ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು

ಪುಸ್ತಕಪರಿಚಯ “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರು ಕೊಡಮಾಡುವ ಪ್ರೊ.ಡಿ.ಸಿ.ಅನಂತಸ್ವಾಮಿ ಸಾಹಿತ್ಯ ದತ್ತಿ 2019 ಪುರಸ್ಕಾರಕ್ಕೆ ಭಾಜನವಾಗಿರುವುದು “ಥಟ್ ಅಂತ ಬರೆದು ಕೊಡುವ ರಸೀತಿಯಲ್ಲ ಕವಿತೆ” ಇದೇ ಪುಸ್ತಕಕ್ಕೆ ಬಾಗಲಕೋಟರ ಜಿಲ್ಲೆಯ ಸಮೀರವಾಡಿ ಸಾಹಿತ್ಯ ದತ್ತಿ ಪ್ರಶಸ್ತಿ ಬಂದಿರುವುದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಕಾಜಾಣ ಪುಸ್ತಕವು 2019ರಲ್ಲಿ ಪ್ರಕಟಿಸಿರುವ ಈ ಕವನ ಸಂಕಲನದಲ್ಲಿ ಮೂವತ್ತಾರು ಕವಿತೆಗಳಿವೆ. ಈ ಸಂಕಲನದ ಮೂಲಕ ಕಾವ್ಯ ಪ್ರಪಂಚಕ್ಕೆ ಪರಿಚಯಗೊಂಡಿರುವ ಸುಮಿತ್ ಮೇತ್ರಿ ಹಲಸಂಗಿಯ ಅಪರೂಪದ ಪ್ರತಿಭೆ. ಸೆರಗು ಜಾರಿದ ಕೊರಳ ಹರಿವಿಗೆ ಸಾವಿರಾರು ಹಗಲು ಮಿಣುಕು ಚುಕ್ಕಿಗಳು ಫಳ್ಳನೆ ಹೊಳೆಯುವ ಕರಿಬೆಕ್ಕಿನ ಕಣ್ಣ ಬೆಳದಿಂಗಳು ಎನ್ನುವಂತಹ ಸಾಲುಗಳನ್ನು ನೋಡಿದಾಗ ಇದನ್ನು ಬರೆದ ಕವಿಯ ಮೊದಲ ಸಂಕಲನವೆಂದು ಅನ್ನಿಸುವುದೇ ಇಲ್ಲ.  ಹೀಗೆ ಈ ಸಂಕಲನದ ಉದ್ದಕ್ಕೂ ಕಣ್ಣಾಡಿಸಿದರೆ ಪ್ರಬುದ್ಧ ಮನಸ್ಸಿನ ಗಮನಾರ್ಹವಾದ ಅಭಿವ್ಯಕ್ತಿಯ ಚಿತ್ರವೊಂದು ಮೂಡುತ್ತದೆ. ಮಾತಾಗುವ ಕಾಗದದ ಹೂವುಗಳು ಬಸವನ ಹುಳುವಿನ ಧಾವಂತ ಸಾವಿರದ ಕಣ್ಣಿನ ನವಿಲು ಬಯಲೊಳಗಿನ ಬಾಗಿಲು ಬೆತ್ತಲೆ ಹಣೆಯ ಒಂಟಿ ಸಿಂಧೂರ ಜೊತೆಯಾಗದ ನೆರಳ ಎದೆಯ ಗರ್ಭದ ಸಂವಹನ ಹೀಗೆ ಕವಿತೆಯ ಕುರಿತು ಹೊಸದೇ ಆದ ಆಲೋಚನೆಗಳನ್ನು ಇಟ್ಟುಕೊಂಡು ಆದ್ಯಾತ್ಮದ ಬೆಳಕಿನಲ್ಲಿ ಅಕ್ಷರದ ಕೈ ಹಿಡಿದು ನಡೆಯುತ್ತಿರುವ ವಿಶಿಷ್ಟ ಕವಿ ಸುಮಿತ್ ಮೇತ್ರಿ. ಸಂತೆ ಪೇಟೆಯ ಗಿಜಿಗುಡುವ ತಿರುವಿನಲ್ಲಿ ಥಟ್ಟನೆ ಎದುರಾಗುವ ಹಸಿರು ತೋಟದಂತೆ ತಾಜಾ ಕವಿತೆಗಳ ಸಂಕಲನವನ್ನು ಕೈಗಿಟ್ಟಿದ್ದಾರೆ ಈ ಪ್ರಾಮಾಣಿಕ ಕವಿ ಮಿತ್ರ. ಹೌದು ಸುಮಿತ್ ಕವಿತೆಯ ಪಾಠಶಾಲೆಯ ಒಬ್ಬ ಪ್ರಾಮಾಣಿಕ ವಿದ್ಯಾರ್ಥಿ. ಆದ್ದರಿಂದಲೇ ಇವರು ಸದಾ ತಮ್ಮನ್ನು ತಾವು ಜೀವಪರ ಕಾಳಜಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಲಸಂಗಿಯ ಹುಲುಸಾದ ನೆಲದಲ್ಲಿ ಮಧುರಚೆನ್ನರನ್ನು ಬಿತ್ತಿದ್ದಾರೆ ಎಂಬ ವರಕವಿ ಬೇಂದ್ರೆಯವರ ಮಾತಿಗೆ ಸಾಕ್ಷಿ ಎನ್ನುವಂತೆ ಇವರ ಕಾವ್ಯ ಚಿಗುರು ಸಾಕ್ಷಿ ಹೇಳುತ್ತದೆ. ಈ ಕ್ಷಣದ ತೇಲುವ ಪುಳಕ ಅನುಭವಿಸುವ ಗಿಡದಿಂದುರುವ ಹೂವಿಗೆ ತನ್ನನ್ನು ತಾನು ಸಮೀಕರಿಸಿಕೊಂಡಿರುವ ಇವರು ಪದ್ಯದ ಹೊಳೆಯಲ್ಲಿ ತೇಲುವ ಸುಖದ ಪಲುಕಿನ ಘಳಿಗೆಗಳನ್ನು ದಾಖಲಿಸಿರುವುದಕ್ಕೆ ಅನೇಕ ಸಾಲುಗಳು ಸಾಕ್ಷಿ ಹೇಳುತ್ತವೆ. ಆತ್ಮ ಹೊರಡುತ್ತದೆ ತೊಳೆದಿಟ್ಟ ಪ್ರತಿಮೆಯಂತ ಹೊಳೆಯುವ ಇಳಿಜಾರಿನ ನವಿಲೂರಿಗೆ ರೈನರ್ ಮಾರಿಯಾ ರಿಲ್ಕ್ ಹೇಳುತ್ತಾನೆ “ ನಮ್ಮ ಬದುಕು ಯಶಸ್ವಿಯೋ ಅಲ್ಲವೋ ಎಂಬುದರ ಪ್ರಮಾಣ ಪುರಾವೆಯೇ ಪ್ರೀತಿ. ನಾವು ಮಾಡುವ ಎಲ್ಲ ಕೆಲಸಗಳೂ ಪ್ರೀತಿಗಾಗಿ ಮಾಡಿಕೊಳ್ಳುವ ಸಿದ್ಧತೆಗಳು ಮಾತ್ರ” ಸುಮಿತ್ ಅವರ ಕೆಲವು ಕವಿತೆಗಳು ರಿಲ್ಕ್ ಹೇಳಿದ ಮಾತು ಸತ್ಯವೆಂಬುದಕ್ಕೆ ಸಾಕ್ಷಿ ಹೇಳುತ್ತವೆ. ಬಯಲಾಗದೇ ಸುರಿಯುವ ಈ ಮಳೆಯಲ್ಲಿ ಪಾದದ ಕಿರುಬೆರಳಿಗೆ ಮುತ್ತಿಡುವಾಸೆ ಮೂಡಿದೆ ಸುಮಿತ್ ಅವರ ಲೇಖನಿಗೆ ಸಹಜ ಕಾವೊಂದು ಪ್ರಾಪ್ತವಾದಂತೆ ಬರೆಸಿಬಿಡುವ ಶಕ್ತಿ ಪ್ರೀತಿಗಿದೆ ಎಂಬ ಭಾವನೆ ಹುಟ್ಟಿಸುವ ಸಾಲುಗಳನ್ನು ನೋಡಿ ಕಿಟಕಿಯ ಬದಿ ನಿಂತು ಮುಂಗುರುಳು ಬದಿಗೊತ್ತಿ ಕಿವಿಯಾಗದಿರು ಸದ್ದೇ ಮಾಡದ ನಿಶಬ್ದಕೆ! ರಿಲ್ಕ್ ಹೇಳುತ್ತಾನೆ “ಒಂದು ಸೃಜನಶೀಲ ಆಲೋಚನೆಯಲ್ಲಿ ನಾವು ಮರೆತು ಹೋದ ಸಾವಿರ ಸಾವಿರ ರಾತ್ರಿಗಳ ಪ್ರೀತಿ ಮತ್ತೆ ಜೀವ ಪಡೆಯುತ್ತದೆ.” ಹಾಗೆ ಪ್ರೀತಿಯೆನ್ನುವುದು ಸುಮಿತ್ ಅವರ ಆಲೋಚನೆಗಳನ್ನು ಸಜೀವಗೊಳಿಸುತ್ತದೆ ಮತ್ತು ಉತ್ಸಾಹಭರಿತ ಸಾಲುಗಳನ್ನು ಬರೆಸುತ್ತದೆ. ಬೆತ್ತಲೆ ರಸ್ತೆಗೆ ಹಬ್ಬಿದ ಇಬ್ಬನಿಯ ಸ್ಪರ್ಶ ಹೇಗೆ ಹೇಳಲಿ ಆ ಕ್ಷಣ ಗಿಳಿಯ ತುಟಿಯ ರಂಗು  ಅವಳ ಗುಂಗು ಹೀಗೆ ಹೊಚ್ಚ ಹೊಸ ಉಪಮೆಗಳನ್ನು ಬಳಸಿ ಓದುಗರು ಕೂಡಾ ಉಲ್ಲಾಸಗೊಳ್ಳುವಂತಹ ಸಾಲುಗಳನ್ನು ಒಕ್ಕಣಿಸುತ್ತಾರೆ. ಮುಂದುವರಿದು ಪ್ರೀತಿಯ ತೀವೃತೆಯ ಕಂಪಿಸುವ ಲಯಕ್ಕೆ ಶರಣಾದ ಭಕ್ತನಂತೆ ಸುಮಿತ್ ದೇವರೆದುರು ಸತ್ಯದ ತಪ್ಪೊಪ್ಪಿಗೆಗೂ ತಯಾರಾಗಿಬಿಡುತ್ತಾರೆ. ಕ್ಷಮಿಸು ಭಗವಂತ ಅವಳಷ್ಟು ನಿನ್ನನ್ನು ಪ್ರೀತಿಸಲಾರೆ ನಿನ್ನಷ್ಟು ನಾನು ಅವಳಲ್ಲಿ ಲೀನವಾಗಲಾರೆ ಉತ್ಕಟ ಪ್ರೇಮದ ಅಭಿವ್ಯಕ್ತಿಯ ಘಳಿಗೆಯಲ್ಲಿ ತಾಜಾ ಹೂವಿನ ಘಮದಂತೆ ಭಾಸವಾಗುವ ಸುಮಿತ್ ಅವರ ಕವಿತೆ ಸಾಮಾಜಿಕ ಕಳಕಳಿಯನ್ನು ಪ್ರತಿಪಾದಿಸುವ ಹಠಕ್ಕೆ ಬಿದ್ದಾಗ ಮಾತಾಗುವ ಕಾಗದದ ಹೂವಿನಂತೆ ಕಾಣುತ್ತದೆ. ಮಧುರಚೆನ್ನರನ್ನು ತಮ್ಮ ಆತ್ಮಸಾಥ್ ಮಾಡಿಕೊಂಡಿರುವ ಸುಮಿತ್ ಅವರಿಗೆ ಭಾವಲೋಕದಲ್ಲಿ ಒರತೆ ಹುಟ್ಟಿಸಿಕೊಂಡು ಹೊಳೆವ ಅಲೆಗಳೊಡನೆ ಚಿನ್ನಾಟವಾಡುವ ಕಾವ್ಯಸುಖದ ಬಗ್ಗೆ ಯಾರೇನು ಉಪದೇಶ ಕೊಡಬೇಕಾಗಿಲ್ಲ. ಆದರೂ ಪ್ರೀತಿಯಿಂದ ಅಭಿನಂದಿಸುತ್ತ “ಈ ಪ್ರಶಸ್ತಿ ಬಂದಿರುವುದು ನನ್ನ ಕೃತಿಗೇ ಹೊರತು ವೈಯಕ್ತಿಕವಾಗಿ ನನಗಲ್ಲ”  ಎನ್ನುವ ಒಳ ಎಚ್ಚರವೊಂದನ್ನು ಜಾಗೃತವಾಗಿಟ್ಟುಕೊಂಡು ಸಾಮಾಜಿಕ ಘೋಷಣೆಗಳನ್ನ ಹಾಗೆಯೇ ಸಾಲಿಗಿಳಿಸಿದರೆ ವೃತ್ತಪತ್ರಿಕೆಯ ವರದಿಯಾಗುತ್ತದೆಯೇ ಹೊರತು ಅದರಲ್ಲಿ ಕವಿತೆ ಇರುವುದಿಲ್ಲ ಎಂಬ ಸತ್ಯವನ್ನು ಮನನ ಮಾಡಿಕೊಳ್ಳುತ್ತ ಉಕ್ಕಿ ಹರಿವ ಪ್ರೀತಿಗೆ ಒಪ್ಪಿಸಿಕೊಂಡ ಉದ್ದೀಪಿತ ಮನಸ್ಸಿನ ಘಮಲಿನಂತಹ ತಾಜಾ ಕವಿತೆಗಳನ್ನು ಮತ್ತಷ್ಟು ಬರೆಯಿರಿ ಎಂದು ಕೋರುತ್ತೇನೆ. ಮನಸ್ಸಿಗೆ ಹೊಳೆಯುವ ಪೂರ್ವ ಸೂಚನೆಗಳಾಚೆಗೆ ಒಂದಿಷ್ಟನ್ನು ನೋಡುವ ಶಕ್ತಿಯನ್ನು ಕವಿತೆಯ ಅಂತಸತ್ವದಿಂದ ನಾವು-ನೀವು ಪಡೆದುಕೊಳ್ಳೋಣ ಎಂಬುದೇ ಇವತ್ತಿನ ಹಾರೈಕೆ. ************************************** ಪ್ರಜ್ಞಾ ಮತ್ತಿಹಳ್ಳಿ

ಇರುವೆ ಗೂಡಿನ ಬಾಯಿ ತೆರೆದ ನೆಲದ ಮಾತು Read Post »

ಪುಸ್ತಕ ಸಂಗಾತಿ

ಜಂಜಿ ಡಪಾತಿ ಬೋ ಪಸಂದಾಗೈತಿ!

ಪುಸ್ತಕಪರಿಚಯ ಜಂಜಿ ಡಪಾತಿ ಬೋ ಪಸಂದಾಗೈತಿ! ಚುಕ್ಕಿ ಬೆಳಕಿನ ಜಾಡುಕಾದಂಬರಿಕರ್ಕಿ ಕೃಷ್ಣಮೂರ್ತಿಛಂದ ಪುಸ್ತಕ. ಇದು ಕಥೆಗಾರ ಕರ್ಕಿ ಕೃಷ್ಣಮೂರ್ತಿ ಅವರ ಮೊದಲ ಕಾದಂಬರಿ. ‘ಮಳೆ ಮಾರುವ ಹುಡುಗ’ ‘ಗಾಳಿಗೆ ಮೆತ್ತಿದ ಬಣ್ಣ’ ಅವರ ಪ್ರಕಟಿತ ಕಥಾಸಂಕಲನಗಳು. ಅರಿಕೆಯಲ್ಲಿ ಕೃಷ್ಣಮೂರ್ತಿ ಅವರು ಹೇಳಿಕೊಂಡಂತೆ ‘ ಜಂಜಿ ಡಂಪಾತಿ’ ಎಂಬ ಅಪ್ರಕಟಿತ ಕಥೆಯೊಂದನ್ನು ಓದಿ ಅವರ ಗೆಳೆಯರು ಕಾದಂಬರಿ ಮಾಡಬಹುದು ಎಂದು ಹೊಳಹು ನೀಡಿದ್ದೇ ಈ ಕೃತಿಯ ಹುಟ್ಟಿಗೆ ಕಾರಣ. ಮಲಯೂ ಭಾಷೆಯ ಶಬ್ದ ಈ ಜಂಜಿ ಡಪಾತಿ. ಅಂದರೆ “ಭರವಸೆ ಪೂರೈಸಿದ್ದೇನೆ” ಎಂದರ್ಥ. ವಲಸೆಯ ಕಥನಗಳ ಪ್ರಕಾರಕ್ಕೆ ಸೇರುವ ಕಾದಂಬರಿಯಿದು. ಇತ್ತೀಚೆಗೆ ವಸುಧೇಂದ್ರ, ಡಾ.ಗುರುಪ್ರಸಾದ್ ಕಾಗಿನೆಲೆ, ಎಂ. ಆರ್. ದತ್ತಾತ್ರಿ ಸೇರಿದಂತೆ ಹಲವರು ಈ ವಿಭಾಗದಲ್ಲಿ ಕೃತಿಗಳನ್ನು ಬರೆದಿದ್ದಾರೆ. ಆದರೆ ಮಲೇಷ್ಯಾದ ಕುರಿತು ಕನ್ನಡದಲ್ಲಿ ಬಂದ ಮೊದಲ ಕಾದಂಬರಿಯಿದು. ಸಹಸ್ರಾರು ಕಿಮೀ ಕ್ರಮಿಸುವ ವಲಸೆ ಹಕ್ಕಿಗಳ ಮಾರ್ಗ ನಿರ್ಣಯವು, ನಕ್ಷತ್ರಗಳ ಜಾಡೂ ಸೇರಿದಂತೆ ಹಲವು ಸಂವೇದನೆಗಳನ್ನು ಆಧರಿಸಿದೆ. ಇದಕ್ಕೆ ಸೂಕ್ತವಾಗಿ ದೇಶ ಕುಲಕರ್ಣಿ ಅವರ ಕವನದ ಸಾಲು ‘ ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು..’ಇದರ ಕೊನೆಯ ಭಾಗ ಈ ಕಾದಂಬರಿಗೆ ಶೀರ್ಷಿಕೆಯಾಗಿದೆ. ನೋಡಿ, ದೇಶ ಕುಲಕರ್ಣಿ ಅವರ ಈ ಕವಿತೆಯು ಕಾದಂಬರಿಯ ಅಪರಿಮಿತ ಸಾಧ್ಯತೆಗಳನ್ನು ಸೂಚ್ಯವಾಗಿ ಹೇಳುತ್ತದೆ. “ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡುಇನ್ನಿಲ್ಲವಾಯಿತೆ ಆ ಹಕ್ಕಿ ಹಾಡುಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆಮುರಿದು ಹೋಯಿತೇ ಈಗ ಆ ಪುಟ್ಟ ಗೂಡು” ಅವಕಾಶ ಸಿಕ್ಕರೆ ಹೊರದೇಶಕ್ಕೆ ಹಾರುವ ಆಸೆಯ ನಿರಂಜನ, ಬೇರಿನ ಹುಡುಕಾಟದಲ್ಲಿ ಇರುವ ಶಣ್ಮುಗರತ್ಮಮ್, ತನ್ನ ಮೂಲದ ಕುರಿತು ಅಭಿಮಾನ ಹೊಂದಿರುವ ದುರೈ; ಹೀಗೆ ಇಲ್ಲಿ ಎಲ್ಲರೂ ಚುಕ್ಕಿ ಬೆಳಕಿನ ಜಾಡಿನಲ್ಲಿದ್ದಾರೆ. ಕುತೂಹಲದ ಕಂದೀಲು ಹಿಡಿದು ಸದ್ಯದ ಸನ್ನಿವೇಶಗಳು ಬದುಕಿನ ಅಸಂಗತತೆಯನ್ನು ಇನ್ನೂ ದಟ್ಟವಾಗಿಸುತ್ತಿರುವ ವಾಸ್ತವದ ಶೋಧವಾಗಿಯೂ ಈ ಕೃತಿ ಕಾಣಿಸುತ್ತದೆ. ಈ ಕಾದಂಬರಿಯ ಮುಖ್ಯ ಪಾತ್ರವಾದ ನಿರಂಜನನನ್ನು ಅತ್ಯುತ್ತಮವಾಗಿ ಕರ್ಕಿಯವರು ಕಡೆದಿದ್ದಾರೆ. ಇವನನ್ನು ಪ್ರತಿನಾಯಕ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಆದರೆ ಇಲ್ಲಿ ನಾಯಕನೂ ಇವನೇ! ಇದು ವರ್ತಮಾನದ ಕಟು ಸತ್ಯ ಸಹ ಹೌದು. ಆಫೀಸಿನ ಕೆಲಸದ ಪ್ರಯುಕ್ತ ನಿರಂಜನ ವಿದೇಶಕ್ಕೆ ಹೋದರೆ ಸ್ಟಾರ್ ಹೋಟೆಲಿನಲ್ಲುಳಿದುಕೊಂಡು ಬರುವಾಗ ಅಲ್ಲಿನ ಸೋಪು, ಬ್ರಶ್ಶು, ಬಾಚಣಿಕೆಯನ್ನು ತುಂಬಿಕೊಂಡು ಬರುವ ಮನಸ್ಥಿತಿಯವ. ಪುಕ್ಕಟೆ ಆಸ್ಪತ್ರೆ, ಬಾಡಿಗೆ ಕಾರಿನ ಬಿಲ್ಲನ್ನು ಹೆಚ್ಚು ತೋರಿಸಿ ಕ್ಲೈಮ್ ಮಾಡುವ ಭಾರತದ ಬಹುಸಂಖ್ಯಾತ ಮನಸ್ಥಿತಿಯವನು. ಅದರಲ್ಲಿ ಅವನಿಗೆ ಯಾವುದೇ ಎಗ್ಗುಸಿಗ್ಗಿಲ್ಲ. ಇವಕ್ಕೆಲ್ಲ ಅವನದೇ ಆದ ಸಮರ್ಥನೆಗಳಿವೆ. ಇವು ನಮ್ಮೊಳಗೂ ಇವೆ ಎಂದು ಅನ್ನಿಸದೇ ಇರದು. ಈತ ಹೆಜ್ಜೆ ಹೆಜ್ಜೆಗೂ ಹೇವರಿಕೆಯನ್ನು ಹುಟ್ಟಿಸುತ್ತಾನೆ. ಅತ್ಯಂತ ಸೂಕ್ಷ್ಮವಾದ ಕೃತಿಕಾರ ಮಾತ್ರ ಇಂತಹದೊಂದು ಪಾತ್ರವನ್ನು ಕಡೆತನಕ ಅದೇ ಲಯದಲ್ಲಿ ನಿರ್ವಹಿಸಬಲ್ಲರು. ಮಲೇಷ್ಯಾದ ಕೌಲಾಲಂಪುರದ ಆಸುಪಾಸಿನಲ್ಲಿ ಒಂದು ವಾರದ ಕಾಲ ನಡೆಯುವ ಕಥನವೇ ಈ ಚುಕ್ಕಿ ಬೆಳಕಿನ ಜಾಡು. ತನ್ನ ಕಛೇರಿಯ ಕಾರ್ಯದ ನಿಮಿತ್ತ ಇಲ್ಲಿಗೆ ಆಗಮಿಸುವ ನಿರಂಜನನಿಗೆ ಇಲ್ಲೆ ಒಂದು ನೌಕರಿ ಕಂಡುಕೊಳ್ಳುವ ಆಸೆಯಿರುತ್ತದೆ. ಹಾಗಾಗಿ ಉಳಿದೆರಡು ದಿನಗಳನ್ನು ಕಣ್ಣದಾಸನ್ ಅವರ ಸೋವಿಯ ಹೋಂ ಸ್ಟೇನಲ್ಲಿ ಕಳೆಯುತ್ತಾನೆ. ಆಗಲೇ ಆತ ಪಾಸ್ಪೋರ್ಟ್ ಕಳೆದುಕೊಳ್ಳುವುದು ಮತ್ತು ಕಥೆ ರೋಚಕವಾಗುವುದು.ಮನುಷ್ಯನನ್ನು ಏನೆಲ್ಲ ಘಟನೆ ಮತ್ತು ವಸ್ತುಗಳು ಕಾಡುತ್ತವೆ ಎನ್ನುವುದಕ್ಕೆ ನಿರಂಜನನ ಡಾಂಬರು ಗುಳಿಗೆ ( ನಾಫ್ತಾಲಿನ್ ಮಾತ್ರೆ), ಕಣ್ಣದಾಸನ್ ಜೀವನ,ಶಣ್ಮುಗರತ್ನಮ್ ನ ವಂಶಜರ ಮೂಲದ ಹುಡುಕಾಟ, ದುರೈಯ ನೈಸರ್ಗಿಕ ಕರ್ಪೂರದ ಹುಚ್ಚು ಇಲ್ಲಿ ಸೊಗಸಾದ ಉದಾಹರಣೆಗಳಾಗಿವೆ. ಭೂಮಿಯ ಅಡಿಯ ಸ್ಕ್ಯಾನಿಂಗ್ ಮಾಡುವ ಕೆಲಸ ಮತ್ತು ಅದರ ಯಂತ್ರಗಳನ್ನು ಪೂರೈಕೆ ಮಾಡುವುದು ನಿರಂಜನನ ಕಂಪೆನಿಯ ಕೆಲಸ. ಈಗ ಎಲೆಕ್ಟ್ರಿಕ್ ಕೇಬಲ್, ಗ್ಯಾಸ್ ಲೈನ್, ಓಎಫ್ಸಿ.. ಎನ್ನುತ್ತಾ ಭೂಮಿಯ ಅಡಿಗೆ ಟ್ರಾಫಿಕ್ ಜಾಮಾಗಿದೆ. ಅದನ್ನು ಕಂಡು ಹಿಡಿದು, ಸಮಸ್ಯೆ ನಿವಾರಿಸುವುದು ಅವನ ಕೆಲಸ. ಇದರ ಹಿನ್ನೆಲೆಯಲ್ಲಿ ಒಬ್ಬ ಇವನಿಂದ ನಿಧಿ ಹುಡುಕುವ ಕೆಲಸಕ್ಕೆ ಇವನಿಗೆ ಆಮಿಷ ತೋರಿ ಅಲ್ಲಿ ನಡೆಯುವ ಘಟನೆ ಮಜವಾಗಿದೆ. ಕ್ಯಾಸೆಟ್ ಶ್ರೀಪತಿ, ಜೋಮೋ, ಸಂಗೊಂಗ್ ತಾಸಿ, ಮುರಳೀಧರ, ರೇವತಿ ಪಾತ್ರಗಳು ಕಾದಂಬರಿಯ ಸಣ್ಣ ಸಣ್ಣ ಪ್ರಸಂಗಗಳಲ್ಲಿ ಬಂದು ಹೋದರೂ ಬಹಳ ಹೊತ್ತು ನೆನಪಿನಲ್ಲಿ ಉಳಿಯುತ್ತವೆ. ಸಣ್ಣ ಬುದ್ಧಿಯ, ವಿಪರೀತ ಲೆಕ್ಕಾಚಾರದ ನಿರಂಜನನ ಹೆಜ್ಜೆಯ ಜಾಡನ್ನು ಊಹಿಸುವ ಕೆಟ್ಟ ಕುತೂಹಲವನ್ನು ಓದುಗನಲ್ಲಿ ಸೃಷ್ಟಿಸುವುದರ ಸವಾಲಿನಲ್ಲಿ ಕರ್ಕಿ ಕೃಷ್ಣಮೂರ್ತಿಯವರು ಗೆದ್ದು, ಕಾದಂಬರಿಯ ಕ್ಯಾನ್ವಾಸಿಗೆ ಹಿಗ್ಗಿರುವ ಕೌಶಲ್ಯವು ಸ್ಪಷ್ಟವಾಗಿ ಗೋಚರಿಸುತ್ತದೆ. ಆ ಮೂಲಕ ಕಾದಂಬರಿಯ ಗೆಲುವೂ ಆಗಿದೆ. ಮಲೇಷ್ಯಾದ ಇಂಡಿಯನ್ಸ್ ಅದರಲ್ಲೂ ತಮಿಳರ ಬದುಕು ಮತ್ತು ಸಂಕಟಗಳು, ಭೂಮಿಪುತ್ರರೆಂದು ಕರೆದುಕೊಳ್ಳುವ ಮಲಯೂ ಜನಾಂಗ,ಅಲ್ಲಿನ ಚೀನಿಯರು, ಅಲ್ಲಿಯೂ ತಿಕ್ಕಾಟ ಮಾಡಿಕೊಳ್ಳುವ ಶ್ರೀಲಂಕಾದ ಸಿಂಹಳೀಯರು ಮತ್ತು ತಮಿಳರು, ‘ಒರಾಂಗ್ ಅಸ್ಲಿ’ ಎಂಬ ಬುಡಕಟ್ಟು ಜನಾಂಗ ಹೀಗೆ ಮಲೇಷ್ಯಾದ ಪ್ರಾದೇಶಿಕ ಚಿತ್ರಣ ಈ ಕೃತಿಯಲ್ಲಿ ಚೆನ್ನಾಗಿ ಮೂಡಿಬಂದಿದೆ. ಕೇವಲ ಎರಡು ನೂರು ರೂಪಾಯಿಗಳಲ್ಲಿ ಮಲೇಷ್ಯಾ ದೇಶದ ಪ್ರವಾಸ ಮತ್ತು ನವಿರಾದ ಕಾದಂಬರಿಯ ಓದು ನಮ್ಮದಾಗಲಿದೆ.******************************************************* ಡಾ. ಅಜಿತ್ ಹರೀಶಿ

ಜಂಜಿ ಡಪಾತಿ ಬೋ ಪಸಂದಾಗೈತಿ! Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾಲಚಕ್ರ ಬೈಟು ಕಾಫಿ ಮತ್ತು ತೇಜಾವತಿ ಅವರ ‘ಕಾಲಚಕ್ರ’ ಎಂಬ ಕವಿತೆಗಳ ಕಟ್ಟು ‘ ಮನಸು ನೀಲ ಗಗನದಲಿ ಸ್ವಚ್ಛಂದವಾಗಿವಿಹರಿಸುವ ಬಾನಾಡಿ’ ನಾನು ಬರಿ ಸಣ್ಣ ದನಿ ಹೊರಹಾಕುವ ಸ್ವಂತ ಅಸ್ತಿತ್ವವಿಲ್ಲದ ಹುಲುಗೆಜ್ಜೆ. ಆದರೆ ಕವಿತೆ ಹಾಗಲ್ಲ.ಅದು ವಿನೀತ ಭಾವವನ್ನು ಅಪ್ಪಿಕೊಂಡು ಬಿಚ್ಚು ಮನಸಿನ ಸ್ಮೃತಿಗಳ ಹಾಯಿಯನ್ನು ಹೊರ ಹಾಕುತ್ತದೆ.ಅಂತೆ ಭರವಸೆಯ, ಪ್ರತಿಭಾನ್ವಿತ ಕವಯಿತ್ರಿ ತೇಜಾವತಿ ಹುಳಿಯಾರ ಅವರ ‘ಕಾಲಚಕ್ರ’ ಕೃತಿಯು ಬೆಳಗಿನ ಕಾಫಿಯೊಂದಿಗೆ ಕೈಗೆತ್ತಿಕೊಂಡೆ.ಇದೊಂದು ಹೊನ್ನುಡಿ ಕವಿತೆಗಳ ಪುಟ್ಟ ಸಂಕಲನ.ಓದುವಿನ ಕುತೂಹಲ ಇನ್ನಷ್ಟು ತೀವ್ರಗೊಂಡಿತು.ಮೊದಲ ಗುಟುಕಿನೊಂದಿಗೆ ಓದು ಸುರುವಿಟ್ಟುಕೊಂಡು ಕೊನೆಯ ಹನಿ ಹೀರುವಿಕೆಯೊಂದಿಗೆ ಸಂಕಲನ ತನ್ನ ಓದು ಮುಗಿಸಿಕೊಂಡಿತು.ಪ್ರೇಮ,ಬದುಕು ಮತ್ತು ನಿಸರ್ಗದೊಂದಿಗಿನ ಒಡನಾಡಿತನಗಳು ಇಲ್ಲಿನ ಕಾವ್ಯದ ಆತ್ಮೀಯ ಸಂಬಂಧಗಳೆನಿಸಿದವು.ಇಲ್ಲಿನ ಬಹುತೇಕ ಕವಿತೆಗಳು ಏಕಮೇವ ಹೊನ್ನುಡಿಯೆಂಬ ಶೀರ್ಷಿಕೆ ಹೊಂದಿರುವ ಚುಟುಕು ಕವಿತೆಗಳಾಗಿವೆ.ಆದರೆ ದೀರ್ಘ ಕವಿತೆಗಳ ಆಯಾಮಗಳನ್ನು ಹೊಂದಿರುವುದಲ್ಲದೇ ಓದುಗರ ಮನಸಿಗೆ ತಲ್ಲೀನತೆ ನೀಡುವ ಬರೆಹಗಳೇ ಆಗಿವೆ ಜೊತೆಗೆ ಕನಸುಗಳಿಗೆ ಮೂರ್ತಸ್ವರೂಪ ಕೊಟ್ಟು ರೂಪಾಂತರಗೊಳಿಸುವ ನುಡಿಗಳಾಗಿವೆ.ಕಾವ್ಯ ರಚನೆಯ ಲಕ್ಷಣ ಕೂಡಾ ಅದೇ ಆಗಿರುತ್ತದೆ.ಇಲ್ಲಿನ ಬಹುತೇಕ ಕವಿತೆಗಳು ಓದುತ್ತಾ ಹೋದಂತೆಲ್ಲಾ ಪರಿವರ್ತಿತ ಸಮಾಜದಲ್ಲಿನ ಕೌಟಂಬಿಕ ಸಂಬಂಧಗಳು,ಯಾಂತ್ರಿಕ ಬದುಕು,ಒಡಲಾಳದ ಉರಿಯ ನೋವು ಇಂತಹವೆ ವಿಷಯಗಳು ಸರಳ ಪ್ರತಿಮೆಗಳ ಮುಖಾಂತರ ವೈವಿದ್ಯಮಯ ಆಯ್ಕೆಯಾಗಿ ಕಂಡುಬರುತ್ತವೆ. ಅಲ್ಲಲ್ಲಿ ತಿಳಿಯಾದ ಭಾವಗಳು ಇಡುಕಿಕರಿಸಿಕೊಂಡಿವೆ. ಕವಯತ್ರಿ ತೇಜಾವತಿ ಅವರಿಗೆ ಬದುಕು ಮತ್ತು ಕಾವ್ಯ ಅವರ ಜೀವದ್ರವ್ಯವೇ ಆಗಿದೆ.ಸಮಾಜದಲ್ಲಿ ನಡೆಯುವ ಕೆಲವು ಕ್ಷುಲ್ಲಕಗಳ ಕುರಿತು ಹತಾಸೆಯಿದೆ,ನೋವಿದೆ.ಈ ತೆರನಾದ ಅಭಿವ್ಯಕ್ತಿಗಳು ಕವಯಿತ್ರಿಯ ಮನದ ಬಾಗಿಲಿಗೆ ಬಂದು ಮೌನ ಮುರಿದಿವೆ. ಹೀಗೆ ಕಾಫಿ ಹೀರುತ್ತಾ ಸಂಕಲನದ ಪುಟ ತಿರುವುತ್ತಿದ್ದಾಗ ಇಲ್ಲಿನ ಒಂದು ಕವಿತೆ ನನಗೆ ತಟ್ಟನೆ ನೆನಪಿಗೆ ತರಿಸಿದ್ದು ಇಂಗ್ಲಿಷಿನ ಪ್ಯಾಟ್ ಪ್ಲೇಮಿಂಗ್ ಅವರ ‘Depression is a monster’ ಕವಿತೆ ನೆನಪಿಸಿತು. ಇವೆರಡಕ್ಕೂ ಅಂತರ ಸಾಮ್ಯತೆ ಕುರಿತು ಹೇಳುವುದಾದರೆ ಪ್ಯಾಟ್ ಅವರು ಖಿನ್ನತೆ ಎನ್ನುವುದು ಕರುಣೆಯನ್ನು ಹಿಸುಕುತ್ತಿದೆ ಎನ್ನುವ ದನಿ ವ್ಯಕ್ತಪಡಿಸಿದರೆ,ಇಲ್ಲಿ ತೇಜಾವತಿ ಅವರಿಗು ಕೂಡಾ ಮನುಷ್ಯನ ಸಹಜ ಅಂತಪ್ರೇರಣೆಗಳಲ್ಲೊಂದೆನಿಸಿದಅಸಮಾಧಾನದ ಕುರಿತು ಅಸಮಾಧಾನವಿದೆ,ಸೆಡುವು ಇದೆ.ಹಾಗಾಗಿ ಅದನ್ನು ಯಾವುದೋ ರೂಪದಲ್ಲಾದರೂ ಹೊರಹಾಕಬೇಕು,ಇಲ್ಲದಿದ್ದರೆ ಜ್ವಾಲಾಮುಖಿಯಾಗಿ ಸ್ಪೋಟಗೊಳ್ಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ.ಅಂತೆಯೇ ಪ್ಯಾಟ್ ಫ್ಲೆಮಿಂಗ್‌ ಮತ್ತು ಕವಯಿತ್ರಿ ಹುಳಿಯಾರ್ ಅವರಿಗೆ ಕ್ರಮವಾಗಿ ಖಿನ್ನತೆ ಮತ್ತು ಅಸಮಾಧಾನದ ಬಗೆಗೆ ಭಯವಿದೆ. ಖಿನ್ನತೆ/ಅಸಮಾಧಾನವು ಹೃದಯ ಮತ್ತು ಆತ್ಮ ಎರಡೂ ನಾಶಪಡಿಸುತ್ತವೆ ಎಂದು ತಮ್ಮತಮ್ಮ ಕವಿತೆಗಳಲ್ಲಿ ಹಳಹಳಿಸುತ್ತಾರೆ. ವಿಫಲ ಪ್ರೇಮ,ದುಷ್ಟ ನಡವಳಿಕೆಯ ಕುರಿತು ಮಾತನಾಡುವ ಬರೆಹ, ಹೊಸತನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯ ಬಗೆಗೂ ಇಲ್ಲಿನ ಕವಿತೆಗಳು ಮಾತಾಡ್ತವೆ.ಜೊತೆಗೆ ಬದುಕಿನ ಮುಂದುವರೆದ ಭಾಗವೆಂಬಂತೆ ನಿರ್ದಿಷ್ಟ ಗುರಿ ತನ್ನ ಚಲನಶೀಲ ಕಳೆದುಕೊಂಡು ಹೊಸತನಕ್ಕೆ ಒಗ್ಗಿಕೊಳ್ಳುವ ಕವಿತೆ ಹೀಗೆ ದನಿಸುತ್ತದೆ. ‘ಹಳೆಯ ಮಾರ್ಗಗಳುನೀರಸವಾದಾಗಹೊಸ ದಾರಿಗಳ ಅನ್ವೇಷಣೆಅನಿವಾರ್ಯಅವಶ್ಯಕ’ ಮುಂದುವರೆದು,ಇಚ್ಚೆ ಸಿಡಿಮದ್ದಿನಂತಿರಬೇಕು/ಪಡೆಯುವಿಕೆ ಜೀವಜಲದಂತೆ ತಣಿಸಬೇಕು ಎನ್ನುತ್ತಲೇ ಕವಯಿತ್ರಿ ಸದಾ ಹೊಸತನಕ್ಕೆ ಹಂಬಲಿಸುವ ಆಶಾವಾದ ವ್ಯಕ್ತಪಡಿಸುತ್ತಾರೆ.ಈ ಕಾವ್ಯದ ಕುರಿತು ಆರಂಭದಲ್ಲಿಯೇ ನಾನು ಕಂಡುಕೊಂಡದ್ದು ತುಂತುರು ಹನಿಗಳಂತೆ,ಬುಳುಬುಳು ಬೀಳುವ ಅನ್ ಪಿನಿಶ್ಡ್ ಸೋಸಿಯಲ್ ಕಾಂಟ್ರಾಕ್ಟ್ ಗಳು,ಬಾಲ್ಯದ ನೆನಪುಗಳು,ಮುಟ್ಟದೆ ಮುಂದು ಹೋಗುವ ಸಂಗತಿಗಳು,ಅಮೂರ್ತವಾದ ಮೌನ,ನೋವು,ಬೇಸರ,ಬದುಕಿನ ಉಲ್ಲಾಸತೆಗಳು,ಶುಗರ್ ಮಿಶ್ರಿತಗೊಂಡ ಅರೆಬೆಂದ ಕಾಫಿ ಸವಿಯುತ್ತಲೇ ಓದಿಸಿಕೊಂಡ ಆಪ್ತಸಾಲುಗಳಿವು. ಪ್ರಾರ್ಥನೆ,ಶ್ರದ್ಧೆ, ಸಮರ್ಪಣಾ ಭಾವ,ಅಹಂಕಾರದ ವಿನಾಶತೆ ಇತ್ಯಾದಿ ಸಂದೇಶಗಳೂ ಒಳಗೊಂಡಿರುವ ಕವಿತೆಗಳು ಕಾಫಿಯಂತೆ ಸಮನ್ವಯವಾಗಿ, ಒಟ್ಟಾರೆಯಾಗಿ ಲೋಕರೂಡಿ ಗುರುಗಳಂತಿವೆ.ತಮಗೆ ತೋಚಿದ್ದನ್ನು ಹೇಳುವ ಬಗೆಯಲ್ಲಿ ಹೊಸತನವಿದೆ.ದ್ವನಿ ಕವಿತೆಯ ರೂಪಗಳಲ್ಲಿ ಅಡಗಿ ಸಹಜೋಕ್ತಿಯಾಗಿ ಓದುಗರಿಗೆ ತಲುಪುವ ಪರಿ ಮೆಚ್ಚುಗೆಯಾಗುತ್ತದೆ.ಮುಂದಿನ ದಿನಮಾನಗಳಲ್ಲಿ ದೀರ್ಘ ಕವಿತೆಗಳೊಂದಿಗೆ ನಮ್ಮ ಮುಖಾಮುಖಿಯಾಗುತ್ತಾರೆಂಬ ಭರವಸೆಯೊಂದಿಗೆ ಬೆಳಗಿನ ಕಾಫಿಯ ರುಚಿ ಮತ್ತು ಓದುವಿನ ಕೊನೆಯ ಸಾಲು ಮುಗಿಸುತ್ತೇನೆ. ****************** ದೇವೂ ಮಾಕೊಂಡ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ನಾದಾನುಸಂಧಾನ (ಅಂಕಣ ಬರಹಗಳ ಸಂಗ್ರಹ) ಪುಸ್ತಕದ ಹೆಸರು: ನಾದಾನುಸಂಧಾನ (ಅಂಕಣ ಬರಹಗಳ ಸಂಗ್ರಹ)ಲೇಖಕರು: ಆಶಾಜಗದೀಶ್ಪುಟಗಳು: 200ಬೆಲೆ: 220/-ಪ್ರಕಾಶನ: ಸಾಹಿತ್ಯ ಲೋಕ ಪ್ರಕಾಶನ, ಬೆಂಗಳೂರುಪ್ರಕಾಶಕರ ಹೆಸರು ಮತ್ತು ದೂರವಾಣಿ: ರಘುವೀರ್, 9945939436 ಕವಯಿತ್ರಿ, ಅಂಕಣಕಾರ್ತಿ ದೀಪಾ ಹಿರೇಗುತ್ತಿ ಯವರು ಹೀಗೆ ಬರೆಯುತ್ತಾರೆ: ಆಶಾ ನಮ್ಮ ನಡುವಿನ ಪ್ರತಿಭಾವಂತ ಲೇಖಕಿ. ಕಥೆ, ಕವನ, ಅಂಕಣ ಈ ಮೂರೂ ಪ್ರಕಾರಗಳಲ್ಲಿ ಯಶಸ್ವಿಯಾಗಿ ಬರೆಯುತ್ತಿದ್ದಾರೆ. ತಮ್ಮ ಶಾಲೆ ಮತ್ತು ಕೌಟುಂಬಿಕ ಜವಾಬ್ದಾರಿಗಳ ನಡುವೆ ನಿರಂತರವಾಗಿ ಬರೆಯುತ್ತಿರುವ ಆಶಾ ಅಚ್ಚರಿ ಹುಟ್ಟಿಸುತ್ತಾರೆ. “ನಾದಾನುಸಂಧಾನ” ಎಂಬ ಈ ಬರಹಗಳ ಗುಚ್ಛದ ವಿಷಯ ವೈವೀಧ್ಯತೆ ಅವರ ಓದಿನ ವಿಸ್ತಾರಕ್ಕೆ ಸಾಕ್ಷಿ. ಹಿರಿಯ, ಸಮಕಾಲೀನ ಬರಹಗಾರರ ಲೇಖನ, ಕಥೆ, ಕಾದಂಬರಿ, ಕವಿತೆಗಳನ್ನು ಓದಿ ವಿಶ್ಲೇಷಿಸಿ ಅವುಗಳ ಬಗ್ಗೆ ಬಹು ಆಪ್ತವಾಗಿ ಬರೆಯುತ್ತಾರೆ. ಜೊತೆಗೆ ತಮ್ಮ ಅನುಭವಗಳನ್ನು ದಾಖಲಿಸುತ್ತಾ ಒಂದು ವಿಶಿಷ್ಟ ಎನ್ನಬಹುದಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಆಶಾ ಓರ್ವ ಸ್ನೇಹಮಯಿ ಸಹೃದಯಿ ಕವಯಿತ್ರಿ ಎಂಬುದನ್ನು ಸಾಬೀತುಪಡಿಸುವ ಗದ್ಯ ಅವರದ್ದು…. *************************************

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಅಮೇರಿಕಾ ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಹೆಸರು – ಅಮೇರಿಕಾ – ಬೊಗಸೆಯಲ್ಲಿ ಕಂಡಷ್ಟು ನೆನಪಿನಲ್ಲಿ ಉಳಿದಷ್ಟು ಪುಸ್ತಕದ ಬೆಲೆ ನೂರು ರೂಪಾಯಿ. ಹತ್ತು ಪರ್ಸೆಂಟ್ ರಿಯಾಯಿತಿಯಲ್ಲಿ ತೊಂಭತ್ತು ರೂಪಾಯಿಗಳು. ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ನಲ್ಲಿ ಕಳಿಸುವುದಕ್ಕೆ ಸರಿಸುಮಾರು ಮೂವತ್ತೈದು ರೂಪಾಯಿಗೂ ಮೇಲ್ಪಟ್ಟು ಆಗುತ್ತದೆ. ಹಾಗಾಗಿ ಒಟ್ಟು 90+35 ನೂರಾ ಇಪ್ಪತ್ತೈದು ಆಗುತ್ತದೆ. ಬ್ಯಾಂಕ್ ಟ್ರಾನ್ಸ್ಫರ್ ಮಾಡುವುದಾದರೆ ಎಸ್. ಬಿ. ಐ. ಖಾತೆ ಸಂಖ್ಯೆ 10386457906. ಜಯನಗರ ಎರಡನೇ ಬ್ಲಾಕ್ ಶಾಖೆ IFSC Code SBIN0003286. ನನ್ನ ಮೊಬೈಲ್ ಸಂಖ್ಯೆ 9886723505/8310506843 – ಇವೆರಡು ಸಂಖ್ಯೆಯಲ್ಲಿ ಯಾವುದಕ್ಕಾದರೂ ವಿಳಾಸವನ್ನು ಕಳುಹಿಸಬಹುದು. ಗೂಗಲ್ ಪೇ ಮುಖಾಂತರವೂ 9886723505 ಈ ಸಂಖ್ಯೆಗೆ ಕಳುಹಿಸಬಹುದು. ನಾವು ಮಾಡಿದ್ದು ಒಟ್ಟು 92 ದಿನದ ಪ್ರವಾಸ. ಅಮೇರಿಕಾ ಪಶ್ಚಿಮ ತೀರದಲ್ಲಿರುವ ಕ್ಯಾಲಿಫೋರ್ನಿಯಾ ಹಾಗೂ ನೆವಾಡಾ ಮತ್ತು ಆರಿಜ಼ೋನಾ ರಾಜ್ಯಗಳು ಅಂತೆಯೇ ಮಧ್ಯ ಅಮೇರಿಕಾದ ಕ್ಯಾನ್ಸಸ್ ಮತ್ತು ವಿಚಿಟಾ ನಗರಗಳು. ನಾನೇ ಸ್ವಂತ ಮುದ್ರಣ ಮಾಡಿಸಿರುವೆ. ಇದು ಪ್ರವಾಸ ಕಥನಕ್ಕಿಂತ ಹೆಚ್ಚಾಗಿ ನಡೆಯಲು ಸಾಧ್ಯವಿಲ್ಲದೆ ಗಾಲಿಕುರ್ಚಿಯ ಮೇಲೆ ಆ ಪ್ರದೇಶಗಳನ್ನು ನೋಡಿಬಂದ ಅನುಭವ ಕಥನ/ಸಾಹಸಗಾತೆ ========================================= ಬದುಕು ಪುಕ್ಸಟ್ಟೆ ಅಲ್ಲ ಪುಸ್ತಕದ ಹೆಸರು: ಬದುಕು ಪುಕ್ಸಟ್ಟೆ ಅಲ್ಲ (ವ್ಯಕ್ತಿತ್ವ ವಿಕಸನ) ಲೇಖಕರ ಹೆಸರು: ರಾಘವೇಂದ್ರ ಈ ಹೊರಬೈಲು ಪುಟಗಳು: 120. ಬೆಲೆ: 100/- ಪ್ರಕಾಶಕರ ಹೆಸರು ಮತ್ತು ವಿಳಾಸ: ಗೋಮಿನಿ ಪ್ರಕಾಶನ, ಶಾಂತಿನಗರ, ತುಮಕೂರು- 572102 ಪುಸ್ತಕ ದೊರೆಯುವ ವಿಳಾಸ: ಗುಬ್ಬಚ್ಚಿ ಸತೀಶ್, ತುಮಕೂರು ಮೊಬೈಲ್ ಸಂಖ್ಯೆ: 9986692342 / 9538242068. ಲೇಖಕ ಸದಾಶಿವ ಸೊರಟೂರು ಬರೆದ ಬೆನ್ನುಡಿಯಿಂದ: ಜಗತ್ತಿನ ಕಡೆ ಮುಖ ಮಾಡಿ ಕೂತು, ಅದರೊಂದಿಗೆ ತನ್ನ ಬದುಕಿನೊಳಗಿನ ಅನುಭವದ ಸರಕುಗಳನ್ನು ತಾಳೆ ಹಾಕಿಕೊಳ್ಳುವ ಹೊತ್ತಿಗೆ ಕಳೆದ ಒಂದೊಂದು ಕ್ಷಣವು ಕೂಡಾ ನನಗೊಂದು ಪಾಠವಾಗಿಬಿಟ್ಟಿತಲ್ಲ ಅನಿಸಿಬಿಡುತ್ತದೆ. ಯಾರಿಗೇ ಆಗಲಿ ಆ ಕ್ಷಣಕ್ಕೆ ಬದುಕು ಪುಕ್ಸಟ್ಟೆ ಅಲ್ಲ ಅನ್ನೋದು ಅರ್ಥವಾಗಿಬಿಡುತ್ತದೆ. ಬಿಡಿ, ಅದು ನೀಡುವ ಬೇಡಿಕೆಗಳ ಪಟ್ಟಿ ದೊಡ್ಡದು. ಬದುಕಿನ ಅಂತಹ ಹತ್ತಾರು ಹಸಿಹಸಿ ಅನುಭವಗಳೊಂದಿಗೆ ರಾಘವೇಂದ್ರ ಈ ಹೊರಬೈಲು ಅವರು ಈ ಪುಸ್ತಕದಲ್ಲಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದಾರೆ. ಅನುಭವಗಳು ಕೊಟ್ಟು ಹೋದ ಬದುಕಿನ ಪಾಠವನ್ನು ಪಕ್ಕದಲ್ಲಿ ಕೂತು, ಆತ್ಮೀಯವಾಗಿ ಹೇಳುವಂತೆ ನಿರೂಪಿಸಿದ್ದಾರೆ. ಅರೆ, ಇದು ನನ್ನದು ಕೂಡಾ ಅನ್ನಿಸುವಂತೆ ಬರೆದಿದ್ದಾರಲ್ಲ ಅನಿಸಿಬಿಡುತ್ತದೆ. ಅದು ಅವರ ಶಕ್ತಿ. ಓದುತ್ತಾ ಹೋದಂತೆ ಅನುಭವಗಳು ಪಾಠದಂತೆ ಆವರಿಸಿಕೊಳ್ಳುವ ಪರಿ ಅದ್ಭುತವಾಗಿದೆ. ಮೇಷ್ಟ್ರು ಕೂಡಾ ಆಗಿರುವ ರಾಘವೇಂದ್ರ ಅವರಿಗೆ ಅಂಥದೊಂದು ಕಲೆ ಸೊಗಸಾಗಿ ಸಿದ್ಧಿಸಿದೆ .

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ತಥಾಗತನಿಗೊಂದು ಪದ್ಮ ಪತ್ರ ಭಾವಜೀವಿಯ ಭಾಷಾ ಚಮತ್ಕಾರಿಕ ಕವಿತೆಗಳು ತಥಾಗತನಿಗೊಂದು ಪದ್ಮ ಪತ್ರಕವನ ಸಂಕಲನಡಾ. ಆನಂದ ಋಗ್ವೇದಿಸಾಧನ ಪಬ್ಲಿಕೇಷನ್ ವೃತ್ತಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ, ಚಿಟಗೇರಿಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಋಗ್ವೇದಿ ಅವರು ಪ್ರವೃತ್ತಿಯಿಂದ ಕವಿ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ, ಡಾ. ಜೋಳದರಾಶಿ ದೊಡ್ಡನಗೌಡ ನಾಟಕ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಕಟಿತ ಕೃತಿಗಳು – ‘ಜನ್ಮ ಮತ್ತು ಅನೂಹ್ಯ ಸಾಧ್ಯತೆ’ ಅವರ ಕಥಾಸಂಕಲನ. ‘ಊರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ. ಈ ಕವನಗಳ ಗುಚ್ಛದಲ್ಲಿ ನಾಲ್ಕು ಭಾಗಗಳಿವೆ; ಬಯಲು, ಬೆಳಕು, ಮೃದ್ವಂಗಿ ಮತ್ತು ಋತುಮಾನ. ಒಟ್ಟು ಅರವತ್ತೇಳು ಕವಿತೆಗಳು ಈ ಕೃತಿಯಲ್ಲಿವೆ. ಶೀರ್ಷಿಕೆ ಕವಿತೆ ‘ತಥಾಗತನಿಗೊಂದು ಪದ್ಮ ಪತ್ರ’ ವನ್ನು ನೋಡಿ. ‘ ನಿನಗೆ ಜ್ಞಾನೋದಯವಾಗಿತ್ತಂತೆ, ನಮಗೆಕನಿಷ್ಠ ಉದಯಿಸಲಿ ಹೊಸ ಬೆಳಕ ಕಿರಣತೊಯ್ಯಿಸಲಿ ನವ ವರ್ಷ ಧಾರೆಈ ಧಗೆ ಹಗೆ ಆರಿ ಆವರಿಸಲಿ ಶುದ್ಧ ಗಾಳಿಅಂತಃಕರಣದ ಹೊಂಬಾಳೆ ಎಂಬುದೂ ದೂರಾಸೆ!!’ ಸದಾಶಯದ ಸಾಲುಗಳು ಗಮನ ಸೆಳೆಯುತ್ತವೆ. ಒಂಟಿ ಹಕ್ಕಿಯ ಉಲಿಯದ ಕೊಕ್ಕು ಕವಿತೆಯಲ್ಲಿ –‘ಹಕ್ಕಿಗೆ ಬೇಕಿರುವುದು;ಕೊರಳ ಹಾಡ ಆಲಿಸುವ ಕಿವಿಕಣ್ಣ ಕನಸ ಕಾಯುವ ರೆಪ್ಪೆದಣಿದ ರೆಕ್ಕೆಯ ಸವರುವ ಬೆರಳುಸದಾ ಹಿಂಬಾಲಿಸುವ –ತನ್ನಂತಹುದೇ ನೆರಳು’ ಹಕ್ಕಿಗಳ ಕುರಿತು ಅದೆಷ್ಟು ಕವನಗಳು ಬಂದಿಲ್ಲ? ಆದರೆ ಇದು ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ. ‘ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು’ ಎಂಬ ಶೀರ್ಷಿಕೆಯೇ ಪ್ರತಿಮಾತ್ಮಕವಾಗಿದೆ. ಇದರ ಮಿಂಚಿನಂತಹ ಸಾಲುಗಳನ್ನು ನೋಡಿ.. ‘ ಬದುಕೆಂಬುದು;ರೆಪ್ಪೆ ತೆರೆದಾಗಿನಿಂದ ಮುಚ್ಚುವವರೆಗೆತೆರೆದ ಅಧ್ಯಾಯ!!’ ಬಯಲಿಗೆ ಬಾಗಿಲಿಲ್ಲ, ಕೊಳಲೂದುವುದೆಂದರೆ, ಯುದ್ಧ ಸೋತ ಯಶೋಧರ ಬದುಕಿನ ದಾರಿಯನ್ನು ಶೋಧಿಸುವ ಕವಿತೆಗಳು. ಅದರದೇ ಸಾಲುಗಳು ಹೇಳುವಂತೆ ‘ ಯುದ್ಧದಿ ಮಣ್ಣ ಗೆಲ್ಲಬಹುದಲ್ಲದೇಹೆಣ್ಣ ಗೆಲ್ಲಬಹುದೇ!?’ ಅಳು ಒಂದೇ ಜಗದ ಭಾಷೆ, ಲೀಲಾಂಮೃತ, ನಾಗರ ಪಂಚಮಿ, ಅಹಲ್ಯಾಗತ, ನೀರೆಯ ಸೆರಗು, ನೆಲದ ನಕ್ಷತ್ರ, ಮೃದ್ವಂಗಿ, ಭವತಾರಿಣಿ ಕವಿತೆಗಳು ಈ ಗುಚ್ಛದಲ್ಲಿ ನನಗೆ ಹೆಚ್ಚು ಇಷ್ಟವಾದ ಕವಿತೆಗಳು.ಬೆಳಕು – ಒಂದು ಗಜಲ್, ಮೃದ್ವಂಗಿ- ಬಿಡಿ ಕವಿತೆಗಳು ಇದೇ ಸಂಕಲನದಲ್ಲಿದ್ದು, ವಿಭಿನ್ನವಾಗಿವೆ. ಸ್ನೇಹಶೀಲ ಮನಸ್ಸಿನ ಕವಿ ಆನಂದ ಋಗ್ವೇದಿ ಅವರು ಇತ್ತೀಚಿನ ವರ್ಷಗಳಲ್ಲಿ ಆತ್ಮೀಯರಾದವರು. ಅವರ ಹಿಂದಿನ ಕೃತಿಗಳನ್ನು ಓದಲು ನನಗೆ ಸಿಕ್ಕಿರಲಿಲ್ಲ. ಈ ಹೊಸ ಕವನ ಸಂಕಲನದಲ್ಲಿ ಅವರು ಹೊಸ ಎತ್ತರವನ್ನು ಏರುವ ಎಲ್ಲ ಭರವಸೆಗಳನ್ನು ಮೂಡಿಸಿದ್ದಾರೆ. ಅಪಾರ ಓದು, ಸಂಶೋಧನೆ ಮತ್ತು ಪರಿಶ್ರಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಹೆಜ್ಜೆ ಗುರುತುಗಳನ್ನು ಛಾಪಿಸಿರುವ ಋಗ್ವೇದಿಯವರು ಮತ್ತಷ್ಟು ಬರೆಯುತ್ತಾ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿಲಿ ಎಂಬ ಆಶಯ ನನ್ನದು.******************************** ಡಾ. ಅಜಿತ್ ಹರೀಶಿ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಕಾಡ ಸೆರಗಿನ ಸೂಡಿ

ಪುಸ್ತಕ ಪರಿಚಯ ಕಾಡ ಸೆರಗಿನ ಸೂಡಿ ಕಾಡ ಸೆರಗಿನ ಸೂಡಿಕಾದಂಬರಿಮಂಜುನಾಥ್ ಚಾಂದ್ಅಕ್ಷರ ಮಂಡಲ ಪ್ರಕಾಶನ ಮಂಜುನಾಥ್ ಚಾಂದ್ ಅವರು ಪತ್ರಕರ್ತರು. ನಾಡಿನ ಹಲವು ಪತ್ರಿಕೆಗಳ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವ ಚಾಂದ್ ‘ ಓ ಮನಸೇ’ ಪಾಕ್ಷಿಕದಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮೂಲತಃ ಕುಂದಾಪುರ ಸಮೀಪದ ಮರವಂತೆಯ ಮಗ್ಗುಲಲ್ಲಿ ಇರುವ ತ್ರಾಸಿ ಎಂಬ ಪುಟ್ಟ ಹಳ್ಳಿಯವರು. ‘ಅಮ್ಮ ಕೊಟ್ಟ ಜಾಜಿ ದಂಡೆ, ಕದ ತೆರೆದ ಆಕಾಶ’ ಅವರ ಪ್ರಮುಖ ಕೃತಿಗಳು. ‘ಕಾಡ ಸೆರಗಿನ ಸೂಡಿ’ ಅವರ ಪ್ರಥಮ ಕಾದಂಬರಿ. ಕಾಡ ಸೆರಗಿನ ಸೂಡಿ ಕಾದಂಬರಿಯು 1930- 34ರ ಕಾಲಘಟ್ಟದಲ್ಲಿ ನಡೆಯುವ ಕಥಾನಕ. 1934ರ ಫೆಬ್ರವರಿ ಇಪ್ಪತ್ತಾರರಂದು ಮಹಾತ್ಮ ಗಾಂಧೀಜಿಯವರು ಕುಂದಾಪುರಕ್ಕೆ ಬಂದ ಎಳೆಯನ್ನು ಇಟ್ಟುಕೊಂಡು ಮಂಜುನಾಥರು ಈ ಕೃತಿಯನ್ನು ರಚಿಸಿದ್ದಾರೆ. ಗಾಂಧೀಜಿ ಬರುವ ಸಮಯದಲ್ಲಿ ಎಲ್ಲೋ ಪ್ರಕಟವಾದ ಪತ್ರಿಕೆ, ಅದು ಮತ್ಯಾವುದೋ ದೂರದ ಗ್ರಾಮದ ಮನೆಮನೆಗೆ ತಲುಪುತ್ತಿದ್ದ ರೀತಿ, ಆ ಗ್ರಾಮದ ಪ್ರಮುಖರು, ಅವರ ಜೀವನ, ಕಾಡಿನಲ್ಲಿ ಜೀವನ ನಡೆಸುತ್ತಿದ್ದ ಬುಡಕಟ್ಟು ಜನಾಂಗದ ತನಿಯಾ ಮತ್ತು ಸನಿಯಾರು ದಂಪತಿಯ ಚಿತ್ರಣ, ಬ್ರಿಟಿಷ್ ಅಧಿಕಾರಿಯ ಕ್ರೂರತೆ, ಮುಂದೆ ಆತ ಒಂದು ಅನೂಹ್ಯ ಕ್ಷಣದಿಂದ ಬದಲಾಗುವುದು, ಊರಿನವರೆಲ್ಲರ ಜೊತೆ ಒಂದಾಗಿ ಬಾಳುವ ಮುಗ್ಧ ತನಿಯಾ, ಸ್ವಾತಂತ್ರ್ಯ ಹೋರಾಟಗಾರರ ಸಾವುಗಳಿಂದ ಚೇತರಿಸಿಕೊಂಡು ಚಳುವಳಿಗೆ ತಮ್ಮದೇ ಕೊಡುಗೆಯನ್ನು ಕೊಡುವ ಮಹಿಳೆಯರು… ಹೀಗೆ ಕಾದಂಬರಿ ಸೌಪರ್ಣಿಕಾ ನದಿಯಂತೆ ಸರಳವಾಗಿ, ಶಾಂತವಾಗಿ ಮತ್ತು ಸುಂದರವಾಗಿ ಸಾಗುತ್ತದೆ. ಯಾವುದೇ ಜನಪ್ರಿಯ ಧಾಟಿಯನ್ನು ಕೃತಿಕಾರರು ಅವಲಂಬಿಸದೇ ತಮ್ಮದೇ ಓಘದಲ್ಲಿ ಕಥೆಯನ್ನು ಹೇಳಿರುವುದು ಇಲ್ಲಿಯ ವಿಶೇಷವಾಗಿದೆ. ನದಿ, ಕಾಡು, ಗುಡ್ಡ, ಜಲಪಾತ, ಮರ, ಬಳ್ಳಿಗಳು ಕಾದಂಬರಿಯ ಉದ್ದಕ್ಕೂ ಹರಡಿಕೊಂಡಿವೆ. ಪ್ರಕೃತಿಯ ದಿವ್ಯ ಸಾನಿಧ್ಯದಲ್ಲಿ ಅಲೆದಾಡಿದ ಅನುಭವ ಓದುಗನಿಗೆ ದೊರೆಯುತ್ತದೆ. ಚಾಂದ್ ಅವರಲ್ಲಿರುವ ನಿರೂಪಕ ಇಲ್ಲಿ ಕಾವ್ಯಾತ್ಮಕವಾಗಿ ಗೋಚರಿಸುತ್ತಾನೆ. ಕುಂದಾಪುರ ಭಾಷೆಯ ಸೊಗಡನ್ನು ಇಲ್ಲಿ ಸವಿಯಬಹುದು. ಇಲ್ಲಿರುವ ಶೀರ್ಷಿಕೆ ಸೂಡಿ ಎನ್ನುವುದು ಇಡೀ ಗ್ರಾಮದ, ಪಂಚಮುಖಿ ಕಣಿವೆಯ ಬೆಳಕೂ, ಜ್ಯೋತಿಯೂ ಆಗಿದೆ, ಪ್ರತಿಭಟನೆಯ ಅಸ್ತ್ರವೂ ಆಗಿದೆ ಮತ್ತು ಪ್ರತಿರೋಧ ತೋರಿದವರ ಪಾಲಿನ ಕೊಳ್ಳಿಯೂ ಆಗಿದೆ. ಹೀಗೆ ಗಾಂಧೀಜಿಯವರು ನಡೆದ ನಾಡಿನ ಅದ್ಭುತವಾದ ಕಥಾನಕವನ್ನು ಚಾಂದ್ ಅವರು ಇಲ್ಲಿ ಕಟ್ಟಿ ಕೊಟ್ಟಿದ್ದಾರೆ. ಶ್ರೀಪತಿ ಮತ್ತು ಗಿರಿಜಾ ಹೆಗಡೆ, ತನಿಯಾ- ಸನಿಯಾರು, ಸುಂದರ ಶೆಟ್ಟಿ, ಶಿವರಾಮ ಪಂಡಿತ, ರಾಬರ್ಟ್ ಕೇವಿನ್ ಹೀಗೆ ಪ್ರತೀ ಪಾತ್ರವನ್ನು ಅವರು ತೀವ್ರವಾಗಿ ಚಿತ್ರಿಸಿದ್ದಾರೆ. ಪ್ರಕೃತಿ ಸಹ ಇಲ್ಲೊಂದು ಪಾತ್ರವಾಗಿ ಮಿಂಚುತ್ತದೆ. ಸುಧಾಕರ ದರ್ಭೆ ಅವರ ಮುಖಪುಟ ವಿನ್ಯಾಸ ಮನಸೆಳೆಯುತ್ತದೆ. ಸದಾ ಒಳಿತನ್ನೇ ಆಶಿಸುವ ಸದಾಶಯದ ಕೃತಿಯಿದು. ಮನೋಜಗತ್ತು ತಲ್ಲಣಿಸುತ್ತಿರುವ ಈ ಸಂದರ್ಭದಲ್ಲಿ ನೆಮ್ಮದಿಯ ಓದಿಗೆ ‘ಸೂಡಿ’ಯನ್ನು ಕೈಗೆತ್ತಿಕೊಳ್ಳಬಹುದಾಗಿದೆ. ***************************  ಡಾ. ಅಜಿತ್ ಹರೀಶಿ

ಕಾಡ ಸೆರಗಿನ ಸೂಡಿ Read Post »

ಪುಸ್ತಕ ಸಂಗಾತಿ

‘ಕಾಗೆ ಮುಟ್ಟಿದ ನೀರು’

ಪುಸ್ತಕ ಪರಿಚಯ ನಾನುಕಂಡಂತೆ– ‘ಕಾಗೆಮುಟ್ಟಿದನೀರು’         ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ.        ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, ನೆಂಟರು, ಬಡತನ, ಪುಟಾಣಿ ಹುಡುಗನೊಬ್ಬ ಆಸೆ ಕಂಗಳಿಂದ ಕಾಣುವ ಪುಟ್ಟ ಪುಟ್ಟ ವಿವರಗಳು…   ಅರವತ್ತರ ವಯಸ್ಸಲ್ಲಿ ಮಾಗಿ ಮಗುವಾಗಿ ನೆನಪಿನ ಹಾದಿಯಲ್ಲಿ ಹಿಂದಿರುಗಿ ಉತ್ಪ್ರೇಕ್ಷೆ ಇಲ್ಲದೆ ಸುಮ್ಮಗೆ ಅಡ್ಡಾಡಿ ಬರುವುದು ಇದೆಯಲ್ಲಾ… ಆ ಸುಖ ನಮ್ಮದೂ ಆಗುವ ಆಪ್ತ ಆರಂಭ ಪುಸ್ತಕದಲ್ಲಿದೆ. ಇದನ್ನು ಕೇವಲ ವಿವರಣೆ ಎನ್ನಲೇ? ವರ್ಣನೆ ಎನ್ನಲೇ? ಗೊಂದಲವಾಗುತ್ತೆ.     ಆರಂಭದ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ತೆರೆದಿಡುವ ಹೂ ಪಕಳೆಗಳಂತಹ ಮೃದುತ್ವದ ಬಾಲ್ಯದನುಭವಗಳು, ಕಂಡ ವ್ಯಕ್ತಿತ್ವ ಶ್ರೇಷ್ಠತೆಗಳು, ಕಟ್ಟಿಕೊಡುವ ಕತೆಗಳು ಭಾರೀ ಹಿಡಿಸುತ್ತವೆ. ಆದರೆ, ಮಂಡ್ಯ ಎಂಬ ಅಪ್ಪಟ ಬಯಲು ನೆಲದ ನನ್ನಂತಹವರಿಗೆ ಗುಡ್ಡ ಬೆಟ್ಟ ಹತ್ತಿಳಿಯುತ್ತಾ ಕಾಡು- ಮೇಡು ಅಲೆದಾಡುತ್ತಾ ಸಿಗುವ ಊರುಗಳು ಹೇಗಿರಬಹುದೆಂಬ ಕುತೂಹಲ ಮೂಡುತ್ತದೆ. ಅದರ  ಹೊರತು ನನ್ನೂರಿನಂತೆ ರಸ್ತೆ ಬದಿಗೇ ಸಿಕ್ಕಿಬಿಡುವ ಊರುಗಳಂತಿಲ್ಲದ ಪರಮಲೆ, ವಾಟೆಕಜೆ, ಕಳ್ಮಕಾರಿ,  ಹೊಪ್ಪಳೆ, ಕಮಿಲ, ಬಂಟಮಲೆ, ಬಿಳಿಮಲೆ, ಏನೇಕಲ್ಲು, ಪಂಜ, ಕರ್ಮಜೆ, ಕರಿಮಲೆ, ಎಲಿಮಲೆ, ಬಂಗಾಡಿ, ಕೂತ್ಕುಂಜ, ಸಂಪಾಜೆ… ಊಫ್!! ಇವೆಲ್ಲಾ ಅರ್ಥವಾಗದ ಚಿದಂಬರ ರಹಸ್ಯ ಹೊದ್ದುಕೊಂಡು ನಿಬಿಡ ಕಾನನದೊಳಗೆ ಲೀನವಾಗಿರುವ ಹಾರುವ ಓತಿಕ್ಯಾತದಂತೆ ಕಾಣುವ ಊರುಗಳಾಗುತ್ತವೆ. ಒಮ್ಮೆಯಾದರೂ ಅವನ್ನೆಲ್ಲಾ ತೀರಾ ಸಮೀಪ ಅನುಭವಿಸಿ ಬರಬೇಕೆನ್ನುವಂತೆ ಹುಚ್ಚು ಹಿಡಿಸುತ್ತವೆೆ.       ಬಾಲ್ಯದ ವಿವರಣೆಗಳು ಆಪ್ತವಾಗುತ್ತಾ ಆಗುತ್ತಾ ಮಂತ್ರಮುಗ್ಧತೆಯಲ್ಲಿ ಕಳೆದು ಹೋಗುತ್ತಿರುವಾಗಲೇ ಕಾಲ ಮಾಗುವುದೇ ತಿಳಿಯದು. ಆಮೇಲಿನದ್ದೆಲ್ಲಾ ಓದು- ಉದ್ಯೋಗ, ಏಳು-ಬೀಳಿನ ವ್ಯಾಪಾರ. ಕನ್ನಡ ಸಾಹಿತ್ಯ ಲೋಕದ ವ್ಯವಹಾರಗಳು, ವಿಶ್ವವಿದ್ಯಾಲಯವೊಂದರ ಕಟ್ಟುವಿಕೆಯ ಪರಿಶ್ರಮ, ಹಿರಿಯರ ಅನುಚಿತ ನಡೆ ಇವೆಲ್ಲಾ ಹಸಿಹಸಿಯಾಗಿಯೇ ದಾಖಲಾಗಿರುವುದು ಇಷ್ಟೊತ್ತಿಗಾಗಲೇ  ನಾಡಿನ ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ತಳಮಳ ಹುಟ್ಟಿಸಬೇಕಿತ್ತು. ಬಹು ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಲೋಕ ಇರುವುದೇ ಹೀಗೆ ನಮ್ಮ ಬೇಳೆ ಬೆಂದರೆ ಸಾಕೆನ್ನುವ ಲೋಕಜ್ಞಾನ ಪ್ರಾಪ್ತವಾಗಿರುವ ನಾಡವರಾಗಿರುವ ನಾವು ಅದೆಷ್ಟು ಜಡ್ಡುಗಟ್ಟಿದವರೆನ್ನುವುದು ತಿಳಿದುಕೊಂಡು ತೆಪ್ಪಗಿರಬೇಕಾಗಿದೆಯಲ್ಲ ಎಂದು ಸಂಕಟವಾಗುತ್ತದೆ.         ‘ಚದುರಿ ಬಿದ್ದ ಆತ್ಮದ ತುಣುಕುಗಳ’ನ್ನು ಆಯ್ದು ಕೊಂಡು ಎದೆಗಾನಿಸಿಕೊಳ್ಳುತ್ತಿರುವಾಗಲೇ ಥಟ್ಟನೆ ನಾನೊಂದು ಪ್ರವಾಸ ಕಥನವನ್ನೋ, ಸಾಹಸಗಾಥೆಯನ್ನೋ ಓದುತ್ತಿರುವಂತೆ ಭಾಸವಾಗುತ್ತದೆ. ಒಂದು ನಿರ್ದಿಷ್ಟ ತಾರ್ಕಿಕ ಆಲೋಚನೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಕೆಲವಾರು  ಆಪ್ತ ಸಮಾನಮನಸ್ಕರೊಡನೆ ಸೇರಿ ಮಾಡುವ ಸಾಂಸ್ಥಿಕ  ಸಂಘಟನೆಯ ಕೆಲಸವು ಸಂತಸ ತರುತ್ತದೆ. ಅದರಲ್ಲೂ ನಮ್ಮ ಕನ್ನಡದ ನೆಲದ ವಿಚಾರಗಳು ನಾಡಿನ ಎಲ್ಲೆ ಮೀರಿ ದೆಹಲಿ, ಅಮೇರಿಕ, ಬೆಲ್ಜಿಯಂ, ಜಪಾನು, ಹೊನಲುಲು ಮೊದಲಾದೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಬಿತ್ತರವಾದ ಬಗೆಗಳು ದಾಖಲಾದ ವಿವರಗಳನ್ನು ಓದುವಾಗ ಹೆಮ್ಮೆಯ ಭಾವ ಸ್ಫುರಿಸುತ್ತದೆ.              ಇಡೀ ಪುಸ್ತಕದ ಸ್ವರೂಪ ಹೀಗೆಯೇ ಎಂದು ನಿರ್ಣಾಯಕವಾಗಿ ಹೇಳಲು ಬಾರದಂತಹ ವಿಶಿಷ್ಟವಾದ ಕೃತಿ. ಸೊಗಸಾದ ನಿರೂಪಣೆ. ಹಲವು ಬಗೆಯಲ್ಲಿ ಕನ್ನಡ ನಾಡು- ನುಡಿ, ರಾಜಕೀಯ- ಸಾಂಸ್ಕೃತಿಕ- ಸಾಮಾಜಿಕ ಸ್ಥಿತ್ಯಂತರಗಳ ದಾಖಲೀಕರಣದಂತೆ ಭಾಸವಾಗುತ್ತದೆ. ಹಾಗೆಯೇ ಕೋಮುವಾದ, ಜಾತೀಯತೆ, ಬಡತನ, ಪಕ್ಷಪಾತ ಮೊದಲಾದನ್ನು ಕುರಿತು ಒತ್ತುಕೊಡದೆ, ಹೇಳಿಯೂ ಹೇಳದಂತೆ ಮಾಡಿರುವ ಲೇಖಕರ ಒಂದು ರೀತಿಯ ಜಾಗೃತ ಸ್ಥಿತಪ್ರಜ್ಞತೆಯು ಕಾಡದೇ ಬಿಡುವುದಿಲ್ಲ.       ನಮ್ಮ ನಡುವೆ ಲೋಕಜಾಗೃತಿಯಂತಿರುವ ಹಿರಿಯರಾದ ಶ್ರೀ ಪುರುಶೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಅನ್ನು ಮನೆಗೆ ಕೊಂಡುತಂದ ದಿನವೇ ಓದಿ ಮುಗಿಸಿದಾಗ ರಾತ್ರಿ ೧:೩೦ ದಾಟಿತ್ತು. ಇತ್ತೀಚೆಗೆ ನನ್ನಿಂದ ಇಷ್ಟು ಮಾತ್ರ ಒಂದೇ ಗುಕ್ಕಿಗೆ ಓದಿಸಿಕೊಂಡ ಕೃತಿ ಇದು.             ಎಲ್ಲಾ ಓದಿಯಾದ ಮೇಲೆ ಪುಸ್ತಕದ ಹಲವಾರು ವಿಷಯಗಳು ದಟ್ಟವಾಗಿ ಕಾಡುತ್ತಲಿವೆಯಾದರೂ ತೀವ್ರವಾಗಿ ಉಳಿದದ್ದು ಮಾತ್ರ ಮೂರು ವಿಚಾರಗಳು.   ೧. ನಿಗದಿಪಡಿಸಿದ ದಿನದಂದು ಗಂಡುಮಗುವಿನೊಡನೆ ಗಂಡನ ಮನೆಗೆ ಹಿಂದಿರುಗದೆ, ಮಳೆ ಕಡಿಮೆಯಾದ ಮೇಲೆ ಗಂಡನ ಮನೆಗೆ ಹಿಂದಿರುಗಿದ ಹಸಿಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳದೆ ಹಸುಗುಸನ್ನು ಮಾತ್ರ ಉಳಿಸಿಕೊಂಡದ್ದು,ಆದರೆ  ಆ ಬಾಣಂತಿ ಅನಂತರ ಏನಾದರೆಂದು ತಿಳಿಯದೇ ಹೋದದ್ದು… ೨. ಕಾಡ ನಡುವೆ ಶಾಲೆಗೆ ಹೋಗಿ ಬರುತ್ತಿದ್ದ ಮಗುವನ್ನು ಹೊಳೆ ದಾಟಿಸಿಕೊಳ್ಳಲು ಬರುಬೇಕಿದ್ದ ಅಮ್ಮ ಕಾಗೆ ಮುಟ್ಟಿದ್ದಕ್ಕೆ ಬರಲಾರದೇ ಹೋದದ್ದು. ಮತ್ತು ಆ ಮಗು ಇಡೀ ರಾತ್ರಿ ನಿಬಿಡ ಕಾಡಿನೊಳಗೆ ಅಮ್ಮನ ಬರುವಿಕೆಯನ್ನು ನಂಬಿ ಕಾದದ್ದು… ೩. ಹೃದಯವನ್ನು ಎಂದೋ ಕೊಟ್ಟಿದ್ದ ಪತ್ನಿ ಕಿಡ್ನಿ ಕೊಟ್ಟದ್ದು…  ವಸುಂಧರಾ ಕದಲೂರು

‘ಕಾಗೆ ಮುಟ್ಟಿದ ನೀರು’ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಸಮಯಾಂತರ ‘ಮಾನವೀಯ ನೆಲೆ’ಯ ‘ಕಟ್ಟುತ್ತೇವ‌ ಕಟ್ಟುತೇವ ನಾವು ಕಟ್ಟೇ ಕಟ್ಟುತೇವ…’ ಎನ್ನುವ ಸಾಹಿತಿ ಸತೀಶ ಕುಲಕರ್ಣಿಯವರ “ಸಮಯಾಂತರ” ಕವನ ಸಂಕಲನವೂ..! ಸತೀಶ ಕುಲಕರ್ಣಿ ಕವಿ, ನಾಟಕಕಾರ ಮತ್ತು ಸಂಘಟಕರಾಗಿ ಪ್ರಸಿದ್ಧರು. ಮುಖ್ಯವಾಗಿ ಮಹಾನ್ ಮಾನವತಾವಾದಿ. ಇವರ ‘ಮಾನವತೆ’ಯ ಬಗೆಗೇನೇ ಒಂದು ಲೇಖನ ಬರೆಯಬಹುದು. ಮುಂದೆ ಎಂದಾರು ಆ ಲೇಖನವನ್ನು ನಾನೇ ಬರೆಯುತ್ತೇನೆ. ಅಲ್ಲದೇ ಮುಖ್ಯವಾಗಿ ಒಂದು ವಿಷಯ ಹೇಳಬೇಕು. ಅದು ಅಂದರೆ ಇವರು ಕೆಲಸ ಮಾಡುತ್ತಿದ್ದ ಹೆಸ್ಕಾಂನಲ್ಲಿಯ ಕೆಳ ದರ್ಜೆಯ ಅದರಲ್ಲೂ ಈ ಹಗಲಿರುಳು ಎನ್ನದೇ, ಬಿಸಿಲು-ಮಳೆ ಎನ್ನದೇ ಈ ಕರೆಂಟ್ ನೊಂದಿಗೆ ಸರಸವಾಡುವ ಮತ್ತು ದುಡಿಯುವ ‘ಲೈನ್ ಮನ್’ ಗಳೆಂದರೆ ಈ ಸತೀಶ್ ಕುಲಕರ್ಣಿ ಅವರಿಗೆ ಅಪಾರ ಪ್ರೀತಿ ಮತ್ತು ಕಾಳಜಿ. ನಾನು ಮೊನ್ನೆ ಈ ಹೆಸ್ಕಾಂನ ಅಧಿಕಾರಿಗಳ ಬೇಜವಾಬ್ದಾರಿಯ ಬಗೆಗೆ ಒಂದು ಲೇಖನ ಬರೆದಾಗ, ಅವರು ಕೋಪ ಮಾಡಿಕೊಂಡು ಅಧಿಕಾರಿಗಳು ಇರಲಿ,  ಈ ಸಾವಿನೊಂದಿಗೆ ಸರಸವಾಡುವ ನಮ್ಮ ‘ಲೈನ್ ಮನ್’ ಗಳನ್ನು ಮೊದಲು ಗುರುತಿಸು ಶಿವು ಅಂತ ಹೇಳಿದರು ಇದೇ ಸತೀಶ್ ಕುಲಕರ್ಣಿಯವರು. ಅಧಿಕಾರಿಗಳನ್ನು ಬಿಡಿ, ಮೊದಲು ಈ ನಮ್ಮ ‘ಲೈನ್ ಮನ್’ಗಳ ಬಗೆಗೆ ಮೊದಲು ಬರೆ ಶಿವು ಅಂತ ಹಕ್ಕಿನಿಂದ ಮತ್ತು ಪ್ರೀತಿಯಿಂದ ಪದೇ ಪದೇ ಹೇಳಿದರು. ಅಂದಂತೆಯೇ ಈ ‘ಲೈನ್ ಮನ್’ಗಳು ಮನೆ-ಮಠವನ್ನೆದೇ, ಚಳಿ-ಮಳೆ ಎನ್ನದೇ ದುಡಿಯುವ ಪರಿಯನ್ನು ನನ್ನಿಂದ ಬರೆಸಿದರು. ಇದನ್ನೇಕೆ ಈ ‘ಸಮಯಾಂತರ’ ಕವನ ಸಂಕಲನದ ಬಗೆಗೆ ನನ್ನ ವಿಮರ್ಶೆ(ತೀರಾ ವಯಕ್ತಿಕ ಅಭಿಪ್ರಾಯ) ಬರೆಯುವ ಮೊದಲು ಹೇಳಿದೆನೆಂದರೆ ಇವರು ತಾವು ಕೆಲಸ ಮಾಡುತ್ತಿದ್ದ ಈ ಹೆಸ್ಕಾಂ ಒಟ್ಟಾರೆ ಕೆಇಬಿಯ ಕೆಳ‌ ದರ್ಜೆಯ ನೌಕರರ ಅದರಲ್ಲೂ ಈ ‘ಲೈನ್ ಮನ್’ಗಳ ಬಗೆಗೆ ಸತೀಶ್ ಕುಲಕರ್ಣಿಯವರಿಗೆ ಎಷ್ಟೊಂದು ಪ್ರೀತಿ, ಕಾಳಯ ಮತ್ತು ತಮ್ಮ ಕೆಲಸದಲ್ಲೂ ಶ್ರದ್ಧೆ ಇತ್ತು ಎಂದು ತಿಳುಸಲು ಈ ಪೀಠೀಕೆ ಹಾಕಿದೆ ಅಷ್ಟೇ. ಇನ್ನೂ ‘ಸಮಯಾಂತರ’ ‘ಕವನ ಸಂಕಲನ’ದ ಬಗೆಗೆ ನೋಡೋಣ… ಸಾಹಿತ್ಯಿಕ ದೃಷ್ಟಿಯಿಂದ ತುಂಬಾ ಉತ್ಸಾಹದಾಯಕ ಪರಿಸರ ಹೊಂದಿರುವ ಹಾವೇರಿಯಲ್ಲಿ ದೀರ್ಘ ಕಾಲದಿಂದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಸಾಂಸ್ಕೃತಿಕ ಭೂಪಟದಲ್ಲಿ ಹಾವೇರಿಗೆ ತನ್ನದೇ ಆದ ಸ್ಥಾನ ಕೊಡಿಸುವಲ್ಲಿ ಅವಿರತವಾಗಿ ಶ್ರಮಿಸಿದವರಲ್ಲಿ ಸತೀಶ್ ಕುಲಕರ್ಣಿಯವರೂ ಪ್ರಮುಖರು. ಐದು ದಶಕಗಳಿಗೂ ಹೆಚ್ಚು ಕನ್ನಡದಲ್ಲಿ ಕಾವ್ಯ ರಚನೆ ಮಾಡುತ್ತಿರುವ ಸತೀಶ ಕುಲಕರ್ಣಿ ಅವರು ಸುಮಾರು ಇನ್ನೂರೈವತ್ತಕ್ಕೂ ಅಧಿಕ ಕವಿತೆಗಳನ್ನು ಬರೆದಿದ್ದಾರೆ. ಅವರ “ಬೆಂಕಿ ಬೇರು”, “ನೆಲದ ನೆರಳು”, “ಒಡಲಾಳ ಕಿಚ್ಚು”, “ವಿಷಾದಯೋಗ”, “ಗಾಂಧೀಗಿಡ” ಮತ್ತು “ಸತೀಶ ಸಮಗ್ರ ಕವಿತೆಗಳು” ಕವನ ಸಂಕಲನಗಳು. “ಸಮಯಾಂತರ” ಅವರ ಆಯ್ದ ಅರವತ್ತು ಕವಿತೆಗಳ ಸಂಕಲನ. ಮೊಗಸಾಲೆ ಪ್ರಕಾಶನದ ಮೂಲಕ ಸುಂದರವಾಗಿ ಪ್ರಕಟಗೊಂಡಿರುವ ಈ ಕೃತಿಗೆ ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ಅನೇಕ ಒಳನೋಟಗಳಿರುವ ಅಭ್ಯಾಸಪೂರ್ಣ ಮುನ್ನುಡಿ ಬರೆದಿದ್ದಾರೆ. ಸತೀಶರ ಕಾವ್ಯವನ್ನು ಸಿಂಹಾವಲೋಕನ ಕ್ರಮದಿಂದ ವಿಮರ್ಶಿಸಿರುವ ನಂಗಲಿಯವರ ಮುನ್ನುಡಿ ಸತೀಶ ಕುಲಕರ್ಣಿಯರ ಕಾವ್ಯಕ್ಕೆ ಉತ್ತಮ ಪ್ರವೇಶ ಒದಗಿಸುತ್ತದೆ. ಸತೀಶರನ್ನು ಸಾಮಾನ್ಯವಾಗಿ ದಲಿತ–ಬಂಡಾಯ ಚಳುವಳಿಯೊಂದಿಗೆ ಗುರುತಿಸಿಲಾಗುತ್ತದೆ. ಅವರನ್ನು “ಬಂಡಾಯ ಕವಿ”ಯೆಂದೂ ಕರೆಯುವುದು ಅವರ ಕಾವ್ಯದ ಮಹತ್ವವನ್ನು ಸೀಮಿತಗೊಳಿಸುತ್ತದೆ. ಅವರ ಕವಿತೆಗಳು ಅಪಾರ ಜೀವನಾನುಭವದಿಂದ ಮೂಡಿ ಬಂದಿವೆ. ಅವರ ಕವಿತೆಗಳು ಕೃತಕವಾಗಿರದೇ ಸಹಜವಾಗಿರುವುದರಿಂದ ಅವರನ್ನು ‘ಸಹಜ ಮಾನವತಾವಾದಿ ಕವಿಯೆಂದು ಕರೆಯಬಹುದು. ಪ್ರಸ್ತುತ “ಸಮಯಾಂತರ” ಸಂಕಲನದಲ್ಲಿ ಅವರ ಒಲವು ನಿಲುವುಗಳನ್ನು ಪ್ರತಿನಿಧಿಸಬಲ್ಲ ವೈವಿಧ್ಯಮಯ ಕವಿತೆಗಳಿವೆ. “ಅಜ್ಞಾತ ಪರ್ವದಲ್ಲಿ” ಕವಿತೆ ತುರ್ತು ಪರಿಸ್ಥಿತಿ ಉಂಟು ಮಾಡಿದ ಅವಾಂತರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸಿದೆ. “ಸ್ಮಶಾನ ಮೌನ ಬಾಗಿಲುಗಳು ಬಂದಾಗಿದ್ದವು. ನಾಲಿಗೆಗಳು ಕತ್ತರಿಸಿ ಹೋಗಿದ್ದವು. ಬೆಳಕಿಲ್ಲ, ಗಾಳಿಯಿಲ್ಲ. ಭದ್ರ ಕೀಲಿಗಳು. ಬಾಯಿ ಬಂದು ಮಾಡಿದ ಚಿಲಕಗಳು. ಜನ ಬರಿ ಸತ್ತ ಜನ……” # ಅಜ್ಞಾತ ಪರ್ವದಲ್ಲಿ… ನೂರಾರು ವರ್ಷಗಳಿಂದ ನೊಂದು ಬೆಂದು ಹೋದ ಶೋಷಿತರ ಅಸಹಾಯಕತೆ ಮತ್ತು ಶೋಷಕರ ಅಟ್ಟಹಾಸವನ್ನು “ಒಡಲಾಳ ಕಿಚ್ಚು” ಕವಿತೆ ಸಮರ್ಥವಾಗಿ ಕಟ್ಟಿಕೊಡುತ್ತದೆ. “ಹಟ್ಟಿಯಲ್ಲಿ ಬಟ್ಟೆ ಬಿಚ್ಚಿ ಸಾಹುಕಾರನಿಗೆ ಮೈ ಕೊಟ್ಟವರ, ಗದ್ದೆಯಲ್ಲಿ ಜರತಾರಿ ರುಮಾಲಿನ ರಾಕ್ಷಸರಿಗೆ ಹಮಾಲರಾಗುವವರ……” “ಕಿತ್ತು ತಿನ್ನುವವರ ಕೂತು ತಿನ್ನುವವರ ಕರಾಮತ್ತು ಉರಿ ಹಚ್ಚಿ ಎಲ್ಲ ಸುಟ್ಟು ಹಾಕಿ ಹೊಸ ಹಸಿರು ಚಿಗುರುವ ಮುನ್ನ ದನಿ ಎತ್ತಿ…… ” # ಒಡಲಾಳ ಕಿಚ್ಚು’ವಿನಲ್ಲಿ ಕಾಣಬಹುದು… ಸತೀಶ ಕುಲಕರ್ಣಿ ಅವರ “ಒಂದು ಅತ್ಯಾಚಾರದ ಹಂತಗಳು” ದೈಹಿಕವಾಗಿ ಜರ್ಜರಿತವಾದ ಅತ್ಯಾಚಾರ ಸಂತ್ರಸ್ತೆ ಕಾನೂನಿನ ಮೂಲಕ ಮಾನಸಿಕ ಅತ್ಯಾಚಾರಕ್ಕೊಳಗಾಗುವುದನ್ನು ಮಾರ್ಮಿಕವಾಗಿ ಚಿತ್ರಿಸುತ್ತದೆ. ಹೀಗೆಯೇ ಮುಂದುವರಿದು… “ಅವರು ಬಂದು ತಡೆದವರಳನ್ನು ಮೇಲೆ ಗಿಡಗಳ ದಳದಳ – ಗಾಳಿಗುಲುಕುವ ಎಲೆಗಳು ಕೀವು ತುಂಬಿ ಸೋರುವ ಹುಣ್ಣು ನಕ್ಷತ್ರಗಳು ಇಷ್ಟು ಅವಳ ಕೊನೆಯ ನೆನಪುಗಳು……” “ಅತ್ಯಾಚಾರವಾಗಿಲ್ಲ – ತೀರ್ಪು ಬಂದಿತ್ತು ಒಂದು ದಿನ ಅವಳು ಹೆರಿಗೆ ನೋವಿಗೆ ನರಳುತ್ತಿದ್ದಳು……” # ಒಂದು ಅತ್ಯಾಚಾರದ ಹಂತಗಳು… “ಕಾಗದ ಕ್ರಾಂತಿಕಾರಿಗಳ ನಡುವೆ”, “ಸಿದ್ಧ ಸವಾರರು” ಹುಸಿ ಕ್ರಾಂತಿಕಾರರ ಕುರಿತ ಕವಿತೆಗಳಾದರೆ, “ಸತ್ತ ಮೇಲೆ” ನಿಜವಾದ ಹೋರಾಟಗಾರರ ಸ್ವಗತದಂತಿದೆ. “ನಾನು ಬೂದಿಯಾಗಿರುವೆ ಈ ನೆಲದ ಮಣ್ಣಾಗಿರುವೆ ನಾನು ಸ್ಮೃತಿಯಾಗಿರುವೆ ಜೀವನದ ಗತಿಯಾಗಿರುವೆ ನಿಲ್ಲದ ಸತ್ಯವಾಗಿರುವೆ ಆಗಿರುವೆ ನಾನು ಬೂದಿ ಎಲ್ಲರೂ ನಡೆದ ಹಾದಿ… ” # ನಾನು ಸತ್ತ ಮೇಲೆ… “ಬಂಡಾಯ” ಮತ್ತು “ಸ್ವಾಭಿಮಾನದ ಹಾಡು” ಬಂಡಾಯ ಚಳುವಳಿಯಿಂದ ಸ್ಫೂರ್ತಿ ಪಡೆದ ಕವಿತೆಗಳು. “ದಮನಕ್ಕೆ ಉತ್ತರ ಧಿಕ್ಕಾರ ಬಂಡಾಯ ದಬ್ಬಾಳಿಕೆಗೆ ಉತ್ತರ…” # ಬಂಡಾಯ… “ನೀ ಚೆಲ್ಲಿದ ಹಾದಿ ಮುಳ್ಳುಗಳ ನಿನ್ನೆಂಜಲ ನಿಗಿನಿಗಿ ಕೆಂಡದುಂಡೆಗಳ ತುಳಿದು ನಾ ದಾಟಬಲ್ಲೆ ನನ್ನ ಗುರಿ ನಾ ಮುಟ್ಟಬಲ್ಲೆ… ” # ಸ್ವಾಭಿಮಾನದ ಹಾಡು… ವಿಷಾದಯೋಗ ಹಿಂಸೆ ಮತ್ತು ಗಲಭೆಯ ದುಷ್ಪರಿಣಾಮದ ಕುರಿತ ಉತ್ತಮ ಕವಿತೆ. “ನಲವತ್ತೇಳರ ನರಕದ ನಾಡು ’ಹೇರಾಮ’ ಆರ್ತನದ ನಾಡು ಪುಡಿ ಪುಡಿಗೊಂಡ ಗೋಪುರದ ನಾಡು… ” # ವಿಷಾದಯೋಗ… “ಅಲಿಖಿತ ಕಾದಂಬರಿ ನಾಯಕನ ಕವಿತೆ” ಮತ್ತು “ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ” ಕವಿತೆಗಳು ಸಾಮಾನ್ಯರ ಅಸಮಾನ್ಯತೆಯನ್ನು ಗುರುತಿಸಿದೆ. ಈ ‘ಲೈನ್ ಮನ್ ಮಡಿವಾಳ ಬೀಮಪ್ಪ’ ಕವಿತೆ ನನಗಂತೂ ಇವರು ತಮ್ಮ ಸಹೋದ್ಯೋಗಿಗಳು ಮತ್ತು ಒಟ್ಟಾರೆ ಕೆಇಬಿಯ ಅಧಿಕಾರ ರಹಿತ ಕೆಲಸಗಾರರ ಬಗೆಗೆ ಸತೀಶ ಕುಲಕರ್ಣಿರಿಗೆ ಇದ್ದ ಮಾನವೀಯ ಮಮಕಾರ ಮತ್ತು ಕೆಇಬಿ ಕೆಲಸಗಾರರ ಮೇಲಿನ ಅಭಿಮಾನವನ್ನು ತೋರಿಸಿತು. “ಮೂಡಿಲ್ಲ ಅಕ್ಷರಕ್ಷರಗಳಲಿ, ಬದುಕಿಲ್ಲ, ಸತ್ತಿಲ್ಲ ಅನನ್ಯದವತಾರವೆ ಓ ಶ್ರೀ ಸಾಮಾನ್ಯ, ಸತ್ಯದ ಸೂತ್ರ ನಾಯಕ ನೀನು… ” # ಅಲಿಖಿತ ಕಾದಂಬರಿಯ ನಾಯಕ… “ಹಾದಿ ಹೆಣವಾದ ಬೀದಿ ದೀಪಗಳ ದೊರೆಯೆ ಬೆಳಕು ಕೊಟ್ಟು, ಕತ್ತಲೆಯ ನೀ ಸೇರಿದಿಯೆ?….. ” # ಲೈನ್ ಮನ್ ಮಡಿವಾಳರ ಭೀಮಪ್ಪನಿಗೆ… ಇದು ತಮ್ಮ ಕಾಯಕವನ್ನು ಇಷ್ಟಪಡುವ ಮತ್ತು ಕೆಳಹಂತದ ನೌಕರರ‌ ಬಗೆಗಿನ ಮಾನವೀಯ ಪ್ರೀತಿ, ಕಾಳಜಿ ಮತ್ತು ಸಹಜ ‘ಲೈನ್ ಮನ್’ಗಳ ಕಷ್ಟದ ಕೆಲಸದ ಅನುಕಂಪವನ್ನು ಎತ್ತಿ ತೋರಿಸುತ್ತದೆ. “ನನ್ನಪ್ಪ”, “ಉಳಿದ ನೆನಪು” ಮತ್ತು “ಗುರುಗಳು ಸತ್ತ ಮುಂಜಾನೆ” ಮಾನವೀಯ ಸಂಬಂಧಗಳ ಕುರಿತ ಕವಿತೆಗಳಾಗಿದ್ದು, ಆ ನೆನಪುಗಳೇ ಕವಿತೆಗಳಾಗಿವೆ. “ನಾಲ್ಕು ಮಕ್ಕಳಿಗೆ ನೂರು ಕನಸು ಕೊಟ್ಟ ಸಾವು ಬರುವತನಕ ಬಿಳಿ ಅಂಗಿ ಪೈಜಾಮು ತೊಟ್ಟ ನನ್ನ ಆ ಬಡ ಅಪ್ಪ…” # ನನ್ನಪ್ಪ… “ಕೆಂಬೆಂಕಿ, ಸುಡುವ ಒಲೆಯ ಮುಂದೆ ಕೂತ ಅವ್ವನ, ಅದೆಷ್ಟು ಕನಸುಗಳು ಹಾಗೆಯೆ ಉರಿದು ಬೂದಿಯಾಗಿ ಹೋಗಿರಲಿಕ್ಕಿಲ್ಲ…… ” # ಉಳಿದ ನೆನಪು… “ಛಡಿ ಏಟಕೊಟ್ಟ ಮಾಸ್ತರು, ಹೊಸ ಮಾತು ಕಲಿಸಿ ಕೊಟ್ಟ ಮಾಸ್ತರು, ಸಾಲಿ ಗ್ರೌಂಡಿನ್ಯಾಗ ಮೂಲಿಗೆ ನಿಂತು ನಮ್ಮಾಟಾ ನೋಡಿದ ಮಾಸ್ತರು, ಅಕ್ಷರ ಏಣಿ ಹತ್ತಿಸಿ ಜೀವನದ ದೂರ ತೋರಿಸಿದ ಮಾಸ್ತರು, ಮನಿ ಮರ್ತು, ಮಕ್ಕಳ ಮರತು ನಮ್ಮನ್ನ ಮಕ್ಕಳಂತ ತಿಳಕೊಂಡ ಮಾಸ್ತರು ಎಲ್ಲಾ ನೆನಪಾದವು ದೂರದಿಂದ ನೋಡಿದೆ. ಮಾಸ್ತರ ಮನಿ ತುಂಬ ಮಂದಿ ಬಾಳಿತ್ತು, ನನ್ನ ಕಣ್ಣ ಬಾಗಲದಾಗ ನೀರು ತುಂಬಿ ನಿಂತಿತ್ತು…” # ಗುರುಗಳು ಸತ್ತ ಮುಂಜಾನೆ… “ನಗರ ಮೈ ಮುರಿಯುತ್ತಿದೆ” ನಗರೀಕರಣದ ಪೈಶಾಚಿಕತೆ ಯಾವ ಮಟ್ಟಕ್ಕೆ ಬದುಕನ್ನು ದುಸ್ತರ ಮಾಡಿದೆಯೆಂಬುದರ ಕುರಿತ ಕವಿತೆ. “ಅಮೇರಿಕಾ” ಬಂಡವಾಳಶಾಹಿ ರಾಷ್ಟ್ರಗಳ ದುರಾಸೆಯನ್ನು ಅಭಿವ್ಯಕ್ತಿಸಿದೆ. “ಕಂಪನಿ ಸವಾಲ್”, “ಎಲ್ಲಿಯೋ ದೂರದಲ್ಲಿ”, “ಮತ್ತೊಂದು ಬೆಳಕು”, “ಬೆಳ್ತನಕಾ” ಮತ್ತು “ಯುದ್ಧ ಶುರು ಆತೇನು? ಇವು ಸತೀಶ ಕುಲಕರ್ಣಿಯವರ ವಿಶಿಷ್ಟವಾದ ಮಾನವೀಯ ಸಹಜ ಕವಿತೆಗಳು. “ಮಹಾಭಾರತದ ಆ ಹಕ್ಕಿ ”ಬಹುಹಿಂದಿನಿಂದ ಬಂದ ಅರ್ಜುನ, ಏಕಲವ್ಯರ ರೂಪಕದೊಂದಿಗೆ ಗೆದ್ದವರ ಕಥೆಯನ್ನು ಸಂಭ್ರಮದಿಂದ ಹೇಳುವುದನ್ನು ಪ್ರಶ್ನಿಸುತ್ತದೆ. “ಕವಿಯಾಗಿ ನಾನೇಕೆ ಒಂದು ಪ್ರಶ್ನೆ ಕೇಳಬಾರದು ಯಾಕೆ, ಆ ಪುಟ್ಟ ಹಕ್ಕಿ ಆಕಾಶಕ್ಕೆ ಗಕ್ಕನೆ ಹಾರಿಹೋಗಬಾರದು ಯಾಕೆ, ಆ ಬಾಣದ ಗುರಿ ತಪ್ಪಬಾರದು ಹೇಳಿ ನೀವೇ ಹೇಳಿ…” # ಮಹಾಭಾರತದ ಆ ಹಕ್ಕಿ… “ಕಟ್ಟತೇವ ನಾವು” ಮತ್ತು “ಗಾಂಧೀಗಿಡ” ಕವಿತೆಗಳಲ್ಲಿ “ಕಟ್ಟತೇವ ನಾವು” ಬಂಡಾಯದ ಕ್ರಾಂತಿಗೀತೆಯಾಗಿದೆ. ಅದರಂತೆಯೇ ಆ ಕ್ರಾಂತಿಯಯನ್ನು ಬಯಸುವ ಕವನವಾಗಿದೆ. “ಕಟ್ಟತೇವ ನಾವು ಕಟ್ಟತೇವ ನಾವು ಕಟ್ಟೇ ಕಟ್ಟತೇವ. ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟತೇವ ನಾವು ಕನಸ ಕಟ್ಟತೇವ ನಾವು ಮನಸು ಕಟ್ಟತೇವ…” # ಕಟ್ಟತೇವ ನಾವು… “ಈಗ ನೆರಳಿಲ್ಲ ನೆಲಕ್ಕೆ ಅರಳಿಲ್ಲ ಹೂವುಗಳು ಸತ್ತ ನೆಲದ ಸತ್ವ ಕುಡಿದ ಗಿಡ ಹಣ್ಣು ಕೊಟ್ಟಿಲ್ಲ ಮೂಕ ಕಾವ್ಯದ ಪ್ರತೀಕದ ಗಿಡ ನಿತ್ಯ ಕೊಡಲಿಗೆ ಬಡವರಿಗೆ ಚಕ್ಕೆ ಕೊಡುವ ಗಾಂಧೀಗಿಡ ಬೇರು ಸತ್ತಿಲ್ಲ ಮತ್ತೊಮ್ಮೆ ಈ ನೆಲದ ಮಾತಾಗುಹುದೆ ಹೇಳು ಗಾಂಧೀಗಿಡ…” # ‘ಗಾಂಧೀಗಿಡ’… ಆಧುನಿಕ ಕನ್ನಡ ಕಾವ್ಯಕ್ಕೆ ಅನೇಕ ವಿಶಿಷ್ಟ ಕವಿತೆಗಳನ್ನು ನೀಡಿರುವ ಸತೀಶ ಕುಲಕರ್ಣಿಯವರ ಕಾವ್ಯಕ್ಕೆ ಈ ವರೆಗೂ ಸೂಕ್ತ ವಿಮರ್ಶೆ ಸಂದಿಲ್ಲ. ಆದರೂ ಅವರ ಕಾವ್ಯ ಜನಮನದಲ್ಲಿ ಹಾಸುಹೊಕ್ಕಾಗಿಯೇ ಇದೆ. ಖ್ಯಾತ ವಿಮರ್ಶಕ ಚಂದ್ರಶೇಖರ ನಂಗಲಿ ತಮ್ಮ ಮುನ್ನುಡಿಯ ಮೂಲಕ ಒಟ್ಟಾರೆ ಈ ಕವನ ಸಂಕಲನವಾದ ‘ಸಮಯಾಂತರ’ ನ್ಯಾಯ ಒದಗಿಸಿದ್ದಾರೆ. ನಂಗಲಿಯವರು ಹೇಳಿದಂತೆ ಸತೀಶ ಕುಲಕರ್ಣಿಯವರು ಹಾವೇರಿಯ ಹೊಕ್ಕುಳಲ್ಲಿ ಅರಳಿದ ಹೂವೇ ಸರಿಯೆಂಬುದು ನನ್ನದೂ ಅಭಿಪ್ರಾಯ..! ********************* ಕೆ.ಶಿವು.ಲಕ್ಕಣ್ಣವರ

ಪುಸ್ತಕ ಸಂಗಾತಿ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯಗಳು

ನಮ್ಮೂರ ಮಣ್ಣಿನಲಿ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಶಾಂತೇಶ ಪ್ರಕಾಶನ, ಧಾರವಾಡ ಪುಟ : ೧೦೨ ಬೆಲೆ : ₹ ೮೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB000400 “ಕೊರೊನಾ ಜೊತೆಗೆ ಶಾಲಾಬದುಕು” ಲೇಖಕರು: ಡಾ.ಪ್ರಸನ್ನ ಹೆಗಡೆ ಮೈಸೂರುಪುಟಗಳು 176ಬೆಲೆ 150/ಪ್ರಕಾಶಕರ ಹೆಸರು: ಲೇಖಕ ಪ್ರಕಾಶಕರುವಿಳಾಸ. ನಂಬರ್ ೨೦. ಐದನೇ ಕ್ರಾಸ್. ಬ್ಯಾಂಕರ್ಸ ಕಾಲೋನಿ.ಬೋಗಾಧಿ ಮೈಸೂರು 570026.ಪೋನ್ ನಂಬರ್ 9844355941ಬ್ಯಾಂಕ್ ಅಕೌಂಟ್ ನಂಬರ್‌.Bank account detailsPrasanna HegdeSyndicate bank.marimallappa college BranchAccount number 17152200003319Ifsc code SYNB0001715 ಮುಸ್ಸಂಜೆಯ ನೋಟ ಪ್ರಕಾರ : ಕವನ ಸಂಕಲನಲೇಖಕರು : ಅರುಣ ರಾವ್ಬೆಲೆ : ೬೦ ರೂಪಾಯಿಗಳುಪುಟಗಳು : ೬೦ ಕೃತಿಗಳಿಗಾಗಿ ಸಂಪರ್ಕಿಸಬೇಕಾದ ವಿಳಾಸ Aruna RaoNo. 22, ‘kanakadhara’,Sourobha orchard,Thigalarapalaya main road,Andrahalli main road,Land mark: Near kalikamba timbers & plywoods.Bangalore 560091 ph: 9901075235, 9449133457 ಹಣ ಜಮಾವಣೆ ಮಾಡಬೇಕಾದ ಖಾತೆಯ ವಿವರ:Aruna T.GA/c no. 1174131000134IFSC code: CNRB0001174 ಮೈರಾ ಕವನ ಸಂಕಲನ ಲೇಖಕಿ : ವಿನುತಾ ಹಂಚಿನಮನಿ ಪ್ರಕಾಶನ : ಚೇತನ ಪ್ರಕಾಶನ, ಹುಬ್ಬಳ್ಳಿ ಪುಟ : ೯೮ ಬೆಲೆ : ₹ ೧೦೦ ಪುಸ್ತಕ ದೊರೆಯುವ ವಿಳಾಸ : ೧೨೫, ಸನ್ಮತಿನಗರ, ಕೆಲಗೇರಿ ರಸ್ತೆ, ೫ ನೆ ಕ್ರಾಸ್,ಧಾರವಾಡ ೫೮೦೦೦೮ ಬ್ಯಾಂಕ್ ಖಾತೆ :ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್,ಸನ್ಮತಿನಗರ ಬ್ರ್ಯಾಂಚ್, ಧಾರವಾಡA/c no: 17064044789IFSC Code : KVGB0004006

ಪುಸ್ತಕ ಪರಿಚಯಗಳು Read Post »

You cannot copy content of this page

Scroll to Top