೆ ಮೌನತಳೆಯುತ್ತದೆ. ಭೀಮಸೇನ ಜೋಶಿಯವರನ್ನು ಒಳಗೊಂಡಂತೆ ಅನೇಕ ಕಲಾವಿದರ ಜೀವನದ ಬಗ್ಗೆಯೂ ಇಂತಹ ಚಿತ್ರಗಳಿವೆ. ನಮ್ಮ ಕಲಾವಿದರ ಈ ಬದಲಿ ಮುಖಕ್ಕಾಗಿ ಅವರ ಕಲೆಯನ್ನು ನಿರಾಕರಿಸಬೇಕಿಲ್ಲ; ಅವರ ಕಲಾಸಾಧನೆ ಮೆಚ್ಚುವ ಭರದಲ್ಲಿ ಈ ಮುಖವನ್ನು ಅಡಗಿಸಬೇಕಿಲ್ಲ. ಸಾರ್ವಜನಿಕ ಬದುಕಿನಲ್ಲಿ ಪುಟಿಯುವ ನಮ್ಮ ಲೇಖಕರ ಮಡದಿಯರು ಯಾಕೆ ಮಂಕುಹಿಡಿದು ಕೂತಿರುತ್ತಾರೆ ಎಂಬ ಪ್ರಶ್ನೆ ನನಗೆ ಚುಚ್ಚುವುದುಂಟು. ಅದರಲ್ಲೂ ದಂಪತಿಗಳು ಒಂದೇ ವೃತ್ತಿಯಲ್ಲಿದ್ದಾಗ, ಮಡದಿ ತನಗಿಂತ ಪ್ರತಿಭಾವಂತಳಾಗಿದ್ದರೆ, ಪುರುಷಾಸೂಯೆ ನಾನಾ ಪರಿಯಲ್ಲಿ ಪ್ರಕಟವಾಗಲು ತೊಡಗುತ್ತದೆ. ಪ್ರತಿಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ರಮ್ಯ ಹೇಳಿಕೆಯ ಹಿಂದೆ ಕ್ರೂರ ವಾಸ್ತವವೂ ಅಡಗಿದೆ. ಅದು `ಸ್ತ್ರೀತ್ಯಾಗ’ದ ಹೆಸರಲ್ಲಿ ಅವಳ ಚೈತನ್ಯ ಹೀರಿ ಬೆಳೆಯುವ ಗಂಡುಸ್ವಾರ್ಥ. ಗಾಂಧೀಜಿ ಜೀವನದಲ್ಲೂ ಕಸ್ತೂರಬಾಯಿ ಈ ಕಷ್ಟ ಅನುಭವಿಸಿದರು. ಗಾಂಧಿಗೆ ತಮ್ಮ ಅಹಂ ಮಡದಿಯ ಭಾವನೆಯನ್ನು ಘಾಸಿಗೊಳಿಸುತ್ತಿರುವ ಬಗ್ಗೆ ಪರಿತಾಪವಿತ್ತು. ಅನೇಕ ಕೀರ್ತಿವಂತ ಪುರುಷರ ಬಾಳಲ್ಲಿ ಈ ಪರಿತಾಪ ಕಾಣುವುದಿಲ್ಲ. ಎಷ್ಟೊ ಹೆಸರಾಂತ ಲೇಖಕರ ಆತ್ಮಚರಿತ್ರೆಯಲ್ಲಿ ಅವರ ಮಡದಿಯರ ಚಿತ್ರಗಳೇ ಇರುವುದಿಲ್ಲ. ಇದ್ದರೂ ಸಣ್ಣರೇಖೆಯಂತೆ ಬಂದು ಹೋಗುತ್ತದೆ. ಆದರೆ ಇದೇ ಮಡದಿಯರು, ತಮ್ಮ ಸಂಗಾತಿಗಳು ತೀರಿಕೊಂಡ ಬಳಿಕ ಬರೆಯುವ ಆತ್ಮಕಥೆಗಳಲ್ಲಿ, ಬಾಳಿನ ಇನ್ನೊಂದೇ ಸತ್ಯವನ್ನು ಹೊರಹಾಕುವರು. ಹೀಗಾಗಿ ಪ್ರಸಿದ್ಧ ಲೇಖಕರ ಸಂಭಾವನ ಗ್ರಂಥಗಳಲ್ಲಿ ಅವರ ಮಕ್ಕಳು-ಮಡದಿ ಬರೆದಿರುವುದು ಸ್ವಾರಸ್ಯಕರ ಮಾತ್ರವಲ್ಲ, ಮಹತ್ವದ್ದು ಕೂಡ. ಅಲ್ಲಿ ಸಾಮಾನ್ಯವಾಗಿ ಪತಿಯೇ ಪರಮೇಶ್ವರ ಎಂದು ತಮ್ಮನ್ನು ಸಲ್ಲಿಸಿಕೊಂಡಿರುವ ಧೋರಣೆಯ ಲೇಖನಗಳಿರುತ್ತವೆ. ಅವುಗಳ ಒಳಗೆಯೇ ಪತಿದೇವರು ನಿತ್ಯ ಬದುಕಿನಲ್ಲಿ ಎಸಗಿರುವ ಕೃತ್ಯಗಳ, ಸಣ್ಣತನ, ಎಗರಾಟಗಳ ಸೂಕ್ಷ್ಮ ಚಿತ್ರಗಳೂ ಇರುತ್ತವೆ. ಗಂಡನಿಂದ ಹಿಂಸೆಗೀಡಾದ ಮಹಿಳೆಯರು ಬರೆದಿರುವ ಆತ್ಮಕಥನಗಳನ್ನು ಈ ದೃಷ್ಟಿಯಿಂದ ಗಮನಿಸಬೇಕು. ಸಾಮಾನ್ಯವಾಗಿ ಅವು ಗಂಡ ಸತ್ತಮೇಲೆಯೇ ಪ್ರಕಟವಾಗುತ್ತವೆ. ಸಾವಿಗೂ ಸತ್ಯಪ್ರಕಟನೆಗೂ ಇರುವ ಈ ಸಂಬಂಧ ಚೋದ್ಯ ಹುಟ್ಟಿಸುತ್ತದೆ. ಅನ್ನಪೂರ್ಣದೇವಿ, ರವಿಶಂಕರ್ ತೀರಿಕೊಂಡ ಮೇಲೂ ಏನನ್ನೂ ಬರೆಯಲಿಲ್ಲ. ಈ ವೈರುಧ್ಯಗಳಿಗೆ ಕಾರಣವೇನು? ಬರೆಹ ಮತ್ತು ಬದುಕಿನ ನಡುವಣ ನಡೆನುಡಿ ಕಂದಕ? ಜೀವನ ಸಂಗಾತಿಯನ್ನು ಸಮನಾಗಿ ಬೆಳೆಯಲು ಅವಕಾಶಕೊಡದ ಪುರುಷಾಹಮಿಕೆ? ಅಮೀರ್‍ಬಾಯಿ ಕರ್ನಾಟಕಿಯವರ ಜೀವನ ಸಂಗಾತಿಯಾಗಿದ್ದ ಖಳನಟ ಹಿಮಾಲಯವಾಲಾನ ಕುಡಿತ,ಆತ ಕೊಡುತ್ತಿದ್ದ ದೈಹಿಕ ಹಿಂಸೆಗಳು ತನಗೆ ನಿಷ್ಠಳಾಗಿರದ ಹೆಂಡತಿಯ ಮೇಲಿನ ಕೋಪದ ಫಲವೇ ಅಥವಾ ಆಕೆ ಸಾರ್ವಜನಿಕ ಬದುಕಿನಲ್ಲಿ ತನಗಿಂತ ಯಶಸ್ವಿ ಆಗುತ್ತಿದ್ದುದರ ಅಸೂಯೆಯೇ?ಪ್ರಸಿದ್ಧರ ಮನೆಗೆ ಹೋದಾಗಲೆಲ್ಲ ಅವರು ಮಡದಿಯ ಜತೆ ವರ್ತಿಸುವ ರೀತಿ ಕುತೂಹಲ ಹುಟ್ಟಿಸುತ್ತದೆ. ಬಹುಪಾಲು ಮಡದಿಯರು ಚಹಕೊಟ್ಟು ಅತಿಥಿಗಳಿಗೆ ನಮಸ್ಕರಿಸಿ ಅಡುಗೆಮನೆ ಸೇರಿಬಿಡುತ್ತಾರೆ. ಚರ್ಚೆ ಹರಟೆಗಳಲ್ಲಿ ಭಾಗವಹಿಸುವುದಿಲ್ಲ. ವ್ಯಂಗ್ಯವೆಂದರೆ, ಗಂಡನು ಬಂದವರೊಡನೆ ಮಾಡುವ ಚರ್ಚೆ ಕೆಲವೊಮ್ಮೆ ಸ್ತ್ರೀಯರ ಬಗ್ಗೆಯೂ ಇರಬಹುದು. ಕೆಲವು ಮಹಿಳೆಯರಿಗೆ ಚರ್ಚೆಗಳಲ್ಲಿ ಆಸಕ್ತಿ ಇರುವುದಿಲ್ಲ ಎಂದು ವಾದಿಸಬಹುದು. ಆಸಕ್ತಿ ಇರಲೇಬೇಕಿಲ್ಲ, ನಿಜ. ಆದರೆ ಆಸಕ್ತಿ ಹುಟ್ಟಿಸಲು ಅಗತ್ಯವಾದ ಅಭಿವ್ಯಕ್ತಿಯ ಅವಕಾಶ ಸಿಕ್ಕದೆ ಹೋಗಿದೆ ಎನ್ನುವ ವಾಸ್ತವ ಮರೆಯಲಾಗದು. ಸಾರ್ವಜನಿಕ ಚರ್ಚೆಯಲ್ಲಿ ಮಹಿಳೆಯರು ಭಾಗವಹಿಸುವುದರ ಬಗ್ಗೆ ಅಘೋಷಿತ ನಿಷೇಧಗಳು ಎಲ್ಲ ಮನೆಗಳಲ್ಲೂ ವಿಭಿನ್ನ ಪ್ರಮಾಣಗಳಲ್ಲಿ ಜಾರಿಯಲ್ಲಿವೆ. ಇದು ಕಂಡವರ ಮನೆಯ ಕತೆಯಲ್ಲ. ನಮ್ಮ ಮನೆಯ ಕತೆಯೂ ಹೌದು. ನಾಡಿನಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ. ಅವು ಹೆಚ್ಚಾಗುತ್ತಿವೆಯೊ ಅಥವಾ ಈಗ ವರದಿ ಆಗುತ್ತಿರುವುದರಿಂದ ಹೀಗನಿಸುತ್ತಿದೆಯೊ? ಈ ಪ್ರಕರಣಗಳು ಹೆಚ್ಚಾಗಲು ಲೈಂಗಿಕ ಪ್ರಚೋದಕ ಸಿನಿಮಾ ಸೀರಿಯಲ್ ಹಾಗೂ ಜಾಹಿರಾತು ಸಹ ಕಾರಣ ಎಂಬ ವಾದವಿದೆ. ಹೊಸತಲೆಮಾರಿನ ನಿರುದ್ಯೋಗಿ ತರುಣರ ಹತಾಶೆಗಳು ಪ್ರಟಕವಾಗುತ್ತಿರುವ ಪರಿ ಎಂಬ ವಿವರಣೆಯೂ ಇದೆ. ಅಷ್ಟೊಂದು ಮುಂಚೂಣಿಗೆ ಬಾರದ ಇನ್ನೊಂದು ವಾದವೆಂದರೆ, ಮಹಿಳೆಯರು ತಮ್ಮ ಸ್ವಾತಂತ್ರ್ಯ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ ಎನ್ನುವುದು. ಭಾರತದ ದಲಿತರಾಗಲಿ, ಅಮೆರಿಕೆಯ ಕಪ್ಪುಜನರಾಗಲಿ, ಕೆಲವು ಇಸ್ಲಾಮಿಕ್ ದೇಶಗಳ ಮಹಿಳೆಯರಾಗಲಿ, ಸಾಂಪ್ರದಾಯಿಕ ವ್ಯವಸ್ಥೆ ಕೊಡಮಾಡಿದ್ದ ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡಿದ್ದರು. ಹಲ್ಲೆಗಳು ಕಡಿಮೆಯಿದ್ದವು. ಅವರು ವ್ಯವಸ್ಥೆಯನ್ನು ಪ್ರಶ್ನಿಸಲು ಹಾಗೂ ಹಾಕಿದ ಗೆರೆಮೀರಿ ತಮ್ಮ ಸ್ವಂತಿಕೆ ತೋರಲು ಆರಂಭಿಸಿದೊಡನೆ ಅವು ಅಧಿಕಗೊಂಡವು. ಹಲ್ಲೆಗೆ ಸಿಕ್ಕಿರುವುದು ಕುಂಟುನೆವ. ಮಹಿಳೆಯರು ಪ್ರಚೋದಕ ವೇಷ ಧರಿಸುವುದರಿಂದಲೇ ಅತ್ಯಾಚಾರಗಳು ಆಗುತ್ತಿವೆ; ಆಕೆ ಗಂಡಸರಂತೆ ಬಾರಿಗೆ ಹೋಗುವುದರಿಂದ, ಸಿಗರೇಟು ಸೇದುವರಿಂದ, ಸಾರ್ವಜನಿಕ ಕ್ಷೇತ್ರಗಳಲ್ಲಿ ದುಡಿಯಲು ಹೋಗುತ್ತಿರುವುದರಿಂದ ಸಂಸಾರಗಳು ಬಿರುಕು ಬಿಡುತ್ತಿವೆ ಎಂಬ ನಾಜೂಕು ವಾದಗಳಿವೆ. ಈ ವಿಚಾರದಲ್ಲಿ ಎಲ್ಲ ಧಾರ್ಮಿಕ ನಾಯಕರೂ ಏಕಮತೀಯರು. ಪಾಕಿಸ್ತಾನದಲ್ಲಿ ಒಬ್ಬ ಪ್ರತಿಭಾವಂತ ಮಹಿಳೆ, ಮಂತ್ರಿಯಾಗಿದ್ದವರು, ಪ್ಯಾರಾಚೂಟಿನಲ್ಲಿ ಪೈಲಟನನ್ನು ಅಪ್ಪಿಕೊಂಡು ಧುಮುಕಿದರು ಎಂಬ ಕಾರಣದಿಂದ ಕೊಲೆಯಾದರು. ಬೆನಜೀರ್ ಕೊಲೆಯ ಹಿಂದೆಯೂ ಮಹಿಳೆ ಸಾರ್ವಜನಿಕ ಬದುಕಿನಲ್ಲಿ ಗಳಿಸುತ್ತಿರುವ ಯಶಸ್ಸಿಗೆ ಕರುಬುತ್ತಿದ್ದ ಪುರುಷವಾದವಿದೆ. ಹೆಣ್ಣುಮಕ್ಕಳ ಶಾಲೆಗಳ ಮೇಲೆ ಬಾಂಬ್ ಹಾಕುವುದಕ್ಕೆ, ಹುಟ್ಟುಹಬ್ಬ ಆಚರಿಸುತ್ತಿದ್ದ ತರುಣ-ತರುಣಿಯರ ಮೇಲೆ ಹಲ್ಲೆ ಮಾಡಲು, ಧರ್ಮ ಸಂಸ್ಕøತಿ ರಕ್ಷಣೆಯ ಸಮರ್ಥನೆ ನೀಡಲಾಗುತ್ತಿದೆ. ಮಹಿಳೆ ಗಂಡಸರಂತೆ ವರ್ತಿಸುತ್ತಿರುವ ಅಥವಾ ಗಂಡಸರ ಸಮಸಮಕ್ಕೆ ಬರುತ್ತಿರುವ ಬಗೆಗೆ ಪುರುಷವಾದಿಗಳಲ್ಲಿ ವಿಪರೀತ ಅಂಜಿಕೆಯಿದೆ. ಭಾರತದ ಸಾಮಾಜಿಕ ಪರಿಸರದಲ್ಲಿರುವ ಗಂಡುವಾದಿ ಮನೋಧರ್ಮವು, ಮಹಿಳೆಯರ ಪ್ರತಿಭೆ ಮತ್ತು ಕ್ರಿಯಾಶಕ್ತಿ ಹೊರಹೊಮ್ಮಲು ಅದೃಶ್ಯವಾದ ಅಸಂಖ್ಯ ತೊಡಕುಗಳನ್ನು ನಿರ್ಮಿಸಿದೆ. ಇದರಿಂದ ಮದುವೆಯಾದ ಅಥವಾ ಮಕ್ಕಳಾದ ಬಳಿಕ ಗಾಯನವನ್ನು ಬಿಟ್ಟು ಗೃಹಿಣಿಯರಾಗಿ ಮಾತ್ರ ಉಳಿದ ಕಲಾವಿದರಿದ್ದಾರೆ; ವೈದ್ಯಕೀಯ ಇಂಜಿನಿಯರಿಂಗ್ ಓದಿ ಕೂಡ ಗೃಹಿಣಿಯರನ್ನಾಗಿ ಪಳಗಿಸಲಾದ ಚೈತನ್ಯಗಳಿವೆ; ಅನ್ನಪೂರ್ಣಾ ಅವರಿಂದ ಯಾರಿಗೂ ಸಂಗೀತವನ್ನು ಕಸಿಯಲಾಗಿಲ್ಲ. ಆದರೆ ಏಕಾಂತದ ಬದುಕನ್ನು ಅವರು ದೂಡುತ್ತಿರುವವರು. ಕೊಲ್ಲುವುದು ಎಂದರೆ ಜೀವ ತೆಗೆಯುವುದು ಮಾತ್ರವಲ್ಲ. ಬಾಳಿನಲ್ಲಿ ನುಗ್ಗಿಬಂದ ಅನಿರೀಕ್ಷಿತ ಆಘಾತಗಳನ್ನು ಹೊಸತಿರುವನ್ನು ಸವಾಲಾಗಿ ತೆಗೆದುಕೊಂಡಿರುವ ಅನೇಕ ಧೀಮಂತರಿದ್ದಾರೆ. ಉಮಾಶ್ರೀ, ಪ್ರತಿಭಾ ನಂದಕುಮಾರ್, ಇಂದಿರಾ ಲಂಕೇಶ್, ವಿಜಯಮ್ಮ ಮುಂತಾದವರ ಆತ್ಮಕತೆಗಳನ್ನು ಓದುವಾಗ ಇದು ಅರಿವಾಗುತ್ತದೆ; ಸುರಂಗದ ತುದಿಗೆ ಬೆಳಕಿರುತ್ತದೆಯೆಂದು ನಡೆದ ಇವರು, ಕಠಿಣ ಸವಾಲನ್ನು ಎದುರಿಸಿ ಗೆದ್ದ ಪರಿ ಹೆಮ್ಮೆ ಮೂಡಿಸುತ್ತದೆ. ಇವುಗಳ ಜತೆಯಿಟ್ಟು ನೋಡುವಾಗ, ಅನ್ನಪೂರ್ಣಾ ತೆಗೆದುಕೊಂಡ ತೀರ್ಮಾನವು, ಪ್ರತಿಭಟನೆಯ ಇನ್ನೊಂದು ಮಾದರಿಯೂ ಆಗಿರಬಹುದು. ಆದರೆ ಅದು ಅವರನ್ನು ಕರೆದುಕೊಂಡು ಹೋಗಿ ಮುಟ್ಟಿಸಿರುವ ತುದಿ-ಅದೇನೆಂದು ಸ್ಪಷ್ಟವಾಗಿಲ್ಲ- ಹೊರನಿಂತು ನೋಡುತ್ತಿರುವ ನಮಗೆ ದಿಗಿಲು ಹುಟ್ಟಿಸುತ್ತಿದೆ. ************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -9 ಕನಸು ಕಲಿಸುವ ಕವಿತೆಗಳು ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ ತೊಂಭತ್ತೊಂಭತ್ತು ಮಂದಿ ವೈಫಲ್ಯವನ್ನು ಜಿಗಿಹಲಗೆ ಮಾಡಿ ಮುಂದಕ್ಕೆ ಚಿಮ್ಮಿ ಹಾರಲು ಪ್ರಯತ್ನ ಮಾಡುತ್ತಾರೆ. ಅಂತಹ ಒಂದು ಪ್ರಯತ್ನಕ್ಕೆ ಹುಮ್ಮಸ್ಸು ಕೊಡುವ ಶಕ್ತಿ ಹಾಡುಗಳಿಗಿವೆ. ಬೇಸರವಾದಾಗಲೂ ಖುಷಿಯಾದಾಗಲೂ ಮನಸ್ಸಿಗೆ ಸಮತೋಲನ, ಸಮೋಲ್ಲಾಸ ತರುವ ಮ್ಯಾಜಿಕ್ ಕವಿತೆಗಳು ಮಾಡಬಲ್ಲವು. ಕವಿತೆಗೆ ಗೇಯತೆ ಕೂಡಿದಾಗ ಅದು ಹಾಡಿನ ಸ್ಥಿತಿ ತಲಪುತ್ತದೆ. ತಕ್ಕಮಟ್ಟಿನ ಲಯಗಾರಿಕೆ ಅದಕ್ಕೆ ಬೇಕು, ಪ್ರಾಸಗಳೂ ಗರಿಗರಿ ಚಕ್ಕುಲಿಯನ್ನು ಕುರುಕಿದ ಹಾಗೆ, ಮನಸ್ಸಿಗೆ ಆಹ್ಲಾದಕರ. ಕೆ.ಎಸ್.ನ. ಅವರ ಕವಿತೆಗಳು ಕನ್ನಡದ ಅತ್ಯುತ್ಕೃಷ್ಟ ಗಜಲ್ ಗಳು. ಪ್ರೇಮ ಹೇಗೆ ಸರ್ವಕಾಲಿಕವೋ ಹಾಗೆಯೇ ಈ ಹಾಡುಗಳು ಕೂಡ. ಕವಿತೆ ಕಟ್ಟುವಾಗ, ಕವಿತೆಗೊಂದು ವಸ್ತು, ವಾಸ್ತು ಮತ್ತು ದೇಹ ಕೊಟ್ಟು ಅದರೊಳಗೆ ಆತ್ಮಾರ್ಥ ಪ್ರತಿಷ್ಠೆ ಮಾಡುತ್ತೇವೆ. ಮೈಸೂರು ಮಲ್ಲಿಗೆಯಲ್ಲಿ ಇದಲ್ಲದೇ ಇನ್ನೊಂದು ಅದ್ಭುತ ಅಂಶವಿದೆ. ಅದು ಕವಿತೆಯ ದನಿ ( ಧ್ವನಿಯಲ್ಲ). ಕವಿತೆಯುದ್ದಕ್ಕೂ, ಈ ದನಿ ನಮ್ಮ ಜೊತೆ ಮಾತಾಡುತ್ತೆ, ಪಿಸುಗುಟ್ಟುತ್ತೆ, ಸಂವೇದನೆಯ ತಂತಿ ಮೀಂಟುತ್ತೆ. ಉದಾಹರಣೆಗೆ ಕೆ.ಎಸ್. ನರಸಿಂಹ ಸ್ವಾಮಿಯವರ ಮೈಸೂರು ಮಲ್ಲಿಗೆ ಕವನ ಸಂಕಲನದ ಸಿರಿಗೆರೆಯ ನೀರಲ್ಲಿ ಹಾಡು, ನೋಡಿ. ಸಿರಿಗೆರೆಯ ನೀರಿನಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು ಗುಡಿಯ ಗೋಪುರಗಳಲ್ಲಿ ಮೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ ಕಣ್ಣಲ್ಲಿ ನಿನ್ನ ಹೆಸರು ತಾಯ ಮೊಲೆಯಲ್ಲಿ ಕರು ತುಟಿ ಇಟ್ಟು ಚೆಲ್ಲಿಸಿದ ಹಾಲಲ್ಲಿ ನಿನ್ನ ಹೆಸರು ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು ಹೊಂದಾಳೆ ಹೂವಿನಲಿ ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು ಮರೆತಾಗ ತುಟಿಗೆ ಬಾರದೆ, ಮೊಡ ಮರೆಯೊಳಗೆ ಬೆಳದಿಂಗಳು ನಿನ್ನ ಹೆಸರು ನೆನೆದಾಗ ಕಣ್ಣ ಮುಂದೆಲ್ಲ ಹುಣ್ಣಿಮೆಯೊಳಗೆ ಹೂಬಾಣ ನಿನ್ನ ಹೆಸರು ಮೈಸೂರು ಮಲ್ಲಿಗೆ ಸಂಕಲನದ ಹೆಸರಲ್ಲೇ ಮಲ್ಲಿಗೆಯಿದೆ. ಮಲ್ಲಿಗೆಯೊಳಗೆ,ಆಕೆ ಇದ್ದಾಳೆ. ಆಕೆಯ ಪರಿಮಳ ಇದೆ, ಆಕೆಯ ಸೌಂದರ್ಯವಿದೆ, ಹುಡುಗಿಯ ಸೂಕ್ಷ್ಮ ಪ್ರಜ್ಞೆಗಳು, ಹುಡುಗಿಯ ನಿಷ್ಕಲ್ಮಶ ಮನಸ್ಸು, ಮಲ್ಲಿಗೆಯ ಪಕಳೆಗಳೇ ನಾಲ್ಕು ದಿಕ್ಕಿಗೆ ನೋಟ ನೆಟ್ಟ ಆಕೆಯ ಕನಸುಗಳು. ನಿಷ್ಕಲ್ಮಶ ಮನಸ್ಸು ಎನ್ನುವಾಗ, ಕೆ.ಎಸ್.ನ. ಅವರ ಕವಿತೆಯ ಇನ್ನೊಂದು ಅಂಶವನ್ನು ಸೂಚಿಸಿದ್ದೇನೆ. ಅವರ ಕವಿತೆಯ ಪ್ರೇಮ,ಆದರ್ಶ ಪ್ರೇಮ. ನಿಜ ಜೀವನದಲ್ಲಿ, ಇದು ಅಪೂರ್ವ ,ಅಪರೂಪ. ಈ ಕಾವ್ಯಧ್ವನಿ, ಸಮಾಜದ ಸಂಬಂಧಗಳೊಳಗೆ ಪೊಸಿಟಿವಿಟಿಯನ್ನು ಬಿತ್ತಿ ಬೆಳೆಸುತ್ತದೆ. ಎಷ್ಟು ಚಿಂತೆ, ಒತ್ತಡಗಳ ನಡುವೆಯೂ ಈ ಹಾಡುಗಳನ್ನು ಕೇಳಿದರೆ, ಬದುಕಿಗೆ ಬೆಳಗು ತೆರೆಯುತ್ತದೆ. ಅದೇ ಹೊತ್ತಿಗೆ, ವಿಮರ್ಶೆಯ ದೃಷ್ಟಿಯಿಂದ, ಇದು ಅವರ ಕಾವ್ಯದ ಸೋಲು ಎಂದರೂ, ಕೆ.ಎಸ್.ನ.ಅವರು ತಲೆಗೆಡಿಸದೆ, ಪ್ರೇಮಿಸಿದರು, ಬದುಕಿದರು, ಕವಿತೆಗಳಿಗೆ ಜೇವ ಕೊಟ್ಟರು. ಮೇಲಿನ ಕವಿತೆ ಕವಿಗೆ ಆತನ ಮನದನ್ನೆಯ ಕಡೆಗಿರುವ ಉತ್ಕಟ ಪ್ರೀತಿಯ ಉಲಿಕೆ.  ಈ ಕವಿತೆಯಲ್ಲಿ ಅದ್ಭುತವಾದ ಪ್ರತಿಮೆಗಳು ಇವೆ. ಈ ಕವಿತೆಯಲ್ಲಿ  ನನ್ನಅನುಭವಕ್ಕೆ ಎಟುಕಿದ ಹಲವು ಅಂಶಗಳು ಜೀವಮುಖೀ ಚೇತನದ ನಿತ್ಯರೂಪೀ ದರ್ಶನಗಳು. “ಸಿರಿಗೆರೆಯ ನೀರಲ್ಲಿ, ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು..” ಕೆರೆ ಎಂಥದ್ದು !! ಸಿರಿಗೆರೆ.. ಅಂದರೆ, ಕೆರೆತುಂಬ, ನೀರಲ್ಲ, ಸಿರಿ. ಸಿರಿ ಅಂದರೆ, ಶ್ರೀ, ಸಂಪತ್ತು. ಸಂಪತ್ತು ತುಂಬಿದ ಕೆರೆಯಲ್ಲಿ, ಶ್ರೀಮಂತಿಕೆಯ ಉಸುಕಲ್ಲಿ,ಶ್ರೀಮಂತಿಕೆಯ ನೀರ ಮೇಲೆ ಎಲೆಯತ್ತಿ.,ಅದರಿಂದ ಹೊರಗೆ ತಲೆಯೆತ್ತಿ ನಿಂತ ತಾವರೆಯ ಕೆಂಪುಬಣ್ಣದಲ್ಲಿ ಆಕೆಯ ಹೆಸರಿದೆ. ಬಣ್ಣವನ್ನು,ಇಲ್ಲಿ ಸ್ವಭಾವ,ಗುಣ ಅಂತ ತೆಗೆದುಕೊಳ್ಳಬಹುದು.  ಅಂತಹ ಶ್ರೀಮಂತಿಕೆಯೊಳಗೆ ( ಆ ಶ್ರೀಮಂತಿಕೆ, ಧನಸಂಪತ್ತೇ ಆಗಬೇಕಿಲ್ಲ, ಅದು,ವಿದ್ಯೆ ಸೌಂದರ್ಯ, ಬುಧ್ದಿ, ಇತ್ಯಾದಿ,ಎಲ್ಲವೂ ಆಗಬಹುದು) ಹುಟ್ಟಿದ ಆ ಹುಡುಗಿ,ಶ್ರೀಮಂತೆ. ತಾವರೆ ಹೂವು, ಮತ್ತು ಎಲೆಗಳ ಮೇಲೆ ನೀರು ಅಂಟಲ್ಲ. ಹೂ,ನೀರನ್ನು ಮೀರಿ ಮೇಲಕ್ಕೆ ತಲೆಯೆತ್ತಿ ನಿಲ್ಲುತ್ತೆ. ಹಾಗೆಯೇ ಕವಿಯ ಮನಸ್ಸು ಕದ್ದ ಗೆಳತಿ, ತನ್ನ ಶ್ರೀಮಂತಿಕೆಯ ಜತೆ ಅಟ್ಯಾಚ್ಮೆಂಟ್ ಇಲ್ಲದೆ, ಶ್ರೀಮಂತಿಕೆಯನ್ನು ಮೀರಿ ನಿಂತ  ಗುಣಸ್ವಭಾವವಾಗಿ, ಕವಿಗೆ ಕಾಣುತ್ತಾಳೆ,ಆಪ್ತಳಾಗುತ್ತಾಳೆ. ಇಲ್ಲಿ,ಸಿರಿ ಅನ್ನುವ ಪದಕ್ಕೆ, ಸೌಂದರ್ಯ  ಎಂಬ ಅರ್ಥ ನೀಡಿ ಈ ಮೇಲಿನ ಪ್ಯಾರಾ ಪುನಃ ಓದಿ ಕೊಂಡರೆ, ಆಹಾ, ಎಂತ ಸಿರಿವಂತ ಕವಿತಾ ಸಾಲುಗಳು !! “ಗುಡಿಯ ಗೋಪುರದಲ್ಲಿ,ಮೆರೆವ ದೀಪಗಳಲ್ಲಿ,ಬೆಳಕಾಗಿ ನಿನ್ನ ಹೆಸರು.” ಗುಡಿಯ ಗೋಪುರದಲ್ಲಿ, ಎಂದರೆ,ಎತ್ತರಕ್ಕೆ, ಎಲ್ಲರಿಗೂ ಬೆಳಕು ತಲಪುವ ಹಾಗೆ ಅನ್ನ ಬಹುದೇ?. ಗುಡಿಯೊಳಗೆ ಉರಿಯುವ ದೀಪ, ಗರ್ಭಗುಡಿಯಷ್ಟಕ್ಕೇ ಬೆಳಕು ಚೆಲ್ಲ ಬಹುದು. ಆದರೆ, ಗುಡಿಯ ಗೋಪುರದಲ್ಲಿ ಹಚ್ಚಿದ ದೀಪ,ದೂರ ದೂರಕ್ಕೆ ಬೆಳಕು ಚೆಲ್ಲುತ್ತದೆ. ಗುಡಿಯ ಗೋಪುರದಲ್ಲಿ ಬೆಳಗುವ ದೀಪಕ್ಕೆ ಗರ್ಭಗುಡಿಯ ತಡೆಗೋಡೆಗಳಿಲ್ಲ. ಸ್ವತಂತ್ರ ಅದು. ದಿಕ್ಕುಗಳ ಪ್ರತಿಬಂಧವೂ ಅದಕ್ಕಿಲ್ಲ. ಎಲ್ಲಾ ದಿಕ್ಕಿಗೂ ಸಮಪಾಲಿನ ಚೇತನವಿಸ್ತರಣೆ ಅದರದ್ದು. ಹಾಗೆಯೇ, ಬೆಳಕು ಎಂದರೆ ದಾರಿ ತೋರುವ ಪ್ರಜ್ಞೆ ಎನ್ನೋಣವೇ, ಅರಿವು ಎನ್ನೋಣವೇ. ಹೇಗಿದ್ದಾಳೆ ಹೇಳಿ! ನಮ್ಮ ಈ ಹುಡುಗಿ. ಸಕಲದಿಕ್ಕಲ್ಲೂ ದಾರಿ ತೋರುತ್ತಾಳೆ. ಎಲ್ಲಾ ನೋಟಗಳ ಅರಿವಿನ ದಾರಿಯಾಗುತ್ತಾಳೆ. “ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನಾ ಕಣ್ಣಲ್ಲಿ ನಿನ್ನ ಹೆಸರು.” ಕೆ ಎಸ. ನ. ಅವರ ಒಟ್ಟೂ ಕವಿತೆಗಳಲ್ಲಿ, ಹಳ್ಳಿಗಳ ಬೇರೆ ಬೇರೆ ಪಾತ್ರಗಳು, (ಜೋಯಿಸರು, ಶ್ಯಾನುಭಾಗರು, ಹೊಲ,ಬೇಲಿ, ತೊಟ್ಟಿಲು ಇತ್ಯಾದಿ) ನಮ್ಮ ಕಣ್ಣಿಗೆ ಕಟ್ಟುವಷ್ಟು ಆಪ್ತ, ರಿಯಲ್ ಪಾತ್ರಗಳು. ಚಿಕ್ಕಂದಿನಲ್ಲಿ ಕರುಗಳ ಜತೆ ಆಟವಾಡಿದ ಮಕ್ಕಳಿಗೆ ಅನನ್ಯ ಅನುಭವ ಸಿಗುತ್ತದೆ. ದನಕರು, ಮುಗ್ಧತೆಗೆ ಇನ್ನೊಂದು ಹೆಸರು. ಕರುಗಳಿಗೆ ಅಷ್ಟೇ ತುಂಟತನ. ಅಂತಹಾ ಕರುವಿನ ಕಣ್ಣುಗಳು, ಶುಧ್ದ ದರ್ಪಣಗಳ ಹಾಗೆ. ಆ ಕಣ್ಣೊಳಗೆ ಮೂಡುವ ಸಮಾಜದ ಪ್ರತಿಬಿಂಬಗಳು, ಇದ್ದದ್ದು ಇದ್ದ ಹಾಗೇ, ಚತುರ ಬುಧ್ದಿಯ ಮಾಡಿಫಿಕೇಷನ್ ಇಲ್ಲದೇ, ರೂಪುಗೊಳ್ಳುತ್ತವೆ. ಚುರುಕು ತುಂಟ, ಮುಗ್ಧ ಕಣ್ಣುಗಳಿಗೆ ಜಗತ್ತು ಸುಂದರ, ಜಗತ್ತೇ ಪ್ರೀತಿ. ಅಂತಹ ಕಣ್ಣುಗಳು ಈ ಕವಿಯ,ಹುಡುಗಿಯದ್ದು. ಆ ಕಣ್ಣುಗಳ ಮುಗ್ಧತೆಗೆ ಸ್ಪಟಿಕದ ಸ್ಪಷ್ಟತೆ, ಸೌಂದರ್ಯವೂ ಇದೆ ಅಂತ ಬೇರೆ ಹೇಳ ಬೇಕಿಲ್ಲ ತಾನೇ. “ತಾಯ ಮೊಲೆಯಲ್ಲಿ ಕರು,ತುಟಿಯಿಟ್ಟು ಚೆಲ್ಲಿಸಿದ ಹಾಲಲ್ಲಿ,ನಿನ್ನ ಹೆಸರು.” ನಾನು ಚಿಕ್ಕಹುಡುಗನಾಗಿದ್ದಾಗ, ಅಮ್ಮ ಹಾಲು ಕರೆಯುತ್ತಿದ್ದಳು, ನನಗೆ ಕರು ಬಿಡುವ ಕೆಲಸ. ದನ ತನ್ನ ಮೊಲೆಯಿಂದ ಹಾಲು ಸುಲಭವಾಗಿ ಹರಿಸುವುದಿಲ್ಲ. ಮೊದಲು, ಆ ಗೋಮಾತೆಯ ಕರು, ತನ್ನ ಮುದ್ದಾದ ಮಂಡೆಯಿಂದ ಮೃದುವಾಗಿ ಕೆಚ್ಚಲಿಗೆ ಗುದ್ದುತ್ತದೆ. ಆ ಮೇಲೆ ಕರು ಹಸುವಿನ ಮೊಲೆ ಚೀಪುತ್ತೆ. ಇನ್ನೂ ಹಾಲು ಬಂದಿಲ್ಲ ಅಂದರೆ, ಅದು ತನ್ನ ಮೃದು ತಲೆಯಿಂದ ನವಿರಾಗಿ ತಾಯಿ ಕೆಚ್ಚಲಿಗೆ ಇನ್ನೂ ಗುದ್ದುತ್ತದೆ ( ಇದು ತಾಯಿಗೆ ನೋವಾಗುವಷ್ಟು ಜೋರಾಗಿ ಅಲ್ಲ) ಆಗ ದನ ತನ್ನ ಮೊಲೆಯಿಂದ ಕರುವಿಗೆ ಹಾಲೂಡುತ್ತದೆ. ಹಾಗೆ ಹಾಲು ಕುಡಿಯುವ ಕರುವಿನ ಕಟವಾಯಿಯಿಂದ ಹಾಲು ತೊಟ್ಟಿಕ್ಕುವ ಅಂದವನ್ನು ಕಂಡ  ಅದೃಷ್ಟವಂತ ನಾನು. ಆ ಹಾಲು ತಾಯಿಯ, ಮಾತೃತ್ವಕ್ಕೆ, ಮಮತೆಗೆ, ಇನ್ನೊಂದು ಹೆಸರು. ಆ ಕರುವಿನ ಬಾಯಿಯಿಂದ ತೊಟ್ಟಿಕ್ಕುವ ಹಾಲಿನಲ್ಲಿ ಕವಿಗೆ ಆಕೆ ಕಂಡರೆ, ಆ ಹುಡುಗಿಯಲ್ಲಿ, ಎಂತಹ  ಮಮತೆ.ಎಂತಹಾ ಮಡಿಲು ತುಂಬಿ ಪ್ರೀತಿ. ಇದಕ್ಕಿಂತ ಉತ್ಕೃಷ್ಟ ರೂಪಕ ಬೇಕೇ. “ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ ದನಿಯಲ್ಲಿ ನಿನ್ನ ಹೆಸರು” ಹೂಬನದ ಬಿಸಿಲಿನಲ್ಲಿ ಅನ್ನುವಾಗ ಗಮನಿಸಿ, ಬನತುಂಬಾ ಹೂಗಳು, ಅವುಗಳ ಮೇಲೆ ಚಿಗುರುಕಿರಣಗಳು, ಇದು ವಸಂತ ಭಾವ. ಪ್ರೀತಿ ಹುಟ್ಟಲು, ಪ್ರಕೃತಿಯ ಮಡಿಲು. ಗಂಡು ನವಿಲು ಸುಮ್ಮನೇ ಕುಣಿಯಲ್ಲ. ಅದು ತನ್ನ ಪ್ರೇಮಿಕೆಯನ್ನು ಪ್ರಣಯಕ್ಕೆ ಕರೆಯುವ ಬಗೆಯಿದು. ಆ ಹೆಣ್ಣು ನವಿಲೇನು ಕಡಿಮೆಯೇ. ಪರಿ ಪರಿಯಾಗಿ ಕರೆದ ಇನಿಯನಿಗೆ ಪರೀಕ್ಷೆ ಹಚ್ಚುವಾಕೆ ಅವಳು. ಗಂಡುನವಿಲು, ತನ್ನ ಜೀವಿತದಲ್ಲಿ ಸಂಗ್ರಹಿಸಿದ ಗರಿಗಳ ಸಿರಿಹೊರೆಯನ್ನು ಅರ್ಧ ಚಂದ್ರಾಕಾರವಾಗಿ ಅರಳಿಸಿ ಹೆಜ್ಜೆಯಿಡುತ್ತದೆ. ಆ ಹೆಜ್ಜೆಗಳು ಸಮತೋಲನದ ಹೆಜ್ಜೆ ( ನವಿಲಿನ ದೇಹದ ಹತ್ತು ಪಟ್ಟು ದೊಡ್ಡ ಗರಿಗಳ ಕೊಡೆ), ಗಾಂಭೀರ್ಯದ ಹೆಜ್ಜೆ. ನಿಸರ್ಗದೊಳಗಿನ ಅನ್ಯೋನ್ಯತೆಯ ಲಯ ಆ ಹೆಜ್ಜೆಗಳಿಗೆ . ಇದು ಸಂಪೂರ್ಣ ಸಮರ್ಪಣೆಯ ನೃತ್ಯ. ನೃತ್ಯಕ್ಕೆ ತನ್ನ ಸೌಂದರ್ಯವನ್ನು, ಜ್ಞಾನವನ್ನು ಜೀವವನ್ನು ಅರ್ಪಿಸಿದ ದನಿ. ಅಂತಹಾ ಸಮತೋಲನದ, ಗಾಂಭೀರ್ಯದ, ಅನ್ಯೋನ್ಯತೆಯ, ಸಮರ್ಪಣಾ ಭಾವದ, ದನಿಯಲ್ಲಿ ಕವಿಗೆ,  ಆಕೆ ಕಾಣಿಸುತ್ತಾಳೆ. “ಹೊಂದಾಳೆ ಹೂವಿನಲಿ,ಹೊರಟ ಪರಿಮಳದಲ್ಲಿ ಉಯ್ಯಾಲೆ ನಿನ್ನ ಹೆಸರು.” ಹೂವು ಅಂತಿಂತ ಹೂವಲ್ಲ. ಹೊಂದಾಳೆ ಹೂವು. ಚಿನ್ನದ ಬಣ್ಣ ಅದಕ್ಕೆ !! ಅದರ ಪರಿಮಳ ಹೇಗಿರಬಹುದು, ಆ ಹೂ, ಗಾಳಿಯಲ್ಲಿ ತೊನೆಯುತ್ತಾ ಹರಡುವ ಪರಿಮಳ, ಉಯ್ಯಾಲೆ ಆಡುವ ಕಲ್ಪನೆ ನೋಡಿ. ಹೂವು ಉಯ್ಯಾಲೆ ಆಡುವುದಲ್ಲ, ಪರಿಮಳ ಉಯ್ಯಾಲೆ ಆಡುವುದು. ಪರಿಮಳದ ಅಲೆ ಅದು. ಕೆಲವೊಮ್ಮೆ ಹೆಚ್ಚು, ಕೆಲವೊಮ್ಮೆ ನಾಸಿಕಾಗ್ರಕ್ಕೆ ರುಚಿಸಿಕ್ಕದಷ್ಟು ಕಡಿಮೆ, ಹೀಗೆ ಪರಿಮಳದ ಅಲೆ,ಅಲೆಅಲೆಯಾಗಿ ಪಸರಿಸುವಾಗ, ರಸಿಕ ನಾಸಿಕದ ಅನುಭೂತಿಯ ಪರಿಕಲ್ಪನೆ. ಆ ಉಯ್ಯಾಲೆ, ರಸ ತರಂಗವಾಗಿ ಆಕೆ ಆಡುವ ರೂಪ ಕವಿಗೆ ಕಂಡದ್ದು, ರವಿಗೆ ಕಾಣಲೇ ಇಲ್ಲ !!  ಕವಿ ಅಷ್ಟೂ ರಸಿಕ!! ಉಯ್ಯಾಲೆ ಪುನಃ ಪುನಃ ಆವರ್ತಿಸುವ, ಆಂದೋಳಿಸುವ ಕ್ರಿಯೆ. ಪ್ರೀತಿ ಎಂಬ ಎತ್ತರ, ಮುನಿಸು ಎಂಬ ತಳಮಟ್ಟ, ಇವೆರಡರ ನಡುವೆ ತೊನೆಯುವ, ಪುನಃ ಪುನಃ ಆವರ್ತಿಸುವ ಈ ಕಗರಿಯೆಯಾಗಿ ಕವಿ,ಪ್ರೇಮಿಕೆಯನ್ನು ಕಾಣುತ್ತಾರೆ. “ಮರೆತಾಗ ತುಟಿಗೆ ಬಾರದೆ, ಮೋಡ ಮರೆಯೊಳಗೆ, ಬೆಳದಿಂಗಳು ನಿನ್ನ ಹೆಸರು “ ಈ ಎರಡು ಸಾಲುಗಳು, ಮತ್ತು ಮುಂದಿನೆರಡು ಸಾಲುಗಳು ಕವಿಯ ಮನಸ್ಸಿನ ಬಟ್ಟಲಲ್ಲಿ ಮೂಡುವ ಕಲ್ಪನೆಗಳು. ಬೆಳದಿಂಗಳ ರಾತ್ರಿಯಲ್ಲಿ, ಆಗಸದಲ್ಲಿ ಮೋಡ ಕವಿದರೆ, ಚಂದಿರ ಕಣ್ಣುಮುಚ್ಚಾಲೆ ಆಡುತ್ತಾನೆ. ಬೆಳದಿಂಗಳು, ಅಂದರೆ ಬಿಳೀ ಚಂದಿರ ಅಂತಾನೂ ಹೇಳಬಹುದು ( ತಿಂಗಳು ಎಂದರೆ ಚಂದ್ರ ಎಂಬ ಅರ್ಥ ಇದೆ) ಕವಿಯ ಪ್ರೇಮಾಗಸಕ್ಕೆ ಆಗಾಗ ಮೋಡ ಕವಿದು ಆಕೆ ಪ್ರೀತಿಯಿಂದ ಕಣ್ಣುಮುಚ್ಚಾಲೆ ಆಡುತ್ತಾಳೆ, ಈಗ ಕಂಡಳು ಅನ್ನುವಾಗ ಮರೆಯಾಗುತ್ತಾಳೆ,  ಸರಿ, ಇನ್ನು ಈಕೆ ದರ್ಶನ ಕೊಡಲ್ಲ ಅಂತ ಕವಿ ನಿರಾಶನಾದಾಗ, ಹೇಯ್ ಇಲ್ಲಿದ್ದೀನಿ ಕಣೋ! ಅಂತ ಕುಣಿಯುತ್ತಾಳೆ !. “ನೆನೆದಾಗ, ಕಣ್ಣ ಮುಂದೆಲ್ಲ, ಹುಣ್ಣಿಮೆಯೊಳಗೆ, ಹೂಬಾಣ ನಿನ್ನ ಹೆಸರು.” ಇದೂ ಕವಿಮಾನಸದಲ್ಲಿ ನಡೆಯುವ ಪ್ರೇಮಕ್ರಿಯೆ. ಕವಿ ಆಕೆಯನ್ನು ಮರೆತರೆ, ಕಾಮದೇವ ಬಿಡುತ್ತಾನೆಯೇ. ಪ್ರೀತಿಭಾವದಿಂದ, ಪ್ರಣಯಭಾವಕ್ಕೆ ದಾಟುವ ಸೂಕ್ಷ್ಮ ದಾರಿಯನ್ನು ಕವಿಗೆ ಮನ್ಮಥನ ಹೂಬಾಣ ಕಲಿಸುತ್ತದೆ. ಆ ಹೂಬಾಣದಲ್ಲಿ ಪ್ರಣಯರೂಪಿಯಾಗಿ ಆಕೆ ತನ್ನ ಇನಿಯ ಕವಿಯನ್ನು ಕಾಡುತ್ತಾಳೆ. ಹೀಗೆ, ಕೆ.ಎಸ್. ನ ಹಾಡು, ಬರೆಯುವುದಿಲ್ಲ, ಹಾಡೇ ಆಗಿ ಬಿಡುತ್ತಾರೆ. ಪ್ರೇಮದ ಅಕ್ಷರವಾಗುವುದಿಲ್ಲ, ಪ್ರೇಮಕ್ಕೆ ಉಸಿರಾಗುತ್ತಾರೆ. ಅದಕ್ಕೇ ಅವರ ರಚನೆಗಳು ಬರೇ ಕವಿತೆಗಳಲ್ಲ, ಹಾಡುಗಳು. ಸಂಗೀತ ಭಾವದ ಕಾವ್ಯ ಝರಿಗಳು. ನವ್ಯ ಕವಿತೆಗಳು ಮನಸ್ಸನ್ನು ಚಾಲೆಂಜ್ ಮಾಡಿ, ಚಿಂತನೆಗೆ ಹರಿತ ತರುವ ಕೆಲಸ ಮಾಡಿದರೆ, ಕೆ.ಎಸ್ ನ ಅವರ ಭಾವಗೀತೆಗಳು, ಮನಸ್ಸನ್ನು ನವಿರಾಗಿ ಆವರಿಸಿ, ಕನಸು ಕಟ್ಟಲು ಕಲಿಸುತ್ತವೆ. ಸ್ವಸ್ಥ, ಪ್ರೀತಿತುಂಬಿದ ಸಮಾಜವನ್ನು

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಅಂಕಪಟ್ಟಿ ಬಾಲ್ಯ ಪುಸ್ತಕ-ಅಂಕಪಟ್ಟಿ ಬಾಲ್ಯಕವಿ- ರವಿರಾಜ ಸಾಗರಪ್ರಕಾಶನ- ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಟಾನ, ಕಮಲಾಪುರಬೆಲೆ-೧೩೦/- ಸ್ಪರ್ಧಾಲೋಕದಿ ಬೇಕೇ ಬೇಕಂತೆತರತರ ಪ್ರಮಾಣ ಪತ್ರಗಳುಕಷ್ಟವಾದರೂ ಮಾಡಲೇ ಬೇಕಂತೆನಾವು ಬಯಸದ ಪಾತ್ರಗಳು    ಇದು ಇಂದಿನ ದಿನಮಾನದ ಎಲ್ಲಾ ಮಕ್ಕಳ ಸಮಸ್ಯೆ. ಮಕ್ಕಳ ಮನಸ್ಸನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಹೇಳಿ? ನಮಗೆ ಹೆಚ್ಚು ಅಂಕಕೊಡುವ ರೋಬೋಟ್ ಬೇಕಿದೆಯೇ ಹೊರತು, ನಮ್ಮಿಂದ ಮುದ್ದಿಸಲ್ಪಟ್ಟು, ನಮ್ಮನ್ನೂ ಪ್ರೀತಿಸುವ ಮಗು ಬೇಕಾಗಿಲ್ಲ. ಎಲ್ಲ ಅಪ್ಪ ಅಮ್ಮಂದಿರಿಂದ ಹಿಡಿದು, ಶಿಕ್ಷಣ ಇಲಾಖೆಯಿಂದ ಹಿಡಿದು ಸಮಾಜದ ಎಲ್ಲರಿಗೂ ಮಗುವಿನ ಅಂಕವೇ ಆ ಮಗುವನ್ನು ಅಳೆಯುವ ಮಾನದಂಡವಾಗಿದೆಯೇ ಹೊರತೂ ಮಗುವಿನ ಮನಃಸ್ಥಿತಿ ಹೇಗಿದೆ? ಅದಕ್ಕೆ ಏನು ಪ್ರೀಯ? ಅದರ ಇಷ್ಟ ಕಷ್ಟಗಳೇನು ಎಂದು ತಿಳಿಯುವ ಒಂದಿಷ್ಟು ಪ್ರಯತ್ನವನ್ನಾದರೂ ನಾವು ಮಾಡಿದ್ದೇವೆಯೇ? ಖಂಡಿತಾ ಇಲ್ಲ. ಇಂದಿನ ಮಕ್ಕಳ ಬಾಲ್ಯ ಅಂಕಪಟ್ಟಿಯ ಮಾರ್ಕುಗಳಲ್ಲಿ ಕಳೆದು ಹೋಗಿದೆ. ಚಿಕ್ಕವನಿನ್ನೂ ಆಟವ ಆಡುಎಂದು ಯಾರೂ ಹೇಳರುಶಾಲೆಗೆ ಫಷ್ಟು ಬರಲೇಬೇಕುಎನ್ನುತ ಒತ್ತಡ ಹೇರುವರು     ಕಾಡು ಬೆಟ್ಟ ಅಲೆದು, ಕಾಡಿನಲ್ಲಿ ಆಯಾ ಸಿಜನ್ನಿನಲ್ಲಿ ಆಗುವ ಹಣ್ಣನ್ನು ಕೊಯ್ದುಕೊಂಡು ತಿನ್ನುವ ನಮ್ಮ ಬಾಲ್ಯ ಈ ಮಕ್ಕಳಿಗೆ ದೊರಕೀತೇ? ಕಾಡಿನ ಹಣ್ಣುಗಳನ್ನೇ ನೋಡಿರದ ಅವು ಏನಾದರೂ ಹಣ್ಣಿಗೆ ಕೈ ಹಚ್ಚಿದರೆ ಸಾಕು, ಹೈಜಿನ್ನಿನ ಪಾಠ ಹೇಳುವ ಮಮ್ಮಿ ಡ್ಯಾಡಿಗಳು ಹೌಹಾರಿ ಬಿಟ್ಟಾರು. ಆದರೆ ನಮ್ಮ ಅಪ್ಪ ಅಮ್ಮಂದಿರಿಗೆ ಮಕ್ಕಳು ಕಾಡಿನ ಯಾವ ಹಣ್ಣು ತಿಂದರೂ ಯಾವ ಅಭ್ಯಂತರವೂ ಇರಲಿಲ್ಲ. ನಾನು ಹಯಸ್ಕೂಲಿಗೆ ಹೋಗುವವರೆಗೂ ನನ್ನ ಶಾಲೆಯ ಬ್ಯಾಗ್ ತುಂಬಾ ಮಳೆಗಾಲದಲ್ಲಿ ಬಿಕ್ಕೆ ಹಣ್ಣು, ಅದರ ಒಡೆದ ಸಿಪ್ಪೆಗಳಿಮದಲೇ ತುಂಬಿರುತ್ತಿತ್ತು. ಅದೇ ಶಾಲೆಯ ಶಿಕ್ಷಕಿಯಾದ ಅಮ್ಮ ಏನಾದರೂ ನನ್ನ ಬ್ಯಾಗ್ ತೆರೆದರೆ ಈ ಟೀಚರ್ರು ಮಗಳಿಗೆ ಹೊಟ್ಟೆಗೇ ಹಾಕೂದಿಲ್ಲ ಅನ್ನೂರು, ಅದೇನ್ ಆ ಚೊಗರು ಕಾಯಿ, ಗಟ್ಟಿ ಹಣ್ಣು ತಿಂತೀಯೇ? ಎಂದು ಬೈಯ್ಯುತ್ತ ಇಡೀ ಚೀಲ ಸ್ವಚ್ಛ ಮಾಡುತ್ತಿದ್ದರು. ಪಿಳ್ಳೆ ಹಣ್ಣು ತಿಂದು ನೀಲಿಗಟ್ಟಿದ ನಾಲಿಗೆಯನ್ನು ಸ್ವಚ್ಛ ಮಾಡಿಕೊಳ್ಳಲು ಪಿಳ್ಳೆ ಹಣ್ಣು ಸುಲಭವಾಗಿ ಸಿಗುತ್ತಿತ್ತು. ಮಳೆಗಾಲ ಮುಗಿದ ತಕ್ಷಣ ಚಳಿಗಾಲದಲ್ಲಿ ಸಂಪಿಗೆ ಹಣ್ಣು, ಮಜ್ಜಿಗೆ ಹಣ್ಣು, ಕೊನೆಗೆ ರಂಜಲು ಹಣ್ಣು ಹೀಗೆ ಎಲ್ಲ ಹಣ್ಣುಗಳು ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಬ್ಯಾಗ್‌ನಲ್ಲಿ ಜಾಗ ಪಡೆದಿರುತ್ತಿದ್ದವು. ಪರೀಕ್ಷೆ ಮುಗಿಯುತ್ತಿದ್ದಂತೆ ಮಾವಿನ ಮಿಡಿಗಳು ನಮ್ಮಿಂದ ಉಪ್ಪು ಖಾರಾ ಹಾಕಿ ನಾಲಿಗೆಗೆ ಚುರುಕು ಮುಟ್ಟಿಸಲು ಕಾಯುತ್ತಿದ್ದವು. ಹಸಿ ಗೇರು ಬೀಜ ಸುಲಿದು ಕೈಯ್ಯ ಚರ್ಮವೆಲ್ಲ ಸುಲಿದು ಹೋಗುವುದು ಮಾಮೂಲಾಗಿತ್ತು. ಹಾಗೆ ಹಣ್ಣು ಕೊಯ್ಯಲು ಮರ ಹತ್ತಿ, ಕೆಳಗಿರುವ ಗಾಜಿನ ಚೂರಿನ ಮೇಲೆ ಬಿದ್ದು ಆದ ಗಾಯ ಇಂದಿಗೂ ನನ್ನ ಕಾಲಿನ ಮೇಲೆ ಸವಿನೆನಪನ್ನು ಉಳಿಸಿಕೊಂಡಿದೆ. ಆದರೆ ನಮ್ಮ ಮಕ್ಕಳನ್ನು ಹಾಗೆ ಕಾಡು ಸುತ್ತಲು ಬಿಟ್ಟೇವೆಯೇ? ಅವರ ಕಾಲಿಗೊಂದು ಸೊಳ್ಳೆ ಕಚ್ಚಿದರೂ ಜಗತ್ತೇ ತಲೆಕೆಳಗಾದಂತೆ ವರ್ತಿಸುವ ನಮಗೆ ಮಕ್ಕಳ ಬಾಲ್ಯವನ್ನು ಜೈಲಿನಲ್ಲಿಡುತ್ತಿರುವ ಅರಿವೂ ಆಗದಿರುವುದು ವಿಷಾದನೀಯ. ಆದರೆ ರವಿರಾಜ್ ಸಾಗರ ಮಕ್ಕಳ ಮಾತಿಗೆ ಜೀವ ತುಂಬಿದ್ದಾರೆ.  ಹೀಗಾಗಿಯೇ ಈ ಸಂಕಲನದಲ್ಲಿಯಾರು ಕೇಳೋರು ನಮ್ಮ ತಲೆಬಿಸಿಯಾಲೈಪಲ್ಲಿ ಗೆಲ್ಲೋಕೆ ರ್‍ಯಾಂಕೇ ಯಾಕ್ರಯ್ಯಾ?ಎಂದು ಮಕ್ಕಳು ಕೇಳುತ್ತಿದ್ದಾರೆ. ಹೇಳಿ, ಬದುಕನ್ನು ಗೆಲ್ಲಲು ರ್‍ಯಾಂಕ ಒಂದೇ ಆಧಾರವೇ? ವಿಚಿತ್ರ ಎಂದರೆ ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಐಎಎಸ್, ಕೆಎಎಸ್ ಪಾಸು ಮಾಡಿದ ಹಲವರು ಚಿಕ್ಕಂದಿನಲ್ಲಿ ರ್‍ಯಾಂಕ್ ಬಂದವರಲ್ಲ. ನಂತರ ಓದಿನ ಮಹತ್ವವನ್ನು ಅರಿತು ತಮ್ಮ ಮಾರ್ಗವನ್ನು ತಾವೇ ನಿರ್ಮಿಸಿಕೊಂಡವರು ಎಂಬುದನ್ನು ಗಮನಿಸಬೇಕಿದೆ.ನಮ್ಮ  ಶಾಲೆಯ ಪುಸ್ತಕದಲ್ಲಿಮಕ್ಕಳ ಹಕ್ಕು ಪಾಠವಿದೆಆ ಪಾಠದ ಪ್ರಶ್ನೆಗೆ ಉತ್ತರಿಸದೆ ಇದ್ದರೆಹೊಡೆಯಲು ಕೋಲು ಕಾಯುತಿದೆಮಕ್ಕಳ ಹಕ್ಕುಗಳು ಕೇವಲ ಓದಿ ಅಂಕಗಳಿಸಲಷ್ಟೇ ಇರುವ ಪಾಠಗಳೇ ಹೊರತೂ ಅದರಿಂದೇನೂ ಆಗುವುದಿಲ್ಲ ಎಂಬುದನ್ನು ಈ ಸಾಲುಗಳು ಚಂದವಾಗಿ ನಿರೂಪಿಸುತ್ತವೆ. ಮೊದಲೆಲ್ಲ ಮಕ್ಕಳಿಗಾಗಿ ಗ್ರಾಮ ಸಭೆ ನಡೆಸುತ್ತಿದ್ದೆವು. ಆಗಲೆಲ್ಲ ಮಕ್ಕಳು ಗಲಾಟೆ ಮಾಡದೇ ಮಾತೆ ಆಡದಂತೆ ಕುಳಿತಿರಬೇಕೆಂದು ಶಾಲೆಯಿಂದ ಗ್ರಾಮ ಪಂಚಾಯತ್‌ಗೆ ಹೊರಡುವ ಮೊದಲೇ ಮಕ್ಕಳಿಗೆ ಎಚ್ಚರಿಕೆ ನೀಡಿ ಕರೆದುಕೊಂಡು ಹೋಗುತ್ತಿದ್ದೆವು. ಎಂಟನೇ ತರಗತಿಯ ಮೊದಲ ಪಾಠವೇ ಎ ಡೇ ಇನ್ ಆಶ್ರಮ’ ರವೀಂದ್ರನಾಥ ಟಾಗೋರರ ಶಾಂತಿನಿಕೇತನದ ಕುರಿತಾಗಿ ಇರುವ ಪಾಠ. ಫಾರ್ಮಲ್ ಹಾಗೂ ಇನ್‌ಫಾರ್ಮಲ್ ಶಿಕ್ಷಣದ ಬಗ್ಗೆ ಚರ್ಚಿಸಿ ಮಕ್ಕಳೆಲ್ಲ ಇನ್‌ಫಾರ್ಮಲ್ ಶಿಕ್ಷಣವೇ ಹೆಚ್ಚು ಅನುಕೂಲ ಎಂದು ತಮ್ಮ ಅಭಿಪ್ರಾಯ ದಾಖಲಿಸಿದ ನಂತರ ‘ಎಲ್ಲರೂ ನಾಳೆ ಕಂಪಲ್ಸರಿ ಪ್ರಶ್ನೋತ್ತರ ಬರೆದು ತನ್ನಿ’ ಎಂದು ದೊಡ್ಡ ಕಣ್ಣು ಬಿಟ್ಟು ಹೇಳಿ, ‘ಗೊತ್ತಲ್ಲ, ನಾಳೆ ನಿಮ್ಮ ಪ್ರಶ್ನೋತ್ತರ ಪಟ್ಟಿ ಕಂಪ್ಲೀಟ್ ಆಗಲಿಲ್ಲ ಎಂದರೆ….’ ಎನ್ನುತ್ತ ಕೈಯ್ಯಲ್ಲಿರುವ ಕೋಲನ್ನು ಅರ್ಥಗರ್ಭಿತವಾಗಿ ನೋಡುತ್ತ ಪಾಠ ಮುಗಿಸುತ್ತೇವೆ. ಅಲ್ಲಿಗೆ ಆ ಪಾಠದ ಉದ್ದೇಶ ಸಫಲವಾದಂತೆ. ಹಾಗಾದರೆ ಪಾಠದ ಪ್ರಶ್ನೋತ್ತರಗಳನ್ನು ನೀಟಾಗಿ ಬರೆದು ಮುಗಿಸಿ ಹೆಚ್ಚು ಅಂಕ ಗಳಿಸೋದು ಮಾತ್ರವೇ ನದುಕಿನ ಸಾರ್ಥಕ್ಯವೇ?ಪರೀಕ್ಷೆಲಿ ಸೋತರೂ ಬದುಕಲ್ಲಿ ಗೆದ್ದೋರುಂಟುಗೆಲ್ಲಬೇಕೆನ್ನುವ ಕನಸು ಎಲ್ಲರಂತೆ ನಮಗುಂಟುನಿಜ. ಮಕ್ಕಳಲ್ಲಿ ತಾವೂ ಗೆಲ್ಲಬೇಕು ಎನ್ನುವ ಹಠ ಇರುತ್ತದೆ. ಕೆಲವರು ಅದಕ್ಕಾಗಿ ಹೆಚ್ಚು ಶ್ರಮ ಹಾಕುತ್ತಾರೆ. ಕೆಲವರು ಶ್ರಮ ಹಾಕದಿದ್ದರೂ ಅವರ ಬುದ್ಧಿಮತ್ತೆಗೆ ಅನುಸಾರವಾಗಿ ಗೆಲ್ಲುತ್ತಾರೆ. ಓದಿದವರು ಮಾತ್ರ ಗೆಲ್ಲುತ್ತಾರೆ ಎನ್ನುವುದು  ಎನ್ನುವುದು ನಿಜವಲ್ಲ. ಓದಿ ಓದಿ ಹೆಚ್ಚು ಅಂಕ ಗಳಿಸಿಯೂ ಜೀವನದಲ್ಲಿ ಗೆಲ್ಲಲಾಗದ ಅನೇಕರನ್ನು ನಾವು ಈಗಾಗಲೇ ಕಂಡಿದ್ದೇವೆ. ಹೆಚ್ಚು ಅಂಕ ಗಳಿಸು ಎಂದು ನಮ್ಮ ಮುಂದಿನ ತಲೆಮಾರನ್ನು ಪೀಡಿಸುವ ನಾವು ನಮ್ಮ ಮುಂದಿನ ಜನಾಂಗಕ್ಕಾಗಿ ಏನು ಬಿಟ್ಟಿದ್ದೇವೆ?ಧರೆಯನ್ನೆಲ್ಲ ಅಗೆದು ಬಗೆದುಸಂಪತ್ತನ್ನೆಲ್ಲ ತಿಂದು ತೇಗಿನಮ್ಮಯ ನಾಳೆಗೆ ಉಳಿಸುವಿರೇನನು?ಹೇಳಿ ಇಲ್ಲಿನ ಮಗು ಕೇಳುತ್ತಿದೆ. ನಮ್ಮ ಮುಂದಿನ ಜನಾಂಗಕ್ಕೆ ನಾವು ಏನನ್ನು ಉಳಿಸಿದ್ದೇವೆ? ಭೂಮಿಯ ಮೇಲಿರುವ ಎಲ್ಲವನ್ನೂ ಕಲುಷಿತಗೊಳಿಸಿದ್ದೇವೆ. ಮರಕಡಿದು, ಕಾಡನ್ನು ನಾಡಾಗಿಸಿದ್ದೇವೆ. ಎಲ್ಲೆಂದರಲ್ಲಿ ವಿಷಯುಕ್ತ ತ್ಯಾಜ್ಯವನ್ನು ಕಾರ್ಖಾನೆಗಳಿಂದಲೂ ಹೊರಬಿಟ್ಟು ಭೂಮಿಯನ್ನು ವಿಷಯುಕ್ತವಾಗಿಸಿದ್ದೇವೆ. ಇಷ್ಟಾದ ನಂತರವೂ ಮಗುವಿನ ಕುರಿತಾದ ಜವಾಬ್ಧಾರಿಯೂ ಇಲ್ಲದೇ ನಮ್ಮದೇ ಲೋಕದಲ್ಲಿ ಮುಳುಗಿ ಹೋಗಿರುವ ತಾಯಿ ತಂದೆಯರಿಗೆ ಮಗು ಕೇಳುವ ಪ್ರಶ್ನೆ ಇದುಅಪ್ಪ ಮೊಬೈಲ್‌ನಲ್ಲಿ, ಅಮ್ಮ ಧಾರಾವಾಹಿಯಲ್ಲಿ ಮುಳುಗಿರುವ ಕುರಿತು ಮಗುವಿಗೆ ಬೇಸರವಿದೆ. ಅಜ್ಜ ಅಜ್ಜಿ ವೃದ್ಧಾಶ್ರಮದಲ್ಲಿರುವಾಗ ತನ್ನ ಜೊತೆ ಆಡಲು ಯಾರಿಲ್ಲವೆಂದು ಮಗು ಕೊರಗುತ್ತದೆ. ಇಷ್ಟಾದರೂ ತಂದೆ ತಾಯಿಗಳು ಹೇಳುವ ಒಳ್ಳೆಯ ವಿಷಯಕ್ಕೆ ಮಕ್ಕಳ ಒಪ್ಪಿಗೆ ಇದ್ದೇಇರುತ್ತದೆ.ಉಳ್ಳವರ ಸೊಕ್ಕನು ಮುರಿದುಬಡವರಿಗೆ ಜೊತೆಯಾಗಿಬಸವಣ್ಣನ ಹಾದ್ಯಾಗೆ ನಡಿಯೋ ಮಗನೆಎನ್ನುವ ಮಾತಿಗೆ ಯಾವ ಮಗುವೂ ಇಲ್ಲ ಎನ್ನುವುದಿಲ್ಲ ಎನ್ನುವ ನಂಬಿಕೆ ಕವಿಗೆ ಇದೆ. ಹೀಗಾಗಿ ಮಕ್ಕಳ ಮೇಲೆ ನಂಬಿಕೆ ಇಟ್ಟು ನಡೆಯುವುದೇ ತಂದೆತಾಯಿಗಳಿಗೆ ಹಿತವಾದದ್ದು. ಮಕ್ಕಳನ್ನು ಅವರದ್ದೆ ಕಲ್ಪನೆಯ ಹಾದಿಯಲ್ಲಿ ಬಿಟ್ಟರೆ ಅವರು ಸೂರ್‍ಯ ಚಂದ್ರರನ್ನೂ ಭೂಮಿಗೆ ತಂದು ಕಟ್ಟಿಡಬಲ್ಲರು. ಮೋಡವನ್ನೂ ನಿಯಂತ್ರಿಸಿ ಕಲ್ಲು ಹೊಡೆದು ಮಳೆ ಸುರಿಸಲೂ ಹಿಂದೆ ಮುಂದೆ ನೋಡರು ಇಂದಿನ ಜನಾಂಗ. ಮೋಡದ ರಾಸಿಗೆಕಲ್ಲು ಹೊಡೆದುಆಲಿಕಲ್ಲನು ರಪರಪ ಕೆಡಗೋಣಬೇಕೆಂದಾಗ ಮಳೆಯನು ಪಡೆದುಧಗೆಯನು ಅಟ್ಟೋಣಎಂದು ಹುಮ್ಮಸ್ಸಿನಿಂದ ಹೇಳುವ ಇಂದಿನ ತಲೆಮಾರಿನ ಹುಮ್ಮಸ್ಸಿಗೆ ಕೊನೆ ಎಲ್ಲಿದೆ.  ಸೂರ್‍ಯನನ್ನೂ ಓಡಿಸಿ ಶಾಸ್ವತವಾಗಿ ಚಂದ್ರನೇ ಬೆಳಕು ನೀಡಲಿ, ಈ ಧಗೆ ಸಹಿಸಲಾಗದು ಎನ್ನುವ ಮಕ್ಕಳಿಗೆ ಚಂದ ತಾರೆಯರ ಚಾಡಿ ಮಾತು ಕೇಳುವ ಅಸಮಧಾನವೂ ಇದೆ. ಮನೆಯಲ್ಲಿ ಅಪ್ಪನ ಕೋಪಕ್ಕೆ ಅಮ್ಮ ಚಾಡಿ ಹೇಳುತ್ತಾಲೆ ಎನ್ನುವ ಮಕ್ಕಳ ಮನಸಿನ ಮಾತು ಇದು ಎಂದೇ ನನಗೆ ಓದಿದಾಗಲೆಲ್ಲ ಅನ್ನಿಸಿದೆ. ಚಾಡಿಯ ಹೇಳಲು  ತಾರೆಗಳೆಲ್ಲನಿನ್ನಯ ಹಿಂದೆಯೇ ಕಾದಿವೆ ನೋಡುಎನ್ನುವ ಮಗು ಪೆನ್ಸಿಲ್ ತಪ್ಪು ಬರೆಯಲು ನೀನೇ ಕಾರಣ ಎಂದು ರಬ್ಬರ್ ಗುರಾಯಿಸುವ ಕನಸನ್ನು ತರಗತಿಯಲ್ಲೂ ಕಾಣುವ ಸಾಮರ್ಥ್ಯ ಹೊಂದಿದೆ. ಮಗುವಿನ ಕಲ್ಪನಾ ಶಕ್ತಿಗೆ ಎಲ್ಲಿದೆ ಮಿತಿ? ಪರಿಸರ ಕಾಳಜಿಯ ಕವನಗಳೂ ಇಲ್ಲಿವೆ. ಗುಬ್ಬಿಯ ಮರಿಗಳು ಕಾಂಕ್ರಿಟ್ ಕಾಡಿನಲ್ಲಿ ದಂಗಾಗಿ ಕುಳಿತಿರುವಾಗ ಗುಬ್ಬಿಯು ತನ್ನ ಸಂಸಾರವನ್ನು ಹಳ್ಳಿಗೆ  ಸಾಗಿಸುತ್ತದೆ. ಅಲ್ಲಿಯೂ ಗಿಡಮರಗಳಿಲ್ಲದ್ದನ್ನು ಕಂಡು ಕಾಡೇ ಉತ್ತಮ ಎನ್ನುತ್ತ ಕಾಡಿನ ಕಡೆ ಮುಖ ಮಾಡುತ್ತದೆ. ಇನ್ನೊಂದೆಡೆ  ಮಳೆಯ ಸುರಿಸಲು ಬಳಿ ಬಾ ಎಂದು ಮೋಡವನ್ನು ಕರೆದರೆ ಕಾಡು ಕಡಿದು, ಭೂಮಿಯನ್ನೆಲ್ಲ ಹೊಲಸು ಮಾಡಿದ್ದನ್ನು ವಿರೋಧಿಸುವ ಮೋಡ, ಹಸಿರು ಬೆಳೆಸಿದರೆ ಖಂಡಿತಾ ಬರುತ್ತೇನೆ ಎನ್ನುತ್ತದೆ. ಹಾಗೆ ಬರುವಾಗಲೇ ಮಿಂಚು, ಗುಡುಗು, ಮಳೆಗೆ ಪೈಪೋಟಿಯೂ ಆಗುತ್ತದೆ. ಮಿಂಚಿನ ಬೆಳಕು ಮೊದಲು ಭೂಮಿಗೆ ತಲುಪುತ್ತದೆ, ಗುಡುಗಿನ ಶಬ್ಧ ನಂತರ ಕೇಳಿದರೆ ಮಳೆ ಮೂರನೆ ಸ್ಥಾನವನ್ನು ಪಡೆಯುತ್ತದೆ. ಇಲ್ಲಿ ಬೆಳಕಿನ ವೇಗ ಶಬ್ಧದ ವೇಗಕ್ಕಿಂತ ಹೆಚ್ಚು ಎನ್ನುವ ಸೂಕ್ಷ್ಮ ಪಾಠವೂ ಅಡಗಿಕೊಂಡಿದೆ. ಮತ್ತೊಂದು ಕವನದಲ್ಲೂ ನದಿಯನ್ನು ಕಂಡು ಪ್ರಾಣಿ ಪಕ್ಷಿಗಳೆಲ್ಲ ಖುಷಿಪಡುತ್ತವೆ. ಆದರೆ ಮನುಷ್ಯ ಮಾತ್ರ ಸುತ್ತಲಿನ ಕಾಡು ಕಡಿದು ಗದ್ದೆ ಮಾಡುತ್ತಾನೆ. ಮಳೆ ಕಡಿಮೆಯಾಗಿ ನದಿ ಒಣಗಿ ಹೋಗುತ್ತದೆ ಎನ್ನುವುದನ್ನು ತಿಳಿಸುತ್ತ ಪ್ರಕೃತಿಯಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚಾಗಬಾರದು ಎನ್ನುತ್ತಾರೆ. ಹೀಗಾಗಿಯೇ ಪುಟ್ಟನು ದೀಪಾವಳಿ ಹಬ್ಬಕ್ಕೂ ಪಟಾಕಿ ಹೊಡೆಯದೇ ಪರಿಸರದ ಬಗ್ಗೆ ಕಾಳಜಿ ತೋರಿಸುವುದನ್ನು ಚಂದದ ಕವಿತೆಯನ್ನಾಗಿಸಿ ಮಕ್ಕಳ ಮನಸ್ಸಿನಲ್ಲಿ ಪರಿಸರದ ಕುರಿತು ಜಾಗ್ರತಿ ಮೂಡಿಸುತ್ತಾರೆ.  ಅಮ್ಮ  ಇಲಿಯ ಕಾಟ ತಾಳದೆ ವಿಷವಿಕ್ಕಿದ್ದನ್ನೂ ಮಗು ಚಿಕ್ಕಿಲಿಗೆ ಹೇಳುತ್ತ, ಬಡವರ ಗೂಡಿಗೆ ಹೋಗಲೇ ಬೇಡ ಎನ್ನುತ್ತದೆ. ತಮ್ಮನಿಗೂ ತಿಂಡಿ ಕೊಡದೆ ತಿಂದ ಗುಂಡನ ಕೈಯ್ಯಿಂದ ತಿಂಡಿ ಎಗರಿಸಿದ ಕಾಗೆ ತನ್ನೆಲ್ಲ ಬಂದು ಬಳಗವನ್ನು ಕರೆದು ಹಂಚಿಕೊಂಡು ತಿನ್ನುತ್ತದೆ. ಇರುವೆ ಒಗ್ಗಟ್ಟಿನ  ಪಾಠ ಹೇಳುತ್ತದೆ. ಕಾಡಿನಲ್ಲಿ ಸಿಗುವ ರುಚಿರುಚಿಯಾದ ಹಣ್ಣು ಬಿಟ್ಟು ಪೇಟೆಗೆ ಬಂದು ಅಂಗಡಿಯಲ್ಲಿ ಕದಿಯುವ ಮಂಗಗಳ ಕುರಿತು ಮಗು ಪ್ರಶ್ನೆ ಕೇಳುತ್ತ ಕಾಡಿನಲ್ಲಿರುವ ಹಣ್ನಿನ ಮರಗಳನ್ನೆಲ್ಲ ಕಡಿದುದ್ದರ ಕುರಿತು ವಿಷಾದ ವ್ಯಕ್ತ ಪಡಿಸುತ್ತದೆ. ಹೀಗೆ ಪರಿಸರದ ಪಾಠ ಹೇಳುತ್ತಲೆ ಅಡುಗೆ ಮನೆಯ ಆಟಗಾರ ಎಂದು ಮಗುವನ್ನು ಕುರಿತೂ ಹೇಳುವ ಕವಿತೆ ಇಲ್ಲಿದೆ. ಅಪ್ಪನ ಹೊಲದಲ್ಲಿ ದುಡಿಯಬೇಕೆನ್ನುವ, ಮನೆಯಲ್ಲಿ ರೋಬೋಟ್ ಜೊತೆ ಆಡುತ್ತಲೇ ಊರಿನ ತೋಟದಲ್ಲಿ ಏನೇನಿದೆ ಎಂದು ತೋರಿಸಲು ತಂದೆಯನ್ನು ಕರೆಯುವ ಮಗುವಿಗೆ ಅಪ್ಪನಂತೆ ಗಡ್ಡ ಮೀಸೆ ಯಾವಾಗ ಬರುವುದು ಎಂದು ಅಮ್ಮನನ್ನು ಕೇಳುತ್ತ ಎದುರು ನೋಡುತ್ತಿದೆ. ತನ್ನ ಶಾಲೆಯಷ್ಟು ಸುಂದವಾದದ್ದು ಬೇರಿಲ್ಲ ಎನ್ನುತ್ತದೆ. ಕಾಡಿಗೆ ಹೋಗಬಯಸುವ, ಸಂತೆಯಲ್ಲಿ ನಲಿದಾಡಲು ಇಷ್ಟಪಡುವ ಮಗುವಿನ ಮನವಿಗೆ ಹಿರಿಯರೆನ್ನಿಸಿಕೊಂಡ ನಾವು ಸ್ಪಂದಿಸಿದ್ದೇವೆಯೇ?      ಭೀಮಲೀಲೆ ಎನ್ನುವ ಅಂಬೇಡ್ಕರರ ಕುರಿತಾದ ಕವನ ಮಕ್ಕಳನ್ನು ಮುಟ್ಟುವಂತಿದೆ. ಓದು ಬರೆಹ ಕಲಿಯದ ಗೋಣಿ ಬಸವನ ಪಾಡನ್ನು ಕಂಡರೆ ಮಗು ಒಂದಿಷ್ಟಾದರೂ ಓದಬೇಕೆಂದು ಬಯಸುವುದು.ಆಕಾಶವನ್ನೇ ಮುಟ್ಟಬಲ್ಲೆವುಏಣಿಯ ನೀಡಿ ಸಹಕರಿಸಿಎಂದು ತಮ್ಮ ಮೇಲೆ ತಾವೇ ಭರವಸೆಯಿಟ್ಟು ಮಗು ಕೇಳುತ್ತಿದೆ.  ಆಕಾಶಕ್ಕೆ ಏರುವ ಮಗುವಿಗೆ ಏಣಿ ಕೊಟ್ಟು ಬೆನ್ನು ತಟ್ಟಬೇಕಾದದ್ದು ಪಾಲಕರು ಮಾಡಲೇ ಬೇಕಾದ ಕರ್ತವ್ಯ.ಬೆನ್ನು ತಟ್ಟಿ ಬೆಂಬಲಿಸಿಬದುಕ ದಾರಿ ತೋರಿಸಿಸೋತರೂ ಗೆಲ್ಲೋ ಕಲೆಯಕಲೀತೀವಿ ಸಹಕರಿಸಿ  ನಮ್ಮ ಮಕ್ಕಳ ಬೆನ್ನು ತಟ್ಟಿ ಯಾವುದು ಒಲ್ಳೆಯದು, ಯಾವುದು ಕೆಟ್ಟದ್ದು ಎಂದು ತಿಳಿಸಿಕೊಳ್ಳಲೇ ಬೇಕಲ್ಲವೇ? ಇಲ್ಲದೇ ಹೋದರೆ ತಪ್ಪು ಸರಿ ಎನ್ನುವುದರ ಅರಿವಾಗುವುದಾದರೂ ಹೇಗೆ? ಅಂತಹ ತಿಳುವಳಿಕೆ ನೀಡಿಲ್ಲದ್ದರಿಂದಲೇ ಸಮಾಜದಲ್ಲಿ ಇಷ್ಟು ಅನ್ಯಾಯ, ಅತ್ಯಾಚಾರಗಳು ಹೆಚ್ಚುತ್ತಿವೆ. ನಾವು ನೀಡುವ ಪಾಠ ಮಕ್ಕಳಲ್ಲಿ ನೈತಿಕತೆಯನ್ನು ತುಂಬಿದರೆ  ಸಮಾಜ ಖಂಡಿತಾ  ಅಧೋಗತಿಗಿಳಿಯಲಾರದು. ಲಿಂಗತ್ವದ ಕಲ್ಪನೆ ಮಾಡಿಕೊಡುವುದು ಹಾಗೂ ಲಿಂಗಬೇಧ ಮಾಡದಂತೆ ನೋಡಿಕೊಳ್ಳುವುದು ನಮ್ಮದೇ ಕರ್ತವ್ಯ.

Read Post »

You cannot copy content of this page

Scroll to Top